ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಹೇಮಾ

ಕಥೆ ಹೇಮಾ ಎಂ.ಆರ್.ಅನಸೂಯ ವಿಜಯಾ  ಸಂಜೆ ಕಾಫಿ ಕುಡಿದು ಕೂತಿದ್ದಾಗ ಪಕ್ಕದಲ್ಲೇ ಇದ್ದ ಮೊಬೈಲ್ ರಿಂಗಣಿಸಿತು. ನೋಡಿದರೆ  ಹೇಮಾ !  ” ನಮಸ್ತೆ ಮೇಡಂ “ ಹೇಮಾ, ಆರಾಮಾಗಿದೀಯಾ ,  ಹೇಗಿದಾನಮ್ಮ ನಿನ್ನ ಮಗ ? ಚೆನ್ನಾಗಿದ್ದಾನೆ  ಮಿಸ್.  ಮಿಸ್ ಮುಂದಿನ ಭಾನುವಾರ ನಾಮಕರಣ ಶಾಸ್ತ್ರವಿದೆ ಖಂಡಿತ ಬರಬೇಕು ಮೇಡಂ   ಹೌದಾ ಎಷ್ಟು ತಿಂಗಳು ಮಗುವಿಗೆ ಐದು ತಿಂಗಳು  ಮಿಸ್ ಹೇಮಾ , ನೀನು ಊರಿಗೆ ಬಂದಾಗ ತಿಳಿಸು. ಪಾಪುನ  ನೋಡಲು  ಬರುತ್ತೇನೆ. ಪಾಪುಗೆ ಏಳು ತಿಂಗಳಾದಾಗ  ಊರಿಗೆ ಬರ್ತಿನಿ ಮಿಸ್ ಅಜ್ಜಿಗೆ ಆಗುವುದಿಲ್ಲ. ಕಷ್ಟ ಆಗುತ್ತೆ. ಬೇಡ  ಅಂದ್ರು ಅತ್ತೆ ಹೌದಲ್ವಾ ನಿಮ್ಮತ್ತೆ ಹೇಳೋದು ಸರಿಯಾಗೇ ಇದೆ ಹೌದು  ಮಿಸ್  ನಮ್ಮತ್ತೆ ತುಂಬಾ ಒಳ್ಳೆಯವರು   ಹೇಮಾ ನೀನು ಊರಿಗೆ ಬಂದಾಗ  ಫೋನ್ ಮಾಡು ಆಯ್ತು ಮಿಸ್ . ಮಗು ಅಳುವ  ಧ್ವನಿ ಕೇಳಿಸಿತು. ಸರಿ  ಈಗ ಮಗುವನ್ನು ನೋಡು ಹೇಮಾ ಎಂದು ಹೇಳಿ ವಿಜಯಾ ಫೋನಿಟ್ಟರು. ಆದರೂ ಹೇಮಾಳ ಗುಂಗು ಮನದಲ್ಲಿ ಉಳಿಯಿತು.  ಹೇಮಾ  ವಿಜಯಾಳ  ಶಿಷ್ಯೆ. ಅವಳು ಪ್ರೌಢಶಾಲೆಯಲ್ಲಿ  ಓದುತ್ತಿದ್ದ ಕಾಲದಿಂದಲೂ  ಅವಳ ನಡೆನುಡಿಗಳು  ಇಷ್ಟ  ಮಧ್ಯಮ ವರ್ಗಕ್ಕೆ ಸೇರಿದ ಹೇಮಾ ಚುರುಕು ಹುಡುಗಿ ಹೆತ್ತತಾಯಿಯಿಲ್ಲದೆ ಅಜ್ಜಿ ತಾತನ ಆಶ್ರಯದಲ್ಲಿ ಬೆಳೆದ ಸಂಕೋಚ ಸ್ವಭಾವದ ಅವಳು ಓದಿನಲ್ಲಿ ಜಾಣೆ. ಒಮ್ಮೆ ಅವರ ಅಜ್ಜಿ ಪೋಷಕರ ಸಭೆಗೆ ಬಂದಾಗ ಅವರ ಆಜ್ಜಿ ಹೇಳಿದ್ದು ಅವರು ನೆನಪಿಗೆ ಬಂತು.  ಅವಳ ತಾಯಿಯು ಹೇಮಾಳ ತಮ್ಮನಿಗೆ ಜನ್ಟ ಕೊಟ್ಟ ನಂತರ  ತೀರಿಕೊಂಡ ದುರ್ದೈವಿ. ಹೆರಿಗೆಗಾಗಿ ತವರು ಮನೆಗೆ ಬಂದಿದ್ದರಿಂದ ಮಕ್ಕಳು ಇಲ್ಲೇ ಉಳಿದವು. ಹೇಮಾಳ ತಂದೆಯ ತಾಯಿ ತಂದೆಯರೂ ಇಲ್ಲದ ಕಾರಣ ಆ ಮಕ್ಕಳನ್ನು ಸಲಹಲು ಯಾರೂ ಮುಂದೆ ಬರಲಿಲ್ಲ. ಹೇಮಾಳ ತಾಯಿ ಒಬ್ಬಳೆ ಪ್ರೀತಿಯ ಮಗಳಾದ್ದರಿಂದ ಅವಳ ಮಕ್ಕಳಿಬ್ಬರು ಅನಾಥ ತಬ್ಬಲಿಗಳಂತೆ ಬೆಳೆಯುವುದು ಬೇಡವೆಂದು ಮಕ್ಕಳನ್ನು ತಾವೇ ಸಾಕಲು ನಿರ್ಧರಿಸಿದರು. ಹೇಮಾಳ ಇಬ್ಬರು  ಸೋದರ ಮಾವಂದಿರು ಸಹ ಒಪ್ಪಿದರು. ಉದ್ಯೋಗದ ನಿಮಿತ್ತ ಬೇರೆ ಬೇರೆ ಊರುಗಳಲ್ಲಿದ್ದರೂ ಸಹಾ ತಾವು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಹೇಮಾಳ ತಾತ ಚಿಕ್ಕ ಹಿಟ್ಟಿನ ಗಿರಣಿ ನಡೆಸುತ್ತಿದ್ದರು. ಮೊದಲಿಗೆ ಹೇಮಾಳ ತಂದೆಯು ತಿಂಗಳಿಗೊಮ್ಮೆ ಬರುತ್ತಿದ್ದವರು ಎರಡನೆ ಮದುವೆಯಾದ ನಂತರ ಆರು ತಿಂಗಳಿಗೊಮ್ಮೆ ಬಂದಾಗ  ಮಕ್ಕಳಿಗೆ ಒಂದಿಷ್ಟು ಬಟ್ಟೆಗಳನ್ನು ಕೊಡಿಸಿ ಅವರ ಕೈಯಲ್ಲಿಷ್ಟು ಹಣ ಕೊಟ್ಟರೆ ತನ್ನ ಜವಾಬ್ದಾರಿಯು ಮುಗಿಯಿತೆಂದು ಭಾವಿಸಿದ್ದ ಮಹಾನುಭಾವ. ತಾಯಿ  ಸತ್ತ ಮೇಲೆ ತಂದೆ ಚಿಕ್ಕಪ್ಪ ಎಂಬ ಗಾದೆಗೆ ತಕ್ಕಂತಿದ್ದರು. ಮಗಳ ಮಕ್ಕಳು ಓದಿನಲ್ಲಿ ಮುಂದಿರುವುದು ಹೇಮಾಳ ಅಜ್ಜಿ ತಾತನಿಗೆ ನೆಮ್ಮದಿ. ಹೇಮಾಳಂತೂ ಅವಳಮ್ಮನ ಪಡಿಯಚ್ಚು.  ಮಗಳ ಸಾವಿನ ಸಂಕಟವನ್ನು ಇಬ್ಬರು ಮೊಮ್ಮಕ್ಕಳ ಆಟ ಪಾಠಗಳು ಮರೆಸಿದ್ದವು‌. ಇಬ್ಬರೂ ಸೋದರ ಮಾವಂದಿರಿಗೂ ತಂಗಿಯ ಮಕ್ಕಳನ್ನು ಕಂಡರೆ ಬಲು ಅಕ್ಕರೆ. ತನ್ನ ಪ್ರೀತಿಯ ಅಜ್ಜಿಯನ್ನು ಬಿಟ್ಟು ಒಂದು ದಿನವೂ ಇರಲಾರಳು ಹೇಮಾ. ಶಾಲೆಗೆ ರಜೆ ಬಂದಾಗ ಮಾವಂದಿರು “ಬಾ ಪುಟ್ಟಿ ನಮ್ಮ ಮನೆಯಲ್ಲಿ ಒಂದೆರಡು ದಿನ ಇದ್ದು ಬರುವೆಯಂತೆ”ಎಂದು ಕರೆದರೆ ಅಜ್ಜಿ ಬಂದ್ರೆ ಮಾತ್ರ  ಬರ್ತಿನಿ’ ಎಂದು ಮುದ್ದಾಗಿ ಹೇಳಿದರೆ  ಅಜ್ಜಿಗೆ ಪ್ರೀತಿಯುಕ್ಕಿ ಬರಸೆಳೆದು ಮುತ್ತಿಡುತ್ತಿದ್ದರು.  ಹೇಮಾಳಿಗೆ ತಮ್ಮನನ್ನು ಕಂಡರೆ ಬಲು ಪ್ರೀತಿ.  ಯಾವುದನ್ನೇ ಆಗಲಿ ತಮ್ಮನೊಡನೆ ಹಂಚಿಕೊಂಡು ತಿಂದರೆ ಮಾತ್ರ  ಅವಳಿಗೆ ಸಮಾಧಾನ. ಹೇಮಾಳ ಅಜ್ಮಿ ಹೇಳಿದ ಒಂದು ಪ್ರಸಂಗ ನೆನಪಿಗೆ ಬಂತು. ಆ ಸಂಗತಿಯನ್ನು ಹೇಳುತ್ತಾ ಕಣ್ತುಂಬಿ ಕೊಂಡಿದ್ದರು. ಒಮ್ಮೆ ಅವರ ಮನೆಯಿದ್ದ ಬೀದಿಯ ಮನೆ ಒಂದರಲ್ಲಿ ನಡೆದಿದ್ದು. ಚಿಕ್ಕ ಮಗುವಿನ ತಾಯಿಯೊಬ್ಬಳು ಏನೋ ಖಾಯಿಲೆಯಿಂದ ತೀರಿಕೊಂಡಿದ್ದರು. ಅದನ್ನು ಕಂಡ ಜನರು ಆ ತಬ್ಬಲಿ ಮಗುವಿನ ಬಗ್ಗೆ ಅನುಕಂಪದ ಮಾತುಗಳನ್ನಾಡುವುದನ್ನು ಕೇಳಿದ ಹೇಮಾ ‘ಅಜ್ಜಿ ಆ ಪಾಪುಗೆ ಇನ್ಮುಂದೆ ಎಷ್ಟು ಕಷ್ಟ ಆಗುತ್ತಲ್ವ ‘ಎಂದು ಕೇಳಿ ಕಣ್ಣೀರು ಹಾಕಿದ್ದಳಂತೆ. ರಾತ್ರಿ ಮಲಗುವಾಗ ಅಜ್ಜಿಯನ್ನು ತಬ್ಬಿಕೊಂಡು ‘ಅಮ್ಮ ಇಲ್ಲದಿದ್ರೂ ನೀನು ನಮ್ಮನ್ನು ಸಾಕಿ ನೋಡಿಕೊಂಡಂಗೆ ಅವರಜ್ಜಿನೂ ಹಾಕ್ತಾರೆ ಅಲ್ವಾ ಅಜ್ಜಿ’ ಎಂದು ಕೇಳಿದ್ದನ್ನು ನೆನೆಸಿಕೊಂಡು ಕಣ್ಣೀರು ಹಾಕಿದ್ದರು. ನಾವಿಲ್ಲದಿದ್ರೆ ಈ ಮಕ್ಕಳ ಗತಿ ಏನಾಗ್ತಿತ್ತೋ ಎನ್ನುತ್ತಾ ಸಂಕಟ ಪಟ್ಟಿದ್ದರು. ಅವರಿಬ್ಬರು  ಒಳ್ಳೆಯ ರೀತಿಯಲ್ಲಿ ಜೀವನದಲ್ಲಿ ನೆಲೆ ಕಂಡರೆ ಸಾಕೆಂಬ ಹಾರೈಕೆ ಅವರದು ಪ್ರೌಢ ಶಾಲಾ ವಿದ್ಯಾಭ್ಯಾಸದ ನಂತರವೂ ಸಹ  ಹೇಮಾ ಆಗಾಗ್ಗೆ ವಿಜಯಾ ಟೀಚರ್ ಗೆ ಫೋನ್ ಮಾಡುವುದು ಹಾಗೂ ಸಲಹೆಗಳನ್ನು ಕೇಳುತ್ತಾ ಸಂಪರ್ಕದಲ್ಲಿದ್ದಳು . ಹೇಮಾ ಈಗ ಎರಡನೆ ವರ್ಷದ  ಪದವಿ  ಓದುತ್ತಿದ್ದಳು. ಅವಳ ತಮ್ಮ ಹತ್ತನೆ ತರಗತಿಯಲ್ಲಿದ್ದ. ಅಕ್ಕತಮ್ಮಂದಿರು ವಿಜಯಾ ಟೀಚರ್  ಶಿಷ್ಯರೆ. ಇತ್ತೀಚೆಗೆ ಅವಳು ಫೋನ್ ಮಾಡಿ ಮಾತನಾಡುತ್ತ ಅವರ ಅಜ್ಜಿಗೆ ಮೊದಲಿನಂತೆ ಹೆಚ್ಚು ಕೆಲಸ ಮಾಡಲಾಗುತ್ತಿಲ್ಲ. ತಾನು ಅವರಿಗೆ ಈಗ ಮೊದಲಿಗಿಂತ ಹೆಚ್ಚು ಸಹಾಯ ಮಾಡುತ್ತಿರುವೆ ಎಂದು ಹೇಳಿ ತಮ್ಮನ ಓದಿನ ಬಗ್ಗೆ ವಿಚಾರಿಸುತ್ತಾ ತಾನೆ ಅವನಿಗೆ ಗಣಿತವನ್ನು ಹೇಳಿಕೊಡುತ್ತಿದ್ದೇನೆ ಎಂದಿದ್ದಳು. ವಾರದ ಹಿಂದೆ ಅವಳ ತಮ್ಮ ಎರಡು ದಿನ ಶಾಲೆಗೆ ಬಂದಿರಲಿಲ್ಲ. ಏಕೆ ಎಂದು ಕೇಳಲು ಅವರ ತಾತ ಜಾರಿ ಬಿದ್ದು ಫ್ರಾಕ್ಚರ್ ಆಗಿದ್ದು  ಹಾಸ್ಪಟಲ್ ಗೆ ಸೇರಿಸಿದ್ದರು. ಹಾಗಾಗಿ ಬರಲು ಆಗಲಿಲ್ಲ ಎಂದು ಹೇಳಿದ. ಹೇಮಾಳಿಗೆ ಫೋನ್ ಮಾಡಿ ಕೇಳಿದಾಗ  ಈಗ ಮನೆಗೆ  ಕರೆದುಕೊಂಡು ಬಂದಿದ್ದೇವೆ. ಮಾವಂದಿರೆ ಇಲ್ಲೇ ಇದ್ದು ಎಲ್ಲವನ್ನು ನೋಡುತ್ತಿದ್ದಾರೆ  ಎಂದಳು. ಆವರ  ತಾತ ಮನೆಯಿಂದ ಹೊರಗೆ  ಎಲ್ಲೂ ಹೋಗದೆ ಮನೆಯ ಮಟ್ಟಿಗೆ ಓಡಾಡಿಕೊಂಡಿದ್ದರು. ಗಿರಣಿಯ ಮೇಲ್ವಿಚಾರಣೆ ನಡೆಸುವುದು ಕಷ್ಟವಾದರೂ ವಿಧಿಯಿರಲಿಲ್ಲ. ಆದರೂ  ಅಜ್ಜಿಯ ಸಹಾಯದಿಂದ ಹೇಗೋ ನಿಭಾಯಿಸುತ್ತಿದ್ದರು. ಇತ್ತೀಚೆಗೆ  ಹೇಮಾಳ ಮದುವೆಯ ಮಾತನ್ನು ಪದೇಪದೇ ಪ್ರಸ್ತಾಪಿಸುತ್ತಿದ್ದರು.. ಇದರಿಂದ  ಓದುವ ಆಸೆ ಬಲವಾಗಿ ಇಟ್ಟುಕೊಂಡಿದ್ದ  ಹೇಮಳಿಗೆ ಆತಂಕವು ಶುರುವಾಯಿತು.  ಕಾಲೇಜ್ ನ್ನು  ಮುಗಿಸಿ ಮನೆಗೆ ಹೋಗುವಾಗ ವಿಜಯಾ  ಟೀಚರ್  ಮನೆಗೆ ಬಂದು ತಮ್ಮ ತಾತ ತನಗೆ ಮದುವೆ  ಮಾಡಲು  ಆತುರ ಮಾಡುತ್ತಿದ್ದಾರೆಂದು ಹೇಳಿದಳು. ಇರಲಿ ಬಿಡು ಮದುವೆ ಎಂದು ಹೇಳಿದಾಕ್ಷಣ ಆಗುತ್ತಾ .ನೀನು ಮಾತ್ರ ಚೆನ್ನಾಗಿ ಓದು ಎಂದು ಸಮಾಧಾನ ಹೇಳಿದರು.ವಿಜಯ ಟೀಚರ್ ರಾತ್ರಿ ಊಟ ಮಾಡಿ  ಅಡುಗೆಮನೆ ಕೆಲಸವನ್ನು  ಮುಗಿಸಿ  ವಾರ ಪತ್ರಿಕೆಯನ್ನು ಓದುತ್ತಿದ್ದಾಗ ಮೊಬೈಲ್ ರಿಂಗ್ ಆಯಿತು. ನೋಡಿದರೆ  ಹೇಮಾಳದು. ಅತ್ತಲಿಂದ “ಮೇಡಂ . . ಬಿಕ್ಕಿ ಬಿಕ್ಕಿ ಅಳುವ ಸದ್ದು. “ಹಲೋ, ಹೇಮ  . . .  ಹಲೋ”ಎಂದರೆ ಮಾತಿಲ್ಲ ಸುಮ್ಮನೇ ಅಳುವುದು ಹಾಗೇ ಫೋನ್ ಕಟ್ ಆಯ್ತು. ಹತ್ತು ನಿಮಿಷದ ನಂತರ ಮತ್ತೆ ಫೋನ್. ಅವಳು ಫೋನ್ ಮಾಡುವಾಗ ಯಾರೊ ಬಂದಿರಬೇಕು.ಅದಕ್ಕೆ ಫೋನ್ ಕಟ್ ಆಗಿದೆಯೆನಿಸಿತು. ಮತ್ತೆ ಫೋನ್ ಬಂದಾಗ “ಹಲೋ ಹೇಮಾ,ಯಾಕಮ್ಮ ಏನಾಯ್ತು” ಮತ್ತೆ ಅಳು. ” ಹಲೋ,ಹೇಮಾ ನಾಳೆ ನಮ್ಮ ಮನೆಗೆ ಬಾ. ಅಳಬೇಡ  ಸುಮ್ನೆ ಮಲಗು” ಎನ್ನುತ್ತಿದ್ದಂತೆ ಫೋನ್ ಕಟ್. ಮತ್ತೆ  ಫೋನ್ ಬರಲಿಲ್ಲ. ಯಾರೋ ಪಕ್ಕದಲ್ಲಿರಬೇಕೆನ್ನಿಸಿತು ನಾನು ಫೋನ್ ಮಾಡಲಿಲ್ಲ.  ಮಾರನೆಯ ದಿನ ಭಾನುವಾರ ಸಂಜೆ ನಾಲ್ಕಕ್ಕೆ ಹೇಮಾ ಬಂದಳು. ತುಂಬಾ ಡಲ್ ಆಗಿದ್ದಳು. ಕಾಫಿ ಕುಡಿಯುತ್ತಾ ವಿಜಯಾ ಕೇಳಿದರು. “ಏನಾಯ್ತು ಹೇಳು ಹೇಮಾ” ಮೇಡಂ, ತಿಂಗಳು ಹಿಂದೆ ನಮ್ಮ ತಾತನಿಗೆ ಲೋ ಬಿ.ಪಿ. ಆಗಿ ಮತ್ತೆ ಹಾಸ್ಪಿಟಲ್ ಗೆ ಸೇರಿಸಿದ್ವಿ.  ಹಾಸ್ಪಿಟಲ್ ನಿಂದ ಬಂದ ದಿನದಿಂದ  ಒಂದೇ ಮಾತು ಮೇಡಂ  ಹೇಮಾಳ ಮದುವೆ ಬೇಗ ಮಾಡ್ಬೇಕು. ನಾನು ಹೆಚ್ಚು ದಿನ ಬದುಕಲ್ಲ ನಾನಿರುವಾಗಲೇ ಅವಳಿಗೆ ಒಂದು ನೆಲೆ ಕಾಣಿಸಬೇಕು  ಅದೊಂದು ಜವಾಬ್ದಾರಿಮುಗಿದ್ರೆ ನೆಮ್ಮದಿಯಾಗಿ ಪ್ರಾಣ ಬಿಡ್ತೀನಿ ಎಂದು ಹಠ ಮಾಡಿ ನಮ್ಮ ಮಾವಂದಿರನ್ನು ಒಪ್ಪಿಸಿದ್ದಾರೆ ನಂತರ ನಮ್ಮ ತಂದೆಗೂ ಫೋನ್ ಮಾಡಿ ವಿಷಯ ತಿಳಿಸಿ ಬರಲು ಹೇಳಿದ್ದಾರೆ. ಇನ್ನು ಒಂದೂವರೆ ವರ್ಷ ತಡೆದರೆ ನನ್ನ ಗ್ರಾಜುಯೇಷನ್ ಕಂಪ್ಲೀಟಾಗ್ತಿತ್ತು . ನನಗೆ ಈಗಲೆ ಮದುವೆ ಬೇಡ ಎಂದರೆ  ನೀನಿನ್ನು  ಚಿಕ್ಕ ಹುಡುಗಿ ಸುಮ್ನಿರಮ್ಮ ನಿನಗಿದೆಲ್ಲ ಅರ್ಥ ಆಗೋದಿಲ್ಲ ಎನ್ನುತ್ತಾರೆ..ಅಜ್ಜಿನೂ ಸಹಾ ನಿಮ್ಮ ತಾತ ಹೇಳಿದ ಹಾಗೆ ಕೇಳು. ನಿನ್ನ ಒಳ್ಳೆಯದಕ್ಕೆ ನಾವು ಹೇಳೋದು ಅಂತಾರೆ . ನನಗೇನಾದ್ರೂ ಹೆಚ್ಚು ಕಡಿಮೆ ಆದರೆ ನಿನ್ನನ್ನು  ನೋಡಿ ಕೊಳ್ಳೋದು ಯಾರು? ನಿಮ್ಮಪ್ಪ ಬಂದು ಕರ್ಕೊಂಡು ಹೋಗಿ ನಿನ್ನನ್ನು ಸಾಕ್ತಾನಾ ಹೇಳು. ಆ ನಂಬಿಕೆ ನಿನಗೆ ಇದ್ಯಾ. ಒಂದು ವೇಳೆ ಕರೆದುಕೊಂಡು ಹೋದ್ರು ನಿನ್ನ ಸ್ಥಿತಿ ಎಷ್ಟರಮಟ್ಟಿಗೆ ಇರುತ್ತೆ ಅಂತ ಯೋಚನೆ ಮಾಡು ನಾವ್ಯಾರು ಶ್ರೀಮಂತರಲ್ಲ. ಅವರವರ ಸಂಸಾರಗಳೇ ಅವರಿಗೆ ಭಾರ ಆಗಿರೋ ಕಾಲದಲ್ಲಿ ನಿನ್ನನ್ನ ಒಂದು ನೆಲೆ ಮುಟ್ಟಿಸೋ ಜವಾಬ್ದಾರಿ ನನ್ನದು. ಅದನ್ನು ಮಾಡದಿದ್ರೆ ನಿನ್ನನ್ನು ಇಷ್ಟು ವರ್ಷ ಪ್ರೀತಿಯಿಂದ  ಸಾಕಿ ಸಲಹಿದ್ದಕ್ಕೆ ಏನು ಪ್ರಯೋಜನ ? ನೀನೇ ಹೇಳು. ಇನ್ನು ನಿನ್ನ ತಮ್ಮ ರಾಘು ಗಂಡು ಹುಡುಗ ಹೇಗೋ ಆಗುತ್ತೆ . ಅವನ ಬಗ್ಗೆ ಯೋಚನೆ ಮಾಡ್ಬೇಡ. ಜಾಣ ಹುಡುಗ ಚೆನ್ನಾಗಿ ಓದ್ಬಿಟ್ಟು ಕೆಲಸಕ್ಕೆ ಸೇರಿದರೆ ಮುಗೀತು. ನಮಗೆ ನಿನ್ನದೆ ಚಿಂತೆ . ಈ ಮನೆ ಬಿಟ್ರೆ ನಿನಗೆ ಎಲ್ಲೂ ಸರಿಯಾದ ಜಾಗ ಇಲ್ಲಮ್ಮ. ನೀನು ಚೆನ್ನಾಗಿದ್ರೆ ನಮಗೆ ನೆಮ್ಮದಿ ಎಂದು ಅಜ್ಜಿ ತಾತ ಹೇಳ್ತಾರೆ ಮೇಡಂ ಎಂದು ಕಣ್ಣೀರುಹಾಕಿದಳು.ನೀವಾದ್ರು ಒಂದು ಮಾತು ಹೇಳಿ ಮೇಡಂ. ನಾನು ಇನ್ನೂ ಓದ್ಬೇಕು  ಮೇಡಂ. ನಾನು ಬಿ.ಇಡಿ. ಮಾಡೋ ಆಸೆಯಿದೆ. ಮದ್ವೆ ಆದ ಮೇಲೆ ಯಾರು ಓದಿಸ್ತಾರೆ ಮೇಡಂ. ಪ್ರೀತಿಯಿಂದ  ಸಾಕಿದ ಅಜ್ಜಿ ತಾತನಿಗೆ ಹೇಗೆ ಹೇಳಿ ಒಪ್ಪಿಸಬೇಕು ಅಂತ ಗೊತ್ತಾಗ್ತಿಲ್ಲ ಎಂದು ಹೇಳುತ್ತ ಬೇಸರ ಪಟ್ಟಳು. ಜಾಣೆ ಯಾಗಿದ್ದು ಅವಳಲ್ಲಿ ಓದುವ ಆಸೆ ಅದಮ್ಯವಾಗಿತ್ತು.  ಆದರೆ ಅವರ ಅಜ್ಜಿ ತಾತ ಹೇಳೋ ಮಾತಿನಲ್ಲಿ ಸತ್ಯಾಂಶ ಇದ್ದಿದ್ದರಿಂದ” ಹೌದು ಹೇಮಾ ಅವರು ಹೇಳಿರುವುದೆಲ್ಲಾ ಸರಿಯಾಗಿದೆ. ಯೋಚನೆ ಮಾಡು. ನೀನು ಮದುವೆ ಆದ ಮೇಲೆ ನಿನ್ನ ಗಂಡನನ್ನು ಒಪ್ಪಿಸಿ ಓದಬಹುದಲ್ವ. ನಿಮ್ಮ ತಾತನಿಗೂ ಹೇಳು ಮದುವೆಯ ನಂತರವು ನೀನು ಓದು  ಮುಂದುವರಿಸಲು ಅವಕಾಶ ಕೊಡಿರಿ ಎಂದು ಕೇಳಲು. ನೋಡೋಣ. ಇನ್ನೂ ಗಂಡು ಸಿಕ್ಕಿ ಮದುವೆಯಾಗುವ ವೇಳೆಗೆ ಪದವಿಯ ಎರಡನೆ ವರ್ಷಮುಗಿಯುತ್ತೆ. ನೀನು ಅಜ್ಜಿ ತಾತ ಹೇಳಿದಂತೆ ಕೇಳು. ಒಳ್ಳೆಯದಾಗುತ್ತೆ.ಓದಿನ ಕಡೆ ಗಮನ ಕೊಡು ಎಂದು ಸಮಾಧಾನಪಡಿಸಿದರು.   ಮನೆಗೆ ಬಂದ ಹೇಮಾ ಆ ದಿನ ರಾತ್ರಿ ಮಲಗಿದ್ದ ತಾತನ ಕಾಲನ್ನು ಒತ್ತುತ್ತಾ ” ತಾತ, ನಾನೊಂದು ಮಾತು ಹೇಳ್ತಿನಿ ಸಿಟ್ಟು ಮಾಡ್ಕೋಬಾರದು”ಎಂದಳು. ಅದೇನು ಹೇಳಮ್ಮ ಎಂದಾಗ ” ಆಯ್ತು ತಾತ ಮದುವೆ ಆಗ್ತೀನಿ. ಮದುವೆ ಸೆಟ್ ಆದರೆ ಮದುವೆ ಆದ ಮೇಲೆ ಒಂದು ವರ್ಷ ಓದಕ್ಕೆ ಅವಕಾಶ ಕೊಟ್ರೆ ಡಿಗ್ರಿ ಆಗೋಗುತ್ತೆ ತಾತ.ಇದನ್ನು ನೀನು ಗಂಡಿನವರಿಗೆ ಹೇಳಿ ಒಪ್ಪಿಸು.” ಎಂದು ಕೇಳಿಕೊಂಡಾಗ ಅವಳಿಗೆ ನಿರಾಶೆ ಮಾಡಬಾರದೆಂದು ಯೋಚಿಸುತ್ತಲೆ “ಆಯ್ತು, ದೈವಿಚ್ಛೆ ಎಂಗಿದೆಯೋ ನೋಡೋಣ”ಎಂದರು  ಆಗ ಅಜ್ಜಿಯು ಸಹಾ ಓದಕ್ಕೆ ಒಪ್ಪುವಂಥ ಗಂಡನೇ ನನ್ನ ಮೊಮ್ಮಗಳಿಗೆ ಸಿಗಲಪ್ಪ ದೇವರೇ ಎಂದು ಮನಪೂರ್ವಕ ಕೇಳಿಕೊಂಡರು. ಮೊಮ್ಮಗಳಿಗೆ ಗಂಡು ನೋಡಲು ತಮ್ಮ ಇಬ್ಬರುಗಂಡು ಮಕ್ಕಳಿಗೆ ಒತ್ತಾಯ

