ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ನೀಲಿ ನಕ್ಷತ್ರದ ಬೆಡಗಿನ ಪದ್ಯಗಳು ವಿ.ನಿಶಾ ಗೋಪಿನಾಥ್ ವಿನಿಶಾ ಗೋಪಿನಾಥ್ ಫೇಸ್ಬುಕ್ಕಿನಲ್ಲಿ ನಿರ್ಭಿಡೆಯಿಂದ ಬರೆಯುತ್ತಿರುವ ಕೆಲವೇ ಕವಯತ್ರಿಯರ ಪೈಕಿ ಗಮನಿಸಲೇ ಬೇಕಾದ ಹೆಸರು. ಈಗಾಗಲೇ ಒಂದು ಕಥಾ ಸಂಕಲನ ಮತ್ತು ಒಂದು ಕವನ ಸಂಕಲನ ಪ್ರಕಟಿಸಿರುವ ವಿನಿಶಾ ಅವರ ಪದ್ಯಗಳು ಪ್ರೀತಿಯ ನಶೆ ಹೊತ್ತಿರುವ ಮತ್ತು ಸಂಜೆಯ ಏಕಾಂತಗಳಿಗೆ ನಿಜದ ಸಾಥ್ ನೀಡುವ “ನಿಶಾ” (ಹೊತ್ತಿಳಿದ ಮಬ್ಬು ಬೆಳಕಿನ ಸಂಜೆಯ) ಕಾಲದ ಯಶಸ್ವೀ ಪದ್ಯಗಳೇ ಆಗಿವೆ. ಅವರ ಮೊದಲ ಸಂಕಲನ ಪ್ರಕಟಿಸಿರುವುದು “ಶಬ್ದ ಗುಣ” ಸಾಹಿತ್ಯ ಪತ್ರಿಕೆಯ ಶ್ರೀ ವಸಂತ ಬನ್ನಾಡಿ. ಬನ್ನಾಡಿಯವರಿಗೆ ಗುಣ ಮತ್ತು ಶಬ್ದದ ಬಗೆಗೆ ಪೂರ್ಣ ಗಮನ. ನಾಟಕ ನಿರ್ದೇಶಕರೂ ರಂಗ ಕರ್ಮಿಯೂ ಆಗಿರುವ ಬನ್ನಾಡಿ ತಮ್ಮ ಕವಿತೆಗಳ ಮೂಲಕ ನಮಗೆ ಫೇಸ್ಬುಕ್ಕಿನ ಮೂಲಕ ಪರಿಚಿತರೂ ಹೌದು. ಈ ಇಂಥ ಕವಿ ಪ್ರಕಟಿಸಿರುವ ಸಂಕಲನಕ್ಕೆ ಖ್ಯಾತ ಕವಿ ಮತ್ತು ವಿಮರ್ಶಕ ಡಾ.ಎಸ್.ಜಿ.ಸಿದ್ಧರಾಮಯ್ಯ ಮುನ್ನುಡಿ ಒದಗಿಸಿರುವ “ನೀಲಿ ನಕ್ಷತ್ರ” ೨೦೧೬ರಲ್ಲಿ ಪ್ರಕಟವಾಯಿತು. ಅಲ್ಲಿ ಇಲ್ಲಿ ಒಂದಷ್ಟು ಚರ್ಚೆಗಳೂ ಆದವು. ನೀಲಿ ಎಂದರೆ ನಿರಾಳ. ನೀಲಿ ಎನ್ನುವುದು ಆಕಾಶದ ಬಣ್ಣ. ನೀಲಿ ಎನ್ನುವುದು ಕೃಷ್ಣನ, ರಾಮನ ಚರ್ಮದ ಬಣ್ಣ. ಕಡು ನೀಲಿ ಎನ್ನುವುದನ್ನು ಕಪ್ಪು ಎಂದೂ ಬಳಕೆ ಮಾಡುವುದಿದೆ. ಜೊತೆಗೇ ಸಾಮಾಜಿಕ ಕಟ್ಟುಪಾಡಿನ ಶಿಷ್ಟಾಚಾರವನ್ನು ಮುರಿದ ಎಲ್ಲೆ ಮೀರಿದ ಲೈಂಗಿಕತೆಗೂ “ನೀಲಿ” ಎನ್ನುವುದುಂಟು. ಲಂಕೇಶರ “ನೀಲು” ಸಾಲು ನೆನಪಾದರೆ ಈ ಪದದ ಅರ್ಥ ಶ್ರೀಮಂತಿಕೆಗೆ ಸಾಕ್ಷಿ. ಈ ಸಂಕಲನದ ನಂತರವೂ ಈ ಕವಿಯು ಇಂಥದೇ ರಚನೆಗಳಲ್ಲೇ ಇರುವಂತೆ ಕಾಣುತ್ತಾರಾದರೂ ಇದುವರೆಗೂ ಬಳಕೆಯಲ್ಲಿದ್ದ, ಪ್ರೀತಿಯನ್ನು ವರ್ಣಿಸುವ ಸಾಂಪ್ರದಾಯಿಕ ರೀತಿಯನ್ನು ಬಿಟ್ಟುಕೊಟ್ಟ ಇಲ್ಲಿನ ಪದ್ಯಗಳು ಲೈಂಗಿಕ ಪ್ರತಿಮೆಗಳಾಚೆಗಿನ ಸೌಂದರ್ಯ ಮತ್ತು ಅನುಭೂತಿಯನ್ನು ವಿಸ್ತರಿಸುವ ಧೈರ್ಯ ಮಾಡಿರುವುದರ ಕುರುಹಾಗಿದೆ. ಸಂದರ್ಭಗಳ ಮರುಸೃಷ್ಟಿಗೆ ಇಲ್ಲಿ ಪದಗಳನ್ನು ಹಿತಮಿತವಾಗಿ ಬಳಸುವ ಈ ಕವಿ, ಅರ್ಥಗಳ ಹೊಳಪು ಕೊಟ್ಟು ದಿಗ್ಮೂಡಗೊಳಿಸುತ್ತಾರೆ. ನೀಲಾಕಾಶದ ದಿಟ್ಟಿಗೆ ನಿಲುಕುವ ಸಂಗತಿಗಳಿಗಿಂತ ಗಮನಕ್ಕೆ ಸಿಗದೇ ಉಳಿವ ಸಂಗತಿಗಳನ್ನು ಈ ಪದ್ಯಗಳ ಆಳದ ಓದು ಮಾತ್ರ ಕೊಡಬಲ್ಲದು. ಮೇಲ್ನೋಟಕ್ಕೆ ಹೆಣ್ಣೊಬ್ಬಳ ಗಂಡಿನ ಮೇಲಣ ಆಕರ್ಷಣೆಯಂತೆ ಈ ಪದ್ಯಗಳ ನೇಯ್ಗೆ ಇದ್ದರೂ ಆಳದಾಳದಲ್ಲಿ ಇರುವುದು ವ್ಯಕ್ತದಾಚೆಗೂ ಉಳಿವ ಅವ್ಯಕ್ತ ಭಾವನೆಗಳ ಮಹಾಪೂರ. ನಿಜಕ್ಕೂ ಚರ್ಚಿಸಲೇ ಬೇಕಾದ ಕಾವ್ಯ ಕೃಷಿ ವಿನಿಶಾ ಗೋಪಿನಾಥರ ಪದ್ಯಗಳಲ್ಲಿವೆ. ಮೊದ ಮೊದಲ ಓದಿಗೆ ಪ್ರೇಮದ ನೈರಾಶ್ಯವೇ ಬಹುತೇಕ ಕವಿತೆಗಳ ಮೂಲ ಎಂದು ಮೇಲ್ನೋಟಕ್ಕೆ ಅನ್ನಿಸುವುದಾದರೂ ಅದು ಸತ್ಯವಲ್ಲ. ವಿಷಾದ ಮತ್ತು ಬದುಕಿನ ಗಾಢ ಕ್ರೂರತೆ ಇಲ್ಲಿನ ಬಹುತೇಕ ಪದ್ಯಗಳ ಅಸ್ತಿವಾರ. ಆ ಕಾರಣಕ್ಕೇ ಇವರ ಮೊದಲ ಸಂಕಲನ “ನೀಲಿ ನಕ್ಷತ್ರ”ಕ್ಕೆ ಮುನ್ನುಡಿ ಬರೆದ ಹಿರಿಯ ಕವಿ ಎಸ್.ಜಿ.ಸಿದ್ಧರಾಮಯ್ಯನವರ ಮಾತನ್ನು ಮುಂದುವರೆಸಲೇಬೇಕು. “ಒಂದು ದಿನ ತಿರಸ್ಕರಿಸುವ ಮತ್ತೊಂದು ದಿನ ಪುರಸ್ಕರಿಸುವ ಒಮ್ಮೆ ನನ್ನನ್ನು ಹಾಲಿನಲ್ಲಿ ಅದ್ದುವ ಒಮ್ಮೆ ನನ್ನನ್ನು ನೀರಿನಲ್ಲಿ ಅದ್ದುವ ಬಹುರೂಪತೆಯನ್ನು ಇನ್ನಾದರೂ ಬಿಡು ನಲ್ಲ ಏನು ನಿನ್ನ ಒಳಗಿನ ನಿಗೂಢ? ಎಲ್ಲವನ್ನೂ ಬಿಚ್ಚಿಡು”. – (ಬಾಳಿನ ಹೊಸ ಪುಟ) ಈ ಪದ್ಯ ಸುರುವಾಗುವುದೇ “ನನ್ನ ಮನೆಯೆಂಬ ಚಿಕ್ಕ ಗೂಡು ಕಾಯುತ್ತಿದೆ ನಿನ್ನ ಬರವಿಗಾಗಿ ಎದೆ ಒಸಗೆ ತುಂಬಿ” ಎನ್ನುವ ಸಾಲಿನಿಂದ. “ಅವನ” ಬರವಿಗಾಗಿ ಕಾಯುವ “ಅವಳು” ಅವನ ನಿಗೂಢ ನಡೆಯನ್ನು ಪ್ರಶ್ನಿಸುತ್ತಲೇ ಅವನನ್ನು ಸ್ಪಷ್ಟ ಪಡಿಸಲು ಕೋರುವ ಕಡೆಯ ಸಾಲು ಬರಿಯ ಪ್ರೀತಿಯ ಮಾತನ್ನಲ್ಲದೆ ಸಂಗಾತಿ ಅನುರೂಪವಾಗಿಯೇ ಇರಬೇಕೆಂಬ ಬಯಕೆ. “ನಾವಿಬ್ಬರು ದೇವ ದೇವಿಯರಾಗಿ ಉಳಿಯುವೆವು ಸೂರ್ಯ ಚಂದ್ರ ನಕ್ಷತ್ರ ನದಿ ಹಳ್ಳ ಕೊಳ್ಳಗಳಿರುವ ತನಕ ಪ್ರೇಮಿಗಳ ಧಮನಿಗಳಲಿ ಪ್ರೀತಿಯ ರಕುತ ಹರಿದಾಡುತ್ತಿರುವ ತನಕ” (ದೇವಿ ದೇವರ ಪ್ರೇಮ ಗಾಥೆ) ಈ ಪದ್ಯದ ಸುರುವಿನ ಸಾಲು ಹೀಗಿದೆ; ಯಾವ ಹೆಣ್ಣೂ ಪ್ರೇಮಿಸಿರಲು ಸಾಧ್ಯವಿಲ್ಲ ನಿನ್ನನು ನನ್ನಷ್ಟು ತೀವ್ರ ಈ ಭೂಮಂಡಲದಲಿ ಅಕ್ಕ ಚೆನ್ನ ರಾಧೆ ಕೃಷ್ಣರು ಧಡ್ಡನೆ ತಮ್ಮ ಬಾಗಿಲುಗಳ ಮುಚ್ಚಿದರು ಕ್ಷಣಹೊತ್ತು ತಮ್ಮ ಪ್ರೇಮಗಾಥೆಯ ಚೌಕಾಶಿ ಮಾಡಿದರು. ಈಗ ಪದ್ಯದ ಓದನ್ನು ಈಗ ಹೇಳಿದ ಎರಡನೇ ಕಂದದಿಂದ ಆರಂಭಿಸಿ ಮೊದಲ ಸಾಲನ್ನು ನಂತರ ಓದಿದರೆ ಹುಟ್ಟುವ ಯಾಚ(ತ)ನೆಯ ಪರಿಗೆ ಸೋಲದೇ ಉಳಿಯುವುದಾದರೂ ಹೇಗೆ? ಇಷ್ಟೆಲ್ಲ ಹೇಳಿದರೂ ಮತ್ತೆ ಗೊಂದಲ ನಿರೂಪಕಿಗೆ, ಅವಳು ಹೇಳುತ್ತಾಳೆ; ಎಲ್ಲ ಗಂಡಸರೂ ಒಂದೇ ಏನು? ಅಕ್ಕನ ಮೊರೆಗೆ ಕಿವಿಗೊಟ್ಟನೇ ಚೆನ್ನ? ಕೊಳಲಿನ ಜೊತೆಗೆ ರಾಧೆಯನೂ ಹಿಂದೆ ಬಿಟ್ಟು ನಡೆದೇ ಬಿಟ್ಟನಲ್ಲ ಕೃಷ್ಣ? ಮುಂದುವರೆದ ಅವಳು ಹೀಗೂ ಹೇಳುತ್ತಾಳೆ; ನೀನು ರೂಹಿಲ್ಲದ ಚೆಲುವನಲ್ಲ ನನ್ನ ಕಣ್ಣಿನ ಮುಂದಿನ ಸಾಕ್ಷಾತ್ಕಾರ ಬಳಿ ಇದ್ದಿದ್ದರೆ ಈಗ ನೀನು ನಿನ್ನ ಕೈತುಂಬಾ ಮೆತ್ತಿಕೊಳ್ಳುತ್ತಿದ್ದೆ ನನ್ನ ಬೆತ್ತಲೆ ಚೆಲುವನು …………. ನೋಡಲಿ ಜಗತ್ತು ನಮ್ಮಿಬ್ಬರ ಪ್ರಣಯದ ಕೊನೆಯಿರದ ಪಯಣವನ್ನು ಈ ಟಿಪ್ಪಣಿಯಲ್ಲಿ ಮೊದಲು ಬಳಸಿದ “ನೀಲಿ” ಶಬ್ದದ ಅರ್ಥವನ್ನು ಈ ಪದ್ಯದ ಓದಿನಲ್ಲಿ ಗ್ರಹಿಸಲು ಯತ್ನಿಸಿ, ಆಗ ಮಾತ್ರ ಈಕೆ ಹೇಳ ಹೊರಟ ಆಳದಾಳದ ಕೊಳದ ನೀಲ ನಿಮಗ್ನ ನಗ್ನ ಸತ್ಯ ಅದ್ಭುತವಾಗಿ ಹೊಳೆಯುತ್ತದೆ. ಇನ್ನು “ಸಂಶಯ” ಎನ್ನುವ ಕವಿತೆಯಲ್ಲಿ ತೇಲಿಹೋಗುವೆ ನಾನು ನಿನ್ನ ಅಗಾಧ ಪ್ರೀತಿಯ ಹೊಳೆಯಲ್ಲಿ ಮರೆತುಬಿಡುತ್ತಾ ನೀನು ಚುಚ್ಚಿದ ಕಂಠಿ ಮುಳ್ಳುಗಳನ್ನು ತಯಾರಾಗಿಬಿಡುತ್ತೇನೆ ನೀನು ತೋರಿಸಿದ ದಾರಿಯಲ್ಲಿ ನಡೆಯಲು ನನಗೆ ಗೊತ್ತಿದೆ; ಆಡಿದ್ದೇನೆ ನಾನೂ ನಿನಗೆ ಘಾಸಿಮಾಡುವ ಮಾತುಗಳನ್ನು ಎಲ್ಲ ಮರೆತು ನೀನು ಕೇಳುವುದು ನನ್ನ ಮಾತುಗಳನ್ನೇ!” -ಎಂದು ಕೊನೆಯಾದಂತೆ ಕಂಡರೂ, ಈ ಮೊದಲು ಅವಳು ಅಂದುಕೊಂಡಿದ್ದೇನು ಎಂದು ಗಮನಿಸಿದರೆ; “ನಿನ್ನ  ಎದೆಯಲ್ಲಿ ಸಂಶಯದ ಬೆಕ್ಕೊಂದು ಚಂಗೆಂದು ನಗೆಯುವುದು ನನಗೆ ಕೇಳಿಸುತ್ತದೆ ಆಗೆಲ್ಲಾ ಎಲ್ಲರ ಹಾಗೆ ನೀನೂ ಒಬ್ಬ ಗಂಡಸು ಎಂಬುದನ್ನು ತೋರಿಸಿ ಬಿಡುತ್ತೀಯ ನಿನ್ನ ಸಿಡಿ ನುಡಿಗಳು ಕ್ಯಾಕ್ಟಸ್ ಮುಳ್ಳುಗಳಂತೆ ನನ್ನ ಮನಸ್ಸನ್ನು ಇರಿಯತೊಡಗುತ್ತವೆ ನನ್ನ ಅಸಹಾಯಕತೆ ನಿನ್ನ ಕ್ರೂರ ಬಾಯಾರಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಸುಮ್ಮನೆ ಕಾಯುತ್ತೇನೆ ನಾನು ನೀನು ಎಂದಿನ ಮಧುರ ನುಡಿಗಳಲಿ ಮಾತನಾಡುವ ಗಳಿಗೆಗೆ” ಇವು ಬರಿಯ ವ್ಯಾಮೋಹದ, ಕಾಮನೆಯ ಅಥವ ಪ್ರಣಯದ ಆಹ್ವಾನದ ಅಂದಾದುಂದಿನ ಸವಕಳಿ ಸಾಲುಗಳಲ್ಲ, ಬದಲಿಗೆ ಸಂಗಾತಿಯ ನಿಷ್ಠೆ ಮತ್ತು ತನ್ನ ಹೊರತು ಅನ್ಯವನ್ನು ಕಾಣುವ ಸಂಗಾತಿಯ ಮೇಲಣ ಸಂಶಯಕ್ಕೆ ಸ್ವತಃ ಕೊಟ್ಟುಕೊಂಡ ಉತ್ತರವೂ ಆಗಿದೆ. “ರೆಡ್ ವೈನ್ ವಿಷಾದ” ಕವಿತೆ ಬರಿಯ ಪದ್ಯವಲ್ಲದ ಒಂದು ಬಗೆಯ ಗಪದ್ಯವೂ ಹೌದು. ಸಣ್ಣಕತೆಯೂ ಹೌದು. ಒಂದು ರಾತ್ರಿ ಅವನ ಬರುವಿಗೆ ರೆಡ್ ವೈನಿನ ಜೊತೆ ಕಾಯ ತೊಡಗುವ ಅವಳು ಬೆಳಗ ಎಚ್ಚರದಲ್ಲಿ ಖಾಲಿ ಬಾಟಲನ್ನು ಕಾಣುತ್ತಾಳೆ. ಆದರೆ ರಾತ್ರಿ ನಡೆದುದೇನು ಎನ್ನುವ ಪ್ರಶ್ನೆಗೆ ಪದ್ಯದ ಓದು ಮಾತ್ರ ನಿಮಗೆ ಉತ್ತರಿಸಬಹುದು (ಎಲ್ಲ ಸ್ವಾರಸ್ಯವನ್ನೂ ಟಿಪ್ಪಣಿಕಾರನೇ ಹೇಳಿಬಿಟ್ಟರೆ ರಸಿಕನಿಗೆ ಬೇಸರ ಎನ್ನಿಸದೇನು?) ಆದರೆ “ನಿರಾಳತೆ” ಎನ್ನುವ ಕವಿತೆ ಮಾತ್ರ ಈವರೆವಿಗೂ ಹೇಳಿದ ಕಾವ್ಯಕೃಷಿಗಿಂತ ಕೊಂಚ ಹೊರಳು ಹಾದಿಯಲ್ಲಿ ಹಾಯುತ್ತದೆ. ಮಧ್ಯಾಹ್ನದ ನಿರಾಳತೆಯ ಒಂದು ಮಳೆ ಕಾಲದಲ್ಲಿ ಅವಳನ್ನು ಕಾಣಬಂದ ಅವನನ್ನು  ಬಲವಂತ ಮಾಡಿ ಹೊರ ಪ್ರಪಂಚದ ಸಂಗತಿಗಳಿಗೂ ಒಡ್ಡ ಬಯಸಿ ಕರೆದೊಯ್ಯುವ ಅವಳು, ಕಾಮನ ಬಿಲ್ಲ ಬಣ್ಣವನ್ನು ಕಾಣಿಸುತ್ತಾಳೆ. ಅವಳು ಮರದ ಕೊಂಬೆಯ ಮೇಲೆ ಕೂತಿದ್ದ ಹಕ್ಕಿಯೊಂದನ್ನು  ಹಿಡಿಯ ಹೋಗಿ ಆ ಪಕ್ಷಿ ತಪ್ಪಿಸಿಕೊಂಡು ನೀರಿಗೆ ಬಿದ್ದೂ ಮತ್ತೆ ಛಕ್ಕನೆ ರೆಕ್ಕೆ ಫಡಫಡಿಸಿ ಹಾರಿದ್ದನ್ನು ಕಂಡಾಗ ಆ ಅವನ ಮನದ ಆಸೆಯನ್ನು ಅರಿಯುತ್ತಾಳೆ ಎನ್ನುವಾಗ ಯಾಕೋ ಮತ್ತೆ ಮೇಲ್ನೋಟದ ಪ್ರಣಯಕ್ಕೇ ಈ ಕವಿಯ ನಾಯಕಿಯೂ ಅರಸುತ್ತಾಳಾ ಅನ್ನಿಸುತ್ತದೆ. ಆದರೆ  “ಮೌನದ ನೆರಳು” ಪದ್ಯದಲ್ಲಿ ಪುನಃ “ನಿನ್ನ ಮಾಂತ್ರಿಕ ಬೆರಳಿನ ಸ್ಪರ್ಶಕ್ಕೆ ತಹತಹಿಸುತಿರುವೆನು ಒಂದೇ ಮಾತಿನಲಿ ಉಲಿದು ಬಿಡು ನನ್ನೀ ಆತ್ಮದಲಿ ಒಂದಾಗಿದ್ದೇನೆಂದು ಆದಿ ಅಂತ್ಯಗಳಿಲ್ಲದ ಒಲುಮೆಯಾಗಿ ನಿನ್ನೊಳಗೆ ಕರಗಿಬಿಡುವೆನು” ಅನ್ನುವಾಗ ಮತ್ತೆ ಸ್ಪುರಿಸಿದ ಆ ಅದೇ ಗಂಧಕ್ಕೆ ಮೂಗು ಅರಳುವುದು ಸಹಜ ಮತ್ತು ಸ್ವಾಭಾವಿಕ ಕೂಡ. “ಏಕಾಂತದಲ್ಲಿದ್ದಾಗಲೇ ನಿನ್ನ ಹಾಜರಿ ಹೃದಯದೊಳಗೆ ಅಗ್ನಿಕುಂಡ ಹೊತ್ತಿಕೊಂಡಂತೆ ನಿನ್ನೊಂದಿಗೆ ಕಳೆದ ದಿನಗಳು  ಯಾಕೆ ಕಾಡುತ್ತಿವೆ ಇಂದಿಗೂ…” ಎಂದು ಸುರುವಾಗುವ “ಅಮಾಯಕ” ಎನ್ನುವ ಕವಿತೆ,ಮುಗಿಯುವುದು ಹೀಗೆ; “ಕಣ್ಣೆದುರೇ ಇದ್ದರೂ ಗುರುತು ಹಿಡಿಯಲಾರ ಅವನು ಕೋಪ ತಾಪ ಸಿಟ್ಟು ಸೆಡ ಬದಿಗಿಟ್ಟ ಗಳಿಗೆ ನಾನವನ ತೋಳಸೆರೆ ಎಂಬುದನ್ನು ಅರಿಯದ ಅಮಾಯಕ” ಇಲ್ಲಿ ಕವಿ ಬದುಕಿನಲ್ಲಿ ಅನಿವಾರ್ಯ ಬರುವ ಸಂಗತಿಗೆ ತಲೆಬಾಗುತ್ತಿದ್ದಾರೋ, ತಲೆ ಎತ್ತಿ ಪ್ರೀತಿ ಮತ್ತು ನಿಷ್ಠೆಗೆ ಬದ್ಧವಾಗದೇ ಬದುಕಿನ ಹಳವಂಡಗಳಲ್ಲಿ ಮರೆಯಾಗಿ ತನ್ನನ್ನು ಗುರುತಿಸದ ಇನಿಯನಿಗೆ ಬದುಕಿನಾಚೆಯ ಬದುಕ ಕಾಣಿಸುತ್ತಿದ್ದಾಳೋ ಅದು ಓದುಗನ ಗ್ರಹಿಕೆಗೆ ಬಿಟ್ಟ ಕಾಣ್ಕೆ. “ರೂಹು ಅರಳಿದ ಕಾಲ” ಎಂಬ ವಿಶಿಷ್ಠ ರಚನೆಯಂತೂ ನನ್ನ ಓದಿನ ಪರಿಯನ್ನೇ ಕ್ಷಣಕಾಲ ಕಂಗೆಡಿಸಿತೆಂದರೆ ನೀವು ನಂಬಲೇ ಬೇಕು. ಏಕೆಂದರೆ ಇಂಥ ಪದ್ಯಗಳ ಅಸ್ತಿವಾರವೇ ಇದುವರೆಗೂ ಕನ್ನಡದ ಮಹಿಳಾ ಅಸ್ಮಿತೆಗೆ ತೆರೆದುಕೊಂಡ ಅಕ್ಕಮಹಾದೇವಿಯ ” ರೂಹು” ಎಂಬ ಶಬ್ದದ ಅಧ್ಬುತ ಮಾಂತ್ರಿಕತೆ ಮತ್ತು ಆ ಪದಕ್ಕಿರುವ ಅತಿ ವಿಶಿಷ್ಠ ಪ್ರಜ್ಞೆಯ ಪುರಾವೆ. “ಮುಂಗಾರು ಮಳೆಯ ಕಾಲಕೆ ಅವಳ ಮನದ ಅಂಗಳದಲಿ ಅವನ ನೆನಪು ನುಗ್ಗಿ ಬರುತ್ತದೆ” ಎನ್ನುವ ಸಾಮಾನ್ಯ ಗ್ರಹಿಕೆಯಿಂದ ಮೊದಲಾಗುವ ಪದ್ಯ, ದಾರಿ ಸರಿದಂತೆ ದಾಟುತ್ತ ದಾಟುತ್ತ, ಕೊನೆಯಾಗುವುದು ಹೀಗೆ; “ಈಗ ಮತ್ತೆ ಮುಂಗಾರಿನ ಒಂದು ದಿನ ಗೊತ್ತು ಅವಳಿಗೆ ನಿರಾಸೆಗೊಳಿಸಿದ್ದಿಲ್ಲ ಎಂದೂ ಅವನು ಬರಬಹುದು ಈಗವನು ಯಾವ ಗಳಿಗೆಗೂ” ಎನ್ನುವಾಗ ಪದ್ಯ ಮುಗಿದೇ ಹೋಯಿತಲ್ಲ ಎನ್ನುವ ಭಾವಕ್ಕಿಂತಲೂ ಬಹಳ ಕಾಲ ಉಳಿಯುವ ಕಡೆಯ ಸಾಲುಗಳು ಕಾಡುತ್ತಲೇ ಇರುತ್ತವೆ, ಥೇಟು ಅವಳ ಬಯಕೆಯ ಅವನಂತೆಯೇ! ಈ ಪದ್ಯಕ್ಕೆ ಫೇಸ್ಬಿಕ್ಕಿನ ಪುಟದಲ್ಲಿ ಖ್ಯಾತ ನಾಟಕಕಾರ ಡಿ ಎಸ್ ಚೌಗುಲೆ ಹೇಳಿದ ಮಾತನ್ನು ಇಲ್ಲಿ ನೆನೆಯದೇ ಇದ್ದರೆ ಅದು ಕೂಡ ತಪ್ಪಾಗುತ್ತದೆ. ಅವರು ಹೇಳುತ್ತಾರೆ: “ಬಹು ಸಂಕೀರ್ಣವಾದ ಕವಿತೆ. ಇದರ ರಚನೆಯ ಸಂವಿಧಾನ ಸುಲಭ ಸಾಧ್ಯವಲ್ಲ. ಹೆಣ್ಣು- ಗಂಡು ನೇಹಿಗರಾಗಿ ಅನುರಾಗಿಗಳಾಗಿ ಕಳೆವ ಪ್ರಕೃತಿ ದತ್ತ ಸಂಗ,ನಿಸ್ಸಂಗದ ರೂಪಗಳು ರೂಹುಗಳಾಚೆ ಒಂದು ಗಾಢ ಅನುಭೂತಿ ಯನ್ನು ಕೊಡುತ್ತವೆ. ಪ್ರತಿಮೆ,ರೂಪಕಗಳು ಹೊಸರಚನೆ ಅನಿಸುತ್ತವೆ. ಆಧ್ಯಾತ್ಮಿಕ ಗುಂಗನ್ನು ಮಸ್ತಕದಲ್ಲಿ ಇರಿಸುತ್ತದೆ. ಕನ್ನಡದಲ್ಲಿ  ಒಂದು ಅಪರೂಪದ ಕಾವ್ಯಾಭಿವ್ಯಕ್ತಿ ಅಭಿನಂದನೆಗಳು”. “ಬುದ್ಧನ ಪ್ರೀತಿ” ಎನ್ನುವ ಪದ್ಯ ಅಧ್ಯಾತ್ಮದ ನೆಲೆಯಲ್ಲಿ ಬುದ್ಧನನ್ನು ಧೇನಿಸಿದರೂ ಕೊನೆಯಲ್ಲಿ ಹೀಗೆ ಆಗುತ್ತೆ; “ಉಳಿದ ಯಾರೂ ಮುಖ್ಯವಾಗದೆ ನಾನು ಮತ್ತು ಅವನು ಮಾತ್ರ ಇರುವ ಲೋಕವದು” ಎನ್ನುವಾಗ ಈಕೆಯ ಅಧ್ಯಾತ್ಮವೆಂದರೆ ಕೃಷ್ಣ ರಾಧೆಯರ, ಅಕ್ಕ ಚೆನ್ನನ, ಮೀರ ಮತ್ತು ಗಿರಿಧರನ ಪ್ರೀತಿಯಂತೆ ಕಾಮವಿಲ್ಲದ, ಪ್ರಣಯದ ಉನ್ಮಾದಕ್ಕಿಂತಲೂ ಮಿಗಿದಾದ ಧ್ಯಾನವಲ್ಲದೆ ಮತ್ತೇನು? “ಇದೆಲ್ಲ ಯಾಕೋ ಅತಿಯಾಯಿತು” ಅನ್ನುತ್ತಾರೆ ರಾಮಾನುಜಮ್ ಒಂದು ಕಡೆ. ಇನ್ನು ಈ ಅಂಕಣದ ಓದುಗರು ಹಾಗೆ ಎನ್ನುವ ಮೊದಲು ಮತ್ತೊಂದು ಪದ್ಯದ ಕೆಲವು ಸಾಲುಗಳನ್ನು ಮತ್ತೆ ಹೇಳುತ್ತ ಈ ಟಿಪ್ಪಣಿ ಮುಗಿಸುತೇನೆ. ನಮಸ್ಕಾರ. “ಮಧ್ಯಾಹ್ನದ ಚುಮು ಚುಮು ಚಳಿಗೆ ಬೆಚ್ಚಗಿನ ಹೊದಿಕೆ ಹುಡುಕುತ್ತಿದ್ದೇನೆ ನಿನ್ನ ಸ್ಪರ್ಶ ತಬ್ಬಿ ಮಲಗಲು” (ಬೆಳಕಿನ ತುಣುಕು) ವಿನಿಶಾ ಗೋಪಿನಾಥ್. ಮೂಲ ಕೋಲಾರ ಜಿಲ್ಲೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.ಮೈಸೂರು ವಿಶ್ವವಿದ್ಯಾಲಯದ ಬಿ.ಎ

Read Post »

ಅಂಕಣ ಸಂಗಾತಿ, ದಿಕ್ಸೂಚಿ

ಸೃಜನಶೀಲರಾಗಿ ಯಶಸ್ವಿ ವ್ಯಕ್ತಿಗಳಾಗಿ ಸಾಮಾನ್ಯವಾಗಿ ನಾವು ಮಾಮೂಲಿ ಕೆಲಸಗಳನ್ನು ಮಾಮೂಲಿ ರೀತಿಯಲ್ಲಿ ಮಾಡಿ ಅತ್ಯದ್ಭುತ ಫಲಿತಾಂಶ ಬಯಸುತ್ತೇವೆ. ನಾವು ಮಾಡುತ್ತಿರುವ ಕೆಲಸವನ್ನು ಎಂದಿನಂತೆ ಮಾಡುವ ರೀತಿಯಲ್ಲಿಯೇ ಮುಂದುವರೆಸಿದರೆ ಹಿಂದೆ ಬಂದ ಫಲಿತಾಂಶವೇ ಬರುವುದು ಸಹಜ. ಕೆಲವರು ನಾವು ಮಾಡುತ್ತಿರುವ ಕೆಲಸವನ್ನೇ ಮಾಡಿ ನೋಡ ನೋಡುತ್ತಿದ್ದಂತೆ ಗೆಲುವು  ಪಡೆಯುತ್ತಾರೆ. ಎಲ್ಲರ ನೆದರಿನಲ್ಲಿಯೂ ಮಿಂಚುತ್ತಾರೆ.ತಾವೂ ಹಿಗ್ಗಿ ಹಲಸಿನಕಾಯಿಯಾಗುತ್ತಾರೆ.  ಅದನ್ನು ನಾವು ಬೆರಗುಗಣ್ಣುಗಳಿಂದ ನೋಡುತ್ತಲೇ ಇದ್ದು ಬಿಡುತ್ತೇವೆ. ಅವರು ಅದೃಷ್ಟವಂತರು ಎಂಬ ಹಣೆಪಟ್ಟಿ ಕಟ್ಟುತ್ತೇವೆ. “ಮನುಷ್ಯನು ತನ್ನ ಕುರಿತು ತಾನೇನು ಅಂದುಕೊಳ್ಳುತ್ತಾನೋ ಅದೇ ಆತನ ಅದೃಷ್ಟವನ್ನು ನಿರ್ಣಯಿಸುತ್ತದೆ.” ಎನ್ನುವ ಎಚ್ ಡಿ ಥೋರೇ ಅವರ ಮಾತನ್ನು ಕಿವಿಗೆ ಹಾಕಿಕೊಳ್ಳದೇ  ನಾವು ತುಂಬಾ ದುರದೃಷ್ಟವಂತರು ಎಂದು ಕರಬುತ್ತೇವೆ.. ನಿಜ ಸಂಗತಿ ಎಂದರೆ “ಜಯಶಾಲಿಗಳು ವಿಭಿನ್ನ ಕೆಲಸಗಳನ್ನೇನೂ ಮಾಡುವುದಿಲ್ಲ; ಅವರು ಕೆಲಸ ಮಾಡುವ ರೀತಿ ವಿಭಿನ್ನವಾಗಿರುತ್ತದಷ್ಟೆ.”ಮಾಡುವ ಕಾರ್ಯಗಳ ಬಗೆಗೆ ಹಳೆಯದರ ಆಧಾರದ ಮೇಲೆ ವಿಭಿನ್ನವಾಗಿ ವಿಚಾರ ಮಾಡಿ ಹೊಸ ರೀತಿಯಲ್ಲಿ ನಿರ್ವಹಿಸುವುದೇ ಸೃಜನಶೀಲತೆ ಎಂದು ಕರೆಸಿಕೊಳ್ಳುತ್ತದೆ. ಹಳೆಯ ಪದ್ದತಿಗಳನ್ನು ನಂಬಿಕೊಂಡು ಅದಕ್ಕೆ ಜೋತು ಬಿದ್ದು ಪಡೆದ ಜ್ಞಾನವನ್ನು ಅರಿವಾಗಿಸಿಕೊಳ್ಳದೇ ಅಜ್ಜ ನೆಟ್ಟ ಆಲದ ಮರಕ್ಕೆ ಜೋತು ಬೀಳುವ ರೀತಿಯಲ್ಲಿ ಮುನ್ನಡೆಯುತ್ತಿರುವುದರಿಂದ ಹೀಗಾಗುತ್ತಿದೆ. ಈ ಮನಸ್ಥಿತಿಯಿಂದ ನಾವಿಂದು ಹೊರಬರಲೇಬೇಕಿದೆ. ಇಂಥ ಮನೋಭಾವವನ್ನು  ಕಂಡು ಕಾಳಿದಾಸ “ಹಳೆಯದು ಎಂದ ಮಾತ್ರಕ್ಕೆ ಎಲ್ಲವೂ ಒಳ್ಳೆಯದಲ್ಲ.” ಎಂದು ಹೇಳಿ ಹಳೆಯದರ ಪರಿಮಿತಿಯೆಡೆಗೆ ನಮ್ಮ ಗಮನ ಸೆಳೆದಿದ್ದಾನೆ. ಇತಿಹಾಸದ ಪುಟಗಳಲ್ಲಿ ಯಶಸ್ವಿ ವ್ಯಕ್ತಿಗಳಾಗಿ ತಮ್ಮ ಹೆಸರು ದಾಖಲಿಸಿಕೊಂಡ ಅಲ್ಬರ್ಟ್ ಐನಸ್ಟೀನ್, ಸಿ ವಿ ರಾಮನ್ ಥಾಮಸ್ ಅಲ್ವಾ ಎಡಿಸನ್, ಸರ್ ಎಮ್ ವಿಶ್ವೇಶ್ವರಯ್ಯನವರಂಥವರ ಯಶಸ್ಸಿಗೆ ಸೃಜನಶೀಲತೆಯು ಬಹುಮುಖ್ಯ ಪಾತ್ರ ವಹಿಸಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಸೃಜನಶೀಲತೆ ಎಂದರೆ. . . . .? “ಮಾಡುವ ಕೆಲಸ ಕಾರ್ಯಗಳನ್ನು ಸಾಮಾನ್ಯವಾಗಿ ಯೋಚಿಸದೇ ವಿಭಿನ್ನ ದೃಷ್ಟಿಕೋನದಿಂದ ಆಲೋಚಿಸಿ ಹೊಸ ಸಂಶೋಧನೆಗಳಿಗೆ ಆವಿಷ್ಕಾರಗಳಿಗೆ ಮುನ್ನುಡಿ ಬರೆಯಲು ಸಹಕರಿಸುವ ಅಂಶವೇ ಸೃಜನಶೀಲತೆ ಎಂದು ಸೃಜನಶೀಲತೆಯು ನಮ್ಮನ್ನು ಇತರರಿಂದ  ವಿಭಿನ್ನ ಎಂದು ತೋರಿಸುತ್ತದೆ. ಜಗತ್ತಿನಲ್ಲಿ ಕುತೂಹಲಕಾರಿ ವಿಸ್ಮಯಕಾರಿ ಸಂಗತಿಗಳೆಡೆಗೆ ಕಣ್ಣರಳಿಸಿ ನೋಡುತ್ತ ಈ ಸತ್ಯ ಸಂಗತಿಗಳ ಬೆನ್ನು ಹತ್ತಿ ತಿಳಿದುಕೊಳ್ಳುವ ಹಂಬಲವನ್ನು ಮನದಲ್ಲಿ ತುಂಬಿಕೊಂಡು ನಾವೂ ಅಂಥ ಚಕಿತಗೊಳಿಸುವ ¸ಸಂಗತಿಗಳನ್ನು ಇದ್ದುದರಲ್ಲಿಯ ನ್ಯೂನತೆಗಳನ್ನು ತಿದ್ದಿ ಉತ್ತಮ ಪಡಿಸುವುದು ಹೇಗೆ ಎಂದು ನಿರಂತರವಾಗಿ ಯೋಚಿಸಿ ಊಹಿಸಿ ಕಲ್ಪನೆಗಳನ್ನು ಕಟ್ಟಿಕೊಂಡು ಆ ಕಲ್ಪನೆಗಳನ್ನು ನನಸಾಗಿಸುವುದೇ ಸೃಜನಶೀಲತೆ.ಹೊಸತನಕ್ಕೆ  ತುಡಿಯುವ ಮನ ಸಹಜವಾಗಿ ಸೃಜನಶೀಲತೆಯತ್ತ ವಾಲುತ್ತದೆ. ಇಂಥವರನ್ನು ಸೃಜನಶೀಲ ಮನಸ್ಸುಳ್ಳವರು ಎಂದು ಗುರುತಿಸಿ ಗೌರವಿಸುತ್ತೇವೆ. ನೀವೂ ಸೃಜನಶೀಲರಾಗಬೇಕೇ? ಹಾಗಾದರೆ ಈ ಅಂಶಗಳನ್ನು ನಿಮ್ಮದಾಗಿಸಿಕೊಳ್ಳಿ ಪ್ರಶ್ನಿಸುವುದನ್ನು ರೂಢಿಸಿಕೊಳ್ಳಿ ಯಾರೋ ಏನೋ ಹೇಳಿದರು ಎಂದು ಸುಮ್ಮನೆ ನಂಬಿ ಬಿಡಬೇಡಿ. ಪ್ರಶ್ನಿಸಿಕೊಳ್ಳಿ ಅದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಿ. ಉತ್ತರ ನಿಮಗೆ ಸಮಾಧಾನ ನೀಡುವವರೆಗೆ ಪ್ರಯತ್ನ ಮುಂದುವರೆಯಲಿ. ಕುತೂಹಲವಿರಲಿ ಮೂಲತಃ ಸೃಜನಶೀಲತೆ ನಿಂತಿರುವುದೇ ಕುತೂಹಲ ಪ್ರವೃತ್ತಿಯ ಮೇಲೆ. ಯಾವುದೇ ಸಂದರ್ಭ ಸನ್ನಿವೇಶ ಪ್ರಸಂಗಗಳಲ್ಲಿಯ ಅನುಭವಗಳನ್ನು ಕುತೂಹಲ ದೃಷ್ಟಿಯಲ್ಲಿಯೇ ನೋಡುವುದು. ಕುತೂಹಲಭರಿತರಾಗಿಯೇ ಆಸ್ವಾದಿಸುವುದನ್ನು ಮೈಗೂಡಿಸಿಕೊಳ್ಳಿ. ಸ್ವಂತಿಕೆಯ ಹಂಬಲವಿರಲಿ ಮತ್ತೊಬ್ಬರ ವಿಚಾರಗಳನ್ನು ಅಂಧಾನುಕರಣೆಯಂತೆ ಒಪ್ಪದಿರಿ. ಪರಾಮರ್ಶಿಸಿ ಸ್ವತಂತ್ರವಾದ ನಿಲುವುಗಳನ್ನು ತಳೆಯಿರಿ. ಈ ಪ್ರಕ್ರಿಯೆ ನಡೆಯುತ್ತಿರುವಾಗ ಮಾನಸಿಕ ಸಂಘರ್ಷ ನಡೆಯುತ್ತದೆ. ನೀವು ತೆಗೆದುಕೊಂಡ ಸ್ವತಂತ್ರ ನಿರ್ಧಾರಗಳಿಗೆ ಪ್ರಬಲವಾದ ಸಮರ್ಥನೆಗಳಿರಲಿ.ಅವು ವಾಸ್ತವಿಕತೆಯಿಂದ ಕೂಡಿರಲಿ. ಕಲ್ಪನಾಶಕ್ತಿ ಪುಟಿಗೊಳಿಸಿ ಊಹಿಸುವ ಸಾಮರ್ಥ್ಯವೇ ಕಲ್ಪನಾಶಕ್ತಿ. ಅಗಾಧವಾದ ಕಲ್ಪನಾಶಕ್ತಿಯನ್ನು ಪುಟಿಗೊಳಿಸಿ ಸಾಧಿಸಬೇಕೆನ್ನುವ ಕ್ಷೇತ್ರದಲ್ಲಿ ಪೂರ್ವ ನಿರ್ಧರಿತ ಪರಿಕಲ್ಪನೆಗಳನ್ನು ಬಳಸಬೇಕೆಂದರೆ ಕಲ್ಪನಾಶಕ್ತಿ ಅತ್ಯಗತ್ಯ. ಕಲ್ಪನಾಶಕ್ತಿಯನ್ನು ವೃದ್ಧಿಸಿಕೊಂಡಷ್ಟು ವಿಷಯ ವಿಸ್ತರಿಸುವ ವಿಷ್ಲೇಶಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ. ಸಣ್ಣ ಸಂಗತಿಯನ್ನೂ ವಿಭಿನ್ನ ಆಯಾಮದಿಂದ ನೋಡಿ ಅದಕ್ಕೆ ಹೊಸ ರೂಪವನ್ನು ನೀಡಲು ಸಾಧ್ಯವಾಗುವುದು. ಪ್ರಯೋಗಶೀಲತೆ ಇರಲಿ ಪ್ರಯೋಗಶೀಲತೆಯನ್ನು ಸೃಜನಶೀಲತೆಯ ತಾಯಿ ಎಂದು ಕರೆಯಬಹುದು. ಕೇಳಿದ ತಿಳಿದ ವಿಷಯಗಳ ಬಗ್ಗೆ ಗೋಚರ ಇಲ್ಲವೇ ಅಗೋಚರ ರೀತಿಯಲ್ಲಿ ಪ್ರಯೋಗಶೀಲತೆ ನಿರಂತರವಾಗಿ ನಡೆಸಿ. ಇದು ಅಪರೋಕ್ಷವಾಗಿ ನಿಮ್ಮಲ್ಲಿ ಸಾಹಸ ಪ್ರವೃತ್ತಿಗೆ ಬೇಕಾದ ಅಸಾಧಾರಣ ಧೈರ್ಯವನ್ನು ತುಂಬುತ್ತದೆ. ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸುತ್ತದೆ. ಚಿಂತನೆಯ ರೀತಿ ಬದಲಿಸಿ ಹೇಳಿದ್ದನ್ನು ಕೇಳಿದ್ದನ್ನು ಓದಿದ್ದನ್ನು ಬರೆದಿದ್ದನ್ನು ಏಕಮುಖೀ ರೀತಿಯಲ್ಲಿ ಯೋಚಿಸಿ ಒಪ್ಪಿಕೊಂಡು ಬಿಡದೇ ಯಾವುದೇ ಒಂದು ವಿಷಯದ ಬಗ್ಗೆ ವಿವಿಧ ಆಯಾಮಗಳಲ್ಲಿ ಚಿಂತಿಸಿದರೆ ಒಂದೇ ಕಾರ್ಯವನ್ನು ವಿವಿಧ ರೀತಿಯಲ್ಲಿ ಮಾಡಲು ಹಲವಾರು ಸಾಧ್ಯತೆಗಳು ಸಿಗುತ್ತವೆ. ಹೀಗೇ ನಿಮ್ಮ ಏಕ ಮುಖಿ ಚಿಂತನೆಯನ್ನು ಬಹುಮುಖಿ ಚಿಂತನಾ  ವಲಯಕ್ಕೆ ವಿಸ್ತರಿಸಿಕೊಳ್ಳಿ. ಹೊಸತನದ ಜೊತೆಗೆ ಮುಕ್ತತೆ ಇರಲಿ ಸೃಜನಶೀಲತೆಯು ಹೊಸತನದ ವಿನ್ಯಾಸದಲ್ಲಿಯೇ ಅಡಗಿದೆ. ನೊಡುವ ನೋಟದಲ್ಲಿ, ಕಾರ್ಯ ನಿರ್ವಹಣೆಯಲ್ಲಿ,ಚಿಂತನೆಯಲ್ಲಿ ವರ್ತನೆಯಲ್ಲಿ ಒಟ್ಟಿನಲ್ಲಿ ಪ್ರತಿಯೊಂದರಲ್ಲಿ ಹೊಸತನವೇ ಮಿಂಚುತಿರಲಿ. ಪೂರ್ವಾಗ್ರಹಪೀಡಿತರಾಗಿ ಯಾವುದೇ ಒಂದು ನಿರ್ಧಿಷ್ಟ ವಿಚಾರಗಳಿಗೆ ಕಟ್ಟಿ ಹಾಕಿಕೊಳ್ಳಬೇಡಿ. ಎಲ್ಲವನ್ನೂ ಮುಕ್ತ ಮನಸ್ಸಿನಿಂದ ಸ್ವಾಗತಿಸಿ. ಸಾಧಕ ಬಾಧಕಗಳನ್ನು ಗಮನದಲ್ಲಿರಿಸಿ ಕಾರ್ಯೋನ್ಮುಖರಾಗುವುದು ಉಚಿತ. ಉತ್ಸಾಹ ಚಿಮ್ಮುತಲಿರಲಿ ಉತ್ಸಾಹ ಹೊಸತನದ ಹೊಸ್ತಿಲಲ್ಲಿ ವಿವಿಧ ರೀತಿಯ ನೂತನ ವಿಚಾರಗಳಿಗೆ ನಾಂದಿ ಹಾಡುತ್ತದೆ. ಪ್ರತಿ ಬಾರಿ ಹೊಸತನಕ್ಕೆ ತುಡಿಯುವದರ ಜೊತೆಗೆ ಹಳೆಯದರಲ್ಲಿ ಅತ್ಯುತ್ತಮವಾದುದನ್ನು ಹೆಕ್ಕಿ ತೆಗೆಯಬೇಕು.ಅದನ್ನೇ ಬುನಾದಿಯನ್ನಾಗಿಸಿಕೊಂಡರೆ ಅವಿಷ್ಕಾರ ಪ್ರವೃತ್ತಿಯು ನಿಮ್ಮದಾಗುತ್ತದೆ. ಅವಿಷ್ಕಾರ ಪ್ರವೃತ್ತಿಯು ನಿಮ್ಮನ್ನು ಗೆಲುವಿನ ಶಿಖರದ ತುತ್ತ ತುದಿಯ ಮೇಲೆ ನಿಲ್ಲುವಂತೆ ಮಾಡುತ್ತದೆ. ಪ್ರೇರೇಪಿಸಿಕೊಳ್ಳಿ ಸೃಜನಶೀಲತೆಗೆ ಎಲ್ಲಡೆಯೂ ಮಣೆ ಮನ್ನಣೆ ಹೊಗಳಿಕೆ ಇದ್ದೇ ಇದೆ. ಇದರಿಂದ ಬಹಿರಂಗ ಪ್ರೇರಣೆ ದೊರೆಯುವುದು ಖಚಿತ.  ಕೇವಲ ಬಹಿರಂಗ ಪ್ರೇರಣೆಯೊಂದೇ ಸಾಲದು. ಈ ಬಹಿರಂಗ ಪ್ರೇರಣೆ ಅಂತಃಪ್ರೇರಣೆಯಾಗಿ ಪರಿವರ್ತನೆಯಾಗಬೇಕು. ನಿಮ್ಮನ್ನು ಪ್ರೇರೇಪಿಸಿಕೊಂಡಾಗ ಮಾತ್ರ ಸೃಜನಶೀಲತೆ ಹೊರೆ ಹೊಮ್ಮುವುದು. ಸೃಜನಶೀಲತೆಯು ಎಲ್ಲರಿಗೂ ಎಟಕುವಂಥದ್ದು..ಏಕೆಂದರೆ  ಇದು ಮಾನವ ಸಹಜವಾದ ಗುಣ. ದಿನ ನಿತ್ಯದ ಬದುಕಿನಲ್ಲಿ ಜೀವನೋತ್ಸಾಹವನ್ನು ತುಂಬಿಕೊಂಡು ಸುತ್ತಮುತ್ತಲಿರುವ ಸಂಗತಿಗಳೆಡೆಗೆ ಆಸಕ್ತಿ ಯ ಕಂಗಳಿಂದ ನೋಡುವುದನ್ನು ರೂಢಿಸಿಕೊಂಡರೆ ಸೋಲಲ್ಲೂ ಸಂಭ್ರಮಿಸುವ ಗಳಿಗೆ ಸನ್ನಿಹಿತವಾಗುವುದು. ಸೋಲನ್ನು ಗೆಲುವಾಗಿ ಪರಿವರ್ತಿಸುವ ಗುಣ ಸೃಜನಶೀಲತೆಗಿದೆ. ಬದುಕಿನ ಎಲ್ಲ ಹಂತದ ಕಾರ್ಯಗಳ ಗೆಲುವಿಗೂ ಸೃಜನಶೀಲತೆ ಬೇಕೇ ಬೇಕು. ಸೃಜನಶೀಲತೆಯು ವಿವೇಕವನ್ನು ಹೆಚ್ಚಿಸುವುದು.ಎಂಥ ಕ್ಲಿಷ್ಟಕರ ಸನ್ನಿವೇಶಗಳಲ್ಲೂ ಸಹನೆ ಕಳೆದುಕೊಳ್ಳದೇ ಪರಿಹಾರ ಕಂಡುಕೊಳ್ಳುವ ಪಕ್ವತೆ ನೀಡುವ ಶಕ್ತಿ,ನಮ್ಮ ಎಲ್ಲ ಶಕ್ತಿಗಳನ್ನು ಸಮರ್ಥವಾಗಿ ಉಪಯೋಗಿಸಿ ಸರ್ವತೋಮುಖ ವ್ಯಕ್ತಿತ್ವ ನೀಡುವ ಶಕ್ತಿ ಸೃಜನಶೀಲತೆಗೆ ಮಾತ್ರ ಇದೆ. ನೀವು ಯಶಸ್ಸು ಗಳಿಸಬೇಕೆಂದರೆ ನೀವು ನೂತನ ದಾರಿಗಳನ್ನು ಆರಿಸಬೇಕು.ಈಗಾಗಲೇ ಒಪ್ಪಿರುವ ನಡೆದಾಡಿರುವ ದಾರಿಗಳನ್ನು ಹೊರತುಪಡಿಸಿ ಸೃಜನಶೀಲತೆಯು ವಿಶ್ವದಾದ್ಯಂತ ಬಂದೂಕಿನ ಗುಂಡುಗಳಿಗಿಂತ ಹೆಚ್ಚು ಶಬ್ದ ಮಾಡುತ್ತ ಸಾಗುತ್ತದೆ ಎನ್ನುವುದು ನೆನಪಿರಲಿ. ಹಾಗಾದರೆ ತಡವೇಕೆ ಸೃಜನಶೀಲರಾಗಿ ಯಶಸ್ವಿ ವ್ಯಕ್ತಿಗಳಾಗಿ. *********************** ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

