ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕನ್ನಡದ ಅಸ್ಮಿತೆ

ನಾಡ ದ್ವಜ ಯಾಕೆ ಬೇಕು? ಚಂದ್ರಪ್ರಭ ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ ತೋರುತಿಹುದು ಹೊಡೆದು ಹೊಡೆದು ಬಾನಿನಗಲ ಪಟ ಪಟ ಕಯ್ಯಾರ ಕಿಞ್ಞಣ್ಣ ರೈ ದೇಶ, ಭಾಷೆ, ಸಂಸ್ಕೃತಿ, ಸಂಪ್ರದಾಯ ಇತ್ಯಾದಿ ಎಲ್ಲವುಗಳ ಮೂಲ ನೆಲೆ ಅಸ್ಮಿತೆ. ಅಷ್ಟೇ ಅಲ್ಲ ಇವೆಲ್ಲ ಒಂದನ್ನೊಂದು ಪೂರಕವಾಗಿ ಪ್ರಭಾವಿಸುವ ಅಂಶಗಳು. ವ್ಯಕ್ತಿ, ವ್ಯಕ್ತಿಯ ಮನೆತನ, ಪ್ರದೇಶ ಎಲ್ಲಕ್ಕೂ ಒಂದು ಹೆಸರಿದೆ. ಹತ್ತಾರು ಸಂಗತಿಗಳನ್ನು ಹೇಳಿ ಬಿಡುವ ತಾಕತ್ತು ಆ ಒಂದು ಹೆಸರಿಗಿದೆ. ಗುರುತಿಸುವಿಕೆಯ ಇಂಥದ್ದೊಂದು ಅಂಶವಾಗಿ ಹುಟ್ಟಿದ್ದು ‘ಧ್ವಜ’ ಎಂಬ ಪರಿಕಲ್ಪನೆ. ಉರಗ ಪತಾಕ ಎಂದೊಡನೆ ತಟ್ಟನೆ ನೆನಪಾಗುವುದು ದುರ್ಯೋಧನ ಮತ್ತವನ ಛಲ. ಗರುಡಧ್ವಜನೆಂದಾಗ ಕೃಷ್ಣ, ಕಪಿಧ್ವಜನೆಂದಾಗ ಅರ್ಜುನ, ವರಾಹ ಧ್ವಜ ಅಂದಾಗ ವಿಜಯನಗರ ಸಾಮ್ರಾಜ್ಯ, ಭಗವಾ ಧ್ವಜ ಅಂದಾಗ ಮರಾಠಾ ಸಾಮ್ರಾಜ್ಯ ನೆನಪಿಗೆ ಬರುವುದು. ಧ್ವಜ, ಪತಾಕೆ, ಬಾವುಟ ಎಂದೆಲ್ಲ ಕರೆಸಿಕೊಳ್ಳುವ ಈ ಸಂಗತಿ ನಿರ್ದಿಷ್ಟ ಕಾರ್ಯೋದ್ದೇಶವನ್ನು ಸೂಚಿಸುತ್ತದೆ. ನಿರಂತರ ಎಲ್ಲರ ಲಕ್ಷ್ಯವನ್ನು ತನ್ನತ್ತ ಸೆಳೆದು ಗುರಿ ತಲುಪುವ ಸಂಕೇತವನ್ನು ಪ್ರತಿನಿಧಿಸುತ್ತದೆ. ಕೆಂಪು ಕೋಟೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಬೇಕೆಂಬ ಕನಸು ನನಸಾದ ಕ್ಷಣದ ಹಿಂದೆ ಏನೆಲ್ಲ ಹೋರಾಟ, ತ್ಯಾಗ, ಬಲಿದಾನಗಳಿವೆ.. ಕೆಲವಷ್ಟು ಮೊಳದ ಬಟ್ಟೆಯಾಗಿರದೇ ಇಡಿಯಾಗಿ ‘ಇಂಡಿಯಾ’ ವನ್ನು ಎಲ್ಲಾ ಗೌರವ, ಸ್ಥಾನ, ಮಾನ ಸಮ್ಮಾನಗಳ ಎತ್ತರದಲ್ಲಿ ನಿರೂಪಿಸುವ ಅಂಶವಾಗಿ ತ್ರಿವರ್ಣ ಧ್ವಜ ಪ್ರತಿಯೊಬ್ಬ ದೇಶವಾಸಿಯ ಎದೆಯಲ್ಲಿ ಸ್ಥಾನ ಪಡೆದಿದೆ. ಸ್ವಾತಂತ್ರ್ಯ ಪೂರ್ವದ ಸಂಸ್ಥಾನಿಕ ಅರಸರ ನಿಯಂತ್ರಣದಲ್ಲಿದ್ದ ಬಿಡಿ ಬಿಡಿ ಪ್ರದೇಶಗಳು ಇಡಿಯಾಗಿ “ಒಂದು ದೇಶ” ದ ಪರಿಕಲ್ಪನೆಯಡಿ ಬರುವಾಗಲೂ ಸಂಸ್ಥಾನಗಳು ಭಾಷೆ, ಸಂಸ್ಕೃತಿ ಇತ್ಯಾದಿ ಹಲವಾರು ಸಂಗತಿಗಳ ವಿಷಯದಲ್ಲಿ ತಮ್ಮತನವನ್ನು ಉಳಿಸಿಕೊಳ್ಳುತ್ತವೆ… ಅದರಲ್ಲಿ ಒಕ್ಕೂಟದ ಸಾಂಕೇತಿಕ ಪ್ರತಿನಿಧಿತ್ವದ ಹಸ್ತಕ್ಷೇಪ ಇರುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಿದ ಬಳಿಕವಷ್ಟೇ ಸಂಸ್ಥಾನಗಳ ವಿಲೀನ ಕಾರ್ಯ ಸಾಧ್ಯವಾಗಿದ್ದು ಮತ್ತು ಅಂದಿನ ಹಿರಿಯರ ನಿರಂತರ ಮನವೊಲಿಸುವ ಪ್ರಯತ್ನದಿಂದ ಅದು ನೆರವೇರಿದ್ದು. ಚಿಕ್ಕದೊಂದು ಉದಾಹರಣೆ ಈ ಸಂಗತಿಯನ್ನು ಪ್ರಸ್ತುತ ಪಡಿಸುವುದು – ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳು ನಡೆದಿವೆ ಎಂದುಕೊಳ್ಳೋಣ. ಅಲ್ಲಿ ಒಂದು ಗುಂಪಿನವರು ತಮಿಳು ಧ್ವಜ ಎತ್ತಿ ಹಿಡಿದಿದ್ದಾರೆ, ಕೆಲವರು ಮಲಯಾಳ ಧ್ವಜ, ಮತ್ತೆ ಕೆಲವರು ಪಂಜಾಬಿ..ಇತ್ಯಾದಿ ಅನುಕ್ರಮವಾಗಿ ತಮ್ಮ ತಮ್ಮ ಧ್ವಜ ಹಿಡಿದು ನಿಂತಿರುವಾಗ ನೀವು ಎತ್ತಿ ಹಿಡಿಯುವ ಧ್ವಜ ಕನ್ನಡ ಧ್ವಜವೇ ಆಗಿರುತ್ತದೆ. ಅಖಂಡತೆಯ ಸೂಚಕ ಎಂಬ ಕಾರಣಕ್ಕೆ ಅಲ್ಲಿ ನೀವು ಭಾರತದ ಧ್ವಜ ಹಿಡಿಯಲಾಗದು. ಕನ್ನಡ ಧ್ವಜ ಎಂದಾಗ ಅದು ಬಸವಾದಿ ಶರಣರು, ಸೂಫಿ ಸಂತರು, ಚೆನ್ನಮ್ಮ-ಅಬ್ಬಕ್ಕ ರಂಥ ಧೀರ ರಾಣಿಯರು, ಟಿಪ್ಪು, ಒಡೆಯರ್ ಮೊದಲಾದ ರಾಜರು ; ಪಂಪ, ರನ್ನ ಪೊನ್ನರಿಂದ ಹಿಡಿದು ಕುವೆಂಪು, ಬೇಂದ್ರೆ ವರೆಗಿನ ಕವಿಗಳನ್ನು… ಅವರು ಬಿತ್ತಿ ಹೋದ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಕರ್ನಾಟಕದ ಇತಿಹಾಸ, ಪರಂಪರೆಯನ್ನು ಪ್ರತಿನಿಧಿಸುವ ಕನ್ನಡತನದ ಪ್ರತೀಕ ಕನ್ನಡ ಧ್ವಜ. ಶಾಂತಿ, ಸೌಹಾರ್ದತೆ ಕನ್ನಡಿಗರ ಮೂಲ ಗುಣ, ಸ್ವಭಾವ. ತನ್ನ ಇಂಥ ಮೌಲ್ಯಗಳ ಮೂಲಕವೇ ಕರ್ನಾಟಕ ಭಾರತೀಯತೆಯನ್ನು ಅಭಿವ್ಯಕ್ತಿಗೊಳಿಸುತ್ತ ಬಂದಿದೆ. ವಿವಿಧತೆಯಲ್ಲಿ ಏಕತೆ ಭಾರತದ ಹೆಗ್ಗಳಿಕೆ. ಭಾಷೆ, ಸಂಸ್ಕೃತಿ, ಆಚರಣೆಗಳಲ್ಲಿರುವ ವೈವಿಧ್ಯತೆ ಭಾರತದ ಅಂತಃಸತ್ವ.  ಈ ಜಾತ್ಯತೀತ ಸ್ವರೂಪ, ಬಹುತ್ವದ ನೆಲೆಯೇ ಭಾರತ ವಿಶ್ವಮಾನ್ಯವಾಗಲು ಕಾರಣವಾದ ಅಂಶವಾಗಿದೆ. ಈ ಅರ್ಥದಲ್ಲಿ ಭಾರತವೆಂದರೆ ನೂರಾರು ಸುಂದರ ಅಸ್ಮಿತೆಗಳ ಸಂಘಟಿತ ರೂಪ. ಎಲ್ಲ ರಾಜ್ಯಗಳೂ ತಮ್ಮತನವನ್ನು ಉಳಿಸಿಕೊಂಡೇ ಭಾರತೀಯತೆಯನ್ನು ಒಪ್ಪಿಕೊಂಡಿವೆ. ‘ಭಾರತ ಜನನಿಯ ತನುಜಾತೆ’ ಎಂದು ಬಣ್ಣಿಸುವಾಗ ಕುವೆಂಪು ನಿರೂಪಿಸುವುದು ಈ ಅಂಶವನ್ನೇ. ಆಯಾ ರಾಜ್ಯಗಳ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಗೌರವಿಸುವುದು ಒಕ್ಕೂಟ ವ್ಯವಸ್ಥೆಯ ಹೊಣೆ ಮತ್ತು ನಿಜವಾದ ಭಾರತೀಯತೆಯ ಲಕ್ಷಣ. ರಾಜ್ಯಗಳು ರಾಷ್ಟ್ರ ಧ್ವಜದ ಅಡಿಯಲ್ಲಿ ತಮ್ಮ ಅಸ್ಮಿತೆಯ ಕುರುಹಾಗಿ ಸ್ವಂತ ಧ್ವಜ ಹೊಂದುವುದರಲ್ಲಿ ಎಂಥ ಅತಿರೇಕವೂ ಇಲ್ಲ. ರಾಜ್ಯೋತ್ಸವದ ಸಂದರ್ಭದಲ್ಲಿ ಆ ಧ್ವಜ ಹಾರಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಈ ಧ್ವಜವನ್ನು ನಿರಾಕರಿಸಿ ಅಲ್ಲಿ ‘ಒಂದು ಧ್ವಜ’ ಪರಿಕಲ್ಪನೆಯನ್ನು ಹೇರುವ ಪ್ರಯತ್ನಗಳು ನಡೆದರೆ ಅದು ಪರೋಕ್ಷವಾಗಿ ಕರ್ನಾಟಕದ ಇತಿಹಾಸ, ಪರಂಪರೆಯನ್ನು ನಿರಾಕರಿಸುವುದೇ ಆಗಿದೆ. ಕನ್ನಡಿಗರು ಕನ್ನಡ ಧ್ವಜವನ್ನು ಪ್ರೀತಿಸಿದರೆ ಅದೊಂದು ಸಹಜ ಪ್ರಕ್ರಿಯೆ. ಅದನ್ನು ಪ್ರತಿಯೊಬ್ಬನೂ ಗೌರವಿಸಬೇಕು. =============================================

ಕನ್ನಡದ ಅಸ್ಮಿತೆ Read Post »

ಇತರೆ

ಅನುಭವ

ಭಯದ ನೆರಳಲ್ಲಿ ಹೆಬ್ರಿ ಸದಾನಂದ ಶೆಟ್ಟಿ ಭಯದ ನೆರಳಲ್ಲಿ ಕೈಯಲ್ಲಿ ಸಣ್ಣ ಬ್ಯಾಗ್ ಹಿಡಿದ ನಾನು ನನ್ನ ಭಾವಿ ಪತ್ನಿ ನೋಡೊ ಬರದಲ್ಲಿ ಹೆಜ್ಜೆ ಹಾಕಿದೆ 40 ನಿಮಿಷ ಕಳೆದ ನ೦ತರ ಮಾವನ ಮನೆ ನಾಯಿಗಳ ಬೊಗಳುವಿಕೆಗೆ ಚಿಮಿಣಿ ಹಿಡಿದು ಹೊರ ಬ೦ದಳು ನನ್ನ ಭಾವಿ ಪತ್ನಿ, ಕಗ್ಗತ್ತಲು ” ಯಾರದು ಜಾಗ್ರತೆ ನಾಯಿ ಕಚ್ಚುತ್ತೆ ”ಅ೦ದಾಗ ” ನಾನು ಕಣೆ” ಅ೦ದಾಗ ಆಕೆಗೆ ಸಣ್ಣವರಿದ್ದಾಗಲಿ೦ದ ಗೊತ್ತಿದ್ದರಿ೦ದ ಓಡಿ ಹೋಗಿ ನಾಯನ್ನು ಕಟ್ಟಿ, ತ೦ಗಿಯನ್ನುದ್ದೇಶಿಸಿ ” ರತ್ನ ನಿನ್ನ ಬಾವ ಬ೦ದಿದ್ದಾರೆ ಅಮ್ಮನಿಗೆ ಹೇಳು” ಅ೦ದವಳೆ ಒಳಗೆ ಹೋಗಿ ಮಾಯವಾದ್ಲು(ನಾಚಿಕೆ) ಹೊರ ಬ೦ದ ಅತ್ತೆಯವರು ”ಈಗ ಬ೦ದದ್ದಾ ಮಗ ಬಾ, ಬಚ್ಚಲಿಗೆ ಹೋಗಿ ಕೈಕಾಲು ಮುಖ ತೊಳೆದು ಕೊ೦ಡು ಬಾ” ಅ೦ದಾಗ ಅತ್ತೆಯ ಹಿ೦ದೆಯೇ ಬ೦ದ ನನ್ನ ಮಾವ ”ಮೊನ್ನೆ ಬ೦ದಿದ್ದೀಯ ಅನ್ನೋ ಸುದ್ದಿ ಇತ್ತು,ಈಗ ಬರೋದ” ಪ್ರೀತಿಯಿ೦ದ ಗದರಿದರು ”ಅಲ್ಲಿ ನಿಮ್ಮ ತ೦ಗಿಗೆ ಹುಷಾರಿರಲಿಲ್ಲಾ ಹಾಗೆ ನೋಡ್ಳಿಕ್ಕೆ ಬ೦ದದ್ದು” ಅ೦ದಾಗ ಅವರು ”ಹುಷರಿಲ್ಲಾ, ಒ೦ದು ಚೀಟಿ ಬಸ್ಸಲ್ಲಿ ಕೊಟ್ಟಿದ್ರೆ ವಿಷಯ ಗೊತ್ತಾಗಿ ನಾನು ಬರ್ತಿರ್ಲಿವಾ” ಅಷ್ಟರಲ್ಲಿ ಇಬ್ಬರಿಗೂ ಊಟಕ್ಕೆ ಬುಲಾವ್ ಇಬ್ಬರೂ ಊಟವಾದ ಮೇಲೆ ಮಲಗಿದೆವು ,ಬೆಳಿಗ್ಗೆ ನಾನು ಏಳುವಾಗ 8.00 ಘ೦ಟೆ ಎದ್ದವನೆ ”ಅತ್ತೆ ಮಾವ ಎಲ್ಲಿ” ಎ೦ದಾಗ ಅವರು ಅಕ್ಕನ್ನ(ನಮ್ಮ ತಾಯಿಯನ್ನು ಹಾಗೆ ಕರೆಯುವುದು ನಮ್ಮತ್ತೆಯ ವಾಡಿಕೆ) ನೋಡ್ಲಿಕ್ಕೆ ಬೆಳಿಗ್ಗೆ ಫ಼ಸ್ಟ್ ಬಸ್ಸಲ್ಲಿ ನಿಮ್ಮೂರಿಗೆ ಹೋಗಿದ್ದಾರೆ ನೀನು ನಾಲ್ಕು ದಿನ ಇಲ್ಲೆ ಇರಬೇಕ೦ತೆ ಅ೦ದಾಗ ”ಇಲ್ಲಾ ಅತ್ತೆ ನಾನು ಹೋಗ ಬೇಕು ರಜೆ ಹೆಚ್ಚಿಲ್ಲ”ಅ೦ತ ಸುಳ್ಳು ಬಿಟ್ಟೆ, ನಮ್ಮಿಬ್ಬರ ಮಾತು ಬಾಗಿಲ ಸ೦ದಿಯಲ್ಲಿ ನನ್ನವಳು ಕದ್ದು ಕೇಳ್ತಾಯಿದದ್ದು ನೋಡೀದೆ , ”ಸರಿ ಅತ್ತೆ ಈಗ ನಾನು ತೋಡಿಗೆ ಹೋಗಿ ಹಲ್ಲುಜ್ಜಿ ಬರ್ತೇನೆ ಅ೦ದವನೆ ಟವೆಲ್ ಹಿಡಿದು ಹೊರಟೆ ,ಹಲ್ಲುಜ್ಜಿ ತಿರುಗಿ ನೋಡ್ತೆ ,ಇವಳು ತ೦ಗಿ ಒಟ್ಟಿಗೆ ಕೊಡಪಾನ ಹಿಡುಕೊ೦ಡು ಹಾಜೂರ್,ನನ್ನ ನೋಡಿದ ನನ್ನಾಕೆ ತ೦ಗಿಯನ್ನುದ್ದೇಶಿಸಿ”ಹೇಳೇ ಹೇಳೆ ”ತ೦ಗಿಗೆ ಅಕ್ಕನ ತಾಕೀತು ಕೊನೆಗೆ ನಾನೆ ”ಎ೦ತ ಹೇಳೇ ರತ್ನ” ಅ೦ದ ಕೂಡ್ಲೆ ”ಭಾವ, ಭಾವ ಅಕ್ಕ ಹೇಳ್ತಾಳೆ ನೀವು ಎರಡು ದಿನ ಇರ್ಲೇ ಬೇಕ೦ತೆ” ಯಾಕ೦ತೆ” ಅ೦ದವನೇ ಟವಲ್ಲಿನಲ್ಲಿ ಮುಖ ಒರೆಸಿ ನೋಡ್ತೇನೆ ಅವರಿಬ್ಬರು ನೀರು ತು೦ಬಿಸಿ ಹೊರಟು ಹೋಗಿಯಾಗಿತ್ತು.

ಅನುಭವ Read Post »

ಇತರೆ

ಲಹರಿ

ಜೀವನ ಅನ್ನೋ ಸೈಕಲ್ ಶಂಭುಗೌಡ ಆರ್.ಜಿ. ಹುಟ್ಟೆಂಬುದ ಹುಟ್ಟಿದಾಗಿಂದ ಜೀವನ ಅನ್ನೋ ಸೈಕಲ್ ಹತ್ತಿ ಪೆಟಲ್ ತುಳ್ದಿದ್ದೋ ತುಳಿದಿದ್ದು…ಮಾರ್ಗ ಮಧ್ಯದಲ್ಲಿ ಹೆಸರಿಲ್ಲದ ಕಾಣದ ಕೈ ಒಂದು ಬೀಸಾಕಿದ ಬಿಕನಾಸಿ ಮುಳ್ಳು ಅಂಟಿಲ್ಲದಿದ್ದರೂ ಅಂಟ್ಕೊಂಡು ಪಂಚರ್ ಆಗಿ ಪಂಚರಂಗಿ ಟೈಟಲ್ ಇರೋ ಪಂಚರ್ ಅಂಗಡಿಯವರೆಗೂ ನಟರಾಜ ಸರ್ವಿಸ್ ನಲ್ಲಿ ನಡೆದು ರಿಪೇರಿ ಮಾಡಿಸಿ ಮತ್ತದೇ ಸೈಕಲ್ ಹತ್ತಿ ಕಾಣದ ಕನಸುಗಳ ಮೂಟೆಗಳನ್ನ ಹೊತ್ತು ಮತ್ತದೇ ಹೆಸರಿಲ್ಲದ ನನಸಿನ ನಗರಿಯತ್ತ ಪಯಣ ಶುರು.ಮಾರ್ಗ ಮಧ್ಯದಲ್ಲಿ ಬೇಟಿಯಾಗೋ ಅಪರಿಚಿತ ಮುಖಗಳನ್ನ ಪರಿಚಯಕ್ಕೂ ಪರಿಚಿತರಾದಾಗ ಸ್ನೇಹಿತರು ಅನ್ನೋ ಹಣೆಪಟ್ಟಿ ಕೊಟ್ಟು ಮಾಡಬೇಕಾಗಿರೋ ಕ್ಯಾಮೆಗಳಿಗೆಲ್ಲ ಸಾತ್ ಕೊಡ್ತಾ ಬಿಟ್ಟಿ ಬಿಕನಾಸಿ ಕನಸುಗಳಿಗೆಲ್ಲ ನನಸಿನ ಬಣ್ಣ ಹಚ್ಚೋ ಜಿದ್ದಿಗೆ ಬಿದ್ದು ನಾನ್ ಸ್ಟಾಪ್ ಜರ್ನಿ ಬೆನ್ನತ್ತಿ ರೂಲ್ಸ್ ಗಳಿರೋದೆ ಬ್ರೇಕ್ ಮಾಡೋಕೆ ಅನ್ನೋ ಮಾಡರ್ನ್ ಗಾಧೆಯನ್ನ ಜಪಿಸ್ತಾ ಸಿಗ್ನಲ್ ಜಂಪ್ ಮಾಡಿ ಗಾಡ್ ಅನ್ನೋ ಟ್ರಾಪಿಕ್ ಪೋಲಿಸ್ ಹತ್ರ ಸಿಕ್ ಹಾಕೊಂಡಾಗ ಹಿಂದಿರುಗಿ ನೋಡಿದ್ರೆ ಜೊತೆಗಿದ್ದವರು ಅಡ್ರಸ್ ಇಲ್ಲದಂಗೆ ಮಾಯಬಜಾರ್ ಅತ್ತ ಮುಖ ಮಾಡಿ ಮಾಯ ಆಗಿರ್ತಾರೆ. ಕಾಲಿಯಾಗಿರೋ ನಮ್ ಹಣೆ ಮೇಲೆ ಹೆಸರಿಲ್ಲದವ ಗೀಚಿ ಹೋದದ್ದು ಇದೇ ಇರಬಹುದೇನೋ ಅಂದ್ಕೊಂಡು ಜೇಬಲ್ಲಿದ್ದಷ್ಟು ಪೈನ್ ಕಟ್ಟಿ ಶಾತಂ ಪಾಪಂ ಅಂತ ನಮಗ ನಾವೇ ಕೆನ್ನೆಗೆ ಹೊಡೆಕೊಂಡು ತಿರುಗಿ ಬಂದು ಮತ್ತದೇ ಸೈಕಲ್ ಹತ್ತುವಾಗಲೇ ನಾವೆಲ್ಲಿಗೆ ಹೋಗಬೇಕಾಗಿತ್ತು ಅನ್ನೋ ಕಾಣದಿರೋ ಅಡ್ರಸ್ ಒಂದು ಕಾಣೋಕ ಶುರು ಆಗುತ್ತೆ ನೋಡಿ.ಆದ್ರೇನು ಪ್ರಯೋಜನ,ನಾವು ಹೋಗಬೇಕಾದ ಊರಿಂದ ನಾವಿರೋ ಊರು ಅದೆಷ್ಟೋ ಮೈಲುಗಟ್ಟಲೆ ದೂರ.ಹಿಂದಿರುಗಿ ನೋಡಿದ್ರೆ ಅಯ್ಯೋ ಸಾವು ಅನ್ನೋ ದಪ್ಪ ಅಕ್ಷರದಲ್ಲಿರೋ ಊರಿನ ಹೆಸರಿನ ಫಲಕ ಕಣ್ಣಿಗೆ ನಾಟೋ ತರ..ಭಯಾನಕ ಸನ್ನಿವೇಷದ ಪರದೆ ಯಾವ ದಾರಿ ಹಿಡಿದು ಬಂತೋ ಅದೇ ದಾರಿಯಲ್ಲಿ ಬಂದಷ್ಟೇ ವೇಗದಲ್ಲಿ ಮೈ ಕೊರಿಯೋ ಚಳಿಯಲ್ಲೂ ಬೆವರ ಹನಿಗಳ ಕಾಣಿಕೆ ಕೊಟ್ಟು ಕಾಣೆಯಾಗಿ ಬಿಡುತ್ತೆ.ಕೀಸೆಯಿಂದ ಕರ್ಚಿಪ್ ತೆಗೆದು ಬೆವರ ಹನಿಗಳನ್ನೆಲ್ಲ ಸಾವಕಾಶವಾಗಿ ನೇವರಿಸಿ ಅವುಗಳ ಮೈ ತೊಳೆದು ಅದೇ ಕರ್ಚಿಪ್ನಲ್ಲಿ ನೀಟಾಗಿ ಕೀಸೆಯಲ್ಲೆತ್ತಿಟ್ಕೊಂಡು ಬಂದ ದಾರಿಗೆ ಸುಂಕವಿಲ್ಲದವರಂತೆ ಕಣ್ ಮುಂದಿರೋ ದಾರಿ ಹಿಡಿದು ಜೀವನದಲ್ಲಿ ಆಡೋರ ಬಾಯಿಗೆ ಸಿಕ್ಕಿ ದಂಡಪಿಂಡ ಅನ್ನೋ ಬಿರುದಾಂಕಿತರಾಗೋ ಬದಲು ಹುಟ್ಟೆಂಬ ನೆಪ ದ ನೆನಪಾಗಿ ಏನಾದ್ರೂ ಒಸಿ ಕಿಸಿಯೋಣ ಅಂತ ಅಂದ್ಕಂಡು ಅಂದ್ಕೊಳ್ಳದೇ ಇರೋದನ್ನ ಲೈಪ್ ನಲ್ಲಿ ಅಂದ್ಕೊಂಡದ್ದಕ್ಕಿಂತ ಹೆಚ್ಚಾಗಿ ಕಾಣದಿರೋ ಕನಸನ್ನ ಕಸಿ ಮಾಡಿ ನನಸೆಂಬ ಹಣ್ಣನ್ನ ಕೈಯಲ್ಲಿ ಹಿಡಿದುಕೊಂಡು ವಿಜಯಶಾಲಿಯಾಗಿರೋ ಸಾರ್ಥಕತೆಯ ಭಾವ ನಮ್ಮೊಳಗೆ,ನಮ್ಮಷ್ಟಕ್ಕೆ ಮಾತ್ರ ಹುಟ್ಟಿದಂತೆ.ಸ್ವಲ್ಪ ವರುಷಗಳು ಹೊರಳಿದ ಮೇಲೆ ಜೀವನದಲ್ಲಿ ನಮಗಿಂತ ಹೆಚ್ಚಾಗಿ ಕಿಸಿದವರ ಪೋಟೋ ಪೇಪರ್ನಲ್ಲೋ, ಟೀವಿಯಲ್ಲೋ,ಅಕ್ಕ-ಪಕ್ಕದ ಮನೆಯವರ ನಾಲಿಗೆಯಲ್ಲಿ ಹೊರಳಾಡ್ತಿರೋದನ್ನ ಮುಚ್ಚಿಕೊಳ್ಳೋಕೆ ಬಾಗಿಲಿಲ್ಲದ ಕಿವಿಯಲ್ಲಿ ಇಷ್ಟ ಇರದಿದ್ದರೂ ಕಷ್ಟವಾಗದೇ ಸರಾಗವಾಗಿ ಕೇಳಿಸಿಕೊಂಡಾಗ ಚಾಪೆ ಸುತ್ತಿ ಹೊಡೆದಂಗಾಗಿರುತ್ತೆ.ಅವಾಗಲೇ ಗೊತ್ತಾಗಿದ್ದು ಜೀವನದಲ್ಲಿ ಯಾರೂ ಕಿಸಿಲಾರದ ಮಹಾನ್ ಏನನ್ನೂ ನಾವು ಕಿಸಿದಿಲ್ಲ ಅಂತ.ಮನುಷ್ಯನ ಈ ಸಹಜ ಯೋಚನೆಗೆ ಅಸೂಯೆ ಅಂತ ಕರಿಬೇಕೋ?? ಅಥವಾ ನಮ್ಮಷ್ಟಕ್ಕೆ ನಮಗೇ ಇರೋ ಅಸಮಧಾನ ಅಂತ ಕರಿಬೇಕೋ?? ಗೊತ್ತಿಲ್ಲ.ಆದ್ರೆ ಒಂದಂತೂ ಸತ್ಯ. ಅಂದ್ಕೊಂಡಂತೆ ಆದೋರು ಬೆರಳೆಣಿಕೆಯಾದರೆ ಅಂದ್ಕಂಡಿದ್ ಒಂದಾದ್ರೆ ಆಗಿದ್ದೇ ಮತ್ತೊಂದ್ ಅಂತಿರೋರು ಸಾಕಷ್ಟು. ಈ ರೀತಿಯ ಲೆಕ್ಕಾಚಾರದಲ್ಲಿ ನಾವೇನೋ ಒಂದು ಆಗಿದೀವಿ ಅನ್ನೋದನ್ನೇ ಮರೆತು ಬಿಟ್ಟಿರ್ತೀವಿ.ಪಾಲಿಗೆ ಬಂದಿದ್ ಪಂಚಾಮೃತ ಅಂತ ಕಣ್ಣಿಗ್ ಒತ್ಕಂಡು ನಮ್ಮಷ್ಟಕ್ಕೆ ನಾವ್ ನಮ್ಮದೆಷ್ಟೋ ಅಷ್ಟನ್ನ ನಮ್ಮ ಮತಿಯ ಮಿತಿಯೊಳಗೆ ಮಾಡ್ತಾ ಸಾಗಿದ್ರೆ ಈ ಜೀವನ ಸರಾಗವಾಗಿ ಸಾಗುತ್ತೆ.ಜೀವನ ಕಲ್ಪವೃಕ್ಷವಾಗುತ್ತದೆ.

