ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ಮರಿಕಪ್ಪೆ ಹಾರಿತು ಬಾವಿಯ ಹೊರಗೆ ಚಾವಣಿಯ ಹೊರೆ ಕಳೆದು ಶಿಥಿಲವಾದರೂ ನಿಂತೇ ಇದ್ದ ಗೋಡೆಯದು.  ಆ ಮೋಟುಗೋಡೆಯ ಮಗ್ಗುಲಲ್ಲಿ  ಕಪ್ಪೆಯಂತೆ ಹಾರಿ ಆ ಬದಿಯ ಕಿಟಕಿಯ ಚೌಕಟ್ಟಿಗೆ ಒಂದು ಕಾಲುಕೊಟ್ಟು  ಬಲಗೈಯಿಂದ ಕಿಟಕಿಯ ಸರಳು ಹಿಡಿದು ಮೇಲೇರಿ ಎಡಗಾಲು ಎತ್ತಿ ಆ ಅರ್ಧಗೋಡೆಯ ಮೇಲೆ ಇಟ್ಟು ದೇಹವನ್ನು ನಿಯಂತ್ರಣಕ್ಕೆ ತಂದುಕೊಳ್ಳುತ್ತ ಕೈಗಳನ್ನೂ ಗೋಡೆಯ ಬೋಳುತಲೆ ಮೇಲೆ ಊರಿ ಪುಟ್ಟ ಲಗಾಟೆ ಹೊಡೆದು ಗೋಡೆ ಏರಿ ಕುಳಿತುಕೊಳ್ಳುತ್ತಿದ್ದೆವು. ನಮ್ಮ  ಸಿಂಹಾಸನವದು. ಏರಿ ಕೂತವಳು ಮಹಾರಾಣಿ. ಉಳಿದವರು ನೆಲದಲ್ಲಿ ಕೂತು ಮಹಾರಾಣಿಯ ಆಜ್ಞೆಗೆ ಕಾಯಬೇಕು. ಭಾರತಿ ನಾಟಕದ ಮುಂದಿನ ಅಂಕದ  ನೆನಪಿನಲ್ಲಿ ಗೊಣಗುತ್ತಿದ್ದಳು.” ಹೇ, ನಾಳೆ ನಾನು ಮಹಾರಾಣಿ. ನೆಲದಲ್ಲಿ  ಎಷ್ಟು ಮಣ್ಣು ನೋಡು.”  ರಸ್ತೆಯ ಮೇಲಿನ ಧೂಳು ಮಣ್ಣು ಹಾರಿ ಬಂದು ದಪ್ಪಗೆ ನೆಲದಲ್ಲಿ ಕೂತಿರುತ್ತಿತ್ತು. ನಾವು ಅದರಲ್ಲಿ ತೋರು ಬೆರಳಿನಿಂದ ಹೆಸರು ಬರೆಯುವುದೂ ಇತ್ತು. ಅಲ್ಲಿ ಆಟ ಆಡಿ ಹೋದ ಸಂಜೆ ಮನೆಯಲ್ಲಿ ಬಯ್ಗಳಿಗೆ ಏನೂ ಬರವಿಲ್ಲ. ಅಂಗಿಯೆಲ್ಲ‌ ಕೆಂಪು. “ನಿಮಗೆ ಆಡಲು ಬೇರೆ ಜಾಗ ಇಲ್ವಾ”. ಅವಳ ಅಮ್ಮ ಒಂದೇ ಸಮನೆ ಗೊಣಗುತ್ತಿದ್ದರು. ಪಾಪ,ಹಗಲಿಡೀ ಹೋಟೇಲಿನ ಕೆಲಸ. ಈಗಿನಂತೆ ಗ್ರೈಂಡರ್ , ಮಿಕ್ಸಿಗಳಿಲ್ಲ.  ಚಚ್ಚೌಕ  ತೆರೆದ ಚಾವಡಿಯ ಮನೆ. ಮನೆಗೆ ಹಿಂದಿನಿಂದ ಬಾಗಿಲು. ಎದುರು ಹೋಟೇಲ್. ಒಳಗಡೆ ಕಾಲಿಟ್ಟರೆ ಮೊದಲು ಕಾಣಿಸುವುದೇ ದೊಡ್ಡದಾದ ಅರೆಯುವ ಕಲ್ಲು. ಸಂಜೆ ಐದು ಗಂಟೆಯಿಂದ ರಾತ್ರಿ 8.30 ರತನಕವೂ ಆಕೆಯ ಕೈಗಳು ಅದರ ಮೇಲೆ ವೃತ್ತಾಕಾರದಲ್ಲಿ ತಿರುಗುತ್ತಲೇ ಇರುತ್ತದೆ. ಅರೆಯುತ್ತಲೇ ಬದುಕು ಆಕೆಯನ್ನೇ ಅರೆದಂತೆ.   ಅದನ್ನು ದಾಟಿದರೆ ಒಂದು ಕಬ್ಬಿಣದ ಒಲೆ. ಅದರ ಮೇಲೆ ಪಾತ್ರೆ.  ಮುಂದುವರೆದರೆ ಉದ್ದದ ಎರಡು ಮೆಟ್ಟಲು, ನಂತರ ಅಡುಗೆ ಮನೆ.  ಹಗಲಿನ ವೇಳೆ ಆಕೆ ದೊಡ್ಡ ಉರಿಯ ಮೂರು ಒಲೆಗಳ ಎದುರು ನಿಂತು ದೋಸೆ, ಬನ್ಸ್, ಪೋಡಿ,ಚಹಾ..ಎಂದು ಉರಿಯುತ್ತಾ ಇರುತ್ತಾಳೆ. ಅದರ ಪಕ್ಕ ಒಂದು ಬಾಗಿಲು. ಒಳಗಡೆ ಎರಡು ಕೊಠಡಿ. ಸಂಜೆ ಬೆಂಕಿಯೊಂದಿಗಿನ ಅನುಸಂಧಾನ ಮುಗಿಸಿ ಕೊಳ್ಳಿಯನ್ನು ಗಂಡನ ಸುಪರ್ದಿಗೆ ಕೊಟ್ಟು ಒಳಗೋಡಿ ಬರುತ್ತಾಳೆ. ಆಗ ಹೆಚ್ಚಾಗಿ ನಮ್ಮ ಪ್ರವೇಶ. ಕೆಂಪು ಬಣ್ಣದ ಅಂಗಿಯೊಂದಿಗೆ. ಅದು ಯಾವ ಬಣ್ಣವಿದ್ರೂ ಆ ಸಮಯ ಕೆಂಪಾಗಿರುತ್ತದೆ. ಸೂರ್ಯಾಸ್ತದ ರವಿಯಂತೆ. ಕಳ್ಳರಂತೆ ಒಳಹೊಕ್ಕು ಅಲ್ಲಿ ನಮ್ಮ ಅಟ,ಚರ್ಚೆ ಮುಂದುವರಿಯುತ್ತಿತ್ತು.  ” ಕೈ ಇಡು..ಅಟ್ಟಮುಟ್ಟ ತನ್ನ ದೇವಿ ನಿನ್ನ ಗಂಡ ಎಲ್ಲಿ ಹೋದ..” ಅಂಗೈ ಅಂಗಾತವಾಗಿರಿಸಿ ಮುಚ್ಚಿ ತೆಗೆದು ಆಟ, ಕೆಲವೊಮ್ಮೆ ಕಣ್ಣಮುಚ್ಚಾಲೆ.  ನಮ್ಮ ಅಂದಿನ ಖಳನಾಯಕನಾದ ಅವಳ ಅಣ್ಣನ ಪ್ರವೇಶದವರೆಗೂ ಮುಂದುವರಿಯುತ್ತಿರುತ್ತದೆ. ಅವನು ಬಂದು ಬಾಗಿಲ ಬಳಿ ನಿಂತು ಕಣ್ಣ ದೊಡ್ಡದು ಮಾಡುತ್ತಿದ್ದ. ” ಒಳಗೆ ಬರಲು ಯಾರು ಹೇಳಿದ್ದು? ನನ್ನ ಬೆದರಿಸುತ್ತಿದ್ದ. ನಾಯಿ ಉಂಟು. ಈಗ ನಾಯಿ ಬಿಡ್ತೇನೆ”. ನಾನು ಹೆದರಿ ಕಳ್ಳಬೆಕ್ಕಿನಂತೆ ಅಲ್ಲಿಂದ‌ ಪಲಾಯನ ಮಾಡುತ್ತಿದ್ದೆ. ಅವಳ ಅಮ್ಮನ ಸ್ವರ ನನ್ನ ಹಿಂಬಾಲಿಸುತ್ತಿತ್ತು. ” ನೋಡು ಅವರ ಅಂಗಿ ನೋಡು, ಅದರ ಬಣ್ಣ ನೋಡು..ಹೇಗಾಗಿದೆ. ಯಾರು ಒಗೆಯೋದು.”‘ ಶ್ರೀಮತಿಯ ಕಣ್ಣಿನಲ್ಲಿ ಕಾಣುವ ಮುಂದಿನ ದೃಶ್ಯಗಳು ನನ್ನ‌ ಮನಸ್ಸಿನ ಮಂಟಪದಲ್ಲೂ ಕುಣಿದು ನಾನು ಮುರಿದ ಗೋಡೆಯ ಸಿಂಹಾಸನದಲ್ಲಿ ಕೂತು  ಅಜ್ಞಾಪಿಸುತ್ತಿದ್ದೆ ‘ ಕೂತು ಆಟ ಬೇಡ. ನಿಂತೇ ಮಾತನಾಡಬೇಕು.’ ಆಟದ ನಾಟಕ ಮುಂದುವರಿಯುತ್ತಿತ್ತು. ಇಲ್ಲಿ ರಾಣಿ,ಸಖಿಯರು,ಅಂತಃಪುರ ಇರುತ್ತಿತ್ತು. ನಾವು ನಾಲ್ಕು ಜನ ಸಖಿಯರು. ಆದರೆ ಮೂವರೇ ಇದ್ದಾಗ ಆಟಕ್ಕೆ ಚ್ಯುತಿಬಾರದಂತೆ ಆ ಪಾತ್ರವನ್ನು ಕಲ್ಪಿಸಿಕೊಂಡು ಮಾತನಾಡುತ್ತಿದ್ದೆವು.  ಒಮ್ಮೆ ರಾಜಕುಮಾರಿಯರ ವಸ್ತ್ರ ಸಂಹಿತೆ ಬಗ್ಗೆ ಮಾತಾಗಿ ನಾವು ಒಂದೇ ರೀತಿಯ ವಸ್ತ್ರ ತಲೆಯ ಮೇಲಿನಿಂದ ಇಳಿಬಿಡಬೇಕು ಎಂಬ ನಿರ್ಣಯಕ್ಕೆ ಬಂದೆವು. ನನ್ನ ಒಬ್ಬ ಗೆಳತಿಯ ಬಳಿ ಅವಳಮ್ಮನ ಹಳದಿಬಣ್ಣದ ನೈಲಾನ್ ಸೀರೆಯ ಉದ್ದದ ತುಂಡಿತ್ತು. ಅದು ಬಹಳ ಚೆಂದವೂ ಇತ್ತು. ಅದರ ಮೇಲೆ ವಿವಿಧ ಹೂವುಗಳ ಚಿತ್ತಾರ. ನನ್ನ ಬಳಿಯೂ ಅದೇ ಬಣ್ಣದ ಅಮ್ಮನ ಸೀರೆ ಇದೆಯೆಂದೆ. ಶ್ರೀಮತಿ ನನ್ನಲ್ಲೂ ಇದೆ ಎಂದಳು. ಮರುದಿನ ನಾಟಕಕ್ಕೆ ವೇಷ ಭೂಷಣ ತಯಾರು. ಮರುದಿನ. ನಾವು ಮೂವರು ಗೆಳತಿಯರು ಸುಂದರವಾದ ಹಳದಿ ಬಣ್ಣದ ಪರದೆ ತಲೆಯ ಮೇಲಿನಿಂದ ಇಳಿಬಿಟ್ಟು ರಾಜಕುಮಾರಿಯರಾದೆವು.  ಆದರೆ ಆಟದ ಅರ್ಧದಲ್ಲೇ ಗೆಳತಿಗೆ‌ ಮನೆಯಿಂದ ಬುಲಾವ್. ಆಕೆ ಓಡಿದಳು.ಅವಳು ಹಿಂದಿನ ದಿನ ಹಳದಿ ಬಣ್ಣದ ತನ್ನ ಅಮ್ಮನ  ಸೀರೆಯ ಸೆರಗು ಕತ್ತರಿಸಿ ತಂದಿದ್ದಳು!!. ಇದರ ಪರಿಣಾಮ, ಮುಂದಿನ ಕೆಲವು ದಿನಗಳ ಕಾಲ ಒಬ್ಬ ರಾಜಕುಮಾರಿಯ ಅನುಪಸ್ಥಿತಿಯಿಂದ ನಮ್ಮ ಗೋಡೆರಂಗದ ನಾಟಕ ರದ್ದಾಗಿತ್ತು. ಮಾತ್ರವಲ್ಲ ಅವರ ಮನೆಯ ಸುತ್ತ ಬಾರದಂತೆ ನಮಗೆ ನಿರ್ಬಂಧ ಹೇರಲಾಗಿತ್ತು. ರಂಗದ ಹಕ್ಕಿಗಳ ರೆಕ್ಕೆ ಪುಕ್ಕ ಈ ಆಟಗಳು. ನಮ್ಮ ಶಾಲೆಯ ಹಿಂದುಗಡೆ ಅಶ್ವಥ್ಥಮರದ ಕಟ್ಟೆಯಿತ್ತು. ಅಲ್ಲಿ‌ ನಮ್ಮ ಮನೆಯಾಟ. ನಮ್ಮ ತರಗತಿಯ ಗೆಳತಿಯರು ಸೇರಿ ಆಟವಾಡುತ್ತಿದ್ದೆವು. ಸುಂದರ ಪಾತ್ರಗಳು, ಆ ಪಾತ್ರಗಳ ನಡುವಿನ ಸಂಭಾಷಣೆ, ಮಾತು, ನಗು, ಅಳು, ಸಂಬಂಧ ಆ ಕಟ್ಟೆಯ ಮೇಲೆ ಒಳಗೊಳಗಿಂದಲೇ ಅರಳುತ್ತಿತ್ತು. ಅಲ್ಲಿ ಅದೆಷ್ಟು ವೇಗದಲ್ಲಿ ಪಾತ್ರಗಳೂ ಬದಲಾಗುತ್ತಿದ್ದವು. ಅಪ್ಪ ಅಮ್ಮ ಮಗ, ಮಗಳು. ಅಜ್ಜ ಅಜ್ಜಿ, ಡಾಕ್ಟರ್,ಕಂಪೌಂಡರ್,ಮನೆ ಕೆಲಸದಾಳು,ಟೀಚರ್,ಅಂಗಡಿ ಆಸ್ಪತ್ರೆ,ಹೋಟೆಲ್, ಎಲ್ಲವೂ ನಮ್ಮ ಮನೆಯಾಟದ ಪಾತ್ರಗಳು. ಅಪ್ಪನ ಬಳಿ ಅಮ್ಮನ ದೂರುಗಳು. ಅಪ್ಪ ಮಕ್ಕಳನ್ನು ಕರೆದು ವಿಚಾರಣೆ, ಪುಟ್ಟಪುಟ್ಟ ಬಾಟಲುಗಳಲ್ಲಿ ಔಷಧಿ, ಇಂಜೆಕ್ಷನ್ ಚುಚ್ಚುವ ದಾದಿ, ಅಳುವ ಮಗು,ಹೀಗೇ ಕಂಡದ್ದೆಲ್ಲಾ ಪಾತ್ರಗಳೇ.  ನಮ್ಮ ಶಾಲೆಯ ಹಿಂದುಗಡೆ ಖಾಲಿ ಜಾಗ. ಪುಟ್ಟ ಮೈದಾನ. ಅದರಾಚೆ ದೇವಾಲಯದ ಗದ್ದೆಗಳು. ಅಲ್ಲೇ ಜಾತ್ರೆಯ ಸಮಯದಲ್ಲಿ ಸರ್ಕಸ್, ಉಯ್ಯಾಲೆ,ಕುದುರೆ, ನಾಟಕ ಮೊದಲಾದವು ನಡೆಯುವುದು. ಜಾತ್ರೆಯ ನಂತರವೂ ಕೆಲದಿನ ಸರ್ಕಸ್ ನ ಮಂದಿ ಇರುತ್ತಿದ್ದರು. ನಾವು ನಮ್ಮ ಶಾಲೆಯ ಹಿಂಬದಿಗೆ ಹೋಗಿ ಅವರ ವೇಷ, ಪ್ರಾಣಿ, ಪಂಜರ ಮೊದಲಾದುವುಗಳನ್ನು ಅತ್ಯಂತ ಕುತೂಹಲದಲ್ಲಿ ನೋಡುವುದು.  ಈ ಸರ್ಕಸ್ ನವರ ಬಳಿ ಸ್ಪಂಜಿನಿಂದ ತಯಾರಿಸಿದ  ಬಣ್ಣದ ಗುಲಾಬಿ ಹೂಗಳು ಮಾರಾಟಕ್ಕಿದ್ದವು. ದೊಡ್ಡದು ಹಾಗೂ ಸಣ್ಣದು. ಒಂದು ಹೂವಿಗೆ ಒಂದು ರೂಪಾಯಿ. ನಮಗೆ ಅದರ ಬಹಳ ಆಸೆಯಾಗಿ ವ್ಯಾಮೋಹಕ್ಕೆ ತಿರುಗಿತ್ತು. ಆದರೆ ಹಣವೆಲ್ಲಿಂದ ಬರಬೇಕು? ಸಂಜೆ ನಮ್ಮ ಶಾಲೆಯ ಮೈದಾನದ ತುದಿಯಲ್ಲಿ ನಿಂತು ವಿಚಾರಿಸುತ್ತಿದ್ದೆವು. ನೀವು ಎಷ್ಟು ದಿನ ಇರುತ್ತೀರಿ?  ಕೊನೆಗೂ ನಾವು 5-6 ಜನ ಸೇರಿ  ಒಂದು ಗುಲಾಬಿ ಕೊಳ್ಳಲು ಹಣ ಸೇರಿಸಿದೆವು.ಅದನ್ನು ದಿನಕ್ಕೊಬ್ಬರು ಮನೆಗೆ ಕೊಂಡೊಯ್ಯುವುದು. ಬೆಳಗ್ಗೆ ಚೀಲದಲ್ಲಿ ಹಾಕಿ  ಮತ್ತೆ ತರಬೇಕು.ನಾವು ಬಹಳ ಖುಷಿಯಲ್ಲಿ ನಮ್ಮ ಮೈದಾನದ ತುದಿಯಲ್ಲಿ ನಿಂತು ವ್ಯಾಪಾರ ಕುದುರಿದೆವು. ಗುಲಾಬಿ ಹೂ ನಮ್ಮೊಳಗೆ ಹೊಸ ಪಾತ್ರವಾಯಿತು. ಎಲ್ಲದರ ನಡುವೆ ಪುಟ್ಟ ದೀಪವೊಂದು ಅಂತರಂಗದಲ್ಲಿ  ಬೆಳಗುತ್ತ ಯಾವುದೋ ಸಂದೇಶ ರವಾನಿಸುತ್ತಲೇ ಇತ್ತು. ಹೌದು, ಬಣ್ಣ ಹಾಕಿ ಹೊಸ ವೇಷದಲ್ಲಿ ವೇದಿಕೆ ಏರಬೇಕು. ಅಲ್ಲಿ ಎದುರುಗಡೆ ಅದೆಷ್ಟು ಜನ ತುಂಬಿಕೊಂಡಿರಬೇಕು. ಅವರೆದುರು ನಾನು ವಸಂತಸೇನೆ, ಶಕಾರ, ಶಬರಿ, ದ್ರೌಪದಿ, ಅಜ್ಜಿ ಓದಿಸಿದ ಕಥೆಗಳ ನಾಯಕಿ. ಎಲ್ಲರೂ ನನ್ನೊಳಗೆ ಬರಬೇಕು. ಅವರನ್ನು ಜನರೆದುರು ಕರೆತಂದು ತೋರಿಸಬೇಕು. ಅಭಿನಯಿಸಬೇಕು. ಆದರೆ ನನ್ನ ಒಳಗಿನ ಪಾತ್ರಗಳು, ಯಾರಾದರೂ ಕಣ್ಣರಳಿಸಿದರೂ ಅಜ್ಜಿಯ ಸೆರಗಿನ ಹಿಂದೆ ಮರೆಯಾಗುತ್ತಿದ್ದವು. ನಾಲ್ಕು ಜನ ನಿಂತರೆ ಎದುರು ಹೋಗಲಾಗದೆ ಕಾಲು ನಡುಗುತ್ತಿತ್ತು. ವೇದಿಕೆಯ ಮೆಟ್ಟಲಾದರೂ ಹತ್ತುವುದು ಆದೀತೇ? ನಾಲ್ಕನೆಯ ತರಗತಿಯಲ್ಲಿ ವಾರ್ಷಿಕೋತ್ಸವ ಸಮಯದ ಸೋಲು ಇದ್ದ ಸ್ವಲ್ಪ ಧೈರ್ಯವನ್ನೂ ಎತ್ತಿಕೊಂಡು ಓಡಿತ್ತು. ಅಂದು ಅಜ್ಜಿಯ ಎದುರು ಒದ್ದೆ ಬೆಕ್ಕಿನಮರಿಯಂತೆ ಕೂತಿದ್ದೆ. ಸೂತ್ರಧಾರಿಣಿ ಎತ್ತಿ ಮಡಿಲಿಗೆ ಎಳೆದು ಕೊಂಡಿದ್ದಳು” ಸೋಲಿಗೆ ಹೆದರಬಾರದು ನನ್ನ ಮಗೂ”ಬಿಕ್ಕುವ ಬಿಕ್ಕಿಗೆ ತಲೆ ನೇವರಿಸುತ್ತಾ ಮುಲಾಮು ಆದಳು. ” ನೀನು ಯುದ್ದ ಭೂಮಿಗೆ ಹೋಗಲು  ನಿನ್ನನ್ನು ನೀನೇ ತಯಾರು ಮಾಡಬೇಕು. ಸೋಲು ಗೆಲುವಿನ ಬಗ್ಗೆ ಚಿಂತಿಸಬಾರದು. ರಣಭೂಮಿಯನ್ನೇ ನೋಡಲಿಲ್ಲ ನೀನು. ದಂಡನಾಯಕಿ ಆಗುವುದು ಹೇಗೆ? ‘ಬರೀ ದಂಡ’ ಆಗಬಾರದು. ಸೋಲಿನ ರುಚಿ ಸವಿದ ಬಳಿಕದ ಗೆಲುವಿಗೆ ಸಂತಸ ಹೆಚ್ಚು”  ಆಗ ಏಳನೇ ತರಗತಿ. ಶಾಲೆಯಲ್ಲಿ ಹಲವಾರು ಪಠ್ಯೇತರ ಚಟುವಟಿಕೆಗಳು. ಡಿಬೇಟ್, ಭಾಷಣ, ಪದ್ಯ,ವಿದ್ಯಾರ್ಥಿ ನಾಯಕ ಚುನಾವಣೆಗಳು,ಮಂತ್ರಿಮಂಡಲ ಹೀಗೆ ಗರಿಗೆದರಿ ಕುಣಿಯುವ ಚಟುಚಟಿಕೆಗಳು.  ಅಚ್ಚರಿಯ ತಿರುವಿಗೆ  ಮುಖ ತಿರುಗಿಸಿತ್ತು ಬದುಕು. ಆಗೆಲ್ಲ ಪ್ರತೀ ತಿಂಗಳ ಎರಡನೆಯ ಶನಿವಾರ ಪಠ್ಯೇತರ ಚಟುವಟಿಕೆಗಳಿಗೆ ವೇದಿಕೆ.  ” ನೋಡು ಬರುವ ಕಾರ್ಯಕ್ರಮ ನಮ್ಮ ಕ್ಲಾಸಿನದ್ದು ಆಗಬೇಕು. ಅದು ಬಹಳ ಚೆಂದ ಇರಬೇಕು.  ಡ್ಯಾನ್ಸ್ ಬೇರೆ ಕ್ಲಾಸಿನವರು ಮಾಡ್ತಾರೆ. ನಾವು ನಾಟಕ ಮಾಡಬೇಕು. 30 ನಿಮಿಷ. ನೀನೇ ಅದರ ಎಲ್ಲ ಜವಾಬ್ದಾರಿ ವಹಿಸಬೇಕು. ಗೊತ್ತಾಯ್ತಾ” ನಮ್ಮ ಕ್ಲಾಸ್ ಟೀಚರ್ ಅವರು ನನ್ನತ್ತ ನೋಡಿ ಹೇಳುತ್ತಲೇ ಇದ್ದರು. . ನನಗೆ ಸಂತಸ,ಭಯ ಮಿಶ್ರಿತವಾದ ಭಾವ. ಪುಕುಪುಕು ಅನಿಸಿದರೂ ಮಾಡಲೇಬೇಕು ಎಂಬ ಹಠ. ಈ ಸಲ ಹೆದರಬಾರದು. ಅಜ್ಜಿಯನ್ನು ಗೋಗೆರೆದೆ. ಇದ್ದ ಕಥೆ ಪುಸ್ತಕ ರಾಶಿ ಹಾಕಿದೆ. ಹೊಸದರ ಸಂಭ್ರಮ. ಊಟ,ತಿಂಡಿಯೂ ರುಚಿಸದಂತೆ ನಾಟಕದ ನಶೆ ಆಟವಾಡುತ್ತಿತ್ತು.  ಯಾವ ನಾಟಕ ಮಾಡಬಹುದು, ಹೇಗೆ, ಎಷ್ಟು ಪಾತ್ರಗಳು ಯಕ್ಷಗಾನದ ವೇಷಗಳು, ಚಂದಮಾಮದ ಚಿತ್ರಗಳು,ಅಜ್ಜಿ ಕಟ್ಟಿಕೊಟ್ಟ ಪಾತ್ರಗಳು ಎಲ್ಲವೂ ಎದುರಾದಂತೆ. ನಾರಾಯಣ ಮಾಮ ಕೊಟ್ಟ ಹಳೆಯ ಪುಸ್ತಕದಲ್ಲಿ ಮೂರು ಕಥೆಗಳಿದ್ದವು. ಅಜ್ಜಿಯ ಬಳಿ ಓಡಿದೆ. “ಸರಿ. ಅದನ್ನು ಚೆಂದ ಮಾಡಿ ಪುಸ್ತಕದಲ್ಲಿ ಮಾತುಗಳಾಗಿ ಬರಿ” ಎಂದಳು. ಅದು ದೊಡ್ಡ ಸಂಗತಿಯಲ್ಲ. ಅಶ್ವಥ್ಥ ಕಟ್ಟೆಯ ಮೇಲೆ, ಮೋಟು ಗೋಡೆಯ ಮೇಲೆ ಚಾಲ್ತಿಗೆ ತಂದ ಕೆಲಸ ಈಗ ಅಕ್ಷರಕ್ಕೆ ತರಬೇಕು. ವಾಲಿವಧೆ ಕಥೆ ನಾಟಕವಾಯಿತು. ಪ್ರತಿ ಪಾತ್ರಗಳೂ ನನ್ನೊಳಗೆ ಕುಣಿಯುತ್ತಿದ್ದವು.  ನಾಟಕ ಮೂಡಿದ ನನ್ನ ಅರ್ಧ ಹರಿದ ಪುಸ್ತಕವನ್ನು,  ಮಗುವನ್ನು ಅಪ್ಪಿಕೊಂಡು ನಡೆದಂತೆ ಶಾಲೆಗೆ ಕೊಂಡೊಯ್ದೆ. ಟೀಚರ್ ಸಲಹೆಯಂತೆ ಪಾತ್ರಗಳಿಗೆ ಗೆಳತಿಯರನ್ನು ಆರಿಸಿದೆ. ನನ್ನ ಚೆಂದದ ಗೆಳತಿ ತಾರೆಯಾದಳು,ಮತ್ತೊಬ್ಬಳು ಸುಗ್ರೀವ, ಇನ್ನೊಬ್ಬಳು ರಾಮ,ಲಕ್ಷ್ಮಣ..  ನಾಟಕದ ಪ್ರೀತಿಯಿಂದ ಬಂದ ಉಳಿದ ಸಂಗಾತಿಗಳನ್ನೆಲ್ಲ ತ್ರೇತಾಯುಗಕ್ಕೆ ಕಳುಹಿಸಲಾಯಿತು. ನಾನು ನಿರ್ದೇಶಕಿ. ಎಲ್ಲರಿಗೂ ಹೇಳಿಕೊಡುವ ಟೀಚರ್!..ಎಂತಹ ಸಂಭ್ರಮ, ಪುಳಕ. ಮನೆಗೆ ಬಂದು ನಾನು ಕಂಡ ಯಕ್ಷಗಾನ ನೆನಪಿಸಿ ಆ ಅಭಿನಯ ಮನಸ್ಸಿನ ರಂಗಕ್ಕೆ ಕರೆತರುತ್ತಿದ್ದೆ. ಅವರ ನಡಿಗೆ, ವೇಷ, ಮುಖದ ಭಾವ, ಚಲನೆ, ಸ್ವರ. ನಾನು ಬೇರಾವುದೋ ಲೋಕಕ್ಕೆ ಸೇರ್ಪಡೆಗೊಂಡ ಅಮಲು. ನನ್ನ ಗೆಳತಿಯರೂ ಸಂಭ್ರಮಿಸುತ್ತಿದ್ದರು. ಆ ತಿಂಗಳು ನೃತ್ಯದಲ್ಲಿ ಭಾಗವಹಿಸುವ  ಸಹಪಾಠಿಗಳೆದರು ಜಂಭ.” ನಾವು ನಾಟಕ ಮಾಡಲಿಕ್ಕುಂಟು. ನೀವು ಎಂತ ಡ್ಯಾನ್ಸ್. “ ಇನ್ನೇನು ಬಂದೇಬಿಟ್ಟಿತು. ಕೇವಲ ಮೂರು ದಿನವಿದೆ ಅನ್ನುವಾಗ ನಮ್ಮ ಟೀಚರ್ ಟ್ರಾಯಲ್ ನೋಡಿ ನನ್ನ ಕರೆದವರು,” ಚೆಂದ ಆಗ್ತಾ ಉಂಟು . ನಮ್ಮ ರಂಜೂಗೆ ಒಂದು ಪಾತ್ರ ಕೊಡು”  ರಂಜನ್ ನಮ್ಮ ಟೀಚರ್ ಮಗ. ಮೂರು ವರ್ಷದವನು. ಟೀಚರ್ ನನ್ನಲ್ಲಿ ಕೇಳುವುದು. ಹಾಗಿದ್ದರೆ ಇದನ್ನೂ ನಾನು ಮಾಡಲೇಬೇಕು. ಮನೆಗೆ ಬಂದೆ. ನಾಟಕವನ್ನು ಮತ್ತೆ ತಿರುವಿ ” ಅಂಗದ” ಮರಿಮಂಗ ಪುಟಕ್ಕನೆ ಜಿಗಿದ. ತಮ್ಮ ಸುಗ್ರೀವನ ಬಳಿ ಯುದ್ದಕ್ಕೆ ತೆರಳುವ ವಾಲಿಯನ್ನು ತಡೆದು ಪ್ರಶ್ನಿಸುವ ಕಂದ‌. ಟೀಚರ್ ಅಚ್ಚರಿಯಿಂದ ” ಹೇ ನಿಜವಾಗ್ಲೂ

