ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಒಟ್ಟಾರೆ ಕಥೆಗಳು :  ಕಥಾ ಸಂಕಲನ 

ಪ್ರಸ್ತುತದ “ಒಟ್ಟಾರೆ ಕಥೆಗಳು” ಕಥಾ ಸಂಕಲನದಲ್ಲಿ ರವಿ ಬೆಳಗೆರೆಯವರ ಎಲ್ಲಾ ೨೩ ಕತೆಗಳ ಸಂಗ್ರಹವಿದೆ. ೧೯೭೯ ರಿಂದ ೧೯೯೫ ರವರೆಗೆ ಹದಿನಾರು ವರ್ಷಗಳಲ್ಲಿ ಅವರು ಬರೆದ ಇಪ್ಪತ್ತೊಂದು ಕಥೆಗಳು ಮತ್ತು ಅನಂತರದ 2ಕಥೆಗಳು

ಒಟ್ಟಾರೆ ಕಥೆಗಳು :  ಕಥಾ ಸಂಕಲನ  Read Post »

ಪುಸ್ತಕ ಸಂಗಾತಿ

ಸಾಮಾಜಿಕ ಚಿಂತನೆಯ ಕಾವ್ಯಕುಸುರಿ

ಪುಸ್ತಕ ಸಂಗಾತಿ ಸಾಮಾಜಿಕ ಚಿಂತನೆಯ ಕಾವ್ಯಕುಸುರಿ           ಅಂಜುಬುರುಕಿಯ ರಂಗವಲ್ಲಿ  ವೃತ್ತಿಯಲ್ಲಿ ಆರಕ್ಷಕರಾಗಿರುವ ಮಂಜುನಾಥ ಯಲ್ವಡಿಕವೂರ ಪ್ರವೃತ್ತಿಯಲ್ಲಿ ಕವಿ.ಉಡುಪಿ ಅದಿತಿ ಪ್ರಕಾಶನ ಇವರ ಚೊಚ್ಚಲ ಕವನ ಸಂಕಲನವನ್ನು ಹೊರತಂದಿದೆ.     ಕನ್ನಡದ ಪ್ರೀತಿಯ ಕವಿ ಜಯಂತಕಾಯ್ಕಿಣಿಯವರು  ಮುನ್ನುಡಿಯಲ್ಲಿ ಇವರ ಕವನಗಳ ಬಗ್ಗೆ ಬರೆಯುತ್ತ “ವೃತ್ತಿಯಲ್ಲಿ ಪ್ರವೃತ್ತಿಯಲ್ಲಿ ಸಮಾಜವನ್ನು ಒಂದು ದೊಡ್ಡ ಕುಟುಂಬವೆಂದು ಗ್ರಹಿಸುವ ಜೀವಿಯೊಬ್ಬನ ಆತ್ಮಸಾಕ್ಷಿ ರೂಪುಗೊಳ್ಳುವ ಧ್ವನಿ ಸೊಲ್ಲುಗಳು ಇಲ್ಲಿವೆ. ಸಮಾಜದ ಜೀವಪರಿಸರದಲ್ಲಿ ತನ್ನ ಅಸ್ಮಿತೆಯನ್ನು ಬೆರೆಸಿಕೊಂಡಿರುವ ಈ  ಕವಿತೆಗಳ ತುಡಿತ ಮಹತ್ವದ್ದಾಗಿದೆ ಎನ್ನುತ್ತಾರೆ.”  ಕವಿ ಮಂಜುನಾಥ ನನಗೆ “ಕಾವ್ಯವೆಂದರೆ ಜೀವಂತಿಕೆಯ ನಿಗಿನಿಗಿ ಕೆಂಡ;ಅರ್ಥವಂತಿಕೆಯ ಬೆರಗು; ತಪದ ಮುನಿಯ ತಲ್ಲೀನತೆ; ಚಿಂತನೆಯ ನಾಗಾಲೋಟದಲ್ಲಿ ಸಿಕ್ಕ ಮೈಲಿಗಲ್ಲು ಅಂದುಕೊಳ್ಳುತ್ತಾರೆ. ಮತ್ತು ಇವನೆಲ್ಲಾ ಅಳವಡಿಸಿಕೊಂಡು ಕವಿ ಚಿಂತನಶೀಲನಾಗಿ,ಸಾಮಾಜಿಕ ಕಳಕಳಿಯೊಂದಿಗೆ, ಗಂಭೀರವಾಗಿ, ಅರ್ಥವಂತಿಕೆಯೊಂದಿಗೆ ಬರೆಯುತ್ತಾರೆ.         ಅವರ ಮೊದಲ ಕವನ ‘ಕನಸು ಮಾರುವ ಹುಡುಗ’ದಲ್ಲಿ  ಕವಿ ಕಾಣುವ ಕನಸು ಪ್ರೀತಿಯದ್ದು. ಮಾನವ ಪ್ರೀತಿಯದ್ದು. ಮೊದಲ ಸಾಲಿನಲ್ಲಿಯೇ  ರಂಜಾನ್ ಪೇಟೆ ಪಕ್ಷಿಕಾಶಿಯ ಕೇಕೆ. ರಂಜಾನ್ ಮುಸ್ಲಿಂ ಹಬ್ಬ. ಆದರೆ ಅಲ್ಲಿ ಖರೀದಿಸುವ ಜನ ಜಂಗುಳಿಯಲ್ಲಿ ಎಲ್ಲಾ ಧರ್ಮದವರೂಇದ್ದಾರೆ. ಅಲ್ಲಿ ಉಕ್ಕುವ ಗೌಜುಗದ್ದಲ ಕವಿ ಕಿವಿಗೆ ಪಕ್ಷಿಗಳ ಕಲರವವಾಗಿ ಕೇಳುತ್ತದೆ. ಕಾರಣಾಂತರಗಳಿಂದ ಜಾತಿ ಧರ್ಮದ ಸಂಬಂಧಗಳಿಗೆ ಸಂಚಕಾರ ಬಂದಿದೆ. ಒಂದಾಗುವ ಯಾವ ಸೂಚನೆಯೂ ಇಲ್ಲಾ. ಒಂದಾಗುವ ಕನಸುಗಳೂ ಇರಲಾರವು. ಈ ಕವಿಯಲ್ಲಿ ಒಂದುಗೂಡಿಸುವ ಮನೋಸಂಕಲ್ಪವಿದೆ. ಅದಕೆ ಕವಿ “ಬೀಗ ಜಡಿದ ಕನಸ ಮನೆಗೆ ಕೀಲಿ ಬೇಕೆ?”ಎಂದು ಮುಗ್ಧ ವಾಗಿ ಪ್ರಶ್ನಿಸುತ್ತಾನೆ.       ‘ಬೋಧಿವೃಕ್ಷದ ನೆರಳು’ ಕವನದಲ್ಲಿ ಸಾಮಾನ್ಯನಿಗೆ ಅಸಾಧ್ಯವಾದ ದಾರಿಯಲ್ಲಿ ಬುದ್ಧ ನಡೆದ ರೀತಿಯನ್ನು ವಿಸ್ಮಯದಿಂದ ನೋಡುವ ಕವಿ “ನಿನ್ನ ಅಚಲ ನಿರ್ಣಯದ  ಮೇಲೆ ಮೋಹದ ಬಲೆ ಬೀಸಿ ಕುಣಿಯಲಿಲ್ಲವೇ ಸಂಬಂಧಗಳ ಮಾಯಾಜಿಂಕೆ?”ಎಂದು ಬುದ್ಧನನ್ನು ಪ್ರಶ್ನಿಸುತ್ತ ಆತ್ಮಾವಲೋಕನ ಮಾಡಿಕೊಳ್ಳುತ್ತಾನೆ. ಬುದ್ಧನ ನಡೆಯನ್ನು ಮಿಥ್ಯದ ಸಮಾಧಿಯಿಂದ ಹೊರಟ ಸತ್ಯದ ಬೆಳಕಿನ ಹಾದಿಗಳು ಅನ್ನುವನು.    ಬಂಧಿಖಾನೆಯೊಳಗೆ ಭಗವಂತ ಈ ಕವನದ ಶೀರ್ಷಿಕೆಯೇ ಎಲ್ಲಾ  ದೇವಾಲಯಗಳ  ಗುಟ್ಟುಗಳನ್ನೂ ಬಯಲು ಮಾಡುತ್ತದೆ. ವರ್ತಮಾನದ ಗಂಟೆ ಜಾಗಟೆಗಳ ಒಡಲೊಳಗೆ ಭೂತಕಾಲದ ಇಂಪಿಲ್ಲಾ ಅನ್ನುವಲ್ಲಿ ಕವಿ ಹತಾಶೆಯ ನಿಟ್ಟುಸಿರು ಬಿಡುತ್ತಾನೆ. ದೇವನ ಕೈ ಕಾಲು ಕಣ್ಣು ಕಿವಿ ಶಿರವೆಳೆದು ಮಾಡಿದರು ಚೂರು ಚೂರು ಬಂಧಿಖಾನೆಯೊಳಗೆ ಬಂಧಿಯ ಮಾಡಿ ಅನ್ನುವನು. ದೇವಾಲಯದ ಮೂಲ ಆಶಯವನ್ನು ಬದಿಗೊತ್ತಿ ಹಕ್ಕಿಗಾಗಿ ಹೋರಾಡಿ ದೇವರನ್ನು ಕಟಕಟೆಗೇರಿಸುವ ಚಿತ್ರವನ್ನು ಬಿಚ್ಚಿಡುತ್ತಾನೆ.     ‘ಅಮೆರಿಕಾ ಕುದುರೆ ‘ಎನ್ನುವ ಕವನದೊಳಗೆ ಅಮೆರಿಕದ ವ್ಯಾಪಾರಿ ಬುದ್ಧಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಸುವ  ದುರ್ಬುದ್ಧಿಗಳನ್ನು ಹೇಳುತ್ತ ‘ಗಾಂಧಿ ಚರಕ ಪುಡಿಯೆಬ್ಬಿಸಿ ಚಕ್ರಾಧಿಪತ್ಯದ ಅಹಮ್ಮಿನ ಕುದುರೆ ಅಂತರ್ಜಾಲದ ಬಲೆಮುಂದೆ ಮಾರ್ಜಾಲ ಕುದುರೆ’ ಎನ್ನುತ್ತ ಅಮೆರಿಕಾ ಭಾರತದ ಮೇಲೆ ಬೀರಿದ ಪ್ರಭಾವವನ್ನು ಈ ಮೂಲಕ ಬಿಂಬಿಸುತ್ತಾರೆ. ಚಿಕ್ಕಪುಟ್ಟಊರದಾರಿ ಜೀರುಂಡೆಗಳ ನೆತ್ತರು ಹೀರುವ ರಕ್ಕಸಕುದುರೆ ಕಂದಕಗಳ ಕೊಚ್ಚೆಯಲ್ಲಿ ಹೇಲುಚ್ಚೆ ಹೊಯ್ವ ಅಂಧಕಾರ ಕುದುರೆ ಎಂದು ಅಮೆರಿಕದ ದುರುಳತನದ ಬಗ್ಗೆ ಅತೀ ಖಾರವಾಗಿ ಪ್ರತಿಕ್ರಿಯಿಸುತ್ತಾನೆ ಕವಿ.     ‘ವಿಷಕಾರುವವರದ್ದೇ ಸದ್ದು’ ಕವನದೊಳಗೆ “ಈಗೀಗ ಕೇರಿಯ ಹಾದಿಗಳಲ್ಲಿ ಉರಗಗಳ ಸರದಿ ವಿಷ ಜೀವಿಗಳು ಹಾವೋ ನಾವೋ ಗೊಂದಲವೋ ಗೊಂದಲ’ ಎಂದು ಆರಂಭವಾಗುವ ಕವನದೊಳಗೆ ಊರುಗಳಲ್ಲಿ ತುಂಬಿರುವ ದುರುಳಜನರ ಬಗ್ಗೆ ವ್ಯಥಿಸುತ್ತಾ ‘ನಮ್ಮ ಕೇರಿಯಲ್ಲೀಗ ವಿಷದ ಉರಗಗಳ ಸದ್ದಿಲ್ಲಾ ವಿಷ ಕಾರುವವರದೇ ಸದ್ದು ಎಂದು ಕವನ ಅಂತ್ಯವಾಗುತ್ತದೆ.   ‘ಡೊಂಬರಾಟದ ಹುಡುಗಿ’ ಯಂಥ ಸಾಮಾಜಿಕ ಸಮಸ್ಯೆಗಳು ಇವರ ಲೇಖನಿಯಿಂದ ಜೀವತಳೆದು ನಿಲ್ಲುತ್ತವೆ. ಅವರ ನುಡಿಯಲ್ಲೇ ಆಲಿಸಿ “ಚಿಂದಿ ಬಟ್ಟೆಯ ಮೇಲೆ ಸಹಿಮಾಡಿದೆ ಬಡತನದ ಪ್ರತಿಬಿಂಬ, ಕಣ್ಣಲ್ಲಿ ಕತ್ತಲೋಡಿಸಬೇಕೆಂಬ ಚಂದ್ರಬಿಂಬ”.  ಕವಿ ಇಲ್ಲಿ ಪರಕಾಯ ಪ್ರವೇಶಮಾಡಿ ಡೊಂಬರ ಹುಡುಗಿಯ ಒಳತೋಟಿಯನ್ನು ಪ್ರಕಟಪಡಿಸುತ್ತಾನೆ.   ‘ಈ ಶಹರದ ಕಣ್ಣುಗಳಲ್ಲಿ’ ಅನ್ನುವ ಕವನದೊಳಗೆ “ನೆತ್ತರು ಮೆತ್ತಿದ ಶಹರದ ಡಾಂಬರು ರಸ್ತೆಯ ಉನ್ಮಾದದ ತುದಿಗೆ ಹಸಿವ ತೃಷೆಗೆ ಕುಕ್ಕಡಿಸೋ ಗಿಡುಗಕ್ಕೆ ರಕ್ತ ಬಿಸಿಯಲ್ಲಾ ಸಿಹಿಯ ಮೃಷ್ಟಾನ್ನ ಅನ್ನುತ್ತ ಶಹರದ ಶುಷ್ಕ ಕ್ರೂರ ವಾಸ್ತವ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ರೀತಿ ಸೊಗಸಾಗಿದೆ.  ಅಂಜುಬುರುಕಿಯ ರಂಗವಲ್ಲಿ ಕವನದೊಳಗೆ ಕವಿ ಸುಪ್ಪತ್ತಿಗೆಯವರ ದಾಳದ ಕುರುಡರಿಂದ ಹೀಯಾಳಿಸಲ್ಪಡುವ ಮಾನವೀಯತೆಯ  ಸೌಧನ್ನು ನಿರ್ಮಿಸಲು ಹಂಬಲಿಸಿ ಗೋಡೆಗಳನ್ನು ಕೆಡವಲು ಆಶಿಸುವನು.”ಬಿರುಕು ಗೋಡೆಗಳಿಗೆ ಮುಚ್ಚಿದ ಊರದಾರಿಗಳಿಗೆ ರಂಗವಲ್ಲಿಯೇ ಬೆಳದಿಂಗಳಾಗಬೇಕೆಂಬ ಕನಸಿನ ಕನವರಿಕೆ” ಕವಿಯಿಲ್ಲಿ ಕಳೆದು ಹೋಗಿರುವ ಸಹೋದರತ್ವವನ್ನು ಮನೆ ಮನದ ಮೌಲ್ಯದ ವಸ್ತುಗಳನ್ನು ಕಳಕೊಂಡವನಂತೆ ವ್ಯಥಿತನಾಗಿದ್ದಾನೆ.  ಕವಿಯ ಎದೆಯಲ್ಲಿ ದಹಿಸುತ್ತಿರುವ ವಿಷಯಗಳಿಗೆ ತಾಳ್ಮೆಯಿಂದ ಕಾದು  ಕಾವು ನೀಡಿ ವಿಚಾರ ಲಹರಿಯನ್ನು ಹದವಾಗಿ ಹರಿಬಿಟ್ಟಿದ್ದಾನೆ. “ಭೂಗರ್ಭದಲಿ ಫಲದ ಸೆಲೆ ಅಡಗಿಸಿಟ್ಟ ಶತಮಾನದ ಫಲದ ಈ ನೆಲ ಕಳೆಗುಂದಿದೆ ರಕ್ತದ ಕಲೆಗೆ. ಪಂಚಾಗ ಬರೆಯಲು ಕೊಟ್ಟು ಸೈತಾನಗಳ ಕೈಗೆ ಎಳ್ಳುನೀರು ಬಿಟ್ಟು ನಾಳೆಗಳ ನೆಮ್ಮದಿಗೆ ಕೊತಕೊತಿಸುತ್ತಿದೆ ಕಾಲಾಂತರದ ಅದಲು ಬದಲಿನ ಮಹಾಪರ್ವಕೆ”  ಕವಿಯ ಅಂತರಂಗದಲ್ಲಿ ತುಮುಲದ ಅಲೆಯೆದ್ದಿದೆ. ಮಹಾಮಹಿಮರು ನೀಡಿದ ಅಮೂಲ್ಯ ಜ್ಞಾನ ಸಂಪತ್ತನ್ನು ಜನರ ಕುರುಡು ನಂಬಿಗೆಯನ್ನು ಸ್ವಾರ್ಥ ಸ್ವಜನ ಹಿತಾಸಕ್ತಿಗೆ  ಬಳಸಿಕೊಂಡು ಹಂಗಿಸುವ ನಗೆಬೀರುವ ಧುರುಳುತನದ ಬಗೆಗೆ ಹತಾಸೆ ಬೆಂಕಿಯಾಗಿ ಸುಡುತ್ತಿದೆ. ಈ ಎಲ್ಲಾ ಅನಿಷ್ಟಗಳನ್ನೂ ದೂರೀಕರಿಸುವ ಮಹಾತ್ಮನಿಗಾಗಿ ಹಂಬಲಿಸುತ್ತಿದೆ ಕವಿಮನ. ‘ಕಹಳೆಗಳು’ ಇಲ್ಲಿ ಪುರಾಣೇತಿಹಾಸ ಪ್ರಸ್ತುತ ಕಾಲವನ್ನು ಸಮೀಕರಿ  ಆಗಾಗ ಅದರಿಂದ ಉಂಟಾದ ಪರಿಣಾಮವನ್ನು ಕವಿ ಪ್ರಸ್ತುತಪಡಿಸುತ್ತಾನೆ. ಈ ಕಹಳೆ ಯೆಂದರೆ  ಮನದಲ್ಲಿ ಹುಟ್ಟಿದ ಯುದ್ಧ ಮೊದಲು ಹುರುಪು ಹುಟ್ಟಿಸುವುದು ಕಹಳೆಯ ಮೂಲಕ. ಈ ಯಾರೋ ,ಯಾವುದೋ ಉದ್ದೇಶದಿಂದ ಹುಟ್ಟಿಸಿದ ಪ್ರಚೋದನೆ ದುರ್ಯೋಧನನ ತೊಡೆ ಮುರಿಯಿತು. ದ್ರೋಣಾಚಾರ್ಯರ ಪ್ರಾಣ ತೆಗೆಯಿತು.     ಹಾಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಹತ್ವದ ಪಾತ್ರವಹಿಸಿತು. ಆದರೆ ಕವಿಯ ನುಡಿಯಲ್ಲೇ “ಈಗೀಗ  ಬೀದಿಸಮಾರಂಭಗಳಲ್ಲಿ, ಟೀವಿಯ ಪರದೆಗಳಲ್ಲಿ ಯಾವುದೋ ಕಹಳೆಗಳಿಗೆ ಯಾರದೋ ಬೇಳೆ ಬೆಳೆಯುವ ಹುನ್ನಾರ. ಇಂದು ಪರರ ಮನೆಯ ಮಗುವನ್ನು ಬಾವಿಗೆ ತಳ್ಳಿ ಆಳನೋಡುವ ಹುನ್ನಾರ. ಜನರ ಮೆದುಳಿಗೆ ಪ್ರಚೋದನಕಾರಿ ಮಾತುಗಳ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ತಂತ್ರ.ಕವಿ ಈ ಪ್ರಚೋದನೆಯಿಂದ ಪಾರಾಗಿದ್ದಾನೆ. ನನಗೆ ಬೀದಿ ಹೆಣವಾಗುವುದು ಇಷ್ಟವಿಲ್ಲಾ.ನೀವೂ ಆಗಬೇಡಿ ಎನ್ನುವುದು ಕವಿಯ ಪರೋಕ್ಷ ಸಂದೇಶವಿದೆ ಇಲ್ಲಿ.     ‘ಅಪ್ಪನ ಬೀಡಿ’ ಎನ್ನುವ ಸಾಮಾನ್ಯ ವಸ್ತುವಿಗೆ ಕವಿ ತುಂಬುವ ಜೀವ ಸ್ವಾರಸ್ಯಕರವಾಗಿದೆ.”ನಿನ್ನ ಕೊಳಕು ಅಂಗಿಯೊಳಗೆ ಅಡಗಿಸಿಟ್ಟ ಬೀಡಿಗೆ ಅನೂಹ್ಯ ಚೇತನವಿತ್ತು”. ಸಾಮಾನ್ಯ ಚಟವಾಗಿ ಕಾಣುವ ಬೀಡಿ ಕವಿಗೆ ಅಪ್ಪನ ಜೀವನ ಪ್ರೀತಿಯಾಗಿ ಕಾಣುತ್ತದೆ. ಅಪ್ಪನ ಕೊನೆಗಾಲದಲ್ಲಿ ಅವನಿಗೆ ಇಷ್ಟವಾದ ಬೀಡಿಕೊಡಲಾರದಷ್ಟು ಬಡವನಾಗಿದ್ದ ಕವಿ, ಕೊನೆಯಲ್ಲಿ     ‘ಮಹಲಿನಂತೆ ಮನೆಯ ಕಟ್ಟಿ ಅಪ್ಪನ ಇಷ್ಟದ ಬೀಡಿಯ ಕೂಡಿಟ್ಟು ಕಾದಿರುವೆ,  ‌ಸೇದಲು ಅಪ್ಪನೇ ಇಲ್ಲಾ”. ಈ ಕವನ ಓದುವಾಗ ಓದುಗ ಕಣ್ಣೀರಾಗದೆ ಇರಲಾರ. ಬೀಡಿ ಸಾಂಕೇತಿಕವಾಗಿ ಬಂದರೂ ಬದುಕಿನ ವಿಪರ್ಯಾಸ ಈ ಕವನದಲ್ಲಡಗಿದೆ.     ಪ್ರತಿಭಾವಂತನೊಬ್ಬ ಸಾಹಿತ್ಯಕ್ಷೇತ್ರದಲ್ಲಿ ತೊಡಗಿಕೊಂಡರೆ ಆಗುವ ಪರಿಣಾಮ ನೋಡುವುದಾದರೆ ಮಂಜುನಾಥ್ ರವರ ಅಂಜುಬುರುಕಿಯ ರಂಗವಲ್ಲಿಯಲ್ಲಿ ನೋಡಬೇಕು. ಇದು ಅವರ ಮೊದಲ ಸಂಕಲನವೆಂದು ಅನಿಸುವುದೇ ಇಲ್ಲಾ. ಪಳಗಿದವನ ಕೈಕುಸುರಿ ಇಲ್ಲಿ ಕೆಲಸಮಾಡಿದೆ. ಕವನದ ವಸ್ತುವಿನ ಆಯ್ಕೆ ವೈವಿಧ್ಯಮಯವಾಗಿದೆ. ಹೆಚ್ಚಿನ ಕವನಗಳು ಸಾಮಾಜಿಕ ಚಿಂತನೆಯ ವಿಷಯಗಳಾಗಿವೆ. ಕೆಲವು ಕವನಗಳು ವೈಯಕ್ತಿಕವಾಗಿವೆ ಎನಿಸಿದರೂ ಅವು ಸಾರ್ವತ್ರಿಕ ಸತ್ಯವನ್ನು ಬಿಂಬಿಸುತ್ತವೆ.ದೃಢ ನಂಬಿಕೆಯೊಂದಿಗೆ ತಮ್ಮ ವಿಚಾರ ಮಂಡಿಸುತ್ತಾನೆ ಕವಿ.        ಗಟ್ಟಿಯಾದ ಕವನಗಳ ಬಂಧ ಮಂಜುನಾಥರವರ ಹಿಡಿತದಲ್ಲೇ ಇದೆ. ಭಾಷೆಯ ಮೇಲಿನ ಪ್ರಭುತ್ವ ಸದೃಢವಾಗಿದೆ.ಆಡಂಬರದ ಶಬ್ದ ಸಾಲುಗಳ ಕೋಟೆಯನ್ನು ಭೇದಿಸಿ ಮುನ್ನುಗ್ಗಿದರೆ ಕವನದ ಅರ್ಥ ಹಿಡಿಯುವುದು ಸುಲಭಸಾಧ್ಯ. ಕಾವ್ಯದ ಒನಪು ವಯ್ಯಾರಗಳೊಂದಿಗೆ ಅರ್ಥವಂತಿಕೆ ಓದುಗನಿಗೆ ಲಭ್ಯವಿದೆ.     ರಾಜಕೀಯ, ಧಾರ್ಮಿಕ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯಗಳು. ಶೋಷಣೆಯ, ಪ್ರಚೋದಿಸವವರ ವಿಷಯಗಳಿದ್ದರೂ ಎಲ್ಲೂ ಸಹನೆ ಮೀರದೆ ಸುಂದರ ಕಾವ್ಯವನ್ನು ಕಟ್ಟಿಕೊಟ್ಟಿದ್ದಾರೆ. ತನ್ನ ಮನದಿಂಗಿತವನ್ನು ನಿರ್ಭಯವಾಗಿ ಹೇಳುವ ಕಸುಬುಗಾರಿಕೆ ಇವರಿಗೆ ಕರಗತವಾಗಿದೆ. ಓದು,ಬುದ್ದಿ, ಭಾವಗಳು ಇಲ್ಲಿ ಮೇಳೈಸಿವೆ.ತನ್ನ ಕಾವ್ಯ ಕುಸುರಿಯಲ್ಲಿ ನಿರಂತರೆಯನ್ನು ಕಾದುಕೊಂಡರೆ ಸಾಹಿತ್ಯದ ಯಾವುದೇ ಮಜಲುಗಳನ್ನು ಮುಟ್ಟುವ ಸಾಮರ್ಥ್ಯ ಮಂಜುನಾಥ ಯಲ್ವಡಿಕವೂರರವರಲ್ಲಿ ಇದೆ. ************************             ರಾಮಮೂರ್ತಿ ಎಸ್ ನಾಯಕ 

ಸಾಮಾಜಿಕ ಚಿಂತನೆಯ ಕಾವ್ಯಕುಸುರಿ Read Post »

