ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಲಹರಿ

ಖಾಸಗಿ ಬಸ್ ಪಯಣ ಜಿ.ಹರೀಶ್ ಬೇದ್ರೆ ಇದು ನಿಮ್ಮ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಇದನ್ನು ಓದಿದ ಮೇಲಾದರೂ ಗಮನಿಸಿ, ನಾನು ಹೇಳಿದ್ದು ನಿಜವೆನಿಸಿ ನೀವು ನಗದಿದ್ದರೆ ಹೇಳಿ. ಅಂಥಹ ವಿಚಾರ ಏನೂ ಅಂತೀರಾ, ಅದೇ ಬಸ್ಸಗಳು ಹಾಗೂ ಅದರಲ್ಲಿನ ಸಂಚಾರ. ಅದರಲ್ಲಿ ಸಿಗುವ ವಿವಿಧ ರೀತಿಯ ಅನುಭವಗಳು. ನೋಡಿ ಸರ್ಕಾರಿ ಬಸ್ಸುಗಳು ತುಂಬಾ ಗೌರವಸ್ಥ ಹೆಣ್ಣಿನಂತೆ ನಿಲ್ದಾಣಕ್ಕೆ ಬಂದು ಊರಿಂದ ಊರಿಗೆ ಹೋದರೆ, ಖಾಸಗಿ ಬಸ್ಸುಗಳು ಆಗ ತಾನೇ ಪ್ರಾಯಕ್ಕೆ ಬಂದ ಹುಡುಗಿ ಎಲ್ಲರೂ ತನ್ನನೇ ನೋಡಲೆಂದು ವೈಯರ ಮಾಡುವಂತೆ, ನಿಲ್ದಾಣಕ್ಕೆ ಬರುವಾಗ ಅತೀ ವೇಗವಾಗಿ ಬರುತ್ತಾ, ಜೋರಾಗಿ ಹಾರನ್ ಮಾಡುತ್ತಾ, ಪ್ರತಿಯೊಬ್ಬರೂ ಗಮನಿಸುವಂತೆ ಬರುತ್ತವೆ. ನಾವೇನಾದರೂ ಅವು ಒಳಬಂದ ವೇಗವನ್ನು ಗಮನಿಸಿ, ಹೋಗಬೇಕಾದ ಸ್ಥಳಕ್ಕೆ ಬೇಗ ಸೇರುತ್ತೇವೆ ಅಂದುಕೊಂಡರೆ, ಅದು ನಮ್ಮ ಭ್ರಮೆ ಮಾತ್ರ. ನಂತರ ತಾನು ಸಾಗುವ ಮಾರ್ಗವಾಗಿ ಬರುವವರನ್ನು ಹತ್ತಿಸಿಕೊಂಡು, ಬಸ್ಸ್ ನಿಲ್ದಾಣದಿಂದ ಊರ ಹೊರಗಿನವರೆಗೂ ಹೊಸದಾಗಿ ಮದುವೆಯಾದ ಹುಡುಗಿ ಮದುವೆಯಾದ ನಂತರ ಮೊದಲಬಾರಿ ತವರು ಮನೆಗೆ ಬಂದು ಹೊರಹೊರಟಾಗ ಹೇಗೆ ನಿಧಾನವಾಗಿ ಹೆಜ್ಜೆ ಹಾಕುತ್ತಾ, ದಾರಿಯಲ್ಲಿ ಸಿಕ್ಕ ಪರಿಚಯದವರಿಗೆ ಮಾತನಾಡಿಸುತ್ತ ಸಾಗಿದಂತೆ, ಪ್ರಯಾಣಿಕರು ಕೈತೋರಿಸಿದ ಜಾಗದಲ್ಲೆಲ್ಲಾ ನಿಲ್ಲಿಸಿ, ಅವರನ್ನು ಹತ್ತಿಸಿಕೊಂಡು ಸಾಗುತ್ತವೆ. ತಾನು ಸಾಗುವ ಮಾರ್ಗ ಮಧ್ಯದಲ್ಲಿ ಸಿಗುವ ಊರುಗಳಲ್ಲಿ ಇಳಿಯುವ ಜನರನ್ನು ಇಳಿಸಿ, ಬರುವವರನ್ನು ಹತ್ತಿಸಿಕೊಂಡು ಮುಂದೆ ಸಾಗುತ್ತವೆ. ನಿಜ ಹೇಳಬೇಕೆಂದರೆ, ತಮ್ಮ ಗಮ್ಯವನ್ನು ತಲುಪುವ ಹೊತ್ತಿಗೆ ಬಸ್ಸಿನೊಳಗೆ ಹೆಜ್ಜೆ ಇಡಲು ಸಾಧ್ಯವಾಗದಷ್ಟು ಪ್ರಯಾಣಿಕರು ತುಂಬಿರುತ್ತಾರೆ. ಆಗ ತಾನೇತಾನಾಗಿ ಬಸ್ಸಿನ ವೇಗವೂ ಕಡಿಮೆಯಾಗಿರುತ್ತದೆ. ಇದನ್ನು ನೋಡಿದಾಗ ತುಂಬಿದ ಬಸುರಿ ಹೆಜ್ಜೆ ಹಾಕಲು ಸಾಧ್ಯವಾಗದೆ ನಿಧಾನವಾಗಿ ನಡೆದಂತೆ ಅನಿಸುತ್ತದೆ. ಬಸ್ಸಿನ ಒಳಗೆ ಜಾಗವಿಲ್ಲವೆಂದು ಯಾರನ್ನೂ ಬಿಟ್ಟು ಹೋಗುವಂತಿಲ್ಲ. ಹಾಗೇನಾದರು ಮಾಡಿದರೆ ಡ್ರೈವರ್, ಕಂಡಕ್ಟರ್ ಜೊತೆಗೆ ಬಸ್ಸಿಗೂ ಕಲ್ಲಿನ ಏಟು ಬೀಳಬಹುದು. ಅದಕ್ಕಾಗಿ ಕಂಡಕ್ಟರ್ ಯಾರನ್ನು ಬಿಟ್ಟು ಹೋಗುವ ಮನಸ್ಸು ಮಾಡುವುದಿಲ್ಲ. ಅಲ್ಲದೆ ತುಂಬಿದ ಬಸ್ಸಿನಲ್ಲಿ ಜಾಗ ಇರದಿದ್ದರೂ, ಮತ್ತೆ ಮತ್ತೆ ಪ್ರಯಾಣಿಕರನ್ನು ಒಳಗೆ ಹತ್ತಿಸಿಕೊಳ್ಳುವುದನ್ನು ನೋಡುವುದೇ ಚೆನ್ನ. ಅವನಿಗೆ ಗೊತ್ತಿರುತ್ತದೆ ಒಳಗಡೆ ಜಾಗವಿಲ್ಲವೆಂದೂ, ಹಾಗಿದ್ದೂ ಯಾರ್ರೀ ಅದೂ ಸ್ವಲ್ಪ ಒಳಗೆ ದಾಟಿ, ಪಾಪ ವಯಸ್ಸಾದ ಅಜ್ಜಿ ಜಾಗ ಬಿಡಿ, ಹೇ ಸಣ್ಣ ಮಕ್ಕಳು ಮಹಾರಾಯ ಹೆಚ್ಚುಕಮ್ಮಿಯಾದರೆ ಕಷ್ಟ ಒಳಗೆ ಕರೆದುಕೊಳ್ಳಿ ಮುಂತಾಗಿ ಹೇಳುತ್ತಾ ಇರದ ಜಾಗದೊಳಗೆ ಜಾಗ ಮಾಡುತ್ತಾನೆ. ಬಸ್ಸು ಹೊರಟಾಗ ಪ್ರಯಾಣಿಕರು ಎಲ್ಲಿಬೇಕೊ, ಹೇಗೆ ಬೇಕೋ ಹಾಗೆ ಕುಳಿತಿರಬಹುದು. ಪ್ರಯಾಣ ಸಾಗಿದಂತೆ ಮೊದಲು ಎಲ್ಲಾ ಅಸನಗಳು ರಾತ್ರಿಯಾಗುತ್ತದೆ. ಆಗ ಹತ್ತುವ ಜನರು ತಮಗೆ ಸರಿ ಎನಿಸಿದ ಅಸನವನ್ನೋ, ಕಂಬಿಯನ್ನೋ ಹಿಡಿದು ನಿಲ್ಲುತ್ತಾರೆ. ಅದು ತಾತ್ಕಾಲಿಕ, ಬರಬರುತ್ತ ನಿಂತವರು ಹಿಂದೆಮುಂದೆ ಸರಿಯಬೇಕಾಗುತ್ತದೆ. ಆಗ ಕುಳಿತವರಿಗೂ ನಿಂತವರಿಗೂ ಜಗಳವಾಗುವ ಸಾಧ್ಯತೆ ಇರುತ್ತದೆ. ಕುಳಿತವರು ಸರಿಯಾಗಿ ನಿಲ್ಲಿ ಎಂದರೆ, ನಿಂತವರು ಹೇಗೆ ನಿಲ್ಲಬೇಕು ಬನ್ನಿ ತೋರಿಸಿ, ನಮ್ಮ ಕಷ್ಟ ನಿಮಗೇನು ಗೊತ್ತು ಎಂದೊ, ಮುಂತಾಗಿ ಮಾತುಗಳಾಗುತ್ತವೆ. ಕೆಲವೊಮ್ಮೆ ಕಿಡಿಗೇಡಿಗಳು ಬೇಕೆಂದೇ ತೊಂದರೆ ಮಾಡಿದಾಗ ಇರದ ಜಾಗದಲ್ಲಿ ನಿಂತು ಪರಸ್ಪರ ಜಗಳವಾಡುವುದು ಅರ್ಜುನ ಮತ್ತು ಬಬ್ರುವಾಹನರ ‘ಯಾರು ತಿಳಿಯರು ನನ್ನ ಭುಜಬಲದ ಪರಕ್ರಾಮ’ ನೆನಪಿಸುತ್ತದೆ. ಇನ್ನೇನು ಇಬ್ಬರೂ ಕೈ ಮೀಲಾಯಿಸುತ್ತಾರೆ ಎಂದು ನಾವು ಕದನ ಕುತೂಹಲಿಗಳಾಗಿ ಕಾಯುವಾಗ ಅವರಿವರ ಮಧ್ಯಸ್ಥಿಕೆಯಿಂದ ತಣ್ಣಗಾಗಿ ಬಿಡುತ್ತದೆ. ಜಗಳವಾಡಿದವರಿಗೂ ಇದೇ ಬೇಕಾಗಿರುತ್ತದೆ ಎಂದು ನನ್ನ ಅನುಮಾನ. ಈ ಜಗಳ ಒಂದು ರೀತಿಯದಾದರೆ, ಹಿಂದೆ ಮುಂದೆ ನಿಂತ ಸ್ನೇಹಿತ, ಸ್ನೇಹಿತೆಯರು ಮಾತನಾಡಲು ಪರದಾಡುವುದು ನೋಡಲು ಬಹಳ ಖುಷಿಯಾಗುತ್ತದೆ. ಇದಕ್ಕಿಂತ ಯುವಕರು ತಮ್ಮ ತಮ್ಮ ಹುಡುಗ, ಹುಡುಗಿಯರನ್ನು ಕದ್ದು ನೋಡುವುದು ಒಂದೆಡೆಯಾದರೆ, ಪ್ರೇಮಿಗಳು ಒಂದೆಕಡೆ ಇದ್ದಾಗ ಸುತ್ತಲಿನ ಜನರನ್ನು ಮರೆತು ತಮ್ಮದೇ ಪ್ರಪಂಚದಲ್ಲಿರುವುದು, ಅಕಸ್ಮಾತ್ ಹಿಂದೆ ಮುಂದೆ ದೂರದಲ್ಲಿದ್ದರೆ ಪರಸ್ಪರ ನೋಡಲು, ಮಾತನಾಡಲು ಪಡುವ ಕಷ್ಟ ನೋಡಲು ಎರಡು ಕಣ್ಣು ಸಾಲದು. ತುಂಬಿದ ಬಸ್ಸಿನಲ್ಲಿ ಸೆಕೆಯಾಗಿ ಕಿಟಕಿ ತೆರೆದು ಕುಳಿತಿರುವಾಗ, ಮುಂದಿನ ಅಸನಗಳಲ್ಲಿ ಕುಳಿತವರು ಬಸ್ಸು ಚಲಿಸುವಾಗ ಎಲೆ ಅಡಿಕೆ, ಗುಟುಕ, ತಂಬಾಕು ಹಾಕಿಕೊಂಡವರು.ಉಗಿದರಂತು, ಹಿಂದೆ ಕುಳಿತವರ ಸ್ಥಿತಿ ದೇವರಿಗೆ ಪ್ರೀತಿ. ಅದೂ ಅವರೇನಾದರೂ ಯಾವುದಾದರೂ ಕಾರ್ಯಕ್ರಮಕ್ಕೊ, ಮುಖ್ಯವಾದ ಕೆಲಸಕ್ಕೂ ತಯಾರಾಗಿ ಹೊರಟಿರಬೇಕು, ಜೊತೆಗೆ ಬೇರೆ ಬಟ್ಟೆಯು ಅವರ ಬಳಿ ಇರಬಾರದು, ಅವರ ಪರಿಸ್ಥಿತಿ ಹೇಗಿರಬಹುದು ಯೋಚಿಸಿ. ವಾಂತಿಯಾದರಂತೂ ಗಲೀಜಿನ ಜೊತೆ ಆ ಕಮಟು ವಾಸನೆ ಹೇಗಿರಬಹುದೆಂದು ನೀವೇ ಊಹಿಸಿಕೊಳ್ಳಿ. ಒಂದೊಮ್ಮೆ ವಾಂತಿ ಬಸ್ಸಿನ ಒಳಗಡೆಯೇ ಮಾಡಿಕೊಂಡರೂ, ಎಷ್ಟೇ ತುಂಬಿದ ಬಸ್ಸಾದರೂ ಜನ ಅಷ್ಟು ಜಾಗ ಬಿಟ್ಟು ನಿಲ್ಲುವುದನ್ನು ನೋಡಿದರೆ, ಆ ಹೊಂದಣಿಕೆ ಸೋಜಿಗವೆನಿಸುತ್ತದೆ. ಇಷ್ಟೆಲ್ಲಾ ಅವಂತರಗಳ ಜೊತೆಗೆ, ನಿಲ್ಲಲೂ ಜಾಗವಿಲ್ಲದಿದ್ದರು ಜನ ಹತ್ತಿದಾಗ, ಕಂಕುಳಲ್ಲಿದ್ದ ಪುಟ್ಟ ಮಕ್ಕಳು ಕುಳಿತವರ ತೊಡೆ ಎರುತ್ತವೆ. ಅನ್ಯರೊಂದಿಗೆ ಮಗು ಕೂರದಿದ್ದಾಗ ಅನಿವಾರ್ಯವಾಗಿ ಕುಳಿತವರು ನಿಂತು ತಾಯಿ ಮತ್ತು ಮಗುವಿಗೆ ಜಾಗ ಬಿಟ್ಟುಕೊಡಬೇಕಾಗುತ್ತದೆ. ನಾವು ಪಯಣಿಸುವ ಸಮಯ ಶಾಲಾ ಕಾಲೇಜುಗಳ ಆರಂಭ ಅಥವಾ ಮುಕ್ತಾಯದ ವೇಳೆ ಆಗಿದ್ದರೆ, ಆ ಮಕ್ಕಳ ಹೆಣ ಭಾರದ ಚೀಲಗಳು ಕುಳಿತವರ ತೊಡೆಯನ್ನು ಅಲಂಕರಿಸುತ್ತವೆ. ಈ ಎಲ್ಲಾ ಅವಾಂತರಗಳ ಜೊತೆ ಮುಂದೆ ಸಾಗಿದ ಬಸ್ಸು ನಿಗದಿತ ಊರಿನ ನಿಲ್ದಾಣ ತಲುಪಿದಾಗ, ಮಗುವನ್ನು ಹೆತ್ತ ತಾಯಿ ನಿಟ್ಟುಸಿರು ಬಿಟ್ಟಂತೆ ಬಿಟ್ಟು ನಿಂತು ತನ್ನ ಒಡಲನ್ನು ಖಾಲಿ ಮಾಡಿಕೊಳ್ಳುತ್ತದೆ. ಅಷ್ಟು ಹೊತ್ತು ಬಸ್ಸಿನೊಳಗೆ ಇದ್ದ ಜನ ಇಳಿದು ತಮ್ಮ ಕಾಯಕದೆಡೆಗೆ ಹೆಜ್ಜೆ ಹಾಕಿದರೆ, ಅದೇ ಬಸ್ಸು ಹೊಸ ಪ್ರಯಾಣಿಕರನ್ನು ಹೊತ್ತು, ಹೊಸ ಅನುಭವ ನೀಡಲು ತನ್ನ ಮಾರ್ಗದಲ್ಲಿ ಸಾಗುತ್ತದೆ. ಇಂತಹ ಸುಂದರ ಅನುಭವ ಪಡೆಯಬೇಕೆಂದರೆ ನಾವು, ಖಾಸಗಿ ಬಸ್ಸುಗಳಲ್ಲಿ ಗ್ರಾಮಂತರ ಪ್ರದೇಶಗಳ ಕಡೆ ಹೋಗಬೇಕು. ……‌

ಲಹರಿ Read Post »

