ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಹೊಸ ಬಿಳಲು….!!

ಕಥೆ ಹೊಸ ಬಿಳಲು….!! ಯಮುನಾ.ಕಂಬಾರ ಚೆನ್ನವ್ವಳ ಕೈಗೆ ಹಚ್ಚಿದ BP ಮೀಟರ ತೆಗೆದು , ನರ್ಸಮ್ಮನಿಗೆ ಸುಗರ ಚೆಕ್ಕ ಮಾಡಲು  ಡಾಕ್ಟರ ‘ಕಿರಣ ‘    ಹೇಳಿದ.  ಚೆನ್ನವ್ವ ಬೆಡ್ಡ ಮೇ ಲಿಂದ ಗಡಬಡಿಸಿ ಎದ್ದು ನರ್ಸ್ಸಮ್ಮ ನನ್ನೇ ನೋಡತೊಡಗಿದಳು. ನರ್ಸ್ಸ ಕೈಯಲ್ಲಿ  ಚಿಕ್ಕದೊಂದು ಸೂಜಿಯಿತ್ತು ಅದರ ಮೇಲೆ ಅಂಟಿಸಿದ ಹಾಳೆ ಮಾಸಿತ್ತು. ಅದರ ಮೇಲೆ  ಅಲ್ಲಲ್ಲಿ ಕಂದು ಕಪ್ಪು ಕಲೆಗಳೂ ಇದ್ದವು . ಚೆನ್ನವ್ವ ತನ್ನ  ಮೈಯ ಶಕ್ತಿಯನ್ನೆಲ್ಲಾ ಒಂದುಗೂಡಿಸಿಕೊಂಡು   ” ಸೂಜಿ,  ಹೊಸದಿದ್ದ್ರ ಚುಚ್ಚರಿ …..” ಎಂದು ಹೇಳಿದಳು. “ಅವ್ರು….ಯಾವಾಗ ಬಂದ್ರುನೂ ಹಿಂಗ ಅಂತಾರ……ಹೊಸಾವ ಅದಾವ ಅಂತ ಹೇಳ್ರಿ…..! ” ಎಂಬ ಮಾತೊಂದು ತೂರಿ ಬಂತು …..ಎದುರಿನ ರೂಮಿನಿಂದ. ಚೆನ್ನವ್ವನ ಕೈ ಕಾಲುಗಳು ಕಂಪಿಸಿದವು. ಕೆಸರಿಗೆ ಕಲ್ಲು ಒಗೆದಾಗ   ಚಿಲ್ಲನೇ ಸಿಡಿವ ಕೆಸರಿನ ತರಹ ಸಲ್ಪು ನಿಧಾನತೆಯನ್ನು ತಾಳದೇ ದಾಸಪ್ಪ ಡಾಕ್ಟರ ನುಡಿದ ಮಾತುಗಳು ಚೆನ್ನವ್ವನ ಗಂಟಲಲ್ಲಿಳಿಯದೇ ಅವಳು ಒದ್ದಾಡುತ್ತಿದ್ದಳು. ಈಗಲಾದರೂ ಈತ ಸುಮ್ಮನಿರಬಾರದೇ. ….!!!ಎಂದು . ದಾಸಪ್ಪ ಡಾಕ್ಟರು ತುಂಬಾ ಜಾಣ ಡಾಕ್ಟರ ಎಂದೇ ಹೇಳಬೇಕು. ರೋಗಿಯ ಜೊತೆ ಬಹಳ ತಲೆ ಕೆಡಿಸಿಕೊಳ್ಳದೇ ರೋಗಿಯನ್ನು ಇಡಿಯಾಗಿ ನೋಡಿ ರೋಗವನ್ನು ಸರಿಯಾಗಿ ನಿರ್ಣಯಿಸುವ ರೀತಿ ರೋಗಿಗೆ ಬಲು ಮೆಚ್ಚಿಕೆಯಾಗುತ್ತಿತ್ತು. ಆದರೆ ಒಂದು ವಿಷಾಧದ ಸಂಗತಿಯೆಂದರೆ ರೋಗಿಯನ್ನು ಕೈ ಮುಟ್ಟಿ ನೋಡದೇ  ದೂರದಿಂದಲೇ ನಿಂತು ಅಳೆದು ಗುಳಿಗೆ ಬರೆಯುತ್ತಿದ್ದ ಡಾಕ್ಟರೆಂದೇ ಹೇಳಬೇಕು. ಆದರೆ ರೋಗಿಗಳು  ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ”  ತಮ್ಮ ಜ್ವರ , ತಲೆ ನೋವು,  ವಾಂತಿ ಭೇದಿ ,ಕಡಿಮೆ ಆಯಿತಲ್ಲಾ ಅಷ್ಟೇ ಸಾಕು ದೇವರೇ” ಎಂದು ತಣ್ಣಗಾಗುತ್ತಿದ್ದರು. ದಾಸಪ್ಪ ಡಾಕ್ಟರಿಗೆ ಬರುವ ರೋಗಿಗಳಲ್ಲಿ ಚೆನ್ನವ್ವ ಮಾತ್ರ ಗುಂಪಿನಿಂದ ಹೊರಗಿಟ್ಟ ಪದದಂತೆ ಇದ್ದಳು.ಜ್ವರ ಬಂದ್ರು ಆತು , ತಲೆನೋವು ಇದ್ದ್ರು ಆತು ,  ಏನಂಬಕು  ಒಂದು ಪ್ಯಾಕ್ಡ ಸಿರಂಜನ ತೆಗೆದುಕೊಂಡೇ ಬರುತ್ತಿದ್ದಳು. ದಾಸಪ್ಪ ಡಾಕ್ಟರ ಸ್ಟೆತೆಸ್ಕೋಪ ತೆಗೆದು ನಿಲ್ಲುವ ಪುರುಸೊತ್ತು ಇಲ್ಲದೇ ಇವಳು ಗಡಬಡಿಸಿ ಎದ್ದು ಮೊದಲು ನರ್ಸಳ ಕೈಯನ್ನೇ ನೋಡುತ್ತಿದ್ದಳು. ” ನಾ ಸಿರೆಂಜ ತಂದೇನ್ರಿ ….‌” ಎಂದು ದೊಡ್ಡ ಧೈರ್ಯ ಮಾಡಿ ಹೇಳಿದ್ದಳು. ಆಗ ದಾಸಪ್ಪ ಡಾಕ್ಟರ ಮುಖ ಕಪ್ಪಿಟ್ಟಿತು. ಆ ಕಪ್ಪು ಇವಳಿಗೆ ಅಳಿಸದ ನೋವಾಗುತ್ತಿತ್ತು. ದೊಡ್ಡ ದವಾಖಾನೆಯಲ್ಲಿ ರೋಗಿಯ ಕಿಡ್ನಿಯನ್ನೇ  ಡಾಕ್ಟರ ತಕ್ಕೊಂಡ್ರ್ಂತ ಎಂಬ ಸುದ್ದಿ ಕೇಳಿದ ಚೆನ್ನವ್ವ ದಂಗಾಗಿ ಹೋಗುತ್ತಿದ್ದಳು. “ತಾನು ತನ್ನ ದೇಹ ಆರೋಗ್ಯದ ಕುರಿತು ಎಚ್ಚರವಾಗಿದ್ದೇನೆ ” ಎಂಬ ಸಮಾಧಾನದಲ್ಲಿದ್ದಳು. ಅಷ್ಟೇ ಏಕೆ ತನ್ನ ತಾಯಿಗೆ  ಹೊಟ್ಟೆ ನೋವು ಬಂದಾಗ ಇದ ಡಾಕ್ಟರ  ಜ್ವರ ಗುಳಿಗೆ ಕೊಟ್ಟು ಮೂರು ಹೊತ್ತು ಮೂರು ಮೂರು ಗುಳಿಗೆ ತಗೋ ಅಂತ ಹೇಳಿದ್ದ್ರಲ್ಲಾ ಅವಾಗ ತನ್ನ ತಾಯಿಗಾದ ಆವಾಂತರ ಮರೆಯದಾಗಿದ್ದಳು ಚೆನ್ನವ್ವ. ಇಂತ ಅನಾಹುತಗಳನ್ನು ತಪ್ಪಿಸಿಕೊಳ್ಳುವ ಒಂದು ಉಪಾಯ ಚೆನ್ನವ್ವ ಹುಡುಕಿಕೊಂಡಿದ್ದಳು. ಡಾಕ್ಟರ ಏನೇ ಗುಳಿಗೆ ಕೊಟ್ರುನು ಮೊದಲು ಅದರಲ್ಲಿ ನಾಲ್ಕು ಭಾಗ ಮಾಡಿ ಒಂದ ಭಾಗ ತೆಗೆದುಕೊಂಡು ಪರೀಕ್ಷೆ ಮಾಡಿಯೇ ಮುಂದಿನ ಹೊತ್ತಿಗೆ ಪೂರ್ಣ ಗುಳಿಗೆಯನ್ನು ತೆಗೆದುಕೊಳ್ಳುತ್ತಿದ್ದಳು. ಈಗ ದಾಸಪ್ಪ ಡಾಕ್ಟರಿಗೆ ವಯಸ್ಸಾಗಿದೆ. ಆತ ತನ್ನ ವೃತ್ತಿಯನ್ನು ಮಗನಿಗೆ ವಹಿಸಿಕೊಟ್ಟಿದ್ದಾನೆ. ಈಗ ಮಗ ‘ ಕಿರಣ ‘ ಆಸ್ಪತ್ರೆಯಲ್ಲಿ  ಡಾಕ್ಟರಿಕಿ ಮಾಡುತ್ತಿದ್ದಾನೆ. ಯಾವುದೇ ವೃತ್ತಿ ಖಾಸಗಿ ವಲಯದಲ್ಲಿ ಕೈ ಹಿಡಿತ ಬೇಕಾದರೆ ಬಹಳ ಕಷ್ಟ ಎಂಬುದು ದಾಸಪ್ಪ ಡಾಕ್ಟರನಿಗೆ ಬಹಳ ಚೆನ್ನಾಗಿ ಗೊತ್ತು ಅದಕ್ಕಾಗಿ ಆತ ಟೆತೆಸ್ಕೋಪ ಕೆಳಗಿಟ್ಟು ಮನೆಯಲ್ಲಿ ಕುಳಿತುಕೊಳ್ಳಲಿಲ್ಲ.  ಮಗನ ಜೊತೆ ಬಂದು  ಆತನಿಗೆ ಟೆತೆಸ್ಕೋಪಕೊಟ್ಟು ತಾನು ಒಂದು ಕುರ್ಚ್ಚಿ ಹಾಕಿಕೊಂಡು  ಕುಳಿತು ತನ್ನ ರೋಗಿಗಳಿಗೆ ವಿಶ್ವಾಸಕೊಡುತ್ತಿದ್ದಾನೆ. “ನಾ ಯಾವುದ ದವಾಖಾನೆಗೆ ಹೋದ್ರುನೂ ಒಂದ ಹೊಸ ಸಿರಂಜನ ಒಯ್ದ ಒಯ್ಯತೇನ್ರಿ.. ” ಎಂದು ದಾಸಪ್ಪ ಡಾಕ್ಟರಿಗಾದ ಮಾನಸಿಕ ಅವಮಾನ ತೊಳೆಯಲು ಪ್ರಯತ್ನಿಸಿದಳು ಚೆನ್ನವ್ವ .”ಹೊಸಾವ ಇಟ್ಟಿರಿತೇವ್ರಿ..!  ” ದಾಸಪ್ಪ ಡಾಕ್ಟರ ವಾದ . ನೀವು ಹಿಂಗ ಸಿಟ್ಟಿಗೆದ್ದ್ರ ಹೆಂಗ್ರಿ…….!!  ” ಎನ್ನುತ್ತಾ  ಆತನ ತಪ್ಪನ್ನು ಹೈ ಲೈಟ ಮಾಡಿ ,”  ಆರೋಗ್ಯ ನಂದರಿ……!!” ಎಂದು ತನ್ನ ವಯಕ್ತಿಕ  ಬೇಡಿಕೆಯನ್ನೂ ದಾಸಪ್ಪ ಡಾಕ್ಟರ ಮುಂದಿಟ್ಟ ಳು. ದಾಸಪ್ಪ ಡಾಕ್ಟರಿಗೆ ಮುಂದೆ ಮಾತನಾಡಲು ದಾರಿ ಸಿಗಲಿಲ್ಲವೋ ಎಂಬಂತೆ  ಅವನಿಂದ ಮಾತುಗಳು ಮತ್ತೆ  ಮೂಡಿ ಬರಲಿಲ್ಲ. ತನ್ನ ವೃತ್ತಿಯನ್ನು ಮಗ ಕಿರಣನಿಗೆ ವಹಿಸಿಕೊಟ್ಟಿದ್ದ. ” ಅವೇರ್ನ್ನೆಸ್ಸ ನಿಮ್ಮ ಹಕ್ಕು ” ಎಂದನು ಕಿರಣ. ಆತನ ಮಾತುಗಳನ್ನು ಕೇಳಿದ ಚನ್ನವ್ವನಿಗೆ  ಮರದಿಂದ ಬೀಳುವ ಮನುಷ್ಯನಿಗೆ ಸಿಕ್ಕ ಮರದ ಬಿಳಲಿನಂತೆ ಆಧಾರವಾಯಿತು. ಆ ಬಿಳಲನ್ನೇ ಹಿಡಿದು ಒಂದು ಸಾರೆ ಜೀಕಿ ಬೀಗಿದಳೂ ಕೂಡಾ. ತನ್ನ ಉಪಾಯಕ್ಕೆ ಸಿಕ್ಕ” ಹೊಸ ಶಬ್ದ, ಹಾಗೂ ರೋಗಿಯ ಹಕ್ಕು ” ಎಂದು ಅರಿತುಕೊಂಡಳು. ನರ್ಸ್ಸ ಹಳೇ ಸೂಜಿ ಒಗೆದಳು.  ಬಾಕ್ಸಿನಿಂದ ಹೊಸ ಸೂಜಿ ತೆಗೆದು ” ಇದನ್ನ ನೋಡ್ರಿ ….! ? ” ಎಂದಳು.” ಹೂನ್ರಿ…..ಇಷ್ಟ ಆದ್ರ ಸಾಕ್ರಿ….” ಎನ್ನುತ್ತಾ …..ಚೆನ್ನವ್ವ ಗೆಲುವಿನಿಂದ ತನ್ನ ಬಲಗೈಯ ಬೆರಳನ್ನು ನರ್ಸ್ಸಮ್ಮನಿಗೆ  ನೀಡಿದಳು. ಆದರೆ ದಾಸಪ್ಪ ಡಾಕ್ಟರು ತಾನು ಬಿಟ್ಟ ಕಪ್ಪು ನೆರಳಿನಲ್ಲಿ ಮತ್ತಷ್ಟು ಕಪ್ಪಾಗಿ ಕಾಣತೊಡಗಿದನು. **************************

ಹೊಸ ಬಿಳಲು….!! Read Post »

