ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಸಾಮಾನ್ಯ ಸಂಗತಿಗಳಲ್ಲೇ ಅಸಾಮಾನ್ಯ ಬೆರಗನ್ನು ಹಿಡಿದಿಡುವ ಉಮಾ ಮುಕುಂದರ ಕವಿತೆಗಳು . ಸಂಗಾತಿಗಾಗಿ ಈ ಅಂಕಣವನ್ನು ಆರಂಭಿಸಿದಾಗ ಫೇಸ್ಬುಕ್ಕಿನ ಕವಿತೆಗಳ ವಿಶ್ಲೇಷಣೆ ಅಷ್ಟೇನೂ ಕಷ್ಟವಾಗದು ಮತ್ತು ನನ್ನ ಇಷ್ಟೂ ದಿನದ ಕಾವ್ಯದ ಓದು ಅದನ್ನು ಪೊರೆಯುತ್ತದೆಂದೇ ಅಂದುಕೊಂಡಿದ್ದೆ. ಆದರೆ ಫೇಸ್ಬುಕ್ಕಿನಲ್ಲಷ್ಟೇ ಮೊದಲು ಪ್ರಕಟಿಸಿ ಆ ಮಾಧ್ಯಮದ ಮೂಲಕವೇ ಬೇರೆಡೆಯೂ ಖ್ಯಾತರಾದ ಅನೇಕ ಹೆಸರುಗಳು ಆನಂದ ಮತ್ತು ಆಶ್ಚರ್ಯವನ್ನು ಉಂಟು ಮಾಡುವುದರ ಜೊತೆಗೇ ಈವರೆವಿಗೂ ಪತ್ರಿಕೆಗಳಲ್ಲಿ ಪ್ರಕಟಿಸದೆಯೂ ತಮ್ಮ ಆಳದನುಭವಗಳಿಗೆ ಕವಿತೆಯ ರೂಪ ಕೊಡುವುದಕ್ಕಷ್ಟೇ ಸೀಮಿತವಾಗದೇ ಇಷ್ಟೂ ದಿನದ ಕಾವ್ಯ ಪರಂಪರೆಯ ಮೂಲಕ ಅರಿತ ಕಾವ್ಯದ ನಡಿಗೆಗೆ ಹೊಸದೇ ದಿಕ್ಕು ತೋರುತ್ತಿರುವ ಮತ್ತು ಫೇಸ್ಬುಕ್ ಕವಿಗಳನ್ನು ಲಘುವಾಗಿ ಕಾಣದೆ ಅವರನ್ನೂ ಮುಖ್ಯ ವಾಹಿನಿಯ ಜೊತೆಗೇ ಪರಿ ಗಣಿಸಲೇಬೇಕೆಂಬ ಎಚ್ಚರವನ್ನೂ ಆ ಅಂಥ ಹೆಸರುಗಳು ಎಚ್ಚರಿಸಿವೆ. ಆ ಅಂಥ ಹೆಸರುಗಳ ಪೈಕಿ ಶ್ರೀಮತಿ ಉಮಾ ಮುಕುಂದರ ಹೆಸರು ಅತಿ ಮುಖ್ಯವಾದುದು. ಓದಿನ ಮೂಲಕ ಅರಿತು ಕವಿತೆಗಳೆಂದು ಯಾವುದನ್ನು ನಾವು ಸಾಮಾನ್ಯವಾಗಿ ಅಂದುಕೊಂಡಿದ್ದೇವೋ ಹಾಗಿರದೆ  ಮೇಲ್ನೋಟಕ್ಕೆ ಸಾಮಾನ್ಯ ಸಾಲುಗಳಂತೆ ಕಂಡರೂ ಆಳದಾಳದಲ್ಲಿ ಬೆಡಗು ಬೆರಗು ಮತ್ತು ಹೊಳಹನ್ನು ಉಮಾ ಮುಕುಂದರು ಈತನಕ ಪ್ರಕಟಿಸಿರುವ ಫೇಸ್ಬುಕ್ ಕವಿತೆಗಳು ಇಟ್ಟುಕೊಂಡಿವೆ. ಉಮಾ ಮುಕುಂದ ಈವರೆಗೂ ಫೇಸ್ಬುಕ್ಕಿನಲ್ಲಿ ಪ್ರಕಟಿಸಿದ ೩೬ ಕವಿತೆಗಳನ್ನು ಅವಧಿಯ ಜಿ.ಎನ್.ಮೋಹನರ “ಬಹುರೂಪಿ” ಪ್ರಕಾಶನವು “ಕಡೇ ನಾಲ್ಕು ಸಾಲು” ಹೆಸರಿನಲ್ಲಿ ಪ್ರಕಟಿಸಿದೆ. ಸಂಕಲನದ ನಾಡಿಮಿಡಿತವನ್ನು ಅದ್ಭುತವಾಗಿ ಹಿಡಿದ ಹೆಚ್. ಎಸ್. ರಾಘವೇಂದ್ರರಾವ್ ಅವರ ಮುನ್ನುಡಿ ಮತ್ತು ಇಲ್ಲಿನೆಲ್ಲ ಪದ್ಯಗಳ ಉಸಿರಲ್ಲೂ ಇರುವ ಬಗೆಬಗೆಯ ಏರಿಳಿತಗಳನ್ನು ವೈದೇಹಿಯವರ ಬೆನ್ನುಡಿ ದಾಖಲಿಸಿ ಉಳಿದವರು ಇನ್ನು ಈ ಕುರಿತು ಬರೆಯಲು ಸಾಧ್ಯವೇ ಇಲ್ಲದಂಥ ಅದ್ಭುತ ನೋಟವನ್ನು ಈ ಇಬ್ಬರೂ ಕೊಟ್ಟಿದ್ದಾರೆ. ಈ ಪುಸ್ತಕಕ್ಕೆ ಹಾಸನದ ಮಾಣಿಕ್ಯ ಪ್ರಕಾಶನದ “ಕಾವ್ಯ ಮಾಣಿಕ್ಯ” ಪ್ರಶಸ್ತಿಯೂ ಲಭಿಸಿದೆ. ನಿತ್ಯ ದಂದುಗದ ಸಂತೆಯಲ್ಲಿ ಯಾವ ಕಾರಣಕ್ಕೂ ಕಳೆದು ಹೋಗ(ಲೇ)ಬಾರದೆಂಬ ಅತಿ ಎಚ್ಚರದ ಸೂಕ್ಷ್ಮತೆಯ ಜೊತೆಗೇ ಎಂಥ ರಿಕ್ತತೆಯಲ್ಲೂ ಸಂವೇದನಾಶೀಲತೆಯನ್ನು ಬಿಟ್ಟುಕೊಡದೆ ಕಾಪಿಟ್ಟುಕೊಳ್ಳಲೇ ಬೇಕೆಂಬ ಹೆಬ್ಬಯಕೆಯ ಈ ಕವಿಯ ಕವಿತೆಗಳು ಸ್ವಗತದಂತೆ ಮತ್ತು ಮನುಷ್ಯತ್ವದ ಮೇರು ಯಾಚ(ತ)ನೆಗಳಂತೆ ಸರಳವಾದ ಕವಿತೆಗಳಾಗಿ ಅರಳಿವೆ ಮತ್ತು ಮೇಲ್ನೋಟದ ಯಾವ ಸಂಕೀರ್ಣತೆಯನ್ನು ತೋರದೆಯೂ ಆ ಸಂಕೀರ್ಣತೆಯನ್ನೇ ಆಭರಣವನ್ನಾಗಿ ಹೊದ್ದ ಅನುಪಮ ಅನುಭವದ ಸಾರ ಸರ್ವಸ್ವವೇ ಆಗಿ ಬದಲಾಗಿವೆ. ಬದುಕ ಪಯಣದ ನಿರಂತರದ ಹಾದಿಯಲ್ಲೂ ನಿತ್ಯ ಹೊಸತನ್ನೇ ಕಾಣುವ ಬಯಸುವ ಈ ಕವಿ ಮನಸ್ಸು ಅನುಭವದಿಂದ ಮಾಗಿದ ನಿಜದ ಅನುಭಾವವೇ ಆಗಿ ಬದಲಾಗಿದೆ. ಉದಾಹರಣೆಗಾಗಿ “ದೈನಿಕ” ಪದ್ಯದ ಪೂರ್ಣ ಪಾಠವನ್ನು ಗಮನಿಸಿ; ದೈನಿಕ ಅದೇ ಸೂರ್ಯ ಅದೇ ಹಗಲು ಬೆಳಕಿನಾಟ ಬೇರೆ ಬೇರೆ ಅದೇ ಗಿಡ ಅದೇ ಮರ ಎಲೆ ಎಲೆಯ ನವಿರು ಬೇರೆ ಅದೇ ಹಕ್ಕಿ ಅದೇ ಹಾಡು ಪಾಡು ಮಾತ್ರ ಬೇರೆ ಬೇರೆ ಅದೇ ನಡಿಗೆ ಅದೇ ಜನ ಉಸಿರ ಭಾರ ಬೇರೆ ಬೇರೆ ಅದೇ ಅಡುಗೆ ಅದೇ ಸಾರು ಅಂದಂದಿನ ರುಚಿ ಬೇರೆ ಅದೇ ಉಡುಗೆ ಅದೇ ತೊಡುಗೆ ತನುಭಾವ ಬೇರೆ ಬೇರೆ ಅದೇ ನಾನು ಅದೇ ಅವನು ಅನುದಿನದ ಸಾಂಗತ್ಯ ಬೇರೆ ಬೇರೆ ಬೇರೆ. ಪದ್ಯದ ಬಗ್ಗೆ ಬರೆಯುವಾಗ ಅಥವ ಮಾತನಾಡುವಾಗ ಕವಿಯೊಬ್ಬನ ಕವಿತೆಯ ಯಾವುದೋ ಒಂದು ಸಾಲನ್ನು ಕೋಟ್ ಮಾಡುತ್ತ ತನ್ನ ಹೇಳಿಕೆಗಳನ್ನು ಆ ವಿಮರ್ಶಕ/ ಬರಹಗಾರ ಸಮರ್ಥಿಸಿಕೊಳ್ಳುವುದುಂಟು. ಆದರೆ ಈಗ ಮೇಲೆ ಕಂಡಿರಿಸಿದ ಪದ್ಯದ ಯಾವ ಸಾಲನ್ನು ಹೇಳಿದರೂ ಇಡೀ ಪದ್ಯ ಹೇಳಲು ತವಕಿಸುತ್ತಿರುವ ಸಂಗತಿ “ಬೇರೆ ಬೇರೆ ಬೇರೆ” (different, root & totally inter depending) ಅನ್ನುವುದನ್ನು ಮುಟ್ಟಿಸಲಾಗುವುದೇ ಇಲ್ಲ ಮತ್ತು ಅನಿವಾರ್ಯವಾಗಿ ಇಡೀ ಪದ್ಯವನ್ನು ಓದದೇ ಇದ್ದರೆ ಕವಿ ಹೇಳ ಹೊರಟ ಅನುಭೂತಿ ಓದುಗನನ್ನು ತಟ್ಟುವುದೇ ಇಲ್ಲ. ಈ ಇಂಥ ಕಸುಬುದಾರಿಕೆ, ಹೇಳಿಕೆ ಅಥವ ಘೋಷಣೆಗಳ ಮೂಲಕವೇ ಮೊರೆಯುವ ಸಾಮಾನ್ಯ ಕವಿಗೆ ಸಾಧ್ಯವಿಲ್ಲದ ಸಂಗತಿ. ಈ “ತಿಳಿ”ವಳಿಕೆ ಅಗಾಧ ಓದು ಮತ್ತು ಬದುಕಿನ ಆಳ ಅನುಭವಗಳಿಂದ ದಕ್ಕಿದ ಮತ್ತು ಸಾಮಾನ್ಯ ಸಂಗತಿಗಳಿಂದಲೂ “ಅರಿವ”ರೀತಿಯಿಂದ ಮಾಗಿದ ಪದ್ಯಗಳೇ ಆಗಿವೆ. ಹಾಗೆಂದು ಇವು ಮುಕ್ತಕಗಳೂ ಅಲ್ಲ. ಉಪನಿಷತ್ತುಗಳ ಪರಿಚಯ ಇರುವವರಿಗೆ ಅಲ್ಲಿ ಬರುವ ಪ್ರಶ್ನೋತ್ತರಗಳ ಪರಿ ಅರಿತವರಿಗೆ ಇಲ್ಲಿನ ಎಲ್ಲ ಕವಿತೆಗಳೂ ಕವಿತೆಯ ವೇಷ ಧರಿಸಿದ ಅನುಭವ ಪಾರಮ್ಯದ ಬಿಕ್ಕುಗಳು ಎಂದು ಹೇಳಿದರೆ ಈ ಕವಿಗೆ ಸಮಾಧಾನವಾದೀತು. ಏಕೆಂದರೆ ಈ ಕವಿತೆಗಳಲ್ಲಿ ಕೃತ್ರಿಮತೆಯಾಗಲೀ, ಜಿದ್ದಿಗೆ ಬಿದ್ದು ಕವಿತೆ ಬರೆಯಲೇಬೇಕೆಂಬ ಆವುಟವಾಗಲೀ ಅಥವ ಬೇರೆ ಯಾರೂ ಹೇಳದ ಸಂಗತಿಯನ್ನು ತಾನು ಹೇಳಿದ್ದೇನೆ ಎಂಬ ಬಿಂಕವಾಗಲೀ ಎಳ್ಳಷ್ಟೂ ಇಲ್ಲವೇ ಇಲ್ಲ. ” ದಾರಿ” ಹೆಸರಿನ ಪದ್ಯದ ಕಡೆಯ ಸಾಲುಗಳನ್ನು ಗಮನಿಸಿ. ಬಾಗಿ ನೆಲದ ಮೇಲೆ ಚೆಲ್ಲಾಡಿದ್ದ ಕಾಸ ಒಂದೊಂದನ್ನೇ ಹೆಕ್ಕಿ ಮೆಲ್ಲನೆ ಅವಳ ಹೆಗಲು ಬಳಸಿ ಅಂಗೈಯಲ್ಲಿಟ್ಟಾಗ ಥಟ್ಟನೆ ನನ್ನ ಕೈಯನ್ನು ಗಟ್ಟಿ ಹಿಡಿಯುತ್ತಾಳೆ ಇಬ್ಬರ ಉಸಿರೂ ಬೆರೆತು ನಿಟ್ಟುಸಿರಾಗುತ್ತದೆ ಮೆಲ್ಲನೆ ಕೈ ಸಡಿಲಿಸಿ ಮನೆ ದಾರಿ ಹಿಡಿದಾಗ ಹೆಜ್ಜೆಗಳು ವಜ್ಜೆಯಾಗುತ್ತವೆ ಮನುಷ್ಯ ಮನುಷ್ಯರ ಸಾಂಗತ್ಯದ ದ್ವೈತ ಅದ್ವೈತಗಳ ಮತ್ತು ಅಸ್ಮಿತೆ- ಅನುಸಂಧಾನದ  ತಾಕಲಾಟಗಳು  ‘ಬಯಕೆ’, ‘ಹೀಗೊಂದು ಬೆಳಗು’ ‘ನೆನಪು’ ‘ನಾನೂ ನೀನೂ’ ‘ನಡೆ’ ಇತ್ಯಾದಿ ಪದ್ಯಗಳಲ್ಲಿವೆ. ಇಷ್ಟು ಹೇಳಿದ ಮಾತ್ರಕ್ಕೆ ಸಹಿಸದೇ ಈ ಕವಿಯ ಮೂಲ ಆಶಯವೇನು ಅವರು ಬದುಕಿನ ಬಗೆಗೆ ಕೊಡುವ ವ್ಯಾಖ್ಯೆಯೇನು ಎಂದೂ ರಿಪಿರಿಪಿ ಮಾಡುವವರು ಖಂಡಿತ “ಆ ದಿನ ಈ ದಿನ” ಕವಿತೆಯ ಈ ಸಾಲನ್ನು ಗಮನಿಸಬೇಕು; ಆ ದಿನ.. ಈ ದಿನ.. ಒಬ್ಬೊಬ್ಬರಿಗೂ ಒಂದೇ ದಿನ!!!! ಎಲ್ಲ ದಿನ ಎಲ್ಲರ ದಿನವಾದ ದಿನ.. ಸುದಿನ. ಇದಕ್ಕಿಂತ ಉತ್ತಮವಾದ ಸರ್ವರನ್ನೂ ಒಳಗೊಳ್ಳುವ ಸುದಿನವನ್ನು ಬಯಸುವ ಕವಿ ಮನಸ್ಸು ಇನ್ನು ಹೇಗೆ ತಾನೇ ಲೌಕಿಕದ ತರ ತಮಗಳನ್ನು ಸಹಿಸೀತು? ಹಾಗಾಗಿಯೇ ತೀರ ಸಾಮಾನ್ಯರಲ್ಲೂ ಇರುವ ಅಸಾಮಾನ್ಯ ಸಂಗತಿಗಳ ಶೋಧ ಇವರ ಕಾವ್ಯ ಕಸುಬಿನ ಮೂಲ ಸ್ರೋತ. ಹಾಗೆಂದು ಸ್ವಂತದ ಶೋಧವೂ ಕೂಡ ಬಲು ಮುಖ್ಯವಾದ ಸಂಗತಿಯೇ. ಅದನ್ನು ಈ ಪದ್ಯದಲ್ಲಿ ಗಮನಿಸಿ; ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬವೇ ನಾನಲ್ಲ ಎನಿಸುತ್ತಿದೆ ನನಗೆ ಇನ್ನು ಫೋಟೋದಲ್ಲಿರುವ ನಾನು ನಾನಾಗಲು ಹೇಗೆ ಸಾಧ್ಯ? ಈ ಇಂಥ “ತಿಳಿ”(ಳು ಅಲ್ಲವೇ ಅಲ್ಲ)ವಳಿಕೆ ಬರುವುದು ನಿರಂತರವಾಗಿ ಕವಿ ಸಾಮಾಜಿಕನಾದಾಗ ಮಾತ್ರ ಸಾಧ್ಯ ಆಗುವ ಮಾತು. ಎಲ್ಲರಿಗೂ ತಿಳಿದಂತೆ ಶ್ರೀಮತಿ ಉಮಾ ಬಾಳ ಸಂಗಾತಿ ಮುಕುಂದ್ ಪ್ರಖ್ಯಾತ ಫೋಟೋಗ್ರಾಫರ್. ಅವರ ಕಪ್ಪು ಬಿಳುಪಿನ ಛಾಯಾಚಿತ್ರಗಳಿಗೆ ಸೆರೆ ಸಿಕ್ಕದ ಖ್ಯಾತನಾಮರು ವಿರಳಾತಿವಿರಳ. ” ಮುಖ ಮುದ್ರೆ” ಅವರ ಛಾಯಾಚಿತ್ರಗಳ ವಿಶೇಷ ಆಲ್ಬಂ. ಛಾಯಾ ಚಿತ್ರ ತೆಗೆಯುವುದು ಕೂಡ ಸವಾಲಿನ ಕೆಲಸವೇ ಹೌದು. ಒಂದು ಮಿಂಚಿನ ಕ್ಷಣದಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನೇ ಇಡಿಕರಿಸಿದಂಥ ಫೋಸು ಸಿಕ್ಕಬಹುದು. ಆ ಕ್ಷಣವನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯುವುದೇ ಛಾಯಾಗ್ರಾಹಕನ ಸಾಹಸ. ಆದರೆ ಈ ಕ್ಷಣ ತನ್ನದು ಎಂದು ಅವನಿಗೆ ಗೊತ್ತಿರಬೇಕಿದ್ದರೆ ತಾನು ಫೋಟೋ ತೆಗೆಯುವ ವ್ಯಕ್ತಿಯ ಗುಣ, ಸ್ವಭಾವ, ಚಿಂತನಾ ವೈಶಿಷ್ಟ್ಯಗಳ ಬಗ್ಗೆ ಆತ ವಿಶೇಷವಾಗಿ ತಿಳಿದುಕೊಂಡಿರಬೇಕಾಗುತ್ತದೆ. ಮಾತ್ರವಲ್ಲದೆ ತನ್ನ ಗುರಿಯ ಬಗ್ಗೆ ಖಚಿತತೆ ಆತನಲ್ಲಿ ಇರಬೇಕಾಗುತ್ತದೆ. ಇದೆಲ್ಲದರಲ್ಲೂ ಮುಕುಂದರಲ್ಲಿ ತಜ್ಞತೆ ಇರುವುದರಿಂದಲೇ “ಮುಖ ಮುದ್ರೆ”ಯಲ್ಲಿರುವ 50 ಮಂದಿ ಸಾಹಿತಿಗಳ, ರಂಗಕರ್ಮಿಗಳ ಮತ್ತು ಚಿತ್ರ ರಂಗಗಳಲ್ಲಿ ದುಡಿದ ಮಹನೀಯರ ಚಿತ್ರಗಳ ಜೊತೆಗೆ ಅವರ ಕುರಿತ ಟಿಪ್ಪಣಿ ಕೂಡ ಈ ಪುಸ್ತಕದಲ್ಲಿ ಇರುವುದು ವಿಶೇಷ. ಸೂಕ್ಷ್ಮತೆ ಮತ್ತು ವ್ಯಕ್ತಿಯೊಬ್ಬರ ಸಹಜತೆಯನ್ನು ಚಿತ್ರಕ್ಕಿಳಿಸುವ ವ್ಯವಧಾನ ಮುಕುಂದರಿಂದ ಉಮಾ ಕಲಿತರೋ ಅಥವಾ ಮುಕುಂದರ ಜೊತೆಗೇ ಇರುತ್ತಾ ಇರುತ್ತಾ ಅವರ ಪಟಗಳಿಗೆ ಆಹ್ವಾನಿತ ಗಣ್ಯರನ್ನು ರೂಪದರ್ಶಿಯಾಗಿಸುವ ಕಾಯಕದಲ್ಲಿ ಉಮಾ ಕಂಡುಕೊಂಡ ಅನುಭವವೆ ಹೀಗೆ ಬದಲಾಯಿತೋ ಈ ದಂಪತಿಗಳೇ ಹೇಳಬೇಕು. ಹೆಗ್ಗೋಡಿನ ನೀನಾಸಂ ಶಿಬಿರ, ಬೆಂಗಳೂರಿನ ಬಹುತೇಕ ಸಾಹಿತ್ಯಕ ಕಾರ್ಯಕ್ರಮಗಳು, ಡಾ.ಎಚ್ಚೆಸ್ವಿ ನಡೆಸಿ ಕೊಡುತ್ತಿದ್ದ ” ಅಭ್ಯಾಸ” ತರಗತಿಗಳಲ್ಲಿ ಈ ದಂಪತಿಗಳನ್ನು ಕಾಣದೇ ಉಳಿದವರಿಲ್ಲ. ಹಾಗೆಂದ ಮಾತ್ರಕ್ಕೆ ದಾಂಪತ್ಯದ ಏಳು ಬೀಳುಗಳು, ಸರಸ ವಿರಸಗಳು ಇವರನ್ನು ಬಾಧಿಸದೇ ಬಿಡದು. ಅದನ್ನು ಕವಿ “ನಡೆ” ಅನ್ನುವ ಹೆಸರಿನ ಪದ್ಯದಲ್ಲಿ  ಹೀಗೆ ಹೇಳುತ್ತಾರೆ; ನಡೆ ಎಲ್ಲೋ ಹುಟ್ಟಿದ ಅವನು ಮತ್ತೆಲ್ಲೋ ಹುಟ್ಟಿದ ನಾನು ಹೇಗೋ ಬೆಸೆದು ಬಂಧ ಶುರುವಾದ ಪಯಣ ಸಾಗಿದೆ ಮೂರು ದಶಕಗಳಿಂದ ಅಂದ ಮಾತ್ರಕ್ಕೆ ನಾವೇನು ಅಪರೂಪವಲ್ಲ ಸಿಟ್ಟು ಸೆಡವು, ಸಣ್ಣತನ ಎಲ್ಲವೂ ಇದ್ದು ಶರಂಪರ ಜಗಳವಾಡಿ ಮುಖ ತಿರುಗಿಸಿ ಮಾತು ಬಿಟ್ಟು ವಾರ ಕಳೆವಷ್ಟರಲ್ಲಿ ಸಾಕೆನಿಸಿ, ‘ಟೋಕಿಯೋ ಸ್ಟೋರಿ’ ಸಿನೆಮಾ ನೋಡೋಣವೇ ಇಂದು ಮತ್ತೆ? ಎಂದು ಕರೆದಾಗ ಅವನು, ಸೊರಗಿ ಸುಕ್ಕಿಟ್ಟ ಶುಂಠಿ ಕೊಂಬೊಂದು ಕೊನರಿದೆ ಕಾಣು ಬಾ.. ಎಂದು ಕರೆದಾಗ ನಾನು ಮರೆತು ಬಿಡುತ್ತೇವೆ ಮಾತು ಬಿಟ್ಟದ್ದನ್ನು ಮುಂದಾಗಿರಬಹುದೊಮ್ಮೆ ಅವನು ಮತ್ತೊಮ್ಮೆ ನಾನು. ಸಾಲ, ಸೋಲುಗಳಲ್ಲಿ ರೋಗ ರುಜಿನಗಳಲ್ಲಿ ದುಃಖ ದುಮ್ಮಾನದಲಿ ಹಮ್ಮು ಬಿಮ್ಮುಗಳಳಿದು ಮುಂದುವರಿದಿದೆ ನಡಿಗೆ ಹೊರಳಿ ನೋಡುತ್ತೇವೆ ಕಂಡ ಕನಸುಗಳನ್ನು ನೆನೆನೆನೆದು ನಗುತ್ತೇವೆ ಹಾರುಗುದುರೆಯನೇರಿ ಹಾರಾಡಿ ಬಿದ್ದದ್ದನ್ನು. ವಸಂತಗಳುರುಳಿ.. ಕೂದಲು ನೆರೆತು ಮಂಡಿ ಸವೆದರೂ ನಡೆಯುತ್ತಿದ್ದೇವೆ ನಿಂತರೂ ಆಗಾಗ ಜೊತೆಗೇ. ರಾಮಾನುಜನ್ ತಮ್ಮ ಯಾವುದೋ ಸಂಕಲನದ ಬಗ್ಗೆ ಮಾತನಾಡುತ್ತ ಆಡುತ್ತ “ಇದು ಯಾಕೋ ಮಾತು ಅತಿಯಾಯಿತು” ಎನ್ನುತ್ತಾರೆ. ಹಾಗೆ ನೀವು ಹೇಳುವ ಮೊದಲು ಮತ್ತು ಸೀಮಿತ ಚೌಕಟ್ಟಿನ ಈ ಅಂಕಣದ ಬರಹವನ್ನು ಎಂದಿನ ಹಾಗೆ ಕವಿಯ ನಾಲ್ಕೋ ಐದೊ ಕವಿತೆಗಳನ್ನು ಆಯ್ದು ಓದಿ ಎಂದು ಹೇಳುವ ಬದಲು ಉಮಾ ಮುಕುಂದರ ಫೇಸ್ಬುಕ್ ಅಕೌಂಟನ್ನು ತೆರೆದು ಅವರ ಎಲ್ಲ ಕವಿತೆಗಳನ್ನು ಓದಿಕೊಂಡರೆ ಸಿಕ್ಕುವ ಅನುಭೂತಿ ನಿಮ್ಮದೂ ಆಗಲಿ ಎಂದು ಹೇಳುತ್ತಲೇ ಹಾಗೆ ಪುರುಸೊತ್ತು ಇಲ್ಲದವರು ಓದಲೇ ಬೇಕಾದ ಐದು ಕವಿತೆಗಳನ್ನು ಇಲ್ಲಿ ಕೊಟ್ಟಿದ್ದೇನೆ. ಮತ್ತು “ಕಡೇ ನಾಲ್ಕು ಸಾಲು” ಸಂಕಲನವು ಬಹುರೂಪಿ ಅಂತರ್ಜಾಲ ಮಳಿಗೆಯಲ್ಲಿ ಮಾರಾಟಕ್ಕೆ ಇದೆ ಎಂದೂ ಸೂಚಿಸಬಯಸುತ್ತೇನೆ ———————————————————————– . ಉಮಾ ಮುಕುಂದ್ ಅವರ ಕವಿತೆಗಳು ೧. ಅಲ್ಲೂ.. ಇಲ್ಲೂ.. ಅಂದೊಂದು ದಿನ ಅವಳು                                            ಜೀನ್ಸು, ಸ್ಲೀವ್ ಲೆಸ್ ಟಾಪು ತೊಟ್ಟು ಕೂದಲಿಳಿಬಿಟ್ಟು ಬೀಸಿ ನಡೆದವಳು ಥಟ್ಟನೆ ಹಿಂತಿರುಗಿ ತುರುಬುಕಟ್ಟಿ ಸೀರೆಯುಟ್ಟು ದೊಡ್ಡ ಕುಂಕುಮ ತೊಟ್ಟಳು ಇನ್ನೊಂದು ದಿನ ಅವರು ಇದ್ದಕ್ಕಿದ್ದಂತೆ ಬಂದಿಳಿದಾಗ                             ನೀರುಳ್ಳಿ, ಬೆಳ್ಳುಳ್ಳಿ, ಮಸಾಲೆ ಬೆರೆಸಿ ಖಮ್ಮನೆ ಮಾಡಿಟ್ಟ ಖಾದ್ಯವ ಮುಚ್ಚಿಟ್ಟು ಮೆಣಸು ಜೀರಿಗೆ ಸಾರು ಮಾಡುಣಿಸಿದಳು ಮತ್ತೊಂದು ದಿನ ಇವರು ಹಾಡು ಹಾಡೆಂದು ಕಾಡಿದಾಗ ಒತ್ತರಿಸಿ ಬಂದ ‘ನಾನು ಬಳ್ಳಿಯ ಮಿಂಚ’ ಕತ್ತಲ್ಲೆ ಕತ್ತರಿಸಿ ‘ರಾಮ ಮಂತ್ರವ..’ ಹಾಡಿ ಮುಗಿಸಿದಳು ಕೊನೆಗೊಂದು ದಿನ ಸೋನೆ ಮಳೆ ಸಂಜೆ.. ಬಿಸಿಬಿಸಿ ಚಳಿ ಕೋಣೆ ಬಾಗಿಲು ಜಡಿದು, ತೆರೆದಿಟ್ಟು ಕಿಟಕಿ ಸಿಪ್ಪು ಸಿಪ್ಪಾಗಿ ಬಿಯರು ಚಪ್ಪರಿಸುವಾಗ            ಈಗಿಂದೀಗಲೆ ನಿಂತೇಹೋದರೆ ಉಸಿರು ಏನೆಂದುಕೊಳ್ಳುವರೊ ಜನರು ಎಂದೆಣಿಸಿ..  ಎಣಿಸಿ..  ಧಡಕ್ಕನೆದ್ದು ಬಾಗಿಲು ತೆರೆದಿಟ್ಟು                                            ‘ಜ಼ಿಂದಗಿ ಭರ್ ಭೂಲೇಂಗಿ ನಹಿ..’ ಎಂದು ದೊಡ್ಡಕೆ ಹಾಡತೊಡಗಿದಳು. ೨. ಸೊಪ್ಪಿನವಳು ನಟ್ಟ ನಡು ಹಗಲು ಹೊತ್ತು

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ ಹೊಸ ಬನಿ ೧೬ ಹುಚ್ಚು ಆದರ್ಶಗಳಿಲ್ಲದ ಭಾವ ಭಿತ್ತಿಯ ಸಹಜ ನಿರೂಪಣೆ ನಾಗರೇಖಾ ಗಾಂವಕರ್ ಕವಿತೆಗಳು ಅವಳ ಮಾಂಸ ಮಜ್ಜೆಯ ನೆರಳು, ಮುಟ್ಟಿನ ವಾಸನೆಬಡಿಯದೇ, ಪೊಗರಿದ ಅವನೆಂಬವನ  ಹುಡುಕಿ ಸೋತಿದ್ದೇನೆ, ಹುಡುಕಿ ಕೊಡು ಹೇ! ಪ್ರಭು. ಎಂದು ಗಟ್ಟಿಯಾಗಿ ಪ್ರಶ್ನಿಸುತ್ತಲೇ ಸುರುವಾಗುವ ಈ ಕವಿತೆ ಗಂಡಿನ ಅಹಮ್ಮನ್ನು ಗುರಾಯಿಸುತ್ತಲೇ ಕಡೆಗೆ ಆದರವನ ದೇವರಿಗೆ ಅವಳ ಮಾಂಸ ಮಜ್ಜೆಯ ನೆರಳು, ಮುಟ್ಟಿನ ವಾಸನೆ ಮೈಲಿಗೆಯಂತೆ. ಆ ದೇವನೆಂಬವನ ಹುಡುಕಿ ಕೊಡು ಹೇ! ಪ್ರಭು (ಹುಡುಕಿ ಕೊಡು) ಎನ್ನುವಾಗ ಸಾಮಾನ್ಯವಾಗಿ “ಅವನು” ಎಂದರೆ “ದೇವರು” ಎಂದೇ ಅರ್ಥೈಸಲಾಗುವ “ಅವನನ್ನೇ” ಹುಡುಕಿಕೊಡು ಎಂದು ಕೇಳುವ ಗತ್ತು ತೋರುತ್ತಲೇ ಒಟ್ಟೂ ಸಾಮಾಜಿಕ ವ್ಯವಸ್ಥೆಯ ಅಸ್ತಿತ್ವನ್ನೇ ಅಲುಗಾಡಿಸುವ ಉತ್ತರವೇ ಇಲ್ಲದ ಪ್ರಶ್ನೆಯನ್ನೆತ್ತುವ ಈ ಕಾವ್ಯಧ್ವನಿ ಶ್ರೀಮತಿ ನಾಗರೇಖಾ ಗಾಂವಕರ ಅವರದ್ದು. ನಾಗರೇಖಾ ಗಾಂವಕರ್ ಸಂಗಾತಿಯ ಓದುಗರಿಗೆ ಪರಿಚಿತ ಹೆಸರು. ಈಗಾಗಲೇ ಸಂಗಾತಿಯೂ ಸೇರಿದಂತೆ ಹಲವು ವೆಬ್ ಪತ್ರಿಕೆಗಳಲ್ಲದೇ ಮಯೂರ, ಕನ್ನಡಪ್ರಭ, ಉದಯ ವಾಣಿ ಪತ್ರಿಕೆಗಳಲ್ಲೂ ಇವರ ಕವಿತೆಗಳು ಆಗಾಗ ಪ್ರಕಟವಾಗುತ್ತಲೇ ಇರುತ್ತವೆ. ದಾಂಡೇಲಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಇವರು ಕಳೆದ ವರ್ಷ ಪ್ರಕಟಿಸಿದ್ದ “ಬರ್ಫದ ಬೆಂಕಿ” ಕವನ ಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘದ ಬಹುಮಾನ ನಿನ್ನೆಯಷ್ಟೇ ಘೋಷಣೆಯಾಗಿದೆ. ಏಣಿ ಮತ್ತು ಪದಗಳೊಂದಿಗೆ ನಾನು, ಬರ್ಫದ ಬೆಂಕಿ[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ[ಅಂಕಣ ಬರಹ ಕೃತಿ] ಸಮಾನತೆಯ ಸಂಧಿಕಾಲದಲ್ಲಿ [ಮಹಿಳಾ ಸಮಾನತೆಯ ಕುರಿತ ಅಂಕಣ ಬರಹ ಕೃತಿ] ಪ್ರಕಟಿಸಿರುವ ಇವರ ಸಂಕಲನಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾರಾಮಲಿಂಗಪ್ಪದತ್ತಿ ಪ್ರಶಸ್ತಿ,  ಡಾ. ಬೆಟಗೇರಿ ಕೃಷ್ಣಶರ್ಮ ಕಾವ್ಯ ಪ್ರಶಸ್ತಿ ಮತ್ತು ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿಗಳು ಲಭಿಸಿವೆ. ಆಯತಪ್ಪಿ ಫಳಾರನೇ ಕೆಳಗುರುಳಿದಾಗ; ಬಿದ್ದರೂ, ಗುದ್ದಿದರೂ ಲೋಹದ ಹಣತೆ ನೆಗ್ಗಬಹುದು, ಮತ್ತೆದ್ದು ನಗಲೂಬಹುದು ಆದರೆ  ಚೂರಾದದ್ದು ಮೆದು ಮೈಯ  ಮಣ್ಣಹಣತೆ ಎಂದೂ ಈ ಕವಿಗೆ ಗೊತ್ತಿರುವ ಕಾರಣಕ್ಕೇ ಇವರ ಪದ್ಯಗಳು ಅನುಭವ ವಿಸ್ತರಣದ ಚೌಕಟ್ಟಿನಾಚೆಗೆ ಉಕ್ಕದೇ ಹಾಗೆಯೇ ಸೀಮಿತ ವ್ಯಾಸದ ಪರಿವೃತ್ತದೊಳಗಿದ್ದೂ ಒತ್ತಡದ ಹೇರನ್ನು ನಿಭಾಯಿಸುವ ಪರಿ ಅಪರೂಪದ್ದಷ್ಟೇ ಅಲ್ಲ ಅದು ನಿಜ ಬದುಕಿನಲ್ಲೂ ಹೆಣ್ಣು ಅಡವಳಿಸಿಕೊಳ್ಳಲೇ ಬೇಕಾದ ಸಹಜ ದಾರಿಯೂ ಆಗಿದೆ. ಇಂಥ ಚಿಂತನೆಯ ಮುಂದುವರೆದ ಶೋಧವಾಗಿ ಒಂದಿಷ್ಟು ಆಚೀಚೆ ಜರುಗಿಸಹೋದರೂ ಕೈಗೆ ಹತ್ತಿದ ಕಬ್ಬಿಣದ ಮುಳ್ಳು ರಕ್ತ ಬಸಿಯಿತು… ಅಂದಿನಿಂದ ಬೇಲಿಯಲ್ಲಿ ಚಿಗುರ ಕಾಣುವ ಕನಸೂ ಕುಸಿಯಿತು.. ಎಂದು ಈ ಕವಿ “ಬೇಲಿಗಳು” ಎನ್ನುವ ಕವಿತೆಯಲ್ಲಿ ಒಟ್ಟೂ ನಾಶವಾಗುತ್ತಲೇ ಇರುವ ಸಂಬಂಧಗಳನ್ನು ಬೇಲಿಯೆಂಬ  ಪ್ರತಿಮೆಯ ಮೂಲಕವೇ ವಿಷಾದಿಸುತ್ತಾರೆ. ಪದಗಳೊಂದಿಗೆ ನಾನು ಎನ್ನುವ ಕವಿತೆಯಲ್ಲಿ ಪದಗಳೆಂದರೆ ನನಗೆ ಅಚ್ಚುಮೆಚ್ಚು ದಿನಂಪ್ರತಿಯ ಅಭ್ಯಾಸವೂ ಪದಗಳ ಹೊಸೆಯುವುದರಲ್ಲಿ, ಮಸೆಯುವುದರಲ್ಲಿ: ಆದರೆ ಆ ಪದಗಳಿಗೆ ಶಬ್ದಕೋಶದಿ ಅರ್ಥಗಳ ಹುಡುಕಿ ಸೋತಿದ್ದೇನೆ. ಎಂದು ಶಬ್ದಾಡಂಬರದ ವೈಯಾರವನ್ನು ಶಬ್ದಗಳು ಶಬ್ದ ಮಾಡುವ ಪರಿಯನ್ನು ಅರುಹುತ್ತಲೇ ಪದಗಳೆಂದರೆ ನನಗೆ ಅಲರ್ಜಿ ನನ್ನೊಳಗಿನ ನನ್ನನ್ನು ಹೊರಗಟ್ಟಿ ಅಣಕಿಸಿ ನಗುತ್ತವೆ. ಹಾಡಾಗುವ ಬದಲು ಹಾವಾಗಿ ಹಗೆಯ ಹೊಗೆ ಹಬ್ಬಿಸುತ್ತವೆ ಪದಗಳೆಂದರೆ ನನಗೆ ಅಲರ್ಜಿ ಪಟ್ಟಾಂಗದಲ್ಲಿ ಪದಗಳ ಭರ್ಜರಿ ಬೇಟೆಯಾಡುವ ನಾನು ಕಾರ್ಯಹೀನ ಕೆಲಸಗೇಡಿಯಾಗುತ್ತೇನೆ. ಎನ್ನುವಾಗ ಹುಟ್ಟಿದ ದ್ವಿತ್ವವನ್ನು ಕಾಣಿಸುತ್ತಾರೆ. ಒಮ್ಮೆ ಹಿತವಾದದ್ದು ಮುಂದಿನ ಕ್ಷಣದಲ್ಲೇ ಬೇಡವೆಂದೆನಿಸುವ ಮನುಷ್ಯನ ಮಿತಿಯನ್ನು ಈಪದ್ಯ ಹೇಳುತ್ತಿದೆಯೋ ಅಥವ ಕವಿಯು to be or not to be ಎಂಬ ಗೊಂದಲದ ದ್ವಂದ್ವ ಮೀರದ ambiguity ಯೆಂಬ ಪಾಶ್ಚಿಮಾತ್ಯರ ಕಾವ್ಯ ಮೀಮಾಂಸೆಯ ಪ್ರತಿಪಾದಕರಾಗಿಯೂ ಕಾಣುತ್ತಾರೆ. ಹಾಗೆಂದು ಈ ಕವಿ ಬರಿಯ ಒಣ ತರ್ಕ ಮತ್ತು ಸಿದ್ಧಾಂತಗಳ ಗೋಜಲಲ್ಲೇ ನರಳದೆ ಅಪರೂಪಕ್ಕೆ ಈ ಮಳೆಗೂ ಕರುಣೆಯಿಲ್ಲ ಹಸಿಮನಗಳಲಿ ಹುಸಿ ಬಯಕೆಗಳ ಕುದುರಿಸಿ ಕಾಡುತ್ತದೆ ಎಂದೂ ಒಲವನ್ನು ಕುರಿತು ಧೇನಿಸುತ್ತಲೇ ಆ ಹುಡುಗನಿಗೆ ಇದೆಲ್ಲವನೂ ಹೇಗೆ ಉಲಿಯಲಿ? ಕಂಪು ಹೆಚ್ಚಾಗಿ ಜೋಂಪು ಹತ್ತಿದೆ, ಕಣ್ಣುಗಳು ಮತ್ತೇರಿ ಪಾಪೆಯೊಳಗೆ ಮುದುರಿದೆ ಕಣ್ಣ್ಗತ್ತಲ ಗುಹೆಯಲ್ಲಿ ಮಿಣುಕು ಹಚ್ಚುವ ನಿನ್ನ ಬಿಂಬವ ಹೇಗೆ ಮರೆಮಾಚಲಿ ಹುಡುಗ? ಎಂದು ರೊಮ್ಯಾಂಟಿಕ್ ಮೂಡಿನಲ್ಲಿ ಕೇಳುತ್ತಾರಲ್ಲ ಆಗ ಆ ಪದ್ಯ ಮು(ಹು)ಟ್ಟಿಸಿದ ಬಿಸಿಯನ್ನು ಓದುಗ ಸುಲಭದಲ್ಲಿ ಮರೆಯಲಾರ!! ಈ ಮುದುಕಿಯರೇ ಹೀಗೆ ಮನೆಯ ಸಂದುಹೋದ ಬಣ್ಣಕ್ಕೆ ಸಾಕ್ಷಿಯಾಗುತ್ತಾರೆ…. ಎಂದೆನುವ ಪದ್ಯದ ಶೀರ್ಷಿಕೆ ಈ ಹಿಂದೆ ಇದೇ ಶೀರ್ಷಿಕೆಯಲ್ಲಿ ಪ್ರತಿಭಾ ನಂದಕುಮಾರ ಪದ್ಯವಾಗಿಸಿದ್ದನ್ನು ಓದಿದ್ದವರಿಗೆ ಸಪ್ಪೆ ಎನಿಸುವುದು ಸುಳ್ಳೇನಲ್ಲ. ದೇಹವೊಂದು ಪದಾರ್ಥವಾಗದೇ ಕಲ್ಪಿತ ಭ್ರಮೆಗಳಲ್ಲಿ ಹುಟ್ಟುವ ಅವನನ್ನು ಆವಾಹಿಸಿಕೊಳ್ಳುತ್ತಾಳೆ ಆಘ್ರಾಣಿಸುತ್ತಾಳೆ, ಬಿಚ್ಚಿ ಹರಹಿದ ಹೆರಳುಗಳ ನಡುವೆ ಬಂಧಿಸುತ್ತಾಳೆ ಪರವಶಳಾಗುತ್ತಾಳೆ ಅವಳು ಅವನಿಲ್ಲದೇ ಅವಳ ದೇವರು ಇರುವುದಾದರೂ ಹೇಗೆ? ಆ ದೇವನಿಗಾಗಿ ಕಾಯುತ್ತಾಳೆ ಅವಳು ಕಾಯತ್ತಲೇ ಇರುತ್ತಾಳೆ ಅವಳು. ಎನ್ನುವ ತುಂಬು ಭರವಸೆಯ ಈ ಕವಿ ಒಂದೇ ಧಾಟಿಯಲ್ಲಿ ಬರೆದುದನ್ನೇ ಬರೆಯುತ್ತಿರುವವರ ನಡುವೆ ವಿಭಿನ್ನತೆಯನ್ನೇ ಮುಖ್ಯ ಸ್ಥಾಯಿಯಾಗಿರಿಸಿಕೊಂಡ ಮತ್ತು ಮಹಿಳಾ ಕಾವ್ಯ ಎನ್ನುವ ಹೆಸರಲ್ಲಿ ಹಾಕಿಕೊಂಡಿದ್ದ ಬೇಲಿಯನ್ನು ಸರಿಸಿ ಆ ಅದೇ ಮಹಿಳಾ ಕಾವ್ಯವು ಸಂಕೀರ್ಣತೆಯನ್ನು ಮೀರಿದ ಅನುದಿನದ ಅಂತರಗಂಗೆಯ ಗುಪ್ತಗಾಮಿನೀ ಹರಿವಿನ ವಿಸ್ತಾರ ಮತ್ತು ಆಳದ ಪ್ರಮಾಣವನ್ನು ಗುರ್ತಿಸುತ್ತಾರೆ. “ತರಗೆಲೆ” ಶೀರ್ಷಿಕೆಯ ಪದ್ಯವೇ ಈ ಕವಿಯು ನಂಬಿರುವ  ಒಟ್ಟೂ ಜೀವನ ಮೌಲ್ಯವನ್ನು ಪ್ರತಿನಿಧಿ ಸುತ್ತಿ ದೆ. ಆ ಸಾಲು ಹಾರುವ ಪುಟ್ಟ ಗುಬ್ಬಿಯ ಬಾಯೇರಿ ಮೊಟ್ಟೆಗೆ ಮಂದರಿಯಾಗಿ, ಪುಟಪುಟ ನೆಗೆತದ ಮರಿಗುಬ್ಬಿಗಳ ಕಾಲಡಿಗೆ ರೋಮಾಂಚನಗೊಳ್ಳಬೇಕು ಚಿಲಿಪಿಲಿಯೂದುವ ತೊದಲು ನುಡಿಗಳಿಗೆ ಕಿವಿಯಾಗಬೇಕು. ಜೀವವಿಲ್ಲದ ಒಣ ಎಲೆಯೆಂದವರ ಕಡೆಗೊಮ್ಮೆ ನಲ್ಮೆಯ ನಗೆ ಬೀರಬೇಕು ಇಂಥ ಭಾವ ಭಿತ್ತಿಯ ಮತ್ತು ಹುಚ್ಚು ಆದರ್ಶಗಳಿಲ್ಲದ ಇದ್ದುದನ್ನೇ ಸರಿಯಾಗಿ ಸ್ಪಷ್ಟವಾಗಿ ಸದುದ್ದೇಶದ ಚಿಂತನೆಯ ಈ ಕವಿಯ ಐದು ಕವಿತೆಗಳ ಪೂರ್ಣ ಪಾಠ ನಿಮ್ಮ ಓದಿಗೆ ಶಿಫಾರಸು ಮಾಡುತ್ತೇನೆ. —————————————————————————————– ೧. ಎದೆ ಬೆಳಕು ಮತ್ತು ಕಣ್ಣ ಕಾಡಿಗೆ ನಿನ್ನ ಉತ್ತರೀಯಕ್ಕೆ ಅರಿವಿಲ್ಲದೇ ಬಳಿದ ನನ್ನ ಕೆಂಪು ತುಟಿರಂಗು ಇನ್ನೂ ಹಸಿಹಸಿ ಆಗಿಯೇ ಇದೆ ಇಳಿಸಂಜೆಗೆ ಹಬ್ಬಿದ ತೆಳು ಮಂಜಿನಂತಹ ಹುಡುಗ ಮಸುಕಾಗದ ಕನಸೊಂದು ಕಣ್ಣಲ್ಲೇ ಕಾದು ಕೂತಿದೆ ನೀನೊಲಿದ ಮರುಗಳಿಗೆ ಭವದ ಹಂಗು ತೊರೆದೆ ಮುಖ ನೋಡದೇ ಮಧುರಭಾವಕ್ಕೆ ಮನನೆಟ್ಟು ಒಳಹೃದಯದ ಕವಾಟವ ಒಪ್ಪಗೊಳಿಸಿ ಮುಗ್ಧಳಾದೆ ಈಗ ನೆನಪುಗಳ ಮುದ್ದಾಡುತ್ತಿರುವೆ ಮುದ್ದು ಹುಡುಗ, ನಿನ್ನ ಒಲವಿಂದ ಬರಡಾದ ಒರತೆಗೂ ಹಸಿಹಸಿ ಬಯಕೆ ಒಣಗಿದ ಎದೆಗೂ ಲಗ್ಗೆ ಇಡುವ ಹನಿ ಜಿನುಗಿನ ಕುಪ್ಪಳಿಸುವಿಕೆ ಗೊತ್ತೇ ನಿನಗೆ? ಈ ತಂಗಾಳಿಯೂ ತೀರದ ದಿಗಿಲು ಹತ್ತಿಸಿಕೊಂಡ ಏಕಾಂಗಿ ಮೃಗದಂತೆ ಸುಂಯ್ಯನೇ ಹಾಗೇ ಬಂದು ಹೀಗೆ ಹೊರಟುಹೋಗುತ್ತದೆ ಮರೆತ ಕನಸುಗಳಿಗೆ ಕಡ ಒದಗಿಸಿ ಬೆನ್ನು ಹತ್ತುತ್ತದೆ ಈ ಮಳೆಗೂ ಕರುಣೆಯಿಲ್ಲ ಹಸಿಮನಗಳಲಿ ಹುಸಿ ಬಯಕೆಗಳ ಕುದುರಿಸಿ ಕಾಡುತ್ತದೆ ಇದೆಲ್ಲವನೂ ಹೇಗೆ ಉಲಿಯಲಿ? ಕಂಪು ಹೆಚ್ಚಾಗಿ ಜೋಂಪು ಹತ್ತಿದೆ, ಕಣ್ಣುಗಳು ಮತ್ತೇರಿ ಪಾಪೆಯೊಳಗೆ ಮುದುರಿದೆ ಕಣ್ಣ್ಗತ್ತಲ ಗುಹೆಯಲ್ಲಿ ಮಿಣುಕು ಹಚ್ಚುವ ನಿನ್ನ ಬಿಂಬವ ಹೇಗೆ ಮರೆಮಾಚಲಿ ಹುಡುಗ? ನೀನಾದರೋ ಭೂವ್ಯೋಮಗಳ ತಬ್ಬಿ ನಿಂತ ಬೆಳಕ ಕಿರಣ ಕಣ್ಣ ಕಾಡಿಗೆಯ ಕಪ್ಪು, ಅದಕ್ಕೆ ಎದೆಯೊಳಗೆ ಬೆಳಕ ಹಚ್ಚಿದೆ, ಕಣ್ಣ ಮುಂದೆ ಇಲ್ಲದೆಯೂ ಕಣ್ಣ ಕಾಡಿಗೆಗೆ ಬಣ್ಣ ಬಳಿದೆ. ಮುದ್ದು ಹುಡುಗ, ಹೀಗಾಗೇ ದಿನಗಳೆದಂತೆ ನನ್ನ ಕಣ್ಣ ಕೆಳಗಡೆ ಕಪ್ಪು ಬರೀ ಕಪ್ಪು ೨.  ಶತಶತಮಾನಗಳ ತಲೆಬರಹ ತಪ್ಪುವ ಹಾದಿಗಳ ಗುಂಟ ಅರಿವಿನ ಸೂಡಿ ಸಿಗಬಹುದೇ ಎಂದು ಕಾಯುತ್ತಲೇ ಇದ್ದಾರೆ ಜನ ದಂಧುಗಗಳ ಸಾಲೇ ಸಾಲು ಎದುರಾಗುತ್ತ ಬೇಸತ್ತ ಮನಸ್ಸುಗಳು ಒಂದನ್ನೊಂದು ಹದತಪ್ಪುತ್ತಲೇ ಬದುಕ ಹದಕ್ಕೆ ಕಾಯಿಸಿಕೊಳ್ಳುವ ಕನಸು ನನಸಾಗದ ಹಾದಿಯ ಮೇಲೆ ಸೌಧಕಟ್ಟುತ್ತಿದ್ದಾರೆ ಶತಶತಮಾನಗಳಿಂದ ಜನ ಹಾವಿನ ಹಾದಿಯನ್ನು ಹೂವೆಂದುಕೊಂಡು ನಂಜಿಗೆ ಬಲಿಯಾಗುತ್ತಿದ್ದಾರೆ ಜನ ಮಧ್ಯದ ಕಡಲಿಗೆ ಮುಗಿಬಿದ್ದು ಮದ್ದೆ ಸಿಗದೇ ಮಾರಿಕೊಂಡ ಮನಸ್ಸಿನ ಕೂಪದೊಳಗಿನ ನೆನಪುಗಳ ಒಂದೊಂದಾಗಿ ಗೋರಿಯೊಳಗೆ ಹೂತು ಹಾಕುತ್ತಲೇ ಮರೆತು ಅದನ್ನೆ ಎದೆಯ ಹಾಡಾಗಿಸಿಕೊಳ್ಳುತ್ತಿದ್ದಾರೆ ಶತಶತಮಾನಗಳಿಂದ ಜನ ಯಾವ ಎತ್ತರಕ್ಕೆ ಏರಿದರೂ ಜಾರುವ ಭಯದಲ್ಲಿಯೇ ಬಸವಳಿಯುತ್ತಾರೆ ಜನ ಬೆಳಕನ್ನು ಮುತ್ತಿಕ್ಕುವ ಆಸೆಗೆ ಬಲಿಬಿದ್ದು ಕೈತಪ್ಪಿ ಬೆಂಕಿಯನ್ನು ಅಪ್ಪಿ ಸುಟ್ಟಗಾಯದ ನೋವಿಗೆ ಮುಲಾಮು ಹಚ್ಚುತ್ತ ಮುಲುಗುಡುತ್ತಿದ್ದಾರೆ ಜನ ಪರಂಪರೆಯ ಮೊರದಲ್ಲಿ ಬದಲಾವಣೆಯ ಅಕ್ಕಿ ಆರಿಸುತ್ತಾ ಕಸವರವನ್ನು ಕಸವೆಂದು ತೆಗೆತೆಗೆದು ಚೆಲ್ಲುತ್ತಿದ್ದಾರೆ ಜನ ನೆಮ್ಮದಿಯ ಹುಡುಕುತ್ತಾ ದೇಗುಲಗಳ ಘಂಟೆಗಳ ಬಾರಿಸುತ್ತ ಪರಮಾತ್ಮ ಎನ್ನುತ್ತ ಪಂಥಗಳ ಕಟ್ಟಿಕೊಳ್ಳುತ್ತಲೇ ನಡೆದಿದ್ದಾರೆ ಶತಶತಮಾನಗಳಿಂದ ಜನ ೩. ಗುಪ್ತಗಾಮಿನಿ ಅಲ್ಪ ನುಡಿಯಲ್ಲಿ ತತ್ವ ವಿಚಾರ ಪುರಾಣಗಳ ಪಠಣ, ನಿತ್ಯ ವಾಚನ ವಾಚಾಳಿತನವಿಲ್ಲ-ವಚನ ಬಲು ಭಾರ ಮಿತ ಭಾಷಿ ನಾನೆಂಬ ಕೀಟಕೊರೆತ-ಮೆದುಳು ಊತ ಎಲ್ಲ ದುರ್ಗಮ ದಾರಿ ಕ್ರಮಿಸಿ ಬಂದಿಹೆ ಏರುವ ಮೊದಲು ಗದ್ದುಗೆ ನನಗಾರು ಸಮನಿಲ್ಲ ನನ್ನಿಂದಲೆ ಎಲ್ಲ ಸರ್ವಥಾ ಸಲ್ಲ ಅಲ್ಲೂ ವಾಸನೆ ನಾ ಸರಳ, ಸಜ್ಜನ ನೀತಿ ನೇಮಗಳ ಪರಿಪಾಲಕ, ಸತ್ಯ ಶಾಂತಿಗಳ ಪೂಜಕ, ಎನಗಿಂತ ಹಿರಿಯರಿಲ್ಲ ನನ್ನಂತೆ ಯಾರಿಲ್ಲ, ಕನವರಿಕೆ ಬೇರೆನಿಲ್ಲ, ಒಳಬೆರಗು-ಅದೇ ಯಾವ ಧನ್ವಂತರಿಯ ಬಳಿಯಿಲ್ಲ ಮದ್ದು ಬಿಳಿಯ ಜುಬ್ಬದ ಒಳಗೆ ಕರಿಯ ಕೋಟಿನ ಗುಂಡಿಯಲ್ಲಿ ರೇಷ್ಮೇ ಮಕಮಲ್ಲಿನ ನುಣುಪಲ್ಲಿ ಸದ್ದಿಲ್ಲದೇ ಠೀಕಾಣಿ ಜರಡಿ ಹಿಡಿದರೂ ಜಾರದಂತೆ ಅಂಟಿಕೂತಿದೆ ನಾನು ಹೋದರೆ ಹೋದೇನು ಕನಕನಿಗಾದ ಉದಯಜ್ಞಾನ ನಮಗೇಕಿಲ್ಲ ಬಿಡು ಆ ಹಂತ ಏರಿಲ್ಲ ಆ ಮರ್ಮ ಸರಳಿಲ್ಲ. ೪. ಪದಗಳೊಂದಿಗೆ ನಾನು ಪದಗಳೆಂದರೆ ನನಗೆ ಅಚ್ಚುಮೆಚ್ಚು ದಿನಂಪ್ರತಿಯ ಅಭ್ಯಾಸವೂ ಪದಗಳ ಹೊಸೆಯುವುದರಲ್ಲಿ, ಮಸೆಯುವುದರಲ್ಲಿ: ಆದರೆ ಆ ಪದಗಳಿಗೆ ಶಬ್ದಕೋಶದಿ ಅರ್ಥಗಳ ಹುಡುಕಿ ಸೋತಿದ್ದೇನೆ. ಹೊಸ ಹಾಡಿಗೆ ಕುಣಿದಾಡುವ ನವಿಲುಗಳ ದಾರಿ ಕಾಯುತ್ತ, ನಾನೇ ನವಿಲಾಗಬಯಸುತ್ತೇನೆ. ಮತ್ತೆ ಕುಕಿಲದ ಗಾನಕ್ಕೆ ಪದ ಜೋಡಿಸಿ ಶ್ರುತಿ ಕೂಡಿಸಿ ಹಾಡಾಗ ಬಯಸುತ್ತೇನೆ. ಪದಗಳು ಪರಾರಿಯಾಗುತ್ತವೆ ಆಗೊಮ್ಮೆ ಈಗೊಮ್ಮೆ ಸುಳಿವುಕೊಡದೆ, ಪಕ್ಕಾ ಪರದೇಶಿಯಂತೆ. ಹಳಹಳಿಸಿ ನೋಡುತ್ತೇನೆ: ಪದಗಳ ಜೋಡಿಸಿ ಇಡಲಾಗದ್ದಕ್ಕೆ. ನಡುರಾತ್ರಿಯಲ್ಲಿ ಕಂದೀಲ ಬೆಳಕಿನಲ್ಲಿ ನಡಗುವ ಕೈಗಳು ಆಡಿಯಾಡುತ್ತವೆ ಕೆತ್ತಿದ ಪದಗಳ ಮೇಲೆ, ಕಂಗಳಿಂದ ಉದುರಿದ ಮುತ್ತೊಂದು ಕರ ಸೋಕಿದಾಗ ಎಚ್ಚರ ಗೊಳ್ಳುತ್ತ ಸಡಿಲವಾಗಿಲ್ಲ ಎಲ್ಲಪದಗಳು ಅವಕ್ಕೆ ಸಂದೂಕದ ಪೆಟ್ಟಿಗೆಯಲ್ಲಿಟ್ಟು ಕಾಪಿಡು ಎನ್ನುತ್ತದೆ ಮನಸ್ಸು. ಪದಗಳೆಂದರೆ ನನಗೆ ಅಲರ್ಜಿ ನನ್ನೊಳಗಿನ ನನ್ನನ್ನು ಹೊರಗಟ್ಟಿ ಅಣಕಿಸಿ ನಗುತ್ತವೆ. ಹಾಡಾಗುವ ಬದಲು ಹಾವಾಗಿ ಹಗೆಯ ಹೊಗೆ ಹಬ್ಬಿಸುತ್ತವೆ ಪದಗಳೆಂದರೆ ನನಗೆ ಅಲರ್ಜಿ ಪಟ್ಟಾಂಗದಲ್ಲಿ ಪದಗಳ ಭರ್ಜರಿ ಬೇಟೆಯಾಡುವ ನಾನು ಕಾರ್ಯಹೀನ ಕೆಲಸಗೇಡಿಯಾಗುತ್ತೇನೆ. ಪದಗಳೆಂದರೆ ಅಚ್ಚುಮೆಚ್ಚು ಅಲರ್ಜಿ ನನಗೆ ಪರಪರನೆ ಕೆರೆದುಕೊಳ್ಳುವ ಚಟವಿದ್ದ ಹಾಗೆ. ೫. ಹುಡುಕಿ ಕೊಡು ಅವಳ ಮಾಂಸ ಮಜ್ಜೆಯ ನೆರಳು, ಮುಟ್ಟಿನ ವಾಸನೆಬಡಿಯದೇ, ಪೊಗರಿದ ಅವನೆಂಬವನ  ಹುಡುಕಿ ಸೋತಿದ್ದೇನೆ, ಹುಡುಕಿ ಕೊಡು ಹೇ! ಪ್ರಭು. ಒಡಲ ಮಾಂಸದ ಹೊದಿಕೆಯೊಳಗೆ ಜೀವವ ಹದವಾಗಿ ಕಾಪಿಟ್ಟು ಅವನುಸಿರ ಹಸಿರ ಮಾಡಿ ಹಣ್ಣಾದವಳು ರಕ್ತ ಹೀರಿದ ಬಟ್ಟೆಯ ಹಿಂಡಿ ನಿಂತವಳ ಸೆರಗು ಹಿಡಿದು ಕಾಡಿದವನ ಎದೆಗವುಚಿಕೊಂಡವಳು ಮಾಂಸಕಲಶದ ತೊಟ್ಟು ಬಾಯಿಗಿಟ್ಟೊಡನೆ ಕಿರುನಕ್ಕು ಕಣ್ಣುಮಿಟುಕಿಸಿದವನ ಲೊಚಲೊಚ ರಕ್ತ ಹೀರುವವನ ಕಣ್ಣೊಳಗೆ ತುಂಬಿಸಿಕೊಂಡವಳು ಅವಳಿಲ್ಲದೇ ಜಗದ ಬೆಳಕಿಗೆ ಕಣ್ಣು

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ ಹೊಸ ಬನಿ – ೧೫. ದೀರ್ಘ ಶೀರ್ಷಿಕೆಗಳ ಭಾರದಲ್ಲೂ ಸರಳ ನಡಿಗೆಯ ಮಂಜುಳ. ಡಿ  ಕವಿತೆಗಳು ಮಂಜುಳ ಡಿ ಈಗಾಗಲೇ ವಿಶ್ವವಾಣಿ ಪತ್ರಿಕೆಯ ಅಂಕಣ ಬರಹಗಾರರಾಗಿ ಕವಯತ್ರಿಯಾಗಿ ಖ್ಯಾತರಾದವರು. ಈಗಾಗಲೇ ಮೂರು ಪುಸ್ತಕಗಳನ್ನು ಪ್ರಕಟಿಸಿರುವ ಅವರು ಬೆಂಗಳೂರಿನವರು. ಅವರ ಫೇಸ್ಬುಕ್ ಬರಹಗಳಲ್ಲಿ ಗದ್ಯ ಪದ್ಯಗಳ ಮಿಶ್ರಣವನ್ನು ಕಾಣಬಹುದು. “ಆಸೆಯ ಕಂದೀಲು” ಕವನ ಸಂಕಲನಕ್ಕೆ ಕಾವ್ಯ ವ್ಯಾಮೋಹಿ ವಾಸುದೇವ ನಾಡಿಗರು ಮುನ್ನುಡಿ ಬರೆದಿರುವುದರಿಂದ ಸಂಕಲನದ ಗುಣ ನಿಷ್ಕರ್ಷೆ ಸುಲಭದ್ದೇ ಆಗಿದೆ. ಈ ಸಂಕಲನ ಕುರಿತು ಈಗಾಗಲೇ ಎನ್.ಡಿ.ರಾಮಸ್ವಾಮಿ ಮುಖಪುಸ್ತಕದಲ್ಲಿ ಬರೆದಿದ್ದಾರೆ. ಅವರು ಹೇಳಿದ ಹಾಗೆ ಈ ಕವಿ ಉತ್ತಮ ಕವನಗಳನ್ನು ಉತ್ಸಾಹದಿಂದ ರಚಿಸಿದ್ದಾರೆ.ಕಾವ್ಯದ ಕಸುಬುದಾರಿಕೆಯನ್ನು ಇಂಗ್ಲೀಷ್ ಸಾಹಿತ್ಯದ ಉಪನ್ಯಾಸಕಿಯಾಗಿ ಅಭ್ಯಾಸ ಮಾಡುತ್ತಲೇ ಇದ್ದಾರೆ. ಭಾಷೆ,ಭಾವ,ಬಂಧಗಳು ಕವನಗಳಲ್ಲಿ  ಉತ್ತಮವಾಗಿ ಮೂಡಿದೆ. ಕಾವ್ಯ ಶಿಲ್ಪದ ಕಸುಬುದಾರಿಕೆ ದಕ್ಕಿದೆ. ಅರ್ಥ ಪೂರ್ಣ ಕವನಗಳಲ್ಲಿ ಭಾವದ ಹೊಳೆ ಹರಿಸಿದ್ದಾರೆ. ಹೊಸತೇನೋ ಒಂದನ್ನು ಆತ್ಮದ ಬಾವಿಯಿಂದ ಕಾರಂಜಿಯಾಗಿಸಿದ್ದಾರೆ. ಕರುಳಿನ ಮಾತುಗಳಿಗೂ ದನಿಯಾಗಿದ್ದಾರೆ. ಅವರ ಚಿತ್ತ ಭಿತ್ತಿಯಲಿ ಸಾವಿರಾರು ಚಿಂತನೆಗಳಿವೆ. ಅವುಗಳಿಗೆ ನಿಜವಾದ ಕೈಮರ ಪೂರ್ವ ಸೂರಿಗಳ ಓದು. (ಇದು ಎನ್ಡಿಆರ್ ಮಾತು) ಇದೇ ಸಂಕಲನ ಕುರಿತು ಹೊನ್ನಾವರದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಎಂ ಹೆಗಡೆ ಹಡಿನಬಾಳ ತುಂಬು ಭರವಸೆಯ ಮಾತನ್ನು ಹೇಳಿದ್ದಾರೆ. “‘ನನ್ನನ್ನು ನೋಯಿಸಿದ್ದಾದರೂ  ಏನು” ಎನ್ನುತ್ತಲೇ ಮನಸ್ಸನ್ನು ಕದ್ದ ವ್ಯಕ್ತಿಯ ಕುರಿತು   ‘ಆಸೆಯ ಕಂದೀಲು’ ಕವನದಲ್ಲಿ  ಕಟ್ಟಿಕೊಂಡ ಆಸೆಗಳು ಕನಸುಗಳನ್ನು ತೆರೆದಿಡುವ  ರೀತಿ ಅದ್ಭುತವಾಗಿದೆ. ಊಟ  ಮಾಡುವಾಗ , ಹಾಸಿಗೆ ಬಿಟ್ಟು ಏಳುವಾಗ ಹೆಜ್ಜೆ ಹೆಜ್ಜೆಗೂ ನೆನಪಿಸಿಕೊಳ್ಳುತ್ತ  ಇನ್ನು ಎಲ್ಲೋ ಯಾರಿಗೋ ಏನೋ ತೊಂದರೆಯಾದಾಗ ತನ್ನ ಇನಿಯನಿಗೇನಾಯಿತೋ ಪರಿತಪಿಸುವ ರೀತಿ, ಒಲಿದ  ಹೃದಯದ ಸಲುವಾಗಿ ಮಿಡಿತವನ್ನು ಧ್ವನಿಸುವ ಸಾಲುಗಳು ಅದ್ಭುತ. ಪ್ರೀತಿಯ ತೀವ್ರತೆ ಹಂಬಲ ಕಳವಳ ಕನವರಿಕೆಯೇ ಮನದಾಳದ ನೋವಿಗೆ ಕಾರಣ ಎನ್ನುವುದರ ಮೂಲಕ ಪ್ರೀತಿಯ ಆಳ ಹರಹನ್ನು ಅತ್ಯಂತ ಸುಂದರವಾಗಿ  ಚಿತ್ರಿಸಿದ್ದಾರೆ. ಒಮ್ಮೆ ಮನಸ್ಸನ್ನು ಕೊಟ್ಟ ನಂತರ ಅವರ ನೆನಪಿನ ತೀವ್ರತೆ ಅಗಾಧ ಎನ್ನುವ ಸತ್ಯವನ್ನು ‘ತೀವ್ರತೆ ಎಷ್ಟಿತ್ತೆಂದರೆ’ ಕವನದ ಮೂಲಕ ತೆರೆದಿಟ್ಟಿದ್ದಾರೆ. ಇನಿಯನ ಸನಿಹ ತರುವ ಖುಷಿಯನ್ನು ಪ್ರಕೃತಿಯ ಆಗುಹೋಗುಗಳೊಂದಿಗೆ  ಸಮೀಕರಿಸಿ ‘ ಸುಮ್ಮನೆ ನಿನ್ನೊಂದು ಇರುವಿಕೆ ‘ ಕವನದ ಮೂಲಕ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ‘ಅಣಿಯಾಗದಿದ್ದ  ಗಳಿಗೆಯಲ್ಲಿ ಮಾಧುರ್ಯವನ್ನು ಪಸರಿಸಿ ಇದೀಗ ನಿನ್ನದೇ ಆದ ನೋವಿನ ಪ್ರಪಂಚದಲ್ಲಿ ನೀನಿರುವುದು ಸರಿಯೇ?’,   ‘ನಿರ್ಲಿಪ್ತತೆಯ ತೊಡೆದು ಹಾಕಿ ನೋವಿನಲ್ಲೂ ಸಪ್ತ ಸ್ವರ ಹೊಮ್ಮಲು ಸಾಧ್ಯವಿಲ್ಲವೇನು?’ ಎಂದು ‘ ಜಗತ್ತಿನ ನೋವೆಲ್ಲಾ ಒಂದಾದರೆ ನಿನ್ನ ನೋವೇ ಒಂದು’ ಕವನದ ಮೂಲಕ ಮೆಚ್ಚಿದ ಇನಿಯನನ್ನು ಪ್ರೀತಿಯಿಂದ ತರಾಟೆಗೆ ತೆಗೆದುಕೊಳ್ಳುವ ಪರಿ ಸೊಗಸಾಗಿ ಮೂಡಿಬಂದಿದೆ . ಮನೆಯನ್ನು  ಸುಂದರಗೊಳಿಸಿ ಗೋಡೆಗಳನ್ನು ಅದೆಷ್ಟೇ ಅಲಂಕಾರ ಗೊಳಿಸಲಿ ಯಾರಿಗೂ ಏನನ್ನೂ ಕೊಡದೆ ಕೃಪಣರಾಗಿ ತನ್ನವರಿಗಾಗಿ ಅದೆಷ್ಟೇ ಕೂಡಿ ಇಟ್ಟಿರಲಿ ಪ್ರಕೃತಿ ಮುಣಿಯಲು ಇವೆಲ್ಲವೂ ನೀರುಪಾಲಾಗಲು ಎಷ್ಟು ಹೊತ್ತು… ಯಾವ ತುಂಡು ಭೂಮಿಗಾಗಿ ಕಚ್ಚಾಡುತ್ತಿರುತ್ತೇವೆಯೋ ಅವು ಗುಡ್ಡ ಕುಸಿತದೊಂದಿಗೆ  ಮಣ್ಣುಗೂಡಲು ಎಷ್ಟು ಹೊತ್ತು ಎನ್ನುವುದನ್ನು ‘ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ’  ಎನ್ನುವ ಕವನದ ಮೂಲಕ ಚೆನ್ನಾಗಿ ಚಿತ್ರಿಸಿ ಪ್ರಕೃತಿಯ ಮುಂದೆ ಮಾನವನ ಆಟ ನಡೆಯದು ಅರ್ಥವಿಲ್ಲದ ಹಗೆತನ ಜಿಪುಣತನ ಸರಿಯಲ್ಲ ಎನ್ನುವ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ‘ನಿನ್ನನ್ನು ನೋಡಿದ ಮೇಲೆ ಈಗ ಇನ್ಯಾರನ್ನುನ್ನು ನೋಡಲಿ’, ‘ನಿನ್ನೊಳಗೆ ಕರಗಿ ನಿನ್ನದೇ ಬಣ್ಣ ತಳೆದದ್ದು ಅರಿವಿಗೇ ಬರಲಿಲ್ಲ’ ಸಾಲುಗಳು ಪ್ರೀತಿಯ ಪರಾಕಾಷ್ಟತೆಯನ್ನು  ಭಾವನೆಯ ತೀವ್ರತೆಯನ್ನು ಪ್ರತಿಬಿಂಬಿಸಿದರೆ, ವಿರಹಿ, ರಿಪೇರಿ, ಕಾವು ಅಗಲಿಕೆ ಧೋರಣೆ, ಬಿಂಬ.. ಪ್ರೀತಿಯಿಂದ ಘಾಸಿಗೊಂಡ ಮನದ ಅಂತರಾಳದ ಧ್ವನಿಯಂತೆ ಇವೆ. “ಆಸೆಯ ಕಂದೀಲು” ಸಂಕಲನ ಕುರಿತ ಈ ಇಬ್ಬರ ಮಾತುಗಳನ್ನು ನಾನು ಸಂಕಲನ ನೋಡಿರದ ಕಾರಣ ಆ ಸಂಕಲನ ಕುರಿತಂತೆ ಮಹತ್ವದ್ದೆನಿಸಿದ ಕೆಲವು ಸಾಲುಗಳನ್ನು ಇಲ್ಲಿ ಹಂಚಿಕೊಳ್ಳುತ್ತಲೇ ಈ ಕವಿಯು ಫೇಸ್ಬುಕ್ಕಿನಲ್ಲಿ ಪ್ರಕಟಿಸಿದ ಕೆಲವು ಕವಿತೆಗಳನ್ನು ಪರಿಚಯಿಸುತ್ತಿದ್ದೇನೆ. ನದಿಯ ಪಾತ್ರ ಅಲ್ಲಿಯೇ ಇದೆ ಅದರ ಉದಯ ಕಾಲದಿಂದಲೂ ಹರಿಯುತ್ತಿರುವ ನೀರು ಮಾತ್ರ ಹೊಸದು ಎನ್ನುವ ನಿಲುವು ಹಳೆಯದೇ ಆದರೂ ಹರಿಯುತ್ತಿರುವ ನೀರು ಹೊಸದೇ ಆಗಿರುತ್ತದೆ ಎನ್ನುವ ಆಲೋಚನೆಯನ್ನು ಸೊಗಸಾಗಿ ಹೇಳುವ ಈ ಕವಿ  “ಭೌತಿಕತೆಯ ಗೀಳು ಮಾನಸಿಕ ಹರಿವು‌‌…” ಎನ್ನುವ ದೀರ್ಘ ಶೀರ್ಷಿಕೆಯ ಗಪದ್ಯದಲ್ಲಿ ಹೇಳುತ್ತಾರೆ. “ಕೆಂಪು ಡಬ್ಬ ಮತ್ತು ಕಾಗದದ ದೋಣಿ…” ಕವಿತೆಯ ಶೀರ್ಷಿಕೆಯೇ ಕುತೂಹಲ ಹೆಚ್ಚಿಸಿ ಆಧುನಿಕ ಫೋನುಗಳಿಗಿಂತಲೂ ಹೃದಯಕ್ಕೆ ಹತ್ತಿರವಾದ ಪತ್ರಗಳ ಮಹತ್ತನ್ನು ಹೇಳುತ್ತದೆ. “ತೆರೆ ಅಪ್ಪಳಿಸುವ ಗಳಿಗೆ…ಭಾನು ಭುವಿಯಲ್ಲಿ ಲೀನ” ಎನ್ನುವ ಪದ್ಯದ ರೀತಿ ಸೊಗಸಾಗಿದ್ದರೂ ಭಾನು ಎನ್ನುವುದು ಸೂರ್ಯನಿಗೆ ಬಾನು ಎಂದರೆ ಆಕಾಶ ಎನ್ನುವ ವ್ಯತ್ಯಾಸದ ಅರಿವು ಬಾರದೇ ಇದ್ದರೆ ಪದ್ಯ ಗೆದ್ದುಬಿಡುತ್ತದೆ. ಆಕಾಶ ಭೂಮಿಗಳು ಪರಸ್ಪರ ಮುಟ್ಟಿದರೂ ಮುಟ್ಟದೆಯೇ ಉಳಿವ ಕ್ಷಿತಿಜದ ಅರಿವು ಕೂಡ ಕವಿಯಾದವರಿಗೆ ಇರಲೇ ಬೇಕಾಗುತ್ತದೆ. “ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ…” ಎನ್ನುವ ಹೆಸರಿನ ಕವಿತೆಗೆ ಷರಾ ಬರೆದು ಕೊಡಗಿನ ಬಿರುಮಳೆಗೆ ಕುಸಿದ ನೆಲ ಕುರಿತ ಪದ್ಯವೆಂದು ಕವಿ ಹೇಳಿದರೂ ಈ ಕವಿತೆಯ ಮೊದ ಮೊದಲ ಸಾಲುಗಳು ಪ್ರತಿಧ್ವನಿಸುವುದು ಕಳೆದುಕೊಂಡ ಕನಸುಗಳನ್ನು, ಪ್ರೀತಿಯಿಂದ ಕಾಪಿಟ್ಟಿದ್ದನ್ನು ಕಳಕೊಂಡ ನೋವನ್ನು. “ಕತ್ತಿ ಮಚ್ಚು ಹಿಡಿದು ಹಗಲಿರುಳೂ ಸಾಧಿಸಿದ ಹಗೆ ಏಳೆಂಟು ಅಡಿ ಗುಡ್ಡದ ಭೂಮಿ ತನ್ನದೆನ್ನುವ ಒಡಹುಟ್ಟಿದವರ ಹಗೆತನವೂ ಕುಸಿದ ಗುಡ್ಡದೊಂದಿಗೆ ಈಗ ನಿನ್ನದೇ” ಎನ್ನುವ ತಿಳುವಳಿಕೆ ಲೋಕಕ್ಕೆಲ್ಲ ತಿಳಿದರೆ ಅದೆಷ್ಟು ಸಲೀಸು ಈ ಬದುಕು! ಆದರೆ ವಾಸ್ತವ ಹಾಗಿಲ್ಲವಲ್ಲ! “ಕುಸುಮಿತ ತೋಪಿನ ಹೂವಿನ ನವಿರು ಪರಿಮಳ, ಉರಿಬಿಸಿಲ ಪ್ರಖರತೆ ಊಹೂ ಹೆಜ್ಜೆಗಳು ನಿಲ್ಲುವ ಹಾಗಿಲ್ಲ ಮಾಡಿಕೊಂಡ ಪಣಗಳು ಕೊಟ್ಟ ಭಾಷೆಗಳು ದೂರ ದೂರ ಪಯಣ ಸಾಗಿದೆ ಹೀಗೆ ಸಾಗುತ್ತಿದೆ” ಎನ್ನುವ ವಿವೇಕದೊಂದಿಗೆ “ಆನೆ ಕುದುರೆ ಗಾಡಿಗಳಲ್ಲಿ ಸಾಗಲಾರೆವು ಅಲ್ಲಿಗೆ ಹೆಜ್ಜೆಗಳೇ ಮೂಡಬೇಕು…” ಎನ್ನುವ ಶೀರ್ಷಿಕೆಯ ಪದ್ಯ ಕೂಡ ಚಣಕಾಲ ಕಾಡದೇ ಇರದು. ನವೋದಯದ ಕಾಲದಲ್ಲಿ ಪ್ರಾಸ,ಗೇಯತೆ,ರಮ್ಯತೆಗಳಿದ್ದರೆ ಪ್ರಗತಿಶೀಲರ ಕಾಲದಲ್ಲಿ ಕನಸುಗಳೇ ರಾಜ್ಯಭಾರ ಮಾಡುತ್ತ ನವ್ಯವು ಪ್ರತಿಮೆ ರೂಪಕಗಳಲ್ಲಿ ಭಾರವಾಗುತ್ತ ಸಾಗಿದ್ದು ಬಂಡಾಯದ ಬಿಸಿಯುಸಿರು ವ್ಯವಸ್ಥೆಯೊಂದಿಗೆ ಸೆಣಸಾಟ ಈ ಎಲ್ಲವೂ ಹೊಸ ಕಾಲದ ಪದ್ಯಗಳಲ್ಲಿ ಭಿನ್ನ ರೀತಿಯಲ್ಲಿ ಮಿಶ್ರಣಗೊಂಡು ಸುಲಭಕ್ಕೆ ದಕ್ಕದ ರೀತಿಗೆ ಚಾಚಿಕೊಳ್ಳುತ್ತ ಕಾವ್ಯದ ನಡಿಗೆಯನ್ನು ಸುಲಭಕ್ಕೆ ಒಲಿಸಿಕೊಳ್ಳಲಾಗದ ಕಾಲ ಇದು. ಆದರೂ ಹೊಸ ದನಿಯಲ್ಲಿ ಧಂಡಿಯಾಗಿ ಹಾಡುವರ ಕಾಲದ ಹಾಡುಗಳನ್ನು ಅಳೆಯುವ ಮಾಪಕಗಳೇ ಇರದ ಈ ಕಾಲದ ಕವಿಗಳು ಪರಂಪರೆಯಿಂದ ಅರ್ಥವಾದ ರೀತಿಗೆ ಹೊಸ ಟ್ಯೂನ್ ಕೊಡುತ್ತಲೇ ಇದ್ದಾರೆ. ಅಂಥವರ ಪೈಕಿ ಮಂಜುಳ ಡಿ ಕೂಡ ಒಬ್ಬರು. ಬರಿಯ ಚುಟುಕುಗಳಲ್ಲೇ ಹೇಳಬೇಕಾದುದನ್ನು ಹೇಳುತ್ತಿರುವವರ ನಡುವೆ ತಮ್ಮ ದೀರ್ಘವೂ ಸ್ವಾರಸ್ಯವೂ ಆದ ಶೀರ್ಷಿಕೆಗಳ ಮೂಲಕ ಕಾವ್ಯವನ್ನು ಪ್ರಸ್ತುತ ಪಡಿಸುವ ಶೈಲಿ ಬೇರೆಯದೇ ಆಗಿದೆ. ಆದರೆ ಹೇಳಿಕೆಗಳ ಭಾರದಲ್ಲಿ ಕವಿತೆ ನಲುಗಬಾರದೆನ್ನುವ ಕಾವ್ಯ ಮೀಮಾಂಸಕರ ಮಾತು ಯಾರೂ ಮರೆಯಲಾರದ್ದು ಭೇಟಿಯಾಗದ ಭೇಟಿಗಳ ಬಗ್ಗೆ ಪ್ರೀತಿ, ಹಳಹಳಿಕೆ, ನೆನಪು, ಸಂಕಟಗಳ ಒಟ್ಟೂ ಮೊತ್ತವನ್ನು ಅದ್ಭುತವಾಗಿ ಅಭಿವ್ಯಕ್ತಿಸಿದ ಕೆಲವು ಟಿಪ್ಪಣಿಗಳೇ ಇಲ್ಲಿ ಕವಿತೆಯಾದ ಘನಸ್ತಿಕೆಯೂ ಇದೆ. ಬರಿಯ ಪ್ರೀತಿ ಪ್ರೇಮ ಕನಸುಗಳಿಗಷ್ಟೇ ತಮ್ಮ ಕವಿತೆಗಳ ಹರಹನ್ನು ಸೀಮಿತಗೊಳಿಸದೇ ಬದುಕಿನ ಹಲವು ವಿಸ್ತರಗಳ ಕಡೆಗೂ ಗಮನ ಸೆಳೆಯುವ ಈ ಕವಿಯ ಮುಂದಿನ ರಚನೆಗಳ ಬಗ್ಗೆ ಕುತೂಹಲ ಹೆಚ್ಚುತ್ತಲಿದೆ. ಘೋಷವಾಕ್ಯವು ಕವಿತೆಯಾಗುವುದಿಲ್ಲ‍ ಮತ್ತು ಕವಿತೆಯಾಗಿ ಗೆದ್ದವು ಅನುದಿನದ ಘೋಷ ವಾಕ್ಯಗಳೇ ಆಗಿ ಬದಲಾಗುತ್ತವೆ ಎನ್ನುವ ಕಿವಿಮಾತಿನೊಂದಿಗೆ ಈ ಕವಿಯ ಕೆಲವು ರಚನೆಗಳನ್ನು ನಿಮ್ಮ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ. ೧. ಭೌತಿಕತೆಯ ಗೀಳು ಮಾನಸಿಕ ಹರಿವು‌‌… ನದಿಯ ಪಾತ್ರ ಅಲ್ಲಿಯೇ ಇದೆ ಅದರ ಉದಯ ಕಾಲದಿಂದಲೂ ಹರಿಯುತ್ತಿರುವ ನೀರು ಮಾತ್ರ ಹೊಸದು ಅದೇ ಹಳೇ ಆಲದ ಮರ ಅದೇ ನೆರಳು ವಿಶಾಲತೆ ಚಿಗುರು ಟಿಸಿಲೊಡೆದು ಮೂಡಿದ ನವಿರು ಹಸಿರು ಕಿರು ತೋಟದ ಅದೇ ರೋಜಾ ಗಿಡ ನೆನ್ನೆಯೂ ಹೂ ಬಿಟ್ಟಿತ್ತು ಇಂದೂ ಬಿಟ್ಟಿದೆ ಆದರೆ ದಳಗಳ ವಿನ್ಯಾಸ ಮಾತ್ರ ನೂತನ ಅವೇ ಸ್ವರಗಳು ಹೊಸ ಹೊಸ ವಿನ್ಯಾಸ ಲಯದಲ್ಲಿ ಹೆಣೆದು ಹೊಮ್ಮುವ ರಾಗಗಳ ನವೀನ ವಿನ್ಯಾಸಗಳು ಮರ ಗಿಡ ಹೂ ನದಿ ಕಡಲು ಎಲ್ಲಾ ಲೋಕಗಳಿಗೂ ಶೇಖರಣೆಯ ತೆವಲಿಲ್ಲ ಅರೆಗಳಿಯಲ್ಲಿ ಮೊಬೈಲಿನಲ್ಲಿ ತೆಗೆದ ನೂರಾರು ಚಿತ್ರಗಳ ಭೌತಿಕತೆ ಒಂದೆರಡು ಸೃಷ್ಟಿಸುವಲ್ಲಿ  ವರ್ಣಚಿತ್ರ ಕಲಾವಿದನಿಗೆ ಅವಧಿಯ ಗಣನೆಯೆಲ್ಲಿ ಇದು ಮಾನಸಿಕ ಹರಿವು ಅದೇ ಕ್ಷಿತಿಜ ಅದೇ ಭೂಮಿ ಇಚ್ಛಿತ ಜೀವದೊಂದಿಗೆ ಲಯಗೊಂಡರೆ ಹೊಸದೊಂದು ಬಣ್ಣ ಪಡೆವ ಹಾಗೆ ಇಬ್ಬರ ನಡುವಿನ ಗೆರೆಯೂ ಅಳಿಸಿದ ತಾದಾತ್ಮ್ಯ ಭಾವ ಇಷ್ಟಕ್ಕೂ ನವೀನ ಗಳಿಗೆಗಳು ನವ ಅನುಭವ ಅಂದರೆ ಹೊಸ ವಿವರಗಳಲ್ಲ ಹಿಂದಿನ ಮುಂದಿನ ಅಡ್ಡ ಉದ್ದ ಹೆಸರುಗಳೆಲ್ಲಾ ಮರೆತು ಹೊಸ ಗಳಿಗೆಯೊಂದಕ್ಕೆ ಮನಸು ಹರಿಬಿಟ್ಟ ಗಳಿಗೆ ದಣಿವಿಲ್ಲದೇ ಹೊಸತನ ಚಲನಶೀಲತೆ ಮೂಡಿ ಆತ್ಮದ ಲಯದೊಂದಿಗೆ ಚೇತೋಹಾರಿಯಾಗಿ ಬೆಸೆಯುವ ಚೇತನ… ೨.  ಕೆಂಪು ಡಬ್ಬ ಮತ್ತು ಕಾಗದದ ದೋಣಿ… ಬರಿಯ ಟಪಾಲುಗಳಿಲ್ಲ ಈ ಕೆಂಪು ಡಬ್ಬಿಯಲ್ಲಿ ನೂರಾರು ಕೈಗಳು ದಾಟಿ ನೂರಾರು ಗಾವುದ ತೆರಳಿ ಯಾರದೋ ಸ್ಪರ್ಶಕ್ಕೆ ಕಾದಿರುವ ಸ್ವಗತಗಳು ಮುಖತಃ ಮಾತಾಗದ ಹೇಳಲೇಬೇಕಾದ ಎಷ್ಟೋ ಮಾತುಗಳಿಗೆ  ಕನಸು ಸಮಾಧಾನ ಎಚ್ಚರ ತಪ್ಪೊಪ್ಪಿಗೆ ನೆನಪು ಎಲ್ಲಾ ಸ್ವಗತಗಳು ಪದಗಳಲ್ಲಿ ಸ್ಪಷ್ಟಗೊಳ್ಳುವ ಹಾದಿ ಎಷ್ಟೋ ದೂರ ಪಯಣಿಸಿ ಬಂದ ಕಾಗದ ಒಡೆಯುವ ಗಳಿಗೆಯ ಉಸಿರ ಕಂಪು ಆತ್ಮಿಕ‌ ಸಂವಾದವೊಂದರ ಹರವು ಜೀವಕ್ಕೆ ಉಣಿಸಬಹುದಾದ ಹಿತ ಬರೀ ಫೋನುಗಳು ಪತ್ರದ ಹಂಗೆಲ್ಲಿ ಈಗ…! ಭಾವ ಭೂಮಿಕೆಯ  ಹರಿಸಿ ನಿಂತ ಪತ್ರವನ್ನೊಮ್ಮೆ ಹಿತವಾಗಿ ನೇವರಿಸಿ ಅಕ್ಷರಗಳಾದ ಸ್ವಗತ  ಕಣ್ತುಂಬಿಕೊಳ್ಳುವ ವಿಸ್ಮಯದಲ್ಲಿ ವಿಹರಿಸುವ ತವಕ  ಕೆಂಪುಡಬ್ಬಿಯ ನೋಡಿದಾಗ ಮೂಡದಿರದೇ… ೩.ತೆರೆ ಅಪ್ಪಳಿಸುವ ಗಳಿಗೆ…ಭಾನು ಭುವಿಯಲ್ಲಿ ಲೀನ ದೃಷ್ಟಿ ಹಾಯಿಸಿದಷ್ಟೂ ನಿನ್ನ ಹರವು ನೀಲಾಕಾಶದ ಬಣ್ಣ ತಳೆದು ನೀಲೀ ತಟ್ಟೆಯಂತೆ ತಂಪಗಿದ್ದೆ ದಣಿವಿಲ್ಲ ಮೋಡಗಳಿಗೆ ಅದೆಷ್ಟು ತಡೆದಿದ್ದವೋ ಛಿದ್ರಗೊಂಡು ಅದೆಷ್ಟು  ಸುರಿದರೂ ತೀರದ ನೋವು ಮಳೆಯ ಅಗಾಧತೆಗೆ ಉಲ್ಬಣಗೊಂಡ ಪರಿ ಮಕ್ಕಳು ಕುಂಚ ಅದ್ದಿ ತೆಗೆದ ನೀರಿನಂತೆ  ವಿಹ್ವಲ ವರ್ಣಕ್ಕೆ ಭಾನು ಇಳೆಗಿಳಿದಿದೋ ಕಡಲೇ ಭಾನುವಿನತ್ತ ಧಾವಿಸಿದೆಯೋ ದಿಕ್ಕುಗಳಾದರೂ ಎಲ್ಲಿ ಎಲ್ಲಾ ನಾದಗಳೂ ಬಣ್ಣಗಳೂ ಹಂಗು ಹಮ್ಮುಗಳು ಲಯ ಕಳೆದುಕೊಂಡ ಈ ರುದ್ರಘೋಷ ಅದೆಷ್ಟು ತಪನ ತನ್ಮಯತೆಯಿಂದ ಕಾದ ತವಕದ ತೀವ್ರತೆ ಮಿತಿ‌ ಕಳೆದು ತೆರೆ ಅಪ್ಪಳಿಸುವ ಗಳಿಗೆ ಜಲದಲ್ಲಿ ಜಲ ಒಂದಾಗುವ ಗಳಿಗೆ ಭಾನು ಭೂಮಿಯಲ್ಲಿ ಲೀನ ೪. ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ… ನೆನ್ನೆಯಷ್ಟೇ  ಚಂದಗೊಳಿಸಿದ್ದ ಗೋಡೆಯ ಬಣ್ಣಗಳು ಮುರಿದುಬಿದ್ದ ಹೆಂಚುಗಳೊಂದಿಗೆ ಬಣ್ಣ ಹಂಚಿಕೊಂಡಿವೆ ಅದೆಷ್ಟೊ ಬೆಲೆಯಿತ್ತು ತಂದು ಅಷ್ಟೇ ಬೆಲೆಯ  ಫ್ರೇಮಿನಲಿ  ಸಿಕ್ಕಿಸಿಟ್ಟು ಬೀಗಿದ ಜಲವರ್ಣ ಚಿತ್ರ ಮಳೆಯಲ್ಲಿ ಕರಗಿದೆ ಆಳು ಕಾಳಿಗೂ  ಬೇಡಿ ಕೇಳಿದವರಿಗೂ ನೀಡದೇ ಮುಂದೆ ಬೇಕಾದಿತೆಂದು ಪೇರಿಸುತ್ತಲೇ ಇಟ್ಟ ಧವಸ ನೆನಸಿ ಬೇಯಿಸುವ ಗೋಜಿಲ್ಲ ಧುತ್ತೆಂದು ಇಂದು ತಾನೇ-ತಾನಾಗಿ  ಧಾರೆಯಲಿ ನೆನಸಿಕೊಂಡಿವೆ ಯಾರದೋ ಬಂಗಲೆಯ ಮುಂದಿನ ಗಣಪ ಪಕ್ಕದ

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊದಬನಿ-ಹೊಸದನಿ-14 ಅಗತ್ಯಕ್ಕಿಂತ ಲಂಬಿಸಿಯೂ ಹ್ರಸ್ವವಾಗೇ ಉಳಿಯುವ ಆಸ್ಪರಿಯವರ ಕವಿತೆಗಳು ಚನ್ನಬಸವ ಆಸ್ಪರಿ . ಅವ್ವನೂ ಕಸೂತಿ ಹಾಕುತ್ತಿದ್ದಳು ಅಪ್ಪನ ತೂತುಬಿದ್ದ ಬನಿಯನ್ನಿನ ಮೇಲೆ ಉಟ್ಟರೆ ಅಂಡು ಕಾಣಿಸುವ ನನ್ನ ದೊಗಲೆ ಚಡ್ಡಿಗೆ ಅಲ್ಲಲ್ಲಿ ಹರಿದ ಪಾಟೀಚೀಲಕ್ಕೆ ಎಂದು ತನ್ನೊಳಗಿನ ಸಂಕಟಗಳನ್ನು ಕವಿತೆಯಾಗಿಸುವ ಚನ್ನಬಸವ ಆಸ್ಪರಿ ಫೇಸ್ಬುಕ್ಕಿನಲ್ಲಿ ಬರೆಯುತ್ತಿರುವ ಹಲವು ಹೆಸರುಗಳ ನಡುವೆ ಅನುಭವದ ಆಧಾರ ಪಡೆದ ಸಶಕ್ತ ಕವಿತೆಗಳನ್ನು  ಅಪರೂಪಕ್ಕೆ ಪ್ರಕಟಿಸುತ್ತಿರುತ್ತಾರೆ. ನಾವೆಲ್ಲ ಅವ್ವ ಎನ್ನುವ ಕವಿತೆಯ ಸರ್ವ ಸ್ವಾಮ್ಯವನ್ನೂ ಲಂಕೇಶರಿಗೆ ಅರ್ಪಿಸಿಬಿಟ್ಟಿರುವಾಗಲೂ ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ಕಾಡುವ ಕಾಪಾಡಿದ ಅವ್ವನ ನೆನಪು ಅನನ್ಯ. ಅಸ್ಪರಿಯವರ ಈ ಕವಿತೆ ಅವಧಿಯಲ್ಲೂ ಪ್ರಕಟವಾಗಿತ್ತು. ಈ ಪದ್ಯದಲ್ಲೇ ಕವಿ ತಾಯಿಯನ್ನು ಹೀಗೂ ಕಾಣುತ್ತಾನೆ; ನಂಜನೇ ಬಳುವಳಿಯಾಗಿ ಕೊಟ್ಟವರ ಅಳುವ ಕೊರಳಿಗೂ ಸಾಂತ್ವನದ ಹೆಗಲೊಡ್ಡಿದ ಅವ್ವ ಶಿಲುಬೆಗಂಟಿದ ಹನಿ ಹನಿ ರಕ್ತದಲೂ ಅಂತಃಕರಣದ ಕಡುಲಿಕ್ಕಿಸಿದ ಏಸು ಅವರಿವರ ಬದುಕು ಸಿಂಗರಿಸುತ್ತಲೇ ಕಾಲನ ಪಾದದಡಿ ನರಳಿದ ಪಾಪದ ಹೂ ಎಂದು ಬರೆಯುವಾಗ “ಪಾಪದ ಹೂ” ಎಂದು ಯಾಕಾಗಿ ಬರೆದರೋ ಏನೋ, ಹೊಸ ಕಾಲದ ಹುಡುಗರು ತಾವು ಬಳಸಿದ ಶಬ್ದಗಳ ಬಗ್ಗೆ ತುಂಬಾ ಎಚ್ಚರದಲ್ಲಿರುವ ಅಗತ್ಯತೆ ಇದ್ದೇ ಇದೆ. ಪ್ರಾಯಶಃ ಲಂಕೇಶರು ಬೋದಿಲೇರನನ್ನು ಅನುವಾದಿಸಿದ್ದ ಪಾಪದ ಹೂ ಎನ್ನುವ ಶೀರ್ಷಿಕೆ ಈ ಕವಿಗೆ ತಕ್ಷಣಕ್ಕೆ ಹೊಳೆದಿರಬೇಕು. ಶ್ರೀ ಚನ್ನಬಸವ ಆಸ್ಪರಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಾರಟಗಿಯವರು. ವೃತ್ತಿಯಿಂದ ಪ್ರೌಢ ಶಾಲಾ ಆಂಗ್ಲ ಭಾಷಾ ಶಿಕ್ಷಕ. ಪ್ರಸ್ತುತ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್‌ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿ.ಅನುವಾದದಲ್ಲಿ ವಿಶೇಷ ಆಸಕ್ತಿ.ವಿಶ್ವವಾಣಿ, ವಿಜಯ ಕರ್ನಾಟಕ, ಅವಧಿ ಪತ್ರಿಕೆಗಳಲ್ಲಿ ಬಿಡಿ ಕವಿತೆಗಳು ಪ್ರಕಟವಾಗಿವೆ.ಸಂಕ್ರಮಣ ಕಾವ್ಯ ಪುರಸ್ಕಾರ ಹಾಗೂ ಪ್ರತಿಲಿಪಿ ಕವನ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಇಲಾಖೆಯಿಂದ ಪೂರ್ವಾನುಮತಿ ಪಡೆದು ಪಾರ್ಟ್ ಟೈಮ್ ಕ್ಯಾಂಡಿಡೇಟ್ ಆಗಿ ಪಿ.ಹೆಚ್.ಡಿ.ಮಾಡುತ್ತಿರುವ ಇವರು ಪಿ.ಯು.ಉಪನ್ಯಾಸಕರ ನೇಮಕಾತಿಗಾಗಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಗಂಗಾವತಿ ತಾಲೂಕಿನ ಶ್ರೀರಾಮನಗರದ ಸರಕಾರಿ ಪ.ಪೂ.ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮೊದಲನೇ ರ್ಯಾಂಕ್ ಪಡೆದ ಪ್ರತಿಭಾಶಾಲಿ,  ಸರ್ಕಾರಿ ನೌಕರಿ ಸೇರಿದ ಕೂಡಲೇ ಸಂಬಳ ಸಾರಿಗೆ ಇಂಕ್ರಿಮೆಂಟೆಂದು ಲೆಕ್ಕ ಹಾಕುತ್ತ ಕಳೆದೇ ಹೋಗುವ ಬದಲು ಇಲಾಖೆಯು ಒದಗಿಸಿರುವ ಅವಕಾಶವನ್ನು ಉಪಯೋಗಿಸಿಕೊಂಡ ಮಾದರಿ ಯುವಕ. ಕವಿತೆ ಬರೆಯುವುದೆಂದರೆ ಶಬ್ದದ ಧಾರಾಳ ಬಳಕೆ ಮತ್ತು ವಾಚಾಳಿತನವೇ ಆಗುತ್ತಿರುವ ಹೊತ್ತಲ್ಲಿ ಈ ಕವಿ ಶಬ್ದಗಳ ಶಬ್ದದ ಸಂತೆಯೊಳಗೂ ಮೌನವನ್ನು ಹುಡುವುದು ವಿಶೇಷ ಲಕ್ಷಣವೇ ಆಗಿದೆ. ಮಾತಾಗದೇ ಹೊರಬರಲು ಕಾತರಿಸಿ ಮಾತಾಗಿ ಹೆಗಲು ನೀಡದ ಮೌನವಾಗಿ ತಬ್ಬಿ ರಮಿಸದ ಎಡಬಿಡಂಗಿ ಶಬ್ದಗಳ ಹಡೆದ ಮನಸಿಗೆ ಗೊತ್ತಾಗಲಿಲ್ಲವೇ ಗಂಡಾಗಿ ಗುಡುಗದ ಹೆಣ್ಣಾಗಿ ಮರುಗದ ತನ್ನ ಸಂತಾನ ಕೇವಲ ಚಟದ ಫಲವೆಂದು? ಎಂದೆನ್ನುವಾಗ ಮಾತ ಪಾತಳಿಯ ಅಸ್ತಿವಾರವನ್ನೇ ಅಲುಗಿಸಿ ಆಳದಾಳದ ಗೊಂದಲವನ್ನು ಹೊರಹಾಕುತ್ತಾರೆ ಮತ್ತು ಕವಿತೆಯ ಅಂತ್ಯದಲ್ಲಿ ಶಬ್ದಕೆ ಅಂಟದ ಮಾತು ನಿಶ್ಯಬ್ದ ಮೀರಿದ ಮೌನ ದಾಟಬಹುದು ಅಂತಃಕರಣದ ನಾವೆ ಎದೆಯಿಂದ ಎದೆಗೆ ಎನ್ನುತ್ತಾರಲ್ಲ ಅದು ಸುಲಭಕ್ಕೆ ಸಿಗದ ಸಾಮಾನ್ಯ ಸಂಗತಿಗೆ ನಿಲುಕದ ವಸ್ತುವೂ ಆಗಿದೆ. ಬೋಧಿಯಿಂದ ಬುದ್ಧನಿಗೆ ಜ್ಞಾನವೋ ಬುದ್ಧನಿಂದ ಬೋಧಿಗೆ ಮುಕ್ತಿಯೋ ! ಹಸನು ದಾರಿಯಲಿ ನಡೆದವನದಿರಲಿ ನಡೆದ ದಾರಿಯನೇ ಹಸನುಗೊಳಿಸಿದವನ ಪಾದ ಧೂಳಿಗೂ ಮುಕ್ತಿ ಎಂದು “ಮುಕ್ತಿ ಮಾಯೆ” ಎನ್ನುವ ಕವಿತೆಯಲ್ಲಿ ಕಚ್ಚಾ ರಸ್ತೆಯಲ್ಲಿ ನಡೆದೂ ಅದನ್ನೇ ಹಸನು ಮಾಡಿದವನ ಪಾದದ ಧೂಳಿಗೂ ಮುಕ್ತಿ ಸಿಕ್ಕಿತು ಎನ್ನುವಾಗ ಪದ್ಯದ ಆಶಯವನ್ನೇ ಗೊಂದಲದ ಗೂಡಾಗಿಸಿಬಿಟ್ಟಿದ್ದಾರೆ. ಇದು ಸಹಜವಾಗಿ ಆಗುವ ತಪ್ಪು. ಕವಿಯೊಬ್ಬ ತಾನು ಬರೆದುದನ್ನು ಕೆಲವು ದಿನ ಹಾಗೇ ಬಿಟ್ಟು ಕೆಲ ದಿದ ನಂತರ ಅದು ತನ್ನ ರಚನೆಯೇ ಅಲ್ಲವೆಂದುಕೊಂಡು ಓದಿದರೆ ತಪ್ಪು ಕಾಣಿಸುತ್ತದೆ. ಬರೆದ ಕೂಡಲೇ ಪ್ರಕಟಿಸಿ ಬಿಡುವ ಅವಸರ ಈ ಬಗೆಯ ತಪ್ಪನ್ನು ಮಾಡಿಸಿ ಬಿಡುತ್ತದೆ. ನನ್ನ ಮುಖದ ಮೇಲೆ ಥೇಟ್ ಅಪ್ಪನದೇ ಮೂಗು ತುಟಿಗಳಿಗೆ ಅವ್ವನದೇ ನಗು ಅವೇ ಚಿಕ್ಕ ಕಣ್ಣುಗಳು ಚಿಕ್ಕಪ್ಪನಿಗಿರುವಂತೆಯೇ ಮಾತಿನಲಿ ಅಜ್ಜನದೇ ಓಘ ನಡೆದರೆ ಸೋದರಮಾವನ ಗತ್ತು ನನ್ನದೇನಿದೆ? ಎನ್ನುವ ಕವಿತೆಯ ಸಾಲುಗಳು ಈ ಕವಿಯ ಭಿನ್ನ ಧ್ವನಿಗೆ ಪುರಾವೆಯಾಗಿವೆ. ಈ ನಡುವೆ ಅದರಲ್ಲೂ ಈ ಎಫ್ಬಿಯಲ್ಲಿ ಪದ್ಯಗಳೆಂದು ಪ್ರಕಟವಾಗುವ ೯೦% ಪದ್ಯಗಳು ಸ್ವಕ್ಕೆ ಉರುಳು ಹಾಕಿಕೊಳ್ಳುತ್ತಿರುವಾಗ ಈ ಕವಿ ತನ್ನ ಅಸ್ತಿತ್ವ ಅನ್ಯರ ಪ್ರಭಾವದಿಂದ ಆದುದು ಎಂಬ ಪ್ರಜ್ಞೆಯಿಂದ ಆದರೆ ಅದನ್ನು ನೆಗೆಟೀವ್ ಅರ್ಥದಲ್ಲಿ ಹೇಳದೇ ಇರುವುದು ಭಿನ್ನತೆ ಅಲ್ಲದೇ ಮತ್ತಿನ್ನೇನು? ಹುಟ್ಟು ಪಡೆವ ಜೀವಕ್ಕೆ ನೀಗದ ಪರಿಪಾಟಲು ಜೀವ ಪಡೆವ ಕವಿತೆಗೆ ಸಾವಿರ ಸವಾಲು ಎಂದು ಸ್ಪಷ್ಟವಾಗಿ ಅರಿತಿರುವ ಈ ಕವಿಗೆ ಕವಿತೆಯ ರಚನೆ ಸುಲಭದ್ದೇನೂ ಅಲ್ಲ ಎನ್ನುವ ಸತ್ಯ ಗೊತ್ತಿದೆ. ಇದು ಕೂಡ ಅಪರೂಪವೇ. ಸದ್ಯದ ಬಹುತೇಕರು ಪದವೊಂದಕ್ಕೆ ಇರುವ ಅರ್ಥವನ್ನೇ ಅರಿಯದೇ ಚಡಪಡಿಸುತ್ತ ಇರುವಾಗ ಚನ್ನಬಸವ ಆಸ್ಪರಿಯವರು ತಮ್ಮನ್ನು ತಾವೇ ನಿಕಷಕ್ಕೆ ಒಡ್ಡಿ ಕೊಳ್ಳುತ್ತ ಪದ್ಯರಚನೆಯ ಸಂದರ್ಭ ಮತ್ತು ಸಮಯ ಅರಿತವರೂ ಹೌದೆಂದು ಇದು‌ ಪುರಾವೆ ನೀಡಿದೆ. ಬುದ್ಧ ಕತ್ತಲು ಮತ್ತು ದೀಪಗಳ ಜೊತೆಗೆ ತನ್ನ ಒಳಗನ್ನು ತೋಯಿಸಿದ ಕುರಿತೇ ಪದ್ಯವನ್ನಾಗಿ ಬೆಳಸುವ ಆಸ್ಪರಿ ಒಮ್ಮೊಮ್ಮೆ ತೀವ್ರ ವಿಷಾದದ ಸುಳಿಗೂ ಸಿಕ್ಕಿ ಬೀಳುತ್ತಾರೆ ಮತ್ತು ಆ ಅಂಥ ಸುಳಿಯಿಂದ ಹೊರಬರುವುದು ದುಸ್ತರ ಎನ್ನುತ್ತಲೇ ಕಡು ಕಷ್ಟದ ಬದುಕು ತೋರುಗಾಣಿಸಿದ ಬೆಳಕ ದಾರಿಯನ್ನೂ ಸ್ಮರಿಸುತ್ತಾರೆ. ತನ್ನೊಳಗನ್ನೇ ಶೋಧಿಸದೇ ಅನ್ಯರ ಹುಳುಕನ್ನು ಎತ್ತಿಯಾಡುವ ಕಾಲದಲ್ಲಿ ಇದು ಭಿನ್ನ‌. ಆದರೂ ಅಗತ್ಯಕ್ಕಿಂತ ಹೆಚ್ಚು ವಿಸ್ತರಿಸುವ ಇವರ ಕವಿತೆಗಳಿಗೆ  ಸಂಕಲನಕ್ಕೆ (ಕತ್ತರಿ ಪ್ರಯೋಗ) ಅಂದರೆ ಅಗತ್ಯಕ್ಕಿಂತ ಉದ್ದವಾದುದನ್ನು ಹ್ರಸ್ವಗೊಳಿಸುವ ಅಗತ್ಯತೆ ಇದ್ದೇ ಇದೆ. ನಿಜದ ಕವಿತೆಗಳು ಈ ಕವಿಯ ಒಳಗೇ ಉಳಿದಿವೆ. ಪ್ರಾಯಶಃ ಕಂಡ ಕಷ್ಟಗಳು ಉಂಡ ಸಂಕಟಗಳಾಚೆಯೂ ಇರುವ ಸಂತಸವನ್ನೂ ಇವರು  ಹೊರತಾರದೇ ಇದ್ದರೆ ಬರಿಯ ವಿಷಾದದಲ್ಲೇ ಈ ಕವಿತೆಗಳು ನರಳಬಹುದು. ಬದುಕೆಂದರೆ ವಿಷಾದ ಸಂತಸ ಭರವಸೆ ಆಸೆ ನಿರಾಸೆಗಳ ಒಟ್ಟು ಮೊತ್ತ. ಬರಿಯ ದುಃಖಾಗ್ನಿಯೇ ಅಲ್ಲದೆ ಸಂತಸದ ಸಂಭ್ರಮದ ಘಳಿಗೆಯ ದಾಖಲೆಯಾಗಿಯೂ ಇವರ ಕವಿತೆಗಳು ಹೊಮ್ಮಲೇ ಬೇಕಾದ ಅನಿವಾರ್ಯವನ್ನು ಈ ಕವಿ ಅರಿಯುವ ಅಗತ್ಯತೆ ಇದೆ. ಚನ್ನಬಸವ ಆಸ್ಪರಿಯವರ ಉದ್ದೇಶಿತ ಸಂಕಲನ ಸದ್ಯವೇ ಹೊರ ಬರಲಿದೆಯಂತೆ. ಅದಕ್ಕೂ ಮೊದಲು ಅವರು ಅದರ ಹಸ್ತಪ್ರತಿಯನ್ನು ಪುಸ್ತಕ ಪ್ರಾಧಿಕಾರವು ಪ್ರತಿವರ್ಷ ಕೊಡುವ ಸಹಾಯಧನದ ಯೋಜನೆಯಲ್ಲಿ ಪ್ರಕಟಿಸಿದರೆ ಅವರ ಹೆಸರು ಕರ್ನಾಟಕದ ಉದ್ದಗಲಕ್ಕೂ ಗೊತ್ತಾಗುತ್ತದೆ ಎನ್ನುವ ಆಶಯದೊಂದಿಗೆ ಅವರ ಪದ್ಯಗಳನ್ನು ಕುರಿತ ಈ ಟಿಪ್ಪಣಿಗೆ ಅವರದೇ ಐದು ಕವಿತೆಗಳನ್ನು ಸೇರಿಸಿ ಮುಗಿಸುತ್ತೇನೆ. ೧. ಶಬ್ದ ಸಂತೆಯಲಿ ಮೌನದ ಮೆರವಣಿಗೆ ಕೆಲವು ಶಬ್ದಗಳು ತುಂಬ ವಿಚಿತ್ರ ಹೊರಬಂದು ಮಾತಾಗುವುದೇ ಇಲ್ಲ ! ಕೇವಲ ತುಟಿ ಕಿನಾರೆಗಳ ಅರಳಿಸಿಯೋ ಮೂಗು ಮುರಿದೋ ಹಣೆಗೆರೆಗಳ ಬರೆದೋ ಕೆನ್ನೆಗುಳಿಗಳಲಿ ನರ್ತಿಸಿಯೋ ಕಣ್ ಹುಬ್ಬು ಕೊಂಕಿಸಿಯೋ ಇಲ್ಲಾ ಕಣ್ಣು ತಿರುವಿಯೋ ಹೊತ್ತು ತಂದ ಸಂದೇಶ ರವಾನಿಸಿಬಿಡುತ್ತವೆ ಅಖಂಡ ಮೌನದಲಿ… ನಿರುಮ್ಮಳ ನಿದ್ದೆಗೆ ಹಿತದಿಂಬು ಕೆಲವು ಸಲ ಮತ್ತೆ ಹಲವು ಸಲ ಬೂದಿ ಮುಚ್ಚಿದ ಕೆಂಡ ಕೆಲವೊಮ್ಮೆ ಶಬ್ದಗಳು ಅಬ್ಬರಿಸುತ್ತವೆ ಮಾತು ಸೋಲುತ್ತದೆ ಆದರೂ ಉದುರುತ್ತಲೇ ಹೋಗುತ್ತವೆ ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಹಂಕಾರದ ಕಣ್ಣಾಮುಚ್ಚಾಲೆಯಲಿ ಮೈಮರೆವ ಮನಸಿಗೆ ಚಾಟಿ ಏಟು ಯಾವ ಲೆಕ್ಕ? ಒಮ್ಮೊಮ್ಮೆ ಶಬ್ದಗಳು ಜಾರುತ್ತವೆ ನಾಲಗೆಯಿಂದ ಚಿಮ್ಮುತ್ತವೆ ಬಾಯಿಂದ ತಿವಿಯುತ್ತವೆ ಒಲವ ಹನಿಗೆ ಬಾಯ್ದೆರೆದ ದೈನೇಸಿ ಎದೆಯನು ಇಂಥ ಶಬ್ದಗಳ ಅನಾಯಾಸವಾಗಿ ಹಡೆದು ಧ್ವನಿಬಟ್ಟೆ ತೊಡಿಸಿ ಸಿಂಗರಿಸಿ ಮಾತು ಎಂದು ಹೆಸರಿಟ್ಟು ತೇಲಿಬಿಟ್ಟ ಮನಸಿಗೆ ವೇಗ ರಭಸ ದಾರಿ ಗುರಿ ಯೇ ಗೊತ್ತಿಲ್ಲದಿರುವಾಗ ಅವು ಹಾದರಕ್ಕೆ ಹುಟ್ಟಿದ ಮಕ್ಕಳಲ್ಲದೆ ಮತ್ತೇನು? ಇನ್ನೂ ಕೆಲ ಶಬ್ದಗಳು ಮೈಮುರಿಯುತ್ತವೆ ಆಕಳಿಸುತ್ತವೆ ತೂಕಡಿಸುತ್ತವೆ ಜೋಲಿ ಹೊಡೆಯುತ್ತಲೇ ನಾಲಿಗೆ ಪಲ್ಲಂಗದಲ್ಲಿ ಪವಡಿಸುತ್ತವೆ ಮತ್ತೆ ಕೆಲವು ಗಂಟಲ ಕಣಿವೆಯಲ್ಲಿ ಜಾರಿ ಬೀಳುತ್ತವೆ ತುಟಿಸರಹದ್ದುಗಳಲಿ ಸಿಕ್ಕಿ ನರಳುತ್ತವೆ ಹಲ್ಲುಗಂಬಗಳಿಗೆ ನೇಣು ಬಿಗಿದುಕೊಳ್ಳುತ್ತವೆ ಮಾತಾಗಿ ಹೆಗಲು ನೀಡದ ಮೌನವಾಗಿ ತಬ್ಬಿ ರಮಿಸದ ಎಡಬಿಡಂಗಿ ಶಬ್ದಗಳ ಹಡೆದ ಮನಸಿಗೆ ಗೊತ್ತಾಗಲಿಲ್ಲವೇ ಗಂಡಾಗಿ ಗುಡುಗದ ಹೆಣ್ಣಾಗಿ ಮರುಗದ ತನ್ನ ಸಂತಾನ ಕೇವಲ ಚಟದ ಫಲವೆಂದು? ಹೀಗೂ ಉಂಟು- ಶಬ್ದಗಳನ್ನು ಒದ್ದು ಹೋದ ಬುದ್ಧ ಲೋಕದ ಮಾತಾದ ಬಹುಶಃ ಈ ಲೋಕದ ಪಾಪಗಳೆಲ್ಲ ತೀರಿದ ದಿನ ಅಥವಾ ಮಾಡಿದ ಮಾಡುವ ಪ್ರತಿ ಪಾಪಕ್ಕೂ ವಿಮೋಚನಾ ಪತ್ರ ದೊರೆತೀತೆಂಬ ಭರವಸೆ ದಕ್ಕಿದ ದಿನ ಅಥವಾ ಪಾಪ ಪುಣ್ಯಗಳಾಚೆಯ ನಿರ್ವಾತದಲ್ಲಿ ನೆಲೆಯಾದ ದಿನ ಉದುರಬಹುದು ಶಬ್ದಗಳು ನಿಶ್ಯಬ್ದದ ಕೂಸುಗಳಾಗಿ ಮಾರ್ದನಿಸಬಹುದು ಆತ್ಮಗರ್ಭದಿಂದ ಶಬ್ದಕೆ ಅಂಟದ ಮಾತು ನಿಶ್ಯಬ್ದ ಮೀರಿದ ಮೌನ ದಾಟಬಹುದು ಅಂತಃಕರಣದ ನಾವೆ ಎದೆಯಿಂದ ಎದೆಗೆ             -ಚನ್ನಬಸವ ಆಸ್ಪರಿ ೨.