ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಗಜಲ್ ಲೋಕ

ಅಂಕಣ ಸಂಗಾತಿ ಗಜಲ್ ಲೋಕ ಗಿರಿಯಪ್ಪನವರ ಗಜಲ್ ಝರಿಯಲ್ಲಿ ಗಜಲ್ ಗುನುಗುತ್ತಿರುವ ಸಹೃದಯಿಗಳೆ, ತಮಗೆಲ್ಲರಿಗೂ ಗಜಲ್ ಪಾಗಲ್ ನ ದಿಲ್ ಸೇ ಸಲಾಮ್…ಗುರುವಾರ ಬಂತೆಂದರೆ ಸಾಕು, ತಾವುಗಳು ಗಜಲ್ ಗೋ ಒಬ್ಬರ ಪರಿಚಯದ ನಿರೀಕ್ಷೆಯಲ್ಲಿರುತ್ತೀರಿ ಎಂಬುದ ನಾ ಬಲ್ಲೆ… ತಮ್ಮೆಲ್ಲರ ಈ ಪ್ರೀತಿಗೆ, ಕನವರಿಕೆಗೆ ಹೇಗೆ ಪ್ರತಿಕ್ರಿಯಿಸಲಿ…ತಮ್ಮೆಲ್ಲರ ಪ್ರೀತಿಗೆ ಸೋತು ಪ್ರತಿ ವಾರದಂತೆ ಈ ವಾರವೂ ಸಹ ಓರ್ವ ಗಜಲ್ ಕಾರ ಒಬ್ಬರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರುತಿದ್ದೇನೆ. ಸ್ವಾಗತಿಸುವಿರಲ್ಲವೇ….!! “ಇನ್ನೂ ಹಲವು ನೋವುಗಳಿವೆ ಪ್ರೀತಿಯನ್ನು ಹೊರತುಪಡಿಸಿ ಸುಖಗಳು ಇನ್ನೂ ಇವೆ ಮಿಲನದ ಸುಖವನ್ನು ಹೊರತುಪಡಿಸಿ“ – ಫೈಜ್ ಅಹ್ಮದ್ ಫೈಜ್          ನಮ್ಮ ಲೋಕ ನಿರಂತರವಾಗಿ ಚಲಿಸುತ್ತಲೆ ಇರುತ್ತದೆ. ನಿಂತವರಿಗೂ ಕಾಣಿಸುತ್ತದೆ, ತುಸು ಮಾತ್ರ. ನಡೆಯುತ್ತ ನೋಡುತ್ತಿರುವವರಿಗೆ ಲೋಕದೊಡನೆ ಬೆರೆಯಲು, ಅನುಸಂಧಾನಗೈಯಲು ಸಾಧ್ಯವಾಗುತ್ತದೆ. ಹಾಗೆ ಬೆರೆತಾಗ ಮಾತ್ರ ಮನುಷ್ಯ ತನ್ನನ್ನು ತಾನು ಮರೆಯಲು ಸಾಧ್ಯವಾಗಬಹುದು. ಆವಾಗ ತಾನು ಕಳೆದುಕೊಂಡದ್ದನ್ನು ಹುಡುಕಲು ಪ್ರಯತ್ನಿಸಿ ಲೌಕಿಕದಾಚೆಯ ಪರಪಂಚವನ್ನು ಎದುರುಗೊಳ್ಳುತ್ತಾನೆ. ಈ ಲೌಕಿಕ-ಅಲೌಕಿಕದ ನಡುವೆ ಇರುವ ಬಾಳು ಯಾರಿಗೂ ಅಷ್ಟು ಸರಳವಾಗಿ, ಸುಲಭವಾಗಿ ದಕ್ಕಲಾರದು. ಯಾವ ಸಂಗತಿಗಳು ನಮಗೆ ಬಿಡುಗಡೆಯ ದಾರಿಯನ್ನು ತೋರಿಸುತ್ತವೆ ಎಂದುಕೊಂಡಿರುತ್ತೇವೆಯೊ ಅವೆ ನಮಗೆ ಹಲವು ಬಾರಿ ಬಂಧಿನಕ್ಕೆ ಕಾರಣವಾಗುತ್ತವೆ! ಈ ಹಿನ್ನೆಲೆಯಲ್ಲಿ ಬದುಕು ಒಂದೇ ಬಾರಿಗೆ ಅರ್ಥವಾಗುವುದಿಲ್ಲ. ತಾಯಿಯ ಗರ್ಭದಿಂದ ಭೂಮಿಗೆ ಚುಂಬಿಸುವಾಗ ಆರಂಭವಾದ ಜೀವನವು ಮಣ್ಣಲಿ ಮಣ್ಣಾಗುವವರೆ ಸದಾ ಕಲಿಯುತ್ತಲೆ, ಕಲಿಸುತ್ತಲೆ ಇರುತ್ತದೆ. ಈ ಕಲಿಕೆಗೆ ಹಲವು ಆಯಾಮಗಳಿವೆ. ಅವುಗಳಲ್ಲಿ ಸಾಂಸ್ಕೃತಿಕ ರಾಯಭಾರತ್ವವನ್ನು ಹೊತ್ತಿರುವ ಸಾಹಿತ್ಯದ ಪಾತ್ರ ಅನಾಯಾಸವಾಗಿ ಕೈಗೆ ಎಟುಕದು. ಕಾಲಾತೀತ, ದೇಶಾತೀತವಾದ ಬರಹದ ದಾಸ್ತಾನ್ ಸಹೃದಯ ಓದುಗರ ಮನದಲ್ಲಿ ದಿನನಿತ್ಯವೂ ಪೂಜೆಗೆ ಒಳಪಡುತ್ತಿದೆ‌. ಪೂಜಿಸ್ಪಲ್ಪಡುತ್ತಿರುವ ಹಲವು ಸಾಹಿತ್ಯದ ಪ್ರಕಾರಗಳಲ್ಲಿ ‘ಗಜಲ್’ ಎಂಬ ದಿಲ್ ಕಾ ಆಯಿನಾ ಮುಂಚೂಣಿಯಲ್ಲಿದೆ.