ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

2020 ಎಂಬ ‘ಮಾಯಾವಿ ವರ್ಷ’

ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು 2020 ಎಂಬ ‘ಮಾಯಾವಿ ವರ್ಷ’ ಚಂದ್ರ ಪ್ರಭಾ.ಬಿ. . 2020 ಎಂಬ ‘ಮಾಯಾವಿ ವರ್ಷ’  ಕುದುರೆಯಂತೆ ಕೆನೆಯುತ್ತ ಆಗಮಿಸಿ ವ್ಯಾಘ್ರನಾಗಿ ಮನುಕುಲವನ್ನು ನುಂಗಿ ಆಪೋಶನ ತೆಗೆದುಕೊಂಡುದು ಇಷ್ಟರಲ್ಲೇ ಇತಿಹಾಸದ ಪುಟ ಸೇರಲಿದೆ. ಆಗಮನಕ್ಕೂ ಮುನ್ನ ಆ ಕುರಿತು ಒಬ್ಬೊಬ್ಬರಲ್ಲಿ ಒಂದೊಂದು ಬಗೆ ವಿಸ್ಮಯಕಾರಿ ನಿರೀಕ್ಷೆ ಇದ್ದುದು ನಿಜ. T20 ಎಂಬ ಚುಟುಕು ಕ್ರಿಕೆಟ್ ಮೂಡಿಸಿದ ಸಂಚಲನ ಅದಕ್ಕೆ ಕಾರಣ. T20 ಮನೆ ಮನ ಮೈದಾನ ಪ್ರವೇಶಿಸಿದ ಹೊಸತರಲ್ಲಿ ಇಷ್ಟು ಕಡಿಮೆ ಓವರ್ ನಲ್ಲಿ ಅದೆಂಥ ಆಟ? 50 ಓವರಿನಲ್ಲಿ ನಿಜವಾದ ಆಟ ಶುರುವಾಗುವುದು 20 ಓವರ್ ನಂತರ..ಅಂಥದರಲ್ಲಿ ಕೇವಲ 20 ಓವರ್ ಆಟ ಹೇಗಿದ್ದೀತು ಎಂಬುದು ಕಲ್ಪನೆಗೂ ನಿಲುಕದಂತಿತ್ತು.. ಆಟದ ಜಟಾಪಟಿ ಕಣ್ಣಿಗೆ ಕಟ್ಟುವಂತೆ ಸುಳಿದಾಡತೊಡಗಿದಂತೆಲ್ಲ ಆಟದ ಕ್ರೇಜ್ ಇನ್ನಿಲ್ಲದಂತೆ ಹೆಚ್ಚಿತು. ಸಿಕ್ಸರು,ಬೌಂಡರಿಗಳ ಭರ್ಜರಿ T20 ಆಟದ ಹಾಗೇ 2020 ರ ವರ್ಷ ನೋಡನೋಡುತ್ತಲೇ ಸರಿದು ಹೋಗುವ ಮೊದಲು ಬದುಕಿಗೆ ಭರ್ಜರಿ ಬಂಪರ್ ಕೊಟ್ಟೇ ಹೋಗುತ್ತದೆ ಎಂಬ ಉತ್ಸಾಹ, ಉಲ್ಲಾಸಭರಿತ ಚರ್ಚೆ ವಿದ್ಯಾರ್ಥಿಮಿತ್ರರು, ಸಹೋದ್ಯೋಗಿಗಳ ನಡುವೆ ಹರಿಯುತ್ತ ಇರುವಂತೇ ವರ್ಷದ ಮೂರನೇ ತಿಂಗಳ ಇಪ್ಪತ್ಮೂರನೇ ದಿನ ಬದುಕು ಲಾಕ್ಡೌನ್ ಆಗಿತ್ತು!!  ಅದಕ್ಕೆ ಕಾರಣ ಏನೇ ಆಗಿರಬಹುದು. ಆದರೆ ಪರಿಣಾಮ ಮಾತ್ರ ಕಂಡು ಕೇಳರಿಯದಂಥದು. ಚಲಿಸುತ್ತಿರುವ ಸಿನಿಮಾದ ದೃಶ್ಯವೊಂದು ಗಕ್ಕನೆ ನಿಂತು ಸ್ಟಿಲ್ ಆದಂತೆ ಬದುಕು ಚಲನೆ ತೊರೆಯಿತು. ಆಗಲೇ ಆರಂಭವಾದ ಪರೀಕ್ಷೆಗಳು ಮುಂದೂಡಲ್ಪಟ್ಟವು. ಇನ್ನೂ ಆರಂಭವಾಗಬೇಕಿದ್ದ ಪರೀಕ್ಷೆ ಅನಿಶ್ಚಿತತೆಗೆ ದೂಡಲ್ಪಟ್ಟವು. ಹತ್ತಾರು ಕಾರಣದಿಂದ ಊರು ತೊರೆದ ಜೀವಗಳಿಗೆ ತವರ ಸೇರುವ ತುಡಿತ ಕಾಡಿತು. ನೂರಾರು ಸಾವಿರಾರು ಮೈಲಿ ನಡೆದು ಸೋರುವ ಹಿಮ್ಮಡಿ, ಸೋತ ದೇಹ ಹೊತ್ತು ಉಸಿರು ಬಿಟ್ಟರೂ ತವರ ನೆಲದಲ್ಲಿ ಬಿಟ್ಟೇನು ಎನುವ ಹಂಬಲದಲ್ಲಿ ಜೀವಗಳು ಬಸವಳಿದವು. ಬಸುರಿ ಬಾಣಂತಿಯರು, ಎಳೆಯ ಜೀವಗಳು, ವೃದ್ಧರು ದಾರಿ ಮಧ್ಯೆ ಅಸು ನೀಗಿದರು. ರೈತಾಪಿ ಜನರು ತಮ್ಮ ಬೆಳೆಗೆ ಪೇಟೆ ಇಲ್ಲದೇ ಕಂಗಾಲಾದರು. ಕಾರ್ಮಿಕರು ಬೀದಿಗೆ ಬಿದ್ದರು. ಟೊಮ್ಯಾಟೊ, ಕೋಸು, ತರಾವರಿ ಬೆಳೆಗಳನ್ನು ಬೀದಿಯಲ್ಲಿ ಎಸೆದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಯ್ತು. ಮೊದಲೇ ಕಂಗೆಟ್ಟು ಹೋದ ಬದುಕಿನ ಬಂಡಿ ಮತ್ತಷ್ಟು ಹಳ್ಳ ಹಿಡಿಯಿತು. ನಾಳೆ ಹೇಗೆ ಎಂಬ ಚಿಂತೆಗಿಂತ ” ಇಂದು ” ಇನ್ನಿಲ್ಲದಂತೆ ಎಲ್ಲರನ್ನೂ ಕಾಡಿತು. ತೆರೆದರೆ ಬಾಗಿಲ ಸಂದಿಯಿಂದಲೂ ವೈರಸ್ಸು ಮನೆ ಸೇರೀತು ಎಂಬ ಆತಂಕದಲ್ಲಿ ಸರಿಯಿತು ತಿಂಗಳೊಪ್ಪತ್ತು. ಕೈಯಲ್ಲಿದ್ದ ಕಾಸು ಕರಗಿ ತಾತ್ಕಾಲಿಕ ನಿರುದ್ಯೋಗ ಕಾಡತೊಡಗಿತು. ಹಲವರಿಗೆ ಅದೇ ಶಾಶ್ವತವೂ ಆಗಿ ಪರಿಣಮಿಸಿ ಬದುಕು ದುರ್ಭರವಾಯ್ತು. ದಿಕ್ಕೆಟ್ಟ ಪ್ರಭುತ್ವ ಏನು ಮಾಡಲೂ ತೋಚದೆ ಹೆಜ್ಜೆ ಹೆಜ್ಜೆಗೂ ಎಡವಿ ಟೀಕೆಗೊಳಗಾಯ್ತು. ತಿಂಗಳುಗಳು ಕಳೆದು ಕಾರ್ಪೊರೇಟ್ ಜಗತ್ತಿನ ಎಲ್ಲ ಸನ್ಮಿತ್ರರು ಸೇಫ್ ಆದ ನಂತರ ಲಾಕ್ಡೌನ್ ರೂಪಾಂತರ ಹೊಂದಿ ಸುಳಿದಾಡತೊಡಗಿತು. ಜನಸಾಮಾನ್ಯನ ಗೋಳು ಅಂತ್ಯವಿಲ್ಲದ್ದಾಯ್ತು. ಹೊರ ಬಿದ್ದರೆ ಬೆತ್ತದ ರುಚಿ ನೋಡಬೇಕು. ಮನೆ ಒಳಗೆ ಕುಳಿತರೆ ದುಡಿವೆಯಿಲ್ಲ. ಹೊಟ್ಟೆ ಹಸಿವಿಗೆ ಚೀಲದಲ್ಲಿ ಏನಾದರೂ ತುಂಬಲೇಬೇಕು. ತುಂಬಲೇನೂ ಇಲ್ಲ! ಆ ಓಣಿಯ ಆತ ಈ ಓಣಿಯ ಈಕೆ.. ಚಿಕ್ಕ ವಯಸ್ಸಿನವರು, ವಯಸ್ಸಾದವರು ನೋಡ ನೋಡುತ್ತ ವೈರಸ್ಸಿಗೆ ಆಹುತಿಯಾದರು. ಸರಕಾರಿ ಆಸ್ಪತ್ರೆಯಲ್ಲಿ ದಾಖಲಾದವರ ಹೆಸರಿನಲ್ಲಿ ಹಲವರ ಜೇಬು ತುಂಬಿದವು. ಖಾಸಗಿ ಆಸ್ಪತ್ರೆಗಳ ಬಿಲ್ಲು ವೈರಸ್ ದಾಳಿಗಿಂತ ಭಾರವೆನಿಸಿತು. ಕಾರಣವಿಲ್ಲದೆ ಸಮುದಾಯವೊಂದನ್ನು ಟೀಕೆಗೆ ಗುರಿಪಡಿಸಿದರು ಹಲವರು. ನರಕವಾಯಿತು ಬದುಕು. ಶಾಲೆ, ಕಾಲೇಜು, ಕಚೇರಿ, ಮಿಲ್ಲು, ಫ್ಯಾಕ್ಟರಿ ಎಲ್ಲ ಕದ ಮುಚ್ಚಿದವು. ಗಿಜಿಗುಡುವ ಸಂತೆ, ಪೇಟೆ, ಚೌಕ, ವೃತ್ತಗಳು ನಿಶ್ಶಬ್ದವಾದವು. ಉದ್ದಕ್ಕೆ ಚಾಚಿಕೊಂಡ ನೀರವ ರಸ್ತೆಗಳಲ್ಲಿ ಕಾಡಿನ ಪ್ರಾಣಿಗಳು ನಿರಾತಂಕವಾಗಿ ಸಂಚಾರಗೈಯಲು ತೊಡಗಿದವು. ಫೇಸ್‌ಬುಕ್, ಟ್ವಿಟರ್ ನಂತಹ ಮಾಧ್ಯಮಗಳು ಸುರಕ್ಷಿತ ಅಂತರ ಕಾಯ್ದುಕೊಂಡೇ ಜನರನ್ನು ಬೆಸೆಯುವ ಜನಪ್ರಿಯ ಮಾಧ್ಯಮಗಳಾದವು. ಉದ್ಯೋಗಸ್ಥ ಹೆಣ್ಮಕ್ಕಳಿಗೆ ಅಡುಗೆ ಮನೆಯಲ್ಲಿ ಒಂದಷ್ಟು ಹೊತ್ತು ನಿರಾತಂಕ,   ” ಕ್ವಾಲಿಟಿ ” ಸಮಯ ಕಳೆಯುವ ಅವಕಾಶ ನಿರಾಯಾಸವಾಗಿ ಒದಗಿತು. ಒಂದರ್ಥದಲ್ಲಿ ಬಗೆ ಬಗೆ ತಿಂಡಿ ತಿನಿಸು ಮಾಡಿ ಪರಿವಾರದೊಂದಿಗೆ ಸಂಭ್ರಮಿಸುವ ಅನಿರೀಕ್ಷಿತ ಲಾಟರಿ ದಕ್ಕಿತು. ಯೂ ಟ್ಯೂಬ್ ಗೆಳತಿಯರ ನೆರವಿನಿಂದ ದಿನಕ್ಕೊಂದು ಬಗೆಯ ರೆಸಿಪಿ ಪ್ರಯೋಗಗಳು ಶುರುವಿಟ್ಟುಕೊಂಡವು. ಪ್ರೀತಿ ಪಾತ್ರರ ಆರೋಗ್ಯ ಇನ್ನಿಲ್ಲದಂತೆ ಸುಧಾರಿಸಿತು. ಬೇಕಿದ್ದರೂ ಬೇಡದಿದ್ದರೂ ಪ್ರತಿಯೊಬ್ಬರೂ ಕೆಲವಷ್ಟು ಕೆ.ಜಿ. ತೂಕ ಹೆಚ್ಚಿಸಿಕೊಳ್ಳುವಂತಾಯ್ತು. ಒಂದೇ ಪೇಜಿನಲ್ಲಿ ಬಗೆ ಬಗೆ ವ್ಯಂಜನಗಳು ಸಚಿತ್ರ ಪ್ರಕಟವಾಗುವಾಗಲೇ ಹಸಿದ ಹೊಟ್ಟೆಯ, ನಿಸ್ತೇಜ ಕಂಗಳ ಕರುಳು ಹಿಂಡುವ ಚಿತ್ರಗಳೂ ಪ್ರಕಟವಾದವು. ಸಹೃದಯರು ಹಲವರು ಗುಂಪು ಕಟ್ಟಿಕೊಂಡು ಹಸಿದ ಹೊಟ್ಟೆಗೆ ಕೈಲಾದಷ್ಟು ಸಹಾಯ ಮಾಡಿ ಮಾನವೀಯತೆ ತೋರಿದರು. ಮೂರು ಹೊತ್ತು ಅಡುಗೆ ಮನೆಯಲ್ಲಿ ಸವೆಯುವುದು ಹೆಂಗಳೆಯರಿಗೆ ಬೇಸರಿಕೆಯಾಯ್ತು. ವಿಶ್ವದಾದ್ಯಂತ ನದಿ, ಸರೋವರ, ನಾಲೆಗಳ ನೀರು ಜನ ಸಂಪರ್ಕದಿಂದ ದೂರಾಗಿ ಮಾಲಿನ್ಯ ಕಳಚಿಕೊಂಡು ಫಳಫಳಿಸಿದವು. ದಕ್ಷಿಣ  ಉತ್ತರ ಧ್ರುವದ ತುತ್ತ ತುದಿ ಶುಭ್ರಗೊಂಡವು, ದೆಹಲಿಯಂಥ ನಗರಗಳು ತುಸುವಾದರೂ ಮಾಲಿನ್ಯಮುಕ್ತವಾದೆವು, ಗಂಗೆ ಯಮುನೆಯರ ಶತಮಾನದ ಕೊಳೆ ಕಳೆಯಿತೆಂದು ಪತ್ರಿಕೆಗಳಲ್ಲಿ ವರದಿಯಾಯ್ತು. ಗೆಳತಿಯರು ಅಚ್ಚರಿ ಮೂಡಿಸುವ ಅನುಭವ ಹಂಚಿಕೊಂಡರು. ನೌಕರಿ ಅಂಬೊ ಚಾಕರಿ ಶುರುವಾದಾಗಿನಿಂದ ಶುರುವಾದ ಬಸ್ ಪ್ರಯಾಣ ತಂದ ಬೆನ್ನು ನೋವು ತಿಂಗಳಾನುಗಟ್ಚಲೆ ವಿರಾಮದಿಂದ ಕಡಿಮೆಯಾಗಿತ್ತು ಗೆಳತಿಗೆ. ಬಿದ್ದು ಕಾಲಿಗೆ ಪ್ಲಾಸ್ಟರ್ ಹಾಕಿಸಿಕೊಂಡ ಮತ್ತೊಬ್ಬಾಕೆಗೆ ಕಾಲಿನ ಉಳುಕು ಅಕ್ಷರಶಃ ಮಾಯವಾಗಿತ್ತು. ಪಾಠಗಳಿಲ್ಲದೆ ಸೊರಗಿದ ತರಗತಿಗಳಿಗೆ ತಾತ್ಕಾಲಿಕ ಪರ್ಯಾಯ ಮಾರ್ಗಗಳು ಒದಗಿ ಬಂದವು. ಪರಿಪೂರ್ಣ ಅಲ್ಲದಿದ್ದರೂ ಅಷ್ಟೋ ಇಷ್ಟೋ ಆಸರಾಯಿತು ಆನ್‌ಲೈನ್. ನಗರಗಳ ನೌಕರಿ ತೊರೆದು ಹಳ್ಳಿಗಳಿಗೆ ಹಿಂದಿರುಗಿದ ಯುವಕರು ಪಿಕಾಸಿ, ಹಾರೆ, ಗುದ್ದಲಿ ಹಿಡಿದು ಬಾವಿ,  ಹಳ್ಳ,  ಕಾಲುವೆ ತೋಡಿದರು. ಒಕ್ಕಲುತನದಲ್ಲಿ ಬದುಕಿದೆ ಎಂದು ಮನಗಂಡರು. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಕಳಕೊಂಡ  ಹಲವಾರು ಮಿತ್ರರು ತಳ್ಳು ಗಾಡಿಯಲ್ಲಿ ಹಣ್ಣು ತರಕಾರಿ ಮಾರಾಟಕ್ಕೆ ತೊಡಗಿದರು. ಅಕ್ಷರಶಃ ಗುಡಿ ಕೈಗಾರಿಕೆ ಎಂಬುದು ಸಾಕಾರಗೊಂಡಿತು. ಹಲವರು ಗೃಹ ಉದ್ಯೋಗ ಆರಂಭಿಸಿದರು.  ಇಲೆಕ್ಟ್ರಾನಿಕ್ ಮಾಧ್ಯಮಗಳನ್ನು ಮಾರಾಟಕ್ಕೆ ವೇದಿಕೆಯಾಗಿ ಬಳಸಿಕೊಂಡರು. ಅಂಚೆಯಣ್ಣ ಹೆಚ್ಚೆಚ್ಚು ಆಪ್ತನಾದ. ಆಡಂಬರ ತೆರೆಗೆ ಸರಿದು ಖರ್ಚಿಲ್ಲದ ಮದುವೆಗಳಾದವು. ಮದುವೆಗೆ ಕರೆಯದಿದ್ದರೆ ಯಾರೂ ಅನ್ಯಥಾ ಭಾವಿಸುವುದಿಲ್ಲ ಎಂಬುದು ಎಲ್ಲರಿಗೂ ಸುಲಭವಾಗಿ ಅರ್ಥವಾಯಿತು. ವೈದ್ಯೆ ಗೆಳತಿಗೆ ಫೋನ್‌ ಸಂಭಾಷಣೆಯಲ್ಲಿ ಕೇಳಿದ್ದೆ, “ಈ ಲಾಕ್ಡೌನ್ ಯಾವೆಲ್ಲ ರೀತಿ ಪರಿಣಾಮ ಬೀರಬಹುದು” ಅಂತ. “ಗಾಯ ಅಳಿದರೂ ಅಳಿಯದೇ ಉಳಿವ ಅದರ ಕಲೆಗಳಂತೆ ಶಾಶ್ವತ ವೈಕಲ್ಯ ಉಳಿಯುತ್ತೆ ಕಣೇ” ಅಂತ ನೋವಿನಿಂದ  ನುಡಿದಿದ್ದಳಾಕೆ. ಅದು ದಿನ ದಿನವೂ ಮನದಟ್ಟಾಗುತ್ತ ಸಾಗಿತು. ಎಂದಿಗಿಂತ ಹೆಚ್ಚು ಆತಂಕಕಾರಿ ಎನಿಸುವ  ಆರ್ಥಿಕತೆ, ನಿರುದ್ಯೋಗ ಹೆಗಲೇರಿ ಕುಳಿತಿವೆ. ಕೊರೊನಾವನ್ನು  ಹಿಂಬಾಲಿಸಿ ಬಂದ ಪ್ರವಾಹ ಗಾಯದ ಮೇಲೆ ಬರೆ ಎಳೆದಿದೆ. ಬೇರೆ ಯಾವುದೂ ಅಲ್ಲ ಕೇವಲ ಸೌಹಾರ್ದ, ಭೃಾತೃತ್ವ, ಹೊಂದಾಣಿಕೆ ಬದುಕು ಕಟ್ಟಿಕೊಳ್ಳುವ ದಾರಿಗಳು ಎಂಬುದು ಎದೆಗಿಳಿದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯರ ಮುಖವಾಡ ಕಳಚಿದೆ. ತಿದ್ದಿಕೊಳ್ಳಲು ಇರುವ ದಾರಿ ಹುಡುಕುತ್ತ  ನಿಜ ಅರ್ಥದಲ್ಲಿ ಬದುಕು ಕಟ್ಟಿಕೊಳ್ಳುವ ಹೊಣೆ ಹೊತ್ತು 2021 ನ್ನು ಸ್ವಾಗತಿಸಬೇಕಿದೆ. ***********

