ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅರ್ಧನಾರೀಶ್ವರ ( ಕಾದಂಬರಿ) ತಮಿಳು ಮೂಲ : ಪೆರುಮಾಳ್ ಮುರುಗನ್  ಕನ್ನಡಕ್ಕೆ : ನಲ್ಲತಂಬಿ ಬದುಕಿನ ಆದಿಮ ಸತ್ಯಗಳಾದ ಕಾಮ, ಹುಟ್ಟು, ತಾಯ್ತನ, ವಂಶಾಭಿವೃದ್ಧಿಯ ಬಯಕೆಗಳು ಮತ್ತು ಸಾಮಾಜಿಕ ವ್ಯವಸ್ಥೆ ಬೆಳೆದು ಬಂದ ಬಗೆಗಳ  ನಡುವಣ ಸಂಘರ್ಷವೇ ಈ ಕಾದಂಬರಿಯ ಕಥಾವಸ್ತು.  ಕಾಮ ಮತ್ತು ತಾಯ್ತನದ ಬಯಕೆಗಳು ನೈಸರ್ಗಿಕವಾಗಿ ಇರುವಂಥವು.  ಆದರೆ ಗಂಡು-ಹೆಣ್ಣುಗಳ ನಡುವಣ ಕಾಮದಾಸೆಯ ಪೂರೈಕೆಗಾಗಿ  ಸಮಾಜವು ರೂಪಿಸಿಕೊಂಡ ವಿವಾಹವೆಂಬ ವ್ಯವಸ್ಥೆಯು ಕೆಲವೊಮ್ಮೆ ವಿಫಲವಾದಾಗ  ವ್ಯವಸ್ಥೆಯನ್ನು ಒಡೆದು  ಬೇರೆ ದಾರಿ ಹಿಡಿಯುವುದು ಹೇಗೆ  ಮತ್ತು ಅದರ ಪರಿಣಾಮಗಳೇನಾಗಬಹುದು ಎಂಬುದರ ಕುರಿತಾದ ಸಂವಾದವನ್ನು  ಈ ಕಾದಂಬರಿ ಅತ್ಯಂತ ಮಾರ್ಮಿಕವಾಗಿ ನಿರೂಪಿಸುತ್ತದೆ.  ಅದರ ಜತೆಗೆ ಜನಪದ ಬದುಕು  ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ವ್ಯವಸ್ಥೆಯೊಳಗೇನೇ ಕಂಡುಕೊಂಡ ಪರಿಹಾರವೂ ಇಲ್ಲಿದೆ. ಗ್ರಾಮೀಣ ಬದುಕಿನ ಚಿತ್ರಣ, ಗಂಡ-ಹೆಂಡಿರ ನಡುವಣ ಆತ್ಮೀಯ ಸಂಬಂಧದ ಅರ್ಧನಾರೀಶ್ವರ ಪರಿಕಲ್ಪನೆಯನ್ನು ಹೋಲುವ ಸುಂದರ ಚಿತ್ರಣವು ಕೃತಿಯ ಸೌಂದರ್ಯಕ್ಕೆ ಮೆರುಗನ್ನಿತ್ತಿದೆ.  ಕಾಳಿ ಮತ್ತು ಪೊನ್ನಿಯರ ದಾಂಪತ್ಯ ಜೀವನವು ‘ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು’ ಆನಂದಮಯವಾಗಿತ್ತು. ಗಂಡ-ಹೆಂಡಿರು ಒಬ್ಬರನ್ನೊಬ್ಬರು ಎಂದೂ ಬಿಟ್ಟಿರಲಾರದವರೂ ಬಿಟ್ಟು ಕೊಡಲಾರದವರೂ ಆಗಿದ್ದರು.  ಅವರಿಬ್ಬರ ನಡುವಣ ಲೈಂಗಿಕ ಸಂಬಂಧದ ಬಿಸುಪು ಹತ್ತು ವರ್ಷ ಕಳೆದರೂ  ಒಂದಿಷ್ಟೂ ಕಡಿಮೆಯಾಗಿರಲಿಲ್ಲ. ಆದರೆ ಒಂದೇ ಒಂದು ಕೊರತೆಯೆಂದರೆ ಅವರಿಗೆ ಮಕ್ಕಳಾಗಿರಲಿಲ್ಲ. ಹೆಣ್ಣು ತನ್ನ ವ್ಯಕ್ತಿತ್ವದ ಮೂಲಕ ಎಷ್ಟೇ ಯಶಸ್ವಿಯಾದರೂ  ಆಕೆ ತಾಯಿಯಾಗದಿದ್ದರೆ ಸಮಾಜವು ಆಕೆಯನ್ನು ಸದಾ ಚುಚ್ಚಿ ನೋಯಿಸುತ್ತಿರುತ್ತದೆ.  