ಅಂಕಣ ಬರಹ “ಸಿಕ್ಕಿತಾ ಎಂದರೆ ಸಿಕ್ಕಿಲ್ಲ ಎಂಬುದೇ ಉತ್ತರ…” ಆಗಾಗ ಕೆಲವರು ಬರಹವನ್ನೂ ಮತ್ತು ಬರೆದ ಬರಹಗಾರನನ್ನೂ ಒಂದೆನ್ನುವಂತೆ ಭಾವಿಸಿ ಅನುಮಾನದಿಂದ ನೋಡುವುದನ್ನು ನೋಡುತ್ತಿರುತ್ತೇವೆ. ಗೆಳೆಯರು ಇದನ್ನು ಬಾರಿ ಬಾರಿ ಹೇಳಿಕೊಳ್ಳುತ್ತಿರುತ್ತಾರೆ. ಅಲ್ಲದೆ ಇದು ಪ್ರತಿಯೊಬ್ಬ ಬರಹಗಾರನಿಗೂ ಒಂದಲ್ಲಾ ಒಂದು ಬಾರಿ ಎದುರಿಸಬೇಕಾಗಿ ಬರುವ ಸಾಮಾನ್ಯ ಸನ್ನಿವೇಶವೂ ಆಗಿರುತ್ತದೆ. ಆದರೆ ಓದುಗರು ಒಂದು ಮಾತನ್ನು ನೆನಪಿನಲ್ಲಿಡಬೇಕು. ಅವನು ಬರಹಗಾರ… ತನಗೆ ಕಂಡ, ಅನುಭವಿಸಿದ, ಇರರ ಅನುಭವದಿಂದ ಅರಿತ ಎಲ್ಲವನ್ನೂ ಒಂದಾಗಿಸಿ ಬರಹದ ಮೂಲತತ್ವದ ಅಚ್ಚಿಗೆ ಸುರಿದು ಓದುಗರಿಗೆ ಮೆಚ್ಚುಗೆಯಾಗುವಂತೆ ಉಣಬಡಿಸುತ್ತಾನೆ. ಸದಾ ತನ್ನದೇ ವ್ಯಯಕ್ತಿಕ ಅನುಭವವನ್ನು ಬರೆಯುವುದಾದರೆ ಅದು ಅವನ ಆತ್ಮಚರಿತ್ರೆ ಆಗುತ್ತದೆ ಹೊರತು ಸಾಹಿತ್ಯ ನಿಸಿಕೊಳ್ಳುವುದಿಲ್ಲ. ಹೆಣ್ಣೊಬ್ಬಳು ಲೈಂಗಿಕ ವಿವರಗಳನ್ನು ತನ್ನ ಬರಹಗಳಲ್ಲಿ ಬಳಸಿದಾಕ್ಷಣ ಅವಳ ಚಾರಿತ್ರ್ಯವಧೆಗೆ ನಿಂತುಬಿಡುವುದು ಎಷ್ಟು ಸಮಂಜಸ. ಹಾಗಂತ ಪುರುಷ ಲೇಖಕರ ಸ್ಥಿತಿಯೂ ಚನ್ನಾಗೇನೂ ಇಲ್ಲ. ಆದರೆ ಸಮಾಜ ಅವರಿಗೆ ಒಂದು ಸಣ್ಣ ಮಾರ್ಜೀನನ್ನು ಕೊಡುತ್ತದೆ ಅಷ್ಟೇ. ಇವತ್ತಿಗೆ ಪರಿಸ್ಥಿತಿ ಒಂಚೂರು ಸುಧಾರಿಸಿಕೊಂಡಿದೆ ಆದರೂ ಕುಹಕದ ನಗು ಮತ್ತು ಅನುಮಾನದ ದೃಷ್ಟಿ ಸಂಪೂರ್ಣ ಮರೆಯಾಗಿಲ್ಲ. ನವರಸ ಎಂದರೆ ಶೃಂಗಾರ, ಹಾಸ್ಯ, ವೀರ, ಅದ್ಭುತ, ಭಯಾನಕ, ಶಾಂತ, ಕರುಣಾ, ರೌದ್ರ, ಭೀಭತ್ಸ… ಎಲ್ಲವೂ ಸೇರಬೇಕು. ಅದೇ ರೀತಿ ಪ್ರತಿ ಕಲೆಯೂ ನವರಸಗಳಿಂದಲೇ ತುಂಬಿ ಪರಿಪೂರ್ಣವಾಗಬೇಕು. ಅದಕ್ಕೆ ಸಾಹಿತ್ಯವೂ ಹೊರತಲ್ಲ. ಹೀಗಿರುವಾಗ ಅದರಲ್ಲಿನ ಒಂದು ಭಾವವನ್ನೇ ನಿರಾಕರಿಸಿಬಿಡುವುದು ಪರಿಪೂರ್ಣತೆಗೆ ಧಕ್ಕೆಯಾದಂತಲ್ಲವೇ… ಒಮ್ಮೆ ನನ್ನ ಒಂದು ಕತೆಯನ್ನು ಓದಿದ ಗೆಳತಿಯೊಬ್ಬಳು “ಅವನು ಯಾರು, ಈಗ ಎಲ್ಲಿದ್ದಾನೆ” ಎಂದೆಲ್ಲಾ ಕೇಳಲು ಶುರುಮಾಡಿದಳು. “ಇಲ್ಲ ಮಾರಾಯ್ತಿ, ಹಾಗೆಲ್ಲ ಎಂತದ್ದೂ ಇಲ್ಲ. ಯಾರದ್ದೋ ಕತೆ ಅದಕ್ಕೆ ಸ್ಫೂರ್ತಿ ಅಷ್ಟೇ… ಮತ್ತೆ ಉಳಿದದ್ದೆಲ್ಲ ಕಟ್ಟುಕತೆ ಅದು…” ಎಂದು ಎಷ್ಟು ಹೇಳಿದರೂ ಅವಳು ನಂಬಲು ಸಿದ್ಧಳಾಗಲೇ ಇಲ್ಲ! ಇರಲಿ, ನಮ್ಮ ಸುತ್ತಮುತ್ತಲ ಬದುಕು, ಸಮಾಜ ನಮ್ಮನ್ನು ಬಹಳಷ್ಟು ಪ್ರಭಾವಿಸುತ್ತವೆ. ಆ ಪ್ರಭಾವವೇ ನಮ್ಮನ್ನು ಬೆಳೆಸುತ್ತವೆ. ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕೆಲವೊಮ್ಮೆ ತೀರಾ ಹತ್ತಿರದ ಸಂಬಂಧಿಗಳೇ ನಮ್ಮ ಕತೆ ಅಥವಾ ಕವಿತೆಯ ನಾಯಕರೂ ಆಗಿಬಿಡುತ್ತಾರೆ. ಅದು ಇನ್ನೊಂಥರದ ಬಿಸಿತುಪ್ಪ. ಅದು ಅವರು ಇಷ್ಟಪಡುವಂತಹ ರೀತಿಯಲ್ಲಿದ್ದರೆ ಸರಿ, ಇಲ್ಲವಾದರೆ ಅವರ ವಿರಸವನ್ನೂ ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ. ಇದೆಲ್ಲವನ್ನೂ ಮೀರಿ ಬರಹಗಾರ ಬರಹವನ್ನು ಉಳಿಸಬೇಕಿರುತ್ತದೆ. ಮನುಷ್ಯರು ಅಳಿಯುತ್ತಾರೆ. ಪಾತ್ರಗಳು ಉಳಿಯುತ್ತವೆ. ಬರಹಗಾರ ಅಳಿಯುತ್ತಾನೆ ಪುಸ್ತಕಗಳಷ್ಟೇ ಉಳಿಯುತ್ತವೆ. ಬರಹ ಒಂದಿಡೀ ಕಾಲಮಾನದ ಧ್ಯೋತಕವಾಗಿರುತ್ತದೆ. ಒಬ್ಬ ವ್ಯಕ್ತಿಯ ವಿವರ ಬರಹದ ಮೂಲಕ ಸಾಮಾನ್ಯೀಕಣಗೊಳ್ಳುತ್ತದೆ. ಇಲ್ಲವಾದರೆ ಓದುವ ಬಹಳಷ್ಟು ಮಂದಿ ಇದು ನನ್ನದೇ ಮಾತು, ಇದು ನನ್ನದೇ ವಿವರ, ಇದು ನನ್ನದೇ ಪರಿಸ್ಥಿತಿ ಎನ್ನುವಂತೆ ಓದಿಕೊಳ್ಳುವರಲ್ಲ ಹೇಗೆ… ಮತ್ತೆ ಬರಹಗಾರನಿಗೂ ತಾನು ಕಂಡುಂಡ ವಿಚಾರವನ್ನು ಕತೆ ಅಥವಾ ಕವಿತೆಗೆ ಬ್ಲೆಂಡ್ ಮಾಡುವ ಕಲೆ ತಿಳಿದಿರಬೇಕಿರುತ್ತದೆ. ಆದರೆ ಒಂದು ಭಾವತೀವ್ರತೆಯಲ್ಲಿ ಬರೆಯ ಹೊರಟ ಹುಮ್ಮಸ್ಸಿನಿಂದಾಗಿ ಬರಹ ವಾಚ್ಯವಾಗುವುದನ್ನು ತಪ್ಪಿಸುವುದು ಕಷ್ಟವಾಗಿಬಿಡುತ್ತದೆ. ಆಗ ಪು.ತಿ.ನ.ರು ಹೇಳಿದ ಭವನಿಮಜ್ಜನ ಮತ್ತು ಲಘಿಮಾ ಕೌಶಲ ನೆನಪಾಗಬೇಕು ಮತ್ತು ಈ ಕಷ್ಟದಿಂದ ಪಾರಾಗುವುದನ್ನು ಪ್ರತಿಯೊಬ್ಬ ಬರಹಗಾರನೂ ಕಲಿಯಬೇಕು. ಎಲ್ಲವನ್ನೂ ವಾಚ್ಯವಾಗಿ ಹೇಳುವುದಾದರೆ ಕತೆ, ಕವಿತೆ, ಪ್ರಬಂಧ… ಎನ್ನುವ ಯಾವ ಸಾಹಿತ್ಯ ಪ್ರಕಾರಗಳ ಅವಶ್ಯಕತೆಯೂ ಇರುವುದಿಲ್ಲ. ಯಾವುದೇ ಬರಹ ವಾಚ್ಯವಾಗುತ್ತಾ ಹೋದಂತೆ ಓದುಗರ ಚಿಂತನೆಗೆ, ವಿಚಾರಕ್ಕೆ ಅವಕಾಶವೇ ಇಲ್ಲದಂತೆ ಆಗಿಬಿಡುತ್ತದೆ. ಎಲ್ಲವನ್ನೂ ಬರಹಗಾರನೇ ಹೇಳಿಬಿಟ್ಟ ಮೇಲೆ ವಿಚಾರ ಮಾಡಲಿಕ್ಕೆ ಇನ್ನೇನುಳಿಯುತ್ತದೆ?! ವಾಚ್ಯತೆ ಬರಹಗಾರನ ಬಹು ದೊಡ್ಡ ಶತ್ರು. ಅದನ್ನು ಮೀರುವುದೆಂದರೆ, ಮೊಸರನ್ನಕ್ಕೆ ಬಿದ್ದ ಕಲ್ಲನ್ನು ಎತ್ತಿ ಪಕ್ಕಕ್ಕಿಟ್ಟು ಸೇವಿಸುವಷ್ಟೇ ನಾಜೂಕಾಗಿ ಮಾಡಬೇಕಾದ ಕೆಲಸ. ಆ ನಾಜೂಕುತನ ಅಭ್ಯಾಸ ಮತ್ತು ಅಧ್ಯಯನ ಬಲದಿಂದ ಸಾಧ್ಯ. ಅವಸರದಿಂದ ಬರೆಯಲು ಹೊರಡುವ ಇಂದಿನ ಬರಹಗಾರರಿಗೆ ಸಾಹಿತ್ಯದ ಇತಿಹಾಸ ಬೇಕಿಲ್ಲ. ಹಿರಿಯರನ್ನು ಓದುವುದು ಬೇಡವಾಗುತ್ತಿದೆ. ಒಂದಷ್ಟು ಬರಹಗಳು ಪ್ರಕಟವಾದ ಕೂಡಲೇ ಅಹಮ್ಮಿಗೆ ಗುರಿಯಾಗಿಬಿಡುತ್ತೇವೆ. ಅದು ನಮ್ಮ ವಯಸ್ಸಿಗೆ ಸಹಜವಾದ ಕಾರಣ ಅದನ್ನು ಮೀರುವುದು ಸುಲಭವಲ್ಲ. ಆದರೆ ಹೆಚ್ಚು ಹೆಚ್ಚು ಓದುತ್ತಾ ಹೋದಂತೆ ಆ ಪೊರೆ ತನ್ನಿಂತಾನೆ ತನ್ನ ಅಸ್ತಿತ್ವವನ್ನು ಕಳಚಿಕೊಳ್ಳುತ್ತದೆ. ಯಾವುದೇ ಕಲೆಯಿರಲಿ ಅದು ಮನಸ್ಸನ್ನು ತಟ್ಟುವಂತಹ ಶಕ್ತಿಯನ್ನು ಹೊಂದಿರುತ್ತದೆ. ಅದು ಮೊದಲು ಕಲಾವಿದನನ್ನೇ ತನ್ನ ಹತೋಟಿಗೆ ತೆಗೆದುಕೊಳ್ಳುತ್ತದೆ. ನಂತರವೇ ಅದು ಅದರ ಆರಾಧಕನನ್ನು ತಲುಪುವುದು. ಒಮ್ಮೆ ಅದು ತನ್ನ ಹಿಡಿತಕ್ಕೆ ಯಾರನ್ನಾದರೂ ಸಿಲುಕಿಸಿಕೊಂಡುಬಿಟ್ಟಿತೆಂದರೆ ಅದು ಆ ವ್ಯಕ್ತಿಯನ್ನು ವಿನೀತನನ್ನಾಗಿಸಿಬಿಡುತ್ತದೆ. ಅಹಂಕಾರ ಇನ್ನಿಲ್ಲ ಅವನಲ್ಲಿ! ಸಾಹಿತ್ಯದ ಅಂತಿಮ ಪ್ರಭಾವವೂ ಅದೇ ಆಗಬೇಕಿದೆ. ಸಾಹಿತ್ಯ ಒಟ್ಟಾರೆ ನಮ್ಮ ವ್ಯಕ್ತಿತ್ವವನ್ನು ಪ್ರಭಾವಿಸಬೇಕು, ಮತ್ತದು ಧನಾತ್ಮಕವಾಗಿಯೇ… ಅದೇ ಅದರ ನಿಜವಾದ ಶಕ್ತಿ. ಹೀಗೆ ಇಷ್ಟೆಲ್ಲಾ ಸಾಹಿತ್ಯದ ಧ್ಯಾನ, ಗುಣಗಾನ… ಮಾಡಿಯಾದ ನಂತರವೂ ಅದರ ನಾಡಿ ಮಿಡಿತ ಸಿಕ್ಕಿತಾ ಎಂದರೆ ಸಿಕ್ಕಿಲ್ಲ ಎಂಬುದೇ ಉತ್ತರ… ************************************************************ –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ಎಲ್ಲಾ ಒಳ್ಳೆಯದೇ ಆಗುತ್ತೆ… ಈ ಥರದ ಮಾತುಗಳನ್ನ ನಾವು ಬಹಳಷ್ಟು ಸಾರಿ ಕೇಳಿರ್ತೇವೆ. “ಒಳ್ಳೇವ್ರಿಗೆ ಒಳ್ಳೆಯದೇ ಆಗುತ್ತೆ”, “ನಾವು ಒಬ್ರಿಗೆ ಒಳ್ಳೇದು ಮಾಡಿದ್ರೆ ದೇವರು ನಮಗೆ ಒಳ್ಳೇದು ಮಾಡ್ತಾನೆ”, “ತಾತ ಮಾಡಿದ ಪಾಪ ಮೊಮ್ನೊಗನಿಗೆ”… ಹೀಗೆ ಹಲವಾರು ಮಾತುಗಳು… ಇವೆಲ್ಲ ಬರಿಯ ಮಾತುಗಳಲ್ಲ, ಅದೊಂದು ದೈತ್ಯ ಶಕ್ತಿಯ ನಂಬಿಕೆ, ನಮ್ಮ ಬದುಕನ್ನು ಮುನ್ನಡೆಸುವ ಶಕ್ತಿ. ನನ್ನ ತಂದೆ ಒಬ್ಬ ಪ್ರಾಮಾಣಿಕ ಹೈಸ್ಕೂಲ್ ಗಣಿತದ ಮೇಷ್ಟ್ರು. ತಮ್ಮ ವಿದ್ಯಾರ್ಥಿಗಳಿಗೆ ಸ್ವಂತ ಮಕ್ಕಳ ರೀತಿಯಲ್ಲೇ ಭಾವಿಸಿ ಪಾಠ ಹೇಳಿಕೊಟ್ಟವರು. ಅವರ ಬದುಕಿನುದ್ದಕ್ಕೂ ಅವರು ನಂಬಿದ್ದು ಒಂದೇ ಒಂದು. ನಾನು ಈ ಮಕ್ಕಳಿಗೆ ಚೆನ್ನಾಗಿ ಪಾಠ ಮಾಡಿದರೆ ದೇವರು ಮುಂದೆ ನನ್ನ ಮಕ್ಕಳನ್ನ ಚನ್ನಾಗಿಟ್ಟಿರ್ತಾನೆ ಎನ್ನುವುದು. ಅದಕ್ಕೆ ಸರಿಯಾಗಿ ನಾನು ನನ್ನ ತಮ್ಮ ಓದಿ ನೌಕರಿಗೆ ಸೇರಿದ ಮೇಲೆ ಅವರಿಗೆ ಅವರ ನಂಬಿಕೆ ಮತ್ತೂ ಬಲವಾಯ್ತು. ಆದರೆ ನಮಗೆ ನಿಜ ಗೊತ್ತಿತ್ತು. ನನ್ನ ತಂದೆ ನಮಗೆ ತಿಳಿದ ಹಾಗೆ, ನಮಗೆ ಬುದ್ಧಿ ಬಂದಾಗಿನಿಂದಲೂ ಎಂದೂ ಸಂಜೆ ಮತ್ತು ಬೆಳಗಿನ ಹೊತ್ತು, ಸಮಯವನ್ನು ವ್ಯರ್ಥವಾಗಿ ಕಳೆದವರಲ್ಲ. ಬೆಳಗ್ಗೆ ಮನೆ ಪಾಠಕ್ಕೆ (ಒತ್ತಯಕ್ಕೆ ಮಣಿದು ಉಚಿತವಾಗಿ ಪಾಠ ಮಾಡುತ್ತಿದ್ದರೇ ಹೊರತು, ಅವರೆಂದೂ ಫೀಸಿಗೆ ಮನೆ ಪಾಠ ಮಾಡಿದವರಲ್ಲ… ಯಾರೋ ಕೆಲವರು ಒತ್ತಾಯ ಪೂರ್ವಕವಾಗಿ ಉಡುಗೊರೆ ಕೊಡುತ್ತಿದ್ದರಷ್ಟೇ..) ಬರುತ್ತಿದ್ದ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು, ಸಂಜೆ ನಾವಿಬ್ಬರು ಮಕ್ಕಳಿಗೆ. ಅವರು ನಾನು ಮತ್ತು ನನ್ನ ತಮ್ಮ ಬೆಳೆದು ಪಿಯುಸಿ ದಾಟುವವರೆಗೂ ಎಂದೂ ಟೀವಿಯನ್ನೇ ನೋಡಲಿಲ್ಲ, ಯಾವ ಮೋಜು ಅದು ಇದು ಎಂದು ಕಾಲಾಯಾಪನೆಯನ್ನೇ ಮಾಡಲಿಲ್ಲ. ಅವರು ಮೊದಲ ಬಾರಿ ನಿರುಮ್ಮಳವಾಗಿ ಟೀವಿ ನೋಡಲು ಶುರು ಮಾಡಿದ್ದೇ, ನಾನು ನೌಕರಿ ಸೇರಿ ಮತ್ತು ನನ್ನ ತಮ್ಮ ತನ್ನ ಹೆಚ್ಚಿನ ಓದಿಗಾಗಿ ಅಂತ ಮನೆ ತೊರೆದಾಗಲೇ. ಅವರ ಈ ಶ್ರಮ ವ್ಯರ್ಥವಾಗಲಿಲ್ಲ. ಆದರೆ ತಮ್ಮ ಇಡೀ ಬದುಕನ್ನೇ ಅವರ ವೃತ್ತಿ (ಸೇವೆ) ಮತ್ತು ಮಕ್ಕಳ ಬದುಕಿಗಾಗಿ ಮುಡುಪಾಗಿಟ್ಟ ರೀತಿ ಮಾತ್ರ ಈಗಲೂ ನನಗೊಂದು ಅಚ್ಚರಿ. ನನಗೂ ಸಹ ನನ್ನ ಮಕ್ಕಳಿಗೆ ಅಷ್ಟು ಸಮಯ ಕೊಡಲು ಒಮ್ಮೊಮ್ಮೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಾನು ನನ್ನ ಮಕ್ಕಳನ್ನು ಸರಿಯಾಗಿ ಬೆಳೆಸುತ್ತಿಲ್ಲವಾ ಎನ್ನುವ ಅನುಮಾನವೂ ನನಗೆ ಕಾಡಿಬಿಡುತ್ತದೆ. ಆದರೆ ಅವರ ಒಟ್ಟಾರೆ ಬದುಕೇ ಒಂದು ಪಾಠವಾಗಿ ನನ್ನ ಮುಂದಿದೆ. ನನ್ನ ಅವಶ್ಯಕತೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಅದನ್ನು ಬಳಸುತ್ತಾ ನಡೆಯಬೇಕಿದೆ. ಒಂದಂತೂ ನಿಜವಾಯಿತು. ನನ್ನಪ್ಪ ಮಹತ್ವಾಕಾಂಕ್ಷಿಗಳಾಗಿರಲಿಲ್ಲ. ಅವರಿಗೆ ಏನನ್ನೋ ಸಾಧಿಸಬೇಕು ಎನ್ನುವ ಹಂಬಲವಿರಲಿಲ್ಲ. ಆದರೆ ತಮ್ಮ ಮಕ್ಕಳು ಸನ್ನಡತೆಯುಳ್ಳವರಾಗಿರಬೇಕು, ಸದ್ಗುಣಗಳನ್ನು ಕಲಿತಿರಬೇಕು, ಸನ್ಮಾರ್ಗದಲ್ಲಿ ನಡೆಯಬೇಕು ಎನ್ನುವುದಷ್ಟೇ ಅವರಿಗೆ ಮುಖ್ಯವಾಗಿತ್ತು. ಬೇರೆಯವರ ಒಂದು ಸಣ್ಣ ಐದು ಪೈಸೆಯನ್ನೂ ಮುಟ್ಟಬಾರದು ಎಂಬ ಪಾಠ ನಮಗೆ ಸಿಕ್ಕಿದ್ದು ಅತಿ ಸಣ್ಣ ವಯಸ್ಸಿನಲ್ಲಿ. ಇವತ್ತಿಗೂ ನಮಗಿರುವುದರಲ್ಲಿ ನಾವು ತೃಪ್ತರೇ ವಿನಃ ಮತ್ತೊಬ್ಬರ ಹಣಕ್ಕೆ ಆಸೆ ಪಡಬೇಕು ಎಂದು ಯಾವತ್ತು ಅನಿಸಿಯೇ ಇಲ್ಲ ನಮಗೆ. ಅವರು ಕೊಟ್ಟಿರುವ ಸಂಸ್ಕಾರ ಅಷ್ಟು ಗಟ್ಟಿಯಾದದ್ದು. ಇವತ್ತು ಅಪ್ಪ ಅಮ್ಮನಿಂದ ಬಹಳ ದೂರದಲ್ಲಿದ್ದು ಬದುಕುತ್ತಿದ್ದರೂ ಅವರು ಕಲಿಸಿದ ಗುಣಗಳು ಸದಾ ನಮ್ಮನ್ನು ಕಾಯುತ್ತಿವೆ, ನಡೆಸುತ್ತಿವೆ. ಕೆಟ್ಟದ್ದರ ನಡುವೆಯೂ ಒಳ್ಳೆಯದನ್ನು ಆರಿಸಿಕೊಂಡು ನಡೆಯುವುದನ್ನು ಹೇಳಿಕೊಡುತ್ತಿವೆ. ಅದರೆ ಈಗಲೂ ಅಪ್ಪ ನಂಬುತ್ತಾರೆ, “ನಾನು ನನ್ನ ವಿದ್ಯಾರ್ಥಿಗಳಿಗೆ ನಿಸ್ವಾರ್ಥದಿಂದ ಹೇಳಿಕೊಟ್ಟ ನಾಲ್ಕು ಅಕ್ಷರಗಳಿಂದಾಗಿಯೇ ದೇವರು ನನ್ನ ಮಕ್ಕಳನ್ನ ಕಾಪಾಡಿದಾನೆ” ಅಂತ. ಆದರೆ ನಾನು ನಂಬುವುದು ಮಾತ್ರ ಅವರ ಪ್ರಾಮಾಣಿಕತೆ, ನಿಸ್ವಾರ್ಥತೆ, ಪರಿಶ್ರಮ, ತ್ಯಾಗ, ಮುಗ್ಧತೆ ಮತ್ತು ಪ್ರಂಜಲ ಮನಸಿನ ಪ್ರೀತಿಯನ್ನು ಮಾತ್ರ…. ಈಗ ಯೋಚಿಸುವುದಿಷ್ಟೇ ನಾನು ನನ್ನ ಮಕ್ಕಳನ್ನು ಎಷ್ಟರ ಮಟ್ಟಿಗೆ ಪ್ರಭಾವಿಸಿದ್ದೇನೆ?! ಅವರ ಒಂದಿಡೀ ಘನ ಬದುಕಿಗಾಗುವಷ್ಟು ದಟ್ಟ ಅನುಭವಗಳನ್ನು ನಾನು ಕಟ್ಟಿಕೊಡುತ್ತಿರುವೆನಾ?! ಅವರಿಗೆ ಎಂತಹ ಮಾರ್ಗವನ್ನು ತೋರಿಸುತ್ತಿದ್ದೇನೆ ನಾನು?! ಇವತ್ತಿನ ಅಂತರ್ಜಾಲದ ಯುಗದಲ್ಲಿ ನಮಗೆ ಮೊಬೈಲಿಗಿಂತಲೂ ಪ್ರಿಯವಾದದ್ದು ಬೇರೊಂದಿಲ್ಲ. ಕಂಪ್ಯೂಟರ್, ಟೀವಿಯನ್ನೂ ಹಿಂದಿಕ್ಕಿದೆ ಈ ಮೊಬೈಲು. ಅದು ನಮ್ಮ ಜೀವನದ ಅವಿಭಾಜ್ಯ ಅಂಗವೆನಿಸತೊಡಗಿದೆ. ಊಟ ನಿದ್ರೆಯ ಜೊತೆಗೆ ನಮ್ಮ ಆಯುಷ್ಯವನ್ನೂ ಕಸಿಯುತ್ತಿವೆ ಈ ಮೊಬೈಲುಗಳು. ಸಾಮಾಜಿಕ ತಾಣಗಳೆನ್ನುವ ವರ್ಚುವಲ್ ಪ್ರಪಂಚವನ್ನೇ ಅತಿಯಾಗಿ ಹಚ್ಚಿಕೊಂಡು ಅದನ್ನೇ ಸತ್ಯ ಎನ್ನುವಂತೆ ಬದುಕುತ್ತಿದ್ದೇವೆ ನಾವು. ಮೊನ್ನೆ ಒಂದು ಕತೆ ಓದಿದೆ. ಅದು ಬಹಳಷ್ಟು ಕಡೆ ಬಹಳಷ್ಟು ಸಮಯದಿಂದ ಹರಿದಾಡುತ್ತಿದ್ದು ನನ್ನ ಗಮನಕ್ಕೂ ಬಂದಿತ್ತು. ಅದೊಂದು ಶಾಲೆ. ಅಲ್ಲೊಬ್ಬ ಶಿಕ್ಷಕಿ. ಒಂದು ದಿನ ಆಕೆ ತನ್ನ ವಿದ್ಯಾರ್ಥಿಗಳಿಗೆ “ಮುಂದೆ ನಿಮಗೆ ಏನಾಗಬೇಕೆಂದು ಆಸೆ ಇದೆ ಎನ್ನುವುದನ್ನು ಒಂದು ಪೇಪರ್ ನಲ್ಲಿ ಬರೆದು ಕೊಡಿ” ಎನ್ನುತ್ತಾಳೆ. ಎಲ್ಲ ಮಕ್ಕಳೂ ಬರೆದುಕೊಡುತ್ತಾರೆ. ಶಿಕ್ಷಕಿ ಅವನ್ನು ಕರೆಕ್ಷನ್ ಮಾಡಲಿಕ್ಕಾಗಿ ಮನೆಗೆ ತರುತ್ತಾಳೆ. ಮನೆಕೆಲಸ, ಅಡುಗೆ, ಊಟ ಎಲ್ಲ ಮುಗಿಸಿ, ದಿನನಿತ್ಯದಂತೆ ಒಂದಷ್ಟು ಹೊತ್ತು ಮೊಬೈಲ್ ನೋಡಿ, ಮಲಗುವ ಮುನ್ನ ಆ ಪೇಪರ್ ಗಳನ್ನು ಓದಲು ಶುರುಮಾಡುತ್ತಾಳೆ. ಪಕ್ಕದಲ್ಲಿ ಅವಳ ಗಂಡ ಮೊಬೈಲ್ ನಲ್ಲಿ ಮುಳುಗಿರುತ್ತಾನೆ. ಇದ್ದಕ್ಕಿದ್ದ ಹಾಗೆ ಅವಳು ಒಂದು ಪೇಪರ್ ಓದುತ್ತಾ ಅಳಲು ಶುರು ಮಾಡುತ್ತಾಳೆ. ಆಗ ಅವಳ ಗಂಡ ಯಾಕೆ ಅಳ್ತಿದಿ ಎಂದು ಕೇಳುತ್ತಾನೆ. ಆಗ ಆಕೆ ಹೇಳುತ್ತಾಳೆ, ಇಲ್ಲೊಂದು ವಿದ್ಯಾರ್ಥಿಯ ಬರೆಹ ನೋಡಿ ಅಳು ಬಂತು ಎನ್ನುತ್ತಾಳೆ. ಆಗ ಗಂಡ ಏನಂಥದ್ದು ಬರೆದಿದ್ದಾನೆ ಆ ಹುಡುಗ ಎಂದು ಕೇಳುತ್ತಾನೆ. ಆಗ ಆ ಶಿಕ್ಷಕಿ ಆ ಬರೆಹವನ್ನು ಓದತೊಡಗುತ್ತಾಳೆ, “ಮಿಸ್ ನನಗೆ ದೊಡ್ಡವನಾದ ಮೇಲೆ ಒಂದು ಸ್ಮಾರ್ಟ್ ಫೋನ್ ಆಗಬೇಕು ಅಂತ ಆಸೆ. ಯಾಕಂದ್ರೆ ಅಪ್ಪ ಅಮ್ಮ ನಂಗಿಂತ ಮೊಬೈಲನ್ನೆ ತುಂಬ ಪ್ರೀತಿಸ್ತಾರೆ. ರಾತ್ರಿ ಮಲಗುವಾಗಲು ಅದನ್ನೇ ನೋಡ್ತಾರೆ, ಬೆಳಗ್ಗೆ ಕಣ್ಣು ಬಿಟ್ಟಾಗಲೂ ಅದನ್ನೇ ನೋಡ್ತಾರೆ. ನಂಜೊತೆ ಎರೆಡು ಮಾತಾಡೋದಿಲ್ಲ, ಪ್ರೀತಿಯಿಂದ ಇರೋದಿಲ್ಲ. ಸದಾ ಮೊಬೈಲಿನಲ್ಲೇ ಮುಳುಗಿರ್ತಾರೆ. ಇನ್ನು ಕಾಲ್ ಬಂದುಬಿಟ್ಟರೆ ಮುಗೀತು. ನಾನೊಬ್ಬ ಇದೀನಿ ಎನ್ನುವುದೇ ನೆನಪಿರೋದಿಲ್ಲ ಅವರಿಗೆ. ಅದಕ್ಕೆ ನಾನೊಂದು ಸ್ಮಾರ್ಟ್ ಫೋನ್ ಆಗಬೇಕು ಅಂತ ಆಸೆ. ಆಗ ಅಪ್ಪ ಅಮ್ಮ ನನ್ನನ್ನೇ ಪ್ರೀತಿಸ್ತಾರೆ” ಎಂದು ಓದಿ ಮುಗಿಸುತ್ತಾಳೆ. ಅಷ್ಟು ಹೊತ್ತಿಗಾಗಲೇ ಗಂಡನ ಕಣ್ಣೂ ತುಂಬಿರುತ್ತದೆ. ಎಂಥದೋ ತಪ್ಪಿತಸ್ಥ ಭಾವ ಅವನನ್ನೂ ಕಾಡತೊಡಗಿರುತ್ತದೆ. ಮತ್ತೆ ಗೊಗ್ಗರು ದನಿಯಲ್ಲಿ ಆ ಹುಡುಗ ಯಾರು ಎಂದು ಕೇಳುತ್ತಾನೆ. ಆ ಹುಡುಗ ಬೇರೆ ಯಾರೂ ಅಲ್ಲ ನಮ್ಮ ಮಗನೇ ಕಣ್ರೀ ಎನ್ನುತ್ತಾ ಮತ್ತೂ ಜೋರಾಗಿ ಅಳತೊಡಗುತ್ತಾಳೆ ಆ ಶಿಕ್ಷಕಿ. ಇದಂತೂ ಬಹುತೇಕ ನಮ್ಮಲ್ಲರಿಗೂ ಅನ್ವಯಿಸುವ ಕತೆಯೇನೋ ಅನಿಸಿಬಿಟ್ಟಿತು ನನಗೆ. ನಾವು ನಮ್ಮ ಮಕ್ಕಳಿಗೆ ನ್ಯಾಬದ್ಧವಾಗಿ ಅವರಿಗೆ ಸಿಗಬೇಕಾದ ಸಮಯವನ್ನ ಕೊಡುತ್ತಿಲ್ಲದ ಅಪರಾಧಿಗಳು. ಇನ್ನು ಆ ಮಕ್ಕಳು ಬೆಳೆದಾದ ಮೇಲೆ ಇನ್ನೆಂತಹ ಮೌಲ್ಯಗಳನ್ನು ಬೆಳೆಸಿಕೊಳ್ಳಲು ತಾನೆ ಸಾಧ್ಯ. ಮಕ್ಕಳು ನೋಡ ನೋಡುತ್ತಲೇ ಬೆಳೆದುಬಿಡುತ್ತಾರೆ. ಅವರ ಬೆಳವಣಿಗೆಯ ಪ್ರತಿ ಹಂತವನ್ನೂ ನಾವು ಅಚ್ಚರಿಯಿಂದ ಕಂಡು ಆನಂದಿಸಿ ಪ್ರೀತಿಸಬೇಕು. ಅದನ್ನೇ ಮಾಡದೆ ಹೋದರೆ ಮುಂದೆ ಆ ಮಕ್ಕಳು ನಮ್ಮನ್ನು ಯಾವ ಕಾರಣಕ್ಕಾಗಿ ನೆನಪಿಡಬೇಕು… ಪೇರೆಂಟಿಂಗ್ ಕೂಡ ಬಹಳ ಜವಾಬ್ದಾರಿಯುತ ಕೆಲಸ. ಹೆತ್ತರೆ ಮಾತ್ರ ಸಾಕಾಗುವುದಿಲ್ಲ. ಮಕ್ಕಳ ಅವಶ್ಯಕತೆಗೆ ಮೀರಿ ಸೌಲಭ್ಯಗಳನ್ನು ಕೊಟ್ಟು ಗಿಲ್ಟ್ ಕಳೆದುಕೊಳ್ಳುವುದಲ್ಲ, ಅವರಿಗೆ ಕೊಡಬೇಕಾದ ಸಮಯ ಕೊಟ್ಟು ಅವರನ್ನ ಪ್ರೀತಿಯಿಂದ ಪ್ರಭಾವಿಸಬೇಕಿದೆ. ಸರಿ ತಪ್ಪುಗಳನ್ನು ಗುರುತಿಸಿ ಸರಿದಾರಿ ಕಂಡುಕೊಂಡು ನಡೆಯುವುದನ್ನು ಕಲಿಸಿಕೊಡಬೇಕಿದೆ. ಇನ್ನದಾರೂ ಒಂದಷ್ಟು ಹೊತ್ತು ಮೊಬೈಲ್ ಬಿಸಾಕಿ ನಮ್ಮ ಮಕ್ಕಳ ಜೊತೆ ಕೂತು ಒಂದಷ್ಟು ಚಂದದ ಸಮಯವನ್ನು ಕಳೆಯಬೇಕಿದೆ ಅಂತ ಅನಿಸುತ್ತಿರುವುದನ್ನು ನನ್ನಿಂದಲೇ ಶುರುಮಾಡಬೇಕಿದೆ. ಮತ್ತೆ ಎಲ್ಲಾ ಒಳ್ಳೆಯದೇ ಆಗುತ್ತೆ ಎನ್ನುವ ನಂಬಿಕೆಯ ಬೀಜವನ್ನು ಬಿತ್ತಿಕೊಂಡು ಅದು ಮೊಳೆತು ಬೆಳೆದು ಹೆಮ್ಮರವಾಗುವುದನ್ನು ಇಂಚಿಂಚೂ ಕಾಣಬೇಕಿದೆ… ********************************** –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ಹವ್ಯಾಸವೆಂಬ ಮಂದಹಾಸ… ಹವ್ಯಾಸಗಳಿಲ್ಲದ ಮನುಷ್ಯನೆಂದರೆ ಎಲೆ ಹೂವು ಹಣ್ಣು ಏನೊಂದೂ ಇಲ್ಲದ ಬೋಳು ಮರವೇ ಸರಿ. ಬದುಕು ದುರ್ಬರವೆನಿಸಿದ ಹೊತ್ತಲ್ಲೂ ಸಹನೀಯತೆ ತರುವ ಶಕ್ತಿ ಇದ್ದರೆ ಅದು ಹವ್ಯಾಸಗಳಿಗೆ ಮಾತ್ರ. ಹೊತ್ತು ಕಳೆಯಲು ವ್ಯರ್ಥ ಅಭ್ಯಾಸಗಳನ್ನು ಮಾಡಿಕೊಳ್ಳುವ ಬದಲು ಸಮಯವನ್ನು ಗೌರವಿಸುವಂತ ಅರ್ಥಪೂರ್ಣ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಹವ್ಯಾಸಗಳು ಬರಿದೆ ಮೂರ್ತಿಗೆ ಮಾಡಿದ ಅಲಂಕಾರದಂತೆ ನಮ್ಮನ್ನು ಚೆಂದಗಾಣಿಸುತ್ತದೆ. ಹವ್ಯಾಸವೆನ್ನುವ ಟಾರ್ಚು ನಮ್ಮ ಕೈಯಲ್ಲಿದ್ದರೆ ಅದು ದಟ್ಟ ಕಾಡಿನ ನಡುವೆಯೂ ಕೈಹಿಡಿದು ನಡೆಸಿ ಗುರಿ ಮುಟ್ಟಿಸಬಲ್ಲದು, ಮನಸ್ಸನ್ನು ಪ್ರಫುಲ್ಲಗೊಳಿಸಬಲ್ಲದು, ನೋವನ್ನು ಮರೆಸಿ ಮಾಯಿಸಬಲ್ಲದು. ವ್ಯಕ್ತಿಯೊಬ್ಬನ ವ್ಯಕ್ತಿತ್ವವನ್ನು ಹವ್ಯಾಸಗಳ ಒರೆಗೆ ಹಚ್ಚುವುದರಿಂದ ಪುಟಕ್ಕಿಟ್ಟ ಚಿನ್ನವೆಂದು ಸಾಬೀತಾಗುತ್ತದೆ. ಸಾಯಲು ನಿಂತವನಲ್ಲೂ ಒಂದು ಸಣ್ಣ ಹಾಡು, ಒಂದು ಸಣ್ಣ ಕವಿತೆ, ಚೆಂದದ ಚಿತ್ರ ಬದುಕುವ ಆಸೆಯನ್ನು ಹುಟ್ಟಿಸುತ್ತದೆಯೆಂದರೆ ಅದರ ಶಕ್ತಿಯನ್ನು ಯಾರಾದರೂ ಊಹಿಸಬಹುದು. ಹವ್ಯಾಸಗಳೆಂದಾಕ್ಷಣ ನಾವದರಲ್ಲಿ ಅತೀತವಾದ್ದೇನನ್ನೋ ಸಾಧಿಸಲೇ ಬೇಕಂತಿಲ್ಲ. ಅದು ನಮ್ಮ ಆತ್ಮ ಸಂತೋಷಕ್ಕೆ ಒದಗಿ ಬಂದರೂ ಸಾಕು. ಹಳ್ಳಿಗಳಲ್ಲಿ ಅದೆಷ್ಟೋ ಅನಕ್ಷರಸ್ಥರು ತಮಗರಿವಿಲ್ಲದೇ ತಮ್ಮ ವಿರಾಮದ ವೇಳೆಯಲ್ಲಿ ಸೋಬಾನೆ ಪದ ಹಾಡಿಕೊಳ್ಳುವುದು, ಹಸೆ ಹೊಯ್ಯುವುದು, ಜಾನಪದ ಕತೆಗಳನ್ನು ಹೇಳುವುದು, ಕೌದಿ, ದಟ್ಟ ಹೊಲೆಯುವುದು, ಹೊಲಿಗೆ, ಕಸೂತಿ, ರಂಗೋಲಿ, ಹಗ್ಗ ಹೆಣೆಯುವುದು, ಬುಟ್ಟಿ ಹೆಣೆಯುವುದು, ಮನೆ ಮುಂದೆ ಕೈತೋಟ ಮಾಡಿ ಅದರಲ್ಲಿ ನಾನಾ ಬಗೆಯ ಗಿಡಗಳನ್ನು ತಂದು ನೆಟ್ಟು ಬೆಳೆಸುವುದು…. ಇಂತಹ ಅದೆಷ್ಟೋ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಇದರಿಂದ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಚೆನ್ನಾಗಿರುತ್ತದೆ. “ಖಾಲಿ ಮೆದುಳು, ದೆವ್ವದ ಮನೆ” ಎನ್ನುವ ಹಾಗೆ ಖಾಲಿ ಕುಳಿತಾಗ ಅನವಶ್ಯಕ ಚಿಂತೆಗಳು ಮುತ್ತಿ ಆರೋಗ್ಯ ಹಾಳುಮಾಡುತ್ತವೆ. ಇಲ್ಲಾ ದೈಹಿಕ ಮತ್ತು ಮಾನಸಿಕ ನಿಷ್ಕ್ರಿಯತೆಯಿಂದಾಗಿ ದೇಹ ರೋಗಗಳ ಗೂಡಾಗುತ್ತದೆ. ಹವ್ಯಾಸಗಳನ್ನು ಬೆಳೆಸಿಕೊಳ್ಳಲು ವಯಸ್ಸಿನ ಮಿತಿ ಅಂತ ಏನೂ ಇಲ್ಲ. ನಮ್ಮ ಆಸಕ್ತಿ ಅಭಿರುಚಿಗೆ ಅನುಗುಣವಾಗಿ ಯಾವುದಾದರೂ ಸರಿ ಹವ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ಯಾವುದೇ ವಯಸ್ಸಿನವರಾಗಲೀ ತಮ್ಮ ವಿರಾಮದ ವೇಳೆಯಲ್ಲಿ ಅನವಶ್ಯಕವಾಗಿ ಸಮಯ ಹಾಳುಮಾಡುವ ಬದಲು ಹವ್ಯಾಸಕ್ಕೆಂದು ಬಳಸಿಕೊಂಡರಾಯಿತು. ಈ ಅಭ್ಯಾಸ, ರೂಢಿ, ಚಟ ಎನ್ನುವ ಪದಗಳು ಹವ್ಯಾಸಕ್ಕೆ ಸಮೀಪದಲ್ಲಿದ್ದರೂ ಹವ್ಯಾಸವನ್ನು ಸರಿಯಾಗಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳಬೇಕಿದೆ ನಾವು. ಮಕ್ಕಳು ಏನನ್ನಾದರೂ ಸುಲಭವಾಗಿ ಬಹಳ ಬೇಗ ಕಲಿತುಬಿಡುತ್ತರೆ. ಹಾಗಾಗಿ ರಜೆಯಲ್ಲಿ ಅವರು ವಿವಿಧ ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಬಹುದು. ಸ್ವಲ್ಪ ದೊಡ್ಡ ಮಕ್ಕಳಿಗೆ ಸಣ್ಣ ಪುಟ್ಟ ತಿನಿಸು ಪಾನೀಯ ತಯಾರಿಸುವುದನ್ನೂ ಹೇಳಿಕೊಡಬಹುದು. ಮನೆಯನ್ನು ಸ್ವಚ್ಛವಾಗಿ ಒಪ್ಪವಾಗಿ ಇಟ್ಟುಕೊಳ್ಳುವುದು, ಹಿರಿಯರಿಗೆ ಸಹಾಯ ಮಾಡುವುದು, ಸಂಗೀತ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ, ಕತೆ-ಕವನ ಬರೆಯುವುದು, ಉತ್ತಮ ಪುಸ್ತಕಗಳನ್ನು ಓದುವುದು, ಆಟ ಆಡುವುದು, ಕೃಷಿ, ತೋಟಗಾರಿಕೆ, ಈಜು, ನಾಟಕ, ಯೋಗ, ಭಾಷಣ, ಗೀತಾ ಪಠಣ, ಕರಾಟೆ ಹೀಗೆ ನಾನಾ ಹವ್ಯಾಸಗಳಲ್ಲಿ ಮಕ್ಕಳು ತೊಡಗಿಕೊಳ್ಳಬಹುದು. ಮಕ್ಕಳಿಗೆ ಸ್ಫೂರ್ತಿ ಮತ್ತು ಮಾದರಿಯಾಗುವಂತೆ ಹಿರಿಯರೂ ಸಹ ಹವ್ಯಾಸಗಳಲ್ಲಿ ತೊಡಗಿಕೊಳ್ಳಬಹುದು. ಇಂದಿನ ಜಗತ್ತು ನಮ್ಮ ಹವ್ಯಾಸಗಳನ್ನೇ ವೃತ್ತಿಯಾಗಿಸಿಕೊಳ್ಳಲು ಅನುಕೂಲಕರವಾಗಿದೆ. ಅದೆಷ್ಟೋ ಜನ ಹಾಗೆ ತಮ್ಮ ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡು ಯಶಸ್ಸೂ ಕಂಡಿದ್ದಾರೆ. ಕರಕುಶಲ ವಸ್ತು ತಯಾರಿಕೆ, ಹೊಲಿಗೆ ಮತ್ತು ಕಸೂತಿ ಕೆಲಸ, ಸಂಗೀತ, ನೃತ್ಯ, ನಟನೆ, ಬರಹ, ಅಡುಗೆಯಂತಹ ಹವ್ಯಾಸಗಳು ಜೀವನದ ನಿರ್ವಹಣೆಗೂ ಆಧಾರವಾಗಿವೆ. ಅದೆಷ್ಟೋ ಮಹಿಳೆಯರು ಇಂತಹ ಗೃಹಾಧಾರಿತ ಉದ್ದಿಮೆಗಳಿಂದಾಗಿ ಸಾಕಷ್ಟು ಸಾಧನೆ ಮಾಡಿ ಹೆಸರುವಾಸಿಯಾಗಿದ್ದಾರೆ ಕೂಡ. ಇದಲ್ಲದೆ ಆರೋಗ್ಯದ ದೃಷ್ಟಿಯಿಂದ ಪ್ರತಿ ನಿತ್ಯ ಮುಂಜಾನೆ ಮತ್ತು ಸಂಜೆಗಳಲ್ಲಿ ನಡಿಗೆ, ಓಟ, ವ್ಯಾಯಾಮ, ಹಗ್ಗದಾಟ, ಶಟಲ್, ಟೆನ್ನಿಕಾಯ್ಟ್ ನಂತಹ ಅಲ್ಪ ದೈಹಿಕ ಶ್ರಮ ಬೇಡುವಂತಹ ಕೆಲಸಗಳಲ್ಲಿ ತೊಡಗಿಕೊಳ್ಳಬಹುದು. ಇದು ಬದಲಾದ ನಮ್ಮ ಜೀವನ ಶೈಲಿಗೆ ಮತ್ತು ಕೋವಿಡ್ 19 ನಂತಹ ಪ್ಯಾಂಡಾಮಿಕ್ ಕಾಯಿಲೆಗಳ ವಿರುದ್ಧ ಪರಿಹಾರವಾಗಿಯೂ ತೋರುತ್ತದೆ. ನಾವಿರುವ ಪ್ರದೇಶದಲ್ಲೇ ಸಣ್ಣ ಪುಟ್ಟ ಸಂಘ ಮಾಡಿಕೊಂಡು ಸ್ವಚ್ಛತೆ, ನೀರಿನ ಸಂರಕ್ಷಣೆ, ಪರಿಸರ ಸಂರಕ್ಷಣೆ ಹೀಗೆ ಹಲವಾರು ಅಂಶಗಳನ್ನಿಟ್ಟುಕೊಂಡು ಜನರನ್ನು ಒಟ್ಟಾಗಿ ಸೇರಿಸಿ ರಚನಾತ್ಮಕ ಕಾರ್ಯಗಳಲ್ಲಿಯೂ ತೊಡಗಿಕೊಳ್ಳಬಹುದು. ಹವ್ಯಾಸಹಳಿಂದ ಚಿಂತೆ ದೂರವಾಗುತ್ತದೆ. ಆತ್ಮವಿಶ್ವಾಸ ಬೆಳೆಯುತ್ತದೆ. ಬುದ್ಧಿ ಮನಸ್ಸು ವಿಕಸನಗೊಳ್ಳುತ್ತದೆ. ಬದುಕಿನಲ್ಲಿ ಹೊಸ ಜೀವನೋತ್ಸಾಹ ತುಂಬಿಕೊಳ್ಳುತ್ತದೆ. ಧನಾತ್ಮಕ ಚಿಂತನೆ, ಪ್ರೀತಿ, ನಂಬಿಕೆ, ವಿಶ್ವಾಸ, ಸಹಕಾರದಂತಹ ಮೌಲ್ಯಗಳು ಬೆಳೆದು ಮನುಷ್ಯ ಪ್ರಬುದ್ಧನಾಗುತ್ತಾನೆ. ಹಾಗಾಗಿ ಯಾರೇ ಆಗಲಿ ಮನುಷ್ಯರಾಗಿ ಹುಟ್ಟಿದ ಮೇಲೆ ಒಂದಾದರೂ ಹವ್ಯಾಸ ಇಟ್ಟುಕೊಳ್ಳಲೇ ಬೇಕು. ಇತ್ತೀಚಿನ ದಿನಗಳಲ್ಲಿ ಶಾಲೆಗಳು, ಶಿಕ್ಷಕರು, ಹಾಗೂ ಪೋಷಕರು ಮಕ್ಕಳ ಹವ್ಯಾಸಗಳ ಕಡೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಶಾಲೆಗಳಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಅಳವಡಿಸಿಕೊಂಡ ಮೇಲೆ ಸಹಪಠ್ಯ ಚಟುವಟಿಕೆಗಳು ಮತ್ತು ಪಠ್ಯೇತರ ಚುಟುವಟಿಕೆಗಳೂ ಸಮಾನ ಪ್ರಾಶಸ್ತ್ಯ ಪಡೆದುಕೊಳ್ಳುತ್ತಿವೆ. ಇದರಿಂದಾಗಿ ಎಳೆವಿನಲ್ಲೇ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಉತ್ತೇಜನ ನೀಡುವುದು ಸಾಧ್ಯವಾಗಿದೆ. ಪ್ರತಿಭಾ ಕಾರಂಜಿಯಂತಹ ವೇದಿಕೆಗಳೂ ಸಹ ಮಕ್ಕಳ ಹವ್ಯಾಸಗಳನ್ನು ಬೆಳೆಸುತ್ತಿವೆ. ಮಾಧ್ಯಮಗಳು ಮತ್ತು ವಿವಿಧ ಚ್ಯಾನಲ್ಲುಗಳೂ ಸಹ ಹಲವಾರು ಬಗೆಯ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಮಕ್ಕಳು ಮತ್ತು ಹಿರಿಯರಿಬ್ಬರ ಪ್ರತಿಭೆಗೂ ಪ್ರಚಾರ ಮತ್ತು ವೇದಿಕೆ ಕಲ್ಪಿಸಿಕೊಡುತ್ತಿವೆ. ಅಕ್ಬರನ ಆಸ್ಥಾನದಲ್ಲಿದ್ದ ಸಂಗೀತ ವಿದ್ವಾಂಸರಾದ ತಾನಸೇನರು ತಮ್ಮ ಗುರು ಹರಿದಾಸರು ತಮಗಿಂತಲೂ ಶ್ರೇಷ್ಠ ಗಾಯಕರು ಎಂದು ಹೇಳುತ್ತಿದ್ದರು. ಕಾರಣ ತಾನಸೇನರು ಅಕ್ಬರರನ್ನು ಮೆಚ್ಚಿಸಲು ಹಾಡುವವರಾಗಿದ್ದರು. ಆದರೆ ಹರಿದಾಸರು ಆತ್ಮ ಸಂತೋಷಕ್ಕಾಗಿ ಮಾತ್ರ, ಜಗತ್ತಿನಲ್ಲಿ ನಾದ ಹುಟ್ಟುವಷ್ಟೇ ಸಹಜವಾಗಿ ಹಾಡುತ್ತಿದ್ದರು. ಇಬ್ಬರೂ ಶ್ರೇಷ್ಠರೇ. ಆದರೆ ನಮ್ಮ ಲಕ್ಷ್ಯ ಯಾವುದು ಎಂಬುದು ನಮಗೆ ಸ್ಪಷ್ಟವಿರಬೇಕು. ಇನ್ನಾದರೂ ಸಮಯವಿಲ್ಲ, ಕೆಲಸ ಜಾಸ್ತಿ, ನಂಗ್ಯಾವುದರಲ್ಲೂ ಆಸಕ್ತಿ ಇಲ್ಲ ಅಂತೆಲ್ಲ ಸಬೂಬು ಹೇಳುವ ಬದಲು ಯಾವುದಾದರೊಂದು ಹವ್ಯಾಸವನ್ನು ಬೆಳೆಸಿಕೊಂಡು ಜೀವನ್ಮುಖಿಯಾಗಿ ಹವ್ಯಾಸದ ಮಂದಹಾಸ ಬೀರಬೇಕಿರುವುದು ಈ ಕಾಲದ ತುರ್ತು. **************************************** ಆಶಾಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ಹಾಡು ಹಳೆಯದಾದರೇನು ಹಳೆಯ ಹಾಡುಗಳನ್ನು ಕೇಳುವಾಗಲೆಲ್ಲಾ ಎಂಥದೋ ಭಾವುಕತೆಗೆ ಒಳಗಾಗುವುದು, ಏನೋ ಒಂದು ರೀತಿ ಹೊಟ್ಟೆ ಚುಳ್ ಎನ್ನುವುದು, ಆ ಹಳೇ ದಿನಗಳ ನೆನಪುಗಳೆಲ್ಲಾ ಹಿಂದಿನ ಜನ್ಮದ ನೆನಪುಗಳೇನೋ ಎನ್ನುವಂತೆ ಕಾಡುವುದು… ಹೀಗೆಲ್ಲಾ ನನಗೆ ಮಾತ್ರ ಅನಿಸುತ್ತದಾ? ಬೇರೆಯವರಿಗೂ ಹೀಗೆಲ್ಲಾ ಆಗುತ್ತದಾ? ಗೊತ್ತಿಲ್ಲ. ಆದರೆ ನನಗೆ ಇದರ ಜೊತೆಗೆ ಇನ್ನೂ ವಿಚ್ ವಿಚಿತ್ರವಾಗೆಲ್ಲ ಏನೇನೋ ಅನ್ನಿಸುವುದಿದೆ. ಹಳೇ ಫೋಟೋಗಳನ್ನು ನೋಡುವಾಗ ಅದರಲ್ಲಿನ ಅಪರಿಚಿತರ ಬಗ್ಗೆ ಏನೇನೋ ಅನಿಸುತ್ತದೆ. ಅವರನ್ನು ನಾನೆಲ್ಲೋ ಭೇಟಿ ಮಾಡಿರುವೆ, ಮಾತಾಡಿಸಿರುವೆ, ಅಥವಾ ಇವರೆಲ್ಲಾ ಎಲ್ಲಿಯವರು, ಇವರೂ ನಮ್ಮಂತೆಯೇ ಬದುಕುತ್ತಿರುವರಾ… ಇನ್ನೂ ಏನೇನೋ ಅನಿಸಿ ಕಾಡತೊಡಗುತ್ತದೆ. ತಲೆ ಕೊಡವಿ ಎದ್ದು ಹೋಗದಿದ್ದರೆ ತಲೆಯೇ ಉದುರಿಹೋಗುತ್ತದೇನೋ ಅನಿಸಿಬಿಡುವಷ್ಟು. ಆದರೂ ಹಳೆಯ ಮಧುರ ಹಾಡುಗಳೆಂದರೆ ನನಗೆ ವಿಪರೀತ ಇಷ್ಟ. ಎಂದೋ ಪ್ರೀತಿಯಿಂದ ಹಾಡಿಕೊಳ್ಳುತ್ತಿದ್ದ ಹಾಡುಗಳು, ಎಂದೂ ಶ್ರುತಿ ತಾಳಗಳ ಲೆಕ್ಕಾಚಾರದ ಮಾತನ್ನು ನನ್ನೊಂದಿಗೆ ಆಡಿಲ್ಲ. ಭಾವದ ಅಗತ್ಯಕ್ಕೆ ತಕ್ಕಂತೆ ಒಂದಾಗಿವೆ. ಮನಸನ್ನು ಮುದಗೊಳಿಸಿವೆ. ನಾನು ಐದನೇ ತರಗತಿಯಲ್ಲಿದ್ದಾಗ ಸರ್ವಶಕ್ತ ಎನ್ನುವ ಪದ್ಯವೊಂದು ನಮ್ಮ ಪಠ್ಯಪುಸ್ತಕದಲ್ಲಿತ್ತು. “ದೇವ ನಿನ್ನ ಇರವ ನಂಬಿ ಜೀವಕೋಟಿ ಸಾಗಿದೆ, ಕಾವನೆಂಬ ಅರಿವಿನಲ್ಲಿ ನಿನ್ನ ಚರಣಕೆರಗಿದೆ” ಎಂದು ಅದರ ಪಲ್ಲವಿ. ಬರೆದ ಕವಿ ಹೆಸರನ್ನು ಮರೆತಿರುವುದಕ್ಕೆ ಕ್ಷಮೆ ಇರಲಿ. ಅದೆಷ್ಟು ಚಂದದ ರಾಗದಲ್ಲಿ ನಮಗದನ್ನು ನಮ್ಮ ಬಸವಣ್ಯೆಪ್ಪ ಮೇಷ್ಟ್ರು ಹೇಳಿಕೊಟ್ಟಿದ್ದರಂದರೆ ಆ ಪ್ರಾರ್ಥನೆಯನ್ನು ಹಾಡುತ್ತಾ ಹೋದಂತೆ ಕಣ್ತುಂಬುತ್ತಿತ್ತು. ಅಳು ಅಳುತ್ತಲೇ ಅದನ್ನು ಹಾಡಿ ಮುಗಿಸುವಾಗ ಎಂಥದೋ ಸಮಾಧಾನ, ಧನ್ಯತಾ ಭಾವ ಮನಸಿಗೆ. ನಿರಾಳ ಎನಿಸಿಬಿಡುತ್ತಿತ್ತು. ಇಂತಹ ಅದೆಷ್ಟೋ ಹಾಡುಗಳನ್ನು ನಮ್ಮ ಬಸವಣ್ಯಪ್ಪ ಮೇಷ್ಟ್ರು ಹೇಳಿಕೊಟ್ಟಿದ್ದರು. “ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು(ಬಿ.ಎಂ.