ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಮೂರನೇ ಆಯಾಮ

ಎಂದೂ ಸಾಕೆನಿಸದ ನೆಲದ ನಂಟು, ಸಮುದ್ರದ ಪ್ರೀತಿ

ಅಂಕಣಬರಹ ಪುಸ್ತಕ- ಬಾನಸಮುದ್ರಕೆ ಗಾಳನೋಟ ಲೇಖಕರು- ಪ್ರವೀಣ ಬೆಲೆ ೮೦/- ಪ್ರಕಾಶನ-ಸಲೀಲ ಪುಸ್ತಕ ಚಿಕ್ಕವನಿರುವಾಗ ಬಟ್ಟೆಯ ಸ್ಟ್ಯಾಂಡ್‌ನಲ್ಲಿರುವ ಬಟ್ಟೆಗಳನ್ನೆಲ್ಲ ಒಂದೆಡೆ ಗುಡ್ಡೆಹಾಕಿಕೊಂಡು ಬೆಚ್ಚಗೆ ಮಲಗುತ್ತಿದ್ದ ಮಗನಿಗೆ ಈಗ ಆತ ಹಾಗೆ ಮಾಡುತ್ತಿದ್ದ ಎಂದರೆ ನಂಬುವುದಿಲ್ಲ. ಮಲಗುವಾಗ ನಾನು ಬೆಳ್ಳಿಗ್ಗೆ ಬೇಗ ಏಳಬೇಕಾದಾಗಲೆಲ್ಲ ಅವನ ಪಕ್ಕ ನನ್ನ ಉಪಯೋಗಿಸಿದ ಉಡುಪುಗಳನ್ನು ಇಡುತ್ತಿದ್ದೆ. ಅದನ್ನೇ ತಬ್ಬಿಕೊಂಡು ಆತ ಹಾಯಾಗಿ ಮಲಗಿಬಿಡುತ್ತಿದ್ದ. ಕೆಲವೊಮ್ಮೆ ಬಟ್ಟೆ ಇಡದಿದ್ದಾಗ ಎದ್ದು ಅಳಲು ಪ್ರಾರಂಭಿಸುತ್ತಿದ್ದ. ಪ್ರವೀಣ ಅವರ ಬಾನಸಮುದ್ರಕೆ ಗಾಳನೋಟ ಎನ್ನುವ ಸಂಕಲನದ ಮೊದಲ ಕವನವನ್ನು ಓದಿದಾಗ ನನಗೆ ಈ ಘಟನೆ ನೆನಪಾಗಿ ಮತ್ತೊಮ್ಮೆ ಕಣ್ಣಲ್ಲಿ ನೀರೂರಿತು. ತಾಯಂದಿರ ಸೀರೆಯ ಬಗ್ಗೆ ಎಲ್ಲ ಮಕ್ಕಳಿಗೂ ಒಂದು ರೀತಿಯಾದ ಭಾವನಾತ್ಮಕವಾದ ಅನುಬಂಧವಿರುತ್ತದೆ. ಊಟವಾದ ನಂತರ ತಾಯಿಯ ಸೆರಗಿಗೆ ಕೈ ಒರೆಸದ ನನ್ನ ತಲೆಮಾರಿನವರು ಸಿಗಲು ಸಾಧ್ಯವೇ ಇಲ್ಲ. ಕೊನೆಯಪಕ್ಷ ಹಳ್ಳಿಯಲ್ಲಿ ಬೆಳೆದವರಾದರೂ ಅಮ್ಮನ ಸೆರಗಿಗೆ ಕೈ ಒರೆಸಿಯೇ ಒಳೆದವರು ಎಂದು ಖಡಾಖಂಡಿತವಾಗಿ ಹೇಳಬಲ್ಲೆ. ನನ್ನ ನಂತರದ ತಲೆಮಾರಿಗೆ ಸೆರಗು ಸಿಕ್ಕಿರಲಿಕ್ಕಿಲ್ಲ. ಆದರೆ ಅಮ್ಮ ಬೆನ್ನು ತಬ್ಬಿ ಅಮ್ಮನ ಚೂಡಿದಾರಕ್ಕೆ ಮುಖ, ಕೈ ಒರೆಸಿಯೇ ಒರೆಸುತ್ತಾರೆ. ಆ ಸುಖವೇ ಬೇರೆ. ಇನ್ನು ನನ್ನ ಅಮ್ಮನ ತಲೆಮಾರಿನವರಿಗೆ ಹಾಗೂ ಅದಕ್ಕಿಂತ ಹಿಂದಿನವರಿಗೆ ಸೆರಗು ಬಹು ಉಪಯೋಗಿ ಸಾಧನವಾಗಿತ್ತು. ಕೆಂಡದ ಒಲೆಯಿಂದ ಬಿಸಿ ಪಾತ್ರೆಗಳನ್ನಿಳಿಸಲು, ಕೆಲವೊಮ್ಮೆ ಮಸಿ ಅರಿವೆಯಾಗಿ, ಮತ್ತೂ ಕೆಲವೊಮ್ಮೆ ತಕ್ಷಣದ ಸ್ವಚ್ಛಗೊಳಿಸುವ ಸಾಧನವಾಗಿಯೂ ಬಳಸಲ್ಪಡುತ್ತಿತ್ತು. ಸೆರಗಿನ ಬಳಕೆಯ ಮಹತ್ವ ಕಡಿಮೆಯದ್ದೇನಲ್ಲ. ಶ್ರೀಕೃಷ್ಣನ ಕೈಗೆ ಗಾಯವಾಗಿ ರಕ್ತ ಸೋರುತ್ತಿರುವಾಗ ದ್ರೌಪದಿ ತನ್ನ ಸೆರಗಿನ ಅಂಚನ್ನೇ ಹರಿದು ಗಾಯಕ್ಕೆ ಪಟ್ಟಿ ಕಟ್ಟಿದ್ದಳಂತೆ. ಆ ಸೆರಗಿನ ಅಂಚು ನಂತರ ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿ ಅಕ್ಷಯ ಸೆರಗಾಗಿ ಅವಳನ್ನು ಆವರಿಸಿಕೊಂಡಿದ್ದು ಎನ್ನುವ ನಂಬಿಕೆಯಿದೆ. ಹೀಗಿರುವಾಗ ಅಮ್ಮನ ಸೆರಗನ್ನು ಚಾಣಿಗಿಯಾಗಿ ಬಳಸುವ ರೂಪಕವನ್ನು ತನ್ನ ಮೊದಲ ಕವಿತೆಯಲ್ಲಿ ತಂದು ಇಡೀ ಸಂಕಲನದ ಘನತೆಯನ್ನು ಹೆಚ್ಚಿಸಿ, ಸಂಕಲನದ ಉಳಿದ ಕವಿತೆಯ ಕಡೆಗೊಂದು ಕುತೂಹಲವನ್ನು ಹುಟ್ಟಿಸಿದ್ದಾರೆ ಪ್ರವೀಣ.    ಇಂದಿಗೂ ಪ್ರವೀಣ ಎಂದಾಗಲೆಲ್ಲ ಹತ್ತಾರು ಪ್ರವೀಣರನ್ನು ನೆನಪಿಸಿಕೊಳ್ಳುವ ನಾನು ೨೦೧೯ರಪ್ರಜಾವಾಣಿ ಕಾವ್ಯದ ವಿಜೇತರು ಎಂದಾಗ ಮಾತ್ರ ಅರ್ಥಮಾಡಿಕೊಳ್ಳುತ್ತೇನೆ. ಹೀಗಿರುವಾಗಲೇ ಈ ಸಂಕಲನ ನನ್ನ ಕೈ ಸೇರಿದ್ದು. ಅದ್ಭುತ ರೂಪಕಗಳ ಸುರಿಮಳೆಯನ್ನು ಓದಿ ದಿಗ್ಭ್ರಮೆಗೊಳಗಾಗಿದ್ದು. ಅಮ್ಮನ ಮೊದಲ ಸೀರೆಗೆಕನಸು ಬರೆದ ಚಿತ್ತಾರದ ಅಂಚಿತ್ತುವಸಂತ ಋತುವಿನ ಚಿಗುರಿನ ಉತ್ಸಾಹಗಳ ಚಿನ್ನದ ಸೆರಗಿತ್ತುನನ್ನ ಹುಟ್ಟಿದ ದಿನ ಬಂಗಾರದಸೆರಗು ಕುಂಚಿಗೆಯಾಗಿ ಅಂಚುಕಟ್ಟುವ ಕಸಿಯಾಗಿ ಚೂಪಾದತುತ್ತತುದಿಗೆ ಸಾಗರದಾಳದಹೊಚ್ಚಹೊಸ ಮುತ್ತು ಮೆರೆದುನನ್ನ ತಲೆಗೆ ಕಿರೀಟವಾಯಿತು.  ಎಂದು ಹೇಳುತ್ತಾರೆ. ಇಲ್ಲಿ ಬರುವ ಸಾಲುಗಳನ್ನು ಗಮನಿಸಿ. ಮಗುವಿನ ತಲೆಗೆ ಕಟ್ಟಲು ಅಮ್ಮ ಹೊಲಿಯುವ ಕುಂಚಿಗೆಗೆ ತನ್ನ ಮೆತ್ತನೆಯ ಸೀರೆಯನ್ನು ಬಳಸಿ ಹೊಲೆಯುವ ಸಹಜ ಪ್ರಕ್ರಿಯೆ ಇಲ್ಲಿ ಕವಿತೆಯಾಗಿ ಮನಮುಟ್ಟುವ ಪರಿಯೇ ವಿಶಿಷ್ಟವಾದದ್ದು. ಈ ಕವನದಲ್ಲಿ ಬರುವ ಸಾಲುಗಳನ್ನು ಓದುತ್ತ ಹೋದಂತೆ ಹೊಸತೇ ಆದ ಒಂದು ಕಾವ್ಯಲೋಕ ಕಣ್ಣೆದುರು ಬಿಚ್ಚಿಕೊಳ್ಳುತ್ತದೆ.   ಜಗತ್ತಿನ ಮೊತ್ತಮೊದಲ ಮುತ್ತಿನಸಂಭ್ರಮದಲ್ಲಿ ನನ್ನ ರಾಜ್ಯಾಭಿಷೇಕವಾಯಿತು.ಈ ಸಾಲುಗಳಲ್ಲಿ ಮೂಡಿರುವ ಆಪ್ತತೆಯನ್ನು ಗಮನಿಸಿ. ಈ ಎರಡು ಸಾಲುಗಳು ಓದುಗನಲ್ಲಿ ಸಾವಿರ ಭಾವವನ್ನು ತುಂಬುತ್ತವೆ.      ಹತ್ತನೇ ತರಗತಿಯ ಹಿಂದಿನ ಸಿಲೆಬಸ್‌ನಲ್ಲಿ ಎ. ಕೆ. ರಾಮಾನುಜನ್‌ರವರು ಇಂಗ್ಲೀಷ್‌ಗೆ ಅನುವಾದಿಸಿದ್ದ ಲಂಕೇಶರ ಅವ್ವ ಕವನವಿತ್ತು. ಅವ್ವನನ್ನು ಹೊಗಳುತ್ತಲೇ ಬನದ ಕರಡಿಯಂತೆ ಪರಚುವ ಅವ್ವ, ಕಾಸು ಕೂಡಿಡುವ ಅವ್ವ, ಸರಿಕರೆದುರು ತಲೆ ತಗ್ಗಿಸಬಾರದೆಂದು ಛಲದಿಂದ ದುಡಿವ ಅವ್ವನನ್ನು ಹೇಳುವಾಗಲೆಲ್ಲ ನನ್ನ ಮಾತು ಆರ್ದೃವಾಗುತ್ತಿತ್ತು. ಅವ್ವನನ್ನು ಕುರಿತ ಕನ್ನಡದ ಅಥವಾ ನಿಮ್ಮ ಮಾತೃಭಾಷೆಯಲ್ಲಿರುವ ಕವನಗಳನ್ನು ಇಂಗ್ಲೀಷ್‌ಗೆ ಅನುವಾದಿಸಿ ಎಂದು ನಾನು ಮಕ್ಕಳಿಗೆ ಹೇಳುತ್ತಿದ್ದೆ.  ಈಗ ಈ ಕವನವನ್ನು ಓದಿದ ನಂತರ ತಕ್ಷಣಕ್ಕೆ ಅನ್ನಿಸಿದ್ದು, ಆಗ ಹಿಂದಿನ ಸಿಲೆಬಸ್ ಇರುವಾಗಲೇ ಪ್ರವೀಣ ಈ ಕವನ ಬರೆದಿದ್ದರೆ ನನ್ನ ಮಕ್ಕಳಿಗೆ ಇನ್ನೊಂದಿಷ್ಟು ಚಂದವಾಗಿ ಅಮ್ಮನನ್ನು ಕಟ್ಟಿಕೊಡಬಹುದಿತ್ತು, ಆಸಕ್ತ ವಿದ್ಯಾರ್ಥಿಗಳಿಗೆ ನಾಲ್ಕಾರು ಸಾಲುಗಳನ್ನು ನೀಡಿ ಇಂಗ್ಲೀಷ್ ಅನುವಾದ ಮಾಡಿ ಎನ್ನಬಹುದಿತ್ತು ಎಂದೇ. ಅಮ್ಮನನ್ನು ಇಷ್ಟೊಂದು ಆಪ್ತವಾಗಿ ಕಟ್ಟಿಕೊಡುವ ಇನ್ನೊಂದು ಕವನವನ್ನು ಸಧ್ಯದಲ್ಲಿ ನಾನು ಓದಿರಲಿಲ್ಲ. ಬರೆದಷ್ಟೂ ಬರೆಯಿಸಿಕೊಳ್ಳುವ ಕವನವಿದು. ಇದೊಂದೇ ಕವನದ ಕುರಿತುಪುಟಗಟ್ಟಲೆ ಬರೆಯಬಹುದೇನೋ. ಭಗಭಗನೆ ಉರಿವ ಹಾಸಿಗೆಯ ಮೇಲೆಸೀರೆ ಹಾಸಿ ನಿದ್ದೆ ಮಾಡುತ್ತಾಳೆ ಎವೆಮುಚ್ಚದೆಸೀರೆಯ ಗಂಟಿನಲ್ಲಿ ಮಡಚಿಟ್ಟುಕೊಂಡಬೈಗುಳ ಅವಮಾನದಣಿವು ಸುಸ್ತುಗಳ ಒದರಿನಡಕ್ಕೆ ಸೆರಗು ಕಟ್ಟಿಕೊಂಡು ಹೊಟ್ಟೆಗೆಹತ್ತಿದ ಬೆಂಕಿ ಆರಿಸಲುಸ್ಟೋವು ಹೊತ್ತಿಸುತ್ತಾಳೆ. ಹೌದು, ಹೆಣ್ಣಿನ ಸೀರೆಯ ಸೆರಗಿನಂಚಿನಲ್ಲಿ ಎಂತೆಂಥವು ಗಂಟುಹಾಕಿಕೊಂಡಿರುತ್ತವೋ ಬಲ್ಲವರಾರು? ಯಾರೋ ಕೊಟ್ಟ ಹಣ, ಇನ್ನಾರೋ ಮಾಡಿದ ಅವಮಾನ, ನಡೆವ ಬೀದಿಯೇ ಮೈಮೇಲೆ ಬಿದ್ದು ಎಸುಗಲೆತ್ನಿಸಿದ ಬಲಾತ್ಕಾರ, ಸ್ವಂತ ಗಂಡನೇ ತಿರಸ್ಕರಿಸಿ ಬೇರೆಯವಳೊಟ್ಟಿಗೆ ನಡೆದ ನೋವು, ಹಡೆದ ಮಗನೇ ದೂರೀಕರಿಸಿದ ಅಸಹಾಯಕತೆ ಎಲ್ಲವೂ ಆ ಸೆರಗಿನ ಮೂಲೆಯಲ್ಲಿರುತ್ತದೆ. ಸೆರಗು ಕೊಡವಿ ಎದ್ದು ನಿಂತರೆ ಬಾಳು, ಇಲ್ಲವೆಂದಾದಲ್ಲಿ ಅದೇ ಸೆರಗನ್ನು ಮನೆಯ ಜಂತಿಗೆ ಕಟ್ಟಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಬದುಕುವ ಛಲವಿರುವ ಯಾವ ಅಮ್ಮನೂ ಹಾಗೆ ಮಾಡಿಕೊಳ್ಳುವುದಿಲ್ಲ, ಬದಲಾಗಿ ತನ್ನ ಮಕ್ಕಳಲ್ಲಿಯೂ ಬದುಕುವ ಹುಮ್ಮಸ್ಸನ್ನೇ ತುಂಬುತ್ತಾಳೆ.ಜೀವನ ಕಟ್ಟುವ ಎಳೆದಾಟದಲ್ಲಿಪಿಸುಕಿದ ಅಮ್ಮನ ಸೀರೆಗಳನ್ನು ಒಟ್ಟಿಗೆ ಹೊಲಿದರೆ ನೆಪ್ಪದಿ ನೀಡುವ ದುಪಟಿಹರಿದರೆ ಕಲ್ಮಶ ತೊಳೆಯುವ ಅರಿವೆಇನ್ನಷ್ಟು ಹರಿದರೆ ಕಣ್ಣೀರು ಒರೆಸುವ ಕೈವಸ್ತ್ರಹರಿದು ಚಿಂದಿ ಚಿಂದಿ ಮಾಡಿದರೂಲಕ್ಷಾಂತರ ದೀಪಗಳಿಗೆಬತ್ತಿ ನಿಜ, ಇಂತಹ ಸಶಕ್ತ ಸಾಲುಗಳಿಗಲ್ಲದೇ ಬೇರಾವುದಕ್ಕೆ ಪ್ರಜಾವಾಣಿಯ ದೀಪಾವಳಿ ಕವನ ಸ್ಪರ್ಧೆಯಲ್ಲಿ ಬಹುಮಾನ ನೀಡಲು ಸಾಧ್ಯ? ಹಾಗೆ ನೋಡಿದರೆ ಈ ಕವಿತೆಗೆ ಪ್ರಥಮ ಬಹುಮಾನ ನೀಡಿ ಪ್ರಜಾವಾಣಿಯ ಬಹುಮಾನಿತ ಕವನಗಳು ಯಾವತ್ತೂ ಅತ್ಯುತ್ತಮವಾಗಿರುತ್ತವೆ ಎಂಬ ಮಾತಿಗೆ ಗಟ್ಟಿ ಸಾಕ್ಷ್ಯ ದೊರೆತಂತಾಗಿದೆ. ಹುಡುಕುತಿವೆ ಕಾಳುಗಳು ಕೋಳಿಗಳನ್ನುಗೋರಿಗಳು ಸತ್ತ ದೇಹಗಳನ್ನುನಿದ್ರೆಗಳು ಮುಚ್ಚುವ ಕಣ್ಣೆವೆಗಳನ್ನುಬಟ್ಟೆಗಳು ಮುಚ್ಚಬಹುದಾದ ಮಾನಗಳನ್ನು   ಈ ಸಾಲುಗಳಲ್ಲಿರುವ ವ್ಯಂಗ್ಯವನ್ನು ಗುರುತಿಸಿ. ಲೋಕದ ನಿಯಮಗಳನ್ನೆಲ್ಲ ಬದಲಾಯಿಸಿದ ವಿಷಾದವನ್ನು ನೋಡಿ. ಹೇಳಬೇಕಾದುದನ್ನೂ ಮೀರಿ ಈ ಸಾಲುಗಳು ಮಾತನಾಡುತ್ತಿವೆ. ಹಾಗೆ ನೋಡಿದರೆ ಒಮ್ಮೆಲೆ ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳೇ ನಮ್ಮಯ ದೇವರು….’ ಎನ್ನುವ ಸಾಲು ನೆನಪಿಗೆ ಬಂದೇ ಬರುತ್ತದೆ. ಇಡೀ ಕವನವನ್ನು ಓದಿದಮೇಲೆ ಅರಿವಾಗದ ವಿಶಣ್ಣಭಾವವೊಮದು ಎದೆಯೊಳಗೆ ಹಾಗೇ ಉಳಿಯದಿದ್ದರೆ ಹೇಳಿ. ಖಂಡಿತವಾಗಿ ಈ ಕವನವನ್ನು ಓದಿ ಮುಗಿಸಿದ ನಂತರ ಮಾಮೂಲಿಯಾಗಿ ಮುಂದಿನ ಕವನವನ್ನು ಓದಲಾಗುವುದೇ ಇಲ್ಲ. ಮತ್ತೊಮ್ಮೆ, ಮಗದೊಮ್ಮೆ ಈ ಕವನದ ಸಾಲುಗಳನ್ನು ತಿರುವುತ್ತೀರಿ. ಪ್ರಜಾಪ್ರಭುತ್ವದ ಮೇಲೆ ಒಂದಿಷ್ಟಾದರೂ ನಂಬಿಕೆಯಿದ್ದವರಾದರೆ ನಿಮಗೆ ಈ ಸಾಲುಗಳು ಚಿಂತನೆಗೆ ಹಚ್ಚುತ್ತವೆ. ಜೀವಪರ ನಿಲುವುಗಳು ನಿಮ್ಮಲ್ಲಿದ್ದರೆ ಖಂಡಿತಾ ಈ ಸಾಲುಗಳು ನಿಮ್ಮನ್ನು ಅಲುಗಾಡಿಸದೇ ಬಿಡುವುದಿಲ್ಲ. ಚೂರಿ ದೈವವೇ ಬಹುಪರಾಕಗಡಿಯ ನಶೆಯೇ ಬಹುಪರಾಕತಲೆಯ ಚಪ್ಪಲಿಯೇ ಬಹುಪರಾಕಬಣ್ಣದ ಪೊರಕೆಯೇ ಬಹುಪರಾಕನಿಜ, ಈ ಪರಾಕುಗಳೇ ನಾವು ಸಾಗುತ್ತಿರುವ ದಾರಿಯನ್ನು ತೋರಿಸುತ್ತಿದೆ. ಬಗಲಲ್ಲಿ ಚಾಕು ಸಿಕ್ಕಿಸಿಕೊಂಡೇ ನಾವೀಗ ಬೆಣ್ಣೆ ಸವರಿದ ಮಾತನಾಡುತ್ತೇವೆ. ದೇಶಪ್ರೇಮದ ಹೆಸರಿನಲ್ಲಿ ಸೈನಿಕರ ಕುರಿತಾದ ಭಾವನಾತ್ಮಕ ಕಥೆಗಳನ್ನು ಹರಿಯಬಿಟ್ಟು ಎಂದೂ ಇಳಿಯದ ನಶೆಯನ್ನು ಸಾಮಾನ್ಯ ಜನರಲ್ಲಿ ತುಂಬಿ ಅಧಿಕಾರದ ಗದ್ದುಗೆಯನ್ನು ಭದ್ರಪಡಿಸಿಕೊಳ್ಳುತ್ತೇವೆ, ಇದೇ ನಶೆಯಲ್ಲಿ ಮಾಡಿದ ತಪ್ಪುಗಳನ್ನೆಲ್ಲ ಮರೆಮಾಚಿಕೊಂಡು ತಲೆಯ ಮೇಲೆ ಪಾದುಕೆಗಳನ್ನಿಟ್ಟುಕೊಂಡು ಪೂಜಿಸುತ್ತಿದ್ದೇವೆ,‘ಇಕೋ ತಕೋ ಸಂಭ್ರಮಿಸು’ ಕವಿತೆಯಂತೂ ಇಡೀ ಸಂಕಲನದ ಕಿರೀಟವೆಂಬಂತೆ ಭಾಸವಾಗುತ್ತದೆ. ರಾವಣ ತನ್ನ ದೈವ ಶಂಕರನನ್ನು ಪ್ರಶ್ನಿಸುತ್ತಲೇ ದೇವಾನುದೇವತೆಗಳನ್ನು ಬೆತ್ತಲು ಮಾಡಿ ನಿಲ್ಲಿಸುತ್ತಾನೆ. ‘ಲಂಕೆಯ ಶರಧಿಯಲಿ ಬೀಳುವ ನನ್ನ ನಾಡ ಪ್ರತಿಬಿಂಬದಷ್ಟೂ ಚೆಂದವಿರದ ಸ್ವರ್ಗವನ್ನು ಬಿಟ್ಟು ಬಾ’ ಎಂದು ಶಿವನನ್ನೇ ಆಹ್ವಾನಿಸುವ ಪರಿ ಕುತೂಹಲ ಮೂಡಿಸುತ್ತದೆ. ಲಕ್ಷ್ಮಣನ್ನು , ಜರೆಯುತ್ತ, ಶಿವಧನಸ್ಸನ್ನು ಮುರಿದವನ ಮೇಲೆ ಸೇಡು ತೀರಿಸಿಕೊಳ್ಳುವ ತನ್ನ ಹಠವನ್ನು ತಪ್ಪೆಂದು ಒಪ್ಪಿಕೊಳ್ಳುತ್ತ ಇಕೊ ತಕೊ ನನ್ನ ಪ್ರಾಣ ಎನ್ನುವ ರಾವಣ ಇಲ್ಲಿ ಪ್ರತಿನಾಯಕನ ವಿಜೃಂಭಣೆಯಿಂದ ಮೆರೆಯುವುದಿಲ್ಲ. ಬದಲಿಗೆ ಒಬ್ಬ ಸಾಮಾನ್ಯ ಮನುಷ್ಯನಾಗಿಯೇ ಹೆಗ್ಗಳಿಕೆ ಗಳಿಸಿಕೊಳ್ಳುತ್ತಾನೆ.