ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಲಲಿತ ಪ್ರಬಂಧ

ನಮ್ಮೂರ ಜಾತ್ರೆಲಿ.. ಜ್ಯೋತಿ ಡಿ.ಬೊಮ್ಮಾ. ನಮ್ಮೂರ ಜಾತ್ರೆಲಿ.. ಬಹಳ ದಿನಗಳಿಂದ ನನ್ನೂರ ಜಾತ್ರೆಗೆ ಬರಲು ಅಪ್ಪ,ಅಮ್ಮ,ಗೆಳೆಯರೆಲ್ಲ ಒತ್ತಾಯಿಸುತ್ತಲೆ ಇದ್ದರು.ಸದಾ ಜನಜಂಗುಳಿಯಿಂದ ದೂರ ಇರಬಯಸುವ ನನಗೆ ಜಾತ್ರೆ ,ಸಮ್ಮೆಳನಗಳು ದಿಗುಲುಹುಟ್ಟಿಸುತ್ತವೆ.ಚಿಕ್ಕಂದಿನ ಜಾತ್ರೆಯ ನೆನಪು ಮುಸುಕಾಗಿತ್ತು.ಮತ್ತೆ ಎಲ್ಲರನ್ನೂ ಭೆಟಿಯಾಗುವ ಸೆಳೆತದಿಂದ ಜಾತ್ರೆಯ ನೆಪದಿಂದ ಊರಿಗೆ ಹೋದೆ.ಊರಿನಲ್ಲಿ ಎಲ್ಲರ ಮನೆಗಳಲ್ಲೂ ಸಂಬಂಧಿಕರು.ದೂರ ದೂರದ ಊರುಗಳಿಂದ ಜಾತ್ರೆಯ ನೆಪದಿಂದ ಬಂದವರು. ಜಾತ್ರೆಯಂತಹ ಊರ ಹಬ್ಬಗಳು ಮತ್ತೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವದರ ಹಿಂದಿನ ಕಾರಣಗಳು ಹುಡುಕಿದರೆ,ಮುಖ್ಯವಾಗಿ , ಪರಸ್ಪರರ ಭೇಟಿ.ಮತ್ತು ಊರಿನಲ್ಲಿನ ಸೌಹಾರ್ದಯುತ ವಾತಾವರಣ ಬಿಂಬಿಸುವದು. ಹೆಜ್ಜೆ ಹೆಜ್ಜೆಗೂ ಕಟೌಟಗಳು.ಸ್ವಾಗತ ಕೋರುವ ನೆಪದಿಂದ ತಮ್ಮ ತಮ್ಮ photo ಗಳನ್ನು ಬೀದಿ ಬೀದಿಗಳಲ್ಲಿ ನಿಲ್ಲಿಸಿ ಹೆಮ್ಮೆ ಪಡುವ ಊರಿನವರು, ರಸ್ತೆಗಳನ್ನು ಅಲಂಕರಿಸಿ ತಳಿರು ತೊರಣ,ಹೂಗಳಿಂದ ಮಾಡಿದ ಸ್ವಾಗತ ಕಮಾನುಗಳು,ಊರವರನ್ನೂ ರಂಜಿಸಲು ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು, ತಹರೆವಾರಿ ಅಂಗಡಿಗಳು,ಬಾಯಲ್ಲಿ ನೀರೂರಿಸುವ ತಿನಿಸಿನ ಬಂಡಿಗಳು, ಮತ್ತು ಎಲ್ಲೆಲ್ಲೂ ಜನ ಜನ ಜನ ಜಾತ್ರೆಯ ಪ್ರಮುಖ ಘಟ್ಟವೆ ರಥೋತ್ಸವ ,ಅದಕ್ಕೂ ಮುನ್ನಾದಿನ ಅಗ್ಗಿ ತುಳಿಯುವದು ಇರುತ್ತದೆ.ಈ ಶಬ್ದದ ಅರ್ಥ ಎನೇನು ಹೊಂದಿಕೆಯಾಗದು.ಅಗ್ನಿಗೆ ಪ್ರದಕ್ಷಿಣೆ ಹಾಕುವದನ್ನೆ ಅಗ್ನಿ ತುಳಿಯುವದು ಎನ್ನ್ನುತ್ತಾರೆ.