ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸಂಪ್ರೋಕ್ಷಣ

ಉತ್ತಮರ ಸಂಗ ಎನಗಿತ್ತು ಸಲಹೊ

ಸಂಬಂಧಗಳು ಹುಟ್ಟಿಕೊಳ್ಳುವುದು ಅಂಥ ವಿಶೇಷವಾದ ಸಂಗತಿಯೇನಲ್ಲ. ಹುಟ್ಟಿಕೊಂಡ ಸಂಬಂಧಗಳು ಎಲ್ಲಿಯವರೆಗೆ ಬಾಳುತ್ತವೆ, ನಮ್ಮ ಬದುಕಿನ ಚಲನೆಯಲ್ಲಿ ಅವುಗಳ ಮಹತ್ವವೇನು, ಅವು ಯಾವ ಬಗೆಯ ಹೊಸತನವನ್ನು ನಮ್ಮ ಯೋಚನೆಗಳಿಗೆ ಒದಗಿಸಬಲ್ಲವು ಎನ್ನುವ ಆಧಾರದ ಮೇಲೆ ಸಂಬಂಧಗಳ ಗುಣಮಟ್ಟದ ನಿರ್ಧಾರವಾಗುತ್ತದೆ. ಈ ಗುಣಮಟ್ಟದ ಮೌಲ್ಯಮಾಪನ ಯಾವುದೇ ರೂಪ, ಆಕಾರ ಅಥವಾ ಹೆಸರುಗಳ ಪ್ರಾಪಂಚಿಕ ಚೌಕಟ್ಟಿನೊಳಗೆ ನಡೆಯುವಂಥದ್ದಲ್ಲ. ತಲೆದಿಂಬಿನ ಪಕ್ಕದಲ್ಲಿ ನೆಮ್ಮದಿಯಿಂದ ನಿದ್ರಿಸಿರುವ ಮೊಬೈಲ್ ನಲ್ಲಿ ಪಾಪ್ ಅಪ್ ಆಗುವ ಗುಡ್ ಮಾರ್ನಿಂಗ್ ಮೆಸೇಜುಗಳಲ್ಲಿ ಹದಿನೈದು ವರ್ಷಗಳ ನಂತರ ಮತ್ತೆ ಜೊತೆಯಾದ ಸ್ನೇಹದ ಬಳಗವೊಂದಿರಬಹುದು; ಫೇಸ್ ಬುಕ್ ನಲ್ಲಿ ಹುಟ್ಟಿ, ವಾಟ್ಸಾಪ್ ನಲ್ಲಿ ಬೆಳೆದು ಸುಖ-ದುಃಖಗಳಿಗೆ ಜೊತೆಯಾದ ಸ್ನೇಹಿತೆಯ ನಗುವೊಂದಿರಬಹುದು; ಹೆಸರು-ಭಾವಚಿತ್ರಗಳಿಲ್ಲದ ಅಪರಿಚಿತ ಹೃದಯವೂ ಇರಬಹುದು. ಪಕ್ಕದ ರಸ್ತೆಯಲ್ಲಿ ಹೋಮ್ ವರ್ಕ್ ಮಾಡುತ್ತಲೇ ಹಾಲು ಮಾರುವ ಹುಡುಗ ಕಾಫಿಯೊಂದಿಗಿನ ಸಂಬಂಧವನ್ನು ನಂಬಿಕೆಯಾಗಿ ಕಾಯುತ್ತಿರಬಹುದು. ಅರ್ಥವಾಗದ ಭಾಷೆಯೊಂದನ್ನು ನಗುವಿನಲ್ಲೇ ಕಲಿಸಿಕೊಡುವ ಜಪಾನಿ ಸಿನೆಮಾವೊಂದರ ಪುಟ್ಟ ಹುಡುಗಿ ಭಾವನೆಗಳೊಂದಿಗಿನ ಸಂಬಂಧವನ್ನು ಸಲಹಿದರೆ, ಫ್ರೆಂಚ್ ವಿಂಡೋವೊಂದರ ಕರ್ಟನ್ನುಗಳ ಮೇಲೆ ಹಾರುವ ಭಂಗಿಯಲ್ಲಿ ಕೂತೇ ಇರುವ ನೀಲಿಬಣ್ಣದ ಹಕ್ಕಿ ಮೌನದೊಂದಿಗೆ ಹೊಸ ಸಂಬಂಧವೊಂದನ್ನು ಹುಟ್ಟುಹಾಕಬಹುದು.           ಹೀಗೆ ಎಲ್ಲೋ ಹುಟ್ಟಿ, ಇನ್ಯಾರೋ ಬೆಳಸುವ ಸಂಬಂಧಗಳಿಗೆಲ್ಲ ಅವುಗಳದೇ ಆದ ಉದ್ದೇಶವಿರುವಂತೆ ನನಗೆ ಅನ್ನಿಸುತ್ತದೆ. ಹೈಸ್ಕೂಲಿನ ದಾರಿಯಲ್ಲಿದ್ದ ಬಸ್ ಸ್ಟಾಪಿನಲ್ಲಿ ಕಾಲೇಜಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ಹುಡುಗ, ನಗುವಿನಿಂದಲೇ ಕಾಲ್ನಡಿಗೆಯ ಕಷ್ಟವನ್ನೆಲ್ಲ ಕಣ್ಮರೆಯಾಗಿಸುತ್ತಿದ್ದ ನೆನಪೊಂದು ಹೈಸ್ಕೂಲಿನ ಮಾರ್ಕ್ಸ್ ಕಾರ್ಡುಗಳೊಂದಿಗೆ ಯಾವ ನಿರ್ಬಂಧವೂ ಇಲ್ಲದೇ ಸಂಬಂಧವನ್ನು ಬೆಳಸಿಕೊಳ್ಳುತ್ತದೆ. ಡೆಂಟಲ್ ಕುರ್ಚಿಯ ಕೈಮೇಲೆ ಆತಂಕದಿಂದಲೇ ಕೈಯಿಟ್ಟು ಸಂಬಂಧ ಬೆಳೆಸಿಕೊಳ್ಳುವ ಹಲ್ಲಿನ ಒಟ್ಟೆಯೊಂದು ಹುಳುಕು ಮರೆತು ಹೂನಗೆಯ ಚಲ್ಲಿದ ಫೋಟೋವೊಂದು ಗೋಡೆಗಂಟಿದ ಮೊಳೆಯೊಂದಿಗೆ ನಂಟು ಬೆಳಸಿಕೊಳ್ಳುತ್ತದೆ. ಚಾದರದ ಮೇಲಿನ ಹೂವೊಂದು ಸೆಕೆಂಡುಗಳಲ್ಲಿ ಹಣ್ಣಾಗಿ ಡೈನಿಂಗ್ ಟೇಬಲ್ಲಿನ ಮೇಲೆ ಏಕಾಂಗಿಯಾಗಿ ಕುಳಿತಿದ್ದ ಬುಟ್ಟಿಯೊಂದಿಗೆ ನಂಟು ಬೆಳಸಿ, ಬುಟ್ಟಿಯ ಬದುಕಿಗೊಂದಿಷ್ಟು ಬಣ್ಣಗಳನ್ನು ದೊರಕಿಸುತ್ತದೆ. ಟಿವಿ ಸ್ಟ್ಯಾಂಡ್ ನೊಳಗೆ ಬೆಚ್ಚಗೆ ಕುಳಿತ ಸಿಡಿಯೊಂದರ ಹಾಡು ಅಡುಗೆಮನೆಯೊಂದಿಗೆ ಬೇಜಾರಿಲ್ಲದೇ ಸಂಬಂಧವನ್ನು ಬೆಳಸಿಕೊಂಡು, ಏಕತಾನತೆಯ ಮರೆಸುವ ಹೊಸ ರಾಗವೊಂದನ್ನು ಹುಟ್ಟಿಸುತ್ತದೆ. ಹೀಗೇ ಅಸ್ತಿತ್ವದ ಮೋಹಕ್ಕೆ ಬೀಳದೆ ಬದುಕಿನ ಭಾಗವಾಗಿಬಿಡುವ ಸಂಬಂಧಗಳೆಲ್ಲವೂ ಅವಕಾಶವಾದಾಗಲೆಲ್ಲ ಅರಿವಿಗೆ ದೊರಕುತ್ತ, ನಿತ್ಯವೂ ಅರಳುವ ಪುಷ್ಪವೊಂದರ ತಾಳ್ಮೆಯನ್ನು ನೆನಪಿಸುತ್ತವೆ.            ತಾಳ್ಮೆ ಎಂದಾಗಲೆಲ್ಲ ನನಗೆ ನೆನಪಾಗುವುದು ಡೈನಿಂಗ್ ಟೇಬಲ್ಲು. ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನಗೆ ಡೈನಿಂಗ್ ಟೇಬಲ್ ಎನ್ನುವುದು ಐಷಾರಾಮದ ಸಂಗತಿಯಾಗಿತ್ತು. ವರ್ಷಕ್ಕೊಮ್ಮೆ ಹೊಟೆಲ್ ಗಳಿಗೆ ಹೋದಾಗಲೋ ಅಥವಾ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಸಂಬಂಧಿಕರ ಮನೆಗಳಿಗೆ ಹೋದಾಗಲೋ ಕಾಣಸಿಗುತ್ತಿದ್ದ ಡೈನಿಂಗ್ ಟೇಬಲ್ಲುಗಳ ಬಗ್ಗೆ ವಿಶೇಷವಾದ ಪ್ರೀತಿಯಿತ್ತು. ಮರದ ಡೈನಿಂಗ್ ಟೇಬಲ್ಲಿನ ಮೇಲೆ ಬಿಸಿ ಕುಕ್ಕರನ್ನೋ, ಸಾಂಬಾರಿನ ಪಾತ್ರೆಯನ್ನೋ ಇಡಲು ಉಪಯೋಗಿಸುತ್ತಿದ್ದ ಸ್ಟೀಲಿನ ಸ್ಟ್ಯಾಂಡುಗಳೆಲ್ಲ ನನ್ನಲ್ಲಿ ವಿಚಿತ್ರ ಕಂಪನಗಳನ್ನು ಉಂಟುಮಾಡುತ್ತಿದ್ದವು. ಅಜ್ಜ-ಅಜ್ಜಿ, ಅಪ್ಪ ಇವರೆಲ್ಲ ಹೇಳುತ್ತಿದ್ದ ಪುರಾಣದ ಕಥೆಗಳನ್ನು ಕೇಳುತ್ತಾ ಬೆಳೆದ ನನಗೆ ಸಾಂಬಾರಿನ ಪಾತ್ರೆಯೊಂದು ಡೈನಿಂಗ್ ಟೇಬಲ್ಲಿನ ಜೀವ ಸೆಳೆದೊಯ್ಯುವ ಯಮರಾಜನಂತೆಯೂ, ಸ್ಟೀಲಿನ ಸ್ಟ್ಯಾಂಡೊಂದು ಸತಿ ಸಾವಿತ್ರಿಯಾಗಿ ಪ್ರಾಣ ಉಳಿಸಿದಂತೆಯೂ ಭಾಸವಾಗುತ್ತಿತ್ತು. ಊಟದ ಪ್ಲೇಟಿನಡಿಯ ಮ್ಯಾಟ್ ಗಳ ಮೇಲಿನ ಗುಲಾಬಿ ಹೂವುಗಳೆಲ್ಲ ಸಾಂಬಾರಿನ ಬಿಸಿಗೆ ಕೊಂಚವೂ ಬಾಡದೇ ನಮ್ಮೆಲ್ಲರೊಂದಿಗೆ ಕೂತು ಊಟ ಮಾಡುತ್ತಿರುವಂತೆ ಸಂಭ್ರಮವಾಗುತ್ತಿತ್ತು. ಊಟ-ತಿಂಡಿಯ ನಂತರ ಡೈನಿಂಗ್ ಟೇಬಲ್ಲಿನ ಮೇಲೆ ಬಂದು ಕೂರುತ್ತಿದ್ದ ಹಣ್ಣಿನ ಬುಟ್ಟಿಯೊಂದು ಸಕಲ ಬಣ್ಣ-ರುಚಿಗಳನ್ನು ಡೈನಿಂಗ್ ಟೇಬಲ್ಲಿಗೆ ಒದಗಿಸಿದಂತೆನ್ನಿಸಿ, ಹಣ್ಣಿನ ಬುಟ್ಟಿಯ ಮೇಲೂ ವಿಶೇಷ ಪ್ರೀತಿಯೊಂದು ಹುಟ್ಟಿಕೊಳ್ಳುತ್ತಿತ್ತು.           ಬದುಕಿನ ಯಾವುದೋ ಕ್ಷಣದಲ್ಲಿ ಅರಿವಿಗೇ ಬಾರದಂತೆ ಹುಟ್ಟಿದ ಪ್ರೀತಿಯೊಂದು ಬದುಕಿನುದ್ದಕ್ಕೂ ನಮ್ಮೊಂದಿಗೇ ಅಂಟಿಕೊಂಡು, ತಾನು ಕಟ್ಟಿಕೊಂಡ ಸಂಬಂಧಗಳೊಂದಿಗೆ ನಮ್ಮನ್ನೂ ಬಂಧಿಸಿಬಿಡುತ್ತದೆ. ಬಾಲ್ಯದ ಆ ಸಮಯದಲ್ಲಿ ಐಷಾರಾಮದೆಡೆಗಿನ ಪ್ರೀತಿಯಿಂದ ಹುಟ್ಟಿಕೊಂಡ ಡೈನಿಂಗ್ ಟೇಬಲ್ಲಿನೊಂದಿಗಿನ ಸಂಬಂಧ ಈಗಲೂ ಹಾಗೆಯೇ ಉಳಿದುಕೊಂಡಿದೆ. ಯಮರಾಜನ ಭಯವಿಲ್ಲದ ಕಲ್ಲಿನ ಡೈನಿಂಗ್ ಟೇಬಲ್ಲಿನ ಮೇಲೆ ಚಿಪ್ಸ್ ಪ್ಯಾಕೆಟ್ಟಿನಿಂದ ಹಿಡಿದು ಮಲ್ಲಿಗೆ ಮಾಲೆಯವರೆಗೂ ಹೊಸಹೊಸ ಅವಕಾಶಗಳು ಸೃಷ್ಟಿಯಾಗಿವೆ. ಈಗಷ್ಟೇ ಮರಿಹಾಕಿದ ಬೆಕ್ಕಿನ ಸುತ್ತಲೂ ಕಣ್ಣುಮುಚ್ಚಿ ಮಲಗಿರುವ ಮರಿಗಳಂತೆಯೇ ಭಾಸವಾಗುವ ಡೈನಿಂಗ್ ಟೇಬಲ್ಲಿನ ಕುರ್ಚಿಗಳು ಅಗತ್ಯಬಿದ್ದಾಗಲೆಲ್ಲ ಮೊಬೈಲ್ ಸ್ಟ್ಯಾಂಡಾಗಿ, ಹ್ಯಾಂಗರುಗಳಾಗಿ, ಲ್ಯಾಡರ್ ಆಗಿ ರೂಪಾಂತರಗೊಂಡು ಮನೆಯ ಎಲ್ಲ ವಸ್ತುಗಳೊಂದಿಗೂ ಸ್ನೇಹಸಂಬಂಧವೊಂದನ್ನು ಬೆಸೆದುಕೊಂಡಿವೆ. ಊಟ-ತಿಂಡಿಯನ್ನು ಬಿಟ್ಟು ಉಳಿದೆಲ್ಲ ಕೆಲಸ-ಕಾರ್ಯಗಳಿಗೂ ಬಳಕೆಯಾಗುತ್ತಿರುವ ಡೈನಿಂಗ್ ಟೇಬಲ್ಲಿನ ಮೂಲ ಉದ್ದೇಶವನ್ನೇ ನಾನು ಮರೆತುಹೋಗಿದ್ದರ ಬಗ್ಗೆ ಡೈನಿಂಗ್ ಟೇಬಲ್ಲಿಗೆ ನನ್ನ ಮೇಲೆ ಬೇಸರವೇನೂ ಇದ್ದಂತಿಲ್ಲ. ಅದರ ಮೈಮೇಲೆ ಧೂಳು ಬಿದ್ದಾಗಲೆಲ್ಲ, ವೆಟ್ ಟಿಶ್ಯೂ ಬಳಸಿ ನಾಜೂಕಾಗಿ ಕ್ಲೀನ್ ಮಾಡುವ ನನ್ನ ಮೇಲೂ ಅದಕ್ಕೊಂದು ವಿಶೇಷವಾದ ಪ್ರೀತಿಯಿರುವಂತೆ ಆಗಾಗ ಅನ್ನಿಸುವುದುಂಟು. ನನ್ನೆಲ್ಲ ಭಾವಾತಿರೇಕಗಳನ್ನು ಅಲ್ಲಾಡದೇ ಸಹಿಸಿಕೊಳ್ಳುವ ಡೈನಿಂಗ್ ಟೇಬಲ್ಲಿನ ತಾಳ್ಮೆಯನ್ನು ನೋಡುವಾಗಲೆಲ್ಲ ಸಂಬಂಧಗಳೆಡೆಗಿನ ನಂಬಿಕೆಯೊಂದು ಬಲವಾಗುತ್ತ ಹೋಗುತ್ತದೆ.           ಈ ನಂಬಿಕೆ ಎನ್ನುವುದು ಇರದೇ ಇದ್ದಿದ್ದರೆ ಸಂಬಂಧಗಳಿಗೊಂದು ಗಟ್ಟಿತನ ದೊರಕುತ್ತಿರಲಿಲ್ಲ. ನಂಬಿಕೆಯೆನ್ನುವುದು ಶಕ್ತಿಯ ರೂಪ ತಳೆದು ಸಂಬಂಧಗಳಿಗೊಂದು ಸಕಾರಾತ್ಮಕತೆಯನ್ನೂ, ಆಯುಷ್ಯವನ್ನೂ ಒದಗಿಸುತ್ತದೆ. ನಂಬಿಕೆ ಇಲ್ಲದೇ ಇದ್ದಿದ್ದರೆ ಮೊಬೈಲಿಗೆ ಬಂದ ಅಪರಿಚಿತ ಗುಡ್ ಮಾರ್ನಿಂಗ್ ಮೆಸೇಜು ಸ್ನೇಹವಾಗಿ ಬದಲಾಗುತ್ತಲೇ ಇರಲಿಲ್ಲ; ಹಾಲು ಮಾರುವ ಹುಡುಗ ಕಾಫಿಯ ಮೇಲಿನ ಪ್ರೀತಿಯನ್ನು ಉಳಿಸುತ್ತಿರಲಿಲ್ಲ; ಭಾಷೆ-ಸಂಸ್ಕೃತಿಗಳ ಪರಿಚಯವಿಲ್ಲದ ದೇಶದ ಸಿನೆಮಾ ನಮ್ಮೊಳಗೊಂದು ಜಗತ್ತನ್ನು ಸೃಷ್ಟಿಸುತ್ತಿರಲಿಲ್ಲ; ಕರ್ಟನ್ನನ್ನು ದಾಟಿ ಮನೆಸೇರುವ ಬೆಳಕು ನೀಲಿಹಕ್ಕಿಯ ಮೌನಕ್ಕೆ ಜೊತೆಯಾಗುತ್ತಿರಲಿಲ್ಲ. ಬಸ್ ಸ್ಟಾಪಿನಲ್ಲಿ ಕಾಯುವ ನಗೆಯೊಂದರ ನಂಬಿಕೆಯನ್ನು ಬಸ್ಸು ಉಳಿಸಿದರೆ, ಗೋಡೆಯ ಮೇಲಿನ ಹೂನಗೆಯ ನಂಬಿಕೆಯನ್ನು ಡೆಂಟಲ್ ಕುರ್ಚಿಯೊಂದು ಕಾಪಾಡುತ್ತದೆ; ಕನಸಿನ ನಂಬಿಕೆಯನ್ನು ಹೂವಿನ ಬುಟ್ಟಿ ಸಲಹಿದರೆ, ಅಡುಗೆಮನೆಯನ್ನು ತಲುಪಿದ ಹಾಡಿನ ರಾಗದ ನಂಬಿಕೆಯನ್ನು ಗಾಯಕ ಉಳಿಸಿಕೊಳ್ಳುತ್ತಾನೆ. ಡೈನಿಂಗ್ ಟೇಬಲ್ ಮೇಲಿನ ಮಲ್ಲಿಗೆಮಾಲೆಯ ನಂಬಿಕೆಯನ್ನು ಪ್ರೀತಿ-ಸಹನೆಗಳು ರಕ್ಷಿಸುತ್ತವೆ. ಹುಟ್ಟಿದ ಸಂಬಂಧಗಳೆಲ್ಲವೂ ನಂಬಿಕೆಯ ಬಲದ ಮೇಲೆ ಬೆಳೆಯುತ್ತ, ಉತ್ತಮರ ಒಡನಾಟದಿಂದ ಹೊಸ ಹೊಳಹು-ಸಾಧ್ಯತೆಗಳಿಗೆ ಎದುರಾಗುತ್ತ, ಬದುಕೊಂದರ ಸಾರ್ಥಕತೆಯ ಮೂಲಕಾರಣಗಳಾಗುತ್ತವೆ. ******* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

