ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕಾಲಾ ಪಾನಿ

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-8 ಸ್ಕೂಬಾ ಡೈವಿಂಗ್ ಬಗ್ಗೆ ಓದಿ ಮಾತ್ರ ಗೊತ್ತು. ಸತೀಶ್ ಅವರನ್ನು ಬಿಟ್ಟು ನಾನು ಡೈವ್ ಮಾಡಲು ಹೋಗುವುದು ಸಾಧ್ಯವಿರಲಿಲ್ಲ. ಮಕ್ಕಳಿಬ್ಬರೂ ಗಣೇಶಣ್ಣನ ಕುಟುಂಬದ ಜೊತೆ ಸ್ಕೂಬಾ ಡೈವಿಂಗ್ ನ ಅನುಭವವನ್ನು ಪಡೆಯಲು ಹೋದರು. ಅಂಡಮಾನ್ ಗೆ ಹೊರಡುವಾಗ ಮಾಡಿದ ತಯಾರಿಯಲ್ಲಿ ಸಾಕಷ್ಟು ಚಿಲ್ಲರೆ ದುಡ್ಡು ಐವತ್ತು, ನೂರು, ಇನ್ನೂರರ ನೋಟುಗಳನ್ನು ಇಟ್ಟುಕೊಂಡಿದ್ದೆವು. ಹತ್ತು ಇಪ್ಪತ್ತರ ನೋಟುಗಳು ಕೂಡಾ. ಆದರೆ ಇಲ್ಲಿಯವರೆಗೆ ಎಲ್ಲಿಯೂ ನಾವು ಖರ್ಚು ಮಾಡುವ ಪ್ರಮೇಯವೇ ಬಂದಿರಲಿಲ್ಲ. ಶಾಪಿಂಗ್ ಗೆಂದು ಕೊನೆಯ ದಿನ  ಕರೆದುಕೊಂಡು ಹೋಗುತ್ತೇವೆಂದು ದರ್ಶನ್ ಮತ್ತು ರಾಕೇಶ್ ಆಶ್ವಾಸನೆ ಕೊಟ್ಟಿದ್ದರು. ಈ ದಿನದ ನೀರಿನ ಆಟಗಳ ಖರ್ಚು ಮಾತ್ರ ನಾವು ಕೊಡಬೇಕಾಗಿತ್ತು. ಸ್ಕೂಬಾ ಡೈವಿಂಗ್ ಲ್ಲಿ ಎರಡು ವಿಧ. Sea shore diving ಅಂದರೆ ದಡದಿಂದಲೇ ಸಮುದ್ರದ ತಳಕ್ಕೆ ಕೊಂಡು ಹೋಗುವುದು. ಇನ್ನೊಂದು deep sea diving. ದೊಡ್ಡದಾದ ದೋಣಿಯಲ್ಲಿ ಸಮುದ್ರದ ನಡು ಭಾಗಕ್ಕೆ ಕೊಂಡೊಯ್ದು ಅಲ್ಲಿಂದ ಜಿಗಿದು ಆಳಕ್ಕೆ ಹೋಗುವುದು. ಡೀಪ್ ಸೀ ಗೆ ಹೋಗುವುದೆಂದು ತೀರ್ಮಾನಿಸಿ ಎಲ್ಲರೂ ಹೊರಟರು. ಒಬ್ಬೊಬ್ಬರಿಗೆ ನಾಲ್ಕುವರೆ ಸಾವಿರ ರೂಪಾಯಿಗಳು. ಇವರು ಹೋಗುವ ಮೊದಲೇ ಒಂದು ತಂಡ ಹೊರಡುತ್ತಿರುವುದರಿಂದ ಇನ್ನು ಒಂದು ಗಂಟೆ ಕಾಯಬೇಕಿತ್ತು. ಅಲ್ಲಿಯವರೆಗೆ ಗಾಜಿನ ತಳದ ದೋಣಿಯಲ್ಲಿ ಸಮುದ್ರ ಯಾನಕ್ಕೆಂದು ಮಕ್ಕಳು ಮೂವರು ತಯಾರಾದರು. ಸಮುದ್ರದ ಆಳದಲ್ಲಿರುವ ಸುಂದರ ಪ್ರಪಂಚ ಗಾಜಿನ ಮೂಲಕ ಕೂತಲ್ಲಿಂದಲೇ ನೋಡಬಹುದಿತ್ತು. ಇದನ್ನಾದರೂ ನೋಡಬಹುದು ಅಂದುಕೊಂಡಿದ್ದೆ ಆದರೆ ಸಣ್ಣಗೆ ತಲೆ ಸುತ್ತುವ ಸಂಭವವಿದೆ ಎಂದುದರಿಂದ ಬೇಡವೆನಿಸಿತು. ಸಮುದ್ರದೊಳಗೆ ದೂರ ದೂರ ನಡುವಿನವರೆಗೂ ದೋಣಿಯಲ್ಲಿ ವಿಹರಿಸುವುದು, ದೋಣಿ ಓಲಾಡುವಾಗ ಕೆಳಗಿನ ದೃಶ್ಯವನ್ನು ವೀಕ್ಷಿಸುವುದು ಒಂದು ರೀತಿಯಲ್ಲಿ ಪುಳಕವೇನೋ ಸರಿ. ತಲೆಯೊಳಗೆ, ಹೊಟ್ಟೆಯೊಳಗೆ ವಿಚಿತ್ರ ಸಂಕಟವಂತೂ ಆಗಿಯೇ ಆಗುತ್ತದೆ. ಮೊದಲಿನ ರೀತಿಯಾಗಿದ್ದರೆ ಪರವಾಗಿರಲಿಲ್ಲ. ಈಗ ಜವಾಬ್ದಾರಿ ನನ್ನ ಮೇಲಿರುವುದರಿಂದ ನಾನು ಆರೋಗ್ಯವಾಗಿರುವುದು ಮುಖ್ಯವಾಗಿತ್ತು. ಮಕ್ಕಳು ಬಂದು ಅವರು ನೋಡಿದ್ದನ್ನು ಬಣ್ಣಿಸಿದ್ದೇ ಬಣ್ಣಿಸಿದ್ದು. ಅವರ ಖುಷಿ ನೋಡಿಯೇ ನನಗೂ ತೃಪ್ತಿಯಾಯಿತು. ಸ್ಕೂಬಾ ಡೈವಿಂಗ್ ಮಾಡುವವರಿಗೆ ಮೊದಲು ಕೆಲವು ಸೂಚನೆಗಳನ್ನು ನೀಡುತ್ತಾರೆ. ಕೆಲವು ಎಚ್ಚರಿಕೆಗಳು ಮತ್ತು ಕೆಲವು ಕೈ ಸನ್ನೆಗಳನ್ನು ಕಲಿಸುತ್ತಾರೆ. ನಾನು ಆರಾಮಾಗಿದ್ದೇನೆ, ಉಸಿರಾಟಕ್ಕೇನೂ ತೊಂದರೆಯಿಲ್ಲ, ಅಥವಾ ನನಗೆ ತೊಂದರೆ ಆಗುತ್ತಿದೆ, ನಾನು ಮೇಲೆ ಹೋಗಬೇಕು ಈ ತರದ ಸಂದೇಶಗಳನ್ನು ಕೈ ಸನ್ನೆಯಿಂದ ತಿಳಿಸಲು ಅಭ್ಯಾಸ ಮಾಡಿಸಿ, ಅವರಿಗೆ ಡೈವಿಂಗ್ ಉಡುಪುಗಳನ್ನು ತೊಡಲು ಕೊಟ್ಟರು. ಮೈಗೆ ಅಂಟಿಕೊಂಡಂತಹ ಬಿಗಿಯಾದ ಉಡುಪಿನಲ್ಲಿ ಎಲ್ಲರೂ ಸುಂದರವಾಗಿ ಕಾಣುತಿದ್ದರು. ನಮ್ಮ ದೀಕ್ಷಾಳಿಗೆ ಸಿಕ್ಕಿದ್ದು ಸ್ವಲ್ಪ ಬಿಗಿ ಇತ್ತಂತೆ. ಕನ್ನಡಿಯಲ್ಲಿ ನೋಡಿಕೊಂಡಾಗ ಚಂದ ಕಾಣ್ತಿದೆಯಲ್ಲಾ ಇರಲಿ ಅಂದುಕೊಂಡು ಸುಮ್ಮನಿದ್ದಳು. ಅವರನ್ನೆಲ್ಲಾ ಒಂದು ದೊಡ್ಡ ದೋಣಿಯೊಳಗೆ ಕೂರಿಸಿ ಕರೆದುಕೊಂಡು ಹೋದರು. ಪ್ರತಿಯೊಬ್ಬರಿಗೂ ಒಬ್ಬೊಬ್ಬ ಡೈವಿಂಗ್ ತರಬೇತಿ ಹೊಂದಿದ ಸಹಾಯಕರಿರುತ್ತಾರೆ.  ಆಮ್ಲಜನಕದ ಭಾರವಾದ ಸಿಲಿಂಡರ್ ಗಳನ್ನು ಹೊತ್ತು ಅದರ ಪೈಪ್ ನಿಂದ ಬರುವ ಗಾಳಿಯಲ್ಲಿ ಬಾಯಿಯಿಂದ ಉಸಿರಾಡಬೇಕು. ಅದರ ಎಲ್ಲಾ ನಿರ್ದೇಶನಗಳನ್ನು ಮೊದಲೇ ನೀಡಿರುತ್ತಾರೆ. ನಾವಿಬ್ಬರೂ ಒಂದು ಉದ್ದವಾದ ಕಲ್ಲಿನ ಬೆಂಚ್ ನೋಡಿ ಅಲ್ಲಿ ಕೂತೆವು. ಸಮುದ್ರದ ಅಲೆಗಳ ಸೌಂದರ್ಯ ನೋಡುತ್ತಾ ಕೂತಾಗ ಇಂಥಾದೊಂದು ದಿನ ನಾವು ಈ ದ್ವೀಪಕ್ಕೆ ಬಂದು ಹೀಗೆ ಕೂತು ಯಾವುದೇ ಚಿಂತೆಯಿಲ್ಲದೆ ಕಾಲ ಕಳೆಯುತ್ತೇವೆ ಎಂದು ಯಾವತ್ತೂ ಯೋಚಿಸಿಯೂ ಇರಲಿಲ್ಲ. ಕೂತಲ್ಲೇ ಸತೀಶ್ ಆಕಳಿಸಲು ತೊಡಗಿದರು. ನಿದ್ರೆ ಬರ್ತಿದೆ ಎಂದು ಆ ಬೆಂಚ್ ಮೇಲೆ ಉದ್ದಕ್ಕೆ ಮಲಗಿದರು. ಸಮುದ್ರದ ಅಲೆಗಳಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದುದರರಿಂದ ಸ್ಕೂಬಾ ಡೈವಿಂಗ್ ಗೆ ಹೊರಟವರನ್ನು ಅಲ್ಲಿಯೇ ಸ್ವಲ್ಪ ತಡೆದು ನಿಲ್ಲಿಸಿದ್ದರು. ಸುಮಾರು ಮುಕ್ಕಾಲು ಗಂಟೆಯ ನಂತರ ವಾತಾವರಣ ತಿಳಿಯಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದುದರಿಂದ ಮುಂದುವರೆದು ಹೋಗಿದ್ದರು. ಅದರ ಬಗ್ಗೆ ಅಲ್ಲಿ ಧ್ವನಿವರ್ದಕದಲ್ಲಿ ಘೋಷಿಸಿದುದರಿಂದ ನಮಗೆ ತಿಳಿಯಿತು. ಇಷ್ಟು ದೂರದ ಊರಿಗೆ ಬಂದು ಸಣ್ಣ ಪುಟಾಣಿ ಮಕ್ಕಳನ್ನು ಹೊರತು ಪಡಿಸಿದರೆ, ಎರಡು ಗಂಟೆಗಳಷ್ಟು ಕಾಲ ಸಮುದ್ರ ತೀರದಲ್ಲಿ ನಿಶ್ಚಿಂತೆಯಿಂದ ಮಲಗಿದ್ದು ಇವರೊಬ್ಬರೇ ಇರಬಹುದು ಎಂದು ಮನಸ್ಸಿನಲ್ಲೇ ನಗುತ್ತಾ ಕುಳಿತೆ. ನಾಲ್ಕೈದು ಜನರನ್ನು ಒಮ್ಮೆ ಕರೆದುಕೊಂಡು ಸಮುದ್ರದಾಳಕ್ಕೆ ಜಿಗಿದಿದ್ದಾರೆ. ಉಳಿದವರನ್ನು ದೋಣಿಯಲ್ಲೇ ಕೂರಿಸಿದ್ದರು. ಆ ದೋಣಿ ಸಮುದ್ರದ ಮೇಲೆ, ನಿಂತಲ್ಲಿಯೇ ನಿಂತು ತೇಲಾಡುವಾಗ ತಲೆ ಸುತ್ತಿದಂತೆ ಆಗುತಿತ್ತಂತೆ. ಡೈವಿಂಗ್ ತರಬೇತಿ ಪಡೆದು ಅಲ್ಲಿ ಕೆಲಸಕ್ಕೆಂದು ದೂರದೂರದ ಊರಿನಿಂದ ಹುಡುಗರು ಬಂದು ಸೇರಿದ್ದಾರೆ. ನೀರಿನೊಳಗೆ ಫೋಟೊಗಳನ್ನು ಕೂಡಾ ಅವರದೇ ಕ್ಯಾಮರಾಗಳಲ್ಲಿ ತೆಗೆದು ಕೊಡುತ್ತಾರೆ ಅವರವರ ಸಹಾಯಕರು. ಒಬ್ಬ ಹುಡುಗ ಯಾರ ಜೊತೆ ಹೋಗಲು ಕಳಿಸಿದರೂ ಹೋಗದೆ ದೀಕ್ಷಾಳ ಜೊತೆ ಹೋಗಲು ಎಂದು ಹೊರಟಾಗ ಅವನ ಜತೆ ಇದ್ದವರು ಅವನನ್ನು ಛೇಡಿಸಿ ನಕ್ಕರಂತೆ. ಸಮುದ್ರದೊಳಗೆ ಜಿಗಿದು ಸ್ವಲ್ಪ ಹೊತ್ತು ಉಸಿರಾಟ ಅಭ್ಯಾಸ ಆಗೋವರೆಗೆ ಸೆಣಸಾಡಿ ಉಡುಪು ಬಿಗಿಯಾಗಿದ್ದರಿಂದಲೋ ಏನೋ ಉಸಿರು ಕಟ್ಟಿದಂತಾಗಿ ಮೇಲೆ ಕರೆದು ಕೊಂಡು ಹೋಗಲು ಸನ್ನೆ ಮಾಡಿದಳಂತೆ. ಧಾತ್ರಿ, ಶ್ರೀಪಾದ ಇಬ್ಬರೂ ಆರಾಮಾಗಿದ್ದರು. ಗಣೇಶಣ್ಣನಿಗೂ ಮೊದಲಿಗೆ ಕಸಿವಿಸಿಯಾದರೂ ನಂತರ ಸರಿ ಹೋಯ್ತಂತೆ. ಸರಸ್ವತಿಯೂ ಖುಷಿಯಿಂದ ಎಲ್ಲವನ್ನೂ ನೋಡಿ ಅನುಭವಿಸಿ ಬಂದಿದ್ದರು. ಆಳದಲ್ಲಿ ಅದೆಷ್ಟು ಸುಂದರವೆಂದು ತಿಳಿಸಲು ಅವರ ಬಳಿ ಶಬ್ದಗಳೇ ಇರಲಿಲ್ಲ. ಬಣ್ಣ ಬಣ್ಣದ ಮೀನುಗಳು ನಮ್ಮನ್ನು ತಾಕಿಕೊಂಡೇ ಚಲಿಸುತ್ತವಂತೆ, ಒಳಗಿನ ಹವಳದ ಗಿಡಗಳಿಂದ ಬಣ್ಣಬಣ್ಣದ ಬೆಳಕು ಬಂದಂತೆ, ನೀಲಿ, ಕೆಂಪು, ನೇರಳೆ, ಹಳದಿ ಬಣ್ಣದ ಹವಳದ ಗುಪ್ಪೆಗಳು ನೋಡಲು ಕಣ್ಣೇ ಸಾಲುವುದಿಲ್ಲ. ಒಮ್ಮೆ ನೀರಿನೊಳಗೆ ಅಭ್ಯಾಸವಾಯಿತೆಂದರೆ ಮತ್ತೆ ಮೇಲೆ ಬರಲು ಮನಸ್ಸೇ ಬರುವುದಿಲ್ಲವಂತೆ. ದೀಕ್ಷಾ ಮೇಲೆ ಬಂದವಳೇ ಗಳಗಳನೆ ವಾಂತಿ ಮಾಡಿದ್ದು ನೋಡಿ ಆ ಹುಡುಗನ ಸಂಗಡಿಗರು ಮತ್ತೆ ಅವನನ್ನು ಛೇಡಿಸಿ ನಕ್ಕರಂತೆ. ಅವನು ಆಮೇಲೆ ಇವಳ ಕಡೆ ತಿರುಗಿಯೂ ನೋಡಿಲ್ಲ ಎಂದು ಹೇಳಿ, ಇನ್ನೊಮ್ಮೆ ನಾನು ಡೈವ್ ಮಾಡಿಯೇ ಮಾಡ್ತಿನಿ ಅವರೆಲ್ಲಾ ನಕ್ಕರಲ್ಲ, ಅವರ ಎದುರಿಗೆ ನಾನು ಚೆನ್ನಾಗಿ ಒಂದು ಗಂಟೆ ಸಮುದ್ರದೊಳಗೆ ಇದ್ದು ಬರ್ತೀನಿ ನೋಡ್ತಿರಿ. ಎಂದು ಆಮೇಲೆ ಸ್ವಲ್ಪ ಸೌಖ್ಯವಾದ ಮೇಲೆ ರಾಕೇಶ್ ಸರ್ ಬಳಿ ನಾಳೆ ಮತ್ತೆ ಮಾಡಬಹುದಾ ಎಂದು ಕೇಳಿದಳು. ಅವರು ಇಲ್ಲಮ್ಮಾ, ಸ್ಕೂಬಾ ಡೈವ್ ಮಾಡಿದ ಇಪ್ಪತ್ತನಾಲ್ಕು ಗಂಟೆಗಳ ನಂತರವೇ ವಿಮಾನಯಾನ ಮಾಡಬೇಕು ಎನ್ನುವ ನಿಯಮವಿದೆ , ಎಚ್ಚರಿಕೆಯ ದೃಷ್ಟಿಯಿಂದ ಅದಕ್ಕಾಗಿಯೇ ನಾವು ಹೊರಡುವ ಒಂದು ದಿನ ಮುಂಚೆ ಈ ಚಟುವಟಿಕೆಗಳಿಗಾಗಿ ಇಡುತ್ತೇವೆ ಎಂದರು. ಹಾಗಾದರೆ ಬರುವ ವರ್ಷ ನಾನೊಬ್ಬಳೇ ಬರ್ತೇನೆ ಎಂದು ಅವರ ಬಳಿ ಹೇಳಿದಳು‌.  ಸಮುದ್ರದಿಂದ ಮೇಲೆ ಬಂದ ಮೇಲೆ ಎಲ್ಲರಿಗೂ ಹೊಟ್ಟೆಯೊಳಗೆ ಸಂಕಟವಾಗಿ, ಯಾರೂ ಮದ್ಯಾಹ್ನದ ಊಟ ಮಾಡುವ ಯೋಚನೆಯಲ್ಲೇ ಇಲ್ಲ. ಸ್ವಲ್ಪ ಮೊಸರನ್ನ, ಸ್ವಲ್ಪ ಹಣ್ಣುಗಳನ್ನು ತಿಂದರೂ ಅದೂ ಹೊಟ್ಟೆಯೊಳಗೆ ಮಾತನಾಡಲು ಶುರು ಮಾಡಿತೆಂದು ಸುಮ್ಮನೆ ಹಾಗೆ ಬಿದ್ದುಕೊಂಡಿದ್ದರು. ನಮ್ಮದೆಲ್ಲಾ ಊಟ ಅವರು ಬರುವುದರೊಳಗೆ ಆಗಿತ್ತು. ಮತ್ತೆ ನಮ್ಮ ಪ್ರಯಾಣ ಪೋರ್ಟ್ ಬ್ಲೇರ್ ಗೆ ಹಡಗಿನಲ್ಲಿ ಹೋಗುವುದಿತ್ತು. ಈ ಸಲ ಹಡಗಿನಲ್ಲಿ ಮೇಲಿನ ಅಂತಸ್ತು ಇತ್ತು. ನಮ್ಮನ್ನು ಮೇಲಿನ ಅಂತಸ್ತಿನಲ್ಲಿ ಕೂರಿಸಿದರು. ಹಡಗಿನೊಳಗೆ ಸ್ಯಾಂಡ್ ವಿಚ್ ಮತ್ತು ಜ್ಯೂಸ್ ಕೊಟ್ಟಿದ್ದರಿಂದ ಊಟ ಮಾಡದೇ ಇದ್ದವರಿಗೆ ಅದನ್ನು ತಿಂದು ಸ್ವಲ್ಪ ಹಾಯೆನಿಸಿತು. ನನಗೆ ಸಣ್ಣಗೆ ಚಳಿಯಾಗಲು ಶುರುವಾಯ್ತು. ದೀಕ್ಷಾ ಅವಳ ಬ್ಯಾಗ್ ನಿಂದ ಒಂದು ಶಾಲು ತೆಗೆದು ನನಗೆ ಕೊಟ್ಟಳು. ಅದು ಅವಳ ಪ್ರೀತಿಯ ಶಾಲ್. ಹೊದ್ದುಕೊಂಡು ಬೆಚ್ಚಗೆ ಕೂತಿದ್ದು ನೆನಪಿದೆ. ಅದರ ಋಣ ನಮ್ಮೊಂದಿಗೆ ಆವತ್ತೇ ತೀರಿ ಕೊನೆಯಾಗುತ್ತದೆಂದು ಅಂದುಕೊಂಡಿರಲಿಲ್ಲ. ಇವತ್ತಿಗೂ ಶಾಲಿನ ಬಗ್ಗೆ ಮಾತನಾಡುವುದನ್ನು ಅವಳು ಬಿಟ್ಟಿಲ್ಲ. ಮೈಸೂರಿಗೆ ಅರ್ಬನ್ ಹಾಟ್ ಪ್ರದರ್ಶನ ಬಂದಾಗ ಖರೀದಿಸಿದ ತಿಳಿ ಗುಲಾಬಿ ಬಣ್ಣದ ಮೇಲೆ ಬಿಳಿಯ ಸಣ್ಣ ಸಣ್ಣ ಹೂಗಳಿದ್ದ ಕಾಶ್ಮೀರಿ ಶಾಲು ಅದು. ಕೊರೊನಾ ಶುರು ಆಗುವ ಮೊದಲೇ ಮತ್ತೊಮ್ಮೆ ಬಂತೆಂದು ಹೋಗಿ ಹುಡುಕಿದರೆ ಆ ಅಂಗಡಿಯೇ ಬಂದಿರಲಿಲ್ಲ. ಮೊನ್ನೆ ಮೊನ್ನೆ ಬಂದ ಹುನರ್ ಹಾಟ್ ಲ್ಲಿ ಹುಡುಕಿದರೂ ಇಲ್ಲ. ಅವಳನ್ನು ಖುಷಿ ಪಡಿಸೋಣ ಎಂದು ದುಬಾರಿ ಪಶ್ಮಿನಾ ಶಾಲು ಖರೀದಿಸಿ ತಂದುಕೊಟ್ಟರೂ ಆ ಶಾಲಿನಷ್ಟು ಚೆನ್ನಾಗಿಲ್ಲ ಎಂದೇ ಅಂದಳು. (ಮುಂದುವರೆಯುವುದು..) ************************************************************* – ಶೀಲಾ ಭಂಡಾರ್ಕರ್.

