ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಗಝಲ ಧರ್ಮ..

ಗಝಲ ಗಳಲ್ಲಿ ಬಳಸುವ ಪಾರಂಪರಿಕ ಪಾರಿಭಾಷಿಕ ಪದಗಳು ಹಾಗೂ ಅವುಗಳ ಅರ್ಥ ಗಝಲ…. ಒಂದೇ ಪದ ಬಳಕೆಯ ಸಮ ಅಂತ್ಯವುಳ್ಳ ರದೀಫ್ ಮತ್ತು ಅನುಪ್ರಾಸ ದಿಂದ ಕೂಡಿದ ಕ಼ವಾಫಿ಼ ಯುಳ್ಳ ಒಂದೇ ವಜ಼್ನ ಅಥವಾ ಬಹರ್ ನಲ್ಲಿ ಬರೆದ ಅಶಾಅರ(ಶೇರ್ ನ ಬಹುವಚನ)ಗಳ ಸಮೂಹ. ಶಾಯಿರ್/ಸುಖನವರ…ಕವಿಶಾಯಿರಿ…. ಕಾವ್ಯಗಜ಼ಲ ಗೋ…ಗಝಲ್ ಗಾರಗಜ಼ಲ್ ಗೋಯೀ… ಗಝಲ್ ಬರೆಯುವ ಕ್ರಮ ಶೇರ… ಸಮಾನ ರದೀಪ್ ಮತ್ತು ವಿಭಿನ್ನ ಕ಼ವಾಫಿ಼ಯಿಂದ ಒಂದೇ ವಜ಼್ನ ಅಥವಾ ಬಹರ್ ಬಳಸಿ ಬರೆದ ದ್ವಿಪದಿಗಳು… ಅಶಆರ್….ಶೇರ್ ನ ಬಹುವಚನ ಫ಼ರ್ದ್… ಒಂದು ಶೇರ್ ಮಿಸ್ರಾ…. ಶೇರ್ ನ ಪ್ರತಿ ಸಾಲನ್ನು ಮಿಸ್ರಾ ಅನ್ನುತ್ತಾರೆ ಪ್ರತಿ ಶೇರ್ ಎರಡು ಮಿಸ್ರಾಗಳಿಂದ ಕೂಡಿರುತ್ತದೆ. ಮಿಸ್ರಾ-ಎ-ಊಲಾ….ಶೇರ ನ ಮೊದಲ ಸಾಲು..ಊಲಾ ಇದರ ಶಬ್ದಶಃ ಅರ್ಥ ಮೊದಲು ಮಿಸ್ರಾ-ಎ-ಸಾನಿ….ಶೇರ ನ ಎರಡನೆ ಸಾಲು.ಸಾನಿ ಇದರ ಶಬ್ದಶಃ ಅರ್ಥ ಎರಡನೆಯದು ಮಿಸರೈನ್… ಮಿಸ್ರಾದ ಬಹುವಚನರದೀಫ್… ಅನುಪ್ರಾಸವುಳ್ಳ ಮತ್ಲಾದ ಎರಡು ಮಿಸ್ರಾ(ಸಾಲು)ಗಳ ಕೊನೆಗೆ ಬರುವ ಹಾಗೂ ಗಝಲ್ ನ ಅನ್ಯ ಶೇರ ಗಳಲ್ಲಿ ಬರುವ ಸಮನಾಂತ ಪದ. ಇದು ಪೂರ್ತಿ ಗಝಲ್ ನಲ್ಲಿ ಪದ ಬದಲಾಗುವದಿಲ್ಲ… ಕಾಫಿಯಾ… ರದೀಫ್ ನ ಹಿಂದೆ ಬರುವ ಅಂತ್ಯಪ್ರಾಸ ವುಳ್ಳ ಪ್ರತಿ ಶೇರ್ ನ ಮಿಸ್ರಾ-ಏ-ಸಾನಿಯಲ್ಲಿ ಬರುವ ಬದಲಾಗುವ ಅಂತ್ಯಪ್ರಾಸವುಳ್ಳ ಪದ. ಒಟ್ಟಾರೆ ಒಂದು ಶೇರ್ ನ ಆಕರ್ಷಣೆ ಕಾಫಿಯಾ. ಇದರ ಸುಂದರ ಹೆಣಿಗೆ ಗಝಲ ನ್ನು ಪ್ರಭಾವಶಾಲಿಯನ್ನಾಗಿಸುತ್ತದೆ.ಇದು ಗಝಲ್ ನ ಬೆನ್ನೆಲುಬು. ಮತ್ಲಾ… ಗಝಲ ನ ಮೊದಲ ಎರಡು ಮಿಸ್ರಾಗಳು (ಸಾಲು).ಎರಡೂ ಸಾಲು ಕಾಫಿಯಾ ರದೀಫ್ ದಿಂದ ಕೂಡಿರುತ್ತವೆ. ಹುಸ್ನ -ಏ -ಮತ್ಲಾ… ಗಝಲ ನಲ್ಲಿ ಮತ್ಲಾದ ನಂತರ ಇನ್ನೊಂದು ಮತ್ಲಾ ಇದ್ದರೆ… ಅಂದರೆ ಒಂದು ಗಝಲ್ ಎರಡು ಮತ್ಲಾ ಗಳಿಂದ ಕೂಡಿದ್ದರೆ… ಆ ಎರಡನೆಯ ಮತ್ಲಾ ವನ್ನು ಹುಸ್ನ -ಏ -ಮತ್ಲಾ ಅನ್ನುತ್ತಾರೆ. ತಕಲ್ಲುಸ್…. ಕಾವ್ಯನಾಮ… ಅಂಕಿತನಾಮ. ಮಕ್ತಾ… ಗಝಲ ನ ಕೊನೆಯ ಶೇರ. ಇಲ್ಲಿ ಗಝಲ ಗಾರ ತನ್ನ ತಕಲ್ಲುಸ್ ಅನ್ನು ಮೊದಲ ಸಾಲು ಅಥವಾ ಕೊನೆಯ ಸಾಲಿನಲ್ಲಿ ಬಳಸಬಹುದಾಗಿದೆ. ಇದು ಒಂದು ಸುಂದರ ಶಾಬ್ದಿಕ ಅರ್ಥ ಬರುವಂತೆ ಬಳಸುವದು ಆತನ ಪ್ರತಿಭೆಯ ಅನಾವರಣ. ರಬ್ತ… ಅಂತಃಸಂಬಂಧಲಾಮ… ಲಘುಗಾಫ…. ಗುರುವಜ಼್ನ… ಮಾತ್ರೆಗಳ ಕ್ರಮರುಕ್ನ…. ಗಣ ಗಜಲ್ ನಾನು ಈ ನೆಲದ ಹಂಗು ಹರಿದುಕೊಂಡು ಹೋಗುತ್ತೇನೆ ಒಂದು ದಿನನೀನೂ ಇಲ್ಲಿ ಇರುವುದಿಲ್ಲ ಬಂಧದ ಎಳೆ ಕಳಚಿಕೊಂಡು ಹೊರಡುತ್ತೇನೆ ಒಂದು ದಿನ ಇರುವವರೆಗೂ ಅಷ್ಟಮದಗಳಿಂದ ಮೆರೆದಾಡಿ ನನ್ನತನವನ್ನು ಮರೆತಿದ್ದೇನೆನನ್ನದೆನ್ನುವ ಈ ಎಲ್ಲವನ್ನೂ ಇಲ್ಲಿಯೇ ಬಿಟ್ಟು ನಡೆಯುತ್ತೇನೆ ಒಂದು ದಿನ ತುತ್ತು ಅನ್ನಕ್ಕಾಗಿ ಹೈರಾಣಾಗುವವರ ಹೊಟ್ಟೆಯ ಮೇಲೆ ಹೊಡೆದಿದ್ದೇನೆಶಾಶ್ವತವಲ್ಲದ ಈ ಬದುಕಿಗಾಗಿ ಹೊಡೆದಾಡಿ ಬರಿಗೈಯಲ್ಲಿ ಸಾಗುತ್ತೇನೆ ಒಂದು ದಿನ ಬೇಕು ಬೇಕು ಎನ್ನುವ ದುರಾಸೆಯಲ್ಲಿ ಮಾನವ ಪ್ರೀತಿಯನ್ನು ಮರೆತಿದ್ದೇನೆಇಲ್ಲಿ ಸ್ವರ್ಗ ನಿರ್ಮಿಸಲಾಗದೆ ಗೋಡೆಗಳನ್ನು ಕಟ್ಟಿಕೊಂಡು ಪಯಣಿಸುತ್ತೇನೆ ಒಂದು ದಿನ ರಾಜ ಮಹಾರಾಜ ಸಂತ ಫಕೀರ್ ಯಾರೂ ಇಲ್ಲಿ ಉಳಿಯಲಿಕ್ಕಾಗಲಿಲ್ಲಸಾವಿನಲ್ಲೂ ಸಾರ್ಥಕತೆ ಪಡೆಯದೆ ಅರುಣಾ ಮಣ್ಣಲ್ಲಿ ಮಣ್ಣಾಗಿ ಬಿಡುತ್ತೇನೆ ಒಂದು ದಿನ…. ಅರುಣಾ ನರೇಂದ್ರ ಅವರ ಗಝಲ್ ಉದಾಹರಣೆಗೆ ನಾನು ಈ ನೆಲದ ಹಂಗು ಹರಿದುಕೊಂಡು ಹೋಗುತ್ತೇನೆ ಒಂದು ದಿನ…..ಇದು ಮಿಸ್ರಾ ಹಾಗೂ ಮಿಸ್ರಾ-ಏ-ಊಲಾ ನೀನೂ ಇಲ್ಲಿ ಇರುವುದಿಲ್ಲ ಬಂಧದ ಎಳೆ ಕಳಚಿಕೊಂಡು ಹೊರಡುತ್ತೇನೆ ಒಂದು ದಿನ…ಇದು ಎರಡನೆಯ ಮಿಸ್ರಾಮಿಸ್ರಾ-ಏ-ಸಾನಿ… ಗಝಲ್ ನ ಈ ಎರಡೂ ಮಿಸ್ರಾಗಳು ಸೇರಿ ಶೇರ ಆದವು ಗಝಲ ನ ಮೊದಲ ಶೇರ ನ್ನು ಮತ್ಲಾ ಅಂತ ಕರೆಯುತ್ತೇವೆಐದು ಅಶಅರ ಗಳುಳ್ಳ ಗಝಲ್ ಇದು… ರದೀಫ್… ಒಂದು ದಿನಕಾಫಿಯಾ…. ಹೋಗುತ್ತೇನೆ, ಹೊರಡುತ್ತೇನೆ, ನಡೆಯುತ್ತೇನೆ,ಸಾಗುತ್ತೇನೆ,ಪಯಣಿಸುತ್ತೇನೆ,ಮಣ್ಣಾಗಿಬಿಡುತ್ತೇನೆ. ತಖಲ್ಲುಸ್… ಅರುಣಾ ಮಕ್ತಾ… ರಾಜ ಮಹರಾಜ ಸಂತ ಫಕೀರ್ ಯಾರೂ ಇಲ್ಲಿ ಉಳಿಯಲಿಕ್ಕಾಗಲಿಲ್ಲ…ಸಾವಿನಲ್ಲೂ ಸಾರ್ಥಕತೆ ಪಡೆಯದೆ ಅರುಣಾ ಮಣ್ಣಲ್ಲಿ ಮಣ್ಣಾಗಿ ಬಿಡುತ್ತೇನೆ ಒಂದು ದಿನ…********************** ಮೆಹಬೂಬ್ ಬೀ

ಗಝಲ ಧರ್ಮ.. Read Post »