ಉತ್ತಮರ ಸಂಗ ಎನಗಿತ್ತು ಸಲಹೊ Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಮಾತು ಅರಳುವ ಹೊತ್ತು ನಗುವಿನೊಂದಿಗೆ ಜನ್ಮತಳೆದ ಸಂಬಂಧಗಳ ಭವಿಷ್ಯವನ್ನು ಮಾತು ನಿರ್ಣಯಿಸುತ್ತದೆ. ಮಾತು ಸರಾಗವೆನ್ನಿಸದ ಹೊರತು ಸಂಬಂಧಗಳನ್ನು ಸರಳವಾಗಿಸಿ ಸುಂದರಗೊಳಿಸಲಾಗದು. ಬದುಕಿನ ಸೂಕ್ಷ್ಮಗಳೆಲ್ಲವನ್ನೂ ತನ್ನೆಲ್ಲ ಚಾಣಾಕ್ಷತೆಯನ್ನು ಉಪಯೋಗಿಸಿ ಕಾಪಾಡಿಕೊಳ್ಳುವ ಮಾತು, ಅಗತ್ಯ ಬಿದ್ದಾಗಲೆಲ್ಲ ಸಂಬಂಧಗಳಿಗೊಂದು ಜೀವಂತಿಕೆಯನ್ನೂ ಒದಗಿಸುತ್ತದೆ. ಮಾತುಗಳೇ ಇಲ್ಲದ ಸಂಬಂಧವೊಂದು ಎಲ್ಲಿಯವರೆಗೆ ಜೀವಂತವಾಗಿ ಉಳಿದೀತು; ಎಲ್ಲ ನಕಾರಾತ್ಮಕತೆಯ ಪರಿಹಾರವೆನ್ನುವಂತೆ ಹೃದಯಕ್ಕಿಳಿವ ಮಾತು ಮಾತ್ರವೇ ಸಂಬಂಧಗಳನ್ನೆಲ್ಲ ಸಹೃದಯತೆಯ ಸೆರಗಿನಲ್ಲಿ ಬಚ್ಚಿಟ್ಟು ಸಾಕಿ ಸಲಹೀತು!           ಕಾಲಕಾಲಕ್ಕೆ ತಕ್ಕಂತೆ ಸಂಬಂಧಗಳ ಮೌಲ್ಯದ ಪರಿಕಲ್ಪನೆ ಬದಲಾಗುತ್ತಾ ಹೋದರೂ ಮಾತು ಮಾತ್ರ ಬೇಜಾರಿಲ್ಲದೇ ಬದಲಾವಣೆಗಳಿಗೆಲ್ಲ ಹೊಂದಿಕೊಂಡಿತು. ಪತ್ರಗಳ ಪ್ರಿಯ ಗೆಳತಿ-ಗೆಳೆಯಂದಿರೆಲ್ಲ ವಾಟ್ಸಾಪ್ ಮೆಸೇಜುಗಳ ಬ್ರೊ-ಡಿಯರ್ ಗಳಾದರು; ಪೋಸ್ಟ್ ಕಾರ್ಡ್ ನ ನಾಲ್ಕೇ ನಾಲ್ಕು ಸಾಲುಗಳ ಮಧ್ಯದಲ್ಲಿ ಕಷ್ಟಪಟ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದ್ದ ಉದ್ದನೆಯ ವಿಳಾಸವೊಂದು ಏಳೆಂಟು ಅಕ್ಷರಗಳ ಇಮೇಲ್ ಅಡ್ರೆಸ್ಸಾಗಿ ನಿರಾಳವಾಗಿ ಕಾಲುಚಾಚಿತು; ಗ್ರೀಟಿಂಗ್ ಕಾರ್ಡುಗಳಲ್ಲಿ ಆತಂಕದಿಂದ ಬಸ್ಸನ್ನೇರುತ್ತಿದ್ದ ಪ್ರೇಮನಿವೇದನೆಯೊಂದು ಇಮೋಜಿಗಳಲ್ಲಿ, ಸ್ಮೈಲಿಗಳಲ್ಲಿ ಗೌಪ್ಯವಾಗಿ ಹೃದಯಗಳನ್ನು ತಲುಪಲಾರಂಭಿಸಿತು. ಹೀಗೆ ಸಂವಹನದ ಸ್ವರೂಪಗಳೆಲ್ಲ ಬದಲಾದರೂ ಮಹತ್ವ ಕಳೆದುಕೊಳ್ಳದ ಮಾತು ಕಾಲಕ್ಕೆ ತಕ್ಕ ಮೇಕಪ್ಪಿನೊಂದಿಗೆ ಅಪ್ಡೇಟ್ ಆಗುತ್ತಲೇ ಇರುತ್ತದೆ.           ಗಂಡ-ಹೆಂಡತಿ ಪರಸ್ಪರ ಮಾತನ್ನಾಡಿದರೆ ಸಾಕು ಮಕ್ಕಳು ಹುಟ್ಟುತ್ತವೆ ಎಂದು ನಾನು ನಂಬಿಕೊಂಡಿದ್ದ ಕಾಲವೊಂದಿತ್ತು. ಅಜ್ಜ-ಅಜ್ಜಿ ಜೊತೆಯಾಗಿ ಕೂತು ಮಾತನ್ನಾಡಿದ್ದನ್ನೇ ನೋಡಿರದ ನಾನು ಅವರಿಗೆ ಎಂಟು ಮಕ್ಕಳು ಹೇಗೆ ಹುಟ್ಟಿದವು ಎಂದು ಅಮ್ಮನನ್ನು ಪ್ರಶ್ನಿಸುತ್ತಿದ್ದೆ. ಇಂತಹ ಮುಗ್ಧ ಯೋಚನೆಯೊಂದು ಈಗ ನಗು ತರಿಸಿದರೂ, ಕಾಲಕಾಲಕ್ಕೆ ಸಂವಹನವೊಂದು ಬದಲಾಗುತ್ತಾ ಬಂದ ರೀತಿಯೂ ಅಚ್ಚರಿ ಹುಟ್ಟಿಸುತ್ತದೆ. ಅಜ್ಜ-ಅಜ್ಜಿಯ ಕಾಲದಲ್ಲಿ ಊಟ-ತಿಂಡಿ, ಪೂಜೆ-ಪುನಸ್ಕಾರಗಳ ಹೊರತಾಗಿ ಮಾತುಕತೆಯೇ ಇಲ್ಲದ ದಾಂಪತ್ಯವೊಂದು ಜಗಳ-ಮನಸ್ತಾಪಗಳಿಲ್ಲದೇ ನಿರಾತಂಕವಾಗಿ ಸಾಗುತ್ತಿತ್ತು. ಮಕ್ಕಳ-ಮೊಮ್ಮಕ್ಕಳ ಮಾತು-ನಗು ಇವುಗಳೇ ಅವರ ಸುಖೀಸಂಸಾರದ ರಹಸ್ಯಗಳೂ, ಗುಟ್ಟುಗಳು ಎಲ್ಲವೂ ಆಗಿದ್ದವು. ಪ್ರೀತಿಯ ಸೆಲೆಯೊಂದು ಸಂವಹನದ ಮಾಧ್ಯಮವಾಗಿ, ಮಾತು ಮೌನಧರಿಸಿ ಸಂಬಂಧಗಳನ್ನು ಸಲಹುತ್ತಿತ್ತು. ದುಡ್ಡು-ಕಾಸು, ಸೈಟು-ಮನೆ ಹೀಗೆ ಸಂಬಂಧಗಳಿಗೊಂದು ಮೌಲ್ಯವನ್ನು ದೊರಕಿಸದ ಮಾತುಕತೆಗಳು ಮನೆತುಂಬ ಹರಿದಾಡುವಾಗಲೆಲ್ಲ, ಮಾತೊಂದು ಪ್ರೀತಿಯ ರೂಪ ಧರಿಸುತ್ತಿದ್ದ ಅಜ್ಜ-ಅಜ್ಜಿಯ ಕಾಲಕ್ಕೆ ವಾಪಸ್ಸಾಗುವ ವಿಚಿತ್ರ ಆಸೆಯೊಂದು ಆಗಾಗ ಹುಟ್ಟಿಕೊಳ್ಳುತ್ತಿರುತ್ತದೆ.           ಹೀಗೆ ಆಗಾಗ ಆತ್ಮತೃಪ್ತಿಯ ಪರಿಕಲ್ಪನೆಯನ್ನೇ ಪ್ರಶ್ನಿಸಿಬಿಡುವಂತಹ, ಈ ಕ್ಷಣದ ಬದುಕಿನ ಸನ್ನಿವೇಶಕ್ಕೆ ಹೊಂದಾಣಿಕೆಯಾಗದೇ ವಿಲಕ್ಷಣವೆನ್ನಿಸಬಹುದಾದಂತಹ ಆಸೆಯೊಂದು ಎಲ್ಲರ ಬದುಕಿನಲ್ಲಿಯೂ ಇರುತ್ತದೆ. ಅಂತಹ ಆಸೆಯೊಂದರ ಅಕ್ಕಪಕ್ಕ ಬಾಲ್ಯವಂತೂ ಸದಾ ಸುಳಿದಾಡುತ್ತಲೇ ಇರುತ್ತದೆ; ಬಾಲ್ಯದ ಹಿಂದೆ-ಮುಂದೊಂದಿಷ್ಟು ಮಾತುಗಳು! ಆ ಮಾತುಗಳೊಂದಿಗೆ ನಾಡಗೀತೆಯನ್ನು ಸುಮಧುರವಾಗಿ ಹಾಡುತ್ತಿದ್ದ ಪ್ರೈಮರಿ ಸ್ಕೂಲಿನ ಟೀಚರೊಬ್ಬರ ಧ್ವನಿ, ಊರಿನ ದೇವಸ್ಥಾನದಲ್ಲಿ ಚಂಪಾಷಷ್ಠಿಯ ದಿನದಂದು ನಡೆಯುತ್ತಿದ್ದ ತಾಳಮದ್ದಳೆಯ ಮೃದಂಗದ ಸದ್ದು, ಕಪ್ಪು-ಬಿಳುಪು ಟಿವಿಯ ಶ್ರೀಕೃಷ್ಣನ ಅವತಾರ ಮಾತನಾಡುತ್ತಿದ್ದ ಅರ್ಧಂಬರ್ಧ ಅರ್ಥವಾಗುತ್ತಿದ್ದ ಹಿಂದಿ, ದುಷ್ಯಂತ-ಶಕುಂತಲೆಯ ಪ್ರಣಯವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತಿದ್ದ ಸಂಸ್ಕೃತ ಶಿಕ್ಷಕರ ನಾಚಿಕೆ ಎಲ್ಲವೂ ಸೇರಿಕೊಂಡು ಅಲ್ಲೊಂದು ಹೊಸ ಪ್ರಪಂಚ ಸೃಷ್ಟಿಯಾಗುತ್ತಿರುತ್ತದೆ. ಆ ಪ್ರಪಂಚದ ಮಾತುಗಳೆಲ್ಲವೂ ಆತ್ಮಸಂಬಂಧಿಯಾದದ್ದೇನನ್ನೋ ಧ್ವನಿಸುತ್ತ, ಭಾಷೆಯೊಂದರ ಅಗತ್ಯವೇ ಇಲ್ಲದಂತೆ ಅಮೂರ್ತವಾದ ಅನುಭವವೊಂದನ್ನು ಒದಗಿಸುತ್ತಿರುತ್ತವೆ.           ಹಾಗೆ ಮಾತುಗಳೊಂದಿಗೆ ದಕ್ಕಿದ ಸ್ಮರಣ ಯೋಗ್ಯ ಅನುಭವವೆಂದರೆ ಇಸ್ಪೀಟಿನ ಮಂಡಲಗಳದ್ದು. ತಿಥಿಯೂಟ ಮುಗಿಸಿ ಕಂಬಳಿಯ ಮೇಲೊಂದು ಜಮಖಾನ ಹಾಸಿ ತಯಾರಾಗುತ್ತಿದ್ದ ಇಸ್ಪೀಟಿನ ವೇದಿಕೆಗೆ ಅದರದ್ದೇ ಆದ ಗಾಂಭೀರ್ಯವಿರುತ್ತಿತ್ತು. ಊರ ದೇವಸ್ಥಾನದ ಅಧ್ಯಕ್ಷಸ್ಥಾನದ ಚುನಾವಣೆಯಿಂದ ಹಿಡಿದು ಸಂವಿಧಾನದ ಆರ್ಟಿಕಲ್ ಗಳವರೆಗೆ ಚರ್ಚೆಯಾಗುತ್ತಿದ್ದ ಆ ವೇದಿಕೆಯಲ್ಲಿ ಇಸ್ಪೀಟಿನ ರಾಜ-ರಾಣಿಯರೆಲ್ಲ ಮೂಕಪ್ರೇಕ್ಷಕರಾಗುತ್ತಿದ್ದರು. ಸೋಲು-ಗೆಲುವುಗಳೆಲ್ಲ ಕೇವಲ ನೆಪಗಳಾಗಿ ಮಾತೊಂದೇ ಆ ಮಂಡಲದ ಉದ್ದೇಶವಾಗಿದ್ದಿರಬಹುದು ಎಂದು ನನಗೆ ಯಾವಾಗಲೂ ಅನ್ನಿಸುತ್ತಿರುತ್ತದೆ. ಆಧುನಿಕತೆಯೊಂದು ಮಾತಿನ ಜಾಗ ಕಸಿದುಕೊಂಡು ಎಲ್ಲರೂ ಅವರವರ ಪ್ರಪಂಚದಲ್ಲಿ ಮಗ್ನರಾಗಿರುವಾಗ, ಕಪಾಟಿನ ಮೂಲೆಯಲ್ಲಿ ಮಾತು ಮರೆತು ಕುಳಿತ ಜಮಖಾನದ ದುಃಖಕ್ಕೆ ಮರುಗುತ್ತಾ ರಾಜನೊಂದಿಗೆ ಗುಲಾಮ ಯಾವ ಸಂಭಾಷಣೆಯಲ್ಲಿ ತೊಡಗಿರಬಹುದು ಎಂದು ಯೋಚಿಸುತ್ತೇನೆ.           ಹೀಗೆ ಸಂಭಾಷಣೆಗೊಂದು ವೇದಿಕೆ ಸಿಕ್ಕರೂ ಸಿಗದಿದ್ದರೂ ಮಾತು ಒಮ್ಮೆ ವ್ಯಕ್ತವಾಗಿ, ಇನ್ನೊಮ್ಮೆ ಶ್ರಾವ್ಯವಾಗಿ, ಕೆಲವೊಮ್ಮೆ ಮೌನವೂ ಆಗಿ ತನ್ನದೇ ಆದ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತದೆ. ಸಿನೆಮಾದ ನಾಯಕನೊಬ್ಬ ಫೈಟ್ ಮಾಸ್ಟರ್ ನ ಮಾತನ್ನು ಆಕ್ಷನ್ ಗಿಳಿಸಿದರೆ, ರಂಗಭೂಮಿಯ ಮಾತೊಂದು ತಾನೇ ನಟನೆಗಿಳಿದು ಥಿಯೇಟರನ್ನು ತುಂಬಿಕೊಳ್ಳುತ್ತದೆ; ಪುಟ್ಟ ಕಂದನ ಅಳುವೊಂದು ಹಸಿವಿನ ಮಾತನ್ನು ಅಮ್ಮನಿಗೆ ತಲುಪಿಸುವಾಗ, ಅಮ್ಮನ ಪ್ರೇಮದ ಮಾತೊಂದು ಎದೆಯ ಹಾಲಾಗಿ ಮಗುವನ್ನು ತಲುಪುತ್ತದೆ; ಬಸ್ಸಿನ ಟಿಕೆಟಿನಲ್ಲಿ ಪೇಪರಿನ ನೋಟುಗಳು ಮಾತನಾಡಿದರೆ, ಕಂಡಕ್ಟರ್ ನ ಶಿಳ್ಳೆಯ ಮಾತು ಡ್ರೈವರ್ ನ ಕಿವಿಯನ್ನು ಅಡೆತಡೆಗಳಿಲ್ಲದೇ ತಲುಪುತ್ತದೆ. ಅಪ್ಪನ ಕಣ್ಣುಗಳ ಕಳಕಳಿ, ಪ್ರೇಮಿಯ ಹೃದಯದ ಕಾಳಜಿ, ಸರ್ಜರಿಗೆ ಸಿದ್ಧರಾದ ವೈದ್ಯರ ಏಕಾಗ್ರತೆ, ಪರೀಕ್ಷಾ ಕೊಠಡಿಯ ಪೆನ್ನಿನ ಶಾಯಿ ಎಲ್ಲವೂ ಮಾತುಗಳಾಗಿ ತಲುಪಬೇಕಾದ ಸ್ಥಳವನ್ನು ನಿರಾತಂಕವಾಗಿ ತಲುಪಿ ಸಂವಹನವೊಂದು ಅಚ್ಚುಕಟ್ಟಾಗಿ ರೂಪುಗೊಳ್ಳುತ್ತದೆ.           