ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

ನೀರು ಕುಡಿಯಿರಿ

ಲೇಖನ ನೀರು ಕುಡಿಯಿರಿ ಆಶಾ ಸಿದ್ದಲಿಂಗಯ್ಯ ಜನರು ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ನೀರನ್ನು ಕುಡಿಯುವುದೇ ಮರೆತಿದ್ದಾರೆ ಆದರೆ ನೀರು ಆರೋಗ್ಯಕ್ಕೆ ಅತ್ಯವಶ್ಯಕ.. ನಮ್ಮ ಉಳಿವಿಗಾಗಿ ನೀರು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಬಾಯಾರಿಕೆಯನ್ನು ನೀಗಿಸುವುದಕ್ಕೆ ಮಾತ್ರವಲ್ಲ, ದೇಹ ಸರಿಯಾಗಿ ಕೆಲಸ ಮಾಡಲು ಹಾಗೂ ರೋಗ ಮುಕ್ತವಾಗಿಡಲು ನೀರು ಅಗತ್ಯ. ದೇಹದ ತೂಕ ಇಳಿಸಲು ಸಹ ನೀರು ಕುಡಿಯುವುದು ಸಹಾಯಕಾರಿ. ಬಿಸಿನೀರು ಕುಡಿದರೆ ದೇಹದ ತೂಕ ಕಡಿಮೆ ಆಗಲು ಸಹಾಯ ಆಗುತ್ತಾ? ನಮ್ಮ ದೇಹದ ಸುಮಾರು 70% ರಷ್ಟು ನೀರಿನಿಂದ ಕೂಡಿದೆ ಹಾಗೂ ದೇಹದ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ, ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯು ಪ್ರತಿದಿನ 2-3 ಲೀಟರ್ ನೀರನ್ನು ಸೇವಿಸುವುದು ಅತ್ಯಗತ್ಯ. ತಣ್ಣನೆ ಮತ್ತು ಬಿಸಿನೀರು ಎರಡೂ ತಮ್ಮದೇ ಆದ ಬಾಧಕಗಳನ್ನು ಹೊಂದಿವೆ. ತೀವ್ರವಾದ ವರ್ಕೌಟ್‌ ನಂತರ ತಣ್ಣಗಾಗಲು ಒಂದು ಲೋಟ ತಣ್ಣೀರು ನಿಮಗೆ ಸಹಾಯ ಮಾಡುತ್ತದೆ, ಆದರೆ ಬಿಸಿನೀರು ದೇಹದಿಂದ ಟಾಕ್ಸಿನ್‌ ಹೊರಹಾಕಲು ಸಹಾಯ ಮಾಡುವುದರೊಂದಿಗೆ ಆಹಾರವನ್ನು ಉತ್ತಮವಾಗಿ ಜೀರ್ಣಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದಲ್ಲದೆ, ಕುಡಿಯುವ ನೀರು ವಿಶೇಷವಾಗಿ ಬಿಸಿನೀರು ತೂಕ ಕರಗಿಸಲು ಸಹಾಯ ಮಾಡುತ್ತದೆ. ಅದು ನಿಜವೇ? ಹೆಚ್ಚು ನೀರು ಕುಡಿಯುವುದರಿಂದ ಒಬ್ಬ ವ್ಯಕ್ತಿಯು ತೂಕ ಕಳೆದು ಕೊಳ್ಳುತ್ತಾನೆ. ಇದಕ್ಕೆ  ಕಾರಣವೆಂದರೆ ನೀರು ಹೊಟ್ಟೆ ತುಂಬಿರುವ ಫೀಲ್‌ ನೀಡುತ್ತದೆ, ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಸಹಕರಿಸುತ್ತದೆ. ವಿಷಕಾರಿ ತ್ಯಾಜ್ಯವನ್ನು ಹೊರಹಾಕುತ್ತದೆ, ಎಂದು ಸಂಶೋಧನೆಯೊಂದು ಹೇಳಿದೆ. 2003ರಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನದ ಪ್ರಕಾರ, ಬಿಸಿನೀರನ್ನು ಕುಡಿಯುವುದರಿಂದ ತೂಕ ಇಳಿಸುವ ಪ್ರಕ್ರಿಯೆಯನ್ನು ಹೆಚ್ಚಿಸಬಹುದು. ಊಟಕ್ಕೆ ಮುಂಚಿತವಾಗಿ 500 ಮಿಲಿ ನೀರನ್ನು ಕುಡಿಯುವುದು ಮೆಟಾಬಾಲಿಸಮ್‌  30% ಹೆಚ್ಚಿಸುತ್ತದೆ. ಪ್ರತಿದಿನ ಬೆಳಿಗ್ಗೆ ಅಥವಾ ದಿನವಿಡೀ ಬಿಸಿ ಅಥವಾ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ತೂಕ ಇಳಿಸುವ ಪ್ರಕ್ರಿಯೆಗೆ ಮೂರು ವಿಧಗಳಲ್ಲಿ ಸಹಾಯವಾಗುತ್ತದೆ. ಬಿಸಿನೀರು ಕುಡಿಯುವುದರಿಂದ ನಿಮ್ಮ ದೇಹದ ಉಷ್ಣತೆ ಬದಲಾಗುತ್ತದೆ. ನೀರಿನ ಬೆಚ್ಚಗಿನ ತಾಪಮಾನವನ್ನು ಸರಿದೂಗಿಸಲು, ನಮ್ಮ ದೇಹವು ಆಂತರಿಕ ತಾಪಮಾನವನ್ನು ಕಡಿಮೆ ಮಾಡುತ್ತದೆ ಮತ್ತು ಚಯಾಪಚಯವನ್ನು ಸಕ್ರಿಯಗೊಳಿಸುತ್ತದೆ. ದೇಹದಲ್ಲಿನ ಕೊಬ್ಬನ್ನು ಒಡೆಯುತ್ತದೆ ಮತ್ತು ಅವುಗಳನ್ನು ಅಣುಗಳಾಗಿ ಪರಿವರ್ತಿಸುತ್ತದೆ, ಇದರಿಂದಾಗಿ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಫ್ಯಾಟ್‌ ಬರ್ನ್‌ ಸುಲಭಗೊಳಿಸುತ್ತದೆ. ಹಸಿವನ್ನು ನೀಗಿಸಲು ಬೆಚ್ಚಗಿನ ನೀರು ಸಹಾಯ ಮಾಡುತ್ತದೆ. ನಿಮ್ಮ ಊಟಕ್ಕೆ 30 ನಿಮಿಷಗಳ ಮೊದಲು ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿದರೆ ನಿಮ್ಮ ಕ್ಯಾಲೊರಿ ಬರ್ನ್ ಆಗುವುದರಲ್ಲಿ ಅನುಮಾನವೇ ಇಲ್ಲ. ಜೀರ್ಣಕ್ರಿಯೆಯ ಪ್ರಕ್ರಿಯೆಯ ಸುಗಮವಾಗಿಸಲು ನೀರು ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ನಮಗೆ  ಜೀರ್ಣಿಸಿಕೊಳ್ಳಲು ಕಷ್ಟಪಡುವ ಆಹಾರ ಕಣಗಳನ್ನು ಸಹ ಕರಗಿಸಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಬಿಸಿನೀರು ನರಮಂಡಲವನ್ನು ಶಾಂತಗೊಳಿಸುತ್ತದೆ. ನಮ್ಮ ನರಮಂಡಲವು ಶಾಂತವಾಗಿದ್ದಾಗ, ನಾವು ಕಡಿಮೆ ನೋವುಗಳನ್ನು ಅನುಭವಿಸುವುದಲ್ಲದೆ, ದಿನವಿಡೀ ಶಾಂತವಾಗಿರಲು ನಮಗೆ ಸಹಾಯ ಮಾಡುತ್ತದೆ. ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬಿಸಿನೀರು ನಿಮ್ಮ ಕರುಳನ್ನು ಸಂಕುಚಿತಗೊಳಿಸುತ್ತದೆ, ಇದು ಕರುಳಿನಲ್ಲಿನ ಅಡಚಣೆಯನ್ನು ಕಡಿಮೆ ಮಾಡಿ ಮಲ ವಿಸರ್ಜನೆ ಸುಲಭಗೊಳಿಸುತ್ತದೆ. ಕುಡಿಯುವ ನೀರು ವ್ಯಕ್ತಿಯ ದೇಹದ ಉಷ್ಣತೆಯನ್ನು ಹೆಚ್ಚಿಸಿ ಬೆವರುವಂತೆ ಮಾಡುತ್ತದೆ. ಬೆವರುವಿಕೆಯ ರಂಧ್ರಗಳಿಂದ ಟಾಕ್ಸಿನ್‌ ಹೊರಹಾಕುತ್ತದೆ ************************************************************************

ನೀರು ಕುಡಿಯಿರಿ Read Post »

ಇತರೆ, ಮಕ್ಕಳ ವಿಭಾಗ

ಪ್ರತಿಫಲ

ಮಕ್ಕಳ ಕಥೆ ಪ್ರತಿಫಲ ಬಸವರಾಜ ಕಾಸೆ ದಿನವೂ ಏನಾದರೂ ಒಂದು ಒಳ್ಳೆಯ ಕೆಲಸ ಮಾಡಿ ಅದನ್ನು ಬರೆದುಕೊಂಡು ಬರಬೇಕು ಎಂದು ಕ್ಲಾಸ್ ಟೀಚರ್ ಹೇಳುತ್ತಿದ್ದರು. ಆದರೆ ಅವಕಾಶ ಇದ್ದಾಗಲೂ ಅಂತಹ ಕೆಲಸವನ್ನು ಯಾವ ಮಕ್ಕಳು ಮಾಡುತ್ತಿರಲಿಲ್ಲ. ಅದರಲ್ಲಿ ವಿಶೇಷವಾಗಿ ಚೂಟಿ ಮಾಡುತ್ತಾನೆ ಇರಲಿಲ್ಲ. ಆದರೆ ದಿನವೂ “ಇಂದು ರಸ್ತೆಯಲ್ಲಿ ಬಿದ್ದ ಮುಳ್ಳು ತೆಗೆದು ಹಾಕಿದೆ”, “ಕಲ್ಲು ತೆಗೆದು ಹಾಕಿದೆ”, “ವೃದ್ಧರಿಗೆ ರಸ್ತೆ ದಾಟಲು ಸಹಾಯ ಮಾಡಿದೆ”, “ಮನೆ ಕಸ ಗುಡಿಸಿದೆ”, “ಅಮ್ಮನಿಗೆ ಅಡುಗೆಯಲ್ಲಿ ನೆರವಾದೆ” ಹೀಗೆ ಸುಮ್ಮಸುಮ್ಮನೆ ಏನಾದರೂ ಬರೆದುಕೊಂಡು ಹೋಗುತ್ತಿದ್ದಳು. ಚೂಟಿಯ ಗೆಳತಿಯಾದ ಪುಟ್ಟಿಯು ನಿಜವಾಗಿಯೂ ಮಾಡುವ ಮನಸ್ಸು ಹೊಂದಿದ್ದಳು ಮತ್ತು ಗಮನಕ್ಕೆ ಬಂದರೆ ಮಾಡುತ್ತಿದ್ದಳು. ಆದರೆ ಇದನ್ನೆಲ್ಲಾ ಎಷ್ಟೋ ಸಲ ಚೂಟಿಯೇ ತಡೆದಿದ್ದಳು. ಅವತ್ತು ಒಂದು ದಿನ ಚೂಟಿ ಮತ್ತು ಪುಟ್ಟಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಯಾರೋ ಮಾವಿನ ಹಣ್ಣು ತಿನ್ನುತಿರುವದನ್ನು ಕಂಡು ಇವರಿಬ್ಬರಿಗೂ ತಿನ್ನಬೇಕು ಎನಿಸಿತು. ಆದರೆ ಇಬ್ಬರ ಬಳಿಯೂ ದುಡ್ಡು ಇರಲಿಲ್ಲ. ಹಾಗೆ ಆಸೆಗಣ್ಣಿನಲ್ಲಿ ಮುಂದೆ ಮುಂದೆ ಬರುವಾಗ ಅಲ್ಲಿ ಒಬ್ಬಳು ಅಜ್ಜಿ ರಸ್ತೆ ದಾಟಲಾಗದೆ ತಲೆ ಮೇಲೆ ಬುಟ್ಟಿ ಹೊತ್ತು ನಿಂತಿದ್ದಳು. ಒಂದಾದ ಮೇಲೆ ಒಂದು ವಿಪರೀತ ವಾಹನಗಳ ಓಡಾಟ. “ಪಾಪ, ನೋಡೇ… ಆ ಅಜ್ಜಿಗೆ ಸಹಾಯ ಮಾಡೋಣ, ಬಾ ಆ ಕಡೆ ಹೋಗೋಣ” ಎಂದರೂ “ಹೋಗೇ, ಯಾರು ಬರತಾರೆ” ಎಂದಳು. ಆಗ ಪುಟ್ಟಿ ಒಬ್ಬಳೇ ಹೋಗಿ ಮೆಲ್ಲಗೆ ಅಜ್ಜಿಯ ಕೈ ಹಿಡಿದು ರಸ್ತೆ ದಾಟಿಸಿದಳು. “ಸ್ವಲ್ಪ ಬುಟ್ಟಿ ಇಳಿಸು ಮರಿ ಹಾಗೆ” ಎಂದಾಗ ಅಜ್ಜಿ, ಪುಟ್ಟಿ ಇಳಿಸಿದಳು. ನೋಡಿದರೆ ಆ ಬುಟ್ಟಿ ತುಂಬಾ ಮಾವಿನ ಹಣ್ಣು “ತಗೋ, ತಿನ್ನು” ಅಂತ ಅಜ್ಜಿ ಕೊಟ್ಟರೂ “ಬೇಡ ಬೇಡ” ಎಂದು ಆಮೇಲೆ ತೆಗೆದುಕೊಂಡಳು. ದೂರದಲ್ಲಿಯೇ ನಿಂತು ನೋಡತಾ ಚೂಟಿ ಹೊಟ್ಟೆಕಿಚ್ಚು ಪಟ್ಟುಕೊಂಡು ಮುಖ ಉದಿಸಿಕೊಂಡಳು. “ಅಜ್ಜಿ ಅವಳು ನನ್ನ ಪ್ರೇಂಡ್” ಎಂದಾಗ ಅವಳನ್ನು “ಬಾ ಇಲ್ಲಿ, ಮಾವಿನ ಹಣ್ಣು ತಗೋ” ಎಂದಾಗ ಆಸೆಗಣ್ಣಿನಿಂದ ಓಡಿ ಬರಲು ಕಾಲಿಗೆ ಮುಳ್ಳು ಚುಚ್ಚಿತು. “ಯಾರಾದರೂ ಸೈಡಿಗೆ ಈ ಮುಳ್ಳು ಹಾಕಿದರೆ ನನ್ನ ಕಾಲಿಗೆ ಹೀಗೆ ಆಗ್ತಾ ಇರಲಿಲ್ಲ” ಎಂದು ಬೈಯಿಕೊಂಡಳು. ಹಾಗೆ ಕುಂಟುತ್ತಾ ಬಂದ ಅವಳಿಗೂ ಅಜ್ಜಿ ಮಾವಿನ ಹಣ್ಣು ನೀಡಿದಳು. ಅದರಿಂದ ಸಂತುಷ್ಟಳಾದ ಚೂಟಿ “ನಾವು ಇನ್ನೊಬ್ಬರಿಗೆ ಸಹಾಯ ಮಾಡಿದರೆ ನಮಗೂ ಮತ್ತೆ ಯಾರೋ ಸಹಾಯ ಮಾಡುತ್ತಾರೆ, ಒಳ್ಳೆಯ ಕೆಲಸಕ್ಕೆ ಒಳ್ಳೆಯ ಪ್ರತಿಫಲ” ಎಂದು ಖುಷಿಗೊಂಡು ತನ್ನ ನಡವಳಿಕೆಯನ್ನು ಬದಲಿಸಿಕೊಳ್ಳಬೇಕು ಎಂದು ನಿರ್ಧರಿಸಿ ಮಾವಿನ ಹಣ್ಣು ತಿಂದಳು ***********************************************

ಪ್ರತಿಫಲ Read Post »