ಇತರೆ, ಲಹರಿ

ಶ್ರಾವಣಕ್ಕೊಂದು ತೋರಣ

ಲಹರಿ ಪ್ರಜ್ಞಾ ಮತ್ತಿಹಳ್ಳಿ ಭರ‍್ರೋ…. ಎಂದು ಬೀಸುತ್ತಿದೆ ಗಾಳಿ. ಅನಾದಿ ಸೇಡೊಂದು ಹೂಂಕರಿಸಿ ಬಂದಂತೆ ಉರುಳಿ ಬೀಳುತ್ತಿವೆ ಹಳೆ ಮರದ ಗೆಲ್ಲುಗಳು. ನಡುಹಗಲೆ ಕತ್ತಲಾಗಿದೆ ಕರೆಂಟಿಲ್ಲದ ಒಳಮನೆಯಲ್ಲಿ. ತೌರಿಗೆ ಹೋದ ಹೊಸ ಸೊಸೆಯ ಕೋಣೆಯಲ್ಲಿ ಕಪಾಟಿನೊಳಖಾನೆಯಲ್ಲಿ ಮಡಿಸಿಟ್ಟ ರೇಷ್ಮೆ ಸೀರೆ ಅಸಹನೆಯಿಂದ ಮೈ ಕೊಡವಿ ಕೇಳುತ್ತಿದೆ ಎಂದು ಬರುತ್ತಾಳೆ? ಒಮ್ಮಲೆ ರಪರಪ ರಾಚಲಾರಂಭಿಸುತ್ತದೆ ಮಳೆ ಎಲ್ಲವನ್ನೂ ನೆನಪಿಸುವಂತೆ ಮತ್ತೆ ಎಲ್ಲವನ್ನೂ ಮರೆಸುವಂತೆ. ಕನ್ನಡಿಗಂಟಿಸಿದ ಬಿಂದಿಯೊಂದು ಗೋಡೆಯ ಕ್ಯಾಲಂಡರಿನತ್ತ ನೋಡಿ ಸಣ್ಣಗೆ ಕಣ್ಣು ಅರಳಿಸುತ್ತದೆ. ಸೋಮವಾರವೇ ಅಮಾವಾಸ್ಯೆ. ಅಂದರೆ ಇನ್ನು ತಡವಿಲ್ಲ. ಅಪ್ಪ ಕೊಡಿಸಿದ ಹೊಸ ಸೀರೆಯುಟ್ಟು ಅಮ್ಮ ನೀರೆರೆದು ಬೆಳೆಸಿದ ಜಾಜಿ ದಂಡೆ ಮುಡಿದು ಬಂದು ಬಿಡುತ್ತಾಳೆ. ಆಷಾಡ ತಿಂಗಳಿಡೀ ಈ ಕೋಣೆಯಲ್ಲಿ ಹೆಪ್ಪುಗಟ್ಟಿದ ವಿರಹದುರಿಯ ಅಸಹನೆಯೊಂದು ಹೇಳ ಹೆಸರಿಲ್ಲದೆ ಓಡಿ ಹೋಗುತ್ತದೆ. ಹೊಸ ಸೊಸೆಯೆದುರು ತನ್ನ ಕ್ರಮ ಪದ್ಧತಿಗಳ್ಯಾವುವೂ ಕಡಿಮೆಯಿಲ್ಲವೆಂದು ನಿರೂಪಿಸಲಿಕ್ಕೆ ಹಳೆಯ ರೂಢಿಗಳನ್ನೆಲ್ಲ ನೆನಪು ಮಾಡಿಕೊಂಡು ಪ್ರತಿ ಮಂಗಳವಾರವೂ ಗೌರಿಪೂಜೆ, ಶುಕ್ರವಾರ ಲಕ್ಷ್ಮಿಪೂಜೆ ಅಂತೆಲ್ಲ ಮಾಡಿಸಬೇಕೆಂದು ಹಂಬಲಿಸುತ್ತ ಸರಭರ ಓಡಾಡುತ್ತಿದ್ದಾಳೆ ಅತ್ತೆ. ಇಷ್ಟು ದಿವಸ ಮಂಡಿ ನೋವು ಅಂತ ನರಳುತ್ತಿದ್ದವಳಲ್ಲೆ ಆವಾಹಿಸಲ್ಪಟ್ಟ ಹೊಸ ಉಮೇದು ನೋಡಿ ಖುಷಿಯಾದ ಮಾವ ಅವಳ ಟ್ರಂಕಿನ ಅಡಿಯಿಂದ ಹೊರ ಬರುವ ಒಂದೊಂದೇ ರೇಶ್ಮೆ ಸೀರೆಗಳ ನೋಡುತ್ತ ತನ್ನ ಆಷಾಢದ ವಿರಹ ನೆನಪಿಸಿಕೊಳ್ಳುತ್ತಿದ್ದಾನೆ.  ಇನ್ನೇನು ಪಾದವೂರಲಿದೆ ಶ್ರಾವಣ. ಜ್ಯೇಷ್ಠ, ಆಷಾಢಗಳಲ್ಲಿ ಬಿಡುವಿಲ್ಲದೆ ಸುರಿದ ಮಳೆ ಶ್ರಾವಣದಲ್ಲಿ ತನ್ನ ಧಾರಾಗತಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುತ್ತದೆ. ಒಂದುಕ್ಷಣ ಹನಿಯುದುರಿಸುವ ಮೋಡಗಳು ಮುಂದೋಡಿದ ಕೂಡಲೆ ಎಳೆ ಬಿಸಿಲು ಬೆನ್ನಟ್ಟಿ ಬರುತ್ತದೆ. ಅದಕ್ಕಾಗಿಯೇ ಬೇಂದ್ರೆಯವರು ಹೇಳಿದ್ದು “ಅಳಲು ನಗಲು ತಡವೆ ಇಲ್ಲ, ಇದುವೆ ನಿನಗೆ ಆಟವೆಲ್ಲ ಬಾರೋ ದಿವ್ಯ ಚಾರಣಾ ತುಂಟ ಹುಡುಗ ಶ್ರಾವಣಾ” ಹಾಗೆ ಹೇಳದೇ ಕೇಳದೇ ರಜಾ ಹಾಕಿ ಹೋದ ಸೂರ್ಯ ಮತ್ತೆ ಆಗೀಗ ಕಾಣಿಸಿಕೊಳ್ಳತೊಡಗಿದ್ದೇ ಗಿಡಗಳ ಚೈತನ್ಯ ಪರಿಧಿ ಹಿಗ್ಗತೊಡಗುತ್ತದೆ.ಹೆಂಚಿನ ಮೇಲೆ ಜರ‍್ರೆನ್ನುವ ಮಳೆಯ ಅನಾಹತ ನಾದ ಕೇಳಿ ಕೇಳಿ ಸಾಕಾದ ಕಂಬಗಳು ಬಾಗಿಲಾಚೆಗಿನ ಪಾಗಾರದತ್ತ ನೋಟ ಹರಿಸುತ್ತಿವೆ. ಕೆಂಪು ಕಲ್ಲಿನ ಅದರ ಮೈ ತುಂಬ ಹಚ್ಚ ಹಸಿರಿನ ಪಾಚಿಯ ಅಂಗಿ ಬೆಳೆಯುತ್ತಿದೆ. ಬಿರುಬಿಸಿಲ ತಾಪಕ್ಕೆ ನೆಲದೊಳಗೆ ಗೆಡ್ಡೆರೂಪದಲ್ಲಿ ತಲೆ ಮರೆಸಿಕೊಂಡಿದ್ದ ಭೂಚಕ್ರ ಕೆಂಪನೆಯ ಬೆಂಕಿ ಚೆಂಡಾಗಿ ಅರಳಲು ಮೊಗ್ಗೊಡೆದು ತಯಾರಾಗಿದೆ. ಸರಸರನೆ ಚಿಗಿತುಕೊಂಡ ಡೇರೆ ಹಿಳ್ಳೆ, ಶ್ಯಾವಂತಿಗೆಗಳು ಹೊಸ ಸೊಸೆಯಷ್ಟೇ ಚೆಂದಗೆ ಸಿಂಗರಿಸಿಕೊಂಡು ನಗುತ್ತಿವೆ. ಅಂಗಳದ ತುಂಬ ಹೆಸರೇ ಗೊತ್ತಿಲ್ಲದ ಕಳೆಗಿಡಗಳು ಪುಟುಪುಟು ಎದ್ದು ನಿಂತುಬಿಟ್ಟಿವೆ. ಯಾರೂ ನೆಡದಿದ್ದರೂ ಎಲ್ಲಿಯದೊ ನೆಲದ ಬೀಜಗಳು ಗಾಳಿ ಸವಾರಿ ಮಾಡಿಕೊಂಡು ಇಷ್ಟು ದೂರ ಬಂದು ಈ ಮಣ್ಣ ಮೈಯಲ್ಲಿ ಮುಖ ಒತ್ತಿ ಕಾಯುವುದೆಂದರೆ, ಆಮೇಲೆ ಯಾವಾಗಲೊ ಬೀಳುವ ಮಳೆಹನಿಯ ಕರೆಗೆ ಓಗೊಟ್ಟು ಚಿಗಿತು ಕುಡಿಯೊಡೆಯುವುದೆಂದರೆ ಅದೆಂತಹ ಪ್ರೀತಿಯ ಋಣಾನುಬಂಧ ಇರಬಹುದು! ಅದಿನ್ನೆಂತಹ ಜೀವದುನ್ಮಾದ ಛಲವಿರಬಹುದು! ಎಲ್ಲಿ ನೋಡಿದರಲ್ಲಿ ಹಸುರಿನ ಹೊಸ ಗಾನ ವಿತಾನ. ಬೇಂದ್ರೆಯವರು ಉದ್ಘರಿಸಿದಂತೆ  “ಬೇಲಿಗೂ ಹೂ ಅರಳಿದೆ ನೆಲಕೆ ಹರೆಯವು ಮರಳಿದೆ ಭೂಮಿ ತಾಯ್ ಒಡಮುರಿದು ಎದ್ದಳೋ ಶ್ರಾವಣದ ಸಿರಿ ಬರಲಿದೆ ಮಣ್ಣಹುಡಿಯ ಕಣಕಣವೂ ಕಣ್ಣಾಗಿ ಪಡೆದು ಬಣ್ಣಗಳ ಜಾತ್ರೆ ಶುರುವಾಗುತ್ತದೆ. ಅಂಗಳದ ತುಂಬ ಮಲ್ಲಿಗೆ, ಅಬ್ಬಲ್ಲಿಗೆ, ಗೆಂಟಿಗೆ, ದಾಸಾಳ, ಶ್ಯಾವಂತಿಗೆ, ಗುಲಾಬಿ, ಶಂಖಪುಷ್ಪ ಒಂದೇ ಎರಡೇ ನೂರಾರು ಹೂಗಳ ಸಂತೆ ನೆರೆಯಲಿದೆ. ಈ ಸೊಬಗು ನೋಡಲು ಮುಗಿಲಂಚಿನಲ್ಲಿ ಮೋಡ ಬಾಗಿ ನಿಲ್ಲುತ್ತದೆ. ಯಾವ ಹೂವಿನಂಗಡಿಗೆ ನುಗ್ಗಬೇಕೊ ತಿಳಿಯದ ಗೊಂದಲದಲ್ಲಿ ಪಾತರಗಿತ್ತಿಗಳು ಗಲಿಬಿಲಿಯಿಂದ ಕುಪ್ಪಳಿಸಬೇಕಾಗುತ್ತದೆ. ಮಸುಕು ಹರಿದು ಪಕ್ಕ ತೆರೆದು ಮುಕ್ತಿ ಪಡೆಯುವ ಚಿಟ್ಟೆಗಳು ಅಪ್ಸರೆಯರೇ ಅಂಗಳಕ್ಕಿಳಿದ ಭಾಸ ಮೂಡಿಸುತ್ತವೆ. ಮನೆ ಬಿಟ್ಟು ಹೊರಗೆ ಬರಲಾರದಂತೆ ಸುರಿದ ಮಳೆಯೊಮ್ಮೆ ಬಿಡುವು ಕೊಟ್ಟರೆ ಬಾಗಿಲಾಚೆಗೆ ಗೇಟು ದಾಟಿ ಬಯಲಿಗಿಳಿಯಬಹುದು. ಹಿಂಡು ಮೋಡಗಳು ದಂಡೆತ್ತಿ ಹೊರಟಂತೆ ಓಡುವುದ ನೋಡಬಹುದು. ತುಂಬಿ ಹರಿವ ಕೆರೆಯ ಕೆನ್ನೆ ಮೇಲೆ ಮುತ್ತಿಡುವ ತುಟಿಯಂತೆ ಕೂತ ಕೆನ್ನೈದಿಲೆಗೆ ಕೈ ಬೀಸಬಹುದು. ಅರೆರೆ ಇದೇನಾಶ್ಚರ್ಯ ಕೊಳವು ನೀಲಿ ಮುಗಿಲಂತೆ ಕಾಣುತ್ತಿದೆ, ಮುಗಿಲು ನೀರಕೊಳದಂತೆ ಕಾಣುತ್ತಿದೆ. ಬೇಂದ್ರೆ ಕವನದ ಸಾಲು ಹೇಳುವಂತೆ ಕೃಷ್ಣವರ್ಣದ ವಾಸುದೇವ ಬೀರಿದ ಬೆಳಕು ಘನ ನೀಲ ಗಗನದಲಿ ಸೋಸಿ ಬಂದಂತೆ ನೀಲ ಘನ ವೃಷ್ಟಿಯನ್ನುಂಡಾ ವಸುಂಧರೆಯು ಹಸಿರಿನಲಿ ಕಾಮನನೆ ಹಡೆದು ತಂದಂತೆ. ಹಸಿರುಡುಗೆಯುಟ್ಟು ಹೂ ಮುಡಿದುಕೊಳ್ಳುವ ಶ್ರಾವಣದಲ್ಲಿ ಸಾಲುಸಾಲು ಹಬ್ಬಗಳು. ಪ್ರತಿ ದಿನವೂ ಒಂದೊಂದು ವೃತ, ಸಡಗರ. ನಾಗಪ್ಪನಿಗೆ ತನಿ ಎರೆಯುವ ಚೌತಿ, ಅರಳು-ಎಳ್ಳು-ಶೆಂಗಾ-ಸೇವಿನುಂಡೆಗಳ ಪಂಚಮಿ. ಎತ್ತೆತ್ತರದ ಮರದ ಗೆಲ್ಲುಗಳಲಿ ಜೀಕುವ ಜೋಕಾಲಿ. ಹೊಸ ಜನಿವಾರ ಧರಿಸುವ ನೂಲು ಹುಣ್ಣಿಮೆ, ಅಣ್ಣ-ತಮ್ಮಂದಿರ ಪ್ರೀತಿ-ವಾತ್ಸಲ್ಯಗಳ ನವೀಕರಣಕ್ಕೆ ರಕ್ಷಾ ಬಂಧನ. ಎರಡನೆ ಶುಕ್ರವಾರದ ವರಮಹಾಲಕ್ಷ್ಮಿ ಕೃಷ್ಣ ಪಕ್ಷದ ಅಷ್ಟಮಿಯಂದು ಗೋಕುಲಾಷ್ಟಮಿ. ಮತ್ತೆ ಹತ್ತು ದಿನ ಕಳೆಯುತ್ತಿದ್ದಂತೆ ಭಾದ್ರಪದದ ಸ್ವರ್ಣಗೌರಿ ವೃತ. ಮರುದಿನ ಬರುತ್ತಾನೆ ಗಣೇಶ. ಐದು ದಿನದ ಪೆಂಡಾಲುಗಳು, ಬೀದಿಗಳಲ್ಲಿ ಮೆರವಣಿಗೆ ಎಳೆಯಷ್ಟಮಿ, ಅನಂತನ ಚತುರ್ದಶಿ, ಪಿತೃಪಕ್ಷದ ಶ್ರಾದ್ಧಗಳು, ಮಹಾಲಯ ಅಮಾವಾಸ್ಯೆ.  ಓಹ್ ಇನ್ನು ಅಡಿಗೆ ಮನೆಗೆ ಬಿಡುವೇ ಇಲ್ಲ. ಸಣ್ಣಗೆ ಬೆಂಕಿಯುರಿ ಮಾಡಿಕೊಂಡು ಒಂದೊAದೇ ಕಾಳುಗಳನ್ನು ಹುರಿದುಕೊಳ್ಳಬೇಕು. ಆಚೀಚೆ ಮನೆಯವರಿಗೆ ಘಂ ಎಂಬ ವಾಸನೆ ತಲುಪಿ ಯಾವ ಉಂಡೆಗಳ ತಯಾರಿ ನಡೆದಿದೆ ಎಂಬ ಸುದ್ದಿ ತಲುಪಿಯೇ ಬಿಡುತ್ತದೆ. ಹೆಸರು, ಕಡಲೆ, ಪುಟಾಣಿಗಳೆಲ್ಲ ಹುರಿದು ಕೆಂಪಾಗಿ ಡಬ್ಬಿಯಲ್ಲಿ ಕೂತು ಗಿರಣಿಗೆ ಹೋಗುತ್ತವೆ. ಪಂಚಮಿ ಇದಿರಿರುವಾಗ ಎಷ್ಟೇ ಮಳೆಯಿದ್ದರೂ ಕರೆಂಟಿದ್ದಷ್ಟೂ ಹೊತ್ತು ಗಿರಣಿ ತೆರೆದುಕೊಂಡು ಕೂಡುತ್ತಾನೆ ಆತ. ಹಿಟ್ಟು ಬೀಸಿಕೊಂಡು ಬಂದೊಡನೆ ಶುರುವಾಗುತ್ತದೆ ಬಿಡುವಿಲ್ಲದ ಕೆಲಸ. ಕರದಂಟಿನುಂಡೆ, ಸೇವಿನುಂಡೆ, ಲಡ್ಡಕಿಯುಂಡೆ, ತಂಬಿಟ್ಟು, ರವೆಲಾಡು, ಬೇಸನ್ ಲಾಡು ಪ್ರತಿ ಮನೆಯಲ್ಲೂ ಕಡೇ ಪಕ್ಷ ಐದು ಬಗೆ ಉಂಡೆಗಳನ್ನು ಮನೆಯ ಹೆಣ್ಣು ಮಕ್ಕಳಿಗೆ ಉಡಿ ತುಂಬಬೇಕು. ಆಚೀಚೆಯವರು ತಾಟಿನಲ್ಲಿ ಬಗೆಬಗೆಯ ಉಂಡಿಗಳನ್ನಿಟ್ಟು ಕೊಟ್ಟಾಗ ತಿರುಗಿ ನಮ್ಮ ಮನೆಯ ಉಂಡಿಗಳನ್ನು ತುಂಬಿ ಕೊಡಬೇಕಲ್ಲ! ಸಿಹಿಯ ಜೊತೆಗೆ ಖಾರದ ತಿನಿಸಿರದಿದ್ದರೆ ನಡೆಯುತ್ತದೆಯೆ? ಚಕ್ಕುಲಿ, ಕೋಡಬಳಿ, ಖಾರದವಲಕ್ಕಿ, ಶಂಕರಪಾಳಿ ಇಷ್ಟಾದರೂ ಆಗಲೇಬೇಕಲ್ಲ! ಹಬ್ಬಕ್ಕೆ ಮಗಳು ತವರಿಗೆ ಬರಲೇಬೇಕು. ಉಡಿ ತುಂಬಲಿಕ್ಕೆ ಹೊಸ ಸೀರೆ ತರಬೇಕು. ಒಂದು ಕೊಳ್ಳಲು ಹೋದಾಗಲೇ ನಾಕು ಚೆಂದ ಕಾಣುತ್ತವೆ. ಯಾವುದು ಕೊಳ್ಳುವುದು ಯಾವುದು ಬಿಡುವುದು ಗೊಂದಲವುಂಟಾಗಿ ಎರಡಾದರೂ ಕೊಳ್ಳೋಣ ಎನಿಸಿಬಿಡುತ್ತದೆ. ಮಗಳಿಗೆ ಕೊಡುವಾಗ ತನಗೂ ಒಂದು ಇದ್ದರೆ ಹೇಗೆ ಅಂತ ಪ್ರಶ್ನೆ ಹುಟ್ಟುತ್ತದೆ. ಈ ಮಾದರಿಯದು ತನ್ನ ಬಳಿ ಇಲ್ಲವಲ್ಲ ಅಂತ ಸಮಜಾಯಶಿ ಸಿಗುತ್ತದೆ. ಅದು ನಾರಿಗೂ ಸೀರೆಗೂ ಇರುವ ಜನ್ಮ ಜನ್ಮದ ಅನುಬಂಧ! ಕೊಂಡಷ್ಟೂ ತೀರದ ವ್ಯಾಮೋಹ. ಅದಕ್ಕಾಗಿಯೇ ಜಡಿಮಳೆಯಲ್ಲೂ ಗಿಜಿಗಿಜಿ ವ್ಯಾಪಾರ ನಡೆಸಿವೆ ಸೀರೆಯಂಗಡಿಗಳು. ಪೇಟೆ ಬೀದಿ ಹೊಕ್ಕ ಮೇಲೆ ಕೇಳಬೇಕೆ. ಗಿಳಿಹಸಿರು ಬಣ್ಣದಲ್ಲಿ ಚೆಂದಗೆ ನಗುತ್ತಿರುವ ಪೇರಲ ಕಾಯಿಗಳು, ಕೆಂಪಗೆ ಹಲ್ಲುಕಿಸಿದು ಕೂತಿರುವ ದಾಳಿಂಬೆಗಳು, ದಪ್ಪಗೆ ಮುಖ ಊದಿಸಿಕೊಂಡು ಬಡಿವಾರದಲ್ಲಿ ಎತ್ತರದ ಹಲಗೆ ಹತ್ತಿರುವ ಸೇಬುಗಳು. ಹಣ್ಣು ನೈವೇದ್ಯಕ್ಕಿಡದಿದ್ದರೆ ಅದೆಂಥಹ ಹಬ್ಬವಾದೀತು. ಹೂವಿನ ರಾಶಿ ಹಾಕಿಕೊಂಡು ಕೂತವಳ ಎದುರಿಗೆ ಬಂದಾಗಲೇ ಹೌಹಾರುವಂತಹ ಸ್ಥಿತಿ ಬರುವುದು. ಅಬ್ಬಾ ಮಲ್ಲಿಗೆ ಮಾರೊಂದಕ್ಕೆ ಎಷ್ಟು ಹೇಳುತ್ತಿದ್ದಾಳೆ! ಕೇಳಿದರೆ ಎಲ್ಲೂ ಮಾಲೇ ಇಲ್ಲ ಅಮ್ಮಾ ನನಗೆ ಬುಟ್ಟಿಗೆ ಇಷ್ಟು ಬಿದ್ದಿದೆ ಅಂತ ಇಷ್ಟುದ್ದ ಕತೆ ಹೇಳುತ್ತಾಳೆ. ಅದ್ಯಾಕೆ ಮಹಾಲಕ್ಷ್ಮಿಗೂ ರೇಟೇರಿಸಿಕೊಳ್ಳುವ ಹೂಮಾಲೆಗೂ ಸಂಬಂಧ ಹೀಗೆ ಕುದುರಿಕೊಂಡಿದೆಯೊ ಗೊತ್ತಿಲ್ಲ. ಪೂಜೆಗೆ ಬರುವ ಮುತ್ತೈದೆಯರಿಗೆ ಅರಿಶಿಣ ಕುಂಕುಮದ ಜೊತೆ ಎಲೆ-ಅಡಿಕೆ ಇಟ್ಟು ಹೂಮಾಲೆಯ ತುಂಡು ಕೊಡಲೇಬೇಕಲ್ಲ. ಅಂತೂ ಚೌಕಾಶಿ ಮಾಡಿ ಗೊಣಗೊಣ ಎಂದು ಅಲವತ್ತುಕೊಳ್ಳುತ್ತಲೇ ಖರೀದಿಸಬೇಕು. ಉಡಿ ತುಂಬುವ ವಸ್ತುಗಳೆಲ್ಲ ಒಂದೇ ಅಂಗಡಿಯಲ್ಲಿ ಸಿಕ್ಕಿಬಿಡುವುದರಿಂದ ತಾಪತ್ರಯವಿಲ್ಲ. ಖಣದ ಬಟ್ಟೆ, ಹಣಿಗೆ, ಬಳೆಗಳು, ಕರಿಮಣಿ, ಕೊಳ್ ನೂಲು(ಕೆಂಪುದಾರ) ಜೊತೆಗೆ ಪಿಳಿಪಿಳಿ ಕನ್ನು ಮಿಟುಕಿಸುತ್ತ ಇಣುಕಿ ನೋಡುತ್ತಿದೆ ಪುಟಾಣಿ ಕನ್ನಡಿ. ಯಾರೂ ಹೊಲಿಸಿಕೊಳ್ಳಲು ಸಾಧ್ಯವಿಲ್ಲದ ರವಿಕೆ ಬಟ್ಟೆಗಳನ್ನು ಕೊಡುವ ಬದಲಿಗೆ ಈಗೀಗ ಪುಟ್ಟ ಸ್ಟೀಲು ತಟ್ಟೆಗಳನ್ನು, ಡಬ್ಬಿಗಳನ್ನು ಅಥವಾ ಪರ್ಸುಗಳನ್ನು ಕೊಡುತ್ತಿದ್ದಾರೆ. ಆಚೀಚೆ ಮನೆಯವರನ್ನೇನೋ ಹೋಗಿ ಕರೆಯಬಹುದು ಆದರೆ ಉಳಿದ ಗೆಳತಿಯರನ್ನು ಕರೆಯಲಿಕ್ಕೆ ಫೋನೇ ಗತಿ. ಮೊದಲ ಮಂಗಳವಾರ ಬಂದವರನ್ನು ಇನ್ನುಳಿದ ವಾರಗಳಂದು ನೀವೇ ಬಂದುಬಿಡಿ ಮತ್ತೆ ಫೋನು ಮಾಡಲಿಕ್ಕೆ ನನಗೆ ಸಮಯ ಸಿಕ್ಕುವುದಿಲ್ಲ ಎಂದು ಪುಸಿ ಹೊಡೆದಿಟ್ಟುಕೊಂಡರೆ ಸಾಕು. ಅಯ್ಯೊ ಅರಿಶಿಣ ಕುಂಕುಮಕ್ಕೆ ಇಲ್ಲವೆನ್ನಲಿಕ್ಕೆ ಸಾಧ್ಯವಿದೆಯೆ ಎಂದು ಬರಲೊಪ್ಪುತ್ತಾರೆ. ನಸುಕಿಗೇ ಎದ್ದು ಮನೆಯೆದುರು ದೊಡ್ಡ ದೊಡ್ಡ ರಂಗೋಲಿ ಹಾಕಿ ಬಾಗಿಲಿಗೆ ತೋರಣ ಕಟ್ಟಿ ಹೋಳಿಗೆ ಅಂಬೋಡೆ ಕೋಸಂಬರಿ ಪಾಯಸಗಳ ಅಡುಗೆ ಮಾಡಿ ಆಮೇಲೆ ದೇವರ ಎದುರಿಗೆ ಕಲಶವಿರಿಸಿ ತೆಂಗಿನಕಾಯಿಗೆ ದೇವಿಯ ಮುಖವಾಡವಿಟ್ಟು ಹೊಸ ಸೀರೆಯುಡಿಸಿ, ಬಗೆಬಗೆಯ ಆಭರಣ ತೊಡಿಸಿ ಅಲಂಕರಿಸಿ ಪೂಜೆ ಮುಗಿಸುವಷ್ಟರಲ್ಲಿ ಮೂರೋ-ನಾಕೋ ಗಂಟೆಯಾಗಿಬಿಡುತ್ತದೆ. ಬೆಳಗಿಂದ ಉಪವಾಸವಿದ್ದದ್ದಕ್ಕೆ ಊಟವೂ ಸೇರುವುದಿಲ್ಲ. ಅಷ್ಟರಲ್ಲಿ ನೆನಪಾಗುತ್ತದೆ ಒಹೋ ಮುತ್ತೈದೆಯರು ಅರಿಶಿಣ-ಕುಂಕುಮಕ್ಕೆ ಬರುವ ಸಮಯವಾಯಿತು. ಈಗ ಮಾತ್ರ ಅವಸರ ಮಾಡುವಂತಿಲ್ಲ. ಸಾಧ್ಯವಾದಷ್ಟು ಚೆನ್ನಾಗಿ ಅಲಂಕರಿಸಿಕೊಳ್ಳಬೇಕು. ಏಕೆಂದರೆ ಹದ್ದಿನ ಕಣ್ಣಿನಿಂದ ಉಟ್ಟ ಸೀರೆಯ ಬಣ್ಣ-ಬುಟ್ಟಾ-ಸೆರಗು ನೋಡುತ್ತ  ತೊಟ್ಟ ಆಭರಣದ ತೂಕವನ್ನು ಅಳೆದು ಬಿಡುತ್ತಾರೆ. ಪರಸ್ಪರರ ಮೇಲೆ ನೋಟದ ಸರ್ಚ ಲೈಟ್ ಓಡಾಡಿದ ಕೂಡಲೇ ಪ್ರಶ್ನೆಗಳ ಬಾಣದ ಮಳೆ ಶುರುವಾಗುತ್ತವೆ. ಎಲ್ಲಿ ತಗೊಂಡ್ರಿ, ಎಷ್ಟು ಕೊಟ್ರಿ, ಎಷ್ಟು ಡಿಸ್ಕೌಂಟು ಬಿಟ್ರು ಅಂತ. ಉಡುಪು-ತೊಡಪುಗಳನ್ನೆಲ್ಲ ಅಳೆದಾದ ನಂತರ ಸರ್ಚಲೈಟ್ ನಾರಿಮಣಿಯರ ದೇಹದಾಕಾರವನ್ನು ಅಳೆಯಲು ಶುರು ಮಾಡುತ್ತದೆ. ತೆಳ್ಗೆ ಕಾಣ್ತಿದೀರಲ್ಲ ಏನು ಮಾಡಿದ್ರಿ?  ಯಾಕೊ ಸ್ವಲ್ಪ ದಪ್ಪಗಾಗೀದೀರಲ್ಲ ವಾಕಿಂಗ್ ಬಿಟ್ಟಿದೀರಾ? ಕಣ್ಣ ಕೆಳಗೆ ಕಪ್ಪು ಕಾಣ್ತಿದೆಯಲ್ಲ ಹುಶಾರಿಲ್ವಾ? ಹೀಗೆ ಉಭಯ ಕುಶಲೋಪರಿ ಸಾಂಪ್ರತ ನಡೆಸುತ್ತ ಲಕಲಕ ಹೊಳೆಯುವ ಲಲನೆಯರ ಹಿಂಡು ತನ್ನ ಕಡೆಗೆ ನೋಡುವುದೇ ಇಲ್ಲವಲ್ಲ ಎಂದು ಪೆಚ್ಚಾಗುವ ಮಹಾಲಕ್ಷಿಗೆ ಪಿಸುಧ್ವನಿಯಲ್ಲಿ ಸಾಂತ್ವನ ಹೇಳುತ್ತಿದೆ ಅವಳ ಕೊರಳ ಕಾಸಿನ ಸರ- ಇದೂ ಒಂಥರ ಲೌಕಿಕದ ಸಹಸ್ರನಾಮಾವಳಿ ಕಣಮ್ಮ ದೇವಿ. ಪ್ರತಿ ವಾರ ಗಿಲಿಗಿಲಿ ಎನ್ನುವ ಲಕ್ಷ್ಮಿಯನ್ನು ನೋಡುತ್ತ ತನ್ನ ಸೀರೆಯ ಪದರ ಬಿಡಿಸಿ ಕೊಡವಿ ತಯಾರಾಗುತ್ತಿದ್ದಾಳೆ ಸ್ವರ್ಣಗೌರಿ. ಅಮ್ಮಾ ನಾನೊಂದಿನ ತಡವಾಗಿ ಯಾಕೆ ಬರಬೇಕು ನಿನ್ನ ಜೊತೆಗೆ ಬಂದು ಬಿಡಲಾ? ಎನ್ನುವುದು ಗಣಪನ ಪ್ರಶ್ನೆ. ಏಯ್ ಒಂದು ದಿವಸವಾದರೂ ಗಂಡ-ಮಕ್ಕಳ ಕಾಟವಿಲ್ಲದೇ ಹಾಯಾಗಿ ಹೋಗಿ ಬರ್ತೀನಿ ನೀನು ನಿಮ್ಮಪ್ಪನ ಜೊತೆಗಿರು ಎಂದು ಸಿಡುಕುತ್ತಿದ್ದಾಳೆ ಶ್ರೀಗೌರಿ. ಆಹಾ ಇನ್ನೂ ಏನೆಲ್ಲ ನಡೆಯಲಿದೆ ನೋಡೋಣ ಬನ್ನಿ ಎಂದು ಓಡೋಡಿ ಬಂದ ಮೋಡಗಳು ಢಿಕ್ಕಿಯಾಟ ನಡೆಸಿವೆ. ಅರೆರೆ ಇದೆಲ್ಲ ಪ್ರತಿ ವರ್ಷದ ಕತೆಯಾಯಿತು. ಈ ವರ್ಷ ಹಾಗಿಲ್ಲವಲ್ಲ. ಯಾರನ್ನೂ ಕರೆಯುವಂತಿಲ್ಲ. ಬಂದವರನ್ನು ಕಳಿಸುವಂತಿಲ್ಲ. ಅರಿಶಿನ ಹಚ್ಚುವ ಜಾಗದಲ್ಲಿ ಕೂತಿದೆ ಮಾಸ್ಕ್. ಮಂಗಳಗೌರಿ ಭೂಮಿಗೆ ಬರಬೇಕೆಂದರೂ ಮಾಸ್ಕ್ ಕಡ್ಡಾಯ. ಸ್ಯಾನಿಟೈಸರ್ ಬೊಗಸೆಗಳಿಗೆ ಮಹಾಲಕ್ಷ್ಮಿ ಕೃಪೆ ಮಾಡುತ್ತಾಳೆಯೆ? ********