ಹೀಗೆ ಬೆರಗಿನ ಲೋಕವೊಂದನ್ನು ನಮ್ಮೆದುರು ತೆರೆದಿಡುತ್ತಾ, ತಾನೂ ಬೆಳೆಯುತ್ತ ನಮ್ಮನ್ನೂ ಬೆಳೆಸುವ ಸಂವಹನವೆನ್ನುವ ಸಂವೇದನೆಯೊಂದು ಮಾತಾಗಿ ಅರಳಿ ಮನಸ್ಸುಗಳನ್ನು ತಲುಪುತ್ತಿರಲಿ. ಪ್ರೈಮರಿ ಸ್ಕೂಲಿನ ಅಂಗಳದ ಮಲ್ಲಿಗೆಯ ಬಳ್ಳಿಯೊಂದು ಟೀಚರಿನ ಕಂಠದ ಮಾಧುರ್ಯಕ್ಕೆ ತಲೆದೂಗುತ್ತಿರಲಿ. ಭಕ್ತರ ಮಾತುಗಳನ್ನೆಲ್ಲ ತಪ್ಪದೇ ಆಲಿಸುವ ದೇವರ ಮೌನವೊಂದು ಶಾಂತಿಯ ಮಂತ್ರವಾಗಿ ಹೃದಯಗಳನ್ನು ಅರಳಿಸಲಿ. ಸಕಲ ಬಣ್ಣಗಳನ್ನೂ ಧರಿಸಿದ ಟಿವಿ ಪರದೆಯ ಪಾತ್ರಗಳೆಲ್ಲ ಪ್ರೀತಿ-ವಿಶ್ವಾಸಗಳ ಮಧ್ಯವರ್ತಿಗಳಾಗಿ ಮಾತಿನ ಮೂಲಕ ಮಮತೆಯನ್ನು ಬಿತ್ತರಿಸಲಿ. ನಾಚಿ ನೀರಾಗುತ್ತಿದ್ದ ಸಂಸ್ಕೃತ ಶಿಕ್ಷಕರ ಶಕುಂತಲೆಯ ಪ್ರೇಮಕ್ಕೆಂದೂ ಪರೀಕ್ಷೆಯ ಸಂಕಷ್ಟ ಎದುರಾಗದಿರಲಿ. ಕಲಿತ ಮಾತುಗಳೆಲ್ಲ ಪ್ರೀತಿಯಾಗಿ, ಪ್ರೀತಿಯೊಂದು ಹೃದಯಗಳ ಮಾತಾಗಿ, ಹೃದಯಗಳೊಂದಿಗಿನ ಸಂವಹನವೊಂದು ಸಂಬಂಧಗಳನ್ನು ಸಲಹುತ್ತಿರಲಿ. *************************************** ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಬೊಗಸೆಯಲ್ಲೊಂದು ಹೂನಗೆ ನೆನಪೊಂದು ಮಳೆಯಾಗಿ ಸುರಿದಾಗಲೆಲ್ಲ ನಗುವೊಂದು ಮಳೆಯ ಹನಿಗಳಾಗಿ ಅಂಗೈಯನ್ನು ಸ್ಪರ್ಶಿಸುತ್ತದೆ. ಹಾಗೆ ಸ್ಪರ್ಶಿಸಿದ ಒಂದಿಷ್ಟು ಹನಿಗಳು ಜಾರಿಬಿದ್ದು ನೆಲವನ್ನು ಹಸಿಯಾಗಿಸಿದರೆ, ಉಳಿದವು ಬೊಗಸೆಯಲ್ಲೊಂದು ಹೊಸ ಪ್ರಪಂಚವನ್ನು ಬಿಚ್ಚಿಡುತ್ತವೆ. ಹಾಗೆ ನಮ್ಮೆದುರು ತೆರೆದುಕೊಳ್ಳುವ ಪ್ರಪಂಚದಲ್ಲಿ ಕೈಗೂಸಿನ ಕನಸಿನಂಥ ನಗುವೊಂದು ಅಮ್ಮನ ಮಡಿಲಿನಲ್ಲಿ ಕದಲಿದರೆ, ಹೂನಗೆಯ ಹೊತ್ತ ಹುಡುಗಿಯೊಬ್ಬಳು ಸೈಕಲ್ಲನ್ನೇರಿ ಕನಸಿನಂತೆ ಮರೆಯಾಗುತ್ತಾಳೆ; ಹನಿಮೂನ್ ಪ್ಯಾಕೇಜಿನ ರೆಸಾರ್ಟ್ ಒಂದರ ಡೈನಿಂಗ್ ಹಾಲ್ ನಲ್ಲಿ ನಾಚಿಕೆಯ ನಗುವೊಂದು ಮೋಂಬತ್ತಿಯಾಗಿ ಕರಗಿದರೆ, ಆಪರೇಟಿಂಗ್ ರೂಮೊಂದರಿಂದ ಹೊರಬಂದ ವೈದ್ಯರ ನಗುವೊಂದು ಕಣ್ಣೀರನ್ನೆಲ್ಲ ಕರಗಿಸಿ ಕಣ್ಮರೆಯಾಗಿಸುತ್ತದೆ. ಹೀಗೆ ನಗುವಿನಲ್ಲಿ ಕಣ್ತೆರೆವ ಬದುಕೊಂದು ಜಾತ್ರೆಯಲ್ಲಿ ಖರೀದಿಸಿದ ಹೇರ್ ಕ್ಲಿಪ್ಪಿನಲ್ಲಿ, ಬಾಲ್ಯದ ಗೆಳೆಯನೊಬ್ಬನ ನೆನಪಿನಲ್ಲಿ, ಕಾಲೇಜಿನ ಗ್ರೂಪ್ ಫೋಟೋಗಳಲ್ಲಿ, ಕಂಟ್ರೋಲಿಗೆ ಸಿಕ್ಕುವ ಶುಗರ್ ಲೆವಲ್ಲಿನಲ್ಲಿ, ತಾನೇ ನಗುವಾಗಿ ಅರಳುತ್ತದೆ. ನಗುವೊಂದು ಬದುಕಿನೊಂದಿಗೆ ತೆರೆದುಕೊಳ್ಳುವ ರೀತಿಯೇ ಒಂದು ವಿಸ್ಮಯ. ಕ್ಯಾಮರಾಗಳಿಲ್ಲದ ಕಾಲದಲ್ಲಿ ಅಪ್ಪನ ಕಣ್ಣುಗಳಲ್ಲಿ, ಅಮ್ಮನ ಹೃದಯದಲ್ಲಿ ಪ್ರಿಂಟಾಗುತ್ತಿದ್ದ ಮಗುವಿನ ನಗೆಯೊಂದು ಬಿಡುವಿನ ಸಮಯದಲ್ಲಿ ಎಳೆಎಳೆಯಾಗಿ ಧಾರಾವಾಹಿಯಂತೆ ಜಗಲಿಯಲ್ಲಿ ಬಿಚ್ಚಿಕೊಳ್ಳುತ್ತಿತ್ತು. ಮಗುವಿಗೆ ಮೊದಲಹಲ್ಲು ಹುಟ್ಟಿದಾಗ ಅಮ್ಮನ ಮುಖದಲ್ಲರಳಿದ ನಗುವನ್ನು ಎಷ್ಟೇ ದುಬಾರಿಯ ಕ್ಯಾಮರಾದಿಂದಲೂ ಸೆರೆಹಿಡಿಯಲಾಗದು. ಅಂಬೆಗಾಲಿಡುತ್ತಲೋ, ಗೋಡೆಯನ್ನು ಹಿಡಿದು ಒಂದೊಂದೇ ಹೆಜ್ಜೆಯನ್ನಿಡುತ್ತಲೋ ಅಮ್ಮನ ತೆಕ್ಕೆ ಸೇರುವ ಮಗುವೊಂದು ಅಮ್ಮನ ಮಡಿಲಿಗೆ ಸುರಿಯುವ ನಗುವಿಗೆ ಪರ್ಯಾಯ ನಗುವೊಂದನ್ನು ಸೃಷ್ಟಿಸಲಾಗದು. ಮಗುವಿನ ಬೆಳವಣಿಗೆಯ ಪ್ರತೀಹಂತವೂ ಸುಂದರವೆನ್ನಿಸುವುದು ಅದು ಕಟ್ಟಿಕೊಡುವ ಬದುಕಿನ ಸಾಧ್ಯತೆಗಳಲ್ಲಿ. ಆ ಸಾಧ್ಯತೆಗಳೆಲ್ಲ ನೆನಪುಗಳಾಗಿ, ಕನಸಾಗಿ, ಒಮ್ಮೊಮ್ಮೆ ದುಗುಡವಾಗಿ, ನಗುವಿನಲ್ಲಿ ಸುಖಾಂತ್ಯವಾಗುವ ಸನ್ನಿವೇಶಗಳಾಗಿ, ಸಂಸಾರವೊಂದರ ರಸವತ್ತಾದ ಕಥೆಗಳಾಗಿ ಉಳಿದುಕೊಳ್ಳುತ್ತವೆ. ಅಂತಹ ದುಗುಡವೊಂದು ನಗುವಾಗಿ ಬದಲಾಗಿ ನನ್ನ ಬದುಕಿನಲ್ಲಿ ಉಳಿದ ಕಥೆ ಕೂದಲಿನದು. ನಾನು ಹುಟ್ಟಿ ಒಂದು ವರ್ಷವಾದರೂ ನನ್ನ ತಲೆಯಲ್ಲಿ ಒಂದೇ ಒಂದು ಕೂದಲು ಹುಟ್ಟುವ ಲಕ್ಷಣವೂ ಕಾಣಿಸಿಕೊಳ್ಳಲಿಲ್ಲವಂತೆ. ಏನಾದರೂ ಸಮಸ್ಯೆಯಿರಬಹುದೆಂದು ಡಾಕ್ಟರಿಗೆ ತೋರಿಸಲು ಕರೆದೊಯ್ದರೆ ಗುಂಡುಗುಂಡಾಗಿ ಮುದ್ದಾಗಿದ್ದ ನನ್ನನ್ನು ಎತ್ತಿಕೊಂಡೇ ರೌಂಡ್ಸ್ ಮುಗಿಸಿದ ಡಾಕ್ಟರು, ಏನೂ ಸಮಸ್ಯೆಯಿಲ್ಲವೆಂದು ಸಮಾಧಾನ ಮಾಡಿದರೂ ಅಮ್ಮನ ಚಿಂತೆ ಕರಗಲಿಲ್ಲವಂತೆ. ದೇವತೆಯಂಥ ಅಮ್ಮ ದೇವರಿಗೆ ಹರಕೆ ಹೊತ್ತು ನನ್ನ ತಲೆಯಮೇಲೆ ಕೂದಲು ಕಾಣಿಸಿಕೊಂಡು, ಅಮ್ಮನ ದುಗುಡವೊಂದು ದೇವರು ಕಣ್ಬಿಡುವಲ್ಲಿಗೆ ಸುಖಾಂತ್ಯ ಕಂಡಿತು. ಈಗಲೂ ಪಾರ್ಲರಿನ ಕತ್ತರಿಗೆ ಕೂದಲು ಕೊಡುವಾಗಲೆಲ್ಲ ಅಮ್ಮನ ದುಗುಡವೇ ಕಣ್ಮುಂದೆ ಬಂದು ನಿಂತಂತಾಗಿ, ಕಾಣದ ದೇವರಲ್ಲೊಂದು ಕ್ಷಮೆ ಯಾಚಿಸುತ್ತೇನೆ. ಒಂದೊಂದೇ ಕೂದಲು ಬೆಳ್ಳಗಾಗುತ್ತಿರುವುದು ಕಾಣಿಸಿದಾಗಲೆಲ್ಲ ಈ ದುಗುಡಕ್ಕೆ ಯಾವ ದೇವರಲ್ಲಿ ಪರಿಹಾರವಿರಬಹುದೆಂದು ಯೋಚಿಸಿ, ನಕ್ಕು ಸುಮ್ಮನಾಗುತ್ತೇನೆ. ದೇವರಿಗೂ ಡಾಕ್ಟರಿಗೂ ಜಾಸ್ತಿ ವ್ಯತ್ಯಾಸವಿಲ್ಲ ಎನ್ನುವ ನಂಬಿಕೆ ನನ್ನದು. ದೇಹಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಡಾಕ್ಟರ್ ಹತ್ತಿರ ಸಿಗದ ಪರಿಹಾರವೊಂದು ದೇವರ ಹತ್ತಿರ ಇದ್ದಿರಬಹುದಾದ ಸಾಧ್ಯತೆಗಳೆಲ್ಲವೂ ನನ್ನ ನಂಬಿಕೆಯಿಂದ ಹೊರಗೆ ಇರುವಂಥವುಗಳು. ದೇವರಂಥ ಡಾಕ್ಟರ್ ಎನ್ನುವ ನಂಬಿಕೆಯೊಂದು ನಿಜವಾಗಬಹುದೇ ಹೊರತು ದೇವರನ್ನೇ ಡಾಕ್ಟರನ್ನಾಗಿಸಿದರೆ ದೇವರ ನಗುವನ್ನೂ ಕಸಿದುಕೊಂಡಂತಾದೀತು. ಇಂತಹ ದೇವರ ರೂಪದ ವೈದ್ಯರೊಬ್ಬರು ಪ್ರತಿಯೊಬ್ಬರ ಜೀವನದಲ್ಲೂ ನಗುವನ್ನು ಮರಳಿಸಲು ಅಥವಾ ಇಲ್ಲದ ನಗುವೊಂದನ್ನು ಹೊಸದಾಗಿ ಹುಟ್ಟಿಸಲು ಕಾರಣೀಕರ್ತರಾಗಿರುತ್ತಾರೆ. ಸ್ವರ್ಗದ ಕಲ್ಪನೆಯನ್ನು ಸರಾಗವಾಗಿ ಕಟ್ಟಿಕೊಡುವ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನಾನು ಬೆಂಗಳೂರಿಗೆ ಬಂದಾಗ ಅನಾರೋಗ್ಯ ಎನ್ನುವುದು ಸಮಯ ಸಿಕ್ಕಾಗಲೆಲ್ಲ ಬೆನ್ನಹಿಂದೆ ಬಿದ್ದು ಹಿಂಸಿಸುತ್ತಿತ್ತು. ಗಂಭೀರವೂ ಅಲ್ಲದ, ನಿರ್ಲಕ್ಷ್ಯಿಸಲೂ ಆಗದ ಸಣ್ಣಪುಟ್ಟ ತೊಂದರೆಗಳೆಲ್ಲ ಸಂಜೆಯಾದಂತೆ ಸಮಯ ತಪ್ಪದೇ ಹಾಜರಾಗುವ ಸೊಳ್ಳೆಗಳಂತೆ ಕಾಟ ಕೊಡುತ್ತಿದ್ದವು. ಅವರಿವರು ಸೂಚಿಸಿದ ಆಸ್ಪತ್ರೆ, ಡಾಕ್ಟರುಗಳನ್ನೆಲ್ಲ ಭೇಟಿ ಮಾಡಿದ್ದಾಯಿತು. ಬಣ್ಣಬಣ್ಣದ ಮಾತ್ರೆಗಳೆಲ್ಲ ಕಣ್ಮುಂದೆ ಬಂದು ಕುಣಿದಂತೆನ್ನಿಸಿ, ಮುಖದ ಮೇಲಿಂದ ನಗುವೊಂದು ಅದೆಲ್ಲಿಯೋ ಮಾಯವಾಗಿಹೋಯಿತು. ಈ ಅನಾರೋಗ್ಯದ ಕಥೆಗೊಂದು ತಿರುವು ಸಿಕ್ಕಿದ್ದು ಪರಿಚಿತರೊಬ್ಬರು ತೋರಿಸಿದ ದವಾಖಾನೆಯಿಂದ. ತಪಾಸಣೆ ಮಾಡಿದ್ದಕ್ಕೆ ಶುಲ್ಕವನ್ನು ಕೂಡಾ ಪಡೆಯದೇ ಔಷಧದ ಖರ್ಚನ್ನು ಮಾತ್ರವೇ ತೆಗೆದುಕೊಳ್ಳುತ್ತಿದ್ದ ವೈದ್ಯರೊಬ್ಬರು ನಡೆಸುತ್ತಿದ್ದ ಆ ದವಾಖಾನೆ, ಅವರ ಮುಖದಲ್ಲಿದ್ದ ಮಂದಹಾಸದಿಂದಾಗಿ ಪುಟ್ಟದೊಂದು ದೇವಸ್ಥಾನದಂತೆ ಭಾಸವಾಗುತ್ತಿತ್ತು. ಅಂಥ ದೇವಸ್ಥಾನದಂಥ ದವಾಖಾನೆಯ ಪ್ರವೇಶದಿಂದ ವರ್ಷಗಟ್ಟಲೇ ಕಷ್ಟಪಟ್ಟ ಮೂಗು, ಗಂಟಲುಗಳೆಲ್ಲ ಎರಡೇ ತಿಂಗಳಿಗೆ ನೆಮ್ಮದಿಯಿಂದ ಉಸಿರಾಡಲಾರಂಭಿಸಿದವು. ಆರೋಗ್ಯ ಸುಧಾರಿಸಿ ಜೀವನಕ್ಕೆ ನಗುವೊಂದು ಮರಳಿ ದೊರಕಿದರೂ, ತಿಂಗಳಿಗೊಮ್ಮೆ ದೇವಸ್ಥಾನಕ್ಕೆ ಹೋಗುವ ಭಕ್ತಿಯಲ್ಲಿ ದವಾಖಾನೆಗೆ ಹೋಗಿ ವೈದ್ಯರ ಆರೋಗ್ಯವನ್ನೇ ವಿಚಾರಿಸಿಕೊಂಡು ಪರಿಪಾಠವೊಂದು ಖಾಯಂ ಆಯಿತು. ಮನೆಯನ್ನು ಬದಲಾಯಿಸಿ ಬೇರೆ ಏರಿಯಾಕ್ಕೆ ಶಿಫ್ಟ್ ಆದರೂ ಔಷಧಿಯ ಅಗತ್ಯ ಬಿದ್ದಾಗಲೆಲ್ಲ, ನಗುವಿನಿಂದಲೇ ಅರ್ಧರೋಗವನ್ನು ವಾಸಿಮಾಡುತ್ತಿದ್ದ ದೇವರಂಥ ಡಾಕ್ಟರನ್ನು ನೆನಪಿಸಿಕೊಂಡು ನಗುನಗುತ್ತಲೇ ಮಾತ್ರೆಯನ್ನು ನುಂಗಿ ನೀರು ಕುಡಿಯುತ್ತೇನೆ. ಹೀಗೇ ನೆನಪುಗಳೊಂದಿಗೆ ನಗುವೆನ್ನುವುದು ಒಂದಿಲ್ಲೊಂದು ವಿಧದಲ್ಲಿ ಅಂಟಿಕೊಂಡೇ ಇರುತ್ತದೆ. ಇನ್ನೆಂದೂ ಮರಳಿ ಬಾರದಂತೆ ನಮ್ಮನ್ನಗಲಿ ದೂರವಾದವರು, ಬದುಕಿದ್ದೂ ಸಂಪರ್ಕವಿಲ್ಲದೇ ಮರೆಯಾಗಿ ಹೋದವರು ಎಲ್ಲರೊಂದಿಗೂ ನೆನಪೊಂದು ನಗುವಾಗಿ ಬೆಸೆದುಕೊಂಡು