ಕಾಳಿ-ಪೊನ್ನಿಯರಿಬ್ಬರೂ ಈ ದುಃಖವನ್ನು ಎದುರಿಸುತ್ತಾರೆ.  ಕೊನೆಗೆ ಕಾಳಿಯ ಅಮ್ಮ ಮತ್ತು ಪೊನ್ನಿಯ ಅಮ್ಮ ಇಬ್ಬರೂ ಅವಳನ್ನು ತಿರುಚೆಂಗೋಡು ಜಾತ್ರೆಯ  ಹದಿನಾಲ್ಕನೇ ದಿವಸದಂದು ಊರಿನ ಪದ್ಧತಿಯಂತೆ  ಮದುವೆಯಾದ ಹೆಣ್ಣು ಮಕ್ಕಳನ್ನು ಅವರು ಇಷ್ಟಪಟ್ಟವರ ಜತೆ ಕೂಡಲು ಕಳುಹಿಸುವ ಯೋಜನೆ ಹಾಕುತ್ತಾರೆ.  ತನ್ನ ಪೊನ್ನಿ ತನ್ನ ಕೈಜಾರಿ ಹೋಗುತ್ತಾಳೆಂಬ ಭಯದಿಂದ ಕಾಳಿ ಇದಕ್ಕೆ ಸಮ್ಮತಿಸುವುದಿಲ್ಲ. ಆದರೆ ತಾಯ್ತನದ ಸಹಜ ಬಯಕೆ ಪೊನ್ನಿಯಲಿ ಎಷ್ಟು ಬಲವಾಗುತ್ತದೆ ಅಂದರೆ  ತಾನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಕಾಳಿಯ ವಿರೋಧವನ್ನು ಲೆಕ್ಕಿಸದೆ ಬೇರೊಬ್ಬ ಯುವಕನನ್ನು ಆರಿಸಿಕೊಂಡು ಪೊನ್ನಿ ಹೋಗುತ್ತಾಳೆ. ಕೊನೆಯಲಿ ಕಾಳಿ ಅವಳ ಮೇಲೆ ಸಿಟ್ಟಾಗುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಪುರುಷ ಕೇಂದ್ರಿತ ವ್ಯವಸ್ಥೆಯಲ್ಲಿ ಒಬ್ಬ ಹೆಣ್ಣು ಹೇಗೆ ಸ್ವಾರ್ಥಿ ಪುರುಷನ ಸ್ವಂತ ಸೊತ್ತಾಗಿ ಶೋಷಣೆಗೊಳಗಾಗುತ್ತಾಳೆ ಎಂಬುದನ್ನು ಕಾದಂಬರಿ ನಿರೂಪಿಸುತ್ತದೆ.ಅನುವಾದದ ಭಾಷೆ ಚೆನ್ನಾಗಿದೆ. ಮೂಲದಲ್ಲಿರುವ ಆಡುಭಾಷೆಗೆ ಪರ್ಯಾಯವನ್ನು ಕೊಡಲು ಅನುವಾದಕರು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಮತ್ತು ಯಶಶ್ವಿಯಾಗಿದ್ದಾರೆ ************************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅನುವಾದಿತ ಕೃತಿ ಪ್ರಪಂಚ ಪ್ರವೇಶ ಮೊದಲ ನುಡಿ ಅನುವಾದವೆಂಬ ಪದದ ಸರಿಯಾದ ಅರ್ಥ ತಿಳಿಯದವರು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಎರಡು ಭಾಷೆಗಳು ತಿಳಿದಿದ್ದರೆ ಸಾಕು ಅನುವಾದ ತಾನೇ ತಾನಾಗಿ ಆಗುತ್ತದೆ ಎಂದು