ಶ್ರೀಮಂತ ಅನುಭವಗಳ ಸಹಜ ಒಡಂಬಡಿಕೆ ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಶಿಕ್ಷಕಿಯಾಗಿದ್ದಾರೆ. ಸಾಹಿತ್ಯ ಕೃಷಿಯಲ್ಲಿ ಆಸಕ್ತಿ ಇರುವ ಕಾರಣ ರಾಧಾ, ನೃತ್ಯಗಾಥಾ, ಮಕ್ಕಳ ರವೀಂದ್ರ, ನಾರಸಿಂಹ, ಮಕ್ಕಳ ರಾಮಾಯಣ, ಕನಕ-ಕೃಷ್ಣ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ರವೀಂದ್ರ ನಾಥ ಟ್ಯಾಗೋರರ ಚಿತ್ರಾ, ಕೆಂಪುಕಣಗಿಲೆ, ಅವಳ ಕಾಗದ ಮೊದಲಾದ ನಾಟಕಗಳನ್ನು ಕನ್ನಡಕ್ಕೆ ರೂಪಾಂತರಿಸಿದ್ದಾರೆ. ‘ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹ ಜಿ.ಎನ್ ಮೋಹನ್ ಸಾರಥ್ಯದ “ಅವಧಿ” ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಅದನ್ನು ನಂತರ “ಬಹುರೂಪಿ” ಪ್ರಕಟಿಸಿತು. ಸಾಹಿತ್ಯ ಪರಿಷತ್ತಿನ ಈ ವರ್ಷದ ದತ್ತಿ ಪ್ರಶಸ್ತಿಗೆ ಈ ಕೃತಿ ಭಾಜನವಾಯಿತು. ಶ್ರೀಮತಿ ಸುಧಾ ಬರಿಯ ರಂಗ ತಜ್ಞೆ, ಪುಸ್ತಕ ಪರಿಚಾರಿಕೆಯಲ್ಲದೆ ಸ್ವತಃ ಕವಿಯಾಗಿಯೂ ಪ್ರಸಿದ್ಧರಾಗಿದ್ದಾರೆ. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆ ಕೂಡ ಅವರ ಬರಹಗಳ ಘಮಕ್ಕೆ ಇಂಬು ಕೊಟ್ಟಿದೆ. ಶಿಕ್ಷಕಿಯಾಗಿ ಮತ್ತು ರಂಗ ನಿರ್ಮಿತಿಯ ಮಿತಿ ಪರಿಮಿತಿಗಳ ಸಂಪೂರ್ಣ ಅರಿವು ಇರುವ ಕಾರಣ ಅವರ ಕವಿತೆಗಳಲ್ಲೂ ಹೆಚ್ಚು ಜನಪ್ರಿಯಗೊಳ್ಳುವ ಸೊಲ್ಲುಗಳು ಮತ್ತು ಇಮೇಜುಗಳು ತನ್ನಿಂತಾನೆ ರೂಪುಗೊಳ್ಳುತ್ತವೆ. ತೀರ ಸಾಮಾನ್ಯ ಸರಕನ್ನು ಕವಿತೆಯ ರೂಪಕವನ್ನಾಗಿಸುವ ಅಥವ ಕವಿತೆಯ ಆತ್ಮಕ್ಕೆ ಬೇಕೇ ಬೇಕಾಗುವ ಪ್ರತಿಮೆಯಾಗಿ ಅವರು ಬಳಸುವ ಕ್ರಮ ಸಮಯೋಚಿತವಾಗಿರುತ್ತದೆ. ” ಈ ರಾತ್ರಿ” ಎನ್ನುವ ಪದ್ಯವನ್ನೇ ನೋಡಿ, ಶಿವನ ಪ್ರೀತಿಸಬೇಕು ಪ್ರೀತಿಯಲಿ ಲಯವಾಗುವ ಪಾಠ ಕಲಿಯಬೇಕು ಎಂದು ಸಾಮಾನ್ಯ ತಿಳುವಳಿಕೆಯಲ್ಲಿ ಆರಂಭವಾಗುವ ಪದ್ಯ ಶಿವನ ಪೂಜಾ ವಿಧಾನವನ್ನು ಅನುಸರಿಸಿ ನಡೆಯುತ್ತಲೇ ಇದ್ದಕ್ಕಿದ್ದಂತೆ ನವಿರು ಭಾವದ ಗರಿಸವರಿ ಪ್ರೇಮಗೀತೆ ನುಡಿಸಬೇಕು ಶಿವನ ಕೊರಳಿನ ನಾಗ- ಉರುಳಾಡಬೇಕು ಎಂದು ಬದಲಾವಣೆಯನ್ನು ಬಯಸುತ್ತಲೇ, ಕಡೆಗೆ ಶಿವರಾತ್ರಿ ಕಳೆದ ಮುಂಜಾನೆ ಬೆಳ್ಳಿ ಬೆಟ್ಟದಲ್ಲಿಯೂ ಬಣ್ಣದ ಹೂವರಳಬೇಕು ಎಂದು ಮುಕ್ತಾಯವಾಗುವ ಪರಿ ಅನೂಹ್ಯ ದಿವ್ಯಕ್ಕೆ ಹಾತೊರೆಯುತ್ತಲೇ ಹೇಗೆ ಶಿವನನ್ನೂ ಒಲಿಸಿ ಅಂಥ ಕಠಿಣ ಮನಸ್ಸಲ್ಲೂ ಹೂವಿನ ಮೃದುತನವನ್ನು ಅರಳಿಸಬಹುದು ಎಂದು ತನ್ನ ನಿಲುವನ್ನು ಪ್ರಕಟಿಸುತ್ತದೆ. “ನಾನು ಮುಟ್ಟಾದ ದಿನ” ಎನ್ನುವ ಪದ್ಯ ಹೆಣ್ಣಿನ ಪಿರುಕಣೆ ಎಂದೇ ಕೆಲವರು ತಿಳಿದಿರುವ ಮಾಸಿಕ ಋತುಚಕ್ರವನ್ನು ಕುರಿತ ದಿಟ್ಟ ಪದ್ಯ. “ಅವನಿಗಿಲ್ಲದ ತೊಡರೊಂದು/ ನನಗೆದುರಾದ ನೋವು” ಎಂದು ಮುಟ್ಟನ್ನು ಬೇರೆಯದೇ ರೀತಿಯಲ್ಲಿ ಅರಿಯುವ “ಅವಳು” ಪರೀಕ್ಷೆಯಲ್ಲಿ ಪ್ರತಿ ಸ್ಪರ್ಧಿ ಹುಡುಗನಿಗೆ ಆ ನೋವು ಇಲ್ಲವಲ್ಲ ಮತ್ತು “ಅವನು” ಅದರಿಂದ ಮುಕ್ತನಾದ ಕಾರಣಕ್ಕೇ ಅವನಿಗೆ ಗೆಲುವು ಸುಲಭ ಎಂದೇ ಭಾವಿಸುತ್ತಾಳೆ. ಮುಂದುವರೆದ ಅವಳು ಮುಟ್ಟಿದಲ್ಲದೇ, ಮುಟ್ಟಿಲ್ಲದೇ ಹುಟ್ಟಿಲ್ಲವೆಂದರಿಯದ ಮುಠ್ಠಾಳರೇ, ಎಲ್ಲ ಸಹಿಸಬಹುದು ಮುಟ್ಟಿನ ಬಿಲಕ್ಕೆ ದುರ್ಬೀನು ಇಡುವ ಕ್ರೌರ್ಯವ ಹೇಗೆ ಸಹಿಸುವುದು? ಎಂದು ಪ್ರಶ್ನಿಸುವ ಎದೆಗಾರಿಕೆಯನ್ನು ತೋರುತ್ತಲೇ, ಹೊಕ್ಕಿಬಿಡಿ ಮುಟ್ಟು ಸುರಿಯುವ ದಾರಿಯಲಿ, ನಿಮ್ಮ ಹುಟ್ಟಿನ ಗುಟ್ಟಲ್ಲದೇ ಬೇರೇನಿಹುದಿಲ್ಲಿ? ಎಂದು ಪದ್ಯ ಮುಗಿಯುವಾಗ “ಅವನ” ಮಿತಿಯನ್ನು ಸ್ಪಷ್ಟವಾಗಿ ಹೇಳುತ್ತಾಳೆ ಮತ್ತು ನೈಸರ್ಗಿಕ ಸತ್ಯವನ್ನು ಅರಿ ಎಂದು ಜರ್ಭಾಗಿಯೇ ತಿವಿಯುತ್ತಾಳೆ. ಪದ್ಯದ ಅಶಯ ಮತ್ತು ತಿಳಿವನ್ನು ಪರ್ಯಾಲೋಚಿಸುವ ಕ್ರಮ ಚನ್ನಾಗಿದ್ದರೂ ಈ ಪದ್ಯದ ಹೆಣಿಗೆಯಲ್ಲಿ ಕುಶಲತೆ ಮತ್ತು ನಾಜೂಕು ಇದ್ದೂ ಇಲ್ಲದಂತಿರುವುದನ್ನು ಮುಖ್ಯ ಗಮನಿಸಬೇಕು. ಹೌದು, ಕೆಲವೊಮ್ಮೆ ನಾಜೂಕಿಗಿಂತ ಕಠಿಣ ಮಾತುಗಳೇ ಅನಿವಾರ್ಯವಾಗುತ್ತವೆ. ಶಿವನನ್ನೆ ಕುರಿತ ಮತ್ತೊಂದು ಪದ್ಯದಲ್ಲಿ “ಹೇ ಜಟಾಧರ, ಚಂದ್ರಚೂಡಾ ಸ್ಮಶಾನದ ಮೌನದಲಿ ಸಂಚರಿಸುವಾಗ” ಎಂದು ಶಿವನನ್ನು ಸಂಭೋದಿಸುತ್ತಲೇ ಅವನ ಗುಣಗಾನ ಮಾಡುವ ಭರದಲ್ಲೇ ಅವನ ಅವಗುಣಗಳನ್ನು ಹಾಸ್ಯವಾಗಿ ಪರಿಶೀಲಿಸುವ ಕ್ರಮ ಹೊಸತೇ ಆಗಿದೆ. “ಉರಿವ ಬೆಂಕಿಯಲಿ ಸಿಗರೇಟು ಹಚ್ಚಿ ಕುಳಿತಾನು!”, “ಇವನೆಲ್ಲಿಯಾದರೂ ಸೇರಿಕೊಂಡಾನು ಡೋಲು ಬಡಿಯುವುದರಲ್ಲಿ ನಿಸ್ಸೀಮ ಇವನು”, ಎಂಬೆಲ್ಲ ಅಂಬುಗಳ ಮಳೆ ಕಡೆಗೆ ಈ ರೀತಿಯಲ್ಲಿ ಸುರಿಯುತ್ತದೆ; ಹೇ ವಿಷಕಂಠ, ಗಂಗಾಧರಾ ಇವನೂ ವಿಷವ ಕುಡಿಯುವವನೇ ಬೇಡವೆಂದರೂ ನಶೆಯೇರಿಸಿಕೊಳ್ಳುವವನು ನಿನ್ನ ಎಲ್ಲ ಛಾಯೆಗಳಿರುವ ಇವನು ನಿನ್ನೊಳಗೇ ಸೇರಿಕೊಂಡಿರುವನೋ ಏನೋ ಒಮ್ಮೆ ಜಟೆಯ ಬಡಿದು ನೋಡು ಮತ್ತೆ ಮತ್ತೆ ಈ ಪದ್ಯದ ಓದು ಇದು ಬರಿಯ ಶಿವನನ್ನು ಕುರಿತ ಪ್ರಾರ್ಥನೆಯಲ್ಲದೇ ನಿಜದ ಬದುಕಿನಲ್ಲಿ ಏಗುತ್ತಿರುವ ಶಿವರನ್ನು ಅಂದರೆ ಸಾಮಾನ್ಯರ ಬದುಕನ್ನು ಧೇನಿಸಿದ, ಆ ಶಿವನ ನಾಮೋತ್ತರಗಳ ಮೂಲಕ ನಮ್ಮ ಜೊತೆಗೇ ಇರುವ ಸರೀಕರನ್ನು ಕುರಿತ ಚಿತ್ರಣವಾಗಿಯೂ ತೋರುತ್ತದೆ. “ತೊಟ್ಟು ಕಳಚಿ ಬೀಳುತ್ತವೆ ಕನಸುಗಳು ಹೂವಿನಂತೆ” ಎಂದು ಕೊನೆಗೊಳ್ಳುವ ಪದ್ಯದ ಆರಂಭ ಹೀಗಿದೆ; “ಒಂದು ಮುಂಜಾವಿನೊಂದಿಗೆ ಒಂದಿಷ್ಟು ಕನಸುಗಳೂ ಅರಳುತ್ತವೆ”. ಈ ಪದ್ಯ ಹೆಣ್ಣೊಬ್ಬಳು ತನ್ನ ನಿತ್ಯದ ಕಾಯಕದಿಂದ ಬಿಡುಗಡೆ ಹೊಂದಿ ತನಗೆ ಬೇಕಾದ ರೀತಿಯಲ್ಲಿ ಒಂದು ದಿನವನ್ನು ಕಳೆಯುವುದು ಬರಿಯ ಕನಸಾಗಿ ಉಳಿಯುತ್ತದೆ ಎಂಬುದನ್ನು ಹೇಳುತ್ತಿದೆ. ಮೇಲ್ನೋಟಕ್ಕೆ ಇಂಥ ಪದ್ಯಗಳಿಗೆ ತುಟಿ ತುದಿಯ ಅನುಕಂಪ ಮತ್ತು ಸಾರ್ವಜನಿಕ ಪರಿತಾಪಗಳು ಸಂದರೂ ನಿಜಕ್ಕೂ ಬದುಕು ಅಷ್ಟು ಘೋರವಾಗಿಲ್ಲ ಮತ್ತು ಸದ್ಯದ ಸ್ಥಿತಿಯಲ್ಲಿ ಹೆಣ್ಣನ್ನು ಅದರಲ್ಲೂ ದುಡಿಯುವ ಹೆಣ್ಣನ್ನು ತೀರ ಹೀನಾಯವಾಗಿ ಕಾಣುವುದನ್ನು ಸಮಾಜ ಬಿಟ್ಟಿದೆ. ಆದರೆ ಇಂಥ ಅತಿಶಯಗಳನ್ನು ಮುಂದುಮಾಡದೇ ಇದ್ದರೆ, ತಮ್ಮ ಬರಹಗಳಲ್ಲಿ ಗಂಡನ್ನು ಶೋಷಣೆಯ ಕಾರಣ ಎಂದು ಹೇಳದೇ ಇದ್ದರೆ, ಮತ್ತು ತಮ್ಮ ನಿಜದ ಬದುಕಲ್ಲಿ ಇಲ್ಲದೇ ಹೋದರೂ ಇದೆ ಎನ್ನುವ ” ಶೋಷಣೆ”ಯನ್ನು ಮುಂದು ಮಾಡದೇ ಇದ್ದರೆ ಅದು ಸ್ತ್ರೀ ಸಂವೇದನೆ ಇರದ ಪಠ್ಯ ಆಗುತ್ತದೆ ಎನ್ನುವ ಹುಂಬ ನಿರ್ಧಾರಗಳೂ ಕೂಡ ಒಟ್ಟಿಗೇ ಸೇರಿ ಇಂಥ ರಚನೆಗಳಿಗೆ ಕೈ ಹಾಕಲು ಕಾರಣವಾಗಿರುತ್ತವೆ. ಇಂಥದೇ ಆಲೋಚನೆಯಲ್ಲೇ ಹುಟ್ಟಿರಬಹುದಾದ “ಕುಂಭ ಸಮ್ಮೇಳನ” ಸಾಹಿತ್ಯ ಸಮ್ಮೇಳನವೇ ಮೊದಲಾದ ಸಾರ್ವಜನಿಕ ಸಮಾರಂಭಗಳಲ್ಲಿ ಅನಿವಾರ್ಯ ಎನಿಸಿರುವ ಕುಂಭ ಹೊತ್ತ ಮಹಿಳೆಯರ ಪ್ರದರ್ಶನವನ್ನು ಪ್ರಶ್ನಿಸುತ್ತದೆ. ಇಂಥ ಪ್ರದರ್ಶನಗಳನ್ನು ವಿರೋಧಿಸುವುದು ಸರಿಯಾದ ಕ್ರಮವೇ ಹೌದಾದರೂ ಇಲ್ಲಿ ಭಾಗವಹಿಸುವವರೂ ಹೆಣ್ಣು ಮಕ್ಕಳೇ ಆದುದರಿಂದ ಮೊದಲು ಅವರಲ್ಲಿ ಎಚ್ಚರ ಹುಟ್ಟಿಸಿ ಇಂಥ ಚಟುವಟಿಕೆಯಿಂದ ದೂರ ಇರಲು ತಿಳುವಳಿಕೆ ಹೇಳಬೇಕು.ಒಮ್ಮೆ ಕುಂಭ ಹೊರುವವರೇ ಸಿಗದಂತೆ ಆದರೆ ತನ್ನಿಂದ ತಾನೇ ಇಂಥ ಆಚರಣೆಗಳು ನಿಲ್ಲುತ್ತವೆ. ಆದರೆ ಬರಿಯ ಗಂಡನ್ನು ಮಾತ್ರ ಇಲ್ಲಿ ಹೊಣೆ ಮಾಡುವುದು ಹೇಗೆ ಸರಿಯಾದೀತು? ಇದು ನಮ್ಮ ದೃಶ್ಯ ಮಾಧ್ಯಮಗಳಾದ ಸಿನಿಮಾ ಮತ್ತು ಟಿವಿಯ ನಟಿಯರ ಅಂಗಾಂಗ ಪ್ರದರ್ಶನಕ್ಕೂ ಅನ್ವಯಿಸುತ್ತದೆ. ಪ್ರದರ್ಶನ ಮಾಡುವವರನ್ನು ಮೊದಲು ಅದರಿಂದ ನಿವೃತ್ತರನ್ನಾಗಿಸಿದರೆ ಎಷ್ಟೋ ಸಮಸ್ಯೆಗಳಿಗೆ ಉತ್ತರ ಸಿಕ್ಕುತ್ತದೆ. ಘೋಷಣೆಗಳಿಂದ ವಿರೋಧದ ಮಾತುಗಳಿಂದ ಹಾಗೆ ಆಡುವವರು ಮುನ್ನೆಲೆಗೆ ಬಂದಾರು ಅಷ್ಟೆ!! “ಬ್ರಾ ಮತ್ತು ಅಭಿವೃದ್ಧಿ” ಎನ್ನುವ ಕವಿತೆ ಕೂಡ ಸಂದರ್ಭವೊಂದಕ್ಕೆ ತುರ್ತು ಪ್ರತಿಕ್ರಿಯೆಯಾಗಿ ಬರೆದ ಕಾರಣ ಅದು ನಿಜಕ್ಕೂ ಹೇಳಬಹುದಾಗಿದ್ದ ದಿವ್ಯವೊಂದರ ಅನುಭೂತಿಯನ್ನು ಕಳೆದುಕೊಂಡಿದೆ. ಆದರೆ “ಗೌರಿಯ ಹಾಡು” ಎನ್ನುವ ಪದ್ಯ ನಿಜಕ್ಕೂ ಮೇಲೆ ಹೇಳದೇ ಉಳಿದ ಶೋಷಣೆಯನ್ನು ಅದ್ಭುತವಾಗಿ ಚಿತ್ರಿಸಿದ ಒಂದು ಶ್ರೇಷ್ಠ ಕೃತಿಯಾಗಿದೆ. ಮತ್ತು ಈ ಕವಿತೆಯ ಅಂತ್ಯ ಒಂದು ಅದ್ಭುತ ರೂಪಕದಲ್ಲಿ ಮುಗಿಯುತ್ತದೆ; ಗೌರಿಯ ದುಃಖದ ಝಳಕ್ಕೆ ಮಂಜಿನ ಬೆಟ್ಟವೂ ಬೆವರುತ್ತದೆ! ಇಂಥದೊಂದು ರೂಪಕವನ್ನು ಸೃಷ್ಟಿಸಿದ ಈ ಕವಿಯನ್ನು ಅಭಿನಂದಿಸದೇ ಇರುವುದು ಹೇಗೆ ಸಾಧ್ಯ? ಸುಧಾ ಆಡುಕಳ ಉದ್ದುದ್ದದ ಪದ್ಯಗಳಿಗಿಂತ ನಾಲ್ಕು ಸಾಲುಗಳಲ್ಲಿ ಇಮೇಜುಗಳನ್ನು ಕಟ್ಟಿ ಕೊಡುವುದರಲ್ಲಿ ಇನ್ನೂ ಹೆಚ್ಚಿನ ಸಾಮರ್ಥ್ಯ ಇರುವವರು. ರಾತ್ರಿ ಯಾವುದೋ ಹೊತ್ತಿನಲ್ಲಿ ಛಕ್ಕನೆ ನಾಲ್ಕು ಸಾಲು ಪೇರಿಸಿ ಝಗ್ಗನೆಯ ಬೆಳಕು ಮತ್ತು ಬೆರಗು ನೇಯುವುದರಲ್ಲಿ ಅವರ ಜಾಣ್ಮೆ ಮತ್ತು ರಂಗ ಶಾಲೆಯ ಅನುಭವ ಮೇಳೈಸುತ್ತವೆ ಎಂದು ಅರಿಯಬಹುದು. ಉದಾಹರಣೆಗೆ ಮಾಯಗಾತಿ ಈ ಕವಿತೆ ಯಾರ ಜಪ್ತಿಗೂ ಸಿಗಳು ಪ್ರೀತಿಯಿಂದ ಕರೆದರೆ ಎದೆಯ ದನಿಯಾಗಿ ಬರುವಳು ಇದಕ್ಕಿಂತ ಕಾವ್ಯ ಕಾರಣವನ್ನು ಇಷ್ಟು ಸ್ಪಷ್ಟವಾಗಿ ಮತ್ತು ಸರಳವಾಗಿ ಸಂಕ್ಷೇಪಿಸುವುದು ಕಷ್ಟ ಸಾಧ್ಯದ ಮಾತು! “ಗಾಯ ಮತ್ತು ಹೊಲಿಗೆ” ಎನ್ನುವ ಕವಿತೆ ಸದ್ಯಕ್ಕೆ ಈ ಕವಿ ಬರೆದಿರುವ ಉತ್ತಮ ಕವಿತೆಗಳಲ್ಲಿ ಒಂದು. ಹೊಲಿಗೆ ಹಾಕುವಾಗ ಚುಚ್ಚುಮದ್ದಿನಿಂದ ಅಮಲಿರುತ್ತದೆ ಬಿಚ್ಚುವಾಗಿನದೇ ಪೇಚಾಟ ನೋಯುವ ಗಾಯ ಮತ್ತು ಎಚ್ಚರದಲ್ಲೇ ಎಳೆಯುವ ದಾರ ಸಂಬಂಧಗಳೂ ಹಾಗೆ ಬೆಸೆದುಕೊಳ್ಳುವಾಗಿನ ಅಮಲು ಬಿಚ್ಚಿಕೊಳುವಾಗ ಇರದು! ಎಂದು ಶುರುವಾಗುವ ಈ ಪದ್ಯ ಮೇಲ್ನೋಟಕ್ಕೆ ಗಾಯ ಮತ್ತು ಅದರ ಚಿಕಿತ್ಸೆಗೆ ಬೇಕಾದ ಹೊಲಿಗೆಯನ್ನು ಕುರಿತು ಹೇಳುತ್ತಿರುವಂತೆ ಕಂಡರೂ ಯಾವುದೇ ಗಾಯದ ಹಿಂದೆ ಮತಾಂಧತೆಯ, ಜಾತಿಯ, ಶ್ರೇಷ್ಠತೆಯ ಅಮಲು ಇದ್ದರೆ ಅಂಥ ಗಾಯ ಸುರುವಲ್ಲಿ ನೋಯದು. ಆದರೆ ಆ ಗಾಯ ಮಾಯುವುದಕ್ಕೆ ಸಮಯ ಮತ್ತು ಸನ್ನಿವೇಶಗಳು ಅತ್ಯಗತ್ಯ ಗಾಯದ ಹೊಲಿಗೆ ತೆಗೆಯುವಾಗ ಆಗುವ ನೋವು ಸುಲಭಕ್ಕೆ ಸಹಿಸಿಕೊಳ್ಳಲಾರದ್ದು. ಚೂರೇ ಚೂರು ಬೇರ್ಪಟ್ಟಾಗಲೇ ಗೊತ್ತಾಗುವುದು ಸೇರಿರುವ ಸುಖ ಬೇರ್ಪಡದ ಸಂಬಂಧಗಳ ಬೆಲೆಯಂತೆ! ಒಮ್ಮೆ ಬೇರ್ಪಟ್ಟ ತನ್ನದೇ ಭಾಗವನ್ನೂ ಸೇರಿಸಿಕೊಳ್ಳಲು ಸಂಶಯಿಸುವುದು ಮಹಾನ್ ಮೂಲಭೂತವಾದಿ ದೇಹ! ಇಂಥ ಯಾವತ್ತೂ ಮಾಯಲಾಗದ ಗಾಯಗಳನ್ನು ಹೇಗೆ ಸಹಿಸಿಕೊಳ್ಳುವುದು, ಮಹಾನ್ ಮೂಲಭೂತವಾದ ನಮ್ಮ ಉಸಿರೇ ಆಗಿ ಪರಿವರ್ತಿತವಾಗಿರುವ ಸನ್ನಿವೇಶದಲ್ಲಿ? ಶ್ರೀಮತಿ ಸುಧಾ ಆಡುಕಳ ಪುಸ್ತಕ ಪರಿಚಾರಿಕೆ, ರಂಗ ಪಠ್ಯ, ಅಂಕಣ ಬರಹಗಳ ಒತ್ತಡಗಳ ನಡುವೆಯೂ ತೀರ ಖಾಸಗಿ ಸಮಯವನ್ನು, ರೂಪಕ ಪ್ರತಿಮೆಗಳ ಬೇಟವನ್ನೇ ಬೇಡುವ ಕಾವ್ಯ ಕೃಷಿಯಲ್ಲೂ ಹುಲುಸು ಬೆಳೆಯನ್ನೇ ತೆಗೆಯುತ್ತಿದ್ದಾರೆ. ಫಸಲಿನ ಪ್ರಮಾಣಕ್ಕಿಂತ ಆ ಫಸಲಿಗೆ ಪ್ರತ್ಯೇಕ ಪ್ರಮಾಣ ಮತ್ತು ಪರಿಣಾಮಗಳು ಇವೆಯೇ ಎಂದು ಸ್ವತಃ ಅವರೇ ತೀರ್ಮಾನಿಸಿದರೆ ಹತ್ತು ಸಾಮಾನ್ಯ ಸೀರೆಗಳನ್ನು ನೇಯುವ ಬದಲು ಒಂದು ಕಲಾಬತ್ತಿನ ಅಪರೂಪದ ಭರ್ಜರಿ ಸೀರೆಯನ್ನೇ ನೇಯ್ದಾರು. ಏಕೆಂದರೆ ಅವರ ಜೀವನಾನುನುಭವದ ಥಡಿಯಲ್ಲಿ ತರಹೇವಾರಿ ಬಣ್ಣ ಬಣ್ಣದ ಲಡಿಗಳ ದಾಸ್ತಾನೇ ಇದೆ. ಅವನ್ನು ಆ ಅಂಥ ಅಪರೂಪದ ಕೃತಿಗಳ ಕಾರಣಕ್ಕೆ ಬಳಸಲಿ ಎನ್ನುವ ಆಶಯದೊಂದಿಗೆ ಅವರ ಆಯ್ದ ಆರು ಕವಿತೆಗಳು ಆಸಕ್ತರ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ. ಸುಧಾ ಆಡುಕಳ ಕವಿತೆಗಳು ೧.ಈ ರಾತ್ರಿ ಜಗದ ಹಂಗು ಗುಂಗಿಲ್ಲದ ಜಂಗಮನ ಎದೆಗೊರಗಿ ಎದೆಯ ಡಿಂಡಿಮವ ಆಲಿಸಬೇಕು- ಅದಕೊಂದು ಏಕತಾರಿಯ ನಾದವ ಅವನಗರಿವಿಲ್ಲದಂತೆ ಜೋಡಿಸಬೇಕು ಬರಸೆಳೆದು ಅಪ್ಪಿದರೆ ಭಸ್ಮವಾಗುವ ವಿಸ್ಮಯವ ಭೂತನಾಥನ ಕಿವಿಯೊಳಗುಸುರಿ ತೆಕ್ಕೆಯೊಳಗೆ ಉರಿದು ಭಸ್ಮವಾಗಬೇಕು ಕಾಪಾಲಧಾರಿ ಶಿವನ ಕಪಾಲವ ತೋಯಿಸಿ ಹಣೆಗಣ್ಣೊಳಗೂ ಪ್ರೀತಿಯ ಅಮಲು ತುಂಬಿಸಬೇಕು ಮಾತನೊಲ್ಲದ ಹರನ ಹರವಾದ ಎದೆಗೆ ನವಿರು ಭಾವದ ಗರಿಸವರಿ ಪ್ರೇಮಗೀತೆ ನುಡಿಸಬೇಕು ಶಿವನ ಕೊರಳಿನ ನಾಗ- ಉರುಳಾಡಬೇಕು ಶಿವರಾತ್ರಿ ಕಳೆದ ಮುಂಜಾನೆ ಬೆಳ್ಳಿ ಬೆಟ್ಟದಲ್ಲಿಯೂ ಬಣ್ಣದ ಹೂವರಳಬೇಕು ೨.ನಾನು ಮುಟ್ಟಾದ ದಿನ; ಅಣ್ಣನ ಕಿಸಕ್ಕನೆ ನಗು ‘ಹೆಣ್ಣು ಜನ್ಮಕ್ಕಂಟಿದ ಬವಣೆ’ ಅಮ್ಮನ ವಿಷಾದದ ಮಾತು ನನಗೆ ಮಾತ್ರ ಪರೀಕ್ಷೆಯಲಿ ನನ್ನ ಸೋಲಿಸುವ ಹುನ್ನಾರದಲ್ಲಿರುವ ಹುಡುಗನ ನೆನಪು ಅವನಿಗಿಲ್ಲದ ತೊಡರೊಂದು ನನಗೆದುರಾದ ನೋವು ತೊಡೆಯ ಸಂಧಿಯಲಿಷ್ಟು ಬಟ್ಟೆ ತುರುಕಿ ಶಾಲೆಗೆ ಓಡಿದವಳ ಕುಂಟುನಡಿಗೆಗೆ: ಗೆಳತಿಯರ ಗುಸುಗುಸು! ಲೆಕ್ಕಮಾಡಲು ಬೋರ್ಡಿಗೆ ಕರೆದ ಶಿಕ್ಷಕರೂ ಲಂಗಕೆ ಅಂಟಿದ ಕೆಂಪ ಕಂಡು ಪೆಚ್ಚು! ಎಂದೂ ತಪ್ಪದ ಲೆಕ್ಕ ತಪ್ಪಾಗಿತ್ತು ರಾತ್ರಿ ಅಪ್ಪ ಹೇಳಿದ ದ್ರೌಪದೀ ವಸ್ತ್ರಾಪಹರಣದ ಕಥೆ ಮುಟ್ಟಾದವಳ ಹಿಡಿದೆಳೆದ ದುಷ್ಟ ತೊಡೆ ಮುರಿದು ರಣಾಂಗಣದಲ್ಲಿ ಬಿದ್ದಿದ್ದ ಉರಿವ ತೊಡೆಯ ಗಾಯಕ್ಕೆ ಕಥೆಯ ಮುಲಾಮು ತಿಂಗಳ ಸ್ರಾವ ಸುರಿಯುತ್ತ ಮೈಲಿಗೆಯ ಪಟ್ಟ ಹೊತ್ತ ಕಾಲ ಸರಿದು ನಾ ಹೇಳಿದಲ್ಲದೇ ಮುಟ್ಟು ಬಯಲಾಗದ ಗುಟ್ಟು ಮುಟ್ಟು ಹುಟ್ಟುವ ಗರ್ಭದಲಿ ಮಗುವ ಹೊತ್ತು ನಿಂತಾಗ ಮುಟ್ಟೂ ಒಂಥರಾ ಹಿತವೆನಿಸಿ, ಮುಟ್ಟಾಗುವವರ ಮುಟ್ಟೆನೆಂದ ದೇವರ ಮೇಲೆ