ಲಹರಿ Read Post »

ಇತರೆ

ಚಿಂತನೆ

ಇಷ್ಟಕ್ಕೆ ಹೀಗೆ ವರಿ ಮಾಡೋದಾ? ಪಿ.ಎಂ.ಇಕ್ಭಾಲ್ ಕೈರಂಗಳ ಮಾನಸಿಕವಾದ ಸಮಸ್ಯೆಗಳೇ ಹಾಗೆ‌. ಬಲು ಸಂಕೀರ್ಣ.  ಹೀಗೇ ಇರುತ್ತದೆ ಎಂಬ ನಿಯಮವಿರಲ್ಲ.  ಒಂದೊಂದು ಸಮಸ್ಯೆಯೂ ವೈವಿಧ್ಯ. ಅವುಗಳ ತೀವ್ರತೆ ಎಷ್ಟು ಎಂದು ಅವುಗಳನ್ನು ಅನುಭವಿಸುವ ನತದೃಷ್ಟರಿಗೇನೇ ಗೊತ್ತು. ಆದರೆ ಒಂದು ನೆನಪಿರಲಿ. ‘ನನ್ನ ಸಮಸ್ಯೆಗೆ ಪರಿಹಾರವಿಲ್ಲ’ ಎಂದು ತಿಳಿದು ಹತಾಶರಾದರೆ ಸಮಸ್ಯೆಯ ವ್ಯಾಪ್ತಿ ಮತ್ತಷ್ಟು ದೊಡ್ಡದಾಗುತ್ತದೆ. ಮಾನಸಿಕವಾಗಿ ಅನುಭವಿಸುವ ನೋವು, ಕೊರಗು ಅಥವಾ ಒತ್ತಡ ಸಣ್ಣ ಸಮಸ್ಯೆಯೇನಲ್ಲ. ಇತರರಿಗಾಗಿ ಅವರ ವಿಷಯದ ಆಳಕ್ಕಿಳಿದು ವಸ್ತುನಿಷ್ಠವಾಗಿ ಚಿಂತಿಸಿ ಅರ್ಥೈಸಲು ಮುಂದೆ ಬರುವವರು ಕಡಿಮೆ. ನನಗೆ ಯಾರಿಲ್ಲ ಎಂಬ ಭಾವ ಸೇಡಾಗಿ ಕನ್ವರ್ಟು ಆಗಿ  ಹಿಂಸೆಗೆ ಇಳಿಯುವವರೂ ಇದ್ದಾರೆ.  ಆತ್ಮಹತ್ಯೆಯ ದಾರಿ ಹಿಡಿದವರೂ ಇದ್ದಾರೆ. ಇವೆರಡೂ  ಪರಿಹಾರ ಅಂತೂ ಅಲ್ಲ. ಸಮಸ್ಯೆ ಎಂದರೇನೇ ಹಾಗೆ‌, ತಡೆಯಲಾಗದು. ತಡೆಯಲಾಗದಿದ್ದರೇನೇ ಅದು ಸಮಸ್ಯೆ ಎನಿಸಿಕೊಳ್ಳುವುದು. ಆದರೆ ‘ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ’ ಎಂದು ತಿಳಿದು ಪರಿಹಾರದತ್ತ ಯೋಚಿಸುವುದು ಮತ್ತು ಪ್ರಯತ್ನಿಸುವುದು ಪ್ರಬುದ್ಧತೆ. ಆಗ ಅಷ್ಟರವರೆಗೆ ನಾವಿರುವುದಕ್ಕಿಂತ ಹೆಚ್ಚಿನ ತಾಳ್ಮೆಯನ್ನು ಹೊರತರಬೇಕಾಗುತ್ತದೆ.  ಮನಸ್ಸನ್ನು ವಿಶಾಲಗೊಳಿಸಬೇಕಾಗುತ್ತದೆ. ವಿಷಯವನ್ನು ಬೇರೆ ಬೇರೆ ಕೋನಗಳಿಂದ ನೋಡುವ ಸಾಮರ್ಥ್ಯವನ್ನು ಹೊರಗೆ ತರಬೇಕಾಗುತ್ತದೆ. ಹಾಗೆ ಮಾಡಿಯೂ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲತೆ ಕಾಣಬಹುದು. ಆಗ  ಮರಳಿಯತ್ನ ಮಾಡಬೇಕು. ಪ್ರಧಾನ ವಿಷಯ ಏನು ಅಂದರೆ, ಇನ್ನಿಲ್ಲದಂತೆ ಕಾಟ ಕೊಡುತ್ತಿದ್ದ ಸಮಸ್ಯೆಯೊಂದು ಎದ್ದು ಹೋಗುವಾಗ ಅದು ಒಮ್ಮೆ ದೊಡ್ಡದಾದಂತೆ ಕಾಣಬಹುದು.  ಹಾಗಾಗುವುದು ಪರಿಹಾರದ ಒಂದು ಹಂತವಾಗಿರಬಹುದು. ಆ ಹಂತವನ್ನೇ ದೊಡ್ಡ ಸಮಸ್ಯೆಯಾಗಿ ಕಾಣಬಾರದು. ಹಾಗೆ ಹತಾಶೆ ಆದರೆ ಅದರ ಬೀಳ್ಕೊಡುವಿಕೆ ಪ್ರೊಗ್ರಾಮು ಕ್ಯಾನ್ಸಲ್ ಆಗಿಬಿಡಬಹುದು!ಎಷ್ಟೋ ಮಂದಿ ಈ ತಪ್ಪನ್ನು ಮಾಡುತ್ತಾರೆ. ಆ ಮೂಲಕ ಸಮಸ್ಯೆಗೆ ದೀರ್ಘಾಯಸ್ಸು ಕರುಣಿಸುತ್ತಾರೆ. ಇಬ್ಬರ ನಡುವಿನ ಮನಸ್ತಾಪ ಒಂದು ಸಮಸ್ಯೆಯಾದರೆ, ಒಂದೆಡೆ ಕೂತು ಸಾಧ್ಯತೆಯ ಪರಮಾವಧಿ ತಾಳ್ಮೆಯಿಂದ ಪರಸ್ಪರ ಮಾತಾಡೋದು  ಪರಿಹಾರದ ಹಂತ. ಆ ಹಂತವು ಒಂದಷ್ಟು ಕಷ್ಟಾನೇ. ಆದರೆ ಆ ಸಮಸ್ಯೆಗೆ‌ ಅದೇ ಪರಿಹಾರದದ  ಹಂತ. ಅದಲ್ಲದೆ ಬೇರೆ ಪರಿಹಾರವೇ ಇಲ್ಲ. ಅದರಿಂದ ಎಸ್ಕೇಪು ಆದಷ್ಟೂ ಆ ಸಮಸ್ಯೆ ಜೀವಂತ. ಕೆಲವೊಮ್ಮೆ ಅನಾಹುತಕ್ಕೇ ಅವಕಾಶ. ರೋಗಪೀಡಿತನಾಗುವುದು ಸಮಸ್ಯೆ. ಕೆಲವೊಮ್ಮೆ  ಅಡ್ಮಿಟು, ಇಂಜಕ್ಷನು, ಐಸಿಯು, ಅಪರೇಷನು, ಲಕ್ಷಾಂತರ ಖರ್ಚು ಇವೆಲ್ಲಾ ಅದರ ಪರಿಹಾರದ ಹಂತವಾಗುತ್ತದೆ. ಆ ಹಂತವನ್ನೇ ಸಮಸ್ಯೆಯಾಗಿ ಕಂಡು ಅದರಿಂದ ಎಸ್ಕೇಪು ಆದಷ್ಟೂ ಸಮಸ್ಯೆಯು ಜೋರಾಗುತ್ತದೆ. ರೋಗಿ ಸಾಯಬಹುದು. ಪರಿಹಾರದ ಹಂತದಲ್ಲಿ ಅಣುವಿನಷ್ಟೂ  ಹತಾಶೆರಾಗಬಾರದು. ಅಗತ್ಯವಿದ್ದರೆ ಸಹೃದಯರಾದ ಇನ್ನೊಬ್ಬರದ್ದೋ ಹೆಚ್ಚಿನವರದ್ದೋ ಸಹಾಯ ಪಡೆಯಬೇಕು. ಸಮಸ್ಯೆಯೆಯೇ ಹಾಗೆ. ಅದು ಮನುಷ್ಯನನ್ನು ಒಂಟಿ ಮಾಡುತ್ತದೆ. ಒಂದು ಉದಾಹರಣೆ ನೊಡಿ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದದ್ದಕ್ಕೆ ಆತ್ಮಹತ್ಯೆ ಮಾಡೋಕೆ ಆಲೊಚಿಸುವ ಎಸ್ಸೆಸೆಲ್ಸಿಯ ತಂಗಿಯನ್ನು ನೋಡಿ ಎಂಬಿಬಿಎಸ್ ಕಲಿಯುವ ಅಕ್ಕ ನಕ್ಕಳು. ತಾಯಿ, ತಂದೇನೂ ಆ ನಗುವಿಗೆ ಜೊತೆಗೂಡಿದರು. ಅವರಿಗೆಲ್ಲ ಅವಳು Silly ಹುಡುಗಿ ಎಂದೆನಿಸಿತು. ‘ಇಷ್ಟಕೇ ಹೀಗೆ ವರಿ ಆಗೋದಾ’ ಎಂದು  ಕೇಳಿದರು. ಇದೆಲ್ಲ ವರಿ ಮಾಡ್ಕೊಬೇಕಾದ ವಿಷಯವಾಗಿ ಅಕ್ಕನಿಗೆ, ಅಮ್ಮನಿಗೆ ಮತ್ತು ಅಪ್ಪನಿಗೆ ಕಾಣಲಿಲ್ಲ.  ಅದೇ ಅಕ್ಕ ಒಂದು ದಿನ ಹತಾಶಳಾಗಿ ಕೂರುತ್ತಾಳೆ.   ಸಹಪಾಟಿಯೊಬ್ಬನ ಇನ್ಸಲ್ಟು ಅವಳ ಮನ ಕೊರೆಯುತ್ತಿತ್ತು. ಕಣ್ಣು ಜಲಾಶಯವಾಗುತ್ತಿತ್ತು. ‘ಇಷ್ಟಕ್ಕೇ ಇಷ್ಟೆಲ್ಲ ವರಿನಾ’ ಎಂದು ತಂಗಿ, ತಾಯಿ, ಅಪ್ಪ ಅಂದುಕೊಂಡರು. ಮನಸ್ಸು ಗಟ್ಟಿಯಿರಬೇಕು ಎಂದು  ಉಪದೇಶ ಹೇಳಿದರು. ಮುಂದೊಂದು ದಿನ ತಾಯಿಯ ಸರದಿ. ಜಗಳವೊಂದರ ಮಧ್ಯೆ ಗಂಡ ‘ನಿನ್ನನು ಮದುವೆಯಾಗಿ ತಪ್ಪು ಮಾಡಿದೆ’ ಎಂದ  ಮಾತೊಂದು ಬಾಣವಾಗಿ ನಾಟಿ ಅವಳ ಎದೆಯನ್ನು ನೋಯಿಸುತ್ತಿತ್ತು. ‘ಹೀಗೆಲ್ಲ ಹೇಳಲೇಬಾರದಿತ್ತು ನಿಮ್ಮಪ್ಪ’ ಎಂದು ಮಕ್ಕಳಲ್ಲಿ ಅಳಲು ಶುರುವಿಟ್ಟುಕೊಂಡಳು.  ‘Silly mom’ ಎಂದು ಮಕ್ಕಳ ನಗು. ‘ತುಂಬಾ ವೀಕು’ ಎಂಬ ಗಂಡನ ಸರ್ಟಿಫಿಕೇಟು. ಒಂದು ದಿನ ಯಜಮಾನನೇ ಮಂಕು. ಸೋತುಬಿಟ್ಟೆ, ಇನ್ನು ಜಯವಿಲ್ಲ ಎಂಬ ಹತಾಶೆಯಲ್ಲಿ ಬಿದ್ದ. ಬಿಸಿನೆಸ್ಸಲ್ಲಿ ಆದ ಲಾಸು ಕಾಸು ಬರಿದು ಮಾಡಿಬಿಟ್ಟಾಗ ಆತ ಹಾಗಾದ. ಯಾಕೊ ಉಮ್ಮಳಿಸಿ ಬರುವ ದುಖವನ್ನು ತಡೆಹಿಡಿಯಲಾಗದೆ ಹೆಂಡ್ತಿ ಮಕ್ಕಳ ಮುಂದೆ ಮಗುವಾದ. ‘ಅಯ್ಯೋ ಅಪ್ಪ, ಇದೆಲ್ಲ ಮಾಮೂಲು. ಹತಾಶೆಯಾಗುವಂತದೇ ಅಲ್ಲ’  ಮಕ್ಕಳ ಪ್ರತಿಕ್ರಿಯೆ. ಹೆಂಡ್ತಿಗೂ ಗಂಡ ಅಷ್ಟು ದುಖ ಪಡುವಷ್ಟು Silly fellow ಆದುದಕ್ಕೆ ಸಹಮತ ಇಲ್ಲ. ಇಲ್ಲಿ ಎಲ್ಲರೂ ತೋರಿಸಿದ್ದು ಒಂದೇ ಸ್ವಭಾವ. ಇನ್ನೊಬ್ಬರ ಮಾನಸಿಕ ಸನಸ್ಯೆಗಳನ್ನು ತಮ್ಮ ಭಾಗದಿಂದ ಮಾತ್ರ ನೋಡಿದ್ದು.ಯಾರಿಗೆ ಯಾರೂ ಜೊತೆಯಾಗದೆನೇ ವರಿ ಮಾಡದಿರಲು ಉಪದೇಶಿಸಿದ್ದು. ‘ಹೌದು ಇದು ನೋವಾಗುವಂತಹದೇ ವಿಷಯ, ನನಗೆ ಅರ್ಥವಾಗುತ್ತೆ, ಸಮಾಧಾನ ಪಡು’ ಎಂದು ಯಾರೂ ಹೇಳಿಲ್ಲ. ಹೇಳಿದ್ದು, ‘ಇದು ನೋವಾಗೋ ಮ್ಯಾಟರೇ ಅಲ್ಲ’ ಎಂದು. ಸಮಸ್ಯೆಯಲ್ಲಿ ಬಿದ್ದಾಗ ಒಬ್ನೊಬ್ಬರೂ ಒಂಟಿಯಾಗಿದ್ದರು. ಒಬ್ಬರ ಸಮಸ್ಯೆ ಇನ್ನೊಬ್ನರಿಗೆ ಏನೂ ಅಲ್ಲ. ಹೆಚ್ಚಿನವರು ಇನ್ನೊಬ್ನರ ಸಮಸ್ಯೆಯನ್ನು ಮೇಲಿನ ಉದಾಹರಣೆಯಂತೆ ತಮ್ಮ ಕೋನದಿಂದ ಮಾತ್ರ ನೋಡುತ್ತಾರೆ. ಸಮಸ್ಯೆಯಲ್ಲಿ ಬಿದ್ದವರಿಗೆ ಅದು ಕೊಡುತ್ತಿರುವ ಯಾತನೆ, ಪರಿಣಾಮವು ಇನ್ನೊಬ್ಬರ ಪಾಲಿಗೆ ನಗಣ್ಯ. ಬಾಂಧವ್ಯವು ಕೂಡ ಹಳಸಿ ಹೋಗೋದು ಆಗಲೇ. ಸಮಸ್ಯೆಯನ್ನು ಅದನ್ನು ಅನುಭವಿಸುವವರ ಕೊನದಿಂದ ನೋಡಬೇಕು. ಹಾಗೆ ಮಾಡುವಷ್ಟು ನಾವು ಬೆಳೆಯಬೇಕು. ಅದವರಿಗೆ ಕೊಡುವ ನೋವನ್ನು ಅರ್ಥಮಾಡಿ  ‘ಅರ್ಥಮಾಡಿದ್ದೇನೆ’ ಎಂಬುದನ್ನು ಅವರಿಗೆ ತಿಳಿಸಬೇಕು. ಆಗ ಅದವರಿಗೆ ಮಹದುಪಕಾರ ಆಗುತ್ತದೆ. ಅವರು ಅನುಭವಿಸುವ ನೋವಿನ ಅಲೆಗಳ ಆರ್ಭಟ ಕಡಿಮೆ ಆಗುತ್ತದೆ. ಹಾಗೆ ಮಾಡಿದರೆ ಬಾಂಧವ್ಯಕ್ಕೆ ಟಾನಿಕ್ಕು. ಎಲ್ಲ ಸಮಸ್ಯೆಗಳೂ ಅನುಭವಿಸುವವರ ವೀಕುನೆಸ್ಸಿನಿಂದಾಗಿ  ದೊಡ್ಡದಾಗುವುದಲ್ಲ. ಹಾಗೆ ನೋಡೋದಾದರೆ ಕೆಲವು ವಿಷಯಗಳಲ್ಲಿ ಎಲ್ಲರೂ ವೀಕೇ. ತಿಳಿದಿರಲಿ, ಕೆಲವು ಸಮಸ್ಯೆ ಅಂತೂ ದೊಡ್ಡದೇ. ಇನ್ನೊಬ್ಬರ ಪಾಲಿಗೆ ಏನೂ ಅಲ್ಲದ ವಿಷಯದೊಳಗಡೆ ಒಂದು ಲೋಕವೇ ಅವಿತುಕೊಂಡಿರುತ್ತದೆ. ಅದನ್ನು ಅರಿಯಲು ಸಮಸ್ಯೆ ಅನುಭವಿಸುವವರ ಭಾಗದಿಂದ ವಿಷಯವನ್ನು ಅಧ್ಯಯನ ಮಾಡಬೇಕಾಗುತ್ತದೆ. ಹೃದಯ ವಿಶಾಲತೆ ಇದ್ದರೇನೇ ಅದು ಸಾಧ್ಯ. ಇನ್ನೊಬ್ಬರ ಸ್ಥಾನದಲ್ಲಿ ನಿಂತು ಅದನ್ನು ನೋಡಲು ತಯಾರಿರೋರು ಕಡಿಮೆ. ಕೆಲವು ಸಮಸ್ಯೆಗಳು ಇನ್ನೊಬ್ಬರ  ಭಾವನಾತ್ಮಕ ಸಾಮೀಪ್ಯಕ್ಕೆ ಮಂಜಿನಂತೆ ಕರಗಿಹೋಗುವಂತಹದ್ದು. ಅಂತಹವರು ಒಂದಷ್ಟು ಇದ್ದರೆ ಈ ಜಗದ ಆತ್ಮಹತ್ಯೆಗಳ ಪ್ರಮಾಣ ಕಡಿಮೆಯಾಗುತ್ತಿತ್ತು. ಸಮಸ್ಯೆಗೆ ಬಿದ್ದ ವ್ಯಕ್ತಿಗಳ ಭಾಗದಿಂದ ವಿಷಯವನ್ನು ನೋಡಲು ಅವರ ಆಪ್ತರೇ ತಯಾರಿರೋದಿಲ್ಲ. ಯಾವ ವ್ಯಕ್ತಿ ಸಕ್ಸಸು ಆಗಿದ್ದರೆ ಯಾರಿಗೆ ಲಾಜಿಕ್ ಬಿಟ್ಟು ಮನ-ಹಣದಿಂದ ಸಹಾಯ ಮಾಡಿ, ಕಣ್ಣರೆಪ್ಪೆಯಂತೆ ಅವರನ್ನು ಕಾಯುತ್ತಿದ್ದನೋ, ಆ ವ್ಯಕ್ತಿಯೇ ಯಾರದೋ ಸ್ವಾರ್ಥಕ್ಕೆ ಬಲಿಯಾಗಿಯೋ, ವಿಧಿಯಾಟಕ್ಕೆ ಸಿಳುಕಿಯೋ ಸೂಕ್ಷ್ಮವಾದೊಂದು ಮನಸಿನ ಸಮಸ್ಯೆಯಲ್ಲಿ ಬಿದ್ದರೆ  ಅವನಿಗೆ ಅವರೇ ಇರುವುದಿಲ್ಲ. ಸಮಸ್ಯೆಗೆ ಬಿದ್ದವರಿಗೆ ಒಂಟಿತನವು ಬೋನಸ್ಸು. ಎಷ್ಟೊ ಆತ್ಮಹತ್ಯೆಗಳು ನಡೆಯುವುದು ಅವರ ಸಮಸ್ಯೆಯಿಂದಲ್ಲ, ಆ ಸಮಸ್ಯೆ ಅವರಿಗೆ ಬೋನಸ್ಸಾಗಿ ಕೊಟ್ಟ ಲೋನ್ಲಿನೆಸ್ಸಿನ ಕಾರಣಕ್ಕಾಗಿ. ಈ ಪಾಯಿಂಟು  ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು. ಸಮಸ್ಯೆಗಳಲ್ಲಿ ಬೀಳದ ವ್ಯಕ್ತಿಗಳಿಲ್ಲ. ಕೆಲವು ಮೇಲೆ ಉದಾಹರಿಸಿದಂತಹುಗಳು. ಗಾಳಿ ಮಳೆಯಂತಹವು, ತಾತ್ಕಾಲಿಕ. ಕೆಲವು ಸುಂಟರಗಾಳಿಗಳಂತಹದೇ ಇರುತ್ತದೆ. ತೀವ್ರತೆ ಹೆಚ್ಚು. ಕೆಲವು ಅಂತೂ ಪಕ್ಕಾ ಸುನಾಮಿ ಅಲೆಗಳೇ. ಕೆಲವು ಸಮಸ್ಯೆಗಳು ತನ್ನಿಂದ ತಾನೇ ಪ್ರಭಾವ ಕಡಿಮೆಗೊಳಿಸಿದೆ ಎನಿಸುವುದು ಇದೆ. ಒಬ್ಬ ಸಂತನ ಬಳಿ ಒಬ್ಬ ಸಮಸ್ಯೆಯೊಂದನ್ನು ಹೇಳಿ ಗೋಳೋ ಎಂದು ಅತ್ತುಬಿಟ್ನನಂತೆ. ಸಂತ ಹೇಳಿದನಂತೆ, “ಒಂದಾರು ತಿಂಗಳು ಕಳೀಲಿ. ನಿನ್ನ ಅಳು ಮಾಯವಾಗುತ್ತದೆ” ಎಂದು. ಅವನು ಕೇಳಿದನಂತೆ, “ಆರು ತಿಂಗಳಲ್ಲಿ ನನ್ನ ಸಮಸ್ಯೆ ಇಲ್ಲವಾಗುತ್ತಾ” ಎಂದು. ಸಂತನ ಉತ್ತರ, “ಇಲ್ಲ. ಆರು ತಿಂಗಳಲ್ಲಿ  ನಿನಗೆ ಇದು ಅಭ್ಯಾಸವಾಗುತ್ತದೆ!” ಕೆಲವು ಸಮಸ್ಯೆಗಳ ಆರಂಭದಲ್ಲಿ ಮನುಷ್ಯ ಪೇಚಾಡುತ್ತಾನೆ. ಜೀವಿಸೋಕೆ‌ ಆಗಲ್ಲ ಎಂಬಂತಾಗುತ್ತಾನೆ. ಕ್ರಮೇಣ ಆ ಸಮಸ್ಯೆ ಅಭ್ಯಾಸವಾಗಿ ಸಮಸ್ಯೆನೇ ಬಲಹೀನಗೊಂಡಂತಾಗುತ್ತದೆ. ಎಲ್ಲ ಸಮಸ್ಯೆಗಳಿಗೆ ಪರಿಹಾರವಿದ್ದೇ ಇದೆ. ಅಥವಾ ಹಾಗಂತನೇ ನಾವು ತಿಳಿದುಕೊಳ್ಳಬೇಕು. ಆದರೆ ಕೆಲವೊಮ್ಮೆ ಪರಿಹಾರ  ಎಂಬ ಅಸಾಮಿಯು ಪ್ರಬಲ ಇಚ್ಛಾಶಕ್ತಿ, ಅಪಾರ ತಾಳ್ಮೆ, ಬುದ್ಧಿಮತ್ತೆ ಮತ್ತು ಕಾಲಾವಕಾಶವನ್ನು ನಮ್ಮಿಂದ  ಬಯಸುತ್ತಾನೆ. ಅದ್ಯಾತ್ಮಲೋಕದಲ್ಲಿ ತನ್ನನ್ನು ತೊಡಗಿಸಿಕೊಳ್ಳೋದೂ  ಸಮಸ್ಯೆಗಳ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ. ಆಗ ಮನ ರಿಲಾಕ್ಸು ಆಗಿ ಪರಿಹಾರದ ಬಾಗಿಲು ತೆರೆಯೋದೂ ಇದೆ. ಅದಕ್ಕೇ‌ ಪಕ್ಕಾ ನಾಸ್ತಿಕ ಸೈಕಾಲಜಿ ಡಾಕ್ಟರೂ ದೇವರನ್ನು ಬಳಿ ಕೂರಿಸಲು ಸಲಹೆ ನೀಡೋದು. ಇನ್ನೊಬ್ಬರ ಪಾಲಿಗೆ ವಿಪರೀತ, ಸಹಿಸಲಾಗದು ಎಂದೆನಿಸಿದ  ಮಾನಸಿಕ ಕೊರಗು, ನೋವನ್ನು ಪರಿಗಣನೆಗೆ ಅರ್ಹ ಎಂದೇ ತಿಳಿಯಬೇಕು. ಅದೆಷ್ಟು ಸಣ್ಣದೇ ಇರಲಿ, ‘ನಮ್ಮ ಭಾಗಕ್ಕೆ ಮಾತ್ರ ಅದು ಸಣ್ಣದು, ಅವರ ಭಾಗಕ್ಕೆ ಸಣ್ಣದಲ್ಲ’ ಎಂದು ತಿಳಿಯಬೇಕು.  ಅವರ ಭಾಗದಿಂದ ವಿಷಯವನ್ನು ನೋಡಿ, ಅರ್ಥೈಸಿ ‘ಅರ್ಥಮಾಡಿದ್ದೇನೆ’ ಎಂದು ಹೇಳಬೇಕು. ಸಮಾಧಾನ ಹೇಳಬೇಕು. ಪರಿಹಾರಕ್ಕೆ ಮುಂದಾಗಬೇಕು. ಇಷ್ಟು ಮಾತ್ರ ಮಾಡದೆ ಬೇರೇನೂ ಮಾಡಿದರೂ ಸಾಕಾಗದು. ಇಷ್ಟು ಮಾಡಲಾಗದ ಹತ್ತಿರದವರು, ಬಂಧುಗಳು ಹೃದಯಹೀನರೇ ಸರಿ‌. ನಾವು ಹಾಗಾಗದಿರೋಣ. ===============================================

ಚಿಂತನೆ Read Post »

ಇತರೆ

ಮಹಿಳೆ

ನಾನು ಹೆಣ್ಣೆಂಬ ಹೆಮ್ಮೆ ನನಗಿದೆ! ಐಶ್ವರ್ಯ .ಎಲ್ ನಾನೊಂದು ಹೆಣ್ಣಾಗಿ ಈ ವಿಷಯದ ಬಗ್ಗೆ ಬರೆಯೋಕೆ ನನಗ್ಯಾವ ಮುಜುಗರವಾಗ್ಲಿ, ಅವಮಾನವಾಗ್ಲಿ‌ ಇಲ್ಲ. ಬದಲಾಗಿ ನಾನೊಬ್ಬ ಹೆಣ್ಣೆಂಬ ಹೆಮ್ಮೆ ನನಗಿದೆ. ನೀವೆಲ್ಲ ಅನ್ಕೊಬಹುದು ಇದೇನು ಜಗಜ್ಜಾಹೀರು ಮಾಡೊ ವಿಷಯಾನ ಅಂತ ಆದ್ರೆ ಜಗತ್ತಿನ ಅದೆಷ್ಟೊ ಜೀವಗಳಿಗೆ ಗೊತ್ತಿಲ್ಲ ಹೆಣ್ತನದ ನಿಗೂಢತೆ, ನೋವುಗಳ ಬಗ್ಗೆ. ಕಂಬಳಿ ಹುಳುವದು ರೆಕ್ಕೆ ಕಟ್ಟುವ ಕಾಲದಂತೆ ಮೊಣಕಾಲಿನವರೆಗೂ ಲಂಗವೆತ್ತಿ ಕುಂಟೆಬಿಲ್ಲೆ ಆಡುತ್ತಿದ್ದವಳಿಗೆ ಹಿಂದೆಂದೂ ಆಗದಂತ ಕಿಬ್ಬೊಟ್ಟೆಯ ಬಾಧ, ಅಲ್ಲಿಂದಲೇ ಶುರುವಾಯ್ತೆನೋ ಹೆಣ್ಣೊಬ್ಬಳ ದೈಹಿಕ ಹೋರಾಟ, ಮಾನಸಿಕ ಸ್ಥಿಮಿತಗಳ ತೊಳಲಾಟ, ಜಗತ್ತಿನೆದುರು ಎಲ್ಲವನ್ನೂ ಬಚ್ಚಿಟ್ಟು ಹೆಣ್ತನದ ನಿಗೂಢತೆಯನ್ನು ಕಾಪಾಡಿಕೊಳ್ಳೊ ಹಠ. ಸಣ್ಣದಾಗಿ ಕಿಬ್ಬೊಟ್ಟೆಯಿಂದ ಶುರುವಾದ ನೋವು ಬೆನ್ನು ಮೂಳೆಗೆಲ್ಲ ವ್ಯಾಪಿಸಿ ಒಟ್ಟಾಗೆ ಮುರಿದಂತಾಗಿ, ತೊಟ್ಟುಡುಗೆಗೆಲ್ಲ ತೇವವಾಗುಂತೆ ತೊಟ್ಟಿಕ್ಕುವ ಮುಟ್ಟು ಮಂದಿ ಮುಂದೆಲ್ಲ ಮುಜುಗರವ ತರಿಸುತ್ತೆ. ಮುಟ್ಟೆಂಬುದು ಮೂದಲಿಸೋ ವಿಷಯವಲ್ಲ. ಅದೊಂದು ಹೆಣ್ಣಿಗಿರುವ ದೈವೀ ಶಕ್ತಿ. ಪುರಾಣದ ಪುಟಗಳನ್ನ ತಿರುವಿ ಹಾಕಿದ್ರೆ ಇಂದ್ರನು ವೃತ್ರಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದಾಗ ಇಂದ್ರನಿಗೆ ಬ್ರಹ್ಮಹತ್ಯಾ ದೋಷ ಬರುತ್ತೆ. ಆಗ ಇಂದ್ರ ತನ್ನ ದೋಷಾನ ಮೂರು ಜನರಿಗೆ ಹಂಚುತ್ತಾನೆ. ನದಿ, ವೃಕ್ಷ, ಮತ್ತೆ ಹೆಣ್ಣು. ಆ ಹೆಣ್ಣೆ ಅದಿತಿ. ನೀರು ಹರಿಯುವಾಗ ನೊರೆಯಾಗಿ, ಮರದಲ್ಲಿ ಹಾಲಾಗಿ, ಹೆಣ್ಣಿಗೆ ರಕ್ತಸ್ರಾವದ ಮುಟ್ಟಾಗಿ. ಬಟ್ ಹೆಣ್ಣು ಯಾವತ್ತೂ ಇದನ್ನ ಶಾಪ ಅನ್ಕೊಂಡಿಲ್ಲ ಯಾಕಂದ್ರೆ ಹುಟ್ಟಿನ ಗುಟ್ಟಡಗಿರುವುದೇ ಈ ಮುಟ್ಟಲ್ಲಿ. ತಾಯ್ತನದ ಸುಖಕ್ಕೊಂದು ನೈಸರ್ಗಿಕ ಕ್ರೀಯೆ…. ಪ್ರತಿ ತಿಂಗಳು ಹೆಣ್ತನವ ನೆನಪಿಸಿ, ದೇಹವನ್ನೊಂಚೂರು ಹಿಂಸಿಸಿ ಹೆಣ್ಣನ್ನು ಜಗತ್ತಿನೆದುರು ಮತ್ತಷ್ಟು ಶಕ್ತಳನ್ನಾಗಿ ಬಿಂಬಿಸ್ತಿದೆ. ಮುಂದಲೆಯಲ್ಲಿ ನಾಲ್ಕು ಕೂದಲು ಉದುರಿದ್ರೆ ಸಾಕು ಊರೇ ತಲೆ ಮೇಲೆ ಬಿದ್ದಂಗೆ ಆಡೋ ಗಂಡಸರ ಎದುರು ಪ್ರತಿ ತಿಂಗಳು ಐದು ದಿನಗಳ ಕಾಲ ರಕ್ತದ ಮಡುವಲ್ಲಿದ್ರು ಯಾವುದನ್ನೂ ತೋರಿಸ್ಕೊಳದೆ ಎಂದಿನಂತೆ ತನ್ನ ಕೆಲಸದಲ್ಲಿ ಒಳಗೊಳಗೆ ನೋವನ್ನ ತಡೆದು ಹಿಡಿಯೊ ಶಕ್ತಿ ಹೆಣ್ಣಿಗಷ್ಟೆ ಇದೆ ಅನ್ಸತ್ತೆ. … ಶಾಲೆಗೋ/ ಕೆಲಸಕ್ಕೊ ಹೋಗೊ ಹೆಣ್ಮಕ್ಕಳ ಮುಟ್ಟಿನ ದಿನಗಳು ಅವಳ ಬಟ್ಟೆಯ ಮೇಲಾದ ಒಂದೆರಡು ರಕ್ತದ ಹನಿಗಳ ಕಂಡು ನಕ್ಕಷ್ಟು ಸಲೀಸಲ್ಲ. ಮುಟ್ಟೆಂಬುದು ಮೊದಲೇ ನಿರ್ಧರಿಸಿ ಬರುವಂತದ್ದಲ್ಲ. ಅವಳ ದೈಹಿಕ, ಮಾನಸಿಕ, ಒತ್ತಡ, ಸ್ಥಿಮಿತಗಳ ಮೇಲೆ ಅವಲಂಬಿಸಿರತ್ತೆ. ಯಾವುದೋ function ಅಥವಾ office. ಮೀಟಿಂಗ್ ಮಧ್ಯದಲ್ಲಿ ಮುಟ್ಟಾದರೆ ಧೀಡಿರನೆ ಎದ್ದು ಹೊರ ಹೋಗೊಕಾಗಲ್ಲ, ಎಲ್ಲರ ನಡುವೆನೆ ಆ ವಿಷಯವನ್ನ ಪ್ರಸ್ತಾಪಿಸೋಕು ಆಗಲ್ಲ. ಅದೆಲ್ಲ ಮುಗಿಯೊ ವರೆಗೂ ಕಾದಿದ್ದು ಎಲ್ಲರೂ ಹೋದ್ಮೆಲೆ ಏಳ್ಬೇಕು ಯಾಕಂದ್ರೆ ಹಿಂಭಾಗದಲ್ಲಾಗಬಹುದಾದ ಒದ್ದೆ ಎಲ್ಲಿ ಯಾರಿಗೆ ಕಾಣ್ಸತ್ತೊ ಅನ್ನೊ ಭಯ.‌ಹಿಂದೆ ತಿರುಗಿ ತಿರುಗಿ ನೋಡ್ಕೊಂಡು ಹೆಜ್ಜೆ ಅಂತರಾನ ಸಣ್ಣಕ್ಕಿಟ್ಟು ಹೆಣ್ತನಾನ ಕಾಪಾಡ್ಕೊಬೇಕು. ಒಂದು ಹೆಣ್ಣು ಗಂಡಿನೆದುರು ದೈಹಿಕವಾಗಿ ಬೆತ್ತಲಾದಷ್ಟು ಮಾನಸಿಕವಾಗಿ ಬೆತ್ತಲಾಗಳಾರಳು. ಆದರೂ ತನ್ನ ಗಂಡನೆದುರು ಎಲ್ಲವನ್ನೂ ಹೇಳಿ ಕೊಳ್ತಾಳೆ ಅಂದ್ರೆ ಅವಳು ನಿಮ್ಮಿಂದ ಒಂದೆರಡು ‌ಸಮಾಧಾನದ ಮಾತುಗಳನ್ನೊ, ಸಾಂಗತ್ಯಾನೊ ಬಯಸ್ತಿದಾಳೆ ಅಂತ ಅರ್ಥ ಹೊರತು ನೀವು ಅವಳನ್ನ ಕೂರ್ಸಿ ಅಡುಗೆ ಮಾಡಿ ಹಾಕ್ಲಿ ಅಂತಲ್ಲ. ಜೀವನ ಪೂರ್ತಿ ನಿಮಗೋಸ್ಕರ ಅಂತಾನೆ ದುಡಿಯೊ ಅವಳಿಗೆ ಅದೆಷ್ಟು ಜನ ಗಂಡಂದಿರು ಅವಳ ಮುಟ್ಟಿನ ದಿನದಲ್ಲಿ ಅಡುಗೆ ಮಾಡಿ ಹಾಕ್ತಿರ?…. ಶಾಸ್ತ್ರ ಸಂಪ್ರದಾಯದ ಹೆಸರಲ್ಲಿ ಮೂರು ದಿನ ಹೊರಗಿಟ್ಟು ಮಾಡೋದು ಬೇಡ. ಮುಟ್ಟಿಂದಲೆ ಹುಟ್ಟು ಅನ್ನೊ ನಗ್ನ ಸತ್ಯ ಎಲ್ಲರಿಗೂ ಗೊತ್ತಿದ್ರು ಮುಟ್ಟದರೆ ಮೈಲಿಗೆ ಅನ್ನೊ ಅನಿಷ್ಟ ಪದ್ದತಿಗಳು ಇಂದಿಗೂ ಜೀವಂತವಾಗಿದೆ. ಮದುವೆ ಮುಂಜಿಗಳಿಗೆ , ಹಬ್ಬ ಸಂಭ್ರಮದಲ್ಲಿ ಪಾಲ್ಗೊಳ್ಳೊಹಾಗಿಲ್ಲ,ಹರಕು ಕಂಬಳಿ, ಹಳೆ ಬೆಡ್ ಶೀಟ್, ತಲೆದಿಂಬಿಗೊಂದೆರಡು ಗೋಣಿಚೀಲ, ಕೂತಲ್ಲಿಂದ ಏಳೊ ಹಾಗಿಲ್ಲ, ಅಬ್ಬಬ್ಬಾ ನಮ್ಮದೇ ದೇಹದ ಮೇಲೆ ನಮಗೆ ಜಿಗುಪ್ಸೆ ಬರೊತರ. ಜಗತ್ತಿನಲ್ಲಿ ಯಾರು ಯಾರ ನೋವನ್ನೂ ಅನುಭವಿಸೋಕಾಗಲ್ಲ ಆದರೆ ಅನುಕಂಪದಿ, ಅನುರಾಗದಿ ಸ್ಪಂದಿಸಬಹುದು. ಒಬ್ಬ ಗಂಡನ ನಿಜವಾದ ಪ್ರೀತಿ ತಿಳಿಯೋದು ಹೆಣ್ಣಿನ ಅಸಹಾಯಕತೆಯಲ್ಲಿ ಮತ್ತೆ ಅವಳ ಅನಾರೋಗ್ಯದಲ್ಲಿ. ನೀವು ನಿಜವಾಗಲೂ ನಿಮ್ಮ ಹೆಂಡ್ತಿನ ಪ್ರೀತ್ಸೋದೆ ನಿಜವಾದ್ರೆ ಅವಳ ಮುಟ್ಟಿನ ದಿನಗಳಲ್ಲಿ ಸ್ನಾನಕ್ಕೆ ಬಿಸಿ ನೀರು ಕಾಯಿಸ್ಕೊಡಿ ತಲೆಯಿಂದ ಪಾದದವರೆಗೆ ಇಳಿಯೊ ಬಿಸಿ ನೀರಿನ ಮಜ್ಜನ ಅದೆಷ್ಟೊ ಹಿತ ಅನ್ಸತ್ತೆ. ಆ ಹೊತ್ತಲ್ಲಿ ದೈಹಿಕವಾಗಿ ಕಿರಿ ಕಿರಿ ಆಗ್ತಿರೊದ್ರಿಂದ ಮಾನಸಿಕವಾಗಿ ಸ್ವಲ್ಪ ಸಿಟ್ಟು ಬರ್ತಿರತ್ತೆ ಎರಡು ದಿನ ಸಮಾಧಾನದಿಂದ ಸುಧಾರಿಸ್ಕೊಳ್ಳಿ, ಮೆಡಿಕಲ್ಗಳಿಗೆ ಹೋಗಿ ಅವಳಿಗೆ ಬೇಕಾಗಿರೊ ಸ್ಯಾನಿಟರಿ ಪ್ಯಾಡ್ಗಳನ್ನ ತಂದು ಕೊಡಿ, ಅಂಗಡಿಗಳಿಗೆ ಹೋಗಿ ಇದ್ನೆಲ್ಲ ಕೇಳೊದ್ರಿಂದ ನೀವ್ಯಾರು ನಗೆಪಾಟಲಿಗೆ ಗುರಿಯಾಗಲ್ಲ, ಯಾಕಂದ್ರೆ ಹುಟ್ಟಿನ ಹಿಂದಿದ್ದ ಮುಟ್ಟಿನ ಮಹತ್ವ ತಿಳಿದ ಯಾವ ಗಂಡಸು ಕೂಡ ನಗೋದಿಲ್ಲ.ಗಂಡನಾದವನು ಮಾತ್ರ ಹೀಗಿರಬೇಕಂತಲ್ಲ ಒಬ್ಬ ಲವರ್, ಒಬ್ಬ ಅಣ್ಣನಾದವನೂ ಕೂಡ ಇದೆಲ್ಲ ತಿಳ್ಕೊಬೇಕು. ಯಾವ ಹೆಣ್ಣು ಕೂಡ ಬಾಯ್ಬಿಟ್ಟು ಹೇಳಲ್ಲ ಯಾಕಂದ್ರೆ ಮುಟ್ಟನ್ನೊದು ಬರಿ ಮೂರು ದಿನದ ಸಂಕಟವಲ್ಲ, ನೋವಿನ ಮೂಟೆಯಲ್ಲ, ಕಿಬ್ಬೊಟ್ಟೆಯಲ್ಲಾಗುವ ಏರು ಪೇರಿನ ಇಳಿವ ರಕ್ರಸ್ತಾವದಂತೆ ಮಾನಸಿಕ ಭಾವನೆಗಳ ತೊಳಲಾಟ… ಹೆಣ್ತನಕ್ಕಿದು ಅನಿವಾರ್ಯ, ಅವಶ್ಯಕತೆ ಅನ್ನೋದು ಪ್ರತಿಯೊಂದು ಹೆಣ್ಣಿಗೂ ಅರ್ಥವಾಗಿದೆ ಇನ್ನೆನ್ನಿದ್ದರು ಅರ್ಥ ಮಾಡಿಕೊಳ್ಳುವ ಸರದಿ ಗಂಡಸರದ್ದೆ…. ======================================= ಪರಿಚಯ: ಊರು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಪುಟ್ಟ ಹಳ್ಳಿ ಓದಿದ್ದು ಬಿ.ಕಾಂ ಪ್ರಸ್ತುತ ಬೆಂಗಳೂರಿನ ಒಂದು ಕಂಪನಿಯಲ್ಲಿ ಕೆಲಸ