Read Post »

ಅಂಕಣ ಸಂಗಾತಿ, ದೀಪದ ನುಡಿ

ಅಂಕಣ ಬರಹ ಬೆಳೆದು ದೊಡ್ಡವರಾಗುವುದೆಂದರೆ ಬೆಳೆದು ದೊಡ್ಡವರಾಗುವುದೆಂದರೆ ಪ್ರಜ್ಞೆ ಮತ್ತು ಸೂಕ್ಷ್ಮತೆಗಳನ್ನು ಕಳೆದುಕೊಳ್ಳುವುದಲ್ಲ.ಹದಿಹರೆಯದಲ್ಲಿ ಮಕ್ಕಳು ಬೆಳೆಸಿಕೊಳ್ಳುವ ಮನೋಧೋರಣೆಯನ್ನ ನಂತರ ಬದಲಿಸುವುದು ಬಹಳ ಕಷ್ಟ. ಇದೇ ಕಾರಣಕ್ಕೆ ಹದಿಹರೆಯದ ಮಕ್ಕಳ ತಾಯ್ತಂದೆಯರು ಬಹಳ ವ್ಯಥಿತರಾಗುವುದು.ಮಕ್ಕಳು ಹೇಳುವ ಒಂದು ಸಣ್ಣ ಸುಳ್ಳು , ಅವರು ತೋರುವ ಒಂದು ಸಣ್ಣ ನಿರ್ಲಕ್ಷ್ಯ ತಂದೆ ತಾಯಿಗೆ ಬಹಳ ನೋವನ್ನುಂಟುಮಾಡುತ್ತದೆ. ಮಕ್ಕಳೇ ಅವರ ಜಗತ್ತು.ಮಕ್ಕಳಿಗಾಗೇ ಬದುಕು ಸವೆಸುವ ತಾಯ್ತಂದೆಯರನ್ನ ಮಕ್ಕಳು ಅರ್ಥ ಮಾಡಿಕೊಳ್ಳುವಲ್ಲಿ ಬಹಳಷ್ಟು ಸಲ ಎಲ್ಲೋ ಸೋಲುತ್ತಾರೆ. ಹಾಗೊಮ್ಮೆ ಅರ್ಥ ಮಾಡಿಕೊಂಡರೂ ಕಾಲ ಮಿಂಚಿ ಹೋಗಿರುತ್ತದೆ. ಆ ಮಕ್ಕಳು ಮುಂದೆ ತಾಯಿಯ ಅಥವಾ ತಂದೆಯ ಪಾತ್ರ ಧರಿಸಿದಾಗ ಹಳೆಯದೆಲ್ಲ ನೆನಪಾಗಿ ತೀವ್ರ ಪಶ್ಚಾತ್ತಾಪ ಪಡುತ್ತಾರೆ. ನಮ್ಮ ಮಕ್ಕಳು ಎಂದೂ ಕೆಟ್ಟ ಹಾದಿ ಹಿಡಿಯಲಾರರು ಎಂಬ ನಂಬಿಕೆಯಿಂದಲೇ ತಾಯ್ತಂದೆಯರು ಮಕ್ಕಳಿಗೆ ಸ್ವಾತಂತ್ರ್ಯ ನೀಡುವುದು. ಮಕ್ಕಳ ಯಾವುದೋ ಒಂದು ನಡೆಯಿಂದ ಈ ನಂಬಿಕೆಗೆ ಘಾಸಿಯಾದರೂ ಮತ್ತೆ ಅದನ್ನು ಗಳಿಸಲು ಸಾಧ್ಯವೇ ಇಲ್ಲ.     ಹದಿಹರೆಯದ ಮಕ್ಕಳ ದೃಷ್ಟಿಯಲ್ಲಿ ತಂದೆ ತಾಯಿಯರೆಂದರೆ ಸದಾ ತಮ್ಮ ಬಗ್ಗೆ ಪತ್ತೇದಾರಿ ಕೆಲಸ ಮಾಡುವವರು, ಅನುಮಾನಪಡುವವರು…ಸದಾ ಬೆನ್ನ ಹಿಂದೆ ಹಿಂಬಾಲಿಸುವವರು…ಸದಾ ತಮ್ಮ ಮೊಬೈಲ್ , ನೋಟ್ ಬುಕ್ ಗಳನ್ನ ಕಪಾಟು ,ಚೀಲಗಳನ್ನ ಹುಡುಕುವ ಪತ್ತೇದಾರರು..ನಾನು ದೊಡ್ಡವನಾದರೂ ನನ್ನ ಮೇಲೆ ನಂಬಿಕೆಯಿಲ್ಲ  , ಪ್ರೈವೆಸಿ ಕೊಡುವುದಿಲ್ಲ ಎನ್ನುವುದು ಬಹಳ ಮಕ್ಕಳ ದೂರು .ಆದರೆ ಇಲ್ಲಿ ತಾಯ್ತಂದೆಯರು ನಿಜಕ್ಕೂ ತಮ್ಮ ಮಕ್ಕಳ ಬಗೆಗಿನ ಕಾಳಜಿಯಿಂದ ಇಷ್ಟೆಲ್ಲಾ ಮಾಡುತ್ತಾರೆಯೇ ಹೊರತು ಅಪನಂಬಿಕೆಯಿಂದಲಲ್ಲ ಎನ್ನುವುದು ಆ ಬೆಳೆದ ಮಕ್ಕಳಿಗೆ ಅರ್ಥವಾಗುವುದೇ ಇಲ್ಲ.        ತಮ್ಮ ಮಕ್ಕಳ ನಡೆನುಡಿಯಲ್ಲಾಗುವ ಸೂಕ್ಷ್ಮ ಬದಲಾವಣೆಗಳೂ ತಾಯ್ತಂದೆಯರ ಹೃದಯಕ್ಕೆ ಕೂಡಲೇ ಪತ್ತೆಯಾಗಿಬಿಡುತ್ತದೆ.ಒಂದಾನೊಂದು ಕಾಲದಲ್ಲಿ ಅವರೂ ಮಕ್ಕಳೇ ಆಗಿದ್ದವರಲ್ಲವೆ!! ಈ ಆಧುನಿಕ ,ಡಿಜಿಟಲ್ ಯುಗದಲ್ಲಿ  ಎಲ್ಲರೂ ಅವರವರದೇ  ಆದ ಲ್ಯಾಪ್ ಟಾಪ್, ಮೊಬೈಲ್ ಗಳ ಹಿಡಿದು ಕೆಲಸ , ಆನ್ ಲೈನ್ ಕಲಿಕೆ , ಸೋಷಿಯಲ್ ಮೀಡಿಯಾ ಎಂದು ಮುಳುಗಿ ಹೋಗಿರುವಾಗ ಮಕ್ಕಳ ಬಗ್ಗೆ ಕಾಳಜಿ ಹೊಂದಿರುವ ಪೋಷಕರು ನಿಜಕ್ಕೂ ಆತಂಕಕ್ಕೆ ಒಳಗಾಗುತ್ತಾರೆ. ಬದುಕು ನಿಜಕ್ಕೂ  ಅಷ್ಟು ಸಲೀಸಲ್ಲ…ಹದಿಹರೆಯಕ್ಕೆ ಬಂದರೂ ಸಹಾ ಮಕ್ಕಳು ಈ ಜಗತ್ತಿಗೆ , ಈ ಬದುಕಿನ ಅನುಭವಗಳಿಗೆ ಅಪರಿಚಿತರೇ!!             ಅಪ್ಪ-ಅಮ್ಮದಿರ ಬಗ್ಗೆ ಇದಕ್ಕಾಗಿ ಅಸಮಾಧಾನಗೊಳ್ಳದೆ ನಿನಗೇನು ಗೊತ್ತು  ಈ ಜನರೇಷನ್ ಎಂದು ಹೀಯಾಳಿಸದೆ ಮಕ್ಕಳು ತಮ್ಮ ತಾಯ್ತಂದೆಯರ ವಯಸ್ಸು ,ಅನುಭವಗಳನ್ನ ಗೌರವಿಸಬೇಕಿದೆ. ತಾಯ್ತಂದೆಯರೇ ಬದುಕಲ್ಲ ..ಆದರೆ ತಾಯಗತಂದೆಯರು ಬದುಕಿನ ಬಹುಮುಖ್ಯ ಭಾಗ ಎಂಬುದನ್ನು ಮಕ್ಕಳು ಅರಿಯಬೇಕಿದೆ. ಒಂದೆಡೆ ಕುದಿರಕ್ತದ ವಯಸ್ಸು ಇನ್ನೊಂದೆಡೆ ಸ್ನೇಹಿತರು ಇವೆರಡರ ನಡುವೆ ಅಪ್ಪ ಅಮ್ಮದಿರಿಗೂ ಸಮಯ ಕೊಡುವ ,ಗೌರವ ಕೊಡುವ ಮನೋಭಾವವನ್ನು ಮಕ್ಕಳು ಬೆಳೆಸಿಕೊಳ್ಳಬೇಕಿದೆ. ಅಪ್ಪ ಅಮ್ಮದಿರು ಮಕ್ಕಳಿಗೆ ಸ್ನೇಹಿತರೂ ಆಗಬಲ್ಲರೂ ಪೋಷಕರೂ ಆಗಬಲ್ಲರು .ಆದರೆ ಸ್ನೇಹಿತರೆಂದಿಗೂ ಅಪ್ಪ ಅಮ್ಮನ ಸ್ಥಾನ ತುಂಬಲು ಸಾಧ್ಯವೇ ಇಲ್ಲ.               ತಾಯ್ತಂದೆಯರಿಂದ ಮುಚ್ಚಿಟ್ಟ ವಿಷಯಗಳು , ಹೇಳಿದ ಸುಳ್ಳುಗಳು ಎಂದಿಗೂ ಮಕ್ಕಳನ್ನು ರಕ್ಷಿಸುವುದಿಲ್ಲ. ಹೀಗೆ ಮಾಡುವುದರ ಮೂಲಕ ಮಕ್ಕಳು ಕೇವಲ ತಮ್ಮ  ತಾಯ್ತಂದೆಯರಿಗೆ ಮೋಸ ಮಾಡುವುದಲ್ಲ ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಿದ್ದೇವೆಂದು ಅರಿವಾಗುವ ಹೊತ್ತಿಗೆ ಬಹಳ ತಡವಾಗಿಬಿಟ್ಟಿರುತ್ತದೆ.ಮಕ್ಕಳು  ಬೆಳೆದಂತೆಯೇ ತಾಯ್ತಂದೆಯರೂ ಬೆಳೆಯುತ್ತಾರೆಂಬುದನ್ನು ಮಕ್ಕಳು ಮರೆಯಬಾರದು. ವಯಸ್ಸು ಹೆಚ್ಚುತ್ತಿದ್ದಂತೆ ಆ ತಾಯ್ತಂದೆಯರ ಹೃದಯ ಬಯಸುವುದು ಮಕ್ಕಳ ಪ್ರೀತಿಯನ್ನು ಕಾಳಜಿಯನ್ನು. ಮಕ್ಕಳನ್ನು ಬೆಳೆಸುವುದು ನಮ್ಮ ಕರ್ತವ್ಯ ಅವರಿಂದ ಏನನ್ನೂ ಬಯಸಬಾರದು ,ನಿರೀಕ್ಷಿಸಬಾರದು  ಎಂದು ಎಷ್ಟೇ ಹೇಳಿಕೊಂಡರೂ ಆ ಜೀವಗಳು ಮಕ್ಕಳಿಗಾಗಿಯೇ ಬದುಕು ಸವೆಸಿ ಜೀವನದ ಸಂಧ್ಯೆಯಲ್ಲಿ ನಿಂತಾಗ ಬೇರಾವ ವಸ್ತು, ಹಣದ ನಿರೀಕ್ಷೆ ಅವರಿಗಿರುವುದಿಲ್ಲ. ಮಕ್ಕಳ ಪ್ರೀತಿ ಮತ್ತು ಸಾನಿಧ್ಯ ಎರಡೇ ಅವರ ನಿರೀಕ್ಷೆಗಳು!.                 ಸದಾ ಅಪ್ಪ ಅಮ್ಮದಿರ ಜೊತೆ ಮಕ್ಕಳು ಇರಲಾಗದು ರೆಕ್ಕೆ ಬಂದ ಹಕ್ಕಿಗಳು ಗೂಡು ತೊರೆದು ಹಾರಲೇ ಬೇಕು .ಅದೇ ಪ್ರಕೃತಿನಿಯಮ.ಆದರೆ ಹಾಗೆ ಹಾರಿ ಹೋದರೂ ಆಗಾಗ್ಗೆ ಮರಳಿ ಗೂಡಿಗೆ ಬಂದು ಕಾಳಜಿ ತೋರುವುದು ಮಾನವನ ಬದುಕಿನ ನಿಯಮವಾಗಬೇಕು.                 ಎಷ್ಟೋ ಬಾರಿ  ಮಕ್ಕಳು ನಾನೇನು ಹುಟ್ಟಿಸು ಎಂದು ಕೇಳಿದ್ದೆನಾ ಎಂದು ಅಪ್ಪ ಅಮ್ಮನನ್ನು ಕೇಳುವುದೂ ಇದೆ. ಈ ಇಂಥ ಮಾತುಗಳಿಂದ ಆ ಹಿರಿಜೀವಗಳಿಗಾಗುವ ಆಘಾತ ಆ ಮಕ್ಕಳಿಗೆ ಅರ್ಥವಾಗಬೇಕಾದರೆ ಅವರೂ ಅಪ್ಪ ಅಮ್ಮದಿರಾಗಬೇಕು!!!ಆದರೆ ಬಹಳಷ್ಟು ಸಂದರ್ಭಗಳಲ್ಲಿ ಅಪ್ಪ ಅಮ್ಮನ ಮನ ನೋಯಿಸಿದ ಮಕ್ಕಳು ನಂತರ ಅರಿತು ಪಶ್ಚಾತ್ತಾಪ ಪಡುವ ಹೊತ್ತಿಗೆ ಅಲ್ಲೇನೂ ಉಳಿದಿರುವುದಿಲ್ಲ..ಗೋಡೆಗಂಟಿದ ಅಪ್ಪ ಅಮ್ಮನ  ಮೂಕ ಭಾವ ಚಿತ್ರಗಳ ಬಿಟ್ಟು!!                 ಬರಿದೆ ಪಶ್ಚಾತ್ತಾಪದಿಂದ ಪ್ರಯೋಜನವಿಲ್ಲ.ಹಿರಿಮರಗಳು ಉರುಳಿದ ಜಾಗದಲ್ಲಿ  ಕುಡಿಸಸಿಯಲ್ಲದೇ ಮತ್ತೊಮ್ಮೆ ಏಕಾಏಕಿ ಹಿರಿಯ ಮರವೊಂದು ಮೂಡದು.ಇಂದಿನ  ಬಹುತೇಕ ಮಕ್ಕಳಿಗೆ ಡಿಜಿಟಲ್ ಪ್ರಪಂಚ ಗೊತ್ತಿದೆ, ಸೋಷಿಯಲ್ ಮೀಡಿಯಾ ಗೊತ್ತಿದೆ, ಗೂಗಲ್ ಸರ್ಚ್ ಗೊತ್ತಿದೆಯೆ ವಿನಃ ಬದುಕಿನ ಭಾಷ್ಯ ಗೊತ್ತಿಲ್ಲ.ನಮ್ಮಿಷ್ಟದಂತೆ ಬದುಕುವುದೇ ಬದುಕು ಎನ್ನುವ ಕುರುಡು ಅಹಂ ಅವರನ್ನು ಹಾದಿ ತಪ್ಪಿಸುತ್ತಿದ್ದರೂ ಅದೇ ಸರಿಯಾದ ಹಾದಿ ಎಂದು ಭ್ರಮೆಯಲ್ಲಿ ನಡೆಯುತ್ತಿರುತ್ತಾರೆ. ದುರಂತವೆಂದರೆ ಗೂಗಲ್ ಗಿಂತ ಹೆಚ್ಚಿನ ಜ್ಞಾನ ಇಲ್ಲದ ಅಪ್ಪ ಅಮ್ಮ ಬದುಕಿನ ಅನುಭವಗಳನ್ನು ಬೊಗಸೆ ಬೊಗಸೆ ಮೊಗೆದು ಕುಡಿದಿದ್ದಾರೆ ,ಒಮ್ಮೆ ಕೈ ಚಾಚಿದರೆ ತಮ್ಮ ಬೊಗಸೆಗೂ ಅದನ್ನ ಧಾರೆಯೆರೆಯಲು ಕಾತರರಾಗಿದ್ದಾರೆಂಬ ಸತ್ಯ ಬಹಳಷ್ಟು ಮಕ್ಕಳಿಗೆ ಗೊತ್ತೇ ಆಗದು.                  ಬಹಳ ಹಿಂದೆ ಸಹೋದ್ಯೋಗಿಯೊಬ್ಬರು ಹೇಳಿದ ಮಾತು ನೆನಪಾಗುತ್ತಿದೆ.”ಮಕ್ಕಳನ್ನ ದೊಡ್ಡ ಓದು ಓದಿಸಬಾರದು…ವಿದೇಶ ಸೇರಿ ಕೊನೆಗಾಲದಲ್ಲಿ  ನೋಡಲೂ ಬಾರದ ಸ್ಥಿತಿ ಬರೋದೇ ಬೇಡ..ಸುಮ್ನೆ ನಮ್ಮಂತೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಹತ್ತಿರವೇ ಇರಲಿ ”  ಸದಾ ಮಕ್ಕಳ ಏಳಿಗೆಯನ್ನೇ ಬಯಸುವ ಅದಕ್ಕಾಗಿ ಜೀವ ತೆರಲೂ ಸಿದ್ಧವಿರಬೇಕಾದ ತಂದೆಯೊಬ್ಬ ಹೀಗೆ ಹೇಳಿ ತಾಯಿ ಅದಕ್ಕೆ ಹೂಗುಟ್ಟುವ ಪರಿಸ್ಥಿತಿ  ಬಂದಿದೆಯೆಂದರೆ ನಾವಿರುವುದು ಎಂಥಹಾ ದುರಂತದ ಕಾಲದಲ್ಲಿ ಎಂದು ಖೇದವಾಗುತ್ತದೆ. ಆ ತಂದೆ ಹೀಗೆನ್ನಬೇಕಾದರೆ ಸುತ್ತ ಮುತ್ತ ನಡೆವ ಅದೆಷ್ಟು ಘಟನೆಗಳನ್ನ ನೋಡಿ ಆ ಮನಸ್ಸು ರೋಸಿಹೋಗಿರಬೇಕು!!              ನಮ್ಮ ಕಾಲ ಬೇರೆ ನಿಮ್ಮ ಕಾಲ ಬೇರೆ ..ಅದೆಲ್ಲ ಈಗ ಮೂರು ಕಾಸಿಗೂ ಬಾರದು ಎಂದು ಹಿರಿಯರ ಹಿತವಚನಗಳ ಮೂಲೆಗೊತ್ತುವ ಮಕ್ಕಳಿಗೆ  ಅಪ್ಪ ಅಮ್ಮನೆಂದರೆ ಶತಮಾನ ಹಳೆಯ ಧೂಳು ತುಂಬಿಕೊಂಡ ಮೂಟೆಗಳು!!  ದುರಂತವೆಂದರೆ ಇದೇ ಮಕ್ಕಳಿಗೆ ಮುಂದೊಂದು  ದಿನ ಅವರ ಮಕ್ಕಳಿಂದಲೂ ಇಂತಹುದೇ  ಕಟು ಅನುಭವ ಕಾದಿದೆಯೆನ್ನುವ ಅರಿವೂ ಇಲ್ಲದಿರುವುದು.              ದೀಪ ತಾನು ಬೆಳಗಿದರಷ್ಟೆ ಮತ್ತೊಂದು ದೀಪವನ್ನು ಬೆಳಗಿಸಬಲ್ಲುದು. ತಾಯ್ತಂದೆಯರ ಬಗ್ಗೆ ಅಕ್ಕರೆ, ಗೌರವ ಹೊಂದಿರುವ ಮತ್ತು ಅದನ್ನು ಕೊನೆಯವರೆಗೂ ಉಳಿಸಿಕೊಂಡು ಹೋಗುವ ಮಕ್ಕಳಷ್ಟೇ ಭವಿಷ್ಯದಲ್ಲಿ ತಮ್ಮ ಮಕ್ಕಳಿಗೂ ಅದನ್ನು ಕಲಿಸಲು ಸಾಧ್ಯವಾಗುವುದು.       ಎಲ್ಲರೂ ಶ್ರವಣಕುಮಾರನಾಗಲಿ, ಶ್ರೀರಾಮನಾಗಲೀ ,ಭಕ್ತಪುಂಡಲೀಕನಂತಾಗಲೀ ತಾಯ್ತಂದೆಯರ ಸೇವೆ ಮಾಡಲು ಸಾಧ್ಯವಿಲ್ಲ ನಿಜ. ಆದರೆ ಸದಾ ತಾನು ನಿನ್ನೊಂದಿಗಿರುವೆ ಎಂಬ ಸಂತಸದಾಯಕ ಭಾವವನ್ನು  ಹೆತ್ತವರಲ್ಲಿ ಉಂಟುಮಾಡಲು  ಸೋಲಬಾರದು.                 ಮಕ್ಕಳೆಲ್ಲ ತಮ್ಮ ತಾಯ್ತಂದೆಯರ ಪಾಲಿನ ದೀಪವಾಗಲಿ .ಭವಿಷ್ಯದಲ್ಲಿ ಹೊಸ ದೀಪಗಳ ಹಚ್ಚುವ ಬೆಳಗುವ ಹಣತೆಗಳಾಗಲಿ.ಸಾಲು ದೀಪಗಳು ಬೆಳಗಿ ಸುತ್ತಮುತ್ತಲಿರುವ ಕತ್ತಲೆಯ ಮಣಿಸುವಂತಾಗಲಿ.      ತುಷ್ಟಯಾಂ ಮಾತರಿ ಶಿವೆ ತುಷ್ಟೇ ಪಿತರೀ ಪಾರ್ವತಿ | ತವ ಪ್ರೀತಿರ್ಭವೇದೇವಿ ಪರಬ್ರಹ್ಮ ಪ್ರಸೀದತಿ || ******************************************* ಶುಭಾ ಎ.ಆರ್  (ದೇವಯಾನಿ) ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ   

