ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ಚಿಗುರಿದ ಕನಸು ಡಾ.ಶಿವರಾಮ ಕಾರಂತ ಮೊನ್ನೆ ನಮ್ಮ ಬತ್ತಲಹಳ್ಳಿಗೆ ಹೊರಟಾಗ ಎದುರಿಂದ ಕುರುಚಲು,ಸಣ್ಣ ಕಾಡು ಗಿಡಗಳಿಂದಲೇ ತುಂಬಿರುವ ಹಸಿರುಟ್ಟ ಬೆಟ್ಟ ಸಾಲುಗಳು ಬರಮಾಡಿಕೊಂಡವು. ಬೆಟ್ಟದ ತಪ್ಪಲಿನಲ್ಲಿ ಇರುವ ನಮ್ಮ ಹೊಲ,ತುಂಡು ಭೂಮಿಯ ಕಂಡಾಗ ಎಂತದೋ ಖುಷಿ. ಈ ದಿನ ಅದೆಲ್ಲವನ್ನೂ ಮತ್ತೆ ಮತ್ತೆ ನೆನೆಯಲು ಕಾರಣವಾಯ್ತು ಈ “ಚಿಗುರಿದ ಕನಸು”. ಈ ಕಾದಂಬರಿಯು ಶಿವರಾಮ ಕಾರಂತರು  ‌ಬರೆದಿರುವ‌ ಕಾದಂಬರಿಗಳಲ್ಲಿ ಒಂದಾಗಿದ್ದು ತುಂಬಾ ಅದ್ಭುತವಾದ ಕಾದಂಬರಿಯಾಗಿದೆ.                   ಈ ಕಾದಂಬರಿಯನ್ನು ಓದಿ ಮುಗಿಸಿದ ನನಗೆ ಈ ಒಂದು ವಿಷಯ ಮನಸ್ಸಿಗೆ ಬರದೆ ಇರಲು ಸಾಧ್ಯವಾಗಲಿಲ್ಲ ಅದೇನೆಂದರೆ ನಾವು ಸಹ ಈ ನಗರದ ಜೀವನವನ್ನು, ಯಾಂತ್ರಿಕ ಬದುಕನ್ನು ಬಿಟ್ಟು ಹಳ್ಳಿಗೆ ಹೋಗಿ ಅಲ್ಲಿ ಇರುವಂತಹ ಅಲ್ಪ ಸ್ವಲ್ಪ ಜಮೀನಿನಲ್ಲಿ ವೈಜ್ಞಾನಿಕವಾಗಿ ವ್ಯವಸಾಯವನ್ನು ಮಾಡಿಕೊಂಡು ನಿಸರ್ಗದ ಮಡಿಲಲ್ಲಿ ಸುಸ್ಥಿರವಾದಂತಹ ಜೀವನವನ್ನು ತೃಪ್ತಿಯಿಂದ ಜೀವಿಸಬಹುದಲ್ಲವೇ ಎಂಬುದು.                ಈ ಕಥೆಯ ನಾಯಕ ಶಂಕರ ರವರ ಪಾತ್ರ ಮಹತ್ವದ್ದು. ಅವರ ವ್ಯಕ್ತಿತ್ವ, ಯೋಚನಾ ಲಹರಿ, ಸಾಧನೆ, ಅವರ ಮಿತಭಾಷೆ ಎಲ್ಲವೂ ಇತರರಿಗೆ ಮಾದರಿಯಾಗಿದೆ.             ಉನ್ನತ ವ್ಯಾಸಂಗವನ್ನು ಮಾಡಿ ಮುಂಬಯಿ, ದೆಹಲಿಯಂತಹ ಮಹಾ ನಗರಗಳಲ್ಲಿ ಓದಿ, ಬೆಳೆದು ತಾನು ಬೆಳೆದ ವಾತಾವರಣಕ್ಕೆ ತೀರಾ ವಿರುದ್ಧವಾದಂತಹ ತನ್ನ ತಾತ ಮುತ್ತಾತಂದಿರು ಬಾಳಿ ಬದುಕಿದ ಒಂದು ಪುಟ್ಟ ಹಳ್ಳಿಗೆ ಬಂದು ಅಲ್ಲಿ ಅವರ ತಾತಂದಿರ ಜಮೀನು ಕಾಡು ಪಾಲಾಗಿದ್ದನ್ನು ದಕ್ಕಿಸಿಕೊಂಡು ತನ್ನ ಶ್ರಮ ಮತ್ತು ವೈಜ್ಞಾನಿಕ ವಿಧಾನಗಳಿಂದ ಆ ಭೂಮಿಯನ್ನು ಸಾಗುವಳಿ ಭೂಮಿಯನ್ನಾಗಿ ಮಾಡಿದ ಕೀರ್ತಿ ಶಂಕರ್ ರವರದ್ದಾಗಿದೆ.               ಶಂಕರ ರವರ ತನ್ನ ಆಸೆ, ಕನಸು ಆಗಿದ್ದಿದ್ದು ಏನೆಂದರೆ ತನ್ನ ತಾತ ನವರು ಬಾಳಿ ಬದುಕಿದ ಹಳ್ಳಿಯಲ್ಲಿ ಅವರ ಜಮೀನಿನಲ್ಲಿ ತಾನು ವ್ಯವಸಾಯವನ್ನು ಮಾಡಿಕೊಂಡು ಬದುಕಬೇಕು ಎಂಬುದು.ತನ್ನ ಈ ಆಸೆಯನ್ನು ತನ್ನ ಅಪ್ಪ ಅಮ್ಮನಿಗೆ ತಿಳಿಸಿದಾಗ ಅವರಿಂದ ಒಪ್ಪಿಗೆ ಸಿಗುವುದಿಲ್ಲ.ಕಾರಣ ಅವರಿಗೆ ಹಳ್ಳಿ, ವ್ಯವಸಾಯ ಇವು ತಮ್ಮ ಪ್ರತಿಷ್ಠೆಗೆ ಸರಿಹೊಂದುವುದಿಲ್ಲ ಎಂಬುದು.ತನ್ನ ಅಪ್ಪ ಅಮ್ಮ ನವರಿಂದ ಯಾವುದೇ ರೀತಿಯ ಆರ್ಥಿಕ ಸಹಾಯ ಸಿಗುವುದಿಲ್ಲ. ಆದರೂ ಛಲ ಬಿಡದೆ ಹಳ್ಳಿಗೆ ಬಂದು ಕೃಷಿಯನ್ನು ಮಾಡಿ ಯಶಸ್ವಿಯಾಗುತ್ತಾರೆ. ತನ್ನ ತಮ್ಮ ಅಣ್ಣನ ಆಸೆ ಕನಸುಗಳಿಗೆ ತನ್ನ ಕೈಲಾದಷ್ಟು ಹಣ ಸಹಾಯ ಮಾಡುತ್ತಾನೆ.                 ಶಂಕರ ರವರು ಹಳ್ಳಿಗೆ ಬಂದು ಕಾಡು ಬೆಳೆದುಕೊಂಡ ಜಮೀನಿನಲ್ಲಿ ವೈಜ್ಞಾನಿಕವಾಗಿ ಕೃಷಿ ಮಾಡಲು ಶುರು ಮಾಡುತ್ತಾರೆ.ಅವರ ಈ ಹಾದಿಯಲ್ಲಿ ಮೇಲಿಂದ ಮೇಲೆ ಕಷ್ಟಗಳು, ಆಘಾತಗಳು ಎಷ್ಟು ಬಂದರು ಧೃತಿಗೆಡುವುದಿಲ್ಲ.ಆ ಕಷ್ಟಗಳನ್ನು ಮೇಲಿಂದ ಮೇಲೆ ಬಂದ ತನ್ನ ಆಪ್ತರ ಸಾವುಗಳನ್ನು ಸಹನೆಯಿಂದ, ಧೈರ್ಯದಿಂದ ಎಲ್ಲಾ ತೊಂದರೆಗಳನ್ನು ನಿಭಾಯಿಸಿ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಾರೆ.       ಇವರ ಈ ಸಾಧನೆ ಸುತ್ತಾ ಹತ್ತಾರು ಹಳ್ಳಿಗಳಿಗೆ ಹಬ್ಬಿ ಇವರ ಮಾದರಿಯ ಕೃಷಿ ವಿಧಾನಗಳನ್ನು ಬೇರೆಯವರು ತಮ್ಮ ಕೃಷಿಯಲ್ಲಿ ಅಳವಡಿಸಿಕೊಳ್ಳಲು ಮನಸ್ಸು ಮಾಡುವರು. ಇದರಲ್ಲಿ ಮೊದಲಿಗರು ಶಂಕರರ ಗೆಳೆಯನಾದ ಸೀತಾರಾಮನ ತಮ್ಮ ಕೃಷ್ಣನೂ ಸಹ ಕೆಲವು ವರ್ಷಗಳು ಶಂಕರರೊಂದಿಗೆ ಕೆಲಸ ಮಾಡಿ ತಮ್ಮದೇಯಾದ ಹೊಸ ಜಮೀನನ್ನು ಕೊಂಡು ಅದನ್ನು ಶಂಕರ ರವರ ಮಾರ್ಗದರ್ಶನದಲ್ಲಿ ಸಾಗುವಳಿ ಮಾಡಿ ಯಶಸ್ವಿಯಾಗುತ್ತಾರೆ.               ಕಥಾನಾಯಕ ಶಂಕರ ರವರ ವ್ಯಕ್ತಿತ್ವ, ಸಾಧನೆ ಇಂದಿನ ಯುವಜನತೆಗೆ ಮಾದರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಹಳ್ಳಿಯಿಂದ ಸುಮಾರು ಜನ ನಗರಗಳಿಗೆ ಉದ್ಯೋಗ ಹುಡುಕಿಕೊಂಡು ಹೋಗುತ್ತಿದ್ದಾರೆ. ಇದರಿಂದ ಕೃಷಿಯ ಮೇಲೆ,ಅದರ ಪ್ರಗತಿಯ ಮೇಲೆ ತುಂಬಾ ದುಷ್ಪರಿಣಾಮಗಳುಂಟಾಗುತ್ತಿವೆ. ಯುವ ಜನತೆ ಇಂತಹ ದುಷ್ಪರಿಣಾಮಗಳಿಗೆ ಅವಕಾಶ ಕೊಡದೆ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಿ ಕೃಷಿಯನ್ನು ಆಧುನಿಕ ರೀತಿಯಲ್ಲಿ ಮಾಡಿ ಅಲ್ಲಿಯೇ ತಮ್ಮ ಬದುಕನ್ನು ಸುಸ್ಥಿರವಾಗಿ ಕಟ್ಟಿಕೊಂಡು ಇತರರಿಗೂ ನೆರವಾಗಬೇಕು ಎಂಬುದು ನನ್ನ ಆಶಯ…. ******** ಸೌಮ್ಯ.ವಿ.

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಮೂರು ದಾರಿಗಳು ಯಶವಂತ ಚಿತ್ತಾಲ ಮೂರು ದಾರಿಗಳು ಕಾದಂಬರಿ ಯಶವಂತ ಚಿತ್ತಾಲ ಸಾಹಿತ್ಯ ಭಂಡಾರ ಮೂರು ದಾರಿಗಳು ಯಶವಂತ ಚಿತ್ತಾಲರ ಮೊದಲ ಕಾದಂಬರಿ.ಭೀತಿ, ಪ್ರೀತಿ ಮತ್ತು ಭಂಡಾಯ ( ಆತ್ಮನಾಶ) ; ಇವು ಈ ಕೃತಿಯಲ್ಲಿ ಉದ್ಭವಿಸಿದ ಒಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮೂರು ವ್ಯಕ್ತಿತ್ವಗಳು ಕಂಡುಕೊಳ್ಳುವ ದಾರಿಗಳು. ಹನೇಹಳ್ಳಿ, ಸಾಣಿಕಟ್ಟಾ, ಗೋಕರ್ಣ ಮತ್ತು ಕುಮಟಾದ ಸುತ್ತಲಿನ ಪರಿಸರದ ಚಿತ್ರಣ, ಭಾಷೆ ಈ ಕಾದಂಬರಿಯಲ್ಲಿ ಸಮೃದ್ಧವಾಗಿ ಮೂಡಿಬಂದಿದೆ. ವಿಶ್ವನಾಥ ಶಾನಭಾಗರು ಸಾಣೇಕಟ್ಟೆಯ ಧಕ್ಕೆಯಿಂದ ಕುಮಟೆಯ ಕಡೆಗೆ ಹೋಗುವ ಬೋಟಿಯನ್ನು ಹತ್ತುವುದರೊಂದಿಗೆ ಕತೆ ಆರಂಭವಾಗುತ್ತದೆ. ವಿಶ್ವನಾಥ ಶಾನಭಾಗರು ಅನುಕೂಲಸ್ಥರು ಮತ್ತು ಅಂಗಡಿಯ ಮಾಲೀಕರು. ಅವರಿಗೆ ನಿರ್ಮಲಾ ಎಂಬ ಒಬ್ಬಳೇ ಮಗಳು. ಅವಳ ಮೇಲೆ ಒಂದು ಅಪವಾದ ಬಂದಿದೆ. ಅದು ಅವಳಲ್ಲಿ, ಪಾಲಕರಲ್ಲಿ, ಕುಟುಂಬದಲ್ಲಿ, ಸಮಾಜದಲ್ಲಿ ಹೇಗೆ ತಲ್ಲಣಗಳನ್ನು ಸೃಷ್ಟಿಸಿದೆ ಎಂಬುದೇ ಇಲ್ಲಿನ ಕಥಾಹಂದರ. ಶಾರದ ಮತ್ತು ವಿಶ್ವನಾಥರ ಮಗಳಾದ ನಿರ್ಮಲೆ ವಿದ್ಯಾಭ್ಯಾಸಕ್ಕಾಗಿ ಕಾರವಾರದ ಚಂದ್ರಭಾಗಿ ಮತ್ತು ಜೋಶಿಯವರ (ಅತ್ತೆ- ಮಾವ) ಮನೆಯಲ್ಲಿದ್ದವಳು. ರಾಮನಾಥ ಅವಳ ಬಾವ. ನಿರ್ಮಲೆ – ರಂಗಪ್ಪನ ಪ್ರಕರಣವನ್ನು ಮಾವನ ಮನೆಗೆ ತಿಳಿಸುವವರು ದೇವಪ್ಪ ನಾಯ್ಕ ಮಾಸ್ತರರು. ಈ ಫೋಟೋಶಾಪಿನ ರಂಗಪ್ಪ,ಪ್ರಿಯಾಗಿ, ವಲ್ಲಿಗದ್ದೆ ಸುಬ್ಬ ಇವರುಗಳಿಗೆ ಊರಿನಲ್ಲಿ ಹೀನ ಸುಳಿಯವರು ಎಂಬ ಹೆಸರಿದೆ.ಅಂತಹ ರಂಗಪ್ಪನ ಅಂಗಡಿಯಲ್ಲಿ ಶಾಲೆಯ ಗೆದೆರಿಂಗ್ ನ ರಾತ್ರಿ ನಿರ್ಮಲಾ ಕಾಣಿಸಿಕೊಂಡ ಸುದ್ದಿ ಊರಲ್ಲಿ, ನೆಂಟರಿಷ್ಟರಲ್ಲಿ ಧಿಗ್ಗನೆ ಹೊತ್ತಿಕೊಳ್ಳುತ್ತದೆ. ಆಗ ಆತಂಕಕ್ಕೆ ಒಳಗಾಗುವ ಶಾನುಭಾಗರು, ಸೀತಾ ಮತ್ತು ದಿ.ಉಪೇಂದ್ರ ಕೇಣಿಯವರ ಮಗ ವಾಸುದೇವನಿಗೆ ಮಗಳ ಮದುವೆ ಮಾಡಿಕೊಡುವ ಪ್ರಸ್ತಾಪ ಇಡುತ್ತಾರೆ. ಇದು ಸಮಾಜದಲ್ಲಿ ಮತ್ತಷ್ಟು ಅನುಮಾನವನ್ನು ಮೂಡಿಸುತ್ತದೆ. ವಾಸುದೇವ ಮಾಸ್ತರಿಕೆ ಮಾಡುತ್ತಿರುವವನು. ಅಂತಸ್ತಿನಲ್ಲಿ ವಿಶ್ವನಾಥರಿಗೆ ಸಾಟಿಯಿಲ್ಲ.ಮದುವೆಯ ಪ್ರಸ್ತಾಪ ಬಂದಾಗ ಸಹಜವಾಗಿ ಸಮಯ ಕೇಳುತ್ತಾನೆ. ನಂತರ ನಿರ್ಮಲೆಯ ಗುಲ್ಲು ತುಂಗಕ್ಕನ ಮೂಲಕ ಸರ್ವವ್ಯಾಪಿಯಾಗುತ್ತದೆ. ಅದು ಬಾಲ್ಯದಿಂದಲೂ ಗೆಳೆಯನಾದ ಶಿನ್ನನ ಮೂಲಕ ಇವನ ಕಿವಿಯನ್ನೂ ತಲುಪುತ್ತದೆ. ಸಾಹಿತಿಯಾದ ವಾಸುದೇವ ಇದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಮದುವೆಗೆ ತಯಾರಾಗುತ್ತಾನೆ. ಈ ಮಧ್ಯೆ ಸಂಬಂಧಿಕನಾದ ವೆಂಕಟರಮಣ ಹೆಚ್ಚಿನ ವಿಷಯ ತಿಳಿಯಲು ಶಿರಸಿಯಲ್ಲಿ ಖಾನಾವಳಿ ಮಾಡಿಕೊಂಡಿರುವ ಪ್ರಿಯಾಗಿಯ ಬಳಿ ತೆರಳುತ್ತಾನೆ. ಆಗ ಆತ ನೋಡುವುದು ಲೈಂಗಿಕ ರೋಗ ತಗುಲಿಸಿಕೊಂಡು ಹಾಸಿಗೆ ಹಿಡಿದ ವಲ್ಲಿಗದ್ದೆ ಸುಬ್ಬನನ್ನು.ಭಯಂಕರ ಅಸಹ್ಯನಾದ ಆತನನ್ನು ನೋಡಿ ಹೆದರಿ ಮನೆ ಸೇರಿದ ವೆಂಕಟರಮಣ ಮುಂದೆ ಜನರ ಬಾಯಿಗೆ ಆಹಾರವಾಗುತ್ತಾನೆ. ನಿರ್ಮಲಾಳ ಪ್ರಕರಣ ಹಿಂದೆ ಸರಿಯುತ್ತದೆ. ಈ ಮಧ್ಯೆ ನಿರ್ಮಲೆಯ ಮನಸ್ಥಿತಿಯಲ್ಲಿ ಬದಲಾವಣೆ ಉಂಟಾಗುತ್ತದೆ. ಒಂದು ದುರಂತ ಅಂತ್ಯದೊಂದಿಗೆ ಕಾದಂಬರಿ ಕೊನೆಯಾಗುತ್ತದೆ. ಶಿಕಾರಿ, ಕೇಂದ್ರವೃತ್ತಾಂತ ಕಾದಂಬರಿಗಳನ್ನು ಮತ್ತು ಅವರ ಕಥಾಸಂಕಲನಗಳನ್ನು ಓದಿ ಈ ಕೃತಿಯನ್ನು ಓದುವವರು ನೀವಾಗಿದ್ದರೆ ಕೊಂಚ ನಿರಾಸೆಯಾಗಬಹುದು. ಅದೇ ನೀವು ಚಿತ್ತಾಲರ ಅಭಿಮಾನಿಯಾಗಿದ್ದರೆ ಇದನ್ನು ಸವಿಯಲು ಮರೆಯದಿರಿ. ****** ಡಾ. ಅಜಿತ್ ಹರೀಶಿ