ಮಹಿಳೆ Read Post »

ಇತರೆ

ಮಕ್ಕಳ ಸಾಹಿತ್ಯ

ಆಯ್ಕೆ ಅವ್ಯಕ್ತ ನನ್ನಹೆಚ್ಚಿನ ಸಮಯವನ್ನು ನಾನು ಮಕ್ಕಳೊಂದಿಗೆ ಕಳೆಯುತ್ತಿರುವುದು.ಅವರೊಂದಿಗೆ ಆದ ಅನುಭವಗಳನ್ನು ಸಣ್ಣ ಸಣ್ಣ ಕಥೆಗಳ ಮೂಲಕ ಬರೆಯುತ್ತೇನೆ. ಅಂತ ಕಥೆಗಳಲ್ಲಿ ಇದೂ ಒಂದು) ಆಯ್ಕೆ ಒಳಗೆ ತಲೆಯಾಡಿಸುತ್ತಾ ನಡೆದು ಬಂದ್ಲು. ನಾನು ನೋಡಿ ಮುಗುಳ್ನಗೆ ಬೀರಿದೆ. ಜ್ವಾಲಾಮುಖಿ ಬಚ್ಚಿಟ್ಟಿದ್ದಂತೆ“ನಾನು ಅವರನ್ನೆಲ್ಲ ದ್ವೇಷಿಸುತ್ತೇನೆ”, “ಇನ್ಯಾವತ್ತೂ ಅವರೊಂದಿಗೆ ಮಾತಾಡೋದಿಲ್ಲ”. ನಾನು ತಾಳ್ಮೆಯಿಂದ “ಏನಾಯ್ತೆ ನನ್ ರಾಣಿ?”. ಅಂತ ಕೇಳ್ದೆ. ನನ್ನ ಪ್ರಶ್ನೆಗೆ ಕಾಯ್ತಿದ್ಲೆನೋಅನ್ನೋ ಹಾಗೆ“ನನಗೆ ನೋವಾಗಿದೆ, ನನ್ನ ಆಡ್ಕೋತಾರೆ,ನನ್ನ ನೋಡಿ ನಗ್ತಾರೆ,ನಾನು…. ನನ್ನ…. ನನಗೆ…”ನಿಲ್ಲೋಮಾತೇ ಇಲ್ಲ ! ನಾನುಸ್ವರ ಸ್ವಲ್ಪ ಏರಿಸಿ, ಮೃದುವಾಗಿ ಹೇಳಿದೆ “ಸ್ಟಾಪ್!”. ಅವಳ ಕಣ್ಣಂಚಲ್ಲಿ ನೋವು ಸಿಟ್ಟು ಎರಡೂ ಸೇರಿ ಕಣ್ಣೀರು ಬರದಷ್ಟು ನಿರಾಸೆ ನನಗೆ ಭಾಸವಾಗಿತ್ತು! ಮೆಲ್ಲನೆ ನಾನೇ ಹತ್ತಿರ ಹೋಗಿ ಮುದ್ದಾಗಿ ತಲೆಸವರಿ ಕೇಳಿದೆ. “ಸರೀ…ಅವರು ಎಷ್ಟು ಸಾರಿ ನಿನ್ನ ನೋಡಿ ನಕ್ಕರು? ಎಷ್ಟು ಸಾರಿಛೇಡ್ಸಿದ್ರು?”ಸಿಟ್ಟಿನಲ್ಲಿ “ಒಂದು ಸಾರಿ ಅಲ್ಲ ಎರಡು ಅಲ್ಲ ಮೂರು ಅಲ್ಲ…” ಲೆಕ್ಕ ಮಾಡಲು ಶುರುಮಾಡಿದಳು.“10 ಬಾರಿ”ಎನ್ನುವಷ್ಟರಲ್ಲಿ ಸ್ವಲ್ಪ ಶಾಂತಿ ತುಂಬಿತ್ತು ಅವಳ್ಮನ್ಸಲ್ಲಿ. ನಾನು ಸುಮ್ಮ್ನೆ“ಈಗ ನಿನ್ನ ಮನಸ್ಸಲ್ಲಿ ಅದೇ ವಿಷಯ ಎಷ್ಟು ಬಾರಿ ನೆನೆಸಿಕೊಂಡು ಸಿಟ್ ಮಾಡ್ಕೊಂಡೆ?” ಅಂತ ಕೇಳ್ದೆ. ಯೋಚಿಸಿ ಅಳೆದು ಸುರಿದು ಲೆಕ್ಕ ಮಾಡಿ ಅವರು ಇವರು ಕಥೆ ಹೇಳ್ತಾ ಕೊನೆಗೆ 25 ಎಂದ್ಲು. ನಾನು ೨೫+೧೦+೨ಬಾರಿನನ್ಹತ್ರ,ಒಟ್ಟು ೩೭ ಬಾರಿ…ಈಗ ಹೇಳು “ನಿನ್ನನ್ನು ಹೆಚ್ಚು ನೋವಿಸಿದ್ದು ಯಾರು ಬಂಗಾರಿ?” ಸ್ವಲ್ಪ ಹೊತ್ತು ಸುಮ್ಮನೇ ನಿಂತು ಮತ್ತೆ ನಾಚಿಕೆಯಿಂದ“ನಾಆಆಆನೇಏಏಏಏಎಂದು ಹೇಳಿ ನಕ್ಕುಬಿಟ್ಟಳು. ನಾನು ಎಲ್ಲರ ಕಡೆ ತಿರುಗಿ ಹೇಳಿದೆ.. “ಸಂತೋಷವಾಗಿರುವುದು ನಮ್ಮ ಆಯ್ಕೆ ಯಾಗಿರಲಿ…, ಕ್ಷಮಿಸಿಬಿಡಿ… ಆದರೆ,ನೋವುತಂದಅನುಭವ ಮರೆಯದಿರಿ!” ==================================== ಪರಿಚಯ: ವಿದ್ಯಾಭ್ಯಾಸ: ಎಂ.ಎಸ್ಸಿ.(ರಸಾಯನಶಾಸ್ತ್ರ) ಬಿ.ಎಡ್, ವೃತ್ತಿ: MAGMA COACHING ZONE ನನಡೆಸುತ್ತಿದ್ದೇನೆ. (ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಮಾಡಿರುವಂತಹ ತಾಣ)ಹವ್ಯಾಸಗಳು: ಬರೆಯೋದು, ಪ್ರಕೃತಿಗೆ ಹತ್ತಿರವಾಗುವಂಥ ತಾಣಗಳಿಗೆ ಹೋಗುವುದು, ಹಾಡು ಕೇಳುವುದು, ಕರಕುಶಲ ಕೆಲಸಗಳನ್ನು ಮಾಡುವುದು,ಇತ್ಯಾದಿ.

ಮಕ್ಕಳ ಸಾಹಿತ್ಯ Read Post »