ಅಂಕಣ ಬರಹ ಘೋಷಣೆಗಳ ನಡುವೆ ರೂಪಕಗಳಿಗೂ ಕಾತರಿಸುವ ಕಲ್ಮೇಶ ತೋಟದ್ ಕವಿತೆಗಳು ಕಲ್ಮೇಶ ತೋಟದ್ . ಮೂರು ಗೇಣಿನಷ್ಟೇ ಅಂತರ ಭಾಸವಾಗುತ್ತಿದ್ದ ಬಾನಹಂದರ ನೋಡಲದೆಷ್ಟು ಸುಂದರ ಆಕಾಶ ಭೂಮಿ ಮಂದಾರ ಅಪ್ಪನ ಹೆಗಲದು ಸುಂದರ ಇಂಥ ಭಾವುಕ ಸಾಲುಗಳಲ್ಲಿ ಅಪ್ಪನ ಹೆಗಲನ್ನು ವರ್ಣಿಸಿ ಅಪ್ಪನನ್ನು ಕುರಿತಂತೆ ಈವರೆಗೂ ಇದ್ದ ಇಮೇಜುಗಳಿಗೆ ಮತ್ತೊಂದು ಹೊಸ ರೂಪಕವನ್ನು ಕೊಡಮಾಡಿರುವ ೨೬ರ ಹರಯದ ಯುವ ಕವಿ ಕಲ್ಮೇಶ ತೋಟದ ಅವರ ಕವಿತೆಗಳನ್ನು ಪರಿಚಯಿಸುವುದಕ್ಕೆ ಸಂತೋಷ ಮತ್ತು ಸಂಭ್ರಮಗಳು ಮೇಳೈಸುತ್ತವೆ. “ಕೌದಿ” ಶೀರ್ಷಿಕೆಯಲ್ಲಿ ಈಗಾಗಲೇ ಒಂದು ಸಂಕಲನ ಪ್ರಕಟಿಸಿರುವ ಈ ಕವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದ ಸ್ನಾತಕೋತ್ತರ ಪದವಿ ಪಡೆದು ಸದ್ಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಕಲ್ಮೇಶ ತೋಟದ ತಮ್ಮ ಕವನ ಸಂಕಲನಕ್ಕೆ ಕವಿಯ ಮಾತು ಬರೆಯುವಾಗ ಹೀಗೆ ಟಿಪ್ಪಣಿಸುತ್ತಾರೆ; “ಅವ್ವ ಹಸಿದ ಬೆಕ್ಕಿನ ಮರಿಯೊಂದು ಕಂಡರೆ ಹಿಂದೆ ಮುಂದೆ ನೋಡದೆ ಒಂದಷ್ಟು ಹಾಲು ಹಾಕುತ್ತಾಳೆ. ನಾಯಿ ಕಂಡರೆ ಅನ್ನ ಹಾಕುತ್ತಾಳೆ. ಹಸು ಕಂಡರೆ ಒಂದು ರೊಟ್ಟಿ ಕೊಟ್ಟು ಬೆನ್ನು ಸವರುತ್ತಾಳೆ. ಪಕ್ಷಿಗಳಿಗೆ ಕಂಪೌಂಡ್ ಮೇಲೆ ಹಸನು ಮಾಡಿ ಉಳಿದ ಕಾಳು ಕಡ್ಡಿ ಚಲ್ಲುತ್ತಾಳೆ. ತುಳಸಿ ಗಿಡದ ಕುಂಡಲಿ ಪಕ್ಕ ಇರುವೆಗಳಿಗೆ ಸಕ್ಕರೆ ಹರವುತ್ತಾಳೆ. ಕೂದಲು, ಪಿನ್ನು ಮಾರಲು ಬರುವ ಮಹಿಳೆಯರಿಗೆ ತಾನಾಗಿಯೇ ಕುಡಿಯಲು ನೀರು ಬೇಕೆ ಎಂದು ಕೇಳಿ ನೀರು ಕೊಡುತ್ತಾಳೆ. ಇಷ್ಟೆಲ್ಲ ಮಾಡಿದ್ದಕ್ಕೆ ಆಕೆ ಫೋಟೋ ಕ್ಲಿಕ್ಕಿಸಿಕೊಂಡೋ, ಸೆಲ್ಫಿ ತೆಗೆದುಕೊಂಡು ಸಾಕ್ಷಿ ನೀಡುವುದಿಲ್ಲ. ಏನೂ ಮಾಡಿಯೇ ಇಲ್ಲವೆಂಬಂತೆ ಎಲ್ಲವನ್ನು ಮರೆತು ಮತ್ತೆ ನಾಳೆಗೆ ಸಿದ್ಧಳಾಗುತ್ತಾಳೆ”. ಫೇಸ್ಬುಕ್ ಪುಟ ತೆರೆದರೆ ಸಾಕು, ಸುಮ್ಮ ಸುಮ್ಮನೇ ಪಟ ಬದಲಿಸುವ, ಸಣ್ಣ ಪುಟ್ಟ ಸಂಗತಿಗಳನ್ನೂ ಎಂಥದೋ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುವ ಸೆಲ್ಫಿ ಹುಚ್ಚಿನವರು ಗಮನಿಸಲೇ ಬೇಕಾದ ಮತ್ತು ಅನುಸರಿಸಲೇ ಬೇಕಾದ ಸಾಲುಗಳು ಇವು. ತಮ್ಮ ಪಾಡಿಗೆ ತಾವು ಮಾನವೀಯ ಕೆಲಸಗಳನ್ನು ಮಾಡುತ್ತಿದ್ದರೂ ತೋರಿಸಿಕೊಳ್ಳದೇ ಹೇಳಿಕೊಳ್ಳದೇ ತಮ್ಮಲ್ಲೇ ಸುಖ ಕಾಣುತ್ತಿರುವವರನ್ನು ನಮ್ಮ ಫೇಸ್ಬುಕ್ಕಿಗರು ಗಮನಿಸದೇ ಇರುವುದು ಇದಕ್ಕೆ ಕಾರಣ. ಕವಿಯೆಂದು ಬೀಗುತ್ತಿರುವ ಹಲವರು ಮೊದಲು ತಮ್ಮ ಸುತ್ತ ಇರುವ ಜನ ಹೇಗೆ ಯಾವುದಕ್ಕೆ ಪ್ರತಿಕ್ರಯಿಸುತ್ತಾರೆ ಎನ್ನುವುದನ್ನು ಕಂಡುಕೊಳ್ಳದೇ ಅಂದು ಕೊಂಡದ್ದನ್ನೇ ಕಾವ್ಯ ಎಂದು ಬರೆಯುವಾಗ ಈ ಕವಿಯ ಈ “ನೋಟ” ಅವರ ಕವಿತೆಗಳಲ್ಲೂ ಚಾಚಿವೆ. “ಸರ್ಕಾರಿ ಬಸ್ಸಿನ ಕೊನೆಯ ಗಿರಾಕಿ” ಕವಿತೆ ಕೂಡ ಇಂಥದೇ ಬೆರಗಿನ ನೋಟದಲ್ಲೇ ಅರಳುತ್ತದೆ ಮತ್ತು ನಾವೆಲ್ಲರೂ ನೋಡಿ ಗಮನಿಸದೇ, ಗಮನಿಸಿದ್ದರೂ ತುಲನೆ ಮಾಡದ ಸಂಗತಿಗಳನ್ನು ಚಿತ್ರಿಸುತ್ತದೆ. ಕಣ್ಣಿಗೆ ಕಂಡದ್ದನ್ನು ಕಂಡಹಾಗೆ ಬರೆಯುತ್ತಿದ್ದ ಕವಿ ಒಮ್ಮೆಲೇ “ಅಜ್ಜನ ದೋತ್ರಕ್ಕೆ ಎಷ್ಟೊಂದು ನೆರಿಗೆಗಳು ಥೇಟ್ ಅವನ ಮುಖದ ಮೇಲಿನಂತೆ” ಎಂದು ಹೇಳುತ್ತ ರೂಪಕದ ಸಾಧ್ಯತೆಯನ್ನು ತೋರುತ್ತಾರಲ್ಲ, ಈ ಇಂಥ ಯತ್ನಗಳೇ ನಾಳೆಯ ಇವರ ಕವಿತೆಗಳನ್ನು ಎದುರು ನೋಡಲು ಪ್ರೇರೇಪಿಸುತ್ತದೆ. “ರಾಮನಾದರೂ ದಕ್ಕಲಿ, ರಹೀಮನಾದರೂ ದಕ್ಕಲಿ ಬಿಕ್ಕಿ ಅಳುವ ಕಂದನ , ಕಣ್ಣೀರು ಕೊಂಚ ಒರೆಸಲಿ” “ದೇವರು ತುಂಬ ದೊಡ್ಡವನು” ಹೆಸರಿನ ಕವಿತೆಯ ಆಶಯ ಮಾನವೀಯ ಗುಣ ಇಲ್ಲದವರಿಗೆ ಸುಲಭಕ್ಕೆ ದಕ್ಕದ್ದು ಮತ್ತು ಸಿದ್ಧಿಸದ್ದು ಕೂಡ. ಏಕೆಂದರೆ ತಮ್ಮ ತಮ್ಮ ದೇವರು ಧರ್ಮ ಜಾತಿಗಳನ್ನೇ ದೊಡ್ಡದೆಂದು ಭಾವಿಸುವವರ ನಡುವೆ ಇಂಥ ಔದಾರ್ಯ ಮತ್ತು ಆತ್ಮ ನಿರ್ಭರತೆ ಇಲ್ಲದ ಯಾರೂ ಕವಿಯೆಂದು ಹೇಳಿಕೊಂಡ ಮಾತ್ರಕ್ಕೇ ಕವಿಯಾಗುವುದಿಲ್ಲ, ಅನ್ಯರ ಕಷ್ಟವನ್ನೂ ತನ್ನದೆಂದು ಭಾವಿಸದವನು ಕವಿಯಾಗುವುದು ಆಗದ ಮಾತು. ಆದರೆ ಇಷ್ಟು ಚಂದದ ದಾರಿಯಲ್ಲಿ ನಡೆದಿದ್ದ ಈ ಕವಿತೆ ಅಂತ್ಯದಲ್ಲಿ ಹೇಳಿಕೆಯಾಗಿ ಬದಲಾಗುತ್ತದೆ; “ಕಟ್ಟುವುದೇ ಆದರೆ ಒಂದು ಶಾಲೆಯನ್ನೊ, ಶೌಚಗೃಹವನ್ನೊ ಕಟ್ಟೋಣ ಹಸಿವು, ಅಜ್ಞಾನ, ಮಾನದ ಮುಂದೆ ಯಾವ ದೇವರೂ ದೊಡ್ಡವನಲ್ಲ ಅಲ್ಲವೆ…” ಇಂಥ ಹೇಳಿಕೆಗಳು ಮತ್ತು ಘೋಷಣೆಗಳು ಒಂದು ವರ್ಗದ ಮನಸ್ಥಿತಿ ಇದ್ದವರಿಗೆ “ಹಿತ” ಅನ್ನಿಸುವದರಿಂದ ಮತ್ತು ಫೇಸ್ಬುಕ್ ಪುಟಗಳ ತುಂಬ ಅಂಥವರದೇ ಲೈಕು ಕಮೆಂಟುಗಳು ತುಂಬಿಕೊಳ್ಳುವುದರಿಂದ ಯುವ ಕವಿಗಳು ಕ್ಷಣದ ಹೊಗಳಿಕೆಗಾಗಿ ಹೇಳಿಕೆಗಳಲ್ಲೋ ಘೋಷಣೆಗಳಲ್ಲೋ ಕವಿತೆಯನ್ನು ಧ್ವನಿಸದೇ ಪ್ರತಿಮೆ ರೂಪಕಗಳ ಮೂಲಕವೇ ತಮ್ಮ ಅಭಿವ್ಯಕ್ತಿಯನ್ನು ಪ್ರಚುರಗೊಳಿಸುವ ಅಗತ್ಯತೆ ಇದೆ. “ಒಂದರೆಘಳಿಗೆಯ ನಿದ್ದೆ” ಕವಿತೆ ಕೂಡ ಮೇಲ್ನೋಟಕ್ಕೆ ರಿಯಲ್ ಮತ್ತು ವರ್ಚ್ಯುಯಲ್ ಪ್ರಪಂಚಗಳ ಡಿಸೆಕ್ಷನ್ ಥರ ಕಂಡರೂ ಆ ಡಿಸೆಕ್ಷನ್ನಿಗೆ ಬೇಕಾದ ಪರಿಕರಗಳನ್ನು ಇಟ್ಟುಕೊಳ್ಳದೇ ಥಟ್ಟನೇ ಹೊಳೆದ ಜನ ಮನ್ನಣೆಗೆ ಬರೆದ ಸಾಲುಗಳಾಗಿ ಬದಲಾಗಿವೆ. ಈ ಎರಡೂ ಕವಿತೆಗಳ ಆತ್ಮವನ್ನು ಬೆಳಗಿ ದೈಹಿಕ ನ್ಯೂನತೆಗಳನ್ನು ಸರಿಪಡಿಸಿದರೆ ಎರಡೂ ಕೂಡ ಉತ್ತಮ ರಚನೆಗಳಾಗುವ ವಸ್ತು ಹೊಂದಿವೆ. “ಸಾವು ಅಂತಿಮ ಎನಿಸಿದಾಗ ನೀನೊಮ್ಮೆ” ಎಂಬ ಸಾಲುಗಳನ್ನು ಪ್ರತಿ ಅನುಪಲ್ಲವಿಯಲ್ಲಿ ಮತ್ತೆ ಮತ್ತೆ ಧೇನಿಸುವ ಕವಿತೆ ಅದ್ಭುತ ಚಿತ್ರಗಳನ್ನು ಚಿತ್ರಿಸುತ್ತಲೇ ನಿಜಕ್ಕೂ ಬದುಕಿಗೆ ಬೇಕಾದ ಪರಿಕರಗಳನ್ನು, ಜರೂರು ಬೇಕಿರುವ ಆತ್ಮ ಸಾಂಗತ್ಯದ ಅನಿವಾರ್ಯಗಳನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತಲೇ ಬದುಕಿದ್ದಷ್ಟೂ ದಿನ ಅರ್ಥ ಪೂರ್ಣವಾಗಿ ಬದುಕಬೇಕಿರುವ ಹೃದಯವಂತಿಕೆಯ ಚಿತ್ರಣವಾಗಿದೆ. ಆದರೆ ಈ ಕವಿ ಏಕೋ ಘೋಷಣೆಗೋ ಅಥವ ಹೇಳಿಕೆಗೋ ಹೆಚ್ಚು ಮಹತ್ವ ಕೊಟ್ಟ ಕಾರಣಕ್ಕೆ ಕಡೆಯ ಸಾಲುಗಳಲ್ಲಿ ಕವಿತೆ ತಟಸ್ಥವಾಗಿ ಬಿಡುತ್ತದೆ. “ಜಿನುಗುವ ಮಳೆಯಲ್ಲಿ ಬಿಕ್ಕುವ ಹಳೆ ನೆನಪುಗಳ ಕೆಣಕಬೇಡ ಸಖಿ” ಎಂದು ಆರಂಭವಾಗುವ ತಲೆ ಬರಹವಿಲ್ಲದ ಪದ್ಯದ ಆಶಯ ಮಹತ್ವದ್ದು. ಘೋಷಣೆ ಅಥವ ಹೇಳಿಕೆಗಳಿಲ್ಲದ ನಿಜದ ಮಾತುಗಳೇ ತುಂಬಿರುವ ಪದ್ಯ ಹರೆಯದ ಹುಡುಗರು ಸಾಮಾನ್ಯ ಸೃಷ್ಟಿಸುವ ಪ್ರೀತಿ, ಪ್ರೇಮಗಳ ಕುರಿತಾದ ಅಂಶಗಳಿದ್ದರೂ ಭೋರ್ಗರೆತ ಮತ್ತು ಸುಳಿ ತಿರುವುಗಳ ಚಿತ್ರಣವಿಲ್ಲದೆಯೂ ಸರಾಗ ಹರಿದು ಕಡಲು ಸೇರುವ ನದಿಯ ಹರಿವಂತೆ ಭಾಸವಾಗುತ್ತದೆ. “ಹುಡುಕುತ್ತಲೇ ಇದ್ದಾಳೆ ಅವ್ವ ಕುಂಕುಮದ ಬಟ್ಟಲಲ್ಲಿ, ಅರಿಶಿಣದ ಬೇರಿನಲ್ಲಿ ಮಲ್ಲಿಗೆ ಹೂ ದಾರದಲ್ಲಿ ಬಳೆಯ ಸದ್ದಿನ ಗುಂಗಿನಲ್ಲಿ ಗೆಜ್ಜೆನಾದದ ಸದ್ದಿನಲ್ಲಿ…..” ಇಲ್ಲವಾದ ಅಪ್ಪನನ್ನು ಸಾರ್ಥಕವಾಗಿ ಚಿತ್ರಿಸಿದ ಸಾಲು ಇಷ್ಟವಾಗುತ್ತದೆ. ಆದರೆ ಇನ್ನೂ ಬೆಳಸಬಹುದಾಗಿದ್ದ ಈ ಪದ್ಯ ಅವಸರದಲ್ಲಿ ಬರೆದಂತೆ ಕಾಣುತ್ತದೆ. “ಎರೆಮಣ್ಣ ನೆಲದಲ್ಲಿ ತರತರದ ಸೊಬಗಲ್ಲಿ ಮೂಡಗಾಳಿಯ ಎದುರು, ಮಸಡಿ ಬಿರಿತರು ಕೂಡ ಬನ್ನಿಗಿಡದಡಿಯ ಕಲ್ಲು ಪಾಂಡವರಿಗೆ ಕೈ ಮುಗಿದು ದೆವ್ವದ ಗಾಳಿಗೆ ಎದೆಯೊಡ್ಡಿ ನಿಂತ ಭೂತಾಯಿ ಇವಳು ಜನಕರಾಜನ ಮಗಳು..” ಎನ್ನುವ ಸಾಲುಗಳನ್ನು ಓದುತ್ತಿದ್ದಾಗ ಯಾಕೋ ಲಂಕೇಶರ ಅವ್ವ ಪದ್ಯ ಬೇಡ ಬೇಡ ಎಂದರೂ ನೆನಪಾಗುತ್ತದೆ. ಕನ್ನಡದ ಕವಿತೆಗಳೇ ಹಾಗೆ, ಒಂದರ ನೆರಳು ಮತ್ತೊಂದರ ತಲೆಗೆ ತಾಕುತ್ತದೆ, ಮಗದೊಂದು ತೋರಿದ ಝಳಕ್ಕೆ ಎಗ್ಗು ಸಿಗ್ಗಿಲ್ಲದೇ ಅರಳಿಕೊಳ್ಳುತ್ತದೆ, ಹೊರಳಿಕೊಳ್ಳುತ್ತದೆ. ಶ್ರೀ ಕಲ್ಮೇಶ ತೋಟದ ಈಗಿನ್ನೂ ೨೬ರ ಹರಯದ ಯುವಕ. ಅವರು ಸಾಗಬೇಕಿರುವ ದಾರಿ ಮತ್ತು ಮುಟ್ಟ ಬೇಕಿರುವ ಗುರಿ ಬಹಳ ದೊಡ್ಡದಿದೆ. ಆತ್ಮ ಸಂಗಾತಕ್ಕೆ ಅನುಭವದ ಹಾದಿಯ ಎಡರು ತೊಡರುಗಳನ್ನು ಬಳಸುತ್ತಲೇ ಅವನ್ನೇ ಕವಿತೆಯ ರೂಪಕಗಳನ್ನಾಗಿ ಬಳಸುವ ಜಾಣ್ಮೆ ಮತ್ತು ಕಲೆ ಅವರು ಸಿದ್ಧಿಸಿಕೊಳ್ಳುತ್ತ ಇದ್ದಾರೆ ಎನ್ನುವುದು ಅವರ ರಚನೆಗಳ ಮೇಲ್ನೋಟದ ಓದಿನ ಫಲಶೃತಿ. ಇಂಥ ಕವಿಗಳು ಅವರಿವರು ಬೆನ್ನು ತಟ್ಟಿದರೆಂಬ ಖುಷಿಯಲ್ಲಿ, ಮೈ ಮರೆಯದೇ ತಮ್ಮ ಅನುಭವಕ್ಕೆ ಬಂದ ಸಂಗತಿಗಳತ್ತಲೇ ಕಿವಿ ಮೂಗು ಕಣ್ಣುಗಳನ್ನು ಕೀಲಿಸಿದರೆ ಮಾತ್ರ ಹೇಳಿಕೆಗಳಿಂದಲೂ ಘೋಷಣೆಗಳಿಂದಲೂ ಮುಕ್ತರಾಗಬಲ್ಲರು. ಆ ಅಂಥ ಶಕ್ತಿ ಇರುವ ಈ ಯುವಕವಿ ತಕ್ಷಣಕ್ಕಲ್ಲವಾದರೂ ನಿಧಾನದ ಓದಿನಿಂದ, ಪೂರ್ವ ಸೂರಿಗಳ ಒಡನಾಟದಿಂದ ಪಡೆಯಲಿ, ಪಡೆಯುತ್ತಾರೆ ಎನ್ನುವ ಹಾರೈಕೆಯ ಜೊತೆಗೇ ಅವರ ಆಯ್ದ ಐದು ಕವಿತೆಗಳನ್ನು ಕಾವ್ಯಾಸಕ್ತರ ಓದಿಗೆ ಶಿಫಾರಸು ಮಾಡುತ್ತಿದ್ದೇನೆ; ಕಲ್ಮೇಶ ತೋಟದ್ ಕವಿತೆಗಳು 1.ಸರ್ಕಾರಿ ಬಸ್ಸಿನ ಕೊನೆಯ ಗಿರಾಕಿ ಕಿಕ್ಕಿರಿದು ತುಂಬಿದ ವಾ.ಕ.ರ.ಸಾ.ಸಂ ಬಸ್ಸಿನಲ್ಲಿ ಎಷ್ಟೊಂದು ಮುದ್ರಣಗೊಳ್ಳದ ಬದುಕುಗಳಿವೆ ಬಸ್ಸು ತನ್ನ ಪಾಡಿಗೆ ತಾ ಹೊರಟಿರುತ್ತದಷ್ಟೆ ಒಳಗೆ ಅಲ್ಲಲ್ಲಿ ಒಂದಿಷ್ಟು ಗುಂಪುಗಳು ಮಾತಿಗಿಳಿದಿರುತ್ತವೆ ಎಷ್ಟೊಂದು ರಾದ್ಧಾಂತದ ಬದುಕು ಪ್ರತಿಯೊಬ್ಬರು ಇನ್ನೊಬ್ಬರನ್ನು ದೂಷಿಸುವುದರಲ್ಲಿಯೇ ಮಗ್ನರಾಗಿದ್ದಾರೆ ಅಲ್ಲೊಂದು ಹಿರಿಯ ನಾಗರಿಕರಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತ ಹುಡುಗರಿಗೆ ಕಾಲೇಜಿನ ಗೌಜು ಗದ್ದಲದ ಚಿಂತೆ ಅಲ್ಲೆ ಮುಂದೆ ಸೀಟು ಸಿಗದೆ ನಿಂತ ಮುದುಕನೊಬ್ಬ ಎಡಗಾಲನ್ನೊಮ್ಮೆ, ಬಲಗಾಲನ್ನೊಮ್ಮೆ ಬದಲಿಸುತ್ತ ದೇಹದ ಭಾರ ನಿಭಾಯಿಸುತ್ತಾನೆ ಅಜ್ಜನ ದೋತ್ರಕ್ಕೆ ಎಷ್ಟೊಂದು ನೆರಿಗೆಗಳು ಥೇಟ್ ಅವನ ಮುಖದ ಮೇಲಿನಂತೆ ಹಿಂದೆ ಯಾರದ್ದೊ ಮೊಬೈಲಿನಲಿ ಹಳೆ ಟ್ಯಾಕ್ಟರ್ ಜಾನಪದದ ಹಾಡು ಎಗ್ಗಿಲ್ಲದೆ ಬಡಿದುಕೊಳ್ಳುತ್ತಲೆ ಇದೆ ಚಿಲ್ಲರೆ ಕೇಳಿ ಕೇಳಿ ಸುಸ್ತಾದ ಕಂಡಕ್ಟರ್ ಕೂಡಾ ಸಾರ್ವಜನಿಕರಿಗೆ ಮನದಲ್ಲೆ ಬೈಯುತ್ತ ಟಿಕೆಟ್ ಹರಿಯುತ್ತಿದ್ದಾನೆ ಬಸ್ಸು ತಗ್ಗು ದಿಬ್ಬಿನ ರಸ್ತೆಯೊಡನೆ ಎಷ್ಟೊಂದು ಆತ್ಮೀಯವಾಗಿದೆ ಎದ್ದರೂ, ಬಿದ್ದರೂ ಮುಗ್ಗರಿಸದೆ ಮುನ್ನಡೆಯುತ್ತದೆ ಬಸ್ಸಿನ ಕಂಬಗಳೆಲ್ಲವೂ ಈಗ ಅನಾಥ ಎಲ್ಲರೂ ಮೊಬೈಲ್ ಹಿಡಿದು ಕುಳಿತವರೆ ನಾನು ಬಸ್ಸಿಗೆ ಹೊಸಬನೊ ಅಥವಾ ಬಸ್ಸು ನನಗೆ ಹೊಸದೊ, ಥೋ… ಗೊತ್ತಿಲ್ಲ ಒಂದೊಂದೆ ನಿಲ್ದಾಣ ಬಂದಂತೆಲ್ಲಾ ಬಸ್ಸು ಬರಿದಾಗತ್ತಲೆ ಇದೆ ಈಗೋ ಕಂಡಕ್ಟರ್ ನ ಅಂತಿಮ ಪ್ರಕಟಣೆ ‘ಲಾಸ್ಟ್ ಸ್ಟಾಪ್ ಯಾರ ನೋಡ್ರಿ ಇಳಕೊಳ್ಳೊರು ಇಳಕೊಳ್ರಿ’ 2. ದೇವರು ತುಂಬ ದೊಡ್ಡವನು ರಾಮನಾದರೂ ದಕ್ಕಲಿ, ರಹೀಮನಾದರೂ ದಕ್ಕಲಿ ಬಿಕ್ಕಿ ಅಳುವ ಕಂದನ , ಕಣ್ಣೀರು ಕೊಂಚ ಒರೆಸಲಿ ಬಣ್ಣದ ಬಾವುಟಗಳು ಒಂದಿಷ್ಟು ಶಾಂತವಾಗಲಿ ಬದುಕೆ ಇಲ್ಲದೆ ಕೊರಗುವವರಿಗೆ ಒಂದಿಷ್ಟು ರಂಗು ದೊರೆಯಲಿ ಧರ್ಮ ಶ್ರೇಷ್ಠತೆಯ ಬೊಬ್ಬೆಯಿಡು ನೀನು ನಾನು ಮಾತ್ರ ಹಸಿದವರಿಗೆ ಒಂದು ತುತ್ತು ಅಣ್ಣ ಕಲಸಿ, ಕೈತುತ್ತನ್ನಷ್ಟೆ ನೀಡಬಲ್ಲೆ ಅಲಿಸಾಬ್ ಕಾಕಾನೊಂದಿಗೆ ವ್ಯವಹಾರ ನಡೆಸುತ್ತಿದ್ದ ದೊಡ್ಡಪ್ಪ ಎಂದಿಗೂ ಧರ್ಮ-ಜಾತಿಗಳ ಲೆಕ್ಕ ಹಾಕಿದ್ದು ಕಂಡಿಲ್ಲ ಇಷ್ಟ್ಯಾಕೆ ಕಚ್ಚಾಡಿ, ಕಷ್ಟಪಡುತ್ತೀರಿ ದೇವರು ತುಂಬ ದೊಡ್ಡವನು ನಿವ್ಯಾಕೆ ಬೀದಿಗಿಳಿದು ಚಿಕ್ಕವರಾಗುತ್ತೀರಿ ಗೋಡೆಯಾದರೂ ಉರುಳಲಿ, ಗುಮ್ಮಟವಾದರೂ ಉರುಳಲಿ ಹಸಿವಿನ ಕಟ್ಟೆ ಒಡೆಯದಿರಲಿ ಕಟ್ಟುವುದೇ ಆದರೆ ಒಂದು ಶಾಲೆಯನ್ನೊ, ಶೌಚಗೃಹವನ್ನೊ ಕಟ್ಟೋಣ ಹಸಿವು, ಅಜ್ಞಾನ, ಮಾನದ ಮುಂದೆ ಯಾವ ದೇವರೂ ದೊಡ್ಡವನಲ್ಲ ಅಲ್ಲವೆ… 3. ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ಪಾರಿಜಾತದ ಹೂ ನೋಡಬೇಕಿತ್ತು ಕೊಂಡಿ ಕಳಚಿದಾಗಲೂ ಅದು ನಗುತ್ತಲೆ ನೆಲಕ್ಕುದುರುವ ಪರಿ ಹೇಳುತ್ತಿತ್ತು ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ನವಿಲು ಗರಿಯನ್ನ ಮಾತಿಗೆಳೆಯಬೇಕಿತ್ತು ಮೈ ಕೊಡವಿದಾಗ ದೇಹದಿಂದ ಬೇರ್ಪಟ್ಟರು ಅದು ನಗುವ ಪರಿ ಹೇಳುತ್ತಿತ್ತು ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ಕಡಲ ಚಿಪ್ಪನ್ನು ಕಂಡು ಬರಬೇಕಿತ್ತು ತಲೆ ಒಡೆಸಿಕೊಂಡಾಗ ಮುತ್ತು ನೀಡಿದ ಘಳಿಗೆಯ ನೆನದು ಅದು ಸಾಂತ್ವನ ಹೇಳುತ್ತಿತ್ತು ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ಹೆತ್ತವ್ವನ ಒಡಲಲ್ಲಿ ಸುಮ್ಮನೆ ತಲೆಯಿಟ್ಟು ಮಲಗಬೇಕಿತ್ತು ಕರುಳಬಳ್ಳಿ ಕತ್ತರಿಸಿ, ಕೋಡಿ ನೆತ್ತರ ಹರಿಸಿದಾಗಲೇ ನೀ ಹುಟ್ಟಿದ್ದನ್ನು ಕಿವಿ ಹಿಂಡಿ ಹೇಳುತ್ತಿತ್ತು ಸಾವೇ ಅಂತಿಮ ಎನಿಸಿದಾಗ ನೀನೊಮ್ಮೆ ನಿನ್ನಾತ್ಮದೊಂದಿಗೆ ಸಂವಾದಕ್ಕಿಳಿಯಬೇಕಿತ್ತು ಕೊನೆ ಪಕ್ಷ ಇದ್ದು ಮಾಡಬೇಕಾದ ಜರೂರತ್ತುಗಳನ್ನ ನೆನಪಿಸುತ್ತಿತ್ತು ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ಮೌನ ಮುರಿದು ಮಾತಾಗಬೇಕಿತ್ತು ನಾನು ಹೆಗಲುಕೊಟ್ಟು ದುಃಖಕ್ಕೆ ಜೊತೆಯಾಗುತ್ತಿದ್ದೆ ನೀ ಇದ್ದರೂ, ಇಲ್ಲದಿದ್ದರೂ ಇಲ್ಲಿ ಯಾವುದು ನಿಲ್ಲುವುದಿಲ್ಲ ಈಗ ಎಲ್ಲವೂ ಮೀರಿ ಹೋಗಿದೆ ಅಷ್ಟೆ ನಿನ್ನ ಬಿತ್ತಿದ ನೆಲವೂ ಉಬ್ಬಿ ನಿಂತಿದೆ ಹೂಗಳ ಹೊತ್ತು ಸನ್ಮಾನವೆಂದು ಭ್ರಮಿಸಿ ನೀನಷ್ಟೆ ಕುಗ್ಗಿ ಮಣ್ಣಾಗಿ ಹೋದವ ಮೂರ್ಖ 4. ಜಿನುಗುವ ಮಳೆಯಲ್ಲಿ ಬಿಕ್ಕುವ ಹಳೆ ನೆನಪುಗಳ ಕೆಣಕಬೇಡ ಸಖಿ ಸುಕ್ಕುಗಟ್ಟಿದ ಮನಸ್ಸಲ್ಲಿ ಮತ್ತೆ ಮುಂಗಾರು ಮಳೆ ಸುರಿದು ಒಲವ ಹೂ