ಪುಸ್ತಕ ವಿಮರ್ಶೆ Read Post »

ಪುಸ್ತಕ ಸಂಗಾತಿ

ಪುಸ್ತಕ ಪರಿಚಯ

ಕಾನ್ಮನೆಯ ಕಾಲುದಾರಿ ಪಶ್ಚಿಮ ಘಟ್ಟದೊಳೆಗೇ ಹುದುಗಿರುವ ದಿನೇಶ ಹಲಿಮನೆಯವರ ಸುತ್ತಲಿನ ಪ್ರದೇಶಗಳಲ್ಲೇ ಹರಿದಾಡುವ ‘ಕಾನ್ಮನೆಯ ಕಾಲುದಾರಿ’ ಎಂಬ ಕಾದಂಬರಿಯೂ..! ದಿನೇಶ ಹಲಿಮನೆಯವರು ನನಗೆ ‘ಸಿರ್ವಂತೆ ಕ್ರಾಸ್‌’‌ ಕಥಾಸಂಕಲನ ಮತ್ತು ‘ಕಾನ್ಮನೆಯ ಕಾಲುದಾರಿ’‌ ಕಾದಂಬರಿ ಕಳುಹಿಸಿ ಎರಡು-ಮೂರು ತಿಂಗಳಾಗಿತ್ತು. ಇವುಗಳಲ್ಲಿ ‘ಸಿರ್ವಂತೆ ಕ್ರಾಸ್’ ಕಥಾಸಂಕಲನದ‌ ಬಗೆಗೆ ನನ್ನ ಅನಿಸಿಕೆ ಬರೆದು ಬಹಳ ದಿನವಾಯಿತು.‌ ಆದರೆ ಈ ‘ಕಾನ್ಮನೆಯ ಕಾಲುದಾರಿ’ ಕಾದಂಬರಿ ಬಗೆಗೆ ಇಷ್ಟು ದಿವಸ ನನ್ನ ಅನಿಸಿಕೆ ಬರೆಯಲಾಗಿರಲಿಲ್ಲ. ಈ ಕಾದಂಬರಿ ಓದಿದ್ದೆನಾದರೂ ಈ‌‌‍ ಕುರಿತು ಬರೆಯಲಾಗಿರಲಿಲ್ಲ. ಹಾಗಾಗಿ ಇಂದು ಅವಡುಗಚ್ಚಿ ಕುಳಿತು ಬರೆದೆನು. ಇದು ನನ್ನ ವ್ಯಯಕ್ತಿಕ ಅನಿಸಿಕೆ ಈ ಕಾದಂಬರಿ ಕುರಿತು ಎಂದು ಹೇಳುತ್ತಾ ನೋಡೋಣ ಬರ್ರಿ ಈ ‘ಕಾನ್ಮನೆಯ ಕಾಲುದಾರಿ’ ಕಾದಂಬರಿ ಬಗೆಗೆ… ಅದು ಹೀಗಿದೆ… ಶಿವರಾಮ ಕಾರಂತರಂತೆ‌ ಪಶ್ಚಿಮ ಘಟ್ಟದೊಳಗೆ ಹುದುಗಿರುವ ದಿನೇಶ ಹಲಿಮನೆಯವರ ಸುತ್ತಮುತ್ತಲಿನ ಪ್ರದೇಶಗಳಲ್ಲೇ ಹರಿದಾಡುತ್ತದೆ ಈ ಕಾದಂಬರಿಯ ಕಥಾಹಂದರ. ಅದೇ ಕಾರಣಕ್ಕೇ ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. ಕಾಂಬರಿಕಾರರಾದ ದಿನೇಶ ಹುಲಿಮನೆ ಅವರು ಮೂಲತಃ ಅವರ ಹತ್ತಿರದವರೇ ಎಂಬುದು ಕಾದಂಬರಿಯ ಆಪ್ತತೆಯನ್ನು ಹೆಚ್ಚಿಸುತ್ತದೆ. ಕಾದಂಬರಿಕಾರರು ಪ್ರಾರಂಭದಲ್ಲೇ ಹೇಳುವ ಸಮಾಜದಲ್ಲಿ ಕೆಲವರು ಜೀವನದ ರಥವೇರಿ ಸಾಗಿದರೆ ಮತ್ತೆ ಕೆಲವರು ಬದುಕಿನ ಬಂಡಿಯನ್ನು ಎಳೆಯುತ್ತಾರೆ. ಎಳೆಯುವುದೂ ಕಷ್ಟವಾದಾಗ ತಳ್ಳುವುದು ಸಹಜ. ಆಧುನೀಕರಣ, ಸಂಪ್ರದಾಯ, ಸಂಬಂಧ, ಇತ್ಯಾದಿಗಳ ನಡುವೆ ಸಂಸಾರ ನಡೆಸುವ, ಎಳೆಯುವ ಅಥವಾ ತಳ್ಳುವ ಸಮಾಜದಲ್ಲಿ, ಸಾಂದರ್ಭಿಕವಾಗಿ ನಡೆಯುವ ಎಷ್ಟೋ ಘಟನೆಗಳನ್ನು ನೇರವಾಗಿ ಸರಿ ಅಥವಾ ತಪ್ಪು ಎಂದು ತೀರ್ಮಾನಿಸುವುದು ಅಷ್ಟು ಸುಲಭದ ಮಾತಲ್ಲ. ಹೀಗೆಂಬ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಈ ಕಾದಂಬರಿಯನ್ನು ಓದಲೇಬೇಕು… ಈ ಕಾದಂಬರಿ ದಿನೇಶ ಹಲಿಮನೆಯವರ ಮೊದಲ ಕಾದಂಬರಿ ಎಂದರೆ ಒಂದು ಕ್ಷಣ ಬೆರಗಾಗಬೇಕು ನಾವು ಅಷ್ಟು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ..! ಬರವಣಿಗೆ ಎಲ್ಲರಿಗೂ ಒಲಿಯುವುದಲ್ಲ. ಅದೂ ಕಾದಂಬರಿಯನ್ನು ಬರೆಯಲು ಬಹಳ ತಾಳ್ಮೆ ಬೇಕು. ತಮ್ಮ ಮೊದಲ ಪ್ರಯತ್ನದಲ್ಲಿಯೇ ದಿನೇಶ‌ ಹಲಿಮನೆಯವರು ಗೆದ್ದಿದ್ದಾರೆ. ಹೌದು, ಈ ಕಾದಂಬರಿಯಲ್ಲಿ ತೇಜಸ್ವಿಯವರ ಬರವಣಿಗೆಯ ಛಾಯೆ ದಟ್ಟವಾಗಿದೆ ಎಂಬುದೂ ನಿಜ. ಓದುತ್ತಿರುವಾಗ ಹಲವೆಡೆ ಚಿದಂಬರ ರಹಸ್ಯದ ಮುಂದುವರಿದ ಭಾಗವೇ ಇದು ಎಂದು ಎನ್ನಿಸಿದ್ದು ನಿಜವೂ ಹೌದು. ಆದರೆ ಕಾದಂಬರಿಯ ಉತ್ತರಾರ್ಧದಲ್ಲಿ ಆ ನೆರಳಿನಿಂದ ಹೊರಬಂದು ನಾಗಾಲೋಟದಲ್ಲಿ ಮುಂದೆ ಸಾಗಿದ್ದಾರೆ ದಿನೇಶ ಹಲಿಮನೆಯವರು. ನಡುನಡುವೆ ಬರುವ ನಾಗಜ್ಜಿಯ ಪಾತ್ರ ನನಗೆ ಕಾರಂತರ ಮೂಕಜ್ಜಿಯನ್ನೊಮ್ಮೆ ನೆನಪಿಸಿತು ಎಂದರೆ ಅತಿಶಯೋಕ್ತಿಯೇನಲ್ಲ ಎಂಬುದು ನನ್ನ ಭಾವನೆ..! ಎತ್ತು ಕಾಣೆಯಾದಾಗ ಬೈರ ಕಾಡಿನ ನಡುವಿನಲ್ಲಿರುವ ಹುಲಿದೇವರ ಬನಕ್ಕೆ ಬಂದು ಹುಲಿದೇವರ ಕಲ್ಲಿಗೆ ದೂರದಿಂದಲೇ ಕೈಮುಗಿಯುವ ಸನ್ನಿವೇಶ, ಜನರ ನಂಬಿಕೆ, ಹಾಗೂ ಭಯ ಎರಡರ ಪ್ರತಿರೂಪವೂ ಹೌದು. ಹಿಂದೆಲ್ಲ ಹುಲಿಗಳ ಸಂಖ್ಯೆ ಜಾಸ್ತಿ ಇದ್ದಾಗ, ಅಲ್ಲಲ್ಲಿ ಹುಲಿಗಳ ತಾಣವನ್ನು ಗುರುತಿಸುವುದಕ್ಕಾಗಿಯೇ ಹುಲಿದೇವರ ಕಟ್ಟೆ, ಹುಲಿಮನೆ, ಹುಲಿಗುಡಿ, ಹುಲೇಕಲ್ ಅಥವಾ ಹುಲಿಕಲ್ಲು, ಹುಲಿಕಟ್ಟೆ, ಹುಲಿಯೂರು, ಇತ್ಯಾದಿ ಹೆಸರುಗಳು ಜನಿಸಿದ್ದು. ಅಂತಹ ಹೆಸರುಗಳು ಅಸಂಖ್ಯ. ಇಲ್ಲಿ ಬೈರ ಹುಲಿಯಪ್ಪ ದೇವರ ಬಳಿ ಬಂದು ಕೆಂಪನಿಗೆ ಏನೂ ಆಗದೆ ಇರಲಿ, ದೊಡ್ಡ ಹಬ್ಬಕ್ಕೆ ಒಂದು ಬಾಳೆಕೊನೆ ಒಪ್ಪಿಸಿಕೊಡ್ತೀನಿ ಎಂದು ಹರಕೆ ಹೊರುತ್ತಾನೆ. ಅದೂ, ಹುಲಿದೇವರ ಕಲ್ಲಿನ ಬಳಿಗೆ ಹೋಗದೇ..! ಕೆಂಪ ಎಂಬ ಎತ್ತನ್ನು ಒಂದು ಪ್ರಾಣಿ ಎಂದು ನೋಡದೇ ತನ್ನ ಮನೆಯ ಸದಸ್ಯನೇನೋ ಎಂದು ಭಾವಿಸುವ ಬೈರ, ಹುಲಿದೇವರ ಕಲ್ಲಿನ ಬಳಿ ಹೋದರೆ ಮೈಲಿಗೆ ಆಗುತ್ತದೆ ಎಂದೂ ಯೋಚಿಸುತ್ತಾನೆ..! ಹುಲಿಯನ್ನೂ ಒಂದು ಪ್ರಾಣಿ ಎಂದು ಭಾವಿಸದೇ ಒಂದು ದೇವರಾಗಿ ಕಾಣುತ್ತಾನೆ. ಕೊಲ್ಲುವ ಹುಲಿಯೂ ದೇವರೇ… ಸಾಯುವ ಎತ್ತೂ ದೇವರೇ ಎಂಬುದು ಭಾರತೀಯ ಜೀವನ ದರ್ಶನ. ಇಂತಹ ಹಲವು ಘಟನೆಗಳು ಈ ಕಾದಂಬರಿಯಲ್ಲಿ ಸುಂದರವಾಗಿ ವೈಬವಿಕರಿಸಲ್ಪಟ್ಟಿದೆ… ದೊಡ್ದಬ್ಬ ಅಥವಾ ದೀಪಾವಳಿ ಹಬ್ಬದ ಸಡಗರ, ಸೊಬಗು, ಆಚರಣೆಗಳು, ಹಸುಗಳಿಗೆ ಬೇಕಾದ ದಂಡೆ ಹುರಿ ಹೊಸೆಯುವಂತಹ ಪದ್ದತಿಗಳು ಕಾದಂಬರಿಯ ಮೊದಲಲ್ಲಿ ಸೊಗಸಾಗಿ ಚಿತ್ರಿತವಾಗಿವೆ. ಇದೇ ಆಚರಣೆಗಳನ್ನು ಕಾದಂಬರಿಯ ಅಂತ್ಯದಲ್ಲಿ, ನಿರುತ್ಸಾಹದಿಂದ, ಯಾಂತ್ರಿಕವಾಗಿ ಚಿತ್ರಿಸುವ ಮೂಲಕ ಕಾದಂಬರಿಕಾರ ಕಾದಂಬರಿ ಸಾಗಿ ಬಂದ ಕಾಲಘಟ್ಟವನ್ನು ಹಾಗೂ ನಮ್ಮ ಇಂದಿನ ಬದುಕು ಸಾಗಿಬಂದ ಕಾಲಘಟ್ಟವನ್ನೂ ಚಿತ್ರಿಸಿದ್ದಾರೆ. ಬೂರೆ ಹಬ್ಬ, ಬೂರ್ಗಳು, ಬಿಂಗಿಪದ, ಕಹಿ ಸವತೆಯನ್ನು ತಂದು ಹಂಡೆಗೆ ಕಟ್ಟಿದ್ದು, ಹಬ್ಬದ ದಿನ ಒಬ್ಬರ ಮನೆಯಲ್ಲಿ ಜಾಗಟೆ ಸದ್ದು ಮುಗಿಯುತ್ತಿದ್ದಂತೆ ಮೊತ್ತೊಂದು ಮನೆಯಿಂದ ಕೇಳಿಬರುವುದು, ದನ-ಕಾರುಗಳನ್ನು ಬೆಚ್ಚುವುದು ಇತ್ಯಾದಿ ವಿವರಗಳನ್ನು ಓದುತ್ತಿರುವಾಗ, ಹಬ್ಬದ ಸೊಗಸು ಮೊತ್ತೊಮ್ಮೆ ನಮ್ಮ ಕಣ್ಣು-ಮನಸುಗಳಲ್ಲಿ ತುಂಬಿಕೊಳ್ಳುತ್ತದೆ. ವಿಳ್ಯದ ಎಲೆಯಿಂದ ದೃಷ್ಟಿ ತೆಗೆಯುವ ನಂಬಿಕೆ, ಕೊಟ್ಟೆ ಕಡುಬು ಮಾಡುವ ಬಗೆ, ಬಿಂಗಿ ಪದ ಹಾಡಲು ಬರುವವರಿಗೆ ಹೋಳಿಗೆ-ಕಡುಬು ಕೊಡುವ ಸಂಪ್ರದಾಯ ಇತ್ಯಾದಿಗಳನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಕಾದಂಬರಿಕಾರ… ಕುರಿ ಕಡಿದು ಬಾಡೂಟ ಮಾಡುವುದೇ ಆಗಿದ್ದರೂ ಅಲ್ಲಿ ಹಿಂಸೆ ಆಗಬಾರದು ಎಂಬ ಒಂದು ನಂಬಿಕೆ ಹಳ್ಳಿಗಳಲ್ಲಿ ಈಗಲೂ ಇದೆ. ಅದನ್ನೇ ಮಾದಿ ಈರನಿಗೆ “ಥೂ! ಹುಚ್ಚು ಮುಂಡೇಗಂಡಾ, ನಾಲ್ಕೈದು ಕೊಚ್ಚು ಹಾಕಿ ಕಡದ್ಯಂತಲ್ಲೋ, ಎರಡು ಕೊಚ್ಚಿಗೂ ತುಂಡಾಗ್ದೆ ಕುರಿ ಬಿದ್ದು ಒದ್ದಾಡ್ತಂತೆ, ಹಂಗೆಲ್ಲಾ ಮಾಡಿದ್ರೆ ಪಾಪ ಬತೈತೆ, ಕುರಿನಾ ಒಂದೇ ಕೊಚ್ಚಿಗೆ ಕಡಿದ್ರೆ ಸರಿ, ಅದಿಲ್ಲಾ ಅಂದ್ರೆ ನನ್ನ ಕೈಯಾಗೆ ಆಗಲ್ಲಾ ಅಂತ ಸುಮ್ನೇ ಇರಬೇಕಪ್ಪ. ಅದು ಬಿಟ್ಟು ಪರ ಊರೋರ ಮುಂದೆ ಹಿರೇತನ ಎಂತಾಕೆ ಮಾಡೋದು“ ಎಂದು ತಾರಾಮಾರಾ ಬೈದು ಹೇಳುತ್ತಾಳೆ. ಕಾದಂಬರಿಕಾರರು ಈ ತರಹದ ಸಣ್ಣಸಣ್ಣ ವಿವರಗಳನ್ನೂ, ಸೂಕ್ಷ್ಮ ವಿಚಾರಗಳನ್ನೂ ಕಟ್ಟಿಕೊಡುವ ಮೂಲಕ ಭವಿಷ್ಯದಲ್ಲಿ ಇನ್ನೂ ಸೊಗಸಾದ ಕೃತಿಗಳನ್ನು ಬರೆಯಬಲ್ಲರು ಎಂಬ ನಂಬಿಕೆ ಮೂಡಿಸಿದ್ದಾರೆ… ಬೈರ ನಿಧನನಾಗಿದ್ದಾನೆ ಎಂಬುದನ್ನು ತಿಳಿದ ನಾಯಿ, ಕೊಟ್ಟಿಗೆಯಲ್ಲಿದ್ದ ಎತ್ತುಗಳೂ ನೀರು, ಆಹಾರ ಮುಟ್ಟದೇ ಇದ್ದವು ಎಂದು ಚಿತ್ರಿಸುವ ಕಾದಂಬರಿಕಾರರು ಮಾನವನಿಗಿಂತ ಮೂಕ ಪ್ರಾಣಿಗಳೇ ಮೇಲು ಎಂಬ ಒಂದು ಝಲಕ್ ನೀಡುತ್ತಾರೆ. ಹಳ್ಳಿಗಳಲ್ಲಿ ಜಾತಿ ಜಾತಿಗಳು ಅಸ್ತಿತ್ವದಲ್ಲಿದ್ದರೂ ಅವರ ನಡುವೆ ಇರುವ ಸಾಮರಸ್ಯ ಹೇಗೆ ಕೆಲವರ ಕುತಂತ್ರ, ಸ್ವಾರ್ಥ, ದುರಾಸೆ, ನೀಚತನಗಳಿಂದ ಹಾಳಾಗುತ್ತದೆ, ಹಾಳಾಗುತ್ತಿತ್ತು ಎಂಬ ವಿಷಯ ಪ್ರಸ್ತಾಪಿಸುತ್ತಾ ಕಾದಂಬರಿ ಬೆಳೆಸುತ್ತಾ ಹೋಗಿದ್ದಾರೆ. ಪ್ರೀತಿ, ಪ್ರೇಮ, ಬದುಕು ಕಟ್ಟಿಕೊಳ್ಳಲು ಪಟ್ಟಣಕ್ಕೆ ವಲಸೆ ಹೋಗುವುದು, ಮುಂದುವರಿದು ವಿದೇಶಕ್ಕೂ ಹೋಗುವುದು, ಅವುಗಳಿಂದ ಕುಟುಂಬ ಮಟ್ಟದಲ್ಲಿ ಆಗುತ್ತಿರುವ ಸಂಕಷ್ಟಗಳು, ತಂದೆ, ಅಣ್ಣ ತೀರಿದರೂ ವಿಷಯ ತಿಳಿಸಲಾಗದ ಪರಿಸ್ಥಿತಿ ಇಂತಹ ಹಲವಾರು ವಿಷಯಗಳು, ನಮ್ಮ ಇಂದಿನ ಬದುಕಿನ ಪ್ರತಿಫಲನವೇ ಸರಿ, ಮತ್ತು ಕಾದಂಬರಿರಕಾರು ಅವುಗಳನ್ನು ಎಲ್ಲೂ ಕೃತಕವೆನ್ನಿಸುವಂತೆ ಬರೆದಿಲ್ಲ. ಬಲಿಷ್ಟರಾದವರು ತಮ್ಮ ಸ್ವಾರ್ಥಕ್ಕೆ ಈ ಕುಟುಂಬಕ್ಕೆ ಕಟ್ಟಿ ಕೊಡಲು ಹೊರಟಾಗ ಬರುವ ಒಂದು ವಾಕ್ಯ “ಕಾನ್ಮನೆಯ ಕಾಲುದಾರಿಯಲ್ಲಿ ಹುಲ್ಲು ಬೆಳೆಯದಿರಲಿ“ ಎಂಬುದು ಇಷ್ಟವಾಯಿತು. ನಮ್ಮ ಮನದ ದಾರಿಯಲ್ಲೂ ಹುಲ್ಲು ಬೆಳೆಯದಿರಲಿ, ಅಂದರೆ ನಮ್ಮ ಮನದಲ್ಲೂ ಉತ್ತಮ ವಿಚಾರಗಳು ಪದೇಪದೇ ಓಡಾಡುತ್ತಾ ಇರಲಿ… ಹೇಗೆ ಹಿಂದುಳಿದವರನ್ನು ಕೆಲವು ಸ್ವಾರ್ಥಿಗಳು ಬಳಸಿಕೊಳ್ಳುತ್ತಾರೆ, ಹೇಗೆ ಕೆಲವು ತತ್ವಗಳು ಜನರನ್ನು ಹಾಳುಮಾಡುತ್ತವೆ. ಅನ್ಯಧರ್ಮದ ಸಂಘಟನೆಗಳ ಮುಖವಾಡ ಹೇಗೆ ನಿಧಾನವಾಗಿ ಬಯಲಾಗುತ್ತದೆ, ಹೇಗೆ ಅನ್ಯಾಯವಾಗಿ ಪಾಪದ ಜನರು ತಮ್ಮದಲ್ಲದ ತಪ್ಪಿಗೆ ನಷ್ಟ, ಸಂಕಟ ಅನುಭವಿಸುತ್ತಾರೆ ಎಂಬ ವಿವರಗಳನ್ನೂ ಕಾದಂಬರಿಕಾರರು ಸೊಗಸಾಗಿ ಸೇರಿಸಿದ್ದಾರೆ… ಕಾದಂಬರಿ ಮೊದಮೊದಲು ತೇಜಸ್ವಿಯವರ ಬರಹಗಳಂತೆ ಆಪ್ತವಾದರೆ, ನಂತರ ನಮ್ಮನ್ನು ಗಂಭೀರ ಚಿಂತನೆಗೆ ಹಚ್ಚುತ್ತದೆ ಕೂಡಾ..! ವಿವಾಹದ ಬಗ್ಗೆ “ಮೇದಿನಿ ಮಠ“ ದ ಸ್ವಾಮಿಗಳ ನಿಲುವು, ಅವರನ್ನು ತಮ್ಮೆಡೆಗೆ ಸೆಳೆಯಲು ಹೋಗಿ ತಾವೇ ಕಕ್ಕಾಬಿಕ್ಕಿಯಾಗುವ ದೊಡ್ಡೇಗೌಡ ಮತ್ತು ಮಹಾಬಲ, ಅಲ್ಲಿನ ಚರ್ಚೆಗಳು ನಮ್ಮನ್ನು ವಿಚಾರ ಮಾಡಲು ಪ್ರಚೋದಿಸುವುದೂ ನಿಜ… ಆದರೆ ಅಂತ್ಯ ನನಗೆ ತೃಪ್ತಿ ತರಲಿಲ್ಲ. ಅಂತ್ಯವನ್ನು ಓದುಗರ ಕಲ್ಪನಾಶಕ್ತಿಗೇ ಬಿಡುವುದು ಒಂದು ಕಥನ ತಂತ್ರ ಹೌದಾದರೂ, ಇನ್ನಷ್ಟು ಮುಂದುವರಿಸಬಹುದಿತ್ತೇನೋ ಎನ್ನಿಸಿದ್ದಂತೂ ನಿಜ… *********** ಕೆ.ಶಿವು.ಲಕ್ಕಣ್ಣವರ