ಇತರೆ

ಭಾಷೆ

ಕನ್ನಡದ ಕಲಿಸುವಿಕೆಯ ಒಂದು ಅನುಭವ ದಾಕ್ಷಾಯಣಿ ನಾಗರಾಜ್            ಭಾಷೆಯೂ ಮಾನವನಿಗೆ ಒದಗಿಬಂದ ಅತ್ಯಾದ್ಭುತವಾದ ಶಕ್ತಿಯಾಗಿದೆ.ಅದನ್ನು ಬಳಸಿ ರೂಢಿಸಿಕೊಂಡು ಸಿದ್ದಿಸಿದರೆ ಅದು ಮಾಂತ್ರಿಕ ಶಕ್ತಿಯಾಗಿ ಪರಿವರ್ತಿನೆಯಾಗಿ ಅವನಿಗೆ ಜೀವಂತಿಕೆಯನ್ನು ತಂದುಕೊಡುತ್ತದೆ. ಭಾಷಾ ಕಲಿಕೆಯನ್ನು ಕಲಿಸುವ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಶಿಕ್ಷಕನು ಮಹತ್ವದ ಪಾತ್ರ ನಿರ್ವಹಿಸಬೇಕಾಗುತ್ತದೆ.          ಮಗುವಿನ ಸರ್ವತೋಮುಖ ಬೆಳೆವಣಿಗೆಯಲ್ಲಿ ಮಾತೃಭಾಷೆಯ ಪಾತ್ರ ಮುಖ್ಯವಾಗಿದೆ. ಆದ್ದರಿಂದ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡಬೇಕು.            ಮಗು,ಮನೆ ,ಪರಿಸರ ,ಕೌಟುಂಬಿಕ ಸದಸ್ಯರು, ಸಹಪಾಠಿಗಳು ಸಮಾಜದ ಇತರರೊಂದಿಗೆ ಎಳವೆಯಿಂದಲೇ ಹಲವಾರು ಭಾಷಿಕ ಸಾಮರ್ಥಗಳನ್ನು ಸ್ವಾಭಾವಿಕವಾಗಿ ರೂಢಿಸಿಕೊಂಡೇ ಶಾಲೆಗೆ ಬಂದಿರುತ್ತದೆ.                   ವಸ್ತುಗಳನ್ನು ಗುರುತಿಸುವ,ಗ್ರಹಿಸುವ,ಸಂಬಂಧಕಲ್ಪಿಸುವ,ನೆನಪಿಟ್ಟುಕೊಂಡು ಅರ್ಥೈಸುವ,ವಿಶ್ಲೇಷಿಸುವ,ಬಳಸುವ,ಹೊಂದಾಣಿಕೆ ಮಾಡುವ,ಕಲ್ಪಿಸುವ ಕಲ್ಪನೆಯಾಚೆಗೆ ಯೋಚಿಸುವ,ತನ್ನ ಅಗತ್ಯತೆಗೆ ತಕ್ಕಂತೆ ಬಳಸುವ ,ಹೋಲಿಕೆ ಮಾಡುವ, ವ್ಯತ್ಯಾಸೀಕರಿಸುವ,ಸಮಗ್ರವಾಗಿ ನೋಡಿ ಗ್ರಹಿಸುವ ,ದಿಕ್ಕು ಬಣ್ಣ ಗಾತ್ರ ಗುರುತಿಸುವ ಇನ್ನೂ ಮುಂತಾದ ಭಾಷಾ ಸಾಮರ್ಥಗಳನ್ನು ಮಾತೃಭಾಷೆಯಲ್ಲಿ ಸ್ವಾಭಾವಿಕವಾಗಿ ಕಲಿತಿರುತ್ತದೆ.ಆದ್ದರಿಂದ ಕನ್ನಡಭಾಷೆಯ ಕಲಿಕೆಯಿಂದಲೇ ಈ ಎಲ್ಲಾ ಸಾಮರ್ಥಗಳು ಹೊರತರಲು ಸಾಧ್ಯ.           ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ನಾನು ನನ್ನ ವೃತ್ತಿಯಲ್ಲಿ ಗಮನಿಸಿದ ಒಂದು ಅಂಶವೆಂದರೆ ಯಾವ ಮಗು ಕನ್ನಡ(ಮಾತೃಭಾಷೆ)ವನ್ನು ಸ್ಪಷ್ಟವಾಗಿ ಓದುತ್ತಾ,ತಪ್ಪಿಲ್ಲದಂತೆ ಬರೆಯುತ್ತದೆಯೋ ಆ ಮಗು ಇತರ ವಿಷಯಗಳ ಮತ್ತು ಭಾಷೆಗಳ ಕಲಿಕೆಯಲ್ಲಿ ಸಕಾರಾತ್ಮಕವಾಗಿರುತ್ತದೆ.ಒಬ್ಬ ಒಳ್ಳೆಯ ಕನ್ನಡ ಶಿಕ್ಷಕ ಮಗುವಿನಲ್ಲಿ ಓದುವ ರುಚಿಯನ್ನು,ಪ್ರಶ್ನೆ ಮಾಡುವ ಬಾಯಿಯನ್ನು,ಮತ್ತು ಸೃಜನಾತ್ಮಕತೆಯನ್ನು ಬೆಳೆಸಬಲ್ಲ.ನಮ್ಮ ಯೋಚನೆಯ ಲಹರಿ ಮೂಡುವುದು ಮಾತೃಭಾಷೆಯಲ್ಲಿ.ಆದ್ದರಿಂದ ಕನ್ನಡದ ಕಲಿಕೆಯೂ ಗುಣಮಟ್ಟದ್ದಾಗಿರಬೇಕು.           ನಮ್ಮ ಕರುನಾಡು ವಿಭಿನ್ನ ಕನ್ನಡಗಳ ಆಮೂಲ್ಯ ಸಂಗಮ.ಆ ನೆಲದ ಸೊಗಡಿನಂತೆ ಕನ್ನಡ ಅಲ್ಲಿನವರ ಜೀವನಾಡಿಯಾಗುತ್ತಾ ಹೋಗುತ್ತದೆ.         ನಾನು ವೃತ್ತಿಯ ಪ್ರಾರಂಭದ ದಿನಗಳಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಗಡಿನಾಡ ಒಂದು ಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೆ. ಅಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಲೂ ಹರಸಾಹಸ ಪಡಬೇಕಾಯಿತು. ಕಾರಣವೆಂದರೆ ಅಲ್ಲಿ ಇಡೀ ಊರಿನ ತುಂಬಾ ಅವರ ಮಾತೃ ಭಾಷೆ ಮಠಾಠಿ ಆಗಿತ್ತು.ಕೆಲವೇ ಕುಟುಂಬಗಳ ಮಾತೃಭಾಷೆ ಮಾತ್ರ ಕನ್ನಡ‌.ಅಂಥಾ ಮಕ್ಕಳು ಮಾತ್ರ ನಮ್ಮ ಕನ್ನಡ ಶಾಲೆಗೆ ದಾಖಲಾಗುತ್ತಿದ್ದರು. ಅಲ್ಲಿ ಕೆಲಸ ನಿರ್ವಹಿಸಲು ಹೋದ ಶಿಕ್ಷಕರು ತಾವೇ ಮಠಾಠಿ ಕಲಿತು ಮಕ್ಕಳಿಗೆ ಕನ್ನಡ ಅರ್ಥ ಮಾಡಿಸಬೇಕಾದ ಪರಿಸ್ಥಿತಿ.      ಆದರೆ ನನಗೆ ಬರುತ್ತಿದ್ದು ಕನ್ನಡ ಮಾತ್ರ!        -ನಮ್ಮ ಮಕ್ಕಳಿಗೆ ಕನ್ನಡವನ್ನು ಕೇಳಿಸಿಕೊಳ್ಳುವ ಕೌಶಲ‌ ಗೊತ್ತಿದ್ದರೂ ಅದನ್ನು ಸಮರ್ಥವಾಗಿ ಬಳಸಲು ಗೊತ್ತಿರಲಿಲ್ಲ. ಅಂತಹ ವಾತಾವರಣದ ಕೊರತೆ ಕಂಡುಬರುತ್ತಿತ್ತು.        -ನಮ್ಮ ಮಕ್ಕಳಿಗೆ ಒಂದೆರಡು ವಾಕ್ಯಗಳ ಅರ್ಥ ಗೊತ್ತಿದರೂ,ಒಂದು ಇಡೀ ಪ್ಯಾರದ ಭಾವಾರ್ಥ ಅವರಿಗೆ ಆಗುತ್ತಿರಲಿಲ್ಲ.        -ಮಾತನಾಡಲು ಹಿಂಜರಿತ ಇರುವುದರ ಜೊತೆಗೆ ಕೆಲವರು ಮಾತನಾಡಿದರೂ ಬರೀ ತುಂಡು ವಾಕ್ಯಗಳನ್ನು ಮಾತನಾಡುತ್ತಿದ್ದರು.ಪೂರ್ತಿ ವಾಕ್ಯ ಬಳಸಲು ಗೊತ್ತಿರಲಿಲ್ಲ.       ಹಾಗಾಗಿ ಮಕ್ಕಳಿಗೆ ನಾನು ಹೊಸಶಿಕ್ಷಕಿಯಾಗಿದ್ದರಿಂದ ಮಾತನಾಡಿಸುವ ತವಕ ಬಹಳಷ್ಟು ಇದ್ದರು ಭಾಷೆ ಬರದೆ ಒದ್ದಾಡುತ್ತಿದ್ದವು. ನನ್ನ ಪರಿಸ್ಥಿತಿ ಅವರಿಗಿಂತ ಭಿನ್ನವಾಗಿರಲಿಲ್ಲ. ಪ್ರಾರಂಭದ ದಿನಗಳಲ್ಲಿ ನಾನು ಹೇಳಿದ ಮಾತುಗಳನ್ನು ನಮ್ಮ ಮುಖ್ಯ ಶಿಕ್ಷಕರು ಮಕ್ಕಳಿಗೆ ಮರಾಠಿಯಲ್ಲಿ ತರ್ಜುಮೆ ಮಾಡಿ ಹೇಳುತ್ತಿದ್ದರು.ಅವರು ಹೇಳಿದ್ದನ್ನು ನನಗೆ. ಕನ್ನಡ ಮಾತುಗಳು ಕೇಳದೆ ನಮಗೆ ಏನೋ ಕಳೆದುಕೊಂಡ ಭಾವ. ಆದ್ದರಿಂದ ಕನ್ನಡವನ್ನು ಕನ್ನಡದಲ್ಲಿ ಹೇಳಲೇಬೇಕು ಅನ್ನುವ ಮನಸ್ಸು ಮಾಡಿದೆ.     ಕೊನೆಗೆ ಅವರಿಗೆ ಎಷ್ಟು ಅರ್ಥ ಆಗುತ್ತೋ ಅಷ್ಟೇ ಆಗಲಿ ಅಂತ ಆ ಮಕ್ಕಳ ಜೊತೆ ಬರೀ ಕನ್ನಡ ಮಾತ್ರ ಮಾತನಾಡಲು ಶುರು ಮಾಡಿದೆ.       ಕೆಲವೊಮ್ಮೆ ಸನ್ನೆಗಳ ಮೂಲಕ ಪದಗಳನ್ನು ಉಚ್ಚರಿಸುತ್ತಾ ಕಲಿಸಲು ಶುರುವಿಟ್ಟುಕೊಂಡೆ.         ಅವರ ಪೋಷಕರನ್ನು ಕರೆಸಿ ಮನೆಯಲ್ಲಿ ಹೆಚ್ಚಾನುಹೆಚ್ಚು ಕನ್ನಡ ಮಾತನಾಡಲು ತಿಳಿಸಿದೆ.        ಮಕ್ಕಳಿಗೆ ಕನ್ನಡದಲ್ಲೇ ಸಣ್ಣ ಸಣ್ಣ ಸಂಭಾಷಣೆಗಳ ಇರುವ ನಾಟಕ ಮಾಡಿಸಿದೆವು.           ಶಿಶುಗೀತೆ,ಪದಗಳ ಆಟ,ಕನ್ನಡದಲ್ಲೇ ಮಾತುಕತೆ, ಹೀಗೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿದೆವು.        ಅವರು ನಿತ್ಯ ಜೀವನದ ಘಟನೆಗಳನ್ನು ಕನ್ನಡದಲ್ಲಿ ಹೇಳಲು ಪ್ರೇರೆಪಿಸಿದೆವು. ಉದಾಹರಣೆಗೆ ಸಂತೆಗೆ ಹೋದಾಗ ಅವರ ಅನುಭವ,ಅವರ ಮನೆಯಲ್ಲಿ ಆಚರಿಸುವ ಹಬ್ಬ, ದಿನಸಿ ಅಂಗಡಿಯಲ್ಲಿನ ಅನುಭವ,, ಹೀಗೆ ಹಲವಾರು. ಮೊದಮೊದಲು ಅವರ ಮಾತುಗಳ ಇಪ್ಪತ್ತು ಶಬ್ದಗಳಲ್ಲಿ ಹತ್ತಕ್ಕಿಂತ ಹೆಚ್ಚು ಮರಾಠಿ ಪದಗಳು ನುಸುಳಿದ್ದವು. ಹಲವಾರು ಚಟುವಟಿಕೆಗಳ ಮೂಲಕ ಅವರನ್ನು ಪ್ರೇರೆಪಿಸಿದ ಬರುಬರುತ್ತಾ ಅವುಗಳ ಸಂಖ್ಯೆ ಇಳಿಕೆಯಾಗಿತ್ತು. ಅಂತೂ ನಮ್ಮ ಮಕ್ಕಳು ನನ್ನ ಜೊತೆ ಮಾತ್ರ ಕನ್ನಡ ಮಾತನಾಡಲು ಶುರು ಮಾಡಿದರು,,ಮುದ್ದಾಗಿ ,,ಕನ್ನಡ್ ಟೀಚರ್ ಅನ್ನುತ್ತಾ. ಕನ್ನಡ ಅಂದರೆ ಸಾಕು “ಮಲ ಕಾಯ್ ಸಮಜಲೆ ನಹೀ”(ನನಗೆ ಅರ್ಥ ಆಗುತ್ತಿಲ್ಲ) ಅನ್ನುತ್ತಿಲ್ಲ ನಮ್ಮ ಮಕ್ಕಳು “ಕನ್ನಡ್ ಮಲ ಯೇತೆ” (ಕನ್ನಡ ನನಗೆ ಬರುತ್ತೆ) ಅನ್ನುವಂತದರು.        ಶಾಲೆಗಳಲ್ಲಿ ಕೆಲವು ಮಕ್ಕಳ ಮಾತೃಭಾಷೆ ಬೇರೆಯದೇ ಆಗಿರುತ್ತದೆ.ಆದ್ದರಿಂದ ಅಂಥಾ ಮಕ್ಕಳ ಕನ್ನಡ ಕಲಿಕೆಯಲ್ಲಿ ನಾವು ಹೆಚ್ಚಿನ ಗಮನ ನೀಡಬೇಕಾಗುತ್ತದೆ.       ಕನ್ನಡದ ಉಚ್ಚಾರಣೆಯನ್ನು ಮೊದಲು ನಾವು ಸರಿಯಾಗಿ ಮಾಡಬೇಕು.ಅಂತೆಯೇ  ಮಕ್ಕಳಿಗೆ ಸರಿಯಾದ ಉಚ್ಚಾರಣೆ ಕಲಿಸಬೇಕು.       ಇನ್ನು ಕೆಲವು ಮಕ್ಕಳು ವ್ಯಾಕರಣವನ್ನು ಬಳಸುವಲ್ಲಿ ಎಡವುತ್ತಾರೆ.ಉದಾಹರಣೆಗೆ ವಾಕ್ಯಗಳಲ್ಲಿ ಏಕವಚನ ಬಹುವಚನಗಳನ್ನು,ಲಿಂಗಗಳನ್ನು  ಬಳಸುವಲ್ಲಿ‌ ಗೊಂದಲಕ್ಕೀಡಾಗುತ್ತಾರೆ. ಅಂತಹ ಸಂದರ್ಭಗಳಲ್ಲಿ ಈ ಕ್ರಿಯಾತ್ಮಕ ವ್ಯಾಕರಣದ ಚಟುವಟಿಕೆಗಳ ಮೂಲಕ ನಾವು ಅರಿವು ಮೂಡಿಸಬಹುದು.      ಆಲಿಸುವಿಕೆ,ಮಾತನಾಡುವುದು,ಓದುವುದು, ಬರೆಯುವುದು ಮತ್ತು ಕ್ರಿಯಾತ್ಮಕ ವ್ಯಾಕರಣದ  ಕೌಶಲಗಳು ಸಮರ್ಪಕವಾಗಿ ಮಕ್ಕಳಿಂದ ಬಳಕೆ ಆಗಬೇಕು.         ಇಂಗ್ಲಿಷ್ ನಲ್ಲಿ ಕಲಿತ ಮಕ್ಕಳು ಬರೆಯಲು ಓದಲು ಶಕ್ತರಾಗಿರುತ್ತಾರೆ.ಆದರೆ ಆಲಿಸಿದ್ದನ್ನು ಅರ್ಥ   ಅರ್ಥಮಾಡಿಕೊಳ್ಳುವಲ್ಲಿ ಮತ್ತು   ಸನ್ನಿವೇಷಕ್ಕೆ ತಕ್ಕಂತೆ ಕನ್ನಡವನ್ನು ಬಳಸಿ ಮಾತನಾಡುವಲ್ಲಿ ಸೋಲುತ್ತಾರೆ.     ಇಂಥ ಸನ್ನಿವೇಶಗಳಲ್ಲಿ ಮಕ್ಕಳಿಗೆ ಅಗತ್ಯ ಪೂರಕ ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಅವರು ಸಹಜವಾಗಿ ಆಲಿಸಿ ಅರ್ಥೈಸಿಕೊಳ್ಳಲು,ಮಾತನಾಡಲೂ ಸಹಾಯ ಮಾಡಬೇಕಾಗುತ್ತದೆ.     ಹೀಗೆ ಬೊಧನೆಯಲ್ಲಿ ಹಲವಾರು ಎಡರತೊಡರುಗಳು ಬಂದೇ ಬರುತ್ತವೆ.ಅವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವುದರೊಂದಿಗೆ ಮಾತೃಭಾಷೆಯನ್ನು ಕಲಿಸಬೇಕಾಗಿದೆ.      ಒಟ್ಟಾರೆ ಕನ್ನಡ ಶಿಕ್ಷಕರ ಜವಾಬ್ದಾರಿ ಕನ್ನಡ ಕಲಿಸುವಲ್ಲಿ ಬಹಳಷ್ಟು ಇದೆ ಎಂದರೆ ತಪ್ಪಾಗಲಾರದು.ಇಂದಿನ ಅಗತ್ಯ ಕೂಡ ಇದು. ===================

ಭಾಷೆ Read Post »