ಸಹಜ ನಡಿಗೆಯ ರುದ್ರ ನರ್ತನದ ಭಾವಗಳಂತೆ ಕುಮಾರ್ ಹೊನ್ನೇನಹಳ್ಳಿ ಪದ್ಯಗಳು . ಕುಮಾರ್ ಹೊನ್ನೇನಹಳ್ಳಿ ವೃತ್ತಿಯಿಂದ ಶಿಕ್ಷಕ ಮತ್ತು ಶಿಕ್ಷಕರ ತರಬೇತುದಾರ ಅಂದರೆ ರಿಸೋರ್ಸ್ ಪರ್ಸನ್. ಅವರ ವೃತ್ತಿಯ ಕಾರಣ ಅಂದರೆ ಸಂಪನ್ಮೂಲ ವ್ಯಕ್ತಿಯಾಗಿರುವ ಕಾರಣ ಜಗತ್ತಿನ ಸಮಸ್ತ ಆಗು ಹೋಗುಗಳ ಅರಿವು ಮತ್ತು ಅಂಥ ಸಂಗತಿಗಳು ಒಟ್ಟೂ ಸಮಾಜದ ಮೇಲೆ ಬೀರುವ ಪರಿಣಾಮಗಳನ್ನೂ ಪ್ರಮಾಣಗಳನ್ನೂ ಆನುಷಂಗಿಕವಾಗಿ ಅವರು ಪ್ರಸ್ತಾಪಿಸದೇ ಅನ್ಯ ಮಾರ್ಗಗಳು ಇರುವುದಿಲ್ಲ. ಹಾಗಾಗಿಯೇ ಏನೋ ಇವರ ಕವಿತೆಗಳಲ್ಲಿ ಐತಿಹಾಸಿಕ ವ್ಯಕ್ತಿಗಳೂ ವರ್ತಮಾನದ ಸಂಗತಿಗಳೂ ಆಗೀಗ ಬೇರೆ ಬೇರೆಯದೇ ರೂಪದಲ್ಲಿ ಭೇಟಿಯಾಗುತ್ತಲೇ ಇರುತ್ತವೆ. ಇವರ ಎಫ್ಬಿ ಖಾತೆಯಲ್ಲಿ Kumara h c holenarsipur ಎಂದಿದೆ. ಎಫ್ಬಿಯ ಅಸಂಖ್ಯಾತ ಪೋಸ್ಟುಗಳ ನಡುವೆ ದಿನಕ್ಕೊಮ್ಮೆಯಾದರೂ ಹಣಕುವ ಲೈಕೋ ಕಮೇಂಟೋ ಅಥವ ತಮ್ಮದೇ ಪಟಗಳನ್ನೇ ತೇಲಿ ಬಿಡುವವರ ನಡುವೆ ಸ್ವಲ್ಪ ಸೀರಿಯಸ್ ಆಗಿಯೇ ಪ್ರತಿಕ್ರಯಿಸುವ ಕುಮಾರ್ ತಮ್ಮ ಕವಿತೆಗಳಿಂದಲೂ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಕಳೆದ ಆರೇಳು ವರ್ಷಗಳಿಂದ ಕವನ ಕೃಷಿಗೆ ಕೈ ಹಾಕಿರುವ ಕುಮಾರ್ ಸದ್ಯ ಹುಣಸೂರಿನ ವಾಸಿ. “ಬೆಳಕಿನೆಡೆಗೆ” ಸಂಘಟನೆಯ ಮೂಲಕ ಹುಣಸೂರಿನಲ್ಲಿ ಸಾಹಿತ್ಯಾಸಕ್ತರ ಗುಂಪಿನ ಜೊತೆ ಒಡನಾಟ ಇಟ್ಟುಕೊಂಡಿರುವ ಇವರು ಶ್ರೀ ಅರವಿಂದ ಚೊಕ್ಕಾಡಿಯವರ ಮಧ್ಯಮಪಂಥದ ಬೆಂಬಲಿಗ. ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಲೇಖನಗಳನ್ನು ಡಯಟ್ ಮೈಸೂರಿನ ಮೂಲಕ ಪ್ರಕಟಿಸಿರುವ ಇವರುಯಾವುದೇ ಲೇಖನ ಕವನಗಳನ್ನು ಉಳಿದಂತೆ ಯಾವುದೇ ಪತ್ರಿಕೆಗೂ ಕಳುಹಿಸಿಲ್ಲ ಎಂದು ಹೇಳಿದಾಗ ಆಶ್ಚರ್ಯವಾಗದೇ ಇರದು. ಆದರೂ ಕವನ ಸಂಕಲನ “ಪ್ರಳಯವಾಗುತ್ತಿರಲಿ..” ಪ್ರಕಟಿಸಿದ್ದಾರೆ. ಯಾವ ಪತ್ರಿಕೆಗೂ ಬರೆಯದೆ ಬರಿಯ ಫೇಸ್ಬುಕ್ಕಿನ ಮೂಲಕವೇ ಕವಿತೆ ಪ್ರಕಟಿಸುವ ಶ್ರೀಯುತರ ಸಂಕಲನ ನಾನು ನೋಡದೇ ಇದ್ದರೂ ಅವರ ಫೇಸ್ಬುಕ್ ಕವಿತೆಗಳ ಮೂಲಕವೇ ಅವರೊಳಗಿನ ಕವಿಯ ಭಾವವನ್ನು ಆ ಕವಿಯು ಸಮಾಜದ ನಡವಳಿಕೆಗಳ ಮೇಲೆ ಇರಿಸಿ ಕೊಂಡಿರುವ ನೈತಿಕ ಸಿಟ್ಟನ್ನೂ ಅರಿಯಬಹುದು. ಶ್ರೀ ಕುಮಾರ್ ಅರವಿಂದ ಚೊಕ್ಕಾಡಿಯವರ ಮಧ್ಯಮ ಪಂಥದ ಸಹವರ್ತಿಯೂ ಆಗಿರುವ ಕಾರಣ ಅವರ ನಿಲುವು ಎಡವೂ ಅಲ್ಲದ ಬಲಕ್ಕೂ ವಾಲದ ಆದರೆ ಸಾಮಾಜಿಕ ಸನ್ನಿವೇಶಗಳಿಗೆ ಆಯಾ ಸಂದರ್ಭಗಳ ಅಗತ್ಯತೆಗೆ ತಕ್ಕಂತೆ ಬಾಗುವುದನ್ನೂ ಬಳುಕುವುದನ್ನೂ ಹಾಗೆಯೇ ಬಗ್ಗದೇ ಸೆಟೆಯುವದನ್ನೂ ಈ ಕವಿತೆಗಳ ಅಧ್ಯಯನದಿಂದಲೇ ಅರಿಯಬಹುದು. ನಿಜದ ಕವಿಯು ನಿಜಕ್ಕೂ ಇಟ್ಟುಕೊಳ್ಳಲೇ ಬೇಕಾದ ನೈತಿಕತೆ ಇದುವೇ ಆಗಿದೆ. ಏಕೆಂದರೆ ಕವಿಯೂ ಮೂಲತಃ ಒಬ್ಬ ಮನುಷ್ಯ. ಅವನಿಗೂ ಎಲ್ಲರ ಹಾಗೆ ಬದುಕಿನ ಸವಾಲುಗಳು, ಸಾಲ ಸೋಲಗಳು, ಸೋಲು ಗೆಲವುಗಳು, ನೈತಿಕತೆಯನ್ನು ಪ್ರಶ್ನಿಸುತ್ತಲೇ ಅನೈತಿಕತೆಗೆ ಎಳೆಸುವ ಪ್ರಲೋಭನೆಗಳು ಈ ಎಲ್ಲವನ್ನೂ ಕವಿಯೂ ಅನುಭವಿಸುತ್ತಲೇ ಇರುತ್ತಾನೆ ಮತ್ತು ಆ ಅಂಥ ಸಂದರ್ಭಗಳಲ್ಲಿ ಎಲ್ಲ ಸಾಮಾನ್ಯರೂ ವರ್ತಿಸುವಂತೆಯೇ ವರ್ತಿಸಿರುತ್ತಾನೆ. ಆದರೆ ಕವಿಯಾದವನು ಆ ಅಂಥ ಅನುಭವವನ್ನು ತನ್ನದೇ ರೀತಿಯಲ್ಲಿ ಅಭಿವ್ಯಕ್ತಿಸಲು ಕವಿತೆಗೆ ಮೊರೆ ಹೋಗುತ್ತಾನೆ. ಮತ್ತು ತನ್ನ ಮುಂದಣ ಸವಾಲುಗಳಿಗೆ ಕವಿತೆಯ ಮೂಲಕವೇ ಉತ್ತರ ಕಂಡು ಕೊಳ್ಳುತ್ತಾನೆ. ಇದನ್ನು ಅವರ “ಸರದಿ” ಅನ್ನುವ ಕವಿತೆಯಲ್ಲಿ ನೀವೇನೋ ಬಿಡಿ ಆ ಕಡೆ ಆದರೂ ಸರಿ ಈ ಕಡೆ ಆದರೂ ಸರಿ ನಿಂತು ಬಿಡುವಿರಿ ಏನೂ ಮಾಡಲಾಗದ ಆ ಒಂದು ಗಳಿಗೆ ನೀವೂ ದಾಟಲೇಬೇಕು ಆಳ ಎಷ್ಟಿದ್ದರೂ ಹರವು ಹರವಿದ್ದರೂ ಕತ್ತಲಲಿ ಹೊರಟರೂ ಬೆಳಕಿನಲಿ ಹೊರಟರೂ ಒಪ್ಪಿ ನಡೆದರೂ ಒಪ್ಪದೆ ಇದ್ದರೂ…… (ಸರದಿ) ಈ ದ್ವಂದ್ವಗಳ ನಡುವೆಯೂ ಪಯಣವನು ಮುಂದಕ್ಕೆ ಸಾಗಿಸಬೇಕಲ್ಲ ಅನ್ನುವ ವ್ಯಥೆಯ ನಡುವೆಯೇ ಸರದಿಯಲ್ಲಿರುವ ನಾವು ನಮ್ಮಾಚೆ ಇನ್ನೂ ಯಾರೋ ಕಾಯುತ್ತಲೇ ಇದ್ದಾರೆ ಅನ್ನುವ ಅರಿವು ಇಲ್ಲಿ ಮುಖ್ಯ. ಮತ್ತು ಆ ಅದೇ ಭಾವವೇ ಈ ಕವಿತೆಯು ದ್ವಂದ್ವವನ್ನು ಗೆಲ್ಲುವ ಉಪಾಯ ಕಂಡುಕೊಂಡದ್ದು! ಈ ಕವಿ ವೃತ್ತಿಯಿಂದ ಶಿಕ್ಷಕ. ಹಾಗಾಗಿ ಪ್ರತಿ ವರ್ಷ ಫಲಿತಾಂಶದತ್ತಲೇ ದಿಟ್ಟಿ. ಅವರು ಹೇಳುತ್ತಾರೆ; ಉದುರಿದ ಎಲೆಗಳ ಗುಡಿಸದೆ ಕಳಿಯಲು ಬಿಟ್ಟಿದ್ದರೆ ತನ್ನದೇ ಬುಡದಲಿ? (ಉದುರಿದ ಎಲೆಗಳ ಗುಡಿಸಿ) ವರ್ತಮಾನದ ಶಿಕ್ಷಣ ವ್ಯವಸ್ಥೆಯನ್ನೂ ಅದು ಅಮೂಲಾಗ್ರವಾಗಿ ಬದಲಾಗಬೇಕಾದ ಅನಿವಾರ್ಯವನ್ನೂ ಹೇಳುತ್ತಿದ್ದಾರೆ ಅನ್ನಿಸಿತು. ಉದುರಿದ ಎಲೆಗಳನ್ನು ಗುಡಿಸಿ ಬಿಸಾಕುವ ಅಂದರೆ ಈಗಾಗಲೇ ಘಟಿಸಿದ ಐತಿಹಾಸಿಕ ಸಾಮಾಜಿಕ ಸನ್ನಿವೇಶಗಳನ್ನು ಕಲಿಕೆಯಲ್ಲಿ ಅಳವಡಿಸಿಕೊಳ್ಳದೇ ಕಡ ತಂದ ರಸ ಗೊಬ್ಬರ ಚಲ್ಲಿದರೆ ಅಂದರೆ ಆಧುನಿಕ ವಿದ್ಯಾಭ್ಯಾಸ ಕ್ರಮ(?) ನೆಲವನ್ನು ಬಂಜರು ಮಾಡುತ್ತಿದೆ ಅನ್ನುವ ಅರಿವು ಸ್ವತಃ ಅನುಭವದಿಂದಲೇ ಕಂಡು ಕೊಂಡ ಕಾಣ್ಕೆ. ” ಕಳೆದ ಆ ನನ್ನ ಮೊಗ” ಕವಿತೆಯು ಧೇನಿಸುವುದು ಸಾಮಾನ್ಯ ಸಂಗತಿಯನ್ನೇ ಆದರೂ ಅದು ಪಡೆಯುವ ನಿಲುವು ಸಾರ್ವತ್ರಿಕವಾಗಿ ಸತ್ಯವಾದುದೂ ಸತ್ವವಾಗಿಯೂ ಇರುವಂಥದು. ಮುಖವಾಡಗಳೊಳಗೇ ಏಗಬೇಕಿರುವ ನಮ್ಮೆಲ್ಲರ ಬದುಕನ್ನೂ ಈ ಕವಿ ಅತ್ಯಂತ ಯಶಸ್ವಿಯಾಗಿ ಹೀಗೆ ಅಭಿವ್ಯಕ್ತಿಸುತ್ತಾರೆ; ಅದೆಷ್ಟು ವರುಷಗಳಾದವು ಕನ್ನಡಿಯಲಿ ಅದೆಷ್ಟು ಮುಖಗಳು ಕಂಡವು ಅದು ನನ್ನದು ಅನ್ನುವ ಯಾವುದೋ ಏನೋ ಎಲ್ಲಾ ಅಯೋಮಯ ಮುಂದುವರೆದ ಪದ್ಯ ಕಡೆಯಲ್ಲಿ ಕಂಡುಕೊಳ್ಳುವ ಸತ್ಯ ಹೀಗೆ; ಅಲ್ಲಿಯವರೆಗೆ ಹೀಗೆ ಅನಿವಾರ್ಯ ಕನ್ನಡಿಯೊಳಗೆ ಕಾಣುವ ಸಾವಿರಾರು ಮುಖಗಳಲಿ ಸಿಕ್ಕ ಒಂದನು ಕಿತ್ತು ಭುಜಗಳ ಮೇಲೆ ಸಿಕ್ಕಿಸಿಕೊಂಡು … ಅಂದ ಮಾತ್ರಕ್ಕೆ ಇವರ ಎಲ್ಲ ಕವಿತೆಗಳೂ ಹೀಗೆ ಅನೂಹ್ಯಕ್ಕೆ ಸಲ್ಲುತ್ತವೆ ಎಂದೇನಲ್ಲ. ನಿಜಕ್ಕೂ ಅದ್ಭುತವಾಗಬಹುದಾಗಿದ್ದ “ನಾನು ಮತ್ತು ನನ್ನಂಥವರು” ಕವಿತೆ ಆರಂಭದಲ್ಲಿ ಹುಟ್ಟಿಸಿದ ಭರವಸೆಯನ್ನೂ (ಶೀರ್ಷಿಕೆ ಗಮನಿಸಿ) ಸಾಮಾನ್ಯ ಸಂಗತಿಯನ್ನೂ ಕವಿತೆಯ ವಸ್ತುವನಾಗಿಸುವ ಕ್ರಮವನ್ನೂ ಉದ್ದೀಪಿಸುತ್ತಲೇ ಅಂತ್ಯವಾಗುವ ವೇಳೆಗೆ ತೀರ ಸಾಮಾನ್ಯ ಹೇಳಿಕೆಯಾಗಿಬಿಡುವುದು ನಿರಾಶೆಯ ಸಂಗತಿ. ಇಂಥ ಹಲವು ಪಲಕುಗಳ ನಡುವೆಯೂ ಕವಿ ಅರಳಿ ಮತ್ತೆ ಹೊರಳುವುದು, ಅನೂಹ್ಯಕ್ಕೆ ತಡಕುವುದು ಕಾವ್ಯ ಕೃಷಿಯ ಪರಂಪರೆಯನ್ನು ಅರಿತವರಿಗೆ ತಿಳಿದ ಸಾಮಾನ್ಯ ಅಂಶ. ಏಕೆಂದರೆ ಇಂಥ ಪದ್ಯಗಳ ನಡುವೆ ಅಬ್ಬ ಎನ್ನುವ ಪ್ರತಿಮೆ ರೂಪಕಗಳನ್ನೂ ಈ ಕವಿ ನೀಡಬಲ್ಲರು. ಉದಾಹರಣೆಗೆ “ಪ್ರಶ್ನೆಗಳು” ಕವಿತೆಯ ಈ ಸಾಲು ನೋಡಿ; ಬಲಹೀನ ನಿಜ ಬಲಹೀನ ಸುಳ್ಳು ಎರಡನ್ನೂ ಹೇಳುವುದಿಲ್ಲ ನಿನ್ನೆದುರು ಹೇಳು ಗೆಳೆಯ ‘ನಿಜ’ವೆಂದರೆ ಏನು? ‘ಸುಳ್ಳು’ ಅದರ ವಿರುದ್ಧ ಪದವೆ? ಓಡುವ ಕಾಲದ ಜತೆಜತೆಗೆ ಓಡುವಾಗ ಯಾವುದು ನಿನ್ನ ಮುಂದಿನ ಕಾಲು ಹಿಂದಿನ ಕಾಲು? ಹೀಗೆ ಪ್ರಶ್ನೆಗಳಿಗೆ ಉತ್ತರವನ್ನು ತಡಕದೆಯೇ ಇದ್ದರೆ ಆ ಕವಿ ಬರಿಯ ಹೇಳಿಕೆ ಕೊಟ್ಟಾನು. ಹೇಳಿಕೆ ಮತ್ತು ಘೋಷಣೆಗಳನ್ನು ಬಿಟ್ಟುಕೊಟ್ಟ ಅನುಭವಗಳ ಸಹಜ ಅಭಿವ್ಯಕ್ತಿ ಮಾತ್ರ ಕವಿತೆಯಾಗಿ ಅರಳುತ್ತದೆ ಮತ್ತು ಬಹುಕಾಲ ಓದುಗನ ಮನಸ್ಸಿನಲ್ಲಿ ನಿಲ್ಲುತ್ತದೆ. ಈಗ ಈವರೆಗೂ ಈ ಕವಿ ಪ್ರಕಟಿಸಿರುವ ಕವಿತೆಗಳಲ್ಲೆಲ್ಲ ಬಹುವಾಗಿ ನನ್ನನ್ನು ಕಾಡಿದ ಮತ್ತು ಎಲ್ಲ ಸಹೃದಯರ ಮನಸ್ಸಿನಲ್ಲೂ ಉಳಿಯಬಹುದಾದ ರಚನೆಯೆಂದರೆ ಸದ್ಯದ ರಿಯಲ್ ವರ್ಲ್ದ್ ಮತ್ತು ವರ್ಚುಯಲ್ ವರ್ಲ್ದ್ ಗಳ ನಡುವಣ ಅಘೋಷಿತ ಯುದ್ಧದ ಪರಿಣಾಮ. ಆ ಪದ್ಯದ ಶೀರ್ಷಿಕೆ “ಹುಚ್ಚು ಹುಚ್ಚಾಗಿ”. ಸರಕು ಇರದ ಸಂತೆಯಲಿ ಬರೀ ಮಾತು ಮಾಹಿತಿ….. ಎಂಥ ವಿಪರ್ಯಾಸದ ಮಾತಿದು? ಸರಕೇ ಇಲ್ಲದ ಸಂತೆಯಲಿ ಮಾರಲೇನಿದೆ? ಕೊಳ್ಳಲೇನಿದೆ? ಇಂಥ ಅದ್ಭುತ ರೂಪಕಗಳನ್ನು ನಿಜ ಕವಿಯು ಮಾತ್ರ ಸೃಷ್ಟಿಸಬಲ್ಲ. ಈ ಮೊದಲೇ ಹೇಳಿದಂತೆ ಫೇಸ್ಬುಕ್ ಕವಿಗಳು ತಮ್ಮ ಪಟಗಳ ಲೈಕು ಕಮೆಂಟುಗಳಲ್ಲಿ ಕಳೆದು ಹೋಗುತ್ತಿರುವಾಗ ನಿಜಕ್ಕೂ ಹೌದೆನ್ನಿಸುವ ಈ ರೂಪಕ ಸೃಷ್ಟಿಸಿದ ಕುಮಾರ್ ಕವಿತೆಯನ್ನು ಮೆಚ್ಚದೇ ಇರುವುದು ಅಸಾಧ್ಯ. ಪದ್ಯದ ಕೊನೆ ಹೀಗಿದೆ; ಸುಮ್ಮನಿರಬೇಕು ಎಂದುಕೊಂಡರೂ ಹೆಂಡತಿ ಬಿಡುವುದಿಲ್ಲ ಮಗ ಕೇಳುತ್ತಾನೆ “ಅಪ್ಪಾ, ಕುಪ್ಪಳಿಸಿದರೆ ತಪ್ಪೇನು?” ಕುಪ್ಪಳಿಸುವುದ ನೋಡುತ್ತ ನಾನೂ ಕುಪ್ಪಳಿಸುತ್ತ ಅವಳ ಕರೆಗೆ ಓಗೊಟ್ಟು… ಹಿಮಾಲಯಕ್ಕೆ ಹೋಗುವುದು ಕನಸು ಬಿಡಿ. ವಾಹ್, ವಾಸ್ತವದ ಉರುಳಲ್ಲಿ ನರಳುತ್ತಿರುವ ಮತ್ತು ಮತ್ತೇನೋ ಕನಸುವ ಎಲ್ಲರಲ್ಲೂ ಈ ಭಾವನೆ ಇರದೇ ಉಂಟೇ? ಕುಮಾರ್ ಅವರ “ಪ್ರಳಯವಾಗಲಿ” ಸಂಕಲನ ನಾನು ಓದಿಲ್ಲ. ಪ್ರಾಯಶಃ ಅವರ ಇಂಥ ಪದ್ಯಗಳು ಆ ಸಂಕಲನದಲ್ಲಿ ಇರಲಾರವು. ಹತ್ತು ಹೆರುವುದಕ್ಕಿಂತ ಮುತ್ತ ಹೆರಬೇಕು ಎನ್ನುವುದು ಆಡುಮಾತು. ಅಂತೆಯೇ ಈ ಕವಿ ಹತ್ತು ಜಾಳು ಪದ್ಯ ಹಿಸೆಯುವ ಬದಲು ಒಂದು ರೂಪಕ ಸೃಷ್ಟಿಸುವ ಕೆಲಸಕ್ಕೆ ಕೈ ಹಾಕಲಿ ಎರಡನೆಯ ಸಂಕಲನ ತರುವ ಮನಸ್ಸು ಮಾಡಲಿ ಎನ್ನುವ ಹಾರೈಕೆಯೊಂದಿಗೆ ಅವರ ಐದು ಕವಿತೆಗಳನ್ನು ನಿಮ್ಮೆಲ್ಲರ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ. ಕುಮಾರ್ ಹೊನ್ನೇನಹಳ್ಳಿಯವರ ಕವಿತೆಗಳು ೧. ಸರದಿ ನೀವೇನೋ ಬಿಡಿ ಆ ಕಡೆ ಆದರೂ ಸರಿ ಈ ಕಡೆ ಆದರೂ ಸರಿ ನಿಂತು ಬಿಡುವಿರಿ ಏನೂ ಮಾಡಲಾಗದ ಆ ಒಂದು ಗಳಿಗೆ ನೀವೂ ದಾಟಲೇಬೇಕು ಆಳ ಎಷ್ಟಿದ್ದರೂ ಹರವು ಹರವಿದ್ದರೂ ಕತ್ತಲಲಿ ಹೊರಟರೂ ಬೆಳಕಿನಲಿ ಹೊರಟರೂ ಒಪ್ಪಿ ನಡೆದರೂ ಒಪ್ಪದೆ ಇದ್ದರೂ ಇವೆ ಕೆಲವು ನಿಮ್ಮಾತಿನ ವ್ಯಂಗ್ಯದಂತೆ ದಾಟುವ ಹೆಜ್ಜೆಗಳಿಗೆ ತಮ್ಮೆದೆಯನೇ ಹಾಸುವ ಕಡುಮೂರ್ಖ ಶಿಖಾಮಣಿಗಳು ಗೊತ್ತಿದೆ ಮಾತು ಮತ್ತು ಹೆಜ್ಜೆಗಳು ಸಿಗವು ಗಳಿಗೆ ದಾಟಿದ ಯಾವ ನಿಯಮಗಳಿಗೂ ಆದರೂ ನಿಮ್ಮಗಳ ವಜ್ಜೆ ಪಾದಗಳಿಗೆ ತಮ್ಮೆದೆಯನೇ ಹಾಸಿರುವ ಇವರುಗಳು ಹಾಗೆಯೆ, ತಡಮಾಡಬೇಡಿ ಯಾರಾದರೇನು ನೀವು, ದಾಟಿರಿ. ನಡೆದು ಬಂದ ಹಾದಿಯ ನೋಡಿದರೆ ಹಿಂದಿರುಗಿ ದಾಟಿರುವೆವು ನಾವೂ ನಮ್ಮ ಕನಸ ನನಸಿಗೆ ತಮ್ಮ ಕನಸುಗಳ ನಮ್ಮ ಕಾಲಡಿಗೆ ಹಾಸಿದ್ದವರ ಎದೆಗಳ ತುಳಿದು ಮುಗಿಯದ ಹಾದಿಯಲಿ ಮುಗಿಯಬಾರದು ಪಯಣವೂ ಬೇಕಾಗಿವೆ ಇನ್ನೂ ಸೇತುವೆಗಳು ಇದ್ದಾರೆ ಪಯಣಿಗರೂ ಈಗಲಾದರೂ ನುಡಿಯಬೇಕಲ್ಲವೆ ಮುಂಚೂಣಿಯಲಿ ನಿಂತಿರುವ ನಿಮ್ಮೆದೆ, ನಮ್ಮೆದೆ ‘ ಇನ್ನಾದರೋ ಸರದಿ ನಮ್ಮದೆ ‘. ೨. ಉದುರಿದ ಎಲೆಗಳ ಗುಡಿಸಿ ಮಾಗಿ ಕಾಲದಲ್ಲಿ ಮರ ಎಲೆ ಉದುರಿಸುವಂತೆ ಮಾತು, ಈ ಮಕ್ಕಳದ್ದು. ತಾಕೀತು ಮಾಡಿದ್ದೆ ” ಕೈ ಕಟ್ ಬಾಯ್ ಮುಚ್ “ ಮರದ ಬುಡದ ಸುತ್ತ ಉದುರಿದ್ದ ಎಲೆಗಳ ಗುಡಿಸಿ ಎಸೆದು ಪಾತಿ ಮತ್ತೊಮ್ಮೆ ಅಗೆದು ಸುರಿದೆ ರಸಗೊಬ್ಬರ, ಇನ್ನೇನಿದ್ದರೂ ಕೈತುಂಬಾ ಹಣ ಎಣಿಸುವ ಕನಸು. ಕೂಡಿ ಕೂರಿಸಿದ ಕೋಣೆಯೊಳಗೆ ಪಿಳಿಪಿಳಿ ನೋಡುವ ಮಕ್ಕಳು ಎಲ್ಲವ ನಾನೇ ಹೇಳುತ್ತಿರುವೆ ಸುಮ್ಮನೆ ಕೇಳುತ್ತಾ ಕಲಿಯಲು ಏನು ದಾಡಿ? ಯಾರು ಕೊಡುತ್ತಾರೆ ಇಷ್ಟು ಚನ್ನಾಗಿ ರಸಗೊಬ್ಬರ? ಕೇಳಿದಾಗ, ಹೇಳಿಕೊಟ್ಟಂತೆ ಉಲಿದಿದ್ದ ಈ ಗಿಳಿಗಳು ‘ ಹಾರಿ ತೋರಿ ‘ ಎಂದಾಗ ನಿಂತಿವೆ ಹಾಗೆ ಗೊಂದಲದಲಿ. ಸಾಕಲ್ಲವೆ ಕಾಲುಗಳು ಎಂದೇ ಕಟ್ಟಿ ಹಾಕಿದ್ದೆ ರೆಕ್ಕೆಗಳ. ರಸಗೊಬ್ಬರ ಉಂಡುಂಡ ಮಣ್ಣು ಈಗೀಗ ಬಂಜರು ಇಳುವರಿ ಇರಲಿ ಫಲ ಕಚ್ಚಿದರೆ ಸಾಕಾಗಿದೆ. ಉದುರಿದ ಎಲೆಗಳ ಗುಡಿಸದೆ ಕಳಿಯಲು ಬಿಟ್ಟಿದ್ದರೆ ತನ್ನದೇ ಬುಡದಲಿ? ೩. ಹೂವು ಮತ್ತು ಕಲ್ಲು ಹೂವಿಗೂ ಕಲ್ಲಿಗೂ ಮದುವೆ ಕರಗಿಸಿ ಮೃದು ಮಾಡಲು ಒದ್ದಾಡಿತು ಹೂವು ಕಲ್ಲು ಕಲ್ಲೇ ಮಿಸುಕಲಿಲ್ಲ ದಿನ ಕಳೆದ ಹಾಗೆ ಹೊಂದಿಕೊಂಡರೂ ನಲುಗಿ ನಲುಗಿ ಬಾಡಿ ಮಣ್ಣಾಯಿತು ಕಲ್ಲಿಗೇನು, ಗುಂಡಗೆ ನಿಂತಲ್ಲಿ ನಿಂತು ಕುಂತಲ್ಲಿ ಕುಂತು ಚಳಿ ಬಿಸಿಲಿಗೇ ಅಲುಗದವನು ಇನ್ನು ಈ ಹುಲು ಹೂವಿಗೆ ನಿಮಗೂ ಗೊತ್ತಿದೆ ನಮ್ಮಲ್ಲಿ ವಿಧುರನ ಲಗ್ನ ಸುಲಭ ಉಳಿಗೂ ಕಲ್ಲಿಗೂ ಮದುವೆ ಉಳಿಯ ಮುಂದೆ ಕಲ್ಲೇ ಮಿದು! ಉಳಿಯ ಒಂದೊಂದು ಪೆಟ್ಟಿಗೂ ನೋವಾದರೂ ಕಲ್ಲು ಕಲ್ಲೇ. ಈಗೇನೋ ಅದು ವಿಗ್ರಹವಂತೆ ನೀಡಿ ಉಳಿಗೆ ವಿಚ್ಛೇದನ ಪಡೆದು ದೀಕ್ಷೆ ನೆಲೆಸಿದೆಯಂತೆ ಗುಡಿಯೊಳಗೆ ಈ ಜನ ನೋಡಿ ಮತ್ತೆ ಮತ್ತೆ ಗುಡಿಗೆ ಹೂವುಗಳ ಹೊರುವುದು “ಕಲ್ಲಿಗೂ ಹೂವಿಗೂ”… ಕ್ಷಮಿಸಿ “ವಿಗ್ರಹಕೂ ಹೂವಿಗೂ”… ಅಲ್ಲಲ್ಲ “ದೇವರಿಗೂ