ಪುಸ್ತಕ ಪರಿಚಯ Read Post »

ಪುಸ್ತಕ ಸಂಗಾತಿ

ಪುಸ್ತಕ

ಅಸಹಾಯಕ ಆತ್ಮಗಳು ಸಣ್ಣ ಕಥೆಗಳು ವೇಶ್ಯಾವಾಟಿಕೆಯ ನರಕದ ಬದುಕಿಗೆ ಯಾವ ಹೆಣ್ಣು ಮಗಳೂ ಸ್ವಇಚ್ಚೆಯಿಂದ ಅಡಿಯಿಡುವುದಿಲ್ಲ. ಬದುಕಿನ ಹಲವು ಅನಿವಾರ್ಯ ಘಟನೆಗಳು ಮತ್ತು ಅವರುಗಳ ಬದುಕಿನಲ್ಲಿ ಬರುವ ಅನಿರೀಕ್ಷಿತ ವ್ಯಕ್ತಿಗಳು ಅವರನ್ನು ವೇಶ್ಯಾವಾಟಿಕೆಯ ಕೂಪದೊಳಗೆ ಬೀಳುವಂತೆ ಮಾಡುತ್ತಿವೆ. ಇಂತಹ ಹತ್ತಾರು ಹೆಣ್ಣುಮಕ್ಕಳನ್ನು ಲೇಖಕರು ಖುದ್ದಾಗಿ ಭೇಟಿಯಾಗಿ ಅವರ ಬಾಯಿಂದಲೇ ಕೇಳಿ ತಿಳಿದ ಅವರ ಬದುಕಿನ ಕರುಣಾಜನಕ ಕತೆಗಳೇ ಈ ಪುಸ್ತಕದ ಒಳಗಿರುವ ಆತ್ಮಗಳು. ಪ್ರಿಯರೆ,ನನ್ನ ‘ಅಸಹಾಯಕ ಆತ್ಮಗಳು’ my lang ನಲ್ಲಿ e-book ರೂಪದಲ್ಲಿ ಪ್ರಕಟವಾಗಿದೆ.ಬೆಲೆ ಕೇವಲ99=00 ರೂಪಾಯಿಗಳು.ಪುಸ್ತಕ ಕೊಳ್ಳುವ ರೀತಿ.ನಿಮ್ಮಮೊಬೈಲಲ್ಲಿ mylang ಡೌನ್ ಲೋಡ್ ಮಾಡಿ ಲಾಗಿನ್ ಆಗಿ ನಿಮಗೆ ಅನುಕೂಲವಾದ ರೀತಿಯಲ್ಲಿ online ನಲ್ಲಿ ಹಣ ಸಂದಾಯ ಮಾಡಿ -ಪುಸ್ತಕ ಪಡೆಯಿರಿ.

ಪುಸ್ತಕ Read Post »

ಪುಸ್ತಕ ಸಂಗಾತಿ

ಪುಸ್ತಕ

ಪ್ರಭುಲಿಂಗ ಲೀಲೆ ಚಾಮರಸ  ಚಾಮರಸನ ಮಹಾಕಾವ್ಯ ‘ಪ್ರಭುಲಂಗಲೀಲೆ’ಯೂ..! ಚಾಮರಸನು ಕನ್ನಡದ ಪ್ರಸಿದ್ಧ ಕವಿ. ಇವರು ‘ಪ್ರಭುಲಿಂಗ ಲೀಲೆ’ಯು ಭಾಮಿನಿ ಷಟ್ಪದಿಯಲ್ಲಿ ಬರೆಯಲಾದ ಈತನ ಪ್ರಸಿದ್ಧ ಕಾವ್ಯವಾಗಿದೆ. ಇವರು ಇಮ್ಮಡಿ ಪ್ರೌಢದೇವರಾಯನ ರಾಜಾಶ್ರಯದಲಿದ್ದವನು. ಅನ್ಯಮತ ಕೋಳಾಹಲ, ವೀರಶೈವಾಚಾರ ಮಾರ್ಗ ಸಾರೋದ್ಧಾರ ಇವನಿಗೆ ಸಂದಿದ ಬಿರುದುಗಳು… ನಡುಗನ್ನಡದ ಶ್ರೇಷ್ಠ ಕಾವ್ಯ ಎಂದು ಪ್ರಸಿದ್ಧವಾಗಿರುವ ‘ಪ್ರಭುಲಿಂಗಲೀಲೆ’ಯ ಕರ್ತೃ ಈತ. ವೀರಶೈವ ಕವಿ. ವಿಜಯನಗರದ ಪ್ರೌಢ ದೇವರಾಯನ ಕಾಲದ ನೂರೊಂದು ವಿರಕ್ತರಲ್ಲಿ ಗಣನೆಯಾಗಿದ್ದಾನೆ. ವೀರಶೈವಾಚಾರ ಮಾರ್ಗಸಾರೋದ್ಧಾರ, ಅನ್ಯಮತ ಕೋಳಾಹಳ ಎಂಬ ಬಿರುದುಗಳನ್ನು ಪಡೆದಿದ್ದ ಈತನ ಸ್ಥಳ ಗದಗ ಇಲ್ಲವೇ ನಾಗಣಾಪುರ ಎಂದು ಹೇಳಲಾಗಿದೆ…. ಹರಿಹರ, ರಾಘವಾಂಕರ ತರುವಾಯ ಐತಿಹಾಸಿಕ ವ್ಯಕ್ತಿಗಳನ್ನು ಕುರಿತು ಕಾವ್ಯ ಬರೆದವರಲ್ಲಿ ಚಾಮರಸ ಅಗ್ರಗಣ್ಯನಾಗಿದ್ದನು. 25 ಗತಿಗಳು ಮತ್ತು 1111 ಪದ್ಯಗಳನ್ನು ಒಳಗೊಂಡಿರುವ ‘ಪ್ರಭುಲಿಂಗಲೀಲೆ’ ಮಧ್ಯಮ ಗಾತ್ರದ ಕಾವ್ಯವಾಗಿದೆ. ‘ಪ್ರಭುಲಿಂಗಲೀಲೆ, ಎಂದರೆ ಪ್ರಭುವೇ ಲಿಂಗಲೀಲೆಯಲ್ಲಿ ಮೆರೆದುದು ಎಂಬ ಭಾವ ಬರುವಂತೆ ಹೆಸರಿಸಿ, ಕಾವ್ಯದ ಉದ್ದಕ್ಕೂ ಅದೇ ರೀತಿ ಅಲ್ಲಮನ ಚರಿತ್ರೆಯನ್ನು ಕವಿ ಉಜ್ಜ್ವಲವಾಗಿ ಚಿತ್ರಿಸಿದ್ದಾನೆ. ಕವಿಯ ವಿಷಯವಾಗಿ ಹೆಚ್ಚಿನ ಯಾವ ಮಾಹಿತಿ ಸಿಗದಿದ್ದರೂ ಆತ ಚಿತ್ರಿಸಿರುವ ಅಲ್ಲಮನ ಚರಿತ್ರೆಯನ್ನೇ ಆಧರಿಸಿ ಊಹಿಸುವುದಾದರೆ ಚಾಮರಸನೂ ತನ್ನ ಕಥಾನಾಯಕನಂತೆ ವಿರಕ್ತನೂ, ಸಂಯಮಿಯೂ ಸದಾಜಾರ ಸಂಪನ್ನನೂ ಆಗಿದ್ದನೆಂದು ಊಹಿಸಬಹುದಾಗಿದೆ… ಹನ್ನೆರಡನೆಯ ಶತಮಾನದಲ್ಲಿ ಮಾನವಕುಲದ ಉದ್ಧಾರಕ್ಕಾಗಿ ನಡೆದ ಶಿವಶರಣರ ಕ್ರಾಂತಿಯಲ್ಲಿ ಅಲ್ಲಮಪ್ರಭು ಜ್ಞಾನನಿಧಿಯಾಗಿ ವೈರಾಗ್ಯ ಮೂರ್ತಿಯಾಗಿ ಕಂಗೊಳಿಸಿದ್ದಾನೆ. ಅಂಧಾಭಿಮಾನಕ್ಕೆ ಒಳಗಾಗದೆ ಸಾಧಕರ ಲೋಪ ದೋಷಗಳ ಮೇಲೆ ಜ್ಞಾನದ ಬೆಳಕನ್ನು ಬೀರಿ ಅವರನ್ನು ಒರೆದು, ಕೆಡೆನುಡಿದು, ದಾರಿ ತೋರಿ ಸಮಸ್ತಜಾತಿಯ ಜಾಲವನ್ನು ಸರ್ವವನ್ನು ಕರುಣಿಸಿ, ಉದ್ಧರಿಸುತ್ತ ಸಾಗಿದ ಈ ಮಹಾತ್ಮನ ದಿವ್ಯ ವ್ಯಕ್ತಿತ್ವವನ್ನು ಈ ಕಾವ್ಯ ಅಪೂರ್ವವಾದ ರೀತಿಯಲ್ಲಿ ಚಿತ್ರಿಸುತ್ತದೆ. ಅಲ್ಲಮ ಪ್ರಭುವಿನ ಚರಿತ್ರೆಯನ್ನು ಮೊಟ್ಟಮೊದಲು ಬರೆದ ಹರಿಹರ ತನ್ನ ಪ್ರಭುದೇವರ ರಗಳೆಯಲ್ಲಿ ಅಲ್ಲಮ ಕಾಮಲತೆಗೆ ಮರುಳಾಗಿ ವಿರಹದಿಂದ ಬೆಂದು ವೈರಾಗ್ಯ ಪಡೆದಂತೆ ಚಿತ್ರಿಸಿದ್ದರೆ `ಲಲಿತನಿರ್ಮಲ ಚಂದ್ರಕಾಂತದ ಶಿಲೆಯ ಹತ್ತಿರ ಲತೆಯ ದಾವಾನಳನು ಕೊಳಲಾಜ್ವಾಲೆಯಾ ಶಿಲೆಯೊಳಗೆ ತೋರ್ಪಂತೆ ತಿಳಿಯದಯದ ಜನಕೆ ಮಾಯೆಯ ತಳಿತ ಕಾಮಜ್ವಾಲೆಯಲ್ಲಮನೊಳಗೆ ಪ್ರತಿಬಿಂಬಿಸಿದುದಾತನೆ ಕಾಮಿಯೆಂಬಂತೆ-ಎಂದು ಚಾಮರಸ ಅಲ್ಲಮನ ಗುರುಗುಹೇಶ್ವರ ಸ್ವರೂಪದ ದರ್ಶನ ಮಾಡಿಸಿದ್ದಾನೆ. ತನ್ನ ಕಾವ್ಯ `ಸತ್ತವರ ಕಥೆಯಲ್ಲ ಜನನದ ಕುತ್ತದಲ್ಲಿ ಕುದಿ ಕುದಿದು ಕರ್ಮದ ಕತ್ತಲೆಗೆ ಸಿಲುಕುವರ ಸೀಮೆಯ ಮಾತು ತಾನಲ್ಲ ಎಂದು ಘೋಷಿಸಿ `ಸತ್ಯಶರಣರು ತಿಳಿವುದೀ ಪ್ರಭುಲಿಂಗಲೀಲೆಯನು’ ಎಂದಿರುವುದು ಕವಿಯ ಉದ್ದೇಶಕ್ಕೆ ಸಾಕ್ಷಿ… ಮಲಯಜದ ಮರ ಗಾಳಿ ಸೋಂಕಿನಲುಳಿದ ಮರ ಪರಿಮಳಿಸುವಂತೆ ಅಲ್ಲಮನ ದಿವ್ಯ ಸಂಪರ್ಕದಿಂದ ಬಸವಣ್ಣ, ಸಿದ್ಧರಾಮ, ಗೊಗ್ಗಯ್ಯ, ಗೋರಕ್ಷ, ಮಾಯಾದೇವಿ, ಮಹಾದೇವಿಯಕ್ಕ, ಮುಕ್ತಾಯಕ್ಕಮೊದಲಾದವರು ಕಣ್ಗೆಸೆದರೂ ಆಯಾ ಪಾತ್ರವೃಕ್ಷಗಳು ತಮ್ಮ ಸತ್ತ್ವದಿಂದಲೇ ಬೆಳೆದು, ತಂತಮ್ಮ ನೆಲೆಯಲ್ಲಿ ನಿಂತು ಅಲ್ಲಮನ ಪಾದಕ್ಕೆ ಬಾಗಿ ಹೂ ಬಿಟ್ಟಿವೆ. ಒಂದು ದೃಷ್ಟಿಯಿಂದ ಪಾರ್ವತಿಯ ತಾಮಸಕಳೆಯಾಗಿ ಬಂದ ಮಾಯೆ ಅವಳಿಗೆ ತಿಳಿವನ್ನು ಕೊಟ್ಟ ವಿಮಳೆ, ಸಾತ್ತ್ವಿಕ ಕಳೆಯಾಗಿ ಬಂದ ಅಕ್ಕಮಹಾದೇವಿ, ಸುಜ್ಞಾನಿ ನಿರಹಂಕಾರರ ಮಗನಾಗಿ ಹುಟ್ಟಿದ ಅಲ್ಲಮ-ಈ ಮುಂತಾದ ಕಥಾರಚನೆಯಲ್ಲಿ ಆಧ್ಯಾತ್ಮಿಕವಾದ ಸಾಂಕೇತಿಕ ಧ್ವನಿಯ ಏಕತೆ ಕಾಣುತ್ತದೆ. `ಶಿವನ ನಟ ನಾಟಕದ ಮಹಿಮೆಯನ್ನು ತೆರೆದು ತೋರಿಸುವ ಈ ಕಾವ್ಯದಲ್ಲಿ ಎಲ್ಲ ಪಾತ್ರಗಳೂ ಜೀವಕಳೆಯಿಂದ ಕೂಡಿ ಶಿವಕಳೆಯನ್ನು ಬೆಳಗುತ್ತವೆ… ತಿಳಿಗನ್ನಡದ ತುಂಬಿದ ತೊರೆಯಂತೆ ನಿರರ್ಗಳವಾಗಿ ಹರಿಯುವ ಚಾಮರಸನ ಭಾಮಿನೀ ಷಟ್ಟದಿಯ ಶೈಲಿಯನ್ನು ಕುಮಾರವ್ಯಾಸನೊಡನೆ ಹೋಲಿಸಬಹುದಾದರೂ ಇವನ ಭಾಷೆ ನಯಗಾರಿಕೆಯಿಂದ ಕೂಡಿದೆ. ಆ ಕಾಲದ ಶಿವಶರಣರ ವಚನಗಳನ್ನು ಕವಿ ಚೆನ್ನಾಗಿ ಅಭ್ಯಾಸ ಮಾಡಿದ್ದ ಎಂಬುದಕ್ಕೆ ಇವನ ವಾಣಿ ಸಾಕ್ಷಿ ಹೇಳುತ್ತದೆ. ಭಾವ ಭಾಷೆಗಳಲ್ಲಿನ ಅಪೂರ್ವವಾದ ಹೊಂದಾಣಿಕೆಯಿಂದಲೂ ಉಜ್ಜ್ವಲವಾದ ಉಪಮೆ ರೂಪಕ ದೃಷ್ಟಾಂತಗಳಿಂದಲೂ ಸಮಯೋಚಿತವಾದ ವರ್ಣನೆ ಮತ್ತು ದೇಶೀಯ ಬೆಡಗಿನ ಪರಿಣಾಮದ ಉತ್ಕಟತೆಯಿಂದಲೂ ಇವನ ಶೈಲಿ ಇವನ ಸ್ವತಂತ್ರ ಕವಿತಾಮಾರ್ಗದ ಮುಖಬಿಂಬದಂತಿದೆ… ಚಾಮರಸನ ‘ಪ್ರಭುಲಿಂಗಲೀಲೆ’ ಸಂಸ್ಕೃತ, ತಮಿಳು, ತೆಲುಗು ಹಾಗೂ ಮರಾಠಿ ಭಾಷೆಗಳಿಗೆ ಪರಿವರ್ತನ ಹೊಂದಿದ ಕೀರ್ತಿ ಪಡೆದ ಏಕಮಾತ್ರ ಕನ್ನಡ ಕಾವ್ಯವಾಗಿದೆ..! ಹೀಗೆಯೇ ಚಾಮಾರಸನ ಕಾವ್ಯ ಸಾಗುತ್ತದೆ… ಲೇಖನ ಸಹಕಾರ– ಎಚ್. ವೃಷಬೇಂದ್ರಸ್ವಾಮಿಯವರ ಕೃತಿ. ******** ಕೆ.ಶಿವು.ಲಕ್ಕಣ್ಣವರ                  

