ದ್ವಿಪದಿಗಳು
ದ್ವಿಪದಿಗಳು ಸಿದ್ಧರಾಮ ಕೂಡ್ಲಿಗಿ ಖಾಲಿಯಾದ ಕಣ್ಣುಗಳಲಿ ತೇಲುತ್ತವೆ ಕಂಬನಿದುಂಬಿದ ಮೋಡಗಳು ಒಮ್ಮೊಮ್ಮೆ ಭೋರ್ಗರೆಯುತ್ತವೆ ಒಮ್ಮೊಮ್ಮೆ ಕಣ್ಣಂಚಿನಲೇ ನಿಲ್ಲುತ್ತವೆ – ಬಂಜೆ ನೆಲಕೂ ಆಗಾಗ ಕನವರಿಕೆ ಒಡಲು ತುಂಬುವ ಸರದಾರ ಬರಬಹುದೆಂದು – ಬರಿದಾದ ತಲೆಯಲಿ ಚಿಂತೆಯ ಹದ್ದುಗಳದೇ ಗಲಾಟೆ ಬೇಟೆ ಸಿಕ್ಕರೆ ಭೂರಿ ಭೋಜನ ಇಲ್ಲದಿರೆ ಬರೀ ಗಾನ ಬಜಾನ – ಮತ್ತೊಬ್ಬರ ಬೂಟಿನಲಿ ಮೂಗು ತೂರಿಸುವ ಹೆಜ್ಜೆಗಳು ತಮಗೊಂದು ಅಸ್ತಿತ್ವವಿದೆಯೆಂದು ಎಂದೂ ಯೋಚಿಸವು – ಮುಗುಳ್ನಗೆಗಳು ಹಾರಾಡುತ್ತವೆ ಚಿಟ್ಟೆಯಂತೆ ಪ್ರೀತಿ ಇದ್ದಲ್ಲಿ ಕೂರುತ್ತವೆ ಇಲ್ಲದಿದ್ದಲ್ಲಿ ಮುಂದೆ ಸಾಗುತ್ತವೆ – ಏನು ಪುಣ್ಯವೋ ಹೆಜ್ಜೆಗಳಿಗೆ ಮಾತು ಬರದಿರುವುದು ಇಲ್ಲವಾದರೆ ಅವುಗಳಲ್ಲಿಯೂ ಪ್ರೀತಿ ಜಗಳಗಳಿರುತ್ತಿದ್ದವು – ಕಣ್ಣೊಳಗಿನ ಆಸೆಯೆಂಬ ಧೂಳು ತೊಳೆದರೆ ಎಲ್ಲವೂ ಸ್ಪಷ್ಟ, ದಿಟ್ಟ, ನೇರ, ನಿರಂತರ ***************************************** –









