ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಮರಣವೇ ಮಹಾನವಮಿ

ಇಬ್ಬರೂ ವಚನಕಾರರ ಬದುಕಿನ ಹಿನ್ನೆಲೆಯಲ್ಲಿ ಈ ವಚನವನ್ನು ಗಮನಿಸಬಹುದು. ಬಸವಣ್ಣನವರು ಭಕ್ತಿಭಂಡಾರಿ ಹೇಗೋ ಹಾಗೇ ಬಿಜ್ಜಳನ ಭಂಡಾರದ ಮೇಲ್ವಿಚಾರಣೆ ನೋಡಿಕೊಳ್ಖುತ್ತಿದ್ದವರು. ಅಕ್ಕ ಮಹಾರಾಣಿಯಾಗಿದ್ದವಳು ಕೊನೆಗೆ ತನಗಾಗಿ ಎಲ್ಲವನ್ನೂ ಬಿಟ್ಟು ಬಂದವಳು. ಈ ಹಿನ್ನೆಲೆಯಲ್ಲಿ ಇಬ್ಬರೂ ಆರ್ಥಿಕವಾಗಿ ಸಬಲರು ಮತ್ತು ಸಮಾಜದ ಮೇಲ್ವರ್ಗದಲ್ಲಿ ಇದ್ದವರು. ಹೆಣ್ಣಾಗಿ ಅಕ್ಕ ತಾನೇ ಎಲ್ಲ ಬಿಟ್ಟು ದಿಟ್ಟವಾಗಿ ನಿಂತವಳು, ಆತ್ಮ ಸಂಗಾತಕ್ಕೆ ನೀ ಎನಗುಂಟು ಎಂದು ನಡೆದಂತೆ, ಈ ದೇಹವ ನಾಯಿತಿಂದರೇನು ನೀರು ಕುಡಿದರೇನು ಎಂದು ನಿಂತವಳು. ಈ ಎಲ್ಲ ಹಿನ್ನೆಲೆಯಲ್ಲಿ ಈ ವಚನದಲ್ಲಿ ಒಡಮೂಡುವ ಭಾವದಿಂದ ಇಬ್ಬರ ನಿರ್ಧಾರಗಳೂ ಮಹತ್ತರವಾದವುಗಳು.

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಎರಡು ವಚನಗಳನ್ನು ಗಮನಿಸಿದರೆ ಎರಡು ತನ್ನ ಭಾಷೆ, ರಾಚನಿಕ ವಿನ್ಯಾಸ ಮತ್ತು ಕೇಳುಗನ ಮೇಲೆ ಬೀರುವ ಪರಣಾಮದಲ್ಲಿ ಭಿನ್ನವಾದ ಮಾರ್ಗಗಳನ್ನು ಹಿಡಿದವುಗಳೇ ಆಗಿವೆ. ಒಂದು ಪ್ರಶ್ನಾರ್ಥಕವಾಗಿ ನಡೆದರೆ, ಮತ್ತೊಂದು ಬದಲಾದ ಕಾಲ, ಸಮಾಜಕ್ಕೆ ಹಿಂದಿನ ಮೌಲ್ಯವೊಂದನ್ನು ಸಾರಿ ಹೇಳಬೇಕಾದಾಗ ಉಂಟಾದ ಖೇಧ, ಸಿಟ್ಟುಗಳು ಕೆಲಸ ಮಾಡಿವೆ. ‘ಅರಿವುಳ್ಳೊಡೆ’ ಎಂಬ ಒಂದು ಪದವನ್ನು ಬಳಸಿ ಅರಿವನ್ನು ಉಂಟುಮಾಡುವುದರ ಕಡೆಗೆ ತನ್ನ ಉದ್ದೇಶವನ್ನು ದಾಸಿಮ್ಮಯ್ಯ ಯಶಸ್ವಿಯಾಗಿ ಹಸ್ತಾಂತರ ಮಾಡಿಬಿಡುತ್ತಾನೆ, ಆದರೆ ಬಸವಣ್ಣನವರಲ್ಲಿ ಸಿಟ್ಟು, ದೋಷಣೆಗಳು ಬಂದಿವೆ

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಈಗ ಬಸವಣ್ಣನವರು ಪೂರ್ವಪಕ್ಷ ಮತ್ತು ಪ್ರತಿಪಕ್ಷಗಳಿಗೆ ಈ ಎರಡು ಹೆಸರುಗಳನ್ನು ಪ್ರಶ್ನಾರ್ಥಕವಾಗಿಯೇ ಬಳಸಿ ಏನನ್ನು ಸೂಚಿಸುತ್ತಿದ್ದಾರೆ ಎಂಬುದನ್ನು ಹೀಗೆ ಪಟ್ಟಿ ಮಾಡಿಯೇಬಿಡಬಹುದು.

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಆಹಾರ, ಆಚಾರ, ವಿಚಾರ, ಬದುಕಿನ ಕ್ರಮ, ಧರ್ಮ, ತತ್ವ, ಸಿದ್ಧಾಂತ, ಅಭಿರುಚಿ, ಭಾಷೆ ಹೀಗೆ ಒಡೆಯುತ್ತಲೇ ಬದುಕುವ ನಮಗೆ ಬಸವಣ್ಣನವರ ವಚನವು ಮನುಷ್ಯರು ಒಗ್ಗೂಡಲು ಸಾವಿರ ಕಾರಣಗಳಿವೆ, ಅದಕ್ಕೆ ಮೂಲ ಆಂತರ್ಯದಲ್ಲಿ ಸಹಿಸಿಕೊಳ್ಳುವ ಗುಣ ಬೇಕಿದೆ ಎಂಬುದನ್ನು ತಿಳಿಸುತ್ತದೆ.