ಕೆಲವೊಂದು ಕಡೆ ಕೆಂಡದ ಮೇಲೂ ನಡೆಯುತ್ತಾರಂತೆ. ಕಾಡು ಉಳಿಸಿ ಎಂದು ಸಾರುವರೆಲ್ಲರೂ ಕೈಯಲ್ಲಿ ಕಟ್ಟಿಗೆ ತುಂಡುಗಳನ್ನಿಡಿದು ಅಗ್ನಿ ಕುಂಡಕ್ಕೆ ಎಸೆದು ದಿಗಂತಕ್ಕೆ ಮುಖಮಾಡಿ ಉರಿಯುವ ಬೆಂಕಿಗೆ ಪ್ರದಕ್ಷಿಣೆ ಹಾಕುತ್ತ, ತೆಂಗಿನ ಕಾಯಿ ಒಡೆಯುತ್ತ ,ಮನೆಯಿಂದ ತಂದ ನೈವೇದ್ಯ ತೋರುತ್ತ (ಎಸೆಯುತ್ತ ) ಸಾಗುವರು.ನನ್ನ ಕೈಗೂ ಕೊಟ್ಟ ಕಟ್ಟಿಗೆ ಚೂರುಗಳು ಅಗ್ನಿಗೆ ಎಸೆಯಬೇಕೋ ಬೇಡವೋ ಎಂಬ ಸಂದಿಗ್ಧ ದಲ್ಲಿ ಯಾಕೋ ಎಸೆಯಲು ಮನಸ್ಸು ಒಪ್ಪದೆ ಹಾಗೆ ಕೈಯಲ್ಲಿ ಹಿಡಿದುಕೊಂಡು ಬಂದು ಅಮ್ಮನಿಂದ ಬೈಸಿಕೊಂಡಾಯಿತು.ರಸ್ತೆ ಮೇಲೆಲ್ಲ ಕಟ್ಟಿಗೆ ಮಾರುವವರದೆ ಜಾತ್ರೆ .ದುಡ್ಡು ಕೊಟ್ಟು ಕೊಂಡು ಬೆಂಕಿಗೆ ಎಸೆದು ಭಕ್ತಿಯಿಂದ ಪರವಶವಾಗುವವರ ದಂಡು ಹೆಚ್ಚುತ್ತ ಹೋಯಿತು. ಜಾತ್ರೆಗೆ ಹೋದಮೇಲೆ ದೇವಸ್ಥಾನ ಕ್ಕೆ ಹೋಗದೆ ಇ ರಕಾಗುತ್ತೆಯೆ .ಅಲ್ಲಿ ಜನರ ದಂಡು ,ಎಲ್ಲರಿಗೂ ದೇವರಿಗೆ ಬಟ್ಟೆ (ಹೊದಿಕೆ) ಮಾಡುವ ಸಂಭ್ರಮ.ಬಟ್ಟೆ ಕೊಳ್ಳಲು ಹೋದ ಅಮ್ಮನನ್ನು ಹಿಂಬಾಲಿಸಿದೆ.ಬಟ್ಟೆ ಮರುವವರು ಬಂಡಿಗಳ ಮೇಲೆ ಎರಡು ವಿಧದ ಬಟ್ಟೆಗಳನ್ನಿಟ್ಟಿದ್ದರು ಬೆಲೆ ಕೆಳಲಾಗಿ ಒಂದರ ಬೆಲೆ ನೂರೂ ರೂ.ಮತ್ತೊಂದರ ಬೆಲೆ ನೂರೈವತ್ತು ರೂಗಳು.ವ್ಯತ್ಯಾಸ ಕೇಳಿದಾಗ ನೂರೈವತ್ತು ಬೆಲೆಯ ವಸ್ತ್ರಗಳು ಹೊಚ್ಚಹೊಸದು.ನೂರು ರೂ ಬೆಲೆಯ ವಸ್ತ್ರಗಳು ದೇವರಿಗೆ ಉಡಿಸಿ ಮತ್ತೆ ತಂದವುಗಳು.ಅದೇ ಕೆರೆಯ ನೀರನ್ನು ಕೆರೆಗೆ ಚಲ್ಲಿ ಎಂಬಂತೆ.