ಪುಸ್ತಕ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ವಿರಹಿ ದಂಡೆ ಬಾನಿಗೂ ಭೂವಿಗೂ ಸಾಕ್ಷಿಯಾಗಲಿ ಕಡಲಂಚಿನಾ ವಿರಹಿ ದಂಡೆ….  ಯುಗಯುಗಗಳು ಜಾರಿದರೂಪ್ರೀತಿಯಭಾಷೆಯೆಂದಿಗೂ ಬದಲಾಗದಿರುವುದು‌ ಸರ್ವಕಾಲಿಕ ಸತ್ಯ. ಹಠಾತ್ ಸುರಿದ ಮಳೆಗೆ ದಂಡೆ ನಾಚಿದೆಎಂಬ ಕವಿ ನುಡಿಯಂತೆ                                            ಕಣ್ಣಂಚಿನಕುಡಿನೋಟಅರಿಯುವುದುಎದೆಯುಸಿರಬಡಿತಗಳು…..ಕಂಗಳಿಗೂ ಭಾರವಾದ ಮನ ಹೃದಯದಲ್ಲಿ ಮಿಡಿಯುವುದು..ಎಂಬಂತೆ.. ಬಹುತೇಕ ಮನಸುಗಳು ಮೀನಿನಂತೆ..! ಕಡಲಾಚೆ ದಂಡೆಯಲಿ ವಿಲವಿಲ ಒದ್ದಾಡಿ,ವಿರಹದಲಿ ಬೆಂದಂತೆ..!.. ಆತ್ಮೀಯ ಸಹೃದಯಿ ,ಇದ್ದುದನ್ನು ಇದ್ದ ಹಾಗೆ ವರದಿ ನೀಡಿ ಮನವನ್ನು ಹಗುರಮಾಡಿಕೊಳ್ಳುವ,ಅನ್ಯಾಯದ ವಿರುದ್ಧ ಒಂಟಿಯಾಗಿಯಾದರೂ ಹೋರಾಟಮಾಡುವ,ಮೃದುಸ್ವಭಾವದಮನೋಭಾವಹೊಂದಿರುವಕವಿಮಿತ್ರ,ಪತ್ರಕರ್ತ   ಶ್ರೀ ನಾಗರಾಜಹರಪನಹಳ್ಳಿಯವರ ಮುದ್ದಾದಕವನ ಸಂಕಲನ *ವಿರಹಿ ದಂಡೆ** ಕೈಸೇರಿದಾಗ ಕುತುಹಲ… ಎಲೆಗಳು ಉದುರುವ ಸಮಯ ಚಳಿಯ ದಾಟಿ ಬಿಸಿಲಿಗೆ ಮೈ ಒಡ್ಡುವ ಕಾಲ…ದಲೊಂದು ಹೊಸ ಚೈತನ್ಯ..!! ಪ್ರೇಮವೆಂದರೆ ಕಾಮವೆಂದು ಪೂರ್ಣವಿರಾಮವಿಟ್ಟರೆ ಮುಗಿಯಿತೇ?? ಪ್ರೇಮವೆಂದರೆ ಗಹಗಹಿಸಿ ಮುಸುಕುಹಾಕಿ ಕತ್ತಲೆಯಲಿ ನರಳಾಡಲು ಪ್ರೀತಿಯ ಪಟ್ಟ ಬೇಕೆ..??? ಅಲ್ಪನ ಮನಸು ಕೊಚ್ಚೆಯಲ್ಲಿ…! ವಿಕೃತನಾಗಿ ಅಲೆದಾಡುವ ಕಾಮುಕನಂತೆ..!! ಇವೆಲ್ಲ ಪ್ರೀತಿ, ಪ್ರೇಮದ ಕೊನೆಯ ಪುಟಗಳಾಗಿ ವಿರಮಿಸಿದರೆ ಸಾಕೆ??? ಎಂಬ ಪ್ರಶ್ನೆಗೆ??.. ವಿರಹದ ಹಗಲ ಸುಡಬೇಕಿದೆ ತಣ್ಣಗೆ ದಂಡೆಯಲಿ ಕುಳಿತು… ಅಲ್ಲಿ ಪ್ರೇಮದ ಗಿಡ ನೆಡುತ್ತೇನೆ ನೀ ನೀರು ಹಾಕುವುದಷ್ಟೆ ಬಾಕಿ……  ಅಧ್ಬುತಚಿಂತನೆ…ಪ್ರೀತಿಗೊಂದು ಹೊಸ ಭಾಷೆ..  ಕವಿಯ ಮನಸ್ಸು ಕೇವಲ ಪ್ರೇಮವಷ್ಟೆ ಅಲ್ಲ,ಆ‌ ಪ್ರೀತಿಗೆ ಪರಿಸರವು ಪೂರಕವೆಂಬಂತೆ ಭಾವಿಸಿ ಸದಾ ಪಕೃತಿಯ ಜೀವಾಳವಾಗಿ ತನ್ನಂತರಂಗದ ಸಂಗಾತಿಯನ್ನು ಪ್ರತಿಕ್ಷಣದಲ್ಲೂ ಹೃದಯದಲ್ಲಿಟ್ಟುಕೊಳ್ಳಬೇಕೆನ್ನುವ ತವಕ. ಕವಿ ನಿಜವಾಗೂ ಬದುಕನ್ನು ಬಹುವಾಗಿ ಪ್ರೀತಿಸುವ ವ್ಯಕ್ತಿ…..  ಕಡಲು ನೀರಾಳ..! ಅದಕ್ಕೆಂದು ಭಯವಿಲ್ಲ..!ಕರಗುವೆನೆಂಬ ಆತಂಕವಿಲ್ಲ..! ಜಗದ ಪ್ರಳಯಕ್ಕೂ,ಜಗದ ಉಳಿವಿಗೂ ಸಾಮರಸ್ಯದ ಕೊಂಡಿ…!   ಕವಿಯ ತುಡಿತ. ಸಮುದ್ರ ನಿದ್ದೆ ಹೋಗಿದೆ ಗೆಳತಿ ವಿರಹಿ ದಂಡೆಗೆ ಮೌನ ಆಕಾಶಬಾಗಿ ಮುನಿಸಿ ಕುಳಿತಿದೆ ಗಾಳಿ ಮಿಸುಗದೇ ನಿಂತಿದೆ ನದಿಗೆ ಈಗ ಧ್ಯಾನದ ಸಮಯ ಮಾತು ಮೂಕವಾಗಿ ಸೋತು ಕುಳಿತಿದೆ ಭುಜಕೆಭುಜ ಬೆಸೆದ ಹೊತ್ತು… ಮಂಚದ ತುಂಬಾ ಎಕಾಂಗಿ ಕನವರಿಕೆಗಳು…! .. ಕಾಯುವ ಸಂಯಮ ವಿರಹಿಗೆ ಅನಿವಾರ್ಯ…!ಪ್ರೀತಿಯ ತುಮುಲಗಳು,ಕನವರಿಕೆಗಳು ,ಕನಸುಗಳು,ಎಲ್ಲವೂ ಪ್ರೇಮಮಯವೇ…ಎಲೆಯದುರಿದ ಮರವೂ..ಪ್ರೇಮ ನಶೆಗೆ ಬಯಲಾದಂತೆ.ಕಂಗಳ ಕಾತರಿಕೆ ಉದರಾಗ್ನಿಗೆ ತುಪ್ಪ ಸುರಿದಂತೆ..! ಪ್ರಾಣಿ,ಪಕ್ಷಿ,ಗಿಡ ಬಳ್ಳಿ, ಚರಾಚರಗಳೆಲ್ಲ ಪ್ರೇಮಿಯ ಆಣತಿಯಂತೆ ನವಿಲು‌ನರ್ತಿಸಿದಂತೆ…! ಬಾನು ಭೂಮಿ ಅದೆಷ್ಟು ದೀರ್ಘವಾಗಿ ಚುಂಬಿಸುತ್ತೆ ನಾಚಿಕೆಯೇ ಇಲ್ಲ,ಅದು ಬಟ್ಟಬಯಲಿನಲಿ ನಟ್ಟ ನಡು ರಸ್ತೆಯಲಿ ನವ ವಧುವರರಂತೆ…!  ಪ್ರಕೃತಿಗೆ ಮಳೆಯಲ್ಲಿಯೇ ಮಿಲನೋತ್ಸವ..ಬಾನು ಭುವಿ ಒಂದಾದರೆ ಮಾತ್ರ ನಮ್ಮ ಒಡಲು ತುಂಬುವುದು…ಹಸಿರು ಉಸಿರಾಗಲೂ ಸಮಯ ಬೇಕು.  ಹಿಂದಿನಂತೆ ಮಳೆಗಾಲವಿಲ್ಲ..ಬರಗಾಲದ ಛಾಯೇ..! ಧರೆತಣಿಯಲು,ಪ್ರವಾಹ ಉಕ್ಕಿಹರಿದರೂ ಭೂಮಿಯ  ವಿರಹದ ತಾಪ ಕಡಿಮೆಯಾಗಿಲ್ಲ…ಕಾರಣ                ಕಾದ ಕಾವಲಿಯಂತಿದ್ದ ವಿರಹದ ಬೇಸಿಗೆ  ಮಳೆ ಮೋಡ ಬಿಗಿದಪ್ಪಿದರೂ  ಕರಗದಾ ಮೋಹ….! ಹರೆಯದ ಬಯಕೆಗಳು ನೂರಾರು..ಕವಿಗೆ ಆಗಾಗ ಬುದ್ದನ ನೆನಪಾದಂತಿದೆ.. ನೀ ನಿದ್ರಿಸಿ ನನ್ನ ಕನಸು ಕಾಣುವಾಗ ಕಾರಣ ಹೇಳದೇ ಹೋಗಲಾರೆ ಮೋಕ್ಷ ದ ಬೆನ್ನು ಹತ್ತಲಾರೆ ಬುಧ್ದನಾಗಲಾರೆ… ನಿನ್ನೊಲವೇ ನನಗೆ ಬೋಧಿವೃಕ್ಷವಾಗಿರುವಾಗ..!! ಇದ್ದು ಜಯಿಸಬೇಕು ಎಂಬ ಧೀಮಂತ ಮನಸ್ಸಿನವರು, ಕವಿ ಪಕ್ಕಾ ನಂಬಿಗಸ್ಥ.  ಪ್ರೇಮಿ…! ಪ್ರೀತಿಗೆ ಬೆನ್ನುತೋರಿಸದೆ ಹೃದಯದಲ್ಲಿಟ್ಟು ಪೊರೆದವ. ಕವಿಗೆ ತನ್ನವರನ್ನು ಬಿಟ್ಟಿರುವಾಗೆಲ್ಲ..ಕಡಲ ದಂಡೆ ವಿರಹವನ್ನು ತಣಿಸುವ ತಾಣವಾಗಿದೆ…. ವಿಶಾಲ ಕಡಲನ್ನು ಸೇರುವ ನದಿಗಳು ಗುಡ್ಡಗಳನ್ನು ,ಕಾಡುಗಳನ್ನು, ಇಳಿಜಾರುಗಳನ್ನು  ಲೆಕ್ಕಿಸದೇ ಹಾತೊರೆವ ಜಾತಕ ಪಕ್ಷಿಯಂತೆ ಎಡರು ತೊಡರುಗಳ ದಾಟಿ ನಿರ್ಭಯವಾಗಿ ಸಾಗರವ ಮುತ್ತಿಡಲು ಹವಣಿಸುವಂತೆ….ತನ್ನ ಕೊನೆಯ ಪಯಣ ನಿನ್ನಲ್ಲೆಯೆನ್ನುವಂತೆ ಧಾವಿಸುವ ಧಾವಂತಕೆ ಕವಿ ಪ್ರೀತಿಯ ಹಸಿರು ನಿಶಾನೆ ತೋರಿಸಿದ್ದಂತೂ ಸತ್ಯ…! ಒಟ್ಟಾರೆ ಕವಿ ಶ್ರೀ ನಾಗರಾಜ ಹರಪನಹಳ್ಳಿಯವರ ಸುಕೋಮಲ ಪ್ರೇಮ ಗೀತೆಗಳು ವಿರಹದ ನೋವನ್ನು ಅನುಭವಿಸುತ್ತಾ ವಿರಹದ ನೂರುಭಾವಗಳು ತಾವು ಕಂಡಂತೆ ಬಿತ್ತರಿಸುತ್ತಾ ಸಾಗುವಾಗ ಪ್ರೇಮ ಕವಿ ನಿಸಾರ ಅಹಮ್ಮದ ನೆನಪಾಗದಿರಲಿಲ್ಲ ನನಗೆ… ಉತ್ತಮ ಹನಿಗವನಗಳು ಅಲ್ಲಿ ಬಟ್ಟಲು ಹೂವಿನಂತೆ ಅರಳಿ ನಕ್ಕಿದ್ದಂತೂ ನಿಜ..!ಕವಿಯ ಮನಸು ಪಕ್ಕಾ ಮಾಗಿದೆ. ಒಲವಾಗಲು ಹೆಚ್ಚೇನು ಬೇಕಿಲ್ಲ ಸೊಗಸಾದ ಒಂದು ಪ್ರೇಮದ ಹಾಡು ಸಾಕು….!!! ಶ್ರೀ ನಾಗರಾಜರವರ *ವಿರಹಿದಂಡೆ *ಅರಿತವನಿಗೆ  ಖಂಡಿತ ನಿಸರ್ಗದ ಅಧ್ಬುತ ಪ್ರೇಮದ ಕೊಡುಗೆಯ ದರ್ಶನವಾಗುವುದಂತೂ ದಿಟ..!ಅವರವರ ಭಾವಕ್ಕೆ..ನನ್ನರಿವಿಗೆ ತೋಚಿದ್ದು…ಇನ್ನೂ ಹೆಚ್ಚೆಚ್ಚು ಪ್ರೇಮ ಗೀತೆಗಳು ದುಂಬಿಯಂತೆ ಝೆಂಕರಿಸಲೆಂದು ಶುಭಹಾರೈಸುವೆ…. ***************** ಶಿವಲೀಲಾ ಹುಣಸಗಿ