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣಬರಹ ಗೊಂಬೆಗೆ ತೊಡಿಸಿದ ಬಣ್ಣದ ಅಂಗಿ ಅಳು ತಡೆಯದಾದಾಗ ಆಸರೆಯಾಗುತ್ತಿದ್ದದ್ದು ಒಂದೋ ಅಜ್ಜಿಯ ಮಡಿಲು, ಇಲ್ಲವಾದರೆ ಆ ತಾಯಿಯಂತಹ ಮರದ ತಣಿಲು. ದಪ್ಪದಪ್ಪದ ಎರಡು ಕಾಂಡಗಳು ಬುಡವೊಂದೇ,ಹೆಗಲೆರಡು ಎಂಬ ಹಾಗೆ ನಿಂತಿದ್ದ ಆಲದ ಮರ. ಅದನ್ನು ಅಪ್ಪಿ ಹಿಡಿದು ನಿಂತರೆ ಎಂತಹಾ ದುಗುಡ,ಭಯ,ದುಃಖವನ್ನೂ ಅದು ಹೀರಿ ನಾನು ಹಗುರವಾಗುತ್ತಿದ್ದೆ. ಯಾವುದೋ ಜನ್ಮಾಂತರದ ಬಂಧದ ಸಾಕ್ಷಿಯೇನೋ ಎಂಬಂತೆ ಮುಖ್ಯ ರಸ್ತೆಯ ಒಂದು ಬದಿಗೆ ಉದ್ದದ ನೆರಳು ಹಾಸಿ ನಿಂತ ಆಲದ ಮರವದು. ಅದರ ಪಕ್ಕದಲ್ಲೇ ತುಸು ಅಂತರ ಕಾಪಾಡಿಕೊಂಡು ಬಂದಂತೆ ಇರುವ ನೇರಳೆಮರ ‌ಎರಡು ಮರಗಳ ನಡುವೆ ಹಿಂಬದಿಯಲ್ಲಿ ಪುಟ್ಟ ದೇಹದ ನೆಕ್ಕರೆ ಮಾವಿನ ಮರ, ಬಾಲ್ಯದ ನಮ್ಮ ಒಡನಾಡಿಗಳು. ಆ ಆಲದ ಮರದ ಬಿಳಲುಗಳನ್ನು ಹಿಡಿದು ನೇತಾಡುತ್ತಿದ್ದದ್ದು ,ಉಯ್ಯಾಲೆ ಆಡಿದ್ದೂ, ಅಂಗೈ ಗುಲಾಬಿಯಾಗಿ ಫೂ.ಫೂ ಎಂದು ಊದಿ ಉರಿ ಕಡಿಮೆಯಾಗಿಸಿಕೊಂಡದ್ದು..ನೇರಳೆ ಮರದ ಅಡಿಯಲ್ಲಿ ಕಾದು ಕಾದು ನೇರಳೆ ಹಣ್ಣ ಹೆಕ್ಕಿ ತಿಂದು ಬಾಯಿ ಮಾತ್ರವಲ್ಲ ಅಂಗಿ ಕೂಡ ಬಣ್ಣ ಮಾಡಿಕೊಳ್ಳುತ್ತಿದ್ದೆವು. ಮಳೆಗಾಲದಲ್ಲಿ ಜೋರಾಗಿ ಗಾಳಿ ಬೀಸಿ ಮಳೆ ಹನಿಯುವ ಮೊದಲೇ ಡುಮ್ ಡುಮ್ ಎಂದು ಈ ಕುಳ್ಳ ಮಾವಿನ ಮರ ಹಣ್ಣು ಬಿಸಾಕುತ್ತಿತ್ತು. ನಾವು ಒದ್ದೆಯಾಗುವ ಭಯವಿಲ್ಲದೆ ಓಡಿ ಹೋಗಿ ಹೆಕ್ಕುತ್ತಿದ್ದೆವು. ಆಲದ ಮರದ ಬುಡದಲ್ಲಿ ಕುಳಿತು ಮಾವಿನ ಹಣ್ಣು ಚೀಪುತ್ತಿದ್ದೆವು. ಈ  ಮರಗಳ ನೆರಳನ್ನು ದಾಟಿ ಮುಂದೆ ಹೋಗುವಾಗ ಲೆಕ್ಕಮಾಡಿ ಮೂರೇ ಮನೆ.  ಒಂದು ನನ್ನ ಗೆಳತಿಯ ಮನೆಯಾದರೆ, ಮತ್ತೆ ಪುಟ್ಟದಾದ ಮನೆ ಬೇಬಿಯವರದ್ದು. ಅಲ್ಲಿ ಕಡ್ಡಿ ದೇಹದ,ಎಲುಬಿನ ಹಂದರ ಕಾಣುವಂತೆ ಇರುವ ಅವರ ಐದಾರು ಗಂಡು ಮಕ್ಕಳು.ನಂತರದಲ್ಲಿ ಸಿಗುವುದು  ಬೆಂಕಿಯ ಎದುರು ಊದುಗೊಳವೆ ಹಿಡಿದು ಕಬ್ಬಿಣದ ಉದ್ದದ  ಕಡ್ಡಿ ಹಿಡಿದು ಕೆಲಸ ಮಾಡುವ ಮಾಧವ ಆಚಾರಿಯವರ ಅಂಗಡಿ. ಅಂಗಡಿ ಅಗಲಕ್ಕೆ ಬಾಯಿ ತೆರೆದು ಕೂತಿದ್ದರೆ ಅದರದ್ದೇ ಹಲ್ಲಿನಂತೆ ಎದುರು ಮೆಟ್ಟಲಿನಲ್ಲೇ ಕೂತುಕೊಳ್ಳುವ ಅವರ ಹೆಂಡತಿ,ಮಗಳು ಕಲಾವತಿ. ಅವರು ನಮಗೆ ಕಲಾವತಿಯಕ್ಕ. ರಜೆ ಬಂದಾಗ ಅಥವಾ ಇಳಿಸಂಜೆಗೆ ಎರಡು ಮನೆಯ ನಡುವಿನ ಓಣಿಯಲ್ಲಿ ನಡೆದು ಅವರ ಮನೆಯ ಕಿಟಕಿ ಬಳಿ ನಿಂತು ಕರೆಯಬೇಕು. ಕಲಾವತಿಯಕ್ಕ ಬಣ್ಣಬಣ್ಣದ ಪುಟ್ಟಪುಟ್ಟ ಬಣ್ಣದ ಬಾಟಲು ಹಿಡಿದು ಬರುತ್ತಾರೆ. ನಾವು ಕಿಟಕಿಯಿಂದ ನಮ್ಮ ಕೈ ಒಳಗೆ ತೂರಿಸಿದರೆ ಚುಮ್ ಅಂತ ತಂಪು ಉಗುರಿಗೆ ಇಳಿದು ಬಣ್ಣ ಕೈ ಬೆರಳಿನ ಉಗುರನ್ನು ತುಂಬಿಕೊಳ್ಳುತ್ತದೆ. ಎಷ್ಟು ಬಗೆಯ ಬಣ್ಣಗಳು. ಹಚ್ಚಿದ ನಂತರ ಅವರ ಎಚ್ಚರಿಕೆ.  ” ಅಂಗಿಗೆ ತಾಗಿಸಬಾರದು. ಹಾಳಾದರೆ ಮತ್ತೆ ಹಚ್ಚುವುದಿಲ್ಲ”  ಕೆಲವೊಮ್ಮೆ ಅವರ ಅಮ್ಮ ಕಿಟಕಿಯಲ್ಲಿ ಹಣಕಿ ಗದರಿಸುವುದೂ ಇದೆ.  ” ಹೋಗಿ, ಹೋಗಿಯಾ..ಅವಳಿಗೆ ಮನೆಯಲ್ಲಿ ಕೆಲಸ ಇಲ್ಲವಾ” ರಂಗದ ಬಣ್ಣಗಳು ನಮ್ಮನ್ನು ನಮ್ಮಿಂದ ಪಲ್ಲಟಗೊಳಿಸುತ್ತ ಬೇರೇನೇನನ್ನೋ ಸೇರಿಸುತ್ತ ಹೋಗುವಾಗ ಕಲಾವತಿಯಕ್ಕನ ಚಿಕ್ಕಚಿಕ್ಕ ಬಣ್ಣದ ಬಾಟಲುಗಳ ದ್ರವ ನಮ್ಮನ್ನು ಸ್ಪರ್ಶಿಸಿ ಘನವಾಗುತ್ತಿದ್ದ ನೆನಪುಗಳು ಆಪ್ತವೆನಿಸಿಕೊಳ್ಳುತ್ತದೆ. ಕಲಾವತಿಯಕ್ಕನವರ ಅಂಗಡಿ( ಅವರನ್ನೂ) ಸವರಿದಂತೆ ದಾಟಿ ಹೋದರೆ  ನಾರಾಯಣಮಾಮನ ಅಂಗಡಿ. ಊರವರಿಗೆ ಅದು ಕಾಮತ್ರ ಅಂಗಡಿಯಾದರೆ ನಮಗೆ ಮಕ್ಕಳಿಗೆ ಮಾತ್ರ  ನಾರಾಯಣ ಮಾಮನ ಅಂಗಡಿ. ಅವರು ಆ ಅಂಗಡಿಯಲ್ಲಿ ಕೆಲಸಕ್ಕೆ ಇರುವುದು. ಜಿನಸು ಅಂಗಡಿಯಲ್ಲಿ ತೊಗರಿ,ಉದ್ದು,ಮೆಣಸು ಸಾಸಿವೆ ಕಾಗದದ ಪೊಟ್ಟಣದಲ್ಲಿ ಕೊಡುವುದು ಅಂದಿನ ಕ್ರಮ. ಆಗ ಪ್ಲಾಸ್ಟಿಕ್ ಉಪಯೋಗ ಬಹಳ ಇದ್ದ ನೆನಪಿಲ್ಲ. ಆ ಅಂಗಡಿಗೆ ರಾಶಿ ಪೇಪರ್, ಪುಸ್ತಕಗಳು ಬಂದು ಬೀಳುತ್ತಿತ್ತು. ಬಿಡುವಿನ ವೇಳೆಯಲ್ಲಿ ಇವರಿಗೆ ಅದನ್ನು ಪರಪರಪರ ಹರಿದು ತನಗೆ ಬೇಕಾಗುವ ಅಳತೆಗೆ ತುಂಡು ಮಾಡುವ ಕೆಲಸ. ಪುಸ್ತಕಗಳೂ ಬರುತ್ತಿದ್ದವು.  ನಾವು ಅಂಗಡಿಗೆ ಸಾಮಾನು ತರಲು ಹೋಗಿ ಪಟ್ಟಿಯಲ್ಲಿರುವ ಪೊಟ್ಟಣಗಳು ನಮ್ಮ ಚೀಲ ಸೇರಿದರೂ ಚಾಕಲೇಟಿಗೆ ಕಾಯುವ ಹಾಗೆ ಸುಮ್ಮನೆ ಅವರ‌ ಮುಖ ನೋಡುತ್ತಾ‌ ನಿಲ್ಲುವುದು. ಅವರು ಸನ್ನೆಯಲ್ಲೇ ಮೂರು, ಎರಡು, ಆಮೇಲೆ, ಇಲ್ಲ ಹೀಗೆ ಸಂದೇಶ ರವಾನಿಸುವುದು.  ನಮ್ಮನ್ನು ಅವರ ರೂಮಿನ ಬಳಿ ಆದಿತ್ಯವಾರ ಬರ ಹೇಳುವುದೂ ಇತ್ತು.  ಆದಿತ್ಯವಾರ ಅವರಿಗೆ ರಜೆ. ಅಲ್ಲಿ ಈ ಮಾಮನ ಕೋಣೆಯಲ್ಲಿ ರಾಶಿ ಚಂದಮಾಮ ಮಾತ್ರವಲ್ಲ ಬಗೆಬಗೆಯ ಕಥೆ, ಚಿತ್ರದ ಪುಸ್ತಕಗಳು.  ಚಂದಮಾಮ ಪುಸ್ತಕದ ಕಥೆಗಳು, ಜತೆಗೆ ಅದರೊಳಗಿನ ಅನೇಕ ಚಿತ್ರಗಳು ನನಗೆ ಅಚ್ಚುಮೆಚ್ಚು. ಪುಟಪುಟಗಳಲ್ಲೂ ಕಥೆಯ ಮೇಲ್ಗಡೆ, ಎಡಬದಿ ಅಚ್ಚಾದ ಹಲವು ಭಾವಾಭಿನಯದ,ಕತೆಗೆ ಹೊಂದುವ ಚಿತ್ರಗಳು  ನೇರ ಇಳಿದುಬಂದು ಮನಸ್ಸಿನೊಳಗೆ ಜಾಗ ಹಿಡಿದು ಕೂರುತ್ತಿದ್ದವು. ಆ ಚಿತ್ರಗಳ ಹಾಗೆಯೇ ಮುಖಾಭಿನಯ ಮಾಡುವ ಹುಚ್ಚು ನನಗೆ.  ಹೊಸಹೊಸ, ನವನವೀನ ಪಾತ್ರಗಳು ಭಿತ್ತಿಯಲ್ಲಿ ಆಟವಾಡುತ್ತಿದ್ದವು. ಕಲ್ಪನೆಯ ಲೋಕದ ಅನಿಯಂತ್ರಿತ ದಂಡಯಾತ್ರೆಗೆ ಇವುಗಳು ಸುರಿದು ಕೊಟ್ಟ ಕಪ್ಪ ಕಾಣಿಕೆ ಅಷ್ಟಿಷ್ಟಲ್ಲ. ಈಗಲೂ ವರ್ತಕ, ಬೇತಾಳ, ರಾಜ, ರಾಜಕುಮಾರಿ, ರೈತ ಎಂಬ ಪದದ ಒಳಗಿನ ಆತ್ಮದಂತೆ ಈ ಚಿತ್ರಗಳು ತೆರೆದುಕೊಳ್ಳುವ ಪರಿ, ಆ ವಿಸ್ಮಯ ಅನುಭವಿಸಿದವರಿಗಷ್ಟೇ ವೇದ್ಯ. ರಂಗದಲ್ಲೂ ಹೀಗೇ ತಾನೇ!. ಪುಟಪುಟಗಳನ್ನು ತಿರುಗಿಸಿದಂತೆ ಪಾತ್ರಗಳು ಬದಲಾಗುತ್ತಾ ನಾವು ನಾವಲ್ಲದ ನಾವೇ ಆಗಿ ತೆರೆದುಕೊಳ್ಳುವ ಸೋಜಿಗ. ನನ್ನ ಬಣ್ಣದ ಲೋಕದ ಬಾಗಿಲೇ ಚಂದಮಾಮ. ಅಂತಹ ಚಂದಮಾಮದ ರಾಶಿ ಹಾಕಿ ಕಬ್ಬಿಣದ ತುಂಡನ್ನು ಸೆಳೆಯುವ ಆಯಸ್ಕಾಂತದಂತೆ ನಮ್ಮನ್ನು ಈ ನಾರಾಯಣ ಮಾಮ ಆಟವಾಡಿಸುತ್ತಿದ್ದ. ಕೆಲವೊಮ್ಮೆ ಮಾತ್ರ ವಿಪರೀತ ಸಿಡುಕಿ ಕೋಲು ತೋರಿಸಿ ಹೆದರಿಸುತ್ತಿದ್ದುದೂ ಉಂಟು.    ಆದಿತ್ಯವಾರ ನಮಗೆ ಭಾರೀ ಕೆಲಸಗಳು. ಈ ನಾರಾಯಣ ಮಾಮನ ರೂಮಿನ ತಲಾಶ್ ಮುಗಿಸಿ ಒಂದಷ್ಟು ಪುಸ್ತಕ ಕೈ,ಕಂಕುಳಲ್ಲಿಟ್ಟು ಹೊರ ಬಂದರೆ ಮುಖ್ಯರಸ್ತೆ. ರಸ್ತೆಯ ಇನ್ನೊಂದು ಬದಿಯಲ್ಲಿ ಬಾಬಣ್ಣನ ಅಂಗಡಿ. ಉದ್ದದ ಹಾಲ್ ನಂತಹ ಅಂಗಡಿಯ ನಡುವಿನಲ್ಲಿ ಬಾಗಿಲು. ಬಾಬಣ್ಣ ಒಂದು ಮೂಲೆಯಲ್ಲಿ ತನ್ನ ಟೈಲರಿಂಗ್ ಮೆಶಿನ್ ಹಿಂದೆ ಕೂತು ಟಕಟಕ ಶಬ್ದ ಹೊರಡಿಸುತ್ತಾ ಬಟ್ಟೆ ಹೊಲಿಯುತ್ತಿರುತ್ತಾರೆ. ಪಕ್ಕದಲ್ಲಿ  ತುಂಡು ಬಟ್ಟೆಗಳ ಸಣ್ಣ ರಾಶಿ. ಇನ್ನೊಂದು ಬದಿಯಲ್ಲಿ ಉದ್ದದ ಒಂದು ಕೋಲು. ಮೂಗಿನ ತುದಿಗೆ ಅಂಟಿಕೊಂಡ ಕಪ್ಪು ಚೌಕಟ್ಟಿನ ದಪ್ಪ ಕನ್ನಡಕ, ಕಪ್ಪು ಬಿಳಿ ಸಂಧಾನ ಮಾಡಿಕೊಂಡಂತೆ ಬೆರೆತಿರುವ ತಲೆಗೂದಲು, ಬಾಯಿಯಲ್ಲಿ ತುಂಬಿಕೊಂಡ ಬೀಡ. ನಮ್ಮ ಧಾಳಿ ಅವರ ಅಂಗಡಿಗೆ ಆಗುವುದನ್ನು ಕನ್ನಡಕದ ಮೇಲಿನಿಂದ ನೋಡಿ ” ಹುಶ್ ಹುಶ್” ಎಂದು ಕಾಗೆ ಓಡಿಸುವಂತೆ ತಾಂಬೂಲ ತುಂಬಿಕೊಂಡ ಬಾಯಿಯಿಂದಲೇ ಗದರಿಸುವಿಕೆ. ನಮಗೆ ಅದೆಲ್ಲ ಒಂದು ಚೂರೂ ಲೆಕ್ಕಕ್ಕಿಲ್ಲ. ನಾವು ಇನ್ನೊಂದು ಮೂಲೆಯಲ್ಲಿ  ಬಿದ್ದಿರುವ ಸಣ್ಣ ಸಣ್ಣ ತುಂಡು ಬಟ್ಟೆಗಳ ದೊಡ್ಡ ರಾಶಿಯತ್ತ ಓಡುವುದು. ಪುಸ್ತಕ ಅಲ್ಲೇ ಮೂಲೆಯಲ್ಲಿ ಪೇರಿಸಿಟ್ಟು ಬಟ್ಟೆಗಳ ರಾಶಿಯಲ್ಲಿ ನಮ್ಮದು ಹುಡುಕಾಟ. ಗೋಪುರದಂತಿರುವ ರಾಶಿ ನಮ್ಮ ಹಾರಾಟಕ್ಕೆ ಕುಸಿದು ಆಕಾರ ಬದಲಾದಂತಾಗುವುದೂ, ಕೆಲವೊಮ್ಮೆ ನಾವೇ ಮೇಲೆ ಏರಿ ಕೆಳಗೆ ಹಾರಿ ಬಿದ್ದು ಕೂಗುವುದು ಸಾಮಾನ್ಯ ಸಂಗತಿ. ಆಗ ಬಾಬಣ್ಣ ತನ್ನ ಸ್ವಸ್ಥಾನದಿಂದ ಪಕ್ಕದಲ್ಲಿದ್ದ ಕೋಲು ತಗೊಂಡು ಓಡಿ ಬರುತ್ತಾರೆ. ನಮಗೆ ಅದು ಆಟದ ಎರಡನೇ ಭಾಗ. ನಾವು ಬಟ್ಟೆಯ ರಾಶಿಗೆ ಸುತ್ತು ಬರುವುದು,ಹಾರುವುದು ಮೇಲೇರುವುದು. ಹಿಂಭಾಲಿಸುವ ಬಾಬಣ್ಣ “ಹ್ಹೇ ಹ್ಹೇ” ಬಟ್ಟೆಯ ರಾಶಿಗೆ ತನ್ನ ಕೋಲಿನಿಂದ ಹೊಡೆಯುವುದು. ನಾವು ಬಾಬಣ್ಣನಿಂದ ತಪ್ಪಿಸಿಕೊಂಡು ಓಡುವುದು. ಬಾಯಲ್ಲಿದ್ದ ಕವಳದಿಂದ ಸಲೀಸಾಗಿ ಬಯ್ಯುವುದೂ ಸಾಧ್ಯವಾಗದೆ ಬಾಗಿಲ ಬಳಿ ಓಡಿ ಬೆರಳೆರಡು ತುಟಿಗಳ ಮೇಲಿಟ್ಟು ಬಾಯಿಯಲ್ಲಿದ್ದ ಕೆಂಪು ರಸವನ್ನು  ಪುರ್ರೆಂದು ಪಿಚಕಾರಿಯಂತೆ ಉಗುಳಿ ಬರುವಾಗ ನಾವು ಒಳಗೆ ಅಡಗಿಯಾಗುತ್ತಿತ್ತು. ” ಹೊರಗೆಬನ್ನಿ, ಬನ್ನಿಯಾ..” ಅಂತ ಕೂಗಿ ಕೂಗಿ ಮತ್ತೆ ಹೋಗಿ ತನ್ನ ಕುರ್ಚಿಗೆ ಅಂಟುತ್ತಿದ್ದರು. “ಲಗಾಡಿ ಹೋಯ್ತು ಇಡೀ ಅಂಗಡಿ. ಈ ಬಟ್ಟೆಗಳನ‌್ನು ಸರಿ ಮಾಡುವುದು ಯಾರು? ಇನ್ನೊಮ್ಮೆ ಯಾರಾದರೂ ಬಟ್ಟೆ ರಾಶಿ ಹತ್ತಬೇಕು. ಹೊರಗೆ ಹೋಗಲು ಬಿಡುವುದಿಲ್ಲ. ಇಲ್ಲೇ ಕಟ್ಟಿ ಹಾಕ್ತೇನೆ” ಎನ್ನುತ್ತಿದ್ದರು. ಅಪರೂಪಕ್ಕೊಮ್ಮೆ ಅವರ ಕೈಗೆ ಸಿಕ್ಕಿಬಿದ್ದರೂ ಅವರು ಹೊಡೆದದ್ದಿಲ್ಲ. ನಾವು ಕಿರುಚಿದ್ದಷ್ಟೆ. ಅವರ ಊರು ಯಾವುದು, ಎಲ್ಲಿಂದ ಬರುತ್ತಿದ್ದರು ಗೊತ್ತಿಲ್ಲ. ಅವರೆಂದರೆ ನಮಗೆ ಬಹಳ ಪ್ರೀತಿ. ನಾನೂ ಯಾರೂ ಇಲ್ಲದ ಸಮಯ ಹೋಗಿ ಬಣ್ಣದ ಬಟ್ಟೆ ತುಂಡು ಆರಿಸಿ ಅವರ ಬಳಿ ಹೋಗಿ  ” ನನ್ನ ಗೊಂಬೆಗೆ ಅಂಗಿ ಹೊಲಿದು ಕೊಡ್ತೀರಾ” ಎಂದರೆ ಪ್ರೀತಿಯಿಂದ ದಿಟ್ಟಿಸಿ  “ಇದು ಚಿಕ್ಕದಾಯಿತು. ತಡಿ, ಬಂದೆ”  ಎನ್ನುತ್ತಾ  ಆ ಬಟ್ಟೆ ರಾಶಿಯಿಂದ ಬೇರೆ ಬಟ್ಟೆ ಆರಿಸುತ್ತಿದ್ದರು.  ಇದು ಬೇಡ ಅಂದರೆ ಇದು, ಇದು ಎಂದು ಕೆಲವು ತುಂಡು ಬಟ್ಟೆ ತೋರಿಸಿ ಒಂದನ್ನು ಆರಿಸಿ ನಾಳೆ ಅಂಗಿ ಮಾಡಿ ಕೊಡ್ತೇನೆ., ಎಂದು ಹೊಲಿದು ಕೊಡುವ ಮಮತಾಮಯಿ. ನಾನು ನನ್ನ ಉಳಿದ ಇಬ್ಬರು ಗೆಳತಿಯರಿಗೆ ತೋರಿಸಿ ಅವರೂ ಬಂದು ಹಠಕ್ಕೆ ಬೀಳುತ್ತಿದ್ದರು. ಆಗ ಕೋಪ ಮಾಡಿ ” ನನ್ನ ಅಂಗಡಿಯೊಳಗೆ ಬಂದರೆ ಜಾಗ್ರತೆ. ಹೋಗಿ ಹೊರಗೆ” ಎಂದು ಗದರಿಸಿದರೂ ಮೂರು ಅಂಗಿಗಳು ನಮ್ಮಲ್ಲಿರುವ ಒಂದು ಗೊಂಬೆಗೆ ತಯಾರಾಗುತ್ತಿದ್ದವು. ಕಿಟಕಿಯ ಬಳಿ ಕುಳಿತುಕೊಳ್ಳುವ ಬಾಬಣ್ಣ ಕಿಟಕಿಯ ದಂಡೆಯಲ್ಲಿ ಒಂದು ರೆಡಿಯೋ ಇಟ್ಟಿದ್ದರು. ಅದರಲ್ಲಿ ಬರುವ ಕಾರ್ಯಕ್ರಮಗಳನ್ನು ಕೇಳುತ್ತ ಕೆಲಸ ಮಾಡುತ್ತಿದ್ದರು. ಶಾಲಾ ಮಕ್ಕಳ ಅಂಗಿ, ಚಡ್ಡಿ. ಪ್ಯಾಂಟ್. ಹುಡುಗಿಯರ ಫ್ರಾಕ್, ಉದ್ದಲಂಗ, ರವಕೆ, ಸ್ಕರ್ಟ್, ಸೀರೆಯ ಬ್ಲೌಸ್. ಬಾಬಣ್ಣನ ಅಂಗಡಿಯಲ್ಲಿ ರೂಪುಗೊಳ್ಳುತ್ತಿದ್ದವು. ಅವರಿಗೆ ಯಾರೂ ಸಹಾಯಕರು ಇಲ್ಲ. ಅವರೇ ಎಲ್ಲವನ್ನೂ ಮಾಡುತ್ತಿದ್ದರು. ತಮ್ಮ ಬಳಿಯ ಟೇಪ್ ಹಿಡಿದು ಅಳತೆ ಮಾಡು, ಬಟ್ಟೆ ಕತ್ತರಿಸು, ಹೊಲಿದು ಕೊಡು. ಹೊಸ ಪಾತ್ರ ಕಟ್ಟಿಕೊಡುವ ನಿರ್ದೇಶಕನಂತೆ ಅವರ ಅಂಗಡಿಯಲ್ಲಿ ಬಗೆಬಗೆಯ ದಿರಿಸುಗಳು ಹುಟ್ಟಿ ಅಲ್ಲಲ್ಲಿ ರಾಶಿ ಬೀಳುತ್ತಿದ್ದವು. ಅವರು ಮಾಡಿಕೊಡುವ ಚೆಂದದ ವಸ್ತೃಗಳನ್ನು ಕಂಡು ಏಕಲವ್ಯನಂತೆ ನಾವೂ ನಮ್ಮ ಗೊಂಬೆಗೆ ದಿರಿಸು ತಯಾರಿಸುತ್ತಿದ್ದೆವು. ನಮ್ಮ ಗೊಂಬೆಗೆ ಪ್ರೀತಿಯಿಂದ ನೇವರಿಸಿ ಮಗ್ಗದ ಸೀರೆಯ ತುಂಡಿನಿಂದ ಸೀರೆ ಮಾಡಿ ಸುತ್ತಿ ಸೆರಗು ತಲೆಯ ಮೇಲಿನಿಂದ ಬರುವಂತೆ ಹಾಕಿದರೆ ಪುಟ್ಟ ಪುಟಾಣಿ ಗೊಂಬೆ ಅಜ್ಜಿಯಾಗಿ ಬಿಡುತ್ತಿದ್ದಳು. ಅವಳನ್ನು ದಪ್ಪ ಮಾಡಲು ಮೊದಲು ಒಂದೆರಡು ಬಟ್ಟೆ ಸುತ್ತಿ ಕೊನೆಗೆ ಮಗ್ಗದ ತುಂಡು ಉಡಿಸುತ್ತಿದ್ದೆವು. ಸಿಲ್ಕ್ ಸೀರೆಯಂತಹ ಹೊಳಪು ಬಟ್ಟೆ ಸಿಕ್ಕಿದರೆ ನಮ್ಮ ಗೊಂಬೆ ರಾಜಕುಮಾರಿ. ತಲೆಯ ಮೇಲಿನಿಂ ದ ಆ ಬಟ್ಟೆ ಎರಡೂ ಬದಿ ಇಳಿಸಿ ಬಿಡುವುದು. .ಮತ್ತೊಂದು ಬಣ್ಣದ ಬಟ್ಟೆ ಅದಕ್ಕೆ ಸುತ್ತಿ ನವೀನ ಮಾದರಿಯ ಬೊಂಬಾಯಿ ವಸ್ತೃ ಶೃಂಗಾರ. ಈಗ ಬೊಂಬೆ, ಮುಂಬಯಿಯ ಷಹರಸುಂದರಿ. ಬೊಂಬೆ ಅಮ್ಮನಾದರೆ ಸಾಧಾರಣ ಸೀರೆ ಚೆಂದ ಮಾಡಿ ಸೆರಗು ಹಾಕಿ ತಯಾರು ಮಾಡುತ್ತಿದ್ದೆವು. ಫ್ರಾಕ್ ಹಾಕಿಸಿದರೆ ಬೊಂಬೆ ಚಂದದ ಶಾಲಾ ಹುಡುಗಿ. ಹೀಗೆ ನಮ್ಮಲ್ಲಿದ್ದ ಒಂದೇ ಒಂದು ಬೊಂಬೆ, ನಮ್ಮ ಬಣ್ಣದ ಚೌಕಿಯೊಳಗಿಂದ ಮೇಕಪ್ ಮಾಡಿಸಿಕೊಂಡು ಹಲವು ಪಾತ್ರಗಳಾಗಿ ಹೊಳೆಯುತ್ತಿತ್ತು.  ಬಟ್ಟೆಗಳ ಉದ್ದ ವ್ಯತ್ಯಾಸವಾದರೆ ಪುಟ್ಟ ಹೊಲಿಗೆ ಬೇಕಾದರೆ ಮತ್ತೆ ಗೊಂಬೆಯ ಜೊತೆಗೇ ಹೋಗಿ ಬಾಬಣ್ಣನಿಗೆ ದುಂಬಾಲು ಬೀಳುತ್ತಿದ್ದೆವು. ನಮ್ಮ ಬಳಿ ಪುಟ್ಟದಾದ ಒಂದು ಡಬ್ಬಿ. ಅದರೊಳಗೆ ವೇಷದ ಬಟ್ಟೆಗಳು.   ಅದೆಷ್ಟು ಬಗೆಬಗೆ. ಕೆಲವೊಮ್ಮೆ ಪುರುಸೊತ್ತಿದ್ದರೆ ಬಾಬಣ್ಣ ಹೊಸ ರೀತಿಯ ಅಂಗಿ ಹೊಲಿದು ಅವರೇ ಅದಕ್ಕೊಂದು ಹೆಸರಿಟ್ಟು ಕನ್ನಡಕದ ಮೇಲಿನಿಂದ ನಮ್ಮ ಮೇಲೆ ಕಣ್ಣು ಹರಿಸಿ, ಸ್ಥಿರಗೊಳಿಸಿ ನಗುತ್ತಿದ್ದರು. ಚೌಕಿಯಲ್ಲಿ ಬಗೆಬಗೆಯ ಪಾತ್ರಗಳು ಜನ್ಮ ತಾಳುವುದೂ ಹೀಗೇ ತಾನೇ..ಒಬ್ಬ ನಿರ್ದೇಶಕ. ಒಂದು