ಶ್ರಾವಣಕ್ಕೊಂದು ತೋರಣ Read Post »

ಇತರೆ, ಲಹರಿ

ಭರವಸೆಯ ಹೊರತು ಬೇರೇನೂ ಉಳಿದಿಲ್ಲ

ಲಹರಿ  ವಸುಂಧರಾ ಕದಲೂರು  ಖಾಲಿ ಮಂಕರಿ ಕವಚಿ ಹಾಕಿದಂತೆ ಎಲ್ಲಾ ಖಾಲಿಖಾಲಿಯಾದ ಭಾವ. ನಿರಾಳ ಅಂತೇನಲ್ಲ. ಮನಸ್ಸು ಭಾರವಾಗಿದೆ. ಏನೆಲ್ಲಾ ಇದೆ. ಆದರೂ ಏನೇನೂ ಇಲ್ಲ ಎನ್ನುವ ಒಂಟಿತನ ಹಿಂಡಿಹಿಪ್ಪೆ ಮಾಡುವಂತೆ. ಬಿಸಿಲಿಗೆ ಒಣ ಹಾಕಿದ ಬಟ್ಟೆ ಒಣಗೀ ಒಣಗೀ ಅಲ್ಲೇ ಇದ್ದು ಕೊನೆಗೆ ಬಣ್ಣಗೆಟ್ಟಂತೆ…      ಸದಾ ಗಿಜಿಗಿಜಿ ಗಜಿಬಿಜಿಯಲ್ಲಿ ಸುತ್ತಾಡುತ್ತಿದ್ದ ಮೈ ಮನಸ್ಸೆಲ್ಲಾ ಒಂದು ಕ್ಷಣಕ್ಕೆ  ಥಟ್ ಎಂದು ಏಕಾಂತ ವಾಸಕ್ಕೆ ನಿರ್ಜನ ಕಾಡ ಮಧ್ಯದಲ್ಲಿ ವಿರಮಿಸಿದಂತೆ ಭಾಸವಾಯಿತು. ಆಹಾ..!! ಇದೇ ಬೇಕಾಗಿತ್ತು ನನಗೆ ಎನಿಸಿ ಎಷ್ಟು ಖುಷಿಪಟ್ಟಿತೋ ಮನಸ್ಸು ಗೊತ್ತಿಲ್ಲ. ಆದರೆ ದಿನ ಕಳೆದ ಮೇಲೆಯೇ ಗೊತ್ತಾದದ್ದು ಅದು ವಿಶ್ರಮಿಸುವ ಏಕಾಂತವಲ್ಲ ಭಯ ಹುಟ್ಟಿಸುವ ಸೆರೆವಾಸವೆಂದು.       ಏನೇನೋ ಕಸರತ್ತುಗಳು. ಸಮಾಧಾನಕ್ಕೆ, ಸ್ಫೂರ್ತಿಗೆ, ಭರವಸೆಗೆ ಯತ್ನಿಸುತ್ತಾ ನಾನೂ ನನ್ನವರೂ ಎಲ್ಲರನ್ನೂ ಹುರಿದುಂಬಿಸಲು ಪ್ರಯತ್ನಿಸುತ್ತಲೇ ಇರುವುದು.     ಇದೇ ಸರಿಯಾದ ಸಮಯ. ನಿನ್ನೊಳಗೆ ನೀನೇ ಇಣುಕಿ ನೋಡು. ನೀನು ಯಾರೆಂಬುದೇ ಮರೆತಿದ್ದೆಯಲ್ಲಾ. ಮನೆ, ಮಕ್ಕಳು, ಮನೆಯವರು… ಇನ್ನಾದರೂ ಗಮನಕೊಡು. ಆಂತರ್ಯದ ಕೂಗು ಇನ್ನಿಲ್ಲದಂತೆ ಎಬ್ಬಿಸಲು ಪ್ರಯತ್ನಿಸಿತು. ಹೌದು ನಿಜ. ನಮ್ಮ ಬದುಕು ಈಗ ಮತ್ತೆ ನಮಗೇ ಸಿಕ್ಕಿದೆ. ನಮ್ಮ ಇಷ್ಟದ ತಿನಿಸು, ಮನೆಯವರಿಷ್ಟದ ಉಣಿಸು, ಸಿನೆಮಾ, ಪುಸ್ತಕ…     ಇಷ್ಟಯೇ… ಸಾಕೇ..?!    ಇಲ್ಲ, ಸ್ನೇಹವಿಲ್ಲದೇ, ಸುತ್ತಾಟವಿಲ್ಲದೇ ಇರಲಾಗದು, ಇರಲಾಗದು. ನಾನೇನು ಅವ್ವ, ಅಮ್ಮನ ಕಾಲದವಳೇ..?  ಪ್ರತಿ ದಿನವೂ ಎಂಟರಿಂದ ಹತ್ತು ಗಂಟೆ ಕಾಲ ಮನೆಯ ಹೊರಗೇ ಕಾಲನ್ನು ಇಟ್ಟವಳು. ಈಗ ಕಾಲಿನ ಚಲನೆಯೂ ಇಲ್ಲದಂತೆ, ಕಾಲದ ಚಲನೆಯೂ ಕಾಣದಂತೆ ಉಳಿದುಬಿಡುವುದು ಹೇಗೆ ಸಾಧ್ಯ?     ಎಷ್ಚೆಂದು ಟಿ.ವಿ ನೋಡುವುದು? ಪುಸ್ತಕ ಸಾಂಗತ್ಯ ಮಾಡುವುದು? ಮನೆ ಮಂದಿಯೊಡನೆ ಹರಟುವುದು?  ಅವರಿಗೂ ಬೇಸರವೇ…    ಮಕ್ಕಳಂತೂ ಜೊತೆಗಾರರಿಲ್ಲದೆ ಮೊಬೈಲ್, ಲ್ಯಾಪ್ಟಾಪು, ಟಿ.ವಿ. ಗಳ ಸಾಂಗತ್ಯದಲ್ಲಿ  ರೊಬೋಟುಗಳೇ ಆಗಿಬಿಡುತ್ತಾರೇನೋ ಎಂಬ ಆತಂಕ. ಮಡದಿಯೊಡನೆ ಹೇಳಿಕೊಳ್ಳಲಾರದ ಆಡಲಾರದ ಮಾತುಗಳಿಗೆ ಗಂಡನಿಗೆ ಗೆಳೆಯನ ಕಿವಿ ಬೇಕು. ಹೃದಯದ ಸಾಂತ್ವಾನಕೆ ಸ್ನೇಹದ ಕೈ ಕುಲುಕುವಿಕೆ ಬೇಕು. ಪತಿಯನ್ನು ಪ್ರತಿ ದಿನವೂ ಕೆರಳಿಸಲಾಗದೆ, ಅರಳಿಸಲಾಗದೆ, ಸಮಾಧಾನಿಸಲಾಗದ ಹೆಂಡತಿಯ ಸಂಕಟಕೆ ಸ್ನೇಹಿತೆ ಬೇಕು. ಆಕೆಯೊಡನಾಡುವ ನಾಕಾರು ಮಾತುಗಳು, ಹೊಸ ಪಾಕದ ಪಾಠ, ಧಾರಾವಾಹಿಯ ಕಂತುಗಳ ಕುರಿತ ವಿಮರ್ಶೆ,  ಬಿರುಸಾಗಿ ಪಾರ್ಕುಗಳಲ್ಲಿ ಒಂದರ್ಧ ಗಂಟೆ ಸುತ್ತಾಡುವ ಸ್ವಾತಂತ್ಯ್ರ ಮತ್ತೆ ಇವೆಲ್ಲವೂ ಅವಶ್ಯ ಬೇಕು.         ಪ್ರತಿ ದಿನವೂ ಕೈ ಗಾಡಿಯಲಿ ಸೊಪ್ಪು ತರಕಾರಿ ಹಣ್ಣುಗಳನ್ನಿಟ್ಟುಕೊಂಡು ಕುಳಿತಿರುತ್ತಿದ್ದ ಅಜ್ಜನೋ, ಯುವಕನೋ, ಅಕ್ಕ – ತಂಗಿಯಂತಹವರೋ ತಮ್ಮತಮ್ಮ ಊರದಾರಿ ಹಿಡಿದಿದ್ದಾರೆ. ಅವರಿಗಲ್ಲಿ ಏನಾಗಿದೆಯೋ..? ಪ್ರತಿದಿನದ ಒಂದು ಸಣ್ಣ ನಗೆಯ ವಿನಿಮಯ ಈಗ ಕಡಿತಗೊಂಡಿದೆ. ಮೊಬೈಲ್ ನಂಬರೂ ಪಡೆದಿಲ್ಲ. ದಿನಂಪ್ರತಿ ಸಿಗುವ ಭರವಸೆಯಿದ್ದಾಗ ಮೊಬೈಲ್ ನಂಬರ್ ಪಡೆದು ದೂರಕರೆ ಮಾಡುವ ಜರೂರೇನಿತ್ತು?           ವಾರಕ್ಕೊಮ್ಮೆ ಹೆಚ್ಚು ಖಾರ, ಈರುಳ್ಳಿ, ಕ್ಯಾರೆಟ್ಟು ಹಾಕಿಸಿಕೊಂಡು ತಿನ್ನುತ್ತಿದ್ದ ಮೈಸೂರು ಚುರುಮುರಿಯವನ ಗಾಡಿಯ ಸದ್ದು ಈಗ ಅಡಗಿ ಹೋಗಿದೆ.     ದಿನಪತ್ರಿಕೆಗಳ ಜೊತೆಗೆ ಬರುತ್ತಿರುವ ಜಾಹೀರಾತುಗಳಲ್ಲಿ ಒಂದು ಕರೆ ಮಾಡಿದರೆ ಸಾಕು ಅರ್ಧ ಗಂಟೆಯೊಳಗೆ ನೀವು ಬಯಸಿದ್ದೆಲ್ಲಾ ಮನೆ ಬಾಗಿಲಿಗೆ ಬಂದು ಡೆಲಿವರಿಯಾಗುತ್ತದೆ ಎಂಬುದನ್ನು ನೋಡೀ ನೋಡೀ ಸಾಕಾಗಿದೆ.      ಮನೆಗೆ ಸ್ನೇಹಿತರನ್ನೂ ಬಂಧುಗಳನ್ನೂ ಆರ್ಡರ್ ಮಾಡಿಸಿ ತರಿಸಿಕೊಳ್ಳಬಹುದೇ….?! ಕಾಲ ಇಷ್ಟು ನಿರ್ದಯಿಯಾಗಿ ಹೀಗೆ ಎಲ್ಲವನ್ನೂ ಕಡಿತ ಮಾಡಬಾರದಿತ್ತು… ಆದರೆ ಈಗ ಭರವಸೆಯ ಹೊರತು ಬೇರೇನೂ ಉಳಿದಿಲ್ಲ.  **********

ಭರವಸೆಯ ಹೊರತು ಬೇರೇನೂ ಉಳಿದಿಲ್ಲ Read Post »

