ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಕನ್ನಡದ ಕವಿಗಳು ಸಾಹಿತ್ಯ ರಚನೆಗೆ ಬಹುಮೂಲಗಳಿಂದ ಪ್ರೇರಣೆ ಪಡೆವಾಗ ತೋರುವ ಭಾಷಾತೀತ ಧರ್ಮಾತೀತ ದೇಶಾತೀತ ಮುಕ್ತತೆಯನ್ನು, ದೇಶಕಟ್ಟುವ ತತ್ವವನ್ನಾಗಿಯೂ ರೂಪಿಸುತ್ತಾರೆ.

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ನಾಗರಿಕ ಸಮಾಜವು ಕೆಟ್ಟಪ್ರಭುತ್ವದ ಬಗ್ಗೆ ವಿಮರ್ಶಾತ್ಮಕವಾಗಿದ್ದರೆ, ದೇಶದ್ರೋಹಿ ಎನಿಸಿಕೊಂಡವರು ದೇಶಪ್ರೇಮಿಗಳಾಗಿ ತೋರುವರು; ಅದು ಪ್ರಭುತ್ವದ ಕೃತ್ಯಗಳಿಗೆ ಬೆಂಬಲಿಸಿದರೆ, ದೇಶಪ್ರೇಮಿಗಳು ಬಂಧನ ಮತ್ತು ಮರಣಗಳಲ್ಲಿ ನುಗ್ಗಾಗುವರು.

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಈಗಲೂ ನನಗೆ ತಾಯಪ್ರೀತಿ ಅಂದಾಗ ಮಹಾ ನಿಷ್ಠುರಿಯಾಗಿದ್ದ, ಸಂಸಾರ ಸಂಭಾಳಿಸುತ್ತ ಸಿಡುಕಿಯಾಗಿದ್ದ ನನ್ನಮ್ಮ ನೆನಪಾಗುವುದಿಲ್ಲ. ಮಕ್ಕಳಿಲ್ಲದೆ ನನ್ನಂತಹವರನ್ನು ಸಾಕಿದ ಪಾರ್ವತಕ್ಕ ನೆನಪಾಗುತ್ತಾಳೆ. ಕೆಂಪನೆಯ ನಕ್ಕಾಗ ನಿರಿಗೆಗಟ್ಟುವ ಅವಳ ಮುಖ ನೆನಪಾಗುತ್ತದೆ.

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಏಕತಾರಿ ಕಣ್ಮರೆ ಹಲವು ವರುಷಗಳಿಂದ ತತ್ವಪದ ಗಾಯಕರನ್ನು ಭೇಟಿಮಾಡುತ್ತ, ಅವರು ಹಾಡುವ ಪದಗಳನ್ನು ಕೇಳುತ್ತ ತಿರುಗಾಡುತ್ತಿದ್ದೇನೆ. ಈ ಗಾಯನದಲ್ಲಿ ಜೀವಾಳದಂತೆ ಬಳಕೆಯಾಗುತ್ತಿದ್ದ ಏಕತಾರಿ ಮರೆಯಾಗುತ್ತಿರುವುದು ಕಾಣುತ್ತಿದೆ. ಯಾಕಿರಬಹುದು? ಇದರ ಪರಿಣಾಮ ಏನಾಗಿದೆ? ವಿಚಾರ ಮಾಡಬೇಕಿನಿಸಿತು. ತಾಡಿಸಿದರೆ ನುಡಿವ ತೊಗಲಿನ ತಮಟೆ, ಡೋಲು, ಮೃದಂಗ, ಢಕ್ಕೆ, ಹಲಗೆ, ದಮಡಿ, ದಪ್ಪು, ಉರುಮೆಗಳಿವೆ; ಗಾಳಿ ವಾದ್ಯಗಳಾದ ಹಾರ್ಮೋನಿಯಂ, ಕೊಳಲು, ಶಹನಾಯಿಗಳಿವೆ; ಮೀಟಿದರೆ ನಾದ ಹೊರಡಿಸುವ ವೀಣೆ, ಕಿನ್ನರಿ, ಚೌಡಿಕೆ, ಏಕತಾರಿ, ಸಾರಂಗಿಯಂತಹ ತಂತಿವಾದ್ಯಗಳೂ ಇವೆ. ಇವುಗಳಲ್ಲಿ ಏಕತಾರಿಯದೇ ಒಂದು ವಿಶಿಷ್ಟ. ಇದು ಏಕ್‍ತಾರ್(ಒಂದು ತಂತಿ) ಎಂಬ ಹಿಂದೂಸ್ತಾನಿ ಪದದಿಂದ ಹುಟ್ಟಿದೆ. ಇದೇ ಶಬ್ದವಿನ್ಯಾಸದಲ್ಲಿ ಸಿತಾರ್ (ಛೇತಾರ್) ಹೆಸರೂ ಬಂದಿರಬೇಕು. ಬಿಗಿದು ಕಟ್ಟಿದ ತಂತಿ ತನ್ನ ಸೆಡವಿನಲ್ಲಿ ಕಡ್ಡಿಯೊ ಬೆರಳೊ ತಾಗಿದರೆ ಝುಂ ಎಂದು ನಾದ ಹೊಮ್ಮಿಸುತ್ತದೆ. ಭಾರತದಾದ್ಯಂತ ಇರುವ ತಂತಿವಾದ್ಯಗಳನ್ನು ದೆಹಲಿಯ ಸಂಗೀತ ಮತ್ತು ನಾಟಕ ಅಕಾಡೆಮಿ ಮ್ಯೂಸಿಯಮ್ಮಿನಲ್ಲಿ ಇಡಲಾಗಿದೆ. ಅವುಗಳ ಕೆಳಗೆ ಅವನ್ನು ಬಳಸುವ ಕಲಾವಿದರ ವಿವರಗಳೂ ಇವೆ. ಪರಿಶೀಲಿಸಿದರೆ, ಹೆಚ್ಚಿನವು ವಿವಿಧ ಗುರುಪಂಥಗಳಿಗೆ ಸಂಬಂಧಿಸಿದವು. ಬಾವುಲರು, ನಾಥರು, ತತ್ವಪದಕಾರರು, ಮಂಟೆಸ್ವಾಮಿಯ ಅನುಯಾಯಿಗಳಾದ ತಂಬೂರಿಯವರು ಇದರ ವಾದಕರು. ಈ ತಂತೀವಾದ್ಯಗಳಿಗೂ ಅನುಭಾವಕ್ಕೂ ಯಾವುದೊ ಬಗೆಯ ಸಂಬಂಧವಿದೆ. ಶಿಶುನಾಳರು ಕೂಡ ‘ತರವಲ್ಲ ತಗೀ ನಿನ ತಂಬೂರಿ’ ಎಂಬಲ್ಲಿ ಸೂಚಿಸುವುದು ತಂತಿವಾದ್ಯವನ್ನೇ. ತಂಬೂರಿ ಚೌಡಿಕೆ ಸಿತಾರ್ ಏಕತಾರಿ ವೀಣೆ ಸರೋದ್ ಮುಂತಾದ ತಂತಿವಾದ್ಯಗಳನ್ನು ಕಲಾವಿದರು ದೇಹಕ್ಕೆ ತಗುಲಿಸಿಕೊಂಡು ನುಡಿಸುವರು ಮತ್ತು ಹಾಡುವರು. ಇದು ಅವರ ದೇಹದಿಂದಲೇ ನಾದ ಹೊರಡುತ್ತಿರುವಂತೆ ತೋರುವುದು. ಮೊದಲಿಂದಲೂ ದೇಹಕ್ಕೂ ತಂತೀವಾದ್ಯಗಳಿಗೂ ಜೈವಿಕ ಸಮೀಕರಣವಿದೆ. ಇದನ್ನು ಬಸವಣ್ಣನವರ `ಎನ್ನ ಕಾಯವ ದಂಡಿಗೆಯ ಮಾಡಯ್ಯ’ ವಚನ ನಾಟಕೀಯವಾಗಿ ಸೂಚಿಸುತ್ತದೆ. ಅಲ್ಲಿ ಮನುಷ್ಯ ಕಾಯದ ಅಂಗಾಂಗಗಳಾದ ಕಾಯ ಶಿರ ಬೆರಳುಗಳು ದಂಡಿಗೆ ಸೋರೆಬುರುಡೆ ಕಡ್ಡಿಗಳಾಗಿ ಪಲ್ಲಟಗೊಂಡು ವಾದ್ಯವಾಗಿ ರೂಪಾಂತರ ಪಡೆಯುತ್ತವೆ. ಕೊನೆಯಲ್ಲಿ ಕೂಡಸಂಗಮದೇವನಿಗೆ ಬತ್ತೀಸರಾಗವನ್ನು ಹಾಡಲು ಕೋರಲಾಗುತ್ತದೆ. ಅಲ್ಲಿರುವುದು `ಉರದಲ್ಲಿ ಒತ್ತಿಬಾರಿಸು’ ಎಂಬ ವಿನಂತಿ. ಉರವು (ಎದೆ)ಭಾವನೆಗಳ ಆಗರವೆನ್ನಲಾಗುವ ಹೃದಯವಿರುವ ಜಾಗ. `ಒತ್ತಿಬಾರಿಸು’ ಎಂಬ ಸೂಚನೆಯಲ್ಲಿ ಶೃಂಗಾರದ ಛಾಯೆಯೂ ಇದೆ.  ಮಾನವ ದೇಹವು ತಂತಿವಾದ್ಯವಾಗಿ ರೂಪಾಂತರಗೊಳ್ಳುವ ಈ ಕ್ರಿಯೆ ಎಲ್ಲಮ್ಮ ಸಂಪ್ರದಾಯದಲ್ಲಿ ಇನ್ನೂ ನಿಚ್ಚಳ. ದೇವಿಯು ಹಗೆಯಾದ ಕಾರ್ತವೀರ್ಯನನ್ನು ಕೊಂದು, ಅವನ ಬೆನ್ನೆಲುಬಿನಿಂದ ಚೌಡಿಕೆಯ ದಂಡವನ್ನೂ ನರದಿಂದ ತಂತಿಯನ್ನೂ ತ¯ಚೆಂಡಿನಿಂದ ಬುರುಡೆಯನ್ನೂ ಬೆರಳಿನಿಂದ ಕಡ್ಡಿಯನ್ನೂ ಮಾಡಿಕೊಂಡು ಹಾಡುತ್ತಾಳೆ. ಸಿದ್ಧರ ಕಥನಗಳಲ್ಲಿ ಅವರು ಕೊಲ್ಲಾಪುರದ ಮಾಯಿಯನ್ನು ಕೊಂದು ಅವಳ ಅಂಗಾಂಗಗಳಿಂದ ವಾದ್ಯಮಾಡಿ ನುಡಿಸುವರು. ಈಗಲೂ ಏಕತಾರಿಯಲ್ಲಿ ಬಳಸುವ ಒಣಸೋರೆಯನ್ನು ಬುರುಡೆ (ಕಪಾಲ) ಎಂದೇ ಕರೆಯುವುದು. ಕಿನ್ನರಿ  ಜೋಗಿಗಳು ಅಥವಾ ನಾಥರು ಕಪಾಲದಲ್ಲಿ ಆಹಾರ ಸ್ವೀಕರಿಸುವ ಪದ್ಧತಿಯಿತ್ತು. ಈಗ ಅವರ ಆಚರಣೆಗಳ್ಲಲಿ ಅದರ ಜಾಗದಲ್ಲಿ ಸೋರೆಯ ಬುರುಡೆ ಬಂದಿವೆ.  ಹೀಗೆ ದೇಹದ ಜತೆ ಸಮೀಕರಣಗೊಳ್ಳುವ ಕಿನ್ನರಿ ಇಲ್ಲವೇ ಏಕತಾರಿ ಹೊರಡಿಸುವ ನಾದವು, ತನ್ನನ್ನು ನುಡಿಸುತ್ತಿರುವ ಕಲಾವಿದನ ದೇಹದ ಜತೆ ಏಕೀಭವಿಸುತ್ತದೆ. ಅವರಿಬ್ಬರ ಮಿಲನದಿಂದ ಹುಟ್ಟುವ ನಾದವು ಯೌಗಿಕ ಪರಿಭಾಷೆಯಲ್ಲಿ ವಿಶಿಷ್ಟ ಅರ್ಥವನ್ನೂ ಪಡೆದಿದೆ. ಏಕತಾರಿ ನುಡಿಸುತ್ತ ಹಾಡುವಾಗ ಹಾಡಿನೊಳಗಿನ ತತ್ವವು ಅಂತರಂಗೀಕರಣಗೊಳ್ಳುತ್ತ, ಕಣ್ಮುಚ್ಚಿ ಹಾಡುವವರು ತಮ್ಮೊಳಗೇ ಸಂವಾದಿಸುತ್ತ  ಮೈಮರೆಯುವರು. ತಮ್ಮನ್ನು ತಾವು ಅರಿತು ತಾವೇ ದೈವವಾಗುವುದು ತತ್ವಪದಗಳ ಒಳಗಿರುವ ತತ್ವಾಶಯ. ಸಾಧನೆಯಲ್ಲಿ ತೊಡಗಿರುವವರು ಉಸಿರಾಟವನ್ನು ನಿಯಂತ್ರಿಸುತ್ತ ಮನಸ್ಸನ್ನು ಗೊತ್ತಿನಲ್ಲಿ ನಿಲ್ಲಿಸುವ ಅವಸ್ಥೆ ತಲುಪಿದಾಗ- ಅಂದರೆ ಸಮಾಧಿ ಅವಸ್ಥೆಯಲ್ಲಿ ಬಗೆಬಗೆಯ ನಾದಗಳು ಕೇಳಿಸುತ್ತವೆಯಂತೆ. ಅಲ್ಲಮ ಈ ಅನುಭವವನ್ನು `ತಾಳೋಷ್ಟ್ರ ಸಂಪುಟವೆಂಬುದು ನಾದಬಿಂದು ಕಳಾತೀತ’ ಎಂದು ಹೇಳುವನು. ಯೋಗದ ಪರಿಭಾಷೆಯಲ್ಲಿ `ಅನಾಹತ ನಾದ’ವೆಂಬ ಮಾತಿದೆ. ನಾದದ ಪ್ರಸ್ತಾಪವು ಯೌಗಿಕ ಸಾಧಕರಲ್ಲಿ ನಾನಾ ಅರ್ಥಗಳಲ್ಲಿ ಕಾಣಿಸುವ ನುಡಿಗಟ್ಟಾಗಿದೆ. ಸಾಧಕರು ತಮ್ಮನ್ನು ತಾವು ಅರಿಯುವ ಸಾಧನೆಯಲ್ಲಿ ಭಾಷಾತೀತವಾದ ನಾದವು ಟ್ರಾನ್ಸ್ ಅವಸ್ಥೆಗೆ ಒಯ್ಯುವ ಸಾಧನವಾಗಿ ದುಡಿಯುತ್ತ ಬಂದಿರುವುದು. ಸೂಫಿಗಳಲ್ಲೂ ಸಂಗೀತವನ್ನು ಸಾಧನೆಯ ಉಪಕರಣವಾಗಿ ಬಳಸುವರು. ಆದರೂ ಅಲ್ಲಿ ತಂತೀವಾದ್ಯ ಕಡಿಮೆ. ಇರಾನ್ ಆಫಘಾನಿಸ್ಥಾನ್ ಬಲೂಚಿಸ್ಥಾನ್‍ಗಳ ಸೂಫಿಗಾಯನದಲ್ಲಿ ತಂತೀವಾದ್ಯವಿದೆ. ಬಂಗಾಲದ ಬಾವುಲರನ್ನು ತಂತೀವಾದ್ಯ ಹೊರತುಪಡಿಸಿ ಕಲ್ಪಿಸಿಕೊಳ್ಳುವಂತೆಯೇ ಇಲ್ಲ. ಹೀಗೆ ಯೋಗಲೋಕದ ಹಾಡಿಕೆಯಲ್ಲಿ ವಿಶಿಷ್ಟ ಸ್ಥಾನವುಳ್ಳ ಏಕತಾರಿ ಕಣ್ಮರೆಯಾಗುತ್ತಿದೆ. ಹಳೇಮೈಸೂರು ಭಾಗದಲ್ಲಿ ಅದು ಉಳಿದುಕೊಂಡಿದ್ದು, ಉತ್ತರ ಕರ್ನಾಟಕದಲ್ಲಿ ಗಾಯಬ್ ಆಗಿದೆ. ಅಪರೂಪಕ್ಕೆ ಏಕತಾರಿಗಳು ಕಂಡರೂ ಅವು ಬುರುಡೆ ಒಡೆದ, ದಂಡ ಮುರಿದ, ತಂತಿ ಹರಿದ ಅವಸ್ಥೆಯಲ್ಲಿವೆ. ಅವುಗಳ ಜಾಗದಲ್ಲಿ ಯೂರೋಪಿನಿಂದ ಆಗಮಿಸಿರುವ ಹಾರ್ಮೋನಿಯಂ ವಿರಾಜಮಾನವಾಗಿದೆ. ಹಳಬರನ್ನು ಕೇಳಿದರೆ, ತಮ್ಮ ಕಾಲದಲ್ಲಿ ಇದ್ದುದು ಏಕತಾರಿ ಮಾತ್ರ ಎನ್ನುವರು.  “ನಾವು ಫಸ್ಟಿಗೆ ತಂಬೂರಿ ಕಾಯೊಳಗೆ ಹಾಡತಿದ್ದಿವಿ. ಈಗ ಅದನ್ನ ಬಿಟ್ಟು 15-20 ವರ್ಷವಾಯಿತು. ತಂಬೂರಿ ಕಾಯೀನೂ ಈಗ ಸಿಗದಂಗಾಗಿದೆ’’ ಎಂದು ಬಲ್ಲಟಗುಡ್ಡದಿಂದ ಬಂದಿದ್ದ ಗಾಯಕ ಅಂಬಾಮಠದ ಜಾತ್ರೆಯಲ್ಲಿ ಹೇಳಿದ. ಆದರೆ ಈಗ ತಂಬೂರಿ ಇಲ್ಲವಾದ ಬಗ್ಗೆ ಅವನಲ್ಲಿ ಆತಂಕವೇನಿರಲಿಲ್ಲ.   ಹಿಂದೂಸ್ತಾನಿ ಸಂಗೀತ ಪದ್ಧತಿಯು ಉತ್ತರ ಕರ್ನಾಟಕದಲ್ಲಿ ಪ್ರವೇಶಿಸಿದ ಬಳಿಕ, ಅದರ ಜತೆ ಹಾರ್ಮೊನಿಯಂ ನುಗ್ಗಿ ಏಕತಾರಿಯನ್ನು ಹಿಂತಳ್ಳಿತು. ಇದರಿಂದ ತತ್ವಪದ ಹಾಡಿಕೆಗೆ ಹಿಂದೂಸ್ತಾನಿ ಸಂಗೀತಗಾರರ ಹಾಗೆ ಕಛೇರಿಯ ರೂಪ ಸಿಕ್ಕಿತು. ಕಲಬುರ್ಗಿ ಸೀಮೆಯ ಬಹಳಷ್ಟು ತತ್ವಪದ ಗಾಯಕರು, ಹಿಂದೂಸ್ತಾನಿ ಸಂಗೀತಗಾರರಂತೆ, ಬೆಂಗಳೂರಿನ ಸುಗಮ ಸಂಗೀತ ಕಲಾವಿದರಂತೆ, ತಾವೇ ಪೇಟಿ ಬಾರಿಸುತ್ತ, ತತ್ವಪದ ಹಾಡುತ್ತ ದೊಡ್ಡ ಸಭೆಗಳಲ್ಲಿ ಹಾಡುವರು. ಏಕತಾರಿಯು ಸಣ್ಣಗುಂಪಿನ ಸಾಧಕರ ನಡುವಿದ್ದರೆ, ಹಾರ್ಮೊನಿಯಂ ತತ್ವಪದಗಳನ್ನು ದೊಡ್ಡ ಸಭಾ ಕಾರ್ಯಕ್ರಮಗಳಿಗೆ ವಿಸ್ತರಿಸಿದೆ. ಏಕತಾರಿ ಹಾಡುವವರಿಗೆ ತತ್ವದೊಳಗಿನ ಅರ್ಥವನ್ನು ಒಳಬಿಟ್ಟುಕೊಂಡು ಅಂತರ್ಮುಖಿಯಾಗಿಸುತ್ತಿದೆ; ಹಾರ್ಮೊನಿಯಂ ತಬಲಗಳು ಹಾಡುವವರನ್ನು ವೃತ್ತಿಪರನನ್ನಾಗಿಸುತ್ತಿವೆ. ಇದಕ್ಕೆ ತಕ್ಕಂತೆ ಸಂಸ್ಕøತಿ ಇಲಾಖೆಯು ಗ್ರಾಮೀಣ ಕಲಾವಿದರನ್ನು ಉತ್ತೇಜಿಸುವ ಭಾಗವಾಗಿ ಹಾರ್ಮೊನಿಯಂ ವಿತರಿಸುತ್ತಿದೆ. ಇವೆಲ್ಲವೂ ಏಕತಾರಿಯ ನಿರ್ಗಮವನ್ನು ತೀವ್ರಗೊಳಿಸಿವೆ. ಒಂದು ವಾದ್ಯದ ಕಣ್ಮರೆಯಿಂದ ಅಥವಾ  ಆಗಮನದಿಂದ ಹಾಡು ಪರಂಪರೆಯಲ್ಲಿ ಏನಾಗುತ್ತದೆ? ತತ್ವಪದ ಸಾಹಿತ್ಯವು ಏಕತಾರಿಯ ಜತೆಗೆ ಸಂಹವನವಾಗುವಂತೆ, ಹಾರ್ಮೊನಿಯಂ ಗದ್ದಲದಲ್ಲಿ ಸಂಹವನವಾಗುವುದಿಲ್ಲ. ಜನ ಕೂಡ ತತ್ವಪದಗಳ ಅರ್ಥದ ಹಂಗಿಲ್ಲದೆ ಒಟ್ಟಾರೆ ಸದ್ದನ್ನು ಆಲಿಸುವಂತೆ ತೋರುತ್ತಿದೆ. ವಾದ್ಯಗಳ ಈ ಆಗಮನ ಇಲ್ಲವೇ ಕಣ್ಮರೆಯು ಸಾಹಿತ್ಯ ಸಂಗೀತ ಮತ್ತು ಅನುಭಾವ ದರ್ಶನದ ಮೂರೂ ಸ್ತರಗಳಲ್ಲಿ  ಪಲ್ಲಟಗಳನ್ನು ತಂದಿದೆ. ಇಂತಹ ಸನ್ನಿವೇಶದಲ್ಲಿ ಏಕತಾರಿಯನ್ನು ಬಿಡದೆಯೂ ಸಾಹಿತ್ಯದ ಅರ್ಥಕ್ಕೆ ಚ್ಯುತಿತಾರದೆ ಕಲಾವಿದರಾಗಿ ವಿಸ್ತರಣೆ ಪಡೆದಿರುವ ಮರೆಪ್ಪದಾಸರ ತಂಡ ವಿಶಿಷ್ಟವೆನಿಸುತ್ತದೆ. ಯಲಬುರ್ಗ ಸೀಮೆಯ ಮಾರೆಪ್ಪ ತಂಡ ಏಕತಾರಿ ಬಳಸುವ ಬಗೆ ಅಪೂರ್ವ. ಅವರು ತಂತಿಗಳನ್ನು ಬೆರಳು ಇಲ್ಲವೇ ಕಡ್ಡಿಯಿಂದ ಮೀಟದೆ, ಸಣ್ಣದೊಂದು ಕೋಲಿಂದ ಬಾರಿಸುತ್ತ ಹಾಡುವರು. ಮತ್ತೂ ವಿಶೇಷವೆಂದರೆ, ಇದರ ಜತೆ ಪಶ್ಚಿಮದ ವಯಲಿನನ್ನು(ಪಿಟೀಲು) ಬಳಸುವುದು. ನಾನು ಕಂಡಂತೆ ಪಿಟೀಲು ಬಳಸಿ ಹಾಡುವ ಏಕೈಕ ತತ್ವಪದ ಗಾಯಕರ ತಂಡವಿದು. ಒಂದೆಡೆ ಯೂರೋಪಿನಿಂದ ಬಂದ, ಹೆಸರಲ್ಲೇ ಸಾಮರಸ್ಯ ಅರ್ಥವುಳ್ಳ ಹಾರ್ಮೋನಿಯಂ, ಏಕತಾರಿಯ ಗಂಟಲನ್ನು ಹಿಸುಕಿದೆ; ಇನ್ನೊಂದೆಡೆ ಯೂರೋಪಿನ ವಯಲಿನ್, ಏಕತಾರಿಯ ಜತೆ ಅಪೂರ್ವ ಗೆಳೆತನ ಸಾಧಿಸಿದೆ. ಯೂರೋಪು ಭಾರತದ ಜತೆ ಸಾವು ಬದುಕಿನ ಆಟವನ್ನು ವಾದ್ಯಗಳ ಜತೆ ಮಾತ್ರವಲ್ಲ, ಇಡೀ ಸಂಸ್ಕøತಿಯ ಜತೆಯೇ ಮಾಡಿದೆ. ಎಂತಲೇ ನಾವದನ್ನು ಇಡಿಯಾಗಿ ದ್ವೇಷಿಸುವ ಇಲ್ಲವೇ ಪ್ರೀತಿಸುವ ಸರಳ ಸನ್ನಿವೇಶದಲ್ಲಿ ನಾವಿಲ್ಲ. ಅಸಮ್ಮತಿ-ಸಮ್ಮತಿಗಳನ್ನು ವಿಷಯವಾರು ಹಾಗೂ ಸಂದರ್ಭಾನುಸಾರ ಮಾಡುವ ಇಕ್ಕಟ್ಟಿನೊಳಗೆ ಸಿಲುಕಿದ್ದೇವೆ. ಈ ಇಕ್ಕಟ್ಟು ಸಾವು ಬದುಕಿನ ಅನುಭವ ಕೊಡುತ್ತಿದೆ. ಚೋದ್ಯವೆಂದರೆ, ಕೆಲವರಿಗೆ ಸಾವಿನ ಅನುಭವವಾಗುವ ಅಂಶವು, ಉಳಿದವರಿಗೆ ಮರುಹುಟ್ಟಿಗೆ ಕಾರಣವಾಗುವುದು. ಎಲ್ಲ ಸಮಾಜಗಳಲ್ಲೂ ಜೀವಂತ ಪರಂಪರೆಗಳು ಕಳೆದುಕೊಳ್ಳುವ ಪಡೆದುಕೊಳ್ಳುವ ದ್ವಂದ್ವಾತ್ಮಕ ಪ್ರಕ್ರಿಯೆಯಲ್ಲಿಯೇ ರೂಪುಗೊಳ್ಳುತ್ತಿರುತ್ತವೆ. ಕಳೆತ ಮತ್ತು ಪಡೆತಗಳ ಫಾಯದೆ ಲುಕ್ಸಾನುಗಳು ಲೆಕ್ಕಕ್ಕೆ ಸಿಗದಷ್ಟು ಸಂಕೀರ್ಣವಾಗಿರುತ್ತವೆ. ********************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಅಂಕಣ ಬರಹ ಒಂದು ಸಲ, ರೈತರ ಕಮ್ಮಟದಲ್ಲಿ ಮಾತಾಡುವ ಅವಕಾಶ ಒದಗಿತು. ನನ್ನ ಮಾತಿನ ಸಾರವನ್ನು ಹೀಗೆ ಹಿಡಿದಿಡಬಹುದು: “ಯಾವುದೇ ಚಳುವಳಿಗೆ ರಾಜಕೀಯ, ಆರ್ಥಿಕ ಸಾಂಸ್ಕೃತಿಕ ಆಯಾಮಗಳಿರುತ್ತವೆ. ಸದ್ಯದ ಮಾರುಕಟ್ಟೆ ಆರ್ಥಿಕತೆಯ ಸನ್ನಿವೇಶವು ರೈತರನ್ನು ದಲಿತರ ಹಾಗೂ ಮಹಿಳೆಯರ ಹಾಗೆ ದಮನಿತ ವರ್ಗಕ್ಕೆ ಇಳಿಸಿದೆ. ಇದಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಸಂಭವಿಸಿರುವ ಅವರ ಸಾವುಗಳೇ ಸಾಕ್ಷಿ. ರೈತರ ಮುಖ್ಯ ಬೇಡಿಕೆಗಳೆಂದರೆ, ಜಮೀನನ್ನು ತಮ್ಮಿಚ್ಛೆಗೆ ವಿರುದ್ಧವಾಗಿ ಕಿತ್ತು ಉದ್ಯಮಿಗಳಿಗೆ ಕೊಡುವುದರಿಂದ ರಕ್ಷಿಸಿಕೊಳ್ಳುವುದು; ಬೀಜ ಗೊಬ್ಬರ ಕೊಳ್ಳಲು ಕಡಿಮೆ ಬಡ್ಡಿಯಲ್ಲಿ ಸಾಲ ಪಡೆಯುವುದು, ಬೆಳೆದ ಫಸಲಿಗೆ ಸೂಕ್ತಬೆಲೆ ಪಡೆಯುವುದು. ಆದರೆ ಮಾರುಕಟ್ಟೆ ಮತ್ತು ಹಣಕಾಸು ಅವರ ನಿಯಂತ್ರಣದಲ್ಲಿಲ್ಲ. ಆ ಸಮಸ್ಯೆಗೆ ಕಾರಣವಾಗಿರುವುದು ಪ್ರಭುತ್ವಗಳು ಅನುಸರಿಸುತ್ತಿರುವ ಮಾರುಕಟ್ಟೆಪರ ನೀತಿ. ಜನರಿಂದ ಆಯ್ಕೆಯಾದ ಪ್ರಭುತ್ವಗಳನ್ನು ನಿಯಂತ್ರಿಸುತ್ತಿರುವುದು ಮಾರುಕಟ್ಟೆ ಶಕ್ತಿಗಳು ಅರ್ಥಾತ್ ಉದ್ಯಮಪತಿಗಳು. ಆದ್ದರಿಂದ ಪ್ರಭುತ್ವದ ನೀತಿಗಳನ್ನು ಟೀಕಿಸುವ, ತಿದ್ದುವ, ಚುನಾವಣೆಗಳಲ್ಲಿ ಬದಲಿಸುವ ಕೆಲಸವನ್ನೂ ರೈತಚಳುವಳಿ ಮಾಡಬೇಕಿದೆ. ಸಾಧ್ಯವಾದರೆ ತಾನೇ ಅಧಿಕಾರ ಹಿಡಿಯುವತ್ತ ಚಲಿಸಬೇಕಿದೆ. ಚಳುವಳಿಯ ಈ ರಾಜಕೀಯ-ಆರ್ಥಿಕ ಆಯಾಮದ ಬಗ್ಗೆ ಚಿಂತಕರು ಈಗಾಗಲೇ ಸಾಕಷ್ಟು ಚರ್ಚಿಸಿದ್ದಾರೆ. ಲೇಖಕನಾಗಿ ನಾನು ಅದರ ಬಗ್ಗೆ ಹೇಳಲಾರೆ. ಯಾವುದೇ ಆರ್ಥಿಕ ರಾಜಕೀಯ ಚಳುವಳಿಗಳಿಗೆ ಇರಬೇಕಾದ ಸಾಂಸ್ಕೃತಿಕ ಆಯಾಮದ ಬಗ್ಗೆ ನನ್ನ ಆಲೋಚನೆ ಹಂಚಿಕೊಳ್ಳುತ್ತೇನೆ. ಸಾಂಸ್ಕೃತಿಕ ಆಯಾಮವು ನಮ್ಮ ಆಲೋಚನ ಕ್ರಮಕ್ಕೆ ಸಂಬಂಧಿಸಿದ್ದು; ಸಮಾಜದ ಮೌಲ್ಯಾದರ್ಶಗಳಿಗೆ, ನಾವು ನಿತ್ಯ ಬಳಸುವ ಭಾಷೆಗೆ ಸಂಬಂಧಿಸಿದ್ದು. ವ್ಯವಸ್ಥೆಯನ್ನು ಆರೋಗ್ಯಕರ ದಿಸೆಯಲ್ಲಿ ಬದಲಿಸಲು ತೊಡಗಿರುವ ಚಳುವಳಿಗಾರರು, ವೈಯಕ್ತಿಕ ಜೀವನದಲ್ಲಿ ಹೇಗೆ ಚಿಂತಿಸುತ್ತಾರೆ ಮತ್ತು ಬದುಕುತ್ತಾರೆ ಎನ್ನುವುದಕ್ಕೂ ಸಂಬಂಧಿಸಿದ್ದು. ಅನೇಕ ಚಳುವಳಿಗಾರರು, ಪುರುಷವಾದ, ಕೋಮುವಾದ, ಜಾತಿವಾದ, ನೈತಿಕ ಭ್ರಷ್ಟತೆಗೆ ಒಳಗಾಗಿರುವುದುಂಟು. ಮನೆಯಲ್ಲಿ, ಅಥವಾ ಸಾರ್ವಜನಿಕ ಪರಿಸರದಲ್ಲಿ, ಅಪ್ರಜಾಪ್ರಭುತ್ವವಾದಿ ಆಗಿರಬಹುದು. ಆದ್ದರಿಂದ ಚಳುವಳಿಗೆ ದೃಷ್ಟಿಕೋನವನ್ನು ಪ್ರಭಾವಿಸುವ ಸಾಂಸ್ಕøತಿಕ ನೀತಿಯೂ ಮುಖ್ಯವಾದುದು. ಈ ಹೊತ್ತಲ್ಲಿ ನೆನಪಾಗುವುದು ಪ್ರೊ. ನಂಜುಂಡಸ್ವಾಮಿ ಹಾಗು ಕಡಿದಾಳು ಶಾಮಣ್ಣ. ಇಬ್ಬರೂ ಕೇವಲ ರೈತರ ಆರ್ಥಿಕ ಬೇಡಿಕೆಗಾಗಿ ಚಳುವಳಿ ಕಟ್ಟಿದವರಲ್ಲ. ಸಮಾಜದ ಮೌಲ್ಯಗಳ ಬದಲಾವಣೆಗೂ ಯತ್ನಿಸಿದವರು. ಇಬ್ಬರೂ ಮಾರ್ಕ್ಸ್ ಕುವೆಂಪು ಲೋಹಿಯಾ ಓದಿಕೊಂಡಿದ್ದವರು. ಶಾಮಣ್ಣನವರು ಸರೋದ್ವಾದನ, ಫೋಟೊಗ್ರಫಿ, ರೈತಚಳುವಳಿ, ಕನ್ನಡ ಚಳುವಳಿ ನಡುವೆ ವ್ಯತ್ಯಾಸವನ್ನೇ ಮಾಡಿದವರಲ್ಲ. ಲೋಹಿಯಾ ಸಮಾಜವಾದಿ ಹಿನ್ನೆಲೆಯಿಂದ ಬಂದ ರೈತಸಂಘಟನೆಯ ಮೊದಲ ತಲೆಮಾರಿನ ನಾಯಕರ ರಾಜಕೀಯ ಕ್ರಿಯೆಗೆ ಆಳವಾದ ಸಾಂಸ್ಕೃತಿಕ ಬೇರುಗಳಿದ್ದವು. ಅವರು ಕನ್ನಡದ ವಿಚಾರ ಸಾಹಿತ್ಯದಿಂದ ಪ್ರೇರಣೆ ಪಡೆಯುತ್ತಿದ್ದವರು. ಕುವೆಂಪು ಅವರ `ಸಾಲದಮಗು’ `ಧನ್ವಂತರಿಯ ಚಿಕಿತ್ಸೆ’ `ನೇಗಿಲಯೋಗಿ’ ಮುಂತಾದ ಕೃತಿಗಳು ರೈತಚಳುವಳಿಗೆ ಇಂಬಾಗಿದ್ದುದನ್ನು ಬಲ್ಲವರು. ಆದರೆ ಹೊಸತಲೆಮಾರಿನ ಎಷ್ಟು ರೈತ ಕಾರ್ಯಕರ್ತರು ಕುವೆಂಪು ಸಾಹಿತ್ಯವನ್ನು ಎಷ್ಟು ಓದಿದ್ದಾರೆಯೊ ತಿಳಿಯದು. ಕುವೆಂಪು ಮಾತ್ರವಲ್ಲ, ತೇಜಸ್ವಿ ಲಂಕೇಶ್ ಅನಂತಮೂರ್ತಿ ಬೆಸಗರಹಳ್ಳಿ ದೇವನೂರು ಅವರ ಕತೆ ಕಾದಂಬರಿ ಲೇಖನಗಳೂ ರೈತ ಕಾರ್ಯಕರ್ತರ ಪಠ್ಯಗಳೇ. ಯಾಕೆಂದರೆ, ಇವರ ಸಾಹಿತ್ಯದಲ್ಲಿ ರೈತಾಪಿ ಹಳ್ಳಿಗಳ ಸಂಭ್ರಮ ಮತ್ತು ಕ್ರೌರ್ಯಗಳ ಚಿತ್ರಣವಿದೆ; ಗೋವಿನ ರಾಜಕಾರಣ ಮತ್ತು ಹಸುವಿನ ವಾಸ್ತವತೆಯ ಬಗ್ಗೆ ಚಿಂತನೆಯಿದೆ. ಕೋಮುವಾದ ಕೇವಲ ಮುಸ್ಲಿಮರ ಹಗೆಯಲ್ಲ, ರೈತರ ವಿರೋಧಿ ಕೂಡ ಎಂಬ ತಿಳುವಳಿಕೆಯಿದೆ. ಪ್ರತಿ ಜನಪರ ಚಳುವಳಿಗಳಿಗೂ ಅದರದ್ದೇ ಆದ ಅಜೆಂಡಾ ಇರುತ್ತದೆ, ಇರಬೇಕು ಕೂಡ. ಇದರ ಜತೆಗೆ ಅದು ನಾಡಿನ ಉಳಿದ ಸಮಸ್ಯೆಗಳ ಬಗ್ಗೆ ಯಾವ ದೃಷ್ಟಿಕೋನ ಇರಿಸಿಕೊಂಡಿದೆ ಎಂಬ ಅಂಶವೂ ಮುಖ್ಯ. ಇದಕ್ಕಾಗಿ ಪ್ರತಿ ಚಳುವಳಿಗೂ ಇನ್ನೊಂದು ಜನಪರ ಚಳುವಳಿಯ ಜತೆ ಬೆರೆಯುವ ಕೊಂಡಿ ಇರಬೇಕು. ನಂಜುಂಡಸ್ವಾಮಿ, ಶಾಮಣ್ಣ ಅವರಿಗೆ ನಾಡಿನ ಪ್ರಜಾಪ್ರಭುತ್ವವಾದಿ ವಿಚಾರವಾದಿ ದಲಿತ ಮತ್ತು ಭಾಷಾ ಚಳುವಳಿಗಳ ಜತೆ ನಂಟಿತ್ತು. ಮಹಿಳಾ ಚಳುವಳಿಗಳ ಜತೆ ಅಷ್ಟು ಸಕೀಲ ಸಂಬಂಧವಿರಲಿಲ್ಲ. ಹೊಸತಲೆಮಾರಿನ ರೈತಚಳುವಳಿಗಾರರಿಗೆ ಕರ್ನಾಟಕವನ್ನು ಆರೋಗ್ಯಕರವಾಗಿ ಕಟ್ಟಬೇಕೆಂದು ಯತ್ನಿಸುತ್ತಿರುವ ಎಲ್ಲ ಜನಪರ ಚಳುವಳಿಗಳ ಸಹವಾಸ ಬೇಕಾಗಿದೆ. ಚಳುವಳಿಯ ಸಭೆಗಳಲ್ಲಿ ರೈತನೊಬ್ಬ ಗಂಡಸು ಎಂಬ ಗ್ರಹಿಕೆಯಲ್ಲೇ ಚರ್ಚೆ ನಡೆಯುತ್ತಿರುತ್ತದೆ. `ರೈತ’ ಶಬ್ದದಲ್ಲಿ ರೈತಮಹಿಳೆಯೇ ಇದ್ದಂತಿಲ್ಲ. ಇದು ಕೇವಲ ಪದರಚನೆಗೆ ಸಂಬಂಧಿಸಿದ ಮಾತಲ್ಲ. ಆಲೋಚನೆಗೂ ಕ್ರಿಯೆಗೂ ಸಂಬಂಧಿಸಿದ್ದು. ರೈತಸಂಘಟನೆಯಲ್ಲಿ ರೈತಾಪಿ ಚಟುವಟಿಕೆಯ ಬೆನ್ನುಲುಬಾದ ಮಹಿಳೆಯರ ಸಂಖ್ಯೆ ಯಾಕಿಷ್ಟು ಕಡಿಮೆ? ರೈತ ಸಂಘಟನೆಗಳಲ್ಲಿ ದಲಿತರು ಯಾಕೆ ಕಡಿಮೆ? ಇದಕ್ಕೆ ನಮ್ಮ ಸಮಾಜದಲ್ಲೇ ಸಾಮಾಜಿಕ ಆರ್ಥಿಕ ಕಾರಣಗಳಿರಬಹುದು. ಮಹಿಳೆಯರನ್ನು ದಲಿತರನ್ನು ರೈತಕೂಲಿಗಳನ್ನು ಒಳಗೊಳ್ಳದ ತನಕ ರೈತ ಚಳುವಳಿ ಪೂರ್ಣಗೊಳ್ಳುವುದು ಸಾಧ್ಯವೇ? ದಲಿತರ ಸಮಸ್ಯೆಗೆ ರೈತರು ತುಡಿಯದೆ ಹೋದರೆ, ರೈತರ ಸಮಸ್ಯೆಗೆ ದಲಿತರು ಮಿಡಿಯದೆ ಹೋದರೆ, ಹೊಸ ಸಂಚಲನ ಸಾಧ್ಯವಿಲ್ಲ. ಮಹಿಳೆಯರ ಮತ್ತು ದಲಿತರ ಭಾಗವಹಿಸುವಿಕೆ, ರೈತ ಚಳುವಳಿಗೆ ಬೇರೊಂದೇ ಸಂವೇದನೆಯನ್ನು ಹಾಯಿಸಬಲ್ಲದು. ಚಳುವಳಿಗಳಿಗೆ ಲೇಖಕರ ಬುದ್ಧಿಜೀವಿಗಳ ಜತೆ ಒಡನಾಟವಿದ್ದರೆ ಹೊಸ ವಿಚಾರಗಳು ಹಾಯುತ್ತವೆ. ಬುದ್ಧಿಜೀವಿಗಳಿಗೆ ಜನಪರ ಚಳುವಳಿಗಳ ಲಗತ್ತಿಲ್ಲದೆ ಹೋದರೆ, ಚಿಂತನೆಗೆ ಸಿಗಬೇಕಾದ ತೀಕ್ಷ್ಣತೆ ಮತ್ತು ನೈತಿಕತೆ ಸಿಗದೆ ಹೋಗುತ್ತದೆ. ರಾಜಕೀಯ-ಆರ್ಥಿಕ ಚಳುವಳಿಗಳಿಗೆ ಸಾಂಸ್ಕೃತಿಕ ವಿವೇಕ ಒದಗಿಸುವ ಕೆಲಸವನ್ನು ಉದ್ದಕ್ಕೂ ಕಲೆ ಮತ್ತು ಸಾಹಿತ್ಯಲೋಕಗಳು ಮಾಡಿಕೊಂಡು ಬಂದಿವೆ.