ಮತ್ತೆ ಏನೇನೋ ವಿಚಾರಗಳಿವೆ ಬರೆಯಲಿಕ್ಕೆ. ಆದರೆ ಬರೆಯ ಹೊರಟ ಕೂಡಲೇ ಅದು ಸುತ್ತಿ ಸುತ್ತಿ ಸುಳಿದು ಮತ್ತದೇ ದಾರಿಗೆ ಹೊರಳಿಬಿಡುವುದು ಪರಿಸ್ಥಿತಿಯ ನಾವು ತಳ್ಳಿ ಹಾಕಲಾಗದ ಪ್ರಭಾವವೇ ಇರಬಹುದು. ಅದನ್ನು ಮೀರಬೇಕಾದ ಸಾವಾಲೊಂದು ಮುಂದೆ ಕುಳಿತಿದೆ. ಅದನ್ನೀಗ ಮೀರಲೇಬೇಕಿದೆ.
ಅಳುವಿನ ಕ್ಷೀಣ ಶಬ್ಧವನ್ನು ಹೊರತುಪಡಿಸಿ ಹೆಚ್ಚಿನ ಜನವೂ ಇಲ್ಲ, ಗದ್ದಲವೂ ಇಲ್ಲ. ಕನಿಷ್ಟ ದೇಹ ತ್ಯಜಿಸಿರುವ ಆತ್ಮಕ್ಕೆ ಸಲ್ಲಬೇಕಾದ ಅಶ್ರುತರ್ಪಣವೂ ಇಲ್ಲದೆ ವಿದಾಯ ಸಲ್ಲಿಸಬೇಕಾದ ದುಃಸ್ಥಿತಿ! ಒಂದು ಸಣ್ಣ ಅತಿ ಸಣ್ಣ ನೋವಿನೆಳೆ ಮಾತ್ರ ಇಡೀ ಜೀವವನ್ನೇ ಹಿಂಡುತ್ತಿದೆ
ತಾಯ್ತನ ಎನ್ನುವದು ಬರಿದೆ ಜೈವಿಕ ತಾಯ್ತನಕ್ಕೆ ಸಂಬಂಧ ಪಟ್ಟುದಲ್ಲ. ಅದೊಂದು ಭಾವ. ಆ ಭಾವವಿದ್ದವರೆಲ್ಲಾ ತಾಯಂದಿರಾಗಬಹುದು ಎನ್ಬುವುದು ಸಾವಿತ್ರಿಯವರಿಂದ ಸಾಬೀತಾಗುತ್ತದೆ. ಆಕೆ ತಮ್ಮದೇ ಒಂದು ಮಗುವನ್ನು ಹೆರಲಿಲ್ಲ. ಆದರೆ ದೀನ ದಲಿತರ ಪಾಲಿಗೆ ನಿಜವಾದ ಮಾತೃಪೂರ್ಣ ತಾಯಿಯೇ ಆದರು.
ಅಂಕಣ ಬರಹ ಒಂದು ಹಾವಿನ ಕಥೆ ಮತ್ತು ನಾವು ಕೆಲವು ಒತ್ತಡಗಳು ಹುಟ್ಟಿಕೊಳ್ಳುತ್ತವೆ. ಎಂಥದೋ ಅನಿವಾರ್ಯತೆ ಕಾಡುತ್ತದೆ. ಮಾಡಬೇಕೆಂದುಕೊಂಡದ್ದನ್ನು ಮಾಡಲಾಗುತ್ತಿಲ್ಲ ಎನ್ನುವ ಚಡಪಡಿಕೆ, ನೋವು, ಹತಾಶೆ… ಬೇಕಾದವರನ್ನು ಮನಸಿಗೆ ಹತ್ತಿರವಾದವರನ್ನು ನಾವಾಗೇ ಹಚ್ಚಿಕೊಂಡವರನ್ನು ಎದೆಗೆ ತಬ್ಬುವ ಮನಸಿದ್ದಾಗಲೂ ದೂರ ನಿಲ್ಲಬೇಕಾದ ಸಂಯಮದ ಪ೫ರೀಕ್ಷೆಗೆ ತಯಾರಾಗಬೇಕಾಗಿ ಬರುವ ಪರಿಸ್ಥಿತಿಯನ್ನು ಧ್ವನಿ ತೆಗೆಯದೇ ಬಯ್ದುಕೊಳ್ಳುತ್ತಾ ಒಳಗೊಳಗೇ ಹಟಕ್ಕೆ ಬೀಳುತ್ತೇವೆ. ಅದು ನಮ್ಮ ಮೇಲಿನ ನಮ್ಮ ಹಟ. ಚೌಕಟ್ಟನ್ನು ದಾಟಿದರೆ ನಮಗೆ ನಾವು ದಕ್ಕಿಬಿಡುತ್ತೇವೆಂದು ನಮಗೆ ಗೊತ್ತು. ಆದರೆ ನಮಗೆ ಅದಕ್ಕೆ ಬೇಕಾಗುವ ಒಂದು ಸಣ್ಣ ಸಾಹಸ ಮಾಡುವುದು ಬೇಕಿಲ್ಲ. ಯಾಕಿದ್ದಾತು ಸುಖಾಸುಮ್ಮನೆ ಉಸಾಬರಿ! ಇಂಥ ಮನೋಭಾವವೇ ನಮ್ಮನ್ನು ಆಳಿಬಿಡುತ್ತದೆ. ಅದರಲ್ಲೂ ನಮ್ಮನ್ನು ಹೆದರಿಸಿ ನಿಲ್ಲುವವರು ನಮ್ಮವರೇ ಆದಾಗ ಅವರನ್ನು ಎದುರಿಸುವುದು ಮತ್ತೊಂದೇ ಬಗೆಯ ಸಂಕಟ, ಸಂಕಷ್ಟ. ನನಗೊಂದು ಕತೆ ನೆನಪಾಗುತ್ತದೆ. ಒಮ್ಮೆ ಒಬ್ಬ ಸಾಧು ದಾರಿಯಲ್ಲಿ ಹೋಗುತ್ತಿರುತ್ತಾನೆ. ಅವನನ್ನು ಕಂಡ ಸಮೀಪದ ಊರಿನ ವ್ಯಕ್ತಿಯೊಬ್ಬ ಒಂದು ಕತೆ ಹೇಳಲು ಶುರು ಮಾಡುತ್ತಾನೆ. ಇಲ್ಲೊಂದು ಹಾವಿದೆ, ಆ ಹಾವು ಈ ದಾರಿಯಲ್ಲಿ ಓಡಾಡೋ ಜನರನ್ನ ಕಚ್ಚಿ ಸಾಯಿಸ್ತಿದೆ. ಸಾಧುಗಳೇ ನೀವೇ ಏನಾದ್ರು ಮಾಡಿ ಆ ಹಾವಿಗೆ ಬುದ್ಧಿ ಕಲಿಸ್ಬೇಕು ಅಂತ ಕೇಳ್ಕೊತಾನೆ ಕೊನೆಗೆ. ನಂತ್ರ ಅಲ್ಲಿಂದ ಹೊರಟು ಹೋಗ್ತಾನೆ. ಆಮೇಲೆ ಆ ಸಾಧು ಹಾವಿನ ಬಳಿ ಹೋಗ್ತಾನೆ. ಹಾವು ಸಾಧುವನ್ನೂ ನೋಡಿ ಬುಸುಗುಡುತ್ತದೆ. ಆಗ ಸಾಧು ಅಲ್ಲಾ ನಿನಗೇನಾದ್ರು ಬುದ್ಧಿಗಿದ್ದಿ ಇದೆಯಾ ಇಲ್ವಾ… ಯಾಕ್ ನೀನು ಜನರಿಗೆ ತೊಂದ್ರೆ ಕೊಡ್ತಿದೀಯಾ? ಅದೆಲ್ಲ ತಪ್ಪು ತಾನೇ… ಪಾಪ ಕಣೋ ಬಿಟ್ಬಿಡೋ ಅದನ್ನೆಲ್ಲಾ ಅಂತ ಉಪದೇಶ ಮಾಡ್ತಾನೆ. ಇದರಿಂದ ಮನಃಪರಿವರ್ತನೆಗೆ ಒಳಗಾದ ಹಾವು ತಾನೂ ಸಾಧುವಾಗಿಬಿಡ್ತದೆ. ಸಾಧು ತನ್ನ ದಾರಿ ಹಿಡಿದು ಹೊರಟು ಹೋಗ್ತಾನೆ. ಅಂದಿನಿಂದ ಶುರು ಜನರ ಉಪಟಳ! ತನ್ನ ಪಾಡಿಗೆ ತಾನಿರೋ ಪಾಪದ ಸಾಧು ಹಾವನ್ನ ಮನ ಬಂದ ಹಾಗೆ ಹೊಡೀತಾರೆ, ಬಡೀತಾರೆ, ಕಲ್ಲು ಎಸೀತಾರೆ, ಕೋಲಿನಿಂದ ತಿವೀತಾರೆ… ಒಟ್ನಲ್ಲಿ ಹಣ್ಗಾಯಿ ನೀರ್ಗಾಯಿ ಮಾಡ್ತಾರೆ. ಆದ್ರೆ ಸಾಧುವಾಗಿಬಿಟ್ಟಿದ್ದ ಹಾವು ಮಾತ್ರ ಸುಮ್ಮನೇ ಒದೆ ತಿನ್ನುತ್ತಾ ಸಾಯುವ ಹಾಗಾಗಿಬಿಡ್ತದೆ. ಅದೇ ಮಾರ್ಗವಾಗಿ ಮತ್ತೆ ಅದೇ ಸಾಧು ಬರ್ತಾನೆ. ಹಾವಿನ ಸ್ಥಿತಿ ಕಂಡು ಅವನಿಗೆ ಮರುಕ ಹುಟ್ತದೆ. ಅದನ್ನ ಕರುಣೆಯಿಂದ ಎತ್ತಿಕೊಂಡು ಔಷಧೋಪಚಾರ ಮಾಡ್ತಾನೆ. ಆಮೇಲೆ ಕೇಳ್ತಾನೆ ಯಾಕೋ ಈ ಸ್ಥಿತಿ ನಿಂಗೆ ಅಂತ. ಆಗ ಹಾವು ಹೇಳ್ತದೆ ನೀವೇ ತಾನೆ ಹೇಳಿದ್ದು ನಾನು ಯಾರನ್ನೂ ಕಚ್ಬಾರ್ದು ಅಂತ, ಅದಕ್ಕೆ ನಾನು ಕಚ್ಚೋದನ್ನೇ ಬಿಟ್ಬಿಟ್ಟೆ. ಆದರ ಪ್ರತಿಫಲವೇ ಇದು. ನಾನು ಸುಮ್ನಿರೋದನ್ನ ಕಂಡು ಜನ ಹತ್ತಿರ ಬಂದ್ರು. ನನ್ನನ್ನ ವಿನಾಕಾರಣ ಹೊಡೆದುವಹಿಂಸೆ ಮಾಡಿದ್ರು. ಆದ್ರೂ ನಾನವರಿಗೆ ಏನೂ ಮಾಡ್ಲಿಲ್ಲ ಅನ್ನುತ್ತೆ. ಇದನ್ನು ಕೇಳಿದ ಸಾಧುವಿಗೆ ಅಯ್ಯೋ ಪಾಪ ಅನ್ಸತ್ತೆ. ಮತ್ತೆ “ಅಲ್ಲೋ ಹಾವೇ ನಾನು ನಿನಗೆ ಕಚ್ಬೇಡ, ಜನ್ರನ್ನ ಕೊಲ್ಬೇಡ ಅಂತ ಹೇಳಿದ್ನೇ ಹೊರತು, ಬುಸುಗುಟ್ಟಿ ಹೆದರಿಸ್ಬೇಡ ಅಂತ ಹೇಳಿರಲಿಲ್ಲ ತಾನೇ. ನೀನು ನಿನ್ನನ್ನ ರಕ್ಷಿಸಿಕೊಳ್ಳಲಿಕ್ಕೆ ಬುಸುಗುಟ್ಟಿ ಹೆದರಿಸಿದ್ದರೆ ಸಾಕಿತ್ತು ಅಲ್ವ… ಯಾರೂ ಹತ್ರ ಬರ್ತಿರಲಿಲ್ಲ ತಾನೇ…” ಎನ್ನುತ್ತಾರೆ. ಆಗ ಹಾವಿಗೆ ತನ್ನ ತಪ್ಪಿನ ಅರಿವಾಗ್ತದೆ. ತಾನು ಬುಸುಗುಟ್ಟಿ ಜನರಿಂದ ಪಾರಾಗಬೇಕಿತ್ತು ಮತ್ತು ಯಾರನ್ನೂ ಕಚ್ಚದೆ ಒಳ್ಳೆಯವನೂ ಆಗಬೇಕಿತ್ತು ಅಂತ. ಈ ಕತೆ ನನಗೆ ಬಹಳ ಸಾರಿ ನೆನಪಾಗ್ತಿರ್ತದೆ. ಮತ್ತೆ ಬಹಳಷ್ಟು ಪರಿಸ್ಥಿತಿಯಲ್ಲಿ ನನಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದಕ್ಕೆ ದಾರಿ ತೋರಿಸುತ್ತದೆ. ನಾವು ಯಾರನ್ನೇ ಆಗಲಿ, ಯಾವ ಪರಿಸ್ಥಿತಿಯಲ್ಲೇ ಆಗಲಿ ಎದುರಿಸಲು ಅಂಜಿ ಅವರು ನಮ್ಮ ವಿಷಯದಲ್ಲಿ ಅಡ್ವಾಂಟೇಜ್ ತೆಗೆದುಕೊಳ್ಳಲು ಯಾಕಾದ್ರು ಬಿಡಬೇಕು… ನಂತರ ಅವರು ಶೋಶಿಸುವಾಗ ಸುಮ್ಮನೇ ಯಾಕೆ ನಲುಗಬೇಕು… ಅದಕ್ಕೆ ಬದಲಾಗಿ ನಮ್ಮ ಅಭಿಮಾನ ಅಸ್ಮಿತೆಗೆ ಪೆಟ್ಟಾಗದಂತೆ ಒಂದು ನಿರುಪದ್ರವಿ ಗಟ್ಟಿ ದನಿಯೊಂದನ್ನು ಹೊರಹಾಕುವುದರಿಂದ ಎದುರಿನವರಿಗೆ ಕನಿಷ್ಟ ನಾವು ನಮ್ಮ ಆತ್ಮಾಭಿಮಾನಕ್ಕೆ ಪೆಟ್ಟು ಬೀಳುವಂತಾದರೆ ಸುಮ್ಮನಿರಲಾರೆವು ಎನ್ನುವ ಮೆಸೇಜನ್ನು ಅವರಿಗೆ ತಲುಪಿಸುವ ಕೆಲಸವನ್ನಾದರೂ ಮಾಡಲೇ ಬೇಕು. ಆದರೆ ಅದು ಅಷ್ಟು ಸುಲಭವಲ್ಲ. ಎದುರಿಗಿರುವವರು ಬೇರೆಯವರಾದರೆ ಕತ್ತಿ ಹಿಡಿಯುವುದು ಸುಲಭ. ಆದರೆ ನಿಂತಿರುವವರು ನಮ್ಮವರೇ ಆದಾಗ?! ಇದು ಕಷ್ಟಾತಿಕಷ್ಟ. ಆದರೆ ಖಂಡಿತಾ ಸಾಧ್ಯ. ಅಸಾಧ್ಯವಂತೂ ಅಲ್ಲ. ನಿರಾಶರಾಗದೆ ಪ್ರಯತ್ನಿಸಿದರೆ ನಮ್ಮನ್ನು ನಾವು ದೃಢಗೊಳಿಸಿಕೊಳ್ಳುವುದೂ ಸಾಧ್ಯವಾಗ್ತದೆ. ಆದರೆ ಸುಮ್ಮನೆ ಇರುವುದನ್ನು ಅದೆಷ್ಟು ವ್ಯವಸ್ಥಿತವಾಗಿ ಹೇಳಿಕೊಟ್ಟುಬಿಡುತ್ತೇವೆ ನಾವು! ನನ್ನ ಗೆಳತಿಯೊಬ್ಬರು ಇದ್ದಾರೆ. ಯಾರು ಏನೇ ಅನ್ನಲಿ ತಿರುಗಿ ಮಾತನಾಡುವುದು ಅವರಿಗೆ ಬಹಳಾ ಕಷ್ಟ. ಅವರೇ ಹೇಳುವ ಹಾಗೆ, ನಾಲ್ಕು ಜನ ಗಂಡುಮಕ್ಕಳಿದ್ದ ದೊಡ್ಡ ಮನೆಗೆ ಸೊಸೆಯಾಗಿ ಬಂದ ಅವರು, ಎಲ್ಲಿ ಒಂದು ಮಾತಾಡಿದರೆ ಬೇರೆಯವರಿಗೆ ನೋವಾಗುತ್ತದೋ ಎಂದು ಯೋಚಿಸುತ್ತಲೇ ಹಲ್ಲುಕಚ್ಚಿ ಸಹಿಸುತ್ತಾ ಬದುಕಿದ್ದು