ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಲಾಕ್ಡೌನ್ ಬೇಡಿಕೆ

ಗಣೇಶ್ ಭಟ್ ಸಮೂಹ ಸನ್ನಿಯಾಗುತ್ತಿರುವ ಲಾಕ್ಡೌನ್ ಬೇಡಿಕೆ ಕೊರೊನಾ ವೈರಸ್ ಹಾವಳಿಯ ಕುರಿತಾದ ಭಯದಿಂದಾಗಿ ಲಾಕ್ಡೌನ್ಗಾಗಿ ಒತ್ತಾಯ ಪ್ರಾರಂಭವಾಗಿದೆ.ಲಾಕ್ಡೌನ್ನಿಂದಾಗಿ ಕೊರೊನಾ ಪಿಡುಗನ್ನು ಹೋಗಲಾಡಿಸಬಹುದೆಂಬುದಕ್ಕೆ ಯಾವುದೇ ಆಧಾರವಿಲ್ಲ. 10, 20 ಅಥವಾ ಇನ್ನೂ ಎಷ್ಟೇ ವಾರಗಳ ಸಂಪೂರ್ಣ ಲಾಕ್ಡೌನ್ನಂತರವೂ ಜನರ ಓಡಾಟ ಪ್ರಾರಂಭವಾದಾಗ ವೈರಸ್ನ ಹಬ್ಬುವಿಕೆ ಒಮ್ಮೆಲೇ ಹೆಚ್ಚುವುದು ಸಹಜವೆಂದು ಸೋಂಕು ರೋಗ ತಜ್ಞರು ಅಭಿಪ್ರಾಯ ಪಡುತ್ತಾರೆ.ಕೇಂದ್ರ ಸರ್ಕಾರ ರಚಿಸಿದ ತಜ್ಞರ ತಂಡ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ ಭಾರತದಲ್ಲಿ ಲಾಕ್ಡೌನ್ ವಿಧಿಸದಂತೆ ಕಳೆದ ಫೆಬ್ರುವರಿಯಲ್ಲಿ ಸಲಹೆ ನೀಡಿತ್ತು. ಮೇ ತಿಂಗಳಿನಲ್ಲಿ ಲಾಕ್ಡೌನ್ – ವಿಸ್ತರಿಸುವ ಮೊದಲು ಕೂಡಾ ಇದನ್ನೇ ಪುನರುಚ್ಚರಿಸಿತ್ತು.ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ಕೊರೊನಾ ನಿಯಂತ್ರಣಕ್ಕೆ ಇರುವ ಸರಳದಾರಿ. ಕೊರೊನಾ ಕುರಿತಾದ ಅತಿಯಾದ ಭಯವೇ ವೈರಾಣುವಿಗಿಂತ ಹೆಚ್ಚಿಗೆ ಅಪಾಯಕಾರಿ. ಅತಿಯಾಗಿ ಭಯಗ್ರಸ್ತನಾದ ವ್ಯಕ್ತಿಯ ದೇಹದಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆಗಳು ರೋಗ- ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಅತಿಯಾದ ಭಯದಿಂದ ಉಂಟಾಗುವ ಮಾನಸಿಕ ಒತ್ತಡವು ಹೃದಯಸ್ತಂಭನ ಅಥವಾ ಇತರೆ ಅಪಾಯಕಾರಿ ಪರಿಣಾಮಗಳನ್ನುಂಟು ಮಾಡುತ್ತದೆಂದು ತಜ್ಞ ವೈದ್ಯರು ಅಭಿಪ್ರಾಯ ಪಡುತ್ತಾರೆ. ಕಾಲುದಿನ, ಅರ್ಧ ದಿನ ಲಾಕ್ಡೌನ್ ಮುಂತಾದ ಕ್ರಮಗಳಿಂದಾಗಿ ಜೀವನಾವಶ್ಯಕ ವಸ್ತುಗಳನ್ನು ಕೊಳ್ಳಲು ಜನರು ಪೇಚೆಗೆ ಧಾವಿಸುತ್ತಾರೆ. ದಿನವಿಡೀ ನಡೆಯುತ್ತಿರುವ ವ್ಯವಹಾರ. ಸೀಮಿತ ಅವಧಿಗೆ ಮೊಟಕುಗೊಂಡಾಗ ಜನರು ಖರೀದಿಗೆ ಮುಗಿಬೀಳುತ್ತಾರೆ, ಮಾರುಕಟ್ಟೆಯಲ್ಲಿ ಅತಿಯಾದ ನೂಕುನುಗ್ಗಲು ಉಂಟಾಗುತ್ತದೆ. ಇದರಿಂದಾಗಿ ಪರಸ್ಪರ ಭೌತಿಕ ಅಂತರ ಕಾಪಾಡಿಕೊಳ್ಳುವದೂ ಸಾಧ್ಯವಾಗುವುದಿಲ್ಲ. ಜನರ ಮನದಲ್ಲಿ ಅನಗತ್ಯವಾಗಿ ಆತಂಕ ಸೃಷ್ಟಿಗೂ ಕಾರಣವಾಗುತ್ತದೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ಕಳೆದ ಐದು ತಿಂಗಳುಗಳಿಂದ ಯಾವುದೇ ರಕ್ಷಾ ಕವಚಗಳಿಲ್ಲದೇ ದಿನವಿಡೀ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ವಿದ್ಯುತ್ ವಿತರಣಾ ವ್ಯವಸ್ಥೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು,ಮಾಧ್ಯಮ ಪ್ರತಿನಿಧಿಗಳು,ಪತ್ರಿಕಾ ವಿತರಕರು,ಪೋಲೀಸರು, ಹಾಲು ಮುಂತಾದ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವವರ ಧೈರ್ಯ, ಆತ್ಮವಿಶ್ವಾಸಗಳಳು ನಮ್ಮೆಲ್ಲರಿಗೆ ಪ್ರೇರಣೆಯಾಗಬೇಕು. ಇವರೆಲ್ಲರೂ ನಮ್ಮೊಂದಿಗೆ,ನಮ್ಮಸುತ್ತಮುತ್ತಲೇ ಬದುಕಿತ್ತಿದ್ದಾರೆ,ಅವರೂ ನಮ್ಮಂತೆಯೇ ಮನುಷ್ಯರು ಎಂಬುದನ್ನು ಮರೆಯಬಾರದು.ಮಧ್ಯಾಹ್ನ 2 ಗಂಟೆಯ ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳದೇ ನಂತರವೇ ಓಡಾಟ ಪ್ರಾರಂಭಿಸಲು ಕೊರೊನಾ ವೈರಸ್, ಸಾಕು ಪ್ರಾಣಿಯಲ್ಲ. ಕತ್ತಲೆಯಾದ ನಂತರ ಬೀದಿಗಳಲ್ಲಿ ಸಂಚರಿಸಲು, ಕೊರೊನಾ ಕಾಡಿನಿಂದ ಓಡಿ ಬಂದ ಚಿರತೆಯೂ ಅಲ್ಲ.ಅರೆಬರೆ ಮಾಹಿತಿ, ಮಾಧ್ಯಮಗಳ ಬೇಜವಾಬ್ದಾರಿ ಉತ್ಪ್ರೇಕ್ಷೆ, ಆಧಾರಹೀನ ಭಯಗಳಿಂದ ಪ್ರೇರಿತರಾಗಿ ಮಂಡಿಸಲ್ಪಡುತ್ತಿರುವ ಲಾಕ್ಡೌನ್ ಬೇಡಿಕೆಗೆ, ಒತ್ತಡಕ್ಕೆ, ಕೊರೊನಾ ಕುರಿತಾದ ಅನಗತ್ಯ ಭಯ, ಆತಂಕಕ್ಕೆ ಒಳಗಾಗದೇ, ಸಮೂಹಸನ್ನಿಗೆ ಸಿಲುಕದೇ, ಆತ್ಮವಿಶ್ವಾಸದಿಂದ ಬದುಕುವ ದಾರಿಯಲ್ಲಿ ಸಾಗೋಣ. ಸೂಕ್ತ ಆಹಾರ ಕ್ರಮ, ಯೋಗ, ಧ್ಯಾನ, ಧನಾತ್ಮಕ ಯೋಚನೆಗಳು ದೈವ ಚಿಂತನೆ, ಶೃದ್ಧೆಯಿಂದ ಇದು ಸಾಧ್ಯ. ಕೊರೊನಾ ಕುರಿತು ಜಾಗೃತಿ ಇರಲಿ, ಭಯ ಪಡುವುದು ಬೇಡ, ಭಯ ಹಬ್ಬಿಸುವುದೂ ಬೇಡ… *************

ಲಾಕ್ಡೌನ್ ಬೇಡಿಕೆ Read Post »

ಆರೋಗ್ಯ, ಇತರೆ

ಭಯ ಪಡುವುದೇನಿಲ್ಲ

  ಡಾ ಪ್ರತಿಭಾ  ಹಳಿಂಗಳಿ ಭಯ ಅಂದರೆ ಏನು ಎನ್ನುವವರು ಕೂಡ ಈ ಕೊರೊನಾ ಮಹಾಮಾರಿಗೆ ಹೆದರುವಂತಾಗಿದೆ.ತನ್ನ ಕಬಂಧ ಬಾಹುಗಳಿಂದ ಇಡಿಯ ವಿಶ್ವವನ್ನೇ ತಲ್ಲಣಗೊಳಿಸಿರುವ ಈ ರೋಗಕ್ಕೆ ಚಿಕಿತ್ಸೆ ಇನ್ನು ಲಭ್ಯವಿಲ್ಲ.            ಇದರ ಮುಖ್ಯ ಲಕ್ಷಣ ಸೀನು,ಕೆಮ್ಮು,ಜ್ವರ ನೋಡಿದರೆ ಸಾಮಾನ್ಯ ನೆಗಡಿ,ಕೆಮ್ಮಿನಂತೆ ಈ ರೋಗ ಯಾವುದೇ ಹೊತ್ತಿನಲ್ಲಿ ತನ್ನ ಅಸ್ತಿತ್ವ ಬದಲಾಯಿಸಿ ಭಯಂಕರ ವಾಗಿಬಿಡುತ್ತದೆ.ಉಸಿರಾಟದ ತೊಂದರೆ ಉಂಟಾಗಿ ಸರಿಯಾಗಿ ಉಸಿರಾಡಲು ಆಗದೆ ಆಕ್ಸಿಜನ್, ವೆಂಟಿಲೇಟರಗಳ ಬಳಕೆ ಅನಿವಾರ್ಯ ವಾಗುತ್ತದೆ.ಕೊರೊನಾ ಪೀಡಿತ ಎಲ್ಲಾ ರೋಗಿಗಳಿಗೂ ಆಕ್ಸಿಜನ್ ಮತ್ತು ವೆಂಟಿಲೆಟರ್ ಗಳ ಅವಶ್ಯಕತೆ ಇರುವುದಿಲ್ಲ ಬಹಳಷ್ಟು ಜನರಲ್ಲಿ ಅದು ಸಾಮಾನ್ಯ ಕೆಮ್ಮು, ಶೀತ ,ಜ್ವರ ದಂತಹ ಲಕ್ಷಣ ಹೊಂದಿ ಸರಿಹೋಗುತ್ತದೆ.                     ಇಷ್ಟು ಆದರೆ ಕೊರೊನಾ ಕ್ಕೆ ಯಾರ ಹೆದರುತ್ತಿರಲಿಲ್ಲವೆನೊ? ಆದರೆ ಇದು ಸಾಮಾನ್ಯ ಎನಿಸುತ್ತಲೆ ಕೆಲವರಿಗೆ ಉಸಿರಾಟದ ತೊಂದರೆ ಉಂಟಾಗಿ ರೋಗಿ ಸಾವನ್ನಪ್ಪಬಹುದು.ಇದರಲ್ಲಿ ಸಾವಿನ ಪ್ರಮಾಣ ಕಡಿಮೆ ಇರಬಹುದು ಆದರೆ ಇದು ಅತಿ ವೇಗವಾಗಿ ಹಬ್ಬುವ ,ಮತ್ತು ಸಾಂಕ್ರಾಮಿಕವಾಗಿ ಒಬ್ಬರಿಂದ ಒಬ್ಬರಿಗೆ ಕೆಮ್ಮು, ಸೀನು ಇದರ ಮೂಲಕ ಮತ್ತು ಶ್ವಾಸದ ಮೂಲಕವೂ ಈ ರೋಗ ಹೊರಡುತ್ತದೆ. ಇದರಲ್ಲಿ ನಾವೇನು ಮಾಡಲು ಸಾಧ್ಯ ಇದರ ಬಗ್ಗೆ  ಅಷ್ಟೇ ನಾವು ಗಮನ ಹರಿಸಬೇಕು. ನಾವು ನೋಡುತ್ತಿರುವ ಹಾಗೆ ಪ್ರತಿಯೊಬ್ಬ ಮನುಷ್ಯನ ಸಹಜ ಚಟುವಟಿಕೆ ಮತ್ತು ಆರ್ಥಿಕತೆಗೆ ಹೊಡೆತ ಬಿದ್ದಂತಾಗಿದೆ. ನಿತ್ಯದ ಜನಜೀವನ ಅಸ್ತವ್ಯಸ್ತ ಆಗಿದೆ.ಬಸ್ಸಿನಲ್ಲಿ ಕೂರಲು ಭಯ,ಹೊಟೆಲಿಗೆ ಹೋಗಲು ಭಯ, ಜನಸಂದಣಿ ಯಂತು ಆಗಲೇ ಬಾರದು. ಅದರಂತೆ ಸಾಮಾಜಿಕವಾಗಿಯೂ ಬಹಳಷ್ಟು ಬದಲಾವಣೆಗಳಾಗಿವೆ. ಮದುವೆಗಳನ್ನು ಸರಳವಾಗಿ ಮಾಡಬೇಕು. ಜನದಟ್ಟಣೆ ಆಗದಂತೆ ನೋಡಿಕೊಳ್ಳಬೇಕು . ಯಾರಾದರೂ ತೀರಿ ಹೋದರು ಸಹ ಜನ ಜಾಸ್ತಿ ಸೇರಬಾರದು. ಯಾವುದೇ ಕಾರ್ಯಕ್ರಮ ಮಾಡಲು ಜನ ಸೇರಬಾರದು. ಕಾರ್ಯಕ್ರಮ ಮಾಡಲೇ ಕೂಡದು ಹೀಗೆ ಜನರ ಸಾಮಾಜಿಕ ಕೊಂಡಿಗಳು ಕಳಚುತ್ತಿದ್ದು ಮನುಷ್ಯ ಒಬ್ಬಂಟಿಯಾಗಿ ಬದುಕಬೇಕಾಗಿದೆ.ಇದು ಇಂದಿನ ತುರ್ತು ಕೂಡಾ ಪ್ರತಿಯೊಬ್ಬರೂ ಇದರ ಬಗ್ಗೆ ಹೆದರದೆ ಆತ್ಮವಿಶ್ವಾಸ ದಿಂದ  ಇದನ್ನೆದುರಿಸುವ ಧೈರ್ಯ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ ಕಡ್ಡಾಯವಾಗಿ ಧರಿಸಬೇಕು. ಮೇಲಿಂದ ಮೇಲೆ ಕೈ ತೊಳೆಯುತ್ತಿರಬೇಕು.ಅನಿವಾರ್ಯ ಕಾರಣ ಗಳಿದ್ದರೆ ಮಾತ್ರ ಮನೆಯಿಂದ ಹೊರ ಹೋಗಬೇಕು. ಇದು ಯಾರೋ ನಮ್ಮ ಮೇಲೆ ಹೇರಿದ ಕಾನೂನು ಆಗಬಾರದು. ನಾವೇ ಸ್ವಯಂ ಪ್ರೇರಿತರಾಗಿ ನಮ್ಮ ಮತ್ತು ನಮ್ಮ ಸುತ್ತಲಿನ ಜನರ ಸೌಖ್ಯ ಕ್ಕಾಗಿ ಇದನ್ನು ಅನುಸರಿಸಲೇಬೇಕು .      ‌‌                **********

ಭಯ ಪಡುವುದೇನಿಲ್ಲ Read Post »