ಇತರೆ, ಪ್ರಬಂಧ

ಸಲಾಮನ ಗಾಡಿಯೂ… ಸಂಕ್ರಾಂತಿ ಹಬ್ಬವೂ

ಲಲಿತ ಪ್ರಬಂಧ ಸಲಾಮನ ಗಾಡಿಯೂ… ಸಂಕ್ರಾಂತಿ ಹಬ್ಬವೂ… ಟಿ.ಎಸ್.ಶ್ರವಣಕುಮಾರಿ ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ’ ಎಂದು ಹೇಳುವಂತೆ ‘ಸಲಾಂ ಸಾಬಿಗೂ ಸಂಕ್ರಾಂತಿಗೂ ಏನು ಸಂಬಂಧ’ ಎಂದು ಹುಬ್ಬೇರಿಸುತ್ತೀರೇನೋ! ಪ್ರತಿ ಸಂಕ್ರಾಂತಿಗೂ ಸಲಾಮನನ್ನು ನೆನಸಿಕೊಳ್ಳದೆ ನನಗೆ ಸಂಕ್ರಾಂತಿ ಹಬ್ಬ ಆಗುವುದೇ ಇಲ್ಲ. ಈಗೊಂದೈವತ್ತು ವರ್ಷಗಳ ಹಿಂದೆ ಜನಸಾಮಾನ್ಯರಿಗೆ ಶಿವಮೊಗ್ಗದಲ್ಲಿ ಸಂಚಾರಕ್ಕೆ ಇದ್ದದ್ದು ಎರಡೇ ರೀತಿ. ಮೊದಲನೆಯದು ನಟರಾಜ ಸರ್ವೀಸ್ ಅಂದರೆ ಕಾಲ್ನಡಿಗೆಯಲ್ಲಿ ಹೋಗುವುದು; ಇನ್ನೊಂದು ಕುದುರೆ ಗಾಡಿ. ಕಾರೆನ್ನುವುದು ಅತಿ ಶ್ರೀಮಂತರ ಸೊತ್ತು ಬಿಡಿ; ನಮದಲ್ಲ. ಊರಲ್ಲಿ ಎಷ್ಟು ಕಾರಿದ್ದವೆಂದರೆ ಓಡಾಡುತ್ತಿದ್ದ ಕಾರು ಇಂತವರದೇ ಎಂದು ಹೇಳುವಷ್ಟು! ಸೈಕಲ್ಲುಗಳು ಸ್ಕೂಟರಿನ ಸ್ಥಾನಮಾನವನ್ನು ಪಡೆದಿದ್ದವು. ಅಲ್ಲಿಲ್ಲಿ ಸುವೇಗಾದಂತಹ ಮೊಪೆಡ್ ಗಳು ‘ನಾವೂ ಇದ್ದೀವಿ’ ಎಂದು ಮುಖದೋರುತ್ತಿದ್ದವು. ಇಷ್ಟೆಲ್ಲಾ ಪರಟಾವಣೆ ಏತಕ್ಕೆಂದರೆ ನಾವೆಲ್ಲಾ ನಟರಾಜ ಸರ್ವೀಸಿನವರೇ ಆದರೂ, ನಮ್ಮಮ್ಮ ಮಾತ್ರ ಎಲ್ಲಿಗೆ ಹೋಗುವಾಗಲೂ ಅವರಿಗೆ ಕುದುರೆಗಾಡಿಯೇ ಬೇಕಿತ್ತು. ನಾವ್ಯಾರಾದರೂ ಅಮೀರ್ ಅಹ್ಮದ್ ಸರ್ಕಲ್ಲಿನವರೆಗೆ ಹೋಗಿ ತಂದು ಕೊಡಬೇಕಿತ್ತು. ಅಲ್ಲಿ ನಿಲ್ಲುತ್ತಿದ್ದ ಗಾಡಿಗಳಲ್ಲಿ ಮೊದಲ ಆಯ್ಕೆ ಸಲಾಮನ ಗಾಡಿ… ಕುದುರೆಯೆಂದರೆ ಸದಾ ಕಣ್ಮುಂದೆ ಬರುವ ಮಿರುಗುತ್ತಿದ್ದ ಕಂದು ಬಣ್ಣದ ಕುದುರೆ; ಹಸಿರು ಬಣ್ಣದ ಗಾಡಿಗೆ ಕೆಂಪಂಚಿನ ಮೇಲೆ ಚಿತ್ತಾರದ ಹೂಗಳು; ಗಾಡಿಯೊಳಗೆ ಹುಲ್ಲಿನ ಮೇಲೆ ಹಾಸಿದ್ದ ಗೋಣಿ ತಾಟು; ಅದರ ಮೇಲೊಂದು ಪುಟ್ಟ ಜಮಖಾನ ನಮ್ಮ ಸಲಾಮನ ರಥ. ಸಲಾಂ ನಮ್ಮಮ್ಮನ ಪರಮ ಶಿಷ್ಯರಲ್ಲೊಬ್ಬನಾಗಿದ್ದ. ಸರಿ; ಈಗ ನಮ್ಮ ಸಂಕ್ರಾಂತಿಗೆ ಮತ್ತೆ ಬರೋಣ. ಎಳ್ಳು, ಸಕ್ಕರೆ ಅಚ್ಚನ್ನು ತಯಾರಿಸಿಕೊಂಡಾದ ಮೇಲೆ ಮತ್ತೆ ಸಲಾಮನ ಗಾಡಿಯ ವಿಷಯಕ್ಕೆ ಬರೋಣ. ಹೆಂಗಸರಿಗಂತೂ ಈ ಹಬ್ಬ ಬಂದರೆ ಅದೆಷ್ಟು ಸಂಭ್ರಮವೋ.. ಹೊಸವರ್ಷ ಆರಂಭವಾಗುವಾಗಲೆ ಮನೆಗೆ ತರುವ ತಿಂಗಳ ದಿನಸಿ ಸಾಮಾನಿನ ಪಟ್ಟಿಯಲ್ಲಿ ಸಕ್ಕರೆ, ಬೆಲ್ಲ, ಹುರಿಗಡಲೆ, ಕಡಲೇ ಬೀಜ, ಕೊಬ್ಬರಿ ಮತ್ತು ಎಳ್ಳು ತಮ್ಮ ಹೆಸರನ್ನು ಬರೆಸಿಕೊಂಡು ಬಿಡುತ್ತಿದ್ದವು. ಜನವರಿ ಹದಿನಾಲ್ಕರಂದು ಇಲ್ಲವೇ ಹದಿನೈದರಂದು ಬರುವ ಸಂಕ್ರಾತಿ ಹಬ್ಬಕ್ಕೆ ಎರಡು ವಾರ ಮೊದಲೇ ಭರದಿಂದ ಸಿದ್ಧತೆಗಳು ಆರಂಭವಾಗುತ್ತಿದ್ದವು. ಆಗೆಲ್ಲಾ ಈಗಿನಷ್ಟು ಬೆಳ್ಳಗಿರುವ ಬೆಲ್ಲ ಸಿಗುತ್ತಿರಲಿಲ್ಲ. ಇರುವುದರಲ್ಲಿ ಬೆಳ್ಳಗಿರುವ ಬೆಲ್ಲವನ್ನು ಹುಡುಕಿಕೊಂಡು ಹೋಗಿ ತರಬೇಕಿತ್ತು. ಹೆಚ್ಚುವುದಕ್ಕೆ ಅಚ್ಚು ಬೆಲ್ಲವೇ ಸರಿ; ಹಿಡಿತಕ್ಕೂ ಸಿಗುತ್ತಿತ್ತು; ಹೆಚ್ಚು ಪುಡಿಯೂ ಆಗುತ್ತಿರಲಿಲ್ಲ. ಕೆಲವರು ಬೆಳ್ಳಗೆ ಕಾಣಬೇಕೆಂದು (ಅಥವಾ ಆ ರುಚಿಯೇ ಅವರಿಗೆ ಇಷ್ಟವಾಗುತ್ತಿತ್ತೇನೋ) ಬೆಲ್ಲದ ಬದಲು ಸಕ್ಕರೆಯ ಪಾಕವನ್ನು ತಟ್ಟೆಗೆ ಹೊಯ್ದು, ಕತ್ತರಿಸಿ ಎಳ್ಳಿನ ಮಿಶ್ರಣಕ್ಕೆ ಬೆರಸುತ್ತಿದ್ದರು. ಕೊಬ್ಬರಿ ವಿಪರೀತ ಗಟ್ಟಿ ಇರಬಾರದು; ಹೆಚ್ಚಲು ಅನುವಾಗುವಂತೆ ಸ್ವಲ್ಪ ಮೆತ್ತಗಿರಬೇಕು; ಬೆಳ್ಳಗಿರಬೇಕು; ಮುಗ್ಗುಲು ವಾಸನೆಯಾಗಲೀ, ಕೆಂಬಣ್ಣವಾಗಲೀ ಸಂಪೂರ್ಣವಾಗಿ ವರ್ಜ್ಯ. ಹೆಚ್ಚಿದ ನಂತರ ಬೆಲ್ಲ, ಕೊಬ್ಬರಿ ಎರಡೂ ಗರಿಗರಿಯಾಗುವ ಹಾಗೆ ಐದಾರು ದಿನ ಬಿಸಿಲಲ್ಲಿ ಒಣಗಬೇಕು. ಕಡಲೇ ಬೀಜವನ್ನು ಹುರಿಯುವುದೂ ಒಂದು ನಾಜೂಕಿನ ವಿಷಯವೇ. ಮಂದ ಉರಿಯಲ್ಲಿ ಬಿಡದೇ ಕೈಯಾಡುತ್ತಾ ಹುರಿಯಬೇಕು. ಇಲ್ಲವಾದರೆ ಸೀಯುವ ಕಾಳುಗಳು ಅಧಿಕ. ಸೀಯದಂತೆ ಕಾಪಾಡಲು ಕೆಲವರು ಮರಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಂಡು ಅದರ ಜೊತೆಯಲ್ಲಿ ಕಡಲೇಬೀಜವನ್ನು ಹಾಕಿ ಹುರಿದು ಜರಡಿಯಾಡಿ ತೆಗೆದುಕೊಳ್ಳುತ್ತಿದ್ದರು. ಈ ರೀತಿ ಹುರಿದದ್ದು ಒಂದೇ ಸಮನಾಗಿ ಹದವಾಗಿ ಬಾದಾಮಿಯ ಬಣ್ಣಕ್ಕೆ ಬರುತ್ತಿತ್ತು; ರುಚಿಯೂ ಉತ್ಕೃಷ್ಟವಾಗಿರುತ್ತಿತ್ತು. ನಮ್ಮ ಮನೆಯ ಬಳಿಯಿದ್ದ ಅಯ್ಯಂಗಾರರ ಮನೆಯಲ್ಲಿ ಕಾಫಿ ಬೀಜ ಹುರಿಯುವ ಒಲೆ ಇತ್ತು. ಒಂದು ಇಜ್ಜಿಲು ಒಲೆಯ ಮೇಲೆ ಅಡ್ಡಡ್ಡವಾಗಿ ಸಿಲೆಂಡರಿನಾಕಾರದ ಒಂದು ಮುಚ್ಚುಳವಿರುವ, ಹಿಡಿಕೆಯಿರುವ ಡಬ್ಬಿ; ಅದು ಒಲೆಯ ಕೆಂಡದ ಮೇಲೆ ಒಂದು ಅಂತರದಲ್ಲಿ ಕೂರುವಂತ ವ್ಯವಸ್ಥೆ. ಅದರೊಳಗೆ ಕಡಲೆಬೀಜವನ್ನು ತುಂಬಿ ಒಲೆಯ ಮೇಲಿಟ್ಟು ಹಿಡಿಕೆಯನ್ನು ತಿರುಗಿಸುತ್ತಿದ್ದರೆ ಆ ಡಬ್ಬಿ ಸುತ್ತುತ್ತಾ ಒಂದೇ ಹದದಲ್ಲಿ ಶಾಖವನ್ನು ಪಡೆದುಕೊಂಡು ಹದವಾಗಿ ಹುರಿದುಕೊಳ್ಳುತ್ತಿತ್ತು. ಇಂತಹ ಯಾವುದಾದರೂ ಒಂದು ರೀತಿಯಲ್ಲಿ ಕಡಲೇಕಾಯನ್ನು ಹುರಿದ ನಂತರ ಅದನ್ನು ಶುಭ್ರವಾದ ಒಂದು ಗೋಣಿ ಚೀಲದ ಮೇಲೆ ಹರಡಿಕೊಂಡು, ಅದರ ಮೇಲೆ ಮರದ ಮಣೆಯನ್ನು ಇಟ್ಟು ಉಜ್ಜಿದರೆ ಕಾಳುಗಳು ಸಿಪ್ಪೆಯನ್ನು ಬಿಟ್ಟುಕೊಂಡು ಬೇಳೆಗಳಾಗಿ ಒಡೆದುಕೊಳ್ಳುತ್ತಿದ್ದವು. ಆಮೇಲೆ ಅದನ್ನು ಮರದಲ್ಲಿ ಕೇರಿ, ಸಿಪ್ಪೆಯನ್ನೂ ನೂಕನ್ನೂ ತೆಗೆದು ಕೆಟ್ಟುಹೋದ, ಚೂರುಚೂರಾದ, ಸೀದುಹೋದ ಕಾಳುಗಳನ್ನೆಲ್ಲಾ ಆರಿಸಿ ತೆಗೆದು ಹಸನು ಮಾಡಬೇಕಿತ್ತು. ಈ ಕೆಲಸಕ್ಕೆ ನಾವು ಮಕ್ಕಳೆಲ್ಲಾ ಅತ್ಯಂತ ಉತ್ಸುಕರಾಗಿ ಸಹಾಯ ಮಾಡುತ್ತಿದ್ದೆವು. ಒಡೆದ, ಸ್ವಲ್ಪ ಸೀದ ಕಾಳುಗಳೆಲ್ಲಾ ನಮ್ಮ ಹೊಟ್ಟೆಗೇ ತಾನೆ! ಹಾಗಾಗಿ ಅಲ್ಪ ಸ್ವಲ್ಪ ಮುಕ್ಕಾದ ಕಾಳುಗಳಿಗೂ ಎಳ್ಳಿನೊಂದಿಗೆ ಬೆರೆಯುವ ಸೌಭಾಗ್ಯವಿರುತ್ತಿರಲಿಲ್ಲ. ಹುರಿಗಡಲೆಯಾದರೂ ಅಷ್ಟೇ ಹುರಿಯುವ ಕೆಲಸವೊಂದು ಇರುತ್ತಿರಲಿಲ್ಲ. ಹೀಗೆ ಆರಿಸುವಾಗ ಇನ್ನೂ ಸಿಪ್ಪೆಯಿಟ್ಟುಕೊಂಡ ಕಾಳುಗಳು, ಒಡೆದವು, ಕಡೆಗೆ ಸ್ವಲ್ಪ ಸೀಳಿಕೊಂಡವು ಕೂಡಾ ನಮ್ಮ ನೈವೇದ್ಯಕ್ಕೇ! ಆರಿಸುವಾಗ ಎಂಜಲು ಮಾಡಿಕೊಂಡು ತಿನ್ನಬಾರದು; ಎಲ್ಲವನ್ನೂ ಒಂದು ತಟ್ಟೆಗೋ, ಬಟ್ಟಲಿಗೋ ಹಾಕಿಕೊಂಡು ನಂತರ ತಿನ್ನಬಹುದು ಎನ್ನುವ ಅಮ್ಮನ ನಿಬಂಧನೆಗೆ, ಯಾವ ಪ್ರತಿರೋಧವೂ ಇಲ್ಲದೆ ಒಪ್ಪಿಕೊಂಡು ನಮಗೆ ಸಾಕೆನಿಸುವಷ್ಟು ಸರಕು ಸಿಕ್ಕ ತಕ್ಷಣ ಕೆಲಸ ಸಾಕಾಯಿತೆಂದು ಎದ್ದೋಡುತ್ತಿದ್ದೆವು. ಎಷ್ಟನ್ನು ಮಾಡಿಕೊಟ್ಟಿದ್ದರೆ ಅಷ್ಟೇ ಅಮ್ಮನ ಪುಣ್ಯ! ಎಳ್ಳನ್ನು ಶುದ್ಧಮಾಡುವುದೂ ಎರಡು ದಿನದ ಕೆಲಸವೇ. ಹಿಂದಿನ ದಿನವೇ ಎಳ್ಳನ್ನು ನೀರಿನಲ್ಲಿ ನೆನೆಯಿಟ್ಟು, ಮಾರನೆಯ ದಿನ ಬೆಳಗಿನ ಕೆಲಸವನ್ನೆಲ್ಲ ಮುಗಿಸಿಕೊಂಡು ಒಂದು ಶುಭ್ರವಾದ ಗೋಣಿಯ ಮೇಲೆ ನೆಂದ ಎಳ್ಳನ್ನು ಸ್ವಲ್ಪ ಸ್ವಲ್ಪವನ್ನೇ ಹಾಕಿಕೊಳ್ಳುತ್ತಾ ಅದು ಬೆಳ್ಳಗಾಗುವ ತನಕ ಉಜ್ಜುತ್ತಿದ್ದರು. ಎಳ್ಳು ಎಷ್ಟು ಬೆಳ್ಳಗಾಗಿದೆ ಎನ್ನುವುದರ ಮೇಲೆ ಉಜ್ಜುವವರ ಕಲಾನೈಪುಣ್ಯ ನಿರ್ಧಾರವಾಗುತ್ತಿತ್ತು. ಎಷ್ಟೋ ಜನರು ಕರಿಎಳ್ಳನ್ನು ಉಜ್ಜಿ ಬೆಳ್ಳಗೆ ಮಾಡಿರುವುದನ್ನೂ ನೋಡಿದ್ದೇನೆ. ಹೀಗೆ ಉಜ್ಜಿದ ಎಳ್ಳಿನ ಸಿಪ್ಪೆಯನ್ನೆಲ್ಲಾ ಕೇರಿ ಆರಿಸಿ ನಂತರ ಮಂದ ಉರಿಯ ಮೇಲೆ ಬಾಣಲೆಯ ಮೇಲೆ ಸ್ವಲ್ಪ ಸ್ವಲ್ಪವನ್ನೇ ಹಾಕಿಕೊಂಡು, ಹೊಸ ಪೊರಕೆ ಕಡ್ಡಿಯನ್ನು ಮಧ್ಯಭಾಗಕ್ಕೆ ಕಟ್ಟಿಕೊಂಡು, ಕಡ್ಡಿಯ ಕಡೆಯ ಭಾಗದಿಂದ ಅದನ್ನು ಘಮ್ಮೆನ್ನುವ ಹಾಗೆ, ಹದವಾಗಿ ಹುರಿಯುತ್ತಿದ್ದರು. ಹೀಗೆ ವಾರ, ಹತ್ತು ದಿನದ ಶ್ರಮದ ನಂತರ ಸಂಕ್ರಾಂತಿ ಎಳ್ಳು ತಯಾರಾಗುತ್ತಿತ್ತು. ಯಾರ ಮನೆಯ ಎಳ್ಳು ಬಂದರೂ ಅದರ ಬಣ್ಣ, ರುಚಿ, ವಾಸನೆಗಳ ಮೌಲ್ಯಮಾಪನವಾಗಿ ಅವರ ಪರಿಶ್ರಮವು ವಿಮರ್ಶೆಗೆ ಒಳಗಾಗುತ್ತಿತ್ತು! ಪೂರ್ತಿ ತಯಾರಾಗಿರುವ ಮಿಶ್ರಣ, ಇಲ್ಲವೇ ಅಭಿರುಚಿಗೆ ತಕ್ಕಂತೆ ಬೆರೆಸಿಕೊಳ್ಳಲು ಸಿದ್ಧಪಡಿಸಿದ ವಸ್ತುಗಳು ಸಿಗುತ್ತಿರುವ ಈ ದಿನಗಳಲ್ಲಿ ಅಂದಿನ ಕಷ್ಟವೂ ಇಲ್ಲ; ಸಂಭ್ರಮವೂ ಇಲ್ಲ ಬಿಡಿ. ಇನ್ನು ಸಕ್ಕರೆ ಅಚ್ಚನ್ನ ತಯಾರಿಸುವುದಂತೂ ಒಂದು ದೊಡ್ಡ ಕಲೆಯೇ. ಪರಿಶ್ರಮವೂ ಬಹಳ. ಹಳಕುಹಳಕಾದ ಸಕ್ಕರೆಯನ್ನು ಅದು ಮುಳುಗುವಷ್ಟೇ ನೀರಿನಲ್ಲಿ ನೆನೆಯಿಟ್ಟು ನಂತರ ಅದನ್ನು ಕುದಿಸಿ, ಕುದಿಯುತ್ತಿರುವಾಗ ಒಮ್ಮೆ ಹಾಲು ಹಾಕಿ ಅದನ್ನು ಬೆಳ್ಳಗಿರುವ ಪಂಚೆಯ ಬಟ್ಟೆಯಲ್ಲಿ ಶೋಧಿಸಿಕೊಂಡು, ನಂತರ ಇನ್ನೊಮ್ಮೆ ಮೊಸರು ಹಾಕಿ ಕುದಿಸಿ ಶೋಧಿಸಿದ ಮೇಲೆ ಪಾಕ ಎಷ್ಟು ಬೆಳ್ಳಗಾಯಿತೆಂಬುದರ ಮೇಲೆ ಇನ್ನೊಮ್ಮೆ ಕುದಿಸಿ ಶುಚಿಮಾಡಬೇಕೇ ಎನ್ನುವುದು ನಿರ್ಧಾರವಾಗುತ್ತಿತ್ತು. ಅಟ್ಟದ ಮೇಲಿಟ್ಟಿದ್ದ ಮರದ ಅಚ್ಚುಗಳನ್ನು ಹಿಂದಿನ ದಿನವೇ ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಯಲು ಬಿಡುತ್ತಿದ್ದರು. ಇನ್ನು ಅಚ್ಚು ಹಾಕುವ ಕಾರ್ಯಕ್ರಮಕ್ಕಂತೂ ಕನಿಷ್ಟ ಇಬ್ಬರಾದರೂ ಬೇಕೇ ಬೇಕು. ನಾಲ್ಕೈದು ಜನ ಸೇರಿದರೆ ಕೆಲಸ ಸುಲುಭ. ಹಾಗಾಗಿ ಅಕ್ಕಪಕ್ಕದವರೆಲ್ಲಾ ಸೇರಿಕೊಂಡು ಸಂತೋಷವಾಗಿ, ಸಹಕಾರಿ ಮನೋಭಾವದಿಂದ ಮಾಡುತ್ತಿದ್ದುದೇ ಹೆಚ್ಚು. ಶುದ್ಧವಾದ ಪಾಕವನ್ನು ಒಂದೋ ಎರಡೋ ಸೌಟನ್ನು ಒಂದು ತಪ್ಪ ತಳದ ಪಾತ್ರೆಗೆ ಹಾಕಿಕೊಂಡು ಪುಟ್ಟ ಇಜ್ಜಿಲ ಒಲೆಯ ಮೇಲೋ, ಇಲ್ಲವೇ ಬತ್ತಿಯ ಸೀಮೆಣ್ಣೆಯ ಸ್ಟೌವ್ ಮೇಲೋ ಬಿಸಿ ಮಾಡುತ್ತಾ, ಆಗಾಗ ಪಾಕದ ಹದ ನೋಡುತ್ತಾ, ಪಾಕ ಸೌಟಿನಿಂದ ಪಾತ್ರೆಯವರೆಗೆ ಒಂದು ನೂಲಿನಂತೆ ನಿಂತರೆ ಅದು ಪಾಕದ ಸರಿಯಾದ ಹದ. ತಕ್ಷಣ ಅದನ್ನು ಕಂಚಿನ ಬೋಗುಣಿಗೆ ಸುರಿದುಕೊಂಡು ಸಿದ್ಧಮಾಡಿಟ್ಟುಕೊಂಡಿದ್ದ ಇನ್ನೊಂದು ಒಬ್ಬೆ ಪಾಕವನ್ನು ಒಲೆಯ ಮೇಲಿಟ್ಟು, ಬೋಗುಣಿಯಲ್ಲಿದ್ದ ಪಾಕವನ್ನು ಸೌಟಿನಿಂದ ತಿಕ್ಕುತ್ತಾ ಅದು ಮಂದ ಬಿಳಿಛಾಯೆಗೆ ತಿರುಗಿದೊಡನೆ, ನೀರಿನಿಂದ ಹೊರತೆಗೆದು ಮಲ್ ಪಂಚೆಯ ಬಟ್ಟೆಯಲ್ಲಿ ಒರೆಸಿ ಜೋಡಿಸಿ ದಾರ ಕಟ್ಟಿಯೋ, ರಬ್ಬರ್ ಬ್ಯಾಂಡ್ ಹಾಕಿಕೊಂಡೋ ತಯಾರಾಗಿ ಮಣೆಯ ಮೇಲೆ ಕುಳಿತಿರುತ್ತಿದ್ದ ಅಚ್ಚಿನ ಬಾಯಿಗೆ ನಾಜೂಕಾಗಿ ಸುತ್ತಲೂ ಚೆಲ್ಲದಂತೆ, ಹಾಗೆ ಸುರಿಯುವಾಗ ಪಾಕ ಪೂರ್ತಿಯಾಗಿ ಒಳಸೇರುವಂತೆ ಕುಟ್ಟಿ ಕುಟ್ಟಿ ಅದು ತುಂಬುವಷ್ಟು ಪಾಕವನ್ನು ತುಂಬಿಸುವುದು ಜಾಣತನದ ಕಲೆಯೇ. ಅದು ಒಣಗಿದ ಮೇಲೆ ಮೇಲಿನ ಹೆಚ್ಚಿನ ಭಾಗವನ್ನು ಹೆರೆದು, ಅದರ ಕಟ್ಟನ್ನು ಬಿಚ್ಚಿ ನಾಜೂಕಾಗಿ ಹಿಡಿದುಕೊಂಡು, ಎಚ್ಚರಿಕೆಯಿಂದ ಅಚ್ಚಿನಿಂದ ಬಿಡಿಸಿ ತಟ್ಟೆಯ ಮೇಲಿರಿಸಿದರೆ ಅಲ್ಲಿಗೆ ಅದರ ಕೆಲಸ ಸಂಪೂರ್ಣ. ಕೆಲವೊಮ್ಮೆ ಕೋಳಿಯ ಕಾಲೋ, ಬಸವನ ಮೂತಿಯೋ, ಮೀನಿನ ಬಾಲವೋ ಮುರಿದು ಕೈಗೆ ಬರುತ್ತಿತ್ತು. ಆಗ ತಕ್ಷಣವೇ ತಿಕ್ಕುತ್ತಿದ್ದ ಬಿಸಿ ಪಾಕದಲ್ಲಿ ಅದರ ಅಂಟಿಕೊಳ್ಳಬೇಕಿರುವ ಭಾಗವನ್ನು ಸ್ವಲ್ಪ ಅದ್ದಿ ಇನ್ನೊಂದು ಭಾಗಕ್ಕೆ ಅಂಟಿಸಿ, ಹಾಗೆಯೇ ಇಟ್ಟುಕೊಂಡಿದ್ದು, ಸ್ವಲ್ಪ ಅಂಟಿಕೊಂಡ ನಂತರ ತಟ್ಟೆಯ ಮೇಲೆ ಕೆಲಕಾಲ ಮಲಗಿಸಿದರೆ ಶಸ್ತ್ರಕ್ರಿಯೆಯಾದ ರೋಗಿ ಆರೋಗ್ಯವಂತನಾಗಿ ಏಳುವಂತೆ, ಸ್ವಲ್ಪ ಕಾಲದ ನಂತರ ಎದ್ದು ನಿಲ್ಲಲು ಶಕ್ತವಾಗುತ್ತಿದ್ದವು. ಈ ಶಸ್ತ್ರಕ್ರಿಯೆ ವಿಫಲವಾದರೆ ಕೋಳಿ, ಮೀನು, ಮಂಟಪ, ಜಿಂಕೆಗಳೆಲ್ಲಾ ಸುತ್ತಲೂ ಬಕಗಳಂತೆ ಕಾಯುತ್ತಿದ್ದ ಮಕ್ಕಳ ಬಾಯಿ ಪಾಲಾಗುತ್ತಿದ್ದವು! ಮಣೆಯ ಮೇಲೆ ಅಲ್ಪ ಸ್ವಲ್ಪ ಚೆಲ್ಲಿದ್ದ ಪಾಕ ಮತ್ತು ಮಕ್ಕಳ ಬಾಯಿಗೆ ಬೀಳದೆ ಉಳಿದುಕೊಂಡಿದ್ದ ತುಂಡುಗಳು ಬಣ್ಣವನ್ನು ಬೆರೆಸಿಕೊಂಡು ಮತ್ತೊಮ್ಮೆ ಜನ್ಮ ತಾಳುತ್ತಿದ್ದವು. ಒಂದೇ ಅಚ್ಚಿನಲ್ಲಿ ಎರಡು ಮೂರು ಬಣ್ಣದ ಪಾಕವನ್ನು ಸುರಿದು ಬಣ್ಣ ಬಣ್ಣವಾದ ಸಕ್ಕರೆಗೊಂಬೆಗಳನ್ನು ಮಾಡುವ ಪ್ರವೀಣರೂ ಇದ್ದರು! ಇದೇ ಸಕ್ಕರೆ ಪಾಕವನ್ನು ಉಪಯೋಗಿಸಿಕೊಂಡು ಬಾಣಲೆಗೆ ಎಳ್ಳನ್ನೋ, ಸೀಮೇ ಅಕ್ಕಿಯನ್ನೋ ಸ್ವಲ್ಪ ಹಾಕಿಕೊಂಡು, ಸ್ವಲ್ಪ ಸ್ವಲ್ಪವಾಗಿ ಅದಕ್ಕೆ ಸಕ್ಕರೆ ಪಾಕವನ್ನು ಹಾಕಿಕೊಳ್ಳುತ್ತಾ ಎಳ್ಳನ್ನು ಹುರಿಯುವ ಹಾಗೆ ನಿಧಾನವಾಗಿ ಹುರಿಯುತ್ತಾ ಕುಸುರೆಳ್ಳನ್ನೂ ಕೆಲವರು ಮಾಡುತ್ತಿದ್ದರು. ಹಾಗೆಯೇ ಇದೇ ಪಾಕವನ್ನು ಚೆನ್ನಾಗಿ ಉಜ್ಜಿ ಬೆಣ್ಣೆಯ ಉಂಡೆಯಂತೆ ಮಾಡಿಕೊಂಡು ಅದರಲ್ಲಿ ಮಣಿಗಳನ್ನು ಮಾಡಿ, ಅದನ್ನು ರಸ್ತು ಗುಂಡಿನೊಡನೆ ಪೋಣಿಸಿ, ಸರವನ್ನು ಮಾಡುತ್ತಿದ್ದರು. ಸಂಜೆ ಅದನ್ನು ಎಳೆಯ ಮಕ್ಕಳ ಕೊರಳಿಗೆ ಹಾಕಿ, ಕಬ್ಬಿನ ತುಂಡು, ಬೋರೆ ಹಣ್ಣು (ಎಲಚಿ ಹಣ್ಣು) ಮತ್ತು ಕಾಸನ್ನು ಸೇರಿನ ತುಂಬಾ ತುಂಬಿಸಿ ಅದನ್ನು ಮಕ್ಕಳ ತಲೆಯ ಮೇಲೆ ಎರೆದು ಆರತಿ ಮಾಡುವ ಪದ್ಧತಿಯೂ ಕೆಲವರಲ್ಲಿ ಇತ್ತು. ಇಡೀ ಸೇರಿಗೆಲ್ಲಾ ಒಂದೆರಡು ರೂಪಾಯಿನಷ್ಟು ಚಿಲ್ಲರೆ ಕಾಸುಗಳಿದ್ದರೂ ಅದು ಬೀಳುವುದೇ ತಡ ಎಲ್ಲರೂ ಅದನ್ನು ಬಾಚಿಕೊಂಡು ಸಂಭ್ರಮಿಸುತ್ತಿದ್ದುದೇ ಒಂದು ಚಂದ! ಈಗ ಮತ್ತೆ ನಮ್ಮ ಸಲಾಮನ ವಿಚಾರಕ್ಕೆ ಬರೋಣ. ಎಳ್ಳು, ಸಕ್ಕರೆ ಅಚ್ಚು ಮಾಡಿದರಷ್ಟೇ ಆಗಲಿಲ್ಲ; ಅದನ್ನು ಮಾಡುವುದೇ ಬಾಳೆಹಣ್ಣು ಮತ್ತು ಕಬ್ಬಿನೊಂದಿಗೆ ಬಂಧು, ಬಳಗ, ನೆಂಟರಿಷ್ಟರು, ಸ್ನೇಹಿತರ ಮನೆಗೆ ಹೋಗಿ ಬೀರುವುದಕ್ಕೆ. ಅಕ್ಕಪಕ್ಕದ ಮನೆಗಳಿಗೇನೋ ಹೋಗಿ ಬೀರಿ ಬರಬಹುದು. ದೂರದೂರದ ಮನೆಗಳಿಗೆ ನಡೆದುಕೊಂಡು ಹೋಗುವುದಾದರೆ ಅದೇ ಸಂಜೆಯಲ್ಲಿ ಎಲ್ಲರ ಮನೆಗೂ ಹೋಗಿ ಪೂರೈಸಲು ಸಾಧ್ಯವಿಲ್ಲ. ಹಾಗಾಗಿ ಆದಿನ ನಮಗೆ ಸಲಾಮನ ಗಾಡಿಯ ರಥಯಾತ್ರೆ! ನಮ್ಮಮ್ಮ ಎಲ್ಲಿಗೆ ಹೋಗಬೇಕಾದರೂ ಹೆಚ್ಚಾಗಿ ಅವನ ಗಾಡಿಯಲ್ಲೇ ಹೋಗುತ್ತಿದ್ದುದರಿಂದ, ಅವನಿಗೆ ನಮ್ಮ ಬಂಧು, ಬಳಗ, ಗುರುತು ಪರಿಚಯದವರೆಲ್ಲರ ಮನೆಯೂ ಗೊತ್ತಿತ್ತು. ಆದಿನ ಮದ್ಯಾನ್ಹ ನಾಲ್ಕು ಗಂಟೆಯ ಒಳಗಾಗಿ ಬರುವಂತೆ ಅಮ್ಮ ಅವನಿಗೆ ಮೊದಲೇ ಹೇಳಿಟ್ಟಿರುತ್ತಿದ್ದರು. ಅಂತೆಯೇ ಅವನು ಬಂದಾಗ ನಮ್ಮನ್ನು ಕರೆದುಕೊಂಡು ಹೋಗಬೇಕಾದ ಒಂದು ಇಪ್ಪತ್ತೈದು, ಮೂವತ್ತು ಮನೆಗಳನ್ನು ಹೇಳುತ್ತಿದ್ದರು. ಆರು ವರ್ಷದ ನಾನು, ನಾಲ್ಕು ವರ್ಷದ ನನ್ನ ತಂಗಿ ಇಬ್ಬರನ್ನೇ