ತಿಳಿಯುವವರಿದ್ದಾರೆ. ಅನುವಾದವೆಂದರೆ ಅದೊಂದು ಯಾಂತ್ರಿಕವಾದ ಕೆಲಸವೆಂದು ಹೇಳುವವರಿದ್ದಾರೆ. ಮನುಷ್ಯನ ಬದುಕಿನಲ್ಲಿ ಭಾಷೆಯ ಮಹತ್ವವೇನು, ಅನುವಾದದ ಮಹತ್ವವೇನು, ಅನುವಾದಕ/ಕಿಯಲ್ಲಿ ಇರಬೇಕಾದ ಪ್ರತಿಭೆಯೇನು, ಪಾಂಡಿತ್ಯವೇನು, ಗುಣಗಳೇನು, ಸೃಜನಶೀಲತೆಯೇನು-ಈ ಯಾವುದರ ಗೊಡವೆಯೂ ಇಲ್ಲದೆ ಸಾಹಿತ್ಯಲೋಕದಲ್ಲಿ ಅನುವಾದಕರಿಗೆ ಮೂಲ ಲೇಖಕರ ನಂತರದ ಸ್ಥಾನ ಕೊಡುವ ಹುನ್ನಾರ ಎಂದಿನಿಂದಲೂ ನಡೆಯುತ್ತಲೇ ಬಂದಿದೆ. ಅನುವಾದದ ಉದ್ದೇಶ ಮತ್ತು ಮಹತ್ವಗಳೇನು ಎಂಬುದರ ಬಗ್ಗೆ ಒಮ್ಮೆ ಚಿಂತಿಸಿದರೆ ಸಾಹಿತ್ಯದ ಸಂದರ್ಭದಲ್ಲಿ ಅನುವಾದಕರ ಅಗತ್ಯವೆಷ್ಟಿದೆ ಎಂಬುದನ್ನು ಮನಗಾಣ ಬಹುದು.ಜಗತ್ತಿನ ಉದ್ದಗಲಕ್ಕೂ ಹರಡಿರುವ ಸಾವಿರಾರು ಭಾಷೆಗಳನ್ನು ಪರಿಗಣಿಸಿದಾಗ ಇಂದಿನ ಸಂಪರ್ಕ ಸಮೃದ್ಧಿಯ ಜಾಗತೀಕರಣದ ಸಂದರ್ಭದಲ್ಲಂತೂ ಅನುವಾದಕರು ಆಮ್ಲಜನಕದಷ್ಟು ಅಗತ್ಯವಾಗಿದ್ದಾರೆಂದು ಹೇಳಿದರೆ ತಪ್ಪಾಗಲಾರದು. ಒಂದು ಭಾಷೆಯಲ್ಲಿ ಬಂದ ಸಾಹಿತ್ಯವನ್ನು ಓದುವ ಓದುಗರು ತಮ್ಮ ಭಾಷೆಗಷ್ಟೆ ಸೀಮಿತರಾದರೆ ಅವರ ಜ್ಞಾನವು ಸಂಕುಚಿತಗೊಳ್ಳುತ್ತದೆ. ಜಗತ್ತಿನ ಇತರ ಮಾನವರನ್ನೂ ಇತರ ಸಂಸ್ಕತಿ ಮತ್ತು ಜೀವನಕ್ರಮಗಳನ್ನೂ ಸಾಹಿತ್ಯ ಕೃತಿಗಳ ಮೂಲಕ ತಿಳಿದುಕೊಂಡಾಗ ಮಾತ್ರ ನಮ್ಮ ಅರಿವಿನ ವ್ಯಾಪ್ತಿ ವಿಸ್ತಾರಗೊಂಡು ನಾವು ಬೌದ್ಧಿಕವಾಗಿ ಬೆಳೆಯಲು ಸಾಧ್ಯ. ಇದು ಅನುವಾದಗಳ ಮೂಲಕವೇ ಆಗಬೇಕಷ್ಟೆ. ಹೀಗೆ ಹೇಳುವಾಗ ನನಗೆ ನನ್ನ ಆರಂಭಿಕ ಅನುವಾದಿತ ಕೃತಿಯನ್ನು ತ್ರಿಶೂರಿನಲ್ಲಿ ಬಿಡುಗಡೆ ಮಾಡುತ್ತ ಮಲೆಯಾಳದ ಮಹಾನ್ ಲೇಖಕ ಶ್ರೀ ಎಂ.ಟಿ.ವಾಸುದೇವನ್ ನಾಯರ್ ಹೇಳಿದ ಮಾತುಗಳು ನೆನಪಾಗುತ್ತವೆ : ‘ಯಾವುದೇ ಸಾಹಿತ್ಯದ ಓದುಗರು ತಮ್ಮ ಭಾಷೆಗಷ್ಟೇ ಸೀಮಿತರಾಗಿದ್ದರೆ ಅವರು ಬಾವಿಯೊಳಗಿನ ಕಪ್ಪೆಗಳಾಗುತ್ತಾರೆ. ವೈವಿಧ್ಯತೆಯಿಂದ ತುಂಬಿದ ಈ ಜಗತ್ತಿನಲ್ಲಿ ನಾವು ಇತರರ ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟಿದೆ. ಹಾಗೆ ತಿಳಿದುಕೊಳ್ಳುವ ಮನಸ್ಸು ನಮಗಿರಬೇಕು .