ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಊಟ ಮುಗಿಸಿದ ನಮ್ಮಿಬ್ಬರ ಕೈಯಲ್ಲಿಯೂ ಮನೆಗೆ ಮುಟ್ಟಿಸುವಂತೆ ನೀಡಿದ ಕೋಳಿ ಮಸಾಲೆ ಡಬ್ಬಗಳ ಚೀಲ ಹಿಡಿದು ಮತ್ತೆ ಮಂಜಗುಣಿ ತಾರಿಯತ್ತ ಸಂತೃಪ್ತಿಯ ಹೆಜ್ಜೆ ಹಾಕಿದೆವು. ದಾರಿಯುದ್ಧದ ನಮ್ಮ ಚರ್ಚೆಯಲ್ಲಿ ಬಿ.ಎ. ಓದು ಮುಗಿಸಿದ ಬಳಿಕ ನಾವು ನೌಕರಿ ಸೇರುವುದಿದ್ದರೆ ಅದು ಸಾಲೆಯ ತಪಾಸಣಾಧಿಕಾರಿಯಾಗಿಯೇ ತೀರಬೇಕು ಎಂದು ಮನದಲ್ಲಿಯೇ ಸಂಕಲ್ಪ ಮಾಡಿಕೊಂಡಿದ್ದೆವು!

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಕನ್ನಡ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ” ಪಡೆದ ಇವರು ರಂಗಭೂಮಿಹಾಗೂಕಿರುತೆರೆಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿಭಾಷೆಯಸಿನೇಮಾಗಳಲ್ಲಿಅಭಿನಯ. ಕೊಂಕಣಿಸಿನೇಮಾ ” ಅಂತು” ವಿನಅಭಿನಯಕ್ಕೆರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿಪ್ರಸ್ತುತಿ 30 ಯಶಸ್ವೀಪ್ರದರ್ಶನಕಂಡಿದೆ.ಮಂಗಳೂರುವಿಶ್ವವಿದ್ಯಾನಿಲಯದಕೊಂಕಣಿಅಧ್ಯಯನಪೀಠದಸದಸ್ಯೆ. ಪ್ರಸ್ತುತರಾಜ್ಯಕೊಂಕಣಿಸಾಹಿತ್ಯಅಕಾಡಮಿಸದಸ್ಯೆ. “ಅಮೋಘಎಂಬಸಂಸ್ಥೆಹುಟ್ಟುಹಾಕಿಸಾಹಿತ್ಯಿಕಹಾಗೂಸಾಂಸ್ಕೃತಿಕಕಾರ್ಯಕ್ರಮಗಳಆಯೋಜನೆ. ಆಕಾಶವಾಣಿಕಲಾವಿದೆ.ಇದುವರೆಗೆ 3 ಕವನಸಂಕಲನಸೇರಿದಂತೆ 6 ಪುಸ್ತಕಗಳುಪ್ರಕಟಗೊಂಡಿವೆ. GSS ಕಾವ್ಯಪ್ರಶಸ್ತಿ,ಕನ್ನಡಸಾಹಿತ್ಯಪರಿಷತ್ತಿನದತ್ತಿಪ್ರಶಸ್ತಿ,GS Max ಸಾಹಿತ್ಯಪ್ರಶಸ್ತಿ. ಹಲವಾರುಕವಿಗೋಷ್ಠಿಯಲ್ಲಿಭಾಗವಹಿಸುವಿಕೆ

Read Post »

ಅಂಕಣ ಸಂಗಾತಿ, ತೊರೆಯ ಹರಿವು

ಸರ್ವಋತು ಬೆಳೆಗಳಾಗಿರುವ ಸಿರಿಧಾನ್ಯಗಳು ಪರಿಸರ ಪೂರಕವಾದ ಬೆಳೆಗಳು. ಅಧಿಕ ಪೌಷ್ಠಿಕಾಂಶ, ಕಬ್ಬಿಣಾಂಶ, ನಾರಿನಂಶ ಹೊಂದಿರುವುದರಿಂದ ಇವು ಉತ್ತಮ ಆಹಾರವೇ ಆಗಿವೆ. ಜೀವನ ಶೈಲಿ, ಅನುವಂಶೀಯ ಕಾಯಿಲೆಗಳಾದ ಮಧುಮೇಹ, ಆ್ಯಸಿಡಿಟಿ, ರಕ್ತದೊತ್ತಡ, ಮಲಬಾಧೆ, ಕರಳು ಸಂಬಂಧಿ ಕಾಯಿಲೆಗಳೇ ಮೊದಲಾದವುಗಳಿಗೆ ಸಿರಿಧಾನ್ಯಗಳ ನಿಯಮಿತ ಬಳಕೆಯಿಂದ ಶಾಶ್ವತ ಪರಿಹಾರವಿದೆಯೆಂದು ಆಹಾರತಜ್ಞರು ಪ್ರತಿಪಾದಿಸುತ್ತಿದ್ದಾರೆ.

Read Post »

ಅಂಕಣ ಸಂಗಾತಿ, ದೀಪದ ನುಡಿ

ಮನುಷ್ಯ ಮನುಷ್ಯನಿಗಾಗದೆ ಮತ್ತಾರಿಗಾಗುತ್ತಾನೆ? ಸಂಬಂಧಿಗಳು, ಸ್ನೇಹಿತರೆಂದ ಮೇಲೆ ಒಂದಲ್ಲ ಒಂದು ಸಂದರ್ಭದಲ್ಲಿ ಪರಸ್ಪರರಿಗೆ ಸಹಾಯಮಾಡಲೇಬೇಕಾಗುತ್ತದೆ.ಆ ಸಹಾಯ ಭೌತಿಕ ವಸ್ತುವಿನ ರೂಪದಲ್ಲಿರಬಹುದು ಅಥವಾ ಮಾನಸಿಕ ಸಾಂತ್ವನದ ರೂಪದಲ್ಲಿರಬಹುದು. ಇದರಲ್ಲಿ ಅಚ್ಚರಿಯೇನೂ ಇಲ್ಲ