ಮುಕ್ತಿ ಮಾಯೆ ಕವಿತೆ ಒಡಲಿಂದ ಹಠಾತ್ತನೆ ಕಳಚಿದ ಅನಾಥ ಸಾಲು ಭಾವಕ್ಕೆ ಭಾರವೇ? ಮುಕ್ತಿ ಕವಿತೆಗೋ ದೈನೇಸಿ ಪದಗಳಿಗೋ ! ಟೊಂಗೆ ತೋಳಿಂದ ಹಗುರ ಕುಸಿದ ಹಣ್ಣೆಲೆ ಮರಬಸಿರಿಗೆ ಭಾರವೇ? ಮುಕ್ತಿ ಟೊಂಗೆಗೋ ಹಣ್ಣೆಲೆಯ ಜೀವಕೋ ! ಗಾಳಿ ಉಸಿರಿಂದ ಸರಕ್ಕನೆ ಸೂತ್ರ ಹರಿದ ಗಾಳಿಪಟ ದಾರಕ್ಕೆ ಭಾರವೇ? ಮುಕ್ತಿ ಆಕಾಶಕ್ಕೋ ತಲೆಮರೆಸಿಕೊಂಡ ಗಾಳಿಪಟಕ್ಕೋ ! ಬಾನಗೊಂಚಲಿಂದ ಧುತ್ತನೆ ಉದುರಿದ ನಕ್ಷತ್ರ ಬೆಳಕಿಗೆ ಭಾರವೇ? ಮುಕ್ತಿ ಬೆಂಕಿಗೋ ಕುದಿಕುದಿದು ಆರಿದ ನಕ್ಷತ್ರದೊಡಲಿಗೋ ! ಬೋಧಿಯಿಂದ ಬುದ್ಧನಿಗೆ ಜ್ಞಾನವೋ ಬುದ್ಧನಿಂದ ಬೋಧಿಗೆ ಮುಕ್ತಿಯೋ ! ಹಸನು ದಾರಿಯಲಿ ನಡೆದವನದಿರಲಿ ನಡೆದ ದಾರಿಯನೇ ಹಸನುಗೊಳಿಸಿದವನ ಪಾದ ಧೂಳಿಗೂ ಮುಕ್ತಿ                            -ಚನ್ನಬಸವ ಆಸ್ಪರಿ ೩. ಅವ್ವ ಎಂಬ ರೇಖಾಚಿತ್ರ ಅವ್ವ ಆಡಿ ಬಂದ ನನ್ನ ಅಂಗಾಲ ತೊಳೆಯಲಿಲ್ಲ ಕೇಕು ಕತ್ತರಿಸಿ ಮೋಂಬತ್ತಿ ಆರಿಸುವ ನನ್ನ  ಸಂಭ್ರಮಕ್ಕೆ ಸಾಕ್ಷಿಯಾಗಲಿಲ್ಲ ಅಪ್ಪ ಮನೆ ಕಟ್ಟಲಿಲ್ಲ ಅವ್ವ ಮನೆಯ ಗೌಡತಿ ಆಗಲಿಲ್ಲ ಗುಳೇ ಹೊರಟ ಅಪ್ಪನ ಹಿಂದೆ ಗಂಟು ಮೂಟೆ ಕಟ್ಟಿ ಊರೂರು ಅಲೆದಳು ಮರುಮಾತನಾಡದೆ ಸಾಕಿದ ನಾಯಿ ಯಜಮಾನನ್ನು ಹಿಂಬಾಲಿಸಿದಂತೆ ಸುಮ್ಮನೆ ಬಾಲ ಅಲ್ಲಾಡಿಸಿಕೊಂಡು ಅಪ್ಪನಿಗೆ ಬಣ್ಣ ಬಣ್ಣದ ನಿಲುವಂಗಿ ತೊಡಿಸಿ ತಾನೇ ಬಣ್ಣದ ಪತಂಗವಾಗುತ್ತಿದ್ದ ಅವ್ವನ ಮಾಸಿದ ಸೀರೆ ಸೆರಗಿನ ತುಂಬ ಹಳಸಿದೆದೆಯ ಕನಸುಗಳು ಉಳಿದರ್ಧ ಬದುಕು ನೀರ ಮೇಲೆ ತೇಲಿ ಬಿಟ್ಟ ಬಾಗಿನಕ್ಕೆ ಮಾಡಿದ ಸಿಂಗಾರ ಅವ್ವನೂ ಕಸೂತಿ ಹಾಕುತ್ತಿದ್ದಳು ಅಪ್ಪನ ತೂತುಬಿದ್ದ ಬನಿಯನ್ನಿನ ಮೇಲೆ ಉಟ್ಟರೆ ಅಂಡು ಕಾಣಿಸುವ ನನ್ನ ದೊಗಲೆ ಚಡ್ಡಿಗೆ ಅಲ್ಲಲ್ಲಿ ಹರಿದ ಪಾಟೀಚೀಲಕ್ಕೆ ಪುಸ್ತಕದಲ್ಲಿಟ್ಟ ನವಿಲುಗರಿ ಇನ್ನೂ ಮರಿ ಹಾಕಿಲ್ಲ ಪಾಟೀಚೀಲದ ಹೊಲಿಗೆಗಂಟಿದ ಅವ್ವನ ಬೆರಳ ತುದಿಯ ಬಿಸಿ ಇನ್ನೂ ಆರಿಲ್ಲ ನಂಜನೇ ಬಳುವಳಿಯಾಗಿ ಕೊಟ್ಟವರ ಅಳುವ ಕೊರಳಿಗೂ ಸಾಂತ್ವನದ ಹೆಗಲೊಡ್ಡಿದ ಅವ್ವ ಶಿಲುಬೆಗಂಟಿದ ಹನಿ ಹನಿ ರಕ್ತದಲೂ ಅಂತಃಕರಣದ ಕಡುಲಿಕ್ಕಿಸಿದ ಏಸು ಅವರಿವರ ಬದುಕು ಸಿಂಗರಿಸುತ್ತಲೇ ಕಾಲನ ಪಾದದಡಿ ನರಳಿದ ಪಾಪದ ಹೂ ವಿಚಿತ್ರ ನರಳಿಕೆಗಳನುಂಡು ತೇಗುವ ವಾರ್ಡಿನ ಬಿಳಿ ಗೋಡೆಗಳ ಮಧ್ಯೆ

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ – ಹೊಸ ಬನಿ-೧೩. ಸಿದ್ಧಾಂತದ ಚೌಕಟ್ಟಿನಲ್ಲೇ ಉಳಿದೂ ಬೆಳಕಿಗೆ ತಡಕುವ ವಸಂತ ಬನ್ನಾಡಿ ಕವಿತೆಗಳು ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ವಾಣಿಜ್ಯ ಪಾಠ ಕಲಿಸುತ್ತಿದ್ದ ಶ್ರೀ ವಸಂತ ಬನ್ನಾಡಿ ಅಲ್ಲಿನ ರಂಗ ಅಧ್ಯಯನ ಕೇಂದ್ರದ ಸಂಚಾಲಕರಾಗಿಯೂ ಪ್ರಸಿದ್ಧರು. ಶಬ್ದಗುಣ ಹೆಸರಿನ ಅರ್ಧವಾರ್ಷಿಕ ಸಾಹಿತ್ಯ ಪತ್ರಿಕೆಯನ್ನು ಅತ್ಯಂತ ಶ್ರೀಮಂತವಾಗಿ ಸಂಪಾದಿಸುತ್ತಿದ್ದವರು ಅವರು. ಶಬ್ದಗುಣ ಕೂಡ ಉಳಿದೆಲ್ಲ ಹಲವು ಸಾಹಿತ್ಯ ಪತ್ರಿಕೆಗಳ ಹಾಗೇ ಪ್ರಾರಂಭದಲ್ಲಿ ಅತಿ ಉತ್ಸಾಹ ತೋರುತ್ತಲೇ ಮೂರು ಸಂಚಿಕೆಗಳನ್ನು ಸಂಪಾದಿಸುವಷ್ಟರಲ್ಲೇ ಅಕಾಲಿಕ ಮರಣಕ್ಕೆ ತುತ್ತಾಯಿತು. ಸಾಹಿತ್ಯ ಪತ್ರಿಕೆಗಳ ಬಗ್ಗೆ ಪ್ರೀತಿಯ ಮಾತು ಆಡುತ್ತಲೇ ಅದರ ಪೋಷಣೆಗೆ ಅತಿ ಅವಶ್ಯವಾದ ಚಂದಾ ಕೊಡದೆ ಆದರೆ ಪತ್ರಿಕೆ ಪಾಪ ಪ್ರಕಟಣೆ ನಿಲ್ಲಿಸಿತೆಂದು ಚಿರ ಸ್ಮರಣೆಯ ಲೇಖನ ಬರೆಯುವ ಲೇಖಕರೇ ಹೆಚ್ಚಿರುವಾಗ ಸಾಹಿತ್ಯ ಪತ್ರಿಕೆಗಳ ಪ್ರಕಟಣೆಯ ಬಗ್ಗೆಯೇ ವಿಸ್ತೃತ ಲೇಖನ ಬರೆಯಬಹುದು. ಇರಲಿ,ಆದರೆ ತಂದದ್ದು ಮೂರೇ ಮೂರು ಸಂಚಿಕೆಗಳೇ ಆದರೂ ಆ ಸಂಚಿಕೆಗಳನ್ನು ರೂಪಿಸುವುದಕ್ಕೆ ಫಣಿರಾಜ್ ಮತ್ತು ರಾಜಶೇಖರರಂಥ ಅಪ್ಪಟ ಸಮಾಜ ವಾದೀ ಚಿಂತನೆಯ ಲೇಖಕರ ಸಹಕಾರ ಇವರಿಗೆ ಇತ್ತೆಂದರೆ ನಿಸ್ಸಂಶಯವಾಗಿ ಬನ್ನಾಡಿಯವರ ಚಿಂತನೆಯ ಹಾದಿಯನ್ನು ಮತ್ತೆ ಸ್ಪಷ್ಟಪಡಿಸುವ ಅವಶ್ಯಕತೆಯೇ ಇಲ್ಲ. ತಮ್ಮೆಲ್ಲ ಸಮಯ ಮತ್ತು (ಆರ್ಥಿಕ) ಶಕ್ತಿಯನ್ನು ಕೂಡ ರಂಗ ಅಧ್ಯಯನ ಕೇಂದ್ರದ ಚಟುವಟಿಕೆಗಳಿಗೆ ಮತ್ತು ಪ್ರಕಾಶನದ ಕೆಲಸಕ್ಕೂ ಬಳಸಿಯೇ (ಪ್ರ)ಸಿದ್ಧರಾದ ಶ್ರೀ ಬನ್ನಾಡಿ ರಂಗ ಕರ್ಮಿಯಾಗಿ ಕೂಡ ಸಮಾಜವಾದೀ ಸಿದ್ಧಾಂತದ ಪ್ರತಿ ಪಾದಕರಾಗಿ ನಿರಂತರವಾಗಿ ಫ್ಯೂಡಲ್ ತತ್ವಗಳ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ಗರ್ಜಿಸುತ್ತಲೇ ಇರುವವರು‌. ಈವರೆಗೆ ಐದು ಕವನ ಸಂಕಲನಗಳನ್ನು ಪ್ರಕಟಿಸಿದ್ದರೂ ಫೇಸ್ಬುಕ್ಕಿನಲ್ಲಿ ಅತ್ಯಂತ ಚಟುವಟಿಕೆಯಿಂದ ಸಮಾಜ ಮುಖೀ ಬರಹಗಾರರ ಪರವಾಗಿ ಮಾತನಾಡುತ್ತಲೇ ಪ್ರಭುತ್ವದ ವಿರುದ್ಧದ ತಮ್ಮ ನಿಲುವುಗಳನ್ನು ಅತ್ಯಂತ ಸ್ಪಷ್ಟವಾಗಿಯೇ ಪ್ರಕಟಿಸುವ ಬನ್ನಾಡಿಯವರ ಕವಿತೆಗಳು ಫೇಸ್ಬುಕ್ಕಿನಲ್ಲಿ ಪ್ರಕಟಿಸುವ ರೀತಿಯೇ ಭಿನ್ನವಾದುದು. ಬಹುತೇಕರು ಫೇಸ್ಬುಕ್ಕಿನಲ್ಲಿ ಕವಿತೆ ಎಂದು ತಾವು ಭಾವಿಸಿದುದನ್ನು ಪ್ರಕಟಿಸುವಾಗ ಅದಕ್ಕೊಂದು ಶೀರ್ಷಿಕೆಯ ಅಗತ್ಯತೆ ಇದೆ ಎಂದೇ ಭಾವಿಸದೇ ಇರುವ ಹೊತ್ತಲ್ಲಿ ಇವರು ಪ್ರಕಟಿಸುವ ಪ್ರತಿ ಕವಿತೆಯೂ  ಅತ್ಯಂತ ಸಮರ್ಥ ಶೀರ್ಷಿಕೆ ಮತ್ತು ಅಗತ್ಯವಿದ್ದಲ್ಲಿ ಅತ್ಯಗತ್ಯವಾದ ಚಿತ್ರಗಳ ಜೊತೆಗೇ ಪ್ರಕಟವಾಗುವುದನ್ನು ನೀವು ಗಮನಿಸಿಯೇ ಇರುತ್ತೀರಿ‌. ಜೊತೆಗೇ ಸಹ ಬರಹಗಾರರ ಸಣ್ಣದೊಂದು ಬರಹಕ್ಕೂ ಚಂದದ ಪ್ರತಿಕ್ರಿಯೆ ಕೊಡುವ ಅವರ ಗುಣ ಕೂಡ ನೀವು ಬಲ್ಲಿರಿ. ಮೂಲತಃ ಒಂದು ಸಿದ್ಧಾಂತಕ್ಕೆ ಕಟ್ಟುಬಿದ್ದ ಯಾವುದೇ ಲೇಖಕ ಕವಿಯಾಗಿ ಪ್ರಕಟವಾಗುವುದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಈಗಾಗಲೇ ಆ ಸಿದ್ಧಾಂತದ ಚೌಕಟ್ಟಿಗೆ ತನ್ನೆಲ್ಲ ಬೌದ್ಧಿಕ ಸಾಮರ್ಥ್ಯವನ್ನೂ ವ್ಯಯಿಸಿ ತನ್ನ ಚೌಕಟ್ಟಿನ ಆಚೆಗೆ ಹೊರಬರಲಾರದೇ ತಳಮಳಿಸುವುದು ಮತ್ತು ಏನೇ ಹೇಳ ಹೊರಟರೂ ಕಡೆಗೆ ಆ ಮೂಲಕ್ಕೇ ಮತ್ತೆ ಮತ್ತೆ ಮರಳುವ ಕಾರಣದಿಂದಾಗಿ ಕವಿಯಾಗಿ ಕಾಣುವುದಕ್ಕಿಂತ ಲೇಖಕನಾಗಿಯೇ ಉಳಿದುಬಿಡುವುದೂ ಮತ್ತು ಆ ಅಂಥ ಚಿಂತನೆಯ ಲೇಖಕ ಬರೆಯ ಹೊರಟ ಕವಿತೆಯು ಕೂಡ ಆ ಸಿದ್ಧಾಂತದ ಘೋಷ ವಾಕ್ಯವೇ ಆಗಿ ಪರಿಸಮಾಪ್ತಿ ಆಗುವುದನ್ನು ನಾವು ಬಲ್ಲೆವು. ಬನ್ನಾಡಿಯವರ ಕಾವ್ಯ ಕೃಷಿ ಈ ಆರೋಪಗಳನ್ನು ಅಥವ ಮಿತಿಗಳನ್ನು ಸಮರ್ಥವಾಗಿ ಎದುರಿಸುತ್ತಿರುವುದನ್ನು ಅವರ ಕವಿತೆಗಳ ಓದಿನ ಮೂಲಕ ಗುರ್ತಿಸಬಹುದು ಕಡಲ ಧ್ಯಾನ ಸಂಕಲನಕ್ಕೆ ಬಾಲೂರಾವ್ ದತ್ತಿನಿಧಿಯ ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿಯನ್ನು ಮತ್ತು ನೀಲಿ ಹೂ ಸಂಕಲನಕ್ಕೆ ಪುತಿನ ಕಾವ್ಯ ಪುರಸ್ಕಾರ ಪಡೆದ ಬನ್ನಾಡಿ ಕವಿತೆಗಳು ಬಿಎಂಶ್ರೀ ಅವರ ಹಾಗೆಯೇ ಸಮರ್ಥ ಅನುವಾದ ಸಾಮರ್ಥ್ಯವನ್ನೂ ಪುತಿನ ಥರದ ಸರ್ವರ ಸಮಾನತೆಯನ್ನೂ ಪಡೆದುದರ ಕಾರಣವಾಗಿದೆ. ಕಾವ್ಯ ವಿಮರ್ಶೆಯ ಸವೆದ ಜಾಡುಗಳು ಈ ಕವಿಯು ಎತ್ತಿಹಿಡಿದ ಭಾವನಾತ್ಮಕ ನೆಲೆಯಾಚೆಗಿನ ಬೌದ್ಧಿಕ ತಹತಹಿಕೆಗಳನ್ನು ಬೇಕೆಂತಲೇ ಬದಿಗೆ ಸರಿಸುವ ಕಾರಣದಿಂದಾಗಿ ಜನಪ್ರಿಯ ಆವೃತ್ತಿಯ ಬಹು ಪ್ರಸರಣದ ಪತ್ರಿಕೆಗಳಲ್ಲಿ ಇಂಥವರ ಕಾವ್ಯ ಪ್ರಕಟವಾಗುವುದು ಅಪರೂಪ. ಹಾಗೆಂದೇ ಏನೋ ತಮ್ಮ ಚಿಂತನೆಗಳನ್ನು ಕವಿತೆಗಳನ್ನಾಗಿ ಪೋಣಿಸುವ ವಸಂತರು ತಮ್ಮ ಹೆಸರಿನಂತೆಯೇ ಎಂಥ ಗ್ರೀಷ್ಮದಲ್ಲೂ ವಸಂತದ ಚಿಗುರನ್ನು ಕಾಣಿಸಬಲ್ಲ ಕನಸುಳ್ಳವರು. ಅವರ ಬಿಡಿ ಬಿಡಿ ಕವಿತೆಗಳ ಡಿಸೆಕ್ಷನ್ನಿಗಿಂತಲೂ ಒಟ್ಟೂ ಕಾವ್ಯದ ಅನುಸರಣದ ಅಭ್ಯಾಸಕ್ಕಾಗಿ ಈ ಟಿಪ್ಪಣಿಯಲ್ಲಿ ಎಂದಿನಂತೆ ಪ್ರತ್ಯೇಕವಾಗಿ ವಿಭಾಗಿಸದೇ ಅವರ ಕಾವ್ಯದ ನಿಲುವಿನ ಬದ್ಧತೆಯ ಸೂಕ್ಷ್ಮವನ್ನು ಒಟ್ಟಂದದಲ್ಲಿ ಸವಿಯಲು ಅವರ ನಾಲ್ಕು ಕವಿತೆಗಳನ್ನು ಇಲ್ಲಿ ಕಾಣಿಸುತ್ತಿದ್ದೇನೆ. “ಅರ್ಥವಾಗದಂತೆ ಯಾರಿಗಾಗಿ ಕಾವ್ಯ ಬರೆಯಬೇಕಾಗಿದೆ ಈಗ ನಾನು?” ಎನ್ನುವ ಸಂಕಟದಲ್ಲೇ ಒಟ್ಟೂ ವರ್ತಮಾನದ ದಾಂಗುಡಿಗಳನ್ನು ವಿಮರ್ಶಿಸುತ್ತಲೇ ಸುಳ್ಳು ಸುಳ್ಳೇ ಒಳಾರ್ಥಗಳಿವೆ ಎಂದು ಬಿಂಬಿಸುವವರ ಪ್ಯೂರಿಟಿಯನ್ನು ಈ ಇಂಪ್ಯೂರ್ ಕವಿತೆ ಹೇ(ಕೇ)ಳುತ್ತಿದೆ. ೧.ಯಾರಿಗಾಗಿ ಬರೆಯಬೇಕಾಗಿದೆ ಕಾವ್ಯ.. …………………………………………………………. ಈ ಜಗತ್ತು ಯಾವತ್ತೂ ನನಗೆ ಬೇಸರ ಬರಿಸಿರಲಿಲ್ಲ ನನ್ನ ಅಜ್ಜಿಯ ನಡುಗುವ ಕೈಗಳು ಮುಖದ ಸುಕ್ಕುಗಳು ನನ್ನ ಜೀವನ ಪ್ರೀತಿಯನ್ನು ಹೆಚ್ಚಿಸಿದವು ನನ್ನ ಸಂಪರ್ಕಕ್ಕೆ ಬಂದವರು ಒಳ್ಳೆಯವರೂ ಆಗಿರಲಿಲ್ಲ ಕೆಟ್ಟವರೂ ಆಗಿರಲಿಲ್ಲ ಅಥವಾ ಎರಡೂ ಆಗಿದ್ದರು ಎರಡೂ ಆಗಿರಲಿಲ್ಲ ಹೀಗೆ ಹಾರಿಹೋದವು ನನ್ನ ಯೌವ್ವನದ ದಿನಗಳು ಯಾವ ಪೂರ್ವನಿರ್ಧರಿತ ಯೋಚನೆಗಳೂ ಇಲ್ಲದೆ ಎಲ್ಲರಿಗೂ ಕಷ್ಟಗಳು ಇದ್ದವು ಸಾಗರದಂತೆ ಮೈ ಚಾಚಿಕೊಂಡ ಕಷ್ಟಗಳು ನಡುವೆ ಉಕ್ಕುವ ನಗು ಬದುಕಿನ ಭರವಸೆ ಹುಟ್ಟಿಸುವ ನಗು ಸುಟ್ಟು ಹಾಕಿಬಿಡಬಲ್ಲ ಬೆಂಕಿ ಹೂವಾಗಿ ಅರಳಿದ ಗಳಿಗೆಗಳೂ ಇದ್ದವು ನನ್ನ ಸಂಪರ್ಕಕ್ಕೆ ಬಂದವರೆಲ್ಲರೂ ಒಂದೋ ನಾನು ಓದುತ್ತಿರುವ ಪುಸ್ತಕಗಳಿಂದ ಎದ್ದು ಬಂದವರ ಹಾಗೆಯೂ ಅಥವಾ ಅವರೇ ಪುಸ್ತಕಗಳ ಒಳಗೆ ಸೇರಿಕೊಂಡವರ ಹಾಗೆಯೂ ಇರುತ್ತಿದ್ದುದರಿಂದ ನನಗೆ ಎಲ್ಲವೂ ಆಸಕ್ತಿದಾಯಕವೂ ನಿಗೂಢವೂ ಅಚ್ಚರಿದಾಯಕವೂ ಸಂತೋಷ ಕೊಡುವಂತದ್ದೂ ಖಿನ್ನನಾಗಿಸುವಂಥದ್ದೂ ಆಗಿ ಹೊಸ ವರ್ಷವೆನಿಸುತ್ತಿರಲಿಲ್ಲ ಯಾವ ವರ್ಷವೂ ಸಣ್ಣಪುಟ್ಟ ಆಸೆಗಳು ಹತ್ತಿಕ್ಕಿಕೊಂಡ ಸ್ವಾರ್ಥ ಹೆಡೆಬಿಚ್ಚುವ ಈಷ್ಯೆ೯ ಮನಸ್ಸು ಬಿಚ್ಚಿ ಹೇಳಿಕೊಳ್ಳುವ ಸಂಕಟಗಳು ಹೇಳದೇ ಉಳಿದ ಮಾತುಗಳು ಎಲ್ಲವೂ ನದಿಯೊಂದು ಹರಿಯುವ ಹಾಗೆ ಹರಿಯುತ್ತಲೇ ಇರುವಾಗ ಬೆಚ್ಚಿ ಬೀಳಿಸಿದ್ದು ಎಲ್ಲೋ ದೂರದಲ್ಲಿ ಎಂಬಂತೆ ಕೇಳಿಬರುತ್ತಿದ್ದ ಕೊಲೆಯ ಸದ್ದುಗಳು ಮನುಷ್ಯ ದೇಹವನ್ನು ಕತ್ತರಿಸಿ ಮೂಟೆಯಲಿ ಕಟ್ಟಿ ಬಿಸಾಕುತ್ತಿದ್ದ ಭೀಭತ್ಸಗಳು ಹಣಕ್ಕಾಗಿಯೋ ಪೂರ್ವದ್ವೇಷದಿಂದಲೋ ನಡೆಯುತ್ತಿದ್ದರಬಹುದಾದ ಕೃತ್ಯಗಳು ಅವೇ ಕೃತ್ಯಗಳು ಸಾಮೂಹಿಕವಾಗಿ ಬಿಟ್ಟರೆ? ಸಾಮೂಹಿಕವಾಗಿ ಒಬ್ಬನನ್ನು ಬೆನ್ನಟ್ಟಿದರೆ? ಗುಡಿಸಲುಗಳ ಮೇಲಿನ ಸಾಮೂಹಿಕ ದಾಳಿಯಾಗಿ ಬಿಟ್ಟರೆ? ಮುಗಿಸಿಬಿಡಲೆಂದೇ ಒಂದೇ ದಿಕ್ಕಿನಲ್ಲಿ ಯೋಚಿಸುವ ಇಬ್ಬರು ಮೂವರು ಹತ್ತಾರು ನೂರಾರು ಕೈಗಳು ಒಟ್ಟಾಗಿ ವಧಿಸತೊಡಗಿದರೆ? ಕಮರಿ ಹೋಯಿತು ನನ್ನ ಕಲ್ಪನೆ ಕಮರಿ ಹೋಗಿತ್ತು ನನ್ನ ಜಗತ್ತಿನ ಕಲ್ಪನೆಯೂ ನಡು ವಯಸ್ಸಿಗೆ ಕವಿದುಕೊಂಡಿತು ಕಣ್ಣಿಗೆ ಕತ್ತಲ ಪೊರೆ ಎಲ್ಲ ಅಸಡ್ಡಾಳಗಳ ನಡುವೆಯೂ ಸಹ್ಯವೆನಿಸಿದ್ದ ಜಗತ್ತು ಮೊದಲ ಬಾರಿಗೆ ಒಡೆದುಹೋಯಿತು ಕನ್ನಡಿಯೊಂದು ಠಳ್ಳನೇ ಒಡೆದು ಚೂರಾಗುವಂತೆ ಅರ್ಥವಾಗದಂತೆ ಯಾರಿಗಾಗಿ ಕಾವ್ಯ ಬರೆಯಬೇಕಾಗಿದೆ ಈಗ ನಾನು? ಸಿದ್ಧಾಂತದ ಅಂಟಲ್ಲಿ ಸಿಲುಕಿದವರು ಅದರಿಂದ ಹೊರ ಬಂದರೂ ಬಿಟ್ಟೂ ಬಿಡದೇ ಕಾಡುವ ಆ ಅದೇ ದಾರಿಗಳು ಅವರು ನಂಬಿದ ಅಧ್ಯಾತ್ಮದ ದಾರಿಯೇ ಆಗಿ ಬದಲಾಗುವುದನ್ನು ಈ ಪದ್ಯ ಸಮರ್ಥಿಸುತ್ತಿದೆ. ಈ ಕವಿತೆಯಲ್ಲಿ ಕವಿ ಯಾರೊಂದಿಗೆ ಸಂಕಟದ ಸಾಗರವನ್ನು ದಾಟಿದ್ದು ಪ್ರೇಮಿಯೊಂದಿಗೋ, ಗೆಳೆಯನೊಂದಿಗೋ ಅಥವ ತನ್ನದೇ ಸಿದ್ಧಾಂತದೊಂದಿಗೋ ಎನ್ನುವುದು ಆಯಾ ಓದುಗರ ಮರ್ಜಿಗೆ ಬಿಟ್ಟ ಸಂಗತಿ. ೨. ದಾಟಿದೆವು ನಾವು ಸಂಕಟದ ಸಾಗರವನು ……………………………………………………. ಸಂಕಟದ ಮಹಾಸಾಗರಗಳೇ ತುಂಬಿವೆ ನಮ್ಮ ಗತಕಾಲದ ದಿನಚರಿಯ ಪುಟಗಳಲಿ ಎಂತಹ ದಾರುಣ ಕಾಲವನು ದಾಟಿ ಬಂದೆವು ನಾವು ನಿನ್ನನು ತಲುಪಲು ನನ್ನ ಬಳಿ ಅಂದು ಒಂದು ಮುರುಕು ದೋಣಿಯೂ ಇರಲಿಲ್ಲ ಆಚೆ ದಡದಲ್ಲಿ ಕೈಬೀಸಿ ಹಾಗೆಯೇ ಮರೆಯಾಗಿ ಬಿಡುತ್ತಿದ್ದೆ ನೀನು ನಕ್ಷತ್ರಗಳ ಗೊಂಚಲನು ಮನೆಯಂಗಳದಲಿ ನೆಡುವ ಕಣಸ ಕಂಡಿದ್ದೆವು ನಾವು ಕಾಲೂರಲೊಂದು ಅಂಗುಲ ನೆಲ ಬಿಸಿಲ ತಾಪ ಮರೆಸಲು ನಾಕು ಹಿಡಿ ಸೋಗೆ ಇಷ್ಟಿದ್ದರೆ ಸಾಕು,ಗೆದ್ದೆವು ಅಂದುಕೊಂಡಿದ್ದೆವು ಇಕ್ಕಟ್ಟಾಗುತ್ತಾ ಹೋಗುವ ಊರ ಓಣಿಯ ದಾರಿ ಬೆನ್ನಿಗಂಟಿ ಈಟಿ ಇರಿವ ಮಂದಿಯ ಕಿಡಿ ಕಣ್ಣು ಸಾಗುತ್ತಲೇ ಇರಬೇಕೆಂಬ ಹಂಸ ನಡೆಯನು                 ಗಟ್ಟಿಗೊಳಿಸಿದವು ನಮ್ಮಲಿ ನಮ್ಮ ಜೊತೆಗಿದ್ದುದು ಗಾಳಿಯ ಮರ್ಮರ ಬಿಡದೆ ಹಿಂಬಾಲಿಸುವ ಕೋಗಿಲೆಯ ಕುಹೂ ಕುಹೂ ಗಾನ ಶೃತಿ ಹಿಡಿವ ಏಕತಾರಿ ಜೀರುಂಡೆ ಜೀಕು ಕವುಚಿ ಬಿದ್ದ ಬೋಗುಣಿಯೆಂಬ ಆಕಾಶದ ಸೊಗಸು ಪ್ರತೀ ಸಲ ಸಾಗರದ ಮುಂದೆ ನಿಂತಾಗಲೂ ಯೋಚಿಸುವುದಿದೆ ನಾವು ನಿರಾಳತೆಯ ಹೊದಿಕೆ ಹೊದ್ದಿರುವ ಸಾಗರವೆಂಬ ಸಾಗರವೇ ಹಾಗೆ ಕೂಗಿ ಕೊಳ್ಳುತ್ತಿದೆಯೇಕೆ ಲೋಕಕೆ ಮುಖ ಮಾಡಿ? ಕೊತ ಕೊತ ಕುದ್ದು ಅಲೆಯಲೆಯಾಗಿ ಹೊರಳಿ ದನಿಯೆತ್ತಿ ದಡಕ್ಕನೆ ಅಪ್ಪಳಿಸುತ್ತಿದೆಯೇಕೆ? ಅಂತಹ ಸಂಕಟ ಅದೇನು ಹುದುಗಿದೆ ನಿನ್ನ  ಒಡಲಲಿ? ನಮ್ಮ ಉಸಿರ ಬಿಸಿಯನು ಉಳಿಸಿದ್ದು ಧನ ಕನಕ ಬಣ್ಣ ಬಡಿವಾರಗಳಲ್ಲ ದಿನವೂ ಇಷ್ಟಿಷ್ಟೇ ಹಂಚಿಕೊಂಡ ಒಲವೆಂಬ ಮಾಯಕದ ಗುಟುಕುಗಳು ಮಿಂದುಟ್ಟು ನಲಿಯ ಬಯಸಿದ್ದು ನಾನು ನಿನ್ನ ಅಂಗ ಭಂಗಿಗಳ ನಿರಾಭರಣ ಝರಿಯಲಿ ಮುಗಿಲ ನಕ್ಷತ್ರಕೆ ಆಸೆಪಡದ ನಾನು ಮುಖವೂರಲು ಬಯಸಿದ್ದು ನಿನ್ನ ನಿಬಿಡ ಹೆರಳಿನ‌ ಸಿಕ್ಕುಗಳಲಿ ———————————- “ಕಡಲು ಮತ್ತು ನೀನು” ಪದ್ಯದ ವಿನಯವಂತಿಕೆ ಎಂದಿನ ಇವರ ರೂಕ್ಷ ರೀತಿಯಿಂದ ಬಿಡಿಸಿಕೊಂಡ ಆದರೆ ಸಂಬಂಧಕ್ಕೂ ಸಿದ್ಧಾಂತದ ಹೊರೆಯನ್ನು ದಾಟಿಸುವ ಯತ್ನ ೩.ಕಡಲು ಮತ್ತು ನೀನು ………………….‌….. ಮಳೆಗಾಲದ ಕಡಲು ಎಂದಿನ ಕಡಲಿನಂತಲ್ಲ ನೋಡಿದ್ದೀಯ ನೀನು ಮಳೆಗಾಲದ ಕಡಲನು? ಅದು ಅಲ್ಲೋಲ ಕಲ್ಲೋಲ ಮಗುಚುವುದನು? ಜಗತ್ತಿನ ಕೊಳೆ ಕೆಸರನು ಮರುಮಾತನಾಡದೆ ಹೊದ್ದು ಕೆಸರಾಗುವುದನು ತಾನೂ ನೀಲಾಕಾಶ ತಾನಾಗಬೇಕೆಂದು ವರುಷವಿಡೀ ಕನಸುವ ಕಡಲು ಈಗ ಕಪ್ಪಾಗುವುದು ಅದೂ ಎಂಥಾ ಕಪ್ಪು ಕಾಡಿಗೆ ಕಪ್ಪು ಕಡಲು! ತಾಳಲಾರದೆ ತಳಮಳ ಅಗ್ನಿಕುಂಡವಾಗುವುದು ಕೊತ ಕೊತ ಕುದಿಯುವುದು ನೋಡಿದ್ದೀಯಾ ನೀನು ನೋಡಿದ್ದೀಯಾ ನೋಡಿದ್ದೇನೆ ನಾನು ಕಡಲನು ನಿನ್ನ ಕಣ್ಣುಗಳಲಿ ಕಡಲು ಅಲ್ಲಿ ತುಳುಕಾಡುವುದನು ಯಾರ ಊಹೆಗೂ ನಿಲುಕದ ಭಾವ ಕಡಲು ಒಂದು ವ್ಯತ್ಯಾಸವಿದೆ ಮಳೆಗಾಲದ ಕಡಲಿಗೂ ನಿನ್ನ ಕಾಡಿಗೆ ಕಣ್ಣಿಗೂ ಭೋರ್ಗರೆವ ನೀನು ರೆಪ್ಪೆಗಳ ಒಳಗೇ ಕೂಗು ಹಾಕುವುದಿಲ್ಲ ಕಡಲಂತೆ ಕತ್ತರಿಸುತ್ತಾ ಹರಿಯುವುದೂ ಇಲ್ಲ ಯಾರನೂ ನೋಯಿಸುವ ಇರಾದೆ ಇರದ ನೀನು ಎಲ್ಲವನು ಬಲ್ಲ ಮೌನ ಕಡಲು ಬೇಸರ ಮುತ್ತಿಕೊಂಡಾ ನಿನ್ನನು ಮರಳುವೆ ನೀನು ನಿನ್ನ ಅಲೆಹಾಡಿನರಮನೆಗೆ ಅನುಗಾಲದ ಕಡಲಂತೆ ಶಾಂತ,ಗಂಭೀರ ಅಲೆ ಅಲೆಗಳಲಿ ಫಳಫಳ ಬೆಳ್ಳಿ ಬೆಳಕ ಚಿಮ್ಮಿಸುವ ರುದ್ರ ನೀಲ ಮನೋಹರ ಮಡಿಲು ಇಂಗಿ ಹೋಗುವುದು ನಿನ್ನೊಳಗೆ ಯಾರ ಗಮನಕೂ ಬಾರದೆ ಬೆಂಕಿಯ ನದಿಯೊಂದು ದೂರದಲೆ ನಿಂತು ನಿನ್ನ ನೋಡುವೆ ನಾನು ಕಡಲ ಅನತಿ ದೂರದಲಿ ಕೈ ಕಟ್ಟಿ ನಿಂತಿರುವ ಅನಾದಿ ಬಂಡೆಯೊಂದಿರುವುದಲ್ಲ ಹಾಗೆ ಪ್ರೀತಿಯ ಸಿಂಚನದಲಿ ದಿನವೂ ತೋಯಬಯಸುವವನು ಸ್ಪರ್ಶದ ದಿಗಿಲಿಗೆ ಹಾತೊರೆಯುವವನು ಬಿರುಮಳೆ ಹೆಂಡದ ನಶೆ ಏರಿಸಿಕೊಂಡ ಕಡಲು ಬಾನೆತ್ತರ ಚಿಮ್ಮಿ ಬಂದೆರಗುವುದಲ್ಲ ಬಯಸುವೆ ಅದನೇ ನಾನೂ ಉಪ್ಪು ತೋಳಾಗಿ ಬಂದು ನೀನು ಅಪ್ಪುವುದನು ———————————————— ಮಾಧ್ವ ಸಂಪ್ರದಾಯವನ್ನು ಬಿಡದೆಯೂ ಮಾರ್ಕ್ಸ್ ವಾದದ ಅಪ್ರತಿಮ ಪ್ರತಿ ಪಾದಕರಾಗಿದ್ದ ಕವಿ ಸು.ರಂ.ಎಕ್ಕುಂಡಿ ಯಾಕೋ ಈಗ ನೆನಪಾಗುತ್ತಾರೆ. ತಾವು ನಂಬಿದ ಸಿದ್ಧಾಂತ ಮತ್ತು ತತ್ವಕ್ಕೆ  ನಿಷ್ಠೆ ಇಟ್ಟುಕೊಂಡೂ ಬದುಕಿನ ರೀತಿಯಲ್ಲಿ ರಾಜಿಯಾಗದೆ ಆದರ್ಶವಾಗುವುದು ಕಡು ಕಷ್ಟದ ಕೆಲಸ. ವಸಂತ ಬನ್ನಾಡಿಯವರೂ ಎಕ್ಕುಂಡಿಯವರ ಮಾರ್ಗವನ್ನು ಅನುಲಕ್ಷಿಸಿದ್ದೇ ಆದರೆ ಅವರೊಳಗಿನ ಕವಿಗೆ ಮತ್ತಷ್ಟು ಕಸುವು ಮತ್ತು ಕಸುಬು ಸಿದ್ಧಿಸೀತೆಂಬ ಆಶಯದೊಂದಿಗೆ “ಮಳೆಗಾಲದ ಹಾಡು ಪಾಡು” ಕವಿತೆಯ ಸಾಲುಗಳಾದ