ಕಥಾಗುಚ್ಛ

ಯಾರ ಜೀವನವೆಲ್ಲೋ…

ಕಥೆ ಯಾರ ಜೀವನವೆಲ್ಲೋ… ಟಿ.ಎಸ್‍.ಶ್ರವಣಕುಮಾರಿ ವನಜಾಕ್ಷಿ ಮತ್ತು ಕೃಷ್ಣಮೂರ್ತಿ ಮಗ ಪ್ರಸಾದಿಯೊಂದಿಗೆ ದೇವಪುರಿಗೆ ಹೋಗಲು ಬೆಳಗ್ಗೆ ಆರುಗಂಟೆಯ ಬಸ್ಸಿಗೆ ಬೆಂಗಳೂರಿಂದ ಹೊರಟಿದ್ದರು. ಶಿವಮೊಗ್ಗಕ್ಕೆ ಹೋಗಿ ಅಲ್ಲಿಂದ ಯಾವುದಾದರೂ ಬೇರೆ ಪ್ರೈವೇಟ್‌ ಬಸ್ಸಿನಲ್ಲೋ, ಇಲ್ಲವೇ ಮಿನಿಬಸ್ಸಿನಲ್ಲೋ ಅಲ್ಲಿಗೆ ತಲುಪಬೇಕಿತ್ತು. ಮಧ್ಯಾಹ್ನ ಹನ್ನೆರಡು ಗಂಟೆಗೆ ಶಿವಮೊಗ್ಗ ತಲುಪಿದರೆ, ತಕ್ಷಣವೇ ಅಲ್ಲಿಗೆ ಹೋಗಲು ವಾಹನ ಸಿಕ್ಕರೆ, ಒಂದರ್ಧ ಗಂಟೆಯ ಪಯಣವಷ್ಟೇ. ಈಗೊಂದು ವಾರದಿಂದ, ಈ ನಿರ್ಣಯ ತೆಗೆದುಕೊಂಡಾಗಿನಿಂದಲೂ ವನಜಾಕ್ಷಿಯ ಮನಸ್ಸಿಗೆ ನೆಮ್ಮದಿಯಿಲ್ಲ. ಕೃಷ್ಣಮೂರ್ತಿಗಳಿಗೆ ತಾನೇ ಏನು, ವಿಧಿಯಿಲ್ಲ, ಕಠಿಣವಾದರೂ ನಿರ್ಧಾರವನ್ನು ತೆಗೆದುಕೊಳ್ಳಲೇ ಬೇಕಿತ್ತು, ತೆಗೆದುಕೊಂಡದ್ದಾಗಿದೆ, ಈಗ ವ್ಯವಸ್ಥೆ ಮಾಡಿ ಬರಬೇಕು. ನೂರನೆಯ ಬಾರಿಗೆ ಇನ್ನಾದರೂ ಎಲ್ಲರ ಮನಸ್ಸಿಗೆ ನೆಮ್ಮದಿ ಸಿಕ್ಕರೆ ಸಾಕು ಅಂದುಕೊಂಡಳು ವನಜಾಕ್ಷಿ. ಅವರಿಬ್ಬರೂ ದೇವಪುರಿಗೆ ಹೋಗಿ ಇಪ್ಪತ್ತು ವರ್ಷಗಳ ಮೇಲೇ ಆಗಿತ್ತೇನೋ. ಅಲ್ಲಿದ್ದ ಕೃಷ್ಣಮೂರ್ತಿಯ ತಾತ ಭುಜಂಗ ಶಾಸ್ತ್ರಿಗಳು ದೈವಾದೀನರಾದ ನಂತರ ಅಲ್ಲಿಗೆ ಹೋಗುವ ಪ್ರಮೇಯವೂ ಇರಲಿಲ್ಲ. ವರ್ಷಾಂತಿಕ ಕಾರ್ಯಕ್ರಮಗಳನ್ನು ಅಲ್ಲಿಯೇ ಮುಗಿಸಿ ತಾತನ ಮನೆಯನ್ನು ಸಂಸ್ಕೃತ ಪಾಠಶಾಲೆ ಮಾಡಲು ಬಿಟ್ಟುಕೊಟ್ಟು ಬಂದದ್ದಾಗಿತ್ತು. ಒಂದೊಳ್ಳೆಯ ಉದ್ದೇಶಕ್ಕಾಗಿ ತಾವೆಲ್ಲಾ ಹುಟ್ಟಿಬೆಳೆದ ಮನೆಯನ್ನು ಕೊಟ್ಟಿದ್ದೇನೆ ಎನ್ನುವ ಸಮಾಧಾನ ಕೃಷ್ಣಮೂರ್ತಿಗಳಿಗಿತ್ತು. ಅಲ್ಲಿದ್ದ ಒಬ್ಬಿಬ್ಬರು ದೂರದ ಬಂಧುಗಳು ಯಾವಾಗಾದರೂ ಫೋನ್‌ ಮಾಡಿದಾಗ ಅಲ್ಲಿನ ಸಮಾಚಾರಗಳು ತಿಳಿಯುತ್ತಿದ್ದವು. ಅವರಿಗಿದ್ದ ಅಸ್ಥೆಗೆ ಅದೂ ಹೆಚ್ಚೇ. ಹೀಗೆ ಹೆಚ್ಚುಕಡಿಮೆ ಸಂಪರ್ಕ ಬಿಟ್ಟೇಹೋಗಿದ್ದ ಊರಿಗೆ ಇಂತಹ ಒಂದು ಕಾರಣಕ್ಕಾಗಿ ಮುಂದೊಂದು ದಿನ ಬರಬೇಕಾಗಬಹುದೆಂಬ ಊಹೆಯೂ ಅವರಿಗಿರಲಿಲ್ಲ. ಯೋಚನೆಗೆ ಬಿದ್ದಿದ್ದವರು ಪ್ರಸಾದಿಯ ಮುಖವನ್ನೊಮ್ಮೆ ನೋಡಿ ನಿಟ್ಟುಸಿರಿಟ್ಟರು. ಅವನು ತನ್ನ ಪಾಡಿಗೆ ಕಿಟಕಿಯಿಂದ ಹೊರಗೆ ನೋಡುತ್ತಿದ್ದ. ಅವನ ಮನಸ್ಸಿನಲ್ಲಿ ಅದೇನು ನಡೆಯುತ್ತಿತ್ತೋ! ಪಕ್ಕದಲ್ಲಿ ಕುಳಿತಿದ್ದ ವನಜಾಕ್ಷಿ ʻಏನು?ʼ ಎನ್ನುವಂತೆ ನೋಡಿದಳು. ʻಏನಿಲ್ಲʼ ಎನ್ನುವಂತೆ ತಲೆಯಾಡಿಸಿ ಮತ್ತೆ ಯೋಚನೆಯಲ್ಲಿ ಮುಳುಗಿದರು. ʻರಾಘವನಾಗಲೀ, ರಾಜೀವನಾಗಲೀ ತಮ್ಮ ಹೆಂಡತಿಯರೊಂದಿಗೆ ಇವನ ಬಗ್ಗೆ ಸ್ವಲ್ಪ ಅಭಿಮಾನ ತೋರಿದ್ದರೆ ಈ ಸಮಸ್ಯೆ ಇಷ್ಟು ಬೇಗ ಬರುತ್ತಿರಲಿಲ್ಲವೇನೋ. ಗಂಡುಮಕ್ಕಳೇ ಹೀಗಾದ ಮೇಲೆ ಸೊಸೆಯರನ್ನೇಕೆ ಅನ್ನಬೇಕು? ಅವರಿಬ್ಬರೂ ಜಾಣರು, ಸ್ವಂತ ಶಕ್ತಿಯಲ್ಲೇ ಕೆಲಸ ಗಿಟ್ಟಿಸಿಕೊಂಡು ಬದುಕಿನಲ್ಲಿ ಮುಂದೆ ಬಂದರು ಎನ್ನುವ ಹೆಮ್ಮೆ ನಮಗಿಲ್ಲವೇ. ಆದರೆ ಪ್ರಪಂಚದವರೆಲ್ಲರೂ ತಮಗೆ ಸರಿಸಾಟಿಯಾಗೇ ಇರಬೇಕು, ಇಲ್ಲದಿರುವವರು ಜೀವಿಸುವುದೇ ವ್ಯರ್ಥ ಅನ್ನುವ ಹಾಗೇಕೆ ಆಡಬೇಕು? ಸ್ವಂತ ತಮ್ಮನನ್ನೇ ಹೆಂಡತಿಯರೆದುರು ಸದಾ ಹಂಗಿಸಿ, ಬೈದು ಮಾತಾಡಿಸುತ್ತಿದ್ದರೆ ಹೊರಗಿಂದ ಬಂದವರಿಗೆ ಏಕೆ ಮಮತೆ ಹುಟ್ಟುತ್ತದೆ? ಗಂಡನಿಗೇ ಬೇಕಿಲ್ಲದ್ದನ್ನು ತಾವೇಕೆ ಹಚ್ಚಿಕೊಳ್ಳುತ್ತಾರೆ. ಅವರ ದೂರಿಗೆ ತಮ್ಮ ಉಪ್ಪುಖಾರವನ್ನೂ ಸೇರಿಸುತ್ತಾರಷ್ಟೇ. ನಮಗಾದರೆ ಮಗ; ಹೇಗಿದ್ದರೂ ಬೇಕು. ಅವರೇಕೆ ಜೀವಮಾನ ಪೂರ್ತಿ ಮೈದುನನನ್ನು ಸಾಕುವ ಹೊಣೆಹೊರುತ್ತಾರೆ? ನೂರೊಂದು ಸಲ ಅಂದುಕೊಂಡಿದ್ದನ್ನೇ ಮತ್ತೊಂದು ಬಾರಿ ಅಂದುಕೊಂಡರು. ಏನೋ ಅವರವರು ಗಂಡ ಹೆಂಡತಿಯ ಮಧ್ಯೆ ಇನ್ನು ಮುಂದಾದರೂ, ಇವನ ದೆಸೆಯಿಂದ ಆಗುತ್ತಿದ್ದ ಜಗಳಗಳು ನಿಂತರೆ ಸಾಕು. ಎಲ್ಲಕ್ಕೂ ಮೊದಲು ಈಗ ಹೋಗುತ್ತಿರುವ ಕೆಲಸ ಅಂದುಕೊಂಡಂತೆ ಸುರಳೀತವಾಗಿ ಆದರೆ ಸಾಕುʼ ಎಂದುಕೊಳ್ಳುತ್ತಿರುವಾಗ ಬಸ್ಸು ಅರಸೀಕೆರೆಯನ್ನು ಮುಟ್ಟಿತು. ಇನ್ನೂ ಎರಡು ಗಂಟೆಯ ಪ್ರಯಾಣ. ಕಾಫಿಗೆ ನಿಲ್ಲಿಸಿದರು. “ಕಾಫಿ ಕುಡಿಯೋಣ್ವಾ” ವನಜಾಕ್ಷಿಯನ್ನು ಕೇಳಿದರು. “ನಂಗೆ ಬೇಡ, ನೀವಿಬ್ರೂ ಕುಡಿದ್ಬನ್ನಿ” ಎಂದಳು ವನಜಾಕ್ಷಿ. ಅಪ್ಪ ಮಗ ಇಬ್ಬರೂ ಕೆಳಗಿಳಿದು ಹೋದರು. ಅಷ್ಟು ಹೊತ್ತೂ ತಡೆದಿಟ್ಟುಕೊಂಡಿದ್ದ ಅಳು ನುಗ್ಗಿಬಂದಂತಾಗಿ ವನಜಾಕ್ಷಿ ಸೆರಗನ್ನು ಮುಖಕ್ಕೊತ್ತಿಕೊಂಡು ಬಿಕ್ಕಿದಳು. ತಮಗಿಬ್ಬರಿಗೂ ವಯಸ್ಸಾಗಿದೆ. ತನಗಾಗಲೇ ಅರವತ್ಮೂರು ವರ್ಷ. ಇವರಿಗೆ ಎಪ್ಪತ್ತು ದಾಟಿದೆ. ಬ್ಯಾಂಕಿನಲ್ಲಿರುವ ದುಡ್ಡಿಗೆ ಬರುವ ಬಡ್ಡಿ ಐದಾರು ಸಾವಿರ ಬಿಟ್ಟರೆ ತಮಗೆ ಬೇರೇನೂ ಆದಾಯವಿಲ್ಲ. ದುಡಿದದ್ದೆಲ್ಲಾ ಮಕ್ಕಳಿಗಾಗೇ ಖರ್ಚಾಗಿ ಉಳಿದದ್ದಷ್ಟೇ. ಬೇರೆ ಮನೆ ಮಾಡಿಕೊಂಡು ಪ್ರಸಾದಿಯನ್ನು ಜೊತೆಗಿಟ್ಟುಕೊಳ್ಳುವ ಯೋಚನೆಯನ್ನು ಮಾಡಲೂ ಸಾಧ್ಯವಿಲ್ಲ. ಇನ್ನೆಷ್ಟು ಕಾಲ ನಾವಿಬ್ಬರೂ ಇರಬಹುದು! ಇನ್ನೂ ಮೂವತ್ತು ವರ್ಷದ ಪ್ರಸಾದಿಯ ಮುಂದೆ ಇಡೀ ಜೀವನ ಬಿದ್ದಿದೆ. ಈಗಲೇ ಅಣ್ಣಂದಿರ ಕಣ್ಣಲ್ಲಿ ಕಸವಾಗಿದ್ದಾನೆ. ತಾವು ಹೋದಮೇಲೆ ಅವನ ಗತಿ ಏನು. ಏನಾದರೂ ವ್ಯವಸ್ಥೆ ಆಗಲೇಬೇಕಲ್ಲವೆ? ಏನೋ… ಈಗ ಅಂದುಕೊಂಡಿರುವ ಹಾಗೆ ಸಾಧ್ಯವಾದರೆ ನಮ್ಮ ಮನಸ್ಸಿಗೂ ಸ್ವಲ್ಪ ನಿಶ್ಚಿಂತೆ ಸಿಗಬಹುದೇನೋ. ಅವರಿಬ್ಬರೂ ಅವಳಿ ಮಕ್ಕಳು, ಇವನಿಗಿಂತ ಮೂರುವರ್ಷಕ್ಕೆ ದೊಡ್ಡವರು, ಚೆನ್ನಾಗಿ ಓದಿ, ಒಳ್ಳೆಯ ಉದ್ಯೋಗ ಗಳಿಸಿಕೊಂಡು, ಮದುವೆಯಾಗಿ, ಜೀವನದಲ್ಲಿ ಚೆನ್ನಾಗಿಯೇ ಸೆಟಲ್‌ ಆಗಿದ್ದಾರೆ. ಇವನೊಬ್ಬನು ಏನೋ ಸಣ್ಣಪುಟ್ಟ ಕೆಲಸವನ್ನಾದರೂ ಮಾಡಿ, ಅಷ್ಟೋಇಷ್ಟೋ ದುಡಿದುಕೊಂಡು ತಕ್ಕಮಟ್ಟಿಗಿದ್ದಿದ್ದರೆ… ಎಷ್ಟುಸಲ ಅಂದುಕೊಂಡರೂ ಅಷ್ಟೇ. ಅಷ್ಟು ಚೆನ್ನಾಗಿ ದೃಷ್ಟಿ ತಾಗುವಂತೆ ಇದ್ದವನಿಗೆ ಐದು ವರ್ಷದವನಿದ್ದಾಗ ಬಂದ ಆ ಹಾಳು ಜ್ವರವೇ ಮುಳುವಾಯಿತು. ತಿಂಗಳುಗಟ್ಟಲೇ ಕಾದ ಜ್ವರ ಅವನು ಉಳಿದಿದ್ದೇ ಹೆಚ್ಚಾಯಿತು. ತುಂಬಾ ದುರ್ಬಲನಾದ. ಫಿಟ್ಸ್‌ ಬರಲು ಆರಂಭವಾಗಿ ಅದೆಷ್ಟು ದೇವರಿಗೆ ಹರಕೆ ಹೊತ್ತದ್ದೋ. ಕಡೆಗೆ ಬದುಕಿದ್ದೇ ಒಂದು ಪವಾಡವೇನೋ ಅನ್ನಿಸಿಬಿಟ್ಟಿತು. ಉಗ್ಗು ಶುರುವಾಯಿತು. ಕಲಿತದ್ದು ನೆನಪಿನಲ್ಲಿ ಉಳಿಯುತ್ತಿರಲಿಲ್ಲ. ಹೇಗೋ ಹೈಸ್ಕೂಲಿನ ತನಕ ತಳ್ಳಿದರು. ಆಮೇಲೆ ಎಂಟನೇ ಕ್ಲಾಸು ಕೂಡಾ ದಾಟಲಿಲ್ಲ. ಬೇರೆ ಯಾವುದಾದರೂ ಟ್ರೈನಿಂಗ್‌ಗೆ ಕಳಿಸಲು ಶ್ರಮದ ಕೆಲಸಗಳಿಗೆ ಬೇಕಾಗುವಷ್ಟು ಶಕ್ತಿಯಿಲ್ಲ. ಕಲಿಯುವ ಕೆಲಸಗಳಿಗೆ ಬುದ್ಧಿ ಸಾಲದು. ಮನೆಯಲ್ಲೇ ತಮ್ಮಿಬ್ಬರಿಗೆ ಸಣ್ಣಪುಟ್ಟ ಸಹಾಯ ಮಾಡಿಕೊಂಡಿರುತ್ತಾನೆ. ಅದಕ್ಕೂ ನೂರೆಂಟು ಆಕ್ಷೇಪಣೆಗಳು ಅಣ್ಣಂದಿರಿಂದ. ಮೊದಮೊದಲಿಗೆ ಪ್ರೀತಿ ಅಂತಃಕರಣವೇ ಇತ್ತು. ಇತ್ತೀಚೆಗೆ ಹೀಗೆ ಅಸಡ್ಡೆ ತೋರುತ್ತಿದ್ದಾರೆ. ಅವರಿಬ್ಬರಿಗೆ ಹೆಣ್ಣು ನೋಡುವಾಗಲೂ ಎಷ್ಟೋ ಸಂಬಂಧಗಳು ಇವನ ಕಾರಣದಿಂದಲೇ ಮುರಿದುಬಿದ್ದಿದ್ದವು. ಕಡೆಗೆ, ʻಮುಂದೆʼ ಇವನಿಗೊಂದು ವ್ಯವಸ್ಥೆ ಮಾಡುವ ಜವಾಬ್ದಾರಿಯನ್ನು ತಾವು ಹೊತ್ತುಕೊಂಡ ಮೇಲೇ ಅವರಿಬ್ಬರಿಗೂ ಮದುವೆಗಳು ಕುದುರಿದ್ದು. ʻಮುಂದೆಂದೋʼ ಎಂದುಕೊಂಡಿದ್ದನ್ನು ಇಷ್ಟು ಬೇಗನೇ, ಈ ರೀತಿಯಲ್ಲಿ ಮಾಡುವಂತಾಯಿತಲ್ಲ ಎಂದು ಮತ್ತೊಮ್ಮೆ ಕಣ್ಣೊರಸಿಕೊಂಡಳು. ಡ್ರೈವರ್‌ ಸೀಟಿನಲ್ಲಿ ಕುಳಿತು ಹಾರ್ನ್‌ ಮಾಡಿದ. ಎಲ್ಲರೂ ಬಸ್ಸು ಹತ್ತಿದರು… ಅಂತೂ ಶಿವಮೊಗ್ಗ ಬಂತು. ಹತ್ತು ನಿಮಿಷದಲ್ಲೇ ತೀರ್ಥಳ್ಳಿಯ ಕಡೆಗೆ ಹೋಗುವ ಮಿನಿ ಬಸ್ಸು ಸಿಕ್ಕಿ ಒಂದು ಗಂಟೆಗೆಲ್ಲಾ ದೇವಪುರಿ ತಲುಪಿದರು. ಹೆಚ್ಚೇನೂ ಬದಲಾವಣೆಯಾಗಿಲ್ಲ. ಆಗಿದ್ದ ಮಣ್ಣಿನ ರಸ್ತೆಗಳಿಗೆ ಒಂದಷ್ಟು ಫುಟ್ಪಾತ್‌ ಟೈಲ್ಸ್‌ ಬಂದಿವೆಯಷ್ಟೇ. ಎಲ್ಲೋ ಒಂದೆರಡು ಮನೆಗಳು ಹೊಸದಾಗಿ ಕಟ್ಟಿರುವುದನ್ನು ಬಿಟ್ಟರೆ ಮಿಕ್ಕವೆಲ್ಲಾ ಆ ಕಾಲದ ನಾಡಹೆಂಚಿನ, ಮಂಗಳೂರು ಹೆಂಚಿನ ಮನೆಗಳೇ. ಊರಿಗೆಲ್ಲಾ ನಾಲ್ಕು ರಸ್ತೆಗಳು. ಊರಿನ ಹಿಂಬಾಗದಲ್ಲಿ ಎಂದಿನಿಂದಲೋ ತುಂಗೆ ಹರಿಯುತ್ತಲೇ ಇದ್ದಾಳೆ. ನದಿ ದಡದಲ್ಲಿ ಒಂದಷ್ಟು ಗಾರೆ ಕೆಲಸಮಾಡಿ ಯಾಗಶಾಲೆಯನ್ನು ಕಟ್ಟಿದ್ದಾರೆ. ಹಿಂದಿನಂತೆಯೇ ದೇವಪುರಿಗೂ ಆಕಡೆಯ ದಡದಲ್ಲಿರುವ ವಿಷ್ಣುಪುರಿಗೂ ಮಧ್ಯೆ ಉಕ್ಕಡ ಓಡಾಡುತ್ತದೆ. ಸಂಗೀತ ಶಾಲೆ ಆರಂಭವಾಗಿದೆ. ಇನ್ನೊಂದು ದೊಡ್ಡ ಮನೆ, ಪ್ರಾಯಶಃ ರಾಂಭಟ್ಟರದಿರಬೇಕು, ಈಗ ಗ್ರಂಥಾಲಯವಾಗಿದೆ. ತಮ್ಮ ಮನೆಯಲ್ಲಿ ಸಂಸ್ಕೃತ ಮತ್ತು ವೇದ ಪಾಠಶಾಲೆ ಅಂದಿನಂತೆಯೇ ನಡೆಯುತ್ತಿದೆ. ಕಾಲಕಾಲಕ್ಕೆ ತಕ್ಕಂತೆ ಸ್ವಲ್ಪ ರಿಪೇರಿ, ಮಾರ್ಪಾಟುಗಳನ್ನು ಮಾಡಿಕೊಂಡಂತೆ ಕಾಣಿಸುತ್ತಿದೆ. ಬಸ್ಸಿನಿಂದಿಳಿದು ಎಲ್ಲವನ್ನೂ ಗಮನಿಸುತ್ತಾ ಊರೊಳಗೆ ನಡೆದು ಬಂದರು. ಈಶ್ವರನ ದೇವಸ್ಥಾನದ ಪಕ್ಕದ ಮನೆಯೇ ಗಣಪತಿ ಘನಪಾಠಿಗಳದ್ದು. ಆವರಿಗೆ ಎಂಭತ್ತೈದರ ಹತ್ತಿರವೇನೋ. ತಾತ ಅಲ್ಲಿದ್ದಾಗ ಕೃಷ್ಣಮೂರ್ತಿಗಳೂ ಘನಪಾಠಿಗಳಿಂದ ಸಂಸ್ಕೃತವನ್ನೂ, ಸ್ವಲ್ಪ ಮಟ್ಟಿಗೆ ವೇದ ಪಾಠವನ್ನೂ ಒಂದಷ್ಟು ಕಾಲ ಕಲಿತಿದ್ದರು. ಮನೆಗೆ ಮಂಗಳೂರು ಹೆಂಚನ್ನು ಹೊದಿಸಿರುವುದನ್ನು ಬಿಟ್ಟರೆ ಹೆಚ್ಚೇನೂ ಬದಲಾವಣೆಯಾಗಿಲ್ಲ. ಅವರು ಜಗಲಿಯ ಮೇಲೇ ಯಾವುದೋ ಗ್ರಂಥವನ್ನಿಟ್ಟುಕೊಂಡು ಓದುತ್ತಾ ಕುಳಿತಿದ್ದರು. ವಯಸ್ಸಾಗಿರುವುದು ಕಾಣುತ್ತದೆ. ಸ್ವಲ್ಪ ಬಾಗಿದ್ದಾರೆ. ಇವರನ್ನು ಕಂಡೊಡನೆಯೇ ಸಂಭ್ರಮದಿಂದೆದ್ದು ಶಲ್ಯವನ್ನು ಸರಿಯಾಗಿ ಹೊದ್ದುಕೊಂಡು “ಬನ್ನಿ ಬನ್ನಿ…” ಎನ್ನುತ್ತಾ ತಮ್ಮ ಕೈಯಲ್ಲಿದ್ದ ಗ್ರಂಥವನ್ನು ಮಡಿಚಿಟ್ಟು ಎದ್ದರು. “ಬೆಳಗ್ಗೆ ಆರು ಗಂಟೆ ಹೊತ್ತಿಗೆ ಮನೆ ಬಿಟ್ಟದ್ದೇನೋ, ಅಲ್ವೇ… ಆರೇಳು ಗಂಟೆ ಪ್ರಯಾಣ, ಆಯಾಸವಲ್ವೇ” ಮಾತನಾಡಿಸುತ್ತಲೇ ಮನೆಯ ಒಳಹೊಕ್ಕರು. “ಲೇ… ಇವ್ಳೇ… ಅವ್ರೆಲ್ಲಾ ಬಂದಾಯ್ತು ಕಂಡ್ಯಾ… ಮಜ್ಜಿಗೆಯೋ, ಪಾನಕವೋ ಎಂತಾದ್ರೂ ಕೊಡ್ತೀಯಾ ನೋಡು” ಎಂದು ಹೆಂಡತಿಯನ್ನು ಕರೆದರು. ಇವರ ಕಡೆ ತಿರುಗಿ “ಕೈಕಾಲು ತೊಳೆದು ಬನ್ನಿ. ಸ್ವಲ್ಪ ಆಸರಿಗೆ ಕುಡ್ದು ನಂತ್ರ ಊಟ ಮಾಡೋಣ” ಎನ್ನುತ್ತಾ ಬಚ್ಚಲಮನೆಯ ಕಡೆಗೆ ಕೈತೋರಿದರು. ಎಲ್ಲರೂ ಕೈಕಾಲು ತೊಳೆದು ಬರುವ ವೇಳೆಗೆ ತೊಟ್ಟಿಯ ಚೌಕಿಗೆ ಬೇಲದ ಹಣ್ಣಿನ ಬೆಲ್ಲದ ಪಾನಕವನ್ನು ತಂದರು ರತ್ನಮ್ಮ. ಆಕೆಯ ಬೆನ್ನೂ ಬಾಗಿಹೋಗಿದೆ. ಅವರಿಗೂ ಎಂಭತ್ತಕ್ಕೆ ಹತ್ತಿರವಾಯ್ತಲ್ವೇ. ಏನೋ ಹಳೇಕಾಲದವರು ಆರೋಗ್ಯವಂತರೆಂದೇ ಹೇಳಬೇಕು. ಏಲಕ್ಕಿ ಹಾಕಿದ ತಣ್ಣಗಿನ ಪಾನಕ ನಿಜಕ್ಕೂ ಹಿತವಾಗಿತ್ತು. ದೊಡ್ಡ ಲೋಟದ ತುಂಬಾ ಕುಡಿದರೂ, ಇನ್ನೊಂದು ಸಲ ಹಾಕಿದಾಗ ಬೇಡವೆನ್ನದೆ ಹಾಕಿಸಿಕೊಂಡು ಕುಡಿದರು. ವನಜಾಕ್ಷಿ ಕುಡಿದ ಲೋಟಗಳನ್ನು ಹಿತ್ತಲಿಗೆ ತೆಗೆದುಕೊಂಡು ಹೋಗಿ ತೊಳೆದು ಬಾರಲು ಹಾಕಿ ಬಂದಳು. ಒಂದಷ್ಟು ಹೊತ್ತು ಲೋಕಾಭಿರಾಮವಾಗಿ ಮಾತಾಡುತ್ತಾ ಕುಳಿತರು. ಇನ್ನಿಬ್ಬರು ಮಕ್ಕಳ, ಸೊಸೆಯರ ಬಗ್ಗೆ ವಿಚಾರಿಸಿಕೊಂಡರು. ತಮ್ಮ ಮಗ ಸುಬ್ರಹ್ಮಣ್ಯನೇ ಈಗ ಸಂಸ್ಕೃತ ಶಾಲೆಯನ್ನು ನಡೆಸುತ್ತಿರುವ ಬಗ್ಗೆ ಹೇಳಿದರು. ಅವನ ಇಬ್ಬರು ಗಂಡುಮಕ್ಕಳಲ್ಲಿ ಒಬ್ಬ ಸುರತ್ಕಲ್ಲಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿರುವುದನ್ನೂ, ಇನ್ನೊಬ್ಬ ವೇದಾದ್ಯಯನದಲ್ಲೇ ಆಸಕ್ತಿ ತೋರಿ ಅದರಲ್ಲೇ ಮುಂದುವರಿಯುತ್ತಿರುವುದನ್ನೂ ಹೇಳಿದರು. ಇನ್ನೂ ಏನು ಮಾತು ಮುಂದುವರೆಸುತ್ತಿದ್ದರೋ… “ಪಾಪ ಅವ್ರು ಅಷ್ಟೊತ್ತಿಗೇ ಊರು ಬಿಟ್ಟೋರು. ಹಸಿವಾಗಿರುತ್ತೆ. ಎಲೆ ಹಾಕ್ತಿನಿ” ಎನ್ನುತ್ತಾ ರತ್ನಮ್ಮನವರು ಎದ್ದರು. ವನಜಾಕ್ಷಿಯೂ ಸಹಾಯಕ್ಕೆಂದು ಎದ್ದಳು. ಎಲ್ಲರಿಗೂ ಎಲೆ ಹಾಕಿದರು. ಮಿಡಿ ಉಪ್ಪಿನಕಾಯಿ, ಸಾರು, ಹುಳಿ, ಚಟ್ನಿಯ ಜೊತೆಗೆ ಮನೆಯ ಮೊಸರಿನ ಹಿತವಾದ ಊಟ. ಪ್ರಯಾಣದ ಆಯಾಸಕ್ಕೂ, ಬಿಸಿಬಿಸಿಯಾದ ಸೊಗಸಾದ ಊಟ ಮಾಡಿದ್ದಕ್ಕೂ ಹೊಂದಿಕೆಯಾಗಿ ಕಣ್ಣು ಎಳೆಯತೊಡಗಿತು. ಗಂಡಸರಿಗೆಲ್ಲಾ ಚೌಕಿಯಲ್ಲಿ ಚಾಪೆ ಹಾಸಿ ತಮ್ಮಿಬ್ಬರಿಗೂ ಒಳಗಿನ ಕೋಣೆಯಲ್ಲಿ ಚಾಪೆ ಹಾಸಿದರು ರತ್ನಮ್ಮ. ಹೆಚ್ಚು ಉಪಚಾರ ಬೇಕಿಲ್ಲದೆ ಮೂವರೂ ನಿದ್ರೆಗೆ ಜಾರಿದರು. ಎಚ್ಚರವಾದ ಮೇಲೆ ಬಿಸಿ ಬಿಸಿ ಕಾಫಿ ಜೊತೆಗೆ ಕೋಡುಬಳೆ, ಚಕ್ಕುಲಿಗಳು ಬಂದವು. ನಂತರ ಒಂದಷ್ಟು ಹೊತ್ತು  ಊರಿಗೆ ಹೊಸದಾಗಿ ಬಂದವರು, ಹೊರ ಹೋದವರು, ಇತ್ತೀಚೆಗೆ ಶುರುವಾದ ಗ್ರಂಥಾಲಯ, ಹೊರಭಾಗದಲ್ಲಿ ತಲೆಎತ್ತಿರುವ ಗೃಹ ಕೈಗಾರಿಕೆಗಳು, ಹಿಂದೂಸ್ಥಾನಿ ಸಂಗೀತವನ್ನು ಕಲಿಸಲು ಬಂದಿರುವ ಹುಬ್ಬಳ್ಳಿಯ ಗವಾಯಿಗಳು, ಯಾಗಶಾಲೆಯಲ್ಲಿ ಎಲ್ಲೆಂಲ್ಲಿಂದಲೋ ಜನ ಬಂದು ಹೋಮಗಳನ್ನು, ಯಜ್ಞ ಯಾಗಾದಿಗಳನ್ನು ನಡೆಸಲು ಅಪೇಕ್ಷಿಸುತ್ತಿರುವುದು, ಅವರಿಗಾಗಿ ಮಾಡಿರುವ ವಸತಿ, ಊಟದ ವ್ಯವಸ್ಥೆ ಎಲ್ಲದರ ಬಗ್ಗೆ ಒಂದು ಗಂಟೆಯ ಕಾಲಕ್ಷೇಪವಾಯಿತು. ನಂತರ ನದಿ ತೀರಕ್ಕೆ ಹೋಗಿಬರುತ್ತೇವೆಂದು ಮೂವರೂ ಹೊರಟರು. ಮುಸ್ಸಂಜೆಯಾಗಿದ್ದರಿಂದ ಅಲ್ಲಲ್ಲಿ ತೀರದ ಬಂಡೆಗಳ ಮೇಲೆ ಕೂತು ಕೆಲವರು ಸಂಧ್ಯಾವಂದನೆಯಲ್ಲಿ ನಿರತರಾಗಿದ್ದರು. ಮುಳುಗುತ್ತಿರುವ ಸೂರ್ಯ, ಹರಿಯುತ್ತಿರುವ ನದಿಯಲ್ಲಿ ತೇಲುತ್ತಿರುವ ಉಕ್ಕಡ, ಹಕ್ಕಿಗಳ ಚಿಲಿಪಿಲಿ, ಪಕ್ಕದಲ್ಲಿದ್ದ ವೇದ ಶಾಲೆಯಿಂದ ಕೇಳುತ್ತಿದ್ದ ವೇದ ಪಠಣ, ಅರಳೀಮರದ ಮರ‍್ಮರ, ದೇವಸ್ಥಾನದಿಂದ ಆಗಾಗ ಕೇಳುತ್ತಿದ್ದ ಗಂಟಾನಾದ ಎಲ್ಲವೂ ಒಂದು ಅಲೌಕಿಕ ವಾತಾವರಣವನ್ನೇ ನಿರ್ಮಿಸಿದ್ದವು. ಅರಳೀಮರದ ಕಟ್ಟೆಯಲ್ಲಿ ಕುಳಿತು ಇಬ್ಬರೂ ಸೂರ್ಯಾಸ್ತವನ್ನು ವೀಕ್ಷಿಸುತ್ತಿದ್ದರು. ಪ್ರಸಾದಿ ಸ್ವಲ್ಪ ದೂರ ನಡೆದು ನದಿ ದಂಡೆಯ ಮೇಲೆ ಕಾಲನ್ನು ನೀರಲ್ಲಿ ಬಿಟ್ಟು ಕುಳಿತ. “ನಾವೇನೋ ವಯಸ್ಸಾದವರು, ಚಿಕ್ಕಂದಿನಲ್ಲಿ ಇಂತಹ ಜೀವನ ಕಂಡವರು, ಇದೆಲ್ಲಾ ಚೆನ್ನಾಗಿದೆ ಅಂತನ್ಸತ್ತೆ. ಪ್ರಸಾದಿ ಹುಟ್ಟಿದಾಗಿನಿಂದ ಸಿಟೀಲೇ ಬೆಳೆದವನು. ಇಂಥಾಲ್ಲಿ ಹೇಗಿರ‍್ತಾನೆ. ಒಂದು ಸಿನಿಮಾ, ಹೋಟ್ಲು, ಅಂಗಡಿ, ಒಂದೂ ಇಲ್ವಲ್ಲ. ಅವರ ಮನೇಲಿ ಟೀವಿ ಕೂಡಾ ಇದ್ಯೋ, ಇಲ್ವೋ ಗೊತ್ತಾಗ್ಲಿಲ್ಲ” ಅಂದಳು ವನಜಾಕ್ಷಿ ಚಿಂತೆಯಿಂದ. ಕೃಷ್ಣಮೂರ್ತಿಯೂ “ನಾನೂ ಅದನ್ನೇ ಯೋಚಿಸ್ತಿದ್ದೆ” ಅಂದರು. “ಅದಷ್ಟೇ ಅಲ್ಲ, ಅಲ್ಲಾದ್ರೆ ಅವನವರೂ ಅಂತ ನಾವಿಬ್ರಾದ್ರೂ ಇದ್ವಿ; ಇಲ್ಲೆಲ್ರೂ ಹೊಸಬರೇ. ಹೇಗೆ ಹೊಂದಿಕೊಳ್ತಾನೋ” ವನಜಾಕ್ಷಿಗೆ ಇನ್ನೊಂದು ಚಿಂತೆ. “ಅದೂ ನಿಜವೇ. ಆದ್ರೇನ್ಮಾಡೋದು. ದಿನವೂ ರಾಮಾಯ್ಣ, ಮಹಾಭಾರ‍್ತ ನೋಡ್ನೋಡಿ ಸಾಕಾಗಿದೆ. ಅನ್ನೋಂಗಿಲ್ಲ, ಅನುಭವಿಸಕ್ಕಾಗಲ್ಲ. ನಾವೂ ಅವ್ನಿಗೆ ಒಂಥರಾ ಪರಕೀಯರೇ

