ಕಾವ್ಯಯಾನ
ಮಣ್ಣಲಿ ಅವಿತ ಜೀವ ಟಿ.ಪಿ. ಉಮೇಶ್ ಬದುಕ ಸಂಪಾದನೆಗೆ ಹೋದ ಜೀವ ಬರಲಿಲ್ಲ ಮರಳಿ ಬೀದಿಯಲಿ ಅಲೆದು ತಿರುವಿನಲಿ ಕಳೆದು ಕಛೇರಿ ಕರ್ಮಗಳ ಫೈಲುಗಳಲಿ ಹೊರಳಿ ದಿನಸಿ ತರಕಾರಿ ಹಣ್ಣಿನಂಗಡಿಯಲಿ ಉರುಳಿ ಲೈಬ್ರರಿ ಸಿನೆಮಾ ಪಾರ್ಕು ಪಾರ್ಟಿಗಳ ಸಂಧಿಸಿ ನೋವಿನ ಮನೆಗೆ ಪ್ರೀತಿಯ ತರಲೋದ ಜೀವ ಮತ್ತೆ ಮರಳಿ ಬರಲಿಲ್ಲ ಜೀವ ಬರುವಾಗ ವಿಷದ ಮಳೆ ಬಂತಂತೆ ದಾರಿ ಅಲ್ಲಲ್ಲೆ ಹುಗಿದು ಹೋಯ್ತಂತೆ ಗಿಡ ಮರ ಪಶು ಪಕ್ಷಿ ಎಲ್ಲ ಉದುರಿ ಕರಗಿದುವಂತೆ ಜೀವವೂ ನೀರು ಆಹಾರವಿರದೆ ಹೊದ್ದಾಡಿ ಸದ್ದಡಗಿತಂತೆ ಕುಸಿಯುತಿಹ ಭೂಮಿ ಮಣ್ಣಲಿ ಮರೆಯಾಯಿತಂತೆ ಮತ್ತೆ ಮರಳಿ ಬಾರದು ಜೀವ ಕನಸಾದ ಸೊಗಸಾದ ಬದುಕಾಗಿದ್ದ ಜೀವ ಜಂತಿಗಳು ಮುರಿದ ಮನೆಗೆ ತೊಲೆಯಾಗಿದ್ದ ಜೀವ ಉರಿವ ಧಗೆಯನೆ ಕುಡಿದು ಹೂ ನಗುವ ಹಂಚುತ್ತಿದ್ದ ಜೀವ ನೋವಿನಲೆ ದುಡಿದು ಪ್ರೀತಿಯನೆ ಗಳಿಸಿ ಉಣಿಸುತ್ತಿದ್ದ ಜೀವ ಏನು ಹೇಳಿದರೇನು ಮತ್ತೆ ಬರುವುದೇನು ಭರವಸೆಯ ಜೀವ ಮರಳಿ ಬಾರದು ಪ್ರೀತಿಯ ಜೀವ ಮಳೆ ಬಾರದೆ ಯಾವ ಬದುಕಿಲ್ಲ ವಿಷದ ಮಳೆಗೆ ಇನ್ನು ಉಳಿವಿಲ್ಲ ಮಳೆ ಇರಲಿ ಪ್ರೀತಿಯ ಮನೆಗೆ ವಿಷವೇಕೆ ಸಲಹುವಾ ಧರಣಿಗೆ ಯಾರಿಟ್ಟರೊ ನಂಜು ಸಿಗದಾ ಮುಗಿಲಿಗೆ ಬದುಕು ಬಹಳಿತ್ತು ಮಣ್ಣಲಿ ಅವಿತ ಜೀವಕೆ ********