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಎರಡು ವಚನಗಳನ್ನು ಗಮನಿಸಿದರೆ ಎರಡು ತನ್ನ ಭಾಷೆ, ರಾಚನಿಕ ವಿನ್ಯಾಸ ಮತ್ತು ಕೇಳುಗನ ಮೇಲೆ ಬೀರುವ ಪರಣಾಮದಲ್ಲಿ ಭಿನ್ನವಾದ ಮಾರ್ಗಗಳನ್ನು ಹಿಡಿದವುಗಳೇ ಆಗಿವೆ. ಒಂದು ಪ್ರಶ್ನಾರ್ಥಕವಾಗಿ ನಡೆದರೆ, ಮತ್ತೊಂದು ಬದಲಾದ ಕಾಲ, ಸಮಾಜಕ್ಕೆ ಹಿಂದಿನ ಮೌಲ್ಯವೊಂದನ್ನು ಸಾರಿ ಹೇಳಬೇಕಾದಾಗ ಉಂಟಾದ ಖೇಧ, ಸಿಟ್ಟುಗಳು ಕೆಲಸ ಮಾಡಿವೆ. ‘ಅರಿವುಳ್ಳೊಡೆ’ ಎಂಬ ಒಂದು ಪದವನ್ನು ಬಳಸಿ ಅರಿವನ್ನು ಉಂಟುಮಾಡುವುದರ ಕಡೆಗೆ ತನ್ನ ಉದ್ದೇಶವನ್ನು ದಾಸಿಮ್ಮಯ್ಯ ಯಶಸ್ವಿಯಾಗಿ ಹಸ್ತಾಂತರ ಮಾಡಿಬಿಡುತ್ತಾನೆ, ಆದರೆ ಬಸವಣ್ಣನವರಲ್ಲಿ ಸಿಟ್ಟು, ದೋಷಣೆಗಳು ಬಂದಿವೆ

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ನಾಡು ಮಾಸ್ಕೇರಿಯಿಂದ ನಾನು, ಹಾರು ಮಾಸ್ಕೇರಿಯ ಕುಪ್ಪಯ್ಯ ಗೌಡ, ಮುಕುಂದ ಪ್ರಭು, ಗಂಗಾವಳಿಯ ಯುಸೂಫ್, ಸದಾನಂದ ಕೂರ್ಲೆ, ಬಾವಿಕೊಡ್ಲಿನ ರಮೇಶ ಗೌಡ ಮೊದಲಾಗಿ ಆರೆಂಟು ಜನ ಸೇರಿ ದಿನವೂ ಕಾಲ್ನಡಿಗೆಯಲ್ಲೇ ಗೋಕರ್ಣಕ್ಕೆ ಹೋಗಿ ಬರುತ್ತಿದ್ದೆವು.