ಎನ್ನುತ್ತಾರೆ. ಎಷ್ಟೆಲ್ಲಾ ಮಾಡಿ ಬಡಿಸಿ ಉಣಿಸಿ ಕೊನೆಗೆ ಒಂದು ಕೆಟ್ಟ ಮಾತಾಡಿಬಿಟ್ಟರೆ ಮಾಡಿದ ಕೆಲಸವೆಲ್ಲಾ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಗುತ್ತದಲ್ಲ ಎಂದು ಸಹಿಸುವುದನ್ನು ಕಲಿತೆ ಎನ್ನುತ್ತಾರೆ. ಇಂಥ ಪಾಠಗಳು ನಮಗೆ ತವರಿನಿಂದಲೇ ಸಿಗುತ್ತಿತ್ತು ಎಂತಲೂ ಹೇಳುವುದನ್ನು ಮರೆಯುವುದಿಲ್ಲ. ಇಂತಹ ಅದೆಷ್ಟು ಸಂಪ್ರದಾಯದ ಹೆಸರಿನ ಪಾಠಗಳು! ಈ ಪಾಠಗಳೆಲ್ಲ ಹೆಣ್ಮಕ್ಕಳಿಗೆ ಮಾತ್ರ ಏಕೆ… ಆ ನನ್ನ ಗೆಳತಿ ಇಂತಹ ಪಾಠಗಳಿಂದಾಗಿ ಅದೆಷ್ಟು ಮೃದು ಎಂದರೆ ಯಾರಾದರೂ ಗಟ್ಟಿಯಾಗಿ ಮಾತನಾಡಿದರೂ ಸಾಕು ಇವರಿಗೆ ಗಂಟಲು ಕಟ್ಟಿ ಅಳುವೇ ಬಂದುಬಿಡುತ್ತದೆ. ಇವರು ಒಂದು ಉದಾಹರಣೆ ಮಾತ್ರ. ಆದರೆ ಇಂತಹ ಅದೆಷ್ಟೋ ಜನ ಹೆಣ್ಮಕ್ಕಳು ನಮಗೆ ಸಿಗುತ್ತಾರೆ. ಮೀಸಲಾತಿ ಇದ್ದರೂ ಹೊರಬರದ, ಸ್ಪರ್ಧಿಸದ, ಸ್ಪರ್ಧಿಸಿ ಗೆದ್ದರೂ ಗಂಡನೇ ಅಧಿಕಾರ ನಡೆಸುವ ಅದೆಷ್ಟೋ ವಾಸ್ತವಗಳು ನಮ್ಮ ಕಣ್ಮುಂದೆಯೇ ಇರುತ್ತವೆ. ಇದೆಲ್ಲ ನೋಡುವಾಗ ನಾವು ನಮ್ಮೊಳಗೇ ಗಟ್ಟಿಯಾಗಿ ಹೊರಬರಬೇಕಾದ ಅಗತ್ಯ ಮತ್ತು ಅನಿವಾರ್ಯತೆಯನ್ನು ಅರಿಯಬೇಕಿದೆ ಅನಿಸುತ್ತದೆ. ಇದಕ್ಕೆ ಯಾವ ಭೇದವಿಲ್ಲ. ಹೆಣ್ಣುಮಕ್ಕಳಿಗೆ ಅದರ ಅಗತ್ಯ ಕೊಂಚ ಹೆಚ್ಚಿರಬಹುದು ಅಷ್ಟೇ. ಹೆಂಗರುಳು, ಹೆಣ್ಣಪ್ಪಿ ಅಂತೆಲ್ಲ ಮೂದಲಿಕೆಗೆ ಒಳಗಾಗುವ ಅದೆಷ್ಟೋ ಗಂಡ್ಮಕ್ಕಳ ಪಾಡೂ ಇದಕ್ಕೆ ಭಿನ್ನವಾಗಿಲ್ಲ ಎನ್ನುವುದೂ ನಿಜವೇ. ಇದಕ್ಕೆಲ್ಲ ಮದ್ದೆಂದರೆ ಮಿತಿಗಳನ್ನು ಮೀರುವುದು. ಯಾವುದು ಗೊಡ್ಡು ಎನಿಸುತ್ತದೋ ಅದನ್ನು ದಿಟ್ಟತನದಿಂದ ನಿರಾಕರಿಸುವುದು. ಕಟ್ಟಳೆಗಳು ಒಳಗಿನದ್ದಾದರೂ ಸರಿ ಹೊರಗಿನದ್ದಾದರೂ ಸರಿ, ಸರಿಸಿ ಹೊರ ಬರುವುದು… ಈ ಮದ್ದು ನಮ್ಮ ಮತಿಗೆ ದಕ್ಕಲಿ… **************************************** –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ಸಂಕ್ರಾಂತಿ ಬಂತೋ ರತ್ತೋ ರತ್ತೋ ಸಂಕ್ರಾಂತಿ ಎಂದ ಕೂಡಲೇ ನೆನಪಾಗುವುದೇ ಚಂದದ ರೇಷಿಮೆ ಲಂಗ ತೊಟ್ಟು ಉದ್ದ ಜಡೆ ಹೆಣೆದುಕೊಂಡು, ಘಮ ಘಮ ಮಲ್ಲಿಗೆ ಹೂ ಮುಡಿದು, ಏನೆಲ್ಲ ಸಾಧ್ಯವಿರುತ್ತದೋ ಅಷ್ಟೆಲ್ಲಾ ಅಲಂಕಾರ ಮಾಡಿಕೊಂಡು ನೆರೆಹೊರೆಯವರಿಗೆ ಎಳ್ಳು ಬೆಲ್ಲ ಹಂಚಲು ಹೊರಡುತ್ತಿದ್ದದ್ದು… ಸಂಕ್ರಾಂತಿ ಹಬ್ಬದ ಪ್ರಮುಖ ಆಕರ್ಷಣೆಯೇ ಇದಾಗಿರುತ್ತಿತ್ತಾದರೂ ಸಂಕ್ರಾಂತಿಗಿರುವ ಆಕರ್ಷಣೆಗಳ ದೊಡ್ಡಪಟ್ಟಿಯೂ ಇರುತ್ತಿತ್ತು. ಸಂಕ್ರಾಂತಿ ಹೆಣ್ಣುಮಕ್ಕಳ ಹಬ್ಬ ಎನಿಸಿಬಿಡುತ್ತಿತ್ತು. ಅದೆಷ್ಟೋ ದಿನಗಳ ತಯಾರಿ ಈ ಹಬ್ಬಕ್ಕೆ. ಹದಿನೈದು ದಿನಗಳಿಗೆ ಮುಂಚೆಯೇ ಎಳ್ಳು-ಬೆಲ್ಲ ತಯಾರಿಸಲು ಬೇಕಿರುವ ವಸ್ತುಗಳ ಖರೀದಿಸಿ ತರುತ್ತಿದ್ದೆವು. ಮನೆಯಲ್ಲಿ ಇರುತ್ತಿದ್ದ ಅಚ್ಚುಗಳಿಗೆ ಜೀವ ಬರುತ್ತಿತ್ತು. ನಾನಾ ನಮೂನಿಯ ಸಕ್ಕರೆ ಅಚ್ಚುಗಳು ಕುತೂಹಲ ಮತ್ತು ಬಾಯಲ್ಲಿ ನೀರೂರಿಸುವ ಸಕ್ಕರೆ ಗೊಂಬೆಗಳನ್ನು ನಮ್ಮದುರು ತಂದು ನಿಲ್ಲಿಸುತ್ತಿದ್ದವು. ಅದೆಷ್ಟು ಚಂದದ ಬಣ್ಣಗಳು ಇವುಗಳದ್ದು! ಈ ಗೊಂಬೆಗಳನ್ನು ನೋಡುತ್ತಾ ನೋಡುತ್ತಾ ಚಪ್ಪರಿಸಿ ತಿನ್ನಬಹುದಿತ್ತು ಎನ್ನುವುದೇ ನಮ್ಮ ದೊಡ್ಡ ಅಚ್ಚರಿಯಾಗಿರುತ್ತಿತ್ತು… ಸಕ್ಕರೆ ಗೊಂಬೆಗಳಾದ ಮೇಲೆ ಇನ್ನು ಎಳ್ಳು-ಬೆಲ್ಲದ ತಯಾರಿಕೆ. ಊರೆಲ್ಲ ಎಳ್ಳು ಬೀರಿಯಾದ ಮೇಲೂ ತಿಂಗಳೊಪ್ಪತ್ತಿಗಾಗುವಷ್ಟು ಎಳ್ಳು ಬೆಲ್ಲ ಉಳಿಯಲೇ ಬೇಕಿತ್ತು… ನಾವೆಲ್ಲ ಮಕ್ಕಳಂತೂ ಸಂಕ್ರಾಂತಿ ಮುಗಿದು ಎಷ್ಟೋ ದಿನಗಳಾದರೂ ಸಂಕ್ರಾಂತಿ ಕಾಳು ಕೇಳುವುದನ್ನು ಬಿಡುತ್ತಿರಲಿಲ್ಲ. ಅದೆಷ್ಟು ಸವಿ… ಅದೆಂತಹಾ ಸವಿ…ಎಳ್ಳು ಸಂಬಂಧವನ್ನು ವೃದ್ಧಿಸುತ್ತದೆ ಮತ್ತು ಬೆಲ್ಲ ಆ ಸಂಬಂಧವನ್ನು ಮಧುರವಾಗಿಸುತ್ತದೆ ಎನ್ನುವ ನಂಬಿಕೆ ಇದೆ ಈ ಎಳ್ಳು-ಬೆಲ್ಲದ ಹಿಂದೆ. ಅದಕ್ಕೆ ಬಣ್ಣ ಬಣ್ಣದ ಜೀರಿಗೆ ಪೆಪ್ಪರಮೆಂಟು, ಬಣ್ಣ ಬಣ್ಣದ ಸಕ್ಕರೆಯ ಸಂಕ್ರಾಂತಿ ಕಾಳು, ಹುರಿದ ಶೇಂಗಾ, ಪುಟಾಣಿ, ಒಣ ಕೊಬ್ಬರಿ, ಸಣ್ಣಗೆ ತುಂಡು ಮಾಡಿದ ಬೆಲ್ಲ ಎಲ್ಲವನ್ನೂ ಬೆರೆಸಿಯಾದ ಮೇಲೆಯೇ ಎಳ್ಳು-ಬೆಲ್ಲ ತಯಾರಾಗುತ್ತಿದ್ದದ್ದು. ಚಳಿಗಾಲದ ಈ ಹಬ್ಬ ವಾತಾವರಣಕ್ಕೆ ಅನುಗುಣವಾಗಿ ಆಚರಿಸಲ್ಪಡುತ್ತಿದ್ದ ರೀತಿಯಿಂದಲೂ ಖುಷಿಯ ಹಬ್ಬ. ಚಳಿಯ ದಿನಗಳಲ್ಲಿ ಮನುಷ್ಯನ ದೈಹಿಕ ಚಟುವಟಿಕೆಗಳು ನಿಧಾನಗತಿಯಲ್ಲಿರುತ್ತವೆ. ಅಂತಹ ಸಮಯದಲ್ಲಿ ಹಬ್ಬದ ನೆವದಲ್ಲಿ ದೇಹವನ್ನು ತಣಿಸುವ ಒಂದಷ್ಟು ಆಚರಣೆಗಳು ಮೈ ಮನಸಿಗೆ ಮುದನೀಡುತ್ತದೆ. ಎಳ್ಳು, ಕೊಬ್ಬರಿಗಳಲ್ಲಿ ಎಣ್ಣೆಯ ಅಂಶವಿರುತ್ತದೆ. ಇವು ಶೀತ, ವಾತವನ್ನು ದೂರ ಮಾಡುತ್ತವೆ. ಕಬ್ಬು ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಎಳ್ಳು, ಕಡಲೆ ಬೀಜಗಳಿಂದ ಕ್ಯಾಲ್ಶಿಯಂ ದೊರೆತರೆ ಬೆಲ್ಲದಿಂದ ಕಬ್ಬಿಣಾಂಶ ದೊರೆಯುತ್ತದೆ. ಮತ್ತೆ ಪೊಂಗಲ್ ತಯಾರಿಸಲು ಬಳಸುವ ಹೆಸರು ಬೇಳೆಯಲ್ಲಿ ವಿಟಮಿನ್ ಸಿ ಇರುತ್ತದೆ ಮತ್ತು ಮಣಸು-ಜೀರಿಗೆ ಜೀರ್ಣಶಕ್ತಿ ವೃದ್ಧಿಸುತ್ತದೆ. ಇವೆಲ್ಲವನ್ನೂ ಗಮನಿಸಿದಾಗ ನಮ್ಮ ಪೂರ್ವಿಕರು ಧಾರ್ಮಿಕವಾಗಿ ರೂಪಿಸಿದ ಆಚರಣೆಗಳ ಹಿಂದೆ ಒಂದಲ್ಲ ಒಂದು ವೈಜ್ಞಾನಿಕ ತಳಹದಿ ಅಡಗಿರುವುದು ಕಂಡುಬರುತ್ತದೆ. ಎಲ್ಲವನ್ನೂ ಮೂಢನಂಬಿಕೆ ಎಂದು ತಳ್ಳಿಹಾಕುವ ಮೊದಲು ಯಾವುದನ್ನು ಅನುಸರಿಸಬೇಕು, ಯಾವುದನ್ನು ಬಿಡಬೇಕು ಎನ್ನುವುದನ್ನು ಅರಿಯಬೇಕಿದೆ. ಮತ್ತು ನಮ್ಮ ಸಂಸ್ಕೃತಿಯ ಉಳಿವೂ ಇಂತಹ ಆಚರಣೆಗಳಲ್ಲಿಯೇ ಇರುತ್ತದೆ ಎನ್ನುವುದನ್ಬು ನಾವು ಮರೆಯಬಾರದು. ಪಥವ ಬದಲಿಸಿದ ಸೂರ್ಯ ಮೊಳಗಿ ಸಂಕ್ರಾಂತಿ ತೂರ್ಯ ಸವೆದಿದೆ ದಾರಿ ಕವಿದಿದೆ ಮಂಜು ಬದಲಾವಣೆ ಅನಿವಾರ್ಯ -ಬಿ.ಆರ್.ಲಕ್ಷ್ಮಣ ರಾವ್ ಸೂರ್ಯ ತನ್ನ ಇಷ್ಟು ದಿನದ ಪಥವನ್ನು ಬದಲಿಸಿ ಮತ್ತೊಂದು ಪಥದಲ್ಲಿ ತಿರುಗಲು ಶುರು ಮಾಡುತ್ತಾನೆ. ಹಿಂದೂ ಪಂಚಾಂಗದ ಪ್ರಕಾರ ಸೂರ್ಯ ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಎಂದು ಮೇಷ ರಾಶಿ ಪ್ರವೇಶಿಸಿದಾಗ ಸೌರಮಾನ ಯುಗಾದಿ ಎಂದು ತುಲಾ ರಾಶಿ ಪ್ರವೇಶಿಸಿದ ದಿನವನ್ನು ಕಾವೇರಿ ತೀರ್ಥೋದ್ಭವ ತುಲಾ ಸಂಕ್ರಮಣ ಎಂದು ಆಯಾನಾಧಾರದ ಮೇಲೆ ಆಚರಿಸಲಾಗುತ್ತದೆ ಮತ್ತು ಈ ದಿನ ಪೌರಾಣಿಕ ಹಿನ್ನೆಲೆಯಲ್ಲಿ ಊರ್ಧ್ವ ಲೋಕಗಳಾದ ಬುವರ್ಲೋಕ(ತಪಸ್ಸಿನಲ್ಲಿ ಮಗ್ನರಾದ ಮುನಿಗಳು ವಾಸ ಮಾಡುವ ಲೋಕ) ಸ್ವರ್ಗಲೋಕದಲ್ಲಿ(ಇಂದ್ರಾದಿ ಅಷ್ಟದಿಕ್ಪಾಲಕರು, ನವಗ್ರಹಗಳು,ಅನೇಕ ಪ್ರತ್ಯಧಿದೇವತೆಗಳು ವಾಸಮಾಡುವ ಲೋಕ) ಸೂರ್ಯೋದಯ ವಾಗುವ ಕಾಲವನ್ನು ನಾವು ಉತ್ತರಾಯಣದ ಸಂಕ್ರಾಂತಿ ಹಬ್ಬ ಎಂದು ಆಚರಿಸುವ ವಾಡಿಕೆ. ಈ ದಿನವನ್ನು ಒಂದು ಪವಿತ್ರ ದಿನ ಎಂದು ಭಾವಿಸಲಾಗಿದೆ ಕಾರಣ ಲೋಕಕಲ್ಯಾಣ ಕರ್ತರಾದ ದೇವತೆಗಳು ಎಚ್ಚರಗೂಳ್ಳುವ ದಿನ ಇದು ಎನ್ನುವ ಧಾರ್ಮಿಕ ನಂಬಿಕೆ. ಆದರೆ ಅವರು ಸ್ನಾನ ಸಂಧ್ಯಾವಂದನೆ ಮುಗಿಸಿ ಕಾರ್ಯಮಗ್ನರಾಗುವುದು ಮುಂದಿನ ರಥಸಪ್ತಮಿಯ ದಿನ ಎಂಬ ಪ್ರತೀತಿಯೂ ಇದೆ. ಮಹಾಭಾರತದ ಭೀಷ್ಮಾಚಾರ್ಯರು ಯುದ್ದಮುಗಿದು ಶರಶಯ್ಯೆಯಲ್ಲಿ ಪವಡಿಸಿದ್ದರೂ, ದೇಹ ಬಾಣಗಳ ಇರಿಯುವಿಕೆಯಿಂದ ನೋಯುತ್ತಿದ್ದರೂ ಪ್ರಾಣಬಿಡಲು ಉತ್ತರಾಯಣದ ಪುಣ್ಯಕಾಲಕ್ಕಾಗಿ ಕಾದರಂತೆ ಎಂದು ಮಹಾಭಾರತ ನಮಗೆ ತಿಳಿಸಿಕೊಡುತ್ತದೆ. ಉತ್ತರಾಯಣ ಪುಣ್ಯಕಾಲದ ಈ ಹಬ್ಬ ಸುಗ್ಗಿಯನ್ನು ಸಾರುವ ಹಬ್ಬವಾಗಿದೆ. ಈ ದಿನ ಹೊಸ ಅಕ್ಕಿಯಲ್ಲಿ ಪೊಂಗಲ್ ಮಾಡಿ ದೇವರಿಗೆ ನೈವೇದ್ಯ ಮಾಡುತ್ತಾರೆ. ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಎಂದೇ ಕರೆಯಲಾಗುತ್ತದೆ. ರೈತರು ಹೊಲದಲ್ಲಿ ಬೆಳೆದ ಧಾನ್ಯಗಳನ್ನು ಕಟಾವು ಮಾಡುವ ಸಮಯವಿದು. ದನಕರುಗಳನ್ನು ತೊಳೆದು, ಅಲಂಕರಿಸಿ, ಮೇವನ್ನು ಉಣಿಸಿ ಮೆರವಣಿಗೆ ಮಾಡುತ್ತಾರೆ. ಹೊಸ ಧಾನ್ಯಗಳಿಂದ ಹುಗ್ಗಿ ಮಾಡಿ ನೈವೇದ್ಯವಾಗಿ ಅರ್ಪಿಸಿ, ಎಳ್ಳನ್ನು ದಾನ ಮಾಡುವ ಪದ್ಧತಿ ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಈ ದಿನ ಸಣ್ಣ ಮಕ್ಕಳನ್ನು ಮಣೆಯ ಮೇಲೆ ಕೂರಿಸಿ, ಎಳ್ಳು, ಎಲಚಿಹಣ್ಣು(ಬಾರೀ ಹಣ್ಣು), ಕಾಸು, ಬಾಳೆಹಣ್ಣಿನ ತುಂಡುಗಳು, ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿದ ಕಬ್ಬುಗಳನ್ನು ಬೆರೆಸಿ ತಲೆಯ ಮೇಲಿಂದ ಎರೆದು ಆರತಿ ಮಾಡುತ್ತಾರೆ. ಇದಕ್ಕೆ ಕರಿ ಎರೆಯುವುದು ಎನ್ನುತ್ತಾರೆ. ಹಬ್ಬದ ಸಂತಸದೊಂದಿಗೆ ಮಕ್ಕಳ ಹಟಮಾರಿತನ, ತುಂಟತನ ಕಡಿಮೆಯಾಗುತ್ತದೆ ಎನ್ನುವ ನಂಬಿಕೆ ಇದೆ ಇದರ ಹಿಂದೆ. ಸೃಜನಾತ್ಮಕವಾಗಿರುವವರು ಸಕ್ಕರೆಯಿಂದ ತಯಾರಿಸಿದ ಕುಸುರು ಕುಸುರಾಗಿರುವ ಎಳ್ಳನ್ನು (ಕುಸುರೆಳ್ಳು) ರಟ್ಟಿನ ಮೇಲೆ ಅಂಟಿಸಿ, ಬಳೆ, ಕಿರೀಟ, ಸೊಂಟದಪಟ್ಟಿ, ಕಾಲಿಗೆ ಗೆಜ್ಜೆ, ಕೊಳಲು, ಸರ ಹೀಗೆ ಎಲ್ಲವನ್ನೂ ತಯಾರಿಸಿ ಮಕ್ಕಳಿಗೆ ತೊಡಿಸಿ ರಧಾಕೃಷ್ಣರನ್ನಾಗಿ ತಯಾರು ಮಾಡಿ ಹಬ್ಬದ ಮೆರುಗನ್ನು ಹೆಚ್ಚಿಸುತ್ತಾರೆ. ಅಂದು ಬೆಳಗ್ಗೆ ತಲೆಸ್ನಾನ ಮಾಡಿ, ದೇವರ ಪೂಜೆ ನೆರವೇರಿಸಿ ಪಿತೃಗಳಿಗೆ ತರ್ಪಣ ಕೊಡುತ್ತಾರೆ. ಅನುಕೂಲವಿದ್ದರೆ ನದಿ ಸ್ನಾನ ಮಾಡುತ್ತಾರೆ. ಮಕರ ಸಂಕ್ರಂತಿಯಂದು ತೀರ್ಥಸ್ನಾನ ಮಾಡಿದರೆ ಪುಣ್ಯ ಫಲವಿದೆಯೆಂಬ ನಂಬಿಕೆ ಇದೆ. ಸಂಜೆ ಹೆಂಗಳೆಯರು ತಟ್ಟೆಯಲ್ಲಿ ಎಳ್ಳು, ಕಬ್ಬಿನ ತುಂಡು, ಬಾಳೆಹಣ್ಣು, ಸಕ್ಕರೆ ಅಚ್ಚು, ತಾಂಬೂಲ ಸಹಿತ ಮನೆ ಮನೆಗೂ ಹಂಚಿ ಬರುತ್ತಾರೆ. ಭಾಗವತದಲ್ಲಿ ಕೃಷ್ಣ ಬಲರಾಮರು ಈ ದಿನ ಮಥುರಾಕ್ಕೆ ಬಂದು ಕಂಸನನ್ನು ಕೊಂದರು ಎಂಬುದಾಗಿ ಬರುತ್ತದೆ. ನಿರಂತರ ಸೃಷ್ಟಿಯ ತಿಗುರಿ ಸೂರ್ಯ ಆಡಿಸುವ ಬುಗುರಿ ಭ್ರಮಣಲೋಲೆ ಸಂಕ್ರಮಣಶೀಲೆ ನಿತ್ಯನೂತನೆ ಧರಿತ್ರಿ -ಬಿ.ಆರ್.ಲಕ್ಷ್ಮಣ ರಾವ್ ವೈಜ್ಞಾನಿಕವಾಗಿ ನೋಡುವುದಾದರೆ ಇಂದಿನ ಈ ದಿನ ಕ್ರಾಂತಿವೃತ್ತದಲ್ಲಿ ಸೂರ್ಯನು ತನ್ನ ಪಥವನ್ನು ಬದಲಿಸುವ ದಿನ. ಆಧುನಿಕ ವಿಜ್ಞಾನಿಗಳ ಪ್ರಕಾರ ಸೂರ್ಯ ಒಂದು ನಕ್ಷತ್ರ. ಅವನಿಗೆ ಪರಿಭ್ರಮಣ ಇಲ್ಲ. ಆದರೆ ಅಕ್ಷ ಪರಿಭ್ರಮಣ ಇದೆ. ಈಗ ನಮ್ಮ ವಿಜ್ಞಾನ ಇಡೀ ಸೌರಮಂಡಲವೇ ನಿಧಾನವಾಗಿ ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ಸರಿಯುತ್ತಿದೆ ಎಂದು ಸಾಧಿಸಿ ತೋರಿಸಿಕೊಟ್ಟಿದೆ. ಒಟ್ಟಿನಲ್ಲಿ ವಿಶ್ವದ ಪ್ರತಿಯೊಂದು ಕಾಯಕ್ಕೂ ಚಲನೆ ಇದೆ. ಬದಲಾವಣೆ ಜಗದ ನಿಯಮ, ನಿರಂತರ ಚಲನೆ ವಿಶ್ವದ ನಿಯಮ… ಜಡತೆ ನಿರಾಸೆಯ ತೊಡೆದು ಭರವಸೆಯಲಿ ಮುನ್ನಡೆದು ಹೊಸ ವಿಕ್ರಮಗಳ ಮೆರೆಯಲೀ ನಾಡು ನಗೆ ನೆಮ್ಮದಿಯನ್ನು ಹರಿಸಿ -ಬಿ.ಆರ್.ಲಕ್ಷ್ಮಣ ರಾವ್ ಎನ್ನುವ ಬಿ.ಆರ್.ಲಕ್ಷ್ಮಣರ ಮಾತಿನಂತೆ ನಮ್ಮ ಬದುಕು ಹೊಸ ಭರವಸೆಯ ದಿಕ್ಕಿನೆಡೆಗೆ ತಿರುಗಲಿ… ಪ್ರಪಂಚವನ್ನೇ ತಲ್ಲಣಗೊಳ್ಳುವಂತೆ ಮಾಡಿರುವ ಕೊರೋನಾವನ್ನು ಸೂರ್ಯನ ಹೊಸ ಪ್ರಭೆ ಸಂಹರಿಸಲಿ. ಬದುಕು ಮತ್ತೊಮ್ಮೆ ಹಳಿಗೆ ಬಂದು ಪ್ರಯಾಣ ಸಸೂತ್ರವಾಗಲಿ ಎನ್ನುವ ಆಸೆ ಮತ್ತು ಹಾರೈಕೆಯೊಂದಿಗೆ ನಾವೆಲ್ಲ “ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡೋಣ” ಅಲ್ಲವಾ… ಈ ಭುವಿಯಾಗಲಿ ಸ್ಪೂರ್ತಿ ನಮ್ಮ ನಾಡಿಗೆ ಮರಳಲಿ ಗತ ಕೀರ್ತಿ ನಮ್ಮ ನಾಡಿಗೆ ಹೊಸ ನಡೆನುಡಿ ಬರಲಿ ನಮ್ಮ ಹಾಡಿಗೆ ಹೊಸಹುರುಪನು ತರಲಿ ನಮ್ಮ ನಾಡಿಗೆ -ಬಿ.ಆರ್.ಲಕ್ಷ್ಮಣರಾವ್ ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ಅರಿವಿನ ನಾವೆಯ ಮೇಲೆ ಸುಖ ಪಯಣ… “Every human being lives in a perpetual state of insuffiency. No matter who you are or what you have achieved, you still want a little more than what you have right now…“ -Sadhguru (Inner Engineering) ಕೊರತೆಯ ಶಾಶ್ವತ ಸ್ಥಿತಿಯೊಂದು ನಮ್ಮೊಳಗೆ ಸದಾ ಜಾಗೃತ ಮತ್ತು ಜೀವಂತ ಇಲ್ಲದೆ ಹೋಗಿದ್ದಿದ್ದರೆ ನಾವೆಲ್ಲ ಬಹುಶಃ ಕೈಕಟ್ಟಿ ಮೂಲೆಹಿಡಿದುಬಿಡುತ್ತಿದ್ದೆವು ಅನಿಸುತ್ತದೆ. ನನಗಂತೂ ಬಲೇ ಸೋಜಿಗವೆನಿಸಿಬಿಡುತ್ತದೆ ಒಮ್ಮೊಮ್ಮೆ. ಅರೆ ನನಗ್ಯಾಕೆ ಸುಮ್ಮನಿರಲಾಗುವುದಿಲ್ಲ ನನ್ನ ಪಾಡಿಗೆ. ಎಲ್ಲರೂ ಮನೆ, ಗಂಡ , ಮಕ್ಕಳು, ನೌಕರಿ, ಸಂಬಳ, ಚಂದದ ಬಟ್ಟೆ, ಮದುವೆ ದಿಬ್ಬಣ…. ಅಂತೆಲ್ಲ ಖುಷಿ ಎನ್ನುವುದು ಕಾಲು ಮುರಿದುಕೊಂಡು ಅವರ ಕಾಲ ಬುಡದಲ್ಲೇ ಬಿದ್ದಿದೆ ಎನ್ನುವಷ್ಟು ನೆಮ್ಮದಿಯಾಗಿರುವಾಗ ನಾವಾದರೂ ಹೀಗೆಲ್ಲ ಮನಸಿನ ಹುಚ್ಚಿಗೆ ಬಲಿಯಾಗಿ ಕಣ್ತುಂಬ ನಿದ್ದೆ ಮತ್ತು ನೆಮ್ಮದಿಯನ್ನು ಕಳೆದುಕೊಂಡು ಪರಿತಪಿಸುತ್ತಿರುತ್ತೇವಲ್ಲ ಏಕೆ… ಒಂದು ಕವಿತೆಯೋ, ಒಂದು ಕತೆಯೋ ಅಥವಾ ಒಂದು ಸಣ್ಣ ಬರಹದ ತುಣುಕೋ ಈ ಬೆರಳುಗಳ ಕುಟ್ಟುವಿಕೆಯಿಂದ ಹುಟ್ಟಿಬಿಟ್ಟರೆ ಸಿಗುವ ಸಂತೋಷ ಇದೆಯಲ್ಲ ಇನ್ಯಾವುದರಲ್ಲೂ ಅದು ಸಿಗಲಾರದು ಎನಿಸಿಬಿಡುತ್ತದೆ. “ಈ ಓದು ಬರಹ ಅಂತೆಲ್ಲ ಏನೇನೋ ಮಾಡೋದು ಬಿಟ್ಟು ಮನೆ, ಮಕ್ಕಳು, ಸಂಸಾರ ಅಂತ ಜವಾಬ್ದಾರಿಯಿಂದ ಬದುಕೋದನ್ನ ಕಲಿ…” ಎನ್ನುವ ಈ ಮಾತನ್ನ ನನ್ನಮ್ಮ ಅದೆಷ್ಟು ಬಾರಿ ಹೇಳಿದ್ದಾರೋ… “ಅಲ್ಲ ನಿಮ್ಗೆ ಟೈಮ್ ಎಲ್ಲಿಂದ ಸಿಗುತ್ತೆ ಇದನ್ನೆಲ್ಲ ಮಾಡೋಕೆ… ಮೋಸ್ಟ್ಲಿ ನೀವು ಮನೇಲಿ ಬರಿ ಬರೆಯೋದೆ ಕೆಲ್ಸ ಮಾಡ್ತೀರೇನೋ ಅಲ್ವ… ನಮ್ಗಂತು ಹಾಗಲ್ಲಪ್ಪಾ… ಮನೆಗ್ಹೋದ್ರೆ ಎಪ್ಪತ್ತಾರು ಕೆಲ್ಸ… ಇಂಥವೆಲ್ಲ ಮಾಡೋಕೆ ಟೈಮೇ ಸಿಗಲ್ಲ ಗೊತ್ತಾ…” ಅಂತೆಲ್ಲ ಮಾತಾಡುವ ಗೆಳೆಯರು, ಸಹೋದ್ಯೋಗಿಗಳು… ಇವೆಲ್ಲ ಸುಳ್ಳೂ ಅಲ್ಲ. ಹಾಗಂತ ಪೂರ್ಣ ಸತ್ಯವೂ ಅಲ್ಲ. ಎಲ್ಲರ ತೃಪ್ತಿಗೂ ಕಾರಣ ಒಂದೇ ಆಗಿರಲು ಸಾಧ್ಯವಿಲ್ಲ. ಹಕ್ಕಿಗೆ ಹಾರಾಟದಲ್ಲಿ ಖುಷಿ, ಮೀನಿಗೆ ಈಜಾಟದಲ್ಲಿ ಖುಷಿ. ಹಾರುವುದು ಹಕ್ಕಿಗೆ ಸಹಜ ಕ್ರಿಯೆ, ಈಜುವುದು ಮೀನಿಗೆ ಸಹಜ ಕ್ರಿಯೆ. ಹಾಗಯೇ ತನ್ನ ಮೆದುಳು ಮತ್ತು ಬುದ್ಧಿಶಕ್ತಿಯಿಂದ ಭಿನ್ನವಾಗಿ ನಿಲ್ಲುವ ಮನುಷ್ಯನಿಗೆ ಹಲವಾರು ಆಸಕ್ತಿ ಮತ್ತು ಅಭಿರುಚಿಗಳು. ಅಂತೆಯೇ ಅವನ ತೃಪ್ತಿಯ ಕಾರಣಗಳೂ ಸಹ. ನನಗೂ ಒಂದು ಬರೆಹ ಹುಟ್ಟಿದ ಕ್ಷಣ ಸಿಗುವ ಆನಂದ ಮತ್ಯಾವುದರಲ್ಲೂ ಸಿಗುವುದಿಲ್ಲ. ಇನ್ನು ಸಮಯದ ವಿಚಾರಕ್ಕೆ ಬಂದರೆ ಒಂದು ದಿನದಲ್ಲಿ ನಿರಂತರ ಕೆಲವು ಘಂಟೆಗಳು ಒಟ್ಟಾಗಿ ಸಿಗುವುದಿಲ್ಲ. ಆದರೆ ಸಿಗುವ ಸಣ್ಣ ಸಣ್ಣ ಸಮಯವನ್ನು ಪೋಣಿಸಿಟ್ಟುಕೊಂಡು ಪ್ರೀತಿಯಿಂದ ಬರಹ ಕಟ್ಟುವುದೂ ಒಂದು ಸವಾಲು. ಆದರೆ ಅದೊಂದು ಸುಖವಾದ ಸವಾಲು. ಪ್ರತಿ ಬಾರಿಯೂ ಆ ಸವಾಲನ್ನು ಗೆದ್ದು ಬರೆಯುವಾಗ ಸಿಗುವ ಖುಷಿ ಅನನ್ಯ. ಹಾಗಾಗಿ ಸಮಯ ಸಿಗುವುದಿಲ್ಲ, ಸಮಯವಿಲ್ಲ ನನಗೆ ಎನ್ನುವುದು ಸಮಸ್ಯೆಯಾಗಿ ಇದುವರೆಗೂ ಕಾಡಿಯೇ ಇಲ್ಲ. ಹಾಡು ಹಸೆ ಸಂಗೀತ ನೃತ್ಯದಂತೆ ಬರೆಹವೂ ಒಂದು ಆಸಕ್ತಿಕರ ಕ್ಷೇತ್ರ. ಮತ್ತದು ಬಹಳವೇ ಪರಿಣಾಮಕಾರಿ ಕ್ಷೇತ್ರವೂ ಹೌದು. ಬರೆಹ ಎನ್ನುವುದು ನಮ್ಮೊಳಗಿನ ಗ್ರಹಿಕೆಯನ್ನು ಹೊರ ಬರುವಂತೆ ಮಾಡುತ್ತದೆ. ಅದು ಮತ್ತೊಬ್ಬರ ಮನದ ಭಾವಕ್ಕೆ ಸಂತೈಕೆಯಾಗಿಯೂ, ಅವರ ಮನದ ಮಾತಿಗೆ ದನಿಯಾಗಿಯೂ ಸಮಾಧಾನ ಕೊಡುತ್ತದೆ. ಓದು ನಮ್ಮನ್ನು ಪ್ರಬುದ್ಧ ವ್ಯಕ್ತಿಗಳನ್ನಾಗಿ ಬದಲಾಯಿಸುತ್ತದೆ, ನಮ್ಮ ಅಹಂಕಾರವನ್ನು ಕಳೆಯುತ್ತದೆ. ಭಾವಗಳ ಹೊರಹೊಮ್ಮುವಿಕೆಗೆ ಮಾಧ್ಯಮವಾಗುವ ಬರೆಹ ನಮ್ಮ ದುಗುಡದ ಮೋಡಗಳನ್ನು ಕರಗಿಸಿ ತಿಳಿ ನೀಲ ಆಗಸವನ್ನಾಗಿ ಮಾರ್ಪಾಟು ಮಾಡುತ್ತದೆ. ಬರಹ ನನ್ನ ಜೀವನದ ಭಾಗವಾದ ಮೇಲೆ, ನನ್ನ ವ್ಯಕ್ತಿತ್ವದಲ್ಲಾಗಿರುವ ಬದಲಾವಣೆಯನ್ನು ಗಮನಿಸುವಾಗ, ಹಾದು ಬರಹ ನಮ್ಮನ್ನು ಗಟ್ಟಿಯಾಗಿಸುತ್ತದೆ. ಎಂತಹ ಸಮಸ್ಯೆ ಬಂದರೂ ಧೈರ್ಯ ಮತ್ತು ತಿಳುವಳಿಕೆಯಿಂದ ಎದುರಿಸುವ ಆತ್ಮವಿಶ್ವಾಸವನ್ನು ತಂದುಕೊಡುತ್ತದೆ. ಬರೀ ಓದುವ ಹವ್ಯಾಸವನ್ನು ತಮ್ಮದಾಗಿಸಿಕೊಂಡ ಅದೆಷ್ಟೋ ಜನ ಇದ್ದಾರೆ. ಆದರೆ ಬರೆಹಗಾರನಿಗೆ ಮಾತ್ರ ಎರಡೆರಡು ಉಪಯೋಗ. ಒಂದು ಓದಿದ್ದು, ಮತ್ತೊಂದು ಬರೆದದ್ದು. ಯಾವ ಕಲೆಯೇ ಆಗಿರಲಿ ತನಗೆ ಬೇಕಾದವರಿಂದ ತನ್ನ ಕ್ಷೇತ್ರಕ್ಕೆ ಬೇಕಾದ ಸೇವೆಯನ್ನು ಪಡೆಯುತ್ತದೆ. ಬರೆಹ ಕಲಿತವರೆಲ್ಲ, ಬರೆಯುವ ಶಕ್ತಿ, ಸಾಮರ್ಥ್ಯವಿದ್ದವರೆಲ್ಲ ಬರೆಯುವುದು ಸಾಧ್ಯವಾಗುವುದಿಲ್ಲ. ಬಹಳಷ್ಟು ಸಾರಿ ಬರೆಹವೇ ಬರೆಹಗಾರನ ಕೈಲಿರುವುದಿಲ್ಲ. ಆದರೆ ಅದರ ಮೇಲೆ ತನ್ನ ಹಕ್ಕು ಚಲಾಯಿಸಲು ಹೊರಡುವುದು ಯಾರಿಗೇ ಇರಲಿ ಹರಿವಿಗೆ ವಿರುದ್ಧವಾಗಿ ಈಜುವ ಹಾಗೆ ದುಸ್ಸಾಹಸವೇ ಸರಿ. ಶಿಕ್ಷಕನನ್ನು ಚಿರಂತನ ವಿದ್ಯಾರ್ಥಿ ಎನ್ನುವ ಹಾಗೆ ಬರೆಹಗಾರ ಚಿರಂತನ ಓದುಗನಾಗಿರಬೇಕಾಗಿರುತ್ತದೆ. ಬರೆಹಗಾರ ಇತಿಹಾಸಕಾರನೂ ಆಗುತ್ತಾನೆ, ಕಾಲಜ್ಞಾನಿಯೂ ಆಗುತ್ತಾನೆ. ಅದಕ್ಕೇ ಅವನಿಗೆ ಎಷ್ಟೊಂದು ಮಾನ್ಯತೆ! ಮಾನ್ಯತೆಗಾಗಿ ಬರೆಯ ಹೊರಟರೆ ಬಹಳ ಬೇಗ ಎದುಸಿರು ಹೆಚ್ಚಿ, ಸುಸ್ತಾಗಿಬಿಡುತ್ತದೇನೋ. ಆದರೆ ಎಷ್ಟೇ ಅದು ಬೇಡ ಎನ್ನುವ ಪ್ರಜ್ಞಾವಂತಿಕೆ ಇದ್ದರೂ ಅದನ್ನು ಮೀರಿ ನಿರ್ಲಿಪ್ತತೆಯನ್ನು ಸಾಧಿಸಿಕೊಳ್ಳುವುದು ಬಹಳ ಕಷ್ಟ. ಅದು ನಮ್ಮನ್ನು ನಾವು ಮೀರುವುದು. ಆದರೆ ಅದು ಯಾರೇ ಆಗಿರಲಿ, ನಮ್ಮಲ್ಲಿ ಎಷ್ಟೇ ಇರಲಿ, ಏನೇ ಇರಲಿ, ಇದ್ದುದರಲ್ಲಿ ತೃಪ್ತಿ ಪಡದಿರುವ ಕೊರತೆಯ ಶಾಶ್ವತ ಸ್ಥಿತಿಯೊಂದು ನಮ್ಮಲ್ಲಿ ತಲ್ಲಣದ ಸುಳಿ ಸೃಷ್ಟಿಸಿ ತೃಪ್ತಿಯನ್ನು ಕಿತ್ತುಕೊಳ್ಳುತ್ತದೆ. ಸಾಧನೆಗಳು, ಪ್ರಶಸ್ತಿಗಳು, ಕೀರೀಟ ಏರಿ ನಿಂತ ತುರಾಯಿಗಳ ಸಂಖ್ಯೆ ಹೆಚ್ಚಿದಷ್ಟೂ ಈ ಅತೃಪ್ತಿಯೂ ದಿನೇ ದಿನೇ ಬೆಳೆಯುತ್ತಲೇ ಹೋಗುತ್ತದೆ. ಮತ್ತೆ ಅದರೊಂದಿಗೆ ಸಹಜವಾಗಿ ಬರುವ ಒತ್ತಡಕ್ಕೂ ಈಡಾಗಲೇ ಬೇಕು ಸಹ. ಇನ್ನಿದು ಸಾಕು ಎಂದು ಬುದ್ದಿ ಹೇಳಿದರೂ ನಮ್ಮ ಅತೃಪ್ತಿ ನಮ್ಮನ್ನು ಸುಮ್ಮನಿರಲು ಬಿಡುವುದಿಲ್ಲ. ಆದರೆ ಹಕ್ಕಿಗೆ ಹಾರುವಿಕೆ, ಮೀನಿಗೆ ಈಜುವಿಕೆ ಸಹಜವಾದಷ್ಟೇ ಬರಹಗಾರನಿಗೂ ಬರಹ ಸಹಜವಾಗಬೇಕು. ಹಾರುತ್ತದೆ ಎಂದು ಹಕ್ಕಿಗಾಗಲಿ, ಈಜುತ್ತದೆ ಎಂದು ಮೀನಿಗಾಗಲೀ ಯಾರಾದರೂ ಪ್ರಶಸ್ತಿ ಕೊಡುತ್ತಾರಾ?! ಹಾಗೇ ಬರೆಹಗಾರನಿಗೆ ಬರೆಹ ಸಹಜವಾಗಬೇಕು. ಮನುಷ್ಯ ತನ್ನ ಬುದ್ಧಿ ಮತ್ತು ದೇಹವನ್ನು ಅದರ ಸಹಜ ಶಕ್ತಿಯನ್ನು ಮೀರಿ ಪಳಗಿಸಿ ಬಳಸಬಲ್ಲ. ಅದಕ್ಕೆ ಒಂದು ಅಭಿನಂದನೆ ಸಲ್ಲಲೇ ಬೇಕು ಅವನಿಗೆ. ಆದರೆ ಅದು ಅವನ ಬಲಹೀನತೆಯಾಗಬಾರದು. ಅತೃಪ್ತಿಯನ್ನು ಒಂದು ಹಂತದಲ್ಲಿಟ್ಟು ನಮ್ಮ ಯಶಸ್ಸಿಗೆ ಮೆಟ್ಟಿಲಾಗಿಸಿಕೊಳ್ಳುವುದರಲ್ಲಿ ನಿಜವಾದ ಬುದ್ಧಿವಂತಿಕೆ ಇದೆ. ಅದಕ್ಕೆ ದಾಸರಾಗುವುದರಲ್ಲಿ ಅಲ್ಲ. ಅದೂ ಒಂದರ್ಥದಲ್ಲಿ ಸಾಧನೆಯೇ. “ಇಂದು ನಾ ಹಾಡಿದರೂ, ಅಂದಿನಂತೆಯೆ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನ ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ?” -ಜಿ.ಎಸ್.ಶಿವರುದ್ರಪ್ಪ ಎನ್ನುವ ಜಿಎಸ್ಸೆಸ್ ರ “ಎದೆ ತುಂಬಿ ಹಾಡಿದೆನು” ಕವಿತೆಯ ಈ ಸಾಲುಗಳು ಯಾವಾಗಲೂ ನೆನೆದಾಗಲೊಮ್ಮೆ ಕಣ್ಮುಂದೆ ತೇಲಿ ಬರುತ್ತವೆ. ಅರಿವಿನ ನಾವೆಗೆ ಹತ್ತಿಸಿ ಸುಖವಾದ ಪ್ರಯಾಣಕ್ಕೆ ಹೊರಡಿಸುತ್ತವೆ. ********************************************** ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ನಿತ್ಯ ಎದುರಾಗುವ ನಿರ್ವಾಹಕರು ಪ್ರತಿನಿತ್ಯ ಕೆಲಸಕ್ಕೆ ಬಸ್ಸಿನಲ್ಲೆ ತೆರಳುವ ನಾವು ಹಲವಾರು ಜನ ಕಂಡಕ್ಟರುಗಳನ್ನು ಪ್ರತಿನಿತ್ಯ ನೋಡುತ್ತಿರುತ್ತೇವೆ. ಒಬ್ಬೊಬ್ಬ ನಿರ್ವಾಹಕರೇ ಒಂದೊಂದು ಥರ. ಕೆಲವರು ತಾಳ್ಮೆಯಿಂದ ಇರುತ್ತಾರೆ, ಕೆಲವರಿಗೆ ಎಂಥದ್ದೋ ಅವಸರ, ಕೆಲವರು ಎಷ್ಟೊಂದು ದಯಾಮಯಿಗಳು, ಮತ್ತೊಂದಿಷ್ಟು ಜನ ಜಗತ್ತಿನ ಎಲ್ಲ ಕೋಪವನ್ನೂ ಹೊತ್ತು ತಿರುಗುತ್ತಿರುವವರಂತೆ ಚಟಪಟ ಸಿಡಿಯುತ್ತಿರುತ್ತಾರೆ. ಮನಸಿನಂತೆ ಮಹದೇವ ಎನ್ನುವ ಹಾಗೆ ಮನಸಿನ ಅವತಾರಗಳಷ್ಟೇ ವೈವೀಧ್ಯಮಯ ನಿರ್ವಾಹಕರು. ಪ್ರತಿನಿತ್ಯ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಬಹುತೇಕ ಉಂಟಾಗುವ ಜಗಳಕ್ಕೆ ಮುಖ್ಯ ಕಾರಣವಾಗುವುದೇ ಚಿಲ್ಲರೆ ಸಮಸ್ಯೆ. ಬೆಳ್ಳಂಬೆಳಗ್ಗೆ ಬಸ್ ಹತ್ತಿದ ಹತ್ತಿರದ ಊರಿಗೆ ಹೋಗಬೇಕಾದವನು ಐನೂರರ ನೋಟೊಂದನ್ನು