ನಾವು ನಮ್ಮ ಮನಸ್ಸಿನ ಕಿಟಿಕಿ ಬಾಗಿಲುಗಳನ್ನು ಹೊಸ ಗಾಳಿ ಮತ್ತು ಬೆಳಕುಗಳಿಗಾಗಿ ಸದಾ ತೆರೆದಿಡಬೇಕು. ಇದು ಅನುವಾದಗಳನ್ನು ಓದುವ ಮೂಲಕ ಸಾಧ್ಯ ‘ ಎಂದು. ಅನುವಾದಕರಿಗೆ ಭಾಷೆಯ ಸಂಪೂರ್ಣ ಜ್ಞಾನದ ಜತೆಗೆ ಆ ಭಾಷೆಯನ್ನಾಡುವ ಜನರ ಸಂಸ್ಕೃತಿ, ಆಚಾರ ವಿಚಾರಗಳು, ಅವರಾಡುವ ವಿಶಿಷ್ಟ ನುಡಿ , ನುಡಿಗಟ್ಟು ಮತ್ತು ಗಾದೆಮಾತುಗಳು, ಅಲ್ಲಿನ ಭೌಗೋಳಿಕ ಪರಿಸರ, ಜನರ ಸ್ವಭಾವ, ವರ್ತನೆ-ಹೀಗೆ ನೂರಾರು ವಿಚಾರಗಳ ಆಳವಾದ ಅರಿವಿರಬೇಕು. ಅದಕ್ಕಾಗಿ ಅನುವಾದಕರಾಗ ಬಯಸುವವರಲ್ಲಿ ಅವಲೋಕನ ಮತ್ತು ಚಿಂತನ ಗುಣಗಳು ಸದಾ ಸಕ್ರಿಯವಾಗಿರಬೇಕು. ತಾವು ಅನುವಾದಿಸುವ ಎರಡು ಭಾಷೆಗಳ ಮೇಲಿನ ಪ್ರಭುತ್ವವನ್ನು ಮೊನಚುಗೊಳಿಸುವ ಆಸಕ್ತಿ ಮತ್ತು ಪರಿಶ್ರಮಗಳತ್ತ ಅವರ ಗಮನವಿರಬೇಕು. ಜಾಗತೀಕರಣಗೊಂಡ ಇಂದಿನ ಜಗತ್ತಿನಲ್ಲಿ ಅನುವಾದಕರ ಅಗತ್ಯ ಎಂದಿಗಿಂತ ಹೆಚ್ಚು ಗುರುತಿಸಲ್ಪಟ್ಟಿದೆ..ಅದೇ ರೀತಿ ಸಾಕಷ್ಟು ಕೃತಿಗಳೂ ಅನುವಾದಗೊಳ್ಳುತ್ತಿವೆ.ಕುವೆಂಪು ಭಾಷಾ ಭಾರತಿ, ಭಾರತೀಯ ಭಾಷಾ ಸಂಸ್ಥಾನ, ಕೇಂದ್ರ ಸಾಹಿತ್ಯ ಅಕಾಡೆಮಿ, ಮತ್ತು ಇನ್ನೂ ಅನೇಕ ಖಾಸಗಿ ಪ್ರಕಾಶನ ಸಂಸ್ಥೆಗಳು ಅನುವಾದಿತ ಕೃತಿಗಳನ್ನು ಹೊರತರುತ್ತಿವೆ. ನಾನು ಈ ಅಂಕಣದಲ್ಲಿ ನನ್ನ ಗಮನ ಸೆಳೆದ ಕೆಲವು ಅನುವಾದಿತ ಕೃತಿಗಳ ಸ್ಥೂಲ ಪರಿಚಯವನ್ನಷ್ಟೇ ಮಾಡುತ್ತೇನೆ. ಅವುಗಳ ರಕ್ಷಾಪುಟ ಮತ್ತು ಪ್ರಕಟಣಾ ವಿವರಗಳನ್ನು ನೀಡುವ ಮೂಲಕ ನೀವು ಅವುಗಳನ್ನು ಸಂಪಾದಿಸಿ ಓದುವ ಆಸಕ್ತಿ ತೋರಿಸಬೇಕೆಂಬುದು ನನ್ನ ಈ ಅಂಕಣದ ಉದ್ದೇಶ. ************************************* ಲೇಖಕರ ಬಗ್ಗೆ:- ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top