ಕಥಾಗುಚ್ಛ

ಕಥಾಗುಚ್ಛ

ವೃದ್ದಾಶ್ರಮ ಎಂಬ ಬೆಳಕು. ಸುಮಾ ಉಮೇಶ್ ಗೌಡ ಮೊಮ್ಮಕ್ಕಳು  ಶಾಲೆಗೆ ಹೋದ್ರು,  ಮಗ ಸೊಸೆ ಕೆಲಸಕ್ಕೆ ಹೋದ್ರು, ಬಾಗಿಲು ಭದ್ರ  ಪಡಿಸಿದ  ರಾಯರು ಪತ್ನಿಯ ಫೊಟೋ ನೋಡುತ್ತಾ  ಕುಳಿತರು  ಏಕಾಂಗಿ ಆಗಿ…    ಗಂಡು ಎಷ್ಟೆ ದರ್ಪದಿಂದ ಇದ್ರು ಪತ್ನಿ  ಮರಣಿಸಿದ ಮೇಲೆ ಹಲ್ಲು ಕಿತ್ತ ಹಾವಿನಂತೆ,  ಯಾರಿಗೆ ಬುಸುಗುಡಿದ್ರು  ಹೇದರಿಕೊಳ್ಳೊರು ಯಾರು..? ರಾಯರ ಬದುಕು ಇದಕ್ಕೆ ಹೊರತಾಗಿರಲಿಲ್ಲ…    ಸದಾ ಚಟುವಟಿಕೆ  ಇಂದ ಇರುವ ರಾಯರಿಗೆ, ನಿವೃತ್ತಿ ಅನ್ನೋದೇ  ಶಾಪವಾದ್ರು,  ಪತ್ನಿಯ ನಗು ಮುಖ,  ಹುಸಿ ಮುನಿಸು,  ಅವರ ಜೊತೆಯಾಗಿ ಲವಲವಿಕೆ ಇಂದ ಇರಲು ಕಾರಣ ಆಗಿತ್ತು,  ಆದರೆ ಆರು ತಿಂಗಳ ಹಿಂದೆ  ಪತ್ನಿ  ಅಗಲಿದ ಮೇಲೆ, ತನ್ನ ಮನೆಯಲ್ಲೇ ತಾನೊಬ್ಬ ಪರಕಿಯ ಅಂತಾಗಿ ಬಿಟ್ಟಿದ್ದರು…     ಪತ್ನಿ ಪದ್ಮಾನ ಫೋಟೋ ನೋಡ್ತಾ,  ಅದು ಯಾವ ದೇವರಿಗೆ ಮುತೈದೆ ಸಾವು  ಬರಲಿ ಅಂತಾ ಬೇಡಿಕೊಂಡೆ  ನೀನು,  ನಿನಗೆ  ಮುತೈದೆ ಸಾವು ಸಿಕ್ಕು,  ನಾನು  ಒಂಟಿಯಾಗಿ ಕೊರಗ್ತಾ ಇದೆನೆ. ನೀನು ನನ್ನ  ಜಾಗದಲ್ಲಿ ಇದ್ದಿದ್ರೆ,  ಅತ್ತು ಮನಸ್ಸು ಹಗುರ ಮಾಡಿಕೊಂಡು,   ಅಕ್ಕ ಪಕ್ಕದ ಮನೆಯವರ  ಜೊತೆ  ಮಾತಾಡ್ತಾ  ಹೇಗೋ ಒಂಟಿತನ  ದೂರ ಮಾಡಿಕೊಳ್ಳತಾ  ಇದ್ದೆ,  ಈಗ ನನ್ನ ಪರಿಸ್ಥಿತಿ ನೋಡು,  ಒಂಟಿಯಾಗಿ ನಾಲ್ಕು ಗೊಡೆಯ ಮಧ್ಯೆ ಇರಬೇಕಾಗಿದೆ,  ಸಂಜೆ ವಾಕಿಂಗ್ ಹೋದರೆ ಒಂಚೂರು ವೇಳೆ ಕಳಿತಿವಿ ಅಷ್ಟೆ…     ಹಾಗಂತ ನಿನ್ನ ಮಗ ಸೊಸೆ ಏನು ದ್ವೇಷಿಸ್ತಾ ಇಲ್ಲ,  ಚನ್ನಾಗಿ ನೋಡ್ಕೊತಾರೆ ನಿನಗೂ ಗೊತ್ತು ಅದು,  ಆದ್ರೆ ಮಮ್ಮಕ್ಕಳಿಗೆ  ಸ್ಕೂಲ್ ಹೊಂ ವರ್ಕ್  ಮಾಡೊಕೆ ವೇಳೆ ಸಾಲಲ್ಲಾ,  ಇನ್ನೂ ನನ್ನ ಜೊತೆ ಕಳೆಯೊಕೆ ಎಲ್ಲಿ ವೇಳೆ ಸಿಗಬೇಕು,  ಮಗ ಸೊಸೆ ಅವರವರ ಕೆಲಸದಲ್ಲಿ ಬ್ಯುಸಿ,  ಸರಿಯಾದ ಟೈಮ್ ಗೆ ಊಟ ತಿಂಡಿ ಮಾಡಿಕೊಟ್ರೆ ಮುಗಿತು,  ಮಗನ ಜೊತೆ ನಾಲ್ಕು ಮಾತು  ಮಾತಾಡೊಕು  ಟೈಮ್ ಇರಲ್ಲ…    ಇದು ನನ್ನೊಬ್ಬನ ಗೋಳಲ್ಲ  ಪದ್ಮಾ,  ಪತ್ನಿಯನ್ನು ಕಳೆದುಕೊಂಡ  ನನ್ನಂತಹ ವಯಸ್ಸಾದವರ ಗೋಳು,  ನಲವತ್ತು ವರುಷ ಸಂಸಾರ ಮಾಡಿ, ಹೀಗೆ ದಿಡಿರ್ ಅಂತಾ ಹೋಗಿಬಿಟ್ರೆ,  ಎಲ್ಲದಕ್ಕೂ  ಪತ್ನಿ ನೆ  ಅವಲಂಬಿಸಿ, ಪತ್ನಿ ಎಷ್ಟೆ  ಚನ್ನಾಗಿ ಬದುಕು ಸಂಬಾಳಿಸಿದರು, ಮತ್ತು ಅವಳ ಮೇಲೆ ರೇಗಾಡೊ ಅಂತಾ ನಮ್ಮ  ಗಂಡಸರ ಸ್ಥಿತಿ ಹೀಗೆ  ಪತ್ನಿ ಹೋದಮೇಲೆ…     ಹಿಂದಿನ ಮನೆ ರಾಮಣ್ಣನ ಪತ್ನಿ ನಾಲ್ಕು ತಿಂಗಳ ಹಿಂದೆ ತೀರಿಕೊಂಡಳು,  ಅವನ ಜೀವನ ಕೂಡಾ ಹೀಗೆ,  ಆಚೆ ಮನೆ ಭೀಮ,  ನನ್ನ ಕ್ಲಾಸ್ ಮೇಟ್  ಸದಾನಂದಾ ಎಲ್ಲರು  ಹೀಗೆ,  ಕೆಲವರಿಗೆ  ಅಂತು ಮಗ ಸೊಸೆ  ಅಂತು  ಸರಿಯಾಗಿ ನೋಡಿಕೊಳ್ಳೊದೆ ಇಲ್ಲ ಪಾಪ,     ನಮ್ಮ ಬಾಸ್  ಶಂಕರ್ ಅವರ ಪತ್ನಿ ಕೂಡಾ  ಹೋದ್ರಂತೆ,  ಹುಲಿ ಅಂತೆ ಇದ್ದವರು ಈಗ  ಇಲಿ ಅಂತೆ ಆಗಿಬಿಟ್ಟಿದಾರೆ,  ಇನ್ನೂ ನಿವೃತ್ತಿ ಆಗಿಲ್ಲ,  ಸದಾ ಕೆಲಸದಲ್ಲೆ  ಮುಳುಗಿರ್ತಾರೆ  ಒಂಟಿತನ  ಮರೆಯಲು,  ಆದ್ರು  ಇಷ್ಟು ವರ್ಷ ಸಂಸಾರ ಮಾಡಿದ  ಸಂಗಾತಿ  ಇಲ್ಲದ ಏಕಾಂತ ಅನುಭವಿಸೋದು  ಹೆಣ್ಣಿಗಿಂತ ಗಂಡಿಗೆ  ಕಷ್ಟ. ಪತ್ನಿಯ ಪಟದ ಎದುರು ಮಾತಾಡ್ತಾ,  ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದ  ರಾಯರ ಫೋನ್ ಗೆ ಕರೆ ಬಂತು,  ಜಾರಿದ ಕಣ್ಣೀರು ಒರೆಸಿಕೊಂಡು  ಫೋನ್ ರಿಸೀವ್ ಮಾಡಿದರು …     ಅರೆ,  ನಮ್ಮ ಬಾಸ್ ಶಂಕರ್ ಅವರ ನಂಬರ್,  ಅವರು ತುಂಬಾ ಕುಗ್ಗಿಹೋಗಿದ್ರು ಅವರಿಗೆ ಏನಾದರೂ ಆಯ್ತಾ,  ಅಯ್ಯೋ ದೇವರೆ ಹಾಗಾಗದೆ ಇರಲಿ ಅಂದು ಫೋನ್ ರಿಸೀವ್ ಮಾಡಿದ…    ರಾಯರೆ ಏನ್ಮಾಡ್ತಿದ್ರಿ..? ಬಾಸ್ ಧ್ವನಿ ಕೇಳಿ ಸಮಾಧಾನ ಆಯ್ತು,  ಇನ್ನೆನಿರುತ್ತೆ ಸರ್,  ಒಂಟಿ ಮನೆಯಲ್ಲಿ ಅಂತರ್ ಪಿಶಾಚಿ ತರ ಇದೆನೆ… ರಾಯರೆ ಹಾಗೆಕಂತಿರಾ..? ಮತ್ತಿನ್ನೇನು  ಸರ್,  ನಮ್ಮ ಕಷ್ಟ ಸುಖ, ನೋವು ನಲಿವು ಕೇಳೊ ಜೀವ ಇಲ್ಲ, ನಿಮಗೂ ಅನುಭವ  ಆಗಿದೆ ಅಲ್ವಾ ಸರ್… ಅದು ನಿಜಾನೆ ರಾಯರೆ, ಎಷ್ಟೆ ಕೋಪ, ಮುನಿಸು ಇದ್ರು,  ನಮ್ಮ ಕಷ್ಟ ಕೇಳೊ  ಪತ್ನಿನ ಇದ್ದಾಗ ಅರ್ಥ ಮಾಡಿಕೊಳ್ಳುವಲ್ಲಿ  ಸೋತಬಿಟ್ಟೆ,  ಈಗ  ಒಂದೊಂದು ಕ್ಷಣ  ಅವಳ  ನೆನಪಿಲ್ಲದೆ  ಬದುಕಲು ಆಗ್ತಾ ಇಲ್ಲ,  ಹಾ ರಾಯರೆ  ನಿಮಗೆ  ಒಂದು ಮುಖ್ಯವಾದ  ವಿಷಯ ತಿಳಿಸಬೇಕಿತ್ತು… ಎನ್ ಸರ್ ಅದು…    ರಾಯರೆ ನಾನು  ಸ್ವಯಂ ನಿವೃತ್ತಿ ಪಡಿತಾ ಇದೆನೆ…    ಸರ್, ಯಾಕೆ ಹಾಗೆ ಮಾಡಿದ್ರಿ,  ಕೆಲಸ ಇಲ್ಲದೇ  ಒಂಟಿಯಾಗಿ ವೇಳೆ ಕಳಿಯೋದು ತುಂಬಾ ಕಷ್ಟ…    ನಿಜಾ  ರಾಯರೆ, ನಾನೊಂದು ನಿರ್ಧಾರಕ್ಕೆ ಬಂದಿದೆನೆ, ಉಳಿದಿರೊ ಜೀವನ ಸಂತೋಷ ವಾಗಿ  ಕಳೆಯಬೇಕು,   ಮಕ್ಕಳು ಸೊಸೆ, ಅಳಿಯ  ಯಾರ ಹಂಗು ಇಲ್ಲದೇ,  ವೃದ್ದಾಶ್ರಮದಲ್ಲಿ  ಇರಬೇಕು ಅಂತಾ ಮಾಡಿದೆನೆ,  ಅಲ್ಲಿ ನಮ್ಮಂತಹ ಹಿರಿಯ ಜೀವಗಳು ಇರ್ತಾರೆ,  ಸಮಾನ ವಯಸ್ಕರ ಜೊತೆ  ಇಡೀ ದಿನ ಕಳೆದು,  ಮನಸ್ಸು  ಉಲ್ಲಾಸಿತ ಆಗಿರಬೇಕು ಅಂದ್ರೆ ಅದೆ ಸರಿ ಅನ್ನಿಸಿತು,  ನನ್ನ ಗೆಳೆಯ ಒಬ್ಬನು ಈಗ ವರ್ಷದಿಂದ ಇದಾನೆ,  ಅವನು  ಅಲ್ಲಿ   ಖುಷಿ ಇಂದ ಇದಾನೆ, ನೀವು ಬನ್ನಿ, ಆದರೆ  ನಾನಲ್ಲಿ  ನಿಮ್ಮ  ಬಾಸ್ ಅಲ್ಲ  ಗೆಳೆಯ, ನಾವು ಸಮಾನ ದುಃಖಿಗಳು…     ರಾಯರು  ತುಂಬಾ ಯೋಚನೆ ಮಾಡಿ  ತಮ್ಮ  ವಾಕಿಂಗ್ ಗೆಳೆಯರ  ಜೊತೆ ಚರ್ಚಿಸಿದಾಗ, ಒಂದು ರೀತಿಯಲ್ಲಿ ಅದೆ  ಸರಿ ಅನ್ನಿಸಿತು,  ಸಮಾನ ವಯಸ್ಕರು,  ಸಮಾನ ದುಃಖಿಗಳು ಇರುವೆಡೆ,  ಕ್ರಿಯಾಶಿಲರಾಗಿ  ವೃದ್ದಾಶ್ರಮದಲ್ಲಿ  ಇರೋದೇ  ಸರಿ ಅನ್ನಿಸಿತು…    ಮಗನಿಗೆ ನಿರ್ಧಾರ ತಿಳಿಸಿದಾಗ,  ನಾವೆಲ್ಲ ಇದ್ದು ವೃದ್ದಾಶ್ರಮ ಯಾಕೆ ಅಪ್ಪಾ ,  ನೋಡಿದವರು  ತಂದೆಯನ್ನು ಮಗ ಸೊಸೆ  ಚನ್ನಾಗಿ ನೋಡಿಕೊಳ್ಳಲಿಲ್ಲ  ಅಂತಾ ಆಡಿಕೊಳ್ಳುತಾರೆ,  ನಾವೇನು ಕಡಿಮೆ ಮಾಡಿದೆವೆ…. ಮಾವ   ನಿಮ್ಮ ಆರೋಗ್ಯಕ್ಕೆ  ಹೊಂದುವಂತ  ಊಟ, ಸರಿಯಾದ ವೇಳೆಗೆ ಮಾತ್ರೆ,  ತಿಂಗಳಿಗೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋದ್ರು ಯಾಕೆ ಮಾವ ಇಂತಹ ನಿರ್ಧಾರ ತಗೆದುಕೊಂಡ್ರಿ   ಅಂದು ಮಗ ಸೊಸೆ  ಒಪ್ಪಲಿಲ್ಲ… ಮಕ್ಕಳು ಚನ್ನಾಗಿ ನೋಡಿಕೊಳ್ಳಲಿಲ್ಲಾ ಅಂತಾ ವೃದ್ದಾಶ್ರಮ ಕ್ಕೆ  ಹೋಗ್ತಾ ಇಲ್ಲ, ನನ್ನ ಏಕಾಂತತೆ  ದೂರ ಮಾಡಿಕೊಳ್ಳಲು ಅಂದು ರಾಯರು ಅರ್ಥ ಮಾಡಿಸಿ, ಬಿಡಿಸಿ,  ಸಮಾಧಾನ ದಿಂದ   ಹೇಳಿದಾಗ ತಂದೆಯ ಮಾತಲ್ಲೂ  ಸತ್ಯ ಇದೆ ಅಂದು ಒಪ್ಪಿದ,  ಮಗ ಸೊಸೆ  ಸಂತೋಷಕ್ಕೆ  ಮೊಮ್ಮಕ್ಕಳೊಂದಿಗೆ  ದೀಪಾವಳಿ ಆಚರಿಸಿ  ವೃದ್ದಾಶ್ರಮ ಕಡೆ  ನಡೆದರು ರಾಯರು …    ವೃದ್ದಾಶ್ರಮ ಕ್ಕೆ  ಹೋದ ರಾಯರಿಗೆ ಹೊಸ ಲೋಕ ತೇರೆದಂತಾಯಿತು,  ತಮ್ಮ ಬಾಸ್ ಜೊತೆ ಆದ್ರು,  ತಮ್ಮಂತಹ ಅನೇಕರು  ಸಿಕ್ಕರು,  ರಾಯರಿಗೆ  ನಿಜವಾದ ದೀಪಾವಳಿ  ವೃದ್ದಾಶ್ರಮದ  ಸ್ನೇಹಿತರ, ಸಂಗಡಿಗರ, ಮೇಲ್ವಿಚಾರಕರ   ಸ್ನೇಹ,  ಪ್ರೀತಿ ಆತ್ಮೀಯತೆಯಲ್ಲಿ  ಸಿಕ್ಕಿತು,  ವೃದ್ದಾಶ್ರಮ ಒಂಟಿ  ಬಾಳಿಗೆ ಬೇಳಕಾಯ್ತು…. ================================= ಪರಿಚಯ: ಗೃಹಿಣಿ,ಹವ್ಯಾಸಿ ಲೇಖಕಿ,ಇವರ ಹಲವು ಬರಹಗಳು ವಿವಿಧ ಪತ್ರಿಕೆಗಳಲ್ಲಿಬಂದಿವೆ.ಇನ್ನೂ ಪುಸ್ತಕ ಹೊರತಂದಿಲ್ಲ