‌ ಮೋಹದ ನಿರ್ವಾಣವನ್ನು ಕಡಿತಗೊಳಿಸಿ ಲೌಕಿಕ ಮತ್ತು ಅಲೌಕಿಕ ಎರಡೂ ಒಂದೇ ಎಂದು ಹೇಳುವ ‘ಗಜಲ್’ ಮನುಕುಲದ ಐಹಿಕ ಬದುಕಿನ ಘನತೆಯನ್ನು ಹೆಚ್ಚಿಸಿದೆ. ಈ ನೆಲೆಯಲ್ಲಿ ಗಮನಿಸಿದಾಗ ಜಗತ್ತಿನ ಯಾವ ಭಾಗದಲ್ಲಿ ನಿಂತು ನೋಡಿದರೂ ಗಜಲ್ ಅಲ್ಲಿಯ ಜನರ ಧ್ವನಿಯಾಗಿ ಕೇಳಿಸುತ್ತದೆ!! ಇದಕ್ಕೆ ಭಾಷೆ, ಭೌಗೋಳಿಕತೆ, ಸಂಸ್ಕೃತಿ, ತತ್ವ, ಜಾತಿ, ಧರ್ಮಗಳ ಹಂಗಿಲ್ಲ. ಎಲ್ಲ ಇದ್ದು ಏನೂ ಇಲ್ಲದಂತೆ ಬದುಕುವ, ಏನು ಇಲ್ಲದಿದ್ದರೂ ಎಲ್ಲ ಇದೆ ಎಂದು ಬಾಳಲು ಕಲಿಸುವ ಉಸ್ತಾದ್ ಎಂದರೆ ಅದು ನಮ್ಮ ಈ ಗಜಲ್. ಇದು ಮನುಷ್ಯನ ಘನತೆಯನ್ನು ಹೆಚ್ಚಿಸುತ್ತ, ಪ್ರೇಮದ ಸ್ವಾತಂತ್ರ್ಯವನ್ನು ಅನುಭಾವ ಮಾಡಿಸುತ್ತದೆ. ಇಂಥಹ ‘ಗಜಲ್’ ಗುಂಗಿನಲ್ಲಿರುವ ಅಸಂಖ್ಯಾತ ಸುಖನವರ್ ಗಳಲ್ಲಿ ಕಿರಸೂರ ಗಿರಿಯಪ್ಪ ಅವರೂ ಒಬ್ಬರು.       ಕಿರಸೂರ ಗಿರಿಯಪ್ಪ ಎಂಬ ಕಾವ್ಯನಾಮದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಚಿರಪರಿಚಿತರಾಗಿರುವ ಗಿರಿಯಪ್ಪ ಆಸಂಗಿಯವು ಬಾಗಲಕೋಟದ ಕಿರಸೂರ ಗ್ರಾಮದವರು. ಎಂ.ಎ ಕನ್ನಡ ಪದವೀಧರರಾದ ಶ್ರೀಯುತರು ತಮ್ಮ ಕಾಲೇಜು ದಿನಗಳಿಂದಲೇ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದು, ತಮ್ಮನ್ನು ತಾವು ಬರಹದಲ್ಲಿ ತೊಡಗಿಸಿಕೊಂಡಿದ್ದಾರೆ. ‘ನಾಭಿಯ ಚಿಗುರು’ (೨೦೧೫) ಎಂಬ ಕವನ ಸಂಕಲನ, ‘ಅಲೆವ ನದಿ’ (೨೦೨೦) ಎಂಬ ಗಜಲ್ ಸಂಕಲನಗಳನ್ನು ಪ್ರಕಟಿಸಿ ಓದುಗರ ಜ್ಞಾನದ ಮಡಿಲಿಗೆ ಹಾಕಿದ್ದಾರೆ. ಇವರ ಹಲವು ಕಾವ್ಯ, ಗಜಲ್ ಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.‌ ಸದ್ಯ ಇವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಗುಗಲಗಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.         