ಹೇಮಾ Read Post »

ಕಥಾಗುಚ್ಛ

ಸಹನಾರವರ ನ್ಯಾನೊ ಕಥೆಗಳು

ಸಹನಾರವರ ನ್ಯಾನೊ ಕಥೆಗಳು ಸಹನಾ ಪ್ರಸಾದ್ ಆಡಲಾಗದ ಮಾತು “ಅಲ್ಲಕಣೆ, ಏನಾಗಿದೆ ನಿನಗೆ? ಮಾತಿಲ್ಲ, ಮೆಸೇಜು ಇಲ್ಲ. ಎಲ್ಲಿ ಅಡಗಿದ್ಯಾ?”ಅವಳಿಂದ ಬಂದ ೫ನೆ ಸಂದೇಶಕ್ಕೆ ಇಷ್ಟವಿಲ್ಲದೆ ಇದ್ರೂಪ್ರತಿಕ್ರಿಯಿಸಿದೆ. “ಏನಿಲ್ಲ, ಸ್ವಲ್ಪ ಹುಷಾರಿಲ್ಲ, ಸ್ವಲ್ಪ ದಿನ ಬಿಟ್ಟುಸಿಗ್ತೀನಿ” ಟೈಪಿಸಿದವಳಿಗೆ “ಹೋದ ತಿಂಗಳು ನೀ ಮಾಡಿದ ಮಿತ್ರದ್ರೋಹ ಮನಸ್ಸನ್ನು ಕೊರೆಯುತ್ತ ಇದೆ. ಅದರ ಹಿಂಸೆಯಿಂದ ಇನ್ನೂ ಹೊರಬಂದಿಲ್ಲ. ಯಾಕೆ ಹೀಗೆ ಮಾಡಿದೆ? ಮೊದಲು ಹೇಳು!” ಎನ್ನುವ ಮಾತುಗಳು ಮನದಲ್ಲೇ ಉಳಿದವು. ಸೊಪ್ಪಿನವಳು “ಅವಳು ಯಾವಾಗ್ಲೂ ಜಾಸ್ತಿನೇ ಹೇಳೋದು. ನಿನ್ನ ಬುದ್ದಿ ಎಲ್ಲಿ ಹೋಗಿತ್ತು? ಇಷ್ಟು ಸಣ್ಣ ಕಂತೆಗೆ ೨೦ ರೂಪಾಯಿಗಳಾ? ಹೂ, ಕೊಡು, ಕೊಡು, ನನ್ನ ಮಗ ದುಡಿದ್ದಿದ್ದೆಲ್ಲ ನಿನ್ನ ದುಂದುವೆಚ್ಚಕ್ಕೆ ಸರಿಹೋಗುತ್ತದೆ!” ಸೀತಮ್ಮ ಸೊಸೆಯನ್ನು ಗದರುತ್ತಿದ್ದದ್ದು ಇಡೀ ವಠಾರದಲ್ಲಿ ಕರ್ಕಶವಾಗಿ ಕೇಳಿಬರುತ್ತಿತ್ತು. ಮರುದಿನ ದೊಡ್ಡ ಕಂತೆ ಕೊತ್ತಂಬರಿಸೊಪ್ಪು ಸೊಸೆಯ ಕೈಲಿಟ್ಟು ಸೊಪ್ಪಿನವಳು ಮೆಲು ನುಡಿದಳು ”ನೀ ೧೦ ರೂಪಾಯಿ ಕೊಡು, ಸಾಕು” ಹೊರಗಿನವರ ಅಂತಃಕರಣ ಮನೆಯವರಿಗಿಲ್ಲವಲ್ಲ ಎಂದು ಹಲುಬುತ್ತಾ ಬಸುರಿ ಹೆಣ್ಣು ಭಾರವಾದ ಹೆಜ್ಜೆಹಾಕುತ್ತಾ ನಡೆದಳು. ಹೊಸಸೀರೆ “ಇದ್ಯಾವಗ್ರೂಪ್” ಅಕ್ಕನ ಫೋನಿನಲ್ಲಿರೋ ಫೋಟೋ ನೋಡುತ್ತಾ ಕೇಳಿದಳು ವಿನುತ. “ಹೊಸದುಕಣೆ, ಸೀರೆಗ್ರೂಪ್. ನಮ್ಮ ಹತ್ತಿರ ಇರುವ ಸೀರೆಗಳನ್ನು ಒಂದೊಂದಾಗಿ ಉಟ್ಟು, ಪಟತೆಗೆದು, ಅದರ ಬಗ್ಗೆ ಬರೆದು ಪೋಸ್ಟ್ಮಾಡುವುದು”. “ಅಬ್ಬಾ, ಒಂದೊಂದು ಸೀರೆನೂ ಎಷ್ಟು ಸೊಗಸಾಗಿದೆ. ಇನ್ನು ಆ ರವಿಕೆಗಳೂ, ಅವುಗಳ ಶೈಲಿ, ಮಾದರಿಗಳೋ..ಸಕ್ಕತ್! ನನ್ನೂ ಸೇರಿಸೆ ಇದಕ್ಕೆ! ಮೊನ್ನೆ ತಾನೆ ಇವರು ಸುಮಾರು ಹೊಸ ಸೀರೆಗಳನ್ನು ಕೊಡಿಸಿದ್ದಾರೆ”ಮೆಚ್ಚುಗೆಯಿಂದ, ಹೆಮ್ಮೆಯಿಂದ ಹೇಳಿದ ತಂಗಿಯನ್ನು ನೋಡಿ ಅಕ್ಕ ಮೆಲುನುಡಿದಳು ”ಇಲ್ಲಿ ಒಂದೊಂದು ಸೀರೆ ಕೊಂಡಾಗಲೂ ಒಂದು ಹಳೆಸೀರೆಯನ್ನು ಯಾರಿಗಾದರೂ ಕೊಡಬೇಕು, ಆಗುತ್ತಾನಿನಗೆ?!” ಎಳೆಮನಸ್ಸು “ಅಪ್ರಯೋಜಕ,ದಡ್ಡ ನಿನ್ನಮಗ” ಅಪ್ಪನ ಕರ್ಣಕಠೋರ ಮಾತುಗಳು ಅವನನ್ನು ಚೂರುಚೂರು ಮಾಡಿದ್ದು ಇದು ಮೊದಲ ಸಲವಲ್ಲ. ಆದರೆ ಕೊನೆಯದಾಗುತ್ತೆ ಎಂದು ನಿರ್ಧಾರ ಮಾಡಿ, ಕಣ್ಣೀರನ್ನು ತೊಡೆದು ಎದ್ದ ಮಾಧವ. “ವಿಜ್ಞಾನ ನನಗೆ ಓದಲಿಕ್ಕೆ ಆಗೋಲ್ಲ, ಅಪ್ಪ. ನಾನು ಆರ್ಟ್ಸ್ ತೊಗೋತೀನಿ. ಅಮ್ಮ, ನೀ ಸಪೋರ್ಟ್ಮಾಡ್ತಿ ತಾನೇ” ಮಗನ ಮಾತಿಗೆ ಸುಮ್ಮನೆ ತಲೆಆ ಡಿಸಿದರೂ ಕಣ್ಣಲ್ಲಿ ಭರವಸೆ ಇತ್ತು. 5 ವರುಷದ ನಂತರ ಮಗ ಪತ್ರಿಕೋದ್ಯಮದ ಪ್ರಶಸ್ತಿ ಸ್ವೀಕರಿಸಿದಾಗ ಅಪ್ಪನ ಕಣ್ಣಲ್ಲೂ ಸಂತಸದ ಹೊನಲು! ಇಷ್ಟೇಬದುಕು “ಬೆಳಗ್ಗೆ ಸಂಜೆ ಬರೀ ಕೆಲಸ, ಕೆಲಸ, ಕೆಲಸ. ಕಚೇರಿಯಲ್ಲಿ ಮುಗಿಸಿ ಬಂದರೆ ಮನೆಯಲ್ಲೂಹೊರೆಗೆಲಸ. ಥೂ, ಇದೂ ಒಂದು ಬದುಕೇ!” ಗೊಣಗುತ್ತಾ ಕೆಲಸ ಮಾಡುತ್ತಿದ್ದ ಮಡದಿಯನ್ನು ನೋಡಿ ರವೀಂದ್ರನಿಗೆ ಕನಿಕರ, ಬೇಸರ ಎರಡೂ ಉಕ್ಕಿತು. ತಾನು ಬೇಸರಿಸಿ ಸಿಟ್ಟಾದರೆ ಅವಳೂ ಕಿರುಚಾಡಿ ಮನೆ ರಣರಂಗವಾಗುತ್ತದೆ ಎಂದು ಕ್ಷಣಕಾಲ ದೀರ್ಘ ಉಸಿರೆಳೆದುಕೊಂಡ. ಹೆಂಡತಿಯನ್ನಪ್ಪಿ “ಈ ಭಾನುವಾರ ಖಂಡಿತ ಹೊರಗೆ ಹೋಗೋಣ, ಆಯ್ತಾ”ಎಂದವಳ ನೆತ್ತಿಗೆ ಮುತ್ತನಿತ್ತಾಗ ಅವಳ ಅರಳಿದ ಮುಖ ತಾವರೆಯನ್ನೂ ನಾಚಿಸುವಂತಿತ್ತು! ನಾಏನುಮಾಡಲಿ ಆರ್ಜಿಯನ್ನೊಮ್ಮೆ, ಅವಳನ್ನೊಮ್ಮೆ ದಿಟ್ಟಿಸಿ ನೋಡಿದರು ಹೆಡ್ಮ್ಯಾಡಮ್. “ಸರಿಯಾಗಿ ಯೋಚಿಸಿದೀರ, ಸೀಮಾ?”ಅವರ ಮಾತಿಗೆ ತುಂಬಿ ಬಂದ ಕಣ್ಣೊರೆಸಿಕೊಂಡು ಧೈರ್ಯವಾಗಿನುಡಿದಳು“ಜಾಸ್ತಿಯೋಚಿಸಿಲ್ಲ. ಏಕೆಂದರೆ ಯೋಚಿಸಿದಷ್ಟೂ ಸಮಸ್ಯೆ ಹೆಚ್ಚಾಗುತ್ತಿದೆ” ಮರುಮಾತಾಡದೆ ಟ್ರಾನ್ಸ್ಫ ರ್ ಬರೆದು ಕೊಟ್ಟರು. ಗಂಡನಿಗೆ ಯಾವಾಗಲೂ ಕೆಲಸದ ಚಿಂತೆ, ಮನಸ್ಸು ಸದಾ ಆಫೀಸಿನಲ್ಲಿ. ಒಂಟಿಯಾಗಿ ಸಮಯ ಕಳೆದು ಸಾಕಾಗಿತ್ತು ಸೀಮಾಳಿಗೆ. ಓಡಿ ಹೋಗುವುದು ಸರಿಯಾದ ಆಯ್ಕೆಯಲ್ಲ, ಆದರೂ ಕಷ್ಟಪಟ್ಟು ಜತೆಯಲ್ಲಿರುವುದಕ್ಕಿಂತ ಇದು ಮೇಲು ಎಂದು ಧೈರ್ಯ ಮಾಡಿದಳು. *********************************** *********************************

ಸಹನಾರವರ ನ್ಯಾನೊ ಕಥೆಗಳು Read Post »