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ ಹೊಸ ಬನಿ-೧೨. ಚದುರಿದ ಚಿತ್ರಗಳಲ್ಲೇ ಅರಳುವ ಹೂವುಗಳಂಥ ನರಸಿಂಹ ವರ್ಮ ಕವಿತೆಗಳು ವಿಟ್ಲದ ನರಸಿಂಹ ವರ್ಮ “ಆಕಾಶದ ಚಿತ್ರಗಳು” ಹೆಸರಿನ ಕವನ ಸಂಕಲನವನ್ನು ೨೦೧೯ರಲ್ಲಿ ಪ್ರಕಟಿಸುವುದರ ಮೂಲಕ ಈಗಾಗಲೇ ಸಾಹಿತ್ಯ ಲೋಕಕ್ಕೆ ಪರಿಚಿತರಾಗಿದ್ದಾರೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾನೂನು ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಅವರ ಕವಿತೆಗಳಲ್ಲಿ ಹುಡುಕಿದರೂ ವಾದ ವಿವಾದಗಳಾಗಲೀ, ವ್ಯವಸ್ಥೆಯ ಪರ ಅಥವ ವಿರೋಧದ ನಿಲುವಾಗಲೀ ಇಲ್ಲದೇ ಇರುವುದು ವಿಶೇಷ. ಜೊತೆಗೇ ವರ್ತಮಾನದ ಸಂಗತಿಗಳಿಗೆ ಥಟ್ಟನೆ ಪ್ರತಿಕ್ರಯಿಸಿ ಪದ್ಯವೊಂದನ್ನು ಹೊಸೆಯುವ ಅವಸರದ ಧಾವಂತ ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಸಾಮಾನ್ಯವಾಗಿ ಕಾಣುವ ವಿಚಾರವೊಂದನ್ನು ಮೇಲೆತ್ತುವ ಅಥವ ಇನ್ನಿಲ್ಲದಂತೆ ಅದನ್ನು ಆಕ್ಷೇಪಿಸುವ ರೀತಿಯಿಂದಲೂ ಅವರು ಮುಕ್ತರು. ಮತ್ತು ಆ ಕಾರಣದಿಂದಲೇ ಅವರು ಪ್ರಕಟಿಸುವ ಕವಿತೆಗೆ ಚಿದ್ವಿಲಾಸದ ಬಗ್ಗೆ ಅನನ್ಯ ಕಕ್ಕುಲತೆ ಮತ್ತು ಇಬ್ಬಂದಿತನದ ಬಗ್ಗೆ ವಿಶೇಷ ಕಾಳಜಿ. ಪ್ರಾಯಶಃ ಈ ಕಾರಣಕ್ಕೇ ನರಸಿಂಹ ವರ್ಮರ ಕಾವ್ಯ ಕೃಷಿಗೆ ವರ್ತಮಾನದ ಸಂಗತಿಗಳಿಗಿಂತಲೂ ಪೌರಾಣಿಕ ಮತ್ತು ಐತಿಹಾಸಿಕ ವ್ಯಕ್ತಿಗಳೂ ಘಟನೆಗಳೂ ಸಾದೃಶ ಪ್ರತಿಮೆಗಳಾಗಿ ಅವರ ಕವಿತೆಗಳ ವಕ್ತಾರಿಕೆಯನ್ನೂ ನಿಭಾಯಿಸುತ್ತವೆ.‌ ಮತ್ತು ಈ ಇದೇ ಕಾರಣಕ್ಕಾಗಿ ಜನ್ಮತಃ ಇರುವ ರಾಜಮನೆತನದ ಪ್ರಭಾವಳಿಯನ್ನು ಕಳಚಿಟ್ಟು ಸಾಮಾನ್ಯನಾಗಿ ನಡೆದು ಹೋದ ತಥಾಗತ ಬುದ್ಧನ ಹಾದಿ ಇವರಿಗೆ ಪ್ರಿಯವಾದುದಾಗಿದೆ. ಅವರ ಕವಿತೆಗಳು ಒಂದು ಸಾಮಾಜಿಕ ಚೌಕಟ್ಟು ಅಥವ ಬಂಧಗಳಿಂದ ದೂರ ಇರುವ ಕಾರಣ ಅವರ ಕವಿತೆಗಳಲ್ಲಿ ಅಧ್ಯಯನಶೀಲತೆ ಮತ್ತು ಪ್ರಾಮಾಣಿಕ ದರುಶನಗಳು ಪ್ರಕಟವಾಗುತ್ತವೆ. ಯಾವ ಕವಿ ಸತತ ಅಧ್ಯನಶೀಲನಾಗಿ ಇರುತ್ತಾನೆಯೋ ಅವನು ಯಾವತ್ತೂ ಯಾರನ್ನಾಗಲೀ ಅಥವ ಯಾವ ಒಂದು ನಿರ್ದಿಷ್ಟ ವಾದಕ್ಕಾಗಲೀ ಕಟ್ಟು ಬೀಳದೇ ಸ್ವತಃ ಸೃಜಿಸಿದ ಅನುಭವದ ಮೂಸೆಗಳಲ್ಲಿ ತನ್ನ ಅನಿಸಿಕೆಗಳನ್ನು ಬೆರೆಸಿ ಲೋಕದ ಕಣ್ಣಿಗೆ ಹಿಡಿಯುತ್ತಾನೆ. ಆ ಲೋಕವು ಹೀಗೇ ಇದೆ ಎಂದಾಗಲೀ ಹೀಗೇ ಇರಬೇಕು ಎಂಬ ವಾದವಾಗಲೀ ಆ ಅಂಥ ಜಿಜ್ಞಾಸುವಿಗೆ ಇರುವುದಿಲ್ಲ. ನನಗೆ ಅನಿಸಿದ್ದನ್ನು ಹೇಳಿದ್ದೇನೆ, ಒಪ್ಪುವುದು ಬಿಡುವುದು ಲೋಕದ ಸಂಗತಿ ಎಂದು ಮುಂದುವರೆಯುತ್ತಾನೆ. ಲೋಕ ಒಪ್ಪಿದರೂ ಅಷ್ಟೆ, ಒಪ್ಪದೇ ಇದ್ದರೂ ಅಷ್ಟೆ. ಲೋಕಾಂತದ ಅಗ್ನಿದಿವ್ಯಗಳನ್ನು ಅನುಲಕ್ಷಿಸದೇ ತನ್ನ ಪಾಡಿಗೆ ತಾನಿರುವ ನರಸಿಂಹ ವರ್ಮರಂತೆಯೇ ಅವರ ಪದ್ಯಗಳಲ್ಲೂ ಅಂಥದೇ ವಿವೇಕ ಸದಾ ಸರ್ವದಾ ಜಾಗೃತವಾಗಿರುವುದನ್ನು ಓದುಗ ಗಮನಿಸಬಹುದು. ಈ ಮಾತಿಗೆ ಉದಾಹರಣೆಯಾಗಿ ಅವರ ಈ ಕವಿತೆಯನ್ನು ನೋಡಬಹುದು. ಬಾಣಲೆಗೆ ಸುರಿವಾಗ ಸಾಸಿವೆಯೊಂದು ಪುಟಿದು ಹಾರಿ ಹೋಯಿತು ಛಲವಿಟ್ಟು ಹುಡುಕಿದರೆ ಸಾಸಿವೆಯೂ ದೊರಕೀತು : ಸೂಕ್ಷ್ಮವನೂ ಶೋಧಿಸಿದೆನೆಂದು ಬೀಗಿದೆ ಬುದ್ಧ ನಕ್ಕ : ನೀನು ಹುಡುಕಿದ್ದು ಬರಿಯ ಸಾಸಿವೆ , ಸಾವಿಲ್ಲದ ಮನೆಯ ಸಾಸಿವೆಯಲ್ಲ ಬಾಣಲೆಮನದ  ನೆಲೆಯಿಲ್ಲೀಗ ಸಾಸಿವೆಯ ಚಟಪಟ ಮತ್ತು ಒಗ್ಗರಣೆಯ ಘಮ . ಪದ್ಯದ ನೇಯ್ಗೆಯಲ್ಲಿ ವಿಶೇಷ ಇರದಿದ್ದರೂ ಸಾಸುವೆಯ ಪ್ರತಿಮೆಯ ಮೂಲಕ ಸಾವನ್ನು ಧೇನಿಸುವ ಕವಿ, ಕಾದ ಬಾಣಲೆಯಾದ ಮನದಲ್ಲಿ ಚಟಪಟಿಸುತ್ತಲೇ ಒಗ್ಗರಣೆಯ ಘಮಕ್ಕೆ ಅಂದರೆ ಬದುಕಿನ ಸಾರವನ್ನೂ ಗ್ರಹಿಸುತ್ತಾನಲ್ಲ ಅದು ವಿಶೇಷವೇ. ಕವಿತೆಯ ಎರಡನೆಯ ಪ್ಯಾರ “ದೊರಕೀತು” ದೊರಕಿತು ಆದರೆ ಮಾತ್ರ ಪದ್ಯಕ್ಕೆ ಮತ್ತಷ್ಟು ಝಳ ಬಂದೀತು‌. ಸದ್ಯಕ್ಕಿಲ್ಲಿ ಯಾವುದೂ ಸರಾಗವಲ್ಲ : ಹಳೆಯ ರಾಗ ಬದಲಾಗಿಲ್ಲ , ಅಬ್ಬರಿಸಿ ಬೊಬ್ಬಿರಿಯುವುದನ್ನು ರಾಗವೆನ್ನಲಾಗುವುದಿಲ್ಲ. ಎಂದು ಕೊನೆಯಾಗುವ ಅವರ ಕವಿತೆಯೊಂದು ನಮ್ಮನ್ನು ಆಕರ್ಷಿಸುವ ವಿವಿಧ ಇಸಂಗಳನ್ನು ಕುರಿತು ಹೇಳುತ್ತಲೇ ಕಡೆಗೆ ಯಾವ ಸಿದ್ಧಾಂತವೂ ಸರಾಗ ಒಲಿಯದು ಮತ್ತು ಎಲ್ಲ ವಾದ ಮತ್ತು ಸಿದ್ಧಾಂತಗಳಲ್ಲೂ ಮತ್ತದೇ ಹಳೆಯದೇ  ರಾಗದ ಛಾಯೆ ಇರುವಾಗ ಅಬ್ಬರಿಸಿ ಕೂಗಿದ ಮಾತ್ರಕ್ಕೆ ಅದನ್ನು ಹೊಸ ರಾಗ ಎನ್ನಲಾಗುವುದಿಲ್ಲ ಎಂಬ ತೀರ್ಮಾನ ಕೂಡ ಎಲ್ಲ ಸಿದ್ಧಾಂತಗಳ ತಲಸ್ಪರ್ಶೀ ಅಧ್ಯಯನದಿಂದ ಪಡೆದ ಕಾಣ್ಕೆಯೇ ಆಗಿದೆ. ಈ ‍ಸ್ತಬ್ಧಗೊಂಡ ‍‌‌ಅನಾಥ ಬೀದಿಗಳಲ್ಲಿ ಯಾವ ಕವಿತೆಗೂ ಜಾಗವಿಲ್ಲ : ಒಂಟಿ ‍ಅರಮನೆಯಲ್ಲೂ ತಕ್ಷಕನ ನೆನಪು ಯಾವ ಫಲದಲ್ಲಿ ಯಾವ ಹುಳವೋ ಪರೀಕ್ಷಿತನಿಗಿಲ್ಲಿ ನಿದ್ದೆಯಿಲ್ಲ. ಎನ್ನುವ ಸಶಕ್ತ ಅಂತ್ಯವಿರುವ ಕವಿತೆಯಲ್ಲಿ ಕರೋನಾದ ಭೀತಿಯನ್ನು ಪದ್ಯವಾಗಿಸಿರುವ ರೀತಿಗೆ ಕೂಡ ತಕ್ಷಕ ಮತ್ತು ಪರೀಕ್ಷಿತರು ಇಣುಕುವುದರಿಂದ ನಮ್ಮೊಳಗೇ ಇರುವ ಯಯಾತಿ ಕೂಡ ಭಯದಿಂದ ನಡುಗುತ್ತಾನೆ. ನೀವು ನನ್ನತ್ತ ಎಸೆದ  ಕಲ್ಲುಗಳನ್ನು ಆಯ್ದು ಜೋಪಾನವಾಗಿ  ಕಾಯ್ದಿರಿಸಿದ್ದೇನೆ ತುಕ್ಕು ಹಿಡಿಯುತ್ತಿದೆಯೇನೋ ಬದುಕಿಗೆ ಎಂದೆನಿಸಿದಾಗಲೆಲ್ಲ‌ಾ ಬಾಳುವ ಹೊನ್ನಛಲವೀಯುವ ಪರುಷಮಣಿಗಳವು ಕಲ್ಲೆಸವ ಕೈಗಳಿಗೂ ಒಂದು ಸಲಾಮ್ ಇದೊಂದು ಮುಂಗಾಣ್ಕೆಯ ಕವಿತೆ. ಕವಿತೆಗಳು ಕೂಡ ಬದುಕಿನ ಭಾಷ್ಯ ಎಂದು ಲಾಕ್ಷಣಿಕರು ಹೇಳಿದ ಮಾತು ಈ ಇಂಥ ಸಾಲುಗಳಲ್ಲಿ ಜೀವಂತವಾಗಿದೆ. ಯಾರು ಯಾರೋ ಯಾವುದೋ ಕಾರಣಕ್ಕೆ ಹೊಡೆದ ಕಲ್ಲುಗಳನ್ನು ಸಂಗ್ರಹಿಸಿ ಇಟ್ಟು ಕೊಂಡ ಕವಿ ಬದುಕು ಉಧ್ವಸ್ತಗೊಂಡಾಗಲೆಲ್ಲ ಆ ಪರುಷಮಣಿಯಂಥ ಮುಟ್ಟಿಸಿದೊಡನೆಯೇ ಬಂಗಾರವಾಗಿ ಬದಲಾಗುವ ಸರಕಾಗಿಸುವುದು ಕೂಡ ಕೌತುಕವೇ ಹೌದು. ಹೀಗೆ ಕಣ್ಣು ಕೆಂಪಾಗಿಸಿ ‌ಅವಳು ಸುಳಿದಾಡುವುದು ಹೊಸತೇನಲ್ಲ ಕವಿಗೆ : ಆದರೂ ವಾಡಿಕೆಯಂತೆ ಕೇಳಿದ ‘ಏನಾಯಿತು’ ಎಂದು ‘ ಕಣ್ಣಿಗೆ ಯಾವುದೋ ಹುಳ ಬಿದ್ದಿರಬೇಕು ‘ ಅಂದಳು ನೋಡಿದರೆ ಏನೂ ಇಲ್ಲ ‘ನಿನ್ನ  ತಲೆಯೊಳಗಿರುವ ಹುಳ ಕಣ್ಣಿಗೆ ಹೊಕ್ಕಿರಬಹುದು’ ‌ಎಂದದ್ದು ಕವಿಯ ಕಾವ್ಯಾತ್ಮಕ ಪ್ರಯೋಗ ‘ನಿಮ್ಮ ಕವಿತೆಯ ಹಾಗೆ ‘ಅಂದಳು ನಿಟ್ಟುಸಿರ ನಂತರ ಮತ್ತೆ ಉಸುರಿದಳು : ‘ನಿನ್ನೆ ಇಡೀ ದಿನ ಇಡೀ ರಾತ್ರಿ ಕಾದೆ ನಮ್ಮ ಮದುವೆಯ ದಿವಸ ನಿಮಗೆ ನೆನಪಾಗುವುದೇ ಎಂದು , ನಿಮ್ಮ ತಲೆಯೊಳಗಿನ  ಕವಿತೆ ಹುಳದಂತೆ ಕಣ್ಣಿಗಿಳಿದಿದ್ದರೂ ಪರವಾಗಿರಲಿಲ್ಲ ಪೊರೆಯಂತೆ  ಕಣ್ಣನ್ನೇ ಕಾಡಿತು ‘ ಅಂದಳು ಕವಿತೆಯ ಪೊರೆ ಒಮ್ಮೆಲೇ ಕಳಚಿತು. ಪ್ರಾಯಶಃ ಈ ಕವಿತೆಯ ಯಾವುದೇ ಸಾಲನ್ನು ಕತ್ತರಿಸಿ ಇಲ್ಲಿ ಕೋಟ್ ಮಾಡಿದ್ದಿದ್ದರೆ ಇಡಿಯ ಪದ್ಯದ ಮೂಲಕ ಕವಿ ಹೇಳ ಹೊರಟದ್ದೇನು ಎನ್ನುವುದು ಶೃತಪಡಿಸಲಿಕ್ಕೆ ಆಗದ ಕಾರಣ ಇಡೀ ಪದ್ಯವನ್ನು ಇಲ್ಲಿ ಓದಿಸಿದ್ದೇನೆ. ಏಕೆಂದರೆ ಇದು ಈ ಕವಿಯೊಬ್ಬನ ತಪ್ಪಲ್ಲ, ಬಹಳಷ್ಟು ಜನ ನಾವು ನಮ್ಮದೇ ಜರೂರುಗಳಲ್ಲಿ ಕಳೆದು ಹೋಗುತ್ತ ನಿಜಕ್ಕೂ “ಶುಭಾಷಯ” ಹೇಳಲೇ ಬೇಕಾದ ಕನಿಷ್ಠ ಸಂತೈಸಬಹುದಾದ ಸಂಗತಿಗಳನ್ನ ಮರೆತು ಬಿಡುತ್ತೇವಲ್ಲ ಅದರ ಅಭಿವ್ಯಕ್ತಿ ಇಲ್ಲಿ ಸಲೀಸಾಗಿ ಬಂದಿದೆ‌. ಒಂದು ಸಣ್ಣಕತೆಯೇ ಆಗಿ ಬದಲಾಗಿದೆ. ಬಯಲಲ್ಲಿ ಬಯಲೆನಿಸಿಕೊಂಡ ಜಂಗಮ ಬೆಳಕು ಎಲ್ಲಿ  ಹೋಯಿತು ? ಎಂದು ಎಲ್ಲವೂ ವ್ಯಾಪಾರವೇ ಆಗಿ ಬದಲಾಗಿರುವ ವರ್ತಮಾನದ ಬದುಕನ್ನು ಪ್ರಶ್ನಿಸುವ ಕವಿಯ ಈ ಪ್ರಶ್ನೆ ನಮ್ಮೆಲ್ಲರದ್ದೂ ಆಗ ಬೇಕಾದ ತುರ್ತು ಸಮಯ ಇದಾಗಿದೆ. “ಆಕಾಶದ ಚಿತ್ರಗಳು” ಶೀರ್ಷಿಕೆಯ ಪದ್ಯದ ಈ ಸಾಲುಗಳು ಅಲ್ಲೊಬ್ಬಳು ಹಳೇ ನೈಟಿಯ ಆಂಟಿಗೆ ಗೊರಕೆ ಗಂಡನ ಪಕ್ಕದಲ್ಲಿ ಮಲಗಿ ನೂರು ನಿಟ್ಟುಸಿರುಗಳ ಕಾದ ನಟ್ಟಿರುಳಲ್ಲೂ ಇಂದ್ರಚಾಪದ ಬೆನ್ನೇರಿ ಆಗಸಕ್ಕೇರುವ ಕನವರಿಕೆ, ಬೆಚ್ಚೆದ್ದ ಗಂಡನ ಸಂಶಯದ ಕಂಗಳಲ್ಲಿ ಗೌತಮನ ಶಾಪದ ಪಳೆಯುಳಿಕೆ ಎನ್ನುವ ಅದ್ಭುತ ರೂಪಕವಾಗಿದೆ. ಒಂದೇ ಒಂದು ಹೊಸ ರೂಪಕವೊಂದನ್ನು ಒಬ್ಬ ಹೊಸ ಕವಿ ಸೃಷ್ಟಿಸಿದರೆ ಆ ಕವಿ ಬಹಳ ಕಾಲ ಉಳಿಯುತ್ತಾನೆ ಎಂಬ ಮಾತಿದೆ. ಹಾಗಾಗಿ ಶ್ರೀ ನರಸಿಂಹ ವರ್ಮನೆಂಬ ಈ ಕವಿ ಬಹುಕಾಲ ಉಳಿಯುವರು ಎಂಬುದಕ್ಕೆ ಸಾಕ್ಷಿಯೂ ಆಗಿದೆ ಈ ಸಾಲುಗಳು. ತಮ್ಮದೇ ಓದಿನಿಂದ ಕಂಡುಕೊಂಡ ದಾರಿಯಲ್ಲೇ ಸಾಗುವ ಈ ಕವಿ ಅಪರೂಪಕ್ಕೆ ಎಂಬಂತೆ “ಸ್ಪರ್ಶವೆಂದರೆ ಮುಟ್ಟುವಿಕೆಯಲ್ಲ ತಟ್ಟುವಿಕೆ” ಎಂದೂ ಕಾಣಿಸಬಲ್ಲ ಛಾತಿ ಉಳ್ಳವರು. ದೂರದ ಬೆಟ್ಟವನ್ನು ಕಣ್ಣ ಮುಂದೆ ಹಿಡಿಯ ಬಲ್ಲಂತೆಯೇ ತಮ್ಮೊಳಗಿನ ದೇವರನ್ನೂ ಕಾಣಿಸ ಬಲ್ಲವರು‌‌. ಶ್ರೀ ನರಸಿಂಹ ವರ್ಮರು ಕಾನೂನು ಕಟ್ಟಳೆ ಅರಿತ ಕಾರಣ ಅವರಿಗೆ ಯಾವುದು ತಪ್ಪು ಯಾವುದು ಸರಿ ಎಂಬ ಸೈದ್ಧಾಂತಿಕ ಕಾರಣಗಳಾಚೆಯ ಅವರವರ ಲೋಕದ ಅರಿವು ಸಿದ್ಧಿಸಿದೆ‌. ಪ್ರಾಯಶಃ ಆ ಅರಿವೇ ಅವರೆಲ್ಲ ಕವಿತೆಗಳಿಗೂ ಹೊದಿಸಿದ ಅರಿವೆಯೂ ಆಗಿದೆ. ಆದರೆ ನಾವು ಹೊದ್ದ ಅರಿವೆಗಳನ್ನು ಕಳಚದೇ ನಿಜದ ನಗ್ನತೆಗೆ ಇರುವ ಚೆಲುವು ಮತ್ತು ಗಟ್ಟಿತನ ಅಲಂಕಾರದಲ್ಲಿ ಮರೆವೆಯಾಗಿ ಬದಲಾಗಬಾರದು. ಅವರ ಮುಂದಿನ ಪದ್ಯಗಳ ಬಗ್ಗೆ ಭರವಸೆ ಮತ್ತು ಅಪರೂಪದ ತಿಳುವಳಿಕೆಯ ಗಂಧದ ಪರಿಮಳ ಸೂಸುತ್ತಲೇ ಆಳದಾಳದ ತಿಳಿವನ್ನು ಪುನರ್ಮನನ ಮಾಡಿಸುವ ಅವರ ಕಾವ್ಯ ಕೃಷಿಗೆ ಶುಭಾಷಯ ಹೇಳುತ್ತ ಅವರ ಆಯ್ದ ಕವಿತೆಗಳನ್ನು ನಿಮ್ಮ ಓದಿಗೆ ಶಿಫಾರಸು ಮಾಡುತ್ತ ಈ ಟಿಪ್ಪಣಿ ಮುಗಿಸುತ್ತೇನೆ. ನರಸಿಂಹ ವರ್ಮರ ಆಯ್ದ ಕವಿತೆಗಳು. 1. ಹೊರಗೆ ‌ಅಡ್ಡಾಡುವುದಿಲ್ಲ ಈಗ ಕವನ : ಹಾಳೆಯಲ್ಲೇ ತೆವಳುತ್ತದೆ ಕದಲದಂತೆ ಕದಲಿ ಕದಲಿಸುತ್ತಿದೆ ‍‌‍ಅವ್ಯಕ್ತ ‌‌ಹುಳದ ಧ್ಯಾನ ‌ಕವಿತೆಗೂ ಬೇಕು ಮಾರುಕಟ್ಟೆ ‍‌ಅಕ್ಷರಗಳಿಗೆ ಮೆರವಣಿಗೆ : ಈಗ ಮ‌ಾತ್ರ ಬೇಡವೇ ಬೇಡ ವಿಮರ್ಶೆ, ಹೊಗಳಿಕೆ ಕೋವಿದ ಎಂದು ಬಣ್ಣಿಸಿದರೆ ಕೋವಿಡ ಎಂದಂತೆ  ಭಾಸವಾಗಿ ಭಾಷೆ  ಭಯ ಹುಟ್ಟಿಸುತ್ತಿದೆ ಈ ‍ಸ್ತಬ್ಧಗೊಂಡ ‍‌‌ಅನಾಥ ಬೀದಿಗಳಲ್ಲಿ ಯಾವ ಕವಿತೆಗೂ ಜಾಗವಿಲ್ಲ : ಒಂಟಿ ‍ಅರಮನೆಯಲ್ಲೂ ತಕ್ಷಕನ ನೆನಪು ಯಾವ ಫಲದಲ್ಲಿ ಯಾವ ಹುಳವೋ ಪರೀಕ್ಷಿತನಿಗಿಲ್ಲಿ ನಿದ್ದೆಯಿಲ್ಲ. 2. ಟ್ರಾಫಿಕ್ ಜಂಜಾಟದಲ್ಲಿ ಕಾರು ಚಲಾಯಿಸುತ್ತಾ ಅವನು ಧ್ಯಾನಕೇಂದ್ರದ ಬಗ್ಗೆ ಧ್ಯಾನಿಸುತ್ತಾನೆ : ಧ್ಯಾನ ಕೇಂದ್ರದೊಳಗೆ ಕಾಲಿಟ್ಟೊಡನೆ ಧ್ಯಾನ ಮಾಯವಾಗುತ್ತದೆ ಬಣ್ಣಬಣ್ಣದ ದಿರಿಸುಗಳ    ಸಾಲಿನಿಂದ ತೇಲಿ ಬಂದ ಲಘು ಅತ್ತರಿಗೆ ತತ್ತರಿಸಿ ಅವನು ಮಾಯೆಯ ಬಗ್ಗೆ ಗಾಢವಾಗಿ ಚಿಂತಿಸುತ್ತಾನೆ : ಧ್ಯಾನಕೇಂದ್ರದೊಳಗೆ ನಿಧಾನವಾಗಿ ಮಾಯೆ ಆವರಿಸತೊಡಗುತ್ತದೆ ಹೊರಗೆ ಕಾರಿನಲ್ಲಿ ಎಸಿಯಿಂದ ಬೇಸತ್ತ ಶ್ವಾನ ಅತಂತ್ರಗೊಂಡು ಹಣಕಲು ಹವಣಿಸುತ್ತಿದೆ  : ರಸ್ತೆಯ ‌ಆಚೆ ಬದಿಯಲ್ಲಿ ಹೆಣ್ಣುಸೊಣಗವೊಂದು ಸ್ವತಂತ್ರವಾಗಿ ಸಂಚರಿಸುತ್ತಿದೆ ಜಗದೊಳಗಿನ ಎಲ್ಲಾ ಮಾಯೆಗಳೂ ಉದರಂಭರಣಕ್ಕೆ ಪ್ರವಚನಗಳಾಗಿ ಗೋಡೆಗಳೊಳಗೆ ಪ್ರವಹಿಸುತ್ತಿವೆ “ಮನದ ಮುಂದಣ ಆಸೆಯೇ ಮಾಯೆ ಕಾಣಾ” ಎಂಬ ಸರಳ ಅಧ್ಯಾತ್ಮ ಅಲ್ಲೇ ಪಕ್ಕದ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯಲ್ಲಿ ಬಯಲಾಗಿ ಬಿದ್ದಿದೆ. 3. ಬಯಲೊಳಗಿದ್ದ ಯೋಗದ ಬಟ್ಟಲುಗಳೀಗ ‌ಅಂಗಡಿಯೊಳಗೆ ದೊರೆವುದೆಂದು ದಾಂಗುಡಿಯಿಡುವ ಜನರು ಎಲ್ಲೆಡೆಗೂ ಹುಯಿಲೋ ಹುಯಿಲು ಬಯಲೊಳಗಿದ್ದ ಬಟ್ಟಲುಗಳೊಳಗೆ ಬೆಟ್ಟದಷ್ಟು ಕುತೂಹಲಗಳು ಒಂದು ನಂಬಿಕೆಗೆ ಹಲವು ನಾಮರೂಪಗಳು ಬಸಿರುಸಿರ ಬಿಗಿ ಹಿಡಿದು ಜಗದುಸಿರೊಳಗೊಂದಾಗುವ ಕನಸ ಸಾಹಸಗಳು ತನುವಿನೊಳಗೊಂದು ಹಾವು ಹಾವಿನೊಳಗೆ ಹೂವುಗಳನಿಟ್ಟು ತಲೆ ದಾಟಬಲ್ಲ ನರ ಕಲ್ಪನಾ ವ್ಯೂಹಗಳು ಬದಲಾದ ಕಾಲದಲಿ ಅಂಗಡಿ ಮುಂಗಟ್ಟುಗಳಲಿ ಮೂಟೆ ಮೂಟೆ ಹಣ ಸುರಿದು ನಕಲಿ ಬಟ್ಟಲುಗಳನೂ ಕೊಳ್ಳಬಲ್ಲ  ಭೋಗಿಗಳು : ಕೊಳ್ಳೆ ಹೊಡೆವ ವ್ಯಾಪಾರಕ್ಕಿಳಿದ ನಕಲಿ ಯೋಗಿಗಳು ಬಯಲಲ್ಲಿ ಬಯಲೆನಿಸಿಕೊಂಡ ಜಂಗಮ ಬೆಳಕು ಎಲ್ಲಿ  ಹೋಯಿತು ? 4. ಕರೆ ಶೂನ್ಯದಲ್ಲೇ ದೃಷ್ಟಿ ನೆಟ್ಟು ಕಂಗೆಟ್ಟು ಕಣ್ಣ ಬೆಳಕನ್ನೇ ಕಳಕೊಂಡವರ ಕಡೆಗೆ ಕಡೆಗಣ್ಣನಾದರೂ ಹಾಯಿಸು; ಕಣ್ಣಿಂದ ಕಣ್ಣಿಗೆ ಸುಳಿಯಲಿ ಭರವಸೆಯ ಮಿಂಚು ಹರಿಸು ಭರವಸೆಯ ಬೆಳಕು! ಸಕಲ ಸ್ನಾಯುಗಳನ್ನೂ ಬಿಗಿಗೊಳಿಸಿ ಹುಬ್ಬುಗಂಟಿಕ್ಕಿ ಬೊಬ್ಬಿರಿಯುವ ಸದಾ ಉದ್ವಿಗ್ನ ಮಂದಿಯೂ ಬಿದ್ದು ಬಿದ್ದು ನಗುವಂತೆ ಖುದ್ದು ನಗು, ನಗಿಸು, ನಗುತ ಬಾಳು ಹಬ್ಬಿಸು ನಗೆಯ ಬೆಳಕು! ಜಡ್ಡುಗಳೂ ಗೊಡ್ಡುಗಳೂ ಬಡ್ಡಾದ ಹೆಡ್ಡುಗಳೂ ಸಿಡಿದು ಚೂರಾಗುವಂತೆ ಹೊಡೆದೊಡೆಯುವ ವಿವೇಚನೆಯ ಪಟಾಕಿಗಳ ಹಂಚು ಜನ ಮಾನಸಕೆ ಉಬ್ಬಿಸು ಸ್ವಾಭಿಮಾನದ ಬೆಳಕು! ತಮಸೋಮ‌ಾ ಜ್ಯೋತಿರ್ಗಮಯ ಎಂಬ ಚಿಂತನೆಯ ಬೆಳಕು ಜಾತಿ ಮತ ಕಾಲ ದೇಶಗಳ ಮೀರಿ ದಿಸೆದಿಸೆಗಳಿಗೂ ಹರಿದಾಗ ಜಗದ ತುಂಬೆಲ್ಲ ನಿತ್ಯ ದೀಪಾವಳಿ! ಅದಕ್ಕಾಗಿ ನೀನು ದಯವಿಟ್ಟು ಬೆಳಕು ಹಚ್ಚು ಕಿಚ್ಚು ಹಚ್ಚಬೇಡ! 5. ಆಕಾಶದ ಚಿತ್ರಗಳು  ಯಾವುದೋ

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ-ಹೊಸ ಬನಿ-೧೧ ಭಾವಕ್ಕಿಂತಲೂ ಬುದ್ಧಿಯ ನಡೆಯಲ್ಲೇ ತವಕಿಸುವ ದಿಲೀಪ ಕುಮಾರ್ ಪದ್ಯಗಳು. ಹೊಸ ಕಾಲದ ಹುಡುಗ ಹುಡುಗಿಯರು ಫೇಸ್ಬುಕ್ ವಾಟ್ಸ್ ಆಪಿನಂಥ ಸಾಮಾಜಿಕ ಜಾಲತಾಣದಲ್ಲಿ ಬರೆದುದನ್ನು ತಿದ್ದುವ ಮೊದಲೇ ಪ್ರಕಟಿಸಿ ಬಿಡುವುದರಿಂದ ನಿಜಕ್ಕೂ ಕವಿತೆಗಳಾಗುವ ತಾಕತ್ತಿದ್ದ ರಚನೆಗಳು ಕೂಡ ಗರ್ಭಪಾತಕ್ಕೆ ಸಿಲುಕಿ ಅಂಥ ತಾಣಗಳಲ್ಲೇ ತಿಣುಕುತ್ತಿರುವ ಕೆಲವರ ಲೈಕು ಈಮೋಜಿ ಕಮೆಂಟುಗಳಿಂದಲೇ ಉಬ್ಬಿ ಹೋಗಿ ಆ ಕವಿ ಮಿಣುಕುಗಳು ನಕ್ಷತ್ರಗಳಾಗುವ ಮೊದಲೇ ಉರಿದು ಬಿದ್ದು ಹೋಗುತ್ತಿರುವ ಕಾಲವಿದು. ಅಪರೂಪಕ್ಕೆ ಹೊಸತಲೆಮಾರಿನ ಕೆಲವು ಹುಡುಗ ಹುಡುಗಿಯರು ತಮ್ಮ ಓದಿನ ಪ್ರಖರ ದಾರಿಯಿಂದ ಸ್ಪೂರ್ತಿಗೊಂಡು ಕಾವ್ಯ ಕ್ರಿಯೆಯಲ್ಲಿ ತೊಡಗಿರುವುದು ಸಂತಸದ ವಿಚಾರ. ಕನ್ನಡ ಮಾಧ್ಯಮದಲ್ಲಿ ಓದುವುದಿರಲಿ, ಮಾತನಾಡುವವರೂ ವಿರಳರಾಗುತ್ತಿರುವ ಹೊತ್ತಲ್ಲಿ ಈಗಾಗಲೇ ತಮ್ಮ ಹರಿತ ವಾಗ್ಝರಿ ಮತ್ತು ಮೊನಚು ವಿಮರ್ಶೆಯ ಮೂಲಕ ಪ್ರಸಿದ್ಧರಾಗಿರುವ ಚಾಮರಾಜ ನಗರದ ಯುವಕವಿ ಆರ್.ದಿಲೀಪ್ ಕುಮಾರ್ ತಮ್ಮ ಮೊದಲ ಕವನ ಸಂಕಲನ ” ಹಾರುವ ಹಂಸೆ” ಯನ್ನು ಪ್ರಕಟಿಸಿದ್ದಾರೆ. ಚಿಕ್ಕವಯಸ್ಸಿನಿಂದಲೇ ಸಾಹಿತ್ಯ, ಸಂಗೀತ ಮತ್ತು ಚಿತ್ರಕಲೆಗಳಲ್ಲಿ ಸಮಾನ ಆಸಕ್ತಿಯಿಂದ  ಸದ್ಯ ಕಾವ್ಯ, ವಿಮರ್ಶೆ, ಭಾಷಾಂತರ, ಸಂಶೋಧನೆ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯು.ಜಿ.ಸಿ ಸೆಮಿನಾರ್ ಗಳಲ್ಲಿ ಸಂಶೋಧನಾ ಲೇಖನಗಳನ್ನು ಮಂಡಿಸಿದ್ದು ಅವರ ಲೇಖನಗಳು ಮೆಚ್ಚುಗೆ ಪಡೆದಿವೆ. ಚಾಮರಾಜನಗರದ ಪ್ರಾದೇಶಿಕ ಪತ್ರಿಕೆಯಲ್ಲಿ ಹಲವು ಲೇಖನಗಳು ಪ್ರಕಟವಾಗಿದೆ. ಮಯೂರದಲ್ಲಿ ಮೊದಲು ಕವನವೊಂದು ಪ್ರಕಟವಾಗಿದ್ದು, ಆನಂತರ ಅಂತರ್ಜಾಲ ಪತ್ರಿಕೆಯಾದ ಕೆಂಡಸಂಪಿಗೆಯಲ್ಲಿ ಮತ್ತು ಜಾಲತಾಣ ಸುಗಮದಲ್ಲಿ ಕವನಗಳು ಪ್ರಕಟವಾಗಿದೆ. “ಹಾರುವ ಹಂಸೆ” ಕವನ ಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಯೋಜನೆಯ ಅಡಿಯಲ್ಲಿ ಗೋಮಿನೀ ಪ್ರಕಾಶನದಿಂದ ಪ್ರಕಟವಾದ ಮೊದಲ ಕವನ ಸಂಕಲನವಾಗಿದೆ . ಡಾ.ಮೂಡ್ನಾಕೂಡು ಚಿನ್ನಸ್ವಾಮಿ ತಮ್ಮ ಮುನ್ನುಡಿಯ ಮೂಲಕ ಈ ಯುವ ಕವಿಯ ಸಾವಯವ ಸಾಮರ್ಥ್ಯವನ್ನು ಎತ್ತಿಹಿಡಿದಿದ್ದಾರೆ. ಹಾಗೇ ಎಚ್ಚರಿಕೆಯ ಮಾತನ್ನು ಬಲು ಸೂಕ್ಷ್ಮವಾಗಿ ಹೇಳಿದ್ದಾರೆ. ಬೆನ್ನುಡಿಯಲ್ಲಿ ಡಾ.