ಇತರೆ

ಬಾಲ್ಯದ ದೀಪಾವಳಿ

ಅಪ್ಪ ಸಿಡಿಸಿದ ಪಟಾಕಿ ಸಿಂಧು ಭಾರ್ಗವ್. ದೀಪಾವಳಿ ಬಂತೆಂದರೆ ಎಲ್ಲಿಲ್ಲದ ಸಂಭ್ರಮ, ಸಡಗರ. ಪುಟಾಣಿಗಳಿಗೆ ಹೊಸ ಝಯಿತಾರಿ ಅಂಗಿ ಕೊಡಿಸುವರು. ಬೊಗಸೆ ತುಂಬಾ ಸಿಹಿಯನ್ನು ನೀಡುವರು. ಯಾರ ಮನೆಗೆ ಹೋದರೂ ಸಿಹಿತಿಂಡಿ ನೀಡಿ ಆ ಪುಟ್ಟ ಮಕ್ಕಳ ಖುಷಿಯನ್ನು ತಾವೂ ಅನುಭವಿಸುವರು. ಅದಲ್ಲದೇ ಇದಕ್ಕಿಂತ ಹೆಚ್ಚೆಂದರೆ ಅಪ್ಪ ಪಟಾಕಿ ತರುವುದು ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಕುಣಿದು ಕುಪ್ಪಳಿಸುತ್ತಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ಕಟ್ಟಡಗಳ ಹಾವಳಿಯೇ ವಿನಃ, ಮಕ್ಕಳಿಗೆ ಆಡಲು ಅನುಕೂಲವಾಗುವಂತಹ ವಾತಾವರಣ ಕಡಿಮೆ. ಆದರೂ ಈ ದೀಪಾವಳಿ ಹಬ್ಬ ಬಂತೆಂದರೆ ಎಲ್ಲರೂ ರಸ್ತೆಯಲ್ಲೇ ಇರುತ್ತಾರೆ. ಯಾವ ವಾಹನಗಳಿಗೂ ಹೋಗಲು ಬಿಡುವುದಿಲ್ಲ. ಓಣಿಯ ಮಕ್ಕಳೆಲ್ಲ ಒಂದಾಗಿ ರಾಕೇಟ್, ಬಿರ್ಸು, ನಕ್ಷತ್ರ ಕಡ್ಡಿ, ಬಾಳೆಮರ, ಲಕ್ಷ್ಮೀ ಪಟಾಕಿ, ನೆಲಚಕ್ರ, ಆಟಂಬಾಂಬ್ ಹೀಗೆ ಬಗೆಬಗೆಯ ಪಟಾಕಿಗಳ ಸಿಡಿಸುತ್ತಾ ಸಂಭ್ರಮ ಪಡುತ್ತಾರೆ. ಅಲ್ಲದೇ ಸಂಜೆ ಆದ ಮೇಲೆ ಎಲ್ಲರ ಮನೆಯ ಗಂಡಸರು ಅಂದರೆ ಅಪ್ಪಂದಿರು ರಸ್ತೆಗಿಳಿದು ತಮ್ಮ ಮಕ್ಕಳ ಜೊತೆ ಪಟಾಕಿ ಸಿಡಿಸಿ ಸಂಭ್ರಮ ಹೆಚ್ಚಿಸುತ್ತಾರೆ. ಹೀಗಿರುವಾಗ ಒಮ್ಮೆ ಪಕ್ಕದ ಮನೆಯ ಅಂಕಲ್ ಸಂಜೆ ವೇಳೆಗೆ ಒಂದು ದೊಡ್ಡ ಬಾಕ್ಸ್ ಪಟಾಕಿ ತಂದಿದ್ದರು. ಮಕ್ಕಳನ್ನೆಲ್ಲ ದೂರ ನಿಲ್ಲಲು ಹೇಳಿ ಒಂದೊಂದೇ ಜಾತಿಯ ಪಟಾಕಿ ಸಿಡಿಸುತ್ತಾ ಮಕ್ಕಳಲ್ಲಿ ಮೋಜು ಹೆಚ್ಚಿಸುತ್ತ ಇದ್ದರು. ಅದೊಂದು ಹೀರೋತನ ಪ್ರದರ್ಶನ ನಡೆಯುತ್ತಾ ಇತ್ತು. ಇದನ್ನೆಲ್ಲ ಹೆಚ್ಚಿನವರು ಅವರವರ ಮನೆಯ ಮಹಡಿ ಮೇಲಿಂದಲೂ ನೋಡುತ್ತ ಇದ್ದರು. ಹೀಗಿರುವಾಗ, ಅಂಕಲ್ ಮೊದಮೊದಲು ಸಣ್ಣಗಿನ ನೆಲಚಕ್ರ, ನಕ್ಷತ್ರ ಕಡ್ಡಿ , ಬಾಳೆಗಿಡ ಎಲ್ಲವನ್ನೂ ಹಚ್ಚುತ್ತ ಬಂದರು. ಈ ನಡುವೆ ಒಂದು ರಾಕೆಟ್ ತುದಿಗೆ ಬೆಂಕಿ ಹಚ್ಚಿಯೇ ಬಿಟ್ಟರು. ಮಕ್ಕಳು ವರ್ಣಮಯ ಬೆಳಕನ್ನು ನೋಡುವುದರಲ್ಲೇ ತಲ್ಲೀನ‌‌. ಕುಣಿಯುತ್ತ ಚಪ್ಪಾಳೆ ತಟ್ಟುತ್ತಾ ಕೇಕೆ ಹಾಕುತ್ತಿರುವಾಗಲೇ ಆಗಸಕ್ಕೆ ಹಾರಬೇಕಿದ್ದ ಆ ರಾಕೇಟ್ ಸರಕ್ಕನೆ ಮಕ್ಕಳು ಇರುವ ಜಾಗಕ್ಕೆ ಬಂದು ಒಂದು ಪುಟಾಣಿ ಹುಡುಗಿಯ ಎದೆಯನ್ನು ಸೀಳಿ ರಸ್ತೆ ಮೇಲೇಯೇ ನೇರವಾಗಿ ಹೋಗಿ ಒಂದು ಕಾರಿಗೆ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದಿತು. “ಏನಾಯಿತು….?? ಓ ಮೈ ಗಾಡ್…” ಎಂದು ನೋಡುವಷ್ಟರಲ್ಲೇ ಆ ಮಗು ಪ್ರಜ್ಞೆ ತಪ್ಪಿ ಬಿದ್ದತು. ಮುಂಜಾಗ್ರತೆಗಾಗಿ ಏನನ್ನು ಹತ್ತಿರದಲ್ಲಿ ಇಟ್ಟುಕೊಂಡಿರಲಿಲ್ಲ. ಗಾಬರಿಯಾಗಿ ಆ ಮಗುವನ್ನು ಎತ್ತಿಕೊಂಡು ಮನೆ ಕಡೆ ಓಡತೊಡಗಿದರು‌. ಮಹಡಿ ಮೇಲೆ ನಿಂತು ನೋಡುತ್ತಿದ್ದವರೆಲ್ಲ ಭಯದಿಂದ “ಮಗು…ಮಗು…” ಎಂದು ಕಿರುಚುತ್ತ ಇದ್ದರು. ಕೊನೆಗೆ ಆ ಅಂಕಲ್ ಮನೆಯೊಳಗೆ ಹೋದಾಗ ಮಗುವ ನೋಡಿ ಅದರ ತಾಯಿಗೆ ಭಯವಾಗಿ ಅವರೂ ಕಿರುಚಿದರು. ಹೀಗೆ ಯಾರಿಗೂ ಏನು ಮಾಡಬೇಕು ಎಂದು ಅರಿವಾಗುತ್ತಲೇ ಇರಲಿಲ್ಲ. ಭಯದಿಂದ ಕೈಕಾಲುಗಳು ನಡುಗುತ್ತಿದ್ದವು. ನಂತರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತದೆ. ಮಗುವಿನ ಎದೆಯ ಭಾಗ ಸುಟ್ಟು ದೊಡ್ಡ ಗುಳ್ಳೆಯೊಂದು ಮೂಡುತ್ತದೆ. ಆ ಕಿರುಚಾಟ, ನೋವು ಒಂದೆರಡು ತಿಂಗಳುಗಳ ಕಾಲ ಎಲ್ಲರ ನಿದ್ರೆ ಕೆಡಿಸಿತ್ತು. ಹಾಗೆಯೇ ಅದೊಂದು ಕಲೆಯಾಗಿ ಆ ಮಗುವಿನ ಎದೆಯಲ್ಲಿ ಹಾಗೆಯೆ ಉಳಿದಿದೆ. ಸ್ನೇಹಿತರೇ, ಪಟಾಕಿ ಸಿಡಿಸುವುದು ತಪ್ಪಲ್ಲ. ಪುಟಾಣಿ ಮಕ್ಕಳ ಎದುರು ಹೀರೋ ಎಂದು ತೋರಿಸಲು ಹೋಗಿ ಅವಘಡಕ್ಕೆ ಸಿಲುಕಬೇಡಿ. ಮುಂಜಾಗ್ರತೆಗಾಗಿ ಒಂದು ಬಕೇಟು ಮರಳು, ನೀರು, ಐಸ್ ಕ್ಯೂಬ್, ಜೇನುಪುಪ್ಪ, ಬರ್ನಾಲ್ ಮುಲಾಮು ಸಗಣಿ, ಒಂದು ಪಾತ್ರೆ ಹುಣಸೆರಸ ಹೀಗೆ ಒಂದಿಲ್ಲೊಂದನ್ನು ಹತ್ತಿರದಲ್ಲೇ ಇರಿಸಿಕೊಂಡಿರಿ. ಈ ಎಂಟು ಹತ್ತು ವರುಷದ ಮಕ್ಕಳೋ ಇಲ್ಲ ಹದಿಹರೆಯದವರೂ ಕೂಡ ಪಟಾಕಿಗಳ ಜೊತೆ ಸರಸವಾಡುವುದನ್ನು ಕಡಿಮೆ ಮಾಡಿ. ನಿಮ್ಮ ಮೋಜು ಮಸ್ತಿ ಇನ್ನೊಬ್ಬರ ಭವಿಷ್ಯವನ್ನೇ ಹಾಳು ಮಾಡಬಹುದು. ಕಣ್ಣುಗಳು ಕುರುಡಾಗಲೂ ಬಹುದು. ದೇಹದ ವಿವಿಧ ಅಂಗಗಳ ಮೇಲಾಗುವ ಸುಟ್ಟಗಾಯ, ಕಲೆ ಎಂದೂ ಮರೆಯಲು ಸಾಧ್ಯವಿಲ್ಲ. ಆ ವಿಷಮದ್ದನ್ನು ಒಳಗೊಂಡ ಸುಟ್ಟಗಾಯ ತುಂಬಾ ಉರಿ ಕೊಡುತ್ತದೆ. ಕ್ಯಾಂಡಲ್ ಉರಿಸುವ ಬದಲು ಮಣ್ಣಿನ ಹಣತೆಯಿಂದ ದೀಪವ ಹಚ್ಚಿರಿ. ಸಿಹಿಯ ಹಂಚಿ ಸಂಭ್ರಮಿಸಿರಿ. ಎಲ್ಲರಿಗೂ ಹಬ್ಬದ ಶುಭಾಶಯಗಳು.

ಬಾಲ್ಯದ ದೀಪಾವಳಿ Read Post »