ಕಥಾಗುಚ್ಛ Read Post »

ಕಥಾಗುಚ್ಛ

ಸಣ್ಣಕಥೆ

ಪ್ರೀತಿ ಆನಂದ್ ಕೊರಟಿ ಆಫೀಸಿಗೆÉ ತಡವಾಗುತ್ತಿದೆ, ಬೇಗ ಹೋಗಬೇಕು…’ ಅವನು ತನ್ನ ಕೋಟನ್ನು ಭುಜದ ಮೇಲೆ ಹಾಕಿಕೊಳ್ಳುತ್ತಾ ಜೋರಾಗಿ ಹೇಳಿದ. ಮೆಟ್ಟಿಲುಗಳನ್ನು ಇಳಿದು ಮನೆಯಿಂದ ಹೊರಗೆ ಓಡುತ್ತಾ ಹೊರಟ. ಅವನು ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಂತೆ, ಅವಳು ಓಡುತ್ತಾ ಮೆಟ್ಟಿಲಿಳಿದು ಬಂದಳು. ‘ತಡಿ, ತಡಿ….’ ಎಂದು ಕೂಗಿದಳು, ಆದರೆ ಅಷ್ಟರಲ್ಲಿ ಅವನು ಹೊರಟು ಹೋಗಿದ್ದ. ಅವಳ ಮುಖ ಮುದುರಿದ ಕಾಗದದಂತೆ ಆಯಿತು. ‘ಅವನು ಹೋಗುವಾಗ ನನಗೆ ಮುತ್ತಿಕ್ಕುವುದನ್ನು ಮರೆತ’ ತನಗೆ ಆದ ನೋವಿನಿಂದ ನಡುಗುವ ಧ್ವನಿಯಲ್ಲಿ ಪಿಸುಗುಟ್ಟಿದಳು. ಅವಳು ಅವನಿಗೆ ಕರೆ ಮಾಡಿ, ‘ನೀನು ನನಗೆ ಮುತ್ತಿಡದೇ ಹೋದೆ’ ಆರೋಪ ಮಾಡುವವಳಂತೆ ಹೇಳಿದಳು. ‘ನನ್ನನ್ನು ಕ್ಷಮಿಸು, ನನ್ನ ಮುದ್ದಿನ ಮಗಳೆ’ ಅವನು ಪರಿತಪಿಸುವ ಧ್ವನಿಯಲ್ಲಿ ಹೇಳಿದ. ಅವಳು ದೊಡ್ಡ ಹೆಂಗಸಿನಂತೆ ‘ಸರಿ ಬಿಡು’ ಎಂದು ಕರೆಯನ್ನು ಕಡಿತಗೊಳಿಸುತ್ತಾ ಹೇಳಿದಳು. ನಂತರ ಸಿಡುಕಿನಿಂದ ತಿಂಡಿ ನುಂಗಿದಳು, ತನ್ನ ಶೂಗಳನ್ನು ಧರಿಸಿದಳು, ತನ್ನ ಶಾಲೆಯ ಬ್ಯಾಗ್ ತೆಗೆದುಕೊಂಡು ಬಾಗಿಲಿನಿಂದ ಹೊರಗೆ ನಡೆದಳು. ಮನಸ್ಸಿನ ಭಾರಕ್ಕೆ ಅವಳ ಭುಜಗಳು ಕುಸಿದವು. ಅವಳು ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ಕಾರು ಮನೆಯ ಹೊರಗಿನ ಪೆÇರ್ಟಿಕೋಗೆ ಬಂತು. ಅವನು ಕಾರ್‌ನಿಂದ ಹೊರಗೆ ಬಂದ. ಅವಳು ಅವನೆಡೆಗೆ ಓಡಿದಳು. ಅವಳ ಮುಖವು ಕ್ರಿಸಮಸ್ ಟ್ರೀಯಂತೆ ಬೆಳಗಿತು. ‘ನನ್ನನ್ನು ಕ್ಷಮಿಸು ಕಂದಾ, ನಾನು ಮರೆತೆ’ ಅವನು ಅವಳನ್ನು ಮೇಲಕ್ಕೆತ್ತುತ್ತಾ ಹೇಳಿದ. ಪ್ರೀತಿಯ ಮುತ್ತಿನ ಮಳೆಗೈದ. ಅವಳು ಏನೂ ಹೇಳಲಿಲ್ಲ. ಮಂದಹಾಸದ ಮುಗುಳ್ನಗೆ ಬೀರಿದಳು. ಹದಿನೈದು ವರ್ಷಗಳ ನಂತರ- ಆ ದಿನ ಆತ ಆಫೀಸಿಗೆ ತಡವಾಗಿ ಬಂದಿದ್ದ ಎಂದು ಯಾರೂ ನೆನಪಿಸಿಕೊಳ್ಳುತ್ತಿಲ್ಲ. ಆದರೆ ಆ ಚಿಕ್ಕ ಬಾಲಕಿ ತನ್ನ ತಂದೆ ಕೇವಲ ತನಗೆ ಪ್ರೀತಿಯ ಮುತ್ತಿಡುವುದಕ್ಕಾಗಿಯೇ ಬಹಳ ದೂರದ ಆಫೀಸಿನಿಂದ ಮರಳಿ ಕಾರನ್ನು ಚಲಾಯಿಸಿಕೊಂಡು ಹಿಂತಿರುಗಿ ಬಂದಿದ್ದನೆಂದು ಇನ್ನೂ ಮರೆತಿಲ್ಲ. ==================================================== ಪರಿಚಯ: ವೃತ್ತಿಯಲ್ಲಿ ಪುಸ್ತಕ ಪ್ರಕಾಶಕ, ಷೇರು ಮಾರುಕಟ್ಟೆ ಮತ್ತು ಬಂಡವಾಳ ಹೂಡಿಕೆಯಲ್ಲಿ ಆಸಕ್ತಿ. ಆಗಾಗ್ಗೆ ತೋಚಿದ್ದು ಗೀಚುತ್ತೆÃನೆ. ಉಳಿದಂತೆ ಎಲ್ಲರೊಳಗೊಂದಾದ ಮಂಕುತಿಮ್ಮ.

ಸಣ್ಣಕಥೆ Read Post »

