ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕಾಲಾ ಪಾನಿ

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-9 ಮಡ್ ವೊಲ್ಕೆನೊ, ಭೂಮಿಯ ಅಡಿಯಲ್ಲಿ ಕೆಲವು ರಾಸಾಯನಿಕಗಳು ಕೊಳೆತು ಉಂಟಾದ ಗ್ಯಾಸ್ ನಿಂದಾಗಿ ಭೂಮಿಯನ್ನು ಬಿರಿದು ಕೆಸರು ಮೇಲಕ್ಕೆ ಚಿಮ್ಮುತ್ತದೆ. ಭೂಮಿಯ ತಳದಿಂದ ಕಲ್ಲಿನ ಚೂರುಗಳು, ಮರಳುಗಲ್ಲುಗಳು, ಸಮುದ್ರದ ಕೆಸರು, ಕೆಂಪು ಮತ್ತು ಹಸಿರು ಬಣ್ಣದ ಕಲ್ಲುಗಳು ಚಿಮ್ಮಿ ಮೇಲೆ ಬಂದು ಹರಿಯುತ್ತವೆ. ಬಿಸಿಯಾದ ಕೆಸರು ಹರಿದು ಬಂದು ನೋಡಲು ಸಿಮೆಂಟಿನಂತ ರಾಡಿಯಾಗಿ ನಿಂತಿತ್ತು. ಕೆಸರಿನ ಬುದ್ಬುದಗಳು, ನೀರ್ಗುಳ್ಳೆಗಳು ಆ ಜಾಗದಿಂದ ಹೊರಗೆ ಚಿಮ್ಮುತ್ತವೆ. ಅಂಡಮಾನ್ ದ್ವೀಪದಲ್ಲಿ ಒಟ್ಟು ಹನ್ನೊಂದು ಇಂತಹ ಮಣ್ಣಿನ ಜ್ವಾಲಾಮುಖಿಗಳಿವೆಯಂತೆ. ಅವುಗಳಲ್ಲಿ ಎಂಟು ಭರಟಾಂಗ್ ದ್ವೀಪದಲ್ಲೇ ಇವೆ. ಉಳಿದವು ಉತ್ತರ ಅಂಡಮಾನ್ ಪ್ರದೇಶದಲ್ಲಿವೆ. ರಷ್ಯಾ, ಉಕ್ರೇನ್, ಇಟೆಲಿ, ರೊಮಾನಿಯಾ, ಚೈನಾ, ಇರಾನ್, ಪಾಕಿಸ್ತಾನಗಳಲ್ಲೂ ಇಂತಹ ಕೆಸರಿನ ಜ್ವಾಲಾಮುಖಿಗಳಿವೆಯಂತೆ‌. ಮೇಲೆ ಹತ್ತಿ ಹೋಗಲು ಮೆಟ್ಟಿಲುಗಳಿವೆ. ಮಧ್ಯ ಮಧ್ಯ ನಡೆದು ಹೋಗುವ ದಾರಿ, ನಡುನಡುವೆ ಮೆಟ್ಟಿಲುಗಳು. ಹೋಗುವ ಮತ್ತು ಬರುವ ದಾರಿ ಸ್ವಲ್ಪ ಪ್ರಯಾಸದಾಯಕವಾಗಿದ್ದರೂ ಅಪರೂಪದ, ಇಂಥದ್ದೊಂದು ಸೃಷ್ಟಿಯ ವೈಚಿತ್ರ್ಯವು ನೋಡಲು ಸಿಕ್ಕಿತು. ಬಣ್ಣ ಹಸಿಯಾಗಿದೆ ಎಂದು ಬೋರ್ಡ್ ಹಾಕಿದ್ದರೂ ಒಮ್ಮೆ ಮುಟ್ಟಿ ನೋಡಿ ಪರೀಕ್ಷಿಸಬೇಕೆಂದು ಅನಿಸುವುದು ಸಹಜ. ಹಾಗೆಯೇ ಇಲ್ಲಿ ಬಿಸಿಯಾಗಿದೆ ಎಂದು ಹೇಳಿದ್ದರೂ, ಸಣ್ಣಗೆ ಹೊಗೆ ಬರುತ್ತಾ ಇದ್ದರೂ, ಮೆಲ್ಲ ಹರಿದು ಬರುತಿದ್ದ ಆ ರಾಡಿಯನ್ನು ಒಮ್ಮೆ ಬೆರಳಿನಿಂದ ಮುಟ್ಟಿದೆ. ಸುಡುವಂತಲ್ಲದಿದ್ದರೂ ಬಿಸಿ ಇತ್ತು. ಅಷ್ಟೇ.. ಅಲ್ಲಿ ಹತ್ತಿ ಹೋಗಿ ಸುಧಾರಿಸಿಕೊಂಡು ಸ್ವಲ್ಪ ಹೊತ್ತು ಅಲ್ಲಿದ್ದು ವಾಪಸ್ ಕೆಳಗೆ ಬಂದೆವು. ಮತ್ತೆ ದೋಣಿ ಹತ್ತಿ ಭರಟಾಂಗ್ ಜೆಟ್ಟಿಗೆ ಬಂದು ಅಲ್ಲಿಂದ ಫೆರ್ರಿ ಕ್ರಾಸ್ ಮಾಡಿ ಇನ್ನೊಂದು ಭಾಗಕ್ಕೆ ಬಂದು ಅಲ್ಲಿ ಚಿಕ್ಕ ಮನೆಯಂತ ಹೋಟೆಲ್ ಒಂದರಲ್ಲಿ, ಬಹುಷಃ ಅದು ಒಂದೇ ಹೋಟೆಲ್ ಇರಬೇಕು ಅಲ್ಲಿ. ಊಟಕ್ಕೆಂದು ಕರೆತಂದರು. ಅಲ್ಲಿಗೆ ಬರುವ ಪ್ರವಾಸಿಗರು ಅದೇ ಹೋಟೆಲ್ ಗೆ ಬರಬೇಕಿತ್ತು ಅನಿಸುತ್ತದೆ. ತುಂಬಾ ಜನ ತುಂಬಿದ್ದರು ಅಲ್ಲಿ‌. ಅಂತೂ ಇಂತೂ ಸ್ವಲ್ಪ ಕಾದ ಮೇಲೆ ಒಳ್ಳೆಯ ಊಟ ಸಿಕ್ಕಿತು. ಅನ್ನ, ಸಾಂಬಾರು, ಪಲ್ಯ, ಹಪ್ಪಳ, ಉಪ್ಪಿನಕಾಯಿ ನಮ್ಮೂರಿನ ಊಟದ ಹಾಗೇ ಇತ್ತು. ಸಹಜವಾಗಿ ಭಯಂಕರ ಹಸಿವೆಯೂ ಆಗಿತ್ತು. ಅಮೃತದಂತೆ ರುಚಿ ಅನಿಸಿತು ಎಲ್ಲರಿಗೂ. ಅಲ್ಲಿಂದ ಹೊರಡುವಾಗ ಎಲ್ಲರೂ ಅಂದರೆ ನಮ್ಮ ಯುವಪೀಳಿಗೆ,  ರಾಕೇಶ್ ಅವರನ್ನು ನೀವು ಆದಿವಾಸಿಗಳನ್ನು ತೋರಿಸಲೇ ಇಲ್ಲ ಎಂದು ಪೀಡಿಸುತಿದ್ದರು. ಈಗ ಸಿಗಬಹುದು ನೋಡೋಣ, ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ಹೊರಗೆ ಬರುತ್ತಾರೆ  ಎಂದರು. ನಾವು ಬಂದ ಬಸ್ಸು ನಮಗಾಗಿ ಕಾದಿತ್ತು ಅಲ್ಲಿ. ಫೋಟೊ ತೆಗೆಯಬಾರದೆಂದು ಎಚ್ಚರಿಸಿದ್ದರೂ ಯಾರೋ ಮಹಿಳೆಯೊಬ್ಬರು ಆದಿವಾಸಿ ಮಹಿಳೆಯನ್ನು ಕಂಡಕೂಡಲೇ ತಮ್ಮ ಫೋನ್ ಕೈಗೆ ತಗೊಂಡು ಕ್ಲಿಕ್ ಮಾಡುವಾಗ ಫ್ಲಾಶ್ ಬೆಳಕು ಅದು ಹೇಗೆ ಆ ಆದಿವಾಸಿ ಮಹಿಳೆಗೆ ತಿಳಿಯಿತೊ, ಬಸ್ಸು ನಿಲ್ಲಿಸಿ ಹತ್ತಿ ಬಂದು ಆ ಫೋಟೊ ತೆಗೆದ ಮಹಿಳೆಯನ್ನೇ ಹಿಗ್ಗಾ ಮುಗ್ಗಾ ಥಳಿಸಿ ಹಾಕಿದ್ದು ಉದಾಹರಣೆಯಾಗಿ ಹೇಳಿ ನಮ್ಮನ್ನೆಲ್ಲಾ ಹೆದರಿಸಿ ಇಟ್ಟರು ರಾಕೇಶ್ ಸರ್. ತುಂಬಾ ನಿಧಾನವಾಗಿ ಚಲಿಸುತ್ತವೆ ಅಲ್ಲಿ ವಾಹನಗಳು, ಪ್ರಕೃತಿ ಸೌಂದರ್ಯದ ಜೊತೆಗೆ ಆದಿವಾಸಿಗಳ ದರ್ಶನ ಭಾಗ್ಯ ಸಿಗಬಹುದೆನ್ನುವ ಸಣ್ಣ ಆಸೆಯಿಂದ ಕೂಡ. ಒಬ್ಬರನ್ನಾದರೂ ತೋರಿಸಿಯೇ ತೋರಿಸುತ್ತೇವೆ ಎಂಬ ಆಶ್ವಾಸನೆ ನೀಡಿದ್ದರು ನಮ್ಮ ಬಸ್ ಡ್ರೈವರ್. ಮುಂದೆ ಮುಂದೆ ಸಾಗುತ್ತಿರುವಾಗ ಅಲ್ಲಿ ನೋಡಿ ಅಂದಿದ್ದು ಕೇಳಿಸಿತು. ಅಲ್ಲಿ ಎಂದರೆ ಎಲ್ಲಿ ಎಂದು ನೋಡುವುದರೊಳಗೆ ಒಬ್ಬ ಆರು ಅಡಿಗಳಿಗಿಂತಲೂ ಎತ್ತರದ ಹದವಾದ ತೂಕದ ಕಟ್ಟು ಮಸ್ತಾದ ಕಪ್ಪು