‘ತನ್ನ ಡಬ್ಬಿಯ ಅನ್ನ’ ಕವಿತೆ ಹಸಿವಿನ ಕುರಿತಾಗಿ ಮಾತನಾಡುತ್ತದೆ. ಹಸಿವೆಯೆಂದು ತಿಂದು ಬಿಡುವಂತಿಲ್ಲ, ಹೊಟ್ಟೆ ತುಂಬಿಸಿಕೊಳ್ಳುವಂತಿಲ್ಲ. ಅದಕ್ಕೂ ರೀತಿ ನೀತಿ ನಿಯಮಗಳಿವೆ. ಆದರೆ ಇಲ್ಲಿ ಮಗು ತನ್ನೆದುರು ಕುಳಿತ ಬಡ, ಬತ್ತಲ ಮಗುವಿಗೆ ಆಹಾರ ನೀಡಿ ಸಂತೃತ ಕಣ್ಣುಗಳಿಂದ ನೋಡುವ ಬಗೆಯಿದೆಯಲ್ಲ, ಅದು ಯಾವ ಸ್ಥಿರ ಚಿತ್ರಕ್ಕಿಂತಲೂ ಹೆಚ್ಚಿನ ಅರ್ಥವನ್ನು ಹೊಮ್ಮಿಸುತ್ತದೆ. ಇದೇ ಚಮದದ ಮನಸೆಳೆಯುವ ಚಿತ್ರಣ ‘ವಿಶ್ವವೇ ಆಟಿಗೆಯ ಬುಟ್ಟಿ’ಯಲ್ಲಿದೆ. ಕೊಚ್ಚೆಯಲೂ ನೆಗೆದು ಹಕ್ಕಿಗೂಡ ಮಾತಾಡಿನದಿಯೊಡನೆ ಓಟ ರವಿಯೊಡನೆ ಆಟಚಂದಾಮಾಮನ ಜೊತೆಯೂಟವಿಶ್ವವೇ ಅವಗೆ ಆಟಿಗೆಯ ಬುಟ್ಟಿ ಎನ್ನುವಲ್ಲಿ ಮಕ್ಕಳ ಮನಸ್ಸಿನ ನಿರ್ಮಲತೆಯನ್ನು ಬಣ್ಣಿಸಲಾಗಿದೆ. ಎರಡೂ ಕವನಗಳಲ್ಲಿ ಇದ್ದಷ್ಟು ಮುಗ್ಧವಾದ ಮಕ್ಕಳ ಪ್ರಪಂಚ ಈ ಜಗತ್ತಿನಲ್ಲಿದ್ದರೆ ಈ ಜಗತ್ತು ಅಳುವಾಗ ಅತ್ತು ಉಳಿದದ್ದಕ್ಕೆಲ್ಲ ನಗುವ ಸುಂದರ ಸ್ವರ್ಗವಾಗುತ್ತಿತ್ತು. ಆದರೆ ನಾವೆಲ್ಲ ಹಾಗೆ ಸ್ವರ್ಗದಲ್ಲಿ ಬದುಕುವ ಮನಸ್ಸು ಮಾಡುತ್ತಿಲ್ಲ. ಸದ್ದಿಲ್ಲದೇ ನರಕವನ್ನು ಕೈಹಿಡಿದು ಕರೆತಂದು ಎದುರಿಗೆ ಕುಳ್ಳಿರಿಸಿಕೊಳ್ಳುತ್ತೇವೆ. ನಾಜೂಕಾಗಿ ಒಂದೊಂದೇ ಹೆಜ್ಜೆಯನ್ನು ನರಕದೊಳಗೆ ಇಡುತ್ತ, ಅದರ ನೋವುಗಳನ್ನೇ ಸುಖ ಎಂದು ಭ್ರಮಿಸುತ್ತಿದ್ದೇವೆ. ನಾನು ಕತ್ತಲೆಯೊಡನೆ ರಾಜಿ ಮಾಡಿಕೊಂಡಿದ್ದೇನೆಮಿಂಚುಹುಳುಗಳ ಬೆಳಕಲ್ಲಿ ನಕ್ಷತ್ರಗಳ ಬಿಡಿಸುತ್ತಿದ್ದೇನೆಹೃದಯಕ್ಕೆ ಬೆಂಕಿ ಹಚ್ಚಿ ಬೆಚ್ಚಗಾಗುತ್ತಿದ್ದೇನೆ ಎಂಬುದು ನಮ್ಮೆಲ್ಲರ ಸಾಲುಗಳೂ ಹೌದು. ಬಯಸಿ ಬಯಸಿ ಎದೆಯಗೂಡಿನಲ್ಲಿರುವ ನಂದಾದೀಪವನ್ನು ತೆಗೆದು ಪೆಟ್ರೋಮ್ಯಾಕ್ಸ್ ಉರಿಸಿ ಸ್ಪೋಟಿಸುತ್ತೇವೆ. ‘ಇನ್ನು ಪ್ರೀತಿ ಹುಟ್ಟುವುದಿಲ್ಲ’ ಕವನದ ಬೆಂಕಿಕಡ್ಡಿ, ‘ಸುಡುತ್ತಿದ್ದುದು’ ಕವನದಲ್ಲಿ ಬರುವ ‘ಬರಿ ಚಡ್ಡಿಯಲ್ಲಿರುವವರು ಎಲ್ಲವನೂ ಸಹಿಸಿಕೊಳ್ಳಬೇಕಾಗುತ್ತೆ,’ ಎನ್ನುವ ಮಾತು, ‘ಹೂವು ಅರಳಿಲ್ಲ’ ಕವಿತೆಯಲ್ಲಿ ಹೇಳುವ ಪಾಚಿಗಟ್ಟಿದ ಗವಿಯ ಹೊರಗಿರುವ ಕಲ್ಲನ್ನು ತಿಕ್ಕಿ ತಿಕ್ಕಿ ಫಳಫಳನೆ ಹೊಳೆಯುವಂತೆ ಮಾಡುವ ಗವಿಯಾಚೆಗಿನ ಬೆಳಕು, ‘ಮುಗಿದು ಹೋದ ಕಥೆ’ಯಲ್ಲಿ ಬರುವ ಕಥೆಯಲ್ಲದ ಕಥೆಯ ವರ್ಣನೆ, ‘ಬದಲಿಸಲಾಗದ ಮೊದಲು’ ಕವಿತೆಯ ಹುಳು, ಎಲ್ಲವೂ ನಮ್ಮನ್ನು ಹೊಸತೇ ಆದ ಲೋಕವೊಂದನ್ನು ಪರಿಚಯಿಸಿಕೊಳ್ಳಲು ಒತ್ತಾಯಿಸುತ್ತಿರುವಂತೆ ಭಾಸವಾಗುತ್ತದೆ. ಇನ್ನೇನು ಮುಗಿದೇ ಹೋಯಿತೆನ್ನುವಾಗ ಧಿಗ್ಗನೆ ಹೊತ್ತಿ ಉರಿಯುವ ಪ್ರೇಮದಂತೆ ಇಲ್ಲಿನ ಕವಿತೆಗಳು ಏನು ಹೇಳಲಿಲ್ಲ ಎನ್ನುವಾಗಲೇ ಎರಡೇ ನಲ್ಲಿ ಎಲ್ಲವನ್ನೂ ಹೇಳಿ ದಿಗ್ಭ್ರಮೆಗೊಳ್ಳುವಂತೆ ಮಾಡಿಬಿಡುತ್ತವೆ. ನನ್ನಲ್ಲೂ ಮಳೆ ಬಂದುನಿನ್ನಲ್ಲೂ ಮಳೆ ಬಂದದ್ದೂತಿಳಿಯುವುದು ಮಳೆ ನಿಂತ ಮೇಲೆ ಇದು ಕೇವಲ ಪ್ರವೀಣರವರ ಸಾಲುಗಳಲ್ಲ. ಅವರ ಸಾಲುಗಳನ್ನು ಓದಿದ ನಂತರ ನಮ್ಮಲ್ಲೂ ಹೀಗೊಂದು ಭಾವ ಹೊಮ್ಮುತ್ತದೆ. ಏನೂ ಆಗಿಲ್ಲವಲ್ಲ ಎನ್ನುವಾಗಲೇ ಕವಿತೆ ನಮ್ಮನ್ನು ನಿಬ್ಬೆರಗಾಗುವ ಒಂದು ತಿರುವಿನಲ್ಲಿ ಕಣ್ಣುಕಟ್ಟಿ ನಿಲ್ಲಿಸಿ ನಾಜೂಕಾಗಿ ತಾನು ಜಾರಿಕೊಳ್ಳುತ್ತದೆ. ಮುಂದಿನ ದಾರಿ ತಿಳಿಯದೇ ಮತ್ತದೇ ಕವನದೊಳಗೆ ಹುದುಗಲೇಬೇಕಾದ ಅನಿವಾರ್‍ಯತೆ ಸೃಷ್ಟಿಯಾಗುವ ವೈಚಿತ್ರ್ಯವನ್ನು ನಾನು ಇಡೀ ಪುಸ್ತಕದ ತುಂಬ ಹಲವಾರು ಸಲ ಎದುರುಗೊಂಡಿದ್ದೇನೆ. ನೆಲದ ನಂಟು ಸಾಕೆಂದು ಸಮುದ್ರಕ್ಕೆ ಧುಮುಕಿದರೆನೀರೆಲ್ಲ ಜೀವಗಾಳಿಯಾಗಿ ಮುಟ್ಟಿದ್ದು ಮತ್ತೊಂದು ನೆಲ ಒಂದು ಕವಿತೆಯ ರೂಪಕಗಳು ಸಾಕೆಂದು ಮತ್ತೊಮದು ಕವಿತೆಗೆ ನಡೆದರೆ ಅಲ್ಲೂ ಎದುರಾಗುವುದು ಒಳಸುಳಿಗೆ ಸಿಕ್ಕಿಸುವ ನುಡಿಚಿತ್ರಗಳೇ ಹೊರತೂ ಮತ್ತೇನೂ ಅಲ್ಲ. ಬದುಕು ಇಷ್ಟೇ. ನಿಜ, ಆಜೆಗೇನೂ ಇಲ್ಲ ಎಂಬ ಸುಂದರ ಕಲ್ಪನೆಯಲ್ಲಿಯೇ ನಾವು ಈಚೆಗಿನ ಸೌದರ್‍ಯವನ್ನು ಕಣ್ತುಂಬಿಕೊಂಡು, ವಾಸ್ತವದ ನಿಜಾಯಿತಿಯಲ್ಲಿ ಬದುಕಬೇಕಿದೆ.                                  ***************************** ಲೇಖಕರ ಬಗ್ಗೆ ಎರಡು ಮಾತು:ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು

ಎಂದೂ ಸಾಕೆನಿಸದ ನೆಲದ ನಂಟು, ಸಮುದ್ರದ ಪ್ರೀತಿ Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಮಗುವಾಗಿಸುವ ಸುಂದರ ಹೂ ಮಾಲೆ

ಪುಟ್ಟಲಕ್ಷ್ಮಿ ಕಥೆಗಳುಲೇಖಕರು- ರಘುನಾಥ ಚ ಹಬೆಲೆ-೮೦/-ಪ್ರಕಾಶನ-ಅಂಕಿತ ಪುಸ್ತಕ ಚಿಕ್ಕ ಮಕ್ಕಳ ಲೋಕವೇ ಬೇರೆ ರೀತಿಯದ್ದು. ಕಂಡಿದ್ದೆಲ್ಲವೂ ಅಚ್ಚರಿಯ ವಿಷಯವೇ. ನಾನು ಮೂರನೇ ತರಗತಿಯಲ್ಲಿದ್ದಾಗ ನನ್ನ ಪಕ್ಕದ ಮನೆಯಲ್ಲಿ ದೀಪಾ ಕೊಡ್ಲೆಕೆರೆ ಎನ್ನುವ ನಾಲ್ಕನೆ ತರಗತಿಯ ಗೆಳತಿಯೊಬ್ಬಳಿದ್ದಳು. ಅವಳ ತಂದೆ ಅಲ್ಲೇ ಸಮೀಪದ ಮತ್ತೊಂದು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಅವರು ನಮ್ಮ ಹೆಸರಾಂತ ಕಥೆಗಾgರಾಗಿರುವ ಚಿಂತಾಮಣಿ ಕೊಡ್ಲೆಕೆರೆ ಹಾಗೂ ಮಹಾಬಲಮೂರ್ತಿ ಕೊಡ್ಲೆಕೆರೆಯವರ ಚಿಕ್ಕಪ್ಪ. ನಾನು ದೀಪಾ ಆಗಲೇ ಕವನ ಬರೆಯುತ್ತೇವೆಂದು ಏನೇನೋ ಬರೆಯುತ್ತಿದ್ದೆವು. ಆಗ ನಾವಿದ್ದ ಅಮ್ಮಿನಳ್ಳಿ ಎಂಬ ಪುಟ್ಟ ಊರಿನ ಹೊರಗಿರುವ, ಗಣಪತಿ ಮೂರ್ತಿಯನ್ನು ಮುಳುಗಿಸುವ ದೊಡ್ಡ ಹಳ್ಳದ ಸಂಕದ ಮೇಲೆ ದೆವ್ವಗಳು ಓಡಾಡುತ್ತವೆ ಎಂಬ ಪ್ರತೀತಿಯಿತ್ತು. ಅಥವಾ ನಮ್ಮ ಹುಡುಗಾಟವನ್ನು ಕಡಿಮೆ ಮಾಡಲು ನಾವು ವಾಸವಾಗಿದ್ದ ಮನೆಯ ಓನರ್ ತೇಜಕ್ಕ ನಮ್ಮನ್ನು ಹೆದರಿಸಲೆಂದು ಹೇಳಿದ್ದಳೋ ಗೊತ್ತಿಲ್ಲ. ಅಂತೂ ನಾವಿಬ್ಬರೂ ಅದನ್ನು ನಂಬಿಕೊಂಡು ಸಂಕದ ಮೇಲಿರಬಹುದಾದ ದೆವ್ವದ ಕುರಿತು ಒಂದು ಕವಿತೆ ಬರೆದ ನೆನಪು. ನನ್ನ ಅಪ್ಪ ‘ನನ್ನ ಮಗಳೂ ಕವಿತೆ ಬರಿತಿದ್ದಾಳೆ’ ಎಂದು ಹೆಮ್ಮೆ ಪಟ್ಟರೂ ನಂತರ ನಿಧಾನವಾಗಿ ದೆವ್ವವನ್ನು ನಂಬ್ತೀಯಾ ನೀನು ಎಂದು ಕೇಳಿದ್ದರು. ಅವರೇ ಕಲಿಸಿಕೊಟ್ಟ ಪಾಠ. ಇಲ್ಲ ಎಂದಿದ್ದೆ. ಹಾಗಿದ್ದರೆ ನಂಬದ ವಿಷಯಗಳ ಬಗ್ಗೆ ಬರೆದು ಮೂಢನಂಬಿಕೆ ಪ್ರದರ್ಶಿಸಬಾರದು’ ಎಂದಿದ್ದರು ಅಲ್ಲಿಗೆ ನನ್ನ ಮೊದಲ ಕವಿತೆ ಎಲ್ಲೋ ಕಳೆದು ಹೋಯ್ತು. ಆದರೂ ಈ ದೆವ್ವದ ಕುರಿತಾದ ಕಥೆಗಳು ನಂಬದೇ ಹೋದರೂ ಯಾವತ್ತೂ ನನಗೆ ಅತ್ಯಾಸಕ್ತಿಯ ವಿಷಯವೇ. ಹೀಗಾಗಿ ಪುಟ್ಟಲಕ್ಷ್ಮಿಯ ಮೊದಲ ಕಥೆ ಓದುತ್ತಲೇ ಖುಷಿಯಾಗಿಬಿಟ್ಟಿತು. ದುಬಾಕು ದೆವ್ವ ಚಿಕ್ಕ ಮಕ್ಕಳ ತಿಂಡಿಯನ್ನೆಲ್ಲ ತಿಂದು ಟಿಫಿನ್ ಬಾಕ್ಸ್‌ಗೆ ಕಲ್ಲು ಮಣ್ಣು ತುಂಬಿಸಿ, ನಂತರ ಪುಟ್ಟಲಕ್ಷ್ಮಿಯ ಪೋಚರ್ ಘೋಚರ್‌ಗೆ ಹೆದರಿ ಜೆಸಿಬಿಯಾದ ದೆವ್ವದ ಕಥೆಷ್ಟು ಖುಷಿಕೊಟ್ಟಿತೆಂದರೆ ನನಗೆ ಮತ್ತೊಮ್ಮೆ ಬಾಲ್ಯಕ್ಕೆ ಜಿಗಿದ ಅನುಭವವಾಯಿತು.     ಎರಡನೇ ಕಥೆ ಕಾಗೆ ಮರಿಯ ಹೊಟ್ಟೆ ನೋವು ಕೂಡ ಕಾಗೆಯ ಮರಿಯೊಂದು ಶಾಲೆಗೆ ಹೋಗುವ, ದಾರಿಯಲ್ಲಿ ಕೋಕಾ ಕುಡಿದು ಹೊಟ್ಟೆ ನೋವು ಬರಿಸಿಕೊಳ್ಳುವ ವಿಶಿಷ್ಟ ಕಥೆಯುಳ್ಳದ್ದು. ಬುಸ್ ಬುಸ್ ಹೆದ್ದಾರಿಯಂತೂ ಹಾವಿನ ರೂಪದ ಹೆದ್ದಾರಿಯ ಕಥೆ. ಪುಟ್ಟಲಕ್ಷ್ಮಿಯನ್ನು ತಿನ್ನಲು ಬಂದ ದೆವ್ವದ ಹೊಟ್ಟೆಯೊಳಗೆ ಸೋಪಿನ ಗುಳ್ಳೆಗಳು ರಕ್ತದ ಕುದಿತವನ್ನು ಕಡಿಮೆ ಮಾಡಿ ಅದನ್ನು ಹೆದ್ದಾರಿಯನ್ನಾಗಿಸಿದ ಕಥೆ ಇದು. ಗಿಬಾಕು ಮತ್ತು ಕು ಬೇಂ ಶಿ ಮಾ ಗೋ ಅಗಿ ಚಂ ಕಥೆಯಲ್ಲಿ ಜೆಸಿಬಿ ಆಗಿ ಬದಲಾಗಿದ್ದ ದುಬಾಕು ದೆವ್ವದ ಅಣ್ಣ ಗಿಬಾಕು ಮನೆಗಳನ್ನೆಲ್ಲ ನುಂಗುವುದರಿಂದ ಈಗಿನ ಅಪಾರ್ಟಮೆಂಟ್‌ಗಳಾಗಿ ಬದಲಾಗುವ ಚಿತ್ರವಿದೆ. ಗಾಂಧಿ ತಾತನ ಕಾಡಿನ ಮಕ್ಕಳು ಕಥೆ ಎಷ್ಟೊಂದು ಕಾಲ್ಪನಿಕ, ಆದರೆ ಎಷ್ಟೊಂದು ವಾಸ್ತವ. ಇಲ್ಲಿ ಬರುವ ಹುಲಿ, ಆನೆ, ಜಿರಾಳೆಗಳು ಅದೆಷ್ಟು ಮನುಷ್ಯ ಲೋಕಕ್ಕೆ ಹೊಂದಿಕೊಂಡಂತಿದ್ದರೂ ಅವುಗಳು ಕಾಡಿನಲ್ಲಿ ಸ್ವತಂತ್ರವಾಗಿರುವುದೇ ಸಮಂಜಸವಾದುದು. ಈ ಕಥೆಯ ಪಾತ್ರವಾಗಿರುವ ಗಾಂಧಿತಾತ ಕೂಡ ಎಷ್ಟೊಂದು ಸಹಜ ಎನ್ನಿಸುವಂತಿದೆ. ತೀರಾ ಸಹಜವಾಗಿ ಫೋಟೊದಿಂದ ಎದ್ದು ಪ್ರಾಣಿಗಳಿರುವ ಮೂರು ಪೆಟ್ಟಿಗೆಯನ್ನು ಕೊಡುವುದು ಎಲ್ಲೂ ಅತಿರೇಖ ಅನ್ನುಸುವುದಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಭಯವಾದರೆ, ಕೆಟ್ಟ ಕನಸುಗಳೇನಾದರೂ ಬಿದ್ದರೆ ಗಾಂಧಿತಾತನನ್ನು ನೆನಪಿಸಿಕೊಂಡು ನಿದ್ದೆ ಮಾಡು ಎನ್ನುವ ಪುಟ್ಟಲಕ್ಷ್ಮಿಯ ತಂದೆತಾಯಿಯರ ಮಾತು ನಿಜಕ್ಕೂ ದೊಡ್ಡ ಸಂದೇಶವನ್ನು ಹೇಳುತ್ತದೆಯೆಂದೇ ನನಗನ್ನಿಸುತ್ತದೆ. ಕಾಡುಪ್ರಾಣಿಗಳನ್ನು ಪಂಜರದಲ್ಲಿಟ್ಟು ಪ್ರದರ್ಶನದ ಗೊಂಬೆಗಳಂತೆ ಆಡಿಸುವ ನಾವು ಪುಟ್ಟಲಕ್ಷ್ಮಿಯ ಕನಸಿನಂತೆ ನಮ್ಮನ್ನೆಲ್ಲ ಪಂಜರದಲ್ಲಿಟ್ಟುಬಿಟ್ಟರೆ ಏನಾಗಬಹುದು ಎಂದು ಯೋಚಿಸಿದರೆ ಭಯವಾಗುತ್ತದೆ. ಹೀಗಾಗಿ ಪುಟ್ಟಲಕ್ಷ್ಮಿ ಎಲ್ಲ ಪ್ರಾಣಿಗಳನ್ನು ಕಾಡಿಗೆ ಬಿಟ್ಟುಬಿಡುವ ನಿರ್ಧಾರ ಮಾಡುತ್ತಾಳೆ. ಕಥೆಯ ದೃಷ್ಟಿಯಿಂದ ಹಾಗೂ ಅದರ ಒಳತಿರುಳಿನ ದೃಷ್ಟಿಯಿಂದ ಈ ಕಥೆ ತುಂಬಾ ಮಹತ್ವದ್ದೆನಿಸುತ್ತದೆ. ಕರೀಮಿಯ ಚುಕ್ಕಿಗಳ ಚೆಂಡಾಟ ಕಥೆಯಲ್ಲಿ  ತನ್ನನ್ನು ಕರೀಮಿ ಎಂದ ನಕ್ಷತ್ರವನ್ನು ಹೊಡೆಯಲೆಂದು ಚೆಂಡು, ಕಲ್ಲುಗಳನ್ನೆಲ್ಲ ಎಸೆದು ನಂತರ ಕಪ್ಪು ಕಸ್ತೂರಿ ಕನ್ನಡ ಕಸ್ತೂರಿ ಮಂತ್ರ ಹೇಳಿ ಚುಕ್ಕಿಗಳನ್ನೆಲ್ಲ ಚುಚ್ಚಿ ಗಾಯ ಮಾಡಿದ ಪುಟ್ಟಲಕ್ಷ್ಮಿಯ ಕತೆ ಖಂಡಿತವಾಗಿಯೂ ನಿಮಗೆ ನಿಮ್ಮ ಬಾಲ್ಯವನ್ನು ನೆನಪಿಸದಿದ್ದರೆ ಹೇಳಿ. ಅಪ್ಪನ ಹಾಗೆ ಕಪ್ಪು ಬಣ್ಣ ಹೊತ್ತುಕೊಂಡ ನನಗೆ ಅಮ್ಮನ ಹಾಗೆ ಬೆಳ್ಳಗಿರುವ ಅಣ್ಣನನ್ನು ಕಂಡರೆ ಅಸೂಯೆ. ಕಪ್ಪು ಬಣ್ಣವೇ ಚಂದ ಎಂದು ಪದೇ ಪದೇ ವಾದಿಸುತ್ತ, ದೇವರ ಶಿಲೆ ಕೂಡ ಕಪ್ಪು ಗೊತ್ತಾ? ಎಂದು ನನ್ನ ಮೇಲೆ ನಾನೇ ದೈವತ್ವವನ್ನು ಆರೋಪಿಸಿಕೊಳ್ಳುತ್ತಿದ್ದೆ. ಬಿಳಿಬಣ್ಣ  ಸ್ವಲ್ಪ ಕೂಡ ಚಮದ ಅಲ್ಲ ಅಂತಿದ್ದೆ. ನಿನ್ನ ಮುಖದ ಮೇಲೆ ಒಂದು ಕಪ್ಪು ಮಚ್ಚೆ ಇದ್ದರೆ ಎಷ್ಟು ಚಂದ ಕಾಣ್ತದೆ, ಅದೇ ನನ್ನ ಮುಖದ ಮೇಲೆ ನಿನ್ನ ಬಿಳಿಬಣ್ಣದ ಮಚ್ಚೆ ಇಟ್ಟರೆ ಅಸಹ್ಯ ಎಂದಾಗಲೆಲ್ಲ ಅಣ್ಣ ನನ್ನ ಮುಗ್ಧತೆಗೆ ನಗುತ್ತಿದ್ದ. ಇಲ್ಲಿ ಪುಟ್ಟಲಕ್ಷ್ಮಿ ಕೂಡ ಹೊಟ್ಟೆಕಿಚ್ಚಿನಿಂದ ಸುಟ್ಟುಕೊಂಡೇ ನೀನು ಹೀಗೆ ಬಿಳುಚಿರೋದು ಎನ್ನುತ್ತಾಳೆ. ಬಣ್ಣಗಳ ತಾರತಮ್ಯವನ್ನು ವಿರೋಧಿಸುವ ಕಥೆ ಖುಷಿ ನೀಡುತ್ತದೆ.  ಮತ್ತೂ ವಿಶಿಷ್ಟವೆಂದರೆ ಇಲ್ಲಿ ನಾವೆಲ್ಲ ಚಂದಮಾಮ ಎಂದು ಕರೆಯುವ ಚಂದ್ರ ಚಂದ್ರಮ್ಮನಾಗಿರುವುದು. ಗುಡಾಣ ಹೊಟ್ಟೆಯ ಸೋಮಾರಿ ಮೊಲ ತೀರಾ ಆಸಕ್ತಿದಾಯಕವಾಗಿದೆ. ಆಹಾರ ಹುಡುಕುವ ಸೋಮಾರಿತನಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಕಸದ ಬುಟ್ಟಿಯಾಗಿ ನಿಂತ ಮೊಲಗಳ ಕಥೆ ಇದು. ಆದರೆ ಕೊನೆಯಲ್ಲಿ ಆ ಮೊಲ ಕಾಡನ್ನೆಲ್ಲ ಕಡಿದು ಬಿಟ್ಟಿದ್ದೀರಿ, ತಿನ್ನಲು ಏನೂ ಸಿಗದು ಎನ್ನುವ ಮಾತು ಮನಮುಟ್ಟುತ್ತದೆ. ಸ್ವಯಂವರ ಕಥೆಯಲ್ಲಿರಾಜನನ್ನು ಆರಿಸಲು ಪಟ್ಟದಾನೆಯ ಸೊಂಡಿಲಿಗೆ ಮಾಲೆ ನೀಡಿ ಅದು ಯಾರ ಕೊರಳಿಗೆ ಹಾಕುತ್ತದೋ ಅವನನ್ನು ರಾಜ ಎನ್ನಲಾಗುತ್ತಿತ್ತಂತೆ. ಅದು ರಾಜ್ಯಲಕ್ಷ್ಮಿಯ ಜೊತೆಗಾದ ಸ್ವಯಂವರ. ಆದರೆ ರಾಜನಾಗಬೇಕೆಂದು ಬಯಸಿದವರೆಲ್ಲ, ಮಾವುತನಿಗೆ, ಅವನ ಹೆಂಡತಿ ಮಗನಿಗೆ ಆಮಿಷ ಒಡ್ಡಿ ತನಗೇ ಮಾಲೆ ಹಾಕಬೇಕು ಎಂದು ಕೇಳಿಕೊಳ್ಳುತ್ತಿದ್ದರಂತೆ. ಕೊನೆಗೆ ಮಾವುತನನ್ನೂ ಅವನ ಪಟ್ಟದಾನೆಯನ್ನು ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕುತ್ತಿದ್ದರಂತೆ. ಆದರೆ ಆನೆ ಮಾತ್ರ ಕಾರಣಿಕನೊಬ್ಬನಿಗೆ ಮಾಲೆ ಹಾಕಿತಂತೆ. ಈ ಕಥೆಯನ್ನು ಹೇಳಿದ ಪುಟ್ಟಲಕ್ಷ್ಮಿಯ ಅಜ್ಜಿ ಈಗ ಚುನಾವಣಾ ಕಣದಲ್ಲಿರುವವರೂ ಅಂತಹುದ್ದೇ ಅಭ್ಯರ್ಥಿಗಳು ಎನ್ನುತ್ತಾರಲ್ಲದೇ ಆನೆಯಂತೆ ಒಳ್ಳೆಯವನನ್ನು ಆರಿಸಿ ಎನ್ನುತ್ತಾರೆ. ಆದರೆ ಕೊನೆಯ ಮಾತು ನಮ್ಮೆಲ್ಲರನ್ನೂ ನಾಚಿಕೆ ಪಡುವಂತೆ ಮಾಡುತ್ತದೆ. ಹಿರಿಯರು ಮಾಡುವ ಗಲೀಜನ್ನೆಲ್ಲ ಚಿಕ್ಕ ಮಕ್ಕಳು ತೊಳೆಯುವಂತಹ ಕಾಲ ಬಂತಪ್ಪಾ ಎಂದು ಪುಟ್ಟ ಲಕ್ಷ್ಮಿ ಹೇಳುತ್ತಾಳೆ. ನಾವು ಹಾಳು ಮಾಡಿ ಅದರ ಫಲವನ್ನು ಕಿರಿಯರು ಅನುಭವಿಸುವಂತೆ ಮಾಡುವ ನಮ್ಮ ದುರಾಸೆಗೆ, ಲಾಲಸೆಗೆ ಧಿಕ್ಕಾರವಿರಲಿ. ಲೈಟು ಕಂಬದ ಬೆಳಕಿನಲ್ಲಿ ಕಥೆಯಲ್ಲಿ ಶಾಲೆಗೆ ಹೋಗದ ರಾಜುವನ್ನು ಕನಸಿನಲ್ಲಿ ಬಂದ ಲೈಟ್‌ಕಂಬ ವಿಶ್ವೇಶ್ವರಯ್ಯನವರ ಕಥೆ ಹೇಳಿ ಶಾಲೆಗೆ ಹೋಗುವಂತೆ ಮನ ಒಲಿಸುತ್ತದೆ. ಮಾರನೆಯ ದಿನ ಶಾಲೆಗೆ ಬಂದವನನ್ನು ಪುಟ್ಟಲಕ್ಷ್ಮಿ ಅಕ್ಕರೆಯಿಂದ ಕರೆದುಕೊಂಡು ಹೋಗುತ್ತಾಳೆ. ಮಳೆರಾಯನ ವಿರುದ್ಧದ ದೂರಲ್ಲಿ ಕಾಲಕಾಲಕ್ಕೆ ಮಳೆ ಸುರಿಸದ ವರುಣನನ್ನು ದೇವಲೋಕದ ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ಮಾಡುವ, ಭೂಲೋಕದ ಜನ ಮರ ಕಡಿದು, ಪರಿಸರವನ್ನು ಮಾಲಿನ್ಯ ಮಾಡಿದ್ದರಿಂದ ಮಳೆಯಾಗುತ್ತಿಲ್ಲ ಎಂದು ತೀರ್ಮಾನಿಸುವ ಚಿತ್ರಣವಿದೆ. ಚುಕ್ಕಿ ಬೇಕಾ ಚುಕ್ಕಿಯಲ್ಲಿ ವೀಕೆಂಡ್‌ನಲ್ಲಿ ಭೂಲೋಕಕ್ಕೆ ಬರುವ ದೇವತೆಗಳ ಕಥೆ ನಗು ತರಿಸಿದರೂಮಳೆ ಸುರಿಸಲಾಗದಂತೆ ಎಡವಟ್ಟು ಮಾಡಿಕೊಂಡ ವರುಣ ದೇವಲೋಕದ ಬರಗಾಲಕ್ಕೂ ಕಾರಣನಾಗುತ್ತಾನೆ. ಇತ್ತ ಮಕ್ಕಳನ್ನು ಸಾಕಲಾಗದ ಚಂದ್ರಮ್ಮ ಚಿಕ್ಕಿಗಳನ್ನೆಲ್ಲ ಭೂಲೋಕಕ್ಕೆ ತಂದು ಮಾರಲು ಪ್ರಯತ್ನಿಸುತ್ತಾಳಾದರೂ ಗಾಜಿನ ಚೂರೆಂದು ಯಾರೂ ಕೊಳ್ಳುವುದಿಲ್ಲ. ನೂರು ರೂಪಾಯಿ ತಳ್ಳು ಎನ್ನುತ್ತ ಬಂದ ಪೋಲೀಸರು ಚಂದ್ರಮ್ಮನ ಕೈ ಎಳೆದಾಗಲೇ ಧೋ ಎಂದು ಮಳೆ ಸುರಿದು ಬುಟ್ಟಿ ಚಲ್ಲಾಪಿಲ್ಲಿಯಾಗುತ್ತದೆ, ಚುಕ್ಕಿಗಳು ಮಳೆಯಲ್ಲಿ ಕೊಚ್ಚಿ ಹೋಗುತ್ತದೆ. ತಪ್ಪಿಸಿಕೊಳ್ಳಲು ಯತ್ನಿಸಿದ ಚಂದ್ರಮ್ಮನಿಗೆ ಫೋಲೀಸರು ಬೆತ್ತ ಬೀಸಿ ಎಚ್ಚರ ತಪ್ಪುವಂತಾಗುತ್ತದೆ. ಕಣ್ಣು ಬಿಟ್ಟರೆ ಗಾಳಿ ಮಳೆ ಬೆಳಕಿಂದ ಆಕಾಶ ಸೇರಿದ ಚಿಕ್ಕಿಗಳು ಹಾಗೂ ಚಂದ್ರಮ್ಮ ಖುಷಿಯಲ್ಲಿರುತ್ತವೆ. ಎಷ್ಟೊಂದು ತೀವ್ರತೆಯನ್ನು ಹೊಂದಿದೆ ಈ ಕಥೆ. ದೇವತೆಗಳೂ ಮನುಷ್ಯರಂತೆ ವೀಕೆಂಡ್ ಪಾರ್ಟಿ ಮಾಡುವುದು, ಕಲಬೆರಿಕೆ ಅಮೃತ, ಮೂಲಿಕೆಗಳು, ಮಕ್ಕಳನ್ನು ಮಾರಲೆತ್ನಿಸುವುದು ಮನಸ್ಸನ್ನು ತಟ್ಟುತ್ತದೆ. ಮಂಚದ ಕಾಲು ಕಥೆ ಹೇಳಿತು ಕಥೆಯಲ್ಲಿ ಅಪ್ಪ ಅಮ್ಮ ಕಥೆ ಹೇಳದಿದ್ದಾಗ ಮುನಿಸಿಕೊಂಡಿದ್ದ ಪುಟ್ಟ ಲಕ್ಷ್ಮಿಗೆ ಮಂಚದ ಕಾಲು ಕಾಡು ಕಡಿದು ನಾಡು ಮಾಡಿಕೊಂಡ ಮನುಷ್ಯನ ದುರ್ವತನೆಯನ್ನು ತಿಳಿಸುವ ಕಥೆ ಹೇಳುತ್ತದೆ. ಸೂರ್ಯನ ದೀಪದಲ್ಲಿ ವಿಶ್ರಾಂತಿ ಇಲ್ಲದೇ ದುಡಿದ ಸೂರ್‍ಯನಿಗೆ ದೇವಲೀಕದವರೆಲ್ಲ ಸನ್ಮಾನ ಮಾಡಿ ದೀಪದ ಕಾಣಿಕೆ ಕೊಟ್ಟರೆ ದಿನವಿಡೀ ಬೆಳಗುವ ಅದರಿಂದ ಕಿರಿಕಿರಿಯಾಗಿ ಸೂರ್‍ಯನ ಹೆಂಡತಿ ಅದನ್ನು ಒಡೆದು ಆ ಚೂರುಗಳೆಲ್ಲ ಚಂದ್ರ ಚುಕ್ಕಿಗಳಾದ ಕಥೆಯನ್ನು ರತ್ನಮ್ಮಜ್ಜಿ ಪುಟ್ಟಲಕ್ಷ್ಮಿಗೆ ಹೇಳುತ್ತಾಳೆ. ಚಾಕಲೇಟು ತಿಂದ ಟ್ಯೋಮಾಟೊ ಕಥೆಯಲ್ಲಿ ಗಿಡದಲ್ಲಿ ಬೆಳೆದ ಟೊಮಾಟೋ ಎಲ್ಲೆಲ್ಲಿಂದಲೋ ಬಂದು ತರಕಾರಿ ಅಂಗಡಿಯಿಂದ ಅಮ್ಮನ ಮುಖಾಂತರ ಪುಟ್ಟಲಕ್ಷ್ಮಿ ಮನೆಗೆ ಬರುತ್ತದೆ. ಗಾಯಗೊಂಡ ಟೋಮಾಟೋ ಸತ್ತೇ ಹೋಗುತ್ತೇನೆ, ಅದಕ್ಕೂ ಮೊದಲು ಒಂದು ಚಾಕಲೇಟು ತಿನ್ನಬೇಕು ಎಂದು ಪುಟ್ಟಲಕ್ಷ್ಮಿಯ ಬಳಿ ಕೇಳಿಕೊಳ್ಳುತ್ತದೆ.. ಚಕಲೇಟು ತಿಂದ ಟೋಮೇಟೊವನ್ನು ಪುಟ್ಟಲಕ್ಷ್ಮಿ ತೋಟದಲ್ಲಿ ಹುಗಿಯುತ್ತಾಳೆ. ಅದರಿಂದ ಎಷ್ಟೆಲ್ಲಾ ಟೋಮೇಟೋ ಗಿಡಗಳು… ಅವೆಲ್ಲ ಟೋಮೇಟೋ ಹಣ್ಣಿನಂತಹ ಚಾಕಲೇಟುಗಳನ್ನು ಬಿಡುತ್ತವೆ.    ಇಡೀ ಪುಸ್ತಕದ ಕಥೆಗಳು ಆಸಕ್ತಿದಾಯಕವಾಗಿ ಓದಿಸಿಕೊಳ್ಳುತ್ತವೆ. ದೆವ್ವದ ಕಥೆ ಬಂದರೂ ಆ ದೆವ್ವವನ್ನು ಓಡಿಸುವ ಮಂತ್ರ ಎಷ್ಟೊಂದು ಸುಲಭದ್ದು. ಬರೀ ಘಾಚರ್ ಘೋಚರ್ ಎಮದರಾಯಿತು. ಆಕಾಶ ಸೇರಬೇಕೆಂದರೆ ಕಪ್ಪು ಕಸ್ತೂರಿ ಕನ್ನಡ ಕಸ್ತೂರಿ ಮಂತ್ರ ಪಟಿಸಿದರಾಯಿತು. ಹೀಗಾಗಿ ಇಲ್ಲಿ ಯಾವುದೂ ಅತಿರೇಕ ಎನ್ನಿಸಿಕೊಳ್ಳುವುದಿಲ್ಲ. ಎಲ್ಲವೂ ಸೀದಾಸಾದಾ ನಮ್ಮ ಮನೆಯಲ್ಲಿಯೇ ನಡೆಯುತ್ತಿರುವಷ್ಟು ಆತ್ಮೀಯ. ಪರಿಸರದ ಕುರಿತಾಗಿ, ಗಿಡಮರಗಳ ಕುರಿತಾಗಿ, ಶಾಲೆಗೆ ಹೋಗುವುದಕ್ಕಾಗಿ ಹೀಗೆ ಎಲ್ಲದಕ್ಕೂ ರಘುನಾಥ ಚ.ಹಾ ತುಂಬ ಚಂದದ ಅಷ್ಟೇ ಸರಳವಾದ, ಓದಲು ಒಂದಿಷ್ಟೂ ಬೇಸರವೆನಿಸದ ಕಥೆಗಳನ್ನು ಹೆಣೆದಿದ್ದಾರೆ. ಬುಟ್ಟಿಯಲ್ಲಿ ತುಂಬಿರುವ ಹತ್ತಾರು ಹೂಗಳನ್ನು ಹಣೆದು ಮಾಲೆ ಮಾಡಿದಂತೆ ಈ ಕಥೆಗಳಲ್ಲಿ ಪುಟ್ಟಲಕ್ಷ್ಮಿ ದಾರವಾಗಿ ಎಲ್ಲ ಕಥೆಗಳನ್ನು ಬೆಸೆದಿರುವ ರೀತಿಯೇ ಅಮೋಘವಾದ್ದು. ಇಲ್ಲಿನ ದೇವರುಗಳೂ ಕೂಡ ಅದ್ಭುತವನ್ನು ಸೃಷ್ಟಿಸುವುದಿಲ್ಲ. ನಮ್ಮಂತೆ ಸಹಜವಾಗಿದ್ದು ಆತ್ಮೀಯವಾಗುವವರು. ಅದಕ್ಕೂ ಹೆಚ್ಚಾಗಿ ಭಯಗೊಂಡಾಗ ಜಪಿಸುವ ಗಾಂಧಿತಾತನ ಹೆಸರು ತೀರಾ ಕುತೂಹಲ ಹುಟ್ಟಿಸುತ್ತದೆ. ಗಾಂಧಿಯನ್ನು ಕೊಂದವರನ್ನು ಪೂಜಿಸುವ ಈ ಕಾಲಘಟ್ಟದಲ್ಲಿ ಇಂತಹ ಕಥೆಗಳು ಇನ್ನಷ್ಟು ಬೇಕಿದೆ. ನಿಜ, ಪುಟ್ಟಲಕ್ಷ್ಮಿಯ ಗೆಳೆತನ ಬೇಕೆಂದರೆ ಈ ಕಥೆಗಳನ್ನು ಓದಲೇ ಬೇಕು, ಓದಿ ಮಗುವಾಗಲೇ ಬೇಕು.                             ************************ ಲೇಖಕರ ಬಗ್ಗೆ ಎರಡು ಮಾತು:ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು

ಮಗುವಾಗಿಸುವ ಸುಂದರ ಹೂ ಮಾಲೆ Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ನವಿರು ಹಾಸ್ಯದೊಳಗೆ ಚುಚ್ಚುವ ಮೊನಚಿದೆ ಹಿಂದೊಮ್ಮೆ ಪ್ರಮಿಳಾ ರಾಜ್ಯವೊಂದಿತ್ತಂತೆ. ಅಲ್ಲಿ ಮಹಿಳೆಯರೇ ರಾಣಿಯರು, ಅಧಿಕಾರದಲ್ಲಿರುವವರು ಎಲ್ಲಾ. ಅಲ್ಲಿ ಗಂಡಸರಿಗೆ ಪ್ರವೇಶವೇ ಇರಲಿಲ್ಲವಂತೆ. ಸಂತಾನ ಬೇಕಾದ ಸ್ತ್ರೀಯರೂ ರಾಜ್ಯದ ಹೊರಗೆ ಹೋಗಿ ಪಡೆಯಬೇಕಾಗಿತ್ತಂತೆ. ಒಂದುವೇಳೆ ಗಂಡು ಸಂತಾನವನ್ನು ಪಡೆದರೆ ಆ ಮಗುವನ್ನು ಅಲ್ಲಿಯೇ ಬಿಟ್ಟು ಬಿಡುವುದು ಅನಿವಾರ್ಯವಾಗಿತ್ತಂತೆ. ಆದರೆ ಹೆಣ್ಣು ಮಗುವಾಗಿದ್ದರೆ ಮಾತ್ರ ತಮ್ಮ ರಾಜ್ಯಕ್ಕೆ ಕರೆದೊಯ್ಯಬಹುದಿತ್ತಂತೆ. ಅಂತಹುದ್ದೊಂದು ಪ್ರಮಿಳಾ ರಾಜ್ಯವಿದ್ದರೆ  ನಾನೂ ಅಲ್ಲಿಯೇ ಹೋಗಿ ಇರಬಹುದಾಗಿತ್ತು ಎಂದು ಎಷ್ಟೋ ಸಲ ಅಂದುಕೊಳ್ಳುತ್ತಿರುತ್ತೇನೆ. ಎಷ್ಟೊಂದು ಕೆಲಸಗಳು. ಮುಗಿಯದ, ಮುಗಿಯಲೊಲ್ಲದ ಕೆಲಸಗಳು ದಿನವಿಡೀ ಆದಾಗಲೆಲ್ಲ ಮನೆಯಲ್ಲಿರುವ ಹಿರಿಯ, ಕಿರಿಯ ಮತ್ತು ಅತ್ತ ಹಿರಿಯನೂ ಅಲ್ಲದ, ಇತ್ತ ಕಿರಿಯನೂ ಅಲ್ಲದ ಮೂವರು ಗಂಡಸರಿಗೆ ಒಳಗೊಳಗೇ ಬೈಯ್ದುಕೊಳ್ಳುತ್ತೇನೆ. ಮಹಿಳಾ ಸಾಮ್ರಾಜ್ಯವಾಗಬೇಕಿತ್ತು. ಅಧಿಕಾರವೆಲ್ಲ ನಮ್ಮದೇ ಕೈಯ್ಯಲ್ಲಿದ್ದರೆ ಇವರನ್ನೆಲ್ಲ ಆಟ ಆಡಿಸಬಹುದಿತ್ತು ಎಂದುಕೊಳ್ಳುತ್ತ, ಏನೇನು ಮಾಡಬಹುದಿತ್ತು ನಾನು ಎಂದೆಲ್ಲ ಊಹಿಸಿಕೊಂಡು ಮನದೊಳಗೇ ನಸುನಗುತ್ತಿರುತ್ತೇನೆ ಆಗಾಗ. ನಾನು ಹಾಗೆ ನಗುವುದನ್ನು ಕಂಡಾಗಲೆಲ್ಲ ‘ಅಮ್ಮ ಹಗಲುಗನಸು ಕಾಣ್ತಿದ್ದಾಳೆ’ ಎಂದು ಗುಟ್ಟಾಗಿ ಅಪ್ಪನ ಬಳಿ ಹೇಳಿಕೊಂಡು ಮಕ್ಕಳು ನಗುತ್ತಿರುತ್ತಾರೆ. ಅಂತಹುದ್ದೇ ಒಂದು ಕನಸಿನ ಕಥೆ ಇಲ್ಲಿದೆ. ಸಂಕಲನದ ಮೊದಲ ಕಥೆ, ಶೀರ್ಷಿಕಾ ಕಥೆಯೂ ಆದ ಎಪ್ರಿಲ್ ಫೂಲ್ ಇದು. ಇಲ್ಲಿ ಗಂಡ ರಾಮು ಮನೆಗೆಲಸವನ್ನೆಲ್ಲ ಮಾಡುತ್ತಾನೆ. ಮಗ ದೀಪುವನ್ನು ಎಷ್ಟು ಓದಿದರೂ ಮನೆಗೆಲಸ ಮಾಡೋದು ತಾನೆ ಎಂದು ಮುಂದೆ ಓದಿಸದೇ ಮನೆಗೆಲಸ ಕಲಿಸಿದ್ದರು. ಮಗಳು ಭೂಮಿ ಮತ್ತು ಹೆಂಡತಿ ಮೈತ್ರಿ ರಾವ್ ಮಾತ್ರ ಹೊರಗಡೆ ಕೆಲಸಕ್ಕೆ ಹೋಗುವವರು. ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನ್ಯ ಈಗ ಗಂಡಿನ ಮೇಲೆ ಆಗುತ್ತಿದೆ. ಗಂಡು ಹೆಣ್ಣಿನ ಅನುಗ್ರಹಕ್ಕಾಗಿ ಅಳುತ್ತಾನೆ. ತನ್ನನ್ನು ಬಿಟ್ಟು ಹೋದರೆ ಎಂದು ಹಳಹಳಿಸುತ್ತಾನೆ. ಹೆಣ್ಣು ಸರ್ವ ಸ್ವತಂತ್ರಳು. ಹೊರಗಡೆಯ ಜವಾಬ್ಧಾರಿ ಹೆಣ್ಣಿನದ್ದು. ಮಗುವನ್ನು ಹೆತ್ತುಕೊಟ್ಟರೆ ಆಯಿತು. ಪಾಲನೆ ಪೋಷಣೆ ಎಲ್ಲವೂ ಗಂಡಿನದ್ದೇ. ಆಹಾ ಎಂದು ಖುಷಿಯಲ್ಲಿ ಓದುತ್ತಿರುವಾಗಲೇ ಇದು ಕನಸು ಎಂದು ಕಥೆಗಾರ ಹೇಳಿಬಿಡುವುದರೊಂದಿಗೆ ನನ್ನ ಊಹಾಲೋಕವೂ ನಿಂತುಹೋಯಿತು. ಆದರೂ ಕಥೆಯಲ್ಲಿ ಬರುವ ಮೊನಚು ವ್ಯಂಗ್ಯ ಇಂದಿಗೂ ಹೆಣ್ಣಿನ ವೇದನೆಯನ್ನು ಕನ್ನಡಿಯಲ್ಲಿಟ್ಟು ತೋರಿಸುತ್ತದೆ. ಹನಮಂತ ಹಾಲಿಗೇರಿ ಒಬ್ಬ ಸಶಕ್ತ ಕಥೆಗಾರ. ನಿಸೂರಾಗಿ ಕಥೆ ಹೇಳುವ ಕಲೆ ಸಿದ್ಧಿಸಿದೆ. ಅದನ್ನು ಮನಮುಟ್ಟುವಂತೆ ಅಕ್ಷರಕ್ಕಿಳಿಸುವ ಶೈಲಿಯೂ ಕರಗತವಾಗಿದೆ. ಕಾರವಾರದಲ್ಲಿ ಪತ್ರಕರ್ತನಾಗಿದ್ದಾಗ ಕೆಲವು ವರ್ಷಗಳ ಕಾಲ ಹತ್ತಿರದಿಂದ ಗಮನಿಸಿದ್ದೇನೆ. ನೊಂದವರ ಪರ ನಿಲ್ಲುವ, ಶೋಷಣೆಗೊಳಗಾದವರ ಸಹಾಯಕ್ಕೆ ಧಾವಿಸುವ ಅವರ ಗುಣವನ್ನು ಕಣ್ಣಾರೆ ಕಂಡಿದ್ದೇನೆ. ಅಂತಹ ಗುಣದಿಂದಾಗಿಯೇ ಬಹುಪಾರಮ್ಯದ ಮಾಧ್ಯಮ ಲೋಕದಲ್ಲಿ  ಏಕಾಂಗಿಯಾಗಬೇಕಾದುದನ್ನೂ ಗಮನಿಸಿದ್ದೇನೆ. ಆದರೂ ತಳ ಸಮುದಾಯದ ಪರ ಅವರ ಕಾಳಜಿ ಯಾವತ್ತೂ ಕುಂದಿಲ್ಲ. ಹೀಗಾಗಿಯೇ ಇಲ್ಲಿನ ಕಥೆಗಳಲ್ಲಿ  ಶೋಷಣೆಗೊಳಗಾದವರ ನೋವುಗಳನ್ನು ನೇರಾನೇರ ತೆರೆದಿಡುವ ಗುಣವನ್ನು ಕಾಣಬಹುದು. ಅಲೈ ದೇವ್ರ್ರು, ಸುಡುಗಾಡು, ಪಿಡುಗು, ಸ್ವರ್ಗ ಸಾಯುತಿದೆ ಹೀಗೆ ಸಾಲು ಸಾಲಾಗಿ ಕಥೆಗಳು ನಮ್ಮ ಸಾಮಾಜಿಕ ಸ್ಥರಗಳ ಪರಿಚಯ ಮಾಡಿಕೊಡುತ್ತವೆ. ನಮ್ಮದೇ ಧರ್ಮಾಂಧತೆಯನ್ನು ಕಣ್ಣೆದುರು ಬಿಚ್ಚಿಡುತ್ತವೆ.    ನಾನು ಚಿಕ್ಕವಳಿರುವಾಗ  ಮನೆಯ ಸಮೀಪ ಒಂದು ಮುಸ್ಲಿಂ ಮನೆಯಿತ್ತು. ಅವರ ರಂಜಾನ್ ಬಕ್ರೀದ್‌ಗೆ ತಪ್ಪದೇ ಸುತ್ತಮುತ್ತಲಿನ ಮನೆಗಳಿಗೆ ಸುರ್‌ಕುಂಬಾ ಕಳಿಸುತ್ತಿದ್ದರು. ಬಹುತೇಕ ಮನೆಯವರು ಅದನ್ನು ತೆಗೆದುಕೊಂಡೂ ಚೆಲ್ಲಿಬಿಡುತ್ತಿದ್ದುದು ನನಗೀಗಲೂ ನೆನಪಿದೆ. ಆದರೆ ನಮ್ಮ ಮನೆಯಲ್ಲಿ ಅಮ್ಮ ಮಾತ್ರ ಲೋಟಕ್ಕೆ ಹಾಕಿ ಕುಡಿ ಎಂದು ಕುಡಿಸುತ್ತಿದ್ದಳು. ‘ಅವರ ಹಬ್ಬ, ಅವರು ಆಚರಿಸುತ್ತಾರೆ. ಸಿಹಿ ಕೊಡುತ್ತಾರೆ. ನಮ್ಮ ಹಬ್ಬ ಮಾಡಿದಾಗ ನಾವೂ ಪಾಯಸ ಕೊಡುವುದಿಲ್ಲವೇ ಹಾಗೆ’ ಎನ್ನುತ್ತಿದ್ದಳು. ಅಕ್ಕಪಕ್ಕದ ಮನೆಯವರೆಲ್ಲ ಚೆಲ್ಲುವುದನ್ನು ಹೇಳಿದಾಗ ಆಹಾರ ಯಾರೇ ಕೊಟ್ಟರೂ ಅದು ದೇವರಿಗೆ ಸಮಾನ. ಅದಕ್ಕೆ ಅಪಮಾನ ಮಾಡಬಾರದು ಎನ್ನುತ್ತಿದ್ದಳು. ಇತ್ತೀಚೆಗೆ ನಾನು ಈಗಿರುವ ಶಾಲೆಗೆ ಬಂದಾಗ ಎಂಟನೇ ತರಗತಿಗೆ ಬಂದ ಮುಸ್ಲಿಂ ಹುಡುಗ ತಮ್ಮ ಹಬ್ಬಕ್ಕೆ ಮತ್ತದೇ ಸಿರ್‌ಕುಂಬಾ ಹಿಡಿದುಕೊಂಡು ಬಂದಿದ್ದ. ನಾನು ಚಿಕ್ಕವಳಾಗಿದ್ದಾಗಿನ ಖುಷಿಯಲ್ಲಿಯೇ ಅದನ್ನು ಸವಿದಿದ್ದೆ. ಹತ್ತಿರದ ಸದಾಶಿವಗಡ ಕೋಟೆಯ ಬಳಿ ತನ್ನ ಆರಾಧ್ಯ ದೈವ ದುರ್ಗಾದೇವಿ ದೇವಸ್ಥಾನವನ್ನು ಕಟ್ಟಿದ್ದ ಶಿವಾಜಿ ಪಕ್ಕದಲ್ಲೇ ಒಂದು ಮಸೀದಿಯನ್ನೂ ಕಟ್ಟಿಸಿಕೊಟ್ಟಿದ್ದಾನೆ. ಹಿಂದೂ ಧರ್ಮದ ಅತ್ಯುಗ್ರ ನಾಯಕ ಎಂದು ಬಿಂಬಿಸುತ್ತ, ಶಿವಾಜಿಯನ್ನು ಮುಸ್ಲಿಂ ವಿರೋಧಿ ಎನ್ನುವಾಗಲೆಲ್ಲ ನನಗೆ ಈ ಮಸೀದಿ ನೆನಪಾಗುತ್ತಿರುತ್ತದೆ. ದುರ್ಗಾದೇವಿಯ ಜಾತ್ರೆಗೆ ಹಾಗೂ ದರ್ಗಾದ ಉರುಸ್‌ಗೆ ಪರಸ್ಪರ ಸಹಕಾರ ನೀಡುವ ಪದ್ದತಿ ಇಲ್ಲಿದೆ. ಹಿಂದೂ ಮುಸ್ಲಿಮರು ಆಚರಿಸುವ ಮೊಹರಂ ಬಗ್ಗೆ ಕೇಳಿದಾಗಲೆಲ್ಲ ಏನೋ ಖುಷಿ. ನನ್ನ ಪರಿಚಯದ ಒಂದು ಮುಸ್ಲಿಂ ಕುಟುಂಬ ಗಣೇಶ ಚತುರ್ಥಿಗೆ ಗಣೇಶನನ್ನು ಕುಳ್ಳಿರಿಸಿ ಪೂಜೆ ಮಾಡುತ್ತದೆ. ಅದೆಷ್ಟೋ ಕ್ರಿಶ್ಚಿಯನ್ ಕುಟುಂಬದೊಡನೆ ಆತ್ಮೀಯ ಸಂಬಂಧವಿದೆ. ನಮ್ಮೂರಿನ ಬಂಡಿ ಹಬ್ಬದ ಸವಿಗಾಗಿ ನಮ್ಮ ಸಹೋದ್ಯೋಗಿಗಳೂ ಮನೆಗೆ ಬರುವುದಿದೆ. ಕ್ರಿಸ್‌ಮಸ್ ಬಂತೆಂದರೆ ನನ್ನ ಪ್ರೀತಿಯ ವೈನ್‌ಕೇಕ್‌ನ ಸುವಾಸನೆ ನಮ್ಮ ಮನೆಯನ್ನೂ ತುಂಬಿರುತ್ತದೆ. ಧಾರ್ಮಿಕ ಸೌಹಾರ್ಧ ಎನ್ನುವುದು ಬರೀ ಬಾಯಿ ಮಾತಿನಲ್ಲಿ ಹೇಳಿದರೆ ಆಗದು. ಇಲ್ಲಿ ಅಲೈ ಹಬ್ಬದಲ್ಲಿ ಹಾಗೂ ಸುಡುಗಾಡು ಎನ್ನುವ ಕಥೆಗಳಲ್ಲಿ ಕಥೆಗಾರ ಧರ್ಮ ಸಾಮರಸ್ಯದ ಬಗ್ಗೆ ಹೇಳುತ್ತಾ ಹೋಗುತ್ತಾರೆ. ಅಲೈ ಹಬ್ಬದಲ್ಲಿ ಹೆಜ್ಜೆ ಹಾಕುವ ಹುಡುಗರು ಹಿಂದುಗಳು. ಆದರೆ ಅದರ ಆಚರಣೆ ಮಸೀದಿಯಲ್ಲಿ.  ಅದನ್ನು ನಿಲ್ಲಿಸಲೆಂದೇ ಬರುವ ಧರ್ಮದ ಕಟ್ಟಾಳುಗಳ ಮಾತನ್ನು ಮೀರಿಯೂ ಹಬ್ಬ ನಡೆಯುತ್ತದೆ. ಆದರೆ ಸುಡಗಾಡು ಕಥೆಯಲ್ಲಿ ಹಿಂದುಗಳ ರುದ್ರಭೂಮಿಯಲ್ಲಿ ಹೆಣದ ಕೆಲಸ ಮಾಡುತ್ತಿದ್ದವನ್ನು ಹೊರಗೆಸೆದು ಅವನ ಜೀವನವನ್ನೇ ನರಕವನ್ನಾಗಿಸುವ ಕಥೆಯಿದೆ. ಸಿದ್ದಯ್ಯನ ಪವಾಡ ಹಾಗೂ ಸ್ಥಿತಪ್ರಜ್ಞ ಕಥೆಗೂ ನಮ್ಮ ದೇವರೆಂಬ ಬಹುನಾಟಕದ ಕಥಾನಕಗಳನ್ನು ಹೇಳುತ್ತವೆ. ದೇವರೇ ಇಲ್ಲ ಎಂಬ ಸತ್ಯವನ್ನರಿತ ಸಿದ್ದಯ್ಯನನ್ನೇ ದೇವರನ್ನಾಗಿಸುವ ಜನರ ಮೂರ್ಖತನವೋ ಮುಗ್ಧತೆಯೋ ಎಂದು ಹೇಳಲಾಗದ ನಡುವಳಿಕೆಯಿದ್ದರೆ ಸ್ಥಿತಿಪ್ರಜ್ಞದಲ್ಲಿ ತನ್ನ ತಾಯಿ ತೀರಿ ಹೋದರೂ ನಗುನಗುತ್ತ ದೇವರ ಪೂಜೆಗೆ ಅಣಿಯಾಗುವ ಮಠಾಧೀಶನೊಬ್ಬನ ಮನುಷ್ಯತ್ವ ಕೊನೆಗೊಂಡ ವ್ಯಕ್ತಿಯ ಚಿತ್ರಣವಿದೆ. ಫಾರಿನ್ ಹೊಲೆಯ ಕಥೆಯಂತೂ ನಮ್ಮ ಧರ್ಮದ ಲೂಪ್‌ಹೋಲ್‌ಗಳನ್ನು ಅತ್ಯಂತ ತೀಕ್ಷ್ಣವಾಗಿ ನಮ್ಮೆದರು ಬೆತ್ತಲಾಗಿಸುತ್ತದೆ. ಬೀಪ್ ತಿನ್ನಬೇಕೆಂದು ಬಯಸಿದ ವಿದೇಶಿ ಕ್ಯಾಮರೂನ್ ಭಾರತದಲ್ಲಿ ಮಾತ್ರ ಸಿದ್ಧವಾಗುವ ಬೀಫ್‌ನ ಮಸಾಲೆ ರುಚಿಯನ್ನು ತಮ್ಮ ಊರಲ್ಲಿ ವರ್ಣಿಸುವುದನ್ನು ಹೇಳುತ್ತ ನಿರೂಪಕನ ಧರ್ಮವನ್ನು ಕರಾರುವಕ್ಕಾಗಿ ವಿಶ್ಲೇಷಿಸುತ್ತಾನೆ.    