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ “ಆಕಾಶವಾಣಿಯ ಅವಕಾಶದಾಕಾಶ” “ಬರೆದ ಕಥೆ ಹಾಗೇ ಬಿಡುವಂತಿಲ್ಲ. ವಿಳಾಸ ಕೊಡುತ್ತೇನೆ. ಆಕಾಶವಾಣಿಗೆ ಕಳುಹಿಸು. ನೋಡೋಣ! ನೀನು ಎಂತಹ  ಕಥೆಗಾರ್ತಿ”.ನಾನು ಬರೆದ ಕಥೆಯೊಂದು ಸರ್ ಗೆ ಸಿಕ್ಕಿ ಗಂಡ- ಹೆಂಡತಿ ಅದನ್ನು ಓದಿ ಮುಂದಿನ ಬಾರಿ ಅವರ ಮನೆಗೆ ಹೋದಾಗ ಇಬ್ಬರೂ ಸೇರಿ ವಿಚಾರಣೆಗೆ ಕಟಕಟೆಯಲ್ಲಿ ನಿಲ್ಲಿಸಿದ್ದರು. ತಲೆತಗ್ಗಿಸಿದವಳ ಪರ ಲಾಯರ್ ಆಗಿ ಅವರ ಶ್ರೀಮತಿ ನಿಂತಿದ್ದರು. ಕೊನೆಗೂ ತೀರ್ಪು ಹೊರಬಿದ್ದಿತ್ತು.  ಚಿಕ್ಕನಡುಕ,ಸಂಭ್ರಮ ಜೊತೆಯಾಗಿತ್ತು. ಆದರೆ ಸರ್ ಗೆ ಆಕಾಶವಾಣಿಯಲ್ಲಿ ಪರಿಚಯವಿದೆ. ಅವರು ಒಂದು ಮಾತು ಸಂಬಂಧಪಟ್ಟವರಿಗೆ ಹೇಳಬಾರದೇ ಎಂಬ ತಳಮಳಕ್ಕೆ ಉತ್ತರ ಎಂಬಂತೆ ನುಡಿದಿದ್ದರು. ” ನಾನು ವಿಳಾಸವಷ್ಟೆ ಕೊಡುವುದು. ನಿನ್ನ ಅರ್ಹತೆಯ ಆಧಾರದಲ್ಲೇ ನಿನ್ನ ದಾರಿ ಸ್ಪಷ್ಟವಾಗಬೇಕು.”  ಕಥೆ ಆಯ್ಕೆಯಾಗಿತ್ತು. ಅದುವರೆಗೂ ಉಡುಪಿಯ ನಾನು ಮಂಗಳೂರನ್ನು ನೋಡಿಯೇ ಇರಲಿಲ್ಲ. ಅಕಾಶವಾಣಿ ಹೊಸ ಊರು ಹೊಸ ಪುಳಕ,ಸಂಭ್ರಮಗಳನ್ನು ಹೊಸ ಹೆದರಿಕೆಯೊಂದಿಗೆ ಪರಿಚಯಿಸಿತ್ತು. ಮಣಿಯಕ್ಕ ಆಕಾಶವಾಣಿಗೆ ಹೋಗುವ ಹಿಂದಿನ ದಿನ ಬಾಯಿಗೆ ಸಕ್ಕರೆ ಹಾಕಿ ” ಇನ್ನೂ ಹೆಚ್ಚು ಬರೆಯಬೇಕು. ಹೆಸರು ಬರಬೇಕು” ಎಂದು ಆಶೀರ್ವದಿಸಿ,ಹಾರೈಸಿ ಕಳುಹಿಸಿದ್ದರು. ಯಾರು, ಈ ಸರ್ ಮತ್ತು ಮಣಿಯಕ್ಕ! ಕೇಳಿ. ಉಡುಪಿಯ ಎಂ.ಜಿ.ಎಂ.ಕಾಲೇಜಿನ ಎತ್ತರದ ಕಾಂಪೌಂಡ್ ಗೋಡೆಯ ಕೊನೆ ನೊನೆಯಲ್ಲಿ ನಿಂತ ಗೇಟು ದಾಟಿ ಹೊರಗೆ ಬಂದರೆ ರಸ್ತೆಯುದ್ದಕ್ಕೆ ಎರಡೂ ಬದಿ ಬೇರುಬಿಟ್ಟು ಕೂತ ಒಂದೇ ಬಗೆಯ ಸಾಲು ಮನೆಗಳು.  ಪದವಿ ತರಗತಿಯಲ್ಲಿರುವಾಗ ಗೆಳತಿಯರ ಜೊತೆ ಹರಟೆ ಹೊಡೆಯುತ್ತ ಅಲ್ಲಿ ಕಳ್ಳರಂತೆ ಅಲೆದು” ಇದು ಯಾರದ್ದು? ಅದು? ಈ ಕಡೇದು?. ಇಲ್ಲಿ ನೋಡು!. ಓ ಆಚೆ ಕೂಡ ಮನೆಗಳು!” ಎಂದು ಪರಸ್ಪರ ಪ್ರಶ್ನೆ ಉತ್ತರ ತಡಕಾಡಿ ಯಾವ ಸರ್ ಗೆ ಯಾವ‌ ಮನೆ ಎಂದು ಗುರುತಿಸಿ ಖುಷಿ ಪಟ್ಟದ್ದೆವು. ಸಾಹಿತ್ಯದ ವಿದ್ಯಾರ್ಥಿಗಳಿಗೆ, ಉಳಿದ ವಿದ್ಯಾರ್ಥಿಗಳಿಗಿಂತ ಉಪನ್ಯಾಸಕರ ಬಳಿ ತುಸು ಹೆಚ್ಚೇ ಸಲುಗೆ. ಮಾತಿಗೆ ಸಾವಿರ ವಿಷಯ.  ಕವಿತೆ, ಕಥೆ, ಕಾದಂಬರಿ, ಹರಟೆ, ಪಾಠ ಎಲ್ಲವೂ ಬೇವು ಬೆಲ್ಲ ಪಾನಕ.  ಪಾಠ ಎಂದೂ ಬರಡೆನಿಸದು.  ಬೇರೆ ವಿಷಯಗಳ ತರಗತಿಯಾಗುವಾಗಲೂ ಕನ್ನಡ ಉಪನ್ಯಾಸಕರು ನಡೆದು ಹೋದರೆ ಸಣ್ಣನೆಯ ಖುಷಿಯೇ  ಸರಿದುಹೋದಂತೆ. ಆಗಲೇ ಆ ಏಳು ನಂಬರ್ ನ ಕ್ವಾರ್ಟರ್ಸ್ ಕಂಡದ್ದು. ಅದರ ಬಾಗಿಲಲ್ಲಿ  ‘ ಹೊಸ್ಕೆರೆ ಎಸ್. ಶಿವಸ್ವಾಮಿ’ ಎಂಬ ನಾಮ ಫಲಕ. ಕಂಚಿನ ಕಂಠದ ಪಾಠ. ಚಂದ್ರಮತಿಯ ವಿಲಾಪ, ಹರಿಶ್ಚಂದ್ರ ಕಾವ್ಯವನ್ನು ಮನಸ್ಸಿನಲ್ಲಿ ನೆಟ್ಟವರು. ಪರೀಕ್ಷೆ ಗೆಂದೇ ಓದುವ ಅಗತ್ಯವೇ ಕಂಡಿರಲಿಲ್ಲ. ಕ್ಲಾಸಿನಲ್ಲಿ ಪಾಠ ಕೇಳಿದರಾಯಿತು. ಪರೀಕ್ಷೆ ಹಾಲ್ ನಲ್ಲಿ ಅದನ್ನೇ ನೆನಪಿಸಿದರೆ ಮನಸ್ಸಿನಲ್ಲಿ ಅಚ್ಚಾದ ಅವರ ಧ್ವನಿ  ಚಿತ್ರಕಗಳು  ಪೇಪರಿನ ಮಡಿಲಿನಲ್ಲಿ ಒಂದೊಂದೇ ಪಾತ್ರಗಳಾಗಿ ಮಾತು, ಭಾವ, ಜೀವ ಪಡೆಯುತ್ತಿದ್ದವು.   ರಂಗವು ಮನದ ಭಿತ್ತಿಯೊಳಗೆ ಹುಟ್ಟಿ ಪರೀಕ್ಷೆಯಲ್ಲಿಯೂ ನಾಟಕ ನಡೆಯುತ್ತಲೇ ಇತ್ತು. ನಾನು ಅದರ ವಿವರ ಬಿಳಿ ಪೇಪರಿನಲ್ಲಿ ದಾಖಲಿಸುತ್ತಿದ್ದೆ. ಪರೀಕ್ಷಾ ಕೊಠಡಿಯಿಂದ ಹೊರಬಂದರೂ ಅದೇ ನಶೆ, ಗುಂಗು. ಆ ಪಾತ್ರಗಳು ನನ್ನ ಹಿಂಬಾಲಿಸುತ್ತಿದ್ದವು. ಅಂತಹ ಮನೋಹರ ಶೈಲಿಯ ಪಾಠ ಅವರದ್ದು. ಕನ್ನಡದಲ್ಲಿ ಸ್ನಾತಕೋತ್ತರ ಓದು ಬೇಕೆನ್ನುವ ಆಸೆಗೆ ಮತ್ತಷ್ಟು ಬಲ ತುಂಬಿದ್ದು ಆಗಲೇ.  ಪದವಿ ಮುಗಿದು ಎಂ.ಎ ಓದಿಗೆ ಹೆಸರು ನೋಂದಾಯಿಸಿ ಆಗಿತ್ತು. ಮನೆಯಲ್ಲಿ ಕೂತು ಓದು. ಜೊತಗೆ ಉದ್ಯೋಗ. ಹಳೆಗನ್ನಡ, ಕೆಲವು ಪಠ್ಯ  ಅರ್ಥವಾಗದೇ ಹೋದಾಗ ಸರ್ ಮನೆಗೆ ಹೋಗಿ ಬಹು ಅಂಜಿಕೆಯಲ್ಲಿ ಬಾಗಿಲು ತಟ್ಟಿದ್ದೆ. ಕೆಂಪು ಸೀರೆ ಉಟ್ಟ,ಅಚ್ಚ ಬಿಳಿಬಣ್ಣದ, ಉದ್ದಮೂಗಿನ, ಹೊಳಪು ಕಣ್ಣಿನ ವಯಸ್ಸಾದವರು ಕಂಡಿದ್ದರು. ಏನು? ಎಂದಾಗ ಏನೂ ಹೇಳಲು ತೋಚದೆ ಖಾಲಿಯಾಗಿ ಬೆಪ್ಪಳಂತೆ ನಿಂತಿದ್ದೆ.  ಅವರ ಹಿಂದೆ ತೆಳ್ಳಗಿನ ಉದ್ದ ದೇಹದ ಮಹಿಳೆ. ಬೈತಲೆ ತೆಗೆದು ಕಟ್ಟಿದ ಸೂಡಿ. ಹಣೆಯಲ್ಲಿ ಹದಗಾತ್ರದ ಹೊಳೆಯುವ ಕೆಂಪು ಚಂದಿರ. ಸೌಮ್ಯ ಮುಖ. ಹಿರಿಯಕ್ಕನಂತೆ ” ಬನ್ನಿ ಒಳಗೆ” ಎಂದು ಕೂರಿಸಿ”ಮೇಷ್ಟ್ರನ್ನು ಮಾತನಾಡಿಸಬೇಕಿತ್ತೇ”ಎಂದು ಮೃದು ವಾಗಿ ಕೇಳಿದ್ದರು. ತಲೆಯಲುಗಿಸಿದ್ದೆ. ಹೊಸದೊಂದು ನವಿರು ಬಾಂಧವ್ಯ ಮನಸ್ಸಿಗೆ ಕಟ್ಟಿ ಅವರು ಒಳನಡೆದರು. ಅದು ಗುರುಗಳ ಅಮ್ಮ ಹಾಗೂ ಹೆಂಡತಿ. ನನಗೆ ಅರ್ಥವಾಗದ ಪಾಠಗಳನ್ನು ಸರ್ ಹೇಳಿ ಕೊಟ್ಟರು. ಗುರುಪತ್ನಿ ನಾಗಮಣಿ ಅಮ್ಮ ಅವರು ತಿಂಡಿ, ಕಾಫಿ, ಊಟ, ಪ್ರೀತಿ, ಭಾವ, ಕಾಳಜಿ, ಹಾರೈಕೆ ತುತ್ತು ಉಣಿಸುತ್ತಾ ಹೋದರು. ನಾನು ಆ ಮನೆಯಲ್ಲಿ ಬದುಕಿನಲ್ಲಿ ಎಂದೂ ಸಿಗಲಿಲ್ಲವೆಂದುಕೊಂಡ ವಾತ್ಸಲ್ಯ ಉಂಡು ಚಿಗುರುತ್ತ ಚಿಗುರುತ್ತ ನಡೆದೆ. ನಾನು ಹೋಗುವಾಗೆಲ್ಲ ಸರ್ ತಮ್ಮ ಕುರ್ಚಿಗೆ ಅಂಟಿ ಮೇಜಿನ ಮೇಲೆ ಪೇಪರ್ ಹರವಿ ಬರೆಯುತ್ತಿದ್ದರು. ಕವನ, ಕಥೆ..ಇನ್ನೂ ಏನೋ..ತಮ್ಮ ಇಷ್ಟದ ಭಾವ ತಮಗಿಷ್ಟ ಆಗುವ ಪರಿಯಲ್ಲಿ ಅಕ್ಷರವಾಗಿಸುತ್ತಿದ್ದರು‌ ನಾನು ಸದ್ದಾಗದಂತೆ ಒಳ ನಡೆದು ಅಡುಗೆ ಮನೆಯ ಒಡತಿಯ ಅಕ್ಕರೆಗೆ ಮಗುವಾಗುತ್ತಿದ್ದೆ. ಅಕ್ಷರ ಮತ್ತು ಅಕ್ಕರೆ ಆ ಮನೆಯ ಅವಳಿ ಮಕ್ಕಳು!. ಅವರ ಮನದ ಭಾವತರಂಗಗಳ ನಾದಕ್ಕೆ ನಾನು ಕಿವಿ.  ಆಗ ಸರ್ ಆಕಾಶವಾಣಿಗೆ ಚಿಂತನ ಬರೆದು ಕಳುಹಿಸುತ್ತಿದ್ದರು. ” ಕೇಳು” ಎನ್ನುತ್ತಿದ್ದರು. ನಿಧಾನವಾಗಿ ಗುರುಪತ್ನಿಯ ಚಿಂತನಗಳು ಬರತೊಡಗಿದವು. ಅವರ ಮನದ ಚಿಂತನಗಳು ಶ್ರವಣಕೇಂದ್ರವಾಗಿ ಅಚ್ಚರಿ, ಸೋಜಿಗವಾಗುತ್ತಿತ್ತು. ಹೊಸದೊಂದು ಸೆಳೆತ.  ರೇಡಿಯೋ ಕಥೆ,ಕವನ,ನಾಟಕ. ಎಲ್ಲಿಯೋ ಆಡಿದ ಮಾತು. ಧ್ವನಿತರಂಗಗಳು ಮನೆಯ ಒಳ ಬಂದು ಪಟ್ಟಾಂಗವಾಡುವುದು. ಆಗಲೇ ನಾನು ಬರೆದ ಕಥೆಯನ್ನು ಅವರಿಬ್ಬರೂ ಓದಿ, ಆಕಾಶವಾಣಿಗೆ ಕಳುಹಿಸಿದ್ದು. ಕಥೆ ಓದುವುದು ಹೊಸ ಅನುಭವ.” ಆರಾಮವಾಗಿ ಓದು. ಭಾವ ತುಂಬಿ ಓದು.  ಅವಸರಿಸಬೇಡ” ನಾಗಮಣಿ ಅಮ್ಮನ ಸಕ್ಕರೆ ಜೊತೆಗಿನ ಅಕ್ಕರೆ ವಾಣಿ ಒಳಗೊಳಗೇ ಮತ್ತೆ ಮತ್ತೆ ಧ್ವನಿಸುತ್ತಿತ್ತು. ಮೊದಲ ಓದು ತಿಳಿಸಿಕೊಟ್ಟವರು ಆಗ ಆಕಾಶವಾಣಿಯಲ್ಲಿ ಯುವವಾಣಿಯ ಜವಾಬ್ದಾರಿ ನಿರ್ವಹಿಸುತ್ತಿದ್ದ ಶರಭೇಂದ್ರಸ್ವಾಮಿಯವರು. ಕಣ್ಣ ಮುಂದೆ ಮನಸ್ಸಿನಲ್ಲಿ ಗೆಜ್ಜೆಕಟ್ಟಿ ಕೂತಿದ್ದ ಪಾತ್ರಗಳು ಅಕ್ಷರಗಳಾಗಿ, ಮಾತಾಗಿ, ಧ್ವನಿಯಾಗಿ ಹೊರಟಿದ್ದವು. ಮುಂದೆ ಬದುಕಿನಲ್ಲಿ ಕಂಡ ಕಥೆ ಕಥೆಗಳು ಅಕ್ಷರಗಳಾದವು. ಗುರುಪತ್ನಿಯ ಶಿಫಾರಸ್ಸು.” ಎಷ್ಟು ಚೆಂದ ಬರ್ದಿದೀಯೇ ಹುಡುಗೀ..”” ನಿನ್ನ ಕಥೆ ನನಗಿಷ್ಟ” ಎನ್ನುತ್ತಾ ನಾಗಮಣಿ ಅಮ್ಮ, ತನ್ನ ಮಡಿಲಲ್ಲಿ ಕೂರಿಸಿ, ಒಪ್ಪ ಮಾಡಿ ಒಬ್ಬ ಕಥೆಗಾರ್ತಿಯನ್ನು ಕಟ್ಟುತ್ತಲೇ ನಡೆದರು. ” ಏನು,ಯಾವ ಕಥೆ? ಬರೆದಿರುವೆಯಾ, ತಾ ಇಲ್ಲಿ. ಕೊಡು.”  ” ವ್ಹಾ, ಮಣಿ ಕಂಡೆಯಾ, ಎಂತಹ ಹೋಲಿಕೆ, ಏನು ಚೆಂದ” ಎನ್ನುತ್ತಾ ಸರ್ ಅವರು,  ನನ್ನೊಳಗೆ ಇದ್ದ, ಇದ್ದೂ  ಇಲ್ಲದಂತಿದ್ದ ಕಥೆಗಾರ್ತಿಯನ್ನು ಬೆಳೆಸಿದರು. ಆಕಾಶವಾಣಿಯೆಂಬ ಅದ್ಬುತ ನನಗೆ ಹೊಸ ಲೋಕದ ದೊರೆತನವನ್ನೇ ಕಾಣಿಕೆ ನೀಡಿದಂತೆ ಶ್ರೀಮಂತಗೊಳಿಸಿತು.  ಜೊತೆಜೊತೆಗೆ ಗುರುದಂಪತಿಗಳ ವಾತ್ಸಲ್ಯ. ಮೊಗೆಮೊಗೆದು ಕೊಟ್ಟ ಪ್ರೀತಿಗೆ ಎಣೆಯುಂಟೇ? ಯಾವ ಹಬ್ಬವಾಗಲಿ ಕರೆ ಬರುತ್ತಿತ್ತು. ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ಮಾಡಿದ ಸಿಹಿತಿಂಡಿ ಮುಚ್ಚಟೆಯಾಗಿ ತೆಗೆದಿರಿಸಿ ಅವರ ಮನೆಗೆ ನಾನು ಹೋದಾಗ ಕೊಡುತ್ತಿದ್ದರು. ತಾನು ಹೆತ್ತ ಕಂದ ಇವಳು ಎಂಬಂತೆ. ಮನಸ್ಸಿನ ಮಾತು ಹಂಚಿಕೊಳ್ಳುತ್ತಿದ್ದರು. ” ನಿನಗಿಂತ ಆತ್ಮೀಯಳು ಯಾರು ಹೇಳು?” “ಹೇ ಹುಡುಗಿ ,ನನ್ನ ಮಾತು ಸರ್ ಬಳಿ ಹೇಳಬೇಡ.”  “ಎಲ್ಲಿದ್ದಿಯೇ,ಮನೆಗೆ ಬಾ. ಅದೆಷ್ಟು ಮಾತಿದೆ.”  “ನನ್ನ ಬಗ್ಗೆ ಒಂದು ಕಥೆ ಬರಿ ನೋಡುವಾ”  “ಸಂಕ್ರಾಂತಿಯ ಎಳ್ಳು ಬೆಲ್ಲ ಬೇಡ್ವಾ”  ” ನಿನ್ನ ಕಥೆ ನೋಡು ತುಷಾರದಲ್ಲಿ ಬಂದಿದೆ. ಬೇಗ ಬಾ. ಸ್ವೀಟ್ ಹಿಡಕೊಂಡು ಬಾ.” ” ಹೇ,ನಾನೇ‌ ಮಾಡಿದ್ದೇನೆ. ಬಾ ಈಗ”. ಹೀಗೆ ಸದಾ ತೊಟ್ಟಿಕ್ಕುತ್ತಿದ್ದ  ಎಂದೂ ಬತ್ತದ ಮಮತೆಯ ಮಾತುಗಳು.ತಾನೇ ನಾನಾದಂತೆ ನಾನೇ ಆಗಿ ಉಳಿದ ತಾಯಿ. ಈ ಬಂಧ ಹಾಗೇ ಉಳಿದಿದೆ. ಊರು ಬದಲಾದರೇನು? ಮನದ ಭಾವ ಬದಲಾದೀತೇ?”ನಿನ್ನಿಂದ ಸಾಧ್ಯ, ಮಾಡು!. ಮಾಡು!!” ಅನ್ನುತ್ತ ಅಂಜುಬುರುಕಿ ಹೆಣ್ಣನ್ನು ಕಲೆಯ ಮಹಲೊಳಗೆ ಕಿರುಬೆರಳು ಹಿಡಿದು ನಡೆಸಿದವರು.ರಂಗದ ಮೆಟ್ಟಲು ಹತ್ತಲು ಇಂತಹ ದೇವತೆಗಳೂ ಬೇಕಾಗುತ್ತಾರೆ ಎನ್ನುವ ತಿಳಿವು ಮೂಡಿಸಿದವರು.ತಾನು ಕಥೆ ಬರೆದಾಗ ಓದಿ ನೋಡು. ನೀನು ಹೇಳಿದರೆ ನನಗೊಂದು ನೆಮ್ಮದಿ ಎನ್ನುತ್ತ ಆತ್ಮವಿಶ್ವಾಸ ಗಂಟು ನನ್ನಲ್ಲಿ ಜೋಪಾನವಾಗಿಸಿದರು. ಆಕಾಶವಾಣಿಯಲ್ಲಿ ಕಥೆಗಳ ಓದು,ಕಥೆಯ ರಚನೆಗೆ ಮೂಲ ಶಕ್ತಿಯಾದಂತೆ ಮುಂದೆ ರೇಡಿಯೋ ನಾಟಕದ ಹುಚ್ಚು ಆಸೆ ತುಂಬಿತು. ಮುದ್ದು ಮೂಡುವೆಳ್ಳೆಯಂತವರ ನಿರ್ದೇಶನದಲ್ಲಿ ಆಕಾಶವಾಣಿ ಕಲಾವಿದಳಾದೆ.  ರೇಡಿಯೋ ನಾಟಕಗಳಲ್ಲಿ ಅವಕಾಶ ದೊರಕಿದಾಗ ಹೊಸಹೊಸ ನಾಟಕಗಳ ಓದು, ಕಲ್ಪನೆ. ಜೊತೆಗೆ ಶರಭೇಂದ್ರ ಸ್ವಾಮಿಯಂತ ನುರಿತ ನಿರ್ದೇಶಕರು, ಸ್ವರಭಾರ, ಧ್ವನಿಪೆಟ್ಟಿಗೆ, ಭಾವದ ಏರಿಳಿತ ಹೇಳಿ  ಕಲೆಯ ವ್ಯಾಮೋಹ ಅಮಲು ನನ್ನೊಳಗೆ ಹರಿದುಬರಲು ಪ್ರೇರಕ ಶಕ್ತಿಯಾದರು. ಅದು ಪೂರ್ತಿ ಹೊಸ ನಶೆ. ರಂಗದ ಪ್ರವೇಶಕ್ಕೆ ನಿಜವಾದ ಪ್ರವೇಶಿಕೆ. ಆಕಾಶವಾಣಿಯ ಅವಕಾಶದಾಕಾಶ ತೆರೆದ ಗುರುಗಳು ಈ ವರ್ಷ, ಸೂಚನೆ ನೀಡದೆ ನಡೆದಿದ್ದಾರೆ. ನನ್ನ ಬದುಕಿನ  ಗುಡಿಯಲ್ಲಿ ಮಾತ್ರ ಇವರು ಸದಾ ಪ್ರತಿಷ್ಠೆಗೊಂಡು, ಬೆಳಗ್ಗಿನ ಮೊದಲ ಪೂಜೆ ಇವರಿಗೇ ಅನ್ನುವಷ್ಟು ಪ್ರಾತಃಸ್ಮರಣೀಯರು. **************************** ಪೂರ್ಣಿಮಾ ಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 30 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ

Read Post »