ಇತರೆ

ಹಿಂಡು ಮೋಡದ ಗಾಳಿ ಸವಾರಿ

ಪ್ರಜ್ಞಾ ಮತ್ತಿಹಳ್ಳಿ ಹಿಂಡು ಮೋಡದ ಗಾಳಿ ಸವಾರಿ -ಆಷಾಢ     ಮದ್ದಾನೆಯ ಹಿಂಡೊಂದು ಧಾಳಿಯಿಟ್ಟಂತೆ ಅಲ್ಲೋಲಕಲ್ಲೋಲಗೊಳ್ಳುವ ಆಕಾಶದಂಗಳ. ಅದಾಗಲೇ ರಜೆ ಹಾಕಿ ವಿಳಾಸ ಕೊಡದೇ ನಾಪತ್ತೆಯಾದ ಸೂರ್ಯ. ಭರ‍್ರೋ ಎಂದು ಬೀಸುತ್ತ ಗಿಡ-ಮರಗಳನ್ನು ಮಲಗಿಸುವ ರಭಸದ ಗಾಳಿ. ಬೆಳಗೊ-ಬೈಗೊ ಒಂದೂ ತಿಳಿಯದಂತೆ ಮೋಡ ಮಡುಗಟ್ಟಿಕೊಂಡ ಬಾನಾಂಗನೆಯ ಮುಖಾರವಿಂದ.  ಹುರುಪು ಬಂದದ್ದೇ ಕುಮ್ಚಿಟ್ಟೆ ಹೊಡೆದು, ಗಿರಿಗಿರಿ ಮಂಡಿ ತಿರುಗುವ ಪುಂಡು ವೇಷದ ಹಾಗೆ ರಪರಪ ರಾಚುವ ಮಳೆ. ಹಾಂ ಇದು ಆಷಾಢ. ಇದರ ಮೂಲ ಲಕ್ಷಣವೇ ಗಾಳಿ. ಇದು ಮಳೆ ಆರಂಭದ ಮಾಸ. ಆದ್ದರಿಂದ ಮಳೆಗಿಂತಲೂ ಮೊದಲು ಬರುವ ಮೋಡದ ಮೆರವಣಿಗೆ, ಅದಕ್ಕೆ ಗಾಳಿಯ ಹಿಮ್ಮೇಳ ಜೋರಾಗಿರುತ್ತದೆ. ಗಗನಂ ಕೆಟ್ಟದು ಚಂದ್ರಸೂರ್ಯರಳಿದರ್ ಆಲದೊಳ್ ಪೂಳ್ದಿತ್ತು ಧಾತ್ರೀತಳಂ ಖಗಸಂಚಾರತೆ ಶೂನ್ಯಮಾದುದು ನಿರುದ್ಯೋಗಕ್ಕೆ ಪಕ್ಕಾದುದೀ ಜಗಮೆಂದೆಂಬಿನಮೆಯ್ದೆ ಕಟ್ಟಿ ಕರೆದತ್ತಾಸಾರಮೀ ಲೋಕದೊಳ್ (ಕಾವ್ಯ ಸಾರಂ) ಡಾ.ಸಿದ್ದಲಿಂಗ ಪಟ್ಟಣಶೆಟ್ಟಿಯವರು ಅನುವಾದಿಸಿದ ಮೋಹನ ರಾಕೇಶರ ನಾಟಕ “ಆಷಾಢದ ಒಂದು ದಿನ” ಅದರ ಕತೆ ಕವಿಯಾದ ಕಾಳಿದಾಸ ರಾಜನಾಗುವ ಕುರಿತಾಗಿದ್ದು.   ಪ್ರಕೃತಿಯ ಮಡಿಲಿನಿಂದ ನಗರದೆಡೆಗೆ ಅವನಿಟ್ಟ ಹೆಜ್ಜೆಗಳನ್ನು ಸೂಕ್ಷ್ಮವಾಗಿ ದಾಖಲಿಸುತ್ತದೆ. ಆತನ ಬಾಲ್ಯದ ಗೆಳತಿ ಆತನ ಒಳಿತಿಗಾಗಿ ಬಲಿಕೊಡುವ ಪ್ರೀತಿಯನ್ನು ಮತ್ತು ವಿರಹವನ್ನು ಕಟ್ಟಿಕೊಡುವುದಕ್ಕಾಗಿ ನಾಟಕಕಾರರು ಆಷಾಢದ ಪ್ರಕೃತಿಯ ಚಿತ್ರಣವನ್ನು ಬಳಸಿಕೊಂಡಿದ್ದಾರೆ. ದೂರದೂರದಿಂದ ಹಿಂಡುಗಟ್ಟಿ ಬರುವ ಕರಿಮೋಡಗಳು, ಕಿಟಕಿ ಬಾಗಿಲುಗಳನ್ನು ಮುರಿಯುವಂತೆ ಬೀಸುವ ಗಾಳಿ, ಆಗಾಗ ಆರ್ಭಟಿಸುವ ಗುಡುಗು-ಮಿಂಚು ಇವೆಲ್ಲ ಪಾತ್ರಗಳ ಮನಸ್ಥಿತಿಯನ್ನು ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗುತ್ತವೆ. ಕವಿದ ಕಾರ್ಮೋಡ ನಾಯಕಿಯ ಆತಂಕವನ್ನು ಧ್ವನಿಸಿದರೆ, ಸುರಿಯುವ ಮಳೆ ಅವಳ ಉಕ್ಕುವ ದು:ಖಕ್ಕೆ ಕನ್ನಡಿ ಹಿಡಿಯುತ್ತದೆ. ತನ್ನೆಲ್ಲ ಭಾವನೆಗಳನ್ನು ಮನದೊಳಗೆ ಅದುಮಿಟ್ಟು ತ್ಯಾಗಿಯಾದ ನಾಯಕಿಯ ಮನೋಭೂಮಿಕೆಯಾಗಿ ಕಾಣುವ ಆಷಾಢ ಹಾಗೆ ನೋಡಿದರೆ ಈ ನಾಟಕದಲ್ಲಿ  ಒಂದು ಪಾತ್ರವೇ ಆಗಿದೆ. ಆಷಾಢದ ರಾತ್ರಿಗಳು ಎನ್ನುವ ಒಂದು ಪತ್ತೆದಾರಿ ಕಾದಂಬರಿಯ ಉದ್ದಕ್ಕೂ ಕೊಲೆ ಇತ್ಯಾದಿ ಘಟನೆಗಳು ನಡೆಯುವುದು ಆಷಾಢದ ರಾತ್ರಿಗಳಲ್ಲಿ. ಕಾಫಿ ತೋಟ, ಜರ‍್ರನೆಯ ಮಳೆ, ಊಳಿಡುವ ಗಾಳಿ ಇವೆಲ್ಲವುಗಳು ಸೇರಿಕೊಂಡು ಈ ಕಾದಂಬರಿ ತುಂಬ ರೋಚಕವಾದ ಅವಿಸ್ಮರಣೀಯ ಅನುಭವವನ್ನು ಕಟ್ಟಿ ಕೊಡುತ್ತದೆ. ವರಕವಿ ಬೇಂದ್ರೆಯವರು ಸಖಿಗೀತದಲ್ಲಿ ಆಷಾಢವನ್ನು ವರ್ಣಿಸುವುದು ಹೀಗೆ ಆಷಾಢದಾ ಮುಗಿಲು ಬೀಸಾಡಿ ಬಂದವು ಈಸಾಡಿ ಬಂದಂಥ ಆನೆಗಳೆ ರೋಷದ ತೋಷದ ಬೆಡಗು ಬಿನ್ನಾಣವಂ ಬೀರುವ ಬಿಂಕದಿ ಮೆರೆಯುವೊಲೆ ಹೌದು ಆಷಾಢವೇ ಹಾಗೆ. ಚೈತ್ರ-ವೈಶಾಖಗಳಲ್ಲಿ ಗಿಡಗಳು ಚಿಗುರಿ ಹೊಸದಾಗಿ ಪಡೆದದ್ದನ್ನು ಬೀಸುಗಾಳಿಯಿಂದ ಆಷಾಢ ಅಲುಗಾಡಿಸುತ್ತದೆ. ಎಷ್ಟೊ ವರ್ಷಗಳ ನಿಷ್ಟೆಯ ಬೇರುಗಳನಿಳಿಬಿಟ್ಟು ನಿಂತ ಮರಗಳನ್ನೂ ಜೋರಾಗಿ ತಳ್ಳುತ್ತ “ಗಟ್ಟಿಯಾ, ನೀನು ಗಟ್ಟಿಯಾ” ಅಂತ ಪರೀಕ್ಷಿಸುತ್ತದೆ. ತನಗೆ ತಾನೇ ಗಟ್ಟಿಯಾಗದಿರುವುದನ್ನು ಉರುಳಿಸಿ ಬಿಡುತ್ತದೆ. ಸುಳ್ಳು -ಪೊಳ್ಳುಗಳು ಆಷಾಢ ಗಾಳಿಯೆದುರು ಉಳಿಯುವುದು ಕಷ್ಟ. ಹಾಗೊಮ್ಮೆ ಎದುರಿಸಿ ಉಳಿದ ಸತ್ಯಗಳು ಹಚ್ಚಗೆ ಅರಳಿ ಶ್ರಾವಣದಲ್ಲಿ ನಳನಳಿಸುತ್ತವೆ. ಉಗುಳುತ್ತುಂ ಸಿಡಿಲೆಂಬ ತೋರಗಿಂಡಿಯಂ ಕಾಲೂರಿ ಭೂಭಾಗದೊಳ್ ಗಗನಭೋಗಮನೆಯ್ದಿ ನೀಳ್ದ ಘನವೇಣೀಬಂದನಂಗೆಯ್ದು  (ಪಂಪ ರಾಮಾಯಣ) ಆಷಾಢಕ್ಕೆ ಅದರ ರುದ್ರ ರಮಣೀಯ ಪ್ರಾಕೃತಿಕ ಲಕ್ಷಣಕ್ಕೆ ಎಲ್ಲವನ್ನೂ ನೆನಪಿಸುವ ಅಸೀಮ ಬಲವಿದೆ. ಸುಯ್ಯನೆ ಶೃತಿ ಹಿಡಿದ ಹಳೆಯ ವಾದ್ಯದಂತೆ ಬೀಸುವ ಗಾಳಿ, ಅದರ ಮುನ್ನುಡಿಯ ಜೊತೆಗೆ ಧಾಂಗುಡಿಯಿಡುವ ಮಳೆ ಇವುಗಳ ಜುಗಲಬಂದಿಯ ಕಚೇರಿ ಹಳೆಯ ನೆನಪುಗಳನ್ನು ನಿಧಾನವಾಗಿ ಮೀಟುತ್ತ ಮರೆತ ರಾಗವೊಂದನ್ನು ಎಳೆದು ತರುತ್ತವೆ. ಮತ್ತೀಗ ಎದೆಯ ಬೀದಿಗಳಲ್ಲಿ ಹಳೆಯ ಕತೆಗಳ ಮೆರವಣಿಗೆ. ಒಂಥರ ಖುಷಿಯ ಇರಚಲು, ಒಂಥರ ನೋವಿನ ತುಂತುರು. ಮನಸ್ಸು ಎಷ್ಟೇ ಒಳ ಸರಿದು ಅಡಗಲು ಯತ್ನಿಸಿದರೂ ಗಾಳಿಯ ರಭಸಕ್ಕೆ ಹನಿಗಳು ತೊಯ್ಯಿಸಿಯೇ ಬಿಡುತ್ತವೆ. ನೆನಯದೆ ಉಳಿಗಾಲವಿಲ್ಲ. ಅರೆ ನಾನು ಇದನ್ನು ಮರೆತಿದ್ದೆನಾ? ಹಳೆಯ ರಾಗದ ಆಲಾಪಕ್ಕೆ ಶೃತಿಗೊಳ್ಳುವ ಹೃದಯ ಮತ್ತೊಂದು ರಿಯಾಜಿಗೆ ಸಿದ್ಧಗೊಂಡಿತಾ? ಒದ್ದೆ ಮನಸ್ಸಿನ ತುಂಬ ಜುಳುಜುಳು ಮೌನ. ಆಷಾಢದ ಮಡುಗಟ್ಟಿದ ಮುಗಿಲು ಏನೋ ಮಬ್ಬು ಕವಿಸುತ್ತದೆ. ಎಂಥದೊ ಆಲಸ್ಯ, ಮುಜುಗರ, ನಿರುತ್ಸಾಹ. ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಬರೆಯುತ್ತಾರೆ ಏನು ಹೊಳೆಯದ ಮನಸಿನಾಗಸಕೆ ಆಷಾಢ ಆಕ್ರಮಿಸಿ ಬೆಳಕನು ಬದಿಗೆ ಸರಿಸಿ ಈಸತೊಡ ಗಿದವು ಗಾಸಿಕೊಳ್ಳುತ ಯಕ್ಷ ಯಾಚಿಸಿದ ಮೋಡ ಆಷಾಢವೆಂದರೆ- ವಿಷಮಗೊಂಡಿರುವ ಪ್ರಕೃತಿ, ಅಸಮತೋಲನದಲ್ಲಿರುವ ನಿಸರ್ಗ. ಆದ್ದರಿಂದ ಈ ಬದಲಾದ ವಾತಾವರಣಕ್ಕೆ ದೇಹ ಮನಸ್ಸುಗಳು ಒಮ್ಮಿಂದೊಮ್ಮೆಲೆ ಹೊಂದಿಕೊಳ್ಳಲಾಗದೆ ಹೆಣಗಾಡುತ್ತವೆ. ಜೀರ್ಣಶಕ್ತಿಯೂ ಕೊಂಚ ಕುಂದಿರುತ್ತದೆ. ಹೊರಗಡೆಯ ಓಡಾಟ-ಸುತ್ತಾಟಗಳೂ ಅಷ್ಟು ಸುಲಭವಲ್ಲ. ಈ ಎಲ್ಲ ಕಾರಣದಿಂದ ಪೂರ್ವಜರು ಇದನ್ನು ಶೂನ್ಯಮಾಸ ಎಂದು ಕರೆದು ಹಬ್ಬ-ಸಮಾರಂಭಗಳನ್ನು  ನಿಷೇಧಗೊಳಿಸಿದರು. ಪಕ್ವಾನ್ನಗಳನ್ನು ಅರಗಿಸಿಕೊಳ್ಳಲು ಹೊಟ್ಟೆಗೂ ಕಷ್ಟ, ಬಂಧು-ಬಳಗ ಸೇರಲಿಕ್ಕೆ ಸಂಚಾರವೂ ಕಷ್ಟ ಎಂಬುದು ಅವರ ದೂರಾಲೋಚನೆ ಇರಬಹುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆಷಾಢ- ದಕ್ಷಿಣಾಯನ ಕಾಲ. ಅಂದರೆ ಸೂರ್ಯ ದಕ್ಷಿಣಾಭಿಮುಖನಾಗುತ್ತಾನೆ. ಕರ್ಕಾಟಕ ವೃತ್ತವನ್ನು ಪ್ರವೇಶಿಸುತ್ತಾನೆ. ಶ್ರೀ ಮಹಾವಿಷ್ಣು ಯೋಗನಿದ್ರೆಗೆ ಹೋಗುತ್ತಾನೆಂಬ ಪ್ರತೀತಿ. ಆದ್ದರಿಂದ ಆಷಾಢ ಹುಣ್ಣಿಮೆಯಿಂದ ಚಾತುರ್ಮಾಸ ವೃತಾಚರಣೆಯನ್ನು ಕೈಗೊಳ್ಳುತ್ತಾರೆ. ವೈಜ್ಞಾನಿಕವಾಗಿ ನೋಡಿದಾಗ ಆಷಾಢದಲ್ಲಿ ದಂಪತಿಗಳ ಮಿಲನವಾಗಿ ಗರ್ಭಾಂಕುರವಾದರೆ ನವಮಾಸಗಳು ತುಂಬಿ ಶಿಶು ಜನನವಾಗುವುದು ಬೇಸಿಗೆಯಲ್ಲಾಗುತ್ತದೆ. ಆ ಬಿರು ಬಿಸಿಲಿನಲ್ಲಿ ಪ್ರಥಮ ಹೆರಿಗೆ ಎಂದರೆ ಮಗು-ಬಾಣಂತಿ ಇಬ್ಬರಿಗೂ ಕಷ್ಟವಾಗುತ್ತದೆ. ಬೇಸಿಗೆಯಲ್ಲಿ ರಕ್ತಸ್ರಾವ ನಿಲ್ಲಿಸುವುದೂ ಕಷ್ಟ ಎಂಬಿತ್ಯಾದಿ ಕಾರಣಗಳಿಂದ ಹಿಂದಿನ ಜನರು ಆಗಿನ ಆಧುನಿಕ ವೈದ್ಯಕೀಯ ಬೆಳೆಯದಿದ್ದ ಕಾಲದಲ್ಲಿ ನವ ದಂಪತಿಗಳನ್ನು ಆಷಾಢದಲ್ಲಿ ದೂರ ಇಡುತ್ತಿದ್ದರು. ಹೊಸ ಸೊಸೆ ಗಾಳಿ-ಮಳೆಯ ಪ್ರತಾಪಕ್ಕೆ ಹೊಂದಿಕೊಳ್ಳುವುದು ಕಷ್ಟ ಎಂದೋ ಏನೋ ತೌರಿಗೆ ಕರೆತರುತ್ತಿದ್ದರು. ಶ್ರಾವಣ ಆರಂಭ ಆದೊಡನೆ ಗೌರಿಪೂಜೆ ಮಾಡಿಸಿ ನಾಗರ ಪಂಚಮಿಯ ಉಂಡಿಗಳನ್ನು ಬುಟ್ಟಿ ತುಂಬಿಸಿ ಕಳಿಸಿ ಕೊಡುತ್ತಿದ್ದರು. ಈಗಲೂ ಆಂಧ್ರಪ್ರದೇಶ ಮತ್ತು ಉತ್ತರ ಕರ್ನಾಟಕಗಳಲ್ಲಿ ಈ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಬಯಲುಸೀಮೆಯ ಹೆಣ್ಣು ಮಕ್ಕಳು ತಮ್ಮ ಪ್ರೀತಿಯ ತೌರು ಸೇರಿ, ತಾಯಿ-ತಂದೆ-ಸೋದರ ಪ್ರೀತಿಯ ಕಡಲಿನಲ್ಲಿ ಮೀಯುವ ಘಳಿಗೆಗಳನ್ನು ಕಾತುರತೆಯಿಂದ ಕಾಯುತ್ತಾರೆ. ಇಲ್ಲಿನ ಜನಪ್ರಿಯ ಜಾನಪದ ಗೀತೆ- “ಆಷಾಢ ಮಾಸ ಬಂದೀತವ್ವ ಅಣ್ಣ ಬರಲಿಲ್ಲ ಕರಿಯಾಕ” ಅದರಲ್ಲಿ ಕರೆದುಕೊಂಡು ಹೋಗಲು ಬರುವ ಅಣ್ಣನನ್ನು ಕಾಯುವ ನಾರಿ ಮುಂದುವರಿದು ಹೀಗೆ ಕನವರಿಸುತ್ತಾಳೆ “ರೊಟ್ಟಿ ಬುತ್ತಿ ಮಾಡಿಕೊಂಡು                            ಎತ್ತಿನ ಬಂಡಿ ಹೂಡಿಕೊಂಡು                            ಎಂದು ಹೋಗೇನ ತವರಿಗೆ ಇಂದಿನ ಹೊತ್ತು ಹಿಂದೇ ಇರಲಿ ಮುಂದಿನ ಹೊತ್ತು ಇಂದೇ ಬರಲಿ ಎಂದು ನೋಡೇನ ತಾಯಿಯ ಮೋರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಆಷಾಢ ಮಾಸದಲ್ಲಿ ಮಿಥುನ ರಾಶಿಯಲ್ಲಿ ಶಿವನಿರುತ್ತಾನೆ. ಅಂದರೆ ಆತ ಕಾಮಾರಿ. ದುಷ್ಟ ಕಾಮವನ್ನು ಸಂಹರಿಸುತ್ತಾನೆ. ಆದ್ದರಿಂದ ಈ ಮಾಸವು ಶೃಂಗಾರ ವಿರೋಧಿ ಮಾಸ ಎಂದು ಪರಿಗಣಿಸುತ್ತಾರೆ. ಯಾರೋ ಜೋರಾಗಿ ತಳ್ಳಿದಂತೆ ಸುಂಯ್ಗುಡುತ್ತದೆ ಗೂಳಿಯಂತೆ ಗಾಳಿ ಬಡಿದುಕೊಳ್ಳುವ ಕಿಡಕಿ ಕದ ಗಂಡನ ಖಾಲಿಯೆದೆಯ ಹಾಗೆ ಪಟಪಟ ದಿನಕ್ಕೆ ಹತ್ತು ಸಲ ಎಂದು ಬರುತ್ತಿ ಎಂಬ ಫೋನು ಕಿವಿಗಾನಿಸಿ ನಗುತ್ತಾಳೆ ಹೊಸ ವಧು ಕಿಲಕಿಲ ಆದರೆ ಈ ಪದ್ಧತಿಯನ್ನು ಶಿಕ್ಷೆ ಎಂದು ಭಾವಿಸುವ ದಂಪತಿಗಳು ಗಮನಿಸಬೇಕಾದ ಅಂಶವೊಂದಿದೆ. ವರಕವಿ ಬೇಂದ್ರೆ ಹೇಳುತ್ತಾರೆ – ಗಾಳಿ ಗೋಳಿಡುವಂತೆ ಭೋರಾಡುತಿಹುದು                       ಬಾಳುವೆಯೆ ಹೊಸತೊಂದು ಒಗಟವಾಗಿಹುದು ಅದೇ ಆಗ ಹೊಸ ಬಾಳುವೆಯ ಒಗಟು ಬಿಡಿಸಲಾರಂಭಿಸಿದ ಜೋಡಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಈ ಒಂದು ತಿಂಗಳ ವಿರಹ ಸಹಾಯಕವಾಗಬಹುದು. ಏಕೆಂದರೆ ಬದುಕಿನ ಪ್ರಯಾಣದಲ್ಲಿ ದೈಹಿಕ ಸಾಮಿಪ್ಯವೇ ಎಲ್ಲವೂ ಅಲ್ಲ. ಮನಸ್ಸುಗಳು ಬೆರೆತು, ಕಲೆತು, ನೆನಪುಗಳಲ್ಲಿ ಪರಸ್ಪರರನ್ನು ಮೂಡಿಸಿಕೊಳ್ಳುತ್ತ ರೂಪಿಸಿಕೊಳ್ಳುತ್ತ ಧ್ಯಾನಿಸುತ್ತ ತನ್ಮೂಲಕ ಒಂದು ಸಾಮಿಪ್ಯವನ್ನು ಖುದ್ದು ಸೃಷ್ಟಿಸಿಕೊಳ್ಳುವುದಿದೆಯಲ್ಲ ಅದು ನಿಜವಾಗಿ ಆಗಬೇಕಿರುವ ಮಿಲನ. ಇಂತಹ ದೈಹಿಕ ದೂರದ ಮಿಲನದಲ್ಲಿ ಆತ್ಮಗಾನವೊಂದು ಹುಟ್ಟಿ ಬರುತ್ತದೆ. ಮತ್ತದು ಬದುಕಿಡೀ ಕೂಡಿ ಹಾಡುವ ಯುಗಳಗೀತೆಗೆ ಸೂಕ್ತ ರಾಗ-ಪ್ರಸ್ತಾರವಾಗುತ್ತದೆ. ಮದುವೆಯ ನಂತರ ಒಟ್ಟಿಗಿದ್ದು ಪರಸ್ಪರರಿಗೆ ಕಲಿಸಿದ್ದನ್ನು ದೂರ ಕೂತು ರಿವಿಜನ್ ಮಾಡಿಕೊಂಡು ಬಂದರೆ ಬದುಕಿನ ಪರೀಕ್ಷೆಗಳನ್ನು ಎದುರಿಸಲು ಸುಲಭವಾಗಬಹುದೊ ಏನೊ. ಕಾಳಿದಾಸನ ಪ್ರಸಿದ್ಧ ಕಾವ್ಯ ಮೇಘದೂತದಲ್ಲಿ ಶಾಪಗ್ರಸ್ತನಾದ ಯಕ್ಷ ತನ್ನ ಸಂದೇಶ ರವಾನೆಗಾಗಿ ಮೋಡಗಳು ಬರುವ ಆಷಾಢ ಮಾಸವನ್ನು ಬಹಳ ಕಾತುರನಾಗಿ ಕಾಯುತ್ತಾನೆ. ಅವನಿಗೆ ಬಂಧು ಸ್ವರೂಪಿ ಮೇಘದೂತನ ಭೆಟ್ಟಿಯಾಗುವುದು “ಆಷಾಢಸ್ಯ ಪ್ರಥಮ ದಿವಸೆ ” ಬೇಂದ್ರೆಯವರು ಕನ್ನಡ ಮೇಘದೂತದಲ್ಲಿ ಬರೆಯುವಂತೆ “ಗಾಳಿ ಬೀಸುವುದು ನಿನ್ನ ನೂಕಿಸುತ ಮಂದ ಮಂದವಾಗಿ           ಚೂಚು ಚಾಚಿ ಚಾದಗೆಯು, ಎಡಕೆ ಕೂಗುವುದು ಚೆಂದವಾಗಿ ತೊಳೆದ ತುರುಬು ಕಪ್ಪಾದ ನೀನು ಗಿರಿಶಿಖರದಲ್ಲಿ ತೇಲೆ ಆಷಾಢ ಮಾವು ಸುರಿದಾವು ಗೊಂಚಲಲಿ ಬೆಟ್ಟದೆದೆಯ ಮೇಲೆ ಹೀಗೆ ಮಂಕು ಕವಿದ ಪ್ರಕೃತಿ, ವಿರಹದುರಿಯ ತೊಳಲಾಟದ ನವ ಜೋಡಿ, ಹಬ್ಬ ಹುಣ್ಣಿಮೆ ಕಾಣದ ದೇವರು ಎಲ್ಲರನ್ನೂ ಬೆದರಿಸಿ ತೆಪ್ಪಗೆ ಕೂರಿಸುವ ಗಾಳಿಯೆದುರು ನಿರುತ್ತರರಾಗುತ್ತಾರೆ. ಹೆಪ್ಪುಗಟ್ಟಿದ ಕಪ್ಪು ರಾತ್ರಿಗಳಲ್ಲಿ ನೆನಪಾದ ಹಳೆ ಸೇಡಿನಂತೆ ಎಡವಿದ ಬೆರಳಿನ ಗಾಯದಂತೆ ಜರ‍್ರನೆ ಸುರಿಯುತ್ತದೆ ಅಬ್ಬರದ ಮಳೆ ಶ್ರಾವಣದ ನಿರೀಕ್ಷೆಯನ್ನೇ ತಬ್ಬಿ ಮಲಗುತ್ತಾರೆ ಅಗಲಿದ ಗಂಡ-ಹೆಂಡಿರು ಮತ್ತು ದೇವರು ಆದರೆ ಈಗ ನಾವು ನೋಡುತ್ತಿರುವ ಆಷಾಢ ತನ್ನ ಮೊದಲಿನ ವಿಲಾಸ ವಿಭ್ರಮದಿಂದ ವಿಜೃಂಭಿಸುತ್ತಿಲ್ಲ. ನಾವು ಬರಿದಾಗಿಸಿದ ಪ್ರಕೃತಿಯ ಒಡಲು ನೋವಿನ ಮಡಿಲಾಗಿ ಋತುಮಾನಗಳು ಅಸ್ತವ್ಯಸ್ತಗೊಂಡು ಉದ್ವಸ್ಥಗೊಂಡಿವೆ. ಕುವೆಂಪು ಅವರು ತಾವು ಕಂಡ ಆಷಾಢದ ವೈಭವವನ್ನು ಚಿತ್ರಿಸಿದ ರೀತಿಗೆ ಈಗ ಪ್ರತ್ಯಕ್ಷವಾಗಿ ಕಾಣಬೇಕೆನ್ನುವ ಹಂಬಲ ಹುಸಿಹೋಗುತ್ತಿದೆ ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತ ವನಧಾತ್ರಿ  ಉತ್ತು ಬಿತ್ತು ನೆಲದ ಕರುಣೆಯ ಧ್ವನಿಯಂತೆ ಕುಡಿಯೊಡೆವ ಮೊಳಕೆಯ ನಿರೀಕ್ಷೆಯಲ್ಲಿರುವ ರೈತ ಆಷಾಢದ ಮಳೆಗಾಗಿ ತೀವೃವಾಗಿ ಹಂಬಲಿಸುತ್ತಾನೆ. ಪುನರ್ವಸು ಮಳೆಗೆ ಪುಳಕಗೊಳ್ಳುವ ಇಳೆ ದಳದಳವರಳಿ ಬೆಳೆಗಳ ಕಣ್ಣು ಹೊಳೆಸುತ್ತದೆ. ಆದರೆ ಈಗೀಗ ಮಳೆ ಹುಸಿ ಹೋಗುತ್ತಿದೆ. ಬೇಂದ್ರೆಯವರ ಓ ಆಷಾಢ ಪದ್ಯದಲ್ಲಿ ಈ ಬೇಡಿಕೆ ದೈನ್ಯದಿಂದ ಮಂಡಿಸಲ್ಪಟ್ಟಿದೆ. ಓ ಆಷಾಢಾ ಆಷಾಢಾ ಆಡಿಸ್ಯಾಡಬೇಡಾ ದುರುರ‍್ಹಾಂಗ | ನೆರಳು ಚಲ್ಲಿ ಆಸೀ ಹಚ್ಚೀ | ಕಸಕೊಂಢಾಂಗ ಬಂತು ಮೋಡಾ | ಹೋತು ಮೋಡಾ ನೋಡಾ ನೋಡಾ ಈಗೀಗ ಆತ್ಮಹತ್ಯೆಗಿಳಿದಿರುವ ರೈತರ ಗೋಳನ್ನು ಕಂಡಾಗ ಬೇಂದ್ರೆಯವರ ಪದ್ಯದ ಮುಂದುವರಿದ ಭಾಗ ನೆನಪಾಗುತ್ತದೆ ಮೊದಲ ಬಿತ್ತಿಗೀ ಮೊಳಕೀ ಗೋಣು ಚೆಲ್ಯಾವ ತೂಕ ತಪ್ಪಿದ ಮೂಕ ಪ್ರಾರ್ಥನೀ ಮುಗಿಲಿಗೆ ಸಲ್ಲಾö್ಯವ ಎಲ್ಲಾö್ಯವ ಎಲ್ಲಾö್ಯವ ಎಲ್ಲಾö್ಯವ ಮೋಡಾ ಮಣ್ಣೆತ್ತೂನೂ ನೀರಡಿಸ್ಯಾವ ಒಕ್ಕಲಿಗನ ಕಣ್ ಬಿಡಿಸ್ಯಾವ ಓ ಆಷಾಢಾ ಎಂತೆಂತಹ ಆಧುನಿಕ ಆವಿಷ್ಕಾರಗಳಾಗಿವೆ ಎಂದರೂ ಕೂಡ ಮನುಜನ ಬಾಳು ಸೃಷ್ಟಿಯ ಸಮಷ್ಟಿಯ ಒಟ್ಟಂದದ ಹಂದರದಲ್ಲಿಯೇ ಅರಳಬೇಕಾದ ಹೂವು. ಹಾಗಲ್ಲದಿದ್ದರೆ ಹಾಹಾಕಾರದ ಗೋಳಿನ ಬಾಳು ನಮ್ಮದಾಗುತ್ತದೆ. ನಿಸರ್ಗದ ಜೊತೆಗೆ ಅನುಸಂಧಾನ ನಡೆಸುವ ರೀತಿಯಲ್ಲಿ ಬದುಕಲು ಕಲಿತ ದಿನ ಮಾನವ ನಿಜವಾದ ಜಾಣನಾಗುತ್ತಾನೆ. ಆಯಾ ಋತುಗಳು, ಆಯಾ ಮಾಸಗಳು ತಮ್ಮ ಸಹಜ ಗುಣ-ಲಕ್ಷಣಗಳೊಂದಿಗೆ ಮೈದೋರಿ ನಮ್ಮ ಬದುಕನ್ನು ಹಸನುಗೊಳಿಸುತ್ತವೆ. *********