ಪಿಡುಗು ಕಥೆಯಲ್ಲಿ ವೇಶ್ಯೆಯರ ಬದುಕಿನ ಕಥೆಯಿದೆ. ಮಧ್ಯಮ ವರ್ಗದ ಮಹಿಳೆಯರು ಯಾವ್ಯಾವುದೋ ಅನಿವಾರ್ಯ ಕಾರಣಗಳಿಗಾಗಿ ಮೈಮಾರಿಕೊಳ್ಳಬೇಕಾದ ಅನಿವಾರ್ಯತೆಯನ್ನು ಈ ಕಥೆ ಹೇಳುತ್ತದೆ. ಕೆಲವು ವರ್ಷಗಳ ಹಿಂದೆ ಗೀತಾ ನಾಗಭೂಷಣರವರ ಒಂದು ಕಥೆ ಎಂಟನೆ ತರಗತಿಗಿತ್ತು. ಮಗನನ್ನು ಕಾಯಿಲೆಯಿಂದ ಉಳಿಸಿಕೊಳ್ಳಲು ಬೇಕಾದ ಔಷಧ ಹಾಗೂ ಆಸ್ಪತ್ರೆಯ ಖರ್ಚಿಗಾಗಿ ಅನಿವಾರ್ಯವಾಗಿ ತನ್ನ ಮೈಯನ್ನು ಒಪ್ಪಿಸಲು ನಿರ್ಧರಿಸುವ ಕಥೆಯದು. ಆದರೆ ಅಂತಹ ಸಂದಿಗ್ಧತೆಯನ್ನು ವಿವರಿಸಿ ಮಕ್ಕಳಿಗೆ ತಾಯಿಯ ಮಹತ್ವವನ್ನು ತಿಳಿಹೇಳಬೇಕಾದ ಅಗತ್ಯತೆ ಅಲ್ಲಿತ್ತು. ವೇಶ್ಯೆಯರೆಂದರೆ ಕೆಟ್ಟವರಲ್ಲ, ಇಂತಹ ಅನಿವಾರ್ಯ ಕಾರಣಗಳೂ ಇರುತ್ತವೆ ಎಂದು ಆಗತಾನೆ ಹರೆಯದ ಹೊಸ್ತಿಲಲ್ಲಿ ಹೆಜ್ಜೆ ಇಡುತ್ತಿರುವ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸುವ ಗುರುತರ ಜವಾಬ್ಧಾರಿಯೂ ಶಿಕ್ಷಕರ ಮೇಲಿತ್ತು. ಆದರೆ ಆ ಕಥೆ ಹರೆಯದ ಮಕ್ಕಳ ಹಾದಿ ತಪ್ಪುವಂತೆ ಮಾಡುತ್ತದೆ ಎಂಬ ನೆಪ ಹೇಳಿ ಪಾಠವನ್ನು ರದ್ದುಗೊಳಿಸಲಾಯಿತು. ವೇಶ್ಯೆಯರೆಂದರೆ ಒಂದೇ ತಟ್ಟೆಯಲ್ಲಿಟ್ಟು ತೂಗುವ ಸಮಾಜದ ಹೊಸ ಪೀಳಿಗೆಗೆ ಈ ಕಥೆ ಹೇಳಿದರೆ ದೃಷ್ಟಿಕೋನ ಬದಲಾಗಬಹುದಿತ್ತು. ಇಲ್ಲಿಯೂ ಕೂಡ ಮಗಳಿಗಾಗಿ ಮೈಮಾರಿಕೊಳ್ಳುವ ಮಧ್ಯ ವಯಸ್ಕ ಗ್ರಹಿಣಿ ಮತ್ತು ಅವಳಿಗಾಗಿ ತಾನೇ ಗಿರಾಕಿಗಳನ್ನು ತರುವ ಗಂಡನ ಹಣದ ದಾಹ, ನಂತರ ತೀರಿ ಹೋದ ತಾಯಿಯಂತೆ ಅನಿವಾರ್ಯವಾಗಿ ಮತ್ತದೇ ದಂಧೆಗೆ ಇಳಿಯುವ ಮಗಳು ನಮ್ಮ ಆತ್ಮಸಾಕ್ಷಿಯನ್ನೇ ಬೀದಿಗೆ ತಂದು ಬೆತ್ತಲಾಗಿಸಿ ಪ್ರಶ್ನೆ ಕೇಳಿದಂತೆ ಅನ್ನಿಸುತ್ತದೆ.    ಇತ್ತ ಸ್ತ್ರೀ ಎಂದರೆ ಅಷ್ಟೇ ಸಾಕೆ ಎನ್ನುವ ಕಥೆ ಕೂಡ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ತನ್ನ ಮಾರ್ಕೆಟಿಂಗ್ ವ್ಯವಹಾರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತ ಮನೆಯ ಜವಾಬ್ಧಾರಿ ವಹಿಸಿಕೊಂಡವಳನ್ನು ಕುಗ್ಗಿಸಿ ತಮ್ಮ ಲಾಭಕ್ಕಾಗಿ ಪುರುಷರ ಮೂತ್ರಿಖಾನೆಯಲ್ಲಿ ಅವಳ ನಂಬರ್ ಬರೆದಿಟ್ಟ ಪುರುಚ ಸಮಾಜ ಅವಳು ಸಂಪೂರ್ಣ ಹತಾಷವಾಗುವಂತೆ ಮಾಡಿಬಿಡುತ್ತದೆ. ಒಮ್ಮೆ ಅನುಮಾನಿಸಿದರೂ ವಸ್ತುಸ್ಥಿತಿಯನ್ನು ಅರ್ಥ ಮಾಡಿಕೊಂಡು ಜೊತೆಗೆ ನಿಲ್ಲುವ ಗಂಡನೊಬ್ಬ ಇಲ್ಲಿದ್ದಾನೆ ಎಂಬುದೇ ಈ ಕಥೆ ಓದಿದ ನಂತರ ಒಂದು ನಿರಾಳ ನಿಟ್ಟುಸಿರಿಡುವಂತೆ ಮಾಡುತ್ತದೆ.       ರಾಷ್ಟ್ರೀಯ ಹೆದ್ದಾರಿ ೬೬ನ್ನು ಅಗಲೀಕರಣಗೊಳಿಸುವ ಪ್ರಕ್ರೀಯೆಗೆ ಚಾಲನೆ ದೊರೆತು ನಾಲ್ಕೈದು ವರ್ಷಗಳೇ ಉರುಳಿ ಹೋಗಿದೆಯಾದರೂ ಅಗಲೀಕರಣವಾಗುತ್ತದೆ ಎಂದು ಹೇಳಲಾರಂಭಿಸಿ ಅದೆಷ್ಟೋ ದಶಕಗಳೇ ಕಳೆದು ಹೋಗಿದೆ. ಚಿಕ್ಕವಳಿರುವಾಗ ‘ನಿಮ್ಮ ಮನೆ ರಸ್ತೆಗೆ ಹತ್ತಿರದಲ್ಲಿದೆ. ನಿಮ್ಮನೆ ಗ್ಯಾರಂಟಿ ಹೋಗ್ತದೆ ನೋಡು’ ಎನ್ನುವ ಮಾತು ಕೇಳುತ್ತಲೇ ಬೆಳೆದವಳು ನಾನು. ‘ನಮ್ಮನೆ ಹೋಗೂದಿಲ್ಲ. ಮನೆಪಕ್ಕದಲ್ಲಿ ಪುರಾತತ್ವ ಇಲಾಖೆಗೆ ಸೇರಿದ, ವಿಜಯನಗರ ಸಾಮ್ರಾಜ್ಯದ ಮೂಲ ಮನೆ ಹಾಗೂ ದೇವಸ್ಥಾನವಿದೆ’ ಎನ್ನುತ್ತಿದ್ದೆ ನಾನು. ನಾಗಬಲಿ ಎನ್ನುವ ಈ ಕಥೆಯಲ್ಲಿಯೂ ಬರೀ ಬಾಯಿ ಮಾತಿನಲ್ಲಿದ್ದ ಯೋಜನೆಗೆ ಚಾಲನೆ ದೊರೆತು ಹಾವೂರು ಎನ್ನುವ ಪುರಾತನ ದೇಗುಲದ ಮೇಲೆ ರಸ್ತೆ ಹಾದು ಹೋಗುವುದನ್ನು ವಿರೋಧಿಸುವ ಊರ ಜನರ ಹೋರಾಟ ಯಶಸ್ವಿಯಾದರೂ ಮುಂದೆ ಸರಕಾರ ಅಲ್ಲಿ ಸ್ನೇಕ್ ಟೆಂಪಲ್ ಎನ್ನುವ ಹಾವುಗಳ ಪಾರ್ಕ್ ಮಾಡಿ ಇಡೀ ಊರೆ ನಾಶವಾಗಿ ಹೋಗುವ ಕಥೆ ಇಲ್ಲಿದೆ. ಹಾವುಗಳ ಶಿಲ್ಪ ಮಾಡಿ ಪ್ರದರ್ಶಿಸುವ ನಾವು ನಿಜದ ಹಾವುಗಳನ್ನು ಹೇಗೆ ಕೊಲ್ಲುತ್ತೇವೆ ಎನ್ನುವ ವಿಷಾದ ಇಲ್ಲಿದೆ. ಅದೇರೀತಿ ಹಾಳಾಗಿ ಹೋದ ಊರಿನ ಮತ್ತೊಂದು ಕಥೆ ‘ಸ್ವರ್ಗ ಸಾಯುತ್ತಿದೆ’. ಇಲ್ಲಿ ದೇವಸಗ್ಗ ಎನ್ನುವ ಊರನ್ನು ತಮ್ಮ ಪಾಳೆಗಾರಿಕೆಯಿಂದ ವಶಡಿಸಿಕೊಂಡ ನಾಯಕ, ಹುಲಿಯೋಜನೆಯಿಂದಾಗಿ ಮನೆ ಬಿಟ್ಟ ಊರ ಜನರು, ಊರನ್ನು ಬಿಡಲೊಲ್ಲದ ಒಂದೆರಡು ಮನೆಯವರು ಉಡಲು ವಸ್ತ್ರವಿಲ್ಲದೇ ಬಳ್ಳಿ ಎಲೆಗಳನ್ನು ಸುತ್ತಿಕೊಂಡು ನಾಗರಿಕ ಸಮಾಜಕ್ಕೆ ಆದಿವಾಸಿಗಳಂತೆ ಗೋಚರಿಸುವುದನ್ನು ಕಥೆಗಾರ ಮನೋಜ್ಞವಾಗಿ ಹೇಳಿದ್ದಾರೆ. ಹುಲಿ ಯೋಜನೆ ಅನುಷ್ಟಾನಗೊಂಡ ಹಳ್ಳಿಗಳಲ್ಲಿ ಎಷ್ಟೋ ಸಲ ವಾಸಿಸಿದ್ದೇನೆ. ಮನೆ ಬಿಟ್ಟರೆ ಸರಕಾರ ಪರಿಹಾರ ನೀಡುತ್ತದೆ ಎನ್ನುವ ಆಕರ್ಷಕ ಕೊಡುಗೆಯ ಹೊರತಾಗಿಯೂ ಅಲ್ಲಿನ ಕೆಲ ಜನರು ಮನೆಯನ್ನು ಬಿಡಲೊಲ್ಲದೇ ಅಲ್ಲೇ ಇದ್ದಾರೆ. ಆದರೆ ಅಂತಹ ಹಳ್ಳಿಗಳ ಬಿಟ್ಟ ಮನೆಗಳಿಂದಾಗಿ ನಿರಾಶ್ರಿತರ ತವರೂರಿನಂತಾಗಿರುವುದನ್ನು ಕಂಡು ಬೇಸರಿಸಿದ್ದೇನೆ. ಹರಪ್ಪಾ ಮೊಹಂಜೋದಾರ್‌ನಂತೆ ಅವಶೇಷಗಳ ಊರು ಎನ್ನಿಸಿ ಖೇದವೆನಿಸುತ್ತದೆ. ಈ ಕಥೆಯನ್ನು ಓದಿದಾಗ ಅದೆಲ್ಲ ನೆನಪುಗಳು ಒತ್ತಟ್ಟಿಗೆ ಬಂದು ಕಾಡಲಾರಂಭಿಸಿದ್ದು ಸುಳ್ಳಲ್ಲ. ಮನೆ ಕಟ್ಟುವ ಆಟದಲ್ಲಿ ಬೆಂಗಳೂರೆಂಬ ಬೆಂಗಳೂರಲ್ಲಿ ಮನೆ ಕಟ್ಟಬೇಕೆಂದುಕೊಂಡ ಸಾಮಾನ್ಯ ಪ್ರಿಂಟಿಂಗ್ ಪ್ರೆಸ್‌ನ ನೌಕರನೊಬ್ಬನ ಬವಣೆಯ ಚಿತ್ರವಿದ್ದರೆ ‘ದೀಪದ ಕೆಳಗೆ ಕತ್ತಲು’ ಕಥೆ  ಮಲ ಬಾಚಲು ಹಿಂದೇಟು ಹಾಕಿದ ಪೌರ ಕಾರ್ಮಿಕ ನಂತರ ಎಲ್ಲೂ ಉದ್ಯೋಗ ದೊರಕದೇ ಒದ್ದಾಡುವ ಕಥೆಯನ್ನು ಹೇಳುತ್ತದೆ. ಮಣ್ಣಿಗಾಗಿ ಮಣ್ಣಾದವರು ಸೈನಿಕನೊಬ್ಬನ ಮನಮಿಡಿಯು ಕಥೆಯ ಜೊತೆಗೇ ಅವನ ನಂತರ ಅವನ ಹೆಂಡತಿ ಅನುಭವಿಸುವ ತಲ್ಲಣಗಳನ್ನು ವಿವರಿಸುತ್ತೆ. ಆದರೂ ಈ ಮೂರು ಕಥೆಗಳು ಮತ್ತಿಷ್ಟು ಗಟ್ಟಿಯಾಗಿದ್ದರೆ ಒಳ್ಳೆಯದಿತ್ತು.     ಗಂಡು ಜೋಗ್ಯ ಕಥೆಯು ಬದುಕಬೇಕೆಂಬ ಆಸೆ ಹೊತ್ತ ಮುತ್ತು ಕಟ್ಟಿಸಿಕೊಂಡ ಜೋಗಪ್ಪನ ಪ್ರೀತಿಯನ್ನು ವಿಷದಪಡಿಸಿದರೆ ಪ್ರೀತಿಗೆ ಸೋಲಿಲ್ಲ ಕಥೆ ಗಂಡು ಹೆಣ್ಣಿನ ಸಂಬಂಧದ ಕುರಿತು ಮಾತನಾಡುತ್ತದೆ. ಹಾಗೆ ನೋಡಿದರೆ ಇಡೀ ಸಂಕಲನವೇ ಮಾನವ ಸಹಜ ಭಾವನೆಗಳಿಂದ ಕೂಡಿಕೊಂಡಿದೆ. ಇಲ್ಲಿ ಪ್ರೀತಿಯಿದೆ, ದ್ವೇಷವಿದೆ, ಮೋಸ, ಸುಳ್ಳುಗಳಿವೆ, ಅಷ್ಟೇ ಸಹಜವಾದ ಕಾಮವೂ

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ವಲಸೆಯ ಹಾದಿಯಲ್ಲಿ ಪುಸ್ತಕ- ಮಲಾಣ್ಲೇಖಕರು- ಶಾಂತಾ ನಾಯ್ಕ ಶಿರಗಾನಹಳ್ಳಿಬೆಲೆ-೩೧೦/-ಪ್ರಕಾಶಕರು- ದೇಸಿ ಪುಸ್ತಕ        ಸೃಷ್ಟಿ ನಾಗೇಶ್ ಒಂದಿಷ್ಟು ಪುಸ್ತಕಗಳನ್ನು ಕಳಿಸಿದ್ದರು. ಅದರಲ್ಲಿ ಮಲಾಣ್ ಕೂಡ ಒಂದು. ನೋಡಿದ ಕೂಡಲೇ ಬೇರೆಲ್ಲ ಕೆಲಸ ಬಿಟ್ಟು ಅದನ್ನೇ ಓದಲಾರಂಭಿಸಿದೆ. ಯಾಕೆಂದರೆ ಅದು ನಾನು ತುಂಬಾ ಗೌರವಿಸುವ ಶಾಂತಾ ನಾಯ್ಕ ಶಿರಗಾನಹಳ್ಳಿಯವರ ಪುಸ್ತಕ. ಹಿಂದೊಮ್ಮೆ ಸುಮಾರು ನಾನು ಹೈಸ್ಕೂಲಿನಲ್ಲಿದ್ದಾಗ ಅವರು ಕಾರವಾರದ ಆಕಾಶವಾಣಿಯಲ್ಲಿದ್ದವರು. ಆಗಲೇ ಇವಳು ಬರೆಯುತ್ತಾಳೆ ನೋಡಿ ಎಂದು ಬೆನ್ನು ತಟ್ಟಿದವರು. ಹೀಗಾಗಿ ಅವರ ಹೆಸರು ನೋಡಿದಾಕ್ಷಣ ಅದನ್ನೇ ಮೊದಲು ಓದಬೇಕೆನಿಸಿತ್ತು. ಈ ಸಲ ಸೃಷ್ಟಿ ನಾಗೇಶ್ ಹೇಳಿದ ಇದನ್ನು ಮೊದಲು ಓದಿ ಎನ್ನುವ ಎಲ್ಲ ಮಾತುಗಳನ್ನೂ ಗಾಳಿಗೆ ತೂರಿಯಾಗಿತ್ತು.     ಇದೊಂದು ಶತಮಾತಗಳ ವಲಸೆಯ ಕಥೆ. ರಾಜಸ್ಥಾನದ ಒಂದು ಹಳ್ಳಿಯಿಂದ  ಕರ್ನಾಟಕ, ಆಂದ್ರದ ಕಡೆಗೆ ಗುಳೆ ಬಂದಂತಹ ಈ ಜನಾಂಗದ ಕಥೆಯನ್ನು ಓದಿದರೆ ಮೈನವಿರೇಳದೇ ಇರದು. ಕೆಲವು ಕಡೆ ಕೋಪ, ಕೆಲವು ಕಡೆ ಕಣ್ಣೀರು ನಮ್ಮನ್ನು ಕೇಳದೇ ನುಸುಳದಿದ್ದರೆ ನೀವು ಈ ಕಾದಂಬರಿಯನ್ನು ಓದಿದ್ದೂ ವ್ಯರ್ಥ ಎನ್ನುವಷ್ಟು ಸೊಗಸಾಗಿ ಮೂಡಿ ಬಂದಿದೆ.     ಬಂಜಾರಾ ಜನಾಂಗವು ರಾಜಸ್ಥಾನದ ಹಳ್ಳಿಗಳಲ್ಲಿ ವೈಭವದಿಂದ ಜೀವನ ಮಾಡಿಕೊಂಡಿದ್ದವರು. ವ್ಯಾಪಾರ ವಹಿವಾಟಿನಿಂದಾಗಿ ಸಾಕಷ್ಟು ಗಟ್ಟಿ ಕುಳ ಎನ್ನಿಸಿಕೊಂಡವರು. ಆದರೆ ಯಾವಾಗ ದೆಹಲಿಯಲ್ಲಿ ಮುಸ್ಲಿಂ ಆಡಲಿತ ಪ್ರಾರಂಭವಾಯಿತೋ ಅದರಲ್ಲೂ ಔರಂಗಜೇಬ್ ದೆಹಲಿಯ ಸಿಂಹಾಸನವನ್ನೇರಿದನೋ ಆಗ ಪ್ರಾರಂಭವಾಯಿತು ನೋಡಿ, ಬಂಜಾರಾಗಳ ದುರ್ವಿಧಿ.   ಈ ಕಾದಂಬರಿ ಪ್ರಾರಂಭವಾಗುವುದೂ ಕೂಡ ದಕ್ಷಿಣಕ್ಕೆ ವಲಸೆ ಹೋಗುವ ಸೈನ್ಯದೊಂದಿಗೆ ಸೇರಿಕೊಳ್ಳುವ ಇಬ್ಬರು ಸಹೋದರರ ಕಥೆಯೊಂದಿಗೆ. ಅವರು ದಕ್ಷಿಣದ ಕಡೆಗೆ ವಲಸೆ ಹೋಗಲು ನಿರ್ಧರಿಸಿರುವುದೂ ಕೂಡ ಮುಸ್ಲಿಂ ಯುವಕರು ತಮ್ಮ ಸಹೋದರಿಯರನ್ನು ‘ಆಗ್ವಾ’ ಮಾಡಿಕೊಂಡು ಹೋದಾರೆಂಬ ಭಯದಿಂದಲೇ. ಬಂಜಾರಾ ಹುಡುಗಿಯರು ತಾಂಡಾದಿಂದ ಹೊರಗೆ ಬರುವುದೇ ದೀಪಾವಳಿ ಹಬ್ಬದಂದು ಮಾತ್ರ. ತಾಂಡಾದ ಆದಿದೇವತೆ ಮರಿಯಮ್ಮನ ಮಟ್ಟೋದ ಮುಂದೆ ನೃತ್ಯ ಮಾಡಲು. ಆಗ ಮಾತ್ರ ಮುಸ್ಲಿಂ ಯುವಕರಿಗೆ ಆ ಹುಡುಗಿಯರು ಕಾಣಸಿಗುತ್ತಿದ್ದುದು. ಹೀಗಾಗಿ ಗುಂಪು ಗುಂಪಾಗಿ ಬರುವ ಮುಸ್ಲಿಂ ಯುವಕರು ಬಂಜಾರಾ ಯುವತಿಯರನ್ನು ಅಪಹರಿಸಿಕೊಂಡು ಹೋಗಿಬಿಡುತ್ತಿದ್ದರು. ಹಾಗೆ ಅಪಹರಿಸಿಕೊಂಡು ಹೋದ ನಂತರ ಆ ಯುವತಿಯರು ಅತ್ತ ಮುಸ್ಲಿಂ ಕೂಡ ಆಗಲಾರದೇ, ಇತ್ತ ಬಂಜಾರಾ ಸಮುದಾಯಕ್ಕೂ ಸೇರಿದವರಾಗಿ ಉಳಿಯದೇ ಜೀವನದಲ್ಲಿ ನೊಂದು ಬದುಕೇ ಬೇಸರವಾಗಿ ಆತ್ಮಹತ್ಯೆಗೂ ಹೇಸದ ಸ್ಥಿತಿ ತಲುಪಿಬಿಡುತ್ತಿದ್ದರು. ಈ ಕಾರಣದಿಮದಾಗಿಯೇ ಎತ್ತುಗಳನ್ನು ಸಾಕಿಕೊಂಡು ದೊಡ್ಡ ವ್ಯಾಪಾರಸ್ಥರಾಗಿದ್ದ ಬಂಜಾರ ಸಮುದಾಯ ಗುಜರಾತ ಕಡೆಗೆ ಅತ್ತ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದ ಕಾಡುಗಳೊಳಗೆ ಸೇರಿಕೊಂಡು ಬುಡಕಟ್ಟುಜನಾಂಗದವರಂತೆ ವಾಸಿಸಲು ಪ್ರಾರಂಭಿಸಿದ್ದರು. ಆದರೆ ಬಂಜಾರರ ವ್ಯಾಪಾರದ ನೈಪುಣ್ಯತೆ, ಅವರ ವ್ಯವಹಾರಿಕ ಜ್ಞಾನ ಮತ್ತು ಎಲ್ಲದ್ದಕ್ಕಿಂತ ಮುಖ್ಯವಾಗಿ ಅವರ ಧೈರ್‍ಯ ಸಾಹಸ ಹಾಗೂ ದೇಹದೃಢತೆಯಿಂದಾಗಿ ಮುಸ್ಲಿಂ ಆಡಳಿತಗಾರರಿಗೆ ಬಂಜಾರರ ಮಾರ್ಗದರ್ಶನ ಅನಿವಾರ್ಯವಾಗಿದ್ದಿತು. ಇತ್ತ ಬಂಜಾರರಿಗೂ ಮುಸ್ಲಿಂ ಆಡಳಿತದಿಂದ ದೂರ ಸರಿದು ತಮ್ಮ ಹೆಣ್ಣುಮಕ್ಕಳ ರಕ್ಷಣೆ ಮಾಡಿಕೊಳ್ಳುವ ಆತುರದಲ್ಲಿದ್ದರು. ಇಂತಹುದ್ದೇ ಹೊತ್ತಿನಲ್ಲಿ ತಮ್ಮ ತಂಗಿ ರೂಪ್ಕಿ ಹಾಗೂ ಅವಳ ತಂಗಿ ಪಾರೂವನ್ನು ರಕ್ಷಣೆ ಮಾಡುವ ಭರದಲ್ಲಿ ಹತ್ತು ಮುಸ್ಲಿಂ ಯುವಕರನ್ನು ಕೊಂದು ಹಾಕಿದ್ದ ಮೀಟು ಹಾಗೂ ಥಾವು ಔರಂಗಜೇಬನ ಸೇನಾಧಿಪತಿಯರಲ್ಲಿ ಒಬ್ಬನಾದ ಜುಲ್ಮಾನ್‌ಖಾನ ಎಂಬುವವನಿಗೆ ತಿಳಿದರೆ ಇಡೀ ತಾಂಡಾ ಸರ್ವನಾಶವಾಗುವುದನ್ನು ಅರಿತು ಸಂಕೆಭಾಕ್ರಿ ಎನ್ನುವ ತಾಂಡಾವನ್ನು ಬಿಟ್ಟು ಜೈಪುರದ ಹತ್ತಿರ ದಕ್ಷಿಣ ಭಾರತದ ವ್ಯಾಪಾರಕ್ಕೆಂದು ತಮ್ಮೊಂದಿಗೆ ಸೈನ್ಯವನ್ನು ಆಯ್ಕೆ ಮಾಡುತ್ತಿರುವ ಜಂಗಿ ಭಂಗಿ ಎಂಬ ಸಹೋದರರ ಕಡೆ ಬಂದಿದ್ದರು. ಅವರ ಬಳಿ ತಾವು ಚವ್ಹಾಣರು ಎಂದು ಕೆಲಸಕ್ಕೆ ಸೇರಿಕೊಂಡು ಹೊರಡುವ ಮಹಾ ವಲಸೆಯ ಕಥೆ ಇದು. ಆ ವಲಸೆಯಲ್ಲಿಯೇ ಮದುವೆ ಮಾಡಿಕೊಳ್ಳುವ ಮೀಟುವಿನ ಬಾಳಿನ ತಿರುವಿನ ಕಥೆ ಇಲ್ಲಿದೆ.    ಚಿಕ್ಕವಳಿರುವಾಗ ನನಗೆ ರಾಧಾ ಕೃಷ್ಣರ ಕಥೆ ಅಚ್ಚರಿ ಹುಟ್ಟಿಸುತ್ತಿತ್ತು. ಇಡೀ ಜಗತ್ತಿಲ್ಲಿ ಅತ್ಯುನ್ನತ ಪ್ರೇಮಕ್ಕೆ ಉದಾಹರಣೆಯಾಗಿ ನೀಡುವ ಈ ಕಥೆಯ ನಾಯಕಿ  ರಾಧಾ ಕೃಷ್ಣನ ಪತ್ನಿಯಲ್ಲ. ಆಕೆ ಬರೀ ಕೃಷ್ಣನ ಪ್ರೇಯಸಿ. ಆಕೆಗೊಬ್ಬ ಗಂಡನಿದ್ದಾನೆ. ಅವಳದ್ದೇ ಆದ ಒಂದು ಸಂಸಾರವಿದೆ. ಆದರೆ ಕೃಷ್ಣನ ಮೇಲಿರುವ ಅವಳ ಪ್ರೇಮಕ್ಕೆ ಯಾವುದೇ ಹೋಲಿಕೆಯಿಲ್ಲ. ಅಚ್ಚರಿಯೆಂದರೆ ಈ ಪ್ರೇಮ ಎಂದೂ ಅನೈತಿಕ ಎಂದು ಅನ್ನಿಸಿಕೊಳ್ಳಲೇ ಇಲ್ಲ. ತೀರಾ ಮಡಿವಂತರಿಂದ ಹಿಡಿದು ತೀರಾ ಕರ್ಮಠ ಸಂಪ್ರದಾಯಿಗಳವರೆಗೆ ಎಲ್ಲರೂ ಈ ಪ್ರೇಮವನ್ನು ಅತ್ಯಂತ ಸಹಜ ಎಂದು ಒಪ್ಪಿಕೊಂಡಿದ್ದರು. ಆದರೆ ನಿಜ ಜೀವನಕ್ಕೆ ಬಂದ ಕೂಡಲೇ ಈ ತರಹದ ಪ್ರೇಮಗಳೆಲ್ಲ ಅನೈತಿಕ ಅಥವಾ ಹಾದರ ಎನ್ನಿಸಿಕೊಳ್ಳುತ್ತದೆ. ಬಾಜಿರಾವ್ ಎಂಬ ಮರಾಠಾ ಶೂರ ಮಸ್ತಾನಿ ಎಂಬ ಮುಸ್ಲಿಂ ಯುವತಿಯನ್ನು ಪ್ರೇಮಿಸಿದರೆ ಅದು ಅಪ್ಪಟ ಸಾಮಾಜಿಕ ಬಹಿಷ್ಕಾರಗೊಂಡ ಪ್ರೇಮವಾಗುತ್ತದೆ. ಕೊನೆಯಪಕ್ಷ ಬಾಜಿರಾವ್ ಹಾಗೂ ಮಸ್ತಾನಿಯ ಈ ಪ್ರೇಮ ಕಥಾನಕವಾಗಿಯಾದರೂ ಅದೆಷ್ಟೋ ಕಾಲದ ನಂತರ ಒಪ್ಪಿತವಾಗುತ್ತದೆ. ಆದರೆ ಜನಸಾಮಾನ್ಯರ, ನಮ್ಮ ನಿಮ್ಮ ನಡುವೆಯೇ ಇಂತಹ ಪ್ರೇಮವನ್ನು ಕಂಡರೆ ನಾವು ಹೇಗೆ ಅವರೊಡನೆ ವ್ಯವಹರಿಸಬಹುದು ಎಂದು ಒಮ್ಮೆ ಯೋಚಿಸಿ ನೋಡಿ. ವಿವಾಹದ ಆಚೆಗಿರುವ ಗಂಡು ಹೆಣ್ಣಿನ ಸಂಬಂಧವನ್ನು ನಾವು ಯಾವ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಕೆಲವು ವರ್ಷಗಳ ಹಿಂದೆ ಒಬ್ಬ ವಿವಾಹಿತ ಯುವತಿ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾರಣವಿಷ್ಟೇ. ಅರಬ್ ದೇಶದಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಗಂಡ ಊರಿಗೆ ಬಂದವನು ಅವಳ ಬಳಿ ಬರದೇ ಸೀದಾ ಅವನ ತಾಯಿಯ ಬಳಿ ಹೋಗಿದ್ದ. ಅದಕ್ಕೆ ಕಾರಣವೂ ಇತ್ತೂ ಈ ಯುವತಿ ಬೇರೆ ಯುವಕನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಆತನಿಗೆ ತಿಳಿಸಲಾಗಿತ್ತು. ಗಂಡ ಬರುತ್ತಾನೆ ಎಂದು ಎರಡು ದಿನ ಕಾದ ಆಕೆ ನಂತರ ಬೆಂಕಿ ಹಚ್ಚಿಕೊಂಡಿದ್ದಳು. ಆಗಲೆಲ್ಲ  ಆಕೆ ರಾತ್ರಿ ಹೊತ್ತು ಹೊರಗೆ ನಿಂತು ಒಬ್ಬನ ಬಳಿ ಮಾತನಾಡುತ್ತಿರುತ್ತಾಳೆ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ನಿಜಕ್ಕೂ ನನಗೆ ಅಚ್ಚರಿ. ‘ಆ ಯುವಕನೊಂದಿಗೆ ಆಕೆಯ ಸಂಬಂಧ ಇದ್ದಿದ್ದೇ ನಿಜವಾದರೆ ಮನೆಯ ಹೊರಗೆ ನಿಂತು ಮಾತನಾಡುವ ಅಗತ್ಯವಾದರೂ ಏನಿದೆ? ಹೊರಗೆ ನಿಂತು ಮಾತನಾಡುತ್ತಿದ್ದಾಳೆಂದರೆ ಅವರಿಬ್ಬರ ನಡುವೆ ನಾವೆಲ್ಲ ಅನುಮಾನಿಸುವ ಸಂಬಂಧ ಇರಲಿಕ್ಕಿಲ್ಲ. ಅದು ಕೇವಲ ಸ್ನೇಹವಿರಬಹುದು.’ ಎಂದು ಅವಳ ಪರವಾಗಿ ಮಾತನಾಡಿದ್ದೆ. ಆದರೆ ಏನೇ ಆದರೂ ವಿವಾಹದ ಆಚೆಗಿನ ಹೆಣ್ಣು ಗಂಡಿನ ಸ್ನೇಹ ಕೂಡ ಅನುಮಾನಕ್ಕೆ ಕಾರಣವಾಗುತ್ತದೆ ಎಂಬುದನ್ನು ಗಮನಿಸುವಾಗ ಈ ಕಾದಂಬರಿಯಲ್ಲಿನ ಅಂತಹುದ್ದೊಂದು ಸಂಬಂಧ ಹೇಗೆ ಇಡೀ ಬಂಜಾರಾ ಜನಾಂಗವನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ ಎಂಬುದನ್ನು ಗಮನಿಸಬೇಕಿದೆ.    ಮೀಟು ಹೊರಟಿದ್ದು ಆಸೀಫ್‌ಖಾನ್ ಎನ್ನುವವನೊಡನೆ. ಆದರೆ ಆತನ ಮಗಳು ಮೀಟುವಿನ ಶೌರ್‍ಯಕ್ಕೆ ಮರುಳಾಗಿ ಆತನಿಗೆ ಒಲಿದು ಬಂದಿದ್ದಳು. ಇತ್ತ ಆಗತಾನೆ ಮದುವೆಯಾದ ಮೀಟು ಸೈನಾಜ್‌ಳ ಒತ್ತಾಯಕ್ಕೆ ಅನಿವಾರ್‍ಯವಾಗಿ ಅವಳೊಂದಿಗೆ ಸಂಬಂಧ ಬೆಳೆಸಬೇಕಾಗಿತ್ತು. ಅವಳ ಮದುವೆಯ ನಂತರವೂ ಈ ಸಂಬಂಧ ಮುಂದುವರೆದು ಆಕೆ ಮಿಟುವಿನಿಂದ ಒಬ್ಬ ಮಗನನ್ನು ಪಡೆಯುವ ಆಕೆ ಬಾಣಂತಿಯ ನಂಜಿನಿಂದ ಸಾವನ್ನಪ್ಪುತ್ತಾಳೆ. ಆದರೆ ಮುಂದೊಮ್ಮೆ ಅವಳ ಗಂಡ ಲತೀಫ್‌ಖಾನ್‌ನಿಗೆ ಇವರ ವಿಷಯ ಗೊತ್ತಾಗಿದ್ದಲ್ಲದೇ ಮಾವನ  ಅಧಿಕಾತರವನ್ನು ಪಡೆಯುವುದಕ್ಕೋಸ್ಕರ ಮೀಟುನನ್ನು ಕೊಂದು ಹಾಕುವುದರೊಂದಿಗೆ ಕಥೆ ಮತ್ತೊಂದು ತಿರುವು ಪಡೆಯುತ್ತದೆ.   ಮೀಟುವಿನ ತಮ್ಮ ಥಾವೂ ಅಣ್ಣನ ಹೆಂಡತಿ ಹಾಗೂ ಮಗ ದೇಸೂನನ್ನು ತುಂಬ ಜಾಗ್ರತೆಯಿಂದ ಕಾಪಾಡಿಕೊಳ್ಳುತ್ತಾನಾದರೂ ಪೀಳಿಗೆಗಳು ಮುಂದುವರೆದಂತೆ ಹಳೆಯ ಬಾಂಧವ್ಯದ ಎಳೆ ಬಿಚ್ಚಿಕೊಳ್ಳುತ್ತ ಸಡಿಲವಾಗುತ್ತದೆ. ಇತ್ತ ಥಾವೂ ಕೂಡ ಹೈದರಾಬಾದಿನ ಕಡೆ ವ್ಯಾಪಾರಕ್ಕೆಂದು ಮಗ ಲಚ್ಮಿ ಜೊತೆ ಹೋದವನು ಅಲ್ಲಿ ನಿಜಾಮರ ಜೊತೆಗಿದ್ದ ಲತೀಫ್‌ಖಾನನ ಮಗನ ಸೈನಿಕರಿಂದ ಸತ್ತು ಹೋಗುತ್ತಾನೆ. ಇರಿತದ ಗಾಯದ ನಂಜೇರಿ ಲಚ್ಮ ಕೂಡ ಮರಣ ಹೊಂದುತ್ತಾನೆ. ಲಚ್ಮನ ಹೆಂಡತಿ ಗುಜಾ ಸತಿಯಾಗುತ್ತಾಳೆ. ಆಕೆ ದೈವಿಸ್ಥಾನ ಪಡೆಯುತ್ತಾಳೆ. ಇಂದಿಗೂ ಭರಮ್‌ಕೋಟ್‌ದ ಜನಾಂಗ ಗುಜಾಸತಿಯನ್ನು ಪ್ರಾರ್ಥಿಸಿಯೇ ಮುಂದುವರೆಯುವ ಸಂಪ್ರದಾಯವಿದೆ.    ಮುಂದೆ ದೇಸು ಹೈದರಾಬಾದಿನ ಕಡೆ ಪುನಃ ವ್ಯಾಪಾರಕ್ಕೆ ಹೊರಟಾಗ ಮತ್ತೆ ಲತೀಫ್‌ಖಾನನ ಮಗ ಜಂಗ್ಲಿಖಾನ್‌ನ್ನು ಭೇಟಿಯಾಗುವ ಸಂದರ್ಭ ಎದುರಾಗುತ್ತದೆ. ತನ್ನಂತೆಯೇ ಇರುವ ಬಂಜಾರಾನನ್ನು ನೋಡಲು  ಆಸಕ್ತನಾದ ಜಂಗ್ಲಿಖಾನನನ್ನು ಸಂಧಿಸಿದಾಗ ಇಬ್ಬರಿಗೂ ಒಳಮರ್ಮ ಅರ್ಥವಾದರೂ ಏನೂ ಅರಿವಾಗದಂತೆ ಇಬ್ಬರೂ ದೂರವಾಗಿದ್ದರೂ ದರೋಡೆಕೋರರು ದಾಳಿ ಮಾಡಿದಾಗ ಪುನಃ ಜಂಗ್ಲಿಖಾನನೇ ಬಂದು ದೇಸುವಿನ ರಕ್ಷಣೆ ಮಾಡಿದ್ದ. ಇದು ಕಥೆಯೊಳಗೆ ಕಾಣುವ ಮಾನವ ಸಂಬಂಧದ ಮಿತಿ ಮತ್ತು ಶ್ರೇಷ್ಠತೆಯನ್ನು ತೋರಿಸುತ್ತದೆ. ಆದರೆ ದೇಸುವಿನ ಚಿಕ್ಕಪ್ಪ ಥಾವೂನ ಮಗ ತೋತ್ಯಾ ಬೇರೆಯಾಗಿದ್ದ. ಸಂಬಂಧಗಳು ನಿಧಾನವಾಗಿ ಹರಿದು ಹೋಗತೊಡಗಿತ್ತು.   ಇದಾದ ನಂತರ ಈ ಬಂಜಾರರಿಗೆ ದೊಡ್ಡ ಏಟು ಬಿದ್ದಿದ್ದು ಬ್ರಿಟೀಷ್ ಆಡಳಿತದಲ್ಲಿ. ಸ್ವತಃ ವ್ಯಾಪಾರಿಗಳಾದ ಬ್ರಿಟೀಷರು, ಈ ಚಿಕ್ಕಪುಟ್ಟ ವ್ಯಾಪಾರಿಗಳನ್ನೆಲ್ಲ ಹೊಸಕಿ ಹಾಕಿಬಿಟ್ಟಿದ್ದರು. ತಮ್ಮ ಅನುಮತಿಯಿಲ್ಲದೇ ವ್ಯಾಪಾರ ಮಾಡುತ್ತಾರೆ ಎನ್ನುವ ಕಾರಣಕ್ಕಾಗಿ ಬಂಜಾರರನ್ನೆಲ್ಲ ದರೋಡೆಕೋರರೆಂದು ಬಿಂಬಿಸಿ ಬಿಟ್ಟಿದ್ದರು. ಬ್ರಿಟೀಷರಿಂದ ತಮ್ಮನ್ನು ಕಾಪಾಡಿಕೊಳ್ಳುವ ಸಲುವಾಗಿ ಮತ್ತೆ ಈ ಜನಾಂಗ ಕಾಡುಗಳನ್ನೇ ಆಶ್ರಯಿಸಬೇಕಾದದ್ದು ವಿಪರ್‍ಯಾಸ. ದೇಸೂನ ನಂತರ ಧನಸಿಂಗ್, ಅವನ ನಂತರ ಹನುಮನಾಯ್ಕ ಹಾಗೆಯೇ ಸಾಗಿ ಸೂರ್ಯನಾಯ್ಕನವರೆಗಿನ ಕಥೆಯನ್ನು ಹೇಳುತ್ತದೆ.    ಇಡೀ ಕಾದಂಬರಿಯ ಕೊನೆಯ ಹಂತದಲ್ಲಿ ಬಂಜಾರಾ ಜನಾಂಗ ಹೇಗೆ ಆಧುನಿಕತೆಯತ್ತ ಮುಖ ಮಾಡಿದೆ ಎನ್ನುವುದನ್ನು ಹಂತಹಂತವಾಗಿ ತಿಳಿಸುತ್ತದೆ. ಭಮರ್‌ಕೋಟ್ಯಾದ ಕವಲುಗಳು ಬೇರೆಬೇರೆಯಾಗಿ ಈಗಿನ ಕರಮ್‌ತೋಟ್ ಜನಾಂಗದ ಸೂರ್ಯನಾಯ್ಕ ಉಪನ್ಯಾಸಕನಾಗಿದ್ದ. ಹೆಂಡತಿ ವಂದನಾ ಕೂಡ ಸಂಶೋಧನೆ ಮಾಡಿ ವಿದ್ಯಾವಂತೆ ಅನ್ನಿಸಿಕೊಂಡಿದ್ದಳು. ನೇರ ನಡೆನುಡಿಯ ಸೂರ್‍ಯ ನಾಯ್ಕ ಬದುಕನ್ನು ಸರಳವಾಗಿ ಎದುರಿಸಿದವನು. ಬಡತನದ ಬದುಕಿನಿಂದ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿಕೊಂಡಿದ್ದನಾದರೂ ಸಹೋದ್ಯೋಗಿಗಳ ತುಳಿತಕ್ಕೂ ಒಳಗಾದವನು. ತನ್ನ ಮಕ್ಕಳಾದರೂ ಮೇಲೆ ಬರಲಿ ಎಂದು ಕಾಯುತ್ತಿರುವವನುಇಷ್ಟೆಲ್ಲದರ ನಡುವೆ ಇಡೀ ಕಾದಂಬರಿಯಲ್ಲಿ ಬಂಜಾರಾಗಳ ಪದ್ದತಿಗಳು, ಆಚಾರ ವಿಚಾರಗಳು ಯಥೇಶ್ಚವಾಗಿ ಕಾಣಸಿಗುತ್ತವೆ. ಪ್ರತಿ ಸಂಪ್ರದಾಯದ ಸ್ಥೂಲ ಚಿತ್ರಣವನ್ನು ಕೊಡುವುದರಲ್ಲಿ ಕಾದಂಬರಿಕಾರರು ಯಶಸ್ವಿಯಾಗುತ್ತಾರೆ. ಜೊತೆಗೆ ಬಂಜಾರಾ ಜನಾಂಗದ ಭಾಷೆಯ ಸಣ್ಣ ಪರಿಚಯವೂ ಸಿಗುತ್ತದೆ.    ಚಿಕ್ಕವಳಿದ್ದಾಗ ಲಂಬಾಣಿ ಜನಾಂಗದ ಉಡುಪು ನೋಡುವುದೇ ಒಂದು ವಿಶೇಷ ಎನ್ನಿಸುತ್ತಿತ್ತು ನನಗೆ. ಕಟ್ಟಡ ಕೆಲಸ ಮಾಡಲು ಬಂದ ಬಂಜಾರಾ ಹೆಂಗಸರ ಬಳಿ ಮಾತನಾಡುತ್ತ ನಾಣ್ಯಗಳನ್ನು ಪೋಣಿಸಿ ಹೊಲೆದ ಅವರ ದುಪಟ್ಟಾಗಳನ್ನು ಮುಟ್ಟಿಮುಟ್ಟಿ ನೋಡಿ ಖುಷಿಪಡುತ್ತಿದ್ದೆ. ಯಾರ ಬಳಿಯಲ್ಲಾದರೂ ಸರಿ ಸಲೀಸಾಗಿ ಸ್ನೇಹ ಬೆಳೆಸುವ ನನ್ನ ಗುಣ ಆ ಹೆಂಗಳೆಯರ ಬಳಿ ಹೋಗುವಂತೆ ಮಾಡುತ್ತಿತ್ತು. ಕಾದಂಬರಿ ಓದಿ ಮುಗಿಸಿದ ನಂತರ ಶಾಂತಾ ನಾಯ್ಕರಿಗೆ ಫೋನ್ ಮಾಡಿ ನನಗೆ ನಿಮ್ಮ ಹೆಂಗಸರು ಹಾಕುವಂತಹ ಡ್ರೆಸ್ ಬೇಕು ಪುಟ್ಟ ಮಕ್ಕಳಂತೆ ಹಠ ಹಿಡಿದು ಹೇಳಿದ್ದೆ. ಮುಂದಿನ ಸಲ ಇಲ್ಲಿಗೆ ಬಂದಾಗ ಕೊಡಸ್ತೀನಿ. ಆದರೆ ಈಗ ಅದನ್ನು ಮಾಡೋದು ಕಡಿಮೆ ಆಗಿದೆ. ಹೇಳಿ ಮಾಡಿಸಬೇಕು. ಎಂದಿದ್ದಾರೆ. ಚಂದದ ನಾಣ್ಯ ಹೊಲಿದು ಮಾಡಿದ ಆ ದುಪಟ್ಟಾಗೋಸ್ಕರ ಈಗ ಕಾಯುತ್ತಿದ್ದೇನೆ.                         —– ಲೇಖಕರ ಬಗ್ಗೆ ಎರಡು ಮಾತು:ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಇವರ ಹವ್ಯಾಸಗಳು

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಚಹಾ ಎನ್ನುವ ಜನುಮದ ಸಾಕಿ ಬುಕ್ ಆಫ್ ಟೀ ಲೇಖಕರು – ಕುಮಾರ್ ಎಸ್ ಬೆಲೆ- -100           ಎಲ್ಲವನ್ನೂ ಬೆಸೆದ ಚಹಾ ಪ್ರೀತಿಗೆ ಎನ್ನುವ ಬರೆಹದೊಂದಿಗೆ ಈ ಪುಸ್ತಕ ನನ್ನ ಕೈ ಸೇರಿದಾಗ ಎಷ್ಟೊಂದು ಖುಷಿಯಾಗಿತ್ತು ಎಂದರೆ ಕುಳಿತಲ್ಲೇ ಒಂದು ಕಪ್ಪು ಬಿಸಿಬಿಸಿ ಚಹಾ ಕುಡಿದಷ್ಟು ರಿಲ್ಯಾಕ್ಸ್ ಆಗಿದ್ದೆ.  ನನ್ನ ಚಹಾ ಪ್ರೀತಿಯೇ ಅಂತಹುದ್ದು. ಕೊಟ್ಟರೆ ಮೊಗಮೊಗೆದು ಕುಡಿಯುತ್ತಲೇ ಇರುವ ಇಲ್ಲದಿದ್ದರೆ ದಿನವಿಡೀ ಕುಡಿಯದ ಪ್ರೀತಿಯಂತಹ ಪ್ರೀತಿ ಈ ಚಹ. ಪ್ರೀತಿಯೂ ಹಾಗೆ. ಪ್ರೇಮ ಸಾಗರದಲ್ಲಿ ಮುಳುಗೇಳು ಎಂದರೆ ‘ಮುಳುಗಿಯೇ ಇರುತ್ತೇನೆ ಬಿಡು’ ಎನ್ನಬಲ್ಲೆ ನಾನು. ‘ಬೇಡ, ಒಂಟಿಯಾಗಿರು’ ಎಂದರೆ ಸರಿ ಬಿಡು ಎನ್ನುತ್ತ ಯಾವುದೋ ಪುಸ್ತಕ ಹಿಡಿದು ಕುಳಿತುಬಿಡಲೂ ಸೈ. ಅದಕ್ಕೇ  ನನಗೆ ಈ ಪ್ರೀತಿ ಮತ್ತು ಚಹಾ ಒಂದೇ ರೀತಿಯದ್ದಾಗಿ ಕಾಣುತ್ತದೆ. ಆದರೆ ಪ್ರೀತಿಯಲ್ಲಿರುವ ಸುಖ ಒಂಟಿಯಾಗಿರುವುದರಲ್ಲೆಲ್ಲಿದೆ ಹೇಳಿ? ಹೀಗಾಗಿಯೇ ಚಹ ಕೊಟ್ಟಷ್ಟೂ ಪ್ರೀತಿಯಿಂದ ಕುಡಿಯುತ್ತಲೇ ಇರುತ್ತೇನೆ. ಹೀಗಾಗಿ ಪುಸ್ತಕ ಕೈ ಸೇರಿದಾಗ ಮತ್ತೊಮ್ಮೆ ಚಹಾ ಕುಡಿದಷ್ಟೇ  ಖುಷಿಯಿಂದ ಓದತೊಡಗಿದೆ.     ಈ ಪುಸ್ತಕವನ್ನು ಕುಮಾರ್ ಅವರು ನನಗೆ ಕಳುಹಿಸಲೂ ಒಂದು ಉದ್ದೇಶವಿದೆ. ನಾನು ಆಗ ದಿನಕ್ಕೊಂದರಂತೆ ಚಹಾ ಕವನಗಳನ್ನು ಬರೆಯುತ್ತಿದ್ದೆ. ಹಿಂದಿನ ದಿನ ರಾತ್ರಿ ಕುಳಿತು ಕವನ ಬರೆಯುವುದು, ಬೆಳಗೆದ್ದು ಒಮ್ಮೆ ಅದನ್ನು ಓದಿ, ತಿದ್ದುವುದಿದ್ದರೆ ತಿದ್ದಿ, ಪೋಸ್ಟ್ ಮಾಡುವುದು. ಪ್ರಾರಂಭದಲ್ಲಿ ಕೇವಲ ಇಬ್ಬರು ಸದಾ ಪ್ರೀತಿಸುವ ಜೀವಗಳ- ಅದು ಪ್ರೇಮಿಗಳೂ ಆಗಿರಬಹುದು ಅಥವಾ ಗಂಡ ಹೆಂಡಿರೂ ಆಗಿರಬಹುದು. – ನಡುವಣ ಪ್ರೇಮ ಸಲ್ಲಾಪಕ್ಕೆ ಚಹಾ ಒಂದು ಮಾಧ್ಯಮ ಎಂಬಂತೆ ಚಿತ್ರಿಸಿ ಬರೆಯುತ್ತಿದ್ದರೆ ನಂತರದ ದಿನಗಳಲ್ಲಿ ಹೆಣ್ಣಿನ ಒಳಕುದಿತವನ್ನು ಕುದಿಯುತ್ತಿರುವ ಡಿಕಾಕ್ಷನ್ಗೆ ಹೋಲಿಸಿ ಬರೆಯುತ್ತಿದ್ದೆ. ಬಹಳಷ್ಟು ಜನರಿಗೆ ಅದು ಬಹಳ ಇಷ್ಟವಾಗುತ್ತಿತ್ತು. (ಕೆಲವರಿಗೆ ಕಿರಿಕಿರಿ ಎನ್ನಿಸಿತೆಂದೂ ನಂತರ ತಿಳಿಯಿತು.) ಹಿರಿಯರಾದ ಎಲ್ ಸಿ ನಾಗರಾಜ್ ಚಹಾದ ಕುರಿತು ಜಪಾನಿ ಹಾಯಿಕುಗಳನ್ನು ಕಳಿಸುತ್ತ ಬರೆಯಿರಿ. ನಾನು ಬೇಕಾದ ಮಾಹಿತಿ ಕೊಡುತ್ತೇನೆ ಎನ್ನುತ್ತ ಜಪಾನಿನ ಪ್ರಸಿದ್ದ ಚಹಾ ಗೋಷ್ಠಿಯ ಕುರಿತು ಮಾಹಿತಿ ನೀಡಿದರು. ಈ ಸಮಯದಲ್ಲಿ ಕುಮಾರ್ ಕೂಡ ಈ ಕವಿತೆಗಳನ್ನು ಓದಿ ಅದೆಷ್ಟು ಖುಷಿಪಟ್ಟರೆಂದರೆ ಚಹಾದ ಕುರಿತಾಗಿ ನನ್ನದೊಂದು ಪುಸ್ತಕವಿದೆ ಎಂದು ಕಳಿಸಿಯೇ ಬಿಟ್ಟರು. ಹೀಗೆ ಚಹಾದ ಘಮದ ಬೆನ್ನು ಹತ್ತಿ ಮನೆಗೆ ಬಂದ ಪುಸ್ತಕ ಇದು.           ಕುಡಿಯುವವರು ಯಾವಾಗಲೂ ಹೇಳುವ ಮಾತೊಂದಿದೆ. ‘ನಾವೇನೂ ಕುಡಿಯುವ ಕಿಕ್ಕಿಗಾಗಿ ಕುಡಿಯುತ್ತೇವೆ ಎಂದುಕೊಂಡಿದ್ದೀರಾ? ಹಾಗೇನಿಲ್ಲ. ಕುಡಿಯುವ ನೆಪದಿಂದ ಸ್ನೇಹಿತರೆಲ್ಲ ಜೊತೆಗೆ ಸೇರ್ತೀವಿ, ಎಲ್ಲರ ಮನದ ಮಾತು ಹೊರಗೆ ಬರುತ್ತದೆ, ಎಲ್ಲರೂ ಪರಸ್ಪರ ಮುನಿಸು ಮರೆತು ಮತ್ತೆ ಒಂದಾಗ್ತೀವಿ ಅದಕ್ಕೇ ಕುಡಿಯೋದು.’ ಆಗೆಲ್ಲ ನಾನು ಅಂದುಕೊಳ್ಳುತ್ತಿದ್ದೆ. ‘ಹೌದಲ್ವಾ? ಕುಡಿಯೋಕೆ ಕುಳಿತರೆ ಎಷ್ಟೆಲ್ಲ ವಿಷಯಗಳು ಹೊರಬರುತ್ತವೆ. ಆದರೆ ಅದಕ್ಕೆ ಅಲ್ಕೋಹಾಲ್ ಯಾಕಾಗಬೇಕು? ಚಹ ಆಗುವುದಿಲ್ಲವೇ?’ ಎಂದುಕೊಳ್ಳುವಾಗಲೇ ಈ ಪುಸ್ತಕ ನನ್ನ ಕೈ ಸೇರಿದ್ದು.  ನಿಮ್ಮ ಜೊತೆಗೆ ಒಂದು ಕಪ್ ಚಹಾದೊಂದಿಗೆ ಇದನ್ನೆಲ್ಲ ಹಂಚಿಕೊಳ್ಳಬಹುದೆಂದುಕೊಂಡೇ ಈ ಬುಕ್ ಆಫ್ ಟೀ’ ನಿಮ್ಮ ಕೂಗಿಡುತ್ತಿದ್ದೇನೆ’ ಎನ್ನುತ್ತ ಕುಮಾರ್ ಚಹಾದ ಜಗತ್ತಿನೊಳಗೆ ನಮ್ಮನ್ನೆಲ್ಲ ಅಕ್ಷರಶಃ ಕೈ ಹಿಡಿದು ಯಾತ್ರೆ ಹೊರಡಿಸುತ್ತಾರೆ. ಚಹಾದ ಬಗ್ಗೆ ಇನ್ನೂವರೆಗೆ ನಾವೆಲ್ಲ ಕಂಡು ಕೇಳರಿಯದ ಎಷ್ಟೊಂದು ವಿಷಯಗಳು ಬರುತ್ತವೆಂದರೆ ನಾವು ಕುಡಿಯುವ ಯಕಶ್ಚಿತ್ ಚಹಾದೊಳಗೆ ಇಷ್ಟೆಲ್ಲ ವಿಷಯ ಇದೆಯಾ? ಎಂದು ಖಂಡಿತವಾಗಿ ನಿಬ್ಬೆರಗಾಗಿ ಬಿಡುತ್ತೇವೆ. ಚಹಾದ ಬಗ್ಗೆ ನಾನು ತಿಳಿದುಕೊಳ್ಳಲೇ ಬೇಕೆಂದುಕೊಂಡ  ಎಲ್ಲ ವಿಷಯಗಳೂ ಇಲ್ಲಿದ್ದು ನನ್ನಂತಹ ಚಹಾದ ಬಯಕೆಯವರಿಗೆ ಇದು ಸಣ್ಣ ಎನ್ಸೈಕ್ಲೋಪೀಡಿಯಾ ಅಂತನ್ನಿಸುವುದರಲ್ಲಿ ಯಾವ ಸಂಶಯವೂ ಇಲ್ಲ.    