2020 ಎಂಬ ‘ಮಾಯಾವಿ ವರ್ಷ’ Read Post »

ಇತರೆ, ಜೀವನ

ಹೊಸ ಭರವಸೆಯೊಂದಿಗೆ..

ಕೊರೊನಾ ಕಾಡಿದ ವರ್ಷಾಂತ್ಯದಲ್ಲಿ ನಿಂತು ಹೊಸ ಭರವಸೆಯೊಂದಿಗೆ..    ಜ್ಯೋತಿ  ಡಿ.ಬೊಮ್ಮ. ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹಿಂದಿರುಗಿ ನೋಡಿದಾಗ ನಿಟ್ಟುಸಿರಿನೊಂದಿಗೆ ವಿಷಾದದ ವಿಷಣ್ಣ ನಗೆಯೊಂದು ಮೂಡುತ್ತದೆ ಕಂಡು ಕಾಣದಂತೆ. 2020 ನೆಯ ವರ್ಷವನ್ನು ಕೂಡ ಒಂದು ಹೊಸ ಭರವಸೆಯಿಂದಲೆ ಬರಮಾಡಿಕೊಂಡಿದ್ದೆವು.ಹಿಂದೊಂದು ಕಾಣದ ಸಾಂಕ್ರಾಮಿಕ ಪಿಡುಗಿನ ಭಯಾನಕ ರೂಪ ಇಡೀ ಮನಕುಲವನ್ನೆ ತಲ್ಲಣಿಸಿಬಿಟ್ಟಿತು. ಎಂಥ ಅನಿಶ್ಚಿತತೆಯ ವಾತಾವರಣ ,ಇಡೀ ಜಗತ್ತೇ ಸ್ಥಬ್ದವಾದಂತಹ ಅಸಹಾಯಕ ಸ್ಥಿತಿ.ರೋಗದ ಭಯ ಎಷ್ಟು ವ್ಯಾಪಿಸಿಬಿಟ್ಟಿತೆಂದರೆ ವೈದ್ಯಕೀಯ ಕ್ಷೇತ್ರವು ಕಂಪಿಸಿತು. ಯಾರಿಗೆ ಯಾವಾಗ ರೋಗ ತನ್ನ ಆಪೋಷನಕ್ಕೆ ತೆಗೆದುಕೊಳ್ಳುವದೊ ಎಂಬ ಭಯದಲ್ಲೆ ದಿನಕಳೆದಿದ್ದಾಯಿತು.ಒಬ್ಬರನ್ನೊಬ್ಬರು ಸದಾ ಅನುಮಾನದಿಂದ ನೋಡುತ್ತ ಸಂಬಂಧಗಳನ್ನೆಲ್ಲ ದೂರಗೊಳಿಸಿ ಒಂದು ಸೀಮಿತ ವಲಯದಲ್ಲೆ ಪರಸ್ಪರರಿಂದ ದೂರವಾಗಿ ಬದುಕಿದ ಆ ಕ್ಷಣಗಳು ಈಗ ನೆನಪಿಸಿಕೊಂಡಾಗ ಮತ್ತೆ ವಿಷಾದ ಕಾಡುತ್ತದೆ.ಕರೋನಾ ಎಂಬ ಸಾಂಕ್ರಾಮಿಕ ರೋಗವನ್ನು ಅಷ್ಟೊಂದು ವೈಭವಿಕರಿಸಿ ಭಯಗೊಳಿಸುವ ಅಗತ್ಯವಿತ್ತೆ ..ಎಂಬ ಪ್ರಶ್ನೆಗೆ ಈಗ ಉತ್ತರ ಬೇಕಾಗಿಲ್ಲದಿರಬಹುದು.ಎಕೆಂದರೆ ಈಗ ನಿಧಾನಕ್ಕೆ ನೇಪಥ್ಯಕ್ಕೆ ಸರಿಯುತ್ತಿರುವ ಅದನ್ನು ಮತ್ತೆ ನೆನಪಿಸಿಕೊಳ್ಳದಿರುವದೆ ಸೂಕ್ತ.  ಆದರೆ ಆ ಸಂದರ್ಬದಲ್ಲಿ ಜನರಿಗೆ ಕಾಡಿದ ಒಂಟಿತನ ,ಖಿನ್ನತೆ , ನೆನೆಸಿ ಕೊಂಡರೆ ಮನ ಕಂಪಿಸದೆ ಇರದು. ಮೊದಮೊದಲು ಲಾಕ್ ಡೌನ್ ಅನ್ನು ಸಂಭ್ರಮಿಸಿದವರೆ ಎಲ್ಲರು. ಮನೆಯ ದಿಗ್ಬಂಧನ ಮುಂದುವರೆದಂತೆ ಅದರ ಪ್ರತಿಕೂಲ ಪರಿಣಾಮ ಎಲ್ಲಾ ಕ್ಷೇತ್ರಗಳ ಮೇಲೂ ತೊರತೊಡಗಿತು..ಕಾರ್ಮಿಕರು ಇನ್ನಿಲ್ಲದಂತೆ ತೊಂದರೆಗೊಳಗಾದರು.ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳು ಈಗಲೂ ಪರದಾಡುತಿದ್ದಾರೆ. ಕರೋನಾ ಮಾರಿಯೂ ಪ್ರತಿಯೊಬ್ಬರ ಶಿಸ್ತು ಬದ್ಧ ಜೀವನ ಕ್ರಮವನ್ನೆ ಕಸಿದುಕೊಂಡು ಬಿಟ್ಟಿತು. ಒಂದೊಂದು ಕಷ್ಟವು ಒಂದೊಂದು ಪಾಠ ಕಲಿಸಿಯೆ ಹೋಗುತ್ತದೆ.ಕರೋನಾ ಕಾಲಘಟ್ಟದ ಸಂದರ್ಭ ವೂ  ನಮಗೆ ಅನೇಕ ಪಾಠ ಕಲಿಸದೆ ಇರಲಿಲ್ಲ.ಮೊಟ್ಟ ಮೊದಲು ಮಾನವನ ಅತೀ ವೇಗದ ಬದುಕಿಗೊಂದು ಬ್ರೇಕ್ ಹಾಕಿತು.ಧಾವಂತ ಬದುಕಿನಲ್ಲಿ ಯಾಂತ್ರಿಕವಾಗಿದ್ದ ಸಂಭಂದಗಳು ಮತ್ತೆ ಬೆಸೆದವು ,ಬಾಂಧವ್ಯದ ಸೆಲೆ ವೃದ್ಧಿಸಿತು. ಮನೆಯಲ್ಲಿ ತಯ್ಯಾರಿಸಿ ಸೇವಿಸುವ ಆಹಾರದ ಮಹಾತ್ಮೆಯ ಅರಿವಾಯಿತು.ಪ್ರಕೃತಿ ಮತ್ತೆ ನಳನಳಿಸಿತು ಮಾಲಿನ್ಯವಿಲ್ಲದೆ.ಹಣ ಒಂದೇ ಪ್ರತಿಯೊಂದಕ್ಕೂ ಪರಿಹಾರವಲ್ಲ ಎನ್ನುವದು ಈ ಕರೋನಾ ಕಲಿಸಿಕೊಟ್ಟಿತು. 2020 ರ  ಕಾಲಘಟ್ಟದಲ್ಲಿ ಕರೋನಾ ಸೋಂಕಿಗೆ ಒಳಗಾದ ಕುಟುಂಬಗಳಲ್ಲಿ ನಮ್ಮದು ಒಂದು.ಆ ಸಂದರ್ಭದಲ್ಲಿ ನಾನು ಅನುಭವಿಸಿದ ತವಕ ತಲ್ಲಣಗಳು ಅಪಾರ.ರೋಗ ಲಕ್ಷಣಗಳು ಅಷ್ಟಾಗಿ ಭಾದಿಸದಿದ್ದರೂ ಅದರ ಸುತ್ತಲಿನ ಸರ್ಕಾರದ ಕಟ್ಟಳೆಗಳು ನಿಜವಾಗಿಯು ನಲುಗಿಸಿದ್ದವು. ಮುಂದೆಯೂ ಅದರೊಂದಿಗೆ ಬದುಕುವ ಅನಿವಾರ್ಯತೆ ಪ್ರತಿಯೊಬ್ಬರಿಗೂ. ಅಂತರ ಮತ್ತು ಮುಖಗವಸು ಕಡ್ಡಾಯವೆ. ಒಂದೂ ರೀತಿಯಲ್ಲಿ ಕರೋನಾ ಪಿಡುಗು ನಮ್ಮನ್ನು ಕಾಡಿದಷ್ಟು ಬದುಕುವ ಛಲ ಮತ್ತು ಆತ್ಮವಿಶ್ವಾಸ ಹೆಚ್ಚಿಸಿತು.ಮುಂದೆಯೂ ಅದರೊಂದಿಗೆ ಬದುಕಬೇಕು ,ಬದುಕೋಣ ,ಮತ್ತೊಂದು ಹೊಸವರ್ಷವನ್ನು ಸ್ವಾಗತಿಸುತ್ತ..ಹೊಸ ಭರವಸೆಯೊಂದಿಗೆ.. ಹೊಸ ಬೆಳಕಿನೊಂದಿಗೆ. **************************************   

ಹೊಸ ಭರವಸೆಯೊಂದಿಗೆ.. Read Post »