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ಶಾಲಾರಂಗದೊಳಗೊಂದು ಕೋಲಾಟ ಠಣ್…ಠಣ್… ಠಣ್.. ಗಂಟೆಯ ಸದ್ದು ಒಂಭತ್ತು ಸಾರಿ  ಕೇಳಿಸಿತಾ! ಹಾಂ!! ಅದು ನಮ್ಮ ಶಾಲೆಯ ಬೆಳಗಿನ ಗಂಟೆ.   ನನ್ನಜ್ಜಿಯ ಹಣೆಯ ನಡುವಿನ ಕುಂಕುಮದ ಬೊಟ್ಟಿನಂತೆ ನಮ್ಮ ಊರಿನ ಕೇಂದ್ರ ಭಾಗದಲ್ಲಿ ಆಧಾರ ಸ್ತಂಭದಂತೆ ಕೂತಿತ್ತು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಹೌದು ಅದು ನಮ್ಮ ಶಾಲೆ.  ನಮ್ಮ ಹಳ್ಳಿಯ ಶಾಲೆ.  ಬಲಗಾಲಿಟ್ಟು ಒಳಗೆ ಬರಬೇಕು. ಮೊದಲು ಕಾಣಿಸುವುದೇ ಬಿಳೀ ಕಂಬದ ಧ್ವಜಸ್ತಂಭ. ಅದರ ಬುಡದಲ್ಲಿ ಕಟ್ಟೆ . ಅದರ ಹಿಂದೆ, ತೆರೆದ ಎದೆ ಮತ್ತು ಅಕ್ಕ ಪಕ್ಕದ ಭುಜಗಳಂತೆ,  ಮುರ ಕಲ್ಲಿನ ಗೋಡೆಯ, ಹೆಂಚಿನ ಮಾಡಿನ ಶಾಲೆಯ ಕಟ್ಟಡ ನೆಲೆ ಕಂಡಿದೆ  ಈ ಧ್ವಜಸ್ವಂಭದ ಎದುರು ವಾರಕ್ಕೆ ಎರಡು ಸಲ ಡ್ರಿಲ್ ಮಾಡುವುದು, ಸೋಮವಾರ ಹಾಗೂ ಶುಕ್ರವಾರ. ಆಗ ಪ್ರತಿಯೊಬ್ಬರಿಗೂ ಸಮವಸ್ತ್ರ ಕಡ್ಡಾಯ. ಒಂದು ಗಂಟೆ ಬಾರಿಸಿದ ಕೂಡಲೇ ಶಾಲೆಯ ಮಡಿಲಿಂದ ಹೊರಕ್ಕೆ ಜಂಪ್ ಮಾಡಿ ಮಕ್ಕಳು  ಓಡುವುದು. ಸಾಲಾಗಿ ತರಗತಿ, ವಿಭಾಗದ ಪ್ರಕಾರ ಸಾಲು ಜೋಡಿಸಲ್ಪಡುತ್ತದೆ.   ಹುಡುಗಿಯರಿಗೆ ನೀಲಿ ಸ್ಕರ್ಟ್ ಬಿಳಿ ಅಂಗಿ. ಹುಡುಗರಿಗೆ ನೀಲಿ ಚಡ್ಡಿ ಬಿಳಿ ಅಂಗಿ. ತಪ್ಪಿದರೆ  ಬಿಸಿಲಲ್ಲಿ ನಿಲ್ಲುವ ಶಿಕ್ಷೆ ಮಾತ್ರವಲ್ಲ ಜೊತೆಗೆ  ಕೈಗೆ ಬಿಸಿ ಬಿಸಿ ಪೆಟ್ಟು ಹಾಗೂ ಬಸ್ಕಿ ಇಪ್ಪತ್ತೈದು. ಅದೆಷ್ಟೋ ಸಲ ಯುನಿಫಾರ್ಮ್ ಮರೆತು ಬಣ್ಣದ ಫ್ರಾಕ್,ಉದ್ದಲಂಗ ಹಾಕಿ ಬಂದು ಶಂಕಿಬಾಯಿ ಟೀಚರ್ ಹತ್ತಿರ ಪೆಟ್ಟು ತಿಂದದ್ದು, ಚುರ್ ಚುರ್ ಎನ್ನುವ ಚೂಪು ನೆನಪು. ಆ ಧ್ವಜಸ್ತಂಭ ನೋಡಿದಾಗೆಲ್ಲ ಚಿತ್ತದಲ್ಲಿ ಅದರ ಎದುರು ಸಾಲಾಗಿ ಒಂದೇ ಬಗೆಯ ದಿರಿಸು ತೊಟ್ಟ ವಿಧ್ಯಾರ್ಥಿಗಳ ಚಿತ್ರವೇ ತುಂಬಿಕೊಳ್ಳುವುದು. ಅದೆಷ್ಟು ಅಂದ- ಚೆಂದ. ಒಬ್ಬರು ಬಟ್ಟೆಯ ಬಣ್ಣ ಬೇರೆಯಾದರೂ ಬಿಳಿ ಅಂಗಿಗೆ ಶಾಹಿ ಕಲೆಯಾದಂತೆ, ನೂರು ಸರಿಗಳ ನಡುವೆ ತಪ್ಪೊಂದು ಎದ್ದು ನಿಂತಂತೆ  ಕಾಣಿತ್ತಿತ್ತು. ನಮ್ಮ ಶಂಕಿ ಟೀಚರ್, ಶೇಖರ ಮಾಸ್ಟ್ರು ಧ್ವಜಸ್ತಂಭದ ಬಳಿಯಿಂದಲೇ ಅಂತಹ ಅಂಗಿಗಳ ಲೆಕ್ಕ ಹಾಕಿ ಬಿಡುತ್ತಿದ್ದರು‌.  ನಮ್ಮ ಅ ಡ್ರಿಲ್ ಗೆ ಅನುಪಮ ಸೌಂದರ್ಯವಿತ್ತು. ಬೆಳಗ್ಗಿನ ಬಿಸಿಲೂ ಹೆಗಲು,ಕೆನ್ನೆ,ತಲೆ ಸವರಿ ಸಣ್ಣಗೆ ಬೆವರುತ್ತಿದ್ದೆವು. ಜೊತೆಜೊತೆಗೆ ನಡೆಸುತ್ತಿದ್ದ ಕವಾಯತ್. ಇರಲಿ. ಇಲ್ಲಿಂದ ಮುಂದೆ ಬಂದರೆ ನಮಗೆ ಕಾಣಿಸುವುದು ಬೆಳಗ್ಗೆ ಯಾವಾಗಲೂ ನಮಗಿಂತಲೂ ಬೇಗ ಬರುತ್ತಿದ್ದ ಗೌರಿ ಟೀಚರ್ . ಇವರು ಬೆಳ್ಳನೆ ಉದ್ದಕ್ಕಿದ್ದು  ಸೀರೆ  ಸ್ವಲ್ಪ ಮೇಲೆ ಉಡುತ್ತಿದ್ದರು. ಉರೂಟು ಕಣ್ಣು, ಬೈತಲೆ ತೆಗೆದು ಎಣ್ಣೆ ಹಾಕಿ ಬಾಚಿದ  ದಪ್ಪ ಮೋಟು ಜಡೆ,.ಕೈಯಲ್ಲಿ ಎರಡು ಪುಸ್ತಕದ ಜೊತೆ ಒಂದು ಸಪೂರ ಕೋಲು. ಆದರೆ ಅವರ ಕೋಲಿಂದ  ಪೆಟ್ಟು ತಿಂದವರು ಬಹಳ ಕಡಿಮೆ. ಇವರು ನಮ್ಮ ಇಷ್ಟದ ಟೀಚರ್. ಅವರದ್ದು ಮೂಲೆಯ ಕ್ಲಾಸ್. ಅಲ್ಲಿ ಕೊಂಚ ಸಪೂರ ಜಗಲಿ. ಶಾಲೆಯ ವರಾಂಡಾದ ಎದುರು ಹೂವಿನ ಹಾಗೂ ಬಣ್ಣದೆಲೆಗಳ ಕ್ರೋಟಾನ್ ಗಿಡಗಳು.  ವಾರಕ್ಕೆ ಒಂದು  ದಿನ  ಗಿಡಗಳ ಬಳಿ  ಬೆಳೆದ ಕಳೆ ಕೀಳುವ, ಕಸ ಹೆಕ್ಕುವ ಕೆಲಸ ಮಕ್ಕಳಿಗೆ ಅಂದರೆ ನಮಗೆ. ನಾವು ಕುಕ್ಕರುಗಾಲಲ್ಲಿ,ಮೊಣಕಾಲೂರಿ, ಬಗ್ಗಿ  ಬೇಡದ ಹುಲ್ಲು ಕೀಳುತ್ತಿದ್ದೆವು. ಕೆಲಸಕ್ಕಿಂತ ಮಾತೇ ಹೆಚ್ಚು.  ಟೀಚರ್ ಬಂದು ” ಎಂತ ಪಂಚಾತಿಗೆ ಕೂತು ಕೊಂಡದ್ದಾ. ಬೇಗಬೇಗ” ಎಂದು ಗದರಿಸಿದಾಗ    ಕಪ್ಪೆ ಹಾರಿದಂತೆ ಹಾರಿ ಹಾರಿ ದೂರವಾಗುತ್ತಿದ್ದೆವು. ಟೀಚರ್ ಬೆನ್ನು ಹಾಕಿದೊಡನೆ ಮತ್ತೆ ನಮ್ಮ ಮಾತು. ಗಂಡು ಹೆಣ್ಣು ಭೇದವಿಲ್ಲ. ಅದೂ ನಮ್ಮಲ್ಲಿ ಕ್ಲಾಸ್ ಲೀಡರ್ ಹುಡುಗಿಯರಾದರೆ ನಮಗೆ ಹುಡುಗರತ್ರ  ಕೆಲಸ ಮಾಡಿಸುವುದೇ ಬಹಳ ಖುಷಿ!. ಜಗಳವಾದರೆ ಮರು ಕ್ಷಣದಲ್ಲಿ ಕೈ ಕೈ ಹಿಡಿದು ಜಿಗಿದೋಡುವ ಕಲೆ ಕಲಿತದ್ದೇ ಹೀಗೆ. ಪಠ್ಯೇತರ ಚಟುವಟಿಕೆಗಳು ಬದುಕನ್ನು ರೂಪಿಸುವ, ಟೀಂವರ್ಕ್ ನಲ್ಲಿ ಹೊಂದಿ ನಡೆಯುವ, ಎಲ್ಲಾ ಕೆಲಸಗಳನ್ನು ಗೌರವಿಸುವ,  ರೀತಿ ಕಲಿಸಿತು. ನಾಟಕದಲ್ಲೂ ಅಷ್ಟೇ, ಪಾತ್ರಗಳು ಹೊಂದಿ ನಡೆದರೇ ಛಂದವೂ ಚಂದವೂ. ರಂಗಸ್ಥಳದಲ್ಲಿ ಪಾತ್ರಪೋಷಣೆ ಎಷ್ಟು ಮುಖ್ಯವೋ ಅದಕ್ಕಿಂತಲೂ ಹೆಚ್ಚು ಮುಖ್ಯ ಚೌಕಿಯಲ್ಲಿ ಬೆರೆಸುವ ಬಣ್ಣಗಳು, ನಟ ನಟಿಯರ ನಡುವಿನ ಕೆಮಿಸ್ಟ್ರಿ. ಆಗೆಲ್ಲ ಇಡೀ ಊರಿನ ಮಕ್ಕಳೆಲ್ಲ ಈ ಶಾಲೆಯಲ್ಲೇ ಓದುವುದು. ಒಂದು ಮನೆಯ ಹುಡುಗಿ ಮಾತ್ರ ಆಂಗ್ಲ ಮಾಧ್ಯಮ ಶಾಲೆಗೆ ಊರಿನಿಂದ ಹೊರ ಹೋಗುತ್ತಿದ್ದ ನೆನಪು. ನಮಗೆ ಅವಳು ಅಸ್ಪೃಶ್ಯ ಳು. ಆದರೆ ನಮ್ಮ ಮಾತುಕತೆಯ ಕೇಂದ್ರ ಆಕೆಯಾಗಿರುತ್ತಿದ್ದಳು. ಇಂಗ್ಲೀಷಿನಲ್ಲೇ ಎಲ್ಲ ಪಾಠವಂತೆ!. ಅದು ನಮಗೆ ವಿಸ್ಮಯ, ಅದ್ಭುತ. “ಒಂದನೇ ಕ್ಲಾಸಿನಲ್ಲಿ ABC’D ಕಲಿಸ್ತಾರಂತೆ, ಇಂಗ್ಲೀಷ್ ಮಾತನಾಡುದಂತೆ, ವಿಜ್ಞಾನ, ಗಣಿತ,ಸಮಾಜ ಎಲ್ಲವೂ ಇಂಗ್ಲೀಷ್.  ಅಲ್ಲಿ ಹೋದವರು ಮಾತನಾಡುವುದು ಹೇಗೆ ಗೊತ್ತುಂಟಾ..ಟುಸ್ ಟುಸ್ ವಾಸ್ ಶ್ ಸು !!” ಎಂದು ಚಿತ್ರ ವಿಚಿತ್ರವಾಗಿ ಬಾಯಿಯ ಚಲನೆ ಹೊಂದಿಸಿ ಮಾತಾಡಿ ಅಣಕಿಸಿ ಹೊಟ್ಟೆ ಬಿರಿಯೆ ನಗುತ್ತಿದ್ದೆವು. ನಮ್ಮ‌ಸಂಜೆಯ ಮನೆಯಾಟದಲ್ಲಿ ಒಂದು ಪಾತ್ರ ಅದೇ ಆಗಿರುತ್ತಿತ್ತು.  ಆಗಿನ ಊರ ಶ್ರೀಮಂತರ ಮನೆಯ ಮಕ್ಕಳೂ  ಸರಕಾರಿ ಶಾಲೆಯಲ್ಲೇ ಓದುವುದು. ಈ ಕಳೆ ಕೀಳುವ ಕೆಲಸಕ್ಕೆ ಒಂದಷ್ಟು ಬಡ್ತಿ ದೊರಕಿದ ನಂತರ ನಾವು ಆ ಮಕ್ಕಳ ಬಳಿ ಹೋಗಿ ” ಹೇ ಸಂದೀಪ ಸರಿ ಕಿತ್ತು ತೆಗೆ ಹುಲ್ಲು. ರಾಜೇಶ ಕಡ್ಡಿ, ಪೇಪರ್ ಹೆಕ್ಕು” ಎಂದು ಅವರಿಂದ ಚೂರು ಹೆಚ್ಚು ಕೆಲಸ ಮಾಡಿಸುವ ಖುಷಿ ಹೆಕ್ಕಿದ್ದೂ ಇದೆ. ಮುಗ್ದ ಮನಸ್ಸಿನ ದ್ವೇಷರಹಿತ ಕಾರ್ಯವದು. ಇಲ್ಲಿ ನೋಡಿ!  ಓಡಿಕೊಂಡು ಬಂದಂತೆ ಬರುತ್ತಿದ್ದಾರಲ್ವಾ!, ಅವರೇ ಸುಮನ ಟೀಚರ್. ತುಸು ಸಿಟ್ಟಿನ ಮುಖ.  ಇವರು ಐದನೆಯ ಕ್ಲಾಸಿಗೆ ಇಂಗ್ಲೀಷ್ ಪಾಠ ಮಾಡುವುದು. ನಮಗೆ ಇವರೆಂದರೆ ಬಹಳ ಭಯ. ಅವರ ಬಳಿ ಒಂದು ಹಳದಿ ಬಣ್ಣದ ಸೀರೆಯಿದೆ. ಅದನ್ನು ಉಟ್ಟು ಬಂದ ದಿನ ಅವರಿಗೆ ಹೆಚ್ಚು ಕೋಪ ಬರುತ್ತದೆ ಎಂಬುದು ನಮ್ಮಗಟ್ಟಿ ನಂಬಿಕೆ. ನಾವು ಬೆಳಗ್ಗೆ ಅವರು ಬರುವುದನ್ನೇ ಒಂದಷ್ಟು ಭಯದಿಂದ ಕಾಯುತ್ತಿದ್ದೆವು. ಒಬ್ಬರಿಗೆ ಅದೇ ಕೆಲಸ ವಹಿಸಿಕೊಟ್ಟಿದ್ದೆವು. ದೂರದಿಂದ ಅವರು ಓಡಿ ಬರುವಾಗ ಹಳದಿ ಬಣ್ಣ ಕಂಡರೆ ನಮ್ಮ ಭಯ ವಿಪರೀತ ಹೆಚ್ಚಿ ಕೂಡಲೇ ಗುಪ್ತ ಸಮಾಲೋಚನೆ ಆರಂಭಿಸುತ್ತಿದ್ದೆವು. ಯಾವ ಪಾಠದ ಪ್ರಶ್ನೆ ಕೇಳಬಹುದು. ಎಣ್ಣೆ ತಾಕಿದರೆ ಪೆಟ್ಟು ಹೆಚ್ಚು ನೋವಾಗುವುದಿಲ್ಲವಂತೆ.  ಅಂಗೈಗಳನ್ನು ಎಣ್ಣೆ ಹಾಕಿದ ತಲೆಗೆ ತಿಕ್ಕಿ ತಿಕ್ಕಿ ಪರೀಕ್ಷಿಸುವುದು.  ಕೆಲವು ಹುಡುಗಿಯರ ತಲೆತುಂಬ ಎಣ್ಣೆ. ನಮ್ಮ ಕ್ಲಾಸಿನಲ್ಲಿ ಮಮತಾ ಎಂಬ ಹುಡುಗಿಯ ತಲೆ ಕೂದಲಲ್ಲಿ ಬಹಳ ಎಣ್ಣೆ. ನಾವೆಲ್ಲ ಅವಳ ತಲೆಗೆ ನಮ್ಮ ಅಂಗೈ ತಿಕ್ಕಿ ಪೆಟ್ಟು ತಿನ್ನಲು ಮಾನಸಿಕವಾಗಿ ಸಿದ್ದಗೊಳ್ಳುತ್ತಿದ್ದೆವು. ಜೊತೆಗೆ ಪುಸ್ತಕ ತೆಗೆದು ವೇಗವಾಗಿ ಓದುವ ತಾಲೀಮು.  ಹೀಗೆ ಬನ್ನಿ! ಇಲ್ಲಿದ್ದಾರೆ ನಮ್ಮ ಶಂಕಿ ಟೀಚರ್. ಅವರಲ್ಲಿ ಪೆಟ್ಟಿನ ಖಾರವೂ ಇದೆ, ಜೊತೆಗೆ ಪ್ರೀತಿಯ ಸಿಹಿಯೂ ಉಂಟು. ಅಗಲಹಣೆಯ ಮುಖ, ವಾತ್ಸಲ್ಯ ಅವರ ಕಣ್ಣಿನಲ್ಲಿ ಒಸರುತ್ತದೆ. ಸ್ವಲ್ಪ ವಯಸ್ಸಾಗಿದೆ. ದೊಡ್ಡ ಸೂಡಿ ಕಟ್ಟಿ ಹೂ ಮುಡಿದು ಬರುತ್ತಿದ್ದರು. ನಾವು ಅವರಿಗಾಗಿ ಹೂವಿನ ಮಾಲೆ ತರುವಲ್ಲಿ ಪೈಪೋಟಿ ನಡೆಸುತ್ತಿದ್ದೆವು. ನನ್ನ ಪಕ್ಕ ಕೂತುಕೊಳ್ಳುವ ಶಾಲಿನಿ ಮನೆಯಲ್ಲಿ ರಾಶಿ ಅಬ್ಬಲಿಗೆ. ಹಾಗೆ ಅವಳಿಗೆ ನಾನೆಂದರೆ ಮೆಚ್ಚು. ಆಗಾಗ ಮನೆಯಿಂದ ಚಿಕ್ಕ ಮಾಲೆ ಪಾಟೀ ಚೀಲದೊಳಗೆ ಹಾಕಿ ನನಗೆ ತಂದು ಕೊಡುತ್ತಿದ್ದಳು. ಕೆಲವಷ್ಟು ಸಲ ನನ್ನಜ್ಜಿ ಜಾಜಿ ಮಲ್ಲಿಗೆ ದಂಡೆಯನ್ನು ಕೊಡುತ್ತಿದ್ದಳು.  ಶಾಲಿನಿ “ನೀನು ಮುಡಿ” ಎನ್ನುತ್ತಿದ್ದಳು. ಅವಳಿಗೆ ನನ್ನ ಉದ್ದದ ಎರಡು ಜಡೆ ಕಂಡರೆ ಇಷ್ಟ. ಆದರೆ ನಾನು ಕ್ಲಾಸಿನ ಹೊರಗೆ ಬಾಗಿಲ ಬಳಿ ಕೈಯಲ್ಲಿ ಹೂವನ್ನು ಹಿಡಿದು ಬಲು ಆಸೆಯಿಂದ ಶಂಕಿ ಟೀಚರ್ ಗೆ ಕೊಡಲು ಕಾಯುತ್ತಿದ್ದೆ. ನಮ್ಮ ಶಾಲೆಗೆ ಒಂದು ದಿನಪತ್ರಿಕೆಯೂ ಬರುತ್ತಿತ್ತು. ಅದನ್ನು ದಿನಕೊಬ್ಬರಂತೆ ಓದಿ ಮುಖ್ಯ ವಿಷಯಗಳನ್ನು ಬೋರ್ಡಿನಲ್ಲಿ ಕ್ರಮಪ್ರಕಾರ ಬರೆಯಬೇಕಿತ್ತು. ನಾವೆಲ್ಲ ಆಕಾಶವಾಣಿಯ ವಾರ್ತಾವಾಚಕರಿಗಿಂತಲೂ ಹೆಚ್ಚಿನ ಚೆಂದದಲ್ಲಿ ನಮ್ಮದೇ  ಶೈಲಿಯಲ್ಲಿ ಓದುವುದು, ಕೆಲವೊಮ್ಮೆ ಹಿಂದಿನಿಂದ ಬಂದ ಟೀಚರ್ ಕೈಯಲ್ಲಿ ಪೆಟ್ಟು ತಿಂದು ನಮ್ಮ ಬೆಂಚ್ ಗೆ ಓಡುವುದೂ ಆಗಾಗ ಚಾಲ್ತಿಯಲ್ಲಿದ್ದ  ವಿಷಯ. ಆಗ ನಾಲ್ಕನೆಯ ಎ ತರಗತಿಗೆ ರಾಘವ ಮೇಷ್ಟ್ರು , ಅವರು ಆಗಾಗ ಮಧ್ಯಾಹ್ನ ಎರಡೂ ತರಗತಿ ಸೇರಿಸಿ ಪಾಠ ಮಾಡುತ್ತಿದ್ದರು. ಜೊತೆಗೆ ಹಾಡು ಹಾಡುವಂತೆ ಪ್ರತಿಯೊಬ್ಬರಿಗೂ ತಾಕೀತು. ನನಗೆ ಅಂಜಿಕೆ,ನಾಚಿಕೆ. ಆದರೆ ಅಜ್ಜಿ ಹೇಳಿದ್ದಾಳೆ ದಂಡನಾಯಕಿಯಾಗಬೇಕು. ಆಗ ಒಂದು ಹಾಡು ಕಂಠಪಾಠ. ನನ್ನ ಕೆಲವು ಗೆಳತಿಯರೂ ಒಂದೊಂದು ಹಾಡು ಹಾಡುತ್ತಿದ್ದರು. ಈ ಒಂದೊಂದು ಹಾಡು ಎಂದರೆ ನಮಗೆ ಆ ವರ್ಷ ಪೂರ್ತಿಯಾಗಿ ಅದನ್ನು ಉಪಯೋಗಿಸಿ ಮುಂದಿನ ತರಗತಿಯಲ್ಲೂ ಹಾಡಲು ಹೇಳಿದರೆ ಅದೇ ಪದ್ಯ ಅಷ್ಟೇ  ಚೆಂದದಲ್ಲಿ  ಹಾಡುತ್ತಿದ್ದೆವು. ನನ್ನದು ಧರ್ಮಸೆರೆ ಚಿತ್ರದ ” ಕಂದಾ ಓ ನನ್ನ ಕಂದ..” ಎಂಬ ಹಾಡು. ನನಗೆ ಆ ಹಾಡಿನ ಮೇಲೆ ಎಂತಹ ಅಭಿಮಾನವೆಂದರೆ ಅಷ್ಟು ಉತ್ತಮವಾದ ಹಾಡು ಬೇರೊಂದಿಲ್ಲ. ನಾನು ಎದ್ದ ತಕ್ಷಣ ಎಲ್ಲ ಗಂಡು,ಹೆಣ್ಣೂ ಮಕ್ಕಳೂ “ಕಂದಾ..” ಎಂಬ ಆಲಾಪ ಶುರು ಮಾಡುತ್ತಿದ್ದರು. ಆದರೆ ಇದು ನನ್ನ ಒಬ್ಬಳದೇ ಸಮಸ್ಯೆಯಲ್ಲ. ಎಲ್ಲರ ಒಳಗೂ ಒಂದೊಂದು ಹಾಡಿನ ಮುದ್ರಿಕೆ ಅಚ್ಚಾಗಿ ಬಿಟ್ಟಿತ್ತು.  ನನಗೆ ನನ್ನ ಈ  ಹಾಡಿನ ವೃತ್ತದಿಂದ ಮೇಲೆದ್ದು ಹೊಸತೊಂದು ಹಾಡು ಹಾಡಬೇಕು  ಎಂಬ ಯೋಚನೆ, ಹಠದಿಂದ  ಬೇರೆ ಹಾಡನ್ನೂ ಕಲಿತಿದ್ದೆ. ಅದನ್ನು ಹಾಡಿ ಭೇಷ್ ಎನಿಸಿಕೊಳ್ಳಬೇಕು. ಈ ಹುಡುಗರ ” ಕಂದಾಆಆಅ” ಎಂಬ ಲೇವಡಿಯಿಂದ ಬಚಾವಾಗಬೇಕು. ನನಗೆ ಸಿಕ‌್ಕಿತು ಹೊಸ ಹಾಡು. ಹಾಡಲೂ ತಯಾರಾದೆ. ಹೊಸ ಹಾಡು. ಹಾಡಿನ ಸರದಿ ಆರಂಭ ಆಗುತ್ತಿದ್ದಂತೆ ಮನಸ್ಸಿನೊಳಗೆ ವೇಗವಾಗಿ,ನಿಧಾನವಾಗಿ ಶ್ರುತಿಬದ್ದವಾಗಿ ಹಾಡಿ ಅನುವಾದೆ. ಹೊಸದರ  ಪುಳಕ. ನನ್ನ ಹೆಸರು ಬಂದಾಗ‌ ಎದ್ದು ಮನದೊಳಗೆ ಮತ್ತೆ ಹೊಸ ಹಾಡು ಉರು ಹೊಡೆಯುತ್ತ ಎದುರು ಹೋದೆ. ಏಕ ಚಿತ್ತದಲ್ಲಿ ನಿಂತು  ಶುರು ಮಾಡಿದರೆ  ಕಂಠದಿಂದ ಮೈಕೊಡವಿ ಎದ್ದು  ಹೊರಬಂದದ್ದು “ಕಂದಾ..ಓ ನನ್ನ..”  ಇಂತಹ ಒಂದೆರಡು ಪ್ರಯತ್ಮ ಮತ್ತೆ ಮಾಡಿ ಕೊನೆಗೆ ನನ್ನ  ಈ ಹಾಡಿನೊಂದಿಗೆ ಜೊತೆಯಾಗಿ ಇರುವ ಸಂಕಲ್ಪವನ್ನೇ ಗಟ್ಟಿ ಮಾಡಿದ್ದೆ. ಈಗಲೂ ನಮ್ಮ ಕ್ಲಾಸಿನ ಸಹಪಾಠಿ ಗಳು ಸಿಕ್ಕರೆ ಅವರು ಹಾಡುತ್ತಿದ್ದ ಹಾಡು ನೆನಪಾಗುತ್ತದೆ. ಅದು ಉಳಿದವರಿಗೂ ಕಂಠಪಾಠ. ಬೆಲ್ಲದ ಸವಿ. ನಮ್ಮ ಶಾಲೆಯಲ್ಲಿ ಆಗ ಫ್ಯಾನ್ ಗಳು ಇರಲಿಲ್ಲ. ಹಾಗಾಗಿ  ಬೇಸಿಗೆ ಸಮಯದಲ್ಲಿ ಮಧ್ಯಾಹ್ನದ ತರಗತಿ ಸೆಖೆ. ಅದು ನಮಗೇನೂ ಆಗ ಭಾದೆ ಎಣಿಸುತ್ತಿರಲಿಲ್ಲ.  ಮಾಸ್ಟರ್ರು ಮಾತ್ರ ಕೆಲವು ಸಲ ಶಾಲೆಯ ಹೊರಗೆ ಹಿಂಬದಿಯ  ದೇಗುಲದ ತೋಪಿನಲ್ಲಿ ಪಾಠ ಮಾಡುತ್ತಿದ್ದರು.ಅಲ್ಲಿ ಹಳೆಯ ಹುಣಿಸೆ, ಮಾವು, ದೇವದಾರು ಮರಗಳಿದ್ದವು. ನಮಗದು ಬಹಳ ಮೋಜಿನ ತರಗತಿ. “ಸರ್, ಸಾರ್..ಇವತ್ತು ಕ್ಲಾಸ್ ಹೊರಗೆ ಮಾಡುವ. ಸಾರ್..ಅಲ್ಲಿ ಪಾಠ ಮಾಡಿ”  ನಮ್ಮದು ಗೋಗರೆತ. ಅವರು ” ಆಯಿತು” ಎಂದದ್ದೇ ತಡ ಹುಡುಗರು ಅವರು ಕುಳಿತುಕೊಳ್ಳುವ ಕುರ್ಚಿ ಎತ್ತಿ ಹಿಡಿದು ಓಡುತ್ತಿದ್ದರು. ನಾವು ಬೇಗ ಓಡಿ ಮೊದಲು ಹುಣಿಸೆ ಹಣ್ಣು ಬಿದ್ದಿದೆಯಾ ಎಂದು ಹುಡುಕಾಡಿ ಹೆಕ್ಕುತ್ತಿದ್ದೆವು. ಸಿಕ್ಕಿದರೆ ಸ್ವಲ್ಪ ಪಾಟಿ ಚೀಲದಲ್ಲಿ ಅಡಗಿಸಿ, ನಂತರ ಸಿಗದವರಿಗೆ ತೋರಿಸಿ  ಹಂಚಿ ತಿನ್ನುವ ಗಮ್ಮತ್ತು. ನಮ್ಮ‌ ಮೇಸ್ಟರಿಗೆ ಮಾತ್ರ ಕುರ್ಚಿ. ನಾವು ಅಲ್ಲಿ

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ರಂಗ ರಂಗೋಲಿ-06 ಅಜ್ಜಿಯ ಗೂಡಲಿ ಹಾರಲು ಕಲಿತ ಗುಬ್ಬಿ ಮರಿ ಆ ಹಳೇ ಮನೆಯಲ್ಲಿ ತೆಂಗಿನ ಹಸಿ ಮಡಲಿನಿಂದ ಒಂದೊಂದು ಒಲಿಯನ್ನು ತನ್ನ ಚಿಕ್ಕಕತ್ತಿಯಿಂದ ಸರ್ರೆಂದು ಎಳೆದು ನನ್ನ ಆಟಕ್ಕೆ ಹಾವು ,ಬುಟ್ಟಿ, ವಾಚ್,ಕಾಲ್ಗೆಜ್ಜೆ, ಕನ್ನಡಕ ಎಷ್ಟು ಪರಿಕರಗಳು ತಯಾರಾಗುತ್ತಿದ್ದವು. ಮಿದುಳಲ್ಲಿ ಚಿತ್ರವಾದ ಕಲ್ಪನೆಗಳೆಲ್ಲಾ, ಅದ್ಭುತ ಆಟಿಗೆಯಾಗಿ, ಕಲಾಪರಿಕರಗಳಾಗಿ ತಯಾರಾಗುವ ಕಲೆಯ ಕುಲುಮೆಯೇ ಅವರಾಗಿದ್ದರು. ಕಾಡಿಗೆ ಹೋಗಿ ಅದೆಂತದೋ ಕಡ್ಡಿಯಂತಹ ಬಳ್ಳಿ ಎಳಕೊಂಡು ಬರುತ್ತಿದ್ದಳು. ಅದರ ಸಿಪ್ಪೆ ತೆಗೆದು ಹೂ ಬುಟ್ಟಿ,ಅನ್ನ ಬಸಿಯುವ ತಟ್ಟೆ, ದೋಸೆ ಹಾಕುವ ಪಾತ್ರೆ,ಅನ್ನ ಹಾಕಿಡುವ ಪಾತ್ರೆ ತಯಾರಿಸುತ್ತಿದ್ದಳು. ತಾನು ತಾಂಬೂಲ ಹಾಕಿಕೊಳ್ಳುವದಲ್ಲದೆ ಅದಕ್ಕೆಂದೇ ಪುಟ್ಟ ಪರಿಕರ ಈ ಬಳ್ಳಿಯಿಂದ ಮಾಡಿಕೊಂಡಿದ್ದಳು.  ಬಿದಿರನ ರೀತಿಯ ವಾಂಟೆ ಎನ್ನುವ ಗಿಡದಿದ  ಗೊರಬು, ಕುಡ್ಪು, ಈಂಚಿಲ ಗಿಡದ ಚಾಪೆ,ಮುಂಡುಗೆಯ ಚಾಪೆ..ಇದಕ್ಕೆ ಎಲೆ,ಗಿಡ ತಂದು ಕೊಡುವ ಕಾಯಕ ನನ್ನ ಬಾಬನದ್ದು(ಅಜ್ಜ) . ಮನೆಯ ಹಿತ್ತಲಿನನಲ್ಲಿ ಅಂಗಳದಲ್ಲಿ ಬಗೆಬಗೆಯ ಹೂವಿನ ಗಿಡಗಳು ಅದಕ್ಕೆ ಪಾತಿ ಮಾಡಿ ನೆಟ್ಟು ಗಿಡಗಳೊಂದಿಗೆ ಸಂಭಾಷಿಸಿ ಹೂವ ಕೊಯ್ದು ದಾರದಲ್ಲಿ  ಮಾಲೆಯಾಗಿಸುವ ಸೂತ್ರಧಾರೆ ಅವಳು. ಸಾಮಾನ್ಯ ಕಚ್ಛಾವಸ್ತುಗಳು ಅದ್ಭುತ ಕಲಾಪಾತ್ರಗಳಾಗುವ ಈ ಬೆರಗನ್ನು ನೋಡುತ್ತಾ, ಬೆಳೆದ ದಿನಗಳವು. ರಂಗಸ್ಥಳದ ಹಿನ್ನೆಲೆಯಲ್ಲಿ, ಚೌಕಿಯೊಳಗೆ ಪಾತ್ರಗಳ ಭಾವರೂಪಕಗಳು, ಅತಿ ಸಾಮಾನ್ಯ ವ್ಯಕ್ತಿಯೂ ನಾಟಕದ ಅಪೂರ್ವ ಪಾತ್ರಾಭಿವ್ಯಕ್ತಿಯಾಗಿ ತಯಾರಾಗುವ ಕ್ರಿಯೇಟಿವಿಟಿಯ ಮೂಲ ಹುಡುಕುತ್ತಾ ಹೋದರೆ ಬಂದು ನಿಲ್ಲುವುದು ಇಲ್ಲೇ. ಇವಳೊಂದು ಕಡಲು. ಅವಳ ದಂಡೆಯಲ್ಲಿ ಬೆಪ್ಪಾಗಿ ನಿಂತ ಪ್ರವಾಸಿಗಳು ನಾನು. ಕರೆಯುತ್ತಾಳೆ. ಎಷ್ಟು ಮೊಗೆದರೂ ಅಷ್ಟು ಬೊಗಸೆಗೆ ತುಂಬುತ್ತಾಳೆ. ನಾನೇ ಅದರೊಳಗೆ ಮುಳುಗಿ ಮುತ್ತು ರತ್ನ ಆಯಬಹುದು.ನಾನಂತೂ ಮನಸಃ ಈಜಿರುವೆ. ಅವಳ ಬಾಳ ಅಚ್ಚಿನ ಪಾತ್ರೆಯಲ್ಲಿ ತಯಾರಾಗಿ ಬಂದ ಬದುಕು ನಾಟಕದ ಪಾತ್ರ ನಾನು. ಅವಳು ದಾರ ಹಿಡಿದು ಬೊಂಬೆಯ ಕುಣಿತ ಕಲಿಸಿದಳು. ಬಹಿರಂಗದಲ್ಲಿ ಮೊಣಕಾಲೂರಿ ಬಾಗಿ ಪ್ರತಿಯೊಂದರಲ್ಲೂ ಪ್ರೀತಿ ಕಲಿಕೆಯ, ಪಾತ್ರದೊಳಗೆ ತನ್ಮಯತೆಯ ಮಹಾಮಂತ್ರ ಬೋಧಿಸಿದಳು. ಅವಳ ದೃಷ್ಟಿಯಲ್ಲಿ ಯಾವುದೂ ನಿರುಪಯೋಗಿ ವಸ್ತುವಿಲ್ಲ. ಪ್ರತಿಯೊಂದಕ್ಕೂ ಚೌಕಟ್ಟು ಕಟ್ಟಿ ಚೌಕಿಯೊಳಗೆ ಚೆಂದವಾಗಿಸುವುದನ್ನು ತೋರಿಕೊಟ್ಟವಳು.  ಯಕ್ಷಗಾನ ನೋಡಿ ಬಂದ ಮರುದಿನದ ಕತ್ತಲಿಗೆ ಆ ಕಥೆಯ ಉತ್ತರಾರ್ಧ ಚಿಮುಟಿ ದೀಪದ ಬೆಳಕಿನಲ್ಲಿ ಮುಂದುವರೆಸುತ್ತಿದ್ದಳು. ದೀಪದಿಂದ ಬರುವ ಹೊಗೆ ನನಗೆ ಯಾವಾಗಲೂ ಕಥೆ ಕೇಳುವಲ್ಲಿ ಅಡ್ಡಿಯಾಗಲಿಲ್ಲ.  ಹೇಳಿದ ಕಥೆ ಮತ್ತೆ ಪುನರಾವರ್ತನೆ ಆಗುವುದು ಬಹಳ ಕಡಿಮೆ. ಈಕೆಗೆ ಕೇವಲ ರಾಮಾಯಣ, ಮಹಾಭಾರತ ಮಾತ್ರವಲ್ಲ ಇತಿಹಾಸದ ಕಥೆಗಳನ್ನೂ ರೋಚಕವಾಗಿ ಹೇಳ ಬಲ್ಲಳು.ಚಂದ್ರಗುಪ್ತ ಮೌರ್ಯ,ಹಕ್ಕಬುಕ್ಕರು ಅವಳಿಗೆ ತೀರ ಪರಿಚಿತರು. ಹಗಲು ದುಡಿತ,ಮನೆಕೆಲಸ, ನನಗೆ ಕಥೆ..ಇವೆಲ್ಲದರ ಜೊತೆಗೆ ಸ್ವಲ್ಪವಾದರೂ ಕಥೆಗಳನ್ನು ಓದದೆ ಅವಳು ಅಡ್ಡವಾದ ನೆನಪಿಲ್ಲ. ನಾನು ಬೆಳೆದ ನಂತರ ನನ್ನ ಓದಿನ ಹಸಿವು ಹೆಚ್ಚಿದಂತೆ ಆಕೆ ನನ್ನ ಮಗುವಾಗುತ್ತಿದ್ದಳು. ” ಏನೆಲ್ಲ ಓದಿದ್ದೀ..ಅದರಲ್ಲಿ ನಿನಗಿಷ್ಟದ ಚೆಂದದ ಒಂದು ಕಥೆ ಹೇಳು ನೋಡುವ”. ನಾನು ಕಥೆ ಹೇಳುವ ಸಂದರ್ಭ ಬಂದಾಗಲೆಲ್ಲ ಅವಳ ಚರ್ಯೆ ನೆನಪಿಸಿ ಅನುಕರಿಸುತ್ತಿದ್ದೆ. ಕಥೆ ಮತ್ತಷ್ಟು ಅಲಂಕಾರಗೊಂಡು ನನಗಾದ ಆ ಅನುಭೂತಿಯೇ ಅವಳಿಗೂ ಉಣಿಸಬೇಕೆಂಬ ಆಸೆ. ಕೆಲವೊಮ್ಮೆ ಪುಸ್ತಕ ಕೊಟ್ಟು  “ಇದರಲ್ಲಿ ಚೆಂದದ ಇಂದು ಕಥೆ ಓದು. ಕೇಳುತ್ತೇನೆ “, ಎನ್ನುತ್ತಿದ್ದಳು. ನನ್ನ ಓದು ನಿಧಾನಗೊಂಡರೆ.. ” ನನಗೆ ಅರ್ಥ ಆಗುತ್ತಿದೆ. ಗಾಡಿ ಸ್ವಲ್ಲ ಬೇಗ ಹೋಗಲಿ” ಅನ್ನುತ್ತಿದ್ದರು.  ಹೇಳುವ ವೇಗ ಹೆಚ್ಚಿದರೆ,  “ಎಂತ ಅದು ಕಥೆಯಾ..ಓದಬೇಕೂಂತ ಓದುವುದಾ..ಸರಿ ಮಾಡಿ ಮೊದಲಿಂದ ಓದು” ಎನ್ನುವ ಅಪ್ಪಣೆ. ಮುಂದೆ ನಾಟಕವೊಂದು ರಂಗದ ಮೇಲೆ ಬರುವ ಪ್ರಕ್ರಿಯೆಗೆ ಪೂರ್ವಭಾವಿ ಕಾರ್ಯಗಳಲ್ಲಿ ಅದರ ಓದು ಎಷ್ಟೊಂದು ಪ್ರಮುಖ ಪಾತ್ರ ಎಂದು ಅರಿವಿಗೆ ಬಂದಾಗ ನನ್ನ ಕಣ್ಣೆದುರು ಕಥೆ ಓದಿಸುತ್ತಿದ್ದ ನನ್ನ ಮೊದಲ  ನಿರ್ದೇಶಕಿ ಬರುತ್ತಾಳೆ. ಹಗಲಿಡೀ ದುಡಿದು ದಣಿದ ಆಕೆ ನನ್ನ ಪುಟ್ಟ ಕರಗಳನ್ನು ತನ್ನ ಅಂಗೈಯೊಳಗಿರಿಸಿ ಮನೆಯ ಹೊರಗೆ ಸಗಣಿ ಸಾರಿಸಿದ ಅಂಗಳಕ್ಕೆ, ಆ ತೆರೆದ ರಂಗ ಮಂಟಪಕ್ಕೆ ಕರೆತರುತ್ತಿದ್ದಳು. ಎದುರು ಗಗನಚುಂಬನಕ್ಕೆ ಹೊರಟ ತೆಂಗಿನ ಮರ. ಆಕಾಶ ಭಿತ್ತಿಯಲ್ಲಿ ಚಂದಿರ, ನಕ್ಷತ್ರ, ಚೆಲ್ಲುವ ಬೆಳದಿಂಗಳು. ಆ ತಂಪು. ಅಮ್ಮ ನಕ್ಷತ್ರದ ಕಥೆ ಎಂದರೆ ಧ್ರುವ ಮಹಾರಾಜ,ಸವತಿ ಮಾತ್ಸರ್ಯ, ಸಪ್ತ ಋಷಿಗಳ ಕಥೆ, ನಚಿಕೇತ, ಉಲೂಪಿ,ಯಕ್ಷ,ಗಂದರ್ವರು, ನಾಗದೇವತೆಗಳು, ಜನಮೇಜಯನ ಸರ್ಪಯಾಗ ಇವೆಲ್ಲವೂ ಸಾಕ್ಷಾತ್ಕಾರಗೊಳ್ಖುವುದು ಅಲ್ಲೇ. ಚಂದಿರನ ಬೆಳಕು , ತೆಂಗಿನ ಗರಿಗಳ ರಂಗ ವಿನ್ಯಾಸ. ಆಕೆಯ ಮುಖದ ಮೇಲೆ ಕಥೆಯ ಭಾವಕ್ಕೆ ತಕ್ಕಂತೆ ಗಾಳಿಯ ಓಟಕ್ಕೆ ಹರಿದಾಡುವ ನೆರಳು ಬೆಳಕಿನ ಲೈಟಿಂಗ್ ತಂತ್ರಜ್ಞಾನ. ನಾನು ಪ್ರೇಕ್ಷಕಳು. ಆಕೆಯದು ಆ ಅಭಿನಯ ಜಗಲಿಯಲ್ಲಿ ಏಕವ್ಯಕ್ತಿ ಪ್ರಸ್ತುತಿ. ನೂರಾರು ಪ್ರೇಕ್ಷಕರ ಕಣ್ಣೊಳಗೆ ಬಿಂಬವಾಗಿ ಮೂಡುವ, ನಾಟಕದ ಪಾತ್ರವಾಗಲು ಎಂಟೆದೆಯ ಧೈರ್ಯ ಬೇಕು. ಭಾವ, ಅಭಿನಯ, ಮಾತುಗಳು, ರಂಗಚಲನೆ ಇವೆಲ್ಲ ದೇಹದೊಳಗೆ ಹೊಕ್ಕು ವೇಷವಾಗಿ,ಆವೇಶವಾಗಿ ಅಭಿವ್ಯಕ್ತಿಯಾಗಲು, ಒಂದಿಷ್ಟೂ ಹಿಂಜರಿಕೆ, ಭಯ, ಸ್ವಂತಶಕ್ತಿಯ ಮೇಲೆ ಸಂಶಯ ಇರಲೇ ಬಾರದು. ಬಾಲ್ಯದಲ್ಲಿ, ನಾನು ಗುಬ್ಬಿ ಮರಿ. ಗೂಡು ಮಾತ್ರ ಬೆಚ್ಚಗೆ, ಹೊರಗೆಲ್ಲಾ ಅಭದ್ರತೆಯ ಭಾವ. ಅಂಜಿಕೆ, ನಾಚಿಕೆ,ಹೆದರಿಕೆ ಧರಿಸಿಕೊಂಡ ಬಾಲ್ಯದ ನನ್ನ ಚಿತ್ತ ಚಿತ್ರವು ಹಲವಾರು ಸಲ ಭಯದ ಕುಲುಮೆಗೆ ದೂಡಿದಂತಾಗಿ ಚಡಪಡಿಸುತ್ತಿದ್ದೆ. ನಾಲ್ಕು ಜನಗಳಿದ್ದರೆ ಅಡಗಲು ಸುರಕ್ಷಿತ ತಾಣ ಹುಡುಕುತ್ತಿದ್ದೆ.  ಇದಕ್ಕೆ ಹಿನ್ನೆಲೆಯಾಗಿ ಕಾರಣಗಳೇನೇ ಇದ್ದರೂ ಅದು ನನ್ನ ವ್ಯಕ್ತಿತ್ವದ ಭಾಗವಾಗಿ ನಾನೇ ಅದಾಗಿ ಚಡಪಡಿಸುತ್ತಿದ್ದೆ.  ಯಾರ ಎದುರೂ ಬರಲಾರದ, ಮಾತನಾಡಲಾರದ ಪುಕ್ಕಲುತನ.  ಆಗೆಲ್ಲ ಬಡಕಲು ಪುಟ್ಟ ದೇಹದ ನನಗೆ ಶಾಲೆಯಲ್ಲಿ ಮೊದಲ ಬೆಂಚ್ ನಲ್ಲಿ ಸ್ಥಳ ಖಾಯಂ. ಅದೂ ಬಹಳಷ್ಟು ಸಲ ಮೊದಲ ಸಾಲಿನ ಮೊದಲ ಜಾಗ. ವಿಪರೀತ ಚಡಪಡಿಕೆ,ಅಸ್ಯವ್ಯಸ್ತಗೊಂಡು ಕುಂಯ್ಯ್ ಗುಡುವ ಮನ. ಟೀಚರ್ ನನ್ನನ್ನೇ ನೋಡುವರು..ಹೊರ ಒಳಗೆ ಹೋಗಿ ಬರುವಾಗ ನನ್ನ ಸಹಪಾಠಿ ಗಳ ದೃಷ್ಟಿಯೂ ನನ್ನ ಮೇಲೆ. ಪ್ರಶ್ನೆಯೂ ಬಾಣದಂತೆ ನನಗೆ. ಶಾಲೆಯಿಂದ ತಪ್ಪಿಸಿಕೊಂಡು ಮನೆಯ ಆ ಕತ್ತಲೆ ಕೊಠಡಿಯಲ್ಲಿ ಕೂತರೇ..ಅನ್ನಿಸುತ್ತಿತ್ತು. ಅಂತಹ  ಸಂದರ್ಭದಲ್ಲೆ ಮನಸ್ಸಿನ ಗಾಯಗಳಿಗೆ ಮುಲಾಮು ಹಚ್ಚುವಂತೆ ಅಜ್ಜಿ ನುಡಿದಿದ್ದಳು. “ಕೇವಲ ಸೈನಿಕನಾದರೆ ಸಾಲದು. ದಂಡನಾಯಕನಾಗುವ ಬಗ್ಗೆ ಯೋಚಿಸಬೇಕು”  ಒಮ್ಮೆಯಲ್ಲ! ಬಾರಿಬಾರಿ. ನಾನು ಕುಸಿದಾಗಲೆಲ್ಲ..ನಾಯಕತ್ವ ನಿನ್ನ ಕೈಗೆ ತೆಗೆದುಕೋ ಅನ್ನುವುದನ್ನೇ ಅದೆಷ್ಟು ಬಡಿದೆಬ್ಬಿಸುವಂತೆ ಹೇಳುತ್ತಾ ಇದ್ದಳು. “ನಾನು ಉದ್ದ ಇರಬೇಕಿತ್ತು ಅಮ್ಮ” ಎಂದು ನಾನಂದರೆ,  “ಪುಟ್ಟ ದೇಹ ಇರುವುದರಿಂದಲೇ ಸಾಧನೆ. ನೋಡುವ ನಾಳೆಯಿಂದ ಟೀಚರ್ ಹಿಂದೆ ಕುಳಿತುಕೊಳ್ಳಲು ಹೇಳಿದರೂ ನೀನು ಎದುರಿರಬೇಕು. ನಾಳೆ ನೀನು ದಂಡನಾಯಕಿ. ಸೈನ್ಯವನ್ನು ಮುನ್ನಡೆಸಬೇಕು. ನಿನಗೆ ಯಾವುದು ಸಾಧ್ಯವಿಲ್ಲ ಎಂಬ ಭಯ ಇದೆಯೋ, ಅದೇ ಸಾಧ್ಯ ಮಾಡಬೇಕು. ಗೊತ್ತಿಲ್ಲದೆ ಇರುವುದನ್ನು ಗೊತ್ತು ಮಾಡುವ ಬಗ್ಗೆ ಯೋಚಿನೆ,ಯೋಜನೆ ಇರಬೇಕು.” ಅನ್ನುತ್ತಾ ಕಥೆ, ಕಲ್ಪನೆ, ಕಲೆಯನೆಲೆ, ಧೈರ್ಯ ಎಲ್ಲವನ್ನೂ ಈ ಗುಬ್ಬಿ ಮರಿಯ ದೇಹದಲ್ಲಿ ತುಂಬಿ, ಹಾರಲು ಕಲಿಸಿದರು, ******************************* ಪೂರ್ಣಿಮಾ ಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿ

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ರಂಗರಂಗೋಲಿ-5 ಪಾತ್ರೆ ತುಂಬಿದ ಇನ್ನೆರಡು ಪಾತ್ರಗಳು ಪೂರ್ಣ… ಪೂ..ರ್ಣ.. ಅವರು ಕರೆಯುತ್ತಿದ್ದಾರೆ!. ತೆಳ್ಳಗಿನ ಸ್ವರವದು. ಉದ್ದ ಜಗಲಿಯನ್ನು ಹಂಚಿಕೊಂಡ ಮೂರನೆಯ ಹೊಸ್ತಿಲಿನ ಕೊನೆಯ ಕೋಣೆಯದು. ಮುಸ್ಸಂಜೆ ಸಮಯ,  ಒಬ್ಬರೇ ಆ‌ ಮರದ ಕಿಟಕಿಯ ಬಳಿ ಕೂತು  ತಿನ್ನುತ್ತಿದ್ದದ್ದು ಒಂದು ಆಮ್ಲೇಟ್. ಅದೂ ಚಿಕ್ಕದು. ಅದಕ್ಕೆ ಬಹಳ ಹೊತ್ತು ತೆಗೆದುಕೊಳ್ಳುತ್ತಿದ್ದರು.  ಆ ಸಮಯ ಮಾತ್ರ ಅವರು ನನ್ನ ಹೆಸರು ಕೂಗುತ್ತಿದ್ದರು. ಮನೆಯ ಹಿಂಬದಿಗೆ ಆ ಕಿಟಕಿಯ ಅರೆ ಕತ್ತಲಿಗೆ ನಾನು ಓಡುತ್ತಿದ್ದೆ. ಕಡ್ಡಿಯಂತಹ ಬಿಳೀ ಬೆರಳುಗಳು. ಪುಟ್ಟ ಆಮ್ಲೇಟಿನ ತುಂಡು ಆ ಕಿಟಕಿಯ ಸಂದಿನಿಂದ ಹೊರಬರುತ್ತಿತ್ತು. ತಾನು ಬಾಯಿ ತೆರೆದು ನನಗೆ “ಆಂ..” ಎನ್ನುತ್ತಿದ್ದರು. ನನ್ನ ಬಾಯಿಗೆ ಅವರ ಪಾಲಿನ ಆಹಾರ. ನಿನ್ನ ಅಜ್ಜಿಗೆ ಹೇಳಬೇಡ. ಇದೆಲ್ಲ ತಿಂದರೆ ಅವಳು ಬಯ್ಯಬಹುದು. ನಾನು ಬಾಯಿ ಒರೆಸಿ ಆ ಹೊಸ ರುಚಿಗೆ ತವಕಿಸುತ್ತಿದ್ದೆ. ಒಂದು- ಎರಡು ತುಂಡು ನನಗೆ. ಉಳಿದದ್ದು ಅವರಿಗೆ. ಜೊತೆಗೆ ಅವರ ಬಳಿ ಒಂದು ಪಾರದರ್ಶಕ ಗ್ಲಾಸ್. ಅದರಲ್ಲಿ ಎಂತದೋ ಪಾನೀಯ. ತುಸು ಘಾಟು ವಾಸನೆ. ಸಂಜೆಗೆ ಅವರ ಆಹಾರ ಅಷ್ಟೆ ಇದ್ದ ಹಾಗೆ ನೆನಪು. ಮತ್ತೆ ಮೌನಿಯಾಗಿ ತನ್ನ ಕೊಠಡಿ ಸೇರುತ್ತಿದ್ದರು. ಅಜ್ಜಮ್ಮನ ವಠಾರದ ಮತ್ತೊರ್ವ ಅಜ್ಜಿಯೇ ಅವರು. ನನ್ನ ಪ್ರೀತಿಯ ಸಣ್ಣಜ್ಜಿ. ಬಾಲ್ಯದಲ್ಲಿ ಸಿಹಿ ಅನುಬಂಧಗಳನ್ನು ಜೋಡಿಸಿದ ಹಿರಿ ಮನಸ್ಸುಗಳು ಅದೆಷ್ಟೋ ಇದ್ದವು. ಅವರಲ್ಲಿ ಈ ಸಣ್ಣಜ್ಜಿಯೂ ಒಬ್ಬರು. ಆ ವಠಾರ ನನ್ನ ನಾಟಕದ ಅವ್ಯಕ್ತ ಪಾಠಶಾಲೆಯಾಗಿತ್ತು. ಅಜ್ಜಮ್ಮ ಅನ್ನುತ್ತಿದ್ದರು: ನನ್ನ ಖಾಸ ತಂಗಿಯಲ್ಲ,ಆದರೆ ಅವಳು ತಂಗಿ. ಅವಳ ಜವಾಬ್ದಾರಿ ನನ್ನದು”  ಈ ಸಣ್ಣಜ್ಜಿ ಅಜ್ಜಮ್ಮನಷ್ಟು ಮಾತನಾಡುವವರಲ್ಲ. ಮೌನಿ. ಆ ಉದ್ದದ ಮನೆಯ ಮುಕ್ತಾಯ ಹಂತದಲ್ಲಿ ಇರುವ ಕೋಣೆಯಲ್ಲಿ ವಾಸ. ಎದುರು ಭಾಗಕ್ಕೆ ಬರುವುದೇ ಕಮ್ಮಿ. ಹಿತ್ತಲ ಬದಿ ಇರುವ ಬಾಗಿಲಿನ ಸಮೀಪ ಮನೆಯ ಒಳಗಡೆ ಒಂದು ಸಿಮೆಂಟಿನ ಕುರ್ಚಿಯ ತರಹ ಇತ್ತು ಅದಕ್ಕೆ ಹೊಂದಿಕೊಂಡಂತೆ ಮರಗಳ ದಳಿ ಇರುವ ಉದ್ದನೆಯ ಕಿಟಕಿ. ಅಲ್ಲಿ ಬೆಳಗ್ಗೆ, ಮಧ್ಯಾಹ್ನ, ಮತ್ತು ಸಂಜೆ ಹೊತ್ತಿಗೆ  ಬಂದು ಕೂರುತ್ತಿದ್ದರು. ಕೈಯಲ್ಲಿ ಒಂದು ಪುಸ್ತಕ. ಯಾವ ಪುಸ್ತಕ, ಯಾವ ವಿಷಯಗಳ ಬಗ್ಗೆ ಅವರ ಆಸಕ್ತಿ ನನಗೆ ತಿಳಿಯುತ್ತಿರಲಿಲ್ಲ. ಬಹುಶಃ ಯಾರಿಗೂ ತಿಳಿದಿರಲಿಲ್ಲ. ಆ ಪುಸ್ತಕಗಳು ಅವರ ಕೋಣೆಯೊಳಗೆ ಇರುತ್ತಿದ್ದವು. ಆ ಕೋಣೆ ಆ ದೊಡ್ಡ ಮನೆಯೊಳಗಿನ ಅವರ ಮನೆ. ಅಜ್ಜಮ್ಮನ ಪ್ರತಿಯೊಂದು ಚರ್ಯೆ ಅನಾವರಣಗೊಂಡು ಕಣ್ಣೆದುರು ಕಾಣುತ್ತಿದ್ದರೆ ಇವರು ಎಲ್ಲ ವಿಷಯಗಳಲ್ಲೂ ಅಂತರ್ಮುಖಿ. ಸಣ್ಣಜ್ಜಿಯ ಕೋಣೆಯೊಳಗೆ ಹಗಲಲ್ಲೂ ಮಂದ ಬೆಳಕು. ನಾನು ಅಂಜಿಕೊಂಡು ಒಳಗೆ ಇಣುಕುತ್ತಿದ್ದೆ.  ಅವರು ಆ ಅರೆಕತ್ತಲಿನ ಕೋಣೆಗೆ ಇರುವ ಒಂದು ಕಿಟಕಿಯ ಬಳಿ ಕೂತಿರುತ್ತಿದ್ದರು. ತಿಂಡಿ,ಊಟ ಅಲ್ಲೇ. ತಟ್ಟೆಯಲ್ಲಿ ನೀರು ಕೊಡಬೇಕು. ಅಲ್ಲೇ ಕೈ ತೊಳೆಯುವುದು. ನಾನು ಅಡಗಿಕೊಂಡು ಅವರ ಚರ್ಯೆಗಳನ್ನು ಗಮನಿಸುತ್ತಿದ್ದೆ.  