ಡಿ ವಿ ಪ್ರಹ್ಲಾದರ ಆರ್ತ ಯಾಪನೆ “ದಯಾ ನೀ, ಭವಾ ನೀ” ಡಿ ವಿ ಪ್ರಹ್ಲಾದ ತಮ್ಮ ಹೊಸ ಸಂಕಲನ “ದಯಾ ನೀ, ಭವಾ ನೀ” ಸಂಕಲನಕ್ಕೆ ನನ್ನನ್ನೆರಡು ಮಾತು ಬರೆಯಲು ಕೇಳಿದಾಗ ನನಗೆ ಆಶ್ಚರ್ಯ. ಏಕೆಂದರೆ ನಮ್ಮಲ್ಲಿ ಬಹುತೇಕರು ಸ್ವ ಪ್ರತಿಷ್ಠೆ ಮತ್ತು ಒಣ ಸಿದ್ಧಾಂತಗಳನ್ನು ಮೆರೆಸಲು ಈ ನಡುವೆ ಕವಿತೆಯನ್ನೂ ಗುರಾಣಿಯಂತೆ ಬಳಸುತ್ತಿರುವ ಸಂಧಿಗ್ದ ಕಾಲವಿದು. ಈ ಇಂಥ ಕಾಲದಲ್ಲಿ ನಮ್ಮ ಸಂಕಲನಗಳಿಗೆ ಮುನ್ನುಡಿ ಹಿನ್ನುಡಿ ಬೆನ್ನುಡಿಗಳಿಗೆ ನಾವಾಶ್ರಯಿಸುವುದು ಪೀಠಾಧಿಪತಿಗಳ ಬೆನ್ನು ಕೆರೆಯುವ ಸನ್ನಿಧಾನಕ್ಕೆ ಮತ್ತು ಆ ಅಂಥ ಗುರು ಪೀಠ ನಮ್ಮನ್ನು ನಮ್ಮ ಸಂಕಲನವನ್ನು ಎಲ್ಲೆಲ್ಲಿ ಎಷ್ಟೆಷ್ಟು ಸಾಧ್ಯವೋ ಅಲ್ಲಲ್ಲೆಲ್ಲ ತೂರಿಸುವ ಹಿತಾಸಕ್ತಿ ಮತ್ತು ಶಕ್ತಿ ಹೊಂದಿದೆಯೇ ಅಂತ ಪ್ರಕಾಶನದ ಕರಾರಿಗೆ ಸಹಿ ಹಾಕುವ ಮೊದಲು ಖಾತರಿ ಮಾಡಿಕೊಳ್ಳುತ್ತೇವೆ. ಈ ಇಂಥ ಸಂಧಿ (ವಾತದ) ಕಾಲದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಏನೇನೂ ಅಲ್ಲದ ಆದರೆ ಬದುಕಿನ ಬಂಡಿಗೆ ಕವಿತೆಯೊಂದೇ ಮೆಟ್ಟಿಲು ಅಂತ ನಂಬಿ ಅದನ್ನೇ ಆಶ್ರಯವಾಗಿಟ್ಟುಕೊಂಡಿರುವ ನನ್ನಿಂದ ಅವರು ಮುನ್ನುಡಿ ಬರೆಸಿದ್ದು ಏಕೋ ಕಾಣೆ. ಇನ್ನು ಅವರ ಈ ಹೊಸ ಸಂಕಲನದ ಪದ್ಯಗಳನ್ನು ಕುರಿತು ಹೇಳುವ ಮೊದಲು ಅವರೇ ಕಟ್ಟಿ ಬೆಳೆಸಿದ ಸಂಚಯದ ಮೂಲಕ ಅದೆಷ್ಟು ಹೊಸ ಪ್ರತಿಭೆಗಳಿಗೆ ಅವರು ಹಾರುಮಣೆಯಾದರು ಮತ್ತು ಪ್ರಕಾಶನದ ಗಂಧ ಗಾಳಿಯ ಅರಿವೇ ಇಲ್ಲದ ನನ್ನಂಥ ಎಷ್ಟೊಂದು ಅನಾಮಿಕ ಮಿಂಚುಹುಳುಗಳನ್ನು ಮಿನುಗುವ ನಕ್ಷತ್ರಗಳನ್ನಾಗಿಸಿದರು. ಹಾಗೆ ಮೆರೆಯ ಹೊರಟ ಅದೆಷ್ಟೋ ಮಿಣುಕುಗಳು ಉಲ್ಕೆಗಳಂತೆ ಉರಿದು ಹೋದದ್ದೂ ಈಗ ಇತಿಹಾಸ. ಇರಲಿ, ಗಾಯದ ಕಲೆ ಕಂಡ ಕೂಡಲೇ ಅನುಭವಿಸಿದ ನೋವಿನ ಯಾತನೆ ನೆನಪಾಗುವುದು ಸಹಜ. ಶ್ರೀನಿವಾಸ ರಾಜು ಮೇಶ್ಟ್ರು ಮತ್ತು ಪ್ರಹ್ಲಾದ್ ಪ್ರತಿ ವರ್ಷ ಕಾವ್ಯ ಸ್ಪರ್ಧೆ ನಡೆಸಿ ಕೈ ತುಂಬ ಪುಸ್ತಕಗಳನ್ನು ಕೊಡುತ್ತಿದ್ದರು. ಯಾವ ಪ್ರವೇಶ ಶುಲ್ಕವೂ ಇಲ್ಲದ ಆ ಸ್ಪರ್ಧೆಗೆ ನಾಮುಂದು ತಾಮುಂದೆಂದು ಬರುತ್ತಿದ್ದ ಅದೆಷ್ಟು ಕವಿತೆಗಳಿಗೆ ಸಂಚಯ ಆಶ್ರಯ ಕೊಟ್ಟು ಸಲಹಿತು. ನೆನೆದಾಗಲೆಲ್ಲ ಅವರ ನಿಸ್ಪೃಹ ಸಾಹಿತ್ಯ ಸೇವೆ ಕಣ್ಣ ಮುಂದೆ ಕಟ್ಟುತ್ತದೆ. ಇನ್ನು ಸಾಹಿತ್ಯ ಪತ್ರಿಕೆಗಳ ನಿಯತ ಪ್ರಸಾರವೇ ಇಲ್ಲದ ಕಾಲದಲ್ಲಿ ಸಂಚಯ ನಡೆದಷ್ಟೂ ಕಾಲವೂ ನಿಯಮಿತವಾಗಿ ನಿಯತ ಕಾಲಿಕವಾಗಿ ಬಂದಿತು. ಸಂಯುಕ್ತ ಸಂಚಿಕೆ ಎಂದು ಅಚ್ಚು ಹಾಕಿ ನಾಮ ಹಾಕುವವರ ನಡುವೆ ಅವರದು ಏಕಾಂಗಿ ಹೋರಾಟವಾಗಿತ್ತು. ವಿಶೇಷ ಸಂಚಿಕೆಗಳ ಮೂಲಕ ಸಂಚಯ ಸಾಹಿತ್ಯ ಚರಿತ್ರೆಯಲ್ಲಿ ಇತಿಹಾಸದ ಪುಟಗಳನ್ನೇ ಬರೆಯಿತು. ಲಂಕೇಶ್, ತೇಜಸ್ವಿ, ಡಾ. ರಾಜ್, ಹಿಂದ್ ಸ್ವರಾಜ್ ಒಂದೇ ಎರಡೇ? ಈಗಲೂ ನನ್ನ ಪುಸ್ತಕದ ಕಪಾಟಲ್ಲಿ ಸಂಚಯದ ಸಂಚಿಕೆಗಳು ಸುಭದ್ರವಾಗಿ ಕೂತಿವೆ, ರೆಫರೆನ್ಸಿಗೆಂದು ತೆಗೆದಾಗಲೆಲ್ಲ ಮತ್ತೇನೋ ಹೊಸ ದಾರಿ ಕಾಣಿಸುವುದೂ ಉಂಟು. “ಡ್ರೀಮರ್” (1995) ಡಿ ವಿ ಪ್ರಹ್ಲಾದ್ ಅವರ ಮೊದಲ ಸಂಕಲನ. ಆಮೇಲೆ ನನ್ನಂಥವರ ಒತ್ತಾಯಕ್ಕೆ ತಂದದ್ದು “ನಾಳೆಯಿಂದ”.(2005) ೯೦ರ ದಶಕದ ಮೊದಲ ಸಂಕಲನದ ೧೧ ವರ್ಷಗಳ ತರುವಾಯ ಬಂದ ‘ನಾಳೆಯಿಂದ’ ಸಂಕಲನ ‘ಡ್ರೀಮರಿನ ಕನಸುಗಳು ಕರಗಿ ಹೋದ ಕುರುಹುಗಳಾಗದೇ ನಾಳೆಯಿಂದಲಾದರೂ ಮತ್ತೆ ಯತ್ನಿಸಿ ಸಫಲನಾಗುವ ಕನಸಿನ ವಿಸ್ತರಣೆಯೇ ಆಗಿತ್ತು. ನವ್ಯದ ಪ್ರಭಾವಳಿಯಲ್ಲೇ ಅರಳಿದ್ದ “ಡ್ರೀಮರ್” ‘ನಾಳೆಯಿಂದ’ ತರುವಾಗಲೇ ಸಾಕಷ್ಟು ಮಾಗಿದ್ದ. ನವ್ಯದ ಸಹಜ ಪ್ರತಿಮೆಗಳಾದ “ಸ್ವ” ಮತ್ತು ಎಲ್ಲವನ್ನೂ ಕಟೆದು ಕಟ್ಟುವ ಕನಸುಗಳಿದ್ದ ಡ್ರೀಮರ್ ನಾಳೆಯಿಂದ ತರುವಾಗ ವಯಸ್ಸಿನಲ್ಲಿ ನಿರ್ಧಾರದಲ್ಲಿ ಮತ್ತು ಅನುಭವ ಜನ್ಯ ಬದುಕ ಶ್ರೀಮಂತಿಕೆಯಿಂದ ಮಾಗಿದ್ದ. ಹಾಗಾಗಿ ಯಾವತ್ತಿಗೂ ಪೋಸ್ಟ್ ಪೋನ್ ಮಾಡುತ್ತಲೇ ಇರುವ ನಮ್ಮ ಕೆಲಸ ಕಾರ್ಯಗಳ ವೈಖರಿಗೆ ಕವಿ ಕೊಟ್ಟ ದಿಟ್ಟ ಉತ್ತರ ಅದಾಗಿತ್ತು. ಸ್ವತಃ ಸಾಹಿತ್ಯ ಪತ್ರಿಕೆಯೊಂದರ ಸಂಪಾದಕನಾಗಿ, ಸಂಕಿರಣ ಶೀರ್ಷಿಕೆಯ ಮೂಲಕ ಅದೆಷ್ಟು ಹೊಸ ಪ್ರತಿಭೆಗಳ ಪುಸ್ತಕಗಳಿಗೆ ಅವರಿವರಿಗೆ ಹೇಳಿ, ಬೇಡಿ ವಿಮರ್ಶೆ ಬರೆಸಿದರು. ದುರಂತ ಅಂದರೆ ಅವರ ಪುಸ್ತಕಗಳ ಬಗ್ಗೆ ಈ ಯಾವ ಮಹನೀಯರೂ ಸೊಲ್ಲೇ ಎತ್ತಲಿಲ್ಲ. ಸದ್ಯ ಇದೀಗ ಸಂಚಯದ ಪ್ರಕಟಣೆ ನಿಂತ ಮೇಲೆ ಪುನಃ ಪದ್ಯದ ಸಂಗಕ್ಕೆ ಪ್ರಹ್ಲಾದ್ ಹೊರಳಿದ್ದಾರೆ. ಯಾವತ್ತೂ ಬರಹಗಾರನಿಗೆ ಕವಿತೆಯೇ ತಂಗುದಾಣ, ನಿಲುದಾಣ ಮತ್ತು ಹಲವೊಮ್ಮೆ ಅಡಗು ತಾಣ. ಯಾಕೆಂದರೆ ನಮ್ಮೊಳಗಿನ ಕನಸು, ಊಹೆ, ಅನಿಸಿಕೆ, ಸಮಾಜದ ಮೇಲಣ ಟಿಪ್ಪಣಿಗಳಿಗೆ ಕವಿತೆಯ ಪೋಷಾಕು ತೊಡಿಸಿ ನಮ್ಮ ಒಳ ಮನಸ್ಸಿನ ಮಾತನ್ನು ಹೇಳುತ್ತೇವೆ. ಅದು ಮುಟ್ಟ ಬೇಕಾದವರಿಗೆ ಮುಟ್ಟಿತೋ ಇಲ್ಲವೋ ನಮ್ಮ ಶಂಖ ನಾವು ಊದುತ್ತಲೇ ಇರುತ್ತೇವೆ. ಎಲ್ಲೋ ಅಪರೂಪಕ್ಕೆ ಕೆಲವರು ಕ್ಲಿಕ್ಕಾಗಿ ಬಹುಮಾನ, ಪ್ರಶಸ್ತಿ, ಪಾರಿತೋಷಕಗಳ ಪಡೆದು ಇದ್ದಲ್ಲೇ ಸುತ್ತ ತೊಡಗುತ್ತಾರೆ. ಆದರೆ ಸಾಂಸ್ಕೃತಿಕ ಲೋಕದ ಸಕಲೆಂಟು ದೇವರ ಸಂಪರ್ಕವಿದ್ದೂ ಪ್ರಹ್ಲಾದ್ ಸಂಕೋಚದಲ್ಲೇ ಉಳಿದು ಬಿಟ್ಟರು. ಆ ಅವರ ಸಂಕೋಚವೇ ಅವರೆಲ್ಲ ಪದ್ಯಗಳ ಆತ್ಮವಾಗಿ ಮತ್ತು ಅವರು ನಡೆಯುತ್ತಿರುವ ಅವರದೇ ದಾರಿಯ ಪ್ರತಿಫಲನವಾಗಿಯೂ ನನಗೆ ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು ಈ “ದಯಾ..ನೀ ಭವಾ..ನೀ” ಸಂಕಲನದ ಪದ್ಯಗಳನ್ನು ಓದುತ್ತ ಓದುತ್ತ ಟಿಪ್ಪಣಿಸುತ್ತ ಹೋದ ಹಾಗೆ ಇಲ್ಲಿನ ಎಲ್ಲ ಪದ್ಯಗಳೂ ಅವರ ಮೊದಲೆರಡು ಸಂಕಲನಗಳ ಮುಂದುವರೆದ ತಂತುವಾಗಿಯೇ ನನಗೆ ಕಂಡಿದೆ. ಹಾಗೆ ನೋಡಿದರೆ ಎಲ್ಲ ಕವಿಗಳ ಹಣೆಬರಹವೂ ಇಷ್ಟೇ ಆಗಿದೆ. ಆಗಿರಬೇಕು ಕೂಡ. ತಾನು ಬಯಸಿದ ತಾನು ನಂಬಿದ ಸಿದ್ಧಾಂತದ ಪರ ವಕಾಲತ್ತು ಹಾಕುವ ಕವಿಯೊಬ್ಬ ಎಷ್ಟೆಲ್ಲ ಸಂಕಲನ ತಂದರೂ ತಾನು ನಂಬಿದ ಸಿದ್ಧಾಂತಕ್ಕೆ ನಿಷ್ಠೆ ಇಟ್ಟುಕೊಂಡಿದ್ದು ಸಂಕಲನದಿಂದ ಸಂಕಲನಕ್ಕೆ ಮತ್ತಷ್ಟು ವ್ಯಾಪಿಸುತ್ತ ಹೋಗುತ್ತಾನೆ. ಎಲ್ಲೊ ಕೆಲವರು ಶೋಕಿಗೆ ಅಥವ ಲೋಕಪ್ರಿಯತೆಯ ಹಂಬಲಕ್ಕೆ ಬಿದ್ದು ತಮ್ಮ ಸೊಂಟ ತಾವೇ ಮುರಿದುಕೊಂಡು ಅಲ್ಲಿಂದಿಲ್ಲಿಗೆ ಕುಪ್ಪಳಿಸುತ್ತ ಎಲ್ಲಿಯೂ ಸಲ್ಲದವರಾಗುತ್ತಾರೆ ಮತ್ತು ಒಟ್ಟೂ ಕಾಣ್ಕೆಯ ಕಾರಣದಿಂದ ಹೊರಗೇ ಉಳಿಯುತ್ತಾರೆ. “ಡ್ರೀಮರ್” ಪುಸ್ತಕದ ಮುನ್ನುಡಿಯಲ್ಲಿ ಎಕ್ಕುಂಡಿ ಅದೆಷ್ಟು ಚೆನ್ನಾಗಿ ಪ್ರಹ್ಲಾದರ ಪದ್ಯಗಳನ್ನು ಬಗೆಯುತ್ತಲೇ ಅವನ್ನು ಧ್ಯಾನಿಸುವ ಆಪ್ತ ಶೈಲಿಯನ್ನು ಹೇಳಿಕೊಟ್ಟಿದ್ದಾರೆಂದರೆ ಅವರ ಮಾತಿನ ಮುಂದೆ ನಾನೇನು ಹೇಳಿದರೂ ಅದು ಪೇಲವವೇ ಆಗುತ್ತದೆ. ಇರುವ ಕೇವಲ ೧೮ ಕವಿತೆಗಳಲ್ಲೂ ಅದೇನು ನವ್ಯದ ಪ್ರತಿಮೆಗಳನ್ನು ಇಡಿಕರಿಸಿಟ್ಟಿದ್ದರು ಎಂದರೆ ಈ ಕಾಲದ ಹುಡುಗರು ತಮ್ಮ ನೂರು ಪದ್ಯಗಳಲ್ಲೂ ಅಲ್ಲಿನ ರೂಪಕ ಮತ್ತು ಪ್ರತಿಮೆಗಳನ್ನು ಮತ್ತೆ ಸೃಷ್ಟಿಸಲಾರರು. ರಸ್ತೆ ಬದಿಯಂಗಡಿಯಲ್ಲಿ ಬಿಡಿಸಿಟ್ಟ ಹಣ್ಣು ಮುತ್ತಿರುವ ನೊಣದ ಹಿಂಡಲ್ಲೂ ಅಲ್ಲೊಂದು ಜೇನು (ಪ್ರತೀಕ್ಷೆ) ಅಂತ ಧೇನಿಸಿದ ಕವಿ ಗಂಡು ಬಿಕ್ಕುವ ಹಾಗಿಲ್ಲ ಹೆಣ್ಣು ನಕ್ಕ ನೆನಪಿಲ್ಲ ಬೆಳುಕು ಬೀರಿದ್ದ ಪ್ರಖರ ಬಲ್ಬುಗಳು ಬರ್ನಾಗಿ ಬಿತ್ತು ಕನಸು, ನೇಯುವ ಗಿರಣಿ ಬೆಂಕಿ ನುಂಗಿತ್ತು(ಬೃಹನ್ನಳೆಯ ಸ್ವಗತ) ಅಂತ ಹೇಳುವಾಗ ಬದುಕಿನ ಎರಡೂ ತುದಿಗಳನ್ನು ಅದೆಷ್ಟು ಸಲೀಸಾಗಿ ದಾಟಿಬಿಡುತ್ತಾರಲ್ಲ ಅದೇ ನನ್ನ ಪಾಲಿನ ಸೋಜಿಗ. ಡ್ರೀಮರಿನ ಎಲ್ಲ ಪದ್ಯಗಳೂ ಗೊತ್ತಿದ್ದೋ ಗೊತ್ತಿಲ್ಲದೆಯೋ ನವ್ಯದ ಭರ್ಜರಿ ಪೋಷಾಕು ತೊಟ್ಟಿವೆ. ಆ ಪೋಷಾಕಿಗೆ ಮುಖ್ಯವಾಗಿ ಅಡಿಗ ಕ್ವಚಿತ್ತಾಗಿ ರಾಮಾನುಜನ್ ಮತ್ತು ಅಪರೂಪಕ್ಕೆ ಎಕ್ಕುಂಡಿ ಬಟ್ಟೆ ಕೊಟ್ಟಿದ್ದಾರೆ. ಗೋತಾ ಹೊಡೆದ ಗಾಳಿಪಟ ಕರೆಂಟು ಕಂಬಿಯ ಮೇಲೆ ತಲೆ ಕೆಳಗು ಮಲಗಿತ್ತು (ಗಾಳಿಪಟ) ಅನ್ನುವಾಗ ಯಾವ ಯಾವುವೋ ಕಾರಣಕ್ಕೆ ಉತ್ಸಾಹ ಕಳಕೊಂಡ ನಮ್ಮೆಲ್ಲರ ಬದುಕಾಗಿ ಆ ಗಾಳಿಪಟ ಕಾಡುತ್ತದೆ. ಇನ್ನು ಸಂಕಲನದ ಶೀರ್ಷಿಕೆಯೂ ಆಗಿರುವ “ಡ್ರೀಮರ್” ಓದಿದ ಮೇಲೆ ಅಂತರ್ಜಾಲದಲ್ಲಿ ಅದಕ್ಕೆ ಪ್ರೇರಣೆಯಾದ ಜಪಾನೀ ಕತೆಯನ್ನು ಹುಡುಕಿ ಓದಿದೆ. ತಲ್ಲಣಿಸಿದೆ. ಏಕೆಂದರೆ ಎಲ್ಲವನ್ನೂ ಮರೆತು ಭ್ರಮೆಯಲ್ಲಿ ಕೊಂಚಕಾಲ ಮಾತ್ರವೇ ಇರಬಲ್ಲೆವು. ಆಮೇಲೆ ಕಾಡುವುದು ಮತ್ತದೇ ನಮ್ಮ ಸುತ್ತಣದ ನಮ್ಮ ಜೊತೆಗಾರರ ಬದುಕೇ! ವಾಸ್ತವದ ಗಹಗಹಿಕೆಯ ಮುಂದೆ ಕ್ಷಣ ಸುಖದ್ದು ಬರಿಯ ಅಮಲು. ಕಡೆಗೂ ನಾವು ಬಯಸುವುದೇನು?, “ಸಾಬರ ಹುಡುಗ ಮತ್ತು ಹಳೇ ಮರ” ಕವಿತೆಯ ಸಾಲು; ಕೊಡು ಕೊಡು ನನಗೊಂದೇ ಒಂದು ಹೂ ಕೊಡು! ಅಂಗಿಗಿಟ್ಟು ಗುನುಗುವೆ ನನ್ನ ಹಾಡು! ಆದರೆ ಸದ್ಯದ ವರ್ತಮಾನ ಹೂವನ್ನಿರಲಿ ಒಣ ಎಲೆಯನ್ನೂ ಕೊಡದಷ್ಟು ಕಠಿಣವಾಗಿದೆ, ಕ್ರೂರವೂ ಆಗಿದೆ. ಇನ್ನು ಪ್ರಹ್ಲಾದರ ಎರಡನೆಯ ಸಂಕಲನ “ನಾಳೆಯಿಂದ” ದ ಕೆಲವು ಪದ್ಯಗಳ ಸಾಲು ಸ್ಮರಿಸಿ ಮುಂದಕ್ಕೆ ತೆರಳುತ್ತೇನೆ. ಈ ಸಂಕಲನದಲ್ಲಿ ಒಟ್ಟಾಗಿ ಇರುವುದು ಕೇವಲ ೨೫ ಕವಿತೆಗಳು. ತಾನು ಹೇಳ ಹೊರಟದ್ದನ್ನು ಎಲ್ಲಿ ಓದುಗ ದೊರೆ ಗಮನಿಸುವುದಿಲ್ಲವೋ ಎನ್ನುವ ಕಾರಣ ಕೊಟ್ಟು ನೂರು ಪದ್ಯಗಳನ್ನು ಅಡಿಕಿರಿಸಿ ಯಾವುದನ್ನೂ ಓದದಂತೆ ಮಾಡಿಕೊಂಡ ಹಲವು ಕವಿಗಳು ನಮಗೆ ಗೊತ್ತಿದ್ದಾರೆ. ನಾನೀಗಾಗಲೇ ಹೇಳಿದಂತೆ ಸಂಕಲನದಿಂದ ಸಂಕಲನಕ್ಕೆ ಕವಿಯ ಪಯಣದ ಹಾದಿ ಮುಂದುವರೆಯುವುದೇ ವಿನಾ ಅವನು ನಂಬಿದ ದಾರಿಯಲ್ಲ. ಹಾಗಾಗಿ ಕವಿ ಸೃಷ್ಟಿಸಿಕೊಂಡ ದಾರಿ ಇದುವರೆಗೂ ಯಾರೂ ಸವೆಸದ ಮತ್ತು ಆ ಕವಿಯೇ ಕಂಡು-ಕೊಂಡ ಕಚ್ಚಾ ರಸ್ತೆ ಆಗಿರಬೇಕು ಎನ್ನುವುದು ಲಾಕ್ಷಣಿಕರ ಅಭಿಮತ. ಇಲ್ಲಿರುವ ೨೫ ಕವಿತೆಗಳೂ ಡ್ರೀಮರಿನ ಮುಂದುವರೆದ ಕನಸುಗಳೇ. ಎಲ್ಲೋ ನವ್ಯದ ಬಿಸುಪು ಕಡಿಮೆಯಾದಂತೆ ಕಂಡು ಆಡುನುಡಿ ಕಂಡಿದೆ ಅಂದ ಮಾತ್ರಕ್ಕೇ ಇವು ಯಾವುವೂ ನವ್ಯದ ಮೂಸೆಯಲ್ಲಲ್ಲದೆ ಬೇರೆಲ್ಲಿಂದಲೂ ಉದಯಿಸಿಲ್ಲ. ಎಚೆಸ್ವಿ ಮುನ್ನುಡಿ ಇರುವ ಈ ಸಂಕಲನದ ಶೀರ್ಷಿಕೆಯೇ ಬಹುಮುಖ್ಯ ಪದ್ಯ “ನಾಳೆಯಿಂದ”. ನಮ್ಮ ಸೋಲನ್ನು ಒಪ್ಪಿಕೊಳ್ಳದ ಮತ್ತು ಅನಿಸಿದ್ದನ್ನು ಮಾಡಲಾಗದ ನಾವು ಸುಳ್ಳು ಸುಳ್ಳೇ ಮತ್ತೆ ಮತ್ತೆ ಹೇಳಿಕೊಳ್ಳುವ ಮಾತೆಂದರೆ ” ನಾಳೆಯಿಂದ”, ಇಂಗ್ಲಿಶಿನಲ್ಲಿ procrastination ಎಂಬ ಪದಕ್ಕೆ ತೀರ ಸಮೀಪದ್ದು. ಒಂದಲ್ಲ ಒಂದು ಕಾರಣ ಕೊಟ್ಟು ಮಾಡಬೇಕಾದ ಕೆಲಸವನ್ನು ( ಕಳ್ಳಂಗೊಂದು ಪಿಳ್ಳೆ ನೆವ) ಮುಂದಕ್ಕೆ ಹಾಕುವುದಕ್ಕೆ ನಾಳೆಯಿಂದ ಅಂತ ಜಾರಿಕೊಳ್ಳುತ್ತೇವಲ್ಲ ಅದೇ ಆಗಿದೆ. ಪ್ರಾಯಶಃ ಮತ್ತೆ ಪದ್ಯ ಬರೆಯಲು ತೊಡಗುತ್ತೇನೆಂದು ಪ್ರಹ್ಲಾದ್ ಅವತ್ತೇ ನಿರ್ಧರಿಸಿದ್ದಿರೋ ಹೇಗೆ?? ಜಗದ ಮೋಡದ ಮಾಡಿಗೆ ಯಾರು ಹೆಸರಿಟ್ಟವರು ಏರಿದಷ್ಟೂ ಎವರೆಷ್ಟು ಉಳಿಯುತ್ತದೆ ರವಷ್ಟು ( ಮೆಟ್ಟಲಾರದ ಮುಗಿಲು) ಅಂತ ಆರಂಭವಾಗುವ ಪದ್ಯ ಆ ಹಿಮದ ಆಲಯದ ಏರುವೆತ್ತರ ಬಿಟ್ಟು ಮುದುರಿ ನಿಂತ ಕುದುರೆಗೆ ಕೆನೆತವಿಲ್ಲ ಆವತ್ತಿನ ಮೊರೆತವಿಲ್ಲ ಅಂತ ಮುಂದುವರೆದು ಕಡೆಗೆ ನಿಲ್ಲುವುದು ಹೀಗೆ; ಮೆಟ್ಟಿ ಬಾವುಟ ನೆಟ್ಟ ಪ್ರತಿ ಎತ್ತರದ ತುದಿಗೂ ಒಂದೊಂದು ಬಟಾಬಯಲು ಮೆಟ್ಟಲಾರದ ಮುಗಿಲು. ನಮ್ಮೆಲ್ಲರೊಳಗಿನ ದೌರ್ಬಲ್ಯವನ್ನು ಹೀಗೆ ಅನಾಮತ್ತು ಎತ್ತಿ ಆಡುವ ಕವಿ ಹಾಗೇ ತಲೆಗೆ ಮೊಟಕುತ್ತಾನಲ್ಲ, ಈ ಇಂಥ ಕವಿಯನ್ನು ನವ್ಯದ ಶಾಲೆಯ ತಂಟೆಕೋರ ವಿದ್ಯಾರ್ಥಿ ಅನ್ನದೇ ವಿಧಿಯಿಲ್ಲವಲ್ಲ! ಹತ್ತಿ ಹತ್ತಿ ಎತ್ತರಕ್ಕೆ ಇನ್ನೂ ಎತ್ತರಕ್ಕೆ ಕಾಣಲಾರದು ಯಾವ ಜಗದ ನೋವು ( ಭೀಮಣ್ಣನ ರಾಮಕಲಿ) ಭೀಮಸೇನ ಜೋಷಿಯವರ ‘ರಾಮ್ ಕಲಿ’ ರಾಗ ಕೇಳಿ ಅಂತ ಪದ್ಯದ ತಳದಲ್ಲಿ ಟಿಪ್ಪಣಿ ಇದೆ. ನಿಜವಾದ ರಾಮನನ್ನು (ರಾಮ ಅಂದರೆ ಆನಂದ) ಅನುಸರಿಸಿದರೆ ಹತ್ತಿಯಂತೆ ಹಗುರಾಗಿ ಎಂಥ ಎತ್ತರಕ್ಕೂ ಹತ್ತಿ ನಿಂತು ಜಗದೆಲ್ಲ ನೋವ ಪರಿಹಾರ ಅಂತ ಅರ್ಥೈಸಿಕೊಂಡರೆ ಜೀವ ನಿರುಮ್ಮಳವಾಗುತ್ತದೆ. ಇನ್ನು ‘ಒಂದು ವಿರಳ ಭೇಟಿ’ ಅನ್ನುವ ಸರಳ ಪದ್ಯ ಓದುವಾಗ ಯಾಕೋ ಪ್ರತಿಭಾ ನಂದಕುಮಾರರ “ನಾವು ಹುಡುಗಿಯರೇ ಹೀಗೆ” ನೆನಪಾಯಿತು. ಆ ಪದ್ಯದಲ್ಲಿ ಕವಿ ಗೆಳತಿಯ ಜೊತೆ ಏನೇನನ್ನೋ ಮಾತಾಡುತ್ತ ಮತ್ತೆ ಹಳೆಯ ಸ್ನೇಹವ ನೆನೆದು ಕಡೆಗೆ ಅವನ ಅವಳಲ್ಲೂ ತನ್ನ ಬಿಂಬವನ್ನೇ ಕಾಣುತ್ತಾಳೆ. ಆದರೆ ಈ ಪದ್ಯದ ಸರಾಗ ಓಟ ಆ ಪದ್ಯದ ಹಾಗೇ ಲಯವರಿತ ಹದದಲ್ಲಿ ಓಡುತ್ತೋಡುತ್ತಲೇ ಆಪತ್ತಿಗೆ ಆಗದ ಗೆಳೆಯನನ್ನು ಸ್ಮರಿಸುತ್ತದೆ. ಗೇಲಿ