ಅಮ್ಮ ನೂರೈವತ್ತು ಕೊಟ್ಟು ಹೋಸ ವಸ್ತ್ರ ಗಳನ್ನೆ ಕೊಂಡಳು ಅವು ಮತ್ತೆ ಇಲ್ಲಿಗೆ ಬರುತ್ತೆ ಎಂದು ತಿಳಿಸಿ ಹೇಳುವ ನನ್ನ ಪ್ರಯತ್ನ ಗೊರ್ಕಲ್ಲ ಮೇಲೆ ನೀರು ಸುರಿದಂತೆ ,ವ್ಯರ್ಥ. ದೇವಸ್ಥಾನ ದಲ್ಲಿ ಒಂದು ಕಿ ಮಿ ವರೆಗೆ ದೇವರಿಗೆ ಬಟ್ಟೆ ಮಾಡುವವರ ಕ್ಯೂ , ನಾನು ಮೆಲ್ಲನೆ ಅಮ್ಮನಿಂದ ತಪ್ಪಿಸಿಕೊಂಡು ದೂರದಲ್ಲಿ ಪರಿಚಿತರೊಂದಿಗೆ ಮಾತಾಡುತ್ತ ಕುಳಿತೆ. ಸುಮಾರು ಸಮಯದ ನಂತರ ನನ್ನನ್ನೂ ಹುಡುಕುತ್ತ ಬಂದ ಅಮ್ಮನ ಕೈಯಲ್ಲಿ ವಸ್ತ್ರಗಳು ಹಾಗೆ ಇದ್ದವು. ದೇವರಿಗೆ ಬಟ್ಟೆ ಮಾಡಿಲ್ಲವೆ ಎಂದು ಕೇಳಿದಕ್ಕೆ ಬಂದ ಉತ್ತರದಿಂದ ಅವಕ್ಕಾದೆ. ” ಗುಡಿಯಲ್ಲಿ ದೇವರಿಲ್ಲವಂತೆ ” ಉತ್ಸವ ಮೂರ್ತಿಯನ್ನು ಊರಲ್ಲಿ ಮೆರವಣಿಗೆ ಮಾಡಲು ಒಯ್ದಿದ್ದರು.ದೇವರು ಬರುವವರೆಗೂ ದೇವರಿಲ್ಲದ ಗುಡಿಯಲ್ಲಿ ಕಾಯುತ್ತ ಕುಳಿತೆವು .ದೇವರು ಬಂದರು , ಎಲ್ಲರೂ ಕೈಯಲ್ಲಿರುವ ವಸ್ತ್ರಗಳನ್ನೂ ಲಗುಬಗೆಯಿಂದ ದೇವರ ಮುಂದೆ ಇಡತೊಡಗಿದರು ದೂರ ಇದ್ದವರು ದೇವರ ಸಮೀಪ ಇರುವವರಿಗೆ ಮಾಡಲು ಕೊಟ್ಟು ದೂರದಿಂದಲೆ ಹರಕ ತೀರಿಸಿ ನಡೆದರು. ದೇವರ ಮುಂದೆ ವಸ್ತ್ರ ಗಳ ರಾಶಿ ಹೆಚ್ಚಾದಂತೆ ಸ್ವಯಂ ಸೇವಕರು ಅವುಗಳನ್ನು ತೆರವುಗೊಳಿಸಿ ಹೊರಗೆ ಮಾರುವವರ ಬಂಡಿಗಳಿಗೆ ವರ್ಗಾಯಿಸುತಿದ್ದರು ಕೊಳ್ಳುವವರು ಮತ್ತೆವೆ ಕೊಂಡು ದೇವರಿಗೆ ಎರಿಸುತಿದ್ದರು.ಒಟ್ಟಿನಲ್ಲಿ ಈ ರೀತಿಯ ಆಚರಣೆ ಗಳಿಂದ ಅನೇಕರ ಬದುಕಿನ ಬಂಡಿ ಸಾಗುತ್ತದೆ. ಆಚರಿಸುವರಿಗೆ ಮನಶ್ಯಾಂತಿ ದೊರೆಯಬಹುದು. ಹರಕೆಯ ಬೇರೆ ಬೇರೆ ಬಗೆಗಳು ಪ್ರಕಟವಾದವು. ಸಕ್ಕರೆ ಹಂಚುವ ಹರಕೆಯವರು.ಪೇಡೆ ಹಂಚುವ ಹರಕೆಯವರು ಎಲ್ಲರ ಕೈಗೂ ಸಕ್ಕರೆ ಪೇಡೆಗಳನ್ನು ತುಂಬ ತೊಡಗಿದರು ತಿನ್ನಲೂ ಆಗದೆ ಬಿಸಾಡಲೂ ಆಗದೆ ಪ್ರತಿಯೊಬ್ಬರು ತಮ್ಮ ಕೈಯಲ್ಲಿರುವದನ್ನೂ ಮತ್ತೊಬ್ಬರಿಗೆ ಹಂಚತೊಡಗಿದರು ಹಂಚುವ ಪ್ರಕ್ರಿಯೆ ಮುಂದುವರೆಯುತಿತ್ತು.