ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—25 ಆತ್ಮಾನುಸಂಧಾನ ತುಂಬ ಪ್ರಭಾವ ಬೀರಿದ ಪ್ರಾಚಾರ್ಯರು ಪ್ರಾಧ್ಯಾಪಕರು ಪದವಿ ಶಿಕ್ಷಣದ ಕಾಲೇಜು ಜೀವನದಲ್ಲಿ ಪ್ರಾಮಾಣಿಕ ನಿಷ್ಠೆ ತೋರಿದ್ದರೆ ಅಪಾರವಾದ ಜ್ಞಾನನಿಧಿ ಕೈವಶ ಮಾಡಿಕೊಳ್ಳುವ ಎಲ್ಲ ಅವಕಾಶಗಳೂ ಇದ್ದವು. ಆದರೆ ಸೂಕ್ತ ಮಾರ್ಗದರ್ಶನ, ತಿಳುವಳಿಕೆಯ ಕೊರತೆಯಿಂದಾಗಿ ಕೇವಲ ಹರೆಯದ ಹುಡುಗಾಟಿಕೆಯಲ್ಲಿ ಪದವಿ ಶಿಕ್ಷಣದ ಮೂರು ವರ್ಷಗಳು ತೀರ ಹಗುರವಾಗಿ ಕಳೆದು ಹೋದವು. ಆದರೂ ತಮ್ಮ ಪಾಠ ಕ್ರಮದ ವಿಶಿಷ್ಠತೆ, ವೇಷಭೂಷಣ, ನಡೆನುಡಿಗಳಿಂದಲೇ ಮನಸ್ಸನ್ನು ಗಾಢವಾಗಿ ಪ್ರಭಾವಿಸಿದ ಅಧ್ಯಾಪಕರು ಮತ್ತಿತರ ವ್ಯಕ್ತಿಗಳನ್ನು ಮರೆಯಲು ಸಾಧ್ಯವಿಲ್ಲದಂತೆ ನೆನಪಾಗಿ ಉಳಿದಿದ್ದಾರೆ. ಕಾಲೇಜಿಗೆ ತಮ್ಮ ದಕ್ಷತೆ ಮತ್ತು ಶಿಸ್ತಿನಿಂದಲೇ ಘನತೆಯನ್ನು ತಂದುಕೊಟ್ಟವರು ಪ್ರಾಚಾರ್ಯರಾದ ಕೆ.ಜಿ. ನಾಯ್ಕ ಅವರು ನೀಳಕಾಯದ, ಗಂಭೀರ ನಿಲುವಿನ ಪ್ರಾಚಾರ್ಯರನ್ನು ವಿದ್ಯಾರ್ಥಿಗಳು ಭೇಟಿಯಾಗುವ ಅವಕಾಶಗಳು ಅಪರೂಪವಾಗಿರುತ್ತಿದ್ದವು. ಆದರೆ ಒಮ್ಮೆ ವರಾಂಡದಲ್ಲಿ ಕಾಣಿಸಿಕೊಂಡರೂ ಎಲ್ಲವೂ ಸ್ಥಬ್ದವಾಗಿ ಬಿಡುವ ಪ್ರಭಾವಶಾಲಿಯಾದ ವ್ಯಕ್ತಿತ್ವ ಅವರದ್ದಾಗಿತ್ತು. ಕಾಲೇಜು ಹೊಸದಾಗಿ ಆರಂಭಗೊಳ್ಳುವ ಕಾರಣ ಮಾನ್ಯ ದಿನಕರ ದೇಸಾಯಿಯವರು ಹಲವು ದಿಕ್ಕುಗಳಿಂದ ಯೋಚಿಸಿ ಶಿಕ್ಷಣ ತಜ್ಞರೊಡನೆ ಸಮಾಲೋಚಿಸಿ ಕೆ.ಜಿ. ನಾಯ್ಕರಂತ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ್ದರು. ಆಯ್ಕೆಯಾಗುವ ಮುನ್ನ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಗಣಿತಶಾಸ್ತ್ರದ ಉಪನ್ಯಾಸಕರಾಗಿದ್ದ ಕೆ.ಜಿ. ನಾಯ್ಕ ಅವರು ಅಂದು ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದು ಅಂದಿನ ಕುಲಪತಿಗಳಾಗಿದ್ದ ‘ಅಡಕೆ’, ರಜಿಸ್ಟ್ರಾರ್ ಆಗಿದ್ದ ‘ಒಡಿಯರ್’ ಅವರ ಅಭಿಮಾನಕ್ಕೆ ಪಾತ್ರರಾಗಿದ್ದವರು. ಕೆ.ಜಿ. ನಾಯ್ಕ ಅವರ ಅಪೂರ್ವ ಕಾಳಜಿಯಲ್ಲಿ ಕಾಲೇಜು ಸ್ಥಾಪನೆಗೊಂಡ ಅಲ್ಪಾವಧಿಯಲ್ಲಿಯೇ ರಾಜ್ಯಮಟ್ಟದಲ್ಲಿ ಖ್ಯಾತಿ ಪಡೆಯುವುದು ಸಾಧ್ಯವಾಯಿತು. ಮುಂದೆ ಇದೇ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆತ ಬಳಿಕ ಕೆ.ಜಿ. ನಾಯ್ಕರ ವ್ಯಕ್ತಿ ವಿಶೇಷದ ಗಾಢ ಅನುಭವಗಳು ಆದವು. ಮತ್ತು ಅವುಗಳಿಂದಲೇ ನನ್ನ ವ್ಯಕ್ತಿತ್ವ ವಿಕಸನಕ್ಕೆ ಹಲವು ಮುಖದ ಪ್ರಯೋಜನಗಳೂ ಆಗಿವೆ. ಅದನ್ನು ಮುಂದೆ ದೀರ್ಘವಾಗಿ ಪ್ರಸ್ತಾಪಿಸುವೆ. ನಾನು ಐಚ್ಛಿಕವಾಗಿ ಕನ್ನಡ, ಪೂರಕ ವಿಷಯಗಳಲ್ಲಿ ಇತಿಹಾಸ ಸಂಸ್ಕೃತಗಳನ್ನು ಆಯ್ದುಕೊಂಡೆ. ಸಹಜವಾಗಿಯೇ ಈ ಮೂರು ವಿಷಯಗಳಿಗೆ ಸಂಬಂಧಿಸಿದ ಅಧ್ಯಾಪಕರು ಮಾತ್ರ ಹೆಚ್ಚಿನ ಒಡನಾಟಕ್ಕೆ ದೊರೆಯುತ್ತ ವಿಶೇಷ ಪ್ರಭಾವಕ್ಕೆ ಪಾತ್ರನಾದೆ. ಅಂದು ನನಗೂ, ನನ್ನ ಅನೇಕ ಸಹಪಾಠಿಗಳಿಗೂ ಬಹು ನೆಚ್ಚಿನ ಗುರುಗಳೆಂದರೆ ಪ್ರೊ. ವಿ.ಎ. ಜೋಷಿಯವರು. ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕಡೆಯವರಾದ ಜೋಷಿಯವರು ಸೊಗಸಾಗಿ ಬಯಲು ಸೀಮೆಯ ಕನ್ನಡ ಮಾತನಾಡುವ ವ್ಯಕ್ತಿ. ತಮ್ಮ ಉಪನ್ಯಾಸದುದ್ದಕ್ಕೂ ವಿದ್ಯಾರ್ಥಿಗಳ ಹೆಸರು ನೆನಪಿಟ್ಟು ಆಗಾಗ ಗುರುತಿಸಿ ಮಾತನಾಡುವ ತಮ್ಮ ಸರಳತೆ ಹಾಸ್ಯಭರಿತವಾದ ಮಾತಿನ ಶೈಲಿಯಿಂದ ಇಡಿಯ ತರಗತಿಯೂ ಚೇತೋಹಾರಿಯಾಗಿ ಇರುವಂತೆ ನೋಡಿಕೊಳ್ಳುವ ಅವರ ಕಲಿಸುವಿಕೆಯೇ ನಮಗೆ ಕನ್ನಡವನ್ನು ಪ್ರೀತಿಸುವಂತೆ ಪ್ರೇರೆಪಿಸಿದ್ದವು. ಪಾಠದ ನಡುವೆ ವಿದ್ಯಾರ್ಥಿ ಸಮುದಾಯದಲ್ಲಿ ಏನಾದರೊಂದು ಬೇಡದ ಸದ್ದು ಕೇಳಿ ಬಂದರೂ ಕೇವಲ ತಮ್ಮ ಬಾಲ್‌ಪೆನ್‌ನಿಂದ ಟಿಕ್… ಟಿಕ್…” ಸದ್ದು ಹೊರಡಿಸಿ ಶಾಂತಗೊಳಿಸುವ ಕಲೆಗಾರಿಕೆ ಅವರಿಗೆ ವಿಶಿಷ್ಟವಾಗಿತ್ತು. ಯಾವುದಾದರೂ ವಿದ್ಯಾರ್ಥಿ ಅಗತ್ಯಕ್ಕಿಂತಲೂ ಅಧಿಕ ಪ್ರತಿಕ್ರಿಯೆ ತೋರಿದರೆ, ಬಾಳ ಶಾಣ್ಯ, ಆಗಾಕ ಹೋಗಬ್ಯಾಡ… ಇದು ನಿನಗೆ ಕೊನೆಯ ವಾರ್ನಿಂಗ್… ಮತ್ತದೇ ಮುಂದುವರಿಸಿದ ಅಂದ್ರ ಒದ್ದು ಹೊರಗ ಕಳಿಸಬೇಕಾಗ್ತದ…” ಎಂದು ಎಚ್ಚರಿಸುತ್ತಿದ್ದರು. ಆದರೆ ತಮ್ಮ ವೃತ್ತಿಯುದ್ದಕ್ಕೂ ಯಾರೊಬ್ಬರನ್ನೂ ತರಗತಿಯಿಂದ ಹೊರಗೆ ಹಾಕದ ಗುರುಶ್ರೇಷ್ಠರಾಗಿಯೇ ಉಳಿದರು. ಅವರ ಸೌಜನ್ಯಶೀಲತೆ, ಪಾಠ ಹೇಳುವ ವಿಶಿಷ್ಟ ಶೈಲಿಯಿಂದಲೇ ನಮ್ಮೆಲ್ಲರನ್ನು ಪ್ರಭಾವಿಸಿದವರು ಪ್ರೊ. ವಿ.ಎ. ಜೋಷಿ. ನಮಗೆ ಕನ್ನಡ ಪಾಠ ಹೇಳಿದ ಇನ್ನೋರ್ವ ಗುರುಗಳು ಪ್ರೊ. ಕೆ.ವಿ. ನಾಯಕ. ಶ್ವೇತ ವರ್ಣದ ಎತ್ತರದ ನಿಲುವಿನ ಸ್ಪುರದ್ರೂಪಿ ತರುಣ ಉಪನ್ಯಾಸಕರಾದ ಕೆ.ವಿ. ನಾಯಕ ನಡುಗನ್ನಡ ಕಾವ್ಯಗಳನ್ನು ಕನ್ನಡ ವ್ಯಾಕರಣ ಛಂದಸ್ಸುಗಳನ್ನು ಪಾಠ ಮಾಡುತ್ತಿದ್ದರು. ಅವರ ಚಂದದ ವ್ಯಕ್ತಿತ್ವ ಮತ್ತು ನಿತ್ಯನೂತನವಾದ ವೇಷಭೂಷಣಗಳು ತುಂಬಾ ಆಕರ್ಷಕವಾಗಿ ಇರುತ್ತಿದ್ದವು. ಜೋಷಿಯವರ ಹಳೆಗನ್ನಡ ಕಾವ್ಯಾಬೋಧನೆ ಕೆ.ವಿ.ನಾಯಕರ ವ್ಯಾಕರಣ ಪಾಠಗಳು ಕನ್ನಡ ವಿಭಾಗದ ವಿದ್ಯಾರ್ಥಿ ಪ್ರೀತಿಗೆ ತುಂಬ ಪ್ರೇರಕವಾಗಿರುತ್ತಿದ್ದವು. ಅಂದು ನಮಗೆ ಸಂಸ್ಕೃತ ಕಲಿಸುತ್ತಿದ್ದವರು. ಪ್ರೊ. ಎಂ.ಪಿ. ಭಟ್ ಎಂಬ ವಿದ್ವಾಂಸರು ಇಂಗ್ಲಿಷ್ ಕನ್ನಡ ಸಂಸ್ಕೃತ ಇತ್ಯಾದಿ ಭಾಷೆಯ ಮೇಲೆ ಅದ್ಭುತ ಹಿಡಿತ ಸಾಧಿಸಿದ್ದ ಎಂ.ಪಿ. ಭಟ್ ಅವರು ರಾಮಾಯಣ ಭಾರತಾದಿ ಕಾವ್ಯಗಳಲ್ಲದೆ ಸಂಸ್ಕೃತದ ‘ಮೇಘದೂತ’ ‘ಪ್ರತಿಜ್ಞಾ ಯೌಗಂಧರಾಯಣ’ ‘ಮೃಚ್ಛಕಟಿಕ’ ಮೊದಲಾದ ಪಠ್ಯಗಳನ್ನು ತುಂಬ ಪ್ರಭಾವಶಾಲಿಯಾಗಿ ಪಾಠ ಮಾಡುತ್ತಿದ್ದರು. ಅವರು ತಮ್ಮ ಉಪನ್ಯಾಸ ನೀಡಿದ ಬಳಿಕ ಮತ್ತೆ ನಾವು ಸಂಸ್ಕೃತ ಪಠ್ಯಗಳನ್ನು ಬಿಡಿಸಿ ಓದುವ ಕಷ್ಟವನ್ನೆ ತೆಗೆದುಕೊಳ್ಳುತ್ತಿರಲಿಲ್ಲ ಆದರೂ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯ ಅಂಕಕಗಳು ಸುಲಭವಾಗಿ ದಕ್ಕುತ್ತಿದ್ದವು ಅಂದರೆ ಪ್ರೊ. ಎಂ.ಪಿ. ಭಟ್ ಅಂತವರಿಂದ ಸಂಸ್ಕೃತ ಕಲಿಯುವುದೇ ಒಂದು ಸೌಭಾಗ್ಯವೆಂದು ನಾವು ಬಹುತೇಕರು ಭಾವಿಸಿದ್ದೆವು. ನಮಗೆ ಇತಿಹಾಸ ಪಾಠ ಹೇಳಿದವರು ಪ್ರೊ.ಎ.ಎಚ್.ನಾಯಕ ಮತ್ತು ಟಿ.ಟಿ. ತಾಂಡೇಲ್ ಅವರು. ಪ್ರೊ. ಎ.