ನಮ್ಮೊಳಗೆ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಪ್ರಾಥಮಿಕ ಶಾಲೆಯಲ್ಲಿ ನನ್ನೊಂದಿಗೆ ಓದುತ್ತಿದ್ದ ಹುಡುಗನೊಬ್ಬ ಯಾವಾಗಲೂ ಜಿದ್ದಿಗೆ ಬಿದ್ದವನಂತೆ ಜಗಳವಾಡುತ್ತಿದ್ದ. ಆ ವಯಸ್ಸಿನಲ್ಲಿ ಅದೊಂದು ಗಂಭೀರವಾದ ವಿಷಯವೇ ಆಗಿದ್ದರೂ ಈಗ ಅವನ ನೆನಪಾದಾಗಲೆಲ್ಲ, ಆ ಜಗಳಕ್ಕೆ ಕಾರಣವೇನಿದ್ದಿರಬಹುದೆಂದು ಯೋಚಿಸಿ ನನ್ನಷ್ಟಕ್ಕೆ ನಾನೇ ನಗುತ್ತಿರುತ್ತೇನೆ. ಕಾಮನ್ ಫ್ರೆಂಡ್ಸ್ ಎನ್ನುವಂಥವರು ಯಾರೂ ಇಲ್ಲದ ಕಾರಣ ಆತನನ್ನು ಇನ್ನುವರೆಗೂ ಹುಡುಕಲು ಸಾಧ್ಯವಾಗದೇ, ಆ ಜಗಳದ ಕಾರಣವೂ ಬಗೆಹರಿಯದೇ, ಅದು ದಯಪಾಲಿಸಿದ ಸಣ್ಣದೊಂದು ನಗುವನ್ನು ನನ್ನದಾಗಿಯೇ ಉಳಿಸಿಕೊಂಡಿದ್ದೇನೆ. ಆತ ಎಲ್ಲಾದರೂ ಒಮ್ಮೆ ಎದುರಾಗಿ ಜಗಳದ ಕಾರಣ ತಿಳಿದುಬಿಟ್ಟರೆ ಅಪರೂಪದ ನಗೆಯೊಂದು ಮರೆಯಾಗಿಬಿಡುವ ಭಯವಿದ್ದರೂ, ಸದ್ಯಕ್ಕೆ ಆ ನಗು ನನ್ನದೆನ್ನುವ ಸಮಾಧಾನದೊಂದಿಗೆ ಜಗಳದ ನೆನಪನ್ನೂ ಕಾಪಾಡಿಕೊಳ್ಳುತ್ತೇನೆ. ಇಂತಹ ಚಿಕ್ಕಪುಟ್ಟ ನೆನಪುಗಳೊಂದಿಗೆ ಶಾಶ್ವತ ನೆಂಟಸ್ತನ ಬೆಳೆಸಿಕೊಳ್ಳುವ ನಗುವೊಂದು ತನ್ನ ಕರ್ತವ್ಯವೆನ್ನುವಂತೆ ಮನಸ್ಸುಗಳನ್ನು ಬೆಸೆಯುತ್ತ, ಮಾತುಗಳನ್ನು ಬೆಳೆಸುತ್ತ, ಮೌನವನ್ನೂ ಗೌರವಿಸುತ್ತ ಸಂಬಂಧಗಳನ್ನೆಲ್ಲ ಕಾಪಾಡುತ್ತಿರುತ್ತದೆ. ಶಾಪಿಂಗ್ ಮಾಲ್ ನ ಅಂಗಡಿಗಳ ಗ್ಲಾಸುಗಳಲ್ಲಿ ಹೊಳೆಯುವ ಹೊಟ್ಟೆಪಾಡಿನ ನಗು, ಆಫೀಸಿನ ಕನ್ನಡಕದೊಳಗಿನ ಒತ್ತಡಕ್ಕೆ ಉತ್ತರವೆಂಬಂಥ ರಿಸೆಪ್ಷನ್ನಿನ ನಗು, ಸ್ಮೋಕಿಂಗ್ ಝೋನ್ ಒಂದರ ಬಿಡುಗಡೆಯ ನಗು, ಕಾಫಿಶಾಪ್ ಒಂದರ ಮೊದಲಭೇಟಿಯ ನಗು ಎಲ್ಲವೂ ಜೀವಂತವಾಗಿರುವವರೆಗೂ ಬೊಗಸೆಯಲ್ಲೊಂದಿಷ್ಟು ಸುಂದರ ಸಂಬಂಧಗಳು ನಸುನಗುತ್ತಿರುತ್ತವೆ. ******************************* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಜಾಮಿನಿಯ ನೆನಪಿನಲ್ಲಿ ಈ ಮಳೆಗಾಲದಲ್ಲಿಯೇ ನೆನಪುಗಳು ಹುಟ್ಟಿಕೊಂಡಿರಬಹುದು ಎನ್ನುವ ಬಲವಾದ ನಂಬಿಕೆಯಿದೆ ನನಗೆ. ಮೋಡಗಳೊಂದಿಗೆ ತಣ್ಣಗೆ ತೇಲಿಬಂದ ನೆನಪೊಂದು, ಏಕಾಂತ ಬಯಸಿ ಟೆರೇಸಿನಲ್ಲಿ ಕುಳಿತು ಆಕಾಶ ದಿಟ್ಟಿಸುತ್ತಿದ್ದ ಹೃದಯವೊಂದನ್ನು ತಾಕಿ ನೆಲಕ್ಕೆ ಇಳಿದಿರಬಹುದು. ಹಾಗೆ ತಾಕಿದ ನೆನಪು ಒಮ್ಮೆ ಬಾಲ್ಯದ ಬೆರಗಾಗಿ, ಇನ್ನೊಮ್ಮೆ ಹರೆಯದ ಕನಸಾಗಿ, ಮತ್ತೊಮ್ಮೆ ಫ್ರಿಡ್ಜ್ ನಲ್ಲಿಟ್ಟ ಐಸ್ ಕ್ರೀಮಾಗಿ ಎಲ್ಲರ ಅರಿವಿಗೂ ದಕ್ಕಿರಬಹುದು. ಹಾಗೆ ದಕ್ಕಿದ ನೆನಪು ಈಗಷ್ಟೇ ಟ್ರೆಕ್ಕಿಂಗ್ ಮುಗಿಸಿದ ಹುಡುಗನೊಬ್ಬನ ಭಾರವಾದ ಬ್ಯಾಗ್ ನಲ್ಲೋ, ಕಾಡುಪಾಪವೊಂದನ್ನು ಕಷ್ಟಪಟ್ಟು ಕ್ಲಿಕ್ಕಿಸಿದ ಫೋಟೋಗ್ರಾಫರ್ ನ ಕ್ಯಾಮರಾದಲ್ಲೋ, ಸಮುದ್ರದಂಚಿಗೆ ಕಾಲುಚಾಚಿ ಕುಳಿತ ಹುಡುಗಿಯೊಬ್ಬಳ ಉಗುರಿನೊಳಗೆ ಸೇರಿಕೊಂಡ ಮರಳಿನ ಕಣಗಳಲ್ಲೋ ಹೊಸದೊಂದು ರೂಪ ಪಡೆದುಕೊಂಡಿರಬಹುದು. ಹೀಗೆ ಹೊಸ ರೂಪ ಪಡೆದ ನೆನಪುಗಳೆಲ್ಲ ಒಂದೊಂದಾಗಿ ಹಿಂದೆಮುಂದೆ ಸುಳಿದಾಡಿ ಅವನೆಂದರೆ ಇವಳು, ಇವಳೆಂದರೆ ಬದುಕು ಹೀಗೆ ಎಲ್ಲವೂ ಹುಟ್ಟಿಕೊಂಡಿರಬಹುದು.      ಬದುಕು ಸಹ್ಯವಾಗುತ್ತಾ, ಸಲೀಸಾಗುತ್ತಾ ಸಾಗಬೇಕೆಂದರೆ ಅಲ್ಲೊಂದಿಷ್ಟು ಸುಂದರ ನೆನಪುಗಳು ಸರಿದಾಡುತ್ತಿರಬೇಕು. ಅಪ್ಪ ದೀಪಾವಳಿಗೆಂದು ತಂದುಕೊಟ್ಟ ಫ್ರಾಕಿನ ಮೇಲೆ ಪ್ರಿಂಟಾಗಿದ್ದ ಕೀಲಿಕೈಗಳು, ವಾಲಿಬಾಲ್ ಕೋರ್ಟ್ ನೊಳಗಿಂದಲೇ ಕದ್ದು ನೋಡುತ್ತಿದ್ದ ಹತ್ತನೇ ಕ್ಲಾಸಿನ ಹುಡುಗನ ಕಣ್ಣುಗಳಲ್ಲಿರುತ್ತಿದ್ದ ತುಂಟತನ, ಗಾಳಿ ಕೂಡಾ ನುಸುಳಲು ಸಾಧ್ಯವಾಗದಂತೆ ತುಂಬಿರುತ್ತಿದ್ದ ಸಿಟಿಬಸ್ಸನ್ನು ಸೇಫಾಗಿ ಕಾಲೇಜು ತಲುಪಿಸುತ್ತಿದ್ದ ಡ್ರೈವರ್ ಸಲೀಮಣ್ಣನ ಸಹನೆ, ಆಫೀಸಿನ ಗ್ರಾನೈಟ್ ಕಟ್ಟೆಯ ಮೇಲೆ ತಪಸ್ಸಿಗೆ ಕೂತ ಕಾಮಧೇನುವಿನಂಥ ಕಾಫಿ ಮಷಿನ್ನು ಹೀಗೇ ಲಕ್ಷ್ಯಕ್ಕೇ ಬಾರದ ಸಣ್ಣಪುಟ್ಟ ಸಂಗತಿಗಳೆಲ್ಲ ನೆನಪಾಗಿ ದಿನನಿತ್ಯ ಎದುರಾಗುತ್ತಲೇ ಇರುತ್ತವೆ. ಈ ನೆನಪುಗಳೊಟ್ಟಿಗಿನ ಸಾಂಗತ್ಯ ಸಾಧ್ಯವಾಗದೇ ಇದ್ದಿದ್ದರೆ ಪಾರಿವಾಳವೊಂದು ಪತ್ರ ವಿಲೇವಾರಿ ಮಾಡಿದ ಕಥೆಯೊಂದು ಸಿನೆಮಾವಾಗುತ್ತಲೇ ಇರಲಿಲ್ಲ; ಆ ಸಿನೆಮಾದ ಡ್ಯೂಯೆಟ್ ಒಂದು ಬಾತ್ ರೂಮ್ ಸಿಂಗರ್ ಗಳನ್ನು ಹುಟ್ಟುಹಾಕುತ್ತಿರಲಿಲ್ಲ; ಅಪ್ಪ-ಅಮ್ಮನ ವಿರೋಧವನ್ನು ಧಿಕ್ಕರಿಸಿ ಒಂದಾಗುವ ಪ್ರೇಮಿಗಳು ಆದರ್ಶಪ್ರೇಮವೊಂದರ ಉದಾಹರಣೆಯಾಗುತ್ತಿರಲಿಲ್ಲ. ಹೀಗೇ ನವರಸಗಳನ್ನೂ ಒಟ್ಟೊಟ್ಟಿಗೇ ನಮ್ಮೆದುರು ಬಿಚ್ಚಿಡುವ ಸಾಮರ್ಥ್ಯವೊಂದು ಅದು ಹೇಗೋ ಈ ನೆನಪಿಗೆ ಸಿದ್ಧಿಸಿದೆ.      ನೆನಪಿನ ಒಡನಾಟದಲ್ಲಿ ವಿಷಾದವೆನ್ನುವುದು ಇರದಿದ್ದರೆ ಬದುಕು ಇನ್ನಷ್ಟು ವರ್ಣಮಯವೆನ್ನಿಸುತ್ತಿದ್ದಿರಬಹುದು. ಹೊಸ ಸೀರೆಗೊಂದು ಮ್ಯಾಚಿಂಗ್ ಚಪ್ಪಲಿ ಧರಿಸಿ ಗೆಳತಿಯೊಬ್ಬಳ ಬರ್ತ್ ಡೇ ಪಾರ್ಟಿಯೊಂದಕ್ಕೆ ಹೋದಾಗ, ಊಟದ ತಟ್ಟೆಯಲ್ಲಿನ ಜಿಲೇಬಿಯೊಂದು ಜಿಲೇಬಿಪ್ರಿಯರನ್ನೆಲ್ಲ ನೆನಪಿಸುವುದುಂಟು. ಹಾಗೆ ಥಟ್ಟನೆ ನೆನಪಿಗೆ ಬರುವವರ ಲಿಸ್ಟ್ ನಲ್ಲಿ ಹೈಸ್ಕೂಲಿನ ಬೆಂಚಿನ ಮೇಲೆ ಊಟ ಹಂಚಿಕೊಂಡು ತಿಂದ ಗೆಳತಿಯೊಬ್ಬಳಿರಬಹುದು; ಮದುವೆ-ಮುಂಜಿಗಳಲ್ಲಿ ಮಾತ್ರ ಭೇಟಿಯಾಗುವ ದೂರದ ಸಂಬಂಧಿಯೊಬ್ಬನಿರಬಹುದು; ಫೇಸ್ ಬುಕ್ ಪೇಜಿನಲ್ಲಿ ಕಾಣಿಸಿಕೊಂಡ ಜಿಲೇಬಿ ತಿನ್ನುತ್ತಿರುವ ಪುಟ್ಟ ಮಗುವೊಂದಿರಬಹುದು. ಆ ಲಿಸ್ಟ್ ನಲ್ಲಿರುವ ಎಲ್ಲರೊಂದಿಗೂ ಕುಳಿತು ಜಿಲೇಬಿ ತಿನ್ನಲಾಗುವುದಿಲ್ಲ ಎನ್ನುವ ಸತ್ಯವೊಂದು ಗೊತ್ತಿದ್ದರೂ, ಅವರ ಊಟದ ತಟ್ಟೆಯಲ್ಲಿಯೂ ಜಿಲೇಬಿ ಲಭ್ಯವಿರುತ್ತದೆಯೆನ್ನುವ ಸಮಾಧಾನವೊಂದು ನೆನಪುಗಳನ್ನು ಸಲಹುತ್ತಿರುತ್ತದೆ. ಆದರೆ ಆ ಲಿಸ್ಟ್ ನಲ್ಲಿದ್ದ ಮುಖವೊಂದು ಇನ್ನೆಂದಿಗೂ ಎದುರಾಗುವುದೇ ಇಲ್ಲವೆನ್ನುವ ವಿಷಾದವೊಂದು ನೆನಪಿನ ರೂಪದಲ್ಲಿ ಜಿಲೇಬಿಯೊಂದಿಗೆ ಪ್ಲೇಟಿನ ತುದಿಯಲ್ಲಿ ಕಾಣಿಸಿಕೊಂಡಾಗ, ಜಿಲೇಬಿಯೆಡೆಗಿನ ಮೋಹ ಇನ್ನಿಲ್ಲದಂತೆ ಮಾಯವಾಗಿಬಿಡುತ್ತದೆ. ಹಾಗೆ ಲಿಸ್ಟ್ ನಿಂದ ಥಟ್ಟನೆ ಅರಿವಿಗೇ ಬಾರದಂತೆ ಕಳೆದುಹೋದವಳು ಜಾಮಿನಿ.      ಮಣಿಪುರದ ಹುಡುಗಿ ಜಾಮಿನಿ ನನ್ನೊಂದಿಗೇ ಕೆಲಸಕ್ಕೆ ಸೇರಿದವಳು. ಮೆತ್ತನೆಯ ಕೂದಲನ್ನು ಮೇಲಕ್ಕೆ ಎತ್ತಿಕಟ್ಟಿ ಜುಟ್ಟು ಅಲ್ಲಾಡಿಸುತ್ತಾ ಫ್ಲೋರ್ ತುಂಬಾ ಓಡಾಡುತ್ತಿದ್ದ ಜಾಮಿನಿ, ಅವಳ ಅಪರೂಪದ ಹೆಸರಿನಿಂದಾಗಿ ಆಫೀಸಿನಲ್ಲೆಲ್ಲ ಫೇಮಸ್ಸಾಗಿದ್ದಳು. ಮೆಲುಮಾತಿನ ಮಿತಭಾಷಿ ಜಾಮಿನಿ ಮನಸ್ಸಿಗೆ ಹತ್ತಿರವಾಗಲು ಜಾಸ್ತಿ ಸಮಯ ಹಿಡಿಯಲಿಲ್ಲ. ತುಂಬುಕುಟುಂಬವೊಂದರ ಕಿರಿಯ ಸೊಸೆಯರಂತೆ ನಾವಿಬ್ಬರೂ ಮನಬಂದಾಗ ಕೆಲಸ ಮಾಡುತ್ತಾ, ಪಾಪ್ ಕಾರ್ನ್ ತಿನ್ನುತ್ತಾ ವರ್ಷಗಳನ್ನೇ ಕಳೆದೆವು. ಮೆಚ್ಚಿದ ಹುಡುಗನನ್ನು ಮದುವೆಯಾದ ಜಾಮಿನಿ ಕೆಲಸ ಬಿಟ್ಟು ಬೇರೆಡೆ ಸೇರಿಕೊಂಡಳು. ನಂತರದ ಐದು ವರ್ಷಗಳಲ್ಲಿ ಒಮ್ಮೆ ಭೇಟಿಯಾಗಿದ್ದು ಬಿಟ್ಟರೆ ಜಾಸ್ತಿ ಮಾತುಕತೆಯೇನೂ ನಮ್ಮಿಬ್ಬರ ಮಧ್ಯೆ ಇರಲಿಲ್ಲ. ಊಟ ಮಾಡುವಾಗಲೋ, ಪಾಪ್ ಕಾರ್ನ್ ತಿನ್ನುವಾಗಲೋ, ಕೆಲವೊಮ್ಮೆ ಮೀಟಿಂಗುಗಳಲ್ಲೋ ಅವಳ ವಿಷಯ ಪ್ರಸ್ತಾಪವಾಗುತ್ತಾ ಫ್ಲೋರ್ ನಲ್ಲಿ ಅವಳ ನೆನಪೊಂದು ಸುಳಿದಾಡುತ್ತಲೇ ಇತ್ತು. ಅಚಾನಕ್ಕಾಗಿ ಒಮ್ಮೆ ಮಧ್ಯಾಹ್ನದ ಹೊತ್ತು ಫೋನ್ ಮಾಡಿದವಳೇ, ಮಾತನಾಡುವುದಿದೆ ಭೇಟಿ ಆಗಬೇಕು ಎಂದಳು. ಅನಿವಾರ್ಯ ಕಾರಣಗಳಿಂದ ಆ ವೀಕೆಂಡ್ ಭೇಟಿ ಸಾಧ್ಯವಾಗಲೇ ಇಲ್ಲ. ಮುಂದಿನ ಶನಿವಾರ ಭೇಟಿಯಾಗುವುದಾಗಿ ಮೆಸೇಜ್ ಕಳಿಸಿ ಸುಮ್ಮನಾಗಿಬಿಟ್ಟೆ. ಅದಾಗಿ ನಾಲ್ಕೇ ದಿನಕ್ಕೆ, ಗುರುವಾರ ಸಂಜೆ ಕ್ಯಾಬ್ ನಲ್ಲಿ ಕುಳಿತು ಮೊಬೈಲ್ ತೆಗೆದರೆ ಜಾಮಿನಿ ಇನ್ನಿಲ್ಲವೆಂಬ ಸುದ್ದಿ ಹರಿದಾಡುತ್ತಿತ್ತು. ಏನಾಗಿತ್ತು, ಏನಾಯಿತು, ಅವಳ ಸಾವಿಗೆ ಕಾರಣವೇನು ಎನ್ನುವ ಪ್ರಶ್ನೆಗೆ ಯಾರಲ್ಲಿಯೂ ಉತ್ತರವಿರಲಿಲ್ಲ. ಅವಳು ಎರಡು ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದಳೆಂಬ ವಿಷಯವೇ ನಮಗೆಲ್ಲ ಅವಳ ಬಗ್ಗೆ ದೊರಕಿದ ಕೊನೆಯ ಮಾಹಿತಿ. ಅವಳ ಮನಸ್ಸಿನಲ್ಲಿ ಏನಿತ್ತು, ಅವಳು ನನ್ನ ಹತ್ತಿರ ಮಾತನಾಡಬೇಕೆಂದಿದ್ದ ವಿಷಯ ಏನಿದ್ದಿರಬಹುದು, ಅವಳ ಸಮಸ್ಯೆಗೆ ನನ್ನಲ್ಲೇನಾದರೂ ಉತ್ತರವಿತ್ತೇ ಎನ್ನುವಂತಹ ಎಲ್ಲ ಪ್ರಶ್ನೆಗಳಿಗೂ ಈಗಲೂ ಉತ್ತರ ಹುಡುಕುತ್ತಲೇ ಇದ್ದೇನೆ. ನಾನು ಆ ವೀಕೆಂಡ್ ಅವಳನ್ನು ಭೇಟಿಯಾಗಿದ್ದರೆ ಅವಳ ಸಾವನ್ನು ತಪ್ಪಿಸಲು ಸಾಧ್ಯವಿತ್ತೇನೋ ಅಥವಾ ಕೊನೆಪಕ್ಷ ಮುಂದೂಡಬಹುದಿತ್ತೇನೋ ಎನ್ನುವ ಎಲ್ಲ ತಪ್ಪಿತಸ್ಥ ಭಾವನೆಗಳು ಈಗಲೂ ಹಾಗೆಯೇ ಇವೆ. ಜಾಮಿನಿಯ ಘಟನೆಯ ನಂತರ ಯಾರಾದರೂ ಭೇಟಿಯಾಗುವ ಪ್ರಸ್ತಾಪವನ್ನಿಟ್ಟರೆ ಕೆಲಸಗಳನ್ನೆಲ್ಲ ಬದಿಗಿಟ್ಟು, ಜೊತೆಗೊಂದು ಮಸಾಲೆದೋಸೆ ತಿಂದು ಬರುತ್ತೇನೆ. ಹಾಗೆ ಜೊತೆಯಾಗಿ ಕುಡಿದ ಕಾಫಿಯೊಂದು ಯಾವುದೋ ದುಃಖವೊಂದರ ಸಮಾಧಾನವಾಗಿರಬಹುದು; ಸಮಸ್ಯೆಯೊಂದಕ್ಕೆ ಪರಿಹಾರವೂ ಆಗಬಹುದು; ಏನಿಲ್ಲವೆಂದರೂ ಅಲ್ಲೊಂದು ಸುಂದರವಾದ ನೆನಪು ಹುಟ್ಟಿಕೊಳ್ಳಬಹುದು; ಆ ನೆನಪು ಜಾಮಿನಿಯಿಲ್ಲದ ನೋವನ್ನು ಕೊಂಚವಾದರೂ ಕಡಿಮೆ ಮಾಡಬಹುದು.      ನೋವಿನೊಂದಿಗಿನ ನೆನಪಿನ ಪಯಣ ಯಾವಾಗಲೂ ದೀರ್ಘ. ಖುಷಿಯಾಗಿ, ಸುಖವಾಗಿ ಕಳೆದ ಗಳಿಗೆಗಳನ್ನು ಎಷ್ಟೋ ಸಲ ಮರೆತೇಹೋಗಿರುತ್ತೇವಾದರೂ, ನೆನಪಲ್ಲಿ ಉಳಿದುಹೋದ ನೋವು ಮಾತ್ರ ಬೇಗ ಮರೆಯಾಗುವಂಥದ್ದಲ್ಲ. ಕಾರಣವೇ ಇಲ್ಲದೇ ಮುರಿದುಬಿದ್ದ ಮೊದಲಪ್ರೇಮ, ಆಪ್ತ ಸಂವಹನವಿಲ್ಲದೇ ಮುಗಿದುಹೋದ ಗೆಳೆತನ, ಅಜ್ಜಿಯ ಸಾವು ಹೀಗೇ ನೋವು ತರುವ ನೆನಪೊಂದು ಎಲ್ಲರ ಬದುಕಿನಲ್ಲೂ ಬೇಡವೆಂದರೂ ಜೀವಂತವಾಗಿರುತ್ತದೆ. ಅಂಥದ್ದೇ ಒಂದು ಅತ್ತ ತೀರಾ ಗಂಭೀರವೂ ಅಲ್ಲದ ಹಾಗಂತ ನಿರ್ಲಕ್ಷ್ಯಿಸಲೂ ಸಾಧ್ಯವಾಗದ, ನೆನಪಿನಿಂದ ಎಂದೂ ಮರೆಯಾಗದ ನೋವೆಂದರೆ ಮನೆಗಳನ್ನು ಬದಲಾಯಿಸುವುದು. ಕೆಲಸಕ್ಕಾಗಿ ಊರು ಬದಲಾಯಿಸುವವರಿಗೆ, ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ನಾಲ್ಕೈದು ಮನೆಗಳಾದರೂ ನೆನಪಿನ ಅರಮನೆಗಳಾಗಿ ಉಳಿದುಕೊಂಡಿರುತ್ತವೆ. ಪುಟ್ಟ ಮನೆಯೊಂದರ ಹಾಲ್ ನಲ್ಲಿ ರಾಜಗಾಂಭೀರ್ಯದಲ್ಲಿ ಕುಳಿತಿರುತ್ತಿದ್ದ ಆರಾಮ ಕುರ್ಚಿ, ವಿಶಾಲವಾದ ಮನೆಯಂಗಳದ ಅಂಚಿನಲ್ಲಿ ಯಾರೋ ನೆಟ್ಟು ಬೆಳೆಸಿದ್ದ ಕರಿಬೇವಿನ ಗಿಡ, ಅಪಾರ್ಟ್ಮೆಂಟಿನ ಫ್ಲ್ಯಾಟ್ ನ ಬಾಲ್ಕನಿಯ ಸರಳುಗಳಿಗೆ ಹಬ್ಬಿಕೊಂಡಿದ್ದ ಮನಿಪ್ಲಾಂಟ್ ಹೀಗೇ ಒಂದೊಂದು ಮನೆಯೂ ಸಿಂಪಲ್ಲಾದ ಯಾವುದೋ ನೆನಪಿನೊಂದಿಗೆ ತಳುಕು ಹಾಕಿಕೊಂಡಿರುತ್ತದೆ. ಮನೆ ಬದಲಾದಾಗ ಲಕ್ಷಗಟ್ಟಲೆ ಸುರಿದು ಸೋಫಾ ಖರೀದಿಸಿ ಮನೆಯನ್ನು ಅಲಂಕರಿಸಿದರೂ ಹಳೆಮನೆಯಲ್ಲಿದ್ದ ಆರಾಮ ಕುರ್ಚಿ ಆಗಾಗ ನೆನಪಿಗೆ ಬಂದು ಸುಖದ ಪರಿಕಲ್ಪನೆಯನ್ನು ಪ್ರಶ್ನಿಸುತ್ತಿರುತ್ತದೆ. ಹೀಗೆ ಸುಖ-ದುಃಖ, ನೋವು-ನಲಿವು ಎನ್ನುವ ಭಾವನೆಗಳೆಲ್ಲವೂ ನೆನಪಿನ ವ್ಯಾಪ್ತಿಯಲ್ಲಿ ಸ್ಥಾನಪಲ್ಲಟಗೊಳ್ಳುತ್ತಾ, ಹೊಸದಾಗಿ ಸೇರ್ಪಡೆಯಾದ ನೆನಪೊಂದು ಹಳೆಯ ನೆನಪುಗಳೊಂದಿಗೆ ವಾದ-ಸಂವಾದಗಳನ್ನು ನಡೆಸುತ್ತಾ ಬದುಕಿನ ಚಲನೆಯುದ್ದಕ್ಕೂ ನೆನಪಿನ ಹೆಜ್ಜೆಗಳು ಜೊತೆಯಾಗುತ್ತಲೇ ಇರುತ್ತವೆ. ದೀಪಾವಳಿಯ ಫ್ರಾಕಿನ ಮೇಲಿದ್ದ ಕೀಲಿಕೈಗಳೆಲ್ಲ ಬದಲಾಯಿಸಿದ ಮನೆಗಳ ನೆನಪೆಲ್ಲವನ್ನೂ ಜೋಪಾನ ಮಾಡಿದರೆ, ಥಿಯೇಟರಿನಲ್ಲಿ ಹೊಸ ಸಿನೆಮಾ ನೋಡುತ್ತಾ ಪಾಪ್ ಕಾರ್ನ್ ತಿನ್ನುವಾಗ ಜಾಮಿನಿಯ ನೆನಪೊಂದು ಪಕ್ಕದ ಸೀಟಿನಲ್ಲಿ ತಣ್ಣಗೆ ಕುಳಿತಿರುತ್ತದೆ. ************* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಗುಂಡಪ್ಪೆಯ ಮಳೆಗಾಲ ಈ ಮಾವಿನಹಣ್ಣಿಗೂ ಮಳೆಗಾಲಕ್ಕೂ ಒಂಥರಾ ಅವಿನಾಭಾವ ಎನ್ನುವಂಥ ಸಂಬಂಧ. ಮೊದಲಮಳೆಯೆನ್ನುವ ಸಂಭ್ರಮ ನಮ್ಮೊಳಗೊಂದು ಹೊಸ ಚೈತನ್ಯ ತುಂಬುವ ಸಮಯದಲ್ಲಿ, ಸಕಲ ಸೊಬಗಿನ ದೇವಕನ್ಯೆಯೊಬ್ಬಳು ಭುವಿಗಿಳಿದಂತೆ ಮಾವಿನಹಣ್ಣೊಂದು ನೆಲಕ್ಕುರುಳುತ್ತದೆ. ಹೀಗೆ ಕಳಚಿಬಿದ್ದ ಮಾವಿನಹಣ್ಣಿನ ಮೇಲೆ ಮಳೆಹನಿಗಳೆಲ್ಲ ಮುತ್ತಿನಂತೆ ಹೊಳೆದು, ಗೌಜು-ಗದ್ದಲವಿಲ್ಲದ ಹೊಸ ಲೋಕವೊಂದು ಸೃಷ್ಟಿಯಾಗುತ್ತದೆ. ಹೀಗೆ ಗದ್ದೆಬಯಲಿನಲ್ಲೋ, ಬೆಟ್ಟದ ತುದಿಯಲ್ಲೋ ನಿರಾತಂಕವಾಗಿ ಹುಟ್ಟಿಕೊಳ್ಳುವ ಈ ಸೊಬಗಿನ ಪ್ರಪಂಚಕ್ಕೆ ಮಳೆಯೊಂದು ಜೀವ ತುಂಬುವ ಪರಿ ಅನನ್ಯ. ಮಳೆ ಆಗೊಮ್ಮೆ ಈಗೊಮ್ಮೆ ಅವಾಂತರಗಳನ್ನು ಸೃಷ್ಟಿಸಿದರೂ ಅದೊಂದು ಮಾಯೆಯಾಗಿ ಮೈ-ಮನಗಳನ್ನು ಆವರಿಸಿಕೊಂಡು ಹೃದಯವನ್ನು ಹಗುರಾಗಿಸುವ ಕ್ಷಣವೊಂದು ಎಲ್ಲರ ಜೀವನದಲ್ಲೂ ಇರುತ್ತದೆ. ಮುಂಗಾರು ನಮ್ಮೊಳಗೆ ಹುಟ್ಟಿಸುವ ಸಂಚಲನ ಎಷ್ಟೋ ಸಲ ಅದೆಷ್ಟು ತೀವ್ರವಾಗಿರುತ್ತದೆಯೆಂದರೆ ಹವಾಮಾನದ ವರದಿಗಳನ್ನೆಲ್ಲ ನಿರುಮ್ಮಳವಾಗಿ ಬದಿಗೊತ್ತಿ ಮೊದಲಮಳೆಗೆ ಕಾಯತೊಡಗುತ್ತೇವೆ. ಅಂಗೈಯನ್ನೋ, ಮುಖವನ್ನೋ ಅಥವಾ ಕೊನೆಪಕ್ಷ ದೃಷ್ಟಿಯನ್ನೋ ಮಳೆಗೊಡ್ಡಿ ನಿಲ್ಲುವ ಬಯಕೆಯೊಂದು ಎಲ್ಲರ ಎದೆಯೊಳಗೂ ಸದಾ ಜೀವಂತ. ಈಗಿನ್ನೂ ಪ್ರಪಂಚ ನೋಡುತ್ತಿರುವ ಮಗುವಿಗೆ ಮಳೆಯೊಂದು ವಿಸ್ಮಯವೆನ್ನಿಸಿದರೆ, ಪ್ರೀತಿ ತುಂಬಿದ ಹೃದಯವೊಂದು ಮಳೆಗೆ ಕವಿತೆಯಾಗಿ ಅರಳುತ್ತದೆ; ರೈತನೊಬ್ಬ ಭತ್ತವೊಂದು ಮೊಳಕೆಯೊಡೆವ ಕನಸ ಕಾಣತೊಡಗಿದರೆ, ಹಪ್ಪಳ-ಸಂಡಿಗೆಗಳೆಲ್ಲ ಸರತಿಯಲ್ಲಿ ಅಟ್ಟ ಹತ್ತಿ ಬೆಚ್ಚಗೆ ಕೂರುತ್ತವೆ; ಹಳೆಯ ಪಾರ್ಕೊಂದರಿಂದ ತೇಲಿಬಂದ ನೇರಳೆಹಣ್ಣಿನ ಬೀಜವೊಂದು ಬೇರುಬಿಡಲು ತವಕಿಸುತ್ತಿರುವಾಗ, ಪಾರ್ಕಿನ ಪಕ್ಕದ ಶಾಲೆಯೊಂದರಲ್ಲಿ ಕನಸುಗಳು ಅರಳುತ್ತವೆ. ಶಾಲೆ ಎನ್ನುವ ಜಾಗವೊಂದು ಜೀವನಕ್ಕೆ ಕಟ್ಟಿಕೊಡುವ ಮೌಲ್ಯಗಳು, ನೆನಪುಗಳು ಅಗಾಧ. ಜಗತ್ತನೆಲ್ಲ ಸುತ್ತಿ ಬಂದರೂ ಬಾಲ್ಯದ ನೆನಪುಗಳಿಗಾಗಿ ಹಂಬಲಿಸಿದಾಗಲೋ, ಹಳೆಯ ಕಾದಂಬರಿಯೊಂದನ್ನು ಓದಿದಾಗಲೋ ಅಥವಾ ಫೇಸ್ ಬುಕ್ ನಲ್ಲೆಲ್ಲೋ ಬಾಲ್ಯದ ಗೆಳತಿಯೊಬ್ಬಳು ಅಚಾನಕ್ಕಾಗಿ ಮಾತಿಗೆ ಸಿಕ್ಕಾಗಲೋ ಶಾಲೆ ಎನ್ನುವ ನಮ್ಮದೇ ಮುಗ್ಧ ಪ್ರಪಂಚವೊಂದನ್ನು ಆವಾಹಿಸಿಕೊಳ್ಳುತ್ತೇವೆ. ಆ ಪ್ರಪಂಚದಲ್ಲೊಂದಿಷ್ಟು ಬೆಟ್ಟದ ನೆಲ್ಲಿಕಾಯಿಗಳು ಬಾಯಲ್ಲಿ ನೀರೂರಿಸಿದರೆ, ಬಣ್ಣದ ರಿಬ್ಬನ್ನುಗಳು ಹೂವುಗಳಾಗಿ ಅರಳುತ್ತವೆ; ಬಾವಿಯ ಸಿಹಿನೀರು ತೆಂಗಿನಬುಡವನ್ನು ತಂಪಾಗಿಸಿದರೆ, ಮೇ ಫ್ಲವರ್ ಗಿಡವೊಂದು ಹೂವಿನ ಭಾರಕ್ಕೆ ಬಳುಕುತ್ತಿರುತ್ತದೆ; ಮಳೆಗಾಲವೊಂದು ಪಠಾಣ್ಸಿನ ಜೊತೆ ಕೊಡೆಯೊಂದಿಗೆ ಅಂಗಳಕ್ಕಿಳಿಯುತ್ತದೆ. ಮೊದಲಮಳೆಯೊಂದು ಮೊದಲಪ್ರೇಮದಂತೆ ಹೃದಯವನ್ನು ಅರಳಿಸಿದರೆ, ಮಳೆಗಾಲವೊಂದು ಮರೆತೂ ಮರೆಯದಂತಿರುವ ನೆನಪುಗಳನ್ನೆಲ್ಲ ತಂದು ಮಡಿಲಿಗೆ ಸುರಿಯುತ್ತದೆ. ಈ ಪಠಾಣ್ಸಿನ ಕಥೆ ಶುರುವಾಗುವುದು ಹೀಗೆ. ನಾನು ನಾಲ್ಕನೇ ಕ್ಲಾಸು ಮುಗಿಸಿ ಐದನೇ ಕ್ಲಾಸಿಗೆ ಕಾಲಿಟ್ಟ ಗರ್ವದ ಜೂನ್ ತಿಂಗಳು ಅದು. ಐದನೇ ಕ್ಲಾಸು ಎಂದರೆ ಅದರ ಗತ್ತು-ಗೈರತ್ತುಗಳೇ ಬೇರೆ. ಒಂದರಿಂದ ನಾಲ್ಕನೇ ಕ್ಲಾಸಿನ ಮಕ್ಕಳ ಎದುರಿಗೆ ಹೀರೋಗಳ ಚಮಕ್ಕನ್ನು ತೋರಿಸುತ್ತ, ಆರು ಮತ್ತು ಏಳನೇ ಕ್ಲಾಸಿನವರೆದುರಿಗೆ ಚಿಕ್ಕವರಂತೆ ಪೋಸ್ ಕೊಡುತ್ತ ಒಳ್ಳೆಯವರಾಗಿಬಿಡುವ ಜಾಣತನ ಐದನೇ ಕ್ಲಾಸಿಗೆ ಸಿದ್ಧಿಸಿರುತ್ತಿತ್ತು. ಗಾರ್ಡನ್ನಿಗೆಂದು ಅಂಗಳ ಹದಗೊಳಿಸುವ, ಬೆಳಿಗ್ಗೆ ಬೇಗ ಬಂದು ಕಸ ಗುಡಿಸಿ ಒರಸುವಂತಹ ಕೆಲಸವನ್ನೆಲ್ಲ ಆರು-ಏಳನೇ ಕ್ಲಾಸಿನವರು ವಹಿಸಿಕೊಳ್ಳುತ್ತಿದ್ದರು. ಗಾರ್ಡನ್ನಿನ ಕಳೆ ತೆಗೆಯುವುದು, ಕ್ಲಾಸ್ ರೂಮಿನ ಹೊರಗೆ ಚಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದ ಚಪ್ಪಲಿಗಳನ್ನು ಜೋಡಿಸುವುದು