ಹಿಂಡು ಮೋಡದ ಗಾಳಿ ಸವಾರಿ Read Post »

ಇತರೆ

ಖಾಸಗಿರಣಮತ್ತು ಅಭಿವೃದ್ದಿ

ಗಣೇಶ್ ಭಟ್ ಶಿರಸಿ ಖಾಸಗೀಕರಣವೇ ಅಭಿವೃದ್ಧಿಯ ದಾರಿಯೆಂದು ತಪ್ಪಾಗಿ ನಂಬಿರುವ ಕೇಂದ್ರ ಸರ್ಕಾರವು, ಹಲವಾರು ರೇಲ್ವೇ ಮಾರ್ಗಗಳಲ್ಲಿ ಖಾಸಗಿಯವರಿಗೆ ಅವಕಾಶ ನೀಡಲು ಮುಂದಾಗಿದೆ.ಈ ನೀತಿಯ ಪ್ರಕಾರ ಖಾಸಗಿ ನಿರ್ವಹಣಾಕಾರರು ತಮ್ಮದೇ ಬಂಡವಾಳ ತೊಡಗಿಸಿ ಹೊಸ ಎಂಜಿನ್ ಮತ್ತು ಭೋಗಿಗಳನ್ನು ಖರೀಧಿಸಿ ನಿಗದಿತ ಮಾರ್ಗಗಳಲ್ಲಿ ರೈಲು ಓಡಿಸಬೇಕು. ಪ್ರಯಾಣ ದರವನ್ನು ನಿಗದಿ ಪಡಿಸುವ ಅಧಿಕಾರವನ್ನು ನಿರ್ವಹಣಕಾರರಿಗೇ ಬಿಡಲಾಗಿದೆ. ಅವರ ಒಟ್ಟೂ ಗಳಿಕೆಯಲ್ಲಿ ಶೇಖಡವಾರು ಪಾಲನ್ನು ರೇಲ್ವೆ ಇಲಾಖೆಗೆ ನೀಡಬೇಕಿದೆ.ಈ ವಿಧದ ಖಾಸಗೀಕರಣದಿಂದ ರೇಲ್ವೇ ಪ್ರಯಾಣ ದರದಲ್ಲಿ ಹೆಚ್ಚಳವಾಗುವದೆಂಬ ಜನಸಾಮಾನ್ಯರ ಆತಂಕಕ್ಕೆ , ಆ ರೀತಿಯಾಗುವುದಿಲ್ಲವೆಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಖಾಸಗಿಯವರಿಗೆ ಈಗ ಕೊಡಮಾಡಿರುವ ೧೫೦ ರೇಲ್ವೇ ಮಾರ್ಗಗಳು ಪ್ರಯಾಣಿಕರ ದಟ್ಟಣೆಯಿಂದ ರೈಲ್ವೇ ಇಲಾಖೆಗೆ ಲಾಭ ತಂದುಕೊಡುತ್ತಿರುವವು. ಆದರೂ ಖಾಸಗಿರಂಗದ ಲಾಭದ ದಾಹಕ್ಕೆ ಮಣಿದು, ನಷ್ಟಕಾರಕ ಮಾರ್ಗಗಳನ್ನು ಸರ್ಕಾರವಿಟ್ಟುಕೊಂಡು, ಲಾಭದಾಯಕ ಮಾರ್ಗಗಳನ್ನು ಖಾಸಗಿಯವರಿಗೆ ನೀಡಲು ಮುಂದಾಗಿದೆ. ಈ ಕ್ರಮದಿಂದಾಗಿ ಖಾಸಗಿ ರಂಗದವರಿಂದ ಸುಮಾರು 30 ಸಾವಿರ ಕೋಟಿ ರೂಗಳ ಹೂಡಿಕೆಯಾಗಲಿದೆಯೆಂದು ರೈಲ್ವೇ ಮಂತ್ರಿ ಹೇಳಿಕೊಂಡಿದ್ದಾರೆ. ರೇಲ್ವೇ ಇಲಾಖೆಗೆ ಈ ಮೊತ್ತದ ಹೂಡಿಕೆ ಜುಜುಬಿ ಎಂಬುದು ವಾಸ್ತವ. ಖಾಸಗಿಕರಣವನ್ನೇ ಪ್ರತಿಪಾದಿಸುವ ಕೇಂದ್ರಸರ್ಕಾರದ ಜನವಿರೋಧಿ ನಿಲುವಿಗೆ ಇದು ಇನ್ನೊಂದು ಉದಾಹರಣೆ.ಸಾರ್ವಜನಿಕ ಸಂಪರ್ಕ ವ್ಯವಸ್ಥೆಯ ನಿರ್ವಹಣೆಯ ಹೊಣೆಗಾರಿಕೆ ತಾತ್ವಿಕವಾಗಿ ಕೇಂದ್ರಸರ್ಕಾರದ್ದು. ಈ ಜವಾಬ್ದಾರಿಯನ್ನು ಕೇಂದ್ರಸರ್ಕಾರಕ್ಕೆ ನಿರ್ವಹಿಸುವ ಸಾಮರ್ಥ್ಯವಿಲ್ಲದಿದ್ದರೆ ಆಸಕ್ತ ರಾಜ್ಯಗಳಿಗೆ ಅವಕಾಶ ನೀಡಬೇಕಾದುದು ಸರಿಯಾದ ದಾರಿ. ಈ ಕ್ರಮ ರೇಲ್ವೇ ಖಾಸಗಿಕರಣವಲ್ಲ, ಕೆಲವು ಮಾರ್ಗಗಳನ್ನು ಮಾತ್ರ ಖಾಸಗಿಯವರಿಗೆ ಕೊಡುತ್ತಿದ್ದೇವೆ ಎನ್ನುವ ಕೇಂದ್ರದ ಸಮಜಾಯಿಷಿ ‘ಲಾಭದ ಖಾಸಗೀಕರಣ, ನಷ್ಟದ ಸಾಮಾಜಿಕರಣ’ ನೀತಿಗೆ ತಾಜಾ ಉದಾಹರಣೆ.*************8

ಖಾಸಗಿರಣಮತ್ತು ಅಭಿವೃದ್ದಿ Read Post »

ಇತರೆ, ಜೀವನ

ಕೋವಿಡ್-19,ಆತ್ಮಾವಲೋಕನ

ಸುರೇಶ್ ಎನ್.ಶಿಕಾರಿಪುರ ಕೋವಿಡ್ -೧೯ ಆತ್ಮಾವಲೋಕನದ ಅದೃಶ್ಯ ದೂತ. ತೊಂಬತ್ತರ ದಶಕದಿಂದ ಇಲ್ಲಿಯ ವರೆಗೆ ಅಂದರೆ ಸುಮಾರು ಮೂವತ್ತು ವರ್ಷಗಳಿಂದ ಈ ದೇಶದಲ್ಲಿ ಮಂದಿರ – ಮಸೀದಿಗಾಗಿ ನಡೆದ ಕಲಹ ಕಿತ್ತಾಟ ಹೋರಾಟ ರಾಜಕೀಯ ಈಗ ಫಲ ನೀಡುತ್ತಿದೆ. ಬಿತ್ತಿದ್ದೇ ಬೆಳೆಯುವುದು. ಜ್ಞಾನವನ್ನು ಬಿತ್ತಿದರೆ ಜ್ಞಾನ ಅಜ್ಞಾನವನ್ನು ಬಿತ್ತಿದರೆ ಅಜ್ಞಾನ. ಈ ದೇಶದ ಬಹುದೊಡ್ಡ ಯುವ ಸಮುದಾಯವನ್ನು ಮಂದಿರ ನಿರ್ನಾಮ ಮತ್ತು ನಿರ್ಮಾಣಕ್ಕೆ ಹುರಿದುಂಬಿಸಿ ನಾನಾ ಬಗೆಯ ಧಾರ್ಮಿಕ ತಳಹದಿಯ ಸಂಘಟನೆಗಳನ್ನು ಕಟ್ಟಿ ಹಿಂದೂ ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಯೋಧರನ್ನಾಗಿ ಪ್ರಯೋಗಿಸಲಾಯಿತು. ಈಗಲೂ ಅದು ಮುಂದುವರೆದೇ ಇದೆ. ಈ ಮತೀಯ ಹೋರಾಟಗಳು ಸೃಷ್ಟಿಸಿದ ಹಿಂಸೆ ಒಡಕು ಅಶಾಂತಿ ಅಂಧಕಾರ ಅಪನಂಬಿಕೆ ಅಂತಿಂಥಾದ್ದಲ್ಲ. ಪ್ರಗತಿಪರವಾಗಿ ಯುವ ಸಮುದಾಯವನ್ನು ಕಟ್ಟದೇ ಹೋದರೆ ಏನೇನು ಯಡವಟ್ಟುಗಳಾಗಬೇಕೊ ಅವೆಲ್ಲವೂ ಆಗುತ್ತವೆ‌ ಎಂಬುದಕ್ಕೆ ನಮ್ಮ ದೇಶದ ಇಂದಿನ ಸ್ಥಿತಿ ತಾಜಾ ಉದಾಹರಣೆ. ರಾಜಕೀಯ ಪಕ್ಷಗಳು ಧರ್ಮಾಧಾರಿತವಾದಾಗ ಅವು ಮಂದಿರ ಮಸೀದಿ ಇಗರ್ಜಿ, ಮಠಗಳು, ಬಾಬಾಗಳು, ದೇವರು ದಿಂಡಿರುಗಳ ಕಡೆಗೇ ಯೋಚಿಸುತ್ತವೋ ಹೊರತು ಒಂದು ಸಶಕ್ತ ವೈಜ್ಞಾನಿಕ ವೈಚಾರಿಕ ಸಮಾಜವನ್ನು ದೇಶವನ್ನು ಕಟ್ಟಲು ಅವುಗಳಿಂದ ಸಾಧ್ಯವಿಲ್ಲ‌. ಅದರ ಪ್ರತಿಫಲವೇ ಇಂದು ಭಾರತ ಎದುರಿಸುತ್ತಿರುವ ಕೋವಿಡ್-19 ಸಮಸ್ಯೆ. ಇದು ಒಂದು ಉದಾಹರಣೆಯಷ್ಟೆ. ಭಾರತದ ದಾರಿದ್ರ್ಯದ ಹಿಂದೆ ಇರುವುದೂ ಈ ವಿಚಾರಗಳೇ. ಈ ದೇಶದಲ್ಲಿ ಮಂದಿರ ಮಸೀದಿಗಾಗಿ ನಡೆದ ಮೆರವಣಿಗೆ, ಹೊಡೆದಾಟ, ವಾಗ್ವಾದ, ವಿಮರ್ಶೆ, ಊರು, ದೇಶ, ರಾಜ್ಯಗಳ ಬಂದ್ ಗಳು, ಸಮಾವೇಷಗಳು, ಬೈಟಕ್ ಗಳು, ರ್ಯಾಲಿಗಳು, ಭಾಷಣಗಳು, ಚುನಾವಣಾ ಪ್ರಣಾಳಿಕೆಗಳು, ಘೋಷಣೆಗಳು, ಶಂಕನಾದಗಳು, ರಥ ಯಾತ್ರೆಗಳು, ರಸ್ತೆ ತಡೆಗಳು, ಬಯ್ಕಾಟುಗಳು, ಆರೋಗ್ಯ ಶಿಕ್ಷಣ, ಸದೃಢ ಆರೋಗ್ಯ ವ್ಯವಸ್ಥೆ, ಆಸ್ಪತ್ರೆಗಳ ನಿರ್ಮಾಣ, ಸಂಶೋಧನೆಗಳು, ಪ್ರಯೋಗಾಯಲಗಳು, ಹೊಸಹೊಸ ವೈದ್ಯಕೀಯ ಆವಿಷ್ಕಾರಗಳು, ಔಷಧ, ಅಂಬ್ಯುಲೆನ್ಸ್, ಸಿಬ್ಬಂಧಿ ನೇಮಕಾತಿ ಮೊದಲಾದ ಮೂಲಭೂತ ಸೌಕರ್ಯಗಳು, ಶಿಕ್ಷಣ ಮೊದಲಾದವಕ್ಕಾಗಿ ನೆಡೆದಿದ್ದರೆ ಇಂದು ಭಾರತ ಅತ್ಯಂತ ಮುಂದುವರೆದ ದೇಶಗಳೆನಿಸಿಕೊಳ್ಳುತ್ತಿರು ಯಾವುದೇ ರಾಷ್ಟ್ರಗಳಿಗಿಂತ ಉನ್ನತ ಸ್ಥಿತಿಯಲ್ಲಿರುತ್ತಿತ್ತು. ಚಿಕಿತ್ಸೆ ಸಿಗದೆ, ಅನ್ನ ಸಿಗದೆ, ಆಶ್ರಯ ಸಿಗದೆ ಜನರು ಗುಳೇ ಹೋಗುವ, ಬೀದಿ ಬೀದಿಯಲ್ಲಿ ಬಿದ್ದು ಸಾಯುವ ಸ್ಥಿತಿ ಬರುತ್ತಿರಲಿಲ್ಲ. ಕೋವಿಡ್ – 19ರ ಈ ತುರ್ತು ಪರಿಸ್ಥಿತಿಯಲ್ಲಿ ಮಂದಿರ ಮಸೀದಿಗಳು ಜನರನ್ನು ರಕ್ಷಿಸಲಾರವು ಎಂಬುದನ್ನು ಈಗಲಾದರೂ ನಮ್ಮ ಯುವ ಸಮುದಾಯ ಅರ್ಥ ಮಾಡಿಕೊಳ್ಳಬೇಕು‌. ದಶಕಗಳಿಂದ ಯುವಕರನ್ನು ಧಾರ್ಮಿಕ ವಿಚಾರಗಳಿಗೆ ಪ್ರಚೋದಿಸಿ ಬಳಸಿಕೊಂಡದ್ದೇನಾದರೂ ಇಂದು ಉಪಯೋಗಕ್ಕೆ ಬರುತ್ತಿದೆಯೇ ಎಂಬುದನ್ನು ಆಲೋಚಿಸಬೇಕು. ಮನುಷ್ಯರ ಜೀವವನ್ನು ಉಳಿಸಲು, ರಕ್ಷಿಸಲು ಉಪಯೋಕ್ಕೆ ಬಾರದ ಮಂದಿರ – ಮಸೀದಿ ಧರ್ಮಗಳ ಗುಂಗಿನಿಂದ ಈಗಲಾದರೂ ಹೊರಬರಬೇಕು. ನಮ್ಮ ದೇಶ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವ ಪ್ರಯತ್ನ ಮಾಡುತ್ತಿದೆ. ನಮಗೆ ಸರಿಯಾದ ಸುರಕ್ಷತಾ ವ್ಯವಸ್ಥೆಗಳು ಇಲ್ಲ ಎಂದು ವೈದ್ಯಕೀಯ ವಲಯದಿಂದ ಹತಾಷೆಯ ಕೂಗುಗಳು ಅಲ್ಲಲ್ಲಿ ಕೇಳಬರುತ್ತಿವೆ. ಯಾರನ್ನು ಯೋಧರು ಎಂದು ಈಗ ಪರಿಗಣಿಸಲಾಗಿದೆಯೋ ಅವರು ಚಿಕಿತ್ಸೆ ನೀಡಲು ಹೆದರುತ್ತಿದ್ದಾರೆ ಹಿಂಜರಿಯುತ್ತಿದ್ದಾರೆ. ಜನ ಭೀತಿಯಿಂದ ಕಂಗಾಲಾಗಿದ್ದಾರೆ. ಖಾಸಗೀ ಆಸ್ಪತ್ರೆಗಳು ಕೊರೋನಾ ರೋಗಿಗಳಿಗಾಗಿ ಬಿಲ್ ಬುಕ್ಕು ಹಿಡಿದು ರೆಡ್ ಕಾರ್ಪೆಟ್ ಹಾಸಿ ಕಾಯುತ್ತಿವೆ‌. ಸರ್ಕಾರಿ ವ್ಯವಸ್ಥೆ ವಿಫಲವಾಗಿದೆ, ಸೋತು ಕೈ ಚೆಲ್ಲವ ಹತಾಶ ಹಂತ ತಲುಪಿಯಾಗಿದೆ. ಇದೆಲ್ಲವೂ ಅವಿವೇಕದ ಅವೈಜ್ಞಾನಿಕ ಹಾಗೂ ಅವೈಚಾರಿಕ ವಿಚಾರಗಳಿಗೆ ಮನ್ನಣೆ ಕೊಟ್ಟದ್ದರ ಫಲ. ಭ್ರಷ್ಟಾಚಾರದ ಫಲ ಹಾಗೂ ಹೊಣೆಗೇಡಿತನದ, ಸ್ವಾರ್ಥದ ಫಲ. ಸರ್ಕಾರವೂ ವಿಫಲವಾಗಿದೆ. ಹಣವೂ ಇಲ್ಲ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳೂ ಇಲ್ಲ. ಕೋವಿಡ್ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಕೂಗೂ ಎದ್ದಿದೆ. ಇದೇ ಸರಿಯಾದ ಹೊತ್ತು ಎಂದು ಕೊರೋನಾಕ್ಕೆ ಮದ್ದು ಕಂಡು ಹಿಡಿದಿರುವುದಾಗಿ ಸುಳ್ಳು ಪ್ರಚಾರ ಮಾಡಿ ಆ ಮೂಲಕ ಜನರ ಆರೋಗ್ಯದ ಜೊತೆ ಆತಂಕದ ಜೊತೆ ಚಲ್ಲಾಟವಾಡುತ್ತಾ ಅವರ ಮಾನಸಿಕ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ಕೋಟಿ ಕೋಟಿ ಹಣ ಲಪಟಾಯಿಸುವ ಔಷಧ ದಂಧೆ ಕೋರರು ಕುಣಿದಾಡುತ್ತಿದ್ದಾರೆ. ಹಾಗಿದ್ದರೂ ಆಳುವ ವ್ಯವಸ್ಥೆ ಅಂತವರ ಮೇಲೆ ಮೃದು ಧೋರಣೆಯನ್ನು ತಾಳಿದೆ. ಇದರ ವಿರುದ್ಧ ಯುವ ಸಮುದಾಯ ಜನತೆ ದಂಗೆ ಏಳುವುದಿಲ್ಲ ಎಂಬ ಖಾತ್ರಿ ಮೇಲಿನವರಿಗಿದೆ ಏಕೆಂದರೆ ಜನತೆಯನ್ನು ಹೇಗೆ ಭಾವನಾತ್ಮಕವಾಗಿ ವಂಚಿಸಿದ್ದೇವೆ ಅದು ಯಾವ ರೀತಿಯ ಕೆಲಸ ಮಾಡುತ್ತಿದೆ ಎಂಬ ಸತ್ಯ ಅವರಿಗೂ ಚನ್ನಾಗಿಯೇ ಗೊತ್ತಿದೆ. ಒಂದು ಸಂಸ್ಥೆಯಂತೂ ಈಗಾಗಲೇ ಕೋವಿಡ್ ಗೆ ತಾನು ಔಷಧ ಕಂಡು ಹಿಡಿದಿದ್ದು ಮುಂಬರು ಅಗಸ್ಟ್ ೧೫ ಕ್ಕೆ ಅದನ್ನು ಬಿಡುಗಡೆ ಮಾಡುವುದಾಗಿಯೂ ಘೋಷಿಸಿದೆ ಅದರ ವೈಜ್ಞಾನಿಕ ಸಾಧ್ಯಾಸಾಧ್ಯತೆಗಳ ವಿರುದ್ಧ  ದನಿ ಎದ್ದಾಗ ಎಚ್ಚೆತ್ತು ಮುಂಬರುವ ವರ್ಷಕ್ಕೆ ಔಷದ ಲಭ್ಯತೆಯ ಸಾಧ್ಯತೆಯನ್ನು ಮುಂದೂಡಿದೆ. ಯೋಗ ಗುರುವೊಬ್ಬರು ಕೆಮ್ಮು ಮತ್ತು ಜ್ವರಕ್ಕೆ ತಾನು ಔಷಧ ತಯಾರಿಸಿರುವುದಾಗಿ ಕೇಂದ್ರ ಆಯುಷ್ ಇಲಾಖೆಗೆ ಅನುಮತಿ ಕೋರಿ ಅರ್ಜಿ ಹಾಕಿ ಇತ್ತ ತಾನು ಕೊರೋನಾ ಜ್ವರಕ್ಕೆ ಕೊರೋನಿಲ್ ಎಂಬ ಔಷಧ ತಯಾರಿಸಿರುವುದಾಗಿ ದೊಡ್ಡ ಜಾಹಿರಾತು ನೀಡುವ ಮೂಲಕ ಲಾಭಿಗೆ ನಿತ್ತಿದೆ. ಆಯುಷ್ ಇಲಾಖೆ ನೋಟಿಸ್ ನೀಡಿದ್ದರೂ, ಬಾಬಾ ರಾಮದೇವ ಅವರ ಮೇಲೆ ಹಾಗೂ ಅವರ ಆಪ್ತರೊಬ್ಬರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿರುವುದಾಗಿ ಹೇಳುತ್ತಿದ್ದರೂ ಕೇಂದ್ರದ ಮಂತ್ರಿಗಳು ಮಾತ್ರ ವಿಶ್ವಾಸಾರ್ಹವಲ್ಲದ ಲಾಭದ ದಂಧೆಯಾಗಿರುವ ಇದನ್ನು ಸಮರ್ಥಿಸಿಕೊಳ್ಳುತ್ತಾರೆ‌. ಇದನ್ನೆಲ್ಲ ಹ್ಞೂ ಎನ್ನಲು ದೇಶದ ಮೂಲೆ ಮೂಲೆಯಲ್ಲಿ ಅಂಧಾಭಿಮಾನಿಗಳ ದೊಡ್ಡಪಡೆಯೂ ಅವರ ಬೆನ್ನಿಗೆ ಇದೆ. ಅಂತಿಮವಾಗಿ ಇದರ ಫಲಿತಾಂಶ ಪ್ರಜಾ ಸಮೂಹದ ಮೇಲೆಯೇ. ವೈಜ್ಞಾನಿಕ ಮನೋಭಾವವನ್ನು ದೇಶದ  ಯುವಕರಲ್ಲಿ ಸಮಸ್ತ ಪ್ರಜಾ ಸಮೂಹದಲ್ಲಿ ಬೆಳೆಸದೆ ಧಾರ್ಮಿಕ ಮನೋಭಾವವನ್ನು ಬಿತ್ತಿ ಬೆಳೆದಿದ್ದರ ಫಲ ಇಂದು ಕಣ್ಣೆದುರೇ ಕಾಣುತ್ತಿದೆ. ಬಾಲ್ಕನಿಗೆ ಬಂದು ಚಪ್ಪಾಳೆ ಹೊಡೆದೂ ಆಯಿತು, ಮನೆ ಮನೆಯಲ್ಲಿ ಹಣತೆ ಹಚ್ಚಿಯೂ ಆಯಿತು. ಬಾಲ್ಕನಿಗೆ ಬಂದು ಚಪ್ಪಾಳೆ ತಟ್ಟಿದರೆ ಊರೊಳಗೆ ನುಗ್ಗಿದ ಮಾರಿ ಹೆದರಿ ಓಡಿ ಹೋಗಲು ಅದೇನು ಗದ್ದೆಯ ಫಸಲಿಗೆ ಮುತ್ತಿದ ಹಕ್ಕಿಯ ಹಿಂಡೇ…? ಕೊನೆಗೆ ಇದೆಲ್ಲವನ್ನೂ ಮಾಡಲು ಹೇಳಿ ಮಾಡಿಸಿದ ಆಳುವ ನಾಯಕ ‘ಕೋವಿಡ್ ನೊಂದಿಗೆ ಜೀವಿಸುವುದ ಕಲಿಯಿರಿ’ ಎಂದುಬಿಟ್ಟ. ಇಂತಹ ಸ್ಥಿತಿ ನಿರ್ಮಾಣವಾಗುವುದು ದೌರ್ಬಲ್ಯದಿಂದ. ದೌರ್ಬಲ್ಯವು ಬರುವುದು ಮೌಢ್ಯ ಮತ್ತು ಮತೀಯ ಸೈದ್ಧಾಂತಿಕತೆಯನ್ನು ಬಿತ್ತಿ ವೈಜ್ಞಾನಿಕತೆಯನ್ನು ಉದಾಸೀನ ಮಾಡುವುದರಿಂದ. ಲಂಕೇಶ್ ಅಂದೇ ಹೇಳಿದ್ದರು ‘ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ’ ಎಂದು. ಆ ಮಾತು ಈಗ ನೆನಪಾಗುತ್ತಿದೆ. ಪವಿತ್ರವಾದ ಜೀವಗಳನ್ನು ಉಳಿಸಲು ಈಗ ಯಾವ ಮಂದಿರ ಮಸೀದಿಗಳೂ ಆ ಕುರಿತ ರಾಜಕೀಯ ವಿಚಾರ ವಾಗ್ವಾದಗಳೂ ಬರುವುದಿಲ್ಲ ಹಾಗೂ ಸಶಕ್ತವಾಗಿಲ್ಲ. ಜಢ ಸಿದ್ಧಾಂತಗಳಿಂದ ಹೊರಬಂದು ನಾವೀಗ ಅವಲೋಕಿಸಬೇಕಾಗಿದೆ. ನಾವು ಮಾತ್ರವಲ್ಲ ನಮ್ಮನ್ನಾಳುವ ನಾಯಕರೂ… “ಓ ಬನ್ನಿ ಸೋದರರೆ ಬೇಗ ಬನ್ನಿ ಗುಡಿ ಚರ್ಚು  ಮಸಜೀದಿಗಳ ಬಿಟ್ಟು ಹೊರ ಬನ್ನಿ ಬಡತನವ ಬುಡಮಟ್ಟ ಕೀಳ ಬನ್ನಿ ಮೌಡ್ಯತೆಯ ಮಾರಿಯನು ಹೊರದೂಡಲೈ ತನ್ನಿ ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ ಓ ಬನ್ನಿ ಸೋದರರೆ ಬೇಗ ಬನ್ನಿ……. ಸಿಲುಕದಿರಿ ಮತವೆಂಬ ಮೊಹದಜ್ಞಾನಕ್ಕೆ ಮತಿಯಿಂದ ದುಡುಯಿರೈ ಲೋಕ ಹಿತಕೆ ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕ್ಕೆ ಓ ಬನ್ನಿ ಸೋದರರೇ ವಿಶ್ವ ಪಥಕೆ…..” ಎಂದು ಕವಿ ಕುವೆಂಪು ಸುಮ್ಮನೇ ಕರೆ ನೀಡಲಿಲ್ಲ. ದೇಶದ ಯುವಕರನ್ನು ಕುರಿತು ವಿವೇಕಾನಂದರು ಸುಮ್ಮಸುಮ್ಮನೇ ಕಂಠಶೋಷಣೆ ಮಾಡಿಕೊಂಡು ಕರೆನೀಡಲಿಲ್ಲ. ಅವರೆಲ್ಲರ ಧಾರ್ಮಿಕ ದೃಷ್ಟಿ ವೈಜ್ಞಾನಿಕತೆಯಿಂದ ಕೂಡಿತ್ತು. ದೇಶ ಮತ್ತು ಅದರ ಸಮಸ್ತ ಅಭಿವೃದ್ಧಿಯ ಕುರಿತು ಅವರ ದಾರ್ಶನಿಕತೆ ದೂರದೃಷ್ಟಿಯಿಂದ ಕೂಡಿತ್ತು. ಅದೆಂದೂ ಅವೈಜ್ಞಾನಿಕವೂ ಮತೀಯಾಂಧಕಾರಿಯೂ ಆಗಿರಲಿಲ್ಲ. ಅವರು ಬದುಕಿದ್ದ ಕಾಲದಲ್ಲೂ ಸಾಂಕ್ರಾಮಿಕ ರೋಗಗಳು ದೇಶವನ್ನು ನುಗ್ಗಿ ಜನರನ್ನು ಇನ್ನಿಲ್ಲದಂತೆ ಬಾದಿಸಿದ್ದವು. ದೇಶದ ವಿಜ್ಞಾನಿಗಳು ಆಗ ಔಷಧ ಶೋಧದಲ್ಲಿ ತೊಡಗಿದರು. ಸರ್ಕಾರಗಳು ನೈಜ ಕಾಳಜಿಯಿಂದ ಕೆಲಸ ಮಾಡಿದವು. ಭಾರತವೇ ಕ್ಷಯ ರೋಗಕ್ಕೆ, ರೇಬಿಸ್ಸಿಗೆ, ಪ್ಲೇಗ್, ಕಾಲರಾ, ಪೋಲಿಯೋ ಮೊದಲಾದ ಖಾಯಿಲೆಗಳಿಗೆ ಮದ್ದು ಅರೆಯಿತು. ಇದು ಸಾಧ್ಯವಾದದ್ದು ವಿಜ್ಞಾನಕ್ಕೆ ನೀಡಿದೆ ಒತ್ತಿನಿಂದ ಪ್ರಾಮುಖ್ಯತೆಯಿಂದ. ಇಂದು ಭಾರತ ಮೇಲ್ಕಂಡ ಕಾಯಿಲೆಗಳನ್ನು ಯಶಸ್ವಿಯಾಗಿ ಎದುರಿಸಿದೆ. ಈಗ ಬಂದಿರುವ ಕೊರೋನಾ ಹಾಗೆ ನೋಡಿದರೆ ಹಿಂದಿನ ವಿನಾಶಕಾರಿ ಸಾಂಕ್ರಾಮಿಕಗಳ ಸ್ವರೂಪದ್ದಲ್ಲ ‘ಹುಲಿಗಿಂತ ಹುಲಿಯ ಬಣ್ಣನೆಯೇ ಹೆದರಿಸಿತ್ತು’ ಎಂಬ ಗಾದೆ ಮಾತಿನಂತೆ ಕೊರೋನಾಕ್ಕಿಂತ ಅದರ ಬಗೆಗಿನ ವರ್ಣನೆಗಳು, ಭಯಾನಕ ಸುದ್ಧಿಗಳು ಎಬ್ಬಿಸುವ ಬೊಬ್ಬೆಯೇ ಇಂದು ಭಯಾನಕತೆಯನ್ನು ಸೃಷ್ಟಿಸಿದೆ. ಇಲ್ಲಿಯೂ ಆಳುವ ವ್ಯವಸ್ಥೆ ಕೋಮು ರಾಜಕೀಯವನ್ನೇನೂ ಬಿಡಲಿಲ್ಲ. ಮಾದ್ಯಮಗಳು ಮುಸ್ಲಿಮ್ ತಬ್ಲಿಘಿಗಳನ್ನು  ಕೊರೋನಾ ಪ್ರಸಾರಕರು ಎಂಬಂತೆ ಬಿಂಬಿಸಿದವು. ಹಳ್ಳಿಹಳ್ಳಿಗಳಲ್ಲಿ ಡಂಗುರ ಹೊಡೆಸಿದರು, ಸಣ್ಣಪುಟ್ಟ ಬಡ ವ್ಯಾಪಾರಿಗಳನ್ನು ಹೆದರಿಸಿ ಗದರಿಸಿ ಹೊಡೆದು ಬಡಿದು ಓಡಿಸಿದರು. ಎಸ್ಟೋ ಬಡವರು ಮನೆ ಹೊಟ್ಟೆಗಿಲ್ಲದೆ ನರಳುವ ಸ್ಥಿತಿ ಸೃಷ್ಟಿ ಮಾಡಿದರು. ಕೊರೋನಾದ ಹೆಸರಲ್ಲಿ ಒಂದು ಸಮುದಾಯವನ್ನು ಅಸ್ಪೃಷ್ಯರನ್ನಾಗಿಸುವ, ಪರಕೀಯರರನ್ನಾಗಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದರು. ಇದು ಧಾರ್ಮಿಕ ಮನೋಭಾವ ಎಂಥಹಾ ಅಮಾನವೀಯ ಮನಸ್ಥಿತಿಗಳನ್ನು ಪರಿಸ್ಥಿತಿಗಳನ್ನು ಸೃಷ್ಟಿಸಬಲ್ಲದು ಎಂಬುದಕ್ಕೆ ಉದಾಹರಣೆ. ಈಗಾಗಲೇ ದ್ವೇಷದ ಮೂಟೆಗಳಾಗಿರುವ ಯುವ ಸಮುದಾಯ ಒಂದು ನಿರ್ದಿಷ್ಟ ಸಮುದಾಯದ ಮೇಲೆ ಕೃದ್ಧರಾಗಿ ಕುದಿಯುವಂತಾಯಿತು. ಸಾಂಕ್ರಾಮಿಕ ರೋಗದಲ್ಲೂ ಧರ್ಮದ ವಿಷಬೀಜ ಬಿತ್ತಿ ರಾಜಕೀಯ ಅಧಿಕಾರದ ಫಸಲು ತೆಗೆಯುವ ಕೃಷಿಯನ್ನು ಭಲೆ ನಾಜೂಕಿನಿಂದ ನಿರ್ವಹಿಸಲಾಯಿತು. ಕೋಟ್ಯಾಂತರ ಕಾರ್ಮಿಕರು ಅನ್ನ ಆಶ್ರಯವಿಲ್ಲದೆ ಗುಳೇ ಹೊರಟು ಹಾದಿಬೀದಿಯಲ್ಲಿ ಬಿದ್ದು ಸತ್ತದ್ದು ಲೆಕ್ಕಕ್ಕಿಲ್ಲವಾಯಿತು.‌ ದೇಶ ಕಟ್ಟಿದವರು ಸೋಂಕಿತರಾದರು ದೇಶ ದೋಚಿದವರು ತಮ್ಮ ಬಹು ಮಹಡಿಯ ಕಟ್ಟಡಗಳಲ್ಲಿ ಸುರಕ್ಷಿತರಾದರು. ಒಟ್ಟಿನಲ್ಲಿ ಅವಿವೇಕದ ಪರಮಾವಧಿ, ಅಲಕ್ಷ್ಯ, ಬಡವರು ದುಡಿಯುವ ವರ್ಗದ ಬಗೆಗಿನ ಅಸಡ್ಡೆ ತಿರಸ್ಕಾರ ಮನೋಭಾವಗಳು ಈ ದೇಶದಲ್ಲಿ ಕಾಯಿಲೆ ವ್ಯಾಪಕವಾಗಿ ಹಬ್ಬಲು ಕಾರಣವಾದವು. ವಿಶ್ವ ಆರೋಗ್ಯ ಸಂಸ್ಥೆಯು ಭಾರತದಂತಹಾ ದೇಶದಲ್ಲಿ ಸೋಂಕು ಸಮುದಾಯದ ಹಂತವನ್ನು ತಲುಪಿದರೆ ಏನು ಅನಾಹುತ ಆಗಬಹುದು ಎಂದು ಎಚ್ಚರಿಸಿತ್ತೋ ಅದು ನಮಗೆ ಎಚ್ಚರವಾದಂತೆ ಕಾಣಲಿಲ್ಲ. ನಾವು ಯಾವುದನ್ನು ಪ್ರಶ್ನಿಸಬೇಕೊ ಅದನ್ನು ಪ್ರಶ್ನಿಸಲಿಲ್ಲ ಯಾವುದನ್ನು ಬೆಂಬಲಿಸ ಬಾರದೊ ಯಾವುದನ್ನು ಒಪ್ಪ ಬಾರದೊ‌ ಯಾವುದನ್ನು ಹಿಂಬಾಲಿಸಬಾರದೋ ಅವುಗಳನ್ನು ಬೆಂಬಲಿಸಿದ್ದರ ಹಿಂಬಾಲಿಸಿದ್ದರ ಒಪ್ಪಿದ್ದರ ಫಲವನ್ನೀಗ ಉಣ್ಣುತ್ತಿದ್ದೇವೆ. ದಶಕಗಳಿಂದ ಧರ್ಮದ ನಿದ್ದೆ ಗುಳಿಗೆ ನುಂಗಿ ಮತ್ತೇರಿ ನಿಶೆಯೊಳಗೆ ನಿದ್ದೆಹೋದದ್ದರ ಫಲ ಇಂದು ಅಸಹಾಯಕ ಸ್ಥಿತಿಗೆ ಸೃಷ್ಟಿಯಾಗುವಂತೆ ಮಾಡಿದೆ. ಇನ್ನಾದರೂ ಈ ಅವಿಚಾರಗಳಿಂದ ಹೊರ ಬಂದು ಪ್ರಗತಿಪರವಾಗಿ ಯೋಚಿಸುವುದನ್ನು ಕಲಿಯಬೇಕು ವೈಜ್ಞಾನಿಕ ಮನೋಧರ್ಮವನ್ನು ರೂಢಿಸಿಕೊಳ್ಳುವ ಮೂಲಕ ಧರ್ಮ ದೇವರು ಜಾತಿಗಳೆಂಬ ಶ್ರೇಷ್ಟತೆಯ ವ್ಯಸನಗಳಿಂದ ಹೊರಬಂದು ದೇಶವನ್ನು ಆಂತರಿಕವಾಗಿ ಬಲಪಡಿಸಬೇಕು. ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಕುಸಿದರೆ ಅಂತಹಾ ದೇಶಕ್ಕೆ ಯಾವತ್ತಿಗೂ ಭವಿಷ್ಯವಿಲ್ಲ. ಧರ್ಮದ ಅಂಧಾಕಾರದ ತಳಹದಿಯ ಮೇಲೆ ದೇಶ ಕಟ್ಟಲು ಹೊರಟರೆ ಅಂತಹಾ ದೇಶ ಎಂದಿಗೂ ಸದೃಢ ದೇಶವಾಗಲಾರದು. *******************