ಎಂದರೆ ಮಿರಿ ಮಿರಿ ಮಿಂಚುವ ಕಪ್ಪು ಬಣ್ಣದ ಆಕರ್ಷಕ ನಿಲುವಿನ ಆದಿವಾಸಿ ಯುವಕ ನಿಂತಿದ್ದ. ಮೈಮೇಲೆ ಬರ್ಮುಡಾ ಮಾತ್ರ ಧರಿಸಿದ್ದ. ಪಕ್ಕದಲ್ಲಿ ಅದೇ ನಿಲುವಿನ ಚಿಕ್ಕ ಗಾತ್ರ ಎನ್ನುವಂತಿದ್ದ ಒಂದು ಮಗುವಿತ್ತು. ಆ ದೃಶ್ಯ ಈಗಲೂ ಕಣ್ಣ ಮುಂದಿದೆ. ಅವನು ಯಾವ ವಾಹನವನ್ನೂ ನೋಡುತ್ತಿರಲಿಲ್ಲ. ನಮ್ಮಂತೆಯೇ ನಮ್ಮ ಹಿಂದೆ ಮುಂದೆ ವಾಹನಗಳು ಆಮೆ ವೇಗದಲ್ಲಿ ಚಲಿಸುತ್ತಾ ಇದ್ದವು. ಮತ್ತೆ ಮುಂದೆ ಹೋಗುತಿದ್ದಂತೆ ಒಬ್ಬಳು ಮಹಿಳೆ. ಅವಳು ಮಾತ್ರ ನೈಟಿ ಹಾಕಿಕೊಂಡಿದ್ದಳು. ಅಲ್ಲೊಂದು ಬಸ್ಸಿನವರು ಅವರ ಬಳಿ ಇದ್ದ ತಿನ್ನುವ ವಸ್ತುಗಳು, ಬಟ್ಟೆ, ಇನ್ನೂ ಏನೇನೋ ಹೊರಗೆ ಎಸೆಯುತಿದ್ದರು. ಆ ಹೆಂಗಸು ಬಗ್ಗಿ ಒಂದೊಂದನ್ನೂ ಹೆಕ್ಕುವುದರಲ್ಲೇ ಮಗ್ನಳಾಗಿದ್ದಳು. ಹಾಗೆಲ್ಲಾ ಏನೂ ಎಸೆಯಬೇಡಿ ಎಂದು ಮತ್ತೊಮ್ಮೆ ನಮ್ಮ ಮ್ಯಾನೇಜರ್ ನಮಗೆ ಹೇಳಿದರು. ಎಲ್ಲರೂ ಹೀಗೆ ಹೆಕ್ಕಿಕೊಳ್ಳುವುದಿಲ್ಲ, ಕೆಲವರು ಸಿಟ್ಟಾಗುತ್ತಾರೆ ಎಂದರು. ಮುಂದೆ ನಾವು ಕಾದು ನಿಂತಿದ್ದ ಗೇಟ್ ದಾಟಿ ಬಂದು ಬಸ್ ನಿಲ್ಲಿಸಿ, ಚಾ, ಕಾಫಿ ಕುಡಿಯುವವರಿಗೆ, ಶೌಚಾಲಯಕ್ಕೆ ಹೋಗುವವರಿಗೆಂದು ಸ್ವಲ್ಪ ಬಿಡುವು ಕೊಟ್ಟರು‌. ಇವತ್ತು ನಮಗೆ ಶಾಪಿಂಗ್ ಗೆ ಕರೆದುಕೊಂಡು ಹೋಗುತ್ತೇವೆಂದು ಹೇಳಿದ್ದರಲ್ಲಾ! ನಾವೂ ಬೇಗ ಹೋಗೋಣ ಎಂದು ಅವಸರ ಮಾಡುತಿದ್ದೆವು‌. ಈಗ ಬರುವಾಗ ಪೋರ್ಟ್ ಬ್ಲೇರ್ ನ ಬೇರೊಂದು ದಿಕ್ಕಿನಿಂದ ಬಸ್ಸು ಬಂದಿದ್ದರಿಂದ ಆ ಊರಿನ ಸಿಟಿಯಂತಹ ಭಾಗ ನೋಡಲು ಸಿಕ್ಕಿತು. ಸಿಗ್ನಲ್, ವಾಹನಗಳ, ಜನರ ಸಂದಣಿಯಿತ್ತು ಅಲ್ಲಿ. ಸಿಂಡಿಕೇಟ್ ಬ್ಯಾಂಕ್ ನ ಶಾಖೆ ನೋಡಿದೆವು. ಜೀವ ವಿಮಾ ಕಛೇರಿಯೂ ಇತ್ತು. ನೋಡಲು ಗೋವಾದಂತದ್ದೇ ಊರು. ಈಗ ನಮಗೆ ಬೇರೊಂದು ಭವ್ಯವಾದ ಹೋಟೆಲ್ ಲ್ಲಿ ತಂಗಲು ವ್ಯವಸ್ಥೆ ಮಾಡಿದ್ದರು. ಬೇಗ ಬೇಗ ನಮ್ಮ ರೂಮುಗಳನ್ನು ನೋಡಿ ಖರೀದಿಗೆಂದು ಹೊರಟು ಬಂದರೆ.. ಆರು ಗಂಟೆಗೆ ಅಂಗಡಿಗಳು ಬಂದ್. (ಮುಂದುವರೆಯುವುದು…) ********************** –ಶೀಲಾ ಭಂಡಾರ್ಕರ್.