ಅಂಕಣ ಸಂಗಾತಿ, ಪಾರಿಜಾತ

ಅಂಕಣ ಬರಹ ಸವಡಿಯಾಗುವ ಸವತಿಯರು ಭಾರತ ಬಹುಸಂಸ್ಕೃತಿ ನಾಡು. ಅಂತೆಯೆ ಬಹು ಪತ್ನಿತ್ವ ಸಮಾಜವುಳ್ಳ ಕೇಂದ್ರಸ್ಥಾನವೂ ಹೌದು.ಒಬ್ಬ ಪುರುಷನನ್ನು ಇಬ್ಬರು ಮಹಿಳೆಯರು ಮದುವೆಯಾದರೆ ಅವರು ಒಬ್ಬರಿಗೊಬ್ಬರು ಸವತಿಯಾಗುವರು. ‘ಸವತಿ’ ಎನ್ನುವ ಈ ಶಬ್ದ ಮೂಲತಃ ಸಹವರ್ತಿ ಎನ್ನುವ ಪದದಿಂದ ಬಂದಿದ್ದು. ಇದರ ಅರ್ಥ ಇಬ್ಬರೂ ಸಮಾನ ಹಕ್ಕು ಹೊಂದಿರುವುದು ಎಂದಾಗುತ್ತದೆ. ಸಮಾನ ಹಕ್ಕುಗಳು, ಸಮಾನ ಸಕಲ ಸವಲತ್ತುಗಳನ್ನು ಸಮಾನವಾಗಿ ಪಡೆಯುವರನ್ನು ಸವತಿ ಎಂದು ಕರೆಯುವರು‌. ಈ ಸವತಿ ಎನ್ನುವ ಪದ ಹೊಟ್ಟೆಕಿಚ್ಚು, ಮತ್ಸರ, ವೈರಿ, ಅಸಹನೆ ಎಂಬ ನಾನಾರ್ಥಗಳನ್ನು ಕೊಡುತ್ತವೆ. ಹಾಗೇ ನೋಡಿದರೆ ಈ ಸವತಿ ಎಂಬ ಸಂಸ್ಕೃತಿ ಮತ್ತು ಸಂಪ್ರದಾಯ ಬೆಳೆದು ಬರಲು ಮುಖ್ಯ ಕಾರಣ ಪುರುಷರ ಪ್ರತಿಷ್ಠೆ ಮತ್ತು ಲೈಂಗಿಕ ಬಯಕೆಗಳು, ಸಂತಾನ ಅಪೇಕ್ಷೆಗಳು ಪ್ರಮುಖ ಎಂದು ಹೇಳಬಹುದು. ಇಲ್ಲಿಯೂ ಸವತಿಯರಾಗಿ ಬಂದ ಸ್ತ್ರೀಯರನ್ನು ಇನ್ನಷ್ಟು ದುಸ್ಥಿತಿಗೆ ಸಿಲುಕಿಸಿತು. ಇದೊಂದು ಕೆಟ್ಟ ಸಾಮಾಜಿಕ ಸಮಸ್ಯೆ ಎಂದೇ ಹೇಳಬಹುದು. ಗಂಡನು ಇನ್ನಾವುದೋ ಕಾರಣದಿಂದ ಎರಡನೆಯ ಮದುವೆಯಾದರೆ ಮೊದಲ ಸತಿಯ ಎದೆ, ಮನಸು ಒಪ್ಪದಿದ್ದರೂ ಅದಕ್ಕೆ ಶಾಂತವಾಗಿ, ಮೌನವಾಗಿ ಸಮ್ಮತಿಯನ್ನು ಕೊಡಬೇಕು. ಅಂದು ಸ್ತ್ರೀಯು ತನ್ನ ಒಡಲಾಳದ ನೋವು ಗಂಭೀರ ಆಗಿದ್ದರೂ ಅವಳು ತನ್ನ ಗಂಡನ ಎದುರು ಹೇಳಿಕೊಳ್ಳುವಂತಿರಲಿಲ್ಲ. ಅಂತಹ ಕೆಟ್ಟ ವ್ಯವಸ್ಥೆಯನ್ನು ಎದುರಿಸಿ ನಿಲ್ಲುವ ಶಕ್ತಿ ಅವಳಾಗ ಪಡೆದುಕೊಂಡಿರಲಿಲ್ಲ. ಪತ್ನಿಯ ಮುಂದೆ ಎರಡನೆಯ ಮದುವೆ ವಿಚಾರ ಪ್ರಸ್ತಾಪಿಸಿ ಅವಳ ಒಪ್ಪಿಗೆಗಾಗಿ ಕಾಯುವುದು ಅಂದಿನ ವ್ಯವಸ್ಥೆಗೆ ಹೊಂದದ ನಿಯಮವನ್ನಾಗಿ ಮಾಡಿಕೊಂಡಿತು ಈ ಪುರುಷ ಸಮಾಜ. ಇಂತದ್ದೆ ಒಂದು ಉದಾಹರಣೆ ನೋಡಲಾಗಿ, ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ರಾಮೈತಾಳರು ತಮ್ಮ ಎರಡನೆಯ ಮದುವೆ ವಿಷಯದಲ್ಲಿ ಸಂಶಯ ಗ್ರಹಸ್ಥನಾದ ಶೀನಮ್ಮಯ್ಯನಿಗೆ ಮನವರಿಕೆ ಮಾಡುವ ಹೇಳಿಕೆಯನ್ನು ನಿದರ್ಶನವಾಗಿ ನೋಡಬಹುದು. “ಶೀನ ನಮ್ಮ ಮನೆಯ ಪಂಚಾಯಿತಿ ನಿನಗೆ ಗೊತ್ತಿಲ್ಲ.ನಮ್ಮಲ್ಲಿ ಒಬ್ಬ ಯಜಮಾನ ಎಂದರೆ ಸಿಂಗಲ್ ಯಜಮಾನ.ಗಂಡನು ಒಂದು ಹೇಳುವುದು, ಹೆಂಡತಿ ಇನ್ನೊಂದು ಹೇಳುವುದು ಈವರೆಗೆ ನಡೆದಿಲ್ಲ”. ಇಂತಹ ವ್ಯವಸ್ಥೆಯ ಬೇರು ಗಟ್ಟಿಯಿರುವಾಗ ಸ್ತ್ರೀ ಅದನ್ನು ವಿರೋಧಿಸುವಂತಿಲ್ಲ.ಆದಾಗ್ಯೂ ಹೆಂಡತಿಯ ಬಗೆಗೆ ದ್ವೇಷ ಮಾಡಿಕೊಳ್ಳವ ಬದಲು ಇಲ್ಲಿ ಪಾರ್ವತಿಯು ಸತ್ಯಭಾಮೆಯರೊಂದಿಗೆ ಬಹು ಅಕ್ಕರೆಯಿಂದಲೇ ನಡೆದುಕೊಳ್ಳುತ್ತಾಳೆ. ಆದರೂ ಇಲ್ಲಿ ಮೊದಲು ಸವತಿಯ ಮೇಲೆ ಹೊಟ್ಟೆಕಿಚ್ಚು ಹೊಂದಿದಳು ಅನ್ನುವದಂತು ನಿಜ. ಈ ವ್ಯವಸ್ಥೆ ಹೇಗೆ ಪುರುಷನ ನಿಯಂತ್ರಣದಲ್ಲಿರುತ್ತದೆ, ಹೆಣ್ಣು ತನ್ನ ಕೋಪವನ್ನು ಹೇಗೆ ಹೆಣ್ಣಿನ ಮೇಲೆ ಸಾಧಿಸಿಕೊಂಡು ಪುರುಷನ ಮೇಲೆ ತೀರಿಸಿಕೊಳ್ಳುತ್ತಾಳೆ ಅಂದ್ರೆ, ಅವಳು ತನ್ನ ಸಿಟ್ಟುನ್ನು ಹೊಸದಾಗಿ ಬಂದ ಹೆಣ್ಣಿನ ಮೇಲೆ ಜಗಳ, ಅಸಹನೆ ತೋರುವುದರ ಮೂಲಕ ತೀರಿಸಿಕೊಳ್ಳುವಳು. ಹೀಗೆ ಇದು ಸವತಿಯರ ಮತ್ಸರಯುದ್ದ ಎಂದೇ ಹೇಳಬಹುದು. ಇಂತದ್ದೆ ಒಂದು ಉದಾಹರಣೆ ‘ಅಂತರಂಗ’ ಕಾದಂಬರಿಯಲ್ಲಿ ಪಾತಮ್ಮ ಸಾಕ್ಷಿಯಾಗಿ ನಿಲ್ಲುತ್ತಾಳೆ. ಇಲ್ಲಿ ಭಟ್ಟರು ತೀರ್ಥಯಾತ್ರೆ ಕೈಗೊಂಡು ಪ್ರಯಾಣದ ನಡುವೆ ಬಸವಿ ಗೌರಮ್ಮಳಿಗೆ ಮನಸೋತು ಹೋಗುವನು. ಬಸವಿಯಾದ ಗೌರಮ್ಮ ಯಾರಿಗೂ ಕಣ್ಣೆತ್ತಿ ನೋಡದ ಅವಳು ಇಲ್ಲಿ ಭಟ್ಟರಿಗೆ ಮನಸೋತು ಹೋಗುತ್ತಾಳೆ. ಭಟ್ಟರು ತೀರ್ಥ ಯಾತ್ರೆ ಮುಗಿಸಿಕೊಂಡು ಮನೆಗೆ ಬಂದ ಕೆಲವು ದಿನಗಳಲ್ಲಿ ಬಸವಿ ಗೌರಮ್ಮ ಕೂಡಾ ಮನೆಗೆ ಬರುವಳು. ವಿಶಾಲ ನಿರ್ಮಲ ಪ್ರೇಮದ ಗೌರಮ್ಮ ವೈರಾಗ್ಯ ನಿಧಿಯಂತೆ ಇರುತ್ತಾಳೆ. ಆದರೆ ಭಟ್ಟರು ಗೌರಮ್ಮಳ ಕುರಿತು ತನ್ನ ಸ್ನೇಹಿತರಿಗೆ, ಸಂಬಂಧಿಕರ ಎದುರಿಗೆ ಮಾಡುವ ವರ್ಣನೆಯಿಂದ ಭಟ್ಟರ ಮೊದಲ ಹೆಂಡತಿ ಪಾತಮ್ಮ ಮೂರ್ಛೆ ಹೋಗುತ್ತಾಳೆ. ಅಂದಿನಿಂದ ಅವಳು ಗಂಡನನ್ನು ದ್ವೇಷಿಸುತ್ತಾಳೆ .ಹೀಗೆ ಇಲ್ಲಿ ಗಂಡನನ್ನ ತಿರಸ್ಕಾರದ ಮನಸ್ಸು ಬೀರುವುದರೊಂದಿಗೆ ಸವತಿಯರ ಅಸಹನೆ ಎದ್ದು ಕಾಣುತ್ತದೆ. ಪುರುಷನದೆ ಸಮಾಜ ಅಲ್ವ ಇದು! ಇಲ್ಲಿ ಎಂಥದ್ದೇ ಸಮಸ್ಯೆಗಳಾದರೂ ಪರಿಹಾರ ಅವಳಿಂದಲೇ ಅನ್ನುವುದು ಆಲ್ರೆಡಿ ಶಾಸನ ಹೊರಡಿಸಿ ಆಗಿದೆ ಈ ನೆಲದ ಮಣ್ಣಿನ ಮೇಲೆ. ಅಂತಹ ಸಾಮಾಜಿಕ ಸಮಸ್ಯೆಗಳು ಕಾದಂಬರಿಯಲ್ಲಿ ಪ್ರಸ್ತಾಪಿಸುವ ಮೂಲಕವೇ ಈ ವ್ಯವಸ್ಥೆಯನ್ನು ಹೀಗೆಳೆಯುವುದು ಒಂದು ಉಸಿರು ಬೇರೆಡೆ ಬಿಡುವಂತೆ ಮಾಡುತ್ತದೆ. ಅಂತೆಯೆ ಇನ್ನೊಂದು ಕಾದಂಬರಿಯಾದ ‘ಪ್ರಬುದ್ಧ ಪದ್ಮನಯನೆ’ ಯಲ್ಲಿ ಪದ್ಮನಯನೆ ಮತ್ತು ಜೀವನಕಲಾ ಸವತಿಯರಾದರೂ ಇಲ್ಲಿ ಅವರಿಬ್ಬರೂ ಬಲುಪ್ರೇಮ ಅಕ್ಕರೆಯಿಂದ ಇದ್ದವರು. ಆದರೂ ಬದಲಾವಣೆ ಮತ್ತು ಹೊಂದಾಣಿಕೆಯ ಮನಸುಗಳು ಕೆಲವೊಂದು ಸಲ ಅನಿವಾರ್ಯತೆಗೆ ಒಗ್ಗಿಕ್ಕೊಳ್ಳುತ್ತವೆ ಅನ್ನುವುದಕ್ಕೆ ಇದೊಂದು ದೃಷ್ಟಾಂತ. ಹೊಯ್ಸಳ ದೊರೆ ವಿಷ್ಣುವರ್ಧನ ಶಾಂತಲೆಗೆ ಮನಸೋತಾಗ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಬಂಧವನ್ನು ಹೊಂದಿದ್ದ ನಾಟ್ಯರಾಣಿ ಶಾಂತಲೆ ಹಾಗೂ ಲಕ್ಷ್ಮೀ ಇಬ್ಬರೂ ಕೊನೆಗೆ ವಿಷ್ಣುವರ್ಧನನ ಪತ್ನಿಯರಾಗಿ ಕೊನೆಗೆ ತ್ಯಾಗದ ಮೂರ್ತಿಯಾಗುವ ಕತೆಯನ್ನು ‘ಕೆ ವಿ ಅಯ್ಯರ್ ರವರ ‘ಶಾಂತಲೆ’ ಕಾದಂಬರಿಯಲ್ಲಿ ಕಾಣಬಹುದು. ಈ ಸವತಿಯರು ಸಂಪ್ರದಾಯ ಇವತ್ತು ನಿನ್ನೆಯದಲ್ಲ. ಇದು ವೇದ ಕಾಲದಿಂದ ಹಿಡಿದು ರಾಜ ಮಹಾರಾಜರ ಕಾಲದಲ್ಲಿ ವಿಫುಲವಾಗಿ ಸಂಚರಿಸಿಕೊಂಡು ಬಂದ ಒಂದು ಪದ್ಧತಿ. ಒಬ್ಬರಿಗೊಬ್ಬರ ಬಗೆಗೆ ಸಿಟ್ಟಲ್ಲಿ  ಮತ್ಸರವಿದ್ದರೂ ಆ ಸವತಿಯರು ಈ ಸಮಾಜದಲ್ಲಿ ಸವತಿಯರಾಗಿ ಉಳಿಯದೇ ಅಕ್ಕತಂಗಿಯರಾಗಿ ಬದುಕು ಸಾಗಿಸುವ ಪರಿ ಗಮನಾರ್ಹವಾದುದು. ಹೀಗೆ ಹೆಣ್ಣು ಈ ಸಮಾಜದಲ್ಲಿ ಭೋಗಕ್ಕೆ ಸಿಲುಕಿದಂತೆ ತ್ಯಾಗಕ್ಕೂ ಸೈ ಅನ್ನುವ ಆದರ್ಶನಾರಿಯೇ ಆಗಿದ್ದಾಳೆ. ******************************************    ತೇಜಾವತಿ ಹೆಚ್ ಡಿ

Read Post »