ಎಚೆಸ್ವಿ ಕೂಡ ಬಹಳ ಮೌಲಿಕವಾದ ಮಾತನ್ನು ಬರೆದಿದ್ದಾರೆ. ಕವಿ ತನ್ನ ಮಾತಲ್ಲಿ ತನ್ನ ಕಾವ್ಯ ಕರ್ಮದ ಹಿಂದಣ ಸಿದ್ಧತೆಯನ್ನು ಸರಳವಾಗಿ ಬಿಚ್ಚಿಟ್ಟಿದ್ದಾರೆ. ಸಂಕಲನದಲ್ಲಿ ಒಟ್ಟು ಐವತ್ತೊಂದು ಕವಿತೆಗಳಿವೆ. ನವ್ಯದ ನುಡಿಗಟ್ಟುಗಳೇ ಶೀರ್ಷಿಕೆಯಾಗಿರುವ ಸಂಕಲನದ ಎಲ್ಲ ಕವಿತೆಗಳ ತಲೆಬರಹವನ್ನು ಸಣ್ಣದೊಂದು pause ಕೊಟ್ಟು ಓದಿದರೆ ಅದೇ ಮತ್ತೊಂದು ಕವಿತೆಯಾಯಿತು! ಇಂಥ ಭಾಗ್ಯ ಮತ್ತು ಅನುಕೂಲ ಕವಿತೆಯ ಬಗ್ಗೆ ಭರವಸೆ ಮತ್ತು ಅಧ್ಯಯನದ ಮೂಲಕವೇ ಕವಿ ಬೆಳೆದಿರುವುದರ ಸೂಚನೆಯಾಗಿದೆ. ಅಡಿಗರ ಜೊತೆಜೊತೆಗೇ ಅಲ್ಲಮ ಇಣುಕುವಾಗಲೇ ಕೆ ಎಸ್ ನ ಕೂಡ ಈ ಕವಿಯ ಜೊತೆಗೆ ಹೆಜ್ಜೆ ಇಕ್ಕುತ್ತಾರೆ. ಇನ್ನೂ ಮಜವೆಂದರೆ ಚಾಮರಾಜನಗರ ಪ್ರದೇಶದ ಮೌಖಿಕ ಕಾವ್ಯ ಪರಂಪರೆಯ ಸೊಗಡಿನ ವಾಸನೆ ಕೂಡ ಮೂಗನ್ನು ಅರಳಿಸುತ್ತದೆ. ಪ್ರಾರ್ಥನೆ, ಬಿನ್ನಹ, ಒಂದು ಭಾವ, ಕೊಡು, ನೋ, ಸತ್ತಿಗೆ ಮುಂತಾಗಿ ಶೀರ್ಷಿಕೆಗಳನ್ನೇ ಓದುತ್ತ ಹೋದರೆ ಮತ್ತೊಂದು ಕವಿತೆ ಹುಟ್ಟುವುದು ಈ ಕವಿಯನ್ನು ಭರವಸೆಯಿಂದ ನಿಜದ ಅರಿವು ಮತ್ತು ಅಧ್ಯಯನ ಮಾಗಿಸಿದ ತಾತ್ವಿಕತೆಗೆ ಭೇಷ್ ಅನ್ನುತ್ತೇನೆ. ದಿಲೀಪ್ ಈಗಾಗಲೇ ಒಂದು ಸಂಕಲನ ಪ್ರಕಟಿಸಿ ತುಂಬ ಹೆಸರು ಮಾಡಿದವರು. ಅಲ್ಲದೆ ತುಂಬ ಕಿರಿಯ ವಯಸ್ಸಿನ ವಿಮರ್ಶಕರು ಕೂಡ ಹೌದು. ಪಂಪನನ್ನು ವರ್ತಮಾನದಲ್ಲಿ ಅರಿತಿರುವ ಯುವಕರ ಪೈಕಿ ದಿಲೀಪ್ ಮೊದಲು ನೆನಪಾಗುತ್ತಾರೆ. ಅವರ ಫೇಸ್ಬುಕ್ ಬರಹಗಳಲ್ಲಿ ಬರಿಯ ಕವಿತೆಗಳಲ್ಲದೇ ನಾಡು, ನುಡಿ, ಸಂಸ್ಕೃತಿ, ರಾಜಕಾರಣವೂ ಸೇರಿದಂತೆ ಬದುಕಿನ ಎಲ್ಲ ಸ್ತರಗಳ ದರ್ಶನದ ಜೊತೆಗೇ ಶಾಸ್ತ್ರೀಯ ಸಂಗೀತದ ಕುರಿತ ಟಿಪ್ಪಣಿಗಳೂ ಹಾಗೂ ಈ ಕವಿಯನ್ನು ಬಹಳವಾಗಿ ಪ್ರಭಾವಿಸಿದವರ ಕುರಿತೂ ಇವೆ. ನಮ್ಮಲ್ಲಿ ಬಹುತೇಕರ ಫೇಸ್ಬುಕ್ ಪುಟಗಳು ಸ್ವಂತದ ಪಟ, ಸಾಮಾಜಿಕ ಘಟನೆಯೊಂದರ ಬಿಡುಬೀಸು ಹೇಳಿಕೆಗಳಾಗಿ ಬದಲಾಗುತ್ತಿರುವ ಕಾಲದಲ್ಲಿ ಎಲ್ಲೋ ಅಪರೂಪಕ್ಕಷ್ಟೇ ಕಾಣುವ ದಿಲೀಪನಂಥವರ ಪುಟಗಳು ಇನ್ನೂ ಅಲ್ಪ ಸ್ವಲ್ಪ ಉಳಿದಿರುವ ಮಾನವೀಯತೆಯ ಮುಖವನ್ನೂ ನಿಜಕ್ಕೂ ಆಗಬೇಕಿರುವ ನಿಜದ ಕೆಲಸಗಳನ್ನೂ ಹೇಳುತ್ತವೆ. ಜೊತೆಗೇ ಪರಂಪರೆಯನ್ನೂ ಪೂರ್ವ ಸೂರಿಗಳನ್ನೂ ಗೌರವಿಸುವ ಈ ಕವಿಯ “ಹಾರುವ ಹಂಸೆ” ಸಂಕಲನದ ಶೀರ್ಷಿಕೆಯೇ ಮೂಲತಃ ಕಂಬದಲಿಂಗನೆಂಬ ಹೆಸರಲ್ಲಿ ವಚನಗಳನ್ನು ಬರೆದ ಕಂಬದ ಮಾರಿತಂ‍ದೆಯೆಂಬ ವಚನಕಾರನ ವಚನದಿಂದ ಪ್ರಭಾವಿಸಲ್ಪಟ್ಟ ಕುರುಹಾಗಿದೆ. ಮಹಾ ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ ಆಡುವ ನವಿಲ ಕಂಡು, ಹಾರುವ ಹಂಸೆಯ ಕಂಡು, ಕೂಗುವ ಕೋಳಿಯ ಕಂಡು, ಬೆಳಗಾಯಿತ್ತೆಂದು ಹೋಗುತ್ತಿದ್ದೆ ಕದಂಬಲಿಂಗದಲ್ಲಿಗೆ. ಇನ್ನು ಹೆಚ್ಚು ವಿಸ್ತರಿಸುತ್ತ ಹೋದರೆ ಸ್ವಾರಸ್ಯ ಕೆಟ್ಟೀತೆಂಬ ವಿವೇಕದಲ್ಲಿ ದಿಲೀಪರ ಕೆಲವು ಕವಿತೆಗಳನ್ನು ಪರಿಶೀಲಿಸುವ ಕೆಲಸ ಮಾಡೋಣ. ಕೇಳಬೇಕು ಸಿಕ್ಕಾಗ ಒಂದು ನದಿಯಿಂದ ಹರಿಯಿತೇ ಬದುಕು ಸಪ್ತಕಂದಕಗಳ ದಾಟಿ ನಿಲ್ಲಿಸಿ ಇಳಿಸಿತ್ತೇ ಸಹಸ್ರಾರದ ಮೇಲೆ ಎಂದು ಪ್ರಾರಂಭವಾಗುವ ದಿಲೀಪರ ಬುದ್ಧನಿಗೆ ಹೆಸರಿನ ಕವಿತೆ ಈ ಕವಿಯು ಅನುಸರಿಸುತ್ತಿರುವ ದಾರಿಯನ್ನು ಮತ್ತು ಅವರು ನಂಬಿರುವ ನೆಚ್ಚಿರುವ ದಾರಿಯನ್ನೂ ತೋರುತ್ತಿದೆ. ಅಂದ ಮಾತ್ರಕ್ಕೇ ಇವರ ಪದ್ಯಗಳು ಸರ್ವ ಗುಣ ಸಂಪನ್ನತೆಯನ್ನೇನೂ ಹೊಂದಿಲ್ಲ. ಅಪರೂಪಕ್ಕೆ ಅವರಿವರ ಮೇಲೆ ಏರಿ ಹೋಗುವ ಚಾಳಿಯ ಜೊತೆಗೇ ವ್ಯಂಗ್ಯದ ಮಾತೂ ಹೀಗೆ ಹೊರಬೀಳುತ್ತವೆ; ಅವನೊಬ್ಬನಿದ್ದ ಗೆಳೆಯ ಗಾಜಿನ ಬಾಟಲಿ ಸದ್ದಾದಾಗ ಓಡಿ ಬರುತ್ತಿದ್ದ ಬಾಟಲಿ ತರೆಯುವಾಗ ಓಪನರ್ ಕೊಡುತ್ತಿದ್ದ ಲೋಟಕ್ಕೆ ಸುರಿದಾಗ ಸೋಡದ ಹಾಗೆ ಮುಖ ಉಬ್ಬಿಸಿ ಕೈ ಅಲುಗಾಡಿದೆ ಹಿಡಿದು ಮುತ್ತಿಕ್ಕಿಸಿ ಲೋಟಕ್ಕೆ ಲೋಟ ಒಟ್ಟಿಗೆ ಕೂರುತ್ತಿದ್ದ (ದುರಿತ ಕಾಲ) ಜೊತೆಗೇ “ತೀರ್ಥಪುರದವರು ಸಿಕ್ಕಿದ್ದರು ” ಥರದ ಕವಿತೆಗಳಲ್ಲಿ ಕಾಣುವ “ತೀರ್ಥರೂಪ”ರನ್ನೂ ನಾವು ಅರಿಯಬೇಕು. ವೈರಾಗ್ಯಕ್ಕೆ ಹೊತ್ತು ಗೊತ್ತಿಲ್ಲ ಗಂಟೊಳಗಿನ ಸ್ವಾದದ ಆಸ್ವಾದನೆಯ ಸಾಧನೆಯ ತುದಿ ಅದೆ ಹಾದಿ ಬೇರೆ ಬೇರೆ ಅಷ್ಟೆ ಒಂದೊಂದು ರುಚಿಯಲೂ ಇರುವ ಸ್ವಾದ ಕಠಿಣವೆನಿಸಿದರೆ ನಿನ್ನ ಬದುಕೂ ಬಲು ಕಠಿಣವಾಗಿದೆ ಒಂದೊಂದು ಭಾಷೆಯ ಲೀಲೆಯಲೂ ಮನದ ಕೊನೆ ಹಾರಬೇಕು (ತೀರ್ಥಪುರದವರು ಸಿಕ್ಕಿದ್ದರು). “ಕವಿತೆಯಲ್ಲದ ಕವಿತೆ”ಯಂಥ ರಚನೆಗಳಲ್ಲಿ ಹಿತೋಪದೇಶ ಕೂಡ ಇದೆ. ಜನಸಾಗರ ರಕ್ತದ ಮಡುವಲ್ಲಿ ತೇಲಿ ಮುಳುಗಿ ಈಜುವಾಗ ನನ್ನೀ ಪ್ರೇಮಾಖ್ಯಾನದ ಪುಟ ಪುಟವನೂ ಬಿಡದೆ ಲೋಲುಪನಾಗಿ ಪ್ರೀತಿಯಲಿ ಓದುವೆ ನನಗೆರಡು ಕಿವಿ ಬೇಡವೆ ನಾನೂ ಕವಿಯಲ್ಲವೇ (“ಗೆ”) ಎಂದು ಬೀಗುವ ವಾಸ್ತವದ ಕವಿಗಳನ್ನು ಚುಚ್ಚುತ್ತಾರೆ ಕೂಡ. ಸ್ವಂತದ ಕವಿತೆಗಳ ಜೊತೆಗೇ ಭರ್ತೃಹರಿಯಂಥ ಹಿರಿಯರನ್ನು ಕನ್ನಡಕ್ಕೆ ಒಗ್ಗಿಸುವ ಅನುವಾದದ ಕೆಲಸಕ್ಕೂ ಇವರು ಕೈ ಹಾಕಿರುವುದು ಸಂತಸದ ಕೆಲಸ. ಇಂದು ಮತ್ತೆ ಮಳೆ ಅದೇ ರಸ್ತೆಯಲಿ ಇದ್ದೇನೆ ರಸ್ತೆ ಕೊನೆಯಲ್ಲೆ ಕಣ್ಣಿದೆ ಗುರುತುಗಳೆಲ್ಲಾ ಅಳಿಸಿ ಕಾಲವಾಗಿದೆ ಇಲ್ಲೆಲ್ಲಾ ಹೆಜ್ಜೆಗುರುತಿದೆ “ಮತ್ತೆ ಮಳೆ” ಪದ್ಯದ ಸಾಲುಗಳ ಮೂಲಕ ತನ್ನಲ್ಲೂ ಇರುವ ಹತಾಶ ಪ್ರೇಮಿಯ ಹುಯಿಲನ್ನೂ ಇವರು ಕಾಣಿಸುವ ರೀತಿ ಹೊಸ ಪರಿಯದ್ದು. ದಿಲೀಪರ ಎಲ್ಲ ಪದ್ಯಗಳನ್ನೂ ಒಟ್ಟಿಗೆ ಹರಡಿಕೊಂಡು ಕೂತರೆ ಅವರೊಳಗಿನ ಕವಿಗೆ ಅನುಭವದ ಹದಕ್ಕಿಂತ ಓದಿನ ಮೂಲಕವೇ ಪಡೆದ ಜ್ಞಾನವೇ ಕೆಲಸ ಮಾಡುವುದು ಅರಿವಾಗುತ್ತದೆ. ಆ ಕಾರಣಕ್ಕೇ ದಿಲೀಪ್ ಹೃದಯದ ಪದ್ಯಗಳಿಗಿಂತ ಬುದ್ಧಿಯ ಬಲದ ಪದ್ಯಗಳ ರಚನೆಯಲ್ಲೇ ಹೆಚ್ಚು ಆಸಕ್ತರಾಗಿರುವ ಕಾರಣಕ್ಕೋ ಏನೋ ಅವರು ವರ್ತಮಾನದ ಸಂಗತಿಗಳಿಗಿಂತಲೂ ಐತಿಹ್ಯದ ಪುರಾವೆಗಳ ಬೆನ್ನುಹತ್ತುತ್ತಾರೆ ಮತ್ತು ಆ ಕಾರಣಕ್ಕೇ ನವ್ಯವು ಕಲಿಸಿಕೊಟ್ಟ ಪ್ರತಿಮೆ ಮತ್ತು ತಮ್ಮ ಅಪಾರ ಓದಿನ ಕಾರಣದಿಂದ ಕಲ್ಪಿಸಿಕೊಂಡ ರೂಪಕಗಳಲ್ಲೇ ತೊನೆಯುತ್ತಾರೆ. ನಿಜದ ಕವಿ ಇದನ್ನು ಮೀರದ ಹೊರತೂ ತನ್ನದೇ ಹಾದಿಯನ್ನು ನಿರ್ಮಿಸಿಕೊಳ್ಳಲಾರ. ಅದು ಅವರಿಗೂ ಗೊತ್ತಿದೆ. ಈ ಮಾತಿಗೆ ಸಾಕ್ಷಿಯಾಗಿ “ಪುರಂದರರಿಗೆ” ಕವಿತೆಯ ಈ ಸಾಲುಗಳನ್ನು ನೋಡಬಹುದು; ಈಗ ಆರಂಬ ಮಾಡಿದ್ದೇನೆ ಒಂದಷ್ಟು ಮೋಡಿಯ ಮಾಯದಮಳೆ‌ ಬಂದಿದೆ ನಾದದಲಿ ಪಚ್ಚೆತೆನೆ ಹುಲುಸಾಗಿ ಬೆಳೆಯಲು ಉಸಿರಾಗಿ ಕೈ ಹಿಡಿದು ನಡೆಸಬಹುದು ಒಳಗಿನ ಮೂಲೆ ಮೂಲೆಯಲೆಲ್ಲ‌ ಇಂದೂ ಕೇಳುತಿದೆ ನೀವು ಎಂದೋ ಮೀಟಿದ ತಂಬೂರಿ ದನಿಯ ಮಾರ್ದನಿ. “ಪುರಂದರರಿಗೆ” ಎಂದು ಹೇಳುವ ಪದ್ಯ ಸ್ವತಃ ಕವಿ ತನಗೆ ತಾನೇ ಹೇಳಿಕೊಳ್ಳುತ್ತಲೇ ಜೊತೆಗೇ ಇರುವವರ ಕಕ್ಕುಲಾತಿ ಮತ್ತು ವಿಸ್ಮೃತಿಗಳ ನಡುವೆ ಜೀಕುತ್ತದೆ ಮತ್ತು ಈ ಕವಿಯ ಮೆಚ್ಚಲೇ ಬೇಕಾದ ಪದ್ಯಗಳಲ್ಲಿ ಒಂದಾಗಿದೆ. ಇದನ್ನು ವಿಸ್ತರಿಸುವ ಹಾಗೆ ಇರುವ  “ಒಮ್ಮೆಲೇ ಹೀಗಾಗಿಬಿಟ್ಟರೆ ಹೇಗೆ” ಹೆಸರಿನ ಪದ್ಯದಲ್ಲಿ ಇರುವ ಅಂತಃಶಕ್ತಿ ಬೆರಗು ಹುಟ್ಟಿಸಿ ಈ ಕವಿಯು ಮುಂದೆ ನೇಯಬಹುದಾದ ಕವಿತೆಯ ಚಮತ್ಕಾರಿಕ ಪದ ಸಂಚಯದ ವಿಶೇಷವಾಗಿಯೂ ಕಾಣಬಹುದು. ಒಳಗೆ ಬೆಂಕಿ ಹೊರಗೂ ಕನಸಲ್ಲಿ ಬೆಂಕಿ ಉರಿ ತಾಕಿ ಮೈ ಉರಿದು ಸುಟ್ಟು ಕರಕಲಾದ ಕನಸು ಬಿದ್ದ ಕ್ಷಣ ಮೈ ಕೈ ಕೊಡವಿ ಗಡಿಬಿಡಿಯಲ್ಲಿ ಎದ್ದು ಕನ್ನಡಿ ಎದುರು ಬಲಗೈ ಎಂದು ಮುಟ್ಟಿದಾಗ ಎಡಗೈ ಎಡಗೈ ಎಂದು ಮುಟ್ಟಿದಾಗ ಬಲಗೈ ನೋಡಿಕೊಂಡು ಮುಖ ಮೈ ಕೈ ಎಲ್ಲಾ ಸವರಿಕೊಂಡು ನೀರು ಕುಡಿದ ತಕ್ಷಣ ಅನುಮಾನ ಶುರುವಾದದ್ದು ಬೆಂಕಿ ಬಿದ್ದದ್ದು ಆ ಕೈ ಗಾ ಈ ಕೈ ಗಾ ಮುಟ್ಟಿದ್ದು ನಿದ್ದೆಯಲ್ಲಾ ಅಥವಾ ಎಚ್ಚರದಲ್ಲಾ ಬೆಂದು ಬೂದಿಯಾಗಿದ್ದು ಒಳಗಾ ಹೊರಗಾ ನಿಜಕ್ಕೂ‌ ಈ‌ ಬಗೆಯ ದ್ವಂದ್ವವೇ ಪದ್ಯದ ಆಂತರ್ಯವಾದರೆ ಅದರ ಮುಂಬಗೆಯ ಬೆಂಕಿಯ ಹದ ಹುಟ್ಟಿಸುವ ಶಾಖಕ್ಕೆ ಪರ್ಯಾಯವಾಗುವುದು ಮತ್ತೊಂದು ಪದ್ಯವೇ ತಾನೆ? ಆದರೆ ಸಾವು ಕೂಡ ಎಲ್ಲ ಕವಿಗಳನ್ನು ಕಾಡುವ ಅನಿವಾರ್ಯ ವಸ್ತುವಾದ್ದರಿಂದ ದಿಲೀಪ ಹೀಗೆ ಹೇಳುತ್ತಾರೆ; ಕರಿನೆರಳು ಎದುರುಗೊಂಡಂತೆ ಮಕ್ಕಳು ಆಟಿಕೆ ತೆಗೆದೆಸೆದಂತೆ ಅತ್ತ ಇತ್ತ ಜೀವದಲಿ ಉನ್ಮಾದದಾಟ ಪಕ್ಕಸರಿದಂತೆ ಆಸೆ ಪಡುವ ಜೀವ ಜೀಕಿದಂತೆ ಕತ್ತಲೆಗೂ ಬೆಳಕಿಗೂ ಜೋಕಾಲಿಯಾಟ ಸರಿ, ಬದುಕಿನ ಮುಖಗಳನ್ನೇ ಇನ್ನೂ ಅರಿಯದ ಹುಡುಗರು ಹೀಗೆ ಸಾವಿಗೆ ಮರುಗುವುದು ಕೂಡ ಕರೋನಾ ಕಲಿಸಿದ ಪಾಠವೇ ಇರಬೇಕು! ದಿಲೀಪ್ ತಮ್ಮ ಓದಿನ ಮೂಲಕ ಕಡ ಪಡೆದ ಸಂಗತಿಗಳಾಚೆ ನಿಜ ಬದುಕಿನ ಪಲುಕುಗಳನ್ನು ಅರಿತವರಾದರೂ ಅವರ ಮೊದಲ ಪ್ರಾಶಸ್ತ್ಯ ಸಲ್ಲುವುದು ಓದಿನ ಮೂಲಕ ಪಡೆದ ಅರಿವಿನ ಕಡೆಗೇ. ಅವರ ಓದಿನ ಹರಹು ಸಮೃದ್ಧವಾದದ್ದು ಹೌದಾದರೂ ವರ್ತಮಾನದ ರಿಕ್ತತೆಯನ್ನು ಮತ್ತು ಸ್ವಂತ ಅನುಭವಗಳ ಮೂಲಕ ಅರಿಯುವ ಬದುಕಿನ ವಿಷಣ್ಣತೆ ಕೂಡ ಕಾವ್ಯೋದ್ಯೋಗಕ್ಕೆ ಪೋಷಾಕನ್ನೂ ಪಕ್ವಾನ್ನವನ್ನೂ ಪಡೆಯುವ ಸಾಧನವೆಂಬುದನ್ನು ತಮ್ಮ ಮುಂದಿನ ಪದ್ಯಗಳ ಮೂಲಕ ಸಾಬೀತು ಪಡಿಸಲಿ ಎನ್ನುವ ಆಶಯದೊಂದಿಗೆ ಅವರ ಫೇಸ್ಬುಕ್ ಕವಿತೆಗಳ ಓದಿನ ಟಿಪ್ಪಣಿಯನ್ನು ಕೊನೆ ಮಾಡುವ ಮೊದಲು ಅವರ ಆಯ್ದ ಆರು ಕವಿತೆಗಳನ್ನು ನಿಮ್ಮ ಓದಿಗಾಗಿ ಶಿಫಾರಸು ಮಾಡುತ್ತಿದ್ದೇನೆ. **************************************************************** ದಿಲೀಪ ಕುಮಾರ್ ಅವರ ಆಯ್ದ ಕವಿತೆಗಳು ೧. ಬುದ್ಧನಿಗೆ ಕೇಳಬೇಕು ಸಿಕ್ಕಾಗ ಒಂದು ನದಿಯಿಂದ ಹರಿಯಿತೇ ಬದುಕು ಸಪ್ತಕಂದಕಗಳ ದಾಟಿ ನಿಲ್ಲಿಸಿ ಇಳಿಸಿತ್ತೇ ಸಹಸ್ರಾರದ ಮೇಲೆ ರಾಹುಲನ ಕಣ್ಣು ಇನ್ನೂ ಒದ್ದೆ ಒದ್ದೆ ನೀನು ಹತ್ತಿ ಇಳಿದಿದ್ದಕ್ಕೋ ಯಶೋಧರೆ ಧರೆಗೆ ಬಿದ್ದಿದ್ದಕ್ಕೋ ಸುತ್ತಲಿನ ಜನರೆಲ್ಲರ ಕಣ್ಣ ಭಾಷೆ ತೋಯಿಸಿತ್ತೇ ಇಬ್ಬರನೂ ಹರಿವ ನದಿಯ ಜಾಡು ಹಿಡಿದು ಮುರಿದ ಮನವ ಬೆಸೆವ ಕಾಯಕಕ್ಕೆ ಬಿಟ್ಟು ಹೊರಟಿದ್ದಾದರೂ ಏಕೆ ಒಂದು ಕಾವಿ ಜೊತೆಗೆ ಆನಂದ ಅದು ಹೇಗೆ ಮತ್ತೆ ಕೇಳಬೇಕು ನಮ್ಮ ಗಲ್ಲಿಯಲಿ ಸಪ್ತಗಿರಿಗೆ ಹೋಗುವ ದಾರಿಯಂಚಲಿ ಸಿಕ್ಕರೆ ಬುದ್ಧನಿಗೆ ಬಿಟ್ಟು ಹೊಗುತ್ತಲೇ ಉಳಿದಿದ್ದು ಹೇಗೆ ಉಳಿಯುತ್ತಲೇ ಅಳಿಯದ ಹಾಗೆ ಇರುವುದು ಹೇಗೆ ೨. ತೀರ್ಥಪುರದವರು_ಸಿಕ್ಕಿದ್ದರು ಇಲ್ಲೇನಿದೆ ಅದೇ ನರಕ ಮೇಲೂ ಹೆಚ್ಚೇನಿಲ್ಲ ಎನಿಸಿ ಸುಮ್ಮನೆ ಕುಳಿತವನೆದುರು ಬಂದು ಬುತ್ತಿ ಬಿಚ್ಚಿ ಮಾತು ಶುರು ಮಾಡಿದರು ಹಂಚಿ ಉಂಡೆವು ಇಬ್ಬರೂ ಒಂದಷ್ಟು ರುಚಿ

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ ಹೊಸ ಬನಿ – ೧೦. ಹಂಗೆ ಇಲ್ಲದ ಖಬರಿನೊಳಗ ಏನೊ ಗುನುಗಿದ್ಹಾಂಗ ಚಂ ಸು ಕವಿತೆಗಳು ರಾಣೇಬೆನ್ನೂರು ಸಮೀಪ ಕೂನಬೇವು ಗ್ರಾಮದ ಸಾಹಿತಿ ಚಂಸು (ಚಂದ್ರಶೇಖರ ಸುಭಾಸ ಗೌಡ ಪಾಟೀಲ ಅಂದರೆ ಯಾರಿಗೂ ಗೊತ್ತಾಗುವುದಿಲ್ಲ!) ಅವರ “ಬೇಸಾಯದ ಕತಿ” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೧೮ನೇ ಸಾಲಿನ ಸಿಂಪಿ ಲಿಂಗಣ್ಣ ದತ್ತಿ (ಜೀವನಚರಿತ್ರೆ) ಪ್ರಶಸ್ತಿ ಪ್ರಕಟವಾದಾಗ ಅವರನ್ನು ಅಭಿನಂದಿಸಲು ಫೋನ್ ಮಾಡಿದ್ದೆ.  ಆ ಲೇಖನಗಳಲ್ಲಿ ಕೆಲವನ್ನು ಓದಿದ್ದರಿಂದಾಗಿ ಬೇಸಾಯದ ಬದುಕಿನ ಹಿಂದಣ ಕಷ್ಟ ಕಾರ್ಪಣ್ಯಗಳ ಕುರಿತು ಮಾತೆತ್ತಿದೆ. “ಅಯ್ಯೋ ಅದು ನಂದು ಒಬ್ಬನ್ನದೇ ಅಲ್ರೀ ಎಲ್ಲ ರೈತ ಮಕ್ಳ ಕತೇರೀ” “ಅಲ್ರೀ ನನ್ ಸಂಕಲ್ನದ ಬಗ್ಗೆ ಬರೆದವ್ರೂ ನೀವೊಬ್ರೇ, ಈಗ ಬಹುಮಾನ ಬಂತಂತ ಫೋನ್ ಮಾಡಿದವ್ರೂ ನೀವೇರೀ” ” ಶಿಶುನಾಳದಾಗ ಭೆಟ್ಟಿಯಾಗಿ ಇಪ್ಪತ್ತೊರ್ಸ ಆದ್ರೂ ನೆಪ್ಪಿಟ್ಟೀರಿ” ಎಂದು ಮಾತಾಡಿದ ಚಂಸು ದನಿಯಲ್ಲಿ ಈವರೆಗಿನ ಅವರ ಮೂರೂ ಕವನ ಸಂಕಲನಗಳಲ್ಲಿ ಕಂಡರಿಸಿದ್ದ ಬಂಡಾಯದ ಮೊಳಗು ಮತ್ತು ಮೊಹರು ಅವರ ಮಾತಲ್ಲಿ ಬತ್ತಿ ಹೋಗಿತ್ತು. ಹ್ಯಾಗಾದರೂ ಬದುಕು ಸಾಗಿಸಿದರೆ ಸಾಕು ಅನ್ನುವ ವ್ಯಥೆಯೂ ತುಂಬಿ ಕೊಂಡಂತಿತ್ತು. ಚಂಸು “ಬೇಸಾಯದ ಕತಿ” ಅನ್ನುವ ಶೀರ್ಷಿಕೆಯಲ್ಲಿ ತಮ್ಮ ಕೃಷಿ ಅನುಭವಗಳನ್ನು ಪತ್ರಿಕೆಯೊಂದರಲ್ಲಿ ಬರೆಯುತ್ತಿದ್ದರು. ರಾಸಾಯನಿಕಗಳನ್ನು ಬಳಸದೇ ಸಹಜ ಕೃಷಿಯಲ್ಲೇ ಇಳುವರಿ ಕಡಿಮೆಯಾದರೂ ಲುಕ್ಸಾನು ಇಲ್ಲವೆಂಬ ಅವರ ಅನುಭವ ಇತ್ತೀಚೆಗೆ ಎಲ್ಲ ರೈತರಿಗೂ ಮಾದರಿಯಾಗಿದೆ. ೧೯೯೫ರಲ್ಲಿ ಗೆಳೆಯನಿಗೆ, ೨೦೦೪ ರಲ್ಲಿ ಕೆಂಪು ಕಂಗಳ ಹಕ್ಕಿ ಮತ್ತದರ ಹಾಡು, ೨೦೦೯ರಲ್ಲಿ ಅದಕ್ಕೇ ಇರಬೇಕು ಎನ್ನುವ ಕವನಸಂಕಲಗಳನ್ನು ಪ್ರಕಟಿಸಿರುವ ಚಂಸು ಪಾಟೀಲ್ ೨೦೦೨ ರಿಂದ ೨೦೦೬ ರವರೆಗೆ ನೋಟ, ಕ್ರಾಂತಿ, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಉಪಸಂಪಾದಕರಾಗಿಯು ಕೆಲಸ ನಿರ್ವಹಿಸಿದ್ದಾರೆ. ೨೦೦೭ ರಿಂದ ರಾಣೇಬೆನ್ನೂರಿಗೆ ಅಂಟಿದಂತಿರುವ ಕೂನಬೇವು ಗ್ರಾಮದಲ್ಲಿ ನೆಲೆಸಿದ್ದು ಸಹಜ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರ ಮೂರು ಸಂಕಲನದ ಎಷ್ಟು ಕವಿತೆಗಳನ್ನು ಜನ ಓದಿದ್ದರೋ ಇಲ್ಲವೋ ಆದರೆ ಮೂರು ಸಾವಿರಕ್ಕೂ ಮೀರಿದ ಅವರ ಫೇಸ್ಬುಕ್ ಗೆಳೆಯರ ಬಳಗದಲ್ಲಿ ಅವರು ಹೊಸದೊಂದು ಕವಿತೆ ಪ್ರಕಟಿಸಿದ ಕೂಡಲೇ ಹಲವರು ಲೈಕುಗಳನ್ನು ಕೊಡುತ್ತಾರೆ. ಮತ್ತು ಮೇಲ್ನೋಟಕ್ಕೆ ಸಾಧಾರಣ ಶೈಲಿಯ ಹಾಸ್ಯದಂತೆ ಕಂಡರೂ ಆಂತರ್ಯದಲ್ಲಿ ವಿಷಾದವೇ ಅವರ ಎಲ್ಲ ಕವಿತೆಗಳಲ್ಲೂ ಸ್ಥಾಯಿಯಾಗಿ ಇರುತ್ತದೆ. ಬಂಡಾಯದ ದನಿ ಇಂಗಿ ಹೋಗಿದ್ದರೂ ಒಟ್ಟೂ ವ್ಯವಸ್ಥೆಯೊಳಗಿನ ದೌರ್ಬಲ್ಯಗಳನ್ನು ಅವರು ಶಕ್ತವಾಗಿ ದಟ್ಟವಾಗಿ ಹೇಳುತ್ತಾರೆ. ರೈತ ವಿರೋಧೀ ನಿಲುವನ್ನು ಪ್ರಶ್ನಿಸುವ ಅವರ ಕವಿತೆಗಳ ಮುಖ್ಯ ಸ್ಥಾಯಿಯೇ ರೈತನ ನಿತ್ಯ ಬದುಕಿನ ಸಮಸ್ಯೆಗಳು ಆಗಿರುವುದನ್ನು ಗಮನಿಸಲೇ ಬೇಕು. ಇವನಿಗೇಕೆ ಕವಿತೆಯ ಉಸಾಬರಿ? ತತ್ವಮೀಮಾಂಸಕರು ಕಾವ್ಯವಿಮರ್ಶಕರು ತಗಾದೆ ತೆಗೆದರು…. ಈ ಇಳೆಗೆ ಬೆಳೆಗೆ ತಗುಲಿದ ಕಳೆ ತೆಗೆಯುವುದು ಹೇಗೆಂದು ನಾ ಚಿಂತೆಗೆ ಬಿದ್ದಿರುವೆ! ಕವಿತೆ ಬರೆಯುವಾಗಲೂ ರೈತನ ಸಮಸ್ಯೆಯೇ ಇವರ ಕಾವ್ಯದ ಪ್ರತಿಮೆಗಳಾಗುವುದು ವಿಶೇಷ. ಹಸಿರು ಟವೆಲ್ ಕಟ್ಟಿಕೊಂಡು ಉದ್ದುದ್ದದ ಭಾಷಣ ಹೊಡೆಯುವವರು ಈ ಕವಿಯಿಂದ ಕಲಿಯಬೇಕಾದ್ದು ಬಹಳ ಇದೆ. ಇಲ್ಲ, ಇಲ್ಲ ನಾವು ಬದಲಾಗುವುದೇ ಇಲ್ಲ! ಎಂದು ಪ್ರತಿ ಅನುಪಲ್ಲವಿಯಲ್ಲಿ ಕೊನೆಯಾಗುವ ಕವಿತೆಯ ಆಂತರ್ಯ ಇಡೀ ಜಗತ್ತೇ ಬದಲಾದರೂ ಬದಲಾಗದ ಮನುಷ್ಯನ ಮಿತಿಯ ಬಗ್ಗೆ ಹೇಳುತ್ತದೆ. ಇಡೀ ಪದ್ಯ ಧೇನಿಸಿದ ಸಂಗತಿ ಕಡೆಯಲ್ಲಿ ಹೀಗೆ ವರ್ಣಿತವಾಗುತ್ತದೆ; ಮೋಡದಂತೆ ಕರಗುತ್ತೇವೆ; ನಿಜ, ಯಾರ ದಾಹವನ್ನೂ ಇಂಗಿಸುವುದಿಲ್ಲ! ಹೆಮ್ಮರವಾಗಿ ಬೆಳೆಯುತ್ತೇವೆ; ನಿಜ, ಯಾರ ಹಸಿವೆಯನ್ನೂ ಪೊರೆಯುವುದಿಲ್ಲ! ಮಳೆಬಿಲ್ಲಿನಂತೆ  ಬಣ್ಣಗಟ್ಟುತ್ತೇವೆ; ನಿಜ, ಎಲ್ಲರ ಸಂಭ್ರಮವಾಗಿ ಮೂಡುವುದಿಲ್ಲ! ನಕ್ಷತ್ರ‌ದಂತೆ ಮಿನುಗುತ್ತೇವೆ; ನಿಜ, ಯಾರ ಬದುಕನ್ನೂ ಬೆಳಗುವುದಿಲ್ಲ! ಬದಲಾಗುತ್ತಲೆ ಇದೆ ಜಗತ್ತು ಇಲ್ಲ, ಇಲ್ಲ ನಾವು ಮಾತ್ರ ಬದಲಾಗುವುದೇ ಇಲ್ಲ! ಪ್ರಾಯಶಃ ಪದ್ಯ ಇಲ್ಲಿಗೇ ಆಗಿದ್ದಿದ್ದರೆ ಕವಿತೆ ಗೆಲ್ಲುತ್ತಿತ್ತು. ಆದರೆ ತನ್ನ ಹೇಳಿಕೆಯನ್ನು ಸಮರ್ಥಿಸಲು ಕವಿ ಮತ್ತೆ ಮುಂದುವರೆಸಿದ ಸಾಲುಗಳು ಪದ್ಯವನ್ನು ನಾಟಕೀಯ ಅಂತ್ಯಕ್ಕೆ ಎಡೆಮಾಡುತ್ತದೆ. “ಮಾನವ ಜಾತಿ ತಾನೊಂದೇ ವಲಂ” ಎಂದಾ ಕವಿಯ ಮಾತು ನಮ್ಮೆದೆಯೊಳಗೆ ಇಳಿಯುವುದೇ ಇಲ್ಲ! ಇಲ್ಲ, ಇಲ್ಲ ನಾವು ಬದಲಾಗುವುದೇ ಇಲ್ಲ! ಈ ಸಾಲು ಪದ್ಯದ ಆಂತರಿಕ ಸತ್ವವನ್ನು ಘೋಷವಾಕ್ಯ ಮಾಡಿದ ಕಾರಣ ಮುಟ್ಟಬೇಕಾದ ಎತ್ತರ ಮುಟ್ಟದ ದೀಪಾವಳಿಯ ರಾಕೆಟ್ಟಿನಂತಾಗಿದೆ. ಬೆಳಕು ಬೆಳಕೆ ಆಗಿರುವುದಿಲ್ಲ; ಕತ್ತಲೆ ಕತ್ತಲೆಯೇ ಆಗಿರುವುದಿಲ್ಲ,; ಬೆಳಕಿನಲ್ಲಿ ಎಷ್ಟೊಂದು ಕತ್ತಲೆ…‌ ನಾವದನ್ನು ಗಮನಿಸುವುದೇ ಇಲ್ಲ! ಈ ಸಾಲುಗಳನ್ನು ಓದಿದ ಕೂಡಲೇ ಯಾರೋ ದಾರ್ಶನಿಕರ ನೆನಪಾದರೆ ತಪ್ಪೇನಿಲ್ಲ. ಈ ಕವಿತೆಯಲ್ಲಿ ಚಂಸು ದಾರ್ಶನಿಕ ಸಂಗತಿಗಳನ್ನೇ ಹೇಳಹೊರಟಿದ್ದಾರೆ. ಆದರೆ ಪದ್ಯದ ಕೊನೆ ಕತ್ತಲಿನಂಥ ದ್ವೇಷದಲ್ಲೂ ಪ್ರೀತಿಯ ಬೆಳಕು ಮಿಂಚುವುದಿಲ್ಲವೇ? ಅನ್ನುವಾಗ ಈ ಕವಿ ಹೇಳ ಹೊರಟ ದಾರ್ಶನಿಕ ಸತ್ಯಕ್ಕೆ ತಲೆ ಬಾಗಲೇ ಬೇಕಾಗುತ್ತದೆ. ವರ್ತಮಾನದ ಸಂಗತಿಗಳಿಗೂ ಕವಿಯನ್ನು ಬಾಧಿಸುತ್ತವೆ. ಆ ಅಂಥ ಸಂಗತಿಗಳು ಕವಿತೆಗಳಾದಾಗ ಅಂದರೆ ನಿತ್ಯದ ಬದುಕಿನಲ್ಲಿ ನಾವೆಲ್ಲ ಕೇಳುತ್ತಲೇ ಇರುವ ಬ್ರಷ್ಟಾಚಾರ, ಅತ್ಯಾಚಾರ, ಮಧ್ಯವರ್ತಿಗಳ ಕಾಟವನ್ನು ಈ ಕವಿ ಪ್ರಶ್ನಿಸಿ ಉತ್ತರಕ್ಕಾಗಿ ತಡುಕುತ್ತಾರೆ. ಸೀತೆಗೆ ಪರೀಕ್ಷೆಯ ಮೇಲೆ ಪರೀಕ್ಷೆ! ಕೊನೆಗೊಂದು ಶವಪರೀಕ್ಷೆ… ವರದಿಗಳೆಷ್ಟೋ ಅಷ್ಟೂ ರಾಮಾಯಣ! ಮನಿಷಾಳ ಹತ್ಯೆ ಕುರಿತಂತೆ ಏನೆಲ್ಲವನ್ನೂ ಓದಿದ ನಮಗೆ ಚಂಸು ಅವರ ಈ ಕವಿತೆ ರಾಮಾಯಣದ ಸೀತೆಯನ್ನು ಈ ಕಾಲದ ಮನಿಷಾಳಿಗೆ ಲಿಂಕ್ ಮಾಡುತ್ತಲೇ ನಿಲ್ಲದ ಈ ಅತ್ಯಾಚಾರಗಳ ಬಗ್ಗೆ ವ್ಯಥೆ ಪಡುತ್ತಾರೆ. ಬರ್ತೇನಂತ ಬಂದೇ ಬಿಟ್ಟಳು ಎಂಥ ಬಜಾರಿ ಹೆಣ್ಣಪ್ಪ! ಮಾಯಗಾತಿ ಮುತ್ತೇಬಿಟ್ಟಳು ಹೋರಿ ಮ್ಯಾಲೆ ಮಾರಿ ಕಣ್ಣಪ್ಪ! ರೈತ ಮತ್ತು ಭೂಮಿಯ ಮೇಲೆ ವ್ಯವಸ್ಥೆ ಮಾಡುತ್ತಲೇ ಇರುವ ಕಂಟಕಗಳನ್ನು ಮಾರಿಯಂತೆ ಚಿತ್ರಿಸುವ ಈ ಕವಿ ರಾಣೇಬೆನ್ನೂರು ಭಾಗದಲ್ಲಿ ಬಿಟಿ ಹತ್ತಿ ಬೀಜದಿಂದ ಆಗಿದ್ದ ಘಟನೆಯನ್ನು ಸ್ವಾರಸ್ಯವಾಗಿ ವಿಸ್ತರಿಸುತ್ತಲೇ ಒಟ್ಟೂ ಸಾಮಾಜಿಕ ಸನ್ನಿವೇಶವನ್ನು ಚಿತ್ರಿಸುತ್ತಾರೆ ಅಜ ಒಯ್ದು ಗಜ ಮಾಡುವಳು ರೂಪಾಂತರವೊ ಎಲ್ಲ ಅಜಗಜಾಂತರ! ಜೀವ ಸಂಕುಲದ ಸ್ವಭಾವಾ ತಿದ್ದುವಳು ಕುಲಾಂತರವೊ ಎಲ್ಲ ಕಲಸುಮೇಲೋಗರ! ಚಾನೆಲ್ಲಗೆ ಚಾಕ್ಲೇಟು ಪೇಪರ್ಗೆ ಬಿಸ್ಕೀಟು ಏರಿಕೊಂಡೆ ಸಾರೋಟು ಮಾಡ್ತಾಳೆ ಕಣ್ಕಟ್ಟು! ಇವಳೆ ಲೆಫ್ಟು ಇವಳೆ ರೈಟು ಇವಳೇ ಫ್ರಂಟು ಚುಂಬಿಸಿ ರಂಬಿಸಿ ಎಗರಿಸಿ ಗಂಟು…. ಸದ್ಯ ಭೂ ಸುಧಾರಣೆ ಕಾಯಿದೆ ಮತ್ತು ಎಪಿಎಂಸಿ ಕುರಿತು ಚರ್ಚೆಗಳು ನಡೆದಿರುವ ಹೊತ್ತಲ್ಲಿ ಚಂಸು ಹೇಗೆ ಅಧಿಕಾರ ಪಿಪಾಸು ವ್ಯವಸ್ಥೆ ಬೇಸಾಯಗಾರನ ಬೆನ್ನು ಸುಲಿಯುತ್ತಿದೆ ಎನ್ನುವುದನ್ನು ಸರಳವಾಗಿ ಹೇಳುತ್ತಲೇ ರೈತನ ಮುಂದಿರುವ ಭವಿಷ್ಯದ ಸವಾಲುಗಳನ್ನು ಪಟ್ಟಿ ಮಾಡುತ್ತಾರೆ. ಇದರ ಮುಂದುವರೆದ ಸಾಲುಗಳನ್ನು ಅವರ ಇನ್ನೊಂದು ಪದ್ಯದಲ್ಲಿ ಹೀಗೆ ಹೇಳುತ್ತಾರೆ; ಬದಲಾಗುವ ಕಾಯ್ದೆಗಳ ಮಧ್ಯೆ ನಿನಗೂ ಇದೆಯೆ? ಕೃತಜ್ಞತೆಗೊಂದಿಷ್ಟು ಸ್ಥಳ? ಚಂಸು ಅವರನ್ನು ಯಾಕೋ ಬೇಸಾಯದಷ್ಟೇ ಕಾಡುವ ಸಂಗತಿಗಳು ಎಂದರೆ ಕತ್ತಲು ಮತ್ತು ಬೆಳಕು. ಅವರ ಇನ್ನೊಂದು ಪದ್ಯ ಹೀಗೆ ಕೊನೆಯಾಗುತ್ತದೆ; ಒಳಗಿನ ಕತ್ತಲೆಯ ಕಳೆಯಲು ಬೆಳೆಸಲೇಬೇಕು ಆತ್ಮಸಾಕ್ಷಿಯೊಂದಿಗೆ ನಂಟು! ಇದನ್ನು ಕವಿಯಾಗಿ ಹೇಳುವುದು ಸುಲಭ. ಆದರೆ ಬದುಕು ಅಷ್ಟು ಸರಳ ಅಲ್ಲವಲ್ಲ. ನಮ್ಮನ್ನು ಮುತ್ತಿರುವ ಕತ್ತಲನ್ನು ತೊಡೆಯುವ ಅಧಿಕಾರಕ್ಕೆ ಆತ್ಮ ಸಾಕ್ಷಿಯೇ ಸತ್ತಿದೆಯಲ್ಲ, ಅದಕ್ಕೇನು ಮಾಡಬೇಕು? ಇದು ಎಡವೂ ಅಲ್ಲ! ಬಲವೂ ಅಲ್ಲ! ಎಡಬಲವೊಂದಾದ ಏಕತೆಯ ಹಾದಿ! ಭಾವೈಕ್ಯತೆಯ ಹಾದಿ! ಉಳಿದೆಲ್ಲವೂ ಆಗಲಿ ಬೂದಿ! ಇದು ಈ ಕವಿ ನೆಚ್ಚಿಕೊಂಡ ಮೆಚ್ಚಿಕೊಂಡ ಬದುಕಿನ ಹಾದಿ. ಹಾಗಾಗಿಯೇ ಗಾಂಧಿ, ಬಸವ, ಅಂಬೇಡ್ಕರರ ಮುಂದಿಟ್ಟು ಕೊಂಡ ಸ್ಪಷ್ಟ ಹಾದಿ. ಆದರೆ ಬದುಕು ಕವಿತೆಯಷ್ಟು ಸರಳ ಅಲ್ಲವಲ್ಲ! ಸುಮ್ಮನೆ ಕೂತಿದ್ದೇನೆ ಅಂಧಭಕ್ತಿಯ ಸುಳ್ಳಿನುರುಳಿಗೆ ಗೋಣನೊಡ್ಡಿ ವಿಶ್ವಗುರುವಿನ ಪಟಾಕಿ ಹಾರಿಸಿ ಕೂಗುತ್ತ, ತಿಸ್‌ಮದ್ದು ಬುಸ್ ಅಂದಷ್ಟಕ್ಕೆ ಉಬ್ಬಿ ಹಲ್ಕಿರಿಯುತ್ತ! ಅಡಿಗರ “ಶ್ರೀ ರಾಮ ನವಮಿಯ ದಿನ” ಕವಿತೆಯ ಅಣುಕು ಈ ಸಾಲುಗಳು. ಅಡಿಗರ ಈ ಕವಿತೆಯನ್ನು ನೆನೆಯದೇ ನಮ್ಮ ಯಾವುದೇ ಕಾವ್ಯ ಕುರಿತ ಸಂಕಿರಣಗಳು ನಡೆಯಲಾರವು. ಅದನ್ನು ಅರಿತ ಈ ಕವಿ ಅಣಕವಾಡಿನ ಮೂಲಕ ಮತ್ತೊಂದು ಮಜಲಿಗೆ ಒಯ್ಯುವುದು ಹೀಗೆ; ಷಟ್ಚಕ್ರ ರಾಕೆಟುಗಳೆಲ್ಲಕ್ಕೂ ಚಲನೆಯೆ ಮೂಲಾಧಾರ. ಸಹಸ್ರಾರಕ್ಕದೇ ದಾರಿದೀಪ ಹುತ್ತಗಟ್ಟಿದೆ ಚಿತ್ತ! ಗೆದ್ದಿಲು ಪರಿತ್ಯಕ್ತ ಜಾಗ? ಎದೆಬಗೆದುಕೊಳ್ಳದೆ ಕಾಣಬಹುದೇ ಪ್ರಜಾವತ್ಸಲ ಬಾಪೂರಾಮನ ಆ ಅಂಥ ರೂಪ? ಗಾಂಧಿಯನ್ನು ಕಾಣಬೇಕಿರುವ ರೀತಿಯನ್ನು ಈ ಕವಿತೆ ಬಗೆಯುವ ಬಗೆಯೇ ಸಶಕ್ತವಾಗಿದೆ ಮತ್ತು ವಿಶಿಷ್ಠವೂ ಆಗಿದೆ. “ಹಂಗೆ ಇಲ್ಲದ ಖಬರಿನೊಳಗ ಏನೊ ಗುನುಗಿದ್ಹಾಂಗ” ಎಂದು ಒಂದು ಕವಿತೆಯಲ್ಲಿ ತಮ್ಮ ಕನಸನ್ನು ತಾವೇ ವರ್ಣಿಸುವ ಈ ಕವಿಯ ಕನಸು ಖಬರಿಲ್ಲದವೇನೂ ಅಲ್ಲ. ಸಾಮಾಜಿಕ ಮೌಲ್ಯಗಳೇ ದಿವಾಳಿಯಾಗುತ್ತಿರುವ ಹೊತ್ತಲ್ಲಿ ತೀರ ಬೇಕೇ ಬೇಕಾದ ಆದರೆ ಮರೆತೇ ಹೋದ ಖಬರನ್ನು ಚಂಸು ಎತ್ತಿ ಹಿಡಿಯುತ್ತಾರೆ ಮತ್ತು ಆ ಕಾರಣಕ್ಕೇ ಹೆಚ್ಚು ಇಷ್ಟವಾಗುತ್ತಾರೆ. ಸ್ವಲ್ಪ ಹೊತ್ತು ಬಿಟ್ಟು ಗುಂಪು ಕರಗಿದ ಮೇಲೆ ಮತ್ತೆ ಅಲ್ಲಿಗೆ ಧಾವಿಸಿದೆ…. ಧ್ಯಾನಸ್ಥ ತಪಸ್ವಿಯಂತೆ ಅದು ಹಾಗೆ ಕೂತಿರುವುದನ್ನು ಕಂಡು ಅಚ್ಚರಿಗೊಂಡೆ! ಅದೇ ನನ್ನ ಕವಿತೆ ಎಂದು ಎತ್ತಿಕೊಂಡೆ; ಎದೆಗೊತ್ತಿಕೊಂಡೆ! ಇಂಥ ಬರವಣಿಗೆಯ ನಡುವೆಯೇ ಬೇಂದ್ರೆಯವರ           “ಕುಣಿಯೋಣು ಬಾರಾ” ಪದ್ಯಕ್ಕೂ ಚಂಸು ಅಣಕು ಮಾಡಬಲ್ಲರು; ಅವ್ನೌನು ಲಾಕ್ಡೌನು ಮುಗೀತು ಕೊರೊನಾ ಹೈರಾಣಾ ಸಾಕಾತು ಜುಮ್ಮಂತ ನುಗ್ಗಿ ಬಿಮ್ಮಂತ ಹಿಗ್ಗಿ ಕುಣಿಯೋಣಾ ಬಾರಾ ಕುಣಿಯೋಣಾ ಬಾರಾ! ಇನ್ನೂ ಸ್ವಾರಸ್ಯದ ಸಂಗತಿಯೆಂದರೆ ಲಾಕ್ಡೌನ್ ಕಾಲದ ಕವಿ ಈ ಚಂಸು. ಅದನ್ನು ಅತ್ಯಂತ ಸ್ವಾರಸ್ಯವಾಗಿ ಹಾಸ್ಯದಲ್ಲಿ ಹೇಳುತ್ತಲೇ ಆಳದಾಳದ ವಿಷಾದವನ್ನೂ ಗುರ್ತಿಸುವುದು ಇವರ ವಿಶೇಷ ಚಿತ್ರಕ ಶಕ್ತಿ. ಭಲ ಭಲಾ ಚಂಸು, ನಿಮ್ಮ ಪದ್ಯಗಳು ಓದುಗರದೇ ಆಗುವುದು ಈ ಸರಳ ರೀತಿಯಲ್ಲಿ ಹೇಳುತ್ತಲೇ ಸಂಕೀರ್ಣವೂ ಆಗುವ ತಿರುವುಗಳಿಂದಾಗಿ. ಮತ್ತು ಆ ತಿರುವುಗಳೇ ತಿವಿಯುವ ಆಯುಧಗಳಾಗಿ ಬದಲಾಗುವ ಕಾರಣಕ್ಕಾಗಿ. ಆದರೂ ಏನೆಲ್ಲ ಬಂಡಾಯದ ಮಾತುಗಳನ್ನು ಬರೆಯುತ್ತಿದ್ದ ನಿಮ್ಮ ಕವಿತೆಗಳು ಈಗ ಹತಾಶೆಯ ಮೂಸೆ ಸೇರಿ ನಿಜ ಬದುಕಿನ ಆವರ್ತನಗಳನ್ನು ಸರಳ ಸಾಲುಗಳಲ್ಲಿ ಕಂಡಿರಿಸುತ್ತಿರುವ ಪರಿಗೆ ದಿಗ್ಮೂಡಗೊಂಡಿದ್ದೇನೆ ಮತ್ತು ನಿಮ್ಮೊಳಗಿನ ಆ ಬಂಡಾಯ ಮತ್ತೆ ಪುಟಿದೆದ್ದು ಸದ್ಯದ ಕಾಯಿದೆ ಕಾನೂನುಗಳನ್ನು ಪ್ರಶ್ನಿಸುತ್ತಲೇ ಈ ನೆಲದ ಮಕ್ಕಳ ಹಕ್ಕನ್ನು ಎತ್ತಿ ಹಿಡಿಯಲಿ ಎನ್ನುವ ಆಶದೊಂದಿಗೆ ನಿಮ್ಮ ಕವಿತೆಗಳ ಟಿಪ್ಪಣಿಯನ್ನು ಕೊನೆಗೊಳಿಸುತ್ತಿದ್ದೇನೆ. ————————————————————————————————— ಚಂಸು ಪಾಟೀಲರ ಆಯ್ದ ಕವಿತೆಗಳು ೧. ಬದಲಾಗುತ್ತಲೆ ಇದೆ ಜಗತ್ತು ಅನುಕ್ಷಣ, ಅನುದಿನ, ವರ್ಷ ಯುಗಗಳಾಚೆಗೂ ಪುನರಾವರ್ತನೆಯ ಮಧ್ಯೆಯೂ ಪರಿವರ್ತನೆಯೆ ಜಗದ ನಿಯಮವೆಂಬಂತೆ ಬದಲಾಗುತ್ತಲೇ ಇದೆ ಜಗತ್ತು! ಇಲ್ಲ, ಇಲ್ಲ, ನಾವು ಮಾತ್ರ ಬದಲಾಗುವುದೇ ಇಲ್ಲ! ಮುಂಜಾನೆಯ ಇಬ್ಬನಿ ಕರಗಿತಲ್ಲ! ಮೊಗ್ಗು ಅರಳಿದೆಯಲ್ಲ; ಕೆಂಪನೆ ನೇಸರ ಬೆಳ್ಳಿತಟ್ಟೆಯಾಗಿ ಫಳಫಳಿಸುತಿಹನಲ್ಲ! ಚಿಲಿಪಿಲಿಗುಟ್ಟುತಿದ್ದ ಹಕ್ಕಿಗಳೆಲ್ಲೋ ದೂರಕೆ ಹಾರಿ ಹೋಗಿವೆಯಲ್ಲ…. ಬದಲಾಗುತ್ತಲೇ ಇದೆ ಜಗತ್ತು ಇಲ್ಲ, ಇಲ್ಲ, ನಾವು ಮಾತ್ರ ಬದಲಾಗುವುದೇ ಇಲ್ಲ! ಅದೇ ಭಾಷೆ, ಅದೇ ದೇಶ ಈ ಗಡಿಗಳಾಚೆ ನಾವು ಇಣುಕಿಯೂ ನೋಡುವುದಿಲ್ಲ! ಇಲ್ಲ, ಇಲ್ಲ ನಾವು ಬದಲಾಗುವುದೇ ಇಲ್ಲ! ವೈಶಾಖದಿ ಬಿತ್ತಿದ ಬಿತ್ತವಿದೋ ತೆನೆದೂಗಿ ನಿಂತಿದೆ! ಆಷಾಡದ ಸಮೀರನ ಶೀತಗಾಳಿ ಬಯಲಾಗಿ ಈಗೀಗ ಮತ್ತೆ ಮೂಡಲಸೋನೆ ಕೀಳುತಿದೆ! ಮಹಾನವಮಿಗೊಂದಿಷ್ಟು ಪಡುಗಾಳಿ ಬೀಸಿದರೆ ಹಾಯೆನಿಸುತ್ತದೆ…. ಬದಲಾಗುತ್ತಲೇ ಇದೆ ಜಗತ್ತು ಇಲ್ಲ, ಇಲ್ಲ ನಾವು ಮಾತ್ರ ಬದಲಾಗುವುದೇ ಇಲ್ಲ! ಅದೇ ಧರ್ಮ, ಅದೇ ಜಾತಿ ಈ ಲಕ್ಷ್ಮಣರೇಖೆಯಾಚೆ ನಾವು ಖಂಡಿತ ಕಾಲಿಡುವುದಿಲ್ಲ! ಇಲ್ಲ,.ಇಲ್ಲ

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಹೊಸ ದನಿ – ಹೊಸ ಬನಿ – ೯ ಅರ್ಥಕ್ಕೂ ಮೀರಿದ ಅನುಭವಗಳಲ್ಲಿ ಅರಳುವ      “ಶ್ರೀ ತಲಗೇರಿ” ಕವಿತೆಗಳು ಅರ್ಥಕ್ಕೂ ಮೀರಿದ ಅನುಭವಗಳಲ್ಲಿ ಅರಳುವ      “ಶ್ರೀ ತಲಗೇರಿ” ಕವಿತೆಗಳು. ಉತ್ತರ ಕನ್ನಡ ಜಿಲ್ಲೆ  ಕನ್ನಡ ಸಾಹಿತ್ಯ ಮತ್ತು ರಂಗಭೂಮಿಗೆ ತನ್ನದೇ ಆದ ವಿಶೇಷ ಕೊಡುಗೆಗಳನ್ನು ನೀಡುತ್ತಲೇ ಬಂದಿದೆ. ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿಯಂಥ ಅದ್ಭುತ ಪ್ರತಿಭೆಗಳನ್ನು ಮುಂಬಯಿಯ ಮಹಾಕೂಪಕ್ಕೆ ತಳ್ಳಿಯೂ ಅವರಿಂದ ಆ ಮಹಾನಗರದ ಸಕಲ ಸೂಕ್ಷ್ಮಗಳ ಪರಿಚಯ ಮಾಡಿಸುತ್ತಲೇ ತನ್ನದೇ ಆದ ಹವ್ಯಕ ಕನ್ನಡ ಮತ್ತು ಮೀನು ವಾಸನೆಯ ಸೊಗಸನ್ನು ಸೇರಿಸಿದ ಭಾಷೆಯನ್ನು ಟಂಕಿಸಿ ತನ್ಮೂಲಕ ಉತ್ತರ ಕನ್ನಡದ ಪರಿಸರದ ಮೇಲೆ ಆಧುನಿಕ ಬದುಕಿನ ಪ್ರಭಾವಗಳನ್ನು ತಲಸ್ಪರ್ಶಿಯಾಗಿಯೂ ಹೃದ್ಯವಾಗಿಯೂ ಅಭಿವ್ಯಕ್ತಿಸಿದೆ. ಅಭಿವೃದ್ಧಿಯ ಹೆಸರಲ್ಲಿ ಈ ನೆಲದ ಮೇಲಾದ ಹಲವು ದಾರುಣ ಪ್ರಯೋಗಗಳನ್ನೂ ಮತ್ತು ಆ ಎಲ್ಲ ಪ್ರಯೋಗಗಳಿಂದಾಗಿ ಅಸ್ತವ್ಯಸ್ತವಾದ ಅಲ್ಲಿನ ಜನ ಜೀವನವನ್ನೂ ಉತ್ತರ ಕನ್ನಡದ ಹಲವು ಬರಹಗಾರರು ಅದ್ಭುತವಾಗಿ ಚಿತ್ರಿಸಿದ್ದಾರೆ. ಇದೇ ಜಿಲ್ಲೆಯ ತಲಗೇರಿ ಅನ್ನುವ ಪುಟ್ಟ ಗ್ರಾಮದ  ಶ್ರೀಧರ ಭಟ್ ಹೆಸರಲ್ಲಿ ಫೇಸ್ಬುಕ್ ಖಾತೆ ಇದ್ದರೂ ಶ್ರೀ ತಲಗೇರಿ ಎನ್ನುವ ಹೆಸರಲ್ಲೇ ಅವರು ಪದ್ಯಗಳನ್ನು ಪ್ರಕಟಿಸುತ್ತಿದ್ದಾರೆ. ಪ್ರಕೃತಿಯ ಕೌತುಕ, ನಗರದ ಗದ್ದಲ,ಮನುಷ್ಯನ ಮೂಲಭೂತ ನಡವಳಿಕೆಗಳ ಮನೋಭೂಮಿಕೆಯ ತಲ್ಲಣಗಳಲ್ಲಿ ಅತೀವ ಆಸಕ್ತಿ ತೋರುವ ಇವರ ಪದ್ಯಗಳಲ್ಲಿ ವಯಸ್ಸಿಗೂ ಮೀರಿದ ಅನುಸಂಧಾನಗಳಿವೆ. ಇತ್ತೀಚೆಗಷ್ಟೇ ‘ಒಂಟಿ ಟೊಂಗೆಯ ಲಾಂದ್ರ’ ಹೆಸರಿನ ಕವನ ಸಂಕಲನ ಇ-ಪುಸ್ತಕವಾಗಿ ಬಿಡುಗಡೆಯಾಗಿದೆ. ವಾಟ್ಸ್ ಆಪಿನ ಹಲವು ಗುಂಪುಗಳಲ್ಲಿ “ಕಾವ್ಯ ಕೇಳಿ” ಗುಂಪು ಸದಾ ರಚನಾತ್ಮಕ ಕೆಲಸಗಳಲ್ಲಿ ತೊಡಗಿರುತ್ತದೆ. ಸುಬ್ರಾಯ ಚೊಕ್ಕಾಡಿ ಮತ್ತು ತಿರುಮಲೇಶರ ಹುಟ್ಟುಹಬ್ಬದ ಸಲುವಾಗಿ ಅನೇಕ ಬರಹಗಳನ್ನು ಈ ಗುಂಪು ಪ್ರಕಟಿಸಿತು. ಈ ಗುಂಪಿನ ಸಾಮಾನ್ಯ ಸದಸ್ಯನಾಗಿ ಪ್ರಕಟಿಸುವುದಕ್ಕಿಂತಲೂ ಅಲ್ಲಿನ ಬರಹಗಳನ್ನು ಓದುವುದರಲ್ಲೇ ಹಿತ ಕಂಡಿರುವ ನನಗೆ ಆ ಗುಂಪಿನಲ್ಲಿ “ಶ್ರೀ ತಲಗೇರಿ” ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತಂತೆ ಬರೆಯುವ ರೀತಿಯಿಂದ ಚಕಿತನಾಗಿದ್ದೇನೆ. ಮೂಲತಃ ಕಂಪ್ಯೂಟರ್ ಪ್ರೋಗ್ರಾಮರ್ ಆದ ಶ್ರೀಧರ ಭಟ್ ತಮ್ಮ ವಯಸ್ಸಿಗೂ ಮೀರಿದ ಅನುಸಂಧಾನಗಳನ್ನು ಕಾಣಿಸಿ ಚಕಿತಗೊಳಿಸುತ್ತಾರೆ. ಅವರ ಇತರ ಬರಹಗಳ ಬಗ್ಗೆಯೂ ಕುತೂಹಲವಿದ್ದರೂ ಈ ಅಂಕಣ ಕವಿತೆಗಳನ್ನು ಕುರಿತೇ ಇರುವುದರಿಂದಾಗಿ ಅವರ ಕೆಲವು ಕವಿತೆಗಳನ್ನು ಕುರಿತ ಈ ಟಿಪ್ಪಣಿಯನ್ನು ಅವರ ” ಕತ್ತಲು” ಕವಿತೆಯ ಸಾಲುಗಳ ಮೂಲಕ ಆರಂಭಿಸುತ್ತಿದ್ದೇನೆ; ನಾವು ಕತ್ತಲನ್ನು ಕಾಯುತ್ತೇವೆ ಕೂಡಲು ಬೇಡಲು ಯಾವುದೋ ತುತ್ತ ತುದಿ ತಲುಪಿ ದಂತೆ ನಿಟ್ಟುಸಿರು ಬಿಡಲು….. ಪದ್ಯದ ಆರಂಭ ಕೂಡ ಇದೇ ಸಾಲುಗಳಿಂದಲೇ ಆಗಿದೆ. ಅಂದರೆ ಈ ಕವಿತೆಯಲ್ಲಿ ಕವಿ ತಾನು ಕಂಡುದನ್ನು ಮತ್ತೆ ಮತ್ತೆ ಕಟೆಯುವ ಸಲುವಾಗಿ ಅದೇ ಅದೇ ಸಾಲುಗಳನ್ನು ಬಳಸುತ್ತಲೇ ತನ್ನ ಅನುಭವದ ಮೂಲಕ ಕತ್ತಲನ್ನೂ ಮತ್ತು ಕತ್ತಲಿನ ಜೊತೆಗೇ ಇರುವ ಬೆಳಕನ್ನೂ ಇಲ್ಲಿ ಎದುರು ಬದುರು ನಿಲ್ಲಿಸುತ್ತಲೇ ಒಂದು ದಟ್ಟ ಅನುಭವದ ಸತ್ಯವನ್ನು ದಾಟಿಸುತ್ತಲೇ ಈ ವರೆಗೂ ಕನ್ನಡದಲ್ಲಿ ಬಂದ “ಬೆಳಕು” ಕುರಿತ ಕವಿತೆಗಳಿಗೆ ವಿರುದ್ಧವಾಗಿದ್ದರೂ ಆದರೆ ಸಶಕ್ತವಾದ ಒಂದು ಪದ್ಯವನ್ನಾಗಿಸಿದ್ದಾರೆ. ಪೂರ್ವಾಪರಗಳನ್ನು ಕತ್ತಲು ಮತ್ತು ಬೆಳಕಿನ ವಿನ್ಯಾಸದಲ್ಲಿ ಕಂಡರಿಸಿದ ಬಗೆಯೇ ಸೊಗಸಾಗಿದೆ. ಯಾವುದೋ ತುಟ್ಟ ತುದಿ ತಲುಪುತ್ತೇವೋ ಇಲ್ಲವೋ ಆದರೆ ನಿಟ್ಟುಸಿರನ್ನಂತೂ ಬಿಡುತ್ತೇವೆ ತಾನೆ? “ಅಸ್ತಿತ್ವ” ಶೀರ್ಷಿಕೆಯ ಪದ್ಯ ಕಾಣುವುದಕ್ಕೆ ಸರಳವಾಗಿದೆ ಆದರೆ ಅದು ತನ್ನೊಳಗೇ ಇರಿಸಿಕೊಂಡಿರುವ ಪ್ರತಿಮೆ ಅಷ್ಟು ಸುಲಭಕ್ಕೆ ಎಟುಕುವುದಿಲ್ಲ. ಒಂದೆರಡು ಸಾಲುಗಳನ್ನಿಲ್ಲಿ ಕೋಟ್ ಮಾಡಿದರೆ ಪದ್ಯದ ಆಂತರ್ಯ ಸುಲಭಕ್ಕೆ ಸುಭಗಕ್ಕೆ ನಿಲುಕದ ಕಾರಣ ಇಡೀ ಪದ್ಯವನ್ನೇ ಓದುವುದು ವಿಹಿತ. ಹೀಗೆ “ಮೌನವನ್ನಾತು ಕೂರಬೇಡ” ಎಂದು ಸುರುವಾಗುವ ಪದ್ಯದ ಸರಕು ಜಯಂತ ಕಾಯ್ಕಿಣಿಯವರ ಫೇವರಿಟ್ ಸಂಗತಿ. ಜಯಂತ್ ಸಾಮಾನ್ಯ ಸಂಗತಿಗಳ ಅಸಾಮಾನ್ಯ ವಿವರಗಳನ್ನು ಕಟ್ಟಿಕೊಡುವಂತೆಯೇ ಈ ಪದ್ಯ ಇರುವುದಾದರೂ ಇಡೀ ಪದ್ಯ ಹೊರಳಿಕೊಳ್ಳುವ ವಿಹ್ವಲತೆ ಅಷ್ಟು ಸುಲಭಕ್ಕೆ ಮರೆಯಲಾರದಂಥದು. ಪ್ರಾಣವೇ ಪ್ರಾಣ ಹೀರಿ ಮತ್ತೆ ವರ್ತಮಾನಕ್ಕೆ ಮಿಲನ ಬರೀ ಸ್ಪರ್ಶವಲ್ಲ ಮರುಹುಟ್ಟು ಆ ಗಳಿಗೆ ಹೂ’ಗಳಿಗೆ’ ಪರಾಗ ಸ್ಪರ್ಶದ ಸಾಮಾನ್ಯ ಸಂಗತಿಯನ್ನು ಅನುನಯಿಸಿದ ರೀತಿ ಅದರಲ್ಲೂ “ಪ್ರಾಣವೇ ಪ್ರಾಣ ಹೀರಿ” ಎನ್ನುವ ರೀತಿ ಒಂದು ಜೇನ್ನೊಣ ಮತ್ತೊಂದು ಹೂವು, ಎರಡೂ ಜೀವಂತ ಇದ್ದರೂ ಅವುಗಳಲ್ಲಿ ಇರುವ ಪರಸ್ಪರ ಸಂಬಂಧಗಳನ್ನು “ಗಳಿಗೆ” (ಸಮಯ) ಕಾಯುತ್ತದಲ್ಲ ಅದನ್ನಿಲ್ಲಿ ಹೇಳಿದ ರೀತಿ ಇದುವರೆಗಿನ ಸಾಹಿತ್ಯ ಪಯಣದಲ್ಲೇ ಬೇರೆಯದೇ ಆಗಿದೆ. ”ಮಳೆಗಾಲಕಿನ್ನೂ ಅರ್ಧ ವಯಸ್ಸು’ ಎನ್ನುವ ಹೆಸರಿನ ಪದ್ಯ ಸುರುವಾಗುವ ಮೊದಲೇ ಮುಗಿದುಹೋಗಿದೆ. ಟಿಪ್ಪಣಿಯ ಸುರುವಿನಲ್ಲಿ ಹೇಳಿದ ಉತ್ತರ ಕನ್ನಡದ್ದೇ ಆದ ಪರಿಸರವನ್ನು ಚಂದಾಗಿ ಚಿತ್ರಿಸಿದ ಕವಿತೆ ಆ ಪ್ರತಿಮಾಲಂಕರದಲ್ಲೇ ಉಳಿದು ಅದನ್ನು ಓದುಗನಿಗೆ ದಾಟಿಸುವಷ್ಟರಲ್ಲಿ ವಿರಮಿಸಿ ಮುಂದೇ ಏನೋ ಆಗಬಹುದಾಗಿದ್ದ ಸಂಗತಿಗೆ ಬ್ರೇಕು ಹಾಕಿಸುತ್ತಲೇ ಸುನಂದಾ ಕಡಮೆ ಮತ್ತು ಜಯಂತರ ಕತೆ ಕವಿತೆಗಳನ್ನು ನೆನಪಿಸುತ್ತದೆ. “ಪ್ರಶ್ನೆ” ಎನ್ನುವ ಹೆಸರಿನ ಪದ್ಯದ ಕೊನೆ ಹೀಗಿದೆ; ಅಹಲ್ಯೆಯ ಗೌತಮರಿಗೊಪ್ಪಿಸಿದ ಹುಡುಗನೊಬ್ಬ ಧರ್ಮದ ಗಡಿಯಲ್ಲೇ ಉಳಿದು ಹೋದ ರಾಜನಾದ ಅಯೋಧ್ಯಾರಾಮ ನಾನು, ಸೀತೆಯಲ್ಲುಳಿದ ಪ್ರಶ್ನೆ ನಾನು ಆದರೆ ಪದ್ಯದ ಆರಂಭದಲ್ಲೆಲ್ಲೂ ಮಹಾಕಾವ್ಯ ರಾಮಾಯಣದ ಯಾವ ಪಾತ್ರವೂ ಬಾರದೇ ಬರಿಯ ಸಂಕೇತಗಳಲ್ಲಷ್ಟೇ ಅರಳಿಕೊಳ್ಳುತ್ತಲೇ ತಿಳುವಳಿಕೆಯ ಆಳಕ್ಕೆ ಹೊರಳಿಕೊಳ್ಳುವ ಕವಿತೆ ಈ ಕವಿಯ ಮನಸ್ಸನ್ನು ಕಾಡುತ್ತಿರುವ ಸಂಗತಿಗಳನ್ನೂ ಸಂದರ್ಭಗಳನ್ನೂ ಸಾರ್ಥಕವಾಗಿ ಸಮೀಕರಿಸಿದೆ. “ದೇವರ ವಿಳಾಸ ಹುಡುಕಿದ್ದೇನೆ” ಎನ್ನುವ ಪದ್ಯವಂತೂ ಈ ಕವಿ ಈಗಾಗಲೇ ದೇವರನ್ನು ಕುರಿತಂತೆ ಇರುವ ಎಲ್ಲ ಜಿಜ್ಞಾಸೆ ಮತ್ತು ಹೇಳಿಕೆಗಳನ್ನು ಒಳಗೊಳ್ಳುತ್ತಲೇ ನಿರಾಕರಿಸುವ ಮತ್ತು ತನ್ನದೇ ಕಾಣ್ಕೆಯನ್ನು ಕೊಡುತ್ತದೆ; ಹೌದಲ್ಲಾ, ತನ್ನಿರುವ ಚೂರು ಚೂರೇ ಬಿಟ್ಟು ಕಳೆದುಹೋದವ ಇದೇ ಜಂಗುಳಿಯ ಮಧ್ಯ.. ಇಲ್ಲೀಗ ಈ ಮರಗಳ ಕೆಳಗೆ ಕೂತವರೆಲ್ಲಾ ಮುಂದೇನಾಗುವರು ?!.. ಅಲ್ಲಿಗೆ ಈ ಕವಿ ದೇವರೆನ್ನುವುದನ್ನು ಲೌಕಿಕದ ಸಂಗತಿಗಳ ಮಧ್ಯೆ ಮತ್ತು ಸಂಬಂಧಗಳ ಸೀಮಿತಾರ್ಥದಾಚೆಯ ನಿಲುಕಲ್ಲಿ ಹುಡುಕುತ್ತಿದ್ದಾನೆ. ಮೂರ್ತಿರಾಯರು ಮತ್ತು ನರಸಿಂಹಯ್ಯನವರ ದೇವರನ್ನೂ ಇಲ್ಲಿ ಸ್ಮರಿಸಿದರೆ ಸಹೃದಯರಿಗೆ ಈ ಪದ್ಯ ಬಗೆಯಲು ಇನ್ನಷ್ಟು ಸಹಕಾರಿ. ಗುಡಿಸಲಿನ ಇತಿಹಾಸದಲಿ ರೇಖೆ ದಾಟಿದರೆ ಸೀತೆಗೆ ಅಪಹರಣದ ಭೀತಿ.. ರಾವಣ ಮಾರುವೇಷದಲ್ಲಿದ್ದಾನೆ.. “ಗೆರೆ” ಎನ್ನುವ ತಲೆಬರಹದ ಈ ಪದ್ಯದ ಕೊನೆ ವರ್ತಮಾನ ಮತ್ತು ಭೂತವನ್ನು ಒಗ್ಗೂಡಿಸಿದ ಭವಿಷ್ಯದ ವಾರ್ತೆಯಂತೆ ಅಂದುಕೊಂಡರೆ ಅದು ಒಟ್ಟೂ ಸಾಮಾಜಿಕತೆಯ ಸರಳ ಮೌಲ್ಯೀಕರಣ. ಮತ್ತು ಈ ಕವಿ ತನ್ನ ಅನುಭವ ಮತ್ತು ಓದಿನಿಂದ ಇತಿವೃತ್ತಗೊಳಿಸಿಕೊಂಡಿರುವ ವಿವೇಕದ ಮಿತಿ. ಕನ್ನಡದ ಮಹತ್ವದ ಕವಿ ತಿರುಮಲೇಶರ ಸ್ಪೂರ್ತಿ ಈ ಕವಿ ಶ್ರೀ ತಲಗೇರಿ ಅವರ ಮೇಲಿರುವುದು ಸ್ಪಷ್ಟವಾಗಿದೆ. ಮತ್ತು ಕ್ವಚಿತ್ತಾಗಿ ಅಡಿಗರನ್ನೂ ರಾಮಾನುಜರನ್ನೂ ಇವರು ಆವರ್ಭಿಸಿಕೊಂಡಿರುವುದೂ ಅವರ ಕವಿತೆಗಳು ನೀಡುವ ದರ್ಶನದಿಂದ ಗುರ್ತಿಸಬಹುದು. ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಆಂತರ್ಯದಲ್ಲಿ ಸಂಕೀರ್ಣತೆ ಇಟ್ಟುಕೊಂಡಿರುವ ಕೆ ಎಸ್ ನ ಮತ್ತು ಜಿ  ಎಸ್ ಎಸ್ ಇವರಿಗೆ ದೂರ. ಏಕೆಂದರೆ ಇನ್ನೂ ೨೬ರ ಹರಯದ ಈ ಹುಡುಗನ ಕವಿತೆಗಳಲ್ಲಿ ಹುಡುಕಿದರೂ ಆ ಪ್ರಾಯಕ್ಕೆ ಸಹಜವಾಗಿ ಬರಲೇಬೇಕಾದ ಪ್ರೇಮ ಮತ್ತು ಪ್ರೀತಿ ಹಾಗೂ ಹುಡುಗ ಹುಡುಗಿಯರ ಒಲವ ಹಾಡಿನ ಸೂಚನೆಗಳೇ ಇಲ್ಲ. ಇದು ಹೀಗಾಗಬಾರದು ಎಲ್ಲ ಕವಿಗಳೂ ವಿಶೇಷತಃ ಯುವಕರು ಬರಿಯ ಜಿಜ್ಞಾಸೆ ಮತ್ತು ಪಾರಮಾರ್ಥದ ಸುಳಿಗಳಲ್ಲಿ ಇಳಿದುಬಿಟ್ಟರೆ ಲೌಕಿಕದ ಗತಿಯೇನು? ಅರ್ಥ ಮತ್ತು ಧ್ಯಾನದೀಚೆಗಿನ ವಯೋ ಸಹಜ ದಾಂಗುಡಿಗಳನ್ನೂ ಪೋಷಿಸದ ಪ್ರಜ್ಞೆ ಲೌಕಿಕವನ್ನು ಬಿಟ್ಟುಕೊಟ್ಟರೆ ಗತಿಯೇನು? “ಬುದ್ಧ ಮೊದಲೇ ಇದ್ದ” ಎನ್ನುವ ಕವಿತೆಯ ಕಡೆಯಲ್ಲಿ ಹಾಗೆ ನೋಡಿದರೆ ಬುದ್ಧ ಮೊದಲೇ ಇದ್ದ ನಡು ರಾತ್ರಿಯಲಿ ಯಶೋಧರಾ ಸಿದ್ಧಾರ್ಥರ ತೋಳುಗಳಲಿ ಬೆಚ್ಚಗೆ ಮಲಗಿದ್ದ ರಾಹುಲನ ತುಟಿಗಳಲಿ ಬುದ್ಧ ಮೊದಲೇ ಇದ್ದ ಎನ್ನುವಲ್ಲಿ ಈ ಕವಿ ಕಂಡುಕೊಂಡ ತಿಳುವಳಿಕೆಯ ಕಾವು ಮತ್ತು ಇತಿಹಾಸವನ್ನು ಬೇರೆಯದೇ ಬೆರಗಿನಿಂದ ಕಂಡ ಸತ್ಯವಾಗಿಯೂ ಕಾಣುತ್ತದೆ. ಈ ನಡುವೆ ಅದರಲ್ಲೂ ಫೇಸ್ಬುಕ್ಕಿನ ಕವಿತೆಗಳಲ್ಲಿ ರಂಜನೆ ಮತ್ತು ನಾಟಕೀಯತೆಗಳೆ ಮಿಲಿತಗೊಂಡ ಹುಸಿಗಳೇ ಪದ್ಯಗಳೆಂದು ದಾಂಗುಣಿಯಿಡುತ್ತಿರುವ ವರ್ತಮಾನದಲ್ಲಿ ಶ್ರೀ ತಲಗೇರಿಯಂಥವರ ಪದ್ಯಗಳು ಕಾವ್ಯಾಸಕ್ತರಿಗೆ ಮತ್ತು ಬದುಕಿನ ಅರ್ಥದ ಜಿಜ್ಞಾಸುಗಳಿಗೆ ಅಲ್ಪ ಪ್ರಮಾಣದ ಸಮಾಧಾನ ಮತ್ತು ಸಾಂತ್ವನ ನೀಡುತ್ತವೆ. ಚಿಂತನೆಯೇ ಮುಖ್ಯವಾದ ಲೌಕಿಕದ ಆಕರ್ಷಕ ಸಂಗತಿಗಳಿಗೆ ಹೊರತಾದ ಈ ಬಗೆಯ ಬೌದ್ಧಿಕತೆ ಕೂಡ ಕೆಲವೇ ಜನಗಳ ಶೋಕೇಸ್ ವಸ್ತುವಾಗುತ್ತಿರುವ ಕಾಲದಲ್ಲಿ ಶ್ರೀಧರ ಭಟ್ ಅವರ ಮುಂದಿನ ಕಾವ್ಯಕೃಷಿ ಕುರಿತು ಸಹಜ ಕುತೂಹಲ ಮತ್ತು ಭರವಸೆಯನ್ನು ಹುಟ್ಟಿಸುತ್ತಿದೆ. ಶ್ರೀ ತಲಗೇರಿ ಅವರ ಆಯ್ದ ಕವಿತೆಗಳು. 