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಹೊರಡುವ ಘಳಿಗೆ ತನ್ನ ಹೆಂಡತಿ ತನ್ನನ್ನು ಹಿಂದೆ ಕರೆಯುವಳೆಂದು ಆಸೆಯಿಂದ ದಿಟ್ಟಿಸುತ್ತಾನೆ. ಆದರೆ ಆಕೆಗೆ ಅದರ ಗಮನವೇ ಇರುವುದಿಲ್ಲ. ಅವನು ನಿರಾಸೆ,ನೋವಿನಲ್ಲಿ ಹೊರಡುತ್ತಾನೆ. ಈ ದೃಶ್ಯದ ಮುಕ್ತಾಯದಲ್ಲಿ ಸಭಾಂಗಣ ನಿಂತು ಕಲಾವಿದನ ಅಭಿನಯಕ್ಕೆ ಚಪ್ಫಾಳೆ ಮಳೆ ಸುರಿಸಿತ್ತು.

Read Post »

ಅಂಕಣ ಸಂಗಾತಿ, ತೊರೆಯ ಹರಿವು

ತೊರೆಯ ಹರಿವು
ವಸುಂಧರಾ ಕದಲೂರು
ಮುಷ್ಠಿಯೊಳಗೆ ಹಾವು ಹಿಡಿದ ಮಗು, ಬೆಂಕಿಯಿಂದ ಆಕರ್ಷಿತವಾಗುವ ಮಗು ಎಂಬೆಲ್ಲಾ ವಿಚಾರ ಕೇಳಿದರೆ ಈ ಬಾಲ್ಯವು ಅಪಾಯವನ್ನು ಪರಿಗಣನೆಗೆ ಇಟ್ಟುಕೊಂಡೇ ಇಲ್ಲವಲ್ಲ!? ಎಂದು ಆಶ್ಚರ್ಯವಾಗುತ್ತದೆ. ಬದುಕಿನ ಬಗ್ಗೆ ಯಾವ ನಿರೀಕ್ಷೆಗಳನ್ನೂ ಇಟ್ಟುಕೊಳ್ಳದೆ ಇದ್ದಾಗ ಇಂತಹ ನಿರಾಳ ಭಾವ ಸಾಧ್ಯವೇನೋ…

Read Post »