ಅಂಕಣ ಸಂಗಾತಿ, ಮುಖಾಮುಖಿ

ಮಕ್ಕಳು ಮತ್ತು ನಿಸರ್ಗ ನನ್ನನ್ನು ಮತ್ತೆ ಮತ್ತೆ ಹಿಡಿದಿಡುತ್ತವೆ ತಮ್ಮಣ್ಣ ಬೀಗಾರ ಮಕ್ಕಳ ಸಾಹಿತಿ ತಮ್ಮಣ್ಣ ಅವರ ಕುರಿತು… ತಮ್ಮಣ್ಣ ಬೀಗಾರ ಅವರು ಯಲ್ಲಾಪುರದ ಬೀಗಾರದವರು.‌1959 ನವ್ಹೆಂಬರ್ 22 ರಂದು ಜನಿಸಿದರು. ಸ್ನಾತಕೋತ್ತರ ಪದವೀಧರ , ಸಿದ್ದಾಪುರದ ಬಿದ್ರಕಾನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕಳೆದ 37 ವರ್ಷಗಳಿಂದ ಮಕ್ಕಳ ಜೊತೆ ಮಕ್ಕಳಾಗಿದ್ದರು. ಮಕ್ಕಳ ಸಾಹಿತ್ಯದ ಬಗ್ಗೆ ಬರೆಯುವವರು ವಿರಾಳತೀ ವಿರಳ. ಅದರೆ ತಮ್ಮಣ್ಣ ಮಕ್ಕಳ ಸಾಹಿತ್ಯವನ್ನು ತಮ್ಮ ಅಭಿವ್ಯಕ್ತಿಯಾಗಿ ಆಯ್ಕೆ ಮಾಡಿಕೊಂಡರು.‌ಚಿತ್ರ ಕಲೆ ಸಹ ಇವರ ಮತ್ತೊಂದು ಅಭಿವ್ಯಕ್ತಿ ಮಾಧ್ಯಮ‌.‌ತಮ್ಮ ಪಾಡಿಗೆ ತಾವು ಇದ್ದು ಬಿಡುವವರು. ಗುಬ್ಬಚ್ಚಿ ಗೂಡು,ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಮಲ್ನಾಡೆ ಮತಾಡು ಇವರ ಕವನ ಸಂಕಲನ ಗಳು ,‌ಅಮ್ಮನ ಚಿತ್ರ ,ಪುಟ್ಟನ‌ ಕೋಳಿ ಮುಂತಾದವು ಮಕ್ಕಳಾ ಕಥಾ ಸಂಕಲನಗಳು. ಬಾವಲಿ ಗುಹೆ ಮಕ್ಕಳ ಕಾದಂಬರಿ.ಹಸಿರೂರು ಹುಡುಗ ಕೃತಿಗೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಲ್ನಾಡೆ ಮಾತಾಡು ಕೃತಿಗೆ ವಸುದೇವ ಭೂಪಾಲಂ‌ ದತ್ತಿ ಪ್ರಶಸ್ತಿ ಸಿಕ್ಕಿದೆ. ಉತ್ತಮ ರಾಜ್ಯ ಶಿಕ್ಷಕ, ರಾಷ್ಟ್ರ ಶಿಕ್ಷಕರ ಪ್ರಶಸ್ತಿ ಸಹ ಇವರಿಗೆ ಸಂದಿವೆ.‌ಪ್ರಜಾವಾಣಿ ಶಿಶು ಕಾವ್ಯಪ್ರಶಸ್ತಿ ಸಹ ಪಡೆದಿದ್ದಾರೆ. ಸಂಗಾತಿ ಕನ್ನಡ ವೆಬ್ ಗಾಗಿ ಮಕ್ಕಳ ಸಾಹಿತಿತಮ್ಮಣ್ಣ ಬೀಗಾರ ಅವರು ನಾಗರಾಜ ಹರನಹಳ್ಳಿ ಅವರ ಜೊತೆ ಈ ಸಲ ಮುಖಾಮುಖಿಯಾಗಿ ದ್ದಾರೆ…………………… ಕತೆ ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಅವನುಕಂಡುಕೊಂಡ ಅನುಭವ, ಸತ್ಯ, ಸಂಕಷ್ಟಗಳನ್ನೆಲ್ಲಾ ಕರಗಿಸಿಕೊಂಡಿರುತ್ತಾನೆ. ಅಂತಹುಗಳನ್ನೆಲ್ಲ ತನ್ನ ಆಸಕ್ತಿ, ಅವಕಾಶ, ಸಾಧ್ಯತೆಗಳ ಮೇಲೆ ಅಭಿವ್ಯಕ್ತಿ ಪಡಿಸಲು ಪ್ರಯತ್ನಿಸುತ್ತಾನೆ. ಅದರಿಂದಾಗಿಯೇ ಕಲೆಗಳೆಲ್ಲ ಹುಟ್ಟಿಕೊಂಡಿದ್ದು ಅನಿಸುತ್ತದೆ. ನಾನು ನನ್ನಂತಹ ಅನೇಕರು ಕತೆ, ಕವಿತೆಗಳನ್ನು ಅಭಿವ್ಯಕ್ತಿಯ ಮಾಧ್ಯಮವಾಗಿ ಕಂಡುಕೊಂಡಿದ್ದಾರೆ. ಅದೇ ರೀತಿ ನಾನು ಕೂಡಾ ನನ್ನಲ್ಲಿ ಕರಗಿರುವ ಸಂವೇದನೆಗಳನ್ನ ಅಭಿವ್ಯಕ್ತಿ ಪಡಿಸಲು ಕತೆ ಕವಿತೆಗಳನ್ನು ಬರೆಯುತ್ತೇನೆ ಅಂದುಕೊಂಡಿದ್ದೇನೆ. ಇಲ್ಲಿ ನನ್ನಿಂದ ಸಮಾಜದ ಒಳಿತಿನ ವಿಸ್ತಾರಕ್ಕೆ ಒಂದಿಷ್ಟು ಸಹಾಯ ಆಗಬೇಕು ಹಾಗೂ ಸಮಾಜದ ಪ್ರೀತಿ ನನಗೆ ಸಿಗಬೇಕು ಎಂಬ ಆಸೆಯೂ ಮೈಗೂಡಿದೆ ಎಂದು ಹೇಳಬಹುದು. ನಾನು ವ್ಯಂಗ್ಯಚಿತ್ರ ಹಾಗೂ ಇತರ ಕಲೆಗಳನ್ನೂ ಅಭಿವ್ಯಕ್ತಿಯ ಮಾಧ್ಯಮವಾಗಿ ಬಳಸಿದ್ದೇನೆ ಅನ್ನುವ ಖುಷಿಯೂ ಸೇರಿದೆ. ಮಕ್ಕಳ ಸಾಹಿತ್ಯ ಕೃಷಿಗೆ ಒಲವು ಹೇಗೆ ಬಂತು, ಅಂತಹ ನಡೆಗೆ ಕಾರಣವೇನು? ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಪ್ರೀತಿಯಿಂದ ವೃತ್ತಿ ನಿರ್ವಹಿಸಿದವನು. ಶಿಕ್ಷಕನಾದವನಿಗೆ ಮಕ್ಕಳೊಡನೆಯ ಸಂಬಂಧ ಮತ್ತು ಆಪ್ತತೆ ಹೆಚ್ಚು. ಮಕ್ಕಳಿಗೆ ಕತೆ, ಕವಿತೆ ಕೇಳುವುದು, ಹೇಳುವುದು, ಚಿತ್ರ ಬರೆಯುವುದು ಎಲ್ಲ ತುಂಬಾ ಇಷ್ಟ. ಮಕ್ಕಳಿಗೆ ಕಥೆ ಹೇಳುತ್ತ ಜೊತೆಗೆ ನನ್ನದೇ ರಚನೆಯ ಕಥೆ ಹೇಳಲು ಪ್ರಾರಂಭಿಸಿದೆ. ಮಕ್ಕಳಿಗಾಗಿ ಚಿತ್ರ ಬರೆಯುತ್ತ ಕಲೆಯನ್ನೂ ಬೆಳೆಸಿಕೊಂಡೆ. ಹೀಗೆ ಕಥೆ ಕವನಗಳನ್ನು ಮಕ್ಕಳಿಗಾಗಿ ಬರೆಯುತ್ತ… ಅವುಗಳಿಗೆ ಅವರ ಖುಷಿಯ ಪ್ರತಿಕ್ರಿಯೆ ಕಾಣುತ್ತ ನಾನು ಮಕ್ಕಳ ಜಗತ್ತಿನಲ್ಲಿಯೇ ಇನ್ನಿಲ್ಲದ ಪ್ರೀತಿಯಿಂದ ತೊಡಗಿಕೊಂಡೆ. ಪ್ರಸ್ತುತ ಮಕ್ಕಳಿಗಾಗಿ ಇಪ್ಪತ್ತೆರಡು ಕೃತಿ ಪ್ರಕಟಿಸಿರುವ ನಾನು ಮಕ್ಕಳ ಖುಷಿ ಹಿಗ್ಗಿಸುವ, ಹೃದಯ ವಿಸ್ತರಿಸುವ ಪ್ರಯತ್ನದಲ್ಲಿ ಸದಾ ತೊಡಗಿಕೊಂಡಿದ್ದೇನೆ. ಶಿಕ್ಷಕ ವೃತ್ತಿ ಮತ್ತು ಮಕ್ಕಳ ಒಡನಾಟ ನಿಮ್ಮಲ್ಲಿ ಮಗುತನವನ್ನು ಪೋಷಿಸಿತೆ? ನಿಜ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವುದು ಪ್ರೀತಿಯ ಧ್ಯಾನದಿಂದ ಸಿದ್ಧಿಸುವಂತಹದ್ದು. ಮಕ್ಕಳ ಸಾಹಿತ್ಯವೆನ್ನುವುದು ‘ಪ್ರಭುದ್ಧತೆಯ ಮೇಲೆ ಮುಗ್ಧತೆಯ ಸವಾರಿ’ ಎಂದು ಎಚ್. ಎಸ್. ವಿ. ಹೇಳಿದ್ದಾರೆ. ಮಗುತನವನ್ನು ನಮ್ಮಲ್ಲಿ ಪೋಷಿಸುವುದು ಮಕ್ಕಳ ಮೇಲಿನ ಪ್ರೀತಿಯೇ, ಅವರ ಒಡನಾಟವೇ. ಈಗ ನನಗೆ ಅರವತ್ತಾಗಿದ್ದರೂ ಮಕ್ಕಳಿಗಾಗಿ ಬರೆಯುತ್ತ… ಅವರೊಂದಿಗೆ ತಾದಾತ್ಮ್ಯ ಹೊಂದುವುದು, ಮಗುತನದ ಖುಷಿ ಅನುಭವಿಸುವುದು ಸಾಧ್ಯವಾಗಿದೆ. ಅದಕ್ಕೆ ವೃತ್ತಿ, ಮಕ್ಕಳ ಒಡನಾಟ ಪ್ರೀತಿಗಳೇ ಕಾರಣ. ಮಕ್ಕಳ ಮೇಲಿನ ಅಕ್ಷರ ಪ್ರಯೋಗದ ಸಾಧ್ಯತೆಗಳನ್ನು ನೀವು ಶಾಲಾ ಕೋಣೆಯಲ್ಲಿ ಮಾಡಿದಾಗ ವಿಶೇಷ ಅನುಭವ ಆಗಿದ್ದುಂಟೆ?    ನಾನು ಯಾವಾಗಲೂ ಮಕ್ಕಳು ಖುಷಿ ಖುಷಿಯಾಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತ ಅವರು ತಾನಾಗಿ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ಹಂಬಲಿಸಿದವನು. ಅದಕ್ಕಾಗಿ ಶಾಲೆಯಲ್ಲಿ ಅಂತಹ ಪರಿಸರ ಹಾಗೂ ಆಪ್ತತೆಯನ್ನು ಮೂಡಿಸುವುದು ಬಹು ಮುಖ್ಯವಾಗುತ್ತದೆ. ಮಕ್ಕಳಿಗಾಗಿ ಕಥೆ ಹೇಳುವುದು, ಅವರಿಂದಲೇ ಕಥೆ ಕವನ ಬರೆಯಿಸಿ ಹೊತ್ತಿಗೆ ತಯಾರಿಸುವುದು, ಚಿತ್ರ ಬರೆಯಿಸುವುದು, ಕಲಾಕೃತಿಗಳ ತಯಾರಿ, ನಾಟಕ ಹಾಗೂ ಇತರ ಸಾಂಸ್ಕೃತಿಕ ಚಟುವಟಿಕೆ, ಎಲೆ ಕಲೆ, ಹಸಿರು ಶಾಲೆ, ಶೈಕ್ಷಣಿಕ ಉತ್ಸವ, ಕಲಾ ಪ್ರದರ್ಶನ ಹೀಗೆ ನನ್ನ ವೃತ್ತಿ ಉದ್ದಕ್ಕೂ ಮಾಡಿದ್ದೇನೆ. ಇದಕ್ಕೆ ಶಾಲಾ ಪರಿಸರವಷ್ಟೇ ಅಲ್ಲಕದೆ ಸಮಾಜದ ಎಲ್ಲ ಸ್ಥರದಿಂದಲೂ ಪ್ರೋತ್ಸಾಹ ಸಿಕ್ಕಿದ್ದು ಖುಷಿ ಉಂಟುಮಾಡುತ್ತದೆ. ಸರಕಾರಿ ಶಾಲೆ ಒಂದು ಮಾದರಿ ಶಾಲೆಯಾಗಿ ರೂಪುಗೊಂಡಿದ್ದು ಹೆಮ್ಮೆ. ಕಥೆ ಅಥವಾ ಕವಿತೆ ಹುಟ್ಟುವ ಸಮಯ ಯಾವುದು? ಕಥೆ ಕವಿತೆಗಳು ಹುಟ್ಟುವ ಸಮಯ ಯಾವುದು ಎಂದು ನಿರ್ಧಿಷ್ಟವಾಗಿ ಹೇಳಲಾಗದು. ನಾವು ನಮ್ಮ ಸುತ್ತಮುತ್ತಲಿನ ಆಗುಹೋಗುಗಳಿಗೆ ಸ್ಪಂದಿಸುತ್ತ ಅವುಗಳನ್ನು ನಾವು ಕಂಡುಕೊಂಡ ಸತ್ಯದ ಆಧಾರದ ಮೇಲೆ ಕರಗಿಸಿ ಕೊಂಡಿರುತ್ತೇವೆ. ಇಂತಹ ಕರಗಿರುವ ಸಂಗತಿಗಳೇ ಕಥೆ ಕವಿತೆಗಳಾಗಿ ಯಾವಾಗ ಬೇಕಾದರೂ ಹೊರ ಬರಬಹುದು. ಆದರೆ ಕಥೆ ಕವಿತೆಗಳನ್ನು ಬರೆಯುವವನ ಸಂವೇದನೆ, ಅಧ್ಯಯನ, ಪ್ರೀತಿ, ಆಸಕ್ತಿಗಳೆಲ್ಲ ಅವು ರೂಪುಗೊಳ್ಳುವಲ್ಲಿ ಮಹತ್ವ ಪಡೆದಿರುತ್ತವೆ.  ನಿಮ್ಮ ಕಥೆಗಳ ವಸ್ತು ವ್ಯಾಪ್ತಿ ಯಾವುದು, ಪದೇ ಪದೇ ಕಾಡುವ ವಿಷಯಗಳಾವವು?  ನಾನು ಮಕ್ಕಳ ಜಗತ್ತಿನವನು. ಮಕ್ಕಳು ಮತ್ತು ನಿಸರ್ಗ ನನ್ನ ಸಾಹಿತ್ಯದಲ್ಲಿ ನಿರಂತರವಾಗಿ ವಸ್ತುಗಳಾಗಿವೆ. ಮಕ್ಕಳ ಆಟ, ಖುಷಿ, ಸಿಟ್ಟು, ಸಂಕಟ ಎಲ್ಲವೂ ಅವರ ಸುತ್ತಲಿನ ಮನೆ, ಶಾಲೆ, ಹಸಿರಿನ ಪರಿಸರ ಮುಂತಾವುಗಳೊಡಗೂಡಿ ಕಾಣಿಸಿಕೊಂಡಿವೆ. ಮಕ್ಕಳು ಮತ್ತು ನಿಸರ್ಗ ನನ್ನನ್ನು ಮತ್ತೆ ಮತ್ತೆ ಹಿಡಿದಿಡುತ್ತವೆ. ನೀವು ಬರೆದ ಕಥೆ ಕವಿತೆಗಳಲ್ಲಿ ನಿಮ್ಮ ಬಾಲ್ಯ, ಹರಯ ಇಣುಕಿದೆಯೇ?   ದಟ್ಟ ಅರಣ್ಯದಿಂದ ಕೂಡಿದ ಯಾವುದೇ ಆಧುನಿಕ ಸೌಲಭ್ಯ ಇಲ್ಲದ ಹಳ್ಳಿಯಲ್ಲಿ ನನ್ನ ಬಾಲ್ಯ ಕಳೆದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರದವನು ನಾನು. ಇಲ್ಲಿನ ಕಾಡು, ನೀರು, ಗುಡ್ಡ, ಬೆಟ್ಟ, ಆಗಿನ ಮಕ್ಕಳ ಸ್ವಾತಂತ್ರ್ಯ, ಆಟ, ಸಾಹಸಗಳೆಲ್ಲ ವಸ್ತುವಾಗಿ ನನ್ನ ಪುಸ್ತಕಗಳಲ್ಲಿ ಕಾಣಿಸಿ ಕೊಂಡಿವೆ. ನಂತರದ ವೃತ್ತಿ ಬದುಕಿನ ಉದ್ದಕ್ಕೂ ಪಡೆದ ಅನುಭವಗಳೂ ಸೇರಿವೆ. ನನ್ನ ‘ಹಸಿರೂರಿನ ಹುಡುಗ’ ಪುಸ್ತಕದಲ್ಲಿ ಬಾಲ್ಯದ ಕಥೆಗಳನ್ನು ಮೊಗೆದು ಇಟ್ಟಿದ್ದೇನೆ. ಎಲ್ಲ ಪುಸ್ತಕಗಳಲ್ಲೂ ಬಾಲ್ಯ ರೂಪಾಂತರದ ಮೂಲಕ ಇಣುಕುತ್ತಲೇ ಇರುತ್ತದೆ. ಪ್ರತಿಯೊಬ್ಬ ಲೇಖಕರಿಗೂ ಅವರ ಸಾಹಿತ್ಯದಲ್ಲಿ ಬಾಲ್ಯ ಹಾಗೂ ಅವರ ಪರಿಸರ ಪ್ರಭಾವಿಸುತ್ತಲೇ ಇರುತ್ತದೆ ಎಂದು ನನಗೆ ಅನಿಸುತ್ತದೆ.  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?  ನಾನು ಮಕ್ಕಳ ಮೇಲೆ ಬಹಳ ವಿಶ್ವಾಸ ಇಡುತ್ತೇನೆ. ಮಕ್ಕಳ ಹೃದಯ, ಮನಸ್ಸುಗಳು ವಿಸ್ತಾರ ಆಗುವುದರಿಂದ ಒಳ್ಳೆಯ ಸಮಾಜ ಮತ್ತು ಆಡಳಿತ ವ್ಯವಸ್ತೆಯ ನಿರ್ಮಾಣ ಆಗುತ್ತದೆ. ರಾಜಕೀಯ ಸೇರಿದಂತೆ ಎಲ್ಲರಿಗೂ ತಮ್ಮ ನಡೆಯ ಕುರಿತಾಗಿ ಮುಕ್ತ ಆತ್ಮಾವಲೋಕನ ಇರಬೇಕು. ನಮ್ಮ ನಾಯಕರ ನಡೆಗಳು ಸಮಾಜದ ಮೇಲೆ ಬಹುಬೇಗ ಪರಿಣಾಮ ಬೀರುತ್ತವೆ… ಇದರಿಂದಾಗುವ ಒಳಿತು ಮತ್ತು ಸಂಕಟಗಳ ಅರಿವು ಎಲ್ಲರಿಗೆ ಇರುವುದು ಅಗತ್ಯ. ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ನಮ್ಮ ವೃತ್ತಿಯಲ್ಲಿ ಪ್ರೀತಿಯಿಂದ ತೊಡಗಿಕೊಳ್ಳುತ್ತ, ಎಲ್ಲರನ್ನೂ ಗೌರವದಿಂದ ಕಾಣುತ್ತ ಪ್ರೀತಿ, ಸ್ನೇಹದ ಭಾವಗಳನ್ನು ವಿಸ್ತಾರ ಗೊಳಿಸುತ್ತ ಬದುಕುವುದೇ ದೇವರು ಪೂಜೆ ,ಧರ್ಮ ಎಲ್ಲವೂ ಆಗುತ್ತದೆ ಎಂದುಕೊಂಡಿದ್ದೇನೆ.  ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನಿಸುತ್ತದೆ?  ಮೊದಲಿನಂತಹ ಸಾಂಸ್ಕøತಿಕ ವಾತಾವರಣ ಇಲ್ಲ ಎಂದು ಹೇಳುತ್ತೇವೆ. ಆದರೂ ನಮ್ಮ ಸಮಾಜದಲ್ಲಿ ಸಾಂಸ್ಕøತಿಕ ಚಿಂತನೆ, ಚಟುವಟಿಕೆಗಳು ನಡೆಯುತ್ತಲೇ ಇವೆ. ಅದು ಹೆಚ್ಚಬೇಕು.  ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ.   ಮೊದಲಿನಿಂದಲೂ ನನ್ನಷ್ಟಕ್ಕೆ ನಾನು ಬರೆಯುತ್ತಾ ಬಂದಿದ್ದೇನೆ. ನನಗೆ ಆರ್.ವಿ. ಭಂಡಾರಿ. ಆರ್.ಪಿ.ಹೆಗಡೆ, ಸನದಿ, ವಿಷ್ಣು ನಾಯ್ಕ, ಆನಂದ ಪಾಟೀಲ ಮುಂತಾದ ಅನೇಕ ಹಿರಿಯ ಸಾಹಿತಿಗಳು ಮಾರ್ಗದರ್ಶನ, ಪ್ರೋತ್ಸಾಹ ನೀಡಿದ್ದಾರೆ. ರಾಜ್ಯಾದ್ಯಂತ ನನ್ನ ಪುಸ್ತಕ ಓದುವ ಪ್ರೀತಿಯ ಬಳಗ ಬೆಳೆದಿದೆ. ರಾಜಕೀಯದ ಕುರಿತು ನಾನು ಯೋಚಿಸಿಲ್ಲ .  ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತಿದೆ?  ನಮ್ಮ ದೇಶದ ಸಾಹಿತ್ಯ, ಸಾಂಸ್ಕೃತಿಕ ಹಿರಿಮೆ ಇದೆ. ಪ್ರಜಾ ಪ್ರಭುತ್ವ ವ್ಯವಸ್ಥೆ ಸಂವಿಧಾನ ನೀಡಿದೆ. ವಿಜ್ಞಾನ, ತಂತ್ರಜ್ಞಾನ ಒಟ್ಟಾರೆ ಅಭಿವೃದ್ಧಿಗಳಲ್ಲಿ ಪ್ರಗತಿ ಇದೆ. ಇದನ್ನೆಲ್ಲಾ ಬಳಸಿಕೊಂಡು ಪ್ರೀತಿ ,ಸ್ನೇಹದ ಅಡಿಯಲ್ಲಿ ನಡೆಯಬೇಕು ಎಂದುಕೊಳ್ಳುತ್ತೇನೆ.  ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು?  ಮಕ್ಕಳಿಗಾಗಿ ಹೆಚ್ಚು ಬರೆಯುತ್ತೇನಾದ್ದರಿಂದ ಮಕ್ಕಳ ಸಾಹಿತ್ಯದ ಕುರಿತೇ ಹೇಳುವುದಾದರೆ… ಮಕ್ಕಳಿಗೆ ಇಷ್ಟ ಆಗುವ ಹಾಗೂ ಅವರಿಗೆ ಒಳಿತಾಗುವ  ಪುಸ್ತಕಗಳು ಹೆಚ್ಚು ಹೆಚ್ಚು ಬರಬೇಕು. ಈಗ ಹೊಸ ಕಾಲದ ಹೊಸ ವಸ್ತು ಸಂವೇದನೆಗಳ ಪುಸ್ತಕಗಳು ಕನ್ನಡ ಮಕ್ಕಳ ಸಾಹಿತ್ಯದಲ್ಲಿ ಬರುತ್ತಿವೆ. ಅದನ್ನು ಆಕರ್ಷಕವಾಗಿ ಪ್ರಕಟಿಸುವ ಪ್ರಕಾಶಕರು ಬೇಕು ಹಾಗೂ ಮಕ್ಕಳಿಗೆ ತಲುಪುವಂತಾಗಬೇಕು. ಮಕ್ಕಳು ಓದಿಗೆ ತೆರೆದುಕೊಂಡರೆ ಸಮಾಜದ ಒಳಿತಿನ ನಡೆ ಬಲಗೊಳ್ಳುತ್ತದೆ. ನಿಮ್ಮ ನಿಚ್ಚಿನ ಸಾಹಿತಿಗಳಾರು? ತೇಜಸ್ವಿಯವರ ಪರಿಸರ ಪ್ರೀತಿಯ ಪುಸ್ತಕಗಳು ನನಗೆ ತುಂಬಾ ಆಪ್ತ. ಇಂಗ್ಲೀಷ ಓದು ಕಡಿಮೆ. ರಸ್ಕಿನ ಬಾಂಡ್ ಇಂಗ್ಲೀಷಿನಲ್ಲಿ ಮಕ್ಕಳಿಗಾಗಿ ಬರೆಯುತ್ತಾರೆ. ಅವರದೂ ಪರಿಸರದ ಮಧ್ಯ ಅರಳಿದ ಕಥೆಗಳೇ ಆಗಿವೆ. ಅವರ ಕಥೆಗಳನ್ನೂ ಓದಿದ್ದೇನೆ. ಈಗ ಚದುರಂಗರ ‘ವೈಶಾಖ’ ಓದುತ್ತಿದ್ದೇನೆ.  ಹೆಚ್ಚು ಸಂತೋಷದ ಕ್ಷಣ ಯಾವುದು? ಮಕ್ಕಳ ಖುಷಿ ಹೆಚ್ಚಿಸುವ ಕೆಲಸದಲ್ಲಿ ತೊಡಗುವುದು. ನಿಮ್ಮ ನೆಚ್ಚನ ತಾಣ ಯಾವುದು? ನಮ್ಮ ಜಿಲ್ಲೆಯ ಎಲ್ಲ ಹಸಿರು ತಾಣಗಳು. ……………. ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಕಬ್ಬಿಗರ ಅಬ್ಬಿ -8 ನಿಸರ್ಗಕ್ಕೂ ಬೇಕು ಸ್ವಾತಂತ್ರ್ಯ ಈ ನೆಲ, ಈ ಜಲ ಈ ಆಕಾಶಈ ಜೀವ ಈ ಭಾವ ಅನಂತಾವಕಾಶಈ ಕಲ್ಲು ಪರಮಾಣು ಒಳದೇವರ ಕಣ್ಣುಈ ಸ್ಥಾವರ ಈ ಜಂಗಮ ಪ್ರಾಣ ವಿಹಂಗಮಈ ವಾತ ನಿರ್ವಾತ ಆತ್ಮನೇ ಆತ್ಮೀಯಈ ಅಂಡ ಬ್ರಹ್ಮಾಂಡ ಉಸಿರಾಡುವ ಕಾಯ ಕಾವ್ಯದೊಳಗೆ ಜೀವರಸವಿದೆ.ರಸದ ಸೆಲೆಯಿದೆ.ಕುದಿಸಮಯವನ್ನೂ ತಣಿಸುವ ಪ್ರೀತಿಯಿದೆ.ಕಲ್ಲ ಮೊಟ್ಟೆಯನ್ನೂ ಕಾವು ಕೊಟ್ಟು ಮರಿ ಮಾಡುವ ಸೃಷ್ಟಿ ತಂತುವಿನ ತರಂಗವಿದೆ.ಕವಿಯ ಕಣ್ಣೊಳಗೆ ಮೂಡಿದ ಪ್ರತೀ ವಸ್ತುವಿನ ಬಿಂಬ ಜೀವಾತ್ಮವಾಗಿ ಕಾವ್ಯದೇಹ ತೊಟ್ಟು ಹೊರ ಬರುತ್ತೆ.ಸ್ಪಂದನೆ ಮತ್ತು ಪ್ರತಿಸ್ಪಂದನೆ ಕಲ್ಲಿನೊಳಗಿನ ಪರಮಾಣು ಕೂಡಾ ಮಾಡುತ್ತೆ.ನೋಟದ ವ್ಯಾಪ್ತಿಗೆ ಸಿಕ್ಕಿದ ಅಷ್ಟನ್ನೂ ಕವಿಯ ಪ್ರಜ್ಞೆ ಬಾಚಿ ಎದೆಗಿಳಿಸುತ್ತೆ.ಮನುಷ್ಯ ಜಗತ್ತಿನ ನೋವು ನಲಿವು, ಶೋಷಣೆಗಳು, ಕಪ್ಪು ಬಿಳುಪು, ಹೆಣ್ಣು ಗಂಡು, ಬೇಧಭಾವಗಳು ಕವಿಗೂ ಕಾಣಿಸುತ್ತೆ, ಇತರರಿಗೂ ಕಾಣಿಸುತ್ತೆ. ಆದರೆ ದಿನಾಲೂ ಬೆಳಗ್ಗೆ ಕೂಗುವ, ಈ ದಿನ ಹಾಜರು ಹಾಕದ ಕೋಗಿಲೆ,ಚಿಟ್ಟೆಯ ರೆಕ್ಕೆಯಲ್ಲಿರುವ ಚುಕ್ಕಿಗಳ ಡಿಸೈನ್,ರಸ್ತೆಯಗಲಿಸಲು ಕಡಿದ ಮರದ ಕಾಂಡದಿಂದ ಜಿನುಗುವ ಕಣ್ಣೀರು,ನೀರ ಹರಿವು ನಿಂತು ಏದುಸಿರು ಬಿಡುತ್ತಿರುವ ನದೀ ಪಾತ್ರ,ಎಂಡೋಸಲ್ಫಾನ್ ಸ್ಪ್ರೇ ಯಿಂದ ಸತ್ತು ಬೀಳುವ ಜೇನು ನೊಣ,ಕಾರಿನ ಹೊಗೆ, ಗಗನ ಚುಚ್ಚುವ ಕಟ್ಟಡ,ಎಲ್ಲವೂ ಕವಿ ಹೃದಯಕ್ಕೆ ತುಂಬಾ ಚುಚ್ಚುತ್ತೆ. ಪರಿಸರದ ಪರಿವರ್ತನೆಗಳು, ಪರಿಸರದ ಮೇಲೆ ಮನುಷ್ಯನ ಯಾಂತ್ರಿಕ ಮನೋಭಾವದ ಅತ್ಯಾಚಾರ, ಮತ್ತು ಅದರಿಂದಾಗಿ, ಪರಿಸರದಲ್ಲಿ ನಢೆಯುತ್ತಿರುವ ಅಸಮತೋಲನ, ಅತಿವೃಷ್ಟಿ,,ಅನಾವೃಷ್ಟಿ ಕವಿಯನ್ನು ದರ್ಶಿಸಿ, ದರ್ಶನವಾಗಿ ಇಳಿದು ಬಂದಾಗ ಕವಿತೆ ಒಳಗೊಳಗೇ ಅಳುತ್ತೆ. ಅಂತಹ ಒಂದು ಎದೆತಟ್ಟುವ ಕವಿತೆ, ಚಂದಕಚರ್ಲ ರಮೇಶ್ ಬಾಬು ಅವರು ಪುಟಕ್ಕಿಳಿಸಿದ್ದಾರೆ. ಈ ಕವಿತೆಯಲ್ಲಿ, ಕೋಗಿಲೆ, ಮನುಷ್ಯನಲ್ಲಿ ಕ್ಷಮೆ ಕೇಳುತ್ತೆ. ಕೋಗಿಲೆಯ ಮಾತುಗಳು ಹೀಗಿವೆ. ಕ್ಷಮೆ ಇರಲಿ ವಸಂತವನದವಸ್ತುಪ್ರದರ್ಶನಕ್ಕೆನಿಮಗೆಲ್ಲ ಸ್ವಾಗತನನ್ನ ಹೆಸರು ಕೋಗಿಲೆನಾನು ವಸಂತನಆಗಮನಸೂಚಿನಾನು ಹೊರಡಿಸುವ ಇನಿದನಿವಸಂತನು ಕಾಲಿಟ್ಟ ಗುರುತು ಒಂದಾನೊಂದು ಕಾಲದಲ್ಲಿನನಗೆ ಎಲ್ಲೆಂದರಲ್ಲಿಮಾವಿನ ಚಿಗುರು ಸಿಗುತ್ತಿತ್ತುಅದು ಮೆದ್ದು ನಾನುನನ್ನ ಇನಿದನಿ ಹೊರಡಿಸುತ್ತಿದ್ದೆಈಗ ಹುಡುಕುವುದರಲ್ಲೇ ಸಾಕಾಗಿದೆದನಿ ಹೊರಡದಿದ್ದಲ್ಲಿ ಕ್ಷಮಿಸಿ ಹೀಗೆ ಬನ್ನಿಇಲ್ಲಿ ಒಂದು ಸಮಯದಲ್ಲಿನಿಸರ್ಗದ ಮಡಿಲಾದದಟ್ಟ ಕಾಡೊಂದಿತ್ತುಗಿಡಮರ ಹೂವು ಹಣ್ಣುಗಳಿಂದನಮ್ಮೆಲ್ಲರ ತಂಗುದಾಣವಾಗಿತ್ತುಈಗ ಇದು ಬರೀ ಅವಶೇಷ ಭೂಮಿಇಲ್ಲಿಗೆ ವಸಂತನ ಆಗಮನದಸುಳಿವು ಸಿಗುವುದಿಲ್ಲಕುರುಹೂ ಕಾಣುವುದಿಲ್ಲಆದಕಾರಣ ಏನೂ ಕಾಣದಿದ್ದರೆಕ್ಷಮೆ ಇರಲಿ ಹೀಗೆ ಬನ್ನಿಕೆಲವಾರು ದಶಕಗಳ ಹಿಂದೆ ಇಲ್ಲಿವನಜೀವಿಗಳ ಸಂಭ್ರಮವಿತ್ತುಪಶು ಪಕ್ಷಿಗಳ ಜಾತ್ರೆಯಿತ್ತುಹಸಿರುವನ ಸಿರಿಯ ನಡುವೆಅವುಗಳ ಜೀವನವೂ ಹಸಿರಾಗಿತ್ತುಈಗ ಇದು ಬರೇ ಬೀಡುಗುಡ್ಡ ದಿನ್ನೆಗಳ ನಾಡು ನನ್ನ ಬಿಕ್ಕಳಿಕೆಗಳನ್ನುತಡೆದು ತಡೆದುದನಿಯ ಒತ್ತಿ ಹಿಡಿದುಈಗ ಹೊರಡುವುದೇ ಕಷ್ಟವಾಗಿದೆನಿಮ್ಮೊಟ್ಟಿಗೆ ಬರಲೂ ಆಗದಾಗಿದೆ ವಸಂತನ ಆಗಮನದಕಾತರ ತೋರುವ ನಿಮಗೆನಿರಾಶೆ ಮಾಡುತ್ತಿದ್ದಕ್ಕೆಕ್ಷಮೆ ಇರಲಿನೀವು ಮುಂದುವರೆಸಿಎಲ್ಲಾದರೂ ವನಸಿರಿನಳನಳಿಸಿದ್ದು ಕಂಡುಬಂದರೇನನಗೆ ತಿಳಿಸಿ ಮತ್ತೆ ನನ್ನ ದನಿಗೊಂದುನವ ಜೀವನ ಬಂದೀತುವನ ಜೀವನದ ಸವಿ ತಂದೀತುಹೋಗಿಬನ್ನಿ ನಮಸ್ಕಾರ *** *** *** ಕೋಗಿಲೆಯ ಸ್ವಗತ ಈ ಕವಿತೆ. ವಸಂತವನದ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಪ್ರೇಕ್ಷಕರಿಗೆ ತೋರಿಸುವ ಕೆಲಸ ಕೋಗಿಲೆಯದ್ದು. ವಸಂತ ಎಂದರೆ ಪ್ರಕೃತಿ ನಳನಳಿಸಿ, ಹೂ ಅರಳಿಸಿದ ಹಸಿರು ಲಂಗ ತೊಟ್ಟು ಇನಿಯನಿಗಾಗಿ ಕಾದು ಪ್ರೇಮಿಸಿ,ಕಾಮಿಸಿ, ನಲಿದು ಗರ್ಭವತಿಯಾಗುವ ಕಾಲ. ಸೃಷ್ಟಿ ಕ್ರಿಯೆ ಔನ್ನತ್ಯವನ್ನು ಮುಟ್ಟುವ, ಕಲಾತ್ಮಕವಾಗುವ, ಜೀವರಾಶಿಗಳು ಸಂಭ್ರಮಿಸುವ ಕಾಲ. ಮಾವಿನ ಮರ ಹೂ ಬಿಡುತ್ತೆ,ಕೆಲವೆಡೆ ಚಿನ್ನದ ತಳಿರಾಗಿ ಮೆದು ಮೆದುವಾದ ಎಲೆ ಚಿಗುರಿ, ಕೋಗಿಲೆಗೆ ಹಬ್ಬವೋ ಹಬ್ಬ! ಇಂತಹ ಜೀವೋತ್ಸವವನ್ನು, ಕವಿ ವಸಂತವನದ ‘ ವಸ್ತುಪ್ರದರ್ಶನ’ ಅಂತ ಹೆಸರಿಟ್ಟು ಕರೆಯುವಾಗಲೇ ಜೀವರಾಶಿಗಳು ಹೆಣವಾಗಿ ಮಸಣ ಹುಡುಕುವುದರ ಚಿತ್ರಣದ ಅರಿವಾಗುತ್ತೆ. ವಸ್ತು ಪ್ರದರ್ಶನ, ಮಾನವ,ತನ್ನ ಸಾಧನೆಯನ್ನು ಪ್ರದರ್ಶಿಸುವ ಕಾರ್ಯಕ್ರಮ. ಮಾನವ ನಿರ್ಮಿತ ಎಂದರೆ ಅದು ನಿರ್ಜೀವ ವಸ್ತುವೇ. ‘ವಸಂತವನದ ವಸ್ತುಪ್ರದರ್ಶನ’ ಎಂಬ ಈ ಸಾಲಿನ ಮೊದಲ ಪದ ಜೀವತತ್ವ,ಎರಡನೆಯ ಪದ ನಿರ್ಜೀವ ತತ್ವ. ಈ ಕವಿತೆ ಅಷ್ಟೂ ದ್ವಂದ್ವಗಳನ್ನು, ಜೀವದಿಂದ ನಿರ್ಜೀವತ್ವದತ್ತ ನಡೆದ ದಾರಿಯನ್ನು ಎರಡೇ ಪದದಲ್ಲಿ ಸೆರೆಹಿಡಿಯಿತಲ್ಲಾ. ಇದು ಕವಿಸಮಯ. “ನನ್ನ ಹೆಸರು ಕೋಗಿಲೆನಾನು ವಸಂತನಆಗಮನಸೂಚಿನಾನು ಹೊರಡಿಸುವ ಇನಿದನಿವಸಂತನು ಕಾಲಿಟ್ಟ ಗುರುತು” ಕೋಗಿಲೆಯ ಸೆಲ್ಫ್ ಇಂಟ್ರೊಡಕ್ಷನ್ ನಲ್ಲಿ, ಗತವೈಭವದ ನೆನಪಿನ ಸುಖವಿದೆ. ಕವಿತೆ ಹಾಗೆ ಆರಂಭವಾಗುತ್ತೆ. ಕೋಗಿಲೆಯ ಸ್ವರ ವಸಂತಾಗಮನಕ್ಕೆ ರೂಪಕವೂ ಆಗಿದೆ. “ಒಂದಾನೊಂದು ಕಾಲದಲ್ಲಿನನಗೆ ಎಲ್ಲೆಂದರಲ್ಲಿಮಾವಿನ ಚಿಗುರು ಸಿಗುತ್ತಿತ್ತುಅದು ಮೆದ್ದು ನಾನುನನ್ನ ಇನಿದನಿ ಹೊರಡಿಸುತ್ತಿದ್ದೆಈಗ ಹುಡುಕುವುದರಲ್ಲೇ ಸಾಕಾಗಿದೆದನಿ ಹೊರಡದಿದ್ದಲ್ಲಿ ಕ್ಷಮಿಸಿ” ವಸಂತನ ಆಗಮನ ಸೂಚಿ, ಕೋಗಿಲೆಯ ಕೊರಳ ಕುಹೂ. ಮೇಲಿನ ಸಾಲಿನಲ್ಲಿ, ಹೇಳುವಂತೆ, ಕೋಗಿಲೆಗೆ ಇತ್ತೀಚೆಗೆ ಮಾವಿನ ತಳಿರು ಸಿಗುತ್ತಿಲ್ಲ. ಹುಡುಕಿ ಸಾಕಾಗಿದೆ. ತಳಿರು ಮೆದ್ದರೇ ಕೋಗಿಲೆಗೆ ಸ್ವರ. ತಳಿರು ತಿನ್ನದೆ ಸ್ವರ ಹೊರಡಲ್ಲ ಕೋಗಿಲೆಗೆ.ವಸಂತಾಗಮನದ ಮಾರ್ಗ ಸೂಚಿ ಕೂಗಿಲ್ಲ ಎಂದರೆ, ವಸಂತಾಗಮನವೇ ಆಗುತ್ತಿಲ್ಲ. ಮನುಷ್ಯನಿಗೆ ಅದರ ಪರಿವೆಯೂ ಇಲ್ಲ! ಆತ ಸ್ಪಂದನಾರಹಿತ ಸ್ವಾರ್ಥಿ ಜೀವ.ಆತನಿಗೆ ವಸ್ತು ಪ್ರದರ್ಶನ ನಡೆದರೆ ಸಾಕು ತಾನೇ. ಮುಂದುವರೆದು ಕೋಗಿಲೆ ಅಳುತ್ತೆ. ಬಿಕ್ಕಿ ಬಿಕ್ಕಿ ಅಳುತ್ತೆ. “ನನ್ನ ಬಿಕ್ಕಳಿಕೆಗಳನ್ನುತಡೆದು ತಡೆದುದನಿಯ ಒತ್ತಿ ಹಿಡಿದುಈಗ ಹೊರಡುವುದೇ ಕಷ್ಟವಾಗಿದೆನಿಮ್ಮೊಟ್ಟಿಗೆ ಬರಲೂ ಆಗದಾಗಿದೆ” ವಸ್ತುಪ್ರದರ್ಶನ ತೋರಿಸಲು ಕೋಗಿಲೆಗೆ ಮಾತು ಹೊರಡುತ್ತಿಲ್ಲ. ಅದು ಬಿಕ್ಕುತ್ತಿದೆ. ಬಿಕ್ಕಿ ಬಿಕ್ಕಿ ಅಳುವ ನಡುವೆ ಮಾತುಗಳು ತುಂಡು ತುಂಡಾಗಿ ನೋವಿನಲ್ಲಿ ಅದ್ದಿ ಅರ್ಧ ಪದಗಳಾಗಿ, ಉಳಿದರ್ಧ ಎಂಜಲಿನ ಜತೆ ಗಂಟಲು ಸೇರಿ ಮಾತಾಡಲಾಗಲ್ಲ. ದನಿಯ ಒತ್ತಿ ಹಿಡಿದು,ಅಳು ಕಟ್ಟಿ ಹೊರಡುತ್ತಿಲ್ಲ. “ಎಲ್ಲಾದರೂ ವನಸಿರಿನಳನಳಿಸಿದ್ದು ಕಂಡುಬಂದರೇನನಗೆ ತಿಳಿಸಿ ಮತ್ತೆ ನನ್ನ ದನಿಗೊಂದುನವ ಜೀವನ ಬಂದೀತುವನ ಜೀವನದ ಸವಿ ತಂದೀತುಹೋಗಿಬನ್ನಿ ನಮಸ್ಕಾರ” ಕೋಗಿಲೆ, ಪ್ರೇಕ್ಷಕನಿಗೆ, ವಿನಂತಿಸುತ್ತೆ. ಎಲ್ಲಾದರೂ ವನಸಿರಿ ನಳನಳಿಸಿದ್ದು ಕಂಡರೆ ತಿಳಿಸಿ, ಮತ್ತೆ ನನ್ನ ದನಿಗೊಂದು ನವಜೀವನ ಬಂದೀತು, ಅಂತ.‌ ಹೋಗಿ ಬನ್ನಿ ನಮಸ್ಕಾರ ಎಂದು ಕೋಗಿಲೆ ಪ್ರೇಕ್ಷಕನಿಗೆ ಹೇಳುವಾಗ ನಮಸ್ಕಾರದೊಳಗೆ,ಮನುಷ್ಯಜಗತ್ತಿನತ್ತ ತಿರಸ್ಕಾರ ಭಾವನೆಯಿದೆಯೇ?. ಇಷ್ಟೊಂದು ನಿರಾಶೆಯಲ್ಲೂ ‘ನವ ಜೀವನ ಬಂದೀತು’ ಎಂಬ ಆಶಾಭಾವದೊಂದಿಗೆ ಕೋಗಿಲೆಯ ಕವಿತೆ ಮುಗಿಯುತ್ತೆ. ಕವಿತೆಯ ಶೀರ್ಷಿಕೆ ವಿಡಂಬನಾತ್ಮಕ. ಮನುಷ್ಯ ಕೋಗಿಲೆಯಲ್ಲಿ ಕ್ಷಮೆ ಕೇಳಬೇಕಿತ್ತು. ಆದರೆ ಮನುಷ್ಯನ ಸ್ವಕೇಂದ್ರಿತ ಮನಸ್ಸು ಸ್ಪಂದನೆಯನ್ನೇ ಮರೆತು ಒಣವಾದಾಗ, ಕೋಗಿಲೆಯೇ ಕ್ಷಮೆ ಕೇಳುವಂತಾಗಿದೆ. ಆದರೆ ಕವಿಯ ಪ್ರಜ್ಞೆ ಹೊಸತೊಂದು ಅನುಭವಕ್ಕೆ ತೆಗೆದುಕೊಂಡಾಗ, ಅದೇ ಕೋಗಿಲೆಯ ಕವಿತೆ ಹೇಗೆ ಬದಲಾಗುತ್ತೆ ಅಂತ ನೋಡಿ!.ಕರೋನಾ ಲಾಕ್ ಡೌನ್ ಆದಾಗ, ಮನುಷ್ಯನ ಇಂಟರ್ಫಿಯರೆನ್ಸ್ ಇಲ್ಲದೇ, ವನಪುಷ್ಪಗಳು ನಳನಳಿಸಿದಾಗ ಕೋಗಿಲೆಯ ಕನಸು ನನಸಾಗುತ್ತೆ. ರಮೇಶ್ ಬಾಬು ಅವರ ಕರೋನ ಸಮಯದ ಕೋಗಿಲೆಯ ಉಲ್ಲಾಸದ ಮಾತುಗಳು ಹೀಗಿವೆ. ತಳಿರು ಮೆದ್ದ ಕೋಗಿಲೆ ಪ್ರತಿವರ್ಷದಂತೆಯುಗಾದಿಯಂದುವಸಂತನ ಆಗಮನಸೂಚ್ಯವಾಗಿಸಾಂಕೇತಿಕವಾಗಿದನಿ ಹೊರಡಿಸಲುಕೊರಳು ಸರಿಪಡಿಸಿಕೊಂಡ ಕೋಗಿಲೆಎಂದಿನಂತೆ ಕೆಲ ಕ್ಷಣಕ್ಕೆಮಾತ್ರ ಎಂದು ತಯಾರಿಅದೇನಾಶ್ಚರ್ಯತನ್ನ ಉಸಿರು ಕಟ್ಟಲಿಲ್ಲದನಿ ಗೊಗ್ಗರಾಗಲಿಲ್ಲಸರಾಗವಾಗಿ ಹೊರಟ ಇಂಚರಉಬ್ಬಸ ಕಳೆದ ನಿಸರ್ಗಹರಡಿದ ರಂಗಸ್ಥಳದಿನವಿಡೀ ಮನತುಂಬಿಸಾಗಿತು ಗಾನಕೊರೋನಾದ ಖಬರಿಲ್ಲಆಡಳಿತದ ಅರಿವಿಲ್ಲಕಾಲುಷ್ಯ ಕಾಣದ್ದೇ ಮಾನದಂಡಅಂದಿನಿಂದ ಇಂದಿಗೂಚುಮುಚುಮು ವೇಳೆಆರಂಭವಾದರೆ ಕಚೇರಿಗೂಡು ಸೇರುವ ಹೊತ್ತಿಗೂ ಮುಗಿಯದುಮತ್ತೆಂದು ಸಿಕ್ಕೀತೋಎನ್ನುವ ಹಾಗೆಕತ್ತುಚಾಚಿಸ್ವರದೌತಣ ನೀಡುತ್ತಿದೆತಳಿರು ಮೆದ್ದ ಕೋಗಿಲೆ ! ** *** **** ಈ ಸಾಲುಗಳನ್ನು ನೋಡಿ! “ವಸಂತನ ಆಗಮನಸೂಚ್ಯವಾಗಿಸಾಂಕೇತಿಕವಾಗಿದನಿ ಹೊರಡಿಸಲುಕೊರಳು ಸರಿಪಡಿಸಿಕೊಂಡ ಕೋಗಿಲೆಎಂದಿನಂತೆ ಕೆಲ ಕ್ಷಣಕ್ಕೆಮಾತ್ರ ಎಂದು ತಯಾರಿಅದೇನಾಶ್ಚರ್ಯತನ್ನ ಉಸಿರು ಕಟ್ಟಲಿಲ್ಲದನಿ ಗೊಗ್ಗರಾಗಲಿಲ್ಲಸರಾಗವಾಗಿ ಹೊರಟ ಇಂಚರಉಬ್ಬಸ ಕಳೆದ ನಿಸರ್ಗ “ ಬಹುಷಃ ಕೋಗಿಲೆಯಷ್ಟೇ ನಿಮಗೂ ಖುಶಿಯಾಗಿರಬೇಕು!‘ತನ್ನ ಉಸಿರು ಕಟ್ಟಲಿಲ್ಲ ದನಿ ಗೊಗ್ಗರಾಗಲಿಲ್ಲ’ ಅಂತ ಕೋಗಿಲೆ ಮನುಷ್ಯಾಕ್ರಮಣದಿಂದ ಕಳೆದ ಕೊರಳು ಮರುಪಡೆದ ಸಂತಸ ವ್ಯಕ್ತಪಡಿಸುತ್ತದೆ. ಇಲ್ಲಿ ಕೋಗಿಲೆ, ವಸಂತನಿಗೆ ರೂಪಕ. ವಸಂತ ಪ್ರಕೃತಿಗೆ ಪ್ರತಿಮೆ. ಹಾಗೆ ಕೋಗಿಲೆಗೆ ಸ್ವರ ಬಂದಿದೆ ಎಂದರೆ ಪ್ರಾಕೃತಿಕ ಸಮತೋಲನ ವಾಪಸ್ಸಾಗಿದೆ ಅಂತ. ಉಬ್ಬಸ ಕಳೆದ ನಿಸರ್ಗ ಅನ್ನುವಾಗ, ಇದೇ ಧ್ವನಿ. ಸಾಧಾರಣವಾಗಿ ವಾತಾವರಣ ಕಲುಷಿತಗೊಂಡಾಗ ಉಬ್ಬಸ. ವಾತಾವರಣ ನಿರ್ಮಲವಾದಾಗ,ಪ್ರಕೃತಿಯ ಉಬ್ಬಸ ಕಳೆದಿದೆ. “ಚುಮುಚುಮು ವೇಳೆಆರಂಭವಾದರೆ ಕಚೇರಿಗೂಡು ಸೇರುವ ಹೊತ್ತಿಗೂ ಮುಗಿಯದುಮತ್ತೆಂದು ಸಿಕ್ಕೀತೋಎನ್ನುವ ಹಾಗೆಕತ್ತುಚಾಚಿಸ್ವರದೌತಣ ನೀಡುತ್ತಿದೆತಳಿರು ಮೆದ್ದ ಕೋಗಿಲೆ !” ಎಡೆಬಿಡದೆ ಸಂಭ್ರಮದಿಂದ ತಳಿರುಮೆದ್ದ ಕೋಗಿಲೆ ಸ್ವರದೌತಣ ಕೊಡುತ್ತೆ. ನೀವೆಲ್ಲಾ ಗಮನಿಸಿರಬಹುದು, ಕೊರೊನಾ ಲಾಕ್ ಡೌನ್ ನಲ್ಲಿ, ಮನುಷ್ಯ ಬಂದಿಯಾದಾಗ, ನಿಸರ್ಗಕ್ಕೆ ಸ್ವಾತಂತ್ರ್ಯ ದಿನದ ಸಂಭ್ರಮ. ಯಾಕೆ ಹೀಗೆ?. ಮನುಷ್ಯ ತಾನು ಮತ್ತು ಪ್ರಕೃತಿಯ ನಡುವೆ ಗೋಡೆ ಕಟ್ಟಿ, ಉಳಿದೆಲ್ಲಾ ಜೀವಸಂಕುಲಗಳನ್ನು ನಿಕೃಷ್ಟವಾಗಿ ನೋಡಿ, ಇಟ್ಟಿಗೆ ಪಟ್ಟಣ ಕಟ್ಟಿದ. ಆ ಪಟ್ಟಣ, ಪಶ್ಚಿಮ ಘಟ್ಟದ ಸಾಲುಗಳಲ್ಲಿ ನಡೆಯುತ್ತಿರುವ ಗುಡ್ಡಕುಸಿತದಡಿಯಲ್ಲಿ ಭೂಗರ್ಭದಲ್ಲಿ ಪಳೆಯುಳಿಕೆಯಾಗುತ್ತಿದೆ . ಕೊರೊನಾದಂತಹ ಕಣ್ಣಿಗೆ ಕಾಣಿಸದ ವೈರಾಣು ದಾಳಿಗೆ ಸಿಕ್ಕಿ ಸ್ತಬ್ಧವಾಗಿದೆ. ಭಾರತೀಯ ಜೀವನಶೈಲಿ ಹೀಗಿತ್ತೇ?. ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ |ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಮ್ || (ಈ ಜಗತ್ತಿನಲ್ಲಿ ಚಲನಾತ್ಮಕವಾದದ್ದು ಏನೇನಿದೆಯೋ ಅವೆಲ್ಲವೂ ಈಶನಿಂದ ಆವೃತವಾದದ್ದು. ಅದನ್ನು ಯಾವತ್ತೂ ನಿನ್ನದಾಗಿಸಿಕೊಳ್ಳಲು ಪ್ರಯತ್ನಿಸಬೇಡ. ಯಾವ ಸಂಪತ್ತನ್ನೂ ಬಯಸಬೇಡ) ಜಗತ್ತಿನ ಕಣ ಕಣದಲ್ಲಿ, ಜೀವವಿರಲಿ ನಿರ್ಜೀವ ವಸ್ತುವಾಗಿರಲಿ,ಎಲ್ಲದರಲ್ಲೂ ಈಶನನ್ನು ಕಾಣುವ ಆ ಮೂಲಕ ನಮ್ಮನ್ನೇ ಕಾಣುವ ದರ್ಶನ ನಮ್ಮದು.ನಮಗೆ ಸ್ವಾತಂತ್ರ್ಯ ಹೇಗೆ ಇಷ್ಟವೋ, ಹಾಗೆಯೇ ಉಳಿದ ಜೀವಜಾಲದ ಸ್ವಾತಂತ್ರ್ಯವನ್ನು ಗೌರವಿಸಿ ಸಹಬಾಳ್ವೆ , ಉಸಿರಿನಷ್ಟೇ ಸಹಜವಾಗಲಿ. ******************************** ಲೇಖಕರ ಬಗ್ಗೆ: ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಬೆಳಕಿನ ರೋಚಕತೆ ನೀಡುವ ಬೆಳದಿಂಗಳು. ಪುಸ್ತಕ- ಬೆಳದಿಂಗಳು ಕವಿ- ಗುರು ಹಿರೇಮಠ ವಿಶ್ವೃಷಿ ಪ್ರಕಾಶನ ಬೆಲೆ-೧೨೦/- ಗುರು ಹಿರೇಮಠ ತುಮಕೂರು ಟು ಹೊಸ್ಪೇಟ್ ಎಂದೇ ನನಗೆ ಪರಿಚಯವಾದವರು. ಮೃದು ಮಾತಿನ ಅಷ್ಟೇ ನಾಚಿಕೆ ಸ್ವಭಾವದ ಹುಡುಗ. ಯಾವಾಗ ಎದುರಿಗೆ ಸಿಕ್ಕರೂ ಒಂದು ನಗೆಯ ಹೊರತಾಗಿ ಬೇರೆ ಮಾತು ಆಡಲು ಬರುವುದೇ ಇಲ್ಲವೇನೋ ಎಂಬಷ್ಟು ಮೌನಿ. ಅವರ ಚುಟುಕುಗಳ ಸಂಕಲನ ಬೆಳದಿಂಗಳು ಓದಿದಾಗ ಅವರ ಮೌನಕ್ಕೊಂದು ಅರ್ಥ ದೊರಕಿತು ನನಗೆ. ಹೇಳಬೇಕಾದುದ್ದನ್ನೆಲ್ಲ ಚುಟುಕಾಗಿ ಮೂರು ನಾಲ್ಕು ಸಾಲುಗಳಲ್ಲಿ ಹೇಳಿ ನಿರುಮ್ಮಳವಾಗಿ ಬಿಡುವ ಗುರುವಿಗೆ ಬಹುಶಃ ಮಾತು ಮಣಭಾರ ಎನ್ನಿಸಿರಬಹುದು.. ಹೀಗಾಗಿಯೇ ಮೌನ ಸಾಮ್ರಾಜ್ಯದ ಚಕ್ರವರ್ತಿ ಅವರು. ಇಷ್ಟಾಗಿಯೂ ನಾನು ಕಂಡAತೆ ಸ್ನೇಹಿತರನ್ನು ತುಂಬಾ ನಂಬುವ ಸ್ವಭಾದ ಗುರು  ಪ್ರೀತಿಸುವವರನ್ನು ನಂಬುತ್ತೇನೆ. ದ್ವೇಷಿಸುವವರನ್ನು  ಪ್ರೀತಿಸುತ್ತೇನೆ ಹೋಗುವ ದಾರಿಯಲ್ಲಿ ನನ್ನೆದೆಯ ಹೂವುಗಳು ನೀವು ಎಂದು ಬರೆದರೆ ಅದರಲ್ಲಿ ಅಚ್ಚರಿಯೇನಿದೆ?  ಪ್ರೀತಿಸುವವರನ್ನು ನಂಬುವುದು ಸಹಜ. ಎಲ್ಲರೂ ತಮ್ಮನ್ನು ಪ್ರೀತಿಸುವವರನ್ನು ನಂಬಿಯೇ ನಂಬುತ್ತಾರೆ. ಅದೇನೂ ವಿಶೇಷವಲ್ಲ.  ಆದರೆ ದ್ವೇಷಿಸುವವರನ್ನು ಪ್ರೀತಿಸುವುದು ಮಾತ್ರ ಬಹುದೊಡ್ಡ ವಿಷಯ. ಹಾಗೆ ದ್ವೇಷಿಸುವವರನ್ನೂ ಪ್ರೀತಿಸುವುದು ಸಾಧಾರಣ ಜನರಿಗೆ ದಕ್ಕುವ ಮಾತಲ್ಲ. ಹೀಗಾಗಿಯೇ ಈ ಪ್ರೀತಿಸುವವರನ್ನು ಹಾಗೂ ದ್ವೇಷಿಸುವವರನ್ನು ತಾನು ಹೋಗುವ ದಾರಿಯಲ್ಲಿ  ಸಿಗುವ ತನ್ನೆದೆಯ ಹೂವುಗಳು ಎನ್ನುತ್ತಾರೆ. ಬದುಕು ತೀರಾ ಚಿಕ್ಕದು. ದ್ವೇಷಿಸುವವರನ್ನು ತಿರುಗಿ ನಾವೂ ದ್ವೇಷಿಸುತ್ತಲೇ ಹೋದರೆ ಇಡೀ ಜೀವನಪೂರ್ತಿ ದ್ವೇಷಿಸುತ್ತಲೇ ಇರಬೇಕಾಗುತ್ತದೆ. ಪ್ರತಿ ಮಾತಿಗೂ ಒಂದು ಎದುರುತ್ತರ ಕೊಡುತ್ತಲೇ ಹೋದರೆ ಮಾತು ಮುಗಿಯುವುದಾದರೂ ಯಾವಾಗ? ಹೀಗಾಗಿಯೇ ದ್ವೇಷಿಸುವವರನ್ನು ಪ್ರೀತಿಸಿಬಿಟ್ಟರೆ ನಾವು ನಿರುಮ್ಮಳವಾಗಿರಬಹುದು. ಕಿuಚಿಟiಣಥಿ oಜಿ meಡಿಛಿಥಿ is ಣತಿiಛಿe bಟesseಜ  ಎಂದು ಶೇಕ್ಸ್ಫೀಯರ್ ಹೇಳುತ್ತಾನೆ. ದ್ವೇಷಕ್ಕೆ ಪ್ರತಿಯಾಗಿ ದ್ವೇಷಿಸಿದರೆ ನಮ್ಮ ನಿರಾಳ ಮನಸ್ಥಿತಿಯನ್ನು ನಾವೇ ನಾಶಮಾಡಿಕೊಂಡAತೆ. ಹೀಗಾಗಿಯೇ ಜಗದ ಎಲ್ಲ ನೋವಿಗೂ ಪ್ರೀತಿಯೊಂದೇ ಔಷಧ. ಜಗದ ಎಲ್ಲ ದ್ವೇಷಕ್ಕೂ ಪ್ರೀತಿಯೇ ಮುಲಾಮು. ಕವಿಯ ಮಾನವೀಯತೆಯ ಪರಿಚಯವಾಗಲು ಈ ಎರಡು ಸಾಲು ಸಾಕು.            ನಾನು ಕಡಲೂರಿನವಳು. ಜಗದ ಸೃಷ್ಟಿ ಕಡಲಲ್ಲಿಯೇ ಆದದ್ದು ಎಂದು ಬಲವಾಗಿ ನಂಬಿದವು. ಜಗದ ಅಂತ್ಯವೂ ಕಡಲಿಂದಲೇ ಆಗುತ್ತದೆ ಎಂದೂ ಮತ್ತೆ ಮತ್ತೆ ಹೇಳುತ್ತಿರುವವಳು. ಕಡಲ ಉಪ್ಪು ನೀರು ನಮಗೆ ಅಮೃತಕ್ಕೆ ಸಮಾನ. ನಾನು ಚಿಕ್ಕವಳಿರುವಾಗಲೆಲ್ಲ ಹೊಟ್ಟೆ ಕೆಟ್ಟರೆ, ತಲೆ ನೋವು ಬಂದರೆ ಉಪ್ಪು ನೀರು ಕುಡಿಸುತ್ತಿದ್ದರು. ಒಂದೋ ವಾಂತಿಯಾಗಿ ಎಲ್ಲವೂ ಹೊಟ್ಟೆಯಿಂದ ಹೊರಹೋಗಬೇಕು, ಅಥವಾ ಉಪ್ಪುನೀರು ಎಲ್ಲವನ್ನೂ ಜೀರ್ಣಿಸಬೇಕು. ಹೀಗಾಗಿ ಎಷ್ಟೋ ಸಲ ನನ್ನ ಮಕ್ಕಳು ಚಿಕ್ಕವರಿರುವಾಗಲೂ ಉಪ್ಪುನೀರಿನ ಔಷಧವೇ ನನ್ನನ್ನು ಸಂಕಟದಿAದ ಪಾರು ಮಾಡಿದ್ದು.    ನಾಲ್ಕು ತಿಂಗಳಿನ ಪುಟ್ಟ ಮಗುವನ್ನು ಕೈಲಿಟ್ಟುಕೊಂಡು ಊರಲ್ಲೇ ಗಂಜಿ ಉಂಡುಕೊAಡು ಸುಖವಾಗಿ ಶಾಲೆಗೆ ಹೋಗಿ ಬರಬಹುದಾದ ಅವಕಾಶವನ್ನು ಬಿಟ್ಟುಕೊಟ್ಟು, ಅನುದಾನಿತ ಶಾಲೆ ಬೇಡ ನನಗೆ ಎನ್ನುತ್ತ ಮನೆಯವರೆಲ್ಲ ಅಸಮಧಾನಕ್ಕೆ ಕಾರಣವಾಗಿ ಬೆಳ್ತಂಗಡಿಯ ಗೊಂಡಾರಣ್ಯವಾದ ಕೊಯ್ಯೂರಿಗೆ ಸರಕಾರಿ ನೌಕರಿ ಮಾಡುತ್ತೇನೆ ಎಂದು ಹೊರಟಿದ್ದೆ. ಏನೂ ಅರಿಯದ ಬೊಮ್ಮಟೆಯಂತಹ ಮಗು ಮಧ್ಯರಾತ್ರಿ ಎದ್ದು ಅತ್ತಾಗಲೆಲ್ಲ ನನಗೆ ತಳಮಳ. ನಾನೇ ಮದುವೆ ಆಗುವವರೆಗೂ ಅಮ್ಮನ ಹೊಟ್ಟೆಗೆ ಕೈಯ್ಯಿಟ್ಟು ಮಲುಗುತ್ತಿದ್ದವಳು. ಈಗ ಈ ಮಗುವನ್ನು ಸಂಭಾಳಿಸುವ ಅಮ್ಮನಾಗಿದ್ದೆ. ಆಗೆಲ್ಲ ನನಗೆ ನೆನಪಾಗುತ್ತಿದ್ದುದು ಒಂದೇ. ನೀರು ಬೆಚ್ಚಗೆ ಮಾಡಿ ಒಂದು ಚಿಟಿಕೆ ಉಪ್ಪು ಹಾಕಿ ಕದಡಿ ಚಮಚದಲ್ಲಿ ನಾಲ್ಕಾರು ಹನಿ ಕುಡಿಸುತ್ತಿದ್ದೆ. ಸ್ವಲ್ಪ ಸಮಯದ ನಂತರ ಮಗು ಅಳುವುದನ್ನು ನಿಲ್ಲಿಸಿ ಮಲಗಿದರೆ ನನಗೆ ಏನೋ ದೊಡ್ಡ ಮಹತ್ಸಾಧನೆ ಮಾಡಿದ ಸಮಾಧಾನ. ರುಚಿ ನೀಡುವ ಉಪ್ಪಿನಲ್ಲಿ ಸಕಲ ಜೀವರಾಶಿಗಳ ಕಣ್ಣೀರಿದೆ ಆದರೆ ಇಲ್ಲಿ ಗುರು ಉಪ್ಪಿಗೆ ಬೇರೆಯದ್ದೇ ಅರ್ಥ ನೀಡಿದ್ದಾರೆ. ಉಪ್ಪುಪ್ಪಿನ ಕಣ್ಣೀರಿಗೆ ಹೋಲಿಸಿದ್ದಾರೆ. ಬದುಕಿನ ವಿವಿಧ ಅರ್ಥಗಳನ್ನು ಹಿಡಿದಿಡುವುದೇ ನಿಜವಾದ ಕವಿಯ ಸಾಧನೆ. ನಮಗೆಲ್ಲ ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂದೆನಿಸಿದರೆ ಗುರು ಉಪ್ಪನ್ನು ಕಣ್ಣೀರಿಗೆ ಸಮೀಕರಿಸಿ ಹೊಸತೇ ಆದ ಆಯಾಮವನ್ನು ನೀಡಿದ್ದಾರೆ.    ಯಶಸ್ಸು ಸುಲಭವಾಗಿ ದಕ್ಕುವಂತಹುದ್ದಲ್ಲ. ಒಂದು ಗುರಿಯನ್ನು ತಲುಪಲು ವಹಿಸಬೇಕಾದ ಶ್ರಮಕ್ಕೆ ಯಾವ ಬೆಲೆಯೂ ಇಲ್ಲ. ಯಶಸ್ಸಿಗೆ ಹತ್ತಾರು ದಾರಿಗಳಿರುವುದಿಲ್ಲ. ಬೇಗ ಹೋಗಿ ಯಶಸ್ಸನ್ನು ಪಡೆಯಲು ಯಾವ ಒಳದಾರಿಯೂ ಇರುವುದಿಲ್ಲ. ಇರುವುದು ಒಂದೇ ದಾರಿ. ಅದು ಸತತ ಪರಿಶ್ರಮ. ಏರುವ ಎತ್ತರಕ್ಕೆ ಒಂದೇ ದಾರಿ ಬೀಳಲು ನೂರು ದಾರಿ ಆದರೆ ಯಶಸ್ಸಿನ ಶಿಖರವನ್ನು ಹತ್ತಿದರೂ ಅದರಿಂದ ಕೆಳಗೆ ಬೀಳಲು ಬೇಕಷ್ಟು ದಾರಿಗಳಿರುತ್ತವೆ. ನಮ್ಮದೇ ವ್ಯಸನಗಳು ನಮ್ಮನ್ನು ದಾರಿ ತಪ್ಪಿಸಿ ಯಶಸ್ಸಿನ ಶಿಖರದಿಂದ ಒಮ್ಮೆಲೆ ಕೆಳಗೆ ಬೀಳಿಸಬಲ್ಲದು. ನಮ್ಮ ಒಂದು ತಪ್ಪು ಹೆಜ್ಜೆಯೂ ನಮ್ಮನ್ನು ಪ್ರಪಾತದ ಕಡೆ ತಳ್ಳುವ ಚಕ್ರವಾಗಿರಬಹುದು.  ಆದರೂ ಈ ಜಗತ್ತು ಪ್ರೇಮಮಯ. ಪ್ರೇಮವೊಂದಿದ್ದರೆ ಸಾಕು, ಜಗತ್ತಿನ ನೂರಾರು ಸಂಕಷ್ಟಗಳನ್ನು ಸುಲಭವಾಗಿ ಜಯಿಸಬಹುದು. ಪ್ರೇಯಸಿಯ ಒಂದು ನಗು ಇಡೀ ಜಗತ್ತನ್ನೇ ಗೆಲ್ಲುವ ಪ್ರೇರಕ ಶಕ್ತಿಯಾಗಬಲ್ಲದು. ನಿನ್ನ ನಗು ಕಂಡ ಕ್ಷಣ ಕಡಲಿನ ಮುತ್ತುಗಳೆಲ್ಲ ಹೂವಾಗಿ ಅರಳಿದವು ಎನ್ನುವ ಕವಿಯಲ್ಲಿನ ತಾಜಾ ಭಾವನೆಗಳು ನಮ್ಮನ್ನು ಜೀವನ್ಮುಖಿಯಾಗಿಸುವುದರಲ್ಲಿ ಸಂಶಯವೇ ಇಲ್ಲ.  ಈ ಪ್ರೇಮದ ಪರಿಯನ್ನೊಮ್ಮೆ ಗಮನಿಸಿ. ಯಾರೋ ನಡೆದ ದಾರಿಯಲ್ಲಿ ನಾ ನಡೆಯುತ್ತಿದ್ದೆ ಸುಮ್ಮನೆ ಒಮ್ಮೆ ದಾರಿ ಬದಲಿಸಿದೆ! ನೀ ಸಿಕ್ಕೆ ಬದುಕು ದಕ್ಕಿತು ಒಂದು ಪ್ರೇಮ ಬದುಕನ್ನು ನಮ್ಮ ತೆಕ್ಕೆಗೆ ನೀಡಬಲ್ಲದು ಎನ್ನುವುದಕ್ಕೆ ಸಾಕ್ಷಿಯಾಗಿರುವ ಈ ಸಾಲುಗಳನ್ನು ನೋಡಿ. ಸರಳವಾದ ಕೆಲವೇ ಶಬ್ಧಗಳಲ್ಲಿ ಈ ಭಾವ ನಮ್ಮನ್ನು ಇಡೀ ಜಗತ್ತಿನ ಪ್ರೇಮದ ರಹದಾರಿಯಲ್ಲಿ ನಿಲ್ಲಿಸುತ್ತದೆ. ಪಡೆದದ್ದು ಇಷ್ಟೇ ಅತ್ತ ನೀನು, ಇತ್ತ ನಾನು ದಡವಾಗಿ ಪ್ರೀತಿಯ ನದಿ ಎಂದೂ ಬತ್ತುವುದಿಲ್ಲ ಹೀಗಾಗಿ ಪ್ರೀತಿಯಲ್ಲಿ ಏನು ಪಡೆದೆ ಎಂದರೆ ಎಂದೂ ಬತ್ತದ ಪ್ರೀತಿಯನ್ನು ಪಡೆಯುವುದು ಮಾತ್ರ ಪ್ರೇಮದ ಕೊನೆಯ ಗುರಿಯಾಗಿರುತ್ತದೆ. ಪ್ರೇಮನದಿಯ ಎರಡು ದಡಗಳಲ್ಲಿ ಪ್ರೇಮಿಗಳಿಬ್ಬರೂ ನಿಂತುಕೊAಡರೆ ಆ ನದಿ ಎಂದಿಗೂ ಬತ್ತಬಾರದು. ಅಂತಹ ಪ್ರೇಮವನ್ನು ಪಡೆದರೆ ಜೀವನ ಸಾರ್ಥಕ ಎನ್ನುವ ಭಾವ ಕವಿಯಲ್ಲಿದೆ. ಅದಕ್ಕೆಂದೇ ಕವಿ ಬೆಳದಿಂಗಳು ಸೋತಿದೆ ಅವಳ ಹೆಸರಿಗೆ ಆ ಹೆಸರಲ್ಲಿ ನನ್ನ ಬದುಕಿನ ಉಸಿರಿದೆ ಎನ್ನುತ್ತಾರೆ. ಪ್ರೇಮದ ಸಾಫಲ್ಯವೇ ಹಾಗೆ. ಪ್ರೇಮಿಯ ಹೆಸರನ್ನು ಜಪಿಸುತ್ತ ಅದನ್ನೇ ಉಸಿರಾಡುವುದರಲ್ಲಿಯೇ ಬದುಕಿನ ಔನತ್ಯವನ್ನು ಕಾಣುವುದು ಪ್ರತಿ ಪ್ರೇಮಿಯ ಆಶಯವಾಗಿರುತ್ತದೆ. ಹೀಗೆಂದೇ ಪ್ರೇಮದಲ್ಲಿ ಬಿದ್ದ ಕಾಲೇಜು ವಿದ್ಯಾರ್ಥಿಗಳ ನೋಟ್‌ಬುಕ್‌ನ ಕೊನೆಯ ಹಾಳೆಯನ್ನು ಗಮನಿಸಿ. ಅಲ್ಲಿ ಕೇವಲ ಪ್ರೇಮಿಯ ಹೆಸರನ್ನೇ ಸಾವಿರ ಸಲ ಬರೆದಿರುತ್ತಾರೆ. ಕವಿ ಕೂಡ ತನ್ನವಳ ಹೆಸರಿಗೆ ಬೆಳದಿಂಗಳೂ ಸೋಲುತ್ತದೆ ಎನ್ನುತ್ತಾರೆ. ಕವಿಗೂ ವಿರಹ ಕಾಡುತ್ತದೆ. ವಿರಹವಿಲ್ಲದ ಪ್ರೇಮ ಈ ಜಗದಲ್ಲಿ ಇದ್ದೀತೆ? ಪ್ರತಿ ಪ್ರೇಮಕ್ಕೂ ವಿರಹ ಕಾಡಿದರೆ ಮಾತ್ರ ಆ ಪ್ರೇಮಕ್ಕೊಂದು ಅಧಿಕೃತತೆ ದಕ್ಕಿದ ಹಾಗೆ. ಪ್ರತಿ ಪ್ರೇಮದಲ್ಲಿಯೂ ಒಂದು ಮುನಿಸಿರುತ್ತದೆ, ಜಗಳವಿರುತ್ತದೆ. ಕೊನೆಗೆ ಪ್ರೇಮಿ ಕೈಕೊಟ್ಟು ಹೋದಳೆಂದು ಪರಿತಪಿಸುವ ಉಪಖ್ಯಾನವಿರುತ್ತದೆ. ಪ್ರೀತಿಯೊಂದಿಗೆ ಸ್ನೇಹ ಮಾಡಿಕೊಂಡವಳು ಮೊದಲೇ ಮೋಸದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು ತಿಳಿಯಲಿಲ್ಲ ಎನ್ನುತ್ತ ವಿರಹದ ಮಾತನಾಡುತ್ತಾರೆ. ಬದುಕಿನ ಬಣ್ಣಗಳನ್ನು ಹಂಚಿಕೊAಡವಳು. ಬದುಕಿನಲ್ಲಿರುವ ಕಾಮನಬಿಲ್ಲನ್ನು ಬಣ್ಣಗಳನ್ನು ತನಗಾಗಿ ತಂದವಳು ಬಣ್ಣಗಳ ಜೊತೆಗೆ ಬಣ್ಣ ಬದಲಿಸಿದಳು ಎಂದು ವಿಷಾದ ಪಡುತ್ತಾರೆ. ಬಣ್ಣಗಳ ಜೊತೆಗೆ ಆಟವಾಡುವುದನ್ನು ಕಲಿಸಿದವಳು ಬಣ್ಣ ಬದಲಿಸಿ ಹೋದಳು ಆದರೂ ಮೋಸ ಮಾಡಿ ಹೋದವಳ ಬಗ್ಗೆ ಬೇಸರವಿಲ್ಲ. ಅವಳ ಮೇಲಿನ ಪ್ರೇಮ ಕಿಂಚಿತ್ತೂ ಕಡಿಮೆಯಾಗುವುದಿಲ್ಲ. ಪ್ರೇಮವೆಂದರೆ ನಂಬಿಕೆ ಎಂದು ಮೊದಲೇ ಹೇಳಿದವರು ಈಗ ನಂಬಿಕೆಯನ್ನು ಕೊಂದವಳ ಬಗೆಗೂ ಮತ್ತದೇ ನಂಬಿಕೆ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ನಂಬಿಕೆಯನ್ನು ಕೊಂದವಳ ಜೊತೆಗೆ ನAಬಿಕೆಯಿAದ ಬದುಕಿರುವ ಹೆಮ್ಮೆ ನನ್ನದಾಗಲಿ ಎನ್ನುತ್ತ ನಂಬಿಕೆಯನ್ನು ತಾನು ಕಳೆದುಕೊಳ್ಳದ ನಿಶ್ಚಯ ಮಾಡುತ್ತಾರೆ. ಪ್ರೀತಿಗಿಂತ ಮೊದಲೇ ಮೋಸವನ್ನೂ ತನ್ನೊಂದಿಗೆ ತಂದಿದ್ದಾಳೆAದು ಆರೋಪಿಸುವ ಕವಿಗೆ ಆಕೆ ತನ್ನನ್ನು ಬಿಟ್ಟು ಹೋದರೆ ಏನು ಮಾಡುವುದೆಂಬ ಭಯವಿದೆ. ಆಕೆಯನ್ನು ಕಳೆದುಕೊಳ್ಳಲಂತೂ ಸಾಧ್ಯವಿಲ್ಲ. ಹೊರಟು ಹೋದಳು ನನ್ನಲ್ಲಿರುವ ಬೆಳಕನ್ನು ಕೊಂದು ಅವಳ ನೆರಳೇ ದಾರಿ ತೋರಿಸುತ್ತಿದೆ ಕತ್ತಲೆಯಲ್ಲಿ ಎನ್ನುತ್ತ ಅವಳ ನೆನಪು, ನೆರಳು ಜೀವನದ ಕತ್ತಲಿನಲ್ಲೂ ದಾರಿ ತೋರುವ ಬೆಳಕಾಗುವ ಕುರಿತು ತುಂಬು ನಂಬಿಕೆಯ ಮಾತನಾಡುತ್ತಾರೆ. ಒಟ್ಟಿನಲ್ಲಿ ಬದುಕು ಅವಳ ಅವಳೊಂದ ಸಾಗಬೇಕೆನ್ನುವುದು ಕವಿ ಆಶಯ.                    ಎಲ್ಲವನ್ನೂ ಅಥೆಂಟಿಕ್ ಆಗಿ ಹೇಳುವ ಕವಿ ಸಾವಿನ ಬಗ್ಗೆ ಮಾತನಾಡದಿದ್ದರೆ ನಡೆದೀತು ಹೇಗೆ? ಹೀಗಾಗಿ ಬದುಕಿನ ನಶ್ವರತೆಯನ್ನು ಕತ್ತಲೆಗೆ ಹೋಲಿಸುತ್ತಾರೆ. ಕತ್ತಲೆಯ ಬದುಕು, ಬೆಳಕಿನ ಸಾವಿನ ರೂಪಕ ಇಲ್ಲ ಆಧ್ಯಾತ್ಮದ ಕೊನೆಯ ಹಂತವನ್ನು ನೆನಪಿಸುತ್ತದೆ. ನಾನು ಕತ್ತಲೆಯಲ್ಲಿ ಬದುಕಿದರೂ ಸಾವು ಬೆಳಕಿನಲ್ಲಿ ಬರಲಿ ವ್ಯಾವಹಾರಿಕ ಜಗತ್ತನ್ನು ತೊರೆದು ಅಲೌಕಿಕ ಜಗತ್ತನ್ನು ಸಾಮಕೇತಿಕವಾಗಿ ಪ್ರತಿನಿಧಿಸುವ ಕತ್ತಲಿನ ಬದುಕು ಮತ್ತು ಬೆಳಕಿನ ಸಾವು ಸಾವಿರಾರು ವರ್ಷಗಳ ಜ್ಞಾನವನ್ನು ಕೇವಲ ನಾಲ್ಕೇ ಸಾಲಿನಲ್ಲಿ ಕಣ್ಣೆದುರು ತೆರೆದಿಡುವ ಅದ್ಭುತ ಇದು. ಅಷ್ಟಾದರೂ ನಾವು ಎಷ್ಟೊಂದು ಸಾವನ್ನು ನೋಡುತ್ತೇವೆ. ಕಣ್ಣೆದುರಿಗೇ ಅದೆಷ್ಟೋ ಜನ ಪತಪತನೆ ಉದುರಿ ಬೀಳುತ್ತಿರುವ ಕಾಲಘಟ್ಟ ಇದು. ಸಾವಿನ ಲೆಕ್ಕಾಚಾರವನ್ನು ಬೆರಳೆಣಿಕೆಯಲ್ಲಿ ಮುಗಿಸಿ, ಸಾವಿರಗಟ್ಟಲೆ ಲೆಕ್ಕದಲ್ಲಿ ಎಣಿಸುತ್ತಿರುವ ಈ ಕೊರೋನಾ ಕಾಲದಲ್ಲಿ ಯಮ ಕೂಡ ಸಾವಿಗೆ ಕಣ್ಣೀರು ಹಾಕುತ್ತಿದ್ದಾನೆಯೇ? ಗೊತ್ತಿಲ್ಲ. ಆದರೆ ಪ್ರತಿ ಸಾವಿನ ಎದುರು ಯಮ ಅತ್ತಿದ್ದು ಯಾರ ಕಣ್ಣಿಗೂ ಕಾಣಿಸಲಿಲ್ಲ ಎನ್ನುವ ಕವಿಯ ಕಲ್ಪನೆ ಅದ್ಭುತವಾಗಿದೆ. ಇದ್ದರೂ ಇರಬಹುದು ಬಿಡಿ. ದಿನವೊಂದಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ, ಕೆಲವೊಂದು ದಿನ ಲಕ್ಷದ ಎಣಿಕೆಯಲ್ಲಿ ಸಾವಿನ ಲೆಕ್ಕಾಚಾರ ಕಂಡಿದೆ ಈ ಜಗತ್ತು. ಜನರ ಮರಣದ ಪ್ರಮಾಣ ಆ ಯಮನಿಗೂ ದಿಗಿಲು ಹುಟ್ಟಿಸಿರಬಹುದು. ಆದರೆ ಸಾವಿಗೊಂದು ಗೌರವ ಕೊಡುತ್ತಿದ್ದೇವೆಯೇ? ಅದೂ ಇಲ್ಲ. ಕೊರೋನಾದಿಂದಾಗಿ ಸಾವುಗಳೆಲ್ಲ ಕೇವಲ ಬೀದಿ ಬದಿಯ ಹೆಣಗಳಷ್ಟೇ ಆಗಿಹೋಗುತ್ತಿರುವ ಈ ದುರಂತದ ಸಮಯದಲ್ಲಿ ಸಾವನ್ನು ಕುರಿತು ಮಾತನಾಡುವುದೇ ಅಪರಾಧ ಎನ್ನಿಸಿಬಿಡುತ್ತದೆ. ಸಾವಿನ ಮಾತು ಬಿಡಿ. ಬದುಕಿರುವವರನ್ನೇ ಮುಟ್ಟಿಸಿಕೊಳ್ಳಲು ನಾವು ಹಿಂದೇಟು ಹಾಕುತ್ತಿದ್ದೇವೆ. ಪರಸ್ಪರರನ್ನು ಭೇಟಿಯಾಗಲು ಅದೆಷ್ಟು ಮುಜುಗರ ಈಗ. ಅನಾವಶ್ಯಕವಾಗಿ ನಾವೀಗ ಯಾರೊಂದಿಗೂ ಮಾತನಾಡಲಾರೆವು. ಪಕ್ಕದ ಮನೆಯವರೊಂದಿಗೆ ಹರಟೆ ಹೊಡೆಯಲಾರೆವು. ಯಾಕೆಂದರೆ ಯಾರಿಗೆ ಗೊತ್ತು, ಅವರ ಮನೆಯ ಯಾವ ಸದಸ್ಯ ಹೊರಹೋಗಿ ಕೊರೋನಾ ಅಂಟಿಸಿಕೊAಡು ಬಂದಿದ್ದಾನೆಯೋ ಎಂಬ ಭಯ. ಇದರ ನಡುವೆ ಸಾವಿರಗಟ್ಟಲೆ ಹೆಣ ಸಂಪಾದಿಸುವ ಸಾವು ಮಾತ್ರ ಥೇಟ್ ರ‍್ಯಾದಿ ಕಳೆದುಕೊಂಡ ಭಿಕಾರಿ. ಅದೆಷ್ಟೋ ಕೋಟಿಗಳ ಒಡೆಯನಾದ ಮುಂಬೈನ ಒಬ್ಬ ಕೊರೋನಾದಿಂದ ಸತ್ತ ನಂತರ ಅವನ ಹೆಣವನ್ನು ಮನೆಯ ಗೇಟಿನ ಎದುರು ಬಿಸಾಡಿ ಹೋಗಿದ್ದಂತಹ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಾಗ ಈ ಸಾವು ಅದೆಷ್ಟು ಭೀಕರ ಎನ್ನಿಸಿಬಿಟ್ಟಿದ್ದಂತೂ ಸುಳ್ಳಲ್ಲ. ಹೀಗಾಗಿ ಈ ಸಂದರ್ಭದಲ್ಲಿ ನಾನು ಹೋದಮೇಲೆ ಇನ್ನೂ ಇರಬೇಕಿತ್ತು ಎನ್ನುವ ನಿಮ್ಮ ನಂಬಿಕೆಯೇ ಸಾರ್ಥಕ ಬದುಕಿನ ಕವಿತೆ ನಾವು ಸತ್ತ ನಂತರ ನಮ್ಮನ್ನು ಕ್ಷಣಮಾತ್ರವಾದರೂ ನೆನಪಿಸಿಕೊಂಡು ಇನ್ನೂ ಇರಬೇಕಿತ್ತು ಎಂದು ಯಾರಾದರೂ ಮನಃಪೂರ್ವಕವಾಗಿ ಅಂದುಕೊAಡರೆ ಅದೇ ದೊಡ್ಡ ಶೃದ್ಧಾಂಜಲಿ. ಇದರ ಹೊರತಾಗಿ ಮಾಡುವ ಯಾವ ಧಾರ್ಮಿಕ ಶ್ರಾದ್ಧ, ತಿಥಿಗಳೂ ನನ್ನನ್ನು ಈ ಇಹಲೋಕದಿಂದ ಮುಕ್ತಗೊಳಿಸಲಾರದು.    ಕವಿತೆ ಬರೆಯುವುದು ಎಂದರೆ ಮರ‍್ನಾಲ್ಕು ಪುಟದ ಗದ್ಯ ಕವನ ಬರೆಯುವ ನನ್ನಂಥವರಿಗೆ ನಾಲ್ಕೇ ಸಾಲಿನಲ್ಲಿ ಹೇಳಬೇಕಾದುದ್ದನ್ನೆಲ್ಲ ಓದುಗರೆದೆಗೆ ದಾಟಿಸುವುದು ಒಂದು ಅಚ್ಚರಿಯ ವಿಷಯವೇ ಸರಿ.