ನೀಲಿ ನಕ್ಷತ್ರದ ಬೆಡಗಿನ ಪದ್ಯಗಳು ವಿ.ನಿಶಾ ಗೋಪಿನಾಥ್ ವಿನಿಶಾ ಗೋಪಿನಾಥ್ ಫೇಸ್ಬುಕ್ಕಿನಲ್ಲಿ ನಿರ್ಭಿಡೆಯಿಂದ ಬರೆಯುತ್ತಿರುವ ಕೆಲವೇ ಕವಯತ್ರಿಯರ ಪೈಕಿ ಗಮನಿಸಲೇ ಬೇಕಾದ ಹೆಸರು. ಈಗಾಗಲೇ ಒಂದು ಕಥಾ ಸಂಕಲನ ಮತ್ತು ಒಂದು ಕವನ ಸಂಕಲನ ಪ್ರಕಟಿಸಿರುವ ವಿನಿಶಾ ಅವರ ಪದ್ಯಗಳು ಪ್ರೀತಿಯ ನಶೆ ಹೊತ್ತಿರುವ ಮತ್ತು ಸಂಜೆಯ ಏಕಾಂತಗಳಿಗೆ ನಿಜದ ಸಾಥ್ ನೀಡುವ “ನಿಶಾ” (ಹೊತ್ತಿಳಿದ ಮಬ್ಬು ಬೆಳಕಿನ ಸಂಜೆಯ) ಕಾಲದ ಯಶಸ್ವೀ ಪದ್ಯಗಳೇ ಆಗಿವೆ. ಅವರ ಮೊದಲ ಸಂಕಲನ ಪ್ರಕಟಿಸಿರುವುದು “ಶಬ್ದ ಗುಣ” ಸಾಹಿತ್ಯ ಪತ್ರಿಕೆಯ ಶ್ರೀ ವಸಂತ ಬನ್ನಾಡಿ. ಬನ್ನಾಡಿಯವರಿಗೆ ಗುಣ ಮತ್ತು ಶಬ್ದದ ಬಗೆಗೆ ಪೂರ್ಣ ಗಮನ. ನಾಟಕ ನಿರ್ದೇಶಕರೂ ರಂಗ ಕರ್ಮಿಯೂ ಆಗಿರುವ ಬನ್ನಾಡಿ ತಮ್ಮ ಕವಿತೆಗಳ ಮೂಲಕ ನಮಗೆ ಫೇಸ್ಬುಕ್ಕಿನ ಮೂಲಕ ಪರಿಚಿತರೂ ಹೌದು. ಈ ಇಂಥ ಕವಿ ಪ್ರಕಟಿಸಿರುವ ಸಂಕಲನಕ್ಕೆ ಖ್ಯಾತ ಕವಿ ಮತ್ತು ವಿಮರ್ಶಕ ಡಾ.ಎಸ್.ಜಿ.ಸಿದ್ಧರಾಮಯ್ಯ ಮುನ್ನುಡಿ ಒದಗಿಸಿರುವ “ನೀಲಿ ನಕ್ಷತ್ರ” ೨೦೧೬ರಲ್ಲಿ ಪ್ರಕಟವಾಯಿತು. ಅಲ್ಲಿ ಇಲ್ಲಿ ಒಂದಷ್ಟು ಚರ್ಚೆಗಳೂ ಆದವು. ನೀಲಿ ಎಂದರೆ ನಿರಾಳ. ನೀಲಿ ಎನ್ನುವುದು ಆಕಾಶದ ಬಣ್ಣ. ನೀಲಿ ಎನ್ನುವುದು ಕೃಷ್ಣನ, ರಾಮನ ಚರ್ಮದ ಬಣ್ಣ. ಕಡು ನೀಲಿ ಎನ್ನುವುದನ್ನು ಕಪ್ಪು ಎಂದೂ ಬಳಕೆ ಮಾಡುವುದಿದೆ. ಜೊತೆಗೇ ಸಾಮಾಜಿಕ ಕಟ್ಟುಪಾಡಿನ ಶಿಷ್ಟಾಚಾರವನ್ನು ಮುರಿದ ಎಲ್ಲೆ ಮೀರಿದ ಲೈಂಗಿಕತೆಗೂ “ನೀಲಿ” ಎನ್ನುವುದುಂಟು. ಲಂಕೇಶರ “ನೀಲು” ಸಾಲು ನೆನಪಾದರೆ ಈ ಪದದ ಅರ್ಥ ಶ್ರೀಮಂತಿಕೆಗೆ ಸಾಕ್ಷಿ. ಈ ಸಂಕಲನದ ನಂತರವೂ ಈ ಕವಿಯು ಇಂಥದೇ ರಚನೆಗಳಲ್ಲೇ ಇರುವಂತೆ ಕಾಣುತ್ತಾರಾದರೂ ಇದುವರೆಗೂ ಬಳಕೆಯಲ್ಲಿದ್ದ, ಪ್ರೀತಿಯನ್ನು ವರ್ಣಿಸುವ ಸಾಂಪ್ರದಾಯಿಕ ರೀತಿಯನ್ನು ಬಿಟ್ಟುಕೊಟ್ಟ ಇಲ್ಲಿನ ಪದ್ಯಗಳು ಲೈಂಗಿಕ ಪ್ರತಿಮೆಗಳಾಚೆಗಿನ ಸೌಂದರ್ಯ ಮತ್ತು ಅನುಭೂತಿಯನ್ನು ವಿಸ್ತರಿಸುವ ಧೈರ್ಯ ಮಾಡಿರುವುದರ ಕುರುಹಾಗಿದೆ. ಸಂದರ್ಭಗಳ ಮರುಸೃಷ್ಟಿಗೆ ಇಲ್ಲಿ ಪದಗಳನ್ನು ಹಿತಮಿತವಾಗಿ ಬಳಸುವ ಈ ಕವಿ, ಅರ್ಥಗಳ ಹೊಳಪು ಕೊಟ್ಟು ದಿಗ್ಮೂಡಗೊಳಿಸುತ್ತಾರೆ. ನೀಲಾಕಾಶದ ದಿಟ್ಟಿಗೆ ನಿಲುಕುವ ಸಂಗತಿಗಳಿಗಿಂತ ಗಮನಕ್ಕೆ ಸಿಗದೇ ಉಳಿವ ಸಂಗತಿಗಳನ್ನು ಈ ಪದ್ಯಗಳ ಆಳದ ಓದು ಮಾತ್ರ ಕೊಡಬಲ್ಲದು. ಮೇಲ್ನೋಟಕ್ಕೆ ಹೆಣ್ಣೊಬ್ಬಳ ಗಂಡಿನ ಮೇಲಣ ಆಕರ್ಷಣೆಯಂತೆ ಈ ಪದ್ಯಗಳ ನೇಯ್ಗೆ ಇದ್ದರೂ ಆಳದಾಳದಲ್ಲಿ ಇರುವುದು ವ್ಯಕ್ತದಾಚೆಗೂ ಉಳಿವ ಅವ್ಯಕ್ತ ಭಾವನೆಗಳ ಮಹಾಪೂರ. ನಿಜಕ್ಕೂ ಚರ್ಚಿಸಲೇ ಬೇಕಾದ ಕಾವ್ಯ ಕೃಷಿ ವಿನಿಶಾ ಗೋಪಿನಾಥರ ಪದ್ಯಗಳಲ್ಲಿವೆ. ಮೊದ ಮೊದಲ ಓದಿಗೆ ಪ್ರೇಮದ ನೈರಾಶ್ಯವೇ ಬಹುತೇಕ ಕವಿತೆಗಳ ಮೂಲ ಎಂದು ಮೇಲ್ನೋಟಕ್ಕೆ ಅನ್ನಿಸುವುದಾದರೂ ಅದು ಸತ್ಯವಲ್ಲ. ವಿಷಾದ ಮತ್ತು ಬದುಕಿನ ಗಾಢ ಕ್ರೂರತೆ ಇಲ್ಲಿನ ಬಹುತೇಕ ಪದ್ಯಗಳ ಅಸ್ತಿವಾರ. ಆ ಕಾರಣಕ್ಕೇ ಇವರ ಮೊದಲ ಸಂಕಲನ “ನೀಲಿ ನಕ್ಷತ್ರ”ಕ್ಕೆ ಮುನ್ನುಡಿ ಬರೆದ ಹಿರಿಯ ಕವಿ ಎಸ್.ಜಿ.ಸಿದ್ಧರಾಮಯ್ಯನವರ ಮಾತನ್ನು ಮುಂದುವರೆಸಲೇಬೇಕು. “ಒಂದು ದಿನ ತಿರಸ್ಕರಿಸುವ ಮತ್ತೊಂದು ದಿನ ಪುರಸ್ಕರಿಸುವ ಒಮ್ಮೆ ನನ್ನನ್ನು ಹಾಲಿನಲ್ಲಿ ಅದ್ದುವ ಒಮ್ಮೆ ನನ್ನನ್ನು ನೀರಿನಲ್ಲಿ ಅದ್ದುವ ಬಹುರೂಪತೆಯನ್ನು ಇನ್ನಾದರೂ ಬಿಡು ನಲ್ಲ ಏನು ನಿನ್ನ ಒಳಗಿನ ನಿಗೂಢ? ಎಲ್ಲವನ್ನೂ ಬಿಚ್ಚಿಡು”. – (ಬಾಳಿನ ಹೊಸ ಪುಟ) ಈ ಪದ್ಯ ಸುರುವಾಗುವುದೇ “ನನ್ನ ಮನೆಯೆಂಬ ಚಿಕ್ಕ ಗೂಡು ಕಾಯುತ್ತಿದೆ ನಿನ್ನ ಬರವಿಗಾಗಿ ಎದೆ ಒಸಗೆ ತುಂಬಿ” ಎನ್ನುವ ಸಾಲಿನಿಂದ. “ಅವನ” ಬರವಿಗಾಗಿ ಕಾಯುವ “ಅವಳು” ಅವನ ನಿಗೂಢ ನಡೆಯನ್ನು ಪ್ರಶ್ನಿಸುತ್ತಲೇ ಅವನನ್ನು ಸ್ಪಷ್ಟ ಪಡಿಸಲು ಕೋರುವ ಕಡೆಯ ಸಾಲು ಬರಿಯ ಪ್ರೀತಿಯ ಮಾತನ್ನಲ್ಲದೆ ಸಂಗಾತಿ ಅನುರೂಪವಾಗಿಯೇ ಇರಬೇಕೆಂಬ ಬಯಕೆ. “ನಾವಿಬ್ಬರು ದೇವ ದೇವಿಯರಾಗಿ ಉಳಿಯುವೆವು ಸೂರ್ಯ ಚಂದ್ರ ನಕ್ಷತ್ರ ನದಿ ಹಳ್ಳ ಕೊಳ್ಳಗಳಿರುವ ತನಕ ಪ್ರೇಮಿಗಳ ಧಮನಿಗಳಲಿ ಪ್ರೀತಿಯ ರಕುತ ಹರಿದಾಡುತ್ತಿರುವ ತನಕ” (ದೇವಿ ದೇವರ ಪ್ರೇಮ ಗಾಥೆ) ಈ ಪದ್ಯದ ಸುರುವಿನ ಸಾಲು ಹೀಗಿದೆ; ಯಾವ ಹೆಣ್ಣೂ ಪ್ರೇಮಿಸಿರಲು ಸಾಧ್ಯವಿಲ್ಲ ನಿನ್ನನು ನನ್ನಷ್ಟು ತೀವ್ರ ಈ ಭೂಮಂಡಲದಲಿ ಅಕ್ಕ ಚೆನ್ನ ರಾಧೆ ಕೃಷ್ಣರು ಧಡ್ಡನೆ ತಮ್ಮ ಬಾಗಿಲುಗಳ ಮುಚ್ಚಿದರು ಕ್ಷಣಹೊತ್ತು ತಮ್ಮ ಪ್ರೇಮಗಾಥೆಯ ಚೌಕಾಶಿ ಮಾಡಿದರು. ಈಗ ಪದ್ಯದ ಓದನ್ನು ಈಗ ಹೇಳಿದ ಎರಡನೇ ಕಂದದಿಂದ ಆರಂಭಿಸಿ ಮೊದಲ ಸಾಲನ್ನು ನಂತರ ಓದಿದರೆ ಹುಟ್ಟುವ ಯಾಚ(ತ)ನೆಯ ಪರಿಗೆ ಸೋಲದೇ ಉಳಿಯುವುದಾದರೂ ಹೇಗೆ? ಇಷ್ಟೆಲ್ಲ ಹೇಳಿದರೂ ಮತ್ತೆ ಗೊಂದಲ ನಿರೂಪಕಿಗೆ, ಅವಳು ಹೇಳುತ್ತಾಳೆ; ಎಲ್ಲ ಗಂಡಸರೂ ಒಂದೇ ಏನು? ಅಕ್ಕನ ಮೊರೆಗೆ ಕಿವಿಗೊಟ್ಟನೇ ಚೆನ್ನ? ಕೊಳಲಿನ ಜೊತೆಗೆ ರಾಧೆಯನೂ ಹಿಂದೆ ಬಿಟ್ಟು ನಡೆದೇ ಬಿಟ್ಟನಲ್ಲ ಕೃಷ್ಣ? ಮುಂದುವರೆದ ಅವಳು ಹೀಗೂ ಹೇಳುತ್ತಾಳೆ; ನೀನು ರೂಹಿಲ್ಲದ ಚೆಲುವನಲ್ಲ ನನ್ನ ಕಣ್ಣಿನ ಮುಂದಿನ ಸಾಕ್ಷಾತ್ಕಾರ ಬಳಿ ಇದ್ದಿದ್ದರೆ ಈಗ ನೀನು ನಿನ್ನ ಕೈತುಂಬಾ ಮೆತ್ತಿಕೊಳ್ಳುತ್ತಿದ್ದೆ ನನ್ನ ಬೆತ್ತಲೆ ಚೆಲುವನು …………. ನೋಡಲಿ ಜಗತ್ತು ನಮ್ಮಿಬ್ಬರ ಪ್ರಣಯದ ಕೊನೆಯಿರದ ಪಯಣವನ್ನು ಈ ಟಿಪ್ಪಣಿಯಲ್ಲಿ ಮೊದಲು ಬಳಸಿದ “ನೀಲಿ” ಶಬ್ದದ ಅರ್ಥವನ್ನು ಈ ಪದ್ಯದ ಓದಿನಲ್ಲಿ ಗ್ರಹಿಸಲು ಯತ್ನಿಸಿ, ಆಗ ಮಾತ್ರ ಈಕೆ ಹೇಳ ಹೊರಟ ಆಳದಾಳದ ಕೊಳದ ನೀಲ ನಿಮಗ್ನ ನಗ್ನ ಸತ್ಯ ಅದ್ಭುತವಾಗಿ ಹೊಳೆಯುತ್ತದೆ. ಇನ್ನು “ಸಂಶಯ” ಎನ್ನುವ ಕವಿತೆಯಲ್ಲಿ ತೇಲಿಹೋಗುವೆ ನಾನು ನಿನ್ನ ಅಗಾಧ ಪ್ರೀತಿಯ ಹೊಳೆಯಲ್ಲಿ ಮರೆತುಬಿಡುತ್ತಾ ನೀನು ಚುಚ್ಚಿದ ಕಂಠಿ ಮುಳ್ಳುಗಳನ್ನು ತಯಾರಾಗಿಬಿಡುತ್ತೇನೆ ನೀನು ತೋರಿಸಿದ ದಾರಿಯಲ್ಲಿ ನಡೆಯಲು ನನಗೆ ಗೊತ್ತಿದೆ; ಆಡಿದ್ದೇನೆ ನಾನೂ ನಿನಗೆ ಘಾಸಿಮಾಡುವ ಮಾತುಗಳನ್ನು ಎಲ್ಲ ಮರೆತು ನೀನು ಕೇಳುವುದು ನನ್ನ ಮಾತುಗಳನ್ನೇ!” -ಎಂದು ಕೊನೆಯಾದಂತೆ ಕಂಡರೂ, ಈ ಮೊದಲು ಅವಳು ಅಂದುಕೊಂಡಿದ್ದೇನು ಎಂದು ಗಮನಿಸಿದರೆ; “ನಿನ್ನ ಎದೆಯಲ್ಲಿ ಸಂಶಯದ ಬೆಕ್ಕೊಂದು ಚಂಗೆಂದು ನಗೆಯುವುದು ನನಗೆ ಕೇಳಿಸುತ್ತದೆ ಆಗೆಲ್ಲಾ ಎಲ್ಲರ ಹಾಗೆ ನೀನೂ ಒಬ್ಬ ಗಂಡಸು ಎಂಬುದನ್ನು ತೋರಿಸಿ ಬಿಡುತ್ತೀಯ ನಿನ್ನ ಸಿಡಿ ನುಡಿಗಳು ಕ್ಯಾಕ್ಟಸ್ ಮುಳ್ಳುಗಳಂತೆ ನನ್ನ ಮನಸ್ಸನ್ನು ಇರಿಯತೊಡಗುತ್ತವೆ ನನ್ನ ಅಸಹಾಯಕತೆ ನಿನ್ನ ಕ್ರೂರ ಬಾಯಾರಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಸುಮ್ಮನೆ ಕಾಯುತ್ತೇನೆ ನಾನು ನೀನು ಎಂದಿನ ಮಧುರ ನುಡಿಗಳಲಿ ಮಾತನಾಡುವ ಗಳಿಗೆಗೆ” ಇವು ಬರಿಯ ವ್ಯಾಮೋಹದ, ಕಾಮನೆಯ ಅಥವ ಪ್ರಣಯದ ಆಹ್ವಾನದ ಅಂದಾದುಂದಿನ ಸವಕಳಿ ಸಾಲುಗಳಲ್ಲ, ಬದಲಿಗೆ ಸಂಗಾತಿಯ ನಿಷ್ಠೆ ಮತ್ತು ತನ್ನ ಹೊರತು ಅನ್ಯವನ್ನು ಕಾಣುವ ಸಂಗಾತಿಯ ಮೇಲಣ ಸಂಶಯಕ್ಕೆ ಸ್ವತಃ ಕೊಟ್ಟುಕೊಂಡ ಉತ್ತರವೂ ಆಗಿದೆ. “ರೆಡ್ ವೈನ್ ವಿಷಾದ” ಕವಿತೆ ಬರಿಯ ಪದ್ಯವಲ್ಲದ ಒಂದು ಬಗೆಯ ಗಪದ್ಯವೂ ಹೌದು. ಸಣ್ಣಕತೆಯೂ ಹೌದು. ಒಂದು ರಾತ್ರಿ ಅವನ ಬರುವಿಗೆ ರೆಡ್ ವೈನಿನ ಜೊತೆ ಕಾಯ ತೊಡಗುವ ಅವಳು ಬೆಳಗ ಎಚ್ಚರದಲ್ಲಿ ಖಾಲಿ ಬಾಟಲನ್ನು ಕಾಣುತ್ತಾಳೆ. ಆದರೆ ರಾತ್ರಿ ನಡೆದುದೇನು ಎನ್ನುವ ಪ್ರಶ್ನೆಗೆ ಪದ್ಯದ ಓದು ಮಾತ್ರ ನಿಮಗೆ ಉತ್ತರಿಸಬಹುದು (ಎಲ್ಲ ಸ್ವಾರಸ್ಯವನ್ನೂ ಟಿಪ್ಪಣಿಕಾರನೇ ಹೇಳಿಬಿಟ್ಟರೆ ರಸಿಕನಿಗೆ ಬೇಸರ ಎನ್ನಿಸದೇನು?) ಆದರೆ “ನಿರಾಳತೆ” ಎನ್ನುವ ಕವಿತೆ ಮಾತ್ರ ಈವರೆವಿಗೂ ಹೇಳಿದ ಕಾವ್ಯಕೃಷಿಗಿಂತ ಕೊಂಚ ಹೊರಳು ಹಾದಿಯಲ್ಲಿ ಹಾಯುತ್ತದೆ. ಮಧ್ಯಾಹ್ನದ ನಿರಾಳತೆಯ ಒಂದು ಮಳೆ ಕಾಲದಲ್ಲಿ ಅವಳನ್ನು ಕಾಣಬಂದ ಅವನನ್ನು ಬಲವಂತ ಮಾಡಿ ಹೊರ ಪ್ರಪಂಚದ ಸಂಗತಿಗಳಿಗೂ ಒಡ್ಡ ಬಯಸಿ ಕರೆದೊಯ್ಯುವ ಅವಳು, ಕಾಮನ ಬಿಲ್ಲ ಬಣ್ಣವನ್ನು ಕಾಣಿಸುತ್ತಾಳೆ. ಅವಳು ಮರದ ಕೊಂಬೆಯ ಮೇಲೆ ಕೂತಿದ್ದ ಹಕ್ಕಿಯೊಂದನ್ನು ಹಿಡಿಯ ಹೋಗಿ ಆ ಪಕ್ಷಿ ತಪ್ಪಿಸಿಕೊಂಡು ನೀರಿಗೆ ಬಿದ್ದೂ ಮತ್ತೆ ಛಕ್ಕನೆ ರೆಕ್ಕೆ ಫಡಫಡಿಸಿ ಹಾರಿದ್ದನ್ನು ಕಂಡಾಗ ಆ ಅವನ ಮನದ ಆಸೆಯನ್ನು ಅರಿಯುತ್ತಾಳೆ ಎನ್ನುವಾಗ ಯಾಕೋ ಮತ್ತೆ ಮೇಲ್ನೋಟದ ಪ್ರಣಯಕ್ಕೇ ಈ ಕವಿಯ ನಾಯಕಿಯೂ ಅರಸುತ್ತಾಳಾ ಅನ್ನಿಸುತ್ತದೆ. ಆದರೆ “ಮೌನದ ನೆರಳು” ಪದ್ಯದಲ್ಲಿ ಪುನಃ “ನಿನ್ನ ಮಾಂತ್ರಿಕ ಬೆರಳಿನ ಸ್ಪರ್ಶಕ್ಕೆ ತಹತಹಿಸುತಿರುವೆನು ಒಂದೇ ಮಾತಿನಲಿ ಉಲಿದು ಬಿಡು ನನ್ನೀ ಆತ್ಮದಲಿ ಒಂದಾಗಿದ್ದೇನೆಂದು ಆದಿ ಅಂತ್ಯಗಳಿಲ್ಲದ ಒಲುಮೆಯಾಗಿ ನಿನ್ನೊಳಗೆ ಕರಗಿಬಿಡುವೆನು” ಅನ್ನುವಾಗ ಮತ್ತೆ ಸ್ಪುರಿಸಿದ ಆ ಅದೇ ಗಂಧಕ್ಕೆ ಮೂಗು ಅರಳುವುದು ಸಹಜ ಮತ್ತು ಸ್ವಾಭಾವಿಕ ಕೂಡ. “ಏಕಾಂತದಲ್ಲಿದ್ದಾಗಲೇ ನಿನ್ನ ಹಾಜರಿ ಹೃದಯದೊಳಗೆ ಅಗ್ನಿಕುಂಡ ಹೊತ್ತಿಕೊಂಡಂತೆ ನಿನ್ನೊಂದಿಗೆ ಕಳೆದ ದಿನಗಳು ಯಾಕೆ ಕಾಡುತ್ತಿವೆ ಇಂದಿಗೂ…” ಎಂದು ಸುರುವಾಗುವ “ಅಮಾಯಕ” ಎನ್ನುವ ಕವಿತೆ,ಮುಗಿಯುವುದು ಹೀಗೆ; “ಕಣ್ಣೆದುರೇ ಇದ್ದರೂ ಗುರುತು ಹಿಡಿಯಲಾರ ಅವನು ಕೋಪ ತಾಪ ಸಿಟ್ಟು ಸೆಡ ಬದಿಗಿಟ್ಟ ಗಳಿಗೆ ನಾನವನ ತೋಳಸೆರೆ ಎಂಬುದನ್ನು ಅರಿಯದ ಅಮಾಯಕ” ಇಲ್ಲಿ ಕವಿ ಬದುಕಿನಲ್ಲಿ ಅನಿವಾರ್ಯ ಬರುವ ಸಂಗತಿಗೆ ತಲೆಬಾಗುತ್ತಿದ್ದಾರೋ, ತಲೆ ಎತ್ತಿ ಪ್ರೀತಿ ಮತ್ತು ನಿಷ್ಠೆಗೆ ಬದ್ಧವಾಗದೇ ಬದುಕಿನ ಹಳವಂಡಗಳಲ್ಲಿ ಮರೆಯಾಗಿ ತನ್ನನ್ನು ಗುರುತಿಸದ ಇನಿಯನಿಗೆ ಬದುಕಿನಾಚೆಯ ಬದುಕ ಕಾಣಿಸುತ್ತಿದ್ದಾಳೋ ಅದು ಓದುಗನ ಗ್ರಹಿಕೆಗೆ ಬಿಟ್ಟ ಕಾಣ್ಕೆ. “ರೂಹು ಅರಳಿದ ಕಾಲ” ಎಂಬ ವಿಶಿಷ್ಠ ರಚನೆಯಂತೂ ನನ್ನ ಓದಿನ ಪರಿಯನ್ನೇ ಕ್ಷಣಕಾಲ ಕಂಗೆಡಿಸಿತೆಂದರೆ ನೀವು ನಂಬಲೇ ಬೇಕು. ಏಕೆಂದರೆ ಇಂಥ ಪದ್ಯಗಳ ಅಸ್ತಿವಾರವೇ ಇದುವರೆಗೂ ಕನ್ನಡದ ಮಹಿಳಾ ಅಸ್ಮಿತೆಗೆ ತೆರೆದುಕೊಂಡ ಅಕ್ಕಮಹಾದೇವಿಯ ” ರೂಹು” ಎಂಬ ಶಬ್ದದ ಅಧ್ಬುತ ಮಾಂತ್ರಿಕತೆ ಮತ್ತು ಆ ಪದಕ್ಕಿರುವ ಅತಿ ವಿಶಿಷ್ಠ ಪ್ರಜ್ಞೆಯ ಪುರಾವೆ. “ಮುಂಗಾರು ಮಳೆಯ ಕಾಲಕೆ ಅವಳ ಮನದ ಅಂಗಳದಲಿ ಅವನ ನೆನಪು ನುಗ್ಗಿ ಬರುತ್ತದೆ” ಎನ್ನುವ ಸಾಮಾನ್ಯ ಗ್ರಹಿಕೆಯಿಂದ ಮೊದಲಾಗುವ ಪದ್ಯ, ದಾರಿ ಸರಿದಂತೆ ದಾಟುತ್ತ ದಾಟುತ್ತ, ಕೊನೆಯಾಗುವುದು ಹೀಗೆ; “ಈಗ ಮತ್ತೆ ಮುಂಗಾರಿನ ಒಂದು ದಿನ ಗೊತ್ತು ಅವಳಿಗೆ ನಿರಾಸೆಗೊಳಿಸಿದ್ದಿಲ್ಲ ಎಂದೂ ಅವನು ಬರಬಹುದು ಈಗವನು ಯಾವ ಗಳಿಗೆಗೂ” ಎನ್ನುವಾಗ ಪದ್ಯ ಮುಗಿದೇ ಹೋಯಿತಲ್ಲ ಎನ್ನುವ ಭಾವಕ್ಕಿಂತಲೂ ಬಹಳ ಕಾಲ ಉಳಿಯುವ ಕಡೆಯ ಸಾಲುಗಳು ಕಾಡುತ್ತಲೇ ಇರುತ್ತವೆ, ಥೇಟು ಅವಳ ಬಯಕೆಯ ಅವನಂತೆಯೇ! ಈ ಪದ್ಯಕ್ಕೆ ಫೇಸ್ಬಿಕ್ಕಿನ ಪುಟದಲ್ಲಿ ಖ್ಯಾತ ನಾಟಕಕಾರ ಡಿ ಎಸ್ ಚೌಗುಲೆ ಹೇಳಿದ ಮಾತನ್ನು ಇಲ್ಲಿ ನೆನೆಯದೇ ಇದ್ದರೆ ಅದು ಕೂಡ ತಪ್ಪಾಗುತ್ತದೆ. ಅವರು ಹೇಳುತ್ತಾರೆ: “ಬಹು ಸಂಕೀರ್ಣವಾದ ಕವಿತೆ. ಇದರ ರಚನೆಯ ಸಂವಿಧಾನ ಸುಲಭ ಸಾಧ್ಯವಲ್ಲ. ಹೆಣ್ಣು- ಗಂಡು ನೇಹಿಗರಾಗಿ ಅನುರಾಗಿಗಳಾಗಿ ಕಳೆವ ಪ್ರಕೃತಿ ದತ್ತ ಸಂಗ,ನಿಸ್ಸಂಗದ ರೂಪಗಳು ರೂಹುಗಳಾಚೆ ಒಂದು ಗಾಢ ಅನುಭೂತಿ ಯನ್ನು ಕೊಡುತ್ತವೆ. ಪ್ರತಿಮೆ,ರೂಪಕಗಳು ಹೊಸರಚನೆ ಅನಿಸುತ್ತವೆ. ಆಧ್ಯಾತ್ಮಿಕ ಗುಂಗನ್ನು ಮಸ್ತಕದಲ್ಲಿ ಇರಿಸುತ್ತದೆ. ಕನ್ನಡದಲ್ಲಿ ಒಂದು ಅಪರೂಪದ ಕಾವ್ಯಾಭಿವ್ಯಕ್ತಿ ಅಭಿನಂದನೆಗಳು”. “ಬುದ್ಧನ ಪ್ರೀತಿ” ಎನ್ನುವ ಪದ್ಯ ಅಧ್ಯಾತ್ಮದ ನೆಲೆಯಲ್ಲಿ ಬುದ್ಧನನ್ನು ಧೇನಿಸಿದರೂ ಕೊನೆಯಲ್ಲಿ ಹೀಗೆ ಆಗುತ್ತೆ; “ಉಳಿದ ಯಾರೂ ಮುಖ್ಯವಾಗದೆ ನಾನು ಮತ್ತು ಅವನು ಮಾತ್ರ ಇರುವ ಲೋಕವದು” ಎನ್ನುವಾಗ ಈಕೆಯ ಅಧ್ಯಾತ್ಮವೆಂದರೆ ಕೃಷ್ಣ ರಾಧೆಯರ, ಅಕ್ಕ ಚೆನ್ನನ, ಮೀರ ಮತ್ತು ಗಿರಿಧರನ ಪ್ರೀತಿಯಂತೆ ಕಾಮವಿಲ್ಲದ, ಪ್ರಣಯದ ಉನ್ಮಾದಕ್ಕಿಂತಲೂ ಮಿಗಿದಾದ ಧ್ಯಾನವಲ್ಲದೆ ಮತ್ತೇನು? “ಇದೆಲ್ಲ ಯಾಕೋ ಅತಿಯಾಯಿತು” ಅನ್ನುತ್ತಾರೆ ರಾಮಾನುಜಮ್ ಒಂದು ಕಡೆ. ಇನ್ನು ಈ ಅಂಕಣದ ಓದುಗರು ಹಾಗೆ ಎನ್ನುವ ಮೊದಲು ಮತ್ತೊಂದು ಪದ್ಯದ ಕೆಲವು ಸಾಲುಗಳನ್ನು ಮತ್ತೆ ಹೇಳುತ್ತ ಈ ಟಿಪ್ಪಣಿ ಮುಗಿಸುತೇನೆ. ನಮಸ್ಕಾರ. “ಮಧ್ಯಾಹ್ನದ ಚುಮು ಚುಮು ಚಳಿಗೆ ಬೆಚ್ಚಗಿನ ಹೊದಿಕೆ ಹುಡುಕುತ್ತಿದ್ದೇನೆ ನಿನ್ನ ಸ್ಪರ್ಶ ತಬ್ಬಿ ಮಲಗಲು” (ಬೆಳಕಿನ ತುಣುಕು) ವಿನಿಶಾ ಗೋಪಿನಾಥ್. ಮೂಲ ಕೋಲಾರ ಜಿಲ್ಲೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.ಮೈಸೂರು ವಿಶ್ವವಿದ್ಯಾಲಯದ ಬಿ.ಎ
ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು
ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು 80ರ ದಶಕದ ಆಚೀಚಿನ ವರ್ಷಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಫಿಲಾಸಫಿಗಳ ಗುಂಗು ಶುರುವಾಯಿತು. ಇದ್ದಕ್ಕಿದ್ದ ಹಾಗೆ ರಜನೀಶ್, ಬುದ್ಧ, ಜಿಡ್ಡು ಕೃಷ್ಣಮೂರ್ತಿ, ಯೂಜಿ ಮುಂತಾದವರು ಪ್ರಚಾರಕ್ಕೆ ಬಂದರು. ಇವರೆಲ್ಲ ಹೇಳಿದ್ದನ್ನು ಕತೆಗಳಲ್ಲೂ ಕವನಗಳಲ್ಲೂ ಲೇಖನಗಳಲ್ಲೂ ತಂದು ಕೊನೆಗೆ ಆ ಹೆಸರುಗಳನ್ನು ಕೇಳಿದರೆ ಕಿರಿಕಿರಿಯಾಗುವಂತೆ ಮಾಡುವಲ್ಲಿ ನಮ್ಮ ಲೇಖಕರೂ ಸಾಹಿತಿಗಳೂ ಯಶಸ್ವಿಯಾದರು.ಈಗಲೂ ಕೆಲವರು ಲೋಹಿಯಾವಾದವನ್ನು ಮತ್ತೆ ಕೆಲವರು ಅಂಬೇಡ್ಕರರನ್ನೂ ಕೆಲವರು ಗಾಂಧಿಯನ್ನೂ ಹೀಗೇ ಬಳಸುತ್ತ, ಬೆದಕುತ್ತ ತಮ್ಮ ಬರವಣಿಗೆಗೆ ಬಳಸುತ್ತ ಆ ಅಂಥವರ ಹೆಸರನ್ನೇ ಮತ್ತೆ ಮತ್ತೆ ಹೇಳುತ್ತ ನಿಜಕ್ಕೂ ಬೆನ್ನೆಲುಬಾಗಿಟ್ಟುಕೊಳ್ಳಬೇಕಿದ್ದ ಆ ಹಿರೀಕರ ಆದರ್ಶಗಳು ಕನಸುಗಳೂ ಮರೆಯಾಗಿ ಕೇವಲ ಹೆಸರೇ ಮೆರೆಯತೊಡಗಿದ್ದನ್ನೂ ನಾವು ಬಲ್ಲೆವು. ಈ ಇಂಥ ಕಾರಣಕ್ಕೇ ಅಂಥ ಸಾಹಿತಿಗಳೂ ಅವರು ಬರೆದ ಸಾಹಿತ್ಯವೂ ಶಾಶ್ವತವಾಗಿ ನಿಲ್ಲಲಿಲ್ಲ. ಬರಿಯ ಸಿದ್ಧಾಂತಗಳನ್ನು ನಂಬಿದ ಸಾಹಿತ್ಯಕೃತಿಗಳು ಕಣ್ಮರೆಯಾಗುವುದು ಸಹಜ ಮತ್ತು ಸ್ವಾಭಾವಿಕ. ಇಂಥದೇ ಪ್ರಯೋಗಗಳು ನವೋದಯದ ಕಾಲದಲ್ಲೂ ನಡೆದದ್ದಕ್ಕೆ ಪುರಾವೆಗಳಿವೆ. ನವ್ಯದಲ್ಲಂತೂ ಪದ್ಯ ಎಂದರೆ ಪ್ರಾಸದ ಹಂಗಿಲ್ಲದ, ಅಲಂಕಾರದ ಕಷ್ಟ ಬೇಕಿಲ್ಲದ ಗದ್ಯದ ಗಟ್ಟಿ ಸಾಲು ಎಂಬ ಹುಂಬ ವ್ಯಾಖ್ಯೆಯನ್ನು ಯಾರೋ ಕೆಲವರು ಹೇಳಿದ್ದನ್ನೇ ನಂಬಿ ಗದ್ಯದ ಸಾಲನ್ನು ತುಂಡು ತುಂಡಾಗಿಸಿ ಬೇಕಾದಂತೆ ತಿರುಚಿದ ಉದಾಹರಣೆಗಳೂ ಇವೆ. ಈ ಇಂಥದೇ ಕಳೆಯನ್ನು ಬಂಡಾಯದ ಅದ್ಭುತ ಬೆಳೆಯಲ್ಲೂ, ದಲಿತ ಧ್ವನಿಯ ಸ್ಪಷ್ಟತೆಯ ನಡುವೆ ರೂಕ್ಷತೆಯನ್ನೂ ಕಂಡಿದ್ದೇವೆ. ಇದು ಕಾಲದಿಂದ ಕಾಲಕ್ಕೆ ಕವಿತೆಯ ರೀತಿ ಬದಲಾಗುವುದರ ಮತ್ತು ಕಾವ್ಯದ ರಸಗ್ರಹಣದ ಸ್ವರೂಪದ ಬದಲಾವಣೆ. ಸದ್ಯದ ಕಾವ್ಯದ ಹರಿಯುವಿಕೆಯಲ್ಲಿ ತೀವ್ರತೆ ಇದೆಯೇ? ಬದುಕನ್ನು ಸಾಹಿತ್ಯ ಬಿಂಬಿಸುತ್ತದೆ ಎನ್ನುವ ವ್ಯಾಖ್ಯೆಯ ಪುನರ್ಮನನ ಹೇಗೆ ಸಾಧ್ಯವಿದೆ? ಎನ್ನುವ ಪ್ರಶ್ನೆಗಳನ್ನು ಇಟ್ಟುಕೊಂಡಿರುವ ಈ ಅಂಕಣದ ಮೂಲ ಉದ್ದೇಶವೇ ವರ್ತಮಾನದ ಕಾವ್ಯ ಕ್ರಿಯೆಯ ಸಂಕೀರ್ಣತೆಗಳನ್ನು ಸಾಮಾನ್ಯ ಓದುಗನ ದೃಷ್ಟಿಯಿಂದ ನೋಡುವುದಾಗಿದೆ. ಬರಿಯ ಹೇಳಿಕೆಗಳು ಕಾವ್ಯವಾಗುವುದಿಲ್ಲ ಮತ್ತು ಕನಿಷ್ಠ ರೂಪಕವೊಂದನ್ನು ಟಂಕಿಸದ ಯಾರೂ ಕವಿಯಾಗಲು ಸಾಧ್ಯವೇ ಇಲ್ಲ ಎನ್ನುವುದನ್ನು ಕನ್ನಡದ ಮನಸ್ಸುಗಳು ಈಗಾಗಲೇ ಸ್ಪಷ್ಟಪಡಿಸಿವೆ. ರಸಗ್ರಹಣದ ಮೂಲ ಉದ್ದೇಶವೇ ತನಗಿರುವ ಅರಿವನ್ನು ಪರಿಷ್ಕೃತಗೊಳಿಸಿ ತಾಜಾ ಪ್ರತಿಮೆಗಳ ಮೂಲಕ ಹೇಳುವ ಪ್ರಯತ್ನ. ಫೇಸ್ಬುಕ್ ಎಂಬ ಸಾಮಾಜಿಕ ಮಾಧ್ಯಮದ ಮೂಲಕವೆ ತಮ್ಮ ಕವಿತೆಗಳನ್ನು ಪ್ರಕಟಿಸುತ್ತಿರುವ ಹಲವರು ನಮ್ಮ ನಡುವೆ ಇದ್ದಾರೆ. ಬಹಳ ವರ್ಷಗಳಿಂದ ಕವಿತೆಯನ್ನು ಬರೆಯುವ ಅಭ್ಯಾಸವಿದ್ದವರೂ ಪತ್ರಿಕೆಗಳಲ್ಲಿ ಅವನ್ನು ಪ್ರಕಟಿಸುವ “ಜಾಣ್ಮೆ” ಮತ್ತು “ಕಲೆ”ಗಳ ಅರಿವು ಇಲ್ಲದೆ ಡೈರಿಗಳ ಪುಟಗಳಲ್ಲೇ ತಮ್ಮ ಕವಿತೆಯನ್ನು ಅಡಗಿಸಿ ಇಟ್ಟುಕೊಂಡಿದ್ದವರು ಫೇಸ್ಬುಕ್ಕಿನಲ್ಲಿ ಪ್ರಕಟಿಸಿ “ಭಾರ” ಕಳೆದುಕೊಳ್ಳುತ್ತಿದ್ದಾರೆ. ಅಂಥ ಹಲವರ ರಚನೆಗಳು ನಿಜಕ್ಕೂ ಚೆನ್ನಾಗಿರುತ್ತವೆ. ಆದರೆ ಫೇಸ್ಬುಕ್ ಪುಟಗಳು ಕ್ಷಣಕ್ಷಣಕ್ಕೂ ಹೊಸ ಹೊಸ ಬರಹ, ಫೋಟೋ, ಕವಿತೆ, ಸ್ಟೇಟಸ್ಸುಗಳ ಮೆರವಣಿಗೆ ಆಗಿರುವುದರಿಂದ ನಿಜಕ್ಕೂ ಅದ್ಭುತ ಎಂದೆನಿಸುವ ಸಾಲುಗಳು ಕೂಡ ಭರಪೂರ ಪೇಜುಗಳ ನಡುವೆ ಮಾಯವಾಗುವುದೂ ಸಹಜ. ಶ್ರೀ ಎನ್.ಡಿ.ರಾಮಸ್ವಾಮಿ ಮೇಲೆ ಹೇಳಿದ ಆ ಅಂಥ ಹಲವರ ಪೈಕಿ ಒಬ್ಬರು. ವೃತ್ತಿಯಿಂದ ಪದವಿ ಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರಾಗಿರುವುದರಿಂದ ಸಹಜವಾಗಿ ಛಾಸರಿನಿಂದ ಶೇಕ್ಸ್ ಪಿಯರನವರೆಗೆ, ಡಾಂಟೆಯಿಂದ ಆಫ್ರಿಕದ ಕಪ್ಪು ಹಾಡಿನವರೆಗೂ ಅವರ ಓದು ತೆರೆದೇ ಇರುತ್ತದೆ. ಆದರೆ ಎಲ್ಲ ಉಪನ್ಯಾಸಕರೂ ಕವಿಗಳಾಗುವುದಿಲ್ಲ. ಕವಿತೆಯನ್ನು ಪಾಠ ಮಾಡುವಾಗ ಮಾತ್ರ ಕವಿತೆಯನ್ನು ಬ್ರೌಸು ಮಾಡುವ ಶಿಕ್ಷಕರೂ ಇದ್ದಾರೆ. ಆದರೆ ಎನ್.ಡಿ.ಆರ್ ಅಪವಾದ. ಇನ್ನೇನು ಮೂರು ವರ್ಷಗಳಷ್ಟೇ ನಿವೃತ್ತಿಗೆ ಬಾಕಿ ಇರುವ ಅವರು ಅದೆಷ್ಟು ವರ್ಷಗಳಿಂದ ಪದ್ಯದ ಮೊರೆ ಹೋಗಿದ್ದರೋ ಏನೋ ಫೇಸ್ಬುಕ್ಕಿನಲ್ಲಿ ನಿತ್ಯವೂ ಅವರ ಪದ್ಯ ಪ್ರಕಟ ಆಗುತ್ತಲೇ ಇರುತ್ತದೆ. ಮೊನ್ನೆ ಫೇಸ್ಬುಕ್ ಪುಟದಲ್ಲಷ್ಟೇ ಬರೆಯುವ ಮತ್ತೊಬ್ಬ ಅನುವಾದಕರು ಇವರ ಪದ್ಯವನ್ನು ತೆಲುಗು ಭಾಷೆಗೆ ಅನುವಾದಿಸಿದ್ದರು ಎಂದರೆ ಇವರ ಪದ್ಯಗಳ ಝಳ ಕಡಿಮೆಯದೇನೂ ಅಲ್ಲ. ಸಾಹಿತ್ಯದಲ್ಲಿ ಆಸಕ್ತಿ ಇರುವ ಇಂಗ್ಲಿಷ್ ಉಪನ್ಯಾಸಕರಿಗೆ ಇರುವ ಮತ್ತೊಂದು ಲಾಭವೆಂದರೆ ಅವರು ಕನ್ನಡದ ಮಹತ್ವದ ಲೇಖಕರನ್ನು ಸುಲಭವಾಗಿ ಒಳಗೊಳ್ಳುವ ಸೌಲಭ್ಯ. ಏಕೆಂದರೆ ಹೈಸ್ಕೂಲ್ ಮತ್ತು ಪಿಯು ಕಾಲೇಜುಗಳು ಬಹುತೇಕ ಒಟ್ಟಿಗೇ ಇರುವುದರಿಂದ ಭಾಷಾ ಶಿಕ್ಷಕರುಗಳ ಮಾತಿನ ನಡುವೆ text ಬಗ್ಗೆ ಮಾತು ಸಹಜವೇ ಆಗಿರುವುದರಿಂದ ಗ್ರಹಿಕೆ ಸೂಕ್ಷ್ಮತೆ ಇದ್ದವರು ಗೆದ್ದಿರುತ್ತಾರೆ. ಎನ್.ಡಿ.ಆರ್ ಪದ್ಯಗಳ ಮೂಲ ಪುರಾತನ ನವ್ಯದ ಶಾಲೆ. ಪ್ರತಿಮೆಗಳೂ ರೂಪಕಗಳೂ ಇಲ್ಲದ ಬರಿಯ ಕನಸುಗಳು ಅವರ ಪದ್ಯಗಳಲ್ಲಿ ವಿರಳಾತಿ ವಿರಳ. ಏನನ್ನು ಹೇಳುವುದಕ್ಕೂ ಪ್ರತಿಮೆ ಮತ್ತು ರೂಪಕಗಳ ಮೊರೆ ಹೋಗುವ ಅವರ ಕವಿತೆಗಳಿಗೆ ಒಮ್ಮೊಮ್ಮೆ ಈ ಭಾರವೇ ಜಾಸ್ತಿಯಾಗಿ ಮೂಲದಲ್ಲಿ ಅವರೇನು ಹೇಳ ಹೊರಟಿದ್ದರೋ ಆ ಅಂಶವೇ ಮರೆಯಾಗುವುದೂ ಉಂಟು. ಉದಾಹರಣೆಗೆ; ಅಕ್ಷಿ ನಕ್ಷತ್ರವಾದದ್ದು ಏಕೆ? ಎದೆಯೊಳಗೆ ಪುಟ್ಟ ಕಾರಂಜಿ ಶಬ್ದ,ಶಬ್ದಕ್ಕೂ ಪುಳಕ ಜೀವ ಸೆಲೆ ಕಡಲಾಗಿ,! ಇಲ್ಲಿ ಶಬ್ದಾಡಂಬರದ ನಡುವೆ ಅಕ್ಷಿ ಅಂದರೆ “ಕಣ್ಣು” ಪುಳಕ ಹುಟ್ಟಿಸುವ ಜೀವಸೆಲೆಯಾಗಿದೆ ಎನ್ನುವುದನ್ನು ಹೇಳುತ್ತಲೇ, “ಮೀಟುತ್ತಿದೆ ಕನಸುಗಳ ಉಡವನ್ನ” ಅನ್ನುವಾಗ ಈ ಪದ್ಯ ಮತ್ತೆಲ್ಲಿಗೋ ತುಯ್ಯುತ್ತಿದೆ ಅಂತ ಭಾವಿಸಿದರೆ, “ಆಕಾಶದ ನಕ್ಷತ್ರಗಳೂ ನಕ್ಕು ವಿಷಾದದ ಅಮಲಲಿ” ಎಂದು ಮುಕ್ತಾಯ ಆಗುವಾಗ ಈ ಕವಿತೆ ಹೇಳಿದ್ದಾದರೂ ಏನನ್ನು ಎನ್ನುವ ಗೊಂದಲ ಸಹಜ. “ಇಲ್ಲಿ ಜೇನಿದೆ,ಹಾಲಿದೆ,ಹಣ್ಣಿದೆ ಅದು ಇದೆ ಇದು ಇದೆ ಎಲ್ಲ ಇದೆ” ಎಂದು ಆರಂಭವಾಗುವ ಪದ್ಯ ಈ ನೆಲದ ಘಮವನ್ನೋ ಅಥವ ಭಾಷೆಯ ಬೆಡಗನ್ನೋ ಹೊಗಳುತ್ತಿದೆ ಅಂದುಕೊಂಡರೆ ” ಏಕಲವ್ಯ ಜಗದೇಕ ವೀರನಾಗಿದ್ದು ಇಳಿದ ಹೊಳೆಯ ದಂಡೆಯಾಚೆಯೂ ಈಜಿದ್ದು!” ಎಂದು ರೂಪುಗೊಂಡರೆ ಮತ್ತೊಂದು ಜಿಗಿತಕ್ಕೆ ತುಯ್ದು “ಲಕ್ಷ್ಮಣ ಹಣ್ಣ ಬಿಟ್ಟು ಓಡಿದ್ದು ಕೋದಂಡ ಹಣ್ಣ ಜತಯೇ ಓಡಿದ್ದು” ಎಂದು ಹೇಳುತ್ತ ಕಡೆಗೆ ಪದ್ಯ “ಮುಗಿಲ ಅಟ್ಟದಲ್ಲೇ ಇರಲಿ ಕೈ ಚಾಚಿದರಷ್ಟೇ ಹಣ್ಣು!” ಎಂದು ಕೊನೆ ಮುಟ್ಟಿದಾಗ ಓಹ್ ಈ ಕವಿ ಹೆಣ್ಣನ್ನು ಕುರಿತು ಹೇಳಲು ಏನೆಲ್ಲ ಪದ ಭಂಡಾರವನ್ನೇ ಸೂರೆಗೊಂಡರಲ್ಲ ಎನ್ನಿಸುತ್ತದೆ. ರಾಮಾಯಣ, ಭಾರತದ ಪಾತ್ರಗಳೆಲ್ಲ ಕಣ್ಣ ಮುಂದೆ ಸರಿದು ಹೋಗುತ್ತವೆ, ಸವೆದ ದಾರಿಯ ಕುರುಹಾಗುತ್ತವೆ “ಬುದ್ಧ ಗುರುವಿನ ಕಣ್ಣಿಗೆ ಧೂಳು ಬಿದ್ದು ಧಾರಾಕಾರ ಕಣ್ಣೀರು ನೋವು,ನವೆ” ಎಂದು ಸುರುವಾಗುವ ಕವಿತೆ ಬುದ್ಧನೂ ಅನುಭವಿಸಿದ ಸಾಮಾನ್ಯ ನೋವನ್ನು ತೆರೆದಿಡುತ್ತಲೇ ” ಓಡಿದ,ಓಡಿದ ಧೂಳುಗಳು ಬಿಡದೆ ಹಿಂಬಾಲಿಸಿದ್ದು ಕಣ್ಣ ಮುಚ್ಚಿ ಓಡಿದ!” ಎಂದು ಹೇಳುವಾಗ ಕಣ್ಣಿಗೆ ಬಿದ್ದದ್ದು ಧೂಳಲ್ಲ, ಬದುಕಿನ ಸತ್ಯಗಳು ಎಂದು ಗೊತ್ತಾಗುತ್ತದೆ. ಮುಂದುವರೆದಂತೆ, “ಈಗ ಬುದ್ದನ ಕಣ್ಣು ಸ್ಪಷ್ಟ, ಎಲ್ಲವೂ ನಿಖರವಾಗಿ ಕಂಡು ಬೆರಗು!” ಎನ್ನುವಾಗ ಬುದ್ಧನ ಜ್ಞಾನೋದಯವನ್ನು ಬೆರಗಿನಿಂದ ಕಂಡಿರಿಸಿದ ಕವಿತೆ ಆಗಿ ಮಾರ್ಪಾಡಾಗುತ್ತದೆ. ಶಬ್ದಗಳು ಚಿನ್ನದ ಅದಿರಾದಾಗ ಬದುಕ ಹೊಲ ಬಂಗಾರವಾಗಿತ್ತ ಶಬ್ದಗಳು ಪ್ರೀತಿಯ ಮೊಗ್ಗಾದಾಗ ಬದುಕು ಮಲ್ಲಿಗೆ ತೋಟವಾಗಿತ್ತ! ಎಂದೂ ಹೇಳಬಲ್ಲ ಈ ಕವಿಯ ಬಳಿ ಶಬ್ದ ಭಂಡಾರದ ಸಂದೂಕ ಇದ್ದೇ ಇದೆ ಈ ಕವಿ ಬದುಕಿನ ನಶ್ವರತೆಯನ್ನು ಕೂಡ ಬಿಡುಬೀಸಾಗಿ ಹೇಳಬಲ್ಲರೆಂಬುದಕ್ಕೆ ನೋಡಿ; “ಸಂತೆಯಲಿ ಮೀನು ಮಾರುವ ಸೊಪ್ಪು,ಸದೆ ಮಾರುವ ಜಾಗದಲಿ ಮಾತುಗಳದೇ ಕಾರುಬಾರು ಗಟ್ಟಿಯಾಗಿ,ಕರ್ಕಶವಾಗಿ ಕಂಚಿನ ಕಂಠದಲಿ ಕೂಗಾಟ!” ಯೆಸ್, ಮುಂದಕ್ಕೆ ಇಣುಕಿದರೆ, “ಮೌನಕ್ಕೆ ಜಳಕ ಮಾಡಿಸಿ ಹೊಸ ಅಂಗಿ ತೊಡಿಸಿ ಕಥೆ,ಕವನ,ಹೇಳುತ್ತಾ ಹೋದರೆ ಸಿಡಿ ಮಿಡಿ ಗೊಂಡು ಉಗಿಯುತ್ತಿತ್ತು!” ಎಂದು ಕುತೂಹಲ ಹುಟ್ಟಿಸುತ್ತಾರೆ. ಆದರೆ ಪದ್ಯ ಕೊನೆಯಾಗುವುದು ಹೀಗೆ; “ಮೌನದ ಗೆಳೆತನ ದುಬಾರಿ ಖಿನ್ನತೆ, ಸಿಡುಕು, ಕೋಪ,ಕುದಿತ,ಮಿದಿತದ ಹೊಂಡವಾದದ್ದು!”. ಈಗ ಹೇಳಿ, ಈ ಪದ್ಯ ಬದುಕಿನ ನಶ್ವರತೆಯನ್ನು ಹೇಳುತ್ತಿದೆಯೋ ಅಥವ ಶಬ್ದದ ಆಡಂಬರದಲ್ಲಿ ಮೌನದ ಮಹತ್ತನ್ನು ಹುಡುಕುವ ಯತ್ನ ಮಾಡುತ್ತಿದೆಯೋ? ಈ ಪರಿಗೆ ಒಯ್ಯವ ಪದ್ಯಕ್ಕೆ ಆಗಾಗ ಲಿಫ್ಟ್ ಕೊಡುವುದರಲ್ಲಿ ಇವರು ಸಿದ್ದ ಹಸ್ತರೇ! “ಈ ಕನ್ನಡಿಯಲಿ ಅದೆಷ್ಟು ಮುಖ ಯುಧಿಷ್ಟರನೂ ನಿಂತಿದ್ದ ಕಿಮ್ ಮಹಾಶಯನೂ ನಿಂತಿದ್ದ ರಂಗದಲಿ ವೇಷ ಕಟ್ಟಿ”. ಎಂದು ಆರಂಭಗೊಂಡ ಪದ್ಯ ದಾಟುತ್ತ ದಾಟುತ್ತ “ಇವನೂ ಬಿಳಿ ಬಟ್ಟೆಯಲಿ ಚಿತ್ರ ಬಿಡಿಸಿದ್ದು ನೆತ್ತರ ಬಣ್ಣದಲಿ” ಎಂದು ಮತ್ತೊಂದು ಲಿಫ್ಟ್ ಪಡೆದಾಗ ಗೊಂದಲ. ಪದ್ಯ ಹೆಚ್ಚಿಸಿದ ಗೊಂದಲದಲ್ಲಿ ” ಇವನು ಶಿಶುಪಾಲನ ಕೊನೆ ತಮ್ಮ ನಂದನನಿಗೂ ಬೆಂಕಿ ಇಟ್ಟೇ ತೀರುವೆನೆಂದ!” ಎಂದು ಕೊನೆಯಾಗುವಾಗ ಈ ಕವಿ ಕಾಣಿಸಿದ ಬೆಳಕ ಝಳಕ್ಕೆ ಕಣ್ಣು ಕುಕ್ಕುವ ಶಕ್ತಿ ಇದ್ದೇ ಇದೆ ಎನ್ನುವುದಕ್ಕೆ ಸಾಕ್ಷಿ. ಆದರೆ ಪುರಾಣ ಪ್ರತಿಮೆಗಳ ಮೂಲಕವೇ ಏನೆಲ್ಲವನ್ನೂ ಕಟ್ಟುವ ಈ ಕವಿಯ ರಚನೆಗಳು ಆಧುನಿಕ ಮನಸ್ಥಿತಿಯ ಮತ್ತು ಪುರಾಣ ಪ್ರತಿಮೆಗಳ ಮೂಲ ಆಶಯವೇ ತಿಳಿಯದವರಿಗೆ ಗೊಂದಲ ಮತ್ತು ಶಬ್ದಾಡಂಬರದ ಹಾಗೆ ಕಂಡರೆ ತಪ್ಪೇನಲ್ಲ. “ತಳ ಇರದ ದೋಣಿಯಲಿ ಮಹಾ ಯಾನ ಆಸೆ ಎಂಬು ಹುಟ್ಟು ಒಂದರಗಳಿಗೆಯೂ ಬಿಡದೆ” ಈ ಸಾಲುಗಳು ಹುಟ್ಟಿಸುವ ತಳಮಳಗಳ ಲೆಕ್ಕ ಸುಲಭಕ್ಕೆ ಸಿಕ್ಕದ್ದು. ಮುಂದುವರೆದಂತೆ ” ಯುದ್ದದ ದಿರಸು ಕವಚ,ಕತ್ತಿ ತಿವಿದಲ್ಲದೇ ಮುಂದೆ ಹಾದಿ,ಹೆಜ್ಜೆ!” ಎಂದು ಆಕ್ಷೇಪಿಸುವ ಈ ಕವಿ ನಿಜಕ್ಕೂ ಏನನ್ನು ಹೇಳಲು ಹವಣಿಸುತ್ತಿದ್ದಾರೆ ಎನ್ನುವುದೇ ಕುತೂಹಲಕ್ಕೆ ದಾರಿ ಮಾಡುತ್ತದೆ. ಇನ್ನೂ ಏನೆಲ್ಲವನ್ನೂ ಹೇಳುತ್ತ ಈ ಕವಿಯ ಕವಿತೆಗಳನ್ನು ಡಿಸೆಕ್ಟ್ ಮಾಡುತ್ತ ಹೋಗಬಹುದು. ಆದರೆ ಪುರಾಣ ಪ್ರತಿಮೆಗಳ ಭಾರದಲ್ಲಿ ಇವರ ನಿಜದ ಆಶಯಗಳೇ ಸುಸ್ತು ಪಡುತ್ತಿವೆ ಎನ್ನುವದಂತೂ ನಿಜ. “ಇಲ್ಲಿ ಗಂಗೆಯಿದೆ ಗಾಂಗೇಯನ ಶರಶಯ್ಯೆ ಇದೆ ಅರ್ಜುನ ದಾಹಕ್ಕೆ ತಳಾ ತಳ ಸೀಳಿ ಗಂಗೆ ತರಬೇಕು!” ಎಂಬ ಭರವಸೆಯ ಕ್ಷೀಣ ದನಿಯೂ ಇವರಿಗೆ ದಕ್ಕಿರುವುದರಿಂದಲೇ ಇವರು ಪದ್ಯ ಪೋಸ್ಟ್ ಮಾಡುತ್ತಿದ್ದಂತೆಯೇ ಬೀಳುವ ಲೈಕುಗಳು ಈ ಕವಿಯು ಮತ್ತಷ್ಟು ಮಗದಷ್ಟು ಪುರಾಣ ಪ್ರತಿಮೆಗಳನ್ನು ಉಜ್ಜುಜ್ಜಿ ಹೊಳಪು ಪೇರಿಸುವಂತೆ ಮಾಡಿವೆ. ಶ್ರೀ ಎನ್. ಡಿ. ರಾಮಸ್ವಾಮಿ ಯಾವತ್ತೋ ತಮ್ಮ ಸಂಕಲನ ತರಬಹುದಿತ್ತು. ಪ್ರತಿಮೆ ರೂಪಕಗಳ ಅರಿವೇ ಇಲ್ಲದ ಸ್ವ ಮರುಕಗಳನ್ನೇ ಕಾವ್ಯವೆಂದು ಬಿತ್ತುತ್ತಿರುವರ ನಡುವೆ ಎನ್ ಡಿ ಆರ್ ಪುರಾಣದ ಪಾತ್ರಗಳ ಮೂಲಕವೇ ಬದುಕನ್ನು ಅರಿಯುವ ರೀತಿಯಿಂದ ಬಹು ಭಿನ್ನಾವಾಗಿ ಕಾಣುತ್ತಾರೆ ಮತ್ತು ವಿಭಿನ್ನವಾಗಿಯೇ ಉಳಿಯುತ್ತಾರೆ ಅವರ ೧೫ ಪದ್ಯಗಳನ್ನು ಒಟ್ಟು ಮಾಡಿ ಇಲ್ಲಿ ಪೋಣಿಸಿದ್ದೇನೆ. ಸುಮ್ಮನೇ ಕಣ್ಣಾಡಿಸುತ್ತ ಹೋದಂತೆ ಮತ್ತೆಲ್ಲಿಗೋ ಮತ್ಯಾವುದೋ ಪರಿಜಿಗೆ ಒಯ್ಯುವ ಈ ಪದ್ಯಗಳ ಝಳ ನಿಮಗೂ ಮುಟ್ಟಲಿ. ಎನ್.ಡಿ.ಆರ್. ಕವಿತೆಗಳು 1. ಅಕ್ಷಿ ನಕ್ಷತ್ರವಾದದ್ದು ಏಕೆ? ಎದೆಯೊಳಗೆ ಪುಟ್ಟ ಕಾರಂಜಿ ಶಬ್ದ,ಶಬ್ದಕ್ಕೂ ಪುಳಕ ಜೀವ ಸೆಲೆ ಕಡಲಾಗಿ,! ಹರಿಯುತ್ತಿದೆ ಝರಿ ಜುಳು,ಜುಳು ನಿನಾದವೆಲ್ಲ ಅಲೌಕಿಕದ ಹುನ್ನಾರವೆ? ಮೀಟುತ್ತಿದೆ ಕನಸುಗಳ ಉಡವನ್ನ! ತಳ ಕಂಡ ಬದುಕ ಸೆಲೆ ಉನ್ಮತ್ತ,ಉನ್ಮೀಲನದ ಗಾಳಿಪಟ ಇಲ್ಲಿಲ್ಲ ಭಾವಗಳ ಹಕ್ಕಿ ಪರಿಧಿಯ ಸೀಳಿ ! ಹಂಚಿ ಕೊಂಡ ಕನಸುಗಳು ಆಯಾತ ನಿರ್ಯಾತವಾಗುತ್ತಿವೆ ಈ ಸೇತುವೆಗೆ ಬದುಕ ಎರಡೂ ಹೊಳೆ ಕಾಯುತ್ತಲೇ! ಆಕಾಶದ ನಕ್ಷತ್ರಗಳೂ ನಕ್ಕು ವಿಷಾದದ ಅಮಲಲಿ ಈ ಸೇತುವೆ ಎಂದಿಗಾದರೂ ಒಮ್ಮೆ ದಕ್ಕಿದರೆ? 2. ಇಲ್ಲಿ ಜೇನಿದೆ,ಹಾಲಿದೆ,ಹಣ್ಣಿದೆ ಅದು ಇದೆ ಇದು ಇದೆ ಎಲ್ಲ ಇದೆ ಹೂವು,ಹಾಸಿಗೆ,ಚಂದ್ರ,ಚಂದನ ನಗು,ಉತ್ಸಾಹ ,ಹುರುಪು,ಕನಸು ಹೊಳೆಯಂತೆ ಕಾದಿದೆ ! ಇಳಿಯ ಬೇಕು ಕನಸುಗಳ ಹೊಳೆಗೆ ಜಿಗಿ,ಜಿಗಿದು ಬಾಚಲು ಬೇಕು ಹಣ್ಣ ಗೊಂಚಲಿನ ಪರಿ ಹರಡಿದ್ದು ಬೇಕಾದ ಮಾಗಿದ ಹಣ್ಣೇ ಕಿತ್ತು! ಏಕಲವ್ಯ ಜಗದೇಕ ವೀರನಾಗಿದ್ದು ಇಳಿದ ಹೊಳೆಯ ದಂಡೆಯಾಚೆಯೂ ಈಜಿದ್ದು! ಬಾಚಿದ್ದು ಯಾವನೂ ಮುಟ್ಟದ ಹಣ್ಣು! ಸುಧಾಮ ಯಾವ
ಪ್ರತಿಮೆಗಳ ಭಾರಕ್ಕೆ ಹೊಯ್ದಾಡುವ ರೂಪ(ಕ)ಗಳು Read Post »
“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು
“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು ಫೇಸ್ಬುಕ್ಕಿನ ತುಂಬ ಹರಡುವ ಪದ್ಯದ ಘಮಲಿಗೆ ತಮ್ಮ ದನಿಯನ್ನೂ ಸೇರಿಸಲು ಹಾತೊರೆಯುತ್ತಿರುವ ಅಸಂಖ್ಯ ಕವಿ ಮನಸ್ಸುಗಳ ನಡುವೆ ಕೊಟ್ರೇಶ್ ತಂಬ್ರಳ್ಳಿ ಅಮರಗೋಳಮಠ ಅವರದು ಗಮನಿಸಲೇಬೇಕಾದ ಹೆಸರು. ಸ್ವಲ್ಪ ಹದವೆನ್ನಿಸುವ ಯಾರದೇ ಕವಿತೆಗಳಿಗೆ ತಕ್ಷಣದ ಪ್ರತಿಕ್ರಿಯೆ ನೀಡುವ ಕೊಟ್ರೇಶ್ ಆಗೀಗ ತಮ್ಮ ರಚನೆಗಳನ್ನೂ ಈ ಸಾಮಾಜಿಕ ಜಾಲ ತಾಣದಲ್ಲಿ ಹರಿ ಬಿಟ್ಟು ಪ್ರತಿಕ್ರಿಯೆಗೆ ಕಾಯುತ್ತಾರೆ. ನಿಜಕ್ಕೂ ಚಂದ ಇರುವ ಅವರ ನಿಜದ ರಚನೆಗಳಿಗಿಂತ ತಕ್ಷಣಕ್ಕೆ ಕೋಪ ತರಿಸುವ, ಸ್ವಲ್ಪ ಒರಟೇ ಎನ್ನಿಸುವ ಅವರ ಪ್ರತಿಕ್ರಿಯೆ ಹೆಚ್ಚು ಸ್ಪೇಸ್ ಪಡೆಯುವದನ್ನು ಗಮನಿಸುತ್ತಲೇ ಇದ್ದೇನೆ. ಮೂಲತಃ ಲಂಕೇಶರ ಅಪ್ಪಟ ಅನುಯಾಯಿಯಾದ ಅವರು ಮಾತು ಮಾತಿಗೆ ಲಂಕೇಶರನ್ನು ಅವರು ಈಗ ಇದ್ದಿದ್ದರೆ ಹೇಗೆ ಪ್ರತಿಕ್ರಯಿಸುತ್ತಿದ್ದರು ಎಂದೆಲ್ಲ ಹೇಳುವಾಗ ಹೆಚ್ಚು ವಿದ್ಯಾಭ್ಯಾಸ ಮಾಡದೆಯೂ ಸಾಹಿತ್ಯದ ನಮ್ರ ವಿದ್ಯಾರ್ಥಿಯಾದ ಅವರ ಬಗ್ಗೆ ಹೆಮ್ಮೆ ಮತ್ತು ಪ್ರೀತಿ ಹುಟ್ಟುತ್ತದೆ. ನಿಜಕ್ಕೂ ಕವಿತೆ ಎಂದರೇನು? ಇದು ಯಾವತ್ತಿಗೂ ಸ್ಪಷ್ಟ ಉತ್ತರ ಸಿಕ್ಕದ ಮತ್ತು ನಿಯಮಿತ ಡೆಫಿನಿಶನ್ ಮೀರಿದ ಸಾರ್ಥಕ ಸಾಲುಗಳು ಎನ್ನುವುದೇ ನನ್ನ ನಮ್ರ ಉತ್ತರ. ಏಕೆಂದರೆ ಕವಿತೆಯನ್ನೂ ಮತ್ತು ಕವಿತೆ ಕಟ್ಟಿ ಕೊಡುವ ಹಿತವನ್ನೂ ಬರೆದ ಕವಿಗಿಂತಲೂ ಆ ಕವಿತೆಯನ್ನು ಓದಿದ ಓದುಗ ಅನುಭವಿಸಬೇಕು. ಕವಿ ತನ್ನ ಕವಿತೆಯಲ್ಲಿ ಹೇಳ ಹೊರಟ ಸಂಗತಿಗಿಂತಲೂ ಮುಖ್ಯವಾದದ್ದು ಓದುಗನಿಗೆ ಹೊಳೆಯಬೇಕು ಮತ್ತು ಆ ಅನ್ನಿಸಿಕೆಯೇ ಆ ಕವಿಯನ್ನೂ ಆ ಕವಿತೆಯನ್ನೂ ಸಾಹಿತ್ಯ ಚರಿತ್ರೆಯ ಮುಂದಣ ಪಯಣದ ಹೆಜ್ಜೆಯಾಗಿ ಕಾಣಬೇಕು. ಆದರೆ ಇವತ್ತು ಧಂಡಿ ಧಂಡಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುವ ಕವಿತೆಗಳ ರೂಪದಲ್ಲಿರುವ ಗದ್ಯದ ಸಾಲುಗಳು ಆ ಅಂಥ ನಿಕಷಕ್ಕೆ ಒಳಗೊಳ್ಳುತ್ತಿವೆಯೇ? ಓದುಗ ಅವನ್ನು ಸೀರಿಯಸ್ ಆಗಿ ಓದಿದ್ದಾನೆಯೇ? ಎಂದು ಪರಿಶೀಲಿಸ ಹೋದರೆ ನಿರಾಸೆ ಕಾಡುತ್ತದೆ. ಏಕೆಂದರೆ ಸ್ವಂತಿಯ ಪಟಗಳಲ್ಲಿ, ಅನಿಷ್ಟದ ರಾಜಕೀಯ ನಿಲುವುಗಳಲ್ಲಿ, ಎಡಬಲದ ಹೊಯ್ ಕೈಗಳಲ್ಲಿ ನಿಜಕ್ಕೂ ನಿಲ್ಲಬಲ್ಲ ಕವಿತೆಗಳು ಕೇವಲ ಲೈಕುಗಳಲ್ಲಿ ಹೆಚ್ಚೆಂದರೆ ನಗುವ/ ಅಳುವ/ ಲವ್ ಸಿಂಬಲಿನ ಈಮೋಜಿಗಳಲ್ಲೇ ತಮ್ಮ ಆಯಸ್ಸು ಮುಗಿಸುತ್ತಿವೆ. ಅಲ್ಲದೇ ದಿನಕ್ಕೆ/ಗಂಟೆಗೆ ಹೊಳೆದ ಸಾಲನ್ನೇ ಕವಿತೆಯೆಂದು ತೇಲಿಬಿಡುವ ಉಮೇದಿನಲ್ಲಿ ಆ ಸಾಲುಗಳು ಪಕ್ವವಾಗಿ ಹದಗೊಂಡು ಸುಖ ಪ್ರಸವ ಕಾಣದೇ ಸಮಯ ನೋಡಿಕೊಂಡು ಹೆರಿಗೆ ಮಾಡಿಸಿದ ಸಿಸೇರಿಯನ್ ಶಿಶುಗಳಂತೆ ಕಾಣುವ ಪ್ರಮೇಯಗಳೇ ಹೆಚ್ಚು. ಕವಿಯಾದವನು ಸಾಹಿತ್ಯ ಚರಿತ್ರೆಯನ್ನು ಅರಿತಿರಬೇಕು, ಪೂರ್ವ ಸೂರಿಗಳನ್ನು ಓದಿರಲೇಬೇಕು, ಕವಿತೆಯ ರಚನೆಗೆ ಸಾಹಿತ್ಯ ವಿಭಾಗೀಕರಣದ ಹಿನ್ನೆಲೆ ಮುನ್ನೆಲೆ ಗೊತ್ತಿರಬೇಕು,ಸಾಹಿತ್ಯ ಕೃಷಿಯಲ್ಲಿ ಈಗಾಗಲೇ ತೊಡಗಿ ಕೊಂಡವರ ನಡುವೆ ಗುರ್ತಿಸಿಕೊಂಡಿರಬೇಕು ….. ಇತ್ಯಾದಿ ಇತ್ಯಾದಿಗಳೆ ಮಾನದಂಡಗಳಾದರೆ, ಪಾಪ ಕೊಟ್ರೇಶ್ ಯಾವತ್ತಿಗೂ ಕವಿ ಎನ್ನಿಸಿಕೊಳ್ಳಲಾರರು. ತಮ್ಮ ಬದುಕಿಗೆ ಸಣ್ಣದೊಂದು ಹೋಟೆಲ್ ನಡೆಸುತ್ತಿರುವ ಅವರ ಸಾಹಿತ್ಯದ ಪ್ರೀತಿ ಮತ್ತು ಪುಸ್ತಕದ ಹುಚ್ಚು ಎಂಥೆಂಥ ಶ್ರೀಮಂತರಲ್ಲೂ ವಿದ್ಯಾವಂತರಲ್ಲೂ ಇರದುದು ನನಗೆ ಗೊತ್ತಿರುವ ಅಪ್ಪಟ ಸತ್ಯ. ಆಗೀಗ ನನ್ನಂಥವರ ಬಲವಂತಕ್ಕೆ ಕನ್ನಡದ ಪೂರ್ವ ಸೂರಿಗಳನ್ನು ಓದುವ ಸಂಕಲ್ಪ ಮಾಡುತ್ತಾರಾದರೂ ಅವರ ನಿತ್ಯದ ಜಂಜಡದಲ್ಲಿ ಅದು ಸಾಧ್ಯವಿಲ್ಲದ ಸಂಗತಿ. ಆದರೂ ಅವರ ಛಲ ಮತ್ತು ತಿಳಿಯಲೇ ಬೇಕೆನ್ನುವ ಉಮೇದು ಅವರು ನಿತ್ಯ ಸ್ತುತಿಸುವ ಲಂಕೇಶರ ಓದಿನಿಂದ ಅವರು ಪಡೆದಿದ್ದಾರೆ. ಲಂಕೇಶ್ ಯೂನಿವರ್ಸಿಟಿ ಸೃಷ್ಟಿಸಿದ ಅಸಂಖ್ಯಾತ ಪದವೀಧರರಲ್ಲಿ ಕೊಟ್ರೇಶ್ ರ್ಯಾಂಕ್ ಪಡೆದ ಮೇಧಾವಿ. ಜೊತೆಗೇ ಗೆಳೆಯ ಸ್ವಭಾವ ಕೋಳಗುಂದ ಅವರ ಜೊತೆಯಲ್ಲಿ ಬಿಡುವಾದಾಗಲೆಲ್ಲ “ಕುರಿತೋದದೆಯುಂ” ಎನ್ನುವ ಸಾಹಿತ್ಯ ಸಂಬಂಧೀ ಚಟುವಟಿಕೆ, ಕನ್ನಡದ ಪೂರ್ವ ಸೂರಿಗಳನ್ನೂ ಸಮಕಾಲೀನ ಕೃತಿಗಳ ಪರಾಮರ್ಶೆಯ ತರಗತಿಗಳನ್ನೂ ಆಯೋಜನೆ ಮಾಡುವ ಅವರ ಗುಣ ಗ್ರಾಹೀ ಚಿಂತನೆಯ ದ್ಯೋತಕ. ಕೊಟ್ರೇಶರ ಕವಿತೆಗಳನ್ನು ಕುರಿತು ಹೇಳಬೇಕಾದ ಈ ಮಾತುಗಳಲ್ಲಿ ಅವರ ವೈಯುಕ್ತಿಕ ವಿವರ ಕುರಿತ ಪರಿಚಯದ ಮಾತುಗಳ ಅವಶ್ಯಕತೆ ಏಕೆಂದರೆ ಇವತ್ತು ಬರೆಯುತ್ತಿರುವ ಹಲವು ಖ್ಯಾತ ನಾಮರ ಹಿಂದೆ ಅವರ ವಿದ್ಯಾಭ್ಯಾಸ, ಅವರ ಕೆಲಸ, ಮಾಧ್ಯಮ ಮತ್ತು ಮಾಧ್ಯಮ ಮಿತ್ರರುಗಳ ಜೊತೆಗಿನ ಒಡನಾಟವೇ ಕವಿಯ ರಚನೆಗಳಿಗಿಂತ ಮುಖ್ಯವಾಗುತ್ತಿರುವ ಕಾಲ ಘಟ್ಟದಲ್ಲಿ ಈ ಯಾವುದರ ಸಂಪರ್ಕವೂ ಸಾಧ್ಯತೆಗಳೂ ಇಲ್ಲದ ನಿರ್ವಾತದಲ್ಲಿ ತನಗನಿಸಿದ್ದನ್ನು ನಿರ್ಭಿಡೆಯಿಂದ ಬರೆಯುವ ಕೊಟ್ರೇಶ್ ಮುಖ್ಯರಾಗುತ್ತಾರೆ. ಇಲ್ಲಿನ ಪದ್ಯಗಳಿಗೂ ಫೇಸ್ಬುಕ್ ಎಂಬ ಸಾಮಾಜಿಕ ಜಾಲತಾಣ ಜಾಗ ಕೊಟ್ಟು ಸಲಹಿದೆ. ಆದರೆ ಸಾಮಾನ್ಯವಾಗಿ ಫೇಸ್ಬುಕ್ ಸಲಹುತ್ತಿರುವ ಲೈಕುಗಳಿಂದಲೂ ಮತ್ತು ಓದುವ ಮೊದಲೇ ಒತ್ತಿಬಿಡುವ ಇಮೋಜಿಯ ಸಿದ್ಧ ಚಿತ್ರಗಳಿಂದಲೂ ಈ ಪದ್ಯಗಳು ಪಾರಾಗಿವೆ. ಅಂದರೆ ಬಲವಂತ ಬಸಿರು ಮತ್ತು ಅನಿವಾರ್ಯ ಹೆರಿಗೆಗಳಿಂದ ಈ ಪದ್ಯಗಳು ಬಚಾವಾಗಿವೆ. ಸಹಜತೆ ಮತ್ತು ಕವಿಸಮಯ ಇಲ್ಲಿನ ಬಹುತೇಕ ಕವಿತೆಗಳ ಹಿಂದೆ ಇರುವುದು ಶೃತವಾಗುವ ಅಂಶ. ಅದಕ್ಕಾಗಿ ಕೊಟ್ರೇಶ್ ಅವರನ್ನು ಅಭಿನಂದಿಸುತ್ತೇನೆ. ಬಹುತೇಕ ಪದ್ಯಗಳ ಮೊದಲ ಸಾಲು ಅಥವ ಶೀರ್ಷಿಕೆಗಳು ಈ ಕವಿಯ ವಿಸ್ತಾರವಲ್ಲದಿದ್ದರೂ ಮೇಲ್ನೋಟದ ಪೂರ್ವ ಸೂರಿಗಳ ಓದನ್ನು ದಾಖಲಿಸಿವೆ. ಯಾರನ್ನೂ ಓದದೆ ತಮಗೆ ತೋಚಿದ್ದೇ ಪ್ರಪಂಚ ಅನ್ನುವವರ ನಡುವೆ ಈ ಕವಿ ಭರವಸೆ ಹುಟ್ಟಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಕವಿತೆಗಳಲ್ಲಿ ದೌರ್ಬಲ್ಯ ಇಲ್ಲವೇ ಇಲ್ಲ ಎಂದು ಅರ್ಥವಲ್ಲ. ಭವಸಾರ ಅನ್ನುವ ಪದ್ಯ ಹೀಗೆ ಮೊದಲಾಗುತ್ತೆ. ” ನಕ್ಷತ್ರಗಳ ಮೋಹದಲ್ಲಿ ಹಗಲನ್ನು ಮರೆತು ಬಿಟ್ಟೆ..” ಆರಂಭವೇನೋ ಕುತೂಹಲ ಹುಟ್ಟಿಸುತ್ತದೆ, ನಿಜ. ಆದರೆ ಅದನ್ನು ಪದ್ಯದುದ್ದಕ್ಕೂ ವಿಸ್ತರಿಸುವುದರಲ್ಲಿ ಏನ್ನೆಲ್ಲ ಪುರಾಣ ಇತಿಹಾಸದ ಪ್ರತಿಮೆಗಳ ಮೆರವಣಿಗೆ ಇದ್ದೂ ಒಂದರ್ಥದಲ್ಲಿ ಬದುಕಿನ ಮಿತಿಯನ್ನು ಇದು ಹೇಳುತ್ತಿದ್ದರೂ ಒಟ್ಟೂ ರಚನೆ ಸಮಗ್ರೀಕರಣದ ಹಂತದಲ್ಲಿ ಇನ್ನೂ ಪಕ್ವವಾಗಬೇಕೆನ್ನಿಸುತ್ತದೆ. “ಹಣತೆ ಮತ್ತು ನನ್ನ ದಾರಿ” ಎನ್ನುವ ಕವಿತೆ ಮೇಲ್ನೋಟಕ್ಕೆ ಜಿ.ಎಸ್.ಎಸ್ ಅವರ ಬಹು ಚರ್ಚಿತ ಹಣತೆ ಹಚ್ಚುತ್ತೇನೆ ನಾನು…ಕವಿತೆಯ ನೆರಳಲ್ಲಿ ನಡೆದರೂ ಕವಿ ತನ್ನ ಮೇಲೆ ತಾನೇ ಇಟ್ಟುಕೊಂಡಿರುವ ಭರವಸೆಯ ಬೆಳಕು. ” ಮಗಳು ಮತ್ತು ಮಳೆ” ಆಕಾರದಲ್ಲಿ ಸಣ್ಣದಿದ್ದರೂ ಆಶಯದಲ್ಲಿ ದೊಡ್ಡದು. ಮಳೆಯ ಮುದದಿಂದ ಪ್ರೇರಿತ ಕವಿ ಕವಿತೆಯ ಹುನ್ನಾರದಲ್ಲಿ ಇರುವಾಗ ಕವಿಯ ಮಗಳು ಅವನ ತೊಡೆಯೇರಿ ಕೂರುತ್ತಾಳೆ. “ಬರೆಯುವ ಹಾಳೆ ಬೋರಲಾಯಿತು ಆದರೆ ಕವಿತೆಗೆ ಮಳೆಯಂತಹ ಜೀವ ತಂದಳು” ಎಂದು ಮುಕ್ತಾಯವಾಗುವ ಈ ರಚನೆ ನನಗೆ ತುಂಬ ಇಷ್ಟವಾಯಿತು. ಆದರೆ ಇಂಥದೇ ನಿರೀಕ್ಷೆಯಲ್ಲೇ “ಮಳೆಯ ಮಾರನೆ ದಿನ” ಶೀರ್ಷಿಕೆಯ ಪದ್ಯವನ್ನು ಸೀರಿಯಸ್ ಆಗಿ ಓದಿದರೆ ತಲೆ ಬರಹದಿಂದ ಆಕರ್ಷಿಸಿದರೂ ಸುಮ್ಮ ಸುಮ್ಮನೇ ತುರುಕಿದ ಪ್ರತಿಮೆಗಳ ಭಾರದಲ್ಲಿ ಕುಸಿದಿದೆ. “ಕೂಡಲ ಸಂಗಮದಲ್ಲಿ ಕೃಷ್ಣ ಮಲಪ್ರಭೆಯರು ಹರಿಯುತ್ತಿಲ್ಲ ಅಳುತ್ತಿದ್ದಾರೆ” ಎಂದು ಆರಂಭವಾಗುವ “ಅಣ್ಣಾ” ಎನ್ನುವ ರಚನೆ ಮೇಲ್ನೋಟಕ್ಕೆ ಹೊಸ ಆಶಯ ಮತ್ತು ಬಂಡಾಯದ ಚಿಂತನೆಯ ಹೊಳಹು ಅನ್ನಿಸುತ್ತದೆಯಾದರೂ ಒಟ್ಟೂ ಕವಿತೆ ಇನ್ನೂ ಮಾಗಿಸಿದ್ದಿದ್ದರೆ……ಅನ್ನಿಸುವುದು ಸತ್ಯ. ಸುಮ್ಮನೇ ಮೂಡಿಸಿದ ಆದರೆ ಬೇಕೆಂತಲೇ ತಂದು ಹೇರಿದ ಸಂಗತಿಗಳ “ರಾತ್ರಿ ಮೂರರ ಮಳೆ” ಟ್ಯಾಬ್ಲಾಯಿಡ್ ಪತ್ರಿಕೆಗಳು ಪ್ರಕಟಿಸುವ ಕಾವ್ಯ ಎಂದು ಅವು ಬಿಂಬಿಸುವ ಲಕ್ಷಣವುಳ್ಳ ರಚನೆ. ಕೃಷ್ಣನನ್ನು ನೆಪವಾಗಿಸಿಕೊಂಡು ರಾಧೆಯ ಅಳಲೆಂದು ಬಿಂಬಿಸಿದ ರಚನೆಗಳ ನಡುವೆ ಈ ಕವಿಯ “ಪ್ರಿಯೇ” ಎನ್ನುವ ಕವಿತೆ ಕುತೂಹಲ ಹುಟ್ಟಿಸುತ್ತದೆ. ನೀಲಾಕಾಶದ ಸಾಕ್ಷಿಯಲ್ಲಿ ಕೃಷ್ಣನ ಮುಗಿಯದ ಪ್ರೇಮದ ಪುಟಗಳಲ್ಲಿ ಒಂದಾಗೋಣ ಅನ್ನುವ ಕವಿಯ ನಿಲುವು ಒಪ್ಪಿತವೇ! ಅಯ್ಯಪ್ಪನ ದೇಗುಲಕ್ಕೆ ಹೆಣ್ಣು ಮಕ್ಕಳ ಪ್ರವೇಶ ನಿರಾಕರಣೆಯನ್ನು ಬಲವಾಗಿ ವಿರೋಧಿಸುವ ಶಕ್ತಿ ” ಇರುಮುಡಿಯ ಸಹಜತೆ” ಕವಿತೆಯದು. ಆದರೆ ಬರಿಯ ಘೋಷಣೆ ಕವಿತೆಯಾಗದು ಎನ್ನುವ ಲೋಕೋತ್ತರದ ವಿಮರ್ಶೆ ಕೂಡ ಈ ರಚನೆಯ ಸಮಗ್ರತೆಯ ದೃಷ್ಟಿಯಿಂದ ಪರಿಶೀಲಿಸಿದರೆ ಉಳಿಯುವುದು ಮತ್ತದೇ ಗಿರಿಗೆ ಕೇಳಿಸದ ನರಿಯ ಕೂಗು. “ನೀಲಿ” ಶೀರ್ಷಿಕೆಯ ಪದ್ಯ ಕೃಷ್ಣನನ್ನು ಕುರಿತ ಚಿಂತನೆಯ ಜೊತೆಜೊತೆಗೇ ಕವಿ ಸ್ವಂತದ ಬದುಕಿನ ರಿಂಗಣಗಳನ್ನು ತುಲನೆ ಮಾಡಿಕೊಳ್ಳುತ್ತಲೇ ಮತ್ತೊಂದು ಹೊರಳಿಗೆ ತಯಾರಾಗುವ ಪರಿ ಆಕರ್ಷಣೀಯ. “ರಂಗ” ಎನ್ನುವ ಕವಿತೆಯಲ್ಲಿ ಕವಿ ಧ್ಯಾನಿಸುವುದು ದೇವರನ್ನೋ ಅವನ ಅಸ್ತಿತ್ವವನ್ನೋ ಅಥವ ಬದುಕಿನ ರಂಗ ಸ್ಥಳದ ಪರಿಕರವಾಗಿಯೇ ಬಳಸಲಾಗುವ ದೇವರ ಅಥವ ಸೃಷ್ಟಿಯ ಮಾಯಾ ಲೋಕವನ್ನೋ? ಅದು ಆ ಕ್ಷಣ ಓದುಗನಿಗೆ ನಿಲುಕುವ ಬೌದ್ಧಿಕತೆಯ ಮಟ್ಟದ್ದು. ನಿಜಕ್ಕೂ ಇಂಥ ರಚನೆಗಳೇ ಕಡಿಮೆಯಾಗುತ್ತಿರುವ ಹೊತ್ತಲ್ಲಿ ಈ ಕವಿಯ ಈ ರಚನೆ ನನಗಂತೂ ಹೆಚ್ಚು ಆಪ್ತವಾಗಿಸಿದ ಕವಿತೆಗಳಲ್ಲೊಂದು. ಮುಂದುವರೆದ ಕವಿ “ಓಂಕಾರ” ಪದ್ಯದಲ್ಲಿ ಹೇಳ ಹೊರಟದ್ದು ಏನು ಅನ್ನುವುದಕ್ಕೆ ಪದ್ಯದ ಕಡೆಯ ಸಾಲು “ಓಂಕಾರ…. ಓಂಕಾರ/ ಶ್ರೀಕಾರಕೆ ಜಯಕಾರ” ಓದಿದರೆ ಅವರ ನಿಲುವು ಸ್ಪಷ್ಟವಾಗುತ್ತದೆ. “ಹತ್ತನೇ ಕ್ಲಾಸಿನ ಹುಡುಗ” ವರ್ತಮಾನದ ವಿದ್ಯಾಭ್ಯಾಸ ಕ್ರಮವನ್ನು ಲೇವಡಿ ಮಾಡುತ್ತಿದ್ದರೂ ಅದಕ್ಕೆ ಪರ್ಯಾಯ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿ ಬರಿಯ ಹೇಳಿಕೆಯೇ ಆಗಿ ಉಳಿಯುವುದು ವಿಷಾದಕರ. ಇವರ ಪದ್ಯಗಳಲ್ಲಿ ನನ್ನನ್ನು ಹೆಚ್ಚು ಕಾಡಿದ್ದು ಮತ್ತು ನಿಜದ ಪದ್ಯದ ಗಂಧ ಪೂಸಿದ್ದು “ಹಕ್ಕಿ-ಹಿಕ್ಕೆ”. ಈ ಕವಿ ಉಪನಿಷತ್ತುಗಳನ್ನು ಓದಿದ್ದಾರೋ ಇಲ್ಲವೋ ಅರಿಯೆ. ಆದರೆ ಉಪನಿಷತ್ತುಗಳ ರೀತಿಯಲ್ಲಿ ಸಣ್ಣದೊಂದು ವಿಚಾರದ ಮೂಲಕ ಮಹತ್ತಾದುದನ್ನು ಕಾಣಿಸುವ ಪ್ರಯತ್ನ ಈ ಕವಿತೆಯಲ್ಲಿದೆ. ಅಲ್ಲಿರುವ ಯಾವುದೋ ಸಾಲನ್ನು ಇಲ್ಲಿ ಉದ್ಧರಿಸಿ ಭೇಷ್ ಅನ್ನುವುದಕ್ಕಿಂತ ಇಡೀ ಪದ್ಯವನ್ನು ಮತ್ತೊಮ್ಮೆ ಮಗದೊಮ್ಮೆ ಓದುವುದು ಸೂಕ್ತ ಎನ್ನಿಸುತ್ತದೆ. ಆದರೂ ಪದ್ಯದ ನಡುವೆ ಹೇಗೋ ನುಸುಳಿರುವ ” ಉಗಿ ಮುಖಕ್ಕೆ” ಅನ್ನುವ ಥರದ ಪ್ರಯೋಗಗಳು ಕಾವ್ಯ ರಚನೆಯ ಅಲಂಕೃತ ಕರ್ಮಕ್ಕೆ ಲಕ್ಷಣವೆನ್ನಿಸುವುದಿಲ್ಲ. ಅದೊಂದು ಸಾಲು ಇಲ್ಲದಿದ್ದರೂ ಕವಿತೆ ಬದುಕ ಭಂಗುರತೆಯ ಮುಖಕ್ಕೆ ಉಗಿಯುತ್ತದೆ! “ನಗ್ನ” ಪದ್ಯ ಕೂಡ ಈ ಕವಿಯು ಪ್ರಾಯಶಃ ನಿತ್ಯ ಅಲೋಚನೆಯ ಆವಿರ್ಭಾವ. “ನಿನ್ನ ಧ್ಯಾನದ ಯೋಗದಲಿ ನನ್ನಿರವನ್ನು ನಾನೇ ಮರೆ ತು ಹಟ ಮುನಿಯಂತೆ ಇಲ್ಲಿ ನಗ್ನನಾಗಿದ್ದೇನೆ” ಎಂದು ಆರಂಭವಾಗುವ ಕವಿತೆ, “ತೀಡಿದಂತೆಲ್ಲ ಘಮ ಘಮಿಸುವ ಗಂಧದ ಕೊರಡು ನಾನು” ಅನ್ನುವ ಸ್ವ ವಿಮರ್ಶೆಗೆ ಒಡ್ಡಿಕೊಳ್ಳುತ್ತ ಕಡೆಗೆ “ಇಲ್ಲಿ ನಿನ್ನದೇ ಗಂಧ, ಅಂದ ಆನಂದ ಪ್ರೇಮಾನಂದವು ನಿನ್ನ ಕಾಯುತ್ತ ಕುಳಿತಿದೆ” ಎಂದು ಕೊನೆಯಾಗುವಾಗ ಈ ಕವಿ ಇಷ್ಟೂ ಹೊತ್ತು ಧ್ಯಾನಿಸಿದ್ದು ಏನು? ಯಾಕಾಗಿ ಈ ಕನಲಿಕೆ ಎನ್ನುವುದರ ಸ್ಪಷ್ಟತೆ ದಕ್ಕುತ್ತದೆ. “ಪ್ರಾರ್ಥನೆ” ಹೆಸರಿನ ಈ ಕವಿಯ ಪದ್ಯಕ್ಕೂ ಅಡಿಗರ ಇದೇ ಹೆಸರಿನ ಬಹು ಖ್ಯಾತಿಯಾದ ಪದ್ಯಕ್ಕೂ ಹೆಸರಿನ ಕಾರಣದಿಂದ ಸಾಮ್ಯತೆ ಇದೆ. ಎರಡೂ ಪದ್ಯಗಳಲ್ಲಿ ಕವಿ ತನ್ನ ಮಿತಿಯನ್ನು ಹೇಳಿಕೊಳ್ಳುತ್ತಲೇ ಮಹತ್ತಾದುದನ್ನು ದಕ್ಕಿಸಿಕೊಳ್ಳುವ ಆರ್ತತೆಯನ್ನು ಯಶಸ್ವಿಯಾಗಿ ಹೇಳಿವೆ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೂ ಈ ಕವಿ ನಮ್ಮ ಪೂರ್ವ ಸೂರಿಗಳನ್ನು ಮತ್ತೆ ಮತ್ತೆ ಅಭ್ಯಾಸ ಮಾಡಿದರೆ ಇನ್ನೂ ನಿಕಷಕ್ಕೆ ಒಡ್ಡಿ ಕೊಳ್ಳಬಹುದು ಅನ್ನುವುದು ಸಹಜ ಆಶಯ. “ರಾತ್ರಿ ತುಂಬಾ ನೆನಪುಗಳು ಬಣ್ಣ ಬಣ್ಣ ತುಂಬಿದ ಸಿನಿಮಾ ಕಪ್ಪು ರಾತ್ರಿ, ಕೆಂಪು ಲೈಟು” (ಬಾರೆ ಕಟ್ಟು) ಪದ್ಯದಲ್ಲಿ ಇವರು ಧ್ಯಾನಿಸುವ ವಸ್ತು ವಿಶೇಷಗಳ, ವ್ಯಕ್ತಿ ಸಂಬಂಧಗಳ ತುಲನೆ ಬಹುತೇಕ ಇವರ ಇತರ ರಚನೆಗಳಲ್ಲೂ ಹಾಸು ಹೊಕ್ಕಾಗಿ ಬರುವ ಸಾಮಾನ್ಯ ಪರಿಕರಗಳು. ಸಾಮಾನ್ಯ ಸಂಗತಿಗಳ ಮೂಲಕವೇ ಅಸಾಮಾನ್ಯವಾದುದನ್ನು ಕಲ್ಪಿಸುವ ರಮಿಸುವ ಮತ್ತು ತನ್ನ ಆಲೋಚನಾ ಕ್ರಮದ ಮುನ್ನಡೆ. ಪ್ರಾಯಶಃ ಈ ಇದೇ ಕಾರಣಕ್ಕೇ ಇಂಥ ಅಸಾಮಾನ್ಯ ಚಿಂತನೆಯ ಮಾರ್ಗಕ್ಕೆ ಈ ಕವಿ ಹೆಚ್ಚು ಇಷ್ಟವಾಗುತ್ತಾರೆ. ಪ್ರಸ್ತುತ ಪದ್ಯ ಕೊನೆಯಾಗುವ ರೀತಿಯನ್ನು ಗಮನಿಸಿ; “ದನ ಕಾಯುವ ಹುಡುಗನೊಬ್ಬ ದಿನವೂ ಗೂಳಿ ಹತ್ತುವುದನ್ನು ನೋಡುತ್ತಾನೆ ಅಲ್ಲಿ; ಅವನಿಗೆ ಅದು ಬದುಕು:
“ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು Read Post »
ಅಂಕ(ಣ)ದ ಪರದೆ ಸರಿಯುವ ಮುನ್ನ.