ಕಥಾಗುಚ್ಛ

ಕಥಾಗುಚ್ಛ

ಜಿ.ಹರೀಶ್ ಬೇದ್ರೆ ಯಾಣ ಬಿಸಿಲು ಬೆವರಿಗೆ ಹೊಂದಿಕೊಂಡು ಬೆಳೆದಿದ್ದ ಮೈಮನಗಳಿಗೆ ಮೊದಲ ಬಾರಿಗೆ ಥರಗುಟ್ಟುವ ಚಳಿಯಲ್ಲಿ ಹೊದೆಯಲು ಏನೂ ಇಲ್ಲದೆ ರಾತ್ರಿಯೆಲ್ಲಾ ಮುದುಡಿಕೊಂಡೇ ಮಲಗಿ, ಪುಣ್ಯಾತ್ಮರ ಮನೆಯೊಂದರಲ್ಲಿ ತಾಮ್ರದ ಹಂಡೆಯಲ್ಲಿ ಹದವಾಗಿ ಕಾಯಿಸಿದ ನೀರನ್ನು  ಸ್ನಾನ ಮಾಡುವ ಅವಕಾಶ ಸಿಕ್ಕಿತು.  ಒಮ್ಮೆ ಹಬೆಯಾಡುವ ಬಿಸಿನೀರು ಮೈಮೇಲೆ ಬಿದ್ದೊಡನೆ ಹಿಂದಿನ ದಿನ ನಡೆದೂ ನಡೆದು ಸುಸ್ತಾಗಿದ್ದ ನೋವೆಲ್ಲಾ ಅರ್ಧ ಮಾಯವಾದಂತಾಗಿತ್ತು. ಬಚ್ಚಲು ಮನೆಯೂ ಹಿಂಭಾಗದಲ್ಲಿ ಇದದ್ದರಿಂದ ಎಲ್ಲರೂ ಸ್ನಾನ ಆಗುವ ತನಕ ಅಲ್ಲೇ ಹಿಂದೆ ಗಿಡಮರಗಳನ್ನು ನೋಡುತ್ತಾ, ಮಾತನಾಡುತ್ತಾ ನಿಂತಿದ್ದೆವು. ನಮ್ಮೆಲ್ಲರ ಸ್ನಾನ ಆದದ್ದನ್ನು ಗಮನಿಸಿ ಒಳಗಿನಿಂದ ತಿಂಡಿ ತಿನ್ನಲು ಕರೆ ಬಂತು. ನಾವು ಮನೆಯ ಒಳ ಹೋಗಿ ಹಾಲಿನಲ್ಲಿ ಕೂರುವ ಮೊದಲೇ ಬಾಳೆ ಎಲೆಯಲ್ಲಿ ಬಿಸಿಬಿಸಿ ಉಪ್ಪಿಟ್ಟು, ಅದರ ಮೇಲೆ ಗಟ್ಟಿಯಾದ ತುಪ್ಪ, ಜೊತೆಗೆ ಮಜ್ಜಿಗೆ ಮೆಣಸು ಮತ್ತು ಒಂದೆರಡು ಬಗೆಯ ಸಂಡಿಗೆಗಳು  ಅಲಂಕರಿಸಿದ್ದರು.  ಅದನ್ನು ನೋಡಿದೊಡನೆ ಹೆಚ್ಚುಕಮ್ಮಿ ನಿನ್ನೆ ಮಧ್ಯಾಹ್ನದಿಂದಲೇ ಖಾಲಿ ಇದ್ದ ಹೊಟ್ಟೆಗಳು ಬೇಗ ಬೇಗ ಎಂದು ಅವಸರಿಸತೊಡಗಿದವು. ಆಶ್ಚರ್ಯ ಎಂದರೆ ಇಲ್ಲಿಯವರೆಗೆ ಉಪ್ಪಿಟ್ಟು ಬೇಡವೇ ಬೇಡ ಎನ್ನುತ್ತಿದ್ದ ಇಬ್ಬರೂ ಎಲ್ಲರಿಗಿಂತ ಮೊದಲು ಎಲೆಯ ಮುಂದೆ ಕುಳಿತಿದ್ದರು. ಹಸಿದವನಿಗೆ ಹಳಸಿದ ಅನ್ನವೇ ಮೃಷ್ಟಾನ್ನ ಆಗುವಾಗ ಬಿಸಿಬಿಸಿ ಉಪ್ಪಿಟ್ಟು ಗಂಟಲಲ್ಲಿ ಇಳಿಯದೆ ಇರಲು ಸಾಧ್ಯವೇ.  ಎಲ್ಲರೂ ಗಂಟಲು ಬಿರಿಯುವಂತೆ ತಿಂದೆವು. ತಿಂಡಿ ತಿಂದು ಸ್ವಲ್ಪ ಹೊತ್ತಿನ ನಂತರ ಹೊರಡುತ್ತೇವೆ ಎಂದು ಎದ್ದಾಗ ಮನೆಯವರು ಕಾಫಿ ಕುಡಿದು ಹೊರಡುವಂತೆ ಹೇಳಿದರು. ನಮಗೂ ಇದು ಬೇಕೆನಿಸಿದ್ದರಿಂದ ದೂಸ್ರಾ ಮಾತನಾಡದೆ ಮತ್ತೆ ಕುಳಿತೆವು. ಅಡುಗೆಮನೆಯಿಂದ ನಾವು ಕುಳಿತಿದ್ದ ಹಾಲಿಗೆ ಕಾಫಿ ಬರುವ ಮುನ್ನವೇ ಅದರ ಘಮ ನಮ್ಮನ್ನು ಸುತ್ತುವರೆದಿತ್ತು.   ನಾವು ದಿನಕ್ಕೆ ನಾಲ್ಕೈದು ಬಾರಿ ಕುಡಿಯಬಹುದಾದಷ್ಟು ಕಾಫಿಯನ್ನು ಒಂದೇ ಲೋಟದಲ್ಲಿ ಕೊಟ್ಟಿದ್ದರು. ಈಗಾಗಲೇ ಅದರ ಪರಿಮಳಕ್ಕೆ ಸೋತು ಶರಣಾಗಿದ್ದರಿಂದ ಯಾರೊಬ್ಬರೂ ಬೇಡವೆನ್ನದೆ ಖುಷಿಯಿಂದ ಗುಟುಕರಿಸುವಾಗ ರಾಘು ತೋರು ಬೆರಳಿಂದ ಎದುರಿಗೆ ತೋರಿಸುತ್ತಾ ಏಯ್… ಏಯ್… ಎಂದು ವಿಚಿತ್ರವಾಗಿ ಧ್ವನಿ  ಮಾಡುತ್ತಾ ಜೋರಾಗಿ ನಡುಗತೊಡಗಿದ. ನಾವು ಇವನಿಗೆ ಏನಾಯ್ತು ಎಂದು ನೋಡುವಾಗಲೇ ಕೈಯಲ್ಲಿದ್ದ ಕಾಫಿಯನ್ನು ಮೈಮೇಲೆ ಚೆಲ್ಲಿಕೊಂಡ. ನಾವೆಲ್ಲ ತಕ್ಷಣ ಎದ್ದು ಅವನ ಬಳಿಬಂದು ಏನೂ ಎಂದು ಕೇಳಿದರೆ, ಏನೊಂದೂ ಮಾತನಾಡದೆ ಎದುರಿನ ಗೋಡೆಯನ್ನೇ ನೋಡುತ್ತಿದ್ದ. ನಾವುಗಳು ಅವನು ನೋಡುತ್ತಿದ್ದ ಕಡೆ ನೋಡಿದಾಗ ನಮ್ಮೆಲ್ಲರ ಹೃದಯಗಳ ಬಡಿತವೂ ಬುಲೆಟ್ ಟ್ರೈನ್  ವೇಗಕ್ಕಿಂತ ಜೋರಾಗಿ ಬಡಿದುಕೊಳ್ಳಲಾರಂಭಿಸಿದವು.ಸುರೇಶ್ ಹೆಬ್ಳೀಕರ್, ದೇವರಾಜ್ ಮುಂತಾದವರು ನಟಿಸಿದ್ದ ಚಿತ್ರವೊಂದು ಬಿಡುಗಡೆಯಾಗಿತ್ತು. ಅದರಲ್ಲಿ ಯಾಣವನ್ನು ಬಹಳ ಚೆನ್ನಾಗಿ ತೋರಿಸಿದ್ದರು. ಆ ಸಿನಿಮಾ ನೋಡಿದ ಮೇಲೆ ನಾವು ಒಮ್ಮೆ ಅಲ್ಲಿಗೆ ಹೋಗಿ ಬರಬೇಕು ಎಂದುಕೊಂಡಿದ್ದೆವು. ಅದೇ ಸಂದರ್ಭದಲ್ಲಿ  ನಮ್ಮ ಪರಿಚಯದ ಪದ್ಮಕುಮಾರಿಯವರು ತಮ್ಮವರೊಂದಿಗೆ ಅದೇ ತಾಣಕ್ಕೆ ಹೋಗಿ ಬಂದು ವಾರಪತ್ರಿಕೆಯೊಂದರಲ್ಲಿ ಸಚಿತ್ರ ಚಾರಣ ಬರಹವನ್ನು ಬರೆದಿದ್ದರು. ಅದನ್ನು ಓದಿದ ಮೇಲಂತೂ ಹೋಗಿಬರಲೇ ಬೇಕೆಂದು ಸಮಾನ ಮನಸ್ಕರಾದ ಎಂಟು ಜನ ಗೆಳೆಯರು ಆಗಿನ ಮೆಟಡೋರನ್ನು ಎರಡು ದಿನದ ಬಾಡಿಗೆಗೆ ಗೊತ್ತುಮಾಡಿಕೊಂಡು ಹೊರಟೆವು. ಹೊರಡುವ ಮೊದಲು ಈಗಾಗಲೇ ಅಲ್ಲಿಗೆ ಹೋಗಿಬಂದಿದ್ದ ಪರಿಚಯದ ಲೇಖಕಿಯನ್ನು ಭೇಟಿಮಾಡಿ ನಾವೂ ಹೋಗಿಬರಲು ಬೇಕಾದ ಮಾಹಿತಿಯನ್ನು ಪಡೆದಿದ್ದೆವು.ಅವರ ಮಾರ್ಗದರ್ಶನದಂತೆ ಮೊದಲ ದಿನ ಹರಿಹರದಲ್ಲಿ ಹರಿ ಮತ್ತು ಹರನನ್ನು ಒಂದೇ ಶಿಲೆಯಲ್ಲಿ ಕೆತ್ತಿರುವ ಹರಿಹರೇಶ್ವರ ದೇವಾಲಯವನ್ನು ನೋಡಿ, ಬನವಾಸಿಯಲ್ಲಿ ಮಧುಕೇಶ್ವರ ಮತ್ತು  ಮಂಜುಗುಣಿಯಲ್ಲಿ ವೆಂಕಟರಮಣನ ದರ್ಶನ ಮಾಡಿಕೊಂಡು ಶಿರಸಿ ಬಂದಾಗ ಸಂಜೆಯಾಗಿತ್ತು. ಅಲ್ಲೇ  ದೇವಸ್ಥಾನದ ಛತ್ರದಲ್ಲಿ ಉಳಿದುಕೊಂಡು, ಆ ದಿನ ಸಂಜೆಯೇ ಶಿರಸಿ ಮಾರಿಕಾಂಬೆಯ ದರ್ಶನ ಮಾಡಿ, ಪೂಜೆಯನ್ನು ಮಾಡಿಸಿದೆವು.  ಮಾರನೇ ದಿನ ಬೆಳಿಗ್ಗೆ ಬೇಗನೇ ಹೊರಟು ಯಾಣ ನೋಡಬೇಕಾದ್ದರಿಂದ ಮತ್ತು ಮುಂಜಾನೆಯಿಂದ ಚೆನ್ನಾಗಿ ಸುತ್ತಿದ್ದರಿಂದ ರಾತ್ರಿ ಬೇಗನೆ ಮಲಗಿದೆವು.ಮುಂಜಾನೆ ಆರುವರೆಗೆಲ್ಲಾ ಎಲ್ಲರೂ ಸಿದ್ದರಾಗಿ  ಹೋಟೆಲಿಗೆ ಬಂದು ಕಾಫಿ ಕುಡಿದು ಎಲ್ಲರಿಗೂ ಸಾಕಾಗುವಷ್ಟು ಇಡ್ಲಿಯನ್ನು ಕಟ್ಟಿಸಿಕೊಂಡು ಕುಮಟಾ ಮಾರ್ಗವಾಗಿ ಯಾಣದತ್ತ ಪಯಣ ಬೆಳೆಸಿದೆವು. ಸುಮಾರು ನಲವತ್ತು ಕಿ.ಮೀ. ದೂರ ಬಂದ ಮೇಲೆ ಪದ್ಮಕುಮಾರಿಯವರು ಹೇಳಿದಂತೆ ಬಲಭಾಗದಲ್ಲಿ ಯಾಣಕ್ಕೆ ದಾರಿ ಎಂಬ ಫಲಕ ಕಾಣಿಸಿತು.  ಅದು ರಸ್ತೆಯಿಂದ ಅಷ್ಟು ದೂರಕ್ಕೆ ಮಾತ್ರ ವಿಶಾಲವಾದ ದಾರಿಯಿದ್ದು, ಅಲ್ಲೇ ಎಣಿಸಿದಂತೆ ನಾಲ್ಕು ಚಿಕ್ಕಚಿಕ್ಕ ಮನೆಗಳಿದ್ದವು.  ಅಲ್ಲಿಂದ ಮುಂದೆ ಕಾಲು ದಾರಿ ಮಾತ್ರವಿದ್ದು ನಡೆದುಕೊಂಡೇ ಮುಂದೆ ಸಾಗಬೇಕಿತ್ತು.  ಲೇಖಕಿ ಇದನ್ನು ಮೊದಲೇ ತಿಳಿಸಿದ್ದರೂ, ನಾವು ಮತ್ತೊಮ್ಮೆ ಅಲ್ಲೇ ಮನೆಯ ಬಳಿಯಿದ್ದ ವಯಸ್ಕರೊಬ್ಬರನ್ನು ಯಾಣಕ್ಕೆ ಹೋಗುವ ದಾರಿ ಇದೇನಾ ಎಂದು ಕೇಳಿ ಖಾತ್ರಿ ಪಡಿಸಿಕೊಂಡು ಮುಂದಕ್ಕೆ ಹೆಜ್ಜೆ ಹಾಕಿದ್ದೇವು.  ಅವರ ಅನುಮತಿಯೊಂದಿಗೆ ನಮ್ಮ ಮೆಟಡೋರನ್ನು ಅಲ್ಲೇ ನಿಲ್ಲಿಸಿ, ಕಟ್ಟಿಸಿಕೊಂಡಿದ್ದ ತಿಂಡಿ ಪೊಟ್ಟಣಗಳೊಂದಿಗೆ ಹೊರಟೆವು.ನಮ್ಮಲ್ಲಿ ಸುತ್ತಮುತ್ತ ಎತ್ತಾ ನೋಡಿದರೂ, ಬೆಟ್ಟ ಗುಡ್ಡಗಳ ಸಾಲು, ಅಲ್ಲಿ ಚಿತ್ರವಿಚಿತ್ರವಾದ  ಕಲ್ಲು, ಬಂಡೆಗಳನ್ನು ನೋಡಿದ್ದ ನಮಗೆ, ಇಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚಹಸಿರಿನ ಗಿಡ ಮರಗಳು. ಜೊತೆಗೆ ಅದರಲ್ಲಿ ಕುಳಿತೋ ಅಥವಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ವಚ್ಛಂದವಾಗಿ ಹಾರುತ್ತಾ ಉಲಿವ ಹಕ್ಕಿಗಳ ಇಂಚರ.  ಇದರೊಂದಿಗೆ ನಾನೇನೂ ಕಮ್ಮಿ ಎನ್ನುವಂತೆ ಎಲ್ಲೆಲ್ಲಿಂದಲೋ ಜುಳುಜುಳು ಹರಿಯುವ ನೀರಿನ ನಿನಾದ.  ಇದನ್ನೆಲ್ಲ ನೋಡುತ್ತ, ಕೇಳುತ್ತಾ ಸಾಗುತ್ತಿದ್ದರೆ, ಸ್ವರ್ಗವೇ ಭೂಮಿಗಿಳಿದು ಬಂದಂತೆ ಭಾಸವಾಗುತ್ತಿತ್ತು. ಹಾಗೇ ಖುಷಿಯಿಂದ ಕೂಗುತ್ತ, ಕುಣಿಯುತ್ತಾ ಐದಾರು  ಕಿ.ಮೀ. ನಡೆದು ಸಾಗಬೇಕಾದ  ದಾರಿಯಲ್ಲಿ  ಮೂರು ಕಿ.