ಇತರೆ

ಲೇಖನ

ಆ ದೃಶ್ಯಗಳನ್ನು ಅಲಂಕರಿಸಿ ಹಂಚುತ್ತಿದ್ದಾರೆ! ಪಿಎಂ ಇಕ್ಬಾಲ್ ಕೈರಂಗಳ ಕೆಲವು ದೌರ್ಜನ್ಯದ ವಾರ್ತೆಗಳು, ವೀಡಿಯೋಗಳು FB ಮತ್ತು ವಾಟ್ಸಪಲ್ಲಿ ಷೇರು ಆಗಿ ನಮ್ಮ ಕಣ್ಣಿಗೆ ಬೀಳುತ್ತಿರುವುತ್ತವೆ. ನೋಡಕ್ಕಾಗದೇ ನೋಡುತ್ತೇವೆ. ಆಗೆಲ್ಲಾ ಮನಸ್ಸು ವಿಪರೀತ ಹರ್ಟುಗೊಳ್ಳುತ್ತದೆ. ಹೃದಯವನ್ನು ಯಾರೋ ಹಿಂಡಿದಂತಾಗುತ್ತದೆ. ಕೆಲವು ನಮ್ಮನ್ನು ಅಳಿಸಿಯೇ ಬಿಡುತ್ತವೆ. ವಿಕೃತ ಮನಸ್ಸಿನ ಪೈಶಾಚಿಕ ಮನುಷ್ಯರ ವಿರುದ್ಧ ರಕ್ತ ಕುದಿಯುತ್ತದೆ. ಅವರನ್ನು ಜೀವಂತ ಸುಡಬೇಕೆಂದು ಅನಿಸುತ್ತದೆ. ಕ್ರೌರ್ಯ, ದೌರ್ಜನ್ಯಗಳ ತಾಕತ್ತೇ ಹಾಗೆ. ಒಂದೆರಡು ನಿಮಿಷದ ವಾರ್ತೆಯಾಗಿ ಅಥವಾ ವೀಡಿಯೋ ಆಗಿ ಸಿಕ್ಕರೆ ನಮಗೆ ಹೀಗಾಗುತ್ತವೆ. ಅವನ್ನು ಅನುಭವಿಸಿದ ಆ ಜೀವಗಳ ಪರಿಸ್ಥಿತಿಯೆಷ್ಟು ಘೋರ ಇದ್ದೀತು! ಉಹುಂ, ಕಲ್ಪನೆ ಮಾಡೋಕೂ ಆಗುವುದಿಲ್ಲ. ಈ ಲೋಕವೇ ಬೇಡ, ಲೋಕವು ಒಮ್ಮೆ ಅವಸಾನ ಕಾಣಲಿ ಎಂದು ಅನಿಸುತ್ತದೆ. ಇತ್ತೀಚೆಗೆ ಹೊಸ ಬೆಳವಣಿಗೆಯೊಂದು ಕಾಣಸಿಗುತ್ತಿವೆ. ಗಾಯಕ್ಕೆ ಬರೆ ಹಾಕುವುದು ಅನ್ತಾರಲ್ಲಾ ಹಾಗೆ. ದೌರ್ಜನ್ಯಗಳ ವೀಡಿಯೋಗಳ ಜೊತೆಗೆ ಕೋಮುಪ್ರಚೋದಿತ ಕೆಲವು ವಾಕ್ಯಗಳು ಸೇರಿ ಷೇರ್ ಆಗುತ್ತಿವೆ. ‘ತಮ್ಮ ಧರ್ಮೀಯರ ವಿರುದ್ಧ ಇಂತಹ ಧರ್ಮೀಯರ ದೌರ್ಜನ್ಯ ಇದು’ ಎನ್ನುತ್ತಾ ಒಂದಷ್ಟು ವಾಕ್ಯಗಳು ಇರುತ್ತವೆ. ಕೆಲವು ವಾಕ್ಯಗಳಂತೂ ಅತಿ ಅಸಹ್ಯವಾಗಿರುತ್ತವೆ. ‘ಕೋಮು ಅಸಹನೆಯನ್ನು ಪ್ರಚೋದಿಸುವುದೇ ಧರ್ಮರಕ್ಷಣೆ’ಯೆಂಬ ವ್ಯಾಧಿಗೆ ತುತ್ತಾದವರು ಕಂಡುಕೊಂಡ ಹೊಸ ಫಾರ್ಮುಲಾ ಇವು. ಒಂದೇ ವೀಡಿಯೋ ಒಂದು ಕಡೆ ಮುಸ್ಲಿಮರ ಮೇಲಿನ ಹಿಂದೂಗಳ ದೌರ್ಜನ್ಯವಾಗಿಯೂ, ಮತ್ತೊಂದು ಕಡೆ ಹಿಂದುಗಳ ಮೇಲಿನ‌ ಮುಸ್ಲಿಮರ ದೌರ್ಜನ್ಯವಾಗಿಯೂ ಬರೆಯಲ್ಪಟ್ಟು ಷೇರ್ ಆಗುತ್ತಿರುವುದು ನನ್ನ ಗಮನಕ್ಕೆ ಎಷ್ಟೋ ಬಂದಿದೆ. ವೀಡಿಯೊ- ಫೋಟೋಗಳಲ್ಲಿರುವ ಬರ್ಬರತೆಯೇ ಸಾಕಾಗುತ್ತೆ ನಮ್ಮ ಮನಸ್ಸನ್ನು ಗಾಯಗೊಳಿಸಿಬಿಡಲು. ಇಂತಹ ಬರಹಗಳು ಗಾಯದ ಮೇಲಿನ ಬರೆಯಾಗಿ ಪರಿಣಮಿಸುತ್ತದೆ. ಅಂತಹ ವೀಡಿಯೋಗಳಲ್ಲಿ ಕಾಣುವ ಕ್ರೂರಿಗಳದ್ದು ಒಂದು ಮನಸ್ಥಿತಿಯಾದರೆ ಅವನ್ನು ಕೋಮು ಅಸಹನೆಗೆ ಉಪಯೋಗಿಸಲು ಉದ್ರೇಕಕಾರಿಯಾಗಿ ಬರಹದೊಂದಿಗೆ ಅಲಂಕರಿಸುವವರದ್ದು ಇನ್ನೊಂದು ಮನಸ್ಥಿತಿ. ವೀಡಿಯೋ ಜೊತೆಗೆ ಇರುವ ಬರಹ ಕನ್ಫರ್ಮಾ, ಬಹುಶ ಕನ್ಫರ್ಮು ಆದರೂ ಅದು ಆ ಪುಂಡರ ಹೆಸರು ಪ್ರತಿನಿಧಿಸುವ ಧರ್ಮದ ಎಲ್ಲರ ಕೃತ್ಯವಾ ಎಂದು ಯೋಚಿಸುವ ಗೋಜಿಗೇ ಹೋಗದೇ ಹಾಗೇ ಷೇರ್ ಮಾಡುವವರದ್ದು ಮತ್ತೊಂದು ಮನಸ್ಥಿತಿ. ಇಂತಹ ಕೋಮೋದ್ರೇಕ ಬರಹದೊಂದಿಗಿನ ವೀಡಿಯೋಗಳನ್ನು ನಾನು ವರ್ಷಗಳಿಂದ ನೋಡುತ್ತಿದ್ದೇನೆ. ಅವುಗಳಲ್ಲಿರುವ ಸಂತ್ರಸ್ತರ ಪರವಾಗಿ ಮನಸ್ಸು ಮರುಗಿ, ಆ ರಾಕ್ಷಸರ ವಿರುದ್ಧವಾಗಿ ರೋಷ ಉಕ್ಕುತ್ತದೆಯೇ ಹೊರತು ಬರಹವನ್ನು ನಂಬಿ ಆ ಕೆಟ್ಟವರ ಹೆಸರುಗಳು ಪ್ರತಿನಿಧಿಸುವ ಧರ್ಮದ ಮೇಲೋ, ಧರ್ಮೀಯರ ಮೇಲೋ ಅಸಹನೆ ಒಮ್ಮೆಯೂ ಬಂದದ್ದಿಲ್ಲ. ವಾಟ್ಸಪ್, fbಯಲ್ಲಿ ವೀಡಿಯೋ ಜೊತೆ ಅಂತಹ ಬರಹ ಷೇರ್ ಮಾಡಿದವರೊಂದಿಗೆ ನನ್ನ ರಿಯಾಕ್ಟು, “ಈ ಘಟನೆಯ ರಾಕ್ಷಸರ ಮತ್ತು ಸಂತ್ರಸ್ತರ ಧರ್ಮ ಯಾವುದೆಂದು ನಿಮಗೆ ಕನ್ಫರ್ಮಾ, ಕನ್ಫರ್ಮಾದರೆ ಹೇಗೆ? ಇರೋದನ್ನು ಹಾಗೇ ನಂಬಿ ಷೇರ್ ಮಾಡಬೇಡಿ. ವೀಡಿಯೋವನ್ನು ಷೇರ್ ಮಾಡುವುದಾದರೆ ಅದರ ಜೊತೆಗಿರುವ ಬರಹವನ್ನು ದಯವಿಟ್ಟು ಅಳಿಸಿ’ ಎಂದಾಗಿರುತ್ತದೆ. ‘ಬಹುಶ ವೀಡಿಯೋ ಜೊತೆಗಿರುವ ಬರಹ ಪ್ರಕಾರ ಅದು …ಇಂತಹ ಧರ್ಮೀಯರು ಎಂಬುದು ನಿಮಗೆ ಪಕ್ಕಾ ಆದರೂ ಅದಕ್ಕೆ ಅವರ ಇಡೀ ಧರ್ಮೀಯನ್ನು ಹೊಣೆಗಾರರನ್ನಾಗಿ ಮಾಡಬೇಡಿ” ಎಂದೂ ಹೇಳುತ್ತೇನೆ. ಕೆಲವರು ನನ್ನ ಮಾತನ್ನು ಅನುಮೋದಿಸಿದರೆ ಕೆಲವರು ಜಗಳಕ್ಕೆ ನಿಂತದ್ದು ಇವೆ. ಜಗಳ ಮಾಡಿದವರಲ್ಲಿ ನಾನು “ ‘ನಿಮ್ಮ ಅರಿವು ನಿಜವೇ ಆದರೂ ಲೋಕದಲ್ಲಿ ಕಾಣುವ ಅಮಾನುಷ ಕಾರ್ಯಗಳನ್ನೆಲ್ಲ ಒಮ್ಮೆ ಪಟ್ಟಿ ನೋಡಿ. ಆ ಕೃತ್ಯಗಳ ಇಡೀ ಧರ್ಮೀಯರನ್ನೋ ಅಥವಾ ಸಿದ್ಧಾಂತವನ್ನೋ ಹೇಗೆ ಅಪರಾಧಿ ಮಾಡೋಕ್ಕಾಗುತ್ತೆ? ಹಾಗೆ ಮಾಡೋದಾದರೆ ಲೋಕದ ಅಷ್ಟೂ ಧರ್ಮ, ಸಿದ್ಧಾಂತಗಳನ್ನು ಅಪರಾಧಿ ಮಾಡಲೇಬೇಕಾಗುತ್ತದೆ ಎಂಬುದು ನಮಗೆ ಗೊತ್ತಿರಲಿ” ಎನ್ನುತ್ತೇನೆ. ಹೆಚ್ಚಿನವರು ಕನ್ವಿನ್ಸು ಆಗ್ತಾರೆ. ತೊಟ್ಟಿಲ ಮಗುವನ್ನೂ ಹೆಣವನ್ನೂ, ಪ್ರಾಣಿಯನ್ನೂ ರೇಪು ಮಾಡುವವರಿದ್ದಾರೆ. ಸ್ವಂತ ಕರುಳ ಕುಡಿಯನ್ನೇ ಕೊಲ್ಲುವ ತಾಯಿ, ಅಪ್ಪನನ್ನೇ ಕೊಲ್ಲುವ ತಂದೆ, ಸೋದರಿಯನ್ನೇ ಬಲಾತ್ಕರಿಸುವ ಸೋದರ, ನಿಧಿಗಾಗಿ ತಾಯಿಯನ್ನೇ ಬಲಿ ಕೊಡುವ ಮಗ, ಹತ್ಯಾ ಸರಮಾಲೆಯನ್ನೇ ಮಾಡುವ ಸರಣಿ ಹಂತಕ…‌ಹೀಗೆ ನಾವು ನ್ಯೂಸುಗಳನ್ನು ಕೇಳುತ್ತಿದ್ದೇವೆ. ಇಂತಹ ಕೃತ್ಯಗಳಲ್ಲಿ ಅಪರಾಧಿಗಳ ಹೆಸರು ನೊಡಿ.. ಎಲ್ಲಾ ಧರ್ಮಗಳಲ್ಲಿರುವ ಹೆಸರಿನವರಿಂದಲೂ ಅಪರಾಧ ನಡೆಯುತ್ತವೆ. ಆದರೆ ಆಕಸ್ಮಾತ್ ಕೆಲವು ಸಂದರ್ಭಗಳಲ್ಲಿ ಅಪರಾಧಿ ಮತ್ತು ಅಪರಾಧಗೊಳಪಟ್ಟವರ ಧರ್ಮ ಬೇರೆ ಆಗಿರುತ್ತವೆ! ಅಪರಾಧಗೊಳಪಟ್ಟವರು ಮತ್ತು ಅಪರಾಧಿಗಳು ಒಂದೇ ಧರ್ಮದವಾದರೆ ಅವು ಆ ಅಪರಾಧಿಗಳ ಮಾತ್ರ ಕೃತ್ಯಗಳಾಗಿಯೂ, ಅಪರಾಧಗೊಳಪಟ್ಟವರು ಅಪರಾಧಿಗಳ ಧರ್ಮದವರಲ್ಲವಾದರೆ ಆ ಕೃತ್ಯಗಳು ಅಪರಾಧಿಗಳ ಧರ್ಮೀಯರ ಎಲ್ಲರ ಕೃತ್ಯಗಳಾಗಿಯೂ ಆಗಿ ನಮಗೆ ಕಾಣೋದು ಯಾವ ನ್ಯಾಯ? ನಾವು ಯಾವ ಮನಸ್ಥಿತಿಯಲ್ಲಿ ಹೂತುಹೋಗಿದ್ದೇವೆ? 99 ಪರ್ಸೆಂಟ್ ಜನರು ಸತ್ಯ, ನ್ಯಾಯದ ದಾರಿಯಲ್ಲಿ‌ಸಾಗಿ ಭಗವಂತನ ಕೃಪೆ ಸಿಗಬೇಕೆಂದು ಬಯಸಿ ಆ ಉದ್ದೇಶಕ್ಕಾಗಿ ಅವರು ಹುಟ್ಟಿದ ಧಾರ್ಮಿಕ ನಂಬಿಕೆಯಲ್ಲಿ ಜೀವನದ ಏರಿಳಿತವನ್ನು ಎದುರಿಸೋದರಲ್ಲೇ ಸುಸ್ತಾಗಿ ಬದುಕುತ್ತಿದ್ದಾರೆ. ಅವರಲ್ಲಿ ಕೆಲವರಂತೂ ನರಳುತ್ತಾ ‘ಯಾರಿಲ್ಲ ನಮಗೆಂದು’ ಫೀಲಾಗುತ್ತಾ ಜೀವನ ದೂಡುತ್ತಿದ್ದಾರೆ. ಅವರಲ್ಲಿ ಕೆಲವರಷ್ಟೇ ಆರ್ಥಿಕ ಸಬಲರಿದ್ದರೆ ಅವರೂ ಸೇವೆ, ದಾನ, ಪ್ರೆಸ್ಟೀಜು ಅಂತ ಬಿಝಿಯಾಗಿರ್ತಾರೆ. ಅದರೆ ಒ ಮಾನವಕುಲದ ಒಟ್ಟು ಜನರ ಒಂದು ಪರ್ಸೆಂಟು ಜನರು ವಿಕೃತರಾಗಿ ತಯಾರಾಗಿರುತ್ತಾರೆ. ಅವರು ವಿಕೃತ ಮೆರೆಯೋದು ಅವರದ್ದಲ್ಲದ ಧರ್ಮೀಯಲ್ಲಿ ಮಾತ್ರ ಅಲ್ಲ! ಪೋಲೀಸ್ ಠಾಣೆಗಳ ಕೇಸುಗಳ ಪಟ್ಟಿ ನೋಡಿ. ಕೋರ್ಟುಗಳಲ್ಲಿರುವ ಪಟ್ಟಿಗಳನ್ನು ಅವಲೋಕಿಸಿ. ಮಾಧ್ಯಮಗಳಲ್ಲಿ ಬರುತ್ತಿರುವ ವಾರ್ತೆಗಳನ್ನು ನೋಡಿ. ಏನನ್ಸುತ್ತದೆ? ಕೊಲೆ, ಅತ್ಯಾಚಾರ, ಹಿಂಶೆ ಮುಂತಾದ ಅಪರಾಧಗಳೆಲ್ಲದರಲ್ಲಿ ಅಪರಾಧಿಗಳ ಮತ್ತು ಅಪರಾಧಗೊಳಪಟ್ಟವರ ಧರ್ಮಗಳು ಬೇರೆ ಬೇರೆಯಾಗಿಯೇ ಇರುತ್ತಾ? ಒಂದು ಧರ್ಮದವರು ಒಂದಾಗಿ ಇನ್ನೊಂದು ಧರ್ಮದವರ ವಿರುದ್ಧ ಮಾಡಿದ ಯುದ್ಧವಾಗಿರುತ್ತವಾ ಅವುಗಳು? ನಮ್ಮ ಉತ್ತರ ‘ಅಲ್ಲ’ ಎಂದಾಗಿಯೇ ಇರುತ್ತದೆ! ಹಾಗಿರುವಾಗ ಕೆಲವು ಘಟನೆಗಳಲ್ಲಿ ಮಾತ್ರ ಅಪರಾಧಿ ಮತ್ತು ಅಪರಾಧಿಗಳ ಹೆಸರಿನವರ ಧರ್ಮಗಳು ಬೇರೆಯಾದರೆ ಅಪರಾಧ ಜಗತ್ತಿನ ಆಕಸ್ಮಿಕಗಳಷ್ಟೇ ಅವೆಂದು ತಿಳಿದುಕೊಳ್ಳದೆ ಅಪರಾಧಿಗಳ ಇಡೀ ಧರ್ಮೀಯರ ಮನಸ್ಥಿತಿಯ ಪ್ರತಿಬಿಂಬವೆಂದು ನಮಗೆ ಯಾಕೆ ಅನಿಸಬೇಕು? ನಮ್ಮಲ್ಲಿ ಹಿಂದುಗಳ ಬಗ್ಗೆ ಮುಸ್ಲಿಮರಿಗೆ ಮತ್ತು ಮುಸ್ಲಿಮರ ಬಗ್ಗೆ ಹಿಂದುಗಳಿಗೆ ಭಯವನ್ನು ಇಂಜೆಕ್ಟು ಮಾಡಲು ತಮ್ಮ ಆರಾಧನಾಲಯಗಳನ್ನು ತಾವೇ ಮಲಿನಗೊಳಿಸುತ್ತಾರೆ. ವಾಸ್ತವ ಏನು ಅಂತ ಗೊತ್ತಿಲ್ಲದ ಹಿಂಶಾತ್ಮಕ ವೀಡಿಯೋಗಳು ಸಿಕ್ಕಿದರೂ ಬಳಸುತ್ತಾರೆ. ಅಮಾನುಷ ಘಟನೆಗಳು‌ ನಡೆದಾಗ ಅಥವಾ ತಿಳಿದಾಗ ಆ ಅಪರಾಧಿಗಳ ಹೆಸರಿನ ಧರ್ಮದ 99.9 ಪರ್ಸೆಂಟ್ ಜನರ ಮನಸ್ಸೂ ಕರೆಳಿ ನಿಲ್ಲುತ್ತವೆ. ಅಪರಾಧಿಗಳ ವಿರುದ್ಧ ಹಿಡಿಶಾಪ ಹಾಕುತ್ತವೆ.‌ ಸಂತ್ರಸ್ತರಿಗಾಗಿ ಮರುಗುತ್ತವೆ. ಆ ನರರೂಪಿ ಚಿಶಾಚಿಗಳಿಗೆ ಶಿಕ್ಷೆ ಆಗಲು ಮನಸಾರೆ ಬಯಸುತ್ತವೆ. ಒಂದು ಧರ್ಮೀಯರು ಒಂದಾಗಿ, ಪ್ಲಾನ್ ಮಾಡಿದ ಕೃತ್ಯಗಳು ಅವುಗಳಲ್ಲ. ಅವು ಅಪರಾಧಿಗಳ ಹೆಸರುಗಳು ಪ್ರತಿನಿಧಿಸುವ ಧರ್ಮೀಯರಿಂದ ಶಹಬಾಸ್ ಪಡೆಯುವುದಿಲ್ಲ. ಅವೆಲ್ಲಾ ಧರ್ಮಯುದ್ದವಲ್ಲ, ವಿಕೃತರ ಅಟ್ಟಹಾಸವಷ್ಟೇ. ಹಿಂಶಾಪ್ರಿಯರ ಕೃತ್ಯಗಳನ್ನು ಕೋಮು ಬಣ್ಣದಿಂದ ಆಲಂಕರಿಸಬೇಡಿ. ಹಾಗೆ ಮಾಡಿದರೆ ಅದು ಆ ಹಿಂಶಾಪ್ರಿಯರಿಗೆ ಮತ್ತಷ್ಟು ಆನಂದ ತಂದುಕೊಡಬಲ್ಲದು. ಅಷ್ಟೂ ಸಮಸ್ಯೆಗಳಿಂದ ನರಳುತ್ತಿರುವ ಮನುಷ್ಯರ ನಡುವೆ ಕೋಮುರಾಕ್ಷಸನನ್ನು ಇನ್ನಷ್ಟು ಬೆಳೆಸಬೇಡಿ. ಅಪರಾಧಿಗಳನ್ನು ಅಪರಾಧವಾಗಿ ನೋಡದೇ ಅವರ ಹೆಸರು ಪ್ರತಿನಿಧಿಸುವ ಧರ್ಮದವರ ಮನಸ್ಥಿತಿ ಅಥವಾ ಕೃತ್ಯಗಳಾಗಿ ಕಂಡರೆ ಈ ಲೋಕದಲ್ಲಿ ಯಾವ ಧರ್ಮವನ್ನು ಸಾಚಾ ಅನ್ನೋಕೆ ಸಾಧ್ಯ ಎಂದು ಎದೆಯಲ್ಲಿ ಕೈಯಿಟ್ಟು ಚಿಂತಿಸಿನೋಡಿ. ================= ಪರಿಚಯ: ಮಂಗಳೂರು ಸಮೀಪದ ಕೈರಂಗಳದವರು.. ವಾರ್ತಾಭಾರತಿಯಲ್ಲಿ ಪ್ರೂಫ್ ರೀಡರ್ ಆಗಿದ್ದವನು

ಲೇಖನ Read Post »

You cannot copy content of this page

Scroll to Top