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಬಾಗಿಲುಗಳ ಆಚೀಚೆ ಬಾಗಿಲುಗಳ ಆಚೀಚೆ ಏನೆಲ್ಲ ಇರಬಹುದು! ಹುಟ್ಟಿದ ಭಾವನೆಗಳನ್ನೆಲ್ಲ ಹುಷಾರಾಗಿ ನಿರ್ವಹಿಸುವ ಮನಸ್ಸಿನಂತೆಯೇ ಬಾಗಿಲುಗಳು ಕೂಡಾ. ಅಗತ್ಯಕ್ಕೆ, ಅವಶ್ಯಕತೆಗೆ ಅನುಗುಣವಾಗಿ ತೆರೆದುಕೊಳ್ಳುವ ಒಂದೊಂದು ಬಾಗಿಲಿಗೂ ಅದರದೇ ಆದ ಪುಟ್ಟ ಹೃದಯವೊಂದು ಇರಬಹುದು; ಆ ಹೃದಯದ ಬಡಿತಗಳೆಲ್ಲವೂ ಮನೆಯೊಳಗಿನ ಮೌನವನ್ನೋ, ಅಂಗಡಿಗಳ ವ್ಯವಹಾರವನ್ನೋ, ಸಿನೆಮಾ ಹಾಲ್ ನ ಕತ್ತಲೆಯನ್ನೋ, ರಸ್ತೆಯೊಂದರ ವಾಹನಗಳ ವೇಗವನ್ನೋ ತಮ್ಮದಾಗಿಸಿಕೊಳ್ಳುತ್ತ ಏರಿಳಿಯುತ್ತಿರಬಹುದು. ಹೀಗೆ ಎಲ್ಲ ಪ್ರಾಪಂಚಿಕ ನೋಟ-ಅನುಭವಗಳನ್ನು ತಮ್ಮದಾಗಿಸಿಕೊಳ್ಳುವ ಬಾಗಿಲುಗಳಿಗೆ ಒಮ್ಮೊಮ್ಮೆ ಕೃಷ್ಣ-ರಾಧೆಯರ, ಶಿವ-ಪಾರ್ವತಿಯರ ಹೃದಯಗಳೂ ಅಂಟಿಕೊಂಡು ಈ ಬಾಗಿಲು ಎನ್ನುವ ವಿಸ್ಮಯದ ಜಗತ್ತು ವಿಸ್ತರವಾಗುತ್ತ ಹೋಗುತ್ತದೆ. ಅವರವರ ಕಲ್ಪನೆಗಳಿಗನುಸಾರವಾಗಿ ತೆರೆದುಕೊಳ್ಳುವ ಆ ಜಗತ್ತಿನಲ್ಲಿ ವೆಲ್ ಕಮ್ ಎಂದು ಸ್ವಾಗತಿಸುವ ಡೋರ್ ಮ್ಯಾಟ್ ನಿಂದ ಹಿಡಿದು ನೀಳವಾದ ಬಳ್ಳಿಯ ನೇಯ್ಗೆಗಳ ಫ್ಲೋರ್ ಕುಷನ್ ಗಳವರೆಗೂ ಹೊಸಹೊಸ ಸ್ಪರ್ಶಗಳು ನಿಲುಕುತ್ತವೆ; ಚುಕ್ಕಿಯಿಟ್ಟು ಎಳೆದ ರಂಗೋಲಿಯ ಸಾಲುಗಳ ಮಧ್ಯೆ ಹುಟ್ಟಿದ ಹೂವೊಂದು ಡಿಸೈನರ್ ಬ್ಲೌಸ್ ಗಳನ್ನು ಅಲಂಕರಿಸುತ್ತದೆ; ತೋರಣದೊಂದಿಗೆ ತೂಗುವ ಮಲ್ಲಿಗೆ ಮಾಲೆಯ ಗಂಧ ಗಾಳಿ ಹರಿದಲ್ಲೆಲ್ಲ ಹರಿದು ಹೃದಯಗಳನ್ನು ಅರಳಿಸುತ್ತದೆ.           ಈ ಹೃದಯಗಳಿಗೂ ಬಾಗಿಲುಗಳಿಗೂ ಒಂದು ರೀತಿಯ ವಿಶಿಷ್ಟವಾದ ಸಂಬಂಧವಿರುವಂತೆ ಭಾಸವಾಗುತ್ತದೆ. ಈ ಸಂಬಂಧವನ್ನು ಮನುಷ್ಯ ಸಹಜವಾದ ರಾಗ-ದ್ವೇಷಗಳನ್ನೊಳಗೊಂಡ ಎಲ್ಲ ಭಾವನೆಗಳೂ ಒಂದಿಲ್ಲೊಂದು ರೂಪದಲ್ಲಿ ಸಲಹುತ್ತಿರುತ್ತವೆ. ಸಂಜೆಯ ಸಮಯದಲ್ಲೊಮ್ಮೆ ಬಾಲ್ಯವನ್ನು ಸುಂದರವಾಗಿ ರೂಪಿಸಿದ ಪ್ರೈಮರಿಯ ಅಥವಾ ಹೈಸ್ಕೂಲಿನ ಅಂಗಳದಲ್ಲಿ ಹೋಗಿ ನಿಂತರೆ ಮುಚ್ಚಿದ ಬಾಗಿಲುಗಳ ಹಿಂದಿರುವ ಅದೆಷ್ಟೋ ಬಗೆಬಗೆಯ ಭಾವನೆಗಳು ಹೃದಯವನ್ನು ತಾಕುತ್ತವೆ. ಮನೆಯಿಂದ ಶಾಲೆಯವರೆಗಿನ ದೂರವನ್ನು ಇದ್ದೂ ಇಲ್ಲದಂತಾಗಿಸಿದ ಗೆಳತಿಯರ ಗುಂಪು, ಪೇಪರಿನಲ್ಲಿ ಸುತ್ತಿ ಕಂಪಾಸು ಬಾಕ್ಸಿನಲ್ಲಿ ಭದ್ರವಾಗಿಟ್ಟಿದ್ದ ಎರಡೇ ಎರಡು ಪೆಪ್ಪರಮೆಂಟುಗಳನ್ನು ಶರ್ಟಿನ ಮಧ್ಯದಲ್ಲಿಟ್ಟು ಎಂಜಲು ತಾಗದಂತೆ ಚೂರು ಮಾಡಿ ಎಲ್ಲರಿಗೂ ಹಂಚುತ್ತಿದ್ದ ಎರಡನೇ ಕ್ಲಾಸಿನ ಹುಡುಗ, ಮಾರ್ಕ್ಸ್ ಕಾರ್ಡುಗಳಿಂದ ಹಿಡಿದು ಶಾಲೆಯ ಜಾತಕವನ್ನೆಲ್ಲ ಬಚ್ಚಿಟ್ಟುಕೊಂಡಿರುತ್ತಿದ್ದ ದೊಡ್ಡದೊಡ್ಡ ಕೀಗೊಂಚಲುಗಳ ಕಬ್ಬಿಣದ ಕಪಾಟು, ತೆರೆದ ಕಿಟಕಿಯ ಬಾಗಿಲುಗಳಿಂದ ನುಸುಳಿ ನೋಟ್ ಬುಕ್ ನ ಪುಟಗಳನ್ನು ನೆನೆಸುತ್ತಿದ್ದ ಮಳೆಹನಿಗಳು, ಹೀಗೆ ಮುಚ್ಚಿದ ಬಾಗಿಲಾಚೆಗಿನ ನೆನಪುಗಳೆಲ್ಲವೂ ವಿಧವಿಧದ ಭಾವನೆಗಳನ್ನು ಹೊತ್ತು ಅಂಗಳಕ್ಕಿಳಿಯುತ್ತವೆ. ಆ ಎಲ್ಲ ಭಾವನೆಗಳನ್ನು ಹೊತ್ತ ಹೃದಯ ಭಾರವಾಗುವುದು ಅಥವಾ ಹೃದಯದ ಭಾರವನ್ನೆಲ್ಲ ಅಂಗಳದಲ್ಲಿಳಿಸಿ ಹಗುರವಾಗುವುದು ಅವರವರ ಗ್ರಹಿಕೆಗಳನ್ನು ಅವಲಂಬಿಸಿರುವಂಥದ್ದು.           ಈ ಗ್ರಹಿಕೆ ಎನ್ನುವುದು ಕೆಲವೊಮ್ಮೆ ಯಾವ ತರ್ಕಕ್ಕೂ ನಿಲುಕದೆ ತನ್ನ ಪಾಡಿಗೆ ತಾನು ವಿಹರಿಸುತ್ತ, ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳುತ್ತದೆ. ದೇವರ ಕುರಿತಾಗಿ ಒಬ್ಬೊಬ್ಬರ ಗ್ರಹಿಕೆಯೂ ಒಂದೊಂದು ತೆರನಾದದ್ದು. ಭಕ್ತಿರಸವನ್ನೇ ಗ್ರಹಿಕೆಯ ಅಂತಸ್ಸಾರವನ್ನಾಗಿಸಿಕೊಂಡ ಭಕ್ತನೊಬ್ಬ ತನ್ನ ದೈನಂದಿನ ಚಟುವಟಿಕೆಗಳೆಲ್ಲವನ್ನೂ ಬೇಸರವಿಲ್ಲದೆ ದೇವರಿಗೆ ಅರ್ಪಿಸಬಹುದು; ತನ್ನೆಲ್ಲ ಗ್ರಹಿಕೆಗಳ ಮೇಲೆ ನಿಯಂತ್ರಣ ಸಾಧಿಸಿದವನಿಗೆ ದೇವರ ಪರಿಕಲ್ಪನೆ ಕೇವಲ ನೆಮ್ಮದಿಯ ವಿಷಯವಾಗಿರಬಹುದು; ನಾಸ್ತಿಕನಿಗೆ ದೇವರು ಎನ್ನುವುದೊಂದು ಮೂರ್ಖತನದ ಆಲೋಚನೆಯೆನ್ನಿಸಬಹುದು. ಆದರೆ ದೇವಸ್ಥಾನದ ಗರ್ಭಗುಡಿಯ ಮುಚ್ಚಿದ ಬಾಗಿಲುಗಳ ಎದುರು ನಿಂತು ಬಾಗಿಲುಗಳು ತೆರೆಯುವ ಸಮಯಕ್ಕಾಗಿ ಕಾದುನಿಂತಾಗ, ವಿಚಿತ್ರವಾದ ಭಯ-ಭಕ್ತಿಗಳೆರಡೂ ಕೂಡಿದ ಭಾವನೆಯೊಂದು ಎಲ್ಲರನ್ನೂ ಆವರಿಸಿಕೊಳ್ಳುತ್ತದೆ. ಹಾಗೆ ಕಾದುನಿಂತ ಸಮೂಹದಲ್ಲಿ ಹೊಸದಾಗಿ ಮದುವೆಯಾದ ಜೋಡಿಯೊಂದು ನಸುನಾಚಿ ನಿಂತಿರುತ್ತದೆ; ಹರಕೆ ಹೊತ್ತು ಮಗುವನ್ನು ಪಡೆದ ತಾಯಿಯೊಬ್ಬಳು ಮಗುವಿನೊಂದಿಗೆ ಕೈ ಜೋಡಿಸಿ ನಿಂತಿರುತ್ತಾಳೆ; ವಾಸಿಯಾಗದ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ತನ್ನ ಔಷಧಿಗಳ ಕೈಚೀಲದೊಂದಿಗೆ ಕಳವಳದಲ್ಲಿಯೇ ಕಾಯುತ್ತಿರುತ್ತಾನೆ; ನಾಸ್ತಿಕನಾದ ಪತ್ರಿಕಾ ವರದಿಗಾರನೊಬ್ಬ ದೇವಸ್ಥಾನದ ಬಗ್ಗೆ ವರದಿಯೊಂದನ್ನು ಬರೆಯಲು ದೇವರ ಮುಖದರ್ಶನಕ್ಕಾಗಿ ಅದೇ ಸಾಲಿನಲ್ಲಿ ನಿಂತಿರುತ್ತಾನೆ. ಎಲ್ಲ ನಿರೀಕ್ಷೆಗಳ ಏಕೈಕ ಉತ್ತರವೆನ್ನುವಂತೆ ತೆರೆದುಕೊಳ್ಳುವ ಬಾಗಿಲುಗಳು ಎಲ್ಲರಿಗೂ ಅವರವರಿಗೆ ಬೇಕಾದ ಸಮಾಧಾನವನ್ನು ಒದಗಿಸುತ್ತವೆ. ಮುಚ್ಚಿದ ಬಾಗಿಲುಗಳ ಹಿಂದೆ ಇದ್ದ ದೇವರು ಮುಂಭಾಗದಲ್ಲಿ ಕಾಯುತ್ತಿದ್ದವರೊಂದಿಗೆ ಮುಖಾಮುಖಿಯಾಗಿ ಎಲ್ಲರ ಮನಸ್ಸಿನ ತಲ್ಲಣಗಳನ್ನೂ ತನ್ನದಾಗಿಸಿಕೊಳ್ಳುತ್ತಾನೆ.           ಹೀಗೆ ಎಲ್ಲರ ತಲ್ಲಣಗಳನ್ನು ತಣಿಸುವ, ಕಳವಳಗಳನ್ನು ಕಡಿಮೆ ಮಾಡುವ, ಸಮಾಧಾನದ ಸಾಧನಗಳಾಗುವ ಬಾಗಿಲುಗಳು ತಮ್ಮ ಹೃದಯದ ಭಾರವನ್ನೆಂದೂ ಇನ್ನೊಬ್ಬರಿಗೆ ವರ್ಗಾಯಿಸುವುದಿಲ್ಲ. ಗಾಳಿಯೊಂದಿಗೆ ಬಾಗಿಲವರೆಗೂ ತಲುಪುವ ಮಳೆಯ ನೀರು ಒಳಗಿಳಿಯದಂತೆ ತನ್ನೆಲ್ಲ ಶಕ್ತಿಯನ್ನೂ ಬಳಸಿ ತಡೆಹಿಡಿಯುವ ಬಾಗಿಲು ಮನೆಯೊಳಗಿನ ಜೀವಗಳನ್ನು ಬೆಚ್ಚಗಿಡುತ್ತದೆ; ಕೊರೆವ ಚಳಿಯನ್ನು, ಬೇಸಿಗೆಯ ಸೆಕೆಯನ್ನು ತನ್ನದಾಗಿಸಿಕೊಂಡು ತನ್ನನ್ನು ನಂಬಿದವರ ನಂಬಿಕೆಯನ್ನು ಕಾಪಾಡುತ್ತ ದೇವನೊಬ್ಬನ ಇರುವಿಕೆಯ ಸಾಕ್ಷಾತ್ಕಾರವನ್ನು ಗಟ್ಟಿಗೊಳಿಸುತ್ತದೆ. ನಂಬಿಕೆಯ ಪರಿಕಲ್ಪನೆಯೂ ಬಾಗಿಲುಗಳೊಂದಿಗೆ ತನ್ನದೇ ಆದ ಸಂಬಂಧವನ್ನು ಬೆಳಸಿಕೊಂಡಿದೆ. ರಾತ್ರಿಯಾಯಿತೆಂದು ಕದ ಮುಚ್ಚುವ ಪ್ರತಿ ಮನಸ್ಸಿನಲ್ಲಿಯೂ ಬೆಳಗು ಮೂಡಿ ಬಾಗಿಲು ತೆರೆಯುತ್ತದೆ ಎನ್ನುವ ನಂಬಿಕೆ ಕೆಲಸ ಮಾಡಿದರೆ, ನಗರದ ಬಾಡಿಗೆ ಮನೆಯಲ್ಲಿನ ಗೃಹಿಣಿಯೊಬ್ಬಳು ಗಂಡನನ್ನು ಕೆಲಸಕ್ಕೆ ಕಳುಹಿಸಿ ಬಾಗಿಲು ಮುಚ್ಚಿ ಸಂಜೆ ಆತ ಮನೆಗೆ ಬರುವ ನಂಬಿಕೆಯಲ್ಲಿಯೇ ತರಕಾರಿ ಹೆಚ್ಚುತ್ತಾಳೆ; ಮಗುವನ್ನು ಹತ್ತಿಸಿಕೊಂಡ ಸ್ಕೂಲ್ ವ್ಯಾನಿನ ಬಾಗಿಲಿನೊಂದಿಗೆ ಮಗುವಿನ ಭವಿಷ್ಯದ ನಂಬಿಕೆಯೊಂದು ಚಲಿಸಿದರೆ, ದಿನಸಿಯಂಗಡಿಯ ಬಾಗಿಲು ತೆರೆವ ಹುಡುಗನೊಬ್ಬ ಗಿರಾಕಿಗಳನ್ನು ನಂಬಿಕೊಂಡು ಅಗರಬತ್ತಿಯನ್ನು ಹಚ್ಚುತ್ತಾನೆ; ಮಲ್ಟಿಪ್ಲೆಕ್ಸ್ ನ ಎಸಿ ಥಿಯೇಟರಿನ ಬಾಗಿಲುಗಳು ಯಾರೋ ಸಮುದ್ರದಂಚಿಗೆ ಕೂತು ಬರೆದ ಕಥೆಯನ್ನು ನಂಬಿಕೊಂಡರೆ, ಬಂಗಾರದಂಗಡಿಯ ಬಾಗಿಲುಗಳು ಇನ್ಯಾರದೋ ಮದುವೆಯನ್ನು ನಂಬಿಕೊಂಡು ತೆರೆದುಕೊಳ್ಳುತ್ತವೆ. ಹೀಗೆ ನೇರ ಸಂಬಂಧವೂ ಇಲ್ಲದ, ಪರಿಚಯವೂ ಇಲ್ಲದ ಅದೆಷ್ಟೋ ನಂಬಿಕೆಗಳನ್ನು ಬಾಗಿಲುಗಳು ಅರಿವಿಲ್ಲದೆಯೇ ಸಲಹುತ್ತಿರುತ್ತವೆ.           ಸಂಬಂಧಗಳನ್ನು ಬಾಗಿಲುಗಳು ಪೊರೆಯುವ ರೀತಿಯೂ ವಿಶಿಷ್ಟವಾದದ್ದು. ಹೆರಿಗೆ ಆಸ್ಪತ್ರೆಯ ಮುಚ್ಚಿದ ಬಾಗಿಲುಗಳು ತೆರೆಯುತ್ತಿದ್ದಂತೆಯೇ, ಮಗುವಿನ ಅಳುವೊಂದು ಅಪ್ಪ-ಮಗುವಿನ ಸಂಬಂಧವನ್ನು ಹುಟ್ಟುಹಾಕುತ್ತದೆ. ಹಾಗೆ ಹುಟ್ಟಿದ ಸಂಬಂಧ ಮನೆಯ ಬಾಗಿಲನ್ನು ಹಾದು, ಶಾಲೆಯ ಬಾಗಿಲನ್ನು ತಲುಪಿ, ಕಾಲೇಜು-ಯೂನಿವರ್ಸಿಟಿಗಳ ಕದ ತಟ್ಟಿ, ಹೊಸಹೊಸ ಸಂಬಂಧಗಳೊಂದಿಗೆ ಬೆಸೆದುಕೊಳ್ಳುತ್ತ ಹೊಸತನವನ್ನು ಕಂಡುಕೊಳ್ಳುತ್ತದೆ. ಅಳುತ್ತಲೇ ಮಗಳನ್ನು ಗಂಡನ ಮನೆಯ ಬಾಗಿಲಿಗೆ ಕಳುಹಿಸಿಕೊಡುವ ಅಪ್ಪ, ನಗುನಗುತ್ತ ಸೊಸೆಯನ್ನು ತೆರೆದ ಬಾಗಿಲಿನಿಂದ ಸ್ವಾಗತಿಸುತ್ತಾನೆ. ಹೀಗೆ ಹೆರಿಗೆ ಆಸ್ಪತ್ರೆಯ ಬಾಗಿಲಿನಿಂದ ಹೊರಬಂದ ಮಗುವಿನ ಅಳು ಸಂತೋಷವನ್ನು ಹಂಚಿ, ಬೆಳವಣಿಗೆ-ಬದಲಾವಣೆಗಳನ್ನು ತನ್ನದಾಗಿಸಿಕೊಳ್ಳುತ್ತ, ಸಂಬಂಧಗಳಿಗೊಂದು ಹೊಸ ಸ್ವರೂಪವನ್ನು ಒದಗಿಸುತ್ತದೆ. ಆಫೀಸಿನ ಕೊಟೇಷನ್, ಪ್ರೊಜೆಕ್ಟ್ ಗಳ ಗೌಪ್ಯತೆಯನ್ನು ಕಾಪಾಡಲು ತಾವಾಗಿಯೇ ಮುಚ್ಚಿಕೊಳ್ಳುವ ಬಾಗಿಲುಗಳ ಆಚೀಚೆ ಅಕ್ಕ-ತಮ್ಮಂದಿರು, ಜೀವದ ಗೆಳತಿಯರು, ಸಿಗರೇಟಿಗೆ ಜೊತೆಯಾಗುವ ಸ್ನೇಹಿತರು ವಯಸ್ಸು ಮರೆತು ಒಂದಾಗುತ್ತಾರೆ; ಲಿವ್ ಇನ್ ಸಂಬಂಧಗಳು, ದಾಂಪತ್ಯಗಳು, ಭಗ್ನಪ್ರೇಮಗಳು ಎಲ್ಲವುಗಳಿಗೂ ಬಾಗಿಲುಗಳು ತೆರೆದ ಹೃದಯದಿಂದ ಸ್ಪಂದಿಸುತ್ತವೆ. ರೆಸ್ಟ್ ರೂಮಿನ ಮುಚ್ಚಿದ ಬಾಗಿಲುಗಳ ಹಿಂದೆ ಉದ್ದನೆಯ ಕನ್ನಡಿಯ ಮುಂದೆ ಲಿಪ್ ಸ್ಟಿಕ್ ಸರಿಮಾಡಿಕೊಳ್ಳುತ್ತ ನಿಂತ ಹುಡುಗಿಯೊಬ್ಬಳು ವೀಕೆಂಡ್ ಪಾರ್ಟಿಯ ಬಗ್ಗೆ ಯೋಚಿಸಿದರೆ, ಕ್ಯಾಂಟೀನಿನ ಅಡುಗೆಮನೆಯ ಬಾಗಿಲಿನ ಹಿಂದೆ ಮಸಾಲೆದೋಸೆ ರೆಡಿಯಾಗುತ್ತಿರುತ್ತದೆ. ಶಿಫ್ಟ್ ಮುಗಿದು ಫ್ಲೋರಿನ ಲೈಟುಗಳೆಲ್ಲ ತಾವಾಗಿಯೇ ಆರಿಹೋದ ಮೇಲೂ ಬಾಗಿಲುಗಳು ಮಾತ್ರ ಡ್ರಾದಲ್ಲಿನ ಡಾಕ್ಯುಮೆಂಟುಗಳನ್ನು, ಮೀಟಿಂಗ್ ರೂಮಿನ ಮಾತುಕತೆಗಳನ್ನು ಜತನದಿಂದ ಕಾಪಾಡುತ್ತ ಮುಂದಿನ ಪಾಳಿಗಾಗಿ ಕಾಯುತ್ತಿರುತ್ತವೆ. ಆಚೀಚೆ ಸರಿದಾಡುವ ಶಾಪಿಂಗ್ ಮಾಲ್ ನ ಗಾಜಿನ ಬಾಗಿಲುಗಳ ಹಿಂದೆ ಅತ್ತರಿನ ಬಾಟಲಿಯೊಂದು ಗಿಫ್ಟಾಗಿ ಸಂಬಂಧಗಳನ್ನು ಸಲಹಿದರೆ, ಬ್ರ್ಯಾಂಡೆಡ್ ಚಪ್ಪಲಿಯೊಂದು ಪಾದಗಳ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತದೆ; ವಿದೇಶದ ಕನಸು ಹೊತ್ತ ಕಾರ್ಪೊರೇಟ್ ಉದ್ಯೋಗಿಯೊಬ್ಬ ಟ್ರಾವೆಲ್ ಬ್ಯಾಗ್ ಖರೀದಿಸಿದರೆ, ನಿವೃತ್ತ ಪ್ರಾಧ್ಯಾಪಕರೊಬ್ಬರು ಪುಸ್ತಕದಂಗಡಿಯ ಬಾಗಿಲನ್ನು ತಲುಪುತ್ತಾರೆ. ಹೀಗೆ ಹೊಸ ಸಂಬಂಧಗಳಿಗೆ ತೆರೆದುಕೊಳ್ಳುತ್ತ, ಮುಗಿದುಹೋದ ಸಂಬಂಧಗಳ ನೆನಪುಗಳನ್ನು ನವೀಕರಿಸುತ್ತ, ಅಗತ್ಯಬಿದ್ದಾಗ ಗುಟ್ಟುಗಳನ್ನು ಕಾಪಾಡುತ್ತ, ತಮ್ಮ ಕರ್ತವ್ಯಗಳನ್ನೆಲ್ಲ ಚಾಚೂತಪ್ಪದೆ ನಿರ್ವಹಿಸುವ ಬಾಗಿಲುಗಳ ಆಚೀಚೆ ಬದುಕುಗಳು ನಿರಾಯಾಸವಾಗಿ ಕಾಲು ಚಾಚುತ್ತವೆ. ******************* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಯಾಕೀ ಪುನರುಕ್ತಿ? ಅಭಿಮಾನಿ ಓದುಗರೊಬ್ಬರು ಪತ್ರ ಬರೆದು ತಮ್ಮ ಪ್ರತಿಕ್ರಿಯೆ ತಿಳಿಸಲು ನನ್ನ ಫೋನ್ ನಂಬರ್ ಕೇಳಿದರು. ಕೊಟ್ಟದ್ದು ತಪ್ಪಾಯಿತು. ಅವರು ಯಾವಾಗೆಂದರೆ ಆವಾಗ ಸಣ್ಣಸಣ್ಣ ವಿಚಾರಕ್ಕೆಲ್ಲ ಕರೆಯಲಾರಂಭಿಸಿದರು. ಪ್ರತಿಸಲವೂ ಅರ್ಧ ತಾಸು ಕಮ್ಮಿಯಿಲ್ಲದ ಮಾತು. ನಿಜವಾದ ಸಮಸ್ಯೆ ಸಮಯದ್ದಾಗಿರಲಿಲ್ಲ. ಅವರು ಒಂದೇ ಅಭಿಪ್ರಾಯವನ್ನು ಬೇರೆಬೇರೆ ಮಾತುಗಳಲ್ಲಿ ಹೇಳುತ್ತಿದ್ದರು. ಸೂಚ್ಯವಾಗಿ ಹೇಳಿನೋಡಿದೆ. ಮುಟ್ಟಿದಂತೆ ಕಾಣಲಿಲ್ಲ. ಫೋನು ಎತ್ತಿಕೊಳ್ಳುವುದನ್ನು ನಿಲ್ಲಿಸಿದೆ. ಕಡೆಗೆ ನಂಬರ್ ಬ್ಲಾಕ್ ಮಾಡಬೇಕಾಯಿತು. ಮತ್ತೊಬ್ಬ ನಿವೃತ್ತ ಶಿಕ್ಷಕರು ಸಜ್ಜನರು ಹಾಗೂ ಶಿಷ್ಯವತ್ಸಲರು. ಹಿಂದೆಂದೊ ನಡೆದದ್ದನ್ನು ಇಸವಿ ದಿನ ಸಮಯ ಸಮೇತ ನೆನಪಿಟ್ಟಿದ್ದವರು. ಶಿಷ್ಯರು ಭೇಟಿಯಾಗಲು ಹೋದಾಗೆಲ್ಲ ಹಿಂದೆ ಹೇಳಿದ್ದನ್ನು ಹೊಸದಾಗೆಂಬಂತೆ ಹೇಳುತ್ತಿದ್ದರು. ನಿವೃತ್ತರಿಗೆ ಹೆಚ್ಚು ಟೈಮಿರುವುದರಿಂದ ವಿಷಯವನ್ನು ಚೂಯಿಂಗ್ ಗಮ್ಮಿನಂತೆ ಎಳೆದೆಳೆದು ವಿವರಿಸುವ ಕುಶಲತೆ ಗಳಿಸಿಕೊಂಡಿರುತ್ತಾರೆ. ನಮ್ಮ ನಂಟರಲ್ಲೂ ಇಂಥ ಒಬ್ಬರಿದ್ದಾರೆ. ಅವರು ಮನೆಗೆ ಆಗಮಿಸುತ್ತಾರೆಂದರೆ ಆತಂಕದಿಂದ ಕಿವಿಗೆ ಇಟ್ಟುಕೊಳ್ಳಲು ಅರಳೆ ಪಿಂಡಿ ಹುಡುಕುತ್ತಿದ್ದೆವು. ಅವರು ಝಂಡಾ ಹಾಕಿರುವಾಗ ಇಡೀ ದಿನ ಏನಾದರೊಂದು ವಿಷಯ ತೆಗೆದು ಸುದೀರ್ಘ ಮಾತಾಡುತ್ತಿದ್ದರು. ಹಳ್ಳಿಯಲ್ಲಿ ನಡೆದ ಸ್ವಾರಸ್ಯಕರ ಘಟನೆಗಳ ಸಂಚಿಯೇ ಅವರಲ್ಲಿರುತ್ತಿತ್ತು. ಸಮಸ್ಯೆಯೆಂದರೆ, ಬೆಳಿಗ್ಗೆ ಹೇಳಿದ್ದನ್ನೇ ಸಂಜೆಗೂ ನಿರೂಪಿಸುತ್ತಿದ್ದರು. ಅವರಿದ್ದ ಸ್ಥಳದಲ್ಲಿ ಅವರ ಭಾವನೆ ಚಿಂತನೆ ಅನುಭವ ಹಂಚಿಕೊಳ್ಳಲು ಜನರೇ ಇರುತ್ತಿರಲಿಲ್ಲ. ಹೊಸಬರು ಸಿಕ್ಕರೆ ಅವರಿಗೆ ಹತ್ತುನಾಲಗೆ ಬಂದಂತಾಗುತ್ತಿತ್ತು. ಈ ಪುನರುಕ್ತಿ ವೈಯಕ್ತಿಕ ಸ್ವಭಾವದಿಂದಲ್ಲ, ಸನ್ನಿವೇಶದಿಂದ ಹುಟ್ಟಿದ್ದು. ಪುನರುಕ್ತಿಯ ಸದ್ಗುಣ ಶಿಕ್ಷಕರಲ್ಲೂ ಇರುವುದುಂಟು. ಒಂದು ಗಂಟೆ ತರಗತಿ ನಿರ್ವಹಿಸಲು ಬೇಕಾದ ಸಿದ್ಧತೆಯಿಲ್ಲದೆ ಕೈಬೀಸಿಕೊಂಡು ಆಗಮಿಸುವ ಇವರು, ಒಂದೆರಡು ಪಾಯಿಂಟುಗಳನ್ನೇ ವಿವಿಧ ಬಗೆಯಲ್ಲಿ ದೋಸೆಯಂತೆ ಮಗುಚಿ ಹಾಕುವರು. ಇವರ ಕ್ಲಾಸಿನಲ್ಲಿ ಹತ್ತುನಿಮಿಷ ಹೊರಗೆದ್ದು ಹೋಗಿ ಬಂದರೆ ಬಹಳ ಲುಕ್ಸಾನಿಲ್ಲ. ಇವರ ಪುನರುಕ್ತಿಗೆ ಕ್ಷಮೆಯಿಲ್ಲ. ಇದು ಸನ್ನಿವೇಶದಿಂದಲ್ಲ, ಕರ್ತವ್ಯಗೇಡಿತನದಿಂದ ಬಂದಿದ್ದು. ಕೆಲವು ಶಿಕ್ಷಕರು ಜೋಕುಗಳನ್ನು ಪುನರುಕ್ತಿಸುವುದುಂಟು. ವಿದ್ಯಾರ್ಥಿಗಳು ನಗುವುದು ಜೋಕಿಗಲ್ಲ, ಈ ವರ್ಷ ಎಷ್ಟನೇ ಸಲ ಬಂದಿದೆ ಎಂದು ಲೆಕ್ಕಹಾಕಿ. 24 ಇಂಟು 7 ಟಿವಿಗಳದ್ದೂ ಇದೇ ಕಷ್ಟ. ಒಂದೇ ಸುದ್ದಿಯನ್ನು ಹತ್ತಾರು ಬಗೆಯಲ್ಲಿ ತೋರಿಸುತ್ತ ಪ್ರಾಣ ತಿನ್ನುತ್ತಿರುತ್ತಾರೆ. ಅವರಿಗೆ ದಿನದ ಸುದೀರ್ಘ ಕಾಲವನ್ನು ತುಂಬುವ ಅನಿವಾರ್ಯತೆ.ಕೆಲವು ಊರುಗಳಲ್ಲಿ ನಿಲಯದ ಕಲಾವಿದರು ವಾಗ್ ಭಯೋತ್ಪಾದಕರೆಂದು ಹೆಸರಾಗಿದ್ದಾರೆ. ಅವರು ಒಳ್ಳೆಯ ವಾಗ್ಮಿಗಳೇ. ಮೊದಲ ಸಲ ಕೇಳುವವರಿಗೆ ಅವರ ವಾಕ್ಪಟುತ್ವ ಇಷ್ಟವೂ ಆಗುತ್ತದೆ. ಸ್ಥಳೀಯರ ಪಾಡು ಬೇರೆ. ಸದರಿಯವರ ಭಾಷಣದ ಸರದಿ ಬಂದಾಗ ಅವರಿಗೆ ಪ್ರಾಣಸಂಕಟ. ಅವರು ಭಾಷಣ ತಪ್ಪಿಸಿಕೊಳ್ಳುವ ಅನಂತ ತಂತ್ರಗಳನ್ನು ಹುಡುಕಿಕೊಂಡಿರುತ್ತಾರೆ ಕೂಡ. ಕೆಲವು ವಾಗ್ಮಿಗಳ ನೆನಪಿನ ಶಕ್ತಿಯೇ ಲೋಕದ ಪಾಲಿಗೆ ಶಾಪ. ಸಣ್ಣಸಣ್ಣ ವಿವರಗಳನ್ನು ನೆನಪಿಟ್ಟು ಹೇಳುವರು. ಟಿವಿಗಳಲ್ಲಿ ಕಾಣಿಸಿಕೊಳ್ಳುವ ನಗೆಹಬ್ಬದ ಕಲಾವಿದರಿಗೆ ಇದು ಬೃಹತ್ ಸಮಸ್ಯೆ. ಮಾತು ಪುನರುಕ್ತಿಯಾಗುತ್ತಿದೆ, ಬೇಸರ ತರಿಸುತ್ತಿದೆ ಎಂಬ ಆತ್ಮವಿಮರ್ಶೆ ಹೇಳುಗರಲ್ಲಿಲ್ಲದೆ ಹೋದರೆ ಕೇಳುಗರಾದರೂ ಏನು ಮಾಡಬೇಕು? ಪುನರುಕ್ತಿ ಮಾತಿಗಿಂತ ಬರೆಹದಲ್ಲಿ ದೊಡ್ಡಶಾಪ. ಒಮ್ಮೆ ನನ್ನದೊಂದು ಲೇಖನದಲ್ಲಿ 500 ಪದಗಳನ್ನು ತೆಗೆದು ಚಿಕ್ಕದಾಗಿಸಲು ಸಾಧ್ಯವೇ ಎಂದು ಸಂಪಾದಕರು ಸೂಚಿಸಿದರು. ಅಭಿಮಾನ ಭಂಗವಾಗಿ ಬೇಸರಿಸಿಕೊಂಡು ಕಡಿಮೆಗೊಳಿಸಿದೆ. ಇಳಿಸಿದ ಬಳಿಕ ಗೊತ್ತಾಯಿತು, 500 ಪದಗಳನ್ನು ಅನಗತ್ಯವಾಗಿ ಬಳಸಿದ್ದೆನೆಂದು. ಪುನರುಕ್ತಿ ಕ್ಲೀಷೆಗಳ ತಾಯಿ ಕೂಡ. ನಮ್ಮ ರಾಜಕಾರಣಿಗಳ ಬಾಯಲ್ಲಿ `ಷಡ್ಯಂತ್ರ’ ಎಂಬ ಪದ ಎಷ್ಟು ಸವೆದುಹೋಗಿದೆ? `ಎಲ್ಲರ ಚಿತ್ತ ದೆಹಲಿಯತ್ತ’ ಎಂಬ ಪ್ರಾಸಬದ್ಧ ವಾಕ್ಯ ಮೊದಲಿಗೆ ಚಂದವಾಗಿ ಕಂಡಿತ್ತು. ಅದನ್ನು ಮಾಧ್ಯಮಗಳು ಹೇಗೆ ಉಜ್ಜಿದವು ಎಂದರೆ, ಈಗದನ್ನು ಓದುವಾಗ ಯಾವ ಭಾವನೆಯೂ ಸ್ಫುರಿಸುವುದಿಲ್ಲ. ನನ್ನ ಸಹಲೇಖಕರೊಬ್ಬರು ನನ್ನದೊಂದು ಬರೆಹದಲ್ಲಿದ್ದ `ಅಮಾಯಕ’ ಎಂಬ ಪದಕ್ಕೆ ಪ್ರತಿಕ್ರಿಯಿಸುತ್ತ, ಮಾಧ್ಯಮಗಳು ಅತಿಯಾಗಿ ಬಳಸಿ ಸವೆಸಿರುವ ಪದಗಳಲ್ಲಿ ಇದೂ ಒಂದೆಂದು ಎಚ್ಚರಿಸಿದರು. ದೋಷ ಭಾಷೆಯದಲ್ಲ; ಬರೆಯುವವರ ಶಬ್ದದಾರಿದ್ರ್ಯದ್ದು. ವಿಚಾರಗಳನ್ನು ಪುನರುಕ್ತಿ ಮಾಡುವುದು ವೈಚಾರಿಕ ಬಡತನದ ಸಂಕೇತ ಕೂಡ. ಕಡಿಮೆ ಮಾತಲ್ಲಿ ಹೆಚ್ಚು ಅರ್ಥ ಹೊರಡಿಸಬಲ್ಲ ಕವಿ ಪಂಪ ತನ್ನನ್ನು `ಹಿತಮಿತ ಮೃದುವಚನ ಚತುರ’ನೆಂದು ಬಣ್ಣಿಸಿಕೊಂಡನು. ಶರಣರ ಮತ್ತು ಸರ್ವಜ್ಞನ ವಚನಗಳ ರೂಪವಿನ್ಯಾಸವೇ ಅತಿಮಾತುಗಳಿಂದ ತನ್ನನ್ನು ಪಾರುಗೊಳಿಸಿಕೊಂಡಿತು. ಈ ಮಾತನ್ನು ಷಟ್ಪದಿಗೆ ಸಾಂಗತ್ಯಕ್ಕೆ ಹೇಳುವಂತಿಲ್ಲ. ಅಲ್ಲಿನ ವಾಚಾಳಿತನ ಹಾಡಿಕೆಯಲ್ಲಿ ಮುಚ್ಚಿಹೋಗುತ್ತದೆ. ಸಂಕ್ಷಿಪ್ತವಾಗಿ ಬರೆಯುವುದು ಪುನರುಕ್ತಿ ಮತ್ತು ಶಿಥಿಲತೆ ತಡೆಯುವ ಒಂದು ಒಳೋಪಾಯ. ಒಂದೇ ವಿಚಾರವನ್ನು ಹಲವು ಕೃತಿಗಳಲ್ಲಿ ಬೇರೆಬೇರೆ ತರಹ ಬರೆದರೆ ಜಾಣ ಓದುಗರಿಗೆ ತಿಳಿದುಬಿಡುತ್ತದೆ. ಅಡಿಗರು ರಮ್ಯ ಸಂಪ್ರದಾಯದಲ್ಲಿ ಬರೆಯುತ್ತ ಬೇಸತ್ತು `ಅನ್ಯರೊರೆದುದನೆ, ಬರೆದುದನೆ ನಾ ಬರೆಬರೆದು ಬಿನ್ನಗಾಗಿದೆ ಮನವು’ ಎಂದು ದುಗುಡಿಸಿದರು; `ನನ್ನ ನುಡಿಯೊಳಗೆ ಬಣ್ಣಿಸುವ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ’ ಎಂದೂ ನುಡಿದರು. ತಾವೇ ಕಂಡುಕೊಂಡ ಭಾಷೆಯಲ್ಲಿ ಅಭಿವ್ಯಕ್ತಿಸಲು ಬಯಸುವ ಎಲ್ಲರಿಗೂ ಪುನರುಕ್ತಿ ಶಾಪವಾಗಿ ಕಾಡುತ್ತದೆ. ಇದರ ಒದ್ದಾಟ ಲಂಕೇಶರ ಪತ್ರಿಕಾ ಟಿಪ್ಪಣಿಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು. ವಾಗ್ಮಿಗಳಿಗೆ ಅವರ ಹಿಂದಿನ ಭಾಷಣವೇ ಎದುರಾಳಿ; ಸೂಕ್ಷ್ಮ ಲೇಖಕರಿಗೆ ಹಿಂದಣ ಯಶಸ್ವೀ ಕೃತಿಯೇ ಹಗೆ. ಅವು “ಭಿನ್ನವಾಗಿ ಮಾತಾಡಲು ಬರೆಯಲು ಸಾಧ್ಯವೇ ನಿನಗೆ?” ಎಂದು ಸವಾಲು ಹಾಕುತ್ತಿರುತ್ತವೆ. ಸವಾಲನ್ನು ಎತ್ತಿಕೊಂಡರೆ ಹೊಸಸೃಷ್ಟಿ; ಇಲ್ಲದಿದ್ದರೆ ಹಳತನ್ನೇ ಹೊಸತೆಂಬ ಭ್ರಮೆಯಲ್ಲಿ ಒದಗಿಸುವ ಕರ್ಮ. ಎಲ್ಲ ದೊಡ್ಡ ಬರೆಹಗಾರಲ್ಲಿ ಜೀವನದರ್ಶನವೊಂದು ಪುನರುಕ್ತಿ ಪಡೆಯುತ್ತ ಬಂದಿರುತ್ತದೆ- ಕುವೆಂಪು ಅವರಲ್ಲಿ ವಿಶ್ವಮಾನವ ತತ್ವ, ಬೇಂದ್ರೆಯವರಲ್ಲಿ ಸಮರಸ ತತ್ವ, ಕಾರಂತರಲ್ಲಿ ಜೀವನತತ್ವ, ತೇಜಸ್ವಿಯವರಲ್ಲಿ ವಿಸ್ಮಯತತ್ವ ಇತ್ಯಾದಿ. ಈ ಮೂಲತತ್ವವು ಕಾಲಕಾಲಕ್ಕೆ ಒಳಗಿಂದಲೇ ಬೆಳೆಯುತ್ತಲೂ ಬಂದಿರುತ್ತದೆ. ಹೀಗಾಗಿ ಅದು ಶಾಪವಲ್ಲ. ಆದರೆ ಇದೇ ಲೇಖಕರು ತಮ್ಮ ಕೊನೆಗಾಲದಲ್ಲಿ ಈ ತತ್ವವನ್ನು ವಿಸಕನಗೊಳಿಸದೆ, ಸ್ಟೀರಿಯೊ ರೆಕಾರ್ಡಿನಂತೆ ಪುನರುಕ್ತಿಸುವ ಕಷ್ಟಕ್ಕೆ ಸಿಕ್ಕಿಕೊಳ್ಳುವುದುಂಟು.ಸರ್ಕಸ್ ಮಾಡುವವರಿಂದ ಹಿಡಿದು ಪೂಜಾರಿಕೆ, ಪಾಠ, ವ್ಯಾಪಾರ, ಡ್ರೈವಿಂಗ್, ಅಡುಗೆ, ಕಛೇರಿ ಕೆಲಸ ಮಾಡುವವರಿಗೆ ಒಂದೇ ನಮೂನೆಯ ಕೆಲಸವನ್ನು ದಿನವೂ ಮಾಡುತ್ತ ಏಕತಾನೀಯ ಜಡತೆ ಆವರಿಸುತ್ತದೆ. ಅವರು ಪುನರಾವರ್ತನೆಯನ್ನು ಹೇಗೆ ನಿಭಾಯಿಸುತ್ತಾರೆ? ಬಹುಶಃ ಅದಕ್ಕೆ ಅನಿವಾರ್ಯತೆಯಲ್ಲಿ ಹೊಂದಿಕೊಂಡಿರುತ್ತಾರೆ. ಸತತ ತರಬೇತಿಯಿಂದ ಪಡೆದ ಪರಿಣತಿಯೇ ಅಲ್ಲಿ ಸಿದ್ಧಿಯಾಗಿ ನಿಂತುಬಿಟ್ಟಿರುತ್ತದೆ. ಆದರೆ ಸೃಜನಶೀಲರು ಪುನರಾವರ್ತನೆಯ ಇಕ್ಕಟ್ಟು ಬಂದಾಗ ಪ್ರತಿಸಲವೂ ವಿಭಿನ್ನತೆ ತೋರಲು ಹೋರಾಡುತ್ತಾರೆ. ತಾವೇ ಕಟ್ಟಿದ ಚೌಕಟ್ಟುಗಳನ್ನು ಮುರಿಯುತ್ತಾರೆ. ತಲ್ಲಣಿಸುತ್ತಾರೆ.ಆಡಿದ್ದನ್ನೇ ಆಡುವವರ ಮಾತು-ಬರೆಹ ಬೋರು ಹೊಡೆಸಬಹುದು. ಅದು ಅಪಾಯವಲ್ಲ. ಆದರೆ ಭಾಷೆ, ಧರ್ಮ, ಸಮುದಾಯ, ದೇಶ, ಸಿದ್ಧಾಂತದ ನೆಲೆಯಲ್ಲಿ ವಿದ್ವೇಷ ಹುಟ್ಟಿಸುವ ರಾಜಕಾರಣದ ಪುನರುಕ್ತಿಗಳು ಅಪಾಯಕರ. ಇಲ್ಲಿ ಪುನರುಕ್ತಿ ಅರೆಸತ್ಯವನ್ನು ಪೂರ್ಣಸತ್ಯವೆಂದು ಸಮೂಹವನ್ನು ನಂಬಿಸುತ್ತದೆ. ಈ ಮನಶ್ಶಾಸ್ತ್ರೀಯ ಪ್ರಯೋಗವನ್ನು ಜರ್ಮನಿಯ ಫ್ಯಾಸಿಸ್ಟರು ಮಾಡಿದರು. ಇದಕ್ಕಾಗಿ ಹಿಟ್ಲರನ ಪ್ರಚಾರ ಮಂತ್ರಿ ಗೊಬೆಲ್ಸ್ ಪ್ರಸಿದ್ಧನಾಗಿದ್ದ. ಜಾಹಿರಾತುಗಳು ಪುನರುಕ್ತಿಯಾಗುವುದು ಇದೇ ತಂತ್ರದಿಂದ. ತತ್ವಪದಗಳಲ್ಲಿ, ಜನಪದ ಹಾಡುಗಳಲ್ಲಿ ಪಲ್ಲವಿಯಾಗಿ ಬರುವ ಪುನರುಕ್ತಿಗೆ ಬೇರೆ ಆಯಾಮವಿದೆ. ಪ್ರತಿ ಖಂಡ ಮುಗಿದ ಬಳಿಕ ಬರುವ ಪಲ್ಲವಿ ಹೊಸಹೊಸ ಅರ್ಥಗಳನ್ನು ಹೊಳೆಸುತ್ತದೆ. `ಬಿದಿರೇ ನೀನಾರಿಗಲ್ಲದವಳು’-ಶರೀಫರ ಈ ಪಲ್ಲವಿ ಗಮನಿಸಬೇಕು. ಹಾಡಿನ ಪ್ರತಿಹೋಳಿನ ಬಳಿಕ ಬರುತ್ತ ಇದು ನವೀನ ಅರ್ಥಗಳನ್ನು ಹುಟ್ಟಿಸುತ್ತ ಬೆರಗುಗೊಳಿಸುತ್ತದೆ. ಹಿಂದುಸ್ತಾನಿ ಸಂಗೀತದಲ್ಲೂ ಒಂದೇ ಚೀಸನ್ನು ಬೇರೆಬೇರೆ ಲಯವಿನ್ಯಾಸದಲ್ಲಿ ಅಭಿವ್ಯಕ್ತಿಸಲಾಗುತ್ತದೆ. ಪ್ರತಿಯೊಂದೂ ಸ್ವರವಿನ್ಯಾಸವೂ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ-ಕರೆಗೆ ಅಪ್ಪಳಿಸುವ ಕಡಲ ಅಲೆಯಂತೆ, ಮರದಕೊಂಬೆ ಗಾಳಿಗೆ ಅಲುಗಿದಂತೆ, ಹಕ್ಕಿ ಹಾಡಿದಂತೆ. ಪ್ರತಿಭಾವಂತ ಗಾಯಕರು ಧ್ವನಿಮುದ್ರಿತ ಯಂತ್ರದಂತೆ ಒಂದೇ ತರಹ ಹಾಡುವುದಿಲ್ಲ. ನಮಗೆ ಪ್ರಿಯವಾದ ಹಾಡು, ಧ್ವನಿಮುದ್ರಣದಲ್ಲಿ ಅದೆಷ್ಟನೆಯ ಸಲವೊ ಕೇಳುವಾಗ ಕೂಡ, ಪುನರುಕ್ತಿ ಎನಿಸದೆ ಹೊಸದೇ ಅನುಭವ ಕೊಡುವುದು; ಹೊಸದೇ ಭಾವ ಹೊಳೆಸುವುದು. ಹಾಡು ಅದೇ. ಕೇಳುವವರ ಮನಸ್ಥಿತಿ ಬೇರೆಯಾಗಿದೆ. ನಮಗೆ ಪ್ರಿಯರಾದವರ ಮುಖವನ್ನು ಎಷ್ಟು ಸಲ ನೋಡಿದರೂ, ಅವರ ಮಾತನ್ನು ಅದೆಷ್ಟು ಸಲ ಆಲಿಸಿದರೂ ಏಕತಾನ ಎನಿಸುವುದಿಲ್ಲ. ಎಳೆಯ ಕಂದನ ಮೊಗವನ್ನು ಕನ್ನಡಿಯಂತೆ ಹಿಡಿದು ತಾಯಿ ದಣಿಯುವಳೇ? ನೋಡುವ ತಾಯಭಾವವೂ ನೋಟಕ್ಕೆ ವಸ್ತುವಾಗಿರುವ ಕೂಸಿನ ಭಾವವೂ ಪರಸ್ಪರ ಬದಲಾಗುತ್ತ ಜೀವಂತಿಕೆ ಸೃಷ್ಟಿಸುತ್ತವೆ. `ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಅದೆಷ್ಟು ಸಲ ಓದಿರುವೆನೊ? ಹಳತೆನಿಸಿಲ್ಲ. ವಯಸ್ಸು ಅಭಿರುಚಿ ಆಲೋಚನಕ್ರಮ ಅನುಭವ ಬದಲಾದಂತೆ, ಹಿಂದೆ ಓದಿದ್ದು ಕೇಳಿದ್ದು, ಹೊಸ ಅನುಭವ ಮತ್ತು ಚಿಂತನೆಯಲ್ಲಿ ಬಂದು ಕೂಡಿಕೊಳ್ಳುತ್ತದೆ. ಪುನರುಕ್ತಿ ಸೃಜನಶೀಲವಾಗಿದ್ದಾಗ ಯಾಂತ್ರಿಕವಾಗಿರುವುದಿಲ್ಲ. ಹಿಂದೆ ಕೇಳಿದ ಹಾಡು ಸ್ಮತಿಯಿಂದ ಎದ್ದುಬರುವಾಗ ಹೊಸಜನ್ಮವನ್ನು ಪಡೆದಿರುತ್ತದೆ. ಪ್ರತಿವರ್ಷವೂ ಚಿಗುರುವ ಮರ ಹೊಸತನದಲ್ಲಿ ಕಾಣಿಸುವುದಕ್ಕೆ ಕಾರಣ, ಮರ ಮಾತ್ರವಲ್ಲ, ಅದನ್ನು ನೋಡುವ ಕಣ್ಣೂ ಸಹ. ********************************* ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅನುವಾದಿತ ಕೃತಿ ಪ್ರಪಂಚ ಪ್ರವೇಶ ಮೊದಲ ನುಡಿ ಅನುವಾದವೆಂಬ ಪದದ ಸರಿಯಾದ ಅರ್ಥ ತಿಳಿಯದವರು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಎರಡು ಭಾಷೆಗಳು ತಿಳಿದಿದ್ದರೆ ಸಾಕು ಅನುವಾದ ತಾನೇ ತಾನಾಗಿ ಆಗುತ್ತದೆ ಎಂದು ತಿಳಿಯುವವರಿದ್ದಾರೆ. ಅನುವಾದವೆಂದರೆ ಅದೊಂದು ಯಾಂತ್ರಿಕವಾದ ಕೆಲಸವೆಂದು ಹೇಳುವವರಿದ್ದಾರೆ. ಮನುಷ್ಯನ ಬದುಕಿನಲ್ಲಿ ಭಾಷೆಯ ಮಹತ್ವವೇನು, ಅನುವಾದದ ಮಹತ್ವವೇನು, ಅನುವಾದಕ/ಕಿಯಲ್ಲಿ ಇರಬೇಕಾದ ಪ್ರತಿಭೆಯೇನು, ಪಾಂಡಿತ್ಯವೇನು, ಗುಣಗಳೇನು, ಸೃಜನಶೀಲತೆಯೇನು-ಈ ಯಾವುದರ ಗೊಡವೆಯೂ ಇಲ್ಲದೆ ಸಾಹಿತ್ಯಲೋಕದಲ್ಲಿ ಅನುವಾದಕರಿಗೆ ಮೂಲ ಲೇಖಕರ ನಂತರದ ಸ್ಥಾನ ಕೊಡುವ ಹುನ್ನಾರ ಎಂದಿನಿಂದಲೂ ನಡೆಯುತ್ತಲೇ ಬಂದಿದೆ. ಅನುವಾದದ ಉದ್ದೇಶ ಮತ್ತು ಮಹತ್ವಗಳೇನು ಎಂಬುದರ ಬಗ್ಗೆ ಒಮ್ಮೆ ಚಿಂತಿಸಿದರೆ ಸಾಹಿತ್ಯದ ಸಂದರ್ಭದಲ್ಲಿ ಅನುವಾದಕರ ಅಗತ್ಯವೆಷ್ಟಿದೆ ಎಂಬುದನ್ನು ಮನಗಾಣ ಬಹುದು.ಜಗತ್ತಿನ ಉದ್ದಗಲಕ್ಕೂ ಹರಡಿರುವ ಸಾವಿರಾರು ಭಾಷೆಗಳನ್ನು ಪರಿಗಣಿಸಿದಾಗ ಇಂದಿನ ಸಂಪರ್ಕ ಸಮೃದ್ಧಿಯ ಜಾಗತೀಕರಣದ ಸಂದರ್ಭದಲ್ಲಂತೂ ಅನುವಾದಕರು ಆಮ್ಲಜನಕದಷ್ಟು ಅಗತ್ಯವಾಗಿದ್ದಾರೆಂದು ಹೇಳಿದರೆ ತಪ್ಪಾಗಲಾರದು. ಒಂದು ಭಾಷೆಯಲ್ಲಿ ಬಂದ ಸಾಹಿತ್ಯವನ್ನು ಓದುವ ಓದುಗರು ತಮ್ಮ ಭಾಷೆಗಷ್ಟೆ ಸೀಮಿತರಾದರೆ ಅವರ ಜ್ಞಾನವು ಸಂಕುಚಿತಗೊಳ್ಳುತ್ತದೆ. ಜಗತ್ತಿನ ಇತರ ಮಾನವರನ್ನೂ ಇತರ ಸಂಸ್ಕತಿ ಮತ್ತು ಜೀವನಕ್ರಮಗಳನ್ನೂ ಸಾಹಿತ್ಯ ಕೃತಿಗಳ ಮೂಲಕ ತಿಳಿದುಕೊಂಡಾಗ ಮಾತ್ರ ನಮ್ಮ ಅರಿವಿನ ವ್ಯಾಪ್ತಿ ವಿಸ್ತಾರಗೊಂಡು ನಾವು ಬೌದ್ಧಿಕವಾಗಿ ಬೆಳೆಯಲು ಸಾಧ್ಯ. ಇದು ಅನುವಾದಗಳ ಮೂಲಕವೇ ಆಗಬೇಕಷ್ಟೆ. ಹೀಗೆ ಹೇಳುವಾಗ ನನಗೆ ನನ್ನ ಆರಂಭಿಕ ಅನುವಾದಿತ ಕೃತಿಯನ್ನು ತ್ರಿಶೂರಿನಲ್ಲಿ ಬಿಡುಗಡೆ ಮಾಡುತ್ತ ಮಲೆಯಾಳದ ಮಹಾನ್ ಲೇಖಕ ಶ್ರೀ ಎಂ.ಟಿ.ವಾಸುದೇವನ್ ನಾಯರ್ ಹೇಳಿದ ಮಾತುಗಳು ನೆನಪಾಗುತ್ತವೆ : ‘ಯಾವುದೇ ಸಾಹಿತ್ಯದ ಓದುಗರು ತಮ್ಮ ಭಾಷೆಗಷ್ಟೇ ಸೀಮಿತರಾಗಿದ್ದರೆ ಅವರು ಬಾವಿಯೊಳಗಿನ ಕಪ್ಪೆಗಳಾಗುತ್ತಾರೆ. ವೈವಿಧ್ಯತೆಯಿಂದ ತುಂಬಿದ ಈ ಜಗತ್ತಿನಲ್ಲಿ ನಾವು ಇತರರ ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟಿದೆ. ಹಾಗೆ ತಿಳಿದುಕೊಳ್ಳುವ ಮನಸ್ಸು ನಮಗಿರಬೇಕು .ನಾವು ನಮ್ಮ ಮನಸ್ಸಿನ ಕಿಟಿಕಿ ಬಾಗಿಲುಗಳನ್ನು ಹೊಸ ಗಾಳಿ ಮತ್ತು ಬೆಳಕುಗಳಿಗಾಗಿ ಸದಾ ತೆರೆದಿಡಬೇಕು. ಇದು ಅನುವಾದಗಳನ್ನು ಓದುವ ಮೂಲಕ ಸಾಧ್ಯ ‘ ಎಂದು. ಅನುವಾದಕರಿಗೆ ಭಾಷೆಯ ಸಂಪೂರ್ಣ ಜ್ಞಾನದ ಜತೆಗೆ ಆ ಭಾಷೆಯನ್ನಾಡುವ ಜನರ ಸಂಸ್ಕೃತಿ, ಆಚಾರ ವಿಚಾರಗಳು, ಅವರಾಡುವ ವಿಶಿಷ್ಟ ನುಡಿ , ನುಡಿಗಟ್ಟು ಮತ್ತು ಗಾದೆಮಾತುಗಳು, ಅಲ್ಲಿನ ಭೌಗೋಳಿಕ ಪರಿಸರ, ಜನರ ಸ್ವಭಾವ, ವರ್ತನೆ-ಹೀಗೆ ನೂರಾರು ವಿಚಾರಗಳ ಆಳವಾದ ಅರಿವಿರಬೇಕು. ಅದಕ್ಕಾಗಿ ಅನುವಾದಕರಾಗ ಬಯಸುವವರಲ್ಲಿ ಅವಲೋಕನ ಮತ್ತು ಚಿಂತನ ಗುಣಗಳು ಸದಾ ಸಕ್ರಿಯವಾಗಿರಬೇಕು. ತಾವು ಅನುವಾದಿಸುವ ಎರಡು ಭಾಷೆಗಳ ಮೇಲಿನ ಪ್ರಭುತ್ವವನ್ನು ಮೊನಚುಗೊಳಿಸುವ ಆಸಕ್ತಿ ಮತ್ತು ಪರಿಶ್ರಮಗಳತ್ತ ಅವರ ಗಮನವಿರಬೇಕು. ಜಾಗತೀಕರಣಗೊಂಡ ಇಂದಿನ ಜಗತ್ತಿನಲ್ಲಿ ಅನುವಾದಕರ ಅಗತ್ಯ ಎಂದಿಗಿಂತ ಹೆಚ್ಚು ಗುರುತಿಸಲ್ಪಟ್ಟಿದೆ..ಅದೇ ರೀತಿ ಸಾಕಷ್ಟು ಕೃತಿಗಳೂ ಅನುವಾದಗೊಳ್ಳುತ್ತಿವೆ.ಕುವೆಂಪು ಭಾಷಾ ಭಾರತಿ, ಭಾರತೀಯ ಭಾಷಾ ಸಂಸ್ಥಾನ, ಕೇಂದ್ರ ಸಾಹಿತ್ಯ ಅಕಾಡೆಮಿ, ಮತ್ತು ಇನ್ನೂ ಅನೇಕ ಖಾಸಗಿ ಪ್ರಕಾಶನ ಸಂಸ್ಥೆಗಳು ಅನುವಾದಿತ ಕೃತಿಗಳನ್ನು ಹೊರತರುತ್ತಿವೆ. ನಾನು ಈ ಅಂಕಣದಲ್ಲಿ ನನ್ನ ಗಮನ ಸೆಳೆದ ಕೆಲವು ಅನುವಾದಿತ ಕೃತಿಗಳ ಸ್ಥೂಲ ಪರಿಚಯವನ್ನಷ್ಟೇ ಮಾಡುತ್ತೇನೆ. ಅವುಗಳ ರಕ್ಷಾಪುಟ ಮತ್ತು ಪ್ರಕಟಣಾ ವಿವರಗಳನ್ನು ನೀಡುವ ಮೂಲಕ ನೀವು ಅವುಗಳನ್ನು ಸಂಪಾದಿಸಿ ಓದುವ ಆಸಕ್ತಿ ತೋರಿಸಬೇಕೆಂಬುದು ನನ್ನ ಈ ಅಂಕಣದ ಉದ್ದೇಶ. ************************************* ಲೇಖಕರ ಬಗ್ಗೆ:- ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಹೊಸ ದನಿ-ಹೊಸ ಬನಿ

ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು

ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು 80ರ ದಶಕದ ಆಚೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಫಿಲಾಸಫಿಗಳ ಗುಂಗು ಶುರುವಾಯಿತು. ಇದ್ದಕ್ಕಿದ್ದ ಹಾಗೆ ರಜನೀಶ್, ಬುದ್ಧ, ಜಿಡ್ಡು ಕೃಷ್ಣಮೂರ್ತಿ, ಯೂಜಿ ಮುಂತಾದವರು ಪ್ರಚಾರಕ್ಕೆ ಬಂದರು. ಇವರೆಲ್ಲ ಹೇಳಿದ್ದನ್ನು ಕತೆಗಳಲ್ಲೂ ಕವನಗಳಲ್ಲೂ ಲೇಖನಗಳಲ್ಲೂ ತಂದು ಕೊನೆಗೆ ಆ ಹೆಸರುಗಳನ್ನು ಕೇಳಿದರೆ ಕಿರಿಕಿರಿಯಾಗುವಂತೆ ಮಾಡುವಲ್ಲಿ ನಮ್ಮ ಲೇಖಕರೂ ಸಾಹಿತಿಗಳೂ ಯಶಸ್ವಿಯಾದರು.ಈಗಲೂ ಕೆಲವರು ಲೋಹಿಯಾವಾದವನ್ನು ಮತ್ತೆ ಕೆಲವರು ಅಂಬೇಡ್ಕರರನ್ನೂ ಕೆಲವರು ಗಾಂಧಿಯನ್ನೂ ಹೀಗೇ ಬಳಸುತ್ತ, ಬೆದಕುತ್ತ ತಮ್ಮ ಬರವಣಿಗೆಗೆ ಬಳಸುತ್ತ ಆ ಅಂಥವರ ಹೆಸರನ್ನೇ ಮತ್ತೆ ಮತ್ತೆ ಹೇಳುತ್ತ ನಿಜಕ್ಕೂ ಬೆನ್ನೆಲುಬಾಗಿಟ್ಟುಕೊಳ್ಳಬೇಕಿದ್ದ ಆ ಹಿರೀಕರ ಆದರ್ಶಗಳು ಕನಸುಗಳೂ ಮರೆಯಾಗಿ ಕೇವಲ ಹೆಸರೇ ಮೆರೆಯತೊಡಗಿದ್ದನ್ನೂ ನಾವು ಬಲ್ಲೆವು. ಈ  ಇಂಥ ಕಾರಣಕ್ಕೇ  ಅಂಥ ಸಾಹಿತಿಗಳೂ ಅವರು ಬರೆದ ಸಾಹಿತ್ಯವೂ ಶಾಶ್ವತವಾಗಿ ನಿಲ್ಲಲಿಲ್ಲ. ಬರಿಯ ಸಿದ್ಧಾಂತಗಳನ್ನು ನಂಬಿದ ಸಾಹಿತ್ಯಕೃತಿಗಳು ಕಣ್ಮರೆಯಾಗುವುದು ಸಹಜ ಮತ್ತು ಸ್ವಾಭಾವಿಕ. ಇಂಥದೇ ಪ್ರಯೋಗಗಳು ನವೋದಯದ ಕಾಲದಲ್ಲೂ ನಡೆದದ್ದಕ್ಕೆ ಪುರಾವೆಗಳಿವೆ. ನವ್ಯದಲ್ಲಂತೂ ಪದ್ಯ ಎಂದರೆ ಪ್ರಾಸದ ಹಂಗಿಲ್ಲದ, ಅಲಂಕಾರದ ಕಷ್ಟ ಬೇಕಿಲ್ಲದ ಗದ್ಯದ ಗಟ್ಟಿ ಸಾಲು ಎಂಬ ಹುಂಬ ವ್ಯಾಖ್ಯೆಯನ್ನು ಯಾರೋ ಕೆಲವರು ಹೇಳಿದ್ದನ್ನೇ ನಂಬಿ ಗದ್ಯದ ಸಾಲನ್ನು ತುಂಡು ತುಂಡಾಗಿಸಿ ಬೇಕಾದಂತೆ ತಿರುಚಿದ ಉದಾಹರಣೆಗಳೂ ಇವೆ. ಈ ಇಂಥದೇ ಕಳೆಯನ್ನು ಬಂಡಾಯದ ಅದ್ಭುತ ಬೆಳೆಯಲ್ಲೂ, ದಲಿತ ಧ್ವನಿಯ ಸ್ಪಷ್ಟತೆಯ ನಡುವೆ ರೂಕ್ಷತೆಯನ್ನೂ ಕಂಡಿದ್ದೇವೆ. ಇದು ಕಾಲದಿಂದ ಕಾಲಕ್ಕೆ ಕವಿತೆಯ ರೀತಿ ಬದಲಾಗುವುದರ ಮತ್ತು ಕಾವ್ಯದ ರಸಗ್ರಹಣದ ಸ್ವರೂಪದ ಬದಲಾವಣೆ. ಸದ್ಯದ ಕಾವ್ಯದ ಹರಿಯುವಿಕೆಯಲ್ಲಿ ತೀವ್ರತೆ ಇದೆಯೇ? ಬದುಕನ್ನು ಸಾಹಿತ್ಯ ಬಿಂಬಿಸುತ್ತದೆ ಎನ್ನುವ ವ್ಯಾಖ್ಯೆಯ ಪುನರ್ಮನನ ಹೇಗೆ ಸಾಧ್ಯವಿದೆ? ಎನ್ನುವ ಪ್ರಶ್ನೆಗಳನ್ನು ಇಟ್ಟುಕೊಂಡಿರುವ ಈ ಅಂಕಣದ ಮೂಲ ಉದ್ದೇಶವೇ ವರ್ತಮಾನದ ಕಾವ್ಯ ಕ್ರಿಯೆಯ ಸಂಕೀರ್ಣತೆಗಳನ್ನು ಸಾಮಾನ್ಯ ಓದುಗನ ದೃಷ್ಟಿಯಿಂದ ನೋಡುವುದಾಗಿದೆ. ಬರಿಯ ಹೇಳಿಕೆಗಳು ಕಾವ್ಯವಾಗುವುದಿಲ್ಲ ಮತ್ತು ಕನಿಷ್ಠ ರೂಪಕವೊಂದನ್ನು ಟಂಕಿಸದ ಯಾರೂ ಕವಿಯಾಗಲು ಸಾಧ್ಯವೇ ಇಲ್ಲ ಎನ್ನುವುದನ್ನು ಕನ್ನಡದ ಮನಸ್ಸುಗಳು ಈಗಾಗಲೇ ಸ್ಪಷ್ಟಪಡಿಸಿವೆ. ರಸಗ್ರಹಣದ ಮೂಲ ಉದ್ದೇಶವೇ ತನಗಿರುವ ಅರಿವನ್ನು ಪರಿಷ್ಕೃತಗೊಳಿಸಿ ತಾಜಾ ಪ್ರತಿಮೆಗಳ ಮೂಲಕ ಹೇಳುವ ಪ್ರಯತ್ನ. ಫೇಸ್ಬುಕ್ ಎಂಬ ಸಾಮಾಜಿಕ ಮಾಧ್ಯಮದ ಮೂಲಕವೆ ತಮ್ಮ ಕವಿತೆಗಳನ್ನು ಪ್ರಕಟಿಸುತ್ತಿರುವ ಹಲವರು ನಮ್ಮ ನಡುವೆ ಇದ್ದಾರೆ. ಬಹಳ ವರ್ಷಗಳಿಂದ ಕವಿತೆಯನ್ನು ಬರೆಯುವ ಅಭ್ಯಾಸವಿದ್ದವರೂ ಪತ್ರಿಕೆಗಳಲ್ಲಿ ಅವನ್ನು ಪ್ರಕಟಿಸುವ “ಜಾಣ್ಮೆ” ಮತ್ತು “ಕಲೆ”ಗಳ ಅರಿವು ಇಲ್ಲದೆ ಡೈರಿಗಳ ಪುಟಗಳಲ್ಲೇ ತಮ್ಮ ಕವಿತೆಯನ್ನು ಅಡಗಿಸಿ ಇಟ್ಟುಕೊಂಡಿದ್ದವರು ಫೇಸ್ಬುಕ್ಕಿನಲ್ಲಿ ಪ್ರಕಟಿಸಿ “ಭಾರ” ಕಳೆದುಕೊಳ್ಳುತ್ತಿದ್ದಾರೆ. ಅಂಥ ಹಲವರ ರಚನೆಗಳು ನಿಜಕ್ಕೂ ಚೆನ್ನಾಗಿರುತ್ತವೆ. ಆದರೆ ಫೇಸ್ಬುಕ್ ಪುಟಗಳು ಕ್ಷಣಕ್ಷಣಕ್ಕೂ ಹೊಸ ಹೊಸ ಬರಹ, ಫೋಟೋ, ಕವಿತೆ, ಸ್ಟೇಟಸ್ಸುಗಳ ಮೆರವಣಿಗೆ ಆಗಿರುವುದರಿಂದ ನಿಜಕ್ಕೂ ಅದ್ಭುತ ಎಂದೆನಿಸುವ ಸಾಲುಗಳು ಕೂಡ ಭರಪೂರ ಪೇಜುಗಳ ನಡುವೆ ಮಾಯವಾಗುವುದೂ ಸಹಜ. ಶ್ರೀ ಎನ್.ಡಿ.ರಾಮಸ್ವಾಮಿ ಮೇಲೆ ಹೇಳಿದ ಆ ಅಂಥ ಹಲವರ ಪೈಕಿ ಒಬ್ಬರು. ವೃತ್ತಿಯಿಂದ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರಾಗಿರುವುದರಿಂದ ಸಹಜವಾಗಿ ಛಾಸರಿನಿಂದ ಶೇಕ್ಸ್ ಪಿಯರನವರೆಗೆ, ಡಾಂಟೆಯಿಂದ ಆಫ್ರಿಕದ ಕಪ್ಪು ಹಾಡಿನವರೆಗೂ ಅವರ ಓದು ತೆರೆದೇ ಇರುತ್ತದೆ. ಆದರೆ ಎಲ್ಲ ಉಪನ್ಯಾಸಕರೂ ಕವಿಗಳಾಗುವುದಿಲ್ಲ. ಕವಿತೆಯನ್ನು ಪಾಠ ಮಾಡುವಾಗ ಮಾತ್ರ ಕವಿತೆಯನ್ನು ಬ್ರೌಸು ಮಾಡುವ ಶಿಕ್ಷಕರೂ ಇದ್ದಾರೆ. ಆದರೆ ಎನ್.ಡಿ.ಆರ್ ಅಪವಾದ. ಇನ್ನೇನು ಮೂರು ವರ್ಷಗಳಷ್ಟೇ ನಿವೃತ್ತಿಗೆ ಬಾಕಿ ಇರುವ ಅವರು ಅದೆಷ್ಟು ವರ್ಷಗಳಿಂದ ಪದ್ಯದ ಮೊರೆ ಹೋಗಿದ್ದರೋ ಏನೋ ಫೇಸ್ಬುಕ್ಕಿನಲ್ಲಿ ನಿತ್ಯವೂ ಅವರ ಪದ್ಯ ಪ್ರಕಟ ಆಗುತ್ತಲೇ ಇರುತ್ತದೆ. ಮೊನ್ನೆ ಫೇಸ್ಬುಕ್ ಪುಟದಲ್ಲಷ್ಟೇ ಬರೆಯುವ ಮತ್ತೊಬ್ಬ ಅನುವಾದಕರು ಇವರ ಪದ್ಯವನ್ನು ತೆಲುಗು ಭಾಷೆಗೆ ಅನುವಾದಿಸಿದ್ದರು ಎಂದರೆ ಇವರ ಪದ್ಯಗಳ ಝಳ ಕಡಿಮೆಯದೇನೂ ಅಲ್ಲ. ಸಾಹಿತ್ಯದಲ್ಲಿ ಆಸಕ್ತಿ ಇರುವ ಇಂಗ್ಲಿಷ್ ಉಪನ್ಯಾಸಕರಿಗೆ ಇರುವ ಮತ್ತೊಂದು ಲಾಭವೆಂದರೆ ಅವರು ಕನ್ನಡದ ಮಹತ್ವದ ಲೇಖಕರನ್ನು ಸುಲಭವಾಗಿ ಒಳಗೊಳ್ಳುವ ಸೌಲಭ್ಯ. ಏಕೆಂದರೆ ಹೈಸ್ಕೂಲ್ ಮತ್ತು ಪಿಯು ಕಾಲೇಜುಗಳು ಬಹುತೇಕ ಒಟ್ಟಿಗೇ ಇರುವುದರಿಂದ ಭಾಷಾ ಶಿಕ್ಷಕರುಗಳ ಮಾತಿನ ನಡುವೆ text ಬಗ್ಗೆ ಮಾತು ಸಹಜವೇ ಆಗಿರುವುದರಿಂದ ಗ್ರಹಿಕೆ ಸೂಕ್ಷ್ಮತೆ ಇದ್ದವರು ಗೆದ್ದಿರುತ್ತಾರೆ. ಎನ್.ಡಿ.ಆರ್ ಪದ್ಯಗಳ ಮೂಲ ಪುರಾತನ ನವ್ಯದ ಶಾಲೆ. ಪ್ರತಿಮೆಗಳೂ ರೂಪಕಗಳೂ ಇಲ್ಲದ ಬರಿಯ ಕನಸುಗಳು ಅವರ ಪದ್ಯಗಳಲ್ಲಿ ವಿರಳಾತಿ ವಿರಳ. ಏನನ್ನು ಹೇಳುವುದಕ್ಕೂ ಪ್ರತಿಮೆ ಮತ್ತು ರೂಪಕಗಳ ಮೊರೆ ಹೋಗುವ ಅವರ ಕವಿತೆಗಳಿಗೆ ಒಮ್ಮೊಮ್ಮೆ ಈ ಭಾರವೇ ಜಾಸ್ತಿಯಾಗಿ ಮೂಲದಲ್ಲಿ ಅವರೇನು ಹೇಳ ಹೊರಟಿದ್ದರೋ ಆ ಅಂಶವೇ ಮರೆಯಾಗುವುದೂ ಉಂಟು. ಉದಾಹರಣೆಗೆ; ಅಕ್ಷಿ ನಕ್ಷತ್ರವಾದದ್ದು ಏಕೆ? ಎದೆಯೊಳಗೆ ಪುಟ್ಟ ಕಾರಂಜಿ ಶಬ್ದ,ಶಬ್ದಕ್ಕೂ ಪುಳಕ ಜೀವ ಸೆಲೆ ಕಡಲಾಗಿ,! ಇಲ್ಲಿ ಶಬ್ದಾಡಂಬರದ ನಡುವೆ ಅಕ್ಷಿ ಅಂದರೆ “ಕಣ್ಣು” ಪುಳಕ ಹುಟ್ಟಿಸುವ ಜೀವಸೆಲೆಯಾಗಿದೆ ಎನ್ನುವುದನ್ನು ಹೇಳುತ್ತಲೇ, “ಮೀಟುತ್ತಿದೆ ಕನಸುಗಳ ಉಡವನ್ನ” ಅನ್ನುವಾಗ ಈ ಪದ್ಯ ಮತ್ತೆಲ್ಲಿಗೋ ತುಯ್ಯುತ್ತಿದೆ ಅಂತ ಭಾವಿಸಿದರೆ, “ಆಕಾಶದ ನಕ್ಷತ್ರಗಳೂ ನಕ್ಕು ವಿಷಾದದ ಅಮಲಲಿ” ಎಂದು ಮುಕ್ತಾಯ ಆಗುವಾಗ ಈ ಕವಿತೆ ಹೇಳಿದ್ದಾದರೂ ಏನನ್ನು ಎನ್ನುವ ಗೊಂದಲ ಸಹಜ. “ಇಲ್ಲಿ ಜೇನಿದೆ,ಹಾಲಿದೆ,ಹಣ್ಣಿದೆ ಅದು ಇದೆ ಇದು ಇದೆ ಎಲ್ಲ ಇದೆ” ಎಂದು ಆರಂಭವಾಗುವ ಪದ್ಯ ಈ ನೆಲದ ಘಮವನ್ನೋ ಅಥವ ಭಾಷೆಯ ಬೆಡಗನ್ನೋ ಹೊಗಳುತ್ತಿದೆ ಅಂದುಕೊಂಡರೆ ” ಏಕಲವ್ಯ ಜಗದೇಕ ವೀರನಾಗಿದ್ದು ಇಳಿದ ಹೊಳೆಯ ದಂಡೆಯಾಚೆಯೂ ಈಜಿದ್ದು!” ಎಂದು ರೂಪುಗೊಂಡರೆ ಮತ್ತೊಂದು ಜಿಗಿತಕ್ಕೆ ತುಯ್ದು “ಲಕ್ಷ್ಮಣ ಹಣ್ಣ ಬಿಟ್ಟು ಓಡಿದ್ದು ಕೋದಂಡ ಹಣ್ಣ ಜತಯೇ ಓಡಿದ್ದು” ಎಂದು ಹೇಳುತ್ತ ಕಡೆಗೆ ಪದ್ಯ “ಮುಗಿಲ ಅಟ್ಟದಲ್ಲೇ ಇರಲಿ ಕೈ ಚಾಚಿದರಷ್ಟೇ ಹಣ್ಣು!” ಎಂದು ಕೊನೆ ಮುಟ್ಟಿದಾಗ ಓಹ್ ಈ ಕವಿ ಹೆಣ್ಣನ್ನು ಕುರಿತು ಹೇಳಲು ಏನೆಲ್ಲ ಪದ ಭಂಡಾರವನ್ನೇ ಸೂರೆಗೊಂಡರಲ್ಲ ಎನ್ನಿಸುತ್ತದೆ. ರಾಮಾಯಣ, ಭಾರತದ ಪಾತ್ರಗಳೆಲ್ಲ ಕಣ್ಣ ಮುಂದೆ ಸರಿದು ಹೋಗುತ್ತವೆ, ಸವೆದ ದಾರಿಯ ಕುರುಹಾಗುತ್ತವೆ “ಬುದ್ಧ ಗುರುವಿನ ಕಣ್ಣಿಗೆ ಧೂಳು ಬಿದ್ದು ಧಾರಾಕಾರ ಕಣ್ಣೀರು ನೋವು,ನವೆ” ಎಂದು ಸುರುವಾಗುವ ಕವಿತೆ ಬುದ್ಧನೂ ಅನುಭವಿಸಿದ ಸಾಮಾನ್ಯ ನೋವನ್ನು ತೆರೆದಿಡುತ್ತಲೇ ” ಓಡಿದ,ಓಡಿದ ಧೂಳುಗಳು ಬಿಡದೆ ಹಿಂಬಾಲಿಸಿದ್ದು ಕಣ್ಣ ಮುಚ್ಚಿ ಓಡಿದ!” ಎಂದು ಹೇಳುವಾಗ ಕಣ್ಣಿಗೆ ಬಿದ್ದದ್ದು  ಧೂಳಲ್ಲ,  ಬದುಕಿನ ಸತ್ಯಗಳು ಎಂದು ಗೊತ್ತಾಗುತ್ತದೆ. ಮುಂದುವರೆದಂತೆ,  “ಈಗ ಬುದ್ದನ ಕಣ್ಣು ಸ್ಪಷ್ಟ, ಎಲ್ಲವೂ ನಿಖರವಾಗಿ ಕಂಡು ಬೆರಗು!” ಎನ್ನುವಾಗ ಬುದ್ಧನ ಜ್ಞಾನೋದಯವನ್ನು ಬೆರಗಿನಿಂದ ಕಂಡಿರಿಸಿದ ಕವಿತೆ ಆಗಿ ಮಾರ್ಪಾಡಾಗುತ್ತದೆ. ಶಬ್ದಗಳು ಚಿನ್ನದ ಅದಿರಾದಾಗ ಬದುಕ ಹೊಲ ಬಂಗಾರವಾಗಿತ್ತ ಶಬ್ದಗಳು ಪ್ರೀತಿಯ ಮೊಗ್ಗಾದಾಗ ಬದುಕು ಮಲ್ಲಿಗೆ ತೋಟವಾಗಿತ್ತ! ಎಂದೂ ಹೇಳಬಲ್ಲ ಈ ಕವಿಯ ಬಳಿ ಶಬ್ದ ಭಂಡಾರದ ಸಂದೂಕ ಇದ್ದೇ ಇದೆ ಈ ಕವಿ ಬದುಕಿನ ನಶ್ವರತೆಯನ್ನು ಕೂಡ ಬಿಡುಬೀಸಾಗಿ ಹೇಳಬಲ್ಲರೆಂಬುದಕ್ಕೆ ನೋಡಿ; “ಸಂತೆಯಲಿ ಮೀನು ಮಾರುವ ಸೊಪ್ಪು,ಸದೆ ಮಾರುವ ಜಾಗದಲಿ ಮಾತುಗಳದೇ ಕಾರುಬಾರು ಗಟ್ಟಿಯಾಗಿ,ಕರ್ಕಶವಾಗಿ ಕಂಚಿನ ಕಂಠದಲಿ ಕೂಗಾಟ!” ಯೆಸ್, ಮುಂದಕ್ಕೆ ಇಣುಕಿದರೆ, “ಮೌನಕ್ಕೆ ಜಳಕ ಮಾಡಿಸಿ ಹೊಸ ಅಂಗಿ ತೊಡಿಸಿ ಕಥೆ,ಕವನ,ಹೇಳುತ್ತಾ ಹೋದರೆ ಸಿಡಿ ಮಿಡಿ ಗೊಂಡು ಉಗಿಯುತ್ತಿತ್ತು!” ಎಂದು ಕುತೂಹಲ ಹುಟ್ಟಿಸುತ್ತಾರೆ. ಆದರೆ ಪದ್ಯ ಕೊನೆಯಾಗುವುದು ಹೀಗೆ; “ಮೌನದ ಗೆಳೆತನ ದುಬಾರಿ ಖಿನ್ನತೆ, ಸಿಡುಕು, ಕೋಪ,ಕುದಿತ,ಮಿದಿತದ ಹೊಂಡವಾದದ್ದು!”. ಈಗ ಹೇಳಿ, ಈ ಪದ್ಯ ಬದುಕಿನ ನಶ್ವರತೆಯನ್ನು ಹೇಳುತ್ತಿದೆಯೋ ಅಥವ ಶಬ್ದದ ಆಡಂಬರದಲ್ಲಿ ಮೌನದ ಮಹತ್ತನ್ನು ಹುಡುಕುವ ಯತ್ನ ಮಾಡುತ್ತಿದೆಯೋ? ಈ ಪರಿಗೆ ಒಯ್ಯವ ಪದ್ಯಕ್ಕೆ ಆಗಾಗ ಲಿಫ್ಟ್ ಕೊಡುವುದರಲ್ಲಿ ಇವರು ಸಿದ್ದ ಹಸ್ತರೇ! “ಈ ಕನ್ನಡಿಯಲಿ ಅದೆಷ್ಟು ಮುಖ ಯುಧಿಷ್ಟರನೂ  ನಿಂತಿದ್ದ ಕಿಮ್ ಮಹಾಶಯನೂ ನಿಂತಿದ್ದ ರಂಗದಲಿ ವೇಷ ಕಟ್ಟಿ”. ಎಂದು ಆರಂಭಗೊಂಡ ಪದ್ಯ ದಾಟುತ್ತ ದಾಟುತ್ತ “ಇವನೂ ಬಿಳಿ ಬಟ್ಟೆಯಲಿ ಚಿತ್ರ ಬಿಡಿಸಿದ್ದು ನೆತ್ತರ ಬಣ್ಣದಲಿ” ಎಂದು ಮತ್ತೊಂದು ಲಿಫ್ಟ್ ಪಡೆದಾಗ ಗೊಂದಲ. ಪದ್ಯ ಹೆಚ್ಚಿಸಿದ ಗೊಂದಲದಲ್ಲಿ ” ಇವನು ಶಿಶುಪಾಲನ ಕೊನೆ ತಮ್ಮ ನಂದನನಿಗೂ ಬೆಂಕಿ ಇಟ್ಟೇ ತೀರುವೆನೆಂದ!” ಎಂದು ಕೊನೆಯಾಗುವಾಗ ಈ ಕವಿ ಕಾಣಿಸಿದ ಬೆಳಕ ಝಳಕ್ಕೆ ಕಣ್ಣು ಕುಕ್ಕುವ ಶಕ್ತಿ ಇದ್ದೇ ಇದೆ ಎನ್ನುವುದಕ್ಕೆ ಸಾಕ್ಷಿ. ಆದರೆ ಪುರಾಣ ಪ್ರತಿಮೆಗಳ ಮೂಲಕವೇ ಏನೆಲ್ಲವನ್ನೂ ಕಟ್ಟುವ ಈ ಕವಿಯ ರಚನೆಗಳು ಆಧುನಿಕ ಮನಸ್ಥಿತಿಯ ಮತ್ತು ಪುರಾಣ ಪ್ರತಿಮೆಗಳ ಮೂಲ ಆಶಯವೇ ತಿಳಿಯದವರಿಗೆ ಗೊಂದಲ ಮತ್ತು ಶಬ್ದಾಡಂಬರದ ಹಾಗೆ ಕಂಡರೆ ತಪ್ಪೇನಲ್ಲ. “ತಳ ಇರದ ದೋಣಿಯಲಿ ಮಹಾ ಯಾನ ಆಸೆ ಎಂಬು ಹುಟ್ಟು ಒಂದರಗಳಿಗೆಯೂ ಬಿಡದೆ” ಈ ಸಾಲುಗಳು ಹುಟ್ಟಿಸುವ ತಳಮಳಗಳ ಲೆಕ್ಕ ಸುಲಭಕ್ಕೆ ಸಿಕ್ಕದ್ದು. ಮುಂದುವರೆದಂತೆ ” ಯುದ್ದದ ದಿರಸು ಕವಚ,ಕತ್ತಿ ತಿವಿದಲ್ಲದೇ ಮುಂದೆ ಹಾದಿ,ಹೆಜ್ಜೆ!” ಎಂದು ಆಕ್ಷೇಪಿಸುವ ಈ ಕವಿ ನಿಜಕ್ಕೂ ಏನನ್ನು ಹೇಳಲು ಹವಣಿಸುತ್ತಿದ್ದಾರೆ ಎನ್ನುವುದೇ ಕುತೂಹಲಕ್ಕೆ ದಾರಿ ಮಾಡುತ್ತದೆ. ಇನ್ನೂ ಏನೆಲ್ಲವನ್ನೂ ಹೇಳುತ್ತ ಈ ಕವಿಯ ಕವಿತೆಗಳನ್ನು ಡಿಸೆಕ್ಟ್ ಮಾಡುತ್ತ ಹೋಗಬಹುದು. ಆದರೆ ಪುರಾಣ ಪ್ರತಿಮೆಗಳ ಭಾರದಲ್ಲಿ ಇವರ ನಿಜದ ಆಶಯಗಳೇ ಸುಸ್ತು ಪಡುತ್ತಿವೆ ಎನ್ನುವದಂತೂ ನಿಜ. “ಇಲ್ಲಿ ಗಂಗೆಯಿದೆ ಗಾಂಗೇಯನ ಶರಶಯ್ಯೆ ಇದೆ ಅರ್ಜುನ ದಾಹಕ್ಕೆ ತಳಾ ತಳ ಸೀಳಿ ಗಂಗೆ ತರಬೇಕು!” ಎಂಬ ಭರವಸೆಯ ಕ್ಷೀಣ ದನಿಯೂ ಇವರಿಗೆ ದಕ್ಕಿರುವುದರಿಂದಲೇ ಇವರು ಪದ್ಯ ಪೋಸ್ಟ್ ಮಾಡುತ್ತಿದ್ದಂತೆಯೇ ಬೀಳುವ ಲೈಕುಗಳು ಈ ಕವಿಯು ಮತ್ತಷ್ಟು ಮಗದಷ್ಟು ಪುರಾಣ ಪ್ರತಿಮೆಗಳನ್ನು ಉಜ್ಜುಜ್ಜಿ ಹೊಳಪು ಪೇರಿಸುವಂತೆ ಮಾಡಿವೆ. ಶ್ರೀ ಎನ್. ಡಿ. ರಾಮಸ್ವಾಮಿ ಯಾವತ್ತೋ ತಮ್ಮ ಸಂಕಲನ ತರಬಹುದಿತ್ತು. ಪ್ರತಿಮೆ ರೂಪಕಗಳ ಅರಿವೇ ಇಲ್ಲದ ಸ್ವ ಮರುಕಗಳನ್ನೇ ಕಾವ್ಯವೆಂದು ಬಿತ್ತುತ್ತಿರುವರ ನಡುವೆ ಎನ್ ಡಿ ಆರ್ ಪುರಾಣದ ಪಾತ್ರಗಳ ಮೂಲಕವೇ ಬದುಕನ್ನು ಅರಿಯುವ ರೀತಿಯಿಂದ ಬಹು ಭಿನ್ನಾವಾಗಿ ಕಾಣುತ್ತಾರೆ ಮತ್ತು ವಿಭಿನ್ನವಾಗಿಯೇ ಉಳಿಯುತ್ತಾರೆ ಅವರ ೧೫ ಪದ್ಯಗಳನ್ನು ಒಟ್ಟು ಮಾಡಿ ಇಲ್ಲಿ ಪೋಣಿಸಿದ್ದೇನೆ. ಸುಮ್ಮನೇ ಕಣ್ಣಾಡಿಸುತ್ತ ಹೋದಂತೆ ಮತ್ತೆಲ್ಲಿಗೋ ಮತ್ಯಾವುದೋ ಪರಿಜಿಗೆ ಒಯ್ಯುವ ಈ ಪದ್ಯಗಳ ಝಳ ನಿಮಗೂ ಮುಟ್ಟಲಿ. ಎನ್.ಡಿ.ಆರ್. ಕವಿತೆಗಳು 1. ಅಕ್ಷಿ ನಕ್ಷತ್ರವಾದದ್ದು ಏಕೆ? ಎದೆಯೊಳಗೆ ಪುಟ್ಟ ಕಾರಂಜಿ  ಶಬ್ದ,ಶಬ್ದಕ್ಕೂ ಪುಳಕ ಜೀವ ಸೆಲೆ ಕಡಲಾಗಿ,!  ಹರಿಯುತ್ತಿದೆ ಝರಿ ಜುಳು,ಜುಳು ನಿನಾದವೆಲ್ಲ ಅಲೌಕಿಕದ ಹುನ್ನಾರವೆ? ಮೀಟುತ್ತಿದೆ ಕನಸುಗಳ ಉಡವನ್ನ!  ತಳ ಕಂಡ ಬದುಕ ಸೆಲೆ ಉನ್ಮತ್ತ,ಉನ್ಮೀಲನದ ಗಾಳಿಪಟ ಇಲ್ಲಿಲ್ಲ ಭಾವಗಳ ಹಕ್ಕಿ  ಪರಿಧಿಯ ಸೀಳಿ !  ಹಂಚಿ ಕೊಂಡ ಕನಸುಗಳು ಆಯಾತ ನಿರ್ಯಾತವಾಗುತ್ತಿವೆ ಈ ಸೇತುವೆಗೆ  ಬದುಕ ಎರಡೂ ಹೊಳೆ ಕಾಯುತ್ತಲೇ!  ಆಕಾಶದ ನಕ್ಷತ್ರಗಳೂ ನಕ್ಕು ವಿಷಾದದ ಅಮಲಲಿ ಈ ಸೇತುವೆ ಎಂದಿಗಾದರೂ ಒಮ್ಮೆ ದಕ್ಕಿದರೆ? 2. ಇಲ್ಲಿ ಜೇನಿದೆ,ಹಾಲಿದೆ,ಹಣ್ಣಿದೆ ಅದು ಇದೆ ಇದು ಇದೆ ಎಲ್ಲ ಇದೆ ಹೂವು,ಹಾಸಿಗೆ,ಚಂದ್ರ,ಚಂದನ ನಗು,ಉತ್ಸಾಹ ,ಹುರುಪು,ಕನಸು ಹೊಳೆಯಂತೆ ಕಾದಿದೆ ! ಇಳಿಯ ಬೇಕು ಕನಸುಗಳ ಹೊಳೆಗೆ ಜಿಗಿ,ಜಿಗಿದು ಬಾಚಲು ಬೇಕು ಹಣ್ಣ ಗೊಂಚಲಿನ ಪರಿ ಹರಡಿದ್ದು ಬೇಕಾದ ಮಾಗಿದ ಹಣ್ಣೇ ಕಿತ್ತು! ಏಕಲವ್ಯ ಜಗದೇಕ ವೀರನಾಗಿದ್ದು ಇಳಿದ ಹೊಳೆಯ ದಂಡೆಯಾಚೆಯೂ ಈಜಿದ್ದು! ಬಾಚಿದ್ದು ಯಾವನೂ ಮುಟ್ಟದ ಹಣ್ಣು! ಸುಧಾಮ ಯಾವ

ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು Read Post »

ಅಂಕಣ ಸಂಗಾತಿ, ದಿಕ್ಸೂಚಿ

ದಿಕ್ಸೂಚಿ

ಸೋಲಿನ ಸುಳಿಯಲ್ಲೇ ಗೆಲುವಿನ ತುದಿಯಿದೆ! ಎಷ್ಟೆಲ್ಲ ಅನುಭವಗಳ ಮೂಟೆಯನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗಿದರೂ ಗೆಲುವು ಮಿಂಚಿನಂತೆ ಅರೆಗಳಿಗೆ ಮಿಂಚಿ ಮಾಯವಾಗುತ್ತದೆ.ಇಲ್ಲಿ ಎಲ್ಲದರಲ್ಲೂ ಒತ್ತಡ. ಯಾವುದೂ ಸರಳ ರೇಖೆಯಲ್ಲಿ ಸಿಗುವುದಿಲ್ಲ. ಎಲ್ಲವನ್ನೂ ವಕ್ರ ರೇಖೆಯ ಕಾಣದ ತಿರುವುಗಳಲ್ಲಿ  ಶ್ರಮ ಹಾಕಿಯೇ ಪಡೆಯಬೇಕು.ಕೆಲವೊಮ್ಮೆ ಶ್ರಮ ಹಾಕಿದರೂ ಮುಖ ಎತ್ತಿಯೂ ನೋಡದೇ, ಬೆನ್ನು ತೋರಿಸಿ ನಗುತ್ತದೆ. ಕೈಗೆ ಸಿಗದೇ ಓಡಿ ಬಿಡುತ್ತದೆ ಗೆಲುವು! ಒಮ್ಮೊಮ್ಮೆ ನನಗೇ ತಿಳಿಯದಂತೆ ಮೇಲಕ್ಕೆತ್ತರಿಸಿ ಕೂರಿಸುತ್ತದೆ. ಮತ್ತೊಮ್ಮೆ ನಿರೀಕ್ಷಿಸಿದರೂ ಕೈಗೆ ಸಿಗದೇ ಕೆಳಕ್ಕೆ ಎಸೆದು ಬಿಡುತ್ತದೆ. ಹೆದರಿಸಿ  ಬೆನ್ನಲ್ಲಿ ಬೆವರಿಳಿಸಿದ ಸೋಲಿನ ಘಟನೆಗಳನ್ನು ನೆನದಾಗಲೊಮ್ಮೆ ಗೆಲುವಿನ ರುಚಿಯ ಆಸೆಯೇ ಬೇಡ ಎಂದೆನಿಸಿ ಬಿಡುತ್ತದೆ.ಸೋಲಿನ ಸಹವಾಸ ಸಾಕಾಗಿ ಒಮ್ಮೆ ಸರಿದು ನಿಂತು ಬದುಕಿನ ಕಪಾಳಕ್ಕೆ ಬಾರಿಸಲೇ ಎನಿಸುವಷ್ಟು ಕೋಪ ನೆತ್ತಿಗೇರುತ್ತದೆ. ಆದರೆ, ಎಷ್ಟೇ ಆಗಲಿ ಬದುಕು ನನ್ನದೇ ಅಲ್ಲವೇ? ಅದಕ್ಕೆ ನೋವಾದರೆ ಮರಳಿ ನನಗೂ ನೋವಾಗುವುದಲ್ಲವೇ? ಎನ್ನುತ್ತ ಹಲ್ಲು ಕಿತ್ತ ಹಾವಿನಂತೆ ಬಲಹೀನನಾಗಿ ಬಿಡುತ್ತೇನೆ. ಸೋಲಿನ ಮಡುವಿನಲ್ಲಿ ಬಿದ್ದು ಒದ್ದಾಡುವಾಗ ಈ ಕ್ಷಣವೇ ನನ್ನನ್ನು ನನ್ನ ಬಂಧು ಬಾಂಧವರು ಶವ ಪೆಟ್ಟಿಗೆಯಲ್ಲಿಟ್ಟು ಕೈ ತೊಳೆದುಕೊಳ್ಳಬಾರದೇ ಎಂದೆನಿಸದೇ ಇರದು. ಸೋಲು ಕಂಡಾಗ ಜೊತೆಗಿದ್ದವರು ದೂರವಾಗುವರು.ಕೆಲಸಕ್ಕೆ ಬಾರದವನು, ಕೈಲಾಗದವನು,ಎಂದು ಚುಚ್ಚು ಮಾತುಗಳಲ್ಲೇ ಚುಚ್ಚುವರು. ಇದೆಲ್ಲ ಏನು ಅಂತಿರೇನು? ಸಾಲು ಸಾಲು ಸೋಲುಂಡ ಜೀವಿಗಳ ಸ್ವಗತ. ಅಷ್ಟಕ್ಕೂ ಗೆಲುವು ಎಂದರೇನು? ಸೋಲಿನ ಸುಳಿಯಲ್ಲೇ ಇರುವ ಗೆಲುವಿನ ತುದಿ ಹಿಡಿಯಲು ಕುತೂಹಲ ಅಲ್ಲವೇ? ಹಾಗಾದರೆ ಮುಂದಿನ ಸಾಲುಗಳಿಗೆ ಕಣ್ಣು ಹಾಯಿಸಿ. ಗೆಲುವು ಎಂದರೇನು? ಗೆಲುವನ್ನು ವ್ಯಾಖ್ಯಾನಿಸುವುದು ಜೀವನವನ್ನು ಪುಟವೊಂದರಲ್ಲಿ ಹಿಡಿದಿಟ್ಟಷ್ಟೇ ಕಠಿಣ. ಹಾಗೆ ನೋಡಿದರೆ ಗೆಲುವು ಅನ್ನೋದು ಅವರವರ ಭಾವಕ್ಕೆ ಬಿಟ್ಟದ್ದು. ಕೆಲವರಿಗೆ ಹಣದೊಡೆಯರಾಗುವುದು ಗೆಲುವಾದರೆ, ಇನ್ನೂ ಕೆಲವರಿಗೆ ಆಟೋಟಗಳಲ್ಲಿ ಚಾಂಪಿಯನ್ ಆಗುವುದು. ತಾವು ದಾಖಲಿಸಿದ ದಾಖಲೆಗಳನ್ನು ತಾವೇ ಮುರಿಯುವುದು. ಇತರರ ಹೆಸರಲ್ಲಿರುವ ದಾಖಲೆಯನ್ನು ಸರಿಗಟ್ಟುವುದು.ಉದ್ಯಮಿಯಾಗುವುದು, ಸ್ವ ಉದ್ಯೋಗ, ಸರಕಾರಿ ನೌಕರಿ ಇನ್ನೂ ಹತ್ತು ಹಲವು.ಈಗ ನಮ್ಮ ಹತ್ತಿರ ಏನಿದೆಯೋ [ಮನೆ, ಶಿಕ್ಷಣ, ಹಣ, ಉದ್ಯೋಗ] ಅಷ್ಟನ್ನು ಪಡೆಯುವ ಕನಸು ಕಾಣುತ್ತಿರುವವರಿಗೆ ಅವುಗಳನ್ನೆಲ್ಲ ಪಡೆಯುವುದೇ ಗೆಲುವು.ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಗೆಲುವು ಎಲ್ಲ ಕಾಲಕ್ಕೂ ಎಲ್ಲರಿಗೂ ಸಾಮಾನ್ಯವಾಗಿರುವುದಲ್ಲ. ವಯೋಮಾನ ಸ್ಥಿತಿ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವಂಥದು. ಅರ್ಲ್ ನೈಟಿಂಗೇಲ್‌ರ ಪ್ರಕಾರ  ‘ಅರ್ಹ ಅಥವಾ ಯೋಗ್ಯವಾದ ಗುರಿಯನ್ನು ಪ್ರಗತಿಪೂರ್ವಕವಾಗಿ ಸಾಧಿಸುವ ಪರಿಯೇ ಯಶಸ್ಸು’ ನೂರಾರು ಚಿಂತೆ ಕೋಟಲೆಗಳ ಮೀರಿ ಎದ್ದು ನಿಲ್ಲುವುದು ಯಶಸ್ಸು. ದೊಡ್ಡ ದೊಡ್ಡ ಕನಸು ಕಾಣುವುದು ಗೆಲುವಲ್ಲ. ಅವುಗಳು ನನಸಾಗುವವರೆಗೆ ಬೆನ್ನು ಹತ್ತುವುದು ಗೆಲುವು. ಅಂದ ಹಾಗೆ ಸೋಲಿನ ಸುಳಿಯಲ್ಲೇ ಗೆಲುವಿದೆ. ಅದ್ಹೇಗೆ ಅಂತಿರೇನು? ಸೋಲಿನ ಸಹವಾಸವೇ ಸಾಕಪ್ಪಾ ಎಂದು ಸೋಲನ್ನಪ್ಪಿಕೊಳ್ಳುವಾಗ ಎರಡು ಹೆಜ್ಜೆ ಮುಂದಿಟ್ಟರೆ ಸಾಕು ಗೆಲುವು  ತಾನಾಗಿಯೇ ನಮ್ಮ ಕೈ ಹಿಡಿಯುತ್ತದೆ. ಬನ್ನಿ ಸೋಲಿನ ಸುಳಿಯಲ್ಲಿ ಗೆಲುವು ಹೇಗೆ ಅಡಗಿದೆ ನೋಡೋಣ. ಬೇರು ಕಿತ್ತೊಗೆಯಿರಿ ಸೋಲನ್ನು, ಬೇಡ ಬೇಡವೆಂದರೂ ಕಾಲಿಗೆ ತೊಡರಿಸಿಕೊಳ್ಳುವ ಕಸದ ಬಳ್ಳಿಯೆಂದು ತಿಳಿಯುವುದು ತಪ್ಪು.    ಉಪಾಯವಿಲ್ಲದೇ ತಂತ್ರಗಳಿಲ್ಲದೇ ಕೈ ಹಾಕಿದರೆ, ಕೈ ಹಾಕಿದ ಕೆಲಸ ಕೈಗೂಡುವುದಿಲ್ಲ.ಸೋಲಿನ ಎದೆಯೊಳಗೆ ಇಣುಕಿ ನೋಡಬೇಕು. ಆಗ ಅದು ತನ್ನ ಅಂತರಾಳದ ನೋವನ್ನು ಬಿಚ್ಚಿಡುತ್ತದೆ.ಇತರರ ಗೆಲುವು ಕಂಡು ಹೊಟ್ಟೆ ಕಿಚ್ಚು ಹೆಚ್ಚಾಯಿತೇ ಹೊರತು ನಿನ್ನ ಗುರಿಯ ಕಿಚ್ಚು ಹೆಚ್ಚಾಗಲಿಲ್ಲ ಎಂದು ಅಳುತ್ತದೆ. ಸೋತೆನೆಂದು ನಿರಾಸೆಯಿಂದ ಕೈ ಚೆಲ್ಲಿ ಕುಳಿತಿಯೇ ಹೊರತು ನಾ ಹೊತ್ತು ತಂದ ಪಾಠವನ್ನು ಆಸೆಯಿಂದ ಸ್ವೀಕರಿಸಲೇ ಇಲ್ಲ. ಕೊರತೆ ಇರುವುದು ನಿನ್ನಲ್ಲಿಯೇ ಹೊರತು ನನ್ನಲ್ಲಲ್ಲ ಎಂದು ಬಿಕ್ಕುತ್ತದೆ. ಹಾಗಾದರೆ ನಾವು ಸೋಲು ತನ್ನ ಬೆನ್ನ ಮೇಲೆ ಹೊತ್ತು ತಂದಿರುವ ಪಾಠವನ್ನು ಅರ್ಥೈಸಿಕೊಳ್ಳಲು ಮುಂದಾಗಬೇಕು ಎಂದಂತಾಯಿತು. ಸೋಲಿನ ಕುರಿತಾಗಿರುವ ಹತಾಶೆ ನಿರಾಶೆಯ ಬೇರುಗಳನ್ನು ಹುಡುಕಿ ಅವುಗಳನ್ನು ಬೇರು ಸಮೇತ ಕಿತ್ತೊಗೆಯಬೇಕು. ಸೋಲೇ ಗೆಲುವಿನ ಸೋಪಾನವೆಂದು  ಯಾವ ಅಂಶಗಳ ಕೊರತೆಯಿಂದ ಸೋತೆ ಎಂದು ಆತ್ಮಾವಲೋಕನ ಮಾಡಿಕೊಂಡು ಮುನ್ನುಗ್ಗಬೇಕು.ಆಗ ಗೆಲುವು ಒಂದು ಹೆಜ್ಜೆ ಸನಿಹ ಬರುವುದು. ತಪ್ಪುಗಳ ಪಟ್ಟಿ ಮಾಡಿ  ‘ಮಾನವ ಯಶಸ್ಸಿನಿಂದ ಕಡಿಮೆ ಕಲಿಯುತ್ತಾನೆ. ವೈಫಲ್ಯತೆಯಿಂದ ಹೆಚ್ಚು ಕಲಿಯುತ್ತಾನೆ.’ಎನ್ನುತ್ತಾರೆ ಪ್ರಾಜ್ಞರು. ಕಂಡ ಸೋಲಿನಲ್ಲಿ ಮಾಡಿದ ಮುಖ್ಯ ತಪ್ಪುಗಳನ್ನು ಪಟ್ಟಿ ಮಾಡಿ ಒಂದು ವರದಿಯನ್ನು ಹೆಣೆಯಬೇಕು. ಅದನ್ನು ಸ್ಪಷ್ಟವಾಗಿ ಒಂದೆಡೆ ಬರೆದು ಮುಂದಿನ ಸಲ ಈ ತಪ್ಪುಗಳಾಗದಂತೆ ಜಾಗರೂಕತೆ ವಹಿಸಬೇಕು. ಹೊಸ ತಪ್ಪುಗಳಾದರೆ ಗಾಬರಿಯಿಂದ ಪ್ರಯತ್ನಿಸುವುದನ್ನು ಅರ್ಧಕ್ಕೆ ನಿಲ್ಲಿಸುವಂತಿಲ್ಲ. ಇನ್ನೂ ಚೆನ್ನಾಗಿ ಮಾಡುವುದಾದರೆ ಹೇಗೆ ಮಾಡಬಹುದು ಎನ್ನುವ ಯೋಜನೆ ಹಾಕಿಕೊಂಡು ಮುನ್ನುಗ್ಗಬೇಕು. ಸಣ್ಣ ತೊರೆಗಳು ಮಹಾನ ಸಮುದ್ರಗಳಾಗುತ್ತವೆ. ತಪ್ಪುಗಳನ್ನು ಮರುಕಳಿಸದಂತೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡರೆ ಗೆಲುವಿನ ಇತಿಹಾಸ ನಿರ್ಮಾಣವಾಗುತ್ತದೆ. ಗುರಿಗೆ ಗುರಿ ಇಡಿ ಮಂಡಿಯೂರಿ ಕುಳಿತು ದೇವರನ್ನು ಬೇಡಿದರೆ ಸಿಗುವುದಿಲ್ಲ ಗೆಲುವು.ಯಾರ‍್ಯಾರನ್ನೋ ಒಲಿಸಿಕೊಳ್ಳಲು ಹೋಗುವುದರಲ್ಲಿಲ್ಲ. ಎಲ್ಲರಿಗೂ ಬೇಕಾದ ವ್ಯಕ್ತಿ ನಾ ಆದರೆ ಅದೇ ಗೆಲುವೆಂದು ಎಲ್ಲರನ್ನೂ ತೃಪ್ತಿ ಪಡಿಸಲು ನೋಡಿದರೆ ಸೋಲಿನ ಸುಳಿಯಿಂದ ಹೊರ ಬರಲಾಗುವುದಿಲ್ಲ. ಇದನ್ನೇ ಬಿಲ್ ಕಾಸ್ಟಿ ಹೀಗೆ ಹೇಳಿದ್ದಾನೆ.”ಯಶಸ್ಸಿನ ಕೀಲಿ ಕೈ ಯಾವುದೋ ನನಗೆ ತಿಳಿಯದು. ಆದರೆ ಎಲ್ಲರನ್ನೂ ತೃಪ್ತಿ ಪಡಿಸಲು ಯತ್ನಿಸುವುದು ವಿಫಲತೆಯ ಕೀಲಿಕೈ ಎಂಬುದನ್ನು ಮಾತ್ರ ನಾನು ಚೆನ್ನಾಗಿ ಬಲ್ಲೆ.” ಇಟ್ಟುಕೊಂಡ ಗುರಿಗೆ ಗುರಿ ಇಟ್ಟು ಹೊಡೆದರೆ, ಸೋಲು ನಿಮ್ಮನ್ನು ಬಿಟ್ಟು ಹೋಗಲು ಬೇಸರಿಸಿಕೊಳ್ಳುವುದಿಲ್ಲ. ಗುರಿಗೆ ಬೇಕಾದ ಕೆಲಸ ಕಾರ್ಯಗಳ ಯೋಜನೆ ರೂಪಿಸಿ ಮಾಡಲೇ ಬೇಕೆಂದು ಮನಸ್ಸಿಗೆ ಹಟ ಹಿಡಿಯುವಂತೆ ಮಾಡಿ.ಇಲ್ಲದಿದ್ದರೆ ಮನಸ್ಸು ಅನಗತ್ಯ ಕೆಲಸಗಳ ಸುತ್ತುವರೆದು ಅಗತ್ಯವಾದುದನ್ನು ಮಾಡಲು ಅಡಚಣೆ ಉಂಟು ಮಾಡುತ್ತದೆ. ಮನದ ತುಡಿತವು ಇಲಿಯನ್ನೂ ಹುಲಿಯಾಗಿಸಬಲ್ಲದು. ನಿರಂತರ ಪ್ರಯತ್ನಿಸಿ ಸೋತಾಗ ಹಗಲು ರಾತ್ರಿ ಸಾಲು ಸಾಲು ಸೋಲುಗಳನ್ನು ಅವುಚಿ ಹಿಡಿದುಕೊಂಡು ಕಣ್ಣೀರಿಡುವಾಗ ಗೆಲುವಿನ ಮೇಲೆ ನಂಬಿಕೆ ಹೊರಟು ಹೋಗುತ್ತದೆ. ಮೃತ ಮೀನುಗಳು ಮಾತ್ರ ನೀರು ಹರಿಯುವ ದಿಕ್ಕಿನಲ್ಲಿ ಚಲಿಸುತ್ತವೆ ಎನ್ನುವುದನ್ನು ಮರೆಯಬಾರದು.ಹೇಳದಿದ್ದರೂ ಮಾಡುವವರು ಹೆಚ್ಚಿನ ಸಂಬಳ ಪಡೆಯುತ್ತಾರೆ ಎಂಬುವುದನ್ನು ನೆನಪಿಡಬೇಕು. ಪ್ರಯತ್ನಕ್ಕೆ ಸರಿಯಾದ ಪ್ರತಿಫಲ ಸಿಕ್ಕೇ ಸಿಗುತ್ತದೆ. ಸಿಗುವ ಸಮಯ ಹೆಚ್ಚು ಕಡಿಮೆ ತಡವಾಗಬಹದು. ಒಂದೊಂದು ಸೋಲಿನಿಂದಲೂ ಮಾರಕವಾದ ಅಂಶಗಳನ್ನು ತ್ಯಜಿಸಬೇಕು. ಪೂರಕ ಅಂಶಗಳತ್ತ ಚಿತ್ತ ದೃಢವಾಗಿಸಿ, ಬಿಡದೇ ಪ್ರಯತ್ನಿಸಬೇಕು. ಆಕಾಶದೆತ್ತರಕ್ಕೆ ಬೆಳೆದು ನಿಂತ ಹೆಮ್ಮರಗಳನ್ನು ಸಹ ಅನೇಕ ಹೊಡೆತಗಳಿಂದ ನೆಲಕ್ಕೆ ಉರಳಿಸಬಹುದು.ಅಂದರೆ ಯಶಸ್ಸಿಗೆ ಒಂದರ ಮೇಲೊಂದರಂತೆ ಪ್ರಯತ್ನಗಳು ಬೇಕಾಗುತ್ತವೆ. “ಬಹುತೇಕ ಜನರು ಯಶಸ್ಸಿನ ಬಾಗಿಲವರೆಗೆ ಬಂದು, ತಮ್ಮ ಪ್ರಯತ್ನ ಬಿಟ್ಟು ಬಿಡುತ್ತಾರೆ. ಹೌದು, ವಿಜಯದ ಗುರಿ ಒಂದು ಗಜ ದೂರವಿರುವಾಗ, ಕೇವಲ ಒಂದು ಅಡಿ ಇರುವಾಗ ಯತ್ನ ಬಿಟ್ಟು ಬಿಡುತ್ತಾರೆ.’ಎನ್ನುತ್ತಾರೆ ಎಚ್. ರಾಸ್. ಪೆರಾಟ್. ಕೊನೆಯ ಹೆಜ್ಜೆಯವರೆಗೂ ಪ್ರಯತ್ನಿಸಿ ಸೋಲಿನ ಸುಳಿಯಲ್ಲೇ ಅಡಗಿದ ಗೆಲುವು ತಂತಾನೇ ಹರಿದು ಬರುತ್ತದೆ. ************************************ ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

ದಿಕ್ಸೂಚಿ Read Post »

You cannot copy content of this page

Scroll to Top