1. “ಕತ್ತಲು” ನಾವು ಕತ್ತಲನ್ನು ಕಾಯುತ್ತೇವೆ ಕೂಡಲು ಬೇಡಲು ಯಾವುದೋ ತುತ್ತ ತುದಿ ತಲುಪಿ ದಂತೆ ನಿಟ್ಟುಸಿರು ಬಿಡಲು ಎಲ್ಲ ಕಳಕೊಂಡ ನಿರ್ಗತಿಕರಂತೆ ಮಲಗುತ್ತೇವೆ ಇಷ್ಟೇ ಇಷ್ಟು ಬಿರಿದ ತುಟಿಗಳ ಡೊಂಕು ಅಗಲಿಸಿ.. ಒಂದು ತಪ್ಪೇ ಇಲ್ಲಿ ಸರಿಯಾಗಬಹುದು ಸೋಲುವ ಯುದ್ಧದ ಸುತ್ತ ಗಿರಕಿ ಕಠಿಣವಾದಷ್ಟೂ ಮೆದುವಿಗೆ ಮೆದುವಾದಷ್ಟೂ ಕಠಿಣಕ್ಕೆ ಉನ್ಮಾದ; ಸೀಮೋಲ್ಲಂಘನದ ಆವೇಶ ಕರಗುತ್ತದೆ ಹೊತ್ತು ದೇಹ ಗಳ ಮಿತಿಯ ಮೀರುವ ಶೋಧದಲ್ಲಿ ಚಿಗುರು ಹುಟ್ಟುವ ಮೊದಲೇ ಜೀವ ಚಿಗುರಬೇಕಲ್ಲ ಬಿಂದುವಾಗಿ ಕತ್ತಲ ನೆರಿಗೆಗಳು ಬೆರಳಿಗೆ ತಾಕುವಾಗ ಬೆಳಕಿಗೆ ಹಿಂದಿರುಗದ ಹಠ ಹಿಡಿದು ಗುರುತಿನ ಬಟ್ಟೆ ಕಳೆದು ಕೂರುವಾಸೆ ವ್ಯಾಪಾರವೇನು ಹುಟ್ಟಿಗೆ ಸಾವು, ಸಾವಿಗೆ ಹುಟ್ಟು ಬ್ರಹ್ಮಾಂಡವೇ ಅಣುವಾಗಿ ಅಣುವೇ ಬ್ರಹ್ಮಾಂಡವಾಗಿ ಎಲ್ಲಿಯ ಏಕರೂಪ, ಎಲ್ಲಿಯ ಭೌತ ತಾಪ ಒಡೆದು ಕಡೆದು ಸಿಡಿದು ಕತ್ತಲು ಬೀಜ ಬಿತ್ತುತ್ತದೆ ನಾಳೆಯ ಸಾಕ್ಷಿಗಾಗಿ.. ನಾವು ಕತ್ತಲನ್ನು ಕಾಯುತ್ತೇವೆ ಕೂಡಲು ಬೇಡಲು ಯಾವುದೋ ತುತ್ತ ತುದಿ ತಲುಪಿ ದಂತೆ ನಿಟ್ಟುಸಿರು ಬಿಡಲು 2. ಹೀಗೆ ಮೌನವನ್ನಾತು ಕೂರಬೇಡ ಒಂದು ಜೋರು ಮಳೆ ಬರುತ್ತದೆ ಬಚ್ಚಿಟ್ಟ ಮಾತು ಮೆತ್ತಗೆ ಕರಗಿ ತೊಳೆದುಹೋದರೆ ಎಲ್ಲಿ ದೋಣಿಯ ಕೋಲು ಬೀಸಲಿ ಊರ ತುಂಬಾ ಬೀಳುವ ಮಳೆಯ ಬಾಲ ಹಿಡಿದು ಗುಡುಗಿನ ಮೀಸೆ ತಿರುವಬೇಕು ಅಂದಿದ್ದೆಯಲ್ಲಾ ಈ ಮಳೆಗೆ ತಲೆ ಬುಡ ಇಲ್ಲ ಆದರೂ ಒಂದು ಹೆಸರು ಕೊಡು ಇಟ್ಟುಕೊಳ್ಳುತ್ತೇವೆ ಒದ್ದೆಯಾಗಬಹುದು ಈ ರಾತ್ರಿ ಒಟ್ಟಿಗೇ ಕಳೆದರೆ ಗತ್ತಿನಲ್ಲಿ ಮತ್ತಿನಲ್ಲಿ ಸ್ವಂತದಲ್ಲಿ ರೋಮಗಳಿಗೆ ಆಗಾಗ “ಕ್ಲಾಸ್ ಸಾವ್ದಾನ್” ಸುಮ್ಮನೆ ಬೆತ್ತಲಾಗಬಾರದು ಹಾಗೆಲ್ಲಾ ಒಂದೇ ಕೊಡೆಯ ಕೆಳಗೆ ಕೂರಬೇಕು ಅದಕೆ ಮೋಡಗಳ ಚಿತ್ರವಿರಬೇಕು ಮತ್ತೆ ಹೇಳಬೇಕೇ ಮಳೆ ಬರಬೇಕು 3.”ಮಳೆಗಾಲಕಿನ್ನೂ ಅರ್ಧ ವಯಸ್ಸು’ ಮುಗಿದಿಲ್ಲವಿನ್ನೂ ಸಂಭಾಷಣೆ ಅರ್ಧಕ್ಕೆ ನಿಂತ ನಿವೇದನೆ ಎದೆಭಾರವೆಲ್ಲಾ ನಿನ್ನದೆಗೆ ನೂಕಿ ಜೋಕಾಲಿಯಾಡುವೆನು ಹಗುರಾಗಿ ಜೀಕಿ.. ಕಂಬಳಿಯ ಕೊಪ್ಪೆಯಲಿ ಸೇರಿಸಿಕೋ ನನ್ನ.. ಮಳೆಗಾಲಕಿನ್ನೂ ಅರ್ಧ ವಯಸ್ಸು ! ಕೊಟ್ಟಿಗೆಯ ತಡಿಯಾಚೆ ಖಾಲಿ ಕೂತಿಹ ಚಂದ್ರ ಒಂದೊಳ್ಳೆ ನೆರಿಗೆಯನು ಬಿಚ್ಚಬಾರದೇ ನಾಚಿಕೆ ಸರಿಸಿ ಇಳಿಜಾರು ಭೂಮಿಯಲಿ ಹನಿ ಜಾರಿ ಬಿದ್ದೀತು ಹತ್ತಿರವೇ ಇರಿಸಿಕೋ ನನದೊಂದು ಬೊಗಸೆಯನು ಮಳೆಗಾಲಕಿನ್ನೂ ಅರ್ಧ ವಯಸ್ಸು ! ಹಳೇ ನಿಲ್ದಾಣದಲಿ ಕೂತಿದೆ ಹರಡಿದಾ ಕೂದಲು ಪ್ರತಿನಿತ್ಯ ಹೀಗೇ ಒಂದು ಭೇಟಿ ಬರುವರೇನೋ ಎಂದು ಕಾಯುವಂತೆ ಕತ್ತೆತ್ತಿ.. ಮರಳುವುದೇನು ಆ ವಯಸ್ಸು ಊರುಬಿಟ್ಟ ಮೋಡಗಳ ಹಿಂದೆಯೇ ಹೋಯಿತಂತೆ ಮಳೆಗಾಲ.. ನೆನಪುಗಳಲಿ ಒಂದಾದರೂ ದೋಣಿಯಿದ್ದೀತು ಸಾವರಿಸಿಕೊಳಲು ಮುರಿದದ್ದೋ ಅಥವಾ ಕಟ್ಟಬೇಕಿರುವುದೋ.. ! 4. ‘ಪ್ರಶ್ನೆ’.. ! ತೊಡೆಯ ಮೇಲೆ ಪುಟ್ಟ ಬೆರಳುಗಳ

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಹೊಸ ದನಿ – ಹೊಸ ಬನಿ – ೮. ತಲೆ ಬರಹ ಇಲ್ಲದೆಯೂ ತಲೆದೂಗಿಸುವ ನಾಗಶ್ರೀ ಎಸ್ ಅಜಯ್ ಕವಿತೆಗಳು. ಬೆಂಗಳೂರಿನ ಗಾಂಧಿ ಬಜಾರಿಗೆ ಕಾಲ್ನಡಿಗೆಯ ಅಂತರದ ಬಿ.ಪಿ.ವಾಡಿಯಾ ಸಭಾಂಗಣ. ಕವಿ ವಾಸುದೇವ ನಾಡಿಗರ ಕವನ ಸಂಕಲನದ ಬಿಡುಗಡೆ ಸಮಾರಂಭ. ವೇದಿಕೆಯಲ್ಲಿ ಸರ್ವ ಶ್ರೀ ಮೂಡ್ನಾಕೂಡು ಚಿನ್ನಸ್ವಾಮಿ, ಜಿ.ಕೆ.ರವೀಂದ್ರ ಕುಮಾರ್, ಸುಬ್ರಾಯ ಚೊಕ್ಕಾಡಿಯಂಥ ಅತಿರಥ ಮಹಾರಥರು. ಪುಸ್ತಕ ಬಿಡುಗಡೆಯ ಆತಂಕದಲ್ಲಿ ಕವಿ ದಂಪತಿ. ತುಂಬಿದ ಸಭೆಯ ಗೌರವಾನ್ವಿತರಿಗೆಲ್ಲ ಕಲಾಪದ ಸೊಗಸು ಮತ್ತು ಸಂದರ್ಭಕ್ಕೆ ತಕ್ಕ ಕವಿ ನುಡಿಗಳನ್ನೂ ಹಿತದ ಮಾತುಗಳನ್ನೂ ಆಡುತ್ತ ಸಭೆಗೆ ಶೋಭೆ ತರುತ್ತಿದ್ದ ನಿರೂಪಕಿ. ಇತ್ತೀಚೆಗೆ ಸಮಾರಂಭಗಳಲ್ಲಿ ನಿರೂಪಕರದೇ ಕಾರುಬಾರು. ಬರಿಯ ವಾಚಾಳಿತನ ಮತ್ತು ಹಗುರ ನಗೆ ಚಟಾಕಿ ಹಾರಿಸಿ ವೇದಿಕೆಯ ಗಣ್ಯರನ್ನು ನೋನುತ್ತ ಅಭಿನಂದಿಸಿದರೆ ಅವರ ಕೆಲಸ ಮುಕ್ತಾಯ. ಕಾರ್ಯಕ್ರಮ ಯಾವುದೇ ಇರಲಿ, ಈ ನಿರೂಪಕರ ಶೈಲಿ ಮಾತ್ರ ಬದಲಾಗದು. ಹಾಡಿದ್ದೇ ಹಾಡುವ ಹೇಳಿದ್ದೇ ಹೇಳುವ ಅವೇ ಅವೇ ಹಗುರ ಚಟಾಕಿಗಳು. ಅಪರೂಪಕ್ಕೆ ಈ ಬರಹದ ಮೊದಲಲ್ಲಿ ಹೇಳಿದ ಸಭೆಯಲ್ಲಿ ಆ ಸಮಾರಂಭದ ನಿರೂಪಕಿಯ ಮಾತು, ಆಕೆ ನಡು ನಡುವೆ ಕೋಟ್ ಮಾಡುತ್ತಿದ್ದ ಕನ್ನಡದ ಮಹಾ ಕವಿಗಳ ಪದ್ಯದ ಸಾಲುಗಳು, ಹಿತ ಮಿತದ ಸಂಕ್ಷೇಪ…ಆಕೆ ಕನ್ನಡ ಸಾಹಿತ್ಯವನ್ನು ಓದಿಕೊಂಡಿದ್ದಾರೆಂದು ಮತ್ತು ಸಾಹಿತ್ಯದ ಮೇಲೆ ವಿಶೇಷ ಒಲವು ಇಟ್ಟುಕೊಂಡಿದ್ದಾರೆ ಎಂಬುದನ್ನೂ ಸ್ಪಷ್ಟವಾಗಿ ಹೇಳುತ್ತಿತ್ತು. ಆಕೆಯ ಹೆಸರು ನಾಗಶ್ರೀ ಅಜಯ್ ಎಂದು ಆಮೇಲೆ ಗೊತ್ತಾಯಿತು. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ೯ ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ೫ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಕನ್ನಡ ಸಾಹಿತ್ಯದಲ್ಲಿ ಮತ್ತು ಕಾರ್ಯಕ್ರಮ ನಿರೂಪಣೆಯಲ್ಲಿ  ಆಕೆ ಆಸಕ್ತರು ಎಂದೂ ಆಮೇಲೆ ತಿಳಿಯಿತು. ಸುರಹೊನ್ನೆ, ಅವಧಿ ಜಾಲತಾಣಗಳಲ್ಲಿ ಮತ್ತು ಫೇಸ್ಬುಕ್ಕಿನಲ್ಲೂ ಅವರ ಕವಿತೆಗಳನ್ನು ಗಮನಿಸುತ್ತ ಬಂದಂತೆ ನಿರೂಪಕರು ಎಂದ ಕೂಡಲೇ ಬಾಯಿಪಾಠ ಮಾಡಿದ ಮಾತನ್ನು ನಾಟಕೀಯವಾಗಿ ಒಪ್ಪಿಸುವವರು, ಸುಮ್ಮನೇ ನೋನುತ್ತ ಜೋಕ್ ಹೇಳುವವರು  ಎಂದು ಅಂದುಕೊಂಡಿದ್ದ ನನ್ನ ಅರಿವನ್ನು ಬದಲಾಯಿಸಿಕೊಳ್ಳಬೇಕಾಯಿತು!! ಬದುಕೆಂದರೇನೆಂದು ಹುಡುಕುವ ಹೊತ್ತಿಗೆ ಮುಕ್ಕಾಲು ಉರಿದ ಊದುಬತ್ತಿ ಸುತ್ತ ಪರಿಮಳ ಉಸಿರಿಗೂ ಚೌಕಾಸಿ. ಇಂಥ ಅದ್ಭುತ ರೂಪಕಗಳ ಕವಿತೆಯ ಮೂಲಕವೇ ಬದುಕ ಅರ್ಥವನ್ನು ತೇದು ತೇದು ಅದರ ಘಮದಲ್ಲೇ ಉಳಿದು ಬಿಡುವ ತಹತಹಿಕೆ ಇವರ ಕವಿತೆಗಳ ಆಂತರ್ಯ. ಹಚ್ಚಿಕೊಂಡರೆ ಹೇಗೆಂದು ಒಮ್ಮೆ ನನ್ನ ಜತೆಗಿದ್ದು ನೋಡು ಉಬ್ಬಸದ ಕಡೆ ಉಸಿರಿನಲೂ ನಿನ್ನದೇ ಹೆಸರು ಉಸುರುವ ಹುಚ್ಚುಚ್ಚು ಹುಡುಗಿ ನಾನು ಪ್ರೀತಿ ಪ್ರೇಮ ಪ್ರಣಯಗಳನ್ನು ಕುರಿತು ಬರೆಯದೇ ‘ಕವಿ’ ಎನ್ನುವ ಅಭಿದಾನಕ್ಕೆ ಪಾತ್ರರಾಗುವುದಾದರೂ ಹೇಗೆ ಸಾಧ್ಯ ಎನ್ನುವ ಪುರಾತನ ಪ್ರಶ್ನೆಗೆ ನಾಗಶ್ರೀ ಪದ್ಯಗಳೂ ಹೊರತಲ್ಲ! ತಾನು ಕವಿಯೆಂದು ಘೋಷಿಸದೆಯೂ ಓದುಗನಲ್ಲಿ ಇದನ್ನು ಬರೆದವರು ಕವಿಯಲ್ಲದೇ ಮತ್ತಿನ್ನೇನು ಅನ್ನುವ ಪ್ರಶ್ನಿಸುವ ಸಾಲನ್ನೇ ಗಮನಿಸಿ; ಅಕ್ಷರ ಗೊತ್ತಿರುವವರೆಲ್ಲ ಅನ್ನಿಸಿದ್ದನ್ನು ಗೀಚಬಹುದು, ಆದರೆ ಆಂತರ್ಯದ ಸಾಲುಗಳು ಮಾತ್ರ ಕವಿತೆಯಾಗಿ ಅರಳಬಲ್ಲವು. ಉಬ್ಬಸವೇ ಮೂಲತಃ ಪ್ರಾಣಾಂತಿಕ ವ್ಯಾಧಿ. ಅಂಥ ವ್ಯಾಧಿಯಲ್ಲಿ ನರಳುತ್ತಿದ್ದರೂ ತನ್ನಿನಿಯನ ಧ್ಯಾನದಲ್ಲೇ ಅವನನ್ನು ಹಚ್ಚಿಕೊಳ್ಳುವ ಆ ಹುಡುಗಿಯನ್ನು ಮೆಚ್ಚಲಾರದೇ ಹೇಗೆ ಉಳಿಯಬಹುದು? ಇದೇ ಪದ್ಯದ ಮುಂದಣ ಸಾಲುಗಳನ್ನು ಅಲ್ಲಲ್ಲಿಗೆ ತುಂಡು ಮಾಡದೇ ಗದ್ಯವಾಗಿಸಿ ಓದಿ ನೋಡಿದರೆ; ಸಿಟ್ಟಿನ ಸಟ್ಟುಗದಲಿ ಒಂದೇಟು ಮುಟ್ಟಿಸಿ ಟೂ ಬಿಟ್ಟು ಮೂತಿಯುಬ್ಬಿಸಿ ಕೊನೆಯ ಸಂದೇಶ ಕೊನೆಯ ಮಾತು ಗಟ್ಟಿ ತೀರ್ಮಾನಗಳ ಮಾರಕಾಸ್ತ್ರ ಪ್ರಯೋಗಗಳು ಇನ್ನೂ ಹೊಸ್ತಿಲು ದಾಟುವಂತಿಲ್ಲ ಆಗಲೇ ಮೊದಮೊದಲ ಪ್ರೇಮ ಸಲ್ಲಾಪ ನೆನಪಾಗುವುದು ನಸುನಾಚಿಕೆಯಲಿ ತುಸು ಬಿರಿವುದು ತುಟಿ ಗದ್ದೆಯಂಚಿನ ಬದು ಒಡೆದಂತೆ ಕೊಚ್ಚಿ ಹೋಗುವುದು ಮುನಿಸು ಅಷ್ಟೇಕೆ ವಿವರಿಸಲಿ? ಹಚ್ಚಿಕೊಂಡವರಿಗಷ್ಟೇ ಗೊತ್ತು ಮೆಚ್ಚಿಕೊಂಡವರ ಸುಖ-ದುಃಖ, ಇಚ್ಚೆಯಿದ್ದವರ ಆಳು ಈ ಸ್ವರ್ಗ- ನರಕ ಪ್ರಾಯಶಃ ಪ್ರಯೋಗ ಎಂದರೆ ಇದೇ ಇರಬೇಕು. ಪದ್ಯಗಂಧೀ ಗದ್ಯ ಎಂದೆಲ್ಲ ಕರೆದುಕೊಳ್ಳುವವರ ನಡುವೆ ಗದ್ಯ ಗಂಧೀ ಪದ್ಯ ಬರೆಯುವ ಈ ಕವಿ ಯಾಕೋ ತೀರ ಸಹಜವಾಗಿ ನಿತ್ಯವೂ ಘಟಿಸುವ ಘಟನಾವಳಿಗಳನ್ನೆಲ್ಲ ಒಟ್ಟಾಗಿಸಿ ಬದುಕಿನ ಪ್ರಭಾವಳಿಯನ್ನಾಗಿಸುತ್ತಾರಲ್ಲ ಈ ಕವಿ ಇವರನ್ನು ಪ್ರಭಾವಿಸುತ್ತಿರುವುದು ಕೆ ಎಸ್ ನ ಅಲ್ಲದೇ ಮತ್ತಿನ್ನಾರು ಎನ್ನುವುದೂ ಆತುರದ ನಿರ್ಧಾರವೇ ಆದೀತು! ಜನಜಂಗುಳಿಯ ಮಧ್ಯೆಯೇ ತೀರಾ ಒತ್ತರಿಸಿ ಬಂದ ಅಳು ಕಡಿಮೆ ಬಿದ್ದ ಟಿಕೇಟು ಕಾಸು ಎಡವಿದಾಗ ಹರಿದ ಅಂಗಿ ಸದಾ ಮೇಲಾಟ ತೋರಿದವರ ಅಣಕು ನೋಟ ಕಿತ್ತ ಉಂಗುಷ್ಟದ ತೇಪೆ ಚಪ್ಪಲಿ ಜಾತ್ರೆಯಂತಹ ಮದುವೆಗೆ ತಪ್ಪು ಅಂದಾಜಿನಲಿ ತೊಟ್ಟ ಸಾದಾ ಅರಿವೆ ಇಲ್ಲಿ ಕವಿ ಬದುಕಿನ ಸೂಕ್ಷ್ಮಗಳನ್ನು ಅವಲೋಕಿಸುವ ರೀತಿ ಸದ್ಯ ಅಬ್ಬರದಲ್ಲಿ ಬೊಬ್ಬಿರಿಯುವ, ಸಮಾನತೆಯ ಬೇಡಿಕೆ ಇಟ್ಟು ಇದ್ದವರಿಂದ ಕಿತ್ತು ತಮ್ಮದಾಗಿಸಿಕೊಳ್ಳುವ ಹಕ್ಕೊತ್ತಾಯದ ಗದರಿಲ್ಲ, ತಮ್ಮನ್ನು ಯಾರೋ ತುಳಿದರು ಎನ್ನುವ ದೂರು ಮೊದಲೇ ಇಲ್ಲ ಅಥವ ಹತಭಾಗ್ಯದ ಬಗ್ಗೆ ದುಃಖವೂ ಇಲ್ಲ; ಇರುವುದು ಬರಿಯ ವಾಸ್ತವದ ನಿಜ ಚಿತ್ರ. ನಾಗಶ್ರೀ ಕವಿತೆಗಳಲ್ಲಿ  ಹೆಚ್ಚಿನವು ಶೀರ್ಷಿಕೆಯೇ ಇಲ್ಲದೆ ಪ್ರಕಟವಾದವು. ಫೇಸ್ಬುಕ್ಕಿನಲ್ಲಿ ಶೀರ್ಷಿಕೆ ಇಲ್ಲದೆಯೂ ಪ್ರಕಟಿಸಬಹುದು. ಆದರೆ ಅಂತರ್ಜಾಲದ ಪತ್ರಿಕೆಗಳಲ್ಲೂ ಇವರ ತಲೆ ಬರಹ ಇಲ್ಲದೆಯೂ ಆ ಪದ್ಯಗಳ ಝಳದಲ್ಲಿ ತಲೆದೂಗಿಸುವಂತೆ ಮಾಡಬಲ್ಲ ಹಲವು ಪದ್ಯಗಳು ಇವೆ. ಅಪರೂಪಕ್ಕೆಂಬಂತೆ “ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟ” ಶೀರ್ಷಿಕೆಯ ಕವಿತೆಯಲ್ಲಿ ವಾಸ್ತವವಾಗಿ ಗಾಳಿಪಟದ ಚಿತ್ರ ಬರುವುದೇ ಇಲ್ಲ! ಬರಿಯ ಶೀರ್ಷಿಕೆಯಲ್ಲೇ ಬದುಕನ್ನೇ ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟವನ್ನಾಗಿಸಿರುವ ಕವಿತೆ ಹೇಳುತ್ತಿರುವುದು ದುರಂತಗಳ ಸರಮಾಲೆಯಲ್ಲಿ ಸಿಕ್ಕೂ ಮತ್ತೆ ಮೇಲೇರಬಯಸುವ ಗಾಳಿಪಟದ ಆಶೆಯಂಥ ಬದುಕನ್ನು!! ಪದ್ಯದ ಕಡೆಯ ಸಾಲು ಹೀಗಿದೆ; ಹೀಗಂತ ಗೊತ್ತಿದ್ದೂ ನಾನೇನೂ ಮಾಡಲಾರೆ ನಾಲ್ಕು ಹನಿ ಕಂಬನಿ ಹೊರತು ಮತ್ತೇನೂ ಕೊಡಲಾರೆ ಕೊಸರಷ್ಟು ಹಸಿಪ್ರೀತಿ ಉಳಿಸಿಟ್ಟಿರುವೆ ಸ್ವೀಕರಿಸು. ಬರಿಯ ಇಂಥ ಹತಾಶೆಗಳ ಚಿತ್ರಣದಲ್ಲಿ ವಾಸ್ತವವನ್ನು ಮರೆಮಾಚುತ್ತ ರಮ್ಯತೆಯನ್ನು ಬಯಸುವ ರೀತಿ ಕೆ ಎಸ್ ನ ಅವರಲ್ಲದೇ ಈ ನಾಗಶ್ರೀಗೂ ಒಲಿದಿರುವುದು ಅಪ್ಪಟ ಸತ್ಯ. ಬಹಳ ಗೊತ್ತೆಂಬ ಹಮ್ಮಿನಲಿ ಹೊಸ ಬಣ್ಣಗಳ ಹುಡುಕುವೆವು ಸೃಜಿಸಿದ ಮತ್ತಾವ ಬಣ್ಣಕ್ಕೂ ಸ್ವತಂತ್ರ ಅಸ್ತಿತ್ವವಿಲ್ಲ ಇದರ ಹೆಸರಿಗೆ ಅದರ ಉಲ್ಲೇಖ ಅದರ ಚಿತ್ತಾರಕ್ಕೆ ಇದರ ಸಹಯೋಗ ಹೊಸತು-ಹಳತು ಹೆಸರಿಗಷ್ಟೇ ವಿರುದ್ಧ ನನ್ನ ತಿಳುವಳಿಕೆಗದು ಜೋಡಿಪದ ಎಂದು ಮುಂದುವರೆಯುವ ಪದ್ಯ ಸಾಮಾನ್ಯ ಪ್ರತಿಮೆಗಳ ಅನಾವರಣದಲ್ಲೇ ಅಸಾಮಾನ್ಯ ರೂಪಕವೊಂದನ್ನು ಸೃಷ್ಟಿಸಿ ಭಲ ಭಲಾ ಎನ್ನಿಸುತ್ತದೆ. ಪದ್ಯ ಮುಗಿಯುವುದು ಹೀಗೆ; ಹಾಗಲ್ಲ ಹೀಗೆಂದರೂ ಹೀಗಲ್ಲ ಹಾಗೆಂದರೂ ಒಪ್ಪುವದು ಬಿಡುವುದು ಅವರವರ ಇಷ್ಟ ಇದ್ದ ಬಣ್ಣಗಳಲೆ ಹೊಸ ಕನಸು ಕಾಣುವುದು ಇರುವ ಭಾವಗಳಲೆ ಹೊಸ ಸಾಲು ಬರೆಯುವುದು ನನಗಿಷ್ಟ ಎಂದೆಂದೂ ಇಂಥ ಸಹಜ ಆಸೆಗಳನ್ನು ಮಾತ್ರ ತನ್ನ ಕವಿತೆಗಳ ಮುಖ್ಯ ಶೃತಿಯನ್ನಾಗಿರಿಸಿಕೊಂಡಿರುವ ಈ ಕವಿತೆಗಳು ಮತ್ತೆ ಮತ್ತೆ ಓದಿದರೆ ಹಳಹಳಿಕೆಯಂತೆ, ತನ್ನ ಕೈಗೆಟುಕದ ಸಂತಸದ ಬಗೆಗಿನ ತಿರಸ್ಕಾರದಂತೆ ಅಥವ ಶ್ರೇಣೀಕೃತ ಸಮಾಜದ ಶ್ರೇಣೀಕರಣದ ಉತ್ತುಂಗದಲ್ಲಿದ್ದೂ ಒಳಗೇ ಟೊಳ್ಳಾಗಿರುವ ಆ ಸಮಾಜದ ಕಿರೀಟದ ಹೊಳಪು ಕಳೆದ ಮಣಿಯಂತೆ ಕಾಣುತ್ತದೆ. ಆದರೆ ಬರಿಯ ಇಂಥ ಹಳಹಳಿಕೆಗಳು ಸದಾ ಸರ್ವದಾ ಯಾವುದೇ ಕವಿಯ ನಿತ್ಯ ಮಂತ್ರವಾಗಬಾರದು. ಹಾಗಾದಲ್ಲಿ ಅಳುಬುರುಕ ಕವಿ ಎಂಬ ಅಭಿದಾನಕ್ಕೆ ಸಿಕ್ಕು ತಾನೇ ತೋಡಿಕೊಂಡ ಹೊಂಡದಲ್ಲಿ ಕವಿ ಬೀಳುತ್ತಾನೆ. ಹಾಗಾಗದೇ ಇರಲು ಮೊದಲು ಈ ಕವಿ ತಾನಿರಿಸಿಕೊಂಡು ಬಂದಿರುವ ಕ್ಷೋಬೆಯಿಂದ ಹೊರಗೆ ಬರಬೇಕು ಮತ್ತು ನಿಜಕ್ಕೂ ಈ ಹಳವಂಡದಿಂದ ಮೇಲೆದ್ದು ಬರುವ ಮಾರ್ಗವನ್ನು ಹುಡುಕಬೇಕು. ಬಿದ್ದಮೇಲೂ ತಿರುಗುತ್ತಲೇ ಇರುವ ಗಾಲಿ ಸತ್ತಮೇಲೂ ಸುತ್ತುತ್ತಲೇ ಇರುವ ಆತ್ಮ ಏನೋ ಹೇಳ ಹೊರಟು ಮತ್ತೇನೋ ಆಗುವಾಗ ಒಂದು ಮನಸ್ಸು ಒಡೆಯಬಹುದು ಮತ್ತೆ ಸೇರಲೆಂದು ಶತಪ್ರಯತ್ನ ಏಕೆ? ಸಿಕ್ಕಿದ್ದು ದಕ್ಕಿದ್ದು ಋಣವಿದ್ದಷ್ಟೇ ಈ ಪದ್ಯ ಕಾವ್ಯದ ಪ್ರಯೋಗದಲ್ಲಿ ನಿಷ್ಕ್ರಮಣದ ಹಾದಿಯಲ್ಲಿದ್ದ ಅಧ್ಯಾತ್ಮದ ಪುನರ್ಪ್ರವೇಶ ಎಂದೇ ಅನ್ನಿಸುತ್ತಿದೆ. ಬದುಕಿನಾಚೆಗೆ ಏನಿದೆ, ಸತ್ತವರು ನಂತರ ಎಲ್ಲಿಗೆ ಹೋಗುತ್ತಾರೆ, ಪೂರ್ವಾಪರದ ಸಂಗತಿಗಳು ಏನಿವೆ ಎನ್ನುವುದನ್ನೆಲ್ಲ ಪದ್ಯದ ವಸ್ತುವನ್ನಾಗಿಸುವುದಕ್ಕೆ ಸಾಕಷ್ಟು ಅಧ್ಯಯನ ಮತ್ತು ಅಧ್ಯಾಪನಗಳ ಅನುಕ್ರಮಣಿಕೆಯ ಅವಶ್ಯಕತೆ ಅನಿವಾರ್ಯ. ನಾಗಶ್ರೀ ಈ ವಿಚಾರದಲ್ಲಿ ಸಾಕಷ್ಟು ದೂರ ಕ್ರಮಿಸಿರುವುದು ಅವರ ಪದ್ಯಗಳ ರೀತಿಯಲ್ಲೇ ಶೃತವಾಗುತ್ತದೆ. ನಡೆದು ಬಿಡಬೇಕು ಆಚೆ ಹಚ್ಚಹಸುರಿನ ಬಯಲಿನೆಡೆಗೆ ವಿಶಾಲ ಸಮುದ್ರದ ಏಕಾಂತಕೆ ಕಡೇಪಕ್ಷ ರಾತ್ರಿಯಾಗುವುದನೆ ಕಾದಿದ್ದು ನಕ್ಷತ್ರಲೋಕದ ವಿಹಂಗಮ ದರ್ಶನಕೆ ಇವೆಲ್ಲಾ ದುರ್ಲಭದ ನಗರಜಾತ್ರೆಯಲಿ ಮಗುವೊಂದರ ಕಣ್ಣಬೆಳಕೊಳಗೆ ಹಣ್ಣುಮುದುಕರ ಮನೆಯಂಗಳಕೆ ನಡೆದುಬಿಡಬೇಕು ದೂರ ದೂರ ಮತ್ತೆ ಸಣ್ಣತನಗಳು ನಂಬಿಕೆಯ ನೆಲೆಯ ಕುರೂಪಗೊಳಿಸದಂತೆ ಈ ಇಂಥ ಆಶಯ ಸದಾ ಉನ್ಮತ್ತತೆ ಮತ್ತು ಸ್ವಪ್ರತಿಷ್ಠೆಯನ್ನು ಮುಂದು ಮಾಡುವ ಲೋಕಾಂತದ ನಾಯಕ ಮಣಿಗಳಲ್ಲಿ ಅಸಾಧ್ಯದ ಧಾತು. ಲೋಕಾಂತದ ದಂದುಗಗಳಲ್ಲಿದ್ದೂ ಏಕಾಂತದ ಸಂಗತಕ್ಕಷ್ಟೇ ಹಾತೊರೆಯುವ ಮೃದು ಮನಸ್ಸಿನ ಅಸ್ತಿವಾರ. ಇಂಥ ಲೌಕಿಕದಾಚೆಗಿನ ಸಂಗತಿಗಳಲ್ಲೇ ಇರುವ ಈ ಕವಿ ಒಮ್ಮೊಮ್ಮೆ ಹೀಗೂ ಹೇಳಬಲ್ಲರು; ಉದ್ದು-ಕಡಲೆ-ಹೆಸರು ಗುರುತಿಸಲೂ ಇಪ್ಪತ್ತು ವರ್ಷ ತೆಗೆದುಕೊಂಡ ಜಾಣರಲ್ಲವೆ ನೀವು ಗಂಡು ಹೆಣ್ಣುಗಳ ನಡುವಿನ ಗುದ್ದಾಟ ನಿನ್ನೆ ಮೊನ್ನೆಯ ಪ್ರಶ್ನೆ ಏನಲ್ಲ. ಗಂಡು ಹೆಚ್ಚೆಂಬ ವಾದದ ಜೊತೆಯೇ ಹೆಣ್ಣು ಕೀಳಲ್ಲವೆಂಬ ಸಮದರ್ಶತ್ವವೂ ಇದ್ದೇ ಇದೆ. ಆದರೆ ಬದುಕನ್ನು ಅರಿಯುವುದಕ್ಕೆ ಅನುಭವಗಳೇ ಮುಖ್ಯ. ಅದು ಗಂಡೋ ಹೆಣ್ಣೋ ಲಿಂಗಾಧಾರಿತ ಅಲ್ಲದ ಆದರೆ ಬದುಕಿನ ನಿಜ ದರ್ಶನದಿಂದ ಹುಟ್ಟುವ ದರುಶನ. ಅದನ್ನು ಕಾಂಬುವ ಪರಿ ಬೇರೆ ಬೇರೆ ಅಷ್ಟೆ. ನಾಗಶ್ರೀ ಕವಿತೆಗಳಲ್ಲಿ ಪುರಾಣ ಪಾತ್ರಗಳು ನೇರವಾಗಿ ಪ್ರಸ್ತಾಪ ಆಗುವುದಿಲ್ಲ. ಆ ಅಂಥ ಕಾವ್ಯ ನಾಯಕರ ಒಣ ಉಪದೇಶಗಳೂ, ಹುಚ್ಚು ಆವೇಶಗಳೂ ಮೈ ತಳೆಯದೇ ಆ ಅಂಥ ಕಾವ್ಯ ನಾಯಕರು ಈ ಒಣ ನೆಲದಲ್ಲಿ ಉದುರಿಸಿ ಹೋದ ಆದರ್ಶಗಳು ಮಾತ್ರ ಸ್ಥಾಯಿ ಶೃತಿಯಾಗಿ ಈ ಕವಿಯ ಹಾಡಿಗೆ ಹಾದಿಯ ಸಾಥಿಯಾಗಿವೆ ಮತ್ತು ಆ ಅದೇ ಕಾರಣಕ್ಕೇ ಸದ್ಯ ಬರೆಯುತ್ತಿರುವವರಿಗಿಂತ ಭಿನ್ನವಾಗಿ ಅವರ ಕವಿತೆಗಳ ಆಪ್ತ ಓದಿಗೆ ಅನುಗೊಳಿಸುತ್ತವೆ. ಸಹೃದಯರ ಸಾಧಾರಕ್ಕಾಗಿ ನಾಗಶ್ರೀ ಅಜಯ ಅವರ ಆಯ್ದ ಆರು ಪದ್ಯಗಳು; ೧. ಹಚ್ಚಿಕೊಂಡರೆ ಹೇಗೆಂದು ಒಮ್ಮೆ ನನ್ನ ಜತೆಗಿದ್ದು ನೋಡು ಉಬ್ಬಸದ ಕಡೆ ಉಸಿರಿನಲೂ ನಿನ್ನದೇ ಹೆಸರು ಉಸುರುವ ಹುಚ್ಚುಚ್ಚು ಹುಡುಗಿ ನಾನು ಥಂಡಿ ಹವೆಯಲಿ ಎದ್ದ ಎದೆನಡುಕ ವಿರಹ ಬೆಚ್ಚನೆಯ ಉಣ್ಣೆಯಂಗಿ ಸುಡುವ ಚಹಾ ಬಿಸಿಯಾಗಿಸದು ಎಂದು ನಿನ್ನ ನೆವದಿಂದ ಜೋಮು ಬಿಡಿಸಿ ಕುಣಿಕುಣಿದು ಓಡುವ ಮರಿಜಿಂಕೆ ಪಾದಗಳು ಸಿಟ್ಟಿನ ಸಟ್ಟುಗದಲಿ ಒಂದೇಟು ಮುಟ್ಟಿಸಿ ಟೂ ಬಿಟ್ಟು ಮೂತಿಯುಬ್ಬಿಸಿ ಕೊನೆಯ ಸಂದೇಶ ಕೊನೆಯ ಮಾತು ಗಟ್ಟಿ ತೀರ್ಮಾನಗಳ ಮಾರಕಾಸ್ತ್ರ ಪ್ರಯೋಗಗಳು ಇನ್ನೂ ಹೊಸ್ತಿಲು ದಾಟುವಂತಿಲ್ಲ ಆಗಲೇ ಮೊದಮೊದಲ ಪ್ರೇಮಸಲ್ಲಾಪ ನೆನಪಾಗುವುದು ನಸುನಾಚಿಕೆಯಲಿ ತುಸುಬಿರಿವುದು ತುಟಿ ಗದ್ದೆಯಂಚಿನ ಬದು ಒಡೆದಂತೆ ಕೊಚ್ಚಿ ಹೋಗುವುದು ಮುನಿಸು ಅಷ್ಟೇಕೆ ವಿವರಿಸಲಿ? ಹಚ್ಚಿಕೊಂಡವರಿಗಷ್ಟೇ ಗೊತ್ತು ಮೆಚ್ಚಿಕೊಂಡವರ ಸುಖ-ದುಃಖ ಇಚ್ಚೆಯಿದ್ದವರ ಆಳು ಈ ಸ್ವರ್ಗ- ನರಕ ೨. ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟ ನೀನು ದೂರದ ಬೆಟ್ಟದಲಿ ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟ ಬೇಸಿಗೆಯ ಸುಡು ಮಧ್ಯಾಹ್ನ ಮೊಸರಲಿ ಅದ್ದಿ, ಉಪ್ಪು ಹಚ್ಚಿ ಒಣಗಲೆಂದೇ ಇಟ್ಟ ಮೆಣಸಿನಕಾಯಿ ಮಳೆಗಾಲದ ಸಂಜೆ ಜಡಿಯಲಿ ತೊಯ್ದು ತೊಪ್ಪೆಯಾದ ಒದ್ದೆ

Read Post »

You cannot copy content of this page

Scroll to Top