ಹೆತ್ತಿರುವ ತಾಯಿ, ನಮ್ಮನ್ನು ಹೊತ್ತಿರುವ ಭೂಮಿಗಿಂತ ದೊಡ್ಡ ಧರ್ಮವಿಲ್ಲ’ ಫಾಲ್ಗುಣ ಗೌಡ ತಣ್ಣಗಿನ ವ್ಯಕ್ತಿತ್ವದ ಸರಳ ಮನುಷ್ಯ ನಮ್ಮ ಫಾಲ್ಗುಣ ಗೌಡ. ಹುಟ್ಟಿದ್ದು ಅಂಕೋಲಾ ತಾಲೂಕಿನ ಅಚವೆ. ಕಾಲೇಜು ಹಂತದಲ್ಲಿ ಬರವಣಿಗೆ ಪ್ರಾರಂಭಿಸಿದರು. ಜಿ.ಸಿ .ಕಾಲೇಜಿನ ಭಿತ್ತಿ ಪತ್ರ ವಿಭಾಗದಿಂದ ಕವಿತೆ ಬರೆಯಲು ಪ್ರಾರಂಭ. ಬೆಂಗಳೂರಿನ ಕ್ರೈಸ್ಟ್ ಕಾಲೇಜು ಏರ್ಪಡಿಸಿದ ಬೇಂದ್ರೆ ಸ್ಮ್ರತಿ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಸತತ ಎರಡು ಸಲ ಬಹುಮಾನ ಪಡೆದರು ಪಾಲ್ಗುಣ. ಬೆಂಗಳೂರಿನ ಸಾಂಸ್ಕೃತಿಕ ಪತ್ರಿಕೆ `ಸಂಚಯ’ ನಡೆಸುವ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಸತತ ಐದು ಬಾರಿ ಬಹುಮಾನ ಪಡೆದಿದ್ದಾರೆ. ಕಾರವಾರ, ಧಾರವಾಡ, ಭದ್ರಾವತಿ ಆಕಾಶವಾಣಿ ಕೇಂದ್ರಗಳಲ್ಲಿ ಕತೆ, ಕವಿತೆ ಪ್ರಸಾರವಾಗಿವೆ. ಗೋವಾದಲ್ಲಿ ನಡೆದ ಅಂತರರಾಜ್ಯ ಕವಿಗೋಷ್ಟಿ ಸೇರಿದಂತೆ ತಾಲ್ಲೂಕು, ಜಿಲ್ಲಾ ಮಟ್ಟದ ಕವಿಗೋಷ್ಟಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇವರ ಮೊದಲ ಕವನ ಸಂಕಲನ `ಮಾಮೂಲಿ ಮಳೆಯಲ್ಲ’ ಪ್ರಕಟಿಸಿದೆ. ` ಅಶಾಂತ ಕಡಲು ಪ್ರಶಾಂತ ಮುಗಿಲು’ ಎಂಬ ಪ್ರಬಂಧ ಸಂಕಲನ ಪ್ರಕಟವಾಗಿದೆ. ಚೌಕಿಮನೆ(ಕವನ ಸಂಕಲನ), ಬಕ್ಕೆಮರ (ಕಥಾ ಸಂಕಲನ) ಸಿದ್ದತೆಯಲ್ಲಿದ್ದಾರೆ. ದಾಂಡೇಲಿಯ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ `ಯುವ ಕವಿ ಪ್ರಶಸ್ತಿ’ ನೀಡಿ ಗೌರವಿಸಿದೆ.ಕಾರವಾರದ ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಕೆಲಸ ಮಾಡುತ್ತ ನಗರದ ದಿವೇಕರ ವಾಣಿಜ್ಯ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಸದ್ಯ ಅಂಕೋಲೆಯ ಪಿ.ಎಂ.ಸಂಯುಕ್ತ ಪ.ಪೂ.ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ………………………………… ಕತೆ, ಕವಿತೆ ಯಾಕೆ ಬರೆಯುತ್ತೀರಿ? ಎಲ್ಲೋ ಕಂಡ ಸನ್ನಿವೇಶಗಳು, ಸಂದರ್ಭಗಳು ನನ್ನ ಮನಸ್ಸನ್ನು ತಟ್ಟಿದರೆ ತಕ್ಷಣ ಬರೆಯಲು ತೊಡಗುತ್ತೇನೆ. ಕೆಲವು ಪಾತ್ರಗಳು ನನ್ನನ್ನು ಕಾಡಿದರೆ ಅದೇ ವಸ್ತುವಾಗಿ ಒಂದು ಕಥೆಯಾಗಬಹುದು. ಯಾವುದೋ ಒಂದು ಸನ್ನಿವೇಶ ನನ್ನದೆಯ ಭಾವನೆಗಳನ್ನು ಉಕ್ಕಿಸಿದರೆ ಅದು ಕವಿತೆಯಾಗುತ್ತದೆ. ಯಾವುದಕ್ಕೂ ಸ್ಫೂರ್ತಿ ಬೇಕೇ ಬೇಕು. ಸ್ಫೂರ್ತಿ ಸಿಕ್ಕರೆ ಅದನ್ನು ಕಥೆ, ಕವಿತೆಯಾಗಿಸುವುದಕ್ಕೆ ಪ್ರತಿಭೆ ಕೂಡಾ ಬೇಕಾಗುತ್ತದೆ. ಬರೆಯುವುದಕ್ಕೆ ಶುರು ಮಾಡಿದರೆ ಮಾತ್ರ ಮನಸ್ಸಿನ ಕದ ತೆರೆದು ಭಾವನೆಗಳನ್ನು ಉದ್ದೀಪನಗೊಳಿಸುತ್ತದೆ. ತನಗೆ ತಾನೇ ಹೇಗೆ ಬರೆಯಬೇಕೆಂದು ನಿರ್ದೇಶಿಸುತ್ತದೆ. ನನ್ನ ಪ್ರೀತಿಯ ಚಿತ್ತಾಲರು ಹೇಳಿದ ಹಾಗೆ ‘ನಾನು ತಿಳಿದದ್ದನ್ನು ಬರೆಯುವುದಲ್ಲ, ಬರೆಯುವುದರ ಮೂಲಕ ತಿಳಿದುಕೊಳ್ಳಲು ಬಯಸುತ್ತೇನೆ’. ಈ ಹೇಳಿಕೆ ನನಗೆ ತುಂಬಾ ಇಷ್ಟ. ಆಗಲೇ ಹೇಳಿದಂತೆ ನನಗೆ ಕಾಡಿದ ಪಾತ್ರಗಳು, ಸನ್ನಿವೇಶಗಳು ಕಾಡಿದ್ದರಿಂದಲೇ ನಾನು ಬರೆಯುವುದಕ್ಕೆ ತೊಡಗುತ್ತೇನೆ. ಕತೆ, ಕವಿತೆ ಹುಟ್ಟುವ ಕ್ಷಣ ಯಾವುದು? ಅಕಾರಣ ಭಾವವೊಂದು ಸ್ಪೂರ್ತಿಯ ಬಿಂದುವಿನಲ್ಲಿ ಲೀನವಾದಾಗ ಮೂರ್ತರೂಪ ಪಡೆದು ಕೆಲವೇ ಸಾಲುಗಳಲ್ಲಿ ಬರೆದರೆ ಅದು ಕವಿತೆ. ಅದು ವಿಸ್ತಾರ ಪಡೆದರೆ ಕಥೆಯಾಗುತ್ತದೆ. ಆ ಕ್ಷಣ ಲೌಕಿಕವಾದ್ದು. ಅದು ಅಕಾರಣ ಪ್ರೀತಿಯಂತೆ. ನಾವು ಅನುಭವಿಸಿದ ನೋವುಗಳು ಕೂಡ ಕಥೆ, ಕವಿತೆಯ ರೂಪ ಪಡೆಯುತ್ತದೆ. ಕವಿಯಾದವ ಆ ಕ್ಷಣಕ್ಕಾಗಿ ಕಾಯಬೇಕಾಗುತ್ತದೆ. ಕವಿತೆಯ ಭಾವವೋ ಕಥೆಯ ಪಾತ್ರವೋ, ವಸ್ತುವೋ ಮನಸ್ಸಿನ ತುಂಬ ತುಂಬಿ ಅದು ಬರವಣಿಗೆ ರೂಪ ಪಡೆದಾಗಲೇ ಮನಸ್ಸು ನಿರಾಳತೆ ಅನುಭವಿಸುವುದು. ಹೆಣ್ಣು ಅನುಭವಿಸುವ ಹೆರಿಗೆ ನೋವನ್ನು ಒಬ್ಬ ಕವಿ, ಕಥೆಗಾರನೂ ಅನುಭವಿಸುತ್ತಾನೆ. ನಿಮ್ಮ ಕಥೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಸಾಮಾನ್ಯವಾಗಿ ದುರ್ಬಲ ವರ್ಗದವರ ಮೇಲೆ ಮಾಡುವ ಉಳ್ಳವರ ಶೋಷಣೆ ಪ್ರೀತಿಯ ಅಗಾಧತೆ ಸಮಾಜವನ್ನು ನಡೆಯುವ ಘಟನೆಗಳು ಉದ್ಯೋಗಸ್ತರ ಮಾನಸಿಕ ತಾಕಲಾಟಗಳು, ದ್ವೇಷ ತುಂಬಿದ ವ್ಯಕ್ತಿತ್ವಗಳ ಮನೋಧರ್ಮಗಳು ಕಥೆಯಾಗುವಲ್ಲಿ ಕಾರಣವಾಗಿವೆ. ನನಗೆ ತುಂಬಾ ಕಾಡುವ ವಿಷಯವೆಂದರೆ ಪ್ರಾಮಾಣಿಕತೆ, ನಿಷ್ಠೆಗೆ ಈಗ ಕವಡೆ ಕಾಸಿನ ಕಿಮ್ಮತ್ತಿಲ್ಲದಿರುವುದು. ಅಸೂಯೆ ತುಂಬಿದ ಸಣ್ಣತನದ ವ್ಯಕ್ತಿತ್ವಗಳು, ಹೆದ್ದಾರಿಯಲ್ಲಿ ಹೂಮಾರಿ ಶಾಲೆಗೆ ಹೋಗುವ ಹುಡುಗಿಯರು, ಹತ್ತಾರು ಕೀಲೋಮೀಟರ್ ಬೆಟ್ಟ ಸುತ್ತಿ ಸೌದೆ ತಂದು, ಮತ್ತೆ ಅಷ್ಟೇ ಕೀಲೋ ಮೀಟರ್ ಸೌದೆ ಹೊತ್ತು ಅದನ್ನು ಕಡಿಮೆ ದುಡ್ಡಿಗೆ ಮಾರಿ ಮನೆಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಮನೆ ಮುನ್ನಡೆಸುವ ‘ಲಂಕೇಶರ ಅವ್ವ’ನಂತ ನನ್ನ ಜನಾಂಗದ ಮಹಿಳೆಯರು. ಮನುಷ್ಯನಲ್ಲಿ ಮಾನವೀಯತೆ ಕಳಕೊಂಡಾಗ ಪ್ರಾಣಿಗಳಲ್ಲಿ ಅದು ವ್ಯಕ್ತವಾಗುತ್ತದಲ್ಲ ಅದು ನನ್ನನ್ನು ತುಂಬಾ ಕಾಡುತ್ತದೆ. ವಿಕಲಚೇತನ ವ್ಯಕ್ತಿ ಇರುವ ಒಂದೇ ಅದೂ ಸೊಟ್ಟಗಾಗಿರುವ ಕಾಲಿನಲ್ಲಿ ಚಿತ್ರ ಬಿಡಿಸಿ, ಬಣ್ಣ ತುಂಬಿ ಅದನ್ನು ದಾರಿಹೋಕರಿಗೆ ಮಾರಿ ಮನೆಯಲ್ಲಿರುವ ತಾಯಿ ತಂಗಿಯನ್ನು ಸಾಕುವ ಬೆಂಗಳೂರಿನ ಒಬ್ಬ ವ್ಯಕ್ತಿಯೊಬ್ಬ ನನ್ನನ್ನು ತುಂಬಾ ಕಾಡುತ್ತಾನೆ. ಕಥೆ, ಕವಿತೆಗಳಲ್ಲಿ ಬಾಲ್ಯ ಇಣುಕಿದೆಯೇ? ಹೌದು. ಬಾಲ್ಯವಿಲ್ಲದೆ ಯಾವುದು ಇಲ್ಲ. ನಾನು ಬರೆಯುವ ಕಥೆ ಮತ್ತು ಕವಿತೆಗಳಲ್ಲಿ ಬಾಲ್ಯದ ಅನುಭವಗಳೇ ಜಾಸ್ತಿಯಾಗಿವೆ. ಬಾಲ್ಯ ಅನುಭವಿಸದೆ ಹರೆಯಕ್ಕೆ ಅರ್ಥವಿಲ್ಲ. ಈಗ ಮಕ್ಕಳ ಬಾಲ್ಯವೆಲ್ಲಾ ಹೋಮ್ ವರ್ಕ, ರಿಯಾಲಿಟಿ ಶೋಗಳ ತಯಾರಿ, ಮೊಬೈಲಿನ ವಿಡಿಯೋ ಗೇಮ್‌ಗಳಲ್ಲಿ. ಮಕ್ಕಳ ಪ್ರತಿಭಾ ಪ್ರದರ್ಶನದ ಹೆಸರಿನಲ್ಲಿ, ಪ್ರಖ್ಯಾತಿಯ ಹುಚ್ಚಿನ ಪಾಲಕರು ಮಕ್ಕಳಿಗೆ ಉಂಟು ಮಾಡುವ ಒತ್ತಡ ಕಂಡಾಗ ಅಚ್ಚರಿಯೆನಿಸುತ್ತದೆ. ಬಾಲ್ಯದ ಮುಗ್ಧತೆ ಅನುಭವಿಸುವುದನ್ನು ಪಾಲಕರು ನೋಡಬೇಕು. ಆ ನಂತರ ಪ್ರತಿಭಾ ಪ್ರದರ್ಶನ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ‘ಸೇವೆ’ ಎನ್ನುವುದು ಅರ್ಥ ಕಳೆದು ಕೊಂಡಿದೆ ಪ್ರಸ್ತುತ ರಾಜಕೀಯ ಅವಕಾಶವಾದಿ ರಾಜಕಾರಣವಾಗಿದೆ. ಮೌಲ್ಯಾಧಾರಿತ ರಾಜಕಾರಣ ಎಂದೋ ಕಳೆದು ಹೋಗಿದೆ. ವಿರೋಧ ಪಕ್ಷ ಇದ್ದು ಇಲ್ಲದಂತಾದ ಎಂಬತ್ತರ ದಶಕದಲ್ಲಿ ಲಂಕೇಶರ ‘ಲಂಕೇಶ ಪತ್ರಿಕೆ’ ಪ್ರಬಲ ವಿರೋಧ ಪಕ್ಷದಂತೆ ಕೆಲಸ ಮಾಡುತ್ತಿತ್ತು. ಅದು ದೇಶಕ್ಕೇ ಮಾದರಿ. ಯಾವ ಜಾಹಿರಾತಿಲ್ಲದೇ ಪತ್ರಿಕೆ ನಡೆಸಿ ರಾಜಕೀಯ ಪಕ್ಷಗಳನ್ನು, ಸರ್ಕಾರವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋದದ್ದು ಎಲ್ಲಾ ತರದ ಪತ್ರಿಕೆಗಳಿಗೆ ಮಾದರಿ. ಪತ್ರಿಕೆಗಳೂ ಕೂಡಾ ಪಕ್ಷಗಳ ಮುಖವಾಣಿಯಾಗಬಾರದು. ನಮ್ಮ ದಿನಕರ ದೇಸಾಯಿಯಂತವರು ಸೇವೆಗಾಗಿ ರಾಜಕೀಯ ಪ್ರವೇಶ ಮಾಡಿದರು. ಅವರು ಕಟ್ಟಿದ ಶಿಕ್ಷಣ ಸಂಸ್ಥೆ ಇಡೀ ಜಿಲ್ಲೆಯನ್ನು ಆವರಿಸಿದೆ. ಶಿಕ್ಷಣ, ರೈತ ಹೋರಾಟ, ದುರ್ಬಲ ವರ್ಗದವರ ಅಭ್ಯುದಯ ಅವರ ನಿಸ್ವಾರ್ಥ ಸೇವೆಯನ್ನು ಹೇಳುತ್ತದೆ. ಆಗಿನ ಅವರ ರೈತ ಹೋರಾಟ ಕರ್ನಾಟಕದ ಮೊದಲ ರೈತ ಹೋರಾಟ ಎಂದು ಲಂಕೇಶ ಕರೆದಿದ್ದರು. ಕಾಗೋಡ ಹೋರಾಟದ ಭರಾಟೆಯಲ್ಲಿ ದೇಸಾಯಿಯವರ ರೈತ ಹೋರಾಟಕ್ಕೆ ಅಷ್ಟು ಪ್ರಭಾವ ಸಿಗಲಿಲ್ಲವೆನ್ನಬೇಕು. ಈಗಲೂ ಕೂಡ ಉತ್ತಮ ರಾಜಕಾರಣಿಗಳು ಖಂಡಿತಾ ಇದ್ದಾರೆ. ಅಂತವರಿಂದಲೇ ನಾಡಿನ ಅಭಿವೃದ್ಧಿಯನ್ನು ನೀರಿಕ್ಷಿಸಬಹುದು. ಹಣ, ಅಧಿಕಾರದ ದುರಾಸೆ ಇಲ್ಲದ ಯುವಕರು ಕಾರಣಕ್ಕೆ ಬರಬೇಕು. ಮತ ಕೂಡ ಮಾರಾಟದ ಸರಕಾಗಿರುವುದು ಪ್ರಜಾಪ್ರಭುತ್ವದ ದೌರ್ಭಾಗ್ಯ. ರಾಮಕೃಷ್ಣ ಹೆಗಡೆ, ದಿನಕರ ದೇಸಾಯಿ, ಹೆಚ್ಚೇನು ಕೈಗಾ ಅಣುಸ್ಥಾವರ ಸ್ಥಳಾಂತರ ಮಾಡಲು ಚುನಾವಣೆಗೆ ನಿಂತ ಕಾರಂತರನ್ನು ಸೋಲಿಸಿದ ಜಿಲ್ಲೆ ನಮ್ಮದು. ಧರ್ಮ ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ಧರ್ಮದ ಬಗ್ಗೆ ಮಾತಾಡುವುದೇ ಕಷ್ಟ. ಅದೊಂದು ಧರ್ಮ ಸೂಕ್ಷ್ಮ. ದಯವೇ ಧರ್ಮದ ಮೂಲವೆಂದರು ಬಸವಣ್ಣನವರು. ಮನುಷ್ಯ ಮಾನವೀಯವಾಗುವುದೇ ಧರ್ಮವೆನ್ನುವುದು ನನ್ನ ಭಾವನೆ. ನಮ್ಮ ಆಚಾರ ವಿಚಾರಗಳು ಸಕಲ ಜೀವಿಗಳ ಬಗ್ಗೆ ಪ್ರೀತಿ ತೋರುವುದೇ ನಿಜವಾದ ಧರ್ಮ ಮತ್ತೆ ‘ನಮ್ಮನ್ನು ಹೆತ್ತಿರುವ ತಾಯಿ, ನಮ್ಮನ್ನು ಹೊತ್ತಿರುವ ಭೂಮಿತಾಯಿಗಿಂತ ದೊಡ್ಡ ಧರ್ಮವಿಲ್ಲ’ವೆಂದು ನನಗನಿಸುತ್ತದೆ. ಈ ಸೃಷ್ಠಿಯ ಹಿಂದೆ ಒಂದು ಕಾಣದ ಕೈ ಕೆಲಸ ಮಾಡುತ್ತಿದೆ. ಅದೇ ದೇವರು. ಅದಕ್ಕೆ ಮನುಷ್ಯ ಹಲವು ಹೆಸರುಗಳನ್ನಿಟ್ಟು ಪೂಜಿಸುತ್ತಿರುವದು. ಅದು ಅವರವರ ನಂಬಿಕೆಗೆ ಬಿದ್ದದ್ದು. ಯಾಕೆಂದರೆ ನಮ್ಮ ಬದುಕು ನಿಂತಿರುವುದೇ ಪ್ರೀತಿ, ವಿಶ್ವಾಸ, ನಂಬಿಕೆಗಳ ಆಧಾರದ ಮೇಲೆ. ಅಲ್ಲವೇ? ಅದರ ಸಾಕ್ಷಾತ್ಕಾರ ಆದವರಿಗೆ ಅದರ ಬಗ್ಗೆ ನಂಬಿಕೆ ಇರುತ್ತದೆ. ರಾಜಕುಮಾರ ಹೇಳ್ತಾರೆ. “ಮಕ್ಕಳೇ ದೇವರು, ದೇವರು ಒಂದು ಮಗು” ಅಂತ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನಿಸುತ್ತದೆ? ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣ ಸದಾ ನಡೆಯುತ್ತಿದ್ದರೆ ಭಾಷೆ ಮತ್ತು ಸಂಸ್ಕೃತಿಯ ಕುರಿತು ಜನಗಳಿಗೆ ಜಾಗೃತಿ ಮೂಡಿಸಿದಂತಾಗುತ್ತದೆ. ಜಾಗತೀಕರಣದ ಮಾರಿ ನಮ್ಮ ಭಾಷೆ, ಸಂಸ್ಕೃತಿಯನ್ನು ಹೊಸಕಿ ಹಾಕುತ್ತಿದೆ. ಜಾಗತೀಕರಣ ಎಂಬ ವಿಷಕನ್ಯೆ ಮನೆ ಬಾಗಿಲಿಗೆ ಬಂದು ನಿಂತಿದೆ. ಅದರ ಕಬಂಧ ಬಾಹುಗಳ ಆಲಿಂಗನದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಆದರೆ ಅದಕ್ಕೆ ಸಮನಾಗಿ ನಮ್ಮ ಭಾಷೆಯನ್ನು ಉಳಿಸುವ, ಸಂಸ್ಕೃತಿಯನ್ನು ಪೋಷಿಸುವ ಕೆಲಸ ನಿರಂತರ ನಡೆಯಬೇಕು. ನಮ್ಮ ಜನಪದರ ಹಾಡುಗಳು, ಗುಮಟೆ ಪಾಂಗ್, ಸುಗ್ಗಿ ಕುಣಿತ, ತರ‍್ಲೆ, ಪುಗಡಿ ಜೊತೆಗೆ ಬಹುತೇಕ ಜನಾಂಗಗಳಲ್ಲಿ ಉಳಿದಿರುವ ಜನಪದ ಪ್ರಕಾರಗಳನ್ನು ಗುರುತಿಸಿ ಕಲಾವಿದರಿಗೆ ವೇದಿಕೆ, ಗೌರವಧನ ನೀಡಿ ಪ್ರೋತ್ಸಾಹಿಸಬೇಕು. ಅವರಿಗೆ ಸರ್ಕಾರ ಪಿಂಚಣಿ ನೀಡುವ ವ್ಯವಸ್ಥೆ ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆಯ ಕರಾವಳಿ ಉತ್ಸವ, ಹಂಪಿ ಉತ್ಸವ, ನಮ್ಮ ಜಿಲ್ಲೆಯಲ್ಲಿ ನಡೆಯುವ ಉತ್ಸವಗಳ ಕಾರ್ಯ ಖಂಡಿತಾ ಶ್ಲಾಘನೀಯ. ಜಿಲ್ಲೆಯ ಕಲಾವಿದರಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಯಾಕೆಂದರೆ ನಿಜವಾಗಿಯೂ ಭಾಷೆ ಸಂಸ್ಕೃತಿ ಉಳಿದಿರುವುದು ಹಳ್ಳಿಗಳಲ್ಲಿ. ಬೆಂಗಳೂರು ತುಮಕೂರಿನವರೆಗೆ ವಿಸ್ತಾರ ಪಡೆದರೆ ಅದು ಅಭಿವೃದ್ಧಿಯಲ್ಲ ; ನಾಡಿನ ಬೆಳವಣಿಗೆಯ ಮೂಲ ಹಳ್ಳಿಗಳಲ್ಲಿದೆ ಎಂದು ಮಹಾತ್ಮ ಗಾಂದೀಜಿ ಹೇಳ್ತಾರೆ. ಹಳ್ಳಿಯ ಕಲಾವಿದರನ್ನು ಗೌರವಿಸುವ ಕೆಲಸ ಮಾಡಿದರೆ ಹಾಗೆಯೇ ಅವರ ನಂತರದ ಪೀಳಿಗೆಯನ್ನು ಪ್ರೋತ್ಸಾಹಿಸಿದರೆ ಸಂಸ್ಕೃತಿ ಉಳಿಯುತ್ತದೆ. ಈಗ ಬೆಳಂಬಾರದ ಸುಗ್ಗಿ ಜನಪದ ಪ್ರಕಾರಕ್ಕೆ ಯಾವ ಜಾಗತೀಕರಣದ ಬಿಸಿ ಇನ್ನೂ ತಟ್ಟಿಸಿಕೊಂಡಿಲ್ಲ. ಒಂದೊಂದು ತುರಾಯಿ ಮಾಡಿಸಲು ಸಾವಿರಗಟ್ಟಲೆ ಖರ್ಚು ಮಾಡುವ ಆ ಹಾಲಕ್ಕಿಗಳಿಗೆ ಸರ್ಕಾರ ಇಲಾಖೆಗಳು ಪ್ರೋತ್ಸಾಹಿಸಬೇಕು. ನಮ್ಮ ಅಂಕೋಲಾ, ಕಾರವಾರ ಮತ್ತು ಜಿಲ್ಲೆಯ ಜನಸ್ಪಂದಿ ಪತ್ರಕರ್ತರು ಇಲಾಖೆಗಳ ಗಮನ ಸೆಳೆಯಬೇಕು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಸಾಹಿತ್ಯದ ರಾಜಕಾರಣದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಪಕ್ಷ ಪಂಗಡಗಳನ್ನು ಬಿಟ್ಟು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಗಬೇಕು. ನಿಜವಾದ ಸಾಹಿತ್ಯಕ್ಕೆ ಕೃತಿಗೆ ಮನ್ನಣೆ ಸಿಗಬೇಕು. ಸುಮ್ಮನೆ ಕೂತು ಬರೆಯುವುದು, ಪ್ರಶಸ್ತಿ ಪುರಸ್ಕಾರಗಳ ಹಿಂದೆ ಬೀಳದೆ ಬರೆಯುವುದು. ಬರೆಯುವುದರ ಮೂಲಕ ತಿಳಿದುಕೊಳ್ಳಲು ಬಯಸುವುದು, ಆರೋಗ್ಯಕರ ಸಮಾಜವನ್ನು ಕಾಪಾಡಿಕೊಂಡು ಹೋಗುವಂತಹ ಬರಹಗಳನ್ನು ಬರೆಯುವುದು ಒಬ್ಬ ಬರಹಗಾರನ ಜವಾಬ್ದಾರಿಯಾಗಬೇಕು. ‘ನಾನು ತಿಳಿದಿದ್ದನ್ನು ಬರೆಯಲು ಪ್ರಯತ್ನಿಸುವುದಿಲ್ಲ. ಬರೆಯುವುದರ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದು ನನ್ನ ಪ್ರೀತಿಯ ಚಿತ್ತಾಲರು ಹೇಳುತ್ತಾರೆ. ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತಿದೆ? ಈ ಬಗ್ಗೆ ನಾನು ಏನನ್ನೂ ಪ್ರತಿಕ್ರಿಯಿಸುವುದಿಲ್ಲ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಸದ್ಯ ಕಾವ್ಯ ಬರೆಯುತ್ತಿರುವೆ. ಕಥೆ ಬರೆಯುವುದು ನನ್ನದೇ ಒತ್ತಡಗಳ ಮಧ್ಯೆ ನಿಂತು ಹೋಗಿದೆ. ಮತ್ತೆ ಬಿಡುವು ಮಾಡಿಕೊಂಡು ಸುಮ್ಮನೆ ಬರೆಯಬೇಕು. ಇನ್ನು ತುಂಬಾ ಓದಬೇಕು. ಕವಿತೆ, ಕಥಾ ಸಂಕಲನ ಪ್ರಕಟಿಸಬೇಕು. ಒಂದು ಕಾದಂಬರಿ ಬರೆಯುವ ಇರಾದೆ ಇದೆ. ಜಯಂತ ಸರ್ ಕಾದಂಬರಿ ಬರೆ ಎಂದು ಹೇಳುತ್ತಿರುತ್ತಾರೆ. ಅವರ ಕಾದಂಬರಿ ನೀರಿಕ್ಷೆಯಲ್ಲಿ ನಾವಿದ್ದೇವೆ. ಇನ್ನು ನನ್ನ ನೆಚ್ಚಿನ ಮತ್ತು ಕಾಡಿದ ಸಾಹಿತಿಗಳು ಹಲವಾರು ಜನ ಇದ್ದಾರೆ. ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಇಷ್ಟವಾಗುತ್ತಾರೆ. ಜಯಂತ್ ಸರ್ ಹೇಳಿದಂತೆ ಅವರನ್ನು ಇಷ್ಟ ದೇವತೆಗಳು ಎನ್ನುತ್ತೇವೆ. ಶಿವರಾಮ ಕಾರಂತ, ತೇಜಸ್ವಿ, ಲಂಕೇಶ, ಅನಂತಮೂರ್ತಿ, ಚಿತ್ತಾಲ, ಬರಗೂರು, ಜಯಂತ ಕಾಯ್ಕಿಣಿ, ಎಸ್. ಮಂಜುನಾಥ ಮುಂತಾದವರು ನನಗೆ ಬಹಳ ಇಷ್ಟ. ಶಿವರಾಮ ಕಾರಂತರ ಬಗ್ಗೆ ಅವರ ಪರಿಸರ ಪ್ರೀತಿಯ ಕಾರಣಕ್ಕೆ ಬಹಳ ಗೌರವ. ಚಿತ್ತಾಲರ ‘ಸೆರೆ’ ಕಥೆ ನನ್ನನ್ನು ಕಥೆಗಾರನನ್ನಾಗಿ ಮಾಡಿತ್ತು. ಅವರ ಶೈಲಿಯ