ಕೋವಿಡ್-19,ಆತ್ಮಾವಲೋಕನ Read Post »

ಇತರೆ

ಹಾಸ್ಯ

ಮದಿರಾ ಪ್ರಿಯರ ಹಳವಂಡಗಳು ಗೌರಿ.ಚಂದ್ರಕೇಸರಿ      ಸಾವಿನಂತಹ ಘೋರಾತಿ ಘೋರ ಪರಿಸ್ಥಿತಿಯಲ್ಲೂ ತಮಾಷೆಗಳನ್ನು ಹುಟ್ಟು ಹಾಕಬಲ್ಲಂತಹ ಎದೆಗಾರಿಕೆ, ಹಾಸ್ಯ ಪ್ರಜ್ಞೆ ಇರುವುದು ನಮ್ಮ ಜನರಿಗೇನೇ ಎಂಬುದು ನನ್ನ ಅಭಿಪ್ರಾಯ. ಕಳೆದ ವರ್ಷ ಬಂದು ಹೋದ ಜಲ ಪ್ರಳಯ, ಈಗಿನ ಕೊರೋನಾದ ಬಗ್ಗೆ ದಿನಕ್ಕೆ ನೂರಾರು ಟಿಕ್ ಟಾಕ್, ಟ್ರೋಲುಗಳು ಬಂದು ಬೀಳುತ್ತವೆ ಮುಖ ಪುಸ್ತಕ, ವಾಟ್ಸಾಪ್ನಲ್ಲಿ. ನೊಂದು ಬೆಂದ ಮನಸುಗಳಿಗೆ ಇವುಗಳಿಂದ ಸ್ವಲ್ಪವಾದರೂ ಉಪಶಮನ ದೊರೆಯುವುದಂತೂ ಹೌದು.      ಕೊರೋನಾದ ರುದ್ರ ತಾಂಡವಕ್ಕೆ ಕಡಿವಾಣ ಹಾಕಲು ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆಯೇ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹಳವಂಡಗಳು ಆರಂಭವಾದವು. ದಿನವಿಡೀ ಅಡುಗೆ ಮನೆಯಲ್ಲೇ ಬೇಯಿಸುತ್ತ, ತಾವೂ ಬೇಯುವ ಸಂಕಟ ಹೆಂಗಸರಿಗೆ. ಬೆಳಗಾಗುತ್ತಿದ್ದಂತೆಯೇ ಮನೆಯಿಂದ ಕಾಲ್ಕಿತ್ತು ಹುಡುಗಿಯರ ಕಾಲೇಜಿನತ್ತ ಠಳಾಯಿಸುತ್ತಿದ್ದ ಹುಡುಗರಿಗೆ  ಕ್ಷಣವೊಂದು ಯುಗವಾಗಿ ಹೋದಂತಾಗಿತ್ತು. ಅಲ್ಪ ಸ್ವಲ್ಪ ಅನುಕೂಲವಾಗಿರುವುದು ಮಕ್ಕಳಿಗೆ. ಕಣ್ಣಿ ಬಿಚ್ಚಿದ ಕರುಗಳಂತಾಗಿ ಹೋಗಿವೆ ಮಕ್ಕಳು. ಆದರೆ ಈ ಗಂಡಸರು ಮಾತ್ರ ಜೀವನದಲ್ಲಿ ಏನನ್ನೋ ಕಳೆದುಕೊಂಡವರಂತೆ ಜಿಗುಪ್ಸೆಗೆ ಒಳಗಾಗಿದ್ದರೆಂಬುದು ನಮ್ಮ ಹೆಂಗಸರ ಅಂಬೋಣ. ಲಾಕ್ ಡೌನ್ ಜೊತೆ ಜೊತೆಗೆ ಮದ್ಯದಂಗಡಿಗಳಿಗೂ ಬೀಗ ಬಿದ್ದಾಗ ಗಂಡಸರೆಲ್ಲ ಅಕ್ಷರಶ: ಹತಾಶರಾಗಿ ಹೋಗಿದ್ದರು. ಮದಿರಾ ಪ್ರಿಯರ ಸ್ಥಿತಿಯನ್ನು ನೆನೆದರೆ ಕರುಳು ಹಿಂಡಿದಂತಾಗುತ್ತಿದೆ. ಬಡವ ಬಲ್ಲಿದರೆನ್ನದೇ ಮದಿರೆಯೊಂದೇ ತಮ್ಮ ಜೀವನದ ಥ್ರಿಲ್ ಎಂದುಕೊಂಡವರಿಗೆ ಜೀವನವೇ ನೀರಸವಾಗಿ ಹೋಗಿತ್ತು. ಈ ಕೊರೋನಾ ಎನ್ನುವ ಹೆಮ್ಮಾರಿಗೆ ಶಾಪ ಹಾಕುತ್ತಿರುವ ನಾಲಿಗೆಗಳೆಷ್ಟೋ, ಮದಿರೆಯ ಸರಬರಾಜನ್ನು ಮುಂದೂಡುತ್ತಾ ಹೋದ ಸರ್ಕಾರವನ್ನು ತೆಗಳಿದವರೆಷ್ಟೋ ಬಲ್ಲವರಾರು? ಇಂಥ ಪರಿಸ್ಥಿತಿಯನ್ನು ಹಿಂದೆಂದೂ ಕಂಡಿರದ ಹನಿ ನೀರಾವರಿ ಮಾಡುವವರು ತಲೆ ಮೇಲೆ ಕೈ ಹೊತ್ತು ಕುಳಿತು ಬಿಟ್ಟಿದ್ದರು. ನಿತ್ಯ ಬರುವ ವಾರ್ತೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಎಣ್ಣೆ ಅಂಗಡಿಗಳೇನಾದರೂ ಬಾಗಿಲು ತೆರೆಯುವ ವಿಚಾರವನ್ನು ಹೇಳುತ್ತಾರೇನೋ ಎಂದು ಬಕ ಪಕ್ಷಿಗಳಂತೆ ಕಾಯುತ್ತಿದ್ದರು. ಆದರೆ ಎಣ್ಣೆ ಅಂಗಡಿಗಳಿಗೂ ಲಾಕ್ ಡೌನ್ ಎಂದು ಗೆರೆ ಕೊರೆದಂತೆ ಹೇಳಿದಾಗ ಮದಿರಾ ಪ್ರಿಯರ ಅಂತರಂಗದ ಅಳಲು ಏನೆಂಬುದು ಅವರಿಗಷ್ಟೇ ಗೊತ್ತು.      ಲಾಕ್‌ಡೌನ್ ಸಮಯದಲ್ಲಿ ಒಮ್ಮೆ ಹೀಗೇ ಆಯಿತು. ಹಿಂದಿನ ವಠಾರದಲ್ಲಿ ಗಲಾಟೆಯಾಗುತ್ತಿತ್ತು. ಕುತೂಹಲಕ್ಕೆಂದು ಹೋಗಿ ನೋಡಿದಾಗ ವ್ಯಕ್ತಿಯೊಬ್ಬನನ್ನು ನಾಲ್ಕು ಜನರು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಆ ವ್ಯಕ್ತಿಯ ಮೇಲೆ ಬಂದಿರುವುದು ದೇವರೋ, ದೆವ್ವವೋ ಎಂದು ಪ್ರಶ್ನಿಸಲಾಗಿ ಅವನಿಗೆ ಬಡಿದುಕೊಂಡಿರುವುದು ಬಾಟಲಿಯ ದಯ್ಯ ಎಂದು ತಿಳಿದಿತ್ತು. ಪ್ರತಿನಿತ್ಯ ವಾರ್ತೆಗಳನ್ನು ನೋಡುವಾಗ ಕೈಯ್ಯಲ್ಲೊಂದು ಹಗ್ಗವನ್ನು ಹಿಡಿದುಕೊಳ್ಳುವುದು, ವಾರ್ತಾ ವಾಚಕರು ಇನ್ನೂ ಒಂದು ವಾರ ಎಣ್ಣೆ ಅಂಗಡಿಗಳಿಗೆ ಬೀಗ ಎನ್ನುತ್ತಲೇ ಇವನು ಹಗ್ಗವನ್ನು ಹಿಡಿದುಕೊಂಡು ನೇಣು ಬಿಗಿದುಕೊಳ್ಳಲು ಕೋಣೆಗೆ ಓಡುವುದು. ಮನೆಯವರೆಲ್ಲ ಓಡಿ ಹೋಗಿ ಅವನನ್ನು ಹಿಡಿದುಕೊಳ್ಳುವುದು. ಮದಿರೆ ಇಷ್ಟೊಂದು ಅನಿವಾರ್ಯವೆ ಮನುಷ್ಯನಿಗೆ ಎನ್ನಿಸಿತು. ಪ್ರಿಯತಮ/ಮೆ ಕೈ ಕೊಟ್ಟಾಗಲೋ ಸಾಲದ ಶೂಲ ಇರಿಯುವಾಗಲೋ ಆತ್ಮಹತ್ಯೆಗೆ ಮೊರೆ ಹೋಗುತ್ತಾರೆಂದರೆ ಇರಬಹುದೇನೋ ಎಂದು ಅಂದುಕೊಳ್ಳುಬಹುದು. ಆದರೆ ಯಕಶ್ಚಿತ್ತ್ ಒಂದು ಕಾಲು ಲೋಟದಷ್ಟು ಕಹಿ ಒಗರಿನ, ಗಂಟಲಲ್ಲಿ ಕೊಳ್ಳಿಯನ್ನು ಇಟ್ಟಂತಾಗುವ ದ್ರವಕ್ಕೋಸ್ಕರ ಜೀವನವನ್ನೇ ಕಳೆದುಕೊಳ್ಳಲು ಮುಂದಾಗುವುದಾ? ಎಂದುಕೊಂಡಿದ್ದೆ.      ಇನ್ನು ಕೆಲ ಮದಿರಾ ಭಕ್ತರು ಒಂದು ಹೆಜ್ಜೆ ಮುಂದೆ ಹೋಗಿ ಎಣ್ಣೆಯಂಗಡಿಗಳಿಗೇ ಕನ್ನ ಕೊರೆದರು. ಅಂದರೆ ಮದಿರಾ ಪ್ರಿಯಾಣಾಂ ನ ಲಜ್ಜಾ ನ ಭಯಂ ಅನ್ನಬಹುದೇನೋ. ಕೆಲ ಹೆಣ್ಣು ಮಕ್ಕಳೂ ಇದಕ್ಕೆ ಹೊರತಾಗಿಲ್ಲವೇನೋ. ಇಂಥ ಬಿಗಿ ಪರಿಸ್ಥಿತಿಯಲ್ಲೂ ಇಬ್ಬರು ಹುಡುಗಿಯರು ಹೇಗೋ ಎಣ್ಣೆಯನ್ನು ಹೊಂಚಿಕೊಂಡು ಪೋಲೀಸರ ಕಾರ್ಯಕ್ಕೆ ಅಡ್ಡಿ ಮಾಡಿದ್ದು ಕೇಳಿ ಹೆಂಗಸರು ಗಂಡಸರಿಗಿಂತ ಚಾಲಾಕಿಗಳು ಎಂಬುದನ್ನು ಸಾಬೀತು ಪಡಿಸಿದರು.ಕುಡಿತಕ್ಕೆ ಅನಿವಾರ್ಯಗಳನ್ನು ಸೃಷ್ಠಿಸಿಕೊಳ್ಳುವವರಿಗೆ ಕಾರಣಗಳಿಗೆ ಕೊರತೆಯೇ? ನಿತ್ಯ ಗಂಟಲಲ್ಲಿ ಎಣ್ಣೆ ಇಳಿಯದಿದ್ದರೆ ಮನೆಗೆ ಹೋಗಲು ಭಯವಂತೆ. ಘಟವಾಣಿ ಹೆಂಡತಿಯರ ಜೊತೆ ಏಗಲು, ಆಫೀಸಿನ ಕೆಲಸದ ಒತ್ತಡವನ್ನು ನೀಗಲು, ಆದ ಸಂತೋಷವನ್ನು ಸಂಭ್ರಮಿಸಲು, ದು:ಖವನ್ನು ಭರಿಸಲು ಹೀಗೆ ಕುಡಿತಕ್ಕೆ ಕಾರಣಗಳ ಸರಮಾಲೆಯೇ ಬಿಚ್ಚಿಕೊಳ್ಳುತ್ತದೆ. ಈಗ ಹಾಲಿ ಒಕ್ಕರಿಸಿರುವ ಕೊರೋನಾದ ಭಯ ಇವರಿಗಿಲ್ಲ. ಅದನ್ನು ಮೀರಿದ ಭಯವೆಂದರೆ ಎಣ್ಣೆ ಅಂಗಡಿಗಳನ್ನು ಬ್ಯಾನ್ ಮಾಡಿ ಬಿಡುವರೇನೋ ಎಂಬ ಚಿಂತೆ.      ಮದ್ಯ ಪ್ರಿಯರ ಹಳವಂಡಗಳೇನೇ ಇರಲಿ ಆದರೆ ಅವರ ಹೆಂಡಂದಿರು ಮಾತ್ರ  ಇಷ್ಟು ದಿನ ನಿರಾಳವಾಗಿದ್ದರು. ಮನೆಯ ಒಂದು ದಿನದ ಖರ್ಚಿಗಾಗುವಷ್ಟು ದುಡ್ಡು ಗಂಡಸರ ಕುಡಿತಕ್ಕೇ ಹೋಗುತ್ತಿತ್ತು. ಅದು ಲಾಕ್‌ಡೌನ್ ಸಮಯದಲ್ಲಿ ಮಿಕ್ಕಿತು.. ಪರಮಾತ್ಮ ಒಳಗೆ ಇಳಿಯುತ್ತಿದ್ದಂತೆಯೇ ಹೆಂಡತಿಯ ಮೇಲೆ ರೋಪು ಹಾಕುತ್ತಿದವರೆಲ್ಲ ಆಗ ಮೆತ್ತಗಾಗಿ ಬಿಟ್ಟಿದ್ದರು. ಲಾಕ್ ಡೌನ್‌ನಿಂದಾಗಿರುವ ಲಾಭಗಳು ಯಾರಿಗುಂಟು ಯಾರಿಗಿಲ್ಲ? ಅಡುಗೆ ಮನೆಯ ಕೆಲಸವೊಂದು ಹೆಚ್ಚಾಗಿದೆ ಎನ್ನುವುದೊಂದನ್ನು ಬಿಟ್ಟರೆ ಆದದ್ದೆಲ್ಲ ಒಳಿತೇ ಆಗಿದೆ ಹೆಣ್ಣು ಮಕ್ಕಳಿಗೆ. ಫಲವತ್ತಾಗಿ ಬೆಳೆದಿದ್ದ ಗಂಡಸರ ಗಡ್ಡ-ಮೀಸೆ ಕ್ರಾಪುಗಳ ಜೊತೆಗೇ ಮದಿರೆ ಇಲ್ಲದೆ ಸೋತು ಹೋಗಿರುವ ಅವರ ಹ್ಯಾಪು ಮೋರೆಯನ್ನು ಕಂಡು ಅಯ್ಯೋ ಎನ್ನಿಸಿದರೂ ಒಳಗೊಳಗೇ ಇವರಿಗೆ ಇದು ಆಗಬೇಕಾದ್ದೇ ಎಂದುಕೊಂಡವರೇ ಹೆಚ್ಚು.      ರಾಮಾಯಣ. ಮಹಾಭಾರದ ಕಾಲದಿಂದಲೂ ಎಲ್ಲದಕೂ ಕಾರಣಳು ಹೆಣ್ಣೇ ಎಂದು ಹೇಳುತ್ತ ಬಂದಿದ್ದಾರೆ ನಮ್ಮ ಗಂಡಸರು. ಈಗ ಹೇಳಲಿ ನೋಡೋಣ, ಅವರ ಕುಡಿತಕ್ಕೆ ಕಲ್ಲು ಬಿದ್ದಿದ್ದು ಹೆಣ್ಣಿನಿಂದಲೇ ಅಂತ? ಅದಕ್ಕೆ ಕಾರಣ ಕೊರೋನಾ ಆಗಿರುವಾಗ ಹೇಗೆ ತಾನೇ ಹೇಳಿಯಾರು? ಯಾರಿಗೆ ಗೊತ್ತು? ಕೊರೋನಾ ಕೂಡ ಹೆಣ್ಣೇ ಅಂದರೂ ಅಂದಾರು ಗಂಟಲಾರಿದವರು.                                    ********

ಹಾಸ್ಯ Read Post »