ಯಾರ ಜೀವನವೆಲ್ಲೋ… Read Post »

ಕಥಾಗುಚ್ಛ

ತವರಿನ ಬೆಟ್ಟ

ಕಥೆ ತವರಿನ ಬೆಟ್ಟ ಶಾಂತಿ ವಾಸು ನಿಮ್ಮವ್ವ ಯೋಳ್ಕೊಟ್ಟಾಳೆನೋ? ಯಾವನ್ತವ ಉಕ್ತೈತೆ ಅಂತ ಮಾಡೀ? ಅವ್ನು ಯಾವನೋ ಮನೆ ಕಟ್ಟುದ್ರೆ ನಿನ್ನನ್ಡ್ಯಾಕೇ ಉರ್ಕಂತೈತೆ ರಂಡೆ?  ಪಿರ್ಯಾದಿ ಯಾಕೆ ಕೊಟ್ಟೆ ಅಂದ್ರೆ ನನ್ನಿಷ್ಟ ಅಂತೀಯ”? ಎನ್ನುತ್ತಾ ಹೆಂಡತಿ ಟಂಕಿಯ ಬೆನ್ನಿನ ಮೇಲೆ ಒಂದೇ ಸಮ ನಾಲ್ಕೈದು ಸಲ ಕುಟ್ಟಿ ಹೊಸ್ತಿಲು ದಾಟಿ ಹೊರಬಂದ ಅಳ್ಳಯ್ಯನಿಗೆ ಎಡಗಡೆಯ ಜಗುಲಿಯ ಮೇಲೆ ಪಟ್ಟಾಪಟ್ಟಿ ಚಡ್ಡಿ, ಮಾಸಿದ ಬನಿಯನ್ನು ತೊಟ್ಟು ಪಕ್ಕದಲ್ಲೇ ಚೌಕದ ಮನೆಗಳ ತೂತು ಬಿದ್ದ ಕಂಬಳಿ ಅದರ ಮೇಲೊಂದು ಕೋಲಿಟ್ಟು, ಕುಕ್ಕರಗಾಲಲ್ಲಿ ಕೂತು ಬೀಡಿ ಸೇದುತ್ತಿದ್ದ ಅಪ್ಪ, ತಾತು ಕಂಡಿದ್ದೇ ತಡ ದುರುಗುಟ್ಟಿ ನೋಡಿ “ಆ ಬಟ್ಟೆ ಬಿಚ್ಚಿ ಒಗಿಯೋಕ್ಕಾಕು ಅಂತ ಎಷ್ಡಪ ಯೋಳಾನಿ? ಮೂಸಾದೇ ಬ್ಯಾಡ ನೋಡೀರೇ ಸಾಕು ಗಬ್ಬಂತದೆ” ಎಂದವನು ಪಂಚೆಯನ್ನು ಮೊಣಕಾಲುಗುಂಟ ಮಾಡಚುತ್ತಾ ತಾತುವನ್ನು ದಾಟಿ ಮುಂದೆ ಹೋಗಿ, ತೆನೆ ಬಿಟ್ಟ ಜೋಳದ ಹುಲ್ಲಿಗೆ ಮೂತ್ರ ಸಿಂಪಡಿಸಿ ಬಂದು, ಮಡಚಿದ ಪಂಚೆಗಿಂತಲೂ ಕೆಳಕ್ಕಿದ್ದ ಖಾಕಿ ಚಡ್ಡಿ ಕಾಣಿಸುವಂತೆ ತಾತುವಿನ ಎದುರಿಗೆ ತುಸು ದೂರವಿದ್ದ ನೇರಳೆಮರದ ಕೆಳಗೆ ಕುಕ್ಕರಗಾಲಲ್ಲಿ ಕುಳಿತು ಮೊಣಕಾಲುಗಳನ್ನು ಕೈಗಳಿಗೆ ಆಸರೆ ಕೊಟ್ಟು, ಓಲೆಯೂರಿನ ಬೀದಿಬೀದಿಗಳಲ್ಲಿ ಟಂಕಿ ನೀಡಿದ ಪಿರ್ಯಾದಿ ಬಗೆಹರಿಸುವ ಸಲುವಾಗಿ ಮಾರನೇದಿನ ಮಧ್ಯಾಹ್ನ ಮೂರು ಗಂಟೆಗೆ ಊರಹಿರಿಯ ಗುಡ್ಡಯ್ಯನ ಮನೆ ಮುಂದೆ ಜನ ಸೇರಬೇಕೆಂದು ಇಂದು ಬೆಳ್ಳಂಬೆಳಗ್ಗೆ  ಸಾರಿದ ಡಂಗೂರದ ಖಾರ ಅಳ್ಳಯ್ಯನ ಮನದಲ್ಲಿ ಉರಿಯುತ್ತಿತ್ತು. ಅವನು ತೊಟ್ಟ ಬಟ್ಟೆ ತಾತುವಿನಷ್ಟು ಮಾಸದಿದ್ದರೂ, ಒಗೆದು ಐದಾರು ತಿಂಗಳಾಗಿರುವ ಲಕ್ಷಣವೆಂಬಂತೆ ಮೂಲ ಬಣ್ಣ ಕಳೆದುಕೊಂಡಿದ್ದವು. ಸುಮ್ಮನೆ ಕುಳಿತು ಅತ್ತಿತ್ತ ನೋಡುತ್ತಿದ್ದ ತಾತು ಕೊನೆಗೆ ತಾನೇ ಮೌನ ಮುರಿದು “ಮತ್ತೇನಂತೆ ನಿನ್ನೆಂಡ್ರಿಗೆ? ವತ್ತಾರೆದ್ದು ವಟಗುಡ್ತಾವ್ಳಿ. ನಿಮ್ಮವ್ವುನ್ನ ಬೆಟ್ಟ ಬ್ಯಾಡ ಗದ್ದೆ ಕೇಳು ಅಂತಂದು ತಮ್ಮನ್ಮನೀಗೆ ಕಳ್ಸಿರವ್ಳು ಇವ್ಳು. ಈಗ್ಯಾಕೆ ಪಂಚಾತಿಗೆ ಪಿರ್ಯಾದು ಕೊಟ್ಟಾಳೋ ಕೇಲ್ಲಾ ಅಂದ್ರೆ, ಮನೆ ಕಟ್ಟೋ ಮಾತಾಡ್ತೀ ಯಾಕ್ಲಾ ಬಾಡ್ಕೋ? ಈಗ್ಲೇ ಉಣ್ಣಾಕ್ಕಿಕ್ಕಲ್ಲಾ, ನಂಬಟ್ಟೆ ಒಗ್ಯಾ ಕೆಲ್ಸ ಒಂದಪನಾರಾ ಮಾಡಾಳೇನ್ಲಾ? ನಿಮ್ಮವ್ವ ಓಗಿ ಆಗ್ಲೇ ಮೂರು ವರ್ಸಾ ಆದೋ.  ಈಗ್ಯಾಕೆ ನಿನ್ನವ್ವನ್ಮ್ಯಾಲೆ ಪಿರೀತಿ ಉಕ್ತಾ ಐತೆ ಅಂತ ಕೇಳೀಯಾ?” ಎನ್ನುತ್ತಾ ತಾನೂ ಸುಟ್ಟು ಬೆರಳನ್ನೂ ಸುಟ್ಟ ಬೀಡಿ ಎಸೆದು ಸುಮ್ಮನೆ ನಾಲಿಗೆ ಹೊರಚಾಚಿ “ಥು ಥು” ಎಂದು ನಾಲಿಗೆಗಂಟಿದ ತಂಬಾಕಿನ ನಾರನ್ನು ಹೊರದಬ್ಬಿದ. ಎಲ್ಲಿಯೋ ನೆಟ್ಟ ನೋಟವನ್ನು ಬದಲಿಸದ ಅಳ್ಳಯ್ಯ “ವತ್ತಾರಿಂದಲ್ಲ ಮೊನ್ನೆ ಬಂದಾಗಿಂದ್ಲೇ, ಅತ್ತೆ ಬಂದ್ರೆ ಜೊತೆಗೇ ಬೆಟ್ಟ ಬತ್ತದೆ ಆಮ್ಯಾಕೆ ಬೆಟ್ಟ ಮಾರಿ, ಈ ಮನೆ ಕೆಡವಿ ಬ್ಯಾರೆ ಮನೆ ಕಟ್ಟುಸ್ಬೇಕು ಅಂತವ್ಳೇ” ಎನ್ನುತ್ತಾ ಮುಂದುವರೆಸಿ “ಬೆಟ್ಟ ಬ್ಯಾಡಾಂದು ಊರುಕೇರಿ ಒಂದ್ಮಾಡ್ದೂಳು ನೀನು ಈಗ್ಯಾಕೇ ಪಂಚಾತಿ ರಂಡೆ ಅಂತ ನಾನಂದ್ರೆ, ಅವ್ವನ್ನ ಕರ್ಕೊಂಬರ್ಲಿ ಅಂತನೇ ನಾಳೆ ಪಂಚಾತಿ ಕರ್ದಾಳಂತೆ” ಎಂದವನು ಖೇದಕರ ಮುಖ ಮಾಡಿ “ಆಸ್ತಿಗಂತ ಅವ್ವನ್ನ ತವರಿಗೆ ಓಡುಸ್ದೆ ಅಂತ ಊರೇ ಉಗೀತಾ ಅದೆ. ಅದ್ರಾಗೆ ಈ ರಂಡೆ  ಶಿಲ್ಮಾವನ್ಮ್ಯಾಲೆ (ಶಿಳ್ಳೆ ಮಾವ) ಪಿರ್ಯಾದು ಕೊಟ್ಟವಳೆ. ಓಗಿಬರೋ ತಾವು ಮುಖ ತೋರ್ಸೋದೆಂಗೆ?” ಎನ್ನುತ್ತಾ ಬಲಗಡೆ ಕತ್ತು ಹೊರಳಿಸಿ ಜಗುಲಿಯ ಮೇಲಿದ್ದ ತಾತುವನ್ನು ನೋಡಿ “ಇವ್ಳವ್ವ ಬೆಟ್ಟ ಮಾರೋಕೆ ಯೋಳಿ ಕಳ್ಸಿರೊ ಹಂಗೆ ಕಾಣ್ತದೆ ಕಣಪ್ಪ. ಯಾರೋ ಯೋಳಾರಂತೆ, ಅವ್ವನ್ಗೆ ಶಿಲ್ಮಾವ ಕೊಟ್ಟಿರೋ ಬೆಟ್ಟ ಪೂರಾ ಗ್ರೇನಿಟ್ ಇದ್ದಾದಂತೆ. ತೊಂಬತ್ತು ಲಕ್ಸಾನೋ ಒಂದು ಕೋಟಿನೊ ಆದಾತಂತೆ.” ಎಂದ. ತಾತು ಯಾವುದೇ ಭಾವನೆ ತೋರದೆ ಗಡಸು ದನಿಯಲ್ಲಿ “ಅಲ್ಲಲೇ ಅವ್ಳು ಬೆಟ್ಟ ಮಾರು ಅಂದ್ರೆ ಮಾರಕ್ಕೇನು ಅವಳವ್ವoದೇನ್ಲಾ?” ಎನ್ನುವಷ್ಟರಲ್ಲಿ ಕೋಳಿಗಳಿಗೆ ಹಿಂದಿನ ದಿನದ ಮುದ್ದೆ ಪಾತ್ರೆಗಂಟಿದ ಅಟ್ಟೆಸೆಯಲು ಬಂದ ಅಳ್ಳನ ಹೆಂಡತಿ ಟಂಕಿ ತುಸು ನಿಂತಂತೆ ಮಾಡಿ ಬಾಗಿಲ ಕಡೆ ತಿರುಗಿದ ಭಂಗಿಯಲ್ಲಿ ಆಕಸ್ಮಿಕವೆಂಬಂತೆ “ಮಾವ ನಾಳೆ ಅತ್ತೆ ಬರ್ಬೋದು ?” ಎಂದಳು. ತನ್ನ ಮಾತು ಅರ್ಧಕ್ಕೆ ನಿಲ್ಲಿಸಿ, ಟಂಕಿಯ ಮಾತಿಗೆ ಉರಿದುಬಿದ್ದ ಮಾವ. “ಓಯ್ ಓಗು ಒಳ್ಗೆ. ತೂದ್ಬುಟ್ರೆ ಅಂಗೇ ಉದ್ರೋಯ್ತಿಯ. ಯಾ ಗಳ್ಗೆನಾಗೆ ಬಂದ್ಯೋ ಅಲ್ಲಿಂದ್ಲೇ ಸುರುವಾತು ದರಿದ್ರ. ಹರೀವಲ್ದಾಗೈತೆ ಕರ್ಮ. ಒಂದಪನಾರ ನೆಲ ಗುಡ್ಸುದ್ದೇ ಕಾಣೆ. ಬಂದುದ್ದೇ ಬಂದೆ ಎಲ್ರು ಸಂತೋಸ ಗುಡುಸ್ಬುಟ್ಟೆ. ಸಾಲ್ದು ಅಂತ ಪಿರ್ಯಾದಿ ಕೊಟ್ಟಿದ್ದೀಯಲ್ಲ, ಏನು ನಮ್ಮಾನ ಕಳೀಬೇಕಂತ ಮಾಡಿದ್ದೀಯ ಯಂಗೆ? ಮನಿ ಬುಟ್ಟೋಗೂ ಅಂದ್ರೂ ಹೋಗವಲ್ಲೇ?” ಎನ್ನುತ್ತಾ ಬುಸುಗುಟ್ಟಿದ ತಾತುವನ್ನು  ಓರೆಗಣ್ಣಿಂದ ನೋಡಿ ಒಳಗೆ ಹೋದವಳಿಗೆ ಕೇಳುವಂತೆ “ನೀನು ಬೋದು, ಓಗು ಅಂದೇಟ್ಗೆ ನನ್ಪೀರಿ ದಡ್ಡಿ ಸುಮ್ಮುನೋಗ್ಬುಟ್ಲು. ಕರ್ಯಾಕೆ ಅಂತ ಓದ್ನನ್ಮಗುನ್ನ ಆ ಶಿಳ್ಳೆ ಬಾಯ್ಗೆ ಬಂದಂಗೆ ಅಂದು ಕಳುಸ್ದ. ಈಗ ಯಾಮಕ ಇಟ್ಕಂಡು ಪಂಚಾತಿನಾಗೆ ಅವುಳ್ನ ಬೇಕು ಅಂತ ಕೇಳೀ?” ಅಂದ. ಟಂಕಿಗೆ ಕೇಳಿಸಿತೋ ಇಲ್ಲವೋ ತಿಳೀದಾಗಲೀ ಮತ್ತೆ ಬಂದು “ಮುದ್ದೆ ಉಣ್ಣಕ್ಕಿಕ್ಕಾನೇ?” ಎಂದಳು. ಎದ್ದು ಪಂಚೆ ಇಳಿಬಿಟ್ಟು ಹೊರಟ ಅಳ್ಳಯ್ಯನನ್ನು ಹಿಂಬಾಲಿಸಲು ತಾತು ಕುಳಿತಂತೆಯೇ ಕಂಬಳಿಯನ್ನು ಎಡ ಹೆಗಲಿನ ಮೇಲೆ ಹಾಕಿ, ಕೋಲು ಅಲ್ಲೇ ಬಿಟ್ಟು ಎದ್ದು ಒಳಗೆ ಹೋದವ ಬಾಗಿಲ ಎಡಮಗ್ಗುಲಲ್ಲಿ ಹಾಸಿದ್ದ ಚಾಪೆಯ ಮೇಲೆ ಕುಳಿತ. ಪಂಚೆ ಕಾಲಿಗೆ ತೊಡರಿ ‘ರಪ ರಪ’ ಸದ್ದು ಮಾಡಿ ಗುಡಿಸದೇ ಎಷ್ಟೋ ದಿನಗಳಾಗಿದ್ದ ನೆಲದ ಧೂಳನ್ನು ಮೇಲೆಬ್ಬಿಸಿ, ಹೊಸ್ತಿಲಿನಿಂದ ಒಳಗಿಣುಕಿದ ಹನ್ನೊಂದು ಗಂಟೆಯ ಬಿಸಿಲಿನ ದಟ್ಟ ಕಿರಣಕ್ಕೆ ಧೂಪವನ್ನಾಗಿಸಿದ್ದ ಅಳ್ಳಯ್ಯ. ತವರುಮನೆಯವರು ಮೂರು ವರ್ಷದ ಕೆಳಗೆ ಭಾಗವಾಗುವ ಸಂಧರ್ಭದಲ್ಲಿ ಹರಿಷಿಣ ಕುಂಕುಮಕ್ಕೆಂದು ಒಬ್ಬಳೇ ಹೆಣ್ಣುಮಗಳು ಪೀರಿಗೆ, ಬಸ್ಸು ಓಡಾಡುವ ರಸ್ತೆ ಬದಿಯಲ್ಲಿ ಎಪ್ಪತ್ತೈದು ತೆಂಗಿನಮರ, ಒಂದು ಭಾವಿ ಇರುವ ಎರಡೆಕರೆ ಜಾಗ ಹಾಗೂ ಊರೊಳಗೆ ನದಿ ಕೊಳ್ಳದ ಪಕ್ಕಕ್ಕಿದ್ದ ಎರಡೆಕರೆ ಭತ್ತದ ಗದ್ದೆಯನ್ನು ಬಳುವಳಿಯಾಗಿ ನೀಡಿದ್ದರು. ಆದರೆ ಊರೊಳಗಿನ ಗದ್ದೆಯ ಜಾಗದಲ್ಲಿ ಹರಡಿದ್ದ ಎರಡಾಳೆತ್ತರದ ಬೆಟ್ಟವು ಪೀರಿಯ ಒಂದೂಕಾಲೆಕರೆ ಜೊತೆಗೆ ಅಕ್ಕಪಕ್ಕದ ಸುಮಾರು ಇಪ್ಪತ್ತೆರಡು ಎಕರೆ ಜಮೀನನ್ನು ನುಂಗಿತ್ತು. ತಮಗೆ ನೀಡಿದ ಜಮೀನಿನಲ್ಲಿ ಬೆಟ್ಟ ಬಂದಿದ್ದು ಅದನ್ನು ಹಿಂತಿರುಗಿಸಿ, ಬಸ್ಸು ಓಡಾಡುವ ಜಾಗದಲ್ಲಿ ಪೀರಿಗೆ ಮೊದಲೇ ನೀಡಿದ ಜಮೀನಿನ ಪಕ್ಕದಲ್ಲೇ ಬದಲಿ ಜಾಗ  ಕೇಳಿ ಪಡೆದು ತರಬೇಕೆಂದು, ಲೋಕಜ್ಞಾನವಿಲ್ಲದ ಅತ್ತೆಯನ್ನು ಪುಸಲಾಯಿಸಿ ಓಲೆಯೂರಿನಿಂದ ಅವಳ ತವರಿಗೆ ಕಳುಹಿಸಿದ್ದಳು ದುರಾಶೆಯ ಹೆಣ್ಣು ಟಂಕಿ. ಅತ್ತೆಯನ್ನು ತವರಿಗೆ ಅಟ್ಟಿದವಳಿಗೆ ಮನೆಯಲ್ಲಿದ್ದ ಎರಡು ಗಂಡುಗಳು ಲೆಕ್ಕದಲ್ಲೇ ಇರಲಿಲ್ಲವಾಗಿ ಸದಾ ಅವಳಮ್ಮನ ಮನೆಗೆ ಹೋಗಿ ಬಿಡಾರ ಹೂಡುವುದು, ಅಪ್ಪಮಗ ಆಳುಗಳನ್ನಿಟ್ಟು ಉದುರಿಸಿ ಸಿಪ್ಪೆಬಿಡಿಸಿ ಬೀಜ ತೆಗೆಸಿಟ್ಟ ಹುಣಸೆಹಣ್ಣು,ಅಕ್ಕಿ, ಬೆಲ್ಲ, ತೆಂಗಿನಕಾಯಿಗಳನ್ನು ಆಗಾಗ ಬಂದು, ಯಾರನ್ನೂ ಕೇಳದೆ ಹೊತ್ತುಕೊಂಡು ಹೋಗಿ ತವರು ಮನೆಯನ್ನು ಉದ್ದಾರ ಮಾಡುವವಳಾಗಿದ್ದಳು. ಮದುವೆಯಾಗಿ ಐದು ವರ್ಷಗಳಾದರೂ ಮಕ್ಕಳಿಲ್ಲದ ಟಂಕಿ ಆ ಮನೆ ಈ ಮನೆ ಸುತ್ತುತ್ತಾ, ಸಂಸಾರ ಮಾಡುವ ಹಂಗಿಗೇ ಹೋಗಿರಲಿಲ್ಲ. ಇವಳಿಲ್ಲದಾಗ ಪಕ್ಕದೂರಿನಲ್ಲಿದ್ದ ತಾತುವಿನ ಮಗಳು ಚಕ್ಕಿಯನ್ನು ಕರೆತರುವ ಅಪ್ಪಮಗ ಊಟದ ಚಿಂತೆಯೊಂದಿಲ್ಲದೆ ಕಾಲಕಳೆಯುತ್ತಿದ್ದರು. ಆದರೆ ಈಗ ಒಂದು ವರ್ಷದ ಹಿಂದೆ ಇದ್ದಕ್ಕಿದ್ದಂತೆ ಮನೆಗೆ ಬಂದ ಟಂಕಿ, ಚಕ್ಕಿಯನ್ನು ಬಾಯಿಗೆ ಬಂದಂತೆ ಬೈದು ಮತ್ತೆ ಬಾರದಂತೆ ತಾಕೀತು ಮಾಡಿ ಕಳಿಸಿದ್ದಳು. ನಂತರದ ವ್ಯವಸ್ಥೆಯಲ್ಲಿ ಆಳು ಕರಿಯನ ಹೆಂಡತಿ ಅವೇರಿ, ನಿತ್ಯ ಬಂದು ನಾಲ್ಕು ಮುದ್ದೆ ಯಾವುದೋ ಒಂದು ಸಾರು ಮಾಡಿಟ್ಟು ಹೋದರೆ ಈ ನತದೃಷ್ಟರು ಎರಡು ಹೊತ್ತು ತಾವೇ ಬಡಿಸಿಕೊಂಡು ಉಣ್ಣುವರು. ಬೇರೆ ಮನೆಯ ಹೆಣ್ಣನ್ನು ಸೊಸೆಯಾಗಿ ಕರೆತಂದ ಈ ಸಂಸಾರವು ಯಾವುದೇ ತಪ್ಪೇ ಮಾಡದೆ ಪ್ರತಿದಿನ ಶಿಕ್ಷೆ ಅನುಭವಿಸುತ್ತಿತ್ತು. ಒಂದು ವಾರದ ಹಿಂದೆ ಇದ್ದಕ್ಕಿದ್ದಂತೆ ಅತ್ತೆಯ ಬಗ್ಗೆ ಅತೀ ಅಕ್ಕರೆ ಬಂದು “ಅತ್ತೆ ಪೀರಿಯನ್ನು ಕರೆತಂದು ಬಿಡಲು ಅವಳ ತಮ್ಮನಿಗೆ ತಾಕೀತು ಮಾಡಬೇಕು” ಎಂದು ಊರ ಹಿರಿಯರಲ್ಲಿ ಪಿರ್ಯಾದಿ ನೀಡಿದ್ದಳು. ಅಂತೆಯೇ ನಾಳೆ ಪಂಚಾಯ್ತಿ ಕೂಡುವುದಿತ್ತು. ಚಾಪೆಯ ಮೇಲೆ ಕುಳಿತ ತಾತು ಅಲ್ಲೇ ಮಲಗಿ, ಒಂದು ಗೊರಕೆ ತೆಗೆದು ಎದ್ದು ತೊಟ್ಟಿಯ ನಂತರದ ಅಡುಗೆಮನೆ ದಾಟಿ ಹೋಗಿ ಹೊತ್ತಲಿನ ತೆಂಗಿನಮರದ ಹಿಂದಿನ ಗೋಡೆ ಮೇಲೆ ಮೂತ್ರವಿಸರ್ಜಿಸಿ ಬಂದು ಮತ್ತೆ ಚಾಪೆಯ ಮೇಲೆ ಕುಳಿತ. ನೋಡಿದರೆ ಸೊಸೆಯ ಸುಳಿವೂ ಇಲ್ಲ. ಮುದ್ದೆಯ ಘಮಲೂ ಇಲ್ಲ. ಅಳ್ಳಯ್ಯ ಎಲ್ಲೂ ಕಾಣಲಿಲ್ಲ. ಎದ್ದು ಅಡುಗೆ ಮನೆಯತ್ತ ಇಣುಕಿದವನಿಗೆ ಒಲೆ ಹಚ್ಚಿಯೇ ಇಲ್ಲದ್ದು ಕಂಡಿತು. ಹೊರಗೆ ಬಂದರೆ ಮಗ ಮರದಡಿ ಕುಂತು ಕಾಗದ ಸುತ್ತಿ ಕಿವಿಯೊಳಕ್ಕೆ ಬಿಟ್ಟು ನವೆಯನ್ನು ಹಿತವಾಗಿ ಶಮನ ಮಾಡಿಕೊಳ್ಳುತ್ತಿದ್ದ. “ಓಡೋದ್ಲೇನ್ಲಾ ಮತ್ತೆ?” ಎಂದ ತಾತುವನ್ನು ನೋಡದೆಯೇ  ಸಾಧಾರಣವೆಂಬ ಧೋರಣೆಯಲ್ಲಿ “ಊ” ಎಂದ ಅಳ್ಳಯ್ಯ. ಮಾರನೇ ದಿನ ಊರ ಹಿರಿತಲೆ ಗುಡ್ಡಯ್ಯನ ಮನೆಯ ಅಕ್ಕಪಕ್ಕದ ಜಗುಲಿ ಮೇಲೆ ಸಾಲಾಗಿ ಕಾಲು ಇಳಿಬಿಟ್ಟು ಹಾಗೂ ನೆಲದ ಮೇಲೆ ಅಲ್ಲಲ್ಲಿ ಕುಕ್ಕರಗಾಲಲ್ಲಿ ಕುಳಿತ ಹದಿನೆಂಟು ಜನರಲ್ಲಿ ಮೂವರು ಪಟ್ಟಾಪಟ್ಟಿ ಚಡ್ಡಿ ಧರಿಸಿದ್ದರೆ ಮಿಕ್ಕವರು ಪಂಚೆಯನ್ನುಟ್ಟು ಪಂಚಾಯ್ತಿ ಕೇಳಲು ಬಂದಿದ್ದರು. ಇತ್ತ ಏಳು ಜನ ಬಂಧುಗಳೊಡನೆ ಓಲೆಯೂರಿಗೆ ಬಂದ ಶಿಳ್ಳೆ, ಅಕ್ಕ ಪೀರಿಯನ್ನು ಅವಳ ಮನೆಯಲ್ಲಿ ಬಿಟ್ಟು ಗುಡ್ಡಯ್ಯನ ಮನೆ ಬಳಿ ಬಂದು ನಾಲ್ಕು ಜನರ ಮಧ್ಯೆ ಜಗುಲಿಯ ಮೇಲೆ ಕುಳಿತ. ಹೊರ ಬಂದ ಗುಡ್ಡಯ್ಯ ಜಗುಲಿಯ ಕಂಬದ ಬಳಿ ನಿಂತು ಶಿಳ್ಳೆಯನ್ನುದ್ದೇಶಿಸಿ “ಊರಗೆಲ್ಲಾ ಸಂದಾಕದಾರೆನ್ಲಾ ಶಿಳ್ಳಾ?” ಎಂದರು. “ಊ” ಎನ್ನುತ್ತಾ ಸ್ವಲ್ಪ ಹೊತ್ತು ಸುಮ್ಮನಿದ್ದು, ತಲೆ ಮುಂದೆ ಮಾಡಿ “ಬೆಟ್ಟ ಬ್ಯಾಡ ಅಂದೋಳು ಟಂಕಿ, ಬ್ಯಾರೆ ಕಡೆ ಗದ್ದೆ ಬೇಕು ಅನ್ನೋಳು ಟಂಕಿ, ಆಸ್ತಿ ತತ್ತಾ ಅಂತಂದು ಅತ್ತೇನ ತವ್ರಿಗೆ ಅಟ್ಟಿರೋಳು ಟಂಕಿ. ಈಗ ಅತ್ತೇನ ಬಿಟ್ಟೋರೋಕ್ಕೇ ಆಗಲ್ದು ತಂದು ಬುಡಿ ಅನ್ನೋಳು ಟಂಕಿನೇ. ಅದುಕ್ಕೇ ಬೆಟ್ಟ ನಾನೇ ಮಡೀಕ್ಕಂಡು, ರೊಡಾಗಿರೋ ಯಳ್ದೆಕ್ರೆ ಗದ್ದೆ ಅಕ್ಕಯ್ನ ಯಸುರ್ಗೆ ಮಾಡಿ ಕರ್ಕೊಂಬಂದು ಬುಟ್ಟಿವ್ನಿ. ಅತ್ತೆಸೊಸೆ ಮಧ್ಯ ನಾವ್ಯಾಕೆ?” ಎನ್ನುತ್ತಾ ಜಗುಲಿ ಇಳಿದು ಗುಡ್ಡಯ್ಯನ ಮುಂದೆ ಬಂದು “ಆದ್ರೆ ಅಣ್ಣೊ, ನಮ್ಮಕ್ಕನ್ನ ಸಾಯೋಗುಂಟ ನೋಡ್ಕಂಡ್ರೆ ಆಸ್ತಿ. ಇಲ್ದಿದ್ರಿಲ್ಲ ಅಂತ ಬರಸಿವ್ನಿ.” ಎನ್ನುತ್ತಾ ಪತ್ರವನ್ನು ಹಿರಿಯನ ಕೈಗಿತ್ತು “ಇಕಾ ಇದ್ನಾ ನೀನೇ ಟಂಕಿಗೆ ಕೊಡು. ನಾನು ಓಯ್ತೀನಿ” ಅನ್ನುತ್ತಾ ಏನನ್ನೋ ನೆನಪಿಸಿಕೊಂಡಂತೆ “ಭಾವನಾಸ್ತೀನೂ ಹಂಗೇ ಬರ್ಸೀವ್ನಿ”. ಎನ್ನುತ್ತಾ ತುಸುವೇ ದನಿಯೇರಿಸಿ “ನಿಮ್ಮೊರಿನ ಹೆಣ್ಣು ಟಂಕಿ ಹೇಳ್ದಂಗೆ ಎಲ್ಲಾ ಕೇಳಿವ್ನಿ. ಈಗ ಅವ್ಳು ನಮ್ಮಕ್ಕಯ್ಯನ್ನ ಸರೀ ನೋಡಲ್ಲಾಂದ್ರೆ ಏನು ಮಾಡ್ತೀರಿ?” ಕೇಳಿದ. ಹಿರಿಯ ಗುಡ್ಡಯ್ಯನಿಗೆ “ನಿಮ್ಮೂರಿನ ಹೆಣ್ಣು” ಎಂದದ್ದು ಅವಮಾನವಾದಂತಾಗಿ “ನಾವಿರೋದು ಯಾಕ್ಲಾ? ಅವುಳ್ನ ಈಗೇ ಕರ್ಸಿ ಯೋಳ್ತೀವಿ. ಬುದ್ದಿ ಬಂದಿಲ್ಲಾಂದ್ರೆ ಊರೊಳಿಕ್ಕೆ ಕಾಲು ಮಡಗಾಂಗಿಲ್ಲ. ಬೈಸ್ಕಾರ ಆಕ್ತೀವಿ. ಆದಾತೆ??” ಎಂದಂದು “ಅಲ್ಲಲೇ ಆಗ್ಲೇ ಪಂಚಾತಿ ಕರ್ಸಕ್ಕೇನಾಗಿತ್ಲಾ ನಿಂಗೆ? ಅತ್ತೇನ ವರ್ದಕ್ಸಿನೆ ತಾ ಅಂತ ಅಟ್ಟೋದೆಲ್ಲಾರ ಉಂಟೇನಲಾ?” ಎಂದು ಮಾತು ನಿಲ್ಲಿಸಿ ಪತ್ರದ ಕಡೆ ನೋಡಿ “ನೀನು ಸರಿಯಾಗೇ ಮಾಡಿದ್ದೀ ಬುಡು” ಎನ್ನುತ್ತಾ ಪಕ್ಕದಲ್ಲಿದ್ದವನನ್ನು ಕರೆದು “ಪಿರ್ಯಾದಿ ಕೊಟ್ಟು, ಡಂಗೂರ ಹಾಕ್ಸಿರೋಳು ಇಲ್ಲಿ ಬರೊಕ್ಕಾದೇ? ಓಗಿ ಒಂಕೂಗಾಕಿ ಬಾ ಓಡು” ಎಂದ. ಶಿಳ್ಳೆ “ನಾನ್ಯಾಕೆ ಪಂಚಾತಿ ಸೇರುಸ್ಲಿ? ನಮ್ಮಕ್ಕಯ್ಯುಗೆ ಒಂದು ಪಿಡ್ಚೆ ಊಟ ಹೆಚ್ಗೆ ಬೇಯಾಕಿಲ್ವೆ ನಮ್ಮಟ್ಟಿನಾಗೆ? ನಂಗಾರ ಎಷ್ಟು ಹೆಣ್ಮಕ್ಕಳದಾವು? ನಿಮ್ಮೂರೋರು ಪಿರ್ಯಾದಿ ಕೊಟ್ಮ್ಯಾಲೂ ಅಕ್ಕಯ್ನ