ಕನ್ನಡ ಲೇಖಕರಿಂದ ಆಧುನಿಕ ಕಾಲದ ಚಳುವಳಿಗಳು ಶಕ್ತಿ ಪಡೆದಿವೆ. ಕನ್ನಡದಲ್ಲಿ ದಲಿತರನ್ನು ಮಾಂಸಾಹಾರಿಗಳನ್ನು ಮಹಿಳೆಯರನ್ನು ಹೀಯಾಳಿಸುವ ನುಡಿಗಟ್ಟು ಗಾದೆಗಳಿವೆ. ಈ ವಿಷಯದಲ್ಲಿ ರೈತ ಚಳುವಳಿ ಎಷ್ಟು ಸೂಕ್ಷ್ಮವಾಗಿದೆಯೊ ಕಾಣೆ. ಕರ್ನಾಟದಲ್ಲಿ ಮಾಂಸಾಹಾರದ ಮೇಲೆ ನಿರಂತರ ಹಲ್ಲೆಗಳಾದವು. ಉಚ್ಚಜಾತಿಗಳ ಆಹಾರಕ್ರಮವನ್ನು ಎಲ್ಲರ ಮೇಲೆ ಹೇರಲು ಯತ್ನಿಸಲಾಯಿತು. ಮಧ್ಯಾಹ್ನ ಶಾಲಾಮಕ್ಕಳಿಗೆ ಮೊಟ್ಟೆಕೊಡುವ ಯೋಜನೆಗೆ ಕೆಲವರು ವಿರೋಧಿಸಿದರು. ಇದೆಲ್ಲ ರೈತ ಚಳುವಳಿಯ ವಿಷಯಗಳಲ್ಲವೆ? ವಾಸ್ತವವಾಗಿ ಕೋಳಿ ಆಹಾರದಲ್ಲಿ ಬಳಕೆಯಾಗುವ ಮೆಕ್ಕೆಜೋಳವು ಕೋಳಿಸಾಕಣೆಯ ಹಿಂದಿದೆ. ಮೊಟ್ಟೆ ಮಾಂಸ ಮೀನು ಹಾಲು ಒಳಗೊಂಡಂತೆ ಎಲ್ಲ ಆಹಾರದ ಹಿಂದೆ ರೈತಾಪಿತನವಿದೆ. ಆಹಾರ ಸಂಸ್ಕøತಿ ಮೇಲಿನ ಹಲ್ಲೆಗಳು ರೈತಚಳುವಳಿಯ ಭಾಗವಾಗದೆ ಹೋದರೆ, ಅದಕ್ಕೆ ಹೊಸವಿಸ್ತರಣೆ ಹೇಗೆ ಸಿಗುತ್ತದೆ? ಅಧಿಕಾರಿಗಳು ರಾಜಕಾರಣಿಗಳು ಬುದ್ಧಿಜೀವಿಗಳು ಪೋಲೀಸರು ಜನಸಾಮಾನ್ಯರ ಆಶೋತ್ತರಕ್ಕೆ ಮಿಡಿಯುವಂತೆ ಸಂವೇದನಶೀಲರಾಗಬೇಕು ಎಂದು ಚಳುವಳಿಗಳು ಅಪೇಕ್ಷಿಸುತ್ತವೆ. ಆದರೆ ಹೀಗೆ ಅಪೇಕ್ಷಿಸುವ ಚಳುವಳಿಗಳಿಗೂ ಇತರರ ನೋವಿಗೆ ಮಿಡಿಯುವ ಸಂವೇದನಶೀಲತೆಯ ಅಗತ್ಯವಿದೆಯಲ್ಲವೇ? ಸಾಂಸ್ಕøತಿಕ ಎಚ್ಚರ ಮತ್ತು ವಿವೇಕಗಳು ವ್ಯಕ್ತಿಗೆ, ಸಮಾಜಕ್ಕೆ ಮಾತ್ರವಲ್ಲ, ಸಮಾಜ ಬದಲಿಸಬೇಕೆನ್ನುವ ಚಳುವಳಿಗಳಿಗೂ ತೀಕ್ಷ್ಣತೆಯನ್ನು ಒದಗಿಸುತ್ತವೆ. ಪ್ರಜಾಪ್ರಭುತ್ವೀಯ ವಿಸ್ತರಣೆ ನೀಡುತ್ತವೆ. ಒಮ್ಮೆ ಕೇರಳ ಪ್ರವಾಸದಲ್ಲಿದ್ದಾಗ ಕಲ್ಲಿಕೋಟೆಯ ಹತ್ತಿರ, ಎಳೆಯ ತೆಂಗಿನಗರಿಗಳಿಂದ ಮಾಡಿದ ದೊಡ್ಡದೊಡ್ಡ ಕೋಳಿಯ ಪ್ರತಿಕೃತಿಗಳನ್ನು ಹೊತ್ತುಕೊಂಡು ಕುಣಿವ ಕೋಳಿಯಾಟ್ಟಂ ಮೆರವಣಿಗೆಯನ್ನು ನೋಡುವ ಅವಕಾಶವೊದಗಿತು. ಕೇರಳದ ಜನಪರ ಚಳುವಳಿಗಾರರು ಈ ಆಚರಣೆಗಳಲ್ಲಿ ತಮ್ಮದೇ `ಕೋಳಿ’ಗಳ ಜತೆ ಭಾಗವಹಿಸಿದ್ದರು. ಅವರ ಕೋಳಿಪ್ರತಿಮೆಗಳ ಮೇಲೆ ಎಲ್ಲ ಧರ್ಮಗಳ ಚಿಹ್ನೆಗಳೂ ಇದ್ದವು. ಇದು ಚಳುವಳಿಗಳು ಜನರ ಭಾವನಾತ್ಮಕ ಲೋಕದೊಳಗೆ ವೈಚಾರಿಕತೆ ಬಿಟ್ಟುಕೊಡದೆಯೂ ಸಂಬಂಧ ಇರಿಸಿಕೊಳ್ಳುವ ಸೂಕ್ಷ್ಮವಾದ ಪರಿ. ಈ ಹಿನ್ನೆಲೆಯಲ್ಲಿ ಕರ್ನಾಟಕದ ರೈತಚಳುವಳಿಯ ಸಾಂಸ್ಕøತಿಕ ಸಂಬಂಧಗಳು ಕ್ಷೀಣವೆನಿಸುತ್ತವೆ. ಕುಟ್ಟುವ ಬೀಸುವ ಹಂತಿಯ ರಾಶಿಪೂಜೆಯ ಹಾಡುಗಳ ಹಿಂದೆ ರೈತಾಪಿಗಳಿದ್ದಾರೆ. ರೈತರೇ ರಿವಾಯತ್ ಹಾಡುಗಳನ್ನು ಹಾಡುವುದು; ಸಂತರ ಉರುಸು ಇಲ್ಲವೇ ಆರೂಢರ ಜಾತ್ರೆ ಮಾಡುವುದು. ರೈತ ಚಳುವಳಿಗೆ ಈ ಸಾಂಸ್ಕøತಿಕ ಲೋಕದ ಜತೆಗೆ ಯಾವ ಬಗೆಯ ನಂಟಿದೆಯೊ ನಾನರಿಯೆ. ಚಳುವಳಿಗಳ ಕಾರ್ಯಕರ್ತರು ಕರೆ ಬಂದಾಗ ಮುಷ್ಕರ ಮಾಡುವ ಸೈನಿಕರಾಗಿ ಮಾತ್ರ ಇರುವುದು ಯಾಂತ್ರಿಕ ಸಂವೇದನೆ ಅನಿಸುತ್ತದೆ. ಸಿದ್ಧಾಂತಗಳ ಪಕ್ಷಗಳ ಸಂಘಟನೆಗಳ ಜತೆ ಯಾಂತ್ರಿಕ ಮತ್ತು ಗುಲಾಮೀ ಸಂಬಂಧ ಇರಿಸಿಕೊಂಡ ಎಲ್ಲರೂ ಕುಬ್ಜರಾಗುವುದು ಮಾತ್ರವಲ್ಲ, ತಮ್ಮ ಸಿದ್ಧಾಂತ ಸಂಘಟನೆಗಳನ್ನೂ ಕುಬ್ಚಗೊಳಿಸುವರು. ಸಂಸ್ಕøತಿ ಧರ್ಮಗಳ ರಕ್ಷಣೆ ಮಾಡುವುದಕ್ಕೆಂದೇ ತಯಾರಿಸಲಾಗಿರುವ ಮತಾಭಿಮಾನಿಗಳನ್ನು ಗಮನಿಸಿ. ಅವರ ವ್ಯಕ್ತಿತ್ವವನ್ನು ಒಳ್ಳೆಯ ಸಂಗೀತ ಆಸ್ವಾದಿಸುವ, ಅತ್ಯುತ್ತಮ ಸಾಹಿತ್ಯ ಓದುವ, ಸಿನಿಮಾ ನೋಡುವ-ಒಟ್ಟಿನಲ್ಲಿ ವ್ಯಕ್ತಿತ್ವ ವಿಸ್ತರಣೆ ಮಾಡಬಲ್ಲ ಯಾವ ಹವ್ಯಾಸಗಳೂ ಇರದಂತೆ ಬಿರುಸಾಗಿ ರೂಪಿಸಲಾಗಿರುತ್ತದೆ. ನಾಯಕರು ಹೇಳಿದ್ದನ್ನು ಪಾಲಿಸುವಂತೆ ಗುಲಾಮೀಕರಣ ಅಲ್ಲಿರುತ್ತದೆ. ಅವರಲ್ಲಿ ಕೆಲವು ಓದುಗ ಹವ್ಯಾಸವುಳ್ಳವರು ಇರಬಹುದು. ಆದರೆ ಅವರನ್ನು ಪಕ್ಷದ ಸಿದ್ಧಾಂತಕ್ಕೆ ಪೂರಕವಾಗಿರುವ ಲೇಖಕರನ್ನು ಬಿಟ್ಟು ಬೇರೆಯವರು ಬರೆದದ್ದರ ಕಡೆ ಕಣ್ಣುಹಾಯಿಸದಂತೆ ಮಾಡಲಾಗಿರುತ್ತದೆ. ಸಂವೇದನೆಯನ್ನು ಹೀಗೆ ಒಣಗಿಸಿದ ನೆಲದ ಮೇಲೆ ಕ್ರೌರ್ಯ ಅಸಹನೆ ಅಸೂಕ್ಷ್ಮತೆಗಳು ಸುಲಭವಾಗಿ ಹುಟ್ಟುತ್ತವೆ. ಚಳುವಳಿಗಳು ತಮ್ಮನ್ನು ಸಾಂಸ್ಕೃತಿಕ ಅಭಿರುಚಿಗಳಿಂದ ಸಮೃದ್ಧಗೊಳಿಸಿಕೊಳ್ಳದೆ ಹೋದರೆ, ಅವುಗಳ ಆರ್ಥಿಕ ಸಾಮಾಜಿಕ ರಾಜಕೀಯ ಚಿಂತನೆ ಮತ್ತು ಕ್ರಿಯೆಗಳು ಮುಕ್ಕಾಗಬಹುದು; ಏಕಮುಖಿಯಾಗಿ ಬೇಗನೆ ದಣಿಯಬಹುದು. ಅವಕ್ಕೆ ರಾಜಕೀಯ ಸ್ಪಷ್ಟತೆಯಷ್ಟೆ ಮುಖ್ಯವಾಗಿ ಮನಸ್ಸನ್ನು ಆರ್ದ್ರವಾಗಿಡುವ ಸಾಂಸ್ಕೃತಿಕ ಅಭಿರುಚಿಗಳೂ ಇರಬೇಕು. ರೈತರು ಕಾರ್ಮಿಕ ದಲಿತರು ಆಸ್ಥೆ ತೋರುವುದರಿಂದ ಮಧ್ಯಮವರ್ಗದ ಚಟುವಟಿಕೆಗಳಾಗಿ ಮಾರ್ಪಟ್ಟಿರುವ ಸಾಂಸ್ಕೃತಿಕ ಲೋಕಗಳಿಗೂ ಮರುಜೀವ ಬರುತ್ತದೆ. ಇದು ಜೀವಂತಿಕೆಯನ್ನು ಕೊಟ್ಟು ಪಡೆಯುವ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ರಾಜಕೀಯ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಎಂಬ ಭೇದಗಳು ಅಂತಿಮವಾಗಿ ಇಲ್ಲವಾಗುತ್ತವೆ; ಶಿಷ್ಟ-ಜಾನಪದಗಳು ಏಕೀಭವಿಸುತ್ತವೆ. ಅಂತಹ ಚಳುವಳಿಯ ಸಂಗ ಮಾಡಿದ ಲೇಖಕರು-ಕಲಾವಿದರು ತಮ್ಮ ಮಂಕುತನ ಕಳೆದುಕೊಂಡು ಹೊಸಹುಟ್ಟನ್ನು ಪಡೆಯಬಲ್ಲರು. ಇದು ಚಿಂತಕರು ಹಾಗೂ ಚಳುವಳಿಗಳು ಪರಸ್ಪರರನ್ನು ಕೊಂದುಕೊಂಡು ಬದುಕಿಕೊಳ್ಳುವ ಸೃಜನಶೀಲ ಉಪಾಯ.’’ ***************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಪ್ರಾಮಾಣಿಕರ ಅಹಮಿಕೆ ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಒಬ್ಬರಾಗಿದ್ದ ಮಲೆನಾಡಿನ ಗಾಂಧಿ ಎಂದೂ ಕರೆಯಲಾಗುತ್ತಿದ್ದ ಕಡಿದಾಳು ಮಂಜಪ್ಪನವರು ಲೇಖಕರೂ ಆಗಿದ್ದರೆಂಬುದು ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಅವರು `ಪಂಜರವಳ್ಳಿಯ ಪಂಜು’ `ನಾಳೆಯ ನೆಳಲು’ `ಕ್ರಾಂತಿಕೂಟ’ ಕಾದಂಬರಿಗಳನ್ನು ಬರೆದರು. ಆದರೆ ಇವಕ್ಕಿಂತ ಅವರ ಆತ್ಮಕಥೆಯೇ (`ನನಸಾಗದ ಕನಸು’) ಚೆನ್ನಾಗಿದೆ. ಅದರಲ್ಲಿ 40-50ರ ದಶಕದ ರಾಜಕಾರಣದ ಸ್ಮøತಿಗಳಿವೆ; 20ನೇ ಶತಮಾನದ ಮೊದಲ ಭಾಗದ ಮಲೆನಾಡಿನ ಚಿತ್ರಗಳಿವೆ. ಕುತೂಹಲ ಹುಟ್ಟಿಸುವುದು ಅದರ ನಿರೂಪಣೆ ಮತ್ತು ಆ ಮೂಲಕ ಹೊಮ್ಮುವ ಲೋಕದೃಷ್ಟಿ.ಮಂಜಪ್ಪನವರು ಆತ್ಮಕತೆಯನ್ನು “ನಾನು ಜನ್ಮ ತಾಳಿದ್ದು ನಮ್ಮ ಕುಟುಂಬದ ಮನೆಯ ಪಕ್ಕದಲ್ಲಿದ್ದ ಕೋಳಿಕೊಟ್ಟಿಗೆಯಲ್ಲಿ. ಅಂದಿನ ಕಾಲದಲ್ಲಿ ವಾಸದ ಮನೆಯಲ್ಲಿ ಹೆರಿಗೆಯಾಗುವುದು ನಿಷಿದ್ಧವಾಗಿತ್ತು. ಆ ಕಾರಣ ಹೆಂಗಸರಿಗೆ ಪ್ರಸವ ವೇದನೆ ಪ್ರಾರಂಭವಾದ ತಕ್ಷಣ ವಾಸದ ಮನೆಯಿಂದ ಹೊರಗಡೆ ಇಡುತ್ತಿದ್ದರು’’ ಎಂದು ಆರಂಭಿಸುತ್ತಾರೆ. ಅವರಿಗೆ ಆತ್ಮಕತೆಯ ಜತೆಗೆ ತಮ್ಮ ಕಾಲದ ಮಲೆನಾಡಿನ ಸಂಪ್ರದಾಯಗಳನ್ನೂ ಕಾಣಿಸುವ ಉದ್ದೇಶವಿದೆ. ಅವರು ಕಾಣಿಸುವ ಕೆಲವು ಸಂಪ್ರದಾಯ ಮತ್ತು ಆಚರಣೆಗಳಂತೂ ಭೀಕರವಾಗಿವೆ. ಅವುಗಳಲ್ಲಿ ಮಹಿಳೆಯರ ಸಾವು ಮತ್ತು ಗಂಡಸರ ಮರುಮದುವೆಯೂ ಒಂದು: “ಆಗಿನ ಕಾಲದಲ್ಲಿ ಮಲೆನಾಡಿನಲ್ಲಿ ಮಲೇರಿಯಾ ಹಾವಳಿಯಿಂದ ಗರ್ಭಿಣಿಯರೂ ಬಾಣಂತಿಯರೂ ಹೆಚ್ಚು ಸಂಖ್ಯೆಯಲ್ಲಿ ಸಾಯುತ್ತಿದ್ದರು. ಇದರ ಪರಿಣಾಮವಾಗಿ ಹೆಂಗಸರ ಸಂಖ್ಯೆ ದಿನೇದಿನೇ ಕ್ಷೀಣವಾಗುತ್ತಿತ್ತು. ಆದ್ದರಿಂದ ಹೆಣ್ಣುಗಳಿಗಾಗಿ ಬಹಳ ಪೈಪೋಟಿ ಇತ್ತು. ಶ್ರೀಮಂತ ವಿಧುರರು ಎರಡು ನೂರು ರೂಪಾಯಿಗಳಿಂದ ಐದುನೂರರ ರೂಪಾಯಿಗಳವರೆಗೆ ಹೆಣ್ಣುಗಳಿಗೆ ತೆರಕೊಟ್ಟು ಮದುವೆಯಾಗುತ್ತಿದ್ದರು. ಈ ಕಾರಣದಿಂದ ನಮ್ಮ ತಂದೆಗೆ ತಮ್ಮ ಸಹೋದರಿಯರ ಮದುವೆ ಮಾಡಲು ಯಾವ ತೊಂದರೆಯೂ ಆಗಲಿಲ್ಲ.’’ ಒಂದು ಪ್ರದೇಶದ ಭೌಗೋಳಿಕ ಸನ್ನಿವೇಶಕ್ಕೂ ಪುರುಷರ ಬಹುಪತ್ನಿತ್ವಕ್ಕೂ, ಅವರ ಸಿರಿವಂತಿಕೆಗೂ, ಗರ್ಭಧಾರಣೆ ಹೆರಿಗೆ ಮುಂತಾದ ಮಹಿಳೆಯರ ಜೈವಿಕ ಆವರ್ತನಗಳಿಗೂ ಇಲ್ಲಿ ಏರ್ಪಟ್ಟಿರುವ ಸಂಬಂಧ ವಿಶಿಷ್ಟವಾಗಿದೆ. ಪುರುಷ ವ್ಯವಸ್ಥೆ ಮಲೇರಿಯಾದಂತಹ ಸನ್ನಿವೇಶವನ್ನೂ ತನಗೆ ಬೇಕಾದಂತೆ ಬಳಸಿಕೊಂಡಿರುವ ಪರಿ ದಿಗ್ಭ್ರಮೆ ತರುತ್ತದೆ. ಮಲೆನಾಡಲ್ಲಿ ಹೆರಿಗೆಯಿಂದ ಮಾತ್ರವಲ್ಲ, ಹಾವು ಕಚ್ಚಿ, ಸೇತುವೆಯಂತಿದ್ದ ಸಂಕಮುರಿದು, ನೆರೆಯಲ್ಲಿ ಕೊಚ್ಚಿಹೋಗಿ- ನಾನಾ ಕಾರಣಕ್ಕೆ ಜನ ಸಾಯುವುದನ್ನು ಮಂಜಪ್ಪ ದಾಖಲಿಸುತ್ತಾರೆ. ಈ ದುರಂತಗಳಿಗೆ ನಾಗರಿಕ ಸೌಲಭ್ಯಗಳಿಲ್ಲದೆ ಇರುವುದು ಅರ್ಧ ಕಾರಣವಾದರೆ, ದಲಿತರು ಬಡವರು ಸ್ತ್ರೀಯರನ್ನು ಕುರಿತ ಸಾಮಾಜಿಕ ಧೋರಣೆ ಇನ್ನರ್ಧ ಕಾರಣ. ಗರ್ಭಿಣಿಯರಾಗುತ್ತಿದ್ದ ವಿಧವೆಯರಿಗೆ ವಿಧಿಸುತ್ತಿದ್ದ ಶಿಕ್ಷೆ ಹಾಗೂ ಅಸ್ಪøಶ್ಯತೆಯ ಆಚರಣೆಗಳಂತೂ ಅಮಾನುಷ. ಗತಕಾಲದ ಕರ್ನಾಟಕವನ್ನು ಎಗ್ಗಿಲ್ಲದೆ ಕೀರ್ತಿಸುವ ಸಂಸ್ಕøತಿ ಚಿಂತಕರು, ಎಷ್ಟೊಂದು ಆತ್ಮವಂಚಕ ಬರೆಹಗಳನ್ನು ಮಾಡಿದರು ಎಂದು ಕಸಿವಿಸಿಯಾಗುತ್ತದೆ. ಬಹುಶಃ ಬ್ರಿಟಿಶರ ಜತೆ ಬಂದ ಪಾಶ್ಚಿಮಾತ್ಯ ಆಧುನಿಕತೆ, ದಲಿತರ ಮತ್ತು ಮಹಿಳೆಯರ ಪಾಲಿಗೆ ಬಿಡುಗಡೆಕೋರನಾಗಿ ಕಾಣಿಸಿದ್ದು ಸಹಜವಾಗಿದೆ. ಲೇಖಕರು ವಸ್ತುಸ್ಥಿತಿಯನ್ನು ಅಡಗಿಸದೆ ಎಲ್ಲವನ್ನೂ ದಾಖಲಿಸುತ್ತಾರೆ.ಲೇಖಕರು ವಕೀಲರಾಗಿದ್ದರಿಂದ ದಿನಾಂಕ, ಮೊಕದ್ದಮೆಯ ಸಂಖ್ಯೆ, ಸಮಯ, ವ್ಯಕ್ತಿಯ ಮತ್ತು ಊರಿನ ಹೆಸರು, ಹಣದ ಮೊಬಲಗು ಇತ್ಯಾದಿಯನ್ನು ಅಂಕಿಸಂಖ್ಯೆ ಸಮೇತ ಕೊಡುತ್ತಾರೆ. “ಉತ್ತರೋತ್ತರ ನಮ್ಮ ತಂದೆ ತಾರೀಖು 24.10.1887ರಂದು ರಿಜಿಸ್ಟರ್ ಆಗಿದ್ದ ಮೂಲಗೇಣಿ ಕರಾರಿನ ಪ್ರಕಾರ ಶ್ರೀರಾಮಚಂದ್ರಾಪುರದ ಮಠದಿಂದ 5 ಎಕರೆ 38ಗುಂಟೆ ತರಿ ಜಮೀನನ್ನೂ 38ಗುಂಟೆ ಅಡಿಕೆ ಬಾಗಾಯ್ತನ್ನು 3 ಗುಂಟೆ ಖುಷ್ಕಿ ಭೂಮಿಯನ್ನೂ ಮೂಲಗೇಣಿಗೆ ಪಡೆದರು’’-ತರಹದ ವಾಕ್ಯಗಳು ಇಲ್ಲಿ ಸಾಕಷ್ಟಿವೆ. ಇವುಗಳಿಂದ ಬರೆಹಕ್ಕೆ ಒಂದು ನಮೂನೆಯ ಖಚಿತತೆ ಬಂದಿದೆ. ಇದುವೇ ಬರೆಹವು ಕಲ್ಪನಾಶಕ್ತಿಯನ್ನು ಬಳಸಿಕೊಳ್ಳುವುದಕ್ಕೆ ತೊಡಕನ್ನೂ ಒಡ್ಡಿದೆ. ತಾವು ಓದುತ್ತಿದ್ದ ಶಾಲೆ ಮೂರು ತಿಂಗಳಿಗೊಮ್ಮೆ ಸುಟ್ಟುಹೋಗುತ್ತಿತ್ತು ಎಂದು ಲೇಖಕರು ನಿರ್ಲಿಪ್ತವಾಗಿ ದಾಖಲಿಸಿ ಮುಂದೆ ಹೋಗುತ್ತಾರೆ. ಅವರೇ ಪ್ರಸ್ತಾಪಿಸುವ ಕ್ರೂರ ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳು ಸೇಡು ತೀರಿಸಿಕೊಳ್ಳುತ್ತಿದ್ದ ಬಗೆ ಇದ್ದೀತು ಇದು ಎಂದು ಊಹಿಸಲು ಮರೆಯುತ್ತಾರೆ. ಆತ್ಮಕತೆಗಳಲ್ಲಿ ಮುಖ್ಯವಾದುದು ಗತಕಾಲದ ಖಚಿತ ವಿವರಗಳಷ್ಟೇ ಅಲ್ಲ; ಅವನ್ನು ಮಂಡಿಸುವ ದೃಷ್ಟಿಕೋನ, ಅವನ್ನು ವಿಶ್ಲೇಷಿಸಿ ವ್ಯಾಖ್ಯಾನಿಸಿ ಸಮಕಾಲೀನ ಬದುಕನ್ನು ಜೀವಂತಗೊಳಿಸುವ ದಾರ್ಶನಿಕತೆ ಕೂಡ.