ಕಥಾಗುಚ್ಛ

ಸಣ್ಣ ತಪ್ಪು

ಕಥೆ ಸಣ್ಣ ತಪ್ಪು ಲಕ್ಷ್ಮೀದೇವಿ ಪತ್ತಾರ ಬೆಳಗ್ಗಿನ ಆಹ್ಲಾದಕರ ವಾತಾವರಣ ತಣ್ಣನೆ ಗಾಳಿ ಬೀಸುತ್ತಿತ್ತು. ವಾಕಿಂಗ್ ಮಾಡಿ ಬಂದಿದ್ದರಿಂದ ಸಣ್ಣದಾಗಿ ಬೇವರು ಬರುತ್ತಿತ್ತು. ಸ್ವಲ್ಪ ಹೊತ್ತು ಹೊರಗೆ ಕುಳಿತು ಒಳಗೆ ಹೋದರಾಯಿತು ಎಂದು ವರಾಂಡದ ಮೆಟ್ಟಿಲು ಮೇಲೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿರುವಷ್ಟರಲ್ಲೇ ಬಂದ ಅಕ್ಕಮ್ಮ “ಇವತ್ತೇನು ಅಡುಗೆ ಮಾಡಬೇಕ್ರಿ” ಎಂದಳು. ಅಕ್ಕಮ್ಮ ನಮ್ಮ ಮನೆ ಅಡುಗೆಯಾಕೆ. ಮಗ ಬೆಳಿಗ್ಗೆ 7.30ಕ್ಕೆ ಶಾಲೆಗೆ ಹೋಗುವನು. ಅವನು ಹೋಗುವಷ್ಟರಲ್ಲಿ ಉಂಡು ಬಾಕ್ಸಿಗೆ ಹಾಕಿಕೊಂಡು ಹೋಗಲು ಅಡುಗೆ ಸಿದ್ಧವಾಗಿರಬೇಕು. ಅವಳು ಬಂದರೆ ನನಗೆ ನೀರಾಳ ತುಂಬಾ ರುಚಿಯಾಗಿ ಶುಚಿಯಾಗಿ ಅಡುಗೆ ಮಾಡುವಳು. ಅವಳು ಬಂದಾಗಿನಿಂದ ನನ್ನ ಅಡುಗೆ ಕೆಲಸ ನಿಂತುಬಿಟ್ಟಿದೆ. 4-5 ವರ್ಷವಾಯಿತು, ಅವಳುಬಂದು, ಲಘುಬಗೆಯಿಂದಲೆ ಪಟ್‍ಪಟ್ ಅಡುಗೆ ಮಾಡಿ ಹೋಗುವಳು. ಮೊದಲಾದರೆ (ಅವಳು ಬರುವ ಮುಂಚೆ) ಆಗ ಅಡುಗೆಯವರನ್ನು ನೇಮಿಸಿದ್ದಿಲ್ಲ. ನಾನೇ ಮಾಡಿಕೊಂಡು ಹೋಗುತಿದ್ದೆ. ಮೇಲಿನ ಕೆಲಸಕ್ಕೆ ಹಚ್ಚಿದರೂ ಅಡುಗೆ ಮಾಡಿ ಮಗನಿಗೆ ಉಣ ಸಿ ಬಾಕ್ಸ್ ಕಟ್ಟುವಷ್ಟರಲ್ಲೇ ಅವರು ಹೋಗುವುದಕ್ಕೆ ರೆಡಿ ಆಗಿರುತ್ತಿದ್ದರು. ಅವರಿಗೂ ಊಟಕ್ಕೆ ಕೊಟ್ಟು ಮುಂದೆ ನಾನು ಶಾಲೆಗೆ ಹೋಗಲು ತಯಾರಿ ಮಾಡಿಕೊಳ್ಳಬೇಕಿತ್ತು. ನಾನು ತಾಲೂಕು ಪ್ಲೇಸಿನಿಂದ 10 ಕಿ.ಮೀ ದೂರದಲ್ಲಿರುವ ಮಲ್ಲಾಪುರ ಮುಟ್ಟಲು ಮನೆಯನ್ನು 8.30 ರಿಂದ 9.00ಗಂಟೆ ಒಳಗೆ ಬಿಡಬೇಕಿತ್ತು. ಹೈಸ್ಕೂಲ್ ಶಿಕ್ಷಕಿಯಾಗಿ ಕೈ ತುಂಬ ಸಂಬಳ ಬರುತ್ತಾದರೂ ಚೆನ್ನಾಗಿ ಕುಳಿತು ಉಣ್ಣದಿದ್ದರೆ ಎಷ್ಟು ದುಡಿದರೂ ಏನು ಪ್ರಯೋಜನ ಎನ್ನಿಸಿಬಿಟ್ಟಿತು.ನಾವು ದುಡಿಯುವುದೇ ಉಂಡು, ತಿಂದು ಚೆನ್ನಾಗಿರಲು ಅದೇ ಇಲ್ಲದಿದ್ದರೆ ಹೇಗೆ ಎನಿಸಿಬಿಟ್ಟಿತು. ಯಾಕೆಂದರೆ ಬೆಳಿಗ್ಗೆ ಎಂದಾಕ್ಷಣದಿಂದಲೇ ಅಡುಗೆ ಮನೆ ಸೇರುವುದು ಲಘುಬಗೆಯಿಂದ ಅಡುಗೆ ಮಾಡಿ ಎಲ್ಲರಿಗೂ ಉಣ್ಣಲು ಕೊಟ್ಟು, ಬಾಕ್ಸ್ ಕಟ್ಟುವುದರಲ್ಲೆ ನನಗೆ ಉಣ್ಣಲು ಪುರುಸೊತ್ತಿರಲಿಲ್ಲ. ಗಂಟಿಲಕ್ಕತ್ತುವಂತೆ 4-5 ತುತ್ತು ಉಂಡು, ನೀರು ಕುಡಿದು ಮುಗಿಸುತ್ತಿದ್ದೆ. ಒಮ್ಮೊಮ್ಮೆ ಮಾಡಿದ ಅಡುಗೆ ಕಡಿಮೆ ಬಿದ್ದು ಮತ್ತೆ ಪೇಚಾಟ. ಅವಗೇನು ಹುರುಪು, ವಯಸ್ಸು ಹುಮ್ಮಸು ಸೇರಿ ಬೇಗ ಎದ್ದು ಮಾಡುತ್ತಿದ್ದೆ. ಈಗೀನ 40 ವರ್ಷ ದಾಟಿದ ಮೇಲೆ ದೇಹದಲ್ಲೆ ನೂರೆಂಟು ಬದಲಾವಣೆ ತಲೆ ಸುತ್ತುವುದು, ಅಲ್ಲಿ ನೋವು, ಇಲ್ಲಿ ನೋವು, ಮುಟ್ಟಿನ ಸಮಸ್ಯೆ ಒಂದೊಂದೆ ಕಾಣ ಸಿಕೊಳ್ಳಲಾರಂಭಿಸಿದವು.ಸಾಕಪ್ಪ ಈ ಒದ್ದಾಟ. ಇಷ್ಟು ದಿನ ಕಷ್ಟಪಟ್ಟದ್ದು ಸಾಕು ನಾವು ದುಡಿಯುವುದಾದರೂ ಏತಕ್ಕೆ ಸುಖಕ್ಕೆ (ಬಯಸಿ) ಹಂಬಲಿಸಿ ದುಡಿಯುತ್ತೇವೆ. ಮತ್ತೆ ಕಷ್ಟ ಪಡುತ್ತೇವೆ. ಬರೀ ಗಳಿಕೆ ಯೋಚನೆ ಗಳಿಸಿಯಾದರೂ ಏನು ಮಾಡಬೇಕು ಮಕ್ಕಳಿಗೆ ಏನು ಬೇಕೂ, ಎಷ್ಟೂ ಬೇಕೂ ಅಷ್ಟು ಮಾಡಿದ್ದಾಗಿದೆ. ಅವರು ಸ್ವಾವಲಂಬಿಗಳಾಗಲಿ. ಎಲ್ಲಾ ನಾವೇ ಮಾಡಬೇಕೆಂದರೆ ಹೇಗೆ? ಈಗಿನ ಮಕ್ಕಳಿಗೂ ನಮ್ಮ ಕಾಲದ ಕಕ್ಕುಲಾತಿ ಕಾಳಜಿ ಕಡಿಮೆ. ನಾವು ಇಷ್ಟು ಮಾಡಿದ್ದರು ಅವರು ನಮ್ಮನ್ನು ನಾವು ಸಾಯುವರೆಗೂ ಚೆನ್ನಾಗಿ ನೋಡಿಕೊಳ್ತಾರೆಂಬ ನಂಬಿಕೆ ಇಲ್ಲ. ಸುಮ್ಮನೆ ನಮ್ಮ ಕರ್ತವ್ಯ ನಾವು ಮಾಡಿದ್ದೇವೆಂದು ಸ್ಥೀತಪ್ರಜ್ಞರಾಗಿರಬೇಕೆನಿಸಿತು. ಅದಕ್ಕಾಗಿ ಅಡುಗೆಯಾಕೆಯನ್ನು ನೇಮಿಸಿದೆ.ನಮ್ಮ ಮನೆಯವರೂ ತಾವಾಯಿತು. ತಮ್ಮ ಡ್ಯುಟಿಯಾಯಿತು. ತಮಗೆ ಹೊತ್ತಿಹೊತ್ತಿಗೆ ಸರಿಯಾಗಿ ಊಟೋಪಚಾರವಾದರೆ ಸಾಕು. ಹಾಗಂತ ನಾನು ಕಷ್ಟ ಪಡಲು ಅವರೇನು ಹೇಳಿರಲಿಲ್ಲ. “ನಿನಗೆ ಹೇಗೆ ಬೇಕೂ ಹಾಗೆ ಮಾಡು” ಎಂದು ಸ್ಥಿತಪ್ರಜ್ಞರಂತೆ ಇದ್ದುಬಿಡುವರು ಅದರಂತೆ ನನಗಿರಲು ಬರುವುದಿಲ್ಲ ನನ್ನ ಗುಣ ಸ್ವಭಾವ ನನಗೆ.ಹಾಗೇ ಬಂದವಳೆ ಅಕ್ಕಮ್ಮ. ಅಕ್ಕಮ್ಮನೇನು ಸೀದಾ ಅಡುಗೆ ಮನೆಗೆ ಹೋಗಿ ನಾನು ಹೇಳಿದ ತಿಂಡಿ, ಅಡುಗೆ ಮಾಡಿದ್ದು, ನಾನು ಕೊಟ್ಟ ಉಳಿದ ಅಡುಗೆ ತೆಗೆದುಕೊಂಡು ಹೋಗಿ ಬೀಡುತ್ತಿದ್ದಳು. ಚುರುಕು ಸ್ವಭಾವದ ಮಾತಿನ ಮಲ್ಲೆ ಅಕ್ಕಮ್ಮ ನಾನು ಅಡುಗೆ ಮನೆಗೆ ಹೋಗಿ ಹಾಗೇ ನೋಡುತ್ತಿದ್ದರೆ ಏನಾದರೂ ಒಟ ಒಟ ಮಾತನಾಡುವಳು ನನಗೂ ಶಾಲೆಗೆ ಹೋಗುವ ಅವಸರ ಸುಮ್ಮನೆ ಮಾತಿಗೆ ನಿಂತರೆ ಕೆಲಸ ಕೆಟ್ಟಿತೆಂದು ಅವಳಷ್ಟಕ್ಕೆ ಅವಳನ್ನು ಅಡುಗೆ ಮನೆಗೆ ಬಿಟ್ಟು ಬಿಡುತ್ತಿದ್ದೆ. ಬರೆ ಮಗನಿಗೆ, ನಮ್ಮವರಿಗೆ ಊಟಕ್ಕೆ ಬಡಿಸಿ, ಬಾಕ್ಸ್ ಕಟ್ಟಿ ನಾನು ರೆಡಿಯಾಗುತ್ತಾ ಇರುತ್ತಿದ್ದೆ. ನಂತರ ಸ್ವಲ್ಪ ನೆಮ್ಮದಿಯಿಂದ ಉಣ್ಣಲು ಸಾಧ್ಯವಾಗಿತ್ತು. ಆದರೆ ಇತ್ತಿಚ್ಚಿಗೆ ರೆಡಿಯಾಗುವಾಗ, ದೇವರ ಪೂಜೆ ಮಾಡುವಾಗ ಬರೇ ಅಡುಗೆ ಮನೆಕಡೆಗೆ ಲಕ್ಷ್ಯ. ಅವಳೇನಾದರೂ ತೆಗೆದುಕೊಂಡು ಹೋಗುತ್ತಿರುವಳೇ ಎಂದು. ಅದಕ್ಕೆ ಕಾರಣ ಬರುವಾಗ ನೀಟಾಗಿ ಬರುವ ಅವಳು ಹೋಗುವಾಗ ಸೊಂಟಕ್ಕೆ ಸೀರೆ ಸಿಕ್ಕಿಸಿಕೊಂಡೇ ಹೋಗುತ್ತಿದ್ದಿದ್ದು. ಇದು ಇತ್ತೀಚಿಗೆ ನನ್ನ ಗಮನಕ್ಕೆ ಬಂತು. ಅವಾಗಿನಿಂದ ಹೊರಗೆ ನಾನು ರೆಡಿಯಾಗುತ್ತಿದ್ದರೂ ಅವಳ ಕಡೆಗೆ ಗಮನ ಸಂಶಯದ ಹುಳುಗೆ ಆಸ್ಪದ ಕೊಟ್ಟರೆ ಅದು ಕೊರೆದು ತಲೆ ಹಾಳು ಮಾಡಿ ಬಿಡುವುದೆಂದು ನಿಶ್ಚಯಿಸಿ ಇವತ್ತೇನಾದÀರೂ ಆಗಲಿ ಅವಳು ಹೋಗುವಾಗ ಮೇಲೆ ಸಿಕ್ಕಿಸಿದ ಸೀರೆ ನೀರಿಗೆ ಬಿಚ್ಚಿ ಸರಿಯಾಗಿ ಹೋಗಲು ಹೇಳುವುದು. ಅವಳೇನಾದರೂ ಅಂದುಕೊಳ್ಳಲಿ ನನ್ನ ಮೇಲೆ ಸಂಶಯವೇ ನಿಮಗೆ ಎಂದು ನೋಂದುಕೊಂಡರು ಚಿಂತೆಯಿಲ್ಲ. ನನ್ನ ಅನುಮಾನ ಹಾಗೇ ಕಂಡಿಲ್ಲ ಮಾತಿನ ಮಲ್ಲಿ ಅವಸರದಲ್ಲಿ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿರುತ್ತಾಳೆ. ಅವೇರಡನ್ನು ಬಿಟ್ಟರೆ ಕೈ ಶುದ್ಧ ಇಲ್ಲಿವರೆಗೂ ಅಂತು ಏನೂ ಬದಲಾವಣೆ ಕಂಡಿಲ್ಲ. ಒಮ್ಮೊಮ್ಮೆ ಮಸಾಲ ಡಬ್ಬಿದಲ್ಲಿನ ಸಾಮಾನು ಬೇಗ ಆದಂಗೆ ಅನಿಸಿದರೂ ಮಾಡಿದ ಅಡುಗೆ ಲೆಕ್ಕ ಹಾಕಿದರೆ ಖರ್ಚು ಆಗಿರಬಹುದು ಎನಿಸುತ್ತೆ. ಹೆಚ್ಚೆಚ್ಚು ಅಡುಗೆ ಮಾಡ್ತಾಳಾದರೂ ಅದು ನಾನು ಕೊಟ್ಟದಲ್ಲವೆ. ಕಡಿಮೆ ಕೊಟ್ಟರೆ ನನಗೇ ಉಳಿಯುವುದಿಲ್ಲ. ಇಲ್ಲವೆ ಮಾಡಿದ ಅವಳಿಗೊಂದಿಷ್ಟೂ ಕೊಡದಿದ್ದರೆ ನಮಗೂ ಸಮಾಧಾನ ಇರುವುದಿಲ್ಲ. ಹೆಚ್ಚಿಗೆ ಕೊಟ್ಟರೆ ಮಾಡಿದ್ದು ಹೆಚ್ಚಾಗಿ ಅವಳು ಬಂದಷ್ಟು ಹೆಚ್ಚಿಗೆ ಓಯ್ಯಬಹುದು. ಅದು ಬಿಟ್ಟರೆ ಅದು ನಾನೇ ಕೊಟ್ಟರೆ ಓಯ್ಯುವುದನ್ನು ಬಿಟ್ಟರೆ ಅವಳು ಕದ್ದದ್ದು ಕಂಡಿಲ್ಲ. ಸುಮ್ಮನೆ ಅನುಮಾನಿಸುತ್ತಿರುವೆ ಎಂದು ಮತ್ತೊಮ್ಮೆ ಅನಿಸುತ್ತೆ. ಏನಾದರೂ ಆಗಲಿ ಇವತ್ತು ಒಂದು ನಿರ್ಧಾರ ಆಗಬೇಕು. ಅವಳನ್ನು ಪರೀಕ್ಷಿಸಿಬೇಕು. ಸಿಕ್ಕರೆ ನಾಳೆಯಿಂದ ನೀನು ಬರಬೇಡ ಎಂದು ಬಿಡಬೇಕು. ಮತ್ತೊಬ್ಬರನ್ನು ನೋಡಿಕೊಂಡಿರಾಯಿತು. ನಮ್ಮ ವಿಶ್ವಾಸಕ್ಕೆ ದ್ರೋಹ ಬಗೆದವರನ್ನು ಎಂದೂ ಸಹಿಸಿಕೊಳ್ಳುವುದು ಬೇಡ, ಎಂದು ನಿರ್ಧರಿಸಿ ಇನ್ನೇನು ಅವಳು ಅಡುಗೆ ಮುಗಿಸುವಷ್ಟರಲ್ಲೇ ನನ್ನ ಎದೆ ಬಡಿತ ನನಗೆ ಕೇಳಿಸುತ್ತೀದೆ. ದೇವರೇ ಕೆಲಸದವರು ಸಿಗುವುದೇನು ಸುಲಭದ ಮಾತಲ್ಲ. ಅವಳು ಪ್ರಾಮಾಣ ಕಳಾಗಿರಲಿ ಸರಿ ಇದ್ದರೆ ನಾನೇ ಕ್ಷಮೆ ಕೇಳಿ ಮುಂದುವರಿಯಲು ಹೇಳಿದರಾಯಿತೆಂದು ಕೊಂಡೆ. ಸರಿ “ಅಮ್ಮಾರೆ ಕೆಲಸ ಆಯಿತು ನಾ ಹೋರಡಲೇ” ಎಂದಳು ಅಕ್ಕಮ್ಮ. ತಡೆ ಅಕ್ಕಮ್ಮ ಸ್ವಲ್ಪ ನಾಷ್ಟ ಬಡಿಸಿಕೋಡ್ತಿನಿ” ಎಂದು ಒಳಗೆ ಬಂದು ಇಡ್ಲಿ ಚಟ್ನಿ ಹಾಕಿಕೊಂಡು ಹೊರಗೆ ಬರುವಷ್ಟರಲ್ಲೆ ನನಗೆ ಒಳಗೊಳಗೆ ಡವಡವ. ಧೈರ್ಯ ಮಾಡಿ “ಏ ಅಕ್ಕಮ್ಮ ಸೀರೆ ಸರಿ ಮಾಡಿಕೊ, ಎಷ್ಟೂ ಮೇಲೆ ಸಿಕ್ಕಿಸಿಕೊಂಡಿಯಲ್ಲಾ” ಎಂದೆ. “ಇಲ್ಲ ಬಿಡ್ರಿ ಅಮ್ಮಾರೆ ಮನೆಗೆ ಹೋಗೆ ಉಣ ್ತನಿ. ನನ್ನ ಮಗನು ಉಣ್ತಾನ” ಎಂದಳು. ನಾನು ಹಠಕ್ಕೆ ಬಿದ್ದವಳಂತೆ “ನಾನು ನೋಡಬೇಕು, ನೀನು ಸಿಕ್ಕಿಸಿಕೊಂಡ ಸೀರೆ ಬಿಚ್ಚಲೇ ಬೇಕು” ಎಂದೇ ಅಷ್ಟರಲ್ಲಾಗಲೇ ಅವಳ ಮುಖ ಕಪ್ಪಿಟ್ಟಿತ್ತು. ಮೊದಲಿದ್ದ ಧೈರ್ಯ ನಾನು ಜೋರು ಮಾಡುವಷ್ಟಾರಲ್ಲಾಗಲೇ ಉಳಿಯಲಿಲ್ಲ. ಅಂಜುತಾ ಬಿಚ್ಚಿದವಳ ಸೀರೆಯಲ್ಲೇ, ಚಕ್ಕಿ, ಲವಂಗ, ಯಾಲಕ್ಕಿ, ಮೊಗ್ಗುಗಳು ಸರ ಸರ ಬಿದ್ದವು. ನನಗೂ ಶಾಕ್. ಅವಳೂ ಇದನ್ನು ನೀರಿಕ್ಷಿಸಿರಲಿಲ್ಲ ಅವಳಿಗೂ ಗಾಬರಿ. ಗರಬಡಿದವಳಂತೆ ಮಾತು ಮರೆತು ನಿಂತಿದ್ದಳು. ನಾನು ಒಂದೇ ಮಾತಿನಲ್ಲಿ “ನಾಳೆಯಿಂದ ನೀನು ಬರಬೇಡ” ಎಂದು ಬಿಟ್ಟೆ ಅವಳಿಗೆ ಈ ನಾಲ್ಕೈದು ವರ್ಷದಲ್ಲೆ ನನ್ನ ಗುಣ ಸ್ವಭಾವ ಗೊತ್ತಾಗಿತ್ತು ಎಷ್ಟೂ ಮೃದು, ಉದಾರಿಯೂ ಒಮ್ಮೆ ಅಷ್ಟೆ ಕಠಿಣ ಕಬ್ಬಿಣವೆಂದು ಅವಳು ಮುಂದೆ ಮಾತಾಡದೆ ಅಳುತ್ತಾ ಹೊರಟು ಹೋದಳು. ಅವಳು ಹೋದ ಮೇಲೆ ಸ್ವಲ್ಪ ಹೊತ್ತು “ಹೊತ್ತಿ ಉರಿಯುವ ಒಲೆಯಂತೆ ಮನಸ್ಸು ದಗದಗಿಸುತ್ತಿತ್ತು”. ನಂತರ ತಿಳಿಗೊಂಡ ಕೊಳದಂತೆ ಆದಮೇಲೆ ವಿಚಾರ ಮಾಡಿ ನೋಡಿದೆ. ಇವತ್ತೇನು ಅವಳನ್ನು ಬೈಯ್ದು ಕಳಿಸಿದೆ. ನಾಳೆ ಹೇಗೆ ಇವತ್ತು ರವಿವಾರ ನಾಳೆ ಬೆಳಗೆದ್ದರೆ ಸೋಮವಾರ ಶಾಲೆಗೆ ಓಡಬೇಕು. ಅವಳು ಬಂದ ಮೇಲೆ ನಿಶ್ಚಿಂತೆಯಿಂದ ಉಂಡು ತಿಂದು ನೆಮ್ಮದಿಯಿಂದ ಇದ್ದೆ. ನಾನು ದುಡುಕಿದರೆ ಇಷ್ಟು ಚೆನ್ನಾಗಿ ಅಡುಗೆ ಮಾಡುವರು ಸಿಗುವರೇ ಕೆಲಸದವರು ಸಿಗುವುದೇ ಬಹಳ ಕಷ್ಟ. ಯಾರು ಏನು ಸಾಚಾ. ಅವಕಾಶ ಸಿಕ್ಕರೆ ಬಡತನದ ಕಾರಣಕ್ಕೆ ಅಲ್ಪಸ್ವಲ್ಪ ಕಳ್ಳತನ ಮಾಡುವರೇ. ಕದ್ದಿದ್ದಾದರೂ ಎಷ್ಟು?, ಹೆಚ್ಚೆಂದರೆ 50 ರೂ ಯಾ ಅಲ್ಲವೆಂದು ಒಮ್ಮೆ ಎನಿಸಿದರೆ. ದಿನದಿನಾ ಇಷ್ಟೇಷ್ಟೆ ಒಯ್ಯುತ್ತಿದ್ದರೆ ಹೇಗೆ, ನಂಬಿಕೆಗೆ ಅರ್ಹಳಲ್ಲದವಳನ್ನು ಹೊರಗೆ ಹಾಕಬೇಕು ಎಂದು ಮತ್ತೆ ಯೋಚಿಸಿತು. ತಲೆ ಕೆಟ್ಟು ಮೂರಾ ಬಟ್ಟೆಯಾಯಿತು. ಈ ಸಣ್ಣ ಘಟನೆಯಿಂದ.ಆದರೆ ನಿಜಕ್ಕೂ ಅಕ್ಕಮ್ಮ ಪ್ರಾಮಾಣ ಕಳೇ ಆಗಿದ್ದಳು. ಅವಳು ಕಳ್ಳಿಯಲ್ಲ. ಅವತ್ತು ಮಗ. ಒಂದೇ ಸವನೆ “ಆ ಟೀಚರ ಮನೆಯಲ್ಲೆ ಮಾಡುವಂತೆ ನಮ್ಮ ಮನೆಯಲ್ಲಿ ಪಲಾವ ಮಾಡು” ಎಂದು ಗಂಟು ಬಿದ್ದಿದ್ದನಂತೆ. ಅವರ ಮನೆಯಲ್ಲಿ ಇದ್ದಂತೆ ನಮ್ಮ ಮನೆಯಲ್ಲಿ ಮಸಾಲೆ ಸಾಮಾನು ಇಲ್ಲಪ್ಪ” ಎಂದರೆ ಕೇಳಿ ತೆಗೆದುಕೊಂಡು ಬಾ ಎಂದಿನಂತೆ. “ನಿನ್ನೆಯಾದರೂ ಕೇಳಿ ಒಂದೇರೆಡು ಲಿಂಬೆ ಹಣ್ಣು ತಂದಿದ್ದೆ. ಮತ್ತೆ ಕೇಳಿದರೆ ಹೇಗೆ “ಎಂದು ಅವಳ ಚಿಂತೆಗೀಡಾಗಿ ಎಂದೂ ಮಾಡದ ತಪ್ಪನ್ನು ಮಗನ ಮಮಕಾರಕ್ಕೆ ಬಿದ್ದು ಆ ತಪ್ಪು ಮಾಡಿಸಿತಂತೆ. ಇದನೆಲ್ಲ ಹೇಳಿ ಹೇಳಿದ್ದು ಅವಳ ಮನೆ ಪಕ್ಕದ ಜೋತೆ ಗೂಡಿ ಕೆಲಸ ಮಾಡುವ ಮಲ್ಲಮ್ಮ ಮೊನ್ನೆ ಶಾಲೆ ಮೂಡಿಸಿಕೊಂಡು ಬರುವಾಗ ದಾರಿಯಲ್ಲಿ ಸಿಕ್ಕಾಗ ಹೇಳಿದ್ದು.”ಪಾಪ ಅಕ್ಕಮ್ಮ . ತುಂಬಾ ಒಳ್ಳೆಯವಳು. ನಿಮ್ಮನ್ನು ಎಷ್ಟು ಹಚ್ಚಿಕೊಂಡಿದ್ದಳು ಅವಳನ್ನು ಯಾಕೆ ಬಿಡಿಸಿದರಿ ಎಂದು ಹೇಳುತ್ತಾ ಅಕ್ಕಮ್ಮ ಆಕೆಯ ಮುಂದೆ ತನ್ನ ದುಃಖ ಹಂಚಿಕೊಂಡ ವಿಷಯ ಬಾಯ್ಬಿಟ್ಟಳು. ಈ ವಿಷಯ ತಿಳಿದ ಮೇಲೆ ನನಗೆ ನನ್ನ ದುಡುಕು ಬುದ್ಧಿ ಬಗ್ಗೆ ತುಂಬಾನೇ ಬೇಸರವಾಯಿತು. ಯಾಕೋ ಅವಳ ಮುಂದೆ ನಾನು ಸಣ್ಣವಳಾಗಿ ಬಿಟ್ಟೆನೆ ಅನಿಸಿತು.ಮತ್ತೆ ಕೆಲಸಕ್ಕೆ ಕರೆಯಲು ಹಿಂಜರಿಕೆ ಆಯಿತು **********************************

ಸಣ್ಣ ತಪ್ಪು Read Post »

ಕಥಾಗುಚ್ಛ

ಭಯ

ಕಥೆ ಭಯ ಲಕ್ಷ್ಮೀದೇವಿ ಪತ್ತಾರ ಸಂಜನಾ ಬೆಳಗ್ಗೆದ್ದ ತಕ್ಷಣ ಪಾರಿಜಾತದ ಗಿಡದತ್ತ ಹೂ ತರಲು ಹೋದಳು. ಹೊತ್ತಾದರೆ ಹೂಗಳು ನೆಲಕ್ಕುರುಳಿ ಬಿಳುವುದೆಂದು ಹೂಬುಟ್ಟಿ ಹಿಡಿದು ಗಿಡದ ಬಳಿ ಹೋದಳು. ಆ ಹೂವೆ ಹಾಗೆ. ಅತಿಸೂಕ್ಷ್ಮವೂ ಅತ್ಯಾಕರ್ಷಕವೂ ಅಲ್ಲದೆ ರಾತ್ರಿ ಅರಳಿ ಬೆಳಗಾಗುವಷ್ಟರಲ್ಲಿ ನೆಲಕ್ಕೆ ಅಲಂಕಾರ ಮಾಡಿದಂತೆ ನೆಲದ ತುಂಬಾ ಅರಳಿ ಬೀಳುತ್ತಿದ್ದವು. ಕೆಲವಷ್ಟು ಗಿಡದ ಮೇಲೆಯೂ ಇರುತ್ತಿದ್ದವು. ಇನ್ನು ಪೂರ್ಣ ಬೆಳಕು ಹರಿಯುವ ಮುನ್ನವೇ ಅವನು ತಂದು ಬಿಡುತ್ತಿದ್ದಳು ಸಂಜನಾ. ಅಂದು ಸ್ವಲ್ಪ ಲೇಟಾಗಿ ಎದ್ದಿರುದರಿಂದ ದೌಡಾಯಿಸಿ ಹೋದಳು . ಗಾಳಿಗೆಲ್ಲಿ ಹೂಗಳೆಲ್ಲಾ ಬಿದ್ದುಬಡುವವೂ ಎಂದು ಅವಸರವಾಗಿ ಎಲೆಗಳ ಮೇಲಿನ ಹೂಗಳನ್ನು ಆಯ್ದುಕೊಂಡು ಬುಟ್ಟಿಗೆ ಹಾಕಿಕೊಂಡಳು. ಹೂಗಳೆಂದರೆ ಬಲು ಇಷ್ಟ ಸಂಜನಾಗೆ. ಗಿಡಗಳಿಗೆ ನೀರು ಹಾಕುವುದು, ಪೂಜೆಗೆ ಮತ್ತು ತನಗೂ ಹೂ ಕಿತ್ತು ತರುವುದು ಅವಳಿಗೆ ಅಚ್ಚುಮೆಚ್ಚಿನ ಕೆಲಸ. ಚೆಂದದ ಹೂಗಳನ್ನು ನೋಡುತ್ತಾ ಇರಬೇಕಾದರೆ ಅವುಗಳ ಮೇಲೆ ಸಣ್ಣದಾದ ಬಿಳಿ ಜೇಡ ಹರಿದಾಡಿದ್ದು ಕಾಣಿಸಿತು. ಅದನ್ನು ತೆಗೆಯಲು ಹೋದಾಗ ಅದು ಕೆಳಗೆ ಜಾರಿತು. ಹೂ ಸರಿಸಿ ಬುಡದಲ್ಲಿದ್ದ ಜೇಡರಹುಳು ತೆಗೆಯುವಷ್ಟರಲ್ಲಿ ಹೂಗಳ ಬುಡದಲ್ಲಿದ್ದ ಅತಿ ಸೂಕ್ಷ್ಮವಾದ ಸಣ್ಣ ಸಣ್ಣ ಹುಳುಗಳು ಹರಿದಾಡುತ್ತಿರುವದನ್ನು ಕಂಡಳು. ಅಂತಹ ಹುಳುಗಳನ್ನು ಈ ಮೋದಲು ಅವಳು ಗಮನಿಸಿರಲಿಲ್ಲ.ಅವು ಅವಳ ಕೈಮೇಲೆ ಸರಸರ ಏರಲಾರಂಭಿಸಿದವು . ಅಷ್ಟು ಸಣ್ಣ ಹುಳುಗಳಾಗಿದ್ದರು ಅವು ಹಾರುತ್ತಿದ್ದವು. ನಂತರ ಅವಳ ಮೈ ಮೇಲೆಲ್ಲಾ ಹರಿದಾಡಲಾರಂಭಿಸಿದವು. ಅವಳು ಆತಂಕದಿಂದ ಬುಟ್ಟಿ ದೇವರ ಜಗುಲಿ ಮೇಲೆ ಇಟ್ಟವಳೆ ತನ್ನ ಬಟ್ಟೆ ಜಾಡಿಸಲು ಆರಂಭಿಸಿದಳು .ಮೈಯೆಲ್ಲಾ ತುರುಸಲಾರಂಭಿಸಿತು .ಜೊತೆಗೆ ಬೊಬ್ಬೆಗಳು ಏಳಲಾರಂಭಿಸಿದವು. ಸ್ನಾನ ಮಾಡಿದರು ಗುಳ್ಳೆಗಳು ಹೋಗಲಿಲ್ಲ. ಎಣ್ಣೆ ಸವರಿದರು ಹೋಗಲಿಲ್ಲ .ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬೊಬ್ಬೆಗಳು ದೊಡ್ಡವಾಗಿ ನೀರುಗುಳ್ಳೆಯಂತಾದವು . ತಡಮಾಡದೇ ಸ್ಕಿನ್ ಡಾಕ್ಟರ್ ಬಳಿ ಕರೆದೊಯ್ದರು. ಇನ್ಫೆಕ್ಷನ್ ಆಗಿದೆ ಎಂದು ಡಾಕ್ಟರ್ ಔಷದಿ, ಮುಲಾಮು ಬರೆದುಕೊಟ್ಟರು. ಆದರೂ ವಾರ ಕಳೆದರೂ ಗುಳ್ಳೆಗಳು ಮಾಯಲಿಲ್ಲ .ಯಾವುದನ್ನೇ ಆಗಲಿ ಮನಸ್ಸಿಗೆ ಬೇಗ ಹಚ್ಚಿಕೊಳ್ಳುವ ಸಂಜನಾ ಅಂಜಿಕೆ ಆತಂಕದಿಂದ ಕುಗ್ಗಿ ಹೋದಳು. ತಂದೆ-ತಾಯಿಯರು ಗಾಬರಿಗೊಂಡರು. ಧಾರ್ಮಿಕ ಸ್ವಭಾವದವರಾದ ಅವರು ಇದು ದೇವರ ಶಾಪವು ಏನು. ನಾವೇನಾದರೂ ತಪ್ಪು ಮಾಡಿರಬೇಕು ಅದಕ್ಕೆ ನಮ್ಮ ಮಗಳಿಗೆ ಶಿಕ್ಷೆಯಾಗಿದೆ. ಇರುವುದು ಒಬ್ಬಳೇ ಒಬ್ಬಳು ಮಗಳು .ಅವಳಿಗೆ ಏನಾದರೂ ಆದರೆ ಅದು ನಮಗೆ ಆದಂತೆ ಎಂದು ಚಡಪಡಿಸಿದರು. ಅವಳ ತಂದೆ ತಾಯಿ ಕೊನೆಗೆ ಸ್ವಾಮಿಯರ ಬಳಿ ಕೇಳಿಬರಲು ನಿರ್ಧರಿಸಿದರು. ಮರುದಿನ ರವಿವಾರ ಸ್ವಾಮಿಯರ ಬಳಿ ಓಡಿ ಹೋದರು.ಆದದ್ದು ತಿಳಿಸಿದ ದಂಪತಿಗಳು ಹೀಗೇಕಾಗಿದೆ ನಮ್ಮ ಮಗಳಿಗೆ , ಪರಿಹಾರ ಏನು ಎಂದು ವಿಚಾರಿಸಲು ಗಣಪತಿ ಆಚಾರ್ಯರು “ಇದು ಖಚಿತವಾಗಿಯೂ ನಾಗದೋಷ ನೀವು ಕುಕ್ಕೆ ಗೆ ಹೋಗಿ ಬನ್ನಿ ಎಲ್ಲಾ ಪರಿಹಾರ ಆಗುತ್ತೆ “ಎಂದು ಹೇಳಿದರು. ಸರಿಯೆಂದು ಕುಕ್ಕೆಗೆ ಪ್ರಯಾಣಮಾಡಿದರು ಸಂಜನಾಳ ತಂದೆ ನಾಗರಾಜ ,ತಾಯಿ ರತ್ನಮ್ಮ. ಹೋಗಿ ಹರಕೆ ತೀರಿಸಿ ಅಂದು ರಾತ್ರಿ ಅಲ್ಲೇ ಉಳಿದು ಮರುದಿನ ಸೇವೆಮಾಡಿ ಮನೆಗೆ ಬಂದರು .ಬಂದು ನೋಡಿದರೆ ಗುಳ್ಳೆಗಳ ಮಂಗಮಾಯ. ನಾಗರಾಜ ರತ್ನಮ್ಮಗಂತು ಹೇಳಲಾಗದಷ್ಟು ಸಂತೋಷ. ಸ್ವಾಮೇರ ಶಕ್ತಿ, ದೇವರ ಮಹಿಮೆ ಎಲ್ಲರ ಮುಂದೆ ಹೇಳಿ ಹೊಗಳಿದ್ದೆ ಹೊಗಳಿದ್ಧು. ಆದರೆ ನಿಜಕ್ಕೂ ಆದದ್ದೆ ಬೇರೆ .ಸಂಜನ ಯಾವುದನ್ನೇ ಆಗಲಿ ಬಹಳ ದೀರ್ಘವಾಗಿ ವಿಚಾರ ಮಾಡುತ್ತಿದ್ದಳು . ಓದುವಾಗ ನೋಡುವಾಗ ,ಕುಲಂಕುಶವಾಗಿ ತಿಳಿದುಕೊಳ್ಳುತ್ತಿದ್ದಳು. ಇತ್ತೀಚಿಗೆ ವಾಟ್ಸಾಪ್ ಫೇಸ್ಬುಕ್ನಲ್ಲಿ ಬರುವ ಆರೋಗ್ಯ ಸೌಂದರ್ಯವರ್ಧಕಗಳ ಬಗ್ಗೆ ಓದುವುದು ಹೆಚ್ಚಾಗಿತ್ತು. 21ರ ಹರೆಯದ ಸಂಜನಾಗೆ ಸಹಜವಾಗಿ ವಯೋಧರ್ಮಕ್ಕೆ ತಕ್ಕಂತೆ ಮುಖದ ಮೇಲೆ ಮೊಡವೆ ಬಂದಿದ್ದವು. ಹೀಗಾಗಿ ದೇಹ ಸೌಂದರ್ಯದ ಬಗ್ಗೆ ತಲೆಕೆಡಿಸಿಕೊಂಡು ಅತಿ ವಿಷಯ ವಿಷಕ್ಕೆ ಸಾಮಾನ ಎಂಬಂತೆ ಸ್ವಲ್ಪ ಮೊಡವೆಯಾದರೂ ಅತಿಯಾಗಿ ಯೋಚಿಸುತ್ತಿದ್ದಳು. ಮೊದಲೇ ಸೈನ್ಸ್ ಸ್ಟೂಡೆಂಟ್. ಪಾರಿಜಾತ ಗಿಡದಲ್ಲಿನ ಸಣ್ಣ ಸಣ್ಣ ಹುಳಗಳು ದಿನಾ ಆ ಗಿಡದಲ್ಲಿ ಇರುತ್ತಿದ್ದವು.ಹೂವು ಕೀಳಿದವರ ಮೈಮೇಲೆ ಏರುತ್ತಿದ್ದವು. ಅದನ್ನು ಸಂಜನಾ ಮಬ್ಬುಬೆಳಕಿನಲ್ಲಿ ಗಮನಿಸಿರಲಿಲ್ಲ .ಆದರೆ ಆ ದಿನ ಸ್ವಲ್ಪ ತಡವಾಗಿದ್ದರಿಂದ ಜೇಡರ ಹುಳು ವಿನ ಕಾರಣದಿಂದ ಅವಳ ಗಮನಕ್ಕೆ ಬಂತು.ಆ ಹುಳುಗಳು ಮೇಲೇರಿ ಏನೇನು ಆಗಬಹುದು ಎಂದು ಅತಿಯಾಗಿ ಯೋಚಿಸುತ್ತಾ ಕಳೆದ ಪರಿಣಾಮ ಅವಳ ದೇಹದ ಮೇಲೂ ಆ ರೀತಿಯ ಪರಿಣಾಮ ಬೀರಿತ್ತು. ಅವಳ ಭಾವನೆ ತೀವ್ರವಾಗಿ ಅವಳ ಯೋಚನೆಯಂತೆ ಘಟಿಸಿತ್ತು. ಯಾವಾಗ ಕುಕ್ಕೆಗೆ ಹೋದರು ಅಲ್ಲೇ ದೇವರ ಮೇಲಿನ ಅತಿಯಾದ ನಂಬಿಕೆಯಿರುವದರಿಂದ ರೋಗ ಹೋಗುವದೆಂದು ಪೂರ್ಣವಾಗಿ ನಂಬಿದಳು.ಅದೂ ಪರಿಣಾಮ ಬೀರಿತು.ಅವಳು ಆರಾಮ ವಾದಳು. ಭಯದೊಂದಿಗೆ ಬಂದ ರೋಗ ಭಯ ಹೋದೊಡನೆ ಹೊರಟುಹೋಗಿತ್ತು ಆದರೆ ಇದು ಅವಳಿಗೆ ಗೊತ್ತಾಗಿದೆ ತನ್ನ ಮೆಚ್ಚಿನ ಪಾರಿಜಾತ ಹೂವುಗಳನ್ನು ತರುವುದನ್ನೇ ಅವಳು ಬಟ್ಟುಬಿಟ್ಟಳು. **************************************