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ದುರಿತಕಾಲದ ದನಿ ವರ್ತಮಾನದ ಕಷ್ಟಕಾಲದ ಕವಿತೆಗಳು! ಕೃತಿ: ದುರಿತಕಾಲದ ದನಿ ಕವಿ: ಕು.ಸ.ಮಧುಸೂದನ, ರಂಗೇನಹಳ್ಳಿ ಪ್ರಕಾಶನ: ವಿಶ್ವಶಕ್ತಿ ಪ್ರಕಾಶನ ರಾಣೇ ಬೆನ್ನೂರು ಪುಟ: 72 ಬೆಲೆ: 100/-       ಕು.ಸ.ಮಧುಸೂದನ ರಂಗೇನಹಳ್ಳಿ ಯವರ ’ದುರಿತಕಾಲದ ದನಿ’ ಹೆಸರೇ ಹೇಳುವಂತೆ ವರ್ತಮಾನದ ವಾಸ್ತವವನ್ನೆಲ್ಲಾ ಸಾರಾಸಗಟಾಗಿ, ತುಸು ಕಟುವೇ ಎನಿಸುವ ಶೈಲಿಯಲ್ಲಿ ಬರೆಸಿಕೊಂಡ ಕವಿತೆಗಳ ಸಂಕಲನ.    ‘ನನ್ನ ಕವಿತೆ ಕುರಿತಂತೆ’ ಎ಼ಂದು ತಮ್ಮ ಕವಿತೆಗಳ ಬಗ್ಗೆ ತಮ್ಮದೇ ಶೈಲಿಯ ವಿವರಣೆಯೇ ಅದ್ಭುತವಾಗಿದೆ.. ಅವರ ಮಾತುಗಳಲ್ಲೇ ಹೇಳಬೇಕೆಂದರೆ “ಒಂದು ಕಡೆ ಜಾಗತೀಕರಣವು ನಮ್ಮ ಸ್ಥಳೀಯ ಸಂಸ್ಕೃತಿಯನ್ನು ನಾಶಪಡಿಸುತ್ತ ನಡೆದಿದ್ದರೆ, ಇನ್ನೊಂದೆಡೆ ಮತೀಯ ಮೂಲಭೂತವಾದ ನಮ್ಮ ಬಹುಸಂಸ್ಕೃತಿಯ ಪರಂಪರೆಯ ಮನೆಯ ಹಂದರವನ್ನು ಕೆಡವಲು ಹೊಂಚು ಹಾಕುತ್ತಿದೆ, ಪ್ರಭುತ್ವ ಧರ್ಮದ ಆಸರೆಯೊಂದಿಗೆ ಅಧಿಕಾರ ಚಲಾಯಿಸುವ ಮಾತಾಡುತ್ತಿದ್ದರೆ ಧರ್ಮವೋ ಸ್ವತಃ ತಾನೇ ಪ್ರಭುತ್ವವಾಗುವ ದಿಸೆಯಲ್ಲಿ ತನ್ನನ್ನು ಅಣಿಗೊಳಿಸಿಕೊಳ್ಳುತ್ತಿದೆ. ಹೀಗೆ ಬಂಡವಾಳ, ಧರ್ಮ, ಪ್ರಭುತ್ವಗಳು ಒಟ್ಟಾಗಿ ಛಿದ್ರಗೊಳಿಸಲು ಹೊರಟಿರುವ ಒಂದು ಸಮಾಜವನ್ನು ಎಚ್ಚರಿಕೆಯ ಸ್ಥಿತಿಯಲ್ಲಿಡಲು ಸಾಹಿತ್ಯ ಮತ್ತು ಸೃಜನಶೀಲ ಕಲಾಪ್ರಕಾರಗಳು ಮುಂದಾಗಬೇಕಿದೆ.” ‘ಕಲೆಗಾಗಿ ಕಲೆ’ ಮಾತನ್ನು ಬಿಟ್ಟು ಸಮುದಾಯಕ್ಕಾಗಿ ಸಾಹಿತ್ಯ!’ ಈ ವರ್ತಮಾನದ ವಾಸ್ತವವೇ ದುರಿತಕಾಲದ ದನಿಯಲ್ಲಿ ಕವಿತೆಗಳಾಗಿ ಮೂಡಿಬಂದಿವೆ. ಈ ಕವಿತೆಗಳು ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಮಾತ್ರವಲ್ಲದೇ, ನಾವಲ್ಲದ ನಮ್ಮ ಹೊರಪ್ರಪಂಚವನ್ನೂ ಅರ್ಥ ಮಾಡಿಕೊಳ್ಳುವ ಕ್ರಿಯೆಯಲ್ಲಿ ತೊಡಗಿವೆ. ‘ರಣ ಹಸಿವಿನಿಂದ’ ಕವಿತೆಯಲ್ಲಿ ದೇಶದಲ್ಲಿನ ದ್ವೇಷ ರಾಜಕಾರಣದ ಬಗ್ಗೆ ಹೀಗೆ ಬರೆಯುತ್ತಾರೆ: ಮೊನ್ನೆಮೊನ್ನೆಯವರೆಗೂ ನೆಡೆದ ಅಕಾರಣ ಯುದ್ಧಗಳಿಗೀಗ ಸಕಾರಣಗಳ ಪಟ್ಟಿ ಮಾಡುತ್ತಾ ಕುಳಿತಿದ್ದಾರೆ ತರಿದ ತಲೆಗಳ ಭೋಗಿಸಿದ ಯೋನಿಗಳ ಕಚ್ಚಿದ ಮೊಲೆಗಳ ಕಲಸಿಹಾಕಿದ ಭ್ರೂಣಗಳ ನಿಖರ ಅಂಕಿಅಂಶಗಳಿಗಾಗಿ ತಲೆ ಕೆರೆದುಕೊಳ್ಳುತ್ತಿದ್ದಾರೆ ಪ್ರತಿಮನುಷ್ಯನಿಗೂ ಇರಬಹುದಾದ ಮೃಗದ ಮುಖವಾಡವ ಕಳಚಲೆತ್ನಿಸಿದಷ್ಟೂ ಗೊಂದಲವಾಗುವುದು ಖಚಿತ ನೋಡು ಇದ ಬರೆಯುವಾಗಲೂ ಕೆಕ್ಕರಿಸಿ ನೋಡುತಿದೆ ಮೃಗವೊಂದು ರಣಹಸಿವಿನಿಂದ!  ಇನ್ನೊಂದು ಕವಿತೆಯಲ್ಲಿ ಇಂದಿನ ಕಷ್ಟಕಾಲದ ಬಗ್ಗೆ ಹೀಗೆ ಹೇಳುತ್ತಾರೆ. ಖಾಲಿ ಶಿಲುಬೆಗೆ ಹೊಡೆಯುವುದಿಲ್ಲ ಯಾರೂ ಮೊಳೆಗಳ ಕಷ್ಟ ಕಾಲದ ಕವಿತೆಗಳು ಅನ್ನದ ಅಗುಳಾಗುವುದಿಲ್ಲ…. ಬಯಲ ಗಾಳಿಯಲಿ ಹಣತೆ ಉರಿಯುವುದಿಲ್ಲ…. ಕಷ್ಟ ಕಾಲದ ಮಾತುಗಳಿಗೆ ಕೊನೆಯಿರುವುದಿಲ್ಲ…. ‘ಬಾ ಮಗುವೆ ಬಾ ನನ್ನ ಹತ್ತಿರಕೆ’ ಕವಿತೆಯಲ್ಲಿ ನಿಸರ್ಗದಿಂದಲೇ ಪಾಠ ಹೇಳಿಕೊಡುವ, ಯಾವ ಮಕ್ಕಳಿಗೂ ತಂದೆಯಾಗಿಬಿಡುವ ಅಂತಃಕರಣದ ಅಪ್ಪನಾಗಲಾರದ ಅಪ್ಪ ಎಂಬ ಕವಿತೆಯ ಮಾತು ಮನವ ಮೂಕವಾಗಿಸುತ್ತದೆ.. ಪ್ರಭುತ್ವದ ಅಸಹಿಷ್ಣುತೆಯ ಬಗೆಗಿನ ಕವಿತೆಯಲ್ಲಿ ಭಯಗೊಂಡ ಬರಹಗಾರರು ಇದೀಗ ಪುರಾಣ ಪುಣ್ಯ ಕತೆಗಳ ಪುನರ್ ಸೃಷ್ಟಿಸುತ್ತ ದಣಿಗಳ ಪುರಸ್ಕಾರಕ್ಕಾಗಿ ಕಾಯುತ್ತ ಕೂತಿದ್ದಾರೆ! ಮನುಷ್ಯನ ಅಸಹಾಕತೆಯನ್ನು ಕಟ್ಟಿ ಕೊಡುವ ಕವಿತೆ ಹೀಗೆ ಮುಗಿಯುತ್ತದೆ ಛಿದ್ರಗೊಂಡ ಆತ್ಮದ ತುಣುಕುಗಳನ್ನು ಮೂಸಿ ನೋಡಿದ ಬೀದಿ ನಾಯಿ ತಿರುಗಿ ನೋಡಿ ಬೊಗುಳಿ ಓಡಿಹೋಯಿತು ಕೊಳೆತ ಆತ್ಮಗಳ ಕತೆ ಇಷ್ಟೇನೆ!! ಪ್ರಭುತ್ವದ ಸರ್ವಾಧಿಕಾರಿ ಅಟ್ಟಹಾಸದ ಬಗ್ಗೆ ಕವಿತೆಯೊಂದು ಹೀಗೆ ಸಾಗುತ್ತದೆ. ರಾಜರಸ್ತೆಯ ವಿಜಯೋತ್ಸವದ ಘೋಷಗಳ ನಡುವೆ ಕ್ಷೀಣವಾಗಿ ಕೇಳುವ ಹಸಿದವರ ಪ್ರಲಾಪದ ಆಲಾಪಗಳೊಳಗೆ ಸಿಂಹಾಸನಗಳ ಉರುಳಿಸುವ ಶಾಪದ ಬಿಸಿಯಿತ್ತು. ಬರಗಾಲ ತಂದೊಡ್ಡುವ ಹಸಿವಿನ ಬಗ್ಗೆ ಬರೆಸಿಕೊಂಡ ಕವಿತೆಯ ಸಾಲುಗಳು: ಮಾಮೂಲಿನಂತಿಲ್ಲ ಈ ರಾತ್ರಿ ಹಸಿದವರಾರೂ ಮಲಗಿಲ್ಲ ಯಮ ಯಾತನೆಯಲ್ಲಿ ಉಂಡವರೂ ಮಲಗಿಲ್ಲ ಹೊಟ್ಟೆ ಉಬ್ಬರದಲ್ಲಿ ! ನಾಯಕರು ಮತ್ತು ಪಾರಿವಾಳಗಳು, ಬರೆದು ಬಿಸಾಕಿದ ಕಾಗದದ ಚೂರಂತೆ… ದುಸ್ವಪ್ನದಲ್ಲಿನ ಬಂದು ಹೀಗೆ ಹಸಿರಿಗೇಕೆ ಉರಿ ಹಚ್ಚಿದೆ ಅದೇನಂತಹ ದ್ವೇಷಾಗ್ನಿಯಿತ್ತು ನಿನ್ನೊಳಗೆ ??”” ಜಂಗಮ ಸ್ಥಾವರ…. ಹೀಗೆ ಇಲ್ಲಿನ ಇಲ್ಲಿನ ಕವಿತೆಗಳು ಸಮಕಾಲೀನ ಸಮಾಜದ ಎಲ್ಲ ಆಗುಹೋಗುಗಳಿಗೂ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸುತ್ತ ಸಾಗುತ್ತವೆ. ಎಲ್ಲಾ ೫೭ ಕವಿತೆಗಳೂ ನಮ್ಮ ಭ್ರಷ್ಟ ವ್ಯವಸ್ಥೆಗೆ ಹಿಡಿದ ಕೈಗನ್ನಡಿಗಳೇ.. ರೋಷ ಅಸಹಾಯಕತೆಯ ಶಬ್ಧವಾಗದ ದನಿಗಳು… ಇದನ್ನ ಓದಿದ ಕೆಲವು ಮನಗಳಾದರೂ ಸಶಭ್ಧವಾಗಿ ಪ್ರತಿಭಟನೆಗೆ ನಿಂತರೇ ಅಲ್ಪಸ್ವಲ್ಪ ಬದಲಾವಣೆ ಸಾಧ್ಯವೇನೋ… ಕುರುಡರ ಸಂತೆಯಲ್ಲಿಯೂ ಕನ್ನಡಿ ಮಾರುವ ಧೈರ್ಯ ಮಾಡುವವನೇ ನಿಜವಾದ ಕವಿ! ಎನ್ನುವಲ್ಲಿ ಕವಿಯೊಬ್ಬನ ಎದೆಗಾರಿಕೆ ಕಂಡು ಬರುತ್ತದೆ. ಹೀಗೆ ಇವತ್ತಿನ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಯಾರಾದರೂ ಹೇಳಲೇಬೇಕಾದ್ದನ್ನು ತಮ್ಮಕವಿತೆಗಳ ಮೂಲಕ ಹೇಳುತ್ತ ಒಟ್ಟು ಸಮಾಜದ ದನಿಯಾಗಲು ಕವಿ ಪ್ರಯತ್ನಿಸಿದ್ದಾರೆ ಹೌದು ಇಲ್ಲಿ ಕವಿತೆಗಳು ಮಾತನಾಡುತ್ತವೆ…. ಕವಿತೆಗಳ ಮಾರುಕಟ್ಟೆಯ ಸರಕನ್ನಾಗಿಸಿದ ಪ್ರಕಾಂಡ ಪಂಡಿತರುಗಳ ಮಾತುಗಳನ್ನು ಕವಿತೆಗಳು ಓದುವವರ ದನಿಯಲ್ಲಿ ಧ್ವನಿಸಿ ಸುಳ್ಳಾಗಿಸಲೀ ಲೇಖಕರ ಸಮಾಜ ವ್ಯವಸ್ಥೆ ಸುಧಾರಣೆ ಮಾಡುವ ಕವಿಯ ಆಶಯ ಈಡೇರಲೆಂದು ನಾವು ಆಶಿಸಬಹುದು! ಇಂತಹ ಕವಿತೆಗಳು ಜನರನ್ನು ತಲುಯಪಿದಾಗಲೇ ಕವಿಯ ಪ್ರಯತ್ನಕ್ಕೆ ಸಾರ್ಥಕತೆ ಬರುವುದು. ಕನ್ನಡದ ಓದುಗರು ಈ ಸಂಕಲನವನ್ನು ಕೊಂಡು ಓದಬೇಕಾಗಿದೆ. ಪ್ರಭುತ್ವದ ಅಟ್ಟಹಾಸದ ಬಗ್ಗೆ ಹೇಳು ಕವಿತೆ ಹೀಗಿದೆ. ನಡುವೆ ಎತ್ತಿದ ಎತ್ತರದ ಗೋಡೆಗಳು ಸರಳುಗಳು ಅವರಿಗೊ ನಮಗೊ? ಪ್ರಭುತ್ವದ ನಾಮಪಲಕವೇ ರಾಚುತ್ತಿದೆ ಕಣ್ಣಿಗೆ! ಹೀಗೆ ಪ್ರಾರಂಭವಾಗುವ ಕವಿತೆ ಕೆಳಗಿನ ಸಾಲುಗಳೊಂದಿಗೆ ಮುಗಿಯುತ್ತದೆ ಕೊಳೆತ ಆತ್ಮಗಳನ್ನಿಟ್ಟುಕೊಂಡ ಮನೆ ಮಸಣವಾಗುತ್ತಿದೆ ದಣಿಗಳ ವಿಜಯೋತ್ಸವಗಳ ಸಂಭ್ರಮ ಸಡಗರಗಳ ಗವಜುಗದ್ದಲ ಮಿತಿ ಮೀರುತಿದೆ. ಇಡೀ ಸಂಕಲನದ ಆಶಯವನ್ನು ಕೆಳಗಿನ ಪುಟ್ಟ ಕವಿತೆಯೊಂದೇ ಹೇಳಿಬಿಡುತ್ತದೆ. ಕ್ರಾಂತಿಕಾರಿ ಬರುವುದಿಲ್ಲ ಆಕಾಶದಿಂದ ಹಾರಿ ನಮ್ಮ ಹಾಗೆಯೇ ಅವನೂ ಅರಸುತ್ತಿದ್ದಾನೆ ಕ್ರಾಂತಿಯ ದಾರಿ ಕವಿತೆಯ ಬೆಂಕಿ ಕಡ್ಡಿ ಗೀರಿ! ************** ಪದ್ಮಜಾ ಜೋಯಿಸ್