ಮಲೆನಾಡನ್ನೂ ತಮ್ಮ ಬದುಕನ್ನೂ ಒಟ್ಟಿಗೇ ಮಂಡಿಸುತ್ತಿರುವ ಮಂಜಪ್ಪನವರದು ಉದಾರ ಮಾನವತಾವಾದಿ ದೃಷ್ಟಿಕೋನ. ಕುವೆಂಪು ಸಮಕಾಲೀನರಾಗಿದ್ದ ಅವರು ತಕ್ಕಮಟ್ಟಿಗೆ ವೈಚಾರಿಕ ಮನೋಭಾವ ರೂಢಿಸಿಕೊಂಡಿದ್ದರು. ಆದರೆ ಅವರ ವೈಚಾರಿಕತೆ ಕೆಳಜಾತಿಯ ಸಂಪ್ರದಾಯಗಳನ್ನು ಮೌಢ್ಯವೆಂದು ಹೀಗಳೆಯುವಂತಹದ್ದು; ಗಣ ಬರಿಸುವುದನ್ನು ಅವರು ಕ್ಷುದ್ರದೇವರು ಎಂದು ಕರೆಯುತ್ತಾರೆ. ಆದರೂ ಮಲೆನಾಡಿನ ಕೆಲವು ಆಚರಣೆಗಳನ್ನು ಸಮರ್ಥಿಸಿಕೊಳ್ಳುತ್ತಾರೆ. “ಜನಸಾಮಾನ್ಯರಲ್ಲಿ ಅಗಾಧ ಮೌಢ್ಯವಿದ್ದರು ಕೂಡ ಅವರಲ್ಲಿ ಸುಸಂಸ್ಕøತಿಯಿತ್ತು” ಎನ್ನುತ್ತಾರೆ. ಮಲೆನಾಡಿಗರು ಹೆಂಡ ಕುಡಿಯುವುದನ್ನು ವ್ಯಾಖ್ಯಾನಿಸುತ್ತ “ನಾಟಿಕಾಲದಲ್ಲಿ ವಿಪರೀತ ಮಳೆ ಬರುತ್ತಿದುದರಿಂದ ನಾಟಿ ಕೆಲಸಕ್ಕೆ ಹೋಗಿ ಮನೆಗೆ ಬಂದ ನಂತರ ಸಾಮಾನ್ಯವಾಗಿ ಎಲ್ಲರೂ ಅಕ್ಕಿಹೆಂಡವನ್ನು ಸೇವಿಸುತ್ತಿದ್ದರು. ಅಕ್ಕಿಯ ಹೆಂಡ ಕುಡಿದವರು ದೃಢಕಾಯರಾಗಿ ಆರೋಗ್ಯವಂತರಾಗಿದ್ದರು. ಅವರುಗಳ ಮುಖದಲ್ಲಿ ರಕ್ತ ಚಿಮ್ಮುವಂತಿತ್ತು’’ ಎಂದು ವ್ಯಾಖ್ಯಾನಿಸುತ್ತಾರೆ. ಮಿತಿಯೆಂದರೆ, ಅವರೊಳಗೆ ಹೊಕ್ಕಿರುವ ಕುವೆಂಪು ಚಿಂತನೆ ಪುರೋಹಿತಶಾಹಿ ವಿರೋಧದ ವೈಚಾರಿಕ ಪ್ರಜ್ಞೆಯಾಗಿ ಬದಲಾಗದೆ ಹೋಗುವುದು. ಲೇಖಕರು ಆರಂಭದಲ್ಲೇ “ನನ್ನ ಬರವಣಿಗೆಯಲ್ಲಿ ಅಸತ್ಯದ ಮಾತುಗಳು ಸೇರದಿರುವಂತೆ ಅನುಗ್ರಹಿಸಬೇಕೆಂದು” ದೇವರಲ್ಲಿ ಪ್ರಾರ್ಥಿಸುತ್ತಾರೆ. ತನ್ನನ್ನು ಸತ್ಯದ ಪ್ರತಿಪಾದಕನೆಂದು ಬಿಂಬಿಸಿಕೊಳ್ಳುವ ಈ ಧೋರಣೆ ಬಂದಿದ್ದು, ತನ್ನ ವೈಯಕ್ತಿಕ ಮಿತಿಗಳನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಬಲ್ಲ ಗಾಂಧೀಜಿಯ ಪ್ರಾಮಾಣಿಕತೆಯಿಂದ; ಅವರ `ಸತ್ಯದೊಡನೆ ನನ್ನ ಪ್ರಯೋಗಗಳು’ ಎಂಬ ಆತ್ಮಕತೆಯಿಂದ. “ನಾನೊಬ್ಬ ಯಃಕಶ್ಚಿತ್ ವ್ಯಕ್ತಿ. ಭೂಹೀನ ಗೇಣಿದಾರನೊಬ್ಬನ ಮಗನಾಗಿ ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬೆಳೆದು ಜೀವನದಲ್ಲಿ ಹಲವು ವಿಧವಾದ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದವನು. ಅನೇಕ ಎಡರು ತೊಡರುಗಳನ್ನು ಎದುರಿಸಿದ್ದ ನಾನು ಅಂದು ಕಷ್ಟಪಟ್ಟಂತೆಯೇ ತಮ್ಮ ಜೀವನದಲ್ಲಿ ಇಂದು ಕಷ್ಟ ಪಡುತ್ತಿರುವ ಜನರಿಗೆ ನನ್ನ ಅನುಭವದಿಂದ ಅಲ್ಪಸ್ವಲ್ಪವಾದರೂ ಪ್ರಯೋಜನವಾಗಬಹುದು ಎಂಬ ಆಶೆ’’ಯಿಂದ ಆತ್ಮಕತೆ ಬರೆದಿರುವುದಾಗಿ ಲೇಖಕರು ಹೇಳಿಕೊಳ್ಳುತ್ತಾರೆ. ಈ ಉದ್ದೇಶವು ತನ್ನ ಆದರ್ಶ ವ್ಯಕ್ತಿತ್ವವನ್ನು ಪ್ರಜ್ಞಾಪೂರ್ವಕವಾಗಿ ಮಂಡಿಸುವುದಕ್ಕೆ ಪೂರ್ವಪೀಠಿಕೆಯಂತಿದೆ. ತನ್ನನ್ನು ಚಾರಿತ್ರ್ಯವಂತನೆಂದು ಬಿಂಬಿಸಿಕೊಳ್ಳುವ ಇಲ್ಲಿನ ಗುಣವೇ ಬರೆಹದ ಪ್ರಾಮಾಣಿಕತೆಗೆ ಚ್ಯುತಿ ತರುತ್ತದೆ. ಆತ್ಮಕತೆ ಬರೆಯುವವರ ಬಾಳು ಪ್ರಾಮಾಣಿಕತೆಯಿಂದ ಕೂಡಿರಬಹುದು. ಅದನ್ನು ಕಟ್ಟಿಕೊಡುವಾಗ ನೈತಿಕ ಅಹಂಕಾರ ಕೂಡಿಕೊಂಡರೆ, ಅಲ್ಲಿನ ವಿನಯ ಕೃತಕವಾಗುತ್ತದೆ. ಸ್ವಂತ ಬದುಕನ್ನು ಶೋಧಿಸಿ ಮರುಮೌಲ್ಯಮಾಪನ ಮಾಡಿಕೊಳ್ಳುವ ಆತ್ಮಕತೆಗಳು ಆತ್ಮಸಂಭಾವಿತನವಿಲ್ಲದ ಕಾರಣದಿಂದಲೇ ಸಹಜವಾಗಿ ಕಾಣುತ್ತವೆ. ಇಂದಿರಾ ಲಂಕೇಶ್, ಇಳಾವಿಜಯಾ, ಸಿಎನ್ಆರ್, ನವರತ್ನ ರಾಮರಾವ್ ಮುಂತಾದವರ ಆತ್ಮಕತೆಗಳು ತಟ್ಟನೆ ನೆನಪಾಗುತ್ತಿವೆ. ಕುವೆಂಪು ಅವರಲ್ಲೂ ಆತ್ಮಸಂಭಾವಿತನವಿದೆ. ಆದರೆ ಅದನ್ನು ದಾಟಿ ಸ್ವಮಿತಿಯನ್ನು ಹೇಳಿಕೊಳ್ಳಬಲ್ಲ ದಿಟ್ಟತನವೂ ಅವರಲ್ಲಿದೆ. ಆತ್ಮಕತೆಗಳು ಬರೆದವರ ವ್ಯಕ್ತಿತ್ವದ ಕನ್ನಡಿಗಳೇನೂ ಹೌದು. ಆದರೆ ಕೆಲವು ಕನ್ನಡಿಗಳು ತೋರಿಸುವ ಬಿಂಬಗಳು ಪೂರ್ತಿ ಅವರವೇ ಆಗಿರುವುದಿಲ್ಲ. ಈ ಅರಕೆಯಿಂದ ಆತ್ಮಕತೆಗಳಿಗೆ ಬಿಡುಗಡೆಯೂ ಇಲ್ಲ. ಅವು ಓದುಗರ ಮೆಚ್ಚುಗೆ ಮತ್ತು ಸಣ್ಣಸಂಶಯದಲ್ಲೇ ತಮ್ಮ ಅಸ್ತಿತ್ವವನ್ನು ಪಡೆದುಕೊಂಡಿರುತ್ತವೆ. ******************************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಕಣ್ಣು-ಕಣ್ಕಟ್ಟು ರೋಣ ತಾಲೂಕಿನ ಗಜೇಂದ್ರಗಡಕ್ಕೆ ಗೆಳೆಯರ ಭೇಟಿಗೆಂದು ಹೊರಟಿದ್ದೆ. ಹಾದಿಯಲ್ಲಿ ಯಲಬುರ್ಗಾ ತಾಲೂಕಿನ ಪುಟ್ಟಹಳ್ಳಿ ನೆಲಜೇರಿ ಎಡತಾಕಿತು. ಗೋಧಿ ಉಳ್ಳಾಗಡ್ಡೆ ಸುರೇಪಾನ ಮೆಣಸು ಮೊದಲಾಗಿ ಮಳೆಯಾಶ್ರಯದ ಪೀಕು ತೆಗೆಯುವ ಎರೆಸೀಮೆಯಿದು. ಹೆಚ್ಚಿನ ತರುಣರು ಕೊಪ್ಪಳದ ಬಗಲಲ್ಲಿ ಬೀಡುಬಿಟ್ಟಿರುವ ಉಕ್ಕಿನ ಕಾರ್ಖಾನೆಗಳಿಗೆ ದಿನಗೂಲಿಗಳಾಗಿ ಹೋಗುತ್ತಾರೆ. ನೆಲಜೇರಿ ಆರ್ಥಿಕವಾಗಿ ಬಡಕಲಾದರೂ ಸಾಂಸ್ಕøತಿಕವಾಗಿ ಸಮೃದ್ಧ ಹಳ್ಳಿ. ಈ ವೈರುಧ್ಯ ಉತ್ತರ ಕರ್ನಾಟಕದ ಬಹಳಷ್ಟು ಹಳ್ಳಿಗಳ ಲಕ್ಷಣ.  ನೆಲಜೇರಿಯ ತಟ್ಟಿ ಹೋಟೆಲಿನಲ್ಲಿ ಚಹಾಪಾನ ಮಾಡುತ್ತ ಇಲ್ಲಿ ಯಾರಾದರೂ ಜನಪದ ಗಾಯಕರು ಇದ್ದಾರೆಯೇ ಎಂದು ಕೇಳಿದೆ. ಅಲ್ಲೊಬ್ಬ ಮೂಲೆಯಲ್ಲಿ ಟೀಯನ್ನೂ ಬೀಡಿಯನ್ನೂ ಒಟ್ಟಿಗೆ ಸವಿಯುತ್ತ ಕಾಲುಚಾಚಿ ಕುಳಿತವನು ಅವಸರವಿಲ್ಲದ ದನಿಯಲ್ಲಿ `ಅದಾನಲ್ಲ ಅಂದಾನಪ್ಪ. ರಿವಾಯತ್ ಪದ ಜಗ್ಗಿ ಹಾಡ್ತಾನ’ ಎಂದನು. ಅಂದಾನಪ್ಪನವರನ್ನು ನೋಡೋಣವೆಂದು ಮನೆಗೆ ಹೋದರೆ ಹೊಲಕ್ಕೆ ಹೋಗಿದ್ದರು. ಅವರು ಬರುವವರೆಗೆ ಜಗುಲಿಯಲ್ಲೇ ಬೀಡುಬಿಟ್ಟೆ. ಒಕ್ಕಲುತನದ ಹಳೇ ಮಾಳಿಗೆಮನೆ. ಹೊರಬಾಗಿಲ ಆಜುಬಾಜು ದೊಡ್ಡದಾದ ಎರಡು ಜಗುಲಿ. ಅವುಗಳ ಮೇಲೆ ಚೀಲಗಳಲ್ಲಿ ದವಸ. ಅವುಗಳ ಬದಿಗೆ ಕೌದಿಹಾಸಿ ದಿಂಬಿಟ್ಟು ಯಜಮಾನ ಕೂರಲು ಸಿದ್ಧಗೊಳಿಸಿದ ಆಸನ. ಗೋಡೆಯ ಮೇಲೆ ದಿವಂಗತರಾದ ಕುಟುಂಬದ ಹಿರಿಯರ ಪಟಗಳು. ಅವಕ್ಕೆ ಹುಲಿಯು ಪಂಜದಿಂದ ಗೆಬರಿದಂತೆ ಎಳೆದಿರುವ ವಿಭೂತಿ ಪಟ್ಟೆ. ಮನೆಯೊಳಗೆ ಇಣುಕಿದರೆ, ಸಿನುಗು ವಾಸನೆಯ ದನದ ಕೊಟ್ಟಿಗೆ. ತಾಯಿ ಮೇಯಲು ಹೋಗಿರುವುದರಿಂದ ಒಂಟಿಯಾಗಿದ್ದು ಅಂಬಾ ಎನ್ನುತ್ತಿರುವ ಎಳೆಗರು. ಅಟ್ಟಕ್ಕೆ ಕಟ್ಟಿರುವ ಉಳ್ಳಾಗಡ್ಡಿ ಬೆಳ್ಳುಳ್ಳಿ ಸಿವುಡು; ಒಣಗಿದ ಹೀರೇಕಾಯಿ ಗೊಂಚಲು. ಕೊಟ್ಟಿಗೆಯ ಬಳಿಕ ತುಸು ಎತ್ತರದಲ್ಲಿ ಮಬ್ಬು ಬೆಳಕಿನಲ್ಲಿ ಕಾಣುವ ಉಣ್ಣುವ ಜಗುಲಿ. ನಂತರ ಹೊಗೆಯಿಂದ ಕಪ್ಪಗಾಗಿ ಇದ್ದಬದ್ದ ಬೆಳಕನೆಲ್ಲ ಕುಡಿದು ಮತ್ತಷ್ಟು ಕತ್ತಲಾಗಿರುವ ಅಡುಗೆಕೋಣೆ.  ಹೀಗೆ ಪಂಚೇಂದ್ರಿಯಗಳಿಗೆ ಕೆಲಸ ಹಚ್ಚಿ ಆರಾಮಾಗಿ ಕೂತಿರುವಾಗ ಅಂದಾನಪ್ಪನವರ ಸವಾರಿ ಬಂತು. ಆರಡಿ ಎತ್ತರದ 75 ವರ್ಷದ ಹಿರಿಯ. ದಪ್ಪನೆಯ ಬಿಳಿಪಟಗ ಎದ್ದು ಕಾಣುತ್ತಿತ್ತು. ಕೈಬೆರಳು ಕುಷ್ಠದಿಂದ ಕರಗಿಹೋಗಿದ್ದರೂ ಮೋಟು ಬೆರಳಲ್ಲಿ ಸೈಕಲ್ ಹ್ಯಾಂಡಲನ್ನು ಹಿಡಿದು, ಬೀದಿಗೆ ಬೈತಲೆ ತೆಗೆದಂತೆ ಹರಿದ ಬಚ್ಚಲು ನೀರಿನ ಅಂಕುಡೊಂಕುಗಳಲ್ಲಿ ಬೀಳದಂತೆ ಸವಾರಿಸುತ್ತ ಬಂದರು. ಅಂಗಳದಲ್ಲಿ ನಿಂತ ಕಾರು ಅವರಿಗೆ ಗಲಿಬಿಲಿ ತಂದಂತಿತ್ತು. ನಮಸ್ಕಾರ ಮಾಡಿ ಭೇಟಿಯ ಉದ್ದೇಶ ತಿಳಿಸಿದೆ. ತನ್ನ ಹಾಡುಪ್ರತಿಭೆಗೆ ಪರಸ್ಥಳದ ಜನ ಬಂದಿರುವುದು ಅರಿತು ಮುಖದಲ್ಲಿ ಅಭಿಮಾನ ಮೂಡಿದಂತೆ ತೋರಿತು. ಲಗುಬಗೆಯಿಂದ ಅಡುಗೆ ಮನೆಯೊಳಗೆ ನುಗ್ಗಿ ಬಿಸಿರೊಟ್ಟಿ ಮಾಡಲು ಹೇಳಿದರು. ದೊಡ್ಡ ಚರಿಗೆಯಲ್ಲಿ ಮುಂಜಾನೆಯಷ್ಟೆ ಕಡೆದ ಮಜ್ಜಿಗೆ ತಂದುಕೊಟ್ಟರು. ಹಳತಾದ ನೋಟುಬುಕ್ಕನ್ನು ನಾಗಂದಿಯ ಮೇಲಿಂದ ತೆಗೆದು, ಧೂಳು ಝಾಡಿಸಿ, ಅದರಲ್ಲಿದ್ದ ರಿವಾಯತ್ ಪದವನ್ನು ಹಾಡಲು ಶುರುಮಾಡಿದರು. ಅವರ ಭಾರಿಕಾಯದೊಳಗೆ ಈ ಹೆಣ್ದನಿ ಹೇಗಾದರೂ ಅಡಗಿಕೊಂಡಿದೆಯೊ ಎಂದು ಅಚ್ಚರಿಸುತ್ತಿದ್ದ ನನಗೆ ಪೈಲವಾನರಂತಿರುವ ಬಡೇಗುಲಾಮಲಿ ಖಾನರು ಜೇನಲ್ಲಿ ಅದ್ದಿತೆಗೆದಂತೆ ಹಾಡಿದ `ಕ್ಯಾಕರ್ಞೂ ಸಜನೀ ಸಾಜನ್ ನ ಆವೆ’ ಠುಮ್ರಿಯ ನೆನಪಾಯಿತು. ರಿವಾಯತ್ ಹಾಡಿಕೆಯಲ್ಲಿ ಹಿಮ್ಮೇಳವಿದ್ದರೇ ಚಂದ. ಒಂಟಿದನಿ ಬೇಗ ದಣಿಯುತ್ತದೆ. ಅಂದಾನಪ್ಪ ಎರಡು ಹಾಡಿಗೆ ನಿಲ್ಲಿಸಿದರು. ಕೆಲವೇ ತಿಂಗಳುಗಳಲ್ಲಿ ತಮ್ಮೂರಿನಲ್ಲಿ ರಾಜಪ್ಪಸ್ವಾಮಿಯ ಉರುಸು ನಡೆಯಲಿದೆಯೆಂದೂ, ಅಲ್ಲಿ ಕೊಪ್ಪಳ ಸೀಮೆಯ ಬಹುತೇಕ ಗಾಯಕರು ಸೇರುವರೆಂದೂ ಆಗ ಖಂಡಿತ ಬರಬೇಕೆಂದೂ ತಿಳಿಸಿದರು. ಇದಾದ ಐದಾರು ತಿಂಗಳಿಗೆ ಅಂದಾನಪ್ಪನವರ ಫೋನು ಬಂತು. ಉರುಸು ಫಲಾನೆ ದಿನವಿದೆಯೆಂದೂ ತಪ್ಪದೇ ಬರಬೇಕೆಂದೂ ಊಟ ವಸತಿಗೆ ಚಿಂತೆ ಮಾಡಬಾರದೆಂದೂ ತಿಳಿಸಿದರು. ಸ್ಕೂಟರಿನಲ್ಲಿ ಹೋದೆ. ಸಂಜೆಯಾಗಿತ್ತು. ಸುತ್ತಮುತ್ತಲ ಗ್ರಾಮದವರು ಓದಿಕೆ ಮಾಡಿಸಿಕೊಂಡು ಕೈಯಲ್ಲಿ ವಸ್ತ್ರಹೊದಿಸಿದ ಪ್ರಸಾದದ ತಟ್ಟೆ ಹಿಡಿದು ಗುಂಪಾಗಿ ಮನೆಗೆ ಮರಳುತ್ತಿದ್ದರು. ಅಂದಾನಪ್ಪ, ಹೆಸರಿಗೆ ತಕ್ಕಂತೆ ಅನ್ನದಾನಿ. ಶಿಷ್ಯನ ಮನೆಯಲ್ಲಿ ಬಿಸಿರೊಟ್ಟಿ ಮೊಸರು ಬದನೆಪಲ್ಯ ಮಾಲ್ದಿಯಿರುವ ಊಟ ಹಾಕಿಸಿದರು. ರಾತ್ರಿ ಹತ್ತಕ್ಕೆ ಮೆರವಣಿಗೆ ಕುರುಬರ ಮನೆಯಿಂದ ರಾಜಪ್ಪನ ದರ್ಗಾಕ್ಕೆ ಹೊರಟಿತು. ಅದರ ಮುಂದೆ ಮನೆಯ ಹಿರೀಕರೊಬ್ಬರು ಮೈದುಂಬಿದ್ದರು. ಅವರ ಜತೆ ಬೇಡ ಸಮುದಾಯಕ್ಕೆ ಸೇರಿದ ಹನುಮಂತದೇವರ ಗುಡಿಯ ಪೂಜಾರಿ ಜತೆಗೂಡಿದನು. ಮೆರವಣಿಗೆಯಲ್ಲಿ ಮುಸ್ಲಿಮರನ್ನೂ ಒಳಗೊಂಡಂತೆ ಊರಿನ ಎಲ್ಲ ಜಾತಿ ಸಮುದಾಯಗಳಿಗೆ ಸೇರಿದ್ದರು. ಅಂದಾನಪ್ಪನವರು ದೊಡ್ಡದೊಂದು ಕೋಲಿನ ತುದಿಗೆ ಹಾಡುಗಾರರಿಗೆ ಕೊಡುವ ಬಹುಮಾನದ ಬೆಳ್ಳಿಬಳೆಗಳನ್ನು ಸಿಕ್ಕಿಸಿಕೊಂಡು ಮುಂಚೂಣಿಯಲ್ಲಿದ್ದರು. ಮೆರವಣಿಗೆ ಹಿಂಭಾಗದಲ್ಲಿ `ಕಂದೂರಿ’ಗೆ ಬಲಿಯಾಗಲಿರುವ ಕುರಿಗಳನ್ನು ಹಿಡಿದುಕೊಂಡು ಬರುತ್ತಿದ್ದ ಭಕ್ತರ ಸೈನ್ಯವೇ ಇತ್ತು.