ತವರಿನ ಬೆಟ್ಟ Read Post »

ಕಥಾಗುಚ್ಛ

ರೊಟ್ಟಿ ತೊಳೆದ ನೀರು

ಕಥೆ ರೊಟ್ಟಿ ತೊಳೆದ ನೀರು ಶಾಂತಿವಾಸು ಮುಂಜಾವಿನ ಚುಮುಚುಮು ಚಳಿಯಲ್ಲಿ ಮಂಕಿ ಟೋಪಿ, ಸ್ವೆಟರ್ ಧರಿಸಿ ವಾಕಿಂಗ್ ಹೊರಟ ಅರವತ್ತೆಂಟರ ಪಾಂಡುರಂಗಯ್ಯ ಶೆಟ್ಟರು, ಇನ್ನೂ ಮಲಗಿಯೇ ಇದ್ದ ಹೆಂಡತಿ ಲಲಿತಮ್ಮಳೆಡೆ ನೋಡಿದರು. ಇಷ್ಟು ಹೊತ್ತಿಗಾಗಲೇ ಗೇಟಿನ ಹೊರಗೆ ಒಳಗೆಲ್ಲ ಗುಡಿಸಿ, ನೀರು ಹಾಕಿ ರಂಗೋಲಿ ಬಿಡಿಸಿ, ಡಿಕಾಕ್ಷನ್ ಹಾಕಿಟ್ಟು ತನ್ನೊಂದಿಗೆ ವಾಕಿಂಗ್ ಹೊರಡುವವಳು ಇನ್ನೂ ಏಕೆ ಎದ್ದಿಲ್ಲವೆಂಬ ಅನುಮಾನವಾಯಿತು. ಉಸಿರಾಡುತ್ತಿದ್ದಾಳೆಯೇ? ಎಂದು ತಿಳಿದುಕೊಳ್ಳುವ ಸಲುವಾಗಿ ತುಸು ಮಂಜಾದ ಕಣ್ಣಿನಿಂದ ಹತ್ತಿರ ಹೋಗಿ ಬಗ್ಗಿ ನೋಡಿದರು. ‘ಬದುಕಿದ್ದಾಳೆ’ ಎಂದು ಖಾತ್ರಿ ಮಾಡಿಕೊಂಡು ಬಾಗಿಲೆಳೆದುಕೊಂಡು ಹೊರಗೆ ನಡೆದರು. ರಸ್ತೆಯ ತಿರುವಿಗೆ ಬರುತ್ತಿದ್ದಂತೆ ಪ್ರತಿದಿನ ಅಡ್ಡ ಸಿಗುತ್ತಿದ್ದ ಚಂದ್ರಪ್ಪ ಕೂಡ ಇಂದು ಕಾಣಿಸಲಿಲ್ಲ.      ನಿಂತಲ್ಲಿಯೇ ನಿಂತು ಚಂದ್ರಪ್ಪನ ಮೊಬೈಲಿಗೆ ಫೋನ್ ಮಾಡಿದರು. ಚಂದ್ರಪ್ಪ ಫೋನ್ ತೆಗೆದದ್ದೇ ತಡ “ಎಲ್ಲಪ್ಪ? ಇವತ್ತು ಇನ್ನೂ ಬಂದೇ ಇಲ್ವಾ? ಬರ್ತಿಯೋ ಇಲ್ವೊ”? ಕೇಳಿದರು. ಆ ಕಡೆಯಿಂದ ಚಂದ್ರಪ್ಪ ಛೇಡಿಸುವ ದನಿಯಲ್ಲಿ “ಅಲ್ಲ ಶೆಟ್ರೇ, ಲೇಟಾಗಿ ಬಂದವರು ನೀವು. ನನ್ನನ್ನೇ ಬಂದಿಲ್ವಾ ಅಂತ ಕೇಳ್ತೀರಾ? ನಾನು ಆಗಲೇ ವಾಕಿಂಗ್ ಮುಗಿಸಿ, ಕಾಫಿ ಕುಡೀತಿದ್ದೀನಿ. ಬಿಸಿ ಬಿಸಿ ಇಡ್ಲಿ ಇಳಿಸ್ತಿದ್ದಾರೆ ಬನ್ನಿ. ತಿಂದು ಮನೆಗೆ ಹೋಗೋಣ” ಎನ್ನಲು, ಶೆಟ್ಟರು “ಇಲ್ಲ ನಾನು ಮನೆಗೆ ಹೋಗ್ತೀನಿ ಚಂದ್ರಪ್ಪ” ಎಂದು ಹೇಳಿ ಫೋನಿಟ್ಟ ಶೆಟ್ಟರಿಗೆ ವಾಕಿಂಗ್ ಹೋಗುವ ಮನಸ್ಸಿರಲಿಲ್ಲ. ಹೆಂಡತಿಯ ಕುರಿತು ಭಯವಾಗತೊಡಗಿತು. ಮೊಬೈಲಿನಲ್ಲಿ ಸಮಯ ಏಳೂವರೆ ತೋರಿಸುತ್ತಿತ್ತು. ವಾಪಸ್ ಮನೆಗೆ ಬಂದವರು ನೇರವಾಗಿ ರೂಮಿಗೆ ಹೋದರು.     ಅಪರೂಪಕ್ಕೆ ಇನ್ನೂ ಮಲಗಿದ್ದ ಲಲಿತಮ್ಮನನ್ನು ಎಬ್ಬಿಸಲು ಮನಸ್ಸು ಬರಲಿಲ್ಲ. ಆದರೆ ಏಕೆ ಎದ್ದಿಲ್ಲವೆಂದು ತಿಳಿಯುವ ತನಕ ನೆಮ್ಮದಿಯೂ ಇಲ್ಲ ಅವರಿಗೆ. ಮೆಲುವಾಗಿ “ಲಲಿತ ನಿದ್ದೆ ಮಾಡ್ತಿದ್ದೀಯಾ ಇನ್ನೂ”? ಎಂದರು. ಕಣ್ಣುಬಿಟ್ಟ ಲಲಿತಮ್ಮ “ಟೈಮೆಷ್ಟು? ಆಗ್ಲೇ ವಾಕಿಂಗ್ ಹೋಗಿ ಬಂದು ಬಿಟ್ರಾ”? ಕೇಳಿದರು. “ನಾನು ಎದ್ದಾಗ್ಲೇ ಏಳಾಗಿತ್ತು ಅನ್ನಿಸುತ್ತೆ. ಚಳಿ ನೋಡು. ಮಲಗಿಬಿಟ್ಟಿದ್ದೀನಿ. ನಾನು ವಾಕಿಂಗ್ ಹೋಗ್ಲೇ ಇಲ್ಲ. ಅಷ್ಟು ದೂರ ಹೋಗಿದ್ದವನು, ನೀನ್ಯಾಕೋ ಎದ್ದಿಲ್ವಲ್ಲ ಅಂತ ವಾಪಸ್ ಬಂದೆ. ಕಾಫಿ ಕೊಡು” ಎಂದರು. “ಕೊಡ್ತೀನಿ ಇರಿ” ಎನ್ನುತ್ತಾ ಎದ್ದು ಹೋದ ಲಲಿತಮ್ಮನ ಕುಗ್ಗಿದ ಬೆನ್ನನ್ನೇ ನೋಡುತ್ತಾ ಕುಳಿತ ಪಾಂಡುರಂಗಯ್ಯ ಶೆಟ್ಟರು, ‘ಇವಳಿಗೇನಾದರೂ ಆದರೆ, ನನ್ನ ಗತಿ ಏನಪ್ಪಾ ದೇವರೇ’? ಎಂದು ಎದೆಯ ಮೇಲೆ ಕೈ ಇಟ್ಟುಕೊಂಡರು. ಒಂದು ತಿಂಗಳಿನಿಂದಲೂ ಲಲಿತಮ್ಮನಲ್ಲಿ ಈ ತರಹದ ಒಂದೊಂದೇ ಬದಲಾವಣೆಯನ್ನು ಗಮನಿಸುತ್ತ ಬಂದಿದ್ದ ಶೆಟ್ಟರು ‘ಆದಷ್ಟು ಬೇಗ ಮನೆಯ ವಿಷಯ ಇತ್ಯರ್ಥ ಮಾಡಿಬಿಡಬೇಕು. ಎಲ್ಲವೂ ಹೋದರೂ ಪರವಾಗಿಲ್ಲ. ಕೊನೆಗೆ ಇವಳೊಬ್ಬಳನ್ನು ಮಾತ್ರ ಉಳಿಸಿಕೊಳ್ಳಬೇಕು’ ಎಂದು ತೀರ್ಮಾನಿಸಿದರು.      ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಆರು ಹಾಗೂ ಮೂರುವರೆ ವರ್ಷದ ಇಬ್ಬರು ಗಂಡು ಮಕ್ಕಳೊಂದಿಗೆ, ಹೊಳೆನರಸೀಪುರದಲ್ಲಿದ್ದ ಜಮೀನು ಮಾರಿ ಹತ್ತು ಸಾವಿರ ರೂಪಾಯಿಗಳನ್ನು ಕೈಲಿ ಹಿಡಿದು ಬೆಂಗಳೂರಿಗೆ ಬಂದು ಸಂಸಾರ ಹೂಡಿದ್ದ ಪಾಂಡುರಂಗಯ್ಯ ಶೆಟ್ಟರು ಹಾಗೂ ಲಲಿತಮ್ಮ ಬಹಳ ಕಷ್ಟ ಜೀವಿಗಳು. ಎರಡು ಬಾಗಿಲುಗಳ ದಿನಸಿ ಅಂಗಡಿ ತೆರೆದು ಅದಕ್ಕಂಟಿದಂತಿದ್ದ ಮನೆಯನ್ನು ಬಾಡಿಗೆಗೆ ಪಡೆದು, ಗಂಡ ಹೆಂಡತಿ ಹಗಲಿರುಳೆನ್ನದೆ ಶ್ರಮಿಸುತ್ತಿದ್ದರು. ಅಪರಿಚಿತ ಊರಿನಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಿ ಸಂಸಾರವು ನೆಲೆ ಕಂಡುಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ಒಂದೊಂದು ಪೈಸೆಗೂ ಲೆಕ್ಕ ಹಾಕಿ ಖರ್ಚು ಮಾಡುತ್ತಾ ಬೆಂಗಳೂರಿಗೆ ಬಂದು ಹದಿನೈದು ವರ್ಷಗಳ ನಂತರ ಬಾಡಿಗೆಗೆ ಪಡೆದಿದ್ದ ಕಟ್ಟಡವನ್ನೇ ಸ್ವಂತಕ್ಕೆ ಕೊಂಡುಕೊಂಡರು.     ನಂತರ ಹಳೆಯ ಕಟ್ಟಡವನ್ನು ಕೆಡವಿ ಕೆಳಗೆ ಬಾಡಿಗೆಗೆ ಒಂದು ಮನೆ, ತಮಗೆ ಎರಡು ಬಾಗಿಲಿನ ಅಂಗಡಿ, ಅದರ ಮೇಲೆ ತಮ್ಮ ವಾಸಕ್ಕೆ ಅನುಕೂಲವಾದ ಮೂರು ಬೆಡ್ ರೂಮಿನ ಮನೆ, ಮತ್ತೂ ಮೇಲೆ ಬಾಡಿಗೆಗೆ ಎರಡು ಮನೆ ಕಟ್ಟಿಕೊಂಡರು. ಜೀವನ ಮೊದಲಿನಷ್ಟು ತ್ರಾಸ ಇಲ್ಲದಿದ್ದರೂ ಸುಮ್ಮನಿದ್ದು ಅಭ್ಯಾಸವಿರದ ದಂಪತಿಗಳು, ಮಕ್ಕಳು ಮೊಮ್ಮಕ್ಕಳಿಗೆಂದು ದುಡಿಯುತ್ತಾ ಅಂಗಡಿಯ ವ್ಯಾಪಾರವನ್ನು ಮಾತ್ರ ನಿಲ್ಲಿಸಲಿಲ್ಲ.       ಹೆಚ್ಚು ಓದದೆ ತಂದೆಯೊಂದಿಗೆ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ ದೊಡ್ಡಮಗ ಕೇಶವನಿಗೆ ಆರು ವರ್ಷದ ಕೆಳಗೆ ತಮ್ಮದೇ ಊರು ಹೊಳೆನರಸೀಪುರದ ರಥಬೀದಿಯ ರಾಮಪ್ಪ ಶೆಟ್ಟಿಯ ಮಗಳು ಕವಿತಾಳೊಂದಿಗೆ ಮದುವೆ ಮಾಡಿ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದರು. ಅವರಿಗೆ ಒಬ್ಬ ಮಗ ವಿಶ್ವಾಸ್ ಐದು ವರ್ಷದವನು. ಎರಡನೆಯ ಮಗ ಕೃಷ್ಣ (ಕಿಟ್ಟಿ) ಬಿ.ಕಾಂ ಓದಿ ಲೆಕ್ಕಪರಿಶೋಧಕರ ಬಳಿ ಕೆಲಸಕ್ಕೆ ಸೇರಿದವನು ಕೊನೆಗೆ ಅದೇ ಕಂಪನಿಯಲ್ಲಿ ಮ್ಯಾನೇಜರಾಗಿ ಬಡ್ತಿ ಪಡೆದು ಮುಂಬೈ ಸೇರಿದ್ದ. ಈಗ ಎರಡು ವರ್ಷಗಳ ಹಿಂದೆ ಅವನಿಗೂ ಮೈಸೂರಿನ ಕೃಷ್ಣಯ್ಯ ಶೆಟ್ಟಿಯವರ ಮಗಳು ಪಂಕಜಳಿಗೂ ಮದುವೆ ಮಾಡಿಸಿ ನೆಮ್ಮದಿಯ ನಿಟ್ಟುಸಿರೆಳೆದಿದ್ದರು ಪಾಂಡುರಂಗಯ್ಯ ಹಾಗೂ ಲಲಿತಮ್ಮ ದಂಪತಿಗಳು.      ಇಷ್ಟೇ ಆಗಿದ್ದರೆ ಇವರ ಸಂಸಾರದ ಹಣೆಬರಹವನ್ನು ಮತ್ತೆ ಆಸಕ್ತಿವಹಿಸಿ ಓದಲಾಗುವುದಿಲ್ಲವೆಂದೇ ದೇವರು ಶೆಟ್ಟರಿಗೆ ಒಂದೊಂದೇ ಕಾಯಿಲೆಯನ್ನು ಸೇರಿಸುತ್ತಾ ಸಾಗಿದ್ದ. ಸಕ್ಕರೆ ಕಾಯಿಲೆಯೊಂದಿಗೆ ರಕ್ತದೊತ್ತಡ ಬೇರೆ ಸೇರಿಕೊಂಡು ಇಳಿವಯಸ್ಸಿನಲ್ಲಿ ನೆಮ್ಮದಿಯಾಗಿ ತಿನ್ನಬಹುದು ಎಂದು ಏನನ್ನೂ ತಿನ್ನದೆ ಬರೀ ನೋಡಿ ನೋಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಶೆಟ್ಟರ ನಾಲಿಗೆ ಚಪಲಕ್ಕೆ ಶಾಶ್ವತವಾಗಿ ಬೀಗ ಹಾಕಿತ್ತು. ಮದುವೆಗೆ ಮೊದಲು ರಜೆ ಸಿಕ್ಕಾಗೆಲ್ಲಾ ಮುಂಬೈನಿಂದ ಬರುತ್ತಿದ್ದ ಕಿಟ್ಟಿ ಮದುವೆಯಾದ ಮೊದಲ ವರ್ಷ ಒಂದೆರಡು ಸಲ ಬಂದಿದ್ದನಷ್ಟೇ, ನಂತರ ಬರುವುದು ಬೇಡ, ಕೊನೇ ಪಕ್ಷ ಫೋನ್ ಮಾಡುವುದನ್ನೂ ಬಿಟ್ಟುಬಿಟ್ಟಿದ್ದ. ಇವರಾಗೇ ಫೋನ್ ಮಾಡಿದರೂ ಒಂದೆರಡೇ ಮಾತಿನಲ್ಲಿ ಎಲ್ಲವನ್ನೂ ಕೇಳಿ ಮುಗಿಸುತ್ತಿದ್ದನಷ್ಟೇ ಹೊರತೂ ತಾನಾಗಿ ಏನನ್ನೂ ಹೇಳುತ್ತಿರಲಿಲ್ಲ.      ಬರಲಾರೆನೆಂದು ನೇರವಾಗಿ ಹೇಳದೆ, ಬಿಡುವಿಲ್ಲವೆಂದು ಮೊದಲೇ ಹೇಳಿಬಿಡುತ್ತಿದ್ದವನನ್ನು ಇವರುಗಳು ಕೂಡ “ಬಾ” ಎಂದು ಕರೆಯುವುದನ್ನು ಬಿಟ್ಟುಬಿಟ್ಟರು. ತಾವೇ ಹೋಗಿ ಮಗನ ಮನೆಯಲ್ಲಿದ್ದು ಬರಬಹುದೆಂಬ ಹೆಂಡತಿಯ ಸಲಹೆ ಶೆಟ್ಟರಿಗೆ ರುಚಿಸಲಿಲ್ಲ. “ಮನೆಬಿಟ್ಟು ನಾನೆಲ್ಲೂ ಬರುವುದಿಲ್ಲ. ಕೇಶವ ಒಬ್ಬ ಅಂಗಡೀನ ಹೇಗೆ ನೋಡಿಕೊಳ್ಳುತ್ತಾನೆ? ಅವನಿಗೆ ಕಷ್ಟವಾಗುತ್ತೆ. ನಾವು ರೈಲ್ವೇ ಸ್ಟೇಷನ್ನಿನಲ್ಲಿರೋ ವೈಟಿಂಗ್ ರೂಮ್ ತರ. ಈ ಜಾಗ ಬಿಟ್ಟು ಕದಲಲ್ಲ. ಇರೋ ಕಡೆನೇ ಪರ್ಮನೆಂಟು. ಅವರೆಲ್ಲ ರೈಲಿನ ಹಾಗೆ ಬರೋರು ಬರಲಿ ಹೋಗೋರು ಹೋಗಲಿ ನಾನು ಮಾತ್ರ ಎಲ್ಲೂ ಕದಲಲ್ಲ” ಎಂದು ನಗೆಚಟಾಕಿ ಜೊತೆಗೆ ಲಲಿತಮ್ಮನ ಬೇಡಿಕೆಯನ್ನು ಅಲ್ಲಿಯೇ ತುಂಡರಿಸುತ್ತಿದ್ದರು. ‘ಬೇಕಿದ್ದರೆ ನೀನು ಹೋಗಿ ಬಾ’ ಎಂದು ಬಾಯಿ ಮಾತಿಗೂ ಹೇಳುತ್ತಿರಲಿಲ್ಲ ಪುಣ್ಯಾತ್ಮ. ಖರ್ಚು ಎಂಬ ನೆಪ ಒಂದು ಕಡೆಯಾದರೆ, ಮನೆಯನ್ನು ಸೊಸೆಯ ಮೇಲೆ ಬಿಟ್ಟು ಹೋಗುವಷ್ಟು ನಂಬಿಕೆ  ಶೆಟ್ಟರಿಗೆ ಇರಲಿಲ್ಲ. ಇಷ್ಟಕ್ಕೂ ಇವರು ಯಾರನ್ನೂ ಮುಂಬೈಗೆ ಬಂದು ಒಂದೆರಡು ದಿನವಾದರೂ ಇರಿ ಎಂದು ಕಿಟ್ಟಿಯೋ ಅಥವಾ ಪಂಕಜಳೋ ಕರೆದೂ ಕೂಡ ಇರಲಿಲ್ಲ. ಅದನ್ನು ಗಮನಿಸುತ್ತಿದ್ದ ಹಿರಿಸೊಸೆ ಕವಿತಾ, ಇನ್ನು ಈ ವಯಸ್ಸಾದ ಎರಡೂ ಬಳ್ಳಿಗಳು ನಮ್ಮ ಕಾಲಿಗೆ ಸುತ್ತಿಕೊಂಡಿವೆ ಎನ್ನುವಂತೆ “ಇವರಿಬ್ಬರಿಂದ ನನಗೆ ಯಾವಾಗ ಮುಕ್ತಿಯೋ” ಎನ್ನುತ್ತಾ ಮೊದಲು ಗೊಣಗಲು ಆರಂಭಿಸಿ ನಂತರದ ದಿನಗಳಲ್ಲಿ ಅವರಿವರಿಗೆ ಫೋನಿನಲ್ಲೂ, ಮನೆಗೆ ಬಂದವರೊಡನೆಯೂ ಹೇಳಿಕೊಂಡು ಗೋಣಗುತ್ತಾ ಓಡಾಡುತ್ತಿದ್ದುದು ಆಗಾಗ ಕಿವಿಯ ಮೇಲೆ ಬೀಳುತ್ತಲೇ ಇತ್ತು. ಇವರಿಬ್ಬರೂ ಆಡುವ ಮಾತುಮಾತಿಗೂ ಕಿರಿಕಿರಿಯಾಗುತ್ತಿದ್ದವಳು, ಹಲವಕ್ಕೆ ಕಿವುಡಾಗಿದ್ದಳು. ಈ ನಡುವೆ ಆಗಾಗ ತಲೆತಿರುಗಿ ಬಿದ್ದು, ಸುಮ್ಮನೆ ಮಲಗಿ ಮೆಲ್ಲಮೆಲ್ಲನೆ ಹಾಸಿಗೆ ಹಿಡಿಯುವ ಹಂತದಲ್ಲಿದ್ದ ಲಲಿತಮ್ಮನ ಆರೋಗ್ಯದ ಏರುಪೇರಿನ ವಿಷಯದಲ್ಲಿ ಕುರುಡಿಯೂ ಸಹಾ ಆಗಿದ್ದಳು.  ಈ ಮಧ್ಯೆ ಕವಿತಾ ಮತ್ತೊಂದು ಮಗುವಿಗೆ ಬಸುರಾಗಿ ಮೂರು ತಿಂಗಳಿಗೆ ಗರ್ಭಪಾತವಾಗಿತ್ತು. ಅವಳು ತಾಯಿಗೆ ಫೋನಿನಲ್ಲಿ “ಇರೋ ಒಂದು ಮಗೂಗೇ ಸೆಕ್ಯೂರಿಟಿ ಇಲ್ಲ. ಈ ಅವತಾರದಲ್ಲಿ ಇನ್ನೂ ಒಂದು ಮಗು ಬೇರೆ ಯಾಕೆ ಬೇಕಿತ್ತು? ಅದು ಹೋಗಿದ್ದೇ ಒಳ್ಳೆದಾಯ್ತು. ಬಿಡಮ್ಮ” ಎನ್ನುವುದನ್ನು ಕೇಳಿಸಿಕೊಂಡ ಲಲಿತಮ್ಮನಿಗೆ ಮಗುವನ್ನು ತಾನೇ ತೆಗೆಸಿದ್ದಾಳೆ ಎಂಬ ಅನುಮಾನ ಬಲವಾಗತೊಡಗಿತು. ಗಂಡನಿಗೆ ಹೇಳಿದರೆ “ಮಗು ಹೊರೋದು, ಹೆರೋದು, ಸಾಕೋದು ಎಲ್ಲಾ ಅವಳೇ ಅಲ್ವಾ? ಇನ್ನೊಂದು ಮಗು ಬೇಕೋ ಬೇಡವೋ ಎಲ್ಲ ಅವಳೇ ತೀರ್ಮಾನ ಮಾಡಿರ್ತಾಳೆ ಬಿಡು” ಎಂದು ಉದಾಸೀನವಾಗಿ ಹೇಳಿಬಿಟ್ಟರು ಶೆಟ್ಟರು. ಆದರೆ ಲಲಿತಮ್ಮನಿಗೆ ಸಂಕಟವಾಗಿ “ಸೆಕ್ಯೂರಿಟಿ ಇಲ್ಲ ಅಂದ್ರೆ ಏನರ್ಥ”? ಎಂದು ಮತ್ತೆ ಗಂಡನನ್ನು ಕೇಳಿದಳು. “ಆ ಮಗು ಹುಟ್ಟಿ, ಬೆಳೆದು, ಓದಿ ಕೊನೆಗೆ ಫಾರಿನ್ನಿಗೆ ಹೋಗೋವರೆಗೂ ನಾವು ಸಂಪಾದಿಸಿದ ಹಣ ಅವಳಿಗೆ ಅವಳ ಮಕ್ಕಳಿಗೆ ಸೆಕ್ಯೂರಿಟಿಯಾಗಿ ಬೇಕು ಅಂತ ಅರ್ಥ” ಎಂದು ಆ ಮಾತಿಗೆ ಅಲ್ಲಿಯೇ ಪೂರ್ಣ ವಿರಾಮವನ್ನಿಟ್ಟಿದ್ದರು. ಆದರೆ ನಂತರದ ಸಮಸ್ಯೆಗಳು ಹಲವಾರು ಅಲ್ಪವಿರಾಮಗಳನ್ನು ದಾಟುತ್ತಿದ್ದವಾಗಲಿ, ತಾನು ಸೃಷ್ಟಿಸುತ್ತಿರುವ ಸಮಸ್ಯೆಗಳಿಗೆ ಹಿರಿಯರು ಪೂರ್ಣವಿರಾಮ ಹಾಕಲಿ ಎಂದು ಸೊಸೆ, ಶುರುಮಾಡಿದ ಸೊಸೆಯೇ ನಿಲ್ಲಿಸಲಿ ಎಂದು ಶೆಟ್ಟರು ಮುಸುಕಿನ ಗುದ್ದಾಟದಲ್ಲಿ ತೊಡಗಿದ್ದರು. ಇವರಿಬ್ಬರು ಸೃಷ್ಟಿಸಿದ ಹಬೆಗೆ ಲಲಿತಮ್ಮನಿಗೆ ಪ್ರಾಣಸಂಕಟವಾಗುತ್ತಿತ್ತು. ಗಂಡಸರಿಲ್ಲದ ಸಮಯದಲ್ಲಿ ಸೊಸೆಯ ವರಸೆ ಬೇರೆಯೇ ಆಗಿರುತ್ತಿತ್ತು. ಸುಮ್ಮನೆ ಗಂಟೆಗಟ್ಟಲೆ ಟಿವಿ ನೋಡುತ್ತಾ ಕುಳಿತಿದ್ದು, ಇನ್ನೇನು ಊಟದ ಹೊತ್ತಾಯಿತು ಎನ್ನುವಾಗ ಎದ್ದು ಅವಸರದಲ್ಲಿ ಅಡುಗೆ ಮಾಡಲು ತೊಡಗಿ ಪಾತ್ರೆಗಳು ಉರುಳುರುಳಿ ಬಿದ್ದು, ಬೆಚ್ಚಿ ಬೀಳುವಂತಾಗುತ್ತಿತ್ತು. ಪಾತ್ರೆಗಳನ್ನು ಆಗಿಂದಾಗ್ಗೆ ತೊಳೆಯದೆ, ರಾಶಿ ಹಾಕಿ ಅದರತ್ತ ಗಮನಿಸದೆ ಓಡಾಡುತ್ತಾ ರಾತ್ರಿ ಮಲಗುವ ಸಮಯಕ್ಕೆ ತೊಳೆಯುವ ಅವಳ ಕ್ರಮ ಎಲ್ಲರ ಹುಬ್ಬನ್ನೂ ಗಂಟಾಗಿಸುತ್ತಿತ್ತು. ಜೊತೆಗೆ ತಾನು ಮಾಡುತ್ತಿದ್ದ ಕುಚೇಷ್ಟೆಗಳಿಗೆ ತಾನೇ ಸಿಡಿಮಿಡಿಯಾಗುತ್ತಿದ್ದಳು. ಮೊದಲೆಲ್ಲಾ ಹೀಗಿರದೆ, ಇತ್ತೀಚೆಗೆ ಬದಲಾದ ಅವಳ ನಡವಳಿಕೆಗೆ ಎಲ್ಲರೂ ಅವರವರಿಗೆ ತೋಚಿದ ಕಾರಣಗಳನ್ನು ಕಂಡುಕೊಳ್ಳುವಂತೆ ಮಾಡಿತ್ತಾಗಲೀ ಪರಿಹಾರ ಶೂನ್ಯವಾಗಿತ್ತು.      ಒಮ್ಮೆ ವಾಕಿಂಗ್ ಮುಗಿಸಿ ಬಂದು ಲಲಿತಮ್ಮ ನೀಡಿದ ಕಾಫಿ ಕುಡಿದು ಸ್ನಾನಕ್ಕೆ ಹೊರಡಲು ನಿಂತ ಶೆಟ್ಟರನ್ನು ಕವಿತಾ “ಮಾವ ಜಮೀನು ಮಾರಿ, ಹತ್ತು ಸಾವಿರ ಕೈಯಲ್ಲಿ ಹಿಡಿದು ಬಂದು ಬೆಂಗಳೂರಲ್ಲಿ ಬದುಕು ಶುರು ಮಾಡಿದೆವು ಅಂತ ಯಾವಾಗಲೂ ಹೇಳ್ತೀರಲ್ಲ? ನಿಮ್ಮ ತಂದೆ ಇದ್ದಾಗಲೇ ತಾನೇ ಜಮೀನು ಮಾರಿ ನೀವೆಲ್ಲಾ ಹಂಚಿಕೊಂಡಿದ್ದು” ಎಂದು ರಾಗವಾಗಿ ಕೇಳಲು, ಶೆಟ್ಟರು ಸಿಟ್ಟಿನಿಂದ “ನಾನು ಸ್ಕೂಲಿಗೆ ಹೋಗದೆ ಆರು ವರ್ಷದ ಮಗುವಾಗಿದ್ದಾಗಿಂದ ನಮ್ಮಪ್ಪ ಶುರುಮಾಡಿದ ಹೋಟೆಲಿನಲ್ಲಿ ಲೋಟ ತೊಳೆದಿದ್ದೀನಿ ಅದನ್ನು ನಿನಗೆ ಯಾರೂ ಹೇಳಲಿಲ್ಲವೇ?” ಎಂದು ಕೇಳುತ್ತಲೇ ಅಲ್ಲಿ ನಿಲ್ಲದೆ ಸ್ನಾನಕ್ಕೆ ಹೊರಟುಬಿಟ್ಟರು. ‘ಗಂಡ ಕೇಶವನ ತಲೆ ತಿಂದು ಏನೂ ಉಪಯೋಗವಾಗದೇ, ಕೊನೆಗೆ ನೇರವಾಗಿ ನನ್ನ ಬಳಿ ಆಸ್ತಿಯ ಬಗ್ಗೆ ಮಾತನಾಡುವ ಹಂತಕ್ಕೆ ಬಂದಿದ್ದಾಳೆ’ ಎಂದು ಅವರಿಗೆ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. “ಪಾಪ ನಮ್ಮ ಕೇಶವ ಹೆಂಡತಿಯ ಮಾತು ಕೇಳಲಾಗದೆ, ನಮ್ಮನ್ನೂ ಎದುರು ಹಾಕಿಕೊಳ್ಳಲಾಗಿದೆ, ಒಳಗೊಳಗೆ ಎಷ್ಟು ಹೆಣಗಾಡುತ್ತಿದ್ದಾನೋ” ಎಂದು ಹೆಂಡತಿಯ ಬಳಿ ಹೇಳಿಯೂ ಇದ್ದರು. ಆದರೆ ಏನನ್ನೂ ಮಾಡಲು ತೋಚದೆ ಅವಳು ಕೇಳಿದ ನೇರ ಪ್ರಶ್ನೆಗಳಿಗೆ ಚಾಟಿಯೇಟಿನ ಉತ್ತರ ನೀಡಿ, ನಂತರದ ಇರಿಸುಮುರಿಸನ್ನು ತಾವೇ ಅನುಭವಿಸುತ್ತಿದ್ದರು.       ಜೀವನ ತನ್ನ ಪಾಡಿಗೆ ತಾನು ನಡೆಯಲಿ ಎಂದು ಇದ್ದುಬಿಟ್ಟರೆ, ಅರ್ಧ ಸಮಸ್ಯೆ ಹುಟ್ಟುವುದೇ ಇಲ್ಲ ಅಲ್ಲವೇ? ಆದರೆ ಇರುವುದಕ್ಕಿಂತಲೂ ಬೇರೆಯದನ್ನು ಬಯಸಿ, ಹಲವರ ಮನಸ್ಸನ್ನು ನೋಯಿಸಿ ಪಡೆಯುವುದೇ ಸುಖವೆಂದು ತಿಳಿದು ಅದನ್ನು ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿ  ಎಡವಟ್ಟನ್ನೇ ಮಾಡುತ್ತಿರುತ್ತಾರೆ. ಆ ಪೈಕಿಯವಳಾದ ಕವಿತಾ ಒಂದು ಮಧ್ಯಾಹ್ನ ಚೇರಿನ ಮೇಲೆ ಕುಳಿತು ಊಟ ಮಾಡುವ ಶೆಟ್ಟರ ಕಾಲಿನ ಬಳಿ ಬಂದು ಕುಳಿತು ಸೊಪ್ಪು ಬಿಡಿಸುತ್ತಾ ಟಿವಿ ನೋಡುತ್ತಿದ್ದಳು.