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಇಬ್ಬರೂ ವಚನಕಾರರ ಬದುಕಿನ ಹಿನ್ನೆಲೆಯಲ್ಲಿ ಈ ವಚನವನ್ನು ಗಮನಿಸಬಹುದು. ಬಸವಣ್ಣನವರು ಭಕ್ತಿಭಂಡಾರಿ ಹೇಗೋ ಹಾಗೇ ಬಿಜ್ಜಳನ ಭಂಡಾರದ ಮೇಲ್ವಿಚಾರಣೆ ನೋಡಿಕೊಳ್ಖುತ್ತಿದ್ದವರು. ಅಕ್ಕ ಮಹಾರಾಣಿಯಾಗಿದ್ದವಳು ಕೊನೆಗೆ ತನಗಾಗಿ ಎಲ್ಲವನ್ನೂ ಬಿಟ್ಟು ಬಂದವಳು. ಈ ಹಿನ್ನೆಲೆಯಲ್ಲಿ ಇಬ್ಬರೂ ಆರ್ಥಿಕವಾಗಿ ಸಬಲರು ಮತ್ತು ಸಮಾಜದ ಮೇಲ್ವರ್ಗದಲ್ಲಿ ಇದ್ದವರು. ಹೆಣ್ಣಾಗಿ ಅಕ್ಕ ತಾನೇ ಎಲ್ಲ ಬಿಟ್ಟು ದಿಟ್ಟವಾಗಿ ನಿಂತವಳು, ಆತ್ಮ ಸಂಗಾತಕ್ಕೆ ನೀ ಎನಗುಂಟು ಎಂದು ನಡೆದಂತೆ, ಈ ದೇಹವ ನಾಯಿತಿಂದರೇನು ನೀರು ಕುಡಿದರೇನು ಎಂದು ನಿಂತವಳು. ಈ ಎಲ್ಲ ಹಿನ್ನೆಲೆಯಲ್ಲಿ ಈ ವಚನದಲ್ಲಿ ಒಡಮೂಡುವ ಭಾವದಿಂದ ಇಬ್ಬರ ನಿರ್ಧಾರಗಳೂ ಮಹತ್ತರವಾದವುಗಳು.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—29 ಆತ್ಮಾನುಸಂಧಾನ ಯಕ್ಷಗಾನದ ಹುಚ್ಚು ಹಿಡಿಸಿದ ದಿನಗಳು ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವಾಗ ಆಯ್ದುಕೊಂಡ ಮುಖ್ಯ ಐಚ್ಛಿಕ ವಿಷಯ ಕನ್ನಡ, ಆಗ ನಮಗೆ ಕನ್ನಡ ಕಲಿಸಲು ಕಾಲೇಜಿನಲ್ಲಿ ಪ್ರೊ. ವಿ.ಏ, ಜೋಶಿ ಮತ್ತು ಪ್ರೊ. ಕೇ.ವಿ. ನಾಯಕ ಎಂಬ ಇಬ್ಬರು ಉಪನ್ಯಾಸಕರಿದ್ದರು. ಇಬ್ಬರೂ ಕನ್ನಡ ವಿಷಯ ಬೋಧನೆಯಲ್ಲಿ ಪರಿಣಿತರಾಗಿದ್ದರು. ಹಳಗನ್ನಡ – ಹೊಸಗನ್ನಡ ಕಾವ್ಯಗಳನ್ನು ಜೋಶಿಯವರು ಲೀಲಾಜಾಲವಾಗಿ ಪಾಠ ಮಾಡುತ್ತಿದ್ದರೆ, ನಡುಗನ್ನಡ ಕಾವ್ಯಗಳನ್ನು, ಗದ್ಯ ಮತ್ತು ವ್ಯಾಕರಣಗಳನ್ನು ಅತ್ಯಂತ ಸುಲಲಿತವಾಗಿ ಪ್ರೊ. ಕೇ.ವಿ. ನಾಯಕ ಕಲಿಸುತ್ತಿದ್ದರು. ನಿಜವಾಗಿ ನನಗೂ, ನನ್ನಂಥ ಅನೇಕ ಗೆಳೆಯರಿಗೂ ಕನ್ನಡ ಕಲಿಕೆಯ ಸಾಕ್ಷಾತ್ಕಾರವಾದದ್ದೇ ಇಲ್ಲಿಂದ ಎಂದು ಹೇಳಬಹುದು. ಹಳೆಗನ್ನಡ ಕಾವ್ಯವನ್ನು ಓದುವ ಕ್ರಮ ಮತ್ತು ಗ್ರಹಿಕೆಯ ರೀತಿಯನ್ನು ಮೊದಲ ಬಾರಿಗೆ ಜೋಶಿಯವರಿಂದ ಕಲಿತೆವು. ಕನ್ನಡ ಛಂದಸ್ಸು ಮತ್ತು ಕೇಶಿರಾಜನ ಶಬ್ದಮಣಿದರ್ಪಣ ಎಂಬ ಶುಷ್ಕ ವ್ಯಾಕರಣ ಶಾಸ್ತ್ರ ಗ್ರಂಥವನ್ನು ನಾವೆಲ್ಲ ತಲೆ ತಿನ್ನುವ ವಿಷಯಗಳೆಂದೇ ಭಾವಿಸಿ ಅವುಗಳಿಂದ ಸಾಧ್ಯವಾದಷ್ಟು ದೂರವೇ ಇರುತಿದ್ದೆವು. ಆದರೆ ವ್ಯಾಕರಣದ ಈ ಶುಷ್ಕ ವಿಷಯಗಳನ್ನೂ ತಮ್ಮ ವಿಶಿಷ್ಟ ಶೈಲಿ ಮತ್ತು ಆಕರ್ಷಕ ವ್ಯಕ್ತಿತ್ವದಿಂದ ನಾಯಕರು ನಮ್ಮ ಅಭಿರುಚಿ, ಆಸಕ್ತಿಗಳು ವೃದ್ಧಿಸುವ ರೀತಿಯಲ್ಲಿ ನಮಗೆ ಪಾಠ ಮಾಡಿದರು. ಈ ಉಭಯ ವಿಭಾಗಗಳ ಕಲಿಕೆ ನನ್ನಲ್ಲಿ ಯಕ್ಷಗಾನ ಪ್ರಸಂಗ ರಚನೆಗೆ ಪ್ರೇರಣೆಯಾಯಿತು. ಬಿ.ಏ. ಅಂತಿಮ ವರ್ಷದ ಓದಿನವರೆಗೂ ನಾನು ಯಕ್ಷಗಾನ ಬಯಲಾಟಗಳನ್ನು ನೋಡುತ್ತಿದ್ದೆನಾದರೂ ಅಲ್ಲಿ ಅಭಿನಯಿಸುವ ಆಸೆ ಎಂದೋ ಕಮರಿ ಹೋಗಿತ್ತು. ಕಾಲೇಜಿನಲ್ಲಿ ಕನ್ನಡ ಓದಿನ ಪ್ರಭಾವದಿಂದ ಛಂದಸ್ಸಿಗೆ ಅನುಗುಣವಾಗಿ ಪ್ರಸಂಗ ಪದ್ಯವನ್ನು ಬರೆಯುವ ಗೀಳು ಹುಟ್ಟಿಕೊಂಡಿತು. ಭಾಮಿನಿ, ವಾರ್ಧಕ, ಷಟ್ಪದಿಗಳನ್ನು ಮಾತ್ರೆಗಳೂ, ಗಣಗಳ ಆಧಾರದಿಂದ ಬರೆಯುವುದು, ಪ್ರಾಸಕ್ಕೆ ತಕ್ಕ ಪದಗಳನ್ನು ಹುಡುಕಿ ಹೊಂದಿಸಿ ಬರೆಯುವುದು ಒಂದು ಆಟದಂತೆ ನನ್ನ ಮನಸ್ಸನ್ನು ಆವರಿಸಿತು. ಜೊತೆಯಲ್ಲಿ ನಮ್ಮ ಊರಿನ ಪರಿಸರದಲ್ಲಿ ಆಗಾಗ ಕಾಣಿಸಿಕೊಳ್ಳುವ ಧರ್ಮಸ್ಥಳ, ಮಂಗಳೂರು, ಕೊಲ್ಲೂರು, ಕೊಳಗಿಬೀಸ್ ಮುಂತಾದ ಯಕ್ಷಗಾನ ಮೇಳದ ಆಟಗಳು ನನಗೆ ಪರೋಕ್ಷವಾಗಿ ರಂಗ ಪ್ರಯೋಗದ ತಂತ್ರಗಳನ್ನು ಕಲಿಸಿದವು.. ಶ್ರೇಣಿ ಗೋಪಾಲಕೃಷ್ಣ ಭಟ್, ರಾಮದಾಸ ಸಾಮಗ, ತೆಕ್ಕಟ್ಟೆ ಆನಂದ ಮಾಸ್ತರ, ಗೋವಿಂದ ಭಟ್, ಕುಂಬ್ಳೆ ಸುಂದರ ರಾವ್, ಕೊಳ್ಳೂರು ರಾಮಚಂದ್ರ ಮೊದಲಾದ ತೆಂಕು ತಿಟ್ಟಿನ ಕಲಾವಿದರ ವಾಗ್ವಿಲಾಸ, ರಾಮಚಂದ್ರ ಹೆಗಡೆ ಚಿಟ್ಟಾಣಿ, ಜಲವಳ್ಳಿ, ಎಕ್ಟರ್ ಜೋಷಿ, ಗಜಾನನ ಭಂಡಾರಿ, ಆರಾಟೆ ಮಂಜುನಾಥ, ಎಂ.ಏ. ನಾಯ್ಕ, ಮುರೂರು ದೇವರು ಹೆಗಡೆ, ಈಶ್ವರ ಹೆಗಡೆ ಮುಂತಾದ ಬಡಕು ತಿಟ್ಟಿನ ಕಲಾವಿದರ ನೃತ್ಯಾಭಿನಯದ ಚೆಲುವು ನನಗೆ ಯಕ್ಷಗಾನದ ಹುಚ್ಚು ಹಿಡಿಸಿದಂತೆ ಪ್ರಭಾವಿಸಿದವು. ನಮ್ಮ ಊರಿನಲ್ಲಿ ಎಲ್ಲಾ ಜಾತಿಯ ಜನರೂ ತಮ್ಮದೇ ಆದ ಬಯಲಾಟ ಮೇಳ ಕಟ್ಟಿಕೊಂಡು ವರ್ಷಕ್ಕೊಮ್ಮೆಯಾದರೂ ಬಯಲಾಟ ಪ್ರದರ್ಶನ ಏರ್ಪಡಿಸುವ ಕಾಲ ಅದು. ನಮ್ಮ ಕೇರಿಯಲ್ಲೂ ನಮ್ಮ ತಂದೆ ಗಣಪು ಮಾಸ್ತರರಿಂದ ತರಬೇತಿ ಪಡೆದು ವಾರ್ಷಿಕ ಹರಕೆ ಬಯಲಾಟ ನಡೆಯುತ್ತಿತ್ತು. ನಾನು ಬಿ.ಏ. ಅಂತಿಮ ವರ್ಷದಲ್ಲಿ ಓದುವ ಸಂದರ್ಭ ಡಾ. ರಾಜಕುಮಾರ – ಕಲ್ಪನಾ ಅಭಿನಯಿಸಿದ ‘ಮಹಾಸತಿ ಅರುಂಧತಿ’ ಎಂಬ ಚಲನ ಚಿತ್ರವೊಂದು ತುಂಬ ಜನಪ್ರಿಯವಾಗಿತ್ತು. ಅದರ ಸೊಗಸಾದ ಕಥಾವಸ್ತು ಯಕ್ಷಗಾನಕ್ಕೆ ತುಂಬ ಹೊಂದಿಕೆಯಾಗುವಂತೆ ಕಂಡು ಅದೇ ಕಥೆಯನ್ನು ಆಯ್ದುಕೊಂಡು ನಾನು ‘ಗೌತಮಿ ಮಹಾತ್ಮೆ’ ಎಂಬ ಹೆಸರಿನಲ್ಲಿ ಪ್ರಸಂಗ ರಚನೆ ಮಾಡಿದೆ. ನಮ್ಮ ತಂದೆಯವರು ಅದನ್ನು ತಿದ್ದಿ ಪರಿಷ್ಕರಿಸಿ ನಮ್ಮ ಊರಿನ ಹುಡುಗರು-ಹಿರಿಯರಿಗೆ ತರಬೇತಿ ನೀಡಿ ಪ್ರದರ್ಶನಕ್ಕೆ ಅಣಿಗೊಳಿಸಿದರು. ನನ್ನ ಗೆಳೆಯರೊಂದಿಗೆ ನಾನೇ ಇಲ್ಲಿಯ ಮುಖ್ಯ ಪಾತ್ರ ನಿರ್ವಹಿಸಿ ಪ್ರದರ್ಶನ ನೀಡಿದೆವು. ತುಂಬ ಯಶಸ್ವಿಯಾಗುವುದರೊಂದಿಗೆ ನೆರೆ ಹೊರೆಯ ಕೆಲವು ಊರುಗಳಿಂದಲೂ ಪ್ರದರ್ಶನದ ಬೇಡಿಕೆಗಳು ಬಂದವು. ನಾನು ಪ್ರಸಂಗ ಕರ್ತನಾಗಿ ಸಣ್ಣದೊಂದು ಹೆಸರು ಸಂಪಾದಿಸುವ ಅವಕಾಶ ಪಡೆದೆ, ಮಾತ್ರವಲ್ಲ ಯಕ್ಷಗಾನ ನಟನಾಗಿ ಯಶಸ್ಸು ಪಡೆದ ಮೊದಲ ಹೆಜ್ಜೆಯಾಯಿತು. ಅದೇ ವರ್ಷ ಅಂಕೋಲೆಯ ‘ನೀಲಂಪುರ’ ಎಂಬ ಗ್ರಾಮದ ವಾರ್ಷಿಕ ಹರಕೆ ಆಟದಲ್ಲಿ ಒಂದು ಪಾತ್ರ ನಿರ್ವಹಿಸುವಂತೆ ಅಲ್ಲಿಯ ಸಂಘಟಕ ರಿಂದ ಆಹ್ವಾನ ಬಂದಿತು. ಧೈರ್ಯ ಮಾಡಿ ಈ ಆಹ್ವಾನವನ್ನು ಒಪ್ಪಿಕೊಂಡು ಅಲ್ಲಿ ‘ಚಂದ್ರಹಾಸ ಚರಿತ್ರೆ ಆಖ್ಯಾನದಲ್ಲಿ ಚಂದ್ರಹಾಸ ಪಾತ್ರ ಮಾಡಿದೆ. ನನ್ನ ಕಲ್ಪನೆಗೂ ಮೀರಿ ನಾನು ಪಾತ್ರ ನಿರ್ವಹಣೆಯಲ್ಲಿ ಯಶಸ್ವಿಯಾಗಿದ್ದೆ. ಇದರ ಪರಿಣಾಮದಿಂದ ಮರು ವರ್ಷದಿಂದಲೇ ಅಂಕೋಲಾ ತಾಲೂಕಿನ ಹಳ್ಳಿ ಹಳ್ಳಿಗಳಿಂದ ನನಗೆ ಆಹ್ವಾನಗಳು. ಬರಲಾರಂಭಿಸಿದವು. ಬಂದ ಆಹ್ವಾನಗಳನ್ನು ಒಪ್ಪಿಕೊಳ್ಳುತ್ತ, ವಿವಿಧ ಪಾತ್ರಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತ ತನ್ಮಯತೆಯಿಂದ ಎಲ್ಲ ಪಾತ್ರಗಳನ್ನು ನಿರ್ವಹಿಸತೊಡಗಿದೆ. ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆಗಳು, ಸಂಘಟಕರ ಪ್ರೀತಿ-ಆದರಗಳು, ಕೈಗೆ ಸಿಗುವ ಸಂಭಾವನೆಗಳಿಂದ ನನಗೆ ಯಕ್ಷಗಾನದ ಹುಚ್ಚು ಹೆಚ್ಚತೊಡಗಿತು. ನಂತರ ಎಂ.ಏ. ಓದಲು ನಿರ್ಧರಿಸಿ ಎರಡು ವರ್ಷ ಧಾರವಾಡದಲ್ಲಿ ಕಳೆಯಬೇಕಾದ್ದರಿಂದ ನನ್ನ ವೇಷಗಾರಿಕೆಗೆ ಕಡಿವಾಣ ಹಾಕಲೇ ಬೇಕಾಯಿತು. ಆದರೂ ಆ ಎರಡು ವರ್ಷಗಳ ಅವಧಿಯಲ್ಲಿ ರಾಮಾಯಣದ ವಾಲಿಯ ಸಮಗ್ರ ಬದುಕಿನ ಕತೆಯನ್ನು ಆಯ್ದುಕೊಂಡು ‘ವೀರ ವಾಲಿ’ ಎಂಬ ಪ್ರಸಂಗವನ್ನು, ಒಂದು ಜನಪದ ಕತೆಯನ್ನು ಆಧರಿಸಿ ‘ನಾಗ ಲೋಕ ವಿಜಯ’ ಎಂಬ ಪ್ರಸಂಗವನ್ನು ಬರೆದು ಸಿದ್ಧಪಡಿಸಿದೆ. ಎರಡೂ ಪ್ರಸಂಗಗಳಲ್ಲಿ ಮುಖ್ಯ ಪಾತ್ರ ನಿರ್ವಹಿಸಿದೆ. ಎರಡೂ ಪ್ರಸಂಗಗಳ ಯಶಸ್ಸಿನಲ್ಲಿ ನಮ್ಮ ತಂದೆಯವರು, ಚಿಕ್ಕಪ್ಪಂದಿರು, ಭಾವ ಹೊನ್ನಪ್ಪ ಮಾಸ್ತರ, ಸಹೋದರ ನಾಗೇಶ ಗುಂದಿ ಮುಂತಾದವರ ಪಾತ್ರ ನಿರ್ವಹಣೆ, ಕೃಷ್ಣ ಮಾಸ್ಕೇರಿ, ಸಿದ್ದಾಪುರದ ಹೆಮ್ಮನಬೈಲು ಮತ್ತು ಸತೀಶ ಹೆಗಡೆ ದಂಟಕಲ್, ನನ್ನ ಸೋದರ ಮಾವ ಹಿಲ್ಲೂರಿನ ಗೋಯ್ದು ಆಗೇರ ಮುಂತಾದವರ ಭಾಗವತಿಕೆಯೂ ಪೂರಕವಾಯಿತು ಎಂಬುದು ನಿಸ್ಸಂದೇಹ. ನನ್ನ ಯಕ್ಷರಂಗದ ಯಾತ್ರೆ ಆರಂಭವಾದದ್ದು ಹೀಗೆ. ರಂಗದ ಬದುಕಿನ ಏಳುಬೀಳುಗಳನ್ನು ಮುಂದೆ ಪ್ರಸ್ತಾಪಿಸುವೆ. *************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಎಲ್ಲವೂ ಕನಸಿನಲ್ಲಿ. ಏನೋ ನಡೆದಂತೆ. ಉಮಾಶ್ರೀಯವರು ಮುಖ್ಯಪಾತ್ರದಲ್ಲಿದ್ದ ಸಿನೇಮಾ. ಕೃಷ್ಣಮೂರ್ತಿಯವರಿಗೆ ಅವರ ಗಂಡನ ಪಾತ್ರ. ನನಗೆ ಅವರ ಎರಡನೆಯ ಹೆಂಡತಿಯ ಪಾತ್ರ