ಇಂತಹ ಕೆಲಸಗಳೆಲ್ಲ ಮೂರು-ನಾಲ್ಕನೇ ಕ್ಲಾಸಿನ ಮಕ್ಕಳ ಜವಾಬ್ದಾರಿಗಳಾಗುತ್ತಿದ್ದವು. ಐದನೇ ಕ್ಲಾಸು ಮಾತ್ರ ಕ್ಲಾಸು ತಪ್ಪಿದರೆ ಆಟದ ಮೈದಾನಕ್ಕೆ ಇಳಿಯುತ್ತಿತ್ತು. ಇಂಥ ಸೌಕರ್ಯಕರ ಐದನೇ ಕ್ಲಾಸು ಶುರುವಾದ ಜೂನ್ ನಲ್ಲಿ ಮಳೆಗಾಲವೂ ಶುರುವಾಗಿತ್ತು. ಪುಟ್ಟಪುಟ್ಟ ಮಕ್ಕಳ ಬಣ್ಣದ ರೇನ್ ಕೋಟ್ ಗಳು, ಹೊಸಹೊಸ ಹಸಿರು-ನೀಲಿ ಸ್ಕರ್ಟ್ ಗಳು, ಆಗಷ್ಟೇ ಹಳ್ಳಿಗಳಿಗೆ ಕಾಲಿಟ್ಟಿದ್ದ ಬಟನ್ ಛತ್ರಿಗಳು ಎಲ್ಲದರ ಮಧ್ಯೆ ಇಡೀ ಶಾಲೆಯ ಗಮನ ಸೆಳೆದದ್ದು ಏಳನೇ ಕ್ಲಾಸಿನ ಹುಡುಗಿಯೊಬ್ಬಳ ಪಠಾಣ್ಸು. ಕಪ್ಪು ಬಣ್ಣದಲ್ಲಿ ಮಿರಮಿರ ಮಿಂಚುತ್ತಿದ್ದ ಆ ರಬ್ಬರಿನ ಚಪ್ಪಲಿಯೊಳಗೆ ಅವಳ ಇಡೀ ಪಾದ ಮುಳುಗಿಹೋಗಿ ನಾಲ್ಕು ಬೆರಳುಗಳು ಮಾತ್ರ ಒಂದಕ್ಕೊಂದು ಅಂಟಿಕೊಂಡು, ಹೊರಗಿನಿಂದ ನೋಡುವವರಿಗೆ ಉಸಿರುಗಟ್ಟಿ ಒದ್ದಾಡುತ್ತಿರುವಂತೆ ಕಾಣಿಸುತ್ತಿದ್ದವು. ಮಳೆಗಾಲಕ್ಕೆಂದೇ ವಿಶೇಷವಾಗಿ ತಯಾರಾಗಿದ್ದ ಆ ಚಪ್ಪಲಿಯಿಂದ ಒಂದೇ ಒಂದು ಹನಿ ನೀರು ಕೂಡಾ ಅವಳ ಸ್ಕರ್ಟಿಗೆ ಸಿಡಿದಿರಲಿಲ್ಲ. ಬೆನ್ನಿನವರೆಗೂ ಮಳೆಯ ನೀರು ಸಿಡಿದು ಸ್ಕರ್ಟಿನ ತುಂಬಾ ರಂಗೋಲಿಯ ಚುಕ್ಕಿಯಂತಹ ಮಣ್ಣಿನ ಕಲೆಗಳಾಗಿ ನೊಂದಿರುತ್ತಿದ್ದ ನಮಗೆಲ್ಲ ಪಠಾಣ್ಸಿನ ಮೇಲೆ ವಿಪರೀತ ಪ್ರೇಮ ಹುಟ್ಟಿಕೊಂಡಿತು. ಆ ಪ್ರೇಮದ ತೀವ್ರತೆ ಎಷ್ಟಿತ್ತೆಂದರೆ ಮಳೆಗಾಲ ಮುಗಿಯುವುದರೊಳಗೆ ನನ್ನ ಹಠಕ್ಕೆ ಮಣಿದು ಅಪ್ಪ ನನಗೂ ಒಂದು ಮಣ್ಣಿನ ಬಣ್ಣದ ಪಠಾಣ್ಸು ತಂದುಕೊಟ್ಟ. ಹೀಗೆ ಪಠಾಣಿ ಚಪ್ಪಲಿಯೊಂದು ಪಠಾಣ್ಸಾಗಿ ಮನೆಗೆ ಆಗಮಿಸಿ ಮಳೆಗಾಲದ ಮಜಾ ಇನ್ನಷ್ಟು ಹೆಚ್ಚಿತು; ನೀಲಿ, ಹಸಿರು ಸ್ಕರ್ಟುಗಳೆಲ್ಲ ಖುಷಿಯಿಂದ ಕುಣಿದಾಡಿದಂತೆನ್ನಿಸಿತು. ಪ್ರತೀವರ್ಷ ಮಳೆಗಾಲ ಮುಗಿದೊಡನೆ ಪ್ಲಾಸ್ಟಿಕ್ ಕವರಿನೊಳಗೆ ಸೇರಿದ ಪಠಾಣ್ಸು ಭದ್ರವಾಗಿ ಜಗಲಿಯ ಮೇಲಿನ ಗೂಡೊಂದನ್ನು ಸೇರಿಕೊಳ್ಳುತ್ತಿತ್ತು. ಹೀಗೆ ಹೈಸ್ಕೂಲು ಮುಗಿಯುವವರೆಗೂ ಪಾದದ ಬೆಳವಣಿಗೆಗನುಗುಣವಾಗಿ ಹಿಗ್ಗುತ್ತಾ, ನನ್ನ ಮಳೆಗಾಲದ ಚಟುವಟಿಕೆಗಳನ್ನೆಲ್ಲ ತಕರಾರಿಲ್ಲದೇ ಸಹಿಸಿಕೊಂಡ ಪಠಾಣ್ಸು ನೆನಪಿನ ಶೂ ರ‍್ಯಾಕ್‌ ನಲ್ಲಿ ಈಗಲೂ ಭದ್ರವಾಗಿದೆ. ಪಠಾಣ್ಸಿನ ಸಂಭ್ರಮದೊಂದಿಗೆ ಮಳೆಗಾಲದ ಇನ್ನೊಂದು ಮಜವೆಂದರೆ ಮಾವಿನಹಣ್ಣಿನದು. ಕೇರಿಯ ತುದಿಯಿಂದ ಶುರುವಾಗುವ ವಿಸ್ತಾರವಾದ ಗದ್ದೆಬಯಲಿನ ತುದಿಯಲ್ಲಿ ಮಾವಿನಮರಗಳ ಸಾಲೊಂದಿತ್ತು. ಆ ಮಾವಿನಮರಗಳ ವಿಶೇಷತೆಯೆಂದರೆ ಅವು ಮಳೆಗಾಲದಲ್ಲಿ ಉದುರಿಸುತ್ತಿದ್ದ ಅಪ್ಪೆಹಣ್ಣುಗಳು. ಅತ್ತ ಹುಳಿಯೂ ಅಲ್ಲದ, ಪೂರ್ತಿ ಸಿಹಿಯೂ ಅಲ್ಲದ ಪುಟ್ಟಪುಟ್ಟ ಮಾವಿನಹಣ್ಣುಗಳಿಗೆ ವಿಶಿಷ್ಟವಾದ ರುಚಿಯಿರುತ್ತಿತ್ತು. ಸಂಜೆ ಶಾಲೆಯಿಂದ ಬರುತ್ತಿದ್ದಂತೆಯೇ ಕೇರಿಯ ಮಕ್ಕಳ ಗ್ಯಾಂಗೊಂದು ಮಾವಿನಮರದ ಬುಡವನ್ನು ತಲುಪುತ್ತಿತ್ತು. ಆ ಮರಗಳ ಸಾಲಿನಲ್ಲಿ ನಮ್ಮೆಲ್ಲರ ಪ್ರೀತಿಯ ಗುಂಡಪ್ಪೆಯ ಮರವಿತ್ತು. ನೋಡಲು ಗುಂಡುಗುಂಡಾಗಿ ಅಚ್ಚಹಸಿರು ಬಣ್ಣದಲ್ಲಿ ಹೊಳೆಯುತ್ತಿದ್ದ ಗುಂಡಪ್ಪೆಯನ್ನು ಹುಲ್ಲುಗಳ ಮಧ್ಯದಿಂದ ಹೆಕ್ಕಿ ಸ್ಕರ್ಟಿನ ಜೇಬಿಗೆ ಸೇರಿಸುವುದೆಂದರೆ ಎಲ್ಲಿಲ್ಲದ ಸಂಭ್ರಮ. ಉಳಿದ ಹಣ್ಣುಗಳೆಲ್ಲ ಮಾವಿನಹಣ್ಣು ಹೆಕ್ಕಲೆಂದೇ ಸ್ಕರ್ಟಿನ ಜೇಬಿನಲ್ಲಿರುತ್ತಿದ್ದ ಪ್ಲಾಸ್ಟಿಕ್ ಕವರನ್ನು ಸೇರಿದರೆ, ಗುಂಡಪ್ಪೆ ಮಾತ್ರ ವಿಶೇಷ ಅಕ್ಕರೆಯಿಂದ ಜೇಬನ್ನು ಸೇರುತ್ತಿತ್ತು. ಮನೆಗೆ ಬಂದು ಪಠಾಣ್ಸನ್ನು ಉಜ್ಜಿ ತೊಳೆದು ಜಗಲಿಯ ಮೂಲೆಯಲ್ಲಿಟ್ಟು, ಅಪ್ಪೆಹಣ್ಣುಗಳನ್ನು ತೊಳೆಯುವ ಕಾಯಕ ಶುರುವಾಗುತ್ತಿತ್ತು. ಯಾರ ಅಪ್ಪಣೆಗೂ ಕಾಯದೇ ಗುಂಡಪ್ಪೆಗಳೆಲ್ಲ ನಿರಾತಂಕವಾಗಿ ಹೊಟ್ಟೆ ಸೇರಿದರೆ, ಉಳಿದವು ಅಡುಗೆಮನೆಯಲ್ಲಿ ಜಾಗ ಕಂಡುಕೊಳ್ಳುತ್ತಿದ್ದವು. ಹೀಗೆ ಪಠಾಣ್ಸೆನ್ನುವ ಸಂಭ್ರಮದಿಂದ ಶುರುವಾಗುವ ಮಳೆಗಾಲವೊಂದು ಗುಂಡಪ್ಪೆಯನ್ನು ಜೀರ್ಣಿಸಿಕೊಳ್ಳುವ ಸಮಾರಂಭದಲ್ಲಿ ಮುಗಿಯುತ್ತಿತ್ತು. ಆಸ್ತಿ, ಹಣ, ಅಂತಸ್ತು ಯಾವ ಹಂಗೂ ಇಲ್ಲದ ಮಳೆಗಾಲವೆಂಬ ಸೃಷ್ಟಿಯ ಸಡಗರ ನೆನಪುಗಳಿಗೆ ಹೊಸ ಜೀವ ತುಂಬಲಿ; ಬದುಕಿಗೊಂದಿಷ್ಟು ಕನಸು ದೊರಕಿ ಗುಂಡಪ್ಪೆಯಂತೆಯೇ ಹಸಿರಾಗಿ ಹೊಳೆಯುತ್ತಿರಲಿ. ************* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಅಜ್ಜನಮನೆಯೆನ್ನುವ ಜೀವನಪಾಠ….. ಅಜ್ಜ ನೆನಪಿಗೆ ಬಂದಾಗಲೆಲ್ಲ ಅಜ್ಜನಮನೆ ಎನ್ನುವ ಮಮತೆಯ ಮಲ್ಹಾರವೊಂದು ಮನಸ್ಸನ್ನೆಲ್ಲ ತುಂಬಿಕೊಳ್ಳುತ್ತದೆ. ಈ ಪ್ರೀತಿ-ಮಮಕಾರಗಳ ಮೂಲವನ್ನೊಮ್ಮೆ ಕೆದಕಿ ನೋಡಿ! ಅಜ್ಜಿಯ ಸೆರಗಿನಂಚಿನ ಪ್ರೀತಿಯ ಸೆಲೆಯೊಂದು, ಅಜ್ಜನ ಕಿರುಬೆರಳಿನ ಅಭಯವೊಂದು ನಾವಿಡುವ ಪ್ರತೀ ಹೆಜ್ಜೆಯನ್ನೂ ಸಲಹುತ್ತಿರುತ್ತದೆ. ಎಷ್ಟೇ ಆಧುನಿಕ ಜೀವನಶೈಲಿಯಾದರೂ, ಅಪಾರವಾದ ಸ್ನೇಹಬಳಗವಿದ್ದರೂ ಅಜ್ಜ-ಅಜ್ಜಿ ಎನ್ನುವ ಪ್ರೀತಿಯ ಬಲೆಯೊಂದರಲ್ಲಿ ಬದುಕಿನುದ್ದಕ್ಕೂ ಬಂದಿಯಾಗಿರುತ್ತೇವೆ; ಅಚ್ಚರಿಯೆಂದರೆ ಆ ಬಂಧನ ನಮಗೆಂದೂ ಹೊರೆಯೆನ್ನಿಸುವುದಿಲ್ಲ. ಅಜ್ಜನ ಕಥೆಯಲ್ಲಿ ಬರುವ ನೂರಾರು ಮೂಟೆಗಳ ಭತ್ತದ ದಾಸ್ತಾನನ್ನು ರಾತ್ರೋರಾತ್ರಿ ಖಾಲಿ ಮಾಡಿದ ಇರುವೆಗಳ ದಂಡು, ಅಜ್ಜಿ ತೋರಿಸಿದ ಕಾಕಣ್ಣ ಗುಬ್ಬಣ್ಣನ ಸ್ನೇಹಲೋಕ ಯಾವುದೂ ಕಟ್ಟುಕಥೆಯೆನ್ನಿಸದೇ ವಯಸ್ಸಿಗನುಗುಣವಾಗಿ ರೂಪ ಬದಲಾಯಿಸಿ ನಮ್ಮೊಳಗೆ ಶಾಶ್ವತವಾಗಿ ಉಳಿದುಕೊಳ್ಳುತ್ತವೆ. ಅಜ್ಜನ ಕಥೆಯಲ್ಲೊಬ್ಬ ರಾಜನಿದ್ದ. ಪ್ರಜೆಗಳಿಗೆಲ್ಲ ಪ್ರಿಯನಾಗಿದ್ದರೂ, ನೆರೆರಾಜ್ಯಗಳಿಗಿಂತ ಸುಭಿಕ್ಷವಾದ ರಾಜ್ಯ ತನ್ನದೆನ್ನುವ ಅಹಂಕಾರದಲ್ಲಿ ಮೆರೆಯುತ್ತಿದ್ದ. ಸಾಮಂತರಿಂದ ಕಪ್ಪಕಾಣಿಕೆಯಾಗಿ ಬಂದ ದವಸ-ಧಾನ್ಯಗಳ ಮೂಟೆಗಳನ್ನು ಗೋದಾಮುಗಳಲ್ಲಿ ಶೇಖರಿಸಿ, ಬರಗಾಲದ ಸಮಯದಲ್ಲೋ ಅಥವಾ ನೆರೆರಾಜ್ಯಗಳು ಸಹಾಯ ಕೋರಿ ಬಂದಾಗಲೋ ಸಮಯೋಚಿತವಾಗಿ ಉಪಯೋಗಿಸುತ್ತಿದ್ದ. ಗೋದಾಮುಗಳಿಗೆ ಕಾವಲುಗಾರರನ್ನು ನೇಮಿಸಿ, ತಾನೇ ಖುದ್ದಾಗಿ ಕಾಲಕಾಲಕ್ಕೆ ಮೇಲ್ವಿಚಾರಣೆ ನಡೆಸುತ್ತಿದ್ದ. ಮೂರು ತಿಂಗಳಿಗೊಮ್ಮೆ ಆಸ್ಥಾನ ಪಂಡಿತರಿಂದ ದಾಸ್ತಾನಿನ ದಾಖಲೆಯನ್ನು ಪರಿಷ್ಕರಿಸಿ, ಶ್ರೀಮಂತಿಕೆಯ ಡಂಗುರ ಸಾರುತ್ತಿದ್ದ. ಕಪ್ಪ ಕೊಡಲಾಗದ ಸಾಮಂತರು, ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ರೈತರಿಗೆಲ್ಲ ರಾಜನ ಈ ಅಹಂಕಾರದ ಬಗ್ಗೆ ಅಸಮಾಧಾನವಿದ್ದರೂ, ಅಸಹಾಯಕತೆಯಿಂದ ಮೌನವಾಗಿ ಸಹಿಸುತ್ತಿದ್ದರು. ಒಮ್ಮೆ ಹೀಗೇ ಗೋದಾಮುಗಳ ಮೇಲ್ವಿಚಾರಣೆ ನಡೆಸುತ್ತಿದ್ದಾಗ ಚೀಲದಲ್ಲಿರುವ ಭತ್ತಗಳೆಲ್ಲ ಖಾಲಿಯಾಗುತ್ತಿರುವುದು ರಾಜನ ಗಮನಕ್ಕೆ ಬಂತು. ಕಾವಲುಗಾರರನ್ನು ಬದಲಿಸಿ ನೋಡಿದ; ಪ್ರಯೋಜನವಾಗಲಿಲ್ಲ. ದಿನಗಳು ಕಳೆದಂತೆ ಭತ್ತದ ಗೋದಾಮಿನಲ್ಲಿ ಖಾಲಿಚೀಲಗಳು ಮಾತ್ರ ಉಳಿದುಕೊಂಡವು. ಪರಿಹಾರವಿಲ್ಲದ ಈ ಸಮಸ್ಯೆ ರಾಜನಿಗೆ ಸವಾಲಾಗಿ ಪರಿಣಮಿಸಿತು. ಸೇನಾಧಿಪತಿ ತಾನೇ ಖುದ್ದಾಗಿ ಭತ್ತದ ಗೋದಾಮಿನ ಕಾವಲಿಗೆ ನಿಂತ. ಆದರೂ ಭತ್ತ ಮಾತ್ರ ಖಾಲಿಯಾಗುತ್ತಲೇ ಇತ್ತು. ಆಸ್ಥಾನ ಪುರೋಹಿತರನ್ನು ಕರೆಸಿ ಪೂಜೆ-ಪುನಸ್ಕಾರಗಳನ್ನು ಮಾಡಿಸಿದ. ಹೋಮ-ಹವನಗಳಿಂದಲೂ ಭತ್ತದ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ದಕ್ಷ ಹಾಗೂ ಬಲಿಷ್ಠನಾದ ತಾನು ಭತ್ತದ ಕಾಳಿನಿಂದ ಸೋಲನ್ನು ಅನುಭವಿಸಿದ ದುಃಖದಿಂದ ಅವಮಾನಿತನಾದ ರಾಜ, ಸಮಸ್ಯೆಗೆ ಪರಿಹಾರ ಹುಡುಕಿಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಘೋಷಿಸಿದ. ರಾಜ್ಯದ ಮೂಲೆಮೂಲೆಗಳಿಂದ ವಿದ್ವಾಂಸರು, ಪಂಡಿತೋತ್ತಮರೆಲ್ಲ ಬಂದು ಗೋದಾಮನ್ನು ಜಾಲಾಡಿದರೂ ಭತ್ತ ಕಾಣೆಯಾಗಲು ಕಾರಣ ಸಿಗದೇ ರಾಜ ಪರದಾಡುತ್ತಿರುವಾಗ ಬಡರೈತನೊಬ್ಬ ಅರಮನೆಗೆ ಬಂದ. ರಾತ್ರಿ ತಾನೇ ಗೋದಾಮನ್ನು ಕಾವಲು ಕಾಯುವುದಾಗಿ ಹೇಳಿದ. ಕತ್ತಲಾಗುತ್ತಿದ್ದಂತೆ ಇರುವೆಗಳ ದಂಡೊಂದು ರಾಜಾರೋಷವಾಗಿ ಗೋದಾಮಿನೊಳಗೆ ಪ್ರವೇಶ ಮಾಡಿ ಶಿಸ್ತಿನಿಂದ ಭತ್ತವನ್ನು ಸಾಗಿಸುತ್ತಿರುವುದು ರೈತನ ಕಣ್ಣಿಗೆ ಬಿತ್ತು. ಕತ್ತಿ-ಗುರಾಣಿಗಳಿಲ್ಲದ ಇರುವೆಗಳ ಸೈನ್ಯವೊಂದು ತನ್ನನ್ನು ಸೋಲಿಸಿದ ಪರಿಗೆ ರಾಜ ಬೆರಗಾದ; ತಲೆಗೇರಿದ್ದ ಅಹಂಕಾರದ ಮದ ಕಳಚಿಬಿತ್ತು. ಅಂದಿನಿಂದ ಬಡಜನರಿಂದ ಕಪ್ಪ ವಸೂಲಿ ಮಾಡುವುದನ್ನು ನಿಲ್ಲಿಸಿದ. ಹೀಗೇ ಅಜ್ಜನ ಕಥೆಯ ಇರುವೆ ಒಂದು ಪಾಠ ಕಲಿಸಿದರೆ, ಆಮೆ ಇನ್ನೊಂದು ನೀತಿಯನ್ನು ಬೋಧಿಸಿತು. ಬಾಲ್ಯದ ಮನರಂಜನೆಗೆ ಒದಗಿಬಂದ ಕಥೆಗಳೆಲ್ಲ ಬದುಕಿನುದ್ದಕ್ಕೂ ಜೊತೆಗೇ ನಿಂತು ಕಾಲಕಾಲಕ್ಕೆ ಅಗತ್ಯವಿರುವ ಪಾಠಗಳನ್ನೆಲ್ಲ ಕಲಿಸಿದವು. ಇರುವೆಯ ದಂಡೊಂದು ಭತ್ತದ ಗೋದಾಮನ್ನು ಖಾಲಿ ಮಾಡುವುದು ಸತ್ಯಕ್ಕೆ ದೂರವಾದರೂ, ಅಹಂಕಾರವೊಂದು ತಲೆಗೇರಿದ ಅರಿವಾದಾಗಲೆಲ್ಲ ರಾಜನ ಅಸಹಾಯಕತೆ ಎದುರು ಬಂದು ನಿಂತಂತಾಗುತ್ತದೆ. ಅಜ್ಜಿಯ ಕಥೆಯಲ್ಲೊಂದು ಹಳ್ಳಿಯಿತ್ತು. ಆ ಹಳ್ಳಿಯ ಜನರಷ್ಟೇ ಅಲ್ಲದೇ, ಪ್ರಾಣಿ-ಪಕ್ಷಿಗಳೂ ಸಹ ಸಾಮರಸ್ಯದಿಂದ ಜೀವನ ಸಾಗಿಸುತ್ತಿದ್ದವು. ಊರಿನ ಕೊನೆಯಲ್ಲೊಂದು ದೊಡ್ಡ ಕೆರೆಯಿತ್ತು. ಆ ಕೆರೆಯ ಪಕ್ಕ ಗುಬ್ಬಣ್ಣನ ಹುಲ್ಲಿನ ಮನೆಯೊಂದಿತ್ತು. ಕೆರೆಗೆ ಬಟ್ಟೆ ತೊಳೆಯಲು ಬರುತ್ತಿದ್ದ ಕಾಕಣ್ಣ ಗುಬ್ಬಣ್ಣನೊಂದಿಗೆ ಸ್ನೇಹ ಬೆಳೆಸಿತು. ಒಂದು ಮಧ್ಯಾಹ್ನದ ಹೊತ್ತು ಬಟ್ಟೆ ತೊಳೆಯಲು ಬಂದ ಕಾಕಣ್ಣ ಗುಬ್ಬಣ್ಣನನ್ನು ಮಾತನಾಡಿಸಲು ಮನೆಯೊಳಗೆ ಹೋದರೆ, ಗುಬ್ಬಣ್ಣ ಕಾಣಿಸಲಿಲ್ಲ. ಮೂಲೆಯಲ್ಲಿದ್ದ ಗೂಡಿನಲ್ಲಿ ಗುಬ್ಬಣ್ಣನ ಮೂರು ಮೊಟ್ಟೆಗಳು ನಿಶ್ಚಿಂತೆಯಿಂದ ಬೆಚ್ಚಗೆ ಕುಳಿತಿದ್ದವು. ಅವುಗಳನ್ನು ನೋಡಿದ್ದೇ ಕಾಕಣ್ಣನ ಬಾಯಲ್ಲಿ ನೀರೂರಿ, ಗುಬ್ಬಣ್ಣನೊಂದಿಗಿನ ತನ್ನ ಸ್ನೇಹವನ್ನು ಮರೆತು ಮೂರೂ ಮೊಟ್ಟೆಗಳನ್ನು ತಿಂದು ಮುಗಿಸಿತು. ಕೆರೆಗೆ ನೀರು ತರಲೆಂದು ಹೋಗಿದ್ದ ಗುಬ್ಬಣ್ಣ ಮನೆಗೆ ಬರುವಷ್ಟರಲ್ಲಿ ಮನೆಯಿಂದ ಹೊರಹೋಗುತ್ತಿದ್ದ ಕಾಕಣ್ಣನನ್ನು ನೋಡಿದ್ದೇ ಸಂದೇಹದಿಂದ ಒಳಗೆ ಹೋಗಿ ನೋಡಿದರೆ, ಮೊಟ್ಟೆಗಳೆಲ್ಲ ಕಾಣೆಯಾಗಿದ್ದವು. ಕಾಕಣ್ಣನ ಮೋಸದಿಂದ ನೊಂದ ಅಸಹಾಯಕ ಗುಬ್ಬಣ್ಣ ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿ ದಿನಗಳನ್ನು ದೂಡುತ್ತಿತ್ತು. ಹೀಗಿರುವಾಗ ಮಳೆಗಾಲದ ಒಂದು ಸಂಜೆ ಕಾಕಣ್ಣ ತನ್ನ ಎರಡು ಮರಿಗಳೊಂದಿಗೆ ಆಶ್ರಯ ಕೋರಿ ಗುಬ್ಬಣ್ಣನ ಮನೆಗೆ ಬಂತು. ಸಗಣಿಮನೆಯಲ್ಲಿ ವಾಸಿಸುತ್ತಿದ್ದ ಕಾಕಣ್ಣನ ಮನೆ ಮಳೆಗೆ ಕರಗಿಹೋಗಿತ್ತು. ಕಾಕಣ್ಣನ ಅಸಹಾಯಕತೆಗೆ ಮರುಗಿ ಗುಬ್ಬಣ್ಣ ದ್ವೇಷ ಮರೆತು ಕಾಕಣ್ಣನನ್ನು ಕ್ಷಮಿಸಿ, ಕಾಕಣ್ಣನ ಮರಿಗಳನ್ನು ತನ್ನದೇ ಮರಿಗಳೆನ್ನುವ ಮಮಕಾರದಲ್ಲಿ ಕಾಪಾಡಿತು. ಕಾಕಣ್ಣ ಗುಬ್ಬಣ್ಣ ತಮ್ಮ ಸ್ನೇಹವನ್ನು ಮರಳಿ ಪಡೆದುಕೊಂಡು ಊರಿಗೊಂದು ಮಾದರಿಯಾದವು. ಹೀಗೇ ಪ್ರೀತಿ-ವಾತ್ಸಲ್ಯಗಳ ಕಥೆಗಳನ್ನು ಹೆಣೆಯುತ್ತ, ಸಹನೆ-ಸಾಮರಸ್ಯಗಳಿಂದ ಬದುಕನ್ನು ಹಸನಾಗಿಸಿಕೊಂಡ ಅಜ್ಜಿ ಕಲಿಸಿದ ಪಾಠಗಳನ್ನು ಕ್ಲಾಸ್ ರೂಮೊಂದು ಕಲಿಸಿಕೊಟ್ಟ ನೆನಪಿಲ್ಲ. ಉಪ್ಪಿನಕಾಯಿ ಆಸೆಗೆ ಮಾವಿನಹೋಳುಗಳಿಗೆ ಉಪ್ಪನ್ನು ಬೆರೆಸುವಾಗಲೆಲ್ಲ, ಆಸೆ-ಆಕಾಂಕ್ಷೆಗಳ ಹದ ತಪ್ಪದಂತೆ ಸಲಹುವ ಅಜ್ಜಿಯ ನೆನಪಿಗೆ ಶರಣಾಗುತ್ತೇನೆ. ಅಜ್ಜಿಗೆ ಮಾವಿನಮರಗಳೆಡೆಗೆ ಅಪಾರವಾದ ಪ್ರೇಮವಿತ್ತು. ಬೇಸಿಗೆರಜದ ಅಜ್ಜನಮನೆಯ ಮಾವಿನ ಸೀಸನ್ನೆಂದರೆ ನಮಗೆಲ್ಲ ಹಬ್ಬ. ಮನಸೋಇಚ್ಛೆ ಮಾವಿನಹಣ್ಣು ತಿನ್ನುತ್ತಿದ್ದ ನಾವೆಲ್ಲ ಗೊರಟೆಯನ್ನು ಬಿಸಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಅಜ್ಜಿಯದಾಗಿತ್ತು. ಸಂಜೆಯಾಗುತ್ತಿದ್ದಂತೆ ಮೊಮ್ಮಕ್ಕಳನ್ನೆಲ್ಲ ಸೇರಿಸಿಕೊಂಡು ವಾಕಿಂಗ್ ಹೊರಡುತ್ತಿದ್ದ ಅಜ್ಜಿ, ಗೊರಟೆಗಳನ್ನೆಲ್ಲ ಹಳೆಯ ಪೇಪರಿನಲ್ಲಿ ಸುತ್ತಿ ಎಲ್ಲರ ಕೈಗೂ ಕೊಡುತ್ತಿದ್ದಳು. ಅಂಗಳದಂಚಿಗೋ, ದಾರಿಯ ಬದಿಯಲ್ಲೋ, ಬೆಟ್ಟದ ಖಾಲಿ ಜಾಗದಲ್ಲೋ ಅಂಗೈಯಗಲದ ಚಿಕ್ಕಚಿಕ್ಕ ಗುಂಡಿಗಳನ್ನು ತೆಗೆದು ಒಂದೊಂದೇ ಗೊರಟೆಯನ್ನು ಅವುಗಳಲ್ಲಿ ಹಾಕಿ ಮಣ್ಣು ಮುಚ್ಚುತ್ತಿದ್ದೆವು. ಬೇಸಿಗೆ ಮುಗಿದು ಮಳೆ ಶುರುವಾದಂತೆಲ್ಲ ಗೊರಟೆಗಳೆಲ್ಲ ಜೀವ ಪಡೆದು ಚಿಗುರೊಡೆಯುತ್ತಿದ್ದವು. ಚಿಗುರಿದ ಗಿಡಗಳಿಗೆಲ್ಲ ಅಜ್ಜಿ ಗಿರಿಜೆಯೆಂತಲೋ, ಗಂಗೆಯೆಂತಲೋ ನಾಮಕರಣ ಮಾಡುತ್ತಿದ್ದಳು. ಹೀಗೇ ಗಿಡ-ಮರಗಳನ್ನೆಲ್ಲ ಹೆಣ್ಣಾಗಿ ಅರಳಿಸಿದ ಅಜ್ಜಿ ಪ್ರಕೃತಿಯನ್ನು ತಾಯಿಯಾಗಿ ಪೊರೆದವಳು. ಮೊದಲಮಳೆಗೆ ಜೀವತಳೆದ ಪ್ರತೀ ಚಿಗುರನ್ನೂ ಅಜ್ಜಿಯ ಸೆರಗೊಂದು ನೆರಳಾಗಿ ಕಾಯುತ್ತಿರಬಹುದು. ತನ್ನ ಮಮತೆಯ ನೆರಳಿನಲ್ಲಿ ಜೀವಕ್ಕೊಂದು ನೆಲೆ ಒದಗಿಸಿದ ಅಜ್ಜನಮನೆ ಕಲಿಸಿದ ಜೀವನ ಪಾಠಗಳೆಲ್ಲ ಇಂದಿಗೂ ಪ್ರಸ್ತುತ. ನೀತಿಕಥೆಗಳನ್ನು ಹೇಳುತ್ತಾ, ನೀತಿ ತಪ್ಪದೇ ಬದುಕಿದ ಅಜ್ಜ-ಅಜ್ಜಿ ಸಲಹಿದ ಮರಗಳ ಪೊಟ್ಟರೆಗಳಲ್ಲಿ ಇರುವೆಗಳ ಸೈನ್ಯವೊಂದು ಭತ್ತದ ರಾಶಿಯ ಮೇಲೆ ನಿಶ್ಚಿಂತೆಯಿಂದ ನಿದ್ರಿಸುತ್ತಿರಬಹುದು; ಪೊಟ್ಟರೆಯ ಸ್ವಲ್ಪ ಮೇಲೆ ಗುಬ್ಬಣ್ಣನ ಹುಲ್ಲಿನ ಬೆಚ್ಚನೆಯ ಮನೆಯೊಂದಿರಬಹುದು; ಮನೆಯೊಳಗೊಂದು ಪುಟ್ಟ ಗುಬ್ಬಣ್ಣ ರೆಕ್ಕೆ ಬಲಿಯುವ ಗಳಿಗೆಗಾಗಿ ಕಾಯುತ್ತಿರಬಹುದು. ಸಹನೆಯಿಂದ ಕಾದು, ಹದವಾಗಿ ಬಲಿತು ಈಗಷ್ಟೇ ನೆಲಕ್ಕುರುಳಿದ ಮಾವಿನಹಣ್ಣಿಗೆ ಅಜ್ಜಿಯ ಸೆರಗು ದೊರಕಿ ಗೊರಟೆಯೊಂದು ಗಿಡವಾಗಿ ಚಿಗುರುವಂತಾಗಲಿ. ಕಾಯುವ, ಚಿಗುರುವ ಪ್ರಕ್ರಿಯೆಗಳೆಲ್ಲವನ್ನೂ ಸಹನೆಯಿಂದ ಪೊರೆಯುವ ಅಜ್ಜನಮನೆಯ ಪ್ರೀತಿಯ ಅಲೆಯೊಂದು ಚಾಚಿರುವ ಅಂಗಾಲುಗಳನ್ನೆಲ್ಲ ಸ್ಪರ್ಶಿಸಿ ಹೃದಯದೆಡೆಗೆ ಹರಿಯುತ್ತಿರಲಿ. ******* ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಅಂಕಣ ಬರಹ

ಸಂಪ್ರೋಕ್ಷಣ ಬಣ್ಣಗಳಲ್ಲದ್ದಿದ ಬದುಕು ಅಂಜನಾ ಹೆಗಡೆ ಬಣ್ಣಗಳೇ ಇರದಿದ್ದರೆ ಜಗತ್ತು ಹೇಗಿರುತ್ತಿತ್ತು ಯೋಚಿಸಿ ನೋಡಿ. ಪುಟ್ಟ ಮಗುವೊಂದು ಬಣ್ಣದ ಬಲೂನುಗಳ ಹಿಂದೆ ಓಡುವ ದೃಶ್ಯವೇ ಕಾಣಸಿಗುತ್ತಿರಲಿಲ್ಲ. ಗಾಳಿಪಟವೊಂದು ಚೂರುಚೂರೇ ನೆಗೆಯುತ್ತ ಆಕಾಶಕ್ಕೆ ಎಗರಿ ಬಣ್ಣದ ಲೋಕವೊಂದನ್ನು ಸೃಷ್ಟಿಸುತ್ತಲೇ ಇರಲಿಲ್ಲ. ಕೆಂಡಸಂಪಿಗೆಗೆ ಕೆಂಡದಂತಹ ಬಣ್ಣವಿರುತ್ತಿರಲಿಲ್ಲ. ಕಾಮನಬಿಲ್ಲೊಂದು ಹುಟ್ಟುತ್ತಲೇ ಇರಲಿಲ್ಲ. ಬಣ್ಣಗಳಿಲ್ಲದಿದ್ದರೆ ಕಲೆ, ಸೌಂದರ್ಯ, ಪ್ರಕೃತಿ ಇವೆಲ್ಲವುಗಳ ಪರಿಕಲ್ಪನೆ ಬೇರೆಯೇ ಏನೋ ಆಗಿರುತ್ತಿತ್ತು. ಅದೇನಾಗಿರಬಹುದಿತ್ತು ಎಂದು ಒಂದು ಸೆಕೆಂಡು ಯೋಚಿಸಿದರೂ ಒಂದಿಷ್ಟು ಬಣ್ಣಗಳೂ ಯೋಚನೆಯೊಂದಿಗೆ ಅಂಟಿಕೊಳ್ಳುತ್ತವೆ.      ಯೋಚನೆಗಳಷ್ಟೇ ಅಲ್ಲದೇ ಮನುಷ್ಯನ ಭಾವನೆಗಳೊಂದಿಗೂ ಬೆಸೆದುಕೊಂಡಿರುವಂಥದ್ದು ಈ ಬಣ್ಣಗಳ ಪ್ರಭಾವ. ಹೆಣ್ಣು ಎಂದರೆ ಗುಲಾಬಿಬಣ್ಣ, ಪ್ರೀತಿಯೆಂದರೆ ಕೆಂಪು, ಸಂಭ್ರಮಕ್ಕೆ ಹಸಿರು, ದುಃಖಕ್ಕೆ ಬಿಳಿ-ಕಪ್ಪು, ಹೀಗೆ ವಿವೇಚನೆ ಅಥವಾ ತರ್ಕಗಳೆಲ್ಲ ಅಮುಖ್ಯವಾಗಿ ಭಾವನೆಗಳೊಂದಿಗೆ ಬಣ್ಣಗಳು ಬೆರೆತುಹೋಗಿವೆ. ಸೀಮಂತಕ್ಕೋ, ಮದುವೆಗೋ ಹಸಿರುಸೀರೆಯನ್ನೇ ಏಕೆ ಉಡಬೇಕು ಎಂದು ಪ್ರಶ್ನಿಸುವವರನ್ನು ಯಾವ ನ್ಯಾಯಾಲಯವೂ ಜೈಲಿಗೆ ತಳ್ಳುವುದಿಲ್ಲ. ಧಾರೆಸೀರೆಗೆ ಹಸಿರುಬಣ್ಣವೇ ಶ್ರೇಷ್ಠ ಎಂದ ಅಮ್ಮ, ಸೀಮಂತಕ್ಕೆ ಹಸಿರುಸೀರೆ ಉಡುವುದು ಉತ್ತಮ ಎಂದ ಅತ್ತೆ ಇವರುಗಳೇ ನ್ಯಾಯಾಧೀಶರಾಗಿ ನಮ್ಮ ಸಂಭ್ರಮಕ್ಕೊಂದಷ್ಟು ಬಣ್ಣಗಳನ್ನು ತುಂಬುತ್ತಾರೆ. ಅಷ್ಟಕ್ಕೂ ಬದುಕಿನಲ್ಲಿ ಯಾವತ್ತಿಗೂ ಮರೆಯಾಗದ, ಮುಗಿದುಹೋಗದ ಸಂಭ್ರಮಗಳೆಂದರೆ ಬಣ್ಣಗಳೇ ಅಲ್ಲವೇ!      