ಭಯ Read Post »

ಕಥಾಗುಚ್ಛ

ಧೃಡ ಚಿತ್ತ

ಕಥೆ ಧೃಡ ಚಿತ್ತ ವಾಣಿ ಸುರೇಶ್ ರಾತ್ರಿ ಎಲ್ಲಾ ಕೆಲಸ ಮುಗಿಸಿ ರೂಮಿಗೆ ಹೋದ ಹರಿಣಿ ಬಾಲ್ಕನಿಯಲ್ಲಿ ಆಕಾಶ ನೋಡುತ್ತಾ ಸುಮ್ಮನೆ ನಿಂತಳು.ಧಾತ್ರಿ ಹೇಳಿದ ಮಾತು ಇನ್ನೂ ಅವಳ ಕಿವಿಯಲ್ಲಿ ಗುಣಗುಣಿಸುತ್ತಿತ್ತು.ನನಗ್ಯಾಕೆ ಅವಳಂತೆ ಮನೆಯಲ್ಲಿ ಹೇಳಕ್ಕಾಗಲ್ಲ ಎಂದು ಯೋಚಿಸುತ್ತಿರುವಾಗ ಗಂಡ ವಿಜಯ್ ಬಂದು ಪಕ್ಕದಲ್ಲಿ ನಿಂತನು.” ಇನ್ನು ಕೂಡ ಆ ನೆಟ್ ಫ್ಲಿಕ್ಸ್ ಬಗ್ಗೆ ಯೋಚನೆ ಮಾಡುತ್ತಿದ್ಯಾ? ಈಗಿನ ಮಕ್ಕಳು ಗೊತ್ತಲ್ವಾ ಹರಿಣಿ? ನಾವು ನೆಟ್ ಫ್ಲಿಕ್ಸ್ ಸಬ್ಸ್ಕ್ರೈಬ್ ಮಾಡದಿದ್ರೆ ಅವ್ಳು ಯಾರದ್ದೋ ಅಕೌಂಟ್ ಶೇರ್ ಮಾಡಿ ತನಗೆ ಬೇಕಾದ್ದನ್ನು ನೋಡುತ್ತಾಳೆ.ಅವ್ರೆಲ್ಲಾ ಹಿಂದಿ ನಿಂದ ಆಡ್ಕೊಳ್ತಾರೆ ಆಮೇಲೆ! ಅದ್ರ ಬದ್ಲು ಟ್ಯೂಷನ್ ಆದ ಮೇಲೆ ಒಂದೇ ಗಂಟೆ ಸೀರೀಸ್ ನೋಡು ಅಂತ ಸ್ಟ್ರಿಕ್ಟ್ ಆಗಿ ಹೇಳೋಣ. ಅದೇನು ನೋಡ್ತಾಳೆ ಅಂತ ನಮ್ಗೂ ಕಣ್ಣಿಡಬಹುದು” ಅಂದಾಗ ಹರಿಣಿಗೂ ಸರಿಯೆನಿಸಿ ತಲೆಯಾಡಿಸಿದಳು. ” ನಿನ್ನ ಮಗರಾಯನಿಗೂ ಸ್ವಲ್ಪ ಬುದ್ದಿ ಹೇಳು! ಇನ್ನೂ ಎಳೇಮಗೂ ತರ ಆಡ್ತಾನೆ.ನಾನು ನಾಳೆ ಬೆಳಗ್ಗೆ ಹತ್ತು ಗಂಟೆ ಹೊತ್ತಿಗೆ ಮಂಗಳೂರಿಗೆ ಹೊರಡುತ್ತೇನೆ.ರವಿ ಬರ್ತಾನೆ ನಂಜೊತೆ.ನಾಡಿದ್ದು ಮದ್ವೆ ಊಟ ಮುಗಿಸಿಕೊಂಡು ಹೊರಟ್ರೆ ರಾತ್ರಿ ಇಲ್ಲಿ ತಲುಪ್ತೇವೆ.” ” ನಿನ್ನ ಮಗರಾಯ” ಎಂದು ಗಂಡ ಹೇಳಿದ್ದಕ್ಕೆ ಸಿಟ್ಟು ಬಂದರೂ ತಡೆದುಕೊಂಡು , ” ಸರಿ ಹಾಗೇ ಮಾಡಿ” ಅಂದಳು.       ಮದುವೆಯಾಗಿ ಐದು ವರ್ಷಗಳ ನಂತರ, ಜನರ ಕೊಂಕು ಮಾತುಗಳನ್ನು ಕೇಳಿ ಹೈರಾಣಾಗಿ ಹೋದವಳಿಗೆ, ಮಗ ಹುಟ್ಟಿದಾಗ ಆದ ಸಂಭ್ರಮ ಹೇಳತೀರದು! ಮಗನಿಗೆ ಐದು ವರ್ಷ ತುಂಬುವವರೆಗೆ ಕೆಲಸಕ್ಕೆ ಹೋಗದೆ ಅವನ ಆಟಪಾಠಗಳಲ್ಲಿ ಮಗ್ನಳಾಗಿ ತಾಯ್ತನದ ಸುಖ ಅನುಭವಿಸಿದ್ದಳು ಅವಳು.ಅಜ್ಜಿ, ತಾತ ,ಅಮ್ಮನ ಅತಿಯಾದ ಮುದ್ದಿನಿಂದಾಗಿ ಅವನು ಸೋಮಾರಿಯಾಗಿ ಬೆಳೆದಿದ್ದ.ಆರು ವರ್ಷದ ನಂತರ ಹುಟ್ಟಿದ ಮಗಳನ್ನು ಕೂಡ ಮುದ್ದಾಗಿ ಬೆಳೆಸಿದರೂ ಮಗನಷ್ಟಲ್ಲ.ಅದಕ್ಕೇನೇ ಆವಾಗಾವಾಗ ” ನಿನ್ನ ಮಗ” ಎಂದು ಗಂಡ ಹೇಳುವಾಗ ಸಿಟ್ಟು ಬರುವುದು ಹರಿಣಿಗೆ. **”****** ನಾಳೆಯ ಸ್ವಾತಂತ್ರ್ಯ ದಿನಾಚರಣೆಗೆ ಸ್ಟೇಜ್ ಪ್ರ್ಯಾಕ್ಟೀಸ್ ಮಾಡಿಸುತ್ತಿರುವಾಗ  ಓಡೋಡಿ ಬಂದ ಆಯಾ ಹರಿಣಿ ಗೆ ಫೋನ್ ಕೊಟ್ಟು,  “ನಾಲ್ಕೈದು ಸಲ ನಿಮ್ಮತ್ತೆ ಫೋನ್ ಮಾಡಿದ್ರಂತ ಗೀತಾ ಮೇಡಂ ನಿಮ್ಮತ್ತೆ ಜತೆ ಮಾತಾಡಿದ್ರಂತೆ. ಏನೋ ಅರ್ಜೆಂಟಂತೆ, ನೀವು ಈವಾಗ್ಲೇ ಫೋನ್ ಮಾಡ್ಬೇಕಂತೆ” ಅಂದಳು. ಹರಿಣಿಗೆ ಭಯದಿಂದ ಎದೆ ಧಸಕ್ಕೆಂದಿತು!! ಗಂಡ ಕೂಡ ಇಲ್ಲಿಲ್ಲವಲ್ಲ ಅಂದುಕೊಳ್ಳುತ್ತಾ ಫೋನ್ ಮಾಡಿದಾಗ , ಮಾತಾಡಿದ್ದು ಪಕ್ಕದ ಮನೆಯ ಸೋಮು ಅಂಕಲ್. ” ನಿನ್ನ ಮಾವನಿಗೆ ಆಗಾಗ ಆಗೋವಂತೆ  ಶುಗರ್ ಜಾಸ್ತಿಯಾಗಿ ತಲೆಸುತ್ತು ಬರ್ತಿದೆ, ಜೊತೆಗೆ ವಿಪರೀತ ಸುಸ್ತು. ಗಾಬ್ರಿ ಮಾಡ್ಕೊಳ್ದೆ ಆರಾಮವಾಗಿ ಸ್ಕೂಟರ್ ನಲ್ಲಿ ಬಾಮ್ಮ ನೀನು. ನಾವಿದ್ದೀವಲ್ಲಾ ಇಲ್ಲಿ” ಅಂದಾಗ ಅವರ ಕಾಳಜಿಯ ಮಾತಿಗೆ ಹರಿಣಿಯ ಕಣ್ಣು ತುಂಬಿ ಬಂತು! ಮಾವನದೇ ವಯಸ್ಸಿನವರಾದರೂ ಆರೋಗ್ಯದ ಬಗ್ಗೆ ಎಷ್ಟು ಗಮನಕೊಡುತ್ತಾರೆ ಅವರು!!  “ಅರ್ಧ ಗಂಟೆಯಲ್ಲಿ ಅಲ್ಲಿರ್ತೇನೆ ಅಂಕಲ್” ಎಂದು ಫೋನಿಟ್ಟಳು. ಶಾಲೆಯ ಸಮಯ ಮುಗಿದಿದ್ದರಿಂದ ಸೀದಾ ಮನೆಗೆ ಬಂದು , ಅತ್ತೆ ಮಾವನನ್ನು ಆಸ್ಪತ್ರೆಗೆ ಕರೆದೊಯ್ದಳು. ಇವರ ಕತೆ ಮೊದಲೇ ಗೊತ್ತಿದ್ದ ಡಾಕ್ಟರ್, ಹರಿಣಿಯ ಅತ್ತೆ ಮಾವನ ಮೇಲೆ ಹರಿಹಾಯ್ದರು.” ಪ್ರತಿ ತಿಂಗಳೂ ಈ ತರ ಸಮಸ್ಯೆ ತಗೊಂಡು ಬರ್ತೀರಲ್ವಾ ನೀವು?ಸ್ವಲ್ಪ ನಾದ್ರೂ ಆರೋಗ್ಯದ ಕಡೆಗೆ ಗಮನ ಕೊಡಬಾರ್ದಾ? ಇವತ್ತು ಅಡ್ಮಿಟ್ ಮಾಡ್ಬೇಕಾಗತ್ತೆ ಇವ್ರನ್ನು” ಅಂದಾಗ ಹರಿಣಿ ಚಿಂತಾಕ್ರಾಂತಳಾದಳು. ನಾಳೆ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ನಿರ್ವಹಣೆ ವಹಿಸಿರುವ ತನಗೆ ರಜೆ ಸಿಗುವುದು ಸಾಧ್ಯವೇ ಇಲ್ಲ. ಏನಾದರೂ ಉಪಾಯ ಮಾಡೋಣ ಅಂದುಕೊಳ್ಳುತ್ತಾ ಕೌಂಟರ್ ಕಡೆಗೆ ನಡೆದಳು.       ಮಾವನನ್ನು ರೂಮಿಗೆ ಕರೆದೊಯ್ದು ಟ್ರೀಟ್ಮೆಂಟ್ ಶುರು ಮಾಡಿದ ನಂತರ ಮಗನಿಗೆ ಫೋನ್ ಮಾಡಿ ” ತಾತನನ್ನು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಮಾಡಿದ್ದಾರೆ. ಸ್ವಲ್ಪ ಹೊತ್ತಲ್ಲಿ ನೀನು ಇಲ್ಲಿಗೆ ಬಾ.ಇವತ್ತು ರಾತ್ರಿ ನೀನು ತಾತನ ಜೊತೆಗಿರು” ಅಂದಳು. ಮಗ ಅಚ್ಚರಿಯಿಂದ ” ನಾನಾ? ” ಎಂದಾಗ  , ” ಹೌದು ನೀನೇ. ನಂಗೆ ನಾಳೆ ಬೆಳಗ್ಗೆ ಆರು ಗಂಟೆಗೆ ಶಾಲೆಯಲ್ಲಿರ್ಬೇಕು.ರಾತ್ರಿ ಹೊತ್ತು ಅಜ್ಜಿ ಇಲ್ಲಿರೋದು ಸರಿಯಲ್ಲ. ಬೇಗ ಬಾ” ಅಂದಳು. ” ನೀನು ರಜೆ ಹಾಕಲ್ವಾ? ” ಎಂದು ಅಚ್ಚರಿಯಿಂದ ಕೇಳಿದ ಅತ್ತೆಗೆ ಶಾಂತವಾಗಿಯೇ ” ಈ ತರದ ಪರಿಸ್ಥಿತಿಯನ್ನು ನೀವಾಗೇ ತಂದುಕೊಂಡದ್ದಲ್ವಾ ಅತ್ತೆ? ನಾನು ಎಷ್ಟಂತ ರಜೆ ಹಾಕ್ಲಿ? ಮಕ್ಳು ಹೆಲ್ಪ್ ಮಾಡ್ತಾರೆ ” ಅಂದಳು. ತಪ್ಪು ತಮ್ಮದಿರುವಾಗ ಸೊಸೆಯ ಹತ್ತಿರ ಮಾತನಾಡಿದರೆ ಕಷ್ಟ ಎಂದು ಅವರೂ ಸುಮ್ಮನಾದರು. ಮಗನನ್ನು ಮಾವನ ಬಳಿ ಬಿಟ್ಟು ಅತ್ತೆಯ ಜೊತೆ ಹರಿಣಿ ಮನೆಗೆ ಹೋದಳು. ಟಿವಿ ನೋಡುತ್ತಾ ಕುಳಿತ ಮಗಳನ್ನು ಕರೆದು,  “ನಾನು ನಾಳೆ ಶಾಲೆಗೆ ಹೋಗುತ್ತೇನೆ. ನೀನು ಕ್ಯಾಬ್ ಬುಕ್ ಮಾಡಿ ಅಜ್ಜಿಯ ಜೊತೆ ಆಸ್ಪತ್ರೆಗೆ ಹೋಗು” ಅಂದಳು. ” ನಾನಾ?” ಎಂದು ಪ್ರಶ್ನಿಸಿದ ಮಗಳಿಗೆ , ” ಹೌದು ನೀನೇ. ನಾಳೆ ಬೆಳಗ್ಗೆ ಬೇಗ ಎದ್ದು ಅಜ್ಜಿಗೆ ಅಡುಗೆಮನೆಯಲ್ಲಿ ಹೆಲ್ಪ್ ಮಾಡು” ಎಂದು ಹೇಳುತ್ತಾ ನಾಳೆಯ ಕಾರ್ಯಕ್ರಮಕ್ಕೆ ಬೇಕಾದ ತಯಾರಿಗೆ ತೊಡಗಿದಳು. ********* ಮಾರನೇ ದಿನ ಬೆಳಗ್ಗೆ ಶಾಲೆಗೆ ಹೊರಟ ಹರಿಣಿಗೆ ಈ ಸೂರ್ಯೋದಯ ಹೊಸತೆಂಬಂತೆ ಕಂಡಿತು.ಮಗನಿಗೆ ಫೋನ್ ಮಾಡಿದಾಗ ಮಾವ ಚೇತರಿಸುತ್ತಿದ್ದಾರೆಂದು ಕೇಳಿ ಇನ್ನಷ್ಟು ಸಮಾಧಾನವಾಯಿತು. ಶಾಲೆಯ ಕಾರ್ಯಕ್ರಮ ಸುಸೂತ್ರವಾಗಿ ನಡೆದು ಊಟಕ್ಕೆ ಕುಳಿತು, ಧಾತ್ರಿಗೆ ಮನೆಯ ಕತೆ ಹೇಳಿದಾಗ ಅವಳಿಗೆ ಅಚ್ಚರಿಯೋ ಅಚ್ಚರಿ!! ಅವಳು  “ನಿಜಾನಾ ? ನಂಬಕ್ಕಾಗ್ತಿಲ್ಲ ನಂಗೆ!!!” ಎಂದು ಕೇಳಿದಾಗ ಹರಿಣಿ ನಗುತ್ತಾ  “ಹೌದಮ್ಮಾ..ಜವಾಬ್ದಾರಿ ಯನ್ನು ನಾವಾಗೇ ವಹಿಸಿಕೊಡೋವರ್ಗೂ ಎಲ್ರೂ ಸುಮ್ನಿರ್ತಾರೆ. ಇದೊಂದು ಪಾಠ, ಕಲ್ತು ಕೋ ” ಅಂದಳು. *************************************

ಧೃಡ ಚಿತ್ತ Read Post »