ಸದಾ ಕ್ರಿಯಾಶೀಲರಾಗಿರುವ ಕಿರಸೂರ ಗಿರಿಯಪ್ಪ ಅವರಿಗೆ ನಾಡಿನ ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ೨೦೧೫ರಲ್ಲಿ ಇವರ ಚೊಚ್ಚಲ ಕೃತಿಗೆ ಪುಸ್ತಕ ಪ್ರಾಧಿಕಾರ ಕರ್ನಾಟಕ ಸರಕಾರ ಪ್ರೋತ್ಸಾಹ ಧನ ಲಭಿಸಿದೆ. ಸಂಚಯ ಬೇಂದ್ರೆ ಸ್ಮೃತಿ ಕಾವ್ಯ ಪ್ರಶಸ್ತಿ (೨೦೧೪), ಸಂಕ್ರಮಣ ಕಾವ್ಯಪ್ರಶಸ್ತಿ (೨೦೧೫, ೨೦೧೮), ತುಷಾರ ಚಿತ್ರಕಾವ್ಯ ಬಹುಮಾನ (ಎರಡು ಸಲ), ಜನಮಿತ್ರ ಸಂಕ್ರಾಂತಿ-ಸಂಬ್ರಮದ ಪ್ರಥಮ ಕಾವ್ಯ ಪ್ರಶಸ್ತಿ (೨೦೧೭), ದಲಿತ ಯುವ ಕಾವ್ಯ ಪ್ರಶಸ್ತಿ (೨೦೧೮), ‘ಪ್ರಜಾಪ್ರಗತಿ ದೀಪಾವಳಿ’ ವಿಶೇಷಾಂಕ ಕಾವ್ಯಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ (೨೦೧೮)…ಮುಂತಾದವುಗಳು ಶ್ರೀಯುತರಿಗೆ ಸಂದಿವೆ.           ನಮ್ಮ ಬದುಕಿನ ತಲ್ಲಣಗಳೆ ‘ಗಜಲ್’ ನ ಸ್ಥಾಯಿಭಾವ. ಅಂತಃಕರಣವೆ ಇದರ ಬೇರು. ಇಂದು ಗಜಲ್ ಒಂದು ಕಾವ್ಯ ಪ್ರಕಾರಕ್ಕೆ ಮಾತ್ರ ಸೀಮಿತವಾಗಿರದೆ ನಮ್ಮ ದಿನನಿತ್ಯದ ಮನಸ್ಥಿತಿಯಾಗಿದೆ. ಇದು ಲೌಕಿಕ-ಅಲೌಕಿಕ ಪ್ರಪಂಚಕ್ಕೆ ಅಂಟಿಕೊಳ್ಳದೆ ಎರಡರ ಛಾಯೆಯನ್ನು ಒಳಗೊಂಡಿದೆ. ಭೋಗ ಜೀವನದ ತುತ್ತ ತುದಿಯಲ್ಲಿ ನಿಂತು ಯೋಗಿಯಾಗುವ ಕಲೆ ಗಜಲ್ ಗೆ ಕರಗತವಾಗಿದೆ. ಬಹುತ್ವವೇ ಇದರ ಉಸಿರು, ವಿಶ್ವ ಪ್ರಜ್ಞೆಯೆ ಇದರ ಜೀವಾಳ. ಗಿರಿಯಪ್ಪನವರ ಗಜಲ್ ಗಳಲ್ಲಿ ಲೌಕಿಕ ಬದುಕಿನ ನಿತ್ಯ ಸಂಕಟಗಳ ಅನಾವರಣವಿದೆ. ಜನಪದರ ಯಶೋಗಾಥೆ, ಸಾಮಾಜಿಕ ತುಮುಲಗಳು, ಮೌಲ್ಯಗಳ ಹುಡುಕಾಟ, ಜಾಗತೀಕರಣದ ಕಪಿಮುಷ್ಟಿ, ಸಂಬಂಧಗಳ ಕಣ್ಣಾಮುಚ್ಚಾಲೆ, ದುಡ್ಡುಳ್ಳವರ ಲಂಪಟತನ, ಅಧಿಕಾರದ ಧೃತರಾಷ್ಟ್ರ ಮೋಹ, ಧರ್ಮಗಳ ಜಂಗಿ ಕುಸ್ತಿ, ಜಾತಿಗಳ ಕೆಸರೆರಚಾಟ…. ಇವುಗಳೊಂದಿಗೆ ಪ್ರೀತಿ, ಪ್ರೇಮ ಹಾಗೂ ವಿರಹಗಳ ಜುಗಲ್ ಬಂಧಿಯ ಹದವಾದ ಮಿಶ್ರಣದಿಂದ ಇವರ ‘ಗಜಲ್’ ಗಳು ಓದುಗರ ಎದೆಗೆ ದಸ್ತಕ್ ನೀಡುತ್ತಿವೆ.         