ಇತರೆ

ಕಾವ್ಯ ಕುರಿತು

ಕಬ್ಬಿಗರ ಅಬ್ಬಿ-೧ ಮಹಾದೇವ ಕಾನತ್ತಿಲ ಹ್ಞಾ, ಹೀಗೆ ಬನ್ನಿ!, ತೋಟದ ಮಧ್ಯೆ ನಡೆಯೋಣ, ನೋಡಿದಿರಾ, ಎಷ್ಟೊಂದು ಹೂವು ಹಣ್ಣುಗಳು,ಈ ತೋಟದಲ್ಲಿ!. ಅಲ್ನೋಡಿ, ಗುಡ್ಡದಿಂದ ಹರಿದು ಬರುವ ನೀರ ಧಾರೆ! ತೋಟದ ಬದಿಯಲ್ಲಿ ಎತ್ತರದ ಕಲ್ಲು ಬಂಡೆಯ ತುದಿಯಿಂದ ಜಾರಿ ಧಾರೆ ಧಾರೆಯಾಗಿ ಬೀಳುತ್ತಿದೆಯಲ್ಲ, ಅದೇ ಅಬ್ಬಿ! ಇದೇನು ಸಾಧಾರಣ ಅಬ್ಬಿ ಅಂದುಕೊಂಡಿರಾ! ಇದು ಕಬ್ಬಿಗರ ಅಬ್ಬಿ..ಈ ಅಬ್ಬಿಯ ಧಾರೆಗೆ ತಲೆ ಕೊಟ್ಟು, ಎದೆ ಬಿಚ್ಚಿ ನಿಂತು ನೋಡಿ!. ನೀವೂ ಕಾವ್ಯವಾಗುತ್ತೀರಿ, ಕಾವ್ಯ ನಿಮ್ಮಿಂದ ಹರಿಯುತ್ತೆ. ‌ನೀವು ಯಾವುದು, ಕಾವ್ಯ ಯಾವುದು ಅಂತ ಬೇರ್ಪಡಿಸಲಾಗದಷ್ಟು ನೀವು ಡಿಸ್ಸಾಲ್ವ್ ಆಗುತ್ತೀರಿ.ಬೇಂದ್ರೆಅಜ್ಜ ,ಈ ಅಬ್ಬಿ ಜಲಪಾತಕ್ಕೆ ಮೈಯೊಡ್ಡಿ, “ಕುಣಿಯೋಣು ಬಾರಾ” ಅಂತ ಕುಣಿದೂ ಕುಣಿದೂ ಕವಿತೆಯಾದರು!. ಪಂಪ,ಕುಮಾರವ್ಯಾಸ, ಬಸವಣ್ಣ, ಮುದ್ದಣ, ಕುವೆಂಪು,ಅಡಿಗರೆಲ್ಲಾ,ಇದರಲ್ಲಿ ತಣ್ಣಗೆ ಮಿಂದು ಕವಿತೆಯಾದವರು. .ಹಾಗೆ ಮೀಯುತ್ತಾ, ನೀವು ಕವಿತೆಯಾಗಿ ಹರಿಯ ಬಹುದು, ಅಥವಾ, ಮಿಂದು ಬಂದು ಈ ತೋಟದಲ್ಲಿ ನಿಮಗಿಷ್ಟದ ಹಣ್ಣಿನ ಗಿಡ, ಹೂವಿನ ಬಳ್ಳಿ ನಡಬಹುದು.. ಒಮ್ಮೆ ಅಬ್ಬಿಯಲ್ಲಿ ಮಿಂದಿರಾ!, ನೀರು ಆರುವ ತನಕ ನೀವು ನೆಟ್ಟ ಗಿಡಗಳಿಂದ ಸಾಹಿತ್ಯ, ಹೂ ಹಣ್ಣಾಗಿ ಬೆಳೆಯುತ್ತೆ. ಹಲೋ! ಎಲ್ಲಿದ್ದೀರಿ, ಸರ್, ಸುಮ್ನೆ ಫಾನ್ಟಸೈಜ್ ಮಾಡಬೇಡಿ, ಮೊದಲು ಕಾವ್ಯ ಅಂದರೇನು?, ತಿಳಿಸಿ!! ಸ್ವಲ್ಪ ಇಂಗ್ಲಿಷ್ ಮಾತಾಡಿ ಮಾರ್ರೆ.. ಸರಿ, ವರ್ಡ್ಸ್‌ವರ್ತ್ ಹೀಗೆ ಹೇಳ್ತಾನೆ ನೋಡಿ ಕವಿತೆಯೆಂದರೆ.. “The spontaneous overflow of powerful feelings: it takes its origin from emotion recollected in tranquility“ ಅಂದ್ರೆ, ಸ್ವಯಂಪ್ರೇರಿತವಾಗಿ ಉಕ್ಕಿ ಹರಿದ ಭಾವನೆಗಳನ್ನು,  ಪಾಕಬರಿಸಿ, ಧ್ಯಾನಸ್ಥ ಮೌನದಲ್ಲಿ  ನೆನೆನೆನೆದು ಭಾವಪರವಶತೆಯ ಕೇಂದ್ರದಿಂದ ಸಂಗ್ರಹಿಸಿದ ಕೆನೆ!, ಅದು ಕವಿತೆ ಅಂತ. ಕವಿತೆ ಬಗ್ಗೆ Britannica ದಲ್ಲಿ ಹೀಗೆ ಬರೆದಿದ್ದಾರೆ “Poetry, literature that evokes a concentrated imaginative awareness of experience or a specific emotional response through language chosen and arranged for its meaning, sound, and rhythm”. ಕವಿತೆಯ ಮೂಲದ್ರವ್ಯ,  ಘಟನಾ ವಿಶೇಷಕ್ಕೆ , ಸೃಜನಶೀಲ ಮನಸ್ಸಿನ ಸ್ಪಂದನೆ. ನಿಜಜೀವನದಲ್ಲಿ ಸೃಜನಶೀಲ, ಸೂಕ್ಷ್ಮ ಮನಸ್ಸು ಪ್ರತಿಯೊಂದು ಘಟನೆಗೆ ಸ್ಪಂದಿಸುತ್ತೆ. ನಿಮ್ಮ ಮನಸ್ಸಲ್ಲಿ ಭಾವನಾತ್ಮಕ, ತಾತ್ವಿಕವಾದ, ರಚನಾತ್ಮಕವಾದ ಐಡಿಯಾ ಹೊಳೆದರೆ ಅದು ಕವಿತೆಯ ಬೆನ್ನೆಲುಬು. ಆ ಐಡಿಯಾವನ್ನು ನೀವು ನೇರವಾಗಿ ಹೇಳಿದರೆ ಅದು ಮಾತು,ಸಂಭಾಷಣೆ. ಅದನ್ನೇ ಒಂದು ಉಪಮೆಯ ಮೂಲಕವೋ, ಪ್ರತಿಮೆಯ ಮೂಲಕವೋ, ರೂಪಕದ ಮೂಲಕವೋ,ಸೂಕ್ಷ್ಮವಾಗಿ ಹೇಳುವುದು, ಕಾವ್ಯದ ಭಾಷೆ. ಹೀಗೆ ರೂಪುಗೊಂಡ ರಸಪಾಕವನ್ನು ಅಚ್ಚೆರೆಯಲು ಬಳಸುವ ಹಂದರ ಪದಪುಂಜಗಳು. ಪದಪುಷ್ಪದ ಹಾರವನ್ನು ಐಡಿಯಾದ ದಾರದಲ್ಲಿ ಹೆಣೆಯಬೇಕು. ಸೂಕ್ತವಾಗಿ ನವಿರಾಗಿ ಅಭಿವ್ಯಕ್ತಿಸುವ ಕುಸುರಿಯೂ ಬೇಕು. ಪದಗಳನ್ನು ಉಪಯೋಗಿಸುವಾಗ ಪದಗಳು ರಿಪೀಟ್ ಆಗದ ಹಾಗೆ ಸಾಧ್ಯವಾದಷ್ಟು ಪ್ರಯತ್ನಿಸಬೇಕು. ಹಾಡಿ ಹಾಡಿ ಸಂಗೀತ, ಕುಣಿದು ಕುಣಿದು ನಾಟ್ಯ ಅಂತ ನಿಮಗೆ ತಿಳಿದದ್ದೇ. ಹಾಗೆಯೇ ಬರೆದು ಬರೆದು ಹೆಣೆದು ಹೆಣೆದು ಕಾವ್ಯ. ” _ಪದಗಳು ಸಾಲಾಗಿ ಶಿಸ್ತಲ್ಲಿ ನಿಂತರೆ ಗದ್ಯ ಗೆಜ್ಜೆ ಕಟ್ಟಿ ಹುಚ್ಚೆದ್ದು ಕುಣಿದರದು ಪದ್ಯ ವಾಚ್ಯವಾದರೆ ಗದ್ಯ ಸೂಚ್ಯವಾದರೆ ಪದ್ಯ ತೆರೆದು ಹೇಳಿ ಮುಗಿಸಿದರೆ ಗದ್ಯ ಮುಚ್ಚಿಟ್ಟು ಹೇಳಿ ಉಳಿದುದು ಪದ್ಯ ಶಬ್ದಗಳ ನಡುವಿನ ನಿಶ್ಶಬ್ದ ಪದ್ಯ” ( ಸುಮತಿ ನಿರಂಜನ, ಯಕ್ಷಲೋಕಕ್ಕೆ ಏಣಿ ಪುಸ್ತಕದಲ್ಲಿ) ಸುಮತೀಂದ್ರ ನಾಡಿಗ್ ಅವರು, ತಮ್ಮ ‘ ಕಾವ್ಯವೆಂದರೇನು’ ಎಂಬ ಪುಸ್ತಕದಲ್ಲಿ ಕವಿತೆಯ ಆತ್ಮಕಥೆ ಬರೆದಿದ್ದಾರೆ. ಕವಿತೆಗೆ ಅಗತ್ಯವಾದ, ಭಾವನೆ, ಲಯ, ಧಾಟಿ,ಧೋರಣೆ, ವ್ಯುತ್ಪತ್ತಿ, ವಸ್ತು ಪ್ರತಿರೂಪ, ಪ್ರತಿಮೆ, ಕ್ರಮಬದ್ಧತೆ ಮತ್ತು ಸೌಂದರ್ಯ, ಭಾವೋತ್ಕರ್ಷ, ರಸಾವಿಷ್ಕಾರ, ಇತ್ಯಾದಿ ಕಾವ್ಯಾಂಗಗಳಿಗೆ ಸಂವಿಧಾನ ಅದು. ಕೊನೆಗೆ ಒಂದು ಅಗತ್ಯ ಮಾತು. ರುಚಿಯಾದ ಹಲ್ವಾ ಜಗಿಯುವಾಗ, ನಾಲಿಗೆ ಹೇಗೆ ತಿರುಗುತ್ತೆ, ದವಡೆಯ ಹಲ್ಲುಗಳು ಯಾವಾಗ ದೂರ ಮತ್ತು ಯಾವಾಗ ಹತ್ತಿರ ಇತ್ಯಾದಿ ,machanism ನ್ನು ಯೋಚಿಸುತ್ತಾ ಹಲ್ವ ತಿಂದರೆ, ನಾಲಿಗೆಯನ್ನು ಹಲ್ಲು ಕಡಿಯುತ್ತೆ!. ಅದಕ್ಕೇ, ಕವಿತೆಯ ಮೂಲ ಸ್ವಭಾವ ಮತ್ತು ಸಂರಚನೆಯ ಹೋಲಿಸ್ಟಿಕ್ ಅರ್ಥ ಮನಸ್ಸಿಗಾದ ಮೇಲೆ, ಬಿಂದಾಸ್ ಆಗಿ ಕವಿತೆ ಬರೆಯಿರಿ. ಕವಿತೆಗೆ ತನ್ನನ್ನು ತಾನೇ ಬರೆಯುವಾಗ ಗೈಡ್ ಮಾಡುವ ಶಕ್ತಿಯಿದೆ. ನಿಮ್ಮ ಮನಸ್ಸಿಗೆ ಕನ್ನಡಿಯಾಗಿ ಬಿಂಬವನ್ನು ಗರ್ಭಿಸುವ ಶಕ್ತಿ ಕವಿತೆಗೆ ಸ್ವಯಂ ಇದೆ. ಬೇಕಾದದ್ದು ನಿಮ್ಮ ಅನ್-ಕಂಡಿಶನಲ್ ಸಮರ್ಪಣಾ ಭಾವ ಮಾತ್ರ. ಹಾಗಿದ್ದರೆ, ನಾವೆಲ್ಲಾ ಈ ಕಾವ್ಯದ ಅಬ್ಬಿಯಲ್ಲಿ ಸ್ವಚ್ಛಂದವಾಗಿ ಮೀಯೋಣವೇ!! **************

ಕಾವ್ಯ ಕುರಿತು Read Post »

ಇತರೆ, ಜೀವನ

ಪ್ರಸ್ತುತ

ಗುರು-ಶಿಷ್ಯ ಸಂಬಂದ ಪ್ರಜ್ಞಾ ಮತ್ತಿಹಳ್ಳಿ ಕೇವಲ ತರಗತಿಯ ನಾಕು ಗೋಡೆಗಳ ನಡುವೆ ವೇಳಾಪಟ್ಟಿಯ ಚೌಕಗಳ ಮಧ್ಯದಲ್ಲಿ ಸಿಲೆಬಸ್ ಎಂಬ ಅಕ್ಷರದ ಅಂಗಡಿ ಇಟ್ಟುಕೊಂಡ ಇವತ್ತಿನ ಗುರು, ಅಕ್ವೇರಿಯಂನ ಮೀನಿನಂತೆ ಅಸಹಾಯಕನಾಗಿದ್ದಾನೆ. ಅವನಿಗೆ ಸಮಯಮಿತಿ ಹಾಗೂ ವಿಷಯಮಿತಿ. ದಿನಕ್ಕೊಂದೊಂದೇ ಗುಳಿಗೆ ಆಹಾರ ನುಂಗಿ ಗಾಜಿನ ಗೋಡೆಗೆ ಮೂತಿ ಗುದ್ದುತ್ತ ಬುಳುಕ್ ಬುಳುಕ್ ಮುಳುಗುತ್ತಿದ್ದಾನೆ.  ಗುರು-ಶಿಷ್ಯರು ಈ ಚರಾಚರದ ಎಲ್ಲ ಎಲ್ಲೆಗಳನ್ನು ಮೀರಿ ಬೆಳೆಯಬಲ್ಲ ಸಂಬಂಧವನ್ನು ಹೊಂದಿರುತ್ತಾರೆ. ತರಗತಿಯ ಕರಿಹಲಗೆಯ ಮೇಲೆ ಬಿಳಿ ಸೀಮೆ ಸುಣ್ಣಕ್ಕೆ ನೋವಾಗದಂತೆ ಭೂಮಿಯ ಚಿತ್ರ ತೆಗೆಯುವವನು ಗುರುವೇ. ತನ್ನ ಜ್ಞಾನದ ಕಿರಣಗಳಿಂದ ಶಿಷ್ಯನ ಚಿತ್ತಬಿತ್ತಿಯ ಮೇಲೆ ಆಕಾಶಗಂಗೆಯ ಹಾಲುಹಾದಿ ತೆರೆಯುವವನೂ ಗುರುವೇ. ಹಾಗಾಗಿ ಗುರು-ಶಿಷ್ಯರ ಸಂಬಂಧ ಎನ್ನುವುದು ಯಾವುದೇ ಗೋಡೆ,ಛಾವಣಿಗಳ ಹಂಗಿಲ್ಲದ ಮಂದಿರದಂತೆ. ಕೊಡುವ ಗುರುವಿನ ಅಂತ:ಸತ್ವದ ಅಗಾಧತೆ ಹಾಗೂ ತೆಗೆದುಕೊಳ್ಳುವ ಶಿಷ್ಯನ ಧಾರಣ ಶಕ್ತಿಗಳನ್ನು ಅವಲಂಬಿಸಿ ಈ ಸಂಬಂಧದ ವ್ಯಾಖ್ಯೆ ಬದಲಾಗುತ್ತದೆ. ಮಮತೆ ಕರುಣೆಗಳ ವಾರಿಧಿಯಂಥ ಗುರು ಸಾಕ್ಷಾತ ಅಮ್ಮನಾಗುತ್ತಾನೆ. ಅವನ ಮಡಿಲಲ್ಲಿ ಶಿಶುವಾಗುವ ಶಿಷ್ಯ ವಾತ್ಸಲ್ಯದ ಗುಟುಕು ಗುಟುಕರಿಸಿ ಅಮೃತಂಗಮಯನಾಗುತ್ತಾನೆ. ಜ್ಞಾನದ ದಾಹದ ಶಿಷ್ಯ ರೋಗಿಯಂತೆ ನರಳುವಾಗ ಗುರು ವೈದ್ಯನಾಗಿ ಸಲಹುತ್ತಾನೆ. ಸಮಾನ ಮನಸ್ಕ-ಸಮಾನ ಆಸಕ್ತ ವಿಷಯಗಳಲ್ಲಿ ಅವರಿಬ್ಬರೂ ಸ್ನೇಹಿತರೇ ಆಗಿಬಿಡುತ್ತಾರೆ. ಆಧ್ಯಾತ್ಮ ಹಾಗೂ ಸಂಗೀತಗಳಲ್ಲಿ ಗುರು ಶಿಷ್ಯರು ಪರಸ್ಪರರಿಗೆ ಕೊಟ್ಟು ಕೊಳ್ಳುವ ಸಂಗತಿಗಳಿಗೆ ಎಣೆಯಾಗಲೀ, ಎಣಿಕೆಯಾಗಲಿ, ಎಲ್ಲೆಯಾಗಲೀ ಇಲ್ಲವೇ ಇಲ್ಲ. ರಾಗದ ದಾರಿಯಲ್ಲಿ ಸಾಗುತ್ತ ಸಾಗುತ್ತ ಅವರು ಅಮರರಾಗುತ್ತಾರೆ ನಾದದ ಸಾಧನೆಯಲ್ಲಿ ಲೀನವಾಗುತ್ತ, ಲೀನವಾಗುತ್ತ ಈ ಲೋಕದ ಸೀಮೆಗಳನ್ನು ದಾಟುತ್ತಾರೆ. ಅಲೌಕಿಕವನ್ನು ಅರಸುತ್ತ, ಅರಸುತ್ತ ಪರಸ್ಪರರಿಗೆ ದಾರಿಯಾಗಿ ತೆರೆದುಕೊಳ್ಳುತ್ತಾರೆ.  ಗುರು-ಶಿಷ್ಯಂದಿರು ಪರಸ್ಪರರನ್ನು ಬೆಳೆಸಬಲ್ಲರು. ಶಿಷ್ಯನ ಇಲ್ಲಗಳನ್ನು ತುಂಬುವುದಕ್ಕಾಗಿ ಗುರು ತಾನು ಮೊದಲು ತುಂಬಿಕೊಳ್ಳುತ್ತಾನೆ. ಹೀಗೆ ಇಬ್ಬರೂ ಬೆಳೆಯುತ್ತಾರೆ. ನಿಜವಾದ ಗುರು “ಮಲಗಿ ಪರಮಾದರದಿ ಕೇಳಲು ಕುಳಿತು ಕಲಿಸುವ, ಕುಳಿತು ಕೇಳಲು ನಿಲುವ, ನಿಂತು ಕೇಳಿದರೆ ನಲಿದು ಕಲಿಸುವ” ಉತ್ಸಾಹಿಯಾಗಿರುತ್ತಾನೆ. ಗುರು-ಶಿಷ್ಯರ ನಡುವೆ ಜಾತಿ-ಲಿಂಗ-ವಯಸ್ಸು-ಹಣ ಗಳ ಅಂತರ ಬರುವುದಿಲ್ಲ. ಆಸಕ್ತಿ ಶ್ರದ್ದೆ ಅರಿವಿನ ಎಚ್ಚರಗಳು ಮಾತ್ರ ಪರಿಗಣಿಸಲ್ಪಡುತ್ತವೆ. ಗುರು-ಶಿಷ್ಯರ ಸಂಬಂಧ ಮನುಕುಲದ ಎಲ್ಲ ಸಂಬಂಧಗಳಿಂದಲೂ ಒಂದೊಂದು ರಂಗು ಪಡೆದು ಅರಳುವ ಕಾಮನಬಿಲ್ಲಿನ ಹಾಗೆ. ಅರಳುತ್ತರಳುತ್ತಲೇ ಹಗುರಾಗಿ ಹಂಗು ಕಳಚಿ ಮೇಲೆ ಹಾರುವ ಸ್ವರ್ಗೀಯ ಕುಸುಮದ ಹಾಗೆ. ಅಲ್ಲಮ-ಗುಹೇಶ್ವರ, ಸಂತ ಶಿಶುನಾಳ ಶರೀಫ-ಗೋವಿಂದಭಟ್ಟರು ವಿವೇಕಾನಂದ-ಪರಮಹಂಸರು, ಬುದ್ದ ಮತ್ತವನ ಅಸಂಖ್ಯಾತ ಶಿಷ್ಯರು ಸಾವಿರ ಸಾವಿರ ಮಾದರಿಗಳನ್ನು ಬಿಟ್ಟು ಹೋಗಿದ್ದಾರೆ. ಭಾರತೀಯ ಗುರು ಏನೂ ಆಗಬಲ್ಲ ಎಂದು ಜಗತ್ತಿಗೆ ತೋರಿಸಿದ್ದೇವೆ. ಆದರೂ ಕಲ್ಲು ಗೋಡೆಯ ಪಡಕಿನಲ್ಲಿ ಘಿಲ್ಲನೆ ಅರಳುವ ಗರಿಕೆಯ ಹಾಗೆ ಅಲ್ಲೊಂದು ಇಲ್ಲೊಂದು ಪುಟಾಣಿ ಅನುಬಂಧಗಳು ಪಿಳಿ ಪಿಳಿ ನಗುತ್ತವೆ. ಕ್ರೀಡಾ ಜಗತ್ತಿನಲ್ಲಿ ಅನೇಕ ಗುರುಗಳುತಮ್ಮ ಶಿಷ್ಯರನ್ನು ತಾರೆಗಳಾಗಿ ಬೆಳೆಸಿದ ಉದಾಹರಣೆಗಳಿವೆ. ಅನೇಕ ತಾರೆಗಳು ಬಾನೇರಿ ಜಗಮಗಿಸುವಾಗ ಗುರು ನೇಪಥ್ಯದ ಕತ್ತಲಲ್ಲೇ ಮುಳುಗಿರಲೂಬಹುದು. ಪತ್ರಿಕಾರಂಗದಲ್ಲೂ ಅನೇಕರು ಉತ್ತಮ ಶಿಷ್ಯರನ್ನು ಬೆಳೆಸಿದ್ದಾರೆ. ಕೆಲವರು ತಾವು ತಮ್ಮನ್ನು ಗುರುವಾಗಿ ಗುರುತಿಸದಿದ್ದರೂ ಅವರ ಬದುಕನ್ನು ಸಮೀಪದಿಂದ ಕಂಡವರು ಆಂತರ್ಯದ  ಶಿಷ್ಯತ್ವದಿಂದ ಅವರಿಂದ ಕಲಿತು ಬೆಳೆದಿದ್ದಾರೆ.  ಕಲಿಯುವ ಹಂಬಲವುಳ್ಳ ಮನುಜನಿಗೆ ಕಲಿಸುವ ಸಂಗತಿಗಳೆಲ್ಲ ಗುರುವೇ. ನದಿ-ನದ-ಬಾನು-ಬಯಲು-ಹೂ-ದುಂಬಿ-ಸಾಗರ-ಚುಕ್ಕಿ-ಚಂದ್ರಮರೆಲ್ಲ ಹಲವು ಸಂಗತಿಗಳನ್ನು ಕಲಿಸುತ್ತಲೇ ಇದ್ದಾವೆ. ಪ್ರಕ್ರತಿಯಂತಹ ದೊಡ್ಡ ಗುರು ಇನ್ನೊಂದಿಲ್ಲ. ಬಡವನಿಗೆ ಅವನ ಹಸಿವೇ ಗುರು. ದರಿದ್ರನಿಗೆ ಅವನ ಕೊರತೆಯೇ ಗುರು. ದೀನನಿಗೆ ಅವನ ನೋವೇ ಗುರು. ಹುಟ್ಟಿನಿಂದ ಚಟ್ಟದ ತನಕ ನಾವು ಕಾಣುವ ಸಂಗತಿಗಳೆಲ್ಲ ನಮಗೆ ಗುರುವಾಗಬಲ್ಲವು. ಕಲಿಯುವ ವಿಧೇಯತೆ ನಮಗಿದ್ದರೆ ಮಾತ್ರ.  ತರಣಿ ದರ್ಶನಕ್ಕಿಂತ ಕಿರಣಾನುಭವ ಸುಲಭ  ಪರಮ ಶಾಸ್ತ್ರಕ್ಕಿಂತ ಸರಿಯುದಾಹರಣೆ  ಪರಮ ತತ್ವವ ಕಂಡ ಗುರುವನರಸುವುದೆಲ್ಲಿ?  ದೊರೆತಂದು ನೀಂ ಧನ್ಯ-ಮಂಕುತಿಮ್ಮ  ಸೂರ್ಯನನ್ನು ನೋಡುವುದಕ್ಕಿಂತ ಅವನ ಕಿರಣಗಳನ್ನು ಅನುಭವಿಸುವುದು ಸುಲಭವಾದದ್ದು. ಶ್ರೇಷ್ಠ ಶಾಸ್ತ್ರಗಳನ್ನು ತಿಳಿದುಕೊಳ್ಳುವುದಕ್ಕಿಂತ ಒ೦ದು ಉದಾಹರಣೆಯನ್ನು ಅರಿಯುವುದು ಸುಲಭ. ಆದರೆ ಪರಮ ತತ್ವವನ್ನು ಕಂಡಿರುವ ಗುರುವನ್ನು ಹುಡುಕುವುದು ಕಷ್ಟ. ಅಂತಹ ಗುರು ಸಿಕ್ಕ ದಿನ ನೀನು-ನಾವು ಎಲ್ಲರೂ ಧನ್ಯರು. ಹೀಗೆ ಕತ್ತಲೆಯಿಂದ ಬೆಳಕಿನ ಕಡೆಗೆ ಅಸತ್ಯದಿಂದ ಸತ್ಯದ ಕಡೆಗೆ ಸಾಗುತ್ತಿರುವ ಈ ಪ್ರಯಾಣ ಕೇವಲ ಒಬ್ಬ ಗುರುವಿನಿಂದ ಮುಗಿಯುವುದಿಲ್ಲ. ನಾವೆಲ್ಲರೂ ನಮಗೆಲ್ಲರಿಗೂ ಕಲಿಸುತ್ತ ಕಲಿಯುತ್ತ ಸಾಗುವುದೇ ಬದುಕು. *****************************  