ಮನುಷ್ಯತ್ವ, ನಂಬಿಕೆಗಳ ಜಾಗವನ್ನು ಇಂದು ಹಣ ಆಳುತ್ತಿದೆ’ ಎಂ.ಟಿ.ನಾಯ್ಕ ಶಿಕ್ಷಕ, ಕವಿ ಎಂ.ಟಿ.ನಾಯ್ಕ ಕುಮಟಾ ತಾಲ್ಲೂಕಿನ ಹೆಗಡೆ. ಹೈಸ್ಕೂಲ್ ಹಂತದಿಂದಲೇ ಬರವಣಿಗೆ ಪ್ರಾರಂಭಿಸಿದವರು. ತಾಲ್ಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯ ವಾಚನ, ಆಕಾಶವಾಣಿ ಧಾರವಾಡ ಮತ್ತು ಕಾರವಾರ ಕೇಂದ್ರಗಳಲ್ಲಿ ಸುಮಾರು ಐದು ಬಾರಿ ಕಾವ್ಯವಾಚನ ಮಾಡಿದ್ದಾರೆ. ಕ್ರೈಸ್ಟ್ ಕಾಲೇಜು ಬೆಂಗಳೂರು , ಜೆ ಎಸ್. ಎಸ್ ಕಾಲೇಜು ಧಾರವಾಡ ಗಳಲ್ಲಿ ನಡೆದ ಬೇಂದ್ರೆ ಸ್ಮೃತಿ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಬಂದಿವೆ. ಬೆಂಗಳೂರಿನ ಸಾಂಸ್ಕೃತಿಕ ಪತ್ರಿಕೆ ` ಸಂಚಯ ‘ ಪತ್ರಿಕೆಯ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಸಂದಿವೆ. ಸಂಯುಕ್ತ ಕರ್ನಾಟಕ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ದೊರೆತಿದೆ. ಪತ್ರಿಕೆಗಳಲ್ಲಿ ಕವನಗಳು, ಅಂಕಣ ಬರಹಗಳು ಪ್ರಕಟಗೊಂಡಿವೆ . ಕೆಲವು ಕಥಾಸಂಕಲನ ಹಾಗೂ ಕವನ ಸಂಕಲನಗಳ ಕುರಿತು ಬರೆದ ವಿಮರ್ಶೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಾಲೇಜು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಮತ್ತು ಎಂ . ಎ. ಮುಗಿಸಿ ಬಂದನಂತರ ಬೇರೆ ಬೇರ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಕಾಲ ಕೆಲಸ ಮಾಡಿದ್ದಾರೆ. ಹಾಲಿ ಶಿಕ್ಷಕನಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾವಿಕೊಡ್ಲ ನಂ ೨ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ` ನೇಪಥ್ಯ ‘ ( ಕವನ ಸಂಕಲನ) ‘ ನನ್ನೊಳಗೆ ನಾನು ‘ ( ಕಥಾಸಂಕಲನ ) ‘ ಸಿಂಧುವಿನಿಂದ ಬಿಂದು ‘ ( ವಿಮರ್ಶಾ ಸಂಕಲ) ಪ್ರಕಟಣೆಯ ಹಾದಿಯಲ್ಲಿದೆ . ………………. ಕಥೆ , ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ನಾನು ಕವಿ ಅಥವಾ ಕತೆಗಾರನಾಗಬೆಕೆಂಬ ತೆವಲಿಗೆ ಎಂದೂ ಒಳಗಾಗಿಲ್ಲ. ಬೇರೆ ಬೇರೆ ಹಿರಯ ಕವಿ ಕಥೆಗಾರರನ್ನು ಓದಿದ ಹಿನ್ನೆಲೆಯಲ್ಲಿ ಸುತ್ತಲಿನ ಸಮುದಾಯದ ನೋವು – ನನ್ನ ನೋವು ,ನಲಿವುಗಳೊಂದಿಗೆ ತಾದಾತ್ಮ್ಯ ಹೊಂದಿದಾಗ ನನ್ನೊಳಗಿನ ಸಹಜವಾದ ಕವಿತ್ವದ ಪ್ರಜ್ಞೆ ಜಾಗ್ರತ ಗೊಂಡು ಅದು ಭಾಷೆಯ ನೆಲೆಯಲ್ಲಿ ಅಕ್ಷರ ರೂಪ ಪಡೆದಾಗ ಅದು ಕವನವಾಗಬಹುದು , ಅಥವಾ ಅದು ಸಂಭಾಷಣೆ, ವಿವರಣೆ ,ವಿಶ್ಲೇಷಣೆ , ನೀರೂಪಣೆಗಳನ್ನೊಳಗೊಂಡ ಪಾತ್ರಗಳ ರೂಪವನ್ನು ಪಡೆದಾಗ ಅದು ಕಥೆ ಕೂಡಾ ಆಗಬಹುದು. ಆದರೆ ಕಥೆ ಅಥವಾ ಕವಿತೆಗಳಿಗೆ ಸಂಬಂಧಿಸಿದ ಸಂಗತಿಗಳು ಒಮ್ಮೆ ಹುಟ್ಟಿ , ಹಲವಾರು ದಿನಗಳವರೆಗೆ ಮತ್ತೆ ಮತ್ತೆ ಕಾಡಿದಾಗ ಅದು ಆಯಾ ರೂಪದಲ್ಲಿ, ಅನಾವರಣಗೊಂಡು ಸಫಲ ಪ್ರಸವದ ಆನಂದಾನುಭೂತಿಯನ್ನು ಆ ಕ್ಷಣಕ್ಕೆ ನೀಡುತ್ತದೆಯಷ್ಟೆ . ಕಥೆ ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು ? ನನ್ನ ದೃಷ್ಟಿಯಲ್ಲಿ ಅದಕ್ಕೆ ಇಂತಹುದೇ ಕ್ಷಣ ಅಂತೇನೂ ಇಲ್ಲ. ನಾನು ಕ.ವಿ.ವಿ ಧಾರವಾಡದಲ್ಲಿ ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿ ಎಂ. ಎ. ಮಾಡುತ್ತಿದ್ದ ಸಂದರ್ಭದಲ್ಲಿ ನಮ್ಮ ಗುರುಗಳಾದ ದಿ. ಡಾ. ಎಂ. ಎಂ.ಕಲ್ಬುರ್ಗಿ ಸರ್ ರವರು ಒಮ್ಮೆ ತರಗತಿಯಲ್ಲಿ ಪಾಠ ಮಾಡುತ್ತಿದ್ದಾಗ ಮಾತನಾಡುತ್ತಾ ‘ ಜೀವನಾನುಭವವೇ ಸಾಹಿತ್ಯದ ಮೂಲ ದ್ರವ್ಯ ‘ ಎಂದಿದ್ದು ಈಗಲೂ ನೆನಪಿದೆ. ಅಂತಹ ಅನುಭವಗಳು ಕಥೆ ಅಥವಾ ಕವನವಾಗಬಲ್ಲ ಸಾಹಿತ್ಯಕ ಅನುಭೂತಿಯನ್ನು ಹೊಂದಿ ಗಾಢವಾಗಿ ಕಾಡಿದಾಗ ಅದು ಕತೆ ಅಥವಾ ಕವಿತೆಯಾಗಿ ರೂಪು ತಳೆಯುತ್ತದೆ ಅಷ್ಟೇ. ನಿಮ್ಮ ಕಥೆಗಳ ವಸ್ತು , ವ್ಯಾಪ್ತಿ ಹೆಚ್ಚಾಗಿ ? ಪದೇ ಪದೇ ಕಾಡುವ ವಿಷಯ ಯಾವುದು ?. ಬದುಕು ..! ಎಲ್ಲಾ ಲೇಖಕರ ಹಾಗೆಯೇ ನನ್ನ ಕಥೆಗಳ ವಸ್ತು ಮತ್ತು ವ್ಯಾಪ್ತಿ ಬದುಕಿಗೆ ಸಂಬಂಧಿಸಿದ ಸಂಗತಿಗಳೇ ಆಗಿವ. ಈ ಬದುಕಿನಲ್ಲಿ ಪ್ರೀತಿ ಯಿದೆ,ಪ್ರೇಮವಿದೆ,ನಂಬಿಕೆ – ವಿಶ್ವಾಸಗಳಿವೆ, ಅಲ್ಲಿ ವಂಚನೆ , ಮೋಸ , ದ್ರೋಹ , ಹಿಂಸೆ , ದೌರ್ಜನ್ಯಗಳಿವೆ .ಹಾಗೆನೆ ಪ್ರಾಮಾಣಿಕತೆ ಕೂಡ ಇವೆ . ಇವೆಲ್ಲವೂ ಸಂದರ್ಭಾನುಸಾರ ಕಥೆಯ ವಸ್ತುಗಳಾಗುತ್ತವೆ . ಇತ್ತೀಚಿನ ದಿನಗಳಲ್ಲಿ ಒಂದು ಹೊಸ ಟ್ರೆಂಡ್ ಸುರುವಾಗಿದೆ. ಅದೆಂದರೆ ಹೇಗಾದರೂ ಸರಿಯೆ ಹಣಮಾಡಬೇಕು . ಅದರಿಂದ ನಮ್ಮ ಸಮಾಜ ಅದರಲ್ಲೂ ನಮ್ಮ ಯುವ ಜನಾಂಗ ಹಣದ ಹಿಂದೆ ಬಿದ್ದಿದೆ . ಮನುಷ್ಯತ್ವ, ಮಾನವೀಯತೆ , ಪ್ರೀತಿ ,ನಂಬಿಕೆಗಳ ಜಾಗವನ್ನು ಇಂದು ಹಣ ಆಳುತ್ತಿದೆಯೆಂದರೆ ತಪ್ಪಾಗದು . ಮಾನವೀಯ ಮೌಲ್ಯಗಳ ಕುರಿತು ಮಾತನಾಡುವವರು ಎಂದರೆ ಒಂಥರಾ ಹುಚ್ಚರಹಾಗೆ ಅನ್ನುವ ಹಂತಕ್ಕೆ ನಮ್ಮ ಸಾಮಾಜಿಕ ಬದುಕು ತಲುಪಿದೆ . ಇದು ನಮ್ಮ ಒಟ್ಟಾರೆ ವ್ಯವಸ್ಥೆಯ ದುರಂತವೇ ಸರಿ . ತಮ್ಮ ಮಕ್ಕಳ ಬದುಕನ್ನು ಗಟ್ಟಿಗೊಳಿಸಲು ಬದುಕಿನುದ್ದಕ್ಕೂ ಹೆಣಗಾಡುವ ತಂದೆತಾಯಿಗಳು , ಅದರೆ ಅದೇ ಮಕ್ಕಳು ವಯಸ್ಸಿಗೆ ಬಂದಾಗ ತಂದೆತಾಯಿಗಳನ್ನು ತಿರಸ್ಕರಿಸುವುದು ಒಂದುಕಡೆಯಾದರೆ , ವಯಸ್ಸಿಗೆ ಬಂದ ಮಗ ತನ್ನ ತಂದೆತಾಯಿ , ಸಹೋದರ, ಸಹೋದರಿಯರ ಬದುಕಿಗಾಗಿ ತನ್ನ ವಯಕ್ತಿಕ ಬದುಕನ್ನು ಮರೆತು ರಕ್ತವನ್ನು ಬೆವರಿನರೂಪದಲ್ಲಿ ಚೆಲ್ಲಿ ಜವಾಬ್ದಾರಿಯಿಂದ ನಿರ್ವಹಿಸುವ ಸಂದರ್ಭದಲ್ಲೂ ಅಂತವರಿಗೆ ಕುಟುಂಬದ ಎಲ್ಲರಿಂದಲೂ ಆಗುವ ವಂಚನೆ ನೀಡುವ ನೋವುಗಳು ಗಾಢವಾಗಿ ಕಾಡಿದಾಗ ಅವುಗಳು ಕಥೆಗಳಿಗೆ ಗಟ್ಟಿ ವಸ್ತುಗಳಾಗುತ್ತವೆ . ಎಲ್ಲಕ್ಕಿಂತಲೂ ಹೆಚ್ಚಾಗಿ ಪ್ರಾಮಾಣಿಕತೆ, ಪ್ರೀತಿ , ಪ್ರೇಮ, ವಿಶ್ವಾಸ, ನಂಬಿಕೆಗಳಿಗೆ ವಿರುದ್ಧವಾಗಿ ಎಸಗುವ ದ್ರೋಹ, ವಂಚನೆ , ಮೋಸ ಇದೆಯಲ್ಲಾ ..ಇವುಗಳು ಯಾವುದೇ ರೀತಿಯ ಹಿಂಸೆ, ದೌರ್ಜನ್ಯಗಳಿಗಿಂತಲೂ ಭೀಕರ ಎನಿಸುತ್ತವೆ . ಈ ಮುಂತಾದ ಸಂಗತಿಗಳೆಲ್ಲವೂ ನನ್ನ ಕಥೆಗಳಿಗೆ ವಸ್ತುವಾಗುತ್ತವೆ . ಹಾಗೇನೇ ಅತಿಯಾದ ಮದ್ಯಪಾನ ಮುಂತಾದ ದುಶ್ಚಟಗಳು , ಅವುಗಳಿಂದ ಬದುಕಿಗಾಗುವ ಹಾನಿ ಇವೆಲ್ಲವೂ ಕೆಲವು ಸಂದರ್ಭಗಳಲ್ಲಿ ವಸ್ತುವಾಗಿವೆ . ಕಥೆ , ಕವಿತೆಗಳಲ್ಲಿ ಬಾಲ್ಯ , ಹರೆಯ ಇಣುಕಿದೆಯೇ ? ಯಾಕಿಲ್ಲ ..? ಪ್ರತಿಯೊಬ್ಬ ಬರಹಗಾರನ ಬರವಣಿಗೆಯಲ್ಲೂ ಕೂಡ ಅವನ ಬಾಲ್ಯ ಮತ್ತು ಹರಯದ ಅನುಭವಗಳು ಇಣುಕಿನೋಡುತ್ತವೆ . ನನ್ನ ಬರವಣಿಗೆಯೂ ಕೂಡ ಅದಕ್ಕೆ ಹೊರತಾಗಿಲ್ಲ . ನಾನು ಬರೆದ ಪ್ರೇಮ ಕವನವೊಂದನ್ನು ಓದಿದ ಬಿಜಾಪುರ ಜಿಲ್ಲೆಯ ನನ್ನ ಎಂ. ಎ. ಸಹಪಾಠಿಯೊಬ್ಬರು ಇದು ನನ್ನ ಬದುಕಿನ ಸಂದರ್ಭಕ್ಕೆ ಸಂಬಂಧಿಸಿದಂತೆ ಇದೆ , ಎಂದಾಗ ನಾನು ಆಶ್ಚರ್ಯಗೊಂಡಿದ್ದೆ. ನನ್ನ ಬಾಲ್ಲದ ದಿನಗಂಳಿದ ಹಿಡಿದು ನಾನು ಶಿಕ್ಷಣ ಪಡೆದು ವ್ರತ್ತಿ ಜೀವನಕ್ಕೆ ಬರುವಲ್ಲಿಯವರೆಗೆ ನನ್ನನ್ನು ,ನಮ್ಮ ಕುಟುಂಬವನ್ನು ಕಾಡಿದ ಅತ್ಯಂತ ನಿಕ್ರಷ್ಟ ಎನ್ನಬಹುದಾದ ಬಡತನ , ನಾನು ಶಿಕ್ಷಣ ಪಡೆಯುವುದಕ್ಕಾಗಿ ನಡೆಸಿದ ಹೋರಾಟ , ಆ ಸಂದರ್ಭಗಳಲ್ಲಿ ಮಹಾತ್ಮರೊಬ್ಬರು ನನ್ನನ್ನು ಕೈಹಿಡಿದು ನಡೆಸಿದ್ದು ಇನ್ನೂ ಮುಂತಾದ ಸಂಗತಿಗಳು, ಅಭವಗಳು , ನನ್ನ ಬರವಣಿಗೆಯಲ್ಲಿ ಇಣುಕಿಹಾಕಲೆಬೇಕಲ್ಲ. ಧರ್ಮ , ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಇದು ತೀರಾ ಕ್ಲಿಷ್ಟಕರ ಪ್ರಶ್ನೆ ಎನ್ನಬೇಕಾಗುತ್ತದೆ . ಯಾಕೆಂದರೆ ಧರ್ಮದ ಕುರಿತು ಮಾತನಾಡುವಷ್ಟು ಧರ್ಮ ಸೂಕ್ಷ್ಮವನ್ನರಿತ ಧರ್ಮಜ್ಞ ನಾನಲ್ಲ. ಹಾಗೆ ನೋಡಿದರೆ ಧರ್ಮಕ್ಕಿಂತಲೂ ಮೊದಲು ಹುಟ್ಟಿದವ ಮನುಷ್ಯ . ಅವನ ನಂತರ ಅವನಿಂದಲೇ ಅಂದರೆ ಮನುಷ್ಯನಿಂದ ಹುಟ್ಟಿದ್ದು ಧರ್ಮ. ಕಾಡಿನಿಂದ ನಾಡಿನೆಡೆಗೆ , ಅನಾಗರಿಕತೆಯಿಂದ ನಾಗರಿಕತೆಯೆಡೆಗೆ ಮಾನವ ಹೆಜ್ಜೆಯಿಟ್ಟು ಅಲ್ಲಿ ಸಾಕಷ್ಟು ಪ್ರವರ್ಧಮಾನಕ್ಕೆ ಬಂದಮೇಲೆ ಹುಟ್ಟಿಕೊಂಡದ್ದು ಧರ್ಮ. ಮನುಷ್ಯ ತನ್ನ ವಯಕ್ತಿಕ ಹಾಗೂ ಸಾಮುದಾಯಿಕ ಜೀವನವನ್ನು ಹೆಚ್ಚು ಸುಂದರಗೊಳಿಸಿಕೊಳ್ಳುವುದಕ್ಕಾಗಿ , ಹೆಚ್ಚು ಮೌಲ್ಯಯುತಗೊಳಿಸಿಕೊಳ್ಳುವುದಕ್ಕಾಗಿ ಒಂದರ್ಥದಲ್ಲಿ ಹೆಚ್ಚು ಅರ್ಥಪೂರ್ಣ ಗೊಳಿಸಿಕೊಳ್ಳುವುದಕ್ಕಾಗಿ ಆ ಕಾಲದಲ್ಲಿ ಅವನು ಕಂಡುಕೊಂಡ ಸುಲಭ ಸಾಧನ ಧರ್ಮ. ಆದರೆ ಇಂದು ಏನಾಗುತ್ತಿದೆ ? ಧರ್ಮ ಮನುಷ್ಯನ ಜೀವನದಮೇಲೆ ಸವಾರಿಮಾಡುವಷ್ಟು ಪ್ರಭಲವಾಗಿ ಬೆಳೆದುನಿಂತಿದೆ . ಇದು ಕೇವಲ ನಮ್ಮ ದೇಶದ ವಿದ್ಯಮಾನವಷ್ಟೆ ಅಲ್ಲ. ಇದು ಜಾಗತಿಕ ವಿದ್ಯಮಾನವಾಗಿದೆ . ಇಂದು ಧರ್ಮದ ಕಾರಣದಿಂದಾಗಿ ನಮ್ಮ ವಯಕ್ತಿಕ ಹಾಗೂ ಸಾಮಾಜಿಕ ಬದುಕು ವಿಕ್ರತಗೊಳ್ಳುತ್ತಿವೆ …ಸಂದಿಗ್ಧತೆಗೆ ಒಳಗಾಗಿದೆ . ಇಂತಹ ಬೆಳವಣಿಗೆ ನಮ್ಮ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನಕ್ಕೆ ತಕ್ಕುದಾದ ಬೆಳವಣಿಗೆಯಂತೂ ಅಲ್ಲ. ಸ್ವಾಮಿ ವಿವೇಕಾನಂದರು ಧರ್ಮ ಮತ್ತು ದೇವರ ಕುರಿತು ಹೇಳುವಾಗ ..’ ವಿಧವೆಯರ ಕಣ್ಣೀರು ಒರೆಸದ , ಹಸಿದವನಿಗೆ ತುತ್ತು ಅನ್ನವ ನೀಡದ ದೇವರು ಮತ್ತು ಧರ್ಮದಲ್ಲಿ ನನಗೆ ನಂಬಿಕೆಯಿಲ್ಲ ಎಂದಿದ್ದಾರೆ. ಯಾವುದು ನಮ್ಮಲ್ಲಿಯ ಮಾನವೀಯ ಪ್ರಜ್ಞೆ ಯನ್ನು ಜಾಗ್ರತಗೊಳಿಸಲು ಶಕ್ತವಾಗುತ್ತದೆಯೋ ಅದು ಧರ್ಮ. ಪರಸ್ಪರ ಪ್ರೀತಿ , ವಿಶ್ವಾಸ , ನಂಬಿಕೆ , ಪ್ರಾಮಾಣಿಕತೆ ಇವೇ ಅದರ ತಳಹದಿ . ಇವುಗಳಿಗೆ ಧಕ್ಕೆತರುವಂತ ಸಂಗತಿಗಳೆ ಅಧರ್ಮ. ನಾನು ಬದುಕುತ್ತಾ ನನ್ನೊಂದಿಗೆ ಇನ್ನುಳಿದ ಎಲ್ಲರನ್ನೂ ಬದುಕಲು ಬಿಡುವುದೇ ಧರ್ಮ .ಇದಕ್ಕಿಂತ ಹೆಚ್ಚಿಗೆ ಇನ್ನೇನು ಹೇಳಲಾರೆ. ಇನ್ನು ‘ ದೇವರು ‘ ಕುರಿತು ಹೇಳುವುದಾದರೆ ‘ ದೇವರು ‘ ಇದ್ದಾನೆ ಎಂಬ ನಂಬಿಕೆ ಹೊಂದಿದವರೆಲ್ಲಾ ಆಸ್ತಿಕ ಗುಂಪಿಗೆ ಸೇರಿದರೆ ‘ ದೇವರ ‘ ಅಸ್ತಿತ್ವದ ಕುರಿತು ಸಂಶಯಪಡುವವರೆಲ್ಲಾ ನಾಸ್ತಿಕ ಗುಂಪಿಗೆ ಸೇರಿಬಿಡುತ್ತಾರೆ . ಇದು ಪ್ರಪಂಚ ಇರುವತನಕ ಮತ್ತು ಈ ಪ್ರಪಂಚದಲ್ಲಿ ಕಟ್ಟಕಡೆಯ ಮನುಷ್ಯ ಇರುವಲ್ಲಿಯ ತನಕ ಮುಂದುವರೆಯುವ ಚರ್ಚೆಯಾಗಿದೆ . ‘ ದೇವರು ‘ ಇದ್ದಾನೆಯೇ ಎನ್ನುವುದು ಅವರವರ ಸ್ವಯಂ ಅನುಭವವೇದ್ಯವಾದ ಸಂಗತಿಯಾಗಿದೆ . ಇನ್ನು ನನ್ನ ದ್ರಷ್ಟಿಯಲ್ಲಿ ನಾನು ಕಷ್ಟದಲ್ಲಿದ್ದಾಗ ಯಾರು ನನ್ನನ್ನು ಕೈಹಿಡಿದು ನಡೆಸಲು ಪ್ರಯತ್ನಿಸುತ್ತಾರೋ , ನಾನು ಸಾವು ಬದುಕುಗಳನಡುವೆ ಹೋರಾಡುತ್ತಿರುವಾಗ ಕಾಳಜಿಯಿಂದ ನನ್ನನ್ನು ಉಳಿಸಲು ಪ್ರಾಮಾಣಿಕವಾಗಿ ಹೆಣಗಾಡುತ್ತಾರೆಯೋ ಅವರೇ ನನ್ನ ಪಾಲಿಗೆ ದೇವರು . ಯಾಕೆಂದರೆ ಅವರು ಮಾತ್ರ ನಾನು ಕಾಣಲು ಸಾಧ್ಯವಾಗುವ ಸತ್ಯದ ದೇವರಾಗಿರುತ್ತಾರೆ . ಇದಕ್ಕೆ ಹೊರತಾದ ಅನ್ಯ ವಿಚಾರ ‘ ದೇವರ ‘ ಕುರಿತಂತೆ ನನ್ನಲ್ಲಿಲ್ಲ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ನಿಮ್ಮ ಈ ಪ್ರಶ್ನೆ ನನ್ನ ವ್ಯಾಪ್ತಿಗೆ ಸಂಬಂಧಿಸಿದ್ದಲ್ಲ. ಆದರೂ ಈ ದೇಶದ ಪ್ರಜೆಯಾಗಿ , ಪ್ರಜಾಪ್ರಭುತ್ವದ ನಿಯಮಾವಳಿಗಳಿಗೆ ಒಳಪಟ್ಟ ಒಬ್ಬ ಜವಾಬ್ದಾರಿಯುತ ಮತದಾರನಾಗಿ ನಿಮ್ಮ ಪ್ರಶ್ನೆಗೆ ಕೆಲವು ಮಿತಿಗೆ ಒಳಪಟ್ಟು ಪ್ರತಿಕ್ರಿಯಿಸಬಹುದು ಎಂದುಕೊಳ್ಳುತ್ತೇನೆ . ಇತ್ತೀಚಿನ ದಿನಗಳಲ್ಲಿ ಬದುಕಿನ ಎಲ್ಲಾ ಸ್ತರಗಳಲ್ಲೂ ಮೌಲ್ಯಗಳು ಕುಸಿಯುತ್ತಿವೆ ಎಂದು ಹೇಳಲಾಗುತ್ತಿವೆ . ಅದು ರಾಜಕೀಯ ಕ್ಷೇತ್ರಕ್ಕೂ ಹೊರತಾಗಿಲ್ಲ. ಮಹಾನ್ ರಾಷ್ಟ್ರೀಯ ಚಿಂತಕರನ್ನು ,ಯಾವುದೇ ವಿಧದ ಧಾರ್ಮಿಕ, ಸಾಮಾಜಿಕ ತಾರತಮ್ಯವಿಲ್ಲದ ಸರ್ವಜನಾಂಗದ ಹಿತಚಿಂತಕರುಗಳನ್ನು ರಾಷ್ಟ್ರದ ರಾಜಕೀಯ ನೇತಾರರುಗಳನ್ನಾಗಿ ಪಡೆದ ದೇಶ ಇದು . ಆದರೆ ಇಂದು ಈ ದೇಶದ ರಾಜಕೀಯ, ಸಾಮಾಜಿಕ ಜೀವನ ಹಾಗಿದೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಲು ಶಕ್ತರಾದರೆ ನಿಮ್ಮ ಪ್ರಶ್ನೆಗೆ ಉತ್ತರ ಸಿಗುತ್ತದೆ . ಸದ್ಯದ ವಿದ್ಯಮಾನಗಳನ್ನು ಗಮನಿಸಿದರೆ ರಾಜಕೀಯದ ಮೂಲಕ ರಾಷ್ಟ್ರ ಸೇವೆ , ಸಮಾಜ ಸೇವೆ ಎನ್ನುವ ಮಾತು ಕೇವಲ ಸವಕಲು ನಾಣ್ಯಗಳಾಗಿವೆ ಎನಿಸುವುದಿಲ್ಲವೆ ? ಅವರು ಅಷ್ಟು ಹಾಳುಗೆಡವಿದ್ದಾರೆ , ಅಕ್ಕಾಗಿ ಇವರು ಇಷ್ಟು ಕುಲಗೆಡಿಸುತ್ತಾರೆ …ಅದನ್ನೆಲ್ಲಾ ಪ್ರಶ್ನಿಸಲು ನೀವುಗಳು ಯಾರು ? ಎಂಬ ಪ್ರಶ್ನೆಗಳು ಹೊರಬೀಳುತ್ತಿರುವುದನ್ನು ನಾವು ಕೇಳುತ್ತಿದ್ದೇವೆ . ಹಾಗೆ ನೋಡಿದರೆ ನಮಗೆ ತೀರಾ ಪುಕ್ಕಟೆಯಾಗಿ ದೊರೆತ ಮತದಾನದ ಹಕ್ಕೂ ಕೂಡ ಇಂದಿನ ವಿದ್ಯಮಾನಗಳಿಗೆ ಕೆಲಮಟ್ಟಿಗೆ ಕಾರಣವಾಗಬಹುದೇನೊ ? ಯಾಕೆಂದರೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಅಲ್ಲಿಯ ಪ್ರಜೆಗಳು ರಾಜಕೀಯ ಹಕ್ಕಿಗಾಗಿ ಹೋರಾಟ ನಡೆಸಿದ ಇತಿಹಾಸವನ್ನು ನಾವು ಓದುತ್ತೇವೆ. ಆದರೆ ನಮ್ಮಲ್ಲಿ ಪ್ರಜಾಪ್ರಭುತ್ವದ ನೆಲೆಯಲ್ಲಿ ರಾಜಕೀಯ ( ಮತದಾನದ ) ಹಕ್ಕು ,
ಏನೂ ಸಾಧ್ಯವಿಲ್ಲವೆಂಬ ಕಾಲಘಟ್ಟದಲ್ಲಿ ಪ್ರತಿರೋಧಗಳು ಬಂದಿವೆ ಬಿ.ಶ್ರೀನಿವಾಸ ಬಂಡ್ರಿ ಗೆಳೆಯ ಬಿ.ಶ್ರೀನಿವಾಸ ಕಡುಬಡತನದ, ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದರು. ೦೧-೦೬-೧೯೭೦ ಅವರ ಜನ್ಮದಿನ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ತಂದೆ ಬಂಡ್ರಿ ನರಸಪ್ಪ, ತಾಯಿ ಓಬವ್ವರಿಗೆ ಹನ್ನೊಂದು ಮಕ್ಕಳ ಪೈಕಿ, ಬದುಕುಳಿದ ಏಳು ಮಕ್ಕಳಲ್ಲಿ ಶ್ರೀನಿವಾಸ ಸಹ ಒಬ್ಬರು.ಸಂಡೂರು ತಾಲೂಕಿನ ಬಂಡ್ರಿ ಗ್ರಾಮದ ಜೋಗಿಕಲ್ಲು ಗುಡ್ಡದಿಂದ ಬದುಕನ್ನರಸಿ ಕೂಡ್ಲಿಗಿಯಲ್ಲಿ ನೆಲೆನಿಂತರು. ಪ್ರಾಥಮಿಕ,ಪ್ರೌಢಶಾಲಾ ವಿದ್ಯಾಭ್ಯಾಸವನ್ನೆಲ್ಲ ಕೂಡ್ಲಿಗಿಯಲ್ಲಿ ಪೂರೈಸಿದ ನಂತರ,ಕೊಟ್ಟೂರು,ಹೂವಿನಹಡಗಲಿ,ಹೊಸಪೇಟೆಯಲ್ಲಿ ಬಿ.ಎಸ್.ಸಿ ಪದವಿ ನಂತರ ಕಲಬುರಗಿಯಲ್ಲಿ ನ್ಯೂಕ್ಲಿಯರ್ ಭೌತಶಾಸ್ತ್ರದಲ್ಲಿ ಎಮ್.ಎಸ್.ಸಿ.ಸ್ನಾತಕೋತ್ತರ ಪದವಿ ಪಡೆದರು.ಪ್ರಜಾವಾಣಿ ದೀಪಾವಳಿ ಕಥಾ ಪುರಸ್ಕಾರ,ಕಥೆಗಾರ ಸದಾಶಿವ ದತ್ತಿನಿಧಿ ಪುರಸ್ಕಾರ,ಸಿಂಚನ ಕಾವ್ಯಪುರಸ್ಕಾರಕ್ಕೆ ಅವರು ಪಾತ್ರರಾಗಿದ್ದಾರೆ.ಪ್ರಕಟಿತ ಕೃತಿಗಳು : ಕಾಣದಾಯಿತೋ ಊರುಕೇರಿ (ಕಥಾ ಸಂಕಲನ), ಉರಿವ ಒಲೆಯ ಮುಂದೆ (ಕವನ ಸಂಕಲನ),ಪುರೋಹಿತಶಾಹಿ ಮತ್ತು ಗುಲಾಮಗಿರಿ (ಅನುವಾದಿತ ಕೃತಿ), ಹಾವೇರಿ ನ್ಯಾಯ (ಸಂಪಾದಿತ ಕೃತಿ) ಅವರ ಬರೆದ ಪುಸ್ತಕಗಳು.…………………………………. ಕತೆ,ಕವಿತೆ ಹುಟ್ಟುವ ಕ್ಷಣ ಯಾವುದು ? ಇವುಗಳು ಹುಟ್ಟುವ ಕ್ಷಣಗಳು ನಿರ್ದಿಷ್ಟವಾಗಿ ಬರವಣಿಗೆಯ ಮಾತ್ರದಿಂದಲೇ ಹುಟ್ಟಿಬರುತ್ತವೆ ಎಂಬುದು ತಪ್ಪು. ಸವಣೂರಿನ ಭಂಗಿಗಳು ಮೈ ಮೇಲೆ ಮಲ ಸುರುವಿಕೊಂಡು ಪ್ರತಿಭಟಿಸಿದ ಸುದ್ದಿಯಾಯ್ತಲ್ಲ..ಅವರ ಪೈಕಿ ಮಂಜುನಾಥ ಭಂಗಿ ಎಂಬ ಹುಡುಗ ಹೇಳ್ತಾನೆ….”ನಾವು…ಅಂದರೆ ನಾನು,ನನ್ ಚಿಗವ್ವ,ಚಿಗಪ್ಪ,ತಂಗಿ,ತಮ್ಮಂದಿರೆಲ್ಲರೂ ಹುಟ್ಟಿ ಈಗ್ಗೆ ಮೂರುದಿನಗಳಾದ್ವು”ಎಂದ!. ಅವರು ತಮ್ಮ ಬೇಡಿಕೆ ಈಡೇರಿಕೆಗಾಗಿ ಮಲ ಸರುವಿಕೊಂಡು ಅಂದಿಗೆ ಮೂರುದಿನವಾಗಿತ್ತು.ಟೀವಿ,ಪೇಪರ್ನಾಗೆಲ್ಲ ಸುದ್ದಿ ಬಂದಿತ್ತು. ಅಲ್ಲೀವರೆಗೂ ನಮ್ಮ ವ್ಯವಸ್ಥೆಗೆ ಅವರ ಸಂಕಟಗಳು ಹೋಗಲಿ ಮನುಷ್ಯರು ಇದ್ದಾರೆನ್ನುವುದೇ ಇರಲಿಲ್ಲ. ಇಪ್ಪತೈದರ ಹರೆಯದ ಯುವಕ “ನಾನು ಈಗ್ಗೆ ಮೂರು ದಿನದ ಹಿಂದೆ ಹುಟ್ಟಿದೆ” ಎನ್ನುವುದನ್ನು ಹೇಗೆ ತೆಗೆದುಕೊಳ್ತೀರಿ..?ಅವನೇನು ದಾರ್ಶನಿಕನಾ..? ಕವಿಯೋ…ಕಥೆಗಾರನೋ..ಏನಂತಾ ಕರೀತೀರಿ? ಅದಕ್ಕೆ ಅಕ್ಷರಗಳ ಸಾಲಿಯಲಿ ಕಲಿತವರಿಗಿಂತಲೂ ಲೋಕದ ಸಾಲಿಯಲಿ ಕಲಿತವರ ಬಹುದೊಡ್ಡ ಪರಂಪರೆಯೇ ನಮ್ಮ ಮುಂದಿದೆ.