ಅಂಕಣ ಸಂಗಾತಿ, ಕಾಲಾ ಪಾನಿ

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-6 ಹೌರಾ ಬ್ರಿಜ್ ಹತ್ರ ಬಂದು ನಿಂತು ಸ್ವಲ್ಪ ಹೊತ್ತು ಫೋಟೊ ಶೂಟ್ ಎಲ್ಲಾ ಆಗುವಾಗ, ಅಲ್ಲಿವರೆಗೆ ಸರ್ಕಸ್ ಮಾಡಿ ಬಂದಿದ್ದು ಸಾಕಾಗಿ ಹೋಯ್ತೇನೊ. ಇನ್ನು ಸಾಕು‌. ವಾಪಸ್ ಹೋಗೋಣ ಅಂದರು ಸತೀಶ್. ನೀರಿನಲ್ಲಿ ನಕ್ಷತ್ರ ಮೀನು, ಜೆಲ್ಲಿ ಮೀನು ಇನ್ನೇನೇನೊ ನೋಡುತ್ತಾ ಮಕ್ಕಳು ಮುಂದೆ ಹೋಗಿದ್ದರು.ನೀವು ಮುಂದೆ ಹೋಗಿ ನೋಡಿ ಬನ್ನಿ. ನಾವಿಲ್ಲೇ ಕೂತಿರ್ತೇವೆ ಎಂದು ಸರಸ್ವತಿಗೆ ಹೇಳಿದೆ. ಅಲ್ಲೇ ಒಂದು ಬಂಡೆಯ ಮೇಲೆ ಕೂತು ಸಮುದ್ರ ನೋಡುತ್ತಾ ಇದ್ದಾಗ ನಮ್ಮ ಮ್ಯಾನೇಜರ್ ಬಂದು, ನೀವಿಲ್ಲೇ ಇದ್ದೀರಾ? ಮುಂದೆ ಹೋಗಿ ಬನ್ನಿ ಸರ್ ಎಂದು ಹೇಳಿದರು. ಅವರಿಗೆ ಆಗ್ತಿಲ್ಲ. ಅದಕ್ಕೆ ಇಲ್ಲೇ ಕೂತೆವು ಅಂದೆ. ಯಾಕೆ? ಏನಾಯ್ತು? ಎಂದು ಗಾಬರಿಯಾದರು. ಏನಿಲ್ಲ. ಈಗ ಏನೂ ಆಗಿದ್ದಲ್ಲ. ಒಂದೂವರೆ ವರ್ಷದ ಹಿಂದೆ ಬ್ರೈನ್ ಸ್ಟ್ರೋಕ್ ಆದ ವಿಷಯ ಹೇಳಿದೆ. ನನಗೆ ಗೊತ್ತೇ ಆಗಿಲ್ಲ. ನೀವು ಮೊದಲೇ ಹೇಳಿದ್ದರೆ ನಾನಿಲ್ಲಿ ಅವರ ಜೊತೆ ಇದ್ದು ನೋಡಿಕೊಳ್ತಾ ಇದ್ದೆ. ನೀವು ಹೋಗಿ ಬರಬಹುದಿತ್ತು, ಈಗ ಹೋಗಿ ನಾನಿಲ್ಲಿರ್ತೇನೆ ಅಂದರು. ಅಷ್ಟರೊಳಗೆ ಎಲ್ಲರೂ ವಾಪಸ್ ಬರುತ್ತಾ ಇದ್ದರು. ಅಲ್ಲೊಂದಿಷ್ಟು ಹೊತ್ತು ಮತ್ತೆ ಫೋಟೊ ಶೂಟಿಂಗ್ ಆಯಿತು. ನಂತರ ನಾವು ಹೋಗಿದ್ದು ಲಕ್ಷ್ಮಣಪುರ ಬೀಚ್ ಗೆ. ಸೂರ್ಯ ಮುಳುಗೋದನ್ನು ನೋಡಲು ಅಲ್ಲಿ ತುಂಬಾ ಜನ ಬರ್ತಾರೆ. ಸಂಜೆ ಐದೂವರೆಗೆ ಸೂರ್ಯಾಸ್ತ. ನಾವು ಬೇಗ ಹೋಗಿ ಕೂತರೆ ಒಳ್ಳೆಯ ದ್ರಶ್ಯ ನೋಡಲು ಸಿಗುತ್ತೆ ಅಂತ ಮತ್ತೆ ಬಸ್ಸಿನಲ್ಲಿ ನೀಲ್ ದ್ವೀಪದ ಪಶ್ಚಿಮಕ್ಕಿರುವ ಆ ಬೀಚ್ ತಲುಪುವಾಗ ಐದು ಗಂಟೆ. ಸಣ್ಣ ಚಿರೋಟಿ ರವೆಯಂತ ಮರಳು, ಪುಸ್ ಪುಸ್ ಜಾರುತ್ತಾ ಹೆಜ್ಜೆ ಇಟ್ಟಲ್ಲೇ ಇದ್ದ ಹಾಗೆ, ಮುಂದೆ ಸಾಗುತ್ತಲೇ ಇಲ್ಲ. ಅಂತೂ ಹೋಗಿ ಸೂರ್ಯಾಸ್ತ ಆಗುವ ಜಾಗಕ್ಕೆ ಹೋಗಿ ಸೇರಿದೆವು. ಕಲ್ಲಿನ ಬೆಂಚ್ ತರ ಮಾಡಿ ಇಟ್ಟಿದ್ದಾರೆ. ಜಾಗ ಸಿಕ್ಕಿದಲ್ಲಿ ಕೂತೆವು. ಪಕ್ಕದಲ್ಲಿ ಚಾ ಅಂಗಡಿ. ಯಾವತ್ತೂ ಚಾ ಕುಡಿಯದ ನನಗೆ ಆವತ್ತು ಚಹಾದ ಪರಿಮಳ ತುಂಬಾ ಇಷ್ಟವಾಗಿ ಎಲ್ಲರೊಂದಿಗೆ ನಾನೂ ಚಹಾ ಕುಡಿದೆ. ಇನ್ನೂ ಹತ್ತು ಹದಿನೈದು ನಿಮಿಷ ಬಾಕಿ ಇತ್ತು. ನಮ್ಮ ಜೊತೆಯಲ್ಲಿ ಬಂದವರಲ್ಲಿ ನವವಿವಾಹಿತ ಜೋಡಿ ಒಂದಿತ್ತು. ನಮ್ಮ ಮಕ್ಕಳಿಗೆ ಈ ಬೀಚ್ ಲ್ಲಿ ಅವರಿಬ್ಬರೂ ಸ್ನೇಹಿತರಾದರು. ಎಲ್ಲರೂ ಜೊತೆ ಸೇರಿ ನಗುತ್ತಾ ಹರಟುತ್ತಾ ಹಾಯಾಗಿ ಸಮುದ್ರದ ಬಳಿ ಇದ್ದರು. ಆ ಜಾಗದಲ್ಲಿ ಸಮುದ್ರ ಸ್ವಲ್ಪ ಆಳವಾಗಿದೆ, ತುಂಬಾ ಮುಂದೆ ಹೋಗೋದೆಲ್ಲ ಬೇಡ. ಸೂರ್ಯಾಸ್ತ ನೋಡಿದ ಕೂಡಲೇ ರೆಸಾರ್ಟ್ ಗೆ ಹೊರಡೋದು ಎಂದು ಬರುವಾಗ ಬಸ್ಸಿನಲ್ಲೇ ಹೇಳಿದ್ದರು. ಸೂರ್ಯ ಉರಿಯುತ್ತಾ ಇದ್ದವನೇ.. ಇದ್ದಕ್ಕಿದ್ದ ಹಾಗೆ ಸುತ್ತಲೂ ಆಕಾಶ ಕೆಂಪು ಕೆಂಪಾಗಿ ಮೆಲ್ಲ ಮೆಲ್ಲನೆ ಆ ಕೆಂಪಿನೊಳಗೆ ಜಾರುತ್ತಾ ಸಮುದ್ರವನ್ನೂ ಕೆಂಪಾಗಿಸುತ್ತಾ.. ಸಮುದ್ರದ ನೀರು ನೀಲಿ ಹಸುರಿನ ಜೊತೆ ಕೆಂಪನ್ನೂ ಸೇರಿಸಿ ವರ್ಣರಂಜಿತ. ಅಬ್ಬಾ ನೋಡಲು ಕಣ್ಣುಗಳೇ ಸಾಲುವುದಿಲ್ಲ! ನೋಡನೋಡುತ್ತಿದ್ದಂತೆಯೇ ಸೂರ್ಯ ಸಮುದ್ರದೊಳಗೆ ಕರಗಿಯೇ ಹೋದ. ನೋಡಲು ಕೂತವರ ಮುಖದ ಮೇಲಿನ ಭಾವನೆಗಳ ಜೊತೆ ಆಕಾಶದ ರಂಗೂ ಸೇರಿ ಸುತ್ತಮುತ್ತೆಲ್ಲ ಕೆಂಪಾದವೋ ಎಲ್ಲಾ ಕೆಂಪಾದವೋ.. ಆ ನೀಲಿ ಸಾಗರ, ಸುತ್ತಲಿದ್ದ ಹಸುರು ಮರಗಳು, ಕೂತ ನಾವಷ್ಟೂ ಜನರೂ ಕೆಂಪಾದೆವು!! ಸಂಜೆಯಾ ರಾಗಕೆ ಬಾನು ಕೆಂಪೇರಿದೆ!! ಅಕ್ಷರಶಃ ಕೆಂಪೇರಿತ್ತು. ಎದ್ದು ಬರಲು ಯಾರಿಗೂ ಮನಸ್ಸಿಲ್ಲ.ಹಾಗೇ ಕಾಲೆಳೆದು ನಡೆದು ಬರುವಾಗ ಮಸುಕು ಕತ್ತಲಲ್ಲಿ ಕೆಂದಾಳೆ ಸೀಯಾಳವನ್ನು ಮಾರುತ್ತಾ ನಿಂತವನನ್ನು ದಾಟುವಾಗ ಒಮ್ಮೆಲೇ ಎಲ್ಲರಿಗೂ ಎಳನೀರು ಕುಡಿಯುವ ಬಯಕೆಯಾಯಿತು. ಅದ್ಭುತ ರುಚಿಯ ಆ ಕೆಂದಾಳೆಯ ನೀರು ಒಂದೇ ಚಿಟಿಕೆ ಉಪ್ಪು ಬೆರೆಸಿದ ಹಾಗೆ ಇತ್ತು. ನಮ್ಮನ್ನು ನೋಡಿ ಇನ್ನೂ ಕೆಲವರು ಸೇರಿದರು. ನೋಡ ನೋಡುತಿದ್ದಂತೆ ಅವನ ಸೈಕಲಲ್ಲಿದ್ದ ಅಷ್ಟೂ ಎಳನೀರು ಮಾರಾಟವಾಗಿ ಹೋಯಿತು. ಬಸ್ಸು ಹತ್ತುವುದರೊಳಗೆ ದೊಡ್ಡವಳು.. ಅಮ್ಮಾ ಅಮ್ಮಾ ಅಮ್ಮಾ ನೋಡಿಲ್ಲಿ ಇವಳು ಜೆನಿಶಾ.. ಇದು ಇವಳ ಗಂಡ ಪ್ರವೀಣ್. ಎಂದು ಪರಿಚಯ ಮಾಡಿ ಕೊಟ್ಟಳು.ಶ್… ಏನಿದು.. ಇದು, ಗಂಡ. ಹಾಗೆಲ್ಲಾ ಅನ್ನಬಾರದು ಅಂದೆ.ಆಯ್ತಮ್ಮಾ ನೀನು ಕೂತ್ಕೊ ಎಂದು ಅವರ ಹರಟೆಯಲ್ಲಿ ಅವರು ಮಗ್ನರಾದರು. ಅಷ್ಟರವರೆಗೆ ಇಬ್ಬರು ಹುಡುಗಿಯರು ಒಬ್ಬ ಹುಡುಗ ಒಬ್ಬರಿಗೊಬ್ಬರು ಕೀಟಲೆ ಮಾಡಿಕೊಂಡಿದ್ದವರಿಗೆ ಈಗ ಇನ್ನಿಬ್ಬರು ಸೇರಿ ಅವರ ಲೋಕವೇ ಬೇರೆಯಾಯ್ತು. ಈ ರೆಸಾರ್ಟ್ ತುಂಬಾ ದೊಡ್ಡದಾಗಿದ್ದು ಪ್ರತ್ಯೇಕ ಕಾಟೇಜ್ ಗಳು ತುಂಬಾ ಚೆನ್ನಾಗಿದ್ದವು. ಸುತ್ತಲೂ ಮರಗಿಡಗಳು, ನಮ್ಮನ್ನು ಬಾರ್ಜಲ್ಲಿ ಕರೆದುಕೊಂಡು ಬಂದು ಹೌರಾ ಬ್ರಿಜ್ ನೋಡಲು ಹೋದಾಗ ನಮ್ಮ ಲಗ್ಗೇಜ್ ಗಳು ಇಲ್ಲಿ ಈ ರೆಸಾರ್ಟಲ್ಲಿ ಬಂದು ಕೂತಿದ್ದವು. ನಮ್ಮ ನಮ್ಮ ಕಾಟೇಜ್ ಯಾವುದೆಂದು ನಮಗೆ ತಿಳಿಸಿ, ನಮ್ಮ ಲಗ್ಗೇಜ್ ಗಳನ್ನು ಅಲ್ಲಿನ ಹುಡುಗರು ತಂದಿರಿಸಿದರು. ನಾವೆಲ್ಲಾ ಮತ್ತೊಮ್ಮೆ ಸ್ನಾನ ಮಾಡಿ ಶುಚಿಯಾಗಿ ಎಂಟು ಗಂಟೆಗೆ ರೆಸ್ಟೋರೆಂಟ್ ಗೆ ಬರಬೇಕು ಎಂದು ಹೇಳಿದ್ದರಿಂದ ಅಲ್ಲೇ ಹೋಗಿ ಕೂತೆವು. ಮಾರನೆ ದಿನದ ಕಾರ್ಯಕ್ರಮದ ಬಗ್ಗೆ ತಿಳಿಸಲು ರಾಕೇಶ್ ಮತ್ತು ದರ್ಶನ್ ನಿಂತಿದ್ದರು.ನಾಳೆ ನೀಲ್ ಐಲ್ಯಾಂಡ್ ಲ್ಲಿರುವ ಡೈವಿಂಗ್ ಸ್ಪಾಟ್ ಲ್ಲಿ ಸ್ಕೂಬಾ ಡೈವಿಂಗ್, ಸ್ನೊರ್ಕ್ಲಿಂಗ್, ಗಾಜಿನ ತಳದ ದೋಣಿಯಲ್ಲಿ ಸಮುದ್ರಯಾನ ಮುಂತಾದ ಚಟುವಟಿಕೆಗಳಿಗಾಗಿ ಕರೆದುಕೊಂಡು ಹೋಗುತ್ತೇವೆ. ಸ್ಕೂಬಾ ಡೈವಿಂಗ್ ಮಾಡುವಆಸಕ್ತಿ ಉಳ್ಳವರು ತಯಾರಾಗಿರಿ. ಮದ್ಯಾಹ್ನದವರೆಗೆ ಸಮುದ್ರದ ಬಳಿ ಕಾಲ ಕಳೆದು ಊಟದ ನಂತರ ಮತ್ತೆ ನಾವು ಹಡಗಿನಲ್ಲಿ ಪೋರ್ಟ್ ಬ್ಲೇರ್ ಗೆ ಹೋಗುವವರಿದ್ದೇವೆ ಎಂದು ತಿಳಿಸಿದರು. ರಾತ್ರಿ ಒಳ್ಳೆಯ ನಿದ್ರೆ ಅತೀ ಅವಶ್ಯಕ, ಸಾಕಷ್ಟು ನೀರು ಕುಡಿಯುತ್ತಾ ಇರಿ. ಮತ್ತು ನಾಳೆ ಬೆಳಗಿನ ಉಪಹಾರದಲ್ಲಿ ಎಣ್ಣೆ ಪದಾರ್ಥವನ್ನು ಸೇವಿಸಬೇಡಿ. ಬ್ರೆಡ್, ಬನ್ ಮತ್ತು ಹಣ್ಣುಗಳನ್ನು ಸೇವಿಸಿದರೆ ಒಳ್ಳೆಯದು ಎಂದು ಸೂಚನೆಗಳನ್ನು ಕೊಟ್ಟರು. ಬೆಳಿಗ್ಗೆ ನಿಗದಿತ ಸಮಯಕ್ಕೆ ತಯಾರಾಗಿ ನಮ್ಮ ಸಾಮಾನುಗಳ ಜೊತೆಗೆ ರೆಸ್ಟೋರೆಂಟ್ ಗೆ ಬಂದು ಉಪಹಾರ ಸೇವಿಸಿ ಲಗ್ಗೇಜ್ ಗಳನ್ನು ಅಲ್ಲಿಯೇ ಬಿಟ್ಟು ನಾವೆಲ್ಲರೂ ಬಸ್ಸಿನಲ್ಲಿ ಸಮುದ್ರ ತೀರಕ್ಕೆ ಹೋದೆವು. ಈ ನನ್ನ ಪ್ರವಾಸ ಕಥನದಲ್ಲಿ ನಮ್ಮ‌ ಸುಖಪ್ರವಾಸದ ಬಗ್ಗೆ ನಿಮಗೆ ನನಗೆ ನೆನಪಿದ್ದಷ್ಟು ತಿಳಿಸುತಿದ್ದೇನೆ. ಪ್ರವಾಸ ವೆಂದರೆ ಸಾಹಸ ಎಂದುಕೊಂಡವರಿಗೆ ನೀರಸವೆನಿಸಬಹುದು.ಸಾಮಾನ್ಯವಾಗಿ ನಾವು ಸಂಸಾರದ ಏಕತಾನತೆಯಿಂದ ಬಿಡುಗಡೆ ಹೊಂದಲು ಒಂದಿಷ್ಟು ಸಮಯವನ್ನು ಬೇರೆ ವಾತಾವರಣದಲ್ಲಿ ಕಳೆಯಲು ಎಂದು ಹೋಗುತ್ತೇವೆ. ಆದರೆ ಬಂದ ಮೇಲೆ ಹೋದ ಖುಷಿಗಿಂತ ಕಿರಿಕಿರಿಯೇ ಜಾಸ್ತಿ ಅನಿಸಿ, ಯಾಕಾದರೂ ಹೋಗಬೇಕಿತ್ತೋ! ಅನಿಸುವುದೂ ಇದೆ. ನಾವು ಅಂಡಮಾನ್ ಗೆ ಹೋಗಿ ಬಂದು ಒಂದು ವರ್ಷದ ಮೇಲಾಯ್ತು. ಬಂದ ಕೂಡಲೇ ಬರೆಯಬೇಕು ಎಂದುಕೊಂಡಿದ್ದೆ. ಏನು ಬರೆದರೂ ನಮ್ಮ ಮಧುರ ಅನುಭವಕ್ಕಿಂತ ಸಪ್ಪೆ ಅನಿಸುತಿತ್ತು. ಹಾಗಾಗಿ ಕೈ ಬಿಟ್ಟಿದ್ದೆ. ಅದಾದ ಸ್ವಲ್ಪ ದಿನಕ್ಕೆ ಕೊರೊನಾ, ಲಾಕ್ ಡೌನ್ ಎಂದು ಬೇರೆಯೇ ಪ್ರಪಂಚದಲ್ಲಿದ್ದಂತೆ ದಿನ ಕಳೆದ ಮೇಲೆ ಅಂಡಮಾನ್ ನೆನಪು ಮರೆತೇ ಹೋಗಿತ್ತು. ಇತ್ತೀಚೆಗೆ ರೇಖಾ ಗೌಡ ಅವರು ಪೂರ್ಣ ಚಂದ್ರ ತೇಜಸ್ವಿಯವರ ಅಂಡಮಾನ್ ಪ್ರವಾಸ ಮತ್ತು ನೈಲ್ ಮಹಾನದಿ ಎಂಬ ಪುಸ್ತಕ ಓದಿ ಅಂಡಮಾನ್ ಬಗ್ಗೆ ಬಹಳ ಆಸೆಯಿಂದ ಬರೆದಿದ್ದರು. ಆಗ ನಾವು ಹೋಗಿ ಬಂದ ವಿಷಯ ಹೇಳಿದ್ದೆ ಅವರಿಗೆ. ನೀವು ನಿಮ್ಮ ಅನುಭವ ಬರೆಯಿರಿ ಎಂದು ತುಂಬಾ ಒತ್ತಾಯಿಸಿದರು. ಬರೆಯಲು ಶುರು ಮಾಡಿದಾಗ ಏನೂ ಸರಿಯಾಗಿ ನೆನಪಿರಲಿಲ್ಲ. ಆಮೇಲಾಮೇಲೆ ಒಂದೊಂದೇ ನೆನಪಾಗಲು ತೊಡಗಿತು. ನಾನೂ ಐದಾರು ದಿನಗಳಿಂದ ಅಂಡಮಾನ್ ಲ್ಲೇ ಇದ್ದಂತೆ ಅನಿಸುತ್ತಿದೆ. (ಮುಂದುವರೆಯುತ್ತದೆ..) ********* ಶೀಲಾ ಭಂಡಾರ್ಕರ್.

Read Post »