ಇತರೆ, ಜೀವನ

ದಬದಬೆಗೆ ಧೈರ್ಯ ಕೊಟ್ಟವನೂ ಸೀರೆಯುಟ್ಟ ಇಣಚಿಯೂ

ದಬದಬೆಗೆ ಧೈರ್ಯ ಕೊಟ್ಟವನೂ ಸೀರೆಯುಟ್ಟ ಇಣಚಿಯೂ ಪ್ರಜ್ಞಾ ಮತ್ತಿಹಳ್ಳಿ            ತನ್ನೆಲ್ಲ ಎಲೆಗಳನ್ನುದುರಿಸಿಕೊಂಡು ಒಣಗಿ ನಿಟಾರನೆ ನಿಂತುಕೊಂಡ ಬಿದಿರು ಗಳದಂತಹ ಎಲುಬುಗಳಿಗೆ   ಚರ್ಮ ಸುತ್ತಿ ಇಟ್ಟ ಹಾಗೆ ಭಾಸವಾಗುವ ಅವಳ ಕುತ್ತಿಗೆಯ ನರಗಳು ಹಸಿರು ಕಾಡು ಬಳ್ಳಿಗಳಂತೆ ಉಬ್ಬುಬ್ಬಿ ಗಂಟಲು ಹರಿದು ಹೊರಬಂದು ಬಿಡುತ್ತವೋ ಎಂಬಂತೆ ಕಾಣುತ್ತಿದ್ದವು. ಹಕ್ಕಿಯೊಂದು ಮೊಟ್ಟೆಯಿಡಲು ಮರದ ಕಾಂಡದಲ್ಲಿ ಹುಡುಕಿಕೊಂಡ ಡೊಗರಿನ ಹಾಗೆ ಎಲುಬುಗಳ ನಡುವೆ ಖಾಲಿ ಜಾಗ ಎದ್ದು ಕಾಣುತ್ತಿತ್ತು.  ಬದುಕಿನ ನಲವತ್ತು ವರ್ಷ ಜೊತೆಗಿದ್ದ ಅಸ್ತಮಾ ಅವಳ ಉಸಿರಾಟದ ರೀತಿಯನ್ನೇ ಬೇರೆ ಮಾಡಿಬಿಟ್ಟಿತ್ತು.  ಸಾದಾ ಉಸಿರು ಎಂದರೂ ಅದಕ್ಕೊಂದು ಸುಂಯ್ ಸುಂಯ್ ಸಪ್ಪಳ ಇರುತ್ತಿತ್ತು. ಹಳೆಯ ಹಾರ್ಮೊನಿಯಂ ಜೋರುಜೋರಾಗಿ ತಿದಿಯೊತ್ತಿದರೆ ಬುಸುಗುಟ್ಟುವ ಹಾಗೆ  ಆ ನಲವತ್ತು ವರ್ಷವೂ ಪ್ರತಿ ಸೆಕೆಂಡೂ ಅವಳು ತನ್ನ ಉಸಿರನ್ನು ಪ್ರಯತ್ನಪೂರ್ವಕವಾಗೇ ತೆಗೆದುಕೊಳ್ಳಬೇಕಿತ್ತು. ಮತ್ತು ಆ ಪ್ರತಿ ಸಲದ ಉಸಿರು ಎಳೆಯುವ ಸದ್ದನ್ನೂ ಅವಳ ಕಿವಿಗಳು ಕೇಳಿಸಿಕೊಂಡಿದ್ದವು. ಅವಳನ್ನು ಮೊದಲ ಬಾರಿಗೆ ನೋಡಿದವರು ಥಟ್ಟನೆ ಈ ವಿಲಕ್ಷಣ ಉಸಿರಾಟದ ಸಪ್ಪಳ ಗಮನಿಸಿ ಅನಾರೋಗ್ಯದ ಕುರಿತು ಕೇಳದೇ ಇರಲು ಸಾಧ್ಯವಾಗದಿರುವಷ್ಟರ ಮಟ್ಟಿಗೆ ಆ ಸದ್ದು ತನ್ನ ಇರುವಿಕೆಯನ್ನು ತೋರುತ್ತಿತ್ತು. ಅವಳು ನಾಕು ಮೆಟ್ಟಿಲು ಹತ್ತಿದಾಗಲಂತೂ ಅವಳ ನಾಕಡಿಯ ಪುಟ್ಟ ದೇಹದ ಪ್ರತಿ ಕಣ ಕಣವೂ ಉಸಿರಿಗಾಗಿ ಹಪಹಪಿಸುತ್ತಿರುವಂತೆ ಅನ್ನಿಸಿದರೆ ಆಳಕ್ಕಿಳಿದ ಕಣ್ಣುಗಳು ನೀರಿಂದ ಹೊರತೆಗೆದ ಮೀನುಗಳಂತೆ ಚಡಪಡಿಸುತ್ತಿದ್ದವು.  ಅವಳ ಪುಪ್ಪುಸದಲ್ಲಿ ಸದಾ ತುಂಬಿರುತ್ತಿದ್ದ ಕಫ ಖಾಲಿಯಾಗದ ಅಕ್ಷಯ ಭಂಡಾರದಂತೆ ಕೂತಿದ್ದು ಧಾವಂತದ ಘಳಿಗೆಗಳಲ್ಲಿ ಕೆಮ್ಮಿನ ಕೊನೆಯಲ್ಲಿ ಹೊರಬರುತ್ತಿತ್ತು. ನಿರಂತರ ಸ್ಟೆರಾಯ್ಡಿನ ಸೇವನೆಯ ಅಡ್ಡ ಪರಿಣಾಮವಾಗಿ ಸೊಟ್ಟ ಸೊಟ್ಟಗೆ ಬಗ್ಗಿ ಹೋದ ಬೆರಳುಗಳು ಅವಳು ಬದುಕಿಡೀ ಉಳಿಸಿಕೊಳ್ಳಲು ಹೆಣಗುತ್ತಿದ್ದ ಬಾಂಧವ್ಯಗಳ ಬೇರಂತೆ ನೇತಾಡುತ್ತಿದ್ದವು. ಅದೇ ಬೆರಳಿಂದಲೇ ದೊಡ್ಡ ದೊಡ್ಡ ತಪ್ಪಲೆಗಳ ಹೊತ್ತು ಓಡಿದಂತೆ ದಾಪುಗಾಲಿಕ್ಕುತ್ತ ಬುಸುಬುಸು ಉಸಿರೆಳೆದುಕೊಳ್ಳುತ್ತಲೇ ಕೂಡೊಲೆಗೆ ಬೆಂಕಿ ಹಾಕುತ್ತ ಸೊಟ್ಟ ಬೆರಳಿಂದಲೇ ಕಡುಬಿನ ಕೊಟ್ಟೆ ಕಟ್ಟಿ ಮೊಮ್ಮಕ್ಕಳು ಮರಿಮಕ್ಕಳಾದಿಯಾಗಿ ಹಿಂಡುಗಟ್ಟಲೆ ಜನರನ್ನು ಅನಾಮತ್ತಾಗಿ ಎಪ್ಪತ್ತು ವರ್ಷ ಸಾಕಿಬಿಟ್ಟಳು ಸೀರೆಯುಟ್ಟುಕೊಂಡು ಬಂದ ಇಣಚಿಯಂತಿದ್ದ ನಮ್ಮಜ್ಜಿ.                 ಅಸ್ತಮಾ ಕಾಟಕ್ಕೆ ಅವಳಿಗೆ ರಾತ್ರಿ ಗಡದ್ದು ನಿದ್ದೆ ಅಂತ ಬರುತ್ತಲೇ ಇರಲಿಲ್ಲ. ಒಂದು ರೀತಿಯ ಮಂಪರಿನಲ್ಲೇ ಇರುತ್ತಿದ್ದಳು. ಯಾವುದಾದರೂ ಸಣ್ಣ ಸಪ್ಪಳವಾದರೂ ಎದ್ದು ಬಿಡುತ್ತಿದ್ದಳು. ಅವಳ ಮಂಚದ ಪಕ್ಕದಲ್ಲಿ ಕಿಡಕಿಯ ಮೇಲೆ ಯಾವಾಗಲು ಒಂದು ಬ್ಯಾಟರಿ, ಅಮ್ರತಾಂಜನದ ಡಬ್ಬಿ, ಬಾಯೊಳಗೆ ಸ್ಪ್ರೇ ಮಾಡಿಕೊಳ್ಳುವ ಅಸ್ತಮಾದ ಔಷಧಿ ಇರುತ್ತಿದ್ದವು. ಹಾಗೆ ನಿದ್ದೆಯಲ್ಲದ ಎಚ್ಚರವಲ್ಲದ ಮಂಪರಿನಲ್ಲಿ ತೆರೆದಿಟ್ಟ ಕಿಡಕಿಯಾಚೆಗಿನ ನಿಶಾ ಜಗತ್ತಿನ ಶಬ್ದಗಳನ್ನು ಆಲಿಸುತ್ತ ತನ್ನ ಉಸಿರಿಗೆ ತಾನೇ ಕಾವಲೆಂಬಂತೆ ಅಷ್ಟೆಲ್ಲ ವರ್ಷ ಬದುಕಿದರೂ ಒಂದೇ ದಿನಕ್ಕೂ ರೋಗ ಕೊಟ್ಟ ವಿಧಿಯನ್ನಾಗಲೀ, ಗುಣ ಮಾಡದ ಔಷಧಿಯನ್ನಾಗಲೀ, ತನ್ನ ಸ್ಥಿತಿಯ ಸಂಕಟವನ್ನಾಗಲೀ ಬೈದಿದ್ದು ಇಲ್ಲವೇ ಇಲ್ಲ. ಇದು ಹೀಗೇ ಇರಬೇಕು ಮತ್ತು ಇದು ಹೀಗಿದ್ದರೇ ಸರಿ ಎನ್ನುವಷ್ಟು ಒಗ್ಗಿಕೊಂಡು ಅದರಲ್ಲೇ ಮನಸ್ವೀ ಕೆಲಸ, ತಿರುಗಾಟ, ಕಾರ್ಯ-ಕಟ್ಟಲೆ ಓಡಾಡಿದ್ದೆಂದರೆ ಅದಕ್ಕೆ ಅವಳ ನಾಕಡಿ ದೇಹದ ಪ್ರತಿ ಅಣುಅಣುವಿನಲ್ಲಿ ತುಂಬಿದ್ದ ಜೀವಶೃದ್ಧೆ ಮತ್ತು ಏಳು ಜನ್ಮಕ್ಕಾಗುವಷ್ಟಿದ್ದ ಆತ್ಮವಿಶ್ವಾಸ ಕಾರಣ.              ಆ ಕಾಲಕ್ಕೆ ಮನೆಪಾಠ ಮಾಡಿಸಿಕೊಂಡು ಎಲ್ ಎಸ್ ಓದಿದ್ದಳು. ಆದ್ದರಿಂದ ಕನ್ನಡದ ಜೊತೆಗೆ ಇಂಗ್ಲೀಷ್ ಹಿಂದಿಗಳೂ ಬರುತ್ತಿದ್ದವು. ತೀರಾ ಸಣ್ಣ ವಯಸ್ಸಿಗೆ ಮದುವೆಯಾಗಿ ಬಂದು ಏಳು ಜನ ಮೈದುನ, ನಾಲ್ವರು ನಾದಿನಿಯರ ಸಂಸಾರ ಸೇರಿಕೊಂಡು ಅತ್ತೆ ಮಾವನ ಮನೋಭಿಲಾಷೆ ತಿಳಿದು ವ್ಯವಹರಿಸುತ್ತ ನಾಲ್ಕು ಮಕ್ಕಳ ತಾಯಾಗಿ ಆಮೇಲೆ ಗಂಡ ಪ್ರತ್ಯೇಕ ಜಮೀನು ಮಾಡಲು ಹೊರಟಾಗ ಅಲ್ಲಿಯ ಅಟ್ರಾಕಣಿ ಬಿಡಾರಕ್ಕೆ ಸ್ಥಳಾಂತರಗೊಂಡು ಒಂದಿದ್ದರೆ ಒಂದಿಲ್ಲದ ಸಂಸಾರ ನಡೆಸುತ್ತ ಬದುಕು ಕಳೆದಳು. ತೋಚಿದ್ದನ್ನು ಆ ಕ್ಷಣಕ್ಕೆ ಮಾಡಿಬಿಡುವ ಅಜ್ಜ ಪರಿಣಾಮಗಳನ್ನು ಆದಮೇಲೆ ಅನುಭವಿಸುವ ಜಾಯಮಾನದವ. ಯೋಜನೆ, ಸಮಾಲೋಚನೆ, ಯಾರನ್ನಾದರೂ ಹೇಳಿ ಕೇಳುವ ಪ್ರವೃತ್ತಿ ಇಲ್ಲವೇ ಇಲ್ಲ. ಅವನ ಎಲ್ಲಾ ಯಡವಟ್ಟುತನಗಳ ಪರಿಣಾಮ ಉಣ್ಣುವಾಗ ಮಾತ್ರ ಅಜ್ಜಿಗೆ ಪಾಲು. ಮಾಡುವಾಗ ಅವಳೇನಾದರೂ ಸಲಹೆ ಸೂಚನೆ ಕೊಟ್ಟರೆ ಹೀನಾಯದ ಮೂದಲಿಕೆ ಕಟ್ಟಿಟ್ಟ ಬುತ್ತಿ. ಆರಡಿ ಎತ್ತರದ ದೊಡ್ಡ ಗಂಟಲಿನ ಪ್ರಚಂಡ ಧೈರ್ಯದ ಆಸಾಮಿ. ಹಾಗೊಮ್ಮೆ ಎಂದಾದರೂ ಜೋಗದ ತಡಸಲಿಗೆ ಬಂಡೆಯಿಂದ ಧುಮುಕಲು ಭಯವಾದರೆ ತನ್ನ ಧೈರ್ಯ ಕಡ ಕೊಡುವಂತಿದ್ದ.  ಇವಳು ಅವನೆದುರಿಗೆ ಬಿರುಮಳೆಯಲ್ಲಿ ತೊಯ್ದ ಗುಬ್ಬಚ್ಚಿ. ಹಾಗಂತ ಅವಳು ಅನ್ನಿಸಿದ್ದನ್ನು ಆಡದೇ ಬಿಟ್ಟವಳೇ ಅಲ್ಲ. ಅವನೆಷ್ಟೇ ಬೈದು ಕೂಗಿದರೂ ತನ್ನ ಅನಿಸಿಕೆಯನ್ನು ಹೇಳಿಯೇ ಸಿದ್ದ. ಅವನ ಕಿವಿಯೋ ಯಾವುದೋ ಅವಘಡದಲ್ಲಿ ಕೆಪ್ಪಾಗಿತ್ತು. ಇವಳು ಅವನ ಮತ್ತೊಂದು ಕಿವಿಯ ಹತ್ತಿರ ಕೂಗಿಕೂಗಿ ಹೇಳಬೇಕು. ಅವನು ಮೊದಲು ಆಂ ಆಂ ಎಂದು ಆಮೇಲೆ ಕೇಳಿದ ನಂತರ ಅವಳಿಗೆ ಯದ್ವಾ ತದ್ವಾ ಬಯ್ಯಬೇಕು. ನಾವೆಲ್ಲ ಮೊಮ್ಮಕ್ಕಳು ದೊಡ್ಡವರಾದಮೇಲೂ ಹೀಗೇ. ಪಾಪ ನಮ್ಮೆದುರಿಗೆ ಅವಳಿಗೆ ಪ್ರಚಂಡ ಅವಮಾನ ಆಗುತ್ತಿತ್ತು. ಹೆಂಡತಿಯ ಮಾತನ್ನು  ಎಂದೆಂದೂ ಕೇಳತಕ್ಕದ್ದಲ್ಲ ಅಂತ ಅದ್ಯಾವ ಪುರುಷೋತ್ತಮ ದೇವರು ಅವನಿಗೆ ಪ್ರಮಾಣ ಮಾಡಿಸಿ ಕಳಿಸಿದ್ದನೋ ಕಡೆತನಕ ಹಾಗೇ ಇದ್ದ. ತನ್ನ ನಿರ್ಧಾರವನ್ನು ಖಡಕ್ಕಾಗಿ ಹೇಳಿ ಮಾತ್ರ ರೂಢಿಯಿರುವ, ಯಾರ ಮಾತನ್ನು ಕೇಳಿ ಗೊತ್ತಿಲ್ಲದವರಿಗೆ ತಾವು ಕೆಪ್ಪರಾಗಿದ್ದೂ ಗೊತ್ತಾಗುವ ಸಂಭವ ಕಡಿಮೆ. ಯಾಕೆಂದರೆ ಅವರು ಕಿವಿಯನ್ನು ಬಹಳ ಕಡಿಮೆ ಮತ್ತು ಗಂಟಲನ್ನು ಬಹಳ ಜಾಸ್ತಿ ಉಪಯೋಗಿಸುತ್ತಿರುತ್ತಾರೆ.            ಆರಂಭದ ದಿನಗಳಲ್ಲಿ ಬ್ರಿಸ್ಟಾಲ್ ಸಿಗರೇಟು ಸೇದುತ್ತಿದ್ದ ಅಜ್ಜ ಸಾಕಷ್ಟು ಖಾರ ಕೂಡ ತಿನ್ನುತ್ತಿದ್ದ. ಆಮೇಲೆ ಅಸಿಡಿಟಿ ಹೆಚ್ಚಾಗಿ ಕರುಳು ಹುಣ್ಣು ಆದಮೇಲೆ ಎಲ್ಲಾ ಬಿಟ್ಟ. ಮಲ್ಲಾಡಿಹಳ್ಳಿಗೆ ಹೋಗಿ ಯೋಗಾಸನ ಕಲಿತು ಬಂದ. ಒಂದು ದಿನವೂ ತಪ್ಪಿಸಲೇ ಇಲ್ಲ. ಅಜ್ಜಿ ತನ್ನ ಅಸ್ತಮಾಕ್ಕಾಗಿಯೂ ಔಷಧ ಪಡೆದು ಪ್ರಾಣಾಯಾಮ, ಯೋಗಾಸನ ಕಲಿತಳು. ಹೋದಹೋದಲ್ಲಿ ಹೆಂಗಸರಿಗೆಲ್ಲ ಕರೆಕರೆದು ಕಲಿಸುತ್ತಿದ್ದಳು. ಮಗಳ ಮನೆ, ಮೊಮ್ಮಗಳ ಮನೆ ಅಕ್ಕಪಕ್ಕದ ಹೆಂಗಸರೆಲ್ಲ ಅವಳ ಶಿಷ್ಯರೇ. ಅಜ್ಜ ಪ್ರತಿ ರಾತ್ರಿ ಏಳುವರೆಯೊಳಗೆ ಊಟ(ಒಣ ರೊಟ್ಟಿ, ಕಾಯಿಸುಳಿ, ಬಿಸಿ ಅನ್ನ-ಹಾಲು)ಮುಗಿಸಿ ಮಲಗಿ ಬಿಡುತ್ತಿದ್ದ. ಒಂಬತ್ತೆಂದರೆ ಅವನಿಗೆ ಮಧ್ಯರಾತ್ರಿ. ಬೆಳಿಗ್ಗೆ ನಾಕೂವರೆಗೆ ಎದ್ದು ದಡ ದಡ ಬಾಗಿಲು ಹಾಕಿ ತೆಗೆದು ಯೋಗಾಸನ ಮಾಡುತ್ತಿದ್ದ. ಓಂ ಎಂದು ಧ್ಯಾನ ಶುರು ಮಾಡಿದನೆಂದರೆ ಜೋಗದ ಕಾಡಿನ ಪ್ರಾಣಿಗಳಿಗೆಲ್ಲ ಅಲಾರಾಂ ಕೂಗಿದಂತಾಗುತ್ತಿತ್ತು. ಅಜ್ಜಿ ಎದ್ದು ಕೆಂಪಕ್ಕಿ ಗಂಜಿ ತಿಂಡಿ ಚಾ ಅಂತೆಲ್ಲ ತಯಾರಿ ಮಾಡಬೇಕು. ಬೆಳಿಗ್ಗೆ ಏಳೆಂದರೆ ಎಲ್ಲಾ ರೆಡಿ. ನಸುಕಿನ ಆರು ಗಂಟೆಗೆ ಅಜ್ಜನ ರೆಡಿಯೊ ಶುರುವಾಗುತ್ತಿತ್ತು. ದಟ್ಟ ಕಾಡಿನ ಕಣಿವೆಯೊಳಗೆ ಅದು ಹೇಗೆ ರೆಡಿಯೊ ತರಂಗಗಳು ಬರಲು ಸಾಧ್ಯ? ಗೊರಗೊರ ಸಪ್ಪಳದ ನಡುನಡುವೆ ಚಿಂತನ. ರೈತರಿಗೆ ಸಲಹೆ, ಪ್ರದೇಶ ಸಮಾಚಾರ ಇಷ್ಟನ್ನು ಕೇಳಿ ಅಜ್ಜ ತಿಂಡಿಗೆ ಬರುತ್ತಿದ್ದ. ಸಂಜೆ ಏಳಕ್ಕೆ ಮತ್ತೆ ರೇಡಿಯೊ ಗೊರಗೊರ. ಕೃಷಿರಂಗದಲ್ಲಿ ಬಂದಲಿ ಎತ್ತ ಕಾಳಿಂಗ ಎತ್ತ ಮಾಲಿಂಗ ಅಂತೆನೋ ಅದರ ಟೈಟಲ್ ಹಾಡು ಬರುತ್ತಿತ್ತು. ಯುವವಾಣಿಯ ಹಿನ್ನೆಲೆ ಸಂಗೀತ ಬಹಳ ಚೆನ್ನಾಗಿರುತ್ತಿತ್ತು. ಆದರೆ ಅದು ಅಜ್ಜನ ಊಟದ ಹೊತ್ತು ಪಟ್ಟನೆ ರೆಡಿಯೊ ಆರುತ್ತಿತ್ತು. ಬೀಟೆಯ ಹಳೆ ಕುರ್ಚಿ ಹಿಂದಕ್ಕೆ ಸರಿದ ಸಪ್ಪಳ. ಆ ಕೋಣೆಯ ಲೈಟು ಆರಿಸಿ ಡಬಾರನೆ ಅಜ್ಜ ಬಾಗಿಲು ಹಾಕುತ್ತಿದ್ದ. ತಕ್ಷಣ  ಒಳಗಿನ ಹೆಣ್ಣು ಮಕ್ಕಳಿಗೆ ಸಿಗ್ನಲ್. ಒರೆದಿಟ್ಟ ರೊಟ್ಟಿ ಕಾವಲಿಗೆ ಹಾಕಿ ತಾಟು ರೆಡಿ ಮಾಡಿ ಅಂತ. ಇಬ್ಬಿಬ್ಬರು ಸೊಸೆಯರಿದ್ದರೂ ಅಜ್ಜ ಬದುಕಿದ್ದ ಅಷ್ಟೂ ದಿನ ಅವನ ಕಿರಿಕಿರಿಯ ಸೇವೆಗೆ ಅಜ್ಜಿ ತಾನೇ ಹೋಗುತ್ತಿದ್ದಳು. ಅವಳು ಮಗಳ ಮನೆಗೆ ಹೋದಾಗ ಅಜ್ಜ ಸಾಕಿದ ಬೆಕ್ಕಿನ ಹಾಗಿರುತ್ತಿದ್ದ. ಸೊಸೆಯರಿಗೆ ಚೂರೂ ಕಿರಿಕಿರಿ ಮಾಡುತ್ತಿರಲಿಲ್ಲ. ಅದಕ್ಕೆ ದೊಡ್ಡ ಸೊಸೆ ಅವನ ಕಾಟ ಹೆಚ್ಚಾದಾಗ ಅತ್ತೆಗೆ ನೀವು ಮಗಳ ಮನೆಗೆ ಹೋಗಿದ್ದು ಬನ್ನಿ ಎಂದು ಸಲಹೆ ಕೊಡುತ್ತಿದ್ದಳು. ಅಜ್ಜಿ ಅಜ್ಜನಿಗೂ ಉಳಿದ ಜಗತ್ತಿಗೂ ಮಧ್ಯದ ಸ್ಟೆಬಿಲೈಸರ ಇದ್ದ ಹಾಗಿದ್ದಳು. ಅವನ ಕೋಪ ತಾಪ ತಿಕ್ಕಲುಗಳನ್ನೆಲ್ಲ ತಾನೇ ಪಡೆದು ತಡೆದು ಬಿಡುತ್ತಿದ್ದಳು. ಉಳಿದವರು ಸುರಕ್ಷಿತರಾಗುತ್ತಿದ್ದರು. ಹಾಗಂತ ಗಂಡ ಹೇಗಿದ್ದರೂ ಏನು ಮಾಡಿದರೂ ಸರಿ ಎನ್ನುವ ಸತಿ ಶಿರೋಮಣಿ ಖಂಡಿತ ಆಗಿರಲಿಲ್ಲ. ಅವನ ಲೋಪದೋಷಗಳ ಸಂಪೂರ್ಣ ಅರಿವಿತ್ತು. ಯಾರ ಜೊತೆಗಾದರೂ ಅಜ್ಜ ಜಗಳಾಡಿದರೆ ಅಥವಾ ಅಕ್ಸಿಡೆಂಟ ಮಾಡಿಕೊಂಡು ಬಂದರೆ ಇವನದೇ ತಪ್ಪಿರುತ್ತದೆಯೆಂದು ಅಂದಾಜು ಮಾಡಿ ಹೇಳುತ್ತಿದ್ದಳು. ಎಂಭತ್ತರ ಇಳಿ ವಯಸ್ಸಿನಲ್ಲೂ ತಲೆಗೆ ರುಮಾಲು ಸುತ್ತಿಕೊಂಡು ಯಮವೇಗದಲ್ಲಿ ಬೈಕು ಹತ್ತಿ ಹೊಂಟು ಬಿಡುತ್ತಿದ್ದ. ಡುಗುಡುಗು ಶಬ್ದ ಕೇಳಿ ಕಿಡಕಿಯಲ್ಲಿಣುಕಿ ಬೈಕು ಹೋದ ದಿಕ್ಕು ನೊಡಿ ಅವನೆಲ್ಲಿಗೆ ಹೋಗಿರಬಹುದು ಅಂತ ಅಂದಾಜು ಮಾಡಬೇಕಿತ್ತೇ ಹೊರತು ಹೇಳಿಕೇಳಿ ಹೋಗುವ ಕ್ರಮ ಇರಲೇ ಇಲ್ಲ. ಆಸುಪಾಸಿನ ಜನ ಅವನ ಬೈಕಿಗೆ ದಾರಿ ಕೊಟ್ಟು ತಾವಾಗೇ ಸರಿಯುತ್ತಿದ್ದರು. ಗೌರವದಿಂದಲ್ಲ ಪ್ರಾಣದಾಸೆಗೆ. ಸಣ್ಣಪುಟ್ಟ ಕೋಳಿ ದನ ತಾಗುವುದು ಎಲ್ಲಾದರೂ ಡಿಕ್ಕಿಯಾಗುವುದು ಮಾಮೂಲೇ ಆಗಿತ್ತು. ಯಾರೂ ಅವನ ಹಿಂದೆ ಕೂರಬಾರದೆಂದು ಹೆಂಗಸರು ಮಕ್ಕಳಿಗೆ ತಾಕೀತು ಮಾಡಲಾಗಿತ್ತು. (ಈ ರೀತಿಯ ಆತ್ಮರಕ್ಷಣೆಯ ಕ್ರಮಗಳ ವಕ್ತಾರ ಅವನ ಅಳಿಯನಾಗಿದ್ದ)               ಕಾಡಿನ ನಡುವೆ ಪೇಟೆಯ ಸವಲತ್ತುಗಳಿಂದ ದೂರವಾಗಿ ಬದುಕುತ್ತಿದ್ದ ಕಾರಣಕ್ಕೋ ಅಥವಾ ಯಾವುದಕ್ಕೂ ಕಾಯದ ಜೀ ಎನ್ನದ ಸ್ವಭಾವಕ್ಕೋ ಅಜ್ಜ ಸ್ವಾವಲಂಬಿಯಾಗಿದ್ದ. ಹಳೆ ಟಯರಿನಿಂದ ಚಪ್ಪಲಿ ಮಾಡಿಕೊಳ್ಳುತ್ತಿದ್ದ. ಹರಿದ ಕಂಬಳಿ ಕತ್ತರಿಸಿ, ಹೊಲಿದು ಕೋಟು ಟೊಪ್ಪಿ ಮಾಡಿಕೊಳ್ಳುತ್ತಿದ್ದ. ಬೈಕು, ಪಂಪುಸೆಟ್ಟು, ಟ್ರಾನ್ಸಫರ‍್ಮರು ಎಲ್ಲದರ ರಿಪೇರಿ ಅತಿ ಚೆನ್ನಾಗಿ ಮಾಡುತ್ತಿದ್ದ. ಅವನ ಗಂಡು ಮಕ್ಕಳು ಈ ಎಲ್ಲಾ ವಿದ್ಯೆಗಳಲ್ಲಿ ಪಾರಂಗತರೇ. ಆದರೆ ಎಲ್ಲರಿಂದಲೂ ಸಾಮೂಹಿಕ ನಿಂದನೆಗೆ ಗುರಿಯಾದ ಅಜ್ಜನ ವಿದ್ಯೆಯೆಂದರೆ ಮೊಮ್ಮಕ್ಕಳ ಕೂದಲು ಕತ್ತರಿಸುವ ಹಜಾಮತಿ. ಅವನಿಗೆ ಗಂಡು ಹುಡುಗರು ಉದ್ದ ಕೂದಲು ಬಿಟ್ಟುಕೊಂಡು ತಿರುಗಿದರೆ ಕಂಡಾಪಟ್ಟೆ ಸಿಟ್ಟು ಬರುತ್ತಿತ್ತು. ಬಾರಾ ಎಂದು ಕರೆದು ಕೂರಿಸಿಕೊಂಡು ಕೈಗೆ ಸಿಕ್ಕಿದ ಕತ್ತರಿಯಿಂದ ನಿರ್ದಯವಾಗಿ ಕತ್ತರಿಸುತ್ತಿದ್ದ. ಕತ್ತರಿಯ ಮೊಂಡುತನ, ಅಜ್ಜನ ನೇತ್ರಗಳ ಮಂದತನ ಎರಡೂ ಕೂಡಿ ಭಯಂಕರವಾದ ಆಕಾರದಲ್ಲಿ ಮೆಟ್ಟಿಲು ಮೆಟ್ಟಿಲಾಗಿ ಅಲ್ಲಲ್ಲಿ ವಿರಳ ಭೂಮಿಯಾಗಿ ಮೊಮ್ಮಕ್ಕಳ ತಲೆ ತಯಾರಾಗುತ್ತಿತ್ತು. ಅಜ್ಜನ ಗಂಟಲಿಗೆ ಹೆದರುವ ಆ ಹುಡುಗರು ಉಕ್ಕಿ ಬರುವ ಅಳುವನ್ನು ಭಯಕ್ಕೆ ವರ್ಗಾಯಿಸಿ ನಡುಗುತ್ತ ಕೂರುತ್ತಿದ್ದರು. ಮತ್ತೆ ಅವರನ್ನು ಪಾರು ಮಾಡಲು ಅಜ್ಜಿಯೇ ಓಡಿ ಬರಬೇಕಿತ್ತು. ಕಡೆಗೆ ಅವಳೇ ಮೊಮ್ಮಕ್ಕಳಿಗೆ ಎಂದೆಂದೂ ಅಜ್ಜ ಹಜಾಮತಿಗೆ ಕರೆದರೆ ಹೋಗಬಾರದೆಂದು ತಾಕೀತು ಮಾಡಬೇಕಾಯಿತು. ಕಡೆಗಾಲದಲ್ಲಿ ಅಜ್ಜನಿಗೆ ಕ್ಯಾನ್ಸರ್ ಆದಾಗ ಅವನ ತಿಕ್ಕಲು ನಿರ್ಧಾರಗಳನ್ನು ಸಹಿಸಿಕೊಂಡು ಕ್ಯಾನ್ಸರ್ ಆಸ್ಪತ್ರೆ ರೇಡಿಯೇಷನ್ ಅಂತೆಲ್ಲಾ ಅಲೆಯುವಾಗ ಅವಳಿಗೆ ತನ್ನ ರೋಗದ ಬಗ್ಗೆ ಮರೆತೇ ಹೋಗಿತ್ತು. ಮುರುಟಿದ ಬೆರಳುಗಳ ಕಾಲನ್ನು ಅಡ್ಡಡ್ಡ ಹಾಕುತ್ತ ಏದುಸಿರು ಬಿಡುತ್ತ ಆಸ್ಪತ್ರೆಯ ಮೆಟ್ಟಿಲನ್ನು ಗೊಣಗದೇ ಹತ್ತಿಳಿದಳು.                ಅನಾಮತ್ತಾಗಿ ಅರವತ್ತು ವರ್ಷ ಸಂಸಾರ ಮಾಡಿದ ಅಜ್ಜನ ಜೊತೆಗೆ ಅವನೆಲ್ಲ ಗುಣಸ್ವಭಾವಗಳೊಂದಿಗೆ ಏಗುವುದೇ ಬದುಕಾಗಿಬಿಟ್ಟವಳಿಗೆ ಅವನ ಇಲ್ಲದಿರುವಿಕೆಯಿಂದ ಉಂಟಾದ ಶೂನ್ಯ ತುಂಬಿಕೊಳ್ಳುವುದು ಕಷ್ಟವಾಗಿರಬೇಕು. ಅಜ್ಜನ ಸೇವೆ ಅವಳ ದಿನಚರಿಯ ಎಷ್ಟು ದೊಡ್ಡ ಭಾಗವಾಗಿತ್ತೆಂದು ಗೊತ್ತಾಗುವಾಗ ಅದರ ಖಾಲಿತನ ಭರಿಸುವುದು ಸಮಸ್ಯೆಯಾಗಿಬಿಟ್ಟಿತು. ನಿಧಾನಕ್ಕೆ ಅಸ್ತಮಾ ನೆನಪಾಯಿತು. ದುಡಿಯಲಿಕ್ಕೇನು ಉಳಿದಿಲ್ಲವೆಂಬಂತೆ ಅಶಕ್ತತೆ ಆವರಿಸಿತು. ಸ್ಟೆರಾಯ್ಡಿನ ಧಾಳಿಗೆ ಶರಣಾದ ಎಲುಬುಗಳು ನೋಯಲು