ಹೀಗಾಗಿ ನಾವು ಒಂದೆರೆಡು ಪುಸ್ತಕಗಳಲ್ಲಿ ಕೆಲವನ್ನು ಹಿಡಿದಿಟ್ಟರೆ ಅದು ಕಡಲಲಿ ನಿಂತು ಹಿಡಿದ ಬೊಗಸೆ ನೀರು ಮಾತ್ರ . ನಾನು..ನನ್ನ ಮೊದಲ ಪದ್ಯ ಬರೆದದ್ದು ಕೂಡ ಹೀಗೆಯೇ. ಅದೊಂದು ದಿನ,ಶಾಲೆಗೆ ರಜೆಯಿತ್ತು.ಬಳ್ಳಾರಿ ಜಿಲ್ಲೆಯ ಬಿಸಿಲು ನಿಮಗೆ ಗೊತ್ತೇ ಇದೆ.ಅಂಥಾ ಬಿಸಿಲಿನಲ್ಲೂ ಅಪ್ಪ,ನನ್ನನ್ನು ಬತ್ತಿಮರದ ನೆರಳಲ್ಲಿ ಕುಳ್ಳಿರಿಸಿ ರಂಟೆ ಹೊಡೆಯುತ್ತಿದ್ದ.ಆತನ ಕಪ್ಪು ಎದೆಯಲ್ಲಿ ಮೂಳೆಗಳು ಎದ್ದು ಕಾಣುತ್ತಿದ್ದವು. ಈ ಚಿತ್ರ ಬಹುಶಃ ನಾನು ಮೂರೋ ನಾಕನೇ ಕ್ಲಾಸಿದ್ದಾಗೋ ಆಗಿರಬಹುದು.ಆದರೆ ಇಂದಿಗೂ ಕಾಡುತ್ತಿದೆ.`ನಾನು ಸಾಲಿ ಕಲಿತಿಲ್ಲ/ ಆದರೂ ಎಣಿಸಬಲ್ಲೆ/ ಅಪ್ಪನ ಎದೆಯ ಮೂಳೆಗಳನ್ನು/ ಎನ್ನುವ ಸಾಲುಗಳನ್ನು ಬರೆಯಲಿಕ್ಕೆ ಸಾಧ್ಯವಾಯಿತು. ಅಂದರೆ ಅಕ್ಷರ ಕಲಿತರೆ ಮಾತ್ರವೇ ಸಂವೇದನೆ ಗಳಿರುತ್ತವೆ ಎಂಬ ಮಾತನ್ನು ಹೊಡೆದು ಹಾಕಿದೆ. ಹೌದು,ನಿವೇಕೆ ಬರೆಯುತ್ತೀರಿ? ಸೃಜನಶೀಲ ಬರಹಗಾರನೊಬ್ಬ ‘ಡಿಸ್ಟರ್ಬ್’ ಆದಾಗ,ಲೇಖನಿ ಖಡ್ಗವಾಗುವುದುಂಟು.ಕೆಲವೊಮ್ಮೆ ಅವ್ವನ ಬತ್ತಿದೆದೆಯಲಿ ಹಾಲು ಬರುವುದಿಲ್ಲವೆಂದು ಗೊತ್ತಿದ್ದೂ ಚೀಪುವ ಬಡಪಾಯಿ ಮಗುವಿನ ಹಾಗೆ.ಬರಹಗಾರ ಬರೀತಾ ಹೋಗ್ತಾನೆ.ನಿರಾಳತೆಯ ಅನಂತ ಗುಹೆ ಹೊಕ್ಕು ಸಾಗುತ್ತಲೇ ಇರುತ್ತಾನೆ.ಈ ಪಯಣ ಕವಿಗೆ,ಕಥೆಗಾರನಿಗೆ,ಕಾದಂಬರಿಕಾರನಿಗೆ,ಹೆಚ್ಚು ಭಾವುಕವಾಗಿಬಿಡುತ್ತದೆ. ಅಕ್ಷರಗಳಿಂದ ಏನೂ ಮಾಡಲು ಸಾಧ್ಯವಿಲ್ಲವೆಂದು ಗೊತ್ತಿರುವ ಕಾಲಘಟ್ಟಗಳಲ್ಲಿ ಪ್ರಪಂಚದ ಅತ್ಯುತ್ತಮ ಕೃತಿಗಳು,ಪ್ರತಿರೋಧಗಳು ಮೂಡಿಬಂದಿರುವುದನ್ನು ಗಮನಿಸಬಹುದು. ಲಿಯೋ ಟಾಲ್ಸ್ಟಾಯ್,ಪಾಬ್ಲೋನೆರೂಡ, ಸಿದ್ಧಲಿಂಗಯ್ಯ, ದೇವನೂರು, ಅನಂತಮೂರ್ತಿ, ಲಂಕೇಶ, ತೇಜಸ್ವಿಯವರ ಸಾಹಿತ್ಯ ಉದಾಹರಿಸಬಹುದು. ಕತೆ-ಕವಿತೆಗಳಲ್ಲಿ ಬಾಲ್ಯ,ಹರೆಯ ಇಣುಕಿದೆಯೆ? ಓ…ಖಂಡಿತ.ಇಣುಕುವುದಿರಲಿ ಪರಿಪೂರ್ಣ ಹಾಜರಿಯೇ ಇದೆ.ನನ್ನ ಕಥೆ,ಕವಿತೆ….ಬರೆಯುತ್ತಿರುವ ಸಂಡೂರಿನ ಚಿತ್ರಗಳಾಗಲೀ,ಕಾದಂಬರಿಯೇ ಆಗಿರಲಿ ಎಲ್ಲದರ ಮೂಲಧಾತು ನನ್ನ ಊರಿನ ಬಾಲ್ಯ,ಮತ್ತು ಹರೆಯದ ಮೌನ. ಅಪ್ಪ ಚೌರ ಮಾಡಿಸಿಕೊಂಡಿದ್ದ ಕಿಟ್ಟಪ್ಪನ ಅಂಗಡಿಯಿಂದ ಹಿಡಿದು ಹರಿದ ಬನಿಯನ್ನಿನ ನನ್ನ ಮೇಷ್ಟ್ರವರೆಗೆ…ನನ್ನ ಬರವಣಿಗೆಯಲ್ಲಿ ಬಂದಿದ್ದಾರೆ. ಈ ಮನೆಯ ಮುದ್ದೆಗೆ/ ಆ ಮನೆಯ ಸಾರು/ ಉಂಡ ರುಚಿ ಮೂಲೆ ಸೇರಿದೆ ಅಜ್ಜನ ಹಾಗೆ/ ಹೀಗೆ ಬರೆಯಲಿಕ್ಕೆ ನನಗೆ ಸಾಧ್ಯ ಮಾಡಿದ್ದೇ ನನ್ನ ಕಳೆದುಹೋದ ಬದುಕು. ಪ್ರತಿಯೊಬ್ಬ ಲೇಖಕನಿಗೂ ಅವನ ಬಾಲ್ಯ,ಹರೆಯ, ಬರವಣಿಗೆಯೊಳು ಹಾಸುಹೊಕ್ಕಾಗಿರುತ್ತವೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತಿದೆ? ಇತ್ತೀಚೆಗೆ ಎಲ್ಲ ಸಮುದಾಯಗಳೂ ತಮ್ಮ ತಮ್ಮ ಸಾಂಸ್ಕೃತಿಕ ಐಕಾನ್ ಗಳನ್ನು ಹೊಂದಿದ್ದಾರೆ.ಬಸವಣ್ಣನನ್ನು,ಕನಕನನ್ನು,ವಾಲ್ಮೀಕಿಯನ್ನು….ಹೀಗೆ ಆಯಾ ಬಹುಸಂಖ್ಯಾತ ಸಮುದಾಯಗಳು ತಮ್ಮ ತಮ್ಮ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿಕೊಂಡಿವೆ.ಆದರೆ ವಿಪರ್ಯಾಸ ನೋಡಿ,ಅಂಚಿನ ಸಮುದಾಯಗಳಾದ ಕೊರಚ,ಕೊರಮ,ಕೊರವರ,,ಕಮ್ಮಾರ,ಕುಂಬಾರ…ತಮ್ಮ ಅಸ್ತಿತ್ವಕ್ಕಾಗಿ ಇನ್ನೂ ಹೋರಾಡುತ್ತಿದ್ದಾರೆ.ಯಾವ ನಾಯಕರು ಇಡೀ ಮಾನವ ಕುಲವೊಂದೇ ಎಂದು ಹೋರಾಡಿದರೋ ,ಅವರನೆಲ್ಲ ಆಯಾ ನಿರ್ದಿಷ್ಟ ಸಮುದಾಯಗಳು ಮಾತ್ರವೇ ಗುತ್ತಿಗೆ ಪಡೆದ ರೀತಿಯಲ್ಲಿ ವರ್ತಿಸುತ್ತಿವೆ.ಸಾಹಿತ್ಯಿಕ ಲೋಕದ ದಿಗ್ಗಜರಿಗೂ ಈ ಸತ್ಯ ಅರಿವಾಗಿದ್ದರೂ ಮೌನವಾಗಿರುವುದು ಸಾಂಸ್ಕೃತಿಕ ಅಪರಾಧ. ಇನ್ನು ಇತರೆ ಧರ್ಮೀಯರದಂತೂ ಹೇಳುವ ಹಾಗೆಯೇ ಇಲ್ಲ.ಶರೀಫರಿಗೂ ಮಠ ಕಟ್ಟಿ ಬಂಧಿಸಿಡಲಾಗಿದೆ.ಮಠಾಧೀಶರಂತೂ ಧಾರ್ಮಿಕ ಮತ್ತು ರಾಜಕಾರಣದ ಗೆರೆ ಅಳಿಸಿರುವವರಂತೆ ತೋರುತ್ತಿದ್ದಾರೆ.ಸಂಪುಟದ ತೀರ್ಮಾನಗಳು ಇವರ “ಅಪ್ಪಣೆ”ಮೇರೆಗೂ ನಡೆದ ವಿದ್ಯಮಾನಗಳು ನಮ್ಮ ಕಣ್ಣೆದುರಿಗಿವೆ. ಸಾಂಸ್ಕೃತಿಕ ರಾಜಕಾರಣ ಎಲ್ಲದಕ್ಕಿಂತಲೂ ಅಪಾಯಕಾರಿಯಾದುದು.ಇದನ್ನು ಗ್ರಹಿಸುತ್ತಿದ್ದ ಲೋಹಿಯಾ,ಜೆ.ಪಿ.,ನಮ್ಮ ಪಟೇಲರಂತಹ ರಾಜಕಾರಣಿಗಳೂ ಈಗ ಇಲ್ಲ.ಒಂದು ರೀತಿ ಕಲ್ಚರಲ್ ವ್ಯಾಕ್ಯೂಮ್ ಸೃಷ್ಟಿಯಾಗಿಹೋಗಿದೆ. ಈ ಮಾತನ್ನು ಯಾಕೆ ಪ್ರಸ್ತಾಪಿಸುತ್ತಿದ್ದೇನೆಂದರೆ,ರಾಜಕಾರಣಿಯೂ ಎಲ್ಲ ಮನುಷ್ಯರ ಹಾಗೆ ನಗಬೇಕು,ಅಳಬೇಕು,ಸಂಕಟಗಳ ಅರಿವೂ ಇರಬೇಕು.ಈ ಹಿಂದಿನ ರಾಜಕಾರಣಿಗಳಿಗೆ ಕನಿಷ್ಟ ಮಟ್ಟದಲ್ಲಾದರೂ ಇವುಗಳ ಅರಿವಿತ್ತು. ನಗು ಮರೆತು,ಅಳು ಮರೆತು ರಾಜಕಾರಣ ಮಾಡಿದರೆ ಅದು ಮನುಷ್ಯ ರಾಜಕಾರಣವಾಗುವುದಿಲ್ಲ.ಸಂವೇದನಾರಹಿತನೊಬ್ಬ ರಾಜಕಾರಣಿಯಾಗುವುದೂ..ಬಾಂಬುಗಳೇ ನಮ್ಮನ್ನಾಳುವುದಕ್ಕೂ ವ್ಯತ್ಯಾಸವಿಲ್ಲ. ಇಂದು ನಮ್ಮನ್ನಾಳುವ ಪ್ರಭುಗಳ ಪರಿಸ್ಥಿತಿ ನೋಡಿ,ಎಲೆಕ್ಷನ್ ಹತ್ತಿರ ಬಂದಾಗಲೆಲ್ಲ ಮಿಲಿಟರಿ ಡ್ರೆಸ್ ಹಾಕ್ಕೊಂಡು ನಿಲ್ತಾರೆ.ಜನರನ್ನು ಭಾವನಾತ್ಮಕವಾಗಿ,ಧಾರ್ಮಿಕವಾಗಿ,ಸಾಂಸ್ಕೃತಿಕವಾಗಿಯೂ ವ್ಯವಸ್ಥಿತವಾಗಿ ಒಡೆಯಲಾಗುತ್ತಿದೆ. ಈಗೀಗ ಗಡಿರೇಖೆಯ ನ್ಯೂಸ್ ಗಳನ್ನೇ ಹೆಚ್ಚಾಗಿ ಕೇಳುತ್ತೇವೆ. ನಾವು ನೀವೆಲ್ಲ ಚಿಕ್ಕ ವಯಸ್ಸಿನಲ್ಲಿ ಯುದ್ಧ ಎಂದರೆ ಬಬ್ರುವಾಹನ ಚಿತ್ರದ ದೃಶ್ಯ ಕಣ್ಮುಂದೆ ಬರುತಿತ್ತು,ಬಿಟ್ಟರೆ ಇಸ್ರೇಲೋ..ಇರಾನ್ ನಲ್ಲೋ..ಅಲ್ಲೊಂದು ಇಲ್ಲೊಂದು ಸುದ್ದಿಯಿರುತ್ತಿತ್ತು.ಆದರೀಗ ಸುದ್ದಿಗಳೇ ಯುದ್ಧ ಸೃಷ್ಟಿಸುವಂತಹ ಸಂದರ್ಭಕ್ಕೆ ಬಂದು ನಿಂತಿದ್ದೇವೆ.ಇದು ನಾವು ತಲುಪಿರುವ ದುರಂತ. ನಿಮ್ಮ ಕತೆಗಳ ವಸ್ತು,ವ್ಯಕ್ತಿ ಹೆಚ್ಚಾಗಿ ಯಾವುದು?ಪದೇ ಪದೇ ಕಾಡುವ ವಿಷಯ ಯಾವುದು? ನನ್ನ ಬರವಣಿಗೆಯು ವರ್ತಮಾನದ ಕನ್ನಡಿ.ಸಾಮಾಜಿಕ ಅಸಮಾನತೆಯಲಿ ಬೆಂದವರು,ಬಂಡವಾಳಶಾಹಿಯ ಹಿಡಿತಕ್ಕೆ ಸಿಕ್ಕು ನಲುಗಿದವರು ನನ್ನ ಕಥೆಯ ಪಾತ್ರಧಾರಿಗಳು.ಬರಹಗಾರನಿಗೆ ವೈಯಕ್ತಿಕವು ಸಾಮಾಜಿಕವೂ ಆಗಿರಬೇಕು.ಆಗ ಮಾತ್ರ ವರ್ತಮಾನದ ಒತ್ತಡ ಅವನನ್ನು ಲೇಖಕನನ್ನಾಗಿ ಮಾಡುತ್ತೆ. ನನ್ನ ಕಥೆ,ಕವಿತೆಗಳೆಲ್ಲವೂ ಒಂದು ರೀತಿಯಲ್ಲಿ ರಿಯಾಕ್ಷನರಿ ಪ್ರೋಜ್, ಪೊಯೆಮ್ಸ್ …ಪ್ರತಿಕ್ರಿಯಾತ್ಮಕ ಗದ್ಯ,ಪದ್ಯಗಳೆ ಆಗಿವೆ. ಧರ್ಮ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ಪ್ರತಿಯೊಬ್ಬ ಭಾರತೀಯನಲ್ಲೂ ರಾಮ,ರಹೀಮ,ಏಸು,ನಾನಕ….ಮುಂತಾದ ಧರ್ಮಗಳ ನಾಯಕರಿದ್ದಾರೆ.ವಿವೇಕಾನಂದರೂ ಹೇಳಿದ್ದನ್ನೆ ನಾನು ಅನುಮೋದಿಸುತ್ತಿರುವೆನಷ್ಟೆ.ಆದರೆ ಆ ದೇವರುಗಳ ಹೆಸರಿನಲ್ಲಿನ ಮೌಢ್ಯತೆಗಳನ್ನು ಸಹಿಸಲಾರೆ. ಧರ್ಮಗಳ ನಡುವಿನ ಅಂತರ ಹೆಚ್ಚಾಗ್ತಿರುವುದೂ ದೇಶದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ.ನೇರವಾಗಿ ಹೇಳಿಬಿಡ್ತೇನೆ…ಒಂದು ನಿರ್ದಿಷ್ಟ ಧರ್ಮೀಯರನ್ನು ಹೊರಗಿಟ್ಟು ಸಿಎಎ ಕಾಯಿದೆ ಜಾರಿ ಮಾಡುವುದು ,ಅನುಮಾನದಿಂದ ನೋಡುವುದು ಆ ಧರ್ಮೀಯರಲ್ಲಿ ಅಭದ್ರತೆ,ಪರಕೀಯ ಭಾವನೆಯನ್ನು ಮೂಡಿಸುವುದಲ್ಲದೆ ಮತ್ತೇನು?ಈ ಹಿಂದೆ ಕಾರ್ಗಿಲ್ ವಿಜಯೋತ್ಸಾಹದ ಸಂದರ್ಭದಲ್ಲಿ ಹಿಂದೂ ಸೈನಿಕರಿಗೆ ರಕ್ಷಾಬಂಧನ ಕಟ್ಟಿದರೆ..ಜೊತೆಯಲಿದ್ದ ,ದೇಶಕ್ಕಾಗಿ ದುಡಿದ ಮುಸ್ಲಿಮ್ ಸೈನಿಕರುಗಳ ಭಾವನೆ ಹೇಗಾಗಿದ್ದೀತು? ಕಳೆದ ವರುಷ ಪುಲ್ವಾಮ ದಾಳಿಯಲ್ಲಿ ಹತರಾದವರು ನಲವತ್ತು ಜನ ಯೋಧರಿದ್ದರು.ನಮ್ಮೂರುಗಳಲ್ಲಿ ರಾತ್ರಿ ಸರ್ಕಲ್ಲುಗಳಲಿ ಮೊಂಬತ್ತಿ ಹಿಡಿದು ಭಾವನಮನ ಸಲ್ಲಿಸುವಾಗ, ಹಾಕಿದ್ದ ಕಾರ್ಯಕ್ರಮದ ಪ್ಲೆಕ್ಸನಲ್ಲಿ ಒಬ್ಬ ನತದೃಷ್ಟನ ಪಟ ಇರಲಿಲ್ಲ.ಕಾರಣವೇನೆಂದರೆಅವನು ಅನ್ಯಧರ್ಮೀಯನಾಗಿದ್ದುದು! ಇದು ನನ್ನ ಭಾರತ ಸಾಗುತ್ತಿರುವ ದುರಂತ ಪಥ. ವೈಯಕ್ತಿಕವಾಗಿ ಧರ್ಮ,ದೇವರುಗಳ ವಿಷಯದಲ್ಲಿ ಲೋಹಿಯಾ ನನಗೆ ಮಾದರಿ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ….ನೋಡಿ,ನಮ್ಮೂರಿನಲ್ಲಿ ಹಿಂದೆ ಕೂಡ ಗಣಿಗಾರಿಕೆಯಿತ್ತು.ಈಗಲೂ ಇದೆ.ಈಗ ಇರುವಷ್ಟು ಅಕ್ರಮ ಇರಲಿಲ್ಲ. ಊರ ಜನರಿಂದ ಆಯ್ಕೆಯಾಗಿ ಹೋದ ಎಮ್ಮೆಲ್ಲೆ ಹತ್ರ ಹೋಗಿ,ಊರಿಗೆ ಶಾಲೆ,ರಸ್ತೆ ರಿಪೇರಿಗೋ,ಕುಡಿಯುವ ನೀರಿಗೋ ಬೇಡಿಕೆಯಿಟ್ಟರೆ “ಮೀಕೇಮಿ ಕೆಲ್ಸಮಲೇದ..?ಮೀದೊಕ್ಕಟೆ ಊರೇಮಿ ನಾಕಿ..? ಪೋ ಪೋ..ಪೋರ್ರಾ”(ನಿಮಿಗೆ ಕೆಲ್ಸವಿಲ್ಲವೇನು ? ನಿಮ್ಮದೊಂದೆ ಊರಂದ್ಕಡಿದಿರೇನು ನನಗೆ…ಹೋಗ್ ಹೋಗ್ರಪಾ..)ಎಂದು ಅರ್ಧ ಕನ್ನಡ ಇನ್ನರ್ಧ ತೆಲುಗು ಮಿಶ್ರಿತ ಭಾಷೆಯಲ್ಲಿ ಗದರಿಸಿ ಕಳುಹಿಸುತ್ತಿದ್ದ.ಆತ ಒಂದು ಕಪ್ಪು ಟೀ ಕೂಡ ಕೊಡುತ್ತಿರಲಿಲ್ಲ.ಜನರೂ ಸುಮ್ಮನೆ ಬರೋರು. ಆದರೆ ಅದೇ ನಮ್ಮೂರಿಗೆ ಕಳೆದ ಹದಿನೈದು ವರುಷಗಳಿಂದ ಗಣಿಧಣಿಗಳೇ ಶಾಸಕರಾಗುತ್ತಿದ್ದಾರೆ.ಅವರನ್ನು ಎಲೆಕ್ಷನ್ ಟೈಮಲ್ಲಿ ನೋಡಿದ್ದು ಬಿಟ್ಟರೆ ಮತ್ತೆ ನೋಡಾದು ಮತ್ತೊಂದು ಎಲೆಕ್ಷನ್ನು ಬಂದಾಗಲೆ.ಎಲೆಕ್ಷನ್ನಲ್ಲಿ ಹಬ್ಬವೋ ಹಬ್ಬ.ಅದುವರೆಗೂ ಅಂತಹ ಸ್ಟೀಲ್ ಸಾಮಾನುಗಳನ್ನು ನೋಡಿರದ ಜನರಿಗೆ ತರಹೇವಾರಿ ಟಿಪನ್ನು ಕ್ಯಾರಿಯರ್ ಮನೆಮನೆಗೆ ತಲುಪಿಸಲಾಯಿತು.ಓಟಿಗೆ ಸಾವ್ರ,ಎರಡ್ಸಾವ್ರ ರೂಪಾಯಿಗಳಂತೆ ಹಂಚಲಾಯಿತು.ಹೀಗೆ ಗೆದ್ದು ಬಂದ ಎಮ್ಮೆಲ್ಲೆ ಹತ್ರನೂ ಅದೇ ಸಮಸ್ಯೆಗಳನ್ನು ಹೊತ್ತು ಬೆಂಗಳೂರಿಗೂ ಹೋಕ್ತಾರೆ. ಅಲ್ಲಿ ಬೆಳಗಾ ಮುಂಜಾನಿಗೆ ಬೆಂಗಳೂರಿಗೆ ಹೋದವರ ದೃಶ್ಯ ವಿವರಿಸುವೆ ಕೇಳಿ. ಭವ್ಯ ಬಂಗಲೆ!ಹೋದ ತಕ್ಷಣ,ಇವರ ವೋಟಿನ ಕಾರ್ಡು,ಆಧಾರಕಾರ್ಡು ಚೆಕ್ ಮಾಡಲಾಗುತ್ತದೆ.ಕ್ಷೇತ್ರದ ಮತದಾರರೆಂದು ಕನ್ಫರ್ಮ್ ಆದ ಮೇಲೇಯೇ ಇವರಿಗೆಲ್ಲ ಸ್ನಾನ,ನಿತ್ಯಕರ್ಮಾದಿಗಳಿಗೆ ರೂಮು ತೋರಿಸ್ತಾರೆ. ಭರ್ಜರಿ ತಿಂಡಿ,ತಿಂದ ನಂತರ ನಿಂತಿದ್ದ ವೋಲ್ವೋ ಬಸ್ ಹತ್ತಬೇಕು.ಯಂತ್ರಮಾನವರಂತೆ ಜನರು ಹತ್ತಿ ಕುಳಿತು ಬೆಂಗಳೂರೆಂಬ ಮಾಯಾನಗರಿಯನ್ನು ಬೆರಗಿನಿಂದ ನೋಡ್ತಾರೆ.ಇಂಥದೊಂದು ಲೋಕವ ನಾವೂ ನೋಡದೆ ಇರುತ್ತಿದ್ವಲ್ಲ ಎಂದು ಬಂದ ಭಾಗ್ಯಕೆ ಖುಷಿಪಡುತ್ತಾರೆ. ಮತ್ತೆ ರಾತ್ರಿ ಭೂರಿ ಭೋಜನದ ವ್ಯವಸ್ಥೆ.ಪ್ರತಿಯೊಬ್ಬರ ಕೈಗೂ ಐನೂರರ ಗಾಂಧಿ ನೋಟು! ಬಸ್ಸೇರಿ ಊರಿಗೆ ಮರಳುತ್ತಾರೆ. ತಾವು ಕೇಳಲೆಂದು ಹೋದ ಅದೇ ಮುರಿದು ಬೀಳುವ ಹಂತದ ಶಾಲೆ ,ತಗ್ಗುದಿಣ್ಣಿಯ ರಸ್ತೆ,ತುಂಬು ಗರ್ಭಿಣಿಯರು ಕೊಡ ನೀರಿಗಾಗಿ ಮೈಲುಗಟ್ಟಲೆ ದೂರ ನಡೆವ ಚಿತ್ರಗಳು ಕಾಣಸಿಗುತ್ತವೆ. ನಾನು ಹೇಳ್ತಿರುವುದು ಕಥೆಯಲ್ಲ.ವಾಸ್ತವ.ಇದು ಭಾರತದ ರಾಜಕಾರಣ ತಲುಪಿರುವ ದುರಂತ . ಮಾತನಾಡದಂತೆ ತಡೆಯುವುದು,ಪ್ರಭುತ್ವದ ವಿರುದ್ಧ ಮೌನವಾಗಿರುವಂತೆ ಬೆದರಿಸುವುದು ಫ್ಯಾಸಿಸಂನ ಲಕ್ಷಣಗಳನ್ನೂ ದಾಟಿ,ಇದೀಗ ಪ್ರತಿಯೊಬ್ಬರ ಮನೆಯಂಗಳಕೂ ಕಣ್ಗಾವಲಿಟ್ಟ ಬಿಗ್ ಬಾಸ್ ರೀತಿಯಲ್ಲಿ ನಮ್ಮ ಬದುಕು ನಡೆಯುತ್ತಿದೆ.ಈ ಹೊತ್ತು ಇಡೀ ಭಾರತವೇ ಡಿಟೆನ್ಷನ್ ಕ್ಯಾಂಪಿನಲ್ಲಿರುವ ಹಾಗೆ ತೋರುತ್ತಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ನಾನು,ಮೂಲತಃ ನ್ಯೂಕ್ಲಿಯರ್ ಫಿಜಿಕ್ಸ್ನ ವಿದ್ಯಾರ್ಥಿ. ಆದರೆ ಭೌತಶಾಸ್ತ್ರಕ್ಕಿಂತಲೂ ಹೆಚ್ಚು ಓದಿದ್ದು ಕನ್ನಡ ಸಾಹಿತ್ಯ. ನಾನೇಕೆ ಇಷ್ಟೊಂದು ಸೆಳೆತಕ್ಕೆ ಒಳಗಾದೆ? ಎಂಬ ಪ್ರಶ್ನೆ ನನಗೆ ನಾನೇ ಹಾಕಿಕೊಂಡಿದ್ದುಂಟು. ನನ್ನೂರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ.ಬಿಸಿಲು,ಬಡತನ ಮತ್ತು ದೇವದಾಸಿಯೆಂಬ ನತದೃಷ್ಟರೇ ಹೆಚ್ಚಾಗಿರುವ ಊರು.ಕೊಟ್ರೇಶ್ ಎಂಬ ಬಾಲ್ಯದ ಗೆಳೆಯನಿದ್ದ.ಅವನಿಗೋ ವಿಪರೀತ ಓದುವ ಹುಚ್ಚು.ನನಗೂ ಹಿಡಿಸಿದ.ಸರ್ಕಾರಿ ಲೈಬ್ರರಿಯ ಹೆಚ್ಚು ಕಮ್ಮಿ ಎಲ್ಲಾ ಪುಸ್ತಕಗಳನ್ನೂ ಓದಿಬಿಟ್ಟಿದ್ದೆವು.ಸಾಲದಕ್ಕೆ ಏಪ್ರಿಲ್ ಮೇ ತಿಂಗಳ ರಜೆಯಲ್ಲಿ ಗಂಟೆಗಟ್ಟಲೆ ಚರ್ಚಿಸುತ್ತಿದ್ದೆವು.ನನಗೆ ಬಹುವಾಗಿ ಕಾಡಿದ ಕಥೆ ನಿರಂಜನರ ಕೊನೆಯ ಗಿರಾಕಿ.ಕಣ್ಣೆದುರೇ ನಮ್ಮೂರಿನಲ್ಲಿ ಅಂತಹ ಎಷ್ಟೋ ನತದೃಷ್ಟರನ್ನು ನೋಡ್ತಾ ಬೆಳೆದ್ವಿ.ಆಗ ನಮಗೆ ಈ ಸಾಹಿತ್ಯ ಬೇರೆಯಲ್ಲ, ಬದುಕೂ ಬೇರೆಯಲ್ಲ ಎಂಬುದು ಅರಿವಾಗತೊಡಗಿತ್ತು.ಆಗಲೇ ನಾವು ಕುವೆಂಪು, ಕಾರಂತರ ಜಗತ್ತನ್ನು, ಮಾಸ್ತಿಯವರನ್ನು,ಅನಂತಮೂರ್ತಿ,ದೇವನೂರು,ಕುಂವೀ,ಸಿದ್ಧಲಿಂಗಯ್ಯ ನವರನ್ನು ಓದಿಕೊಂಡಿದ್ದು.ಬಹುಶಃ ಈ ಸೆಳೆತದಿಂದಾಗಿಯೇ ನಾನು ಮನುಷ್ಯನಾಗಿ ಉಳಿದುಕೊಳ್ಳುವುದಕ್ಕೆ ಸಾಧ್ಯವಾಯಿತು. ಲಂಕೇಶ್-ತೇಜಸ್ವಿಯವರ ಓದು,ನಮ್ಮ ದಾರಿಗಳನ್ನು ಮತ್ತಷ್ಟು ಕ್ಲಿಯರ್ ಮಾಡ್ತಾ ಹೋಯಿತು.ನಿರಂಜನರ ಕೊನೆಯ ಗಿರಾಕಿಗಳೂ,ದೇವನೂರರ ಅಮಾಸ,ಕುಂವೀಯವರ ಡೋಮ,ಮೊಗಳ್ಳಿಯವರ ಬುಗುರಿ,ಎಲ್ಲವೂ ನಮ್ಮೂರಲ್ಲಿದ್ವಲ್ಲ!ಅದಕ್ಕೆ…ಬರಹ ನನಗೆ ಆಪ್ತತೆಯನ್ನು ನೀಡ್ತಾ ಬಂತು. ನಂಜುಂಡ ಸ್ವಾಮಿಯವರ ರೈತ ಹೋರಾಟ,ಕೃಷ್ಣಪ್ಪನವರ ದ.ಸಂ.ಸ.,ಗೋಪಾಲಗೌಡರ ಸಮಾಜವಾದ ಕುರಿತಂತೆ ,,ಜೊತೆಗೆ ನಾನು ಈಗ ಕಳೆದ ಇಪ್ಪತ್ತು ವರುಷಗಳಿಂದ ಕೆಲಸ ಮಾಡುತ್ತಿರುವ ಹಾವೇರಿ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಸ್ವಾತಂತ್ರ‍್ಯ ಹೋರಾಟಗಾರರ ಕುರಿತು ಚರಿತ್ರಾರ್ಹ ಬರವಣಿಗೆ ದಾಖಲಿಸಬೇಕಿದೆ.ಆ ಹೊತ್ತಿನ ಸಾಹಿತ್ಯದ ತೇವ ಆರಿ ಹೋಗದ ಹಾಗೆ ಮರು ರೂಪಿಸುವ ಬಹುದೊಡ್ಡ ಕನಸೊಂದಿದೆ.ಜೊತೆಗೆ ಗಣಿಗಾರಿಕೆಯೆಂಬ ಅತ್ಯಾಚಾರಕ್ಕೆ ಒಳಗಾದ ಸಂಡೂರೆಂಬ ಊರಿನ ಸಾಂಸ್ಕೃತಿಕ ದಾಳಿಯ ಕುರಿತೂ ಬರವಣಿಗೆ ಮಾಡಬೇಕಿದೆ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ,ಸಾಹಿತಿ ಯಾರು..? ಲಂಕೇಶ್…ತೇಜಸ್ವಿ,ಕುವೆಂಪು, ಇಂಗ್ಲೀಷಿನಲ್ಲಿ ಶಿವ ವಿಶ್ವನಾಥನ್ ಬರಹಗಳಿಷ್ಟ.ಮಾರ್ಕ್ವೈಜ್ನ ಒನ್ ಹಂಡ್ರೆಡ್ ಡೇಸ್ ಆಫ್ ಸಾಲಿಟ್ಯೂಡ್….ತುಂಬ ಡಿಸ್ಟರ್ಬ್ ಮಾಡಿದ ಕೃತಿ.ಇತ್ತೀಚೆಗೆ ಶಿವಸುಂದರ್,ಬರಗೂರರ ,ಹರ್ಷಮಂದರ್,ಮುಜಾಫರ್ ಅಸಾದಿಯವರ ಮಾತುಗಳನ್ನು