Read Post »

ಅಂಕಣ ಸಂಗಾತಿ, ತೊರೆಯ ಹರಿವು

ಅದು ಹೋಗಲಿ ಬಿಡಿ.. ಸದಾ ಆರೇಳು ಮಕ್ಕಳು ಗುಂಪು ಸೇರಿ ಶಾಲಾ ಚೀಲದೊಳಗೆ ಪುಸ್ತಕೇತರ ಹಲವು ಪರಿಕರಗಳನ್ನು ಹೊತ್ತು ಶಾಲೆಗೆ ಹೋಗುತ್ತಿದ್ದ ನಮ್ಮ ತಂಡವು ಯಾವ ‘ಸಾರ್ಥ’ಕ್ಕೂ (ವ್ಯಾಪಾರೀ ತಂಡ) ಕಡಿಮೆ ಇರುತ್ತಿರಲಿಲ್ಲ

Read Post »

ಅಂಕಣ ಸಂಗಾತಿ, ದೀಪದ ನುಡಿ

ಸಾವಿನೊಂದಿಗೇ ಬದುಕುವ ಅನಿವಾರ್ಯತೆ ಈ ಬದುಕಿನದು. ಏನೇ ಇದ್ದರೂ ಏನೇ ಗೆದ್ದರೂ ಕೊನೆಗೊಮ್ಮೆ ಎಲ್ಲ ತೊರೆದು ಹಿಡಿ ಬೂದಿಯಾಗುವುದು ಅಥವಾ ಮಣ್ಣಲ್ಲಿ ಸೇರುವುದು ಕಾಲಚಕ್ರದ ನಿಯಮ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—28 ಆತ್ಮಾನುಸಂಧಾನ ಬಹುಮುಖೀ ವ್ಯಕ್ತಿತ್ವದ ರಾಕಜ್ಜ ನಮ್ಮ ತಾಯಿಯ ಚಿಕಪ್ಪ ರಾಕು. ಬಾಲ್ಯದಲ್ಲಿಯೇ ತಂದೆ, ಅವಳ ವಿವಾಹದ ಬಳಿಕ ತಾಯಿಯನ್ನು ಕಳೆದುಕೊಂಡ ಅವ್ವನಿಗೆ ತೌರುಮನೆಯ ಕಡೆಯಿಂದ ಕೊನೆಯವರೆಗೂ ಹತ್ತಿರದಲ್ಲಿ ಕುಟುಂಬದ ಸದಸ್ಯನೇ ಎಂಬಂತೆ ಆಧಾರವಾಗಿದ್ದವನು ಚಿಕ್ಕಪ್ಪ ರಾಕು. ನಮಗೆಲ್ಲ ಅಕ್ಕರೆಯ ರಾಕಜ್ಜ. ವಿಶೇಷವೆಂದರೆ ಬಾಲ್ಯದಿಂದಲೂ ನನ್ನನ್ನು ವಿಶೇಷವಾಗಿ ಎದೆಗೆ ಹಚ್ಚಿಕೊಂಡು ಅಕ್ಕರೆ ತೋರಿದವನು ರಾಕಜ್ಜನೇ. ಜಾತ್ರೆಗೋ, ಯಕ್ಷಗಾನ ಬಯಲಾಟ ನೋಡುವುದಕ್ಕೋ ನನ್ನನ್ನು ಹೆಗಲೇರಿಸಿಕೊಂಡು ಹೊರಡುವ ರಾಕಜ್ಜ ನಾನು ಬೇಡಿದುದನ್ನು ಕೊಡಿಸುತ್ತ ಮುದ್ದು ಮಾಡಿ ಬೆಳೆಸಿದವನು. ನಾನು ಬೆಳೆದಂತೆ ಕಾರಣಾಂತರಗಳಿಂದ ದೂರವಿರಬೇಕಾದಾಗಲೆಲ್ಲ ಹೆಂಗಸರಂತೆ ಬಿಕ್ಕಿ ಬಿಕ್ಕಿ ಅಳುತ್ತಲೇ ಬೀಳ್ಕೊಡುವ ಅಜ್ಜನ ಅಪಾರವಾದ ಅಕ್ಕರೆಯ ನಡುವೆಯೇ ನನಗೆ ಬುದ್ಧಿ ಬೆಳೆದಂತೆ ಅವನ ವ್ಯಕ್ತಿತ್ವದ ವಿವಿಧ ಮುಖಗಳು ಬಿಚ್ಚಿಕೊಳ್ಳುತ್ತ ವಿಸ್ಮಯವುಂಟುಮಾಡಿದವು. ಅಜ್ಜನ ಕೈ ಹಿಡಿದವಳು ನಾನು ಹುಟ್ಟುವ ಮೊದಲೇ  ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿ ಇಹಲೋಕ ತ್ಯಜಿಸಿದ್ದಳು. ಅಜ್ಜ ಇನ್ನೊಂದು ಮದುವೆ ಮಾಡಿಕೊಂಡಿದ್ದ ನಂತೆ. ಆದರೆ ಅವಳು ಅಜ್ಜನೊಟ್ಟಿಗೆ ಬಹುಕಾಲದ ನಿಲ್ಲದೆ ಅಂಕೋಲೆ ಕಡೆಯ ತೌರುಮನೆಗೆ ಹೊರಟು ಹೋದವಳು ಮತ್ತೆ ತಿರುಗಿ ಬರಲಿಲ್ಲ. ಹಾಗಾಗಿ ನನಗೆ ಬುದ್ಧಿ ಬಲಿತ ಕಾಲದಿಂದಲೂ ಅಜ್ಜ ಒಂಟಿಯಾಗಿರುವುದನ್ನು ಮಾತ್ರ ನಾನು ಕಂಡಿದ್ದೇನೆ. ಮೊದಲ ಹೆಂಡತಿ ಯಿಂದ ಪಡೆದ ಮಗಳನ್ನು ಪ್ರೀತಿಯಿಂದಲೇ ಬೆಳೆಸಿದ ಅಜ್ಜ, ಅವಳು