ಮಿ. ಬಂದಾಗ ಅಡ್ಡವಾಗಿ ನದಿಯೊಂದು ಸಿಕ್ಕಿತು. ಆಗಲೇ ಸಮಯ ಹತ್ತು ಗಂಟೆಯಾಗಿತ್ತು ಜೊತೆಗೆ ಹೊಟ್ಟೆ ಚುರುಗುಡಲಾರಂಭಿಸಿತ್ತು. ಹಾಗಾಗಿ ಅಲ್ಲೇ ಕುಳಿತು ಕಟ್ಟಿಸಿಕೊಂಡು ಬಂದಿದ್ದ ತಿಂಡಿಯನ್ನು ತಿಂದು ನದಿಯ ನೀರನ್ನೇ ಕುಡಿದೆವು. ನಡೆದು ಉರಿ ಎದಿದ್ದ ಕಾಲುಗಳನ್ನು ನದಿಯ ತಣ್ಣನೇ ನೀರಲ್ಲಿ ಬಿಟ್ಟುಕೊಂಡು ಕುಳಿತ್ತಿದ್ದರಿಂದ ಮನಸಿಗೆ ಹಿತ ನೀಡುತ್ತಿತ್ತು.  ನಾವು ನೋಡಲು ಬಂದಿದ್ದ ಜಾಗ ತಲುಪಲು ಇನ್ನೂ ಎರಡರಿಂದ ಮೂರು ಕಿ.ಮಿ. ನಡೆಯಬೇಕಿತ್ತು.  ಹಾಗಾಗಿ ಅಲ್ಲಿ ತಡಮಾಡದೆ ಹೊರಟೆವು. ನದಿ ದಾಟಿ ಸ್ವಲ್ಪ ಮುಂದೆ ಬಂದನಂತರ ಕಾಲುದಾರಿಯಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದು ದಾರಿ ಕಾಣದಂತಾಗಿತ್ತು. ನಾವು ಹೋಗುತ್ತಿರುವ ದಾರಿ ಸರಿಯಿದೆಯೇ ಎಂದು ಕೇಳಲು ಅಲ್ಲಿ ಯಾರೆಂದರೇ ಯಾರು ಇರಲಿಲ್ಲ. ಲೇಖಕಿಯವರು ಕಾಲುದಾರಿಯಲ್ಲಿ ಸೀದಾ ನಡೆಯುತ್ತಾ ಹೋದರೆ ಆಯಿತು ಎಲ್ಲಿಯೂ ತಿರುವುಗಳು ಬರುವುದಿಲ್ಲ ಎಂದು ಹೇಳಿದ್ದರಿಂದ ಅದೇ ದಾರಿಯಲ್ಲಿ ನಡೆಯತೊಡಗಿದೆವು. ನಡೆಯುತ್ತಾ ಮೂರು ಕಿ.ಮಿ.ಗಿಂತ ಮುಂದೆ ಬಂದರು ಅಘೋರೇಶ್ವರ ದೇವಾಲಯವಾಗಲಿ, ಅದರ ಬಳಿ ಇರುವ ಶಿಖರಗಳಾಗಲ್ಲಿ ಕಾಣಲೇ ಇಲ್ಲ. ಏನು ಮಾಡುವುದೆಂದು ಯೋಚಿಸುತ್ತಾ ಹೆಜ್ಜೆ ಹಾಕುವಾಗಲೇ ಇದ್ದಕ್ಕಿದ್ದಂತೆ ಬಿಂದು ಮತ್ತು ಲೋಕು ಜೋರಾಗಿ, ವೆಂಕಣ್ಣ ಹಿಂದೆ ನಿನ್ನ ಪ್ಯಾಂಟ್ ನೋಡಿಕೋ ಎಂದರು. ನೋಡಿದರೆ, ಮಂಡಿಯಿಂದ ಕೆಳಭಾಗದಲ್ಲಿ ರಕ್ತ ಮಾಯವಾಗಿತ್ತು. ನಾವು ಏನಪ್ಪಾ ಎಂದುಕೊಳ್ಳುವಾಗಲೇ ವಾಹಿದ್, ಹೆದರಬೇಡ ವೆಂಕಣ್ಣ ಪ್ಯಾಂಟನ್ನು ಸ್ವಲ್ಪ ಮಾಡಿಸು ಎಂದವನು, ತಾನೇ ಹತ್ತಿರ ಬಂದು ಆ ಕೆಲಸಮಾಡಿ ಯಾವಾಗಲೋ ಅವನ ಮಂಡಿಯವರೆಗೆ ಹತ್ತಿ ರಕ್ತ ಹೀರುತ್ತಿದ್ದ ಜಿಗಣೆಯನ್ನು ತೋರಿಸಿ, ಅದನ್ನು ಬೆರಳಿನಿಂದ ಕೀಳಲು ನೋಡಿದ. ಅದು ಸಾಧ್ಯವಾಗದಾಗ, ತನ್ನ ಜೇಬಿನಿಂದ ಲೈಟರ್ ತೆಗೆದು ಅದರ ಬುಡಕ್ಕೆ ಉರಿ ಹಿಡಿದ.  ಆಗ ತಕ್ಷಣವೇ ಜಿಗಣೆ ಕೆಳಗೆ ಬಿತ್ತು. ಆದರೆ ವೆಂಕಟೇಶ್ ಕಾಲಿನಿಂದ ರಕ್ತ ಜಿನುಗುತ್ತಿತ್ತು. ಅದಕ್ಕೆ ಅರವಿಂದ್ ಅಲ್ಲೇ ಬೆಳೆದ ಗಿಡಗಳಲ್ಲಿ ಹುಡುಕಾಡಿ ಯಾವುದೋ ಸೋಪನ್ನು ತಂದು ಜಜ್ಜಿ ಗಾಯವಾದ ಜಾಗಕ್ಕೆ ಸವರಿದ. ಏನಾಶ್ಚರ್ಯ, ಸುರಿಯುತ್ತಿದ್ದ ರಕ್ತ ಎರಡೇ ನಿಮಿಷದಲ್ಲಿ ನಿಂತಿತು. ಆಗ ಅವನು ಮುಖದಲ್ಲಿ ಕಾಣುತ್ತಿದ್ದ ಹೆಮ್ಮೆ ನಿಜಕ್ಕೂ ನೋಡುವಂತ್ತಿತ್ತು. ಇದೆಲ್ಲಾ ಆದ ನಂತರ ಮತ್ತೆ ಮುಂದಕ್ಕೆ ಹೆಜ್ಜೆ ಹಾಕಿದೆವು. ಹೀಗೇ ನಡೆಯುತ್ತಾ ಮತ್ತೆ ಎರಡು ಕಿ.ಮಿ. ಬಂದರು, ಅಂದುಕೊಂಡ ಸ್ಥಳದ ಸುಳಿವೇ ಕಾಣಲಿಲ್ಲ. ಆಗ ಸಮಯ ಮೂರು ಗಂಟೆ. ಹೊಟ್ಟೆ ಹಸಿಯಲಾರಂಭಿಸಿತ್ತು. ಜೊತೆಗೆ ನಾವು ದಾರಿ ತಪ್ಪಿದ್ದು ಖಚಿತವಾಗಿತ್ತು. ಏಕೆಂದರೆ ಲೇಖಕಿ ಹೇಳಿದಂತೆ ಮತ್ತು ಸ್ಥಳೀಯ ಮನೆಯಾತ ಹೇಳಿದಂತೆ ನಾವು ಸರಿಯಾದ ದಾರಿಯಲ್ಲಿ ಬಂದಿದ್ದಾರೆ ಹನ್ನೊಂದುವರೆಗೆಲ್ಲಾ ಯಾಣ ತಲುಪಿ ಸಾಕೆನಿಸುವಷ್ಟು ನೋಡಿ ಊಟದ ಸಮಯಕ್ಕೆ ಶಿರಸಿಯಲ್ಲಿ ಇರಬೇಕಾಗಿತ್ತು. ಆದರೆ ಈಗ ಗಂಟೆ  ಮೂರದರೂ ನಮಗೆ ತಿಳಿಯದ ಜಾಗದಲ್ಲಿ ನಿಂತಿದ್ದೆವು.  ಮುಂದೆ ಹೋಗಬೇಕೋ, ಹಿಂದೆ ಹೋಗಬೇಕೋ ತಿಳಿಯದಂತ ಪರಿಸ್ಥಿತಿ.  ಎಲ್ಲರಿಗೂ ಇದೇ ಚಿಂತೆಯಾಗಿ ಪರಸ್ಪರ ಮಾತುಕತೆ ನಿಂತುಹೋಗಿತ್ತು. ಯಾಂತ್ರಿಕವಾಗಿ ನಿಧಾನವಾಗಿ ನಡೆಯುತ್ತಿದ್ದೆವೆ  ಹೊರತು ಯಾಣ ತಲುಪುವ ಭರವಸೆ ಇರಲಿಲ್ಲ. ಯಾವುದೋ ಚಿಂತೆಯಲ್ಲಿ ನಡೆಯುತ್ತಿದ್ದ ಜ್ಯೋತಿ ಮರದ ಬುಡವನ್ನು ಗಮನಿಸದೆ ಎಡವಿಬಿದ್ದ. ಬಿದ್ದವರನ್ನು ಎತ್ತಲು ವೆಂಕಟೇಶ್ ಮತ್ತು ಮೂಸಮಿಲ್ ಮುಂದಾದರು. ಆದರೆ ಅವರ ಸಹಾಯ ಪಡೆಯದೆ ಮೇಲೆದ್ದ ಜ್ಯೋತಿ, ಬೋಳಿ ಮಕ್ಕಳ ಯಾರ ಪ್ರಾಣ ತೆಗಿಬೇಕಂತ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ. ದಾರಿ ಗೊತ್ತಿಲ್ಲ ಅಂದ್ರು ಮುಂದೆ ಹೋಗ್ತಾನೆ ಇದೀರಾ. ಇನ್ನೂ ನನಾಂತೂ ಬರೋಲ್ಲ. ಬೇಕಿದ್ದರೆ ನೀವೇ ಹೋಗಿ ಎಂದು ಬಾಯಿಗೆ ಬಂದಂತೆ ನಮಗೆಲ್ಲಾ ಬೈಯತೊಡಗಿದ. ಸಾಮಾನ್ಯವಾಗಿ ಜ್ಯೋತಿ ಎಂದಿಗೂ ಈ ರೀತಿ ಆಡಿದವನಲ್ಲ. ಆದರೆ ಮುಂದೇನು ಎಂಬ ಚಿಂತೆ, ಜೊತೆಗೆ ಹೊಟ್ಟೆ ಹಸಿವು ಅವನನ್ನು ಕೆರಳುವಂತೆ ಮಾಡಿತ್ತು. ಅವನು ಹಾಗೆ ಮಾತನಾಡಿದೊಡನೇ ಲೋಕು ಸಿಟ್ಟಿನಿಂದ, ನಾವೇನೂ ನಿನ್ನ ಮನೆಗೆ ಬಂದು, ನೀನು ಬರಲೇ ಬೇಕೆಂದು ಆಮಂತ್ರಣ ಕೊಟ್ಟು ಕರೆದಿಲ್ಲ. ನಿಜ ಹೇಳಬೇಕೆಂದರೆ ನೀನೇ ನಮ್ಮನ್ನು ಹೊರಡಿಸಿದ್ದು ಎಂದು ಜೋರು ಮಾಡಿದ. ಇದು ಜಗಳ ಆಡುವ ಸಮಯವಲ್ಲವೆಂದು, ನಾನು, ರಾಘು, ವಾಹಿದ್, ಬಿಂದು ಎಲ್ಲಾ ಸೇರಿ ಇಬ್ಬರಿಗೂ ಸಮಾಧಾನ ಮಾಡಿದೆವು. ಅವರಿಬ್ಬರೂ ಸಮಾಧಾನವಾಗಿ, ನಾವು ಮುಂದೆ ಹೋಗುವುದೋ ಅಥವಾ ಬಂದು ದಾರಿಯಲ್ಲಿ ಹಿಂದಿರುಗುವುದೋ ಎಂದು ತೀರ್ಮಾನಿಸುವ ವೇಳೆಗೆ ಗಂಟೆ ನಾಲ್ಕಾಗಿತ್ತು. ಆಗಲೇ ಸೂರ್ಯನೂ ತನ್ನ ಅಂದಿನ ಕೆಲಸ ಮುಗಿಸಿ ಮುಳುಗುವ ಆತುರದಲ್ಲಿದ್ದಂತೆ ಕಂಡಿತು. ಏಕೆಂದರೆ ಇದು ಡಿಸೆಂಬರ್ ತಿಂಗಳಾಗಿತ್ತು ಹಾಗಾಗಿ ಬೆಳಕು ಕಮ್ಮಿಯಾಗುತ್ತಾ ಬಂದಿತ್ತು.  ಇದರಿಂದ ಎಲ್ಲರೂ ಬಂದ ದಾರಿಯಲ್ಲಿ ಹಿಂದಿರುಗುವ ನಿರ್ಧಾರಕ್ಕೆ ಬಂದೆವು. ಹಿಂದಿರುಗುವ ನಿರ್ಧಾರವಾದೊಡನೇ, ಅರವಿಂದ್ ಮತ್ತು ವೆಂಕಟೇಶ್ ಬೇಗ ಹೆಜ್ಜೆ ಹಾಕಿ ಇಲ್ಲ ಕತ್ತಲಾಗಿ ಬಿಡುತ್ತದೆ ಎಂದು ವೇಗವಾಗಿ ನಡೆಯತೊಡಗಿದರು. ಉಳಿದವರು ಅವರ ವೇಗಕ್ಕೆ ಹೆಜ್ಜೆ ಹಾಕಲು ಕಷ್ಟವಾಗುತ್ತಿತ್ತು. ಅರ್ಧ ದಾರಿಯೂ ಬಂದಿರಲಿಲ್ಲ, ರಾಘು ಬುಡಕಡಿದ ಬಾಳೆಗಿಡದಂತೆ ದಬ್ಬನೇ ಬಿದ್ದ. ಮತ್ತೆ ಎಲ್ಲರೂ ಅಲ್ಲಿ ನಿಲ್ಲಬೇಕಾಯಿತು. ಏನೆಂದು ಕೇಳಿದರೆ ತಲೆ ಸುತ್ತುತ್ತಿದೆ ಎಂದು. ಬಹುಶಃ ಹಸಿವಿನಿಂದ ಇದಾಗಿತ್ತು. ಅವನು ಸುಧಾರಿಸಿಕೊಳ್ಳುವರೆಗೂ ಉಳಿದವರು ಏನು ಮಾಡುವಂತಿರಲಿಲ್ಲ. ಹಾಗಾಗಿ ಅವನ ಸುತ್ತಲೇ ಕುಳಿತೆವು. ಪಾಪ ಬಿಂದು, ಅವನ ಕರವಸ್ತ್ರದಿಂದ  ರಾಘು ಮುಖಕ್ಕೆ ಗಾಳಿ ಹಾಕುತ್ತಿದ್ದ.  ಅಲ್ಲೇ ಹತ್ತಿರದಲ್ಲಿ ನೀರು ಹರಿವ ಸದ್ದು ಕೇಳಿ ನಾನು, ಮುಜಾ ಬಾಟಲಿ ತೆಗೆದುಕೊಂಡು ಹೋಗಿ ನೀರು ತಂದು, ರಾಘುಗೆ ಕುಡಿಸಿ ಅವನ ಮುಖವನ್ನು ತೊಳೆದೆವು. ಒಂದರ್ಧ ಗಂಟೆಯಾದಮೇಲೆ ಸ್ವಲ್ಪ ಸುಧಾರಿಸಿಕೊಂಡು ಎದ್ದುನಿಂತು ಹೋಗುವ ಎಂದ.  ಆಗಲೇ ಸೂರ್ಯ ಮರೆಯಾಗಿ ಮಸುಕು ಬೆಳಕು ಮಾತ್ರ ಉಳಿದಿತ್ತು. ಆದರೆ ಈಗ ವೇಗವಾಗಿ ನಡೆಯುವಂತಿರಲಿಲ್ಲ.ಯಾರೊಬ್ಬರ ಮುಖದಲ್ಲೂ ನಗೆ ಇರಲಿಲ್ಲ, ಮಾತುಕತೆಯೂ ನಿಂತುಹೋಗಿ, ಸುಮ್ಮನೆ ಮುಂದೆ ನಡೆಯುತ್ತಿದ್ದ ವಾಹಿದನನ್ನೇ ಎಲ್ಲರೂ ಹಿಂಬಾಲಿಸುತ್ತಿದೆವು. ಬೆಳಕು ಮಾಯವಾಗಿ ದಟ್ಟ ಕತ್ತಲಾವರಿಸಿ  ಮುಂದೆ ಹೆಜ್ಜೆ ಇಡಲು ದಾರಿ ಕಾಣದಾಯಿತು. ನೂರಕ್ಕೆ ನೂರು ಕಾಡಿನ ಕತ್ತಲಲ್ಲಿ ಬಂಧಿಯಾದದ್ದು ಖಾತ್ರಿಯಾಯಿತು.  ಎಲ್ಲಿದ್ದೇವೆ, ಅಕ್ಕಪಕ್ಕ

ಕಥಾಗುಚ್ಛ Read Post »

ಕಥಾಗುಚ್ಛ

ನ್ಯಾನೊ ಕಥೆಗಳು

ಅಂಬ್ರೀಶ್ ಎಸ್ ಹೈಯ್ಯಾಳ್… ಒಂದು– ಬರಗಾಲದಿಂದ ತತ್ತರಿಸಿದ ಜನ ದೇವರ ಮೊರೆ ಹೋದರು. ಮಳೆ ಬರಲೆಂದು ಪ್ರಾರ್ಥಿಸಿದರು. ಆದರೆ ದೇವಸ್ಥಾನದಲ್ಲಿ ಪೂಜಾರಿಯಿಂದ ಪ್ರತಿದಿನವೂ ದೇವರನ್ನು ನೀರಿನಿಂದ ತೊಳೆದು ಹಾಲು ತುಪ್ಪದ ಅಬಿಷೇಕ ಜರಗುತಿತ್ತು. ಎರಡು– ಅದು ಬೇಸಿಗೆ ಸಮಯ.ಅಲ್ಲೊಂದು ಉದ್ಯಾನವನದಲ್ಲಿ. ನೀರಿನ ಕಾರಂಜಿಯಾಟದ ಕಾರ್ಯಕ್ರಮ ಏರ್ಪಾಡಾಗಿತ್ತು. ಹೊಮ್ಮಿಸುವ ಸಂಗೀತಕ್ಕೆ ಬಣ್ಣ ಬಣ್ಣದ ನೀರಿನ ಕಾರಂಜಿ ನೃತ್ಯವಾಡುತಿತ್ತು. ಆದರೆ ಅಲ್ಲಿ ನೋಡುತ್ತಾ ಕುಳಿತ ಪ್ರೇಕ್ಷಕರು ಬಾಯಾರಿಕೆಯಾಗಿ ನೀರಿಲ್ಲದೆ ಪರದಾಡುತಿದ್ದರು. ಮೂರು– ಅಲ್ಲೊಂದು ಕಾಡು. ಕಾಡಿನ ಮದ್ಯೆ ಹರಿಯುವ ನದಿಯೊಂದು ವರ್ಷಪೂರ್ತಿ ತುಂಬಿ ತುಳುಕುತಿತ್ತು. ನದಿಗೆ ಅಡ್ಡಲಾಗಿ ನೀರನ್ನು ಶೇಖರಿಸಲು ಅಲ್ಲೊಂದು ಆಣೆಕಟ್ಟು ನಿರ್ಮಾಣ ಮಾಡುವ ಯೋಜನೆ ಕೈಗೊಂಡರು.ಅದಕ್ಕಾಗಿ ಸಾವಿರಾರು ಮರಗಳನ್ನು ಕಡಿದರು. ಈಗ ಅಲ್ಲಿ ನೀರಿನ ಸಂಗ್ರಹಣೆಯಿಲ್ಲದೆ ನದಿ ಬರಿದಾಗಿದೆ.. ನಾಲ್ಕು– ಜನ ಅವನನ್ನು ಹಿಯಾಳಿಸುತಿದ್ದರು. ನೀರೂಪದ್ರವಿ ಎಂದು ಟೀಕಿಸುತಿದ್ದರು. ಸತ್ತರೆ ವಾಸಿ ಎನ್ನುತಿದ್ದರು. ಆದರೆ ಆ ವ್ಯಕ್ತಿ ಸಾಯುವಾಗ ಕಣ್ಣು,ಕಿಡ್ನಿಗಳನ್ನು ದಾನ ಮಾಡಿ ಪ್ರಾಣ ಬಿಟ್ಟ ಐದು– ಅವರಿಬ್ಬರು ಶಿಕ್ಷಣದಲ್ಲಿ ಮ್ಯಾನೆಜ್ಮೆಂಟ್ ಪದವಿ ಪಡೆದಿದ್ದರು. ಹಾಗಾಗಿ ಅವರು ಸಂಸಾರದಲ್ಲಿ ಹೊಂದಿಕೊಳ್ಳುತ್ತಾರೆಂದು ಮದುವೆ ಮಾಡಲಾಗಿತ್ತು.ಆದರೆ ದಾಂಪಥ್ಯಜೀವನ ನಿರ್ವಹಣೆಯಲ್ಲಿ ಅವರು ಸೋತು ವಿಚ್ಛೇದನ ಪಡೆದು ದೂರವಾದರು.

ನ್ಯಾನೊ ಕಥೆಗಳು Read Post »