ಎಚ್. ನಾಯ್ಕ ಅವರು ಪದವಿ ಶಿಕ್ಷಣದ ಮೊದಲ ವರ್ಷದಲ್ಲಿ ನಮಗೆ ಕೆಲವು ಕಾಲ ಇಂಗ್ಲಿಷ್ ವಿಷಯದ ಪಾಠ ಹೇಳಿದಂತೆ ನೆನಪು. ತುಂಬ ಕರ್ತವ್ಯ ದಕ್ಷ ಅಧ್ಯಾಪಕರೆಂದೇ ಗುರುತಿಸಿಕೊಂಡ ಎ.ಎಚ್. ನಾಯ್ಕ ಅವರು ತಮ್ಮ ಪಾಠದೊಂದಿಗೆ ವಿದ್ಯಾರ್ಥಿ ಕ್ಷೇಮ ಚಿಂತನೆಯನ್ನು ನಿರ್ವಹಿಸುತ್ತಿದ್ದರು. ತರಗತಿಗಳನ್ನು ತಪ್ಪಿಸುವ ವಿದ್ಯಾರ್ಥಿಗಳಿಗೆ ಮತ್ತೆ ಮತ್ತೆ ಕರೆದು ಬುದ್ಧಿ ಹೇಳುವ ಎಚ್ಚರಿಕೆ ನೀಡುವ ಹೆಚ್ಚಿನ ಕೆಲಸವನ್ನು ಎ.ಎಚ್. ನಾಯ್ಕ ಅವರಂತೆ ನಿರ್ವಹಿಸಿದ ಅಧ್ಯಾಪಕರು ಕಡಿಮೆ.ಅವರ ವ್ಯಕ್ತಿತ್ವದ ಇನ್ನೊಂದು ವಿಶೇಷತೆ ಅಂದರೆ ದೈವ ಭಕ್ತಿ! ಅಧ್ಯಾತ್ಮಿಕ ಒಲವು!ಕಾಲೇಜು ಪಕ್ಕದಲ್ಲೇ ಇರುವ ಹೊನ್ನಾರಾಕಾ ನಾಗದೇವತಾ ಮಂದಿರವನ್ನು ಪ್ರವೇಶಿಸಿ ಅಲ್ಲಿರುವ ಎಲ್ಲ ಗಂಟೆಗಳನ್ನು ಬಾರಿಸಿ ದೇವರಿಗೆ ಕೈಮುಗಿದು ಗಂಧ ಪ್ರಸಾದ ಪಡೆಯದೆ ಅವರು ಎಂದೂ ಕಾಲೇಜು ಆವರಣಕ್ಕೆ ಬರುತ್ತಿರಲಿಲ್ಲ. ಅವರ ಈ ನಡೆಯನ್ನು ವಿದ್ಯಾರ್ಥಿಗಳು ಮೋಜಿನಿಂದ ಗಮನಿಸುತ್ತಾರೆ ಎಂಬುದು ಅವರಿಗೆ ಅರಿವಾದರೂ ತಮ್ಮ ನಿಷ್ಠೆಯನ್ನು ಎಂದು ತಪ್ಪಿ ನಡೆಯುತ್ತಿರಲಿಲ್ಲ. ಅವರ ಈ ಭಗವದ್ಭಕ್ತಿಯನ್ನೇ ವಿದ್ಯಾರ್ಥಿಗಳು ಹಲವು ಬಾರಿ ಗೇಲಿ ಮಾಡುತ್ತಿದ್ದರು. ತರಗತಿಗೆ ಗೈರು ಹಾಜರಾಗುವ ವಿದ್ಯಾರ್ಥಿಗಳನ್ನು ಮುಂದಿನ ತರಗತಿಯಲ್ಲಿ ವಿಚಾರಿಸಿಕೊಳ್ಳುವುದು ಅವರ ಕ್ರಮವೇ ಆಗಿತ್ತು. ಹನೇಹಳ್ಳಿಯ ಕಡೆಯಿಂದ ಬರುವ ಪ್ರಸನ್ನ ಎಂಬ ನಮ್ಮ ಸಹಪಾಠಿಯೊಬ್ಬ ಗುರುಗಳ ದೈವ ಭಕ್ತಿಯ ನಿಷ್ಠೆಯನ್ನು ಅರಿತವನಾಗಿ ಗುರುಗಳು “ನಿನ್ನೆ ಏಕೆ ನೀನು ತರಗತಿಗೆ ಬರಲಿಲ್ಲ?” ಎಂದು ಕೇಳಿದಾಗಲೆಲ್ಲ “ಮನೆಯಲ್ಲಿ ಸತ್ಯನಾರಾಯಣ ಪೂಜೆಯಿತ್ತು ಸರ್” ಎಂದೇ ಕಥೆ ಹೇಳುತ್ತಿದ್ದ. ಅಷ್ಟಕ್ಕೆ ಅವನನ್ನು ಕ್ಷಮಿಸಿಯೇ ಬಿಡುವ ಪ್ರೊ.ನಾಯ್ಕರ ರೀತಿಯು, ನಮಗೆಲ್ಲ ಮೋಜಿನ ಸಂಗತಿಯಾಗಿ ಮನರಂಜನೆ ನೀಡುತ್ತಿತ್ತು.ದೈವ ನಿಂದನೆ, ಆತ್ಮವಂಚನೆ, ಸುಳ್ಳು ಇತ್ಯಾದಿ ಸನಿಹವೂ ಬರದಂತೆ ಬಾಳಬೇಕೆಂದು ತಮ್ಮ ಉಪನ್ಯಾಸದ ನಡುವೆ ಮತ್ತೆ ಮತ್ತೆ ಉಪದೇಶಿಸುವ ಪ್ರೊ. ಎ.ಎಚ್. ನಾಯ್ಕ ಅದಕ್ಕೆ ವಿರುದ್ಧವಾಗಿ ವರ್ತಿಸುವರನ್ನು ಕಂಡರೆ ಕೆಂಡಾಮಂಡಲರಾಗಿ ಬೈಯುವ ಅಂಥ ವ್ಯಕ್ತಿಗಳಿಂದ ದೂರವೇ ಇರುತ್ತಿದ್ದರು. ಅವರಿಂದ ಇತಿಹಾಸ ಪಾಠಕೇಳಿದಕ್ಕಿಂತಲೂ ನೈತಿಕ ಶಿಕ್ಷಣದ ಪಾಠ ಕೇಳಿದುದೇ ಅಧಿಕವೆಂಬಂತೆ ಎ.ಎಚ್. ನಾಯ್ಕ ಅವರು ವಿದ್ಯಾರ್ಥಿಗಳ ಚಿತ್ತ ಬಿತ್ತಿಯಲ್ಲಿ ನೈತಿಕ ಮೌಲ್ಯ ಪ್ರತಿಪಾದಕ ಪೂಜನೀಯರಾಗಿಯೇ ನೆಲೆ ನಿಂತಿದ್ದಾರೆ.ಇತಿಹಾಸ ಪಾಠ ಹೇಳಿದ ಇನ್ನೊಬ್ಬ ಗುರು ಪ್ರೊ. ಟಿ.ಟಿ. ತಾಂಡೇಲ್ ಅವರು. ಯುವ ಅಧ್ಯಾಪಕರಾಗಿದ್ದ ತಾಂಡೇಲ್ ಸೂಟು ಬೂಟುಗಳಲ್ಲಿ ಆಕರ್ಷಣೀಯವಾಗಿ ತರಗತಿಯನ್ನು ಪ್ರವೇಶಿಸುತ್ತಿದ್ದರು. ಅಷ್ಟೇ ನಿರರ್ಗಳವಾಗಿ ಇಂಗ್ಲೀಷಿನಲ್ಲಿ ತಮ್ಮ ಪಾಠ ಆರಂಭಿಸುತ್ತಿದ್ದುದ್ದು ಅವರ ನಡೆ-ನುಡಿಯ ಶೈಲಿ ಯುವ ಮನಸ್ಸುಗಳನ್ನು ಗಾಢವಾಗಿಯೇ ತಟ್ಟುತ್ತಿತ್ತು. ತಾಂಡೇಲ್ ಸರ್ ಅವರ ವೇಷಭೂಷಣಗಳ ಕಾಳಜಿ, ಉಪನ್ಯಾಸದ ವಿಶಿಷ್ಟ ಸ್ಟೈಲ್ ಬಹಳಷ್ಟು ವಿದ್ಯಾರ್ಥಿಗಳಿಗೆ ಪ್ರಿಯವಾಗುತ್ತಿತ್ತು.