ಮನುಷ್ಯನ ಮೂಲ ಅವಶ್ಯಕತೆಗಳಲ್ಲಿ ಅನ್ನದ ಪಾತ್ರ ಮಹತ್ವದ್ದಾಗಿದೆ. ಈ ಸಂಸಾರದಲ್ಲಿ ಪ್ರತಿಕ್ಷಣ ಹಸಿವಿನ ಬೇಗೆಗೆ ಸಿಲುಕಿ ಉಸಿರಿಗೆ ವಿದಾಯ ಹೇಳುತ್ತಿರುವವರ ಸಂಖ್ಯೆ ಆಗಸದ ತಾರೆಗಳನ್ನೂ ಮೀರಿಸುವಂತಿದೆ. ಆದಾಗ್ಯೂ.. ಆದಾಗ್ಯೂ ಪ್ರೀತಿಯಿಂದ ವಂಚಿತವಾದ ಜೀವಿಗಳು ಅದೆಷ್ಟೋ…!! ಗಜಲ್ ಗೋ ಕಿರಸೂರ ಗಿರಿಯಪ್ಪ ಅವರು ಈ ಷೇರ್ ನಲ್ಲಿ ಪ್ರೀತಿಯ ಸಾರ್ವತ್ರಿಕತೆಯನ್ನು ಸಾರಿದ್ದಾರೆ. “ಪ್ರೀತಿ ಗೆಲ್ಲದ ಪದಗಳು ಎಷ್ಟು ಹಾಡಿದರೇನು! ಬೆಳಕಿನಾಚೆ ಎದೆಗೆ ನಾಟದ ಧರ್ಮಗಳ ಎಷ್ಟು ಹುಡುಕಿದರೇನು! ಕತ್ತಲಿನಾಚೆ”  ನಾವಾಡುವ ಮಾತುಗಳಿಗೆ ಪ್ರೀತಿಯ ತಳಪಾಯವಿರಬೇಕು, ಕಾಳಜಿಯ ಆಲಿಂಗನವಿರಬೇಕು; ನೋವಿಗೆ ಮಿಡಿಯುವ ಹೃದಯವಿರಬೇಕು. ಇಲ್ಲದಿರೆ ಆ ಮಾತುಗಳು ಮಾತಾಗದೆ ಬರೀ ಕಿವಿ ತಮಟೆ ಹರಿಯುವ ಕರ್ಕಶ ಸದ್ದು, ಗದ್ದಲಗಳಾಗುವವು. ಇನ್ನೂ ಮೂಲಭೂತವಾಗಿ ‘ಧರ್ಮ’ ಎಂದರೆ ಬದುಕುವ ಪದ್ಧತಿ ಎಂದು. ಆದರೆ ನಮ್ಮ ಮಧ್ಯೆ ಇರುವ ಧರ್ಮಗಳು ಬಾಳಿಗೆ ಬೆಳಕಾಗುವುದಕ್ಕಿಂತ ಕತ್ತಲೆಯಾಗುತ್ತಿರೋದೆ ಹೆಚ್ಚು ಎಂದು ಗಜಲ್ ಗೋ ಆತಂಕವನ್ನು ವ್ಯಕ್ತಪಡಿಸಿದ್ದಾರೆ.‌      ‘ಗಾಯ’ಗಳು ಗುಣವಾದರೆ ಜೀವನ ಆರೋಗ್ಯಮಯ, ಹಸಿಯಾಗಿಯೆ ಉಳಿದರೆ ಬದುಕು ಪ್ರೇಮಮಯ. ಯಾವ ಪ್ರೇಮಿಯೂ ತನ್ನ ಎದೆಗಾದ ಗಾಯ ಮಾಯಲಿ ಎಂದು ಬಯಸುವುದೆ ಇಲ್ಲ. ಅದು ಹಸಿಯಿದ್ದಷ್ಟು ಪ್ರೀತಿ ಹಚ್ಚ ಹಸಿರಾಗಿರುತ್ತದೆ. ಇದನ್ನೇ ಗಿರಿಯಪ್ಪ ನವರು ತಮ್ಮ ಅಶಅರ್ ನಲ್ಲಿ ಹೃದಯಕ್ಕೆ ನಾಟುವಂತೆ ಸೆರೆ ಹಿಡಿದಿದ್ದಾರೆ. “ನನ್ನೆದೆಯಾಗ ನಿನ್ನ ಕಾಲ್ಗೆಜ್ಜೆ ಗುರುತು ವಾಸಿಯಾಗದ ಚಿತ್ರ ನನ್ನೆದೆಯಾಗ ನಿನ್ನ ಕೈಬಳೆ ಸಂಗೀತ ಅಳಿಸಲಾಗದ ಚಿತ್ರ“ ಕಾಲ್ಗೆಜ್ಜೆ, ಕೈ ಬಳೆಗಳ ಕಲರವ ಪ್ರೀತಿಸುವ ಜೀವಿಗಳ ಆಯುಷ್ಯವನ್ನು ವೃದ್ಧಿಸುತ್ತವೆ.‌ ಇವುಗಳ ಸದ್ದು ಪ್ರೇಮಲೋಕದ ನಿನಾದವನ್ನು ಸೂಸುತ್ತದೆ. ಈ ಮೇಲಿನ ಷೇರ್ ಪ್ರೇಮಿಯೊಬ್ಬನ ಅಂತರಂಗದ ರಂಗೋಲಿಯಂತೆ ಕಂಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗಿರಿಯಪ್ಪ ನವರ ‘ಗಜಲ್’ಗಳು ಹೃದಯಕ್ಕೆ ಹತ್ತಿರವಾಗುತ್ತವೆ.         