ಆರೋಗ್ಯ, ಇತರೆ

ಮದರಂಗಿ (ಮೆಹೆಂದಿ)

ಮದರಂಗಿ (ಮೆಹೆಂದಿ) ಮದರಂಗಿಯಲ್ಲಿ ಮನಸ್ಸಿನ ರಂಗು ಮೂಡಿದೆ. ಆಶಾ ಸಿದ್ದಲಿಂಗಯ್ಯ ಮದುವೆಯ ಸಂದರ್ಭದಲ್ಲಿ ಮದುಮಗ ಅಥವಾ ಮದುಮಗಳಿಗೆ ಕೈಗೆ ಹಚ್ಚುವ ಪ್ರಾಕೃತಿಕ ಬಣ್ಣ. ಎಂದರೆ ಇದೊಂದು ಎಲ್ಲರಿಗೂ ಇಷ್ಟವಾಗುವ ನಿಸರ್ಗದ ಒಂದು ಗಿಡವಾಗಿದೆ. ಔಷಧೀಯ ಗುಣವುಳ್ಳ ಗಿಡವಾಗಿದ್ದು, ಇದರ ಸೊಪ್ಪನ್ನು ಔಷಧಕ್ಕೆ ಬಳಸುತ್ತಾರೆ. ಭಾರತೀಯ ಸಂಪ್ರದಾಯದಲ್ಲಿ ಕೈಗಳಿಗೆ ಬಣ್ಣವನ್ನು ಹಚ್ಚಿಕೊಳ್ಳುವ ರೂಢಿ ಇದೆ. ಮದರಂಗಿ ತಯಾರಿಕೆ ಮದರಂಗಿಯನ್ನು ಕೈಗಳಿಗೆ ಹಚ್ಚಿಕೊಳ್ಳುವುದಾದರೆ, ಮದರಂಗಿಯ ಸೊಪ್ಪು, ನಿಂಬೆಹಣ್ಣಿನ ರಸವನ್ನು ಸೇರಿಸಿ ಚೆನ್ನಾಗಿ ಅರೆದು, ಕೈಗಳಿಗೆ ಹಚ್ಚಬೇಕು. ವಿಜ್ಞಾನ ಮುಂದುವರಿದ ಹಾಗೆ ಜನರು ಮದರಂಗಿಯನ್ನು ಬೇರೆ ವಿಧಾನದಲ್ಲಿ ಸುಲಭವಾಗಿ ತಯಾರಿಸಿಕೊಳ್ಳಲು ದಾರಿಯನ್ನು ಕಂಡುಕೊಂಡಿದ್ದಾರೆ.  ಹೇಗೆಂದರೆ,ಮದರಂಗಿ ಸೊಪ್ಪನ್ನು ಒಣಗಿಸಿ ಪುಡಿಮಾಡಿ ಅದಕ್ಕೆ ನಿಂಬೆಹಣ್ಣಿನ ರಸವನ್ನು ಸೇರಿಸಿ ಕಲಸಿ ಹಚ್ಚುವ ವಿಧಾನವನ್ನು ಬಳಸಿದ್ದಾರೆ. ಹೀಗೆ ಮದರಂಗಿಯಲ್ಲಿ ಚಿತ್ರಗಳನ್ನು ಬಿಡಿಸಿಕೊಳ್ಳುವ ರೂಢಿಯನ್ನು ಮಾಡಿಕೊಂಡಿದ್ದಾರೆ. ಹೀಗೆ ಸಣ್ಣ ಸಣ್ಣ ಚಿತ್ರಗಳನ್ನು ಬರೆದು ಅದಕ್ಕೆ ಡಿಸೈನ್ ಎಂದು ಹೆಸರಿಸಿಕೊಂಡಿದ್ದಾರೆ. ಮದರಂಗಿಯ ಡಿಸೈನ್ ಗಳಿಗೆ ಕೆಲವು ಉದಹರಣೆ ಎಂದರೆ, ಇಂಡಿಯನ್ ಡಿಸೈನ್, ಅರೇಬಿಕ್ ಡಿಸೈನ್, ಶೈಲಿ ಅರೇಬಿಕ್ ಡಿಸೈನ್ ಇತ್ಯಾದಿ… ಮದರಂಗಿ ಬ‍ಣ್ಣದ ಗುಟ್ಟು ಹಚ್ಚಿದ ಮದರಂಗಿಯನ್ನು ತುಂಬಾ ರಂಗಾಗಿಸಲು ಹಲವು ವಿಧಾನಗಳಿವೆ. ಒಂದು ವಿಧಾನ : ಸ್ವಲ್ಪ ಏಲಕ್ಕಿಯನ್ನು ಹುರಿದು ಅದರ ಶಾಖ ಕೊಡಬೇಕು. ಎರಡನೇ ವಿಧಾನ : ನಿಂಬೆ ಹಣ್ಣಿನ ರಸವನ್ನು ಹಚ್ಚಬೇಕು. ಮೂರನೇ ವಿಧಾನ : ಸ್ವಲ್ಪ ಸಕ್ಕರೆಯನ್ನು ನೀರಿನಲ್ಲಿ ಕರಗಿಸಿ, ಆ ನೀರನ್ನು ಹಚ್ಚಬೇಕು. ಔಷಧೀಯ ಗುಣ ಗೋರಂಟಿ ಎಲೆಗಳಿಗೆ ಔಷಧೀಯ ಗುಣಗಳಿವೆ. ಕಷಾಯದ ರೂಪದಲ್ಲಿ ಇಲ್ಲವೆ ಸರಿಯ ರೂಪದಲ್ಲಿ ಇವನ್ನು ಹುಣ್ಣು, ತರಚು ಹಾಗೂ ಸುಟ್ಟಗಾಯಗಳು ಮತ್ತು ಕೆಲವು ಚರ್ಮರೋಗಗಳಿಗೆ ಬಳಸುತ್ತಾರೆ. ಕಷಾಯ ಗಂಟಲುನೋವಿಗೆ ಒಳ್ಳೆಯ ಮದ್ದು.  ಗೋರಂಟಿಯ ಹೂವನ್ನು ಆವೀಕರಣಕ್ಕೊಳಪಡಿಸಿ ಒಂದು ಬಗೆಯ ಪರಿಮಳಯುಕ್ತ ತೈಲವನ್ನು ಪಡೆಯಬಹುದು. ಇದಕ್ಕೆ ಮೆಹಂದಿ ಎಣ್ಣೆ ಎಂದು ಹೆಸರು. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಗೋರಂಟಿಯ ಚೌಬೀನೆಯನ್ನು ಉಪಕರಣಗಳ ಹಿಡಿ, ಗೂಟ ಮುಂತಾದವುಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಎಳೆಯ ಕಡ್ಡಿಗಳನ್ನು ಹಲ್ಲುಜ್ಜಲು ಇಂಡೋನೇಷ್ಯದಲ್ಲಿ ಬಳಸುತ್ತಾರೆ. ಗೋರಂಟಿಯನ್ನು ವಾಣಿಜ್ಯ ದೃಷ್ಟಿಯಿಂದ ದೆಹಲಿ, ಗುಜರಾತ್ ಮತ್ತು ಮಾಲ್ವ ಎಂಬ ಮೂರು ಬಗೆಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ದೆಹಲಿ ಗೋರಂಟಿ ಅತ್ಯುತ್ತಮವಾದ್ದು. ಗೋರಂಟಿಯ ಉಪಯೋಗಗಳು ಅಂಗೈ ಅಂಗಾಲು ಉರಿ ಹಸಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ನಿಂಬೆಹುಳಿ ಸೇರಿಸಿ ಚೆನ್ನಾಗಿ ಮಸೆದು ಅಂಗೈ ಅಂಗಾಲುಗಳಿಗೆ ಲೇಪಿಸುವುದು. ತಲೆಯಲ್ಲಿ ಹೇನು ಮತ್ತು ಸೀರು ನಿವಾರಣೆಗೆ ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಅರೆದು 2ಗ್ರಾಂ ಆರತಿ ಕರ್ಪೂರವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ತಲೆಗೆ ಹಚ್ಚುವುದು. (ಅಥವಾ) ಹಸಿ ಅಥವಾ ಒಣಗಿದ ಒಂದು ಹಿಡಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು ಸ್ವಲ್ಪ ಕರ್ಪೂರ ಮತ್ತು ಆಲಿವ್ ಎಣ್ಣೆಯನ್ನು ಬೆರಿಸಿ ತಲೆ ಕೂದಲಿಗೆ ಹಚ್ಚುವುದು. ಇದರಿಂದ ಹೇನುಗಳು, ಸೀರುಗಳು ನಾಶವಾಗುವುವು. ಬಿಳಿ ಕೂದಲು ಕಪ್ಪಾಗಲು (ಬಾಲನೆರೆ) ಒಂದು ಹಿಡಿ ಹಸೀ ಗೋರಂಟಿ ಕಾಯಿಗಳನ್ನು ನುಣ್ಣಗೆ ಅರೆದು ಒಂದು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ ಚತುರಾಂಷ ಕಷಾಯ ಮಾಡುವುದು. ಚೆನ್ನಾಗಿ ಪಕ್ವವಾಗಿರುವ 25 ಗ್ರಾಂ ನೀಲಿ ದ್ರಾಕ್ಷಿಯನ್ನು ತಂದು ಬೀಜಗಳನ್ನು ಬೇರ್ಪಡಿಸಿ ನುಣ್ಣಗೆ ರುಬ್ಬಿ ಮೇಲಿನ ಕಷಾಯಕ್ಕೆ ಸೇರಿಸುವುದು. ನಂತರ ಒಂದು ಬಟ್ಟಲು ಈ ಕಷಾಯಕ್ಕೆ ಕಾದಾರಿದ ನೀರು ಸ್ವಲ್ಪ ಸೇರಿಸಿ ಕೂದಲಿಗೆ ಹಚ್ಚುವುದು. ಬೆಳಿಗ್ಗೆ ಸೀಗೆಕಾಯಿ ಹಾಕಿ ಬಿಸಿ ನೀರಿನ ಸ್ನಾನ ಮಾಡುವುದು. ಹೀಗೆ ಮೂರು ನಾಲ್ಕು ತಿಂಗಳ ಉಪಚಾರದಿಂದ ಸಫಲತೆ ದೊರೆಯುವುದು. ಕಾಮಾಲೆಯಲ್ಲಿ ಎರಡು ಹಿಡಿ ಹಸಿ ಗೋರಂಟಿ ಸೂಪ್ಪನ್ನು ಚೆನ್ನಾಗಿ ಜಜ್ಜಿ ಒಂದು ಬಟ್ಟಲು ನೀರಿನಲ್ಲಿ ರಾತ್ರಿ ನೆನೆ ಹಾಕುವುದು, ಬೆಳಿಗ್ಗೆ ಈ ನೀರನ್ನು ಒಂದು ಶುಭ್ರವಾದ ಬಟ್ಟೆಯಲ್ಲಿ ಶೋಧಿಸಿ ದಿನಕ್ಕೆ ಒಂದು ವೇಳೆ 7 ದಿನಗಳು ಕುಡಿಯುವುದು. ಮೂಲವ್ಯಾಧಿಯಲ್ಲಿ ಎರಡು ಹಿಡಿ ಹಸಿ ಗೋರಂಟಿ ಸೂಪ್ಪನ್ನು ಚೆನ್ನಾಗಿ ಜಜ್ಜಿ ತೆಳು ಬಟ್ಟೆಯಲ್ಲಿ ಸೋಸಿ ರಸ ತೆಗೆಯಿರಿ, ಅರ್ಧ ಟೀ ಚಮಚ ರಸಕ್ಕೆ ಎರಡು ಚಿಟಿಕೆ ಸುಟ್ಟಬಿಗಾರದ ಪುಡಿ ಸೇರಿಸಿ ಬೆಳಿಗ್ಗೆ ಒಂದೇ ವೇಳೆ ಸೇವಿಸುವುದು. ತಲೆ ಸುತ್ತು ಎರಡು ಗ್ರಾಂ ಗೋರಂಟಿ ಬೀಜಗಳನ್ನು ನಯವಾಗಿ ಅರೆದು ಒಂದು ಟೀ ಚಮಚ ಶುದ್ಧ ಜೇನಿನಲ್ಲಿ ಮಿಶ್ರ ಮಾಡಿ ಸೇವಿಸುವುದು. ಹಲ್ಲು ನೋವು ಮತ್ತು ಹುಳುಕು ಹಲ್ಲಿನಲ್ಲಿ ಹಸಿ ಗೋರಂಟಿ ಸೂಪ್ಪನ್ನು ಜಜ್ಜಿ ಉಂಡೆ ಮಾಡಿ ನೋವಿರುವ ಜಾಗದಲ್ಲಿ ಇಡುವುದು, ರಸವನ್ನು ಆಗಾಗ್ಗೆ ಉಗುಳುತ್ತಿರುವುದು. ಬೆವರು ಸೆಲೆ ಒಂದು ಹಿಡಿ ಹಸಿ ಗೋರಂಟಿ ಎಲೆಗಳನ್ನು ತಂದು ಚೆನ್ನಾಗಿ ಕುಟ್ಟಿ ಶುಭ್ರವಾದ ಬಟ್ಟೆಯಲ್ಲಿ ಸೋಸಿ ಚೆನ್ನಾಗಿ ರಸ ತೆಗೆಯುವುದು, ಈ ರಸವನ್ನು ಬೆವರು ಸೆಲೆಗೆ ಹಚ್ಚುವುದು. ಗಜಕರ್ಣ, ಹುಳುಕಡ್ಡಿ ಮತ್ತು ದದ್ದುಗಳಿಗೆ ಮೊದಲು ಗಾಯ ಇರುವು ಕಡೆ ಒರಟು ಬಟ್ಟೆಯಿಂದ ಸ್ವಲ್ಪ ಉಜ್ಜುವುದು. 20ಗ್ರಾಂ ಗೋರಂಟಿ ಬೀಜಗಳನ್ನು ಗಟ್ಟಿ ಮೊಸರಿನಲ್ಲಿ 3ದಿನ ನೆನೆಹಾಕುವುದು, ಮೂರು ದಿನಗಳ ನಂತರ ಈ ಬೀಜಗಳನ್ನು ಚೆನ್ನಾಗಿ ರುಬ್ಬಿ ಲೇಪಿಸುವುದು. 2ಗ್ರಾಂ ಬೀಜಗಳ ಚೂರ್ಣವನ್ನು ಕಾದಾರಿದ ನೀರಿನಲ್ಲಿ ಹೊಟ್ಟೆಗೆ ಕೊಡುವುದು. ಬಿಳಿ ತೊನ್ನು ಮತ್ತಿತರ ಚರ್ಮ ವ್ಯಾಧಿಗಳಿಗೆ ಈ ಮೂಲಿಕೆಯಲ್ಲಿ ರಕ್ತ ಶುದ್ದಿ ಮಾಡುವ ಗುಣವಿದೆ, 10ಗ್ರಾಂ ಗೋರಂಟಿ ಬೀಜಗಳನ್ನು ನಯವಾಗಿ ಅರೆದು ಚೂರ್ಣ ಮಾಡುವುದು. ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಸಕ್ಕರೆ ಪುಡಿ ಸೇರಿಸಿ ಸೇವಿಸುವುದು. ಹೀಗೆ ನಲವತ್ತು ದಿವಸ, ಒಂದು ಟೀ ಚಮಚ ಗೋರಂಟಿ ಬೀಜಗಳನ್ನು ನಿಂಬೆ ರಸದಲ್ಲಿ ಅರೆದು ಹೊರಗೆ ಲೇಪಿಸುವುದು, ಸ್ವಲ್ಪ ಶ್ರೀಗಂಧವನ್ನು ನೀರಿನಲ್ಲಿ ತೇದು ನೀರಿನಲ್ಲಿ (ಒಂದು ಬಟ್ಟಲು) ಕದಡಿ ಸೇವಿಸುವುದು. ಮದರಂಗಿ ಕೈಯ ಮೇಲೆ ಹೇಗೆ ರಂಗು ಮೂಡಿಸುತ್ತದೆಯೋ ಹಾಗೆಯೇ ಪ್ರಾಕೃತಿಕ ಔಷಧವು ಹೌದು.. ಮದರಂಗಿಯಲ್ಲಿ ಮನಸ್ಸಿನ ರಂಗು ಮೂಡಿದೆ… *******************

ಮದರಂಗಿ (ಮೆಹೆಂದಿ) Read Post »

ಇತರೆ, ಲಹರಿ

ಚಂದಿರನ ಬೆಳದಿಂಗಳಲ್ಲಿ

ಭಾವಲಹರಿ… ಭಾವಲಹರಿ… ರಶ್ಮಿ.ಎಸ್. ಒಬ್ಬಂಟಿಯೆನಿಸಿದಾಗಲೆಲ್ಲ ಬಾಲ್ಕನಿಗೆ ಬಂದು ನಿಲ್ತೇನಿ. ಅದೆಷ್ಟು ದೂರದ ಗೊತ್ತಿಲ್ಲ.. ಅಷ್ಟೂ ದೂರದಿಂದ ನಕ್ಷತ್ರವೊಂದು ಮಿಣಮಿಣ ಅಂತ ಮಿಣುಕ್ತದ. ಕಣ್ಣುಪಿಳುಕಿಸಿ, ಕಣ್ಣಾಗ ನಗ್ತದ. ನನ್ನ ಮನಿ ಮುಂದಿನ ಬೇವಿನ ಮರದ ಎಲೆಗಳು ತಣ್ಣಗ ಗಾಳಿ ಸೂಸ್ತದ. ಅದರೊಳಗೊಂದು ಕಹಿಯ ಕಂಪೂ ಇರ್ತದ. ಇರುಳಿನ ತಂಪೂ ಇರ್ತದ. ಅಪಾರ್ಟ್‌ಮೆಂಟಿನಾಗ ಸಾಕಿದ್ದ ನಾಯಿ ಚೂರಿ ಬಂದು ಬೊಗಳ್ತದ. ‘ಚೂರಿ ಮಲಗೂದು ಬ್ಯಾಡೇನು.. ಅಂದ್ರ ಸಾಕು..’ ಪಾಪ ತನಗೆ ಅನ್ಕೊಂಡು ಸುಮ್ನಾಗಿ ಒಳಗ ಹೋಗ್ತದ. ಮತ್ತದೆ ರಾತ್ರಿ, ಮತ್ತದೆ ಒಂಟಿತನ. ಹಾಸಿಗೆಗೆ ಬೆನ್ನು ಆನಿಸಿ, ಅಂಗಾತ ಮಲಗಿದಾಗ, ಫ್ಯಾನಿನ ರೆಕ್ಕಿಗಳು ಮಾತಿಗಿಳೀತಾವ. ಈ ಫ್ಯಾನಿನ ರೆಕ್ಕಿಗಳ ಜೊತಿಗೆ ನನ್ನವು ಹಲವಾರು ಗುಟ್ಟುಗಳದಾವ.  ರಾತ್ರಿಗಳಿಂದ ಯಾವ ಗುಟ್ಟುಗಳನ್ನೂ ಮುಚ್ಚಿಡಾಕ ಆಗೂದಿಲ್ಲ. ಗುಟ್ಟೇನು ಬಂತು.. ಏನೇನೂ ಮುಚ್ಚಿಡಾಕ ಆಗೂದಿಲ್ಲ. ಅಗ್ದಿ ನೀರವ ರಾತ್ರಿ ಇವು. ತೀರ ನಮ್ಮ ಹೃದಯದ ಲಯ, ನಮಗೇ ಕೇಳಿಸುವಷ್ಟು ನೀರವ ರಾತ್ರಿಗಳಿವು. ಇದ್ದಕ್ಕಿದ್ದಂತೆ ಫೋನಿನಲ್ಲಿ ಮಿನುಗು ದೀಪ. ಕತ್ತಲೆಗೆ ಹೊಂದಿಕೆಯಾಗಲಿ ಅಂತ ಬೆಳಕು ಕಡಿಮೆ ಮಾಡಿದಷ್ಟೂ ಮಾದಕ ಮಂದ ದೀಪ. ಯಾವುದೋ ಮೂಲೆಯಲ್ಲಿರುವವರಿಗೆ ಇದೀಗ ಎಚ್ಚರಿಕೆ. ಹೇಗಿದ್ದೀರಿ ಅಂತ ಕೇಳುವ ಕಾಳಜಿ. ಆದರೆ ಮನಸಿಗೆ ಅದ್ಯಾವುದೂ ಬೇಡ. ಯಾರೂ ಬೇಡ. ಮತ್ತದೇ ಏಕಾಂತದೊಳು, ನಾಭಿಯಾಳದಿಂದ ಒಮ್ಮೊಮ್ಮೆ ಅಳು, ನರನಾಡಿಯಲ್ಲಿ ವ್ಯಾಪಿಸುವಂತೆ ಆವರಿಸುತ್ತದೆ. ಕಂಗಳಿಗೂ ಹಟ. ಇನ್ನು ಕಂಬನಿ ಸುರಿಸಲಾರೆವು ಎಂಬಂತೆ. ಜೊತೆಗೆ ಕೆನ್ನೆಗಾನಲಾರೆವು ಎಂಬಂತೆ. ಮತ್ತೆ ಫೋನಿನ ಮಿಂಚು. ಅಲೆಮಾರಿಯೊಬ್ಬ, ಕಸ ಕೆದುಕುತ್ತ, ಹೂ ಗಿಡಗಳ ದಿಟ್ಟಿಸುತ್ತ, ಕಾಲಿನಿಂದ ಕಲ್ಲನ್ನೊಂದು ಒದೆಯುತ್ತ ಹೋದಂತೆ… ಎಫ್‌.ಬಿಯಲ್ಲಿ ಕಣ್ಣಾಡಿಸುತ್ತ, ಕೈ ಆಡಿಸುತ್ತ ಅಲೆಮಾರಿಯಾಗುವುದು. ಯಾವುದೇ ಉದ್ದೇಶವಿಲ್ಲದೆ, ಯಾವುದೇ ಅಜೆಂಡಾಗಳಿಲ್ಲದೆ, ಯಾರಿಗೂ ಕಿರಿಕಿರಿ ಮಾಡದೇ, ಯಾರನ್ನೂ ಮೆಚ್ಚಿಸಲೆಂದೋ, ದೂರಲೆಂದೋ… ಏನೇನೂ ಬರೆಯದೆ, ಖುಷಿಯೆನಿಸಿದ ಹಾಡು, ಸಂಕಟವನ್ನೇ ಪದಗಳಲ್ಲಿ ಹಿಡಿದಿಡುವ ಶಾಯರಿಗಳನ್ನು ಹಂಚುತ್ತ ಹೋಗುವುದು. ಅದು ಯಾರಾದರೂ ಓದಲಿ ಅಂತಲ್ಲ. ನಮ್ಮ ಪುಟದಲ್ಲಿ ಉಳಿಯಲಿ ಅಂತ. ಅಂಥವನ್ನು ಓದಿ, ಒಂದಷ್ಟು ಮೆಸೆಂಜರ್‌ನಲ್ಲಿ ವಿಚಾರಿಸಿಕೊಳ್ಳುವುದು. ಆಪ್ತರೆನಿಸಿದರೆ ಉತ್ತರಿಸುವದು, ಇಲ್ಲದಿರೆ ನೋಡಿ, ಮುಗುಳೊಂದನ್ನು ಚೆಲ್ಲಿ, ಮುಂದಕ್ಕೆ ಹೋಗುವುದು. ಇದಿಷ್ಟೂ ಆಗುವಾಗ, ಬದುಕಿಡೀ ಕಪ್ಪುಬಿಳುಪಿನ ಚಿತ್ರದಂತೆ ಕಾಣತೊಡಗುತ್ತದೆ. ಕಾಡತೊಡಗುತ್ತದೆ. ಕತ್ತಲೆಯೊಳಗೆ ಬಣ್ಣಗಳಿಲ್ಲ. ಬಣ್ಣಗಳಿರುವುದಿಲ್ಲ. ಒಂದೋ ಕಡುಕಪ್ಪು. ಇಲ್ಲವೇ ಶ್ವೇತಶುಭ್ರ ಬಿಳುಪು. ಈ ಎರಡರ ನಡುವಿನ ಬೂದು ಬಣ್ಣಕ್ಕೆ ಯಾವ ಅರ್ಥವೂ ಇಲ್ಲ. ಕಡುಕಪ್ಪು ರಾತ್ರಿ, ಹೀಗೆ ಬೆಳಗಿನ ಸೆರಗಿನಂಚಿಗೆ ಸರಿಯುವಾಗ ನಿದ್ದೆ ಸುಳಿಯುತ್ತದೆ. ಕಣ್ರೆಪ್ಪೆ ಕೆನ್ನೆಗಾನುತ್ತವೆ… ಈ ರಾತ್ರಿಗಳಲ್ಲಿ ಅದೆಷ್ಟು ಗುಟ್ಟುಗಳಡಗಿವೆಯೋ… ಅದೆಷ್ಟು ಚುಕ್ಕೆಯಂಥ ಮಿಣಮಿಣ ನಗು ಮಿಂಚಿದೆಯೋ… ಮತ್ತ ಮರುದಿನ ಎಚ್ಚರ ಆದಾಗ, ಸಣ್ಣದೊಂದು ನಗು.. ಇನ್ನೊಂದು ರಾತ್ರಿ ಸಿಕ್ತು.. ಮೋಹಿಸಲು… ಏಕಾಂತವನ್ನು ಅನುಭವಿಸಲು, ಯಾವ ಮುಖವಾಡಗಳಿಲ್ಲದೆ ನನ್ನತನವನ್ನು ಇಡಿಯಾಗಿ ಅನುಭವಿಸಲು. ಈ ಚಳಿಗಾಲದ ನೀರವ ರಾತ್ರಿಯ ಮೌನದೊಳಗಿನ ಮಾತುಗಳಿಗೆ, ಮಾತುಗಳ ನಡುವಿನ ಮೌನಕ್ಕೆ ಮರುಳಾಗುತ್ತಲೇ ಇರ್ತೀನಿ. ರಾತ್ರಿಗಳನ್ನು ಮೋಹಿಸುವುದು ಈ ಕಾರಣಕ್ಕೆ. ಮೋಹಕ ರಾತ್ರಿಗಳನ್ನು ಪ್ರೀತಿಸುವುದೂ ಇದೇ ಕಾರಣಕ್ಕೆ. **********************************

ಚಂದಿರನ ಬೆಳದಿಂಗಳಲ್ಲಿ Read Post »

ಇತರೆ

ಮೋಹದ ಬೆನ್ನು ಹತ್ತಿದರೆ . . . . .