ಶ್ರೀ.)”, ಆ ಹಾ ಹಾ ಮಲ್ಲಿಗೆ, ಬರುವೆನೇ ನಿನ್ನಲ್ಲಿಗೆ(ಬೇಂದ್ರೆ)”, ” ಈ ನಾಡಿನಲಿ ನಾನು ಮೂಡಿಬಂದುದೆ ಸೊಗಸು, ಭಾರತವ ಪ್ರೀತಿಸುವ ಭಾಗ್ಯವೆನದಾಯ್ತು”….. ಹೀಗೆ ಅದೆಷ್ಟೋ ಭಾವಪೂರ್ಣ ಹಾಡುಗಳನ್ನು ಮಕ್ಕಳಿಂದ ಹಾಡಿಸಿದ ಶ್ರೇಯ ಅವರದು. ಅವರಿಗೆ ಬಹುಶಃ ಗೊತ್ತಿರಲಿಕ್ಕಿಲ್ಲ ಅದರ ಪರಿಣಾಮ. ನಾವಿವತ್ತು ಏನಾಗಿ ಬೆಳೆದಿದ್ದೇವೋ ಅದರ ಹಿಂದಿನ ಮೌಲ್ಯಗಳನ್ನು ನಾವು ಪಡೆದದ್ದು ಇಂತಹ ಅದೆಷ್ಟೋ ಹಾಡುಗಳಿಂದ ಎಂದರೆ ಸುಳ್ಳಲ್ಲ. ಅವು ಕಾಲದ ಜೊತೆ ಮರೆಯಾಗತೊಡಗಿದಾಗ ಒಂಥರಾ ಸಂಕಟವಾಗುತ್ತಿತ್ತು. ಮೆದುಳಿನ ಸಾಮರ್ಥ್ಯದ ಬಗ್ಗೆ ಅನುಮಾನವಾಗುತ್ತಿತ್ತು. ಆಗ ಹೊಳೆದದ್ದು, ಡೈರಿಯೆನ್ನುವ ಗಂಧದ ಡಬ್ಬಿಯಲ್ಲಿ ನನ್ನ ಪ್ರೀತಿಯ ನವಿರಾದ ನವಿಲುಗರಿಯಂಥ ಹಾಡುಗಳನ್ನು ಬರೆದಿಡಬೇಕು ಎನ್ನುವುದು. ಬರೆದೆ. ಬರೆದ ಹಾಡುಗಳಲ್ಲಿ ನನ್ನಿಷ್ಟದ “ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ, ಬಾಡಿಹೋಗುವ ಮುನ್ನ ಕೀಳುವರಾರೆಂದು” ಎನ್ನುವ ಕವಿತೆಯೂ ಇತ್ತು. ಆದರೆ ಚಿಕ್ಕಂದಿನಲ್ಲಿ ನನಗೆ ಅದನ್ನು ಬರೆದವರು ಯಾರು ಎನ್ನುವುದು ಗೊತ್ತಿರಲಿಲ್ಲ. ಇತ್ತೀಚೆಗೆ ಅದನ್ನಯ ಬರೆದವರು ವ್ಯಾಸರಾಯ ಬಲ್ಲಾಳರು ಎಂದು ತಿಳಿದದ್ದು. ಡೈರಿಯಲ್ಲೇನೋ ಬರೆದಿಟ್ಟಿದ್ದೆ. ಆದರೆ ಒಂದಿನ ಯಾರೋ ಆ ಡೈರಿಯನ್ನೇ ಅಪಹರಿಸಿಬಿಟ್ಟರು. ಎಷ್ಟು ಹುಡುಕಿದರೂ ಸಿಗಲಿಲ್ಲ. ಅಳುವೇ ಬಂತು. ನೆನಪಿದ್ದಷ್ಟೂ ಹಾಡುಗಳನ್ನು ಮತ್ತೆ ಬರೆದಿಟ್ಟುಕೊಂಡೆ. ಆದರೆ ಒಂದಷ್ಟು ಇಷ್ಟದ ಹಾಡುಗಳು ನೆನಪಿನಿಂದಲೂ ಹಾರಿದ್ದವು. ಅತ್ತೆ ಅಷ್ಟೇ. ಆಗಲೇ “ಕಾಡು ಮಲ್ಲಿಗೆಯೊಂದು…” ಕವಿತೆಯೂ, ಕಳೆದು ಹೋದದ್ದು. ಆದರೆ ಮೊನ್ನೆ ವಿಜಯ ಪ್ರಕಾಶರ ಧ್ವನಿಯಲ್ಲಿ ಆ ಹಾಡನ್ನು, ಅದೇ ಧಾಟಿಯಲ್ಲಿ ಮತ್ತೂ ವಿಸ್ತೃತ ಸ್ವರ ಪ್ರಸ್ತರ, ಆಲಾಪ ಮತ್ತು ಚಂದದ ಪ್ರಸ್ತುತಿಯೊಂದಿಗೆ ಕೇಳಿದಾಗ ಕಿವಿಗಳಿಗೆ ಅಪೂರ್ವ ಆನಂದವಾಅಯಿತು. ಅದರ ಸಾಹಿತ್ಯವೂ ಸಿಕ್ಕಿದ್ದು ಮತ್ತೊಂದೇ ಎತ್ತರದ ಖುಷಿ. ಆದರೆ ಕೆಲವರು ಯಾಕೆ ಹಾಗೆ ಮತ್ತೊಬ್ಬರ ಸಂಗ್ರಹವನ್ನು ಕದಿಯುತ್ತಾರೋ ಗೊತ್ತಿಲ್ಲ. ನನಗೆ ಹೀಗೆ ಡೈರಿಯಲ್ಲಿ ಬರೆದಿಟ್ಟುಕೊಳ್ಳುವ ಅಭ್ಯಾಸ ಶುರುವಾದದ್ದು ಬಹಳ ಚಿಕ್ಕಂದಿನಲ್ಲಿಯೇ. ಈಗ ನನ್ನ ತರಗತಿಯ ಪ್ರತಿಯೊಬ್ಬ ಮಗುವಿನಿಂದಲೂ ಈ ಕೆಲಸವನ್ನು ಮಾಡಿಸುತ್ತಿರುತ್ತೇನೆ. ಆಸಕ್ತಿ ಮತ್ತು ಪ್ರೀತಿಯಿಂದ ಮಾಡುವವರನ್ನು ಕಂಡಾಗ ಮಾಡಿಸಿದ ಕೆಲಸ ಸಾರ್ಥಕವಾಯಿತು ಎನಿಸುತ್ತದೆ. ಈ “ಕಾಡುಮಲ್ಲಿಗೆಯೊಂದು” ಕವಿತೆ ಒಂದೊಂದು ಬಾರಿ ಒಂದೊಂದು ಅರ್ಥವನ್ನು ಹೊಳೆಯಿಸುತ್ತದೆ. ನಿರ್ಲಕ್ಷಿತ ಸಮುದಾಯವೊಂದರ ದನಿಯಾಗಿ ಹಾಡುತ್ತದೆ. ಮೀರಾ ಎನ್ನುವ ಕವಯಿತ್ರಿಯ ಕವಿತೆಯೊಂದು ಕವಿತೆ ಇದ್ದಕ್ಕೆ ಸಮವರ್ತಿಯೆನ್ನುವಂತೆ ಇದೆ. “ಬಿಳಿ ಮಲ್ಲಿಗೆ ಮುಡಿ ಏರುತ ನಗುತಿರೆ, ಕಾಕಡ ಗಿಡದಲಿ ಬಾಡುತಿದೆ…” ಎಂದು ಆ ಹಾಡು ಶುರುವಾಗುತ್ತದೆ. “ಕಾಡುಮಲ್ಲಿಗೆ”ಯ ನೆನಪಲ್ಲಿ, ಅನುಪಸ್ಥಿತಿಯಲ್ಲಿ ಈ ಕವಿತೆ ನನಗೆ ಸಾಂತ್ವನ ಹೇಳಿತ್ತು. ಆದರೆ ” ಕಾಡು ಮಲ್ಲಿಗೆಯ” ಮುಂದೆ ಇದು ಸಪ್ಪೆಯೇ ಎಂದು ಬಹಳಷ್ಟು ಸಾರಿ ಅನ್ನಿಸಿದೆ. ಇವುಗಳ ಯಾದಿಯಲ್ಲಿ ಬರುವ ಮತ್ತೊಂದು ಗೀತೆಯೆಂದರೆ “ಬಂಗಾರದೆಲೆಯ ಮೇಲೆ ತಂಗಾಳಿ ಬೀಸಿ ಬಂತು, ಸಂಗಾತಿ ನಿನ್ನ ನೆನಪು, ನನ್ನೆದೆಗೆ ತಂಪು ತಂತು..” ಕವಿತೆ. ಹರೆಯದ ಕನಸುಗಳಿಗೆ ಕಸುವು ತುಂಬಿದ ಕವಿತೆ ಇದು ಎಂದರೆ ತಪ್ಪಾಗಲಾರದು. ಅಷ್ಟು ಮುದ್ದಾದ ಭಾವಗೀತೆ ಇದು. “ಆ ಶುಕ್ರ ತಾರೆ ನಕ್ಷತ್ರ ಧಾರೆ ಧರಗೇರಿ ಏರಿ ಏರಿ, ನನ್ನೆದೆಯ ವೀಣೆ ನಿನ್ನೆದೆಯ ಮೀಟಿ ಇದು ರಾಗ ರಾಸ ವೀಣೆ” ಎಂದು ತಾರಕವನ್ನು ಮುಟ್ಟುವ ಜಾಗವಂತೂ ಭಾವ ತೀವ್ರತೆ ತೀವ್ರ ಗತಿ ಪಡೆದುಕೊಂಡು ಶಿಖರ ಮುಟ್ಟುತ್ತದೆ. ಹಾಗೇ ನಾವೆಲ್ಲರೂ ಹಾಡಿನೊಳಗೆ ಲೀನವಾಗುತ್ತೇವೆ. ಚಿಕ್ಕಂದಿನಲ್ಲಿ ಹಾಡಿಕೊಳ್ಳುತ್ತಿದ್ದ ಮತ್ತೊಂದು ದೇಶಭಕ್ತಿ ಗೀತೆಯೆಂದರೆ, “ಮೊಳಗಲಿ ಮೊಳಗಲಿ ನಾಡಗೀತವು, ಮೂಡಲಿ ಮೂಡಲಿ ಸುಪ್ರಭಾತವು” ಎನ್ನುವ ಈ ಗೀತೆ. ಬಹಳ ವರ್ಷಗಳ ವರೆಗೂ ನನಗೆ ಈ ಗೀತೆಯನ್ನು ಬರೆದವರು ಎಚ್.ಎಸ್.ವೆಂಕಟೇಶಮೂರ್ತಿಯವರು ಎನ್ನುವ ವಿಚಾರವೇ ತಿಳಿದಿರಲಿಲ್ಲ. ಆದರೆ ಆ ಗೀತೆಗಿದ್ದ ಪ್ರಸಿದ್ಧಿಯ ಬಗ್ಗೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ. ಪುಟ್ಟ ಮಕ್ಕಳಿಂದ ಹಿರಿಯರವರೆಗೂ ಎಲ್ಲರ ನಾಲಿಗೆ ಮೇಲೆ ನಲಿದಾಡುತ್ತಿದ್ದ ಗೀತೆ ಅದು. ಈಗಲೂ ನಾ ನನ್ನ ಮಕ್ಕಳಿಗೆ ಅದನ್ನು ಹೇಳಿಕೊಡುತ್ತಿರುತ್ತೇನೆ. ಇಂತಹುದೇ ಮತ್ತೊಂದು ದೇಶಭಕ್ತಿ ಗೀತೆಯೆಂದರೆ “ಕುಹೂ ಕುಹೂ ನೀ ಕೋಗಿಲೆಯೆ ನಾ ಹಾಡುವ ಹಾಡೊಂದ ಹಾಡುವೆಯಾ ನಾ ಹೇಳುವ ಮಾತೊಂದ ಕೇಳುವೆಯಾ…” ಗೀತೆ. ಈಗಲೂ ಇದನ್ನು ಬರೆದ ಕವಿಯ ಬಗ್ಗೆ ನನಗೆ ಅಸ್ಪಷ್ಟ ತಿಳಿವಳಿಕೆ. ಆದರೆ ಅದು ಕೇಳುವ ಹಾಡುವ ಹೃದಯಗಳಲ್ಲಿ ನೆಲೆಸಿರುವ ರೀತಿಯ ಬಗ್ಗೆ ಸ್ವತಃ ಕವಿಗೇ ಎಂತಹ ಹೆಮ್ಮೆ ಮತ್ತು ಪರಮಾನಂದವಿರಬಹುದು… ಬಹುದೊಡ್ಡ ಅಚ್ಚರಿ… ಇಂತಹ ಅದೆಷ್ಟೋ ಮುಗಿಯದ ಹಾಡುಗಳು… ನಾನು ದೂರ ಶಿಕ್ಷಣದ ಮೂಲಕ ಬಿಎಡ್ ಮಾಡುತ್ತಿದ್ದ ಕಾಲದಲ್ಲಿ ನಡೆದ ಒಂದು ಘಟನೆಯನ್ನು ಹೇಳುವೆ. ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ನಮ್ಮ ಇಗ್ನೂ ಸೆಂಟರ್ ಇದ್ದದ್ದು. ಕಾಂಟ್ಯಾಕ್ಟ್ ಪ್ರೋಗ್ರಾಮಿಗಾಗಿ ಅಲ್ಲಿ ಉಳಿಯಬೇಕಾಗಿ ಬಂದಿತ್ತು. ಅಲ್ಲಿ ಮಹಿಳೆಯರಿಗಾಗಿ ಮತ್ತು ಪುರುಷರಿಗಾಗಿ ಪ್ರತ್ಯೇಕ ಡಾರ್ಮೆಟ್ರಿಗಳಿದ್ದವು, ಒಂದರ ಎದುರು ಇನ್ನೊಂದು. ಒಂದು ದಿನ ಸ್ನಾನಕ್ಕೆ ಹೋದಾಗ ನಾನು ಯಾವ ಪರಿವೆಯಿಲ್ಲದೆ “ಏನೆ ಕೇಳು ಕೊಡುವೆ ನಿನಗೆ ನಾನೀಗ…” ಎನ್ನುವ ಗೀತ ಚಿತ್ರದ ಹಾಡನ್ನು ಹಾಡಿಕೊಳ್ಳುತ್ತಾ ಮಜವಾಗಿ ಸ್ನಾನ ಮಾಡಿ ಬಂದಿದ್ದೆ. ಅವತ್ತು ಮಧ್ಯಾಹ್ನ ಯಾರೋ ಪಕ್ಕದ ಪುರುಷರ ರೂಮಿನವರೊಬ್ಬರು ಗೆಳತಿಯರಲ್ಲಿ “ಯಾರದು ಆ ಹಾಡನ್ನು ಹಾಡುತ್ತಿದ್ದವರು? ಏ ಚನ್ನಾಗಿ ಹಾಡುತ್ತಿದ್ದರು…” ಎಂದು ಒಂಥರಾ ನಗಾಡುತ್ತಾ ಕೇಳಿದರಂತೆ. ನನಗೆ ಹೀಗಾಗಬಹುದೆಂಬುದರ ಅರಿವೇ ಇರಲಿಲ್ಲ. ಜೀವ ಬಾಯಿಗೆ ಬಂದಂತಾಗಿತ್ತು. “ದಯವಿಟ್ಟು ಅದು ನಾನು ಎಂದು ತೋರಿಸಬೇಡಿ ಕಣ್ರೇ ಅವರಿಗೆ… ಪ್ಲೀಸ್..” ಎಂದು ಗೋಗರೆದಿದ್ದೆ. ಈಗಲೂ ಆ ಘಟನೆಯನ್ನು ನೆನೆದಾಗಲೆಲ್ಲಾ ನಗು ಬರುತ್ತದೆ… ಇಂತಹ ಅದೆಷ್ಟೋ ಬೆಚ್ಚನೆ ನೆನಪುಗಳನ್ನು ಕೊಟ್ಟ ಆ ಹಳೆಯ ಹಾಡುಗಳಿಗೆ ಶರಣು ಶರಣಾರ್ತಿ… ************************************* ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ಅಸಾಮಾನ್ಯದ ವ್ಯಕ್ತಿ ಚಿತ್ರ ಇವನು… ಬಾಲ್ಯದಲ್ಲಿ ಅಜ್ಜನ ಊರು ಮತ್ತು ಅಜ್ಜನ ಮನೆ ಎನ್ನುವ ಆ ಜಾಗ ಎಷ್ಟೊಂದು ಆಸ್ಥೆಯ ಆಕರ್ಷಣೆಯ ಜಾಗವಾಗಿತ್ತು… ಅದೆಷ್ಟು ಖುಷಿಯಿಂದ ಅಜ್ಜನ ಮನೆಗೆ ಬರುತ್ತಿದ್ದೆವು… ಅಜ್ಜನ ಮನೆಯ ಮಾಳಿಗೆ, ಪಡಸಾಲೆ, ನೆಲಾಗಾಣೆ, ಅಟ್ಟ, ಗಣಿಗೆ, ಬಾದಾಳ, ಸಗಣಿ ನೆಲ, ಮಣ ಗಾತ್ರದ ಒಂಟಿ ತಲೆ ಬಾಗಿಲು, ಪಡಸಾಲೆಯ ನಾಲ್ಕು ಕಂಬಗಳು, ಅಡುಗೆ ಮನೆಯ ಮಜ್ಜಿಗೆ ಕಡೆಯುವ ಕಂಬ, ದನಾಕ್ಕೆ, ತಿಪ್ಪೆ, ಬಾರುಕೋಲು, ಹಗೇವಿನ, ಸಗಣಿ, ಗಂಜಲ…. ಇನ್ನೂ ಅಸಂಖ್ಯ ಯಾವುದನ್ನೂ ಮರೆಯಲು ಸಾಧ್ಯವಾಗದೆ ಇನ್ನು ಮರೆತು ಹೋಗಿಬಿಟ್ಟರೆ?! ಎಂದು ಮನಸ್ಸು ಅತ್ತಿಂದಿತ್ತ ತೊನೆಯುತ್ತಿದ್ದಾಗ ಮತ್ತೆ ಮತ್ತೆ ಅಜ್ಜನೂರನ್ನು ಕಣ್ತುಂಬಿಕೊಳ್ಳಲು ಹೊರಟದ್ದಿದೆ. ಅಜ್ಜನ ಮನೆಯಲ್ಲಿ ನಾನು ಹುಟ್ಟಿದಾಗ ಮನೆಯಲ್ಲಿ ಮೂರು ಮೂರು ಬಾಣಂತನಗಳಂತೆ. ನನ್ನ ಅತ್ತೆಯ ಮಗ, ದೊಡ್ಡಪ್ಪನ ಮಗ ಮತ್ತು ನಾನು ಒಟ್ಟಿಗೆ ಒಂದೇ ಮನೆಯಲ್ಲಿ ಒಂದೇ ತಿಂಗಳಲ್ಲಿ ಹುಟ್ಟಿದ್ದೆವಂತೆ. ಪಡಸಾಲೆಯ ನಾಲ್ಕು ಕಂಬಗಳನ್ನು ಬಳಸಿ ಮೂರು ಜೋಲಿ ಕಟ್ಟಿದ್ದರಂತೆ. ಪರದೆಗಳನ್ನು ಇಳಿ ಬಿಟ್ಟು ಮೂರು ಬಾಣಂತಿ ಕೋಣೆಗಳನ್ನು ನಿರ್ಮಿಸಿದ್ದರಂತೆ. ಅತ್ತೆಯ ಮಗ ಮತ್ತು ದೊಡ್ಡಪ್ಪನ ಮಗ ಬೆಳ್ಳ ಬೆಳ್ಳಗೆ ಗುಂಡು ಗುಂಡಗೆ ಮುದ್ದು ಮುದ್ದಾಗಿದ್ದರಂತೆ. ಆದರೆ ನಾನು ಕಪ್ಪಗೆ,ತೆಳ್ಳಗೆ ಇಷ್ಟೇ ಇಷ್ಟು ಇದ್ದೆನಂತೆ. ಮನೆಗೆ ಯಾರೇ ಬರಲಿ ಅವರಿಬ್ಬರನ್ನೇ ಹೆಚ್ಚು ಮುದ್ದು ಮಾಡುತ್ತಿದ್ದರಂತೆ. ನನ್ನನ್ನು ಯಾರೂ ಎತ್ತಿಕೊಳ್ಳುತ್ತಿರಲಿಲ್ಲವಂತೆ. ನಾನು ನನ್ನಮ್ಮನಿಗೆ ಮೊದಲ ಮಗು. ಮೇಲಾಗಿ ಅಮ್ಮ ಹದನೈದಕ್ಕೆ ಹಸೆ ಏರಿದವರು, ಹದಿನೇಳಕ್ಕೆ ನನ್ನನ್ನು ಹೆತ್ತವರು. ಅವರಿಗೆ ಅದೇನೇನು ಕನಸುಗಳಿತ್ತೋ… ನನ್ನಿಂದಾಗಿ ಅದೆಷ್ಟು ನಿರಾಸೆಯಾಗಿತ್ತೋ ಅವರಿಗೆ… ಯಾರಾದರೂ ಮಗುವನ್ನು ಜರಿದರೆ ಸಾಕು ನನ್ನ ಮಗು ಹೀಗಿದೆಯಲ್ಲ ಎಂದು ಅಳುತ್ತಿದ್ದರಂತೆ. ಈಗಲೂ ಒಮ್ಮೊಮ್ಮೆ ನನಗೆ ಆ ಮನೆಯ ಜಂತೆಗಳು ಬಿಕ್ಕಳಿಸಿದಂತೆ ತೋರುತ್ತದೆ. ನಾನು ನಾಲ್ಕೂವರೆ ವರ್ಷದವಳಿದ್ದಾಗ ನನ್ನ ತಮ್ಮ ಹುಟ್ಟಿದ. ಅಜ್ಜನ ಮನೆಯಲ್ಲಿಯೇ ಅಮ್ಮನ ಹೆರಿಗೆಯಾದದ್ದು. ಆ ದಿನದ ಅಮ್ಮನ ನೋವು, ರಕ್ತಸ್ರಾವ, ನೆಲದ ಮೇಲೆ ಚೆಲ್ಲಿದ್ದ ರಕ್ತ , ತಮ್ಮ ಹುಟ್ಟಿದ ಸಂಭ್ರಮ ಎಲ್ಲವೂ ಇನ್ನೂ ನೆನಪಿದೆ ನನಗೆ. ಆಗ ಇಡೀ ಊರಿಗೇ ತತ್ತಕ್ಷಣದ ಸೂಲಗಿತ್ತಿ, ದಾದಿ, ಹೆರಿಗೆವಮಾಡಿಸುವ ವೈದ್ಯೆ ಎಂದರೆ ಅದು ಕುಂಬಾರಜ್ಜಿ ಮಾತ್ರ. ಅವಳ ಹಸ್ತಗುಣದ ಮೇಲೆ ಇಡೀ ಊರಿಗೇ ನಂಬಿಕೆ ಇತ್ತು. ಮೇಲಾಗಿ ಯಾವ ದಿಕ್ಕಿನಿಂದ ಹೊರಟರು ಮುಖ್ಯ ರಸ್ತೆ ಸೇರಿಕೊಳ್ಳಲು ಎರೆಡು ಮೂರು ಕಿಲೋಮೀಟರ್ ನಡೆಯಬೇಕಿದ್ದ ಆ ಕುಗ್ರಾಮದ ಜನರಿಗೆ ಹೀಗೆ ಆಕೆಯನ್ನು ಅವಲಂಬಿಸದೆ ವಿಧಿಯೂ ಇರಲಿಲ್ಲ. ಅಂದೂ ಸಹ ಕುಂಬಾರಜ್ಜಿ ಬಂದು ಅಮ್ಮನ ನೋವಿನಲ್ಲಿ ಭಾಗಿಯಾಗಿದ್ದಳು. ಪಡಸಾಲೆಗೆ ಪಡಾಸಾಲೆಯೇ ನೋವಿನಿಂದ ಅನುರಣಿಸುತ್ತಿತ್ತು. ರಕ್ತಸ್ರಾವದ ನಡುವೆಯೇ ಅಮ್ಮನ ಉಪಚಾರ ಮಾಡುತ್ತಾ ಸಮಾಧಾನಿಸುತ್ತಾ ಮಗು ಹೊರಬರುವ ದಾರಿಯನ್ನು ಸಲೀಸುಗೊಳಿಸಲು ಕುಂಬಾರಜ್ಜಿ ತೊಡಗಿದ್ದಳು. ಆದರೆ ಯಾರ ನೋವನ್ನು ಯಾರೂ ಕಡ ಪಡೆಯಲು ಸಾಧ್ಯವಿಲ್ಲವಲ್ಲ. ಇದೆಲ್ಲವನ್ನೂ ಅಚ್ಚರಿಯಿಂದ ನೋಡುತ್ತಿದ್ದ ನನಗೆ ಅಮ್ಮನ ಅಳುವನ್ನು ಮಾತ್ರ ಸಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಮತ್ತೆ ಸರಹೊತ್ತಿನ ನಿದ್ದೆ ತಡೆಯಲಾಗದೆ ಮಲಗಿಬಿಟ್ಟಿದ್ದೆ. ಅಂತೂ ಇಂತೂ ರಾತ್ರಿ ಪೂರಾ ತ್ರಾಸು ಕೊಟ್ಟು ಬೆಳಗಿನ ಏಳರ ಹೊತ್ತಿಗೆ ಮಗು ಭೂಮಿಗೆ ಬಂದಿತ್ತು. ಆ ಮುದ್ದು ಮಗು ನನ್ನ ತಮ್ಮನಾಗಿದ್ದ. ಒಮ್ಮೆ ದೊಡ್ಡಪ್ಪನ ಮಗನಿಗೆ ಅಪರಾತ್ರಿಯಲ್ಲಿ ಎಚ್ಚರ ತಪ್ಪಿಬಿಟ್ಟಿತ್ತು. ಮನೆಯಿಡೀ ಗದ್ದಲ… ದೊಡ್ಡಪ್ಪ ದೊಡ್ಡಮ್ಮನ ಜೋರು ಅಳು… ಮನೆಮಂದಿಯೂ ಚಡಪಡಿಸುತ್ತಿದ್ದಾರೆ. ಐದಾರು ವರ್ಷದ ನನಗೆ ಏನು ಮಾಡಲೂ ತಿಳಿಯುತ್ತಿಲ್ಲ. ಕಾಲುಗಳು ನಡುಗುತ್ತಿವೆ. ಹೊಟ್ಟೆ ಚುಳ್ ಎನ್ನುತ್ತಿದೆ. ಅಳು ಗಂಟಲಲ್ಲೆ ಸಿಕ್ಕಿ ಹಾಕಿಕೊಂಡಂಥ ಅನುಭವ. ವಿಪರೀತ ಭಯದಿಂದ ಒಳಕ್ಕೆ ಹೊರಕ್ಕೆ ಕುಣಿಯುತ್ತಾ ಕೊನೆಗೆ ಗಣಿಗೆಯ ಸಂದಿಯಲ್ಲಿ ಹೋಗಿ ನಿಂತಿದ್ದೆ. ಎಷ್ಟು ಹೊತ್ತು ನಿಂತಿದ್ದೆನೋ.. ಮುಂದೆ ಏನಾಯಿತೋ.. ಒಂದೂ ನೆನಪಿಲ್ಲ. ಅಂದು ಕೆಂಪು ಫ್ರಾಕ್ ತೊಟ್ಟಿದ್ದನೆಂಬ ನೆನಪು. ಎಲ್ಲ ಅಸ್ಪಷ್ಟ ನೆನಪುಗಳು. ಈಗ ಕೇಳಿದರೆ ನಿಜವೋ ಸುಳ್ಳೋ ಎನ್ನುವ ಗೊಂದಲವೇ ಹೆಚ್ಚು ಕಾಡುತ್ತದೆಯೇನೋ… ಮತ್ತು ನಿಜವೆಂದು ಹೇಳಲಾರೆನೇನೋ… ಅಜ್ಜನ ಮನೆ ಅರಮನೆಯಂತದ್ದಲ್ಲದಿದ್ದರೂ ತೀರಾ ಚಿಕ್ಕದ್ದೇನೂ ಆಗಿರಲಿಲ್ಲ. ತಾನು ಮದುವೆಯಾಗಿ ಬೇರೆ ಸಂಸಾರವಂತ ಹೂಡಿಕೊಂಡು ಬಂದಾಗ ಅಜ್ಜಯ್ಯನಲ್ಲಿ ಸ್ವಂತ ಮನೆಯಾಗಲೀ ಎತ್ತಾಗಲೀ ಬಿತ್ತಿ ಬೆಳೆಯುವ ಅಂಗೈ ಅಗಲ ಭೂಮಿಯಾಗಲೀ ಇರಲಿಲ್ಲವಂತೆ. ಆದರೆ ಕಷ್ಟಧಾರಿ ಅಜ್ಜಯ್ಯ ತನ್ನ ಸ್ವಂತ ಸಾಮರ್ಥ್ಯದಿಂದ ಮನೆ, ದನ, ಕರ, ಮೂವತ್ತೆರೆಡು ಎಕರೆ ಹೊಲ ಅಂತ ಸಂಪಾದಿಸಿಕೊಂಡಿದ್ದ ಮತ್ತು ಅನುವು ಆಪತ್ತಿಗಿರಲೆಂದು ಒಂದಷ್ಟು ಹಣವನ್ನೂ ಕೂಡಿಟ್ಟುಕೊಂಡಿದ್ದ. ಅದಕ್ಕೆ ಮೊಮ್ಮೊಕ್ಕಳ ಮದುವೆಗೆ ಎನ್ನುವ ಹೆಸರಿಟ್ಟು ಹೋಗಿದ್ದ. ಪೂರ್ವದಿಕ್ಕಿನ ಅಜ್ಜಯ್ಯನ ಆ ಮನೆಯೂ ಅಜ್ಜಯ್ಯನಂತೆಯೇ ಬೆಳಗ್ಗೆ ಐದರ ನಂತರ ಯಾರನ್ನೂ ಮಲಗಲು ಬಿಡುತ್ತಿರಲಿಲ್ಲ. ಬೆಳ್ಳಂಬೆಳಗಿನ ಎಲ್ಲಾ ಪ್ರಖರ ಪ್ರಭೆಯೂ ಮನೆ ಹೊಕ್ಕುತ್ತಿತ್ತು. ಅಜ್ಜನಿಗಂತೂ ನಾಲ್ಕರ ನಂತರ ಮಲಗಿ ಅಭ್ಯಾಸವೇ ಇರಲಿಲ್ಲ. ಮತ್ತೆ ಮನೆ ಮಂದಿಯೂ ಸಹ ಐದರ ನಂತರ ಮಲಗುವಂತಿರಲಿಲ್ಲ. ರಜೆಗೆ ಹೋದಾಗ ಹೊತ್ತು ಆರಾದರೂ ಕುಂಬಕರ್ಣರಂತೆ ಮಲಗಿರುತ್ತಿದ್ದ ನಮ್ಮನ್ನು ಬೈದು ಎಬ್ಬಿಸುತ್ತಿದ್ದ ಅಜ್ಜನ ಆಜ್ಞೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಊರು ತುಂಬ ಇದ್ದ ಚಿಕ್ಕಪ್ಪ ದೊಡ್ಡಪ್ಪಂದಿರ ಮನೆಗಳನ್ನು ಹುಡುಕಿ ಹೋಗುತ್ತಿದ್ದದ್ದು ಇನ್ನು ಚೆನ್ನಾಗಿ ನೆನಪಿದೆ. ಆಗಲೂ ಕಳ್ಳಬೀಳುತ್ತಿದ್ದೇವೆಂದು ಅಜ್ಜ ಬೈಯ್ಯುತ್ತಿದ್ದ ಅದು ಬೇರೆ ಮಾತು. ಚಿಕ್ಕವಳಿದ್ದಾಗ ನನಗೆ ಎಷ್ಟೋ ಬಾರಿ ಅಜ್ಜನ ಮನೆಯ ಪಡಸಾಲೆಯ ಕಂಬಗಳನ್ನು ನೋಡುತ್ತಾ ಇದರ ಮೇಲಿರುವ ಬೆವರಿನಂಟು, ಎಣ್ಣೆಯ ಕಮಟು, ಎಂಥದೋ ಜಿಡ್ಡು ಯಾರ್ಯಾರದಿರಬಹುದು… ವಾಸನೆಯಿಂದೇನಾದರೂ ಅವರ ಗುರುತು ಹತ್ತುತ್ತದಾ? ಯಾರ ಸ್ಪರ್ಷದ ವಾಸನೆ ಇಲ್ಲಿದೆ…. ಎಂದೆಲ್ಲ ಅನಿಸಿ ಹೊಟ್ಟೆ ಚುಳ್ ಎನ್ನುತ್ತಿತ್ತು. ನನ್ನಜ್ಜ ಅವುಗಳಲ್ಲೆ ಒಂದು ಕಂಬಕ್ಕೆ ತನ್ನ ಜಂಪರ್ ನೇತು ಹಾಕುತ್ತಿದ್ದರು. ಅದೇ ಕಂಬದ ಮೇಲ್ಭಾಗದಲ್ಲಿ ರೇಡಿಯೋ ಪೆಟ್ಟಿಗೆಯೊಂದನ್ನು ಇಡಲಾಗಿತ್ತು. ಬೆಳ್ಳಂ ಬೆಳಗ್ಗೆ ಅದು ಹೊರಡಿಸುತ್ತಿದ್ದ “ಟ್ಯೂ ಟ್ಯುಡುಡುಡೂ.. ಟ್ಯುಡುಡುಡೂ… ಟ್ಯುಡೂ…” ಎಂಬ ನಾದವೇ ನಮಗೆಲ್ಲ ಬೆಳಗಿನ ಸುಪ್ರಭಾತ. ಅಡುಗೆ ಮನೆಯ ಪುಟ್ಟ ಕಂಬಕ್ಕೆ ಹಗ್ಗ ಕಟ್ಟಿ ಅಜ್ಜಿ ಮಜ್ಜಿಗೆ ಕಡೆಯುತ್ತಿದ್ದರು. ಹೊರಗಿನ ಹಾಲಿನಲ್ಲಿದ್ದ ಕತ್ರಿ ಗೂಟ ಎನ್ನುವ ಕಂಬದಲ್ಲಿ ಜಾನುವಾರುಗಳಿಗಾಗಿ ಜೋಳದ ಸೊಪ್ಪೆ ಕತ್ತರಿಸಲಾಗುತ್ತಿತ್ತು. ಪಡಸಾಲೆಯ ಕಂಬಗಳನ್ನು ಬಳಸಿ ನಾವೆಲ್ಲ ಮನೆ ಮಕ್ಕಳು ಉಪ್ಪಿನಾಟ ಆಡುತ್ತಿದ್ದೆವು. ಅಜ್ಜನ ಮನೆಯ ಕಂಬಗಳ ಮೇಲ್ಭಾಗದಲ್ಲಿ ನವಿಲಿನ ಚಿತ್ರಗಳಿದ್ದವು. ಆದರೆ ಅಜ್ಜಯ್ಯ ಮನೆಯೊಳಗೆ ಉಪ್ಪಿನಾಟ ಆಡಲು ಬಿಡುತ್ತಿರಲಿಲ್ಲ. ಮನೆಯೊಳಗೆ ಉಪ್ಪಿನಾಟ ಆಡಿದರೆ ಸಾಲ ಹೆಚ್ಚಾಗುತ್ತದೆ ಎನ್ನುತ್ತಿದ್ದ. ಹಾಗಾಗಿ ಮನೆಯ ಪಕ್ಕದಲ್ಲಿ ಮನೆಗೆ ಆತುಕೊಂಡಂತೆ ಇದ್ದ ಬಸವಣ್ಣನ ಗುಡಿಯಲ್ಲಿ ನಾವೆಲ್ಲ ಉಪ್ಪಿನಾಟ ಆಡುತ್ತಿದ್ದೆವು. ಉಪ್ಪಿನಾಟ ಎಂದರೆ ಆಟವಾಡಲು ಎಷ್ಟು ಜನ ಆಟಗಾರರಿತ್ತೇವೋ ಅಷ್ಟು ಜನ ಒಂದೊಂದು ಕಂಬ ಹಿಡಿದಿಟ್ಟುಕೊಳ್ಳಬೇಕು. ಒಬ್ಬರು “ಉಪ್ಪಮ್ಮೊ ಉಪ್ಪು…..” ಎಂದು ರಾಗವಾಗಿ ಹಾಡುತ್ತಾ ಉಪ್ಪು ಮಾರುತ್ತಾ ಬರಬೇಕು. ರಾಗವಾಗಿ ಹಾಡಬೇಕೆನ್ನುವ ನಿಯಮವೇನೂ ಇಲ್ಲ. ಆದರೆ ಆಡುತ್ತಿದ್ದವರೆಲ್ಲರೂ ಹುಡುಗಿಯರೇ ಹೆಚ್ಚಾಗಿರುತ್ತಿದ್ದರಿಂದ ಅದು ಹಾಡಿನ ಒನಪು ವಯ್ಯಾರವನ್ನು ಪಡೆದುಕೊಳ್ಳುತ್ತಿತ್ತಿರಬೇಕು. ಉಪ್ಪಿನವಳು ಮುಂದೆ ಹೋದ ತಕ್ಷಣ ಕಂಬ ಹಿಡಿದುಕೊಂಡಿರುತ್ತಿದ್ದ ಆಟಗಾರ್ತಿಯರು ಉಪ್ಪಿನವಳ ಹಿಂದೆ ಅದಲು ಬದಲಾಗಬೇಕು. ಹೀಗೆ ಅದಲು ಬದಲಾಗುವಾಗ ಅಚಾನಕ್ ಉಪ್ಪಿನವಳು ಕಂಬವನ್ನು ಆಕ್ರಮಿಸಿಕೊಂಡುಬಿಟ್ಟರೆ ಕಂಬವನ್ನು ಕಳೆದುಕೊಂಡವಳು ಔಟ್ ಎಂದು ಅರ್ಥ. ಈಗ ಅವಳು ಉಪ್ಪು ಮಾರುತ್ತಾ ಹೊರಡಬೇಕು. ಹೀಗೆ ಆಟ ಮುಂದುವರಿಯುತ್ತಿತ್ತು. ಬಸವಣ್ಣನ ಗುಡಿಯಲ್ಲಿ ನಾವೆಲ್ಲ ಸಮಯದ ಪರಿವೆಯಿಲ್ಲದೇ ಉಪ್ಪಾಟ ಆಡಿದ್ದಿದೆ. ಆದರೀಗ ಆ ಮರದ ಕಂಬಗಳು ಮತ್ತು ಮಣ್ಣಿನಿಂದ ನಿರ್ಮಿಸಿದ್ದ ಗುಡಿಯನ್ನು ಕೆಡವಿ ಹೊಸ ಕಾಂಕ್ರೀಟ್ ಕಟ್ಟಡವನ್ನು ಕಟ್ಟಲಾಗಿದೆ. ಕಂಬಗಳೆಲ್ಲ ಎಲ್ಲೋ ಮಾಯವಾಗಿವೆ. ಅಸಲಿಗೆ ಅದೊಂದು ಗುಡಿ ಅಂತಲೇ ಅನಿಸುತ್ತಿಲ್ಲ. ಹಿಂದೆಲ್ಲಾ ಗುಡಿಯಲ್ಲಿ ಸಣ್ಣ ಗೌರಿ ಮತ್ತು ದೊಡ್ಡ ಗೌರಿ ಹಬ್ಬಕ್ಕೆ ಗೌರಿ ಮಣ್ಣನ್ನು ತಂದು ಹಾಕಲಾಗುತ್ತಿತ್ತು. ಗುಡಿಯ ಪಕ್ಕದಲ್ಲಿದ್ದ ಬುಡ್ಡೆ ಕಲ್ಲೂ ಸಹ ಗೌರಿ ಮಣ್ಣಿನೊಟ್ಟಿಗೆ ಕಾಡು ಹೂಗಳ ಪೂಜೆ ಪಡೆಯುತ್ತಿದ್ದ. ಆದರೀಗ ಗುಡಿಯೇ ಅನ್ನಿಸದ ನೆನಪುಗಳ ಸಮಾಧಿ ದಿಬ್ಬದ ಮೇಲೆ ಗೌರಿಯ ಗದ್ದುಗೆಯನ್ನು ಸಿದ್ಧಮಾಡಿ ಕೂರಿಸುತ್ತಾರೆ ಹೇಗೆ… ಅವಳನ್ನು ದೇವತೆ ಎಂದು ಕಲ್ಪಿಸಿಕೊಳ್ಳುತ್ತಾರೆ ಹೇಗೆ… ಎಂದು ಕಳವಳವಾಗುತ್ತದೆ. ಹಿಂದೆ ಆಚರಿಸಿದ್ದ ಗೌರಿ ಹಬ್ಬಗಳು, ದೀಪ ಹಿಡಿದು ಓಡಾಡಿದ್ದ ಹೆಜ್ಜೆ ಗುರುತುಗಳು, ಜೋಕಾಲಿ ಕಟ್ಟಿ ಜೀಕಿದ ಎಲ್ಲ ನೆನಪುಗಳೂ ಸುಮ್ಮನೇ ಕಾಡುತ್ತವೆ. ಒಂಥರಾ ಸಂಕಟ…. ಅಜ್ಜಯ್ಯ ಒಂಥರಾ ಶಿಸ್ತಿನ ಸಿಪಾಯಿ. ಬಿಳಿ ಪಂಚೆಯ ಕಚ್ಚೆ ಹಾಕಿ, ಮೇಲೊಂದು ತಾನೇ ಹೇಳಿ ಹೊಲೆಸಿಕೊಂಡಿರುತಿದ್ದ ದೊಡ್ಡ ಬೊಕ್ಕುಣದ ಜಂಪರ್ ತೊಟ್ಟು ಪೂರ್ಣ ಕತ್ತಲು ಕಳೆದು ಬೆಳ್ಳಗಾಗುವುದರೊಳಗೆ ತನ್ನ ಜೋಡೆತ್ತುಗಳನ್ನು ಬಿಟ್ಟುಕೊಂಡು ಕಣದ ಕಡೆ ಹೊರಟು ಬಿಡುತ್ತಿದ್ದ. ಮನೆಯಲ್ಲಿ ಯಾರೊಬ್ಬರೂ ಅವನ ಮುಂದೆ ಸುಮ್ಮನೆ ಕಾಲಾಯಾಪನೆ ಮಾಡುವುದು ಸಾಧ್ಯವಿರಲಿಲ್ಲ. ಅಸಲಿಗೆ ಅವನಾದರೂ ಎಲ್ಲರಿಗೂ ಮಾದರಿಯಂತಿರುತ್ತಿದ್ದ. ಎಂದೂ ಮೈಮುರಿದು ದುಡಿಯದೆ ಕೂತು ಉಂಡವನಲ್ಲ. ಭಾವುಕತೆಯನ್ನು ಕಳೆದುಕೊಂಡವನಂತೆ ವರ್ತಿಸುತ್ತಿದ್ದ ಅಜ್ಜಯ್ಯ, ಇಂದಿಗೂ ನಮ್ಮ ಮನಸ್ಸಿನಲ್ಲಿ ಹೇಗಿಷ್ಟು ಆಳದ ಬೇರಿನಂತೆ ನಾಟಿಕೊಂಡುಳಿದನೆಂಬುದು ನಿಜಕ್ಕೂ ಅಚ್ಚರಿಯೇ. ಅಜ್ಜಯ್ಯ ದಿನದಿಪತ್ನಾಲ್ಕು ತಾಸೂ ಕೃಷಿಯಲ್ಲೇ ಮುಳುಗಿರುವವನೆನಿಸಿದರೂ ಅವನ ಧಾರ್ಮಿಕ ಸ್ವಭಾವದ ಬಗ್ಗೆ ಅಪ್ಪ ಅತ್ತೆಯರಿಂದ ಸಾಕಷ್ಟು ಅರಿತಿದ್ದೆ. ಕೃಷಿಕನಾದರೂ ಅಕ್ಷರಸ್ತನಾಗಿದ್ದ ಅಜ್ಜಯ್ಯ ರಾಮಾಯಣವನ್ನು, ಶನಿ ಮಹಾತ್ಮೆ ಕಥನವನ್ನ ಬಹಳ ಇಷ್ಟ ಪಟ್ಟು ಓದುತ್ತಿದ್ದನಂತೆ. ತನ್ನ ಅಕ್ಷರ ಪ್ರೀತಿಯಿಂದಾಗಿಯೇ ಅಪ್ಪ ದೊಡ್ಡಪ್ಪಂದಿರನ್ನು ಅಕ್ಷರವಂತರನ್ನಾಗಿ ಮಾಡಿ ನೌಕರಿಗೆ ಸೇರುವಂತೆ ಮಾಡಿದ್ದನಂತೆ. ಅಜ್ಜಯ್ಯ ಸತ್ತಾಗ ನಾನು ಮಾಡಿದ ಮೊದಲ ಕೆಲಸವೇ ಅವನ ಖಾಸಗಿ ಪೆಟ್ಟಿಗೆಯನ್ನು ತೆರೆದು ನೋಡಿದ್ದು. ಅಲ್ಲಿಯವರೆಗೂ ಅದನ್ನು ಕಿರುಬೆರಳಿಂದ ಮುಟ್ಟಲೂ ಭಯಪಡುತ್ತಿದ್ದೆ. ಕಾರಣ ಅಜ್ಜಯ್ಯ ಎಂದೂ ಆ ಪೆಟ್ಟಿಗೆಯನ್ನು ಜನರಿರುವಾಗ ತೆರೆಯುತ್ತಿರಲಿಲ್ಲ. ಮತ್ತೆ ಯಾರಿಗೂ ಅದನ್ನು ಮುಟ್ಟಲೂ ಬಿಡುತ್ತಿರಲಿಲ್ಲ. ಯಾರಾದರೂ ಅಪ್ಪಿ ತಪ್ಪಿ ಮುಟ್ಟಲು ಪ್ರಯತ್ನಿಸಿಬಿಟ್ಟರೆ ಗುಡುಗಿಬಿಡುತ್ತಿದ್ದ. ಅದಕ್ಕೆ ಹೆದರಿ ನಾವೆಂದೂ ಅದರ ತಂಟೆಗೆ ಹೋಗುತ್ತಿರಲಿಲ್ಲ. ಅದನ್ನವನು ತನ್ನ ಪ್ರಾಣಕ್ಕು ಮಿಗಿಲಾಗಿ ಜೋಪಾನ ಮಾಡಿಟ್ಟುಕೊಂಡಿದ್ದ. ಎಷ್ಟೊಂದು ಕುತೂಹಲ ಅದನ್ನು ತೆರೆದು ನೋಡುವಾಗ. ಅದರೊಳಗೆ ಏನೇನೋ ಚಿತ್ರ ವಿಚಿತ್ರ ವಸ್ತುಗಳು, ಯಾವುದೋ ಬೀಗದ ಕೈಗಳು, ಒಂದಷ್ಟು ದೇವರ ಪಟಗಳು, ಶಿಥಿಲಾವಸ್ಥೆಯಲ್ಲಿದ್ದ ಪರ್ಸುಗಳು, ಜೊತೆಗೆ ಶನಿ ಮಹಾತ್ಮೆ, ರಾಮಾಯಣ, ಮಹಾಭಾರತದ ಅತ್ಯಂತ ಪುರಾತನ, ಬಣ್ಣ ಮಾಸಿದ, ಬ್ಯಾಗಡಿ ಕವರಿನ ಬೈಂಡ್ ಹಾಕಲಾಗಿದ್ದ ಪುಸ್ತಕಗಳು. ಧೂಳಿನ ಘಮದೊಟ್ಟಿಗೆ ಅಜ್ಜಯ್ಯನ ಬೆವರಿನ ಗಮಲು ಬೆರತಿದ್ದಿರಬೇಕು. ಎಂಥದೋ ಮಧುರಾನುಭೂತಿ. ನಾನು ಆ ಪುಸ್ತಕಗಳನ್ನು ಮನೆಗೆ ತಂದಿಟ್ಟುಕೊಂಡಿದ್ದೆ. ಅಜ್ಜಯ್ಯನ ಮೇಲಿನ ಪ್ರೀತಿಯಿಂದಾಗಿ. ಈಗಲೂ ಆ ಪುಸ್ತಕಗಳು ಅಜ್ಜಯ್ಯನನ್ನು ನೆನಪಿಸುತ್ತ ನನ್ನ ಬಳಿ ಇವೆ. ಅಜ್ಜ ಸತ್ತಾಗ ನಾವು ಬಹಳ ದೂರದಿಂದ ಮಣ್ಣಿಗೆ ಬಂದಿದ್ದೆವು. ಊರನ್ನು ಪ್ರವೇಶಿಸಲು ಎಂಥದೋ ಹಿಂಜರಿಕೆ. ಅಜ್ಜನನ್ನು ಆ ಸ್ಥಿತಿಯಲ್ಲಿ ನೋಡುವುದು ನನ್ನಿಂದ ಸಾಧ್ಯವಾ ಎನಿಸಿತ್ತು. ಮನೆ ಹತ್ತಿರವಾದಂತೆ ಮನೆ ಮುಂದಿನ ಹೊಗೆ, ಒಳಗಿನ ಅಳು, ಸುತ್ತುಗಟ್ಟಿದ್ದ ಜನ ನನ್ನನ್ನು ಅಧೀರಳಾಗಿಸಿದ್ದವು. ನಾನೀಗ ಬಾಗಿಲಿಗೆ ಬಂದು ನಿಂತಿದ್ದೆ. ಅಜ್ಜನನ್ನು ಅವನು ಸದಾ ಮಲಗುತ್ತಿದ್ದ ಕಟ್ಟೆಯ ಮೇಲೆ ಇಂಟು ಮಾರ್ಕಿನ ರೀತಿಯಲ್ಲಿ ಕೋಲುಗಳ ಆಧಾರ ಕೊಟ್ಟು ಕೂರಿಸಲಾಗಿತ್ತು. ಹಣೆ ತುಂಬ ಮೂರು ಪಟ್ಟೆ ವಿಭೂತಿ, ಕತ್ತಲ್ಲಿ ದೊಡ್ಡ ಕರಡಿಗೆ, ಅವನ ಇಷ್ಟದ ಬಿಳಿ ಪಂಚೆ ಮತ್ತು ಹೊಚ್ಚ ಹೊಸ ಬಿಳಿ ಜುಬ್ಬ… ಈ ಎಲ್ಲ ಪೋಷಾಕಿನಲ್ಲಿ ಅವ ಈಗಿನ್ನು ಸ್ನಾನ ಮಾಡಿ ಸಂತೆಗೆ ಹೊರಟವನಂತೆ ಕಾಣುತ್ತಿದ್ದ.
ಅಂಕಣ ಬರಹ ಮಾತಲ್ಲಿ ಹಿಡಿದಿಡಲಾಗದ ಚಿತ್ರ… ಕೆಲವರ ವ್ಯಕ್ತಿತ್ವವೇ ಹಾಗಿರುತ್ತದೆ. ಜೇನು ತುಪ್ಪದಲ್ಲಿ ಅದ್ದಿ ತೆಗೆದಷ್ಟು ಸವಿಯಾಗಿ. ಅದೆಷ್ಟು ವಿನಯತೆ, ಅದೆಷ್ಟು ಭೂಮಿಗಿಳಿದ ಮನುಷ್ಯ ಎನಿಸಿಬಿಡುವಂತೆ. ಮನುಷ್ಯ ಏನೂ ಗೊತ್ತಿಲ್ಲದ ಸಂದರ್ಭದಲ್ಲಿ ಮುಗ್ಧನಷ್ಟೇ ಸ್ವಾರ್ಥಿಯೂ ಇರುತ್ತಾನೆ. ಅದು ಪುಟ್ಟ ಮಗುವಿನಲ್ಲಿ ಕಂಡು ಬರುವಂತಹ ಮುಗ್ಧತೆ ಮತ್ತು ಸ್ವಾರ್ಥ. ತದ ನಂತರ ಬೆಳೆಯುತ್ತ ಬೆಳೆಯುತ್ತಾ ಅವನ್ನು ತನಗೆ ಬೇಕಾದ ಹಾಗೆ ಬಳಸುವುದನ್ನು ಕಲಿಯುತ್ತಾನೆ. ಆದರೆ ಜ್ಞಾನ ಸಂಪಾದನೆ ಮಾಡುತ್ತಾ ಮಾಡುತ್ತಾ ವಿನೀತನಾಗಿ ಬಿಡುತ್ತಾನೆ. ಅವನೆಲ್ಲಾ ಅಹಂಕಾರವೂ ಸತ್ತುಹೋಗುತ್ತದೆ. ಜ್ಞಾನ ಸಂಪಾದನೆಗಾಗಿ ಹೊರಡುವಾಗ ನಾನು ಎಲ್ಲ ಜ್ಞಾನವನ್ನೂ ಆಪೋಶನ ತೆಗೆದುಕೊಳ್ಳಬಲ್ಲೆ ಎನ್ನುವ ಆತ್ಮವಿಶ್ವಾಸದಿಂದ ಹೊರಡುವ ಅವನು, ಜ್ಞಾನಿಯಾಗುತ್ತಾ ಆಗುತ್ತ ಅವನಿಗೆ ಒಂದು ವಿಷಯ ಅರ್ಥವಾಗುತ್ತದೆ. ಜ್ಞಾನವೆಂಬುದು ಒಂದು ಬೃಹತ್ ಸಾಗರ. ನಾನದರ ಒಂದೇ ಒಂದು ಹನಿಯನ್ನು ಮಾತ್ರ ನನ್ನದಾಗಿಸಿಕೊಳ್ಳಬಲ್ಲೆ. ಆ ಹನಿಯಾದರೂ ಅರಿವು ಮರೆವಿನ ಜಲಚಕ್ರವನ್ನು ಸದಾ ಸುತ್ತುವ ಜಲಬಿಂದು ಎನ್ನುವುದು ಅವನಿಗೆ ಅರ್ಥವಾಗುತ್ತದೆ. ಅವನಿಗೀಗ ಸಾಧನೆಯ ಹಂಬಲವಿಲ್ಲ, ಪರಮ ಸುಖದ ಚಿಂತೆಯಿಲ್ಲ. ಅವನಿಗೆ ಬದುಕಿನ ದೊಡ್ಡ ಅರ್ಥ ಯಾವುದು ಎಂಬುದು ತಿಳಿದುಬಿಟ್ಟಿರುತ್ತದೆ. ಆಗ ಅವನು ನಾನು ಎನ್ನುವ ಸ್ವಯಂಭೂತನವನ್ನು ತನಗೆ ತಾನೇ ಕಳೆದುಕೊಂಡುಬಿಡುತ್ತಾನೆ. ಆ ಹಂತ ತಲುಪಿದ ಯಾರೇ ಆಗಲಿ, ಅವರ ಸಾಧನೆಯನ್ನ ಜಗತ್ತು ಕೊಂಡಾಡುತ್ತದೆ, ಆದರೆ ಆ ವ್ಯಕ್ತಿ ಮಾತ್ರ ಸಂಕೋಚದ ಮುದ್ದೆಯಾಗಿರುತ್ತಾನೆ. ಇಷ್ಟೆಲ್ಲಾ ಹೇಳುತ್ತಿರುವಾಗ ನನ್ನ ಕಣ್ಮುಂದೆ ಇದ್ದ ಚಿತ್ರ ಎಸ್ಪಿಬಿಯವರದ್ದು. ಅವರ ವ್ಯಕ್ತಿತ್ವ ಹೀಗೆ ಸಾಮಾನ್ಯೀಕರಿಸುವ ವ್ಯಕ್ತಿತ್ವವಾಗಿತ್ತು ಎನ್ನುವದೇ ಆ ವ್ಯಕ್ತಿತ್ವದ ಶ್ರೇಷ್ಠತೆ. ಅಷ್ಟು ವಿಶಾಲವಾದ, ವಿನೀತವಾದ, ಮಗುವಿನಂಥಾ ವ್ಯಕ್ತಿ ಅವರು. ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಅವರ ಕೆಲವು ಗೀತೆಗಳನ್ನು ಕೇಳಬಹುದು. ಮಲಯಮಾರುತ ಚಿತ್ರದ “ಶಾರದೇ ದಯೆ ತೋರಿದೆ…”, ಶ್ರೀನಿವಾಸ ಕಲ್ಯಾಣ ಚಿತ್ರದ “ಪವಡಿಸು ಪರಮಾತ್ಮ ಶ್ರೀ ವೆಂಕಟೇಶ, ಮನವೆಂಬ ಮಲ್ಲಿಗೆಯ, ಹೂವ ಹಾಸಿಗೆ ಮೇಲೆ….”, ಶ್ರೀ ಮಂಜುನಾಥ ಚಿತ್ರದ “ಈ ಪಾದ ಪುಣ್ಯ ಪಾದ, ಈ ಪಾದ ದಿವ್ಯ ಪಾದ…”ಎನ್ನುವ ಈ ಮೂರು ಹಾಡುಗಳನ್ನು ನಾನಿಲ್ಲಿ ಉದಾಹರಿಸುತ್ತೇನೆ. ಈ ಹಾಡುಗಳನ್ನು ಹಾಡುವಾಗ ಅವರ ಧ್ವನಿಯಲ್ಲಿ ಒಂದು ಶರಣಾಗತಿ ಕಾಣಿಸುತ್ತದೆ, ಒಂದು ದೀನತೆ ಕಾಣಿಸುತ್ತದೆ. ಅಂತಹ ಹಾಡುಗಳನ್ನು ಹಾಡುವಾಗ ಧ್ವನಿಗೆ ಒಂದು ಮೆದುತನ ಬೇಕಿರುತ್ತದೆ, ಆದರೆ ಅದು ದುಃಖ ಆಗಿರಬಾರದು, ನೋವೂ ಆಗಿರಬಾರದು. ಅದೊಂದು ಪರಮ ಸುಖವನ್ನು ಒಂದೇ ಒಂದು ಹನಿಯನ್ನೂ ಇಲ್ಲದಂತೆ ಉಂಡು ನಿಂತವನ ಧನ್ಯತಾ ಭಾವವಾಗಿರಬೇಕು. ಅದನ್ನು ಧ್ವನಿ ಮಾತ್ರದಿಂದ ಹೊಮ್ಮಿಸಬೇಕು. ಅಂತಹಾ ಒಂದು ಶಕ್ತಿ ಎಸ್ಪಿಬಿಯವರ ಕಂಠಕ್ಕೆ ಮಾತ್ರ ಸಾಧ್ಯವೇನೋ ಎನಿಸುವಷ್ಟು ಅವರು ಸಂಗೀತ ನಿರ್ದೇಶಕರ ಏಕ ಮಾತ್ರ ಆಯ್ಕೆಯಾಗಿರುತ್ತಿದ್ದರು ಎನ್ನುವುದು ಹೊಗಳಿಕೆಯ ಅತಿಶಯೋಕ್ತಿಯಲ್ಲ, ವಾಸ್ತವ. ಬಹುಶಃ ಅವರನ್ನು ರಿಪ್ಲೇಸ್ ಮಾಡಬಹುದಾದಂತಹ ಮತ್ತೊಬ್ಬ ಗಾಯಕ ಹುಟ್ಟಿಯೇ ಇಲ್ಲವೇನೋ. ಅದೆಷ್ಟು ರೀತಿಯಲ್ಲಿ ತಮ್ಮನ್ನು ತಾವು ಪ್ರಯೋಗಕ್ಕೆ ಒಳಪಡಿಸಿಕೊಂಡಂತಹ ಗಾಯಕ ಅವರು. ಅವರ ಒಂದೊಂದು ಗೀತೆಯೂ ಒಂದೊಂದು ಪ್ರಯೋಗ, ಒಂದೊಂದೂ ಅತ್ಯಮೂಲ್ಯ ರತ್ನ. ಅವರೊಬ್ಬ ಗಾಯನ ಲೋಕದ ದೇವರು… ಈ ಕೊರೋನಾ ನಮ್ಮನ್ನು ಎಷ್ಟೆಲ್ಲ ಪರೀಕ್ಷೆಗೆ ದೂಡುತ್ತಿದೆ. ನಾವು ತುಂಬಾ ಪ್ರೀತಿಸುವ ಅದೆಷ್ಟೋ ವ್ಯಕ್ತಿಗಳನ್ನು ನಮ್ಮಿಂದ ದೂರ ಮಾಡುತ್ತಿದೆ. ಎಲ್ಲಿಯೂ ಯಾರ ಮನೆಗೂ ಹೋಗದೆ ಇದ್ದಲ್ಲೇ ಇರುವ ಸಂಕಷ್ಟದ ನಡುವೆ ಧ್ವನಿ ಮಾತ್ರದಿಂದ ನಮ್ಮವರನ್ನು ಪ್ರೀತಿಸುವಂತಾಗಿದೆ. ಸ್ಪರ್ಷ ಮತ್ತು ಪರಸ್ಪರ ಭೇಟಿಯನ್ನು ನಿರ್ಬಂಧಿಸುತ್ತಿದೆ ಈ ಕೊರೋನಾ. ಪರಿಸ್ಥಿತಿ ಹೀಗಿರುವಾಗ ನಾವು ನಮ್ಮ ಆರಾಧ್ಯ ದೈವ ಎಂದು ಭಾವಿಸಿಕೊಳ್ಳುತ್ತಿದ್ದ ಕೆಲ ವ್ಯಕ್ತಿಗಳನ್ನೂ ಕಳೆದುಕೊಳ್ಳುವಂತಾಯಿತು. ಅದರಲ್ಲೂ ಎಸ್ಪಿಬಿಯವರು ಹೊರಟೇ ಹೋದಾಗ… ಮನಸ್ಸು ತಹಬದಿಗೇ ಬಂದಿರಲಿಲ್ಲ. ಸತ್ಯವನ್ನು ಒಪ್ಪಲು ಮನಸ್ಸು ಸಿದ್ಧವಿರಲಿಲ್ಲ. ಎಲ್ಲೇ ಅವರ ಹಾಡು ಕೇಳಲಿ, ಕಾರ್ಯಕ್ರಮ ಬರಲಿ ದುಃಖ ಉಕ್ಕುತ್ತಿತ್ತು. ದೇಶಕ್ಕೆ ದೇಶವೇ ಕಣ್ಣೀರು ಮಿಡಿಯಿತು, ಅವರಿಗೆ ಕೊನೆಯ ಶ್ರದ್ಧಾಂಜಲಿಯನ್ನು ಅರ್ಪಿಸಿತು. ಅವರ ಮುಗ್ಧ ನಗು, ಸರಳತೆ, ವಿನಯತೆ, ವಿನೀತತೆ, ಬದುಕಿದರೆ ಹೀಗೆ ಬದುಕಬೇಕು ಎನ್ನುವಂತೆ ಬದುಕಿದ ಅವರ ಬದುಕಿನ ರೀತಿ… ಅದೆಂಥ ಆದರ್ಶ. ಆಗಾಗ ನಾನು ನನ್ನ ತಂದೆ ತಾಯಂದಿರು ಮತ್ತು ಗುರುಹಿರಿಯರಿಗೆ ಅವರ ಪಾದಕ್ಕೆ ಹಣೆ ಹಚ್ಚಿ ನಮಸ್ಕರಿಸುತ್ತಿರುತ್ತೇನೆ. ನನ್ನ ಮಕ್ಕಳಿಂದಲೂ ಅದನ್ನು ಮಾಡಿಸುತ್ತೇನೆ. ಹಾಗೆ ಮಾಡುವಾಗ ನನಗೆ ನನ್ನ ಅಹಂಕಾರವನ್ನ ಕಳೆದುಕೊಂಡಂತೆ ಭಾಸವಾಗುತ್ತದೆ. ಮನಸ್ಸು ತಿಳಿಯಾಗುತ್ತದೆ. ಇದು ನನ್ನ ಅನುಭವ. ಎಸ್ಪಿಬಿಯಂತಹ ಮೇರು ವ್ಯಕ್ತಿ ಚೂರೂ ಅಹಂಕಾರವಿಲ್ಲದೆ ಏಸುದಾಸರ ಪಾದಪೂಜೆ ಮಾಡಿ ಅವರ ಆಶೀರ್ವಾದ ಪಡೆಯುವ ದೃಶ್ಯ ಹೃದಯ ತುಂಬಿ ಬರುವಂತೆ ಮಾಡುತ್ತದೆ. ಅಹಮ್ಮಿನ ಕೋಟೆಯೊಳಗೆ ಬಂಧಿಯಾದ ಅದೆಷ್ಟೋ ಮಂದಿಗೆ ಮಾದರಿಯಾಗಿ ಕಾಣುತ್ತದೆ ಈ ದೃಶ್ಯ. ಮತ್ತೆ ಎಸ್ಪಿಬಿಯವರು ಈಗ ತಾನೇ ಗಾಯನ ಲೋಕಕ್ಕೆ ಕಾಲಿಡುತ್ತಿರುವ ಪುಟ್ಟ ಮಕ್ಕಳನ್ನೂ ಸಹ “ಶಾರದೆ”, ಬಾಲಸರಸ್ವತಿ” ಎಂದೆಲ್ಲಾ ಹೊಗಳುತ್ತಾ ಶರಣಾಗಿಬಿಡುವಾಗ ನಮ್ಮ ಜನ್ಮ ಪಾವನವಾಯಿತೆನ್ನಿಸಿಬಿಡುತ್ತದೆ ಆ ಮಕ್ಕಳಿಗೆ. ಮತ್ತೆ ಹೊಸ ಗಾಯಕರನ್ನು ಅವರು ಉತ್ತೇಜಿಸುವ ರೀತಿಯಂತೂ ಅದ್ಭುತ. ಅಷ್ಟೇ ಅಲ್ಲ ಒಬ್ಬ ಸಾಮಾನ್ಯ ವ್ಯಕ್ತಿಯನ್ನೂ ಅವರು ಗೌರವಿಸುವ ರೀತಿ ಅನನ್ಯ. ಇಂತಹ ಹಲವು ಕಾರರಣಗಳಿಗೂ ಎಸ್ಪಿಬಿಯವರು ಅನುಕರಣೀಯರು ಅನುಸರಣೀಯರು. ಈ ಗಾಯನ ಗಾರುಡಿಗ ನಟನೆಯಲ್ಲೂ ಸೈ ಎನಿಸಿಕೊಂಡವರು. ಅವರು ಮಾಡಿದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದವರು. ಗಾಯನದ ಹೊರತಾಗಿ ನಟನೆ, ಸಂಗೀತ ನಿರ್ದೇಶನವನ್ನೂ ಮಾಡಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದವರು. ಸದಾ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಾ ಅದರಲ್ಲಿ ಯಶಸ್ವಿಯಾದವರು ಎಸ್ಪಿಬಿ. 