ಹಿಡಿದುಬಿಟ್ಟರೆ ನಿರ್ವಾಹಕರ ಪರಿಸ್ಥಿತಿ ಏನು… ಒಬ್ಬರಿಗೋ ಇಬ್ಬರಿಗೋ ಆದರೆ ಸರಿ, ಆದರೆ ಬಸ್ಸಿನಲ್ಲಿರುವ ಪ್ರತಿಯೊಬ್ಬರಿಗೂ ಚಿಲ್ಲರೆ ಕೊಡುವ ಪರಿಸ್ಥಿತಿ ಎದುರಾದಾಗ ಕಂಡಕ್ಟರ್ ಆದರೂ ಎಲ್ಲಿಂದ ಚಿಲ್ಲರೆ ತರಬೇಕು. ಅವರಾದರೂ ಮನೆಯಿಂದಲೂ ಹೆಚ್ಚು ಚಿಲ್ಲರೆ ತರುವಂತಿಲ್ಲ. ನಾನಂತೂ ಸದಾ ಚಿಲ್ಲರೆಯನ್ನು ನನ್ನ ಬ್ಯಾಗಿನಲ್ಲಿ ಇಟ್ಟುಕೊಂಡೇ ತಿರುಗುವುದು ರೂಢಿ ಮಾಡಿಕೊಂಡಿದ್ದೇನೆ. ಮತ್ತೆ ನಮಗೆ ಯಾವ ಕಂಡಕ್ಟರರಿಗೆ ಚಿಲ್ಲರೆ ಕೊಡಬೇಕು ಮತ್ತೆ ಯಾರಿಗೆ ಕೊಡಬಾರದು ಎನ್ನುವುದೆಲ್ಲ ಅದೆಷ್ಟು ಚೆನ್ನಾಗಿ ಗೊತ್ತಾಗಿಬಿಡುತ್ತದೆ! ಅವರು ಬೇರೆಯವರಿಗೆ ಟಿಕೆಟ್ ಕೊಡುವುದನ್ನು ನೋಡುವಾಗಲೇ “ಓ ಇವರಿಗೆ ಚಿಲ್ಲರೆ ಸಮಸ್ಯೆ ಇದೆ ಅಥವಾ ಇಲ್ಲ” ಎನ್ನುವುದನ್ನು ಅಭ್ಯಸಿಸಿಬಿಡುತ್ತೇವೆ. ನಂತರವೇ ನಾವು ಚಿಲ್ಲರೆ ತೆಗೆಯುವುದು. ತೀರಾ ಅಸಹನೆಯ ಕಂಡಕ್ಟರರ ಮುಂದೆ ಚಿಲ್ಲರೆ ಇಲ್ಲದೆ ದೊಡ್ಡ ನೋಟೊಂದನ್ನು ಹಿಡಿದು ನಿಲ್ಲಬೇಕಾಗಿ ಬಂದಾಗ ನಿಜಕ್ಕೂ ಅದೆಷ್ಟು ಅನವಶ್ಯಕ ಮಾತುಗಳನ್ನು ಕೇಳಬೇಕಾಗುತ್ತದೆ ಮತ್ತು ಬಳಸಲಿಕ್ಕೆ ತಯಾರಾಗಬೇಕಾಗಿ ಬರುತ್ತದೆ. ಈ ಕಂಡಕ್ಟರುಗಳದು ಬಹಳ ಒತ್ತಡದ ಕೆಲಸ. ಪ್ರತಿನಿತ್ಯ ಎಂತೆಂಥಾ ಪ್ರಯಾಣಿಕರು ಹತ್ತುತ್ತಾರೆಂದರೆ, ಕೆಲವರಂತೂ ಅವರನ್ನು ತೀರಾ ನಿಕೃಷ್ಟವಾಗಿ ಕಂಡು, ವ್ಯವಹರಿಸುವುದನ್ನು ನೋಡುವಾಗ ಇಂತಹ ಜನಗಳಿಂದಲೇ ಅವರು ಕಠೋರರಾಗಿಬಿಡುತ್ತಾನೋ ಅಂತಲೂ ಅನಿಸತೊಡಗುತ್ತದೆ. ಒಮ್ಮೆ ಬೆಂಗಳೂರಿನಿಂದ ಬರುತ್ತಿದ್ದ ಹುಡುಗಿಯೊಬ್ಬಳು ನಿರ್ವಾಹಕಿಯೊಡನೆ ಗಲಾಟೆ ಶುರುಮಾಡಿಕೊಂಡಿದ್ದಳು. ಆದದ್ದು ಇಷ್ಟು. ಆ ಹುಡುಗಿ ಗೌರಿಬಿದನೂರಿನ ಬಳಿಯ ಒಂದು ಹಳ್ಳಿಯಿಂದ ಬೆಂಗಳೂರಿಗೆ ನಿತ್ಯ ಕಾಲೇಜಿಗೆ ಹೋಗಿ ಬರುತ್ತಾಳೆ. ಹಾಗಾಗಿ ಅವಳಲ್ಲಿ ನಿತ್ಯದ ಪಾಸ್ ಇರುತ್ತದೆ. ಆದರೆ ಆ ಸಧ್ಯ ಅದರ ಅವಧಿ ಮುಗಿದದ್ದು, ಅವಳು ಈಗ ಟಿಕೇಟ್ ಕೊಳ್ಳಬೇಕಿತ್ತು. ಅವಳೇ ತಾನಿದ್ದಲ್ಲಿಗೆ ಬಂದು ಪಾಸ್ ಬಗ್ಗೆ ಹೇಳಿ ಟಿಕೇಟ್ ಪಡೆಯಬೇಕಿತ್ತು ಎನದಬುವುದಯ ನಿರ್ವಾಹಕಿಯ ವಾದ. ಇಲ್ಲ ತಾನಿದ್ದಲ್ಲಿಗೆ ಬಂದು ವಿಷಯ ತಿಳಿದುಕೊಂಡು ಟಿಕೇಟ್ ಕೊಡಬೇಕಿತ್ತು ಎನ್ನುವುದು ಆ ಹುಡುಗಿಯ ವಾದ. ಆದರೆ ಕನಿಷ್ಟ ವಯಸ್ಸಿಗೂ ಬೆಲೆ ಕೊಡದೆ ನಿರ್ವಾಹಕಿಯ ಬಳಿ ಹೇಗೆಂದರೆ ಹಾಗೆ ಜಗಳಕ್ಕಿಳಿದಿದ್ದ ಹುಡುಗಿಯ ವರ್ತನೆ ಅಸಹನೀಯವಾಗಿತ್ತು. ಸಾಲದ್ದಕ್ಕೆ “ಎಷ್ಟು ನಿನ್ ನಂಬರ್ರು? ಬಾ ಸ್ಟಾಂಡಿಗೆ ಕಂಪ್ಲೇಂಟ್ ಮಾಡ್ತೀನಿ…” ಎನ್ನುತ್ತಾ ಹೋದ ಹುಡುಗಿಯ ಬಗ್ಗೆ ನೋಡುತ್ತಿದ್ದ ನಮಗೇ ಕೋಪ ಬರುತ್ತಿತ್ತು. ಇಷ್ಟೊಂದು ಉದ್ಧಟತನ ಮತ್ತು ಅಹಂಕಾರವನ್ನು ತಂದೆ ತಾಯಂದಿರಾದರೂ ಹೇಗೆ ಬೆಳೆಯಲು ಬಿಡುತ್ತಾರೆ… ಅವಳಿಗೆ ಯಾವ ಮದವೇ ಇದ್ದಿರಲಿ, ಎದುರಿನವರನ್ನು ಕನಿಷ್ಟ ಗೌರವದಿಂದ ಮಾತಾಡಿಸದಿರುವಂತಹ ವರ್ತನೆ ಅಸಹನೀಯವೇ ಸರಿ. ನನ್ನ ಪುಟ್ಟ ಮಗಳಿಗೆ ಪ್ರತಿನಿತ್ಯ ನನ್ನ ಜೊತೆಗೇ ತಿರುಗಬೇಕಾದ ಅನಿವಾರ್ಯ. ಇನ್ನೂ ಸಣ್ಣವಳಿದ್ದಾಗ, ಅವಳಿಗೆ ಅದೆಂಥದೋ ತಾನೇ ನಿರ್ವಾಹಕರಿಗೆ ದುಡ್ಡು ಕೊಡಬೇಕು, ಟಿಕೇಟ್ ಪಡೆಯಬೇಕು, ಚಿಲ್ಲರೆ ಇಸಿದುಕೊಳ್ಳಬೇಕು ಎನ್ನುವ ಹಂಬಲ. ಆದರೆ ಟಿಕೆಟ್ಟನ್ನು ಮಕ್ಕಳ ಕೈಗೆ ಕೊಡಬೇಡಿ ಎನ್ನುವುದು ನಿರ್ವಾಹಕರ ಕಾಳಜಿ ಮತ್ತು ಆಜ್ಞೆ. ಅದರ ನಡುವೆಯೂ ಇವಳ ಆಸೆಯನ್ನು ಕಂಡು ಪಾಪ ಅನ್ನಿಸಿ ಒಮ್ಮೊಮ್ಮೆ ನಿರ್ವಾಹಕರು, ಖಾಲಿ ಟಿಕೆಟ್ ಹೊಡೆದು ಅವಳ ಕೈಗಿಟ್ಟಾಗ ಅವಳಿಗಾಗುತ್ತಿದ್ದ ಸಂಭ್ರಮವಂತೂ ಅಷ್ಟಿಷ್ಟಲ್ಲ… ಇನ್ನು ಮಾನವೀಯತೆಯೇ ಮೈವೆತ್ತಂತೆ ಇರುವ ಅದೆಷ್ಟೋ ನಿರ್ವಾಹಕರನ್ನು ಕಾಣುವಾಗ ಇವರು ಬರೀ ಕೆಲಸ ಮಾಡುತ್ತಾರೆ ಎನ್ನುವುದಕ್ಕೆ ಮನಸೇ ಬರುವುದಿಲ್ಲ. ಆ ಕ್ಷಣಕ್ಕೆ ಯಾರದೋ ತಂದೆ, ಮತ್ಯಾರದೋ ಅಣ್ಣ, ಇನ್ಯಾರದೋ ಮಗನ ಹಾಗೆ ವರ್ತಿಸುತ್ತಾ ನಮ್ಮವರೇ ಆಗಿಬಿಡುವ ಇವರನ್ನು ನಮ್ಮವರಲ್ಲ ಎಂದುಕೊಳ್ಳುವುದಾದರೂ ಹೇಗೆ ತಾನೆ ಸಾಧ್ಯ…. ****************************** ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ. –
ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ
ಅಂಕಣ ಬರಹ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ ಐದು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮತ್ತು ಕೊಲೆ! ಪ್ರತಿನಿತ್ಯ ಇಂತಹ ಅಸಂಖ್ಯ ಸುದ್ದಿಗಳು ಸರ್ವೆ ಸಾಮಾನ್ಯ ಎನಿಸುವಷ್ಟು ಬರುತ್ತಿರುತ್ತವೆ. ಓದುವುದಕ್ಕೇ ಆಗದಂಥ ವಿಚಿತ್ರ ಸಂಕಟ… ನಿರ್ಲಕ್ಷಿಸುವುದು ಸಾಧ್ಯವಿಲ್ಲ, ಏನಾದರೂ ಮಾಡುವಾ ಎಂದರೆ ಮಾಡಲಾಗದ ಅಸಹಾಯಕತೆ… ಹಿಂದೆಯೇ ಇಂಥವನ್ನ ಎಷ್ಟು ದಿನ ಅಂತ ಸಹಿಸಿಕೊಳ್ಳುವುದು ಎನ್ನುವ ಬೆಂಬಿಡದ ಪ್ರಶ್ನೆ… ಇನ್ನೂ ಅರಳದ ಮೊಗ್ಗನ್ನ ತಮ್ಮ ಕೆಟ್ಟ ದಾಹಕ್ಕೆ ಬಳಸಿ ಬಿಸಾಡುತ್ತಾರಲ್ಲ, ರಕ್ತ ಕುದಿಯುತ್ತದೆ. ಎಲ್ಲೋ ಕೆಲ ಕಂದಮ್ಮಗಳಿಗೆ ಒಂದಷ್ಟು ಸಂತಾಪವಾದರೂ ಸಿಗುತ್ತದೆ. ಆದರೆ ಅಸಂಖ್ಯ ಮಕ್ಕಳಿಗೆ ಅದೂ ಇಲ್ಲ. ಆ ಮಕ್ಕಳನ್ನು ನೆನೆದು ನಾವಿಲ್ಲಿ ದುಃಖಿಸಿ ದುಃಖಿಸಿ ಅಳುತ್ತೇವೆ. ಪ್ರಾರ್ಥಿಸುತ್ತೇವೆ. ನ್ಯಾಯಕ್ಕಾಗು ಕೂಗುತ್ತೇವೆ. ದೀಪ ಹಚ್ಚಿ ಅವರ ಆತ್ಮಕ್ಕಾಗಿ ನಾವಿಲ್ಲಿ ಶಾಂತಿ ಕೋರುತ್ತೇವೆ. ಹೀಗೇ ಯಾರೋ ಎಂಥದೋ ಸಂಕಟದಲ್ಲಿರುತ್ತಾರೆ, ಮತ್ಯಾರೋ ತುಂಬಾ ಕಷ್ಟಪಡುತ್ತಿರುತ್ತಾರೆ. ಯಾರು ಏನು ಎತ್ತ ಎಂದು ತಿಳಿಯದ ಅವರ ಬಗ್ಗೆ ನಾವಿಲ್ಲಿ ಮರುಗತೊಡಗುತ್ತೇವೆ. ಸಧ್ಯ ಅವರು ಅದರಿಂದ ಹೊರಬಂದರೆ ಸಾಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ನಮ್ಮ ಕೈಲಾದಷ್ಟು ಸಹಾಯ ಮಾಡಲು ಹೊರಡುತ್ತೇವೆ. ಅದು ನಮ್ಮೊಳಗಿನ ಮನುಷ್ಯತ್ವ. ಅದಕ್ಕೆ ಯಾವ ಭೇದವೂ ಇಲ್ಲ, ಬೇಲಿಯೂ ಇಲ್ಲ. ಅದಕ್ಕೆ ನಾವೆಲ್ಲ ಮನುಷ್ಯರು ಎನ್ನುವ ಒಂದೇ ಕಾರಣ ಸಾಕು. ನಮ್ಮ ಅದೆಷ್ಟೋ ಇಂತಹ ನಿಸ್ವಾರ್ಥ ಪ್ರಾರ್ಥನೆಗಳು ಅದೆಷ್ಟೋ ಜನರ ಬದುಕಿನ ಹಿಂದಿರುತ್ತವೆ ಎನ್ನುವುದನ್ನು ನಾವು ಯೋಚಿಸಿಯೂ ಇರುವುದಿಲ್ಲ. ಅಪ್ಪ, ಅಮ್ಮ, ಸಂಬಂಧಿಕರು, ಸ್ನೇಹಿತರು, ಪರಿಚಯದವರಷ್ಟೇ ಅಲ್ಲದೆ ಕೆಲವೊಮ್ಮೆ ಅಪರಿಚಿತರೂ ಆಪದ್ಭಾಂದವರಾಗಿ ಬರುತ್ತಾರೆ. ನಮ್ಮ ಹೊಗಳಿಕೆ, ಗಮನ ಯಾವೊಂದನ್ನೂ ನಿರೀಕ್ಷಿಸದೆ ಪ್ರಾರ್ಥಿಸುವ ಆ ಕೈಗಳು ನಿಜಕ್ಕೂ ಭಗವಂತನ ಆಶೀರ್ವಾದವೇ ಇರಬೇಕು. ಮತ್ತೆ ನಾವು ಸುಖಾ ಸುಮ್ಮನೆ ಸಣ್ಣ ಸಣ್ಣ ವಿಚಾರಕ್ಕೂ ನಮ್ಮನ್ನು ಪ್ರೀತಿಸುವವರೊಂದಿಗೆ ಮುನಿಸಿಕೊಳ್ಳುತ್ತೇವೆ, ದೂರವಾಗಿಬಿಡುತ್ತೇವೆ. ಆದರೆ ಅವರ ಮನಸಿನಲ್ಲಿ ಉಳಿದಿರುವ ನಮ್ಮ ಬಗ್ಗೆ ನಮಗೇ ಅರಿವಿರುವುದಿಲ್ಲ. ನಮ್ಮ ಕಷ್ಟ ಸುಖಕ್ಕೆ ಅವರದೊಂದು ಪ್ರಾರ್ಥನೆ ಸದಾ ಸಲ್ಲುತ್ತಿರುತ್ತದೆ ಎನ್ನುವುದು ಗೊತ್ತೇ ಆಗುವುದಿಲ್ಲ. ಅವಳು ನನ್ನ ಗೆಳತಿ. ಆದರೆ ಬಹಳ ವರ್ಷಗಳಿಂದ ನಮ್ಮಿಬ್ಬರ ನಡುವೆ ಸಂಪರ್ಕವಿಲ್ಲ. ಜಗಳ ಮನಸ್ಥಾಪ ಎಂತದ್ದೂ ಇಲ್ಲ. ಆದರೆ ಸುಮ್ಮನೇ ಅದು ಹೇಗೋ ಸೃಷ್ಟಿಯಾದ ನಿರ್ವಾತವದು. ಅವಳಿಗೆ ಮಕ್ಕಳೆಂದರೆ ಪ್ರಾಣ. ಆದರೆ ಅವಳ ಮಮತೆಯ ಮಡಿಲು ಮಾತ್ರ ಇನ್ನು ತುಂಬಿರಲಿಲ್ಲ. ಎರೆಡು ಮಕ್ಕಳನ್ನು ಕಳೆದುಕೊಂಡಿದ್ದಳು. ದಿನ ತುಂಬಿದ್ದರೂ ಗರ್ಭದಲ್ಲೇ ಮರಣಿಸಿಬಿಟ್ಟಿದ್ದವು. ಮತ್ತೆರೆಡು ಬಾರಿ ಆದ ಗರ್ಭಪಾತಗಳು ಅವಳನ್ನು ಮಾನಸಿಕವಾಗಿ ಕುಗ್ಗಿಸಿಬಿಟ್ಟಿದ್ದವು. ಈಗ ಮತ್ತೊಮ್ಮೆ ಗರ್ಭಿಣಿಯಾಗಿದ್ದಳು. ಅದು ತಿಳಿದಾಗಿನಿಂದಲೂ ಸದಾ ಒಂದು ಪ್ರಾರ್ಥನೆ ಅವಳಿಗಾಗಿ.