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ಪ್ರೇಮ ತಪಸ್ವಿನಿ ಚಿತ್ರಾoಗದೆ. ಎಸ್.ಪಿ.ವಿಜಯಲಕ್ಷ್ಮಿ “”ಪ್ರೇಮ ತಪಸ್ವಿನಿ  ಚಿತ್ರಾoಗದೆ “”–ಲೇಖಕಿ  S P ವಿಜಯಲಕ್ಸ್ಮಿ, ಇವರ ಕೆಲವು ಕವಿತೆ ಓದಿರುವೆ, ಪ್ರವಾಸ ಕಥನದ ಲೇಖನಗಳೂ ನನಗೆ ತುಂಬಾ ಇಷ್ಟವಾದವು, ಇದೀಗ ಹೇಳಹೊರಟದ್ದು ಮನಸೂರೆಗೊಂಡ ಚಿತ್ರಾoಗದೆಯ ಬಗ್ಗೆ….        ನಂಗೆ ಪೌರಾಣಿಕ ಕಥನಗಳೆಂದರೆ ಮೊದಲಿಂದಲೂ ತೀರದ ಆಕರ್ಷಣೆ, ಮತ್ತೆ ಮತ್ತೆ  ಪ್ರತಿ ಬಾರಿಯೂ ಓದಿದಾಗಲೂ ಹೊಸ ಹೊಸ ಆಯಾಮಗಳೂ ಹೊಸಬೆಳಕ ಚೆಲ್ಲುತ್ತಲೇ ಇರುತ್ತವೆ, ಅದರಲ್ಲೂ ಹೆಣ್ಣು ಪಾತ್ರಗಳು ಒಂದೊಂದರ ಮೇಲೂ ನೂರೆಂಟು ರೀತಿಯ ಭಾವಗಳು ಮುಡುತ್ತವೆ, ನಂಗೆ ಈ  ಚಿತ್ರಾ…….  ಪಾತ್ರದ ಬಗ್ಗೆ ಜಾಸ್ತಿಯೇನೂ ತಿಳಿದಿರಲಿಲ್ಲ, ಮಹಾಭಾರತದಲ್ಲಿ ಬರೋ ಅರ್ಜುನ ಗಾಂಧರ್ವ ವಿವಾಹವಾದವಳು,   ಬಬ್ರುವಾಹನನ ಅಮ್ಮ ಅಷ್ಟೇ,  ಅಲ್ದೇ, ರವೀoದ್ರನಾಥ್ ಟ್ಯಾಗೋರ್ ರ ಚಿತ್ರಾ,  ಕುವೆಂಪು ಚಿತ್ರಾ ಅವರವರದೇ ಶೈಲಿಯಲ್ಲಿ ಹೊರಹೊಮ್ಮಿಸಿದ್ದಾರೆ, ಆದರೂ ನಾನೂ ಓದಿರಲಿಲ್ಲ ಹೋದ ವರ್ಷ್ ನಮ್ಮೂರಲ್ಲಿ ಆಳ್ವಾಸ್ ನವರು ನೃತ್ಯ ರೂಪಕ ನೋಡೋವರೆಗೂ, ಅದುವರೆಗೂ ನಂಗೆ ನೃತ್ಯರೂಪಕ ಅಂದ್ರೆ ಅಂತಾ ಆಸಕ್ತಿ ಖಂಡಿತಾ ಇರಲಿಲ್ಲ, ಆತ್ಮೀಯ್ರೊಬ್ಬರ ಆಗ್ರಹಕ್ಕೆ ಮಣಿದು ಅಂದು ಹೋಗಿದ್ದೆ, ಅಂದು ನೋಡಿದ ಚಿತ್ರಾ ಮನದೊಳಗೆ ಅರಳಿದ್ದು ಇಳಿದದ್ದು ಮಾತ್ರಾ Vijaya Sp ಯವರ ಪ್ರೇಮ ತಪಸ್ವಿನಿ ಚಿತ್ರಾಳಾಗಿ,  ಮಣಿಪುರ ರಾಜ್ಯ ತನ್ನ ನಿಸರ್ಗ ರಮಣೀಯತೆ ಹಾಗೂ ಬದುಕಿನ ವೈವಿದ್ಯತೆಯಿಂದಲೇ ವಿಶಿಷ್ಟವಾದುದು, ಇದರಲ್ಲಿ ಬಿಂಬಿತವಾದ ಇನ್ನೊಂದು ಅಂಶ ಗಂಡುಮಕ್ಕಳಿಲ್ಲದ ಕಾರಣ ಮಗಳನ್ನೇ ರಾಜಕುಮಾರನಂತೆ ಬೆಳೆಸುವ  ರಾಜ ಚಿತ್ರಸೇನ, ಪುರುಷತ್ವವನ್ನೇ ಆವಾಹಿಸಿಕೊಂಡು ಬೆಳೆಯುವ ಚಿತ್ರಾ… ಮಗಳ ಹೆಣ್ತನದ ಸೊಗಡು ಸೂಕ್ಷ್ಮತೆಗಾಗಿ ಹಪಹಪಿಸುವ ತಾಯಿ ಕರುಳು….. ಗಂಡಿನಂತೆಯೇ ಬೆಳೆದರೂ ಹೆಣ್ತನವೆನ್ನೋದು ಹೇಗೆ ಅಂತರ್ಗತವಾಗಿರತ್ತನ್ನೋದು ಗಾಂಡೀವಿಯನ್ನ ನೋಡಿ ವಿರಹದಿ ಚಡಪಡಿಸುವ ಚಿತ್ರಾ…. ರಮ್ಯ ರೋಚಕ ಮಹಾಭಾರತದಲ್ಲಿ ಸಣ್ಣ ಅಂಶವಾಗಿರೋ ಚಿತ್ರಾ oಗದೆ ಇಲ್ಲಿ ವಿಸ್ತ್ರುತಗೊಳ್ಳುತ್ತಾ ಕಣ್ಮುಂದೆ ಪ್ರಣಯೋನ್ಮಾದದ ಹೊಸ ರೋಚಕ ಲೋಕವೊಂದು ಅತಿರಮ್ಯವಾಗಿ ಅನಾವರಣಗೊಳ್ಳುತ್ತಾ ಮೈಮನ ಆವರಿಸಿಕೊಳ್ಳುತ್ತಾಳೆ ಕ್ಷಾತ್ರ ತೇಜಸ್ಸಿನ ಹೊಳಪಿನಲ್ಲಿ ಆ ವೀರತೆಯ ಗರ್ವದಲ್ಲಿ ಮಿಂಚುವ ಯುವರಾಣಿ ಎದೆಯೊಳಗೆ ಹೇಗಾದರೂ ಪಾರ್ಥನನ್ನೊಲಿಸಿಕೊಳ್ಳುವ ಹಂಬಲ ಉಕ್ಕಿ ಕಾಮದೇವನನ್ನು ಬೇಡಿಕೊಳ್ಳುವ ಪರಿ ಅದರ ಮೂಲಕ ಅವನನ್ನೊಲಿಸಿಕೊoಡು ಮತ್ತೆ ಗಂಡೆದೆಯ ಚಿತ್ರಳಾಗಿಯೂ ಅವನಲ್ಲುಳಿದು ಹೋಗುವ ಅಂತಿಮ ವಿಜಯ,  ಲೀಲಾ ವಿನೋದ ಕೃಷ್ಣ ಪರಮಾತ್ಮನ ಆಟದಲ್ಲಿ ಮಾಧ್ಯಮ ಪಾಂಡವ ಮೈಮರೆತು ಬಿಡುವ ರೀತಿಯನ್ನು,  ಚಿತ್ರಾ ಮರಳಿ ಪುರಪ್ರವೇಶ ಮಾಡದೇ ಊರಮುಂದಿನ ಗುಡಿಯಲ್ಲಿ ಪತಿಯ ನಿರೀಕ್ಷೆಯಲ್ಲಿ ಪ್ರೇಮತಪಸ್ವಿನಿಯಾಗೇ ಕಾಲಕಳೆಯುವ, ಭಗವಂತನ ಮಾಯದಿಂದ ಅಪ್ಪ ಮಗನ ಮಧ್ಯೆ ನೆಡೆಯುವ ಯುದ್ಧ, ಪತ್ನಿಯನ್ನು ಜಾರಿಣಿಯೆಂದು ನಿಂದಿಸುವ ದುರಹಂಕಾರಿ ಅರ್ಜುನ ಸರ್ವವನ್ನು ಯಾವ ಭಿಡೆಯಿಲ್ಲದೆ ಅತ್ಯುತ್ತಮ ಭಾಷೆಯಲ್ಲಿ ಸೌಜನ್ಯದ ಎಲ್ಲೆ ಮೀರದಂತೆ ಮೂಲಕ್ಕೆ ಕುತ್ತೂ ಬರದೇ ಮೂಲದ ರಸವತ್ತಾದ ವರ್ಣನೆಗೂ ಚ್ಯುತಿ ಬಾರದಂತೆ ಅಕ್ಷರ ಅಕ್ಷರವನ್ನೂ ಮೂಡಿಸಿರುವ ಪರಿ ಮನೋಜ್ಞವಾಗಿದೆ, ಪ್ರೇಮ ಪರಿಣಯ ರಾಸಲೀಲೆ ಯಾವುದೂ ಮಿತಿ ಮೀರದೇ ಓದುತ್ತಿದ್ದಂತೆ ದಿನಗಟ್ಟಲೇ ಆ ಭಾಷೆ, ವರ್ಣನೆ ಆ ರೋಮಾಂಚನದಲ್ಲಿ ಮೈಮರೆಯುವಂತಾಗತ್ತೆ, ನಾನಂತು ನಮ್ಮ ಹಳ್ಳಿಯ ಫಾರಂ ಹೌಸಲ್ಲಿ ಕುಳಿತು ಓದಿ ಕಳೆದೇ ಹೋಗಿದ್ದೆ,  ಹೌದು ಎಸ್. ರಾಮನಾಥ್ ಅವರು ಮುನ್ನುಡಿಯಲ್ಲಿ ಹೇಳಿದಂತೆ ಪೌರಾಣಿಕದ ಬಗ್ಗೆ ಏನೇ ಬರೆಯುವುದೂ ಹೋಳಿಗೆ ಮಾಡಿದಂತೆ,?? !!(ಇದನ್ನ ಓದಿಯೇ ಸವೀಬೇಕು ) ನಿಜಾ ನಾನು ಹೋಳಿಗೆ ಸವಿದ ಆನಂದದಲ್ಲಿದ್ದೆ,  ನಾನಂದ್ಕೊಡಿದ್ದೆ ಈ ವಿಷಯಗಳನ್ನು ಅಂದಿನ ಭಾಷೆಯಲ್ಲಿ ಬರೆಯೋದು ಸುಲಭ ಅಂತಾ ಆದರೆ ಇದನ್ನ  ಓದಿದ ಮೇಲೇ ಅರ್ಥವಾಗಿದ್ದು ನಮ್ಮಿ ನಾಗಾಲೋಟದ ಬದುಕನ್ನ ಅಂದಿನ ಭಾವನೆಗೆ ಭಾಷೆಗೆ ಹೊಂದಿಸುವುದು ಎಷ್ಟು ಕ್ಲಿಷ್ಟ ಅಂತಾ….  ಇದು ಸಂಪ್ರದಾಯಸ್ಥ ಸಾತ್ವಿಕ ಸಹೃದಯಿ ಹಾಗೂ ಅತ್ಯಂತ ಪ್ರೌಢ ಮನಸ್ಕರಿಗೆ, ಮತ್ತು ವಿಷಯದ ಆಳ ಅಗಲ ವಿಸ್ತಾರವನ್ನು ಅರಿತು ನುರಿತವರಿಗೆ  ಮಾತ್ರಾ ಸಾಧ್ಯ, ಮುಖಸ್ತುತಿಯಲ್ಲ ನಾನೇ ಬರೆದರೆ ಹೇಗಿರುತ್ತದೆಂಬುದನ್ನು ಚಿಂತಿಸಿದಾಗಲೇ ಹೊಳೆದ ಸೂಕ್ಷ್ಮವಿದು, ಒಂದು ಸುಸಂಸ್ಕೃತ ಚೌಕಟ್ಟಿನ ಸಾತ್ವಿಕ ಸಹಿಷ್ಣುತೆಯ ಸುರಕ್ಷತೆಯ ಬಾಲ್ಯದಿಂದಲೂ ಅನುಸರಿಸಿದ ಸಂತೃಪ್ತ ಮನಸ್ಥಿತಿಯ ಚಿಂತನೆಗೂ ಇವೆಲ್ಲವನ್ನೂ ಗೊತ್ತಿದ್ದೂ ಪರಿಸ್ಥಿತಿಯ ಅನಿವಾರ್ಯತೆಯಿಂದ ಅಧಿಗಮಿಸಿದ ಬಂಡಾಯ ಅಭಿವ್ಯಕ್ತಿಗಳ ನಡುವೆ ಸಣ್ಣ ತೆರೆಯೊಂದಿರತ್ತೆ ತಿಳಿವಿನ ಶುದ್ಧ ನಿಷ್ಕಲ್ಮಶ ಮನಸ್ಸಿಗೆ ಮಾತ್ರಾ ಅರಿವಿಗೆ ಬರುವಂತಹುದು, ಇವೆಲ್ಲವನ್ನೂ ಕ್ರೋಢಿಕರಿಸಿ ಸಮಗ್ರವಾಗಿ ಅವಲೋಕಿಸಿದರೆ ಇದು ವಿಜಯಾ ಅತ್ಗೆ ಕೈಲಿ ಅರಳಿದಷ್ಟೂ ಸುಮಕೋಮಲವಾಗಿ ನನ್ನಿಂದ ಸಾಧ್ಯವಾಗ್ತಿರಲಿಲ್ಲ, ಈ ಚಿತ್ರಾಳಿಂದಾದ ಇನ್ನೊಂದು ಉಪಕಾರವೆಂದರೆ ಪುರಾಣದ ಹೆಣ್ಣು ಪಾತ್ರಗಳೆಲ್ಲವನ್ನು ಕಲೆ ಹಾಕುವ  ಹುಡುಹುಡುಕಿ ಓದುವ ಅದರಲ್ಲೊಂದು ಹೊಸ ಕಾವ್ಯ ಸೃಷ್ಟಿಸುವ ತುಮುಲವೊಂದು ಹುಟ್ಟಿಕೊಂಡಿದ್ದು, ವಿಜಯಾ ಅತ್ತಿಗೆ ಯಾಕೆ ಮತ್ತಷ್ಟು ಈ ಪುರಾಣ ಪಾತ್ರಗಳ ರಚನೆಗೆ ಮನ ಮಾಡಬಾರದು??  ಯಾರಾದರೂ ಸಹೃದಯರು ಇಂತಹ ಗುಣಮಟ್ಟದ ಲೇಖಕಿಗೆ  ಒತ್ತಾಸೆಯಾದಲ್ಲಿ ಬಹುಷಃ ಅತ್ಯುತ್ತಮ ಪಾತ್ರಗಳು ಒಡಮೂಡಿಯಾವು, ********* ಪದ್ಮಜಾ ಜೋಯಿಸ್