ಮಕ್ಕಳು ಮತ್ತು ನಿಸರ್ಗ ನನ್ನನ್ನು ಮತ್ತೆ ಮತ್ತೆ ಹಿಡಿದಿಡುತ್ತವೆ ತಮ್ಮಣ್ಣ ಬೀಗಾರ ಮಕ್ಕಳ ಸಾಹಿತಿ ತಮ್ಮಣ್ಣ ಅವರ ಕುರಿತು… ತಮ್ಮಣ್ಣ ಬೀಗಾರ ಅವರು ಯಲ್ಲಾಪುರದ ಬೀಗಾರದವರು.1959 ನವ್ಹೆಂಬರ್ 22 ರಂದು ಜನಿಸಿದರು. ಸ್ನಾತಕೋತ್ತರ ಪದವೀಧರ , ಸಿದ್ದಾಪುರದ ಬಿದ್ರಕಾನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕಳೆದ 37 ವರ್ಷಗಳಿಂದ ಮಕ್ಕಳ ಜೊತೆ ಮಕ್ಕಳಾಗಿದ್ದರು. ಮಕ್ಕಳ ಸಾಹಿತ್ಯದ ಬಗ್ಗೆ ಬರೆಯುವವರು ವಿರಾಳತೀ ವಿರಳ. ಅದರೆ ತಮ್ಮಣ್ಣ ಮಕ್ಕಳ ಸಾಹಿತ್ಯವನ್ನು ತಮ್ಮ ಅಭಿವ್ಯಕ್ತಿಯಾಗಿ ಆಯ್ಕೆ ಮಾಡಿಕೊಂಡರು.ಚಿತ್ರ ಕಲೆ ಸಹ ಇವರ ಮತ್ತೊಂದು ಅಭಿವ್ಯಕ್ತಿ ಮಾಧ್ಯಮ.ತಮ್ಮ ಪಾಡಿಗೆ ತಾವು ಇದ್ದು ಬಿಡುವವರು. ಗುಬ್ಬಚ್ಚಿ ಗೂಡು,ಚಿಂವ್ ಚಿಂವ್, ಜೀಕ್ ಜೀಕ್, ಪುಟಾಣಿ ಪುಡಿಕೆ, ಮಲ್ನಾಡೆ ಮತಾಡು ಇವರ ಕವನ ಸಂಕಲನ ಗಳು ,ಅಮ್ಮನ ಚಿತ್ರ ,ಪುಟ್ಟನ ಕೋಳಿ ಮುಂತಾದವು ಮಕ್ಕಳಾ ಕಥಾ ಸಂಕಲನಗಳು. ಬಾವಲಿ ಗುಹೆ ಮಕ್ಕಳ ಕಾದಂಬರಿ.ಹಸಿರೂರು ಹುಡುಗ ಕೃತಿಗೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, ಮಲ್ನಾಡೆ ಮಾತಾಡು ಕೃತಿಗೆ ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ ಸಿಕ್ಕಿದೆ. ಉತ್ತಮ ರಾಜ್ಯ ಶಿಕ್ಷಕ, ರಾಷ್ಟ್ರ ಶಿಕ್ಷಕರ ಪ್ರಶಸ್ತಿ ಸಹ ಇವರಿಗೆ ಸಂದಿವೆ.ಪ್ರಜಾವಾಣಿ ಶಿಶು ಕಾವ್ಯಪ್ರಶಸ್ತಿ ಸಹ ಪಡೆದಿದ್ದಾರೆ. ಸಂಗಾತಿ ಕನ್ನಡ ವೆಬ್ ಗಾಗಿ ಮಕ್ಕಳ ಸಾಹಿತಿತಮ್ಮಣ್ಣ ಬೀಗಾರ ಅವರು ನಾಗರಾಜ ಹರನಹಳ್ಳಿ ಅವರ ಜೊತೆ ಈ ಸಲ ಮುಖಾಮುಖಿಯಾಗಿ ದ್ದಾರೆ…………………… ಕತೆ ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಅವನುಕಂಡುಕೊಂಡ ಅನುಭವ, ಸತ್ಯ, ಸಂಕಷ್ಟಗಳನ್ನೆಲ್ಲಾ ಕರಗಿಸಿಕೊಂಡಿರುತ್ತಾನೆ. ಅಂತಹುಗಳನ್ನೆಲ್ಲ ತನ್ನ ಆಸಕ್ತಿ, ಅವಕಾಶ, ಸಾಧ್ಯತೆಗಳ ಮೇಲೆ ಅಭಿವ್ಯಕ್ತಿ ಪಡಿಸಲು ಪ್ರಯತ್ನಿಸುತ್ತಾನೆ. ಅದರಿಂದಾಗಿಯೇ ಕಲೆಗಳೆಲ್ಲ ಹುಟ್ಟಿಕೊಂಡಿದ್ದು ಅನಿಸುತ್ತದೆ. ನಾನು ನನ್ನಂತಹ ಅನೇಕರು ಕತೆ, ಕವಿತೆಗಳನ್ನು ಅಭಿವ್ಯಕ್ತಿಯ ಮಾಧ್ಯಮವಾಗಿ ಕಂಡುಕೊಂಡಿದ್ದಾರೆ. ಅದೇ ರೀತಿ ನಾನು ಕೂಡಾ ನನ್ನಲ್ಲಿ ಕರಗಿರುವ ಸಂವೇದನೆಗಳನ್ನ ಅಭಿವ್ಯಕ್ತಿ ಪಡಿಸಲು ಕತೆ ಕವಿತೆಗಳನ್ನು ಬರೆಯುತ್ತೇನೆ ಅಂದುಕೊಂಡಿದ್ದೇನೆ. ಇಲ್ಲಿ ನನ್ನಿಂದ ಸಮಾಜದ ಒಳಿತಿನ ವಿಸ್ತಾರಕ್ಕೆ ಒಂದಿಷ್ಟು ಸಹಾಯ ಆಗಬೇಕು ಹಾಗೂ ಸಮಾಜದ ಪ್ರೀತಿ ನನಗೆ ಸಿಗಬೇಕು ಎಂಬ ಆಸೆಯೂ ಮೈಗೂಡಿದೆ ಎಂದು ಹೇಳಬಹುದು. ನಾನು ವ್ಯಂಗ್ಯಚಿತ್ರ ಹಾಗೂ ಇತರ ಕಲೆಗಳನ್ನೂ ಅಭಿವ್ಯಕ್ತಿಯ ಮಾಧ್ಯಮವಾಗಿ ಬಳಸಿದ್ದೇನೆ ಅನ್ನುವ ಖುಷಿಯೂ ಸೇರಿದೆ. ಮಕ್ಕಳ ಸಾಹಿತ್ಯ ಕೃಷಿಗೆ ಒಲವು ಹೇಗೆ ಬಂತು, ಅಂತಹ ನಡೆಗೆ ಕಾರಣವೇನು? ನಾನು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಪ್ರೀತಿಯಿಂದ ವೃತ್ತಿ ನಿರ್ವಹಿಸಿದವನು. ಶಿಕ್ಷಕನಾದವನಿಗೆ ಮಕ್ಕಳೊಡನೆಯ ಸಂಬಂಧ ಮತ್ತು ಆಪ್ತತೆ ಹೆಚ್ಚು. ಮಕ್ಕಳಿಗೆ ಕತೆ, ಕವಿತೆ ಕೇಳುವುದು, ಹೇಳುವುದು, ಚಿತ್ರ ಬರೆಯುವುದು ಎಲ್ಲ ತುಂಬಾ ಇಷ್ಟ. ಮಕ್ಕಳಿಗೆ ಕಥೆ ಹೇಳುತ್ತ ಜೊತೆಗೆ ನನ್ನದೇ ರಚನೆಯ ಕಥೆ ಹೇಳಲು ಪ್ರಾರಂಭಿಸಿದೆ. ಮಕ್ಕಳಿಗಾಗಿ ಚಿತ್ರ ಬರೆಯುತ್ತ ಕಲೆಯನ್ನೂ ಬೆಳೆಸಿಕೊಂಡೆ. ಹೀಗೆ ಕಥೆ ಕವನಗಳನ್ನು ಮಕ್ಕಳಿಗಾಗಿ ಬರೆಯುತ್ತ… ಅವುಗಳಿಗೆ ಅವರ ಖುಷಿಯ ಪ್ರತಿಕ್ರಿಯೆ ಕಾಣುತ್ತ ನಾನು ಮಕ್ಕಳ ಜಗತ್ತಿನಲ್ಲಿಯೇ ಇನ್ನಿಲ್ಲದ ಪ್ರೀತಿಯಿಂದ ತೊಡಗಿಕೊಂಡೆ. ಪ್ರಸ್ತುತ ಮಕ್ಕಳಿಗಾಗಿ ಇಪ್ಪತ್ತೆರಡು ಕೃತಿ ಪ್ರಕಟಿಸಿರುವ ನಾನು ಮಕ್ಕಳ ಖುಷಿ ಹಿಗ್ಗಿಸುವ, ಹೃದಯ ವಿಸ್ತರಿಸುವ ಪ್ರಯತ್ನದಲ್ಲಿ ಸದಾ ತೊಡಗಿಕೊಂಡಿದ್ದೇನೆ. ಶಿಕ್ಷಕ ವೃತ್ತಿ ಮತ್ತು ಮಕ್ಕಳ ಒಡನಾಟ ನಿಮ್ಮಲ್ಲಿ ಮಗುತನವನ್ನು ಪೋಷಿಸಿತೆ? ನಿಜ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವುದು ಪ್ರೀತಿಯ ಧ್ಯಾನದಿಂದ ಸಿದ್ಧಿಸುವಂತಹದ್ದು. ಮಕ್ಕಳ ಸಾಹಿತ್ಯವೆನ್ನುವುದು ‘ಪ್ರಭುದ್ಧತೆಯ ಮೇಲೆ ಮುಗ್ಧತೆಯ ಸವಾರಿ’ ಎಂದು ಎಚ್. ಎಸ್. ವಿ. ಹೇಳಿದ್ದಾರೆ. ಮಗುತನವನ್ನು ನಮ್ಮಲ್ಲಿ ಪೋಷಿಸುವುದು ಮಕ್ಕಳ ಮೇಲಿನ ಪ್ರೀತಿಯೇ, ಅವರ ಒಡನಾಟವೇ. ಈಗ ನನಗೆ ಅರವತ್ತಾಗಿದ್ದರೂ ಮಕ್ಕಳಿಗಾಗಿ ಬರೆಯುತ್ತ… ಅವರೊಂದಿಗೆ ತಾದಾತ್ಮ್ಯ ಹೊಂದುವುದು, ಮಗುತನದ ಖುಷಿ ಅನುಭವಿಸುವುದು ಸಾಧ್ಯವಾಗಿದೆ. ಅದಕ್ಕೆ ವೃತ್ತಿ, ಮಕ್ಕಳ ಒಡನಾಟ ಪ್ರೀತಿಗಳೇ ಕಾರಣ. ಮಕ್ಕಳ ಮೇಲಿನ ಅಕ್ಷರ ಪ್ರಯೋಗದ ಸಾಧ್ಯತೆಗಳನ್ನು ನೀವು ಶಾಲಾ ಕೋಣೆಯಲ್ಲಿ ಮಾಡಿದಾಗ ವಿಶೇಷ ಅನುಭವ ಆಗಿದ್ದುಂಟೆ? ನಾನು ಯಾವಾಗಲೂ ಮಕ್ಕಳು ಖುಷಿ ಖುಷಿಯಾಗಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತ ಅವರು ತಾನಾಗಿ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು ಎಂದು ಹಂಬಲಿಸಿದವನು. ಅದಕ್ಕಾಗಿ ಶಾಲೆಯಲ್ಲಿ ಅಂತಹ ಪರಿಸರ ಹಾಗೂ ಆಪ್ತತೆಯನ್ನು ಮೂಡಿಸುವುದು ಬಹು ಮುಖ್ಯವಾಗುತ್ತದೆ. ಮಕ್ಕಳಿಗಾಗಿ ಕಥೆ ಹೇಳುವುದು, ಅವರಿಂದಲೇ ಕಥೆ ಕವನ ಬರೆಯಿಸಿ ಹೊತ್ತಿಗೆ ತಯಾರಿಸುವುದು, ಚಿತ್ರ ಬರೆಯಿಸುವುದು, ಕಲಾಕೃತಿಗಳ ತಯಾರಿ, ನಾಟಕ ಹಾಗೂ ಇತರ ಸಾಂಸ್ಕೃತಿಕ ಚಟುವಟಿಕೆ, ಎಲೆ ಕಲೆ, ಹಸಿರು ಶಾಲೆ, ಶೈಕ್ಷಣಿಕ ಉತ್ಸವ, ಕಲಾ ಪ್ರದರ್ಶನ ಹೀಗೆ ನನ್ನ ವೃತ್ತಿ ಉದ್ದಕ್ಕೂ ಮಾಡಿದ್ದೇನೆ. ಇದಕ್ಕೆ ಶಾಲಾ ಪರಿಸರವಷ್ಟೇ ಅಲ್ಲಕದೆ ಸಮಾಜದ ಎಲ್ಲ ಸ್ಥರದಿಂದಲೂ ಪ್ರೋತ್ಸಾಹ ಸಿಕ್ಕಿದ್ದು ಖುಷಿ ಉಂಟುಮಾಡುತ್ತದೆ. ಸರಕಾರಿ ಶಾಲೆ ಒಂದು ಮಾದರಿ ಶಾಲೆಯಾಗಿ ರೂಪುಗೊಂಡಿದ್ದು ಹೆಮ್ಮೆ. ಕಥೆ ಅಥವಾ ಕವಿತೆ ಹುಟ್ಟುವ ಸಮಯ ಯಾವುದು? ಕಥೆ ಕವಿತೆಗಳು ಹುಟ್ಟುವ ಸಮಯ ಯಾವುದು ಎಂದು ನಿರ್ಧಿಷ್ಟವಾಗಿ ಹೇಳಲಾಗದು. ನಾವು ನಮ್ಮ ಸುತ್ತಮುತ್ತಲಿನ ಆಗುಹೋಗುಗಳಿಗೆ ಸ್ಪಂದಿಸುತ್ತ ಅವುಗಳನ್ನು ನಾವು ಕಂಡುಕೊಂಡ ಸತ್ಯದ ಆಧಾರದ ಮೇಲೆ ಕರಗಿಸಿ ಕೊಂಡಿರುತ್ತೇವೆ. ಇಂತಹ ಕರಗಿರುವ ಸಂಗತಿಗಳೇ ಕಥೆ ಕವಿತೆಗಳಾಗಿ ಯಾವಾಗ ಬೇಕಾದರೂ ಹೊರ ಬರಬಹುದು. ಆದರೆ ಕಥೆ ಕವಿತೆಗಳನ್ನು ಬರೆಯುವವನ ಸಂವೇದನೆ, ಅಧ್ಯಯನ, ಪ್ರೀತಿ, ಆಸಕ್ತಿಗಳೆಲ್ಲ ಅವು ರೂಪುಗೊಳ್ಳುವಲ್ಲಿ ಮಹತ್ವ ಪಡೆದಿರುತ್ತವೆ. ನಿಮ್ಮ ಕಥೆಗಳ ವಸ್ತು ವ್ಯಾಪ್ತಿ ಯಾವುದು, ಪದೇ ಪದೇ ಕಾಡುವ ವಿಷಯಗಳಾವವು? ನಾನು ಮಕ್ಕಳ ಜಗತ್ತಿನವನು. ಮಕ್ಕಳು ಮತ್ತು ನಿಸರ್ಗ ನನ್ನ ಸಾಹಿತ್ಯದಲ್ಲಿ ನಿರಂತರವಾಗಿ ವಸ್ತುಗಳಾಗಿವೆ. ಮಕ್ಕಳ ಆಟ, ಖುಷಿ, ಸಿಟ್ಟು, ಸಂಕಟ ಎಲ್ಲವೂ ಅವರ ಸುತ್ತಲಿನ ಮನೆ, ಶಾಲೆ, ಹಸಿರಿನ ಪರಿಸರ ಮುಂತಾವುಗಳೊಡಗೂಡಿ ಕಾಣಿಸಿಕೊಂಡಿವೆ. ಮಕ್ಕಳು ಮತ್ತು ನಿಸರ್ಗ ನನ್ನನ್ನು ಮತ್ತೆ ಮತ್ತೆ ಹಿಡಿದಿಡುತ್ತವೆ. ನೀವು ಬರೆದ ಕಥೆ ಕವಿತೆಗಳಲ್ಲಿ ನಿಮ್ಮ ಬಾಲ್ಯ, ಹರಯ ಇಣುಕಿದೆಯೇ? ದಟ್ಟ ಅರಣ್ಯದಿಂದ ಕೂಡಿದ ಯಾವುದೇ ಆಧುನಿಕ ಸೌಲಭ್ಯ ಇಲ್ಲದ ಹಳ್ಳಿಯಲ್ಲಿ ನನ್ನ ಬಾಲ್ಯ ಕಳೆದಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರದವನು ನಾನು. ಇಲ್ಲಿನ ಕಾಡು, ನೀರು, ಗುಡ್ಡ, ಬೆಟ್ಟ, ಆಗಿನ ಮಕ್ಕಳ ಸ್ವಾತಂತ್ರ್ಯ, ಆಟ, ಸಾಹಸಗಳೆಲ್ಲ ವಸ್ತುವಾಗಿ ನನ್ನ ಪುಸ್ತಕಗಳಲ್ಲಿ ಕಾಣಿಸಿ ಕೊಂಡಿವೆ. ನಂತರದ ವೃತ್ತಿ ಬದುಕಿನ ಉದ್ದಕ್ಕೂ ಪಡೆದ ಅನುಭವಗಳೂ ಸೇರಿವೆ. ನನ್ನ ‘ಹಸಿರೂರಿನ ಹುಡುಗ’ ಪುಸ್ತಕದಲ್ಲಿ ಬಾಲ್ಯದ ಕಥೆಗಳನ್ನು ಮೊಗೆದು ಇಟ್ಟಿದ್ದೇನೆ. ಎಲ್ಲ ಪುಸ್ತಕಗಳಲ್ಲೂ ಬಾಲ್ಯ ರೂಪಾಂತರದ ಮೂಲಕ ಇಣುಕುತ್ತಲೇ ಇರುತ್ತದೆ. ಪ್ರತಿಯೊಬ್ಬ ಲೇಖಕರಿಗೂ ಅವರ ಸಾಹಿತ್ಯದಲ್ಲಿ ಬಾಲ್ಯ ಹಾಗೂ ಅವರ ಪರಿಸರ ಪ್ರಭಾವಿಸುತ್ತಲೇ ಇರುತ್ತದೆ ಎಂದು ನನಗೆ ಅನಿಸುತ್ತದೆ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ನಾನು ಮಕ್ಕಳ ಮೇಲೆ ಬಹಳ ವಿಶ್ವಾಸ ಇಡುತ್ತೇನೆ. ಮಕ್ಕಳ ಹೃದಯ, ಮನಸ್ಸುಗಳು ವಿಸ್ತಾರ ಆಗುವುದರಿಂದ ಒಳ್ಳೆಯ ಸಮಾಜ ಮತ್ತು ಆಡಳಿತ ವ್ಯವಸ್ತೆಯ ನಿರ್ಮಾಣ ಆಗುತ್ತದೆ. ರಾಜಕೀಯ ಸೇರಿದಂತೆ ಎಲ್ಲರಿಗೂ ತಮ್ಮ ನಡೆಯ ಕುರಿತಾಗಿ ಮುಕ್ತ ಆತ್ಮಾವಲೋಕನ ಇರಬೇಕು. ನಮ್ಮ ನಾಯಕರ ನಡೆಗಳು ಸಮಾಜದ ಮೇಲೆ ಬಹುಬೇಗ ಪರಿಣಾಮ ಬೀರುತ್ತವೆ… ಇದರಿಂದಾಗುವ ಒಳಿತು ಮತ್ತು ಸಂಕಟಗಳ ಅರಿವು ಎಲ್ಲರಿಗೆ ಇರುವುದು ಅಗತ್ಯ. ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ನಮ್ಮ ವೃತ್ತಿಯಲ್ಲಿ ಪ್ರೀತಿಯಿಂದ ತೊಡಗಿಕೊಳ್ಳುತ್ತ, ಎಲ್ಲರನ್ನೂ ಗೌರವದಿಂದ ಕಾಣುತ್ತ ಪ್ರೀತಿ, ಸ್ನೇಹದ ಭಾವಗಳನ್ನು ವಿಸ್ತಾರ ಗೊಳಿಸುತ್ತ ಬದುಕುವುದೇ ದೇವರು ಪೂಜೆ ,ಧರ್ಮ ಎಲ್ಲವೂ ಆಗುತ್ತದೆ ಎಂದುಕೊಂಡಿದ್ದೇನೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನಿಸುತ್ತದೆ? ಮೊದಲಿನಂತಹ ಸಾಂಸ್ಕøತಿಕ ವಾತಾವರಣ ಇಲ್ಲ ಎಂದು ಹೇಳುತ್ತೇವೆ. ಆದರೂ ನಮ್ಮ ಸಮಾಜದಲ್ಲಿ ಸಾಂಸ್ಕøತಿಕ ಚಿಂತನೆ, ಚಟುವಟಿಕೆಗಳು ನಡೆಯುತ್ತಲೇ ಇವೆ. ಅದು ಹೆಚ್ಚಬೇಕು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ. ಮೊದಲಿನಿಂದಲೂ ನನ್ನಷ್ಟಕ್ಕೆ ನಾನು ಬರೆಯುತ್ತಾ ಬಂದಿದ್ದೇನೆ. ನನಗೆ ಆರ್.ವಿ. ಭಂಡಾರಿ. ಆರ್.ಪಿ.ಹೆಗಡೆ, ಸನದಿ, ವಿಷ್ಣು ನಾಯ್ಕ, ಆನಂದ ಪಾಟೀಲ ಮುಂತಾದ ಅನೇಕ ಹಿರಿಯ ಸಾಹಿತಿಗಳು ಮಾರ್ಗದರ್ಶನ, ಪ್ರೋತ್ಸಾಹ ನೀಡಿದ್ದಾರೆ. ರಾಜ್ಯಾದ್ಯಂತ ನನ್ನ ಪುಸ್ತಕ ಓದುವ ಪ್ರೀತಿಯ ಬಳಗ ಬೆಳೆದಿದೆ. ರಾಜಕೀಯದ ಕುರಿತು ನಾನು ಯೋಚಿಸಿಲ್ಲ . ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತಿದೆ? ನಮ್ಮ ದೇಶದ ಸಾಹಿತ್ಯ, ಸಾಂಸ್ಕೃತಿಕ ಹಿರಿಮೆ ಇದೆ. ಪ್ರಜಾ ಪ್ರಭುತ್ವ ವ್ಯವಸ್ಥೆ ಸಂವಿಧಾನ ನೀಡಿದೆ. ವಿಜ್ಞಾನ, ತಂತ್ರಜ್ಞಾನ ಒಟ್ಟಾರೆ ಅಭಿವೃದ್ಧಿಗಳಲ್ಲಿ ಪ್ರಗತಿ ಇದೆ. ಇದನ್ನೆಲ್ಲಾ ಬಳಸಿಕೊಂಡು ಪ್ರೀತಿ ,ಸ್ನೇಹದ ಅಡಿಯಲ್ಲಿ ನಡೆಯಬೇಕು ಎಂದುಕೊಳ್ಳುತ್ತೇನೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಮಕ್ಕಳಿಗಾಗಿ ಹೆಚ್ಚು ಬರೆಯುತ್ತೇನಾದ್ದರಿಂದ ಮಕ್ಕಳ ಸಾಹಿತ್ಯದ ಕುರಿತೇ ಹೇಳುವುದಾದರೆ… ಮಕ್ಕಳಿಗೆ ಇಷ್ಟ ಆಗುವ ಹಾಗೂ ಅವರಿಗೆ ಒಳಿತಾಗುವ ಪುಸ್ತಕಗಳು ಹೆಚ್ಚು ಹೆಚ್ಚು ಬರಬೇಕು. ಈಗ ಹೊಸ ಕಾಲದ ಹೊಸ ವಸ್ತು ಸಂವೇದನೆಗಳ ಪುಸ್ತಕಗಳು ಕನ್ನಡ ಮಕ್ಕಳ ಸಾಹಿತ್ಯದಲ್ಲಿ ಬರುತ್ತಿವೆ. ಅದನ್ನು ಆಕರ್ಷಕವಾಗಿ ಪ್ರಕಟಿಸುವ ಪ್ರಕಾಶಕರು ಬೇಕು ಹಾಗೂ ಮಕ್ಕಳಿಗೆ ತಲುಪುವಂತಾಗಬೇಕು. ಮಕ್ಕಳು ಓದಿಗೆ ತೆರೆದುಕೊಂಡರೆ ಸಮಾಜದ ಒಳಿತಿನ ನಡೆ ಬಲಗೊಳ್ಳುತ್ತದೆ. ನಿಮ್ಮ ನಿಚ್ಚಿನ ಸಾಹಿತಿಗಳಾರು? ತೇಜಸ್ವಿಯವರ ಪರಿಸರ ಪ್ರೀತಿಯ ಪುಸ್ತಕಗಳು ನನಗೆ ತುಂಬಾ ಆಪ್ತ. ಇಂಗ್ಲೀಷ ಓದು ಕಡಿಮೆ. ರಸ್ಕಿನ ಬಾಂಡ್ ಇಂಗ್ಲೀಷಿನಲ್ಲಿ ಮಕ್ಕಳಿಗಾಗಿ ಬರೆಯುತ್ತಾರೆ. ಅವರದೂ ಪರಿಸರದ ಮಧ್ಯ ಅರಳಿದ ಕಥೆಗಳೇ ಆಗಿವೆ. ಅವರ ಕಥೆಗಳನ್ನೂ ಓದಿದ್ದೇನೆ. ಈಗ ಚದುರಂಗರ ‘ವೈಶಾಖ’ ಓದುತ್ತಿದ್ದೇನೆ. ಹೆಚ್ಚು ಸಂತೋಷದ ಕ್ಷಣ ಯಾವುದು? ಮಕ್ಕಳ ಖುಷಿ ಹೆಚ್ಚಿಸುವ ಕೆಲಸದಲ್ಲಿ ತೊಡಗುವುದು. ನಿಮ್ಮ ನೆಚ್ಚನ ತಾಣ ಯಾವುದು? ನಮ್ಮ ಜಿಲ್ಲೆಯ ಎಲ್ಲ ಹಸಿರು ತಾಣಗಳು. ……………. ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮುಖಾಮುಖಿ
“ಏಕತಾನತೆಗೆ ಬೇಸತ್ತಾಗ ಕವಿತೆ ಕೈಹಿಡಿಯುತ್ತದೆ” “ಪೋಯಟ್ರಿ ಇಸ್ ಅನ್ ಎಸ್ಕೇಪ್ ಪ್ರಾಮ್ ಪರ್ಸನಾಲಿಟಿ” ನಾಗರೇಖಾ ಗಾಂವಕರ್ ನಾಗರೇಖಾ ಗಾಂವ್ಕರ್ ಅಂಕೋಲಾ ತಾಲೂಕಿನ ಆಡ್ಲೂರು ಗ್ರಾಮದವರು. ನಾಗರೇಖಾ ಅವರು ದಾಂಡೇಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲಾಭಾಷಾ ಉಪನ್ಯಾಸಕಿ. ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಪಾಶ್ಚಿಮಾತ್ಯ ಸಾಹಿತ್ಯ ಲೋಕ ಭಾಗ-೧,೨ ನ್ನು ಸಹ ಪ್ರಕಟಿಸಿದ್ದಾರೆ. ಕತೆಗಳನ್ನು ಸಹ ಬರೆಯುವ ಇವರು, ಕೆಲ ಕತಗಳಿಗೆ ಬಹುಮಾನ ಸಹ ಪಡೆದಿದ್ದಾರೆ. ಕನ್ನಡ ಕವಿಗಳ ಕವಿತೆಗಳನ್ನು ಆಂಗ್ಲಭಾಷೆಗೆ ತರ್ಜಿಮೆ ಮಾಡುವಲ್ಲಿ ಸಹ ಈಚೆಗೆ ತೊಡಗಿಕೊಂಡಿದ್ದಾರೆ. ಕನ್ನಡ ಕಾವ್ಯ ಜನಪರವಾಗಿ, ಮಹಿಳಾ ಜಗತ್ತಿನ ಕುರಿತು ಸ್ಪಂದಿಸುತ್ತಲೇ ಬಂದಿದೆ. ಸಮಾಜದ ಪ್ರತಿಬಿಂಬವೇ ಆಗಿರುವ ಸಾಹಿತ್ಯ, ನೋವಿಗೆ ಸಾಂತ್ವಾನ ಹೇಳಿದೆ. ದುಃಖಕ್ಕೆ ಮಿಡಿದಿದೆ. ಅನ್ಯಾಯವನ್ನು ಪ್ರತಿಭಟಿಸಿದೆ. ತಾಯಿಯಂತೆ ಪ್ರೀತಿ,ವಾತ್ಯಲ್ಯಗಳನ್ನು ನೀಡಿದೆ. ಕಾವ್ಯ ಅಮೃತಕ್ಕೆ ಹಾರುವ ಗರುಡ ಎಂಬ ಮಾತಿದೆ. ಕಾವ್ಯದ ದಿಕ್ಕು ದಿಶೆಗಳನ್ನು ಕನ್ನಡ ಕಾವ್ಯ ಜಗತ್ತು ನಿರಂತರವಾಗಿ ತನ್ನ ದಾರಿಯನ್ನು ಹುಡುಕುತ್ತಾ ಸಾಗಿದೆ. ಈ ಸಲ ಸಂಗಾತಿ ವೆಬ್ ನೊಂದಿಗೆ ನಾಗರಾಜ್ ಹರಪನಹಳ್ಳಿ ಅವರ ಜೊತೆ ಮುಖಾಮುಖಿಯಾಗಿದ್ದಾರೆ ಕವಯಿತ್ರಿ ನಾಗರೇಖಾ ಗಾಂವ್ಕರ್. …… ಪ್ರಶ್ನೆ : ಕವಿತೆ ಏಕೆ ಬರೆಯುತ್ತೀರಿ? ಉತ್ತರ : ಬದುಕಿಗೆ ಜೀವಂತಿಕೆಯನ್ನು ತುಂಬುವಂತಹ ಎಷ್ಟೆಷ್ಟೋ ಪ್ರಯತ್ನಗಳಿವೆ. ಭಾವ ಜೀವಿಯಾದವ ಸಂವೇದನೆಗಳ ತಾಕಲಾಟದಲ್ಲಿ ವೈಯಕ್ತಿಕ ದರ್ಶನಗಳ ಕಂಡುಕೊಳ್ಳುವತ್ತ ಹಾಗೂ ಅದನ್ನು ಒಡಮೂಡಿಸುವಲ್ಲಿ ಇದೊಂದು ಮಾರ್ಗ ಹಿಡಿಯುವುದಿದೆ. ಹಾಗಾಗಿ ಕವಿತೆ ನನ್ನನ್ನು ಜೀವಂತವಾಗಿಡುವಲ್ಲಿ ಸಹಕರಿಸುತ್ತದೆ. ಯಾಂತ್ರಿಕ ಬದುಕಿನ ಏಕತಾನತೆಗೆ ಬೇಸತ್ತಾಗ ಕವಿತೆ ಕೈಹಿಡಿಯುತ್ತದೆ. ನಾನು ಯಾರಿಗಾಗಿ ಬರೆಯುತ್ತೇನೆ ಅಂತಾ ಟಾಲಸ್ಟಾಯ್ ಬಹಳ ವಿಷಾದದಿಂದ ಕೇಳಿಕೊಂಡಿದ್ದನಂತೆ. ಅಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಹಾಗಾಗಿ ಈ ಸಂದರ್ಭದಲ್ಲಿ ನಾನು ಹೇಳಬಯಸುವುದಿಷ್ಟೇ! ದ್ವಂದ್ವಗಳನ್ನು ಮೀರಲು, ನನ್ನ ನಾನು ಕಳೆದುಕೊಳ್ಳಲು, ನಿರಾಳವಾಗಲು ಕವಿತೆಗಳನ್ನು ಬರೆದದ್ದು ಇದೆ. ಬರೆಯುತ್ತಿರುವೆ. ಕವಿತೆ ಹುಟ್ಟುವ ಕ್ಷಣ ಯಾವುದು? ಕವಿತೆ ಹುಟ್ಟುವುದು ಕೂಡಾ ಅತೀವ ವಿಷಾದದ ನೆರಳಲ್ಲಿ, ದುಃಖದ ಪರಮಾವಧಿಯಲ್ಲಿ ಇಲ್ಲವೇ ಸಂತೋಷದ ಉತ್ತುಂಗದಲ್ಲಿ. ಅದು ವೈಯಕ್ತಿಕ ಸಂದರ್ಭವೇ ಆಗಿರಬಹುದು ಇಲ್ಲ ಸಾಮಾಜಿಕ ಸಾಂಸ್ಕೃತಿಕ ನೆಲೆಗಳಲ್ಲಿ ಉಂಟಾದ ವಿಪ್ಲವದ ಸಂದರ್ಭವೇ ಆಗಿರಬಹುದು. ಪ್ರಕೃತಿಯಲ್ಲಿ ಮೈ ಮರೆತಾಗ,ಅನ್ಯಾಯ ಕಂಡಾಗ, ಅಸಹಾಯಕತೆ ಉಂಟಾದಾಗ, ಪ್ರೀತಿ ಎಂಬ ಜೀವಾಮೃತಕ್ಕೆ ಹಂಬಲಿಸುವಾಗ, ಕವಿತೆ ಹುಟ್ಟುತ್ತದೆ. ಕವಿತೆಗಳ ವಸ್ತು, ವ್ಯಾಪ್ತಿ, ಹೆಚ್ಚಾಗಿ ಯಾವುದು? ಕವಿತೆ ಆ ಸಮಯದ ಫಲ. ಆದರೂ ಬಾಲ್ಯದ ನೆನಪುಗಳು ನನ್ನ ಬಹಳ ಕಾಡಿವೆ. ಸಮೃದ್ಧವಾದ ಜೀವನಾನುಭವ ಕೊಟ್ಟ ದಿನಗಳವು ಅವು. ಹಾಗಾಗಿ ಆ ನೆನಪುಗಳು ಮಧ್ಯ ವಯಸ್ಸಿನಲ್ಲಿ ನಿಂತು ನೋಡಿದಾಗ ಅಲ್ಲಿಗೂ ಇಲ್ಲಿಗೂ ಇರುವ ಅಗಾಧ ವ್ಯತ್ಯಾಸ, ದೃಷ್ಟಿಕೋನಗಳ ವೈರುಧ್ಯಗಳು ಅನುಭವಗಳು ಎಲ್ಲ ಭಿನ್ನ ವಿಭಿನ್ನವಾಗಿ ಕವಿತೆಗಳಲ್ಲಿ ಮೂಡಿದ್ದಿದೆ. ಹಾಗೇ ಸುತ್ತಲಿನ ಸಮಾಜದ ಓರೆಕೋರೆಗಳು ಅನ್ಯಾಯದ ನಡೆಗಳು, ಬಂಡಾಯವನ್ನು ಮನದಲ್ಲಿ ಮೂಡಿಸಿದಾಗ, ಹೆಣ್ಣಿನ ಮೇಲಿನ ದೌರ್ಜನ್ಯ, ಶೋಷಣೆ ಸಂಗತಿಗಳು ಕವಿತೆಯ ವಸ್ತುವಾಗಿವೆ. ಸಮಕಾಲೀನ ಜೀವನದಲ್ಲಿ ದೌರ್ಜನ್ಯವನ್ನು, ನೋವನ್ನು ವ್ಯಕ್ತಪಡಿಸುವುದು ಮಹಿಳಾ ಕವಿತೆಗಳ ಗುರಿಯಾಗಿರದೇ ಸಮಾನ ಗುಣಮಟ್ಟದ ಕಾವ್ಯ ಕಟ್ಟುವ ದಿಶೆಯಲ್ಲಿ ನನ್ನ ಒಲವಿದೆ. ಪ್ರೀತಿಯ ಕವಿತೆಗಳು, ಪ್ರಕೃತಿಯ ಕುರಿತಾದ ಕವಿತೆಗಳು, ಸಾಮಾಜಿಕ ಅಸಮಾನತೆಯ ಕುರಿತಾಗಿ ಕೆಲವು ಕವಿತೆಗಳ ಬರೆದಿರುವೆ. ಕವಿತೆಗಳಲ್ಲಿ ಬಾಲ್ಯ ಇಣುಕಿದೆಯಾ? ಬಾಲ್ಯದ ನೆನೆಪುಗಳು, ಅದು ಎದೆಯೊಳಗೆ ಎಂದೂ ಮಾಸದ ನೆನೆಪುಗಳ ಮಾಲೆಯಾಗಿ ಇದ್ದದ್ದು, ಕಳೆದುಕೊಂಡ ಹೆತ್ತವರ ನೆನೆಪು, ಅವರುಂಡ ನೋವಿನ ದಿನಗಳ ನೆನಪು ನನ್ನ ಕವಿತೆಗಳಿಗೆ ವಸ್ತುವಾಗಿದೆ. ಆದರೆ ಬದುಕನ್ನು ಒಳಗೊಳ್ಳುವ ಸಾರ್ವಕಾಲಿಕ ಜೀವನ ಸತ್ಯಗಳ ಬಿಂಬಿಸುವ ಕವಿತೆಗಳ ಹುಟ್ಟಿಗೂ, ತುರ್ತು ಕಾಲಕ್ಕೆ, ಆ ಕ್ಷಣದ ತೀವ್ರತೆಗೆ ಹುಟ್ಟುವ ಕವಿತೆಗಳಿಗೂ ಒಂದು ಅವ್ಯಕ್ತ ಭಾವದ ತುಡಿತ ಇದ್ದೇ ಇರುತ್ತದೆ. ಹಾಗಾಗಿ ನನ್ನ ಕವಿತೆಗಳು ನಿರ್ದಿಷ್ಟ ಪ್ರಕಾರದಲ್ಲಿ ಗುರುತಿಸಿಕೊಳ್ಳುವಲ್ಲಿ ಸೋತಿವೆ ಎಂಬ ಬೇಸರವಿದೆ ನನಗೆ. ಆದರೂ ಬದುಕು ಎಲ್ಲ ಅನುಭವಗಳ ಮೂಲಕವೇ ಸಾಗುವುದರಿಂದ ಅನುಭವ ಜನ್ಯ ಅಭಿವ್ಯಕ್ತಿಯಾಗಿ ಕವಿತೆ ಹುಟ್ಟಿದೆ. ಆದರೆ ಅದು ಕೇವಲ ಅನುಭವವನ್ನು ಮಾತ್ರ ಕಡೆಯುವ ಕೋಲಲ್ಲ. ಅದರೊಳಗೆ ನಿಗೂಢತೆಗೆ ತೆರೆದುಕೊಳ್ಳಬೇಕು. ವಸ್ತು, ಅರ್ಥವನ್ನು ದಾಟಿ ಅಗಮ್ಯದೆಡೆಗೆ ಸಾಗಬೇಕು. ಅಂತಹ ಕೆಲವೇ ಕೆಲವು ಕ್ಷಣಗಳ ನಾನು ಅನುಭವಿಸಿದ್ದೇನೆ. ಮತ್ತು ಏಲಿಯಟ್ ಹೇಳುವ “ಪೋಯಟ್ರಿ ಇಸ್ ಅನ್ ಎಸ್ಕೇಪ್ ಪ್ರಾಮ್ ಪರ್ಸನಾಲಿಟಿ” ಈ ಮಾತನ್ನು ನಾನು ಬಹಳವಾಗಿ ಒಪ್ಪುವೆ. ಎಲ್ಲ ಕವಿತೆಗಳ ವಸ್ತುವು ನನ್ನ ಅನುಭವವೇ ಆಗಬೇಕೆಂದಿಲ್ಲ. ಪ್ರಸ್ತುತ ರಾಜಕಾರಣದ ಬಗ್ಗೆ ? ನೋಡಿ ರಾಜಕಾರಣ ಪದಕ್ಕೆ ಎಷ್ಟು ಅನರ್ಥ ಬಂದಿದೆ, ಅದು ಅಪಭ್ರಂéಶಕ್ಕೆ ಒಳಗಾಗಿದೆ. ಇವತ್ತು ಸಾಮಾನ್ಯ ಭಾಷೆಯಲ್ಲಿ ಅವನು ಬಹಳ ರಾಜಕಾರಣ ಮಾಡುತ್ತಾನೆ ಎಂದು ಯಾರಾದರೂ ಹೇಳಿದರೆ ಅವನೇನೋ ಕುತಂತ್ರ ಮಾಡುತ್ತಿದ್ದಾನೆ ಎಂದು ಅರ್ಥೈಸಿಕೊಳ್ಳಲಾಗುತ್ತದೆ.. ಹಾಗಾಗಿ ನನಗೆ ರಾಜಕೀಯ ಅದರ ದೊಂಬರಾಟಗಳ ಬಗ್ಗೆ ತೀವ್ರ ನಿರಾಸಕ್ತಿ, ಅಷ್ಟೇ ಅಲ್ಲ ಜಿಗುಪ್ಸೆ ಕೂಡಾ. ದೇಶದ ಒಳಿತನ್ನು ಉದ್ಧಾರವನ್ನು ಮೂಲಧ್ಯೇಯವಾಗಿಸಿಕೊಂಡ ರಾಜಕೀಯ ನಾಯಕರು ಇಂದು ವಿರಳಾತೀವಿರಳ. ಭಾರತದಲ್ಲಿ ಸ್ವಜನ ಹಿತಾಸಕ್ತಿಯೇ ನಾಯಕರ ಮುಖ್ಯ ಧ್ಯೇಯ. ಅದೂ ಪಕ್ಷಾತೀತವಾದ ಪರಂಪರೆಯಾಗಿ ನಮ್ಮಲ್ಲಿದೆ. ಕೊಳೆತು ನಾರುತ್ತಿರುವ ರಾಜಕಾರಣದ ಬಗ್ಗೆ ಕವಿತೆ ಕಟ್ಟಿ ಅದನ್ನು ವಿಡಂಬಿಸುವ ಕವಿತೆಗಳು ಪುಂಖಾನುಪುಂಖವಾಗಿ ಬರುತ್ತಿವೆ. ಆದರೂ ಪದಗಳು ಸೋತಿವೆ. ಹಾಗಿದ್ದೂ ಅಂತಹ ಕವಿತೆಗಳು ತುತರ್ುಕಾಲದ ಕವಿತೆಗಳಾಗಿ ನಾನೂ ಬರೆದಿದ್ದಿದೆ, ಧರ್ಮ ದೇವರು ವಿಚಾರದಲ್ಲಿ ನಿಲುವು ? ವಿಗ್ರಹ ಆರಾಧನೆ, ನಂಬಿಕೆ, ನಾಮಸ್ಮರಣೆ, ಭಯ ಇವು ಯಾವುದೂ ಇಲ್ಲದಂತೆ ಮನಸ್ಸು ಸ್ವಚ್ಛವಾಗಿದ್ದಾಗ ಕಾಲಾತೀತವಾದ, ಶಾಶ್ವತವಾದ ದೇವರೆಂದು ಕರೆಯಬಹುದಾದ ಸತ್ಯ ಕಾಣಿಸುತ್ತದೆ. ಇದನ್ನು ಕಾಣಲು ಅಪಾರವಾದ ಒಳನೋಟ, ತಿಳುವಳಿಕೆ, ತಾಳ್ಮೆ ಬೇಕು. ಧರ್ಮವೆಂದರೆ ಏನು ಎಂದು ಅನ್ವೇಷಿಸುವವರು ದಿನದಿನವೂ ಅನ್ವೇಷಿಸುತ್ತಲೇ ಇರುವವರು ಮಾತ್ರ ನಿಜದ ಧರ್ಮ ಅರಿಯಬಲ್ಲರು ಎಂದು ಜಿಡ್ಡು ಕೃಷ್ಣಮೂರ್ತಿ ಹೇಳುತ್ತಾರೆ. ಆದರೆ ಅಂತಹ ಒಳನೋಟ ಇನ್ನು ಪಡೆಯದ ನಾನು ಆಸ್ತಿಕ ಮನಸ್ಥಿತಿಯಲ್ಲಿ ಸಂಸ್ಕೃತಿಯ ನೆರಳಲ್ಲಿ ಇದ್ದು, ಸಾರ್ಥಕ ಬದುಕಿಗೆ ಬೇಕಾದ ಸಕಾರಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುವಂತಹ ಆಚರಣೆಗಳಲ್ಲಿ ಒಲವಳ್ಳವಳು. ಅಲ್ಲದೇ ನಮ್ಮದೇ ಆದ ಒಂದು ಸಂಸ್ಕೃತಿಯ ಉಳಿವು ಬೇಕೆನ್ನುವ ನಿಟ್ಟಿನಲ್ಲಿ ಪರಂಪರೆಯನ್ನು ಬೆಳೆಸಿಕೊಂಡು ಹೋಗುವುದು ಉತ್ತಮ. ನಕಾರಾತ್ಮಕ ಧೋರಣೆ ವೈಚಾರಿಕತೆ ಆಗುವುದಿಲ್ಲ. ಆದರೆ ಮೌಢ್ಯದಿಂದ ಕೂಡಿದ ಸಂಪ್ರದಾಯಗಳಿಗೆ ನನ್ನ ವಿರೋಧವಿದೆ. ಇಂತಹುಗಳೆಲ್ಲ ಹೆಚ್ಚಾಗಿ ರೂಢಿಗತವಾಗಿ ಬಂದ ಸಂಪ್ರದಾಯಗಳು. ಪರಂಪರೆಗೂ ಸಂಪ್ರದಾಯಕ್ಕೂ ವ್ಯತ್ಯಾಸಗಳು ಬಹಳ ಇವೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮ್ಮ ಪ್ರತಿಕ್ರಿಯೆ? ನಮ್ಮಲ್ಲಿ ಶ್ರೀಮಂತ ಸಾಂಸ್ಕೃತಿಕ ಹಿನ್ನೆಲೆ ಇದೆ. ನಮ್ಮದೇ ಆದ ಜೀವನ ವಿಧಾನವಿದೆ. ಆದರೂ ಇನ್ನೊಂದು ಬಗೆಯಲ್ಲಿ ಪ್ರಕ್ಷುಬ್ಧ ಸಾಂಸ್ಕೃತಿಕ ವಾತಾವರಣವನ್ನು ಅನುಭವಿಸುತ್ತಿದ್ದೇವೆ. ಆದರೂ ವಿವಿಧತೆ ಇದ್ದಲ್ಲಿ ಸಹಜವಾದ ಭಿನ್ನತೆ ಇದು. ಏಕಮುಖ ಸಂಚಲನೆಯನ್ನು ಕಂಡುಕೊಳ್ಳಲಾಗದ, ಭಿನ್ನತೆಯಲ್ಲಿಯೇ ಏಕತೆಯನ್ನು ಹೊಂದಬೇಕಾದ ರೀತಿಯನ್ನ ಪ್ರತಿಪಾದಿಸುವತ್ತ ನಾವೆಲ್ಲ ಮನಸ್ಸು ಮಾಡಬೇಕಾಗಿದೆ. ಸಾಹಿತ್ಯ ವಲಯದ ರಾಜಕಾರಣ ಹೇಗಿದೆ? ಇತ್ತೀಚೆಗೆ ಸಾಹಿತ್ಯ ವಲಯದ ರಾಜಕಾರಣ ರಾಜಕೀಯದ ರಾಜಕಾರಣಕ್ಕಿಂತ ತೀರಾ ಕೆಳಮಟ್ಟದ್ದು ಮತ್ತು ಅಪಾಯಕಾರಿ ನಿಲುವಿನದು. ಸಮಾನತೆ ಸಹಬಾಳ್ವೆಯ ಸ್ವಸ್ಥ ಸಮಾಜ ನಿಮರ್ಾಣ ಮಾಡಬೇಕಾದ ಜವಾಬ್ದಾರಿ ಮರೆತು ಪಂಥಗಳಲ್ಲಿ ಮೈಮರೆತು, ಪರಸ್ಪರ ಕೆರಚಾಟ, ಕೆಸರಾಟದಲ್ಲಿ ತೊಡಗಿದಂತಿದೆ. ಜಾತಿ ಪಂಥಗಳ ಮೇಲಾಟ ಇಲ್ಲೂ ಢಾಳಾಗಿ ಕಾಣುತ್ತಿದೆ. ದೇಶದ ಚಲನೆಯ ಬಗ್ಗೆ ಏನನಿಸುತ್ತದೆ…? ಈ ದೇಶ ಹಿಂದೆಯೂ ಇತ್ತು. ಮುಂದೆಯೂ ಇರುತ್ತದೆ. ಆದರೆ ದೇಶದ ಆಡಳಿತದ ಚುಕ್ಕಾಣಿ ಹಿಡಿದವರು ಸದೃಢ ಸಮಾಜವನ್ನು, ಪ್ರಜಾಪ್ರಭುತ್ವದ ಬುನಾದಿ ಮೇಲೆ ನಿಂತ ಆಡಳಿತ ವ್ಯವಸ್ಥೆಯನ್ನು ಪೋಷಿಸುವ ಅಗತ್ಯವಿದೆ. ನೆಚ್ಚಿನ ಕವಿಗಳು ಕನ್ನಡ ಮತ್ತು ಇಂಗ್ಲೀಷನಲ್ಲಿ? ನನ್ನ ಇಷ್ಟದ ಕವಿ ಕುವೆಂಪು, ನವೋದಯದ ಕಾಲದಲ್ಲೂ ಬಂಡಾಯದ ದನಿ, ಹಾಗೇ ಕವಿ ಸುಬ್ರಾಯ ಚೊಕ್ಕಾಡಿಯವರು, ಮಹಿಳಾ ಕವಯತ್ರಿಯರಲ್ಲಿ ಮಾಲತಿ ಪಟ್ಟಣಶೆಟ್ಟಿ, ವೈದೇಹಿ, ಲಲಿತಾ ಸಿದ್ದಬಸವಯ್ಯ ಇವರೆಲ್ಲರ ಕವಿತೆಗಳು ಇಷ್ಟ.ಇಂಗ್ಲೀಷ ಸಾಹಿತ್ಯದಲ್ಲಿ ನನ್ನ ಮೆಚ್ಚಿನ ಕವಯತ್ರಿ ಎಮಿಲಿ ಡಿಕನ್ಸನ್- ಬದುಕಿನುದ್ದಕ್ಕೂ ಮುಂಚೂಣಿಗೆ ಬರೆದೇ ಎಲೆಮರೆಯ ಕಾಯಾಗಿಯೇ ಕಾವ್ಯ ಕಟ್ಟಿದ ಆಕೆ ಸತ್ತ ನಂತರ ಇಂದಿನ ಬಹುತೇಕ ಯುವ ಮನಸ್ಸುಗಳ ಮನಸ್ಸನ್ನು ಸೆರೆಹಿಡಿದದ್ದು. ಸಾವನ್ನು ಸಂಭ್ರಮಿಸಿದವಳು ಆಕೆ. ಹಾಗೇ ಜಾನ್ ಕೀಟ್ಸ್, ಡಿ ಎಚ್ ಲಾರೆನ್ಸ್ ಮತ್ತು ಡಬ್ಲೂ ಬಿ ಯೇಟ್ಸ್ ಕೂಡಾ ನೆಚ್ಚಿನ ಕವಿಗಳು ಸಾಹಿತ್ಯದ ಬಗ್ಗೆ ಕನಸುಗಳೇನು? ಸಾಹಿತ್ಯ ಬದುಕಿನ ಹಾದಿಗೆ ಒಂದಿಷ್ಟು ಬಲವನ್ನು ನೀಡುವಂತದ್ದು, ಶೋಷಿತ ವರ್ಗದ ದನಿ ಹಾಗೂ ಮಹಿಳಾ ದನಿ ಸಾಹಿತ್ಯದಲ್ಲಿ ಗಟ್ಟಿಯಾಗಲಿ, ಅದಕ್ಕೆ ತಕ್ಕ ಬೆಂಬಲ ಸಿಗಲಿ. ಇನ್ನು ನನ್ನ ಮಟ್ಟಿಗೆ ಅಂತರಂಗದ ತುಮುಲಗಳ ಇಡಿಯಾಗಿ ತೆರೆದುಕೊಳ್ಳಲು, ನಿಸೂರಾಗಲು ಇರುವ ಸಾಧನವಾಗಿ, ಸ್ನೇಹಿತೆಯಾಗಿ, ಕವಿತೆ ಕೈಹಿಡಿದಿದೆ. ಬರೆದದ್ದೆಲ್ಲ ಬೆಲ್ಲವೇ ಆಗಿಲ್ಲ. ಆದರೆ ಬದುಕನ್ನು ವಿಕಸನಗೊಳಿಸಿದೆ. ಜೀವನವನ್ನು ಸಂಭ್ರಮಿಸಲು ಕಲಿಸಿದೆ. ನೋವಿಗೆ ಮುಲಾಮಾಗಿದೆ. ಕನಸಿಗೆ ತೈಲವನ್ನೆರೆದಿದೆ. ರಾಗದ್ವೇಷಗಳಿಗೆ ಶಾಯಿಯಾಗಿದೆ.ಕವಿತೆಯಲ್ಲಿ ನನಗೆ ವಿಶ್ವಾಸವಿದೆ. ಈಚೆಗೆ ಓದಿದ ಕೃತಿಗಳ ಬಗ್ಗೆ ಹೇಳಿ ಎಚ್ ಎಸ್ ರಾಘವೇಂದ್ರರಾವ್ ಅನುವಾದಿಸಿರುವ ಜಿಡ್ಡು ಕೃಷ್ಣಮೂರ್ತಿಯ ಸಂಸ್ಕೃತಿ ಸಂಗತಿ. ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ಕನ್ನಡಕ್ಕೆ ಅನುವಾದಿಸಿರುವ ಮರಾಠಿ ಸಾಹಿತಿ ವಿ.ಸ ಖಾಂಡೇಕರರ ಆತ್ಮಕಥನ ಒಂದು ಪುಟದ ಕಥೆ ಹಾಗೂ ಪ್ರತಿಭಾ ನಂದಕುಮಾರರ ಅನುದಿನದ ಅಂತರಗಂಗೆ ಇದಿಷ್ಟು ಇತ್ತೀಚೆಗೆ ಓದಿದ ಕೃತಿಗಳು. ನಿಮಗೆ ಇಷ್ಟದ ಕೆಲಸ ಓದು ಬರಹದ ಜೊತೆಗೆ ಹೊಲಗದ್ದೆಗಳಲ್ಲಿ ಕೆಲಸ ಮಾಡುವುದು, ಬಾಲ್ಯದಲ್ಲಿ ತೋಟ ಗದ್ದೆ ಹಳ್ಳ ಕೊಳ್ಳ ಇಲ್ಲಿಯೇ ನನ್ನ ಬದುಕಿನ ಕನಸುಗಳು ಚಿಗುರಿದ್ದು. ಹಾಗೇ ಅಡುಗೆ ಮಾಡುವುದು, ಮನೆಯನ್ನು ಒಪ್ಪ ಓರಣಗೊಳಿಸುವುದು. ನಿಮ್ಮ ಇಷ್ಟದ ಸಿನೇಮಾ ? ಇದೇ ಅಂತ ಹೇಗೆ ಹೇಳಲಿ. ಕುಬಿ ಮತ್ತು ಇಯಾಲ್, ಸರಕಾರಿ ಪ್ರಾಥಮಿಕ ಶಾಲೆ ಕಾಸರಗೋಡು, ಹೀಗೇ ಸುಮಾರು ಇವೆ. ಮರೆಯಲಾಗದ ಘಟನೆ ಮೊದಲ ಬಾರಿ ಊರು ಬಿಟ್ಟು ನೌಕರಿಗೆ ಹೋದಾಗ ಹೊಸ ಸ್ಥಳದಲ್ಲಿ ಕಂಡ ಕಸದ ತೊಟ್ಟಿಯಲ್ಲಿ ಎಸೆದ ನವಜಾತ ಹೆಣ್ಣು ಶಿಶುವನ್ನು ನೋಡಿದ್ದು, ಸುತ್ತಮುತ್ತ ಹತ್ತಾರು ದೌರ್ಜನ್ಯಗಳ ಕಂಡಿದ್ದಿದೆ. ಹೆತ್ತವರ ಸಾವನ್ನು ನೋಡಿದ್ದಿದೆ. ಸಂಬಂಧಿಗಳ ಅಕಾಲ ಮರಣ ನೆನಪಾದರೆ ನೋವು ಮಡುಗಟ್ಟುತ್ತದೆ ಇವೆಲ್ಲ ಸದಾ ನೆನಪಿನಲ್ಲಿ ಉಳಿಯುವಂತಹವು. ******************************************* ********************************************* ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮುಖಾಮುಖಿ
ಅಂಕಣ ಬರಹ ಮುಖಾಮುಖಿಯಲ್ಲಿ ರೇಖಾಭಟ್ ನಮ್ಮೊಳಗಿನ ಪ್ರೀತಿ, ಕರುಣೆ, ಮಮತೆಗಳೇ ದೇವರು ರೇಖಾ ಗಜಾನನ ಭಟ್ಟ ವಜ್ರಳ್ಳಿ ಹತ್ತಿರದ ಹೊನ್ನಗದ್ದೆಯವರು. ಯಲ್ಲಾಪುರದ ಕುಂದೂರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ. ಇವರ ಪತಿ ಹೈಸ್ಕೂಲ್ ಶಿಕ್ಷಕರು. ಗಾಯನ ಮತ್ತು ಬರವಣಿಗೆ ಇವರ ಹವ್ಯಾಸಗಳು. ಗಜಲ್ ಬರೆಯುವುದರ ಮೂಲಕ ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ್ದಾರೆ. ಇವರ ಚೊಚ್ಚಿಲ ಕೃತಿಯನ್ನು ಮಡಿಲ ನಕ್ಷತ್ರವನ್ನು ಅದಿತಿ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಪ್ರಕಟಣೆಗೆ ಕನ್ನಡ ಪುಸ್ತಕ ಪ್ರಾಧಿಕಾರ ಧನ ಸಹಾಯ ಮಾಡಿದೆ. ಕನ್ನಡದಲ್ಲಿ ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಪರಂಪರೆ ಇದೆ. ಆ ಸಾಲಿನಲ್ಲಿ ಈ ವರ್ಷ ಉತ್ತರ ಕನ್ನಡದಿಂದ ಆಯ್ಕೆಯಾದವರು ರೇಖಾ ಭಟ್ಟ. ವಚನಗಳನ್ನು, ದಾಸ ಸಾಹಿತ್ಯವನ್ನು ಇಷ್ಟಪಟ್ಟು ಓದುವ ರೇಖಾ ಭಟ್ಟ ಕನ್ನಡದ ಬೇಂದ್ರೆ ಮತ್ತು ಎಚ್.ಎಸ್.ವೆಂಕಟೇಶ ಮೂರ್ತಿ ಅವರ ಕವಿತೆಗಳನ್ನು ಇಷ್ಟಪಡುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ ನಾನಿನ್ನು ಎಳಸು ಎಂಬ ವಿನಯ ಸಹ ಅವರಲ್ಲಿದೆ. ವೈಚಾರಿಕ ಸಾಹಿತ್ಯ ಮತ್ತು ಪ್ರಗತಿಪರ ಧೋರಣೆಗಳನ್ನು ಗ್ರಹಿಸುವ ಮನಸ್ಸು ಸಹ ಅವರಲ್ಲಿದೆ. `ನಿನ್ನ ಮಾತುಗಳ ಧ್ವನಿಸಲೆಂದು ನಾ ಮೌನವನ್ನು ತಬ್ಬಿಕೊಂಡೆ, ನಿನ್ನ ಕನಸುಗಳು ಅರಳಲೆಂದು ನನ್ನ ಬಯಕೆಗಳ ಬಸಿದು ಕೊಂಡೆ’ ಎನ್ನುವ ರೇಖಾ ಅವರ ಗಜಲ್ ಗಳಲ್ಲಿ ಹೊಸತನದ ಹುಟುಕಾಟವೂ ಇದೆ. ಬಿಡುಗಡೆಯ ಹಂಬಲವೂ ಇದೆ. `ನಿನ್ನ ನೆನಪುಗಳ ಹೊರತಾಗಿ ಬೇರೇನೂ ಉಳಿದಿಲ್ಲ ಗೆಳೆಯಾ ದಹಿಸುತಿರುವ ವಿರಹದುರಿಯು ಏನನ್ನೂ ಉಳಿಸಿಲ್ಲ ಗೆಳೆಯಾ ‘ ಹೂಬನದಲಿ ಬರೀ ಮುಳ್ಳುಗಳೇ ಕಣ್ಣುಗಳ ಇರಿಯುತಿವೆ ಯಾಕೆ ವಿಷಾದದಲಿ ಬೆಂದ ಮನದಂತೆ ನೆಟ್ಟ ನೋಟವೂ ನೆಟ್ಟಗಿಲ್ಲ ಗೆಳೆಯಾ ಗಜಲ್ ಪ್ರಕಾರ ವಿರಹವನ್ನು ಪ್ರೇಮದ ಉತ್ಕಟತೆಯನ್ನು ಹೇಳಲು ಸಮರ್ಥವಾದ ಅಭಿವ್ಯಕ್ತಿಯ ಒಂದು ಪ್ರಕಾರ. ಈಚೆಗೆ ಗಜಲ್‌ನಲ್ಲಿ ವಿರಹ ಮತ್ತು ಪ್ರೇಮವೈಫಲ್ಯವನ್ನು ಮೀರಿ ಬದುಕಿನ ನಾನಾ ಬವಣೆಗಳನ್ನು, ಖುಷಿಯನ್ನು ಸಹ ಹೇಳಲು ಬಳಕೆಯಾಗುತ್ತಿದೆ. ರೇಖಾ ಅವರ ಮಡಿಲ ನಕ್ಷತ್ರದಲ್ಲಿ ಗಜಲ್ ಪ್ರಕಾರ ಹಳೆಯ ನೆನಪುಗಳ ಜೊತೆಗೆ ಸಮಾಜದ ಅನೇಕ ಸಂಗತಿಗಳ ವಿಮರ್ಶೆಯ ಒಳನೋಟವೂ ಇದೆ. ನನ್ನ ಗೆಳೆಯರಾದ ಕೋಲಾರದ ದೊಡ್ಡಕಲ್ಲಹಳ್ಳಿ ನಾರಾಯಣಪ್ಪ , ಶಿರಸಿ ತಾಲೂಕು ಹೊಸ್ಮನೆ ಗ್ರಾಮದ ಗಣೇಶ್ ಹೆಗಡೆ ಹೊಸ್ಮನೆ ಸಹ ಗಜಲ್ ಗಳನ್ನು ಬರೆಯುವಾಗ ಭಿನ್ನ ಧೋರಣೆ ತಾಳಿ ಅದ್ಭುತ ಪ್ರತಿಮೆಗಳನ್ನು ಗಜಲ್ ಪ್ರಕಾರದಲ್ಲಿ ತಂದರು ಎಂಬುದು ಇಲ್ಲಿ ಸ್ಮರಣೀಯ. ಚೊಚ್ಚಲ ಕೃತಿಯಲ್ಲಿ ರೇಖಾ ಅವರು ಒಂದು ಸರಳ ರೇಖೆ ಎಳೆದಿದ್ದಾರೆ. ಅವರ ಬರಹ ಚೆಂದದ ರಂಗೋಲಿಯಾಗಲಿ ಎಂದು ಹಾರೈಸೋಣ. ನ.೧೪ ರಂದು ಅವರ ಮಡಿಲ ನಕ್ಷತ್ರ ಬೆಂಗಳೂರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಬಿಡುಗಡೆ ಸಹ ಆಗಿದೆ. ಕನ್ನಡದ ೨೩ ಜನ ಯುವ ಬರಹಗಾರರ ಸಾಲಿನಲ್ಲಿ ನಮ್ಮ ಜಿಲ್ಲೆಯ ರೇಖಾ ಭಟ್ ಸಹ ಸೇರಿರುವುದು ನಮಗೆ ಸಂತೋಷ ತಂದಿದೆ. ………………………………………………………………………………………………………………………….. ಪ್ರಶ್ನೆ : ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಉತ್ತರ : ನನ್ನೊಳಗಿನ ನನ್ನ ಹಗುರಾಗಿಸಿಕೊಳ್ಳಲು ನಾ ಕವಿತೆ ಬರೆಯುತ್ತೇನೆ ಪ್ರಶ್ನೆ : ಕವಿತೆ ಹುಟ್ಟುವ ಕ್ಷಣ ಯಾವುದು ? ಉತ್ತರ : ಆ ಕ್ಷಣವನ್ನು ಕವಿಸಮಯ ಎಂದಿದ್ದಾರೆ ಹಿರಿಯರು ಪ್ರಶ್ನೆ : ನಿಮ್ಮ ಕವಿತೆಗಳ ವಸ್ತು ಯಾವುದು ,ಈ ವರೆಗೆ ಬರೆದ ಕವಿತೆಗಳ ದೃಷ್ಟಿಯಿಂದ ? ಉತ್ತರ : ಅದಮ್ಯ ಸ್ಪೂರ್ತಿ, ನವಿರಾದ ಪ್ರೀತಿ, ಹೊರ ಭರವಸೆಗಳಿಂದ, ನೋವುಗಳ ಸರಿಸಿ , ನೆಮ್ಮದಿಯ ಅರಸಿ, ಹೊಸ ಆಶಯಗಳನ್ನು ಹೊತ್ತು, ಹೊಸಬೆಳಕಿನತ್ತ ಪಯಣ, ಪ್ರಶ್ನೆ : ಕವಿತೆಗಳಲ್ಲಿ ಬಾಲ್ಯ ಇಣುಕಿದೆಯೇ ? ಉತ್ತರ : ನಾನು ಬರೆದ ಗಜಲ್ ಗಳಲ್ಲಿ ಬಾಲ್ಯದ ಛಾಯೆ ಅಷ್ಟಾಗಿ ಇಣುಕಿಲ್ಲ. ಮಕ್ಕಳಿಗೆಂದೇ ಬರೆದ ಪದ್ಯಗಳಲ್ಲಿ ನನ್ನ ಬಾಲ್ಯದ ಅನುಭವಗಳನ್ನು ಬಿಂಬಿಸುವ ಯತ್ನ ಮಾಡಿದ್ದೇನೆ ಪ್ರಶ್ನೆ : ಕಾವ್ಯದ ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ : ಕಾವ್ಯ ವ್ಯೆಯಕ್ತಿಕವಾಗಿ ಬಿಂಬಿಸಲ್ಪಟ್ಟು ಓದುಗನ ಮನಸ್ಸಿನಲ್ಲಿ ಬೇರೂರಿದರೂ , ಅದು ಸಮಾಜಮುಖಿಯಾಗಬೇಕು. ಕಾವ್ಯ ಓದುಗನಲ್ಲಿ ಹೊಸ ಚಿಂತನೆಯ ಬೀಜವನ್ನು ಬಿತ್ತಬೇಕು ಪ್ರಶ್ನೆ : ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ರಾಜಕೀಯದಲ್ಲಿ ದಕ್ಷ ನಾಯಕರು ಇರುತ್ತಾರೆ. ಅಸಮರ್ಥ ನಾಯಕರು ಇರುತ್ತಾರೆ .. ಜನನಾಯಕರು ಜನರಿಗಾಗಿ, ರಾಜ್ಯಕ್ಕಾಗಿ,ದೇಶಕ್ಕಾಗಿ ಶ್ರಮಿಸಬೇಕೆ ವಿನಹ ಸ್ವಲಾಭಕ್ಕಾಗಿ ರಾಜಕಾರಣ ಮಾಡಬಾರದು. ಪ್ರಶ್ನೆ : ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ಮಾನವೀಯತೆಯೇ ಧರ್ಮ.. ನಮ್ಮೊಳಗಿನ ಪ್ರೀತಿ, ಕರುಣೆ, ಮಮತೆಗಳೇ ದೇವರು.. ಪ್ರಶ್ನೆ : ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ : ಸಾಂಸ್ಕೃತಿಕವಾಗಿ ಬೆಳೆಯಲು ಬೆರೆಯಲು ಈಗ ಸಾಕಷ್ಟು ವಿಪುಲ ಅವಕಾಶಗಳಿವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಸ್ಕೃತಿಯನ್ನು ಎತ್ತಿ ಹಿಡಿದು ನಮ್ಮ ಮೂಲ ಪರಂಪರೆಗಳನ್ನು ಮುನ್ನೆಡಸಬೇಕು… ಪ್ರಶ್ನೆ : ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? . ಉತ್ತರ : ನಾನಿನ್ನು ಸಾಹಿತ್ಯ ಕ್ಷೇತ್ರದಲ್ಲಿ ಎಳಸು ಎಂಬ ಭಾವ ನನ್ನದು. ಬರೆಹ ನನಗೆ ಮತ್ತು ಓದುಗರಿಗೆ ಸಮಾಧಾನ ನೀಡಿದರೆ ಸಾಕಲ್ಲವೇ… ಹಿರಿಯರ ಬರೆಹಗಳನ್ನು ಆಸಕ್ತಿಯಿಂದ ಓದುತ್ತೇನೆ. ಗೌರವಿಸುತ್ತೇನೆ. ಇಲ್ಲಿನ ರಾಜಕೀಯದಿಂದ ದೂರವೇ ಉಳಿದಿದ್ದೇನೆ..ಈಗ ತ.ರಾ.ಸು. ಅವರ ದುರ್ಗಾಸ್ತಮಾನ ಓದುತ್ತಿದ್ದೆನೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ ನನ್ನ ಮುಂದಿನ ಓದು. ಪ್ರಶ್ನೆ : ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ : ಕಾಲಕ್ಕೆ ತಕ್ಕಂತೆ ಬದಲಾಗುವುದು ಜಗದ ನಿಯಮ. ಅಂತೆಯೇ ನಮ್ಮ ದೇಶವು ಪ್ರಗತಿಯತ್ತ ಮುನ್ನೆಡೆಯುತ್ತಿದೆ. ಸಾಕಷ್ಟು ಅಭಿವೃದ್ಧಿಗಳಾಗುತ್ತಿವೆ. ಈ ಜಾತ್ಯಾತೀತ ರಾಷ್ಟ್ರದ ಒಳಬಾಂಧವ್ಯ ಇನ್ನಷ್ಟು ಗಟ್ಟಿ ಮಾಡುವ ಕೆಲಸಗಳು ಈಗಿನ ಬರೆಹಗಾರದಿಂದಲೂ ಆಗುತ್ತಿದೆ ಹಾಗೂ ಆಗಬೇಕಾಗಿದೆ. ಪ್ರಶ್ನೆ : ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ : ನಾನೂ ಮೊದಲು ಸಾಕಷ್ಟು ಓದಬೇಕಿದೆ .. ಸಾಹಿತ್ಯವೆಂಬ ಸಾಗರದ ಗುಟುಕು ಕುಡಿದು, ನಂತರ ಹೊಸಹೊಸ ಬೀಜಗಳನ್ನು ಬಿತ್ತನೆ ಮಾಡಿ, ಸಾಹಿತ್ಯ ಕೃಷಿಯನ್ನು ಶ್ರೀಮಂತಗೊಳಿಸುವ ಕನಸು ನನ್ನದು.. ನನ್ನ ಶಾಲೆಯ ಮಕ್ಕಳಲ್ಲೂ ಸಾಹಿತ್ಯ ಪ್ರೀತಿ ಹೆಚ್ಚಿಸಿ, ಕನ್ನಡ ಸಾಹಿತ್ಯದೆಡೆಗೆ ಅವರಲ್ಲಿ ಒಲವು ಮೂಡಿಸುವ ಹಂಬಲವಿದೆ. ಪ್ರಶ್ನೆ : ಕನ್ನಡ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ ಯಾರು ? ಉತ್ತರ : ದ.ರಾ. ಬೇಂದ್ರೆ. ಹಾಗೂ ಎಚ್ ಎಸ್,ವೆಂಕಟೇಶ ಮೂರ್ತಿಯವರ ಭಾವಗೀತೆಗಳು. ………