ಹರೆಯಕ್ಕೆ ಬಂದಾಗ ಗುಂಡಬಾಳೆಯ ಕಡೆಯ ಹುಡುಗನೊಬ್ಬನಿಗೆ ಮದುವೆ ಮಾಡಿ ಕೊಟ್ಟವನು ಮಗಳು ಅಳಿಯನೆಂದು ವರ್ಷಕ್ಕೆ ಒಮ್ಮೆ ಅಥವಾ ಅನಿವಾರ್ಯವಾದ ಸಂದರ್ಭದ ಭೇಟಿಯಲ್ಲದೆ ಹೆಚ್ಚಿನ ಒಡನಾಟದ ಸಂಬಂಧ ಉಳಿಸಿಕೊಂಡಿರಲಿಲ್ಲ. ತಂದೆ-ತಾಯಿ ಇಬ್ಬರೂ ಇಲ್ಲದ ತಬ್ಬಲಿ ಎಂಬ ಕಾರಣದಿಂದಲೋ ಅವ್ವನನ್ನೇ ಪ್ರೀತಿಯ ಮಗಳು ಎಂದು ಮಮಕಾರ ತೋರುತ್ತಿದ್ದ. ನಮ್ಮ ಮನೆಯ ಸನಿಹದಲ್ಲಿಯೇ ಅಜ್ಜನಿಗೆ ಸರಕಾರ ನೀಡಿದ ಐದು ಗುಂಟೆ ಭೂಮಿ, ಒಂದು ಜನತಾ ಮನೆಯಿತ್ತು. ಕೃಷಿ ಕೂಲಿ, ತೆಂಗು ಅಡಿಕೆ ಮರ ಹತ್ತಿ ಕೊಯ್ಲು ಮಾಡುವ ಕೌಶಲ್ಯ ರಾಕಜ್ಜನಿಗಿತ್ತು. ಕೂಲಿ ಕೆಲಸದ ಆಳುಗಳಿಗೆ ತಾನೇ ಮುಂದಾಳಾಗಿ ನಾಯಕತ್ವ ವಹಿಸುವ ಅವನ ಮಾತಿಗೆ ಸಮಾಜ ಬಾಂಧವರೂ ಮನ್ನಣೆ ನೀಡಿ ಗೌರವಿಸುತ್ತಿದ್ದರು. ಇದಕ್ಕೆ ಅಜ್ಜನ ಬಹುಮುಖೀ ವ್ಯಕ್ತಿತ್ವವೇ ಕಾರಣವಾಗಿದ್ದಿರಬೇಕೆಂದು ಅನ್ನಿಸುತ್ತದೆ. ಅಜ್ಜನ ಮನಯ ಮುಂದೆ ಒಂದು ಬೃಹತ್ತಾದ ತುಳಸಿ ಕಟ್ಟೆಯಿತ್ತು. ತಲೆ ತಲಾತಂತರಗಳಿಂದ ಬಂದ ಈ ತುಳಸಿ ಕಟ್ಟೆಗೆ ಅಜ್ಜನೇ ಪೂಜಾರಿ. ನಮ್ಮ ಕೇರಿಯಲ್ಲಿ ಇರುವುದು ಇದೊಂದೇ ತುಳಸಿ ಕಟ್ಟೆಯಾದ್ದರಿಂದ ಹಬ್ಬ ಹರಿದಿನಗಳಲ್ಲಿ, ವಿಶೇಷವಾಗಿ ಕಾರ್ತಿಕ ಮಾಸದ ತುಳಸಿ ವಿವಾಹ ಸಂಭ್ರಮದ ಪೂಜೆಯಲ್ಲಿ ಕೇರಿಯ ಎಲ್ಲರೂ ಬಂದು ಭಾಗವಹಿಸುತ್ತಿದ್ದರು. ಇಂಥ ಪೂಜಾ ಸಮಯದಲ್ಲಿ ಮಂಗಳಾರತಿ ಮುಗಿಯುತ್ತಿದ್ದಂತೆ ಅಕ್ಷತೆಯನ್ನು ಹಿಡಿದು ಕುಟುಂಬದ ಮತ್ತು ಊರಿನ ಎಲ್ಲರ ಕ್ಷೇಮದ ಕುರಿತು ಅಜ್ಜ ಪ್ರಾರ್ಥಿಸುತ್ತಿದ್ದ. ಇದೇ ಸಂದರ್ಭದಲ್ಲಿ ಅಜ್ಜನಿಗೆ ದೇವರು ಮೈಮೇಲೆ ಬರುವುದೂ, ಭಕ್ತಾದಿಗಳು ಪ್ರಶ್ನಿಸಿ ಪರಿಹಾರ ಕೇಳುವುದೂ ನಡೆಯುವುದನ್ನು ನಾವು ಕಣ್ಣಾರೆ ಕಾಣುತ್ತಿದ್ದೆವು. ಕೇರಿಯ ಹಲವರು ಬೇರೆಬೇರೆ ಬೇಡಿಕೆಯನ್ನಿಟ್ಟು ಪ್ರಾರ್ಥಿಸಿಕೊಳ್ಳುತ್ತಿದ್ದರು. ಬರುವ ವರ್ಷ ಅದೇ ಹಬ್ಬದ ಪೂಜೆಯಲ್ಲಿ ಹರಕೆಯೊಪ್ಪಿಸಿ ಕೃತಾರ್ಥರಾಗುತ್ತಿದ್ದರು. ಇಂಥ ಪೂಜೆಯ ವಿಶೇಷ ದಿನಗಳಲ್ಲಿ ಅಜ್ಜ ಪೂಜೆ ಮುಗಿಯುವವರೆಗೆ ನಿರಾಹಾರಿಯಾಗಿಯೇ ಇರುತ್ತಿದ್ದ. ಪೂಜೆಯ ಬಳಿಕ ಮಾಡಿದ ಅಡುಗೆಯನ್ನು ದೇವರಿಗೆ, ಪಿತೃಗಳಿಗೆ ಮೀಸಲು ಒಪ್ಪಿಸಿದ ಬಳಿಕವೇ ಊಟ ಮಾಡುತ್ತಿದ್ದ. ಬಹುಶಃ ಇದೇ ಕಾರಣದಿಂದ ಕೇರಿಯ ಎಲ್ಲರೂ ಅಜ್ಜನನ್ನು ಗೌರವ ಭಾವದಿಂದ ಕಾಣುತ್ತಿರಬೇಕು. ನಮ್ಮ ಸಮುದಾಯದ ಸಂಪ್ರದಾಯದಂತೆ ಸಮಾಜದ ಮದುವೆ, ನಾಮಕರಣ, ಅಂತ್ಯಸಂಸ್ಕಾರ ಇತ್ಯಾದಿ ಕರ್ಮಗಳಲ್ಲಿ ಬುಧವಂತ ಮತ್ತು ಕೋಲಕಾರರೆಂಬ ಇಬ್ಬರು ಹಿರಿಯರು ಕಾರ್ಯನಿರ್ವಹಣೆಯ ಸೂತ್ರಧಾರರಾಗಿ ಇರುತ್ತಿದ್ದರು. ಅಜ್ಜನಿಗೆ ಇಂಥ ನಿರ್ದಿಷ್ಟ ಸಾಮಾಜಿಕ ಅಧಿಕಾರವೇನೂ ಇರಲಿಲ್ಲ. ಆದರೆ ಜಾತಿಯ ವಿವಾಹ ಸಂಬಂಧ ಕುದುರಿಸುವ ಮತ್ತು ವಿವಾಹ ಮುಂತಾದ ಮಂಗಳ ಕಾರ್ಯಗಳ ನಿರ್ವಹಣೆಯಲ್ಲಿ ಊರಿನ ಬುಧವಂತ ಕೋಲಕಾರರೂ ಅಜ್ಜನನ್ನೆ ಮುಂದಿಟ್ಟುಕೊಂಡು ಅವನ ಸಲಹೆ-ಸಹಕಾರದಿಂದಲೇತಮ್ಮ ಜವಾಬ್ದಾರಿಯನ್ನು ಪೂರೈಸುವುದು ಅಜ್ಜನ ವ್ಯಕ್ತಿತ್ವದ ಒಂದು ಹೆಚ್ಚುಗಾರಿಕೆಯೆಂದೇ ತೋರುತ್ತಿತ್ತು. ರಾಕಜ್ಜನ ವ್ಯಕ್ತಿತ್ವದ ಬಹುಮುಖ್ಯವಾದ ಭಾಗವೆಂದರೆ ಯಕ್ಷಗಾನ. ಮಾಸ್ಕೇರಿಯ ಹಿರಿಯ ಯಕ್ಷಗಾನ ಕಲಾವಿದರೂ, ಪ್ರಸಂಗಕರ್ತರೂ, ವಿದ್ವಾಂಸರೂ ಆದ ತಿಮ್ಮಣ್ಣ ಗಾಂವಕಾರ ಎಂಬವರು ನಮ್ಮ ಸಮಾಜದ ಯುವಕರನ್ನು ಸಂಘಟಿಸಿ ಯಕ್ಷಗಾನ ತರಬೇತಿ ನೀಡುತ್ತಿದ್ದರೆಂದೂ, ಇದೇ ಕಾರಣದಿಂದ ಅವರು ತಮ್ಮ ಜಾತಿ ಬಾಂಧವರಿಂದ ಬಹಿಷ್ಕಾರದ ಶಿಕ್ಷೆ ಅನುಭವಿಸಿದ್ದರಂದೂ ನಾನು ನನ್ನ ಹಿಂದಿನ ಬರಹಗಳಲ್ಲಿ ಉಲ್ಲೇಖಿಸಿದ್ದೇನೆ. ಇದೇ ತಿಮ್ಮಣ್ಣ ಗಾಂವಕರರ ಶಿಷ್ಯ ಬಳಗದಲ್ಲಿ ತರಬೇತಿ ಪಡೆದ ನಮ್ಮ ರಾಮಕಜ್ಜನು ಉತ್ತಮ ಯಕ್ಷ ಕಲಾವಿದನಾಗಿಯೂ ಪ್ರಸಿದ್ಧಿ ಪಡೆದಿದ್ದ. ವಿಶೇಷವಾಗಿ ಸ್ತ್ರೀ ಪಾತ್ರದಲ್ಲಿ ಪರಿಣಿತಿ ಹೊಂದಿದ್ದ ರಾಕಜ್ಜನು ದಕ್ಷಿಣದ ಕಡೆಯ ಯಕ್ಷಗಾನ ಕಲಾವಿದರಂತೆ (ಸ್ತ್ರೀ ಪಾತ್ರಗಳಿಗೆ ಅನುಕೂಲಕರವಾಗಿ) ಉದ್ದ ತಲೆಗೂದಲು ಬಿಟ್ಟುಕೊಂಡೇ ಇದ್ದ. ಅವನ ಮೂಗಿನಲ್ಲಿ ಮೂಗುತಿಯ ಗುರುತುಗಾಯ, ಕಿವಿಯಲ್ಲಿ ಕಿವಿಯೋಲೆ ಚುಚ್ಚುವ ಗಾಯಗಳನ್ನು ನಾನು ದೊಡ್ಡವನಾದ ಮೇಲೆಯೂ ಗಮನಿಸಿದ್ದೇನೆ. ಆದರೆ ನಾನು ಯಕ್ಷಗಾನ ಪಾತ್ರ ಮಾಡಲಾರಂಭಿಸಿದಾಗ ರಾಕಜ್ಜ ವಯೋ ಸಹಜ ಕಾರಣಗಳಿಂದ ಸ್ತ್ರೀ ಪಾತ್ರ ಮಾಡುವುದನ್ನು ಸಂಪೂರ್ಣ ನಿಲ್ಲಿಸಿದ್ದ. ತೀರ ಅಪರೂಪವಾಗಿ ಪುರುಷ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ಒಂದು ತಾಮ್ರಧ್ವಜ ಕಾಳಗ ಯಕ್ಷಗಾನ ಬಯಲಾಟದಲ್ಲಿ ಅಜ್ಜನೇ ಅರ್ಜುನನಾಗಿ ಪಾತ್ರ ವಹಿಸಿದ್ದರೆ ನಾನು ಕೃಷ್ಣನ ಪಾತ್ರ ಮಾಡಿದ್ದೆ. ಅದೇ ಪ್ರಸಂಗದಲ್ಲಿ ನಾನು ಬಲಗೈಯಲ್ಲಿ ಬಿಲ್ಲು ಹಿಡಿದು ಎಡಗೈಯಲ್ಲಿ ಬಾಣ ಪ್ರಯೋಗಿಸುವಂತೆ ತಪ್ಪಾಗಿ ಅಭಿನಯಿಸಿದೆನೆಂದು ಆಟದ ಮರುದಿನ ಎಲ್ಲರೆದುರು ಅಜ್ಜ ಅಪಹಾಸ್ಯ ಮಾಡಿ ನಕ್ಕಿದ್ದು ಅಜ್ಜನ ರಂಗಪ್ರಜ್ಞೆಯ ವಿವೇಕವೇ ಆಗಿತ್ತು ಎಂಬುದು ನಿಧಾನವಾಗಿ ನನಗೆ ಅರಿವಾಯಿತು. ಅಜ್ಜನಿಗೆ ಅಕ್ಷರಾಭ್ಯಾಸವಿರಲಿಲ್ಲ. ಯಕ್ಷಗಾನ ಕಲೆಯ ಆರಾಧಕನಂತೆ ಅದನ್ನು ಹಚ್ಚಿಕೊಂಡಿದ್ದ ಆತನಿಗೆ ಮಹಾಭಾರತಗಳು ಕಂಠಪಾಠದಂತೆ ಅವನ ಸ್ಮೃತಿಯಲ್ಲಿ ನೆಲೆಸಿದ್ದವು. ಭಾರತದ ಹದಿನೆಂಟು ಪರ್ವಗಳಲ್ಲಿ ಯಾವ  ಏನಿದೆ? ಎಂಬುದನ್ನು ತಪ್ಪಿಲ್ಲದೆ ಹೇಳುತ್ತಿದ್ದ. ಯಾವುದೇ ಹೊಸ ಪ್ರಸಂಗವಿದ್ದರೂ ಅದರ ಪದ್ಯವನ್ನು ಕೇಳುತ್ತಲೇ ಅರ್ಥ ವಿವರಿಸುವ ಪ್ರಾಜ್ಞತೆ ಅವನಿಗೆ ಲೋಕಾನುಭವದಿಂದಲೇ ಸಾಧ್ಯವಾಗಿತ್ತು. ನಾನು ನಮ್ಮೂರಿನ ಬಯಲಾಟ ಪ್ರದರ್ಶನಗಳಿಗಾಗಿ ನನ್ನ ಬಿ.ಎ. ದ್ವಿತೀಯವರ್ಷದ ಕಲಿಕೆಯ ಹಂತದಲ್ಲಿಯೇ ಯಕ್ಷಗಾನ ಪ್ರಸಂಗ ರಚನೆಗೆ ತೊಡಗಿದ್ದೆ. ಆಗ ನಮ್ಮ ತಂದೆಯವರೂ ಸಮರ್ಥ ಕಲಾವಿದರೂ, ಭಾಗವತರೂ ಆಗಿ ಸುತ್ತೆಲ್ಲ ಪ್ರಸಿದ್ಧಿ ಪಡೆದಿದ್ದರು. ನಾನು ರಚಿಸಿದ ಪದ್ಯಗಳನ್ನು ಅವರಿಗೆ ತೋರಿಸಿ ಸರಿಪಡಿಸಿಕೊಳ್ಳಲು ಧೈರ್ಯವಿಲ್ಲದೆ ನಾನು ರಾಕಜ್ಜನನ್ನೇ ಅವಲಂಬಿಸಿದ್ದೆ. ನಾಲ್ಕಾರು ಭಾಮಿನಿ-ವಾರ್ಧಕ ಷಟ್ಪದಿಗಳನ್ನು, ವಿವಿಧ ತಾಳಗಳ ಪದ್ಯಗಳನ್ನು ಬರೆದಾದ ಬಳಿಕ ಅಜ್ಜನ ಮುಂದೆ ಹಾಡಿ ತೋರಿಸುತ್ತಿದ್ದೆ. ಅದರ ಅರ್ಥ ಹೇಳುವುದರೊಂದಿಗೆ ಹಾಡಲು ಸರಿಹೊಂದದಿದ್ದರೆ ಛಂದೋ ದೋಷವಿದೆಯೆಂದೂ ಅಜ್ಜ ಸಲಹೆ ನೀಡುತ್ತಿದ್ದ. ತನಗೆ ಲಭ್ಯವಾದ ಸಂಕುಚಿತ ಪರಿಸರದಲ್ಲಿಯೇ ತನ್ನ ಅದ್ಭುತ ವ್ಯಕ್ತಿತ್ವಕ್ಕೆ ಸಾಣೆ ಹಿಡಿಸಿಕೊಂಡು ಬೆಳೆದು-ಬೆಳಗಿ ಮರೆಯಾದ ರಾಕಜ್ಜ ಇಂದಿನ ಆಧುನಿ ಪ್ರಪಂಚದಲ್ಲಿ ಬದುಕಿ ಇದ್ದಿದ್ದರೆ?…… ಎಂದು ಹಲವು ಬಾರಿ ನನಗನಿಸಿದೆ ******************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.‌ಯಕ್ಷಗಾನ ಕಲಾವಿದ.‌ ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ‌ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,‌ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ.‌ ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ‌ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ‌ಕನ್ನಡಿಗರ ಎದುರು ಇಡುತ್ತಿದೆ

Read Post »

You cannot copy content of this page

Scroll to Top