ದಬದಬೆಗೆ ಧೈರ್ಯ ಕೊಟ್ಟವನೂ ಸೀರೆಯುಟ್ಟ ಇಣಚಿಯೂ Read Post »

ಇತರೆ

ಜಂಬಿಕೊಳ್ಳಿ ಮತ್ತು ಪುಟ್ಟವಿಜಿ

ಅನುಭವ ಕಥನ ಕಾಡಿನಲ್ಲಿ ಓದು ವಿಜಯಶ್ರೀ ಹಾಲಾಡಿ  ವಿಜಿ ಮತ್ತು ಅವಳಂತಹ ಆಗಿನ ಕಾಲದ ಮಕ್ಕಳು ಸಣ್ಣ ವಯಸ್ಸಿನಲ್ಲಿದ್ದಾಗ ಎದ್ದುಬಿದ್ದು ಓದುವುದೆಲ್ಲ ಏನೂ  ಇರಲಿಲ್ಲ. ಮನೆಕೆಲಸ, ಆಟ, ಹಾಡಿ-ಗುಡ್ಡಗಳ ಸುತ್ತಾಟ,   ಎಲ್ಲದರ ನಡುವೆ ಶಾಲೆಗೂ ಹೋಗಿಬರುತ್ತಿದ್ದರು!  ಪರೀಕ್ಷೆ ಬಂದಾಗ ಅಲ್ಪಸ್ವಲ್ಪ ಓದಿಕೊಳ್ಳುತ್ತಿದ್ದರು. ಹಾಗಂತ ಶಾಲೆಗೆ ಹೋಗುವುದು ಅವರಿಗೆ ಸುಲಭವೇನೂ ಆಗಿರಲಿಲ್ಲ.  ಗದ್ದೆ, ತೋಡು, ಕಾಡುಗಳಲ್ಲಿ ಮೈಲಿಗಟ್ಟಲೆ ನಡೆದು ಹೋಗಿಬರಬೇಕಿತ್ತು . ಆದರೆ ‘ಓದಿ ಓದಿ’ ಎಂದು ಶಾಲೆಯಲ್ಲೂ ಮನೆಯಲ್ಲೂ ಯಾರೂ ಅವರ ತಲೆ ತಿನ್ನುತ್ತಿರಲಿಲ್ಲ. ಹಾಗಾಗಿ ಮನಸ್ಸಾದರೆ ಓದಿಕೊಳ್ಳುತ್ತಿದ್ದರು. ಆದರೆ ತರಗತಿಯಲ್ಲಿ ಪಾಠಗಳನ್ನು ಚೆನ್ನಾಗಿ ಕೇಳಿಸಿಕೊಳ್ಳುತ್ತಿದ್ದರು. ಒಂಬತ್ತನೇ ತರಗತಿಯವರೆಗೂ ಇದೇ ತರ ತಲೆಬಿಸಿ ಇಲ್ಲದೆ ಇದ್ದರು. ವಿಜಿ ಶಾಲೆ ಪುಸ್ತಕಗಳ ಜೊತೆಗೆ ಕಥೆ ಪುಸ್ತಕಗಳನ್ನೂ ಓದುತ್ತಿದ್ದಳು. ಹತ್ತನೇ ತರಗತಿಯಲ್ಲಿ ಮಾತ್ರ ತುಸು ಗಂಭೀರವಾಗಿ ಓದಬೇಕಿತ್ತು. ಪರೀಕ್ಷೆಯ ತಯಾರಿ ಎಂದರೇನೆಂದು ತಿಳಿದದ್ದು ಆಗಲೇ. ಈ ಮಕ್ಕಳ ಓದುವಿಕೆಯೂ ವಿಚಿತ್ರವಾಗಿತ್ತು. ಕೋಣೆಯೊಳಗೆ ಕುರ್ಚಿ, ಮೇಜುಗಳನ್ನಿಟ್ಟುಕೊಂಡು ಶಿಸ್ತಾಗಿ ಕೂತು ಓದುತ್ತಿದ್ದುದು ಭಾರೀ ಕಮ್ಮಿ. ಅಲ್ಲದೆ ಹಾಗೆಲ್ಲ ಓದಲು ಹೆಚ್ಚಿನ ಮಕ್ಕಳ ಮನೆಯಲ್ಲಿ ಟೇಬಲ್ಲು ಕುರ್ಚಿಗಳು ಇರಲಿಲ್ಲ. ನೆಲದಲ್ಲಿ ಚಿಮಣಿದೀಪದ ಎದುರಿಗೆ ಕೂತು ಪುಸ್ತಕಗಳನ್ನು ಹರಡಿಕೊಂಡು ಬರೆದುಕೊಳ್ಳುತ್ತಿದ್ದರು. ವಿಜಿ ದಿನವೂ ರಾತ್ರಿ ಒಂದರ್ಧ ಗಂಟೆಯಾದರೂ ಹೀಗೆ ಅಜ್ಜಿ, ಅಮ್ಮನಎದುರಿಗೆ ಬರೆಯಲೇಬೇಕಿತ್ತು .ಇದು ಊಟದ ಮುಂಚೆ ನಡೆಯುತ್ತಿತ್ತು. ಆಮೇಲೆ ಊಟ ಮಾಡಿ ಒಂಭತ್ತು ಗಂಟೆಗೆಲ್ಲ ಮಲಗಿಬಿಡುತ್ತಿದ್ದರು.  ಪರೀಕ್ಷೆಯ ಸಮಯದಲ್ಲಿ ವಿಜಿ ಮತ್ತು ಅವಳ ಗೆಳತಿಯರು ಓದುತ್ತಿದ್ದುದು ಹೆಚ್ಚಾಗಿ ತೋಟ ಹಾಡಿಗಳಲ್ಲಿ. ತೋಟದಲ್ಲಿ ಹುಲ್ಕುತ್ರೆ ಇರುತ್ತಿತ್ತು. ಸೂಡಿಹಲ್ಲುಕುತ್ರೆಯಾದರೆ  ಹುಲ್ಲನ್ನು ಜಪ್ಪಿ ಭತ್ತವನ್ನು ಪೂರ್ತಿಯಾಗಿ ಬೇರ್ಪಡಿಸಿ ಹುಲ್ಲನ್ನು ಸೂಡಿ ಮಾಡಿ ಜೋಡಿಸಿಡುತ್ತಿದ್ದ ಕುತ್ರೆ. ಇಂತಹ ಒಣಹುಲ್ಲನ್ನು ಸಂಗ್ರಹಿಸಿ ಇಟ್ಟು ವರ್ಷಪೂರ್ತಿ ದನಕರುಗಳಿಗೆ ತಿನ್ನಲು ಬಳಸುತ್ತಿದ್ದರು . ಹಟ್ಟಿಯ ಅಟ್ಟದಲ್ಲಿ ಕೂಡಿಟ್ಟು ಉಳಿದ  ಹುಲ್ಲನ್ನು ಹುಲ್ಕುತ್ರೆ ಮಾಡಿ ಇಡುತ್ತಿದ್ದರು. ಬೇಕಾದಾಗ ಇದರಿಂದ ಹುಲ್ಲನ್ನು ತೆಗೆದುಕೊಳ್ಳುತ್ತಿದ್ದರು. ಇಂತಹ ಕುತ್ರೆಗಳು ಮೂರ್ನಾಲ್ಕು ಇರುತ್ತಿದ್ದವು. ಇದಲ್ಲದೆ ತಳು ಹುಲ್ಲಿನ ಕುತ್ರೆಯೂ ಇರುತ್ತಿತ್ತು. ಇದು ಸೂಡಿ ಮಾಡದ ಬಿಡಿ ಹುಲ್ಲು. ಸ್ವಲ್ಪ ಸ್ವಲ್ಪ ಹುಲ್ಲು ತೆಗೆದು ಅರ್ಧ ಆದ ಇಂತಹ ಕುತ್ರೆಗಳ ಮೇಲೆ ಆರಾಮವಾಗಿ ಕುಳಿತು ಅಥವಾ ಕಾಲು ಚಾಚಿ ಮಲಗಿ ಓದುತ್ತಿದ್ದರು. ನಾಲ್ಕೈದು ಜನ ಅಂದರೆ ನೀಲಿಮಾ,ಮಾಣಿಕ್ಯ ಮತ್ತು ಅವಳ ತಂಗಿಯರು ಸೇರಿದರೆ ಮಾತ್ರ ಓದು ನುಗುಳಿ (ಜಾರಿ ) ಹೋಗಿ ಮಾತು ಜೋರಾಗುತ್ತಿತ್ತು…. ಅಂತಹ ಸಂದರ್ಭದಲ್ಲಿ ಹುಲ್ಕುತ್ರೆ ಮೇಲೆ  ಕುಣಿಯುತ್ತ ಆಟವಾಡುತ್ತಿದ್ದುದೂ ಉಂಟು.   ಆಟ ಎಂದಮೇಲೆ ಜಗಳವೂ ಇರುತ್ತಿತ್ತು; ರಾಜಿಯೂ ಆಗುತ್ತಿತ್ತು! ಅಜ್ಜಿಯೇನಾದರೂ  ತೋಟದ ಕಡೆಗೆ ಬಂದರೆ “ಎಂತಾ ಮಕ್ಳೆ ಅದ್ ನಳಿನಳಿ ಓಡೂದ್, ನೀವ್ ಓದೂಕ್ ಬಂದದ್ದಾ, ಕೊಣೂಕ್ ಬಂದದ್ದಾ?” ಎಂದು ಜೋರು ಮಾಡುತ್ತಿದ್ದರು. ಅವರು ಆಚೆ ದಾಟುವವರೆಗೆ ಸುಮ್ಮನೆ ಹೆಡ್ಡರ ತರ ನಿಂತುಕೊಂಡು ಮತ್ತೆ ಮೊದಲಿನಂತೆ ಓಡುವುದು, ಹಾರುವುದು ಬೀಳುವುದು ಮಾಡಿ ಕುತ್ರೆ ಹರಡುತ್ತಿದ್ದರು . ಆದರೆ ಹೆಚ್ಚು ಶಬ್ದ ಆಗದಂತೆ ಬಾಯಿ ಒತ್ತಿ ಹಿಡಿಯುತ್ತಿದ್ದರು. ಮನೆಗೆ ಹೊರಡುವಾಗಂತೂ ಹುಲ್ಲನ್ನೆಲ್ಲ ಮೊದಲಿನಂತೆ ಇಟ್ಟು ಜಾಗ್ರತೆ ಮಾಡುತ್ತಿದ್ದರು ವಿಜಿ, ನೀಲಿಮಾ.  ಇಲ್ಲದಿದ್ದರೆ ಅಜ್ಜಿ ಬೆನ್ನಿಗೆ ಬಾರಿಸುತ್ತಾರೆ ಎಂದು ಅವರಿಗೆ ಗೊತ್ತಿತ್ತು.ಕೆಲವೊಮ್ಮೆ ಹಾಡಿಗೆ ಪುಸ್ತಕ ಹಿಡಿದು ಹೋಗಿ ಕೂತುಕೊಳ್ಳುತ್ತಿದ್ದರು. ಹತ್ತಲಿಕ್ಕಾಗುವ ಸಣ್ಣ ಮರ ಇದ್ದರೆ ಮಂಗಗಳಂತೆ ಅದರ ಮೇಲೆ ಹತ್ತಿ ಕೂತು ಪುಸ್ತಕ ಬಿಡಿಸುತ್ತಿದ್ದರು.  ಒಂದೈದು ನಿಮಿಷ ಓದಲಿಕ್ಕಿಲ್ಲ, ಅಷ್ಟೊತ್ತಿಗೆ ಎಂತದೋ ನೆನಪಾಗಿ ಒಬ್ಬರನ್ನೊಬ್ಬರು ಕರೆದುಕೊಂಡು ಮಾತು ಶುರು ಮಾಡುತ್ತಿದ್ದರು. ಅದೂ ಸಹ ಒಂದ್ಹತ್ತು ನಿಮಿಷ ಅಷ್ಟೇ….. ಮರ ಇಳಿದು ಹಾಡಿ ತಿರುಗಲು ಆರಂಭಿಸುತ್ತಿದ್ದರು. ಯಾವುದಾದರೂ ಹಣ್ಣೋ, ಕಾಯೋ , ಚಿಗುರೋ, ಎಲೆಯೋ  ಹೀಗೆ ತಿನ್ನಲಿಕ್ಕಾಗುವುದು ಏನಾದರೂ ಇದೆಯಾ ಎಂದು ಹುಡುಕುತಿದ್ದರು. ಈ ವಿಷಯದಲ್ಲಿ ಇವರು ಮಂಗಗಳಿಗೇನೂ ಕಮ್ಮಿ ಇರಲಿಲ್ಲ. ವರ್ಷದ ಯಾವುದೇ ಕಾಲವಾಗಲಿ, ಈ ಮಕ್ಕಳಿಗೆ ಹಾಡಿಯಲ್ಲಿ ಎಂತಾದರೂ ತಿನ್ನಲು ಸಿಗುತ್ತಿತ್ತು!  ಮಳೆಗಾಲದ ಆರಂಭದಲ್ಲಾದರೆ ರಾಶಿರಾಶಿ ನೇರಳೆ, ಸಳ್ಳೆ ಹಣ್ಣು ಇರುತ್ತಿತ್ತು . ನೇರಳೆ ಹಣ್ಣು ತಿಂದು ಮುಖ ಮೈ ಅಂಗಿಗೆಲ್ಲ ಬಣ್ಣ ಮೆತ್ತಿಕೊಂಡು ಥೇಟ್ ಮಂಗನಾಗುತ್ತಿದ್ದರು ! ವೈಶಾಖದಲ್ಲಂತೂ ಕೇಳುವುದೇ ಬೇಡ; ಗರ್ಚ (ಕರಂಡೆ),  ಜಡ್ಡ್ ಮುಳ್ಳ್ ಹಣ್ಣು,ಸೂರಿಹಣ್ಣು, ಚಾಂಪಿಹಣ್ಣು ಇನ್ನೂ ಎಂತೆಂತದೆಲ್ಲ ಸಿಗುತ್ತಿತ್ತು. ಹಾಡಿಯಲ್ಲಿ ಹಣ್ಣೇ ಇಲ್ಲ ಎಂದಾದರೆ, ಗರ್ಚನ ಗಿಡ ಮತ್ತು ದುರ್ಕಲ ಗಿಡದ ಎಳೆಕಾಂಡವನ್ನು ತಿನ್ನುತ್ತಿದ್ದರು. ಗರ್ವಾಳ ಕಾಯಿ ಹುಡುಕುತ್ತಿದ್ದರು. ಯಾವ್ಯಾವುದೋ ಹುಳಿ ಸೊಪ್ಪನ್ನು ಬಾಯಿಗೆ ತುಂಬಿಕೊಳ್ಳುತ್ತಿದ್ದರು. ಇಷ್ಟೆಲ್ಲ ಆಗುವಾಗ ಓದುವುದು ಮರೆತುಹೋಗಿ ಕಾಡಿನ ಹಣ್ಣೋ, ಎಲೆಯೋ,  ಹಕ್ಕಿಯೋ, ಮೊಲವೋ ಯಾವ್ಯಾವುದರ ಕುರಿತೋ ಪಂಚಾಯಿತಿಗೆ ಮಾಡುತ್ತಾ ಮನೆ ತಲುಪುತ್ತಿದ್ದರು.  ಇನ್ನು ಕೆಲವೊಮ್ಮೆ ಓದುವ ರಜೆ ಕೊಟ್ಟಾಗ ಗಂಟಿ(ದನಕರು) ಎಬ್ಬಿಕೊಂಡು ಸುಮಾರು ದೂರ ಹೋಗುತ್ತಿದ್ದರು. ದನಗಳು ತಮ್ಮಷ್ಟಕ್ಕೆ ಹಸಿ ಮೇಯ್ದುಕೊಳ್ಳುವಾಗ ಅಲ್ಲೇ ಮರಗಳ ಬುಡದಲ್ಲಿ ದರಲೆಗಳ ಮೇಲೆ ಕುಳಿತು ಓದುತ್ತಿದ್ದರು . ಪರೀಕ್ಷೆಯ ರಜೆಯಲ್ಲಿ ಸ್ವಲ್ಪ ಗಂಭೀರವಾಗಿ ಓದಲು ತೊಡಗುತ್ತಿದ್ದರು. ಆಗಲೂ ಮಧ್ಯೆ ಎದ್ದು ಹೋಗಿ ಹಣ್ಣುಗಳನ್ನು ಹೊಟ್ಟೆಗೆ ಸೇರಿಸದೆ ಬಿಡುತ್ತಿರಲಿಲ್ಲ. ಹತ್ತನೇ ಕ್ಲಾಸಿನ ಪರೀಕ್ಷೆಗೆ ರಜೆ ಕೊಟ್ಟಾಗ ಚೋರಾಡಿ ಎಂಬಲ್ಲಿಗೆ ಹೋಗುವ ದಾರಿಯಲ್ಲಿ ಇರುವ ಗರ್ಚನ ಗಿಡಗಳ ಗುಡ್ಡೆಯಲ್ಲಿ ಗಂಟಿ ಬಿಟ್ಟುಕೊಂಡು ಒಬ್ಬಳೇ ಓದುತ್ತಾ ಕುಳಿತಿರುತ್ತಿದ್ದುದು ವಿಜಿಗೆ ಕಣ್ಣಿಗೆ ಕಟ್ಟಿದಂತೆ ನೆನಪಿಗೆ ಬರುತ್ತದೆ. ಪಿಯುಸಿಗೆ ಹೋಗುವಾಗ ನಾಗ್ ದೇವ್ರ್ ಬನದ ಸುರುಳಿ ಸುರುಳಿ ಸುತ್ತಿದ ದಪ್ಪ ಬೀಳಿನ ಮೇಲೆ ಕುಳಿತು ಓದಿದ್ದು ಅವಳಿಗೆ ನೆನಪಿದೆ. ಕೆಲವು ವಿಷಯಗಳನ್ನು ಅಲ್ಲಿ ಕೂತು ಬಾಯಿಪಾಠ ಮಾಡುತ್ತಿದ್ದಳು. ಅವಳಿಗೆ ಇಂಗ್ಲಿಷ್ ಸ್ವಲ್ಪ ಕಷ್ಟವಾದ್ದರಿಂದ ಹಾಗೆ ಕೆಲವು ಉತ್ತರಗಳನ್ನು ಕಂಠಪಾಠ ಮಾಡಿಕೊಳ್ಳುತ್ತಿದ್ದಳು.  ವಿಜಿಯ ಮನೆಯಲ್ಲಿ’ ಆಚೆ ಒಳ’ ಅಂತ ಒಂದು ಪುಟಾಣಿ ಕೋಣೆಯಿತ್ತು. ಅದಕ್ಕೊಂದು ಸಣ್ಣ ಕಿಟಕಿ. ಮೇಲೆ ಮುಚ್ಚಿಗೆಯ ಮಾಡು. ಆ ಕೋಣೆಯಲ್ಲಿ ಅಕ್ಕಿಮುಡಿ ಗಳನ್ನು ಸಂಗ್ರಹಿಸಿಡುತ್ತಿದ್ದರು. ಉಳಿದ ಜಾಗದಲ್ಲಿ ಒಂದು ಮರದ ಪೆಟ್ಟಿಗೆ, ಟ್ರಂಕ್ ಮತ್ತು ಕೆಲವು ದಿನನಿತ್ಯ ಉಪಯೋಗಿಸದ ಪಾತ್ರೆಗಳು , ಹಪ್ಪಳದ ಕಟ್ಟಿನ ಡಬ್ಬಗಳು, ಹಿಟ್ಟಿನ ಡಬ್ಬ, ಶಾವಿಗೆ ಒರಳು ಮುಂತಾದುವೆಲ್ಲ ಇದ್ದವು. ತುಂಬಾ ಚಳಿ ಇದ್ದಾಗ ಅಥವಾ ಮನೆಗೆ ಯಾರಾದರೂ ನೆಂಟರು ಬಂದು ಹೊರಗೆ ಕುಳಿತು ಓದಲಾಗದ ಸಮಯದಲ್ಲಿ ಆ ಸಣ್ಣ ಕೋಣೆಯ ಸಣ್ಣಜಾಗದಲ್ಲಿ ವಿಜಿ ಓದಿ ಕೊಳ್ಳುತ್ತಿದ್ದಳು. ಹಾಗೊಂದು ಸಲ ಚಿಮಣಿದೀಪ ಇಟ್ಟುಕೊಂಡು ಕುಳಿತಿದ್ದಳು. ಮನೆಗೆ ಯಾರೋ ನೆಂಟರೆಲ್ಲ ಬಂದ ಸಮಯವಾದ್ದರಿಂದ ಗಲಾಟೆ ಕೇಳುತ್ತದೆ ಎಂದು ಕೋಣೆಯ ದಪ್ಪಬಾಗಿಲನ್ನು ಎಳೆದು ಹಾಕಿದ್ದಳು .ಕಿಟಕಿಯು ಮಾಮೂಲಿಯಂತೆ ಹಾಕಿಕೊಂಡಿತ್ತು .ಅದಲ್ಲದೆ ಅಕ್ಕಿ ಮುಡಿಗಳು ಬೆಚ್ಚಗಿರಬೇಕು ಎಂದು ಆ ಕಿಟಕಿಗೆ ಯಾವಾಗಲೂ ಒಂದು ಪ್ಲಾಸ್ಟಿಕ್ಕಿನ ಹಾಳೆಯನ್ನು ಹೊಡೆದಿರುತ್ತಿದ್ದರು. ಈ ಸಂದರ್ಭದಲ್ಲಿ ಬಾಗಿಲು ತೆಗೆದು  ಬಂದ ಅಣ್ಣ” ಅಯ್ಯೋ ಇಂಥ ಹೊಗೆಯಲ್ಲಿ ಕುಳಿತು ಓದುವುದಾ!? ಆರೋಗ್ಯಕ್ಕೆ ಒಳ್ಳೆಯದಲ್ಲ, ಕಿಟಕಿ ತೆಗೆದಿಡಬೇಕು ” ಎಂದು ಉದ್ಗರಿಸಿದ್ದ, ಏಕೆಂದರೆ ಹೊಗೆ ಕೋಣೆಯನ್ನೆಲ್ಲಾ ತುಂಬಿ ಉಸಿರುಕಟ್ಟುವಂತೆ ಆಗಿತ್ತು . ಆದರೂ ಅದು ವಿಜಿಗೆ ಗೊತ್ತಾಗಿರಲಿಲ್ಲ. ಆದರೆ ಸಾಮಾನ್ಯವಾಗಿ ಅವಳು ಓದುತ್ತಿದ್ದುದು ಹೊರಗೆ ಚಾವಡಿ – ಜಗಲಿಯಲ್ಲಿ ಅಥವಾ ಉಪ್ಪರಿಗೆಯಲ್ಲಿ. ಅಲ್ಲಾದರೆ ಚೆನ್ನಾಗಿ ಗಾಳಿಯಾಡುವಂತಿತ್ತು . ಈ ಮೊದಲೇ ಹೇಳಿದಂತೆ ವಿಜಿಯ ಊರಿಗೆ ಕರೆಂಟ್ ಬರುವಾಗ ಅವಳಂತಹ ಮಕ್ಕಳೆಲ್ಲ ಪಿಯುಸಿ ಮುಗಿಸಿಯಾಗಿತ್ತು. ಚಿಮಣಿ ದೀಪದ ಬೆಳಕಲ್ಲಿ ಓದುವಾಗ ದೀಪಕ್ಕೆ ಆಕರ್ಷಿತವಾಗಿ ಕುಟ್ಟೆ, ಹಾತೆ, ಮಿಡತೆ, ಮಳೆಹಾತೆ ಒರ್ಲೆಹಾತೆ ಹೀಗೆ ವಿಧವಿಧ ಕೀಟಗಳು ಬಂದು ದಾಳಿ ಮಾಡುತ್ತಿದ್ದವು. ಕೆಲವು ದೀಪಕ್ಕೆ ಬಿದ್ದು ಸುಟ್ಟು ಸತ್ತೂ ಹೋಗುತ್ತಿದ್ದವು. ಮತ್ತೆ ಕೆಲವು ಮೈಮುಖದ ಮೇಲೆ ಕೂತು ಕಿರಿಕಿರಿ ಕೊಡುತ್ತಿದ್ದವು. ಕೆಲವೊಮ್ಮೆ ದೀಪದ ಬುಡದಲ್ಲಿ ರಾಶಿರಾಶಿ ಬಂದು ಬೀಳುತ್ತಿದ್ದವು. ಚಿಮಣಿದೀಪದಲ್ಲಿ ಮಕ್ಕಳು ಓದುವುದು ಕಷ್ಟ ಎಂದು ಮನಗಂಡ ಅಪ್ಪಯ್ಯ ಲ್ಯಾಂಪು ತರುತ್ತಿದ್ದರು. ಸಣ್ಣ ಲ್ಯಾಂಪು ಕೋಣೆಯಲ್ಲಿ ಮೊಳೆಗೆ ಸಿಕ್ಕಿಸಿ ಇಡಲಾದರೆ , ದೊಡ್ಡ ಲ್ಯಾಂಪು ಓದಲಿಕ್ಕೆ. ಒಂದು ಸಲ ಸುಮಾರು ದೊಡ್ಡ ಲ್ಯಾಂಪ್ ತಂದಿದ್ದರು. ಅದರ ಬುರುಡೆ ಸೋರೆಕಾಯಿಯ ಗಾತ್ರಕ್ಕಿತ್ತು! ಮತ್ತೊಂದು ಸಲ ಸಪೂರ ಬುರುಡೆಯ ನೋಡಲು ವಿಚಿತ್ರವಾಗಿರುವ ಲ್ಯಾಂಪನ್ನು ತಂದುಕೊಟ್ಟಿದ್ದರು . ಅದು ಚೀನಿ ಲ್ಯಾಂಪಂತೆ! ಯಾಕೆ ಆ ಹೆಸರು ಬಂದದ್ದೋ ಗೊತ್ತಿರಲಿಲ್ಲ. ಚೀನಾದವರು ಅಂತಾ ಲ್ಯಾಂಪು ಉಪಯೋಗಿಸುತ್ತಾರೋ  ಏನೋ ಎಂದು ಅವಳು ಅಂದುಕೊಂಡಿದ್ದಳು. ಇಂತಹ ಲ್ಯಾಂಪುಗಳಲ್ಲಾದರೆ ಓದಲು ಸ್ವಲ್ಪ ಆರಾಮವೆನಿಸುತ್ತಿತ್ತು. ಹೊಗೆ ಮುಖಕ್ಕೆ ಬಡಿಯುವುದಿಲ್ಲ ಮತ್ತು ಜಾಸ್ತಿ ಪ್ರಕಾಶ ಬೀರುತ್ತಿತ್ತು. ಅವರ ಮನೆಯ ಎಡಬದಿಯಲ್ಲಿ ಒಂದು ಸಪೂರ ಚಿಟ್ಟೆ (ದಂಡೆ ) . ಅದರ ಕೆಳಗೆ ಗದ್ದೆ. ಅಲ್ಲಿ ಉದ್ದಾನುದ್ದಕ್ಕೆ ಊರಿನ ಎಲ್ಲರ ಮನೆಯ ಗದ್ದೆಗಳು ಹಬ್ಬಿಕೊಂಡಿದ್ದವು. ಗದ್ದೆಯ ಇನ್ನೊಂದು ಬದಿಗೆ ಕಾಡು . ಮನೆಯ ಬಲಭಾಗದಲ್ಲಿ ತೋಟ; ಅದನ್ನು ದಾಟಿದರೆ ಕಾಡು. ಇಂತಹ ಗದ್ದೆ, ಕಾಡುಗಳ ನಡುವೆ ರಾತ್ರಿಯ ದಟ್ಟಕತ್ತಲು, ನೀರವತೆ…. ನಡುನಡುವೆ ಇರುಳ ಸದ್ದುಗಳು, ಕೆಲವೊಮ್ಮೆ ತೋಟದ ಕಡೆಯಿಂದ ಗುಮ್ಮಗಳ ಕೂಗು. ಒಂದು ಗುಮ್ಮ ‘ಹೂಂ’ ಎಂದರೆ ಇನ್ನೊಂದು ಗುಮ್ಮ ‘ಹೂಂಊಂಹೂಂ’ ಎಂದು ಉತ್ತರ ಕೊಡುತ್ತಿತ್ತು! ಹಾಡಿಯಲ್ಲಿ ನೀರಿಗೆ ಕಲ್ಲು ಹಾಕಿದಂತೆ ಕೂಗುವ ಯಾವುದೋ ರಾತ್ರಿಹಕ್ಕಿಯ ಕೂಗು . ಆಗಾಗ ನಾಯಿಗಳ ನೀಳ ಬೊಗಳು. ಮಳೆಗಾಲವಾದರೆ ಮನೆಯೆದುರಿನ ಗದ್ದೆಯಲ್ಲಿ ಅಸಂಖ್ಯಾತ ಕಪ್ಪೆಗಳ, ಕೀಟಗಳ  ಸದ್ದು ಅಥವಾ’ಜೈಲ್’ ಎಂದು ಸುರಿಯುವ ಮಳೆಯ ಶಬ್ದ. ಮನೆಯೊಳಗೆ ಕುಳಿತು ಓದಿನಲ್ಲಿ ಮುಳುಗುವ ವಿಜಿಗೆ ಸುತ್ತಲಿನ ಪರಿಸರ ನಿಜಕ್ಕೂ ಸಹಕಾರಿಯಾಗಿತ್ತು. ಓದು ಎಂದರೆ ಬರೀ ಶಾಲೆ ಪುಸ್ತಕದ ಓದಷ್ಟೇ ಅಲ್ಲ, ಆರನೇ ತರಗತಿಯಲ್ಲೇ ಅವಳು ಕತೆ ಕಾದಂಬರಿಗಳನ್ನು ಓದಲು ಶುರು ಮಾಡಿದ್ದಳು. ಅವರ ಮನೆಯಲ್ಲಿದ್ದ ಕುವೆಂಪು, ಕಾರಂತರ ಪುಸ್ತಕಗಳು ಮತ್ತು ಇತರ ಪುಸ್ತಕಗಳು, ವಾರಪತ್ರಿಕೆ, ಮಾಸ ಪತ್ರಿಕೆಗಳನ್ನು ಓದುತ್ತಿದ್ದಳು.  ಹಗಲೆಲ್ಲ ಶಾಲೆ, ಮನೆಕೆಲಸ ಹೀಗೆ ಸಮಯ ಕಳೆದುಹೋಗುತ್ತಿತ್ತು. ರಾತ್ರಿ ಶಾಲೆಯ ಓದಿನ ನಂತರ ಕಥೆ ಪುಸ್ತಕಗಳನ್ನು ಓದುವುದು ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ ಪ್ರಾರಂಭವಾಗಿ ಮುಂದುವರೆಯಿತು. ಶಾಲೆಯ ಓದು ಅನಿವಾರ್ಯವಾಗಿತ್ತು ; ಅದಲ್ಲದೆ ಓದಲೇಬೇಕೆಂಬ ಛಲ, ಹಠವೂ ಇತ್ತು. ಇತರ ಪುಸ್ತಕಗಳ ಓದು ಮಾತ್ರ ಹೊಸ ಲೋಕವೊಂದನ್ನು ಪರಿಚಯಿಸಲು ಸಹಕಾರಿಯಾಯಿತು. ***