ಊರಹೊರಗೆ ದೊಡ್ಡ ಬಯಲಿನಲ್ಲಿ ಮರಗಳ ಗುಂಪಿನ ನಡುವೆ ರಾಜಪ್ಪಜ್ಜನ ಸಮಾಧಿಯಿದೆ. ಅದು ಸೂಫೀ ಗೋರಿಯಂತೆ ಉತ್ತರ ದಕ್ಷಿಣಮುಖಿಯಾಗಿದೆ. ಒಬ್ಬ ಮುಜಾವರ್ ಅಲ್ಲಿ ಫಾತೆಹಾ ನೆರವೇರಿಸುತ್ತಿದ್ದನು. ರಾಜಪ್ಪಜ್ಜನ ಪುಣ್ಯತಿಥಿಗೆ `ಉರುಸು’ ಎಂದು ಕರೆಯುವುದರಿಂದ, ಇದು ಸೂಫಿಸಂತನಿಗೆ ಸಂಬಂಧಪಟ್ಟಿದ್ದು ಎಂದು ನನ್ನ ಊಹೆಯಾಗಿತ್ತು. ಆದರೆ ರಾಜಪ್ಪಜ್ಜ ಎಂಬತ್ತು ವರ್ಷಗಳ ಹಿಂದೆ ಬದುಕಿದ್ದ ಆರೂಢನಾಗಿದ್ದರು. ಹಿಂದುಳಿದ ಜಾತಿಗೆ ಸೇರಿದ್ದ ಆತನ ಶಿಷ್ಯರಲ್ಲಿ ಹೆಚ್ಚಿನವರು ದಲಿತರಾಗಿದ್ದು, ಅವರ ಸಮಾಧಿಗಳು ಆಸುಪಾಸಿನಲ್ಲಿದ್ದವು. ರಾಜಪ್ಪಜ್ಜನ ಸಮಾಧಿ ಪೌಳಿದ್ವಾರದಲ್ಲಿ ಮೊಹರಂ ಚಿಹ್ನೆಗಳಾದ ಹುಲಿ ಹಾಗೂ ಹಸ್ತದ ಚಿತ್ರಗಳೂ ಇವುಗಳ ಜತೆ ಗಣಪತಿ ಹಾಗೂ ಹನುಮಂತನ ಚಿತ್ರಗಳೂ ಬರೆಯಲ್ಪಟ್ಟಿದ್ದವು. ಅಂದು ನಡೆಯಲಿದ್ದ ರಿವಾಯತ್ ಪದಗಳ ಹಾಡಿಕೆ ಸಹ ಮೊಹರಂ ಸಂಪ್ರದಾಯಕ್ಕೆ ಸೇರಿತ್ತು. ರಾತ್ರಿ ಹತ್ತರ ಸುಮಾರಿಗೆ ಗಾಯಕರು ಕಲೆತರು. ಕಂಬಕ್ಕೆ ಕಟ್ಟಿದ ಮೈಕಿನ ಸುತ್ತ ಗಾಯಕರು ತಮ್ಮ ಮೇಳದ ಜತೆ ಪ್ರದಕ್ಷಿಣೆ ಹಾಕುತ್ತ ಹಾಡಿದರು. ಹಾಡಿಕೆ ಬೆಳಗಿನ ಜಾವಕ್ಕೆ ಮುಗಿಯಿತು. ಚೀಲ ಚಾಪೆ ಹಾಸಿಕೊಂಡು ಕೌದಿ ಹೊದ್ದು ಕುಳಿತ ಜನ ಕೇಳಿತು. ಗಾಯಕರನ್ನು ಹಾಡಲು ಕರೆಯುವುದು, ಚೆನ್ನಾಗಿ ಹಾಡಿದಾಗ ಉತ್ತೇಜಿಸುವುದು, ಗೆದ್ದವರಿಗೆ ಬೆಳ್ಳಿಯ ಬಳೆ ಬಹುಮಾನವಾಗಿ ಕೊಡುವುದು ಮುಂತಾದ ಕಾರ್ಯಗಳನ್ನು ಅಂದಾನಪ್ಪ ಹರೆಯದವರಂತೆ ಓಡಾಡುತ್ತ ಮಾಡಿದರು. ಉರುಸಿನ ವಿಶೇಷ `ಕಂದೂರಿ’ ಎನ್ನಲಾಗುವ ಮಾಂಸದೂಟ. ರಾತ್ರಿ ಹತ್ತರ ಸುಮಾರಿಗೆ ಮೆರವಣಿಗೆಯಲ್ಲಿ ಆಗಮಿಸಿದ್ದ ಕುರಿಗಳನ್ನು ಮುಲ್ಲಾ ಹಲಾಲ್ ಮಾಡಿದನು. ಅವನ್ನು ಜನ ಬೀಡುಬಿಟ್ಟಲ್ಲೆ ದೊಂದಿಯ ಗ್ಯಾಸ್‍ಲೈಟಿನ ಬೆಳಕಲ್ಲಿ ಹಸಿಗೆ ಮಾಡಿದರು. ನಡುರಾತ್ರಿಯ ಹೊತ್ತಿಗೆ ಅಡುಗೆ ಶುರುವಾಯಿತು. ಇಡೀ ಬಯಲು ಒಲೆಗಳ ಬೆಂಕಿಯಿಂದ ಬೀಡುಬಿಟ್ಟ ಸೈನಿಕ ಶಿಬಿರವಾಯಿತು. ಬೆಳಗಿನ ಜಾವ ಪೂಜಾರಿ ಮೈದುಂಬಿ ವರ್ಷದ ಮಳೆಬೆಳೆಯ ಕಾರ್ಣೀಕ ಹೇಳಿದನು. ಇದಾದ ಬಳಿಕ ಊಟ ಶುರು. ಜಾತ್ರೆಗೆ ಬಂದವರನ್ನು ಎಲ್ಲರೂ ಕರೆದು ಉಣ್ಣಿಸುವವರೇ. ಮಾಡಿದ ಅಡುಗೆ ಬೆಳಕು ಕಣ್ಬಿಡುವ ಮೊದಲು ಖಾಲಿಯಾಗಬೇಕು. ಮನೆಗೆ ಒಯ್ಯುವಂತಿಲ್ಲ. ಊಟದ ಜತೆ ಉರುಸು ಮುಕ್ತಾಯ ಕಂಡಿತು. ಜನ ಟಂಟಂ, ಬಂಡಿಗಳಲ್ಲಿ ಊರುಗಳಿಗೆ ತೆರಳಿದರು. ಬಿಸಿಲೇರುವ ಹೊತ್ತಿಗೆ ದರ್ಗಾ ನಿರ್ಜನವಾಯಿತು. ನೇಲಜೇರಿಯಲ್ಲಿ ಉರಿಸಿದೆ, ಸೂಫಿ ಪರಂಪರೆಯಿಲ್ಲ; ರಿವಾಯತ್ ಹಾಡಿನ ಪರಂಪರೆಯಿದೆ, ಮೊಹರಂ ಅಲ್ಲ; ಮುಸ್ಲಿಮರ ಭಾಗವಹಿಸುವಿಕೆಯಿದೆ, ಸಾಂಪ್ರದಾಯಿಕ ಇಸ್ಲಾಮಲ್ಲ; ಹತ್ತಕ್ಕೆ ಒಂಬತ್ತರÀಷ್ಟು ಹಿಂದುಗಳ ಭಾಗವಹಿಸುವಿಕೆಯಿದೆ, ಜಾತ್ರೆಯಲ್ಲ; ಅವಧೂತ ಪರಂಪರೆಯ ಲಕ್ಷಣಗಳಿವೆ, ಗುರುದೀಕ್ಷೆ ಕೊಡುವ ಪದ್ಧತಿಯಿಲ್ಲ; ಹಾಗಾದರೆ ಇದನ್ನು ಯಾವ ಧರ್ಮ ಅಥವಾ ಪಂಥದ ಚೌಕಟ್ಟಿನಲ್ಲಿಟ್ಟು ನೋಡುವುದು? ನಿರ್ದಿಷ್ಟ ಚೌಕಟ್ಟಿನಲ್ಲಿಟ್ಟು ನೋಡುವ ಅಥವಾ ಅದಕ್ಕೆ ಹೆಸರು ಕೊಡುವ ತುರ್ತು ಉರುಸಿನಲ್ಲ್ಲಿ ಭಾಗವಹಿಸಿದ ಯಾರಲ್ಲೂ ಇರಲಿಲ್ಲ. ಅವರಿಗೆ ತಾವು ಮಾಡುವ ಉರುಸು, ಹಾಡುವ ಹಾಡು, ಉಣ್ಣುವ ಊಟ ಯಾವ ಧರ್ಮಕ್ಕೆ ಸಂಬಂಧಿಸಿದವು ಎಂಬುದು ಪ್ರಶ್ನೆಯಾಗಿ ಕಾಡದಿರುವಾಗ, ನನಗೇಕೆ ಚೌಕಟ್ಟಿನ ಪ್ರಶ್ನೆ ಕಾಡುತ್ತಿದೆ? ಯಾವುದೇ ಧಾರ್ಮಿಕ ಆಚರಣೆಯನ್ನು ಈಗಾಗಲೇ ನಿರ್ವಚನಗೊಂಡಿರುವ ಜಾತಿ ಧರ್ಮ ಇಲ್ಲವೇ ಪಂಥದ ಚೌಕಟ್ಟಿನಲ್ಲಿ ಇಟ್ಟುನೋಡಬೇಕು ಎಂಬುದು ನನ್ನ ಬೌದ್ಧಿಕ ತುರ್ತೇ? ನೆಲಜೇರಿಯ ಉರುಸು ತನಗೆ ತಾನೇ ಸ್ಥಳೀಯವಾಗಿ ರೂಪುಗೊಂಡಿರುವ ಜನತೆಯ ಧರ್ಮ. ಇದರಲ್ಲಿ ಸೂಫಿಗಳ ಅವಧೂತರ ಮೊಹರಮ್ಮಿನ ಇಸ್ಲಾಮಿನ ಚಹರೆಗಳೆಲ್ಲ ಸಹಜವಾಗಿ ಒಗ್ಗೂಡಿವೆ. ಇಂತಹ ಅನೇಕ ತಾಣ ಮತ್ತು ಸಮುದಾಯಗಳು ನಾಡಲ್ಲಿವೆ. ಈ ಲೋಕಗಳನ್ನು ಅರಿಯಲು ಸದ್ಯ ಚಾಲ್ತಿಯಲ್ಲಿರುವ ಚೌಕಟ್ಟು ಸಾಲುವುದಿಲ್ಲ. ರಾಜಕೀಯವಾಗಿ ಧರ್ಮವನ್ನು ನೋಡಲು ರೂಪುಗೊಂಡಿರುವ ಕಣ್ಕಟ್ಟುಗಳಂತೂ ಯಾತಕ್ಕೂ ಬಾರವು. ಈ ಲೋಕಗಳನ್ನು ನೋಡಲು ತೆರೆದಮನಸ್ಸಿನ ಕಣ್ಣನ್ನು ಪಡೆದುಕೊಳ್ಳುವ ಅಗತ್ಯವಿದೆ. ಹಿಂದೆ ಕಲಿತಿದ್ದನ್ನು ಮಾತ್ರ ನೋಡುವ ಕಣ್ಕಟ್ಟುಗಳನ್ನಲ್ಲ.  ಹಂಪಿಗೆ ತೆರಳುವ ಮುನ್ನ ಅಂದಾನಪ್ಪನವರಿಗೆ ವಿದಾಯ ಹೇಳಲೆಂದು ಹುಡುಕಿದೆ. ಜಂಗುಳಿಯಲ್ಲಿ ಸಿಗಲಿಲ್ಲ. ಅವರ ಮನೆಗೆ ಬಂದು ಕೇಳಿದೆ. ಅಷ್ಟುಹೊತ್ತಿಗೆ ಅವರು ಸೈಕಲ್ ಹತ್ತಿ ಹೊಲಕ್ಕೆ ಹೋಗಿಬಿಟ್ಟಿದ್ದರು. **************************** ರಹಮತ್‌ ತರೀಕೆರೆ ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಪ್ರಶ್ನೆಯ ಜರೂರಿ ಕೆಲವು ವರ್ಷಗಳ ಹಿಂದೆ ಎರಡು ವಿದ್ಯಮಾನ ಜರುಗಿದವು. ಒಂದು- ತಾನು ಓದುವ ಶಾಲೆಯನ್ನು ತಾಲಿಬಾನಿಗಳು ಯಾಕೆ ಕೆಡವಬೇಕು ಎಂದು ಪ್ರಶ್ನಿಸಿದ ಪುಟ್ಟಬಾಲೆ ಮಲಾಲಳದು. ಎರಡು-ಬಾಳಾಸಾಹೇಬ್ ಠಾಕರೆ ತೀರಿಕೊಂಡರೆ ಮುಂಬೈ ಬಂದ್ ಯಾಕೆ ಮಾಡಬೇಕು ಎಂದು ಚರ್ಚಿಸಿದ ಇಬ್ಬರು ತರುಣಿಯರದು. ಸುತ್ತಮುತ್ತ ಬದುಕುತ್ತಿರುವ ಲಕ್ಷಾಂತರ ಜನರಲ್ಲಿ ಹುಟ್ಟದ ಪ್ರಶ್ನೆಗಳು ಈ ಹುಡುಗಿಯರಲ್ಲಿ ಸಹಜವಾಗಿ ಹೇಗೆ ಹುಟ್ಟಿಕೊಂಡವು? ನಮಗೇತಕ್ಕೆ ಇಲ್ಲದ ರಗಳೆ ಎಂದು ಬಹುಸಂಖ್ಯಾತ ಸಾರ್ವಜನಿಕರು ಸುರಕ್ಷಿತಮೌನ ತಾಳಿರುವಾಗ ಕೆಲವರೇಕೆ ಕೇಳುವ ದಿಟ್ಟತನ ತೋರುತ್ತಾರೆ? ಪ್ರಶ್ನೆ ಕೇಳುವುದು ಆಲೋಚನ ಶಕ್ತಿಯುಳ್ಳ ಎಲ್ಲ ವ್ಯಕ್ತಿಗಳಲ್ಲೂ ಇರುವ ಸಹಜ ಗುಣ. ಆದರೆ ಹಾಗೆ ಕೇಳದಂತೆ ತಡೆಯಲು ನೂರಾರು ಅಂಕುಶಗಳು ಸಮಾಜದಲ್ಲಿರುತ್ತವೆ. ಆದರೆ ಈ ತಡೆಗಳ ಒಳಗೂ ಪ್ರಶ್ನೆಯನ್ನು ಹುಟ್ಟಿಸಿಕೊಳ್ಳುವುದು ಮುಖ್ಯ; ಅದನ್ನು ಬಹಿರಂಗವಾಗಿ ಕೇಳುವುದು ಮತ್ತು ಅದರ ಪರಿಣಾಮ ಅನುಭವಿಸಲು ಸಿದ್ಧವಾಗುವುದು ಇನ್ನೂ ಮುಖ್ಯ. ಇದನೇ ಕುವೆಂಪು ನಿರಂಕುಶಮತಿತ್ವ ಎಂದು ಕರೆದಿದ್ದು. ಈ ನಿರಂಕುಶಮತಿತ್ವದ ಮಾರಣಾಂತಿಕ ಪರಿಣಾಮವನ್ನು ಸಾಕ್ರೆಟಿಸ್ ಎದುರಿಸಿದ; ಅನೇಕ ಸೂಫಿಗಳು, ಚಾರ್ವಾಕರು ಎದುರಿಸಿದರು; ಭಗತ್‍ಸಿಂಗ್ ಮುಂತಾದ ಹೋರಾಟಗಾರರು ಮುಖಾಮುಖಿ ಮಾಡಿದರು; ಈಗ ಪತ್ರಕರ್ತರು ಚಿಂತಕರು ಎದುರಿಸುತ್ತಿದ್ದಾರೆ. ನಮ್ಮ ಮನೆಗಳಲ್ಲಿ ಎಷ್ಟೊ ಮಹಿಳೆಯರು ಇದರ ಕಹಿಫಲವನ್ನು ಉಂಡಿದ್ದಾರೆ. ಪ್ರಶ್ನೆಗಳು ಕೇವಲ ಸ್ಥಾಪಿತ ವ್ಯವಸ್ಥೆಯನ್ನು ವಿರೋಧಿಸುವ ಕಾರಣದಿಂದ ಹುಟ್ಟುತ್ತವೆ ಎಂದು ತಿಳಿಬೇಕಿಲ್ಲ. ಅವು ಕುತೂಹಲದ ದೆಸೆಯಿಂದಲೂ ಹುಟ್ಟಬಹುದು. ಮಕ್ಕಳು ಸಹಜ ವಿಸ್ಮಯದಿಂದ ಎಷ್ಟೊಂದು ಪ್ರಶ್ನೆ ಕೇಳುತ್ತಿರುತ್ತವೆ? ಯಾಕೆ ಸಂಜೆ ಮುಂಜಾನೆ ಸೂರ್ಯ ಕೆಂಪಗೆ ಕಾಣುತ್ತದೆ? ಹೂವುಗಳಿಗೆ ಏಕಿಷ್ಟು ಬಣ್ಣಗಳಿವೆ? ನೀರೇಕೆ ಹರಿಯತ್ತದೆ? -ಹೀಗೆ ನೂರಾರು. ಇವನ್ನು ಕೇಳಿಸಿಕೊಳ್ಳುವ ಸಹನೆ ಮತ್ತು ಉತ್ತರಿಸುವ ತಿಳಿವು ಬಹುತೇಕ ಹಿರಿಯರಲ್ಲಿ ಇರುವುದಿಲ್ಲ. ತಿಳಿವನ್ನು ಕೊಡುವ ಜಾಗಗಳಾಗಿರುವ ತರಗತಿಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಎಷ್ಟೊಂದು ಪ್ರಶ್ನೆಗಳನ್ನು ಹೊಸಕಿ ಹಾಕಿರಬಹುದು ಎಂದು ನೆನೆದರೆ ಭಯವಾಗುತ್ತದೆ. ಸಹಜ ಪ್ರಶ್ನೆಯನ್ನು ದಮನಿಸುವುದು, ಕೇಳುವವರ ಚೈತನ್ಯವನ್ನೇ ದಮನಿಸಿದಂತೆ. ನಿಜವಾದ ಗುರುಗಳೂ ಕೇವಲ ಪ್ರಶ್ನೆಗೆ ಉತ್ತರಿಸುವುದಿಲ್ಲ. ಪ್ರಶ್ನೆ ಕೇಳುವ ಮನೋಭಾವವನ್ನೂ ನಿರ್ಮಿಸುತ್ತಿರುತ್ತಾರೆ. ತಂದೆತಾಯಿಗಳು ಆದರ್ಶರಾಗುವುದು, ಮಕ್ಕಳಿಗೆ ಸರಿಯಾದ ಆಹಾರ ಬಟ್ಟೆ ವಸತಿ ಕೊಡುವ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸುವುದರಿಂದ ಮಾತ್ರವಲ್ಲ, ಅವರ ಪ್ರಶ್ನೆ, ಕುತೂಹಲ, ನಿರ್ದಿಷ್ಟ ಕ್ಷೇತ್ರದಲ್ಲಿ ಕೆಲಸ ಓದುವ ಸಹಜ ಹಕ್ಕುಗಳನ್ನು ನಾಶಮಾಡಿದ್ದಾರೊ ಇಲ್ಲವೊ ಎಂಬುದರ ಮೇಲೆ. ತನ್ನ ಪ್ರಶ್ನೆಯನ್ನು ಹೊಸಕಿಹಾಕಿದ ಅಪ್ಪನ ವಿರುದ್ಧ ಬಂಡೆದ್ದ ಪುರಾಣದ ನಚಿಕೇತ ನೆನಪಾಗುತ್ತಾನೆ. ಬಹುತೇಕ ಧರ್ಮಗಳು ಹೊಸ ಪ್ರಶ್ನೆಗಳನ್ನು ಕೇಳುವ ಧೀಮಂತರಿಂದಲೇ ಹುಟ್ಟಿವೆ. ಮುಂದೆ ಅವೇ ಧರ್ಮಗಳು ಪ್ರಶ್ನೆಗಳನ್ನು ಹತ್ತಿಕ್ಕಿಯೇ ಬೆಳೆದಿವೆ. ಬುದ್ಧನಂತಹ ಕೆಲವರು ಮಾತ್ರ ಪ್ರಶ್ನೆ ತಿಳಿವಿನ ಮೂಲವೆಂದು ನಂಬಿದ್ದರು. ನಾನು ಹೇಳಿದ್ದು ಒಪ್ಪಿಗೆಯಾಗದಿದ್ದರೆ ನಿನ್ನ ದಿಟವನ್ನು ನೀನೇ ಹುಡುಕಿಕೊ ಎಂದು ಬುದ್ಧ ನೇರವಾಗಿ ಹೇಳಿದನು. ಹೀಗೆ ಹೇಳಲು ಒಬ್ಬ ಗುರುವಿಗೆ ಬಹಳ ಧೈರ್ಯ ಬೇಕು. ಮಗುವೊಂದು ಹುಟ್ಟುವ ಜೈವಿಕಕ್ರಿಯೆ ಬಲ್ಲ ಎಲ್ಲರಿಗೂ ಅದಕ್ಕೆ ಜಾತಿ ಧರ್ಮಗಳಿರುವುದಿಲ್ಲ ಎಂಬುದು ಗೊತ್ತಿದ್ದರೂ, ಅದು ಹುಟ್ಟಿ ಲೋಕಕ್ಕೆ ಬಂದ ಕೂಡಲೇ ಅದಕ್ಕೆ ಜಾತಿ ಧರ್ಮಗಳು ಯಾಕೆ ಸುತ್ತಿಕೊಳ್ಳುತ್ತವೆ? ಹುಟ್ಟಿನಿಂದ ಯಾಕೆ ಕೆಲವರು ಕೀಳು ಅಥವಾ ಮೇಲು ಅನಿಸಿಕೊಳ್ಳಬೇಕು? ಕೆಲವರು ಯಾಕಷ್ಟು ದುಡಿದರೂ ಬಡವರಾಗಿ ಉಳಿದಿದ್ದಾರೆ? ಯಾಕೆ ವಾಸದ ಪರಿಸರವನ್ನು ಚೊಕ್ಕಟವಾಗಿ ಇರಿಸಿಕೊಳ್ಳಲು ನಮಗೆ ಸಾಧ್ಯವಾಗಿಲ್ಲ? ಯಥೇಚ್ಛವಾದ ನಿಸರ್ಗ ಸಂಪತ್ತಿದ್ದರೂ ಭಾರತದಲ್ಲೇಕೆ ಬಡತನವಿದೆ? ಎಲ್ಲರಿಗೂ ಸೇರಬೇಕಾದ ಸಂಪತ್ತನ್ನು ಲೂಟಿಹೊಡೆದವರು ಹೇಗೆ ಆರಾಮಾಗಿ ಬದುಕುತ್ತಿದ್ದಾರೆ? ದುಷ್ಟರು ಕಳ್ಳರು ಎಂದು ಗೊತ್ತಿದ್ದರೂ ಜನ ಯಾಕೆ ಕೆಲವರನ್ನು ಚುನಾವಣೆಯಲ್ಲಿ ಆರಿಸುತ್ತಾರೆ? ಸ್ತ್ರೀಯರನ್ನು ನಿಕೃಷ್ಟವಾಗಿ ಚಿತ್ರಿಸುವ ಲೇಖಕರಿಗೆ ಯಾಕೆ ಮಹಿಳಾ ಓದುಗರೇ ಹೆಚ್ಚಿದ್ದಾರೆ? ಹೀಗೆ ನೂರಾರು ಪ್ರಶ್ನೆಗಳಿವೆ. ಪ್ರ್ರಶ್ನೆ ಹುಟ್ಟುವುದು ಮತ್ತು ಪ್ರಕಟವಾಗುವುದು ಮಾತ್ರವಲ್ಲ, ಅವು ಕ್ರಿಯೆಗೂ ಕಾರಣವಾಗಬೇಕು. ಈ ಕ್ರಿಯೆ ತಪ್ಪಾದ ವ್ಯವಸ್ಥೆಯನ್ನು ಬದಲಿಸಬೇಕು. ಮಲಾಲಾ ಎತ್ತಿದ ಪ್ರಶ್ನೆ ತಾಲಿಬಾನಿಗಳನ್ನು ಪ್ರತಿರೋಧಿಸುವ ಹೊಸಅಲೆಯನ್ನು ಹುಟ್ಟಿಸಿತು. ಲೋಕದಲ್ಲಿ ಸ್ವತಂತ್ರವಾಗಿ ವಿಚಾರಮಾಡುವ ಪ್ರವೃತ್ತಿಯೇ ಹೊಸ ಪ್ರಶ್ನೆಗಳ ತಾಯಿ; ಪ್ರಶ್ನೆಗಳು ನಿಸರ್ಗ ರಹಸ್ಯಗಳನ್ನು ಶೋಧಿsಸುವ ವಿಜ್ಞಾನವನ್ನು ಬೆಳೆಸಿವೆ; ಹಳೆಯ ಸಮಾಜವನ್ನು ಹೊಸ ಸಮಾಜವಾಗಿ ಬದಲಿಸಿವೆ. ನಮ್ಮ ಪೂರ್ವಿಕರು ಪ್ರಶ್ನೆ ಕೇಳಿಕೊಳ್ಳದಿದ್ದರೆ ಬೆಂಕಿ ಅಥವಾ ಬೇಸಾಯ ಶೋಧ ಆಗುತ್ತಿರಲಿಲ್ಲ. ವಿಜ್ಞಾನ ತಂತ್ರಜ್ಞಾನದ ಫಲವಾಗಿ ನಾವಿಂದು ಅನುಭವಿಸುತ್ತಿರುವ ಸೌಲಭ್ಯಗಳು ಇರುತ್ತಿರಲಿಲ್ಲ. ಪ್ರಶ್ನೆಯಿಲ್ಲದೆ ಸ್ಥಾಪಿತಸತ್ಯಗಳ ಒಳಗಿನ ಹುಸಿ ಹೊರಬರುವುದಿಲ್ಲ; ಹೊಸ ಚಿಂತನೆ ಹುಟ್ಟುವುದಿಲ್ಲ. ನಾವೇಕೆ ಹೀಗಿದ್ದೇವೆ ಎಂಬ ಪ್ರಶ್ನೆ ಹುಟ್ಟಿರದಿದ್ದರೆ, ಅಮೆರಿಕೆಯ ಕಪ್ಪುಜನ ಗುಲಾಮಗಿರಿಯಿಂದ ಸ್ವತಂತ್ರರಾಗುತ್ತಿರಲಿಲ್ಲ; ಭಾರತೀಯರು ಬ್ರಿಟಿಶರ ವಿರುದ್ಧ ಹೋರಾಡುತ್ತಿರಲಿಲ್ಲ; ಮಹಿಳೆಯರು ಬಿಡುಗಡೆಯ ಹಾದಿ ಹುಡುಕುತ್ತ್ತಿರಲಿಲ್ಲ. ದಲಿತರು ಸ್ವಾಭಿಮಾನ ಗಳಿಸುತ್ತಿರಲಿಲ್ಲ; ಸರ್ವಾಧಿಕಾರಿಗಳು ನಾಶವಾಗುತ್ತಿರಲಿಲ್ಲ.ಚರಿತ್ರೆಯಲ್ಲಿ ಸಮಾಜಗಳನ್ನು ಬದಲಿಸಿರುವುದು ಪ್ರಶ್ನೆಗಳೇ. ರಾಜಸಭೆಗೆ ತನ್ನನ್ನು ಬಲಾತ್ಕಾರವಾಗಿ ಎಳೆದು ತಂದಾಗ ದ್ರೌಪದಿ `ತನ್ನನ್ನೇ ಪಣಕ್ಕಿಟ್ಟು ಸೋತ ವ್ಯಕ್ತಿಗೆ ತನ್ನ ಹೆಂಡತಿಯನ್ನು ಪಣಕ್ಕಿಡಲು ಹಕ್ಕಿದೆಯೇ?’ ಎಂಬ ಪ್ರಶ್ನೆ ಮುಂದಿಡುತ್ತಾಳೆ. ಉತ್ತರಿಸಲು ಸಭೆ ಒದ್ದಾಡುತ್ತದೆ. ಪ್ರಶ್ನೆಯ ಮೂಲಕ ಆಕೆ ತನ್ನ ಆಕ್ರೋಶ ವೇದನೆಗಳನ್ನಷ್ಟೆ ಹೊರಗೆಡಹುವುದಿಲ್ಲ, ಹೆಣ್ಣೊಬ್ಬಳ ಅಪಮಾನವನ್ನು ಸಹಿಸಿಕೊಂಡಿರುವ ಸಭೆಯ ಅಮಾನವೀಯತೆ ಮತ್ತು ಅವಿವೇಕವನ್ನೂ ಬಯಲಿಗೆಳೆಯುತ್ತಾಳೆ. ಪ್ರಶ್ನಿಸುವ ಪ್ರವೃತ್ತಿ ಅಧಿಕಾರಸ್ಥರ ಕೆರಳಿಕೆಗೂ ದಮನಕ್ಕೂ ಕಾರಣವಾಗುತ್ತದೆ. ಪ್ರಶ್ನೆಯೆತ್ತಿದ ಮಲಾಲಾಗೆ ತಾಲಿಬಾನಿಗಳು ಗುಂಡು ಹೊಡೆದು ಉತ್ತರಿಸಿದರು; ಮುಂಬೈ ತರುಣಿಯರಿಗೆ ಪೋಲಿಸರು ಬಂಧಿಸುವ ಮೂಲಕ ಪ್ರತಿಕ್ರಿಯಿಸಿದರು. ಧರ್ಮರಾಯನು ಯುದ್ಧದಲ್ಲಿ ಗೆದ್ದು ಅರಮನೆ ಪ್ರವೇಶಿಸುವಾಗ, `ಜ್ಞಾತಿಬಂಧುಗಳನ್ನು ಕೊಂದ ನಿನಗೆ ರಾಜ್ಯವಾಳುವ ನೈತಿಕತೆಯಿದೆಯೇ’ ಎಂದು ಪ್ರಶ್ನಿಸಿದ ಚಾರ್ವಾಕನನ್ನು ಕೊಂದರು. ಶಿಷ್ಯ ದಾರಾಶುಕುವನ್ನು ಕೊಂದ ಔರಂಗಜೇಬನ ವಿರುದ್ಧ ಸೂಫಿ ಸರ್ಮದ್ ನಗ್ನನಾಗಿ ನಿಂತು ಇಂತಹುದೇ ಪ್ರಶ್ನೆಯನ್ನೆತ್ತಿ ತಲೆದಂಡ ತೆತ್ತನು. ಸಾಂಪ್ರದಾಯಿಕ ನಂಬಿಕೆಗಳನ್ನು ಪ್ರಶ್ನಿಸಿದ ಅನೇಕ ವಿಜ್ಞಾನಿಗಳನ್ನು ಯೂರೋಪಿನ ಚರ್ಚುಗಳು ದಮನ ಮಾಡಿದ್ದಂತೂ ಸರ್ವವಿದಿತ. ಧಾರ್ಮಿಕ ಮೂಲಭೂತವಾದಿಗಳು ಮತ್ತು ರಾಜಕೀಯ ಸರ್ವಾಧಿಕಾರಿಗಳು ಇಂತಹ ದಮನವನ್ನು ಮಾಡುತ್ತಲೇ ಬಂದಿರುವರು. ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಹಿರಿಯರು ಕಿರಿಯರ, ಪುರುಷರು ಮಹಿಳೆಯರ ಪ್ರಶ್ನೆಗಳನ್ನು ಹೀಗೇ ಹೊಸಕಿ ಹಾಕಿರುವರು. ಆದರೂ ಪ್ರಶ್ನಿಸುವ ಪ್ರವೃತ್ತಿಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಸಾಧ್ಯವಾಗುವುದೂ ಇಲ್ಲ. ಪ್ರಶ್ನೆಯಿಲ್ಲದೆ ಚರಿತ್ರೆ ಚಲಿಸುವುದಿಲ್ಲ; ಲೋಕ ಬದಲುವುದಿಲ್ಲ. ಪ್ರಶ್ನೆಗಳು ಸಂಸ್ಕøತಿ ನಾಗರಿಕತೆಗಳನ್ನು ಕಟ್ಟಿಬೆಳೆಸಿದ ಶಕ್ತಿಗಳು. ಅವುಗಳ ಗಾತ್ರ ಚಿಕ್ಕದಿರಬಹುದು. ಪರಿಣಾಮ ಚಿಕ್ಕದಲ್ಲ. ಸಮಾಜದಲ್ಲಿ ಮಹತ್ವದ ಪಲ್ಲಟ ಸಂಭವಿಸಿದ್ದರೆ, ಅದರ ಹಿಂದೆ ಕೆಲವರು ಎತ್ತಿದ ಪ್ರಶ್ನೆಗಳಿವೆ; ಅವು ಹುಟ್ಟಿಸಿದ ಕ್ರಿಯೆ-ಪ್ರತಿಕ್ರಿಯೆಗಳಿವೆ. ನಮ್ಮ ಧರ್ಮದಲ್ಲಿ ಮಹಿಳೆಯರೇಕೆ ಹಿಂದುಳಿದ್ದಾರೆ, ದಲಿತರೇಕೆ ಅಸ್ಪøಶ್ಯರಾಗಿದ್ದಾರೆ, ನಿರ್ದಿಷ್ಟ ಜನರೇಕೆ ಶ್ರೇಷ್ಠರೆನಿಸಿಕೊಂಡಿದ್ದಾರೆ, ನಮ್ಮ ಮತಧರ್ಮಗಳೇಕೆ ದ್ವೇಷ ಹುಟ್ಟಿಸುತ್ತಿವೆ, ನಾನೇಕೆ ಇಷ್ಟು ನೀಚನಾಗಿದ್ದೇನೆ-ಹೀಗೆ ನಿಷ್ಠುರ ಪ್ರಶ್ನೆಗಳನ್ನು ಹುಟ್ಟಿಸಿಕೊಳ್ಳಲಾಗದ, ಅದನ್ನು ಲೋಕದ ಮುಂದಿಡಲಾರದ, ಮತ್ತು ಅಂತಹ ಪ್ರಶ್ನೆ ಕೇಳಿಸಿಕೊಳ್ಳುವ ಸಹನೆಯಿಲ್ಲದ ಯಾವ ವ್ಯಕ್ತಿ, ಸಮುದಾಯ ಮತ್ತು ಸಮಾಜವೂ ಚರಿತ್ರೆಯಲ್ಲಿ ದೊಡ್ಡದನ್ನು ಸಾಧಿಸಿಲ್ಲ. ನಾಗರಿಕ ಮತ್ತು ಮಾನವೀಯ ಕೂಡ ಆಗಿಲ್ಲ. ********************************************* ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ದೇವರಮನೆಯಲ್ಲಿ ಕುರಿಂಜಿ (ಬಿಸಿಲನಾಡಾದ ಬಳ್ಳಾರಿ ಸೀಮೆಯಲ್ಲೂ ಕುರಿಂಜಿಯಿದೆ ಎಂಬ ಖಬರಿಲ್ಲದೆ,ಎರಡು ವರ್ಷದ ಹಿಂದೆ ಬರೆದ ಲೇಖನವಿದು.) ತರೀಕೆರೆ ಸೀಮೆಗೆ ಸೇರಿದ ಕೆಮ್ಮಣ್ಣುಗುಂಡಿ, ಬಾಬಾಬುಡನಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಕಲ್ಹತ್ತಿಗಿರಿ ಮುಂತಾದ ಶೋಲಾ ಬೆಟ್ಟಗಳಲ್ಲಿ ಬಾಲ್ಯದಿಂದಲೂ ಅಲೆದಿದ್ದೇನೆ. ಆಗ ಕಳೆಯಂತೆ ಬೆಳೆದಿರುತ್ತಿದ್ದ ಅನಾಮಿಕವಾದ ಹಸಿರು ಗಿಡಗಳು ಕಣ್ಣಿಗೆ ಬೀಳುತ್ತಿದ್ದವು. ಆದರೆ ಅವು 12 ವರ್ಷಕ್ಕೊಮ್ಮೆ ಹೂಬಿಟ್ಟು ಗಿರಿಕಣಿವೆಗಳನ್ನು ಹೂವಿನ ತೊಟ್ಟಿಲಾಗಿ ಮಾಡಬಲ್ಲ ಕುರಿಂಜಿಗಳೆಂದು ಗೊತ್ತಿರಲಿಲ್ಲ. ತಿಳಿಯುತ್ತ ಹೋದಂತೆ, ನಮ್ಮ ಆಸುಪಾಸಿನಲ್ಲೇ ಇರುವ ಅವನ್ನು ಗಮನಿಸದೆ ಹೋದೆನೆಲ್ಲ ಎಂದು ತುಸು ಲಜ್ಜೆಯಾಗಿತ್ತು. ಕಳೆದ ಋತುವಿನಲ್ಲಿ ಕುರಿಂಜಿಯ ಭೇಟಿ ಮಾಡಿದೆ. ಕುರಿಂಜಿಯ ಸಾಮಾನ್ಯವಾಗಿ ಪಶ್ಚಿಮಘಟ್ಟದ ಶೋಲಾಕಾಡುಗಳಲ್ಲಿ ಬೆಳೆಯುತ್ತದೆ. ಅದರಲ್ಲೂ ನಾಲ್ಕೈದು ಸಾವಿರ ಅಡಿ ಎತ್ತರದಲ್ಲಿ ಮತ್ತು ಧೋಧೋ ಮಳೆ ಬೀಳುವಲ್ಲಿ. ಶೋಲಾಕಾಡುಗಳ ವಿಶಿಷ್ಟ ಚಹರೆಯೆಂದರೆ-ಬೋಳಾಗಿ ಕಾಣುವ ಹುಲ್ಲುಬೆಳೆದ ಬೆಟ್ಟಗಳು; ಆಳವಾದ ಕಣಿವೆಗಳಲ್ಲಿ ಹಸಿರುಹಿಮ ಹೆಪ್ಪುಗಟ್ಟಿದಂತೆ ಕಾಡು; ಬೆಟ್ಟ-ಕಣಿವೆಗಳನ್ನು ಹೊಗೆಯಂತೆ ಬಂದು ತಬ್ಬಿಕೊಂಡು ಆಟವಾಡುವ ಮೋಡಗಳು; ಹರನ ಜಟೆಯಿಂದ ಜಿನುಗುವ ಗಂಗೆಯಂತೆ ಒಸರುವ ಜಲಧಾರೆಗಳು; ಮುಖದೋರದೆ ಹಚ್ಚನೆ ಕಂಬಳಿಯೊಳಗೆ ಅಡಗಿ ಕಣಿವೆಯೇ ಹಾಡುವಂತೆ ಮಾಡುವ ಹಕ್ಕಿಗಳು; ಅಪರೂಪಕ್ಕೆ ಹುಲ್ಲುಹಾಸಿನ ನೆತ್ತಿಗಳ ಮೇಲೆ ಕಾಣುವ ಕಾಡುಕೋಣ, ಕಾಡುಕುರಿ, ಕಡವೆ, ಜಿಂಕೆಗಳು; ಎಂದೂ ಕಾಣಿಸದ ಹುಲಿ.ಇಂತಹ ಪರಿಸರದಲ್ಲಿ ವಾಸಿಸುವ ಕುರಿಂಜಿ, ನೋಡಲು ಮೊಳಕಾಲೆತ್ತರದ ಸಾಧಾರಣ ಗಿಡ; ಕಪ್ಪುಹಸುರಿನ ದಪ್ಪನೆಯ ಎಲೆಗಳಿಗೆ ಹಸ್ತರೇಖೆಯಂತೆ ಎದ್ದುಕಾಣುವ ಗೀರುನರ; ಚಳಿಗೆದ್ದ ನವಿರಿನಂತೆ ಸೂಕ್ಷ್ಮವಾದ ಸುಂಕು. ಅಂಚಿನಲ್ಲಿ ಗರಗಸದ ಹಲ್ಲಿನಂತೆ ಕಚ್ಚುಗಳು. ಫರ್ನ್ ಹಾಗೂ ಹುಲ್ಲಿನ ಜತೆ ಬೆರೆತು ಬೆಳೆಯುವ ಇದು, ಹೂವಿಲ್ಲದ ದಿನಗಳಲ್ಲಿ ಯಾವ ಆಸಕ್ತಿಯನ್ನೂ ಕೆರಳಿಸುವುದಿಲ್ಲ. ಗೊರಟೆಯಂತೆ ಕಾಣುವ ಇದರ ಹೂ ಕೂಡ ಬಹಳ ಸುಂದರವಲ್ಲ. ಬಹುಶಃ ಹೂಬಿಡಲು ತೆಗೆದುಕೊಳ್ಳುವ ದೀರ್ಘಕಾಲ ಮತ್ತು ಹೂತಳೆದ ಕಾಲಕ್ಕೆ ಕಣಿವೆಗಳನ್ನೆ ನೀಲಿಯಾಗಿಸುವ ಶಕ್ತಿಯಿಂದ ಅದು ಖ್ಯಾತೆ. ಉದಕಮಂಡಲದ ಬೆಟ್ಟಗಳಿಗೆ ‘ನೀಲಗಿರಿ’ ಹೆಸರು ಬರಲು ಕುರಿಂಜಿಯೇ ಕಾರಣ. ನೀಲದ ಜತೆಗೆ ತಿಳಿಗೆಂಪು ಹಾಗೂ ಮಾಸಲುಬಿಳಿ ಕುರುಂಜಿಯೂ ಇವೆ. ಮಲೆನಾಡಿಗರಾದ ಕಲ್ಕುಳಿ ಹೆಗ್ಗಡೆಯವರ ಪ್ರಕಾರ, ಕುರಿಂಜಿ ಜಾತಿಗೆ ಸಮೀಪವಾದ ಗುರುಗಿ ಸಹ ಐದಾರು ವರ್ಷಕ್ಕೊಮ್ಮೆ ಹೂಬಿಡುತ್ತದೆ. ವ್ಯತ್ಯಾಸವೆಂದರೆ, ಕುರಿಂಜಿ ಬೆಟ್ಟದ ಬಯಲಲ್ಲಿದ್ದರೆ, ಗುರುಗಿ ಕಾಡಂಚಿನ ನೆರಳಲ್ಲಿ ಬೆಳೆಯುತ್ತದೆ. ಕುರಿಂಜಿ ಕೆಮ್ಮಣ್ಣುಗುಂಡಿ, ಬಾಬಾಬುಡನ್‍ಗಿರಿ, ಕುದುರೆಮುಖ, ಕೊಡಚಾದ್ರಿ, ದೇವರಮನೆ, ಕುಮಾರಪರ್ವತಗಳ ಶೋಲಾಗಳಲ್ಲಿ ಚದುರಿಕೊಂಡಿದೆ. ಕುದುರೆಮುಖದ ಬಳಿ ಕುರಿಂಜಿ ಎಂಬ ಬೆಟ್ಟವೇ ಇದೆ. ಕುರಿಂಜಿಗೆ ಕನ್ನಡದಲ್ಲಿ ಹಾರ್ಲೆ ಎನ್ನುವರು. ಇದರ ನಿಜ ವೈಭವ ತಮಿಳುನಾಡಿನ ಉದಕಮಂಡಲ, ಪಳನಿ, ಕೊಡೈಕೆನಾಲ್, ಏರ್ಕಾಡು ಹಾಗೂ ಕೇರಳದ ಮುನ್ನಾರ್‍ಗಳಲ್ಲಿದೆ. ಅಲ್ಲಿ ಇಡೀ ಬೆಟ್ಟಕಂದರಗಳ ಮೇಲೆ ರಂಗಿನ ಚಾದರವಾಗಿ ಹಬ್ಬುವ ಕುರುಂಜಿ ತನ್ನ ಸರ್ವಾಧಿಕಾರ ಸ್ಥಾಪಿಸುತ್ತದೆ; ಹಿಮಾಲಯದ ಹೂಕಣಿವೆಗಳ ಚೆಲುವನ್ನು ನೆನಪಿಸುತ್ತದೆ. ನಾನು ಕುರಿಂಜಿ ಕಾಣಲು ನನಗೆ ಅತಿಪರಿಚಿತವಾಗಿರುವ ಬಾಬಾಬುಡನಗಿರಿ ಶ್ರೇಣಿಯನ್ನು ಬಿಟ್ಟು, ಮೂಡಿಗೆರೆ ಸಮೀಪದ ದೇವರಮನೆಯನ್ನು ಆರಿಸಿಕೊಂಡೆ. ದೇವರಮನೆ ಕೆಳಗಿನ ಬೆಟ್ಟಗೆರೆಯಲ್ಲಿರುವ ಕಿರಿಯಗೆಳೆಯ ಸಂಪತ್, ‘ಹೂಬಿಟ್ಟಿವೆ ಬನ್ನಿ. ಆದರೆ ಕಾಡಾನೆಗಳ ಕಾಟ’ ಎಂದು ಎಚ್ಚರಿಕೆ ಸಹಿತವಾದ ಆಹ್ವಾನ ಕೊಟ್ಟರು. ಕ್ಯಾಮೆರಾಧಾರಿ ಸೋದರ ಕಲೀಮನೊಡನೆ ಬೆಟ್ಟಗೆರೆಗೆ ಹೋದೆ. ಸಂಪತ್ ಮನೆ ಅವರ ಪುಟ್ಟ ಕಾಫಿತೋಟದಲ್ಲಿದೆ. ಮನೆಯ ಸುತ್ತಮುತ್ತವಿದ್ದ ಮರ ಗಿಡಗಳಿಗೆ ಶೋಲಾ ಪರಿಸರದ ನೂರಾರು ಬಗೆಯ ಹಕ್ಕಿಗಳು ಬಂದುಹೋಗುತ್ತಿದ್ದವು. ಈ ಹಾರುವ ಹೂಗಳನ್ನು ಕಂಡು ಕುರುಂಜಿಯನ್ನು ಮರೆಯುವ ಲಕ್ಷಣ ತೋರಿಸುತ್ತಿದ್ದ ಪಕ್ಷಿಪ್ರಿಯ ತಮ್ಮನನ್ನು ಉಪಾಯವಾಗಿ ಎಬ್ಬಿಸಿಕೊಂಡು ದೇವರಮನೆಗೆ ಹೊರಟೆವು.