ಮನದೊಳಗಣ ತಾಕಲಾಟವೇ ಅಭಿವ್ಯಕ್ತಿ
ಅಂಕಣ ಬರಹ ಕವಿಯಿತ್ರಿ ನೂತನ ಎಂ.ದೋಶೆಟ್ಟಿ ಉತ್ತರ ಕನ್ನಡದ ಸಿದ್ದಾಪುರದವರು. ಮೃತ್ಯುಂಜಯ ದೋಶೆಟ್ಟಿ , ಪ್ರೇಮಾ ದೋಶೆಟ್ಟಿ ಅವರ ಮಗಳು.ಅವರ ಪತಿ ಶಾಮ ಸುಂದರ ಕದಂ ಕಾರವಾರ ಬಳಿಯ ಸದಾಶಿವಗಡದವರು. ಆಕಾಶವಾಣಿಯಲ್ಲಿ ಎಂಜಿನಿಯರ್. ಕವಯಿತ್ರಿ ಕತೆಗಾರ್ತಿ ನೂತನ ದೋಶೆಟ್ಟಿ ಸಮೂಹ ಸಂವಹನ , ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕ ಹುದ್ದೆ ನಿಭಾಯಿಸುತ್ತಿದ್ದಾರೆ. ಕಾರವಾರ ಆಕಾಶವಾಣಿ, ಬೆಂಗಳೂರು ಆಕಾಶವಾಣಿಯಲ್ಲಿ ಸೇವೆ ಮಾಡಿ, ಇದೀಗ ಹಾಸನ ಜಿಲ್ಲಾ ಆಕಾಶವಾಣಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ೨೦೦೯ರಲ್ಲಿ ಕಾಲವೆಂಬ ಮಹಾಮನೆ ಕಾವ್ಯ ಸಂಕಲನ ಪ್ರಕಟಿಸಿದರು. ಭಾಗೀರತಿ ಉಳಿಸಿದ ಪ್ರಶ್ನೆಗಳು ,ಮಾನವೀಯತೆ ಬಿಕ್ಕಳಿಸಿದೆ(೨೦೧೬) ಅವರ ಕವಿತಾ ಸಂಕಲನಗಳು. ಯಾವ “ವೆಬ್ ಸೈಟ್ ನಲ್ಲೂ ಉತ್ತರವಿಲ್ಲ ” ಕಥಾ ಸಂಕಲನ. ಅಂತಃಸ್ಪುರಣ, ಮರೆಯಾಯಿತೆ ಪ್ರಜಾಸತ್ತೆ ಅವರ ಲೇಖನಗಳ ಸಂಗ್ರಹ. ಆಕಾಶವಾಣಿ ಅಂತರಾಳ ಅವರು ಆಕಾಶವಾಣಿ ಕುರಿತು ಬರೆದ ಪುಸ್ತಕ. ಬಾ ಬಾಪು , ಆನ್ ಗಾಂಧಿಯನ್ ಪಾಥ್ ಆಕಾಶವಾಣಿಗಾಗಿ ರೂಪಿಸಿದ ರೂಪಕಗಳು. ವಚನಸಾಹಿತ್ಯ, ಬಸವಣ್ಣ, ಗಾಂಧಿಜೀ ವಿಚಾರಧಾರೆಯಿಂದ ಪ್ರಭಾವಿತರಾದ ಲೇಖಕಿ. ಜೀವಪರ ಕಾಳಜಿಯ ಕವಯಿತ್ರಿ. ಈ ಸಲ ಸಾಹಿತ್ಯ ಸಂಗಾತಿ ಕನ್ನಡ ವೆಬ್ ಜೊತೆ ಮಾತಿನಲ್ಲಿ ಮುಖಾಮುಖಿಯಾಗಿದ್ದಾರೆ… ……. ಲೇಖಕಿ ನೂತನ ದೋಶೆಟ್ಟಿ ಅವರೊಡನೆ ಮುಖಾಮುಖಿಯಾಗಿದ್ದಾರೆ ಕವಿ ನಾಗರಾಜ ಹರಪನಹಳ್ಳಿ ಪ್ರಶ್ನೆ : ಕತೆ, ಕವಿತೆ ಗಳನ್ನು ಬರೆಯುವುದರ ಕುರಿತು ಹೇಳಿ, ಇದೆಲ್ಲಾ ಹೇಗೆ ಆರಂಭವಾಯಿತು? ಉತ್ತರ : ನಾನು ಮೊದಲು ಬರವಣಿಗೆ ಶುರು ಮಾಡಿದ್ದು ನಾನು ಓದಿದ ಪುಸ್ತಕದ ಕುರಿತು ನನಗೆ ಅನ್ನಿಸಿದ ನಾಲ್ಕು ಸಾಲುಗಳನ್ನು ನೋಟ್ ಪುಸ್ತಕದಲ್ಲಿ ಬರೆಯುವುದರ ಮೂಲಕ. ಅದೊಂಥರ ವಿಮರ್ಶೆ ಅಂತ ಆಗ ಅಂದ್ಕೊಂಡಿದ್ದೆ. ಕಾಲೇಜಿನ ಆರಂಭದ ದಿನಗಳಲ್ಲಿ. ಆ ಪುಸ್ತಕ ಈಗಲೂ ನನ್ನ ಹತ್ತಿರ ಇದೆ. ಆನಂತರ ಸಣ್ಣ ಕವಿತೆ ಬರೀತಿದ್ದೆ. ಅದೇ ಪುಸ್ತಕದಲ್ಲಿ. ನಾನು ಬಹುತೇಕ ಮೌನಿ. ಬಹಳ ಕಡಿಮೆ ಮಾತು. ಹಾಗಂತ ಮನದೊಳಗಿನ ದೊಂಬರಾಟ ಇರ್ತಿತ್ತಲ್ಲ. ಅದಕ್ಕೆ ಒಂದು ಅಭಿವ್ಯಕ್ತಿ ಬೇಕಾಗುತ್ತಿತ್ತು. ಅದು ಕವಿತೆಯ ಸಾಲುಗಳಲ್ಲಿ ಹೊರಬರಲು ಹವಣಿಸಿತ್ತು. ಕತೆಯೂ ಹಾಗೇ. ಸುತ್ತಲಿನ ಪರಿಸರದಲ್ಲಿ ಗಮನಿಸಿದ, ತಟ್ಟಿದ ವಿಷಯದ ಎಳೆ ಮನಸ್ಸಿನಲ್ಲಿ ಕೊರೆಯಲು ಶುರುವಾಗುತ್ತಿತ್ತು. ಕತೆಯಾಗಲಿ, ಕವಿತೆಯಾಗಲಿ ಅದು ಒಂದು ರೂಪಕ್ಕೆ ಬರುವ ತನಕದ ತಹತಹವನ್ನ ಅನುಭವಿಸಿಯೇ ತೀರಬೇಕು. ಅದು ಅಕ್ಷರದ ರೂಪದಲ್ಲಿ ಇಳಿದಾದ ಮೇಲಿನ ನಿರುಮ್ಮಳತೆ ಕೂಡ ಅತ್ಯಂತ ಸುಖದ ಅನುಭವಗಳಲ್ಲಿ ಒಂದು. ಬರವಣಿಗೆ ನನ್ನ ನಿಲುವು, ಸಮಾಜದ ಆಶಯ, ನನ್ನ ಆಶಯದ ಕಾಣ್ಕೆ. ಇದರ ಹೊರತಾಗಿಯೂ ಇದಕ್ಕೇ ಬರೀತೇನೆ ಅಂತ ಹೇಳೋದಕ್ಕೆ ಆಗೋದಿಲ್ಲ. ನನಗೆ ಬರವಣಿಗೆ ತೀರಾ ಖಾಸಗಿ, ತೀರ ಸ್ವಂತದ್ದು.. ಹೀಗಂದಾಗ ಕೆಲವರು ಕೇಳ್ತಾರೆ. ಅದು ಬೇರೆಯವರು ಓದೋದಕ್ಕೆ ಅಂತ. ಅದಕ್ಕೆ ಆ ಶಕ್ತಿ ಇದ್ದರೆ ತುಂಬ ಸಂತೋಷ. ತಾನಾಗೇ ಅದನ್ನು ಆದರೆ ಕತೆ, ಕವಿತೆ ಗಳಿಸಿಕೊಳ್ಳಬೇಕು. ಕವಿತೆ ಹುಟ್ಟುವ ಕ್ಷಣ… ತಡೆಹಿಡಿದ ದುಃಖ ತಮ್ಮವರು ಕಂಡಾಗ ಕಟ್ಟೆಯೊಡೆದು ಹೊರ ಬರುತ್ತದಲ್ಲಾ ಅಂಥ ಒತ್ತಡ ಒಳಗೆ ಇರುತ್ತದೆ ಅಂತ ಕಾಣುತ್ತೆ. ಅದಕ್ಕೆ ಚುರುಕು ಮುಟ್ಟಿಸಿದ ತಕ್ಷಣ ತಾನಾಗಿ ಬರುತ್ತದೆ. ದುಃಖ, ನೋವು,ಸಂಕಟ, ವಿಷಾದ, ಕಳೆದುಕೊಳ್ಳುವುದು, ಒಂಟಿತನ , ಸಂಬಂಧ ಮೊದಲಾದವು ತೀವೃವಾಗಿ ಬರೆಸುವಂತೆ ಸಂತೋಷ , ಸುಖ ಬರೆಸಲಾರದು. ಬರೆದಾದ ಮೇಲೆ ಅದೊಂದು ಬಂಧಮುಕ್ತತೆ… ಕತೆ ಹಾಗಲ್ಲ. ಕೆಲವು ಕತೆಗಳು ಒಂದೇ ಓಟದಲ್ಲಿ ಸಾಗಿಬಿಡುತ್ತವೆ. ಕೆಲವಕ್ಕೆ ಹೈರಾಣಾಗಿ ಹೋಗಿಬಿಡುತ್ತೇವೆ. ಬಂದಿರುವುದು ನನ್ನ ಒಂದು ಕಥಾ ಸಂಕಲನ. ಯಾವ ವೆಬ್ ಸೈಟಿನಲ್ಲೂ ಉತ್ತರವಿಲ್ಲ ಅಂತ. ಅದೇ ಶೀರ್ಷಿಕೆಯ ಕತೆ ನನ್ನ ಮನಸ್ಸಿನಲ್ಲಿ ಮೂಡಿದ್ದು ಬಸ್ಸಿನಲ್ಲಿ ಹೋಗುತ್ತಿರುವಾಗ. ಅಲ್ಲೇ ಗುರುತು ಹಾಕ್ಕೊಂಡಿದ್ದೆ. ಇನ್ನು ಕಾರವಾರದಲ್ಲಿ ಇದ್ದಾಗ ಕಡಲು ಬಹಳ ಕಾಡಿಸಿತ್ತು. ಬೀಚಿನಲ್ಲಿ ಶೇಂಗಾ ಮಾರಲು ಬರುವ ಹುಡುಗನನ್ನು ಕಂಡಾಗ ಮನೆಗೆ ಬಂದು ಬರೆದಿದ್ದಿದೆ. ಒಂದೊಂದು ಕತೆಗೂ ಅದರದ್ದೇ ಆದ ಇತಿಹಾಸ ಇರುತ್ತೆ. ಕಾವ್ಯ,ಕತೆಯ ವಸ್ತು, ವಿಷಯ…. ಮನುಷ್ಯ ಸಂಬಂಧಗಳು ಬಹುತೇಕ ವಸ್ತು ಕತೆಗಳಲ್ಲಿ. ಸಾಮಾಜಿಕ ಚಿತ್ರಣ, ಶೋಷಣೆಗಳೂ ಇವೆ. ಪ್ರಸ್ತುತ ರಾಜಕೀಯ…. ನಾನು ರಾಜಕೀಯವನ್ನು ಹತ್ತಿರದಿಂದ ಗಮನಿಸುತ್ತೇನೆ. ಅದರ ನಡೆಗಳು ನಮ್ಮ ಸಾಮಾಜಿಕ ಹಾಗೂ ವೈಯುಕ್ತಿಕ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತವೆ. ಆದರೆ ಬಹುತೇಕರು ತಮಗೆ ಸಂಬಂಧವಿಲ್ಲ ಎಂಬಂತೆ ಇರುತ್ತಾರೆ. ಹಾಗಾಗಬಾರದು. ನಮ್ಮಲ್ಲಿ ರಾಜಕೀಯ ಪ್ರಜ್ಞೆ ಬಹಳ ಕಡಿಮೆ ಅನ್ನಿಸುತ್ತದೆ. ಬಾಲ್ಯ, ಹರೆಯ….ಕುರಿತು ಒಂದಿಷ್ಟು ಬಾಲ್ಯ ಧಾರಾಳವಾಗಿ ಇಣುಕಿದೆ ಕವಿತೆಗಳಲ್ಲಿ . ಏಕೆಂದರೆ ನಮ್ಮದು ಸಮೃದ್ಧ ಬಾಲ್ಯ. ಮಲೆನಾಡಿನ ಬೆಚ್ಚನೆಯ, ನಚ್ಚಗಿನ ಬಾಲ್ಯ. ನನ್ನ ಊರು ಸಿದ್ದಾಪುರ. ಊರಿಗೆ ಊರೇ ನಮ್ಮ ಆಟದ ಅಂಗಳವಾಗಿತ್ತು. ಎದುರು-ಬದುರು, ಅಕ್ಕ-ಪಕ್ಕ ಎಲ್ಲರೂ ನಮ್ಮವರೇ ಎಂದು ಬೆಳೆದವರು. ಈಗಲೂ ಅದನ್ನು ಎಲ್ಲರಲ್ಲೂ ಕಾಣಲು ಹೋಗಿ ಮೋಸ ಹೋಗುತ್ತೇನೆ. ಸಾಂಸ್ಕೃತಿಕ ವಾತಾವರಣ ಏನನಿಸುತ್ತದೆ? ಬಸವ ತತ್ತಗಳಲ್ಲಿ ಬೆಳೆದ ನಮಗೆ ಯಾವುದೇ ಜಾತಿ- ಮತಗಳ ಬೇಧ ಕಾಣಿಸದೇ ನಮ್ಮ ಹಿರಿಯರು ಬೆಳೆಸಿದ್ದು ನಮ್ಮ ಭಾಗ್ಯ. ಆದರೆ ಇವುಗಳು ಇಂದು ಮುನ್ನೆಲೆಗೆ ಬಂದು ನಿಂತಿವೆ. ಇವುಗಳ ಮಾಯೆಯ ಮುಸುಕಿಂದ ಒಂದು ಅಂತರ ಕಾಪಾಡಿಕೊಳ್ಳುವುದು ಕಷ್ಟವೇನಲ್ಲ. ಧರ್ಮ, ದೇವರ ಕುರಿತು ಹೇಳಿ… ನಾವು ಚಿಕ್ಕಂದಿನಿಂದ ನಮ್ಮ ಮನೆಯಲ್ಲಿ ಮಕ್ಕಳೆಲ್ಲ ಎರಡು ಹೊತ್ತು … ದೇವರೆದುರು ನಿಂತು ಬಸವಣ್ಣನವರ ಕಳಬೇಡ, ಕೊಲಬೇಡ …ವಚನ ಹೇಳಿಕೊಳ್ಳುತ್ತಿದ್ದೆವು. ಉಳಿದ ಇನ್ನೂ ಏನೇನೋ ಹೇಳಿಕೊಳ್ಳುತ್ತಿದ್ದೆವು. ಆದರೆ ಆ ವಚನ ನನ್ನ ಮನದಲ್ಲಿ ಮಾಡಿರುವ ಪ್ರಭಾವ ಅಪಾರ. ನಾನು ಇಂದಿಗೂ ಅದನ್ನು ಅಕ್ಷರ ಷಹ ಪಾಲಿಸುತ್ತೇನೆ. ಇದರಿಂದ ಎಷ್ಟು ಸಂಕಟಗಳನ್ನು ಅನುಭವಿಸಬೇಕಾಗುತ್ತದೆ. ಆದರೂ ಅದೇ ನನ್ನ ಧರ್ಮ. ಆಗೆಲ್ಲ ನಾನು ಸಮಾಧಾನ ಮಾಡಿಕೊಳ್ಳುವುದು ಬಸವಣ್ಣನನ್ನೇ ಬಿಡದವರು ನಮ್ಮನ್ನು ಬಿಟ್ಟಾರೇ ? ಅಂತ. ಅವರೆಂದಂತೆ ಕಾಯಕವೇ ನನ್ನ ಧರ್ಮ. ಈ ಧರ್ಮದಲ್ಲಿ ಎಷ್ಟು ಕಷ್ಟವಿದೆಯೇ ಅಷ್ಟೇ ಸುಖವಿದೆ. ನನಗೆ ಆಗ ಕಷ್ಟದಿಂದ ಸಿಗುವ ಸುಖವೇ ಇಷ್ಟ. ಅದು ಬಹಳ ಚೇತೋಹಾರಿ. ಇನ್ನು ದೇವರು …ನನಗೆ ಒಬ್ಬ ಮಿತ್ರನಂತೆ. ಯಾರ ಬಳಿಯೂ ಹೇಳಲಾಗದ ವಿಷಯ, ಚರ್ಚೆಗೆ ಆ ನಿರಾಕಾರ ಬೇಕು. ದೇವರು ಎಂಬುದು ಒಂದು ಅನುಭೂತಿ. ನಿಮ್ಮನ್ನೆ ನೀವು ಆಂತರ್ಯದಲ್ಲಿ ಕಾಣುವ ಬಗೆ. ಸಾಹಿತ್ಯ ವಲಯದ ರಾಜಕೀಯದ ಬಗ್ಗೆ ನಾನು ಸಿದ್ದಾಪುರದವಳು. ಅಲ್ಲಿಂದ ದೂರ ಇದ್ದೇನೆ. ಉತ್ತರ ಕನ್ನಡ ಜಿಲ್ಲೆಯಲ್ಲೇ ನಾನು ಅಪರಿಚಿತಳು. ನನ್ನ ಮೂರು ಕವನ ಸಂಕಲನಗಳಿವೆ. ಒಂದು ಕವಿತೆ ಬೆಂಗಳೂರು ವಿಶ್ವವಿದ್ಯಾಲಯದ ಪದವಿಗೆ ಪಠ್ಯವಾಗಿ ತುತ್ತು 2013ರಲ್ಲಿ. ಸುಧಾದಲ್ಲಿ ಬಂದಿದ್ದ ಕತೆಯನ್ನು ಕುವೆಂಪು ವಿಶ್ವವಿದ್ಯಾಲಯದ ಪದವಿಗೆ ಪಠ್ಯ ಮಾಡಿದ್ದರು 2010ರಲ್ಲಿ. ನಾನು ಅವುಗಳನ್ನು ನೋಡಲೂ ಇಲ್ಲ. ಯಾರೋ ಹೇಳಿದರು ಇದೆ ಎಂದು. ಸಂತೋಷವಾಯಿತು. ಸಾವಿರಾರು, ಮಕ್ಕಳು ಓದಿದರಲ್ಲ ಎಂದು. ನನ್ನಷ್ಟಕ್ಕೆ ನಾನು ಬರೆದುಕೊಂಡು ಇರುತ್ತೇನೆ. ಯಾವ ಹಪಹಪಿಯೂ ಇಲ್ಲ. ಇದು ನನ್ನ ನಿಲುವು.ಉಳಿದವರ ನಿಲುವಿನಲ್ಲಿ ನನಗೆ ಆಸ್ಥೆ ಇಲ್ಲ. ದೇಶದ ಚಲನೆ ಬಗ್ಗೆ ಏನನಿಸುತ್ತದೆ? ಅಂದರೆ ರಾಜಕೀಯವಾಗಿ ಮಾತ್ರ ಅಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ..ಹೀಗೆ. ಸಾಕಷ್ಟು ಅಭಿವೃದ್ಧಿ ಆಗಿದೆ. ರಾಜಕೀಯ ಹಿನ್ನೆಲೆಯಲ್ಲಿ ಸ್ಥಿತ್ಯಂತರಗಳು ಸಹಜ. ಆದರೆ ನಮ್ಮಲ್ಲಿ ಅದಕ್ಕೆ ಹಾಹಾಕಾರ ಎಬ್ಬಿಸುವ ಚಾಳಿ ಇದೆ. ಬದಲಾಗಿ ಅದನ್ನು ಕೌಂಟರ್ ಮಾಡುವ ಜಾಣ್ಮೆ ಬೇಕು. ಈಗ ನೀವು ಗಮನಿಸಿದರೆ ಯಾವುದೇ ಮುಖ್ಯ ಚಳುವಳಿಗಳಿಲ್ಲ. ಇದೂ ಒಂದು ಫೇಸ್. ತನಗೆ ಬೇಕಾದ್ದನ್ನು ಪಡೆಯುವುದು ಸಮಾಜಕ್ಕೆ ಗೊತ್ತಿದೆ. ಆ ಮಟ್ಟಿಗೆ ನನ್ನದು ಆಶಾವಾದ.ಆದರೆ ಸಾಹಿತ್ಯ ಕ್ಷೇತ್ರ ಒಡೆಯದೇ ಒಂದಾಗಿ, ಗುಂಪುಗಾರಿಕೆ ಇರದೇ ಮಾದರಿಯಾಗಿರಬೇಕು ಎಂಬ ಆಸೆಯಿದೆ. ಸಾಹಿತ್ಯವನ್ನು ಅದರ ಮೌಲಿಕತೆಯೊಂದಿಗೆ ಮಾತ್ರ ನೋಡುವ ವಾತಾವರಣ ಒಡಮೂಡಲಿ. ನಿಮ್ಮ ಕನಸು… ಓದಬೇಕಾದ್ದು ಬಹಳ ಇದೆ. ನನಗೆ ಮಿತಿಗಳಿವೆ. ಹಾಗಾಗಿ ನನ್ನ ಕನಸುಗಳು ಬಹಳ ಎತ್ತರ ಹಾರಲಾರವು. ಇಷ್ಟದ ಲೇಖಕರು ಕನ್ನಡದಲ್ಲಿ ತೇಜಸ್ವಿ, ಬೇಂದ್ರೆ ಇಂಗ್ಲೀಷ್ ಹೆಚ್ಚು ಓದಿಲ್ಲ. ವರ್ಡ್ಸ್ವರ್ತ್ ನೆಚ್ಚಿನ ಕವಿ. ಈಚೆಗೆ ಓದಿದ ಕೃತಿ… ಲಕ್ಷ್ಮೀ ಪತಿ ಕೋಲಾರ ಅವರ ಹರಪ್ಪ ಡಿಎನ್ ಎ ನುಡಿದ ಸತ್ಯ, ರವಿ ಹಂಜ್ ಅವರು ಹ್ಯೂಎನ್ ತ್ಸಾಂಗನ ಮಹಾಪಯಣ, ನೇಮಿಚಂದ್ರರ ಯಾದ್ ವಶೀಮ್. ಇಷ್ಟದ ಕೆಲಸ: ಗಾರ್ಡನಿಂಗ್ ಇಷ್ಟದ ಸ್ಥಳ: ಕೈಲಾಸ ಮಾನಸ ಸರೋವರ ಮರೆಯಲಾರದ ಘಟನೆ : ಬಹಳಷ್ಟಿವೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ …ಊಟಿಗೆ ಹೋಗಿದ್ದಾಗ ಬೆಟ್ಟದ ಮೇಲೆ ಜಿ ಎಸ್ ಶಿವರುದ್ರಪ್ಪ ನವರು ಸಿಕ್ಕಿದ್ದು. ನನ್ನ ಅತೀವ ಸಂಕೋಚ, ಮುಜುಗರದಿಂದ ನಾನು ಬರೆದದ್ದನ್ನು ಯಾರಿಗು ಹೇಳುತ್ತಿರಲಿಲ್ಲ. ತೋರಿಸುತ್ತಲೂ ಇರಲಿಲ್ಲ. ಈಗಲೂ ಅದೇನು ಹೆಚ್ಚು ಬದಲಾಗಿಲ್ಲ. ************************************** ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮನದೊಳಗಣ ತಾಕಲಾಟವೇ ಅಭಿವ್ಯಕ್ತಿ Read Post »
ನಾನು ದೀಪ ಹಚ್ಚಿಕೊಂಡರೂ ಬೆಳಕು ಎಲ್ಲರಿಗೂ ಕಾಣಿಸಬೇಕು `ಈಗ ಅಕ್ಷರಸ್ಥರನ್ನು, ಶ್ರೀಮಂತರನ್ನು ನಂಬಿಸುವ- ಒಲಿಸಿಕೊಳ್ಳುವ ಸಿದ್ಧಾಂತ ಹೆಚ್ಚಾಗಿದೆ…’ ಗಣೇಶ್ ಹೆಗಡೆ ಹೊಸ್ಮನೆ ಗಣೇಶ್ ಹೆಗಡೆ ಹೊಸ್ಮನೆ ಶಿರಸಿ ತಾಲೂಕು ಜಾನ್ಮನೆಯವರು. ವೃತ್ತಿಯಿಂದ ಕೃಷಿಕ. ಯಾರೂ ನೆಡದ ಮರ ಇವರ ಮೊದಲ ಕವಿತಾ ಸಂಕಲನ. ಇದಕ್ಕೆ ಚೆನ್ನವೀರ ಕಣವಿ ಕಾವ್ಯ ಪ್ರಶಸ್ತಿ, ಪುತ್ತೂರು ಕನ್ನಡ ಸಂಘದ ಉಗ್ರಾಣ ಪ್ರಶಸ್ತಿ ಲಭಿಸಿವೆ. ನಂತರ ಹರಿದು ಕೂಡುವ ಕಡಲು (ಗಜಲ್) ಸಂಕಲನವನ್ನು ಲಡಾಯಿ ಪ್ರಕಾಶನ ಪ್ರಕಟಿಸಿತು. ಕಾರವಾರ ಆಕಾಶವಾಣಿ, ಧಾರವಾಡ ಆಕಾಶವಾಣಿಯಲ್ಲಿ ಕವಿತೆಗಳನ್ನು ವಾಚಿಸಿದ್ದಾರೆ. ಕತೆಗಳನ್ನು ಸಹ ಬರೆದು ಪ್ರಕಟಿಸಿದ್ದಾರೆ. ಕಾರವಾರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಕಾರ್ಯಕ್ರಮಗಳಿಗೆ ಬಂದು ಕವಿತೆ ವಾಚಿಸಿದ್ದಾರೆ. ಕೃಷಿ ಬದುಕಿನಲ್ಲಿ ಕಂಡ ಪ್ರತಿಮೆಗಳನ್ನು ಅದ್ಭುತವಾಗಿ ಗಜಲ್ ಪ್ರಕಾರದಲ್ಲಿ ಗಣೇಶ್ ಬಳಿಸಿದರು. ಅಷ್ಟರ ಮಟ್ಟಿಗೆ ಗಜಲ್‌ನಲ್ಲಿ ಹೊಸ ಪ್ರಯೋಗ ಮಾಡಿದರು. ತಣ್ಣನೆಯ ವ್ಯಕ್ತಿತ್ವದ ಗಣೇಶ್ ಅಪಾರವಾದ ವೈಚಾರಿಕತೆಯನ್ನು ಬಳಸಿಕೊಂಡವರು. ವೇದಿಕೆಗಾಗಿ ಎಂದೂ ಹಂಬಲಿಸದವರು. ಪ್ರಶಸ್ತಿಗಳ ಹಿಂದೆ ಬೀಳದವರು. ಕವನ ವಾಚನಕ್ಕೆ ಕರೆದರೆ, ಸದ್ದಿಲ್ಲದೇ ಬಂದು ಕವಿತೆ ವಾಚಿಸಿ ಹೋಗಿಬಿಡುವ, ಮಾತಿಗೆ ಎಳೆದರೆ ಮಾತ್ರ ಮಾತನಾಡುವ ಅಪರೂಪದ ವ್ಯಕ್ತಿ. ಬೌದ್ಧಿಕತೆ ಮತ್ತು ಪ್ರಾಮಾಣಿಕತೆಗಳ ಮಿಶ್ರಣದಂತಿರುವ ಕೃಷಿಕ ಗಣೇಶ್ ಅಪ್ಪಟ ಕವಿ ಮನಸ್ಸಿನವರು. ಹಳ್ಳಿಯಲ್ಲಿದ್ದು ಕೊಂಡೇ ಅಪಾರ ಜೀವನ ಪ್ರೀತಿಯನ್ನು ಕಟ್ಟಿಕೊಂಡವರು.………………………………………………………………………………………………………………………………. * ಕತೆ , ಕವಿತೆಗಳನ್ನು ಯಾಕೆ ಬರೆಯುತ್ತೀರಿ ? ಉತ್ತರ : ಯಾಕೆ ಬರೆಯುತ್ತೇನೆ ಎಂದು ಹೇಳುವುದು ಕಷ್ಟ. ಅದು ಆಯಾ ಕಾಲಕ್ಕೆ ಸಂದರ್ಭಕ್ಕೆ ಬದಲಾಗುತ್ತಲೇ ಇರುವ ಸಂಗತಿ.ಮೊದಮೊದಲು ನನ್ನ ಪಾಡಿಗೆ ನಾನು ಬರೆದುಕೊಳ್ಳುತ್ತಿದ್ದೆ. ಕ್ರಮೇಣ ಬರವಣಿಗೆಯೊಂದಿಗೆ ಒಂದು ಸಾಮಾಜಿಕ ಸಂಬAಧ- ಜವಾಬ್ದಾರಿ ಇದೆ ಅನಿಸಿತು.ನನಗೆ ಈಗೀಗ ಅನಿಸುವುದು, ನನಗಾಗಿಯೇ ನಾನು ದೀಪ ಹಚ್ಚಿಕೊಂಡAತಿದ್ದರೂ ಬೆಳಕು ಎಲ್ಲರಿಗೂ ಕಾಣಿಸಬೇಕು. * ಕತೆ ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು ? ಉತ್ತರ : ಕತೆಯಾಗಲೀ ಕಾವ್ಯವಾಗಲಿ ಹುಟ್ಟಿಕೊಳ್ಳುವ ಇಂಥದೇ ಕ್ಷಣ ಎಂಬುದಿಲ್ಲ. ಯಾವುದೇ ಕೆಲಸಗಳಲ್ಲಿ ತೊಡಗಿದರೂ ಆ ಕೆಲಸ ಬಿಟ್ಟು ಇನ್ನೊಂದರ ಬಗ್ಗೆ ಸಹಾ ಆಲೋಚಿಸುತ್ತಿರುವುದು ನನ್ನ ಸ್ವಭಾವ.ಹಾಗಾಗಿ ನನ್ನ ಬಹುತೇಕ ಕವಿತೆಗಳು ನನ್ನ ಕೆಲಸ ಮತ್ತು ಆಲೋಚನೆಗಳ ನಡುವಿನ ಸಂಬAಧದಿAದ ಹುಟ್ಟಿವೆ. * ನಿಮ್ಮ ಕತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ : ಇತ್ತೀಚೆಗೆ ನಾನು ಕತೆ ಬರೆದಿಲ್ಲ.