ಜಂಬಿಕೊಳ್ಳಿ ಮತ್ತು ಪುಟ್ಟವಿಜಿ Read Post »

ಇತರೆ

ಕರೋನ ಮುಕ್ತ ಶಾಲೆ

ಸರಿತಾಮಧು ಎಂದಿಗೆ ಬರಲಿದೆಯೋ ಶಾಲೆಗೆ ಹೋಗಿ ನಲಿಯುವ ದಿನಗಳು ಎಂದು ಕಾತರಿಸುವ ಮಕ್ಕಳಿಗೆ ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೊರಟಾಗ ಮನೆಯಲ್ಲಿ ತಾವಷ್ಟೇ ಇರಬೇಕಾ ಎನ್ನುವ ಭಯ. ಹಾಗೆ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗುವ ಪೋಷಕರಿಗೂ ಇದೇ ಚಿಂತೆಯಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಶಾಲೆಗಳು ತೆರೆಯುವ ಸೂಚನೆ ಸದ್ಯಕ್ಕೆ ಇಲ್ಲವೇನೋ? ಹೀಗಿರುವಾಗ ಮಕ್ಕಳ ಕಲಿಕೆ ಹೇಗೆ ಎಂದು ಚಿಂತಿಸಿ ಆನ್ಲೈನ್ ಮೂಲಕ ಶಿಕ್ಷಣ ನೀಡುವುದು ಒಳಿತೋ ಕೆಡುಕೋ ಎಂಬ ಜಿಜ್ಞಾಸೆ ಎಲ್ಲರ ಮನದಲ್ಲೂ ಮೂಡಿದೆ.ಪ್ರಾಥಮಿಕ ಹಂತದಿಂದಲೇ ಈ ರೀತಿಯ ಪಾಠಬೋಧನೆ ಮಕ್ಕಳ ಮನಮುಟ್ಟುವುದೇ ಎನ್ನುವ ಗೊಂದಲವೂ , ಚರ್ಚೆಯೂನಡೆಯುತ್ತಲೇ ಸಾಗಿರುವ ಬೆನ್ನಲ್ಲೇ ಕೆಲವು ಖಾಸಗಿ ಶಾಲೆಗಳು ಆನ್ಲೈನ್ ತರಗತಿ ಗೆ ನಾಂದಿ ಹಾಡಿವೆ.ಹೀಗಿರುವಾಗ ಮಕ್ಕಳ ಕೈಗೆ ಮೊಬೈಲ್ ನೀಡಿ ನೆಮ್ಮದಿಯಾಗಿ ಇರುವುದಾದರೂ ಹೇಗೆ ಎಂಬ ಗೊಂದಲ ಮನೆಯಲ್ಲಿ ಇರದ ,ದುಡಿಯಲು ಹೊರಗೆ ಹೋಗುವ ಪೋಷಕ ವರ್ಗದ್ದು. ಇನ್ನು ಕೃಷಿಯಾಧಾರಿತ ಕುಟುಂಬಗಳಲ್ಲಿನ ಮಕ್ಕಳು ಹೆಚ್ಚಾಗಿ ಗ್ರಾಮೀಣ ಪ್ರದೇಶದ ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು , ಪ್ರಸ್ತುತ ತಮ್ಮ ಹಿರಿಯರಿಗೆ ಹೊಲಗದ್ದೆಗಳಲ್ಲಿ ನೆರವಾಗುತ್ತಾ ಸಮಯ ಕಳೆಯುತ್ತಿದ್ದಾರೆ. ದನಕರುಗಳನ್ನು ಮೇಯಿಸುತ್ತಾ, ಇಲ್ಲವೇ ಬೀದಿಯಲ್ಲಿ ಅಡ್ಡಾಡುತ್ತಾ ಇರುವ ಮಕ್ಕಳನ್ನೂ ನೋಡುತ್ತಿದ್ದೇವೆ. ಇವರ ಮಟ್ಡಿಗೆ ಆನ್ಲೈನ್ ಶಿಕ್ಷಣ ಕೈಗೆಟುಕದ ತಾರೆಯಂತೆ.ಹಾಗಂತ ಗ್ರಾಮೀಣ ಪ್ರದೇಶದವರು ಮೊಬೈಲ್ ಬಳಕೆಯಲ್ಲಿ ಹಿಂದೆ ಬಿದ್ದಿಲ್ಲ.ಆದರೂ ಹಲ್ಲು ಇದ್ದವರಿಗೆ ಕಡಲೆ ಇಲ್ಲವಂತೆ ಅನ್ನುವ ಹಾಗೆ ಮೊಬೈಲ್ ಇದ್ದರೂ ನೆಟ್ವರ್ಕ್ ಸಿಗದ ಅದೆಷ್ಟೋ ಹಳ್ಳಿಗಳಿವೆ.ನಗರವಾಸಿಗಳಿಗೆ ಈ ರೀತಿಯ ಶಿಕ್ಷಣ ಸ್ವಲ್ಪ ಮಟ್ಟಿಗೆ ಅನುಕೂಲವೇ ಹೊರತು ಗ್ರಾಮಾಂತರದ ಮಕ್ಕಳಿಗಲ್ಲ. ಹಣದ ಅನುಕೂಲತೆ ಇದ್ದು ಮನೆಯಲ್ಲೇ ಇರುವ ಪೋಷಕರು ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಗಳನ್ನು ಕೊಡಿಸಿ, ಜೊತೆಯಲ್ಲಿ ಕುಳಿತು ತಾವೂ ಮಕ್ಕಳಿಗೆ ನೆರವಾಗಬಹುದು.ಇಷ್ಟೆಲ್ಲಾ ಆಗು – ಹೋಗುಗಳ ನಡುವೆ ಆನ್ಲೈನ್ ಶಿಕ್ಷಣ ಎಷ್ಟರಮಟ್ಟಿಗೆ ಯಶಸ್ವಿಯಾಗಬಹುದು ಎನ್ನುವ ಬಹು ದೊಡ್ಡ ಪ್ರಶ್ನೆ ನಮ್ಮ ಮುಂದೆ ಇದೆ. ಮುಖಾಮುಖಿ ಮಕ್ಕಳೊಂದಿಗೆ ನಡೆಯುವ ಚಟುವಟಿಕೆಯುಕ್ತ ತರಗತಿಗೂ ಮನೆಯೊಳಗೆ ಕಂಪ್ಯೂಟರ್ ಪರದೆಯನ್ನು ಪಿಳಿಪಿಳಿ ನೋಡುತ್ತಾ ಜಡವಾಗಿ ಕುಳಿತು ಕೊಳ್ಳುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ . ಇದರಿಂದ ಚಿಕ್ಕ ವಯಸ್ಸಿಗೆ ಕಣ್ಣುಗಳ ಮೇಲೂ ದುಷ್ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ. ಎಂದಿಗೆ ಮುಗಿಯುವುದೋ ಈ ಯಾತನೆ ಎಂದು ಒಳಗೊಳಗೇ ತಳಮಳಿಸಿ ನೊಂದಿರುವ ಜೀವಗಳೇ ಹೆಚ್ಚು ‌ . ಬಡವ – ಶ್ರೀಮಂತ , ನಗರ – ಹಳ್ಳಿಗಳೆಂಬ ಭೇದ ವಿಲ್ಲದೇ ಕರೋನ ತನ್ನ ಹಿಡಿತ ಸಾಧಿಸಿ ಜನರ ಕಂಗೆಡಿಸಿದೆ.ಹೀಗಿರುವಾಗ ಶಾಲೆ ತೆರೆಯುವುದೋ ಬಿಡುವಿದೋ ಆದರೆ ಒಂದಲ್ಲ ಒಂದು ರೀತಿಯ ಸಮಸ್ಯೆ ಇದೆ. ಕರೋನ ಮುಕ್ತ ಸಾಧ್ಯವಿಲ್ಲವೇನೋ ?ಬದಲಾಗಿ ಅದರೊಂದಿಗೆ ಹೊಂದಾಣಿಕೆ ಸೂತ್ರ ಮಾತ್ರ ಕಣ್ಮುಂದೆ ಇದೆ. *********************

ಕರೋನ ಮುಕ್ತ ಶಾಲೆ Read Post »