ಪ್ರತಿದಿನ ದೇವರ ಮುಂದೆ ಕೂತಾಗಲೂ, ಅವಳೇ ಕಣ್ಮುಂದೆ ಬರುತ್ತಾಳೆ, ಒಂದು ಪ್ರಾರ್ಥನೆ ದೇವರ ಪಾದದ ಮೇಲೆ ಬೀಳುತ್ತದೆ, “ಭಗವಂತಾ ಇದೊಂದು ಮಗು ಅವಳ ಮಮತೆಯ ಮಡಿಲಿಗಿಳಿದು ಅವಳ ಮಡಿಲು ಜೀವಂತವಾಗಿಬಿಡಲಿ…” ಎಂದು ಒಂದು ನಿಮಿಷ ಕಣ್ಮುಚ್ಚಿ ಕೈಮುಗಿದು ಕುಳಿತುಬಿಡುತ್ತೇನೆ. ನಾನು ಅವಳಿಗಾಗಿ ಇಲ್ಲಿ ಪ್ರಾರ್ಥಿಸುತ್ತಿದ್ದೇನೆ ಎನ್ನುವ ಸುದ್ದಿಯೂ ಅವಳಿಗೆ ಗೊತ್ತಿಲ್ಲ. ಅವಳಿಗೆ ಗೊತ್ತಾಗಲಿ ಎನ್ನುವ ಕಾರಣಕ್ಕೆ ನಾನು ಪ್ರಾರ್ಥಿಸುತ್ತಲೂ ಇಲ್ಲ. ಆದರೆ ಒಂದು ಮಾತ್ರ ನನಗೂ ಆಶ್ಚರ್ಯ! ಅವಳಿಗೇ ಗೊತ್ತಿಲ್ಲದ ನನ್ನ ಪ್ರಾರ್ಥನೆಯೊಂದು ಅವಳ ಬದುಕಿಗಾಗಿ ಸಲ್ಲುತ್ತಿದೆ.. ಹಾಗೆಯೇ ನಮ್ಮ ಬದುಕಿಗೂ ನಮಗೇ ಗೊತ್ತಿಲ್ಲದ ಅದೆಷ್ಟು ಜನರ ಅದೆಷ್ಟು ಪ್ರಾರ್ಥನೆಗಳು ಸಲ್ಲಿಸಲ್ಪಟ್ಟಿರಬಹುದು! ಇಲ್ಲದ ಇರುವ ಕೊರತೆಗಳನ್ನು ದೊಡ್ಡದು ಮಾಡಿಕೊಂಡು ಬದುಕನ್ನು ಹಳಿಯುವ ಮೊದಲು ನಾವ್ಯಾಕೆ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕು ಎನ್ನುವುದು ಅರ್ಥವಾದರೆ ಖಂಡಿತ ನಾವು ಇರುವುದರಲ್ಲೆ ಸಂತೋಷವಾಗಿ ಬದುಕಬಲ್ಲೆವು. ನಮಗೆ ಸಿಕ್ಕಿರುವ ಈ ಬದುಕಿನ ಅದೆಷ್ಟೋ ಕಾಣದ ಕೈಗಳ ಪ್ರಾರ್ಥನೆ ಇರುವುದು ತಿಳಿದರೆ ನಮ್ಮ ದುರಾಸೆಯ ಬಗ್ಗೆ ನಮಗೆ ಅಂಜಿಕೆ, ಮುಜುಗರವಾಗಬಹುದು. ಬಹಳ ವರ್ಷಗಳ ನಂತರ ಗೆಳತಿಯೊಬ್ಬಳು ಸಿಕ್ಕಿದಳು. ಆಡಿದ ಮಾತುಗಳು ಸಾವಿರ. ನಕ್ಕಿದ್ದೆಷ್ಟೋ… ಅತ್ತಿದ್ದೆಷ್ಟೋ… ಕೊನೆಗೆ ಅವಳು ಮೆಲ್ಲಗೆ, “ನಿನ್ನ ಮೊದಲ ಹೆರಿಗೆಯಲ್ಲಿ ಏನೋ ತೊಂದರೆ ಆಗಿತ್ತಂತೆ ಹೌದಾ..?” ಎಂದು ಕೇಳಿದಳು. ನಾನು ನಗುತ್ತಾ “ಎಂಟು ವರ್ಷಗಳೇ ಕಳೆದು ಹೋದವು… ಈಗ್ಯಾಕೆ ಮಾರಾಯ್ತಿ ಆ ಮಾತೆಲ್ಲ…?” ಎಂದೆ. ಅದಕ್ಕವಳು, “ಏನಿಲ್ಲ ಅವತ್ತು ಯಾರೋ ನನಗೆ ಸುದ್ದಿ ಮುಟ್ಟಿಸಿದ್ದರು. ನನಗಾದ ಗಾಬರಿ ಅಷ್ಟಿಷ್ಟಲ್ಲ, ಹೋಗಿ ದೇವರ ಮುಂದೆ ದೀಪ ಹಚ್ಚಿಟ್ಟು, ದೇವರೇ ಎಲ್ಲ ಸಸೂತ್ರ ಆಗಿ ಅವಳು ಆರೋಗ್ಯವಾಗಿ ಮಗುವಿನೊಟ್ಟಿಗೆ ಮನೆಗೆ ಬಂದುಬಿಡಲಪ್ಪಾ… ” ಎಂದು ಹರಸಿಕೊಂಡಿದ್ದೆ. ಮತ್ತೆ ನೀ ಮನೆಗೆ ಬಂದದ್ದು ತಿಳಿದ ಮೇಲೆ ದೇವರಿಗೆ ಹೋಗಿ ಹರಕೆ ತೀರಿಸಿ ಬಂದಿದ್ದೆ ಎಂದಳು. ನನ್ನ ಕಣ್ಣು ತುಂಬಿಬಿಟ್ಟಿದ್ದವು. ಗಂಟಲು ಕಟ್ಟಿಬಿಟ್ಟಿತ್ತು. ಸುಮ್ಮನೇ ಅವಳನ್ನು ತಬ್ಬಿಕೊಂಡೆ. ಕಣ್ಣೀರು ಅವಳ ಭುಜವನ್ನು ತೋಯಿಸುತ್ತಿತ್ತು. ಇಂಥದೊದು ಹರಕೆ ನನ್ನನ್ನು ಕಾಯುತ್ತಿದೆ ಎನ್ನುವ ಕಲ್ಪನೆಯೂ ಇಲ್ಲದೆಯೇ ಇಷ್ಟು ವರ್ಷ ಬದುಕಿದೆನಲ್ಲ ಅನಿಸಿ ಅಂತಃಕರಣದ ಎಳೆಗಳು ನಮ್ಮನ್ನು ಸುತ್ತಿಕೊಂಡು ಪೊರೆಯುವ ರೀತಿಗೆ ಸೋತುಹೋದೆ. ಹೀಗೆ ಬದುಕು ನಮ್ಮ ಹುಂಬ ನಡವಳಿಕೆಗಳನ್ನು ಸುಳ್ಳು ಮಾಡುತ್ತಾ ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕು ನಾವು ಎನ್ನುವುದನ್ನು ಮತ್ತೆ ಮತ್ತೆ ಪ್ರಾಮಾಣೀಕರಿಸಿ ತೋರಿಸಿಕೊಡುತ್ತಿರುತ್ತದೆ… **************************************************************** ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಸಿಕ್ಕಿರುವ ಬದುಕಿಗೆ ಕೃತಜ್ಞರಾಗಿರಬೇಕಿದೆ Read Post »
ಅಂಕಣ ಬರಹ ಎಡವಿದವನಿಗೂ ಸಣ್ಣ ಸಹಾನುಭೂತಿ ಸಿಗಲಿ ಬಹುಶಃ ನಾನವಾಗ ನಾಲ್ಕನೆಯ ತರಗತಿಯಲ್ಲಿದ್ದೆ. ಅಂದು ಭಾನುವಾರ. ಅವತ್ತು ನಾವೆಲ್ಲ ಹೀಗೇ ಆಟ ಆಡುತ್ತಿದ್ದೆವು. ಶಾಲೆಯ ಸುತ್ತಮುತ್ತ ನಾನು, ಶ್ರುತಿ, ಸ್ವಪ್ನ ಮತ್ತೆ ಇನ್ನೂ ಒಂದಿಷ್ಟು ಗೆಳತಿಯರು, ಆಡಿ ಆಡಿ ಸುಸ್ತಾದೆವು. ಕೊನೆಗೆ ನೀರು ಕುಡಿಯಬೇಕೆನಿಸಿತು ಎಲ್ಲರಿಗೂ. ಅಲ್ಲಿಯೇ ಇದ್ದ ಬೋರನ್ನು ಹೊಡೆಯತೊಡಗಿದೆವು. ನೀರು ಬಂತು. ಒಬ್ಬೊಬ್ಬರೇ ನೀರು ಹೊಡೆಯುವುದು, ಉಳಿದೆಲ್ಲರು ಸರತಿಯಲ್ಲಿ ಮುಖತೊಳೆದು ನೀರುಕುಡಿಯುವುದು ಮಾಡುತ್ತಿರುವಾಗ, ನಾನೊಂದಿಷ್ಟು ಬೋರು ಹೊಡೆಯುವ ಉಳಿದವರು ಕುಡಿಯಲಿ ಎಂದು ಹಿಂದೆ ಬಂದೆ. ಆದರೆ ಅಚಾನಕ್ ಬೋರಿನ ಸಂದಿಯಲ್ಲಿ ಶ್ರುತಿ ಕಿರುಬೆರಳು ಇಟ್ಟಿದ್ದು ಗೊತ್ತೇ ಆಗಿರಲಿಲ್ಲ. ನಾನು ಹೊಡೆದ ಮೊದಲ ಹೊಡೆತಕ್ಕೇ ಅವಳು ಪ್ರಾಣ ಹೋಗುವಂತೆ ಚೀರಿಬಿಟ್ಟಿದ್ದಳು. ನನಗಾದ ಗಾಬರಿಯೂ ವರ್ಣಿಸಲಸದಳ. ಅವಳ ಕೈಯಿಂದ ಧಾರಾಕಾರ ರಕ್ತ ಸುರಿಯತೊಡಗಿತ್ತು. ಅಲ್ಲೇ ಇದ್ದ ಅಕ್ಕಪಕ್ಕದ ಮನೆಯವರು ಅರಶಿನ ತಂದು ಗಾಯಕ್ಕೆ ಒತ್ತಿ ಬಟ್ಟೆ ಕಟ್ಟಿದರು. ಅವಳನ್ನು ಸಮಾಧಾನಿಸುತ್ತಿದ್ದರು. ಉಳಿದ ಗೆಳತಿಯರೆಲ್ಲರೂ ಅವಳ ಆಜೂ ಬಾಜೂ ನಿಂತು ಅವಳನ್ನು ಸಮಾಧಾನಿಸತೊಡಗಿದರು. ಅವಳ ಅಳು ತಹಬದಿಗೆ ಬರತೊಡಗಿತ್ತು. ಯಾರೊಬ್ಬರೂ ನನ್ನನ್ನು ಅತಿಯಾಗಿ ಬೈದದ್ದು ನೆನಪಿಲ್ಲ. ಆದರೆ ಅವರೆಲ್ಲರ ದೃಷ್ಟಿ ಮಾತ್ರ ನನ್ನನ್ನು ತಪ್ಪಿತಸ್ಥಳೆಂದು ನೋಡುತ್ತಿದ್ದವು. ಅದು ಮಾತ್ರ ಚಂದ ನೆನಪಿದೆ. ಶ್ರುತಿ ನನ್ನ ಕಡೆ ತಿರುಗಿಯೂ ನೋಡಲಿಲ್ಲ. ಅವಳಿಗೆ ಬಹಳ ನೋವಾಗಿತ್ತು. ಆ ಕ್ಷಣ ಭೂಮಿ ಬಾಯಿಬಿಡಬಾರದಾ ಅಂತನಿಸಿದ್ದು ಸುಳ್ಳಲ್ಲ ನನಗೆ. ಅವಳ ಅಪ್ಪ ಅಮ್ಮ ನನಗೆ ಬಯ್ಯುತ್ತಾರಾ? ನನ್ನ ಅಪ್ಪ ಅಮ್ಮನಿಗೆ ನಾ ಹೀಗೆ ಮಾಡಿದೆ ಅಂತ ಗೊತ್ತಾದರೆ ಖಂಡಿತಾ ಹೊಡೆಯುತ್ತಾರೆ, ಈಗ ಏನು ಮಾಡಲಿ? ಮತ್ತೆ ನನ್ನೊಂದಿಗೆ ಅವಳು ಆಟಕ್ಕೆ ಬರುವುದಿಲ್ಲವಾ? ಇಲ್ಲಿಗೆ ಎಲ್ಲ ಮುಗಿಯಿತಾ? ಅದೆಂಥ ಆತಂಕ, ಭಯ, ಹಿಂಸೆ ಆಗತೊಡಗಿತೆಂದರೆ, ನನ್ನೊಂದಿಗೆ ಧೈರ್ಯಹೇಳಲಿಕ್ಕೆ ಯಾರೂ ಇರಲಿಲ್ಲ. ಏನು ಮಾಡಲಿ, ಎತ್ತ ಹೋಗಲಿ, ಮನೆಗೆ ಹೋಗಲಾ, ಬೇಡವಾ… ಹೋಗದೆ ಆದರೂ ಎಲ್ಲಿ ಹೋಗಲಿ… ಕಾಡತೊಡಗಿತು. ಅವತ್ತು ಅದೆಷ್ಟು ಸಂಕಟವಾಗಿತ್ತು ನನಗೆ. ಬಹಳ ಅತ್ತಿದ್ದೆ. ಅಷ್ಟೊಂದು ರಕ್ತವನ್ನ ಅದೇ ಮೊದಲು ನಾನು ನೋಡಿದ್ದದ್ದು. ವಿಪರೀತ ಭಯವಾಗಿಬಿಟ್ಟಿತ್ತು. ಶ್ರುತಿ ಅಳುತ್ತಿದ್ದರೆ, ಅವಳನ್ನು ತಬ್ಬಿ ಸಂತೈಸಬೇಕು ಅನಿಸುತ್ತಿತ್ತು. ಆದರೆ ಸುತ್ತಲಿದ್ದ ಯಾರೂ ಅದಕ್ಕೆ ಅವಕಾಶ ಕೊಡದಂತೆ ಅವಳನ್ನು ತಮ್ಮ ಕರುಣೆಯ ಅರಿವೆಯಲ್ಲಿ ಸುತ್ತಿಟ್ಟುಬಿಟ್ಟಿದ್ದರು. ನನ್ನ ಅಳು ಯಾರಿಗೂ ಕಾಣಲಿಲ್ಲ. ಅವತ್ತೆಲ್ಲ ಬಹಳ ಹೊತ್ತು ಹೊರಗೇ ಎಲ್ಲೆಲ್ಲೋ ಅಲೆದು ಮನೆಗೆ ಬಂದೆ. ನಾನು ಎಣಿಸಿದಷ್ಟು ಘೋರವಾದದ್ದು ಏನೂ ನಡೆಯಲಿಲ್ಲ. ಆದರೆ ಆ ಘಟನೆಯ ನಂತರ ಶ್ರುತಿ ಮತ್ತೆ ನಾನು ಮತ್ತೆ ಆಟ ಆಡಲಿಲ್ಲ. ಬಹುಶಃ ನನ್ನೊಂದಿಗೆ ಆಟವಾಡಲಿಕ್ಕೆ ಭಯವಾಯಿತಾ ಅವಳಿಗೆ, ಅಥವಾ ಅವಳ ಅಪ್ಪ ಅಮ್ಮನಿಗೆ ಬೇಸರವಾಗಿತ್ತಾ, ಅಥವಾ ಬೇರೆ ಏನಾದರೂ ಆಯಿತಾ… ಏನೇನೋ ತಳಮಳಗಳು… ಅವರ ಕಣ್ಣೋಟಗಳು ವಿಚಿತ್ರವಾಗಿರುತ್ತಿದ್ದವು. ಅವುಗಳ ಅರ್ಥ ತಿಳಿಯುವಷ್ಟು ದೊಡ್ಡವಳಿರಲಿಲ್ಲ ನಾನು… ಆದರೆ ಶ್ರುತಿಯ ಬಗ್ಗೆ ನೆನೆದಾಗಲೆಲ್ಲ ಪಾಪ ಎನಿಸುತತಿತ್ತು. ಅವಳಿಗೆ ನಿಜಕ್ಕೂ ಬಹಳ ನೋವಾಗಿತ್ತು. ಅವಳ ಅಪ್ಪ ಅಮ್ಮನಿಗೂ ಬೇಸರವಾಗಿದ್ದಿರಬಹುದು… ಅದು ತಪ್ಪೂ ಅಲ್ಲ… ಆದರೆ ಬಹಳ ವರ್ಷಗಳ ನಂತರ ನಾನೀಗ ಶಿಕ್ಷಕಿ… ನನ್ನದೇ ಶಾಲೆಯಲ್ಲಿ ಇಂತಹ ಅದೆಷ್ಟೋ ಘಟನೆಗಳಿಗೆ ನಾನು ಪ್ರತಿನಿತ್ಯ ಸಾಕ್ಷಿಯಾಗುತ್ತಿರುತ್ತೇನೆ. ಆದರೆ ಇಂತಹ ಆಕಸ್ಮಿಕ ಪ್ರಕರಣಗಳಲ್ಲಿ ಸಹಾನುಭೂತಿ ಎನ್ನುವುದು ಅವಘಡಕ್ಕೆ ಗುರಿಯಾದವರಿಗೆ ಸಿಗುವಷ್ಟು ಸುಲಭವಾಗಿ ಅದನ್ನು ಮಾಡಿದವರಿಗೆ ಸಿಗುವುದಿಲ್ಲ. ಅವರ ಅರಿವನ್ನು ಮೀರಿ ನಡೆದ ಘಟನೆಯೊಂದು ಅವರನ್ನು ಅದೆಷ್ಟು ನೋಯುವಂತೆ, ಅವಮಾನ ಪಡುವಂತೆ ಮಾಡಿಬಿಡುತ್ತದೆಂದರೆ ಅದು ಅಳತೆಗೂ ಮೀರಿದ್ದು. ನಾನೀಗ ಶಿಕ್ಷಕಿಯಾಗಿ ಬಹಳಷ್ಟು ಸರ್ತಿ ಇಂತಹ ಘಟನೆಗಳು ನಡೆದಾಗ ಇಬ್ಬರ ಪರವಾಗಿಯೂ ನಿಲುವು ತೆಗೆದುಕೊಳ್ಳುತ್ತೇನೆ. ಗುರಿಯಾದವರಿಗೆ ಸಹಾನುಭೂತಿ ತೋರಿಸುವ ಹೊತ್ತಿನಲ್ಲೇ ಮಾಡಿದವರು ದುರುದ್ದೇಶದಿಂದಾಗಲೀ, ಉದ್ದೇಶ ಪೂರ್ವಕವಾಗಿಯೋ ಅಥವಾ ಕೆಟ್ಟ ಉದ್ದೇಶದಿಂದಲೋ ಖಂಡಿತ ಮಾಡಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟು ಇಬ್ಬರಲ್ಲೂ ಒಂದು ಸ್ನೇಹ ಹಾಗೇ ಉಳಿದಿರುವಂತೆ ನೋಡಿಕೊಳ್ಳುತ್ತಿರುತ್ತೇನೆ. ಮತ್ತೆ ಮಾಡಿದವರಿಗೆ ಅದರ ಬಗ್ಗೆ ತಿಳುವಳಿಕೆ ಹೇಳಿ ಮುಂದೆ ಹೀಗಾಗದಂತೆ ಜಾಗ್ರತೆ ವಹಿಸಲು ತಿಳಿಸಿಕೊಡುತ್ತಿರುತ್ತೇನೆ. ಒಮ್ಮೆ ಹೀಗಾಯಿತು. ಊಟದ ವೇಳೆಯಲ್ಲಿ ಮೂರನೇ ತರಗತಿಯ ಹುಡುಗನೊಬ್ಬ ತರಗತಿಯ ಕೋಣೆಗೆ ಜೋರಾಗಿ ನುಗ್ಗುವಾಗ, ತನ್ನ ಸಹಪಾಟಿಯ ಮೇಲೆ ಮುಗ್ಗರಿಸಿ ಬಿದ್ದಿದ್ದಾನೆ. ಆ ಹೊಡೆತಕ್ಕೆ ಇವನ ಮುಖ ಬೆಂಚಿಗೆ ತಗುಲಿ, ಮೂಗಲ್ಲಿ ರಕ್ತ ಸೋರತೊಡಗಿದೆ. ಅಂದು ಜೋರಾಗಿ ನುಗ್ಗಿದವನಿಗೆ ಹಾಗೆ ಒಳ ನುಗ್ಗಿದ್ದಕ್ಕಾಗಿ ಬೈದೆವಾದರೂ ನೋವಾದವನಿಗೆ, ಅವನು ಬೇಕಂತ ಮಾಡಿಲ್ಲ, ಮತ್ತೆ ಅವ ನಿನ್ನ ಸಹಪಾಠಿ ಮತ್ತು ಗೆಳೆಯ ತಾನೆ ಎಂಬುದನ್ನು ಮನವರಿಕೆ ಮಾಡಿಕೊಟ್ಟೆವು ಮತ್ತೆ ಅವನಿಗೆ ಸೂಕ್ತ ಚಿಕಿತ್ಸೆಯನ್ನೂ ಮಾಡಿದೆವು (ಇಂತಹ ನಿತ್ಯದ ಅದೆಷ್ಟೋ ಘಟನೆಗಳಿಗೆ ಶಿಕ್ಷಕರಾದ ನಾವು ಸದಾ ಸಿದ್ಧರಿರಲೇಬೇಕಿರುತ್ತದೆ…). ಆದರೂ ಎಲ್ಲೋ ಒಂದು ಕಡೆ ಅವನ ಪೋಷಕರು ಶಾಲೆಗೆ ಬಂದು ಗಲಾಟೆ ಮಾಡಬಹುದು, ಬೀಳಿಸಿದ ಮಗುವಿಗೂ ಏನಾದರೂ ಬೈಯ್ಯಬಹುದು… ಅಂತೆಲ್ಲ ಭಯ ನಾವೆಲ್ಲ ಶಿಕ್ಷಕರಿಗೂ ಇತ್ತು. ಆದರೆ ಹಾಗಾಗಲಿಲ್ಲ. ಮರು ದಿನ ಅವ ಶಾಲೆಗೆ ಬಂದ. ಮೂಗಿನ ಗಾಯ ದೊಡ್ಡದಾಗಿ ಕಾಣುತ್ತಿತ್ತು. ಆದರೆ ಅವ ತನ್ನ ತಂದೆ ತಾಯಿಯರಿಗೆ ತಾನೇ ಹೇಗೋ ಶಾಲೆಯಲ್ಲಿ ಬಿದ್ದೆ ಎಂದು ಹೇಳಿದ್ದನಂತೆ. ಮತ್ತೆ ಮರುದಿನದಿಂದ ಅವರಿಬ್ಬರೂ ಏನೂ ಆಗಿಲ್ಲದಂತೆ ಪಕ್ಕ ಪಕ್ಕವೇ ಕೂತು ಆಡಿಕೊಂಡು, ಓದಿಕೊಳ್ಳತೊಡಗಿದರು… ಹೀಗೆ ಇಂತಹ ಘಟನೆಗಳಲ್ಲಿ ಎಲ್ಲ ಸುಖ ಅನ್ನಿಸಿದಾಗ ಸದಾ ನನ್ನ ಬಾಲ್ಯದ ಆ ಘಟನೆ ನೆನಪಾಗಿ, ಸಧ್ಯ ಈ ಮಕ್ಕಳಿಗೆ ಹಾಗಾಗಲಿಲ್ಲವಲ್ಲ ಅನಿಸಿ ಮನಸು ಹಗುರವಾಗುತ್ತದೆ… ************************************************* –ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.
ಅಂಕಣ ಬರಹ ಅರಿತವರ ಮರೆತು ಸಾಗುವುದೆಂದರೆ … ನಮ್ಮನ್ನು ನಾವು ಹುಡುಕಿಕೊಳ್ಳುವುದು ಎಂದರೆ ಏನು? ನಮ್ಮೊಳಗೆ ನಾವು ಇಳಿಯುವುದು ಎಂದರೆ ಏನು? ನಮಗೇ ಕಾಣದ ನಮ್ಮನ್ನು ಕಂಡುಕೊಳ್ಳುವುದು ಎಂದರೆ ಏನು? ಮತ್ತೆ ಈ ಧಾವಂತದ ಬದುಕಲ್ಲಿ ಅದಕ್ಕೆ ತಗುಲುವ ಸಮಯವನ್ನು ಉಳಿಸಿಟ್ಟುಕೊಳ್ಳುವ ವ್ಯವಧಾನವಾದರೂ ನಮ್ಮಲ್ಲಿ ಉಳಿದಿದೆಯಾ… ಇಂತಹ ಹಲವಾರು ಉತ್ತರ ಸಿಗದ ಪ್ರಶ್ನೆಗಳು, ಗೊಂದಲಗಳು ನನ್ನನ್ನು ಸದಾ ಕಾಡುತ್ತಿರುತ್ತದೆ. ಇಂಥವಕ್ಕೆ ನಾನೇ ನಾನು ಉತ್ತರಿಸಿಕೊಳ್ಳಬೇಕಿರುತ್ತದೆ. ಆದರೆ ಕೆಲವೊಮ್ಮೆ ಎಂತಹ ಸಂದಿಗ್ಧತೆ ಒದಗಿಬರುತ್ತದೆ ಎಂದರೆ ಉತ್ತರಿಸುವುದಿರಲಿ ಪ್ರಶ್ನೆಯನ್ನು ಎದುರಿಸುವುದೂ ಕಷ್ಟವೇ… ಎಷ್ಟೋ ಪ್ರಶ್ನೆಗಳಿಗೆ ಉತ್ತರಗಳು ಇರುವುದಿಲ್ಲ. ಮತ್ತೊಂದಿಷ್ಟು ಪ್ರಶ್ನೆಗಳಿಗೆ ಉತ್ತರಗಳಿದ್ದರೂ ಅವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ನಾವು ಇರುವುದಿಲ್ಲ. ನಾವು ಹಸುಗಳನ್ನ ಸಾಕ್ತೇವೆ, ಹೊತ್ತು ಹೊತ್ತಿಗೆ ಸರಿಯಾಗಿ ಹುಲ್ಲು ಮೇಯಿಸ್ತೇವೆ, ಅದು ಅಲ್ಲಿ ಹೋಗಬಾರದು, ಇಲ್ಲಿ ಮೇಯಬಾರದು ಹೀಗೆ ನಮಗೆ ಬೇಕಾದಂತೆ ಒಂದು ಚೌಕಟ್ಟಿನೊಳಗಿಟ್ಟು ಬೆಳೆಸ್ತೇವೆ. ನಮ್ಮ ಪ್ರಕಾರ ಅದು ಒಂದೂ ತಪ್ಪೇ ಮಾಡಿಲ್ಲ! ಆದರೆ ಬೀದಿಯ ದನ ಹಾಗಲ್ಲ, ಮನಸಿಗೆ ಬಂದ ಕಡೆ ಹೋಗ್ತದೆ, ಮನಸಿಗೆ ಬಂದದ್ದು ಮಾಡ್ತದೆ, ಮನಸಿಗೆ ಬಂದದ್ದನ್ನ ತಿನ್ತದೆ…. ಅದಕ್ಕೆ ಯಾವ ನಿರ್ಬಂಧಗಳಿಲ್ಲ. ಅದು ಗೋ ಮಾತೆ ಎಂದು ಪೂಜೆಗೆ ಸಲ್ಲುವ ಹೊತ್ತಲ್ಲೇ ಹೀನಾಮಾನವಾಗಿ ಒದೆ ಮತ್ತು ಬೈಗುಳಗಳನ್ನೂ ತಿಂದಿರುತ್ತದೆ. ಆದರೆ ಅದರ ಅನುಭವಗಳು ಎಷ್ಟು ಸಂಪದ್ಭರಿತ! ಅದರ ಬದುಕು ಅದೆಷ್ಟು ಸಂಪನ್ನ! ನಿಮಗೆ ಈ ಎರೆಡು ದನಗಳಲ್ಲಿ ಯಾವ ದನದ ಬದುಕು ಇಷ್ಟ ಎಂದು ಯಾರಾದರೂ ಒಂದು ವೇಳೆ ನಮ್ಮನ್ನು ಕೇಳಿದರೆ ನಮಗೆ ಬೀದಿ ದನದ ಬದುಕೇ ಇಷ್ಟ, ಆದರೆ ನಮ್ಮ ಆಯ್ಕೆ ಮಾತ್ರ ಸಾಕಿದ ದನ ಎಂದಾಗಿರುತ್ತದೆ. ಕಾರಣ ನಮಗೆ ಸಮಾಜವನ್ನು ಎದುರಿಸುದಾಗಲೀ, ಧಿಕ್ಕರಿಸುವುದಾಗಲೀ ಬೇಕಾಗೂ ಇಲ್ಲ, ಸಾಧ್ಯವೂ ಇಲ್ಲ ಹಾಗಾಗಿ. ಹಾಗಾಗಿಯೇ ನಾವು ಸಮಾಜದ ನಿರೀಕ್ಷೆಯ ಚಾಳೀಸು ತೊಟ್ಟು ಪ್ರತಿಯೊಂದನ್ನೂ ಪ್ರತಿಯೊಬ್ಬರನ್ನೂ ಅದು ನಿರ್ಮಿಸಿಕೊಟ್ಟ ಚೌಟ್ಟಿನ ಒಳಗೇ ನೋಡಲು ಬಯಸುತ್ತೇವೆ. ಒಂದು ವೇಳೆ ಯಾರಾದರೂ ಅದನ್ನು ಮೀರಲು ಪ್ರಯತ್ನಿಸಿದರೆ ನಾವೇ ಮೊದಲಾಗಿ ಅವರ ಕಾಲು ಹಿಡಿದು ಹಿಂಜಗ್ಗುತ್ತೇವೆ, ಅವರ ಆತ್ಮವಿಶ್ವಾಸ ಕುಗ್ಗಿಸುವ ಅಷ್ಟೂ ಮಾತನ್ನು ಒಂದೂ ಬಿಡದಂತೆ ಆಡುತ್ತೇವೆ. ನಮ್ಮ ಮನಃಸಾಕ್ಷಿಗೆ ನಾವು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಬಿದ್ದ ತೋಳಕ್ಕೆ ಕಲ್ಲು ಬೀಸುವುದರಲ್ಲಿ ಸಿಗುವ ಸುಖ, ಒಣ ಆತ್ಮಸಾಕ್ಷಿಯ ಗೊಡ್ಡು ಉಪದೇಶಕ್ಕೆ ಕಿವಿಯಾಗುವುದರಲ್ಲಿ ನಮಗೆ ಖಂಡಿತಾ ಸಿಗಲಾರದು . ನನಗೆ ಸ್ವಾತಂತ್ರ್ಯ ಎಂದರೆ ಯಾವುದು ಮನುಷ್ಯತ್ವವನ್ನ ಮೀರುವುದಿಲ್ಲವೋ, ಇನ್ನೊಬ್ಬರಿಗೆ ತೊಂದರೆ ಉಂಟು ಮಾಡುವುದಿಲ್ಲವೋ, ದುಷ್ಟ ಮತ್ತು ಕ್ರೂರ ಅಲ್ಲವೋ ಅದೆಲ್ಲವನ್ನೂ ನಾವು ಮಾಡಬಹುದು ಎಂದು. ಆದರೆ ಒಬ್ಬರ ರೆಕ್ಕೆಗಳನ್ನು ಕತ್ತರಿಸಿ ಹಾಕಿ ಅವರ ಹಾರುವ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವುದಕ್ಕಿಂತ ದೊಡ್ಡ ಕ್ರೂರತೆ ಮತ್ತೊಂದಿರಲಾರದು. ಆದಾಗ್ಯೂ ತಪ್ಪುಗಳು ಒಂದು ಹಂತದವರೆಗೆ ಮನುಷ್ಯನನ್ನು ಮಾಗಿಸುತ್ತವೆ. ತಪ್ಪು ಮಾಡಿದವನು ಒಳಗೊಳಗೆ ಗಟ್ಟಿಯಾಗುತ್ತಾ ಹೋಗುತ್ತಾನೆ. ಅವನ ಬದುಕಿನ ಪಾಠ ಅವನನ್ನು ವಜ್ರಕಠೋರವಾ ಗಿಸುತ್ತದೆ. ಅವನು ಎಂಥದ್ದೇ ಪರಿಸ್ಥಿತಿ ಬರಲಿ ಎದುರಿಸಲು ಸದಾ ತಯಾರಿರುತ್ತಾನೆ. ತಪ್ಪುಗಳು ನಮಗೆ ಬದುಕನ್ನು ನೋಡುವ ವಿಭಿನ್ನ ದೃಷ್ಟಿಕೋನವನ್ನು ತೋರಿಸಿಕೊಡುತ್ತವೆ, ನಮ್ಮ ಸರಿಗಳು ಬದುಕನ್ನು ಹೀಗೇ ನೋಡಬೇಕೆನ್ನುವ ದಾರಿಯ ನಿರ್ದಿಷ್ಟತೆಯನ್ನು ಮನಗಾಣಿಸುತ್ತವೆ. ನಮ್ಮ ತಪ್ಪುಗಳು ನಮಗಷ್ಟೇ ಅಲ್ಲದೆ ಇತರರಿಗೂ ಪಾಠವಾಗಬಲ್ಲವು. ಮತ್ತು ಇತರರ ತಪ್ಪುಗಳು ನಮ್ಮ ಪುಸ್ತಕದ ಪಾಠವೂ ಆಗಬೇಕು. ಆದರೆ ಕೆಲವೊಮ್ಮೆ ಅಮೂಲ್ಯ ಕ್ಷಣಗಳನ್ನು, ಅಮೂಲ್ಯ ವ್ಯಕ್ತಿಗಳನ್ನು ಸುಮಧುರ ಬಾಂಧವ್ಯವನ್ನು ನಮ್ಮ ಸ್ವಯಂಕೃತ ಅಪರಾಧದಿಂದ ಕಳೆದುಕೊಂಡುಬಿಡುತ್ತೇವಲ್ಲ ಅದು ಪರಮ ಯಾತನಾಮಯ… ಅದು ಯಾರಲ್ಲೂ ಹಂಚಿಕೊಂಡು ಹಗುರಾಗುವಂಥದ್ದಲ್ಲ. ನಮ್ಮಿಂದ ಅಪಾರವಾದದ್ದನ್ನು ನೀರೀಕ್ಷಿಸುವ, ನಮ್ಮನ್ನು ತಮ್ಮ ಬದುಕಿನ ಪರಮಾರ್ಥ ಎಂದು ತಿಳಿದವರನ್ನು ಧಿಕ್ಕರಿಸಿ ಹೊರಡುತ್ತೇವಲ್ಲ… ಆ ಕ್ಷಣದ ಬಗ್ಗೆ ನಿಜಕ್ಕೂ ಧಿಕ್ಕಾರವಿದೆ ನನಗೆ. ಒಂದು ಪ್ರೀತಿ, ಅಸಖ್ಖಲಿತ ಪ್ರೇಮ, ಪವಿತ್ರ ಸ್ನೇಹ, ಮಮತೆ ಅಂತಃಕರಣವೆಲ್ಲವನ್ನು ತಿರಸ್ಕರಿಸಿಬಿಡುತ್ತೇವಲ್ಲ… ಬಹುಶಃ ಆ ಒಂದು ಕ್ಷಣ ನಾವು ನಮ್ಮ ಹೃದಯದ ಮಾತುಗಳಿಗೆ ಕಿವುಡರಾಗಿಬಿಟ್ಟಿರುತ್ತೇವೆ. ಅದರಲ್ಲೂ ಆಯ್ಕೆಗಳಿದ್ದು ಒಂದನ್ನು ಮಾತ್ರ ಆರಿಸಬೇಕಾದ ಶರತ್ತಿದ್ದಾಗಲಂತೂ ಆರಿಸಿಕೊಂಡದ್ದರ ಸುಖವೇ ಅನುಭವಕ್ಕೆ ನಿಲುಕದಷ್ಟು ಕಳೆದುಕೊಂಡದ್ದರ ದುಃಖ ಆವರಿಸಿಬಿಟ್ಟಿರುತ್ತದೆ. ಆದರೆ ಬದುಕಿನ ನಿಯಮವೇ ಹಾಗಿದೆ. ಒಂದನ್ನು ಪಡೆಯಲು ಮತ್ತೊಂದನ್ನು ಕಳೆದುಕೊಳ್ಳಲೇಬೇಕು! ಆದರೆ ನಂಬಿಕೆಯನ್ನು ಕಳೆದುಕೊಳ್ಳುವುದಿದೆಯಲ್ಲ… ಅದು ನಮ್ಮ ಬದುಕಿನ ಬೇರನ್ನೇ ಅಲುಗಾಡಿಸಿಬಿಡುತ್ತದೆ. ಸರಿ ನಮ್ಮವರನ್ನು ಬಿಟ್ಟು ಹೊರಟಾದ ಮೇಲೆ ಏನಾದೆವು ಎಂದೊಮ್ಮೆ ಹಿಂತಿರುಗಿ ನೋಡಿದರೆ ನಮ್ಮ ಹೆಜ್ಜೆಗಳಷ್ಟೂ ಅವರೇ ಕಲಿಸಿದ ಸಂಸ್ಕಾರದಚ್ಚಿನಲ್ಲಿ… ಇವತ್ತು ನಾವೇನಾಗಿರುತ್ತೇವೋ ಅದಷ್ಟೂ ಅವರು ನೀಡಿದ ಶಿಕ್ಷಣ. ನಮ್ಮ ಬದುಕು ಮುನ್ನಡೆದದ್ದೇ ಅದರ ಸೂಚಕ. ಬಿಟ್ಟುಬಂದೆವೆಂದುಕೊಂಡದ್ದು ಸದಾ ಹಿಂಬಾಲಿಸುತ್ತಲೇ ಬಂದಿರುವುದು ಅರಿವಾಗಿಲ್ಲದ ಸತ್ಯ. ನಮ್ಮ ಪ್ರತಿ ಕೆಲಸದಲ್ಲೂ ಅವರು ನೆನಪಾಗುತ್ತಾರೆ. ನಮ್ಮ ಪ್ರತಿ ನಡೆ ನುಡಿಯಲ್ಲೂ ಅವರೇ ಅವರು ಕಾಣಿಸಿಕೊಂಡು ಹನಿ ನೀರಾಗಿ ಉರುಳುತ್ತಾರೆ. ಅವರೊಂದಿಗಿನ ಒಂದೊಂದು ಕ್ಷಣವೂ ಮುತ್ತುಗಳಾಗುತ್ತವೆ. ಹೊಳೆಯುತ್ತವೆ. ಕರೆಯುತ್ತವೆ. ನೆನಪಾಗಿ ತಬ್ಬುತ್ತವೆ. ಸಂತೈಸಿ ತಲೆ ನೇವರಿಸಿ ಹಣೆಯ ಮೇಲೊಂದು ಮುತ್ತಿಡುವರಿಲ್ಲದೆ ಖಾಲಿ ಎದೆಯ ಮೀಂಟುವ ನೋವನ್ನು ಸಹಿಸಲಾಗದೆ ನರಳುವಾಗ ತಾವೂ ಮರುಗುತ್ತವೆ. ಅರಿತವರ ಮರೆತು ಸಾಗುವುದೆಂದರೆ ಸಳುಕು ಹಿಡಿದ ಎದೆಯನ್ನು ಅಬ್ಬೊತ್ತಿಕೊಂಡು, ಬಾಯಿಗೆ ಬಟ್ಟೆ ತುರುಕಿ, ನಿಶ್ಯಬ್ಧವಾಗಿ ಬಿಕ್ಕುವುದು… ಇದರಿಂದ ಯಾರಿಗೆ ತಾನೆ ಮುಕ್ತಿ ಇದೆ… ನಾವೆಲ್ಲ ಪಕ್ಕಾ ವ್ಯಾಪಾರಿಗಳು. ಲೇವಾದೇವಿ ನಮಗೆ ಬಹಳ ಚನ್ನಾಗಿ ಗೊತ್ತು. ನಮಗೆ ಪ್ರೀತಿಗಿಂತಲೂ ಭೌತಿಕ ವಸ್ತುಗಳೇ ಬದುಕಿನ ಅನಿವಾರ್ಯ ಎನಿಸುತ್ತವೆ. ಅತ್ಯಂತ ಹೆಚ್ಚು ಪ್ರೀತಿಸುವ ಜೀವ ಪಕ್ಕದಲ್ಲಿ ಇರುವಾಗಲೂ ಹಣ ಐಶ್ವರ್ಯ ಆಸ್ತಿ ಅಂತಸ್ತು ದೊಡ್ಡದು ಎನಿಸುತ್ತದೆ ನಮಗೆ. ಮತ್ತೀ ಸಮಾಜವಾದರೂ ಅದನ್ನೇ ಅನಿವಾರ್ಯವೆನ್ನಿಸಿಬಿಡುವಂತೆ ಮಾಡಿಬಿಡುತ್ತದೆ. ನಾವು ನಮ್ಮ ಆಂತರ್ಯಕ್ಕೆ ಪ್ರಿಯವಾಗುವ ಬದಲು, ದುಡ್ಡಿನ ಬಾಲ ಹಿಡಿಯಲು ಹೊರಟುಬಿಡುತ್ತೇವೆ. ಈಗ ನಮ್ಮಲ್ಲಿ ಬಹಳ ಒಳ್ಳೆಯ ಗಾದೆ ಮಾತುಗಳು ಹುಟ್ಟಿಕೊಳ್ಳುತ್ತವೆ, penny saved is a penny gained, ನಾವು ಉಳಿಸಿಟ್ಟ ಹಣವೇ ನಮ್ಮ ನಿಜವಾದ ಮಿತ್ರ, ತಾಮ್ರದ ಕಾಸು ಅಣ್ಣ ತಮ್ಮಂದಿರನ್ನೇ ಅಗಲಿಸಿತಂತೆ (ಅದಕ್ಕೆ, ಮೊದಲೇ ಅಣ್ಣ ತಮ್ಮಂದಿರು ದೂರ ದೂರ ಇದ್ದು ಬಿಡಬೇಕು!), ದುಡ್ಡಿದ್ದವನೇ ದೊಡ್ಡಪ್ಪ… ಇವೆಲ್ಲ ನಮ್ಮ ಬದುಕಿನ ಮೊಟ್ಟೋಗಳಾಗುವ ಹೊತ್ತಿನಲ್ಲಿ ದುಡ್ಡನ್ನು ಮೀರಿದ ಅನುಭೂತಿಯೊಂದು ಇದೆ ಮತ್ತು ಅದು ನಮ್ಮ ಬದುಕಿನ ಕೇಂದ್ರವಾಗಬೇಕಿದೆ ಎನ್ನುವ ದನಿ ಕೀರಲಾಗಿ ಭೌತಿಕದ ಧ್ವನಿವರ್ಧಕದ ಅಬ್ಬರದ ನಡುವೆ ಇಲ್ಲವೇ ಆಗಿಬಿಡುತ್ತಿರುವುದು ಸಂಕಟ ಉಂಟು ಮಾಡುತ್ತದೆ… ************************************* ಆಶಾ ಜಗದೀಶ್ ಶಿಕ್ಷಕಿ, ಗೌರಿಬಿದನೂರಿನಲ್ಲಿ ವಾಸಮೊದಲ ಪುಸ್ತಕ ಮೌನ ತಂಬೂರಿ- ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಹೊಂಡಿದೆ. ನಾದಾನುಸಂಧಾನ- ಅಂಕಣ ಬರಹದ ಪುಸ್ತಕ, ಮಳೆ ಮತ್ತು ಬಿಳಿಬಟ್ಟೆ- ಕಥಾ ಸಂಕಲನ ಮತ್ತು ನಡು ಮಧ್ಯಾಹ್ನದ ಕಣ್ಣು- ಕವನ ಸಂಕಲನ (ಅಚ್ಚಿನಲ್ಲಿದೆ) ಈ ವರ್ಷ ಹೊರಬರಲಿರುವ ಪುಸ್ತಕಗಳು. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ, ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆಯಲ್ಲಿ ಮೆಚ್ಚುಗೆ ಗಳಿಸಿದ ಕವಿತೆ, ಜೀವನ್ ಪ್ರಕಾಶನದ ಯುಗಾದಿ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಪ್ರಜಾವಾಣಿ ಸಂಕ್ರಾಂತಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಸುಧಾ ಯುಗಾದಿ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಹುಮಾನ, ಮುಂಬೈನ ಶ್ರೀ ಜಗಜ್ಯೋತಿ ಕಲಾಸಂಘ ನೀಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ… ಇನ್ನು ಮುಂತಾದ ಬಹುಮಾನಗಳು ಬಂದಿವೆ.