ಹಿಂದೆ ಬರೆದ ಕಥೆಗಳಲ್ಲಿ ನನ್ನ ಸುತ್ತಮುತ್ತ ನಿತ್ಯ ಜರುಗಿದ- ಜರುಗುತ್ತಿರುವ ಘಟನೆಗಳ ಪ್ರಭಾವವಿತ್ತು. ಒಂದೆರಡು ಕಾಲ್ಪನಿಕ, ಪತ್ತೇದಾರಿ, ಮತ್ತು ಪುರಾಣ ಕಥೆಗಳನ್ನಾಧರಿಸಿ ಕೆಲವು ಸಣ್ಣ ಸಣ್ಣ ಕಥೆಗಳನ್ನು ಸಹಾ ಬರೆದಿದ್ದೇನೆ. * ಕತೆ ಕವಿತೆಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಉತ್ತರ : ಕವಿತೆಗಳ ಮಟ್ಟಿಗೆ, ಇಣುಕಿದೆ ಎನ್ನುವುದಕ್ಕಿಂತ ಬಾಲ್ಯದ ಪ್ರಭಾವವಿದೆ ಎನ್ನಬಹುದು.ಕಥೆಗಳಲ್ಲಿ ಬಾಲ್ಯದ ನೆನಪು ಕನಸು ಆಸಕ್ತಿ ಕುತೂಹಲಗಳು ಸೇರಿಕೊಂಡಿವೆ. ‘ಹರೆಯ’ದ ಎಂಬ ಪ್ರಭಾವದಿಂದ ನಾನು ಬರೆದಿಲ್ಲ ಎನಿಸುತ್ತದೆ. * ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ರಾಜಕೀಯವನ್ನು ಬೇರೆ ಬೇರೆ ಉದ್ದೇಶ- ಹಾದಿಯ ಮೂಲಕ ಬಳಸಿಕೊಳ್ಳಲಾಗುತ್ತಿದೆ.ನನ್ನ ಬಾಲ್ಯದ ದಿನಗಳಿಂದ ಕಂಡAತೆ ಹೇಳುವುದಾದರೆ ಹಿಂದೆ ರಾಜಕೀಯ ಪಕ್ಷಗಳು ಅನಕ್ಷರಸ್ಥರನ್ನು ,ಬಡವರನ್ನು ನಂಬಿಸುವ ಭಾಷಣ ಮತ್ತು ಸಿದ್ಧಾಂತ ಮುಂದಿಡುತ್ತಿದ್ದರು. ಈಗ ಅಕ್ಷರಸ್ಥರನ್ನು, ಶ್ರೀಮಂತರನ್ನು ನಂಬಿಸುವ, ಒಲಿಸಿಕೊಳ್ಳುವ ಸಿದ್ಧಾಂತ ಹೆಚ್ಚಾಗಿದೆ. ಇದನ್ನು `ರಾಜಕೀಯ ತಂತ್ರಗಾರಿಕೆ’, `ತಂತ್ರಗಾರಿಕೆಯ ಶ್ರೇಷ್ಠವಾದದ್ದು’ ಎಂದು ಜನರೂ ಸಹಾ ನಂಬುತ್ತಿದ್ದಾರೆ.ನಮ್ಮ ಸ್ವಾತಂತ್ರ‍್ಯ-ಸAವಿಧಾನ ನೀಡಿದ ಅನುಕೂಲತೆ ಇದ್ದಾಗ್ಯೂ, ಸಮರ್ಥ ರಾಜಕೀಯ ಸಿದ್ಧಾಂತ ಮುನ್ನೆಲೆಗೆ ಬರದೇ ಹೋಗುತ್ತಿರುವುದು ವಿಷಾದನೀಯ. * ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ದೇವರು ಇರುವ ಬಗ್ಗೆ ನನಗೆ ಯಾವುದೇ ಖಾತ್ರಿ ಸಿಕ್ಕಿಲ್ಲ.ಬಾಲ್ಯದಿಂದಲೂ ನನ್ನ ಕೌಟುಂಬಿಕ ಮತ್ತು ಸಾಂಸ್ಕೃತಿಕ ಜವಾಬ್ದಾರಿಯಾಗಿ ನಮ್ಮ ಮನೆ ಊರಿಗೆ ಸಂಬAಧಪಟ್ಟ ದೇವರು-ದಿಂಡರುಗಳ ಪೂಜೆಯನ್ನು ನಾನು ಮಾಡುತ್ತೇನೆ, ಆ ವಿಚಾರ ಬೇರೆ.ಹಾಗೆ ನೋಡಿದರೆ ದೈವ-ದೇವರು ಎಂಬುದು ಅವರವರ ವೈಯಕ್ತಿಕ ವಿಚಾರ.ನಮಗೆ ಸಮಾಧಾನವಾಗುವುದಾದರೆ ನಾವು ಒಂದು ಇರುವೆಯನ್ನೂ ಪೂಜಿಸಿಕೊಳ್ಳಬಹುದು, ಪ್ರಾರ್ಥಿಸಿ ಕೊಳ್ಳಬಹುದು. ನಮ್ಮಲ್ಲಿ ಹುಟ್ಟುವ ಎಲ್ಲ ತೊಡಕುಗಳು ದೇವರಿಂದಲ್ಲ, ಧರ್ಮದಿಂದ.ನನ್ನ ದೃಷ್ಟಿಯಲ್ಲಿ ಎಲ್ಲ ಧರ್ಮಗಳು ಕೂಡ ಆಯಾ ಕಾಲದಲ್ಲಿ ಆಯಾ ಪ್ರದೇಶದ ಜನ ಸಾಮೂಹಿಕವಾಗಿ ಬದುಕುವುದಕ್ಕೆ-ರಕ್ಷಿಸಿಕೊಳ್ಳುವುದಕ್ಕೆ ಕಂಡುಕೊAಡ ಒಂದೊAದು ಹಾದಿಗಳು. ಆ ಮಟ್ಟಿಗೆ ಅದು ಆಯಾಕಾಲದ ಸಂವಿಧಾನ.ಇವತ್ತು, ನಮ್ಮ ಕಾಲಕ್ಕೆ ಯೋಗ್ಯವೆನಿಸುವಂತಹ ಒಂದು ದೇಶವಾಗಿ ಬದುಕುವುದಕ್ಕೆ ಸಾಧ್ಯವಾಗುವಂತಹ ಒಂದು ಸಂವಿಧಾನವನ್ನು ನಮಗೆ ನೀಡಲಾಗಿದೆ. ಅದು ನಮ್ಮ ಧರ್ಮವಾಗಬೇಕು. * ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ : ಹೇಳುವುದು ಕಷ್ಟ. ಮೇಲೆ ನೀವು ಕೇಳಿದ `ಪ್ರಸ್ತುತ ರಾಜಕೀಯ’, `ಧರ್ಮ ದೇವರು’ ಪ್ರಶ್ನೆಗಳೊಂದಿಗೆ ಇದೂ ಬೆಸೆದುಕೊಂಡಿದೆ.ನೂಲಿನ ಮೇಲೆ ನಡೆದ ಹಾಗೆ, ತುಸು ಆ ಕಡೆ ಜಾರಿದರೆ ರಾಜಕೀಯದೆಡೆಗೂ, ಈ ಕಡೆ ಜಾರಿದರೆ ಧಾರ್ಮಿಕತೆಯೆಡೆಗೂ ಗುರುತಿಸಲ್ಪಡುವ ಅಪಾಯವಿದೆ. * ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ : ಸಾಹಿತ್ಯವಲಯದ ರಾಜಕಾರಣ ಉಸಾಬರಿ ಯಿಂದ ನಾನು ದೂರ. ನನ್ನ ಪಾಡಿಗೆ ನಾನು ಬರೆದುಕೊಂಡಿರುವುದೇ ನನಗಿಷ್ಟ.ನೋಡುತ್ತಿದ್ದರೂ ಕೇಳುತ್ತಿದ್ದರೂ ತಿಳಿಯುತ್ತಿದ್ದರೂ ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಾರೆ. * ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ : ದೇಶ ಎಂದರೆ ಏನು, ಹೇಗಿರಬೇಕು? ಎಂದು ಬಾಲ್ಯದಿಂದ ತಿಳಿದುಕೊಂಡು ಬಂದಿದ್ದೆವೋ ಈಗ ಹಾಗಿಲ್ಲ, ಹಾಗಾಗುತ್ತಿಲ್ಲ ಎನಿಸುತ್ತಿದೆ.ದೇಶದ ಅಭಿವೃದ್ಧಿ-ಆರ್ಥಿಕತೆಯ ಹಿನ್ನೆಲೆಯಿಂದ ಅಷ್ಟೇ ಅಲ್ಲ, ದೇಶದೊಳಗಿನ ಜನರ ಮತ್ತು ಸಮುದಾಯಗಳ ನಡುವಿನ ನಂಬಿಕೆ ವಿಶ್ವಾಸಗಳು ಸಡಿಲಗೊಳ್ಳುತ್ತಿದೆಯೇನೋ ಅನಿಸುತ್ತಿದೆ. * ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು ? ಉತ್ತರ : ನನಗೆ ಇನ್ನೂ ತುಂಬ ಬರೆಯುವುದಿದೆ ಅನಿಸುತ್ತದೆ. ಕತೆ ಕವಿತೆಗಳೊಂದಿಗೆ, ಕೆಲ ಹಾಸ್ಯ ಬರಹಗಳನ್ನು ಬರೆದೆ. ಎರಡು ಮೂರು ನಾಟಕಗಳನ್ನು ಬರೆದೆ.ಕವಿತೆಯಂತೆ ಮಕ್ಕಳ ಪದ್ಯಗಳನ್ನು ಬರೆಯುವುದು ಸಹ ನನಗೆ ಇಷ್ಟ, ಒಂದು ಪುಸ್ತಕ ವಾಗುವಷ್ಟು ಶಿಶುಗವಿತೆಗಳಿವೆ.ಈ ತನಕ ನಾನು ಬರೆದಿರುವುದು ಏನೂ ಅಲ್ಲ,ಇದಕ್ಕಿಂತಲೂ ಉತ್ತಮವಾಗಿ ಬರೆಯುವ ಸಾಧ್ಯತೆ ಇದೆ ಎಂದು ಆಗಾಗ ಅಂದುಕೊಳ್ಳುತ್ತೇನೆ. ಹಾಗೆ ಬರೆಯುವ ಅವಕಾಶ ಮತ್ತು ಧ್ಯಾನ ನನ್ನ ಬದುಕಿನಲ್ಲಿ ಉಳಿಯುತ್ತದೆ ಎಂದುಕೊAಡಿದ್ದೇನೆ. * ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು ? ಉತ್ತರ : ಕೇವಲ ೬ನೇ ತರಗತಿ ಓದಿರುವ ನಾನು ಆಂಗ್ಲ ಸಾಹಿತ್ಯವನ್ನು ಓದಲಾರೆ. ಹಲವು ಅನುವಾದಿತ ಸಾಹಿತ್ಯವನ್ನು ಓದಿದ್ದೇನೆ.ನಿರಂಜನರು ಸಂಪಾದಿಸಿದ ‘ವಿಶ್ವಕಥಾಕೋಶ’ದ ಪುಸ್ತಕಗಳು ನನ್ನನ್ನು ತುಂಬ ಕಾಡಿವೆ.ಇಷ್ಟದ ಸಾಹಿತಿಗಳು ಎಂದು ಒಬ್ಬ ಸಾಹಿತಿಯನ್ನು ಗುರುತಿಸಲಾರೆ. ಬೇಂದ್ರೆ, ಕುವೆಂಪು, ಕಾರಂತ, ಕಂಬಾರ, ಅಡಿಗರಿಂದ ಹಿಡಿದು ನನ್ನ ತಲೆಮಾರಿನವರೆಗಿನ ಅನೇಕರ ಕಾವ್ಯ ಕಥೆ ಪ್ರಬಂಧ ವಿಮರ್ಶೆ ಮೊದಲಾದವುಗಳನ್ನು ಇಷ್ಟಪಟ್ಟಿದ್ದೇನೆ. * ಈಚೆಗೆ ಓದಿದ ಕೃತಿಗಳಾವವು? ಉತ್ತರ : ಸಮುದಾಯದ ಗಾಂಧಿ, ಬುದ್ಧಚರಿತೆ, ವಿರಕ್ತರ ಬಟ್ಟೆಗಳು, ಜಾಂಬ್ಳಿ ಟುವಾಲು, ನಾನು ಕಸ್ತೂರ್…. ಇತ್ಯಾದಿ. * ನಿಮಗೆ ಇಷ್ಟವಾದ ಕೆಲಸ ಯಾವುದು? ಉತ್ತರ : ನಾನು ಒಪ್ಪಿಕೊಂಡ- ಅಪ್ಪಿಕೊಂಡ ನಿತ್ಯದ ನನ್ನ ಕೃಷಿ ಕೆಲಸ, ಓದು ಬರವಣಿಗೆ, ಅಪರೂಪದ ತಿರುಗಾಟ ಎಲ್ಲವೂ ನನಗೆ ಇಷ್ಟವೇ. * ನಿಮಗೆ ಇಷ್ಟವಾದ ಸ್ಥಳ ಯಾವುದು ? ಉತ್ತರ : ನನ್ನ ಮನೆ, ನೆಲ, ಊರು, ಬೆಟ್ಟ-ಗುಡ್ಡ, ಹೊಳೆ… ಹಾಗೆ ಹೇಳುವುದಾದರೆ ಇಡೀ ಭೂಮಿಯ ವೈವಿಧ್ಯತೆ ಮತ್ತು ಸಮೃದ್ಧತೆಯ ಬಗ್ಗೆ ನನಗೆ ಅತಿ ಪ್ರೀತಿ-ಕುತೂಹಲವಿದೆ. ಎಲ್ಲವನ್ನು ಕಾಣಬೇಕೆಂಬ ಹಂಬಲವಿದೆ. * ನಿಮ್ಮ ಪ್ರೀತಿಯ, ತುಂಬಾ ಇಷ್ಟ ಪಡುವ ಸಿನಿಮಾ ಯಾವುದು? ಉತ್ತರ :ಇತ್ತೀಚಿನ ವರ್ಷಗಳಲ್ಲಿ ನಾನು ತುಂಬ ಇಷ್ಟಪಟ್ಟು ಮತ್ತೆ ಮತ್ತೆ ನೋಡಿದ ಸಿನಿಮಾಗಳೆಂದರೆ ಕನ್ನಡದ ‘ಮೌನಿ’ ಮತ್ತು ‘ಕನಸೆಂಬೋ ಕುದುರೆಯನೇರಿ’ ‘ಬೇಲಿ ಮತ್ತು ಹೊಲ’. ಹಿಂದಿ ಭಾಷೆಯ ‘ಪಿಕೆ’. * ನೀವು ಮರೆಯಲಾರದ ಘಟನೆ ಯಾವುದು? ಉತ್ತರ : ಮರೆಯಲಾಗದ ಘಟನೆ ಎಂದು ಯಾವುದೋ ಒಂದನ್ನು ಹೇಳಲಾರೆ.ಸಾಮಾನ್ಯ ಬುದ್ಧಿ ತಿಳಿದಾಗಿನಿಂದ ನನ್ನ ವ್ಯಾಪ್ತಿಯಲ್ಲಿ ನಡೆದ ಘಟನೆಗಳನ್ನು ಸಾಮಾನ್ಯ ನೆನಪಿಟ್ಟುಕೊಳ್ಳುತ್ತ ಬಂದಿದ್ದೇನೆ. ಪ್ರತಿಯೊಂದೂ ನನಗೆ ಮರೆಯಲಾಗದ ಘಟನೆಯೇ, ಕೆಲ ಮಟ್ಟಿಗೆ ಮರೆಯಲಾಗದುದು ನನ್ನ ದೌರ್ಬಲ್ಯವೂ ಹೌದು. ಅವುಗಳಲ್ಲಿ ನನ್ನನ್ನು ತುಂಬ ಕಾಡುವುದು ಸಾವು. ನಾನು ಆರೇಳು ವರ್ಷದವನಿದ್ದಾಗ ಸಂಭವಿಸಿದ ನನ್ನ ತಂದೆಯ ದುರ್ಮರಣದಿಂದ ಆರಂಭವಾದದ್ದು ಅದು. ಸಾವು ಅನಿವಾರ್ಯ ಮತ್ತು ಸಹಜ ಎಂಬುದು ತಿಳಿದಿದ್ದರೂ, ಪ್ರತಿ ಸಾವಿನ ನಂತರ ಉಂಟಾಗುವ ಶೂನ್ಯದ ಅನುಭವ ನನ್ನನ್ನು ಮತ್ತೆ ಮತ್ತೆ ಕದಡುತ್ತದೆ.********************************** ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಭಿವ್ಯಕ್ತಿ ಮನುಷ್ಯರ ಸಹಜ ಪ್ರಕ್ರಿಯೆ
ಮಹಾಂತೇಶ್ ಪಲದಿನ್ನಿ ಮಿಥುನ ಶಿಲ್ಪಗಳ ಮೂಲಕ ಸಾಮಾಜಿಕ ಎಚ್ಚರಿಕೆ ನೀಡುವ ಸಂದೇಶವೂ ಇದೆ ‘ * ಕಲಾವಿದ ಡಾ.ಮಹಾಂತೇಶ್ ಎಂ.ಪಲದಿನ್ನಿ . ವಿಜಾಪುರ ಇವರ ಊರು. ಹುಟ್ಟಿದ್ದು ೧೯೮೪. ಕಲಾ ಶಿಕ್ಷಣ ಕಲಿತದ್ದು ಹಂಪಿ ಕನ್ನಡ ವಿವಿ ಶಿಲ್ಪಕಲಾ ವಿಭಾಗದಲ್ಲಿ. ಬಿಎಫ್‌ಎ ಶಿಲ್ಪಕಲೆ ಕಲಿತ ಅವರು ಮೈಸೂರಿನ ಕಾವಾದಲ್ಲಿ ಮಾಸ್ಟರ್ ಆಫ್ ಆರ್ಟ ಕಲಿತರು. ನಂತರ ಶಿಲ್ಪಕಲೆಯಲ್ಲಿ ಎಂ.ಫಿಲ್.ಪದವಿ ಹಾಗೂ ಡಾಕ್ಟರೇಟ್ ಪದವಿಗಳನ್ನು ಹಂಪಿ ಕನ್ನಡ ವಿ.ವಿ.ಯಿಂದ ಪಡೆದರು. ಹಂಪಿ ವಿಶ್ವ ವಿದ್ಯಾಲಯದ ಶಿಲ್ಪಕಲಾ ವಿಭಾಗ ಬದಾಮಿ ಶಾಖೆಯಲ್ಲಿ ಅವರು ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಲೆಗಳನ್ನು ಕೆತ್ತಿ ಕಲೆ ಅರಳಿಸುವ ಅವರು ಈವರೆಗೆ ರೂಪಿಸಿದ ಶಿಲ್ಪಗಳನ್ನು ೨೦೧೮ರಲ್ಲಿ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನವನ್ನು ಹೈದರಾಬಾದ್‌ನಲ್ಲಿ ಏರ್ಪಡಿಸಿದ್ದರು. ಜವಾಹರಲಾಲ್ ನೆಹರು ಆರ್ಕಿಟೆಕ್ಚರ್ ಆಂಡ್ ಫೈನ್ ಆರ್ಟ ಯುನಿವರ್ಸಿಟಿಯಲ್ಲಿ ಅವರ ಶಿಲ್ಪಕಲಾ ಪ್ರದರ್ಶನ ನಡೆದಿದೆ. ೨೦೦೭, ೨೦೦೮,೨೦೦೯,೨೦೧೦ ರಲ್ಲಿ ಕ್ರಮವಾಗಿ ಕೇರಳ, ಚೆನ್ನೆöÊ, ವಿಜಾಪುರ, ಧಾರವಾಡ, ಹಾಗೂ ೨೦೧೧ರಲ್ಲಿ ಬೆಂಗಳೂರು, ಕುಂದಾಪುರದಲ್ಲಿ ಅವರ ಶಿಲ್ಪಕಲಾ ಕೃತಿಗಳ ಪ್ರದರ್ಶನ ನಡೆದಿದೆ. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ೧೯೯೯ ರಿಂದ ೨೦೧೭ರವರೆಗೆ ೨೬ ಕಡೆ ಅವರ ಶಿಲ್ಪಗಳ ಪ್ರದರ್ಶನಗಳು ನಡೆದಿವೆ. ೨೦೦೯ ರಿಂದ ೨೦೧೩ರವರೆಗೆ ಅವರು ರಾಜ್ಯದ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿ ಸಹ ಡಾ. ಮಹಾಂತೇಶ್ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಹಾಗೂ ದೇಶದ ವಿವಿದೆಡೆ ೨೨ ಕಲಾ ಶಿಬಿರಗಳಲ್ಲಿ ಅವರು ಭಾಗವಹಿಸಿ ಶಿಲ್ಪಗಳನ್ನು ರೂಪಿಸಿದ್ದಾರೆ. ಅವರ ಅತ್ಯುತ್ತಮ ಶಿಲ್ಪಗಳನ್ನು ಕಾರವಾರದ ರಾಕ್ ಗಾರ್ಡನ್ ಸೇರಿದಂತೆ ಹಂಪಿ ಕನ್ನಡ ವಿವಿಯಲ್ಲಿ, ಪಂಜಾಬದ ಪಟಿಯಾಲಾ ಕಲಾಗ್ರಾಮದಲ್ಲಿ, ಇಳಕಲ್ ಚಿತ್ರಕಲಾ ವಿದ್ಯಾಲಯ, ಬಾಗಲಕೋಟೆ ಜಿಲ್ಲಾ ಆಡಳಿತ ಭವನ, ಮಧ್ಯಪ್ರದೇಶದ ಖುಜರಾಹೋ ಶಿಲ್ಪಗ್ರಾಮದಲ್ಲಿ, ಬೆಂಗಳೂರು ಕಲಾ ಗ್ರಾಮದಲ್ಲಿ ,ದಾವಣಗೆರೆ ಕುವೆಂಪು ವಿವಿ ಆವರಣದಲ್ಲಿ, ಕುಪ್ಪಳ್ಳಿಯಲ್ಲಿ, ಬಳ್ಳಾರಿಯಲ್ಲಿ , ಸತ್ತೂರು ಮಠದಲ್ಲಿ, ಹೂವಿನಹಡಗಲಿ ರಂಗಭಾರತಿಯಲ್ಲಿ ಕಾಣಬಹುದಾಗಿದೆ. ………………………………………………………………………….. ನಾಗರಾಜ ಹರಪನಹಳ್ಳಿ : ಬಣ್ಣಗಳ ಜೊತೆ ,ಶಿಲೆಗಳ ಜೊತೆ ಕುಂಚ ಮತ್ತು ಉಳಿಯ ಜೊತೆ ಕಳೆದ ರೋಚಕ ಕ್ಷಣ ಯಾವುದು ? ನೆನಪಲ್ಲಿ ಉಳಿದ ಒಂದು ಪ್ರಸಂಗ ಕುರಿತು ವಿವರಿಸಿ …. ಮಹಾಂತೇಶ್ ಪಲದಿನ್ನಿ : ವಿದ್ಯಾರ್ಥಿಗಳ ಜೊತೆಗೆ ನಿಸರ್ಗ ಚಿತ್ರ ಬಿಡಿಸಲು ಹೋದಾಗ ಅವರ ಜೊತೆ ಸೇರಿ ಒಂದು ವರ್ಣಚಿತ್ರ ಬಿಡಿಸಿರುವುದು ಸ್ಮರಣೀಯ ಕ್ಷಣ. ಪ್ರಶ್ನೆ : ಕಲೆ ಅಥವಾ ಚಿತ್ರ, ಹುಟ್ಟುವ ಕ್ಷಣ ಯಾವುದು ? *ಉತ್ತರ :* ಕಲೆ ಯಾವ ಕ್ಷಣದಲ್ಲಿಯಾದರು ಹುಟ್ಟಬಹುದು ಕಲೆಗೆ ನಿರ್ದಿಷ್ಟತೆ ಇಲ್ಲ. ಪ್ರಶ್ನೆ : ನಿಮ್ಮ ಶಿಲ್ಪಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ? ಉತ್ತರ : ಬಾದಾಮಿಯಲ್ಲಿರುವ ಏಕಶಿಲಾ ಬೆಟ್ಟದಲ್ಲಿ ನಿರ್ಮಾಣವಾಗಿರುವ ಗುಹಾಂತರ ಶಿಲ್ಪಗಳು, ಅದರ ವಸ್ತು ವಿನ್ಯಾಸಗಳು, ಕಥಾನಕ ಶಿಲ್ಪಗಳು, ಸಾಲಭಂಜಿಕೆ ಶಿಲ್ಪಗಳು, ನನಗೆ ಹೆಚ್ಚು ಇಷ್ಟವಾಗಿವೆ. ಲಜ್ಜಾಗೌರಿ ಶಿಲ್ಪಗಳು ನನಗೆ ಬಹಳ ಕಾಡುವ ವಿಷಯ. ಪ್ರಶ್ನೆ : ನಿಮ್ಮ ಶಿಲ್ಪಗಳಲ್ಲಿ ಬಾಲ್ಯ, ಹರೆಯ ಇಣುಕಿದೆಯೇ ? ಉತ್ತರ : ನಮ್ಮ ಸುತ್ತಲಿನ ಪರಿಸರವು ಕಾರಣವಾಗುತ್ತದೆ. ನಾವು ಕಳೆದ ಬಾಲ್ಯದ ನೆನಪುಗಳು ನಮಗೆ ಅರಿಯದೆ ಶಿಲ್ಪಗಳನ್ನು ರಚಿಸುವಾಗ ಅದರಲ್ಲಿ ಮೂಡುತ್ತದೆ. ಹಾಗೂ ಕೆಲವು ನಮ್ಮಲ್ಲಿರುವಂತಹ ಹೇಳಿಕೊಳ್ಳಲಾಗದ ವಿಷಯವನ್ನು ಶಿಲ್ಪಗಳ ಮೂಲಕ ತೋರಿಸುವುದು. ನಮ್ಮ ಜೀವನದಲ್ಲಿ ನಡೆದಂತಹ ಘಟನೆಗಳನ್ನು ಸಹ ಯಾವುದೇ ಮಾಧ್ಯಮದ ಮೂಲಕ ಅದನ್ನು ತೋರ್ಪಡಿಸಲು ಇಲ್ಲಿ ಅವಕಾಶವಿರುತ್ತದೆ. ಪ್ರಶ್ನೆ : ಪ್ರೀತಿಯ ಅಭಿವ್ಯಕ್ತಿ ನಿಮ್ಮ ಶಿಲ್ಪಗಳಲ್ಲಿ ಹೆಚ್ಚು …ಅಲ್ವಾ ? ಉತ್ತರ : ಅಭಿವ್ಯಕ್ತಿ ಎಂಬ ಪದವನ್ನು ಸರಳವಾಗಿ ವಿವರಿಸುವುದಾದರೆ, ನಮ್ಮ ಭಾವನೆಗಳನ್ನು ದೃಶ್ಯದ ಮೂಲಕ ಹೊರಹಾಕುವುದು. ನಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತ ಪಡಿಸುವುದಕ್ಕೆ ಅಭಿವ್ಯಕ್ತಿ ಎಂಬ ಸಾಧನದ ಮೂಲಕ ಚಿತ್ರ, ಶಿಲ್ಪದ ಮೂಲಕವೂ ವ್ಯಕ್ತಪಡಿಸಬಹುದು. ಈ ಎಲ್ಲ ದಾರಿಗಳ ಮೂಲಕ ಪ್ರಕಟಪಡಿಸುವುದೇ ಅಭಿವ್ಯಕ್ತಿ ಅನ್ನಿಸಿಕೊಳ್ಳುತ್ತದೆ. ಅಭಿವ್ಯಕ್ತಿ ಮನುಷ್ಯರ ಸಹಜ ಪ್ರಕ್ರಿಯೆ. ಪ್ರಶ್ನೆ : ಮಿಥುನ ಶಿಲ್ಪ ಗಳನ್ನು ಆಧುನಿಕ ಕಲಾ ಶೈಲಿಯಲ್ಲಿ ಹೆಚ್ಚು ರೂಪಿಸಿದ್ದೀರಿ… ಹೇಗೆ ಇದರ ಪ್ರಭಾವ ಆಯಿತು. ಏನು ಉದ್ದೇಶ ? ಉತ್ತರ : ಮಿಥುನ ಶಿಲ್ಪಗಳು ಕ್ರಿ.ಶ.