ಅಂಕಣ ಸಂಗಾತಿ, ದೀಪದ ನುಡಿ

ಅಂಕಣ ಬರಹ ಕಾಲೆಳೆವ ಕೈಗಳೇ ಮೆಟ್ಟಿಲಾಗಲಿ     ಸಾಮಾನ್ಯವಾಗಿ ಕಾಲೆಳುವುದು ಅಥಬಾ ಲೆಗ್ ಪುಲ್ಲಿಂಗ್ ಎಂದರೆ ಕೀಟಲೆ ಮಾಡುವುದು ಅಥವಾ ಇಲ್ಲದ್ದನ್ನು ಇದೆ ಎಂದು ತಮಾಷೆಗಾಗಿ ನಂಬಿಸುವುದು ಎಂದರ್ಥವಿದೆ. ಆದರೆ ಇಲ್ಲಿ ಕಾಲೆಳುವುದೆಂದರೆ ಹಗುರ ಅರ್ಥದಲ್ಲಿ ಇಲ್ಲ. ಮುನ್ನಡೆವವನ ದಾರಿಗೆ ಅಡ್ಡ ಹಾಕುವುದಿ ಎಂಬರ್ಥದಲ್ಲಿ ಬಳಸಲಾಗಿದೆ. ಬಹಳ ಹಿಂದೆ ಕೇಳಿದ್ದ ಕಥೆಯೊಂದು ನೆನಪಾಗುತ್ತಿದೆ. ಒಂದು ಕಾಡಿನಲ್ಲಿ ಒಂದು ಬಾವಿ. ಆ ಬಾವಿಯಲ್ಲಿ ನೂರಾರು ಕಪ್ಪೆಗಳು. ಬಾವಿಯನ್ನೇ ಪ್ರಪಂಚವೆಂದುಕೊಂಡು ನೆಮ್ಮದಿಯಿಂದಿದ್ದವು. ಒಮ್ಮೆ ಅಲ್ಲಿದ್ದ ಒಂದು  ಕಪ್ಪೆಗೆ ಯಾಕೋ ಆ ಬಾವಿಯ ಜಗತ್ತು ಬೇಸರವೆನಿಸಿ ಒಂದು ಬಾರಿಯಾದರೂ ಹೊರಗೆ ಹೋಗಿ ನೋಡಬೇಕೆನಿಸಿತಂತೆ. ಸರಿ ಅದಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡತೊಡಗಿತು. ಇಷ್ಟಿಷ್ಟೇ ಎತ್ತರಕ್ಕೆ ಜಿಗಿಯುತ್ತ ಜಿಗಿಯುತ್ತಾ ಹೊರಗೆ ಹಾರಲು ಅಭ್ಯಾಸ ಮಾಡಿಕೊಳ್ಳತೊಡಗಿತು. ಉಳಿದ ಕಪ್ಪೆಗಳು ಮೊದ ಮೊದಲು ಆಶ್ಚರ್ಯದಿಂದ ಅದನ್ನೇ ಗಮನಿಸುತ್ತಿದ್ದವು ನಂತರ ತಾವೂ ಹಾರಲು ಪ್ರಯತ್ನ ಮಾಡತೊಡಗಿದವಂತೆ. ಆದರೆ ಯಾವಾಗ ಅವುಗಳಿಗೆ ಆ ಕಪ್ಪೆ ಬಾವಿಯಿಂದ ಹೊರಗೆ ಹೋಗಲು ಪ್ರಯತ್ನ ಮಾಡುತ್ತಿದೆಯೆಂದು ತಿಳಿಯಿತೋ ಆ ಕ್ಷಣದಿಂದಲೇ ಆ ಕಪ್ಪೆ ಮೇಲೆ  ಜಿಗಿಯಲು ಹೋದರೆ ಅದರ ಕಾಲೆಳೆದು ಕೆಳಗೆ ಬೀಳಿಸತೊಡಗಿದವು. ಪ್ರತೀ ಬಾರಿ ಆ ಕಪ್ಪೆ ಮೇಲೆ ಜಿಗಿಯಲು ಪ್ರಯತ್ನಿಸುವುದು, ಪ್ರತೀ ಬಾರಿ ಉಳಿದ ಕಪ್ಪೆಗಳು ಅದರ ಕಾಲೆಳೆದು ಕೆಳಗೆ ಬೀಳಿಸುವುದು…ಕೊನೆಗೂ ಆ ಕಪ್ಪೆಗೆ ಬಾವಿಯಿಂದ ಹೊರಬರಲಾಗದೆ ಅದು ಕೊನೆಯವರೆಗೂ ಕೂಪ ಮಂಡೂಕವೇ ಆಗಿ ಜೀವನ ಸವೆಸಬೇಕಾಯಿತಂತೆ…        ಇದು ಈ ಕಥೆಯ ಹಳೆಯ ವರ್ಷನ್ ..ಹೊಸ ವರ್ಷನ್ ನಲ್ಲಿ ಆ ಕಪ್ಪೆ  ತನ್ನ ಕಾಲೆಳೆವ ಇತರ ಕಪ್ಪೆಗಳ  ಕೈಗಳ ಮೇಲೆ ಬೆನ್ನ ಮೇಲೆ ಜಿಗಿ ಜಿಗಿದು ಆ ಬಾವಿಯಿಂದ ಹೊರಜಿಗಿದು ವಿಶಾಲ ಜಗತ್ತಿಗೆ ಬಂದಿತಂತೆ..               ಕಾಲೆಳೆಯುವುದೂ ,ಕಾಲೆಳೆಸಿಕೊಳ್ಳುವುದೂ ಬರೀ ಮನುಷ್ಯವರ್ಗಕ್ಕಷ್ಟೇ ಸೀಮಿತವಾಗಿಲ್ಲ ಎನ್ನುವುದನ್ನ ಹೇಳುವ ಈ ಕಥೆ ಕಾಲೆವ ಕೈಗಳ ಬಗ್ಗೆ ಎಚ್ಚರಿಕೆಯನ್ನೂ ಕೊಡುತ್ತದೆ. ಏನಾದರೂ ಹೊಸತನ್ನು ಆಲೋಚಿಸುವ , ಮಾಡ ಬಯಸುವ ವ್ಯಕ್ತಿಗೆ ಸುತ್ತಮುತ್ತಲ ಜನರಿಂದ ಪ್ರೋತ್ಸಾಹ ಎಷ್ಟು ಸಿಗುತ್ತದೋ ಅದರ ಎರಡರಷ್ಟು ಕುಹಕ, ಕೊಂಕುಗಳೂ ,ಅಡ್ಡಿ ಆತಂಕಗಳೂ ಎದುರಾಗುತ್ತವೆ. ಮಾತೆ ಸಾವಿತ್ರಿ ಬಾಯಿ ಫುಲೆಯವರು ಅಕ್ಷರ ಕಲಿತು ಇನ್ನಿತರ ಮಹಿಳೆಯರಿಗೆ ಅಕ್ಷರ ಕಲಿಸಲು ಹೋದಾಗ ಅವರದೇ ಸುತ್ತಮುತ್ತಲಿದ್ದ ಜನರು ಹೇಗೆಲ್ಲಾ ಅವರ ಹಾದಿಯಲ್ಲಿ ತಡೆಯಾದರು .ಹೇಗೆ ಆ ಮಾತೆ ಎಲ್ಲವನ್ನೂ ಎದುರಿಸಿ ತನ್ನ ಗುರಿ ತಲುಪಿದರು ಎನ್ನುವುದು ಜಗತ್ತಿಗೆ ಗೊತ್ತಿರುವ ಸಂಗತಿ.           ನಾವು ಕೆಲಸ ಮಾಡುವ ಸ್ಥಳವನ್ನೇ ತೆಗೆದುಕೊಳ್ಳೋಣ . ನಮಗೊಪ್ಪಿಸಿದ ಕೆಲಸವನ್ನು ಹೊಸರೀತಿಯಲ್ಲಿ ಮಾಡಲು ಹೋದಾಗ ಓ.ಇವರೇನು ಮಹಾ ಮಾಡುವುದು ನಾವು ಮಾಡದ್ದನ್ನ ಎನ್ನುತ್ತಲೇ   ನಿಮಗಿಲ್ಲಿನ ಸಂಗತಿ ಗೊತ್ತಿಲ್ಲ ಬಿಡಿ ..ನಾವು ನಿಮಗಿಂತ ಹಳಬರು ಇದೆಲ್ಲಾ ಮಾಡಿ ಕೈ ಬಿಟ್ಟಾಯಿತು..ಸುಮ್ಮನೇ ಯಾಕೆ ಕಷ್ಟಪಡುತ್ತೀರಿ..ನಮ್ಮಂತಿರಿ ಎನ್ನುವ  ಉಚಿತ ಉಪದೇಶದ ಜೊತೆಗೇ ತಮ್ಮಲ್ಲಿನ ಅಸಹನೆ , ಅಸಡ್ಡೆಗಳಿಂದ ಕಾಲೆಳೆಯತೊಡಗುವುದು ತೀರಾ ಸಹಜವಾಗಿಬಿಟ್ಟಿದೆ.            ಹೆಣ್ಣು ಬಹುಶಃ ಮೊದಲ ಬಾರಿ ಮನೆಯಿಂದ ಹೊರ ಹೆಜ್ಜೆ ಇಟ್ಟಾಗಲೂ ಅದೆಷ್ಟೋ ಕೈಗಳು ಆಕೆಯ ಕಾಲೆಳೆಯಲು ಅಷ್ಟೇ ಏಕೆ ಕಾಲು ಮುರಿಯಲೂ ಪ್ರಯತ್ನಿಸಿರಲಿಕ್ಕಿಲ್ಲ ! ಅಕ್ಕ, ಭಕ್ತೆ ಮೀರಾ ಇವರೆಲ್ಲಾ ಕಾಲೆಳೆವವರ ನಿರ್ಲಕ್ಷಿಸಿ ಹೊರಟಾಗಲೇ ತಮ್ಮ ಗಮ್ಯ ಸೇರಲಾಗಿದ್ದು.               ಕಾಲೆಳೆವ ಕೈಗಳಿಗೆ ಶರಣಾದರೆ ಅಲ್ಲಿಗೆ ನಮ್ಮ ಪಯಣ ಮುಗಿದಂತೆಯೇ ಸರಿ. ಸಾಗುವ ಹಾದಿ ಸರಿಯಿದೆ ,ಅದರಿಂದ ಯಾರಿಗೂ ತೊಂದರೆ ಆಗಲಾರದ ದೃಢ ವಿಶ್ವಾಸವಿದ್ದಲ್ಲಿ ಯಾವ ಕೈಗಳಿಗೂ ಅದನ್ನು ತಡೆಯಲು ಸಾಧ್ಯವಿಲ್ಲ.     ಮುನ್ನಡೆವವರ ಕಾಲೆಳೆವುದರಲ್ಲಿ , ಬೀಳಿಸಿ ಬಿದ್ದಾಗ ನೋಡಿ ನಗುವುದರಲ್ಲಿ ಹೆಚ್ಚುಗಾರಿಕೆಯೇನಿಲ್ಲ. ಆದರೆ ಮುನ್ನಡೆವವನಿಗೆ ಈ ಕೈಗಳು ಬಂಧನವಾಗಬಾರದು. ಬದಲಿಗೆ ಪ್ರೇರಣೆಯಾಗಬೇಕು. ಮುನ್ನುಗ್ಗುವ ಛಲ ಮೂಡಿಸಬೇಕು.ಕಾಲೆವ ಕೈಗಳಿಗೆ ,ಮನಸುಗಳಿಗೆ ಆಯಾಸವಾಗಿ ಹಾಗೇ ಪಕ್ಕಕ್ಕೆ ಒರಗುವಂತಾಗಬೇಕು..  ಹಾಗಾಗಿಯೇ…        ಅವರಿವರ ಕಾಲೆಳೆದು ಮೇಲೇರುವುದ ತಡೆದು ಬೀಗುವುದು ತರವಲ್ಲವಯ್ಯ ಕಾಲೆಳೆವಕೈಯನೇ ಮೆಟ್ಟಿಲಾಗಿಸಿ ಮೇಲೇರುವರಿಹರು ಕಾಲೆಳೆದವನೀನುಕೂಪದಲೆಕೊಳೆವೆ ನೋಡಯ್ಯ                 ಎನ್ನುವಂತೆ ಕಾಲೆಳೆವ ಕೈಗಳನ್ನೇ ಮೇಲೇರುವ ಮೆಟ್ಟಿಲಾಗಿಸಿಕೊಳ್ಳುವ ಚಾಕಚಕ್ಯತೆ ನಮಗಿರಬೇಕು.       Obstacles are stepping stones , not stopping stones.               ಕೂಪಮಂಡೂಕಗಳಿಗೆ ಆ ಕೂಪವೇ ಜಗತ್ತು.ತಾವು ಅದರಿಂದಾಚೆಗೆ ಹೋಗಲು ಪ್ರಯತ್ನಿಸುವುದಿಲ್ಲ ಇತರರನ್ನೂ ಹೋಗಲು ಬಿಡುವುದಿಲ್ಲ.  ಹೀನ ಸಂಪ್ರದಾಯಗಳು  ,ಮೂಢನಂಬಿಕೆ , ಅರ್ಥವಿಲ್ಲದ ಕಟ್ಟುಪಾಡುಗಳು ಈ ಸಮಾಜದಲ್ಲಿ ಸದಾ ಇದನ್ನೆಲ್ಲ ಮೀರಿ ಹೋಗುವವರ ಸಹಿಸಲಾಗದೆ ಮತ್ತೆ ಮತ್ತೆ ಕೆಳಗೆಳೆಯುತ್ತಲೇ ಇರುತ್ತವೆ. ಅಸಹನೆ, ಅಸಹನೆ, ಕುಹಕ ,ಮತ್ಸರ, ವಿಕೃತಮನೋಭಾವಗಳೆಂಬ ಕಾಲೆಳೆವ ಕೈಗಳಿಗೆ ಬಲಿಯಾದರೆ ಅಲ್ಲಿಗೆ ಕಥೆ ಮುಗಿದಂತೆಯೇ..        ಅದರಲ್ಲಿಯೂ ಹೆಣ್ಣುಮಕ್ಕಳೇ ಹೆಚ್ಚಾಗಿ ಈ ಕಾಲೆಳೆಯುವಿಕೆಗೆ ಬಲಿಯಾಗುವುದು.ಆದಿ ಕಾಲದಿಂದಲೂ ಅವಳನ್ನು ಸಂಕೋಲೆಗಳಲ್ಲಿ ಕಟ್ಟಿ ಹಾಕಿದ್ದಾಗಿದೆ.ಈಗ ಈ ಆಧುನಿಕ ಜಗತ್ತಿನಲ್ಲಿ ಹೆಣ್ಣುಗಳು ತಮ್ಮ ಬುದ್ಧಿಶಕ್ತಿ , ಚಾಕಚಕ್ಯತೆಗಳನ್ನುಪಯೋಗಿಸಿ ಕೊಂಡು ಎಲ್ಲಾ ಅಡೆತಡೆಗಳನ್ನೂ ಮೀರಿ  ಎಲ್ಲಾ ರಂಗಗಳಲ್ಲಿಯೂ ತಮ್ಮ ಹೆಜ್ಜೆಯೂರುತ್ತಿರುವಂತಹಾ ಸಂದರ್ಭದಲ್ಲಿಯೂ ಸಹಾ ಅವರನ್ನು ಪ್ರೋತ್ಸಾಹಿಸುವವರಂತೆಯೇ  ಹೀಯಾಳಿಸುವ ,ಆತ್ಮ ಸ್ಥೈರ್ಯ ಕುಗ್ಗಿಸುವ ಮನೋಭಾವವನ್ನು ತಮ್ಮ ಮಾತು ಮತ್ತು ಕೃತಿಗಳಲ್ಲಿ ತೋರಿಸುತ್ತಾ ಕಾಲೆಳೆವವರೂ ಇದ್ದಾರೆ.          ಆನೆಯೋ ಸಿಂಹವೋ ತನ್ನ ಹಾದಿಯಲ್ಲಿ ತಾನು ನಡೆಯುತ್ತಿದ್ದರೆ ಅವನ್ನು ತಡೆದು ನಿಲ್ಲಿಸಲು ಸಾಧ್ಯವಿದೆಯೆ? ನಮ್ಮ ನಿಲುವೂ ಅದೇ ಆಗಿದ್ದರೆ ಖಂಡಿತಾ ಕಾಲೆಳೆವ ಕೈಗಳು ಸೋಲುತ್ತವೆ ಮತ್ತು ಸೋಲಲೇ ಬೇಕು.                  ನಮ್ಮ ಹಾದಿಯಲ್ಲಿ ನಾವು ಆತ್ಮವಿಶ್ವಾಸದಿಂದ ಸಾಗೋಣ. ಕಾಲೆಳೆವ ಕೈಗಳ ಸೋಲಿಸೋಣ. ಗೆಲುವಿನ ಹಾದಿಯಲಿ  ಹೆಜ್ಜೆಯಿರಿಸುತ್ತ  ದೃಢತೆಯೆಂಬ ಹಣತೆಯ ಬೆಳಕನ್ನು ಹರಡೋಣ ***********************************                                    ಶುಭಾ ಎ.ಆರ್  (ದೇವಯಾನಿ)  – ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ ,  ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ ,  “ತುಂಡು ಭೂಮಿ ತುಣುಕು ಆಕಾಶ”  ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ    

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—21 ಆತ್ಮಾನುಸಂಧಾನ ವಿದ್ಯಾರ್ಥಿ ನಿಲಯದಲ್ಲಿ ಪ್ರಪ್ರಥಮ ರಂಗಪ್ರವೇಶ ಅಂಕೋಲೆಯ ಲಕ್ಷ್ಮೇಶ್ವರ ಭಾಗದ ವಿದ್ಯಾರ್ಥಿ ನಿಲಯದಲ್ಲಿ ಮೊದಲ ಮಳೆಗಾಲ ಕಳೆದಿತ್ತು. ನವೆಂಬರ್ ತಿಂಗಳಲ್ಲಿ ವಿದ್ಯಾರ್ಥಿ ನಿಲಯವು ಅಂಬಾರಕೊಡ್ಲ ರಸ್ತೆಗೆ ಹೊಂದಿಕೊಂಡಿದ್ದ ಎರಡಂತಸ್ತಿನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ವಿಶಾಲವಾದ ಕಂಪೌಂಡಿನಲ್ಲಿರುವ ಕಟ್ಟಡದ ನೆಲ ಅಂತಸ್ತಿನಲ್ಲಿ ಸಾಕಷ್ಟು ವಿಶಾಲವಾದ ಕೋಣೆಗಳು, ಮೊದಲ ಮಹಡಿಯಲ್ಲಿಯೂ ಅಷ್ಟೇ ವಿಶಾಲ ಕೋಣೆಗಳು ತುಂಬಾ ಅನುಕೂಲಕರವಾಗಿದ್ದವು. ಈ ಕಟ್ಟಡದ ಮಾಲಿಕರು ಯಾರೋ ನಮಗೆ ತಿಳಿದಿರಲಿಲ್ಲ. ಆದರೆ ಬಹುಕಾಲದಿಂದ ಈ ಭವ್ಯ ಬಂಗಲೆ ಯಂಥ ಮನೆಯಲ್ಲಿ ಯಾರೂ ವಾಸಿಸುತ್ತಿರಲಿಲ್ಲ. ಸುತ್ತ ಮುತ್ತಲ ಮನೆಯವರು ಇದು ‘ಭೂತ ಬಂಗಲೆ….. ಅಲ್ಲಿ ದೆವ್ವಗಳ ಕಾಟವಿದೆ…’ ಇತ್ಯಾದಿ ಮಾತನಾಡಿಕೊಳ್ಳುತ್ತಿದ್ದರು. ನಾವು ಬಂದು ನೆಲೆಸಿದ ಕೆಲದಿನಗಳವರೆಗೆ ನಮಗೂ ಅಂಥ ಭ್ರಮೆಯ ಅನುಭವಗಳೂ ಆದವು. ಮಧ್ಯರಾತ್ರಿಯ ನಂತರ ಯಾರೋ ಮಹಡಿಯ ಮೇಲೆ ನಡೆದಾಡಿದ… ಏನೋ ಮಾತಾಡಿದ ಸಪ್ಪಳ ಕೇಳಿ ಬಂತಾದರೂ ಕೆಲವೇ ದಿನಗಳಲ್ಲಿ ನಾವು ಅದಕ್ಕೆ ಹೊಂದಿಕೊಳ್ಳುತ್ತ ಕ್ರಮೇಣ ಮರೆತೇ ಬಿಟ್ಟೆವು. (ಈಗ ಅದೇ ಕಟ್ಟಡವನ್ನು ಬೇರೆ ಯಾರೋ ಕೊಂಡು ನವೀಕರಿಸಿ ‘ಹರ್ಷ ನಿವಾಸ’ ಎಂದು ಹೆಸರಿಟ್ಟು ವಾಸಿಸುತ್ತಿದ್ದಾರೆ). ನಾವು ಈ ಕಟ್ಟಡಕ್ಕೆ ಬಂದು ನೆಲೆ ನಿಂತ ಕೆಲವೇ ದಿನಗಳಲ್ಲಿ ವಸತಿನಿಲಯದ ಮೊದಲಿನ ಮೇಲ್ವಿಚಾರಕರಾಗಿದ್ದ ‘ಮಾಜಾಳಿಕರ’ ಎಂಬುವವರು ವರ್ಗವಾಗಿ ಬೇರೆ ಮೇಲ್ವಿಚಾರಕರು ಆಗಮಿಸಿದರು. ಹೊಸದಾಗಿ ನಮ್ಮ ವಸತಿನಿಲಯದ ಮೇಲ್ವಿಚಾರಕರಾಗಿ ಆಗಮಿಸಿದ ಲಿಂಗು ಹುಲಸ್ವಾರ ಎಂಬುವವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಮೂಲತಃ ಕಾರವಾರದವರಾದ ಲಿಂಗು ಹುಲಸ್ವಾರ ತಮ್ಮ ಯುವ ಸ್ನೇಹಿತರ ಸಂಘಟನೆ ಮಾಡಿಕೊಂಡು ಕಾರವಾರದಲ್ಲಿ ರಂಗ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಇದ್ದವರು. ಅವರು ನಮ್ಮ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿಯನ್ನು ಪ್ರೇರೆಪಿಸುವುದಕ್ಕಾಗಿ ಇಲ್ಲಿಯೂ ನಾಟಕವೊಂದನ್ನು ಆಡಿಸುವ ಆಸಕ್ತಿ ತೋರಿದರು. ಆದರೆ ಹಾಸ್ಟೆಲಿನ ಯಾವ ವಿದ್ಯಾರ್ಥಿಯೂ ಈ ಹಿಂದೆ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಹೊಂದಿರಲಿಲ್ಲ. ಆದರೂ ಲಿಂಗು ಹುಲಸ್ವಾರ ಅವರು ಅಲ್ಪಸ್ವಲ್ಪ ಪ್ರತಿಭೆ ಮತ್ತು ಅಭಿನಯದ ಆಸಕ್ತಿಯುಳ್ಳ ವಿದ್ಯಾರ್ಥಿಗಳನ್ನು ಆಯ್ದು ತರಬೇತಿ ನೀಡುವ ಸಂಕಲ್ಪ ಮಾಡಿದರು. ಕಾರವಾರದ ತಮ್ಮ ಪರಿಚಯದ ಕೆಲವು ಯುವಕರನ್ನು ಕರೆಸಿಕೊಂಡು ನಾಟಕ ನಿರ್ದೇಶನದ ನೆರವು ಪಡೆದರು. ಹಾಸ್ಟೆಲಿನ ಆಯ್ದ ವಿದ್ಯಾರ್ಥಿಗಳ ತಂಡ ‘ಸಂಸಾರ’ ಎಂಬ ಸಾಮಾಜಿಕ ನಾಟಕವೊಂದನ್ನು ಪ್ರಯೋಗಿಸುವುದೆಂದು ತೀರ್ಮಾನವಾಯಿತು. ನನ್ನ ನೆನಪಿನಲ್ಲಿ ಉಳಿದಿರುವಂತೆ ಲಿಂಗು ಹುಲಸ್ವಾರ ಅವರೇ ನಾಟಕದ ಮುಖ್ಯ ಪಾತ್ರ ನಿರ್ವಹಿಸಿದ್ದರು. ಉಳಿದಂತೆ ನಾಗೇಶದೇವ ಅಂಕೋಲೆಕರ, ಲಕ್ಷ್ಮಣ ಹುಲಸ್ವಾರ, ಶಂಕರ ಹುಲಸ್ವಾರ, ಹುಲಿಯಪ್ಪ ನಾಯ್ಕ, ನಾರಾಯಣ ವೆಂಕಣ್ಣ ಆಗೇರ, ಲೋಕಪ್ಪ ಬರ‍್ಕರ್ ಮುಂತಾದವರು ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದರು. ನನಗೆ ಒಂದು ಹಾಸ್ಯ ಸ್ತ್ರೀ ಪಾತ್ರದಲ್ಲಿ ಅಭಿನಯಿಸುವ ಅವಕಾಶ ನೀಡಿದ್ದರು. ಮಾರುತೇಶ ಬಾಬು ಮಾಂಡ್ರೆ ಎಂಬುವವರು ಬರೆದ ‘ಸಂಸಾರ’ ಎಂಬ ಸಾಮಾಜಿಕ ನಾಟಕವನ್ನು ಬನವಾಸಿಯಲ್ಲಿ ನಾನು ಮೂರನೆಯ ತರಗತಿಯಲ್ಲಿ ಓದುತ್ತಿರುವಾಗ ಗಮನಿಸಿದ್ದೆ. ಬನವಾಸಿಯಲ್ಲಿ ನಮ್ಮ ಗುರುಗಳಾದ ಪಿ.ಜಿ. ಪಾತಃಕಾಲ ಎಂಬುವವರ ನಾಯಕತ್ವದಲ್ಲಿ ಪ್ರಯೋಗಗೊಂಡ ‘ಸಂಸಾರ’ ನಾಟಕದಲ್ಲಿ ನಮ್ಮ ತಂದೆಯವರು ಮುಖ್ಯ ಸ್ತ್ರೀ ಪಾತ್ರಧಾರಿಯಾಗಿದ್ದರು ಎಂಬುದನ್ನು ಹಿಂದೆ ಪ್ರಸ್ತಾಪಿಸಿದ್ದೇನೆ. ಈ ನಾಟಕವು ಅಲ್ಲಿ ಜನಾಗ್ರಹದ ಮೂಲಕ ಎರಡು-ಮೂರು ಬಾರಿ ಪ್ರಯೋಗಗೊಂಡಿತ್ತು. ಹೀಗಾಗಿ ಪ್ರಸ್ತುತ ನಾಟಕದ ಸ್ಥೂಲ ಚಿತ್ರಣವೊಂದು ನನ್ನ ಮನಸ್ಸಿನ ಮೂಲೆಯಲ್ಲಿ ಸುಪ್ತವಾಗಿತ್ತು. ಇಷ್ಟಾಗಿಯೂ ನಾನು ಮೊಟ್ಟ ಮೊದಲ ಬಾರಿಯ ಸ್ತ್ರೀ ಪಾತ್ರ ನಿರ್ವಹಣೆಯಲ್ಲಿ ಸಫಲನಾಗಲಿಲ್ಲ ಎಂಬುದು ನಿಜ. ಮೂಲಭೂತವಾಗಿ ನನ್ನೊಳಗಿರುವ ಸಭಾ ಕಂಪ ಮತ್ತು ಕೀಳರಿಮೆಯ ಕಾರಣದಿಂದ ಅಂಜುತ್ತಲೇ ರಂಗ ಪ್ರವೇಶಿಸಿದ ನಾನು ಸಂದರ್ಭಕ್ಕೆ ಸರಿಯಾಗಿ ಕಂಠಪಾಠ ಮಾಡಿದ ಸಂಭಾಷಣೆಗಳನ್ನು ಒಪ್ಪಿಸಿದ್ದಲ್ಲದೆ ಹಾಸ್ಯ ಪಾತ್ರಕ್ಕೆ ತಕ್ಕಂತೆ ನಟಿಸುವುದು ಸಾಧ್ಯವೇ ಆಗಿರಲಿಲ್ಲ. ಬಹುತೇಕ ನನ್ನ ಸ್ನೇಹಿತರು ಕೂಡ ನನ್ನಂತೆಯೇ ಅಳುಕಿನಿಂದಲೇ ರಂಗ ಪ್ರವೇಶದ ಮೊದಲ ಅನುಭವ ಪಡೆದರಲ್ಲದೆ ನಾಟಕದ ಪಠ್ಯಕ್ಕೆ ನ್ಯಾಯ ನೀಡಲಾಗದೆ ಒಟ್ಟಾರೆ ನಾಟಕವು ಸಾಮಾನ್ಯ ರಂಗ ಪ್ರಯೋಗವಾಗಿಯೇ ಪ್ರದರ್ಶನಗೊಂಡಿತು. ವಿದ್ಯಾರ್ಥಿ ನಿಲಯದ ಎರಡು ವರ್ಷಗಳನ್ನು ಕಳೆಯುವಾಗ ನಾರಾಯಣ ವೆಂಕಣ್ಣ ಆಗೇರ ತನ್ನ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿಸಿದ ಕಾರಣ ಊರಲ್ಲಿಯೇ ಉಳಿದ. ತನ್ನ ತಂದೆ ತೀರಿಕೊಂಡುದರಿಂದ ಊರಿಗೆ ಹೋದ ಕೃಷ್ಣ ಆಗೇರ ಮರಳಿ ವಿದ್ಯಾರ್ಥಿ ನಿಲಯಕ್ಕೆ ಬಾರದೆ ಹನೇಹಳ್ಳಿಯ ಹೈಸ್ಕೂಲು ಸೇರಿಕೊಂಡ. ಉಳಿದ ನಾವು ಕೂಡ ವಿದ್ಯಾರ್ಥಿ ನಿಲಯದ ಆಶ್ರಯದಿಂದ ಹೊರಬಂದು ಮತ್ತೆ ನಮ್ಮ ನಮ್ಮ ಮನೆ ಸೇರಿಕೊಂಡು ಅಲ್ಲಿಂದಲೇ ಓದು ಮುಂದುವರಿಸಿದೆವು. ****************************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ಕಾಲಾ ಪಾನಿ