ದೇವರಮನೆ- ಕರ್ನಾಟಕದಲ್ಲಿ ಹಾಯುವ ಪಶ್ಚಿಮಘಟ್ಟಗಳ ಸಾಲಿನ ಮೋಹಕ ಪರ್ವತ ಶ್ರೇಣಿಗಳಲ್ಲಿ ಒಂದು. ಹಚ್ಚನೆಯ ಹಚ್ಚಡ ಹೊದ್ದ ಪರ್ವತ-ಕಣಿವೆ; ಅವಕ್ಕೆ ಮನಬಂದಾಗ ಮುಸುಕುವ ಹೊಗೆಮಂಜಿನ ಅಪ್ಪುಗೆ. ಇದು ಭೈರವಾರಾಧನೆಯ ಕ್ಷೇತ್ರ ಕೂಡ. ‘ದೇವರ’ ವಿಶೇಷಣ ಅಂಟಿಸಿಕೊಡಿರುವ ಹಳ್ಳಿ, ಕಣಿವೆ, ಗುಡ್ಡ, ಕಾಡು, ಕೆರೆಗಳು ಸಾಮಾನ್ಯವಾಗಿ ಭೈರವಾರಾಧನೆಗೆ ಸಂಬಂಧಿಸಿದವು. ಅಲ್ಲಿರುವ ಭೈರವ ಗುಡಿಯನ್ನೂ ರುದ್ರಭೀಷಣ ಭಂಗಿಯ ಮೂರ್ತಿಶಿಲ್ಪಗಳನ್ನೂ ಕಂಡರೆ, ಹಿಂದೆ ಇದೊಂದು ನರಬಲಿ ಮುಂತಾಗಿ ತಾಂತ್ರಿಕ ನಿಗೂಢಾಚರಣೆ ನಡೆಯುತ್ತಿದ್ದ ಸ್ಥಳವಾಗಿತ್ತು ಎಂದು ಭಾಸವಾಗುತ್ತದೆ. ಪುರಾವೆಗೆಂಬಂತೆ ಅಲ್ಲೊಂದು ನರಬಲಿ ಫಲಕವೂ ಇದೆ.ಬೆಟ್ಟಗೆರೆಯಿಂದ ದೇವರಮನೆಗೆ ಏರುಹಾದಿ. ತೆಳಗೆ ಕಣಿವೆಯಾಳದಲ್ಲಿ ಕಾಣುವ ಒಂದು ಹಳ್ಳಿಯ ಹೆಸರು ಕೇಳಿ ಖುಶಿಯಾಯಿತು: ‘ಕೋಗಿಲೆ’! ಹಾದಿಯುದ್ದಕ್ಕೂ ಚಿಕ್ಕಚಿಕ್ಕ ಬೆಟ್ಟಗಳು. ಅವುಗಳ ತುಂಬ ಹೊಲದಲ್ಲಿ ಪೈರು ಬೆಳೆದಂತೆ ಕುರುಂಜಿ ಗಿಡ. ಕುರುಂಜಿ ಕನಕಾಂಬರದಂತೆ ಮುಚ್ಚಿದ ಮಗುವಿನ ಮುಷ್ಠಿಯಂತಹ ಪುಟ್ಟತೆನೆಯಲ್ಲಿ ಹೂಬಿಡುತ್ತ ಬರುತ್ತದೆ. ನಾವು ಹೋದಾಗ ಹೂವೈಭವ ಮುಗಿಯುತ್ತಿತ್ತು. ಕೂಲಿಗೆ ಹೋಗುವ ಹೆಂಗಸರು ರಸ್ತೆಯಲ್ಲಿ ನಡೆವಾಗ ಕೈಗೆ ಸಿಕ್ಕ ಬೇಲಿಹೂವನ್ನು ತುರುಬಿಗೆ ಸಿಕ್ಕಿಸಿಕೊಳ್ಳುವಂತೆ, ತೆನೆಯ ತುದಿಯಲ್ಲಿ ಕೆಲವಷ್ಟೆ ಉಳಿದಿದ್ದವು. ಸ್ಥಳೀಯರಿಗೆ `ಹಾರ್ಲೆ’ ಎಂಟು ಹತ್ತು ಹನ್ನೆರಡು ವರ್ಷಕ್ಕೊಮ್ಮೆ ಹೂಬಿಡುವುದು ತಿಳಿದಿದೆ. ಅದನ್ನೊಂದು ವಿಶೇಷವೆಂದು ಅವರು ಭಾವಿಸಿಲ್ಲ. ಅದನ್ನು ದನ ತಿಂದರೆ ಉಚ್ಚಿಕೊಳ್ಳುತ್ತವೆ ಎಂಬುದನ್ನು ಬಲ್ಲರು. ಮಲೆನಾಡ ಜಾನಪದದಲ್ಲೂ ಕುರಿಂಜಿಯ ಉಲ್ಲೇಖ ಕಾಣಲಿಲ್ಲ. ಪದ್ಮಾ ಶ್ರೀರಾಮ್ ಅವರು ಬರೆದ ‘ನೀಲಮೊಗದ ಚೆಲುವೆ’ಯಂತಹ ಕೆಲವು ಲೇಖನಗಳನ್ನು ಬಿಟ್ಟರೆ, ಇದರ ಮೇಲೆ ಹೆಚ್ಚಿನ ಬರೆಹಗಳೂ ಇದ್ದಂತಿಲ್ಲ. ಬಿ.ಜಿ.ಎಲ್. ಸ್ವಾಮಿಯವರ ‘ಹಸಿರುಹೊನ್ನು’ ಕೂಡ ಕುರಿಂಜಿಯ ಪ್ರಸ್ತಾಪಿಸುವುದಿಲ್ಲ. ಪಶ್ಚಿಮಘಟ್ಟಗಳಲ್ಲಿ ಜೀವಮಾನವೆಲ್ಲ ಕಳೆದ ತೇಜಸ್ವಿಯವರಿಗೂ ಕುರಿಂಜಿ ಕಾಡಿಲ್ಲ. ಬಹುಶಃ ಪ್ರಾಣಿ ಹಕ್ಕಿಗಳ ಮೇಲೆ ಅವರಿಗಿದ್ದಷ್ಟು ಕುತೂಹಲ ಸಸ್ಯಗಳ ಬಗ್ಗೆ ಇರಲಿಲ್ಲವೆ?ಕನ್ನಡ ಸಂಸ್ಕøತಿಗೆ ಹೋಲಿಸಿದರೆ, ತಮಿಳು ಸಂಸ್ಕøತಿಯಲ್ಲಿ ಕುರಿಂಜಿ ನೂರಾರು ರೂಪದಲ್ಲಿ ಕಾಣಿಸುತ್ತದೆ. ಅಲ್ಲಿನ ಬುಡಕಟ್ಟು ಜನ, ಮದುಮಗಳಿಗೆ ಎರಡು ಕುರುಂಜಿ ವಯಸ್ಸಾಯಿತು, ಅವನಿಗೆ ಸಾಯುವಾಗ ಎಂಟು ಕುರಿಂಜಿ ವಯಸ್ಸಾಗಿತ್ತು ಎಂದು, ಅದನ್ನು ಆಯಸ್ಸು ಅಳೆಯುವ ಮಾನವಾಗಿಸಿಕೊಂಡಿರುವರು. ತಮಿಳಿನ ಪ್ರಾಚೀನ ಅಭಿಜಾತ ಸಾಹಿತ್ಯದಲ್ಲಿ ಕುರಿಂಜಿ ವಿರಾಜಮಾನ. ಪ್ರೇಮಕಾವ್ಯವಿರುವ ಸಂಗಂ ಸಾಹಿತ್ಯದಲ್ಲಿ ತಮಿಳುನಾಡನ್ನು ಕರಾವಳಿ, ಮರುಭೂಮಿ, ಕಾನುಪ್ರದೇಶ, ಹೊಲಗದ್ದೆಯ ಬಯಲು ಹಾಗೂ ಬೆಟ್ಟಪ್ರದೇಶಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಭೂಪ್ರದೇಶದ ಜತೆಗೂ ಒಂದೊಂದು ಸಸ್ಯ ಇಲ್ಲವೇ ಹೂವನ್ನು ಸಮೀಕರಿಸಲಾಗಿದೆ. ಗುಡ್ಡಗಾಡಿನ ಪ್ರದೇಶಕ್ಕೆ ಕುರಿಂಜಿ ಸಂಕೇತ. ಇದರಿಂದ `ಕುರಿಂಜಿ ತಿಣೈ’ ಎಂಬ ಕಾವ್ಯ ಸಂಪ್ರದಾಯವೇ ಹುಟ್ಟಿದೆ. ಈ ಕಾವ್ಯದ ವಸ್ತು, ಅಗಲಿದ ಪ್ರೇಮಿಗಳ ಮಾತುಕತೆ ಮತ್ತು ಕೂಟ. ಇದಕ್ಕೆ ಪೂರಕವಾಗಿ ಕುರಿಂಜಿ ತಿಣೈನಲ್ಲಿ ಬೆಟ್ಟಪ್ರದೇಶದ, ಕುರಿಂಜಿ ಹೂವಿನ, ನಡುರಾತ್ರಿಯ, ಇಬ್ಬನಿ ಸುರಿವ ಚಳಿಗಾಲದ, ಹುಲಿ ಆನೆ ನವಿಲುಗಳ, ಬಿದಿರಿನ ಹಿಂಡಿಲುಗಳ, ಜಲದ ಅಬ್ಬಿಗಳ, ದುಂಬಿಗಳ, ಜೇನುಕೀಳುವ ಜನರ ಬದುಕಿನ ವರ್ಣನೆಗಳು. ಈ ಕಾವ್ಯಮಾರ್ಗದ ಅಧಿದೇವತೆ ಮುರುಗನ್. ಬೆಟ್ಟಪ್ರದೇಶದ ದೈವವಾದ ಮುರುಗನ್ ಕುರಿಂಜಿಹಾರ ತೊಟ್ಟು ಬುಡಕಟ್ಟಿನ ಚೆಲುವೆಯಾದ ವೆಳ್ಳಿಯನ್ನು ಪ್ರೇಮಿಸುವವನು. ಕೊಡೈಕೆನಾಲಿನ ಕುರಿಂಜಿ ಬನದಲ್ಲಿ ಅವನದೊಂದು ಗುಡಿಯಿದೆ. ತಮಿಳರ ಆದಿಮಕಾವ್ಯವಾದ ‘ಶಿಲ್ಪಪ್ಪದಿಕಾರಂ’ನ ನಾಯಕಿ ಕನ್ನಗಿ ಸಹ ಕಡಲತೀರದಲ್ಲಿ ಹುಟ್ಟಿಬೆಳೆದು, ಮದುರೆಯಂತಹ ಬಯಲುನಾಡಲ್ಲಿ ದುರಂತ ಕಂಡು, ಕೊನೆಗೆ ಕುರುಂಜಿ ಹೂವಿನ ಬೆಟ್ಟದಲ್ಲಿ ಪ್ರಾಣತ್ಯಾಗ ಮಾಡುವವಳು. ತಮಿಳು ಮನೆಮಾತಿನ ಕನ್ನಡ ಕವಿ, ಎ.ಕೆ. ರಾಮಾನುಜನ್ ಪ್ರಾಚೀನ ಸಂಗಂ ಸಾಹಿತ್ಯವನ್ನು ‘ಪೊಯೆಮ್ಸ್ ಆಫ್ ಲವ್ ಅಂಡ್ ವಾರ್’ ಹಾಗೂ ‘ಇಂಟೀರಿಯರ್ ಲ್ಯಾಂಡ್‍ಸ್ಕೇಪ್’ ಎಂದು ಇಂಗ್ಲೀಶಿಗೆ ಅನುವಾದಿಸಿದ್ದಾರೆ. ಅವರು ಅನುವಾದಿಸಿರುವ ಕುರಿಂಜಿ ತಿಣೈನ ಎರಡು ಪದ್ಯಗಳ ಕನ್ನಡ ಸಾರವಿದು: 1. ಇಳೆಗಿಂತಲೂ ದೊಡ್ಡ, ದಿಟಕ್ಕೂ ಆಗಸಕ್ಕಿಂತಲೂ ಎತ್ತರನೀರಿಗಿಂತಲೂ ಹೆಚ್ಚು ಆಳ ನನ್ನ ಗಂಡಿನ ಮೇಲಣ ಪ್ರೇಮಪರ್ವತಗಳ ಇಳುಕಲಿನಲಿ ಕಡುಕಪ್ಪನೆಯ ದೇಟಿನಚೆಲುವಾದ ಕುರಿಂಜಿ ಹೂಗಳಿಂದ ದುಂಬಿಗಳು ಮಾಡುವ ಜೇನು 2. ಹುರುಳಿಕಾಯ ಬತ್ತಲೆಬೇರು ನಸುಗೆಂಪಾಗಿದೆಕಾಡುಕೋಳಿಯ ಕಾಲಿನಂತೆಚಿಗರೆ ಹಿಂಡು ಮಾಗಿದ ಕಾಯಿಗಳ ಮೇಲೆರಗುತಿದೆಇಬ್ಬನಿ ಸುರಿವ ಮುಂಜಾನೆಯ ಋತುವಿನ ಹೊಡೆತಕ್ಕೆಬೇರೆ ಮದ್ದಿಲ್ಲ, ನನ್ನ ಗಂಡಿನ ಹರವಾದ ಎದೆಯ ಹೊರತು. ಕುರಿಂಜಿ ತಿಣೈ ಕಾವ್ಯಮಾರ್ಗವೆಂದರೆ- ಪಶ್ಚಿಮಘಟ್ಟದ ಸಸ್ಯಾವಳಿ, ಕೀಟ, ಹಕ್ಕಿ, ಪ್ರಾಣಿ, ನೀರು, ಗಾಳಿ, ಜನ, ಅವರ ದುಡಿಮೆ, ಹಾಡು ಕತೆ ಸಂಗೀತಗಳೆಲ್ಲವನ್ನು ತುಂಬಿಕೊಂಡ ಅನನ್ಯಲೋಕ. ಈ ಲೋಕದಲ್ಲಿ ಒಂದು ಲೋಕದೃಷ್ಟಿಯೂ ಅಡಗಿದೆ. ಕುರಿಂಜಿಪಾಟ್ಟು ಎಂಬ ಹಾಡುಗಳನ್ನು ನಾಟ್ಟುಕುರಿಂಜಿ ಎಂಬ ರಾಗದಲ್ಲಿ ಸಂಜೆ ಹೊತ್ತು ಹಾಡುವರು; ಅದರ ಜತೆ ನುಡಿಸುವ ತಂತಿವಾದ್ಯದ ಹೆಸರು ಕುರಿಂಜಿಯಾಳ್. ತಮಿಳು ಸಂಸ್ಕøತಿಯ ಜತೆ ಆಪ್ತನಂಟನ್ನು ಏರ್ಪಡಿಸಿಕೊಳ್ಳದೆ ಹೋದ ಕನ್ನಡ ಸಾಹಿತ್ಯಕ್ಕೆ ಇವೆಲ್ಲ ಯಾವುದೊ ಲೋಕದ ವಿಚಾರಗಳಂತೆ ತೋರಬಹುದು. ಸಂಸ್ಕøತ ಕಾವ್ಯಮೀಮಾಂಸೆಗೆ ತನ್ನನ್ನು ಅಗತ್ಯಕ್ಕಿಂತ ಹೆಚ್ಚಾಗಿ ತೆತ್ತುಕೊಂಡು ಜೀತಮಾಡಿದ ಕನ್ನಡ ಶಿಷ್ಟ ಕಾವ್ಯಪರಂಪರೆ, ದ್ರಾವಿಡ ಸೀಮೆಯ ಸ್ಥಳೀಯ ಸಾಂಸ್ಕøತಿಕ ನೆಲೆಗಳ ಮೂಲಕ ತನ್ನದೇ ಮೀಮಾಂಸೆ ಕಟ್ಟಿಕೊಳ್ಳಲಾರದೆ ಹೋಯಿತು. ಆಧುನಿಕ ಕಾಲದಲ್ಲಿ ಈ ತಮಿಳು ಸಂಸ್ಕøತಿಯೊಂದಿಗೆ ಕನ್ನಡ ಸಂಸ್ಕøತಿಯನ್ನು ಕೂಡಿಸುವ ಕಸುವು ಬಿಜಿಎಲ್ ಸ್ವಾಮಿಗಿತ್ತು. ರಾಮಾನುಜನ್‍ಗಿತ್ತು. ಶಿವಪ್ರಕಾಶರಿಗಿದೆ. ಈ ದಿಸೆಯಲ್ಲಿ ಕನ್ನಡವು ಹೊಸಹಾದಿ ಸೋಸಬೇಕಿದೆ.ಕುರಿಂಜಿ ಸಂಸ್ಕøತಿಯನ್ನು ತಮಿಳು ಸಿನಿಮಾ ಸಂಗೀತ ಚಿತ್ರಕಲೆಗಳು ಅದ್ಭುತವಾಗಿ ಮುಂದುವರೆಸಿದವು. ಅಲ್ಲಿ ಕುರಿಂಜಿ ಹೆಸರಲ್ಲಿ ಶಾಲೆ ಆಸ್ಪತ್ರೆ ಹೋಟೆಲು ರೆಸಾರ್ಟು ಬಡಾವಣೆಗಳಿವೆ; ಒಬ್ಬ ಇಂಜಿನಿಯರ್ ತಮಿಳು ಲಿಪಿಗಾಗಿ ಕುರಿಂಜಿ ಫಾಂಟ್ ಎಂಬ ಅಕ್ಷರವಿನ್ಯಾಸ ಸೃಷ್ಟಿಸಿರುವನು. ತಮಿಳು ಸಿನಿಮಾ ಗೀತಕಾರನೊಬ್ಬನ ಹೆಸರು ಕುರಿಂಜಿಪ್ರಭ; ತಮಿಳು ಸಿನಿಮಾಗಳು ಕುರಿಂಜಿಯ ಹೂಸುಗ್ಗಿಯನ್ನು ಸೆರೆಹಿಡಿಯಲು ಮರೆಯುವುದಿಲ್ಲ. ‘ಕುರಿಂಜಿ ಮಲರ್’ ಚಿತ್ರದಲ್ಲಿ ‘ಕುರಿಂಜಿ ಮಲರೈ’ ಎಂಬ ಜಾನಕಿ-ಜೇಸುದಾಸ್ ಹಾಡಿರುವ ಇಂಪಾದ ಹಾಡಿದೆ. ವ್ಯಂಗ್ಯವೆಂದರೆ ಈ ಹಾಡಿನ ಮೊದಲ ಸಾಲು ಕುರಿಂಜಿ ಬೆಳೆಯುವ ಶೋಲಾಬೆಟ್ಟಗಳಲ್ಲಿ ಚಿತ್ರೀಕರಣಗೊಂಡಿದೆ. ಅದು ಹೂವಿಲ್ಲದ ಕಾಲ. ತಮಿಳರ ಈ ಯತ್ನಗಳ ಹಿಂದೆ ಅವರ ಸಾಂಸ್ಕøತಿಕ ಪ್ರಜ್ಞೆಯಿದೆ. ಜತೆಗೆ ಸಾಂಸ್ಕøತಿಕ ಸಂಕೇತಗಳನ್ನು ಮಾರುಕಟ್ಟೆಗಾಗಿ ಬಳಸುವ ವ್ಯಾಪಾರಿ ಜಾಣ್ಮೆ ಕೂಡ. ಕೇರಳ-ತಮಿಳುನಾಡಿನ ಗಿರಿಧಾಮಗಳಿಗೆ ಪ್ರವಾಸಿಗರನ್ನು ಸೆಳೆಯಲು ಅವರಿಗೆ ಕುರಿಂಜಿಯೊಂದು ದೊಡ್ಡ ಆಕರ್ಷಣೆ. ಅಲ್ಲಿನ ಹೋಟೆಲುಗಳಲ್ಲಿ ಕುರಿಂಜಿ ಋತುವಿನ ವರ್ಷಗಳ್ನು ಸೂಚಿಸುವ ಮಾಹಿತಿ ಬರೆಹಗಳಿರುತ್ತವೆ. ಒಮ್ಮೆ ದಕ್ಷಿಣ ಭಾರತದ ಎತ್ತರ ಶಿಖರವಾದ ಮುನ್ನಾರಿನ ಎರವಿಕುಲಮ್‍ಗೆ ಕಾಡುಮೇಕೆ ನೋಡಲು ಹೋಗಿದ್ದೆವು. ಕುರಿಂಜಿ ಗಿಡಗಳಿಂದ ತುಂಬಿಹೋಗಿದ್ದ ಬೆಟ್ಟದ ಕೋಡಿನಲ್ಲಿ ಮೇಕೆ ನಿರಾಳ ಮೇಯುತ್ತಿದ್ದವು. ಅದು ಹೂವಿನ ಕಾಲವಾಗಿರಲಿಲ್ಲ. ಈಚೆಗೆ ಕುರಿಂಜಿ ನೆಲೆಗಳಾದ ಶೋಲಾಗಳನ್ನು ಚಹತೋಟಗಳನ್ನಾಗಿ ಮಾಡಲಾಗಿದೆ. ಕುರಿಂಜಿ ದಟ್ಟವಾದ ಹುಲ್ಲಿನ ಜತೆ ಬೆಳೆಯುವುದರಿಂದ, ಆ ಹುಲ್ಲಿಗೆ ಬೆಂಕಿಬಿದ್ದಾಗಲೆಲ್ಲ ತಾನೂ ಭಸ್ಮವಾಗುತ್ತದೆ. ಕರ್ನಾಟಕದ ಶೋಲಾಗಳಲ್ಲಿ ಈ ಖಾಂಡವದಹನ ಪ್ರಸಂಗಗಳು ಸಾಮಾನ್ಯೆ. ಈಗೀಗ ತಮಿಳುನಾಡಲ್ಲಿ ಕುರಿಂಜಿ ಉಳಿಸುವ ಚಳುವಳಿಗಳೂ ಹುಟ್ಟಿಕೊಂಡಿವೆ. ಕೆಲವು ಜಾತಿಯ ಮೀನುಗಳು ಹೊಳೆಗಳಲ್ಲಿ ನೂರಾರು ಮೈಲಿ ಪಯಣಿಸಿ ಹೊಸಸಂತಾನಕ್ಕೆ ಮೊಟ್ಟೆಯಿಟ್ಟು ಜೀವಬಿಡುತ್ತವೆ. ಅದರಂತೆ ದಶಕಗಳ ಕಾಲ ಕಾಯುವ ಕುರಿಂಜಿ ಹೂತರೆ ಅದರ ಮರಣದ ಸೂಚನೆ. ಬಿದಿರು ಕೂಡ ಹೀಗೆ ತಾನೇ? ಕುರಿಂಜಿ ಹೂತಳೆದು ಸತ್ತ ಬಳಿಕ, ಬಿದ್ದ ಅದರ ಬೀಜಗಳು ಮಳೆಗಾಲಕ್ಕೆ ಕಾದು ಸಸಿಯಾಗಿ ಹೊಸ ಬದುಕನ್ನು ಆರಂಭಿಸುತ್ತವೆ. ಇದರ ಹುಟ್ಟುಸಾವಿನ ಈ ಯಾನ ಎಷ್ಟು ಸಹಸ್ರ ಶತಮಾನಗಳಿಂದ ನಡೆದುಬಂದಿದೆಯೊ? ಹೆಚ್ಚಿನ ಸಸ್ಯಗಳಿಗೆ ‘ವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆ’; ಕುರಿಂಜಿಗಾದರೊ ದಶಕಕೊಂದು ಹೊಸತು ಜನ್ಮ. ಆದರೆ ಸಾವಿನ ಸಾನಿಧ್ಯದಲ್ಲಿ ಅದು ಹೂತಳೆದು ಪಡುವ ಸಂಭ್ರಮ, ಸಾವು ಮತ್ತು ಮರುಹುಟ್ಟುಗಳ ನಡುವೆ ಮಾಡುವ ಧ್ಯಾನ ಅಪೂರ್ವ. ಕುರಿಂಜಿ ಬೆಳೆಯುವ ಮುಳ್ಳಯ್ಯನಗಿರಿ, ಬಾಬಾಬುಡನಗಿರಿ ಕೊಡಚಾದ್ರಿಗಳು ನಾಥರು ಸೂಫಿಗಳು ಅವಧೂತರ ತಾಣಗಳಾಗಿದ್ದು, ಇಲ್ಲಿ ಧ್ಯಾನದ ಗುಹೆಗಳಿವೆ; ವಿಭಿನ್ನ ದಾರ್ಶನಿಕ ಪರಂಪರೆಗೆ ಸೇರಿದ ಸಂತರು ಒಂದೇ ಗುಹೆಗಳಲ್ಲಿದ್ದ ಚರಿತ್ರೆಯಿದೆ. ಮಂಜು ಮಳೆ ಬಿಸಿಲು ಚಳಿಗಳೆಂಬ ಪರೀಷಹಗಳನ್ನು ಎದುರಿಸುತ್ತ ಸಹಸ್ರಾರು ವರ್ಷಗಳಿಂದ ನಿಂತಿರುವ ಶೋಲಾಬೆಟ್ಟಗಳನ್ನು ನೋಡುವಾಗ, ಅವೂ ಸ್ವತಃ ಧ್ಯಾನಸ್ಥವಾಗಿವೆ ಅನಿಸುತ್ತದೆ. ಅವುಗಳ ತುದಿಯಲ್ಲಿ