ಅಂಕಣ ಸಂಗಾತಿ, ಅಸಹಾಯಕ ಆತ್ಮಗಳು

(‘ಅಸಹಾಯಕಆತ್ಮಗಳು’ ಎನ್ನುವ ಮಾಲಿಕೆಯಲ್ಲಿ ನಾನುಬರೆದಈಕತೆಗಳುನೈಜಜೀವನದಚಿತ್ರಗಳಾಗಿದ್ದು, ಸಂಬಂದಿಸಿದಹೆಣ್ಣುಮಕ್ಕಳನ್ನುಸಂದರ್ಶಿಸಿಅವರಬಾಯಿಂದಲೇಕೇಳಿಬರೆದಕತೆಗಳಾಗಿವೆ-)ನಿಮ್ಮಲೇಖಕ

Read Post »

ಅಂಕಣ ಸಂಗಾತಿ, ಚಿತ್ತ ಜನ್ಯ

ಅಳುವಿನ ಕ್ಷೀಣ ಶಬ್ಧವನ್ನು ಹೊರತುಪಡಿಸಿ ಹೆಚ್ಚಿನ ಜನವೂ ಇಲ್ಲ, ಗದ್ದಲವೂ ಇಲ್ಲ. ಕನಿಷ್ಟ ದೇಹ ತ್ಯಜಿಸಿರುವ ಆತ್ಮಕ್ಕೆ ಸಲ್ಲಬೇಕಾದ ಅಶ್ರುತರ್ಪಣವೂ ಇಲ್ಲದೆ ವಿದಾಯ ಸಲ್ಲಿಸಬೇಕಾದ ದುಃಸ್ಥಿತಿ! ಒಂದು ಸಣ್ಣ ಅತಿ ಸಣ್ಣ ನೋವಿನೆಳೆ ಮಾತ್ರ ಇಡೀ ಜೀವವನ್ನೇ ಹಿಂಡುತ್ತಿದೆ

Read Post »

ಅಂಕಣ ಸಂಗಾತಿ, ದೀಪದ ನುಡಿ

ಈ ಬದುಕಿನಲ್ಲಿ ಗಳಿಸಿದ ಪ್ರತಿಯೊಂದನ್ನೂ ಕಾಲದ ಜೊತೆಜೊತೆಗೇ ಮುಂದೆ ಸಾಗುತ್ತ ಪ್ರತಿಯೊಬ್ಬರೂ ಕಳೆದುಕೊಳ್ಳಲೇಬೇಕಾಗುತ್ತದೆ. ಹುಟ್ಟಿನೊಂದಿಗೆ ಅಂಟಿಕೊಂಡ ನಂಟುಗಳ ಜೊತೆಜೊತೆಗೇ ಗಳಿಸಿದ ಸಮಸ್ತವೂ ಬದುಕಿನ ಸಂಕಲನಕ್ಕೆ ಬಂದರೆ ಎಲ್ಲೆಲ್ಲಿ ಯಾವ ಯಾವುದರ ಘಳಿಗೆ ತೀರುತ್ತದೋ ಅಲ್ಲಲ್ಲಿ ಅವುಗಳೆಲ್ಲಾ ಬದುಕಿನಿಂದ ಕಳೆದುಹೋಗಲಾರಂಭಿಸುತ್ತವೆ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—23 ಆತ್ಮಾನುಸಂಧಾನ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿಗೆ… ಬಿ.ಎ. ಪದವಿ ಶಿಕ್ಷಣ ಪಡೆಯುವುದಕ್ಕಾಗಿ ಅಂಕೋಲೆಯ ಗೋಖಲೆ ಸೆಂಟನರಿ ಕಾಲೇಜಿಗೆ ಸೇರಲು ಬಯಸಿದೆ. 1966ರಲ್ಲಿ ಮಾನ್ಯ ದಿನಕರ ದೇಸಾಯಿಯವರು ತಮ್ಮ ಕೆನರಾ ವೆಲ್ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆಯ ಮೂಲಕ ಸ್ಥಾಪಿಸಿದ ಗೋಖಲೆ ಸೆಂಟನರಿ ಕಾಲೇಜು ನನ್ನಂಥ ಸಾವಿರಾರು ಬಡ ವಿದ್ಯಾರ್ಥಿ ಗಳ ಪದವಿ ಶಿಕ್ಷಣದ ಕನಸನ್ನು ನನಸಾಗಿಸಿದ್ದು ಈಗ ಇತಿಹಾಸ. ನಾನು ವಿದ್ಯಾರ್ಥಿಯಾಗಿ ಕಾಲೇಜು ಸೇರುವ ಹೊತ್ತಿಗೆ ಪದವಿ ಅಭ್ಯಾಸ ಮುಗಿಸಿದ ಮೊದಲ ತಂಡ ಕಾಲೇಜಿನಿಂದ ಹೊರಗೆ ಹೋಗಲು ಅಣಿಯಾಗುತ್ತಿತ್ತು. ಕಾಲೇಜಿನ ಸಂಸ್ಥಾಪಕ ಪ್ರಾಚಾರ್ಯರಾಗಿದ್ದ ಪ್ರೊ.ಕೆ.ಜಿ. ನಾಯ್ಕ ಅವರು ಅತ್ಯಂತ ಶಿಸ್ತು ಮತ್ತು ದಕ್ಷತೆಯಿಂದ ಕಾಲೇಜಿನ ಆಡಳಿತವನ್ನು ನಡೆಸುತ್ತಿದ್ದರು. ಅವರ ಮತ್ತು ಮಾನ್ಯ ದಿನಕರ ದೇಸಾಯಿಯವರ ಮಾರ್ಗದರ್ಶನದಂತೆಯೇ ಅಹರ್ನಿಶಿ ಕಾರ್ಯ ನಿರ್ವಹಿಸುವ ಅಧ್ಯಾಪಕ ಮತ್ತು ಆಫೀಸು ಸಿಬ್ಬಂದಿಗಳ ತಂಡ ಕಾಲೇಜನ್ನು ಒಂದು ಮಾದರಿ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಲು ಕ್ರಿಯಾಶೀಲರಾಗಿದ್ದರು. ಎಲ್ಲ ವಿಭಾಗಗಳಲ್ಲಿ ಕಾರ್ಯನಿರತರಾಗಿದ್ದ ಪ್ರತಿಭಾ ಸಂಪನ್ನ ಅಧ್ಯಾಪಕ ವರ್ಗ ಕಾಲೇಜಿಗೆ ಒಂದು ವಿಶಿಷ್ಟ ಗಾಂಭೀರ್ಯವನ್ನು ತಂದುಕೊಟ್ಟಿತ್ತು. ಕಲಾ ವಿಭಾಗವಾಗಲಿ, ವಿಜ್ಞಾನ ವಿಭಾಗವಾಗಲಿ ಜ್ಞಾನದಿಂದ ಪರಿಪೂರ್ಣರೆನಿಸಿದ ಅಧ್ಯಾಪಕರಿಂದ ತುಂಬಿತ್ತು. ಪ್ರತಿ ಹಂತದ ಆಯ್ಕೆ ಅನುಷ್ಠಾನಗಳಲ್ಲಿ ಡಾ. ದಿನಕರ ದೇಸಾಯಿ ಮತ್ತು ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯ ಕೆ.ಜಿ. ನಾಯ್ಕ ಅವರ ದೂರದರ್ಶಿತ್ವ ಉತ್ತಮ ಫಲಿತಾಂಶ ನೀಡಿತ್ತು. ಇದು ಮೂರ್ನಾಲ್ಕು ವರ್ಷಗಳ ಅಲ್ಪಾವಧಿಯಲ್ಲಿಯೇ ಕಾಲೇಜಿಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಗೌರವಾದರಗಳನ್ನು ದೊರಕಿಸಿಕೊಟ್ಟಿತ್ತು. ಸಂಸ್ಕೃತ ವಿಭಾಗದಲ್ಲಿ ಪ್ರೊ. ಎಂ.ಪಿ. ಭಟ್, ಕನ್ನಡ ವಿಭಾಗದ ಪ್ರೊ. ವಿ.ಎ. ಜೋಷಿ, ಕೆ.ವಿ. ನಾಯಕ ಇತಿಹಾಸ ವಿಭಾಗದಲ್ಲಿ, ಪ್ರೊ. ಎ.ಎಚ್. ನಾಯಕ, ಟಿ.ಟಿ. ತಾಂಡೇಲ್ ಇಂಗ್ಲೀಷ್ ವಿಭಾಗದಲ್ಲಿ, ಪ್ರೊ. ಎನ್.ಜಿ. ಸಭಾಹಿತ, ದಿವಾಸ್ಪತಿ ಹೆಗಡೆ, ಎಂ.ಎನ್. ಡಂಬಳ, ಶ್ರೀಮತಿ ನಿರ್ಮಲಾ ಗಾಂವಕರ ಹಿಂದಿ ವಿಭಾಗದಲ್ಲಿ, ಪ್ರೊ. ಕೆ.ಪಿ. ಕುಲಕರ್ಣಿ ಅರ್ಥಶಾಸ್ತ್ರ ವಿಭಾಗಕ್ಕೆ, ಪ್ರೊ. ಡಿ.ಆರ್.ಪೈ, ಡಿ.ವ್ಹಿ. ಹೆಗಡೆ ರಾಜ್ಯಶಾಸ್ತ್ರದಲ್ಲಿ, ಪ್ರೊ. ಎಂ.ಡಿ. ರಾಣಿ ಮುಂತಾದ ಮಹನೀಯರು ಕಲಾ ವಿಭಾಗದ ಗೌರವಾನ್ವಿತಿ ಅಧ್ಯಾಪಕರಾಗಿದ್ದಾರೆ. ವಿಜ್ಞಾನ ವಿಭಾಗದ ಗಣಿತ ಶಾಸ್ತ್ರಕ್ಕೆ ಸ್ವತಃ ಪ್ರಾಚಾರ್ಯರಾಗಿದ್ದಾಗ ಕೆ.ಜಿ. ನಾಯ್ಕ, ಪಿ.ಎಂ. ರಾಣೆ, ಎಂ.ಜಿ. ಹೆಗಡೆ ಮುಖ್ಯವಾಗಿದ್ದರು. ಪ್ರೊ. ಸಿ.ಎನ್. ಶೆಟ್ಟಿ, ಪ್ರೊ ವಿ.ಆರ್. ವೆರ್ಣೆಕರ್ ರಸಾಯನಶಾಸ್ತ್ರ ವಿಭಾಗದಲ್ಲಿ, ಪ್ರೊ. ಬಿ.ಎನ್. ಭಟ್, ಪ್ರೊ. ಮೋಹನ ಹಬ್ಬು ಭೌತಶಾಸ್ತ್ರ ವಿಭಾಗದಲ್ಲಿ, ಪ್ರೊ. ಶ್ರೀಮತಿ ಶಾಂತಾ ಥಾಮಸ್, ಆರ್.ಬಿ. ನಾಯ್ಕ ಜೀವಶಾಸ್ತ್ರ, ಸಸ್ಯಶಾಸ್ತ್ರ ವಿಭಾಗದಲ್ಲಿ ಕರ್ತವ್ಯನಿಷ್ಠರಾಗಿ ಕಾರ್ಯನಿರ್ವಹಿಸುತ್ತ ವಿಜ್ಞಾನ ವಿಭಾಗದ ಘನತೆಯನ್ನು ಹೆಚ್ಚಿಸಿದ್ದರು. ಆಡಳಿತ ಕಚೇರಿಯ ಮುಖ್ಯಸ್ಥರಾಗಿ ಕೃಷ್ಣಾನಂದ ಶೆಟ್ಟಿ ಎಂಬುವವರು ಕಾರ್ಯನಿರ್ವಹಿಸುತ್ತಿದ್ದರೆ, ಆನಂದು ಶೆಟ್ಟಿಯವರು ಲೆಕ್ಕಪತ್ರ ವಿಭಾಗದ ಮುಖ್ಯಸ್ಥರಾಗಿದ್ದರು. ಇವರಿಗೆ ಸೈಯದ್ ಎಂಬ ಮುಸ್ಲಿಂ ತರುಣನೊಬ್ಬ ಗುಮಾಸ್ತರಾಗಿ ಸಹಕರಿಸುತ್ತಿದ್ದರು. ನನ್ನ ನೆನಪಿನಲ್ಲಿ ಉಳಿದಂತೆ, ಕಾಲೇಜಿನ ಗ್ರಂಥಾಲಯದ ಜವಾಬ್ದಾರಿಯನ್ನು ವಿಷ್ಣು ನಾಯ್ಕ ಎಂಬ ತರುಣ ಬರಹಗಾರರೊಬ್ಬರು ನೋಡಿಕೊಳ್ಳುತ್ತಿದ್ದು ಒಂದೆರಡು ವರ್ಷಗಳಲ್ಲಿಯೇ ಅವರು ಕೆನರಾ ವೆಲಫೇರ್ ಸಂಸ್ಥೆಯದ್ದೇ ಆದ ಹೈಸ್ಕೂಲಿಗೆ ಶಿಕ್ಷಕರಾಗಿ ನೇಮಕಗೊಂಡು ದಾಂಡೇಲಿಗೆ ವರ್ಗಾವಣೆಯಾದರು. ಆ ಬಳಿಕ ಎಸ್.