ಕಥಾಗುಚ್ಛ

ಮನಸೆಂಬ ಮರ್ಕಟ

ಕಥೆ ಮನಸೆಂಬ ಮರ್ಕಟ ವಾಣಿ ಸುರೇಶ್ ಕೆ. ಸ್ಕೂಟರ್ ಕೀ , ಬ್ಯಾಗನ್ನು ತೆಗೆದುಕೊಂಡು ಧಾತ್ರಿ ಟಿವಿ ನೋಡುತ್ತಿದ್ದ ಮಗಳು, ಪೇಪರ್ ಓದುತ್ತಿದ್ದ ಗಂಡ, ತಿಂಡಿ ತಿನ್ನುತ್ತಿದ್ದ ಅತ್ತೆಗೆ ಕೇಳಿಸುವಂತೆ ಜೋರಾಗಿ , ” ಇನ್ನು ಮುಂದೆ ನಾನು ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲ್ಲ ಅಂತ ಡಿಸೈಡ್ ಮಾಡಿದ್ದೇನೆ.ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು  ಪಾಲಿಸಿದರೆ , ನನಗೂ ಆ್ಯಂಗ್ಸೈಟಿ, ಮೈಗ್ರೇನ್‌ ಕಡಿಮೆಯಾಗತ್ತೆ. ಸಣ್ಣಪುಟ್ಟ ವಿಷಯಕ್ಕೆ ನನಗೆ ಮೆಸೇಜ್ ಮಾಡೋದು, ಫೋನ್ ಮಾಡೋದು ಮಾಡ್ಬೇಡಿ. ಫೋನನ್ನು ಸೈಲೆಂಟ್ ಮೋಡಲ್ಲಿ ಇಡ್ತಾ ಇದ್ದೇನೆ ನಾನು. ಬರ್ಲಾ, ಬೈ” ಎಂದು ಲಿಫ್ಟ್ ಹತ್ತಿದಳು.       ಸ್ಕೂಟರ್ ಓಡಿಸುತ್ತಿರುವಾಗ ಇವತ್ತು ಮೈ ಮನಸ್ಸು ಹಗುರವಾದಂತೆ ಅನಿಸಿತು ಧಾತ್ರಿಗೆ. ಗೆಳತಿ ಹರಿಣಿ ಹೇಳಿದ್ದು ಎಷ್ಟು ನಿಜ! ತರಗತಿಯಲ್ಲಿ ಪಾಠ ಮಾಡುವಾಗಲೂ ಬರುವ ಮೆಸೇಜ್ ಮತ್ತು ಕಾಲ್ ಗಳು ತಲೆ ಚಿಟ್ಟು ಹಿಡಿಸುತ್ತಿದ್ದವು. ಬ್ಯಾಂಕ್ ಸ್ಟೇಟ್ ಮೆಂಟ್ ತಗೊಂಡು ಬಾ ಇವತ್ತೇ ಲಾಸ್ಟ್ ಡೇಟು ಅನ್ನುವ ಗಂಡ, ದೇವಸ್ಥಾನಕ್ಕೆ ಹೋಗ್ಬೇಕು ಮನೆ ಕೀ ಕಾಣಿಸ್ತಿಲ್ಲ ಅನ್ನೋ ಅತ್ತೆ, ಯಾವತ್ತೋ ಕೊಟ್ಟ ಪ್ರಾಜೆಕ್ಟ್ ವರ್ಕ್ ಮಾಡದೆ ,ಟೀಚರ್ ಕೈಯಲ್ಲಿ ಪನಿಷ್ಮೆಂಟ್ ತಗೊಂಡು ‘ ಇವತ್ತೇ ತಗೊಂಡು ಬಾ’ ಅಂತ ಮಗಳು ಕಳಿಸಿದ ಮೆಟೀರಿಯಲ್ಸ್ ಲಿಸ್ಟ್…. ಇವೆಲ್ಲಾ ಒಂದೊಂದು ಉದಾಹರಣೆ ಅಷ್ಟೇ. ನಾನು ಮಾಡಿದ್ದು ಜಾಸ್ತಿ ಆಯಿತು, ಇನ್ನು ಮುಂದೆ ಮೂವರೂ ಸ್ವಲ್ಪವಾದರೂ ಜವಾಬ್ದಾರಿ ವಹಿಸಿಕೊಳ್ಳಲಿಅಂದುಕೊಳ್ಳುತ್ತಾ ಶಾಲೆ ತಲುಪಿದಳು.      ಧಾತ್ರಿ ಮತ್ತು ಹರಿಣಿ ಹೇಗೆ ಗೆಳತಿಯರಾದರು ಎನ್ನುವುದೇ ಎಲ್ಲರ ಮಿಲಿಯನ್ ಡಾಲರ್ ಪ್ರಶ್ನೆ!! ಧಾತ್ರಿ ಮಿತಭಾಷಿಯಾದರೆ, ಹರಿಣಿಯದ್ದು ಮಲೆನಾಡಿನ ಮಳೆಯಂಥ ಮಾತು.ಕೇಳುವ ಎರಡು ಕಿವಿಗಳಿದ್ದರೆ ಸಾಕು ಹರಿಣಿಗೆ, ಮತ್ತೇನೂ ಬೇಕಿಲ್ಲ.ಅದಕ್ಕೇನೇ ಪಾಪದ ಧಾತ್ರಿಯ ಗೆಳೆತನ ಮಾಡಿದ್ದಾಳೆ ಎಂದು ಎಲ್ಲರ ಅಭಿಪ್ರಾಯ.    ಇವತ್ತು ಫಸ್ಟ್ ಪೀರಿಯಡ್ ಫ್ರೀ ಇದ್ದುದರಿಂದ ಇವರಿಬ್ಬರೂ ಸ್ಟಾಫ್ ರೂಮಿನಲ್ಲಿದ್ದರು. ಹರಿಣಿ ಅಸಹನೆಯಿಂದ ವಾಟ್ಸಾಪ್ ನಲ್ಲಿ ಮೆಸೇಜ್ ಟೈಪ್ ಮಾಡುತ್ತಿದ್ದನ್ನು ನೋಡಿ ಧಾತ್ರಿ ನೋಟ್ ಬುಕ್ ತಿದ್ದುತ್ತಾ ಕುಳಿತಳು. ಮೆಸೇಜ್ ಕಳಿಸಿ ಧಾತ್ರಿ ಕಡೆಗೆ ತಿರುಗಿದ ಹರಿಣಿ ಮಾತಿಗೆ ಶುರು ಹಚ್ಚಿದಳು ” ನೋಡು, ನನ್ನ ಮಗಳದು ಒಂದು ವಾರದಿಂದ ಒಂದೇ ಹಠ, ನೆಟ್ ಫ್ಲಿಕ್ಸ್ ಬೇಕಂತ. ಈವಾಗ ಸೆಕೆಂಡ್ ಪಿಯುಸಿ ಅವಳು. ಹಾಳುಮೂಳು ಸೀರೀಸ್ ನೋಡಿ ಕೂತ್ರೆ ಓದೋದು ಯಾವಾಗ? ಅವಳ ಅಪ್ಪನೂ ಅವಳ್ಗೇ ಸಪೋರ್ಟು. ಏನು ಬೇಕಾದ್ರೂ ಮಾಡ್ಕೊಳ್ಳಿ ಅಂತ ಗಂಡಂಗೆ ಮೆಸೇಜ್ ಹಾಕ್ದೆ.ತಲೆ ಕೆಟ್ಟು ಹೋಗ್ತಿದೆ ನಂದು” ಧಾತ್ರಿಗೆ ಏನು ಹೇಳಬೇಕೆಂದು ತೋಚಲಿಲ್ಲ.ಅಷ್ಟರಲ್ಲಿ ಹರಿಣಿಗೊಂದು ಕಾಲ್ ಬಂತು.” ಯಾವ ಟೀ ಶರ್ಟ್? ಬ್ಲ್ಯಾಕ್ ಕಲರ್ ಯೂ.ಎಸ್ ಪೋಲೋ ನಾ? ಮೊನ್ನೆ ಇಸ್ತ್ರಿಗೆ ಕೊಟ್ಟು ನಿನ್ನ ಕಪಾಟಿನಲ್ಲಿ ಇಟ್ಟಿದ್ದೇನೆ ನೋಡು.” ಕಾಲ್ ಕಟ್ ಮಾಡಿ ಪುನಃ ಧಾತ್ರಿ ಕಡೆಗೆ ತಿರುಗಿ, ” ಇವತ್ತು ಫೈನಲ್ ಇಯರ್ ಬಿ.ಇ. ಯವರೆಲ್ಲಾ ಸೇರಿ ಪಾರ್ಟಿ ಮಾಡ್ತಾ ಇದ್ದಾರಂತೆ. ಈ ಮಹಾರಾಯ ಈವಾಗ ಎದ್ದು ಶರ್ಟು ಕಾಣಿಸ್ತಿಲ್ಲ ಅಂತೆ! ಇವರಿಗೆಲ್ಲಾ ಕೈ ಕಾಲ ಹತ್ತಿರ ಕೆಲಸ ಮಾಡಿಕೊಟ್ಟು ಅಭ್ಯಾಸ ಆಗಿಹೋಗಿದೆ.ತಲೆ ಕೆಟ್ಟು ಹೋಗ್ತಿದೆ ನಂದು!” ಅಂದಳು. ಧಾತ್ರಿ ಹೇಗೋ ಕಷ್ಟ ಪಟ್ಟು ನಗು ತಡೆದುಕೊಂಡಳು.       ಅಷ್ಟರಲ್ಲಿ ಹರಿಣಿಯ ಫೋನಿಗೆ ಠಣ್ ಅಂತ ಒಂದು ಮೆಸೇಜ್ ಬಂತು. ಧಾತ್ರಿ ನೋಟ್ಸ್ ತಿದ್ದುತ್ತಿದ್ದರೂ ಹರಿಣಿಯ ಟೈಪಿಂಗ್ ಸ್ಪೀಡ್ ನೋಡಿ ಏನೋ ಸೀರಿಯಸ್ ವಿಷಯ ಇರಬೇಕೆಂದುಕೊಂಡಳು.ಐದು ನಿಮಿಷ ಮಾತುಕತೆಯಾದ ಮೇಲೆ ಪುನಃ ಹರಿಣಿ ಇವಳ ಕಡೆ ತಿರುಗಿ , ” ನಿನ್ನೆ ನಮ್ಮನೆಯೋರು ಆಫೀಸ್ ನಿಂದ ಬರ್ತಾ ಜಲೇಬಿ ತಗೊಂಡು ಬಂದಿದ್ರು. ಮಾವ ಹೈ ಶುಗರ್ ಪೇಷಂಟ್ ಆದ್ರೂ ಎರಡು ಜಲೇಬಿ ತಿಂದ್ರು!! ಅದಕ್ಕೆ ನಮ್ಮತ್ತೆ ಸಪೋರ್ಟ್ ಬೇರೆ. ಇದನ್ನೇ ನನ್ನ ಓರಗಿತ್ತಿಗೆ ಹೇಳಿದ್ದು ಈವಾಗ.ಇವ್ರಿಗೆ ಹೆಲ್ತ್ ಅಪ್ಸೆಟ್ ಆದ್ರೆ ನಾನೇ ನೋಡಿಕೊಳ್ಬೇಕು ತಾನೇ? ನಂಗಂತೂ ತಲೆ ಕೆಟ್ಟು ಹೋಗ್ತಿದೆ ಕಣೇ.”      ಈವಾಗ ಧಾತ್ರಿ ಜೋರಾಗಿ ನಕ್ಕಳು! ಆಶ್ಚರ್ಯದಿಂದ ನೋಡುತ್ತಿದ್ದ ಹರಿಣಿಗೆ, ” ನಿನ್ನೆ ನೀನು ನನಗೆ ಒಂದು ದೊಡ್ಡ ಭಾಷಣ ಮಾಡ್ದೆ, ನಾವು ಯಾರ ಬಗ್ಗೆಯೂ ತಲೆಕೆಡಿಸಿ ಕೊಳ್ಳಬಾರದು ಅಂತ.ಇವತ್ತು ನೀನು ಮಾಡ್ತಿರೋದು ಏನು?” ಎಂದು ಕೇಳಿದಳು. ಹರಿಣಿ  “ಇನ್ನೇನು ಮಾಡ್ಲಿ ನಾನು?” ಅನ್ನುವಷ್ಟರಲ್ಲಿ ಬೆಲ್ ಹೊಡೆಯಿತು. ಮುಂದಿನ ಕ್ಲಾಸಿಗೆ ಬೇಕಾದ ಪುಸ್ತಕ ತೆಗೆದುಕೊಂಡು ಹೊರಟ ಧಾತ್ರಿಗೆ ಹರಿಣಿ, ” ನೀನು ಇವತ್ತು ಮೊಬೈಲ್ ತರಲಿಲ್ವಾ?” ಎಂದು ಕೇಳಿದಳು. ” ತಂದಿದ್ದೇನೆ. ಆದ್ರೆ ನಿನ್ನ ಭಾಷಣದಿಂದ ಪ್ರಭಾವಿತಳಾಗಿ ಸೈಲೆಂಟ್ ಮೋಡ್ ನಲ್ಲಿಟ್ಟಿದ್ದೇನೆ.” ಎಂದು ನಗುತ್ತಾ ತರಗತಿಯ ಕಡೆಗೆ ಹೊರಟಳು. ” ಅಂತೂ ಒಬ್ಬರಾದ್ರೂ ನನ್ನ ಮಾತಿಗೆ ಬೆಲೆ ಕೊಟ್ರಲ್ಲಾ ” ಎಂದು ಗೊಣಗುತ್ತಾ ಹರಿಣಿಯೂ ಹಿಂಬಾಲಿಸಿದಳು. *******************************************

ಮನಸೆಂಬ ಮರ್ಕಟ Read Post »

ಕಥಾಗುಚ್ಛ

ಸ್ವಾಭಿಮಾನಿ

ಪುಟ್ಟ ಕಥೆ ಸ್ವಾಭಿಮಾನಿ ಮಾಧುರಿ ಕೃಷ್ಣ ಸಂಬಂಧಿ ಮಹಿಳೆ…ಹನ್ನೆರಡಕ್ಕೆ ಮದುವೆಯಾಗಿತ್ತು. ಎಲ್ಲರೂ ಮೊದಲ ಮಗುವಿನ ಬರವಿನಲ್ಲಿದ್ದರೆ ಅಪ್ಪನಾಗುವವನು ಮಾಯ ! ಕಷ್ಟಪಟ್ಟು ಹುಡುಕಿ ಹುಡುಕಿ ಕರೆ ತರುತ್ತಿದ್ದರು.ಮೂರು ಮಕ್ಕಳಾದ ಮೇಲೆ ತಿಳಿವು ಬಂದದ್ದು ಇನ್ನೂ ಇಪ್ಪತ್ತರ ಗಡಿಯಲ್ಲೇ ಇದ್ದ ಯುವತಿ ಹೆಂಡತಿಗೆ. ಬಗಲಲ್ಲೆರಡು ಸೀರೆ ತುರುಕಿಕೊಂಡು ಕಾದೇ ಕಾದಳು. ಐದು ತಿಂಗಳ ಮೊಲೆಹಾಲು ಕುಡಿಯುತ್ತಿದ್ದ ಮಗುವನ್ನು ಕೆಳಗಿಳಿಸಿ ಸದ್ದಿಲ್ಲದೆ ಅಪರರಾತ್ರಿಯಲ್ಲಿ ಗಂಡನ ಹಿಂದೆ ಹೋದಳು.ಟಿಕೇಟು ಕೇಳಿದಾಗ ಮುಂದೆ ಮುದುಡಿ ಕುಳಿತ ಗಂಡನೆಡೆ ಕೈ ಮಾಡಿದಳು. ದೂರದ ತಮಿಳುನಾಡಿನಲ್ಲಿ ರೈಲಿಳಿದಾಗ ಗಂಡನನ್ನು ಗಲ್ಲಾದಲ್ಲಿ ಕೂರಿಸಿ ತಾನು ಕಾಫಿ ತಿಂಡಿ ಊಟ ತಯಾರಿಸುತ್ತ ಮೂರು ವರ್ಷಗಳ ಮೇಲೆ ಮಕ್ಕಳನ್ನು ಕರೆಸಿ ಕೊಂಡಳು. ಕೆಲವೇ ವರ್ಷಗಳಲ್ಲಿ ಒಬ್ಬ ಮಗ ಹೋಟೆಲ್ ಉದ್ಯಮಿ ಇನ್ನೊಬ್ಬ ಡಾಕ್ಟರ್ ,ಮತ್ತೊಬ್ಬ ಆಡಿಟರ್ …ಕೊನೆಯವಳಾಗಿ ಹುಟ್ಟಿದ ಮಗಳು ಕಾಲೇಜು ಪ್ರಾಧ್ಯಾಪಕಿ….. ಮನೆಯಲ್ಲಿ ಲಕ್ಷ್ಮಿ ಕಾಲು ಮುರಿದು ಕೊಂಡು ಬಿದ್ದಿದ್ದಾಳೆ. ತೊಂಭತ್ತರಲ್ಲಿರುವ ಆ ವೃದ್ಧೆ ಸ್ವಾಭಿಮಾನಿಯಾಗಿಯೇ ಉಳಿದಿದ್ದಾಳೆ. ಮಠವೊಂದರ ಲಿಫ್ಟ್ ನಲ್ಲಿ ಹತ್ತಿ ಮೇಲೇರಲು ಕೈ ಆಸರೆ ಸ್ವೀಕರಿಸಿದವಳು ಲಿಫ್ಟ್ ಐದನೇ ಮಹಡಿಯಲ್ಲಿ ನಿಂತ ಕ್ಷಣವೇ ಕೊಡವಿಕೊಂಡು ಊದಿಕೊಂಡಿದ್ದರೂ ಸ್ವಂತ ಕಾಲುಗಳಿಂದಲೇ ಮುಂದೆ ಮುಂದೆ ನಡೆದದ್ದು ಅಚ್ಚರಿ ಅಭಿಮಾನದಿಂದ ನೋಡುತ್ತಲೇ ಆಕೆಯ ಹಿಂದೆ ದೇವತಾಕಾರ್ಯ ನಡೆಯುವಲ್ಲಿಗೆ ನಾನೂ ಒಳ ಹೊಕ್ಕೆ. ಸಂಗಾತಿ. ಕಾಮ್ ನಲ್ಲಿ ಕವಯಿತ್ರಿ ವಿಶಾಲಾ ಆರಾಧ್ಯರ ‘ಬುದ್ಧನೊಂದಿಗೊಂದು ದಿನ’ ಕವಿತೆ ಓದಿದೆ…ಯಾರೂ ಕೇಳದೊಂದು ಪ್ರಶ್ನೆ ಅವರು ಗೌತಮ ಬುದ್ಧನಿಗೆ ಕೇಳಿದ್ದರು…’ ಆ ರಾತ್ರಿ ಯಶೋಧರೆಯೂ ನಿನ್ನನ್ನು  ಹಿಂಬಾಲಿಸಿ ಬಂದಿದ್ದರೆ ಏನಾಗುತಿತ್ತು ?.’ಏನೂ ಆಗಬಹುತಿತ್ತಲ್ಲವೇ ,ನನ್ನ ಕಣ್ಮುಂದೆ ಈ ಸಂಬಂಧಿ ಬಂದೇ ಬಂದು ನಿಂತಳು. ***************************************************

ಸ್ವಾಭಿಮಾನಿ Read Post »