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಬಾಗದ ಬದುಕು ನಾನು ಶಿವಮೊಗ್ಗೆಯಲ್ಲಿದ್ದ ದಿನಗಳಲ್ಲಿ ಹಲವು ತಲೆಮಾರಿಗೆ ಸೇರಿದ ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿಗಳು ಹಾಗೂ ಸಮಾಜವಾದಿಗಳು ಬೀದಿಯಲ್ಲಿ ಓಡಾಡಿಕೊಂಡಿದ್ದನ್ನು ಕಾಣುತ್ತಿದ್ದೆ. ಹೆಚ್ಚಿನವರು ಗಾಂಧಿ ಇಲ್ಲವೇ ಲೋಹಿಯಾರ ವ್ಯಕ್ತಿತ್ವ ಅಥವಾ ಚಿಂತನೆಯ ಭಾವಕ್ಕೆ ಸಿಕ್ಕು ಬದುಕಿನ ಹಾದಿ ರೂಪಿಸಿಕೊಂಡವರು. ಸಮಕಾಲೀನ ಚುನಾವಣಾ ರಾಜಕಾರಣದಲ್ಲಿ ಇವರ ಯಾರ ಹೆಸರೂ ಚಾಲ್ತಿಯಲ್ಲಿರುತ್ತಿರಲಿಲ್ಲ. ಹೀಗಾಗಿ ಮಾಧ್ಯಮಗಳೂ ಇವರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇವರು ಮಲೆನಾಡಿನ ಮಳೆಗಾಲದಲ್ಲಿ ಮೋಡಗಳ ಮರೆಯಿಂದ ತಟ್ಟನೆ ಕಾಣಿಸಿಕೊಂಡು ಬೆಳಗುವ ಸೂರ್ಯನಂತೆ ಸನ್ನಿವೇಶ ಬಂದಾಗ ಪ್ರತ್ಯಕ್ಷವಾಗುತ್ತಿದ್ದರು. ಇವರಲ್ಲಿ ಪೊನ್ನಮ್ಮಾಳ್ ಸಹ ಒಬ್ಬರು.ತಮಿಳು ಮನೆಮಾತಿನ ಪೊನ್ನಮ್ಮಾಳ್ ಬ್ರಿಟಿಶರ ವಿರುದ್ಧದ ಹೋರಾಟಗಳಲ್ಲಿ ಭಾಗವಹಿಸಿ ಸೆರೆಮನೆ ಕಂಡವರು; ಹೋರಾಟಗಾರರಿಗೆ ನೀಡಲಾಗುತ್ತಿದ್ದ ಪೆನ್ಶನ್ ತೆಗೆದುಕೊಳ್ಳಲು ನಿರಾಕರಿಸಿದವರು; ನಾಡಸೇವೆಗೆ ಸಂಸಾರ ಅಡ್ಡಿಯಾದೀತೆಂದು ಮದುವೆಯಾಗದೆ ಉಳಿದವರು; ಖಾದಿಬಿಟ್ಟು ಬೇರೆ ಉಟ್ಟವರಲ್ಲ; ಲೋಹಿಯಾ ಅನುಯಾಯಿಯಾಗಿದ್ದವರು; ಸಮಾಜವಾದಿ ಚಿಂತನೆಯ ಮೂಸೆಯಲ್ಲಿ ರೂಪುಗೊಂಡವರು; ಬಹುತೇಕ ಆದರ್ಶವಾದಿಗಳಂತೆ ಮುರಿದರೂ ಬಾಗಲಾರೆನೆಂದು ಬದುಕಿದವರು; ನಂಬಿದ ಮೌಲ್ಯಗಳಲ್ಲಿ ರಾಜಿ ಮಾಡಿಕೊಂಡವರಲ್ಲ. ಕೆಟ್ಟದ್ದು ಅನಿಸಿದಾಗ ಸಹಿಸಿದವರಲ್ಲ. ಗೌರವ ಹುಟ್ಟಿಸುವ ಇಂಥ ಸಮಾಜವಾದಿಗಳ ಹಠಮಾರಿತನ ಮತ್ತು ನೈತಿಕತೆ ಕೆಲವೊಮ್ಮೆ ದುರಂತಪ್ರಜ್ಞೆಯದು ಅನಿಸುತ್ತದೆ. ಉದಾಹರಣೆಗೆ, ಪೊನ್ನಮ್ಮಾಳರ ಸಮಕಾಲೀನರಾದ ಸದಾಶಿವರಾವ್. ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡ ಮುಂತಾದವರ ಸಂಗಾತಿಯಾಗಿದ್ದ ಇವರು ತೀರ್ಥಹಳ್ಳಿ ಸೀಮೆಯವರು. ಐವತ್ತರ ದಶಕದ ಸಮಾಜವಾದಿ ಚಳುವಳಿಯಲ್ಲಿ ಒಡಮೂಡಿದವರು; ಕಾಗೋಡು ಸತ್ಯಾಗ್ರಹದ ಪ್ರಭಾವದಿಂದ ಉಳುವವರಿಗೇ ನೆಲವನ್ನು ಬಿಟ್ಟುಕೊಡಬೇಕು ಎಂಬ ಆದರ್ಶಕ್ಕೆ ಬಿದ್ದು, ಇದ್ದಬದ್ದ ಜಮೀನನೆಲ್ಲ ರೈತರಿಗೆ ಹಂಚಿದವರು. ತಮಗಾಗಿ ಏನನ್ನೂ ಉಳಿಸಿಕೊಳ್ಳದ ಇವರ ಮುಪ್ಪಿನ ದಿನಗಳಲ್ಲಿ ಕಷ್ಟದ ದಿನಗಳು ಕಾಣಿಸಿದವು. ಇದನ್ನವರು ಯಾರಲ್ಲೂ ಹೇಳಿಕೊಳ್ಳಲಿಲ್ಲ. ಯಾರಿಗೂ ಸುದ್ದಿಯಾಗದಂತೆ ಒಂದು ದಿನ ತೀರಿಕೊಂಡರು. ಶಿವಮೊಗ್ಗೆಯಲ್ಲಿದ್ದ ಇನ್ನೊಬ್ಬ ವಿಶಿಷ್ಟ ವ್ಯಕ್ತಿ ನಾಗಪ್ಪಶೆಟ್ಟರು. ಸಬರಮತಿ ಆಶ್ರಮದಲ್ಲಿ ಇದ್ದವರು. ಗಾಂಧೀಜಿಯವರಿಗೂ ಕಸ್ತೂರಬಾಯಿಗೂ ಯಾವುದೊ ವಿಷಯಕ್ಕೆ ಭಿನ್ನಮತ ಬಂದಾಗ, ಗಾಂಧಿಯವರ ವಿರುದ್ಧ ಓಟುಹಾಕಿ ದೋಷ ತೋರಿಸಿಕೊಟ್ಟವರು ಎಂದು ಅವರ ಬಗ್ಗೆ ಪ್ರತೀತಿಯಿತ್ತು. ಶೆಟ್ಟರು ಹಳೇಸೈಕಲೊಂದನ್ನು ಸವಾರಿ ಮಾಡಿಕೊಂಡು ಶಿವಮೊಗ್ಗ ಶಹರನೆಲ್ಲ ತಿರುಗಾಡುತ್ತಿದ್ದರು; ಎಚ್. ನರಸಿಂಹಯ್ಯನವರಂತೆ ಇವರೂ ಶಿಕ್ಷಣಸಂಸ್ಥೆ ಕಟ್ಟಲು ತಮ್ಮ ಜೀವನ ವ್ಯಯಿಸಿದರು. ವಿಚಿತ್ರವೆಂದರೆ, ಈ ಇಬ್ಬರೂ ಕಟ್ಟಿದ ಸಂಸ್ಥೆಗಳು ವಿಜ್ಞಾನ ಮತ್ತು ವಾಣಿಜ್ಯಶಾಸ್ತ್ರಕ್ಕೆ ಹೆಸರಾಗಿದ್ದವು. ಅಲ್ಲಿ ಬಡ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬರುತ್ತಿದ್ದುದು ಕಡಿಮೆ. ಇದನ್ನು ಅವರ ವೈಯಕ್ತಿಕ ಸರಳತೆಗಿದ್ದ ಸಾಮಾಜಿಕ ಪ್ರಜ್ಞೆಯ ಕೊರತೆ ಎನ್ನಬೇಕೊ, ತಮ್ಮ ಪ್ರಭಾವಶಾಲಿ ವ್ಯಕ್ತಿತ್ವವನ್ನು ಬೇರೆ ಹಿತಾಸಕ್ತಿಗಳು ಬಳಸಿಕೊಳ್ಳುವುದನ್ನು ಅರಿಯದ ಮುಗ್ಧತೆ ಎನ್ನಬೇಕೊ ತಿಳಿಯದು. ಈ ವಿಷಯದಲ್ಲಿ ಪೊನ್ನಮ್ಮಾಳ್ ಭೋಳೆಯಲ್ಲ. ಸಂಸ್ಥೆಗಳಿಗೆ ತಮ್ಮ ವ್ಯಕ್ತಿತ್ವ ಬಳಕೆಗೊಳ್ಳಲು ಬೆಂಕಿಯಂತಹ ಅವರು ಬಿಡಲಿಲ್ಲ. ಉದ್ದಕ್ಕೂ ಶಕ್ತಿರಾಜಕಾರಣಕ್ಕೆ ದೂರವಾಗಿದ್ದು ಜನಪರ ಚಳುವಳಿಗಳಲ್ಲೇ ಗುರುತಿಸಿಕೊಂಡರು. ಅವರ ಮಾತು ಹರಿತವಾದ ಚಾಕುವಿನಿಂದ ಚರ್ಮದ ಮೇಲೆ ಗೀರಿದಂತೆ ಕಟುವಾಗಿರುತ್ತಿತ್ತು. ರಾಜಕಾರಣಿಗಳು ಇವರ ಸಹವಾಸವೇ ಬೇಡವೆಂದು ದೂರ ಇರುತ್ತಿದ್ದರು. ಜೆ.ಎಚ್. ಪಟೇಲ್, ಬಂಗಾರಪ್ಪ ಮುಂತಾದವರನ್ನೆಲ್ಲ ಪೊನ್ನಮ್ಮಾಳ್, ಅವರು ಮುಖ್ಯಮಂತ್ರಿಗಳಾಗಿದ್ದಾರೆ ಎಂಬುದನ್ನೂ ಲೆಕ್ಕಕ್ಕಿಡದೆ ಏಕವಚನದಲ್ಲಿ ಮಾತಾಡುತ್ತಿದ್ದರು. ಪಟೇಲರನ್ನು ಕೂರಿಸಿಕೊಂಡು ಅವರ ಕುಡಿತ ಸ್ತ್ರೀಶೋಕಿಗಳನ್ನು ಕಟುವಾಗಿ ಟೀಕಿಸುತ್ತಿದ್ದರಂತೆ; ಅವರ ಪ್ರಕಾರ, ಕುಡಿಯದ, ವ್ಯಾಯಾಮ ಮಾಡಿ ದೇಹವನ್ನು ಶಿಸ್ತಾಗಿ ಇಟ್ಟುಕೊಂಡಿದ್ದ ಬಂಗಾರಪ್ಪ, ಗುಡ್ಬಾಯ್ ಆಗಿದ್ದರು. ಬಂಗಾರಪ್ಪನವರಾದರೂ ಪೊನ್ನಮ್ಮಾಳ್ ನಡೆದುಹೋಗುತ್ತಿದ್ದರೆ, ಕಾರು ನಿಲ್ಲಿಸಿ ರಸ್ತೆಬದಿಯಲ್ಲೇ ನಿಂತು ಮಾತಾಡುತ್ತಿದ್ದರು. ಮಾತು ಮುಗಿದ ಬಳಿಕ ಪೊನ್ನಮ್ಮಾಳ್ ತಮ್ಮ ನಡಿಗೆ ಮುಂದುವರೆಸುತ್ತಿದ್ದರು. ಅಧಿಕಾರಸ್ಥರ ಜತೆ ಹೀಗೆ ಅಂತರ ಕಾದುಕೊಂಡಿರುತ್ತಿದ್ದ ಪೊನ್ನಮ್ಮಾಳ್, ಸಾಮಾನ್ಯರ ಕಷ್ಟಗಳಿಗೆ ಸಂಬಂಧಪಟ್ಟ ಯಾವುದೇ ಚಳುವಳಿ-ಸತ್ಯಾಗ್ರಹ ಇದ್ದರೂ, ಇಡೀ ದಿನ ಬಂದು ಕೂರುತ್ತಿದ್ದರು. ಯೌವನದಲ್ಲಿ ಸುಂದರಿ ಆಗಿದ್ದಿರಬಹುದಾದ ಇವರು, ಹೊಸತಲೆಮಾರಿನ ಚಳುವಳಿಗಾರ ತರುಣ ತರುಣಿಯರನ್ನು ಸುತ್ತ ಕೂರಿಸಿಕೊಂಡು ಮಾತುಕತೆ ಮಾಡುತ್ತಿದ್ದರು- `ಟೈಟಾನಿಕ್’ ಚಿತ್ರದಲ್ಲಿ ಅಜ್ಜಿ, ಹಡಗು ಮುಳುಗುವಾಗ ಜೀವ ಉಳಿಸಿಕೊಳ್ಳಲು ಹೋರಾಡಿದ ಸಾಹಸಗಾಥೆ ಹಂಚಿಕೊಳ್ಳುವಂತೆ. ಆದರೆ ಟೈಟಾನಿಕ್ ಅಜ್ಜಿಯಷ್ಟು ಮುಕ್ತವಾಗಿ ಖಾಸಗಿ ಬದುಕನ್ನು ತೆರೆದು ಹೇಳುತ್ತಿರಲಿಲ್ಲ. ಹಳಗಾಲದ ಅನೇಕ ಸ್ವಾತಂತ್ರ್ಯ ಹೋರಾಟಗಾರರಂತೆ, ಗತಕಾಲದ ಆದರ್ಶಗಳಲ್ಲೇ ಮುಳುಗಿ ವರ್ತಮಾನವೆಲ್ಲ ಪತನವಾಗಿದೆ ಎಂದು ಸಿನಿಕವಾಗಿ ಗೊಣಗುವ ಪೈಕಿ ಆಗಿರಲಿಲ್ಲ ಪೊನ್ನಮ್ಮಾಳ್. ಸಮಕಾಲೀನ ಹೋರಾಟಗಳಲ್ಲಿ ತೊಡಗಿಕೊಂಡು ಅವಕ್ಕೆ ನೈತಿಕ ಬೆಂಬಲ ತುಂಬುತ್ತಿದ್ದರು. ನಾನೂ ಭಾಗವಹಿಸಿದ್ದ ಹಳೆಯದಾದ ಪತ್ರಿಕಾ ವರದಿಯೊಂದನ್ನು ಒಮ್ಮೆ ನೋಡುತ್ತಿದ್ದೆ. ತುಂಗಭದ್ರಾ ನದಿಯನ್ನು ಕುದುರೆಮುಖದ ಅದಿರುಗಾರಿಕೆಯಿಂದ ಉಳಿಸುವ ಚಳುವಳಿಯದು. ಶಿವಮೊಗ್ಗೆಯ ಗೋಪಿಸರ್ಕಲಿನಲ್ಲಿ ಹಾಕಿದ ಪೆಂಡಾಲಿನಲ್ಲಿ ಅನೇಕ ಲೇಖಕರು ಚಿಂತಕರು ಧರಣಿ ನಿರತರಾಗಿದ್ದಾರೆ. ಅವರ ನಡುವೆ ಪೊನ್ನಮ್ಮಾಳ್ ಕುರ್ಚಿಯಲ್ಲಿ ಕುಳಿತಿದ್ದಾರೆ. ಅವರ ಕುಳಿತ ಭಂಗಿಯಲ್ಲಿ ಮುಂದಾಳುತನದ ಗತ್ತಿಗಿಂತ, ನೀವು ಮಾಡುತ್ತಿರುವ ಒಳ್ಳೆಯ ಕೆಲಸಗಳಲ್ಲಿ ನನ್ನನ್ನೂ ಒಳಗೊಳ್ಳಿ ಎಂಬ ಕೋರಿಕೆಯೂ ಇದ್ದಂತಿದೆ. ತಮ್ಮ ಚೈತನ್ಯ ಹೊಸ ತಲೆಮಾರಿನ ತರುಣ ತರುಣಿಯರಲ್ಲಿ ಮುಂದುವರೆಯುತ್ತಿದೆ ಎಂಬ ಸಮಾಧಾನವಿದೆ. ಅವರು ಆದರ್ಶ ತುಂಬಿಕೊಂಡ ಹುಡುಗ-ಹುಡುಗಿಯರ ಜತೆ ಸೇರಿ, ತಮ್ಮ ಮನಸ್ಸಿನ, ಸಿದ್ಧಾಂತದ, ಆದರ್ಶದ ಯೌವನ ಉಳಿಸಿಕೊಂಡಿದ್ದರು. ಹಿರಿತನ ತನ್ನನ್ನು ನವೀಕರಿಸಿಕೊಳ್ಳುವುದು ಅಥವಾ ಪರಂಪರೆ ರೂಪುಗೊಳ್ಳುವುದು ಹೀಗೇ ತಾನೇ? ಸಾರ್ವಜನಿಕ ಬದುಕಿನಲ್ಲಿ ಮಹಿಳೆಯರ ಪಾಲುಗೊಳ್ಳುವಿಕೆಯು ತೀರ ಕಡಿಮೆಯಿರುವ, ಇದ್ದರೂ ಸಹಾಯಕರಾಗಿ ಉಳಿಯುುವ ಭಾರತೀಯ ಸಾಮಾಜಿಕ ಸನ್ನಿವೇಶದಲ್ಲಿ, ಪೊನಮ್ಮಾಳ್ ನಮ್ಮ ಕೊಡಗಿನ ಗೌರಮ್ಮನವರ ತರಹ, ತಮ್ಮ ವ್ಯಕ್ತಿತ್ವದ ಘನತೆಯನ್ನು ಸ್ವಯಂ ಪರಿಭಾವಿಸಿದ್ದವರು. ಸದ್ಯ ಕರ್ನಾಟಕ ರಾಜಕೀಯ ಪಕ್ಷಗಳಲ್ಲಿರುವ ಕೆಲವು ನಾಯಕಿಯರು, ಸೂಕ್ಷ್ಮತೆ ಕಳೆದುಕೊಂಡು ಕೂಗುಮಾರಿಗಳಾಗಿ ಪರಿವರ್ತನೆಗೊಂಡಿರುವುದನ್ನು ಕಾಣುವಾಗ, ಜನಪರ ಚಳುವಳಿಗಳಲ್ಲಿ ರೂಪುಗೊಂಡ ಕರ್ನಾಟಕದ ಕಮಲಾದೇವಿ ಚಟ್ಟೋಪಾಧ್ಯಾಯ, ಪೊನ್ನಮ್ಮಾಳ್ ಮುಂತಾದ ಹಳಬರ ಧೀಮಂತಿಕೆ ಗೌರವ ಹುಟ್ಟಿಸುತ್ತದೆ. ಬಾಳಿನುದ್ದಕ್ಕೂ ವ್ಯವಸ್ಥೆಯ ಎದುರಾಳಿಯಾಗಿಯೇ ಜೀವಿಸಿದ ಪೊನ್ನಮ್ಮಾಳ್ ಕಡೆತನಕ ಒರೆಯಿಂದ ಆಗತಾನೇ ಹೊರಸೆಳೆದ ಕತ್ತಿಯಂತೆ ತಮ್ಮ ಪ್ರಖರತೆ ಉಳಿಸಿಕೊಂಡಿದ್ದರು. ಕಾಗೋಡು ಸತ್ಯಾಗ್ರಹಕ್ಕೆಂದು ಶಿವಮೊಗ್ಗೆಗೆ ಲೋಹಿಯಾ ಬಂದಾಗ ತೆಗೆಯಲಾದ ಒಂದು ಫೋಟೊ ಇದೆ. ಅದರಲ್ಲಿ ಸೈನಿಕಳಂತೆ ಪೊನ್ನಮ್ಮಾಳ್ ಲೋಹಿಯಾರ ಜತೆ ನಡೆಯುತ್ತಿದ್ದಾರೆ. ಅವರ ದೇಹಭಾಷೆ ಯಾರಿಗೂ ಬಾಗದೆ ಬದುಕುವ ಅವರ ಗುಣದ ಪ್ರತೀಕದಂತಿದೆ. ತುಸು ಬಾಗಿರುವ ಲೋಹಿಯಾ ಹೊಸತಲೆಮಾರಿನ ಹೆಣ್ಣೊಬ್ಬಳಲ್ಲಿ ತಮ್ಮ ಚೈತನ್ಯ ಪ್ರವಹಿಸುತ್ತಿರುವುದನ್ನು ಪರಿಭಾವಿಸಿರುವ ಭಾವದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.ಪೊನ್ನಮ್ಮಾಳ್ ಹಾದಿಯಲ್ಲಿ ನಡೆದ ಹಲವಾರು ಮಹಿಳೆಯರನ್ನು ಕರ್ನಾಟಕ ಕಂಡಿತು. ************************************** ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

You cannot copy content of this page

Scroll to Top