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-5 ಹ್ಯಾವ್ಲೊಕ್ ಲ್ಲಿ ನಮ್ಮ ರೆಸಾರ್ಟ್ ಹಿಂಭಾಗದ ಸಣ್ಣ ಖಾಸಗಿ ಬೀಚ್ ನ ಉದ್ದಕ್ಕೂ ಸರಸ್ವತಿ ಮತ್ತು ನಾನು ಎಷ್ಟು ದೂರ ನಡೆದೆವೋ ವಾಪಸ್ಸು ಬರಬೇಕೆಂದೇ ಅನಿಸಲಿಲ್ಲ.  ಮಕ್ಕಳು ಅಲ್ಲಿ ಇಲ್ಲಿ ಓಡಾಡಿಕೊಂಡು ಮೊಬೈಲಲ್ಲಿ, ಕ್ಯಾಮರಾದಲ್ಲಿ ಫೋಟೊ ತೆಗೆದುಕೊಳ್ಳುವುದರಲ್ಲೇ ಮಗ್ನರಾಗಿದ್ದರು. ಗಣೇಶಣ್ಣ ಸತೀಶ್ ಇಬ್ಬರೂ ಅಲ್ಲಿದ್ದ ಬೆಂಚ್ ಮೇಲೆ ಆರಾಮಾಗಿ ಅಲೆಗಳನ್ನು ನೋಡುತ್ತಾ ಕೂತರು. ನಾವು ತಿರುಗಿ ಬಂದರೂ ಮಕ್ಕಳಿಗೆ ರೂಮು ಸೇರಲು ಮನಸ್ಸೇ ಇಲ್ಲ. ಇನ್ನೂ ಸ್ವಲ್ಪ ಇನ್ನೂ ಸ್ವಲ್ಪ ಹೊತ್ತು ಎಂದು ಅಲ್ಲೇ ಇದ್ದುದರಿಂದ ನಾವೂ ಅಲ್ಲೇ ಕೂತು, ಅದು ಇದು ಮಾತು ಹಾಡು ಎಂದು ಹತ್ತೂವರೆಯವರೆಗೆ ಸಮಯ ಕಳೆದು, ಮರುದಿನ ಬೆಳಿಗ್ಗೆ ಎಂಟು ಗಂಟೆಯ ಒಳಗೆ ತಯಾರಾಗಲು ಹೇಳಿದುದರಿಂದ ಮಕ್ಕಳನ್ನು ಹೊರಡಿಸಿ ನಮ್ಮ ನಮ್ಮ ಕಾಟೇಜ್ ಸೇರಿದೆವು. ನಮ್ಮ ಮಕ್ಕಳು ಇಬ್ಬರಿದ್ದುದರಿಂದ ಎಲ್ಲಾ ಕಡೆ, ಅವರಿಗೆ ಪ್ರತ್ಯೇಕ ಕೊಠಡಿ ಅಥವಾ ಕಾಟೇಜ್ ಸಿಗುತಿತ್ತು. ಆದರೆ ಶ್ರೀಪಾದನಿಗೆ ಮಾತ್ರ ಪ್ರತೀ ಸಲವೂ ಅಪ್ಪ ಅಮ್ಮನ ಜೊತೆಯೇ ಅವರ ಕೋಣೆಯೊಳಗೆ ಇನ್ನೊಂದು ಹಾಸಿಗೆ ಹಾಸಿ ಕೊಡುತಿದ್ದರು. ಆ ಒಬ್ಬಳೇ ಬಂದ ಹುಡುಗಿಗೆ ಒಬ್ಬಳಿಗೇ ಒಂದು ಕೋಣೆ. ಇದು ಅನ್ಯಾಯ ಎಂದು ಶ್ರೀಪಾದನಿಗಿಷ್ಟು ಕೀಟಲೆ ಮಾಡುತಿದ್ದರು ಈ ಹುಡುಗಿಯರು. ಇನ್ನೊಮ್ಮೆ ಎಲ್ಲಾದರೂ ಹೋಗುವಾಗ ಅವನ ಟಿಕೇಟ್ ಬೇರೆಯೇ ತಗೊಳ್ಳಿ ಎಂದು ಅವನ ಅಪ್ಪ ಅಮ್ಮನಿಗೆ ಇವರ ಸಲಹೆ. ಪ್ರತಿಯೊಂದು ಕೋಣೆಗೂ ಪ್ರತೀ ದಿನ ಎರಡು ಲೀಟರಿನ ನೀರಿನ ಬಾಟಲ್ ಒದಗಿಸುತಿದ್ದರು. ಬೆಳಗ್ಗಿನ ತಿಂಡಿ ಮತ್ತು ರಾತ್ರಿಯ ಊಟ ನಾವು ಉಳಿದುಕೊಳ್ಳುವ ಹೊಟೇಲ್ ಅಥವಾ ರೆಸಾರ್ಟ್ ಗಳಲ್ಲೇ ಆಗುತಿತ್ತು. ಮದ್ಯಾಹ್ನದ ಊಟವನ್ನು ಆದಷ್ಟು ಒಳ್ಳೆಯ ಹೊಟೇಲ್ ಹುಡುಕಿ ಕರೆದುಕೊಂಡು ಹೋಗುತಿದ್ದರು. ಊಟ ತಿಂಡಿಗೆ ಎಲ್ಲೂ ಯಾವ ತೊಂದರೆಯೂ ಆಗಲಿಲ್ಲ. ಬೆಳಿಗ್ಗೆ ಎದ್ದು ಏಳೂವರೆಗೆ ತಯಾರಾಗಿ ಬೆಳಗಿನ ಉಪಹಾರ ತೆಗೆದುಕೊಂಡು ನಾವು ಹೋಗಲಿದ್ದಿದ್ದು ಅಂಡಮಾನ್ ನಲ್ಲಿ ಮಾತ್ರವಲ್ಲ ಇಡೀ ಏಷಿಯಾದಲ್ಲೇ ಸುಂದರ ರಾಧಾನಗರ್ ಬೀಚ್ ಗೆ. ಅಲ್ಲಿ ಸ್ನಾನ ಮಾಡಲು, ಸಮುದ್ರದಲ್ಲಿ ಆಟವಾಡಲು ಅನುಕೂಲಕರ ವಾತಾವರಣವಿದೆ. ಬಟ್ಟೆ ಬದಲಿಸಲು ವ್ಯವಸ್ಥೆಯೂ ಇತ್ತು. ನಮಗೆ ಅಲ್ಲಿ 12 ರ ವರೆಗೆ ಸಮಯವಿತ್ತು. ಎಲ್ಲರೂ ಮನಸೋ ಇಚ್ಛೆ ಸಮಯ ಕಳೆದರು. ಅಂಡಮಾನಿನ ಸಮುದ್ರದ ಬಗ್ಗೆ ಯೋಚಿಸುವಾಗ ಮೊದಲೆಲ್ಲ.. ಕಾಲಾಪಾನಿ ಎಂಬ ಶಬ್ದವೊಂದು ಭೀಕರವಾಗಿ ಕಿವಿಯೊಳಗೆ ಮೊಳಗುತಿದ್ದುದರಿಂದ ನನಗೇನೋ ಆ ನೀರು ವಿಷಪೂರಿತ, ಗಲೀಜು, ಕರ್ರಗೆ.. ಹೀಗೆ ಏನೇನೋ ಕಲ್ಪನೆಗಳಿದ್ದವು. ಆದರೆ., ಬಂಗಾಳ ಕೊಲ್ಲಿಯ ಸೌಂದರ್ಯಕ್ಕೆ ಸಾಠಿಯೇ ಇಲ್ಲ ಎಂಬುದು ಸ್ವತಃ ನೋಡಿದ ಮೇಲೆ ತಿಳಿಯಿತು. ತಿಳಿ ನೀಲಿ, ತಿಳಿ ಹಸಿರು, ನೀರಿನ ಮೇಲೆ ಬಿಳಿ ನೊರೆಯ ಸಾಲು ಷಿಫಾನ್ ಸೀರೆಯ ಮೇಲೆ ಕಸೂತಿ ಹೊಲಿದಂತೆ ನೋಡಲು ಅತೀ ಸುಂದರ. ತಿಳಿಯಾದ ನೀರು, ಎಲ್ಲೆಲ್ಲೂ ಶುಭ್ರ, ಸ್ವಚ್ಛ, ಸಣ್ಣ ಮರಳು. ಎಳೆ ಬಿಸಿಲಿನ ನಮ್ಮ ಆ ಬೆಳಗಿನ ಸಮಯ. ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತಿತ್ತು. ಎಷ್ಟೇ ವರ್ಣಿಸಿದರೂ ಆ ನೀರಿನ ಸೊಬಗಿನ ಮುಂದೆ ಶಬ್ದಗಳು ಸಪ್ಪೆಯಾಗುತ್ತವೆ.  ಹ್ಯಾವ್ಲೊಕಿಂದ ಹತ್ತು ಕಿ.ಮೀಟರ್ ದೂರದ ರಾಧಾನಗರ ಬೀಚ್ ಗೆ ನಮ್ಮನ್ನು ಬಸ್ಸಿನಲ್ಲಿ ಕರೆತಂದಿದ್ದರು. ಸಾವಕಾಶವಾಗಿ ಒಂದಿಷ್ಟು ಸಮಯವನ್ನು ಯಾವುದೇ ಗಡಿಬಿಡಿಗಳಿಲ್ಲದೆ ಕಳೆದೆವು. ಹ್ಯಾವ್ಲೊಕ್ ದ್ವೀಪಕ್ಕೆ ಬರುವವರೆಗೆ ಟೂರ್ ಮ್ಯಾನೇಜರ್ ಜೊತೆ ನಮ್ಮ ಪ್ರವಾಸದಲ್ಲಿ ಜೊತೆಗೂಡಿದ್ದು ನಮ್ಮನ್ನು ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಿಂದ ಕರೆದೊಯ್ಯಲು ಬಂದ ವಿಜಯ್ ಅನ್ನುವ ಹುಡುಗ. ಅಲ್ಲಿಂದ ಮುಂದೆ.. ನಾವು ಹಡಗಿನಲ್ಲಿ ಪ್ರಯಾಣ ಮಾಡಿ ಹ್ಯಾವ್ಲೊಕ್ ದ್ವೀಪಕ್ಕೆ ಬಂದು ತಲುಪಿದಾಗ ಅಲ್ಲಿ ನಮಗೆ ರೆಸಾರ್ಟ್ ಮತ್ತಿತರ ಎಲ್ಲಾ ವ್ಯವಸ್ಥೆ ಮಾಡಿದ್ದು ದರ್ಶನ್. ಮೂಲತಃ ತಮಿಳುನಾಡಿನವರು. ಅವರ ತಂದೆ ಎಷ್ಟೋ ವರ್ಷಗಳ ಹಿಂದಿನಿಂದ ಅಂಡಮಾನ್ ನಲ್ಲಿ ನೆಲೆಸಿ ಟೂರಿಸಂ ನಡೆಸುತಿದ್ದಾರೆ. ಓದು ಮುಗಿಸಿ ದರ್ಶನ್ ಈಗ ಅಪ್ಪನ ಜೊತೆ ಸೇರಿದ್ದಾನೆ. ವ್ಯವಸ್ಥಿತವಾಗಿ, ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳನ್ನೂ ಮರೆಯದೆ ನಮ್ಮ ಪ್ರವಾಸವನ್ನು ಅತ್ಯಂತ ಸುಖಮಯವಾಗುವಂತೆ ಮಾಡಿದ ಕೀರ್ತಿ ನಿರ್ಮಲಾ ಟ್ರಾವೆಲ್ಸ್ ಜೊತೆಗೆ ವಿಜಯ್ ಮತ್ತು ದರ್ಶನ್ ಅವರದು. ಪೋರ್ಟ್ ಬ್ಲೇರ್ ನಷ್ಟು ಮುಂದುವರಿದಿಲ್ಲವಾದುದರಿಂದ ಈ ಸಣ್ಣ ದ್ವೀಪಗಳಲ್ಲಿ ಇರುವುದರಲ್ಲೇ ಒಳ್ಳೆಯ ಹೋಟೆಲಲ್ಲಿ ಮದ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಿಸಿದ್ದರು. ಶುಚಿ-ರುಚಿಯಾದ ಊಟದ ನಂತರ ನಮ್ಮ ಪ್ರಯಾಣ ಮುಂದುವರಿಯಿತು. ನಾವು ಇಂದು ಹೋಗಿ ಸೇರಬೇಕಿರುವುದು ಮತ್ತೊಂದು ದ್ವೀಪಕ್ಕೆ. ಎರಡೂ ದ್ವೀಪಗಳು ಒಂದರಿಂದೊಂದು ಬೇರ್ಪಟ್ಟು ಇರೋದ್ರಿಂದ ಸಮುದ್ರ ಯಾನ ಮಾತ್ರವೇ ಇಲ್ಲಿಯ ಸಂಪರ್ಕ ಸಾಧನ. ಸರಕಾರಿ ಫೆರ್ರಿಯಲ್ಲಿ ನಮ್ಮ ಬಸ್ಸಿನ ಜೊತೆಗೆ ನಮ್ಮ ಪ್ರಯಾಣ ನೀಲ್ ಐಲ್ಯಾಂಡ್ ಗೆ. ನೀಲ್ ಐಲ್ಯಾಂಡ್ ಈಗ ಶಹೀದ್ ದ್ವೀಪವೆಂದು ಮರುನಾಮಕರಣಗೊಂಡಿದೆ. ಬಾರ್ಜ್ ಅಥವಾ ಫೆರ್ರಿಯಲ್ಲಿ ಒಂದೂವರೆ ಗಂಟೆ ಪ್ರಯಾಣ ಮಾಡಿ ನಾವು ನೀಲ್ ದ್ವೀಪದ ಸಮುದ್ರದೊಳಗಿನ ಹವಳದ ಗಿಡಗಳನ್ನು ಮತ್ತು ನೈಸರ್ಗಿಕ ಸೇತುವೆಯನ್ನು ನೋಡಲು ಹೋದೆವು. ನೈಸರ್ಗಿಕವಾಗಿ ಕಲ್ಲುಗಳ ರೂಪದಲ್ಲಿ ಹವಳದ ದಿಂಡಿನಂತಹ ರಚನೆಗಳು ಪ್ರತೀ ಹೆಜ್ಜೆ ಹೆಜ್ಜೆಗೂ ಸಿಗುತಿದ್ದವು. ಉಬ್ಬರವಿಲ್ಲದ ಸಮುದ್ರ ತೀರವದು, ಕಲ್ಲು ಬಂಡೆಗಳಂತ ರಚನೆಗಳು. ಅಲೆಗಳ ಬಡಿತಕ್ಕೆ ನೈಸರ್ಗಿಕವಾಗಿ ಸಮುದ್ರದೊಳಗೆ ಇಂತಹ ಅನೇಕ ಆಕಾರಗಳ ಸೃಷ್ಟಿಯಾಗಿದೆ. ಕಲ್ಲುಗಳ ಮೇಲಿನಿಂದ, ನೀರಿನೊಳಗೆ ತುಂಬಾ ದೂರ ನಡೆದು ಹೋದ ಮೇಲೆ ನೋಡಲು ಸಿಕ್ಕಿದ್ದು ಇಂತಹ ಹವಳದ ಕಲ್ಲುಗಳಿಂದಲೇ ರಚಿತವಾದ ನೈಸರ್ಗಿಕ ಸೇತುವೆ. ಪಶ್ಚಿಮ ಬಂಗಾಳಕ್ಕೂ ಅಂಡಮಾನ್ ಗೂ ವಿಶೇಷ ನಂಟು. ಅನೇಕ ವರ್ಷಗಳದು. ಸೆಲ್ಯುಲರ್ ಜೈಲಿನ ಸಂಬಂಧವೆಂದೂ ಹೇಳಬಹುದು. ಬಂಗಾಳದ ಅನೇಕ ಕ್ರಾಂತಿಕಾರಿ ಹೋರಾಟಗಾರರನ್ನು ಶಿಕ್ಷೆಗೆಂದು ಅಂಡಮಾನ್ ಜೈಲಿಗೆ ಖೈದಿಗಳನ್ನಾಗಿ ಕರೆತಂದಿದ್ದರಿಂದ, ಬಂಗಾಳದ ಜನತೆಗೆ ತಮ್ಮ ಪೂರ್ವಜರ ಬಗ್ಗೆ ಅಪಾರ ಹೆಮ್ಮೆ ಮತ್ತು ಗರ್ವ. ಅಂಡಮಾನ್ ದ್ವೀಪ ಬಂಗಾಳದ ಜನತೆಗೆ ತೀರ್ಥಕ್ಷೇತ್ರಕ್ಕೆ ಸಮ. ಈಗಲೂ ಅಂಡಮಾನ್ ದ್ವೀಪ ಸಮೂಹಗಳಲ್ಲಿ ಬಂಗಾಳಿಗಳು ನೆಲೆಯೂರಿದ್ದಾರೆ. ಅಲ್ಲಿಯೇ ತಮ್ಮ ವ್ಯಾಪಾರ, ಕಸುಬುಗಳನ್ನು ಕೈಗೊಳ್ಳುತಿದ್ದಾರೆ. ನೈಸರ್ಗಿಕವಾಗಿ ರಚನೆಯಾದ ಸೇತುವೆಗೆ ಬಂಗಾಳದ ಜನರು ಮೊದಲಿಗೆ ರಬೀಂದ್ರ ಸೇತು ಎಂದು ಕರೆದರು. ಕಾಲಾನಂತರ ಕಲ್ಕತ್ತಾದ ಹೌರಾ ಬ್ರಿಜ್ ಗೆ ಹೋಲಿಸಿ ಇದನ್ನೂ ಹೌರಾ ಬ್ರಿಜ್ ಎಂದೇ ಕರೆಯುತ್ತಾರೆ. – ಅಂಡಮಾನ್ ಆಲ್ಬಂ (ಮುಂದುವರೆಯುವುದು..) ******************** ಶೀಲಾ ಭಂಡಾರ್ಕರ್.

Read Post »

You cannot copy content of this page

Scroll to Top