ಏನೋ ಯೋಚನೆ ಮಾಡುವ ರೀತಿ ಕೂತಿರುತ್ತಿದ್ದರು. ನಂತರ ಅಲ್ಲೇ ಓದು. ಪುಟ್ಟದೊಂದು ಗೋಡೆಗೆ ಹೊಂದಿಕೊಂಡ ಕಪಾಟು. ಅದರಲ್ಲೇ ಅವರ ಪುಸ್ತಕ,ಪೌಡರ್ ಡಬ್ಬ, ಬಿಳೀ ಪುಟ್ಟ ಡಬ್ಬದಲ್ಲಿ ಪೊಂಡ್ಸ ಕ್ರೀಂ.  ಯಾವುದೂ ಹೊರ ಬಾರದು. ಅವರ ಊಟವೂ ಅಷ್ಟೆ ಮಾತಿಗಿಂತಲೂ ಮಿತ. ಬರೀ ಒಂದು ಮುಷ್ಠಿ ಅನ್ನ,ಒಂದು ಲೋಟ ಹಾಲು,ಒಂದಿಷ್ಟು ಪಲ್ಯ. ಯಾವುದರ ಬಗ್ಗೆಯೂ ಚರ್ಚೆ ಇಲ್ಲ. ಅವರಾಗಿ ಊಟದ ಬಗ್ಗೆ ವಿಚಾರಿಸಿದ್ದು ಕಂಡಿಲ್ಲ. ಬೆಳಗ್ಗೆ ಬೇಗನೆ ಸ್ನಾನ. ಅವರ ದೇವರ ಪೂಜೆಯೂ ಬಹಿರಂಗವಾಗಿ ಕಾಣುತ್ತಿರಲಿಲ್ಲ. ಭಜನೆ,ಹಾಡು ಹಾಡಿದವರಲ್ಲ. ಅವರ ಮನೆಗೆ ಬಹಳಷ್ಟು ಜನ ಬರುತ್ತಿದ್ದರು. ಅಜ್ಜಮ್ಮ ಅವರೊಡನೆ, ಮಾತು ಚರ್ಚೆ ನಡೆಸುತ್ತಿದ್ದರು. ಸಣ್ಣಜ್ಜಿ ಯಾವುದರಲ್ಲೂ ಪಾಲ್ಗೊಂಡ ನೆನಪಿಲ್ಲ. ಭೇಟಿಗೆ ಬಂದವರೇ ಅವರ ಬಳಿ ಹೋಗಿ ಮಾತನಾಡುತ್ತಿದ್ದರು. ಅಜ್ಜಮ್ಮ ನನಗೆ ಮಾತು ಕಲಿಸಿದರೆ ಸಣ್ಣಜ್ಜಿ ಕಲಿಸಿದ್ದು ಮೌನ. ನಾಟಕದಲ್ಲಿ ಹಲವು ಬಾರಿ ಮಾತುಗಳಿಗಿಂತ ಹೆಚ್ಚು ಮೌನ ಮಾತಾಡುತ್ತೆ ಅಂತ ಅರ್ಥವಾದಾಗಲೆಲ್ಲಾ, ನೆನಪಾಗುವುದು ಸಣ್ಣಜ್ಜಿ ಕಲಿಸಿದ ಮೌನ. ಅಜ್ಜಮ್ಮನ ಜೊತೆ ಮಾತು ಮೀರಿ ನಾನು ಸಣ್ಣಜ್ಜಿ ಬಳಿ ಹೋಗಲು ಎದ್ದರೆ ಗದರುತ್ತಿದ್ದರು. ಅವಳು ಯಾಕೆ? ಅವಳಿಗೆ ಗಂಡೂ ಬೇಡ,ಹೆಣ್ಣೂ ಬೇಡ.  ಸಣ್ಣಜ್ಜಿಯ ಪುಸ್ತಕಗಳು, ಅವರ ಕಣ್ಣಲ್ಲಿ ಒಸರುವ ವಾತ್ಸಲ್ಯ ಅದೊಂದು ಅಮೂರ್ತ ಭಾವ ನಿಧಿಯನ್ನು ದೇಣಿಗೆ ನೀಡಿತ್ತು. ಮುಂದೆ ನಾಟಕಗಳಲ್ಲಿ ರಾಮಾಯಣದ ಶಬರಿ, ರಾಮಾಶ್ವಮೇಧದ ಊರ್ಮಿಳಾ, ಮಂದಾರ ರಾಮಾಯಣದ ಅಹಲ್ಯೆ ಪಾತ್ರಗಳು ಮನಸ್ಸಿನಲ್ಲಿ ಚಿತ್ರಿತಗೊಂಡಾಗ ಆ ಪಾತ್ರದ ಮೂರ್ತ ರೂಪದಂತೆ ಅಯಾಚಿತವಾಗಿ ಸಣ್ಣಜ್ಜಿಯ ಕಾಯ ನಿಲ್ಲುತ್ತಿತ್ತು. ಅವರೂ ಯಾರದ್ದೋ ನಿರೀಕ್ಷೆಯಲ್ಲಿದ್ದರೇ ಎಂಬ ಪ್ರಶ್ನೆಯಿಂದ ಈಗಲೂ ಮನಸ್ಸು ತಳಮಳಿಸುತ್ತದೆ. ಈಗ ಅನಿಸುತ್ತದೆ. ಅವರ ಭಾವಕೋಶದೊಳಗೆ ಏನಿತ್ತು? ಕೋಶ ಹರಿದು ಚಿಟ್ಟೆ ಬಣ್ಣದ ರೆಕ್ಕೆ ತೆರೆದಿರಲೇ ಇಲ್ಲವೇ? ಆ ಮೌನವನ್ನು ಯಾರೂ ಮುಟ್ಟುವ ಮನಸ್ಸು ಮಾಡಿಲ್ಲವೇ. ತಪಸ್ವಿನಿಯಂತೆ ಬದುಕಿದರು. ಪದ್ಮಪತ್ರದ ಮೇಲಿನ ಜಲಬಿಂದುವಿನಂತೆ, ಯಾವುದಕ್ಕೂ ಅಂಟಿಕೊಳ್ಳದೆ. ನನ್ನ ಬಾಳ ರಂಗಸ್ಥಳದಲ್ಲಿ ಕಂಡ ಅಪರೂಪದ ಪಾತ್ರ. ಅದೊಂದು ದಿನ ಮಲಗಿದ್ದಲ್ಲಿಯೇ ಕಾಯ ತೊರೆದಿದ್ದರು. ನಂತರದ ದಿನಗಳಲ್ಲಿ ನನ್ನೊಳಗೊಂದು ಭಯ ಹುಟ್ಟಿಕೊಂಡಿತ್ತು. ಅಡುಗೆ ಮನೆ ಹೋಗಬೇಕಾದರೆ ಅವರ ಕೊಠಡಿ ದಾಟಿ ಹೋಗಬೇಕಿತ್ತು. ಬೇಡವೆಂದರೂ ದೃಷ್ಟಿ ತೆರೆದ ಆ ಕೊಠಡಿಯತ್ತ ಓಡುತ್ತಿತ್ತು. ಆ ಪುಟ್ಟ ದೇಹ ಅಲ್ಲಿ ಇದ್ದ ಹಾಗೆ ಅನಿಸಿ ಗಾಬರಿಗೊಳ್ಳುತ್ತಿದ್ದೆ. ಅಜ್ಜಮ್ಮ ಏನಾದರೂ ತರಲು ಹೇಳಿದರೆ ಅಲ್ಲಿಯವರೆಗೆ ಸಹಜವಾಗಿ ಬಂದರೆ ನಡಿಗೆ ನಿಲ್ಲುತ್ತಿತ್ತು. ಮನಸ್ಸಿನಲ್ಲಿ ದೇವರ ನಾಮಸ್ಮರಣೆಯೊಂದಿಗೆ ಕಣ್ಣುಮುಚ್ಚಿ ಓಟದ ನಡಿಗೆಯಲ್ಲಿ  ಆ ಕೊಠಡಿ ದಾಟುತ್ತಿದ್ದೆ.  ಆ ಮನೆಯಲ್ಲಿದ್ದ ಮೂರನೆಯವರೇ ಹೆಣ್ಣು ರೂಪದ ಗಂಡು ಪಾತ್ರದ ವತ್ಸಲ ಚಿಕ್ಕಿ. ಅವರು ನಡೆದಾಡುವ ಶೈಲಿಯೂ ಹಾಗೆ. ಉದ್ದಕ್ಕಿದ್ದರು. ಎದೆಸೆಟೆಸಿ ನಡೆದಂತೆ ನಡೆಯುತ್ತಿದ್ದರು. ದಪ್ಪ ಸ್ವರ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ತಮ್ಮ ಬಳಿ ಇದ್ದ ಕೆಜಿಗಟ್ಟಲೆ ಬಂಗಾರ, ನಗದು ಎಲ್ಲ ಗಂಟು ಕಟ್ಟಿ ಗಾಂಧೀಜಿಯವರನ್ನು ಭೇಟಿ ಮಾಡಿ ಅವರಿಗೆ ಒಪ್ಪಿಸಿದ್ದರಂತೆ. ತನಗಿಷ್ಟವಾದಾಗ ತಿಂಡಿ, ಇಷ್ಟವಾದರೆ ಊಟ. ಯಾರನ್ನೂ ಕೇಳಿ ಉಪಚರಿಸಿಕೊಂಡವರಲ್ಲ. ಬೇಕಾದಾಗ ಅಡುಗೆ ಮನೆಗೆ ನುಗ್ಗಿ ಪಟಪಟ ಸದ್ದು ಮಾಡಿ ತನಗಿಷ್ಟವಾದುದ್ದನ್ನು ತಯಾರಿಸಿ ಉಣ್ಣುತ್ತಿದ್ದರು. ಮನೆಯೊಳಗೂ ಸ್ಲಿಪ್ಪರ್ ಚಪ್ಪಲು ಹಾಕಿ ಓಡಾಟ. ದಿನದಲ್ಲಿ ಮೂರು ನಾಲ್ಕು ಸಲ ಉಡುಪು ಬದಲಿಸುತ್ತಿದ್ದರು. ಎಲ್ಲವೂ ಶಿಸ್ತುಬದ್ಧ. ಬೆಳಗ್ಗೆದ್ದು ಎಲ್ಲಿಗೋ ಹೋಗುತ್ತಿದ್ದರು. ಥಟ್ಟೆಂದು ಪ್ರತ್ಯಕ್ಷವಾಗುತ್ತಿದ್ದರು. ಏನನ್ನೋ ಹೇಳಲಿರುವಂತೆ ಸದಾ ತುಟಿಗಳ ಚಲನೆ. ಖಾದಿ ಉಡುತ್ತಿದ್ದರು. ಮಹಾತ್ಮ ಗಾಂಧೀಜಿಯವರಿಂದ ಪ್ರಭಾವಿತರಾಗಿದ್ದರು. ಮನಸ್ಸಾದರೆ  ದೇವಾಲಯಕ್ಕೆ ಹೊರಡುತ್ತಿದ್ದರು. ಅಗೆಲ್ಲ ನನ್ನ ಕರೆದುಕೊಂಡು ಹೋಗುವುದು. ಎದುರಾದ ಗಿಡ, ಮರ, ಕಲ್ಲು ಎಲ್ಲದಕ್ಕೂ ನಮಸ್ಕರಿಸುತ್ತಿದ್ದರು. ಕಾಲಿಗೆ ಕಲ್ಲು ಎಡವಿದರೆ ಆ ಕಲ್ಲಿಗೆ ಎರಡೂ ಕೈಗಳನ್ನು ಬಾಗಿಸಿ ನಮಸ್ಕರಿಸುತ್ತಿದ್ದರು.  “ಎಲ್ಲದರೊಳಗೂ ದೇವರಿದ್ದಾನೆ” ಸ್ವಗತದಂತೆ ಮಾತನಾಡುತ್ತಿದ್ದರು. ನನ್ನ ಕೈ ಹಿಡಿದೇ ಇರುತ್ತಿದ್ದರು. ಪ್ರಹ್ಲಾದ ಕಥೆ ಇವರೊಳಗಿಂದಲೇ ಚಿಗುರಿದಂತೆ.  ನಾನು ಬಹಳ ಕಾಲ ಅವರ ಈ ಅಭ್ಯಾಸ, ಹವ್ಯಾಸ ನನ್ನೊಳಗೆ ಇಳಿಸಿಕೊಂಡು ಅನುಸರಿಸುತ್ತಿದ್ದೆ. ವ್ಯಕ್ತಿಯ ಹಾವ ಭಾವದ ಅನುಕರಣೆ, ಸ್ವಭಾವದ ಅನುಕರಣೆ ಅಭಿನಯ ಮಂಟಪದ ಕಂಭಗಳು ತಾನೇ. ರಂಗದ ರಂಗೋಲಿಯೇ ಪ್ರೀತಿ,ತನ್ನಯತೆಯಿಂದ ನಮ್ಮನ್ನು ಸಮೀಕರಿಸಿ ಸಮರ್ಪಿಸಿಕೊಳ್ಳುವ ದೈವೀಕತೆ. ಪ್ರತೀ ಒಂದರ ಸೂಕ್ಷ್ಮತೆ, ಆಗುಹೋಗುಗಳನ್ನು ತೆರೆದ ಕಣ್ಣು, ಮನಸ್ಸಿನಿಂದ ಎದೆಗಿಳಿಸಿಕೊಳ್ಳುವ ಜಾದೂ. ಅದರ ಮೊದಲ ಅಕ್ಷರಾಭ್ಯಾಸ ಬಾಲ್ಯ.  ನೆನಪಿಗೆ ತಾಲೀಮು, ಉಸಿರಿಗೆ ರಾಗ, ಮಾತಿಗೆ ಕೌಶಲ್ಯ, ದೇಹದ ಚಲನೆ, ಚೈತನ್ಯ ಎಲ್ಲವನ್ನೂ ನಿರಾಳತೆಯಿಂದ ಸ್ವೀಕರಿಸಲು ವೇದಿಕೆ ಕಟ್ಟಿದ್ದರು ಆ ಮೂವರು ದೇವಕನ್ನಿಕೆಯರು. ಅಜ್ಜಮ್ಮ ಹಾಡಿಸಿದ ಹಾಡುಗಳು, ಪ್ರಶ್ನೋತ್ತರಗಳು, ನೃತ್ಯ, ವ್ಯಕ್ತಿಗಳ ಮಾತು, ನಡೆಯ ಅನುಕರಣೆ ಎಲ್ಲವೂ ನನ್ನೊಳಗೆ ಒಬ್ಬ ಕಲಾವಿದೆ ಅಂಕುರಿಸಲು,ರಂಗದಲ್ಲಿ ಕಾಣಿಸಲು ದೀವಿಗೆಯಾಗಿ ಕಂಡಿದೆ.  ಬದುಕಿನ ಹಲವು ಅವಸ್ಥೆಗಳಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುವ ಕ್ರಿಯೆ ಮತ್ತು ಪ್ರತಿಯೊಂದು ಪಾತ್ರಗಳಲ್ಲಿ ಅನುಭವಿಸುವ ತಾದಾತ್ಮ್ಯ ಭಾವ ಮನಸ್ಸಿನೊಳಗೆ ಸದಾ ಹಸಿರಾಗಿದೆ. *********************************************************************** ಪೂರ್ಣಿಮಾಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿ

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ರಂಗ ರಂಗೋಲಿ – ೪ ಚಾವಡಿಯಲ್ಲಿ ರಂಗ ಗೀತೆ ಎಂಟನೇ ತರಗತಿಯ ಕ್ಲಾಸಿನಲ್ಲಿ ಪುಟ್ಟ ಗುಬ್ಬಚ್ಚಿ ದೇಹದ ನಾನು ಮೊದಲನೇ ಬೆಂಚಿನಲ್ಲಿ ಮುದುಡಿ ಕುಳಿತಿದ್ದೆ. ” ದೇವದಾಸಿ ಪದ್ದತಿ,ಬಸವಿ ಪದ್ದತಿ,ಗೆಜ್ಜೆಪೂಜೆ ನಿಷೇಧಿಸಿದರು” ತರಗತಿಯಲ್ಲಿ ಕನ್ನಡದ  ಬಾಲಕೃಷ್ಣ  ಮೇಷ್ಟ್ರು ಕರ್ನಾಟಕದ ಇತಿಹಾಸದ ಬಗ್ಗೆ ಬಿಡುವಿನಲ್ಲಿ ಕಥೆಯ ರೂಪದಲ್ಲಿ ಹೇಳುತ್ತಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿ ಮೈಸೂರಿನ ಕರ್ತೃ. ಜಾರಿಗೆ ತಂದ ಈ ಕಾನೂನುಗಳು ಹೊಸದಾದ ಮನ್ವಂತರಕ್ಕೆ ನಾಂದಿ ಹಾಡಿತ್ತು. ಥಟ್ಟನೆ ನನ್ನ ಕಣ್ಣೆದುರು, ಆ ದೊಡ್ಡ ಸುಂದರ ಮನೆ, ಒಳಗೆ ಗೋಡೆಗೆ ತೂಗುಹಾಕಿದ ಗೆಜ್ಜೆ, ಹಾಡುತ್ತಿದ್ದ ಭಜನೆ, ಜೊತೆಗೆ ಅವರ ಮುಖಗಳು ಸ್ಥಿರವಾಗಿ ಯಾವುದೋ ತಳಮಳಕ್ಕೊಳಕ್ಕಾಗಿ ಅಂತರ್ಮುಖಿಯಾಗುತ್ತಿದ್ದೆ. ಕಲೆಯ ಬಗೆಗಿನ ಕನಸಿಗೆ ಸೇತುವೆ ಕಟ್ಟಲು ಇವರ ದೇಣಿಗೆ ಚಿಕ್ಕದೇನು?. ಶಾಲೆಯ ಮೈದಾನದಲ್ಲಿ  ಗೆಳತಿಯರು ಥ್ರೋಬಾಲ್, ಓಟ, ಎಂದು ಆಟದ ಹುಮ್ಮಸ್ಸಿನಲ್ಲಿದ್ದರೆ  ಬದಿಯಲ್ಲಿ ಸಾಲಾಗಿದ್ದ ಮರಗಳಲ್ಲಿ ಒಂದರ ನೆರಳಿಗೆ ಆತುಕೊಂಡು ಆಗಾಗ ಬಾಲ್ಯದಲ್ಲಿ ಆ ಮನೆಯ ಇಂಚು ಇಂಚುಗಳಲ್ಲಿ ಹುದುಗಿಸಿಟ್ಟ ನೆನಪುಗಳನ್ನು ಬೊಗಸೆಗಿಳಿಸಿ ತಾಜಾಗೊಳಿಸುತ್ತಿದ್ದೆ. ಎಂತದೋ ಸುಪ್ತ ನೆನಪುಗಳ ಗುಂಗಿನ ಸುಖ. ಅದು  ಮುಗ್ಧತೆ ಆವರಿಸಿದ್ದ  ಎಲ್ಲವನ್ನೂ ಕುತೂಹಲದ ಮನಸ್ಸಿನಿಂದ ನೋಡಿ ಅದನ್ನು ಅನುಕರಿಸಿ ಅಭಿನಯಿಸುವ ಬಾಲ್ಯ. ರಾಮಾಯಣ, ಮಹಾಭಾರತ, ಕಥಾಸರಿತ್ಸಾಗರದ ಕಥೆಗಳ ಓದು. ಅಲ್ಲಿ ಕಾಣ ಸಿಕ್ಕಂತಹ ರಾಜಕುಮಾರಿಯರು ನನ್ನ ಕಣ್ಮುಂದೆ ಗೆಜ್ಜೆ ಕಟ್ಟಿ ತಿರುಗುತ್ತಿದ್ದರು. ನಾಯಕಿಯರೆಂದರೆ ದೊಡ್ಡ ಅರಮನೆಯಲ್ಲಿ ಇರುವವರು..ಹಿಂದೆ ಮುಂದೆ ಸಖಿಯರು ಇರಬೇಕು. ಅವರು ನಾಯಕಿಯ ಹಿಂದೆ ಸುತ್ತುವವರು. ಶಾಲೆಯಲ್ಲಿ ನನ್ನ ಗೆಳತಿಯರಿಗೆ ನಾನು ಓದಿದ,ಮರು ಸೃಷ್ಟಿಸಿದ,  ಕಟ್ಟಿದ ಕಥೆಗಳನ್ನು ಹೇಳಿ,ಅದನ್ನು ನಾನೂ ಅನುಭವಿಸುತ್ತಿದ್ದೆ.  ಅಂತರಂಗದಲ್ಲೊಬ್ಬಳು ರಾಜಕುಮಾರಿ. ನಾನು ಒಬ್ಬಳೇ ಇರುವಾಗ ಒಳಲೋಕದ ಭ್ರಮರ ಹೊರಗೂ ಹಾರಿ ನನ್ನ ಹೆಜ್ಜೆಗಳು ರಾಜಕುಮಾರಿಯ ಹೆಜ್ಜೆಗಳೇ ಆಗಿ ರೂಪಾಂತರಗೊಳ್ಳುತ್ತಿತ್ತು. ನಾನು ರಾಜಕುಮಾರಿ. ಹೌದು ಹಾಗೆಂದೇ ಭಾವಿಸಿದ್ದೆ, ಭ್ರಮಿಸಿದ್ದೆ. ರಂಗು ರಂಗಾದ ರಂಗ ನನ್ನೊಳಗೆ ಪ್ರವೇಶಿಸಿದಾಗ  ನಾಟಕದ ಪಾತ್ರದೊಳಗೆ ಮಾಡುವ ಪರಕಾಯ ಪ್ರವೇಶದ  ಮೊದಲ ಪಾಠ ನನಗರಿವಿಲ್ಲದೇ ಬದುಕು ಕಲಿಸುತ್ತಿತ್ತು.  ನಾನು ಇದ್ದ ಮನೆ ಹಳೆಯಮನೆ, ಚಿಕ್ಕ ಮನೆ. ನಮ್ಮ ಈ ಮನೆಯ ಹತ್ತಿರವೇ ನನ್ನ ಕನಸಿನ ಅರಮನೆ ಒಂದಿತ್ತು. ಎದುರು ಉದ್ದದ ಚಾವಡಿ, ಸುಂದರ ಕೆತ್ತನೆಯ ಬಾಗಿಲು, ಆಗಿನ ಕಾಲಕ್ಕೆ ಬಲು ಅಪರೂಪದ ಟೇರೆಸ್ ಹೊದ್ದ ಮನೆಯದು. ಮನೆ ಎದುರು ಹೂವಿನ ಗಿಡಗಳು. ಗಿಡಗಳನ್ನು ಸಿಂಗರಿಸಿದ ಬಗೆಬಗೆಯ ಹೂವುಗಳು. ಬಟನ್ ಸೇವಂತಿಗೆ, ಗುಲಾಬಿ ಬಣ್ಣದ ಗುಲಾಬಿ, ಗಿಡ್ಡ ದೇಹದ ಮಲ್ಲಿಗೆ,  ನಂದಿಬಟ್ಟಲು, ದೇವರಿಗೆ ಏಕಾಂತದಲ್ಲಿ ಶಂಖ ಊದಿ ಎಬ್ಬಿಸುವ ಶಂಖಪುಷ್ಪ ಹೂಗಳು ಎತ್ತರದ ದೇವಮಂದಾರ ಮರಕ್ಕೆ ಸುತ್ತಿ ಹತ್ತಿದ ಬಳ್ಳಿಯಲ್ಲಿ ಅರಳಿದ್ದವು. ಇನ್ನೂ ಅದೆಷ್ಟೋ ಬಣ್ಣಗಳು ಅಲ್ಲಿ ಹೂವಿನ ರೂಪದಲ್ಲಿ ಆ ಮನೆಯ ಅಂದ ಹೆಚ್ಚಿಸಿತ್ತು. ಆ ಹೂವಿನ ಗಿಡಗಳ ಮುಂದೆ ಅದರ ರಕ್ಷಣೆಗೇ ನಿಂತ, ಕಾದು ಕಪ್ಪಾದ ಕಲ್ಲಿನ ಕಾಂಪೌಂಡ್. ದೊಡ್ಡಬೀಗದ ಗೇಟು.  ಮುಖ್ಯ ರಸ್ತೆಯ ಬಳಿಯಲ್ಲೇ ಇರುವ ನಮ್ಮ ಮನೆಯ ಎದುರು  ನನ್ನ ಗೆಳತಿಯರು ಆಗಾಗ ತಿರುಗಾಡುವುದಿತ್ತು.  ಆಗೆಲ್ಲ ಮನೆಗಳಲ್ಲಿ ಕಠಿಣ ನಿರ್ಬಂಧಗಳು ಇರುತ್ತಿರಲಿಲ್ಲ. ಊರಿಡೀ ಸುತ್ತುವ ಸ್ಚಾತಂತ್ರ್ಯ ನಮಗಿತ್ತು. ಈ ಗೆಳತಿಯರು ಬರುವ ವಿಷಯ ನನಗೆ ತಿಳಿದರೆ, ಎಲ್ಲಿದ್ದರೂ ಓಡಿಹೋಗಿ ಆ ಅರಮನೆಯ ಹೊರಗಿನ ಎತ್ತರದ ಚಾವಡಿ ಹತ್ತಿ ಗಿಡಗಳ ನಡುವಿನಿಂದ ನುಸುಳಿಕೊಂಡು ಆ ಗೇಟಿನ ಒಳಗಡೆ ಗೋಣು ಎತ್ತರಿಸಿ ಗೆಳತಿಯರಿಗೆ ಕಾಣುವಂತೆ  ವಿಶಿಷ್ಟ ಭಂಗಿಯಲ್ಲಿ ನಿಂತಿರುತ್ತಿದ್ದೆ. ಒಂದು ಕೈ ಗೇಟಿನ ಮೇಲಿರಿಸಿ ರಸ್ತೆಯ ಮೇಲೆ ದೃಷ್ಟಿ ಗಟ್ಟಿ ಮಾಡಿ  ಕಾಯುತ್ತಿದ್ದೆ. ಒಮ್ಮೆ ಈ ಹುಡುಗಿಯರ ದಂಡು ಆ ರಸ್ತೆಯಲ್ಲಿ ಮನೆಯೆದುರಿಂದ ಹಾದು ಮರೆಯಾಯಿತೋ  ನಾನು ರಾಜಕುಮಾರಿಯ ಪಾತ್ರದ ಜಂಭದಿಂದ ಅರೆನಕ್ಕು  ನನ್ನ ಗುಡಿಸಲಲ್ಲಿ ಬಂದು  ಹುದುಗಿ ಕೊಳ್ಳುತ್ತಿದ್ದೆ. ಅಂತಹ ವಿಶೇಷ, ವಿಶಿಷ್ಟ ಅನುಭೂತಿಯನ್ನು ನೀಡಿದಂತಹ ಆ ಮನೆ ಹಾಗೂ ಅದರ ಒಳಗಿರುವ ರಾಣಿಯರು ನನ್ನ  ರಂಗೋಲಿಗೆ ಚುಕ್ಕಿ ಬರೆದವರು. ಹೀಗಾಗಿ ಕನ್ನಡದ ಮೇಷ್ಟ್ರು ಇತಿಹಾಸದ ಕಥೆ ಕಲಿಸಿ ಕೊಟ್ಟಾಗಲೂ ನಿರ್ಧಿಷ್ಟ ವಿಷಯಗಳು ಎದುರು ಸಿಕ್ಕಾಗ ಅವರ ಪಾಶ ಸೆಳೆಯುತ್ತಿತ್ತು. ನಿಮಗೀಗ ಅವರನ್ನು ಪರಿಚಯಿಸುವೆ. ಅವರು ನಾವು ಇದ್ದ ಬಾಡಿಗೆ ಮನೆಯ ಮಾಲೀಕರು.  ಹೆಂಗಸರು. ಅವರದ್ದು ನಮ್ಮ ಪಕ್ಕದ ಮನೆ. ದೊಡ್ಡ ಮನೆ. ಅಲ್ಲಿ ಮೂವರು ಮಹಿಳೆಯರು, ಊರಿನ ಅವಿಭಾಜ್ಯ ಪಾತ್ರದಂತಿದ್ದರು. ನಂತರದಲ್ಲಿ ಇಬ್ಬರು. ಅವರನ್ನು ಅಜ್ಜಮ್ಮ, ಸಣ್ಣಜ್ಜಿ, ವತ್ಸಲ ಚಿಕ್ಕಿ ಎಂದು ಕರೆಯುತ್ತಿದ್ದೆ. ಹಾಗೆ ಕರೆಯಲು ಅವರೇ ನನಗೆ ಕಲಿಸಿ ಕೊಟ್ಟದ್ದು. ಅಲ್ಲಿ ಕಾಣುತ್ತಿದ್ದುದು ಶ್ರೀಮಂತ ಬದುಕು. ಗಂಡಸರು ಬಂದು ಹೋದರೂ  ವಾಸ ಇರಲಿಲ್ಲ. ಅಜ್ಜಿ ಪಿಸಪಿಸ ಅಂದಿದ್ದು ಕೇಳಿದ್ದೆ..’ ಅವರಿಗೆ ಮದುವೆ ಇಲ್ಲ’ ಆ ಮನೆ ನನ್ನ ಬಾಲ್ಯಕ್ಕೆ ಅನೂಹ್ಯ ಹಾಸು ಹೊದಿಸಿತ್ತು. ಅಂಬೆಗಾಲಿನಿಂದ ಬಡ್ತಿಹೊಂದಿ ತಪ್ಪು ಹೆಜ್ಜೆ ಇರಿಸಿ ನಡೆಯಲು ಕಲಿತಾಗ ಆ ಕೆಂಪು ಸಿಮೆಂಟಿನ ತಂಪು ಪಾದಕ್ಕೆ ಅಪ್ತ ಬಂಧ ಬೆಸೆದಿತ್ತು.  