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ನಾನು ಓದಿದ ಪುಸ್ತಕ

ಶಬರಿ ಬರಗೂರು ರಾಮಚಂದ್ರಪ್ಪ                          ಜಗತ್ತಿನಾದ್ಯಂತ ಕರೋನಾ ತಂದ  ಬೀಕರ  ಆತಂಕ  ,ಸಾವು. ನೋವುಗಳ , ವಿಷಾದ , ಈ  ಭಯಗ್ರಸ್ಥ ಸನ್ನಿವೇಶದಿಂದ ಪಾರಾಗಲು  ದೇಶವಾಸಿಗಳಿಗೆ  ವಿಧಿಸಿದ  ಲಾಕ್ ಡೌನ್  ಎಂಬ ಬಂದ್  ನಿಂದಾಗಿ  ದೊರೆತ ಬಿಡುವಿನ ಸಮಯಕ್ಕೆ  ಜೊತೆಯಾದುದು ” ಶಬರಿ “_ ಎಂಬ  ಕಾದಂಬರಿ.         ಈ   ನಾಡು ಕಂಡ ಹೆಸರಾಂತ ಚಲನಚಿತ್ರ ನಿರ್ದೇಶಕರು , ನಟರೂ , ಸಾಹಿತಿಗಳೂ , ಬರಹಗಾರರೂ ಆಗಿ ಹೆಸರು ಮಾಡಿರುವ  ಹಿರಿಯರೂ ಆಗಿರುವ ಡಾ// ಬರಗೂರ್ ರಾಮಚಂದ್ರ ಪ್ಪನವರದು .     ಬರಗೂರರೆಂಬ , ಮನೋ ಆಲಯದೊಳಗೆ  ಹೆಣೆಯಲ್ಪಟ್ಟ  “ಶಬರಿ”_ ಕಾದಂಬರಿ ನನ್ನೊಳಗೆ ಅಚ್ಚೊತ್ತಿದ ಕೆಲವು ಭಾವನೆಗಳನ್ನು   ನಿಮ್ಮೊಂದಿಗೆ ಹಂಚಿಕೊಳಬಯಸುತ್ತಿದ್ದೇನೆ.    ಸಾಹಿತ್ಯ ಎಂದರೆ ಶಬ್ಧ, ಅರ್ಥ, ಭಾವ , ಬುದ್ಧಿಗಳಿಂದ  ಸಮ್ಮಿಳಿತವಾಗಿದ್ದು  , ಓದುಗನಿಗೆ  ಜ್ಞಾನ , ಆನಂದ , ಬದಲಾವಣೆ. ಮಾರ್ಗದರ್ಶನ ,  ವಿಶ್ವಾಸವನ್ನು. ನೀಡುವಂತದ್ದಾಗಿದೆ . ಮಾನವೀಯ ಮೌಲ್ಯದಾ  , ಮಾರ್ಗದರ್ಶನ ವಿಶ್ವಾಸವನ್ನು ನೀಡುವಂತದ್ದಾಗಿ ಮೌಲ್ಯಗಳ   ಮಹತ್ವವನ್ನು  ,  ಬದಲಾವಣೆಗಳ ಔಚಿತ್ಯ ವನ್ನೂ  ,ಸಮಾಜದ ಓರೆ  ಕೋರೆಗಳನ್ನು , ತಿದ್ದುವ, ಒಡಲೊಳಗಿನ ತುಮುಲಗಳನ್ನು   ಬಿಚ್ಚಿಡುವ   ನೋವುಗಳಿಗೆ , ಸಾಂತ್ವನ ,  ನೀಡುವ ,ಸರಿ ತಪ್ಪುಗಳನ್ನು ವಿವೇಚನೆಗೆ ಹಚ್ಚುವ , ಹೋರಾಟಗಳಿಗೆ ಧೈರ್ಯ ತುಂಬುವ , ಮಹತ್ವದ ಕೆಲಸಗಳನ್ನು ಸಾಹಿತ್ಯ ಮಾಡುತ್ತಾ. ,ಬಂದಿದೆ .    ಮನುಷ್ಯ , ಜಗತ್ತಿನಲ್ಲಿ ನೆಮ್ಮದಿಯಿಂದ. ಬದುಕಲು ಹಣ  ಅಂತಸ್ತು ಆಹಾರ ಸೌಲಭ್ಯಗಳಷ್ಟೇ , ಸಾಲದು , ಎಲ್ಲಕ್ಕಿಂತ ಮಿಗಿಲಾಗಿ ದೌರ್ಜನ್ಯಗಳಿಂದ ಹೊರಬರಲು , ಜಗತ್ತಿನ ಅನ್ಯಾಯಗಳನ್ನು ಬಯಲಿಗೆಳೆಯಲು  ಅಕ್ಷರ ಜ್ಞಾನ ಹಾಗೂ ಆತ್ಮವಿಶ್ವಾಸ ಬಹಳ ಮುಖ್ಯ  ಎಂಬುದನ್ನು “ಶಬರಿ”- ಎಂಬ  ಪಾತ್ರದ ಮುಖೇನ         ಬಹಳ ಅದ್ಭುತ ವಾಗಿ. ತಮ್ಮ ದಿಟ್ಟ ನಿರೂಪಣಾ ಶೈಲಿಯಿಂದ ಹೆಣೆಯುತ್ತಾ ಹೋಗಿರುವ ಪರಿ ಅದ್ವಿತೀಯವಾಗಿದೆ.        ಆ ರಾಮಾಯಣದಲ್ಲೊಬ್ಬ ಶಬರಿ  ಈ. ಕಾದಂಬರಿಯಲ್ಲೊಬ್ಬ  ಶಬರಿ   ಇಬ್ಬರ  ಪಾತ್ರಗಳಲ್ಲೂ ನೇರ ಸಹಜ ದಿಟ್ಟ ನಡೆನುಡಿಗಳು ಸಹಕಾರ  ಸಹಾಯದ ಮನೋಭಾವಗಳು, ವ್ಯವಸ್ಥೆಯನ್ನು ಧಿಕ್ಕರಿಸುವ ದೃಢತೆಗಳು ಇಬ್ಬರಲ್ಲೂ ಸಾಮ್ಯತೆ ಪಡೆದುಕೊಂಡಿವೆ.       “ನನ್ನ ದೃಷ್ಟಿಯಲ್ಲಿ ಶಬರಿ. ಒಂದು ಪಾತ್ರವಲ್ಲಾ , ಇದೊಂದು ರೂಪಕ ಈ ರೂಪಕಕ್ಕೆ ಹಿನ್ನೆಲೆಯಾಗಿ. ಬಂದಿರುವುದು ಒಂದು ಬುಡಕಟ್ಟಿನ ಬವಣೆಯ ಬದುಕು” ಎಂದು ಬರಗೂರರೇ ತಮ್ಮ “ಬರಗೂರರ ಬಯಲೊಳಗೆ”-ಎಂಬಲ್ಲಿ ನುಡಿದಿದ್ದಾರೆ .        ರಾಜಕೀಯ ಅಂತಃಕರಣವನ್ನು ಶೋಧಿಸುತ್ತಾ ಜನಸಂಸ್ಕೃತಿ  ಹಾಗೂ ಮುಗ್ಧತೆಯನ್ನು , ರೂಢಿ , ಆಚರಣೆ ,ದೇವರು ಎಂಬ ಕಲ್ಪನೆಗಳ ಮೂಲಕ ಬೆದರಿಸಿ ಸವಾರಿ ಮಾಡುವ  ವರ್ಗ . ಒಂದೆಡೆಯಾದರೆ, ಅಕ್ಷರಕಲಿಕೆಯಿಂದಾಗಿ  ಮೂಡಿದ  ಜ್ಞಾನ , ವಿಶ್ವಾಸ  , ತನ್ಮೂಲಕ  ಚರ್ಚೆ ,ಅನ್ಯಾಯಗಳ ಪರಾಮರ್ಶೆ ,,ತಮ್ಮ ಬೆವರನ್ನೇ ಹೀರಿ  ಬದುಕನ್ನು , ನರಕವಾಗಿಸ ಹೊರಟಿರುವವರ  ವಿರುದ್ಧ ಧನಿಯೇರಿಸುತ್ತಾ , ಆತ್ಮಸ್ಥೈರ್ಯ  ಪಡೆದು ಸೆಟೆದು ನಿಲ್ಲುವ ಬುಡಕಟ್ಟು ಜನಾಂಗ  ಯತ್ತೊಂದು  ವರ್ಗ . ಇಲ್ಲಿ ರಾಜಕೀಯ ಕೈಮೇಲಾಟ  ಅಮಾಯಕರ  ಹತ್ಯೆ , ಗೆ  ಇಂತಹ ಒಂದು ಗಂಭೀರ ವಿಷಯವನ್ನು  , ಅತ್ಯಂತ ಸರಾಗವಾಗಿ ಹಾಡು,ನರ್ತ ಹಾಸ್ಯ ಶೃಂಗಾರ ಕರುಣ  ಮುಂತಾದ  ನವರಸಗಳನ್ನು ಮಿಳಿತಗೊಳಿಸುತ್ತಾ  , ಎಲ್ಲಿಯೂ ಇದೊಂದು ಚಳುವಳಿಯೆಂಬ ಸುಳಿವೂ  ಮನದಲ್ಲಿ ಮೂಡದ ಹಾಗೆ  ಓದಿಸಿಕೊಂಡು ಹೋಗುವ ಇಲ್ಲಿಯ ಶೈಲಿ,  ಬರಗೂರರ ಅಭಿವ್ಯಕ್ತಿಯ ತೇಜಕ್ಕೆ ಸಾಕ್ಷಿಯಾಗಿ , ಮನಸ್ಸನ್ನು  ಸೆಳೆದಿದೆ . ಜೊತೆಗೆ ಚಲನಚಿತ್ರ ದಂತೆ ನಡುನಡುವೆ  ಸನ್ನಿವೇಶಕ್ಕೆ ತಕ್ಕಂತೆ  ಕವನಗಳು   ಜಾಗೃತಿ ಗೀತೆಗಳ  ದಂಡೇ  ಅತ್ಯಂತ ಪ್ರಬುದ್ಧ ವಾಗಿ ಮೂಡಿಬಂದಿರುವ ಪರಿ ಚಲನ  ಚಿತ್ರದ ಪ್ರಭಾವ ಇಲ್ಲಿಯೂ ಬಿತ್ತರಿಸಿದೆ ಚಿತ್ರನಿರ್ಧೇಶಕರ ನಡಿಗೆಯ ಲಕ್ಷಣವಿರುವುದು ಕಾಣಸಿಗುತ್ತದೆ .        ಹಾಗೆಯೇ ಬರಗೂರು ಬಳಸಿರುವ ಗ್ರಾಮೀಣ ಭಾಷೆಯ ಸೊಗಡು ಅತ್ಯಂತ ಸುಂದರವೂ ಮೊನಚೂ ಆಗಿ ಮೂಡಿಬಂದಿದ್ದು , ಲೇಖಕರು  ಗ್ರಾಮೀಣ ಭಾಷೆಯ ಹಿಡಿತ ಹೊಂದಿದ್ದಾರೆಂಬು ದಕ್ಕೆ  ಸಾಕ್ಷಿಯಾಗಿದೆ. ಹಾಗೂ ಅವರೆದೆಯೊಳಗೆ ಇಷ್ಟೊಂದು ಗ್ರಾಮ್ಯ ಪದಗಳು ಉಳಿದಿದೆಯೇ ಎಂದು ಅಚ್ಚರಿಯೆನಿಸುತ್ತದೆ . ರಿಯೆನಿಸುತ್ತದೆ . ಹಾಗೆ ಬಹಳ ಗಟ್ಟಿಯಾದ ಸುಂದರ ಗ್ರಾಮ್ಯ ಭಾಷೆಯನ್ನು ಮುಂದಿನ ಪೀಳಿಗೆಗೆ ಗೂ ಉಳಿಸುವ ಬೆಳಸುವ ಕಾರ್ಯಮಾಡಿದ್ದಾರೆ  .     ಇನ್ನೂ  -ಶಬರಿ :ತಿಮ್ಮರಾಯಪ್ಪ _,ಗೌರಿ ,:ಪೂಜಾರರಪ್ಪಾ , ಮೂಕ ಸಣ್ಣೀರ , ರಾಮಾಜೋಯಿಸ್ , (ಊರಗೌಡನಿಗೆ  ಸಲಹೆಗಾರ), ನರಸಿಂಹರಾಯಪ್ಪ:ಸಾವಿತ್ರಮ್ಮ (ಊರು ಗೌಡ, ಗೌಡತಿ) , ಚಂದ್ರು ಬುಡಕಟ್ಟು ಜನರ ಸಂಬಂಧಿ  ,ಸೂರ್ಯು , ಮತ್ತು ನವಾಬ್  ಈ ಜನರ ಉದ್ಧಾರಕ್ಕಾಗಿ  ತಮ್ಮನ್ನೇ ಸವೆಸಿ ಕೊಂಡವರು  ಈ ಜನರು ಹಿಂದಿನ ಶಕ್ತಿ ಯಾಗಿ ಧ್ವನಿಯಾಗಿನಿಂತವರು .      ಇಲ್ಲಿ ಪ್ರಧಾನ ವಾಗಿ ಕಂಡುಬರುವ ಪಾತ್ರಗಳೆಂದರೆ      ಶಬರಿ ಚಂದ್ರು  ಸೂರ್ಯ , ಹುಸೇನ್  ಇಲ್ಲಿಯ  ಜನರನ್ನು, ಎಚ್ಚರಿಸಿ ವಿದ್ಯೆ ಕಲಿಸಿ, ಅವರ, ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತು ತಮ್ಮನ್ನೇ ಉರಿಸಿಕೊಂಡು ಬೆಳಕಾಗುತ್ತಾ ಬಂದು ,ಕ್ರಿಯಾರೂಪಕಗಳಾಗಿರವ  ಪಾತ್ರಗಳು , ಹಾಗೂ ಕಥಾ ನಾಯಕ , ನಾಯಕಿಯರಾಗಿದ್ದಾರೆ.          ಶಬರಿ ಕಥೆ ಪ್ರಾರಂಭವಾಗುವುದು ‌ಸಿಂಹಾವಲೋಕನ ಕ್ರಮದಿಂದ ,. ಬುಡಕಟ್ಟು ಸಮುದಾಯದಲ್ಲಿ ಹೆಚ್ಚೆಂದರೆ ಮೂವತ್ತು ಗುಡಿಸಲುಗಳು ,  ಊರಿನ ಹೊರಗೆ ಸ್ವಲ್ಪ ದೂರದಲ್ಲಿವೆ  ,ಆಚಾರ ವಿಚಾರಗಳಲ್ಲಿ ವಿಚಿತ್ರ ಸಂಪ್ರದಾಯ ಅದನ್ನು ಚಾಚೂ ತಪ್ಪದೆ  ಪಾಲಿಸುತ್ತಿದ್ದಾರೆ. ಈ ಆಚರಣೆಗಳಿಗೆ ವಕ್ತಾರರಂತೆ ಪೂಜಾರಪ್ಪಾ ಇದ್ದಾನೆ . ಇವನು ಗೌರಿಯ ತಂದೆ . ಈತನ ಮಾತೇ ವೇದವಾಕ್ಯ , ಇವನನ್ನು ಬಿಟ್ಟರೆ ತಿಮ್ಮರಾಯಪ್ಪ , ಹಟ್ಟಿಯ ಹಿರಿಯ ನಿಯತ್ ಗಾರ , ಹದ್ದು ಮೀರದ ಮಾತು ನಡವಳಿಕೆ . ಇವನ  ಮಗಳೇ ಶಬರಿ  ತಾಯಿಯಿಲ್ಲದ ಇವಳು ತಂದೆಯ ಆಣತಿಯಂತೆ ಬೆಳೆದವಳು . ರಾಮಾಯಣ ದ ಶಬರಿ ಕಥೆಕೇಳಿದ್ದ  ತಿಮ್ಮರಾಯಿ  ಶಬರಿಯಂತೆ ತಾಳ್ಮೆಯಿಂದ , ನೀತಿ ನಿಷ್ಠೆ ಇಟ್ಕೊಂಡು  ಬಾಳಿದ್ರೆ ಒಳ್ಳೇದಾಗ್ತದೆ ಎಂದು  ತನ್ನ  ಜನಗಳಿಗೆ ನಿಯತ್ತಿನ ತಾಳ್ಮೆಯ ಕಥೆ  ಹೇಳುತ್ತಾ , ತಾನೂ ಅದನ್ನೇ ನಂಬಿ , ಪಾಲಿಸ್ತಾ ತನಗಿಷ್ಟವಾದ ಶಬರಿ ಹೆಸ್ರೇ  ಮಗಳಿಗೂ ಕರೆದಾತ  ಸುತ್ತಲೂ ಝೇಂಕರಿಸಿದ  ಮಳೆಮೋಡ ,ಕಾರೆಂಬ ಕತ್ತಲು  ಮಿಂಚು ಫಳಫಳನೆ ಹೊಳೆದು ಮರೆಯಾಗುತ್ತಿದೆ , ಹುಚ್ಚೀರ ಮಳೆ ಬರುವ ಸೂಚನೆಯನ್ನು ಕೈ ಭಾಷೆಯ ಮೂಲಕವೇ ತಿಳಿಸುತ್ತಾ ಒಳ ಕರೆಯುತ್ತಿದ್ದಾರೆ  ಒಳಗೆ ನಡಿಯೆಂದು ಸನ್ನೆ ಯಲಿ ಹೇಳುತ್ತಿದ್ದಾನೆ , ಶಬರಿಯ ಮನೆ ಮನಸು ಎರಡಕ್ಕೂ  ,ಅಮಾವಾಸ್ಯೆ ಕವಿದಿದೆ . ಇಡೀ ಹಟ್ಟಿ ಮೌನವಾಗಿ ಸೂತಕದ ಛಾಯೆ ಆವರಿಸಿದೆ . ” ಅತ್ರೆ ಸತ್ತವ್ರು , ಬತ್ತಾರೇನ  ,ಸ್ಯಬರಿ ನಿಮ್ಮಪ್ಪಾನೇ ಹೇಳ್ತಿರಲಿಲ್ವಾ , ಒಳ್ಳೇ ದಿನಕ್ಕೆ ಕಾಯಬೇಕು ಅಂತಾ “- ಶಬರಿ ಅಂದ್ಮೇಲೆ. ಕಾಯೋದ್  ತಾನೇ . ನೀನೇ ಕಾಯದಿದ್ರೆ  ಹ್ಯಾಂಗೆ ಎಂದು ಹೇಳ್ತಾ ಎಲ್ರೂ  ಗುಡಿಸಲು ಸೇರಿಕೊಂಡ್ರು .    ಅಲ್ಲುಳಿದವರು ಮಾತನಾಡಬಾರದ ಹುಚ್ಚೀರ. ಶಬರಿ  . ಒಡಲೊಳಗಿನ ಮಗು ಮೂವರೇ . ಕತ್ತಲನ್ನು ಸೀಳಿಕೊಂಡು ಬರುವ ಗುಡುಗು ಮಿಂಚು  , ಆ ಮಿಂಚು ಬೆಳಕಂತೆ ಇವಳು ಬಾಳಲ್ಲಿ ಬೆಳದಿಂಗಳಾಗಿ ಬಂದ ಸೂರ್ಯ , ಬರುವನೇ  ದೂರಕ್ಕೆ ದಿಟ್ಟಿಸುವಳು ಆ ಸೂರ್ಯ ಅದೆಷ್ಟು ದಿನಗಳಾಗಿದ್ದವು ಹೋಗಿ , ಇಂದಾರಾ  ಬಂದಾನಾ , ದೂರದಲ್ಲೂ ಯಾರೂ ಬರುವ ಸುಳಿವಿಲ್ಲಾ ಸಪ್ಪಳವೂ ಇಲ್ಲಾ . ‌ಸೂರ್ಯ ಬಂದೇ ಬರುವನು ವಸಿ ಕಾಯಬೇಕು  , ಮಗಾ , ಆ ಶಬರವ್ವನ ತರಾ ಅಪ್ಪನ  ಮಾತುಗಳು , “- ನೆನಪುಗಳು ಬದಕ ನೆಕ್ಕಲಾರಂಬಿಸಿದವು .        ಇಂತದ್ದೇ ಮಳೆಯ ರಾತ್ರಿಯಲೊಮ್ಮೆ ಸೂರ್ಯನೊಂದಿಗೆ  ಏಕಾಂತದ ಮಾತು , ನಮ್ಮ ಮಗುವಿಗೆ ಏನ್ ಹೆಸರಿಡಾನಾ ? ಈಗ್ಲೇ ಯಾಕಾ ಆ ಮಾತು ? ಹಂಗದ್ರೆ ಯೋವಾಗಾದ್ರೂ ಇಡೋದೇ ತಾನೆ , ಈಗ್ಗೆ ಅನ್. ಕಂಡ್ರೆ.  ತಪ್ಪೇನು  ಅಂಬ್ತ ?  ಗಂಡೂ ಹೆಣ್ಣು ಎರಡ್ಕೂ ಹೊಂದಿಕೆ ಆಗೋಹಂಗೇ  ತೇಜ್ ಅಂತಾ ಇಡಾನಾ , ಆಗಬಹುದಾ ಹಂಗಾದ್ರೆ ಏನಾ ? ಇಂತಾ ಎಸ್ರು ನಾ ಕೇಳೇ ಇಲ್ಲಾ ? ‌ಪಳ  ಪಳ  ಅಂತ ಹೊಳೆಯುತ್ತಲ್ಲಾ ಅದು , ತೇಜ   ಸೂರ್ಯನ್ ಬೆಳಕಿದ್ದಂಗೆ  ಹಂಗಾರೆ ಅದೇ ಇರ್ಲಿ ಸೂರ್ಯಂಗೂ ಚಂದಾಗಿ ಹೊಂದಾಣಿಕೆ   ಆಗ್ತದಾ  .ಹೂ ಅದೇ ಇರ್ಲಿ ಆಟೆಯಾ :: ಅದಿರಲಿ ಗಂಡೇ ಹುಟ್ಟಬೇಕಲ್ಲಾ. ನಕ್ಕಿದ್ದ ಸೂರ್ಯ  ಇಂತದ್ದೆ ರಾತ್ರಿಯಲಿನಡೆದ ಮಾತುಕತೆ .         ಈಗ ಎಲ್ಲವೂ ಗೌಜಲಾಗಿದೆ  , ತಿಮ್ಮರಾಯನ  ಅಂತಿಮ ಕಾರ್ಯ ಮುಗಿಸಿ ಬಂದಿದಾಳೆ , ತಾಳಿಕಟ್ಟಿದ  ಚಂದ್ರು ಬುಡಕಟ್ಟಿನವರು  ಪಾಲಿಸಿಕೊಂಡು  ಬಂದ ಸಂಪ್ರದಾಯ ವಾದ , ಮದುವೆಯಾದ ಹೆಣ್ಣು ಮಗಳು ಮೊದಲ ರಾತ್ರಿ ಯನ್ನು , ದೇವಾಲಯ ದಲ್ಲಿ. ದೇವರೊಂದಿಗೆ ಕಳೆಯಬೇಕು , ಈ ಅಲಿಖಿತ ಕಾನೂನು ಚಂದ್ರನೊಳಗೆ ಕೆಂಡದುಡೆಯಾಗಿ  ಪುಟಿದು  , ರಹಸ್ಯ ಭೇದಿಸಲು ತೀರ್ಮಾನಿಸಿದ ಮೊದಲ ರಾತ್ರಿ ದೇವಾಲಯ ಹೊಕ್ಕ ಚಂದ್ರು ,ದೇವಾಲಯದಲ್ಲಿ  ಕೊನೆಯಾದ  . ನಂಬಿಕೆ ಉಲ್ಲಂಘನೆ ರಕ್ತ ಕಾರಿ  ಕೊನೆಯಾದ ನೆಂಬ  ಭಯ  ಬಿತ್ತಲಾಗುತ್ತದೆ . ಮದುವೆ ದಿನವೇ ಶಬರಿ ವಿಧವೆ .       ಚಂದ್ರು ವಿನ ಮದುವೆಯಂದೇ ಬರಬೇಕಿದ್ದಾ ಗೆಳೆಯ ಸೂರ್ಯಾ  ಕಾರಣಾಂತರದಿಂದ ಎರಡು ದಿನ ತಡವಾಗಿ ಬಂದು  ಚಂದ್ರುವಿನ  ಗೆಳಯನೆಂಬುದ ಸಾಕ್ಷೀಕರಿಸಿ ಶಬರಿಯ ಮನೆಯಲ್ಲೇ ಉಳಿದು ಮನೆಯವನೆ ಅಷ್ಟೇ ಏಕೆ  ಹಟ್ಟಿಯವನೇ ಆಗಿ ನಿಂತು ಬದಲಾವಣೆ ಯು ಕನಸಿನೊಂದಿಗೆ   ರಾತ್ರಿ ಶಾಲೆ  ಅಕ್ಷರ ಜ್ಞಾನ ನಂಬಿಕೆ , ವಂಚನೆ , ಹಕ್ಕು ಹಾಡು ಎಲ್ಲಾ ಬದಲಾವಣೆ ತಂದು ವಿಶ್ವಾಸ ಮೂಡಿಸಿ ಹೋರಾಟದ  ಶಕ್ತಿ ತುಂಬಿ . ನಿಂತು ಕಥೆ  ಮುಂದುವರಿಯುವ  ಪರಿಗೆ  ಓದುಗ ಫಿದಾ ಆಗುವಂತೆ ನಿರುಪಿಸಿರುವ ರೀತಿಗೊಂದು ಹ್ಯಾಟ್ಸ್ ಆಫ್ ಹೇಳಲೇಬೇಕು . ಹಾಗೆ ಮುಂದುವರಿದಿದೆ .   ಹಾಗೆಯೇ ಮತ್ತೊಂದು ಮಹತ್ತರ ನಂಬಿಕೆ ಬದಲಾಗುವ ಸನ್ನಿವೇಷವೆಂದರೆ  ಅಂತರ್  ಧರ್ಮೀಯ ವಿವಾಹ   ಅದೂ ಬುಡಕಟ್ಟು ಜನರ ವಕ್ತಾರನಂತೆ ಇದ್ದ ಪೂಜಾರಪ್ಪನ ಮಗಳು ಗೌರಿ  ನವಾಬನನ್ನು ಪ್ರೇಮಿಸಿ ಸಂಪ್ರದಾಯ ದಿಕ್ಕರಿಸಿದಾಗ ವಿಧಿಯಿಲ್ಲದೆ ಒಪ್ಪುವ ಸನ್ನಿವೇಶ  ಮೊದಲ ರಾತ್ರಿ ದೇವರೊಂದಿಗೆ ಇರಬೇಕೆಂಬ ಕಾನೂನು ಮುರಿದು ಜಯಶಾಲಿ ಗಳಾಗಿದ್ದು . ಇದು ಊರಗೌಡನ ಮರ್ಮ ಎಂಬುದನ್ನು , ಚಂದ್ರು, ಸತ್ತದ್ದು  ರಕ್ತಕಾರಿಯಲ್ಲಾ ,ದೇವಾಲಯದಲ್ಲಿ ಇದ್ದ ಊರಗೌಡ ನರಸಿಂಹನಿಂದ  ,ಎಂದು ಹೇಳುತ್ತಾ ,ಎಲ್ಲವನ್ನೂ ಹಾಳೆಯಲ್ಲಿ ಬರೆದು ,  ಎಲ್ಲರ  ಕಣ್ಣು ತೆರೆಸಿ ದ್ದು .  ಕಾದಂಬರಿಗೊಂದು ಹೊಸ ತಿರುವು  ನೀಡುವಂತೆ ಬದಲಾವಣೆ  ಸ್ವೀಕರಿಸುವ  ಸಮುದಾಯ . ಇವರ ಒಗ್ಗಟ್ಟೀಗೆ ಬೆದರಿ ಬೆಪ್ಪಾದ  ಗೌಡ  ಜೋಯಿಸರು .     ಹೀಗೆ ಕಥೇ ಸಾಂಗೋಪ ಸಾಂಗವಾಗಿ ಸಾಗಿದೆ , ಕುತೂಹಲ ಹಿಡಿದಿಡುವಲ್ಲಿ ಯಶಸ್ವಿ ಯಾಗಿ ಓದಿಸಿಕೊಂಡು ಸಾಗಿ ಕೊನೆಯಲ್ಲಿ , ಕರುಳು ಕಿತ್ತಂತೆ ಸಂಕಟದ ಅಂತ್ಯ ಕಂಡಿದೆ .  ನೀವೊಮ್ಮೆ ಓದಿ ಅನುಭವಿಸಿ (ಕಾಡಿಸುತ್ತದೆ) .  ಇಲ್ಲಿ ಬರುವ ಒಂದಷ್ಟು ಪಾತ್ರಗಳು ನಂಟು ಹೇಗೆ ಎಲ್ಲಿಂದ  ಹೇಗೆ ಸೇರಿಕೊಂಡವು , ಇದಾವ ಸಂಘಟನೆ , ಬುಡಕಟ್ಟಿನ ಇವರ ನಡುವಿನ ಸಾಮರಸ್ಯ ಕ್ಕೆ  .ಕಾರಣವೇನು ಎಂಬುದರ