ಬಹುಶಃ ಮೀನುಗಾರರಂಥ ಹಿಂದುಳಿದ ಸಮಾಜದಿಂದ ಬಂದು ಇಂಥದೊಂದು ಕಾಲೇಜಿನಲ್ಲಿ ಉಪನ್ಯಾಸಕನಾಗುವುದು ವಿದ್ಯಾರ್ಥಿಗಳ ಮನಸ್ಸು ಗೆಲ್ಲುವುದೆಂದರೆ ಸುಲಭದ ಸಂಗತಿಯೇನೂ ಆಗಿರಲಿಲ್ಲ. ನನ್ನಂತ ದಲಿತ ವಿದ್ಯಾರ್ಥಿಯೊಬ್ಬನ ಮನಸ್ಸಿನಲ್ಲಿ ಇಂಥದೊಂದು ಸಾಧ್ಯ…” ಎಂಬ ಆಸೆಯ ಹೊಳಪೊಂದು ಮಿಂಚುವಂತೆ ಮಾಡಿದ ನನ್ನ ಆದರ್ಶ ಗುರು ಟಿ.ಟಿ. ತಾಂಡೇಲ್ ********************* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಕಲಿಕೆಯ ದೃಷ್ಟಿಯಿಂದ ಸರಸಮ್ಮನ ಸಮಾಧಿಯ ಚಿತ್ರೀಕರಣದ ಸಮಯದಲ್ಲಿ ಹಲವಾರು ಕಲಾವಿದರ ಅಭಿನಯ, ದೇಹಭಾಷೆ, ತೊಡಗಿಸಿಕೊಳ್ಳುವ ಪರಿ, ಸಂಭಾಷಣೆಯನ್ನು ಉಚ್ಚರಿಸುವ ಬಗೆ ಇವನ್ನೆಲ್ಲ ಬಹಳ ಸಮೀಪದಿಂದ ಗಮನಿಸಿದ್ದೆ. ಇದು ನನ್ನೊಳಗಿನ ರಂಗದ ಹುಚ್ಚಿಗೆ ಬಹಳ ಕಾಣಿಕೆ ನೀಡಿದೆ.
ಮತ್ತೆ ಏನೇನೋ ವಿಚಾರಗಳಿವೆ ಬರೆಯಲಿಕ್ಕೆ. ಆದರೆ ಬರೆಯ ಹೊರಟ ಕೂಡಲೇ ಅದು ಸುತ್ತಿ ಸುತ್ತಿ ಸುಳಿದು ಮತ್ತದೇ ದಾರಿಗೆ ಹೊರಳಿಬಿಡುವುದು ಪರಿಸ್ಥಿತಿಯ ನಾವು ತಳ್ಳಿ ಹಾಕಲಾಗದ ಪ್ರಭಾವವೇ ಇರಬಹುದು. ಅದನ್ನು ಮೀರಬೇಕಾದ ಸಾವಾಲೊಂದು ಮುಂದೆ ಕುಳಿತಿದೆ. ಅದನ್ನೀಗ ಮೀರಲೇಬೇಕಿದೆ.
ಮನುಷ್ಯರ ಅಭಿವ್ಯಕ್ತಿಯು ನಾನಾ ರೂಪಗಳಲ್ಲಿ ಆಗುತ್ತಿರುವುದರಿಂದ ಅವರ ಯಶಸ್ಸನ್ನು ಅಳೆಯವುದಕ್ಕೆ ತೊಡಗುತ್ತೇವೆಯಾ? ಎಂದರೆ, ಅದೂ ಅಲ್ಲವೆನಿಸುತ್ತದೆ. ಮರಗಿಡ, ನದಿ,ಬೆಟ್ಟ ಪಶುಪಕ್ಷಿಗಳಾದಿಯಾಗಿ ಸಕವ ಚರಾಚರ ಜೀವಚೇತನಗಳೂ ತಮ್ಮ ಸಾಮರ್ಥ್ಯವನ್ನು ನಾನಾ ಬಗೆಯಲ್ಲಿ ಸಮರ್ಥವಾಗಿ ನಿರೂಪಿಸುತ್ತಿವೆಯಲ್ಲಾ!
ದೀಪ ಮತ್ತೊಂದು ದೀಪವನ್ನು ಹಚ್ಚುತ್ತದೆಯೆ ಹೊರತು ಅಸೂಯೆಯಿಂದ ತಾನೇ ಬೆಳಗಬೇಕೆಂಬ ಸ್ವಾರ್ಥದಿಂದ ಅಥವಾ ಅಹಂನಿಂದ ಇನ್ನೊಂದು ದೀಪವನ್ನು ನಂದಿಸುವುದಿಲ್ಲ. ನಾವುಗಳೂ ದೀಪಗಳಾಗಬೇಕಿದೆ. ಹಿತಶತೃಗಳ ಮುಖವಾಡ ಕಿತ್ತೆಸೆದು ನಿಜ ಮಾನವರಾಗಿ ಬದುಕಬೇಕಿದೆ
ಮತ್ತೆ ಮೈಸೂರು ತಲುಪಿದಾಗ ಅಂಡಮಾನ್ ನ ಮಧುರ ನೆನಪುಗಳು ತುಂಬಿ ತುಂಬಿ ನಮ್ಮೊಂದಿಗೆ ಬಂದಿದ್ದವು
ಬಸ್ಸು ಅಂಕೋಲೆಯ ಬಸ್ ನಿಲ್ದಾಣದಲ್ಲಿ ಬಂದು ನಿಲ್ಲುವ ಹೊತ್ತಿಗೆ ಸರಿಯಾಗಿ ಸುತ್ತಲಿನ ಬೇಲೇಕೇರಿ, ಭಾವಿಕೇರಿ, ಕಣಗಿಲ ಮುಂತಾದ ಊರುಗಳಿಂದಲೂ ಬಸ್ಸುಗಳು ಬಂದು ನಿಲ್ಲುತ್ತಿದ್ದವು. ಎಲ್ಲ ಬಸ್ಸುಗಳಲ್ಲಿಯೂ ಅಷ್ಟಿಷ್ಟು ಕಾಲೇಜು ವಿದ್ಯಾರ್ಥಿಗಳು ಇರುತ್ತಿದ್ದರು. ಎಲ್ಲರೂ ಕೂಡಿಯೇ ಕಾಲೇಜಿನವರೆಗೆ ಕಾಲ್ನಡಿಗೆಯಲ್ಲಿ ನಡೆಯುವಾಗ ಇಂದಿನ ‘ದಿನಕರ ದೇಸಾಯಿ ರಸ್ತೆ’ ಅಕ್ಷರಶಃ ಜಾತ್ರೆ ಹೊರಟಂತೆ ಕಾಣುತ್ತಿತ್ತು
ರಂಗದ ಮೇಲಿನ ಕೆಮಿಸ್ಟ್ರಿಗೆ, ರಂಗದ ಕೆಳಗಿನ ಕಲಾವಿದರ ಅನ್ಯೋನ್ಯತೆ, ಕಾಳಜಿ, , ಹಾಸ್ಯ ಲಾಸ್ಯಗಳು ಅತ್ಯಂತ ಅಗತ್ಯ ಜೀವತಂತುಗಳು ಎಂಬುದನ್ನು ನಾನು ನಿಧಾನವಾಗಿ, ಪಾರಿವಾಳ ಒಂದೊಂದೇ ಕಾಳುಗಳನ್ನು ಹೆಕ್ಕಿ ನುಂಗುವಂತೆ, ಕಲಿಯುತ್ತಲೇ ಇದ್ದೆ.