ಪುಸ್ತಕ ಸಂಗಾತಿ

ಒಲವಿನ ಮಧು ಬಟ್ಟಲು ಗಜಲ್ ಗಳು

ಪುಸ್ತಕ ಪರಿಚಯ
ಕೃತಿ ಹೆಸರು…… ಒಲವಿನ ಮಧು ಬಟ್ಟಲು ಗಜಲ್ ಗಳು
ಲೇಖಕರು… ಶ್ರೀಮತಿ ಭಾಗ್ಯವತಿ ಕೆಂಭಾವಿ ಯಾದಗಿರಿ ಮೊ.೯೯೦೦೭೧೬೩೬೩
ಪ್ರಕಾಶನ…. ಬಿಸಿಲನಾಡು ಪ್ರಕಾಶನ ಕಲಬುರಗಿ ಮೊ.೯೪೮೧೦೦೦೯೪
ಪ್ರಥಮ ಮುದ್ರಣ …೨೦೨೦

ಒಲವಿನ ಮಧು ಬಟ್ಟಲು ಗಜಲ್ ಗಳು Read Post »

ಪುಸ್ತಕ ಸಂಗಾತಿ

‘ಒಳಗೊಂದು ವಿಲಕ್ಷಣ ಮಿಶ್ರಣ’

ಪುಸ್ತಕ ಸಂಗಾತಿ ‘ಒಳಗೊಂದು ವಿಲಕ್ಷಣ ಮಿಶ್ರಣ’ ಪ್ರತಿಯೊಂದು ಕಾಲಘಟ್ಟದ ಮನೋಧರ್ಮ ಆಯಾ ಕಾಲದ ಸಾಹಿತ್ಯ, ಕಲೆ ಇತ್ಯಾದಿ ಮಾಧ್ಯಮಗಳ ಮೂಲಕ ಸೂಕ್ಷ್ಮವಾಗಿ ವಿಶ್ಣೇಷಣೆಗೋ ವಿಮರ್ಶೆಗೋ ಒಳಗಾಗುತ್ತಾ ವಿಧವಿಧವಾಗಿ ಅಭಿವ್ಯಕ್ತಗೊಳ್ಳುತ್ತಿರುತ್ತದೆ. ಸಮಕಾಲೀನ ಆಗುಹೋಗುಗಳನ್ನು ಸೂಕ್ಷ್ಮ ಮನಸ್ಸಿನ ಕವಿ/ಕಲಾವಿದ ತನ್ನದೇ ರೀತಿಯಲ್ಲಿ ಗ್ರಹಿಸುತ್ತಾ ಅಭಿವ್ಯಕ್ತಿಸುತ್ತಿರುತ್ತಾನೆ. ಆತನ ಪ್ರಶಾಂತ ಸಾಗರದಂಥಹ ಮನಸ್ಸನ್ನು ಕಲಕುವ ಸಂಗತಿಗಳು ಎಬ್ಬಿಸುವ ಅಲೆಗಳು ಅಗಾಧವೂ ಪರಿಣಾಮಕಾರಿಯೂ ಆಗಿರುತ್ತವೆ. ಕವಿ/ಕಲಾವಿದ ತನ್ನದೇ ಒಂದು ಕ್ಲೋಸ್ಡ್ ಜಗತ್ತೋಂದನ್ನು ನಿರ್ಮಾಣ ಮಾಡಿಕೊಂಡು ಅದರೊಳಗೆ ವಿಹರಿಸುತ್ತಿರುತ್ತಾನಾದರೂ ಆತನೂ ಮೂಲತಃ ಸಮಾಜದ ಒಂದು ಭಾಗವಾಗಿರುವುದರಿಂದ ಅಲ್ಲಿನ  ಆಗುಹೋಗುಗಳಿಗೆ ಆತನೂ ಸಾಕ್ಷಿದಾರ. ಆದರೆ ಆತನೇನೂ ಮೂಕಸಾಕ್ಷಿಯಲ್ಲ. ಬದಲಿಗೆ ಆ ಆಗುಹೋಗುಗಳು ಮತ್ತು ತಲ್ಲಣಗಳಿಗೆ ತನ್ನ ಕಲಾಸೃಷ್ಟಿಯ ಅಭಿವ್ಯೆಕ್ತಿಯ ಮೂಲಕ ಬದುಕಿನ ಸರಿ ತಪ್ಪುಗಳನ್ನು ತೋರುವ ತಿಳಿಗನ್ನಡಿಯಾಗುತ್ತಾನೆ.       ನಮ್ಮ ನಡುವಿನ ಪ್ರತಿಭಾವಂತ ಕಥೆಗಾರ ಇಂದ್ರಕುಮಾರರ ಚೊಚ್ಚಲ ಕವನಸಂಕಲನ ‘ ಒಳಗೊಂದು ವಿಲಕ್ಷಣ ಮಿಶ್ರಣ’ ಆಧುನಿಕ ಯಾಂತ್ರಿಕ ಬದುಕಿನ ತಲ್ಲಣಗಳು, ಆಲೋಚನೆಗಳು, ಅಸಹನೀಯ ವಿಲಕ್ಷಣ ಅನುಭವಗಳನ್ನು ಓದುಗನ ಮುಂದಿಟ್ಟು ಆತನ ಆತ್ಮಸಾಕ್ಷಿಯನ್ನು ಕಲಕುವ ಒಂದು ದರ್ಪಣ ಕೃತಿ. ಕಥನಕಲೆಯಲ್ಲಿ ಪಳಗಿರುವ ಇಂದ್ರಕುಮಾರರ ಕೈ ಕಾವ್ಯಸೃಷ್ಟಿಯಲ್ಲೂ ಯಶಸ್ವಿಯಾಗಿರುವುದನ್ನು ಈ ಕೃತಿ ಸಾಕ್ಷೀಕರಿಸುತ್ತದೆ.       ಕೃತಿಯ ಹೆಸರೇ ಸೂಚಿಸುವಂತೆ ಇಲ್ಲಿನ ಬಹುತೇಕ ಕವಿತೆಗಳು ವಿಲಕ್ಷಣಗಳ ಮಿಶ್ರಣವೇ ಸರಿ. ಈ ಕವಿತೆಗಳಲ್ಲಿರುವುದು ಇಡೀ ಆಧುನಿಕ ಸಮಾಜ ಮತ್ತು ಬದುಕನ್ನೊಳಗೊಳ್ಳುವ, ‘ಇಂದಿನ ಬಣ್ಣಗೆಟ್ಟ ಬದುಕಿ’ನ, ‘ಕಣ್ಣಿದ್ದೂ ಕುರುಡಾದ ಜನ’ರ , ‘ಅಸ್ವಸ್ತ ಅಸ್ತಿತ್ವ’ಗಳ ವಿಚಿತ್ರ ಮಿಶ್ರಣದ ಚಿತ್ರಣ. ಕವಿ ಹೇಳುವಂತೆ ಇಂದಿನ ಬದುಕು ಭರವಸೆಯಿಲ್ಲದ್ದು.                        “ ಬದುಕುವ ಭರವಸೆಗಳೆಲ್ಲ                        . . . . ಮಾರ್ಡನ್ ಟಾಯ್ಲೆಟ್ಟಿನೊಳಗೆ                          ಫ್ಲಷ್ ಆಗಿಹೋಗಿವೆ. ” ಇಲ್ಲಿನ ಕಾವ್ಯದ ಕಟ್ಟಡ ಕಟ್ಟಿರುವುದು ‘ಕಲಕಿದ ದ್ರಾವ್ಯ’ದ ಕಣಗಳಿಂದ. ಇಲ್ಲಿನ ಬಹುತೇಕ ಕವಿತೆಗಳು ಅತ್ಯಂತ ಪರಿಣಾಮಕಾರಿಯಾದ ಪದ ಚಿತ್ರಣಗಳಾಗಿವೆ. ಈ ಕವಿತೆಗಳು ಓದಿದಂತೆ ‘ಮನಸ್ಸು ಸಿಡಿದು ಸಾವಿರ ಹೋಳಾದಂತೆನಿಸುವುದು’ ಸಹಜವೇ. ಏಕೆಂದರೆ ಜಗತ್ತಿನ ಅಸಹನೀಯ ‘ಗೋಳಾಕಾರದ ಗೋಳು’ಗಳೆಲ್ಲಾ ‘ಪ್ರಕ್ಷುಬ್ಧ ಅಲೆಗಳಂತೆ’ ಈ ಕವಿತೆಗಳ ರೂಪದಲ್ಲಿ ಬಂದು ಮನಸ್ಸಿಗೆ ಬಡಿದು ವಿಚಲಿಸಿಬಿಡುವುದಷ್ಟೇ ಅಲ್ಲದೆ ಮನಃಸಾಕ್ಷಿಯ ‘ಕಟಕಟೆಗೆ’ ಎಳೆತಂದು ‘ ಖಾಲಿತನದ ಭಾರ ಎದೆಗಳ ಮೇಲೆ’ ಆವರಿಸುವಂತೆ ಮಾಡುತ್ತವೆ.     ಈ ಕವಿತೆಗಳ ವಸ್ತು ಇಂದಿನ ಬದುಕಿನ ಜಂಜಾಟಕ್ಕೆ ಸಂಬಂಧಿಸಿದಂತೆ ‘ ಕಾಣಿಸದ್ದು ಕೇಳಿಸದ್ದು’ ಥರದ್ದಾಗಿವೆ. ಈ ಬದುಕನ್ನು ನಾವು ತೂಗುತ್ತಿರುವುದು ‘ಜಂಗು ತಕ್ಕಡಿಯಲ್ಲಿ’ ಎಂಬ ಅರಿವುಮೂಡಿ, ಈ ಬದುಕು ‘ಸಾಲದ ಬದುಕು’ ಎನಿಸಿ ಸಾಲದು ಈ ಬದುಕು ಎನಿಸುತ್ತದೆ. ಈ ‘ನೆಲದೊಡಲಿನ ಮಿಸುಕಾಟ’ದಲ್ಲಿ ನಾಚಿಕೆಯೆಲ್ಲವ ಬಿಟ್ಟು ಸಾಗುತ್ತಿರುವುದು ವಿಷಾದನೀಯ. ಜಗತ್ತು ಮಾನವೀಯತೆ ಕಳೆದುಕೊಂಡು ಕಣ್ಣಿದ್ದೂ ಕುರುಡರಾಗಿರುವುದು ಇಂದಿನ ದುರಂತವೇ ಸರಿ. ಈ ಚಿತ್ರಣ ನೋಡಿ;                    “. . . .ಜಗತ್ತು ಆಪರೇಷನ್ ಥಿಯೇಟರ್‌ನ ಬಾಗಿಲಲ್ಲಿತ್ತು” ಹೆಚ್ಚು ಕಡಿಮೆ ಸತ್ತಿರುವ ಜಗತ್ತಿಗೆ ‘ ಮಂಡಕ್ಕಿ ಚಿಲ್ಲರೆ ತೂರುವವರಿಲ್ಲ.’ ಎನಿಸುತ್ತದೆ. ಏಕೆಂದರೆ ;                    “ಮಾನವೀಯತೆಯ ಕೋರ್ಸಿನಲ್ಲಿ                      ಮರುಕದ ಕ್ಲಾಸ್ ಬಂಕ್ ಮಾಡಿದವರೆಲ್ಲಾ                     ಹೆಣಕ್ಕೆ ಹೆಗಲು ಕೊಟ್ಟುದ್ದನ್ನು ಬಿಟ್ಟು                     ತೂರಿದ ರೊಕ್ಕ ಆರಿಸಿಕೊಳ್ಳುವಲ್ಲಿ                     ಮಗ್ನರಾಗಿರುವವರಲ್ಲ ! ”       ಮಾನವಸಹಜ ಪ್ರೀತಿ ಮಮತೆಗಳನ್ನೆಲ್ಲಾ ಗಾಳಿಗೆ ತೂರಿರುವ ಆಧುನಿಕ ಮನುಷ್ಯನ ಬದುಕಿನ ಹಲವಾರು ಸ್ತರಗಳ ಖಾಲಿತನದ ಅನಾವರಣ ಈ ಕವಿತೆಗಳಲ್ಲಿದೆ. ಮನುಷ್ಯ ಮಾನವೀಯತೆಯ ಒಳ-ಹೊರಗನ್ನು ಕಳೆದುಕೊಂಡು ‘ಗರ್ದಿಗಮ್ಮತ್ತಿನ ಓಡುವ ರೀಲು’ಗಳಾಗಿರುವುದು ವಿಪರ್ಯಾಸ.                   “ ಕಿಡ್ನಿ ಕಣ್ಣು ರಕ್ತ ಮಾರಿಕೊಳ್ಳುವುದು                     ಆಗಿನ್ನೂ ತಿಳಿದಿರಲಿಲ್ಲ.”                   “ ಇಲ್ಲಿ ಎಲ್ಲವೂ ಮಾರಾಟಕ್ಕಿದೆ                     ಸತ್ತ ಹೆಣ, ಅಂಡಾಣು, ವೀರ್ಯಾಣು.” ಮನುಷ್ಯನ ದೇಹವಷ್ಟೇ ಅಲ್ಲ ಮನಸ್ಸೂ ಮಾರಾಟದ ವಸ್ತುವಾಗಿದೆ. ‘ಅನ್ನದ ಮೇಲೆಯೇ ಉಚ್ಚೆಹೊಯ್ಯುವ,’ ‘ಅಮ್ಮ ಎಂಬ ಹಚ್ಚೆಗೈಯಲ್ಲೇ ಅವಳಿಗೆ ತದುಕುವ’ ಅಮಾನವೀಯ ಆಧುನಿಕ ಬದುಕಿದು. ಈ ಆಧುನಿಕ ಚಕ್ರವ್ಯೂಹದಲಿ ಸಿಲುಕಿ ನರಳುತ್ತಿರುವವರೇ ಬಹುತೇಕ ಮಂದಿ. ಇದು ವ್ಯಾಪಾರಿ ಯುಗ, ಡಿಸ್ಕೌಂಟ್ ಜಗತ್ತು. ‘ನಿಯತ್ತಿನ ತಲೆ ಮೊಟಕಿರುವ’ ಇಲ್ಲಿ ‘ಏನುಸಿಕ್ಕರೂ ನಾಲಿಗೆ ಒಡ್ಡುವವರೇ’ ಹೆಚ್ಚು. ‘ಆಡುವ ಪಿಸುಮಾತುಗಳೇ ಕಿವಿಗೆ ಘೋರವಾಗಿ ಬಡಿಯುವ’ ಸಮಾಜದಲ್ಲಿ ಸಾಗುತ್ತಿರುವ ಈ ಬದುಕು ಅದೆಷ್ಟು ಅನರ್ಥಕಾರಿ!                    “ ಸಿಟಿಯ ಸ್ಲಮ್ಮಿನಲ್ಲಿ ದೇವರಗುಡಿ                      ಹುಡುಕುತ್ತಿದ್ದೆ                      ದೇವರಿರಲಿಲ್ಲ ಯಾರೋ ಕದ್ದಿದ್ದರು.” ಎನ್ನುವ ಕವಿಯ ಆತಂಕದ ಶೋಧ ಬರೀ ಕವಿಯದ್ದಷ್ಟೇ ಆಗದೆ ಸೂಕ್ಷ್ಮ ಮನಸ್ಥಿತಿಯ ಎಲ್ಲರದ್ದೂ ಆಗಿದೆ. ಕವಿಯ ಕಾಡುವ ಒಂಟಿತನ ವಿಕ್ಷಿಪ್ತತೆ ಎಲ್ಲವೂ ಓದುಗರಿಗೂ ಕಾಡುತ್ತವೆ. ‘ಸೆಕೆಂಡುಗಳು ಗಂಟೆ ವರುಷಗಳಾಗಿ’ ಸಾಗುವಂತೆ ಏಕತಾನತೆಯಿಂದ ಕೂಡಿರುವ ಈ ಬದುಕಿನಲ್ಲಿ ಮನುಷ್ಯ ಸಹಜ ಪ್ರೀತಿ ಮಮತೆ ವಿಶ್ವಾಸಗಳನ್ನೆಲ್ಲಾ ಮರೆತು ‘ಕಲ್ಲಾಗಿಲ್ಲ, ಬದಲಿಗೆ ಮೃಗವಾಗಿದ್ದಾನೆ’ ಹಾಗು ‘ಜೀವನ ಪ್ರೀತಿಯ ಕೀಲಿಕೈ ಕಳೆದುಕೊಂಡಿದ್ದಾನೆ’ ಎನ್ನುವ ಕವಿ ಈ ಯಂತ್ರಯುಗದ ಯಾಂತ್ರಿಕ ಬದುಕಿನ ಕರಾಳಮುಖದ ದರ್ಶನಮಾಡಿಸುತ್ತಾರೆ. ಆಧುನಿಕ ಬದುಕಿನ ಸಾಂಸಾರಿಕ ಸಂಕಟಗಳು, ಪ್ರೇಮ-ಕಾಮ, ವಿವಾಹ-ವಿಚ್ಛೇದನಗಳು, ಒಂಟಿತನ, ಬಡತನ, ಬಗೆಬಗೆಯ ದೌರ್ಜನ್ಯಗಳ ಕುರಿತ ಅನೇಕ ಸಂಗತಿಗಳು ಈ ಕವಿತೆಗಳ ವಸ್ತು. ಇಂದಿನ ತಲ್ಲಣಗಳಿಗೆ ಕವಿ ಮನಸ್ಸು ಎಷ್ಟು ಸೂಕ್ಷ್ಮವಾಗಿ ಸ್ಪಂದಿಸುತ್ತದೆ ಎಂಬುದಕ್ಕೆ ಇಲ್ಲಿನ ಕವಿತೆಗಳೇ ಸಾಕ್ಷಿ. ಕವಿ ಮನಸ್ಸೇ ಹಾಗಲ್ಲವೆ? ಆತ ತನ್ನ ಸುತ್ತಲಿನ ಆಗುಹೋಗುಗಳಿಗೆ ಸೂಕ್ಷ್ಮವಾಗಿ ಪರಿಣಾಮಕಾರಿಯಾಗಿ ಸಾಕ್ಷೀಭಾವದಿಂದ ಎದುರುಗೊಳ್ಳುತ್ತಾನೆ. ಇಲ್ಲಿನ ಕವಿತೆಗಳು ಯಾವುದೋ ಆದರ್ಶ ಜಗತ್ತೊಂದನ್ನು ನಮ್ಮ ಕಣ್ಣಮುಂದೆ ತಂದಿರಿಸುವುದಿಲ್ಲ, ಬದಲಿಗೆ ಮನುಷ್ಯ ಸಮಾಜದ ಒಳ-ಹೊರಗಿನ ಜೊಳ್ಳನ್ನು ತೂರಿ ತೂರಿ ಜರಡಿಹಿಡಿಯುತ್ತವೆ. ಇಲ್ಲಿ ಬಳಸಿರುವ ಕಾವ್ಯಭಾಷೆ ವಸಂತಕಾಲದ ಕೋಕಿಲ ನುಡಿಯಲ್ಲ. ಅದು ಖಡ್ಗದಂತೆ ಮೊನಚಾದುದು, ನೇರವಾಗಿ ಮನಸಿಗೆ ನಾಟುವಂತಹ ತೀಕ್ಷ್ಣತೆ, ಭಾವತೀವ್ರತೆ ಈ ಭಾಷೆಗಿದೆ. ಯಂತ್ರಯುಗದ ತಲ್ಲಣಗಳನ್ನು ಕಟ್ಟಿಕೊಡುವಾಗ ಆ ಯುಗದ ಭಾಷೆಯನ್ನೇ ಬಳಸುವುದು ಸರಿಯಾದುದೇ ಆಗಿದೆ. ಕವಿಯಂತೂ ಭಾಷೆಯನ್ನು ಸೂಕ್ತವಾಗಿ ಅರ್ಥಪೂರ್ಣವಾಗಿ ದುಡಿಸಿಕೊಂಡಿದ್ದಾರೆ. ಅದೆಷ್ಟೋ ಸಾಲುಗಳು ಮನದಲ್ಲುಳಿಯುವ ಅರ್ಥಪೂರ್ಣ ಸಾಲುಗಳಿವೆ ಇಲ್ಲಿನ ಕವಿತೆಗಳಲ್ಲಿ. ಇಲ್ಲಿನ ‘ವಿಲಕ್ಷಣ ಮಿಶ್ರಣ’ ಕವಿಮನದೊಳಗಣ ಭಾವ ಲಹರಿಯೇನೋ ಎಂದು ಮೇಲ್ನೋಟಕ್ಕೆ ಒಮ್ಮೆಲೆ ಅನ್ನಿಸಿಬಿಡುವುದಾದರೂ, ಆಳವಾಗಿ ಅವಲೋಕಿಸಿದರೆ ಅದರ ವಸ್ತುವಿಷಯಗಳು ಹೊರ ಜಗತ್ತಿನಿಂದ ದೊರೆತ ಫಲಿತಗಳೇ ಆಗಿವೆ ಎಂಬುದು ಅರಿವಿಗೆ ಬರುತ್ತದೆ. ಹಾಗಾಗಿಯೇ ಇಲ್ಲಿನ ‘ಒಳಗು’ ಎಲ್ಲರದ್ದೂ ಆಗಿಬಿಡುತ್ತದೆ. ಈ ಕಾಡುವ ಕವಿತೆಗಳು ಓದುಗನ ಮನಸನ್ನು ಕಲಕುವ ‘ವಿಲಕ್ಷಣ ಮಿಶ್ರಣ’ವೇ ಸರಿ. *******************************              ಬಿ. ಜಿ. ಜಗದೀಶ ಸಾಗರ್