ಆರ್. ಉಡುಪಿ ಎಂಬ ಗ್ರಂಥಾಲಯ ವಿಜ್ಞಾನ ಪದವೀಧರರು ಇಲ್ಲಿ ನೇಮಕಗೊಂಡು ಸುದೀರ್ಘಕಾಲ ಗ್ರಂಥಾಲಯ ಆಡಳಿತವನ್ನು ಸಮರ್ಥವಾಗಿ ನಡೆಸಿದರು. ವಿದ್ಯಾರ್ಥಿ ಸಮುದಾಯದಲ್ಲಿ ಬಹು ಸಂಖ್ಯೆಯ ನಾಡವರು, ಕೊಂಕಣಿಗರು, ನಾಮಧಾರಿಗಳು, ಸ್ವಲ್ಪ ಪ್ರಮಾಣದಲ್ಲಿ ಹಾಲಕ್ಕಿಗಳು, ಕ್ರೈಸ್ತರು, ಮುಸ್ಲಿಂರು, ದಲಿತರು ಓದುತ್ತಿದ್ದರು. ಆರ್ಥಿಕ ಅಭಿವೃದ್ಧಿ ಹೊಂದಿರದ ಅಂದಿನ ಸಾಮಾಜಿಕ ಜೀವನದ ಪರಿಣಾಮ ವಿದ್ಯಾರ್ಥಿಗಳ ವೇಷ ಭೂಷಣಗಳಲ್ಲಿಯೇ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇನ್ನೂ ಸ್ಪಷ್ಟವಾಗಿ ಹೇಳಬಹುದೆಂದರೆ ಆರ್ಥಿಕ ಅನುಕೂಲತೆಯ ಕುಟುಂಬದ ಮಕ್ಕಳು ‘ಫುಲ್ ಪ್ಯಾಂಟ್’ ಧರಿಸಿ ಬರುತ್ತಿದ್ದರೆ, ಆರ್ಥಿಕ ಅನಾನುಕೂಲವಿದ್ದ ಕುಟುಂಬದ ಮಕ್ಕಳು ‘ಹಾಪ್ ಪ್ಯಾಂಟ್’ ಧರಿಸಿಯೇ ಕಾಲೇಜು ಪ್ರವೇಶಿಸಿದ್ದರು. ನಾನು, ನನ್ನ ಗೆಳೆಯರೆಲ್ಲ ಈ ಎರಡನೆಯ ದರ್ಜೆಯವರೇ ಆಗಿದ್ದು ಹಾಪ್ ಪ್ಯಾಂಟ್ ಧಾರಿಗಳಾಗಿ ಕಾಲೇಜಿನ ಮೆಟ್ಟಿಲೇರುತ್ತಿದ್ದಂತೆ ದಿಗಿಲುಗೊಂಡದ್ದು ಸಹಜ. ಹಿಂದಿನ ಎಲ್ಲ ಶಾಲೆ ಹೈಸ್ಕೂಲುಗಳಿಂದ ತೀರ ಭಿನ್ನವೇ ಆದಂತಿರುವ ಶಿಕ್ಷಣ ವ್ಯವಸ್ಥೆಗೆ ನಮ್ಮನ್ನು ಹೊಂದಿಸಿಕೊಳ್ಳುವುದಕ್ಕೆ ಬಹುಕಾಲವೇ ಬೇಕಾಯಿತು. ಅದರಲ್ಲಿಯೂ ಇಂಗ್ಲೀಷ್ ಭಾಷೆಯ ಅಲ್ಪ ಸ್ವಲ್ಪ ಅರಿವಿನಲ್ಲೇ ಪಿ.ಯು ಪರೀಕ್ಷೆ ಹೇಗೋ ದಾಟಿ ಬಂದ ನಮಗೆಲ್ಲ ಇಂಗ್ಲಿಷ್ ಮಾಧ್ಯಮದ ಪಾಠ ಪ್ರವಚನಗಳು ಅಕ್ಷರಶಃ ಗಾಬರಿ ಹುಟ್ಟಿಸಿದ್ದವ ಒಂದೊಂದು ತರಗತಿಯಲ್ಲಿ ತುಂಬಿ ತುಳುಕುವ ವಿದ್ಯಾರ್ಥಿ ಸಮುದಾಯ ಸೂಟು-ಬೂಟುಗಳಲ್ಲಿ ಗಂಭೀರವಾಗಿ ತರಗತಿಗಳನ್ನು ಪ್ರವೇಶಿಸಿ ನಿರರ್ಗಳವಾಗಿ ಇಂಗ್ಲೀಷ್ ಮಾಧ್ಯಮದಲ್ಲಿ (ಕನ್ನಡ ವಿಷಯ ಹೊರತಾಗಿ) ಉಪನ್ಯಾಸ ನೀಡುವ ಅಧ್ಯಾಪಕರ ವಾಗ್ ವೈಭವಕ್ಕೆ ಬೆರಗಾಗುತ್ತ ಹಿಂದಿನ ಸಾಲಿನ ಹುಡುಗರಾಗಿ ತರಗತಿಗೆ ಬಂದ ನಮ್ಮ ಗೆಳೆಯರ ಗುಂಪು ನಿಧಾನವಾಗಿ ಪುಸ್ತಕ ಪಾಠ ಇತ್ಯಾದಿಗಳನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತ ಕಾಲೇಜ್ ಕ್ಯಾಂಪಸ್ ಬದುಕಿಗೆ ಹೊಂದಿಕೊಳ್ಳತೊಡಗಿದ್ದೆವು. ************************************************************* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

You cannot copy content of this page

Scroll to Top