ಲೇಖನ ಮೋಹದ ಬೆನ್ನು ಹತ್ತಿದರೆ ಜಯಶ್ರೀ.ಜೆ. ಅಬ್ಬಿಗೇರಿ  ಹೊಸದಾಗಿ ಮದುವೆಯಾದ ದಿನಗಳಲ್ಲಿ ಬಾಳ ಸಂಗಾತಿಯ ಮೋಹ ಅತಿಯೆನಿಸುವಷ್ಟು ಇರುತ್ತದೆ ಎಂದು ವಿಶೇಷವಾಗಿ ಹೇಳಬೇಕಿಲ್ಲ. ಈ ಮೋಹವೆಂಬುದು ಲೋಕಾರೂಢಿ. ಅದರಲ್ಲೇನು ವಿಶೇಷವಿದೆ ಎಂದು ಮನಸ್ಸು ಪ್ರಶ್ನೆ ಹಾಕಿ ನಗುವುದುಂಟು. ಮೋಹದ ಕುರಿತಾಗಿ ಪುಂಖಾನುಪುಂಖವಾಗಿ ಘಟನೆಗಳನ್ನು ಉಲ್ಲೇಖಿಸಬಹುದು. ಅದರಲ್ಲೂ ತುಳಸಿದಾಸರ ಕಥೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದ್ದದ್ದೇ ಇದೆ. ಅದನ್ನು ಹಾಗೆ ಒಮ್ಮೆ ಮೆಲಕು ಹಾಕುವುದಾದರೆ ಹೀಗೆ ಸಾಗುತ್ತದೆ. ತುಳಸಿದಾಸರಿಗೆ ತಮ್ಮ ಪತ್ನಿಯಲ್ಲಿ ಅಪಾರ ಆಸಕ್ತಿ. ಆಕೆಯನ್ನು ಬಿಟ್ಟಿರಲು ಮನಸ್ಸು ಒಪ್ಪುತ್ತಲೇ ಇರುತ್ತಿರಲಿಲ್ಲ. ಹೊಳೆಯ ಆಚೆ ಪತ್ನಿಯ ಮನೆ ಹೊಳೆಯ ಈಚೆ ತುಳಸಿದಾಸರ ಮನೆ. ಒಂದು ದಿನ ಮಡದಿ ಅವಸರದಲ್ಲಿ ಅವರಿಗೆ ಹೇಳದೇ ತನ್ನ ತವರಮನೆಗೆ ಹೋದಳು. ಸತಿಯನ್ನು ಮನೆಯಲ್ಲಿ ಕಾಣದ ತುಳಸಿದಾಸರಿಗೆ ಚಡಪಡಿಕೆ ಶುರುವಾಯಿತು. ಇವತ್ತು ರಾತ್ರಿ ಎಷ್ಟೊತ್ತಾದರೂ ಸರಿ ಹೊಳೆ ದಾಟಿ ಸತಿಯ ಮನೆಯನ್ನು ತಲುಪಲೇ ಬೇಕೆಂದು ನಿರ್ಧರಿಸಿದರು. ಅದೇ ದಿನ ಹೊಳೆಗೆ ಮಹಾಪೂರ ಬಂದಿತ್ತು. ಮಹಾಪೂರ ಎಂದ ಮೇಲೆ ಕೇಳಬೇಕೆ? ಅದು ತನ್ನೊಡಲಿನಲ್ಲಿ ಊರಿನಲ್ಲಿರುವ ಕಸವನ್ನು ತಂದು ಹೊಳೆಗೆ ಚೆಲ್ಲಿತ್ತು. ಹೊಳೆ ಊರಿನ ಕೊಳೆಯಿಂದಲೇ ತುಂಬಿತ್ತು. ತುಳಸಿದಾಸನಿಗೆ ಮಾತ್ರ ಇದಾವುದೂ ಕಾಣಲೇ ಇಲ್ಲ. ಅವರ ಕಣ್ಣಲ್ಲಿ ಮಡದಿಯ ರೂಪ ಅಚ್ಚೊತ್ತಿತ್ತು. ಮನದಲ್ಲಿ ಆಕೆಯ ಸವಿನೆನಪು. ಸತಿಯ ಮೇಲಿನ ಮೋಹ ಅವರಲ್ಲಿ ಶಕ್ತಿಯನ್ನು ನೂರ್ಮಡಿಗೊಳಿಸಿತ್ತು. ಹಿಂದೆ ಮುಂದೆ ನೋಡದೇ ಹೊಳೆಗೆ ಧುಮುಕಿಯೇ ಬಿಟ್ಟರು. ನೋಡು ನೋಡುತ್ತಿದ್ದಂತೆಯೇ ಆಚೆ ದಡ ತಲುಪಿದ್ದರು. ತಮ್ಮೊಂದಿಗೆ ಹೊಳೆಯ ಕೊಳೆಯನ್ನು ಹೊತ್ತು ತಂದಿದ್ದರು.      ಅದೇ ಆವಸ್ಥೆಯಲ್ಲಿ ಮಡದಿ ಮನೆಯ ಕದ ತಟ್ಟಿದರು. ಮಡದಿ ಹೊರ ಬಂದು ನೋಡಿದಳು. ಮೈಯೆಲ್ಲಾ ಕೊಳೆ ತುಂಬಿತ್ತು. ಕಂಗಳಲ್ಲಿ ಮೋಹ ತುಂಬಿತ್ತು. ‘ಇದೇನಿದು ಇಷ್ಟು ರಾತ್ರಿ ಹೊತ್ತಿನಲ್ಲಿ ಹೀಗೆ ಬಂದಿದ್ದೀರಿ?’ ಎಂದಳು. ಹೌದು ಕಾಣದೇ ಇರಲಾಗಲಿಲ್ಲ ಅದಕ್ಕೆ ಬಂದೆ ಎಂದ ಪತಿ. ಪತಿಯ ಮೋಹ ಕಂಡ ಜಾಣ ಸತಿ ಹೀಗೆ ಹೇಳಿದಳು. ‘ನೀವು ಇಷ್ಟು ಪ್ರೇಮವನ್ನು ದೇವರ ಮೇಲೆ ಇಟ್ಟಿದ್ದರೆ ನಿಮಗೆ ದೇವರ ದರ್ಶನವಾಗುತ್ತಿಲ್ಲ!’ ಮಡದಿಯ ಮಾತು ಕೇಳಿದ ತುಳಸಿದಾಸರಿಗೆ ಒಮ್ಮೆಲೇ ಸತ್ಯ ಹೊಳೆಯಿತು.ಮೋಹವೆಂಬ ಕತ್ತಲೆ ಕಳೆದು ಜ್ಞಾನ ಜ್ಯೋತಿಯ ಹೊತ್ತಿಸಿದೆ. ನನ್ನ ಪಾಲಿನ ಗುರು ನೀನು. ಕಣ್ತೆರೆಸಿದ ದೇವತೆಯೂ ನೀನು. ಎನ್ನುತ್ತ ಮಡದಿಯ ಮನೆಯಿಂದ ಹೊರ ಬಂದ. ಮೈ ಮನವೆಲ್ಲ ಸುತ್ತಿದ್ದ ಮೋಹದ ಪೊರೆ ಕಳಚಿಕೊಂಡ. ಸತ್ಯದರ್ಶನ ಪಡೆದು ಮಹಾ ಸಂತನಾದ.      ಇದು ಜನ ನಾಲಿಗೆಯ ಮೇಲೆ ನಲಿದಾಡುವ ಕಥೆ.ಪುರಾಣ ಇತಿಹಾಸಗಳಲ್ಲಿ ಇಂತಹ ಕಣ್ತೆರೆಸಿದ ಕಥೆಗಳು ಹೇರಳವಾಗಿ ಲಭ್ಯ. ಹೀಗಿದ್ದಾಗ್ಯೂ ನಾವು ನಮ್ಮದೇ ಮೋಹ ಲೋಕದಲ್ಲಿ ಮೇಲೇಳದಂತೆ ಮುಳುಗಿದ್ದೇವೆ. ಒಬ್ಬೊಬ್ಬರಿಗೆ ಒಂದೊಂದು ಮೋಹ. ಹೆಣ್ಣು ಹೊನ್ನು ಮಣ್ಣಿನ ಹಿಂದೆ ಬಿದ್ದು ಜೀವನದಾನಂದವನ್ನು ಕಳೆದುಕೊಂಡು ದಿಕ್ಕು ತಪ್ಪಿದವರಂತೆ ತಿರುಗುತ್ತಿದ್ದೇವೆ. ಜ್ಞಾನವೆಂಬ ಕಣ್ಣಗಲಿಸಿ ನೋಡಿದರೆ ಎಲ್ಲೆಲ್ಲೂ ನಿರ್ಮೋಹದ ಬೆಳಕು ಕಣ್ತುಂಬಿಸಿಕೊಳ್ಳುವ ಸುದೈವ ದೊರೆಯದೇ ಇರದು.  ಮುಂಜಾನೆದ್ದು ಕಿವಿಗೆ ಬೀಳುವ ಹಕ್ಕಿಗಳ ಕಲರವ, ಬಾನಿಗೆ ಬಂಗಾರದ ಬಣ್ಣ ಬಳಿಯುತ್ತ ಉದಯಿಸುವ ಸೂರ್ಯ, ಕತ್ತಲಲ್ಲಿ ಮಿನುಗಿ ನಗುವ ನಭದ ತಾರೆಗಳು, ಸದಾ ಉತ್ಸಾಹದಲ್ಲಿರುವ ಚಿಕ್ಕ ಮಕ್ಕಳನ್ನು ಕಂಡರೆ ನಮ್ಮಲ್ಲೂ ಸಂತಸದ ಕಾರಂಜಿ ಚಿಮ್ಮುವುದು. ಆಡುವ ಮಕ್ಕಳು ಆಟಿಕೆಯಲ್ಲಿ ಮುಳುಗಿ ಚಿಮ್ಮಿಸುವ ಬೊಚ್ಚ ಬಾಯಿಯ ನಗು ಎಂಥವರನ್ನು ಆನಂದದ ಬುಗ್ಗೆಯಲ್ಲಿ ಮುಳುಗಿಸುತ್ತದೆ. ಕಡಲನ್ನು ನೋಡುತ್ತ ಅದರ ಅಲೆಗಳ ಅಬ್ಬರದಲ್ಲಿ ಕಳೆದು ಹೋಗುವುದು ಎಲ್ಲಿಲ್ಲದ ಸಂತಸ ನೀಡುವುದು.ಜೀವನವೇ ಆನಂದ ಧಾರೆ ಎನ್ನಿಸದೇ ಇರದು.  ಜೀವನದ ಮೂಲಧಾರೆ ಯಾವುದಿರಬಹುದು? ಎಲ್ಲಿಂದ ಆರಂಭವಾಗಿರಬಹುದು ಎಂದು ತಿಳಿಯುವುದು ಸುಲಭದ ಸಂಗತಿಯಲ್ಲ.ಬಹಳಷ್ಟು ಅರಿತವರಿಗೂ ವಿದ್ವಾಂಸರಿಗೂ ಪ್ರಾಯಶಃ ಬಹಳ ಬಹಳ ಸಮಯದವರೆಗೂ ಚರ್ಚಿತ ವಿಷಯವಾಗಿದೆ ಎಂದೆನಿಸುತ್ತದೆ. ಮನುಷ್ಯನ ಅಂತರಂಗದತ್ತ ಮನಸ್ಸನ್ನು ಕೇಂದ್ರೀಕರಿಸಿದರೆ ಹೊಳೆಯುವ ಸೀದಾ ಸರಳ ಉತ್ತರ ಮೋಹವನ್ನು ತೊರಯುವುದು. ಪ್ರತಿ ದಿನವನ್ನು ಪ್ರತಿಕ್ಷಣವನ್ನು ಆನಂದದಿಂದ ಕಳೆಯುವುದೇ ಬದುಕಿನ ಪರಮೋಚ್ಛ ಧ್ಯೇಯ. ಇದಕ್ಕಾಗಿಯೇ ಕಬ್ಬಿಣದ ಕಡಲೆಯಂತಿರುವ ಬದುಕನ್ನು ತಿಳಿದುಕೊಳ್ಳಲು ಹರಸಾಹಸ ಪಡುತ್ತಿದ್ದೇವೆ. ಹಾಗೆ ನೋಡಿದರೆ ಜೀವನ ತುಂಬಾ ಸರಳ ಇದೆ. ಅದನ್ನು ಸಂಕೀರ್ಣ ಮಾಡಿಕೊಂಡವರೇ ನಾವು. ನಮ್ಮ ವಿಚಾರಗಳು ನಮ್ಮ ಪ್ರಪಂಚವನ್ನು ರೂಪಿಸುತ್ತವೆ ಎಂದು ಗೊತ್ತಿದ್ದೂ ಅವುಗಳ ಮೇಲೆ ಹತೋಟಿ ಸಾಧಿಸದೇ ಮೋಹದ ಬಲೆಯಲ್ಲಿ ಬಿದ್ದಿದ್ದೇವೆ. ಕಣ್ಣು ಕಾಣದ ಗಾವಿಲರಂತೆ ಆಡುತ್ತಿದ್ದೇವೆ. ಯಾವುದರ ಬಗ್ಗೆ ಗಮನ ಹರಿಸುತ್ತೇವೆಯೋ ಅದು ಬೆಳೆಯುತ್ತದೆ. ನಾನು ನನ್ನದೆಂಬ ಮೋಹದ ಬೆನ್ನು ಹತ್ತಿದರೆ ಸಮಸ್ಯೆಗಳ ಸಂಖ್ಯೆ ಹೆಚ್ಚುತ್ತದೆ ಬದುಕು ಕತ್ತಲಲ್ಲಿ ಮುಳುಗಿ ನರಳುತ್ತದೆ. ನಿರ್ಮಲ ಮನಸ್ಸಿನಿಂದ ನಿರ್ಮೋಹದತ್ತ ಮುಖ ಮಾಡಿದರೆ ಹೋದ ದಿಕ್ಕು ದಿಕ್ಕಿನಲ್ಲೂ ಬದುಕಿನ ಪರಮ ಸತ್ಯದ ಕಾಮನ ಬಿಲ್ಲು ಕಮಾನು ಕಟ್ಟಿ ಕರೆಯುತ್ತದೆ. ಮೋಹ ನಾಚಿ ನೀರಾಗಿ ದೂರ ಸರಿಯುತ್ತದೆ.

ಮೋಹದ ಬೆನ್ನು ಹತ್ತಿದರೆ . . . . . Read Post »

ಇತರೆ

ಮಲೆನಾಡಿಗರ ತುಮುಲ

ಅನಿಸಿಕೆ ಮಲೆನಾಡಿಗರ ತುಮುಲ ಗಣೇಶಭಟ್ ಶಿರಸಿ ಪಶ್ಚಿಮ ಘಟ್ಟಗಳ ಹಾಗೂ ಅಲ್ಲಿನ ಜೀವವೈವಿದ್ಯ ರಕ್ಷಣೆಯ ಉದ್ದೇಶದಿಂದ ೨೦೧೧ರಲ್ಲಿ ಡಾ. ಮಾಧವ ಗಾಡ್ಗೀಲ್ ಸಮಿತಿ ನೀಡಿದ ವರದಿಯನ್ನು ತಿರಸ್ಕರಿಸಿದನಂತರ ವಿಜ್ಞಾನಿ ಕಸ್ತೂರಿರಂಗನ್ ನೇತೃತ್ವ ಸಮಿತಿ ರಚಿಸಲಾಗಿತ್ತು. ಪಶ್ಚಿಮ ಘಟ್ಟದಲ್ಲಿ ಮಾನವನ ಹಸ್ತಕ್ಷೇಪವನ್ನು ಸೀಮಿತಗೊಳಿಸಬೇಕೆಂದು ಸೂಚಿಸಿರುವ ಎರಡನೇ ವರದಿಯ ಅನುಷ್ಠಾನಕ್ಕೂ ಹಿಂಜರಿಯುತ್ತಿರುವ ಕರ್ನಾಟಕದ ಸರ್ಕಾರ ಹಸಿರು ನ್ಯಾಯಾಲಯದ ಮೆಟ್ತಲೇರುವ ಪ್ರಯತ್ನ ನಡೆಸಿದೆ. ಈ ಎರಡೂ ವರದಿಗಳು ಪರಿಸರ ಪೂರಕ ಅಭಿವೃದ್ಧಿಯನ್ನು ಪ್ರತಿಪಾದಿಸುತ್ತವೆಯಾದರೂ, ಡಾ. ಮಾಧವ ಗಾಡ್ಗೀಳ್ ವರದಿ ಹೆಚ್ಚು ಜನಪರವಾಗಿದೆ. ಪ್ರತಿಯೊಂದು ಅಭಿವೃದ್ಧಿ ಯೋಜನೆಯಲ್ಲೂ ಜನರ ಸಹಭಾಗಿತ್ವವನ್ನ ಕಡ್ಡಾಯಗೊಳಿಸಬೇಕೆಂಬ ಗಾಡ್ಗೀಳ ವರದಿ, ಗುತ್ತಿಗೆದಾರರ, ಉದ್ಯಮಿಗಳ, ಅಧಿಕಾರಿಗಳ ರಾಜಕಾರಣಿಗಳ ಕಣ್ಣುರಿಗೆ ಕಾರಣವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಹಾಗೂ ಸರ್ಕಾರದ ಖಜಾನೆಯನ್ನು ಲೂಟಿಹೊಡೆಯುತ್ತಿರುವ ಗುಂಪಿಗೆ, ಜನಸಾಮಾನ್ಯರಿಗೆ ಆರ್ಥಿಕ ಅಧಿಕಾರ ಸಿಗುವುದು ಬೇಕಾಗಿಲ್ಲ. ಜನಸಾಮಾನ್ಯರು ಈ ಗುಂಪಿನ ಗುಲಾಮರಾಗಿ ಸದಾ ಇರಬೇಕು, ಸಂಪತ್ತನ್ನು ತಾವು ಕೊಳ್ಳೆಹೊಡೆಯುತ್ತಿರಬೇಕೆಂದು ಬಯಸುವವರು ಈ ವರದಿಯ ಕುರಿತು ಜನರಲ್ಲಿ ಅಪನಂಬಿಕೆ, ಭೀತಿಯನ್ನು ಹುಟ್ಟಿಸುತ್ತಿದ್ದಾರೆ.   ಪರಿಸರ ಪೂರಕ ಅಭಿವೃದ್ಧಿಯ ಪಥದಿಂದಲೇ ಮಾನವ ಸಮಾಜದ ಏಳ್ಗೆ , ಉನ್ನತಿ, ಮತ್ತು ಪ್ರಗತಿಯ ನಿರಂತರತೆ ಸಾಧ್ಯ. ನಿಸರ್ಗ ವಿರೋಧಿ ಚಟುವಟಿಕೆಗಳಿಂದ ಎಷ್ಟೋ ನಾಗರಿಕತೆಗಳು ನಶಿಸಿಹೋಗಿದ್ದನ್ನು ಇತಿಹಾಸ ದಾಖಲಿಸಿದೆ. ಆರ್ಥಿಕ ವಿಕೇಂದ್ರೀಕರಣದತ್ತ ಅಡಿ ಇಡುವ ಗಾಡ್ಗೀಳ ವರದಿಯ ಅನುಷ್ಠಾನ ಉತ್ತಮ ಆಯ್ಕೆ. ಈ ವರದಿಯನ್ನು ಈಗಾಗಲೇ ಮೂಲೆಗುಂಪು ಮಾಡಿರುವದರಿಂದ ಕನಿಷ್ಠ ಪಕ್ಷ ಕಸ್ತೂರಿರಂಗನ್ ವರದಿಯನ್ನಾದರೂ ಅನುಷ್ಠಾನಕ್ಕೆ ತಂದು , ಮಾನವ ಮತ್ತು ಪರಿಸರದ ನಡುವಿನ ಸಂಘರ್ಷಕ್ಕೆ ತಡೆ ಒಡ್ಡಲೇ ಬೇಕು. ಸ್ವಾರ್ಥಿಗಳ ಹುನ್ನಾರಕ್ಕೆ ಒತ್ತು ನೀಡಿದರೆ,  ರಾಜ್ಯದ ಪರಿಸ್ಥಿತಿ ಅದರಲ್ಲೂ ವಿಷೇಶವಾಗಿ ಮಲೆನಾಡ ನಿವಾಸಿಗಳ ಬದುಕು ಅಪಾಯಕ್ಕೆ ಸಿಲುಕುವುದು ನಿಶ್ಚಿತ.     ಪಶ್ಚಿಮ ಘಟ್ಟಗಳ  ಅರಣ್ಯ ಮತ್ತು ಜೀವ ವೈವಿಧ್ಯತೆಯ ನಾಶದಿಂದ ಭಾರತ ಮಾತ್ರವಲ್ಲ ಪಾಶ್ಚ್ಯಾತ್ಯ ರಾಷ್ಟ್ರಗಳೂ ಹವಾಮಾನ ವೈಪರೀತ್ಯ  ಅನುಭವಿಸ ಬೇಕಾಗುತ್ತದೆಂಬುದನ್ನು ಅಧ್ಯಯನಗಳು ದೃಢಪಡಿಸಿವೆ.       ಮಾನವ ಮತ್ತು ಪರಿಸರದ ನಡುವೆ ಅನಗತ್ಯ ಸಂಘರ್ಷಕ್ಕೆ ಎಡೆ ಮಾಡಿಕೊಡದಂತೆ ಜನರ ಸಹಭಾಗಿತ್ವದೊಂದಿಗೆ ಈ ವರದಿಯನ್ನು ಅನುಷ್ಠಾನ ಮಾಡಲು ಸಾಧ್ಯ; ಸ್ವ ಹಿತಾಸಕ್ತ ಗುಂಪುಗಳ ಹಿಡಿತದಿಂದ ಹೊರಬಂದು ನೇತಾರರು ನಿರ್ಣಯ ತೆಗೆದುಕೊಳ್ಳಬೇಕು ಅಷ್ಟೇ.   ********************************************

ಮಲೆನಾಡಿಗರ ತುಮುಲ Read Post »

ಇತರೆ

ಆತ್ಮ ನಿವೇದನೆಯಲ್ಲಿ ಅಕ್ಕನ ಹೆಜ್ಜೆಗಳು

ಲೇಖನ ಆತ್ಮ ನಿವೇದನೆಯಲ್ಲಿ ಅಕ್ಕನ ಹೆಜ್ಜೆಗಳು  ಡಾ.ರೇಣುಕಾ. ಅ. ಕಠಾರಿ ಕನ್ನಡ ನಾಡಿನ ಚರಿತ್ರೆಯಲ್ಲಿ ‘ವಚನ ಸಾಹಿತ್ಯ’ ಹೊಸ ಮೈಲುಗಲ್ಲನ್ನೇ ಸೃಷ್ಠಿಸಿತ್ತು. ಕುಟುಂಬದಲ್ಲಿ ಹೆಣ್ಣು ಸ್ವಾತಂತ್ರ್ಯ   ಕಳೆದುಕೊಂಡ ಕಾಲದಲ್ಲಿ ಶರಣ ಪರಂಪರೆಯು ಆಕೆಗೆ ಸ್ಥಾನವನ್ನು ಒದಗಿಸಿಕೊಟ್ಟಿತು. ಈ ಮೊದಲು ಹೆಣ್ಣನ್ನು ಶೂದ್ರ ಸಮಳೆಂಬ ಅಪವಾದವನ್ನು ಹೊತ್ತುಕೊಂಡು ಬದುಕಬೇಕಾಗಬೇಕಿತ್ತು. ಹಾಗೆ ಅವಳನ್ನು  ಅಜ್ಞಾನಿಯನ್ನಾಗಿ ಮಾಡಿದ್ದರು. ಮಹಿಳೆಯರಿಗೆ ಮೋಕ್ಷ ಬೇಕಾದರೆ ಪತಿಯ ಸೇವೆಯ ಮೂಲಕವೇ ಸಾಧ್ಯವೆಂಬ ಕಲ್ಪನೆಯನ್ನು ಬಲವಂತವಾಗಿ ಆಕೆಯ ಮೇಲೆ ಹೊರಿಸುತ್ತಿದ್ದರು. ಈ ಮೊದಲು ನಡೆಯುತ್ತಿದ್ದ ಎಲ್ಲ ಹಿಂಸಾ ಕೃತ್ಯಗಳಿಗೆ ಅಂತ್ಯ ಹಾಕಬೇಕೆಂದೇ ಹನ್ನೆರಡನೆಯ ಶತಮಾನವು ಹೊಸ ಕ್ರಾಂತಿಯ ರೂಪವನ್ನು ತಾಳಿತು. ಆ ಸಂದರ್ಭದಲ್ಲಿ ಹಲವಾರು ಮಹಿಳಾ ವಚನಕಾರ್ತಿಯರು ತಮ್ಮ ಜೀವನದಲ್ಲಿ ಕಂಡಿರುವ ಎಲ್ಲ ಸುಖ-ದು:ಖಗಳನ್ನು, ನೋವು-ನಲಿವುಗಳನ್ನು ಹೀಗೆ ಮೊದಲಾದುವುಗಳ ಕುರಿತು ವಚನಗಳನ್ನು ರಚಿಸುವುದರ ಮೂಲಕ ತಮ್ಮ ತಮ್ಮ ಆತ್ಮ ನಿವೇದನೆಯನ್ನು ಮಾಡಿಕೊಳ್ಳಲು ಹೊಸ ಮಾರ್ಗದ ಸೃಷ್ಠಿ ಆಗತೊಡಗಿತು. ಅಕ್ಷರವನ್ನು ಕಲಿಯದ ಅದೆಷ್ಟೋ ಮಹಿಳೆಯರು ಅಕ್ಷರ ಜ್ಞಾನದೊಂದಿಗೆ ಸಾಹಿತ್ಯ ಸೃಷ್ಠಿಯಲ್ಲಿ ಮುಂದಾದರು. ಚಿಂತನ ಮಂಥನಗಳೊಂದಿಗೆ ಪರಸ್ಪರಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳವಂತಹ ಕಾಲ ನಿರ್ಮಾಣವಾಯಿತು. ಹೀಗೆ ಮಹಿಳೆಯರು ತಮ್ಮತನವನ್ನು ಅರಿತುಕೊಳ್ಳಲು ಆತ್ಮಾವಲೋಕನ ಮಾಡಿಕೊಂಡರು.  ಶರಣರ ದಾಂಪತ್ಯ ಒಂದು ಪರಂಪರೆಯ ಧರ್ಮವನ್ನೆ ಸೃಷ್ಟಿಸಿದೆ. ಬದುಕಿನಲ್ಲಿ ಶಾಂತಿ ನೆಮ್ಮದಿ ಸುಖ-ದು:ಖಗಳನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುವಂತಹ ಧ್ಯಾನ ಮಾರ್ಗದ ಜೊತೆಗೆ ಆಧ್ಯಾತ್ಮದ ಕೊಂಡಿಯನ್ನು ಅನುಸರಿಸಿದರು. ಲೌಕಿಕ ಬದುಕನ್ನು ಸಂಪನ್ನಗೊಳಿಸಿಕೊಳ್ಳುವುದು ಮತ್ತು ಅದರ ಜೊತೆಗೆ ಪರಮಾರ್ಥ ಸಾಧನೆಯ ಗುರಿ ಶರಣರದಾಗಿತ್ತು. ಇದಕ್ಕೆ ಅನುಗುಣವಾಗಿ ಸಾಕಷ್ಟು ಶರಣೆಯರು ಸತಿಪತಿ ಭಾವವನ್ನು ಪಡೆದರು. ಅನುಭವಿಸಿದ ಜೀವನದ ಸಾರವನ್ನು ಕಂಡುಕೊಂಡು, ಮಲ್ಲಿಕಾರ್ಜುನನ್ನೇ ಹುಡುಕುತ್ತ ನಿರತಳಾಗಿಯೇ ಆಧ್ಯಾತ್ಮದ ಸಾಧನೆಯನ್ನು ಕಂಡುಕೊಂಡವಳು ಅಕ್ಕಮಹಾದೇವಿ. ಅಂತೆಯೇ ಆತ್ಮ ನಿವೇದನೆಯೆನ್ನುವುದು ಎರಡು ಹೃದಯಗಳ ಅನ್ಯೋನ್ಯ ಮಿಲನವಾಗಿ ಶಿವಪಥದಲ್ಲಿ ನಡೆದು ದೇವನ ಪಾದವನ್ನು ಸೇರಲು ಸಹಾಯಕವಾಗುವ ಒಂದು ಅವಕಾಶವೆಂದು ನಂಬಿಕೊಂಡಿದ್ದರು. ಆಕೆಯ ಬದುಕಿನ ಚಿತ್ರಣದ ಎಲ್ಲ ನೆಲೆಗಳು ಅವಳ ವಚನಗಳಲ್ಲಿ ಕಾಣುತ್ತೇವೆ. ಅಕ್ಕನ ಒಂದೊಂದು ವಚನಗಳು ಒಂದೊಂದು ಕಥೆಯನ್ನು ಹೇಳುತ್ತವೆ ಹಾಗೇ ಆತ್ಮದ ಪರಿಶೋಧವೂ ಇದೆ. ಇಡೀ ಜೀವನದುದ್ದಕ್ಕೂ ಚೆನ್ನನನ್ನು ನೆನೆಯುತ್ತಲೆ ತನ್ನೊಡಲದ ವೇದನೆಯನ್ನು ಅನುಸಂಧಾನಿಸಿಕೊಳ್ಳಲು ಪ್ರಯತ್ದಿಸಿದ ಮಹಾ ಶರಣೆ. “ಉರಕ್ಕೆ ಜವ್ವನಗಳು ಬಾರದ ಮುನ್ನ ಮನಕ್ಕೆ ನಾಚಿಕೆಗಳು ತೋರದ ಮುನ್ನ ನಮ್ಮವರಂದೆ ಮದುವೆಯ ಮಾಡಿದರು ಸಿರಿಶೈಲ ಚೆನ್ನಮಲ್ಲಿಕಾರ್ಜುನಂಗೆ ಹೆಂಗೂಸೆಂಬ ಭಾವ ತೋರುವ ಮುನ್ನ ನಮ್ಮವರಂದೆ ಮದುವೆಯ ಮಾಡಿದರು”            (ಅಕ್ಕನ ವಚನಗಳು: ಸಂ.ಡಾ.ಸಾ.ಶಿ. ಮರುಳಯ್ಯ- ೧೯೯೩. ಬೆಂಗಳೂರು ಪು.ಸಂ೧೫)             ಅಕ್ಕನಲ್ಲಿ ಅಂತರಂಗದ ತೊಳಲಾಟವಿದೆ. ಆಕೆಯ ಭಾವದ ಜೊತೆಗೆ ಆಕೆ ಹಾಕಿಕೊಂಡಿರುವ ನೂರಾರು ಆಸೆ ಆಕಾಂಕ್ಷೆಗಳನ್ನು ಬಹಿರಂಗವಾಗಿ ಇಡಲು ಬಯಸುವ ಸಾಲುಗಳು ಎದ್ದು ಕಾಣುತ್ತವೆ. ಜಾಗತೀಕರಣದ ತುದಿಯನ್ನು ದಾಟಿ ನಿಲ್ಲುತ್ತಿರುವ ನಾವುಗಳು ಆತ್ಮದ ಶೋಧದಲ್ಲಿ ತೊಡಗುವುದು ಅನಿವಾರ‍್ಯವೆನಿಸುತ್ತದೆ. ತಾನು ಮನದಲ್ಲಿ ಬಯಸಿದ ಆ ಚೆನ್ನನ ಹೆಸರು ಹೇಳುವ ಮೊದಲೆ, ಹಿರಿಯರು ಮಾಡಿದ ಮದುವೆಗೆ ಅರ್ಥವಿದೆಯಾ? ಎಂದು ವ್ಯಂಗ್ಯವಾಗಿ ಹೇಳುವ ನುಡಿ ಇವತ್ತಿಗೂ ಜೀವಂತವಾಗಿದೆ. ಅಕ್ಕನ ಈ ವಚನದಲ್ಲಿ ಹೇಳಿದ ಎಲ್ಲ ಶಬ್ಧಗಳ ಮಾತುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಸತ್ಯದ ಕೊಂಡಿ ಒಂದೊಂದೇ ಧ್ವನಿಗಳನ್ನು ಧ್ವನಿಸಿ ಎದ್ದು ನಿಲ್ಲುತ್ತವೆ. ಆನಾದಿ ಕಾಲದಿಂದಲೂ ಹೆಣ್ಣು ಎನ್ನುವ ಕಾರಣಕ್ಕೆ ಒಪ್ಪಿಗೆ ಇಲ್ಲದಿದ್ದರೂ ಮದುವೆಯೆಂಬ ಹೊಸ ಹಣೆ ಬರಹವನ್ನು ಕಟ್ಟುತ್ತಿದ್ದರು. ಇದು ಶೋಷಣೆಯ ರೂಪವೆಂದು ಭಾವಿಸುವಲ್ಲಿ ಯಾವುದೆ ತಪ್ಪಿಲ್ಲವೆಂದು ಅನಿಸುತ್ತದೆ. ಹಾಗೇ ಅಕ್ಕ ಪ್ರಶ್ನಿಸುವ ಮಾತು ಬಂಡಾಯದ ಹೊಸರೂಪವೇ ಹೊರತು ಬೇರೇನಲ್ಲ? “ಚೆನ್ನ ಮಲ್ಲಿಕಾರ್ಜುನಯ್ಯ ನೀನಿಲ್ಲದನ್ಯರ ಮುಖವ ನೋಂಡೆನೆಂದಡೆ ನೋಡುವಂತೆ ಮಾಡಿದೆಯಲ್ಲಾ ಲಿಂಗವೆ”                  (ಅಕ್ಕನ ವಚನಗಳು, ದ್ವಿ ಸಂಸ್ಕರಣ ಸಂ.ಎಲ್. ಬಸವರಾಜು.೧೯೭೨,ಮೈಸೂರು)             ಹೆಣ್ಣು ತನ್ನತನದ ಹಿಂದೆಯೇ ಸಾಗುವುದು ಆಕೆ ಕಟ್ಟಿಕೊಂಡ ಒಂದು ಬೇಲಿ ಅಷ್ಟೇ. ಆದರೆ ಅದರಾಚೆಗೂ ಆಕೆಯ ಬೇಕು ಬೇಡಿಕೆಗಳನ್ನು ಮನದಾಳದಂತೆ ಪೂರೈಸಿಕೊಳ್ಳಲು ಅಸಾಧ್ಯವೆಂದು ಭಾವಿಸಬೇಕು? ಪರಸ್ಪರವಾಗಿ ಇರುವ ಬದುಕೇ ಭಿನ್ನ. ಮುಖಾಮುಖಿಯಾಗಿಸದೇ ಮತ್ತು ಬೇರೆ ಎಲ್ಲಿಯೋ ಇರುವ ಚಹರೆಯನ್ನು ಅನುಸಂಧಾನ ಮಾಡಿಕೊಳ್ಳಲು ಸಾಧ್ಯವೇ? ಎಂಬ ವಿಚಾರವಂತಿಕೆಗಳು ಬಹು ಸವಾಲನ್ನು ಎತ್ತುತ್ತವೆ. ಅಕ್ಕನ ತುಡಿತಗಳು ವೇದನೆಯಾಗಿ ಅಲಿದಾಡುವ ಬಗೆ ಬಹು ತನ್ಮಯತೆಯನ್ನು ಉಂಟು ಮಾಡುತ್ತದೆ. ಅಂದರೆ, ‘ಚೆನ್ನ ಮಲ್ಲಿಕಾರ್ಜುನೆನಗೆ ಕಟ್ಟದ ಕಟ್ಟಳೆಯ ನನ್ನಿಂದ ನಾನೆ ಅನುಭವಿಸಿ ಕಳೆವನು’. ಎಂದು ಅರುಹುವ ಮಾತು ಇಂದಿಗೂ ಜೀವಂತವಾಗಿ ನಮ್ಮನ್ನು ಪ್ರಶ್ನಿಸುತ್ತದೆ. ಇದೇ ನಾವು ಆತ್ಮಾವಲೋಕವೆಂದು ಕರೆಯುವುದು. ಹುಡುಕಾಟದ ಆಕೆಯ ತಲ್ಲಣಗಳು ಒಂದೊಂದೆ ಅಲೆಯಾಗಿ ಅಪ್ಪಳಿಸುವ ಒಡಲ ದಂಡೆಗೆ ಆತ್ಮದ ಸಾಕ್ಷಾತ್ಕಾರದ ಅವತಾರವಾಗಿದೆಂದು ಅರ್ಥವಾಗುವುದು. “ಎನ್ನ ಮನ ಪ್ರಾಣ ಭಾವ ನಿಮ್ಮಲ್ಲಿ ನಿಂದ ಬಳಿಕ ಕಾಯದ ಸುಖವ ನಾನೇನೆಂದರಿಯನು ಆರು ಸೋಂಕಿದರೆಂದರಿಯೆನು ಚೆನ್ನಮಲ್ಲಿಕಾರ್ಜುನನ ಮನದೊಳಗೆ ಒಚ್ಚ(ಪ್ಪಿ)ತವಾದ ಒಳಿಕ ಹೌರಗೇನಾಯಿತೆಂದರಿಯೆನು” (ಪು.ಸA ೨೩ ವಚನ ಸಂ ೭೬-ಅಕ್ಕನ ವಚನಗಳು: ದ್ವಿ ಸಂಸ್ಕರಣ ಸಂ.ಎಲ್.ಬಸವರಾಜು ೧೯೭೨, ಮೈಸೂರು) ಹೆಣ್ಣು ತನ್ನೊಳಗೆಯೇ ಒಂದು ಪ್ರಪಂಚವನ್ನು ಸೃಷ್ಟಿಸಿಕೊಂಡಿದ್ದಾಳೆ.  ಹಾಗೆ ಅಕ್ಕನ ಮನದ ಪ್ರಪಂಚದಲ್ಲಿ ಆ ಚೆನ್ನನ್ನು ಕಾಣುವ ಹಂಬಲ ಹೆಣ್ತತನದ ಒಂದು ರೂಪ ಅಷ್ಟೇ ಎಂದು ತಿಳಿಯುತ್ತದೆ. ಇದು ಸರ್ವಕಾಲಕ್ಕೂ ಸತ್ಯವೆ ಆಗಿರುತ್ತದೆ. ನೀನೆ ನನ್ನ ಪ್ರಾಣವೆಂದ ಮೇಲೆ ಎಲ್ಲವೂ ನೀನೆ ಇದರಲ್ಲಿ ಸಂಶಯವೇ? ಪಾರಮಾರ್ಥಿಕದ ಸುಖವೇ ಬೇಡವೆಂದು ತನುವಿನಲ್ಲಿ ಇರುವ ನಿನ್ನ ಇರುವಿಕೆಯ ಕಾಯಕವೊಂದೆ ಸಾಕು ಎಂದು ಹೆಣ್ಣು ತನ್ನ ನಿವೇದನೆಗಳನ್ನು ಒಗ್ಗೂಡಿಸುವ ಪರಿ ಅಕ್ಕನಲ್ಲಿ ಅನನ್ಯವಾಗಿದೆ.. ಬೇರೆಯವರ ಮಾತುಗಳ ನಿಂದನೆಯೂ ಬಂದರೂ ಬಿರುಗಾಳಿಗೆ ಅಣುರೇಣುವಿನಂತೆ ಮಾಯವಾಗುವೆಂಬ ಅಕ್ಕನ ಮನದ ಒಪ್ಪತ ನಿಲುವು ಸಾಟಿಯಾಗಿದೆ. “ಹಸಿವಾದಡೆ ಊರೊಳಗೆ ಬಿಕ್ಷಾನ್ನಗಳುಂಟು  ತೃಷೆಯಾದಡೆ ಕೆರೆ ಹಳ್ಳ ಭಾವಿಗಳುಂಟು  ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು  ಶಯನಕ್ಕೆ ಹಾಳು ದೇಗುಲಗಳುಂಟು  ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು” (ಶಿವಶರಣೆಯರ ವಚನ ಸಂಪುಟ. ಸಂ.ಡಾ. ವೀರಣ್ಣ ರಾಜೂರ ೧೯೯೩. ಬೆಂಗಳೂರು ಪು.ಸಂ. ೧೦೪. ಪು. ೩೩೬)  ಸಹಜವಾಗಿ ಜೀವವನ್ನು ಉಳಿಸಿಕೊಳ್ಳಲು ಮತ್ತು ಬದುಕು ನಡೆಸಲು ಕೆಲವು ಸಕ್ರಿಯೆಗಳ ಅಥವಾ ಆಹಾರ ಪದಾರ್ಥಗಳು ಚಿಕ್ಕ ಗುಡಿಸಲು ಅವಶ್ಯಕವಿರುತ್ತದೆ. ಅವುಗಳನ್ನು ಪಡೆದುಕೊಂಡ ಮೇಲೆ ಮನವೆಂಬ ಶುದ್ಧಿಗೆ ಆತ್ಮದ ಅವಲೋಕನ ಹೊಳೆಯಬೇಕು. ಆಗ ಮಾತ್ರ ಆತ್ಮದ ಸಂಗಾತಿಯ ಪೂರ್ಣತೆ ಇರುವಿಕೆ ಆಗುತ್ತದೆ. ಅಕ್ಕಳ ಚೆನ್ನನೊಂದಿಗೆ ಮಾಡಿಕೊಂಡಿರುವ ಸಂಧಾನದ ಅರಿವು ಇಂದು ನೂತನ. “ಅಕ್ಕನ ವಚನಗಳು ಅವಳ ಆತ್ಮಚರಿತೆಯ ಮತ್ತು ವ್ಯಕ್ತಿತ್ವದ ಜೀವಂತ ಮತ್ತು ಜ್ವಲಂತ ದಾಖಲೆಗಳಾಗಿವೆ’’ ಎಂದು ಡಾ.ರಂ.ಶ್ರೀ ಮುಗಳಿರವರು ಹೇಳಿರುವ ಹೇಳಿಕೆ ಸತ್ಯವೆನಿಸುವುದು. ಆತ್ಮವಂಚನೆ ಇಲ್ಲದೆ ಅಕ್ಕನ ವಚನಗಳು ಆತ್ಮ ಶೋಧನೆಯ ಪ್ರಕ್ರಿಯೆಯಲ್ಲಿ ಮೂಡಿಬಂದಿದೆ. ಹಾಗೇ ಚೆನ್ನನೊಂದಿಗೆ ಅಕ್ಕ ಅತ್ಮವಲೋಕನ ಮಾಡಿಕೊಂಡ ಪರಿ ಅನನ್ಯವಾದುದು. ಅಕ್ಕಳ ಈ ನಿವೇದನೆಯು ಪರಂಪರೆಯಲ್ಲಿ ಒಂದು ಗಟ್ಟಿ ನೆಲೆಯನ್ನು ಸ್ಥಾಪಿಸಿದ್ದು ವಿಶೇಷ. ಹೆಣ್ಣಿನ ಆತ್ಮ ನಿವೇದನೆಗೆ ಮುಕ್ತ ಸ್ವಾತಂತ್ರ್ಯವಿದ್ದಿಲ್ಲಾ? ಎನ್ನುವ ಅನುಮಾನದ ಬೆಂಕಿ ಇದೀಗ ಬೂದಿಯಾಗಿದೆ. ಸ್ವಾತಂತ್ರ್ಯ ವಿಲ್ಲದ ಕಾಲದಲ್ಲಿ ಅಕ್ಕಳು ತನ್ನ ವಿಚಾರದ ಕಹಿ-ಸಿಹಿ ನೆನಪುಗಳನ್ನು ಆತ್ಮದೊಳಗೆ ಅಡಗಿಸಿ ಅವುಗಳನ್ನು ವಿಹರಿಸಲು ರೂಪಕದ ಮೂಲಕ ಕ್ರಿಯೆ ನಡೆಸಿದಳು. ಆ ಕಾರಣಕ್ಕೆ ಅಕ್ಕಮಹಾದೇವಿಯ ಆತ್ಮ ನಿವೇದನೆಗಳ ಹೊಳಪು ಇವತ್ತು ಪ್ರಜ್ವಲಿಸುತ್ತಿವೆ. ಹೆಣ್ಣು ಏಕಕಾಲದಲ್ಲಿ ಮಾಯೆಯಾಗಿ, ಸಂಪತ್ತಾಗಿ, ಸಖಿ ಮತ್ತು ಸತಿಯಾಗಿ ಜೊತೆ ಜೊತೆಗೆ ಹಾಕುವ ಹೆಜ್ಜೆಗಳು ಸವಾಲಾಗಿರುತ್ತವೆ. ******************************************************