‘ಒಳಗೊಂದು ವಿಲಕ್ಷಣ ಮಿಶ್ರಣ’ Read Post »

ಪುಸ್ತಕ ಸಂಗಾತಿ

ಸಾಂಸ್ ಏ ಗಜಲ್

ಕೃತಿ ಹೆಸರು…..ಸಾಂಸ್ ಏ ಗಜಲ್ (ಕನ್ನಡ ಗಜಲ್ ಗಳು)
ಲೇಖಕರು…ಡಾ.ರೇಣುಕಾತಾಯಿ ಎಂ ಸಂತಬಾ ( ರೇಮಾಸಂ) ಮೊ.೯೮೪೫೨೪೧೧೦೮
ಪ್ರಥಮ ಮುದ್ರಣ ೨೦೨೦
,ಪ್ರಕಾಶನ…* ಸಂತಬಾ ಪ್ರಕಾಶನ ಹುಬ್ಬಳ್ಳಿ*

ಸಾಂಸ್ ಏ ಗಜಲ್ Read Post »

ಪುಸ್ತಕ ಸಂಗಾತಿ

ಹೊಸ ಪುಸ್ತಕಗಳು

ಪುಸ್ತಕ ಸಂಗಾತಿ ಹೊಸ ಪುಸ್ತಕಗಳು ಆತ್ಮೀಯರೆ ನೇರಿಶಾ ಪ್ರಕಾಶನ ಪ್ರಕಟಿಸಿರುವ ಪ್ರಕಟಣೆಗಳು ೧. ನೇರಿಶಾ – ನಂರುಶಿ ಕಡೂರು (ಗಜಲ್ ಸಂಕಲನ) –ಬೆಲೆ – 180 ೨. ಬದುಕು ಬರಿದಲ್ಲ – ರವಿ.ವೆ.ಕುರಿಯವರ (ಕವನ ಸಂಕಲ)ಬೆಲೆ – 100 ೩. ಮಣ್ಣಿನ ಕಣ್ಣುಗಳು- ನಂರುಶಿ ಕಡೂರು (ಖಸಿದಾ ಸಂಕಲನ)ಬೆಲೆ – 80 ೪. ಕಣ್ಣೆಂಜಲ ಕನ್ನಡಿ- ನೂರ ಅಹ್ಮದ ನಾಗನೂರ (ಗಜಲ್ ಸಂಕಲನ)ಬೆಲೆ -110 ೫. ಬೆಳಕ ನಿಚ್ಛಣಿಕೆ- ಚಂದ್ರಶೇಖರ ಪೂಜಾರ(ಚಂಪೂ) (ಗಜಲ್ ಸಂಕಲನ)ಬೆಲೆ – 100 ೬. ಸಿಹಿ ಜೀವಿಯ ಗಜಲ್ – ಸಿ.ಜಿ. ವೆಂಕಟೇಶ್ವರ (ಸಿಜಿವಿ) (ಗಜಲ್ ಸಂಕಲನ)ಬೆಲೆ- 120 ಐದು ಕೃತಿಗಳ ಬೆಲೆ ಒಟ್ಟು- ₹ 690 ಆಗುತ್ತದೆ.ಒಟ್ಟಿಗೆ ಖರೀದಿ ಮಾಡುವವರಿಗೆ ರಿಯಾಯಿತಿಯಲ್ಲಿ – ₹ 600 ರೂ ಗಳಿಗೆ ನೀಡಲಾಗುತ್ತದೆ. ಮತ್ತು ಅಂಚೆ ವೆಚ್ಚ ಉಚಿತವಾಗಿರುತ್ತದೆ. ಮಣ್ಣಿನ ಕಣ್ಣುಗಳು + ಕಣ್ಣೆಂಜಲ ಕನ್ನಡಿ+ಬೆಳಕ ನಿಚ್ಚಣಿಕೆ – ಈ ಮೂರು ಪುಸ್ತಕಗಳ ಬೆಲೆ ₹290 ರೂ ಆಗುತ್ತದೆ. ಮೂರನ್ನು ಒಟ್ಟಿಗೆ ಖರೀದಿಸುವವರಿಗೆ10% ರಿಯಾಯಿತಿ ಮತ್ತು ಅಂಚೆವೆಚ್ಚ ಉಚಿತವಾಗಿ ನೀಡಲಾಗುತ್ತದೆ. ನೇರಿಶಾ + ಬದುಕು ಬರಿದಲ್ಲ ಈ ಎರಡೂ ಸಂಕಲನಗಳ ಬೆಲೆ – 280 ಆಗತ್ತೆ‌.ಒಟ್ಟಿಗೇ ಖರೀದಿಸುವವರಿಗೆ 15 % ರಿಯಾಯಿತಿ ಮತ್ತು ಅಂಚೆ ವೆಚ್ಚವನ್ನು ಉಚಿತವಾಗಿ ನೀಡಲಾಗುತ್ತದೆ. ಸಿದ್ಧರಾಮ ಹೊನ್ಕಲ್ ರವರ ೧. ನಿನ್ನ ಪ್ರೇಮವಿಲ್ಲದ ಸಾಕಿ- 100೨. ಹೊನ್ನಮಹಲ್- 100೩. ಆತ್ಮ ಸಖಿಯ ಧ್ಯಾನದಲ್ಲಿ- 120೪. ಹೊನ್ನಗರಿಯ ಹೈಕುಗಳು- 120೫. ಆಕಾಶಕ್ಕೆ ಹಲವು ಬಣ್ಣಗಳು- 135 ಸಿದ್ಧರಾಮ ಹೊನ್ಕಲ್ ರವರ ಐದು ಕೃತಿಗೆ 575/- ಆಗುವುದು.ಕೇವಲ 400/-ದಲ್ಲಿ ದೊರೆಯುತ್ತದೆ.ಮತ್ತು ಬಿಡಿ ಪುಸ್ತಕಗಳ ಮೇಲೆ 25% ರಿಯಾಯಿತಿ ಜೊತೆಗೆ ಅಂಚೆವೆಚ್ಚ ಉಚಿತ. ನೇರಿಶಾ ಪ್ರಕಾಶನದ ಯಾವುದೇ ಬಿಡಿ ಪುಸ್ತಕಗಳ ಮೇಲೆ ೧೦% ರಿಯಾಯಿತಿ ಮತ್ತು ಅಂಚೆವೆಚ್ಚ ಉಚಿತ. ಪುಸ್ತಕಗಳಿಗಾಗಿ ಸಂಪರ್ಕಿಸಿ ನಂರುಶಿ ಕಡೂರು – 8073935296ನೂರ ಅಹ್ಮದ ನಾಗನೂರ – 9986886907ಚಂಪೂ – 91645 74818ಶಿವಕುಮಾರ ಕರನಂದಿ – 89710 22430ಎಸ್.ಎಸ್ ಅಲಿ – 97314 31234 ಪೋನ್ ಪೇ ನಂ-9663673639ಗೂಗಲ್ ಪೇ ನಂ-9731328023 ನೇರಿಶಾ ಪ್ರಕಾಶನ

ಹೊಸ ಪುಸ್ತಕಗಳು Read Post »

ಪುಸ್ತಕ ಸಂಗಾತಿ

ಹೊಂಗೆ ನೆರಳು

ಪುಸ್ತಕ ಸಂಗಾತಿ ಹೊಂಗೆ ನೆರಳು  ರಾಜ್ಯ ಮಟ್ಟದ ಪ್ರಾತಿನಿಧಿಕ ಗಜಲ್ ಸಂಕಲನ ಪುಸ್ತಕ ಪರಿಚಯ ಹೊಂಗೆ ನೆರಳು  ರಾಜ್ಯ ಮಟ್ಟದ ಪ್ರಾತಿನಿಧಿಕ ಗಜಲ್ ಸಂಕಲನ ಸಂಪಾದಕರು…ಶ್ರೀ ರಾಮು ಎನ್ ರಾಠೋಡ ಮಸ್ಕಿ  ಮೊ.ನಂ ೯೭೩೯೯೫೯೧೫೧ ಪ್ರಕಾಶಕರು..ಹೆಚ್ ಎಸ್ ಆರ್ ಎ ಪ್ರಕಾಶನ ಬೆಂಗಳೂರು.  ಮೊ.೭೮೯೨೭೯೩೦೫೪ ಶ್ರೀ ರಾಮು ಎನ್ ರಾಠೋಡ ಮಸ್ಕಿ ಇವರು ವೃತ್ತಿಯಿಂದ ಕೆ ಪಿ ಟಿ ಸಿ ಎಲ್  ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಉತ್ತಮ ಬರಹಗಾರರು ,ಕವಿಗಳು ,ಗಜಲ್ ಕಾರರು,ಸಂಘಟನಾಕಾರರು ಆಗಿದ್ದು ಕವಿವೃಕ್ಷ ಬಳಗ ರಾಯಚೂರು ಜಿಲ್ಲಾಧ್ಯಕ್ಷರಾಗಿ ಅತ್ಯಂತ ಉತ್ಸಾಹ ದಿಂದ ಕ್ರಿಯಾ ಶೀಲರಾಗಿ ತಾಲೂಕಾ ಮಟ್ಟದಲ್ಲಿ ಕವಿವೃಕ್ಷ ಬಳಗ ವನ್ನು ಸ್ಥಾಪಿಸಿ ಎಲೆಯಮರೆಯ ಯುವ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಮಟ್ಟದ ಕವಿಗೋಷ್ಠಿಗಳನ್ನು ಆಯೋಜಿಸಿ ಹೊಸ ಹೊಸ ಕೃತಿಗಳನ್ನು ಲೋಕಾರ್ಪಣೆ ಕಾರ್ಯಕ್ರಮ ಗಳನ್ನು ಮಾಡುತ್ತಾ ಬಂದಿದ್ದಾರೆ.ಈಗ ಹೊಂಗೆ ನೆರಳು ಎಂಬ ರಾಜ್ಯ ಮಟ್ಟದ ಪ್ರಾತಿನಿಧಿಕ ಗಜಲ್ ಸಂಕಲನಕ್ಕೆ ಸಂಪಾದಕರಾಗಿ ಕೃತಿ ಪ್ರಕಟಿಸಿ ಲೋಕಾರ್ಪಣೆ ಮಾಡಿ ಓದುಗರ ಕೈಗೆ ಇಟ್ಟಿದ್ದಾರೆ.      ಹೊಂಗೆ ನೆರಳು ಕೃತಿಯ ಶೀಷಿ೯ಕೆ ಓದಿದ ತಕ್ಷಣ ನೆನಪಾಯಿತು ಬೇಂದ್ರೆ ಯವರ ಯುಗಾದಿ ಕವಿತೆಯ ಸಾಲು,”ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಮತ್ತೆ ಕೇಳ ಬರುತಿದೆ” ಚೈತ್ರದ ಬಿಸಿಲು ಚಿಗುರಿ ಹಸಿರಾದ ಹೊಂಗೆ ಮರದ ನೆರಳಿಗೆ ದಣಿದ ಜೀವ ಮಲಗಿದಾಗ ಮರದಲಿ ಅರಳಿದ ಹೊಂಗೆ ಹೂ ಗಳ ಘಮ ಆಘ್ರಾಣಿಸಿ  ಕಣ್ಣು ಮುಚ್ಚಿ ಭೃಂಗಗಳ ಸಂಗೀತ ಆಸ್ವಾದಿಸಿದಾಗ ಮನವು ಸಂಭ್ರಮಿಸಿ ಪರವಶಕೊಳ್ಳುತ್ತದೆ .ಅದರಂತೆ ಓದುಗ ಗಜಲ್ ಗಳ ಒಳ ಹೊಕ್ಕಾಗ  ಗಂಧವು ಆತ್ಮಕ್ಕೆ ಪೂಸಿಸಬೇಕು ಅದು ಎಲ್ಲಾ ಮಗ್ಗಲಿನಿಂದ ಗ್ರಹಿಸಿ ಆತ್ಮ ವನ್ನು ಆವರಿಸಿ ಸಂದಾನಕ್ಕೆ ಇಳಿಯಬೇಕು.ಆ ಗಜಲ್ ದಲ್ಲಿರು ಮಧುರ ,ಮೃದು ಗೇಯತೆ ಲಾಲಿತ್ಯ ಭಾವ ತೀವ್ರತೆ ಓದುಗನನ್ನು ಮಂತ್ರ ಮುಗ್ಧವಾಗಿಸಿ ತನ್ನಲ್ಲಿಯೇ ತಾ ಗುನ್ ಗುನಾಯಿಸುವಂತೆ ಮಾಡಬೇಕು, ನವಿರಾದ ಭಾಷೆ ಸ್ವಾತಿಕ ಸ್ವಾದ ಓದುಗರಿಗೆ ನೀಡಬೇಕು.ಗಜಲ್ ಗಳಲ್ಲಿ ನಿರಾಕಾರನೊಂದಿಗೆ ಸಂವಾದಿಸುವ ಸತ್ವ ತುಂಬಿರುತ್ತದೆ.    ಪ್ರೀತಿ ,ಪ್ರೇಮ ವಿರಹ ಸಂದಾನಗಳು ಗಜಲ್ದ ಸ್ಥಾಯಿ ಗುಣವಾಗಿದ್ದರೂ ಅದರ ಜೊತೆಗೆ ಈಗ ಸಮಾಜಿಕ ಗಜಲ್ ಗಳು ರಚನೆ ಯಾಗುತ್ತಿವೆ.ಸಮಾಜದ ವಾಸ್ತವಿಕ ಸ್ಥಿತಿಗೆ ಕವಿ ಸ್ಪಂದಿಸಿ ಓರೆ ಕೋರೆಗಳನ್ನು ತಿದ್ದಲು ಗಜಲ್ ರಚನೆಯು ಆಗುತ್ತಿವೆ.. ಸುಕೋಮಲ ವಾದ  ಮಧುರ ಮೃದು ಶಬ್ದಗಳಲ್ಲಿ ಲಯ ಗೇಯತೆ ಯಿಂದ ಗಜಲ್ ರಚನೆ ಆದರೆ ಹಾಡಲು ಚಂದ,ಗಜಲ್ ಒಂದು ಹಾಡು ಗಬ್ಬ ವಾಗಿದ್ದು ಹಾಡಿದಾಗ ಅದರ ತೀವ್ರತೆ ಹೃದಯವನ್ನು ತಟ್ಟುತ್ತದೆ.ಅದಕ್ಕಾಗಿ ಭಾವತೀವ್ರತೆ ಯಿಂದ ಹಾಡಲು ಬರುವಂತಹ ಗಜಲ್ ಗಳನ್ನು ರಚಿಸಿದರೆ ಅವು ಬಹುಕಾಲ ಜನಮನದಲ್ಲಿ ನಿಲ್ಲುತ್ತವೆ.         ಪ್ರೀತಿ ಎಂದರೆ ಏನೆಂದು ವ್ಯಾಖ್ಯಾನಿಸಲು ಬರುವುದಿಲ್ಲವೋ ಅದೇ ರೀತಿ ಗಜಲ್ ಅಂದರೇನೆಂದು ವ್ಯಾಖ್ಯಾನಿಸುವುದು ಕಷ್ಟ.ಅವರವರ ಭಾವಕ್ಕೆ ಅವರವರ ಭಕ್ತಿಗೆ ನಿರಾಕಾರನಾದ ಭಗವಂತನು ಕಾಣಿಸಿಕೊಳ್ಳುವಂತೆ ಅದೇ ರೀತಿ ಯಾಗಿ ಗಜಲ್ ಸಾಹಿತ್ಯ ಓದುಗರ ಗ್ರಹಿಕೆಯಂತೆ ಹೊಳಪುಗಳನ್ನು ತೋರಿಸುವ ಸುಂದರವಾದ ಕಾವ್ಯ ಸಾಹಿತ್ಯ ವಾಗಿದೆ.         ಹೊಂಗೆ ನೆರಳು ರಾಜ್ಯ ಮಟ್ಟದ ಪ್ರಾತಿನಿಧಿಕ ಗಜಲ್ ಸಂಕಲನದಲ್ಲಿ  ೪೮ ಗಜಲ್ ಕಾರರ ೭೪ ಗಜಲ್ ಗಳಿದ್ದು ಹಿರಿಯ ಕಿರಿಯ ಸಮಕಾಲಿನ ಗಜಲ್ ಕಾರರ ಉತ್ತಮ ಗಜಲ್ ಗಳಿವೆ. “ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ” ಎಂಬಂತೆ ಈ ಸಂಕಲನದಲ್ಲಿ ನುರಿತ ಗಜಲ್ ಕಾರರ ಗಜಲ್ ಗಳ ಜೊತೆಗೆ ಯುವ ಉತ್ಸಾಹಿ ಬರಹಗಾರರ ಗಜಲ್ಗಳು ಇವೆ. ಯುವ ಬರಹಗಾರರು ವಯೋಸಹಜತೆ ಅನುಗುಣವಾಗಿ ಪ್ರೀತಿ ,ಪ್ರೇಮ,ವಿರಹ,ಪ್ರಣಯಗಳ ಜೊತೆಗೆ ಸಾಮಾಜಿಕ ವರ್ತಮಾನದ ತಲ್ಲಣಗಳ ಬಗ್ಗೆ ಗಜಲ್ ಗಳನ್ನು ರಚಿಸಿದ್ದಾರೆ. ಯುವ ಬರಹಗಾರರು ಉತ್ಸಾಹ ದಿಂದ ಗಜಲ್ ಗಳನ್ನು ರಚಿಸಿದ್ದಾರೆ ನಿಜ ,ಆದರೂ ಅವರು ತಮ್ಮ ಓದುವ ಹವ್ಯಾಸ ವನ್ನು ಹೆಚ್ಚಿಸಿಕೊಂಡರೆ ಇನ್ನೂ ಉತ್ತಮವಾದ ಗಜಲ್ ಗಳನ್ನು ಬರೆಯಲು ಸಾಧ್ಯ ವೆಂದು ನನ್ನ ಅನಿಸಿಕೆ.ಗಜಲ್ ರಚನೆಯಲ್ಲಿ ಅದರದೇ ಆದ ಛಂದಸ್ಸು ಜೊತೆಗೆ ಭಾವತೀವ್ರತೆ ಮತ್ತು ರೂಪಕ ,ಪ್ರತಿಮೆ ಗಳನ್ನು ಬಳಿಸಿ ಗಜಲ್ ರಚಿಸಿದಾಗ ಗಜಲ್ ಕಾವ್ಯ ಸುಂದರವಾಗುತ್ತದೆ.           ಹೊಂಗೆ ನೆರಳು ಗಜಲ್ ಸಂಕಲನಕ್ಕೆ ನಾಡಿನ ಹೆಸರಾಂತ ಗಜಲ್ ಕಾರರಾದ ಅಲ್ಲಾಗಿರಿರಾಜ್ ಕನಕಗಿರಿ ಯವರು ಮುನ್ನುಡಿ ಬರೆದಿದ್ದಾರೆ. ಇದರ ಜೊತೆಗೆ ಜಿಲ್ಲೆಯ ಅನೇಕ ಗಜಲ್ ಕಾರರು ತಮ್ಮ ಅನಿಸಿಕೆಗಳನ್ನು ಬರೆದು ಸಂಕಲನದ ಬಗ್ಗೆ ತಮ್ಮ ಮೆಚ್ಚುಗೆಯನ್ನು ತಿಳಿಸಿದ್ದಾರೆ.