ಚಿಕ್ಕವಳಿರುವಾಗ ನಾನು ಚಹಾ ಕುಡಿಯುತ್ತಲೇ ಇರಲಿಲ್ಲ. ನನ್ನ ಅಣ್ಣ ಈಗಲೂ ಚಹಾ ಕುಡಿಯುವುದಿಲ್ಲ. ‘ಮಾವ ಇನ್ನೂ ಸಣ್ಣ ಪಾಪು, ಹಾಲು ಕುಡಿತಾನೆ’ ನನ್ನ ಮಕ್ಕಳು ನನ್ನಣ್ಣನನ್ನು ಅವನು ಚಹಾ ಕುಡಿಯದಿರುವುದಕ್ಕಾಗಿ ಕಿಚಾಯಿಸುತ್ತಾರೆ. ಚಿಕ್ಕವಳಿದ್ದಾಗ ಚಹಾ ಬೇಕು ಎಂದರೆ ಮೊದಲೇ ಕಪ್ಪು, ಚಹಾ ಕುಡಿದರೆ ಮತ್ತಿಷ್ಟು ಕಪ್ಪಾಗ್ತೀಯಾ ನೋಡು’ ಅಮ್ಮ ಅತ್ತ ಹೆದರಿಸುವ ದನಿಯೂ ಅಲ್ಲದ, ಇತ್ತ ರೇಗುವ ದನಿಯೂ ಅಲ್ಲದ ಧ್ವನಿಯಲ್ಲಿ ಸೀರಿಯಸ್ ಆಗಿ ಹೇಳುವಾಗಲೆಲ್ಲ ತುಟಿಗಿಟ್ಟ ಚಹಾದ ಲೋಟವನ್ನು ಮರುಮಾತನಾಡದೇ ಕೆಳಗಿಡುತ್ತಿದ್ದೆ. ಥೇಟ್ ಅಪ್ಪನ ಬಣ್ಣವನ್ನೇ ಹೊತ್ತುಕೊಂಡು ಬಂದಿದ್ದ ನನಗೆ ಆ ಕ್ಷಣಕ್ಕೆ ನನ್ನ ಬಣ್ಣ ಹಾಗೂ ಚಹಾದ ಸೆಳೆತ ಎರಡೂ ಒಂದೊಂದು ಕಡೆ ಪಾಶ ಹಾಕಿ ಎಳೆದಂತೆ ಭಾಸವಾಗುತ್ತಿತ್ತು. ಆದರೆ ಬಣ್ಣ ಅನ್ನುವುದು ಯೋಚಿಸಬೇಕಾದ ವಿಷಯವೇ ಅಲ್ಲ, ಅಪ್ಪ ನಾನು ಬಣ್ಣದ ಬಗ್ಗೆ ಕೀಳರಿಮೆ ಬೆಳೆಸಿಕೊಂಡು ಮೂಲೆಗೆ ಸೇರದಂತೆ ಕಿವಿ ಮಾತು ಹೇಳುತ್ತಲೇ ಆತ್ಮವಿಶ್ವಾಸ ತುಂಬುವ ಹೊತ್ತಿಗೆ ಅದ್ಯಾವ ಮಾಯಕದಲ್ಲಿ ನಾನು ಚಹಾದ ಅತ್ಯುಗ್ರ ಅಭಿಮಾನಿಯಾಗಿ ಬದಲಾದೆನೋ ನನಗೆ ಅರ್ಥವೇ ಆಗಲಿಲ್ಲ.         ಚಹಾದ ಸಮಗ್ರ ಇತಿಹಾಸವನ್ನು ಕಟ್ಟಿಕೊಡಲು ಲೇಖಕರು ಇಲ್ಲಿ ಪ್ರಯತ್ನಿಸಿದ್ದಾರೆ.  ಚಹಾ ಮೊದಲು ಕೇವಲ ಈಗಿನಂತೆ ಪೇಯವಾಗಿರಲಿಲ್ಲ. ಅದೊಂದು ಔಷಧಿಯಾಗಿತ್ತು ಎನ್ನುತ್ತಲೇ ತಮ್ಮ ಚಹಾದ ಅತಿ ಪ್ರೀತಿಗೊಂದು ಘನತೆಯನ್ನು ತಂದುಕೊಡಲೆತ್ನಿಸುತ್ತ ತಮ್ಮ ಬರೆಹವನ್ನು ಪ್ರಾರಂಭಿಸುತ್ತಾರೆ. ಐದು ಸಾವಿರ ವರ್ಷಗಳ ಹಿಂದೆ ಜಗತ್ತಿನ ಮೊಟ್ಟಮೊದಲ ಚಹಾವನ್ನು ತಯಾರಿಸಿದ್ದು ಚೀನಿ ದೊರೆ ಶೆನ್ ನುಂಗ್ ಕೃಷಿ ದೇವರೆಂದೇ ಆತನನ್ನು ಪೂಜಿಸುತ್ತಿದ್ದ ಚೀನಿಯರಿಗೆ ಆತ ಹೊಸ ಹೊಸ ಕೃಷಿ ಪದ್ದತಿಯನ್ನು ಕಲಿಸಿಕೊಟ್ಟಿದ್ದ ಶೆನ್ ನುಂಗ್ ಒಮ್ಮೆ ಔಷಧಿಯ ಸಸ್ಯಗಳನ್ನು ಹುಡುಕುತ್ತ ಹೋದಾಗ ವಿಶ್ರಾಂತಿಗೆಂದು ತಂಗಿದ್ದ ಕುಟೀರದಲ್ಲಿ ಆತನ ಕುದಿಸುವ ನೀರಿನ ಪಾತ್ರೆಗೆ ಎಲ್ಲಿಂದಲೋ ಚಹಾದ ಎಲೆಯೊಂದು ಹಾರಿ ಬಂದು ಬಿದ್ದಿತ್ತಂತೆ. ಅದು ನೀರಿನ ಬಣ್ಣವನ್ನು ಬದಲಾಯಿಸಿತ್ತು. ಅದನ್ನು ಕುಡಿದ ಶೆನ್ ನುಂಗ್ ದೊರೆಗೆ ಆಯಾಸವೆಲ್ಲ ಪರಿಹಾರವಾಗಿ ಹೊಸ ಚೈತನ್ಯ ಮೂಡಿತ್ತಂತೆ. ಆದರೆ ಈಗಿನ ಚೀನಾ- ಭಾರತದ ನಡುವಣ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಚಹಾ ಚೀನಿಯದ್ದು ಎಂದು ಹೇಳಲೂ ಭಯವೇ ಆದರೂ ಅದು ನಿಷೇಧೀತ ಪಟ್ಟಿಯಲ್ಲಿಲ್ಲ ಎಂಬುದೇ ಚಹಾದ ತಲುಬಿರುವವರಿಗೆ ಸಮಾಧಾನದ ವಿಷಯ. ಯಾಕೆಂದರೆ ಚಹಾ ಕುಡಿಯುವವರಿಗೆ ಒಮ್ಮೆ ಚಹಾ ಕುಡಿಯಬೇಕು ಎನ್ನಿಸಿದರೆ ತಕ್ಷಣವೇ ಕುಡಿಯಲೇ ಬೇಕು ಅನ್ನಿಸಿಬಿಡುತ್ತದೆ. ಆ ಸಮಯದಲ್ಲಿ ಉಳಿದೆಲ್ಲವೂ ನಗಣ್ಯವಾಗಿ ಬಿಡಬಹುದು.  ಆದರೆ ಮತ್ತೊಂದು ಸಮಾಧಾನದ ವಿಷಯವೇನೆಂದರೆ ಕುಮಾರ್ ಉಲ್ಲೇಖಿಸಿದ ಮತ್ತೊಂದು ಕಥೆಯ ಪ್ರಕಾರ ಚಹಾದ ಮೂಲ ಭಾರತವೇ ಆಗಿರುವುದು. ಬೋಧಿಧರ್ಮ ಸತತ ಒಂಬತ್ತು ವರ್ಷಗಳ ಕಾಲ ನಿರಂತರ ಧ್ಯಾನ ಮಾಡುವ ಶಪಥ ಮಾಡಿದ್ದ. ಆದರೆ ಕೆಲವು ಸಮಯದ ನಂತರ ನಿತ್ರಾಣಗೊಂಡು ನಿದ್ದೆ ಹೋದ. ಎದ್ದಾಗ ತನ್ನ ಕಣ್ಣುಗಳ ಮೇಲೆ ಕೋಪಗೊಂಡು ಮುಚ್ಚಿಕೊಂಡ ರೆಪ್ಪೆಗಳನ್ನು ಕಿತ್ತೆಸೆದ. ಆ ರೆಪ್ಪೆಗಳು ಬೇರು ಬಿಟ್ಟು ಗಿಡವಾಗಿ ಬೆಳೆಯಿತು. ಅದರ ಎಲೆಗಳು ಕಣ್ಣಿನ ರೆಪ್ಪೆಯ ಆಕಾರದಲ್ಲೇ ಇತ್ತು. ಆ ಎಲೆಗಳನ್ನು ತಿಂದಾಗ ಆಯಾಸವೆಲ್ಲ ಪರಿಹಾರವಾಗಿ ಉತ್ಸಾಹ ತುಂಬಿಕೊಂಡಿತ್ತು.  ಈತನೇ ಮುಂದೆ ಈ ಗಿಡವನ್ನು ಚೀನಾಕ್ಕೆ ಒಯ್ದನೆಂದು ಹೇಳಲಾಗುತ್ತದೆ. ನಂತರ ಬೇರೆ ಬೇರೆ ದೇಶಗಳಲ್ಲಿ ಚಹಾದ ಮಹಿಮೆ ಹಬ್ಬಿತು.      ಕ್ರಿಶ 726ರಲ್ಲಿ ಚಹಾ ಜಪಾನನ್ನು ಪ್ರವೇಶಿಸಿತು. ಶೋಮು ಎಂಬ ದೊರೆ ಚಹಾದ ಕೃಷಿಯನ್ನು ಪ್ರಾರಂಭಿಸಿದ. ಚೀನಾದ ಹೊರಗೆ ಚಹಾ ಬೆಳೆದ ಮೊದಲ ದೇಶ ಎಂಬ ಹೆಗ್ಗಳಿಕೆ ದೊರೆಯಿತು. ಚೀನಾದಲ್ಲಿ  ಟಿಯಿಸಂ ಬೆಳೆದ ಹಾಗೆ ಜಪಾನಿನಲ್ಲಿ ಚಹಾ ಸಮಾರಾಧನೆ ಎನ್ನುವ ವಿಶಿಷ್ಟ ಸಂಪ್ರದಾಯವೇ ಬೆಳೆಯಿತು. ಹೇಗೆ ಸಮಾರಾಧನೆಯ ಕೋಣೆಯನ್ನು ಪ್ರವೇಶಿಸಬೇಕು, ಹೇಗೆ ನಿಂತುಕೊಳ್ಳಬೇಕು ಎಂಬುದರಿಂದ ಹಿಡಿದು ಪ್ರತಿಯೊಂದನ್ನೂ ಹೀಗೆಯೇ ಮಾಡಬೇಕು ಎನ್ನುವ ನಿಯಮಗಳನ್ನು ರೂಪಿಸಿ ಮಾಡುವ ಸಮಾರಾಧನೆ ಇದು.               16ನೇ ಶತಮಾನದಲ್ಲಿ ಡಚ್ಚರಿಂದ ಚಹಾ ಯುರೋಪಿಗೆ ಪರಿಚಯಿಸಲ್ಪಟ್ಟಿತ್ತು. ಅವರು ಚೀನಾದ ಪ್ರಮುಖ ಬಂದರಾದ ಅಮೋಯ್ ಎಂಬಲ್ಲಿ. ಅಲ್ಲಿನ ವ್ಯಾಪಾರಿಗಳು ತಮ್ಮ ಆಡು ಭಾಷೆಯಲ್ಲಿ ಟೇ ಎನ್ನುತ್ತಿದ್ದರಂತೆ. ಹೀಗಾಗಿ ಡಚ್ಚರು ಅದನ್ನು ಟೀ ಯನ್ನಾಗಿಸಿದರು. 1650ರಲ್ಲಿ ಚಹಾ ಇಂಗ್ಲೆಂಡಿಗೆ ಕಾಲಿಟ್ಟಾಗ ಅದ್ಭುತವೂ, ವೈದ್ಯರಿಂದ ಪ್ರಮಾಣಿಕೃತವೂ ಆದ ಚೀನಿ ಪೇಯ.’ ಎಂದಿದ್ದು ದಾಖಲೆಯಾಗಿ ಉಳಿದಿದೆ. ಮೊದಮೊದಲು ಚಾ, ಚಾಯ್, ಟು, ಟೆ, ಮಿಂಗ್, ಥಿಯ ಮುಂತಾದ ಪದಗಳಿಂದ ಪರಿಚಿತವಾಗಿದ್ದ ಈ ಪಾನೀಯಕ್ಕೆ ಚಹಾ ಹಾಗೂ ಟೀ ಎನ್ನುವ ಹೆಸೆರು ಸೂಟ್ ಆದಷ್ಟು ಬೇರೆ ಯಾವುದೇ ಹೆಸರೂ ಆಗುವುದಿಲ್ಲ.        ನಾನು ಕೆಲಸ ಸಿಕ್ಕ ಸಂಭ್ರಮದಲ್ಲಿ ಯಾವ ಸ್ಥಳ ಒಳ್ಳೆಯದೆಂದೇ ತಿಳಿಯದೇ ಬೆಳ್ತಂಗಡಿಯ ಒಂದು ಕಾಡೊಳಗಿನ ಹಳ್ಳಿಯನ್ನು ಆರಿಸಿಕೊಂಡಿದ್ದೆ. ಅಲ್ಲಿನ ಹೆಚ್ಚಿನವರಿಗೆ ಕನ್ನಡವೇ ಬರುವುದಿಲ್ಲ. ಆದರೆ ನಮಗೆ ತುಳು ಮಾತನಾಡಲು ಬರದಿದ್ದರೆ ‘ಭಾಷೆ ಇಜ್ಜಿ’ ಎನ್ನುವವರು. ಹೀಗಾಗಿ ತುಳು ಕಲಿಯಲೇ ಬೇಕಾಗಿತ್ತು. ಪ್ರೌಢಶಾಲೆಯಲ್ಲಿ ಉಳಿದ ಶಿಕ್ಷಕರೆಲ್ಲ ತುಳು ಮಾತಾಡುವಾಗ ನಾನು ಮುಖ ಮುಖ ನೋಡುತ್ತ ಕುಳಿತುಕೊಳ್ಳಬೇಕಾಗಿತ್ತು. ಹೀಗಾಗಿ ತುಳು ಕಲಿಯುವ ಪ್ರಯತ್ನದಲ್ಲಿ ನನಗೆ ಸಿಕ್ಕ ಮೊದಲ ವಾಕ್ಯವೇ ‘ಚಾ ಪೆರಿಯಾರ?’ ಮುಂದಿನ ವಾಕ್ಯ ‘ಬಲ್ಲೆ, ಚಾ ಪರ್ಕ’ ಹೀಗಾಗಿ ಚಹಾ ನನಗೆ ನನ್ನನ್ನು ತುಳುನಾಡಿನೊಟ್ಟಿಗೆ ಬೆಸೆಯುವ ಕೊಂಡಿಯಾಗಿದ್ದು. ಮುಂದೆ ಈ ‘ಬಲ್ಲೆ ಚಾ ಪರ್ಕ’ ಎನ್ನುವುದು ತುಳುನಾಡಿನ ಪ್ರಸಿದ್ಧ ನಾಟಕವೊಂದರ ಹೆಸರು ಎಂಬುದೂ ಗೊತ್ತಾಗಿದ್ದು. ನಾಟಕಕ್ಕೂ ಚಹಾ ಕುಡಿಯೋಣ ಬನ್ನಿ ಎಂಬ ಹೆಸರಿಡುತ್ತಾರೆಂದರೆ ಈ ಚಹಾ ನಮ್ಮನ್ನು ಎಲ್ಲಿಂದ ಎಲ್ಲಿಗೆ ಬೆಸೆಯುತ್ತದೆ ನೋಡಿ. ‘ಒಬ್ಬ ಬಾಲ್ಟಿಯೊಂದಿಗೆ ನೀವು ಚಹಾ ಕುಡಿಯುತ್ತಿದ್ದೀರಿ ಎಂದರೆ ನೀವೊಬ್ಬ ಅಪರಿಚಿತ ಅಷ್ಟೆ. ಎರಡನೇ ಸಾರಿ ನೀವು ಅವನೊಡನೆ ಚಹಾ ಸೇವಿಸುತ್ತಿದ್ದೀರಿ ಎಂದರೆ ನೀವು ಆತನ ಅತಿಥಿ, ಮೂರನೇ ಸಲ ನೀವು ಅವನೊಂದಿಗೆ ಚಹಾ ಕಪ್ ಹಂಚಿಕೊಳ್ಳುತ್ತಿದ್ದೀರೆಂದರೆ ಅದರರ್ಥ ನೀವು ಆ ಕುಟುಂಬದ ಸದಸ್ಯ. ನಿಮಗಾಗಿ ಆತ ಸಾಯಲೂ ಸಿದ್ಧ ಎಂದರ್ಥ’ ಈ ಮಾತನ್ನು ಹೇಳಿದ್ದು ಒಬ್ಬ ತಾಲಿಬಾನಿಯಂತೆ. ಅಂದರೆ ಚಹಾದ ಶ್ರೇಷ್ಟತೆಯನ್ನು ಅರ್ಥಮಾಡಿಕೊಳ್ಳಿ. ಇಂತಹ ಚಹಾದ ಹಿರಿಮೆಯನ್ನು ಓದುತ್ತಿದ್ದರೆ ನನಗೆ ನಾನೆಲ್ಲೋ ಕಳೆದು ಹೋಗುತ್ತಿದ್ದೇನೆ ಎಂಬಂತೆ ಭಾಸವಾಗುತ್ತಿತ್ತು. ಚಹಾದ ಕುರಿತಾದ ಲೇಖನಗಳೂ ಅಷ್ಟೇ. ಒಂದೊಂದೂ ಒಂದೊಂದು ತರಹ ಚಹಾದ ಬಗ್ಗೆ ಸಮಗ್ರ ಮಾಹಿತಿ ನೀಡುವಂತಹುದ್ದು. ಚಹಾದ ಮೂಲ, ಎಲ್ಲೆಲ್ಲಿ ಬೆಳೆದ ಚಹಾದ ರುಚಿ ಹೇಗಿರುತ್ತದೆ, ವಿವಿಧ ಚಹಾ ಪ್ರಕಾರಗಳ ಬಗ್ಗೆ, ಟೀ ಬ್ಯಾಗ್ ಕುರಿತು,  ಜಾರ್ಜ್ ಆರ್ವೆಲ್ಲರ ಟೀ ಟಿಪ್ಸ್ ಬಗ್ಗೆ, ಚಹಾದ ಎಲೆಗಳನ್ನು ಸಂಗ್ರಹಿಸುವ ಒಣಗಿಸುವ ಹಾಗೂ ಸಂಸ್ಕರಿಸುವ ವಿಧಾನಗಳನ್ನು ತಿಳಿಸುವ ಲೇಖನಗಳು ಖಂಡಿತಾ ಗಮನ ಸೆಳೆಯುತ್ತವೆ. ಹಲವಾರು ತರಹದ ಚಹಾ ಮಾಡುವ ವಿಧಾನಗಳ ಬಗ್ಗೆಯೂ ಲೇಖಕರು ವಿವರವಾಗಿ ತಿಳಿಸುತ್ತಾರೆ. ಇದರೊಟ್ಟಿಗೆ ಬೇರೆ ಬೇರೆ ದೇಶಗಳ ಚಹಾ ಪ್ರೀಯತೆ ಮತ್ತು ಅವರು ಇಷ್ಟಪಡುವ ಚಹಾದ ವೆರೈಟಿಯನ್ನೂ ತಿಳಿಸುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಚಹಾ ಇಷ್ಟ ಎಂಬುದನ್ನು ಬಹು ಚಂದವಾಗಿ ವಿವರಿಸುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಜಪಾನಿನಲ್ಲಿ ನಡೆಯುವ ಚಹಾ ಸಮಾರಾಧನೆಯ ಹಾಗೂ ಸೆನ್ ರಿಕ್ಯೂ ಹೇಳಿದ ಚಹಾದ ನಾಲ್ಕು ತತ್ವಗಳು ತೀರಾ ಆಕಷರ್ಿಸುತ್ತವೆ.    ಹಿಂದೆ ನಮ್ಮ ಹಳ್ಳಿಯ ಕಡೆ ಬೆಳಗೆದ್ದು ಚಹಾ ಕುಡಿಯುತ್ತಾರೆಂದರೆ ಕೀಳು ಎಂಬಂತೆ ಕಾಣುತ್ತಿದ್ದರಂತೆ. ‘ಛೀ ಅಂವಾ ಬೆಳಿಗ್ಗೆನೇ ಚಹಾ ಕುಡಿತಾನೆ’ ಎಂದು ಆಡಿಕೊಳ್ಳುತ್ತಿದ್ದುದೂ ಇತ್ತಂತೆ. ನಾವೀಗ ಹೇಗೆ ‘ಅವನು ಬೆಳಿಗ್ಗೆ ಬೆಳಿಗ್ಗೆನೆ ಕುಡಿತಾನೆ’ ಎಂದು ಕುಡುಕರನ್ನು ಆಡಿಕೊಳ್ಳುತ್ತೇವೋ ಹಾಗೆ. ಹಳ್ಳಿಯ ಯಾವುದೋ ಮನೆಯಲ್ಲಿ ಚಹಾವನ್ನು ಬಳಸಲು ಪ್ರಾರಂಭಿಸಿದಾಗ ಹಳ್ಳಿಯ

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಉದಯಿಸುತ್ತಿರುವ ಸೂರ್ಯನೊಂದಿಗೆ ಹೆಜ್ಜೆಯಿಡುವ ತವಕದಲ್ಲಿ. ತೇರೂವೋ ಮೂಲ ಗೌರಿ ದೇಶಪಾಂಡೆ ಕನ್ನಡಕ್ಕೆ- ಚಂದ್ರಕಾಂತ ಪೋಲಳೆ ಬೆಲೆ-೮೦   ನನಗೆ ಬೇರೆ ಭಾಷೆಗಳಿಂದ ಅನುವಾದಗೊಂಡ ಕಾದಂಬರಿಗಳ ಹುಚ್ಚು ಹಿಡಿಸಿದ್ದು ಸೃಷ್ಟಿ ನಾಗೇಶರವರು. ಅವರ ಸೃಷ್ಟಿ ಪ್ರಕಾಶನ ಎಂದರೆ ಅನುವಾದಗಳಿಗಾಗಿಯೇ ಮೀಸಲಾಗಿರುವ ಪ್ರಕಾಶನ. ಜಗತ್ತಿನ ಅದ್ಭುತ ಕಾದಂಬರಿಗಳ ಅನುವಾದಗಳನ್ನು ನಾನು ಓದಿದ್ದು ಸೃಷ್ಟಿ ಪ್ರಕಾಶನದ ಪುಸ್ತಕಗಳಿಂದಾಗಿಯೇ. ತಮ್ಮ ಪ್ರಕಾಶನದ ಪುಸ್ತಕಗಳನ್ನು ತಲುಪಿಸುವ ಸೃಷ್ಟಿ ನಾಗೇಶ ಇದನ್ನು ಮೊದಲು ಓದಿ, ಈ ಪುಸ್ತಕ ಅದ್ಭುತವಾಗಿದೆ ಓದಿ ಎಂದೆಲ್ಲ ಸಲಹೆ ಮಾಡಿಯೇ ಕಳುಹಿಸುತ್ತಾರೆ. ಅವರ ಸಲಹೆ ಯಾವತ್ತೂ ತಪ್ಪಾಗಿದೆ ಎನಿಸಿದ್ದೇ ಇಲ್ಲ ನನಗೆ. ತೆರೂವೋ ಕಳಿಸಿದಾಗಲೂ ಅಷ್ಟೇ. ಅದರ ಜೊತೆ ಇನ್ನೂ ನಾಲ್ಕೈದು ಪುಸ್ತಕಗಳನ್ನು ಕಳುಹಿಸಿದ್ದರೂ ‘ಮೊದಲು ತೆರೂವೋ ಓದಿ ನಂತರ ಬೇರೆಯದ್ದನ್ನು ಓದಿ’ ಎಂದೇ ಕಳುಹಿಸಿದ್ದರು. ಅವರು ಹೇಳಿರುವ ಕಾರಣಕ್ಕಾಗಿಯೇ ಮೊದಲು ತೆರೂವೋ ತೆರೆದವಳು ಕಕ್ಕಾಬಿಕ್ಕಿಯಾಗಿದ್ದೆ. ನಾಗೇಶ್ ಯಾಕೆ ಈ ಪುಸ್ತಕ ಸಜೆಸ್ಟ್ ಮಾಡಿದ್ದಾರೆ ಎಂಬುದೇ ಅರ್ಥವಾಗದೇ ಅದೆಷ್ಟು ಕಂಗಾಲಾಗಿದ್ದೆ ಎಂದರೆ ನಾನೇನು ಓದುತ್ತಿದ್ದೇನೆ ಎಂಬುದೇ ನನಗೆ ಅರ್ಥವಾಗುವಂತಿರಲಿಲ್ಲ. ಅದೇನು ‘ಜಿ’? ಅದೇನು ತಿಂಗಳುಗಳ ಹೆಸರುಗಳು? ಅದ್ಯಾಕೆ ತೆರೂವೋಗೆ ಪತ್ರ ಬರೆಯಬೇಕು? ಮಧ್ಯೆ ಬರುವ ಈ ಜಿ ಆಕೆಗೆ ಏನಾಗಬೇಕು? ಯಾವುದೂ ಅರ್ಥವಾಗದೆ ಅಯೋಮಯದ ಓದಾಯ್ತಲ್ಲ ಇದು ಎಂದುಕೊಂಡಿದ್ದೆ. ಆದರೂ ನಾಗೇಶ್ ಓದಲು ಹೇಳಿದ್ದಾರೆ ಎಂದರೆ ಅದಕ್ಕೇನೋ ಅರ್ಥವಿದ್ದಿರಲೇಬಹುದು  ಎಂದುಕೊಳ್ಳುತ್ತ ಮತ್ತೊಮ್ಮೆ ಓದಿದೆ, ಬರೀ ತೇರೂವೋಗೆ ಬರೆದ ಪತ್ರಗಳನ್ನು, ನಂತರ ಪ್ರಿಯ ಜೆ ಎಂದಿದ್ದದ್ದನ್ನು, ಮತ್ತೊಮ್ಮೆ ಬರಿದೇ ತಿಂಗಳುಗಳ ಹೆಸರಿರುವುದನ್ನು, ಇನ್ನೊಮ್ಮೆ ಅವಳ ಮಾತುಗಳನ್ನು ಓದಿಕೊಂಡೆ. ಆಗ ಶುರುವಾಯ್ತು ನೋಡಿ ಕ್ರಶ್. ಕಾದಂಬರಿಯ ಮೇಲಲ್ಲ, ಕಥಾನಾಯಕಿ ಹೇಳುವ ತೆರೂವೊ ಎಂಬ ಜಪಾನಿನ ಐವತ್ತು ವರ್ಷದ ವ್ಯಕ್ತಿಯ ಮೇಲೆ, ಅದರ ಜೊತೆಜೊತೆಗೇ ಕಥಾನಾಯಕಿಯ ನೇರವಾದ ಮಾತುಗಳ ಮೇಲೆ, ಪ್ರೀತಿಸಿದ್ದನ್ನು ಹಪಾಹಪಿಯಿಂದ ಪಡೆದುಕೊಳ್ಳುವುದರ ಮೇಲೆ, ಮತ್ತು ಪ್ರೀತಿಸಿದ್ದರೂ ಆ ಪ್ರೀತಿ ತನ್ನದಲ್ಲ ಎಂದು ಆಕೆ ಎಚ್ಚರಿಕೆ ವಹಿಸಿದ ರೀತಿಯ ಮೇಲೆ.       ಇಡಿ ಕಾದಂಬರಿ ಮೊದಲ ಓದಿಗೆ ತಲೆಬುಡವೂ ಅರ್ಥವಾಗುವುದಿಲ್ಲ ಎಂಬುದು ನಿಜವಾದರೂ ಎರಡನೆಯ ಓದಿನ ನಂತರ ಆ ಪುಸ್ತಕ ಇಷ್ಟವಾಗುವುದರ ಜೊತೆಗೆ ತೆರೂವೋ ಮೇಲೆ ಪ್ರೀತಿ ಹುಟ್ಟದಿರಲು ಸಾಧ್ಯವೇ ಇಲ್ಲ. ಯಾಕೋ ನನಗೆ ಜಪಾನಿಯರ ಮೇಲೆ ಮೊದಲಿನಿಂದಲೂ ಪೂರ್ವಾಗ್ರಹ. ಬಹುಶಃ ಎರಡನೇ ಮಹಾಯುದ್ಧದ ಸಮಯದಲ್ಲಿ ಅವರು ಬಾಂಗ್ಲಾ ದೇಶದ ಮೇಲೆ ಹಾಗೂ ಆಗಿನ ಬರ್ಮಾ ಎಂಬ ಹೆಸರಿನ ಈಗ ಮಾಯನ್ಮಾರ್ ಎಂದು ಕರೆಯಿಸಿಕೊಳ್ಳುವ ಭೂಭಾಗದ ಮೇಲೆ  ನಡೆಸಿದ ಪೈಶಾಚಿಕ ಕೃತ್ಯ ಯಾಕೋ ಮತ್ತೆ ಮತ್ತೆ ಕಣ್ಣೆದುರಿಗೆ ರುದ್ರನರ್ತನವನ್ನಾಡಿದಂತಾಗುತ್ತದೆ. ಇತಿಹಾಸದ ಓದು ಜಾಸ್ತಿಯಾದರೆ ಇಂತಹುದ್ದೊಂದು ಪೂರ್ವಾಗ್ರಹ ತಾನಾಗಿಯೇ ಮೂಡುತ್ತದೆಯೇ? ಕೆಲವು ದಿನಗಳ ಹಿಂದೆ ವಿಕಿ ಕ್ರುಕ್ ಬರೆದ ‘ಎಲಿಫಂಟ್ ಕಂಪನಿ’ ಓದುತ್ತಿದ್ದೆ. ಅಲ್ಲಿ ಜಪಾನಿಯರು ಯುದ್ಧ ಕೈದಿಗಳನ್ನು ನಡೆಸಿಕೊಳ್ಳುತ್ತಿದ್ದ ಭೀಕರ ಅನುಭವ ದಾಖಲಾಗಿತ್ತು. ಯುದ್ಧ ಕೈದಿಗಳನ್ನು ಮರಕ್ಕೆ ಕಟ್ಟಿಹಾಕಿ ಹರಿತವಾದ ಕತ್ತಿಯಿಂದ ಉದ್ದಕ್ಕೆ ಸೀಳಿಬಿಡುತ್ತಿದ್ದರಂತೆ. ನೆತ್ತಿಯಿಂದ ನಡುವೆ ಎರಡು ಭಾಗ ಮಾಡಿ ಎಸೆಯುತ್ತಿದರಂತೆ. ಸೆರೆ ಸಿಕ್ಕ ವಿರೋಧಿ ಸೈನ್ಯದ ಆನೆಗಳನ್ನು ಕೂಡ ಬಿಡದೆ ಕ್ರೂರವಾಗಿ ಹಿಂಸಿಸಿ ಕೊಲ್ಲುವ ಚಿತ್ರ ಈ ಪುಸ್ತಕ ಓದಿದ ನಂತರ ನನ್ನ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ. ಹೀಗಾಗಿ ಜಪಾನಿಗಳು ಎಂದ ತಕ್ಷಣ ಪುಟ್ಟ ಕಣ್ಣಿನ, ಚಂದದ ನಗುವಿನ, ಕುಳ್ಳಗಿನ ಜನ ನೆನಪಾಗುವಂತೆಯೇ ಈ ಕ್ರೂರತನದ ಚಿತ್ರಣವೂ ಅದರ ಜೊತೆ ಜೊತೆಗೇ ನೆನಪಾಗಿ ಬಿಡುತ್ತದೆ. ಆದರೆ ತೆರೂವೋ ಓದಿದ ನಂತರ ನನ್ನ ಮನದೊಳಗೆ ಮೂಡಿದ್ದ ಜಪಾನಿಯರ ಚಿತ್ರ ಒಂದಿಷ್ಟು ಪಲ್ಲಟವಾಗಿ ಒಂದಿಷ್ಟು ಅಲ್ಲಲ್ಲ ತುಸು ಹೆಚ್ಚೇ ಎನ್ನಿಸುವಷ್ಟು ಪ್ರೇಮಮಯವಾದ ಒಂದು ಚಿತ್ರ ಕಾಣಿಸಿಕೊಂಡಿದ್ದಂತೂ ಸುಳ್ಳಲ್ಲ.              