ಮನುಷ್ಯನಿಗೆ ಬಾಲ್ಯಕ್ಕಿಂತ ಬಲುದೊಡ್ಡ ಸಂಭ್ರಮ ಇನ್ನೊಂದಿಲ್ಲ ಎಂದು ನಂಬಿದವಳು ನಾನು. ಕಾಲ ದೇಶ ಭಾಷೆ ಜಾತಿ ಧರ್ಮ ಯಾವ ಬೇಲಿಯನ್ನಾದರೂ ಕಟ್ಟಿಕೊಳ್ಳಿ, ಅದರಾಚೆಗಿನ ಸ್ವಚ್ಛಂದ ಬಾಲ್ಯವೊಂದರ ನೆನಪು ಎಲ್ಲರೊಳಗೂ ಸದಾ ಜಾಗ್ರತ. ಇನ್ನೊಮ್ಮೆ ಬಾಲ್ಯಕ್ಕೆ ಮರಳುವುದು ಸಾಧ್ಯವಾದರೆ ಅದನ್ನು ಇನ್ನಷ್ಟು ಸುಂದರವಾಗಿಸುವ ಹಗಲುಗನಸೊಂದು ಎಲ್ಲರ ಹೆಗಲಮೇಲೂ ನೇತಾಡುತ್ತಿರುತ್ತದೆ; ಆ ಕನಸುಗಳನ್ನೆಲ್ಲ ಒಂದಿಷ್ಟು ಬಣ್ಣಗಳು ನೇವರಿಸುತ್ತಿರುತ್ತವೆ ಆಗಾಗ. ಬಾಲ್ಯವೊಂದು ಕನಸಾಗುವ ಗಳಿಗೆಯಲ್ಲಿ ಆಗಷ್ಟೇ ನೆಲಕ್ಕುರುಳಿದ ಅಚ್ಚಹಳದಿ ಕರವೀರದ ಮೇಲೆ ಇಬ್ಬನಿಯೊಂದು ಹೂಬಿಸಿಲಿಗೆ ಹೊಳೆದು, ಆ ಜಾಗವನ್ನೆಲ್ಲ ತಿಳಿಹಳದಿ ಬಣ್ಣವೊಂದು ಮಾಯೆಯಾಗಿ ಆವರಿಸಿದಂತೆ ಅನ್ನಿಸುವುದುಂಟು ನನಗೆ. ಹೂಹೃದಯದ ಹುಡುಗನೊಬ್ಬನಿಗೆ, ತಿಳಿಗುಲಾಬಿ ಬಣ್ಣದ ಗ್ರೀಟಿಂಗ್ ಕಾರ್ಡೊಳಗೆ ಹಸಿರು ಜೆಲ್ ಪೆನ್ನಿನಲ್ಲಿ ಬಿಡಿಸಿದ್ದ ಹೃದಯವೊಂದು ಕೆಂಪು ಚೂಡಿದಾರ ಧರಿಸಿ ಕನಸಿನೊಳಗೊಂದು ಕನಸ ಹುಟ್ಟಿಸಿರಬಹುದು. ಒಂಟಿಜೀವವೊಂದು, ಬಾಲ್ಯಕ್ಕೊಂದಿಷ್ಟು ಕನಸುಗಳ ಕರುಣಿಸಿ ಮರೆಯಾದ ನೀಲಿಕಣ್ಣಿನ ಹುಡುಗನ ನೆನಪಲ್ಲಿ ಹೊಸಹೊಸ ಕನಸುಗಳ ಸ್ವೆಟರೊಂದನ್ನು ಹೆಣೆಯುತ್ತಿರಬಹುದು.      ಹೀಗೆ ನೆನಪುಗಳಿಗೆ ಜಾರಿದಂತೆಲ್ಲ ಜೊತೆಗಿಷ್ಟು ಬಣ್ಣಗಳು ಹಿಂಬಾಲಿಸುತ್ತಲೇ ಇರುತ್ತವೆ. ಅಜ್ಜಿಯೋ, ಅಮ್ಮನೋ, ಚಿಕ್ಕಮ್ಮನೋ ನಮ್ಮ ಬಾಲ್ಯದ ಕಥೆ ಹೇಳುವುದನ್ನು ಯಾವತ್ತಾದರೂ ಗಮನಿಸಿದ್ದೀರಾ! ಪುಟ್ಟಪುಟ್ಟ ಸರಕುಗಳೆಲ್ಲ ಸಕಲ ಬಣ್ಣಗಳನ್ನೊಳಗೊಂಡ ವಿವರಗಳಾಗಿ, ಸಾದಾಸೀದಾ ಸುಂದರ ಕಥೆಯೊಂದರಂತೆ ನಮ್ಮ ಬಾಲ್ಯ ಅನನ್ಯ ಅನುಭೂತಿಯಾಗಿ ನಮ್ಮೆದುರು ತೆರೆದುಕೊಳ್ಳುವ ಸಮಯವಿದೆಯಲ್ಲ, ಅದಕ್ಕಾಗಿ ಸದಾ ಕಾಯುತ್ತಿರುತ್ತೇನೆ ನಾನು. ಅಂಥದ್ದೇ ಒಂದು ಚಂದದ ಕಥೆಯಲ್ಲಿ ನನ್ನ ಬಾಲ್ಯ ಒಂದಿಷ್ಟು ಬಣ್ಣಬಣ್ಣದ ಮಣಿಗಳೊಂದಿಗೆ ಸೇರಿಕೊಂಡಿದೆ. ಜೀವನಶೈಲಿಯಂತೆಯೇ ಆಟಿಕೆಗಳೂ ಸಿಂಪಲ್ಲಾಗಿದ್ದ ಹಳ್ಳಿಗಳಲ್ಲಿ ಆಗೆಲ್ಲ ಕಾಣಸಿಗುತ್ತಿದ್ದ ಆಟಿಕೆಗಳೆಂದರೆ ಜಾತ್ರೆಗಳಲ್ಲೋ ಅಥವಾ ತೇರುಗಳಲ್ಲೋ ಮಾರಾಟವಾಗುತ್ತಿದ್ದ ಪ್ಲಾಸ್ಟಿಕ್ ಚೆಂಡುಗಳು, ಲಾರಿ-ಬಸ್ಸುಗಳ ಆಕಾರದ ಪುಟ್ಟಪುಟ್ಟ ಪ್ಲಾಸ್ಟಿಕ್ ವಾಹನಗಳು. ಅವುಗಳಿಗೆ ದಾರಕಟ್ಟಿ ಎಳೆಯುತ್ತಾ ಕೇರಿಯ ಮನೆಗಳನ್ನೆಲ್ಲ ಸುತ್ತುತ್ತಾ ಹಗಲುಗಳು ಕಳೆದುಹೋಗುತ್ತಿದ್ದವಾದರೂ ರಾತ್ರಿಗಳಲ್ಲಿ ಮಾತ್ರ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿತ್ತು. ಹಗಲುಗಳ ಶಾಂತಸ್ವರೂಪಿ ಅಮ್ಮಂದಿರೆಲ್ಲ ರಾತ್ರಿ ರಣಚಂಡಿಯ ಅವತಾರವನ್ನು ತಾಳುವ ದೃಶ್ಯ ಸಾಮಾನ್ಯವಾಗಿತ್ತು. ಅಂತಹ ದೃಶ್ಯವೊಂದನ್ನು ಸುಂದರ ಕಾವ್ಯವನ್ನಾಗಿ ಪರಿವರ್ತಿಸಿದ್ದು ಬಣ್ಣದ ಮಣಿಗಳ ಹಳೆಯದೊಂದು ಪುಟ್ಟ ಪೆಟ್ಟಿಗೆ.      ಅಮ್ಮನಿಗೆ ಆ ಪೆಟ್ಟಿಗೆಯನ್ನು ನನ್ನ ಆಟಿಕೆಯನ್ನಾಗಿಸುವ ಯೋಚನೆ ಅದೆಲ್ಲಿಂದ ಬಂತು ಅವಳಿಗೂ ಗೊತ್ತಿಲ್ಲ. ಅಥವಾ ಆ ಪೆಟ್ಟಿಗೆಯೊಳಗೆ ಮಣಿಗಳು ಎಲ್ಲಿಂದ ಬಂದು ಸೇರಿಕೊಂಡವು ಎನ್ನುವುದಕ್ಕೂ ಉತ್ತರವಿಲ್ಲ. ತುಂಬುಕುಟುಂಬದ ಯಾವುದೋ ಹೆಣ್ಣುಮಗಳ ಸರವೊಂದು ಹರಿದುಹೋದಾಗಲೋ, ಮಕ್ಕಳ ಕೈಗಳನ್ನು ಅಲಂಕರಿಸುತ್ತಿದ್ದ ಕರಿಮಣಿಯ ಬಳೆಯೊಂದು ತುಂಡಾದಾಗಲೋ ಚಲ್ಲಾಪಿಲ್ಲಿಯಾದ ಮಣಿಗಳನ್ನೆಲ್ಲ ಯಾರೋ ಅದರಲ್ಲಿ ತುಂಬಿಸಿಟ್ಟಿರಬಹುದು. ಈಗಲೂ ಅಟ್ಟದಮೇಲೆ ನೆನಪುಗಳ ಪಳೆಯುಳಿಕೆಯಂತೆ ಬೆಚ್ಚಗೆ ಕುಳಿತಿರುವ ಆ ಪೆಟ್ಟಿಗೆಯಲ್ಲಿ ಬಣ್ಣಗಳೆಲ್ಲ ಬೆಳಕಿಗೆ ಹೊರಳಲು ಹಾತೊರೆಯುತ್ತಿರುವ ಹಂಬಲವೊಂದು ಕಾಣಿಸುವುದುಂಟು ನನಗೆ. ಆಕಾಶಬಣ್ಣದ ನುಣುಪಾದ ಮಣಿಗಳು, ಪಾರಿವಾಳದ ಕಣ್ಣುಗಳು ಅತ್ತಿತ್ತ ಹರಿದಾಡುವ ಅನುಭವ ನೀಡುವ ಕಪ್ಪುಮಿಶ್ರಿತ ಕೆಂಪುಮಣಿಗಳು, ಜೊತೆಗೊಂದಿಷ್ಟು ಬೇರೆಬೇರೆ ಆಕಾರ-ಗಾತ್ರಗಳ ಕರಿಮಣಿಗಳು ಎಲ್ಲವೂ ಇದ್ದವು ಅದರಲ್ಲಿ. ಮನೆಯ ಕೆಲಸಗಳನ್ನೆಲ್ಲ ಮುಗಿಸಿ ಮಲಗಲು ರೆಡಿಯಾಗುತ್ತಿದ್ದ ಅಮ್ಮ ರೂಮಿನ ಲೈಟನ್ನು ಉರಿಯಲು ಬಿಟ್ಟು, ಪೆಟ್ಟಿಗೆಯ ಪುಟ್ಟ ಪ್ರಪಂಚವನ್ನು ನನ್ನೆದುರು ತೆರೆದಿಟ್ಟು, ಕೈಗೊಂದು ದಾರವನ್ನು ಕೊಟ್ಟು ಮಲಗಿಬಿಡುತ್ತಿದ್ದಳಂತೆ. ನಾನು ದಾರದೊಳಗೆ ಒಂದೊಂದಾಗಿ ಮಣಿಗಳನ್ನು ಪೋಣಿಸಿ, ಬಣ್ಣಬಣ್ಣದ ಸರವೊಂದನ್ನು ಸೃಷ್ಟಿ ಮಾಡಿ ಪೆಟ್ಟಿಗೆಯೊಳಗೆ ಇಟ್ಟು, ಡ್ಯೂಟಿಯೊಂದನ್ನು ಮುಗಿಸಿದವಳಂತೆ ಅಪ್ಪನ ಕೆಂಪುಚಾದರದೊಳಗೆ ಸೇರಿಕೊಂಡು ಮಲಗುತ್ತಿದ್ದೆನಂತೆ. ಒಂದೆರಡು ದಿನಗಳ ಕಥೆಯಲ್ಲ ಈ ಮಣಿಸರಗಳದ್ದು; ಎರಡು ಮೂರು ವರ್ಷಗಳ ದಿನಚರಿ. ಪುಟ್ಟಮಗುವೊಂದು ಪುಟ್ಟಪುಟ್ಟ ಕೈಗಳಲ್ಲಿ ದಾರ ಹಿಡಿದು ಮಣಿಗಳನ್ನು ಪೋಣಿಸುತ್ತಾ, ತನ್ನ ಸುತ್ತ ಬಣ್ಣದ ಲೋಕವೊಂದನ್ನು ಸೃಷ್ಟಿಸಿಕೊಳ್ಳುವಂತಹ ಸುಂದರ ದೃಶ್ಯಕಾವ್ಯ ಬೇರೆಲ್ಲಾದರೂ ನೋಡಲು ಸಿಕ್ಕೀತೇ!      ಹೀಗೆ ಬಾಲ್ಯವೆಂಬ ಸಂಭ್ರಮ ಅಚ್ಚುಕಟ್ಟಾಗಿ ಬಣ್ಣಗಳೊಂದಿಗೆ ಬೆರೆತು, ನೆನಪಾಗಿ ಎದೆಯ ಗೋಡೆಗಂಟಿಕೊಂಡಿತು. ಜಡೆಯ ಮೇಲೆ ಹೂವಾಗಿ ಅರಳುತ್ತಿದ್ದ ಕೆಂಪು, ಹಸಿರು ರಿಬ್ಬನ್ನುಗಳನ್ನು ಲವ್ ಇನ್ ಟೋಕಿಯೊ ಹೇರ್ ಕ್ಲಿಪ್ ಗಳು ರಿಪ್ಲೇಸ್ ಮಾಡಿದವು. ಉದ್ದಜಡೆಯ ಮೋಹ ಮರೆಯಾದಂತೆಲ್ಲ ಪಾರ್ಲರುಗಳ ಕೆಂಪು, ಗೋಲ್ಡನ್ ಕಲರುಗಳು ಸ್ಟ್ರೀಕ್ಸುಗಳಾಗಿ ತಲೆಯನ್ನೇರಿದವು. ಬಾಲ್ಯದ, ಯೌವನದ ಅವೆಷ್ಟೋ ಆಸೆ-ಕನಸುಗಳು ಕಣ್ಮರೆಯಾಗಿ ಹೋದರೂ ಬಣ್ಣಗಳೆಡೆಗಿನ ಮೋಹ ಮಾತ್ರ ಅಟ್ಟದ ಮೇಲಿನ ಪೆಟ್ಟಿಗೆಯಂತೆ; ಮುಪ್ಪಾಗುವುದಿಲ್ಲ. ಮಳೆಗಾಲಕ್ಕೆ ತಿಳಿಹಳದಿ ಕೊಡೆಯೊಂದು ಸಂಗಾತಿಯಾಗಿ ಜಗಲಿಗಿಳಿದರೆ, ಚಳಿಗಾಲಕ್ಕೊಂದು ಬಣ್ಣಬಣ್ಣದ ಹೂಗಳ ದುಪ್ಪಟಿ ಮಂಚವೇರುತ್ತದೆ. ಬೇಸಿಗೆಯ ತಿಳಿಮಜ್ಜಿಗೆಯ ಮೇಲೆ ಅಚ್ಚಹಸಿರು ಕೊತ್ತಂಬರಿಸೊಪ್ಪಿನ ಎಲೆಯೊಂದು ತಣ್ಣಗೆ ತೇಲುತ್ತಿರುತ್ತದೆ; ನೆನಪುಗಳಂತೆ!      ಹೀಗೆ ಹಚ್ಚಹಸಿರಾಗಿ ತೇಲುವ ನೆನಪುಗಳಲ್ಲಿ ಆಫೀಸಿನ ಹೋಳೀಹಬ್ಬವೊಂದು ಕೂಡಾ ಶಾಮೀಲಾಗಿದೆ. ಅಲ್ಲೊಬ್ಬ ಹುಡುಗನಿದ್ದ; ಲೆನ್ಸ್ ಹಾಕುತ್ತಿದ್ದ ಅವನ ಕಣ್ಣುಗಳಲ್ಲೊಂದು ಅನನ್ಯವಾದ ನಿರ್ಲಿಪ್ತತೆಯಿರುತ್ತಿತ್ತು. ಅವನೊಂದಿಗೆ ಮಾತನಾಡುವಂತಹ ಯಾವ ಅಗತ್ಯವೂ ಇರದಿದ್ದ ಕಾರಣ ಅವನು ಎದುರಾದಾಗಲೆಲ್ಲ ಅವನ ಕಣ್ಣುಗಳನ್ನೊಮ್ಮೆ ನೋಡಿ ಸುಮ್ಮನಾಗಿಬಿಡುತ್ತಿದ್ದೆ. ಆಫೀಸಿನ ತುಂಬಾ ಹೋಳೀಹಬ್ಬದ ಸಂಭ್ರಮ ತುಂಬಿದ್ದ ಒಂದು ಸಂಜೆ ನಾನೊಬ್ಬಳೇ ಮುಗಿಸಲೇಬೇಕಾದ ಕೇಸೊಂದನ್ನು ಹಿಡಿದು ಕೂತಿದ್ದೆ. ಡ್ರಾದಲ್ಲಿದ್ದ ಬಣ್ಣದ ಪ್ಯಾಕೇಟುಗಳನ್ನು ಒಯ್ಯುತ್ತಿದ್ದ ಅದೇ ಲೆನ್ಸ್ ಕಣ್ಣಿನ ಹುಡುಗ ನನ್ನ ಡೆಸ್ಕಿನೆದುರು ಒಮ್ಮೆ ನಿಂತು ಗಿಳಿಹಸಿರು ಬಣ್ಣದ ಪ್ಯಾಕೆಟೊಂದರ ಟಾಚಣಿಯನ್ನು ಬಿಡಿಸಿ, ಚಿಟಿಕೆಬಣ್ಣವನ್ನು ಕೆನ್ನೆಗಂಟಿಸಿ ಅವನ ಪಾಡಿಗೆ ಹೊರಟುಹೋದ. ಆ ಘಟನೆಯಿಂದಾಗಿ ನಮ್ಮ ಮಧ್ಯೆ ಪ್ರೇಮಾಂಕುರವಾಗುವಂತಹ ಅದ್ಭುತಗಳೇನೂ ಘಟಿಸದೇ ಹೋದರೂ, ಈಗಲೂ ಹೋಳೀಹಬ್ಬದ ಗಿಳಿಹಸಿರು ಬಣ್ಣದ ಪ್ಯಾಕೆಟನ್ನು ನೋಡಿದಾಗಲೆಲ್ಲ ನಿರ್ಲಿಪ್ತ ಕಣ್ಣುಗಳಿಂದ ಟಾಚಣಿ ಬಿಡಿಸಿದ ಹುಡುಗ ನೆನಪಾಗುತ್ತಾನೆ. ಅವನ ಬೆರಳಂಚಿಗೂ ಗಿಳಿಹಸಿರು ಬಣ್ಣದ ನೆನಪೊಂದು ಅಂಟಿಕೊಂಡಿರಬಹುದು! **** ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು; ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡೆನಿಂಗ್ ಇವರ ನೆಚ್ಚಿನ ಹವ್ಯಾಸ

ಅಂಕಣ ಬರಹ Read Post »

You cannot copy content of this page

Scroll to Top