ಅಜ್ಜಿಯಿಂದ ಜೋರು, ಮತ್ತು ಪೆಟ್ಟಿನಿಂದ ತಪ್ಪಿಸಿಕೊಂಡು ಓಡಲು ಸಿಗುತ್ತಿದ್ದ ಸುರಕ್ಷಿತ ತಾಣವೂ ಹೌದು. ” ಅಜ್ಜಮ್ಮ” ಅಲ್ಲಿನ ಯಜಮಾನಿ. ಆಗಲೇ ಅವರಿಗೆ ಇಳಿ ವಯಸ್ಸು. ಆದರೂ ರಾಣಿಯ ಗಾಂಭೀರ್ಯ,ಗತ್ತು. ಮಿತ ಮಾತು. ಅವರು ಯಾವಾಗಲೂ  ಹೂಗಳಿದ್ದ ಬಿಳೀ ತೆಳ್ಳಗಿನ ಹತ್ತಿಯ ಸೀರೆ ಉಡುತ್ತಿದ್ದರು. ಅವರ ಹತ್ತಿರ ಹೋದರೆ ಎಂತದೋ ಸುವಾಸನೆ. ನಾನು ವಿನಾ ಕಾರಣ ಅವರ ಬಳಿ ಹೋಗಿ  ನಾಸಿಕ ಅರಳಿಸಿ ಉಸಿರಿಗೆ ತಾಲೀಮು ನೀಡಿ ಸಂಭ್ರಮಿಸುತ್ತಿದ್ದೆ. ನನಗೆ ಅವರನ್ನು ಮುಟ್ಟುವುದೆಂದರೆ ಎಂತದೋ ಪುಳಕ. ಅದು ರೇಶಿಮೆಯಂತಹ ನುಣುಪು ಸ್ಪರ್ಶ, ಸ್ವಚ್ಛ ಬಿಳಿ ಮೈ ಬಣ್ಣ, ಹದ ಎತ್ತರದ, ತುಸು ದಪ್ಪನೆಯ ಮೈಕಟ್ಟು. ಅಗಲ ಮುಖ.ನನಗೆ ಅವರೆಂದರೆ ಏಕೋ ಕಾಣೆ, ಅಚ್ಚರಿ, ಹೆಮ್ಮೆ, ಪ್ರೀತಿ.  ಅವರು  ಪ್ರೀತಿಯಿಂದ ಕರೆಯುತ್ತಿದ್ದರು. ತಾವು ತಿಂಡಿ ತಿನ್ನುವಾಗ,ಊಟದ ಸಮಯ ನನ್ನ ಕರೆದು ಹತ್ತಿರ ಕುಳ್ಳಿರಿಸುತ್ತಿದ್ದರು. ದೊಡ್ಡ ಊಟದ ಬಟ್ಟಲು. ತರತರಹದ ವ್ಯಂಜನಗಳು, ಬೆಳ್ಳಿಯ ಲೋಟದಲ್ಲಿ ಹದಬಿಸಿ ಹಾಲು. ಪಕ್ಕದಲ್ಲಿ ಒಂದು ತಂಬಿಗೆ ನೀರು. ಅವರು ಊಟಕ್ಕೆ ಬರುವಾಗ ಇಷ್ಟೂ ತಯಾರು ಮಾಡಿ ಇಡುತ್ತಿದ್ದರು. ಅವರು ನಿಧಾನವಾಗಿ ಅಡುಗೆ ಮನೆಗೆ ಬರುತ್ತಿದ್ದರು. ಮನೆಯ ಹಜಾರದಿಂದ ಅಡುಗೆ ಮನೆ ಒಂದಷ್ಟು ದೂರ. ಅದು ಉದ್ದನೆಯ ಮನೆ. ನಾನು ಅವರ ಹೆಜ್ಜೆಗಳನ್ನು ಅನುಕರಿಸುತ್ತ ಅವರ ಹಿಂದೆ ಹಿಂದೆ ನಡೆಯುತ್ತಿದ್ದೆ.  ಪ್ರತಿಸಲವೂ ಅಷ್ಟೇ ಅಚ್ಚರಿಯಿಂದ ಅವರ ಊಟವನ್ನು ನೋಡುವಾಗ ನನಗೆ ಅದರಲ್ಲಿ ಆಸೆಯಿರುತ್ತಿರಲಿಲ್ಲ. ಆದರೆ ಅದನ್ನು ಕಾಣುವುದು ದೊಡ್ಡ ಸಂಭ್ರಮ. ಬೆಳಗ್ಗೆ ಸ್ನಾನ ಮಾಡಿ ದೇವರ ಕೋಣೆ ಸೇರುತ್ತಿದ್ದರು. ಆ ಹೊತ್ತಿಗೆ ಅಲ್ಲಿ ಹರಿವಾಣದ ತುಂಬ ಹೂಗಳು, ಬಗೆಬಗೆಯ ಆರತಿ ತಟ್ಟೆಗಳು, ಗಂಧ, ಊದುಬತ್ತಿ, ಅದೆಷ್ಟು ದೇವರ ಪಟಗಳು, ತಾಳೆಗರಿಯ ಕಟ್ಟುಗಳು. ಆ ಸಮಯ ಮಾತ್ರ ಅವರು ಮಣೆ ಇಟ್ಟು ನೆಲದಲ್ಲಿ ಕೂರುವುದು. ಅವರೇ ಪ್ರಾರ್ಥನೆಯನ್ನು ನನಗೆ ಕಲಿಸಿದ್ದು. ಅದೆಷ್ಟು ಕೀರ್ತನೆಗಳು, ಹಾಡುಗಳು ಅವರಿಗೆ ತಿಳಿದಿತ್ತು.  ಅವರ “ಜೊತೆಗೆ ಕುಳಿತುಕೋ” ಎಂಬ ಮೃದುವಾದ ಅಪ್ಪಣೆ ನನಗೆ ತುಂಬಾ ಪ್ರಿಯ. ನಾನು ಆ ವಯಸ್ಸಿಗೆ ಸಹಜ ಕುತೂಹಲದಿಂದ ನೋಡುತ್ತಿದ್ದೆ. ಅವರು ಒಳಹೋದೊಡನೆ ಆ ಕೋಣೆಯೆಲ್ಲವೂ ಊದುಬತ್ತಿಯ ಸುವಾಸನೆ, ಕರ್ಪೂರದ ಪರಿಮಳ, ಬಗೆಬಗೆಯ ಆರತಿಗಳು, ಯಾವುದೋ ಮಂತ್ರ ಪಠನೆ ಗಳಿಂದ ತುಂಬುತ್ತಿತ್ತು. ಅವರು ಎಲ್ಲವನ್ನೂ ಮುಗಿಸಿ ಅಡ್ಡಬಿದ್ದು ಹೊರಬರುತ್ತಿದ್ದರು. ಅಲ್ಲಿಗೆ ಆ ಕೋಣೆಯ ಬಾಗಿಲು ಮುಚ್ಚುತ್ತಿತ್ತು. ನಂತರ ಅಲ್ಲಿ ಸಂಜೆ ಭಜನೆ. ಭಜನೆ ಮುಗಿದ ತಕ್ಷಣ ರಾತ್ರಿಯ ಊಟ.  ಇವರಿಂದ ಸಾಲುಸಾಲು ಭಜನೆ ಹಾಡುಗಳು ನನಗೆ ಕಂಠಪಾಠವಾದವು. ನನ್ನಿಂದ ಅವರು ಹಾಡಿಸುತ್ತಿದ್ದರು. ಅವರ ಮನೆಗೆ ಬಂದವರ ಎದುರು ನನ್ನ ಸಂಗೀತ ಕಛೇರಿ ನಡೆಯುತ್ತಿತ್ತು. ಹೆಚ್ಚಾಗಿ ಅವರ ನೆಂಟರು, ಹೆಂಗಸರೇ ಹೆಚ್ಚಾಗಿ ಬರುತ್ತಿದ್ದುದು. ಬರುವವರು ಕಾರಿನಲ್ಲಿ. ನಾನು ತಕ್ಷಣ ಪ್ರಸ್ತುತಿಗೆ ಅನುವಾಗಿ ಕಾಯುತ್ತಿದ್ದೆ. ಅವರು ಜೋರಾಗಿ ನನ್ನ ಕೂಗುತ್ತಿದ್ದರು. ಥಟ್ಟನೆ ನಾನು ಹಾರಿ ಜಿಗಿದು ಹೋಗಿ ದೊಡ್ಡ ಹಜಾರದ ಮೂಲೆಯಲ್ಲಿ ನಿಲ್ಲುತ್ತಿದ್ದೆ. ಅವರು ನನ್ನ ಪರಿಚಯವನ್ನು ಸೊಗಸಾಗಿ ಮಾಡುತ್ತಿದ್ದರು. ಬಂದವರು ಕಣ್ಣರಳಿಸಿ ನನ್ನ ನೋಡುವುದು. ನಂತರ ಅಜ್ಜಮ್ಮನ ಅಪ್ಪಣೆಯಾಗುತ್ತಿತ್ತು. “ಹಾಡು..ನಾರಾಯಣತೇ ನಮೋನಮೋ..” ಅಪರೂಪಕ್ಕೆ ಕೆಲವೊಮ್ಮೆ ಅತಿಥಿ ಗಳ ಮುಖಚರ್ಯೆಯ ಭಾವಕ್ಕೆ ಹೆದರಿ  ನಾನು ಮತ್ತು  ಹಾಡು  ಬೇರೆಯಾಗುವುದೂ ಇತ್ತು. ಆಗಲೂ ನಡುವೆ ಅವರು ಸರಿಪಡಿಸಿ ನನ್ನ ಪರಾಕುಗಳನ್ನು ಸೊಗಸಾಗಿ ನುಡಿಸುತ್ತಿದ್ದರು. ಸ್ಪಷ್ಟ ಉಚ್ಛಾರಣೆ, ಗಾಯನ, ಹಾಡಿನ ಸಾಲುಗಳನ್ನು ಉರು ಹಚ್ಚಿ ಕಂಠಪಾಠ ಮಾಡುವ ಕಲೆ ಇತ್ಯಾದಿಗಳನ್ನು, ಕಲಿಸಿದ ಚಾವಡಿಯಲ್ಲಿ ನನಗರಿವಿಲ್ಲದೆಯೇ ಕಲಿಸಿದ ಗುರುಮಾತೆ ಅವರು. ಅಲ್ಲಿ ಹೊಸದೊಂದು ನಂಟು ಬೆಸೆದಿತ್ತು. ಯಾರೂ ಇರದಿದ್ದಾಗ  ಪ್ಲಾಸ್ಟಿಕ್‌ ನ ಬಳ್ಳಿ ಹೆಣೆದ ಮರದ ಚೌಕಟ್ಟಿದ್ದ ಕುರ್ಚಿಯಲ್ಲಿ ಅವರು ಕೂತರೆ ನಾನು ಅವರ ಪಾದದ ಬಳಿ. ತಲೆ ಎತ್ತಿದ್ದರೆ ಬಹಳ ಎತ್ತರಕ್ಕೆ ಅವರು ಇದ್ದಂತೆ ಕಾಣುತ್ತಿತ್ತು. ಅವರ ಜೊತೆಗೆ ಮಾತು. “ಮೊನ್ನೆ ಬಂದವರ ಹೆಸರು ಹೇಳು” ” ಕಳೆದ ವಾರ ಬಂದವರು”  “ನಿನ್ನೆ ಊಟಕ್ಕೆ ಏನೆಲ್ಲ ಇತ್ತು” ನನ್ನ ಉತ್ತರಕ್ಕೆ  ಅವರದ್ದು ಸುಂದರ ನಗು. ನನಗೆ ಅದೇ ದೊಡ್ಡ ಬಹುಮಾನ. ಅಜ್ಜಮ್ಮನ ಮಲಗುವ ಕೊಠಡಿ ವಿಶಾಲವಾಗಿತ್ತು. ಮಂಚದ ಬಳಿ ಪುಟ್ಟ ಕೆತ್ತನೆ ಇದ್ದ ಸ್ಟೂಲ್ ರೀತಿಯ ಉಪಕರಣ.  ಒಬ್ಬರೇ ಕೂತಿದ್ದರೆ ಮೆಲ್ಲನೆ ದೇವರ ಹಾಡು ಮಣಮಣಿಸುತ್ತಿದ್ದರು. ನಾನು ಅಡಗಿಕೊಂಡು ಕೇಳಲು ಯತ್ನಿಸುತ್ತಿದ್ದೆ. ನನ್ನ ಮುಖ ಕಂಡರೆ ಅವರ ಹಾಡು ನಿಲ್ಲುತ್ತಿತ್ತು. ” ಬಾ ಎದುರು” ಅಪ್ಪಣೆಯಾಗುತ್ತಿತ್ತು. ಇಲ್ಲಿ ಕೂತುಕೋ. “ನನಗೀಗ ನಿನ್ನ ಅಜ್ಜಿ ಹೇಳಿದ ಒಂದು ಕಥೆ ಹೇಳು” ಉಳಿದವರಿಗೆ ಹೇಳಿದಷ್ಟು ಸಲೀಸಾಗಿ ಕಥೆ ಅವರೆದುರು ತೆರೆದುಕೊಳ್ಳುತ್ತಿರಲಿಲ್ಲ. ಒಂದಿಷ್ಟು ಯೋಚನೆ, ಲಜ್ಜೆ, ಸಂಕೋಚ ಪ್ರದರ್ಶನದ ನಂತರ ಕಥೆ ಆರಂಭ. ಅವರದ್ದು ಚೆಂದದಲ್ಲಿ ಗಟ್ಟಿಯಾಗಿ,ಒಂದು ಲಾಲಿತ್ಯದಲ್ಲಿ ಹೂಂಗುಟ್ಟುವಿಕೆ. .ಜಾತ್ರೆ ಹತ್ತಿರ ಬಂದಾಗ ಅವರು ಹೇಳುತ್ತಿದ್ದರು: ” ನಾಳೆ ಹೋಗುತ್ತೀಯಲ್ವಾ, ದೇವರು ಜಾತ್ರೆಯಲ್ಲಿ ಹೋಗುವಾಗ ದೇವರ ಎದುರು ಝರಿ ಸೀರೆ ಕಚ್ಚೆಹಾಕಿ ಉಟ್ಟ ಹೆಂಗಸು ಇರಬಹುದು. ನೋಡಿ ಬಾ. ಮೊದಲೆಲ್ಲ ನೃತ್ಯದ ಹೆಜ್ಜೆ ಹಾಕುತ್ತ ಹೋಗುತ್ತಿದ್ದೆವು . ದೇವರ “ಬಲಿ” ಹೋಗುತ್ತಿರುವಾಗ ದೇವರ ಎದುರಿನಿಂದ ಚಾಮರ ದೇವರಿಗೆ ಬೀಸುತ್ತ ಹೋಗುವುದು. ಅದು ನನ್ನ ಹಕ್ಕಾಗಿತ್ತು. ಅದು ನನಗೆ ಸಿಕ್ಕಿದ ಸೌಭಾಗ್ಯವಾಗಿತ್ತು. ದೇವರ ಬಲಬದಿಯ ಹೆಣ್ಣು ನಾನು.” ನನಗೆ ಏನೊಂದು ಅರ್ಥ ಆಗುತ್ತಿರಲಿಲ್ಲ. ಮನೆಗೆ ಬಂದು ನನ್ನ ಅಜ್ಜಿಯ ಬಳಿ ಕೇಳುತ್ತಿದ್ದೆ. “ಅಮ್ಮಾ..ಬಲಬದಿ ಅಂದರೇನು”  ಆಕೆ ತನ್ನ ಬಲ ಕೈ ತೋರಿಸಿದರೆ ನಾನು ಪೆಚ್ಚಾಗುತ್ತಿದ್ದೆ. ಅಜ್ಜಿ ಅನ್ನುತ್ತಿದ್ದಳು. “ಜಾತ್ರೆಯಲ್ಲಿ ನೃತ್ಯ ಮಾಡುವುದು ದೇವದಾಸೀ   ಸಂಪ್ರದಾಯವಾಗಿತ್ತು. ಈಗ ಅದೆಲ್ಲ ನಿಷೇಧ. ಆದರೂ ಹರಕೆ ತೀರಿಸುವಂತೆ ಬಂದು ಹೋಗುತ್ತಾರೆ. ಅವರು ಮದುವೆಯಾಗುವುದೂ ಇಲ್ಲ. ದೇವಾಲಯದಿಂದ ಅವರಿಗೆ ಕುಂಕುಮ,ತಾಳಿ ಶಾಸ್ತ್ರ ಬದ್ದವಾಗಿ ನೀಡಲಾಗುತ್ತಿತ್ತು. ಈಗ ಅದೆಲ್ಲ ನಿಂತಿದೆ.” ದೇವರಿಗೇ ಸಮರ್ಪಣೆ ಮಾಡಿಕೊಂಡ ಈ ಮಾತೃ ಪಾತ್ರಗಳು ನನ್ನನ್ನು ಪ್ರೀತಿಸಿದ್ದು,  ಸಮರ್ಪಣಾ ಭಾವದಿಂದ ಬದುಕನ್ನು ಪ್ರೀತಿಸಲು ನನಗೆ ಕಲಿಸಿದ್ದು  ರಂಗೋಲಿಗೆ ಜೀವ, ಭಾವ, ಬಣ್ಣ ತುಂಬಿವೆ. ************************************************************** ರಂಗಭೂಮಿ ಹಾಗೂ

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ರಂಗ ರಂಗೋಲಿ-03 ಜಾತ್ರೆಯ ಲೋಕ ಕಲಾವಿದಳೆನಿಸಿಕೊಳ್ಳುವ ಹಂಬಲಿಕೆಗೆ,ಒಲವಿಗೆ ಬಾಲ್ಯದ ಅನುಭವಸ್ವನಗಳು  ಓಂ ಕಾರಗಳಾಗಿ ಮೂಡಿರಬೇಕು. ಹಲವು ಕಥೆಗಳು,ಹಲವು ಪಾತ್ರಗಳು,ಆ ಪಾತ್ರಗಳ ಅಭಿನಯ..ಎದುರಿಗೊಬ್ಬ ಕಾಣದ ನಿರ್ದೇಶಕ. ಅವನಿಗೆ ಶರಣಾಗಿ ಬದುಕಿನ ರಂಗಭೂಮಿಯಲ್ಲಿ ಬಗೆಬಗೆಯ ಪಾತ್ರ ಕಥೆ ಅನಾವರಣಗೊಳ್ಳುತ್ತಿತ್ತು. ಈ ‘ಸಿರಿ’ ನೋಟ ಒಬ್ಬ ಕಲಾವಿದೆಯ ಒಳಗನ್ನು..ಅಥವಾ ಕಲೆಯ ಬಗ್ಗೆ ಅತೀವ ಪ್ರೀತಿಭಾವವನ್ನು ಚಿಲುಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಊರ ಉತ್ಸವ ಮುಗಿದರೂ ಅದೇ‌ ಮಂಪರು.  ನಾಲ್ಕು ದಿನದ ಜಾತ್ರೆ ರಥೋತ್ಸವದೊಂದಿಗೆ ಸಂಪನ್ನಗೊಳ್ಳುತ್ತಿತ್ತು. ಮರುದಿನವೂ ಹಗಲಿಗೆ ಬೆಳಗಾದಾಗ ಜಾತ್ರೆಗದ್ದೆ ಖಾಲಿ ಖಾಲಿ. ಗದ್ದೆಯಲ್ಲಿ ಚದುರಿ ಬಿದ್ದಿರುವ ಒಡೆದ ಬಳೆ, ಮಣ್ಣಿನೆದೆಗೆ ಒತ್ತಿಕೊಂಡ ಕುಂಕುಮದ ಗುರುತು, ಹಿಂಗಾರ ಹೊರಕವಚ, ಮತ್ತೆ ಇನ್ನಾವುದೋ ಊರಿನ ಜಾತ್ರೆ ಮಿನುಗಲು ಹೋಗುವ ಕಾಯಕಕ್ಕೆ ತಮ್ಮ ಸಂತೆ ಸರಂಜಾಮು ಕಟ್ಟುತ್ತಿರುವ ಕೆಲಸಗಾರರು, ಮಕ್ಕಳನ್ನು ಹೊತ್ತು, ಜೀಕಿ ಜೀಕಿ ಆ ಹದಬಿಸಿಯ ಬಿಸುಪು ಕಳಚಿಕೊಳ್ಳದೆ ಮೌನವಾಗಿ ಕೂತ ಆಟದ ಕುದುರೆಗಳು, ಕೊಂಡಿ ಕಳಚಿಕೊಂಡ ತೊಟ್ಟಿಲು, ಇನ್ನೂ ಸಾಮಾನುಗಳನ್ನು ಕಟ್ಟುವ ಮುನ್ನದ ಕೊನೆಯ ವ್ಯಾಪಾರದ ನಿರೀಕ್ಷೆಯಲ್ಲಿ ಕಣ್ಣಪಿಳುಕಿಸುವ ಪಾತ್ರೆ ಅಂಗಡಿಯವನು, ರಟ್ಟಿನ ಪೆಟ್ಟಿಗೆಯೊಳಗೆ ಸೇರಿಕೊಳ್ಳುತ್ತಿರುವ ಚಪ್ಪಲಿಗಳು,  ಎಸೆದ ಪತ್ರ, ಐಸ್ ಕ್ಯಾಂಡಿ ರಸಿಕ ಬಾಯಲ್ಲಿ ಕರಗಿ ಅನಾಥವಾದ ಕಡ್ಡಿಗಳು.ಮಣ್ಣಿಗೆ ಸಿಲುಕಿಕೊಂಡ ಜಿಲೇಬಿ ತುಂಡು, ಮಿಠಾಯಿ, ಒಂದು ರೂಪಾಯಿ ನಾಣ್ಯ, ಒಂದು ನೋಟು. ಅದೆಷ್ಟು ನೋಟಗಳು! ಒಂದೇ ಎರಡೇ ಈ ಪಳೆಯುಳಿಕೆಗಳು. ನಿನ್ನೆ ತೆರೆದುಕೊಂಡ ಕಥೆಗಳು ಇದೀಗ ಬಾಯಿ ಕಳೆದು ಚೌಕಿಯಲ್ಲಿ ಮುಖ ಬಣ್ಣ ತೊಳೆಯುತ್ತಿವೆ. ಎಲ್ಲವನ್ನೂ ಕಣ್ಣಿನಲ್ಲೇ ಹೆಕ್ಕಿಕೊಂಡರೂ ನಾವು ಗೆಳತಿಯರು ಮುಗಿ ಬೀಳುವುದು ಜಾತ್ರೆಯ ಸಮಯದಲ್ಲಿ ಬಳೆ ಮಾರುತ್ತಿದ್ದ ಅಂಗಡಿಗಳಿದ್ದ ಸಾಲಿಗೆ. ಇನ್ನೂ ಒಂದೆರಡು ಹೆಂಗಸರು ಬಟ್ಟೆಯ ಒಡಲಿಗೆ ಕಟ್ಟಿದ ಬಳೆಗಳನ್ನು ಹಾಕಿ ಗಂಟು ಬಿಗಿಯುತ್ತಿರುತ್ತಾರೆ. ನಾವು ಅಲ್ಲಿ ಬಿದ್ದಿರುವ ಬಣ್ಣದಬಳೆಗಳ ಚೂರುಗಳನ್ನು ಆಯುತ್ತಿದ್ದೆವು. ಜಾಸ್ತಿ ಸಿಕ್ಕಿದಷ್ಟು ನಮ್ಮ ಹರ್ಷ ಹೆಚ್ಚುತ್ತಿತ್ತು. ಅವನ್ನು ತಂದು ಆ ಚೂರುಗಳನ್ನು ಒಂದೊಂದಾಗಿ ಬೆಂಕಿಯ ಮುಖಕ್ಕೆ  ಅದರ ನಡು ಭಾಗ ಹಿಡಿದು ಸಣ್ಣನೆಯ ಬಲದಲ್ಲಿ ಬಾಗಿಸಿ ತುದಿ ಜೋಡಿಸುತ್ತಿದ್ದೆವು. ಇದು ಕಡಿದ ತುಂಡನ್ನು ಜೋಡಿಸುವ ಕಲೆ, ಅಂಕಗಳನ್ನು ಸೂತ್ರಧಾರ ಕಟ್ಟಿ ಒಂದಾಗಿಸಿದ ರಂಗಾವಳಿ. ಬಹಳ ಸಂಭ್ರಮದ ಕೆಲಸವದು.  ಮುಂದಿನ ಕೆಲವು ದಿನಗಳು ಮನೆಯ ಹಿಂದಿನ ಹಿತ್ತಲಲ್ಲಿ ನಾವು ಗೆಳತಿಯರು ಯಾವಯಾವುದೋ ಗಿಡದ ಸೊಪ್ಪು ಕೈಯಲ್ಲಿ ಹಿಡಿದು ಆವೇಶಗೊಳ್ಳುವ ಸಿರಿಯ ಲಯದಲ್ಲಿ ಕಾಲು ಹಿಂದೆ ಮುಂದೆ ಹೆಜ್ಜೆ ಹಾಕುತ್ತ ಸಿರಿಯನ್ನು ಅಭಿನಯಿಸುತ್ತಿದ್ದೆವು. ” ಯಾಕೆ ಈ‌ ಪ್ರಾಣಿಗೆ ಅನ್ಯಾಯ ಮಾಡಿದೆ?.. ಈ ಊಟ ಸರಿಕೊಡದೆ ಗುಡ್ಡೆಗೆ ಸೊಪ್ಪುತರಲು ಕಳುಹಿಸಿದೆಯಾ..? “ ಕಣ್ಣು ಮೇಲೆ ಕೆಳಗೆ, ಉರುಟು ಉರುಟಾಗಿ ತಿರುಗಿಸಿ ‘ಸಿರಿ’ವಂತೆಯ ಪ್ರಶ್ನೆ. ಉಳಿದ ಗೆಳತಿಯರು ಪಾದಕ್ಕೆ ತಲೆಯೂರಿ ತಪ್ಪಾಯ್ತು, ಎಂಬ ಕ್ಷಮಾಪಣೆ. ಒಳಮನೆಯಲ್ಲಿ ಕೆಲಸದಲ್ಲಿದ್ದ ಅಜ್ಜಿ ಹೊರಬಂದಳೋ ಸಿರಿ ಅಡಗಿ ನಾವು ನಾವಾಗುತ್ತಿದ್ದೆವು. “ಏನದು.. ಕೂದಲೆಲ್ಲ ಬಿಚ್ಚಿಕೊಂಡು, ಏನು ನಿಮ್ಮ ಅವತಾರ. ಜಾತ್ರೆಯಲ್ಲಿ ಸಿರಿ ಆವೇಶಗೊಂಡ ಹಾಗೆ..ಅದೆಲ್ಲ ಆಟ ಆಡಬಾರದೂ..ದೇವರಿಗೆ ಕೋಪ ಬರ್ತದೆ.” ಎಂದು ಎಚ್ಚರಿಸುತ್ತಿದ್ದಳು. ಅವಳು ಸರಿದು ಹೋದ ತಕ್ಷಣ ನಮ್ಮ ಆಟ ಮುಂದುವರಿಯುತ್ತಿತ್ತು. ದೇವರ ಪೂಜೆ, ಆರತಿ, ಪಂಚಕಜ್ಜಾಯ, ಮಡಿಯುಟ್ಟ ಪೂಜೆಯ ಭಟ್ಟರು, ದೇವಾಲಯ ಶುಚಿಗೊಳಿಸುವ ಕೆಲಸಗಾರರು, ವಾದ್ಯ ಎಲ್ಲವೂ ಆಟದ ಪಾತ್ರಗಳು. ಊರ ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಈ ಬಗೆಯ ಉತ್ಸವಗಳು ಮಕ್ಕಳ ಹಸಿ ಮನಸ್ಸಿಗೆ ಚಿತ್ತಾರ ಬರೆಯುತ್ತಿತ್ತು. ಸಾಂಸ್ಕೃತಿಕ ಆಚರಣೆ,ಸಂಸ್ಕೃತಿಯ ಪರಿಚಯವು ಥಿಯರೀ ಆಂಡ್ ಪ್ರಾಕ್ಟಿಕಲ್ ರೂಪದಲ್ಲಿ ಮಸ್ತಿಷ್ಕಕ್ಕೆ ಸೇರಿ ಒಂದು ಪರಿಮಳ ವ್ಯಂಜನದ ಸಂಚಲನ. ಹಲವಾರು ದಿನಗಳು ನಮಗೆ ಚರ್ಚೆಗೆ ಮುಖ್ಯ ವಿಷಯವೂ ಅದೇ ಆಗಿರುತ್ತಿತ್ತು. ಇದರಿಂದ ಬದುಕಿನ ಬಗೆಬಗೆಯ ಪಾತ್ರಗಳ ಚಲನೆ, ಭಾವನೆ, ಆ ವ್ಯವಹಾರಗಳನ್ನು ತೆರೆದ ಕಣ್ಣು, ಮನಸ್ಸಿನಿಂದ ನೋಡುವ,ಕಾಣುವ ಅವಕಾಶವನ್ನು ನಾವು ಪಡಕೊಂಡೆವು.    ಜಾತ್ರೆಯ ಕೊನೆಯ ರಾತ್ರೆ ರಥೋತ್ಸವದಂದು ಊರಲ್ಲಿ ಟೆಂಟಿನ ಯಕ್ಷಗಾನ ಆಟ. ತಪ್ಪಿಸದೇ ಹೋಗಬೇಕಾದ ಹರಕೆಯಂತಹ ಒಳಬದ್ದತೆ. ಮನೆಯಲ್ಲಿ ಬೇಡವೆಂದರೂ ಹೋಗುವುದೇ. ರಂಗಸ್ಥಳದ ಹತ್ತಿರ, ಎದುರು ಸಾಲಲ್ಲಿ  ರಾತ್ರಿಯಿಡೀ ಮಣ್ಣು ನೆಲದಲ್ಲಿ ಕೂತು ನೋಡುತ್ತ ಅಲ್ಲೇ ನಿದ್ದೆಯ ಭಾರಕೆ ರೆಪ್ಪೆ ಮುಚ್ಚಿ ದೇಹ ಅಡ್ಡವಾದಾಗಲೂ ಒಳಲೋಕದಲ್ಲಿ ಆಟವು ಮುಂದುವರಿಯುತ್ತಿತ್ತು. ಅಲ್ಲಿ ನಾನೇ ಬಣ್ಣದ ವೇಷವಾಗಿ ಕುಣಿಯುತ್ತಿದ್ದೆ. ಸಿರಿ, ಆವೇಶ, ವೀರಭದ್ರ, ಯಕ್ಷಗಾನದ ನೂತನ ಪ್ರಸಂಗ. ಅಲ್ಲಿ ಬರುವ ಗೆಜ್ಜೆ ನಾದದ ಸುಂದರ ಸ್ತ್ರೀ ವೇಷ. ಎಲ್ಲ  ಕನಸಿಗೆ ಧಾಳಿ ಇಟ್ಟು ಹೊಸ ಪ್ರಸಂಗವೊಂದು ನಡೆಯುತ್ತಿತ್ತು. ಮತ್ತೆ ಭಾರದ ರೆಪ್ಪೆ ತೆರೆದು ಯಕ್ಷಗಾನದ ವೀಕ್ಷಣೆ. ಜಾತ್ರೆ ಮುಗಿದು ಅದೆಷ್ಟೋ ಕಾಲದವರೆಗೆ  ನನ್ನ ಒಳಗೆ ಈ ಪ್ರಸಂಗಗಳು ಆಟ ಆಡುತ್ತಿದ್ದವು. ಬೇಸಿಗೆ ಕಳೆದು ಮಳೆ. ಒಳಹೊರಗೆ ಮಳೆಯಂತೂ ಸುರಿದಿತ್ತು. ಅದು ಮುಂಗಾರಿನ ಮಳೆ..