2012 ರಲ್ಲಿ ಮಿಥುನಮ್ ಎನ್ನುವ ಚಿತ್ರವೊಂದು ಬರುತ್ತದೆ. ಇದು ಅಪ್ಪದಾಸು ಎನ್ನುವ ರಿಟೈರ್ಡ್ ಟೀಚರ್ ಒಬ್ಬನ ಕತೆ. ಇದೊಂದು ರಮಣರ ಕತೆಯನ್ನು ಆಧರಿಸಿದ ಚಲನಚಿತ್ರ. ಇದನ್ನು ಸುಂದರ ದೃಶ್ಯಕಾವ್ಯವನ್ನಾಗಿ ತೆರೆಗೆ ತಂದವರು ತನಿಕೆಲ್ಲ ಭರಣಿ. ಮಿಥುನಮ್ ಎನ್ನುವ ಈ ಚಲನಚಿತ್ರದ ಪ್ರತಿಯೊಂದು ಫ್ರೇಮನ್ನೂ ಗಾಢವಾಗಿ ಆವರಿಸಿಕೊಂಡಿರುವ ಬುಜ್ಜೆಮ್ಮಾ ಮತ್ತು ಅಪ್ಪದಾಸು ನಮ್ಮನ್ನು ಯಾವುದೇ ಕಾರಣಕ್ಕೂ ಅತ್ತಿತ್ತ ಅಲುಗಾಡದಂತೆ ಹಿಡಿದು ಕೂರಿಸಿಬಿಡುತ್ತಾರೆ. ಅಲ್ಲೊಂದು ಸುಂದರ ದಾಂಪತ್ಯ ಗೀತೆ ಇದೆ. ಅದು ಶುದ್ಧ ಪ್ರೇಮ ಕಾವ್ಯವನ್ನು ನವಿರಾಗಿ ಹಾಡುತ್ತದೆ. ಅವರ ದಾಂಪತ್ಯವನ್ನು ತೆರೆಯ ಮೇಲೆ ನೋಡುವ ನಮ್ಮಲ್ಲಿ ಒಂದು ಕನಸು ಹುಟ್ಟುತ್ತದೆ. ನಾವೂ ಸಹ ಇಷ್ಟೇ ಪ್ರೀತಿಯಿಂದ ಬದುಕಬೇಕು ಎಂದು. ಬುಜ್ಜೆಮ್ಮ ಒಮ್ಮೆ ಹೇಳುತ್ತಾಳೆ “ಮನುಷಗಾ ಪುಟ್ಟಡಂ ಕಷ್ಟಂ ಕಾದು, ಮನುಷಗಾ ಬದುಕಡಮೇ ಕಷ್ಟಂ” ಎಂದು. ಅದರೆ ಇವರಿಬ್ಬರೂ ಅಪ್ಪಟ ಮನುಷ್ಯರಾಗಿ ಬದುಕುವವರು. ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂಬ ನಿರಾಸೆ, ಕೋಪ, ನೋವು, ಸಂಕಟ, ತಿರಸ್ಕಾರ, ಬೇಸರ…. ಎಂಥದ್ದೂ ಇಲ್ಲ ಅವರಲ್ಲಿ. ಆದರೆ ಮಕ್ಕಳು ತಮ್ಮೊಂದಿಗಿರಲಿ ಎನ್ನುವ ಸಣ್ಣ ಆಸೆ ಮಾತ್ರ ಇದೆ. ಅದೇ ಮಮತೆಯನ್ನು ತಾವು ಸಾಕುವ ಪ್ರಾಣಿಗಳಿಗೆ ಉಣಿಸುತ್ತಾರೆ. ತಮ್ಮ ಮುದ್ದು ಗೌರಿಯ(ಹಸು) ಕರು ಕಳೆದು ಹೋದಾಗ ಅದಕ್ಕಾಗಿ ಅವರು ಪರಿತಪಿಸುವ, ಹುಡುಕುವ ರೀತಿ ನಮ್ಮನ್ನು ತಲ್ಲಣಗೊಳಿಸುತ್ತದೆ. ಕೊನೆಗೆ ಅದು ಶವವಾಗಿ ಸಿಕ್ಕಾಗ ಇವರು ಗೋಳಾಡುವ ರೀತಿ ಎಂಥವರಲ್ಲೂ ಕಣ್ಣೀರು ತರಿಸುತ್ತದೆ. ಬುಜ್ಜೆಮ್ಮ ಯಾವಾಗಲೂ ತಮಾಷಿಗೆ ಅಪ್ಪದಾಸುವನ್ನು ರೇಗಿಸಲಿಕ್ಕಾಗಿ, “ನನ್ನನ್ನು ದ್ರಾಕ್ಷಿ ತೋಟ ಇದ್ದವನೊಬ್ಬ ಮದುವೆಯಾಗಲು ಆಸೆಪಟ್ಟಿದ್ದ. ನಾನು ಆ ದ್ರಾಕ್ಷಿತೋಟದವನನ್ನು ಮದುವೆಯಾಗಬೇಕಿತ್ತು. ಅವನನ್ನು ಮದುವೆಯಾಗಿದ್ದರೆ ಎಷ್ಟು ಸುಖವಾಗಿರುತ್ತಿದ್ದೆ. ಹೋಗಿ ಹೋಗಿ ನಿನ್ನನ್ನು ಮದುವೆಯಾಗಿ ಹಿಂಗಿದೀನಿ” ಅಂತ ರೇಗಿಸುತ್ತಿರುತ್ತಾಳೆ. ಅಪ್ಪದಾಸುವಿಗೆ ಈ ವಿಷಯ ಬಿಸಿತುಪ್ಪ. ಆದರೆ ಕೊನೆಯಲ್ಲೊಮ್ಮೆ ಇದೇ ಕಾರಣಕ್ಕೆ ಇಬ್ಬರ ನಡುವೆಯೂ ಜಗಳವಾಗುತ್ತದೆ. ಅಜ್ಜಿ ಅದೇ ಚಿಂತೆಯಲ್ಲಿ ಕಾಯಿಲೆಗೆ ಬೀಳುತ್ತಾಳೆ. ಮುನಿಸು ಬಿಟ್ಟು ಅಪ್ಪದಾಸು ಬುಜ್ಜೆಮ್ಮನ ಸೇವೆ ಮಾಡುತ್ತಾನೆ. ನನ್ನನ್ನು ಬಿಟ್ಟು ಅವಳು ಹೊರಟು ಹೋದರೆ ಏನು ಮಾಡುವುದು ಎನ್ನುವ ಚಿಂತೆಯ ಜೊತೆಗೆ ಹೋಗಲಿ ಪಾಪ ನನ್ನ ಕಣ್ಮುಂದೆಯೇ ಮುತ್ತೈದೆಯಾಗಿ ಹೋಗಲಿ ಎಂದುಕೊಳ್ಳುತ್ತಾ ಅವಳಿಗೆ ಆ ಕಾಯಿಲೆಯ ನಡುವೆಯೂ ಅಲಂಕಾರ ಮಾಡಿ ಅವಳಿಂದ ಪೂಜೆ ಮಾಡಿಸುತ್ತಾನೆ. ಅವಳಿನ್ನು ಸಾವಿನ ಅಂಚಿನಲ್ಲಿದ್ದಾಳೆ ಅನ್ನಿಸಿ ಅಜ್ಜ ಕಟ್ಟಿಗೆಯನ್ನು ಸಿದ್ದಪಡಿಸುವಾಗ ನಾವು ನಮ್ಮ ಕಣ್ಣೀರನ್ನು ಹಿಡಿದಿಡುವುದು ತುಂಬ ಕಷ್ಟ. ಅವತ್ತು ರಾತ್ರಿ ಮಲಗುವಾಗ ಹೆಂಡತಿ “ನನಗೆ ಯಾರೂ ದ್ರಾಕ್ಷಿತೋಟದವನೂ ಇರಲಿಲ್ಲ ಕಣ್ರಿ. ನಿಮ್ಮನ್ನು ರೇಗಿಸಲಿಕ್ಕಾಗಿ ಹಾಗೆ ಹೇಳುತ್ತಿದ್ದೆ ಎನ್ನುತ್ತಾಳೆ. ಅವತ್ತು ಅಪ್ಪದಾಸುವಿಗೆ ಆಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅಕ್ಷರಶಃ ಕುಣಿದಾಡಿಬಿಡುತ್ತಾನೆ. ಅವತ್ತು ಅದೆಷ್ಟು ನೆಮ್ಮದಿಯಾಗಿ ಆರಾಮ್ ಕುರ್ಚಿಯ ಮೇಲೆಯೇ ನಿದ್ರಿಸಿಬಿಡುತ್ತಾನೆ ಎಂದರೆ, ಮರುದಿನ ಅವನನ್ನು ಹೆಂಡತಿ ಏಳಿಸಿದಾಗಲೇ ತಿಳಿಯುವುದು ಅವ ಪ್ರಾಣವನ್ನೇ ಬಿಟ್ಟಿದ್ದಾನೆ ಎಂಬುದು. ಇದೊಂದು ಮಾತಿಗಾಗಿಯೇ ಅವ ಪ್ರಾಣ ಬಿಗಿಹಿಡಿದಿದ್ದನಾ?! ಅವನ ಬುಜ್ಜೆಮ್ಮ, ” ದೇವರೇ ವಿಧವೆ ಪಟ್ಟ ಬೇಡುತ್ತಿದ್ದ ಯಾರದರೂ ಹೆಣ್ಣುಮಗಳಿದ್ದರೆ ಅದು ನಾನೊಬ್ಬಳೇ ಇರಬಹುದು. ಸಧ್ಯ ನನ್ನ ಕೋರಿಕೆಯನ್ನ ಈಡೇರಿಸಿಬಿಟ್ಯಲ್ಲ. ಎಲ್ಲಿ ನಾನೇ ಮೊದಲು ಹೋಗಿ ಇವನನ್ನು ಅನಾಥನನ್ನಾಗಿ ಮಾಡಿ ಬಿಡ್ತೀನೇನೋ ಎನ್ನುವ ಭಯ ಕಾಡ್ತಿತ್ತು. ಮೊದಲೇ ಮಗುವಿನಂಥವನು. ನಾನೂ ಇಲ್ಲದೆ ಹೋದರೆ ಹೇಗೆ ಬದುಕಿಯಾನು…” ಎಂದೆಲ್ಲಾ ಮಾತಾಡುವ ರೀತಿ ಹೃದಯಂಗಮ. ಮತ್ತೆ ಅವನು ನೆಮ್ಮದಿಯಾಗಿ ಇಹಲೋಕ ತ್ಯಜಿಸಿದ್ದರ ಬಗ್ಗೆ ಒಂಥರಾ ನೆಮ್ಮದಿ. ಆದರೆ ನಾವೆಲ್ಲ ಹೊಸ ಪೀಳಿಗೆಯ ಜನ ನಮ್ಮ ತಂದೆ ತಾಯಂದಿರನ್ನು ಹೀಗೆ ಅನಾಥರನ್ನಾಗಿ ಮಾಡುತ್ತಿದ್ದೇವಲ್ಲ ಒಮ್ಮೆ ಒಂದು ಕ್ಷಣ ಯೋಚಿಸಬೇಕಿದೆ. ದುಡ್ಡಿಗಿಂತಲೂ ದೊಡ್ಡದಾದದ್ದು ನಿಜಕ್ಕೂ ಇದೆ. ಮಾನವೀಯತೆ ಪ್ರೀತಿ ವಾತ್ಸಲ್ಯಕ್ಕಿಂತ ದೊಡ್ಡದು ಯಾವುದೂ ಅಲ್ಲ ಅಲ್ಲವಾ…. ಹೀಗೆ ಮಾತಲ್ಲಿ ಹಿಡಿದಿಡಲಾಗದ ಅದೆಷ್ಟೋ ವಿಷಯ ಈ ಚಿತ್ರದಲ್ಲಿದೆ. ಅಥವಾ ನನ್ನ ಪದಗಳದೇ ಬಡತನವಿರಬಹುದು. ಆದರೆ ಎಸ್ಪಿಬಿ ಮತ್ತು ಲಕ್ಷ್ಮಿಯವರು ನಮ್ಮನ್ನು ಆವರಿಸುವ ಪರಿ ಅದ್ಭುತ. ಲಕ್ಷಿಯವರು ಎಸ್ಪಿಬಿಯವರಿಗೆ “ನಾನು ನಿಮ್ಮ ದೊಡ್ಡ ಫ್ಯಾನ್, ನನ್ನಷ್ಟು ದೊಡ್ಡ ಫ್ಯಾನ್ ಯಾರೂ ಇರಲು ಸಾಧ್ಯವಿಲ್ಲ” ಎಂದು ಹೇಳುತ್ತಿದ್ದ ಮಾತು ನೆನಪಾಗುತ್ತಿದೆ. ಇದು ನಮ್ಮೆಲ್ಲರ ಮಾತೂ ಸಹ ಅಂತಲೂ ಅನಿಸುತ್ತಿದೆ. ಹೃದಯ ಆರ್ದ್ರವಾಗುತ್ತಿದೆ. ಕಣ್ಣಂಚು ಒದ್ದೆ ಒದ್ದೆ. ಇನ್ನೂ ಏನೇನೋ ಬರೆಯಬೇಕೆನಿಸುತ್ತಿದ್ದರೂ ಬರೆಯಲಾಗದೆ ಹೋಗುತ್ತಿರುವೆ ಎನಿಸುತ್ತಿದೆ. ಎಸ್ಪಿಬಿ ಎನ್ನುವ ಮಹಾಸಾಗರದ ಬಗ್ಗೆ ನಾನೆಂಬ ಪುಟ್ಟ ಹಾಯಿದೋಣಿ ಎಷ್ಟು ತಾನೆ ಬರೆಯಲು ಸಾಧ್ಯ…. ************************************** –ಆಶಾಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ಜ್ಞಾನವೆಂಬ ತಿಜೋರಿಯ ಕೀಲಿಕೈ… ಪುಸ್ತಕಗಳ ರಾಶಿಯನ್ನು ತಡವುವಾಗೆಲ್ಲಾ ಎಂಥದೋ ಆಪ್ತಭಾವ. ಗುಪ್ತಗೆಳೆಯನೊಬ್ಬ ಮನಕ್ಕೆ ಆಗಮಿಸಿದಂತೆ ಪ್ರತಿ ಪುಸ್ತಕವೂ ನಮ್ಮ ಅತಿ ಖಾಸಗೀತನವನ್ನು ಕೊಳ್ಳೆ ಹೊಡೆಯುತ್ತಿರುತ್ತದೆ. ನನಗೆ ಪುಸ್ತಕದ ರುಚಿ ಹತ್ತಿದ್ದು ಬಹುಶಃ ಮೂರೋ ನಾಲ್ಕನೆಯದೋ ತರಗತಿಯಲ್ಲಿದ್ದಾಗ. ಆಗ ನನ್ನ ಮನೆಗೆ ಬರುತ್ತಿದ್ದದ್ದು ದಿಕ್ಸೂಚಿ ಮಾತ್ರ. ಅದು ಖಂಡಿತ ದಿಕ್ಸೂಚಿ ಆಕರ್ಷಕವಾಗಿ ಕಾಣಿಸಬಹುದಾದ ವಯಸ್ಸು ಆಗಿರಲಿಲ್ಲ. ಆದರೆ ಒಂದು ಪುಸ್ತಕದ ಸ್ಪರ್ಶದ ಅನುಭೂತಿ ಹೇಗಿರುತ್ತದೆಂದು ತಿಳಿದದ್ದು ಮಾತ್ರ ದಿಕ್ಸೂಚಿಯಿಂದಲೇ. ಶಾಲೆಯ ಪಠ್ಯ ಪುಸ್ತಕಗಳು ಸದಾ ನಮ್ಮೊಂದಿಗಿರುತ್ತಿದ್ದವಾದರೂ ಯಾವತ್ತಿಗೂ ಅವು ನಮಗೆ ಆತ್ಮೀಯವಾಗಿ ಕಾಣಿಸುತ್ತಿರಲಿಲ್ಲ. ಅವನ್ನು ಎಷ್ಟು ಬೇಗ ಹೊರತೆಗೆಯುತ್ತಿದ್ದೆವೋ ಅಷ್ಟೇ ಬೇಗ ಒಳ ಹಾಕಿ ಮುಚ್ಚಿಟ್ಟು ಎದ್ದರೇ ಸಮಾಧಾನ. ಆದರೆ ಕತೆಗಳ ಲೋಕ ಪರಿಚಯವಾಯ್ತು ನೋಡಿ ಪುಸ್ತಕಗಳ ರುಚಿಯೂ ಸಿಕ್ಕಿಬಿಟ್ಟಿತು. ಕತೆಗಳು ಹತ್ತಿರವಾದ ನಂತರ ಕನ್ನಡ, ಇಂಗ್ಲೀಷ್ ಮತ್ತು ಹಿಂದಿಯ ಪಾಠಗಳು ಪಾಠವಾಗಲ್ಲದೇ ಕಥೆಗಳಾಗಿಯೂ ಇಷ್ಟವಾಗತೊಡಗಿದವು. ಕವಿತೆಗಳು ಆಪ್ತ ಹಾಡಾದವು. ಇದು ಓದಿನ ರುಚಿ ಹತ್ತಿಸಿದ ಕತೆಗಳಿಂದ ಆದ ಬಹುದೊಡ್ಡ ಲಾಭ. ಆದರೆ ಚಿಕ್ಕಂದಿನಲ್ಲಿ ಬಾಲಮಂಗಳ, ಚಂದಾಮಾಮ, ಚಂಪಕದಂತಹ ಪುಸ್ತಕಗಳ ಬಗ್ಗೆ ಇರುತ್ತಿದ್ದ ಆಕರ್ಷಣೆಯ ಮಟ್ಟ ಎಷ್ಟಿರುತ್ತಿತ್ತೆಂದರೆ ಎಲ್ಲಿಯಾದರೂ ಸಿಕ್ಕರೆ ಸಾಕು ಲಪಟಾಯಿಸಿಬಿಡಬೇಕು ಎನ್ನುವಷ್ಟು. ಆದರೆ ಲಪಟಾಯಿಸುವ ಅವಕಾಶ ಸಿಗಲಿಲ್ಲ ಅದು ಬೇರೆ ಮಾತು. ಮನೆಯಲ್ಲಿ ಕೊಡಿಸಿ ಎಂದು ದುಂಬಾಲುಬಿದ್ದರೆ ದಿಕ್ಸೂಚಿ ಓದು ಎನ್ನುವ ಉತ್ತರ ಬರುತ್ತಿತ್ತು. ದಿಕ್ಸೂಚಿಯ ಪುಟ ತಿರುವುವಾಗ ಎಂಥದೋ ನಿರಾಸೆ… ಅಲ್ಲಿ ಎಲ್ಲಿಯಾದರೂ ಇತಿಹಾಸದ ರಾಜರ ಕತೆಗಳಿದ್ದರೆ ಕಣ್ಣುಗಳು ಕೊಂಚ ಮಿಂಚುತ್ತಿದ್ದವು. ಒಂದಷ್ಟು ವರ್ಷ ದಿಕ್ಸೂಚಿಯಲ್ಲಿ ನಾಗರೀಕತೆಗಳ ಬಗ್ಗೆ ಸಚಿತ್ರ ವಿವರಣೆ ಬರುತ್ತಿತ್ತು. ಅದು ಸ್ವಲ್ಪ ಆಸಕ್ತಿ ಹುಟ್ಟಿಸುತ್ತಿತ್ತು. ಆದರೆ ಬಾಲಮಂಗಳದ ಕತೆಗಳ ಮುಂದೆ ಮೃಷ್ಟಾನ್ನದ ಮುಂದೆ ಇಟ್ಟ ಮುದ್ದೆಯ ಹಾಗೆ ಸಪ್ಪೆ ಸಪ್ಪೆ… ನನ್ನ ಗೆಳತಿಯೊಬ್ಬಳು ತನ್ನಲ್ಲಿರುತ್ತಿದ್ದ ಬಾಲಮಂಗಳ ಪುಸ್ತಕವನ್ನು ಆಗಾಗ ಶಾಲೆಗೆ ತರುತ್ತಿದ್ದಳು. ಅದನ್ನು ನೋಡುವಾಗೆಲ್ಲಾ ಇವಳೆಷ್ಟು ಅದೃಷ್ಟವಂತಳು, ಇವಳ ಅಮ್ಮ ಇವಳಿಗೆ ಓದಲು ಕತೆ ಪುಸ್ತಕ ಕೊಡಿಸುತ್ತಾರಲ್ಲಾ ಎಂದು ಕರುಬುತ್ತಿದ್ದೆ. ರಜೆ ಸಿಕ್ಕಾಗ ಅವಳ ಮನೆಗೆ ಬಾಲ ಮಂಗಳವನ್ನು ನೋಡಲಿಕ್ಕೆಂದೇ ಹೋದದ್ದಿದೆ. ಆದರೆ ಅವನ್ನು ದೂರದಿಂದ ನೋಡಬಹುದಿತ್ತಷ್ಟೇ, ಮುಟ್ಟುವಂತಿರಲಿಲ್ಲ. ಇರಲಿ ಆ ಗೆಳತಿ ಕನಿಷ್ಟ ನೋಡಲು ಬಿಟ್ಟಿದ್ದಳಲ್ಲಾ… ಅದೇ ಸಮಾಧಾನ. ಈ ಪರಿಸ್ಥಿತಿಯನ್ನು ದಾಟುತ್ತಿರುವಾಗ ಅಚಾನಕ್ ನನಗೆ ಸಿಕ್ಕ ದೊಡ್ಡ ನಿಧಿ ಎಂದರೆ ಲೈಬ್ರರಿ ಕಾರ್ಡ್. ನಾನು ಐದನೇ ತರಗತಿಯಲ್ಲಿದ್ದಾಗ ಬಹುಶಃ ನನ್ನಪ್ಪ ನನಗದನ್ನು ಮಾಡಿಸಿಕೊಟ್ಟದ್ದು. ನಂತರ ಅಲ್ಲಿದ್ದ ಪಂಚತಂತ್ರದ ಕತೆಗಳಿಂದ ಹಿಡಿದು