ರೊಟ್ಟಿ ತೊಳೆದ ನೀರು Read Post »

ಕಥಾಗುಚ್ಛ

ಸಿನಿಮಾ ಅಲ್ಲ… ಜೀವನ

ಸಿನಿಮಾ ಅಲ್ಲ… ಜೀವನ ಮಧುರಾ ಕರ್ಣಮ್             ಬಾಲಸೂರ್ಯ ತನ್ನ ಹೊಂಗಿರಣಗಳನ್ನು ಸೂಸುತ್ತಿದ್ದಂತೆ ರಾಜರಥದ ಹೊರಭಾಗದಲ್ಲಿ ಅಂಟಿಸಿದ್ದ ಗಣೇಶನ ಚಿತ್ರದ ಮೇಲೆ ಬೆಳಕು ಪ್ರತಿಫಲಿತವಾಗಿ ಗಣೇಶ ಹೊಳೆಯತೊಡಗಿದ್ದ. ಅದೇ ತಾನೆ ತಟ್ಟೆ ಇಡ್ಲಿ ತಿಂದು ‘ಅ..ಬ್’ಎಂದು ತೇಗಿ ಮೇಲೊಂದು ಲೋಟ ಕಾಫಿ ಇಳಿಸಿ ಸಂತೃಪ್ತನಾಗಿ ಒಮ್ಮೆ ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡೆ. “ನಿತ್ಯ ಹೊರಗೇ ಏಕೆ ತಿಂಡಿ ಮಾಡಾದು? ಮನೆಗೆ ಬಂದ್ರೆ ಒಳ್ಳೆ ತಿಂಡಿ ಹಾಕಾಕಿಲ್ವ?”ಎಂಬ ಅಮ್ಮನ ಕೋಪದ ನುಡಿಗಳು ನೆನಪಾಗಿ ನಗು ಸೂಸಿತು. ಬೆಳಿಗ್ಗೆ ಆರು ಗಂಟೆಗೆಲ್ಲ ಸ್ನಾನ ಮಾಡಿ ನನ್ನ ರಾಜರಥವನ್ನು ಎತ್ತಿಕೊಂಡು ಹೊರಬಿದ್ದು ಯಶವಂತಪುರದ ಸ್ಟೇಷನ್ ಬಳಿ ಬಂದರೆ ಬೇಕಾದಷ್ಟು ಬಾಡಿಗೆಗಳು. ತಿಂಡಿಗೆ ಕಾಯ್ದರೆ ಮನೆಯಲ್ಲೇ ಹತ್ತಾಗುತ್ತದೆ. ಅಲ್ದೇ ಪಾಪ.. ಅಮ್ಮ ಬೇಗ ಬೆಳಿಗ್ಗೆ ಎದ್ದು ಮಾಡಬೇಕು. ಮನೆಯ ಯೋಚನೆ ಕೊಡವಿ ನನ್ನ ರಾಜರಥವನ್ನು ಪ್ರೀತಿ..ಅಭಿಮಾನದಿಂದ ನೋಡಿದೆ. ಹೌದು..ನನ್ನ ರಾಜರಥ..ಕುದುರೆ ..ವಾಹನ ಎಲ್ಲ ಈ ಆಟೋ ಆಗಿತ್ತು. ನನ್ನ ಜೀವನಾಧಾರ ಎಂದರೂ ತಪ್ಪಿಲ್ಲ. ಹಿಂದೆ ಶಂಕರನಾಗ್‌ರ ‘ಆಟೋರಾಜ’ಚಿತ್ರದ ಪೋಸ್ಟರ್ ಸಣ್ಣದಾಗಿ ರಾರಾಜಿಸುತ್ತಿತ್ತು. ಆಟೊ ಚಾಲಕರೆಲ್ಲ ಇಷ್ಟ ಪಡುವ ಹೆಮ್ಮೆಯ ಚಿತ್ರವದು. ಪಾಪ..ಸದಾ ಟ್ರಾಫಿಕ್‌ನಲ್ಲೇ ಇರುವುದರಿಂದ ಮೇಲೆಲ್ಲ ದೂಳು ಹರಡಿತ್ತು. ತುಸು ದೂರ ಕ್ರಾಸ್ ರೋಡಿನಲ್ಲಿ ತಂದು ನಿಲ್ಲಿಸಿ ಹಳೆಯ ಬಟ್ಟೆಯಿಂದ ಒರೆಸಲಾರಂಭಿಸಿದೆ. ಆಗಲೇ ಅವಳು “ಅಮ್ಮಾ..”ಎಂದು ಕೂಗಿಕೊಂಡು ಅತ್ತಲಿಂದ ಓಡಿ ಬಂದದ್ದು. ನಾನೂ ಗಾಬರಿಯಿಂದ “ಏನು..ಏನಾಯ್ತು?”ಎಂದು ಕೇಳಿದೆ. ಉತ್ತರಿಸಲಾರದೆ ಕೈ ತೋರಿದಳು. ಪುಟ್ಟ ಹಾವೊಂದು ಅವಳಿಗಿಂತ ಹೆಚ್ಚು ಹೆದರಿಕೊಂಡು ಸರಸರನೆ ಸರಿದು ಹೋಗುತ್ತಿತ್ತು. ‘ಒಹ್! ಇದಕ್ಕಾ.. ಇವಳು ಇಷ್ಟು ಹೆದರಿ ಕೂಗಿಕೊಂಡದ್ದು..’ಎಂದುಕೊಂಡೆ.  ದಾರಿಯಲ್ಲಿ ಜನರಾರೂ ಇರಲಿಲ್ಲ. ಸೀದಾ ಬಂದವಳು ನನ್ನ ಆಟೋ ಏರಿ ಕುಳಿತಳು. ಒಂದು ನಿಮಿಷ ಸುಮ್ಮನಿದ್ದು ನಾನು “ಅದು ಹೋಯಿತಮ್ಮ”ಎಂದೆ. ಅತ್ತಲಿಂದ ಉತ್ತರವಿಲ್ಲ. ಸೂಕ್ಷ್ಮವಾಗಿ ಅವಳನ್ನು ಗಮನಿಸಿದೆ. ಸೌಂರ‍್ಯದ ಖನಿ ಎಂದು ಹೇಳಲಾಗದಿದ್ದರೂ ಅಂದವಾಗಿದ್ದಳು. ಹಾಲು ಬಣ್ಣ, ನೀಳ ಮೂಗು, ಅರಳು ಕಂಗಳಲ್ಲಿ ಮಡುಗಟ್ಟಿದ್ದ ನೀರು, ಅಗಲ ಬಾಯಿಯಲ್ಲಿ ಅದರುತ್ತಿದ್ದ ಕೆಂಪು ತುಟಿಗಳು, ಹಣೆಯ ಮೇಲೆ ಸಾಲುಗಟ್ಟಿದ್ದ ಬೆವರ ಹನಿಗಳು.. ಅವಳಿನ್ನೂ ಕಂಪಿಸುತ್ತಿದ್ದಳು.             ತುಸು ಮೃದುವಾಗಿ “ಮೇಡಮ್.. ಹೆದರಬೇಡಿ. ಅದು ಹೊರಟು ಹೋಯಿತು. ಇಳಿಯಿರಿ”ಎಂದೆ. ಅವಳು ನಡಗುತ್ತಲೇ “ಉಹ್ಞೂಂ.. ಹೆಬ್ಬಾಳಕ್ಕೆ ನಡೀರಿ” ಎಂದಳು. “ನಾನಲ್ಲಿಗೆ ಬರಲ್ಲ ಮೇಡಮ್. ಏರಿಯಾ ಸರಿಯಾಗಿ ಗೊತ್ತಿಲ್ಲ”ಎಂದೆ. ಚಿಕ್ಕ ಮಗು ರಚ್ಚೆ ಹಿಡಿದು ಕೇಳುವಂತೆ  “ನಾನೀಗ ಇಳಿಯಲ್ಲ. ಕೆಳಗೆ ಕಾಲಿಡಲೂ ಹೆದರಿಕೆ ನಂಗೆ. ನಡೀರಿ.. ಪ್ಲೀಸ್..”ಎಂದು ಅಂಗಲಾಚಿದಳು. ಛೆ! ಇಂದು ಬೆಳಿಗ್ಗೆ ಯಾರ ಮುಖ ನೋಡಿದ್ದೆನೋ ಎನಿಸಿದರೂ ಅವಳ ಸ್ಥಿತಿ ಕಂಡು ಅಯ್ಯೋ.. ಎನಿಸದಿರಲಿಲ್ಲ. ಸುಮ್ಮನೆ ಒಳಗೆ ಕುಳಿತು ಮೀಟರ್ ಹಾಕಿ ಗಾಡಿ ಶುರು ಮಾಡಿದೆ. ಕನ್ನಡಿಯಲ್ಲಿ ಅವಳ ಪ್ರತಿಬಿಂಬ ಕಾಣುತ್ತಿತ್ತು. ಸ್ವತಂತ್ರವಾಗಿ ಹಾರಾಡಲು ಬಿಟ್ಟ ಕೂದಲು, ಕೈಗೆ ದುಬಾರಿ ವಾಚು, ಬೆಲೆ ಬಾಳುವ ಕ್ಲಚ್ ರೂಪದ ಪರ್ಸು.. ಸ್ಥಿತಿವಂತರ ಮನೆಯ ಹುಡುಗಿ ಎನ್ನುವುದರಲ್ಲಿ ಅನುಮಾನವೇ ಇಲ್ಲ. ವಿಳಾಸ ಹೇಳಲು ತಡವರಿಸುತ್ತಿದ್ದವಳನ್ನು “ಸಣ್ಣ ಪುಟ್ಟದ್ದಕ್ಕೆಲ್ಲಾ ಇಷ್ಟು ಹೆದರಬಾರದು ಮೇಡಮ್. ಮುಂದೆ ಜೀವನದಲ್ಲಿ ಎಂಥೆಂಥದ್ದಕ್ಕೆಲ್ಲಾ ತಲೆ ಕೊಡಬೇಕಾಗುತ್ತೆ. ‘ಧೈರ್ಯಂ ಸರ್ವತ್ರ ಸಾಧನಂ’ ಎಂಬಂತೆ ಧರ‍್ಯ ತಂದುಕೊಳ್ಳಿ” ಎಂದು ಸಾಂತ್ವನಿಸಿದಾಗ ಕೊಂಚ ತಹಬಂದಿಗೆ ಬಂದಿದ್ದಳು. ‘ಭರ್‌ರ್..’ಎಂದು ಓಡಿದ ನನ್ನ ರಥ ‘ವೀರಪ್ಪನ ಪಾಳ್ಯ’ಎಂದು ಬರೆದ ಕಮಾನಿನ ಮೂಲಕ ಹಾದು ತಿರುವುಗಳಲ್ಲಿ ತಿರುಗಿ ಅವಳು ತೋರಿಸಿದ ಭವ್ಯ ಬಂಗಲೆಯ ಮುಂದೆ ನಿಂತುಕೊಂಡಿತು. ಇಳಿದವಳು ಮೀಟರ್‌ನತ್ತ ನೋಡುವ ಗೊಡವೆಗೂ ಹೋಗದೇ ಐನೂರರ ನೋಟೊಂದನ್ನು ಕೊಟ್ಟು “ಥ್ಯಾಂಕ್ಸ.. ತುಂಬಾ ಥ್ಯಾಂಕ್ಸ”ಎಂದು ಹೊರಟು ಬಿಟ್ಟಳು. ರ‍್ರೀ.ಮೇಡಮ್, ಚಿಲ್ಲರೆನಾರೂ ತೊಗೊಳ್ಳಿ”ಎಂದು ಕೂಗಿದೆ. ತೆಗೆದುಕೊಂಡವಳು ಮನೆಯತ್ತ ನಾಲ್ಕು ಹೆಜ್ಜೆ ಹಾಕಿ ತಿರುಗಿ ನನ್ನತ್ತ ನೋಡಿ ಹೂನಗು ಬೀರಿದಳು. ಮೋಡ ಕರಗಿ ಮಳೆಯಲ್ಲಿ ಮಿಂದ ಹೂ ಶುಭ್ರವಾಗಿ ನಗುವಂತೆ.. ಹಾವು ನೋಡಿ ಹೆದರಿ ಕಂಪಿಸಿ ಕಣ್ತುಂಬಿದ ಕುರುಹೂ ಇರದಂತೆ.. ನನಗೆ ಅಚ್ಚರಿಯೊಂದಿಗೆ ಯಾವುದೋ ಪುಳಕದಲ್ಲಿ ಮಿಂದ ಭಾವ. ಒಂದೊಂದೇ ಹೆಜ್ಜೆಯನ್ನಿಡುತ್ತ ಮನೆಯೊಳಗೆ ನಡೆಯುವಾಗ ಮತ್ತೊಮ್ಮೆ ತಿರುಗಿ ಕೈ ಮಾಡಿದಳು. ನಾನೂ ಮುಗುಳ್ನಕ್ಕು ಕೈ ಮಾಡಿದೆ. ಮನಸ್ಸಿಗೆ ಎಂದೂ ಇಲ್ಲದ ವಿಚಿತ್ರ ಸಿಹಿ ಅನುಭವ. ಅದೆಂಥ ಆಕರ್ಷಣೆಯೋ.. ಗೊತ್ತಿಲ್ಲ.             ಅದು ಅಲ್ಲಿಗೆ ಮುಗಿದ ಅಧ್ಯಾಯವಾಗಿದ್ದರೆ ಬೆಳೆದು ಕಥೆಯಾಗುತ್ತಿರಲಿಲ್ಲ. ನಾನು ನಿಮಗೆ ಹೇಳಬೇಕಾಗೂ ಇರಲಿಲ್ಲ. ಮರುದಿನ ನಾನು ಮಹಾಲಕ್ಷ್ಮಿಲೇಔಟಿನ ಪಂಚಮುಖಿ ಆಂಜನೇಯನಿಗೆ ನಮಿಸಿ ಮೂಲೆಯಲ್ಲಿದ್ದ ಅಂಗಡಿಯಲ್ಲಿ ಚಿತ್ರಾನ್ನ ತಿಂದು.. ಕಾಫಿ ಕುಡಿದು ನನ್ನ ರಥದ ಬಳಿ ಬಂದೆ. ತುಸುದೂರದಲ್ಲಿ ಕಾಯುತ್ತ ನಿಂತವಳು ಹೂನಗು ಬೀರುತ್ತ ಹತ್ತಿರ ಬಂದಳು. ನಿನ್ನೆ ಕಂಡ ಜಾಗ.. ಅದೇ ಹುಡುಗಿ..ಎಂದು ಖಚಿತಪಡಿಸಿಕೊಂಡೆ. “ಈವತ್ತೇನು.. ತಿಂಡಿ ಲೇಟಾ?”ಎಂದು ತುಂಬಾ ಪರಿಚಯವಿರುವಂತೆ ಕುಶಲೋಪರಿ ಆರಂಭಿಸಿದಳು. “ಹ್ಞೂಂ, ಏಳಲು ತಡವಾಯ್ತು”ಎಂದೆ. ತಟಕ್ಕನೆ ಆಟೋ ಏರಿ ಕುಳಿತು “ನಡೀರಿ ಹೆಬ್ಬಾಳಕ್ಕೆ..”ಎಂದಳು. ನಾನು ನುಸುಗೋಪದಿಂದ “ಆಗಲ್ಲ ಮೇಡಮ್.. ನಾನಲ್ಲಿಗೆ ಬರೋದೇ ಇಲ್ಲ. ನಿನ್ನೆ ನೀವು ತುಂಬಾ ಹೆದರಿಕೊಂಡಿದ್ರೀಂತ ಬಂದದ್ದಷ್ಟೇ.. ಬೇರೆ ಆಟೋ ನೋಡ್ಕೊಳಿ”ಎಂದೆ ಮಾಮೂಲಿ ಧಾಟಿಯಲ್ಲಿ. ಅವಳೂ ಭಂಡತನ ತೋರುತ್ತ “ನಾನಂತೂ ಇಳಿಯಲ್ಲ. ನನ್ನ ಬಿಟ್ಟು ಮುಂದೆ ಹೋಗಿ”ಎಂದಳು. ಕೋಪವೇರಿ “ಏನಂದುಕೊಂಡಿದ್ದೀರಿ ನನ್ನನ್ನ..?” ಎಂದು ಕೇಳಿದೆ. “ಒಬ್ಬ ಒಳ್ಳೆಯ ಸ್ನೇಹಿತ..ಹಿತೈಷಿ..” ಎಂದು ಮುದ್ದಾಗಿ ಉಲಿದಳು. ಹಾಳು ಮನಸ್ಸು ಮತ್ತೆ ಮೃದುವಾಯಿತು. ಮತ್ತೆ ಈ ಹುಡುಗಿ ಕಣ್ತುಂಬಿಕೊಂಡು ಹನಿ ಪಟಪಟನೆ ಉದುರಿಸಿದರೆ ಕಷ್ಟವೆನಿಸಿ ಸೀದಾ ಓಡಿಸಿದೆ. ಮಾಮೂಲು ದಾರಿಯಲ್ಲಿ ಓಡಿದೊಡನೆ ಹಸನ್ಮ್ಮಖಿಯಾದವಳು ದಾರಿಯಲ್ಲಿ ಪ್ರವರ ಆರಂಭಿಸಿದಳು.             