ಕರಾವಳಿಯ ಮಳೆ. ಧೋ. ಎಡೆಯಿರದೇ ಸುರಿ ಸುರಿದು ಹೊಸ ಲೋಕವನ್ನು ಕಟ್ಟಿಕೊಡುವ ಮಳೆ. ಭೂಮಿ  ಬಿತ್ತನೆಗೆ ತಯಾರಾಗಿ, ಒದ್ದೆ.ಒದ್ದೆ‌, ಒಳಗೆ ಅತೃಪ್ತ ಮನಸ್ಸು ಚಿಗುರಲು ಚಡಪಡಿಸುತ್ತಿತ್ತು. ಸಿರಿ, ಕುಣಿತ, ಯಕ್ಷಗಾನ ನಲಿತ, ಮಾತು, ಚೆಂಡೆ ನಾದ. ಎಂತದೋ ಸುಪ್ತ ಆಸೆ. ಬಲವಾಗುತ್ತ ಹೋಗುತ್ತಿತ್ತು. ಅದಕ್ಕೆ ಪೂರಕ ಆಹಾರವಾಗಿ ಸಿಕ್ಕಿದ್ದು ಅಕ್ಷರ ಲೋಕ, ಅಕ್ಕರೆಯ ಪುಸ್ತಕಗಳ ಲೋಕ. ****************************************** ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ರಂಗ ರಂಗೋಲಿ -೨  ‘ಸಿರಿ’ ತುಂಬಿದ ಬಾಲ್ಯ ಒಂದು ಭಾವನಾ ಲೋಕದ ಹೊಸಿಲಿನ ಒಳಗೆ ರಂಗು ರಂಗಾದ ಕಲ್ಪನಾಲೋಕ ಶೃಂಗಾರಗೊಂಡು ಕೂತಿತ್ತು. ಅಲ್ಲಿ ನಿತ್ಯ ನರ್ತನ ವಿಲಾಸ. ನನ್ನಲೊಳಗೆ ” ಸಿರಿ” ಎಂಬ ಪ್ರೀತಿ ಅರಳಿದ ಪ್ರಕ್ರಿಯೆಗೆ ಮೂಲ ಬಿತ್ತನೆಯಿದು.  ಹಾಂ..ಸಿರಿ!. ಹೌದು..ಸ್ತ್ರೀ ಕುಲಕ್ಕೆ ಪ್ರತಿಭಟನೆಯ ದಾರಿಯನ್ನು ತೋರಿಸಿಕೊಟ್ಟ, ಪುರುಷ ಪ್ರಧಾನ ಸಮಾಜದ ವಿರುದ್ಧ ಬಂಡಾಯ ಸಾರಿದ ಹಳ್ಳಿಯ ಹೆಣ್ಣಿನ ಆತ್ಮವಿಶ್ವಾಸದ ಪ್ರತೀಕ. ಸ್ತ್ರೀತ್ವವನ್ನು ಅರಿವಿನ ನೆಲೆಯಲ್ಲಿ  ಗ್ರಹಿಸಬೇಕಾದ ಒತ್ತಾಯವನ್ನು ತಿಳಿಸಿದ ಇಲ್ಲಿನ ಮಣ್ಣಿನಲ್ಲಿ ಮೂಡಿಬಂದ ಶಕ್ತಿ ಸ್ವರೂಪಿಣಿ. ಮನವು ಮತ್ತೆ ಅಲ್ಲಿಗೆ ಓಡುತ್ತಿದೆ. ಅದು ಹುಚ್ಚು ಅಮಲಿನ ಹೊಳೆ…ಆ ಸಿರಿಯ ಪಾದದ ಬಳಿಗೆ. ಬನ್ನಿ! ,ಹೀಗೆ ಬನ್ನಿ!! ಇದೋ ನೋಡಿ ನನ್ನೂರಿನ ಜಾತ್ರೆ, ಉತ್ಸವ.  ನಿಮಗೆ ನಾನು ಸಿರಿಯನ್ನು ತೋರಿಸುವೆ. ನಾನು ಸಿರಿಯನ್ನು ಮೊದಲು ಕಂಡದ್ದೂ ಅಲ್ಲೇ. ಆಗ ನನ್ನದು ಬಾಲ್ಯ ಸಹಜ ಆಟದ ಉತ್ಸಾಹ,  ಕುತೂಹಲ, ಅಚ್ಚರಿಗಳು ಬೆರೆತುಕೊಂಡ ವಯಸ್ಸು. ನಮ್ಮೂರಲ್ಲಿ ಚಂದ್ರನ ಹುಣ್ಣಿಮೆ ಸಂಭ್ರಮವೂ ಸಿರಿ ಜಾತ್ರೆಯೂ ಜತೆ ಜತೆಗೆ. ಊರಿನ ದೇವರ ಉತ್ಸವ  ಜನಜೀವನ ತುಂಬಾ ಬಣ್ಣವೋ ಬಣ್ಣ. ಆ ಹುಣ್ಣಿಮೆಯ ರಾತ್ರಿ ವರ್ಷದ ಬೇರೆ ಹುಣ್ಣಿಮೆ ಇರುಳಿನಂತಲ್ಲ. ಊರ ಮಣ್ಣಿನ ಕಣಕಣದಲ್ಲಿ ಮೊಳಕೆಗೊಳ್ಳುತ್ತವೆ ಹೆಣ್ಣು ಹೃದಯಗಳು. ಬಲಿಯುತ್ತದೆ ಆತ್ಮಸಮ್ಮಾನದ ಕೂಗು.  ಅನಾವರಣಗೊಳ್ಳತ್ತಲೇ ಹೋಗುತ್ತದೆ ಆ ಸುಪ್ತ ಮನಸ್ಸು. ಮನಸ್ಸಿನ ಒಳಪದರದಲ್ಲಿ ಹುಗಿದಿಟ್ಟ ದುಗುಡ ದುಮ್ಮಾನ, ನಿರಾಸೆ, ಹತಾಶೆ, ಆಸೆ, ಈಡೇರದ ಕನಸು, ಆ ಬೆಳದಿಂಗಳ ಸ್ಪರ್ಶಕ್ಕೆ ಬುಳಬುಳ ಎಂದು ಮನಸ್ಸಿನಾಚೆ ಆ ದೇವಾಲಯದ ಎದುರಿನ ಬಯಲು ಗದ್ದೆಗೆ ಹರಿದು ಬಗೆಬಗೆಯ ಆಕಾರ ತಾಳುತ್ತದೆ. ರೋಷ, ಸಿಟ್ಟು,ಆರ್ಭಟ, ಹೂಂಕಾರ, ನಿರ್ವಿಕಾರತೆ ಬಗೆಬಗೆಯಾಗಿ ನವರಸ ಪಾಕ ಹೊಯ್ದಂತೆ. ಹೆಂಗಸರು ಸಿರಿಯಾಗಿ ಅರಳುತ್ತಾರೆ.  ಆಗೆಲ್ಲ ಹೆಂಗಸರ ಈ ನಡೆ, ಅದಕ್ಕೆ ಕಾರಣಗಳು ಅರ್ಥ ಆಗುವ, ಅಥವಾ ಆಲೋಚನೆಗಳು ಆ ದಿಕ್ಕಿನತ್ತ ಒಂದಿಷ್ಟೂ ತಿರುಗುವಷ್ಟು ಬುದ್ಧಿ ಬಲಿತಿರಲಿಲ್ಲ. ಹುಣ್ಣಿಮೆಯ ಮುನ್ನ ದಿನವೇ ನಾವು ಮಕ್ಕಳು ಸಂಭ್ರಮವನ್ನು ಮೈ ಮನಸ್ಸಿಗೆ ಹೊಯ್ದುಕೊಂಡಂತೆ ಓಡಾಟ ಆರಂಭಿಸುತ್ತಿದ್ದೆವು. ಹೊಸ ಅಂಗಿ, ಅದರ ಹೊಸತನದ  ಪರಿಮಳ ಮೂಸಿ ಮೂಸಿ ನೋಡಿ ಗೆಳತಿಯರ ಮನೆಗೆ ಓಡುವುದು. ಅಲ್ಲಿ ಅವಳ ಫ್ರಾಕ್,ಅದರ ಬಣ್ಣವನ್ನು  ಹೀರಿಕೊಂಡ ಮನಸ್ಸು ಮತ್ತೆ ಓಟವನ್ನು ಮುಂದುವರೆಸುತ್ತದೆ. ಕೊನೆಗೆ ನಾಲ್ಕೈದು ಮಂದಿ ಒಂದೆಡೆ ಸೇರಿ ಹೊಸ ಜಂಭದಲ್ಲಿ ದೇವಾಲಯದ ಸಮೀಪ ಹೋಗುವುದು. ದೇವಾಲಯದ ಎದುರಿನ ಗದ್ದೆ, ಆ ರಸ್ತೆಗಳಲ್ಲಿ ಗಸ್ತು ತಿರುಗುವ ಕಾಯಕ.  ಜಾತ್ರೆಗೆ ಎರಡು ದಿನ ಇದೆ ಎನ್ನುವಾಗ  ರಾಶಿರಾಶಿ ಗೊರಬುಗಳು ಮಾರಾಟಕ್ಕೆ ಬರುತ್ತಿದ್ದವು. ರೈತರು ಮಳೆ ಬಿಸಿಲಲ್ಲಿ ತೋಟ-ಗದ್ದೆಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಇದನ್ನು ತಲೆಗೆ ಧರಿಸಿ ಬೆನ್ನಿಗೆ ಇಳಿಬಿಡುವ ತೆರೆದ ಜನಪದ ಜಾಕೆಟ್ಟು ಇದು.  ಉತ್ಸವದ ಸಮಯದಲ್ಲಿ ಲಾರಿ ಲಾರಿಗಳಲ್ಲಿ ಈ ಗೊರಬುಗಳು ಬರುತ್ತಿದ್ದವು. ನಮಗೆ ಈ ಲಾರಿಗಳನ್ನು ಹಾಗೂ  ತುಂಬಿಕೊಳ್ಳುವ ಗೊರಬುಗಳ ರಾಶಿ ಇವನ್ನು ಎಣಿಕೆ ಮಾಡುವುದೇ ಅತ್ಯಂತ ಖುಷಿ ಕೊಡುವ ಸಂಗಾತಿಯಾಗಿತ್ತು. ಮತ್ತೆ ಹೊಸ ಲಾರಿ ಬಂದರೆ ಮೊದಲಿನಿಂದ ಲೆಕ್ಕ ಶುರು. ಗೊರಬುಗಳ ಲೆಕ್ಕಾಚಾರದಿಂದ  ಮುಂದೆ ಬಂದರೆ ನಮಗೆ ಕಾಣುವುದು ನಿರ್ಮಾಣ ಹಂತದ ಸಂತೆ ಅಂಗಡಿಗಳು, ಜಾತ್ರೆಗೆ ಬಂದ ಸರ್ಕಸ್ ನ  ಇನ್ನೂ ಜೋಡಣೆಯಾಗದ ಉಪಕರಣಗಳು, ಬೋನಿನೊಳಗಿನ ಪ್ರಾಣಿಗಳು, ಸೊಂಟ ಕೈ ಕಾಲು ಬಿಡಿ ಬಿಡಿಯಾಗಿ ಬಿದ್ದ ವಿವಿಧ ಬಗೆಯ ಆಟದ  ಯಂತ್ರಗಳು, ಮಕ್ಕಳಾಟದ ಸಾಮಾನುಗಳು. ಡೇರೆಯೊಳಗೆ ಕೂತಿರುವ ಬೆಂಚು, ಟೇಬಲ್. ಮರುದಿನ ರಾತ್ರಿ ಆ ಜಾಗ ಮಸಾಲೆ ದೋಸೆ ಪರಿಮಳ ಬರುವ ಹೋಟೇಲ್ ಆಗಿರುತ್ತದೆ. ಗೋಣಿ ಚೀಲದಲ್ಲಿ ಕೂತ ಪ್ಲಾಸ್ಟಿಕ್, ಸ್ಟೀಲ್ ಪಾತ್ರೆಗಳು. ಮುಚ್ಚಿದ ದೊಡ್ಡ ಪ್ಲಾಸ್ಟಿಕ್ ಹೊದಿಕೆಯೊಳಗೆ ಮುಸುಗುಡುವ ಅಪರಿಚಿತ ವಸ್ತುಗಳು. ಅವುಗಳ ಬಗ್ಗೆ ಅತೀವ ಕುತೂಹಲ, ಚರ್ಚೆಯಾಗುತ್ತ ಎಲ್ಲವನ್ನೂ ಕಣ್ಣು,ಬಾಯಿ ಬಿಟ್ಟು ನೋಡುತ್ತಾ, ಕತ್ತಲು ನಮ್ಮ ಸುತ್ತಲೂ ಆವರಿಸುವುದನ್ನು ನೋಡಿ ಮನೆಗೆ ಓಡುತ್ತಿದ್ದೆವು. ಹುಣ್ಣಿಮೆಯ ದಿನ ಎಳೆಯ ಮನಸ್ಸುಗಳಿಗೆ ಸಂಭ್ರಮ, ಕುತೂಹಲ, ಆಸಕ್ತಿ. ದೊಡ್ಡವರಲ್ಲಿ ಮಕ್ಕಳ ಪ್ರಶ್ನೆ!  “ಎಷ್ಟು ಹೊತ್ತಿಗೆ ಜಾತ್ರೆ ಶುರು?”. ಉತ್ತರ ಸಿಕ್ಕರೂ ಮತ್ತದೇ ಪ್ರಶ್ನೆ. ಸಂಜೆ ಅವಸರದಲ್ಲಿ ಸಿಕ್ಕಿದ್ದು ಒಂದಷ್ಟು ಮುಕ್ಕಿ ಜಾತ್ರೆಗೆ ಜಾಗವಾದ ಗದ್ದೆಗೆ ಹಾಜಾರಾತಿ ಕೊಡುತ್ತಿದ್ದೆವು. ಆಗಲೇ ವಾದ್ಯಗಳು, ಪಾಡ್ದನದ ನಾದ ಕಿವಿ ತುಂಬುತ್ತಿತ್ತು. ” ನಾರಾಯಣ ಓ ನಾರಾಯಿಣೋ ಓ..ಓ..ಆ..ಆ.. ಇನಿ ಯೆನ್ನ ಪಡಿಸಂಪಗೆ ಓ ಈರ್ ಪತ್ತಲೆ ಬೆರಮ್ಮಣಂದ್ ಪನ್ಪೋಲ್ ಆಲ್ ದಾರು  ಆಲ್..ಓ….ಓ…” ಜನ ತುಂಬುತ್ತಿದ್ದರು. ಅದು ಸಿರಿ ಜಾತ್ರೆ. ಎಲ್ಲಿ ನೋಡಿದರೂ ಹೆಂಗಳೆಯರು. ಒತ್ತೊತ್ತಾಗಿ ಕೂತು, ನಿಂತು, ಮುಡಿ ಕೆದರಿ ಏನನ್ನೋ ಮೆಲು ಧ್ವನಿಯಲ್ಲಿ ಮಣಮಣಿಸುತ್ತಿದ್ದರು. ಸಣ್ಣನೆಯ ಆಲಾಪದಂತೆ ಪಾಡ್ದನ ಆರಂಭಗೊಳ್ಳುತ್ತಿತ್ತು. “ಡೆನ್ನ ಡೆನ್ನ ಡೆನ್ನನಾ…ಓ..ಓ..”  ಆ ಎಳೆ ಹಿಡಿಯುವುದೇ ಖುಷಿ. “ನಾರಾಯಿಣ ಓ ನಾರಾಯಿಣೋ… ಓ..ಓ…ಓ..ಆ… ಆಹ್ಹ..ಹ್ಃ..ಹ್ಹ..ಓ..ಓ..ಸ್ಹ್ ಉ…” ನಾವು ಜನರ ಗುಂಪಿನಲ್ಲಿ ತೂರಿಕೊಳ್ಳುತ್ತ ಒಬ್ಬಬ್ಬ ಸಿರಿಯ ಬಳಿಗೂ ಹೋಗಿ ನಿಂತಿರುತ್ತಿದ್ದೆವು. ಚಂದ್ರನ ಒಡೆತನ ತುಂಬಿದಂತೆ,  ಬೆಳದಿಂಗಳು ಚೆಲ್ಲಿದ ನಶೆಗೆ, ಮನಕಡಲು ಅಲೆಯೆದ್ದು  ಹೆಂಗಳೆಯರ ಕೊರಳಿಗೆ ಶಕ್ತಿ ತುಂಬಿಕೊಳ್ಳುತ್ತದೆ. ಉಸಿರಿಗೆ ಹೊಸ ಆಯಾಮ..ಕಣ್ಣು ಸಹಜತೆಯ ಮಿತಿಯಾಚೆಗೆ ಚಾಚಿ  ಯಾವುದೋ ಉನ್ಮಾದ, ನಿಂತಲ್ಲಿ ಭಾರವಾಗುವ ಹೆಜ್ಜೆ,  ತೇಲುವ ದೇಹ. ಪಿಸು ನುಡಿಯಂತೆ ,ನಿಧಾನವಾಗಿ ನಾಭಿಯಾಳದಿಂದ ಹೊರಬರುವ ಧ್ವನಿ ಕ್ರಮೇಣ ತನ್ನ ಮೃದುತ್ವ ಕಳಕೊಂಡು ಏರುಧ್ವನಿಯಾಗುತ್ತದೆ. ಕಣ್ಣಲ್ಲಿ ಉನ್ಮಾದ , ಶಾಂತ ವಾಗಿರುವ ಸ್ವರ ಅದರಾಚೆಗೆ ನಡೆದು ಯಾವುದೋ ಅನಾಮಿಕ ಭಾವ.‌ ನಾವು ಹೊಟ್ಟೆಯೊಳಗೆ ಭೀತಿ ಅದುಮಿಟ್ಟು ಅದನ್ನೂ ಮೀರಿದ ಕುತೂಹಲದಿಂದ ಇಣುಕುತ್ತಿದ್ದೆವು.  “ನಾರಾಯಿಣೊ..ನಾರಾಯಿಣೋ “ ಅವರ ಪ್ರತೀ ಹಾವ ಭಾವ ನನ್ನೊಳಗೆ ಅಚ್ಚಾಗುತ್ತಿತ್ತು. ಕೈಯಲ್ಲಿ ಆಯುಧದಂತೆ ಹಿಡಿದಿರುವ ಹಿಂಗಾರ ಹೂ. ಮುಖದ ಇಕ್ಕಡೆ, ಹಿಂದುಗಡೆ ಕೆದರಿ ಹರಡಿಕೊಂಡ ಮುಡಿ, ಉಸಿರಿನ ಏರಿಳಿತಕ್ಕೆ ಸರಿಯಾಗಿ ಧ್ವನಿಸುವ ಆ ಆಳದ ಸ್ವರ, ಆಗಾಗ ತಲೆಗೂದಲನ್ನೇ ಕಣ್ಣಿಗೆ ಮುಖಕ್ಕೆ ಅಡ್ಡವಾಗಿ ಹಿಡಿದು ಬಿಕ್ಕುವ ಪರಿ, ಹಿಂಗಾರವನ್ನು ಆಗಾಗ ಸಮಾಧಾನದಿಂದ,ಮತ್ತೆ ರೋಷದಿಂದ ಮುಖದ ಮೇಲೆಯೇ ಬಡಿಯುತ್ತ ಕೈಗಳನ್ನು ಅದೇ ರಭಸದಲ್ಲಿ ಹಿಂದೆ ಮುಂದೆ ಆಡಿಸುತ್ತ ಸಣ್ಣನೆ ಹೆಜ್ಹೆ ಹಾಕಿ ಕುಣಿವ, ಆವೇ ಶದಲ್ಲಿ ಹಿಂಗಾರ ಹೂವಿನೊಂದಿಗೆ ಮೇಲಕ್ಕೆ ಹಾರುವ, ನವ ನಶೆಯು ಮೈಯ ಕೋಶ ಕೋಶಗಳಲ್ಲೂ ತುಂಬಿಕೊಂಡು ಎದೆಯನ್ನು ಆಲಾಪದೊಂದಿಗೆ ಪ್ರಾಣದ ಜೊತೆಗೆ ಆಟವಾಡುವಂತೆ ಆಡಿಸುವ ಅವರ ಆ ಪರಿ. ಎದುರುಗಡೆ ದೀನರಾಗಿ ನಿಲ್ಲುವ ಆ ‘ಸಿರಿ’ ರೂಪೀ ಹೆಂಗಳೆಯರ ಮನೆಯವರು. ಅವರ ಕಣ್ಣಿನಾಳದ ಭಯದ ಜೊತೆಜೊತೆಗೆ ತುಂಬಿಕೊಂಡ ಭಕ್ತಿ. ಎಲ್ಲವನ್ನೂ ಬಹಳ ಆಸಕ್ತಿಯಿಂದ ಗಮನಿಸುವ ನನ್ನೊಳಗೂ ಅಂತಹುದೇ ಅದಾವುದೋ ಅಪರಿಚಿತ ಭಾವ ಶಕ್ತಿ ಸಂಚಯಿಸುತ್ತಿತ್ತು. ಎಲ್ಲಿ ಎದುರಿನ ಸಿರಿ ಜೋರಾಗಿ ಒಮ್ಮೆ ಕಿರುಚಿದಳೋ ಡವಗುಡುವ ಎದೆಯನ್ನು ಅಂಗೈಯಲ್ಲಿ ಒತ್ತಿ ಹಿಡಿದು ನಿಂತ, ದಪ್ಪ ದಪ್ಪ ಕಾಲುಗಳ ಸಂದಿಯಲಿ ನೂರಿಕೊಳ್ಳುತ್ತ ಮತ್ತೊಬ್ಬ ‘ಸಿರಿ’ಯ ಕಡೆ ಓಡುತ್ತಿದ್ದೆ. ಅಲ್ಲಿ  ಒಬ್ಬೊಬ್ಬ ‘ಸಿರಿ’ಯ ಬಳಿಯೂ ಒಂದು ಕಥೆ ತೆರೆದುಕೊಂಡು  ಆ ಮಣ್ಣಿಗೆ ಬಿದ್ದು ಆವಿಯಾಗುತ್ತಿತ್ತು. ಹೆಣ್ಣು ತನ್ನ ಕಥೆಯನ್ನು ಒಳ ಚಿಪ್ಪಿನಿಂದ ಹರಿದು ತೆಗೆದು  ತಾನು  ಕಳಚಿಕೊಂಡಂತಹ ನಿರಾಳತೆಗೆ ಒಳಗಾಗುತ್ತಿದ್ದಳೇನೋ. ಮತ್ತೆ ನಾಳೆಗಳು ಅದೇ ಕಥೆಗಳ ಮುನ್ನುಡಿ ಬರೆಯಲಾರದೇ?. ಈ ಯೋಚನೆ ಆಗ ಬರುವುದು ಸಾಧ್ಯವೇ ಇರಲಿಲ್ಲ. ಅದು ಮಕ್ಕಳ ಮನಸ್ಸು. ಸ್ವಚ್ಛ ಖಾಲಿ ಕಾಗದ. ಏನು ಕಂಡೆನೋ ಅಷ್ಟೇ ಅಚ್ಚಾಗುತ್ತಿತ್ತು. ಹೊಸದನ್ನು ಕಾಣುವ ಸಂಭ್ರಮಕ್ಕೆ ಇಲ್ಲಿ ಹಸಿವು. ಬಲು ಆಸಕ್ತಿ, ಕುತೂಹಲ, ಅಚ್ಚರಿಯಿಂದ ಆ ಕಥೆಗಳನ್ನು ನನ್ನೊಳಗೆ ಬರಮಾಡಿಕೊಳ್ಳುತ್ತಿದ್ದೆ. ಎಲ್ಲವೂ ಕೆಳವರ್ಗದ, ಬಡವರ, ಹಳ್ಳಿಯಲ್ಲಿ ಗದ್ದೆ, ತೋಟಗಳಲ್ಲಿ ದುಡಿವ ಹೆಣ್ಣುಮಕ್ಕಳ, ಹೆಂಗಸರ ಹರಳುಗಟ್ಟಿದ ನೋವುಗಳು, ‘ಸಿರಿ’ರೂಪದಲ್ಲಿ ಕರಗುತ್ತಿತ್ತು. ಒಳಗಿರುವ ಭಗವಂತ ಅವರಿಗೆ ಮೂರ್ತ,ಅಮೂರ್ತ ಸಾಕ್ಷಿ. ಪ್ರತಿ ಹೆಣ್ಣು ಮನಸ್ಸೂ ಅಂತರಂಗದ ಭಾವ ಹೊರತೆಗೆದು ಆಟವಾಡಿದಂತೆ. ಆಕೆ ತನಗಾಗುತ್ತಿರುವ ಅನ್ಯಾಯಕ್ಕೆ ಹಾವಿನಂತೆ ಭುಸುಗುಡುತ್ತಾಳೆ, ಕಣ್ಣನ್ನು ಉರುಟುರುಟಾಗಿ ರಪರಪನೆ ತಿರುಗಿಸಿ ಎದುರಿನವರ ಬಲವನ್ನೇ ಉಡುಗಿಸುತ್ತಾಳೆ. ಆಕ್ರೋಶದಲ್ಲಿ ಒಮ್ಮೆಲೆ ಕಿಟಾರನೆ ಕಿರುಚುತ್ತಾಳೆ. ಒಳಕೋಪಕ್ಕೆ ಕೈಯಲ್ಲಿ ಹಿಡಿದ ಹಿಂಗಾರ ಪರಪರ ಹೊಡೆದುಕೊಳ್ಳುತ್ತಾಳೆ. ಪ್ರಶ್ನಿಸುತ್ತಾಳೆ. ಸಹಜ ಬದುಕಿನ ಪಾತ್ರಗಳು ಇಲ್ಲಿ ಅದಲು ಬದಲಾದಂತೆ. ಎಲ್ಲ ಬಗೆಯ ಭಾವಾಭಿವ್ಯಕ್ತಿಗೆ ಇಲ್ಲಿ ಮುಕ್ತ ವೇದಿಕೆ. ಮುಂದೆ ಹೋದರೆ ಸುಸ್ತಾಗಿ ಒರಗಿರುವ ‘ಸಿರಿ’ಯರು. ಅಕ್ಷತೆ ಚೆಲ್ಲಿದಂತೆ ಎಲ್ಲೆಡೆ ಬಿದ್ದಿರುವ ಹಿಂಗಾರದ ಹೂಗಳು. ದೇಗುಲದ ಪ್ರಾಂಗಣದೊಳಗೆ  ಬರಬೇಕು. ಅಲ್ಲಿ ಸುತ್ತ ಚಾವಡಿಯಲ್ಲಿ ಸಿಂಗಾರಗೊಂಡು ಬಿಳಿ ಝರಿ ಲಂಗ ಮಲ್ಲಿಗೆ ಹೂ ಮುಡಿದು ಅಲಂಕರಿಸಿ ಕೂತ ಹೆಣ್ಣು ಮಕ್ಕಳು. ಗರ್ಭಗುಡಿಗೆ ಒಂದು ಪ್ರದಕ್ಷಿಣೆಗೊಂಡು ಎದುರು ಬಂದರೆ ಸೇವಂತಿಗೆ, ಮಲ್ಲಿಗೆ, ಕೇಪುಳ ರಾಶಿ ರಾಶಿ ಹೂಗಳು, ಕುಂಕುಮ, ಊದುಬತ್ತಿ, ಅರಶಿನ ಗುಪ್ಪೆ ಗುಪ್ಪೆಯಾಗಿ  ಕೂತಿರುತ್ತಿದ್ದವು.  ಒಳಗಡೆ ಅಲಂಕಾರಗೊಂಡ ಊರ ದೇವರು ವೀರಭದ್ರ. ಉರಿಯುತ್ತಿರುವ ಹಣತೆಗಳು. ಅರೆಬರೆ ನಮಿಸಿ. ಮತ್ತೆ ಹೊರಗೆ ಓಟ. ಅಲ್ಲಿ ಸುತ್ತ ವಿವಿಧ ದೈವದೇವರುಗಳು. ವ್ಯಾಘ್ರಮುಖೀ ಚಾಮುಂಡಿ. ಇಲ್ಲಿ ನೋಡಬೇಕು ಥೇಟು ಹುಲಿಯ ಹಾವಭಾವ ತೋರುವ ಗಂಡು ಸಿರಿ. ಹುಲಿ ಆರ್ಭಟದಲ್ಲಿ ಆವೇಶಗೊಳ್ಳುವ ಗಂಡಸರು.  ಅಂದು ಕಾಣುತ್ತಿದ್ದುದೇ  ಸಿರಿ ಲೋಕ.  ಅದು ಬಾಲಕಿಯ ಮನಸ್ಸಿನ  ಪುಟ್ಟ ಕಣ್ಣೊಳಗೆ ಹಲವು ಪಾತ್ರ ರೂಪ,ಸ್ವರ, ಅಚ್ಚಾಗಿ ರಂಗ  ‘ಸಿರಿ’ ಪ್ರಪಂಚ ಬೀಡು ಬಿಟ್ಟಿತ್ತು. ************************************************************ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.

Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ-01 ನಾಂದಿ ಪದ್ಯ ತೆಂಗಿನ ಮಡಲಿನಿಂದ ನೇಯ್ದ ತಟ್ಟಿ ಆ ಮನೆಯ ಹೊರ ಆವರಣದ ತಡೆ ಗೋಡೆ. ಮಣ್ಣಿನ ನೆಲಕ್ಕೆ ಮಣ್ಣಿನದ್ದೇ ಪರಿಮಳ. ಮಳೆಗಾಲದಲ್ಲಿ ಆ ಮನೆಯ ನೆಲವು ನೀರ ಒಸರಿಗೆ ಹಸಿ ಹಸಿಯಾಗುತ್ತದೆ. ಹೊರಗೆ ಧೋ ಎನ್ನುವ, ಹನಿಹನಿ ಟಪಟಪ ಹನಿಸಿ ಮರ್ಮರಿಸುವ, ಗುನುಗುವ, ಆರ್ಭಟಿಸುವ ಹಠಮಾರಿ ಮಳೆ.  ಚಾಪೆಯಂತೆ ಹೆಣೆದ ಆ ತಟ್ಟಿಯನ್ನು ನನ್ನ ಪುಟ್ಟ ಬೆರಳಿನಲ್ಲಿ ಅಗಲಿಸಿ ಒಂದು ಕಣ್ಣನ್ನು ಆ ಖಾಲಿಗೆ ಹೊಂದಿಸಿ..ಇನ್ನೊಂದು ಕಣ್ಣ ಮುಚ್ಚಿ ಹೊರಗೆ  ಸುಯ್ಯುತ್ತಿದ್ದ ಮಳೆಯೊಂದಿಗೆ ಮುಗ್ಧ ಮನಸ್ಸಿನ ಅವ್ಯಕ್ತ ಅನುಸಂಧಾನ ನಡೆಯುತ್ತಿತ್ತು. ಎದೆಗೆ ಹೊಯ್ಯತ್ತಿದ್ದ ಭಾವಗಳಿಗೆ ಅಕ್ಷರದ ರೂಪವಿಲ್ಲ. ಆದರೆ ಕಣ್ಣುಗಳಲ್ಲಿ ಚುಕ್ಕಿಗಳ ಹೊಳಪು. ಸ್ಪಷ್ಟವಾಗದ ಅವರ್ಣನೀಯ ಮಾತುಗಳು ಗಿರಕಿ ಹೊಡೆಯುತ್ತಿದ್ದವು. ಅದೇ ಭಾವವನ್ನು ಹೊತ್ತು ಮುಖ ತಿರುಗಿಸುತ್ತಿದ್ದೆ. ಮಗ್ಗದ ಸೀರೆ ಉಟ್ಟ, ಉದ್ದದ ಮೂಗುತಿ, ನತ್ತು ಮೂಗಿಗೇರಿಸಿಕೊಂಡು, ಹಣೆಯಲ್ಲಿ ದೊಡ್ಡದಾಗಿ  ಹುಣ್ಣಿಮೆಯ ಚಂದ್ರನಂತ ಕುಂಕುಮ ತಂಪಾಗಿ ನಗುತ್ತಿದ್ದರೆ ..ಅದರದೇ ಬೆಳಕು ಹೊದ್ದಂತೆ ಕಣ್ಣು ಮುಖದಲ್ಲಿ ಮಿಂಚಿನಂತಹ ಬೆಳಕು ಹಾರಿಸಿ ಎದುರಿನ ಕೆಳತುಟಿ ಕಚ್ಚಿ ಕೂತ ಎರಡು ಹಲ್ಲು ಬಿಡುತ್ತಿದ್ದಳು ನನ್ನಜ್ಜಿ.   ನಾನು ಮತ್ತೆ ಕಣ್ಣನ್ನು ಹೊರಗಿನ ಮಳೆಗೆ ಸಿಲುಕಿಸುತ್ತಿದ್ದೆ.  “ಇನ್ನು ಸ್ವಲ್ಪ ದಿನ ಆಮೇಲೆ ಆಟ ಶುರು..ಈ ಮಳೆ ನಿಲ್ಲುತ್ತಲೇ ಒಂದೊಂದೇ ಮೇಳ ಹೊರಡಲು ಶುರುವಾಗುತ್ತದೆ”. ಒಂದೇ ನೆಗೆತಕ್ಕೆ ಆಕೆಯ ತೆಕ್ಕೆಗೆ ಜೋತು ಬೀಳುತ್ತಿದ್ದೆ. ಮಳೆಯ ಸದ್ದಿನಾಚೆ ಅದನ್ನೂ ಮೀರಿಸುವಂತೆ ಚಂಡೆಯ ಸದ್ದು ಕಿವಿಯೊಳಗೆ ಅನುರಣಿಸಿದಂತೆ ತೊನೆಯುತ್ತಿದ್ದೆ. ಬಣ್ಣಬಣ್ಣದ ವಸ್ತೃ, ಕಿರೀಟ. ಅಬ್ಬಾ!ಆ ಶಕರನ ಮುಖ, ತೆರೆದುಕೊಂಡ ಕಣ್ಣು. ಅದರ ಸುತ್ತ.ಬಣ್ಣದ ರೇಖೆಗಳು. ಅದು ರಾಕ್ಷಸ ವೇಷ.  ಎದೆಯಲ್ಲಿ ಬಂದು ಕೂತ ಉರೂಟು ಭಯ..ಶಕಾರ ಎದ್ದ.  ಹೋಓಓಓಒ…ಥೈ ಥೈಥೈ…  “ಎಲ್ಲೀ…ಆ ವಶಂತ ಶೇನೆ”  ದೇಹದೊಳಗೆ ತುಂಬಿಕೊಳ್ಳುವ ಅದು ಯಾವುದೋ ಆವೇಶ. ನಾಯಿ ಓಡಿಸಲು ಮೂಲೆಯಲ್ಲಿ ಕೂತ ಕೋಲು ಬಿಲ್ಲು ಬಾಣವಾಗಿ ಮನಸಿನೊಳಗಿನ ಆ ಪುರುಷಾಕೃತಿ ಮುಖಕ್ಕೆ ಕಟ್ಟಿದ ಕಂಗಿನ ಹಾಳೆಯ ತುಂಡಿನ ಮುಖವಾಡದಿಂದ ಅನಾವರಣಗೊಳ್ಳುತ್ತಿತ್ತು. ನನ್ನ ಪುಟ್ಟ ದೇಹವನ್ನು ತನ್ನ ಆಧೀನಕ್ಕೆ ತಂದು ಕುಣಿಸುತ್ತಿತ್ತು.  “ಶಕರ” ಹೂಂಕರಿಸುತ್ತಿದ್ದ.  “ಹ್ಹೇ…ವಶಂತಶೇನೆ..ಎಲ್ಲಿರುವೆ. ಬಂದೆ ನಾನು… “ ಕೇವಲ ಎರಡು ಹಲ್ಲಿನ ಬೊಜ್ಜುಬಾಯಿ ಅಗಲಿಸಿ ಈ ಸೂತ್ರಧಾರಿ ನನ್ನಜ್ಜಿ ನಗುತ್ತಿದ್ದಳು…ನಗು ನಗು.. ” ಅಬ್ಬಬ್ಬಾ..ಈ ಶಕರನ ಧಾಳಿ ತಡಕೊಳ್ಳುವುದು ಕಷ್ಟ. ಏ.. ನಿಲ್ಲಿಸು..ನಿನ್ನ ವಶಂತ..ಶೇನೆ ಬರುತ್ತಾಳೆ..ಇಲ್ಲದಿದ್ರೆ ಈಗ ಕೋಲು ಬರ್ತದೆ.” ಮತ್ತೆ ನಗು. ಆ ನಗುವಿನಿಂದ ಮತ್ತಷ್ಟು ಹುಮ್ಮಸ್ಸು ಏರಿ ತೆಂಗಿನ ಕಾಯಿಯ ತುದಿ ಸಿಪ್ಪೆ ಸಮೇತ  ( ಅದು ವಸಂತಸೇನೆಯ ಮುಡಿ) ಹಿಡಿದು ಎಳೆತರುತ್ತಿದ್ದೆ. ಕುಣಿತ..ಸುತ್ತುಸುತ್ತಿ ಸುತ್ತಿ ಗಿರ್ ಗಿಟಿ ಹಾಕಿ ಒದ್ದೆ ನೆಲದಲ್ಲಿ ಕುಸಿಯುತ್ತಿದ್ದೆ. ನನ್ನೊಳಗೆ ಚಂಡೆಯ ಅಬ್ಬರ  ಏರುತ್ತಲೇ ಇತ್ತು.  ವಸಂತಸೇನೆ ಆರ್ತಳಾಗಿ ಅಜ್ಜಿಯತ್ತ ನೋಡುವಂತೆ ಭಾಸವಾಗುತ್ತಿತ್ತು.  “ರಕ್ಷಿಸಿ..ಎಲ್ಲಿ ನನ್ನ ಚಾರುದತ್ತ..” “ತರ್ತೇನೆ ಈಗ ಕೋಲು..ನಿನ್ನ ಪಾಠ ಪುಸ್ತಕ ಎಲ್ಲುಂಟು. ಅದು ಚೀಲದಿಂದ ಹೊರ ಬರಲಿಕ್ಕೆ ಉಂಟಾ.. ಆಟದ ಸುದ್ದಿ ತೆಗೆದದ್ದೇ ದೊಡ್ಡ ತಪ್ಪಾಯ್ತು. ನೋಡ್ತೇನೆ ನಿನ್ನ ಮಾರ್ಕು.ಕುಂಡೆಗೆ ಬಿಸಿ ಬರೆ ಹಾಕಲಿಕ್ಕುಂಟು..ಆಮೇಲೆ ಶಕಾರ,ವಸಂತಸೇನೆ.” ಅವಳ ಜೋರು ಕಿವಿಯ ಬದಿಯಿಂದ ಹಾದುಹೋದರೆ ಒಳಗಿಳಿದು ಸದ್ದು ಮಾಡುವುದು ಯಕ್ಷಗಾನದ ಆ ಪಾತ್ರಗಳು. ಶುರುವಾಗುತ್ತಿತ್ತು. ಪುಟ್ಟ ಮನಸ್ಸಿನೊಳಗೆ ರಂಗಿನಾಟ..ಬಣ್ಣ ಗಾಢವಾಗುತ್ತಲೇ ಹೋಗುತ್ತಿತ್ತು. ಕಲ್ಪನಾಲೋಕದೊಳಗಿನ ಒಡ್ಡೋಲಗ. ರಾಜ, ರಾಣಿ ರಾಜಕುಮಾರ, ರಾಕ್ಷಸ  ಅವತರಿಸಿ ನನ್ನಲ್ಲಿ ನಶೆ ಏರಿಸುತ್ತಿದ್ದ ಪರಿ.  ಹನಿದ ಮಳೆ ಕ್ಷೀಣವಾಗುತ್ತಾ,ಆಗುತ್ತಾ, ಮಾಯಾ ಲೋಕದೆಡೆಗೆ ಸರಿದು ಹೋದರೆ..ಬಿಳಿಬಿಳಿ ಚಳಿ ಧರೆಗಿಳಿಯುತ್ತಿತ್ತು. ಪೆಟ್ಟಿಗೆ ಸೇರಿದ್ದ ಪುರಾಣದ ಪಾತ್ರಗಳ ರಂಗಸಜ್ಜಿಕೆ ಮೈ ಕೊಡವಿ ಎದ್ದು..ಮೇಳಗಳು ಸಂಚಾರಕ್ಕೆ ಹೊರಡುತ್ತಿದ್ದವು.  ಇರುಳು ಕವಿಯುತ್ತಲೇ ಯುಗ ಬದಲಾಗಿ ತ್ರೇತಾ ,ದ್ವಾಪರ ತೆರೆದುಕೊಂಡು ರಾಮ,ಕೃಷ್ಣ ಎಲ್ಲರೂ ಧರೆಗಿಳಿಯುತ್ತಿದ್ದರು. ಅಜ್ಜಿಯ ಸೊಂಟದಲ್ಲಿ ಕೂತು ಆರಂಭವಾದ ನನ್ನ ಅವಳ ಈ ಯಕ್ಷಲೋಕದೆಡೆಗಿನ ಪಯಣ ಅವಳ ಕೈ ಹಿಡಿದು ನಾನು ನಡೆಸುವವರೆಗೂ ಸಾಗಿತ್ತು.  ರಾತ್ರಿ ಬಯಲಾಟದ ವೀಕ್ಷಣೆ.. ಹಗಲಿಗೆ ಅರೆಮಂಪರಿನಲ್ಲಿ ಒಳಗಡೆಯ ಚಂಡೆಯ ಸದ್ದಿಗೆ ಸಿಕ್ಕಿದ ಕೋಲು ಹಿಡಿದು ಕುಣಿತ..ಅಮ್ಮನ ಹಳೆಯ ಸೀರೆ ತುಂಡು, ಸೋದರ ಮಾವನ ಲುಂಗಿಗಳು..ಒಡ್ಡೋಲಗದ ಪರದೆ, ಬಗೆಬಗೆಯ ವಸ್ತ್ರಗಳಾಗಿ ಕಲ್ಪನಾಲೋಕದ ಭ್ರಮರವು ಮನಸೋ ಇಚ್ಛೆ ಹಾರುತ್ತಲೇ ಇತ್ತು. ಶಾಲೆಗೆ ಹೋಗಿ ಕೂತರೂ ವೇಷ ಎದುರುಬಂದಂತೆ.. “ಬಂದಳು..ಚೆಲು..ವೆ ಚಿತ್ರಾಂಗದೆ.”  ಅದೆಷ್ಟು ಹೊಸ ಹೊಸ ಪಾತ್ರಗಳು ಮನಃಪಟಲದಲ್ಲಿ ಅರಳಿ ನಾನೇ ಅದಾಗಿ ರೂಪುಗೊಳ್ಳುವ ಚೆಂದವೆಂತಹುದು…ಆಹಾ..ನನಗೋ ಅವರನ್ನು ಅಲ್ಲಿಂದ ಬಿಡುಗಡೆಗೊಳಿಸಿ ಹೊರತರಬೇಕಾದ ತುರ್ತು. ಪಕ್ಕದಲ್ಲಿ ಕೂತ ಗೆಳತಿಯರಿಗೆ ಸ್ಲೇಟಿನಲ್ಲಿ ಟೀಚರ್ ಕೊಟ್ಟ ಲೆಕ್ಕ ಬಿಡಿಸಿ, ಮಗ್ಗಿ ಬರೆದು ಆಮಿಷ ಹುಟ್ಟಿಸುತ್ತಿದ್ದೆ. ಆಮೇಲೆ ನಾನು ಕಥೆ ಹೇಳುವುದನ್ನು ನೀನು ಕೇಳಬೇಕು. ಮನೆಗೆ ಓಡಬಾರದು ಹೀಗೆ ಹಲವು ಒಳ ಒಪ್ಪಂದಗಳು. ಹೊಸ ಹೊಸ ಪಾತ್ರಗಳು ನನ್ನಲ್ಲಿ ಬಣ್ಣ ಹಚ್ಚಿಕೊಳ್ಳುತ್ತಿದ್ದವು. ರಾತ್ರಿ ಎದೆಗಿಳಿದ ಅವುಗಳ ಮಾತುಗಳು ಚೂರು ಪಾರು ಮಾರ್ಪಾಡು ಹೊಂದಿ ಬಣ್ಣದ ಚಿತ್ತಾರದ ಗ್ಲಾಸಿನಲ್ಲಿ ತುಂಬಿದ ಶರಭತ್ತಿನ ರುಚಿಯಂತೆ ವ್ಯಕ್ತವಾಗುತ್ತಿದ್ದವು. ಮತ್ತೆ ಆ ಪಾತ್ರಗಳಿಗೆ  ಹೆಸರು ಹುಡುಕುವ ಪರದಾಟ.  ಸೌದಾಮಿನಿ, ಧಾರಿಣಿ, ಮೈತ್ರೇಯಿ, ವೈದೇಹಿ..ಎಲ್ಲರೂ ಬಿಂಕ ಲಾಸ್ಯದಿಂದ ಗೆಜ್ಜೆ ಕಟ್ಟಿ ಮನೆ ಕದ ತೆರೆದು ಹೊರಗಡೆ ಹಾರುತ್ತಿದ್ದರು.  ಅದೊಂದು ಅದ್ಭುತ ಲೋಕ. ಅರಿವಿನ ಜಗತ್ತು ಮೊಳಕೆಗೊಳ್ಳುವ ಮುನ್ನವೇ ಅಜ್ಜಿಯೆಂಬ ಅಚ್ಚರಿಯ ಮಾಂತ್ರಿಕಳು ನನ್ನೊಳಗೆ ಕಲ್ಪನೆಯ ಪ್ರಪಂಚ ತೆರೆದು ತೋರಿಸಿ ನನ್ನನ್ನು ಅಲ್ಲಿ ಕೂರಿಸಿದ್ದಳು. ತನ್ನ ಚಿರಿಟಿ ಹೋದಂತಹ ಸೊಂಟದಲ್ಲಿ ನನ್ನ ಕೂರಿಸಿ ಥಂಡಿ ಗಾಳಿಯ ಒರೆಸುತ್ತ ದೇವಾಲಯದ ಎದುರಿನ ಗದ್ದೆ, ಶಾಲೆಯ ಎದುರಿನ ಬಯಲು, ಯಾರದೋ ಮನೆಯಂಗಳದಲ್ಲಿ ನಡೆವ ಹರಕೆಯ ಬಯಲಾಟ ಒಂದನ್ನೂ ಬಿಡದೆ ರಾತ್ರಿ ತೆಂಗಿನೆಣ್ಣೆ, ಉಪ್ಪು ಬೆರೆಸಿದ ಕುಚುಲಕ್ಕಿ ಗಂಜಿ ಉಣಿಸಿ ಕಂಡೊಯ್ಯುತ್ತಿದ್ದಳು. ಅಲ್ಲೇ ಆ ಮಣ್ಣಿನ ನೆಲದಲ್ಲಿ  ಕಣ್ಣು ಬಾಯಿ ಕಿವಿ,ಮೂಗು, ಮೈಯೆಲ್ಲ ಅರಳಿಸಿ ಕೂತು ಆಟ ನೋಡುತ್ತಿದ್ದೆ. ಈ ಜಗದ ತಂತು ಕಡಿದು ಅಲ್ಲೆಲ್ಲೋ ಸೇರಿದಂತೆ..ಎಂತಹ ವಿಸ್ಮಯ ಪ್ರಪಂಚವದು. ದೇವತೆಗಳು ಬರುತ್ತಿದ್ದರು. ಸುಂದರ ಉದ್ಯಾನವನ, ಅತಿ ಸುಂದರ ರಾಜಕುಮಾರಿ, ಆ ರಾಜ..ಈ ರಾಕ್ಷಸ.. ಮತ್ತೆ ಯುದ್ದ..ಆರ್ಭಟ. ಅತ್ಯಂತ ಮನೋಜ್ಞವಾಗಿ, ಚಾಕಚಕ್ಕತೆಯಿಂದ ,ಕೌಶಲ್ಯದ  ಮಾತುಗಳ ಕೊಂಡಿಗಳು ಕ್ಕೋ ಕೊಟ್ಟಂತೆ,ಅರಳು ಅರಳಿದಂತೆ ಹರಡಿಕೊಳ್ಳುತ್ತಿದ್ದವು.  ರಾಜಕುಮಾರಿಯ ಜೊತೆಗಿನ  ಸಖಿಯಾಗಿ, ಆ ರಾಜಕುಮಾರಿಯೇ ನಾನಾಗಿ ಅಲೆದಾಟ,ನಗು,ಅಳು, ವಿರಹದ ಅರ್ಥವೇ ಇಣುಕದ ವಯಸ್ಸಿನಲ್ಲಿ ವಿರಹ ಶೃಂಗಾರ ಎಲ್ಲವೂ ತಣ್ಣಗೆ ಮುಗ್ಧ ಮನಸ್ಸಿನ ಒಳಗಿಳಿಯುತ್ತಿತ್ತು. ಆಗೆಲ್ಲ ರಾಮಾಯಣ, ಮಹಾಭಾರತದ ಕಥೆಗಳು ಹಾಗೂ ಅಲ್ಲಿ ಸಿಗುವ ಉಪಕಥೆಗಳು ಬಯಲಾಟದ ಪ್ರಸಂಗಗಳಾಗಿರುತ್ತಿದ್ದವು. ಭಕ್ತಿಪ್ರಧಾನ,ನೀತಿಭೋದಕ ಕಥೆಗಳು. ಇಂತಹ ಸಂದರ್ಭದಲ್ಲೇ ಆ ಪುಟ್ಟ ವಯಸ್ಸಿನಲ್ಲಿ ನೋಡಿದ ವಸಂತಸೇನೆ ಎಂಬ ಪ್ರಸಂಗ ಬಹಳ ಆಳಕ್ಕಿಳಿದು ನನ್ನ ಕುಣಿಸುತ್ತಿತ್ತು. ನಿಜವೆಂದರೆ ನಂತರದ ದಿನಗಳಲ್ಲಿ ಕಥೆ ಮಾಸಿದರೂ, ಅದರಲ್ಲಿ ಬರುವ ವಸಂತಸೇನೆಯ ಪ್ರೀತಿ ಹಾಗೂ ಖಳನಾಯಕ ಶಕರನ  ಗಟ್ಟಿ ಸೀಳುಧ್ವನಿಯ ಮಾತು ಉಳಿದುಬಿಟ್ಟಿತು. ಶಕರ ಬಂದ ಎಂದರೆ ಹೆದರಿಬಿಡುತ್ತಿದ್ದೆ. ಮತ್ತೆ ನಾನೇ ಶಕರನಾಗಿ ಕುಣಿಕುಣಿದು.. ‘ಎಲ್ಲಿ ಆ ವಶಂತ ಶೇನೆ ‘ ಎನ್ನುತ ಅದೇ ಶೈಲಿಯಲ್ಲಿ ದೊಡ್ಡ ಹೆಜ್ಜೆ ಇರಿಸಿ ಸಂಭ್ರಮಿಸುತ್ತಿದ್ದೆ. ಹಗಲಲ್ಲಿ ಶಕರನಾಗಿ ಬದಲಾಗುವ ನಾನು ರಾತ್ರಿ ಊಟದ ಸಮಯ ಬಂದು ಶಕರ ಎಂದರೆ ಹೆದರಿ ಗಬಗಬ ಉಣ್ಣುತ್ತಿದ್ದೆ. ರಾತ್ರೆಯಾದರೆ ನಾನು ಥೇಟು ವಸಂತಸೇನೆ!. ರಂಗ ಏರುವ ಆಸೆ,ನಶೆ..ತೀರದ ಹುಚ್ಚಿಗೆ ಈ ಬಯಲಾಟಗಳೇ ಮೊದಲ ಸಜ್ಜಿಕೆ. ನಿಂತಲ್ಲಿ,  ಕೂತಲ್ಲಿ ಶಕರ, ವಸಂತಸೇನೆ, ಶ್ವೇತಕುಮಾರ, ದ್ರೌಪದಿ, ದಮಯಂತಿ,..ಸಾಲು ಸಾಲು ಪಾತ್ರಗಳು  ನನ್ನನ್ನು ಗಟ್ಟಿಯಾಗಿ ಆವರಿಸಿಕೊಳ್ಳತೊಡಗಿದವು. ಎಲ್ಲೋ ಒಂದಿನಿತು ಮರೆಗೆ ಹೋಗಲು ಯತ್ನಿಸಿದರೆ ಈ ಜಾದೂಗಾರಿಣಿ ಅಜ್ಜಿ‌ ಮತ್ತೆ ಮತ್ತೆ ತುತ್ತು ಇಡುವಾಗ, ತಲೆಗೆ ನೀರು ಹೊಯ್ಯುವಾಗ, ಎಣ್ಣೆಯಿಟ್ಟು ಜಡೆ ಹೆಣೆಯುವಾಗ, ಬೇಸರದ ಕ್ಷಣಗಳಲ್ಲಿ ಮುದ್ದಿಸುವಾಗ ಕಥೆಯ ಮಾಲೆ ಹೊರತೆಗೆದು ಒಂದೊಂದಾಗಿ ಬಿಡಿಸುತ್ತಿದ್ದಳು. ಓಹ್..ಎಂತಹ ಶ್ರೀಮಂತ ದಿನಗಳವು. ಆ ದಿನಗಳು ನನ್ನ ನಾಟಕ ಬದುಕಿನ ಮೊದಲ ಪುಟಗಳು ಅನ್ನಲೇ,ಅಥವಾ ಮುನ್ನುಡಿ ಬರಹ ಅನ್ನಲೇ. ************************************************************************ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ.

Read Post »

You cannot copy content of this page

Scroll to Top