ಹಾಗಾಗಿ ಮನಸ್ಸನ್ನು ಹಗುರವಾಗಿ ಪರಿಗಣಿಸದೇ, ಕಣ್ಣಿದುರಿಗೆ ಬಾರದ ಈ ಅನಿವಾರ್ಯದ ಅನಂಗವನ್ನು ಬಹಳ ಗೌರವದಿಂದ ಕಾಣುತ್ತಾ, ನಂನಮ್ಮ ಮನಸ್ಸು ಎಲ್ಲೋ ಮಾಯವಾಗಲು ಬಿಡದೆ ಅದರ ಸ್ವಾಸ್ಥ್ಯ ಕಾಯ್ದುಕೊಳ್ಳೋಣ. ಕೀಟಲೆಯ ಮನಸ್ಸು ನಮಗಿದ್ದರೂ ಸರಿಯೇ ಆದರೆ, ಇತರರನ್ನು ಕಾಡುವ ಕೋಟಲೆಯ ರಾಕ್ಷಸ ಮನಸ್ಸು ನಮ್ಮದಾಗದಿರಲಿ
ಅಂಕಣ ಬರಹ ಮೂರು ಗಳಿಗೆಯ ಬಾಳಿನಲ್ಲಿ… ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೆ.. ಶುದ್ಧ ವೈರಾಗ್ಯ ಮೂಡಿಸುವ ಈ ದಾಸರ ಪದವನ್ನು ಬಹುಶಃ ಹಳೆಯ ತಲೆಮಾರಿನವರು ಅದೆಷ್ಟು ಸಲ ಗುಣುಗುಣಿಸಿರಬಹದೋ ಏನೋ.. ನಿಜವೆ ? ಈ ಪ್ರಪಂಚದಲ್ಲಿ ಯಾರಿಗೂ ಇಲ್ಲವೆ? ಲೌಕಿಕ ವ್ಯಾಪಾರಿಗಳಾದ ನಾವುಗಳು ಕಟ್ಟಿಕೊಂಡ ಸಂಸಾರ , ಕೈಕೊಂಡ ವೃತ್ತಿ , ಗೆಳೆಯರು ,ಬಂಧುಗಳು ಇವರೆಲ್ಲ ಏನೂ ಅಲ್ಲವೆ? ನೀರಿನೊಳಗಿದ್ದರೂ ನೀರನ್ನು ಸೋಕಿಸಿಕೊಳ್ಳದ ಕಮಲಪತ್ರದಂತಹ ಬದುಕು ಸಾಮಾನ್ಯರಿಗೆ ಸಾಧ್ಯವಾಗುತ್ತದಾ? ಈ ಮಾತುಗಳು ,ದಾಸವಾಣಿ ಇವೆಲ್ಲ ಇಂದಿನ ತಂತ್ರಜ್ಞಾನದ ಯುಗದ ಜನತೆಗೆ ಬೇಕೆ? ನಾವು ಬದುಕುವುದು ಕೇವಲ ನಮಗಾಗಿ ಎಂದರೆ ತಮ್ಮ ಮಕ್ಕಳಿಗಾಗಿ ..ಮುಂದಿನ ಮೂರು ತಲೆಮಾರುಗಳಿಗಾಗಿ ಆಸ್ತಿ ಸಂಪಾದಿಸುವ ಜನರೆಲ್ಲ ಕೇವಲ ತಮಗಾಗಿಯೇ ಬದುಕಿದ್ದಾರೆಯೆ? ನಾನು ಹೋದರೂ ನನ್ನ ಮಕ್ಕಳು ಸುಖದಿಂದ ಇರಲಿ ಎನ್ನುವ ನಿಜ ಕಾಳಜಿ, ಅಥವಾ ನನ್ನ ಮುಂದಿನ ಹತ್ತು ತಲೆಮಾರಿನವರಿಗೆ ಕಷ್ಟ ಬರಬಾರದು ಎಂಬ ದುರಾಸೆ ಮಿಶ್ರಿತ ಕಾಳಜಿಯಿರುವುದರಿಂದಲೇ ಅಲ್ಲವೆ ಬ್ಯಾಂಕ್ ಡಿಪಾಸಿಟ್ , ಒಡವೆ, ಮನೆ , ಫ್ಲಾಟ್, ಜಮೀನು ಎಂದೆಲ್ಲ ಗಳಿಸುತ್ತಿರುವುದು. ಇರುವುದೊಂದೇ ಬದುಕು , ಈ ಬದುಕು ನನ್ನದು ಮಾತ್ರಾ ಇತರರ ಬಗ್ಗೆ ನಾನು ಯೋಚಿಸುವುದಿಲ್ಲ ಎನ್ನುವುದು , ನನ್ನ ಕುಟುಂಬಕ್ಕಾಗಿ ನಾನು ನನ್ನ ಆಸೆಗಳನ್ನು ತ್ಯಾಗ ಮಾಡುವುದಿಲ್ಲ ಎನ್ನುವುದು ಒಂದು ರೀತಿಯಲ್ಲಿ ಸ್ವಾರ್ಥಪರತೆಯಾಗುತ್ತದೆ. ಒಂದು ಕುಟುಂಬ ವ್ಯವಸ್ಥೆಯಲ್ಲಿರುವ ಗಂಡು ಹೆಣ್ಣು ಇಬ್ಬರಿಗೂ ಸಮಾನ ಜವಾಬ್ದಾರಿಗಳಿರುತ್ತವೆ. ಒಂದು ವೇಳೆ ಗಂಡು ತನ್ನ ಜವಾಬ್ದಾರಿ ಮರೆತರೂ ಹೆಣ್ಣು ಆ ಕುಟುಂಬಕ್ಕಾಗಿ ತನ್ನೆಲ್ಲ ಶಕ್ತಿ ಧಾರೆಯೆರೆಯುತ್ತಾಳೆ. ನಾನಿಲ್ಲದಿದ್ದರೂ ಜಗತ್ತು ಹಾಗೇ ನಡೆಯುತ್ತದೆ.ನಾನಿಲ್ಲವಾದರೂ ನನ್ನ ಪ್ರೀತಿ ಪಾತ್ರರು ಹಾಗೇ ಬದುಕುತ್ತಾರೆ ..ಹಾಗಿದ್ದಾಗ ನಾನೇಕೆ ನನ್ನ ಆಸೆ , ಗುರಿ ಏನೆಲ್ಲ ತ್ಯಾಗ ಮಾಡಬೇಕು ಎಂಬ ಯೋಚನೆಗಳಿರುವವರೂ ನಮ್ಮ ಮಧ್ಯೆ ಇಲ್ಲದಿಲ್ಲ. ಈ ಭೂಮಿ ನಮಗಾಗಿ ಅದೆಷ್ಟಲ್ಲಾ ಹೂ ,ಹಣ್ಣು ಹಸಿರು ಕೊಟ್ಟು ಆಧಾರವಾಗಿದೆಯಲ್ಲ.ಅದೂ ನನಗೇಕೆ ಬೇಕು ಇವೆಲ್ಲ ..ನನಗಿಷ್ಟ ಬಂದಂತೆ ನಾನಿರುವೆ ಎಂದು ಸುಮ್ಮನಿದ್ದರೆ ನಮ್ಮ ಗತಿ ದೇವರೇ ಗತಿ! ಇಟ್ಟರೆ ಸಗಣಿಯಾದೆ ತಟ್ಟಿದರೆ ಉರುಳಾದೆ ಸುಟ್ಟರೆ ನೊಸಲಿಗೆ ವಿಭೂತಿಯಾದೆ ಎನ್ನುವ ಮೂಕ ಗೋವು ಸಹಾ ತನ್ನ ಹಾಲೆಲ್ಲಾ ಕೇವಲ ತನ್ನ ಕಂದನಿಗಿರಲಿ ಎಂದೂ ಆಶಿಸಿಲ್ಲ.ಅದಕ್ಕೆ ಇಷ್ಟ ಇರುತ್ತದೋ ಇಲ್ಲವೋ ಆದರೂ ಕರುವಿನ ಪಾಲುಗಿಂತ ಹೆಚ್ಚು ಹಾಲನ್ನು ನಮಗೆ ನೀಡುತ್ತಿದೆ. ಒಂದು ಮನೆ , ಗಂಡ – ಹೆಂಡತಿ, ಇಬ್ಬರು ಪುಟ್ಟ ಮಕ್ಕಳಿದ್ದರು. ಗಂಡ ಅಸಾಧ್ಯ ಬುದ್ಧಿವಂತ. ಆಗಾಗ ಜಗಳವಾದಾಗಲೆಲ್ಲ ಹೆಂಡತಿಗೆ ಹೇಳುತ್ತಿದ್ದ “. ಏನು ಮಾಡ್ಲಿ ಹೇಳು…ಒಂದು ವೇಳೆ ನಾನೇನಾದರೂ ನಿನ್ನ ಮದುವೆಯಾಗಿಲ್ಲದಿದ್ದರೆ ..ಎಲ್ಲೋ ಹೋಗಿ ಏನೋ ಮಾಡಿ…ಏನೋ ಆಗಿರುತ್ತಿದ್ದೆ…ಆದ್ರೆ .ನಿನ್ನ ಮದುವೆಯಾಗಿಬಿಟ್ನೆ??” ಹೆಂಡತಿಯೂ ಸೋಲುತ್ತಿರಲಿಲ್ಲ..” ನೀನು ಬರೀ ನಿನ್ನ ಬಗ್ಗೆ ಹೇಳ್ತೀಯಲ್ಲ..ನನಗೂ ಒಂದಷ್ಟು ಆಸೆಗಳಿದ್ದವು..ನಿನ್ನ ಮದುವೆಯಾಗಿ ನಾನೂ ಅವಕ್ಕೆಲ್ಲ ಎಳ್ಳು ನೀರು ಬಿಡಲಿಲ್ಲವ …” ಎಂದು ವಾದ ಮಾಡುತ್ತಿದ್ದಳು. ಗಂಡ – ಹೆಂಡತಿಯರ ಈ ವಾದಗಳನ್ನು ಕೇಳುತ್ತಾ ಮಕ್ಕಳು ಒಳಗೊಳಗೇ ಆತಂಕ ಪಡುತ್ತಿದ್ದವು.ಇವರಿಬ್ಬರೂ ಹೀಗೇ ಜಗಳವಾಡಿಕೊಂಡು ಮನೆ ಬಿಟ್ಟು ಹೋದರೆ ನಮ್ಮ ಗತಿಯೇನು ಎಂದು. ಗಂಡನಿಗೆ ಅರ್ಥವಾಗದಿದ್ದರೂ ಮಕ್ಕಳ ಈ ಆತಂಕ ಹೆಂಡತಿಗರ್ಥವಾಯಿತು. ನಮ್ಮನ್ನೇ ನಂಬಿರುವ ಈ ಮಕ್ಕಳ ಮನಸ್ಸಿಗೆ ನೋವು ಮಾಡಬಾರದೆಂದು ಗಂಡನಿಗೆ ಅರ್ಥ ಮಾಡಿಸಿದಳು. ಒಂದು ಸಂಸಾರ ಎಂದು ಕಟ್ಟಿಕೊಂಡ ಕ್ಷಣದಿಂದಲೇ ನಮ್ಮ ಕೆಲವೊಂದು ಆದ್ಯತೆಗಳು ನಮಗೇ ಅರಿವಿಲ್ಲದಂತೆ ಬದಲಾಗಿ ಬಿಡುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ ನಾವುಗಳು ನಮ್ಮ ಆಸಕ್ತಿಯ ಕ್ಷೇತ್ರವನ್ನು ಮರೆತೇ ಬಿಡಬೇಕಾಗುತ್ತದೆ. ದುರದೃಷ್ಟವಶಾತ್ ಇದು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರಾ ಅನಿವಾರ್ಯವಾಗಿಬಿಟ್ಟಿದೆ. ಗಂಡು ತನಗನಿಸಿದ್ದನ್ನ ಯಾವಾಗ ಬೇಕಾದರೂ ಸಾಧಿಸುವಷ್ಟು ಸ್ವತಂತ್ರವನ್ನು ಸ್ವಯಂ ತೆಗೆದುಕೊಂಡು ಬಿಟ್ಟಿದ್ದರೆ ಹೆಣ್ಣು ಮನೆ , ಮಕ್ಕಳು ಅವರ ಓದುಬರಹ ,ಆರೋಗ್ಯ ಮನೆಯಲ್ಲಿನ ಹಿರಿಯರ ಆರೈಕೆ ಎಂದು ನೂರಾರು ಜವಾಬ್ದಾರಿಗಳನ್ನ ತನ್ನ ಕೋಮಲಭುಜಗಳ ಮೇಲೆ ಹೊತ್ತು ಇದೇ ನನ್ನ ಬದುಕು ಎಂದುಕೊಂಡು ಹಾದಿ ಸವೆಸುತ್ತಾಳೆ. ಗಂಡು ಮನೆಯ ಜವಾಬ್ದಾರಿಯನ್ನ ಸಮವಾಗಿ ನಿಭಾಯಿಸಿದ್ದರೆ ಹೆಣ್ಣಿಗೆ ಅದೂ ಏನಾದರೊಂದು ಸಾಧಿಸಬೇಕೆಂಬ ಆಕಾಂಕ್ಷೆಯಿರುವ ಹೆಣ್ಣಿಗೆ ಸಂಸಾರ ಹೊರೆಯೆನಿಸುವುದಿಲ್ಲ. ಮನೆ ಹೊರಗು ಒಳಗುಗಳೆರಡನ್ನೂ ನಿಭಾಯಿಸುವ ಕುಶಲತೆ ಆಕೆಗಿದೆ. ಆದರೆ ಯಾವುದೋ ಒಂದು ಘಳಿಗೆಯಲ್ಲಿ…ಛೇ ..ಇದೆಂತಹ ಬದುಕು ನನ್ನದು ..ನನಗಾಗಿ ನಾನು ಬದುಕದೆ ಈ ಮನೆ ,ಗಂಡ ಮಕ್ಕಳಿಗಾಗಿ ಬದುಕುತ್ತಿದ್ದೇನಲ್ಲ..