ಇಂದು ಕನ್ನಡ ಸಾಹಿತ್ಯ ಲೋಕದಲ್ಲಿ ‘ಗಜಲ್’ ಸಾಹಿತ್ಯ ಪ್ರಕಾರವನ್ನು ಕೇಳದ, ಇಷ್ಟ ಪಡದ ಸಾಹಿತ್ಯ ಪ್ರೇಮಿಗಳು ಸಿಗುವುದು ದುರ್ಲಭವೇ ಸರಿ. ಇಂಥಹ ‘ಗಜಲ್’ ಗಂಗೆಯಲ್ಲಿ ಮೀಯುತ್ತಿರುವ ಗಜಲ್ ಗೋ ಕಿರಸೂರ ಗಿರಿಯಪ್ಪ ಅವರಿಂದ ‘ಗಜಲ್’ ಕ್ಷೇತ್ರ ಮತ್ತಷ್ಟು ಸಂಪತ್ಭರಿತವಾಗಲಿ ಎಂದು ಶುಭ ಕೋರುತ್ತೇನೆ.  “ವಿಚಿತ್ರ ದೀಪ ನಾನು ಹಗಲು ರಾತ್ರಿ ಉರಿಯುತ್ತಿದ್ದೇನೆ ನಾನು ದಣಿದಿದ್ದೇನೆ ಗಾಳಿಗೆ ಹೇಳಿ ನನ್ನನ್ನು ನಂದಿಸಲು“ – ಬಶೀರ್ ಬದ್ರ          ಗಜಲ್ ಗುಲ್ಜಾರ್ ನ ಸುತ್ತಾಟ ತಮ್ಮ ಕನಸು-ಮನಸುಗಳಿಗೆ ಮುದ ನೀಡುತ್ತಿದೆ ಎಂದುಕೊಂಡಿರುವೆ, ನಿಜವಲ್ಲವೆ… ಹೂಂ ಎಂದು ತಲೆಯಾಡಿಸುತ್ತಿರುವಿರಲ್ಲವೆ.. ತುಂಬಾ ಸಂತೋಷ. ಆದರೂ ಏನು ಮಾಡೋದು, ಕಾಲದ ಮುಂದೆ ಮಂಡಿಯೂರಲೆ ಬೇಕಲ್ಲವೇ! ನನ್ನ ಈ ಕಲಮ್ ಗೆ ಪೂರ್ಣ ವಿರಾಮವನ್ನು ನೀಡುತ್ತ, ಮುಂದಿನ ಗುರುವಾರ ಮತ್ತೆ ಶಾಯರ್ ಒಬ್ಬರ ಪರಿಚಯದೊಂದಿಗೆ ತಮ್ಮ ಮುಂದೆ ಹಾಜರಾಗುವೆ.‌ ಅಲ್ಲಿಯವರೆಗೆ ಟಾಟಾ, ಬೈ ಬೈ…ಸೀ ಯುವ್, ಟೇಕ್ ಕೇರ್…!! ಧನ್ಯವಾದಗಳು.. ರತ್ನರಾಯಮಲ್ಲ ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Read Post »

ಅಂಕಣ ಸಂಗಾತಿ, ಸಕಾಲ

ಅಂಕಣ ಸಂಗಾತಿ ಸಕಾಲ ಶುಭ,ಅಶುಭದ ನಡುವೆ ಆಷಾಢಮಾಸ ಆಷಾಡ ಮಾಸದ ಬೇಗೆಯ ಅನುಭವಿಸಿದ ಮನಸು ಒಮ್ಮೆ ಮೀನನ್ನು ನೀರಿಂದ ಬೇರ್ಪಡಿಸಿದಾಗ ಅದರ ವಿಲವಿಲ ಒದ್ದಾಟ,ಹೊಯ್ದಾಟದಂತೆ.ಮದುವೆಯಾದ ಹೊಸತರಲ್ಲಿ ಪರಸ್ಪರ ಅರ್ಥೈಸಿಕೊಂಡು ಕಂಗಳ ತಾಪ ಇಡೀ ಮನಸಿಗೆ ಆವರಿಸಿ ಮಳೆ,ಚಳಿಯ ಅಬ್ಬರಕೆ ಒಬ್ಬರನ್ನೊಬ್ಬರು ಬಿಟ್ಟಿರಲಾರದ ಗಳಿಗೆಯಲಿ ವಿರಹದಾನುಭವ ಅನುಭವಿಸುವಂತೆ ಮಾಡುವ ಈ ಮಾಸ ನಿಜವಾಗಲೂ ನವದಂಪತಿಗಳಿಗೆ ಶಾಪವೇ ಸರಿ.ಬಿಟ್ಟುಕೊಡದ ಮನಸ್ಸಿಂದ ಹೊರಟುನಿಂತ  ಕಂಗಳಿಂದ ಹನಿಗಳು ಜಾರುತ್ತಿದ್ದಂತೆಯೇ ಬೊಗಸೆಲಿ ಹಿಡಿದು ಕಣ್ಣಿಗೊರಸಿಕೊಂಡು ಒಲ್ಲದ ಮನಸ್ಸಿನಿಂದ ಕಳಿಸಿದ ನನ್ನವನ ಹತಾಶೆ,ಬೇಸರ,ವಿರಹವೇದನೆ,ಪ್ರತಿ ದಿನ ಲೆಕ್ಕ‌ಹಾಕಿ ಕಳೆಯುವುದರೊಳಗೆ ಎಷ್ಟೋ ಶತಮಾನ ದೂರವಿದ್ದ ಕಹಿಅನುಭವ ಆಗದೆ ಇರದು. ಇದೆಲ್ಲ ಯಾಕಾಗಿ? ಇದರ ಹಿಂದಿನ ಮಹತ್ವದ ಅರಿವಿಲ್ಲ.