ಇದರಿಂದ ಸಂಕಲನದ ಮೌಲ್ಯ ಹೆಚ್ಚಾಗಿದೆಂದು ಹೇಳಬಹುದು. ನನ್ನ ಓದಿಗೆ ದಕ್ಕಿದ ಕೆಲವು ಗಜಲ್ ಗಳ ಮಿಸ್ರಾ ಗಳು  “ಕತ್ತಲೆಯ ಗೂಡಲಿ ಉಳಿದು ಉಸಿರು ಗಟ್ಟುತ್ತಿದೆ ನನಗೆ * ಬೆಳಗಲಿ ಉದಯಿಸುವ ಸೂರ್ಯ ಕಿರಣ ನೋಡಲು ಬಿಡು* (ಗಜಲ್ ೩೮) ಮೇಲಿ ಮಿಸ್ರಾ ದಲ್ಲಿ ಗಜಲ್ ಕಾರರು ಜಗದ ಅಜ್ಞಾನ ದ (ಕತ್ತಲೆ) ಕೂಪದಲ್ಲಿ ಇದ್ದು ಉಸಿರು ಗಟ್ಟುತ್ತಿದೆ,ಜ್ಞಾನದ ಬೆಳಕನ್ನು ಪಡೆಯಬೇಕಾಗಿದೆ  ನನ್ನನ್ನು ಬಂದಿಸ ಬೇಡ ವೆಂದು ಆತ್ಮ ಸಂಗಾತಿ ಯೊಂದಿಗೆ ಸಂವಾದಿಸುತ್ತಾನೆ.ಮನುಷ್ಯನು ಆಚರಿಸುವ ಮೂಢ ನಂಬಿಕೆಗಳಿಂದ,ಅಜ್ಞಾನ ದಿಂದ ಹೊರಬರಲು ಚಡಪಡಿಸುವ ತೀವ್ರಭಾವ ಗಜಲ್ ದಲ್ಲಿ ಎದ್ದು ಕಾಣುತ್ತದೆ. ಕಳೆದು ಹೋದ ರಾತ್ರಿ ಕನಸು ಮರೆತು ಹೋದರೇನು ಹೊನ್ನ ಬೆಳೆದಿಂಗಳನ್ನು ಸವಿಯೋಣ ಬಾ (ಗಜಲ್ ೧) ಮೇಲಿನ ಮಿಸ್ರಾ ದಲ್ಲಿ ಕವಿ ಜೀವನದಲ್ಲಿ ಕಳೆದ ಕಲ್ಪನೆಯ  ಸುಂದರ ದಿನಗಳು ಮರೆತು ಹೋದರೇನಾಯಿತು  ನಮ್ಮ ಮುಂದಿರುವ ವಾಸ್ತವಿಕ ಬಗ್ಗೆ ಯೋಚಿಸಿ ಸುಖ ಪಡೆಯೋಣ ಬಾ ಎಂದು ಆಶಾದಾಯಕದ  ನುಡಿಯನ್ನು ಬಾಳ ಸಂಗಾತಿಗೆ ಹೇಳುತ್ತಾರೆ. ಮಾತೆಕೋ ಮೌನವಾಗಿದೆ ಅವಳು ಬಾರದೆ ಇಂದು ಮನವೇಕೋ ನೊಂದಿದೆ ಇನಿಯಳು ಕಾಣದೆ ಇಂದು (ಗಜಲ್ ೧೨) ಮೇಲಿನ ಮತ್ಲಾದಲ್ಲಿ ಕವಿ ತನ್ನ ಪ್ರಿಯೆತಮೆಯ ಬರುವನ್ನು ಕಾಯುತ್ತಿದ್ದಾರೆ.ಅವಳಿಲ್ಲದೆ ಮಾತುಗಳು ಬಾರದೆ ಹೃದಯ ಮೌನವಾಗಿದೆ. ಮನವು ನೊಂದು ಬೆಂದು ಅವಳ ಬರುವಿಗಾಗಿ ಕಾಯುತ್ತಾ ಚಡಪಡಿಸುತಿದೆ  ಇಂದು ಎಂದು ಹೇಳುತ್ತಾ ವಿರಹಿಗಳ ಮಾನಸಿಕ ಸ್ಥಿತಿ ಯನ್ನು ಗಜಲ್ ದಲ್ಲಿ ವ್ಯಕ್ತ ಪಡಿಸಿದ್ದಾರೆ. ಚೆಂದದ ಚೆಲುವೆಯು ಮನಸನು ಕದಿಯಲು ಬಂದಿಹಳು ಪ್ರೀತಿಯ ಗೈಯಲು ತೋಳಲಿ ಬಂಧಿಸಲು ಬಂದಿಹಳು ( ಗಜಲ್ ೨೧) ಮೇಲಿನ ಮತ್ಲಾದಲ್ಲಿ ಪ್ರಿಯತಮ ತನ್ನ ಪ್ರೇಯಸಿಯ ಚೆಲುವನ್ನು ವಣಿ೯ಸುತ್ತಾ ನನ್ನ ಹೃದಯ ವನ್ನು ಕದಿಯಲು ಬಂದ ಕಳ್ಳಿ,ಪ್ರೀತಿಮಾಡುತ್ತಾ ತನ್ನ ಕೋಮಲವಾದ ತೋಳಿನಲ್ಲಿ ನನ್ನನ್ನು ಬಂಧಿಸಲು ಬಂದಿರುವಳೆಂದು ಹೇಳುತ್ತಾ ಗಜಲ್ ದಲ್ಲಿ ಅವಳು ತನ್ನ ಬಾಳಲ್ಲಿ ವಸಂತ ಗೀತೆ ಹಾಡುತ್ತಾ ಅಮೃತವನ್ನು ಉಣಿಸಲು ಬಂದಂತ ದೇವಲೋಕದ ಅಪ್ಸರೆ ಎಂದು ತನ್ನ ಪ್ರಿಯೆತಮೆ ಯನ್ನು ಭಾವನಾತ್ಮಕ ವಾಗಿ ವಣಿ೯ಸಿದ್ದಾರೆ. ಎದೆ ತುಂಬ ಕಾಡುವ ನೆನಪುಗಳು ಎಲ್ಲಿ ಬಚ್ಚಿಡಲಿ ಬಣ್ಣ ಬಣ್ಣಕ್ಕೆ ತಿರುಗುವ ರೆಕ್ಕೆಗಳು ಎಲ್ಲಿ ಬಚ್ಚಿಡಲಿ (ಗಜಲ್ ೩೪) ಮೇಲಿನ ಮತ್ಲಾದಲ್ಲಿ ಕವಿ ಮನದಲ್ಲಿ ಕಾಡುವ ಕೊರೆಯುವ ಹಳೆಯ ನೆನಪುಗಳನ್ನು ಹೇಗೆ ಮರೆಯಲಿ ಎಲ್ಲಿ ಬಚ್ಚಿಡಲಿ ಅವುಗಳನ್ನು ಎಂದು ಹೇಳುತ್ತಾ ಕ್ಷಣ ಕ್ಷಣಕ್ಕೆ ಬದಲಾಗುವ  ಬಣ್ಣ ಬಣ್ಣದ ಕನಸುಗಳನ್ನು (ರೆಕ್ಕೆಗಳು)ಎಲ್ಲಿ ಬಚ್ಚಿಡಲಿ ಎಂದು ತನ್ನ ಪ್ರಿಯತಮೆಗೆ ಹೇಳುತ್ತಾನೆ ಅವಳೊಂದಿಗೆ ಕಳೆದ ದಿನಗಳನ್ನು ಹೇಗೆ ಮರೆಯಲೆಂಬ ಚಡಪಡಿಕೆಯು ಈ ಗಜಲ್ ದಲ್ಲಿ ಎದ್ದು ಕಾಣುತ್ತದೆ. ಅದೆಷ್ಟೋ ಉಳಿದ ಎದೆಯ ಮಾತಿಗೆ ದನಿ ಬೇಕಿದೆ ದೂರಾದ ಜೀವವು ಪ್ರೀತಿಗೆ ಸೋತು ಬರಬೇಕಿದೆ (ಗಜಲ್ ೪೭) ಮೇಲಿನ ಮತ್ಲಾದಲ್ಲಿ ಗಜಲ್ ಕಾತಿ೯ಯು ತನ್ನ ಪ್ರಿಯಕರನ ಬರುವಿಗಾಗಿ  ಕಾಯುತ್ತಾ ನೀನಿಲ್ಲದೆ ನನ್ನ ಮನದ ಮಾತುಗಳು ಎದೆ ಆಳದಲ್ಲಿ ಉಳಿದಿವೆ,ನೀ ಬಂದು ಅವುಗಳಿಗೆ ದನಿಯಾಗ ಬೇಕಾಗಿದೆಂದು ಹೇಳುತ್ತಾ ,ನೀನು ಎಷ್ಟೇ ದೂರ ಇದ್ದರೂ ನನ್ನ ಶುದ್ಧ ವಾದ ಪ್ರೀತಿಗೆ ನೀನು ತಲೆಬಾಗಿ ಬರಲೇಬೇಕೆಂದು ಹಂಬಲುಸುತ್ತಾ ಪ್ರಿಯಕರನ್ನು ಆಹ್ವಾನಿಸುತ್ತಾ ಅವನ ಆಗಮನದ ನಿರೀಕ್ಷೆ ಯಲ್ಲಿ ಹಗಲು ರಾತ್ರಿ ಯನ್ನದೆ ತೆರೆದ  ಕಣ್ಣಿನಿಂದ  ನಿದ್ದೆ ಮಾಡದೆ ಹುಡುಕುತ್ತಿದ್ದಾಳೆ.ಇದು ವಿರಹದಲ್ಲಿ ಪ್ರಿಯತಮನನ್ನು  ಹುಡುಕಾಡುವ  ಗಜಲಾಗಿದೆ. * ನೂರು ನೋವುಗಳ ಸಂತೆ ಮನಕೆ ಅಂಟಿರಲು* * ಬಟ್ಟಲಿನ ಒಡಲಲಿ ತುಸು  ಒಲವಿನ ನಶೆಯಲ್ಲ ಸಾಕಿ*(ಗಜಲ್ ೫೫) ಮೇಲಿನ ಮಿಸ್ರಾ ದಲ್ಲಿ ಕವಿ ತನ್ನ ಮನದ ನೋವು ಸಾಕಿ ಯೊಂದಿಗೆ ಹಂಚಿಕೊಳ್ಳುತ್ತಾನೆ.ಮನಸಿನಲ್ಲಿ ನೂರು ನೋವುಗಳ ಸಂತೆ ನಡೆದಿದೆ ಅವು ಕರಳಿಗೆ ಅಂಟಿಕೊಂಡಿವೆ.ಹೃದಯ ಬಟ್ಟಿಲು ಬರಿದಾಗಿದೆ ಮರುಭೂಮಿ ಯಾಗಿ ಬಿರಿದಿದೆ,ಪ್ರೀತಿಯ ಮಳೆ ಇಲ್ಲದೆ ಒಣಗಿದೆ ನಿನ್ನೊಲವಿನ ಗುಟುಕು ಕುಡಿಯದೆ ಬದುಕಿನಲ್ಲಿ ಒಲವಿನ ನಶೆ ಎಲ್ಲಿಂದ ಬರಬೇಕೆಂದು ಸಾಕಿಯನ್ನು ಪ್ರಶ್ನಿಸುತ್ತಾ ಪ್ರಿಯೆತಮೆಯ ಪ್ರೇಮ ಇರದ ಬದುಕಿಗೆ ನೆಲೆ  ಎಲ್ಲೆಂದೆ ಎಂದು ಹಲಬುವ ಗಜಲ್ ಇದು. ಇಂತಹ ಪ್ರೀತಿಯ ಕನವರಿಕೆಯ ಮತ್ತು ವಿರಹದ ನೋವಿನ ಗಜಲ್ ಗಳು ಈ ಸಂಕಲನದಲ್ಲಿ ಸಾಕಷ್ಟು ಇವೆ ಇದರ ಜೊತೆಗೆ ವಿವಿಧ ವಿಷಯ ಗಳ ಗಜಲ್ ಗಳು ಕೂಡಾ ಇವೆ.ಹೊಂಗೆ ನೆರಳು ಗಜಲ್ ಸಂಕಲನವು ಓದಿಸಿಕೊಂಡು ಹೋಗುತ್ತದೆ.ಶ್ರೀ ರಾಮು ಎನ್ ರಾಠೋಡ ಮಸ್ಕಿ ಇವರ ಸಂಪಾದಕೀಯ ಕೆಲಸಕ್ಕೆ ಅಭಿನಂದನೆಗಳು ಹೇಳುತ್ತಾ ನನ್ನ ಬರಹಕ್ಕೆ ಮಿರಾಮ ಕೊಡುವೆ.          ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ

ಹೊಂಗೆ ನೆರಳು Read Post »

ಪುಸ್ತಕ ಸಂಗಾತಿ

ಆಸೆಯ ಕಂದೀಲ

ಪುಸ್ತಕ ಸಂಗಾತಿ  “ಆಸೆಯ ಕಂದೀಲ – ಬೆಳಕಿನ ಮೌನದ ಮಾತು ಹುಡುಕುತ್ತಾ…” ಕೃತಿ: “ಆಸೆಯ ಕಂದೀಲು“(ಕವನ ಸಂಕಲನ) ಕವಯತ್ರಿ: ಮಂಜುಳ.ಡಿ, ಬೆಂಗಳೂರು. ಪ್ರಕಾಶನ: ತೇಜು ಪಬ್ಲಿಕೇಷನ್ಸ್, ಬೆಂಗಳೂರು. ಬೆಲೆ: ₹೫೫ ಕವನ ಸಂಕಲನಗಳನ್ನು ಕೊಂಡು ಓದುವವರ ಸಂಖ್ಯೆ ಗಣನೀಯವಾಗಿ ಇಳಿಮುಖ ಕಾಣುತ್ತಿರುವ ಸಮಯದಲ್ಲಿ, ಇಂದಿನ ಕಾಲಘಟ್ಟದಲ್ಲಿ ಕವಿತೆಗಳನ್ನು ಬರೆದು ಪ್ರಕಟಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸಂತಸದ ಸಂಗತಿಯೇ ಆಗಿದೆ. ಆದರೆ ಮನಸ್ಸಿಗೆ ಬಂದದ್ದನ್ನು ಗೀಚಿ ಪುಸ್ತಕದ ರೂಪದಲ್ಲಿ ಪ್ರಕಟಿಸಿ ತಾನೊಬ್ಬ ‘ಕವಿ/ಕವಯಿತ್ರಿ’ ಎಂಬ ಲೇಬಲ್ ಅನ್ನು ತಮಗೆ ತಾವೇ ನೀಡಿಕೊಂಡು ಸಂಭ್ರಮಿಸುವ ಸಂಸ್ಕೃತಿ ಜಾರಿಯಲ್ಲಿರುವುದನ್ನು ತಳ್ಳಿಹಾಕುವಂತಿಲ್ಲ! ಹೀಗಿದ್ದಾಗ ಅಂತಹ ಹಲವರ ನಡುವೆ ನಿಜಕ್ಕೂ ಉತ್ಕೃಷ್ಟವಾದ ಕವಿತೆಗಳನ್ನು ರಚಿಸುತ್ತಿರುವ ಲೇಖಕರನ್ನು ಅರಸುವುದು ಕಷ್ಟಸಾಧ್ಯವೆ ಸರಿ. ಅಂತಹ ವಿರಳರಲ್ಲಿ ವಿರಳರಾದ, ಫೇಸ್ಬುಕ್  ಸಾಮಾಜಿಕ ಜಾಲತಾಣದಲ್ಲಿ ಛಾಪು ಮೂಡಿಸಿ, ತಮ್ಮದೇ ಆದ ಓದುಗ ವರ್ಗವನ್ನು ಹೊಂದಿರುವ ಮಂಜುಳ.ಡಿ ರವರು, ತಮ್ಮ ವಿಭಿನ್ನ ಶೈಲಿಯ ಕವಿತೆಗಳಿಂದಲೇ ಪರಿಚಿತರಾದವರು. “ಆಸೆಯ ಕಂದೀಲು” ಕವನ ಸಂಕಲನ ‘ಮಂಜುಳ.ಡಿ’ ರವರ ಚೊಚ್ಚಲ ಕೃತಿಯಾಗಿದ್ದು, ಇದರೊಂದಿಗೆ “ಸಂಪಿಗೆ ಮರ” (ವಿಶ್ವವಾಣಿ ದಿನಪತ್ರಿಕೆಯಲ್ಲಿ ಪ್ರಕಟಣೆಯಾದ ಅಂಕಣ ಬರಹಗಳು) ಮತ್ತು “ನಿನಾದವೊಂದು…”(ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟನೆಯಾದ ಅಂಕಣ ಬರಹಗಳು) ಕೃತಿಗಳನ್ನು ಸಹ ಪ್ರಕಟಿಸಿದ್ದಾರೆ. “ಮುಸ್ಸಂಜೆಯ ಚಹದೊಂದಿಗೆ ಒಮ್ಮೆ ನೀ ಸಿಗು ಒಂದಷ್ಟು ಮಾತುಗಳ ಎಳೆ ಹೆಣೆಯುವ ನೀ ಮೌನದಲ್ಲಿ ಹೇಳುತ್ತಾ ಹೋಗು ನಾ ಸುಮ್ಮನೆ ಕೇಳುವೆ“ (ಮಾತಿನ ಎಳೆ)    ಮುಂಜಾನೆ ಮುಸುಕು ಇಬ್ಬನಿ ಮಬ್ಬಿನ ಈ ಚಳಿಯ ಘಳಿಗೆಯಲ್ಲಿ, ಬಾಲ್ಕಾನಿಯಲ್ಲಿ ನಿಂತು ಶುಷ್ಕ ಹಬೆಯಾಡುವ ಚಹಾದ ಒಂದೊಂದು ಗುಟುಕು ಹೀರುತ್ತಾ… ಮಂಜುಳ. ಡಿ ರವರ ಒಂದೊಂದು ಕವಿತೆಗಳನ್ನು ಆಸ್ವಾದಿಸುತ್ತಿದ್ದರೆ ಭಾವಗಳ ಅಮಲೇರುವ ನಶೆಯ ಗಂಧ ಮೈಮನಸ್ಸನ್ನು ಆವರಿಸುತ್ತದೆ. ಏಕತಾನತೆಯಲ್ಲಿ ತಲ್ಲೀನನಾಗಿರುವವನಲ್ಲಿ ನಿರ್ಲಿಪ್ತ ನದಿಯೊಂದು ಮೌನವಾಗಿ ಹರಿದಂತೆ ಅನುಭವವಾಗುತ್ತದೆ. ಶುದ್ಧ ಕಾವ್ಯಾತ್ಮಕವಾದ ಪರಿಭಾಷೆಯಲ್ಲಿ ಮಿಂದು ಪುಟಿದೆದ್ದಂತಿರುವ ಕಾವ್ಯದ ಸಾಲುಗಳು ನವೀನತೆಯಿಂದ ಅತ್ಯಾಪ್ತವಾಗುವ, ಮನಕೆ ಮುದ ನೀಡುವ, ರಮಿಸುವ, ಸಮ್ಮೋಹಿಸುವ, ಪರವಶಗೊಳಿಸುವ ಸರಳ ಭಾಷೆಯ ಹಾಗೂ ಸುಂದರ ಭಾವದ ಅಚ್ಚುಕಟ್ಟಾದ ರಚನೆಗಳು, ಅನಾಯಾಸವಾಗಿ ಕವಿಮನದ ಸೂಕ್ಷ್ಮ ಸಂವೇದನೆಯಿಂದ ಹೊಮ್ಮಿದ ಹಾಗೇ ಅಷ್ಟೇ ಅನಾಯಾಸವಾಗಿ ಓದುಗನನ್ನು ದಕ್ಕಿಸಿಕೊಳ್ಳುತ್ತವೆ. “ಅದು ಧ್ಯಾನವೋ ತಪನವೋ ಅರಿಯೆ ದಶಕವಾದರೂ ಒಂದಂಗುಲ ಕದಲದ ಒಂದೇ ತೀವ್ರತೆ ಅಂಗುಷ್ಠದಿಂದ ನೆಟ್ಟಿಯಂಚಿನವರೆಗೂ ಅರೆಗಳಿಗೆಯಲ್ಲಿ ಕರಗಿ ಹರಿದುಬಿಡಬೇಕೆಂಬ ಕಾತರತೆ“ (ಮುಗಿಲಿನಂಚಿನ ನೀಲಿ ಪರಿಚ್ಛೇದದಲ್ಲಿ ಉಲ್ಕಾಪಾತ) ಈ ತೆರನಾದ ವಿಭಿನ್ನ ಮತ್ತು ಅನನ್ಯ ಅಭಿವ್ಯಕಿಯನ್ನು, ಕೌಶಲ್ಯವನ್ನು ಕರಗತ ಮಾಡಿಕೊಂಡಿರುವ ಮಂಜುಳರವರ ಕವನ ಸಂಕಲನದಲ್ಲಿ  ತಮ್ಮದೇ ಛಾಪು ಮೂಡಿಸುವ ಪ್ರಯತ್ನ ಮಾಡಿದ್ದಾರೆ ಎನ್ನಬಹುದು. “ನಿನ್ನ ಕಂಡ ಮರುಕ್ಷಣ ನನ್ನೊಳು ಹರಿದು ನಿಂತ ನಿನ್ನ ಅಸ್ತಿತ್ವ“ “ನಿನ್ನದೇ ಬಣ್ಣ ಪಡೆದು ನಿಂತ ಪರಿ ನನ್ನ ಬಣ್ಣವ್ಯಾವುದೋ ಗುರುತಿಸಲಿ ಹೇಗೆ?” (ನಿನ್ನಲ್ಲಿ ಕರಾಗಿರುವ ನನ್ನ ಬಣ್ಣವಾವುದು?)     ಓದುಗ ಬೆರಳನ್ನು ಬಳಸಿ ಸಂಕಲನದ ಕವಿತೆಗಳನ್ನು ಓದುವಾಗ, ಅದರಲ್ಲಿನ ಹಸಿ ಸಿಹಿ ಭಾವ ಸುಮಗಳು ಓದುಗನ ಅಂಗೈ ಬೆರಳಿಗಂಟಿ ಮಗುಮ್ಮಾಗಿ ಘಮ್ ಎಂದು ನಕ್ಕು ಅಚ್ಚರಿ ಮೂಡಿಸುತ್ತವೆ! ಹಾಗಾಗಿ ಪ್ರಸ್ತುತ ಕವಿತೆಗಳಲ್ಲಿ ಮಿಂದು, ಕರಗಿ, ಒಂದಾಗಿ, ಕಳೆದು ಹೋಗುವ ಭಾವ ತೀವ್ರತೆ ಉಂಟಾಗುತ್ತದೆ. “ಬಿಟ್ಟು ಹೋಗುವ ಆತುರವೆಷ್ಟಿತ್ತು ನೋಡು ನಿನ್ನರ್ಧ ನನ್ನಲ್ಲೆ ಉಳಿಸಿ ಹೋದೆ“ ( ಮಾಸದ ಕಲೆ)    ಇಲ್ಲಿನ ಕವಿತೆಗಳು ಒಂದು ಮತ್ತೊಂದರ ನೆರಳಿಲ್ಲದೆ ಸ್ವತಂತ್ರವಾಗಿ ಮತ್ತು ವೈವಿಧ್ಯಮಯವಾಗಿ ಭಿನ್ನತೆಯನ್ನು ಕಾಯ್ದುಕೊಳ್ಳುವ ಜೊತೆಗೆ, ತಮ್ಮದೇ ಆದ ನವಿರಾದ ಶೈಲಿಯನ್ನು ಮೈಗೂಡಿಸಿಕೊಂಡಿದ್ದು; ಕ್ಲಿಷೆ ಅನಿಸುವ, ಜಿಜ್ಞಾಸೆ ಮೂಡಿಸುವ ಸವಕಲು ಪದಗಳ  ಪಂಜು ನಂದಿಸಿ, ಆಸೆಯ ಕಂದೀಲನ್ನು ಹೊಸತಾಗಿ ಹಚ್ಚಿದ್ದಾರೆ. ಅದರ ಪ್ರಭೆ ಉತ್ಸಾಹ ಭರಿತ, ಉಲ್ಲಾಸದಾಯಕ, ಉನ್ಮಾದದ ರಸಸಿದ್ಧಿಯ ಜೊತೆಗೆ ಉದಾತ್ತತೆಯ ತದಾತ್ಮಕತೆಯನ್ನು ಹುಟ್ಟಿಸಿ ಬೆರಗು ಮೂಡಿಸುವಂಥದ್ದು. “ಹೂಡಿದ ಸಂಚೊoದು ಯಾವುದೇ ಶಿಕ್ಷೆಯಿಲ್ಲದೆ ರಿಹಾ ಆಯಿತು ಕಣ್ಣುಗಳನ್ನು ಆಯುಧವೆಂದು ಪರಿಗಣಿಸಿಲ್ಲ“ (ಆಯುಧ) ಹೀಗೆ…. ಹಾರುವ ಹಕ್ಕಿಯ ರೆಕ್ಕೆಯ ತುದಿಯಾಗಿ ಆತ್ಮವನ್ನು ಸ್ಪರ್ಶಿಸುವ, ಹೂದಳಗಳಾಗಿ ಮನಸ್ಸನ್ನು ಆರ್ದವಾಗಿ ತಾಕುವ, ಕತ್ತಲಲ್ಲಿ ದೀಪವನ್ನು ಹಚ್ಚಿಟ್ಟಂತೆ ಬೆಳಗುವ, ಬಿಸಿಲ ಹೊಂಗಿರಣಗಳಿಗೆ ಹೊಳೆಯ ಅಲೆಗಳಾಗಿ ಹೊಳೆಯುವ, ಹೊಸ ಹೊಳಹು ಹಾಗು ನವ ಕಾಣ್ಕೆಗಳ ಮೂಲಕ ವಿಸ್ಮಯ ಲೋಕವೊಂದನ್ನು ಸೃಷ್ಟಿಸುವ, ತದಾತ್ಮಕತೆಯನ್ನು ಹುಟ್ಟಿಸಿ ಬೆರಗು ಮೂಡಿಸುತ್ತವೆ. ‘ನೆರಳೆ ಬೆಳಕನ್ನು ಬೆನ್ನಟ್ಟಿದ ಹಾಗೆ‘ __ ‘ಕಣ್ಣಿನಲ್ಲಿ ಬಿದ್ದ ಜಗವೀಗ ಒದ್ದೆ‘ __ ‘ಅಲ್ಲಾನ ಗೋಡೆಯ ಚೂರು‘ __ ‘ನೀ ಬರುವ ಹಾದಿಯಲ್ಲಿ ಕಣ್ಣ ಹಾಸಿ‘ __ ‘ನಿನ್ನ ನೋಟದ ಜ್ವಾಲೆಯೊಂದು ತಾಕಿ‘ __ ‘ಕಣ್ಣವೆಯ ಮೇಲೆ ಅನೂಹ್ಯ ಖಂಡಗಳ ನೆರಳು‘ __ ‘ಹೇಳು ಹೀಗೆ ನಿನ್ನ ಕಡಲಲ್ಲಿ ಕರಗಿ ನಿನ್ನದೇ ಬಣ್ಣ ತಳೆದ ನನ್ನ ಬಣ್ಣವಾದರೂ ಯಾವುದು?’ ಹೀಗೆ…. ಸುಲಭಕ್ಕೆ ಕಲ್ಪನೆಗೆ ದಕ್ಕದ ಅಪರೂಪದ, ಸೃಜನಶೀಲ, ಚಿಂತನೆಗೆ ಹಚ್ಚುವ ಅಲೌಕಿಕ ಅರ್ಥವನ್ನು, ಪಾರಮಾರ್ಥಿಕ ಅನುಭೂತಿಯೊಂದಿಗೆ ಬೆಸೆದು ರೂಪಕಗಳಾಗಿಸಿ ಪ್ರೇಮವನ್ನು ಧ್ಯಾನಿಸುವ ಪರಿ ಅಪರಿಮಿತವಾದುದು. “ಉಡುಗೊರೆಯಾಗಿ ಏನು ಬೇಕು ಎಂದಿಗೂ ಮುಗಿಯದ ಒಂದೇ ಒಂದು ಭೇಟಿ ಸಾಕು“ (ಉಡುಗೊರೆ) ಈ ತೆರನಾದ ಕವಿತೆಗಳ ತೀವ್ರತೆ, ಭಾವುಕತೆ, ತುಡಿತ, ಮಿಡಿತ, ಕಾವ್ಯ ಕಟ್ಟುವ ವಿಧಾನ ಹಾಗು ಕಾವ್ಯ ಕಟ್ಟುವ ಕೆಲವು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಗಝಲ್ ಪ್ರಕಾರದ ಒಂದಷ್ಟು ಲಕ್ಷಣಗಳು ಗೋಚರಿಸುತ್ತವೆ. ಈ ನಿಟ್ಟಿನಲ್ಲಿ, ಮುಂದಿನ ದಿನಗಳಲ್ಲಿ ಮಂಜುಳರವರು ಗಝಲ್ಗಳನ್ನು ರಚಿಸಿದ್ದಲ್ಲಿ ಉತ್ತಮ ಗಝಲಕಾರರಾಗುವ ಸಾಧ್ಯತೆಗಳಿವೆ ಅನಿಸುತ್ತದೆ. “ಮನೆಯಿಂದ ಮಂದಿರ, ಮಸೀದಿ ತುಸು ದೂರವೇ ಇದೆ ಸಾಗುವ ಹಾದಿಯಲ್ಲಿ ನೋವಿನಲ್ಲಿದ್ದವರ ಕೊಂಚ ನಗಿಸಿಬಿಡೋಣ“ (ಮನುಜಮತ)     ಶೋಕವು ನಿನಾದವಾಗುವ, ಲೋಕದ ಕಣ್ಣಿನ ಭಾಷೆಗೆ ಕವಿತೆ ಕ್ಯಾನುವಾಸಾಗುವ, ನೋವು ಕಂಬನಿಯಾಗಿ, ಮನದ ಬನಿಯಾಗಿ ಅಲಾಪಗೊಂಡು ಹೃದಯ ಮಿಡಿಯುವ, ಆ ಮೂಲಕ ನೋವು ಸಹ ಮುಗುಳ್ನಗೆಯಾಗುವ, ತುಡಿಯುವ, ಕಾಡುವ, ಕನವರಿಸುವ, ಕನಸಾಗುವ, ಪ್ರೇಮ ಆರಾಧನೆಯೊಂದಿಗೆ ವಿರಹವನ್ನು ಅಪ್ಪಿ ಸಲಹುವ, ಜೊತೆಗೆ ಸಿಟ್ಟು, ಸೆಡವು, ಹತಾಶೆ, ವ್ಯಾಮೋಹ, ಏಕಾಂತ, ಒಂಟಿತನ, ಮೌನ, ನಿಟ್ಟುಸಿರು, ನಗು, ಮುಗ್ಧತೆ, ಪ್ರಕೃತಿ, ಜಾತಿ, ಧರ್ಮ ಹೀಗೆ ಒಂದಷ್ಟು ತತ್ವ-ಸಿದ್ಧಾಂತ ಎಲ್ಲವೂ ಒಂದು ಯಾಖಃಚಿತ್ ರೂಪ ಪಡೆದು ರೂಪಕಗಳಾಗಿ ಕವಿತೆಗಳಲ್ಲಿ ಭಾವಾರ್ಥಗಳೊಡಗೂಡಿ ಸದ್ದಿಲ್ಲದೆ ಅನುಸಂಧಾನಿಸುವಂತೆ ಹರಿಯುವ ರೀತಿ…. ನನ್ನ ಪ್ರೀತಿಯ ಕವಯತ್ರಿ ಅಮೃತಾ ಪ್ರೀತಂ ರ ಕವಿತೆಗಳನ್ನು ನೆನಪಿಸಿದವು. ಅಮೃತಾ ರ ಕವಿತೆಗಳನ್ನು ಆಸ್ವಾದಿಸಿ, ಅನುಭವಿಸಿ, ಅವುಗಳ ಅಂತರ್ಯದಿ ಅವಿರ್ಭವಿಸಿ ಅಮಲೇರಿಸಿಕೊಂಡು ಕವಿತೆಗಳ ನಶೆಯಲ್ಲಿ ಧುತ್ತನಾಗಿ ಎಷ್ಟೋ ದಿನಗಳವರೆಗೆ ಕಾಡುವಂತೆ, ಮಂಜುಳ ರವರ ಆಸೆಯ ಕಂದೀಲು ಸಂಕಲನದ ಕವಿತೆಗಳು ಕಾಡುತ್ತವೆ. ತದಾತ್ಮಕತೆಯನ್ನು ಹುಟ್ಟಿಸಿ ಬೆರಗು ಮೂಡಿಸುತ್ತವೆ! ~’ನೆರಳೆ ಬೆಳಕನ್ನು ಬೆನ್ನಟ್ಟಿದ ಹಾಗೆ‘ ~’ಕಣ್ಣಿನಲ್ಲಿ ಬಿದ್ದ ಜಗವೀಗ ಒದ್ದೆ‘ ~’ಅಲ್ಲಾನ ಗೋಡೆಯ ಚೂರು‘ ~’ನೀ ಬರುವ ಹಾದಿಯಲ್ಲಿ ಕಣ್ಣ ಹಾಸಿ‘ ~’ನಿನ್ನ ನೋಟದ ಜ್ವಾಲೆಯೊಂದು ತಾಕಿ‘ ~’ಕಣ್ಣವೆಯ ಮೇಲೆ ಅನೂಹ್ಯ ಖಂಡಗಳ ನೆರಳು‘ ~’ಹೇಳು ಹೀಗೆ ನಿನ್ನ ಕಡಲಲ್ಲಿ ಕರಗಿ ನಿನ್ನದೇ ಬಣ್ಣ ತಳೆದ ನನ್ನ ಬಣ್ಣವಾದರೂ ಯಾವುದು?’ ಇಂತಹ ಸಾಲುಗಳು ಚಿಂತನೆಗೆ ಹಚ್ಚುವುದರೊಂದಿಗೆ, ಕವಿಮನದ ಕಲ್ಪನೆಯ ಅನುಭೂತಿಯನ್ನು  ಓದುಗನಿಗೂ ಪ್ರಾಸಾದಿಸುತ್ತವೆ.  “ಇದುವರೆಗಿನ ಸಂಗೀತ ವಿದ್ವಾಂಸರು ಯಾರನ್ನು ಒಳಗಿಳಿಸಿಕೊಂಡು ಹಾಡುತ್ತಾರೆನ್ನುವುದು ಸದಾ ಚಕಿತಗೊಳಿಸುವ ಸಂಗತಿ ನನಗೆ“ ಎಂಬಂತಹ ಕವಿತೆಯ ಹೊಳಹುಗಳು, ತೀರಾ ವಾಚ್ಯವೆನಿಸಿದರೂ ಕಾವ್ಯ ಲಹರಿಯೊಂದಿಗೆ ಓದಿಸಿಕೊಂಡು ಸಾಗುತ್ತವೆ. ಇದರ ಜೊತೆಗೆ, ಮುಖ್ಯವಾಗಿ ಕೊನೆಯ ಪುಟಗಳಲ್ಲಿ ಬಿಡಿ ಹೂಗಳಾಗಿ ಅರಳಿರುವ ಅಳಿದುಳಿದ ಕವಿತೆಗಳು ಉತ್ಕೃಷ್ಟ ರಚನೆಗಳಾಗಿದ್ದು, ಕವಿಮನಸಿನಾಗಸದ ನಕ್ಷತ್ರಗಳಂತೆ ಮಿನುಗುತ್ತವೆ. ಅವುಗಳಲ್ಲಿ ಕೆಲವು ಓದುಗರಿಗಾಗಿ ಈ ಕೆಳಗೆ ಹಂಚಿಕೊಂಡಿರುವೆ…. “ಮಳೆಯ ಹನಿಗಳಿಗೆ ಬಣ್ಣವಿಲ್ಲ ……………………… ಆದರೂ ಸುತ್ತಲೂ ಬಣ್ಣ ಚೆಲ್ಲಿದ ವಾತಾವರಣ“ (ರಂಗು) __ “ಯಾರದ್ದಾದರೂ ತಪ್ಪುಗಳನ್ನು ಎಣಿಸುವ ಮೊದಲು ಕನ್ನಡಿಯ ಮುಂದೆ ಒಮ್ಮೆ ಹಾದು ಹೋಗುವ“ (ಆತ್ಮಶೋಧ) __ “ಮನೆಯವರಿಗೂ ಬಿಟ್ಟು ಬರಲೇ ………… ನನ್ನನ್ನು ಇನ್ನೆಷ್ಟು ಬಿಡುತ್ತೀಯ ಹೇಳು“ (ವಿರಹಿ) __ “ಕಣ್ಣಿಂದ ಹೇಳಿದರೆ ನೀರ ಹನಿಗಳು ಪದಗಳಲ್ಲಿ ಹೇಳಿದರೆ ಕವಿತೆ“ (ನೋವೆಂದರೆ…) __ “ಕೆಳಜಾತಿಯವನೆಂದು ಆತನನ್ನು ಮನೆಯ ಒಳಗೆ ಬಿಟ್ಟುಕೊಳ್ಳಲಿಲ್ಲ ಅವರು ಸಾಕಿದ ನಾಯಿ ಆ ಮನೆಯ ಒಳಗೆಲ್ಲ ಓಡಾಡುತ್ತಲ್ಲ“* (ಜಾತಿಮತಿ) ಮುಗಿಸುವ ಮುನ್ನ… “ಆಸೆಯ ಕಂದೀಲು…” ಸಂಕಲನದ ಒಟ್ಟು ಅರವತ್ತೈದು ಕವಿತೆಗಳೂ ಸಹ ಒಂದಾದ ನಂತರ ಮತ್ತೊಂದು ಓದುಗನನ್ನು ಅಪ್ಪುತ್ತಾ, ಆತ್ಮೀಯತೆಯಿಂದ, ಅಪ್ಯಯತೆಯಿಂದ ನಿರರ್ಗಳವಾಗಿ ಸಾಗುತ್ತವೆ. ಇಂತಹ ಪ್ರತಿಭಾವಂತರನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸುವ ಜವಾಬ್ದಾರಿ ಓದುಗರದ್ದಾಗಿದೆ. ಕವಯಿತ್ರಿ ‘ಮಂಜುಳ.ಡಿ’ ರವರ ಚೊಚ್ಚಲ ಪ್ರಯತ್ನ ನಿಜಕ್ಕೂ ಸಾರ್ಥಕತೆಯತ್ತ ಸಾಗಿದೆ. ಈ ಪಯಣ ಹೀಗೆ ಮುಂದುವರಿಯಲಿ, ಮತ್ತಷ್ಟು ಕೃತಿಗಳು ಪ್ರಕಟವಾಗಿ ಓದುಗರ ಮನಸ್ಸು ತಣಿಸಲಿ ಎಂಬ ಶುಭ ಹಾರೈಕೆಗಳೊಂದಿಗೆ… *****************************. ಜಬೀವುಲ್ಲಾ ಎಮ್. ಅಸದ್

ಆಸೆಯ ಕಂದೀಲ Read Post »

You cannot copy content of this page

Scroll to Top