ಪ್ರಸ್ತುತ Read Post »

ಇತರೆ

ಕಾವ್ಯ ವಿಶ್ಲೇಷಣೆ

ಟಿ . ಎಸ್. ಏಲಿಯಟ್ ನ ಕವನ “ಜೆ.ಆಲ್ಫ್ರೆಡ್  ಪ್ರುಫ಼್ರಾಕ್ ನ ಪ್ರೇಮ ಗೀತೆ “ ಆಂಗ್ಲ ಸಾಹಿತ್ಯದಲ್ಲಿ ಸ೦ತೃಪ್ತಿಯ ( ಸ್ಯಾಚುರೇಶನ್ ಪಾಯಿ೦ಟ್ ) ಎಲ್ಲೆಯನ್ನು ಮೀರಿ ಏಕತಾನವಾಗುತ್ತಿದ್ದ ರೊಮ್ಯಾಂಟಿಕ್ ಕಾವ್ಯ ಪ್ರಕಾರವನ್ನು ಸ೦ಪೂರ್ಣವಾಗಿ ನಿರಾಕರಿಸಿ ಮಾಡರ್ನಿಸಂನ ಹಾದಿಯಲ್ಲಿ ಸಾಗುತ್ತಾ ಜಗತ್ತಿನ ಸಾಹಿತ್ಯಕ್ಕೇ ಒಂದು ಹೊಸ ತಿರುವನ್ನು ತಂದುಕೊಟ್ಟದ್ದು ಟಿ.ಏಸ್.ಏಲಿಯಟ್. ಅವನಿಗೆ ಬೆಂಬಲವಾಗಿ ನಿ೦ತವನು ಎಜ಼್ರಾಪೌ೦ಡ್. ಏಲಿಯಟ್ ನ ಪ್ರಾರಂಭಿಕ ಕವನಗಳಲ್ಲಿ ಪ್ರಸಿದ್ಧವಾದ ಒಂದು ಕವನ “ಜೆ.ಆಲ್ಫ್ರೆಡ್ ಪ್ರುಫ್ರಾಕ್ ನ ಪ್ರೇಮ ಗೀತೆ ( ಲವ್ ಸಾಂಗ್ ಆಫ್ ಜೆ.ಆಲ್ಫ್ರೆ ಡ್ ಪ್ರುಫ಼್ರಾಕ್). ೧೯೧೫ ರಲ್ಲಿ ಷಿಕಾಗೋದ “ಪೊಯೆಟ್ರಿ”ಪತ್ರಿಕೆಯಲ್ಲಿ ಈ ಕವನ ಪ್ರಕಟಗೊಂಡಾಗ ಸಾಹಿತ್ಯ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗಳು ಬಂದವು. ಕೆಲವರು, ಹಿಂದೆಂದೂ ಓದಿರದ ಹೊಸ ಶೈಲಿಯ, ಅರ್ಥವಾಗದಿದ್ದರೂ ಮಿಂಚಿನಂತಹ ಕೆಲವು ಸಾಲುಗಳಿಂದ ಆಕರ್ಷಿಸುತ್ತಿದ್ದ ಕವಿತೆಯನ್ನು ಓದಿ ಆಶ್ಚರ್ಯ ಚಕಿತರಾಗಿ ಹುಬ್ಬು ಮೇಲೇರಿಸಿದರು. ಕೆಲವರು ಅದೊಂದು ಪದ್ಯವೇ ಅಲ್ಲವೆಂದು ಅಲ್ಲಗಳೆದರು. ಆರ್ಥರ್ ವಾ ಎಂಬ ವಿಮರ್ಷಕ “ದಿ ಕ್ರಿಟಿಕಲ್ ಕ್ವಾರ್ಟರ್ಲಿ” ಎಂಬ ಪತ್ರಿಕೆಯಲ್ಲಿ ಕವಿತೆಯನ್ನು ಕುರಿತು ” ಲಯದ ಶಿಸ್ತನ್ನೇ ಅರಿಯದ “ಇದೊಂದು ಅರ್ಥಹೀನ ಪ್ರಲಾಪ” ವೆಂದು ಬರೆದ. ಮುಂದುವರಿದು ಏಲಿಯಟ್ ನನ್ನು ” ಎ.ಡ್ರಂಕನ್ ಹೆಲಾಟ್” ಎ೦ದು ಜರೆದ. ಮುಂದೆ ಏಜ಼್ರಾ ಪೌಂಡ್ ಈ ಕವಿತೆಯನ್ನು ವಿಮರ್ಷಿಸುತ್ತಾ ಕವಿತೆಯ ಶಿಲ್ಪದಲ್ಲಿರುವ ನಾವೀನ್ಯತೆಯನ್ನ ಹೊಸ ವಸ್ತು ವಿನ್ಯಾಸವನ್ನ ಎತ್ತಿ ಹಿಡಿದ. ಮುಂದೆ ಏಲಿಯಟ್ ನೋಬೆಲ್ ಪಾರಿತೋಷಕಕ್ಕೆ ಭಾಜನನಾದ. “ಜೆ. ಆಲ್ಫ್ರೆಡ್ ಪ್ರುಫ್ರಾಕ್ ನ ಪ್ರೇಮ ಗೀತೆ” ಒಂದು ವಿಡಂಬನಾತ್ಮಕ ಕವಿತೆ. ಶೀರ್ಶಿಕೆಯಲ್ಲಿರುವಂತೆ ಇದೊಂದು ಪ್ರೇಮ ಗೀತೆಯಲ್ಲ. ಬದಲಿಗೆ ಒಬ್ಬ ಅಳ್ಳೆದೆಯ,ಹ್ಯಾಮ್ಲೆಟ್ ನ ಹಾಗೆ ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳಲಾಗದೇ ಸದಾ ತೊಳಲಾಟದಲ್ಲಿರುವ ವ್ಯಕ್ತಿಯೊಬ್ಬನ ಸ್ವಗತವಾಗಿದೆ. ಷಿಕಾಗೋ ದ “ಪೊಯೆಟ್ರಿ” ಎಂಬ ಪತ್ರಿಕೆಯಲ್ಲಿ ಈ ಕವನ ಮೊದಲು ಪ್ರಕಟವಾದಾಗ ಆ ಪತ್ರಿಕೆಯ ಸಂಪಾದಕಿ “ಹ್ಯಾರಿಯೆಟ್ ಮನ್ರೋ” ಗೆ ಬರೆದ ಪತ್ರದಲ್ಲಿ ಕವಿ ತನ್ನ ಕವಿತೆಗೆ “ಪ್ರೇಮ ಗೀತೆ” ಎನ್ನುವ ಶೀರ್ಷಿಕೆ ಯಾವ ರೀತಿಯಲ್ಲೂ ಹೊಂದಾಣಿಕೆಯಾಗದೆಂದು ತನಗೆ ಗೊತ್ತಿದ್ದರೂ “ರುಡ್ಯಾರ್ಡ್  ಕಿಪ್ಲಿಂಗ್” ನ ಕವಿತೆ “ಲವ್ ಸಾಂಗ್ ಆಫ್ ಹರ್-ದಯಾಲ್” ತನ್ನ ಮನಸ್ಸಿನಲ್ಲಿ ನಿ೦ತು ಬಿಟ್ಟಿದ್ದರಿ೦ದ ಅದರ ಆಕರ್ಷಣೆಗೆ ಒಳಗಾಗಿ ಈ ಶೀರ್ಷಿಕೆಯನ್ನು ತನ್ನ ಕವಿತೆಗೆ ನೀಡಿರುವುದಾಗಿ ತಿಳಿಸಿದ್ದಾನೆ. ಕವಿತೆಯಲ್ಲಿ ಬರುವ ಎಲ್ಲ ಪ್ರತಿಮೆಗಳೂ ಪ್ರುಫ್ರಾಕ್ ನ ಇಬ್ಬಂದಿ ತನದ, ತೊಳಲಾಟದ ಪ್ರತೀಕಗಳೇ ಆಗಿವೆ. ಅವನು ಮುಖ್ಯವಾದ ವಿಚಾರವೊಂದನ್ನು ಹೇಳ ಬೇಕೆಂದು ಕೊಳ್ಳುತ್ತಾನೆ. ಆದರೆ ಹೇಳುವುದಿಲ್ಲ. ಅದು ಯಾರಿಗೆ ಎಂಬುದೂ ಸ್ಪಷ್ಟವಾಗಿಲ್ಲ. ಬಹುಶಃ ಅವನು ಪ್ರೀತಿಸುವ ಹುಡುಗಿಗೆ ಇರಬಹುದು ಎನ್ನುವುದು ಕೆಲವರ ಅಭಿಪ್ರಾಯವಾದರೆ ಮತ್ತೆ ಕೆಲವರು ಅವನು ಯಾವುದೋ ತಾತ್ವಿಕ ಒಳನೋಟವನ್ನೋ ಅಥವಾ ಸಮಾಜದಿಂದ ಉಂಟಾದ ಭ್ರಮನಿರಸನವನ್ನೋ ಹೇಳಲಿಚ್ಛಿಸುತ್ತಿದ್ದಾನೆ ಎಂದು ಅಭಿಪ್ರಾಯ ಪಡುತ್ತಾರೆ. ಒಟ್ಟಿನಲ್ಲಿ ಪ್ರುಫ್ರಾಕ್ ನ ದ್ವಂದ್ವದ ತೊಳಲಾಟ ಆಧುನಿಕ ಸಮಾಜದಲ್ಲಿ ಅರ್ಥಪೂರ್ಣ ಅಸ್ತಿತ್ವದ ಬದುಕನ್ನು ಬದುಕಲಾಗದ ಅಸಹಾಯಕತೆಯನ್ನು ಬಿಂಬಿಸುತ್ತದೆ. ಪ್ರುಫ್ರಾಕ್ ಒಬ್ಬ ಸೂಕ್ಷ್ಮ ಸಂವೇದನೆಯ ವ್ಯಕ್ತಿಯಾಗಿದ್ದು ಪ್ರತಿಯೊಂದನ್ನೂ ತಾರ್ಕಿಕವಾಗಿ ನೋಡುವ, ಜಿಜ್ಞಾಸೆಗೆ ಒಳಪಡುವ, ಹಾಗೆಯೇ ಹಿಂಜರಿಕೆಯ ವ್ಯಕ್ತಿತ್ವವುಳ್ಳವನಾಗಿದ್ದಾನೆ. ಹಾಗಾಗಿ ಯಾವ ತೀರ್ಮಾನವನ್ನೂ ಅವನು ತೆಗೆದುಕೊಳ್ಳಲಾರ. ಅವನ ಪ್ರಪಂಚದಲ್ಲಿ ಸುಂದರವಾದ,ಮನಸ್ಸನ್ನು ಅರಳಿಸುವ ಯಾವ ವಸ್ತುಗಳೂ ಅಥವಾ ಸ್ಥಳಗಳೂ ಇಲ್ಲ. ಅವನಿಗೆ ಸ೦ಜೆಯೆನ್ನುವುದು ಕ್ಲೋರೋ ಫಾರ್ಮಿನ ಪ್ರಭಾವಕ್ಕೆ ಒಳಗಾದ ವ್ಯಕ್ತಿ ಆಪರೇಷನ್ ಟೇಬಲ್ಲಿನ ಮೇಲೆ ಮಲಗಿದ ಹಾಗೆ ಕಾಣಿಸುತ್ತದೆ. ಅವನು ಕರೆದೊಯ್ಯುವುದು ಹೊಲಸು ರೆಸ್ಟೋರೆಂಟ್ಗಳಿಂದ ಹೊಮ್ಮುವ ಗಬ್ಬು ವಾಸನೆಯ ಬೀದಿಗಳ ಮೂಲಕ. ವಯಸ್ಸು ಮಿರುತ್ತಿರುವ ಪ್ರುಫ್ರಾಕ್ ಹೋಗ ಬೇಕಾಗಿರುವುದು ಒ೦ದು ದೊಡ್ಡ ಮಹಲಿನಲ್ಲಿರುವ ಸುಂದರಿಯರನ್ನು ಭೇಟಿ ಮಾಡಲು. ಆ ಸುಂದರಿಯರು ತಮ್ಮ ಪ್ರತಿಷ್ಠೆಯನ್ನು ಮೆರೆಯಲು ಒಂದು ಕೋಣೆಯಿ೦ದ ಮತ್ತೊಂದಕ್ಕೆ ವೈಯಾರದಿಂದ ನಡೆದಾಡುತ್ತಾ, ಶ್ರೇಷ್ಠ ಫ್ರೆಂಚ್ ಕಲೆಗಾರ, ಶಿಲ್ಪಿ, ಕವಿ ಮೈಖೆಲೇಂಜಲೋನ ಬಗ್ಗೆ, ತಮಗೆ ಅಷ್ಟಾಗಿ ಗೊತ್ತಿರದಿದ್ದರೂ ಬಹಳ ಗೊತ್ತಿರುವವರ ಹಾಗೆ ಮಾತನಾಡುತ್ತಿರುತ್ತಾರೆ.ಅಲ್ಲಿಗೆ ಈ ಅಳ್ಳೆದೆಯ ಪ್ರುಫ್ರಾಕ್ ಹೋಗಿ ಅವರನ್ನು ಭೇಟಿಯಾಗಬೇಕಾಗಿದೆ ಮತ್ತು ವಿಷಯವೊಂದನ್ನು( ಬಹುಶಃ ಪ್ರೇಮ ನಿವೇದನೆಯಿರ ಬಹುದು) ಪ್ರಸ್ತಾಪಿಸ ಬೇಕಾಗಿದೆ. ಆದರೆ ಆ ಹೆಣ್ಣುಗಳು ತನ್ನನ್ನು ನಿರಾಕರಿಸಿಬಿಟ್ಟರೆ ಎ೦ಬ ಭಯದಿಂದ ಅವನು ಕೊನೆಯವರೆಗೂ ತನ್ನ ಮನದ ಇಂಗಿತವನ್ನು ಹೇಳುವುದೇ ಇಲ್ಲ. ಕವನದಲ್ಲಿ ಸೊಗಸಾಗಿ ಮೂಡಿ ಬಂದಿರುವ ಮಹಲಿನ ಕಿಟಕಿ ಗಾಜುಗಳಿಗೆ ಬೆನ್ನುಜ್ಜುವ ಹಳದಿ ಮಂಜು ಮತ್ತು ಹಳದಿ ಗಾಳಿ, ಅದು ಕೊಳಚೆ ಗಟಾರಗಳ ಮೇಲೆ ಸುಳಿದಾಡಿ ಸುಸ್ತಾಗಿ ಸುರುಳಿ ಸುತ್ತಿಕೊಂಡು ಮಲಗುವ ಚಿತ್ರ ಪ್ರುಫ್ರಾಕ್ ನ ಕಲ್ಪನಾ ಲೋಕ ಅಂತ್ಯವಾಗುವ ರೀತಿಯನ್ನು ಸಾರುತ್ತದೆ. ಪ್ರುಫ್ರಾಕ್ ನಿಗೆ ಆಧುನಿಕ ಸಮಾಜದ ಬದುಕು ನೀರಸವೆನಿಸುತ್ತಿದೆ. ಇಂಥ ಸಮಾಜದಿಂದ ದೂರ ಹೋಗಿಬಿಡಬೇಕೆಂಬುದು ಅವನ ಬಯಕೆ. ಅದಕ್ಕಾಗಿ “ ಮೌನ ಶರಧಿಯ ಮೇಲೆ ಸಲೀಸು ಜಾರಬಲ್ಲಂಥ ಜೋಡಿ ಪಂಜಗಳುಳ್ಳವನು ನಾನಾಗಿದ್ದರೆ” ಎಂದುಕೊಳ್ಳುತ್ತಾನೆ. ಹಿಂಜರಿಕೆಯ ಸ್ವಭಾವದ ಪ್ರುಫ್ರಾಕ್ ತನ್ನ ಪ್ರೇಮ ನಿವೇದನೆಯನ್ನು ಕೊನೆಯವರೆಗೂ ಮಾಡಿಕೊಳ್ಳ ಲಾರದವನಾಗಿ ತನ್ನನ್ನೇ ತಾನು ಹೀಗೆ ಪ್ರಶ್ನಿಸಿ ಕೊಳ್ಳುತ್ತಾನೆ : “ ಆ ಗಳಿಗೆಯನ್ನು ಅದರ ಉತ್ತುಂಗಕ್ಕೆ ಕೊಂಡೊಯ್ಯಬಲ್ಲ ಬಲ ಇದೆಯೇ ನನಗೆ”?. ಅದನ್ನು ಹೇಳುವುದು ಅವನಿಗೆ ಎಷ್ಟು ಕಷ್ಟವೆಂದರೆ “ ಮಾಯಾ ಲಾಂದ್ರವೊಂದು ಸ್ಕ್ರೀನಿನ ಮೇಲೆ ನರಗಳ ವಿವಿಧ ವಿನ್ಯಾಸಗಳನ್ನು” ಮೂಡಿಸಿದ ಹಾಗೆ! ಇಷ್ಟೆಲ್ಲಾ ತೊಳಲಾಟಗಳಿದ್ದರೂ, ಡೋಲಾಯಮಾನ ಸ್ವಭಾವದವನಾಗಿದ್ದರೂ ತಾನು ಮಾತ್ರ ರಾಜಕುಮಾರ ಹ್ಯಾಮ್ಲೆಟ್ ಅಲ್ಲ, ಬದಲಿಗೆ ತಾನು ಅವನ ಪರಿಚಾರಕನೆನ್ನುತ್ತಾನೆ. ತನಗೆ ಅವನಾಗುವ ಯಾವ ಯೋಗ್ಯತೆಯೂ ಇಲ್ಲ ಎಂದು ತನ್ನನ್ನು ತಾನು ವಿಡಂಬನಾತ್ಮಕ ವಿಷ್ಲೇಶಣೆಗೆ ಒಳಪಡಿಸಿಕೊಳ್ಳುತ್ತಾ; ತಾನು ಕೆಲವೊಮ್ಮೆ ಹಾಸ್ಯಾಸ್ಪದ ವ್ಯಕ್ತಿ ಮತ್ತು ಕೆಲವೊಮ್ಮೆ ಪೂರ್ಣ ವಿದೂಷಕ ಎನ್ನುತ್ತಾನೆ. ಪ್ರುಫ್ರಾಕನಿಗೆ ತಾನು ಮುದುಕನಾಗುತ್ತಿದ್ದೇನೆ ಎ೦ಬ ಅರಿವು ಇದೆ. ತನ್ನ ಕಲ್ಪನೆಯ ಕಡಲ ಕಿನಾರೆಯಲ್ಲಿ ನಡೆಯುವಾಗ ಮತ್ಸ್ಯ ಕನ್ಯೆಯರು ಹಾಡುವುದನ್ನು ಕೇಳಿಸಿಕೊಳ್ಳುವ ಪ್ರುಫ್ರಾಕ್ನಲ್ಲಿ ಕಡಲ ಕನ್ಯೆಯರು ತನಗಾಗಿ ಹಾಡಲಾರರು ಎ೦ಬ ಅರಿವೂ ಇದೆ. ತಾನು ಹೇಳಬೇಕಾದ್ದನ್ನು ಹೇಳಲಾಗದ ಪ್ರುಫ್ರಾಕ್ ವಾಸ್ತವವನ್ನು ಎದುರಿಸಲಾಗದೇ ತನ್ನ ಕಲ್ಪನಾ ಸಾಮ್ರಾಜ್ಯದ ಕಡಲ ಕೋಣೆಯಲ್ಲಿ ಮತ್ಸ್ಯ ಕನ್ಯೆಯರ ಜತೆಯಲ್ಲಿ ಕಲ್ಪನಾವಿಹಾರದಲ್ಲಿ ಮುಳುಗಿ ಹೋಗುವುದರೊ೦ದಿಗೆ ಕವಿತೆ ಮುಕ್ತಾಯವಾಗುತ್ತದೆ. ಕವಿತೆಯ ಪ್ರಾರ೦ಭಕ್ಕೆ ಮುನ್ನ ಏಲಿಯಟ್ ಡಾ೦ಟೆಯ “ಡಿವೈನ್ ಕಾಮಿಡಿ” ಯಲ್ಲಿ ಡಾ೦ಟೆ ಮತ್ತು ಗ್ಯಿಡೋಡಾ ಮಾಂಟೆಫೆಲ್ಟ್ರೋರ ಭೇಟಿಯ ಸ೦ದರ್ಭದಲ್ಲಿ ಪೋಪ್ ನ ಮಾರ್ಗದರ್ಶಕ ನಾಗಿದ್ದ ಮಾಂಟೇಫೆಲ್ಟ್ರೋ ಡಾ೦ಟೆಗೆ ಹೇಳುವ ಮಾತುಗಳನ್ನು ಬಳಸಿಕೊ೦ಡಿದ್ದಾನೆ. ಪೋಪ್ ಬೋನಿಫೇಸ್ VIII ಗೆ ಸಲಹೆಗಾರನಾಗಿದ್ದ ಗ್ಯಿಡಾಡೋ ಮಾ೦ಟೆ ಫೆಲ್ಟ್ರೋ ನೀಡಿದ ಸಲಹೆಯ ಮೇರೆಗೆ ಪೋಪ್ ದುಷ್ಟ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾನೆ. ಇದರಿ೦ದಾಗಿ ಮಾಂಟೇ ಫೆಲ್ಟ್ರೋ ನರಕದ ನಾಲ್ಕನೆಯ ವೃತ್ತದಲ್ಲಿ ಶಿಕ್ಷೆ ಅನುಭವಿಸ ಬೇಕಾಗುತ್ತದೆ. “ಲಾಜರಸ್ ನಾನು, ಸತ್ತವರ ನಡುವಿ೦ದ ಎದ್ದು ಬ೦ದಿದ್ದೇನೆ……” ಎನ್ನುವ ಸಾಲುಗಳಲ್ಲಿ ಉದ್ದ್ರತವಾಗಿರುವ “ಲಾಜರಸ್” ಬೈಬಲ್ಲಿನಲ್ಲಿ ಬರುವ ಒಬ್ಬ ಭಿಕ್ಷುಕ. ಇನ್ನೊಬ್ಬ ಶ್ರೀಮಂತ ಡೈವ್ಸ್ . ಸತ್ತ ಮೇಲೆ ಲಾಜರಸ್ ಸ್ವರ್ಗಕ್ಕೂ, ಡೈವ್ಸ್ ನರಕಕ್ಕೂ ಹೋಗುತ್ತಾರೆ. ನರಕ ಹೇಗಿದೆ ಎಂದು ತನ್ನ ನಾಲ್ಕು ಜನ ಸೋದರರಿಗೆ ತಿಳಿಸಿ ಅವರನ್ನು ಎಚ್ಚರಿಸಲು ಬಯಸುವ ಡೈವ್ಸ್ ಇದಕ್ಕಾಗಿ ಲಾಜರಸ್ನನ್ನು ಭೂಮಿಗೆ ಕಳಿಸಬೇಕೆ೦ದು ಅಬ್ರಾಹಂನನ್ನು ಕೇಳಿಕೊಳ್ಳುತ್ತಾನೆ. ಅದಕ್ಕೆ ಅಬ್ರಾಹಂ ಒಪ್ಪುವುದಿಲ್ಲ. ಮೋಸೆಸ್ ಮತ್ತು ಪ್ರವಾದಿಗಳ ಉಪದೇಶವನ್ನು ಕೇಳದ ಹೊರತು ಸತ್ತವನು ಎದ್ದು ಬಂದು ಹೇಳಿದರೂ ನಿನ್ನ ಸೋದರರು ಬದಲಾಗುವುದಿಲ್ಲ ಎ೦ದು ಅಬ್ರಾಹ್ ಹೇಳುತ್ತಾನೆ. ಅಲ್ಲದೆ ಕವಿತೆಯಲ್ಲಿ ಬರುವ “ಅಮರ ಪರಿಚಾರಕ ನನ್ನ ಕೋಟನ್ನು ಎಳೆದು ಕುಚೋದ್ಯ ಮಾಡಿದ್ದನ್ನು ನೋಡಿದ್ದೇನೆ “ಎನ್ನುವ ಸಾಲುಗಳಲ್ಲಿ ಬರುವ “ಅಮರ ಪರಿಚಾರಕ ಸಾವಿನ ಮೂರ್ತ ರೂಪ. ನಾನು ಮಾಡಿದ ಕವಿತೆಯ ಕನ್ನಡಾನುವಾದ ಇಲ್ಲಿದೆ: ಜೆ.ಆಲ್ಫ್ರೆಡ್ ಪ್ರಫ್ರಾಕ್ ನ ಪ್ರೇಮ ಗೀತೆ ನನ್ನ ಉತ್ತರ ಭೂ ಲೋಕಕ್ಕೆ ಎ೦ದೂ ಮರಳದವನಿಗೆ ಎ೦ದು ಯೋಚಿಸಿದ್ದರೆ, ಈ ಜ್ವಾಲೆ ನಿಶ್ಚಲವಾಗುತ್ತಿತ್ತು. ಆದರೆ ನರಕದ ಈ ಕೂಪದಿ೦ದ ಯಾರೂ ಹಿ೦ದಿರುಗಿಲ್ಲವೆಂಬ ನಾನು ಕೇಳಿದ ಮಾತು ನಿಜವೇ ಆಗಿದ್ದರೆ ಯಾವ ಅಪಕೀರ್ತಿಯ ಭಯವೂ ಇಲ್ಲದೇ ನಾನು ಉತ್ತರಿಸ ಬಲ್ಲೆ…. ( ಪೋಪ್ ಬೋನಿಫೇಸ್ VIII ನ ಸಲಹೆಗಾರ ಗ್ಯಿಡೋಡಾ ಮಾ೦ಟೆ ಫೆಲ್ಟ್ರೋ ಡಾ೦ಟೆ ಗೆ ನರಕದಲ್ಲಿ ಹೇಳಿದ್ದು) ಹಾಗಿದ್ದರೆ ನಡಿ ನಾವಿಬ್ಬರೂ ಹೊರಡೋಣ ಇನ್ನು ಟೇಬಲ್ಲಿನ ಮೇಲೆ ಅರಿವಳಿಕೆ ಔಷಧಿಗೆ ಮೈ ಮರೆತು ಮಲಗಿರುವ ರೋಗಿಯಂತೆ ಸಂಜೆ ಹರಡಿರುವಾಗ ಬಾನಿನ ತುಂಬ ಹಾದು ಹೋಗೋಣ ನಡಿ ಅರ್ಧ ಬರಿದಾದ ಬೀದಿಗಳನ್ನ, ಅಶಾಂತ ರಾತ್ರಿಗಳ ಪಿಸುಮಾತಿನ ಅಡಗು ತಾಣಗಳಾದ ಒಂದು ರಾತ್ರಿಯ ಕಳಪೆ ಹೋಟೆಲುಗಳನ್ನ, ಮೃದ್ವಂಗಿ ಕಪ್ಪೆ ಚಿಪ್ಪುಗಳ ಕೊಳಕು ರೆಸ್ಟೋರಂಟುಗಳನ್ನ ಚಕಿತಗೊಳಿಸುವ ಪ್ರಶ್ನೆಗಳೆಡೆಗೆ ನಿನ್ನನ್ನು ಕರೆದೊಯ್ವ ಕುಟಿಲ ವಾದಗಳ ಹಾಗೆ ನಿನ್ನನ್ನು ಬಳಲಿಸುವ ಬೀದಿಗಳನ್ನ. ಓಹ್! ಕೇಳ ಬೇಡ ಇದೇನೆಂದು ಖುದ್ದಾಗಿ ಹೋಗಿ ನೋಡೋಣ ಬಾ. ಕೋಣೆಯೊಳಗೆ ಹೆಂಗಸರು ಬಂದು ಹೋಗುತ್ತಿದ್ದಾರೆ ಮೈಖೆಲೇಂಜಲೋನ ಬಗ್ಗೆ ಮಾತನಾಡುತ್ತಾ. ಹಳದಿ ಮಂಜು ಬೆನ್ನುಜ್ಜುತ್ತಿದೆ ಕಿಟಕಿ ಗಾಜಿನ ಮೇಲೆ ಹಳದಿ ಹೊಗೆ ಮೂತಿ ಉಜುತ್ತಿದೆ ಕಿಟಕಿ ಗಾಜಿನ ಮೇಲೆ ನಾಲಿಗೆಯಿಂದ ನೆಕ್ಕಿತದು ಸ೦ಜೆಯ ಮೂಲೆ ಮೂಲೆಗಳನ್ನ. ಸುಳಿದಾಡಿತದು ಕೊಳಕು ನೀರು ಮಡುಗಟ್ಟಿನಿ೦ತ ಚರಂಡಿಗಳ ಮೇಲೆ ತಾರಸಿಯಿಂದ ಕಾಲು ಜಾರಿ ಅನಿರೀಕ್ಷಿತ ನೆಗೆಯಿತದು ಕೆಳಗೆ ಅಕ್ಟೋಬರಿನ ಹಿತಕರ ಸಂಜೆಯನ್ನು ನೋಡಿ ಸುತ್ತಿ ಕೊಂಡಿತದು ಮತ್ತೆ ಮನೆಯ ಸುತ್ತಾ. ಹಾಗೆಯೇ ನಿದ್ದೆ ಹೋಯಿತು. ನಿಜಕ್ಕೂ ಕಾಲವಿದೆ ಮು೦ದೆ ಕಿಟಕಿ ಗಾಜುಗಳಿಗೆ ಬೆನ್ನುಜ್ಜುತ್ತಾ ಬೀದಿಯಲ್ಲಿ ಹಾಯ್ದು ಹೋಗುವ ಹಳದಿ ಹೊಗೆಗೆ ಕಾಲವಿದೆ ಮುಂದೆ, ಖಂಡಿತಾ ಕಾಲವಿದೆ ಮುಂದೆ ನೀನು ಭೇಟಿ ಮಾಡುವ ಮುಖಗಳನ್ನು ಭೇಟಿ ಮಾಡುವ ಮುಖವೊಂದನ್ನು ಸಜ್ಜುಗೊಳಿಸಲು ಕಾಲವಿದೆ ಮುಂದೆ ಹತ್ಯೆಗಯ್ಯಲು ಮತ್ತು ಸೃಷ್ಟಿಸಲು ಕಾಲವಿದೆ, ಧುತ್ತನೇ ಪ್ರಶ್ನೆಯೊಂದನ್ನೆತ್ತಿ ನಿನ್ನ ತಟ್ಟೆಗೆ ಹಾಕುವ ಕೈಯ ಕೆಲಸಗಳಿಗೆ ಮತ್ತು ಅದರ ದಿನಗಳಿಗೆ. ನಿನಗೂ ಸಮಯವಿದೆ , ನನಗೂ ಸಮಯವಿದೆ ಮತ್ತು ಸಮಯವಿದೆ ಇನ್ನೂ ನೂರು ಅನಿಶ್ಚತತೆಯ ತೊಳಲಾಟಗಳಿಗೆ ಮತ್ತು ನೂರು ದಾರ್ಶನಿಕತೆಗೆ, ಮತ್ತು ಪುನರಾವಲೋಕನಕ್ಕೆ ಕಾಲವಿದೆ ಎಲ್ಲದಕ್ಕೂ ಚಹ ಮತ್ತು ಟೋಸ್ಟ್ ಗಳನ್ನು ಸೇವಿಸುವ ಮೊದಲು. ಕೋಣೆಯಲ್ಲಿ ಹೆಂಗಸರು ಬ೦ದು ಹೋಗುತ್ತಿದ್ದಾರೆ ಮೈಖೆಲೇಂಜಲೋನ ಬಗ್ಗೆ ಮಾತನಾಡುತ್ತಾ. ನಿಜಕ್ಕೂ ಕಾಲವಿದೆ ಮು೦ದೆ ನನಗೆ ಎದೆಗಾರಿಕೆ ಇದೆಯೇ? ಇದೆಯೇ ನನಗೆ ಎದೆಗಾರಿಕೆ! ಎಂದು ಅಚ್ಚರಿ ಪಡಲು. ಕಾಲವಿದೆ, ಕೂದಲುಗಳ ನಡುವೆ ಇಷ್ಟಗಲ ಬೋಳಾದ ತಲೆ ಹೊತ್ತು ಹಿಂದಿರುಗಿ ಮೆಟ್ಟಿಲುಗಳನ್ನಿಳಿಯಲು. ( ಹೇಳುತ್ತಾರವರು : ಅವನ ತಲೆಗೂದಲು ಎಷ್ಟು ತೆಳುವಾಗುತ್ತಿದೆ ! ) ನನ್ನ ಬೆಳಗಿನ ಕೋಟು, ಗದ್ದಕ್ಕೆ ತಗುಲುವ೦ತೆ ಸೆಟೆದು ನಿ೦ತ ನನ್ನ ಕಾಲರ್, ದುಬಾರಿ ಬೆಲೆಯ ಆದರೆ ಸರಳವಾದ, ಸಾಧಾರಣ ಪಿನ್ ನಿಂದ ಧೃಡವಾಗಿ ನಿ೦ತ ನನ್ನ ನೆಕ್ ಟೈ ( ಹೇಳುವರು ಅವರು : ಅವನ ಕೈ ಕಾಲುಗಳು ಅದೆಷ್ಟು ಬಡಕಲಾಗಿವೆ!) ಎದೆಗಾರಿಕೆ ಇದೆಯೆ ನನಗೆ ಲೋಕವನ್ನೇ ಅಲ್ಲೋಲ ಕಲ್ಲೋಲ ಗೊಳಿಸಲು? ಕ್ಷಣದಲ್ಲೇ ಕಾಲವಿದೆ ತೆಗೆದು ಕೊಳ್ಳುವ ತೀರ್ಮಾನಗಳಿಗೆ ಮತ್ತು ಪುನರ್ವಿಮರ್ಷಿತ ಮರು ತೀರ್ಮಾನಗಳಿಗೆ ಮತ್ತು ಮರುಕ್ಷಣವೇ ಅವುಗಳ ಬದಲಾವಣೆಗೆ. ಲಾಗಾಯ್ತಿನಿಂದಲೇ ಗೊತ್ತಿದ್ದಾರೆ ಅವರೆಲ್ಲ ನನಗೆ. ಗೊತ್ತಿದ್ದಾರೆ ಅವರೆಲ್ಲ. ನಾ ಬಲ್ಲೆ ಸಂಜೆಗಳನ್ನು , ಬೆಳಗುಗಳನ್ನು, ಮಧ್ಯಾಹ್ನಗಳನ್ನು.