ಕೆಲವುಆಚರಣೆಗಳು ಸೂಕ್ತವಾದರೂ,ಇನ್ನೂ ಕೆಲವು‌ ಮೂಡನಂಬಿಕೆಯ ಪರಾಕಾಷ್ಠೆಯನ್ನು ತಲುಪುತ್ತದೆ.ಯಾವುದು ಹಿತ ಯಾವುದು ಅಹಿತಕರವೆಂದು ಅರ್ಥೈಸಿಕೊಳ್ಳುವ ಸಮಯ ಯಾರಿಗಿದೆ? ಹಿರಿಯರು ಮಾಡಿದ ಕಟ್ಟುಪಾಡುಗಳ ಮರ್ಮದ ಹಿಂದಿರುವ ಕರ್ಮ,ಧರ್ಮ ತಿಳಿದಷ್ಟು ಮನಸ್ಸು ಹಗುರವಾಗದೆ ಇರದು.ಅದು ಕೇವಲ ಭವಿಷ್ಯಕ್ಕೊಸ್ಕರ ಎಂಬುದನ್ನು ತಿಳಿಯುವುದು ತಡವೇ ಆಷಾಡ ಮಾಸ ಅಶುಭ ಮಾಸ ಎಂಬ ಕಲ್ಪನೆಯಿದೆ. ಶುಭ ಕಾರ್ಯಗಳಾದ ಮದುವೆಯ ಮಾತುಕತೆ, ಮದುವೆ, ಗೃಹಪ್ರವೇಶ, ಉಪನಯನ, ವಾಹನ ಮತ್ತು ಜಮೀನು ಕೊಳ್ಳುವುದು, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಕಾರ್ಯಗಳೆಲ್ಲಾ ನಿಷೇದವಾಗುವುದು. ಈ ಮಾಸದಲ್ಲಿ ಯಾವುದೇ ಶುಭಕರ ಕೆಲಸಗಳನ್ನು ಮಾಡಿದರು ಅವು ಫಲ ನೀಡುವುದಿಲ್ಲ ಹೀಗಾಗಿ ಈ ಮಾಸದಲ್ಲಿ ಶುಭಕಾರ್ಯಗಳಿಗೆ ಮನ್ನಣೆ ಇಲ್ಲ. ಆದರೆ ಆಷಾಢ ಮಾಸ ಅಶುಭ ಮಾಸ ಎಂದು ಯಾವ ಶಾಸ್ತ್ರಗಳಲ್ಲೂ ಉಲ್ಲೇಖಿಸಿಲ್ಲ.ಉಲ್ಲೇಖವಿಲ್ಲದ್ದನ್ನು ಶಿರಸಾವಹಿಸಿದ್ದೆವೆ.ಅದು ಎಲ್ಲಿಂದು ಯಾರಿಂದ ಹುಟ್ಟಿತೋ ಗೊತ್ತಿಲ್ಲ. ಆದ್ರೂ ಆಚರಣೆಯಲ್ಲಿ ಇದೆ. ಆಷಾಢದ ಅರ್ಥ : ಭಾರತೀಯ ಮಾಸಗಳಲ್ಲಿ ಜೇಷ್ಠದ ನಂತರ ಮತ್ತು ಶ್ರಾವಣದ ಮೊದಲು ಬರುವ ಮಾಸ ಅದು ಆಂಗ್ಲರ ಮಾಸದಲ್ಲಿ ಜೂನ್ ಮತ್ತು ಜುಲೈನ ಮಧ್ಯದಲ್ಲಿ ಬರುತ್ತದೆ ಉದಾಹರಣೆ : ಆಷಾಢದಲ್ಲಿ ಅತ್ಯಧಿಕವಾದ ಮಳೆಯಾಗುವುದರಿಂದ ರೈತರು ವ್ಯವಸಾಯದ ಕೆಲಸದಲ್ಲಿ ತೊಡಗಿರುತ್ತಾರೆ. ಸಮಾನಾರ್ಥಕ : ತಿಂಗಳು, ಆಷಾಢಮಾಸ, ಆಸಾಡ, ಆಸಾಡ ಮಾಸ.ಅರ್ಥಗಳೇನೆ ಇದ್ದರು ಆಷಾಢ ಎಲ್ಲರಿಗೂ ಒಂದೇ ಕಾಯಕ ಕಲ್ಪಿಸಿದೆ. ಇದಕ್ಕೆ ಮುಖ್ಯ ಕಾರಣ ಶತಮಾನಗಳ ಹಿಂದೆ ಆಷಾಢ ಮಾಸದಲ್ಲಿ ಅತಿಯಾದ ಮಳೆಯ ಆರ್ಭಟ,ಒಮ್ಮೆ ಮಳೆ ಸುರಿಯಲು ಆರಂಭಿಸಿದರೆ ರವಿಯ ಕಾಣದ ದಿನಗಳು ಎಷ್ಟೋ, ಮಳೆಯ ಪ್ರಮಾಣ ಹೆಚ್ಚಿರುತ್ತಿತ್ತು. ಮನೆಯಿಂದ ಹೊರಗೆ ಹೋಗುವುದೇ ಬಹಳ ಕಷ್ಟಕರ. ಈ ರೀತಿ ನಿರಂತರವಾದ ಮಳೆ,ಗಾಳಿಯಿಂದ ಸಂಚಾರಕ್ಕೆ ಅಡೆತಡೆ,ಈ ಕಾರಣಗಳಿಂದ ಹೊರಗಿನ ಕೆಲಸಗಳು ಕುಂಟಿತವಾಗುತ್ತಿದ್ದವು. ಅನ್ನದಾತನಿಗೆ ಹೊಲ ಗದ್ದೆಗಳಲ್ಲಿ ವಿಪರೀತ ಕೆಲಸ ಕಾರ್ಯಗಳು ಇರುತ್ತಿತ್ತು.