ಬಹಳಷ್ಟು ಸಲ ನನ್ನನ್ನು ನಾನೇ ಕೇಳಿಕೊಳ್ಳುವುದಿದೆ. ಈ ಪ್ರೀತಿ ಪ್ರೇಮವೆಲ್ಲ ಯಾವತ್ತಾದರೂ ಹೇಳಿಕೇಳಿ ಹುಟ್ಟುತ್ತವೆಯೇ? ‘ಒಬ್ಬ ಇಷ್ಟವಾದ’ ಎಂದು ಹೆಣ್ಣು ಹೇಳುವುದಕ್ಕೆ ಅದೆಷ್ಟು ಒದ್ದಾಡಬೇಕು ಎಂದರೆ ಭಾರತೀಯ ಸಂಸ್ಕೃತಿಯಲ್ಲಿ ಈಗಲೂ, ಈ ಕ್ಷಣಕ್ಕೂ ಅದು ಅಸಾಧ್ಯವೇ.  ನಾವು ತೀರಾ ಮುಂದುವರಿದಿದ್ದೇವೆ ಎಂದುಕೊಂಡ ಈ ಜಮಾನಾದಲ್ಲೂ ‘ಆತ ಇಷ್ಟವಾದ’ ಎಂದು ಬಾಯಿ ಮಾತಿಗೂ ಹೇಳುವುದು ಅಪರಾಧವೇ ಆಗಿದೆ. ಹಾಗೇನಾದರೂ ಹೆಣ್ಣೊಬ್ಬಳು ಹೇಳಿ ಬಿಟ್ಟರೆ ಈ ಸಮಾಜ ಅವಳನ್ನು ನೋಡುವ ದೃಷ್ಟಿಕೋನವೇ ಬೇರೆ. ನನ್ನ ಗೆಳತಿಯೊಬ್ಬಳು ಒಬ್ಬನನ್ನು ಇಷ್ಟಪಟ್ಟು, ಅದನ್ನು ಆತನ ಬಳಿ ಮುಚ್ಚುಮರೆ ಇಲ್ಲದೇ ಹೇಳಿಕೊಂಡು ಒದ್ದಾಡಿದ ಪರಿಯನ್ನು ತೀರಾ ಹತ್ತಿರದಿಂದ ನೊಡಿದ್ದೇನೆ. ಈ ಸಮಾಜ ರೀತಿ ರಿವಾಜುಗಳಿಂದಷ್ಟೇ ಅಲ್ಲ, ಅದು ಕಟ್ಟಳೆಗಳಿಂದ ತನ್ನನ್ನು ತಾನೇ ಬಿಗಿದುಕೊಂಡ ಬಂಧನ. ಹೀಗಾಗಿ ಯಾವ ಕಾರಣಕ್ಕೂ ಹೆಣ್ಣು ತನ್ನೊಳಗಣ ಪ್ರೇಮವನ್ನು ಬಿಚ್ಚಿಡುವಂತೆಯೇ ಇಲ್ಲ ಎಂಬುದು ಹಲವಾರು ಸಲ ಸಾಬೀತಾಗಿದೆ. ಹೆಣ್ಣು ಪ್ರೀತಿಸುವುದನ್ನು ಸಮಾಜ ಒಪ್ಪಿಕೊಳ್ಳಬಹುದು. ಆದರೆ ತಾನಾಗಿಯೇ ಮುಂದುವರೆದು ಪ್ರೀತಿಸುತ್ತೇನೆ ಎಂದರೆ ಅದನ್ನು ಯಾರಿಗಾಗಿ ಹೇಳಿದ್ದಳೋ ಆ ಹುಡುಗನೂ ಆಡಿಕೊಳ್ಳುವುದೆಂದರೆ ಅದೊಂದು ಹಿಂಸಾರತಿಯೆಂದೇ ನನಗೆ ಭಾಸವಾಗುತ್ತದೆ. ಪ್ರೀತಿಸಿ ಮದುವೆಯಾದವರನ್ನು ಕೇಳಿ ನೋಡಿ. ಅದರಲ್ಲೂ ಹುಡುಗಿಯೇ ಮುಂದುವರೆದು ಪ್ರೀತಿಸುತ್ತೇನೆ ಅಂದುಬಿಟ್ಟರಂತೂ ಮುಗಿದೇ ಹೋಯಿತು. ಪ್ರೀತಿಸುವಾಗೇನೋ ಖುಷಿಯಿಂದಲೇ ಪ್ರೀತಿಸುತ್ತಾರೆ. ಮದುವೆಯಾಗಲೂ ಅಂಂತಹುದ್ದೇನೂ ತಕರಾರು ಕಾಡುವುದಿಲ್ಲ. ಆದರೆ ಸಂಸಾರ ನಡೆಸುವಾಗ ಏನಾದರೂ ಮಾತಿಗೆ ಮಾತು ಬೆಳೆದರೆ ‘ನಂಗೊತ್ತಿಲ್ವಾ ನೀನೇನು ಅಂತ? ಯಾವ ಹೆಣ್ಣು ನಾಚಿಕೆ ಬಿಟ್ಟು ಪ್ರೀತಿಸ್ತೇನೆ ಅಂತಾ ಬರ್‍ತಾಳೆ? ನೀನಾಗೇ ಮೊದಲು ಪ್ರಪೋಸ್ ಮಾಡಿದಾಗಲೇ ನಾನು ಎಚ್ಚರಿಕೆ ವಹಿಸಬೇಕಾಗಿತ್ತು.’ ಎನ್ನುವ ತರಹದ ಮಾತುಗಳು ಬರುವ ಬಗ್ಗೆ ಹಲವಾರು ಸ್ನೇಹಿತೆಯರು ಅಂತರಂಗದಲ್ಲಿ ತೋಡಿಕೊಂಡಿದ್ದಾರೆ. ಅಂದರೆ ಪ್ರೀತಿಯನ್ನು ಹೇಳಿಕೊಳ್ಳುವುದಕ್ಕೂ ಈ ಸಮಾಜದಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ಇಲ್ಲದಿರುವಾಗ ಲೈಂಗಿಕತೆಯ ಬಗ್ಗೆ ಮಾತನಾಡಲು ಕನಿಷ್ಟ ಅವಕಾಶವೂ ಇಲ್ಲ ಎಂದರ್ಥ. ಆದರೆ ಅಚ್ಚರಿಯೆಂದರೆ ಅದು ಭಾರತವಿರಲಿ ಅಥವಾ ಜಪಾನ್ ಇರಲಿ, ಬಹುಶಃ ಪೌರಾತ್ಯ ದೇಶಗಳಲ್ಲಿ ಅಂತಹ ವ್ಯತ್ಯಾಸ ಕಂಡು ಬರುವುದಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಅಲ್ಪಸ್ವಲ್ಪವಾದರೂ ಧಾರಾಳತನ ದೊರಕಬಹುದೇನೋ. ಯಾಕೆಂದರೆ ಜಪಾನಿನಲ್ಲಿರುವಾಗ ನಮ್ಮ ಕಥಾ ನಾಯಕಿ ತನ್ನ ಗಂಡ ಜನಕನೊಡನೆ ಮೊದಲ ಸಲ ಪಾರ್ಟಿಗೆಂದು ಬಾರಿಗೆ ಹೋದಾಗ ಅಲ್ಲಿ ನೆರೆದಿದ್ದ ಗಂಡಸರಿಗೆಲ್ಲ ಅಚ್ಚರಿ. ಅಲ್ಲಿ ಪ್ರತಿಯೊಬ್ಬ ಗಂಡಸಿಗೂ ತನ್ನದೇ ಫೆವರಿಟ್ ಬಾರ್ ಇರುತ್ತದೆ. ಅದರ ಜೊತೆಗೇ ಕಂಪನಿ ಕೊಡಲು ಮಾಮಾಸಾನ ಮತ್ತು ಪ್ರತಿಯೊಬ್ಬರಿಗೂ ಕುಡಿತದ ಖುಷಿ ಅನುಭವಿಸಲು, ಖಾಲಿಯಾದ ಮಧು ಸೀಸೆಯನ್ನು ತುಂಬಿಸಲು, ಅಪ್ಪಲು, ಮುದ್ದಿಸಲು ಪೆವರಿಟ್ ಕಂಪಾನಿಯನ್ ಕೂಡ ಇರುತ್ತಾಳೆ. ಆದರೆ ಅವರೇ ನೇರವಾಗಿ ಹೇಳುವಂತೆ ಹೆಂಡತಿಯನ್ನು ಜೊತೆಗೆ ಕರೆದುಕೊಂಡು ಹೋಗುವ ಪದ್ದತಿ ಅಲ್ಲಿಲ್ಲ. ಹೆಣ್ಣೊಬ್ಬಳು ಬಾರಿಗೆ ಬರುವುದೇ ಅವರಿಗೆ ಹೊಸ ಆಲೋಚನೆ. ಆದರೆ ಅಲ್ಲಿಯ ಗಂಡಸೊಬ್ಬ ನಿಮ್ಮೊಂದಿಗೆ ಹರಟೆ ಹೊಡೆಯಲು ತುಂಬಾ ಉತ್ಸಾಹ ಬರುತ್ತದೆ. ಆದರೆ ನಾನು ಲಗ್ನವಾದರೆ ನಿಮ್ಮಂಥವರನ್ನು ಅಲ್ಲಪ್ಪ. ಹೆಂಡತಿ ಹೇಗಿರಬೇಕೆಂದರೆ, ಸಂತೋಷದಿಂದ ಮನೆಯಲ್ಲೇ ಕುಳಿತಿರಬೇಕು. ಎನ್ನುತ್ತಾನೆ. ಅಂದರೆ ಜಗತ್ತಿನ ಸುಖಗಳೆಲ್ಲವನ್ನೂ ಸೂರೆ ಹೊಡೆಯುವುದು ಗಂಡಸರ ಕೆಲಸ. ಆದರೆ ಹೆಣ್ಣು ಮಾತ್ರ ಮನೆಯೊಳಗೇ ಜಗದ ಸುಖವನ್ನೆಲ್ಲ ಕಲ್ಪಿಸಿಕೊಂಡು ಸಂತೃಪ್ತರಾಗಬೇಕು.          ಆದರೆ ತೆರೂವೋದಲ್ಲಿ ಕಾದಂಬರಿಕಾರ್ತಿ ತುಂಬಾ ಮುಕ್ತವಾಗಿ ಹೆಣ್ಣಿನ ಬಾಯಿಂದ ಲೈಂಗಿಕ ಸ್ವಾತಂತ್ರ್ಯದ ಕುರಿತು ಹೇಳಿಸುತ್ತಾರೆ. ಕಾದಂಬರಿಯ ನಾಯಕಿಗೆ ಓಡಾಡುವ ಹೊಸ ಹೊಸ ದೇಶಗಳಿಗೆ ಪಯಣಿಸುವ ಮಹತ್ವಾಕಾಂಕ್ಷೆ. ಎಲ್ಲಿಗಾದರೂ ಪ್ರವಾಸ ಹೋಗುವುದನ್ನು ನಿರಾಕರಿಸುವುದೆಂದರೆ ಅದು ಮುದಿತನ ಆವರಿಸಿದಂತೆ ಎಂದೇ ಭಾವಿಸುವ ಸ್ವಚ್ಛಂದ ಮನಸ್ಸಿನ ಹೆಣ್ಣು. ಸ್ವತಃ ಆಕೆಯ ಗಂಡ ಒಂದೆಡೆ ತಮಾಷೆಯಿಂದ ‘ಅವಳು ಯಾರ ಯಾರ  ಪ್ರೇಮದಲ್ಲಿ ಬಿದ್ದಿದ್ದಾಳೆ ಎಂಬ ಪಟ್ಟಿಯ ಆಧಾರದಿಂದ  ಅವಳು ಯಾವ ಯಾವ ಸ್ಥಳ ನೋಡಿದ್ದಾಳೆಂದು ಪರೀಕ್ಷಿಸಬೇಕಾಗುತ್ತದೆ! ಟೋನಿ, ಯೊಹಾನ್, ಯೆಆಕಿಮ್ ಕುರ್ಟ, ಎಂಜೆಲೋ, ಪಾವುಲೋ, ನಿಕೋಣ, ಇವಾನ್. ಅಸಂಖ್ಯ ಪ್ರಾಣಿಗಳು ಅವರ ಜೊತೆಗೆ ಹಿಂದುಸ್ಥಾನದ ಜನರನ್ನು ಸೇರಿಸಿದರಂತೂ ನೋಡುವುದೇ ಬೇಡ! ಸಿಕ್ಕ ಸಿಕ್ಕವರನ್ನು ಪ್ರೀತಿಸುವ ಚಟವೇ ಬಿದ್ದಿದೆ ಅವಳಿಗೆ.’ ಎನ್ನುತ್ತಾನೆ. ಭಾರತೀಯ ಗಂಡನೊಬ್ಬ ಹೀಗೆ ಮುಕ್ತವಾಗಿ ಹೇಳಿಕೊಳ್ಳುವುದು ಅಸಂಭವವೇ ಆಗಿದ್ದಾಗಲೂ ಕೂಡ ಇದೊಂದು ತಮಾಷೆಯ ದಾಖಲಾತಿಯಾಗಿದ್ದರಿರಬಹುದೆಂದು ಕೊಂಡರೂ ಸ್ವತಃ ಕಥಾನಾಯಕಿ ಕೂಡ ಬೇರೆ ಬೇರೆ ದೇಶಗಳ ಗಂಡಸರ ಬಗ್ಗೆ ಮಾತನಾಡುತ್ತಾಳೆ. ಅದರಲ್ಲೂ ಆಕೆ ಜಪಾನಿನ ತೆರೂವೋ ಎನ್ನುವ ಯಾಮಾಹಾಸಾನನ ಪ್ರೀತಿಯಲ್ಲಿ ತೊಡಗಿಸಿ ಕೊಂಡಿದ್ದರ ಚಿತ್ರಣವಂತೂ ಅತ್ಯಪೂರ್ವ. ಅದಷ್ಟೇ ಆಗಿದ್ದರೆ ಅದೊಂದು ಅಪೂರ್ಣ ಚಿತ್ರಣವಾಗುತ್ತಿತ್ತು. ಅವಳು ಪ್ರೀತಿಸಿದ್ದಕ್ಕಿಂತ ಹೆಚ್ಚಾಗಿ ತೆರೂವೋ ಪ್ರೀತಿಸುವುದಿದೆಯಲ್ಲ ಅದು ಅತ್ಯದ್ಭುತ.  ತೆರೂವೋ ಎನ್ನುವ ನಲವತ್ತೈದು ಐವತ್ತು ವರ್ಷದ ಮಧ್ಯವಯಸ್ಸನ್ನೂ ದಾಟಿದ ಪುರುಷನೊಂದಿಗೆ ನಲವತ್ತೈದರ ಕಥಾನಾಯಕಿಯ ಪ್ರೇಮ ನಮ್ಮೆಲ್ಲ ಹೊಸ ಪ್ರೇಮಕಥೆಗಳನ್ನೂ ನಾಚಿಸುವಂತಿದೆ. ತೆರೂವೊನ ದೇಹದ ಕಣಕಣವನ್ನೂ ಹೀರಿ ಒಂದು ತುತ್ತನ್ನು ಮಾಡಿ ನುಂಗಿ ಬಿಡಬೇಕು ಎನ್ನುವ ಆಕೆಯ ಮಾತು ಒಂದು ಕ್ಷಣ ಓದುಗನನ್ನು ಪ್ರೇಮದ ಕಡಲಲ್ಲಿ ಮುಳುಗಿ ಹೋಗುವಂತೆ ಮಾಡದಿರಲು ಸಾಧ್ಯವೇ ಇಲ್ಲ.  ಹೀಗಾಗಿಯೇ Drink to me only with thine Eyes and I will pledge with mine Or leave a kiss within the cup And I’ll not look for wine ಎನ್ನುವ ಸಾಲುಗಳು ಅವಳಿಗಿಷ್ಟ. ಮತ್ತು ಅದನ್ನೆಲ್ಲ ತಿಳಿದ ನಂತರವೂ ತೆರೂವೋ ಅವಳನ್ನೆಷ್ಟು ಪ್ರೀತಿಸುತ್ತಾನೆಂದರೆ ಜಪಾನಿ ಕೌಟುಂಬಿಕ ನಿಯಮಗಳಿಗೆ ವಿರುದ್ಧವಾಗಿ ಅವಳನ್ನು ಪ್ರೀತಿಸುತ್ತಾನೆ, ಜಪಾನಿನ ಸಾಮಾಜಿಕ ನಿಯಮಗಳನ್ನು ಮೀರಿ ನಡುಮಧ್ಯಾಹ್ನವೇ ಕುಡಿದು ಮತ್ತೇರುವಷ್ಟು ಅವಳನ್ನು ಪ್ರೇಮಿಸುತ್ತಾನೆ. ಅಂತಹ ಪ್ರೇಮದಲ್ಲಿ ದೇಹ ಸಂಪರ್ಕವೆಂಬುದು ಅಷ್ಟೊಂದು ಪ್ರಧಾನವಾದ ವಿಷಯವೇ ಆಗುವುದಿಲ್ಲ. ಹಾಗೆಂದು ದೇಹದ ಮಿಲನವಾಗದೇ ಪ್ರೇಮ ಫಲಿಸುವುದೂ ಇಲ್ಲ. ಹೀಗಾಗಿಯೇ ಕಥಾನಾಯಕಿ ‘ಪರಸ್ಪರರ ಬಗೆಗಿನ ಭಾವವು ಅದೆಷ್ಟು ಸಂಪೂರ್ಣ ಮತ್ತು ಸರ್ವವ್ಯಾಪಿಯಾಗಿರುತ್ತದೆ ಎಂದರೆ  ಪ್ರಣಯಕ್ರಿಯೆಯೂ ಸಹ ಅದರದ್ದೇ ಒಂದು ಭಾಗವಾಗಿ ಬಿಡುತ್ತದೆ. ಅದನ್ನು ಮಾಡುವುದಾಗಲಿ ಮಾಡದೇ ಇರುವುದಾಗಲಿ ಅಷ್ಟೊಂದು ಮಹತ್ವದ್ದಾಗಿ ಉಳಿಯುವುದಿಲ್ಲ. ಒಬ್ಬರು ಮತ್ತೊಬ್ಬರಿಂದ ಪಡೆಯುವುದು ಒಂದು ಬಗೆಯ ಅನುಭವವಾದರೆ, ಒಬ್ಬರು ಮತ್ತೊಬ್ಬರಿಗೆ ನೀಡುವುದು ಮತ್ತೊಂದು ಬಗೆಯ ಸುಖ.’ ಎನ್ನುತ್ತಾಳೆ. ಹೀಗೆಂದೆ ತನ್ನ ಮತ್ತು ಅವಳ ಪ್ರೇಮದ ಕುರಿತಾಗಿ ಅವಳ ಗಂಡನಿಗೆ ತಿಳಿದರೆ ಏನಾಗಬಹುದು ಎಂದು ತೆರೂವೋ ಕೇಳಿದಾಗ ‘ಅದಕ್ಕೂ ಜನಕನಿಗೂ ಏನು ಸಂಬಂಧ?’ ಎನ್ನುತ್ತಾಳೆ. ‘ಮದುವೆ ಮಾಡಿಕೊಂಡಿಲ್ಲವೇ?’ ಎಂದರೆ ‘ಮಾಡಿಕೊಂಡರೇನಾಯಿತು? ಇಂಥ ಭಾವನೆ, ಇಂಥ ಅನುಭವ, ಇಂಥ ಕೃತಿಯು ಅವನ ಮಾಲಿಕತ್ವದ್ದು ಆಗಿ ಬಿಡುತ್ತದೆಯೇ?’ ಎನ್ನುವ ಮಾತುಗಳು ಅವಳೆಷ್ಟು ಸ್ವತಂತ್ರ ಮನೋಭಾವದವಳು ಎಂಬುದನ್ನು ತೋರಿಸುತ್ತದೆ. ತನ್ನ ಪ್ರೇಮ, ತನ್ನ ಕಾಮ ತನ್ನ ವೈಯಕ್ತಿಕ ಮಾತ್ರ ಎನ್ನುವ ಅವಳ ಭಾವನೆ ನಿಜಕ್ಕೂ ಒಮ್ಮೆ ನಿಟ್ಟುಸಿರಿಡುವಂತೆ ಮಾಡುತ್ತದೆ.    ಇದೆಲ್ಲದರ ನಡುವೆಯೂ ಅವಳ ಅಪ್ಪನ ಸ್ನೇಹಿತನಾದ ‘ಜಿ’ ಯನ್ನು ಆಕೆ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾಳೆ. ಅವರಿಬ್ಬರ ನಡುವಿನ ಸಂಬಂಧವೇ ಅಚ್ಚರಿ ಹುಟ್ಟಿಸುವಂತಹುದ್ದು. ಅವಳ ಎಲ್ಲ ಪ್ರೇಮ ಸಂಬಂಧಗಳ ಬಗೆಗೆ ಅರಿವಿರುವ ಜಿ ಕೂಡ ಅವಳನ್ನು ಆಳವಾಗಿ ಪ್ರೀತಿಸುವುದು ಅವಳ ಮಾತುಗಳಿಂದಲೇ ಅರಿವಾಗುತ್ತದೆ. ‘ನಾನೇನಾದರೂ ದೂರದ ದೇಶಕ್ಕೆ  ಹೋದರೆ ಅದರಿಂದ ಕಂದಕವುಂಟಾಗುವುದು ಜಿ ಜೀವನದಲ್ಲಿ ಮಾತ್ರ’ ಎನ್ನುವ ಅವಳ ಮಾತುಗಳು ಈ ಸತ್ಯವನ್ನೇ ಹೇಳುತ್ತದೆಯಾದರೂ ಜಪಾನಿಗೆ ಹೋದ ಮೇಲೆ ಆಕೆ ತೆರೂವೋನ ಕುರಿತಾಗಿ ‘ಜಿ’ಯಲ್ಲಿ ಹೇಳಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ತೆರೂವೋ ಜೊತೆಗಿನ ಪ್ರೇಮವನ್ನು ಎದೆಯೊಳಗೇ ಮುಚ್ಚಿಟ್ಟುಕೊಂಡು, ಜೀವನಪೂರ್ತಿ ಒಬ್ಬಳೇ ಆಸ್ವಾದಿಸುವ ಆಸೆ

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಮೂರನೇ ಆಯಾಮ

ಸುಪ್ತಮನದೊಳಗಿನ ಗುಪ್ತತೆಗಳ ಅನಾವರಣ ಸುಪ್ತಲೇಖಕರು- ಡಾ. ಕೆಬಿ ಶ್ರೀಧರಬೆಲೆ- ೨೦೦ ತ್ರೀ ಈಡಿಯೆಟ್ಸ್ ನೋಡಿದ್ದೀರಲ್ಲ? ಅಲ್ಲಿನ ಒಂದು ದೃಶ್ಯ. ಇಂಜಿನಿಯರ್ ಕಾಲೇಜಿನ ರಿಸಲ್ಟ್ ಬಂದಿರುತ್ತದೆ. ಸ್ನೇಹಿತರಾದ ಫರ್ಹಾನ್ ಖಾನ್ ಮತ್ತು ರಾಜು ತಮ್ಮ ತಮ್ಮ ರಿಸಲ್ಟ್ ನೋಡಲು ಅಂಕಪಟ್ಟಿಯ ಕೆಳಗಿನಿಂದ ಮೇಲಕ್ಕೆ ನೋಡುತ್ತಿರುತ್ತಾರೆ. ಅಲ್ಲೆಲ್ಲೋ ಮಧ್ಯದಲ್ಲಿ ಅವರ ಹೆಸರುಗಳು ಕಾಣಿಸುತ್ತವೆ. ತಮ್ಮ ಹೆಸರು ಸಿಕ್ಕ ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಾರೆ. ಆದರೆ ತಮಗಿಂತ ಒಂದಿಷ್ಟು ಮೇಲಿನವರೆಗೆ ನೋಡಿದರೂ ರಾಂಚೋ ನಂಬರ್ ಸಿಕ್ಕುವುದೇ ಇಲ್ಲ. ಗೆಳೆಯರಿಗೆ ಬೇಸರ. ತಮ್ಮದೇ ಜೊತೆ ತಮ್ಮೆಲ್ಲ ಕೀಟಲೆಯಲ್ಲಿದ್ದ ರಾಂಚೋ ಫೇಲ್ ಆದ ಎನ್ನುವುದು. ಆದರೆ ಮತ್ತೊಮ್ಮೆ ನೋಡಿದರೆ ಚತುರ್‌ನನ್ನೂ ಹಿಮದೆ ಹಾಕಿ ರಾಂಚೋ ಟಾಪರ್ ಆಗಿರುತ್ತಾನೆ. ಲೀಸ್ಟ್‌ನ ಮೊಟ್ಟ ಮೊದಲಲ್ಲಿ ಅವನ ಹೆಸರಿರುತ್ತದೆ. ಆಗ ಒಂದು ಮಾತು ಬರುತ್ತದೆ. ‘ತಮ್ಮ ಸ್ನೇಹಿತ ಫೇಲ್ ಆದ ಎನ್ನುವುದು ಎಷ್ಟು ಬೇಸರ ಕೊಡುತ್ತದೆಯೋ, ಅದಕ್ಕಿಂತ ಹೆಚ್ಚು ಬೇಸರ ಆತ ಕಾಲೇಜಿಗೇ ಮೊದಲಿಗೆ ಎಂದು ತಿಳಿದಾಗ ಆಗುತ್ತದೆ’ ಎನ್ನುವುದು. ನನಗೆ ಈ ಮಾತು ಪದೆಪದೇ ನೆನಪಾಗುತ್ತದೆ. ನಾವು ಯಾರನ್ನೋ ನಮ್ಮವರು ಎಂದುಕೊಳ್ಳುತ್ತಲೇ ಇರುತ್ತೇವೆ. ಜೀವಕ್ಕಿಂತ ಹೆಚ್ಚು, ಪ್ರಾಣಸ್ನೇಹಿತ ಎನ್ನುವ ಮಾತುಗಳನ್ನು ಆಡಿಕೊಳ್ಳುತ್ತಲೇ ಇರುತ್ತೇವೆ. ಆದರೆ ಎಷ್ಟೇ ಜೀವಕ್ಕೆ ಜೀವ ಎಂದರೂ ಎದೆಯ ಮೂಲೆಯಲ್ಲೊಂದು ಸಣ್ಣ ಅಸೂಯೆ ಇದ್ದೇ ಇರುತ್ತದೆಯೇ? ನಾವು ಎರಡು ಜೀವ ಒಂದು ಪ್ರಾಣ ಎನ್ನುವ ಮಾತುಗಳೆಲ್ಲ ಕಷ್ಟದಲ್ಲಿದ್ದಾಗ ನಿಜವೇ. ಕಷ್ಟಕ್ಕೆ ಹೆಗಲು ಕೊಡುವಾಗ ಹೆಚ್ಚಿನ ಸ್ನೇಹಿತರಿಗೆ ಯಾವ ಬೇಸರವೂ ಆಗುವುದಿಲ್ಲ. ನೋವನ್ನು ತಮ್ಮದೇ ಎಂದು ತಿಳಿದು ಅದನ್ನು ನಿವಾರಿಸಲು ಓಡಾಡುವ ಸ್ನೇಹಿತರಿಗೇನೂ ಕೊರತೆ ಇರುವುದಿಲ್ಲ. ಖುಷಿಯ ಜೊತೆಗೆ ಸಾವಿರಾರು ಗೆಳೆಯರಿರಬಹುದು. ಯಶಸ್ಸಿನ ಜೊತೆಗೆ ಇನ್ನೂ ಬಹಳಷ್ಟು ಸ್ನೇಹಿತರು ಹುಟ್ಟಿಕೊಳ್ಳಬಹುದು. ಆದರೆ ಕೊರತೆಯಿರುವುದು ಯಶಸ್ಸನ್ನು ಅಷ್ಟೇ ದೊಡ್ಡ ಮನಸ್ಸಿನಿಂದ ಒಪ್ಪಿಕೊಳ್ಳುವ ಸ್ನೇಹಿತರದ್ದು. ಡಾ. ಶ್ರೀಧರ ಕೆ.