ಕಥಾಗುಚ್ಛ

ವಿಭ್ರಮ

ಕಥೆ ವಿಭ್ರಮ ಮಧುರಾ   ಕರ್ಣಮ್ “ಚರಿ, ಇಪ್ಪ ಎನ್ನ ಪಣ್ಣಣು?” ಎಂದು  ದುಗುಡ ತುಂಬಿದ ಮುಖದಿಂದ ಕೇಳಿದಳು ಆಂಡಾಳು. “ಏನ್ಮಾಡೋದು? ಇದ್ದುದನ್ನು ಇದ್ದ ಹಾಗೇ ಪ್ರಾಮಾಣಿಕವಾಗಿ ನಿಜ ಹೇಳಿಬಿಡೋದು. ನಮ್ಮ ಮನಸ್ಸಿಗಾದ್ರೂ ನೆಮ್ಮದಿ ಇರುತ್ತೆ. ಎಷ್ಟು ದಿನಾಂತ ಸುಳ್ಳು ಪಳ್ಳು ಹೇಳಿ ಮುಚ್ಚಿಟ್ಕೊಳ್ಳೋಕಾಗುತ್ತೆ?” ಎಂದರು ವರದರಾಜ ಐಯ್ಯಂಗರ‍್ರು. “ಗುರುವಾಯೂರಪ್ಪಾ, ನಾನು ನಿಮ್ಮನ್ ಕೇಳ್ತಿದೀನಲ್ಲ, ನನಗೆ ಬುದ್ಧಿ ಇಲ್ಲ.” ಎಂದು ಕೂಗುತ್ತ ಒಳಗೋಡಿದಳು ಆಂಡಾಳು. ಅವಳಿಗೆ ಸಮಸ್ಯೆ ಎಲ್ಲರಿಗೂ ಗೊತ್ತಾಗುವದು ಬೇಡವಾಗಿತ್ತು. ಹಾವೂ ಸಾಯದಂತೆ ಕೋಲೂ ಮುರಿಯದಂತೆ ಮಧ್ಯದ ದಾರಿ ಹುಡುಕಬೇಕಾಗಿತ್ತು. ಐಯ್ಯಂಗಾರ‍್ರದೋ..ನೇರ ನಡೆ. ಸುಳ್ಳು ಅವರ ಜಾಯಮಾನದಲ್ಲೇ ಇಲ್ಲ.             ಅವರ ಮನೆಯಲ್ಲಿ ಈ ವಾಗ್ಯುದ್ಧ ಆರಂಭವಾಗಿ ತಿಂಗಳುಗಳೇ ಕಳೆದಿದ್ದವು. ಪರಿಹಾರ ಕಂಡಿರಲಿಲ್ಲ. ಕಾಣುವುದು ಅಷ್ಟು ಸುಲಭವೂ ಆಗಿರಲಿಲ್ಲ. ಇಷ್ಟು ದಿನ ನಿತ್ಯವೂ ಬಿಡದೆ ಗುರುವಾಯೂರಪ್ಪನ ದೇವಸ್ಥಾನಕ್ಕೆ ಹೋಗಿ ತಲೆ ಬಾಗದೇ ತುತ್ತು ಬಾಯಿಗಿಟ್ಟವರಲ್ಲ. ಅದರ ಫಲವೋ ಎಂಬಂತೆ ಒಬ್ಬನೇ ಮಗ ವೇಲು ಎಲ್ಲಾ ಪರೀಕ್ಷೆಗಳನ್ನೂ ಉತ್ತಮ ಅಂಕಗಳೊಂದಿಗೆ ಪಾಸು ಮಾಡಿದ್ದ. ಎಂಜಿನಿಯರಿಂಗ್ ಮುಗಿದು ಕ್ಯಾಂಪಸ್ ಸೆಲೆಕ್ಷನ್ ಕೂಡ ಆಗಿತ್ತು. ತಂದೆ ತಾಯಿಗಳ ಮುಖದಲ್ಲಿ ಸಂತೋಷ ಉಕ್ಕಿ ಹರಿದಿತ್ತು. ಆದರೆ ವೇಲು ಮುಂದೆ ಓದಲು ಉತ್ಸುಕನಾಗಿದ್ದ. ಜಿ.ಆರ್.ಇ. ಟೋಫೆಲ್ ಪರೀಕ್ಷೆಯಲ್ಲೂ ಒಳ್ಳೆ ಅಂಕಗಳನ್ನು ಗಳಿಸಿದ. ತಂದೆ ತಾಯಿಗಳ ಕಾಲಿಗೆ ಬಿದ್ದು ಸ್ಕಾಲರ್‌ಶಿಪ್‌ನೊಂದಿಗೆ ಎಜುಕೇಷನ್ ಲೋನೂ ತೆಗೆದುಕೊಂಡು ಅಮೆರಿಕಕ್ಕೆ ರವಾನೆಯಾದ. ಅಲ್ಲಿಂದಲೇ ಆಂಡಾಳುವಿಗೆ ವಿಭ್ರಮ ಆರಂಭವಾಗಿದ್ದು. ಸಂತಸ, ದು:ಖ ಎರಡೂ ಮೇಳೈಸಿದ ಸ್ಥಿತಿ. ಮಗ ಯಶಸ್ವಿಯಾಗಿ ಮುಂದುವರೆಯುತ್ತಿದ್ದಾನೆಂದು ಆನಂದಿಸಬೇಕೆಂದುಕೊಂಡವಳಿಗೆ ಮಗನನ್ನು ಅಗಲಿ ಇರಬೇಕೆನ್ನುವ ದು:ಖ. ಆದರೆ ಅದು  ತಾತ್ಕಾಲಿಕವಲ್ಲವೇ? ತಾನೇ ಸಂತೈಸಿಕೊಂಡಳು.              ವೇಲು ಎಂ.ಎಸ್. ಮುಗಿಸಿ ಅಲ್ಲೇ ಕೆಲಸಕ್ಕೆ ಸೇರಿದ. ಸಾಫ್ಟವೇರ್ ಉದ್ಯೋಗ. ಬದುಕು ಹಾರ್ಡೇ. ಎಜುಕೇಷನ್ ಲೋನ್ ತೀರಿಸಬೇಡವೇ? ಆದರೆ ಕೈತುಂಬ ಸಂಬಳ. ‘ಮೂರ‍್ನಾಲ್ಕು ವರ್ಷಗಳಲ್ಲಿ ಎಲ್ಲ ತೀರಿಸಿ ಬಂದ್ಬಿಡ್ತೀನಿ’ ಎಂದು ಭರವಸೆ ನೀಡಿದ. ಎರಡು ದಿನಕ್ಕೊಂದು ಬಾರಿಯಾದರೂ ಫೋನು. ಮಗನೊಡನೆ ಮಾತು, ಹರಟೆ, ನಗು ಎಲ್ಲವೂ ಸರಿಯಾಗಿತ್ತು. ತಂದೆ ತಾಯಿಗಳಿಬ್ಬರೂ ಅಮೆರಿಕಕ್ಕೆ ಬರಬೇಕೆಂದು ಅವನ ಆಸೆ .‘ನಮ್ಮ ಆಚಾರ,ವಿಚಾರಗಳು ಅಲ್ಲಿ ನಡೆಯುವದಿಲ್ಲ. ಬೇಡ.’ ಎಂಬ ಮಾತು ನಡೆಯಲಿಲ್ಲ. ಅವನ ಒತ್ತಾಯಕ್ಕೆ ಮಣಿದು ಹೋಗಿ ಆರು ತಿಂಗಳಿದ್ದು ಅವನಿಗೆ ಪೊಂಗಲ್, ಪುಳಿಯೋಗರೆ ಮಾಡಿ ಬಡಿಸಿ, ಮಾಡಲು ಕಲಿಸಿ ನಯಾಗರ ಜಲಪಾತ ನೋಡಿಕೊಂಡು ಬಂದದ್ದಾಯಿತು. ಬರುವಾಗ ಆಂಡಾಳು ಮೆಲ್ಲನೆ “ಒಂದು ತಿಂಗಳಾದ್ರೂ ರಜ ತೆಗೆದುಕೊಂಡು ಬಾ. ಹುಡುಗಿ ನೋಡಿಟ್ಟಿರ್ತೀನಿ. ಬಂದು ನೋಡಿ ನಿನಗಿಷ್ಟವಾದ ಹುಡುಗೀನ ಮದುವೆ ಮಾಡ್ಕೊಂಡು ಹೋಗು. ಅಂದ್ರೆ ನಮಗೆ ನಿಶ್ಚಿಂತೆ. ನಿನಗೆಷ್ಟು ದಿನ ಬೇಕೋ ಇಲ್ಲಿದ್ದುಕೊಂಡು ಸಾಕೆನಿಸಿದಾಗ ಬಾ”ಎಂದಳು.             ಅಷ್ಟೇ ಮೆತ್ತಗಿನ ಧ್ವನಿಯಲ್ಲಿ ಮಗರಾಯ “ಮಮ್ಮೀ, ಮದುವೇಂದ್ರೆ…ಇಲ್ಲಿ ನಾನೊಂದು ಹುಡುಗೀನ ಇಷ್ಟಪಟ್ಟಿದೀನಿ. ನೀನು ಬೇಜಾರು ಮಾಡ್ಕೋತೀಯಾಂತ ಮೊದಲೇ ಹೇಳಿರಲಿಲ್ಲ. ಮಿನಿ ನನ್ನ ಜೊತೆ ನಮ್ಮಾಫೀಸಿನಲ್ಲೇ ಕೆಲಸ ಮಾಡುತ್ತಾಳೆ. ದೆಹಲಿಯವಳು. ತುಂಬಾ ಜಾಣೆ. ನಮ್ಮಿಬ್ಬರ ಐಡಿಯಾಲಜಿ ಒಂದೇ ರೀತಿ ಇದೆ. ಆದರೆ ಮದುವೆ ಬಗ್ಗೆ ನಾವಿನ್ನೂ ಯೋಚಿಸಿಲ್ಲ. ಸದ್ಯಕ್ಕೆ ಒಳ್ಳೆ ಫ್ರೆಂಡ್ಸ ಅಷ್ಟೇ.” ಎಂದು ಶಾಕ್ ನೀಡಿದ್ದ.             ಆಂಡಾಳು ಒಂದು ಕ್ಷಣ ಗರ ಬಡಿದವರಂತೆ ನಿಂತಿದ್ದವಳು ಸಾವರಿಸಿಕೊಂಡು ಕಣ್ತುಂಬಿಕೊಂಡಳು. “ಅವಳು ನಿನಗಷ್ಟೇ ಹೆಂಡತಿಯಾಗ್ತಾಳೇ ಹೊರತು ನಮಗೆ ಸೊಸೆಯಾಗ್ತಾಳೋ ಇಲ್ಲವೋ ಗೊತ್ತಿಲ್ಲ. ಎಷ್ಟೆಲ್ಲಾ ಆಸೆ ಇಟ್ಕೊಂಡಿದ್ದೆ. ಏನೆಲ್ಲಾ ಕನಸು ಕಟ್ಟಿದ್ದೆ? ಒಳ್ಳೇ ಐಯ್ಯಂಗಾರ್ ಹುಡುಗೀನೇ ತಂದು ಭರ್ಜರಿಯಾಗಿ ಮದುವೆ ಮಾಡಬೇಕು. ಗುರುವಾಯೂರಪ್ಪನ ದೇವಸ್ಥಾನದಲ್ಲಿ ಒಂಬತ್ತು ಮೊಳದ ಮಡಸಾಲು ಸೀರೆ ಉಡಿಸಿ, ನಿಮ್ಮಿಬ್ಬರ ಕೈಲಿ ಪೂಜೆ ಮಾಡಿಸಿ..  ಎಲ್ಲಾ ಅವನಿಚ್ಛೆ. ಈಗಲೂ ಕಾಲ ಮಿಂಚಿಲ್ಲ. ನಿನಗಿಷ್ಟವಾಗೋ ಐಯ್ಯಂಗಾರ‍್ರ ಹುಡುಗೀನೇ ಮದುವೆಯಾಗು. ನಮ್ಮ ಬಗ್ಗೆಯೂ ಯೋಚಿಸು ಕಣ್ಣಾ.” ಎಂದು ಹೇಳಲಷ್ಟೇ ಸಾಧ್ಯವಾಗಿತ್ತು. ದಂಪತಿಗಳಿಬ್ಬರೂ ವಿಷಣ್ಣವದನರಾಗೇ ತಿರುಗಿ  ಬಂದಿದ್ದರು.             ಆಕಾಶವೇ ತಲೆಮೇಲೆ ಬಿದ್ದಂತೆ ಕುಳಿತ ಹೆಂಡತಿಯನ್ನು ಐಯ್ಯಂಗಾರ‍್ರೇ ಸಮಾಧಾನಿಸಬೇಕಾಗಿ ಬಂತು. “ಏನೋ ಹರಯದ ಆಕರ್ಷಣೆ ಕಣೆ. ಈ ವಯಸ್ಸಿನಲ್ಲಿ ಇವೆಲ್ಲ ಸಹಜ ತಾನೇ. ಏನು ಬರುತ್ತೋ ಅದನ್ನ ಎದುರಿಸೋ ಧೈರ‍್ಯ, ಶಕ್ತಿ ಕೊಡೂಂತ ಗುರುವಾಯೂರಪ್ಪನಲ್ಲಿ ಬೇಡಿಕೊಳ್ಳೋಣ.” ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದ್ದರು. ಆಂಡಾಳು “ಇವನು ಜಾಣನಾಗಿರದೇ ಇದ್ರೇನೆ ಚೆನ್ನಾಗಿತ್ತು. ಏನೋ ಒದ್ಕೊಂಡು ಇಲ್ಲೇ ಕೆಲಸ ಮಾಡೋನು. ಒಳ್ಳೇ ಹುಡುಗಿ ನೋಡಿ ಮದುವೆ ಮಾಡಿ ಮೊಮ್ಮಕ್ಕಳನ್ನಾಡಿಸ್ಕೊಂಡು ಹಾಯಾಗಿ ಇರ್ತಾ ಇದ್ವಿ. ಇವನು ಸ್ಕಾಲರ್ ಆಗಿದ್ದೇ ನಮಗೆ ಕಷ್ಟವಾಯ್ತಾಂತ?” ಎಳೆಎಳೆಯಾಗಿ ನೋವು ಬಿಡಿಸಿಟ್ಟರು. ಐಯ್ಯಂಗರ‍್ರು “ಛೀ, ಬಿಡ್ತು ಅನ್ನು. ಅವರ ಏಳಿಗೆ ಮುಖ್ಯ ತಾನೇ. ನಮ್ಮ ಹಣೇಲಿ ಏನು ಬರ್ದಿದಾನೋ ಗುರುವಾಯೂರಪ್ಪ? ಸದ್ಯ, ಎಲ್ಲಾ ಚಿಂತೇನೂ ಅವನ ಮೇಲೆ ಹಾಕಿ ನಿಶ್ಚಿಂತರಾಗಿದ್ದು ಬಿಡೋಣ.” ಎಂದು ಸಂತೈಸಿದರು.             ದಿನಗಳು ಓಡುತ್ತಿದ್ದವು. ಪೊಂಗಲ್, ಆಡಿ ಶುಕ್ರವಾರ, ಜನ್ಮಾಷ್ಟಮಿ..  ಹೀಗೆ ಹಬ್ಬಗಳು, ಪೂಜೆಗಳು. ಮಡಸಾಲು ಸೀರೆಯುಟ್ಟು ಉದ್ದ ತಿಲಕವಿಟ್ಟ ಆಂಡಾಳು, ನಾಮ ತೀಡಿ ಮುಗುಟ ಉಟ್ಟ ಐಯ್ಯಂಗರ‍್ರ ಜೊತೆಯಲ್ಲಿ ನಿತ್ಯ ಬೆಳಿಗ್ಗೆ ಗುರುವಾಯೂರಪ್ಪನ ದೇವಸ್ಥಾನಕ್ಕೆ ಹೋಗುವದನ್ನು ತಪ್ಪಿಸಲಿಲ್ಲ. ಮುತ್ದೈದೆ  ಸಾವನ್ನೇ ಬಯಸುತ್ತ ಎದುರಿಗಿದ್ದ ಪಾರಿಜಾತ ವೃಕ್ಷದ ಹೂಗಳನ್ನಾಯ್ದು ನಿತ್ಯ ಸ್ವಾಮಿಗಿಟ್ಟು ಬೇಡಿಕೊಳ್ಳುವದನ್ನು ಮರೆಯಲಿಲ್ಲ. ಮೇಲುಕೋಟೆಯ ವೈರಮುಡಿ ಉತ್ಸವಕ್ಕೆ ಹೋಗಿ ತಲೆಬಾಗದೇ ಇರಲಿಲ್ಲ. ವೇಲು ಕೂಡ ವಾರಕ್ಕೆರಡು ಬಾರಿಯಾದರೂ ಫೋನು, ಚಾಟ್ ಮಾಡುವದನ್ನು ತಪ್ಪಿಸಲಿಲ್ಲ. ಗುರುವಾಯೂರಪ್ಪನೂ ಇವರನ್ನು ಕಡೆಗಣಿಸಲಿಲ್ಲ.             ಸಮಸ್ಯೆ ಚಿಕ್ಕದಾಗಿ ಕಾಣುವದು ಯಾವಾಗ? ಮೊದಲಿದ್ದ ಸಮಸ್ಯೆಗಿಂತ ದೊಡ್ಡದೇ ಎದುರಾದಾಗ. ಇಲ್ಲೂ ಹಾಗೇ ಆಯಿತು. ಒನ್ ಫೈನ್ ಡೇ ವೇಲು ತಾನು ಮಿನಿಯೊಂದಿಗೆ ‘ಲಿವಿಂಗ್ ಟುಗೆದರ್’ ಸಂಬಂಧ ಹೊಂದಿದ್ದೇನೆಂದು ಹೇಳಿದ. ದಂಪತಿಗಳಿಗೆ ಮತ್ತೊಂದು ಶಾಕ್. ‘ಕಲ್ಲಿಗಿಂತ ಇಟ್ಟಿಗೆಯೇ ಮೆದು’ ಎಂಬಂತೆ ಮದುವೆ ಇಲ್ಲದೇ ಒಟ್ಟಿಗೆ ಬಾಳುವುದಕ್ಕಿಂತ ‘ಮದುವೆಯಾದರೇ ಚೆನ್ನ’ ಎನಿಸಲಾರಂಭಿಸಿತು. ಇವರಿಗೆ ‘ಲಿವಿಂಗ್ ಟುಗೆದರ್’ ನ ಪರಿಕಲ್ಪನೆಯೇ ಭಯಾನಕ. ಭಾರತದಲ್ಲೂ ಆರಂಭವಾಗಿದ್ದರೂ ಚಿತ್ರತಾರೆಯರೂ, ಸೆಲಿಬ್ರಿಟಿಗಳಲ್ಲೇ ಹೆಚ್ಚಾಗಿತ್ತು. ಸಾಮಾನ್ಯರ ಮಟ್ಟಕ್ಕಿನ್ನೂ ದೂರವೇ. ಮಗನ ಜೊತೆ ಚರ್ಚೆ ಮಾಡಿ “ಮದುವೆ ಮಾಡಿಕೊಂಡು ಬಿಡಿ. ಇಲ್ಲವೇ ಇಲ್ಲಿ ಬನ್ನಿ. ನಾವೇ ಮಾಡುತ್ತೇವೆ.” ಎಂಬ ಆಯ್ಕೆಗಳನ್ನೂ ಕೊಟ್ಟರು.             ವೇಲು ಸ್ಪಷ್ಟವಾಗಿ “ನಿನಗೆ ಇಲ್ಲಿನ ಕಾನೂನು ಗೊತ್ತಿಲ್ಲ. ಮದುವೆ ಎಂಬ ಬಂಧನದ ನಂತರ ಸಂಬಂಧ ಸರಿಹೋಗದೇ ವಿಚ್ಛೇದನವಾದರೆ ಕಾಂಪನ್ಸೇಷನ್ ಕೊಡಲು ಜೀವಮಾನದಲ್ಲಿ ಕೂಡಿಟ್ಟದ್ದನ್ನೆಲ್ಲ ಸುರಿಯಬೇಕಾಗುತ್ತದೆ. ಬೀದಿಗೆ ಬಂದು ನಿಲ್ಲುತ್ತೇವೆ. ಆ ವಿಷಯದಲ್ಲಿ ಕಾನೂನು ತುಂಬ ಕಠಿಣ. ಅದಕ್ಕೆ ಇಲ್ಲಿ ಮದುವೆ ಇಲ್ಲದೇ ಒಟ್ಟಿಗೆ ವಾಸಿಸುವದು. ಅವಳಿಗೆ ಬೇಡವಾದರೆ ಅವಳು ‘ಬಾಯ್’ ಹೇಳಿ ಹೊರಡಬಹುದು. ನನಗೆ ಬೇಡವಾದರೆ ನಾನು ದೂರ ಹೋಗಬಹುದು. ಯಾವುದೇ ನಿರ್ಬಂಧವಿಲ್ಲ. ಈಗ ನನಗೆ ಕಂಪನಿ ಹೆಚ್ಚಿನ ಹೊಣೆ ಹೊರಿಸಿದೆ. ವಿಶೇಷ ತರಬೇತಿಗಾಗಿ ಜರ್ಮನಿಗೆ ಹೋಗಬೇಕು. ಮದುವೆಯ ಉರುಳಿಗೆ ಸಿಲುಕುವುದಿಲ್ಲ.”ಎಂದು ಖಡಾ ಖಂಡಿತವಾಗಿ ಹೇಳಿಬಿಟ್ಟ.             ಎಲ್ಲೋ ಬಂಡೆ ಬಿರುಕು ಬಿಟ್ಟ ಹಾಗೆ, ತಾವು ನಂಬಿಕೊಂಡು ಬಂದ ಮೌಲ್ಯಗಳು, ಸಂಬಂಧಗಳು ತಮ್ಮ ಮುಂದೆಯೇ ಜಾಳು ಜಾಳಾಗಿ ನೀರಲ್ಲಿ ಕರಗಿ ಹೋದಂತೆ ಭಾಸವಾಯಿತು ಇಬ್ಬರಿಗೂ. ಜನ್ಮ ಜನ್ಮಾಂತರದ ಸಂಬಂಧಕ್ಕೊಳಪಟ್ಟು ಇಬ್ಬರೂ ಹೊಂದಿಕೊಂಡು ಕಷ್ಟಸುಖಗಳಲ್ಲಿ ಸಮಭಾಗಿಯಾಗಿ ಒಬ್ಬರಿಗಾಗೇ ಇನ್ನೊಬ್ಬರು ಬಾಳುವ ಪರಿ ಎಲ್ಲಿ? ಬೇಕೆಂದಾಗ ಜೊತೆಗಿದ್ದು ಬೇಡವಾದಾಗ ದೂರವಾಗುವ ಬಗೆ ಎಲ್ಲಿ? ಅಜಗಜಾಂತರ. ಬೇಕೆಂದಾಗ ತೀಟೆ ತೀರಿಸಿಕೊಂಡು..  … ‘ಪಶುಸಮಾನ’ ಎನ್ನಿಸಿತು ಆಂಡಾಳುವಿಗಂತೂ. ಮಿನಿಯ ಜೊತೆ ಹರಕು ಮುರುಕು ಇಂಗ್ಲೀಷಿನಲ್ಲಿ ಹಿಂದಿ ಸೇರಿಸಿ ಮಾತನಾಡಿದಳು. “ಇಷ್ಟವಿದ್ದರೆ ಬೆಂಗಳೂರಿಗೆ ಬಂದು ಹಾಯಾಗಿರಬಹುದು.” ಎಂಬುದನ್ನು ಒತ್ತಿ ಹೇಳಿದಳು. “ಶಾದಿ ನೌ? ಬುಲ್‌ಶಿಟ್, ಹಮ್ ದೋನೋ ತೀನ ಚಾರ ಸಾಲ ತೊ ಸಾಥ ರೆಹಕೆ ದೋನೋಮೆ ಬನತಾ ಹೈ ಕ್ಯಾ ದೇಖತೆ ಹೈ. ಫಿರ್ ಶಾದಿ ಕೆ ಬಾರೆ ಮೆ ಸೋಚೇಂಗೆ( ಮದುವೆಯೇ? ಈಗಲೇ? ನಾವು ಮೂರ‍್ನಾಲ್ಕು ವರ್ಷಗಳಾದರೂ ಜೊತೆಗಿದ್ದು ಇಬ್ಬರ ಸ್ವಭಾವಗಳು ಹೊಂದಾಣಿಕೆಯಾಗುತ್ತವೋ ನೋಡುತ್ತೇವೆ. ನಂತರ ಮದುವೆಯ ಬಗ್ಗೆ ಯೋಚಿಸುತ್ತೇವೆ).” ಎಂದವಳು ಇವರನ್ನು ಪರಿಹಾಸ್ಯ ಮಾಡುತ್ತಲೇ ಫೋನಿಟ್ಟಳು.             ಎರಡನೇ ಸಮಸ್ಯೆಯೂ ಚಿಕ್ಕದಾಗುತ್ತ ಹೋಯಿತು. ವಾರಕ್ಕೊಮ್ಮೆಯಾದರೂ ವೇಲು ತಂದೆ, ತಾಯಿಗಳೊಂದಿಗೆ ಚಾಟ್ ಮಾಡುತ್ತಿದ್ದ. ಕೆಲವೊಮ್ಮೆ ಮಿನಿ ಕೂಡ ಮಾತನಾಡುತ್ತಿದ್ದಳು. ಎನೋ ಹೇಳಲಾಗದ ಬಂಧ ಮೆಲ್ಲನೆ ಬೆಸೆಯತ್ತಿತ್ತು. ಆಂಡಾಳ್ ‘ಪೊಂಗಲ್’ ಹಬ್ಬಕ್ಕೆ ರೇಷ್ಮೆ ಸೀರೆ ಕಳುಹಿಸಿದಳು. ಮಿನಿ ಅದನ್ನು ಸೊಟ್ಟ ಸೊಟ್ಟಗೇ ಉಟ್ಟು ವೆಬ್‌ಕ್ಯಾಮ್‌ನಲ್ಲಿ ಚಾಟ್ ಮಾಡುವಾಗಲೇ ತೋರಿಸಿದ್ದಳು. ‘ಎಲ್ಲ ಸರಿಯಾಗಿಲ್ಲ’ ಎಂಬ ವ್ಯಥೆಯೊಂದಿಗೆ ‘ಏನೋ ಒಂದು ನಡೆಯುತ್ತಿದೆ.’ ಎಂಬ ತುಸು ಸಮಾಧಾನ ಮಿಳಿತವಾಗಿ ಬದುಕು ಏರಿಳಿಯುತ್ತಿತ್ತು.             ಎರಡನೇ ಸಮಸ್ಯೆಯೂ ಕರಗಿ ಚಿಕ್ಕದಾಗಿದ್ದು ಮೂರನೇ ದೊಡ್ಡ ಸಮಸ್ಯೆ ಬಂದಾಗಲೇ. ಮಿನಿ ಮತ್ತು ವೇಲು ಬೆಂಗಳೂರಿಗೆ ಬರುವ ಯೋಚನೆ ಮಾಡಿದ್ದರು. “ಮಮ್ಮೀ, ಮಿನಿ ಸೌತ್ ಇಂಡಿಯಾನೇ ನೋಡಿಲ್ಲ. ಅವಳು ಹುಟ್ಟಿ ಬೆಳೆದಿದ್ದೆಲ್ಲ ಅಮೆರಿಕದಲ್ಲೇ. ಆಗಾಗ ದೆಹಲಿಗೆ ಹೋಗಿ ಬಂದು ಅಭ್ಯಾಸವಿದೆಯಷ್ಟೇ. ಇಬ್ಬರೂ ಜೊತೆಯಾಗಿ ಬಂದು ಎರಡು ತಿಂಗಳಿದ್ದು ಸೌತ್ ಇಂಡಿಯಾವನ್ನೆಲ್ಲ ಸುತ್ತಿ ಹೋಗುತ್ತೇವೆ.” ಎಂದಿದ್ದ ವೇಲು. ವಿಭ್ರಮ ಕಾಡಿತ್ತು ಆಂಡಾಳುವಿಗೆ. ಮಗ ಬರುತ್ತಾನೆಂದರೆ ಸಂತೋಷ. ಮಿನಿ ಬಂದರೂ ಸಂತಸವೇ. ಆದರೆ ಅವರ ಸಂಬಂಧದ ಬಗ್ಗೆ ಏನು ಹೇಳುವದು? ಗೆಳತಿಯೋ, ಪ್ರಿಯೆಯೋ, ಹೆಂಡತಿಯೋ..  ಅದೇ ಬೃಹತ್ ಸಮಸ್ಯೆಯಾಗಿಬಿಟ್ಟಿತು. ‘ಸೊಸೆ’ ಎನ್ನುವ ಹಾಗಿಲ್ಲ. ‘ಮಗನ ಸಹೋದ್ಯೋಗಿ, ಭಾರತ ನೋಡಲು ಬಂದಿದ್ದಾಳೆ’ ಎಂಬ ಹಸೀ ಸುಳ್ಳು ನಡೆಯಲ್ಲ. ಇಬ್ಬರೂ ಅಂಟಿಕೊಂಡೇ ಇರುವುದನ್ನು ನೋಡಿದರೆ ಯಾರಾದರೂ ಜೋಡಿ ಎಂದು ಹೇಳಿಯಾರು. ‘ಮಗನ ಗರ್ಲಫ್ರೆಂಡ್, ಜೊತೆ ಸಂಬಂಧ ಹೊಂದಿರುವವಳು’ ಎಂಬ ನಿಜವನ್ನು ಇಲ್ಲಿಯ ಸಮಾಜ ಅಷ್ಟು ಸುಲಭವಾಗಿ ಒಪ್ಪಲ್ಲ. ಹಾಗಿರುವಾಗ ನಿತ್ಯ ಹೋಗುವ ದೇವಸ್ಥಾನದಲ್ಲಿನ ಎಷ್ಟೊಂದು ಜನ ಗೆಳತಿಯರಿಗೆ ಏನು ಹೇಳಲಿ? ಸಂಜೆ ಹೋಗುವ ಪಾಠ, ಪ್ರವಚನಗಳಲ್ಲಿನ ಆತ್ಮೀಯರಿಗೆ ಏನು ಹೇಳಬೇಕು? ನೆರೆ ಹೊರೆ ಎಲ್ಲ ಏನು ತಿಳಿಯುತ್ತಾರೆ? ಏನೋ ಹೇಗೋ ಸುಧಾರಿಸಿಕೊಂಡು ಹೋಗಲು ಅದೇನು ಒಂದಿನವೇ? ಒಂದು ವಾರವೇ? ಎರಡು ತಿಂಗಳು, ಎಂದರೆ ಅರವತ್ತು ದಿನಗಳು.             ‘ಸೊಸೆ’ ಎನ್ನಲು ಮದುವೆ ಮಾಡಿಲ್ಲ. ಪಾಯಸದೂಟ ಹಾಕಿಲ್ಲ. ಹೋಗಲಿ, ‘ಅಲ್ಲೇ ಮದುವೆಯಾಗಿದ್ದಾರೆ’ಎಂದರೆ ಮಗ, ಮಿನಿ ಒಪ್ಪಬೇಕಲ್ಲ. ಕೊರಳಲ್ಲಿ ತಾಳಿ, ಹಣೆಯಲ್ಲಿ ಕುಂಕುಮ, ಸಿಂಧೂರ ಯಾವುದೂ ಇಲ್ಲ. “ಹೇಗೂ ಬಂದಿರುತ್ತೀರಿ. ಇಲ್ಲೇ ಮದುವೆ ಮಾಡಿ ಬಿಡುತ್ತೇವೆ.”ಎಂದಿದ್ದು ಇಬ್ಬರಿಗೂ ರುಚಿಸಿರಲಿಲ್ಲ. “ನಮಗೀಗ ಆ ಯೋಚನೆಯೇ ಇಲ್ಲ.” ಎಂದಿದ್ದರು. ಅವರು ಬರುವದು ಇನ್ನೂ ಐದು ತಿಂಗಳಿತ್ತು. ಐಯ್ಯಂಗಾರ್ ದಂಪತಿಗಳು ನಿತ್ಯ ಕುಲುಮೆಯಲ್ಲಿ ಬೇಯುತ್ತಿದ್ದರು. ಎರಡು ಸಂಸ್ಕೃತಿಗಳ ನಡುವಿನ ಅಂತರ ಏನೆಲ್ಲಾ ಪೀಕಲಾಟಗಳನ್ನು ಸೃಷ್ಟಿಸಬಲ್ಲುದು ಎಂಬ ಅರಿವಾಗಿತ್ತು ಅವರಿಗೆ. ಗುರುವಾಯೂರಪ್ಪನಿಗೂ ಇವರ ಕಷ್ಟ ಗೊತ್ತು. ಆದರೂ ಸುಮ್ಮನೆ ಮಂದಹಾಸ ಬೀರುತ್ತಿದ್ದ.             ಮೂರನೇ ಸಮಸ್ಯೆಗೆ ಹೊಂದಿಕೊಳ್ಳುವಷ್ಟರಲ್ಲಿ ನಾಲ್ಕನೇ ಸಮಸ್ಯೆ ಬಾಯಿ ತೆರೆದು ಕೂತಿತ್ತು. ವೇಲು ತಾವು ಬರುವ ದಿನಾಂಕವನ್ನು ನಿಶ್ಚಿತವಾಗಿ ತಿಳಿಸಿದ. ಜೊತೆಗೆ “ಮಮ್ಮಿ, ಮಿನಿ ಈಗ ಮೂರು ತಿಂಗಳ ಗರ್ಭಿಣಿ. ಅಲ್ಲಿಗೆ ಬರುವಾಗ ಫೋರ್ ಮಂತ್ಸ್ ಆಗಿರುತ್ತೆ. ವಿಶೇಷ ಆರೈಕೆ ಬೇಕಾಗಬಹುದು”ಎಂದ. ಮತ್ತದೇ ವಿಭ್ರಮ ಆಂಡಾಳ್‌ಗೆ. ಮೊಮ್ಮಗುವಿನ ಬರುವಿಕೆ ಸಂತಸ ತಂದರೂ ನಲಿಯಲಾಗುತ್ತಿಲ್ಲ. ದು:ಖಪಡಲೂ ಆಗುತ್ತಿಲ್ಲ. “ಈಗಲಾದರೂ ಮದುವೆಯಾಗಿ.” ಎಂದು ದಂಪತಿಗಳಿಬ್ಬರೂ

ವಿಭ್ರಮ Read Post »