ಎಲ್ಲಾ ರೀತಿಯ ಕತೆಗಳನ್ನೂ ಒಂದು ಕಡೇಯಿಂದ ಓದಿ ಮುಗಿಸಿದ್ದೆ. ಪರೀಕ್ಷೆಗಳಿದ್ದಾಗಲೂ ಕತೆ ಪುಸ್ತಕಗಳನ್ನು, ಪಠ್ಯಪುಸ್ತಕದ ನಡುವೆ ಬಚ್ಚಿಟ್ಟುಕೊಂಡು ಓದಲು ಹೋಗಿ ಅಪ್ಪನ ಕೈಗೆ ಸಿಕ್ಕುಬಿದ್ದು ಬೈಸಿಕೊಂಡದ್ದೂ ಇದೆ. ಹೈಸ್ಕೂಲು ಮುಗಿದು ಕಾಲೇಜು ಮೆಟ್ಟಿಲು ಹತ್ತಿದಾಗ ನಾನು ನನ್ನ ಜೀವನದ ಮೊಟ್ಟ ಮೊದಲ ಸಾಮಾಜಿಕ ಕಾದಂಬರಿ ಓದಿದ್ದು. ನಾನು ಓದಿದ ಮೊದಲ ಕಾದಂಬರಿ ಉಷಾನವರತ್ನರಾಮರ ಬಿರುಕು. ಆ ಕತೆಯ ಧರಣಿ, ಚಾರುದಾಸ್, ಅವರ ಮುದ್ದಾದ ಮಗಳು ಈಶಾನ್ಯ… ಪ್ರತಿ ಪಾತ್ರವೂ ಇಂದಿಗೂ ಮನಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅದೆಷ್ಟೋ ಬಾರಿ ಆ ಪಾತ್ರಗಳು ನನ್ನನ್ನು ವಿಪರೀತ ಕಾಡಿವೆ. ಆ ವಯಸ್ಸೇ ಅಂಥದ್ದು. ಕಾದಂಬರಿಯ ಪಾತ್ರವನ್ನೇ ಆವಾಹಿಸಿಕೊಂಡು ಅನುಭವಿಸುವಂತಹ ವಯಸ್ಸು. ನಂತರ ಓದಿನ ಸಲುವಾಗಿ ನಗರದ ಹಾಸ್ಟೆಲ್ಲಿಗೆ ಬಂದೆ. ಅಲ್ಲಿ ನಮ್ಮ ಹಾಸ್ಟೆಲ್ ಎದುರಿಗೆ ಒಂದು ಸಣ್ಣ ಹೋಟೆಲ್ ಇತ್ತು. ಅದರ ಮುಂಭಾಗದ ಶೋಕೇಸಿನಲ್ಲಿ ಕುವೆಂಪುರವರು ಬರೆದ ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ಜೀವನ ಚರಿತ್ರೆಗಳನ್ನು ಇಟ್ಟಿರುತ್ತಿದ್ದರು. ದಿನಾ ಅವನ್ನು ಗಮನಿಸುತ್ತಿದ್ದ ನಾನು ಒಮ್ಮೆ ತಡೆಯಲಾಗದೆ ಆ ಪುಸ್ತಕವನ್ನು ಕೊಡುತ್ತೀರಾ ಓದಿ ತಂದುಕೊಡುವೆ ಎಂದು ಕೇಳಿಯೇಬಿಟ್ಟಿದ್ದೆ. ಒಂದೆರೆಡು ದಿನ ಇಲ್ಲ ಎನ್ನುತ್ತಾ ಸತಾಯಿಸಿದ ಹೋಟೇಲಿನ ಮಾಲೀಕರು, ಕೊನೆಗೆ ನಾ ಯಕೋ ಬಿಡೋ ಗಿರಾಕಿ ಅಲ್ಲ ಅನಿಸಿ ಒಂದಿನ ವಿವೇಕಾನಂದರ ಜೀವನ ಚರಿತ್ರೆಯನ್ನು ಮಾತ್ರ ಕೊಟ್ಟರು. ಅವತ್ತು ಆ ಪುಸ್ತಕವನ್ನು ಕೈಯಲ್ಲಿ ಹಿಡಿದದ್ದೇ ಒಂದು ರೋಮಾಂಚನ. ಅದರ ಓದು ನನ್ನಲ್ಲಿ ತಂದ ಬದಲಾವಣೆಯೂ ಒಂದು ಅದ್ಭುತವೇ ಸರಿ. ಆ ಅದ್ಭುತವೇ ಮೂರು ವರ್ಷಗಳ ಕಾಲ ಹಾಸ್ಟೆಲ್ಲಿನಲ್ಲಿದ್ದಾಗ ನನ್ನನ್ನು ತಿದ್ದಿದೆ, ಬುದ್ಧಿ ಹೇಳಿದೆ, ಸಮಾಧಾನಿಸಿದೆ, ಸರಿ ದಾರಿಯಲ್ಲಿ ನಡೆಸಿದೆ. ಆ ಪುಸ್ತಕವನ್ನು ವಾರಕ್ಕೆ ಮುಂಚೆಯೇ ಒಂದು ಮುಕ್ಕು ಬಾರದಂತೆ ಜೋಪಾನವಾಗಿಟ್ಟುಕೊಂಡು, ಓದಿ ಮುಗಿಸಿ ಹೋಟೇಲಿನ ಅಂಕಲ್ (ಇಷ್ಟು ದಿನಗಳಲ್ಲಿ ಅವರೀಗ ಅಂಕಲ್ ಆಗಿ ಬದಲಾಗಿದ್ದದ್ದೂ ಸೋಜಿಗ…) ಗೆ ಮರಳಿ ತಂದು ಕೊಟ್ಟಾಗ ಅವರ ಮುಖದಲ್ಲಿ ಒಂದು ಸಣ್ಣ ಸಂತೋಷ ಮತ್ತು ಮೆಚ್ಚುಗೆ ಇತ್ತು. ಮರಳಿ ಪಡೆದ ಪುಸ್ತಕವನ್ನು ಅದಿದ್ದ ಜಾಗದಲ್ಲೇ ಇಟ್ಟು, ಸದ್ದಿಲ್ಲದೇ ನಾ ಕೇಳದೆಯೇ ರಾಮಕೃಷ್ಣರ ಪುಸ್ತಕವನ್ನು ತಂದು ನನ್ನ ಕೈಗೆ ಇತ್ತಿದ್ದರು. ನನ್ನ ಕಣ್ಣಲ್ಲಿ ಕೃತಜ್ಞತೆಯ ಮಹಾಪೂರ… ಖುಷಿಯ ಉತ್ತುಂಗದಲಿ ನಾನಿದ್ದೆ. ಮತ್ತೊಂದು ವಾರದ ನನ್ನ ಓದು ಸಂಪನ್ನವಾಗಿತ್ತು. ಅಲ್ಲಿಂದ ಮುಂದಕ್ಕೆ ಪುಸ್ತಕಗಳನ್ನು ನಾನು ಹುಡುಕಿ ಹೊರಡಲು ಶುರುಮಾಡಿದೆ. ಎಲ್ಲೇ ಪುಸ್ತಕ ಕಾಣಲಿ ಅದು ನನಗೆ ಬೇಕು ಅನಿಸುತ್ತಿತ್ತು. ನನ್ನ ಪಾಕೆಟ್ ಮನಿಯ ಬಹುಭಾಗ ಪುಸ್ತಕಗಳಿಗೇ ಖರ್ಚಾಗುತ್ತಿತ್ತು. ಇನ್ನು ನಾನು ಯಾವ ಯಾವ ಊರಿನಲ್ಲಿರುತ್ತಿದ್ದೆನೋ ಅಲ್ಲೆಲ್ಲಾ ಒಂದೊಂದು ಲೈಬ್ರರಿ ಕಾರ್ಡ್ ಇರುತ್ತಿತ್ತು ನನ್ನ ಬಳಿ. ಇನ್ನು ನೌಕರಿ ಸಿಕ್ಕಾಗ ಆದ ಮೊದಲ ಆನಂದವೆ ಇನ್ನು ಮುಂದೆ ಸ್ವಂತ ಖರ್ಚಿನಲ್ಲಿ ಪುಸ್ತಕ ಕೊಳ್ಳಬಹುದು ಎಂಬುದು. ಅದು ಮತ್ತೊಂದೇ ಮಟ್ಟಿಗಿನ ಖುಷಿ. ನನ್ನ ಆಸಕ್ತಿ ಎಷ್ಟು ವೈವೀಧ್ಯವಿರುತ್ತಿತ್ತೋ ಅಷ್ಟೇ ರೀತಿಯ ಪುಸ್ತಕಗಳನ್ನು ನಾನು ಓದುತ್ತಿದ್ದದ್ದು. ಸಾಹಿತ್ಯ, ವ್ಯಕ್ತಿತ್ವ ವಿಕಸನ, ಆಧ್ಯಾತ್ಮ, ಸಂಗೀತ, ಜ್ಯೋಯಿಷ್ಯ, ಸಂಖ್ಯಾಶಾಸ್ತ್ರ… ಹೀಗೆ ನಾನಾ ಬಗೆಯ ಪುಸ್ತಕಗಳಿರುತ್ತಿದ್ದವು ನನ್ನ ಬಳಿ. ನನ್ನ ಗೆಳತಿಯರು ಕೆಲವೊಮ್ಮೆ ಶಾಸ್ತ್ರ ಕೇಳಲು ಬರುತ್ತಿದ್ದರು ನನ್ನ ರೂಮಿಗೆ. ಈಗ ನೆನೆದರೆ ನಗು ಬರುತ್ತದೆ. ಈಗಲೂ ಆ ಎಲ್ಲ ಪುಸ್ತಕಗಳೂ ಇವೆ… ಎಲ್ಲೋ ಮೂಲೆಯಲ್ಲಿ. ಅಪ್ಪ ಒಮ್ಮೆ ತಮಾಷೆಗೆ, “ಸುಮ್ನೆ ಒಂದು ಬೋರ್ಡ್ ಹಾಕ್ಕೊಂಡು, ಪಂಚಾಂಗ ಇಟ್ಕೊಂಡು ಕೂತುಬಿಡು ಹೋಗ್ಲಿ, ಒಂಚೂರು ಸಂಪಾದನೆಯಾದ್ರೂ ಆಗುತ್ತೆ…” ಅಂತ ಹೇಳಿ ಹೇಳಿ ನಗಾಡಿದ್ರು. ಆದ್ರೆ ಯಾರೇನೇ ಹೇಳಲಿ, ನನಗೆ ಆಸಕ್ತಿ ಹುಟ್ಟಿದ್ದನ್ನೆಲ್ಲಾ ನಾ ಓದಿದ್ದೇ ಸೈ ಎನ್ನುವಂತೆ ಓದುತ್ತಿದ್ದೆ ಆಗ. ತುಷಾರ, ಮಯೂರ, ಓ ಮನಸೇ, ಸುಧಾ, ತರಂಗ… ತಪ್ಪದೇ ನನ್ನ ಕೋಣೆ ಸೇರುತ್ತಿದ್ದವು. ನಾನಾಲ್ಕು ನ್ಯೂಸ್ ಪೇಪರ್ ಹಾಕಿಸಿಕೊಳ್ತಿದ್ದೆ ಮನೆಗೆ. ಅಕ್ಕಪಕ್ಕದವರು ಒಂದು ರೀತಿ ಹುಚ್ಚರನ್ನು ನೋಡುವ ಹಾಗೆ ನೋಡುತ್ತಿದ್ದರು. ಒಂದೆರೆಡು ಮಂದಿ ತಮ್ಮ ಮನೆಗೆ ನ್ಯೂಸ್ ಪೇಪರ್ ಹಾಕಿಸಿಕೊಳ್ಳುವುದನ್ನೇ ಬಿಟ್ಟುಬಿಟ್ಟಿದ್ದರು. ಇಲ್ಲಿಯೇ ಬಂದು ಓದಿ ಹೋದರಾಯಿತು ಎಂದುಕೊಂಡು. ಅವರು ಬಂದು ಕೇಳಿದಾಗ ನನಗೂ ಇಲ್ಲ ಎನ್ನಲು ಸಾಧ್ಯವಿರುತ್ತಿರಲಿಲ್ಲ. ವಾರವಿಡೀ ಕೆಲಸಕ್ಕೆ ಹೋಗುವ ತರಾತುರಿ. ಸಿಗುತ್ತಿದ್ದ ಒಂದೇ ಒಂದು ದಿನದ ಬಿಡುವು ಭಾನುವಾರ. ಭಾನುವಾರದಂದು ನಾ ಮಾಡುತ್ತಿದ್ದ ಮೊಟ್ಟ ಮೊದಲ ಕೆಲಸವೇ ಲೈಬ್ರರಿಗೆ ಹೋಗಿ ಅಲ್ಲೊಂದಿಷ್ಟು ಹೊತ್ತು ಪುಸ್ತಕಗಳನ್ನು, ನೋಡಿ, ಮುಟ್ಟಿ, ತಡವಿ ಕೊನೇಗೆ ಯಾವುದೋ ತುಂಬಾ ಬಿಡಲಾಗದ ಮೂರು ಪುಸ್ತಕಗಳಿಗೆ ಡೇಟ್ ಹಾಕಿಸಿಕೊಂಡು ತರುತ್ತಿದ್ದದ್ದು. ಅಷ್ಟಕ್ಕೂ ಡೇಟ್ ಹಾಕಿಸಿಕೊಂಡು ಬರುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಕಾರಣ ನಾಲ್ಕೈದು ದಿನಗಳೊಳಗಾಗಿಯೇ ಅವು ಲೈಬ್ರರಿಗೆ ಮರಳಿಬಿಡುತ್ತಿದ್ದವು. ಮತ್ತೆ ಹೊಸಪುಸ್ತಕಗಳು ಮನೆ ಸೇರುತ್ತಿದ್ದವು. ಇದೊಂದು ಮಾತ್ರ ಯಾವಾಗಲೂ ಹೀಗೆ ನಡೆಯುತ್ತಿತ್ತು. ಹಾಗಾಗಿ ಲೈಬ್ರೇರಿಯನ್ನೂ ಮೂರು ಕೊಡೋ ಜಾಗದಲ್ಲಿ ನಾಲ್ಕು, ಐದು ಪುಸ್ತಕಗಳನ್ನೂ ಕೊಟ್ಟು ಕಳಿಸಿಬಿಡುತ್ತಿದ್ದ. ಭಾನುವಾರ ಬಂತೆಂದರೆ ಪೂರ್ತಿ ಎಲ್ಲ ಪೇಪರ್ರುಗಳ ಅಡಿಶನಲ್ಸ್ ಗಳನ್ನು ಓದುವುದರಲ್ಲೇ ಮುಗಿಯುತ್ತಿತ್ತು. ಯಾವುದನ್ನು ಬೇಕಾದರೂ ತಪ್ಪಿಸಿ ಬಿಡುತ್ತಿದ್ದೆನೇನೋ ಆದರೆ ಇದನ್ನು ಬಿಡುವುದು ಸಾಧ್ಯವಿರುತ್ತಿರಲಿಲ್ಲ. ಹಾಗೆ ಲೋಕದ ಅರಿವಿಲ್ಲದೆ ಓದುತ್ತಾ ಕಾಲ ಕಳೆದುಬಿಡುವುದೂ ಒಂಥರಾ ಸುಖ. ಈಗ ಇವೆಲ್ಲಾ ನೆನಪುಗಳೂ ನನಗೇ ಒಂದು ನಮೂನಿ ದಂತಕಥೆಗಳಂತೆ ಕಾಣಿಸುತ್ತವೆ. ಕಾರಣ ಮದುವೆ, ಸಂಸಾರ, ಮಕ್ಕಳು, ಕೆಲಸ… ಒಟ್ಟಾರೆ ಧಾವಂತದ ಈ ಬದುಕಿನ ನಡುವೆ ಓದುವ ಸುಖ ಕಳೆದುಹೋಗಿದೆ. ಸಿಗುವ ಸಣ್ಣ ಸಣ್ಣ ಸಮಯದ ತುಣುಕುಗಳನ್ನು ಜೋಡಿಸಿಕೊಂಡು ಒಂದೊಂದೇ ಪುಸ್ತಕವನ್ನು ಪ್ರೀತಿಯಿಂದ ಮುಗಿಸಬೇಕಾಗಿ ಬರುತ್ತದೆ. ಆದರೆ ಓದುವ ಪ್ರೀತಿ ಇನ್ನೂ ಬತ್ತಿಲ್ಲ, ಸ್ವಲ್ಪವೂ ಸೊರಗಿಲ್ಲ, ಬದಲಿಗೆ ದುಪ್ಪಟ್ಟಾಗಿದೆ ಎನ್ನುವುದೇ ಖುಷಿಯ ವಿಚಾರ. ನಾವೆಲ್ಲಾ ಓದಿನ ಬಗ್ಗೆ ಚರ್ಚಿಸುತ್ತಾ, ಓದಿನ ಸುಖಕ್ಕಾಗಿ ಪುಸ್ತಕಗಳ ಕನಸುತ್ತಾ ಕೂತಿರುವಾಗ ನಮ್ಮ ಮಕ್ಕಳು ಅದಕ್ಕಿಂತ ಭಿನ್ನವಾಗಿ ಬೆಳೆಯುತ್ತಿದ್ದಾರೆ. ಆದರೆ ಆ ಭಿನ್ನತೆ ನಮ್ಮಲ್ಲಿ ಆತಂಕ ಹುಟ್ಟಿಸುತ್ತಿದೆ. ಮಕ್ಕಳಿಗೀಗ ಪುಸ್ತಕಗಳು ಬೇಕಿಲ್ಲ. ದೃಷ್ಯ ಮಾಧ್ಯಮದ ಎದುರು ಸಪ್ಪಗೆ ಕಾಣುವ ಪುಸ್ತಕಗಳನ್ನು ಅವರು ಮೂಸುವುದೇ ಇಲ್ಲ. ಡಿಜಿಟಲ್ ಲೈಬ್ರರಿ, ಇ ಬುಕ್ಸ್… ಹೀಗೆ ಎಲ್ಲವೂ ಮೊಬೈಲು, ಕಂಪ್ಯೂಟರಿನ ಮುಂದೆಯೇ ನಡೆಯಬೇಕು. ಅವರಿಗಾಗಿ ಕೂಡಿಟ್ಟ ಪುಸ್ತಕಗಳು, ಇಟ್ಟಲ್ಲೇ ಮುಲುಗುತ್ತವೆ. ಆದರೆ ಬುದ್ಧಿ ಮತ್ತು ಮೆದುಳಿಗೆ ಪುಸ್ತಕಕ್ಕಿಂತ ದೊಡ್ಡ ಆಹಾರವಿಲ್ಲ ಮತ್ತು ಕಣ್ಣಿಗೂ ಒಳ್ಳೆಯದು. ಇದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುವುದಾದರೂ ಹೇಗೆ ಎನ್ನುವುದೇ ಚಿಂತೆ. ಆದರೆ ನನ್ನ ತರಗತಿಯಲ್ಲಿ ಒಬ್ಬ ಹುಡುಗನಿದ್ದಾನೆ. ಬಹಳಾ ಚೂಟಿ, ತರಲೆ, ಕಿತಾಪತಿ, ತುಂಬಾ ಬುದ್ಧಿವಂತ ಮೇಲಾಗಿ ಕವಿ ಕತೆಗಾರ. ತುಂಬಾ ಬಡತನವಿರುವ ಮನೆಯಿಂದ ಅವ ಶಾಲೆಗೆ ಬರುತ್ತಾನೆ. ಆದರೆ ಪುಸ್ತಗಳ ಬಗ್ಗೆ ಅವನಿಗೆ ಅಪಾರ ಪ್ರೀತಿ. ಎಲ್ಲೇ ಪುಸ್ತಕ ಸಿಕ್ಕರೂ ಅವನಿಗದು ಬೇಕು. ತನ್ನ ಓರಗೆಯವರಿಗಿಂತಲೂ ಹೆಚ್ಚಿನ ಜ್ಞಾನ ಅವನದು. ಅವನಿಗೆ ಆಗಾಗ ಒಂದಷ್ಟು ಪುಸ್ತಕಗಳನ್ನು ಕೊಡುತ್ತಿರುತ್ತೇನೆ. ಕಳೆದ ಬಾರಿ The magic of the lost temple ಎನ್ನುವ ಸುಧಾಮೂರ್ತಿಯವರ ಒಂದು ಪುಸ್ತಕ ಕೊಟ್ಟಿದ್ದೆ. ಅವನಿನ್ನೂ ನನಗೆ ಮರಳಿಸಿಲ್ಲ. ಒಂದುವೇಳೆ ಕೊಡದಿದ್ದರೂ ತೊಂದರೆ ಏನಿಲ್ಲ. ನನಗೆ ಗೊತ್ತು ಅದನ್ನವನು ಜೀವನಪರ್ಯಂತ ನನಗಿಂತಲೂ ಜೋಪಾನವಾಗಿ ಇಟ್ಟುಕೊಂಡಿರುತ್ತಾನೆ ಎಂದು. ************************************************************* –ಆಶಾಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.