ಅವಳ ಹೆಸರು ಮಾನ್ಯ. ಇಂಜಿನಿಯರಿಂಗ್‌ನ ನಾಲ್ಕು ವರ್ಷಗಳು ಮುಗಿದರೂ ಕೆಲವು ವಿಷಯಗಳು ಉಳಿದುಕೊಂಡಿವೆಯಂತೆ. ಅದಕ್ಕೇ ಟ್ಯೂಟರ್ ಹತ್ತಿರ ಹೇಳಿಸಿಕೊಳ್ಳಲು ಮಹಾಲಕ್ಷ್ಮಿಲೇಔಟಿಗೆ ಬರುತ್ತಾಳೆ. ಬೆಳಿಗ್ಗೆ ಏಳು ಗಂಟೆಗೆಲ್ಲ ಅಪ್ಪನ ಡ್ರೆöÊವರ್ ಬಿಟ್ಟು ಹೋಗುತ್ತಾನೆ. ಅಪ್ಪ ಒಂಬತ್ತಕ್ಕೆಲ್ಲ ಆಫೀಸಿಗೆ ಹೊರಟುಬಿಡುತ್ತಾರೆ. ಹೀಗಾಗಿ ಮನೆ ಸೇರಲು ನನ್ನ ಬೆನ್ನು ಬಿದ್ದಿದ್ದಾಳೆ. ಅಪ್ಪ ಆದಾಯ ತೆರಿಗೆ ಅಧಿಕಾರಿ. ಭವ್ಯ ಬಂಗಲೆ ನೋಡಿಯೇ ‘ಭಾರೀ ಕುಳ’ಎನ್ನಬಹುದು. ಅಮ್ಮ ಮಹಿಳಾ ಸಮಾಜ, ಕ್ಲಬ್‌ಗಳ ಮೆಂಬರ್. ಅಣ್ಣ ಅಮೆರಿಕೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತ್ಯಾದಿ..ಇತ್ಯಾದಿಗಳನ್ನು ಹೇಳಿಕೊಳ್ಳುತ್ತ ತಟಕ್ಕನೇ ಅವಳು “ಇನ್ನು ಮುಂದೆ ನಿತ್ಯ ನಾನು ಟ್ಯೂಷನ್‌ಗೆ ಬರುವಷ್ಟು ದಿನ ನೀವೇ ನನ್ನನ್ನು ಮನೆಗೆ ಬಿಟ್ಟುಬಿಡಿ”ಎಂದಳು. “ಆಗಲ್ಲ ಮೇಡಮ್.. ಈ ರೂಟು ತುಂಬಾ ಬಿಝಿ ಇರುತ್ತೆ. ಟ್ರಾಫಿಕ್‌ನಲ್ಲಿ ತುಂಬಾ ಟೈಮ್ ಹಾಳಾಗುತ್ತೆ. ನೀವು ಓಲಾ..ಊಬರ್ .. ಬುಕ್ ಮಾಡಿದ್ರೆ ಬರ್ತಾರೆ”ಎಂದೆ. “ಅದೆಲ್ಲಾ ನನಗೆ ಗೊತ್ತು. ಅವರು ಬೇಡ. ನೀವೇ ಒಪ್ಕೊಳ್ಳಿ. ದುಡ್ಡು ಎಷ್ಟಾದ್ರೂ ಕೇಳಿ. ನಮ್ಮ ಏರಿಯಾದ ಶಾಪಿಂಗ ಕಾಂಪ್ಲೆಕ್ಸನಿಂದ ನಿಮಗೆ ಬೇಕಾದಷ್ಟು ಬಾಡಿಗೆಗಳೂ ಸಿಗುತ್ವೆ”ಎಂದು ಪಟ್ಟು ಹಿಡಿದಳು. ನಾನು ದ್ವಂದ್ವದಲ್ಲಿ ಮುಳುಗಿದರೂ ಯೋಚಿಸಿದೆ. ಒಳ್ಳೆ ಅವಕಾಶ. ಇಲ್ಲಿ ಕಾಯೋ ಬದಲು ಅಲ್ಲೇ ಹೊಡೀಬಹುದು. ಒಂದು ಲಾಂಗ್ ರೂಟ್ ಬಾಡಿಗೆಯಂತೂ ಫಿಕ್ಸು ಎನಿಸಿ ಒಪ್ಪಿಕೊಂಡೆ. ಹುಡುಗಿ ಫುಲ್ ಖುಷಿಯಾಗಿ“ಹರ‍್ರೇ..”ಎಂದಳು. ನನಗೋ.. ಒಮ್ಮೆ ಅಚ್ಚರಿ.. ಮತ್ತೊಮ್ಮೆ ನಗು..ಅದೇಕೆ ಈ ಹುಡುಗಿ ನನ್ನನ್ನು ಹಚ್ಚಿಕೊಳ್ಳುತ್ತಿದ್ದಾಳೆ ಎನ್ನುವ ಆತಂಕ.             ದಿನಗಳು ಓಡುತ್ತಿದ್ದವು. ಬಿಡುವೇ ಇರದಂತೆ.. ಆಟೋ ಕೂಡ ಹಾಗೇ ಹೆಬ್ಬಾಳಕ್ಕೆ ಓಡುತ್ತಿತ್ತು. ಅವಳು ತನ್ನ ತಾಯಿ, ತಂದೆ, ಗೆಳತಿಯರ ಬಗ್ಗೆ ನಿತ್ಯವೂ ಹೇಳುತ್ತಿದ್ದಳು. ಒಬ್ಬ ಆಪ್ತ ಸ್ನೇಹಿತೆಗೆ.. ಹಿತಚಿಂತಕರಿಗೆ ಹೇಳುವಂತೆ.. “ಅಪ್ಪ ತುಂಬಾ ಸ್ಟಿçಕ್ಟ. ಮೊದಲು ಮಾಮೂಲಿಯಾಗಿದ್ದರು. ನನ್ನನ್ನು, ಅಣ್ಣನನ್ನು ಚೆನ್ನಾಗಿ ಮಾತನಾಡಿಸುತ್ತ ಪಿಕ್ಚರ್, ಪಾರ್ಕುಗಳಿಗೆಲ್ಲ ಕರೆದೊಯ್ಯುತ್ತಿದ್ದರು. ನಮ್ಮದೊಂದು ಮಧ್ಯಮ ವರ್ಗದ ಕುಟುಂಬವಾಗಿರುವವರೆಗೂ ಎಲ್ಲ ಚೆನ್ನಾಗೇ ಇತ್ತು. ಅಮ್ಮ ನಮ್ಮ ಬೇಕುಬೇಡಗಳನ್ನು ಪೂರೈಸುತ್ತ ಮನೆಗೆ ಆಧಾರವಾಗಿದ್ದಳು. ವಾರವಾರವೂ ಹೊಸ ತಿಂಡಿ, ಅಡಿಗೆ ಮಾಡೋಳು. ನಾವು ಅವಳಿಗೆ ಸಹಾಯ ಮಾಡುತ್ತಿದ್ದೆವು. ನಾನೂ ಸ್ನೇಹಿತೆಯರೊಂದಿಗೆ ಆಟ, ಓದು.. ಪಿಕ್ಚರ್ ಎಂದೆಲ್ಲ ಹಾಯಾಗಿದ್ದೆ. ಅಪ್ಪನಿಗೆ ಪ್ರಮೋಷನ್ ಆಗಿ ಇನ್‌ಕಮ್‌ಟ್ಯಾಕ್ಸ ಆಫೀಸರ್ ಆದ ಮೇಲೆ ಮನೆಯ ಚಿತ್ರವೇ ಬದಲಾಯಿತು. ಬಂಗಲೆ ದೊಡ್ಡದಾದಷ್ಟೂ ನಾವೆಲ್ಲ ದೂರವಾದೆವು. ನಮ್ಮೊಂದಿಗೆ ಮಾತನಾಡಲು ಅಪ್ಪನಿಗೆ ಸಮಯವೇ ಇರುವುದಿಲ್ಲ. ವಿಪರೀತ ಮೂಡಿಯಾಗಿ ಸದಾ ವ್ಯವಹಾರಗಳಲ್ಲೇ ಮುಳುಗಿ ಎಲ್ಲ ಮರೆತುಬಿಡುತ್ತಾರೆ. ನನ್ನ ಅಕೌಂಟಿಗೆ ದುಡ್ಡು ಹಾಕುವುದನ್ನು ಬಿಟ್ಟು.. .. ಎಲ್ಲವನ್ನೂ. ಅಮ್ಮ ಸದಾ ಕ್ಲಬ್‌ನ ಮೀಟಿಂಗಿನಲ್ಲೋ.. ಮಹಿಳಾ ಸಮಾಜದ ಸೋಷಿಯಲ್ ವರ್ಕಿನ ಹೆಸರಿನ ಫಂಕ್ಷನ್‌ಗಳಲ್ಲೋ ಲೀಡರ್ ಆಗಿ ಮಿಂಚುತ್ತಾರೆ. ಅದಕ್ಕೆ ಬ್ಯೂಟಿ ಪಾರ್ಲರ್‌ಗೆ ಹೆಚ್ಚು ಟೈಮು, ದುಡ್ಡು ಹಾಕ್ತಾರೆ. ನನಗೋಸ್ಕರ ಯಾರ ಬಳಿಯೂ ಸಮಯವಿಲ್ಲ.”ಎಂದಾಗ ನನಗಾಗಿ ಊಟ, ತಿಂಡಿ ಸಿದ್ಧ ಮಾಡಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾಯುತ್ತಾ “ನಾಗಾ.. ಒಂತುತ್ತು ತಿಂದು ಹೋಗೋ.. ಹಸಿದುಕೊಂಡು ಕೆಲಸ ಮಾಡ್ಬಾರ್ದು ಮಗಾ”ಎಂದು ಅಲವತ್ತುಕೊಳ್ಳುವ ನನ್ನಮ್ಮನ ನೆನಪಾಗಿತ್ತು. ಈ ರೀತಿಯ ಬಡ ಸಿರಿವಂತಿಕೆಗಿಂತ ನನ್ನಂಥವರ ಹೊಟ್ಟೆ ತುಂಬಿದ..ಪ್ರೀತಿ ತುಂಬಿದ ಶ್ರೀಮಂತ ಬಡತನವೇ ಲೇಸು ಎನಿಸಿತು.  “ಅಣ್ಣ ಅಮೆರಿಕದಿಂದ ಆಗಾಗ ಫೋನ್ ಮಾಡ್ತಿರ್ತಾನೆ. ಅವನಿಗೆ ಇಲ್ಲಿ ಬರಲು ಇಷ್ಟವೇ ಇಲ್ಲ. ಇಲ್ಲಿನ ರೀತಿ, ನೀತಿಗಳೊಂದಿಗೆ ಅಪ್ಪನ ಲಂಚಗುಳಿತನ, ಭ್ರಷ್ಟಾಚಾರ, ಅಮ್ಮನ ಬೂಟಾಟಿಕೆ, ಆಡಂಬರ.. ಯಾವುದೂ ಇಷ್ಟವಾಗಲ್ಲ” ಇತ್ಯಾದಿ ವಿವರಗಳು ನಾನು ಕೇಳದೆಯೇ ನನಗೆ ದೊರಕಿದ್ದವು. ನಾನು ಬರೀ ‘ಹ್ಞೂಂ..’ಗುಡುವ ಯಂತ್ರವಾಗಿದ್ದೆ. ಆದರೆ ಮನದ ಮೂಲೆಯಲ್ಲಿ ತಟ್ಟನೆ ‘ಹಾಗಾದರೆ ಕಾಳು ಹಾಕಿದವರಿಗೆ ದೊಡ್ಡ ಸಾಮ್ರಾಜ್ಯವೇ ದೊರಕುವುದುಂಟು’ಎನಿಸಿದ್ದು ಸುಳ್ಳಲ್ಲ. “ಮನೇಲಿ ಅಡಿಗೆಯವಳು, ಕೆಲಸದವಳು, ಮಾಲಿ.. ಬಿಟ್ಟರೆ ಯಾರಿರುವುದಿಲ್ಲ. ದೊಡ್ಡ ಸುಂದರ ಮನೆಯನ್ನು ಅವರೇ ಎಂಜಾಯ್ ಮಾಡ್ತಾರೆ. ಎಲ್ಲರೂ ರಾತ್ರಿಯೇ ಬರುವುದು. ಅದಕ್ಕೇ ಸಿ.ಸಿ.ಟಿವಿ. ಬೇರೆ ಹಾಕಿಸಿದ್ದಾರೆ”ಎಂದು ನಕ್ಕಳು. ವಿಷಾದಭರಿತ ನಗೆ. ‘ತುಂಬಾ ಮುಗ್ಧೆ’ಎನಿಸಿತು. ಶ್ರೀಮಂತಿಕೆಯ ಮೆಟ್ಟಿಲೇರುವ ಹುಚ್ಚಿನಲ್ಲಿ ಅಮಾಯಕ ಮನವನ್ನು ಮರೆತಿದ್ದಾರೆ ಎಂಬ ಬೇಜಾರೂ ಸೇರಿಕೊಂಡಿತು. ಯಾರ ಅಕ್ಕರೆಯೂ ಸಿಗದ ಶ್ರೀಮಂತ ಸಕ್ಕರೆಯ ಗೊಂಬೆ ಪ್ರೀತಿಗೆ.. ವಿಶ್ವಾಸಕ್ಕೆ ಹಂಬಲಿಸುತ್ತಿದ್ದಾಳೆ ಎನ್ನುವುದು ಸ್ಪಷ್ಟವಾಗಿತ್ತು. ಯಾವ ವಿಷಯ ಹೇಳಬೇಕು.. ಹೇಳಬಾರದೆಂಬ ಅರಿವಿಲ್ಲದೇ ಮನೆಯ ಚಿತ್ರವನ್ನೆಲ್ಲ ಬಿಡಿಸಿಡುತ್ತಿದ್ದಾಳೆ. ಮಧ್ಯಾಹ್ನ ಹೋಗಿ ಕೊಳ್ಳೆ ಹೊಡೆಯಬಹುದು ಎನಿಸಿ ನಗು ಬಂತು. ಮಳೆಗಾಲ ಆರಂಭವಾಗಿತ್ತು. ತುಂತುರಾಗಿ ನೀರ ಧಾರೆ ಸುರಿಯತೊಡಗಿತ್ತು. ಆಟೋ ಹೆಬ್ಬಾಳಕ್ಕೆ ನಿತ್ಯವೂ ಓಡುತ್ತಿತ್ತು. “ಮಳೆಗಾಲ.. ಕಾರಲ್ಲೇ ಓಡಿಯಾಡಬಹುದಲ್ಲ..”ಎಂದೆ. ಅದಕ್ಕೆ ಅವಳು “ಹ್ಞಾಂ, ಅಪ್ಪ ಕೂಡ ಅದನ್ನೇ ಹೇಳಿದರು. ಡ್ರೈವರ್‌ನ ಕಳಿಸ್ತೀನಿ ಅಂದ್ರು. ನಾನೇ ಕ್ಯಾಬ್ ಬುಕ್ ಮಾಡ್ಕೋತೀನಿ ಅಂದೆ. ನಾನು ಆಟೋದಲ್ಲಿ ಓಡಿಯಾಡುವುದು ಅವರ ಅಂತಸ್ತಿಗೆ ಕಡಿಮೆ ಅಂತಾರೆ. ಈಗ ನಿತ್ಯ ನಾನು ಮನೆಗೆ ಹಿಂತಿರುಗುವಾಗ ಮನೇಲಿ ಯಾರೂ ಇರಲ್ಲ. ನೋಡಲ್ಲ..” ಎಂದಳು. “ಫ್ರೆಂಡ್ಸ ಜೊತೆ ಕ್ಯಾಬ್‌ನಲ್ಲೂ ಹೋಗಬಹುದು”ಎಂದೆ. “ಫ್ರೆಂಡ್ಸಾ.. ಶಬ್ದಾನೇ ಮರೆತು ಎಷ್ಟೋ ದಿನ ಆದಂಗಾಗಿದೆ. ಮೊದಲು ನಾವು ಚಿಕ್ಕ ಮನೇಲಿದ್ದಾಗ ತುಂಬಾ ಜನ ಫ್ರೆಂಡ್ಸ ಇದ್ದರು. ನಾವೆಲ್ಲ ಸಿನಿಮಾ, ಮಾಲ್, ಶಾಪಿಂಗ್ ಅಂತ ಓಡಾಡ್ತಿದ್ವಿ. ಎಲ್ಲರೂ ಕೊಳ್ಳೋದು ಜಾಸ್ತಿ ಇರಲಿಲ್ಲವಾದರೂ ವಿಂಡೋ ಶಾಪಿಂಗ್ ಮಾಡಿದ್ದೇ ಹೆಚ್ಚು. ಸಿನಿಮಾ ಅಂತೂ ಒಂದೂ ಬಿಡದೇ ನೋಡ್ತಿದ್ದೆವು. ಕನ್ನಡ, ಹಿಂದಿ, ತೆಲಗು, ತಮಿಳು, ಇಂಗ್ಲಿಷ್.. ನೋಡಿ ಮಜಾ ಮಾಡ್ತಿದ್ದೆವು. ಕನ್ನಡ ಸಿನಿಮಾದ ಡೈಲಾಗ್‌ಗಳನ್ನ ಉರು ಹೊಡೆದು ಹೇಳಿದ್ದೇ ಹೇಳಿದ್ದು. ದೊಡ್ಡ ಮನೆಗೆ ಬಂದ ಮೇಲೆ ಅವರು ಅಮ್ಮ, ಅಪ್ಪನಿಗೆ ಇಷ್ಟವಾಗಲಿಲ್ಲ. ಬಿಡಿಸಿಬಿಟ್ರು. ಅಮ್ಮ ತೋರಿಸಿದ ಹೈಕ್ಲಾಸ್ ಒಣ ಡಂಭಾಚಾರದ ಫ್ರೆಂಡ್ಸ

ಸಿನಿಮಾ ಅಲ್ಲ… ಜೀವನ Read Post »

ಕಥಾಗುಚ್ಛ

ಪಾತ್ರೆ ಪಂಡಿತೆ

ಒಂದು ತಿಂಗಳ ನಂತರ ಮನೆಯ ಅಕ್ಕ-ಪಕ್ಕ ಓಡಾಡುತ್ತಾ ನನ್ನ ಗಮನ ಸೆಳೆಯಲು ಯತ್ನಿಸಿದ್ದಳು. ಕುಡುಕರ ಎದುರು ಮರಕ್ಕೆ ನೇತು ಹಾಕಿದ ಹೆಂಡದ ಬಾಟಲಿಯಂತೆ ಗಂಗಾ ನನಗೆ ಕಾಣಲಾರಂಭಿಸಿದಳು.

ಪಾತ್ರೆ ಪಂಡಿತೆ Read Post »

ಕಥಾಗುಚ್ಛ

ಗೋಡೆಯ ಮೂಲೆ

ಶ್ರಮಕುಮಾರ್ ಬರೆಯುತ್ತಾರೆ
ಎಷ್ಟೋ ಹುಡುಗಿಯರು ರಸ್ತೆಯಲ್ಲಿ ನಡೆಯುವಾಗ ಮೂಡುವ ಸೂರ್ಯನಿಗೆ ಎದರಿ ನಡೆಯುತ್ತಾರೆ ಅವಳು ಹಾಗೆ ನಡೆದವಳಿರಲಿಕ್ಕಿಲ್ಲ ಧೈರ್ಯವಾಗಿ ನಗ್ನಳಾಗಿದ್ದವಳು. ಯಾವೊಂದು ಕಲೆಗಳು ಅವಳ ಚರ್ಮಕ್ಕಂಟಿರಲಿಲ್ಲ

ಗೋಡೆಯ ಮೂಲೆ Read Post »

ಕಥಾಗುಚ್ಛ

ಅತಿ ಮಧುರಾ ಅನುರಾಗ

ಅಮ್ಮಾ ! ದುನಿಯಾ ಬದಲಾಗ್ತಿದೆ. ಈಗ ಇಷ್ಟಪಟ್ಟವರ ಜೊತೆಯಲ್ಲೇ ಮದುವೆಗಳು ಆಗ್ತಿರೋದು. ಇವು ತಪ್ಪು ಸಹ ಅಲ್ಲ. ಅದೆಲ್ಲ ಸರಿ. ನಿಮಗಿಷ್ಟಾನಾ ಇಲ್ಲಾ ಅದ್ ಹೇಳಿ “ ಎಂದಳು.

ಅತಿ ಮಧುರಾ ಅನುರಾಗ Read Post »

ಕಥಾಗುಚ್ಛ

ಅಧ್ಯಾತ್ಮಿಕ ತುಡಿತದೆಡೆಗೆ ಮನ

ಕಥೆ ಅಧ್ಯಾತ್ಮಿಕ ತುಡಿತದೆಡೆಗೆ ಮನ ಬಸವರಾಜ ಕಾಸೆ ಆತ ಪ್ರಕಾಶ, ಅದೇನೋ ಚಿಕ್ಕವನು ಇದ್ದಾಗಿನಿಂದಲೇ ದೇವರೆಂದರೆ ಆತನಿಗೆ ಅಪಾರ ಭಕ್ತಿ. ಅವನ ಮನಸ್ಸು ಸದಾ ಅಲೌಕಿಕ ಕಡೆಗೆ ತುಡಿಯುತ್ತಿತ್ತು. ಆತನ ಮೈ ಬಣ್ಣ ಕಡುಕಪ್ಪು. ಆದರೆ ಶ್ವೇತ ಬಣ್ಣದ ಅತ್ಯಂತ ಸುಂದರ ಭಾವನೆಗಳಿದ್ದವು. ಆ ಬಣ್ಣದ ಕಾರಣದಿಂದ ಬಂಧುಗಳಿಂದಲೇ ಒಂದಿಷ್ಟು ತಿರಸ್ಕಾರಕ್ಕೆ ಒಳಗಾಗಿದ್ದ. ಆತನದು ಕೆಳಜಾತಿ ಎನ್ನುವ ಕಾರಣಕ್ಕೆ ಇನ್ನೂ ಹೊರಗಿನ ಜನಗಳಿಂದ ಅಸಡ್ಡೆಗೆ ಒಳಗಾಗಿದ್ದ. ಇವೆಲ್ಲವೂ ಒಂದೊಂದಾಗಿ ಬೆಳೀತಾ ಬೆಳೀತಾ ಆತನ ಅರಿವಿಗೆ ಬರತೊಡಗಿತು. ಇದರಿಂದಾಗಿ ಆತ ಹೆಚ್ಚೆಚ್ಚು ಇತರರೊಂದಿಗೆ ಬೆರೆಯುವುದನ್ನು ಬಿಟ್ಟು ಒಬ್ಬಂಟಿಯಾಗಿ ಉಳಿಯತೊಡಗಿದ. ಇದರಿಂದ ಆಚೆ ಬೇರೆ ಒಂದಕ್ಕೆ ಅವನು ಸದಾ ಚಡಪಡಿಸುತ್ತಿದ್ದ. ಮತ್ತೆ ಈ ಜಾತಿ ಅಂತಹ ಅನಿಷ್ಟ ಕಟ್ಟಳೆಗಳನ್ನು ಬುಡ ಸಮೇತ ಕಿತ್ತು ಹಾಕಬೇಕು ಎಂದೇ ಹಂಬಲಿಸುತ್ತಿದ್ದನು. ಬಣ್ಣ ನೋಡಿ ಹೀಯಾಳಿಸುವವರೇ ಈ ಬಣ್ಣ ಒಪ್ಪಿ ಮೆಚ್ಚಬೇಕು ಎಂದೆಲ್ಲಾ ಹಾತೊರೆಯುತ್ತಿದ್ದ. ಕೃಷ್ಣನೂ ಸಹ ಕಪ್ಪು, ಆದರೆ ಕೃಷ್ಣನೆಂದರೆ ಅದೆಂತಹ ಮೋಹ ಅಂತೆಯೇ ಈ ಕಪ್ಪು ಅಂದರೂ ಸಹ ಅಂತಹ ಒಂದು ವ್ಯಾಮೋಹ, ಎಲ್ಲಾ ದೇವರುಗಳು ಎಂತೆಂತಹ ಜಾತಿ, ಅವರನ್ನೊಮ್ಮೆ ಕೇಳಿ ಬರಬೇಕು ಎಂಬ ತರಾತುರಿ. ಬಣ್ಣ, ಜಾತಿ ಮೊದಲಾದ ಮನುಷ್ಯ ಸೃಷ್ಟಿ ದಬ್ಬಾಳಿಕೆಗಳ ಅಂತ್ಯ ಎನ್ನುವ ಆತನ ಗುರಿಯೊಂದಿಗೆ ಅಧ್ಯಾತ್ಮದೆಡೆಗಿನ ಒಲವು ದಿನ ಕಳೆದಂತೆ ಹೆಚ್ಚಾಗತೊಡಗಿತು. ಯಾವುದಾವುದೋ ಧ್ಯಾನ ಶಿಬಿರಗಳಲ್ಲಿ ವರ್ಷಗಟ್ಟಲೆ ಕಳೆದ. ಯೋಗ ಸಿದ್ದಿಯನ್ನು ರೂಢಿಗತ ಮಾಡಿಕೊಂಡ. ಪಾಠ ಪ್ರವಚನಗಳಲ್ಲೇ ಸದಾ ಮಗ್ನನಾಗಿರುತ್ತಿದ್ದ. ಅದೆಷ್ಟೋ ವರ್ಷಗಳು ಕಳೆದರೂ ಆತ ಇನ್ನೂ ಸರಿಯಾಗಿ ಮಾರ್ಗದರ್ಶನ ನೀಡುವ ಗುರುವಿನ ಹುಡುಕಾಟದಲ್ಲಿ ಇದ್ದ. ಜಾತಿಗೆ ಒಂದೊಂದು ಮಠ. “ನಿಮ್ಮ ಸೇವೆ ಮಾಡುವೆ, ಮಾರ್ಗದರ್ಶನ ನೀಡಿ” ಅವರೆಲ್ಲಾ ಕೇಳಿದೊಂದೆ “ನಿನ್ನದು ಯಾವ ಜಾತಿ”. ಅಲ್ಲಿಯೂ ಇವನಿಗೆ ಸ್ಥಳವಿರಲಿಲ್ಲ. ತನ್ನದೇ ಜಾತಿಯ ಮಠಕ್ಕೆ ಹೋದರೆ ಅಲ್ಲಿ ಬಣ್ಣದ ನೆಪ. ಹೆಚ್ಚಿನ ಮಠಗಳು ನೂರಾರು ವೈವಿಧ್ಯಮಯ ವ್ಯಾಪಾರಗಳು ಕುದುರುವ ಮತ್ತು ನಡೆಸುವ ಪುಣ್ಯ ಸ್ಥಳಗಳಾಗಿದ್ದವು. ಈತ ನಡೆ ಮುಂದೆ, ನಡೆ ಮುಂದೆ ಎಂದು ಖಾಲಿ ಜೋಳಿಗೆಯೊಂದನ್ನು ನೇತು ಹಾಕಿಕೊಂಡ ಫಕೀರ ದೇಶ ಸುತ್ತುತ್ತಾ ಹೊರಟ. ಆದರೆ ಅವನ ಆ ಜೋಳಿಗೆ ಜ್ಞಾನದಿಂದಲೇ ತುಂಬಿಕೊಂಡಿತು. ಪ್ರತಿ ಪ್ರದೇಶಕ್ಕೆ ಹೋದಾಗಲೂ ಹೊಸ ಹೊಸ ಅನುಭವ, ವಿಚಿತ್ರ ವಿಚಿತ್ರ ಜನಗಳ ಪರಿಚಯ, ವಿಭಿನ್ನ ಪರಿಸರದ ಸ್ವಾದ ಸವಿಯುತ್ತಲೇ ನಡೆದೇ ಇದ್ದ. ಆತನಿಗೆ ವಿಶ್ರಾಂತಿ ಬೇಕು ಎನಿಸಿದಾಗ ಸಿಗುವ ಸ್ಥಳವೇ ನೆಮ್ಮದಿ ತಾಣ. ಎಲ್ಲಿ ಏನು ಸಿಗುತ್ತೋ ಅದೇ ಆಹಾರ. ಜೀವನದ ಎಲ್ಲಾ ಜಂಜಾಟಗಳಿಂದ ದೂರ ಆಗಿದ್ದ ಆತನಿಗೆ ಸ್ವಾರ್ಥಗಳ ಪರಿಕಲ್ಪನೆಯೇ ನಡುಕ ಹುಟ್ಟಿಸುತ್ತಿತ್ತು. ಅದೆಷ್ಟೋ ವರ್ಷಗಳ ಕಾಲ ನಡೆದು ಎಲ್ಲಾ ದೇವ ಸನ್ನಿದಿಗಳಿಗೆ ಭೇಟಿ ನೀಡಿದ. ಕೊನೆಗೆ ಹಿಮಾಲಯಕ್ಕೆ ಹೋಗಿ ಅಲ್ಲಿ ಇದ್ದ ಅಘೋರಿಗಳ ಪರಿಚಯಿಸಿಕೊಂಡು ಮುಕ್ತಿ ಮಾರ್ಗದೆಡೆಗೆ ಮುಕ್ತ ಮನಸ್ಸಿನಿಂದ ನನ್ನನ್ನು ಮುನ್ನೆಡೆಸಿ ಎಂದು ವಿನಂತಿಸಿದ. ಕೊನೆಗೆ ಒಬ್ಬ ಅಘೋರಿ ಕಠಿಣ ಯಾಗ, ಪರಿಶ್ರಮ, ತಪೋಧ್ಯಾನಗಳ ಕುರಿತು ನಿರಂತರವಾಗಿ ತಿಳಿಸುತ್ತಾ ಹೋದ. ಭಯಂಕರವಾದ ವಿಭಿನ್ನ ತಪಸ್ಸುಗಳನ್ನು ಆಚರಿಸತೊಡಗಿದ. ಆತನಿಗೆ ಈ ಜಗದ ಪರಿವೆ ಇರದೇ ಅದರಲ್ಲಿಯೇ ಕಳೆದು ಹೋಗಿ ಬಿಟ್ಟಿದ. ಭಂಗಿ ಸೇದುವುದೇ ಆತನ ಶಕ್ತಿ ಹೆಚ್ಚು ಮಾಡುತಿತ್ತು. ಇನ್ನೂ ಆಹಾರವಂತೂ ಸಿಕ್ಕಿದೆಲ್ಲವೂ ತಿನ್ನತೊಡಗಿದ. ರಹಸ್ಯ ವಿದ್ಯೆಗಳು ಎಲ್ಲಾವನ್ನು ತನ್ನೊಳಗೆ ಅರಗಿಸಿಕೊಳ್ಳತೊಡಗಿದ. ಆತನಿಗೆ ಅದೊಂದು ಸುಂದರ ಪ್ರಪಂಚವೇ ಆಗಿ ಹೋಗಿತ್ತು. ಆತನ ಮೈ ಮನಸ್ಸು ಹೇಗೇಗೋ ಹದಗೊಂಡು ಮತ್ತೊಂದು ರೂಪವೇ ಪಡೆದಿತ್ತು. ಹೀಗಾದರೆ ತನ್ನ ಗುರಿ ಎಂದುಕೊಂಡು ಹಿಮಾಲಯ ಬಿಟ್ಟು ಮತ್ತೆ ದೇಶ ಸುತ್ತುತ್ತಾ ಹಿಂತಿರುಗತೊಡಗಿದ. ಮತ್ತೆ ದಾರಿಯುದ್ದಕ್ಕೂ ಅಪರಿಚಿತ ಜನರೊಂದಿಗೆ ಓಡಾಟ, ಆತನ ದಿವ್ಯ ತೇಜಸ್ಸಿನ ಮುಖ ಮತ್ತು ಇರುವ ಜ್ಞಾನಕ್ಕೆ ಅಲ್ಲಲ್ಲಿ ಜನ ಸೋತು ಹೋದರು. ದಾರಿಯಲ್ಲಿ ಎಲ್ಲೇ ಏನೇ ಪ್ರವಚನ ನಡೆಯುತ್ತಿದ್ದರೂ ಅಲ್ಲಿ ಹೋಗಿ ವಾದಿಸತೊಡಗಿದ. ದೊಡ್ಡ ದೊಡ್ಡ ಸ್ವಾಮೀಜಿಗಳೇ ಬೆರಗಾಗುವಂತೆ ತನ್ನ ಸಿದ್ದಾಂತಗಳನ್ನು ಪ್ರತಿಪಾದಿಸತೋಡಗಿದ. ಹೋದಲ್ಲಿ ಎಲ್ಲಾ ತನ್ನದೇ ಉಪದೇಶಗಳನ್ನು ನೀಡತೊಡಗಿದ. ಅಧ್ಯಾತ್ಮಿಕತೆಯ ಉತ್ತುಂಗ ತಲುಪಿದ ಆತನ ಬೋಧನೆಗಳು ಸರಳವಾಗಿ ಜನರ ಮನಸ್ಸಿಗೆ ನಾಟಿದವು. ಈತನ ಈ ಕಾರ್ಯಗಳೆಲ್ಲವೂ ಜನರಿಂದ ಜನರಿಗೆ ಹಬ್ಬಿ ಮಾಧ್ಯಮಗಳ ಮೂಲಕ ಎಲ್ಲರನ್ನೂ ತಲುಪತೊಡಗಿದ. ಆತನ ಈ ದಾರಿಯಲ್ಲಿ ಎಷ್ಟೋ ಜನ ಆತನ ಭಕ್ತರಾದರೆ ಇನ್ನೂ ಕೆಲವರು ಆತನ ಶಿಷ್ಯಂದಿರೇ ಆದರು. ತನ್ನ ಸ್ವಂತ ಊರು ತಲುಪುವಷ್ಟರಲ್ಲಿ ಆತನ ಖ್ಯಾತಿ ಮನೆ ಮಾತಾಗಿತ್ತು. ಜಾತಿ, ಬಣ್ಣಗಳ ಮೀರಿ ಬೆಳೆದ ಆತನಿಗೆ ಅನುಯಾಯಿಗಳೇ ಆಶ್ರಮವೊಂದನ್ನು ಕಟ್ಟಿಸಿಕೊಟ್ಟರು. ಕಾಲ ಕಳೆದಂತೆ ವಿದೇಶಿ ಹಣವೂ ಹರಿದು ಬಂತು. ಅಣ್ಣ ಎಂದು ಆತನ ಶಿಷ್ಯಂದಿರೇ ಕರೆಯುತ್ತಿದ್ದರಿಂದ ಆತ ಅಣ್ಣ ಎಂದೇ ಹೆಸರು ವಾಸಿಯಾದ. ಕೈ ಕುಲುಕುವ ಒಂದು ಹೊಸ ಪದ್ಧತಿಯನ್ನು ರೂಡಿಸಿಕೊಂಡ ಆತನ ಕೈ ಕುಲುಕಲು ಇಂದು ಶ್ವೇತ ಬಣ್ಣದವರು, ಉಚ್ಚ ಜಾತಿಯವರು ಸರದಿಯಲ್ಲಿ ನಿಂತರೂ ಆತನ ದರುಶನವೇ ಇನ್ನೂ ಸಿಗುತ್ತಿಲ್ಲ. ****************************************

ಅಧ್ಯಾತ್ಮಿಕ ತುಡಿತದೆಡೆಗೆ ಮನ Read Post »

You cannot copy content of this page

Scroll to Top