ಇತರೆ

ವಚನ ಚಿಂತನೆ

ಚಿಂತನೆ ಡಾ.ವೈ.ಎಂ.ಯಾಕೊಳ್ಳಿ ಕಾಮ ಕಾಲದ ಕಾಡುವ ಮಾಯೆ ನಳಲುಗತ್ತಲೆ ನೀನು ಮಾಯೆ ಸಂಗ ಸುಖದಿಂದ ಹಿಂಗುವರಾರು ಇಲ್ಲ ಬಿಗಿದ ಕುಚ,ಉರ ಮಧ್ಯವು ಲಿಂಗಾಕಾರವು ಮಹೇಶ್ವರಗೆಯೂ ಪ್ರೀತಿಯು ಸನ್ಮೋಹ ಅಮೃತ ಸಾರವು ಇಳೆ ಉತ್ಪತ್ಯಕ್ಕೆ ಆಧಾರವು ಇಂಥ‌ ಮೋಹ ಪ್ರಿಯವಾದ ಮೋಹಿನಿಯರ ಅಗಲುವದೆಂತೋ ಕರಸ್ಥಳದ ಇಷ್ಟಲಿಂಗೇಶ್ವರಾ ಇಡೀ ವಚನ ಸಾಹಿತ್ಯವನ್ನು ಅಧ್ಯಯನ ಮಾಡಿದರೂ ಒಂದು ವಿಶೇಷ ನೆಲೆಯಲ್ಲಿ‌ ನಿಲ್ಲುವ ವಚನ‌ ಇದು . ಇದನ್ನು ರಚಿಸಿದವನು ಮೆಡ್ಲೇರಿ ಶಿವಲಿಂಗನೆಂಬ ಹದಿನಾರನೆಯ ಶತಮಾನದ ವಚನಕಾರ.ಡಾ ವೀರಣ್ಣ ರಾಜೂರ ಅವರು ಸಂಪಾದಿಸಿದ ಸಂಕೀರ್ಣ ವಚನ ಸಂಪುಟ ೯ ರಲ್ಲಿ ಈತನ ೨೩ ವಚನಗಳು ದೊರಕಿವೆ.ಬಹಳ ವಿಶಿಷ್ಟವಾದ ಅಂಕಿತವನ್ನು ಈತ ಇರಿಸಿಕೊಂಡಿದ್ದಾನೆ.ಅವನ  ‘ಕರಸ್ಥಲದ ಇಷ್ಟ  ಲಿಂಗೇಶ್ವರ’ ಎಂಬ ಅಂಕಿತವೂ ಒಂದು ವಿಶೇಷವೇ. ಇವನ ವಚನಗಳನ್ನು‌ ಪರಿಭಾವಿಸಿದರೆ ದೊರಕಿದ ೨೩ ವಚನಗಳಲ್ಲಿ‌ ಮೂರ್ನಾಲ್ಕು ವಚನಗಳಲ್ಲಿ‌ ಮಾಯೆಯ‌‌ ಮಹಿಮೆಯನ್ನು ಬಣ್ಣಿಸುತ್ತಾನೆ. ಮಾಯೆಯ ನಿರಾಕರಣೆಗಿಂತ ಅದರ ಮಹಿಮೆಯನ್ನು‌ ಹೊಗಳುವ , ಅದನ್ನು‌ ಮೀರುವದು ಅಷ್ಟು ಸರಳವಲ್ಲ ಎಂಬ ಸರಳ ಸತ್ಯದ ನಿರ್ಧಾರ ಅವನ ವಚನಗಳಲ್ಲಿರುವದು ವಿಶೇಷವಾಗಿದೆ.‌ ಶರಣರ ಮಹತ್ವ ಇರುವದೇ ಇಲ್ಲಿ. ಸುಮ್ಮ ಸುಮ್ಮನೇ ಅವರು‌ ಮಾಯೆಯನ್ನು ಮೀರುವ  ಮಾತನಾಡುವದಿಲ್ಲ. ಅದು ಅಷ್ಟು ಸರಳವೂ ಅಲ್ಲ. ಅಂತೆಯೇ ಮೆಡ್ಲೇರಿ ಶಿವಲಿಂಗನೆಂಬ ಈ ವಚನಕಾರ  ಇಲ್ಲಿ ಮೋಹದ‌ ಮಾಯೆಯ ಸ್ವರೂಪವನ್ನು ವಿವರಿಸುತ್ತಾನೆ. ಕಾಮ ಕಾಡುವ ಮಾಯೆಯಾದರೂ ಗಂಡು ಹೆಣ್ಣುಗಳ ಸಂಗ ಸುಖದಿಂದ ಪಾರಾದವರು ಯಾರು? ಪಾರಾಗಬೇಕೆಂದು ಬಯಸಿದವರಾದರೂ ಪಾರಾಗಿದ್ದಾರೆಯೆ? ಶಿವನಾದರೂ‌ ಪಾರಾದನೇ,?ಎಂಬ ಅವನ‌ ಪ್ರಶ್ನೆ ನಿಜವಾದದ್ದಿದೆ.ಎಲ್ಲರೂ ಮಾತನಾಡುವ ವರೇ ಮೀರಿದವರು ಯಾರು? ಸರ್ವಜ್ಞ ಕವಿ ಮಾತಿನೊಳಗೆಲ್ಲರೂ ಶುಚಿ ವೀರ ಸಾಧುಗಳು ಎಂದು ಸುಮ್ಮನೇ ಎಚ್ಚರಿಸಿಲ್ಲ. ಆದ್ದರಿಂದಲೇ ವಚನಕಾರ  “ಬಿಗಿದ ಕುಚವು ಉರದ ಮಧ್ಯವು ಲಿಂಗಾಕಾರವು ಮಹೇಶ್ವರಗೂ ಪ್ರಿಯವು” ಎಂದು ಸಾಂಕೇತಿಕವಾಗಿ ಬಣ್ಣಿಸುತ್ತಾನೆ.ಇಡೀ ವಚನ ಒಂದು ಸಾಂಕೇತಿಕ ಭಾಷೆಯಲ್ಕಿಯೇ ಹೆಣೆಯಲ್ಪಟ್ಟಿರುವದು ವಿಶೇಷ. ಅದು ಕೇವಲ ಮೋಹವನ್ನು ಉಂಟು ಮಾಡುವ ದೇಹದ  ಅಂಗ ಭಾಗ ಮಾತ್ರವಾಗಿರದೆ ‘ಸನ್ಮೋಹ ಅಮೃತಸಾರವೂ ‘ಆಗಿರುವಂತೆ ಇಳೆ ಉತ್ಪತ್ಯಕ್ಕೆ ಆಧಾರವೂಆಗಿದೆ.ಹಾಗಾಗಿ ಲೋಕದಲ್ಲಿ ಜನಿಸಿದ ಮೇಲೆ ಗಂಡು ಹೆಣ್ಣೆಂಬ ಭಾವಕ್ಕೆ ಬಂಧಿಯಾದ ಮೇಲೆ, ಇಂಥ‌ “ಮೋಹ ಪ್ರಿಯವಾದ ಮೋಹಿನಿಯರ ಅಗಲುವದೆಂತೋ‌ ಕರಸ್ಥಲದ ಇಷ್ಟಲಿಂಗೇಶ್ವರಾ! ” ಎಂದು ವಚನಕಾರ ಉದ್ಘಾರವೆತ್ತುತ್ತಾನೆ. ಇಡೀ ವಚನ ಮಾಯೆಯ ನ್ನು ಸಂಸಾರವನ್ನು ಗಂಡು ಹೆಣ್ಣಿನ ಒಲವನ್ನು ದೂಷಿಸದೆ ಅದು ಜಗತ್ತಿಗೆ ಅಗತ್ಯ.ಅದನ್ನು ಹೊಂದುವದರಲ್ಲಿ ಯಾವ ತಪ್ಪೂ ಇಲ್ಲ.ಆದರೆ ಅಲ್ಲೊಂದು ಸಾಮಾಜಿಕ ಒಪ್ಪಿತ ದಾರ್ಮಿಕ‌ ನೀತಿ ಇರಬೇಕಾದದ್ದು ಅವಶ್ಯ ಎನ್ನುವದನ್ನು ಸೂಚ್ಯವಾಗಿ ಚಿತ್ರಿಸಿದೆ. ಅಕ್ಕ ‘ಹಾವಿನ ಬಾಯ ಹಲ್ಲ ಕಳೆದು ಹಾವ ನಾಡಿಸ ಬಲ್ಲಡೆ ಹಾವಿನ ಸಂಗವೇ ಲೇಸ ಕಂಡಯ್ಯ’ ಎಂ ದಿರುವದಾಗಲಿ ಬಸವಣ್ಣನವರು ‘ಹೆಣ್ಣಿನಲಿ‌ ಮನವಾದಡೆ  ಮದುವೆಯಾಗುವದು’ ಎಂದಿರುವದಾಗಲಿ ಮಾಯೆಯನ್ನು ಹೊಂದಿಸಿಕೊಂಡು‌ಹೋಗುವದರಲ್ಲಿಯೇ ಮಾಯೆಯ ಗೆಲ್ಲುವ ವಿಧಾನವಿದೆ ಎಂದು ಸೂಚಿಸಿದ್ದರು ದಾಸಿಮಯ್ಯನವರು ಬಂದುದ ಬಳಸುವಳು ತಂದುದ ಪರಿಣಾಮಿಸುವಳು ಬಂಧುಗಳ‌ಮರೆಸುವಳು ಇದು‌ಕಾರಣ ದುಗ್ಳೆಯ ತಂದು ಬದುಕಿದೆನು ಕಾಣಾ ರಾಮನಾಥಾ ಎಂದು ತಮ್ಮ ಸ್ತ್ರೀಯನ್ನು ಸ್ತುತಿಸಿದ್ದರು. ಹೀಗೆ ವಚನಕಾರರ ನಂತರ ವಚನಕಾರರ ಸಾಲಿನಲ್ಲಿಯೆ ಬಂದ ಶರಣರೂ ಬಸವಾದಿ ಶಿವಶರಣರು ಸಾರಿದ ಧನಾತ್ಮಕ ಚಿಂತನೆಯನ್ನು ಮುಂದುವರೆಸಿದ್ದರು ಎನ್ನುವದಕ್ಕೆ ಇಂಥ ವಚನಗಳು ಸಾಕ್ಷಿಯಾಗುತ್ತವೆ.

ವಚನ ಚಿಂತನೆ Read Post »

ಇತರೆ, ಜೀವನ

ಕಾಲ ಎಂದಿಗೂ ನಿಲ್ಲುವದಿಲ್ಲ

ಸ್ಮಿತಾ ಭಟ್ ಮಿಲಿಯನ್ ಗಟ್ಟಲೆ ವರ್ಷಗಳಿಂದ ಈ ಭೂಮಿಯ ಮೇಲೆ ಏನೆಲ್ಲ ಸಂಭವಿಸಿತೋ ಇಂದಿನವರೆಗೂ ಯಾರಿಗೂ ಸ್ಪಷ್ಟವಾದ ಮಾಹಿತಿ ಇಲ್ಲ. ಹೀಗಿತ್ತು,ಹಾಗಿತ್ತು,ಏನೋ ನಡೆದಿತ್ತು, ಎಂದು ಇತಿಹಾಸ ಪುಟಗಳಿಂದ ಅಷ್ಟೊ ಇಷ್ಟೊ ತಿಳಿಯುತ್ತೇವೆ,ಮತ್ತೊಂದಿಷ್ಟು ನಮ್ಮ ಊಹೆ. ಕಾಲದ ಜೊತೆಗೆ ಎಲ್ಲವೂ ಉರುಳುತ್ತವೆ ಎನ್ನುವದು ನಿತ್ಯ ಸತ್ಯ. ಸವೆದ ಹೆಜ್ಜೆಗಳ ಜಾಡು ಎಷ್ಟರ ಮಟ್ಟಿಗೆ ಇಂದು ಉಳಿದುಕೊಂಡಿದೆ.ಎಲ್ಲವೂ ಮಸುಕಾಗುತ್ತಲೇ ಹೋಗುತ್ತದೆ. ಹೊಸ ನೀರಿಗೆ ಹಳೆಯ ನೀರು ಕೊಚ್ಚಿಹೋಗಿ ಸಮುದ್ರಸೇರಿ ಅಸ್ತಿತ್ವವನ್ನೇ ಕಳೆದುಕೊಂಡಂತೆ. ಆಳಿದ ರಾಜ, ಕಟ್ಟಿದ ಕೋಟೆ,ಜಾರಿಯಾದ ನಿಯಮ,ತ್ಯಾಗದ ಬದುಕು,ಮಾಡಿದ ಯುದ್ಧ ಮಹಾ ಮಹಾ ರೋಗ, ಪ್ರತಿಯೊಂದು ಅಂದರೆ ಪ್ರತೀಯೊಂದೂ ಕಾಲ ತನ್ನ ಗರ್ಭದೊಳಗೆ ಎಲ್ಲವನ್ನೂ ಕರಗಿಸಿ ಬಿಡುತ್ತದೆ.ಮರೆಸಿ ಬಿಡುತ್ತದೆ. ಕಾಲಕ್ಕೆ ಮಾತ್ರ ಆ ಶಕ್ತಿ ಇರುವದು. ಇಷ್ಟೆಲ್ಲ ಗೊತ್ತಿದ್ದೂ ನಾವೇಕೆ ಪ್ರತೀ ಸಂದರ್ಭದಲ್ಲೂ ಭಯ ಬೀಳುತ್ತೇವೆಯೋ ಗೊತ್ತಿಲ್ಲ. ಇಂದು ಇದ್ದಂತೆ ನಾಳೆ ಇರಲಾರದು ನಿತ್ಯವೂ ಬೆಳಗುವ ಸೂರ್ಯ ಹೊಸಭರವಸೆಯನ್ನಂತೂ ತರುತ್ತಾನೆ. ಆದರೆ ಅದಕ್ಕೆ ತರೆದುಕೊಳ್ಳುವ ಮನಸ್ಥಿತಿಯಾಗಲಿ, ದಾರಿಯಾಗಲಿ ನಮಗೆ ಗೋಚರಿಸುವದೇ ಇಲ್ಲ. ನಾಳೆ ನಮಗೇನಾಗುತ್ತದೋ,ನೌಕರಿ ಉಳಿಯುತ್ತದಾ? ಮನೆ ಖರೀದಿಸಲು ಆಗುತ್ತದಾ? ಏನೇನೋ ಕೆಲಸಗಳನ್ನು ಎತ್ತಿಟ್ಟುಕೊಂಡಿದ್ದೆ ಅದನ್ನೆಲ್ಲ ಮುಗಿಸುತ್ತೇನಾ? ಅಕಸ್ಮಾತ್ ಸತ್ತೇ ಹೋದರೆ!? ನಮ್ಮ ಆಲೋಚನೆಗಳು ಹೀಗೆ ಒಂದರ ಹಿಂದೊಂದು ಗಿರಕಿ ಹೊಡೆಯುತ್ತಲೇ ಹೋಗುತ್ತದೆ. ಬೇಕು ಎಲ್ಲವೂ ಬದುಕಿರುವವರೆಗೆ ನಿಜ ಆದರೆ ಬದುಕುವದೇ ಆಸೆಗಳಿಗೆ ಅಂತಾಗಬಾರದು ನಮ್ಮ ಸಮಯ ಯಾವ ಕ್ಷಣ ಬೇಕಾದರೂ ಮುಗಿಯಬಹುದು ಅದಕ್ಕೊಂದು ಸಿದ್ದತೆ ಸದಾ ಬೇಕು. ಬದುಕು ನಶ್ವರ ಎಂದು ಎದ್ದು ಹೊರಟ ಬುದ್ದನನ್ನು ನಾವು ಪ್ರೀತಿಸುತ್ತೇವೆ, ಆದರೆ ಅವನ ತತ್ವಗಳನ್ನು ಮರೆಯುತ್ತೇವೆ. ಜಗತ್ತಿಗೆ ಬರುವ ಅಪಾಯಗಳು ಇಂದು ನಿನ್ನೆಯದಲ್ಲ ಅಯಾಯಾ ಕಾಲಕ್ಕೆ ತಕ್ಕಂತೆ ಗಂಡಾಂತರಗಳು,ಅವಘಡಗಳು, ಪ್ರಕೃತಿ ವಿಕೋಪಗಳು,ಸಾವು ನೋವುಗಳು ಸಂಭವಿಸುತ್ತಲೇ ಬಂದಿದೆ. ಮತ್ತೆ ಹೊಸದಾಗಿ ರೂಪಗೊಂಡಿದೆ ಕೂಡಾ ಒಮ್ಮೆ ಪ್ರಳಯ ಕಾಲ ಸನ್ನಿಹಿತ ವಾದಾಗ  ವೈವಸ್ವತ ಮನುವನ್ನು ಕುರಿತು ವಿಷ್ಣು ಹೇಳುತ್ತಾನೆ. ಸದ್ಯದಲ್ಲೇ ಮಹಾ ಪ್ರಳಯ ವೊಂದು ಸಂಭವಿಸಲಿದೆ ಒಂದು ದೊಡ್ಡ ಹಡಗನ್ನು ತೆಗೆದುಕೊಂಡು ಅದರಲ್ಲಿ ವೇದಗಳನ್ನೂ, ಕೆಲವು ಪ್ರಾಣಿಗಳನ್ನೂ,ಸಸ್ಯಗಳ ಬೀಜಗಳನ್ನೂ, ಶೇಖರಿಸಿಡು. ನೀನು ಮತ್ತು ನಿನ್ನ ಪತ್ನಿ ಅದರೊಳಗೆ ಜೀವಿಸಿ.  ಆ ಹಡಗಿನ ರಕ್ಷಣೆ ನನ್ನದು ಎನ್ನುತ್ತಾನೆ. ಒಂದು ದಿನ ಇಡೀ ಭೂಮಿಯೇ ನೀರಿನಿಂದ ತುಂಬಿ ಮಹಾಪ್ರಳಯವೊಂದು ಸಂಭವಿಸಿಯೇ ಬಿಡುತ್ತದೆ. ವಿಷ್ಣು ಮೀನಿನ ರೂಪದಲ್ಲಿ ಬಂದು ಹಡಗನ್ನು ತನ್ನ ಕೋರೆಹಲ್ಲಿಗೆ ಕಟ್ಟುವಂತೆ ಮನುವಿಗೆ ಹೇಳಿ ಪ್ರವಾಹಕ್ಕೆ ನುಚ್ಚು ನೂರಾಗುವಂತಿದ್ದ ಹಡಗಿಗೆ ರಕ್ಷಣೆ ಕೊಡುತ್ತಾನೆ.  ವರ್ಷಗಳ ನಂತರ ಪ್ರವಾಹ ತಗ್ಗಿದ ಮೇಲೆ ಮತ್ತೆ ಸೃಷ್ಟಿಯ ಕಾರ್ಯ ನಿಧಾನವಾಗಿ ಆರಂಭವಾಗುತ್ತದೆ. ಅದೇ ಕೂಡಿಟ್ಟ ಬೀಜಗಳು ಮನುವಿನ ಸಂಸಾರ. ಅಲ್ಲಿಂದ ದ್ವಿಗುಣವಾಗುತ್ತ ದ್ವಿಗುಣವಾಗುತ್ತ  ಬಂದ ಪ್ರತೀ ಸೃಷ್ಟಿ ಬ್ರಹತ್ ಬ್ರಹ್ಮಾಂಡವೇ ಆಗಿ ನಿಲ್ಲುತ್ತದೆ. ಸಂಪೂರ್ಣ ನಾಶ ಎನ್ನುವದು ಎಂದಿಗೂ ಅಗಿಲ್ಲ. ಅತಿ ಆಯಿತು ಎಂದು ಅನ್ನಿಸಿದಾಗೆಲ್ಲ  ಕಾಲಚಕ್ರದ ಸುಳಿಗೆ ಸಿಲುಕಿಸಿ ಮತ್ತೆ  ಗರ್ಭದೊಳಗೆ ಎಳೆದುಕೊಂಡೇ ಬಿಡುತ್ತದೆ ಭೂಮಿ. ಇಂತಹದ್ದೊಂದು ಸಮತೋಲನದಿಂದಲೇ ಮಿಲಿಯನ್ ಗಟ್ಟಲೆ ವರ್ಷಗಳಿಂದಲೂ ಭೂಮಿ  ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡೇ ಬಂದಿದೆ. ಸೃಷ್ಟಿ, ಸ್ಥಿತಿ, ಲಯ,ಗಳ ಜವಾಬ್ಧಾರಿ ಹೊತ್ತ ತ್ರಿಮೂರ್ತಿಗಳು ಒಬ್ಬರಿಗೊಬ್ಬರು ಪೂರಕವಾಗಿಯೇ ನಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆಯಮೇಲೆ ನಮ್ಮ ಧರ್ಮ ನಿಂತಿದೆ. ಅದು ಸತ್ಯ ಕೂಡಾ ಆಗಿದೆ. ಈಗ ಬಂದಿರುವ ಕರೋನಾ ಎಂಬ ಮಹಾಮಾರಿಯಂತ ರೋಗದಿಂದ ಜಗತ್ತೇ ನಾಶವಾಯಿತು,ಇನ್ನು ಮನುಷ್ಯ ಭೂಮಿಯ ಮೇಲ ಬದುಕುವದೇ ಅಸಾಧ್ಯ,ಹಾಗಾಯಿತು ಹೀಗಾಯಿತು ಜನರು ಖಾಲಿಯೇ ಆದರು ಎನ್ನುವಂತೆ ಭಯಬೀಳಿಸುವ ಟಿ,ವಿ ಚಾನಲ್ಗಳನ್ನು ಮೈಮೇಲೆ ಎಳೆದುಕೊಂಡು ನಾವೂ ದೆವ್ವ ಬಂದವರಂತೆ ಆಡುತ್ತಿದ್ದೇವೆ. ಚಿಂತಾಜನಕರಾಗಿದ್ದೇವೆ.ಮಾನಸಿಕ ಅಸ್ವಸ್ಥರಾಗಿದ್ದೇವೆ.  ಹಿಂದೊಮ್ಮೆ ನಾವೆಲ್ಲ ಪ್ರಳಯವೇ ಸಂಭವಿಸುತ್ತದೆ ಸಂಪೂರ್ಣ ಭೂಮಿಯೇ ನಾಶವಾಗುತ್ತದೆ ಎಂದು ಅದೆಷ್ಟು ಬೊಬ್ಬೆ ಹೊಡೆದು ಕೊಂಡಿಲ್ಲ ಹೇಳಿ. ಅಯ್ಯೋ ಅಜ್ಜೀ ಇದೆಲ್ಲ ಯಾವಾಗ ಮುಗಿತದ್ಯೋ ಏನ್ ಕಥೆನೋ ಎಷ್ಟೊಂದು ಕಷ್ಟ ಅನುಭವಿಸುತ್ತಿದ್ದಾರೆ. ಎಲ್ಲಾ ವಿಚಿತ್ರ ಆಗೋಯ್ತು ಜಗತ್ತೇ .ಅಂತ ಗೊಣಗುತ್ತಿದ್ದೆ.  ಸುಮಾರು 85 ವರ್ಷದ ಅಜ್ಜಿ ಹೇಳುತ್ತಿದ್ದರು. ಅಯ್ಯೊ ಕೂಸೇ ನನ್ನ ಅಜ್ಜಿಯ ಕಾಲದಲ್ಲಿ ಇಂತಹದ್ದೇ ಒಂದು ಮಹಾ ಮಾರಿ ರೋಗ ಬಂದಿತ್ತಂತೆ. “ಗಾಂಡ್ ಗುಂದಿಗೆ” ರೋಗ ಅಂತಿದ್ರು ಅದಕ್ಕೆ. ಊರಿಗೆ ಊರೇ ಖಾಲಿ ಅಗ್ತಿತ್ತು. ಸುಡೋಕು ಯಾರೂ ಇರ್ತಿರಲಿಲ್ಲ ಗೊತ್ತಾ!? ಏನೂ ಔಷಧ ಇಲ್ಲದೇ ಇರೋ ಕಾಲ್ದಲ್ಲೇ ಅದನ್ನೇ ಗೆದ್ದು ಬಂದಿಲ್ವ ನಾವೆಲ್ಲ. ಮತ್ತೆ ಎಷ್ಟು ಬೆಳೆದಿದೆ ನೋಡು ಜನಸಾಗರ.ಸುಮ್ನೇ ಚಿಂತೆ ಮಾಡ್ತಾರೆ ಜನ.ಏನೂ ಆಗಲ್ಲ ಭಗವಂತಂಗೆ ಎಲ್ಲ ಗೊತ್ತಿರ್ತದೆ ಸುಮ್ಕಿರು ಅಂದ್ಬಿಟ್ಲು. ಯಾವ ರೋಗದ ಕುರಿತು ಅಜ್ಜಿ ಮಾತಾಡಿದ್ಲು ಗೊತ್ತಿಲ್ಲ. ಅದ್ರೆ ಬಂದಿದ್ದು ಸತ್ಯ ಅದಕ್ಕೆ ಪುರಾವೆಗಳನ್ನೂ ಕೊಡುತ್ತಿದ್ರೆ ಮೈ ಜುಂ ಎಂದಿತು ಆಗಲೇ ಅನ್ನಿಸಿದ್ದು ಆಗಬಾರದ್ದು ಏನು ಆಗಿದೆ ಈಗ. ನಿಜ ಜನರ ಸಾವು, ನೋವು, ಆಕ್ರಂದನ, ಮನಸನ್ನು ಘಾಸಿಗೊಳಿಸುತ್ತವೆ. ಆದರೆ ಬದುಕಿರುವವರು ನಮ್ಮಿಂದ ಸಾದ್ಯವಾದಷ್ಟು ಮಾನವೀತೆಯಿಂದ, ವಿಧೇಯರಾಗಿ ಯೋಚಿಸಿದರೆ, ನಡೆದುಕೊಂಡರೆ ಸಾಕಲ್ಲವೇ ಇನ್ನೊಂದು ಜೀವ ತನ್ನಿಂದ ತಾನೇ ಉಸಿರಾಡುತ್ತದೆ. ಸಾಯುವ ಪ್ರತೀ ಜೀವವನ್ನು ರಕ್ಷಿಸಲು ಯಾರಿಂದಲೂ ಸಾದ್ಯವಿಲ್ಲ ಸಾದ್ಯವಿದ್ದಷ್ಟು ಮಾಡ ಬಹುದಲ್ಲ. ಆ ನಿಟ್ಟಿನಲ್ಲಿ ಸಾಕಷ್ಟು ಜನ ಡಾಕ್ಟರ್ ಗಳು ಪೋಲೀಸರು ದಾದಿಯರು ಕಾರ್ಮಿಕರು ದಿನ,ರಾತ್ರಿ ಇಲ್ಲದೇ ದುಡಿಯುತ್ತಲೇ ಇದ್ದಾರೆ. ಕೇವಲ ಅವರಷ್ಟೇ ದುಡಿದರೆ ತ್ಯಾಗ ಮಾಡಿದರೆ ಸಾಕೇ? ಪ್ರತಿಯೊಬ್ಬ ಮನುಷ್ಯನಿಗೂ ಅವನದೇ ಆದ ಕರ್ತವ್ಯಗಳಿದೆ ಅದನ್ನು ನಿಸ್ವಾರ್ಥತೆಯಿಂದ ಮಾಡಬೇಕಿದೆ. “ಕರ್ಮಣ್ಯೇವಾ ದಿಕಾರಸ್ತೇ ಮಾ ಫಲೇಷು ಕದಾಚನ” ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿದ್ದಾನೆ ಫಲಾ ಫಲಗಳ ಅಪೇಕ್ಷೆ ಬೇಡಾ ಕೇವಲ ಕರ್ಮಗಳನ್ನು ಮಾಡು ಎಂದು ಅವರವರ ಕರ್ಮಳಿಗನುಸಾರ ಬದುಕನ್ನು ಭಗವಂತ ಕರುಣಿಸಿಯೇ ಕರುಣಿಸುತ್ತಾನೆ ಮತ್ತೇಕೆ ಭಯ. ಆಡಂಬರವಿಲ್ಲದೇ ಜೀವಿಸುವುದ ಕಲಿಯಬೇಕಿದೆ. ಮನುಕುಲಕ್ಕೊಂದು ಪಾಠ ಕಲಿಸಲೆಂದೇ ಈ ಕರೋನಾ ಬಂದಿದೆಯೇನೋ ಅನ್ನಿಸುತ್ತದೆ ಬಹಳ ಸಲ. ಸುಮ್ಮನೇ ಭಯಬೀಳುವದರಲ್ಲಿ ಅರ್ಥವಿಲ್ಲ ಒಂದಿಷ್ಟು ಜಾಗೃತೆಯಲ್ಲಿ ಜೀವಿಸಿದರೆ ಆಯಿತು. ಮುಂದಿನದು ದೈವ ಚಿತ್ತ ಎನ್ನುವ ಮನೋ ಬಲ ತಂದುಕೊಳ್ಳಬೇಕು. ಮನುಷ್ಯರಿಗಿಂತಲೂ ಅಬಲರಾದ, ಯಾವ ಪ್ರಾಣಿ, ಪಕ್ಷಿ ,ಮರಗಳು, ಯಾರಿಂದಲೂ ಏನನ್ನೂ ಬೇಡುವದಿಲ್ಲ, ತಮ್ಮ ತಮ್ಮ ಸ್ವಪ್ರಯತ್ನದಿಂಲೇ ಬದುಕುತ್ತವೆ. “ಸರ್ವೆವೈಲ್ ಆಪ್ ದಿ ಫಿಟ್ಟೆಸ್ಟ್”ಎನ್ನುವ ಡಾರ್ವಿನ್  ಸಿದ್ದಾಂತ ಎಂದಿಗೂ ಸತ್ಯವೇ ಆಗಿದೆ. ಹುಟ್ಟು ಸಾವುಗಳಿಂದ ಯಾರೂ ತಪ್ಪಿಸಿಕೊಳ್ಳಲಾರರು. ಬಂದೊದಗಿದ ಭಯದಿಂದ ಹೊರಗೆ ಬನ್ನಿ ವಿಷಾಲವಾಗಿ ಯೋಚಿಸಿ ಹೊಸಬೆಳಕಿನ ಕಿರಣವೊಂದು ನಮಗಾಗಿ ಸ್ವಾಗತಿಸುತ್ತದೆ. *************

ಕಾಲ ಎಂದಿಗೂ ನಿಲ್ಲುವದಿಲ್ಲ Read Post »

ಇತರೆ

ಶಿಶುಗೀತೆ

ತಲ ಷಟ್ಪದಿಯಲ್ಲಿ ಶಿಶುಗೀತೆ ತೇಜಾವತಿ ಹೆಚ್. ಡಿ ಗೊಲ್ಲನೊಬ್ಬತೋಟದೊಳಗೆಕುರಿಯ ಮಂದೆ ಹಾಕಿದ |ಭಾರ ಹೊರಲುಕತ್ತೆ ಹಿಂಡುಎತ್ತು ಕುದುರೆ ಸಾಕಿದ || ಬೇಟೆಗೆಂದುನಾಯಿ ತಂದುಚತುರ ಸುಂಕು ಕಲಿಸಿದ |ಎಲ್ಲ ಸೇರಿಕೂಡಿ ಬಾಳ್ವಪ್ರೇಮವನ್ನು ಬೆಳೆಸಿದ || ನಿತ್ಯ ತಾನುಬೇಗ ಎದ್ದುಕುರಿಯ ಕಾಯತೊಡಗಿದ|ಸಂಜೆಯೊಳಗೆಮರಳಿ ಬಂದುತನ್ನ ಗೂಡ ಸೇರಿದ || ಒಂದು ಇರುಳುಹೊಂಚು ಹಾಕಿತೋಳವೊಂದು ಬಂದಿತು|ರೊಪ್ಪದೊಳಗೆಇದ್ದ ಕುರಿಯಮರಿಯ ನೋಡಿ ನಲಿಯಿತು|| ಇಂದು ಎನಗೆಹೊಟ್ಟೆ ತುಂಬಾರುಚಿಯ ಬೇಟೆ ಎನ್ನುತ|ಓಡಿ ಬಂದುಮರಿಯ ಮೇಲೆಹಲ್ಲು ನೆಟ್ಟು ಎರಗಲು|| ನಿದ್ರಿಸಿದ್ದನಾಯಿ ತಾನುಒಂದೇ ಸಮನೆ ಬೊಗಳಲು|ಕತ್ತೆ ಕೂಡಎದ್ದು ನಿಂತುಕಾಲು ಕೊಡವಿ ಅರಚಿತು|| ಶಬ್ಧ ಕೇಳಿಗೊಲ್ಲ ತನ್ನಡೇರೆಯಿಂದ ಬಂದನು|ಸುತ್ತಮುತ್ತಹುಡುಕಿ ಒಂದುಭಾರೀ ಕೋಲು ತಂದನು|| ಬೀಸಿ ಒಮ್ಮೆಕಾಲು ತಲೆಗೆಸಿಟ್ಟಿನಿಂದ ಹೊಡೆಯಲು|ಕೋಲು ತಗುಲಿಮುರಿದು ಕಾಲುಕುಂಟು ತೋಳವಾಯಿತು|| ಬಂದ ದಾರಿಸುಂಕವಿಲ್ಲಎಂದು ಹೆದರಿ ತೋಳವು|ಬೆಪ್ಪು ಮೋರೆಹಾಕಿಕೊಂಡುತನ್ನ ದಾರಿ ಹಿಡಿಯಿತು || ಗಾಯಗೊಂಡಕುರಿಯ ಮರಿಯುಮರಳಿ ಮಡಿಲ ಸೇರಿತು |ಅಂದಿನಿಂದಗೊಲ್ಲ ಮುಂದೆಜಾಗರೂಕನಾದನು || *************

ಶಿಶುಗೀತೆ Read Post »

ಇತರೆ

ಮರಳಿಗೂಡಿಗೆ

ಲಹರಿ ಅನುಪಮಾ ರಾಘವೇಂದ್ರ                              “ಎಲ್ಲಿ ಹೋದರೂ ಹಿಂತಿರುಗಿ ಮನೆಗೆ ತಲುಪುವವರೆಗೆ ಮನಸ್ಸಿಗೆ ಸಮಾಧಾನವೇ ಇಲ್ಲ”  ಎಂಬ  ಭಾವ ಮೂಡಿದಾಗಲೇ  ‘ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಮಾತು ಎಷ್ಟು ಅರ್ಥಪೂರ್ಣ ಅನಿಸಿದ್ದು.       ತಿಂಗಳ ಹಿಂದೆ ಹಕ್ಕಿಯೊಂದು ನಮ್ಮ aಮೊಟ್ಟೆಗಳನ್ನಿಟ್ಟು,ಕಾವು ನೀಡಿ , ಮರಿ ಮಾಡಿತ್ತು. ಅಷ್ಟು ದಿನಗಳಲ್ಲಿಯೇ ಆ ಹಕ್ಕಿ ಸಂಸಾರ ಹಾಗೂ ನನ್ನ ಮಧ್ಯೆ ಅನಿರ್ವಚನೀಯ ಬಂಧವೊಂದು ಬೆಳೆದುಬಿಟ್ಟಿತ್ತು. ಆ ಮರಿಗಳ ರೆಕ್ಕೆ ಬಲಿಯುವವರೆಗೂ ತಾಯಿ ತಂದೆ ತಾವೇ ಆಹಾರ ತಂದು ಬಾಯಿಗೆ ಕೊಟ್ಟು ಸಾಕುತ್ತಿದ್ದವು. ಆ ಮರಿಗಳ ರೆಕ್ಕೆ ಬಲಿತಾಗ ಎಲ್ಲ ಹಕ್ಕಿಗಳೂ ಗೂಡು ಬಿಟ್ಟು ಹೋಗಿದ್ದವು. ನನಗೊಂದು ಸಂಶಯ……. ‘ಹಾರಿ ಹೋದ ಮೇಲೆ ಮರಿಗಳಿಗೂ ,ಅದರ ಹೆತ್ತವರಿಗೂ ಯಾವ ರೀತಿಯ ಸಂಬಂಧವಿರಬಹುದು…?’ ಆ ಮರಿಗಳು ತಮ್ಮ ಹೆತ್ತವರ ಬಗ್ಗೆ ಚಿಂತೆ ಮಾಡುತ್ತವೆಯೋ………ಇಲ್ಲವೋ…….. ಆ ದೇವರೇ ಬಲ್ಲ. ಈಗಿನ ಕಾಲದಲ್ಲಿ ತಿಳುವಳಿಕೆಯುಳ್ಳ ಮನುಷ್ಯರೇ ತಮ್ಮ ಹೆತ್ತವರ ಜವಾಬ್ದಾರಿ ವಹಿಸದೆ ನುಣುಚಿಕೊಳ್ಳುವುದು ಸರ್ವೇ ಸಾಮಾನ್ಯ. ಹೀಗಿರುವಾಗ ಪ್ರಾಣಿ ಪಕ್ಷಿಗಳಲ್ಲಿ ಯಾವ ಬಂಧ….? ಆ ಹಕ್ಕಿಗಳು ಹಾರಿ ಹೋದ ಮೇಲೆ ಏನೋ ಕಳಕೊಂಡ ಅನುಭವ ನನಗೆ. ಹೆರಿಗೆಗೆ ತವರಿಗೆ ಬಂದ ಮಗಳನ್ನು ಬಾಣಂತನ ಮಾಡಿ ಕಳುಹಿಸಿ ಕೊಟ್ಟ ಭಾವ….. ಮಗಳ ಹೆಜ್ಜೆಯ ಸಪ್ಪಳದ ತಾಳವಿಲ್ಲ…. ಮಗುವಿನ ಅಳುವಿನ ಇಂಪಾದ ರಾಗವಿಲ್ಲ. ಈಗ ಎಲ್ಲೆಲ್ಲೂ ಕರ್ಣ ಕಠೋರ ಮೌನರಾಗ ಮಾತ್ರ !       ಹಾಗೂ ಹೀಗೂ ಒಂದು ತಿಂಗಳು ಕಳೆದಿತ್ತು. ಅದೊಂದು ದಿನ ಹಟ್ಟಿಯ ಬಳಿ ಏನೋ ಕೆಲಸದಲ್ಲಿದ್ದೆ. ಹಕ್ಕಿಯೊಂದು ಏನನ್ನೋ ಕಚ್ಚಿಕೊಂಡು ಹಾರಿ ಹಟ್ಟಿಯೊಳಗೆ ಬರುವುದು ಕಂಡಿತು. ಹತ್ತಿರ ಹೋದರೆ ಅದು ಓಡಿ ಹೋಗಬಹುದೆಂದು ಅಂಜಿ ದೂರದಿಂದಲೇ ಗಮನಿಸಿದೆ. ಹೋ….. ಅದೇ ಹಕ್ಕಿ….. ಅಂದು ಇಲ್ಲೇ ವಾಸವಾಗಿತ್ತಲ್ಲಾ….. ನನ್ನ ಮನಸ್ಸೂ ರೆಕ್ಕೆ ಬಿಚ್ಚಿ ಹಾರತೊಡಗಿತು. ಗೂಡಿನ ಕಡೆಗೆ ಹೋದ ಹಕ್ಕಿ ಒಂದೆರಡು ಕ್ಷಣದಲ್ಲೇ ವಾಪಾಸು ಬಂದು ಕಿಚ ಪಿಚ ಹಾಡುತ್ತಾ ನನ್ನ ಸುತ್ತ ಮುತ್ತ ತಿರುಗಿ ಹೊರಗೆ ಹಾರಿತು. ಮರಳಿ ಗೂಡಿಗೆ ಬಂದೆ ಎಂಬ ಸೂಚನೆ ನೀಡಿತ್ತೋ…… ಅದರ ಗೂಡನ್ನು ಹಾಳುಗೆಡಹದೆ ಹಾಗೇ ಇಟ್ಟದ್ದಕ್ಕೆ ಧನ್ಯವಾದ ಹೇಳಿತ್ತೋ ……… ಹಕ್ಕಿಗಳ ಭಾಷೆಯನ್ನು ಅರ್ಥ ಮಾಡಿಕೊಳ್ಳುವಂತಿದ್ದರೆ ಎಷ್ಟು ಚೆನ್ನ ಅನಿಸಿತ್ತು.    ನಮ್ಮ ಮನೆಯ ಸುತ್ತ ಮುತ್ತ ಗಿಡ ಮರಗಳಲ್ಲಿ ಹತ್ತು ಹಲವು ಹಕ್ಕಿಗಳು ಬಂದು ಗೂಡು ಕಟ್ಟಿ, ಮೊಟ್ಟೆ ಇಟ್ಟು , ಮರಿ ಮಾಡಿ ಹಾರಿ ಹೋಗಿವೆ. ಯಾವ ಹಕ್ಕಿಗಳನ್ನೂ ನಾನು ಇಷ್ಟೊಂದು ಹಚ್ಚಿಕೊಂಡಿಲ್ಲ. ಆ ಹಕ್ಕಿಗಳು ಹಾರಿ ಹೋದ ಮೇಲೆ ಆ ಗೂಡು ಅಲ್ಲೇ ಅನಾಥವಾಗಿ ಬಿದ್ದಿರುವುದು ಸಾಮಾನ್ಯ. ಕೆಲವು ದಿನಗಳು  ಕಳೆದ ಮೇಲೆ ಆಕರ್ಷಕವಾಗಿರುವ ಆ ಗೂಡುಗಳನ್ನು  ನನ್ನ ಸಂಗ್ರಹಾಲಯದೊಳಗೆ ಸೇರಿಸಿಕೊಳ್ಳುವುದು ನನ್ನ ಅಭ್ಯಾಸ. ಆದರೆ ಯಾಕೋ ಏನೋ… ಹಟ್ಟಿಯಲ್ಲಿದ್ದ ಗೂಡು ಒಂದು ತಿಂಗಳಿನಿಂದ ಅನಾಥವಾಗಿದ್ದರೂ ನನ್ನ ಸಂಗ್ರಹಾಲಯಕ್ಕೆ ಸೇರಿಸಿಕೊಳ್ಳುವ ಯೋಚನೆ ಬರಲೇ ಇಲ್ಲ. ಹಟ್ಟಿಯ ಬಳಿಗೆ ಹೋದಾಗಲೆಲ್ಲ  ನನ್ನ ಕಣ್ಣು ಓಡುತ್ತಿದ್ದದ್ದು ಆ ಗೂಡಿನ ಕಡೆಗೆ.          ಮರುದಿನ ಮಾಮೂಲಿನಂತೆ ಹಟ್ಟಿಯ ಬಳಿಗೆ ಹೋದಾಗ ಹಕ್ಕಿ ಪುರ್ರನೆ ಹಾರಿ ಹೋಯಿತು. ಮೆಲ್ಲನೆ ಇಣುಕಿ ನೋಡಿದೆ. ಮೂರು ಮೊಟ್ಟೆ. ಹೋ…… ಇನ್ನೊಂದು ಬಾಣಂತನದ ತಯಾರಿ…… ಹಕ್ಕಿಗೆ ತಿನ್ನಲು ಕಾಳು ಹಾಕಬೇಕು, ನಾಯಿ , ಬೆಕ್ಕುಗಳ ಕಣ್ಣು ಬೀಳದಂತೆ ಜಾಗ್ರತೆ ವಹಿಸಬೇಕು, ಮೊಟ್ಟೆಯೊಡೆದು ಮರಿ ಹೊರ ಬರಲು  ಕಾಯಬೇಕು , ಅದು ಹಾರಲು ಕಲಿಯುವುದನ್ನು ಕದ್ದು ನೋಡಬೇಕು , ನನ್ನ ಮೊಬೈಲಲ್ಲಿ ಸೆರೆ ಹಿಡಿಯಬೇಕು. ಅಬ್ಬಾ…..ಎಷ್ಟೆಲ್ಲಾ ಕೆಲಸ . ಸಂಭ್ರಮವೋ ಸಂಭ್ರಮ. ************

ಮರಳಿಗೂಡಿಗೆ Read Post »

You cannot copy content of this page

Scroll to Top