ನಾನು ಓದಿದ ಪುಸ್ತಕ Read Post »

ಪುಸ್ತಕ ಸಂಗಾತಿ

ಪುಸ್ತಕ ವಿಮರ್ಶೆ

ಮಾಯಾ ಕನ್ನಡಿ ಕಮಲಾ ಹೆಮ್ಮಿಗೆ ಕಮಲಾ ಹೆಮ್ಮಿಗೆಯವರ ‘ಹೊಸತಾದ ಸ್ತ್ರೀ‌ ಪ್ರಪಂಚ’ವೇ ಆಗಿದೆ ಈ‌ ‘ಮಾಯಾಕನ್ನಡಿ’ ಎಂಬ ಕಥೆಗಳ ಸಂಕಲನ..! ಸಾಹಿತ್ಯದ ವಿವಿಧ ಪ್ರಕಾರಗಳಿಗೆ ತಮನ್ನು ಒಡ್ಡಿಕೊಂಡಿರುವ ಲೇಖಕಿ ಕಮಲಾ ಹಮ್ಮಿಗೆಯವರು ಇದುವರೆಗೆ ಒಂಬತ್ತು ಅನುವಾದಿತ ಕೃತಿಗಳನ್ನು ಕೊಟ್ಟಿದ್ದಾರೆ. ನಾನಾ ಕಾರಣದಿಂದ ಕೇರಳದಲ್ಲಿ ನೆಲೆಸಿದ್ದರಿಂದ ಇವರು ಮಲೆಯಾಳೀ ಸ್ತ್ರೀ ಸಂಕಥನಗಳಿಗೆ ಕೈಹಚ್ಚಿದರು. ‘ಚಿರು ಕಥ’ ಎಂದು ಕರೆಸಿಕೊಳುವ ಸಣ್ಣ ಕಥೆಗಳ ಪ್ರಖರತೆ ಮನಗೊಂಡು ಅತ್ತಿ ಹಣ್ಣಿನಂಥ ಹೆಣ್ಣಿನ ಬದುಕನ್ನು — ಅಂದರೆ ಮೇಲೆ ಆಕರ್ಷಕವಾಗಿದ್ದು ಒಳಗೆ ಅರೆಕೊರೆಯಿದ್ದರೂ — ಬಿಚ್ಚಿಡುವ ಕಥೆಗಳನ್ನಾಧರಸಿಕೊಂಡು ಒಟ್ಟಾರೆ ಕೇರಳ ಕಾಂತೆಯರ ನಿಟ್ಟುಸಿರು, ಕೋಪಗಳನ್ನು ಕನ್ನಡಕ್ಕೆ ತರುವಲ್ಲಿ ಸಾಫಲ್ಯ ಕಂಡಿದ್ದಾರೆ ಕಮಲಾ ಹೆಮ್ಮಿಗೆ… ‘ಮಾಯಾಕನ್ನಡಿ’ ಕೇರಳ ಕಾಂತಾ ಸಮ್ಮಿತದ ಮುಂದುವರಿದ ಭಾಗವೆನ್ನೆಡ್ಡಿಯಿಲ್ಲ. ಸ್ವಾತಂತ್ರೋತ್ತರ ಭಾರತ, ಸುಶಿಕ್ಷಿತ ಸ್ತ್ರೀಯರ ಬವಣೆಗಳು, ಸಮಾಜದ ದ್ವಂದ್ವ ನೀತಿಗಳನ್ನು ಪ್ರಶ್ನಿಸುವ ಗುಣ‌ ಇವೆಲ್ಲವನ್ನೂ ಇಲ್ಲಿಯ ೧೬ ಕಥೆಗಳಲ್ಲಿ ಕಾಣಬಹುದು. ೧೯ ನೆಯ ಶತಮಾನದಲ್ಲೇ ಭ್ರಮನಿರಸನ(ಗಾಂದೀಜಿಯೋತ್ತರ ದಿನಗಳು)ವಾದ ಚಿತ್ರ ಇಲ್ಲಿ ನೋಡಲು ಸಿಗುವುದು. ಪೊಲೀಸ್ ವ್ಯವಸ್ಥೆ ವಿರುದ್ಧ ಕಮಲಾದಾಸ್ (ಸುರೈಯ್ಯಾ) ಎತ್ತಿದ ಧ್ವನಿ ‘ಕಲ್ಲ್ಯಾಣಿ’ಯಲ್ಲಿದ್ದರೆ ‘ವತ್ಸಲಾ’ರ ಕಥೆಗಳಲ್ಲಿ ಹೆಣ್ಣಿನ ಸೂಕ್ಷ್ಮ ಸಂವೇದನೆ ಹಾಗೂ ಮಾತೃ ಹೃದಯಗಳ ಚಿತ್ರಣವಿದೆ. ‘ಚರಿತ್ರೆ ಮರುಕಳಿಸಲಿಲ್ಲ’ ದಲ್ಲಿ ‘ರಾಜಲಕ್ಷ್ಮಿ’ಯವರು ಅಳಿಯ ಸಂತಾನ ಕಟ್ಟು (ಮಾತೃ ಮೂಲ ಕುಟುಂಬ) ಕುರಿತು ವಿಡಂಬಿಸಿದ್ದಾರೆ. ‘ಕನ್ಯ’ ‘ಸಲಿಂಗ ಪಶು’ ಕಥೆಗಳಲ್ಲಿ ಇಂದೂ ಮೇನೊನ್ ಹೆಣ್ಣಿನದೇ ವಿಶಿಷ್ಟಾನುಭಗಳನ್ನು ದಟ್ಟವಾಗಿ ಮುಂದಿಟ್ಟಿದ್ದಾರೆ. ಇ.ಪಿ.ಸುಷ್ಮಾರ ‘ಮಗಳು’ ಧೋರಣೆ ಕಲಾತ್ಮಕತೆ ಎರಡೂ ದ್ರವ್ಯತೆಯಿಂದ ಪರಿಪಕ್ವವಾದ ಕಥೆ. ನಿಜವಾಗಿ ಇದು ಕವಿತೆ! ಮೂರು ತಲೆಮಾರಿನ ಲೇಖಕರ ಪ್ರಾತಿನಿಧಿಕ ಕಥಾ ಸಂಕಲನ. ಹೀಗೆ ನಮ್ಮೆದುರು ಸುರುಳಿ ಬಿಚ್ಚುತ್ತದೆ. ಕಮಲಾ ಹೆಮ್ಮಿಗೆಯವರು ಉದ್ದೇಶ ಪೂರ್ವಕವಾಗಿ ‘ಜನಪದ ಕಥೆ’ಯೊಂದನ್ನು ಸೇರಿಸಿ ಕೃತಿಗೆ ಮೆರಗು ನೀಡಿದ್ದಾರೆ. ಒಂದು ಹರೆಯದ ಹುಡಿಗಿಗೆ ರಸಹಗಳಲ್ಲಿರುವು ಹಾಗೂ ಯಾತನೆಗಳಲ್ಲಿ‌ ಯಾವುದು‌ ತೀವ್ರ ಎಂಬ ‘ಯಕ್ಷ ಪ್ರಶ್ನೆ’ ಹಾಕುವ ಸಮಾಜದ ಕ್ರೌರ್ಯವನ್ನು ಕಣ್ಣಿಗೆ ಕಟ್ಟಿ ಕೊಟ್ಟಿದ್ದಾರೆ. (ಒಟ್ಟು ಸಂಕಲನದ ‘ಆಶಯ’ವನ್ನಿದು ಪ್ರಕಟಿಸುತ್ತದೆ). ಇನ್ನು ಮುಖಪುಟ ಹಾಗೂ ಶೀರ್ಷಿಕೆ ಸಂಬಂಧಿಸಿದ ‘ಮಾಯಾಕನ್ನಡಿ’ ಸೊಗಸೇ ಬೇರೆ. ಇಲ್ಲಿ ಕಳ್ಳನೊಬ್ಬನಿಗೆ ಗುಜರಿಯಲ್ಳಿ ಕನ್ನಡಿಯೊಂದು ಸಿಗುತ್ತದೆ. ಅ ಯುವಕ ಮನೆಗೆ ತಂದು ಮುಖ ನೋಡಿಕೊಳ್ಳಲು ಸಹಜವಾಗಿ ಬಯಸಿದರೆ, ಅಲ್ಲಿ ಸೈತಾನನ‌ ಬದಲು ಕ್ರಿಸ್ತನ ಮುಖ ಕಾಣುವುದು! ನಂತರದ ಕ್ಷಣಗಳಲ್ಲಾತ ಒಳ್ಳೊಳ್ಳೆ ಕಾರ್ಯಗಳನ್ನು ಎಸಗುವನು. ಕಥೆಯ ಅಂತ್ಯದಲ್ಲಿ ಕನ್ನಡಿಯಲ್ಲಿ ಸೈತಾನನ ಮೊಗವೇ ಕಾಣುವುದು ಬದುಕಿನ ವ್ಯಂಗ್ಯ! ಹಿರಿಯ ಲೇಖಕಿ ‘ಗ್ರೇಸಿ’ಯವರ ಕಥೆ ಇದು. ಫ್ಯಾಂಟಸಿ ಚಿತ್ರಣವಿದೆ. ಹೀಗೆ ಬದುಕಿನ ನಿಸ್ಸಾರತೆ, ಸ್ವಾರಸ್ಯ ಎರಡನ್ನೂ ಕುರಿತ ಕಥೆಗಳು ವಾಚಕರಿಗೆ ಸಂಕಲನ ನೀಡುತ್ತದೆ. ಸ್ತ್ರೀ-ದೃಷ್ಟಿಕೋನ ಇಲ್ಲಿ ಮುಖ್ಯ. ಕಮಲಾ ಹೆಮ್ಮಿಗೆಯವರು ತುಂಬಾ ಸರಳ ಭಾಷೆಯಲ್ಲಿ ಅಲ್ಲಿಯ ಪರಿಸರ, ನಾಣ್ನುಡಿ, ಮುಂತಾದವುನ್ನು ಸಾರ ಕೆಡದಂತೆ ಒಪ್ಪಳಿಯದಂತೆ ಕನ್ನಡಕ್ಕೆ ತಂದಿದ್ದಾರೆ. ಉತ್ತರ ಕರ್ನಾಟಕದ (ಉದಾ: ಶಿಕಾವತು) ಹವಣಾದ ಶಬ್ದಗಳೂ ಬಳಕೆಗೊಂಡಿವೆ. ಸಂಕೀರ್ಣವಾದ ವಾಕ್ಯಗಳು ಎಲ್ಲೂ ಇಲ್ಲ. ‘ಪ್ಯಾಸಿ’ವೂ ಒಂದು ಶೃತಿಯಾಗಿ ಸಂಕಲನದುದ್ದಕ್ಕೂ ಇರುವ ಅನುಭವ! ಇಂಥ ಸ್ತ್ರೀ ‘ಅಸ್ಮಿತೆ’, ಸಂವೇದನೆ, ಕನ್ನಡಕ್ಕೆ ಅತ್ಯವಶ್ಯವಾಗಿತ್ತು. ಅದನ್ನು ಕಮಲಾ ಹೆಮ್ಮಿಗೆಯವರು ಸಮರ್ಥವಾಗಿ ಒದಗಿಸಿದ್ದಾರೆ. ‘ಕೇರಳ ಕಾಂತಾ ಸಮ್ಮಿತ’ದ ಕಥೆಗಳು ಅಘಾತ ತರುವಂತಿದ್ದವು. ಇಲ್ಲಿ ಮಾತ್ರ ‘ಪ್ರಶಾಂತ ಸಮುದ್ರ. ಎರಡೂ ಕಮಲಾ ಹೆಮ್ಮಿಗೆಯವರ ಕೌಶಲ್ಯಕ್ಕೆ ಸಾಕ್ಷಿಯೇ..! ಮುಖಪುಟ, ಹಿಂಬದಿ ‘ಸಮುದ್ರ ದೇವತೆ’ ಬೆನ್ನುಡಿ ಅರ್ಥಪೂರ್ಣ. ‘ಬ್ಲರ್ಬ್’ ಬರೆದ ಪ್ರಭು.ಅಜಾನೂರು, ಅನುವಾದಕರ ಸರಳ, ಸಂಪನ್ನ ವ್ಯಕಿತ್ವವನ್ನು‌ ಸರಿಯಾಗಿ ಗುರುತಿಸಿದ್ದಾರೆ. ಇಷ್ಟು ಹೇಳಿ ಈ ಕಮಲಾ ಹೆಮ್ಮಿಗೆಯವರ ಅನುವಾದಿತ ನೂತನ ಕಥೆಗಳ ಬಗೆಗೆ ಸಾಕುಮಾಡುತ್ತೇನೆ. —————————————————– ಪುಸ್ತಕ ಪ್ರತಿ ಬೇಕಾದವರಿಗೆ ಒಂದು ಸಲಹೆ-– ಸಂಪರ್ಕಿಸಬೇಕಾದ ಮೊಬೈಲ್ ನಂಬರ್ ಕೆಳಗಿನಂತೆ ಇದೆ.– ‘ಕಣ್ವ ಪ್ರಕಾಶನ’ ಬೆಂಗಳೂರು ಮೊಬೈಲ್ ನಂಬರ್– 9845052481 ************* ಕೆ.ಶಿವು ಲಕ್ಕಣ್ಣವರ

ಪುಸ್ತಕ ವಿಮರ್ಶೆ Read Post »

You cannot copy content of this page

Scroll to Top