ಬಿಯವರ ಸುಪ್ತ ಕಾದಂಬರಿಯನ್ನು ಓದುವಾಗ ನನಗೆ ಇದೆಲ್ಲ ನೆನಪಾಯ್ತು. ಕೆ. ಬಿ. ಶ್ರೀಧರ ಹೆಸರಾಂತ ವೈದ್ಯರು. ವೈದ್ಯರೇಕೆ ಸಾಹಿತ್ಯಲೋಕದೊಳಗೆ ಕಾಲಿಡಲು ಮನಸ್ಸು ಮಾಡಿದರೋ ಗೊತ್ತಿಲ್ಲ. ಅದರಲ್ಲೂ ಕಾದಂಬರಿಯನ್ನು ಬರೆಯುವ ಹುಮ್ಮಸ್ಸು ಮೂಡಿದ್ದೇಕೆ? ಅವರೇ ಅದಕ್ಕೆ ಉತ್ತರ ಹೇಳಬೇಕು.     ‘ಸುಪ್ತ’ ಎನ್ನುವುದು ವೈದ್ಯರೊಬ್ಬರು ಬರೆದಿರುವುದರಿಂದ ಸಹಜವಾಗಿಯೇ ವೈದ್ಯಲೋಕಕ್ಕೆ ಸಂಬಂಧಪಟ್ಟ ಕಾದಂಬರಿ. ಇದು ಬಾಲ್ಯ ಸ್ನೇಹಿತ ಸ್ನೇಹ, ಅಸೂಯೆ, ಅಸಮಧಾನ ಅವರ ಖುಷಿ, ಕುಡಿತದ ಕುರಿತಾಗಿ ಹೇಳುವಂತೆಯೇ ಪ್ರಮುಖವಾಗಿ ಆ ಸ್ನೇಹಿತರಲ್ಲಿ ಒಬ್ಬನ ಕ್ಯಾನ್ಸರ್‌ನ ಕುರಿತಾಗಿ ಹೇಳುತ್ತ ಹೋಗುತ್ತದೆ. ಕ್ಯಾನ್ಸರ್‌ನ ಮೂಲಕವಾಗಿಯೇ ಇವರ ಬಾಲ್ಯ, ಯೌವನದ ದಿನಗಳು, ಇವರ ವಿದ್ಯಾಭ್ಯಾಸದ ಕುರಿತಾಗಿ ಪರ್‍ಯಾವರಣದ ಕ್ರಮದಲ್ಲಿ ವಿಷದಪಡಿಸುತ್ತದೆ. ಇಲ್ಲಿ ಕ್ಯಾನ್ಸರ್ ಪೇಷಂಟ್ ಕೂಡ ಒಬ್ಬ ವೈದ್ಯನೇ. ಕಾದಂಬರಿಕಾರ ಕೂಡ ವೈದ್ಯನೇ ಆಗಿರುವುದರಿಂದ ಕ್ಯಾನ್ಸರ್‌ಗೆ ಸಂಬಂಧಪಟ್ಟ ಹೆಚ್ಚಿನ ವಿವರಣೆಗಳನ್ನು ಇಲ್ಲಿ ಯಥಾವತ್ತಾಗಿ ದಾಖಲಿಸಲು ಸಾಧ್ಯವಾಗಿದೆ ಎಂದುಕೊಳ್ಳುತ್ತೇನೆ. ಕೆಲವು ದಿನಗಳಿಂದ ಫ್ರೆಂಚ್ ಲೇಖಕರ ಬಗ್ಗೆ ಹಿಂದೊಮ್ಮೆ ನಾನೇ ಬರೆದ ಲೇಖನಗಳನ್ನು ತಿದ್ದಿ ಬರೆಯಲೆಂದು ಮತ್ತೊಮ್ಮೆ ಮಾಹಿತಿ ಕಲೆಹಾಕುತ್ತಿದ್ದೆ. ಗೆಳೆಯ ವಿ. ಆರ್ ಕಾರ್ಪೆಂಟರ್ ತನ್ನ ನವಿಲು ಪತ್ರಿಕೆಗಾಗಿ ಒತ್ತಾಯದಿಂದ ವಿಕ್ಷಿಪ್ತ ಲೇಖಕರು ಎಂಬ ಮಾಲಿಕೆಯನ್ನು ಬರೆಸಿದಾಗ ಬರೆದ ಲೇಖನಗಳು ಅವು. ಅನುಭವಕ್ಕಾಗಿಯೇ ಪಾಪದ ಕೂಪದಲ್ಲಿ ಬಿದ್ದು ಹೊರಳಾಡಿದ ಬಹಳಷ್ಟು ಲೇಖಕರ ಬಗ್ಗೆ ಓದಿದಾಗ ನಿಜಕ್ಕೂ ಅಚ್ಚರಿಯಾಗಿತ್ತು. ಬೋದಿಲೇರ್, ಸೆಂಡಾರ್ಸ್, ಪೌಲ್ ವರ್ಲೆನ್ ಮುಂತಾದವರು ತಮ್ಮ ಬರವಣಿಗೆಗಾಗಿಯೇ ಪಾಪಲೋಕದ ಒಳಹೊಕ್ಕು ಆ ಬದುಕನ್ನು ಅನುಭವಿಸಿದರು ಎಂಬುದೇ ಒಂದು ವಿಶೇಷ. ಒಂದು ಕಾದಂಬರಿಗಾಗಿ ತಮ್ಮನ್ನೇ ತಾವು ನಿಕಷಕ್ಕೊಡ್ಡಿಕೊಳ್ಳುತ್ತಾರೆಯೇ? ಹಾಗೆ ಮಾಡಿದರೆ ಅನುಭವಗಳು ದಟ್ಟವಾಗುತ್ತವೆಯೇ ಎಂಬ ಅನುಮಾನ ಕೂಡ ನನಗೆ ಆ ಸಮಯದಲ್ಲಿತ್ತು. ಆದರೆ ಸುಪ್ತ ಕಾದಂಬರಿಯನ್ನು ಓದಿದಾಗ ಅದು ನಿಜ ಎನ್ನಿಸುತ್ತದೆ. ಒಬ್ಬ ವೈದ್ಯ, ವೈದ್ಯಲೋಕದ ಸವಾಲುಗಳ ಬಗ್ಗೆ ಬರೆಯುವುದಕ್ಕೂ, ಇಂಗ್ಲೀಷ್ ಶಿಕ್ಷಕಿಯಾದ ನಾನು ವೈದ್ಯಲೋಕದ ಕುರಿತು ಬರೆಯುವುದಕ್ಕೂ ಅಜಗಜಾಂತರ ವ್ಯತ್ಯಾಸವಿರಬಹುದು. ಹೀಗಾಗಿಯೇ ಗೆಳತಿ ದೀಪ್ತಿ ಭದ್ರಾವತಿಗೆ ನಾನು ಪದೇಪದೇ ಹೇಳುತ್ತಿರುತ್ತೇನೆ. ಅದೆಷ್ಟು ಸಮೃದ್ಧ ಅನುಭವಗಳು ಆಕೆಗೆ ದಕ್ಕುತ್ತವೆಯೆಂದು. ಇಲ್ಲಿ ಕೂಡ ಅವಿನಾಶ ಮತ್ತು ಗಿರೀಶ ಇಬ್ಬರೂ ಬಾಲ್ಯ ಸ್ನೇಹಿತರು. ಇಲ್ಲಿ ಬರುವ ಸೂರಿ, ಪ್ರವೀಣ ಮುಂತಾದ ಪಾತ್ರಗಳು ಕೂಡ ಇದೇ ಸ್ನೇಹದ ಪರಿಧಿಯೊಳಗೇ ಬರುವಂತಹುದ್ದು. ಆದರೆ ಗಿರೀಶ ಸಿ ಇ ಟಿ ಪರೀಕ್ಷೆಯಲ್ಲಿ ಪ್ರವೀಣ ಮತ್ತು ಅವಿನಾಶನ ಕಾಪಿ ಹೊಡೆದು ಮೆಡಿಕಲ್ ಸೇರಿದ್ರೆ ಅವಿನಾಶನಿಗೆ ಮೆಡಿಕಲ್ ಸಿಗದೇ ಇಂಜಿನಿಯರ್ ಕಾಲೇಜಿಗೆ ಹೋಗಬೇಕಾಗಿತ್ತು. ಅವಿನಾಶ ಮತ್ತು ಪ್ರವೀಣರ ಪೇಪರ್ ನೋಡಿಕೊಂಡು ತಾನು ಬರೆದಿದ್ದರೂ, ‘ನಿನ್ನ ರ್‍ಯಾಂಕ್‌ಗೆ ಮೆಡಿಕಲ್ ಸೀಟು ಸಿಕ್ಕೋದು ಡೌಟೇ’ ಎಂದು ಅಣಕಿಸುತ್ತಿದ್ದ ಗಿರೀಶನ ಬಗ್ಗೆ ಒಳಗೊಳಗೇ ಇರುವ ಅಸೂಯೆ, ಅದಕ್ಕಿಂತ ಹೆಚ್ಚಾಗಿ ‘ಅವರೇ ತಮ್ಮ ದೊಡ್ಡಸ್ತಿಕೆ ತೋರಿಸೋದಕ್ಕೋಸ್ಕರ ನೋಡ್ಕೊಂಡು ಬರಿ ಅಂತ ಪೇಪರ್ ತೋರಿಸಿದ್ದರು’ ಎನ್ನುವ ಗಿರೀಶನ ಪಾಪಪ್ರಜ್ಞೆಯನ್ನೂ ಇಲ್ಲಿ ಗಮನಿಸಬೇಕು ಗೆಳೆಯರ ನಡುವಣ ಈ ತಾಕಲಾಟದ ಕಥೆಗಳು ಇಡೀ ಪುಸ್ತಕದೊಳಗೆ ಅಂತರಗಂಗೆಯಂತೆ ಹರಿದಿದೆ.      ಕ್ಯಾನ್ಸರ್ ಎಂದರೆ ಸುಲಭವಲ್ಲ. ನಮಗೆ ಕ್ಯಾನ್ಸರ್ ಆಗಿದೆ ಎಂದು ಒಪ್ಪಿಕೊಳ್ಳುವುದಕ್ಕೇ ಬಹಳಷ್ಟು ಸಮಯ ಬೇಕು. ಬಡಪೆಟ್ಟಿಗೆ ಮನಸ್ಸು ಅದನ್ನು ಒಪ್ಪಿಕೊಳ್ಳುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಕ್ಯಾನ್ಸರ್ ಬಂದರೆ ಸತ್ತೇ ಹೋಗುತ್ತಾರೆಂಬ ಸುಳ್ಳು ನಂಬಿಕೆಗಳು, ದೇವರು ಯಾವುದೋ ವಿಷಯಕ್ಕೆ ಶಿಕ್ಷೆ ಕೊಡೋದಕ್ಕೇ ಈ ರೋಗ ಕೊಟ್ಟಿದ್ದಾನೆ ಅಂತ ಅಂದುಕೊಳ್ಳುವ ಮೂಢನಂಬಿಕೆಗಳಿಂದಾಗಿ ಕ್ಯಾನ್ಸರ್ ರೋಗಿ ಎಂದು ಕರೆಯಿಸಿಕೊಳ್ಳಲು ಯಾರೂ ಇಷ್ಟ ಪಡುವುದೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಲಕ್ಷಣಗಳು ಕಾಣಿಸಿದರೂ ಅದಲ್ಲ ಎಂದು ತಮ್ಮನ್ನು ತಾವು ನಂಬಿಸಿಕೊಳ್ಳುವುದೇ ಹೆಚ್ಚು ಎಂಬ ಜನರ ಮನಸ್ಥಿತಿಗೆ ಈ ಕಾದಂಬರಿ ಕನ್ನಡಿ ಹಿಡಿದಿದೆ.    ಅದು ಅಗಷ್ಟ್‌ನ ಸಮಯ. ಅಮ್ಮ ಅಪ್ಪ ಎರಡು ದಿನಗಳ ಮಟ್ಟಿಗೆ ನಮ್ಮ ಮನೆಗೆ ಬಂದಿದ್ದರು. ‘ಇಲ್ನೋಡು ಪಟ್ಟಿ. ಏನೋ ಗಂಟಿದೆ.’ ಅಮ್ಮ ಒಂದು ದಿನ ತನ್ನ ಎದೆಯ ಮೇಲಾದ ಚಿಕ್ಕ ಕಡಲೇ ಕಾಳಿನಷ್ಟು ಗಾತ್ರದ ಗಂಟನ್ನು ಮುಟ್ಟಿಸಿದ್ದರು. ನನ್ನ ಎದೆ ಧಸಕ್ಕೆಂದಿತ್ತು. ‘ಯಾವಾಗ ಆಯ್ತು ಇದು?’ ಗಡಬಡಿಸಿ ಕೇಳಿದ್ದೆ. ‘ಎರಡು ಮೂರು ತಿಂಗಳಾಗಿರಬಹುದು’ ಅಮ್ಮ ಹೇಳಿದ್ದರು. ‘ಆಗಲೇ ಹೇಳೋದಲ್ವಾ? ಇಷ್ಟು ದಿನ ಯಾಕೆ ತಡಮಾಡಿದೆ?’ ನಾನು ಮತ್ತಿಷ್ಟು ಕಂಗಾಲಾದಂತೆ ಕೇಳಿದ್ದೆ. ‘ಏನಾಗಲ್ಲ ಬಿಡು.’ ಅಮ್ಮ ಹೇಳಿದ ಸಮಾಧಾನ ನನಗೋ ಸ್ವತಃ ಅವರಿಗೋ ಅರ್ಥವಾಗಿರಲಿಲ್ಲ. ಮಾರನೇ ದಿನವೇ ಎಲ್ಲ ಅನಾರೋಗ್ಯಕ್ಕೂ ಓಡುವ, ಕುಟುಂಬದವರೇ ಆದ ಕುಮಟಾದ ಪ್ರಸಿದ್ಧ ವೈದ್ಯರಾದ ವಿ ಆರ್ ನಾಯಕರ ಬಳಿ ಕರೆದೊಯ್ದೆ. ಬಯಾಪ್ಸಿಯ ರಿಪೋರ್ಟ್ ತಿಳಿಯಲು ಒಂದು ವಾರ- ಹತ್ತು ದಿನಗಳ ಸಮಯ ಬೇಕಿತ್ತು. ಅಷ್ಟರಲ್ಲಿ ನನಗೆ ಸುಮಾರು ೧೫೦ಕಿಮಿ ದೂರದ ಊರಲ್ಲಿ ತರಬೇತಿ ಪ್ರಾರಂಭವಾಗಿತ್ತು. ಅದು ಸಂಪನ್ಮೂಲ ವ್ಯಕ್ತಿಗಳಿಗೆ ನೀಡುವ ತರಬೇತಿಯಾದ್ದರಿಂದ ಮತ್ತು ಪುನಃ ನಾವು ಬಂದು ನಮ್ಮ ಜಿಲ್ಲೆಯಲ್ಲಿ ತರಬೇತಿ ನಡೆಸಬೇಕಾದ್ದರಿಂದ ಹೆಚ್ಚಿನ ಒತ್ತಡವಿತ್ತು. ಹೀಗಾಗಿ ಅಪ್ಪ ಅಮ್ಮ ತಾವೇ ಹೋಗಿ ರಿಪೋರ್ಟ್ ತರುವುದಾಗಿ ಹೇಳಿದ್ದರು. ನನಗೋ ಬೆಳಗಿನಿಂದ ಅಂಡು ಸುಟ್ಟ ಬೆಕ್ಕಿನ ಒದ್ದಾಟ. ಅದೇ ಸಮಯಕ್ಕೆ ಅಪ್ಪ ಫೋನ್ ಮಾಡಿ, ‘ಡಾಕ್ಟರ್ ನಮ್ಮ ಬಳಿ ಏನೂ ಹೇಳಲಿಲ್ಲ, ನಿನಗೇ ಫೋನ್ ಮಾಡಲು ಹೇಳಿದ್ದಾರೆ’ ಎಂದಿದ್ದರು. ಅವರು ಹಾಗೆಂದದ್ದೇ ನನಗೆ ಅರ್ಥವಾಗಿತ್ತು. ಆದರೂ ಮಾತನಾಡಲೇ ಬೇಕಲ್ಲ. ಡಾ. ವಿ ಆರ್ ನಾಯಕರಿಗೆ ಫೋನಾಯಿಸಿದ್ದೆ ಹೆದರುತ್ತಲೇ. ಯಾಕೋ ಸ್ವಲ್ಪ ಅನುಮಾನ ಅನ್ನಸ್ತಿದೆ. ಡಾಕ್ಟರ್ ಹೇಳಿದಾಗ ಜಂಘಾಬಲವೇ ಅಡಗಿಹೋದಂತೆ. ಏನಾಯ್ತು? ಕ್ಲೀಯರಾಗಿ ಹೇಳಿಬಿಡು. ನಾನು ಡಾಕ್ಟರ್‌ನ್ನು ಒತ್ತಾಯಿಸಿದ್ದೆ. ಈಗ ಮೊದಲನೇ ಸ್ಟೇಜ್‌ಗೆ ಹೋಗ್ತಿದೆ. ತಕ್ಷಣ ಬೆಂಗಳೂರಿಗೆ ಹೊರಟು ಬಿಡಿ. ಉಲ್ಲಾಸನಿಗೆ ಫೋನ್ ಮಾಡಲು ಹೇಳು. ಎಂದಿದ್ದರು. ಕಣ್ಣಲ್ಲಿ ಸುರಿಯಬೇಕಾಗಿದ್ದ ನೀರನ್ನು ಕಣ್ಣಲ್ಲೇ ಇಂಗಿಸುತ್ತ ಅಣ್ಣ ಉಲ್ಲಾಸನಿಗೆ ಫೋನ್ ಮಾಡಿದ್ದೆ. ಅಪ್ಪ ಅಮ್ಮನನ್ನು ತಕ್ಷಣ ಬರಲು ಹೇಳಿ ಮಾರನೇ ದಿನವೇ ಇಬ್ಬರನ್ನೂ ಅಣ್ಣನ ಮನೆಗೆ ಕಳುಹಿಸಿದೆ. ಅಮ್ಮನಿಗೆ ಹೇಳಬಾರದು ಎಂದುಕೊಂಡರೂ ನನ್ನ ಗಡಿಬಿಡಿಗೆ ಅಮ್ಮನಿಗೆ ಅರ್ಥವಾಗಿತ್ತು. ಆದರೂ ಕಿದ್ವಾಯಿಯಲ್ಲಿ ತೋರಿಸುವವರೆಗೂ ಅದಲ್ಲ, ಹಾಗೇನೂ ಆಗಿರುವುದಿಲ್ಲ ಎಂಬ ನಂಬಿಕೆ. ಆದರೆ ರಿಪೋರ್ಟ್ ಬಂದಾಗ ನಾವು ಬೇಡಿಕೊಂಡಂತೇನು ಆಗಿರಲಿಲ್ಲ. ಆದರೆ ಸಮಾಧಾನವೆಂದರೆ ಮೊದಲ ಸ್ಟೇಜ್‌ಗೆ ಎಂಟರ್ ಆಗುವುದರಲ್ಲಿತ್ತು. ಈ ಕಾದಂಬರಿಯಲ್ಲೂ ಹೀಗೇ. ಗಿರೀಶ ತನ್ನ ಕಣ್ಣಿನ ಕೆಳಗಾದ ಗುಳ್ಳೆಯನ್ನು ಏನೂ ಅಲ್ಲವೆಂದು ನಿರ್ಲಕ್ಷ ಮಾಡಿದ್ದ. ಮೂರನೇ ಸ್ಟೇಜಿಗೆ ಬರುವವರೆಗೂ, ಸ್ವತಹ ತಾನೇ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾಗಲೂ.     ಇಲ್ಲಿ ಬರುವ ವೈದ್ಯಕೀಯ ವಿವರಣೆಗಳು ಎಷ್ಟು ಆಸಕ್ತಿ ಹುಟ್ಟಿಸುತ್ತವೆಯೋ ಅಷ್ಟೇ ಆಸಕ್ತಿಯನ್ನು ಇಲ್ಲಿನ ಸ್ನೇಹಿತರ ಒಡನಾಟವೂ ಹುಟ್ಟಿಸುತ್ತದೆ. ಗೆಳೆಯರ ನಡುವಣ ಅಸೂಯೆ, ಪ್ರೀತಿ, ಪರಸ್ಪರ ಸಹಾಯ ಮಾಡುವ ಮನಸ್ಸಿದ್ದಾಗಲೂ ಕಾಡುವ ಅಪನಂಬಿಕೆಗಳನ್ನು ತುಂಬಾ ಚಂದವಾಗಿ ನಿರೂಪಿಸಿದ್ದಾರೆ. ಬಾಲ್ಯದಲ್ಲಿ ಎಂದೋ ಮಾಡಿದ ಅವಮಾನ ಧುತ್ತನೆ ಎದುರು ನಿಂತು ಸ್ನೇಹದ ನಡುವೆ ಕಟ್ಟಿಬಿಡುವ ಗೋಡೆಯ ಕುರಿತಾಗಿ ಹೇಳಿದ್ದಾರೆ. ಗಿರೀಶನಿಗೆ ಕ್ಯಾನ್ಸರ್ ಆದದ್ದರ ಕುರಿತು ಬೇಸರಿಸಿಕೊಳ್ಳುವ ಅವಿನಾಶನಿಗೂ ಆತ ಹಿಂದೆ ಇವನ ದೇಹಾಕೃತಿಯ ಕುರಿತು ಆಡಿಕೊಂಡಿದ್ದ ಮಾತು ನಿದ್ದೆಯ ಕನವರಿಕೆಯಾಗಿಯೂ ಆಚೆ ಬರುತ್ತದೆ. ಇವೆಲ್ಲದರ ನಡುವೆ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಓದುವ ಯುವ ಮನಸ್ಸುಗಳ ತಾಕಲಾಟ, ತಿಕ್ಕಲುಗಳು, ಸಣ್ಣತನದ ಜೊತೆಜೊತೆಗೇ ಸ್ನೇಹವನ್ನು ಬಿಟ್ಟುಕೊಡಲಾಗದ ಆತ್ಮೀಯತೆ ಮನಸ್ಸು ತಟ್ಟುವಂತಿದೆ. ತನ್ನ ಕಿಮೋ ಮಾಡುವಾಗ ಪೂರ್ತಿಯಾಗಿ ತನ್ನದೇ ರೂಮಿನಲ್ಲಿ ಇಟ್ಟುಕೊಂಡ ಅವಿನಾಶನಿಗೂ ಗಿರೀಶ ಕೊನೆಗೆ ಕೆಟ್ಟದಾಗಿಯೆ ಮಾತನಾಡುತ್ತಾನೆ. ‘ಡಿಕ್ಟೇಟರ್ ತರಹ ಮಾಡ್ತಾನೆ. ಅದು ಮುಟ್ಟಬೇಡ, ಇದು ಮುಟ್ಟಬೇಡ ಅಂತಾನೆ. ಅವನು ಟಿ.ವಿ ಹಾಕಿದಾಗಲೇ ನೋಡಬೇಕು.’ ಎಂಬಂತಹ ಮಾತುಗಳು ಅವಿನಾಶನ ಕಿವಿಗೂ ತಲುಪುತ್ತದೆ. ಅವಿನಾಶನ ಕೂದಲಿಲ್ಲದ ತಲೆಯ ಕುರಿತೂ ತಮಾಷೆ ಮಾಡುತ್ತ ಅಪಹಾಸ್ಯ ಮಾಡುವ ಗಿರೀಶ ಸತ್ತ ದಿನವೇ ಅವಿನಾಶನ ಮದುವೆ. ಆತನ ಕೊನೆಯ ದರ್ಶನವನ್ನೂ ಮಾಡಲಾಗದಂತಹ ಪರಿಸ್ಥಿತಿ. ಒಂದು ಖುಷಿಯ ಬದುಕಿನ ಪ್ರಾರಂಭದೊಂದಿಗೆ ಜೀವನವನ್ನು ತೀರಾ ಹಗುರವಾಗಿ ಪರಿಗಣಿಸಿ ತಾನೆ ತನ್ನ ಕೈಯ್ಯಾರೆ ಹಾಳು ಮಾಡಿಕೊಂಡವನ ಜೀವನ ಮುಗಿಯುವುದು ನಿಜಕ್ಕೂ ವಿಪರ್‍ಯಾಸ.    ಕಾದಂಬರಿ ಕೇವಲ ಯುವ ಮನಸುಗಳ ಅನಾವರಣ, ವೈದ್ಯಕೀಯ ವಿಷಯಗಳನ್ನಷ್ಟೇ ಹೇಳುವುದಿಲ್ಲ. ಅದೊಂದು ಮನೋವೈಜ್ಞಾನಿಕ ಕಥೆಯಾಗಿಯೂ ನಮ್ಮೆದುರು ತೆರೆದುಕೊಳ್ಳುತ್ತದೆ. ಅವಿನಾಶನ ತಂದೆಗೆ ಪಾರ್ಶ್ವವಾಯುವಾದಾಗಿನ ಘಟನೆಗಳನ್ನು ಆತ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾನೆ. ಆ ಕಠಿಣ ಸಮಯದಲ್ಲಿ ಯಾರೂ ಸಹಾಯಕ್ಕೆ ಬರದೇ ಅನುಭವಿಸಿದ ಯಾತನೆ ಮತ್ತೆ ಮತ್ತೆ ಅವಿನಾಶನ ಕಣ್ಣೆದುರಿಗೆ ಹಾದು ಹೋಗುತ್ತದೆ. ಚಿಕ್ಕವನಿರುವಾಗ ಮಗ ಹಾದಿ ತಪ್ಪಬಾರದೆಂದು ಅವಿನಾಶನ ತಂದೆ ತೀರಾ ಕಠಿಣವಾಗಿ ವರ್ತಿಸುತ್ತಿದ್ದರು. ಒಮ್ಮೆ ಅವಿನಾಶನ ಸ್ನೇಹಿತರೆಲ್ಲ ಶಾಲೆಗೆ ಚಕ್ಕರ್ ಹಾಕಿ ಸುತ್ತಾಡಲು ಹೋಗಿದ್ದರು. ಅವಿನಾಶನೂ ಅದೇ ಗುಂಪಿನಲ್ಲಿರುವ ಹುಡುಗನಾದ್ದರಿಂದ ಅವನು ಹೋಗದಿದ್ದರೂ ಅವನೂ ಮಕ್ಕಳ ಜೊತೆ ಶಾಲೆಗೆ ಚಕ್ಕರ್ ಹಾಕಿ ಸುತ್ತಾಡಲು ಹೋಗಿದ್ದಾನೆಂದು ಅನುಮಾನಿಸಿ ಶಿಕ್ಷೆ ನೀಡಿದ್ದರು. ತಾನು ಚಿಕ್ಕೋನು ಎಂದೇ ತನ್ನನ್ನು ಹೀಗೆ ನಿಯಂತ್ರಣದಲ್ಲಿಡುತ್ತಾರೆ ಎಂದು ಭಾವಿಸಿದ್ದ ಅವಿನಾಶ ತಾನು ದೊಡ್ಡವನಾದ ಮೇಲೆ ಅಪ್ಪನನ್ನು ಕಂಟ್ರೋಲ್ ಮಾಡ್ತೇನೆ ಎನ್ನುವ ಮಾತು ಮತ್ತು ಅಪ್ಪನಿಗೆ ಪಾರ್ಶ್ವವಾಯುವಾಗಿ ಅವರು ಪೂರ್ತಿಯಾಗಿ ಇನ್ನೊಬ್ಬರ ಮೇಲೆ ಅವಲಂಭಿಸುವಂತಾದಾಗ ತಾನೀಗ ಅವರ ಮೇಲೆ ರೇಗಾಡಬಹುದು ಎಂದು ಯೋಚಿಸಿ ನಂತರ ತನ್ನ ಯೋಚನೆಗೆ ತಾನೇ ಹೇಸಿ ಅಪ್ಪನನ್ನು ಕಣ್ಣ ರೆಪ್ಪೆಯಂತೆ ನೋಡಿಕೊಂಡಿದ್ದ. ಹೀಗಾಗಿ

ಮೂರನೇ ಆಯಾಮ Read Post »

You cannot copy content of this page

Scroll to Top