ಕಥಾಗುಚ್ಛ

ಬದಲಾವಣೆ

ಕಥೆ ವಿಜಯಶ್ರೀ ಹಾಲಾಡಿಯವರ ಹೊಸ ಕತೆ ಬದಲಾವಣೆ ಕುದಿಸಿ ಆರಿಸಿದ ನೀರಿಗೆ ತಂಪಿನ ಬೀಜವನ್ನು ಹಾಕಿ ರುಚಿಗೊಂಚೂರು ಬೆಲ್ಲ ಸೇರಿಸಿ ಚಮಚದಲ್ಲಿ ಕಲಕುತ್ತ ಕುಳಿತಿದ್ದಾಳೆ ಜುಬೇದಾ. ಫ್ಯಾನ್ ತಿರುಗುತ್ತಿದ್ದರೂ ಸೆಖೆಯೇನೂ ಕಮ್ಮಿಯಿಲ್ಲ, ಅಲ್ಲದೇ ಫ್ಯಾನಿಂದ ಬರುವುದೂ ಬಿಸಿಗಾಳಿಯೇ: ಏನೂ ಸುಖವಿಲ್ಲ. “ನೀನು ಕೆಲಸ ಎಂತ ಮಾಡುವುದು ಬೇಡ, ಸುಮ್ಮನೇ ರೆಸ್ಟ್ ತಕೋ. ಹೊತ್ತುಹೊತ್ತಿಗೆ ಸರಿಯಾಗಿ ತಿನ್ನು. ಪುನಃ ಆಸ್ಪತ್ರೆ ಸೇರಿದರೆ ನನ್ನಿಂದಾಗಲಿಕ್ಕಿಲ್ಲ” ಬೆಳಿಗ್ಗೆ ಅಂಗಡಿಗೆ ಹೋಗುವ ಮುಂಚೆ ಎಚ್ಚರಿಸಿ ಹೋಗಿದ್ದಾನೆ ರಹೀಮ. ಅದಲ್ಲದೆ “ಉಮ್ಮ, ನೀವು ಪೂರ್ತಿ ಗುಣವಾಗುವವರೆಗೆ ನಾನು ಕಾಲೇಜಿಂದ ಇಲ್ಲಿಗೇ ಬರುತ್ತೇನೆ. ಮತ್ತೆ ಅಕ್ಷಯನ ಹತ್ತಿರ ಹೋಗಬೇಕು ನಾನು. ಪಾಪ ಅಲ್ಲಿ ಅವನು ಒಬ್ಬನೇ ಆಗಿದ್ದಾನೆ” ಅನ್ವರ ಹೇಳಿದ್ದು ನೆನಪಾದಾಗ ಕಣ್ಣೀರು ಬರುವಂತಾಗಿ ತಟಕ್ಕನೇ ತಡೆಯಲು ಯತ್ನಿಸಿದಳು. “ಆಗದ್ದು ಹೋಗದ್ದು ಎಲ್ಲ ಯೋಚನೆ ಮಾಡುತ್ತ ಕುಳಿತದ್ದಕ್ಕೇ ಹುಷಾರಿಲ್ಲದೆ ಆಗುವುದು ನಿನಗೆ. ಸ್ವಲ್ಪ ನೆಮ್ಮದಿಯಾಗಿ ಇರು ನೋಡುವಾ ಮನೆಯಲ್ಲಿ” ಮೂರು ದಿನ ಆಸ್ಪತ್ರೆಯಲ್ಲಿದ್ದು ಡಿಸ್ಚರ್ಜ್ ಆಗಿ ಮನೆಗೆ ಬಂದ ಕೂಡಲೇ ರಹೀಮ ಹೇಳಿದ ಮಾತು. ತಾನೇನು ಬೇಕಂತ ಮಾಡಿಕೊಂಡಿದ್ದೇನ ಇದೆಲ್ಲ: ಹುಷಾರಿಲ್ಲದೆ ಹಾಸಿಗೆ ಹಿಡಿಯುವುದು ಯಾರಿಗಾದರೂ ಆಸೆಯಾ? “ಕರಾವಳಿಯ ಹವೆ ನಿಮಗೆ ಹಿಡಿಯುವುದಿಲ್ಲ ಅಮ್ಮ” ಅಂತ ಡಾಕ್ಟರ್ ಹೇಳಲಿಲ್ಲವಾ? ಮೊನ್ನೆ ಸ್ವಲ್ಪ ಟೆನ್ಷನ್ ಮಾಡಿಕೊಂಡದ್ದು ಹೌದು. ನಿಂತ ನೆಲವೇ ಕುಸಿದು ಬೀಳುತ್ತದೆ ಅನ್ನುವಾಗ ಯಾರಿಗಾದರೂ ಯೋಚನೆಯಾಗುವುದಿಲ್ಲವಾ? ಅನ್ವರ ಕೂಡಾ ಮನೆಬಿಟ್ಟು ಹೋಗಿದ್ದಾನೆ. ಹೊರಗಡೆ ಒಂದು ತರಕಾರಿ ತಕೊಳ್ಳುವ ಅಂತ ಹೋದರೂ ನಮ್ಮಂತವರ ಕಿವಿಗೆ ಬೀಳಬೇಕೆಂದೇ ಕೆಲವು ನಂಜಿನ ನಾಲಗೆಯವರು ಹೇಳುವುದು ಕೇಳುತ್ತದೆ. “ಈ ಸಾಯ್ಬರನ್ನೆಲ್ಲ ಪಾಕಿಸ್ತಾನಕ್ಕೆ ಓಡಿಸಬೇಕು ಮೊದಲು. ಆಗ ಎಲ್ಲವೂ ಸರಿಯಾಗುತ್ತದೆ” ಯಾ ಅಲ್ಲಾಹ್! ಎಂತಾ ಮಾತು! ನಾವು ಹೋಗುವುದಾದರೂ ಎಲ್ಲಿಗಂತ ಬೇಕಲ್ಲಾ. ಯಾವ ಕಾಲದಿಂದಲೂ ಇಲ್ಲಿಯೇ ಇದ್ದವರಲ್ವಾ ನಾವು…. ಈಗ ಹೋಗಿ, ಹೋಗಿ ಅಂತ ಹಂಗಿಸಿದರೆ….ಅದೂ ಅಲ್ಲದೆ ಆರಕ್ಕೇರದ ಮೂರಕ್ಕಿಳಿಯದ ನಮ್ಮಂತವರೆಲ್ಲ ಎಲ್ಲಿಗೋ ಹೋಗಿ ಹೇಗೆ ಬದುಕುವುದು? ದೊಡ್ಡ ದೊಡ್ಡ ದುಡ್ಡಿನವರಾದರೂ ಎದ್ದುಕೊಂಡು ಎಲ್ಲಿಗಾದರೂ ಹೋಗಿ ಜೀವನ ತೆಗೆದಾರು. ಛೇ, ಮೊದಲೆಲ್ಲ ಹೀಗಿರಲಿಲ್ಲಪ್ಪ. ನಾವೇ ಎಲ್ಲದರಲ್ಲೂ ತಗ್ಗಿ ನಡೆಯುತ್ತಿದ್ದುದು ಹೌದು: ಆದರೆ ಇಷ್ಟೆಲ್ಲ ಭಂಗ ಇರಲಿಲ್ಲ. ಈಗ ಸುಮಾರು ಆರೇಳು ವರ್ಷದಿಂದ ನಿಧಾನಕ್ಕೆ ಕುದಿಯುತ್ತಾ ಬಂದಿದೆ ವಾತಾವರಣ: ಈಗಂತೂ  ಸಿಡಿದೇ ಬಿಟ್ಟಿದೆ. ಮುಂದೆ ಹೇಗೋ ಏನೋ… ಯಾರಿಗೆ ಗೊತ್ತು!          ಒಂದೆರಡು ಹಣ್ಣಿನ ಹೋಳು, ಹಿಡಿ ಗಂಜಿ ತಿಂದು ರೂಮಿಗೆ ಬಂದು ಕುಳಿತಳು ಜುಬೇದಾ. ನಿಶ್ಶಕ್ತಿ ಕಮ್ಮಿಯಾಗಲು ಇನ್ನೊಂದು ವಾರವಾದರೂ ಬೇಕು. ಅದಲ್ಲದೆ ತಲೆತಿರುಗಿ ಬಿದ್ದು ಮಂಡೆ ಮಂಚಕ್ಕೆ ಜಪ್ಪಿ ಆದ ಗಾಯದ ನೋವು ಬೇರೆ. ಇತ್ತೀಚೆಗೆ ಸುಮಾರು ಸಮಯವಾಗಿತ್ತು ಸರಿಯಾಗಿ ಊಟವೇ ಸೇರದೆ. ಯಾವುದೂ ಬೇಡ ಅಂತಾಗಿದೆ ಅವಳಿಗೆ. ಟಿ.ವಿಯಲ್ಲಿ ತೋರಿಸುವ ವಿಧ ವಿಧ ವಾರ್ತೆಗಳು ಸುಮ್ಮನೇ ತಲೆಬಿಸಿ ಮಾಡುತ್ತವೆ. ‘ಪೌರತ್ವ ತಿದ್ದುಪಡಿ ಕಾಯ್ದೆ ಬರುತ್ತದೆ’ ಅಂತ ಆವತ್ತಿಂದ ಹೇಳುತ್ತಲೇ ಇದ್ದಾರೆ. ಅನ್ವರ, ಅಕ್ಷಯ ಕೂಡಾ ಇದನ್ನು ಮಾತಾಡುತ್ತಿದ್ದರು. ಆದರೆ ಟಿ.ವಿಯವರ ಬೊಬ್ಬೆ ಯಾವಾಗಲೂ ಇದ್ದದ್ದೇ. ಸತ್ಯ ಹೇಳುತ್ತಾರ, ಸುಳ್ಳು ಹೇಳುತ್ತಾರ ಒಂದೂ ತಿಳಿಯುವುದಿಲ್ಲ. ಈಗೀಗ ಅವರು ಸತ್ಯವೇ ತೋರಿಸಿದರೂ ನಮಗೆ ಸಂಶಯ ಬರುತ್ತದೆ. ಮನೆಕೆಲಸ ಮುಗಿದ ನಂತರ ವಾಟ್ಸಪ್ ನೋಡುವುದುಂಟು ಅವಳು. ಆದರೆ “ಅದರಲ್ಲಿ ಬರುವುದನ್ನೆಲ್ಲ ನಂಬಬೇಡಿ ಉಮ್ಮಾ, ಅಲ್ಲೂ ಹೆಚ್ಚಿನವೆಲ್ಲ ಸುಳ್ಳೇ ಇರುವುದು” ಅಂತ ಪದೇ ಪದೇ ಎಚ್ಚರಿಸುತ್ತಾನೆ ಅನ್ವರ. ಅದೂ ನಿಜವೇ, ಈಗೀಗಂತೂ ಅವರನ್ನು ಇವರು ಬಯ್ಯುವುದು, ಇವರನ್ನು ಅವರು ಬಯ್ಯುವುದು…ಇದೇ ಆಯಿತು ಜನಗಳದ್ದು. ಮೊನ್ನೆ ಒಂದು ಮೆಸೆಜ್ ಹಾಕಿದ್ದರು ಯಾರೋ “ಮುಸ್ಲಿಮರು ಜಾತ್ರೆಯಲ್ಲಿ ಮಜ್ಜಿಗೆ ವ್ಯವಸ್ಥೆ ಮಾಡಿದ್ದಾರೆ, ಅದನ್ನು ಕುಡಿಯಬೇಡಿ. ಮಕ್ಕಳಾಗದ ಹಾಗೆ ಔಷಧ ಹಾಕಿರುತ್ತಾರೆ ಅದರಲ್ಲಿ. ಅವರು ಕೊಟ್ಟದ್ದು ಏನೂ ತಿನ್ನಬೇಡಿ”. ಯಾ ಅಲ್ಲಾ! ಒಂದು ಒಳ್ಳೆಯ ಕೆಲಸವನ್ನೂ ಜನರು ಹೀಗೆ ಮಾತಾಡುತ್ತಾರೆಂದರೆ! ಇನ್ನೊಬ್ಬರು ವಾಟ್ಸಪ್ಪಲ್ಲಿ ಬಣ್ಣ ಬಣ್ಣ ಚಿತ್ರದೊಟ್ಟಿಗೆ ಹಾಕುವುದು…” ಮುಸ್ಲಿಮರ ಅಂಗಡಿಗಳಿಗೆ ಹೋಗಬೇಡಿ. ಅವರಿಗೆ ಯಾಕೆ ವ್ಯಾಪಾರ ಮಾಡಿಕೊಡುತ್ತೀರಿ? ಹಿಂದೂಗಳ ಅಂಗಡಿಯಲ್ಲೇ ಎಲ್ಲವನ್ನೂ ಖರೀದಿಸಿ. ಯಾರ್ಯಾರದ್ದೋ ಹೊಟ್ಟೆ ತುಂಬಿಸಿದ್ದು ಸಾಕು ನಾವು”. ಇಷ್ಟು ದ್ವೇಷ ಯಾಕೆ ಜನರಿಗೆ ಅಂತ ಅರ್ಥ ಆಗುವುದಿಲ್ಲ. ರಹೀಮನೂ ಹೇಳುತ್ತಿರುತ್ತಾನೆ “ಈಗ ವ್ಯಾಪಾರ ಪೂರಾ ಡಲ್” ಅಂತ. ಹೋಗಲಿ, ವ್ಯಾಪಾರದ ಮನೆ ಹಾಳಾಗಿ ಹೋಗಲಿ ಅನ್ನುವ ಅಂದರೆ ನೆರೆಕರೆ ಮನುಷ್ಯರ ಪ್ರೀತಿ, ವಿಶ್ವಾಸವೂ ರಂಪವಾಗಿ ಹೋಯಿತಲ್ಲ..ಜಾಹ್ನವಿ ಸರಿಯಾಗಿ ಮುಖ ನೋಡಿ ಮಾತಾಡಿ ಯಾವ ಕಾಲವಾಯಿತು!     ಎರಡು ತಿಂಗಳ ಹಿಂದೆ ನಡೆದದ್ದು ಈಗ ಎಣಿಸಿದರೂ ಮೈ ಕೊಡಕುತ್ತದೆ ಜುಬೇದಾಳಿಗೆ. ‘ಪೌರತ್ವ ತಿದ್ದುಪಡಿ ಕಾಯ್ದೆ’ ಬಂದರೆ ಭಾರೀ ಕಷ್ಟವಾಗುತ್ತದೆ. ತುಂಬಾ ದಾಖಲೆ ಕೇಳುತ್ತಾರೆ. ನಾವು ಹುಟ್ಟಿದ ಪ್ರಮಾಣ ಪತ್ರದಿಂದ ಹಿಡಿದು ನಮ್ಮ ಅಪ್ಪ ಅಮ್ಮನ ಹುಟ್ಟಿನ ದಾಖಲೆಯೂ ಬೇಕಾಗುತ್ತದೆ, ಆ ಸರ್ಟಿಫಿಕೇಟ್ ಎಲ್ಲ ಎಲ್ಲಿದೆ ನಮ್ಮ ಹತ್ತಿರ? ತೊಂದರೆಯಾಗಲಿಕ್ಕುಂಟು ಮುಂದೆ” ಎಂಬಂತಹ ಭಾಷಣಗಳು ಕಾಯ್ದೆಯ ವಿರುದ್ದ ಪ್ರತಿಭಟನೆಗಳು ಎಲ್ಲ ಆಯಿತು. ಆವತ್ತು ಭಾಬಿ ದೂರದ ದೆಹಲಿಯಿಂದ ಫೋನ್ ಮಾಡಿದ್ದರು. “ಜುಬೇದಾ, ಇಲ್ಲಿ ಬೆಳಗಾದರೆ ಹೇಗೋ ಏನೋ ಅಂಬಂತಹಾ ದಿನಗಳು ಬಂದಿವೆ. ಯೂನಿವರ್ಸಿಟಿಯಲ್ಲಿ ಓದುವ ಪಾಪದ ವಿದ್ಯಾರ್ಥಿಗಳಿಗೂ ಬಡಿದಿದ್ದಾರೆ. ನಿಮ್ಮಲ್ಲೂ ಶುರುವಾಗಬಹುದು, ನೀವಿರುವ ಪ್ರದೇಶ ಭಾರಿ ಸೂಕ್ಷ್ಮ  ಅಲ್ಲವಾ..ಜಾಗ್ರತೆಯಾಗಿರಿ”. ಆದರೆ ಕಡೆಗೆ ಅದದ್ದೇನು? ಇಷ್ಟೆಲ್ಲ ಹೇಳಿದ ಬಾಬಿಯ ಕಾಕನ ಮಗ ಅಶ್ರಫನೇ ಗೋಲಿಬಾರಿನಲ್ಲಿ ಪೋಲೀಸರ ಗುಂಡಿಗೆ ಸತ್ತುಹೋದ. ಜಿಲ್ಲಾ ಕೇಂದ್ರ ಇರುವುದು ನಮ್ಮಲ್ಲಿಂದ ಮೂವತ್ತು ಕಿಲೋಮೀಟರ್ ದೂರದಲ್ಲಿ. ಮೊದಲೇ ಕೋಮುಗಲಭೆಯ ಬಿಸಿಯಲ್ಲೇ ಇರುವ ಜಾಗ. ಈಗಂತೂ ಕೆಂಜಿರುವೆ ಕೊಟ್ಟೆಗೆ ಕಲ್ಲು ಹಾಕಿದ ಹಾಗಾಯ್ತು. ಬಾಬಿ ಫೋನ್ ಮಾಡಿದ ವಾರದೊಳಗೇ ಹೀಗೆಲ್ಲ ಆಯ್ತು. ಇಡೀ ಪೇಟೆಯೇ ಒಂದು ವಾರ ಬಂದಾಗಿ ಹೋಯ್ತು. ಜನರು ಹೆದರಿ ಮನೆ ಹೊರಗೆ ಕಾಲು ಹಾಕಲಿಲ್ಲ. ಅಶ್ರಫ್ ಮೂರು ಜನ ತಂಗಿಯರ ಮದುವೆ ಜವಾಬ್ದಾರಿ ಹೊತ್ತಿದ್ದ ಬೇಟಾ. ಅವನ ಉಮ್ಮ, ಬಾಪ್ಪರಿಗೆ ಪ್ರಾಯ ಆಗಿದೆ, ಆರೋಗ್ಯವೂ ಒಳ್ಳೆದಿಲ್ಲ…ಯಾವ ಕೆಲಸವೂ ಅವರಿಂದ ಸಾಗುವುದಿಲ್ಲ. ವಿಷಯ ಕೇಳಿದ ದಿನ ಬಾಬಿ ತುಂಬಾ ಅತ್ತರು. “ಎಳೆಮಕ್ಕಳು ಹೀಗೆ ಸತ್ತರೆ ನೋಡಿಕೊಂಡು ಇರುವುದು ಹೇಗೆ ನಾವು, ಇದು ದೊಡ್ಡ ಅನ್ಯಾಯ. ಪಾಪದವರನ್ನು ಕೇಳುವವರು ಯಾರೂ ಇಲ್ಲವಾ ಹಾಗಾದರೆ” ಅಂತ. ಅಶ್ರಫನ ಅಪ್ಪ ಅಮ್ಮನಂತೂ ಹೆದರಿಹೋಗಿದ್ದರಂತೆ. ” ಇನ್ನು ನಾವಿಲ್ಲಿ ಇರುವುದಿಲ್ಲ, ನೀನೇ ಕರೆದುಕೊಂಡು ಹೋಗು. ಅಲ್ಲೇ ದೆಹಲಿಯಲ್ಲೇ ರಸ್ತೆ ಬದಿ ಯಾವುದಾದರೂ ವ್ಯಾಪಾರ ಮಾಡಿಕೊಂಡು ಗಂಜಿಯಾದರೂ ತಿನ್ನುತ್ತೇವೆ. ನಮ್ಮ ಬೇಟನನ್ನು ಕೊಂದ ಈ ಊರು ನಮಗೆ ಬೇಡ” ಎಂದು ಹಟ ಹಿಡಿದು ಕೂತರಂತೆ. ಕಡೆಗೆ ಬಾಬ್ಬಿಯೇ ಅವರ ಸಂಸಾರವನ್ನು ದಿಲ್ಲಿಗೆ ಕರೆದೊಯ್ದರು….ಛೇ ಮೂರ್ನಾಲ್ಕು ತಿಂಗಳಲ್ಲಿ ಪರಿಸ್ಥಿತಿಯೇ ಬದಲಾಗಿಹೋಯಿತು. ಆ ದಿನ ಅನ್ವರ, ಅಕ್ಷಯ ಇಬ್ಬರೂ ಹೊರಟಿದ್ದರು ಅಶ್ರಫನ ಕೊನೆ ಮುಖ ನೋಡಲಿಕ್ಕೆ. ಆದರೆ ಅಕ್ಷಯನ ಅಮ್ಮ ಜಾಹ್ನವಿ ಅವನು ಹೋಗುವುದು ಬೇಡ ಎಂದು ತಡೆದರಂತೆ. “ಆಂಟೀ ಮೊದಲಾಗಿದ್ದರೆ ನೀವಾದರೂ ಒಂದು ಮಾತು ಹೇಳಿ ಅನ್ನಬಹುದಿತ್ತು. ಈಗ ನಿಮ್ಮಲ್ಲಿ ಮಾತೇ ಆಡುವುದಿಲ್ಲವಲ್ಲ ಅಮ್ಮ, ಏನಾಗಿದೆಯೋ ಗೊತ್ತಾಗುತ್ತಿಲ್ಲ ಅವರಿಗೆ. ಹೇಳಿಕೊಟ್ಟವರ ಮಾತು ಕೇಳಿ ಹೀಗಾದದ್ದು ನನ್ನಮ್ಮ” ಅಕ್ಷಯ ಸಿಟ್ಟಿನಲ್ಲಿ ಹೇಳಿದ್ದ. ಹೌದು, ಜಾಹ್ನವಿ ಯಾಕೆ ಹೀಗಾದರು? ಮೊದಲೆಲ್ಲ ಎರಡು ಮನೆಗಳ ನಡುವೆ ಕಂಪೌಂಡೇ ಇಲ್ಲ ಎಂಬ ಭಾವನೆ ಬರುತ್ತಿತ್ತು. ಈಗ ತಲೆಯೆತ್ತಿ ಅವರ ಮನೆ ಬಾಗಿಲು ದಿಟ್ಟಿಸಲೂ ಒಂತರಾ ಆಗುತ್ತದೆ. ಮನಸ್ಸಲ್ಲಿ ಇಷ್ಟೆಲ್ಲ ಯೋಚನೆಯಾದರೂ “ಹೋಗಲಿ ಮಗಾ, ಪಾಪ ಜಾಹ್ನವಿಯಕ್ಕ ಕೆಟ್ಟವರೇನಲ್ಲ, ಯಾಕೊ ಈಗೀಗ ನಮ್ಮನ್ನು ಕಂಡರೆ ಬೇಸರ ಅವರಿಗೆ. ನಾವು ಯಾರಿಗೂ ಬೇಡದವರಲ್ವಾ, ಅದಕ್ಕೇ ಹಾಗೆ” ಅಂದಿದ್ದಳು. “ನೀವು ತಲೆಬಿಸಿ ಮಾಡಬೇಡಿ ಆಂಟಿ. ಅಮ್ಮನನ್ನು ನಾನು ಸರಿಮಾಡುತ್ತೇನೆ. ನೀವು ಆರಾಮಿರಿ” ಎಷ್ಟು ಒಳ್ಳೆಯ ಹುಡುಗ ಅಕ್ಷಯ! ಅನ್ವರನ ಹಾಗೇ ಅವನನ್ನೂ ಮಗನಂತೆಯೇ ನೋಡಿಕೊಂಡದ್ದಲ್ವಾ ಸಣ್ಣದಿರುವಾಗ..ಆಗ ಕಾಲವೇ ಬೇರೆಯಿತ್ತು. ಜಾಹ್ನವಿಯಾಗಲಿ, ಅವರ ಗಂಡ ಸುರೇಶಣ್ಣನಾಗಲೀ ‘ಇವರು ಯಾರೋ ಮೂರನೆಯವರು’ ಅಂತ ತಮ್ಮನ್ನು ಕಂಡದ್ದೇ ಇಲ್ಲ. ನಮ್ಮ ಜುಬೇದಾ, ನಮ್ಮ ರಹೀಮ, ನಮ್ಮ ಅನ್ವರ್ ಎಂಬ ಮಾತೇ ಬರುತ್ತಿದ್ದುದು ಅವರ ಬಾಯಿಂದ. ಸುರೇಶಣ್ಣ ಹೆಚ್ಚುಕಮ್ಮಿ ಮೊದಲಿನ ಹಾಗೇ ಇದ್ದಾರೆ.  ಆದರೆ ಹೆಂಡತಿಯ ಮಾತು ಮೀರಲು ಆಗುವುದಿಲ್ಲ ಕಾಣುತ್ತದೆ ಅವರಿಗೆ. ಜಾಹ್ನವಿ ದೀದಿಗೆ ಬ್ಯಾಂಕಿನಲ್ಲಿ ಕೆಲಸವಾದರೆ, ಸುರೇಶಣ್ಣಂಗೆ ಎಲ್ ಐ ಸಿಯಲ್ಲಿ. ಅಕ್ಷಯನಿಗೆ ಐದು ವರ್ಷವಾಗುವವರೆಗೆ ಸುರೇಶಣ್ಣನ ಅಮ್ಮ ಇದ್ದರು ಮಗನ ಜೊತೆಗೆ.. ಕಡೆಗೆ ” ಮಗು ಶಾಲೆಗೆ ಹೋಗಲು ಸುರುಮಾಡಿತಲ್ಲ, ನಾನು ಊರಿಗೆ ಹೋಗುತ್ತೇನೆ” ಎಂದು ಅವರು ಹೊರಟುಹೋದ ನಂತರ ಅಷ್ಟು ಸಣ್ಣ ಮಗುವನ್ನು ನೋಡಿಕೊಳ್ಳುವವರಿಲ್ಲದೆ ಜಾಹ್ನವಿ ಭಂಗ ಬರುತ್ತಿರುವಾಗ “ನೀವೇನೂ ಯೋಚನೆ ಮಾಡಬೇಡಿ ದೀದಿ, ನಾನು ನೋಡಿಕೊಳ್ಳುತ್ತೇನೆ” ಅಂದದ್ದು ತಾನು. ಹಾಗೆ ಅಕ್ಷಯ ಮತ್ತು ಅನ್ವರ ಒಟ್ಟಿಗೆ ಆಟವಾಡುತ್ತಾ ದೊಡ್ಡದಾದದ್ದಲ್ವಾ…ಪ್ರಾಯವೂ ಹೆಚ್ಚು ಕಮ್ಮಿ ಒಂದೇ. ಅಕ್ಷಯ ಒಂದು ವರ್ಷಕ್ಕೆ ದೊಡ್ಡವನು ಅಷ್ಟೇ. ಮಕ್ಕಳಿಗೆ ಹಗಲುಹೊತ್ತಿನ ಊಟ ತಿಂಡಿ ಎಲ್ಲ ತಮ್ಮ ಮನೆಯಲ್ಲೇ ಆಗುತ್ತಿತ್ತು. ರಾತ್ರಿ ಮಾತ್ರ ಬಿಸಿಬಿಸಿಯಾಗಿ ಮಾಡಿದ ಅಡುಗೆಯನ್ನು ಬುತ್ತಿಪಾತ್ರದಲ್ಲಿ ಹಾಕಿ ತಮಗೂ ತಂದುಕೊಟ್ಟರೇ ಸಮಾಧಾನ ಆಗುತ್ತಿದ್ದುದು ಜಾಹ್ನವಿಗೆ. “ಆ ಜಾತಿ ಈ ಜಾತಿ ಮಣ್ಣು ಮಸಿ ಎಲ್ಲ ಸುಮ್ಮನೇ ಜುಬೇದಕ್ಕಾ, ಮುಖ್ಯ ನಮ್ಮ ನೀತಿ ಸರಿಯಿರಬೇಕು’ ಎನ್ನುತ್ತಿದ್ದರಲ್ಲ ಜಾಹ್ನವಿ. ಸುರೇಶಣ್ಣನಂತೂ “ಜನಿವಾರ ಒಂದು ಎಲ್ಲೋ ಕಪಾಟಿನ ಮೂಲೆಯಲ್ಲಿರಬೇಕು. ಅಮ್ಮ ಬಂದಾಗ ಹಾಕಿಕೊಳ್ಳುವುದು: ಪಾಪ ಅವರಿಗೆ ಬೇಸರ ಆಗಬಾರದಲ್ವಾ. ಅವರು ಅತ್ತಮುಖ ಹೋದಕೂಡಲೇ ನನ್ನ ಜನಿವಾರದ ಸವಾರಿ ಕಪಾಟಿಗೆ ಓಡುತ್ತದೆ” ಹೇಳಿ ನಗಾಡಿದ್ದೆಷ್ಟು ಸಲ! ಹೀಗೇ ನಡೆಯುತ್ತಿತ್ತು ಎಲ್ಲ…ಆದರೆ ಇದೆಲ್ಲ ಹೇಗಾಯ್ತೋ ಗೊತ್ತಾಗುತ್ತಿಲ್ಲ. ಮೊದಮೊದಲು ಜಾಹ್ನವಿ ವ್ಯಂಗ್ಯ ಮಾಡುವುದು, ಸಿಟ್ಟು ತೋರಿಸುವುದು ಮಾಡತೊಡಗಿದರು. ಆಮೇಲಾಮೇಲೆ ಅವರ ಮನೆಗೆ ನಾವೆಲ್ಲ ಹೋಗುವುದೇ ಇಷ್ಟವಿಲ್ಲವೆಂಬಂತೆ ವರ್ತನೆ ಶುರುವಾಯಿತು. ಅವರಂತೂ ಈಚೆ ಬರುವುದೇ ನಿಂತುಹೋಯಿತು. ಈಗ ಸುಮಾರು ಒಂದು ವರ್ಷವೇ ಕಳೆಯಿತು: ತಾನಾಗಲೀ, ರಹೀಮನಾಗಲೀ ಆ ಮನೆಗೆ ಕಾಲಿಡದೆ. ಮಕ್ಕಳಿಬ್ಬರು ಮಾತ್ರ ಒಟ್ಟಿಗೇ ಕಾಲೇಜಿಗೆ ಹೋಗಿ ಬರುತ್ತವೆ. ಅವುಗಳನ್ನು ನೋಡಿದರೆ ಮುದ್ದು ಉಕ್ಕಿಬರುತ್ತದೆ. ಅಣ್ಣತಮ್ಮಂದಿರಾದರೂ ಇಷ್ಟು ಹಚ್ಚಿಕೊಳ್ಳಲಿಕ್ಕಿಲ್ಲ. ಅವುಗಳಾದರೂ ತಣ್ಣಗಿರಲಿ, ಈ ದ್ವೇಷದ ಉರಿ ಅವುಗಳಿಗೆ ಬೇಡ ಎಂದರೆ ಈಗೀಗ ಅದಕ್ಕೂ ಬಂದೋಬಸ್ತು ಸುರುವಾಗಿ ಅದೇ ವಿಕೋಪಕ್ಕೆ ಹೋಗಿ ಅಕ್ಷಯ, ಅನ್ವರ ಇಬ್ಬರೂ ಮನೆಬಿಟ್ಟು ಹೋಗಿದ್ದಾರೆ. ಕಂಡವರೆಲ್ಲ ಕೇಳುತ್ತಾರೆ “ನಿಮ್ಮ ಮಗ ಏನು ಬೇರೆ ಹೋಗಿ ಕೂತದ್ದು? ನಿಮ್ಮಲ್ಲಿ ಕೋಪ ಮಾಡಿ ಹೋದದ್ದಾ!” ಏನಂತ ಉತ್ತರ ಕೊಡುವುದೆಂದು ಅರ್ಥವಾಗುವುದಿಲ್ಲ ಜುಬೇದಾಳಿಗೆ. *** ನಡುರಾತ್ರಿ ಮೀರುತ್ತಿದೆ: ಗಾಢಕತ್ತಲು. ಅಲ್ಲೆಲ್ಲೋ ಮರಗಳೆಡೆಯಲ್ಲಿ ಜೀರುಂಡೆ ನಾದ. ರೂಮಿನ ಬಾಗಿಲು ತೆಗೆದು ಹೊರಗಿನ ದಂಡೆಯಲ್ಲಿ ಬಂದು ಕುಳಿತಿದ್ದಾನೆ ಅಕ್ಷಯ. ಓದಬೇಕೆಂದು ಪುಸ್ತಕ ಹಿಡಿದರೆ ಓದಲಾಗದೆ, ನಿದ್ದೆಮಾಡುವ ಅಂದುಕೊಂಡು ಅದೂ ಸಾಧ್ಯವಾಗದೆ ಎದ್ದುಬಂದಿದ್ದಾನೆ. ಕಾಲೇಜಿನಲ್ಲೂ ಆವತ್ತು ಯಾವುದರ ಮೇಲೂ ಗಮನ ಕೇಂದ್ರೀಕರಿಸಲಾಗಲಿಲ್ಲ. ಅನ್ವರ್ ಆಗಲೇ ಮಲಗಿಯಾಗಿದೆ. ಜುಬೇದಾ ಆಂಟಿಗೆ ಹುಷಾರಿಲ್ಲವೆಂದು ಮನೆಗೆ ಹೋಗಿದ್ದವನು ನಿನ್ನೆ ತಾನೇ ಬಂದಿದ್ದಾನೆ. ಪಾಪ, ನಿನ್ನೆ ರಾತ್ರಿ “ಉಮ್ಮ ಉಮ್ಮ”