ಈ ಕಾರಣಗಳಿಂದ ಬೇರೆ ವ್ಯವಹಾರಕ್ಕೆ ಸಮಯವೇ ಸಿಗುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಆಷಾಢಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲವಾಗಿದ್ದರಿಂದ ಶುಭಕಾರ್ಯ ಮಾಡುವುದನ್ನು ನಿಷೇಧಿಸಿದ್ದರು. ಆಷಾಢ ಮಾಸದ ಮಹತ್ವ ಪಡೆಯಲು ದೈವಿಕ ಹಿನ್ನಲೆ ಯು ಕಾರಣವಾಗಿದೆ.ಹಿಂದೂಗಳಿಗೆ ಪೂಜೆ ಪುನಸ್ಕಾರಗಳಿಗೇನು ವರ್ಷವಿಡಿ ಆಚರಣೆಗೆ ಕೊರತರಯಿಲ್ಲ.ಅಮರನಾಥದಲ್ಲಿರುವ ಹಿಮಲಿಂಗ ದರ್ಶನ ಆರಂಭವಾಗುವುದು, ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು ಈ ಮಾಸದಲ್ಲೇ.ಇನ್ನೊಂದು ವಿಶೇಷವೆಂದರೆ ಶಿವನು ಪಾರ್ವತಿಗೆ ಅಮರತ್ವದ ರಹಸ್ಯ ಹೇಳಿರುವುದು, ಗಂಗೆಯು ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಇದೇ ಮಾಸದಲ್ಲಿ ಎಂಬ ಪ್ರತೀತಿ ಇದೆ.ಮಹಾ ಪತಿವ್ರತೆ ಅನುಸೂಯಾದೇವಿ ನಾಲ್ಕು ಸೋಮವಾರ ಶಿವ ವ್ರತ ಮಾಡಿದ್ದು,ಶುಕ್ರವಾರ ಲಕ್ಷ್ಮೀಯ ಆರಾಧನೆ ಶ್ರೇಷ್ಠವೆಂದು ಆಚರಣೆಗಳು ಬಿಂಬಿಸಿವೆ.ಬಲಿ ಚಕ್ರವರ್ತಿ ಶಾಂಡಿಲ್ಯ ವ್ರತ ಪ್ರಾರಂಭ ಮಾಡಿದ ಉಲ್ಲೇಖವಿದೆ. ಇಂದ್ರನು ಗೌತಮರಿಂದ ಸಹ ಸಾಕ್ಷನಾಗು ಎಂಬ ಶಾಪ ಪಡೆದ ಹಾಗೂ ಅದರ ವಿಮೋಚನೆಗೆ ಆಷಾಢದಲ್ಲಿ ನಾಲ್ಕು ಸೋಮವಾರ ಸೋಮೇಶ್ವರ ಜಯಂತಿ ವ್ರತ ಮಾಡಿ ಶಾಪ ವಿಮೋಚನೆ ಪಡೆದ ಬಗ್ಗೆ ಹೇಳುತ್ತದೆ. ಸುಮಂಗಲಿಯರು ಮಾಂಗಲ್ಯ ಪಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ಜ್ಯೋತಿ ಭೀಮೇಶ್ವರ ವ್ರತವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚಾತುರ್ಮಾಸ್ಯ ವ್ರತವನ್ನು ಪ್ರಾರಂಭ ಮಾಡುತ್ತಾರೆ. ಆಷಾಢದ ಶುಕ್ಲ ಪಕ್ಷದ ಪಂಚಮಿ ದಿನದಂದು ಅಮೃತ ಲಕ್ಷ್ಮೀ ವ್ರತವನ್ನು ಮಹಿಳೆಯರು ಭಕ್ತಿಯಿಂದ ಆಚರಿಸುತ್ತಾರೆ. ಈ ಎಲ್ಲಾ ಮಹತ್ವಗಳ ಜೊತೆಗೆ ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮ ದಿನ. ಆಷಾಢ ಮಾಸದಲ್ಲಿ ನವದಂಪತಿಗಳು ದೂರ ಇರಬೇಕೆಂಬ ನಿಜವಾದ ಮಹತ್ವ ಹೇಳುವುದರ ಜೊತೆಗೆ ಅದರ ಹಿಂದಿನ ಸಿದ್ಧಾಂತದ ಅರ್ಥ ಬೇರೆ ಇದ್ದು,ಈ ಅವಧಿಯಲ್ಲಿ ಹೆಣ್ಣು ಗರ್ಭಧರಿಸಿದರೆ ಆಕೆ ಚೈತ್ರ ಮಾಸದಲ್ಲಿ ಅಂದರೆ ಬೇಸಿಗೆ ಕಾಲದಲ್ಲಿ ಮಗುವಿಗೆ ಜನ್ಮ ನೀಡುವಂತಾಗುತ್ತದೆ.