ಹಾಗಾದರೆ ನನಗಾಗಿ ಬದುಕುವುದಾದರೂ ಯಾವಾಗ ಎನಿಸಿಬಿಟ್ಟರೆ ಅಲ್ಲಿಗೆ ಮುಗಿಯಿತು ಆ ಕುಟುಂಬದ ಸರ್ವನಾಶ !! ಹೆಣ್ಣಿಗೆ ಹೀಗೆಂದೂ ಅನಿಸದಂತೆ ನೋಡಿಕೊಳ್ಳುವ ಗುರುತರ ಹೊಣೆ ಗಂಡುಗಳಿಗಿದೆ. ಕುಟುಂಬ ಒಂದು ಮಧುರ ಬಂಧ! ಏನೂ ಸರಯಿಲ್ಲದಿದ್ದಾಗ, ತೀರಾ ಹಿಂಸೆಯಾಗುತ್ತಿದ್ದಾಗ ಪರಸ್ಪರರ ಒಪ್ಪಿಗೆ ಮೇರೆಗೆ ಬೇರಾದರೂ ಮಕ್ಕಳ ಜವಾಬ್ದಾರಿ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ನಮ್ಮ ನಮ್ಮ ತಾಯ್ತಂದೆಯರನ್ನೇ ತೆಗೆದುಕೊಳ್ಳೋಣ. ಅವರಲ್ಲಿ ಯಾರಾದರೊಬ್ಬರು ಅಥವಾ ಇಬ್ಬರೂ ನನ್ನ ದಾರಿ ನನಗೆ ನಾನಿಲ್ಲದೆಯೂ ಇವರೆಲ್ಲ ಇದ್ದೇ ಇರುತ್ತಾರೆ ..ನನ್ನ ಆಕಾಂಕ್ಷೆಯೇ ಮುಖ್ಯ ಎಂದು ಹೊರಟು ಬಿಟ್ಟಿದ್ದರೆ ನಾವುಗಳು ಈಗ ಇರುವಂತೆ ಇರಲು ಸಾಧ್ಯವಾಗುತ್ತಿತ್ತೆ? ( ವ್ಯತಿರಿಕ್ತ ಉದಾಹರಣೆಗಳಿವೆ ..ಇಲ್ಲಿ ಮಾತು ಸಾಮಾನ್ಯವಾಗಿ ಕುಟುಂಬದ ಕುರಿತು ಬಂದಿದೆ). ನಿಜ , ನಾನಿಲ್ಲದೆಯೂ ಲೋಕ ಇದ್ದೇ ಇರುತ್ತದೆ..ನನ್ನವರೂ ಬದುಕಿ ಬಾಳಿಯೇ ಬಾಳುತ್ತಾರೆ. ಆದರೆ ನಾನಿಲ್ಲದಾಗ ನನ್ನವರನ್ನು ಬದುಕಲು ಸಿದ್ಧ ಮಾಡುವುದಿದೆಯಲ್ಲ..ಅದೇ ನಮ್ಮೆಲ್ಲರ ಹೊಣೆಗಾರಿಕೆ.ನಾನಿಲ್ಲದ ಮೇಲೆ ಮನೆ ಮಾಡುವುದೇಕೆ ಎಂದು ಯಾರಾದರೂ ಯೋಚಿಸಿದ್ದರೆ ಜನಸಾಲದ ಹೊರೆಯಲ್ಲಿ ನಲುಗಿ ಮನೆ ಕಟ್ಟುತ್ತಲೇ ಇರಲಿಲ್ಲ.ಒಂದು ವೇಳೆ ಸಾಲ ತೀರಿಸಿದ ಮರು ದಿನವೇ ಆತ ಸತ್ತರೂ ಅಯ್ಯೋ ನಾನು ಕಟ್ಟಿಸಿದ ಮನೆಯಲ್ಲಿ ಬಹಳ ದಿನ ಬದುಕಲಿಲ್ಲ ಎಂದು ಕೊರಗುತ್ತ ಸಾಯಲಾರ.ಬದಲಾಗಿ ನಾನು ಹೋದರೂ ನನ್ನವರಿಗೊಂದು ನೆಲೆ ಇದೆ ಎಂದು ನೆಮ್ಮದಿಯಿಂದ ಸಾಯುತ್ತಾನೆ.ಆಸ್ತ ಮಾಡದವನು ಮಕ್ಕಳನ್ನು ಚೆನ್ನಾಗಿ ಓದಿಸಿದವನು ನಾನಿಲ್ಲದೆಯೂ ನನ್ನವರು ಬದುಕಲು ಗಟ್ಡಿಗರಾಗಿದ್ದಾರೆ ಎಂದು ನಿರಾಳವಾಗಿ ಸಾಯುತ್ತಾನೆ. ಇದೆಲ್ಲ ಇಲ್ಲದವನೂ ಸಹಾ ನಾನು ಹೋದರೇನು ನನ್ನ ಹೆಂಡತಿ ಮಕ್ಕಳು ನನ್ನಂತೆಯೇ ದಿನಾ ದುಡಿದು ತಿನ್ನುತ್ತಾರೆ ಎಂಬ ಭಾವದಲ್ಲಿ ಸಾಯುತ್ತಾನೆ. ಇಲ್ಲಿ ನಾವು ಯಾರೂ ನಮಗಾಗಿ ಬದುಕುವುದಿಲ್ಲ..ಆದರೆ ನಾವೇ ಅಂಟಿಸಿಕೊಂಡ ಬಂಧಗಳಿಗಾಗಿ ಬದುಕುತ್ತೇವೆ.ಹಣ ,ಕೀರ್ತಿ..ಹೀಗೇ ಹತ್ತಾರು ಕಾರಣಗಳಿಂದ ಕುಟುಂಬದ ಜವಾಬ್ದಾರಿ ತೊರೆದ ಬಹಳಷ್ಟು ಬದುಕು ಒಂದು ಹಂತದಲ್ಲಿ ಪ್ರಸಿದ್ಧಿಗೆ ಬಂದರೂ ನಂತರ ಮೂರಾಬಟ್ಟೆಯಾಗಿರುವ ಉದಾಹರಣೆಗಳೂ ನಮ್ಮ ಕಣ್ಣ ಮುಂದಿವೆ. ಗಂಡಿರಲಿ ಹೆಣ್ಣಿರಲಿ..ಕುಟುಂಬ ವ್ಯವಸ್ಥೆ ಗೆ ಒಳಪಟ್ಟ ಮೇಲೆ ಪರಸ್ಪರರ ಗೌರವಿಸುತ್ತಾ ಮನೆ ಕುಟುಂಬ ಎನ್ನುವುದು ಇಬ್ಬರ ಪಾಲಿಗೂ ಹೊರೆಯಾಗದಂತೆ ನಡೆದುಕೊಳ್ಳುವುದು ತೀರಾ ಅನಿವಾರ್ಯ. ಹೀಗೆ ರಾಜಿಯಾಗಲು ಸಾಧ್ಯವಿಲ್ಲದವರು ಸಂಸಾರ ಕಟ್ಡಿಕೊಳ್ಳುವ ಮುನ್ನ ನೂರು ಬಾರಿ ಯೋಚಿಸಬೇಕಿದೆ.