ಸಲಾಮನ ಗಾಡಿಯೂ… ಸಂಕ್ರಾಂತಿ ಹಬ್ಬವೂ Read Post »

ಇತರೆ

ಇನ್ವಿಕ್ಟಸ್ ಮತ್ತು ಮಂಡೇಲಾ

ಲೇಖನ ಇನ್ವಿಕ್ಟಸ್ ಮತ್ತು ಮಂಡೇಲಾ ರಶ್ಮಿ ಹೆಗಡೆ ಮುಂಬೈ ಕೆಲವರ ವ್ಯಕ್ತಿತ್ವ ಹಾಗೂ ಸ್ಪೂರ್ತಿದಾಯಕ ಮಾತುಗಳು,ಸಾಧಕರ ಜೀವನಗಾಥೆಗಳು,ಕೆಲವು ಪುಸ್ತಕಗಳು,ಇನ್ನು ಕೆಲವು ಕಾವ್ಯಗಳು ನಮಗೆ ಗುರುವಾಗಿ,ಆದರ್ಶದ ಚಿಲುಮೆಗಳಾಗಿ ಜೀವನದುದ್ದಕ್ಕೂ ಪ್ರೇರೇಪಿಸುತ್ತವೆ. ಕೆಲವು ಕಾವ್ಯಗಳಂತೂ ಉತ್ಕೃಷ್ಟತೆಯ ಎಲ್ಲೆಯನ್ನು ಮೀರಿ ಬೆಳೆಯುತ್ತವೆ. ಬದುಕಿನ ಅಂಕುಡೊಂಕಿನ ದಾರಿಯಲ್ಲಿ  ಹಾದಿ ತಪ್ಪದಂತೆ ಮುನ್ನಡೆಸಿ,ಸಂಕಟದ ಸಮಯದಲ್ಲಿ ಧೈರ್ಯ,ನೆಮ್ಮದಿ ನೀಡಿ ಚಿಕಿತ್ಸೆಯ ರೂಪದಲ್ಲಿ ಕಾಪಾಡುತ್ತವೆ. ಉತ್ಕೃಷ್ಟವಾದ ಸಾಹಿತ್ಯ ಹಾಗೂ ಪುಸ್ತಕಗಳು ಮನುಷ್ಯನ ಯೋಚನಾಲಹರಿಯನ್ನೇ ಬದಲಿಸಬಲ್ಲದು. ಶಬ್ದಗಳು ಖಡ್ಗಕ್ಕಿಂತ ಹರಿತವಾದದ್ದು ಎನ್ನುವುದು ಸತ್ಯ. ಹೀಗೆಯೇ ಒಂದು ಪುಸ್ತಕ ಒಬ್ಬ ವ್ಯಕ್ತಿಯ ಜೀವನದಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಬಲ್ಲದು ಎನ್ನುವುದಕ್ಕೆ ಇಲ್ಲಿದೆ ಒಂದು ಉದಾಹರಣೆ. ಕುರುಕ್ಷೇತ್ರ ಯುದ್ಧದಲ್ಲಿ ಅರ್ಜುನನಿಗೆ ಕೃಷ್ಣ ನೀಡಿದ ಗೀತೋಪದೇಶ ಆತನಿಗೆ ಶಕ್ತಿಯಾಗಿ ಯುದ್ಧದಲ್ಲಿ ಜಯಶಾಲಿಯನ್ನಾಗಿ ಮಾಡಿತ್ತು. ಅದೇ ಭಗವತ್ಗೀತೆ ಕಲಿಯುಗದಲ್ಲಿ ಮಹಾತ್ಮಾ ಗಾಂಧೀಜಿ,ಅನಿಬೆಸಂಟ್ ,ಸ್ವಾಮಿ ವಿವೇಕಾನಂದರಂಥ ಮಹಾನ್ ವ್ಯಕ್ತಿಗಳಿಗೆ ಸಾಧನೆಯತ್ತ ದಾರಿತೋರಿದ್ದು ತಿಳಿದ ವಿಷಯ. ಕನ್ನಡದ ಭಗವತ್ಗೀತೆ ಎಂದು ಕರೆಯಲ್ಪಡುವ ಡಿ ವಿ ಗುಂಡಪ್ಪನವರ ‘ಮಂಕುತಿಮ್ಮನ ಕಗ್ಗ’ವಂತೂ ಅದೆಷ್ಟು ಜನರ ಮನಸ್ಸಿಗೆ ನೆಮ್ಮದಿ ನೀಡಿದೆ ಎಂದು ಹೇಳತೀರದು. ಹೀಗೆಯೇ ಒಂದು ಕಾವ್ಯ ನೆಲ್ಸನ್ ಮಂಡೇಲಾ ಅವರ ಜೀವನಕ್ಕೆ ದಾರಿದೀಪವಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣಭೇದ ನೀತಿ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿ,ಬಹುಜಾತಿ ಸಮಾನತೆಯ ಬಗ್ಗೆ ಸ್ವತಃ ಶಿಕ್ಷಣ ನೀಡಿದವರು ಮಂಡೇಲಾ. ಅವರು ತಮ್ಮ ಜೀವನದ ಕಾಲುಭಾಗಕ್ಕಿಂತ ಹೆಚ್ಚು ಸಮಯವನ್ನು,ಅಂದರೆ ಸತತವಾಗಿ ಇಪ್ಪತ್ತೇಳು ವರ್ಷ ವಿವಿಧ ಜೈಲುಗಳಲ್ಲಿಯೇ ಕಳೆದರು. 1961ರಲ್ಲಿ ವರ್ಣಭೇದ ಚಳುವಳಿ ಅಡಿಯಲ್ಲಿ ಮೊದಲಬಾರಿಗೆ ಬಂಧಿತರಾದ ಮಂಡೇಲಾರನ್ನು ಖುಲಾಸೆಗೊಳಿಸಿದ್ದರೂ,ಅಕ್ರಮವಾಗಿ ದೇಶತೊರೆದರೆಂಬ ಕಾರಣಕ್ಕೆ ದೋಷಿಯನ್ನಾಗಿಸಿ 1962ರಲ್ಲಿ ಮತ್ತೆ ಬಂಧಿಸಿ ಕೇಪ್ ಟೌನ್ ಹಾಗೂ ಟೇಬಲ್ ಮೊಂಟೆನಿನ ಸಮೀಪದ “ರಾಬಿನ್ ದ್ವೀಪ ಕಾರಾಗೃಹ”ದಲ್ಲಿ ಇರಿಸಲಾಯಿತು. ಹಾಸಿಗೆಯಂಥ  ಕನಿಷ್ಠ ಸೌಲಭ್ಯಗಳೂ ಇರದ ಚಿಕ್ಕದಾದ,ಸದಾ ಒದ್ದೆಯಾಗಿರುತ್ತಿದ್ದ ಕೋಣೆ. ಜೈಲಿನ ಬಿಳಿವರ್ಣೀಯ ಅಧಿಕಾರಿಗಳಿಂದ ಸತತವಾದ ದೈಹಿಕ ಹಾಗೂ ಮಾನಸಿಕ ಕಿರುಕುಳ,ಮಲಗಲು ಒಣ ಹುಲ್ಲಿನ ಚಾಪೆ. ಕೈದಿಗಳ ಮೇಲೆ ಒತ್ತಡ ಹೇರಿ ಗಣಿ ಕೆಲಸಮಾಡಿಸಿ, ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದ ಆ ಕಾರಾಗೃಹದಲ್ಲಿ ಅವರು ಕಳೆದಿದ್ದು ಸತತವಾಗಿ ಹದಿನೆಂಟು ವರ್ಷಗಳು. ಆರು ತಿಂಗಳಿಗೊಮ್ಮೆ ಮಾತ್ರ ಪತ್ರ ವ್ಯವಹಾರ ನಡೆಸುವುದಷ್ಟೇ ಅಲ್ಲದೆ, ವರ್ಷಕ್ಕೆ ಒಂದೇ ದಿನ,ಅದೂ ಸಹ ಅರ್ಧ ಘಂಟೆ ಮಾತ್ರ ಆಪ್ತರನ್ನು ಭೇಟಿಯಾಗುವ ಅವಕಾಶವಿತ್ತು. ಅಷ್ಟಾದರೂ ಅವರು ಧೃತಿಗೆಡಲಿಲ್ಲ. ಜೈಲಿನಲ್ಲಿಯೇ ಸಹ ಖೈದಿಗಳಲ್ಲೂ ಸ್ಫೂರ್ತಿ ತುಂಬಿ ನಾಗರಿಕ ಅಸಹಕಾರ ಚಳುವಳಿಯನ್ನು ಮುನ್ನಡೆಸಿದರು. ಇದು ದಕ್ಷಿಣ ಆಫ್ರಿಕಾದ ಅಧಿಕಾರಿಗಳನ್ನು ರಾಬಿನ್ ದ್ವೀಪದ ಪರಿಸ್ಥಿತಿಯನ್ನು ತೀವ್ರವಾಗಿ ಸುಧಾರಿಸುವಂತೆ ಒತ್ತಾಯಿಸಿತು. ಇದೇ ಕಾರಣಕ್ಕೆ ಅವರನ್ನು “ಪೋಲ್ಸ್ ಮೂರ್” ಜೈಲಿಗೆ, ಸ್ಥಳಾಂತರಿಸಿ ಅಲ್ಲಿನ ಒಂದು ಸಣ್ಣ ಕೋಣೆಯಲ್ಲಿ ಗೃಹಬಂಧನದಲ್ಲಿಟ್ಟರು. ಜೈಲಿನಲ್ಲಿದ್ದಾಗಲೇ ಅಂಚೆ ತರಬೇತಿ ಮೂಲಕ ಆಕ್ಸ್ಫರ್ಡ್ ನ ವೋಲ್ಸಿಹಾಲ್ ನಿಂದ ಎಲ್ ಎಲ್ ಬಿ ಪದವಿ ಪಡೆದರು. ಇಪ್ಪತ್ತೇಳು ವರ್ಷಗಳ ಸಮಯ ಹೊತ್ತುರಿಯುತ್ತಿದ್ದ ಹೋರಾಟದ ಕಿಚ್ಚನ್ನು ಮನಸಿನಲ್ಲಿ ಆರಲು ಬಿಡದೆ,ಕಾಪಾಡಿಕೊಂಡು ಹೋಗುವುದು ಸುಲಭವಲ್ಲ. ಈ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದು ಒಂದು ಕವಿತೆ  ಎಂದರೆ ಅತಿಶಯೋಕ್ತಿಯಾಗದು. ಜೈಲಿನಲ್ಲಿದ್ದಷ್ಟು ವರ್ಷ ಅವರ ಜೊತೆಯಾಗಿ,ಗುರುವಾಗಿ,ಸ್ಪೂರ್ತಿಯಾಗಿ ನಿಂತಿದ್ದು ಹದಿನೆಂಟನೇ ಶತಮಾನದ ಕವಿಯಾಗಿದ್ದ “ವಿಲಿಯಂ ಅರ್ನೆಸ್ಟ್ ಹೆನ್ಲೇ” ಅವರ ಕವನ ‘ಇನ್ವಿಕ್ಟಸ್’. ಲ್ಯಾಟಿನ್ ಭಾಷೆಯಲ್ಲಿ ಇದರರ್ಥ “ಅಜೇಯ”ಎಂದು.  ನೆಲ್ಸನ್ ಮಂಡೇಲಾರ ಜೀವನ ಚರಿತ್ರೆ ಆಧಾರಿತ ಸಿನಿಮಾಕ್ಕೂ ಸಹ ‘ಇನ್ವಿಕ್ಟಸ್’ ಎಂದೇ ಹೆಸರಿಡಲಾಗಿತ್ತು.  ಕೆಲವೇ ಸಾಲುಗಳುಳ್ಳ ಈ ಕವನ ಅವರ ಮೇಲೆ ಅಗಾಧವಾದ ಪರಿಣಾಮ ಬೀರಿತ್ತು. ತಮ್ಮ ಸಹಖೈದಿಗಳೆದುರೂ ಆ ಕವನವನ್ನು ವಾಚಿಸುತ್ತಿದ್ದ ಮಂಡೇಲಾ, ಕ್ರಮೇಣವಾಗಿ ಅವರಲ್ಲಿಯೂ ಆ ಕವಿತೆಯ ಮೂಲಕ ಹೊಸ ಸ್ಪೂರ್ತಿಯನ್ನು ತುಂಬಿದ್ದರು. ಜೈಲಿನ ಕಠಿಣ ಸಮಯದಲ್ಲೂ ಹೋರಾಟದ ಕಿಚ್ಚು ಆರದಂತೆ ಕಾಪಾಡಿಕೊಂಡು ಬಂದಿದ್ದು ಅದೇ ಪದ್ಯ. ಇನ್ವಿಕ್ಟಸ್ ಕವನದ ಕೊನೆಯ ಈ ಎರೆಡು ಸಾಲುಗಳು ಆತನಿಗೆ ಅತ್ಯಂತ ಪ್ರಭಾವ ಬೀರಿದ್ದವು. “ನನ್ನ ಅದೃಷ್ಟದ ಮುಖ್ಯಸ್ಥ ನಾನು, ನನ್ನ ಆತ್ಮದ ನಾಯಕನು ನಾನು” ಎಂದು. “ಈ ಕವಿತೆಯು ನಾನು ವೈಯಕ್ತಿಕವಾಗಿ,ಪ್ರಪಂಚದಾದ್ಯಂತದ ಅನೇಕರೊಂದಿಗೆ ವ್ಯವಹರಿಸಿ,ಪಾಲಿಸಿದ ಅನುಭವ ಹಾಗೂ ಪದಗಳ ಸಂಗ್ರಹ”ಎಂದಿದ್ದರು. ಹೋರಾಡುವ ಧೈರ್ಯ ಸೋತು ಮಲಗುತ್ತಿದೆ ಎನಿಸಿದಾಗಲೆಲ್ಲ ಎಚ್ಚರಿಸಿ,ಧೈರ್ಯ ತುಂಬಿದ್ದು ಈ ಕವಿತೆ. ಒಂದು ಬರಹ ಒಬ್ಬ ವ್ಯಕ್ತಿ,,ಸಮಾಜ ಹಾಗೂ ದೇಶದ ಮೇಲೆ ಅದೆಷ್ಟು ಪರಿಣಾಮ ಬೀರಬಲ್ಲದೆಂಬುದಕ್ಕೆ ಇದೇ ಸಾಕ್ಷಿ. ಮಂಡೇಲಾ ಮುಂದೆ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿದ್ದು ಇತಿಹಾಸ. ಮಹಾತ್ಮಾ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಮೊದಲು ವರ್ಣ ಭೇದ ನೀತಿಯ ವಿರುದ್ಧ ದನಿಯೆತ್ತಿದವರು. ಆ ಚಳುವಳಿಯನ್ನು ಅಲ್ಲಿ ಮುಂದುವರೆಸಿದ ಮಂಡೇಲಾರಿಗೆ ಆದರ್ಷವಾದವರೇ ಗಾಂಧೀಜಿ. ಇಪ್ಪತ್ತೇಳು ವರ್ಷದ ಕಾರಾಗೃಹ ಶಿಕ್ಷೆ ಮುಗಿಸಿಬಂದ ಮಂಡೇಲಾ ನಗುತ್ತಾ ಹೇಳಿದ್ದೇನು ಗೊತ್ತೇ? ” ಇಪ್ಪತ್ತೇಳು ವರ್ಷದ ಸುದೀರ್ಘ ರಜೆ ಇನ್ನು ಮುಗಿಯಿತು “ಎಂದು. ಭಾರತ ರತ್ನ,ಮಹಾತ್ಮಾ ಗಾಂಧಿ ಶಾಂತಿ ಪ್ರಶಸ್ತಿ,ನೊಬೆಲ್ ಶಾಂತಿ ಪುರಸ್ಕಾರಗಳಂತಹ ಅನೇಕ ಗೌರವಕ್ಕೆ ಪಾತ್ರರಾದ ಮಂಡೇಲಾ 2013 ರಂದು ತಮ್ಮ ಜೀವನ ಯಾತ್ರೆ ಮುಗಿಸಿ ಇಹಲೋಕಕ್ಕೆ ಪಯಣಿಸಿದರು. ಪುಸ್ತಕಗಳು ಅತ್ಯಂತ ಶಾಂತವಾದ ಸಲಹೆಗಾರರಷ್ಟೇ ಅಲ್ಲ,ಅವು ಸ್ಥಿರವಾದ ಸ್ನೇಹಿತರು ಕೂಡ. ಜೀವನದ ಎಲ್ಲಾ ಸಂಬಂಧಗಳು ನಮ್ಮಿಂದ ದೂರವಾದಾಗ ಸದಾ ಜೊತೆಗಿರುವ ಆತ್ಮೀಯ ಬಂಧುವೆಂದರೆ ಅದು ಪುಸ್ತಕ ಮಾತ್ರ. ಹಾಗೆಯೇ ನಾಲ್ಕೇ ಸಾಲುಗಳುಳ್ಳ ಒಂದು ಕವಿತೆ ಸಾವಿರ ಅನುಭವದ ವ್ಯಕ್ತಿಗೂ ಮೀರಿ ಪ್ರಭಾವ ಬೀರಬಲ್ಲದು. ************************************************************

ಇನ್ವಿಕ್ಟಸ್ ಮತ್ತು ಮಂಡೇಲಾ Read Post »

ಇತರೆ, ಲಹರಿ

ಎದಿಹಿಗ್ಗು ಕಡೆತನಕ.

ಭಾವಲಹರಿ. ಎದಿಹಿಗ್ಗು ಕಡೆತನಕ. ರಶ್ಮಿ .ಎಸ್. ಅಳಬಾರ್ದು ಅಂತ ನಿರ್ಧಾರ ಮಾಡೇನಿ ಅಕ್ಕ. ಆಮ್ಯಾಲೆ ಕಣ್ಣೀರು ತಂದಿಲ್ಲ. ಕಂಠ ಮೀರಿ ದುಖ್ಖಿಸಿಲ್ಲ. ಬಿಕ್ಕಿಲ್ಲ’. ‘ತ್ರಾಸು ಆಗ್ತದ. ಆದ್ರ ಅಳೂದ್ರಿಂದ ಸಂದರ್ಭ ಇರೂದಕ್ಕಿಂತ ಬ್ಯಾರೆ ಏನಾಗೂದಿಲ್ಲ. ಇಡೀ ಪರಿಸ್ಥಿತಿಯನ್ನಂತೂ ಬದಲಸಾಕ ಆಗೂದಿಲ್ಲ. ಅದಕ್ಕೆ ಅಳಬಾರ್ದು ಅಂತ ಮಾಡೇನಿ’. ನಮ್ಮ ಚಿಗವ್ವ ನಮ್ಮಮ್ಮಗ ಹೇಳ್ತಿದ್ಲು. ಮನಿ ಹಿತ್ತಲದಾಗ ಬೇವಿನ ಮರಕ್ಕ ಕಟ್ಟಿದ್ದ ಜೋಕಾಲಿಯೊಳಗ ತೂಗಕೊಂತ ಕುಂತ ಚಿಕ್ಕಮ್ಮ ಆಗಲೇ ೫ ದಶಕ ನೋಡ್ದಕ್ಕಿ. ನಮ್ಮಮ್ಮ ೬. ಬ್ಯಾಸಗಿ ಝಳ ತಾಕಲಾರ್ದ ಹಂಗ ಅಪ್ಪ ಹಿತ್ತಲದಾಗ ತೋಟ ಮಾಡ್ಯಾರ. ಅಲ್ಲಿ ತಣ್ಣಗೆ ಕುತ್ಗೊಂಡು ಕಷ್ಟ ಸುಖ ಮಾತಾಡೂ ಮುಂದ ನಾವು ಮಕ್ಕಳು ಇಬ್ಬರ ಮುಖ ಮಿಕಮಿಕ ನೋಡ್ಕೊಂತ ಸುಮ್ನಾಗಿದ್ವಿ. ಮೈ ಇಡೀ ಕಣ್ಣಾಗಿದ್ವು. ಕಿವಿಯಾಗಿದ್ವು. ಅಕ್ಕ–ತಂಗಿ ಇಬ್ರೂ ಕಷ್ಟ ಉಂಡು ಗಟ್ಟಿಯಾದೋರು. ಅಮ್ಮ ಅತ್ತು ಹಗುರಾಗ್ತೀನಿ ಅಂತಂದ್ರ, ಅತ್ರ ಮಂದಿಮುಂದ ಹಗುರಾಗ್ತೀವಿ ಅನ್ನೂ ನಂಬಿಕಿ ತಂಗೀದು. ಭಾಳ ತ್ರಾಸ ಆದ್ರ ಕಣ್ಣೀರಿನ ಮುತ್ತು ಗಲ್ಲಗುಂಟ ಇಳೀತಾವ. ಮುತ್ತಿನ ಮಣಿಯಂಥ ಬಣ್ಣ ನಮ್ಮ ಚಿಗ್ಗವ್ವಂದು. ಹಾಲಿನ ಕೆನಿ ಮ್ಯಾಲೆ ಹಬೆ ಇಬ್ಬನಿ ಕುಂತಂಗ ಕಾಣ್ತದ ಅವಾಗ. ಚಿಕ್ಕಮ್ಮ ಮಾತು ಮುಂದುವರಿಸಿದ್ರು.  ‘ಅಳೂದಂದ್ರ ಏನು? ನಾವು ನಮ್ಮ ದೌರ್ಬಲ್ಯವನ್ನು ತೋರಸೂದು. ನಾವು ನಂಬಿದ್ದು ಎಲ್ಲೊ ಖೊಟ್ಟಿ ಆಗೇದ ಅಂತ ತ್ರಾಸ ಮಾಡ್ಕೊಳ್ಳೂದು. ನಂಬಿದೆದಿಗೆ ಕಾಲ ನೀಡೂ ಪೆಟ್ಟು. ಅದು ಯಾವಾಗಲೂ ಎದಿ ಮುರದು ಬಿರದು ಬರೂಹಂಗ ಇರ್ತದ. ಈ ದುಃಖ್ಖದ್ದ ಕಟ್ಟಿ ಮುರದು ಬರೂವ ನೀರೆ ಕಣ್ಣೀರು. ಅವಕ್ಕೂ ಗಟ್ಟಿಯಾಗಬೇಕು. ಕಲ್ಲಾಗಬೇಕು. ಮನಸು ಹೂ ಕಲ್ಲಾಗಬೇಕು. ಅಂದ್ರ ಸಂತೋಷ ಆದಾಗ ಹೂವಿನ್ಹಂಗ ಅರಳೂದು. ನೋವು ಬಂದ್ರ ಕಲ್ಲಿನ್ಹಂಗ ಗಟ್ಟಿಯಾಗೂದು ಅಷ್ಟೆ. ನಾವು ಅಳೂದ್ರಿಂದ ಏನಾಗ್ತದ? ಇಷ್ಟಕ್ಕೂ ನಮ್ಮ ತ್ರಾಸೇ ದೊಡ್ದು ಅಂದ್ಕೊಂಡಾಗ ಅಳ್ತೀವಿ. ನಮಗ ಎದುರಸಾಕ ಆಗ್ದೇ ಇರೂದು ಯಾವುದೂ ನಮ್ಮ ಜೀವನದಾಗ ಘಟಿಸಾಕ ಸಾಧ್ಯನೇ ಇಲ್ಲ. ಇದು ನಮ್ಮ ಜೀವನದೊಳಗ ಆಗೇದ ಅಂದ್ರ, ಅದಕ್ಕ ನಾವು ಲಾಯಕ್ಕದೀವಿ. ಅದನ್ನು ಎದುರಿಸುವ, ನಿಭಾಯಿಸುವ ಛಾತಿ ನಮಗದ ಅಂತನೇ ಅರ್ಥ. ಹಂಗಿದ್ದಾಗ ಕಣ್ಣೀರು ಸುರಿಸಿ, ಸ್ವಮರುಕದ ಬಾವಿಯೊಳಗ ನಮ್ಮನ್ನೇ ನಾವು ದೂಡಬೇಕು ಯಾಕ?’ ಇಬ್ಬರೂ ಅಕ್ಕಾ ತಂಗೇರು ಹತ್ತು ವರ್ಷದ ನಂತರ ಮಾತಾಡಾಕ ಕುಂತಿದ್ರು. ಅಳಾಕ, ನಗಾಕ ಎರಡಕ್ಕೂ ರಾಶಿ ರಾಶಿ ಮಾತುಗಳಿದ್ವು. ಇವರ ಸಾಲಿಗೆ ದೊಡ್ಡಮ್ಮನೂ ಸೇರ್ಕೊಂಡರ ಅಲ್ಲೊಂದು ಬದುಕಿನ ಪಡಸಾಲಿನ ಬಿಚ್ಕೊಂತದ. ಅವರು ಸೀರಿ ತೊಗೊಂಡ ಲೆಕ್ಕದಿಂದ ಶುರು ಆಗುವ ಮಾತು, ದೇವರಿಗೆ ಒಂದು ಕೈ ನೋಡ್ಕೊಳ್ಳೂತನಾನೂ ಹೋಗ್ತದ.  ಅವರಿಬ್ಬರ ನಡು ನಾನು ಬಾಯಿ ಹಾಕಿದ್ದೆ. ‘ಯಾರರೆ ಅನುಮಾನಿಸ್ದಾಗ, ಅವಮಾನ ಮಾಡ್ದಾಗ, ನಿರ್ಲಕ್ಷ್ಯ ಮಾಡ್ದಾಗ, ನಮ್ಮ ಇರುವನ್ನು ಅಲ್ಲಗಳೆದಾಗ ಮಾತ್ರ ಅಳು ಉಕ್ಕಿ ಬರ್ತದ. ಅದನ್ನು ತಡ್ಯಾಕ ಆಗಾಂಗಿಲ್ಲ. ನೀನೂ ಕಾಕಾರೂ ೩೫ ವರ್ಷಾ ಸಂಸಾರ ಮಾಡೇರಿ. ಈಗ ಹಿಂಗ ಹೇಳ್ತಿ. ನೀ ಖರೆ ಹೇಳು ಮದಿವಿಯಾದ ಹೊಸತರೊಳಗ ಅತ್ತಿಲ್ಲೇನು?’ ಚಿಕ್ಕಮ್ಮ ಸುಮ್ಮನಾಗಿದ್ಲು. ಅಳು ಬರ್ತಿತ್ತೇನೋ? ಇಲ್ಲ. ಒಮ್ಮೆ ನಮ್ಮನಿ ಮಾವಿನ ಗಿಡ ದಿಟ್ಟಿಸಿ ನೋಡ್ದಕ್ಕಿನ, ‘ನೋಡಲ್ಲೆ, ಆ ದೊಡ್ಡ ಮಾವಿನ ಕಾಯಿನ ಎಲಿ ಹೆಂಗ ಮರೀ ಮಾಡ್ಯಾವು ನೋಡು… ಎಷ್ಟು ಮಂಗ್ಯಾ ಬಂದ್ರೂ ಕಂಡಿಲ್ಲದು’ ಅಂದ್ರು. ಅಂಗಳದಾಗ ನಿಂತು ಹಿಸಿಕಿ ಕೊಟ್ಟ ಹಣ್ಣು, ಕಣ್ಮುಚ್ಚಿ ಹೀರ್‌್ಕೊಂತ ನಿಂತ ನನಗ ಆ ಕಾಯಿ, ಎಲಿ, ಮಂಗ್ಯಾ ಯಾವೂ ಕಾಣವಲ್ದಾಗಿತ್ತು. ನಾನು ಚಿಕ್ಕಮ್ಮನಿಗೆ ಸವಾಲು ಹಾಕೇನಿ ಅನ್ನೂ ಮದದೊಳಗ ರಸ ಹೀರ್ತಿದ್ದೆ. ‘ಮನಸು ಹಂಗೆ. ಕೆಲವೊಮ್ಮೆ ಹುಡುಕಿ ಹೆಕ್ಕಿ, ಹಣ್ಣು ಕಿತ್ತೊಗಿಯೂ ಮಂಗ್ಯಾನ್ಹಂಗ. ಇನ್ನೂ ಕೆಲವೊಮ್ಮೆ ಯಾರ ಕಣ್ಣಿಗೂ ಕಾಣದೇ ಇರೂಹಂಗ ಬೆಚ್ಚಗೆ ಕಾಪಿಡುವ ಎಲಿ ಇದ್ಹಂಗ. ಇದು ಕಡೀಕ ಕೇಳೂದು ನಮ್ಮ ಮಾತು ಮಾತ್ರ. ಎಲ್ಲಿ ಮಂಗ್ಯಾ ಆಗಬೇಕು? ಎಲ್ಲಿ ಮನಶಾ ಆಗಬೇಕು ಅನ್ನೂ ನಿರ್ಧಾರ ನಮ್ಮದೇ ಆಗಿರ್ಬೇಕು. ಅಳ್ತಿದ್ದೆ. ನಮ್ಮತ್ತಿ ಎಲ್ಲಾ ಹೆಣ್ಣ ಹಡದಿಯಲ್ಲಬೇ ಅಂತ ಹಂಗಿಸಿದಾಗೆಲ್ಲ ಅಳ್ತಿದ್ದೆ. ಹಿಂಗೆ ಒಮ್ಮೆ ಅತ್ತು ಅತ್ತು ಹೈರಾಣಾದಾಗ ಅನಿಸಿದ್ದು ಅತ್ರೇನು ಮಕ್ಕಳು ಗಂಡಾಗ್ತಾವ? ಇಲ್ಲ. ಅತ್ತೇನು ಪ್ರಯೋಜನ? ದೇವರು ಹೆಣ್ಣು ಕೊಟ್ಟಾನ. ನಮಗೂ ಅಂಥಾ ಹೆಣ್ಣು ಕೊಡಲಿಲ್ಲ ಅಲ್ಲ ಅಂತ ಮಂದಿ ಕರಬೂಹಂಗ ಮಕ್ಕಳನ್ನ ಬೆಳಸ್ತೀನಿ ಅಂತ ನಿರ್ಧಾರ ಮಾಡ್ದೆ. ಯಾವ ಕಾರಣಕ್ಕೂ ಅಳೂದಿಲ್ಲ. ದೇವರು ನಾ ಅತ್ತೂ ಕರದು ಮಾಡ್ಲಿ ಅನ್ನೂವಂಥ ಸಂದರ್ಭ ತಂದಾಗೂ ಕಲ್ಲಾಗಿದ್ದೆ. ಇದು ಜಿದ್ದು. ದೇವರ ಮ್ಯಾಲಿನ ಜಿದ್ದು. ಈ ಜಿದ್ದಿನಿಂದ ಇನ್ನೊಬ್ಬರಿಗೆ ತ್ರಾಸಂತೂ ಇಲ್ಲಲ್ಲ.  ಆಮೇಲೆ ನಿಮ್ಮಣ್ಣ ಹುಟ್ದಾ. ಆ ಮಾತು ಬ್ಯಾರೆ. ಆದ್ರ ಇವೊತ್ತಿಗೂ ಅಳಬಾರದು ಅನ್ನೂ ನಿರ್ಧಾರ ಗಟ್ಟಿಯಾಗಿಯೇ ಉಳದದ. ಇದು ನಮ್ಮೊಳಗಿನ ಬೆಳಕು. ಅದು ನಮಗೇ ಕಾಣಬೇಕು. ನಮ್ಮ ಜೀವನಾನ ತೋರಬೇಕು. ಮುಂದ ಅಳಬೇಕು ಅನ್ನಸ್ದಾಗಲೆಲ್ಲ ಬೇಂದ್ರೆ ಅಜ್ಜನ ಪದಗಳು ನನಗ ಗಟ್ಟಿಯಾದ್ವು. ರೊಟ್ಟಿ ಬಡ್ಕೊಂತ ‘ನನ್ನ ಕೈ ಹಿಡಿದಾಕೆ ಅಳುನುಂಗಿ ನಗು ಒಮ್ಮೆ, ನಾನೂನು ನಕ್ಕೇನ’ ಹಾಡು ಹಾಡ್ತಿದ್ರ ರೊಟ್ಟಿ ತೆಳು ಆಗ್ತಿದ್ವು. ಮನಸೂ ತಿಳಿ ಆಗ್ತಿತ್ತು. ತೀರ ಅಂಥ ಸಂದರ್ಭ ಬಂದ್ರ, ನೀನು ಇದನ್ನ ಮನನ ಮಾಡ್ಕೊ. ‘ಹುಸಿ ನಗುತ ಬಂದೇವ, ನಸುನಗುತ ಬಾಳೋಣ, ತುಸು ನಗುತ ತೆರಳೋಣ’ ‘ಬಡತನ ಗಿಡತನ ಕಡೆತನಕುಳಿದಾವೇನ, ಎದೆಹಿಗ್ಗು ಕಡೆ ಮಟ್ಟ, ಬಾಳಿನ ಕಡಲಾಗ ಅದನ ಮುಳುಗಿಸಬ್ಯಾಡ, ಕಡೆಗೋಲು ಹಿಡಿ ಹುಟ್ಟ’ ಅಂತ ಹಾಡಾಕ ಸುರು ಮಾಡಿದ್ರು. ಮೊದಲಾದ್ರ ಇವರ ಚಿತ್ರಹಾರ್ ಮುಗಿಯೂದಿಲ್ಲ ಅಂತ ಮೂಗುಮುರಿಯೂ ಮಕ್ಕಳು ಅವೊತ್ತು ಸುಮ್ನ ಕೇಳಿರಲಿಲ್ಲ. ಕೇಳಿ ಸುಮ್ನ ಆಗಲೂ ಇಲ್ಲ. ‘ಗಂಡ ಅಂತಾನಂತ ಅತ್ಗೊಂತ ಕುಂತ್ರ, ಸಿಟ್ಟಿಗೆದ್ರ ಬದುಕು ಮೂರಾಬಟ್ಟಿ ಆಗ್ತದ. ಕಟ್ಗೊಂಡ ಗಂಡ ಪೂರ್ವಜನ್ಮದ ಮಗಾ ಅಂತ ತಿಳ್ಕೊಂಡು ಕ್ಷಮಿಸ್ಕೊಂತ ಹೋಗಬೇಕು. ಅವರೂ ಅಷ್ಟೆ. ಕಟ್ಗೊಂಡು ಹೆಂಡ್ತಿ, ಮಗಳಿದ್ಹಂಗ ಅನ್ನೂ ಮಮಕಾರ ಬೆಳಸ್ಕೊಂಡ್ರ ಜಗಳ ಕಡಿಮಿ ಆಗ್ತಾವ. ಎದಿಹಿಗ್ಗು ಉಳದೇ ಉಳೀತದ… ಇವೆಲ್ಲ ಕಾಲ ಮಾಗಿದ್ಹಂಗ, ಪ್ರೀತಿ ಗಟ್ಟಿ ಆದ್ಹಂಗ ಬರ್ತದ. ಈಗೀಗ ನೀವು ಪ್ರೀತಿ ಬಲಿಯಾಕೆ ಬಿಡೂದಿಲ್ಲ. ಪ್ರೇಮದ ಕಾವು ಇಳಿಯೂ ಮುನ್ನ, ಪ್ರೇಮದ ಪೂರ ಕಡಿಮಿ ಆಗಿ, ನದಿ ಹೊಳಿ ಹರಿಯೂ ಮೊದಲೇ ದಾರಿ ಬ್ಯಾರೆ ಅನ್ನೂಹಂಗ ಜಗಳಾಡ್ತೀರಿ. ಕಾದು ನೋಡ್ರಿ. ‘ಜಗಳ ಕಾಯ್ದು’ ಅಲ್ಲ‘ ಅಂತಹೇಳಿ ಸುಮ್ನಾಗಿದ್ರು. ಈ ‘ಎದಿಹಿಗ್ಗು ಕಡೆತನಕ’ ಅನ್ನೂ ಪದ, ಹಸಿ ಗೋಡಿಯೊಳಗ ಹಳ್ಳ ನೆಟ್ಟಂಗ ಗುರಿ ಮುಟ್ಟಿತ್ತು. ಅನ್ನೋರು ಅಂತಾರ. ಆಡ್ಕೊಳ್ಳೋರು ಆಡ್ಕೊಂತಾರ. ನಮ್ಮ ಎದಿ ಹಿಗ್ಗು ನಮಗಿದ್ರ ಯಾವ ನೋವು ಎಷ್ಟು ಹೊತ್ತಿನ ಅತಿಥಿ? ಸದಾ ಕಣ್ಣೀರೊಳಗ ತೇಲೂ ನನಗ ಇದು ಪಾಠ ಆಗಿತ್ತು. ಆದ್ರ ಗಟ್ಟಿಯಾಗೂದು, ಗಟ್ಟಿ ಮಾಡೂದು ಅವರಿವರ ಮಾತಲ್ಲ. ನಮ್ಮ ಬದುಕು. ****************************************

ಎದಿಹಿಗ್ಗು ಕಡೆತನಕ. Read Post »

ಇತರೆ

ಹಿಮಾಲಯ ಪರ್ವತ ಶ್ರೇಣಿಗಳು”

ಲೇಖನ ಹಿಮಾಲಯ ಪರ್ವತ ಶ್ರೇಣಿಗಳು” ಆಶಾ ಸಿದ್ದಲಿಂಗಯ್ಯ ಸಿಂಧೂ ನದಿಯ ಬಯಲಿನಲ್ಲಿ ಸಂಸ್ಕೃತಿ ರೂಪುಗೊಳ್ಳುವ ಮೊದಲೇ ಗೊಂಡಿ ಭಾಷೆಯಿತ್ತು ಎನ್ನುವ ಮಾತು ಹೆಚ್ಚು ಮುಖ್ಯವಾಗುತ್ತದೆ. ಹಲವು ಲಕ್ಷ ವರ್ಷಗಳ ಹಿಂದೆ ಈಗಿನ ದಕ್ಷಿಣ ಅಮೆರಿಕ, ದಕ್ಷಿಣ ಆಫ್ರಿಕಾ, ಏಷ್ಯಾ ಖಂಡದ ದಕ್ಷಿಣ ಭಾಗ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಅಂಟಾರ್ಟಿಕಾಗಳು ಕೂಡಿದ್ದ ಭೂಭಾಗವಿತ್ತು. ಅದನ್ನು ಗೊಂಡ್ವಾನ ಎಂದು ಕರೆಯುತ್ತಿದ್ದರು. ಭಾರತದ ವಿಂಧ್ಯ ಪರ್ವತ ಶ್ರೇಣಿಯ ದಕ್ಷಿಣ ಭಾಗ ಅಂದರೆ ದಕ್ಷಿಣ ಭಾರತದ ಪ್ರಸ್ಥಭೂಮಿ ಗೊಂಡ್ವಾನ ಪ್ರದೇಶದ ಭಾಗವಾಗಿತ್ತು. ಅಲ್ಲಿ ವಾಸಿಸುತ್ತಿದ್ದ ಗೊಂಡರು ಸಿಂಧೂ ನದಿ ಬಯಲಿನ ನಾಗರಿಕತೆಯ ಜನರಿಗಿಂತ ಹಿಂದಿನವರು. ಅವರು ಆಡುತ್ತಿದ್ದ ಭಾಷೆ ದ್ರಾವಿಡ ವರ್ಗಕ್ಕೆ ಸೇರಿತ್ತು. ಅದು ಈಗಲೂ ಬಳಕೆಯಲ್ಲಿದೆ ಎಂಬುದು ಕುತೂಹಲದ ವಿಚಾರ. ಹಿಮಾಲಯ ಭೂಮಿಯ ಅತ್ಯಂತ ನವೀನ ಪರ್ವತ ಶ್ರೇಣಿಗಳಲ್ಲಿ ಒಂದು. ಸುಮಾರು ೨೫ ಕೋಟಿ ವರ್ಷಗಳ ಹಿಂದೆ “ಪ್ಯಾಂಜಿಯ” ಭೂಭಾಗ ಒಡೆದು ಇಂಡೋ-ಆಸ್ಟ್ರೇಲಿಯನ್ ಭೂಭಾಗ ಯೂರೇಷ್ಯನ್ ಭೂಭಾಗದತ್ತ ತೇಲಲಾರಂಭಿಸಿತು. ಸುಮಾರು ೪-೭ ಕೋಟಿ ವರ್ಷಗಳ ಹಿಂದೆ ಈ ಎರಡು ಭೂಭಾಗಗಳು ಒಂದಕ್ಕೊಂದು ಗುದ್ದಿದಾಗ ಹಿಮಾಲಯ ಪರ್ವತಗಳು ಸೃಷ್ಟಿಯಾದವು. ಸುಮಾರು ೨-೩ ಕೋಟಿ ವರ್ಷಗಳ ಹಿಂದೆ ಇಂದಿನ ಭಾರತದ ಪ್ರದೇಶದಲ್ಲಿದ್ದ ಟೆತಿಸ್ ಸಾಗರ ಸಂಪೂರ್ಣವಾಗಿ ಮುಚ್ಚಿ ಹೋಯಿತು . ಇಂಡೋ-ಆಸ್ಟ್ರೇಲಿಯನ್ ಭೂಭಾಗ ಇಂದಿಗೂ ನಿಧಾನವಾಗಿ ಟಿಬೆಟ್ ಭೂಭಾಗದ ಅಡಿಯಲ್ಲಿ ಚಲಿಸುತ್ತಿದೆ (ಸುಮಾರು ವರ್ಷಕ್ಕೆ ೨ ಸೆಮೀ), ಮತ್ತು ಮುಂದಿನ ಕೋಟಿ ವರ್ಷಗಳಲ್ಲಿ ಸುಮಾರು ೧೮೦ ಕಿಮೀ ನಷ್ಟು ಚಲಿಸಿರುತ್ತದೆ! ಈ ಚಲನೆಯಿಂದ ಹಿಮಾಲಯ ಶ್ರೇಣಿ ವರ್ಷಕ್ಕೆ ಅರ್ಧ ಸೆಮೀ ನಷ್ಟು ಬೆಳೆಯುತ್ತಿದೆ. ಇದೇ ಚಲನೆಯಿಂದ ಈ ಪ್ರದೇಶ ಸಾಕಷ್ಟು ಭೂಕಂಪಗಳನ್ನು ಸಹ ಕಂಡಿದೆ. ಹಿಮಾಲಯ ಶ್ರೇಣಿ ಪಶ್ಚಿಮದಲ್ಲಿ “ನಂಗಾ ಪರ್ಬತ್” ಇಂದ ಪೂರ್ವದಲ್ಲಿ “ನಾಮ್ಚೆ ಬರ್ವಾ” ದ ವರೆಗೆ ಸುಮಾರು ೨೪೦೦ ಕಿಮೀ ಉದ್ದವಿದೆ. ಅಗಲ ೨೫೦-೩೦೦ ಕಿಮೀ. ಹಿಮಾಲಯ ಶ್ರೇಣಿಯಲ್ಲಿ ಸಮಾನಾಂತರವಾಗಿ ಸಾಗುವ ಮೂರು ವಿಭಿನ್ನ ಶ್ರೇಣಿಗಳನ್ನು ಕಾಣಬಹುದು: “ಉಪ-ಹಿಮಾಲಯ”: ಇದನ್ನು ಭಾರತದಲ್ಲಿ “ಶಿವಾಲಿಕ್ ಹಿಲ್ಸ್ “ಎಂದು ಕರೆಯಲಾಗುತ್ತದೆ. ಈ ಶ್ರೇಣಿ ಅತ್ಯಂತ ಇತ್ತೀಚೆಗೆ ಸೃಷ್ಟಿಯಾದದ್ದು ಮತ್ತು ಸರಾಸರಿ ೧೨೦೦ ಮೀ ಎತ್ತರ ಹೊಂದಿದೆ. ಮುಖ್ಯವಾಗಿ, ಇನ್ನೂ ಬೆಳೆಯುತ್ತಿರುವ ಹಿಮಾಲಯ ಪರ್ವತಗಳಿಂದ ಜಾರುವ ಭೂಭಾಗದಿಂದ ಈ ಶ್ರೇಣಿ ಸೃಷ್ಟಿಯಾಗಿದೆ. “ಕೆಳಗಿನ ಹಿಮಾಲಯ”: ಸರಾಸರಿ ೨೦೦೦-೫೦೦೦ ಮೀ ಎತ್ತರವಿದ್ದು ಇದು ಭಾರತದ ಹಿಮಾಚಲ ಪ್ರದೇಶ, ನೇಪಾಳದ ದಕ್ಷಿಣ ಪ್ರದೇಶಗಳ ಮೂಲಕ ಸಾಗುತ್ತದೆ. ಡಾರ್ಜೀಲಿಂಗ್, ಶಿಮ್ಲಾ, ನೈನಿತಾಲ್, ಮೊದಲಾದ ಭಾರತದ ಅನೇಕ ಪ್ರಸಿದ್ಧ ಗಿರಿಧಾಮಗಳು ಈ ಶ್ರೇಣಿಯಲ್ಲಿಯೇ ಇರುವುದು. “ಮೇಲಿನ ಹಿಮಾಲಯ”: ಈ ಶ್ರೇಣಿ ಎಲ್ಲಕ್ಕಿಂತ ಉತ್ತರದಲ್ಲಿದ್ದು ನೇಪಾಳದ ಉತ್ತರ ಭಾಗಗಳು ಮತ್ತು ಟಿಬೆಟ್ ನ ದಕ್ಷಿಣ ಭಾಗಗಳ ಮೂಲಕ ಸಾಗುತ್ತದೆ. ೬೦೦೦ ಮೀ ಗಿಂತಲೂ ಹೆಚ್ಚಿನ ಸರಾಸರಿ ಎತ್ತರವನ್ನು ಹೊಂದಿರುವ ಈ ಶ್ರೇಣಿ ಪ್ರಪಂಚದ ಅತಿ ಎತ್ತರದ ಮೂರು ಶಿಖರಗಳನ್ನು ಒಳಗೊಂಡಿದೆ – ಎವರೆಸ್ಟ್, ಕೆ-೨, ಮತ್ತು ಕಾಂಚನಗಂಗಾ. ಹವಾಮಾನದ ಮೇಲಿನ ಪ್ರಭಾವ ಭಾರತೀಯ ಉಪಖಂಡ ಮತ್ತು ಟಿಬೆಟ್ ಪ್ರಸ್ಥಭೂಮಿಗಳ ಹವಾಮಾನದ ಮೇಲೆ ಹಿಮಾಲಯ ಶ್ರೇಣಿ ಆಳವಾದ ಪ್ರಭಾವವನ್ನು ಬೀರುತ್ತದೆ. ಆರ್ಟಿಕ್ ಪ್ರದೇಶದಿಂದ ಚಳಿ ಗಾಳಿ ಭಾರತದೊಳಕ್ಕೆ ಬೀಸುವುದನ್ನು ಹಿಮಾಲಯ ಶ್ರೇಣಿ ತಡೆಯುತ್ತದೆ. ಇದರಿಂದಾಗಿ ದಕ್ಷಿಣ ಏಷ್ಯಾ – ಟಿಬೆಟ್ ಮೊದಲಾದ ಪ್ರದೇಶಗಳಿಗಿಂತ ಬೆಚ್ಚಗಿರುತ್ತದೆ. ಹಾಗೆಯೇ ಮಾನ್ಸೂನ್ ಮಾರುತಗಳನ್ನು ತಡೆದು ಭಾರತದ ಪೂರ್ವ ರಾಜ್ಯಗಳಲ್ಲಿ (ಮಿಜೋರಂ, ಮೇಘಾಲಯ, ಇತ್ಯಾದಿ) ಬಹಳಷ್ಟು ಮಳೆಯಾಗುವಂತೆ ಮಾಡುತ್ತದೆ. ಮಾನ್ಸೂನ್ ಮಾರುತಗಳು ಹಿಮಾಲಯವನ್ನು ದಾಟಲಾಗದೆ ಇರುವುದೂ ಸಹ ಟಿಬೆಟ್/ಚೀನಾಗಳಲ್ಲಿನ ಗೋಬಿ ಮರುಭೂಮಿ ಮತ್ತು ತಕ್ಲಮಕಾನ್ ಮರುಭೂಮಿಗಳ ಸೃಷ್ಟಿಗೆ ಒಂದು ಕಾರಣ ಎಂದು ಊಹಿಸಲಾಗಿದೆ. ಚಳಿಗಾಲದಲ್ಲಿ ಪಶ್ಚಿಮದ ಇರಾನ್‍ನ ಕಡೆಯಿಂದ ಉಂಟಾಗುವ ಹವಾಮಾನದ ಪ್ರಕ್ಷುಬ್ಧತೆಗಳನ್ನು ಈ ಶ್ರೇಣಿಗಳು ಮುನ್ನುಗ್ಗದಂತೆ ತಡೆಯುತ್ತವೆ. ಈ ರೀತಿಯ ತಡೆಯುವಿಕೆಯಿಂದಾಗಿ ಕಾಶ್ಮೀರದಲ್ಲಿ ಹಿಮಪಾತವುಂಟಾಗುತ್ತದೆ ಹಾಗೂ ಉತ್ತರ ಭಾರತದ ಮತ್ತು ಪಂಜಾಬ್‍ನ ಕೆಲವು ಭಾಗಗಳಲ್ಲಿ ಮಳೆ ಬೀಳುತ್ತದೆ. ಹಿಮಾಲಯ ಶ್ರೇಣಿಗಳು ಉತ್ತರದಿಂದ ಆರ್ಕ್‍ಟಿಕ್ ಕಡೆಯಿಂದ ಬೀಸುವ ಚಳಿಗಾಳಿಯನ್ನು ಬಹುಮಟ್ಟಿಗೆ ತಡೆದರೂ, ಬ್ರಹ್ಮಪುತ್ರ ಕಣಿವೆಯಲ್ಲಿ ಈ ಚಳಿಗಾಳಿಯ ಸ್ವಲ್ಪ ಪಾಲು ನುಸುಳಿ ಬರುತ್ತದೆ. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಮತ್ತು ಭಾರತದ ಈಶಾನ್ಯ ರಾಜ್ಯಗಳಲ್ಲಿ ಚಳಿಗಾಲದ ಉಷ್ಣತೆ ಸಾಕಷ್ಟು ಮಟ್ಟಿಗೆ ಕೆಳಗಿಳಿಯುತ್ತದೆ. ಇದೇ ಗಾಳಿಯು ಈ ಈಶಾನ್ಯ ಪ್ರಾಂತ್ಯಗಳಲ್ಲಿ ಈಶಾನ್ಯ ಮುಂಗಾರನ್ನೂ ಉಂಟುಮಾಡುತ್ತದೆ. ***********************************

ಹಿಮಾಲಯ ಪರ್ವತ ಶ್ರೇಣಿಗಳು” Read Post »

ಇತರೆ, ಜೀವನ

ಮಾತು ಮನವನ್ನು ಅರಳಿಸಬೇಕು

ಲೇಖನ ಮಾತು ಮನವನ್ನು ಅರಳಿಸಬೇಕು ಮಾಲಾ ಕಮಲಾಪುರ್ ಭಾಷೆ ಮನುಷ್ಯನಿಗೆ  ಲಭಿಸಿದ ದೈವ ದತ್ತ ವರ ವಾದರೆ ಮಾತು ನಮ್ಮ ಭಾವನೆಗಳನ್ನು ಅಭಿವ್ಯಕ್ತಗೊಳಿಸುವ ಮೂಲಕ ಅಮೂಲ್ಯ ಸಾಧನ ಆಗಿದೆ. ಮಾತು ನಮ್ಮ ಬದುಕನ್ನು ಕಟ್ಟುತ್ತದೆ. ಇದು ವ್ಯಕ್ತಿಯ  ಬಿಚ್ಚಿಡುವ ಪಾರಿಜಾತದ ಪರಿಮಳದಂತೆ. ನಾವಾಡುವ ಮಾತು ಪುಷ್ಪದ ದಳದಂತೆ. ಮಾತಿನ ಬಳಕೆ  ಬಲ್ಲವರು ಮಾಣಿಕ್ಕ್ಯ ತರುತ್ತಾರೆ. ಬಳಿಕೆ ಅರಿಯದವರು ಜಗಳ ತರುತ್ತಾರೆ.ಮನುಷ್ಯನು  ಯಾವುದೇ ಲೌಕಿಕ ವಾದ ವಸ್ತು ಗಳಿಂದ ಅಲಂಕಾರ ಮಾಡಿಕೊಂಡರು ಶೋಭಿಸುವುದಿಲ್ಲ. ಆದರೆ ಒಳ್ಳೆಯ ಮಾತು ಮತ್ತು ಪ್ರಾಮಾಣಿಕ  ಮಾತುಗಳಿಂದ  ಅಲಂಕಾರ ದಿಂದ  ಶೋಭಿಸುತ್ತಾನೆ. ಮನುಷ್ಯನ  ಅಂತಸ್ತಾಗಲಿ, ಕುಲವಾಗಲಿ ಯಾವದು ಆತನ ಯಶಸ್ಸಿಗೆ ಕಾರಣವಾಗುವುದಿಲ್ಲ. ಮಧುರ ಮಾತೇ ಆತನ ಗೆಲುವಿಗೆ ಕಾರಣವಾಗುತ್ತದೆ.ಮಾತು ಮನವನ್ನು ಅರಳಿಸವೇಕು, ಹೃದಯತಣಿಸಿ ಜೀವಕ್ಕೆ ಕಳೆಯನ್ನು ತುಂಬ ಬೇಕು. ಶರಣರಾಗಲಿ, ದಾಸರಾಗಲಿ ತಮ್ಮ ನಡೆ ನುಡಿ ಸಾಮರಸ್ಯದ  ಬೆಸುಗೆಯನ್ನೇ ಬೆಸೆದಿದ್ದಾರೆ. ಅದಕ್ಕೆ ಬಸವಣ್ಣ ನವರು ನುಡಿದಡೇ  ಮುತ್ತಿನ ಹಾರದಂತೆ ಇರಬೇಕು, ನುಡಿದರೆ ಮಾಣಿಕ್ಕ್ಯದ  ದೀಪ್ತಿಯಂತಿರಬೇಕು, ನುಡಿದಡೆ ಸ್ಪಟಿಕದ ಸಲಾಕೆಯಂತಿರಬೇಕು ಎಂದು ಸಾರಿದ್ದಾರೆ.ನಾವು ಮಾತನಾಡುವಾಗ ಸಮಯ ಸಂಧರ್ಭ ಅವಲೋಕಿಸಿ ಮಾತನಾಡಬೇಕು. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಪ್ರಚಲಿತ ಗಾದೆ ಮಾತು ಇದೆ ಮಾತಿಗೆ ಕ್ಷಮೆ ಕೇಳಬಹದು ಆದರೆ ಅದರಿಂದಾಗುವ ನೋವು ಶಮನವಾಗುವುದಿಲ್ಲ. ಪುರಾಣ ಕಾಲದಲ್ಲಿಯೂ ಋಷಿ ಮುನಿಗಳ ಮಾತು ಕೋಪ ತಾಪ ದಿಂದ ಹೊರ ಬಂದಾಗ ಶಾಪವಾಗುತ್ತಿತ್ತು. ಅವರು ಅರಳಿದ ಹೃದಯದಿಂದ ಮಾತು ವರವಾಗುತಿತ್ತು. ಬಲ್ಲವರು ಕಡಿಮೆ ಮಾತುಗಳಲ್ಲಿ ಮೌಲ್ಲ್ಯಾ ಧಾರಿತ ವಿಷಯಗಳನ್ನು ಬಿಚ್ಚಿಡುತ್ತಾರೆ. ಮಾತು ಹಿತವಾದಷ್ಟು ಒಳಿತು. ಅದಕ್ಕೆ ನಮ್ಮ ಹಿರಿಯರು ಮಾತು ಬೆಳ್ಳಿ ಮೌನ ಬಂಗಾರ ಎಂದಿದ್ದಾರೆ.ಒಟ್ಟಿನಲ್ಲಿ ಹೇಳುವುದಾದರೆ ನಮ್ಮ ನಾಲಿಗೆ ಒಳ್ಳೇದು ಆದರೆ ನಾಡೆಲ್ಲ ಒಳ್ಳೇದು. ಅದಕ್ಕೆ ನಮ್ಮ ಹಿರಿಯರು ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಅಂತ ಹೇಳಿದರು. ಮೃದುವಾದ ಮಾತು ಕಠೋರ ವ್ಯಕ್ತಿ ಗಳ ಹೃದಯವನ್ನು ಕರಗಿಸುತ್ತದೆ ಪ್ರಾಮಾಣಿಕ ಮಾತು ಮನುಷ್ಯನ ಕೀರ್ತಿಯನ್ನು ಹೆಚ್ಚಿಸುತ್ತದೆ. ************************

ಮಾತು ಮನವನ್ನು ಅರಳಿಸಬೇಕು Read Post »

ಇತರೆ, ನಿಮ್ಮೊಂದಿಗೆ

ಅಕ್ಷರದ ಅವ್ವ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ

ಲೇಖನ ಅಕ್ಷರದ ಅವ್ವ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಡಾ.ಸುಜಾತಾ.ಸಿ.                                     “ನೀನು ನಂಗೊAದು ರೊಟ್ಟಿ ಕೊಟ್ರೆ                                     ಒಂದು ದಿವ್ಸ ಹಸಿವನ್ನ ತೀರಿಸ್ದಂಗೆ                                     ರೊಟ್ಟಿಗಳಿಸೋದು ಹೆಂಗೇAತ ಕಲಿಸಿದ್ರೆ                                     ಗಳಿಸೋ ಅವಕಾಶ ಕಿತ್ಕಳೋ ತಂಕ                                     ನನ್ನ ಹಸಿವನ್ನ ತೀರ್ಸಿದಂಗೆ                                     ಅದೇ ನಿನೇನಾದ್ರೂ ವಿದ್ಯೆ ಕಲ್ಸಿ                                     ಒಗ್ಗಟ್ಟಾಗಿ ಹೋರಾಡೋದು ಕಲ್ಸಿದ್ಯಾ?                                     ಏನ್ಬೇಕಾದ್ರೂ ಆಗ್ಲಿ, ಯಾವ ಕಷ್ಟನಾದ್ರೂ ಬರಲಿ                                     ಎಲ್ಲ ಒಟ್ ಸೇರಿ                                     ನಮ್ ದಾರಿ ನಾವು ಹುಡುಕೋದ ಹೇಳಿಕೊಟ್ಟಂಗೆ” ಭಾರತದ ಮೊದಲ ಮಹಿಳಾ ಶಿಕ್ಷಕಿ ಹಾಗೂ ಅಪ್ಪಟ ಸ್ತ್ರೀವಾವಾದ ಚಿಂತಕಿ ಮಾತೆ ಸಾವಿತ್ರಿ ಭಾ ಫುಲೆ ಅವರಿಗೆ ಮಹಿಳೆಯರ ಬಗ್ಗೆ ಇದ್ದ ಕಾಳಜಿ ಮತ್ತು ಪ್ರೇಮ ಅವರ ಬದುಕು ಮತ್ತು ಬರಹದಲ್ಲಿ ಕಾಣಸಿಗುತ್ತದೆ. ಮೇಲಿನ ಕವಿತೆಯನ್ನು ನೋಡಿದರೆ ಮಹಿಳೆಯರಿಗೆ ಬಹಳ ಮುಖ್ಯವಾದುದು ಶಿಕ್ಷಣವೆಂಬುದನ್ನು ಸಾರಿ ಹೇಳುತ್ತದೆ. ಇಂತಹ ತಾಯಿಯನ್ನು ನಾವು ಪದೇ ಪದೇ ನೆನೆಯಬೇಕು ಹಾಗೇ ಅವಳ ಹೆಜ್ಜೆಯಲ್ಲಿಯೇ ನಮ್ಮ ಹೆಜ್ಜೆಗಳನ್ನು ಇಡುವದರಿಂದ ಮಾತ್ರ ಅವಳ ಹೋರಾಟಕ್ಕೆ ಸಾರ್ಥಕತೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಭಾರತೀಯರಿಗೆ ಅದರಲ್ಲೂ ಶೂದ್ರಾತಿಶೂದ್ರ ಬಹುಸಂಖ್ಯಾತರಿಗೆ ಹಾಗೂ ಭಾರತದ ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಸಲು ತನ್ನ ಇಡೀ ಜೀವನವನ್ನೇ ಮುಡುಪಾಗಿಟ್ಟು ಅಕ್ಷರ ಬೀಜವನ್ನು ಬಿತ್ತಿ ಕ್ರಾಂತಿಯನ್ನೇ ಹುಟ್ಟು ಹಾಕಿದ ದಿಟ್ಟ ಮಹಿಳೆ ಅವ್ವ ಸಾವಿತ್ರಿ ಬಾಯಿ ಫುಲೆ. ಸಾವಿತ್ರಿ ಬಾಯಿ ಅವರು ಬಡ ರೈತ ಕುಟುಂಬದಲ್ಲಿ ಶಿರವಳ ಹತ್ತಿರವಿರುವ ನಾಯಗಾವ ಎಂಬ ಹಳ್ಳಿಯಲ್ಲಿ ಝಗಡ ಪಾಟೀಲರ ಮಗಳಾಗಿ ೩ ನೇ ಜನೇವರಿ ೧೮೩೧ ರಲ್ಲಿ ಜನಿಸಿದರು. ಸಾವಿತ್ರಿಬಾಯಿ ಅವರಿಗೆ ಎಂಟು ವರುಷವಿರುವಾಗ ಗೋವಿಂದರಾವ್ ಅವರ ಮಗ ಜ್ಯೋತಿ ಬಾ ಫುಲೆ ಅವರಿಗೆ ಹದಿಮೂರು ವರ್ಷ ಇರುವಾಗ ವಿವಾಹ ಮಾಡುತ್ತಾರೆ. ಸಾವಿತ್ರಿಬಾಯಿ ಹುಟ್ಟಿದ ಊರಲ್ಲಿ ಶಿಕ್ಷಣದ ಪರಂಪರೆ ಇರಲಿಲ್ಲ. ಅನಕ್ಷರಸ್ಥಳಾದ ಸಾವಿತ್ರಿಯನ್ನು ಮದುವೆಯಾವ ಜ್ಯೋತಿಭಾ ಅಕ್ಷರ ಕಲಿಸಲು ಒರ್ವ ಶಿಕ್ಷಕನನ್ನು ನೇಮಿಸುತ್ತಾರೆ. ಆ ಶಿಕ್ಷಕರು ಕೇಶವ ಶಿವರಾಮ ಭಾವಳ್ಕರ ಎಂಬುವವರು. ಸಾವಿತ್ರಿಬಾಯಿಯವರಿಗೆ ಕಲಿಸಲು ಒಪ್ಪಿಕೊಂಡು ಅಕ್ಷರದ ಅಭ್ಯಾಸವನ್ನು ಮಾಡಿಸುತ್ತಾರೆ. ಹಾಗೆ ಸಮಯ ಸಿಕ್ಕಾಗ ಜ್ಯೋತಿಬಾಫುಲೆ ಅವರು  ಕೂಡಾ ಪಾಠ ಮಾಡಲು ಅಣಿಯಾಗುತ್ತಿದ್ದರು. ಇದರಿಂದ ಸಾವಿತ್ರಿಬಾಯಿ ಫುಲೆ ಅವರು ಸಂಗಾತಿ ಜ್ಯೋತಿಬಾಫುಲೆ ಅವರ ಹೆಗಲಿಗೆ ಹೆಗಲು ಕೊಟ್ಟು ಕ್ರಾಂತಿಯ ಜ್ಯೋತಿಯನ್ನು ಹಚ್ಚಲು ಕಾರಣವಾಯಿತು. ಸಮಾಜದ ಅನೇಕ ಮೌಢ್ಯಗಳನ್ನು ಶಿಕ್ಷಣದ ಅರಿವಿನ ಮೂಖಾಂತರ ಹೊರದೂಡುವ ಕೆಲಸವನ್ನು ದಂಪತಿಗಳು ಮಾಡಿದರು. ಅಕ್ಷರ ಕಲಿತ ಸಾವಿತ್ರಿಯವರು ಸುಮ್ಮನೆ ಕೂಡುವ ಜಾಯಮಾನದವಳಾಗಿರದೇ ತಮ್ಮ ಮನೆಯನ್ನೇ ಮೊಟ್ಟ ಮೊದಲಿಗೆ ಶಾಲೆಯನ್ನಾಗಿ ಮಾಡಿ ಗಂಡ ಹೆಂಡತಿ ಇಬ್ಬರು ಸೇರಿ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸುತ್ತಾರೆ. ಜ್ಯೋತಿಬಾ ಅವರಿಗೆ ಹಿಂದೂ ಸ್ತ್ರೀಯರಿಗೆ ವಿಮೋಚನೆ ಮಾಡುವದು ಪ್ರಥಮ ಆದ್ಯ ಕರ್ತವ್ಯವೆಂದು ತಿಳಿದು ಎಲ್ಲ ಹೆಣ್ಣು ಮಕ್ಕಳ ಹಾಗೂ ಶೂದ್ರರಿಗೆ ಶಿಕ್ಷಣವನ್ನು ಕೊಡಲು ನಿರ್ಧರಿಸುತ್ತಾರೆ. ಒಂದು ದಿನ ಜ್ಯೋತಿಬಾ ಫುಲೆ ಅವರು ಮಿಸ್ ಫೆರಾರ್ ಅವರು ನಗರದಲ್ಲಿ ಅಮೇರಿಕನ್ ಮಿಷನ್ ನಡೆಸುತ್ತಿದ್ದ ಹೆಣ್ಣು ಮಕ್ಕಳ ಶಾಲೆಗೆ ಭೇಟಿ ನೀಡುತ್ತಾರೆ. ಅಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ವ್ಯವಸ್ಥೆಯನ್ನು ನೋಡಿ ತಾವು ಕೂಡ ಹಾಗೆ ಶಿಕ್ಷಣವನ್ನು ಕೊಡಿಸಬೇಕು ಎಂದು ಅವರನ್ನು ನೋಡಿ ಬಹಳವಾಗಿ ಪ್ರಭಾವಿತರಾಗುತ್ತಾರೆ. ೧೮೪೮ ರಲ್ಲಿ ಕೆಳಜಾತಿಯ ಹೆಣ್ಣು ಮಕ್ಕಳ ಶಾಲೆಯನ್ನು ಪ್ರಾರಂಭಿಸುತ್ತಾರೆ. ಸಂಪ್ರದಾಯವಾದಿಗಳಿಂದ ಈ ಶಾಲೆ ಬಹುಬೇಗ ಮುಚ್ಚಿ ಹೋಗುತ್ತದೆ. ಮರಳಿ ಪ್ರಯತ್ನ ಮಾಡು ಎಂಬಂತೆ ಪುಣಿಯ ಬುಧವಾರ ಪೇಟೆಯಲ್ಲಿರುವ ಬಿಢೆ ಎಂಬುವರ ಮನೆಯಲ್ಲಿ ಶಾಲೆಯನ್ನು ತೆರೆಯುತ್ತಾರೆ. ಅಹಮ್ಮದ ನಗರದ ಮಿಸ್ ಫರಾರ್ ಫಾರ್ಮಲ್ ಸ್ಕೂಲಿಗೆ ಶಿಕ್ಷಕ ತರಬೇತಿ ಪಡೆದುಕೊಳ್ಳಲು ಕಳಿಸುತ್ತಾರೆ. ಅದೇ ಶಾಲೆಯಲ್ಲಿ ಫಾತಿಮಾ ಶೇಕ್ ಎಂಬಾಕೆಯೂ ಕೂಡಾ ಕಲಿಯುತ್ತಿರುತ್ತಾರೆ. ಸಾವಿತ್ರಿಬಾಯಿ ಫುಲೆ ಅವರ ಕನಸಿಗೆ ನೀರೆಯುವಂತೆ ಫಾತಿಮಾಳು ಕೂಡಾ ಶಿಕ್ಷಕ ವೃತ್ತಿಯನ್ನು ಸಾವಿತ್ರಿಬಾಯಿ ಅವರ ಜೊತೆಗೂಡಿ ಕೆಲಸದಲ್ಲಿ ತೊಡಗಿಸಿಕೊಂಡರು. ಸಾವಿತ್ರಿ ಬಾಯಿ ಫುಲೆ ಅವರ ಶಿಕ್ಷಕ ವೃತ್ತಿ ಇಲ್ಲಿಂದಲೇ ಪ್ರಾರಂಭವಾಗುತ್ತದೆ. ಶಾಲೆ ಪ್ರಾರಂಭಿಸಿದ ಮೊದಲಲ್ಲಿ ಎಂಟು ಜನ ಹೆಣ್ಣು ಮಕ್ಕಳು ಮಾತ್ರ ಪ್ರವೇಶವನ್ನು ಪಡೆದುಕೊಂಡಿದ್ದರು. ನಂತರದ ದಿನದಲ್ಲಿ ನಲವತ್ತೇಂಟು ಜನರಿಂದ ಶಾಲೆ ಕಂಗೊಳಿಸಹತ್ತಿತ್ತು. ಅದೇ ಶಾಲೆಗೆ ಸಾವಿತ್ರಿಬಾಯಿ ಫುಲೆಯವರನ್ನು ಮುಖ್ಯ ಶಿಕ್ಷಕಿಯನ್ನಾಗಿ ನೇಮಿಸಿಕೊಳ್ಳಲಾಯಿತು. ನಿರಂತರವಾಗಿ ಶಾಲೆಯ ಅಭಿವೃದ್ಧಿಗಾಗಿ ಹಗಲಿರುಳು ದುಡಿದು ಶೈಕಣಿಕವಾಣಿ ಉತ್ತಮ ಪ್ರಗತಿಯನ್ನು ಸಾಧಿಸಲು ಸಫಲತೆಯನ್ನು ಪಡೆಯಿತು. ಆ ಶಾಲೆಗೆ ಬರುವವರೆಲ್ಲರೂ ಕಡು ಬಡತನದಲ್ಲಿ ಇದ್ದ ಹೆಣ್ಣು ಮಕ್ಕಳು.ಶೂದ್ರರು ದಮನಿತರು. ಇತಂಹ ಪರಿಸ್ಥಿತಿಯಲ್ಲಿ ಶಾಲೆಗೆ ದುಡ್ಡು ಖರ್ಚು ಮಾಡುವದು ಹರಸಾಹಸವೇ ಆಗಿತ್ತು. ಅದನ್ನು ಅರಿತ ಫುಲೆ ದಂಪತಿಗಳು ಹೆಣ್ಣು ಮಕ್ಕಳಿಗೆ ಊಟ,ಸಮವಸ್ತç, ಆಟಕ್ಕೆ ಬೇಕಾದ ಸಾಮಿಗ್ರಿಗಳ ವ್ಯವಸ್ಥೆಯನ್ನು ಮಾಡಿದರು. ಅಲ್ಲದೆ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆದುಕೊಂಡುಬರಲು ಮತ್ತು ಮತ್ತೇ ಮರಳಿ ಮನೆಗೆ ಕಳಿಸಲು ಸರಿಯಾದ ವ್ಯವಸ್ಥೆಯನ್ನು ಮಾಡಿದರು. ಇದರಿಂದ ಅದೆಷ್ಟೋ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕಲಿಯಲು ಸಹಾಯವಾಯಿತು.  ಶೂದ್ರರು ಶಾಲೆಗೆ ಹೋಗಿ ಅಕ್ಷರ ಜ್ಞಾನ ಪಡೆದು ಕೊಳ್ಳುವುದನ್ನು ಸಹಿಸದ ಕೆಲ ಜಾತಿವಾದಿ ಪುಣಿಯ ಬ್ರಾಹ್ಮಣರು ವಿರೋಧಿಸಿದರು. ಜ್ಯೋತಿಬಾ ಫುಲೆ ಅವರಿಗೆ ಬೇದರಿಕೆಗಳನ್ನು ಹಾಕಿದರು ಆದರೆ ಇಂತಹ ಗೊಡ್ಡು ಬೇದರಿಕೆಗೆ ಹೆದರದೆ ತಮ್ಮ ಗುರಿ ಮತ್ತು ಉದ್ದೇಶವನ್ನು ಫುಲೆಯವರು ಬಿಡಲಿಲ್ಲ. ಒಂದು ಕ್ಷಣ ಇಂದಿನ ಪರಿಸ್ಥಿತಿಯಲ್ಲಿ ನಾವು ನೋಡಿದರೆ ಅಂದು ಫುಲೆ ಅವರು ತಾವು ಮಾಡುವ ಕೆಲಸದಿಂದ ಒಂದು ಹೆಜ್ಜೆ ಹಿಂದೆ ಸರಿದಿದ್ದರೆ ಎಲ್ಲ ಹೆಣ್ಣು ಮಕ್ಕಳ ಪರಿಸ್ಥಿತಿ ಏನಾಗುತ್ತಿತ್ತು ಎಂದು ವಿಚಾರಿಸಿದರೆ ಮೈಯೆಲ್ಲ ನಡುಕ ಹುಟ್ಟುತ್ತದೆ. ಪರಿಸ್ಥಿತಿ ತುಂಬಾ ಹದಗೆಟ್ಟು ಕಲಿಸಲು ಬಂದ ಶಿಕ್ಷಕರನ್ನು ಕೂಡಾ ಬೆದರಿಸಿ ಹೆದರಿಸಿ ಅವರನ್ನು ಶಾಲೆಗೆ ಬರದಂತೆ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಾವಿತ್ರಿಬಾಯಿಯವರನ್ನೇ ಮನೆಯಲ್ಲಿಯೇ ಪಾಠ ಮಾಡಲು ನೇಮಿಸಿಕೊಳ್ಳುತ್ತಾರೆ. ಇದನ್ನು ಅರಿತ ಇಡೀ ಪುಣಿ ತಲ್ಲಣಕ್ಕೆ ಇಡಾಗುತ್ತದೆ. ಮಹಿಳೆಯಾದವಳು ಮನೆಯಿಂದ ಹೊರಹೋಗಿ ಶಿಕ್ಷಕಿಯಾಗಿ ಕೆಲಸ ಮಾಡುವುದು ಮಹಾ ಅಪರಾಧವೆಂಬAತೆ ಸಂಪ್ರದಾಯಸ್ಥರೆಲ್ಲರೂ ವಿರೋದ ವ್ಯಕ್ತಪಡಿಸುತ್ತಾರೆ. ಇದು ರಾಷ್ಟಿçÃಯ ಗೌರವಕ್ಕೆ ಮಾಡಿದ ಅಪಮಾನವೆಂದು, ಇಂತಹ ಕೆಲಸ ಅಪವಿತ್ರವೆಂದು ಬ್ರಾಹ್ಮಣರು ಸಾವಿತ್ರಿಬಾಯಿಯವರು ಶಾಲೆಗೆ ಹೋಗುವಾಗ ಅವರ ಮೇಲೆ ಮಣ್ಣು, ಸೆಗಣಿಯನ್ನು ಎಸೆಯುತ್ತಾರೆ ದೃತಿಗೆಡದ ಸಾವಿತ್ರಿಬಾಯಿ ಅವರು “ದೇವರು ನಿಮಗೆ ಒಳ್ಳೆಯದು ಮಾಡಲಿ, ಅವನು ನಿಮ್ಮನ್ನು ಕ್ಷಮಿಸಲಿ, ನನ್ನ ಕರ್ತವ್ಯವನ್ನು ನಾನು ನಿರ್ವಹಿಸುತ್ತಿದ್ದೇನೆ” ಎಂದು ಸಾವಿತ್ರಿಬಾಯಿಯವರು ತಮ್ಮ ಮೇಲೆ ಸೆಗಣಿ ಎಸೆದವರಿಗೆ ಒಳ್ಳೆಯದಾಗಲಿ ಎಂದು ದೇವರನ್ನು ಪ್ರಾರ್ಥಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಸಾವಿತ್ರಿಬಾಯಿ ಅವರು ಶಾಲೆಗೆ ಹೋಗುವಾಗ ತಮ್ಮ ಕೈಯಲ್ಲಿ ಒಂದು ಸೀರೆಯನ್ನು ಹಿಡಿದುಕೊಂಡು ಹೋಗುತ್ತಿದ್ದರು ಶಾಲೆ ಪ್ರವೇಶಿಸಿದ ನಂತರ ಸೆಗÀಣಿಯ ಸೀರೆಯನ್ನು ಕಳಚಿ ಕೈಯಲ್ಲಿ ತಂದ ಮತ್ತೋಂದು ಸೀರೆಯನ್ನು ಊಡುತ್ತಿದ್ದರು. ಯಾವದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಪತಿಯ ಸಹಾಯದಿಂದ ಕೆಲಸದಲ್ಲಿ ನಿರತರಾಗುತ್ತಾರೆ. ಸಾವಿತ್ರಿಬಾಯಿಯವರು ಸ್ತ್ರೀಯರ ಸುಧಾರಣಿಗಾಗಿ ಜ್ಯೋತಿರಾವರ ಮಾರ್ಗದರ್ಶನದಲ್ಲಿ “ಮಹಿಳಾ ಸೇವಾ ಮಂಡಳ”ವನ್ನು ಸ್ಥಾಪನೆ ಮಾಡುತ್ತಾರೆ. ಪುಣಿಯ ಕಲೆಕ್ಟರ್ ಅವರ ಪತ್ನಿ ಇ.ಸಿ.ಜೋನ್ಸ ಎಂಬುವರು ಮಹಿಳಾ ಸೇವಾ ಮಂಡಳ ಸಂಸ್ಥೆಯ ಅಧ್ಯಕ್ಷರಾಗುತ್ತಾರೆ. ಮಹಿಳೆಯರನ್ನೆಲ್ಲಾ ಒಟ್ಟು ಗೂಡಿಸಲು ೧೮೫೨ ರಲ್ಲಿ ದೊಡ್ಡ ಪ್ರಮಾಣದ ಎಳ್ಳುಬೆಲ್ಲ ಹಂಚುವ ಕಾರ್ಯಕ್ರಮ ಹಮ್ಮಿಕೊಂಡು ಎಲ್ಲ ಹೆಣ್ಣು ಮಕ್ಕಳಿಗೆ ಕುಂಕುಮವನ್ನು ವಿತರಿಸಿ ಅವರಿಗೆಲ್ಲ ಊಡಿಯನ್ನು ತುಂಬುತ್ತಾರೆ. ೧೮೭೧ ರಲ್ಲಿ ಸ್ತ್ರೀ ವಿಚಾರವತಿ’ ಸಭಾ ಸ್ಥಾಪನೆ ಮಾಡುತ್ತಾರೆ. ಆ ಕಾಲದಲ್ಲಿ ಬ್ರಾಹ್ಮಣ ಸ್ತ್ರೀಯರಿಗೆ ಹೆಚ್ಚಿನ ತೊಂದರೆ ಇತ್ತು. ಅದರಲ್ಲಿ ವಿಧವೆಯರಾದರೆ ಅನೇಕ ಬ್ರಾಹ್ಮಣ ಮನೆತನದ ಮಾವ, ಮೈದುನ ಮುಂತಾದವರು ಅವರ ಮೇಲೆ ಬಲಾತ್ಕಾರ ಮಾಡುತ್ತಿದ್ದರು. ಲೈಂಗಿಕ ಶೋಷಣೆ ಮಾಡುತ್ತಿದ್ದರು. ಇದರ ಪರಿಣಾಮವಾಗಿ ಅವರಿಗೆ ಮಕ್ಕಳಾದರೆ ‘ಬಾಲ ಹತ್ಯೆ’ ಮಾಡುತ್ತಿದ್ದರು. ಇಲ್ಲವೇ ಗರ್ಭವತಿಯಾದರೆ ಸ್ವತಃ ಅವರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಇವೆಲ್ಲವನ್ನೂ ತಡೆಗಟ್ಟುವ ಉದ್ದೇಶದಿಂದ ಜ್ಯೋತಿಭಾರವರು ‘ಬಾಲಹತ್ಯಾ ಪ್ರತಿಬಂಧಕ ಗೃಹ’ ಸ್ಥಾಪಿಸಿದರು. ತರುಣ ಬ್ರಾಹ್ಮಣ ವಿಧವೆಯರಿಗೆ ಈ ಗೃಹ ದೊಡ್ಡ ಆಧಾರವಾಗಿತ್ತು. ೧೮೬೩ರಲ್ಲಿ ಸ್ವಂತ ಮನೆಯಲ್ಲಿ ಸ್ಥಾಪಿಸಿದ ಅನಾಥ ಬಾಲಶ್ರಮವನ್ನು ಸಾವಿತ್ರಿಯವರು ೩೫ ಜನರಿಗೆ ಬಾಣಂತನವನ್ನು ಮಾಡಿದರು. ಸವರ್ಣೀಯ ವಿಧವೆಯರು ಅವರ ಸೇವೆ ಮಾಡುವಾಗ ಸಾವಿತ್ರಿಭಾಯಿಯವರಿಗೆ ಅದು ಎಂದು ಕೀಳಾಗಿ ತೋರಲಿಲ್ಲ. ೧೮೭೩ರಲ್ಲಿ ಕಾಶೀಬಾಯಿ ಎಂಬ ಬ್ರಾಹ್ಮಣ ವಿಧವೆಯ ಇಂತಹದೇ ಸಂಬಂಧದಿಂದ ಹುಟ್ಟಿದ ಮಗನನ್ನು ಜ್ಯೋತಿಬಾಪುಲೆ ಮತ್ತು ಸಾವಿತ್ರಿಬಾಯಿಪುಲೆ ದತ್ತು ತೆಗೆದುಕೊಳ್ಳುತ್ತಾರೆ. ಆ ಮಗುವಿಗೆ ಯಶವಂತ ಅಂತಾ ನಾಮಕರಣ ಮಾಡುತ್ತಾರೆ. ಅನನ್ನು ಎಂ.ಬಿ.ಬಿ.ಎಸ್ ಓದಿಸಿ ಡಾಕ್ಟರರನ್ನಾಗಿ ಮಾಡುತ್ತಾರೆ.ಹೀಗೆ ಮಹಿಳೆಯರಿಗಾಗಿ ವಿಧವೆಯರ ಪುನರ್ವಸತಿ, ವಿಧವಾ ಅನಾಥಾಶ್ರಮವನ್ನು ಕೂಡಾ ಸ್ಥಾಪಿಸುತ್ತಾರೆ. ಪುಲೆಯವರು ಸ್ಥಾಪಿಸಿದ್ದ ವಿಧವಾ ಅನಾಥಾಲಯವು ದೇಶದಲ್ಲಿಯೇ ಸ್ಥಾಪಿಸಿದ ಪ್ರಥಮ ಸಾಮಾಜಿಕ ಸಂಸ್ಥೆಯಾಗಿದ್ದಿತು. ೧೮೬೮ರಲ್ಲಿ ತಮ್ಮ ‘ನೀರಿನಬಾವಿ’ಯನ್ನು ಕೆಳಜಾತಿಗಳಿಗೆ ಮುಕ್ತಗೊಳಿಸಿ ಬಿಡುತ್ತಾರೆ. ಇದರಿಂದ ಎಷ್ಟೋ ಕೆಳವರ್ಗದವರಿಗೆ ನೀರು ಸಿಕ್ಕಂತಾಗುತ್ತದೆ. ಶಿಕ್ಷಣ ನೀಡುವ ದಾಹವು ಪುಲೆಯವರು ವಯಸ್ಕ ರೈತರು  ಮತ್ತು ದುಡಿಯುವವರಿಗಾಗಿ ರಾತ್ರಿ ಶಾಲೆಯನ್ನು ಪ್ರಾರಂಭಿಸುವAತೆ ಮಾಡಿತು. ತಮ್ಮ ಮನೆಯಲ್ಲಿ ರಾತ್ರಿ ಶಾಲೆಯನ್ನು ಪ್ರಾರಂಭಿಸಿ ಪ್ರತಿದಿವಸ ೨ ಗಂಟೆಗಳ ಕಾಲ ತಾವು ಮತ್ತು ತಮ್ಮ ಪತ್ನಿ ಸಾವಿತ್ರಿಬಾಯಿ ಪುಲೆಯವರು ‘ಅಶಿಕ್ಷಿತ ವಯಸ್ಕ, ರೈತರರಿಗೆ ಶಿಕ್ಷಣವನ್ನು ನೀಡುತ್ತಿದ್ದರು. ನಿರಂತರ ಹೋರಾಟದಿಂದ ೭೩ ವರ್ಷದ ಮಹಾತ್ಮ ಜ್ಯೋತಿಬಾಪುಲೆಯವರು ಧೀರ್ಘ ಅನಾರೋಗ್ಯದಿಂದ ೧೮೯೦ರಲ್ಲಿ ನವೆಂಬರ್ ೨೮ರಂದು ನಿಧನರಾದರು. ಮಕ್ಕಳಾಗದ ದಂಪತಿಗಳಾಗಿದ್ದರಿAದ ದತ್ತು ಪುತ್ರ ಯಶವಂತನಿಗೆ ಸಂಸ್ಕಾರ ಮಾಡಲು ಕುಟುಂಬದವರು ಒಪ್ಪದೇ ಇದ್ದಾಗ ಸ್ವತಃ ಕೈಯಲ್ಲಿ ದಿವಟಿಯನ್ನು ಹಿಡಿದು ಜ್ಯೋತಿಯವರ ಅಂತ್ಯ ಸಂಸ್ಕಾರ ಮಾಡಿದ ದಿಟ್ಟ ಮಹಿಳೆ ಸಾವಿತ್ರಿಬಾಯಿ ಪುಲೆ. ಹಾಗೇ ಅವರು ತಮ್ಮ ಇಡೀ ಜೀವನದ ಉದ್ದಕ್ಕೂ ಹೆಣ್ಣುಮಕ್ಕಳಿಗಾಗಿ ಮತ್ತು ಅಶ್ಪೃಶ್ಯರಿಗಾಗಿ ಶಾಲೆ ಪ್ರಾರಂಭಿಸಿದರು. ಬಾಲಹತ್ಯಾ ಪ್ರತಿಬಂಧಕ ವಿಧವಾ ಅನಾಥಾಶ್ರಮ, ಕೂಲಿಕಾರ ರೈತರಿಗಾಗಿ ರಾತ್ರಿಶಾಲೆ, ಬಡವರಿಗಾಗಿ ಅನ್ನಛತ್ರಗಳನ್ನು ತೆರೆದರು. ಬ್ರಾಹ್ಮಣ ವಿಧವೆಯರ ತಲೆಬೋಳಿಸುವುದನ್ನು ವಿರೋಧಿಸಿದರು. ದೇವದಾಸಿ ಪದ್ಧತಿ ನಿರ್ಮೂಲನೆ ಮಾಡುವ ಪ್ರಯತ್ನದಲ್ಲಿ ತೋಡಗಿದರು. ಹೀಗೆ ಎಲ್ಲ ರೀತಿಯ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಮೊದಲ ಮಹಿಳೆ ಸಾವಿತ್ರಿಬಾಫುಲೆ ಎಂದರೆ ತಪ್ಪಾಗಲಾರದು. ಒಟ್ಟಾರೆಯಾಗಿ ಸಮಾಜದ ಎಲ್ಲ ಅನಿಷ್ಟಗಳಿಗೂ ಕಾರಣವಾದ ಜಾತಿಪದ್ಧತಿ ಅಳಿಯಬೇಕೆಂದು ಜಾಲ್ತಿಯಲ್ಲಿದ್ದ ಬಹುಪಾಲು ವ್ಯವಸ್ಥೆ ಆಚರಣೆ ನಂಬಿಕೆಗಳಿಗೆ ಸವಾಲೆಸೆದರು. ಶಿಕ್ಷಣ ಎಲ್ಲರ ಹಕ್ಕು ಎಂದು ಸಾರಿ ಶಾಲೆಯನ್ನು ತೆರೆದರು ಪುರೋಹಿತರಿಲ್ಲದೆ ಮದುವೆ ಮಾಡಿಸಿದರು. ಬಹುಪತ್ನಿತ್ವವನ್ನು ವಿರೋಧಿಸಿದರು. ವಿಧವೆಯರ ಮಾನವ ಹಕ್ಕುಗಳ ಎತ್ತಿ ಹಿಡಿದು ಮರು ವಿವಾಹವನ್ನು ಪ್ರತಿಪಾದಿಸಿದರು. ಸತ್ಯಶೋಧಕ ಸಮಾಜ ಕಟ್ಟಿದರು. ತಮಗೆ ತಿಳಿದಂತೆ ಕವಿತೆಗಳನ್ನು ಬರೆದರು. ಎಲ್ಲ ಧರ್ಮಗಳ ಶಾಸ್ತç-ಪುರಾಣ-ಗ್ರಂಥಗಳ ನಿರಾಕರಿಸಿ ಸಾರ್ವಜನಿಕ ಸತ್ಯ ಧರ್ಮ ಪ್ರತಿಪಾದಿಸಿ ಹೊಸ ಹೊಸ ಗ್ರಂಥಗಳನ್ನು ರಚಿಸಿ ಓದುಗರ ಮನಸ್ಸನ್ನು ಸೋರೆಗೊಂಡ ಮಹಾನ್ ಕ್ರಾಂತಿಕಾರಿ ತಾಯಿಯಾಗಿ ನಮಗೆಲ್ಲ ಮಾರ್ಗದಾತೆಯಾದವರು. ಇಂತಹ ಮಾತೆ ಸಾವಿತ್ರಿಬಾಯಿಯವರ ಕಲಿಸಿದ ಪಾಠದ ಪರಿಣಾಮವಾಗಿ ಹದಿನಾಲ್ಕು ವರ್ಷದ ‘ಮುಕ್ತಾ’ ಎಂಬ ಹುಡಗಿ ೧೫ನೇ ಫೆಬ್ರುವರಿ ೧೮೫೫ ರಿಂದ ೯ ಮಾರ್ಚ ೧೮೫೫ ರ ಜ್ಞಾನೋದಯ ಎಂಬ ಪತ್ರಿಕೆಯ ಅಂಕಣದಲ್ಲಿ ‘ಹೊಲೆಯ ಮಾದಿಗರ ದುಖಃಗಳು’ ಎಂಬ ಪ್ರಬಂಧ ಪ್ರಕಟವಾಗುತ್ತದೆ. ಇದೆಲ್ಲದರ ಪರಿಣಾಮವಾಗಿ  ಅವರು ಕಟ್ಟಿದ ಕನಸು ನನಸಾಗಲು ಬಹಳ ಸಮಯ ಹಿಡಿಯುವದಿಲ್ಲ. ೧೮೪೮ ರಿಂದ ೧೮೫೨ರ ಅವಧಿಗೆ ೧೮ ಶಾಲೆಗಳನ್ನು ತೆರೆಯುತ್ತಾರೆ. ಇದರಿಂದ ನಮಗೆಲ್ಲಾ ತಿಳಿದು ಬರುವ

ಅಕ್ಷರದ ಅವ್ವ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ Read Post »

ಆರೋಗ್ಯ, ಇತರೆ

ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ?

ಲೇಖನ ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ? ಆಶಾ ಸಿದ್ದಲಿಂಗಯ್ಯ ತರಕಾರಿ ಎಂಬುದು ಸಾಮಾನ್ಯವಾಗಿ ಹಣ್ಣುಗಳನ್ನು ಹೊರತಾಗಿ ಅಹಾರವಾಗಿ ಉಪಯೋಗಿಸಲಾಗುವ ಸಸ್ಯಗಳ ಭಾಗಗಳು. ಮಳೆಗಾಲದ ತರಕಾರಿಗಳು : ಟೊಮೊಟೊ, ಬೆಂಡೆ, ಬದನೆ, ಹುರುಳಿ, ತಿಂಗಳ ಹುರಳಿ, ಗೆಣಸು, ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, ಹಾಗಲ, ಮೂಲಂಗಿ ಮುಂತಾದುವುಗಳು. ಚಳಿಗಾಲದ ತರಕಾರಿಗಳು: ಕ್ಯಾಬೇಜ್, ಹೂವುಕೋಸು, ಗಜ್ಜರಿ, ಬಟಾಣಿ, ಈರುಳ್ಳಿ, ಆಲೂಗಡ್ಡೆ, ಮೂಲಂಗಿ, ಟರ್ನಿಪ್, ಸೊಪ್ಪು ತರಕಾರಿ ಮುಂತಾದುವುಗಳು. ಬೇಸಿಗೆ ತರಕಾರಿಗಳು : ಸೌತೇ, ಕಲ್ಲಂಗಡಿ, ಕರಬೂಜ, ಕುಂಬಳ, ಬೆಂಡೆ, ಬದನೆ ಮುಂತಾದವುಗಳು. ನಮ್ಮ ದೇಹವನ್ನು ಸಮಸ್ತ ರೋಗರುಜಿನಗಳಿ೦ದ ದೂರವಿರಿಸಲು ನಾವು ಸೇವಿಸುವ ಆಹಾರವು ನಮ್ಮ ಹಸಿವನ್ನು ಹಿಂಗಿಸುವುದರ ಜೊತೆಗೆ ಅದು ಔಷಧದಂತೆ ಕಾರ್ಯನಿರ್ವಹಿಸುವಂತಿರಬೇಕು. ಆರೋಗ್ಯದಾಯಕ ಜೀವನಕ್ಕಾಗಿ ಆಹಾರಪದ್ಧತಿಯಲ್ಲಿ ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಸೇರಿಸಿಕೊಳ್ಳುವುದು ತುಂಬಾ ಮುಖ್ಯ. ಸೊಪ್ಪು,ತರಕಾರಿಗಳ ಪ್ರಯೋಜನಗಳು ನಾರಿನಾಂಶದಿಂದ ಸಮೃದ್ಧವಾಗಿವೆ ಈ ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ನಾರಿನ೦ಶವು ಯಥೇಚ್ಚವಾಗಿರುವುದರಿಂದ,  ಜೀರ್ಣಾಂಗವ್ಯೂಹ ಅತ್ಯುತ್ತಮವಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವಲ್ಲಿ ಚಮತ್ಕಾರವನ್ನೇ ಮಾಡಬಲ್ಲವು. ಮಲಬದ್ಧತೆಯ ಉಪಟಳವನ್ನು ದೂರವಿರಿಸಲು ನಾವು ಸೇವಿಸುವ ಆಹಾರದಲ್ಲಿ ನಾರಿನಂಶವು ಸಾಕಷ್ಟಿರುವುದು ಅತ್ಯಗತ್ಯ. ಮಲವಿಸರ್ಜನೆಯು ಸರಾಗವಾಗಿ ಆಗುವಂತಾಗಲು, ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಸೇವಿಸಿರಿ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತವೆ ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿರುವ  ನಾರಿನಂಶವು  ಶರೀರದ ರಕ್ತದೊತ್ತಡ ಹಾಗೂ ಕೊಲೆಸ್ಟೆರಾಲ್ ನ ಮಟ್ಟವನ್ನು ಸರಿಪಡಿಸಲು ನೆರವಾಗುತ್ತದೆ. ತೂಕ ಕಡಿಮೆ ಆಗಲೂ ಸಹಕಾರಿ ತೂಕನಷ್ಟವನ್ನು ಹೊಂದುವುದಕ್ಕೆ ಪೂರಕವಾಗಿರುವ ಆಹಾರಕ್ರಮಗಳ ರೂಪದಲ್ಲಿ ಸೊಪ್ಪುಯುಕ್ತ ಹಸಿರು ತರಕಾರಿಗಳು ಚೆನ್ನಾಗಿ ಕೆಲಸ ಮಾಡುತ್ತವೆ. ಏಕೆಂದರೆ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿದ್ದು, ಕಡಿಮೆ ಮಟ್ಟದಲ್ಲಿ ಕ್ಯಾಲರಿಗಳನ್ನು ಹೊಂದಿವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಸೊಪ್ಪುಯುಕ್ತ ಹಸಿರು ತರಕಾರಿಗಳು ನಾನಾ ಬಗೆಯ ವಿಟಮಿನ್ ಗಳು ಹಾಗೂ ಖನಿಜಾಂಶಗಳನ್ನು ಒಳಗೊಂಡಿವೆ. ಇವುಗಳ ಜೊತೆಗೆ,ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ರೋಗಗಳ ವಿರುದ್ಧ ಸೆಣೆಸಾಡುವ ಕೆಲವು ಮಾಧ್ಯಮಗಳಿದ್ದು, ಅವು ಶರೀರವನ್ನು ನಾನಾ ಬಗೆಯ ರೋಗರುಜಿನಗಳಿ೦ದ ರಕ್ಷಿಸುತ್ತವೆ. ಮಧುಮೇಹ ಸೊಪ್ಪುಯುಕ್ತ ಹಸಿರು ತರಕಾರಿಗಳು ಮಧುಮೇಹದ ಅಪಾಯವನ್ನು ತಡೆಗಟ್ಟುತ್ತವೆ ಹಾಗೂ ಜೊತೆಗೆ ನಿಮ್ಮ ಶರೀರವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಕೂಡ ನೆರವಾಗುತ್ತವೆ. ತ್ವಚೆಯ ಆರೋಗ್ಯಕ್ಕಾಗಿ ಸೊಪ್ಪುಯುಕ್ತ ಹಸಿರು ತರಕಾರಿಗಳು ನಿಮ್ಮ ತ್ವಚೆಯ ಹಾಗೂ ಕೇಶರಾಶಿಯ ಆರೋಗ್ಯಕ್ಕೂ ಸಹ ಒಳ್ಳೆಯದು. ಪ್ರತಿದಿನವೂ ಸೊಪ್ಪುಯುಕ್ತ ಹಸಿರು ತರಕಾರಿಗಳ ಸೇವನೆಯಿಂದ ನೀವು ಆರೋಗ್ಯಕರವಾದ ತ್ವಚೆಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಸೊಪ್ಪುಯುಕ್ತ ಹಸಿರು ತರಕಾರಿಗಳನ್ನು ಬಳಸಿಕೊಂಡು ತಯಾರಿಸಿದ ಸಲಾಡ್ ಗಳ ಸೇವನೆಯಿಂದಾಗುವ ಹಲವಾರು ಪ್ರಯೋಜನಗಳ ಪೈಕಿ ಇದೂ ಸಹ ಒಂದು. ಕ್ಯಾಲ್ಸಿಯಂನಿಂದ ಸಮೃದ್ಧವಾಗಿವೆ ಕೆಲವೊ೦ದು ಸೊಪ್ಪುಯುಕ್ತ ಹಸಿರು ತರಕಾರಿಗಳು ಕ್ಯಾಲ್ಸಿಯಂನಿಂದಲೂ ಸಂಪನ್ನವಾಗಿವೆ. ನಮಗೆಲ್ಲಾ ತಿಳಿದಿರುವಂತೆ ಮೂಳೆಗಳು ಹಾಗೂ ಹಲ್ಲುಗಳನ್ನು ಆರೋಗ್ಯಕರವಾಗಿಟ್ಟುಕೊಳ್ಳಲು ಕ್ಯಾಲ್ಷಿಯಂ ಆತ್ಯಂತ ಅವಶ್ಯಕ ಮೂಲವಸ್ತುವಾಗಿದೆ. ಕಣ್ಣುಗಳನ್ನು ಬಾಧಿಸುವ ರೋಗಗಳನ್ನು ಹತ್ತಿಕ್ಕುತ್ತವೆ ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿರುವ ಕೆಲಬಗೆಯ ಆಂಟಿ ಆಕ್ಸಿಡೆಂಟ್ ಗಳು ಕಣ್ಣಿನ ಪೊರೆಗಳಂತಹ, ನೇತ್ರ ಸಂಬಂಧೀ ರೋಗಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕೀಲುಗಳಿಗೆ ಸಂಬಂಧಿಸಿದ ರೋಗಗಳನ್ನು ತಡೆಗಟ್ಟುತ್ತವೆ ಆರ್ಥ್ರೈಟಿಸ್ನಂತಹಾ ಕೀಲುಗಳಿಗೆ ಸಂಬಂಧಿಸಿದ ಕೆಲವೊಂದು ರೋಗಗಳನ್ನು ತಡೆಗಟ್ಟುವಲ್ಲಿಯೂ ಸಹ ತರಕಾರಿಗಳು ಪ್ರಯೋಜನಕಾರಿಯಾಗಿವೆ. ಸೊಪ್ಪುಯುಕ್ತ ಹಸಿರು ತರಕಾರಿಗಳ ಮತ್ತೊಂದು ಪ್ರಯೋಜನವೇನೆಂದರೆ, ಅವು ಹೃದ್ರೋಗಗಳ ಅಪಾಯವನ್ನೂ ಸಹ ತಡೆಗಟ್ಟಬಲ್ಲವು. ತರಕಾರಿಗಳು ತಾರುಣ್ಯಭರಿತರನ್ನಾಗಿರಿಸುತ್ತವೆ. ಸೊಪ್ಪುಯುಕ್ತ ಹಸಿರು ತರಕಾರಿಗಳಲ್ಲಿ ಕೆಲವೊಂದು ಬಯೋ ಪ್ರತಿಬಂಧಕ ಕಾರಕಗಳಿದ್ದು ಅವು ಆರೋಗ್ಯಕರವಾದ ತ್ವಚೆ ಹಾಗೂ ಮೂಳೆಗಳನ್ನು ಪಡೆಯುವಲ್ಲಿ ಸಹಕಾರಿಯಾಗಿರುತ್ತವೆ.  ತರಕಾರಿಗಳ ಒಂದು ಅತ್ಯುತ್ತಮವಾದ ಗುಣವಿಶೇಷವೇನೆಂದರೆ, ಅವು ಟನ್ನುಗಟ್ಟಲೆ ಕ್ಯಾಲರಿಗಳನ್ನು ಒಳಗೊಂಡಿರಲಾರವು. ಹೀಗಾಗಿ,  ಸೊಪ್ಪು, ತರಕಾರಿಗಳ ಪ್ರಮಾಣದ ಕುರಿತಾಗಿ ಚಿಂತಿಸುವ ಅವಶ್ಯಕತೆ ಇಲ್ಲದೇ ಅವುಗಳನ್ನು ಧಾರಾಳವಾಗಿ ಸೇವಿಸಬಹುದು.

ಯಾವ ಕಾಲಕ್ಕೆ ಯಾವ ತರಕಾರಿ ಸೂಕ್ತ ? Read Post »

ಇತರೆ, ಲಹರಿ

ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್

ಕವಿತೆ ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್ ಸ್ಮಿತಾ ಭಟ್ ವರ್ಷವೊಂದು ಗತಿಸಿ ಹೋಯಿತಲ್ಲ, ಎಂದು ಅಂತರ್ಮುಖಿಯಾಗಿ ಯೋಚಿಸುತ್ತಾ ಖಾಲಿ ಗೋಡೆಯತ್ತ ತದೇಕಚಿತ್ತದಿಂದ ನೋಡುತ್ತಿದ್ದೆ. ತನ್ನ ಅಸ್ತಿತ್ವವನ್ನು ನೆನಪಿಸುವಂತೆ, ತೂಗುಹಾಕಿದ ಕ್ಯಾಲೆಂಡರ್ ಗಾಳಿಗೆ ಹಾರುತ್ತಾ ಪರ ಪರ ಸದ್ದು ಮಾಡಿತು ಅದು ಏನನ್ನೋ ಹೇಳುತ್ತಿರುವಂತೆ ಭಾಸವಾಗುತ್ತಿತ್ತು. ಬೀಸುವ ಗಾಳಿಗೆ ಉದುರಿ ಬಿದ್ದಾವು ಎಂದು,ಬರುತ್ತಿದ್ದ ಗಾಳಿಯನ್ನು ತಡೆಯಲು ಎದ್ದು ಕಿಟಕಿಯ ಕದವನ್ನು ಎಳೆದೆ. ಆಗಲೂ ಕ್ಯಾಲೆಂಡರ್ ನದು ಮತ್ತದೇ ಸದ್ದು. ಆಗಲೇ ನಾನು ಗಮನಿಸಿದ್ದು ನವೆಂಬರ್ ತಿಂಗಳಿನಲ್ಲಿಯೇ ನಿಂತು ತನ್ನ ದಯನೀಯ ಸ್ಥಿತಿಯನ್ನು ಹೇಳುತ್ತಿರುವಂತೆ ಭಾಸವಾಯಿತು. ಈ ನಡುವೆ ನಾನು ಗಮನಿಸಿಯೇ ಇರಲಿಲ್ಲ. ಭಾವದೊಳಗೆ ನಡೆದ ನೋವಿನ ಸಂಗತಿಗಳು ಸಂಪೂರ್ಣ ದಿನಚರಿಯನ್ನು ಅದಲು-ಬದಲು ಮಾಡಿತ್ತು. ಕೆಟ್ಟ ಗಡಿಯಾರ ಮತ್ತು ತಿರುಗಿಸಿ ಇರದ ಕ್ಯಾಲೆಂಡರ್ ಮನೆಯ ಗೋಡೆಯ ಮೇಲೆ ಯಾವತ್ತೂ ಇರಬಾರದು. ಅದು ಇದೆ ಅಂತಾದರೆ ಆ ಮನೆಯ ದಿನಚರಿ ಸರಿ ಇಲ್ಲ ಅಂತಲೇ ಅರ್ಥ. ಎನ್ನುವ ಅಪ್ಪನ ಮಾತು ತಕ್ಷಣ ನೆನಪಾಯಿತು. ನನ್ನ ಭಾವ ಕೂಡಾ ಅದಕ್ಕೆ ಪುಷ್ಟಿ ಕೊಡುತ್ತಿತ್ತು. ಎದ್ದು ಹೋಗಿ ಕ್ಯಾಲೆಂಡರನ್ನು ತಿರುವಿಹಾಕಿದೆ. ಇನ್ನು ಮೂರೇ ದಿನ ಇರುವುದು ಈ ಕ್ಯಾಲೆಂಡರಿನ ಅಸ್ತಿತ್ವ ಮುಗಿಯಲು. ಅಯ್ಯೋ ಪಾಪ ಅನ್ನಿಸಿ ಕ್ಯಾಲೆಂಡರ್ ಅನ್ನು ಸವರುತ್ತಾ ಕುಳಿತೆ. ಎಷ್ಟೊಂದು ನೋವುಗಳನ್ನು ಹೊತ್ತು ತಂದಿದ್ದೆ ನೀನು.ಸಾವು-ನೋವು,ರೋಗ,ಪ್ರವಾಹ, ಒಂದಾ ಎರಡಾ, ಮನುಕುಲಕ್ಕೆ ಅತಿ ತ್ರಾಸದಾಯಕವಾದ ವರ್ಷ ಅನ್ನಬಹುದು. ನೀನು ಕೊಟ್ಟ ನೋವಿನಿಂದ ನಿನ್ನ ಕಾಲ ಇತಿಹಾಸದಲ್ಲಿ ಕಹಿ ಭಾವದಿಂದ ನೆನಪಿರುವಂತಹ ವರ್ಷವಾಗುತ್ತದೆ ಅಂದೆ. ಅದೇ ಕ್ಷಣದಲ್ಲಿ ನನ್ನ ತಪ್ಪು ಮಾತಿನ ಅರಿವಾಯಿತು ನಡೆದ ಘಟನೆಗಳಿಗೆ ಕ್ಯಾಲೆಂಡರನ್ನು ದೂಷಿಸುತ್ತಿದ್ದೇನಲ್ಲ ಎಂದು. ನಡೆದ ತಪ್ಪುಗಳಿಗೆ ಯಾರನ್ನಾದರೂ ಹೊಣೆ ಮಾಡುವುದು ಮನುಷ್ಯನ ಸಹಜ ಗುಣ ಅನ್ನಿಸಿ ನಗು ಬಂತು.ಮತ್ತಲ್ಲೇ ತೂಗುಹಾಕಿ ಇನ್ನೆರಡು ದಿನ ಆರಾಮವಾಗಿ ಇರು ಕಾಲ ಎಲ್ಲರದ್ದು ಮುಗಿಯುತ್ತದೆ. ಹಾಗೆ ನಿನ್ನದೂ.. ಆದರೆ ಎಷ್ಟು ವಿಚಿತ್ರ ನೋಡು ನೀನು ಕಾಲ ಮುಗಿದ ಮೇಲೆ ಮತ್ತೆ ಇದೇ ರೂಪದಲ್ಲಿ ಬರುತ್ತೀಯ. ಯಾವ ವ್ಯತ್ಯಾಸವೂ ಇಲ್ಲದೇ. ಅದೇ ದಿನಾಂಕ, ಅದೇ ವಾರ, ಅದೇ ತಿಂಗಳು, ಅದೇ ಹಬ್ಬ ಹರಿದಿನಗಳನ್ನು ಹೊತ್ತು. ಕೇವಲ ಒಂದು ಸಂಖ್ಯೆಯನ್ನು ಬದಲಿಸಿಕೊಂಡು.ನಿನಗದು ಕರಾರುವಾಕ್ಕಾಗಿ ಗೊತ್ತಿದೆ. ಯಾರ ಕೈ ಚಳಕದೊಳಗೆ ಸಿಕ್ಕು ಹಣಿಸಿಕೊಂಡರೂ, ನಿನ್ನ ನಿಯಮಕ್ಕೇ ಬಂದು ನಿನಗೆ ರೂಪ ಕೊಡುತ್ತಾರೆ. ಮನುಷ್ಯನಂತೆ ಬೇರೆ ಬೇರೆ ದೇಹಗಳಿಗೆ ಹೊಕ್ಕು ಸಂಭ್ರಮಿಸುವ ನೋಯುವ ನಿಯಮವೂ ಇಲ್ಲ. ಆತ್ಮವು ಮಾತ್ಮತ್ತೆ ಅದದೇ ದೇಹದೊಳಗೆ ಹೊಕ್ಕು ನಗುವದೆಷ್ಟು ಸೋಜಿಗ ಅನ್ನಿಸುತ್ತದೆ. ಪ್ರತಿ ಮನೆಯಲ್ಲಿ ಅತ್ಯಂತ ಗೌರವದ ಸ್ಥಾನವೂ, ಮೂಲೆಗುಂಪು ಮಾಡುವ ನೋವು ಅನುಭವಿಸುವೆ.ಹೆಚ್ಚು ಕಡಿಮೆ ಮನುಷ್ಯನದು ಹಾಗೆ ಅಲ್ವಾ?ನಿನ್ನ ಹೊಸ ಹುಟ್ಟನ್ನು ತಂದು ಸಂಭ್ರಮಿಸುತ್ತಾರೆ, ಮತ್ತೆ ನಿನ್ನ ಎಸೆಯುತ್ತಾರೆ.ಬಹುಶಹ ಕಾಲಚಕ್ರ ಎನ್ನುವುದು ಇದೇ ಇರಬೇಕು.ಎಲ್ಲಿಂದಲೋ ಬಂದು, ಹೊಸತೊಂದು ಏನೂ ಸೇರಿಕೊಳ್ಳುವುದಿಲ್ಲ.ಇದೇ ಪರಿಧಿಯೊಳಗೆ ರೂಪಾಂತರವಾಗುತ್ತ ನಾವು ನೋಡುವ ರೀತಿಯಲ್ಲಿ ನಮಗೆ ಗೋಚರಿಸುತ್ತದೆ.ಹಾಗೆ ನಮ್ಮ ಸಂತೋಷ ಕೂಡ ಹೊರಗೆಲ್ಲೂ ಇರುವುದಿಲ್ಲ. ಅದು ನಮ್ಮೊಳಗೇ ಇರುತ್ತದೆ. ಅದನ್ನು ನಾವು ಗ್ರಹಿಸಬೇಕು ಮತ್ತದಕ್ಕೆ ಪುನಹಃ ಪುನಹಃ ಹೊಸ ರೂಪವನ್ನು ಕೊಡಬೇಕು ಅಷ್ಟೇ. ಕ್ಯಾಲೆಂಡರ್ ನಂತೆ.ಕಾಲದ ಜೊತೆಗೆ ಸಾಗುವಾಗ ನೀನೊಂದು ಅದ್ಭುತ ಸಂಗತಿ ಮತ್ತು ಸಂಗಾತಿಯಂತೂ ಹೌದು. ನಿನ್ನ ಬೀಳ್ಕೊಡುತ್ತಿಲ್ಲ ಮತ್ತೆ ಸ್ವಾಗತಿಸುತ್ತಿದ್ದೇನೆ ಎಂದೆ. ಸದ್ದು ಮಾಡುವುದು ನಿಲ್ಲಿಸಿ ನಕ್ಕಂತೆ ಭಾಸವಾಯಿತು ***********************************

ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್ Read Post »

You cannot copy content of this page

Scroll to Top