ಬೇಸಿಗೆ ಅವಧಿಯಲ್ಲಿ ಆಕೆಗೆ ಹೆಚ್ಚು ತೊಂದರೆಗಳು ಬರಬಹುದೆಂದು ಮನಗಂಡ ಹಿರಿಯರು ಆಚರಣೆಗೆ ತಂದರು.ಅದನ್ನು ನಾವುಗಳು ಅಲ್ಲಲ್ಲಿ ಚಾಚು ತಪ್ಪದೆ ನಂಬಲು ಆರಂಭಿಸಿದೆವು ಎಂದರೆ ತಪ್ಪಿಲ್ಲ. ಅತ್ತೆ ಸೊಸೆ ಒಬ್ಬರ ಮುಖ ಒಬ್ಬರು ನೋಡಬಾರದು ಮದುವೆಯಾದ ಹೊಸ ವರ್ಷದಲ್ಲಿ ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು ನಿಷೇಧ ಎಂದು ಕೆಲವು ಕಡೆ ಪದ್ಧತಿ ಇದೆ. ಇದಕ್ಕೆ ಸರಿಯಾದ ಕಾರಣ ಇಲ್ಲವಾದರೂ,ಆಷಾಢದಲ್ಲಿ ಮಳೆ ಹೆಚ್ಚು ಇರುವುದರಿಂದ ಹೊಲ ಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ. ಅತ್ತೆಯಾದವರು ಸೊಸೆಗೆ ಹೆಚ್ಚು ಕೆಲಸದ ಒತ್ತಡ ತರಬಹುದು, ಇದರಿಂದ ಅವರಿಬ್ಬರಲ್ಲಿ ವೈಮನಸ್ಸುಂಟಾಗಿ ಜಗಳಕ್ಕೆ ಕಾರಣ ಆಗಬಹುದು ಎಂದು ಒಂದು ತಿಂಗಳ ಕಾಲ ತವರು ಮನೆಗೆ ಕಳಿಸುವ ಸಂಪ್ರದಾಯ ಬಂದಿರಬೇಕು.ಆದ್ರೆ ಆಷಾಢ ಮಾಸ ಇರಲಿ ಬಿಡಲಿ ಅತ್ತೆ ಸೊಸೆ ಕೂಡಿ ಅನ್ಯೊನ್ಯತೆಯಿಂದ ಕೂಡಿ ಬಾಳಿದ ಸಂಗತಿಗಳು ನೂರಕ್ಕೆ ಐದು ಪ್ರತಿಶತ ಇರಬಹುದೆಂದು ಅಂದಾಜಿಸಲಾಗಿದೆ. ಮಳೆಗಾಲದ ಆರಂಭ ಆಷಾಢ ಮಾಸದಲ್ಲಿ ಶುಭ ಕಾರ್ಯಗಳು ನಡೆಯದಿದ್ದರೂ ಈ ಪೂಜೆ, ವ್ರತಗಳನ್ನು ಮಾಡಬಹುದು. ಈ ತಿಂಗಳ ಆಚರಣೆಗಳ ಮೇಲೆ ನೀವು ಗಮನಹರಿಸಿದರೆ, ಎಲ್ಲಾ ಆಚರಣೆಗಳು ಒಂದು ವಿಷಯದ ಕಡೆಗೆ ಸೂಚಿಸುತ್ತದೆ ಅದು ಮಳೆಗಾಲ ಆರಂಭವಾಗಿದೆ.ಆದಷ್ಟು ಬೀಜ ಬಿತ್ತನೆ ಭವಿಷ್ಯದ ಚಿಂತನೆ ಜೊತೆಗೆ ದೇಶ ಕುಟುಂಬದ ಸಂರಕ್ಷಣೆ ಹೊಣೆ ನಮ್ಮದೆಂಬ ಭಾವ.ಶುಭ,ಅಶುಭದ ನಡುವೆ ಆಷಾಢವು ಮೇಘ,ಪ್ರಕೃತಿಯ ಮಿಲನಕೆ ಸಾಕ್ಷಿಯೆಂದರೆ ಅತಿಶಯೋಕ್ತಿ,ಭಕ್ತಿ ಎನಿಸಲಾರದು… ಶಿವಲೀಲಾ ಹುಣಸಗಿ ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

Read Post »

You cannot copy content of this page

Scroll to Top