ಕಾವ್ಯ ವಿಶ್ಲೇಷಣೆ Read Post »

ಇತರೆ, ಜೀವನ

ಲಹರಿ

ಹಾಡುಗಳು ಹೀಗೆ…. ಜಿ.ಲೋಕೇಶ್ ಈ ಬದುಕಿನ ಒತ್ತಡಗಳನ್ನು ನಿಭಾಯಿಸುವವರು ತಾವು ಅದರಿಂದ ಮುಕ್ತರಾಗಲು ತಾವು ತಾವಾಗಿಯೇ ಇರಲು ಹಲವು ದಾರಿಗಳನ್ನು ಕಂಡುಕೊಳ್ಳುತ್ತಾರೆ.ಅದರಲ್ಲಿ ಸಂಗೀತವಂತು ಮನಸ್ಸಿಗೆ ಹಬ್ಬ ನೀಡುವ ಬೆಳಕು.ಹಾಡುಗಳನ್ನು ಗುನುಗುತ್ತಾ ಅವುಗಳೊಡನೆ ದಿನ ದೂಡುವ ಎಷ್ಟೋ ಮನಸ್ಸುಗಳಿವೆ. ಕೆಲವು ಹಾಡುಗಳಂತು ಎಷ್ಟು ಕಾಡುತ್ತವೆ ಅಂದರೆ ಬಹುಶಃ ಅವು ನಮ್ಮ ಬದುಕಿನುದ್ದಕ್ಕೂ ಜೊತೆಗೆ ಇದ್ದು ಬಿಡುತ್ತವೆ.ನಮ್ಮೊಂದಿಗೆ, ನಮ್ಮೊಡನೆ,ನಮ್ಮ ಜೀವನದ ಘಟನೆಗಳೊಡನೆ ತಳಕು ಹಾಕಿಕೊಂಡಿರುತ್ತವೆ.ಅದರಲ್ಲಿ ಪ್ರೇಮಿಗಳಿಗಂತು ಹಾಡುಗಳು ವರದಾನ. ಅಂತಹ ಪ್ರೇಮಿ ಹೀಗೆ ತನ್ನ ಜೀವನವನ್ನು ತನ್ನ ಪ್ರಿಯತಮೆಗಾಗಿ ಮೀಸಲಿಡಬಹುದು. “ತೇರೆ ಮೇರೆ ಸಪ್ನೆಅಬ್ ಏಕ್ ರಂಗ್ ಹೈ!”ವಾಹ್ ಎಂತಹ ಅದ್ಭುತ ಸಾಲುಗಳು ಅವಳ ಕನಸುಗಳು, ಇವನ ಕನಸುಗಳು ಒಂದೇ ಬಣ್ಣದಲ್ಲಿವೆ. ಸಾಕಲ್ಲವೇ?ಮನಸ್ಸಿಗೆ ಇನ್ನೇನು ಬೇಕು? ಸರ್ವ ಋತುವು ವಸಂತವೇ, ಚಿಗುರೆಲೆಯ ಘಮಲೇ!” “ದೂರ ಬೆಟ್ಟದಲ್ಲಿ ಒಂದು ಮನೆಯಿರಬೇಕು,ಮನೆಯ ಸುತ್ತ ಹೂವ ರಾಶಿ ಹಾಸಿರಬೇಕು”ಈ ಹಾಡಿನ ಸಾಲುಗಳು ಅವನು ಅವಳು ಕಂಡ ಕನಸುಗಳನ್ನು ಪ್ರತಿ ಕ್ಷಣವನ್ನು ನೆನಪಿಸುತ್ತಿರುತ್ತದೆ .ಅವರದೇ ಕನಸಿನ ಮನೆಯನ್ನು ಈ ಸಮಾಜದ ಗೊಡವೆಯೇ ಇರದ ದೂರದ ಬೆಟ್ಟದಲ್ಲಿ ಮನೆ ನಿರ್ಮಿಸಿ ಹಾಸಿ ಹೊದಿಯಲು ಕನಸುಗಳು. ಇವನಿಗೆ ಅವಳು, ಅವಳಿಗೆ ಇವನು .ಹಾಸಿ ಹೊದಿಯಲು ಕನಸುಗಳು. ಮುದಿತನದ ದಿನಗಳವರೆಗೂ ಇಬ್ಬರೇ! ಮಕ್ಕಳು ಬೇಡವೇ ಎನ್ನುತ್ತಾಳೆ ಅವಳು ಹಾಡುಗಳನ್ನು ಕೇಳಿ, ಕೇಳಿ ಇವನೆ ಒಂದು ಸಾಲು ಹೇಳುತ್ತಾನೆ “ಮಗುವಿನಂತೆ ನೀನಿರಲುಮಕ್ಕಳು ಬೇಕೆ? ಜೊತೆಗಿರಲು”ಮನೆಯ ಸುತ್ತಲೂ ಹೂವು ರಾಶಿ ಹಾಸಿಕೊಂಡು ದಿನವು ಇವರನ್ನು ನೋಡಿ ನಗುತಿರಬೇಕು. ಮನೆಯ ಮುಂದೆ ಹೊಂಡ ನಿರ್ಮಿಸಿ ಅದರಲ್ಲಿ ಕಮಲದ ಹೂಗಳು ಬಾತುಕೋಳಿಗಳು ಒಂದಷ್ಟು ವಿವಿಧ ಜಾತಿಯ ಹಕ್ಕಿಗಳು. ಹೊಸ ಪ್ರಪಂಚವನ್ನೇ ನಿರ್ಮಾಣ ಮಾಡಿ ಬದುಕು ಸಾಗಬೇಕು.ಆಕಸ್ಮಾತ್ ಅವಳಿಗೆ ನೋವಾದರೆ ಹೇಳುತ್ತಾನೆ “ನೀನ್ಯಾತಕೆ ಬಾಡುವೆ ಸೊರಗಿನಾನಿಲ್ಲವೇ ಆಸರೆಯಾಗಿ”ಅವಳನ್ನು ತೊಡೆಯ ಮೇಲೆ ಇರಿಸಿ ತಲೆ ನೇವರಿಸುತ್ತಾ ಕಂಗಳ ಹನಿಗಳನ್ನು ತಡೆಯುವನು ಕೊನೆಗೆ ಅವಳ ಅನುಪಸ್ಥಿತಿ ಕಾಡಿ ಹೇಳುತ್ತಾನೆ “ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಿಅದರ ಮಧುರ ಸ್ಮೃತಿಯ ನಾನುಹೇಗೆ ತಾನೇ ಮರೆಯಲಿ.”ಎಂದು ನೋವು ತಡೆದು ಪ್ರತಿದಿನವೂ ಬದುಕು ದೂಡುತ್ತಾನೆ. ಅವನ ಬದುಕಿನ ಪುಟವು ಕೊನೆಯಾಗ ಬಂದಾಗ “ಒಲವೇ ಜೀವನ ಸಾಕ್ಷಾತ್ಕಾರಒಲವೇ ಮರೆಯದ ಮಮಕಾರ.”ಎಂದು ಜಗವು ಇವರ ರೀತಿಯ ಪ್ರೀತಿ ಕಂಡಿಲ್ಲದಂತೆ ಅಮರವಾಗಿಸುತ್ತಾನೆಕೊನೆಗೆ ಒಂದು ಉಯಿಲು ಬರೆದಿಡುತ್ತಾನೆ. ದಿನವೂ ನಮ್ಮ ಸಮಾಧಿಯ ಮುಂದೆ ಹೂಗಳು ನಲಿಯುತ್ತಿರಲಿ. ನಮ್ಮ ಕನಸುಗಳು ಮುಂದುವರಿಯಲು ಮತ್ತೊಂದು ಜೀವಾತ್ಮಗಳು ಮನೆಯನ್ನು ಸಿಂಗರಿಸಲಿಅವರ ಬೆಳಗುಗಳು ಮತ್ತಷ್ಟು ಹೊಸ ಹಾಡುಗಳೊಂದಿಗೆ ಪ್ರಾರಂಭವಾಗಲಿ ಎಂದು! ************* ಜಿ.ಲೋಕೇಶಶಿಕ್ಷಕರುಸ.ಹಿರಿಯ ಪ್ರಾಥಮಿಕ ಶಾಲೆ ಮೈಲಾಪುರಚಿಂತಾಮಣಿ ತಾಲೂಕುಚಿಕ್ಕಬಳ್ಳಾಪುರ ಜಿಲ್ಲೆ563125# 9731549945

ಲಹರಿ Read Post »

You cannot copy content of this page

Scroll to Top