ಕಥಾಗುಚ್ಛ

ಕಥಾಗುಚ್ಛ

ಹಬ್ಬ ಪ್ರೀತಿಯನ್ನು ಹಬ್ಬಿದರೆ ಸುಮಂಗಳ ಮೂರ್ತಿ ಬಾನುಮತಿ ಈ ಸಾರಿ ವಿಜಯದಶಮಿಯನ್ನು ವಿಶೇಷವಾಗಿ ಆಚರಿಸಬೇಕು, ಅದು ನಮ್ಮ ಕುಟುಂಬದವರಿಗೆ ಮತ್ತು ಬಂದ ಬಂಧು ಬಳಗದವರಿಗೆ ಖುಷಿ ಕೊಡುವ ಹಾಗೆ ಇರಬೇಕು,ಎಂದು ಯೋಚಿಸುತ್ತಿದ್ದ ಅವಳು,ಖರ್ಚಿನ ಬಗ್ಗೆಯೂ ನಿಗಾವಹಿಸಬೇಕಿತ್ತು. ಅವಳು ಒಂದು ಮಧ್ಯಮವರ್ಗದ ಕುಟುಂಬಸ್ಥೆ ಎನ್ನುವುದು ಮರಿಯೋ ಆಗಿಲ್ಲ .          ಬಾನುಮತಿಗೆ ಮದುವೆಯಾದ ನಂತರದ ಮೊದಲನೇ ವಿಜಯದಶಮಿ, ಹಾಗಾಗಿ ಗಂಡನ ಮನೆಯ ಪದ್ಧತಿಗಳು ಅವಳಿಗೆ ಅಷ್ಟಾಗಿ ಏನು ತಿಳಿದಿರಲಿಲ್ಲ. ಆ ಕಾರಣದಿಂದ ಅವಳ ಅತ್ತೆಯ ಸಲಹೆ ಕೇಳಿ ಅವರ ಸಲಹೆಗಳನ್ನು ಪಾಲಿಸಿದರೆ ಮತ್ತಷ್ಟು ಚಂದ ಎಂದು ಯೋಚಿಸುತ್ತಾ,ಸಂಜೆಯ ಕಾಫಿ ತಯಾರಿಸಿ, ಯಾವುದೋ ನ್ಯೂಸ್ ಚಾನಲ್ ನೋಡುತ್ತಿದ್ದ ಮಾವನವರಿಗೆ,ಮೊಬೈಲ್ ನೋಡುತ್ತಿದ್ದ ಗಂಡನಿಗೆ,ಪೂಜೆಗೆಂದು ಹೂ ಕಟ್ಟುತಿದ್ದ ಅತ್ತೆಯವರಿಗೆ ಕೊಟ್ಟು,ತಾನು ಕುಡಿಯುತ್ತಾ ಅತ್ತೆಯ ಬಳಿ ಕೂತಳು.           ಬಾನುಮತಿಯ ಕೆಲಸದ ವೈಖರಿ,ಅವಳ ಅತ್ತೆಗೆ ಬಹಳ ಇಷ್ಟವಾಗಿತ್ತು.ಬಾನುಮತಿ ಮನೆಗೆ ಬಂದ ಸ್ವಲ್ಪ ದಿನಗಳಲ್ಲಿಯೇ ಮನೆಯವರನ್ನೆಲ್ಲ ಬಹಳ ಚೆನ್ನಾಗಿ ಅರ್ಥಮಾಡಿಕೊಂಡು,ಹೊಂದಿಕೊಂಡಿದ್ದಳು. ಸಮಯ ಸಿಕ್ಕಾಗೆಲ್ಲ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದ ಅವಳಿಗೆ, ಪುಸ್ತಕಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವಳು ಮೊದಲಿನಿಂದಲೂ ಯಾರಿಗಾದರೂ ಉಡುಗೊರೆ ಕೊಡಬೇಕಾದರೆ ಪುಸ್ತಕವನ್ನೇ ಕೊಡುವುದು ಅವಳ ರೂಢಿಯಾಗಿತ್ತು.ಈ ಬಾರಿ ಹಬ್ಬಕ್ಕೆ ತಾಂಬೂಲದೊಂದಿಗೆ ಪುಸ್ತಕಗಳನ್ನ ಕೊಡಬೇಕು,ಆದರೆ ಅತ್ತೆಯವರು ಏನೇಳುತ್ತಾರೋ ಎಂಬ ಯೋಚನೆಯಿಂದ,ಈ ಕುರಿತು ಅತ್ತೆಯ ಜೊತೆ ಮಾತನಾಡಬೇಕೆಂದು ಅವಳ ಮನಸ್ಸಿನಲ್ಲೇ ಆಲೋಚಿಸುತ್ತಿರುತ್ತಾಳೆ.ಅಷ್ಟರಲ್ಲಿಯೇ, ಬಾನು ನಿನ್ನ ತವರಲ್ಲಿ ವಿಜಯದಶಮಿ ಹಬ್ಬವನ್ನ ಹೇಗೆ ಆಚರಿಸುತ್ತಿದ್ದರು? ಎಂದ ಅತ್ತೆಯ ಪ್ರಶ್ನೆಗೆ ಬಾನುಮತಿ,ಹೀಗೆ ಇಲ್ಲಿಯ ರೀತಿಯೇ ಅತ್ತೆ ಶರನ್ನವರಾತ್ರಾರಂಭ ದಿಂದ ವಿಜಯದಶಮಿಯ ವರೆಗೆ ಒಂದೊಂದು ಶಕ್ತಿ ದೇವತೆಯ ಆರಾಧನೆ,ಮುತ್ತೈದೆಯರಿಗೆ ಕುಂಕುಮ ಪ್ರಸಾದ ಕೊಡುವುದು, ನಾನು ಪ್ರತೀ ಬಾರಿ ಕುಂಕುಮದೊಂದಿಗೆ ಕನ್ನಡ ಪುಸ್ತಕಗಳನ್ನು ಕೊಡುತ್ತಿದ್ದೆ.ಅತ್ತೆ ನೀವು ಒಪ್ಪುವುದಾದರೆ ಪುಸ್ತಕಕೊಡುವ ನನ್ನ ಅಭ್ಯಾಸವನ್ನ ಮುಂದುವರಿಸಲೇ ?ಎಂದ ಬಾನುಮತಿಯ ಮಾತಿಗೆ ಖಂಡಿತ ಬಾನು ಇದು ತುಂಬ ಒಳ್ಳೆಯ ಅಭ್ಯಾಸ ಮುಂದುವರೆಸು ಎನ್ನುತ್ತಾ ಮುಗುಳ್ನಗೆ ಬೀರಿದರು.           ಅತ್ತೆಯ ಸಮ್ಮತಿಗೆ ಖುಷಿಯಾದ ಬಾನುಮತಿ,ಮನದಲ್ಲೇ ಅತ್ತೆಯೂ ಅಮ್ಮನಂತೆಯೇ ನೋಡು ಇದಕ್ಕೆ ಹೇಳುವುದು, “ಪ್ರೀತಿ ಹಂಚಬೇಕು ಯಾವುದೇ ನಿರೀಕ್ಷೆ ಇಲ್ಲದೆ,ಆಗ ಹಂಚಿದಕ್ಕಿಂತ ಹೆಚ್ಚಿನ ಪ್ರೀತಿಯೇ ದಕ್ಕುತದೆ ” ನನ್ನ ಈ ಹೊಸ ಬದುಕಿನಲ್ಲೂ ಅಮ್ಮ ಜೊತೆಗಿದ್ದಾಳೆ,ಹೀಗೆ ಮನಸ್ಸಿನಲ್ಲೇ ಖುಷಿಪಡುತ್ತಿದ್ದ ಬಾನುಮತಿಯ ಅರಳಿದ ಮುಖ  ಹೊಳೆಯುವ ಚಂದ್ರನೂ ನಾಚುವಂತೆ ಕಂಗೊಳಿಸುತ್ತಿತ್ತು.              ಬಾಂಧವ್ಯ ಅಂದರೆ ಇದೇ ಅಲ್ಲವೇ,ಪರಸ್ಪರ ಹೊಂದಾಣಿಕೆ. ಬಾನುಮತಿಯ ಉತ್ತಮ ನಡುವಳಿಕೆ ಕನ್ನಡ ಸಾಹಿತ್ಯ ಓದುವುದರಿಂದ ಬಂದಿದೆ ಎಂದರೆ ತಪ್ಪಾಗಲಾರದು.           ಸಾಮಾನ್ಯವಾಗಿ ಒಂದಿಬ್ಬರು ಮೂರು ಹೆಂಗಸರು ಮಾತನಾಡಲು ಶುರುಮಾಡಿದ್ರೆ,ಇಡೀ ಒಂದು ಬಡಾವಣೆಯ ವಿಚಾರಗಳು ಬಿತ್ತರಿಕೆಯಾಗುವುದನ್ನ ಕಾಣಬಹುದು,ಅದರಲ್ಲಿ ಬೇರೊಬ್ಬರ ಕಾಲೆಳೆಯೊ ವಿಷಯಗಳೇ ಹೆಚ್ಚಾನ್ಹೆಚ್ಚು.ಇಂತಹ ಮಾತುಗಳಿಗೆ ಅವಕಾಶ ನೀಡದಂತ ಸ್ವಭಾವದವಳು ಬಾನುಮತಿ.ಹಬ್ಬ ಪ್ರೀತಿಯನ್ನ ಹಬ್ಬಿಸಬೇಕು,ಮನಗಳನ್ನ ತಣಿಸಬೇಕು,ಎನ್ನುವುದಷ್ಟೆ ಇವಳ ಹರಿಕೆ.        ಓ…ಹಬ್ಬದ ತಯಾರಿಯಲ್ಲಿ  ಮಗ್ನಳಾದ ಬಾನು,ಎಲ್ಲವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿದ್ದಾಳೆ,ಆದರೆ ಚಾಪೆ ಇದ್ದಷ್ಟು ಕಾಲುಚಾಚು ಎಂಬ ಗಾದೆ ಮಾತಿಗೆ ವಿರುದ್ಧವೇನೂ ಅಲ್ಲ. ಮತ್ತು ಅತ್ತೆ ಸೊಸೆ ಇಬ್ಬರು ಹಬ್ಬಕ್ಕೆ ದೂರದ ಬಂಧು ಮಿತ್ರರನ್ನ,ಫೋನ್ ಮೂಲಕ ಕರೆಯುತ್ತಾರೆ,ಮನೆಯ ಅಕ್ಕಪಕ್ಕದವರನ್ನೆಲ್ಲ ಖುದ್ದಾಗಿ ಹೋಗಿ ಕರೆಯುತ್ತಾರೆ.ಇವರ ಪ್ರೀತಿಯ ಕರೆಗೆ ಯಾರು ಬಾರದೆ ಉಳಿಯಲಿಲ್ಲ.           ಬಾನುಮತಿಯ ಮನೆ ಸಂಮೀಪಿಸುತ್ತಿದ್ದಂತೆ, ಅವಳ ಮನೆಯಂಗಳದ ಪುಟ್ಟ ಹಣತೆಗಳ ಬೆಳಗು ನಕ್ಷತ್ರಗಳ ಮಿಂಚಿನಂತೆ ಜಗಮಗಿಸುತ್ತಿರುವುದು ಕಣ್ಣಿಗೆ ದೇವಾಲಯದಂತೆ ಕಾಣುತ್ತದೆ.ಹಾಗೇ ಮನೆಯಂಗಳದ ಹೂವುಗಳರಳಿದ ಹಸಿರು ಕಾಶಿಗೆ ಇಬ್ಬನಿ ಮುತ್ತಿಕ್ಕಿದೆ, ಹಣತೆಗಳ ಬೆಳಗಿಗೆ,ಹೊಂಬಣ್ಣದ ಹನಿಗಳು ಪನ್ನೀರಿನಂತೆ ಜಿನುಗಿ ಮೈಮನ ಪುಳಕಗೊಂಡಂತೆ ಭಾಸವಾಯ್ತು.           ಬಂದವರನ್ನ ಪ್ರೀತಿಯಿಂದ ಮಾತನಾಡಿಸಿ,  ‘ಬನ್ನಿ’ ಬೆಳಕಾಗಲಿ,ಪ್ರೀತಿ ಬದುಕಾಗಲಿ. ಎಂದು ನುಡಿಯುತ್ತಾ ,ಕುಂಕುಮ ಹಚ್ಚಿ, ಪ್ರಸಾದದ ಜೊತೆ ಕನ್ನಡ ಪುಸ್ತಕ ಕೊಟ್ಟು,ಬಿಡುವಿನ ಸಮಯದಲ್ಲಿ ಓದಿ ಎಂದು ಅಕ್ಕರೆ ಹರಿಸಿದ ಬಾನುಮತಿಯ ಮಾತು,ಮತ್ತಷ್ಟು ಹಿತವೆಸಿತ್ತು.     ==================================== ಪರಿಚಯ: Spoken English faculty ಆಗಿ 12 ವರ್ಷಗಳಿಂದ ಕೆಲಸಮಾಡುತ್ತಿದ್ದಾರೆ.ಬಾಲ್ಯದಿಂದಲೇ ಕನ್ನಡ ಸಾಹಿತ್ಯವನ್ನ ಬರೆಯುವ ಮತ್ತು ಓದುವುದು ಹವ್ಯಾಸ. ಕಥೆ, ಕವಿತೆ,ಗಜಲ್,ವಚನ,ಲೇಖನ ಬರಹಗಳನ್ನು ಬರೆಯುತ್ತಿರುತ್ತಾರೆ.2013 ರಲ್ಲಿ Kannada to English dictionary ಬರೆದಿರುವ ಇವರ ಕವನ ಸಂಕಲನ “ಖಾಲಿಹಾಳೆ”ಬಿಡುಗಡೆಗೆ ಸಿದ್ಧವಾಗಿದೆ

ಕಥಾಗುಚ್ಛ Read Post »

ಕಥಾಗುಚ್ಛ

ಕಥಾಗುಚ್ಛ

ಮುಡಿಯೇರಿದ ಹೂವು! ಸಂತೇಬೆನ್ನೂರು ಫೈಜ್ನಾಟ್ರಾಜ್ ಹುಡ್ಗಿ ಮನೆ ಪಕ್ಕಾನೇ ಇದ್ ಬಿಟ್ರೆ ಪ್ರೀತಿ ಹುಟ್ ಬಿಡುತ್ತಾ ? ಹುಡುಗೀರೂ ಥಕ್ ಅಂತ ತೆಕ್ಕೆಗೆ ಬಿದ್ ಬಿಡ್ತಾರಾ ? ಅದೆಲ್ಲಾ ನಮ್ಮಂಥಾ ಹುಚ್ ಹುಡುಗರ ಬೆಚ್ ಕಲ್ಪನೆಗಳು ! ಈಗ ಈ ರೇಷ್ಮಾ ನಮ್ಮ ಪಕ್ಕದ್ಮನೇಲೇ ಇರೋದು ; ಆಕೆ ಬಂದು ಸರಿ ಸುಮಾರು ವರ್ಷ ಆಗ್ತಾ ಬಂತು. ತಲೆ ಮೇಲಿನ ದಾವಣಿ ಸರೀಲಿಲ್ಲ. ತಲೆ ಎತ್ತಿ‍ ಯಾರನ್ನೂ ನೋಡ್ಲಿಲ್ಲ. ತಾನು, ತನ್ನ ಕೆಲ್ಸ ಅಂತ ಸದಾ ಮೌನದ ಮೂಟೆಯಾಗ ಇರತಿದ್ಲು !           ನಾನೇ ಅಲ್ವೆ ಹಳೇ ಸಿನೆಮಾದ ವಹಿದಾ ರೆಹಮಾನ್, ಜೀನತ್ ಅಮಾನ್, ಮಮ್ತಾಜ್ ಮುಂತಾದವರ ಹೋಲಿಕೆ ಕೊಟ್-ಕೊಟ್ ಮಾತಿಗಿಳ್ಸಿದ್ದು, ಅದೂ ಹ್ಞಾಂಜಿ, ಹ್ಞೂಂಜಿ, ಬೋಲೋಜಿ ಅಷ್ಟೆ! ಪಾಪ ಅವಳೇನ್ ಇಲ್ಲೇ ಪರ್ಮನೆಂಟಾಗಿ ಇರ್ತಾಳೆಯೇ? ಈಗ್ಲೋ ಆಗ್ಲೋ ತನ್ನೂರಿಗೆ ಹೋಗ್ತಾಳೆ; ಚಿಕ್ಕಮ್ಮ ಕಾಯಿಲೆ ಅಂತ ಸಹಾಯಕ್ಕೆ ಬಂದಿರೋದಲ್ವೆ ? ಬಂದಾಗ್ಲಿಂದಾಕೆಗೆ ಕಣ್ಣಲ್ಲಿ ಕಣ್ ಕೂಡ್ಸಕ್ ಪ್ರಯತ್ನ ಪಟ್ಟು ಪಟ್ಟು ಕಣ್ ಕರಗಿದ್ವೇ ಹೊರತು. ರೇಷ್ಮಾಳ ನೆರಳೂ ನನ್ ಮೇಲೆ ಬಿದ್ದಿರಲಿಲ್ಲ. ನನ್ನ ಈ ಪ್ರೀತಿ ಪ್ರಯತ್ನ ಪಾಪ ಅವಳಿಗೂ ಗೊತ್ತಿತ್ತು; ನಾನು ಹಳೇ ಹಾಡು ಹೇಳೋದು, ಹಿಂದಿ ರಾಜ್‌ಕುಮಾರ್‌ನ ಶಾಯರಿ ಬಿಸಾಕೋದು, ನಮ್ ತಂಗಿ ಮೇಲೆ ಹಾಕಿ ಮಾತಾಡೋದು ಎಲ್ಲಾ ತಿಳಿದೂ  ಮೂಕಿ ಹಾಗೆ ಇದ್ದ ಕಾರಣ ತಿಳೀತಾನೆ ಇರ್ಲಿಲ್ಲ. ಮೊನ್ನೆ ಅವಳಾಗಿ ಜುಮ್ಮಾ ನಮಾಜ್ ವೇಳೆ ಯಾರೂ ಇಲ್ಲದ ಸಮಯಕ್ಕೆ ಮಾತಾಡಲು ಹಿತ್ತಲ ಹುಣಸೇಮರದ ಎದುರಿನ ಗೋರಂಟಿ ಬಳ್ಳಿ ನೆರಳಿಗೆ ಕರೆಯುವರೆಗೂ !           ಎದೆಯಲ್ಲಿ ಹೂವರಳಿ ಘಂಗುಡ್ತಿದ್ವು; ಮನಸ್ಸು ಪಾರಿವಾಳವಾಗಿ ಹೋಗಿತ್ತು. ನಾ ಹೋದ ಅರ್ಧ ನಿಮಿಷಕ್ಕೆ ರೇಷ್ಮಾ ರಕ್ತ ಬಣ್ಣದ ನೈಟಿಯಲ್ಲಿ ಬಂದೇ ಬಿಟ್ಟಳು. ನನಗೋ ನೀರು ಎಲ್ಲೆಂದರಲ್ಲಿ ಒಸರುತ್ತಿತ್ತು. ‘ನೋಡಿ ಸಾಬ್ ನಾನು ನೀವಂದ್ ಕೊಂಡಂತೆ ಇಲ್ಲ. ನಿಮ್ಮ ಪ್ರೀತಿ, ಪ್ರೇಮ ಎಲ್ಲಾ ನಿಮ್ ತಂಗಿಯಿಂದ ಮಾಲೂಮ್ ಹೈ, ಮಗರ್ ನಾ ಅದಕ್ಕೆ ಅರ್ಹಳಲ್ಲ;  ನನ್ನಿಂದ ನೀವೇನೂ ಬಯಸದಿದ್ದರೆ ಒಳ್ಳೆಯದು -ಎಂದು ಮೌನವಾದಳು ಕಣ್ಣಲ್ಲಿ ನೀರು ಕವಿತೆ ಹಾಡುತ್ತಿದ್ದವು! ಅಲ್ಲಾ ರೇಷ್ಮಾ ಮೈ ತುಮ್‌ಸೆ ಪ್ಯಾರ್ ಕರ್ತಾ ಹುಂ -ಶಾದಿ ಕೆ ಲಿಯೇ ಭಿ ತಯಾರ್ .. .. ನಾ ನಿವೇದಿಸಿಕೊಂಡೆ.           ಆಕೆ ದುಃಖಿತಳಾಗಿ ನುಡಿದಳು; ನೋಡಿ ಸಾಬ್, ನಾನೂ ಜೀವನದ ಬಗ್ಗೆ ಬಹುತ್ ಬಹೂತ್ ಆಸೆ ಇಟ್ಕೊಂಡಿದ್ದವಳು. ಬಾಳನ್ನು ಬೆಲ್ಲದಂತೆ ಸವಿಯ ಬೇಕೆಂದುಕೊಂಡಿದ್ದವಳು, ಈ ನಸೀಬ್ ಹಾಳಾದ್ದು! ನನ್ನ ಒಳ್ಳೆತನಾನೇ ನನ್ನ ಹೀಗ್ ಮಾಡ್ತು ನಾ ಯಾರ್ಯಾರನ್ನ ಗೆಳೆಯರು ಅಂತ ನಮ್ಮೂರಲ್ಲಿ ನಂಬ್ಕೊಂಡಿದ್ನೊ ಅವ್ರೆ ಪಿಕ್ನಿಕ್ ನೆಪದಲ್ಲಿ ಕರೆದುಕೊಂಡು ಹೋಗಿ ಸಾಮೂಹಿಕ ಬಲತ್ಕ್ಕಾರದಿ ನರಬಾದ್ ಮಾಡಿದ್ರು. ಅದರ ನೋವು ಮರೆಯೋಕೆ ಇಲ್ಲಿಗೆ ಚಿಕ್ಕಮ್ಮನ ನೆಪಕ್ಕೆ ಬಂದೆ. ನಿಮ್ಮ ಪ್ರಾಮಾಣಿಕ ಪ್ರೀತಿ, ನಡೆ-ನುಡಿ ವರ್ಷದಿಂದ ನೋಡಿ, ಕೇಳಿ ಗೊತ್ತಿದೆ, ನಿಮ್ಮಂಥವರಿಗೆ ನಾ ತಕ್ಕವಳಲ್ಲ ಅಂತಲೇ ನಾ ಪ್ರೀತಿಯ ಹಾತ್ ನೀಡಲಿಲ್ಲ. ಈಗ ಹೇಳಿ ಈಗ್ಲೂ ಮೊದಲಿನಂತೆ ಪ್ರೀತಿ, ಪ್ರೇಮದ ಮಾತಾಡ್ತೀರಾ ? ಮದ್ವೆ ಯಾಗ್ತೀರಾ? ಎಂದಳು ರೇಷ್ಮಾ ಒಂದೇ ಉಸಿರಿಗೆ !           ನಾನು ದಿಜ್ಞೂಡನಾಗಿದ್ದೆ! ಎದೆಲಿ ಏನೋ ಇರಿದಂಗ್ ಅನುಭವ ! ರೇಷ್ಮಾ ಕಣ್ಣು ಹೊಳೆಯಾಗಿದ್ದವು ; ನೀರು ಧಾರಾಕಾರ ಸುರೀತಿದ್ವು ! ನಾ ಎರಡೂವರೆ ನಿಮಿಷದ ದೀರ್ಘ ಮೌನ ಚಿಂತನೆಯ ನಂತರ ದೊಡ್ ಉಸಿರ್ ಬಿಟ್ಟು ಹೇಳಿದೆ -’ರೇಷ್ಮಾ ಮೈ ತುಂಸೆ ಹಿ ಶಾದಿಕರೂಂಗ ..”           ಆಕೆ ಈಗ ತಲೆ ಎತ್ತಿ ಕಣ್ಕೂಡಿಸಿ, ಕಣ್ಣರಳಿಸಿ ನೋಡಿದಳು: ನೀರಲ್ ತೇಲೋ ನಕ್ಷತ್ರದಂತೆ ಕಣ್ ಕಂಡವು ! ಮಾತಾಡದೆ ಆಕೆ ಬರೀ ನನ್ನೇ, ನನ್ನ ಬೆಕ್ಕಿನ ಕಣ್‌ಗಳನ್ನೆ ನೋಡ್ತಾ ನಿಂತ್ ಬಿಟ್ಲು ! ನಾ ನಕ್ಕೆ…. ಅವಳು ನಗಲಿಲ್ಲ ಅಡಿಯ ಹೂ ಮುಡಿಗೇರಿತ್ತು ! ಸಂತೇಬೆನ್ನೂರು ಫೈಜ್ನಾಟ್ರಾಜ್ ಕಥೆಗಾರರ  ಪರಿಚಯ: ಕನ್ನಡ ಅಧ್ಯಾಪಕರು,.ನಾಡಿನೆಲ್ಲಾ ಪತ್ರಿಕೆ ಗಳಲ್ಲಿ ಕತೆ ಕವನ,ಪ್ರಬಂಧ, ಲೇಖನ, ಹನಿಗವನ ಪ್ರಕಟಗೊಂಡಿವೆ.ಈಗಾಗಲೇ ಎರಡು ಕವನ ಸಂಕಲನ,ಒಂದು ಮಕ್ಕಳ ಕಥಾ ಸಂಕಲನ,ಒಂದು ಮಕ್ಕಳ ಕವನ ಸಂಕಲನ,ಒಂದು ಕಥಾ ಸಂಕಲನ ಒಟ್ಟು ಐದು ಕೃತಿ ಬಿಡುಗಡೆ ಆಗಿವೆ,ಸ್ನೇಹ ಶ್ರೀ ಪ್ರಶಸ್ತಿ,ಸಂಚಯ ಕಾವ್ಯ ಪುರಸ್ಕಾರಹಾಮಾನಾ ಕಥಾ ಪ್ರಶಸ್ತಿಪಡೆದಿದ್ದಾರೆ…