ನಮ್ಮ ಬದುಕನ್ನು ನಾವು ಹಾಳುಗೆಡವಬಹುದು ಆದರೆ ನಮ್ಮನ್ನು ನಂಬಿದವರ ಬದುಕನ್ನು ಹಾಳುಗೆಡವಲು ನಮಗಾವ ಅಧಿಕಾರವೂ ಇರುವುದಿಲ್ಲ.. ನಾವು ಬದುಕುವುದು ಕೇವಲ ನಮಗಾಗಿ ಅಲ್ಲ..ನಮ್ಮವರಿಗಾಗಿಯೂ ಹೌದು..ಅದಕ್ಕಾಗಿ ಒಂದಷ್ಟು ನಮ್ಮ ಆಸೆಗಳನ್ನ ಹತ್ತಿಕ್ಕಿಕೊಳ್ಳಲೇಬೇಕಾಗುತ್ತದೆ. ಒಂದು ಹಕ್ಕಿಯೂ ಸಹಾ ತನ್ನ ಮರಿಗಳಿಗೆ ರೆಕ್ಜೆ ಮೂಡಿ ಅವು ಪುರ್ರನೆ ಬಾನಿನಲ್ಲಿ ಹಾರುವ ಸಾಮರ್ಥ್ಯ ಪಡೆವವರೆಗೂ ಕಾಳಜಿಯಿಂದ ಅವುಗಳನ್ನ ಪಾಲಿಸುತ್ತದೆ. ಹಿಂಡಿನಲ್ಲಿ ವಾಸಿಸುವ ಪ್ರಾಣಿಗಳೂ ತಮ್ಮ ಹಿಂಡಿನಲ್ಲಿ ಯಾವುದಾದರೊಂದು ಪ್ರಾಣಿಸಂಕಷ್ಟಕ್ಕೆ ಸಿಲುಕಿದಾಗ ಜೀವದ ಹಂಗು ತೊರೆದು ಅದನ್ನು ಕಾಪಾಡಿದ ಉದಾಹರಣೆಗಳೂ ಇವೆ. ಹೀಗಿರುವಾಗ ನಾವು ಮನುಷ್ಯರು! ಹೇಳಿ ಕೇಳಿ ಸಮಾಜ ಜೀವಿಗಳು..ಕುಟುಂಬ ವ್ಯವಸ್ಥೆಯನ್ನ ಒಪ್ಪಿಕೊಂಡವರು ನನಗಾಗಿ ನಾನು ಬದುಕುತ್ತೇನೆಂದು ಎಲ್ಲ ತೊರೆದು ಅಷ್ಟು ಸುಲಭವಾಗಿ ನಮ್ಮಿಷ್ಟದ ಹಾದಿಯಲ್ಲಿ ಹೋಗಿಬಿಡಲಾಗುತ್ತದೆಯೆ? ಮಕ್ಕಳು ತಮ್ಮ ಅಪ್ಪ- ಅಮ್ಮದಿರು ಇಲ್ಲವಾದಾಗಲೂ ಅವರ ಬಗ್ಗೆ ಕೃತಜ್ಞತೆಯಿಂದ ಪ್ರೀತಿಯಿಂದ ನೆನೆವಂತೆ ನಮ್ಮ ಬಾಳಿರಬೇಕು.ಇಂದಿನ ಫಾಸ್ಟ್ ಜನರೇಷನ್ ರವರು ಇದನ್ನ ಒಪ್ಪುವರೋ ಇಲ್ಲವೊ ತಿಳಿಯದು. ಎಷ್ಟೆಲ್ಲ ಜವಾಬ್ದಾರಿಯುತವಾಗಿ ಮಕ್ಕಳನ್ನು ಬೆಳೆಸಿದರೂ ಮುಂದೆ ಆ ಮಕ್ಕಳು ತಮ್ಮ ತಂದೆ ತಾಯಿಯರನ್ಮು ಹೀನಾಯವಾಗಿ ಕಾಣುವ ,ಅನಾಥಾಶ್ರಮಕ್ಕೆ ತಳ್ಳುವುದೂ ನಡೆಯುತ್ತಲೇ ಇದೆ. ಹಾಗೆಂದು ಎಲ್ಲೋ ಕೆಲವರು ಹೀಗೆ ಮಾಡುತ್ತಾರೆಂದು ಎಲ್ಲಾ ಅಪ್ಪ – ಅಮ್ಮದಿರು ತಮ್ಮ ಮಕ್ಕಳನ್ನ ಓದಿಸದೆ ಒಳ್ಳೆಯ ಸಂಸ್ಕಾರ ಕೊಡದೆ ಬೆಳೆಸಲು ಇಚ್ಛಿಸುವುದೆಲ್ಲಿಯಾದರೂ ಇದೆಯೆ? ನಮ್ಮ ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಶುದ್ಧ ನೀರು ,ಶುದ್ಧ ಭೂಮಿಯನ್ನು ಉಳಿಸೋಣವೆಂದು ಆಶಿಸುವ ನಾವುಗಳು ಅಂತೆಯೇ ಈ ಶುದ್ಧ ಜಗತ್ತಿನಲ್ಲಿ ಎಲ್ಲಾ ರೀತಿಯಿಂದಲೂ ಬದುಕಲು ಅರ್ಹರಾದ ಪೀಳಿಗೆಯನ್ನು ಬೆಳೆಸುವುದೂ ಅಷ್ಟೇ ಮುಖ್ಯ. ತಾನು ಬಾಡಿ ಮಣ್ಣ ಸೇರಿ ಹೋಗುತ್ತೇನೆಂದು ಮಲ್ಲಿಗೆ ಪರಿಮಳ ಸೂಸುವುದ ನಿಲ್ಲಿಸುವುದಿಲ್ಲ. ತಾನು ಹೇಗಿದಗದರೂ ಆರಿ ಕತ್ತಲಾವರಿಸಿಬಿಡುತ್ತದೆಂದು ಒಂದು ಹಣತೆ ಎಣ್ಣೆ ಬತ್ತಿ ಎಲ್ಲಾ ಇದ್ದರೂ ಬೆಳಕು ಕೊಡದೆ ಸುಮ್ಮನಿರುವುದಿಲ್ಲ. ಬದುಕೂ ಅಷ್ಟೇ ..ಮಲ್ಲಿಗೆಯಂತಾಗಲಿ, ಉರಿವ ಹಣತೆಯಂತಾಗಲಿ.ಇರುವಷ್ಟು ದಿನ ಸುತ್ತಮುತ್ತ ಪರಿಮಳವನ್ನೂ ,ಬೆಳಕನ್ನೂ ಚೆಲ್ಲುವಂತಾಗಲಿ. ********* ದೇವಯಾನಿ ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ , ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ , “ತುಂಡು ಭೂಮಿ ತುಣುಕು ಆಕಾಶ” ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ