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಹಳೆಯ ಅಂಕಣ ಹೊಸ ಓದುಗರಿಗೆ

ಆರ್.ದಿಲೀಪ್ ಕುಮಾರ್ ಬರೆಯುತ್ತಾರೆ-
ಅಕ್ಕನ ವಚನಗಳ ಅಂಕಿತ ಚೆನ್ನಮಲ್ಲಿಕಾರ್ಜುನ. ಕೆಲವು ಕಡೆ ಶ್ರೀ ಎಂದು, ಸಿರಿ ಎಂದು, ಶ್ರೀಶೈಲ ಎಂದು ಮಲ್ಲಿಕಾರ್ಜುನನೊಡನೆ ಸೇರಿಕೊಳ್ಳುತ್ತದೆ‌. ಬಸವ ಯುಗದ ವಚನ ಮಹಾಸಂಪುಟದಲ್ಲಿ ಇದಕ್ಕೆ‌ ಸಾಕ್ಷಿಗಳೂ ದೊರೆಯುತ್ತವೆ. ಅಕ್ಕನ ವಚನಗಳ ವಿಶೇಷತೆಯೇ ಮಾರ್ದವತೆ. ಆ ವಚನ ಹೀಗಿದೆ

ಹಳೆಯ ಅಂಕಣ ಹೊಸ ಓದುಗರಿಗೆ Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಆರ್.ದಿಲೀಪ್ ಕುಮಾರ್
ವಚನ ವಿಶ್ಲೇಷಣೆ ಮಾಡುತ್ತಾ-
ಇಲ್ಲಿ ಬಾಯಾರಿಕೆಯಿಂದ ಬಳಲುತ್ತಿರುವ ವ್ಯಕ್ತಿಗೆ ಪಾಯಸವನ್ನು ಕೊಡುವ ಚಿತ್ರಣವನ್ನು ಕೊಟ್ಟು ದೈವವೆನ್ನುವುದು, ಆತ್ಮಜ್ಞಾನವೆನ್ನುವುದು ಬಾಯಾರಿಗೆಯನ್ನು ತೊಡೆಯುವ ಪರಿಶುದ್ಧವಾದ ನೀರಿನ ಹಾಗೆ ಎಂದು ಸೂಚಿಸುತ್ತಾನೆ

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಆರ್.ದಿಲೀಪ್ ಕುಮಾರ್
ಈ ಸತ್ತಿಗೆ ಕಾಯಕದ ಮಾರಿತಂದೆಯ ಒಟ್ಟೂ ೧೦ ವಚನಗಳು ಇದುವರೆವಿಗೂ ದೊರೆತಿವೆ. ಐಘಂಟೇಶ್ವರಲಿಂಗ ಎಂಬ ಅಂಕಿತನಾಮವನ್ನು ಇವು ಹೊಂದಿವೆ. ಅವನ ಒಂದು ಅತ್ಯದ್ಭುತ ವಚನವು ಹೀಗಿದೆ. ಇದೇ ವಚನವನ್ನು ಬಳಸಿ ಅವನ ಕಾಯಕವೆಂದು ಮಹಾಸಂಪುಟ ಸಂಪಾದಕರು ವ್ಯಾಖ್ಯಾನವನ್ನು ಮಾಡಿರುವುದು

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಈ ಮೇಲಿನ ವಚನಗಳನ್ನು ಇಟ್ಟಿರುವ ಕ್ರಮದಿಂದ ಇಬ್ಬರು ವ್ಯಕ್ತಿಗಳ ನಡುವಿನ ಸಂವಾದದೋಪಾದಿಯಲ್ಲಿ ಕಾಣುತ್ತಿದೆ. ಇದೊಂದು ಕಾಲ್ಪನಿಕ‌ ಗ್ರಹಿಕೆಯಷ್ಟೇ. ಹೀಗೆ ನಡೆದಿರಬಹುದು ಎಂಬುದು ನನ್ನ ಗ್ರಹಿಕೆಯಷ್ಟೇ. ನಾನು ಗಮನಿಸಿರುವ ಹಾಗೆ ಈ ಸಂವಾದ ಕ್ರಮವೆಂಬುದನ್ನು ಹಲಗೆಯಾರ್ಯನ ಶೂನ್ಯಸಂಪಾದನೆ ಈ ಎರಡು ವಚನಗಳಿಗೆ ಅನುಸರಿಸಿಲ್ಲ.

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಅಂಕಣ ಬರಹ ಊರೊಳಗೆ ಪಂಥ ರಣದೊಳಗೆ ಓಟವೆ ವಚನಕಾರರಲ್ಲಿ ಎಂಟು ಜನ ಮಾರಿತಂದೆ ಹೆಸರಿನವರು ಇದ್ದಾರೆ. ಅವರಲ್ಲಿ ಅರಿವಿನ ಮಾರಿತಂದೆಯೂ ಒಬ್ಬ. ಈತ ಹಿರಿಯ ವಚನಕಾರ. ಫ. ಗು. ಹಳಕಟ್ಟಿಯವರು “ಈತನು ಬಸವೇಶ್ವರರ ಕಾಲದಲ್ಲಿ ಶಿವಾನುಭವ ಮಂಟಪದಲ್ಲಿದ್ದನೆಂದು ವೀರಶೈವರಲ್ಲಿ ಐತಿಹ್ಯವಿರುವುದಿಲ್ಲ. ಆದ್ದರಿಂದ ಬಸವೇಶ್ವರನ ಕಾಲಕ್ಕಿಂತಲೂ ಈಚಿನವನಿರಬೇಕು. ಆದರೆ ೧೫ ನೇ ಶತಮಾನದ ಅಂತ್ಯಭಾಗದಲ್ಲಿದ್ದ ಪ್ರಸಿದ್ಧಿ ಹೊಂದಿದ ಗುಬ್ಬಿಯ ಮಲುಹಣನು ಈ ಅರಿವಿನ ಮಾರಿತಂದೆಯ ಉಕ್ತಿಗಳನ್ನು ತನ್ನ ‘ಗಣಭಾಷ್ಯ ರತ್ನಮಾಲೆ’ ಯಲ್ಲಿ ಉದಾಹರಿಸಿದ್ದಾನೆ. ಅಲ್ಲದೇ ಅನೇಕ ವಚನ ಸಂಗ್ರಹಗಳಲ್ಲಿ ಈತನ ವಚನಗಳು ಆಗಿಹೋದ ಪುರಾತನ ಕಾಲದ ಮಹತ್ವದ ವಚನಕಾರರಲ್ಲಿ ಗಣಿಸಲು ಏನೂ ಅಡ್ಡಿಯಿಲ್ಲ.‌ ಪುರಾತನರ ವಚನಗಳಲ್ಲಿ ಈತನವೂ ಸೇರಿರುವುದರಿಂದ ಈತನ ಕಾಲವನ್ನು ಸು ೧೧೬೦ ಎಂದೇ ಹೇಳಬಹುದಾಗಿದೆ” ಎಂದಿದ್ದಾರೆ.೧ ಹನ್ನೊಂದು ಜನರ ಚರಿತ್ರೆಯ ವಿವರಗಳು ತಿಳಿದು ಬರುವುದಿಲ್ಲ, ಅವರಲ್ಲಿ ಅರಿವಿನ ಮಾರಿತಂದೆಯೂ ಒಬ್ಬ.೨  ಎಂದು ಒಂದು ಕಡೆ ಹೇಳಿದರೆ. ಮತ್ತೊಂದು ಕಡೆ ‘ವಿರೂಪಾಕ್ಷ ಪಂಡಿತನು (೧೫೮೫) ಚೆನ್ನಬಸವ ಪುರಾಣದಲ್ಲಿ ಈತನೇ ‘ಮಾದರ ಕೇತಯ್ಯ ….. ‘ ಎಂಬ ಪದ್ಯದಲ್ಲಿ ಅರಿವಿನ ಮಾರಿತಂದೆಯ ಹೆಸರನ್ನು ಹೇಳಿದ್ದಾನೆ.೩ ಎಂದು ಸಾಹಿತ್ಯ ಚರಿತ್ರಾಕಾರರು ಹೇಳಿದ್ದಾರೆ. ಜ್ಞಾನ, ತಿಳುವಳಿಕೆ, ಅನುಭವಗಳ ಸಮಪ್ರಮಾಣದ ಮಿಶ್ರಣವಾದ ಅರಿವಿಗೆ ಬಹುದೊಡ್ಡ ಪ್ರಾಶಸ್ಯ್ಯವನ್ನು ಮಾರಿತಂದೆಯು ತನ್ನ ವಚನಗಳಲ್ಲಿ ಕೊಟ್ಟಿರುವುದರಿಂದ ಈತನನ್ನ “ಅರಿವಿನ ಮಾರಿತಂದೆ” ಎಂದು ಕರೆಯಲಾಗಿದೆ.೪  ಬಸವಣ್ಣನವರು ತಮ್ಮ ವಚನಗಳಲ್ಲಿ ಹೆಸರಿಸಿರುವ ಮಾರಿತಂದೆ ಈತನಲ್ಲ ಎಂಬುದನ್ನು ವಿದ್ವಾಂಸರು ಸಾಧಿಸಿ ತೋರಿಸಿದ್ದಾರೆ.೫  ಸದಾಶಿವಮೂರ್ತಿ, ಸದಾಶಿವಮೂರ್ತಿಲಿಂಗ,  ಸದಾಶಿವಲಿಂಗಮೂರ್ತಿ, ಸದಾಶಿವಲಿಂಗ ಎಂದು ಈತನ ವಚನಗಳ ಅಂಕಿತಗಳು ಇವೆ. ಅರಿವಿನ ಮಾರಿತಂದೆಯ‌ ಒಟ್ಟೂ ವಚನಗಳ ಸಂಖ್ಯೆ ೩೦೨, ಅದರಲ್ಲಿ ೨೫೧ ಸಾಮಾನ್ಯ ವಚನಗಳಾಗಿದ್ದು, ಉಳಿದವು ಬೆಡಗಿನ ವಚನಗಳಾಗಿವೆ. ಅರಿವಿನ ಮಾರಿತಂದೆಯ ವಚನವೊಂದು ಹೀಗಿದೆ ವಾಗದ್ವೈತದಲ್ಲಿ ನುಡಿದು ಸ್ವಯಾದ್ವೈತದಲ್ಲಿ ನಡೆದು ತೋರಬೇಕು ಊರೊಳಗೆ ಪಂಥ ರಣದೊಳಗೆ ಓಟವೆ ? ಮಾತಿನಲ್ಲಿ ರಚನೆ ಮನದಲ್ಲಿ ಆಸೆಯೇ ? ಈ ಘಾತಕರ ಶಾಸ್ತ್ರ, ವಚನ ರಚನೆಗೆ ಮೆಚ್ಚಿ ಮಾಡುವವನ ಭಕ್ತಿ ಅಲಗಿನ ಘೃತವ ಶ್ವಾನ ನೆಕ್ಕಿ ನಾಲಿಗೆ ಹರಿದು ಮತ್ತಲಗ ಕಂಡು ತೊಲಗುವಂತಾಯಿತ್ತು, ಉಭಯದ ಇರವು. ಇಂತೀ ಭೇದಂಗಳ ಅರಿತು ನಿರತನಾಗಿರಬೇಕು ಸದಾಶಿವಮೂರ್ತಿಲಿಂಗವನರಿವುದಕ್ಕೆ.೬ ಈ ವಚನವು ಮೇಲು ನೋಟಕ್ಕೆ ಬಹಳ ಸರಳವಾಗಿ ಕಾಣುತ್ತಿದೆಯಾದರೂ ತನ್ನ ಆಂತರ್ಯದಲ್ಲಿ ವೀರಭಾವವೊಂದರ‌ ಸಮರ ಪ್ರಜ್ಞೆ ನಿರಂತರವಾದ ಹರಿವನ್ನು ಹೊಂದಿದೆ. ಅಪಾಯಕಾರಿಗಳ ಲಕ್ಷಣ ಮತ್ತು ಅವರು ಆ ಮನಸ್ಥಿತಿಯಿಂದ ಹೊರಬರುವ ಮಾರ್ಗವನ್ನು ಈ ವಚನವು ತಿಳಿಸುತ್ತಿದೆ. ಎಲ್ಲ ಕಾಲದಲ್ಲಿಯೂ ಮಾತಿನ ಮಲ್ಲರ ಬಹುದೊಡ್ಡ ಗುಂಪೊಂದು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಆ ಮಾತಿನ ಮಲ್ಲರ ಗುಂಪು ಕೆಲವೊಮ್ಮೆ ತಮ್ಮೊಡನೆ ಸಂಪರ್ಕಕ್ಕೆ ಬರುವವರಿಗೆ ಹಾದಿಯ ನಿರ್ದೇಶವನವನ್ನೂ ಯಾವುದೇ ಭಿಡೆ ಇಲ್ಲದೆ ಮಾಡಲು ಶುರು ಮಾಡಿಬಿಡುತ್ತದೆ. ಕ್ರಿಯೆಯಲ್ಲಿ ನಿರತಕಾರವರಿಗೆ ಅದರ ಅಗತ್ಯವೇ ಇರುವುದಿಲ್ಲ. ಅಥವಾ ಮಾತಿನ ಮಲ್ಲರು ಕ್ರಿಯೆಯಲ್ಲಿ ತೊಡಗಿದರೆ ಮಾತು ತನ್ನಿಂದ ತಾನೇ ನಿಂತುಬಿಡುತ್ತದೆ. ಮಾತಿನಲ್ಲಿ ಎಲ್ಲರೂ, ಎಲ್ಲವೂ ಒಂದೇ ಎನ್ನುವ (ವಾಕ್+ಅದ್ವೈತ), ಆದರೆ ಅನುಭವಜನ್ಯ ಅರಿವಿನಿಂದ ಒಂದೇ ಎಂಬುದನ್ನು ಅರಿತು, ನಡೆದು ತೋರದಂತಹವರ (ಸ್ವಯ+ಅದ್ವೈತ) ಸ್ಥಿತಿಯನ್ನು ಹೇಳಲು ಅರಿವಿನ ಮಾರಿತಂದೆ ಎರಡು ಸಾದೃಶ್ಯಗಳನ್ನು ಬಳಸಿದ್ದಾನೆ. ಒಂದು, ಊರೊಳಗೆ ತಾನು ಕಟ್ಟಿಕೊಂಡ ಗುಂಪಿನೊಳಗೆ ವೀರಾಧಿವೀರ, ಆದರೆ ನಿಜವಾದ ರಣರಂಗದಲ್ಲಿ ಬೆನ್ನು ತಿರುಗಿಸಿ ಓಡಿ ಹೋಗುವ ರಣಹೇಡಿಯ ಚಿತ್ರವನ್ನು ಮತ್ತು ಖಡ್ಗದ ತುದಿಗೆ ಸವರಿದ ಘೃತ (ತುಪ್ಪ) ವನ್ನು ನೆಕ್ಕಿ ನಾಲಿಗೆ ಸೀಳಿದ ನಾಯಿಯು ಮತ್ತೆ ಖಡ್ಗವನ್ನು ಕಂಡು ಓಡುವ ಚಿತ್ರ. ಈ ಎರಡರ ಮೂಲಕ ಮಾತಿನ ಮಲ್ಲರು ಮತ್ತವರು ರಣಹೇಡಿಗಳು. ಬದುಕಿನಲ್ಲಿ ಏಕತ್ವವನ್ನು ಸಾಧಿಸಿ ತೋರಿಸಲಾರದ ಹೇಡಿಗಳು ಎಂದೂ, ನಾಲಿಗೆ ಸಿಳಿದ ನಾಯಿಯ ಸ್ಥಿತಿಯು ಅವರು ಸ್ವಯಾದ್ವೈತವನ್ನು ಸಾಧಿಸಲಾರದ, ಆಚರಿಸಲಾರದವರು ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾನೆ. ಏಕಭಾವವೆನ್ನುವುದು ಘೃತದ ಹಾಗೆ. ಅದನ್ನು ಸಾಧಿಸಿದವರು ಹೆದರಿ ಓಡಬೇಕಿಲ್ಲ ಎಂಬ ದನಿಯೂ ಇದರಲ್ಲಿ ಅಡಗಿದೆ. ಮಾತಿನಲ್ಲಿ ಮಾತ್ರ ವಚನ ರಚನೆಗಳನ್ನು ಮಾಡುತ್ತಾ, ಬದುಕಿನಲ್ಲಿ ಅದರ ತತ್ವಗಳನ್ನು ಆಚರಿಸದವರೆಲ್ಲರೂ, ಸ್ವಾನುಭವದಿಂದ ನುಡಿದಂತೆ ನಡೆಯದವರು ಹೇಡಿಗಳು, ನಾಲಿಗೆ ಹರಿದ ನಾಯಿಗಳು ಎಂದು ಹೇಳುತ್ತಿದ್ದಾನೆ. ವಚನದಲ್ಲಿ ಗಮನಿಸಬೇಕಾದ ಮುಖ್ಯ ಅಂಶವೊಂದಿದೆ. “ಅರಿತು ನಿರತ” ಎಂಬ ಪದಗಳು ಒಂದಕ್ಕೊಂದು ಸಾಧಿಸುವ ಸಂಬಂಧ ವ್ಯಕ್ತಿ ಮತ್ತು ಸಮಾಜಕ್ಕೆ ಮಹತ್ವವಾದದ್ದು ಎನ್ನುತ್ತಿದ್ದಾನೆ. ಅರಿತು ಸಾಧಿಸಲಾರದ ಅಥವಾ ಅರಿಯದೆ ಮಾತನಾಡುವ ಎಲ್ಲರೂ ರಣಹೇಡಿ, ನಾಲಿಗೆ ಸೀಳಿದ ನಾಯಿಗಳೆನ್ನುವ ಭಾವ ವಚನದಲ್ಲಿದೆ. ಇದೊಂದು ರೀತಿಯಲ್ಲಿ ನುಡಿದು ಸೂತಕಿಗಳಾಗುವ ಸ್ಥಿತಿ. ಅರಿವಿನ ಮಾರಿತಂದೆಯು ಮಾತು ಮತ್ತು ಕ್ರಿಯೆಗಳು ಒಂದಿಲ್ಲದ ರಣಹೇಡಿಗಳಿಗೆ ವಚನದ ಮೊದಲ ಸಾಲಿನಲ್ಲಿಯೇ ಪಂಥಾಹ್ವಾನವನ್ನು ಕೊಡುತ್ತಾನೆ ಮತ್ತದು ಎದುರಿನವರ ನಡೆ ನುಡಿಯನ್ನು ನಿರ್ದೇಶನ ಮಾಡುವ ಸಮರ ಪ್ರಜ್ಞೆಯ ರೀತಿಯಲ್ಲಿ ಬಂದಿದೆ. ಇದು ವೀರನ ಲಕ್ಷಣ. ತಾನು ಅನುಸರಿಸಿಲ್ಲದೆ, ಅನುಭವಕ್ಕೆ ಅರಿವಿಗೆ ಬಾರದ, ಕೇವಲ ಮಾತಿಗಾಗಿ “ಸಮಯವನ್ನು ನೋಯಿಸಿ” ಎದುರಿನವರಿಗೆ ಮಾಡಲು ಆಡಲು ಹೇಳುವ ಜಾಯಮಾನದವರಲ್ಲ ವಚನಕಾರರು. ಭಾರತೀಯ ಕಾವ್ಯ ಮೀಮಾಂಸೆಯಲ್ಲಿ ವೀರರಸವನ್ನು ಕುರಿತು ವಿವೇಚನೆ ಮಾಡುವಾಗ ದಾನವೀರ, ಧರ್ಮವೀರ, ದಯಾವೀರ ಎಂದು ಮೂರು ಭಾಗಗಳಲ್ಲಿ ಈ ವೀರರಸವು ಕಾವ್ಯಗಳಲ್ಲಿ ಹರಿದು ಬಂದಿದೆ ಎಂದು ಮೀಮಾಂಸಕರು ಹೇಳಿದ್ದಾರೆ. ಅರಿವಿನ ಮಾರಿತಂದೆಯ ಒಳಗೆ ಧರ್ಮವೀರದ ನದಿಯೊಂದು ನಿರಂತರವಾಗಿ ಹರಿಯುತ್ತಿರುವ ಸ್ಥಿತಿಯಲ್ಲಿ ನಿಂತಿದ್ದಾನೆ. ನಡೆ ನುಡಿಗಳು ಒಂದಾದ ಏಕತ್ರ ಸ್ಥಿತಿಯದು. ವ್ಯೋಮಮೂರ್ತಿ, ತಲೆವೆಳಗಾದ ಸ್ವಯಜ್ಞಾನಿಯಾದ ಅಲ್ಲಮನೂ “ನುಡಿದು ಸೂತಕಿ” ಗಳಾಗದಿರಲೆಂಬ ಕಾರಣದಿಂದಲೇ ಕೊಟ್ಟ ಎಚ್ಚರಿಕೆ೭  ಬಸವಣ್ಣನವರು “ನುಡಿಯೊಳಗಾಗಿ ನಡೆಯದಿದ್ದಡೆ ಕೂಡಲಗಮದೇವನೆಂತೊಲಿವನಯ್ಯಾ”೮  ಎಂದು ಹೇಳುವ ಮಾತುಗಳೂ ಇದೇ ಎಚ್ಚರಿಕೆಯಲ್ಲಿ ಬಂದಿದೆ. ಪ್ರತೀ ಕ್ಷಣವೂ ಬದುಕನ್ನು ಅರಿತು ನಿರತನಾಗಿ ನಡೆವ ಕ್ರಮವನ್ನು ವಚನಕಾರರು ತಿಳಿಸುತ್ತಲೇ ಇಂದಿಗೂ ಜೀವಂತರಾಗಿದ್ದಾರೆ ಅಡಿಟಿಪ್ಪಣಿಗಳು ೧. ಕನ್ನಡ ಸಾಹಿತ್ಯ ಚರಿತ್ರೆ. ಸಂಪುಟ ೪. ಸಂ ಡಾ. ಹಾ. ಮಾ. ನಾಯಕ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ. ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು ವಿಶ್ವವಿದ್ಯಯಾನಿಲಯ. ಪು ೫೬೬ (೧೯೭೭) ೨. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಪು ೯೩೬ (೨೦೧೬) ೩. ಕನ್ನಡ ಸಾಹಿತ್ಯ ಚರಿತ್ರೆ. ಸಂಪುಟ ೪. ಸಂ ಡಾ. ಹಾ. ಮಾ. ನಾಯಕ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ. ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು ವಿಶ್ವವಿದ್ಯಯಾನಿಲಯ. ಪು ೫೬೬ ೪. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ಪು ೯೩೬ ೫. ಪೀಠಿಕೆಗಳು ಲೇಖನಗಳು. ಡಿ. ಎಲ್. ನರಸಿಂಹಾಚಾರ್. ಡಿ. ವಿ. ಕೆ ಮೂರ್ತಿ. ಮೈಸೂರು ಪು ೪೫೬ ಮತ್ತು ೪೫೭ ೬. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ವ ಸಂ ೬೦೬, ಪು ೧೦೦೩ ೭. ಮಾತೆಂಬುದು ಜ್ಯೋತಿರ್ಲಿಂಗ !      ಸ್ವರವೆಂಬುದು ಪರತತ್ವ !      ತಾಳೋಷ್ಠ ಸಂಪುಟವೆಂಬುದೇ ನಾದಬಿಂದಕಳಾತೀತ !      ಗೊಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ ಕೇಳಾ, ಮರುಳೆ ಅಲ್ಲಮನ ವಚನ ಚಂದ್ರಿಕೆ. ಡಾ. ಎಲ್. ಬಸವರಾಜು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ವ. ಸಂ. ೯೫೧. ಪು ೨೧೪ (೨೦೧೪) ೮. ನುಡಿದರೆ ಮುತ್ತಿನ ಹಾರದಂತಿರಬೇಕು      ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು      ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು      ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು      ನುಡಿಯೊಳಗಾಗಿ ನಡೆಯದಿದ್ದಡೆ      ಕೂಡಲಸಂಗಮದೇವನೆಂತೊಲಿವನಯ್ಯಾ ? ( ಟಿಪ್ಪಣಿ : ವಚನದಲ್ಲಿ ಮಾತು ಹೇಗಿರಬೇಕೆಂಬುದಕ್ಕೆ ಮೂರು ಉಪಮೆಗಳನ್ನು ಕೊಡುತ್ತಾರೆ. ಹಾರ, ದೀಪ್ತಿಗಳು ಸರಿ. ಆದರೆ “ಸಲಾಕೆ” ಯ ಮೊನಚು, ಅದರ ಕಾರ್ಯ ಸ್ಪಷ್ಟವಾಗಿ ಅರ್ಥವಾಗಿದ್ದವರಿಗೆ ಬಸವಣ್ಣನವರ ವ್ಯಕ್ತಿತ್ವದ ಬಗೆಗೆ ಹೆಚ್ಚು ಪ್ರೀತಿ, ಗೌರವ ಉಂಟಾಗುತ್ತದೆ. ಮಾತೆಂಬುದು ಸಲಾಖೆಯಂತೆ ಮೊನಚು ಹೌದು,‌ ರಕ್ಷಣೆಗೂ ಹೌದು ಎಂಬುದನ್ನು ಮರೆಯುವ ಹಾಗಿಲ್ಲ. ) ಎನ್ನ ನಾ ಹಾಡಿಕೊಂಡೆ. ಡಾ. ಎಸ್. ವಿದ್ಯಾಶಂಕರ. ಪ್ರಿಯದರ್ಶಿನಿ ಪ್ರಕಾಶನ. ವ ಸಂ ೮೦೨. ಪು ೬೭೨ **************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಅಂಕಣ ಬರಹ ಕೇಡಿಲ್ಲದ ಪದ ದೊರಕೊಂಬುದು ಕಿನ್ನರಿ ಬೊಮ್ಮಯ್ಯ ವಚನಕಾರರಲ್ಲಿಯೇ ಒಂದಷ್ಟು ಸಿಟ್ಟು ಸೆಡವುಗಳುಳ್ಳ ಮನುಷ್ಯ. ನೇರ ನಡೆ – ನುಡಿಗೆ ಹೆಸರಾದಂತೆ, ಪರೀಕ್ಷಿಸಿಯೇ ಎಲ್ಲವನ್ನೂ ಎಲ್ಲರನ್ನೂ ಒಪ್ಪುವವನು. ಇದಕ್ಕೆ ಸಾಕ್ಷಿಯಾಗಿ ಶೂನ್ಯಸಂಪಾದನೆಗಳಲ್ಲಿ ಬಂದಿರುವ ಅಕ್ಕನನ್ನು ಪರೀಕ್ಷಿಸುವ ಸಂದರ್ಭವನ್ನೊಮ್ಮೆ ನೋಡಿ. ಅವಳನ್ನು ಪರೀಕ್ಷಿಸಿ ‘ಹುಲಿನೆಕ್ಕಿ ಬದುಕಿದೆನು’೧ ಎಂದು ಅಕ್ಕನ‌ನ್ನು ಹುಲಿಯೆಂದು ಕರೆದು ಗೌರವಿಸಿ ಅವಳು ಕೊಡುವ ಉತ್ತರಕ್ಕೆ ಭಯದಿಂದಲೇ ಮಾತನಾಡುತ್ತಾನೆ. ಈ ಸಂದರ್ಭವು ಶೂನ್ಯಸಂಪಾದನೆಗಳಲ್ಲಿ ಬಹುಮಹತ್ವದ ಭಾಗ. ವಚನಚಳುವಳಿಯ ಕೊನೆಯ ಹಂತದಲ್ಲಿನ ಕ್ರಾಂತಿಕಲ್ಯಾಣವಾದ ಸಂದರ್ಭದಲ್ಲಿ ನಡೆದ ಯುದ್ಧವನ್ನು ಮಾಡಿದವನು ಇವನು ಎಂಬ ಪ್ರತೀತಿಯೂ ಇದೆ. ಕಿನ್ಮರಿ ಬೊಮ್ಮಯ್ಯ ಆಂಧ್ರಪ್ರದಶದ ಪೂದೂರ (ಊಡೂರು) ಎಂಬಲ್ಲಿಯವನು. ಅಕ್ಕಸಾಲಿಗ ವೃತ್ತಿಯನ್ನು ಮಾಡಿ ಬದುಕುತ್ತಿದ್ದವನು. ತನ್ನ ಗುರುವು ವೃತ್ತಿ, ಕಾಯಕ‌ ನಿಷ್ಠೆ, ವೃತ್ತಿಧರ್ಮ ಮತ್ತು ಸತ್ಯಗಳನ್ನು ಅನುಮಾನಿಸಲಾಗಿ ಅಲ್ಲಿಂದ ಹೊರನಡೆದು ಕಲ್ಯಾಣ ಪಟ್ಟಣಕ್ಕೆ ಬಂದು ತನ್ನ ಕಾಯಕದಲ್ಲಿ ನಿರತನಾದವನು.೨ ದಿನವೂ ತನ್ನ ಕರಸ್ಥಳದಲ್ಲಿದ್ದ ಲಿಂಗದ ಮುಂದೆ ಕಿನ್ನರಿ ನುಡಿಸಿ, ಒಂದು ಹೊನ್ನು, ಒಂದು ಹಣ, ಒಂದು ಹಾಗವನ್ನು ಕೇಳುಗರಿಂದ ಪಡೆದು ಅದರಿಂದ ಜಂಗಮಾರ್ಚನೆ, ದಾಸೋಹ ಮಾಡುತ್ತಿದ್ದವನು.೩ ಬಹಳ ಮುಖ್ಯವಾಗಿ ಬಸವಣ್ಣನವರ ಸಮಕಾಲೀನ ಇವನು. ಬಸವಣ್ಣನನ್ನೇ ಬದಲಾಯಿಸಿದ, ಬಸವಣ್ಣನಿಗೆ ತಾಳುವಿಕೆಯನ್ನು ಕಲಿಸಿದ ಶಿವಶರಣನೀತ. ಈತ ತನ್ನ ಕೊನೆಯ ಕಾಲವನ್ನು ಯುದ್ಧಮಾಡುತ್ತಲೇ ಕಳೆದು ಯುದ್ಧದಲ್ಲೇ ಸತ್ತವನು.೪ ‌ಯುದ್ಧವನ್ನು ತಡೆಯಲು ಒಂದು ನದಿಯನ್ನೇ ತಿರುಗಿಸಿದನೆಂಬ ಪ್ರತೀತಿಯೂ ಇವನ ಬಗೆಗಿದೆ.೫  ಇವನ ವಚನಗಳ ಅಂಕಿತ “ಮಹಾಲಿಂಗ ತ್ರಿಪುರಾಂತಕ ದೇವ”. ಇವನ ಒಂದು ವಚನವನ್ನು ಕವಿಚರಿತಕಾರರು ಹೆಸರಿಸಿದ್ದು, ಉಳಿದಂತೆ ಶೂನ್ಯಸಂಪಾದನೆ, ಬಸವಯುಗದ ವಚನ ಸಂಪುಟಗಳಲ್ಲಿ ಬಹಳಷ್ಟು ವಚನಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ. ಅವನದೊಂದು ವಚನ ಹೀಗಿದೆ ————————— ನಿನ್ನ ಹರೆಯದ ರೂಹಿನ ಚೆಲುವಿನ ನುಡಿಯ ಜಾಣಿನ ಸಿರಿಯ ಸಂತೋಷದ ಕರಿ ತುರಗ ರಥ ಪದಾತಿಯ ನೆರವಿಯ ಸತಿ ಸುತರ ಬಂಧುಗಳ ಸಮೂಹದ ನಿನ್ನ ಕುಲದಭಿಮಾನದ ಗರ್ವವ ಬಿಡು, ಮರುಳಾಗದಿರು. ಅಕಟಕಟಾ ರೋಮಜನಿಂದ ಹಿರಿಯನೆ ? ಮದನನಿಂ ಚೆಲುವನೆ ? ಸುರಪತಿಯಿಂದ ಸಂಪನ್ನನೆ ? ವಾಮದೇವ ವಶಿಷ್ಠರಿಂದ ಕುಲಜನೆ ? ಅಂತಕನ ದೂತರು ಬಂದು ಕೈಬಿಡಿದೆಳೆದೊಯ್ಯುವಾಗ ನುಡಿ ತಡವಿಲ್ಲ ಕೇಳೋ ನರನೆ ! ಎನ್ನ ಮಹಾಲಿಂಗ ತ್ರಿಪುರಾಂತಕದೇವರ ಪೂಜಿಸಿಯಾದರೆ ಕೇಡಿಲ್ಲದ ಪದ ದೊರಕೊಂಬುದು ಮರುಳೆ೬ ಮನುಷ್ಯನ ಸಮಸ್ಯೆ, ಅವಗುಣವೆಂದರೆ ಎಂದರೆ ತನ್ನ ಜನ, ಹುಟ್ಟಿನಿಂದ ಬಂದ ಶ್ರೀಮಂತಿಕೆ ಮತ್ತು ಸುತ್ತಮುತ್ತಲಿನ ಜನ ಸಹಾಯ, ಸಹಕಾರ ಇವುಗಳಿಂದ ಗರ್ವಿತನಾಗುವುದು. ಅದೇ ಹುಟ್ಟಿನಿಂದ ಬೆನ್ನ ಹಿಂದೆಯೇ ಅಂಟಿ ಬಂದಿರುವ ಸಾವಿನ ಬಗೆಗೆ ಯೋಚನೆ ಮಾಡದೆ ಇರುವುದು. ಈ‌ ವಚನವು ಎರಡೂ ಮುಖ್ಯ ನೆಲೆಗಳಾದ ಸಾವು ಮತ್ತು ಬದುಕುಗಳಲ್ಲಿ ಯಾವುದು ದೊಡ್ಡದು ? ಮತ್ತು ಏಕೆ ದೊಡ್ಡದು ? ಎಂಬ ವಿಷಯವಾಗಿ ಮಾತನಾಡುತ್ತದೆ. ಅದರೊಡನೆಯೇ ಎರಡರ ನಡುವೆ ಬದುಕು ಹೇಗಿರಬೇಕೆಂದು ಹೇಳುತ್ತದೆ. ಬಸವಣ್ಣನವರ ಒಂದು ವಚನವೂ ಇದೇ ರೀತಿಯ ಆಯಸ್ಸು ಕಡಿಮೆಯಾಗುವುದರ ಕಡೆಗೆ ಮತ್ತು ಮಾಡಬೇಕಾದ ಕಾರ್ಯದ ಕಡೆಗೆ ಗಮನ ಸೆಳೆಯುತ್ತದೆ.೭ ಆ ವಚನದ ಪ್ರಭಾವವೂ ಬೊಮ್ಮಯ್ಯನ ಪ್ರಕೃತ ವಚನದ ಮೇಲೆ ಆಗಿರಬಹುದು. ಪ್ರಕೃತ ವಚನದ ಬೆಳವಣಿಗೆಯ ಕ್ರಮವನ್ನು ಗಮನಿಸಿ. ದೇಹದ ಹೊರ ರೂಪದಿಂದ ಆರಂಭಗೊಂಡು ಭವವನ್ನು ಮೀರಿ ಗಳಿಸಬೇಕಾದ ಅಮೂರ್ತ ಪದವಿಯ ಆಶಯವನ್ನು ಹೊತ್ತು ಸಾಗುತ್ತಿದೆ. ಆದರೆ ಅದೆಲ್ಲವೂ  ಹೇಳುತ್ತಿರುವುದು ಹರೆಯದ ರೂಪ, ಆ ರೂಪಕ್ಕೆ ಕಾರಣವಾದ ಚೆಲುವು, ಸಿರಿಯಿಂದುಂಟಾಗುವ ಸಂತೋಷ ಕೇಡುಗಳನ್ನೇ ಕುರಿತು ಮೊದಲ ಹಂತದ್ದು. ಅದನ್ನು ಒಪ್ಪಿ ಅಪ್ಪಿದ ನಂತರ ಎರಡನೆಯ ಮೆಟ್ಟಿಲು ಆರಂಭವಾಗುತ್ತದೆ. ಕರಿ, ತುರಗ, ರಥ, ಪದಾತಿಗಳ ಸಮೂಹ ಸೃಷ್ಟಿಸುವ ಪ್ರಭುತ್ವದ ಸ್ಥಿತಿ. ಏಕಕಾಲದಲ್ಲಿ ಹಣ, ಹಣದಿಂದ ಉಂಟಾಗುವ ಅಧಿಕಾರದ‌ ಮದವನ್ನು ಕುರಿತು ನಂತರದ ಸಾಲುಗಳಲ್ಲಿ ಮಾತನಾಡುತ್ತಾನೆ. ಕುಟುಂಬ, ಮಕ್ಕಳು, ಹೆಂಡತಿ, ಕುಲದ ಅಭಿಮಾನ‌ ಇವುಗಳಿಂದ ಮುಕ್ತನಾಗುವುದರ ಕಡೆಗೆ ಗಮನ ಸೆಳೆಯುತ್ತಾನೆ. ಮಾತು ಜಾಣತನದಿಂದ ಕೂಡಿರಬೇಕಾದ ಅಗತ್ಯವಿಲ್ಲ, ವಚನಕಾರರಲ್ಲಿ ಚಮತ್ಕಾರೀ ಮಾತಿಗಿಂತ ಆತ್ಮಸಾಕ್ಷಿಯಿಂದಿದ್ದರೆ ಒಳಿತೆಂಬುದು ಅಭಿಪ್ರಾಯ. ವಚನ ಎಂಬುದೇ ಭಾಷೆಯ ಕೊಡುವುದನ್ನು ತಿಳಿಸುವಾಗ ಅದರ ಮೂಲಕವೇ ಅಮೂರ್ತ ಪದವಿಯ ಆಸೆಯಿಂದ, ಭವದಲ್ಲಿ ಬದುಕುವ ಆಶಯವನ್ನು ಹೊಂದಿದ್ದು ಭವದಿಂದ ಬಿಡುಗಡೆಯಾಗಿಯೂ ಯಶಸ್ಸನ್ನು ಗಳಿಸಬೇಕಾದ ಕಡೆಗೆ ಆಸೆಯನ್ನು ಹೊತ್ತು ಈ ವಚನ ಬಂದಿದೆ. ಮೂರು ವಿಧದ ಸಂಬಂಧಗಳನ್ನು ವಚನದ ರಚನಾ ವಿನ್ಯಾಸದಲ್ಲಿ ಮೆಟ್ಟಿಲುಗಳಾಗಿ ಅನುಕ್ರಮದಲ್ಲಿ ಇಡಲಾಗಿದೆ. ದೇಹದಿಂದ ಮೊದಲ್ಗೊಂಡು ಮತ್ತೆ ದೇಹದ ಕಡೆಗೆ ಬರುವ ಕ್ರಮವದು. ೧. ದೇಹ ಸಂಬಂಧ – ಹರೆಯ, ರೂಪು, ಚೆಲುವು, ನುಡಿ, ಜಾಣತನ, ಸಂತೋಷ ೨. ಸಮೂಹ ಸಂಬಂಧ – ಕರಿ, ತುರಗ, ರಥ, ಪದಾತಿ ಇವುಗಳ ನೆರವಿ ( ಗುಂಪು ) ೩. ಕುಟುಂಬ ಸಂಬಂಧ – ಸತಿ, ಸುತರ, ಬಂಧು, ಸಮೂಹ, ಕುಲದಭಿಮಾನ ಹೀಗೆ ವಚನ ಬೆಳೆಯುತ್ತಾ ಸಾಗುತ್ತದೆ. ನಂತರದಲ್ಲಿ ನೇರವಾಗಿಯೇ ಈ ಮೂರು ಸಂಬಂಧಗಳಿಂದ ಉಂಟಾಗುವ “ಗರ್ವವ ಬಿಡು” ಎನ್ನುತ್ತಾನೆ. ಮೇಲಿನ ಮೂರು ಅನುಕ್ರಮಗಳೊಡನೆ ಸಾಧಿಸುವ ಸಂಬಂಧ ಮತ್ತು ನಂತರದಲ್ಲಿ ಬರುವ ಪುರಾಣಪ್ರತೀಕಗಳ ಜೊತೆಗೆ ಸಾಧಿಸುವ ಸಂಬಂಧವನ್ನೂ ಗಮನಿಸಿ. ಸಾಮಾನ್ಯವಾಗಿಯೇ ಆರಂಭವಾದ ವಚನವು ಕೊನೆಗೆ ಪುರಾಣಪ್ರತೀಕಗಳನ್ನು ದೃಷ್ಟಾಂತವಾಗಿ ಬಳಸಿಕೊಂಡು ಗರ್ವವನ್ನು ಬಿಡುವುದಕ್ಕೆ ಮಾರ್ಗವನ್ನು ಮಾಡುತ್ತದೆ. ರೋಮಜನಿಂದ ಹಿರಿಯನೆ ? (ಹನುಂತನ ರೋಮಗಳಿಂದ ಹುಟ್ಟಿದ ಲಿಂಗಗಳಿಗಿಂತ ದೊಡ್ಡವನೆ ) ಮನ್ಮಥನಿಂತ ಚೆಲುವನಾ ? ಇಂದ್ರನಿಗಿಂತ ಸಂಪತ್ತನ್ನು ಹೊಂದಿರುವವನೇ ? ವಾಮದೇವ ಮತ್ತು ವಶಿಷ್ಠರಿಗಿಂತ ಕುಲದಲ್ಲಿ ದೊಡ್ಡವನಾ ? ಹೀಗೆ ಬೇರೆ ಬೇರೆ ಪುರಾಣ ಕಥೆಗಳನ್ನು ತಂದು ಪ್ರಶ್ನಿಸುತ್ತಾನೆ. ಇಲ್ಲಿಯೂ ಲಿಂಗದಿಂದ/ ದೇವರಿಂದ ಆರಂಭವಾಗಿ ಮನುಷ್ಯರಲ್ಲೇ ಉತ್ತಮರಾದ, ಸಾಧನೆಯಿಂದ ದೊಡ್ಡವರಾದ ಋಷಿಗಳ ಕಡೆಗೆ ಬರುತ್ತದೆ. ಮೇಲೆ ಉನ್ನತವಾಗಿರುವ ದೃಷ್ಟಾಂತಗಳನ್ನೇ ಕೊಡುತ್ತಾನೆ. ಕೊನೆಗೆ ಮೂಲ ಉದ್ದೇಶವಾದ ಪದವಿಯನ್ನು ಗಳಿಸಬೇಕಾದರೆ “ಮಹಾಲಿಂಗ ತ್ರಿಪುರಾಂತಕದೇವರ ಪುಜಿಸಿದರೆ” “ಕೇಡಿಲ್ಲದ ಪದವಿ” ಯ “ಕೊಡುವ” ಎಂಬ ನಂಬಿಕೆಯಲ್ಲಿ,  ಅದೂ “ಕಾಲನ ದೂತರು ಬಂದು ಕೈ ಹಿಡಿದೆಳೆವಾಗ” ಎಂದು “ಪರಮಪದವಿ” ಯ ಕುರಿತು ಮಾತನಾಡಿ “ನುಡಿ ತಡವಲ್ಲ” ಎಂದು ಎಚ್ಚರಿಸುತ್ತಾನೆ. ಈ‌ ವಚನ ರಚನೆಗೆ ಕಾರಣವಾದ ಬಸವಣ್ಣನವರ “ನೆರೆ ಕೆನ್ನೆಗೆ ತೆರೆ ಗಲ್ಲಕೆ” ವಚನವನ್ನು ಇಟ್ಟು ನೋಡಬಹುದು. ಹಾಗೆಯೇ ವಚನ ಚಳಿವಳಿಯ ಅನಂತರದ ದಾಸ ಪರಂಪರೆಯಲ್ಲಿಯೂ ಇದೇ ಅಂಶಗಳು ಸ್ವಲ್ಪ ಮಾರ್ಪಾಟುಗೊಂಡು ಗೇಯತೆಯನ್ನು ಸಾಧಿಸಿಕೊಂಡು ಬಂದಿದೆ. ಪುರಂದರದಾಸರ “ಮಾನವ ಜನ್ಮ ದೊಡ್ಡದು ಇದ / ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ” ಎಂಬ ಪ್ರಖ್ಯಾತ ಕೀರ್ತನೆಯ ರಚನೆಯ ಮೇಲೆ ಪ್ರಭಾವ ಮತ್ತು ಪ್ರೇರಣೆಯಾಗಿದೆ.೮ ಅಂತಕನ ದೂತರು ಬಂದು ಕೈವಿಡಿದೆಳೆವಾಗ ನುಡಿ ತಡವಲ್ಲ ಕೇಳೋ ನರನೆ ! ಎಂದು ಕಿನ್ನರಿ ಬೊಮ್ಮಯ್ಯ ಹೇಳುವ ಈ ಸಾಲುಗಳ ಪಕ್ಕದಲ್ಲಿ ಕಾಲನ ದೂತರು ಕಾಲ್ ಪಿಡಿದೆಳೆವಾಗ ತಾಳುತಾಳೆಂದರೆ ತಾಳುವರೆ ಎಂಬ ಪುರಂದರದಾಸರ ಸಾಲುಗಳನ್ನಿಟ್ಟು ಒಮ್ಮೆ ನೋಡಿ. ಎರಡರ ನಡೆಯೂ ಒಂದೇ ಇದೆ. ವಚನದಲ್ಲಿ “ಅಂತಕನ ದೂತರು ಕೈವಿಡಿದು” ಎಂದಿದ್ದರೆ, ಪುರಂದರರಲ್ಲಿ  “ಕಾಲನ ದೂತರು ಕಾಲ್ ಪಿಡಿದೆಳೆವಾಗ” ಎಂದು ಬಂದಿದೆ. ದಾಸ ಸಾಹಿತ್ಯದಲ್ಲಿ ಲಯದ ಸಾಧ್ಯತೆಯಲ್ಲಿ ಈ ಮಾತುಗಳು ಬಹಳ ಪರಿಣಾಮಕಾರಿ ಯಶಸ್ಸಯನ್ನು ಸಾಧಿಸಿಬಿಡುತ್ತದೆ. “ಕಾಲ” “ಕಾಲ್ ಪಿಡಿದು” ಈ ಪದಗಳು ಸಾವು ಸಂಭವಿಸಿದ ನಂತರ ದೇಹವನ್ನು ಎಳೆದುಕೊಂಡು ಹೊಗುವ ಚಿತ್ರವನ್ನು ಕಣ್ಣಮುಂದೆ ಕಟ್ಟಿ ಬಿಡುತ್ತವೆ. ಬೊಮ್ಮಯ್ಯನ ವಚನದಲ್ಲಿ ಮೂಲ ಆಶಯವು ಎನ್ನ ಮಹಾಲಿಂಗ ತ್ರಿಪುರಾಂತಕದೇವರ ಪೂಜಿಸಿಯಾದರೆ ಕೇಡಿಲ್ಲದ ಪದ ದೊರಕೊಂಬುದು ಮರುಳೆ ಎಂದು ಬಂದಿದ್ದರೆ, ಪುರಂದರರಲ್ಲಿ ಎನು ಕಾರಣ ಯದುಪತಿಯ ಮರೆತಿರಿ ಧನಧಾನ್ಯ ಸತಿಸುತರು ಕಾಯುವರೆ ಇನ್ನಾದರೂ ಏಕೋಭಾವದಿ ಭಜಿಸಿರೋ ಚೆನ್ನ ಶ್ರೀ ಪುರಂದರವಿಠಲರಾಯನ ಎಂದು ಬಂದಿದೆ. “ಮರುಳೆ” ಎಂಬ ಬೊಮ್ಮೆಯ್ಯನು ಎದುರಿನವರೊಂದಿಗೆ ಸಾಧಿಸುವ ಸಂಬಂಧದ ವಿಧಾನಕ್ಕೂ, ಪುರಂದರರು “ಹುಚ್ಚಪ್ಪಗಳಿರಾ” ಎನ್ನುವಾಗ ಸಾಧಿಸುವ ಸಂಬಂಧಕ್ಕೂ ಬಹಳ ಹೋಲಿಕೆಯಿದೆ. ಈ ವಿಧಾನಗಳೂ ಇಲ್ಲಿ ಬಹುಮುಖ್ಯವಾದದ್ದು ನೇರವಾಗಿ ಎದುರಿರುವವರನ್ನು “ಮರುಳರು” ಎಂದು ಭಾವಿಸಿರುವುದು ತಿಳಿಯುತ್ತದೆ. ಒಟ್ಟಾರೆಯಾಗಿ ಕಿನ್ನರಿ ಬೊಮ್ಮಯ್ಯನ ವಚನವೊಂದು ಯಾವ ಆಸೆಯನ್ನು ಹೊತ್ತು ಕಾಲವನ್ನು ಕ್ರಮಿಸಿತೋ, ಅನಂತರದ ದಾಸ ಸಾಹಿತ್ಯದ ಕಾಲವೂ ಅದೇ ಆಶಯವನ್ನು ಹೊತ್ತು ನಡೆದಿದೆ. ಈ ಆಶಯಗಳು ಇಂದಿಗೂ ಮನುಷ್ಯ ತನ್ನ ಗರ್ವವನ್ನು ಬಿಟ್ಟು ಸಾಧಿಸಿಕೊಳ್ಳಬೇಕಾದುದರ ಹಂಬಲವನ್ನು ಸಾರುತ್ತಿದೆ. ————————————— ಅಡಿಟಿಪ್ಪಣಿಗಳು ೧. ಶರಣಾರ್ಥಿ ಶರಣಾರ್ಥಿ ಎಲೆ ತಾಯೆ ಎಮ್ಮವ್ವಾ ‌     ಶರಣಾರ್ಥಿ ಶರಣಾರ್ಥಿ ಕರುಣಾಸಾಗರನಿಧಿಯೆ      ದಯಾಮೂರ್ತಿ ಕಾಯೆ ಶರಣಾರ್ಥಿ ಶರಣಾರ್ಥಿ      ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕ ನೀವು ಬಿಡಿಸಿದಿರಿ      ನಿಮ್ಮ ದಯದಿಂದ ನಾನು ಹುಲಿನೆಕ್ಕಿ ಬದುಕಿದೆನು      ಶರಣಾರ್ಥಿ ಶರಣಾರ್ಥಿ ತಾಯೆ ಹಲಗೆಯಾರ್ಯನ ಶೂನ್ಯಸಂಪಾದನೆ. ಸಂ. ಪ್ರೊ. ಎಸ್. ವಿದ್ಯಾಶಂಕರ್ ಮತ್ತು ಪ್ರೊ. ಜಿ.‌ಎಸ್. ಸಿದ್ದಲಿಂಗಯ್ಯ. ಪ್ರಿಯದರ್ಶಿನಿ ಪ್ರಕಾಶನ ಬೆಂಗಳೂರು. ವ. ಸಂ. ೧೦೨೦. ಪು ೪೪೯ ( ೨೦೦೮ ) ೨. ಶಿವಶರಣ ಕಥಾರತ್ನಕೋಶ. ತ. ಸು. ಶಾಮರಾಯ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ. ಪುಟ ೮೬ ( ೧೯೬೭ ) ೩. ಪೂರ್ವೋಕ್ತ ೪. ಪೂರ್ವೋಕ್ತ ೫. ಪೂರ್ವೋಕ್ತ ೬. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ.‌ ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು. ವ.ಸಂ – ೧೧. ಪು ೧೨೦೪ ( ೨೦೧೬ ) ೭. .ನೆರೆ ಕೆನ್ನೆಗೆ ತೆರೆ ಗಲ್ಲಕೆ ಶರೀರ ಗೂಡುವೋಗದ ಮುನ್ನ       ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ       ಕಾಲ ಮೇಲೆ ಕೈಯನೂರಿ ಕೋಲ ಹಿಡಿಯದ ಮುನ್ನ       ಮುಪ್ಪಿಂದೊಪ್ಪವಳಿಯದ ಮುನ್ನ       ಮೃತ್ಯುಮುಟ್ಡದ ಮುನ್ನ         ಪೂಜಿಸು ನಮ್ಮ ಕೂಡಲಸಂಗಮದೇವನ ವಚನ ಸಾಹಿತ್ಯ ಸಂಗ್ರಹ. ಸಂ. ಸಂ ಶಿ ಭೂಸನೂರು ಮಠ. ವ. ಸಂ ೮೦. ಪು ೪೯ ( ೧೯೬೫ ) ೮. ಮಾನವಜನ್ಮ ದೊಡ್ಡದು ಇದ      ಹಾನಿಮಾಡಲಿ ಬೇಡಿ ಹುಚ್ಚಪ್ಪಗಳಿರಾ ( ಪ )      ಕಣ್ಣು ಕೈಕಾಲ್ ಕಿವಿ ನಾಲಿಗೆ ಇರಲಿಕ್ಕೆ      ಮಣ್ಣುಮುಕ್ಕಿ ಮರುಳಾಗುವರೆ      ಹೆಣ್ಣುಮಣ್ಣಿಗಾಗಿ ಹರಿಯ ನಾಮಾಮೃತ      ಉಣ್ಣದೆ ಉಪವಾಸ ಇರುವರೆ ಖೋಡಿ ( ೧ )     ಕಾಲನ ದೂತರು ಕಾಲ್ಪಿಡಿದೆಳೆವಾಗ     ತಾಳುತಾಳೆಂದರೆ ತಾಳುವರೆ     ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ     ಸುಳ್ಳಿನ ಸಂಸಾರಸುಳಿಗೆ ಸಿಕ್ಕಲುಬೇಡಿ ( ೨ )     ಏನು ಕಾರಣ ಯದುಪತಿಯ ಮರೆತಿರಿ     ಧನಧಾನ್ಯ ಸತಿಸುತರು ಕಾಯುವರೆ     ಇನ್ನಾದರು ಏಕೋಭಾವದಿ ಭಜಿಸಿರೊ     ಚೆನ್ನ ಶ್ರೀ ಪುರಂದರವಿಠಲರಾಯನ ( ೩ ) ಹರಿದಾಸರ ಜನಪ್ರಿಯ ಹಾಡುಗಳು. ಸಂ. ಡಾ. ಟಿ. ಎಸ್. ನಾಗರತ್ನ ಮತ್ತು ಡಾ. ಮಂದಾಕಿನಿ. ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು. ಪು ೨೦೯ ***************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ

Read Post »

You cannot copy content of this page

Scroll to Top