ಕಥಾಗುಚ್ಛ Read Post »

ಕಥಾಗುಚ್ಛ

ಕಥಾಗುಚ್ಛ

ಟೊಮ್ಯಾಟೊ ಕೆಚಪ್ ಡಾ.ಅಜಿತ್ ಹರೀಶಿ ಹಲೋ ಸನಾ, ನಾನ್ಯಾರು ಗೊತ್ತಾಯ್ತಾ? ಒಂದು ವಾರದಿಂದ ವಾಟ್ಸ್ ಆಪ್ ಮಾಡದೆ, ನಿನ್ನ ಸಂದೇಶಕ್ಕೆ ಉತ್ತರ ಕೊಡದೆ ಸುಮ್ಮನಿದ್ದನಲ್ಲ… ಜಯ್.. ನಾನು ಜಯ್ ಅಲ್ಲ. ನನ್ನ ಹೆಸರು ಸುಹಾನ್. ನಾನೀಗ ಮೇಲ್ ಮಾಡಿದ್ದು ನಿನಗೆ ಸತ್ಯ ಹೇಳಲಿಕ್ಕೆ… ಸನಾ, ಅಡಿಗೇನೆ ಬರದ ನೀನು, ಮೆಟ್ರಿಮೋನಿಯಲ್ ನ ಪ್ರೊಫೈಲ್ ನಲ್ಲಿ ನನಗೆ ಒಪ್ಪಿಗೆ ಆದಾಗ್ಯೂ, ವಧು ಪರೀಕ್ಷೆ ಮಾಡೋದಿಕ್ಕೆ ಅಂತ ನಾನೊಂದು ವೇಷ ಹಾಕಿದೆ. ಜಯ್, ಕಂಪ್ಯೂಟರ್ ಇಂಜಿನಿಯರ್ ಅಂತ. ನಿಂಗೆ ಟೊಮ್ಯಾಟೊ ಕೆಚಪ್ ಇಷ್ಟ ಅಲ್ವ.. ಅದೂ ಟಿ.ಕೆ ರೆಸ್ಟೋ ದು. ಹೌದು ಕಣೇ.. ಆ ರೆಸ್ಟೋರೆಂಟ್‌ ಮಾಲಿಕ ನಾನು. ನಿಂಗೊತ್ತಾ, ಕೆಚಪ್ ಪಕ್ವ ಟೊಮ್ಯಾಟೊಗಳ ಹೂರಣ. ಪಕ್ವತೆಯ ಪರೀಕ್ಷೆಗೊಳಪಟ್ಟ ಆಯ್ದ ಹಣ್ಣುಗಳಿಂದ ತಯಾರಾಗೋ ಗೊಜ್ಜು. ತಾಜಾತನದ ಖುಷಿಗೆ, ಹೋಟೆಲಿನಲ್ಲೇ ಸಿದ್ಧ ಪಡಿಸುವ ಕಲ್ಪನೆಯೊಂದಿಗೆ, ಹೋಟೆಲ್  ಹೆಸರನ್ನೂ ಅದೇ ಇಟ್ಟು ನಾನು ಉದ್ಯಮ ಪ್ರಾರಂಭಿಸಿದ್ದು. ನಮ್ಮಪ್ಪ ಗೌತಮ್ ಗೋರ್ ನನ್ನ ಬೆನ್ನಿಗೆ ನಿಂತರು. ನಮಗೆ ಕೆಲವು ಪ್ರಾರಂಭಿಕ ಸವಾಲುಗಳಲ್ಲಿ ಉತ್ತಮ ಚೆಫ್ ಅಗತ್ಯವೂ ಒಂದಾಗಿತ್ತು. ಟಿ.ಕೆ ಹೋಟೆಲ್ ನ ಅಡುಗೆಮನೆಗೆ ವಿಶಿಷ್ಟ ರುಚಿಗಳ ಸಮಮಿಳಿತಗಳ ಹೆಗ್ಗಳಿಕೆ ಇರುವ ಚೆಫ್ ಸಮೀರ್ ವಿಜೇತನ ಪ್ರವೇಶವಾದ ನಂತರ, ಹೋಟೆಲ್ ನ ಮೆನುಕಾರ್ಡ್ ಗೆ ಒಂದು ಹೊಸ ಆಯಾಮ ದೊರೆತು, ಉದ್ಯಮ ಬೆಳೆಯತೊಡಗಿತು. ಕೆಚಪ್ ನ ರುಚಿಯ ಚಟ ಹತ್ತಿದವರ ತಿನ್ನುವ ಖಾಯಂ ಅಡ್ಡಾ ಅನ್ನುವಂತಾಯಿತು. ಟಿ.ಕೆ. ಹೋಟೆಲ್ ಹೋಗಿ ರೆಸ್ಟೋರೆಂಟ್ ಆಗಿ, ಕಟ್ಟಡವೂ ಸ್ಥಾನಪಲ್ಲಟ, ನವೀಕರಣಗಳೊಂದಿಗೆ ಬೆಳೆಯುವ ಹೊತ್ತಿಗೆ ಚೆಫ್ ಸಮೀರನ ರುಚಿ ಟಿ.ಕೆ. ರೆಸ್ಟೋಗೆ ಏಕತನದ ಗುರುತಾಯಿತು. ವ್ಯಾಪಾರದ ಕುರುಹಾಯಿತು. ದಿವಸವೂ ಕೆಚಪ್ ಗಾಗಿಯೇ ಅಡುಗೆಮನೆಯ ಒಂದು ಭಾಗ ಮತ್ತು ತಂಡ ಬೇಕು ಅನ್ನುವಷ್ಟು. ದುಡ್ಡುಳ್ಳ ದೊಡ್ಡಜನರ ಖಾಸಗೀ ಸಮಾರಂಭಗಳಿಗೂ, ಭೋಜನಾತಿಥ್ಯದ ಗುತ್ತಿಗೆ ಸಿಗುವಷ್ಟು ಬೆಳೆದು ಕೆಚಪ್ ಒಂದು ನಿತ್ಯ ತಯಾರಾಗಲೇ ಬೇಕಾಯಿತು. ಹೀಗೆ ನಮ್ಮ ಉದ್ಯೋಗ ಉತ್ತುಂಗದಲ್ಲಿದ್ದಾಗಲೇ ನಮ್ಮಪ್ಪ ಅಮ್ಮ ನನಗೆ ಮದುವೆ ಮಾಡ್ಕೋ ಅಂತ ಒತ್ತಾಯ ಹೇರಿದ್ರು. ಬರೀ ಉದ್ಯೋಗದಲ್ಲೇ ಮುಳುಗಿ ಹೋಗಿದ್ದ ನನಗೆ ನಿನ್ನ ಮೆಟ್ರಿಮೋನಿಯಲ್ ಪ್ರಪೋಸಲ್ ಬಂದ ನಂತರ ಸ್ವಲ್ಪ ಮನಸ್ಸು ಸಂಸಾರದ ಕಡೆ ವಾಲಿದೆ. ನಿನಗೆ ನೆನಪಿದೆಯಾ‌… ಕಳೆದ ಭಾನುವಾರ ಅತೀ ಸಂದಣಿಯಿರುವ ಸಂಜೆಯಲ್ಲಿ ಫಾಮಿಲಿ ರೂಮಿನ ಎರಡು ಜನರ ಖಾಲಿ ಟೇಬಲ್ ನ್ನು ಅರಸಿ ನಾನು ಮತ್ತು ನೀನು ಟಿ.ಕೆ.ರೆಸ್ಟೋದಲ್ಲಿ ಕುಳಿತಿದ್ದು. ಅದು ನಮ್ಮ ಮೂರನೆಯ ಭೇಟಿ ಆಗಿತ್ತಲ್ವ. ಮಾಟ್ರಿಮೊನಿಯಲ್ ನ ವಧು -ವರರ ಪಟ್ಟಿಗಳಲ್ಲಿ  ನಾವೇ ಆಯ್ದಕೊಂಡು, ಅಂತೂ ಮಾತನಾಡುವುದು ಅಂತ ಆಗಿ, ಮೊದಲನೇ ಭೇಟಿಯು ಎರಡನೆಯದಕ್ಕೂ, ಮುಂದೆ ಮೂರನೆಯದಕ್ಕೂ ಸಾಗಿ, ಸಾಕಷ್ಟು ಮೆಸೆಂಜರ್, ವಾಟ್ಸಪ್ ಸಂದೇಶಗಳು ಹರಟೆಗೆ ತಿರುಗಿ, ಅಪರಿಚತೆಯು ಪರಿಚಿತ ಅನ್ನುವಷ್ಟಾಗಿ ಇಂದು ಸಲುಗೆ ಎನ್ನುವ ಮಟ್ಟಿಗೆ ಒಡನಾಟ ಬೆಳೆದಿದ್ದು.  ಈ ಸಂದೇಶ, ಪುರಾಣಗಳಲ್ಲಿ ಒಂದೂ ಹೇಳಿಕೊಳ್ಳುವಂತಹ, ನಾನಿಲ್ಲಿ ನಮೂದಿಸಬೇಕಾದಂತಹದ್ದೇನೂ ಇಲ್ಲವಾಗಿ ನನಗೆ ಅದೊಂದು ಶೀತಲ ಮಾತುಕತೆ ಎಂದಷ್ಟೇ ಹೇಳಬಲ್ಲೆ. ಆದರೆ, ಸನಾ… ನನಗೆ ನಿನ್ನ ಆಂತರ್ಯ ಅರಿಯಬೇಕಾಗಿತ್ತು. ನೀನು ಚೆಂದದಿಂದ ನನ್ನ ಮನಸ್ಸು ಗೆದ್ದಿದ್ದರೂ…. ಆ ಮೂಲೆಯ ಟೇಬಲ್ ಆಯ್ಕೆ ನಿನ್ನ ಇಚ್ಛೆಗೆ ವಿರುದ್ಧವಾಗಿ ನಡೆದದ್ದು. ನಿನಗೆ ಮೂಲೆ ಜಾಗ ಇಷ್ಟವಿಲ್ಲ ಅಂತ ಆವತ್ತೇ ಗೊತ್ತಾಗಿದ್ದು ನನಗೆ. ಅಷ್ಟು ಕಿಕ್ಕಿರಿದ ಹೋಟೆಲ್ ನಲ್ಲಿ ಮತ್ತೆಲ್ಲೂ ಅವಕಾಶವಿರದ ಕಾರಣ ಅನಿವಾರ್ಯವಾಗಿ ಕುಳಿತೆ ಅಲ್ವಾ.. ಇಲ್ಲಿಂದಲೇ ಆರಂಭ.. ನಿನ್ನ ಆಂತರಿಕ ಕಿರಿಕಿರಿ, ನನ್ಮುಂದೆ ಹೇಳಿಯೇ ಬಿಟ್ಟೆ ಅದನ್ನೂ… ನಾನೇನೋ ನಿನ್ಜೊತೆ ಕೂತಿದ್ದೆ. ಆದರೆ ಆವತ್ತು ಅಡುಗೆಮನೆಯ ಕೆಚಪ್ ವಿಭಾಗದಲ್ಲಿ ಒಂದು ಸಂಗತಿ ನಡೆದಿತ್ತು ಗೊತ್ತಾ… ಸಿದ್ಧ ಕೆಚಪ್ ನ ಸಂಗ್ರಹವು ಕೊನೆಯಾಗುವ ಹಂತದಲ್ಲಿ… ಆದರೆ ನೈಸರ್ಗಿಕವಾಗಿ ಕಳಿತ ಹಣ್ಣುಗಳ ಸರಬರಾಜು, ಅಂದು ಆಕಸ್ಮಿಕವಾಗಿ ನಮ್ಮ ರೆಸ್ಟೋರೆಂಟ್ ಗೆ ಇಲ್ಲದಂತಾಗಿ, ಟೇಬಲ್ ನ ಆರ್ಡರ್ ಗಳಿಗೆ ಯಥೇಚ್ಛವಾಗಿ ಸೇವೆಯಾಗುತ್ತಿದ್ದ ಕೆಚಪ್ ಗೆ ಕತ್ತರಿ ಬಿತ್ತು. ಮತ್ತೊಮ್ಮೆ ಕೇಳಿದವರಿಗೆ ಮಾತ್ರ ಕೆಚಪ್ ಅನ್ನು ಬಡಿಸುವ ಆದೇಶ ನಾನೇ ಕೊಟ್ಟಿದ್ದೆ. ನಿನ್ನನ್ನ ಪಾರಲೆಲ್ ರೋಡಿನಿಂದ ಪಿಕ್ ಅಪ್ ಮಾಡಿದ್ನಲ್ಲ, ಅಲ್ಲಿಗೆ ಬರೋ ಮುಂಚೇನೆ ಎಲ್ಲ ವೇಟರ್ ಗಳಿಗೂ, ಚೆಫ್ ಗೂ ಹೀಗೆ ಹೇಳಿದ್ದೆ. ನೀನು ಬಂದು ಕುಳಿತಾಗ, ನಾನು ಎಲ್ಲರಂತೆ ಗಿರಾಕಿ ಅನ್ನೋ ಹಾಗೆ ನಡೆಸಿಕೊಳ್ಳಲು ಮೊದಲೇ ಎಲ್ಲರಿಗೂ ಹೇಳಿಯೇ ಇದ್ದೆ. ಅದಾಗಲೇ ನಾನು, ಮೆನು ಕಾರ್ಡ್ ಒಮ್ಮೆ ಕಣ್ಣಾಡಿಸಿ ಪನೀರ್ ಮಂಚೂರಿಯನ್ ತಿನ್ನುವುದು, ನಿನ್ನನ್ನು ಕೇಳಿ, ನಿನಗೂ ಇಷ್ಟವಾದರೆ ಆರ್ಡರ್ ‌ಕೊಡುವುದೆಂದು… ಅಂದು ಕೊಂಡಿದ್ದೆ. ಆದರೆ ನೀನು ಅಮೇರಿಕನ್ ಕ್ರಿಸ್ಪಿ ನೂಡಲ್ಸ್ ಗೆ ಆರ್ಡರ್ ಕೂಡ ಕೊಟ್ಟಾಗಿತ್ತು… ನೀನೇ ಮೊದಲು ಹೇಳಿದ್ದರಿಂದ, ಈಗ ವಿಧಿಗಳೇನೂ ಇಲ್ಲವಾಗಿ ನನಗಾಗಿ ಆರ್ಡರ್ ಇತ್ತೆ. ಟೇಬಲ್ ನ ಆಯ್ಕೆ, ಇಬ್ಬರ ಬೇರೆ ಬೇರೆ ರುಚಿಗಳು ನನ್ನ ಗಮನಕ್ಕೆ ಬಂದಿತ್ತು ಆವತ್ತೇ.  ಒಂದು ತಾಸು ಕುಳಿತು, ಎದ್ದು ಹೋಗಬಹುದಾದ ಜಾಗ,  ಚಾಟ್ ವಿಷಯದಲ್ಲೇ ವೈರುಧ್ಯ. ಇನ್ನೂ ಏನೇನು ಭೇದವಿದೆಯೋ ಎಂಬ ಕುತೂಹಲ ಥಟ್ಟನೆ ಕೆರಳಿತ್ತು  ನನಗೆ. ಸನಾ, ಅದಾಗಲೇ ನೀನು ಸೆಲ್ಫೀ ಮೋಡ್ ಅನ್ನೇ ಕನ್ನಡಿಯಾಗಿಸಿ ಮೋರೆಯನ್ನು ನೋಡಿ, ಓರೆ ಕೋರೆಗಳಲ್ಲಿ ಮುಳುಗಿದ್ದೆ. ಇನ್ನು ಖಾಲಿ ಟೇಬಲ್, ತಿನ್ನಲು ಏನೂ ಇಲ್ಲ. ಸುಮ್ಮನೆ ಕೂರುವ ಬದಲು ಮಾತಿಗೆಳೆಯಲಾ? ಹೀಗೇ ಇಂದಿನ ಭೇಟಿ, ಹಿಂದಿನ ಎರಡೂ ಭೇಟಿಗಳೂ ನೀನೇ ಮೊದಲು ಕೇಳಿಯೇ ಆಗಿದ್ದು. ನಾನು ಒಪ್ಪಿ ಬಂದಿದ್ದೆ ಅಷ್ಟೇ. ದುಡ್ಡು ಮಾತ್ರ ನಾನೇ ಕೊಟ್ಟಿದ್ದೆ. ಗಂಡಸಿನ ಸಾರ್ವಕಾಲಿಕ ಕರ್ತವ್ಯ. ಹೆಣ್ಣಿಗಾಗಿ ತೆರು, ಹೆಣ್ಣಿನ ಭಾರ ಹೊರು, ಹೆಣ್ಣಿನಿಂದಲೇ ಶುರು, ಅಂತೆಲ್ಲಾ ನಾನೇ ಮನಸ್ಸಲ್ಲೇ ಅಳೆದು ತೆಗೆದು, ಕೊನೆಗೆ ನಾನು ಪ್ರಶ್ನೆ ಕೇಳಿದ್ದೆ ‘ನೀನು ತಿಂಗಳಲ್ಲಿ ಎಷ್ಟು ಖರ್ಚು ‌ಮಾಡ್ತೀಯಾ?’ ಅಂತ. ನಿನ್ನ ನಿರ್ವಹಣೆ ನನ್ನಿಂದ ಸಾಧ್ಯವೇ ಎಂಬ ವ್ಯಾವಹಾರಿಕ ಮತ್ತು ಅತ್ಯಂತ ಪ್ರಾಯೋಗಿಕವಾಗಿ ನಿನ್ನ ಬಗ್ಗೆ ಅರಿಯಲು. ಈ ಪ್ರಶ್ನೆ, ಹಿಂದೆಂದೂ ನಾನು ನಿನಗೆ ಕೇಳಿದ್ದಿಲ್ಲ.  ಉತ್ತರ ಸಿದ್ಧವೂ‌ ಇರಲಿಲ್ಲ ನಿನ್ನಲ್ಲಿ ಅಲ್ವಾ? ಯಾವತ್ತಾದರೂ ಖರ್ಚುವೆಚ್ಚಗಳ ದಾಖಲಿಸಿಟ್ಟಿರ್ತೀಯಾ ಅಂತ‌? ನೀನೆಷ್ಟು ಗಲಿಬಿಲಿಯಾಗಿದ್ದೆ ಗೊತ್ತಾ? ನನಗೆ ಇನ್ನೊಂದು ಅಸಮತೆ ಗುರುತು ಹತ್ತಿತು.  ‘ಇರಲಿ‌ ಬಿಡು, ನೀನೆಷ್ಟು ದುಬಾರಿ ನನಗೆ ಅಂತ ತಿಳಿಯಲು ಕೇಳಿದೆ’ ಅಂದು ಮಾತು ಬದಲಿಸಿದ್ದೆ.  ಆದರೆ ಸನಾ, ನಿನ್ನ ಉತ್ತರ ನನಗೆ ಸ್ವಲ್ಪ ಜಾಸ್ತಿನೇ ಶಾಕ್ ಕೊಟ್ಟಿತು.  ‘ನಂದೇ ದುಡ್ಡು. ನಾನೇ ಖರ್ಚು‌ ಮಾಡೋದು. ನಿನಗ್ಯಾಕೆ ಲೆಕ್ಕ ಕೊಡ್ಬೇಕು?  ನಾನು ಇಂಡಿಪೆಂಡೆಂಟ್‌’ ಅಂದೆ. ಮತ್ತೆ ಮೊಬೈಲ್ ನ ಜೊತೆ ಚಕ್ಕಂದ ಆಡ್ತಾ ಕುಳಿತೆ. ನೀನು ಇಷ್ಟು ಹೇಳಿದ್ರಿಂದ ನನಗೆ ಇನ್ನೊಂದು ಅಂಶ ಕಂಡುಕೊಂಡಂತೆ ಆಯಿತು. ಇಂಡಿಪೆಂಡೆಂಟ್‌ ‌ಆಗಿ ಬದುಕೋದಾದ್ರೆ, ನಮ್ಮಿಚ್ಛೆಯಂತೆಯೇ ನಡ್ಕೊಳೋದಾದ್ರೆ ಮದುವೆ ಯಾಕಾಗ್ಬೇಕು? ಒಂಚೂರು ಒಟ್ಟೊಟ್ಟಿಗೆ ಹೊಂದಿಕೊಂಡು ಹೋಗ್ಲಿಕ್ಕೆ ಮದುವೆ‌ ಅಲ್ವ? ಒಂಟಿ ಬದುಕಬಹುದು.. ಹಕ್ಕಿ ಹಾಗೇ ಸ್ವತಂತ್ರವಾಗಿ. ಆದರೆ ಜೊತೆಗೆ ಇನ್ನೊಂದು ಜೀವ ಒಟ್ಟಿಗೇ ಹೆಜ್ಜೆ ಇಡೋದಿದ್ರೆ ಜೀವನದ ದಾರಿ ಬೇಸರವಾಗದಂತೆ ಸವೆದು ಹೋಗುತ್ತೆ ಅಲ್ವಾ?  ಅಷ್ಟು ಹೊತ್ತಿಗೆ ನಮ್ಮಿಬ್ಬರ ಮುಂದೂ ತಿಂಡಿಯು ಬಂದು, ವೇಟರ್ ಬಡಿಸಿ ಹೋದ. ನೂಡಲ್ಸ್ ಕ್ರಿಸ್ಪಿ ಇದ್ದರೂ ಅದನ್ನು ಅದ್ದಿ ತೆಗೆದು ಬಾಯಿಗಿಡುವ ಮುನ್ನ ನೀನು ಚಿಲ್ಲಿ ಸಾಸ್ ಮತ್ತು ಟೊಮ್ಯಾಟೋ ಕೆಚಪ ಅನ್ನು ನಿನ್ನದೇ ಆದ ಹದದಲ್ಲಿ ಬೆರೆಸಿ ತಿನ್ನುವವಳು ಅಂತ‌ ಆವತ್ತು ಗೊತ್ತಾಯ್ತು. ಕೆಚಪ್ ಪುಟ್ಟದೇ ಕಪ್ ನಲ್ಲಿ ಮಿತಿಯಲ್ಲಿ ತಂದಿಟ್ಟಿದ್ದು, ನಿನಗೆ ಇನ್ನೊಂದಿಷ್ಟು ಬೇಕು ಅನಿಸ್ತು. ಸಾಸ್ ಗಿಂತ ಕೆಚಪ್ ಅನ್ನು ಜಾಸ್ತಿ‌ ಬೆರೆಸಿಕೊಳ್ಳುವ ನೀನು, ನಿನ್ನ ಪ್ಲೇಟ್ ಅನ್ನು ನಿನ್ನ ರುಚಿಗೆ ತಕ್ಕಂತೆ ಪರಿವರ್ತಿಸುವ ಕ್ರಿಯೆಯಲ್ಲಿ ತಲ್ಲೀನಳಾಗಿದ್ದೆ. ಇದನ್ನೆಲ್ಲಾ ಗಮನಿಸ್ತಾ, ಅದಾಗಲೇ ಪನೀರ್ ಮಂಚೂರಿಯನ್ ರುಚಿಯ ಹಿಡಿದು ಆಸ್ವಾದದಲ್ಲಿ ತೊಡಗಿದ್ದೆ ನಾನು. ಸರಳ ಲೆಕ್ಕದ ನನಗೆ ಎಲ್ಲವೂ ಹದದಲ್ಲೇ‌ ಇದೆ ಎನಿಸಿತ್ತು. ನೀನು ಕೆಚಪ್ ನ ಆರ್ಡರ್ ಮಾಡಲು ವೇಟರ್ ನ್ನು ಕೂಗಿ, ಆದೇಶವಿತ್ತೆ. ಅವನು‌ ಹೋದವನು ಮತ್ತೆ ಬರಲಿಲ್ಲ.. ಯಾಕೆ ಬರಲಿಲ್ಲ ನಿಂಗೆನಾದರೂ ಗೊತ್ತಾಯ್ತಾ? ಇದೇ ಸಮಯ, ಸನಾ …. ಅಡಗೆಮನೆ ಒಳಗೆ ಏನು ಆಗ್ತಾ ಇತ್ತು ಗೊತ್ತಾ? ಗಳಿತ ಕೆಂಪು ಹಣ್ಣುಗಳ ಹಿಸುಕಿದರೆ‌ ಮಾತ್ರ ಕೆಚಪ್ ಸಿದ್ಧವಾಗೋದು ಕಣೇ. ಕೆಚಪ್ ಗೆ ಅಚ್ಚ ಕೆಂಪು ಹೊಳಪಿನ ಬಣ್ಣ ಬರಬೇಕಾದರೆ, ಕಳಿತ ಹಣ್ಣುಗಳನ್ನು ಆಯ್ದು,  ಹವೆಯಲ್ಲಿ ಬಣ್ಣ ಬದಲಾಗದಂತೆ, ಸಿಪ್ಪೆ ಮಾತ್ರ ಬೇರೆಯಾಗುವಂತೆ ಬೇಯಿಸಿಕೊಳ್ಳುವುದು ಕ್ರಮ. ಹವೆಯೊಳಗೇ ಬೇಯುವ ಕ್ರಿಯೆಯಲ್ಲಿ ಸಿಪ್ಪೆ ಬೇರೆ, ಗುಳ ಬೇರೆಯಾಗಿ, ಹಣ್ಣಿಗೆ ಹಣ್ಣೇ ಹೊರಗಿನ ತೆಳುವಾದ ಆದರೆ ಪ್ಲಾಸ್ಟಿಕ್ ನಂತಹ ಪದರದಿಂದ ಬೇರ್ಪಡುವುದು. ಇದು ಹಿಸುಕುವ ಕ್ರಿಯೆಗೆ ಪೂರ್ವ ತಯಾರಿ‌. ಆವತ್ತು ಕೆಚಪ್ ಗೆ ತಕ್ಕ ಹಣ್ಣುಗಳು ಹೋಲ್ ಸೇಲ್ ಸಪ್ಲೈ ಮಾಡುತ್ತಿದ್ದ ತರಕಾರಿ ಮಾರುಕಟ್ಟೆಯಿಂದ ಆಗದೆ, ಅರೆಬರೆ ಹಂಪು, ಹಣ್ಣಾಗುತ್ತಿರುವ ಟೊಮ್ಯಾಟೊ ಗಳ ರಾಶಿ ಬಂದು ಬಿದ್ದಿತ್ತು. ಇಂತಹ ಅಪಕ್ವ ಟೊಮ್ಯಾಟೊ ಬೇಯಿಸಿದರೂ ಸರಿಯಾಗಿ ಸಿಪ್ಪೆಯಿಂದ ಬೇರ್ಪಡದು, ಕೆಚಪ್ ಗೆ ಬಣ್ಣವೂ ಬರದು. ಸಿದ್ಧಗೊಳಿಸಬೇಕಾಗಿದ್ದ ಪ್ರಮಾಣದಲ್ಲಿ ಗಣನೀಯ ಕಡಿತ ಮಾಡುವಂತಾಯಿತು. ರಾಶಿಯಿಂದ ಆಯ್ದು, ಮುಂದಿನ ಕ್ರಿಯೆಗೆ ತೊಡಗಿದ ತಂಡಕ್ಕೆ ಕೆಚಪ್ ನ ಬಣ್ಣ, ತಿಳಿಯಾಗಿದ್ದು ಅವರ ಮನಸ್ಸಿನಲ್ಲಿ ಇರಿಸುಮುರಿಸು ತಂದಿತ್ತು. ಬಣ್ಣಕ್ಕೆಂದು ಬೇರೆ ಯಾವುದನ್ನು ಸೇರಿಸಿದರೂ‌ ರುಚಿ ಹೋಗುವುದು. ಚೆಫ್ ಸಮೀರನ ತಲೆಯಲ್ಲಿ ಇದೇ ಸಮಯದಲ್ಲಿ ಬರೀ ಯೋಚನೆಗಳು. ಒಂದನ್ನೂ ಪ್ರಯೋಗಕ್ಕಾಗಿ ಕಾರ್ಯಗತಗೊಳಿಸಲು ಆಗುತ್ತಿಲ್ಲ. ತಂಡಕ್ಕೆ ಮಾಡಬೇಕಾದ ಬದಲೀ ಕೆಲಸ ಹೇಳಲಾಗುತ್ತಿಲ್ಲ. ಆಗಲೇ ನಾನು ಎದ್ದು ಹೋಗಿದ್ದು. ನಿನಗೆ ನೆನಪಿದೆಯಾ? ಫ್ರೆಷ್ ಆಗಲು ಹೋಗಿಬರುವ ನೆಪದಲ್ಲಿ, ನಮ್ಮ ಕಿಚನ್ ಗೆ ಹೋಗಿ ಬಂದೆ.  ಗಳಿತ ಹುಣಸೇಹಣ್ಣಿನ ಕಲ್ಕವನ್ನು ರುಚಿಗೆ ಮತ್ತು ಬಣ್ಣ ಬದಲಾವಣೆಗೆ ಬೆರೆಸಿ ಉಪ್ಪು, ಸಕ್ಕರೆ, ವಿನೆಗರ್ ನ ಹದವನ್ನು ರುಚಿ ನೋಡುತ್ತಾ ಬೆರೆಸಲು ಖುದ್ದು ಜವಾಬ್ದಾರಿ ಹೊರಲು, ಸಮೀರ್ ಗೆ ಹೇಳಿ ಬಂದೆ. ಕೆಚಪ್ ನ ಸಂಗ್ರಹ ಮುಗಿದೇ ಹೋಯಿತು ಅನ್ನುವಾಗ ನೀನು ಇಟ್ಟಿದ್ದ‌ ಆರ್ಡರ್ ‌ಟೇಬಲ್ ಗೆ ತಲುಪದೇ, ನಿನಗೆ ಅಸಮಾಧಾ‌ನ ಹೆಚ್ಚಾಗಿ, ಟೇಬಲ್ ನ ಸಪ್ಲೈರ್ ಗೆ, ಹೋಟೆಲ್ ನ ಸಿಬ್ಬಂದಿಗೆ ಹರಿಹಾಯ್ದು, ರಂಪಾಟವಾಗಿ, ನೆನಪಿದೆ ಅಲ್ವಾ…. ನಿನ್ನನ್ನು ಸಮಾಧಾನ ಮಾಡಲು ಸಾಧ್ಯವಿಲ್ಲ ಎನಿಸಿತ್ತು ಆ ಹೊತ್ತಿಗೆ.‌ ಮೊದಲು ಹೊರಗೆ ಹೋಗಬೇಕೆನ್ನುವಷ್ಟು‌ ವಿಚಿತ್ರ ಹಿಂಸೆ ನನಗೆ. ಕೋಪ, ಅಸಹನೆ, ಆಹಾರದ ಬಗ್ಗೆ, ಬೇರೆಯವರ ಬಗ್ಗೆ ಅಗೌರವ…. ನೀನು ನಡೆದುಕೊಂಡ ರೀತಿ ಯಾವುದನ್ನೂ ಅನುಭವಿಸಲಾಗದೆ ನನ್ನ ಮನಸ್ಸಿಗೇ ರೇಜಿಗೆ ಹುಟ್ಟಿತ್ತು ಆ ಸಂಜೆಯ ಬಗ್ಗೆ, ನಿನ್ನ ವರ್ತನೆಯ ಬಗ್ಗೆ. ಹೋಟೆಲ್ ನ ಆಂತರಿಕ ವಿಷಯವನ್ನು ಖುದ್ದು ಮ್ಯಾನೇಜರ್ ಬಂದು ನಿನ್ನಲ್ಲಿ ವಿನಯವಾಗಿ, ವಾಸ್ತವವಾಗಿ ನಡೆದದ್ದನ್ನು ವಿವರಿಸದ ಮೇಲೂ ನಿನ್ನ ಮನಸ್ಸಿಗೆ ಇಳಿಯಲೇ ಇಲ್ಲ.. ಗಯ್ಯಾಳಿ ಹಾಗಿತ್ತು… ನಿನ್ನ ವರ್ತನೆ ನನ್ನನ್ನು ಇನ್ನಷ್ಟು ದೂರ ನೂಕಿತ್ತು.. ಈ ಮಾಟ್ರಿಮೋನಿಯಲ್ ಮುಲಾಕಾತ್ ಬಗ್ಗೆ. ಒಂದೂ ಮಾತನಾಡದೆ, ಸಿಬ್ಬಂದಿಗಳಿಗೆ, ಕ್ಷಮಿಸಿ ಅಂದಷ್ಟೇ ಹೇಳಿ ಹೊರಡುವವನಿದ್ದೆ…. ಆದರೆ,..

ಕಥಾಗುಚ್ಛ Read Post »

You cannot copy content of this page

Scroll to Top