೨ ನೇ ಶತಮಾನದಷ್ಟು ಪ್ರಾಚೀನವಾದುದು. ಕೆಲವು ಶಿಲ್ಪಗಳು ದೇವಾಲಯದ ಗೋಪುರದ ಮೇಲೆ, ದೇವಾಲಯದ ಭಿತ್ತಿಯ ಮೇಲೆ ರಚಿಸಲಾಗಿದೆ. ಅವುಗಳ ಹಿಂದಿನ ಆಶಯ ಬೇರೆ. ಹಿಂದಿನ ಕಾಲದಲ್ಲಿ ಲೈಂಗಿಕತೆ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಉದ್ದೇಶವಾಗಿತ್ತು. ನಾನು ರಚಿಸಿದ ಶಿಲ್ಪಗಳಲ್ಲಿ ಮಿಥುನ ಶಿಲ್ಪಗಳನ್ನು ಪ್ರಸ್ತುತ ಸನ್ನಿವೇಶ ನಡೆದಿರುವ ಘಟನೆ ಮತ್ತು ಲೈಂಗಿಕ ಕಿರುಕುಳ, ಸಮಾಜಕ್ಕೆ ಒಳಿತಾಗುವ ದೃಶ್ಯವನ್ನು ನನ್ನ ಶಿಲ್ಪಗಳಲ್ಲಿ ಕಾಣಬಹುದು. ಪ್ರಶ್ನೆ : ನಾಡಿನ ದೇವಾಲಯದಲ್ಲಿನ ಶೃಂಗಾರ ಮತ್ತು ಮಿಥುನ ಶಿಲ್ಪಗಳ ಪ್ರಭಾವ ನಿಮ್ಮ ಮೇಲಿದೆಯೇ? ಉತ್ತರ : ದೇವಾಲಯದಲ್ಲಿರುವ ಕಥಾನಕ, ದೇವತಾ ಶಿಲ್ಪಗಳು, ಮಿಥುನ ಶಿಲ್ಪಗಳು, ಮತ್ತು ಆ ಕಾಲದಲ್ಲಿ ರಚಿತವಾದ ಶಿಲ್ಪಶಾಸ್ತ್ರಗಳು ಗ್ರಂಥಗಳು ದೇವಾಲಯಗಳ ನಿರ್ಮಾಣ ಇವೆಲ್ಲ ಪ್ರಭಾವ ನನ್ನ ಕೃತಿಗಳ ಮೇಲಾಗಿದೆ. ಪ್ರಶ್ನೆ : ಕಲಾ ಪ್ರಕಾರದಲ್ಲಿ ಯಾವ ಮಾಧ್ಯಮ ನಿಮಗೆ ಇಷ್ಟ? ಉತ್ತರ : ಶಿಲಾ ಮಾಧ್ಯಮ ಪ್ರಶ್ನೆ : ಬದಾಮಿ , ಪಟ್ಟದಕಲ್ಲು ಶಿಲಾ ಬಾಲಕಿಯರಿಗೂ, ಹಳೇಬೀಡು, ಬೇಲೂರು ಶಿಲಾ ಬಾಲಕಿಯರಲ್ಲಿ ಯಾರು ಚೆಂದ? ಆ ಶಿಲ್ಪಗಳ ವಿಶೇಷತೆ ಏನು ? ಉತ್ತರ : ಚೆಂದ ಪ್ರಶ್ನೆಯ ಬರುವುದಿಲ್ಲ ಆಯಾ ಕಾಲಘಟ್ಟದಲ್ಲಿ ಪ್ರಚಲಿತದಲ್ಲಿರುವ ಕೆಲವು ಉಡುಗೆ ತೊಡುಗೆಗಳನ್ನು ಧರಿಸಿರುತ್ತಾರೆ. ಬಾದಾಮಿ ಚಾಲುಕ್ಯ ಶಿಲ್ಪಗಳಲ್ಲಿ ಉದ್ದ ನೀಳವಾಗಿ ವಸ್ತ್ರವಿನ್ಯಾಸಗಳು, ಅಂದಿನ ಕಾಲದಲ್ಲಿ ಪ್ರಚಲಿತವಿದ್ದ ವೇಷಭೂಷಣಗಳು ಇಲ್ಲಿ ರಚನೆಯಾಗಿವೆ. ವಿವಿಧ ಭಾವನಾತ್ಮಕ ಸಂಬAಧವನ್ನು ಹೊಂದಿರುವ ಜೋಡಿ ಶಿಲ್ಪ, ಕೆಲವು ಸಂದರ್ಭಗಳಲ್ಲಿ ಒಂದು ಹೊಸ ರೀತಿಯ ಶಿಲ್ಪಗಳು ಇಂದಿಗೂ ನಾವು ಕಾಣುತ್ತೇವೆ. ಬೇಲೂರಿನ ಶಿಲ್ಪಗಳು ಪ್ರತ್ಯೇಕವಾದ ಶಿಲೆಯನ್ನು ಬಳಸಿ ರಚಿಸಿದ ಶಿಲ್ಪಗಳನ್ನು ತಂದು ಜೋಡಿಸಲಾಗಿದೆ. ಆದರೆ ಬಾದಾಮಿಯಲ್ಲಿ ಏಕಶಿಲಾ ಬೆಟ್ಟದಲ್ಲಿ ಅಖಂಡ ಶಿಲೆಯಲ್ಲಿ ಕೆತ್ತಿರುವುದು ವಿಶೇಷವಾಗಿದೆ. ಅಲ್ಲದೆ ಕಠಿಣವಾದ ಮರಳು ಶಿಲೆಯನ್ನು ಇಲ್ಲಿ ಶಿಲ್ಪಕ್ಕೆ ಬಳಸಿರುವುದು ಮಹತ್ವದ್ದು. ಇದು ಶಿಲ್ಪಕಾರನ ನೈಪುಣ್ಯ, ಕಠಿಣ ಪರಿಶ್ರಮ, ವಿಷಯ ಹಾಗೂ ಮಾಧ್ಯಮದ ಬಗ್ಗೆ ಇರುವ ತಿಳುವಳಿಕೆಯನ್ನು ಪ್ರತಿಬಿಂಬಿಸುತ್ತದೆ. ಪ್ರಶ್ನೆ : ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ಪ್ರಸ್ತುತ ರಾಜಕೀಯ ಜಾತಿಯಿಂದ ತುಂಬಾ ಹದಗೆಟ್ಟಿದೆ. ಕಲಾವಿದರಿಗೆ ಇಂದಿನ ಪರಿಸ್ಥಿತಿಯಲ್ಲಿ ಬೆಲೆ ಇಲ್ಲದಂತಾಗಿದೆ. ತಮ್ಮ ಸ್ವಾರ್ಥಕ್ಕಾಗಿ ಕಲಾವಿದರನ್ನು ಬಲಿಪಶು ಮಾಡುತ್ತಿದ್ದಾರೆ. ರಾಜಕೀಯ ಅನ್ನೋದೆ ಇರಬಾರದು ನನ್ನ ಪ್ರಕಾರ ಪ್ರಶ್ನೆ : ಧರ್ಮ ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು ? ಉತ್ತರ : ಧರ್ಮ, ದೇವರು ಅಂದರೆ ಯಾವುದು ನಂಬಿಕೆ ಅನ್ನುವುದೆ ದೇವರು ನನ್ನ ಪ್ರಕಾರ. ಧರ್ಮವು ಮಾನವ ಸಮಾಜವನ್ನು ಸಂರಕ್ಷಿಸುವ ಒಂದು ಪ್ರಮುಖ ಸಾಧನವಾಗಿದೆ. ಧರ್ಮೋ ರಕ್ಷತಿ ರಕ್ಷತಃ ಅಂದರೆ ಧರ್ಮವನ್ನು ರಕ್ಷಿಸುವವರನ್ನು ಧರ್ಮವು ರಕ್ಷಿಸುತ್ತದೆ. ಧರ್ಮನಾಶವಾದಲ್ಲಿ ಜನಾಂಗವೇ ನಾಶವಾಗುವುದು. ಒಳ್ಳೆಯ ರೀತಿಯಲ್ಲಿ ಬದುಕುವುದೆ ಧರ್ಮ. ದಯಯೇ ಧರ್ಮದ ಮೂಲ. ದೇವನೊಬ್ಬ ನಾಮ ಹಲವು. ಪ್ರಶ್ನೆ : ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತಿದೆ ? ಉತ್ತರ : ಪ್ರಸ್ತುತ ಸಾಂಸ್ಕೃತಿಕ ವಾತಾವರಣ, ಅಕಾಡೆಮಿಗಳಲ್ಲಿಯೂ ಕೂಡ ರಾಜಕೀಯದಿಂದ ಹೊರತಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಯಾವುದೇ ಕಾರ್ಯಗಳಲ್ಲಿ ರಾಜಕೀಯ ಮುಖ್ಯ ಪಾತ್ರ ವಹಿಸುತ್ತಿದೆ. ಪ್ರಶ್ನೆ : ಚಿತ್ರ , ಕಲಾ ಲೋಕ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ : ಪ್ರಸ್ತುತ ಇತ್ತೀಚಿನ ದಿನಗಳಲ್ಲಿ ಕಲಾ ಲೋಕದಲ್ಲಿಯೂ ಕೂಡ ರಾಜಕೀಯ ಮಧ್ಯಸ್ಥಿಕೆ ವಹಿಸುತ್ತಿದೆ. ರಾಜಕೀಯ ಸ್ವಾರ್ಥವೇ ಹೆಚ್ಚಾಗಿದೆ. ನಿಜವಾದ ಕಲಾವಿದರನ್ನು ಗುರುತಿಸುವುದು ಕಷ್ಟವಾಗಿದೆ. ಪ್ರಶ್ನೆ : ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸು ಏನು ಹೇಳುತ್ತಿದೆ? ಉತ್ತರ : ಮನುಜ ಜನ್ಮವು ಒಂದೆ ಎಂದು ತಿಳಿದುಕೊಂಡು ಧರ್ಮ ದಿಂದ ನಡೆಯಬೇಕು. ಪ್ರಶ್ನೆ : ಕನ್ನಡ ಹಾಗೂ ಆಂಗ್ಲ ಭಾಷೆಯ ಕಲಾಪ್ರಕಾರದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕಲಾವಿದ ಯಾರು ? ಉತ್ತರ : ಕರ್ನಾಟಕದ ಶಿಲ್ಪಿ. ದೇವಲಕುಂದ ವಾದಿರಾಜ ಹಾಗೂ ಪಾಶ್ಚಿಮಾತ್ಯ ಕಲಾವಿದ ಹೆನ್ರಿ ಮೋರ್. ********************** ************************************* ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಭಿವ್ಯಕ್ತಿ ಮನುಷ್ಯರ ಸಹಜ ಪ್ರಕ್ರಿಯೆ Read Post »
ಶಾಂತಿ ಬೀಜಗಳ ಜತನ’
ಸಾಹಿತ್ಯದ ಬರವಣಿಗೆ ಗಂಭೀರವಾದಂತೆಲ್ಲಾ ಲೇಖಕರ ಜವಾಬ್ದಾರಿ ಹೆಚ್ಚುತ್ತದೆ ಡಾ. ಪ್ರಕಾಶ ಗ. ಖಾಡೆ ಬಾಗಲಕೋಟೆಯಲ್ಲಿ ಅಧ್ಯಾಪಕರಾಗಿರುವ ಡಾ. ಪ್ರಕಾಶ ಗಣಪತಿ ಖಾಡೆ ಅವರು ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ೧೦-೦೬-೧೯೬೫ ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ, ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾಗಿ , ೨೦೦೫ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ “ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ” ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಮಾಡುತ್ತಿದ್ದಾರೆ. ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ, ಜಾನಪದ, ಶಿಕ್ಷಣ, ಸಂಶೋಧನೆ ಹಾಗೂ ಸಂಘಟನೆ ಕ್ಷೇತ್ರದಲ್ಲಿ ಸದಾ ಕ್ರಿಯಾಶೀಲ ವ್ಯಕ್ತಿತ್ವ, ಕನ್ನಡದ ಪ್ರಮುಖ ಪತ್ರಿಕೆ, ಆಕಾಶವಾಣಿ, ದೂರದರ್ಶನಗಳಲ್ಲಿ ನಿರಂತರವಾಗಿ ಲೇಖನ, ಕವಿತೆ, ಕಥೆ, ವಿಮರ್ಶೆ ಪ್ರಕಟ ಮತ್ತು ಪ್ರಸಾರವಾಗಿವೆ. ಈವರೆಗೆ ಗೀತ ಚಿಗಿತ, ಪ್ರೀತಿ ಬಟ್ಟಲು, ತೂಕದವರು, ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ, ಕೃಷ್ಣಾ ತೀರದ ಜನಪದ ಒಗಟುಗಳು, ಮುನ್ನುಡಿ ತೋರಣ, ಜತ್ತಿ ಕಾವ್ಯಾಭಿವಂದನ, ನೆಲಮೂಲ ಸಂಸ್ಕೃತಿ, ಕನ್ನಡ ಪತ್ರಿಕೆ ಮತ್ತು ಸಾಹಿತ್ಯ, ಜಾನಪದ ಕೋಗಿಲೆ ಗೌರಮ್ಮ ಚಲವಾದಿ, ಸಾಹಿತ್ಯ ಸಂಗತಿ ,ಮೌನ ಓದಿನ ಬೆಡಗು,ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ,ಶಾಂತಿ ಬೀಜಗಳ ಜತನ ಸೇರಿದಂತೆ ೨೭ ಕೃತಿಗಳನ್ನು ಪ್ರಕಟಿಸಿದ್ದಾರೆ. ಮುಧೋಳ,ಶಿವಮೊಗ್ಗ, ವಿಜಾಪುರ ಮತ್ತು ಮೈಸೂರುಗಳಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಹಂಪಿ ಉತ್ಸವ,ಮೈಸೂರು ದಸರಾ,ನವರಸಪುರ ಉತ್ಸವಗಳಲ್ಲಿ ಕವಿತೆ ವಾಚನ. ಕೇರಳದಲ್ಲಿ ಜರುಗಿದ ಕನ್ನಡ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ. ಉತ್ತಮ ವಾಗ್ಮಿ, ಅಪರೂಪದ ಶಿಕ್ಷಣ ಚಿಂತಕ ಡಾ. ಪ್ರಕಾಶ ಖಾಡೆ ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿಯೂ ಕಾರ್ಯನಿರ್ವಹಿದ್ದಾರೆ. ಶಾಂತಿ ಬೀಜ ಜತನದ ಕವಿ …………………………………. ನಾಗರಾಜ ಹರಪನಹಳ್ಳಿ : ಕತೆ, ಕವಿತೆಗಳನ್ನು ಯಾಕೆ ಬರೆಯುತ್ತೀರಿ? ಪ್ರಕಾಶ್ ಖಾಡೆ ; ಮೊದಲೆಲ್ಲ ಹೆಸರಿಗಾಗಿ ಬರೆಯಬೇಕೆನಿಸುತ್ತಿತ್ತು, ಈಗ ಹಾಗಿಲ್ಲ. ಸಾಹಿತ್ಯದ ಬರವಣಿಗೆ ಗಂಭೀರವಾದಂತೆಲ್ಲಾ ಲೇಖಕರ ಜವಾಬ್ದಾರಿ ಹೆಚ್ಚುತ್ತದೆ, ನನಗೂ ಆಗಿದ್ದು ಅದೇ. ಒಂದು ಕತೆ, ಒಂದು ಕವಿತೆ ಉಂಟು ಮಾಡುವ ಪರಿಣಾಮವಿದೆಯಲ್ಲ ಅದು ಬೆರಗು ಹುಟ್ಟಿಸುವಂಥದು. ನನ್ನ ರಚನೆಯ ಇಂಥ ಸಾಲುಗಳನ್ನು ನಾನೇ ಅನೇಕ ಬಾರಿ ಓದಿ ಬೆರಗುಗೊಂಡಿದ್ದೇನೆ. ಸಾಹಿತ್ಯ ಸಾರ್ಥಕತೆ ಕಂಡಾಗ ಅದರ ಮೌಲ್ಯ ಹೆಚ್ಚುತ್ತದೆ, ರಚನೆ ಗಂಭೀರವಾಗಿ ಸಾಗುತ್ತದೆ, ಬರಹ ತನ್ನಿಂದ ತಾನೆ ಬರೆಸಿಕೊಳ್ಳುತ್ತದೆ, ಇಲ್ಲಿ ಕವಿ ಸಣ್ಣವನಾಗಬೇಕು, ಕವಿತೆ ದೊಡ್ಡದಾಗಬೇಕು, ಇಂಥ ಭಾವ ನನ್ನಲ್ಲಿ ಬಂದ ಘಳಿಗೆಯಿಂದ ನಾನೇ ಮತ್ತೆ ಮತ್ತೇ ಕೇಳಿಕೊಳ್ಳುತ್ತೇನೆ, ಹೌದು ನಾನೇಕೆ ಬರೆಯುತ್ತೇನೆ,ಕ್ಷಮಿಸಿ ಉತ್ತರಕ್ಕಾಗಿ ಇನ್ನೂ ಹುಡುಕುತ್ತಿದ್ದೇನೆ. ಪ್ರಶ್ನೆ ; ಕತೆ ಅಥವಾ ಕವಿತೆ ಹುಟ್ಟುವ ಕ್ಷಣ ಯಾವುದು. ಉತ್ತರ : ಅದೊಂದು ಕ್ಷಣಿಕದ ಸಂದರ್ಭ,ಅದು ಹುಟ್ಟಿದ ಘಳಿಗೆಯೇ ಗೊತ್ತಾಗೊಲ್ಲ,ಒಂದು ಕತೆ ,ಒಂದು ಕವಿತೆ ಹುಟ್ಟುತ್ತಿದೆ ಎಂದರೆ ,ಅದರ ಹಿಂದೆ ನಮಗರಿವಿಲ್ಲದೇ ಅನೇಕ ಅನುಭವಗಳು ,ಸಂದರ್ಭಗಳು ರೂಪು ಪಡೆದುಕೊಳ್ಳತ್ತಿರುತ್ತವೆ,ಒಂದು ರಚನೆ ಪೂರ್ಣವಾದಾಗ ಅದರ ನಿಲುಗಡೆ,ಈ ನಿಲುಗಡೆಯ ಹಿಂದಿನ ಚಲನೆಗಳು ಇವತ್ತಿಗೂ ಲೆಕ್ಕಕ್ಕೆ ಸಿಗುತ್ತಿಲ್ಲ,ಹಾಗಾಗಿ ಆ ಕ್ಷಣ ಎಂಬುದು ಒಂದು ಬಯಲು,ಒಂದು ಬೆಳಕು. ಪ್ರಶ್ನೆ ; ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು.? ಉತ್ತರ : ಮೂರು ದಶಕಗಳ ಕಾಲ ನನ್ನ ಕಾವ್ಯದ ಪಯಣ, ನಾನು ಬರೆವ ಹೊತ್ತಿಗೆ ನವ್ಯ ಮರೆಯಾಗಿ ,ಬಂಡಾಯ ಕಾವ್ಯದ ಬಿರುಸು ವಿಜೃಂಭಿಸುತ್ತಿತ್ತು. ಈಗ ಎಲ್ಲ ನಿರಾಳ ಹೊಸ ಕಾಲ, ಹೊಸ ಓದುಗ ಬಳಗ, ಅದರಲ್ಲೂ ವಿಶ್ವವ್ಯಾಪಿ. ಬಹುಬೇಗ ಕಾವ್ಯ ತಲುಪುವ ಕಾಲ.ಈಗಂತೂ ತುಂಬಾ ಅವಸರದ ಜಗತ್ತು, ಎಲ್ಲವನ್ನೂ ಅಂದರೆ ಮೇಘಸ್ಪೋಟ ಮಳೆ, ಪ್ರವಾಹ, ಪ್ರಳಯ ಇಂಥ ಪ್ರಾಕೃತಿಕ ಅವಘಡಗಳನ್ನೂ ಕಾಣಬೇಕಾದ ಕೆಟ್ಟ ಕಾಲ.ಜನತೆಯ ನೆಮ್ಮದಿ ಕೆಡಿಸುವ ಆಗುಂತಕ ವಿಷಯಗಳು,ಹಿಂಸೆ,ದುರಾಡಳಿತ,ಭ್ರಷ್ಟಾಚಾರ ಸಾರ್ವತ್ರಿಕ,ಇಂಥ ಹೊತ್ತಲ್ಲಿ ಶಾಂತಿ,ಪ್ರೀತಿ ಹುಡಕ ಹೊರಟಿರುವುದು ನನ್ನ ಕವಿತೆಗಳ ವಸ್ತು ಮತ್ತು ವ್ಯಾಪ್ತಿ.ನನ್ನ `ಶಾಂತಿ ಬೀಜಗಳ ಜತನ’ ಕಾವ್ಯ ಸಂಕಲನವು ಇಂಥ ಆಶಯಗಳನ್ನು ಹೊತ್ತ ಮೊತ್ತ.’ ಪ್ರಶ್ನೆ ; ಕತೆ,ಕವಿತೆಗಳಲ್ಲಿ ಬಾಲ್ಯ ,ಹರೆಯ ಇಣುಕಿದೆಯೇ ? ಉತ್ತರ : ಖಂಡಿತ ಸರ್,ಈಗಲೂ ಬಾಲ್ಯವನ್ನು ಕಳೆದ ನನ್ನ ತೊದಲಬಾಗಿಯ (ಜಮಖಂಡಿ ತಾಲೂಕು) ಹಳ್ಳಿಯ ನೆನಪುಗಳು ಕಾಡುತ್ತವೆ, ನನ್ನ ‘ಸೂರ್ಯ ಚಂದ್ರರು ಕಾವಲೋ’ ಕಥೆಯಂತೂ ನನ್ನೂರ ಪಾತ್ರಗಳನ್ನು,ಸಂದರ್ಭಗಳನ್ನು ಕಟ್ಟಿಕೊಡುತ್ತದೆ, ನನ್ನ ‘ಮತ್ತೆ ಬಾಲ್ಯಕ್ಕೆ..’ ಕವಿತೆಯಂತೂ ಬಾಲ್ಯದ ದಿನಗಳ ಆಡೊಂಬಲ ಸಾರುತ್ತದೆ,ಸ್ವರ್ಗಕ್ಕಿಂತಲೂ ಮಿಗಿಲಾದ ಹುಟ್ಟಿಸಿದ ತಾಯಿ, ಹುಟ್ಟಿದ ಊರು ಮರೆಯಲಾದೀತೆ.? ಪ್ರಶ್ನೆ ; ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ? ಉತ್ತರ : ಇಂದು ರಾಜಕೀಯ ಪರಿಕಲ್ಪನೆಯೇ ಬೇರೆ ಯಾಗಿದೆ,ನಾವೆಲ್ಲ ಕನ್ನಡದೊಂದಿಗೆ ರಾಜಕೀಯ ಶಾಸ್ತ್ರವನ್ನು ಒಂದು ವಿಷಯವಾಗಿ ಪದವಿ ತರಗತಿಯಲ್ಲಿ ಓದಿದವರು, ಅಲ್ಲಿ ಓದಿದ್ದು , ಈಗ ನಡೆಯುತ್ತಿರುವುದು ತುಂಬಾ ಆತಂಕಾರಿಯಾಗಿದೆ. ಈಗ ಬದ್ಧತೆ ಎಂಬುದು ಉಳಿದಿಲ್ಲ,ಅಧಿಕಾರ ಹಣವುಳ್ಳವರ ಸೊತ್ತಾಗಿದೆ . ಮಠಗಳು ಸ್ವಂತದ ಕುಲ ,ಕುಲದವರನ್ನು ಉದ್ಧರಿಸಲು ಲಕ್ಷ್ಮಣ ರೇಖೆ ಹಾಕಿಕೊಂಡಿವೆ, ಬಲಿಷ್ಠ ಜಾತಿ,ಪಂಗಡ ನಾಯಕರು ಮುಂಚೂಣಿಯಲ್ಲಿದ್ದಾರೆ,ಸಣ್ಣ ಪುಟ್ಟ ಜಾತಿ ಜನಾಂಗದವರನ್ನು ಕೇಳುವವರೇ ಇಲ್ಲ,ಅಧಿಕಾರಕ್ಕಾಗಿ ಹೂಡುವ ತಂತ್ರಗಳು,ಬೆಳವಣಿಗೆಗಳು ಮಾನವತ್ವವನ್ನೂ ಮೀರಿ ಬೆಳೆದಿವೆ. ಭವಿಷ್ಯವಂತೂ ಬಹಳ ಕರಾಳವಾಗಿದೆ. ಕವಿಗಳು ಎಚ್ಚರವಾಗಿರಬೇಕು. ಪ್ರಶ್ನೆ ; ಧರ್ಮ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು.? ಉತ್ತರ : ಧರ್ಮ ಮತ್ತ ದೇವರು ವಿಷಯ ನಮ್ಮ ತಿಳುವಳಿಕೆ ಹೆಚ್ಚಿದಂತೆಲ್ಲಾ ಬದಲಾಗುತ್ತಾ ಹೋಗುತ್ತದೆ. ಕಂದಾಚಾರ, ಡಾಂಭಿಕತೆಗಳನ್ನು ನಮ್ಮ ತಂದೆ ವಿರೋಧಿಸುತ್ತಿದ್ದರು,ನಮ್ಮಲ್ಲೂ ಅಂಥ ಆಲೋಚನೆಗಳನ್ನು ಬಿತ್ತಿದರು,ಹೀಗಾಗಿ ದೇವರು ಧರ್ಮದ ಬಗೆಗೆ ನಮಗೊಂದು ಸ್ಪಷ್ಠ ಕಲ್ಪನೆ ಇತ್ತು.ಕಲ್ಲು ದೇವರುಗಳಿಗಿಂತ ಮನುಷ್ಯರೊಳಗಿನ ದೇವರನ್ನು ಇವತ್ತಿಗೂ ಹುಡುಕುತ್ತಿದ್ದೇನೆ,ಅನೇಕರು ಸಿಕ್ಕಿದ್ದಾರೆ,ಹೀಗಾಗಿ ಬದುಕು ಸುಂದರವಾಗಲು ನಮಗೆ ನಂಬುಗೆ ಇರಬೇಕು, ಅದು ವಾಸ್ತವದ ನೆಲೆಯಲ್ಲಿದಷ್ಟೂ ದೇವರು ಎಂಬುದು ಆಪ್ತವಾಗುತ್ತದೆ. ಪ್ರಶ್ನೆ ; ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತ್ತದೆ.? ಉತ್ತರ : ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಗಬ್ಬೆದ್ದು ಹೋಗಿದೆ.ನಿಜವಾದ ಸಾಂಸ್ಕೃತಿಕ ರಾಯಭಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಪ್ರಶಸ್ತಿಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಗೌರವ ಡಾಕ್ಟರೇಟುಗಳ ಹೆಸರಿನಲ್ಲಿ ಯಾರು ಯಾರೋ ಪದವಿ ಕೊಡುತ್ತಿದ್ದಾರೆ, ಅಪಾತ್ರರು ಪಡೆದುಕೊಳ್ಳುತ್ತಿದ್ದಾರೆ, ಯಾವುದೇ ಪ್ರಶಸ್ತಿ ಘೋಷಣೆಯಾದರೂ ‘ಅರ್ಹರಿಗೆ ಮುಂದಿನ ಬಾರಿ’ ಎನ್ನುವಂತಾಗಿದೆ. ಸಂಸ್ಕೃತಿ ಇಲಾಖೆಯ ಅನುದಾನ ನಿಜ ಕಲಾವಿದರಿಗೆ ಸಿಗುತ್ತಿಲ್ಲ, ಇಲ್ಲಿಯೂ ಬ್ರೋಕರುಗಳು ದುಡ್ಡು ಮಾಡಿಕೊಳ್ಳುತ್ತಿದ್ದಾರೆ. ಪ್ರಶ್ನೆ ; ಸಾಹಿತ್ಯ ವಲಯದ ರಾಜಕಾರಣದ ಬಗೆಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ.? ಉತ್ತರ : ಈಗಂತೂ ರಾಜಕಾರಣ ಎಲ್ಲ ಕ್ಷೇತ್ರವನ್ನೂ ವ್ಯಾಪಿಸಿದೆ, ಅದರ ರಾಕ್ಷಸ ಬಾಹುಗಳು ಎಲ್ಲವನ್ನೂ ಆಪೋಶನ ಮಾಡುತ್ತಾ ಸಾಗಿವೆ. ಕವಿ ಬರಹಗಾರರಿಗೆ ಯಾವ ಪಂಥವೂ ಇರಬಾರದು, ಆತ ಸಮಾಜವನ್ನು ಎಚ್ಚರಿಸುತ್ತ ಜನತೆಯನ್ನು ಸರಿಮಾರ್ಗಕ್ಕೆ ತರುವ ಕೆಲಸ ಮಾಡಬೇಕು. ಇಂಥ ಹೊತ್ತಲ್ಲಿ ಕವಿ ಸಮಾಜದೊಂದಿಗೆ ನಿಲ್ಲಬೇಕು, ಸಮಾಜದೊಂದಿಗೆ ಬೆರೆಯಬೇಕು, ಆದರೆ ಆಗುತ್ತಿರುವುದೇನು, ರಾಜಕಾರಣಿಗಳ ಸುತ್ತ ಗಿರಕಿ ಹೊಡೆಯತ್ತಾ, ಬೇಳೆ ಬೇಯಿಸಿಕೊಳ್ಳತ್ತಿರುವ ಇಂಥಹವರಿಂದ ನಿಜ ಸಾಹಿತಿಗಳು ಮರೆಯಲ್ಲಿಯೇ ಉಳಿಯುವ ಸಂದರ್ಭ ಬಂದಿದೆ, ಪ್ರಶಸ್ತಿಗಾಗಿ, ಪಠ್ಯ ಪುಸ್ತಕಗಳಲ್ಲಿ ಪದ್ಯ ಸೇರಿಸುವದಕ್ಕಾಗಿ, ಅಧಿಕಾರಕ್ಕಾಗಿ ಹಪಹಪಿಸುವ ಸಾಹಿತಿಗಳು ಸಮಾಜಕ್ಕೆ ಏನೂ ಸಂದೇಶ ಕೊಡಬಲ್ಲರು, ಕಾಲವೇ ಎಲ್ಲವನ್ನೂ ಉತ್ತರಿಸುತ್ತದೆ. ಹೊಸ ಬರಹಗಾರರು ಎಚ್ಚರದಿಂದಿರಬೇಕು. ಪ್ರಶ್ನೆ ; ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳು ಏನು.? ಉತ್ತರ : ವಾಸ್ತವದ ನೆಲೆಯಲ್ಲಿ ಬದುಕುತ್ತಿರುವ ನಮಗೆ ಆಶಾದಾಯಕವಾಗಿ ಒಂದಿಷ್ಟು ಕನಸುಗಳಿರಬೇಕು. ‘ಕವಿತೆಯ ಜೀವಂತಿಕೆಯಲ್ಲಿ ಕವಿ ಬದುಕಿದ್ದಕೆ ಸಾಕ್ಷಿಯಿದೆ’ ಎಂದು ನಂಬಿದವ ನಾನು, ಹಾಗಾಗಿ ನನ್ನ ಬರವಣಿಗೆ ಓದುಗರಲ್ಲಿ ಒಂದಿಷ್ಟು ಪರಿವರ್ತನೆ ತಂದರೆ ಅದೇ ನನ್ನ ಸಾರ್ಥಕತೆ ಎಂದುಕೊಂಡಿದ್ದೇನೆ, ನನಗೆ ಕನಸುಗಳಿವೆ ಒಂದು ಕಾದಂಬರಿ ಬರೆಯಲು ಆರಂಭಿಸಿದ್ದೇನೆ, ಬರೆಸಿಕೊಳ್ಳುತ್ತಾ ಸಾಗಿದೆ ಮುಗಿಯಬೇಕಷ್ಟೇ.. ಪ್ರಶ್ನೆ ; ನಿಮ್ಮ ಇಷ್ಟದ ಕವಿ,ಸಾಹಿತಿ ಯಾರು ? ಉತ್ತರ : ನನಗೆ ಲಂಕೇಶ, ಕಂಬಾರ, ತೇಜಸ್ವಿ ಅವರ ಬರಹಗಳು, ಬರಗೂರು,ಚಂಪಾ,ದೇವನೂರು,ಕಾಟ್ಕರ್ ಅವರ ಚಿಂತನೆಗಳು ತುಂಬಾ ಪ್ರಭಾವಿಸಿವೆ. ಜನಪದ ಹಾಡು,ಕಥೆಗಳಂತೂ ನನಗೆ ಜೀವದ್ರವ್ಯ. ಪ್ರಶ್ನೆ ; ಈಚೆಗೆ ಓದಿದ ಕೃತಿಗಳಾವವು ? ಉತ್ತರ : ಡಾ,ಸರಜೂ ಕಾಟ್ಕರ್ ಅವರ ಅನುವಾದಿತ ಕೃತಿಗಳನ್ನು ಓದುತ್ತಿದ್ದೇನೆ, ಅಲಕ್ಷಿತ ಸಾಹಿತ್ಯವನ್ನು ,ಸಾಹಿತಿಗಳನ್ನು ಮುಖ್ಯವಾಹಿನಿಗೆ ತರುವ ಅವರ ಕೆಲಸ ಮಾದರಿಯಾದುದು, ಹಾಗಾಗಿ ಅವರ ಬರಹಗಳು ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ.ಹೊಸಬರ ಕಾವ್ಯಗಳನ್ನು ತಪ್ಪದೇ ಓದುತ್ತೇನೆ. ಪ್ರಶ್ನೆ ; ನಿಮಗೆ ಇಷ್ಟವಾದ ಕೆಲಸ ಯಾವುದು.? ಉತ್ತರ : ನನ್ನ ಕೆಲಸದಿಂದ ಇನ್ನೊಬ್ಬರು ಖುಷಿಯಿಂದಿರುವುದು. ಪ್ರಶ್ನೆ ; ನಿಮಗೆ ಇಷ್ಟವಾದ ಸ್ಥಳ ಯಾವುದು.? ಉತ್ತರ : ಬಾದಾಮಿ ಪರಿಸರ, ಕೊಡಗಿನ ಪ್ರಕೃತಿ, ಸಮುದ್ರದ ದಂಡೆ. ಪ್ರಶ್ನೆ ; ನಿಮ್ಮ ಪ್ರೀತಿಯ ,ನೀವು ಇಷ್ಟ ಪಡುವ ಸಿನಿಮಾ ಯಾವುದು ? ಉತ್ತರ : ಡಾ.ರಾಜಕುಮಾರ,ಮಾಧವಿ ಅಭಿನಯದ ‘ಭಾಗ್ಯದ ಲಕ್ಷ್ಮೀ ಬಾರಮ್ಮ’. ಪ್ರಶ್ನೆ ; ನೀವು ಮರೆಯಲಾಗದ ಘಟನೆ ಯಾವುದು ? ಉತ್ತರ : ನಮ್ಮ ತಂದೆ ಬದುಕಿನ ಅನೇಕ ಪಾಠಗಳನ್ನು ಹೇಳಿಕೊಟ್ಟರು,ಅವು ಯಾವ ಪಠ್ಯದಲ್ಲೂ ಇರಲಿಲ್ಲ,ಬದುಕು ಕಟ್ಟಿಕೊಳ್ಳಲು ಅಣ್ಣ ಮತ್ತು ಈಚೆಗೆ ಅಗಲಿದ ತಂದೆ ಅನೇಕ ಮರೆಯಲಾಗದ ಘಟನೆಗಳಿಗೆ ಸಾಕ್ಷಿಯಾಗುತ್ತಾರೆ. ************ ******** ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.