ಬದಲಾವಣೆ Read Post »

ಕಥಾಗುಚ್ಛ

ಕಥಾಯಾನ

‘ಬಾಳ ಬಣ್ಣ’  ವಸುಂಧರಾ ಕದಲೂರು       ಕುಸುಮಳಿಗೆ ವಿವಾಹದ ಏಳು ವರ್ಷದ ಅನಂತರ ಹುಟ್ಟಿದವನೇ ‘ಅಮರಕಿಶೋರ’. ಕುಸುಮಾಳದ್ದು ಮೂವತ್ತರ ಹರಯದಲ್ಲಾದ ವಿವಾಹ.    ತಡವಾದ ವಿವಾಹ ಜೊತೆಗೆ ತಡವಾಗಿಯೇ ಮಗು ಹುಟ್ಟಿದ್ದು. ಈ ಕಾರಣಕ್ಕೋ ಏನೋ ಮಗುವನ್ನು ಐದು ವರ್ಷ ಆಗೋವರೆಗೂ ನೆಲಕ್ಕೆ ಬಿಟ್ಟರೆಎಲ್ಲಿ ನವೆದು ಹೋಗುವುದೋ ಎಂದುಕೊಂಡು ಕೆಳಕ್ಕೆ ಬಿಡದೇ ಕಂಕುಳಲ್ಲಿಟ್ಟುಕೊಂಡು ಸಾಕಿದಳು. ಕಣ್ಣನ್ನು ರೆಪ್ಪೆಗಳು ಹೇಗೆ ಮುಚ್ಚಟೆಯಿಂದ ರಕ್ಷಿಸುತ್ತವೆಯೋ ಹಾಗೆ ಮಗನನ್ನು ನೋಡಿಕೊಳ್ಳುತ್ತಿದ್ದಳು.         ಮಗುವಿಗೆ ಹಸಿವಾಗಿ ಅದು ‘ಆ…’ ಎಂದು ಬಾಯ್ಬಿಡುವ ಮೊದಲೇ ತುಪ್ಪದಲ್ಲೇ ಅನ್ನ ಕಲಸಿ ಬಾಯಿಗಿಟ್ಟು ತಿನಿಸುತ್ತಿದ್ದಳು. ಯಾವುದಾದರೂ ಆಟದ ಸಾಮಾನು ಬೇಕೆನ್ನುತ್ತಾ ಕೈಚಾಚುವ ಮೊದಲೇ ಕೊಂಡು ಅದನ್ನವನ ಕೈಗಿತ್ತು ಸಂಭ್ರಮಿಸುತ್ತಿದ್ದಳು. ಆಕೆಯ ಪ್ರೀತಿಯಲ್ಲಿ  ಶ್ರೀಮಂತಿಕೆಯ ಅದ್ದೂರಿತನ ಇಲ್ಲದಿದ್ದರೂ, ಭಾವ ತೀವ್ರತೆಯ ಆಡಂಬರಕ್ಕೇನೂ ಕೊರತೆಯಿರಲಿಲ್ಲ. ಅವಳ ವಾರಿಗೆಯಲ್ಲೇ ಹೆತ್ತವರು ತಮ್ಮ ಮಕ್ಕಳನ್ನು ಎರಡು- ಎರಡೂವರೆ ವರ್ಷಕ್ಕೇ ಮಾಂಟೆಸ್ಸರಿಗೆ ಸೇರಿಸಿದರೆ, ಈಕೆ ಮಾತ್ರ ‘ಮನೆಯೇ ಮೊದಲ ಪಾಠಶಾಲೆ’ ಎಂದು ನಂಬಿ, ‘ಅಆಇಈ’, ‘ಎಬಿಸಿಡಿ’, ‘1234’ ಗಳ ಜೊತೆಗೆ ನರ್ಸರಿ ರೈಮ್ಸ್, ದೇವರ ನಾಮ, ಶ್ಲೋಕಗಳನ್ನು ಅಮರನಿಗೆ ಕಲಿಸುತ್ತಾ, ಅವನ ತೊದಲು ಬಾಯಿಂದ ಮತ್ತೆಮತ್ತೆ ಅದನ್ನು ಹೇಳಿಸಿ, ಮುದ್ದು ಮುದ್ದು ಉಚ್ಚಾರಣೆಗಳನು ಕೇಳಿ, ಮಗನೊಡನೆ ತಾನೂ ಮತ್ತೊಂದು ಮಗುವಾಗಿ ಆಡುತ್ತಾ ಖುಷಿಪಡುತ್ತಾ ದಿನದೂಡುತ್ತಿದ್ದಳು.    ಅಮ್ಮ ಹೇಳಿಕೊಡುವ ಪಾಠಗಳನ್ನು ಕಲಿಯುವುದರಲ್ಲಿ      ಚುರುಕಾಗಿದ್ದ ಅಮರನು, ಬಣ್ಣಗಳನ್ನು ಗುರುತಿಸಲು ಮಾತ್ರ ಪರದಾಡುತ್ತಿದ್ದ. ಅವನ ಈ ಸಮಸ್ಯೆ ಅರಿವಿಗೆ ಬಂದದ್ದೂ ಸಹ, ಕುಸುಮಾಳು ಅವನಿಗೆ ಕಲರ್ಸ್ಗಳ ಕುರಿತು ಪಾಠ ಮಾಡುವಾಗ. ಕಾಮನ ಬಿಲ್ಲಿನ ಬಣ್ಣಗಳ ಚಾರ್ಟನ್ನು ಗುರುತಿಸುವಾಗ ಅಮರ ಪದೇಪದೇ ವಿಫಲನಾಗುತ್ತಿದ್ದ. ಹಸಿರು, ಕೆಂಪು, ಹಸಿರು, ಹಳದಿ ಹೀಗೆ ಕೆಲವು ಛಾಯೆಯ ಬಣ್ಣಗಳನ್ನು ಗುರುತಿಸಲು ಕಷ್ಟಪಡುತ್ತಿದ್ದ. ಪದೇ ಪದೇ ತಿದ್ದಿ ಹೇಳಿಕೊಟ್ಟರೂ ಈ ಕೆಲವು ಬಣ್ಣಗಳನ್ನು ಪ್ರತ್ಯೇಕವಾಗಿ ಗುರುತಿಸಲು ಅಸಮರ್ಥನಾಗುತ್ತಿದ್ದ.    ಅಮರನು ಪದೇ ಪದೇ ತನ್ನನ್ನು ರೇಗಿಸಲು ಬೇಕೆಂದೇ ಹೀಗೆ ತುಂಟಾಟ ಮಾಡುತ್ತಿರಬಹುದಾ..? ಎಂದು ಆರಂಭದಲ್ಲಿ ನಿರ್ಲಕ್ಷಿಸಿದ್ದ ಕುಸುಮಾ, ಅದು ಆಟವಲ್ಲ, ಆತನ ಸಮಸ್ಯೆ ಎಂದು ತಿಳಿದು ಚಿಂತೆಗೆ ಒಳಗಾದಳು.  ಸಮಸ್ಯೆ ಸ್ವರೂಪ ತಿಳಿಯುತ್ತಿದ್ದಂತೇ ನೇತ್ರತಜ್ಞರ ಬಳಿ ಮಗುವನ್ನು ಕರೆದುಕೊಂಡು ಹೋದಳು.    ಮಗುವಿನ ಕಣ್ಣುಗಳನ್ನು ಅತ್ಯಾಧುನಿಕ ಉಪಕರಣಗಳ ಮೂಲಕ ಪರೀಕ್ಷಿಸಿದ ನೇತ್ರತಜ್ಞರು ‘ನೋಡಿ ಕುಸುಮ, ನಿಮ್ಮ ಮಗು ಅಮರನಿಗೆ ‘ಬಣ್ಣಗುರುಡು’ತನ ಅಂದರೆ colour blindness ಇದೆ’ ಎಂದು ಸ್ಪಷ್ಟಪಡಿಸಿದರು. ವಿಷಯ ತಿಳಿದು ಆಘಾತಕ್ಕೊಳಗಾದ ಕುಸುಮಾ ತನ್ನ ಮುದ್ದು ಮಗುವಿನ ಬದುಕು ಹೀಗೆ ಬಣ್ಣಗೆಟ್ಟಿತೇ ಎಂದು ಶೋಕಿಸಿದಳು.       ಮನೋವ್ಯಥೆಯಿಂದ ದುಃಖಿಸುತ್ತಿದ್ದ ಕುಸುಮಾಳನ್ನು ಸಂತೈಸಿದ ವೈದ್ಯರು, ಆಕೆಗೆ ‘ಬಣ್ಣಗುರುಡುತನ’ದ ಬಗ್ಗೆ ಕೂಲಂಕಷವಾಗಿ ವಿವರಿಸಿ, ‘’ಕೆಲವರಿಗೆ ಇಂತಹ ಕೆಲವು ಅಪರೂಪದ ಅನುವಂಶೀಯ ಕಾಯಿಲೆಗಳು ಬರುತ್ತವೆ. ಹಾಗೆ ಬರುವುದು ಯಾರದ್ದೋ ಅಪರಾಧದಿಂದಲ್ಲ. ನೀವು ಯಾವ ರೀತಿಯಲ್ಲೂ ಅಧೀರರಾಗಬೇಡಿ’’ ಎಂದು ಧೈರ್ಯ ತುಂಬಿದರು. ಜೊತೆಗೆ ಒಂದಷ್ಟು ಸಲಹೆ ನೀಡಿ ಮನೆಗೆ ಕಳುಹಿಸಿಕೊಟ್ಟರು.     ಆಸ್ಪತ್ರೆಯಿಂದ ಮನೆಗೆ ಮರಳಿದ ಕುಸುಮಾಳಿಗೆ, ಸಮಾಧಾನವೇ ಆಗಲಿಲ್ಲ. ಮಕ್ಕಳಿಲ್ಲದೇ ಹಲವು ವರ್ಷ ಬಣ್ಣಗೆಟ್ಟಿದ್ದ ತನ್ನ ಬದುಕಿಗೆ ಉಲ್ಲಾಸದ ಹೊಸಬೆಳಕನ್ನು ತಂದುಕೊಟ್ಟ ತನ್ನ ಮುದ್ದುಕಂದನ ಬದುಕು ಹೀಗೆ ವರ್ಣಹೀನವಾಯಿತಲ್ಲಾ… ಎಂದು ರೋಧಿಸಿದಳು.      ವೈದ್ಯರ ಸಲಹೆಯಂತೆ, ನಾಕಾರು ದಿನಗಳಾದ ಮೇಲೆ ಅಮರನಿಗೆಂದು ವಿಶೇಷವಾಗಿ ಆರ್ಡರ್ಮಾಡಿಸಿದ್ದ ಹೊಸ ಕನ್ನಡಕ ತರಲು ಹೋದಾಗ, “ಡಾಕ್ಟರ್ ‘ಡೇ ವಿಸಿಟಿಂಗ್’ ಮೇಲೆ ಆಸ್ಪತ್ರೆ ರೌಂಡ್ಸ್ ಗೆ ಹೋಗಿದ್ದಾರೆ. ಪ್ಲೀಸ್ ವೇಯ್ಟ್ ಮಾಡಿ” ಎಂದು ರಿಸೆಪ್ಷನಿಸ್ಟ್ ಹುಡುಗಿ ತಿಳಿಸಿದಳು. ಡಾಕ್ಟರ್ ಬರುವುದು ತಡವೆಂದು ತಿಳಿದ ಮೇಲೆ ಕುಸುಮಾ ವೇಯಿಟಿಂಗ್ ರೂಮಿನಲ್ಲಿ ಹೋಗಿ ಕುಳಿತಳು.              ಪದೇ ಪದೇ ಮಗನ ಪರಿಸ್ಥಿತಿಯ ಬಗ್ಗೆಯೇ ಯೋಚಿಸುತ್ತಾ ಒತ್ತಿ ಬರುತ್ತಿದ್ದ ದುಃಖಕ್ಕೆ ಬಿಕ್ಕಳಿಸುತ್ತಾ ಬಾಯಿಗೆ ಕರವಸ್ತ್ರ ಅಡ್ಡ ಹಿಡಿದುಕೊಂಡು ತಲೆತಗ್ಗಿಸಿ ಕುಳಿತಿದ್ದಳು. ವೇಯ್ಟಿಂಗ್ ರೂಮಿನಲ್ಲಿ ಇವಳಂತೆೇ ಡಾಕ್ಟರರನ್ನು ಕಾಣಲು ಬಂದಿದ್ದ ಹಲವರಿದ್ದರು.   ಸಣ್ಣವಯಸ್ಸಿನವರಾಗಿದ್ದ ಒಂದು ದಂಪತಿ ಜೋಡಿಯು,  ಕುಸುಮಾ ದುಃಖಿಸುವುದನ್ನು ನೋಡಿ ಹತ್ತಿರಬಂದು “ಅಳುತ್ತಿರುವುದು ಏಕೆ ?”ಎಂದು ಸಾಧಾನವಾಗಿ ಕಾರಣ ವಿಚಾರಿಸಿದರು. ಅವರ ಸಂತೈಸುವಿಕೆಯ ದನಿಯ ಮಾಂತ್ರಿಕ ಶಕ್ತಿಗೆ ಸಮಾಧಾನಗೊಂಡ ಕುಸುಮಾ ಬಿಕ್ಕಳಿಸುತ್ತಲೇ ತನ್ನ ದುಃಖದ ಕಾರಣ ತಿಳಿಸಿದಳು. ಆ ದಂಪತಿಗಳು ಆಕೆಯನ್ನು ಸಮಾಧಾನಿಸುತ್ತಾ, ‘’ನೋಡಿ, ಹೀಗೆ ಹೇಳುತ್ತಿದ್ದೇವೆಂದು ತಪ್ಪು ತಿಳಿಯಬೇಡಿ. ನಾವು ನಿಮಗಿಂತ ಸಣ್ಣವರೇ ಇರಬಹುದು. ಆದರೆ, ಬರೀ ಶೋಕಿಸುವುದರಿಂದ ಯಾವ ಪ್ರಯೋಜನವಿಲ್ಲ ಎಂದು ಮಾತ್ರ ಹೇಳಬಲ್ಲೆವು. ಸುಮ್ಮನೆ ಯೋಚಿಸುತ್ತಾ ಬೇಸರಪಡುತ್ತಾ ಕುಳಿತುಕೊಳ್ಳಬೇಡಿ. ವಿಜ್ಞಾನ ಮುಂದುವರೆದಿದೆ. ಹಲವು ಸಾಧನ- ಸಾಧ್ಯತೆಗಳಿವೆ. ನೀವು ಹೊಸ ಹುರುಪಿನಿಂದ ನಿಮ್ಮ ಮಗುವಿನ ಕನಸುಗಳಿಗೆ ಬಣ್ಣ ತುಂಬಿರಿ. ಮಗುವಿನ ಭವಿಷ್ಯವನ್ನು ವರ್ಣಹೀನ ಮಾಡಬೇಡಿ. ನಿಮ್ಮದೇನು ಅಂತಹ ದೊಡ್ಡ ಸಮಸ್ಯೆಯೇ ಅಲ್ಲ” ಎಂದು ನಿಧಾನವಾಗಿ ಸಂತೈಸಿ ತಮ್ಮ ಕುರ್ಚಿ ಬಳಿ ಮರಳಿ ಹೋದರು.    ‘’ನನ್ನದೇನು ದೊಡ್ಡ ಸಮಸ್ಯೆಯಲ್ಲವಾ..?! ನನ್ನ ದುಃಖ, ಹೊಟ್ಟೆ ಸಂಕಟ ಇವರಿಗೆ ಹೇಗೆ ತಿಳಿಯಬೇಕು? ಇವರ ಬಳಿ ನಾನು ಏಕಾದರು ನನ್ನ ಮಗನ ಸಮಸ್ಯೆ ಹೇಳಿಕೊಂಡೆನೋ..?!’’ ಎಂದುಕೊಂಡು ಕುಸುಮ ತನ್ನ ನೋವಿನ ಜೊತೆಗೆ ಈಗ ಕೋಪ ಅಸಮಾಧಾನಗಳನ್ನೂ ಹೊಂದಿದವಳಾಗಿ ಕುದಿಯತೊಡಗಿದಳು.    ಅವರು ಹೋಗಿ ಕುಳಿತ ಸ್ವಲ್ಪ ಹೊತ್ತಿನಲ್ಲೇ ಅವರ ಪಕ್ಕದ ಕುರ್ಚಿಯ ಬಳಿಯಲ್ಲಿ ಇರಿಸಲಾಗಿದ್ದ ಪ್ರಾಮ್ನಲ್ಲಿ ನಿದ್ರಿಸುತ್ತಿದ್ದ ಮಗುವೊಂದು ಎದ್ದು ಕಿಟಾರನೆ ಕಿರುಚಿ ರೋಧಿಸತೊಡಗಿತು. ಕುಸುಮಾಳ ಗಮನ ಆ ಮಗುವಿನತ್ತ ಹರಿಯಿತು. ಕ್ಷಣದ ಹಿಂದೆ ಯಾರನ್ನು ‘ತನ್ನ ಸಂಕಟ ಅರಿಯಲಾಗದವರು’ ಎಂದು ಮನಸ್ಸಿನಲ್ಲೇ ಜರಿದುಕೊಂಡಳೋ ಅದು ಅವರ ಮಗುವಾಗಿತ್ತು .       ದಂಪತಿಗಳು ಆ ಮಗುವನ್ನು ನಿಧಾನವಾಗಿ ಪ್ರಾಮ್ನಿಂದ ಮೇಲೆತ್ತಿಕೊಂಡು, ಬಹಳ ನಾಜೂಕಾಗಿ ಅದರ ಬಟ್ಟೆ ಸರಿಪಡಿಸುತ್ತಾ ಮೆಲ್ಲನೆ ದನಿಯಲ್ಲಿ ಸಂತೈಸಲು ತೊಡಗಿದರು. ಮಗುವಿನ ಮುಖ ತನ್ನತ್ತ ತಿರುಗುತ್ತಲೇ ಅದನ್ನು ಕಂಡ ಕುಸುಮ ಗರಬಡಿದಂತೆ ಸ್ಥಬ್ಧಳಾದಳು!        ‘ಅಮರನಿಗೆ ಕೆಲವೊಂದು ಬಣ್ಣ ಗುರುತಿಸಲು ತಿಳಿಯದಿದ್ದರೇನಂತೆ, ಕಡೇಪಕ್ಷ ಈ ಜಗತ್ತನ್ನಾದರೂ ಕಾಣುತ್ತಾನಲ್ಲಾ. ಈ ಅಮ್ಮನ ಮುಖವನ್ನಾದರೂ ನೋಡಿ ನಲಿಯುತ್ತಾನವನು. ಅವನಿಗೆ ಬಣ್ಣಗಳ ಬಗ್ಗೆ ತಿಳಿಯದಿದ್ದರೇನಂತೆ, ನನಗೆ ಅವನೇ ಕಾಮನಬಿಲ್ಲು. ನನ್ನ ಬಾಳಿಗೆ ಅವನೇ ಬಣ್ಣದೋಕುಳಿ, ಬಾಣಬಣ್ಣ’ ಎಂದು ತನ್ನ ಮನವನ್ನು ಸಂತೈಸಿಕೊಂಡಳು ಕುಸುಮ.    ಇನ್ನೂ ಅಳುತ್ತಲೇ ಇದ್ದ ಮಗುವನ್ನು ಸಂತೈಸಲು ಮನಸ್ಸಾಗಿ, ಕುಸುಮ ಅಮರನಿಗೆಂದು ಕೊಂಡಿದ್ದ ದೊಡ್ಡ ಕ್ಯಾಡ್ಬರೀಸ್ ಚಾಕ್ಲೇಟ್ ಅನ್ನು ಪರ್ಸಿನಿಂದ ತೆಗೆದು, ಅಳುತ್ತಿದ್ದ ಮಗುವಿನ ಬಳಿಗೆ ನಡೆದಳು. ಸ್ನೇಹದ ನಗೆ ಸೂಸುತ್ತಿದ್ದ ಆ ಮಗುವಿನ ಅಪ್ಪಅಮ್ಮನ ಕಣ್ಣುಗಳು ಕುಸುಮಾಳತ್ತ ತಿರುಗಿದಾಗ ಅಪಾರ ವಿಶ್ವಾಸದಲ್ಲಿ ಹೊಳೆಯುತ್ತಿದ್ದವು. ಆದರೆ, ಕಣ್ಣುಗಳಿರಬೇಕಾದ ಜಾಗದಲ್ಲಿ ಕೇವಲ ಎರಡು ಕುಳಿಗಳನ್ನು ಹೊಂದಿದ್ದ ಮಗುವನ್ನು ಅವರು ಎದೆಗವಚಿಕೊಂಡ ರೀತಿಯನ್ನು ಕಂಡಾಗ ಕುಸುಮಳಿಗೆ ‘ಎಲ್ಲಾ ತಾಯ್ತಂದೆಯರಿಗೂ ಅವರ ಮಗುವೇ ಅವರವರ ಬಾಳ ಬಣ್ಣ-  ಬಾಳ ಬೆಳಕು’ ಎಂಬ ಸತ್ಯ ಅರ್ಥವಾಗಿತ್ತು. ****************************

ಕಥಾಯಾನ Read Post »

You cannot copy content of this page

Scroll to Top