ಸಂಗಾತಿ ಸಾಹಿತ್ಯ ಪತ್ರಿಕೆಯನ್ನು ಅದರ ನಿಲುವನ್ನೂ ಹಲವು ಗೆಳೆಯರು ಗಮನಿಸಿರಬಹುದು. ಸದಾ ಹೊಸ ಆಲೋಚನೆಗಳಿಗೆ ಮತ್ತು ಆಧುನಿಕ ಕಾಲದ ಸಂವೇದನೆಗೆ ವೇದಿಕೆಯಾಗಿರ ಬಯಸುವ ಸಂಗಾತಿ ಸ್ಥಾಪಿತ ಹಿತಾಸಕ್ತಿಗಳನ್ನು ಮತ್ತು ಬರಿಯ ತೋರಿಕೆಯನ್ನು ಎಂದಿಗೂ ಎತ್ತಿಹಿಡಿದಿಲ್ಲ. ಅವರು ಇವರು ಎಂದಲ್ಲ. ಫೇಸ್ಬುಕ್ ಈ ನಡುವೆ ಬಹುತೇಕರ ನಿರಂತರ ನಿಲುದಾಣ, ತಂಗುದಾಣ, ಹಾಗೂ ಅಭ್ಯಾಸದ ಮೈದಾನವೂ ಆಗಿದೆ. ಹಲವರನ್ನು ಫಾಲೋ ಮಾಡುತ್ತ ಅವರ ರಚನೆಗಳನ್ನು ಗಮನಿಸಿದರೆ ದಿನದಿಂದ ದಿನಕ್ಕೆ ಪ್ರಭೃದ್ಧರಾಗುತ್ತಿರುವ ಹಲವರಿದ್ದಾರೆ. ಇನ್ನು ಒಂದೋ ಎರಡೋ ಸಂಕಲನ ತಂದೂ ಫೇಸ್ಬುಕ್ಕಲ್ಲಿ ಕ್ರಿಯಾಶೀಲರಾಗಿ ಇರುವ ಹಲವರಿದ್ದಾರೆ. ಇಂಥ ಎಲೆ ಮರೆಯ ಪ್ರತಿಭೆಗಳನ್ನು ಅವರು ಪ್ರಕಟಿಸಿರುವ ಕವಿತೆಗಳ ಅವಲೋಕನದ ಜೊತೆಗೆ ಪರಿಚಯಿಸುವ ಇರಾದೆಯಿಂದ ಹುಟ್ಟಿದ್ದು ಈ ಅಂಕಣ “ಹೊಸ ದನಿ – ಹೊಸ ಬನಿ”. ಈ ಶೀರ್ಷಿಕೆ ಹೊಳೆದದ್ದು ಕೂಡ ಆಕಸ್ಮಿಕವೇನಲ್ಲ. ಖ್ಯಾತ ಕವಿ ಶ್ರೀ ಜಿ ಕೆ ರವೀಂದ್ರ ಕುಮಾರ್ ಬೆಂಗಳೂರು ಆಕಾಶವಾಣಿ ನಿರ್ದೇಶಕರಾಗಿ ನಿಯುಕ್ತರಾದಾಗ ಅವರ ಜೊತೆಯಾದವರು ಮತ್ತೊಬ್ಬ ಪ್ರತಿಭೆ ಡಾ.ಎನ್.ರಘು. ಅದ್ಭುತ ಸಂಗೀತ ಪ್ರತಿಭೆಯ ರಘು ಮತ್ತು ಜಿ ಕೆ ಆರ್ ಜೋಡಿ ನಾಡಿನಾದ್ಯಂತ ಇರುವ ಕವಿಗಳಿಂದ ತಿಂಗಳಿಗೊಂದು ಹೊಸ ಕವಿತೆ ಬರೆಸಿ ಅದಕ್ಕೆ ಅದ್ಭುತ ಸಂಗೀತ ಹೊಂದಿಸಿ ಭಾವಗೀತೆ ಆಗಿಸಿ ಜನಪ್ರಿಯ ಕಾರ್ಯಕ್ರಮ ಮಾಡತೊಡಗಿದರು. ಈ ಹಿಂದೆಯೂ ಆಕಾಶವಾಣಿ “ನವಸುಮ” “ತಿಂಗಳ ಹೊಸಹಾಡು” ಎಂದು ಖ್ಯಾತ ಕವಿಗಳ ರಚನೆಗಳಿಗೆ ಸಂಗೀತ ಜೋಡಿಸಿ ಹಾಡಾಗಿ ಪ್ರಸಾರ ಮಾಡುತ್ತಿತ್ತು. ಎರಡು ಬಾರಿ ನನ್ನ ಕವಿತೆಗಳಿಗೆ ಈ ಅವಕಾಶ ಸಿಕ್ಕು ನನ್ನ ಕವಿತೆಗಳೂ ಹಾಡಾಗಿ ಬಿತ್ತರವಾದುವು. ಆ ಕಾರ್ಯಕ್ರಮದ ಶೀರ್ಷಿಕೆ “ಹೊಸ ದನಿ – ಹೊಸಬನಿ” ಎಂದೇ ಆಗಿತ್ತು. ಹೆಸರೇ ತಿಳಿಸುವಂತೆ ಸುಗಮ ಸಂಗೀತ ಕ್ಷೇತ್ರಕ್ಕೆ ಹೊಸ ದನಿಯನ್ನು ಸೇರಿಸಿ ಆ ಕವಿಯ ಕವಿತೆಗೆ ರಾಗ ಸಂಯೋಜಿಸಿ ತಿಂಗಳ ಹಾಡಾಗಿ ಪ್ರಸಾರ ಮಾಡುತ್ತಿದ್ದ ಆ ಕಾರ್ಯಕ್ರಮ ತುಂಬ ಜನಪ್ರಿಯವೂ ಆಯಿತು. ಅದೇ ಶೀರ್ಷಿಕೆಯಲ್ಲೇ ಇವತ್ತು ಫೇಸ್ಬುಕ್ಜಿನಲ್ಲಿ ಬರೆಯುತ್ತಿರುವ ಕವಿತೆಗಳನ್ನು ಗುರ್ತಿಸಿ ತನ್ಮೂಲಕ ಕವಿಯ ಸಾಹಿತ್ಯಕ ಸಾಧನೆಯನ್ನು ಓದುಗರಿಗೆ ತಿಳಿಸುವುದು ಈ ಅಂಕಣದ ಉದ್ದೇಶ. ಕಳೆದ ಮೂವತ್ತೈದು ವರ್ಷಗಳಿಂದಲೂ ಕವಿತೆಯ ಸಾಗಂತ್ಯದಲ್ಲಿ ಬದುಕು ಕಂಡುಕೊಂಡ ನನಗೆ ಹೊಸಕಾಲದ ಅದರಲ್ಲೂ ಹೊಸ ಮಾಧ್ಯಮಗಳಾದ ಫೇಸ್ಬುಕ್ ಮತ್ತು ವಾಟ್ಸ್ ಅಪ್ ಗುಂಪುಗಳಲ್ಲಿ ಹಾಗೇ ವೈಯುಕ್ತಿಕ ಪೇಜಲ್ಲಿ ಬರೆಯುತ್ತಿರುವ ಹಲವರ ಬಗ್ಗೆ ಖುಷಿ ಮತ್ತು ಕೆಲವರ ಬಗ್ಗೆ ಸಂತಾಪಗಳೂ ಇವೆ. ಹೊಗಳಿಕೆಗೋ ಲೈಕಿಗೋ ಅಥವ ತುಂಬ ಈಸಿಯಾದ ಇಮೋಜಿಗಳಿಗೋ ಇರುವ ಪ್ರಾಧಾನ್ಯತೆ ವಿಮರ್ಶೆಯ ನಿಜದ ಮಾತುಗಳಿಗೆ ಪ್ರೋತ್ಸಾಹಕ್ಕೆ ಹೇಳಿದ ತಿದ್ದುಪಡಿಗಳಿಗೆ ಇಲ್ಲದುದನ್ನು ಕಂಡಾಗ ಬೇಸರವೂ ಆಗಿದೆ. ಕಾವ್ಯಕೇಳಿ, ಕಾಜಾಣ, ಪದ್ಯ, ಮೊದಲಾದ ತಾಣಗಳು, ಹಾಗೇ ಅವಧಿ, ಕೆಂಡಸಂಪಿಗೆ, ಸಂಗಾತಿ, ಸಂಪದ ಮೊದಲಾದ ವೆಬ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಕವಿತೆಗಳೂ ಇದುವರೆಗೂ ನಂಬಿದ್ದ ಸಾಹಿತ್ಯ ಚರಿತ್ರೆ ಕಟ್ಟಿಕೊಟ್ಟಿದ್ದ ಮಿತಿ ಮತ್ತು ಪಾತಳಿಯನ್ನು ವಿಸ್ತರಿಸಿ ಹಾಗೇ ಕೆಡವಿ ಹೊಸದನ್ನು ಕಟ್ಟುತ್ತಿರುವ ಈ ಕಾಲದ ಎಲ್ಲ ನಿಜ ಕವಿಗಳನ್ನೂ ಅಭಿನಂದಿಸುತ್ತೇನೆ. ಈ ಕುರಿತು ಸದ್ಯ ಅನಿಸಿದ್ದನ್ನು ವಿಸ್ತರಿಸಿ ಈ ಲೇಖನ. ನಮ್ಮಲ್ಲಿ ಬಹಳ ಜನ ಕವಿತೆಯೆಂದರೆ ಕವಿಗೋಷ್ಠಿಯೆಂದರೆ ಮೂಗು ಮುರಿಯುತ್ತೇವೆ. ಕವಿತೆಯನ್ನು ಓದುವುದು ಅಥವ ಬರೆಯುವುದೆಂದರೆ ಮಾಡಲು ಬೇರೇನೂ ಕೆಲಸವಿಲ್ಲದವರು ಹೊಂಚಿಕೊಂಡ ಕೆಲಸವೆಂದು ಅನ್ನುವವರೂ ಇದ್ದಾರೆ. ಆದರೂ ಸಾಹಿತ್ಯ ಸಮ್ಮೇಳನಗಳ ಮುಖ್ಯ ಆಕರ್ಷಣೆಯೇ ಕವಿಗೋಷ್ಠಿಗಳಾಗಿರುವುದೂ ವಿಶೇಷವೇ. ಪಂಡಿತರಿಗಷ್ಟೇ ಕವಿತೆ ಪಾಮರರಿಗೆ ಏಕದರ ಗೊಡವೆ ಅನ್ನುವವರೂ ಇದ್ದಾರೆ. ಇನ್ನು ಕವಿಯಲ್ಲದವರು ಅಥವ ಕವಿತೆಯ ಗೊಡವೆ ಬೇಡದೆಯೂ ಕವಿತೆಯ ಜೊತೆಗೆ ಅನಿವಾರ್ಯವಾಗಿ ಬೆರೆಯುವವರೆಂದರೆ ಅದನ್ನು ಪಠ್ಯವಾಗಿ ಓದಲೇಬೇಕಿರುವ ವಿದ್ಯಾರ್ಥಿಗಳು ಮತ್ತು ಅದನ್ನವರಿಗೆ ಪಾಠ ಹೇಳಬೇಕಾದ ಗುರುತರ ಜಾವಾಬ್ದಾರಿ ಹೊಂದಿರುವ ಅಧ್ಯಾಪಕರು. ಕವಿತೆಯನ್ನು ಪಾಠ ಮಾಡುವುದು ಎಂದರೆ ಅಧ್ಯಾಪಕರಿಗೆ ಹಿಂಜರಿಕೆ.ವರ್ಷಾವಧಿ ಪರೀಕ್ಷೆಯಲ್ಲಿ ಕವಿತೆಗಳ ಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವುದೆಂದರೆ ವಿದ್ಯಾರ್ಥಿಗಳಿಗೆ ಅಂಜಿಕೆ. ಅರ್ಥವಾಗದು ಎಂಬ ಅಂಜಿಕೆ ಹುಡುಗರಿಗೆ. ಅರ್ಥವಾಗದಿದ್ದರೆ ಎಂಬ ಅಂಜಿಕೆ ಅಧ್ಯಾಪಕರಿಗೆ. ಓದಿದ ಕವಿತೆ ಅರ್ಥವಾಗದಿದ್ದರೆ ನಮ್ಮ ಅಹಂಕಾರಕ್ಕೆ ಪೆಟ್ಟು. ಅದಕ್ಕೇ ನಮಗೆ ಕವಿತೆಯ ಉಸಾಬರಿಯೇ ಬೇಡ ಎಂದು ಮುಖ ತಿರುಗಿಸುವ ಮಂದಿ ಬಹಳ. ಕವಿತೆಯೊಂದನ್ನು ಓದಿದೊಡನೆಯೇ ಅದು ಅರ್ಥವಾಗಲೇ ಬೇಕು ಎಂದು ದಯವಿಟ್ಟು ಹಠಮಾಡಬೇಡಿ. ಕವಿತೆಯನ್ನು ಅರ್ಥದ ಗೂಟಕ್ಕೆ ಕಟ್ಟಬೇಡಿ. ಅದನ್ನು ಸುಮ್ಮನೆ ವಿಹಾರಕ್ಕೆ ಬಿಡಿ. ಅಂಗಳದಲ್ಲಿ ಆಡಬಯಸುವ ಪುಟ್ಟ ಮಗುವಿನಂತೆ ಕವಿತೆ ಆರಾಮಾಗಿ ನಿಮ್ಮ ಮನದ ಅಂಗಳದಲ್ಲಿ ಆಡಿಕೊಳ್ಳಲಿ. ಕವಿತೆಯ ಭಯವನ್ನು ಗೆಲ್ಲಲು ನಾವು ಆರಂಭದಲ್ಲಿ ಕೈಗೊಳ್ಳಬೇಕಾದ ಸುಲಭ ಉಪಾಯವಿದು. ಸುಮ್ಮನೆ ಓದುತ್ತಾ ಹೋದರೆ, ಓದುತ್ತಲೇ ಹೋದರೆ ಹೇಗೆ ಈಗ ತಾನೇ ಓಡಾಡಲು ಪ್ರಾರಂಭಿಸಿರುವ ಮಗು ತನ್ನ ಆಟದಲ್ಲಿ ಒಂದು ಲಯ ಕಂಡೀತೋ ಹಾಗೆಯೇ ನೀವೂ ಕವಿತೆಯನ್ನು ಕಾಣಬೇಕು. ಕವಿತೆ ಹೇಗೆ ನಡೆಯುವುದು, ಹೇಗೆ ನಗುವುದು, ಹೇಗೆ ಅತಾರ್ಕಿಕವನ್ನು ಪಲುಕುವುದು ಗಮನಿಸಿ. ಕವಿತೆ ಎಂದರೆ ಮೊದಲು ಗಮನಿಸ ಬೇಕಾದದ್ದು ಅದನ್ನು ಕವಿಯು ಹೇಗೆ ಗುನುಗುನಿಸುವ ಮಾತುಗಳನ್ನು ಹಿಡಿದು ನೇಯ್ದು ಮಾಲೆ ಮಾಡಿದ್ದಾನೆ ಎಂಬುದನ್ನು ಓದಿನ ಮೂಲಕವೇ ದಕ್ಕಿಸಿಕೊಳ್ಳಬೇಕು. ಕವಿತೆಯ ಗ್ರಹಿಕೆ ಎಂಬುದು ಕವಿತೆಯ ಶಬ್ದ ಸಾಮಗ್ರಿಯಿಂದ ನೀವೇ ಸ್ವಂತ ಕಟ್ಟಿಕೊಂಡ ಗ್ರಹಿಕೆ ಎಂಬುದನ್ನು ಮರೆಯದಿರಿ. ಈ ಪದ್ಯದ ಇನ್ನೊಬ್ಬ ಓದುಗ ಭಿನ್ನವಾದ ಬೇರೆ ಒಂದು ಗ್ರಹಿಕೆಯನ್ನೇ ತನ್ನ ಓದಿನಿಂದ ಕಟ್ಟಿಕೊಂಡರೆ ನೀವು ಆತಂಕಗೊಳ್ಳಬೇಕಿಲ್ಲ. ಸದ್ಯಕ್ಕೆ ಇದು ನಿಮ್ಮ ಕಾವ್ಯ ಗ್ರಹಿಕೆ. ಮುಂದೆ ನಿಮ್ಮ ಓದು ಪರಿಷ್ಕಾರಗೊಂಡಂತೆ ಕವಿತೆ ಬೇರೊಂದು ವಿಭಿನ್ನವಾದ ಗ್ರಹಿಕೆಯನ್ನೇ ಕಟ್ಟಿಕೊಳ್ಳಬಲ್ಲುದು. ಕವಿತೆ ಒಂದೇ; ಆದರೆ ಅದರ ಗ್ರಹಿಕೆಗಳು ಅನಂತ. ಈ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಹೊಸ ಕಾವ್ಯಾರ್ಥಿಗಳು ತಮ್ಮ ಕಾವ್ಯ ಶೋಧವನ್ನು ಮುಂದುವರೆಸಲಿ. ಕವಿತೆಯೆಂಬುದು ನಿರಂತರ ವಿಕಸನಶೀಲವಾದ ಒಂದು ಜೈವಿಕ ಭಾಷಾನುಸಂಧಾನ ಎಂಬ ಅರಿವು ನಿಮಗಿರಲಿ. ಅದಕ್ಕಿಂತ ಮುಖ್ಯ ನಮ್ಮ ಪೂರ್ವಸೂರಿಗಳನ್ನೂ ಹಾಗೇ ಸಮಕಾಲೀನರನ್ನೂ ಎಷ್ಟು ಓದಿಕೊಂಡಿದ್ದೀರಿ ಎನ್ನುವುದು ಮುಖ್ಯ. ಸಾಹಿತ್ಯ ಚರಿತ್ರೆಯ ಅದು ನಡೆದ ಬಂದ ದಾರಿಯ ಬಗ್ಗೆ ಕೊಂಚವಾದರೂ ತಿಳುವಳಿಕೆ ನಾವು ನಡೆಯುತ್ತಿರುವ ದಾರಿಗೆ ತೋರುಬೆರಳು ಅನ್ನುವುದನ್ನು ಮರೆಯದಿರೋಣ. ಹಲವು ಯುವ ಬರಹಗಾರರು ಪರಂಪರೆಯನ್ನು ಧ್ಯಾನಿಸದೇ ಸುಮ್ಮನೇ ಮುಂದುವರಯುತ್ತಿರುವುದನ್ನೂ ಓದಿನಿಂದ ಬಲ್ಲೆ. ನಿಜಕ್ಕೂ ಭಾಷೆಯ ಸೊಗಸು, ಅದರ ನಿರ್ಮಿತಿಯ ವಿನ್ಯಾಸ ಹಾಗೂ ಮಿತಿ ಅರ್ಥವಾಗುವುದೇ ನಿರಂತರದ ಓದಿನಿಂದ. ಅನ್ಯರನ್ನು ಓದದೇ ನಾವು ನಮ್ಮ ಕಾವ್ಯ ಬೆಳೆಯಲಾರದು. ಸದ್ಯದ ಕಾವ್ಯ ಇನ್ನೂ ತನ್ನ ದಾರಿಯನ್ನು ಸ್ಪಷ್ಟಗೊಳಿಸಿಕೊಳ್ಳಬೇಕಿದೆ. ನವೋದಯದ ರಮ್ಯತೆ ಕಳೆದು ನವ್ಯದ ಪ್ರತಿಮೆ ರೂಪಕಗಳೂ ಸವೆದು ಬಂಡಾಯದ ದನಿ ಉಡುಗಿಹೋಗಿರುವ ಸಂದರ್ಭದಲ್ಲಿ ಕಾವ್ಯವೆಂದರೆ ಆ ಕ್ಷಣ ಅನ್ನಿಸಿದ್ದನ್ನು ತತ್ ಕ್ಷಣವೇ ಬರೆದು ಪ್ರಕಟಿಸುವ ಸಾಮಾಜಿಕ ಜಾಲತಾಣಗಳ ಪುಟಗಳಾಗಿ ಬದಲಾಗುತ್ತಿದೆ. ಇದು ಗಮನಿಸಬೇಕಾದ ಮುಖ್ಯ ಸಂಗತಿ. ಕವಿತೆ ಬರೆಯುವವರೆಂದರೆ ಅದ್ಯಾಪಕರೇ ಎಂಬ ಹುಸಿಯನ್ನು ವರ್ತಮಾನದ ಕವಿಗಳು ಅಳಿಸಿಹಾಕಿದ್ದಾರೆ. ಬದುಕಿನ ಹಲವು ಸ್ತರಗಳಿಂದ ಅನುಭವಗಳಿಂದ ಹುರಿಗೊಂಡ ಅನೇಕ ಮನಸ್ಸುಗಳು ಆಧುನಿಕ ಕಾವ್ಯ ಪ್ರಕಾರವನ್ನು ಕಟ್ಟುತ್ತಿವೆ. ತಮಗನ್ನಿಸಿದ್ದನ್ನು ನಿರ್ಭಿಡೆಯಿಂದ ಸ್ಪಷ್ಟವಾಗಿ ಹೇಳುವ ಸಿದ್ಧ ಸಾಮಗ್ರಿ ಈಕಾಲದ ಕವಿಗಳಿಗಿರುವುದು ವಿಶೇಷ. ಹೊಸ ದನಿ- ಹೊಸ ಬನಿಯ ಮೂಲಕ ಎಲ್ಲರನ್ನೂ ಗುರುತಿಸುತ್ತೇವೆ, ಬೆನ್ನು ತಟ್ಟುತ್ತೇವೆ ಎನ್ನುವುದಷ್ಟೇ ಈ ಅಂಕಣದ ಉದ್ದೇಶವಲ್ಲ. ಆದರೆ ನಿಜಕ್ಕೂ ಚೆನ್ನಾದ ಕವಿತೆಗಳನ್ನು ಬರೆಯುತ್ತಿದ್ದರೂ ಬೇರೆ ಬೇರೆ ಕಾರಣಗಳಿಂದಾಗಿ ಪತ್ರಿಕೆಗಳಲ್ಲಿ ಅಷ್ಟಾಗಿ ಕಾಣಿಸಿ ಕೊಳ್ಳದ ಕವಿಗಳನ್ನು ಪರಿಚಯಿಸುವುದು ಮುಖ್ಯ ಉದ್ದೇಶ. ಇದರ ಜೊತೆಗೆ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಣೆಗಾಗಿ ಕಾದು ಕಾದು ಕಡೆಗೆ ಫೇಸ್ಬುಕ್ಕಲ್ಲಿ ಪ್ರಕಟಿಸಿ ಭೇಶ್ ಅನ್ನಿಸಿಕೊಂಡ ಹಲವರನ್ನು ನಾವು ಬಲ್ಲೆವು. ಫೇಸ್ಬುಕ್ ಗೆಳೆಯಲ್ಲಿ ವಿನಂತಿ. ಸ್ಟೇಟಸ್ಸಿನಲ್ಲಿ ಎರಡು ಸಾಲು ಬರೆದೋ, ಅವರಿವರ ಸಾಲು ಎಗರಿಸಿ ತಮ್ಮದೆಂದೇ ಹೇಳುವವರು ಬೇಕಿಲ್ಲ ಉಳಿದಂತೆ ಚೆಂದಾಗಿ ಬರೆಯುತ್ತಿದ್ದೇನೆ ಅಂತ ಅನ್ನಿಸಿದವರು ಸಂಗಾತಿಗೆ ತಮ್ಮ ಹತ್ತು ಹನ್ನೆರಡು ಕವಿತೆಗಳ ಗುಚ್ಛದೊಂದಿಗೆ ನಿಮ್ಮ ಭಾವಚಿತ್ರ ಮತ್ತು ಸ್ವಪರಿಚಯದೊಂದಿಗೆ ಕಳಿಸಿ. ನಿಮ್ಮ ಕವನ ಗುಚ್ಛದಲ್ಲಿ ಫೇಸ್ಬುಕ್ಕಲ್ಲಿ ಪ್ರಕಟಿಸಿದ ದಿನಾಂಕಗಳನ್ನು ನಮೂದಿಸಿ ಅಥವ ಆ ಪದ್ಯಗಳ ಲಿಂಕ್ ಲಗತ್ತಿಸಿ. ಕವಿತೆಗಳು ಕನಿಷ್ಠ ಹದಿನೈದು- ಇಪ್ಪತ್ತು ಸಾಲಾದರೂ ಇರಲಿ. ಪ್ರತಿ ಗುರುವಾರ ಉದ್ದೇಶಿತ ಅಂಕಣ ಪ್ರಕಟವಾಗಲು ಓದುಗರ, ಕವಿಗಳ ಸಹಕಾರವೂ ಮುಖ್ಯ. *********************************** ಲೇಖಕರ ಬಗ್ಗೆ: ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ.
ಅಂಕ(ಣ)ದ ಪರದೆ ಸರಿಯುವ ಮುನ್ನ. Read Post »