ಆತ್ಮ ನಿವೇದನೆಯಲ್ಲಿ ಅಕ್ಕನ ಹೆಜ್ಜೆಗಳು Read Post »

ಇತರೆ

ಚಿಟ್ಟೆ

ಲೇಖನ ಚಿಟ್ಟೆ ಆಶಾ ಸಿದ್ದಲಿಂಗಯ್ಯ ಚಿಟ್ಟೆ ಲೆಪಿಡೊಪ್ಟೆರಾ ಆರ್ಡರ್ ಗೆ ಸೇರಿದ ಕೀಟ. ಇದು ಹೆಸ್ಪರಾಯ್ಡಿಯಾ (the skippers) ಹಾಗೂ ಪೆಪಿಲಿಯನಾಯ್ಡಿಯಾ (ಉಳಿದೆಲ್ಲ ಚಿಟ್ಟೆಗಳ) ಜಾತಿಗಳಿಗೆ ಸೇರಿದ್ದು ಹಲವು ಬಣ್ಣಗಳು ಹಾಗೂ ವಿವಿಧ ಆಕಾರಗಳಲ್ಲಿ ಕಾಣಸಿಗುತ್ತವೆ. ಕಾಯ್ರ್ನ್ಸ್ ಬರ್ಡ್ವಿಂಗ್ ಎನ್ನುವುದು ಆಸ್ಟ್ರೇಲಿಯಾದಲ್ಲಿನ ಅತಿ ದೊಡ್ಡ ಚಿಟ್ಟೆ ಚಿಟ್ಟೆಗಳ ಮೇಲೆ ಅಧ್ಯಯನ ನಡೆಸುವವರನ್ನು ಆಂಗ್ಲ ಭಾಷೆಯಲ್ಲಿ ‘ಲೆಪಿಡಾಪ್ಟರಿಸ್ಟ್’ಗಳೆಂದು ಕರೆಯುತ್ತಾರೆ. ಚಿಟ್ಟೆಗಳ ವೀಕ್ಷಣೆ ಜನರಲ್ಲಿ ಒಂದು ಹವ್ಯಾಸವಾಗಿ ಬೆಳೆದಿದೆ. ಜೀವನ ಚಕ್ರ ಒಂದು ಜೀವನ ಚಕ್ರವು ಜೀವಂತ ಜೀವಿಯು ತನ್ನ ಜೀವಿತಾವಧಿಯಲ್ಲಿ ಆರಂಭದಿಂದ ಕೊನೆಯವರೆಗೆ ಹಾದುಹೋಗುವ ಹಂತಗಳಿಂದ ಮಾಡಲ್ಪಟ್ಟಿದೆ. ಚಿಟ್ಟೆ ತನ್ನ ಜೀವನ ಚಕ್ರದಲ್ಲಿ ಸಂಪೂರ್ಣ ಮೆಟಾಮಾರ್ಫಾಸಿಸ್ ಎಂಬ ಪ್ರಕ್ರಿಯೆಗೆ ಒಳಗಾಗುತ್ತದೆ. ಇದರ ಅರ್ಥ, ಚಿಟ್ಟೆ ಅದರ ಆರಂಭಿಕ ಲಾರ್ವಾ ಹಂತದಿಂದ ಸಂಪೂರ್ಣವಾಗಿ ಕ್ಯಾಟರ್ಪಿಲ್ಲರ್ ಆಗಿದ್ದರೆ, ಅಂತಿಮ ಹಂತದವರೆಗೆ ಅದು ಸುಂದರವಾದ ಮತ್ತು ಆಕರ್ಷಕವಾದ ವಯಸ್ಕ ಚಿಟ್ಟೆ ಆಗುತ್ತದೆ. ಚಿಟ್ಟೆಯು ರೂಪ ತಾಳುವ ಮುನ್ನ ಕಂಬಳಿಹುಳುವಾಗಿರುತ್ತದೆ. ಅದರ ಆಹಾರ ಮ್ಯಾಣ ಮಲ್ಲಿಗೆ ಗಿಡ.  ಗಿಡದ  ಎಲೆಯ ತುಂಬೆಲ್ಲಾ ಸುಮಾರು ಗಾಢ ಕೆಂಪು ವರ್ಣದ, ಹಸಿರು ಬಣ್ಣದ ತಲೆ, ಉಳಿದ ಭಾಗದಲ್ಲಿ ಸಣ್ಣ ಸಣ್ಣ ಮುಳ್ಳಿನಂತಹ ಮೃದು ಕವಲುಗಳಿರುವ  ಕಂಬಳಿಹುಳುಗಳು ಹರಿದಾಡುತ್ತಾ ಎಲೆಯನ್ನು ಭಕಾಸುರನಂತೆ ಮುಕ್ಕುತ್ತವೆ. ಹಾಗೆ ಎಲೆಗಳನ್ನು ತಿನ್ನುತ್ತಾ, ತಿನ್ನುತ್ತಾ ಬೆಳೆಯತೊಡಗುತ್ತವೆ. ಚಿಟ್ಟೆ ಜೀವನ ಚಕ್ರವು ನಾಲ್ಕು ಹಂತಗಳನ್ನು ಹೊಂದಿದೆ: ಮೊಟ್ಟೆ, ಲಾರ್ವಾ, ಪೊರೆ ಮತ್ತು ವಯಸ್ಕ. ಮೊಟ್ಟೆಯಿಂದ ಹೊರಬರುವ ಲಾರ್ವಾ ಅಥವಾ ಕ್ಯಾಟರ್ಪಿಲ್ಲರ್ ಜೀವನ ಚಕ್ರದಲ್ಲಿ ಎರಡನೇ ಹಂತವಾಗಿದೆ. ಮರಿಹುಳುಗಳು ಸಾಮಾನ್ಯವಾಗಿ, ಹಲವಾರು ಜೋಡಿ ಸುಳ್ಳು ಕಾಲುಗಳು ಅಥವಾ ಪ್ರೊಲೆಗ್ಗಳೊಂದಿಗೆ ಹಲವಾರು ಜೋಡಿ ಕಾಲುಗಳನ್ನು ಹೊಂದಿರುತ್ತವೆ. ಒಂದು ಕ್ಯಾಟರ್ಪಿಲ್ಲರ್ ಪ್ರಾಥಮಿಕ ಚಟುವಟಿಕೆ ತಿನ್ನುವುದು. ಅವು ಹೊಟ್ಟೆಬಾಕತನದ ಹಸಿವನ್ನು ಹೊಂದಿದ್ದಾವೆ ಮತ್ತು ನಿರಂತರವಾಗಿ ತಿನ್ನುತ್ತವೆ.  ಕ್ಯಾಟರ್ಪಿಲ್ಲರ್ ತಿನ್ನುವುದರಿಂದ, ಅದರ ದೇಹವು ಗಣನೀಯವಾಗಿ ಬೆಳೆಯುತ್ತದೆ. ಕಠಿಣ ಹೊರ ಚರ್ಮ ಅಥವಾ ಎಕ್ಸೋಸ್ಕೆಲೆಟನ್, ಆದಾಗ್ಯೂ, ವಿಸ್ತರಿಸಲಾಗದ ಕ್ಯಾಟರ್ಪಿಲ್ಲರ್ ಜೊತೆಗೆ ಬೆಳೆಯುವುದಿಲ್ಲ ಅಥವಾ ವಿಸ್ತರಿಸುವುದಿಲ್ಲ. ಬದಲಾಗಿ, ಹಳೆಯ ಎಕ್ಸೋಸ್ಕೆಲೆಟನ್ನು ಮೊಲ್ಟಿಂಗ್ ಎನ್ನುವ ಪ್ರಕ್ರಿಯೆಯಲ್ಲಿ ಚೆಲ್ಲುತ್ತದೆ ಮತ್ತು ಅದನ್ನು ಹೊಸ, ದೊಡ್ಡದಾದ ಎಕ್ಸೋಸ್ಕೆಲೆಟನ್ ಬದಲಿಸಲಾಗುತ್ತದೆ. ಒಂದು ಮರಿಹುಳುವು ನಾಲ್ಕರಿಂದ ಐದು ಮೊಳಕೆಗಳಷ್ಟು ಹಾದುಹೋಗುವುದಕ್ಕೆ ಮುಂಚೆಯೇ ಹೋಗಬಹುದು. ಚಿಟ್ಟೆಯ ಜೀವನಚಕ್ರದ ನಾಲ್ಕನೇ ಮತ್ತು ಅಂತಿಮ ಹಂತವು ವಯಸ್ಕವಾಗಿದೆ. ಚಿಟ್ಟೆ ಹೊರಹೊಮ್ಮುತ್ತದೆ. ಇದು ಅಂತಿಮವಾಗಿ ಪುನಃ ಚಕ್ರವನ್ನು ಪ್ರಾರಂಭಿಸಲು ಮೊಟ್ಟೆಗಳನ್ನು ಇಡುತ್ತವೆ. ಹೆಚ್ಚಿನ ವಯಸ್ಕ ಚಿಟ್ಟೆಗಳು ಕೇವಲ ಒಂದು ವಾರ ಅಥವಾ ಎರಡು ದಿನಗಳಲ್ಲಿ ಬದುಕುತ್ತವೆ, ಕೆಲವು ಜಾತಿಗಳು 18 ತಿಂಗಳುಗಳವರೆಗೆ ಬದುಕಬಹುದು. ಬಟರ್ಫ್ಲೈ ಚಟುವಟಿಕೆಗಳು ಚಿಟ್ಟೆಗಳು ಸಂಕೀರ್ಣ ಜೀವಿಗಳಾಗಿವೆ. ಅವುಗಳ ದಿನನಿತ್ಯದ ಜೀವನವನ್ನು ಅನೇಕ ಚಟುವಟಿಕೆಗಳಿಂದ ನಿರೂಪಿಸಬಹುದು. ನೀವು ಅನುಸರಿಸುವವರಾಗಿದ್ದರೆ  ಅನೇಕ ಚಟುವಟಿಕೆಗಳಲ್ಲಿ ಚಿಟ್ಟೆಗಳು ಕಾಣಿಸಿಕೊಳ್ಳುತ್ತವೆ. ಹೂವಿಂದ ಹೂವಿಗೆ ಹಾರುವ ಮಕರಂದವನ್ನು ಹೀರುವ  ಚಿಟ್ಟೆಯನ್ನು ಗಮನಿಸಬಹುದು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಆಕರ್ಷಸಿಸುವ ಚಿಟ್ಟೆಗಳು ಅಲ್ಪಯುಷ್ಯ ಹೊಂದಿದ್ದರೂ ಹಾರಡುತ್ತ ಖುಷಿಯಾಗಿ ಜೀವನ ಕಳೆಯುತ್ತಾ, ಸದಾ ಕೊರಗುವ ಮನುಷ್ಯರಿಗೆ ಜೀವನ ಪಾಠವು ಸಹ ಹೌದು ಚಿಟ್ಟೆಯ ಆಹಾರ ಲಾರ್ವಾ ಅಥವಾ ಕ್ಯಾಟರ್ಪಿಲ್ಲರ್ ಹಂತ ಮತ್ತು ವಯಸ್ಕ ಚಿಟ್ಟೆಗಳು ವಿಭಿನ್ನ ಆಹಾರದ ಆದ್ಯತೆಗಳನ್ನು ಹೊಂದಿವೆ, ಅವುಗಳ ಬಾಯಿಯ ಭಾಗಗಳಲ್ಲಿನ ವ್ಯತ್ಯಾಸಗಳಿಂದಾಗಿ. ಮರಿಹುಳುಗಳು ತಿನ್ನುವುದರ ಬಗ್ಗೆ ಬಹಳ ನಿರ್ದಿಷ್ಟವಾಗಿರುತ್ತವೆ, ಅದಕ್ಕಾಗಿಯೇ ಸ್ತ್ರೀ ಚಿಟ್ಟೆ ಕೆಲವು ಸಸ್ಯಗಳಲ್ಲಿ ಮಾತ್ರ ತನ್ನ ಮೊಟ್ಟೆಗಳನ್ನು ಇಡುತ್ತದೆ. ಆಕೆಯ ಮೊಟ್ಟೆಗಳಿಂದ ಹೊರಬರುವ ಹಸಿದ ಮರಿಹುಳುಗಳಿಗೆ ಸೂಕ್ತವಾದ ಆಹಾರವಾಗಿ ಸಸ್ಯಗಳು ಯಾವವುಗಳನ್ನು ಸೇವಿಸುತ್ತವೆ ಎಂದು ಅವು ಸಹಜವಾಗಿ ತಿಳಿದಿರುತ್ತವೆ. ಮರಿಹುಳುಗಳು ಹೆಚ್ಚು ಚಲಿಸುವುದಿಲ್ಲ ಮತ್ತು ತಮ್ಮ ಇಡೀ ಜೀವನವನ್ನು ಒಂದೇ ಸಸ್ಯದಲ್ಲಿ ಅಥವಾ ಅದೇ ಎಲೆಗಳಲ್ಲಿ ಕಳೆಯಬಹುದು! ತಮ್ಮ ಪ್ರಾಥಮಿಕ ಗುರಿ ಅವು ಎಷ್ಟು ಸಾಧ್ಯವೋ ಅಷ್ಟು ತಿನ್ನಲು ಅವುಗಳ pupate ಸಾಕಷ್ಟು ದೊಡ್ಡದಾಗಿದೆ. ಮರಿಹುಳುಗಳು ಎದೆಹಾಲು ಎಂದು ಕರೆಯಲ್ಪಡುವ ಬಾಯಿ ಭಾಗಗಳನ್ನು ತಿನ್ನುತ್ತವೆ, ಅವುಗಳು ಎಲೆಗಳು ಮತ್ತು ಇತರ ಸಸ್ಯ ಭಾಗಗಳನ್ನು ತಿನ್ನಲು ನೆರವಾಗುತ್ತವೆ. ಬೆಳೆಗಳಿಗೆ ಹಾನಿ ಮಾಡಿರುವುದರಿಂದ ಕೆಲವು ಮರಿಹುಳುಗಳನ್ನು ಕೀಟಗಳೆಂದು ಪರಿಗಣಿಸಲಾಗುತ್ತದೆ. ಮರಿಹುಳುಗಳು ಹೆಚ್ಚುವರಿ ನೀರನ್ನು ಕುಡಿಯುವ ಅಗತ್ಯವಿಲ್ಲ ಏಕೆಂದರೆ ಅವು ತಿನ್ನುವ ಸಸ್ಯಗಳಿಂದ ಬೇಕಾಗಿರುವ ನೀರನ್ನು ಪಡೆಯುತ್ತವೆ.  ಚಿಟ್ಟೆಗಳು ಸುತ್ತಲೂ ಸುತ್ತುತ್ತವೆ ಮತ್ತು ಹೆಚ್ಚು ವಿಶಾಲ ಪ್ರದೇಶದ ಮೇಲೆ ಸೂಕ್ತವಾದ ಆಹಾರವನ್ನು ಹುಡುಕುತ್ತವೆ..  ಹೆಚ್ಚಿನ ಸಂದರ್ಭಗಳಲ್ಲಿ, ವಯಸ್ಕ ಚಿಟ್ಟೆಗಳು ವಿವಿಧ ದ್ರವಗಳ ಮೇಲೆ ಮಾತ್ರ ಆಹಾರವನ್ನು ನೀಡುತ್ತವೆ. ಅವು ಪ್ರೋಬೊಸಿಸ್ ಎಂಬ ಟ್ಯೂಬ್ ತರಹದ ನಾಲಿಗೆ ಮೂಲಕ ಕುಡಿಯುತ್ತವೆ. ಇದು ಸಪ್ ದ್ರವ ಆಹಾರಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ, ಮತ್ತು ನಂತರ ಚಿಟ್ಟೆ ಆಹಾರವನ್ನು ನೀಡುತ್ತಿರುವಾಗ ಮತ್ತೆ ಸುರುಳಿಯಾಗುತ್ತದೆ. ಹೆಚ್ಚಿನ ಚಿಟ್ಟೆಗಳು ಹೂವಿನ ಮಕರಂದವನ್ನು ಬಯಸುತ್ತವೆ, ಆದರೆ ಇತರವುಗಳು ಮರಗಳನ್ನು ಕೊಳೆಯುವಲ್ಲಿ ಮತ್ತು ಪ್ರಾಣಿ ಸಗಣಿಗಳಲ್ಲಿ, ಕೊಳೆಯುತ್ತಿರುವ ಹಣ್ಣುಗಳಲ್ಲಿ ಕಂಡುಬರುವ ದ್ರವಗಳ ಮೇಲೆ ಆಹಾರವನ್ನು ನೀಡುತ್ತವೆ. ಬಿಸಿಲು ಪ್ರದೇಶಗಳು ಮತ್ತು ಗಾಳಿಯಿಂದ ರಕ್ಷಿಸಲು ಬಯಸುತ್ತವೆ. .*********************************************

ಚಿಟ್ಟೆ Read Post »

ಇತರೆ

ಚಂದ್ರನೆಂಬ ವೈಜ್ಞಾನಿಕ ವಿಸ್ಮಯ

ಭಾರತವು ತನ್ನದೇ ಆದ ತಂತ್ರಜ್ಞಾನ ಸಂಶೋಧಿಸಿ ಅಭಿವೃದ್ಧಿಗೊಳಿಸಿದ್ದರಿಂದ ಚಂದ್ರಯಾನ ಯೋಜನೆಯಿಂದ ಭಾರತದ ಬಾಹ್ಯಾಕಾಶ ಯೋಜನೆಗೆ ಮಹತ್ವದ ಉತ್ತೇಜನ ಲಭಿಸಿತು.

ಚಂದ್ರನೆಂಬ ವೈಜ್ಞಾನಿಕ ವಿಸ್ಮಯ Read Post »

ಇತರೆ

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ ೨೦೨೦ನೆಯ ಸಾಲಿನಿಂದ ಕೊಡಮಾಡುವ ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ೪೦ ವರ್ಷದೊಳಗಿನ ಕವಿಗಳಿಂದ ಕೃತಿಗಳನ್ನು ಆವ್ಹಾನಿಸಲಾಗಿದೆ.ಪ್ರಶಸ್ತಿಯು ೫ ಸಾವಿರ ನಗದು,ಸ್ಮರಣಿಕೆ ಒಳಗೊಂಡಿದೆ.ಆಸಕ್ತ ಕವಿಗಳು ೨೦೨೦ ನೆಯ ಸಾಲಿನಲ್ಲಿ ಪ್ರಕಟಗೊಂಡ ತಮ್ಮ ಸ್ವರಚಿತ ಮೂರು ಕವನ ಸಂಕಲನಗಳನ್ನು ಜನವರಿ ೧೫,೨೦೨೧ ರೊಳಗೆಸಂಚಾಲಕರು, ನಾಗಶ್ರೀ ಕಾವ್ಯಪ್ರಶಸ್ತಿ ಸಮಿತಿಸಿಂದಗಿ,ವಿಜಯಪುರ ಜಿಲ್ಲೆಈ ವಿಳಾಸಕ್ಕೆ ಪ್ರೊಫೆಷನಲ್ ಕೋರಿಯರ್ ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ +918951375140,988065654 ಸಂಪರ್ಕಿಸುವಂತೆ ಕೋರಿದ್ದಾರೆ.

ನಾಗಶ್ರೀ ಕಾವ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ Read Post »

You cannot copy content of this page

Scroll to Top