ಮನೆಗೆ ಹೋಗಿ ಎಲ್ಲರೊಂದಿಗೆ ಕುಳಿತು ಹೋಳಿಗೆ ಊಟಮಾಡಿದ್ದು ಸಂತೋಷದಾಯಕವಾಗಿತ್ತು. ಮರದಿನ ಸಂಜೆ ಬಾಲ್ಯದ ಗೆಳತಿಯರೊಡನೆ ಜಾತ್ರೆಗೆ ಹೋದ ಸಂದರ್ಬ ಮನಸ್ಸನ್ನು ಉಲ್ಲಾಸ ಗೊಳಿಸಿತು. ಸಂಜೆಯ ತಂಪಿನಲ್ಲಿ ಜನರೆಲ್ಲ ಏಳುವ ಧೂಳನ್ನು ಲೆಕ್ಕಿಸದೆ ,ತಾಯಂದಿರು ಅಜ್ಜ ಅಜ್ಜಿಯರು ಚಿಕ್ಕ ಮಕ್ಕಳ ಕೈಹಿಡಿದು ಅವು ಕೇಳುವ ವಸ್ತುಗಳೆಲ್ಲ ಗದರುತ್ತಲೆ ಚೌಕಾಶಿ ಮಾಡಿ ಕೊಡಿಸುತ್ತ ,ಜಾತ್ರೆಯ ಸವಿಯನ್ನು ಮಕ್ಕಳಿಗಿಂತ ಹೆಚ್ಚು ಅನುಭವಿಸುತ್ತ ಒಡಾಡುವದನ್ನು ನೋಡುವದೆ ಚಂದ. ಏನು ಕೊಳ್ಳಬೇಕು ,ಎಲ್ಲಿ ಹೋಗಬೇಕೆಂಬ ನಿರ್ದಿಷ್ಟ ಗುರಿಇರದೆ ಗೆಳತಿಯರೆಲ್ಲ ಕಾಲು ಹೋದ ಕಡೆ ಹೋಗುತ್ತ ,ಹಳೆ ನೆನಪುಗಳು ಮೆಲುಕುಹಾಕುತ್ತ ,ಅಂಗಡಿಗಳಲ್ಲಿರುವ ವಸ್ತುಗಳನ್ನು ಸುಮ್ಮನೆ ನೋಡುತ್ತ , ಮನೆಯಲ್ಲಿ ಹೆಚ್ಚಾಗಿ ಬಿದ್ದಿರುವ ಬಳೆ ಪಿನ್ನು ಟಿಕಳಿಗಳನ್ನೆ ಮತ್ತೆ ಮತ್ತೆ ಕೊಳ್ಳುತ್ತ ಆಟದ ಯಂತ್ರಗಳಿರುವ ಮೈದಾನಕ್ಕೆ ಬಂದಾಯಿತು.ಅಲ್ಲಿರುವ ಜೋಕಾಲಿ ತಿರುಗುಣಿಗಳಲ್ಲಿ ಕುಳಿತು ತಲೆ ತಿರುಗಿದರು ಬಿಡದೆ ಮತ್ತೆ ಮತ್ತೆ ಗಿರಕಿ ಹೊಡೆಯುತ್ತ ಅಕ್ಷರಶ ಮಕ್ಕಳಾದೆವು ,ಎದೆಯುದ್ದ ಬೆಳೆದ ಮಕ್ಕಳಿದ್ದಾರೆಂಬುದು ಮರೆತು. ಹರೆಯದಲ್ಲಿ ಹಿಂದಿಂದೆ ಅಲೆದ ಹುಡುಗರೆಲ್ಲ ಈಗ ಪ್ರೌಢರಾಗಿ ಎದುರಿಗೆ ಸಿಕ್ಕರೂ ಎಕವಚನದಲ್ಲಿ ಮಾತಾಡಬೇಕೊ ಬಹುವಚನದಲ್ಲಿ ಮಾತಾಡಬೇಕೋ ತೋಚದೆ ತಡವರಿಸತೊಡಗಿದಾಗ ಅವರ ಪರಿಪಾಟಲು ಕಂಡು ನಗುತ್ತ ಮತ್ತದೆ ಹಳೆ ಆತ್ಮಿಯತೆಯಿಂದ ಮಾತಾಡಿದಾಗ ನಾವೆಲ್ಲ ಮತ್ತೆ ಇಪ್ಪತೈದು ವರ್ಷ ಹಿಂದೆ ಹಾರಿದ್ದಾಯಿತು. ಜಾತ್ರೆಯು ತುಂಬಾ ನಾವೆಲ್ಲ ಗೆಳೆಯ ಗೆಳತಿಯರು ಒಡಾಡಿದ್ದೆ ಒಡಾಡಿದ್ದು.ಜೀಲೆಬಿ ಮಿರ್ಚಿ ಭಜಿ ಚೂಡವಾಗಳನ್ನು ತಿನ್ನುತ್ತ ಈಗಿನ ಮತ್ತು ಹಳೆಯ ವಿಷಯಗಳು ಮಾತಾಡುತ್ತ ಜಾತ್ರೆ ಎಂಬ ಮಾಯಾಲೋಕದಲ್ಲಿ ಮುಳುಗಿದೋದೆವು. ಇಷ್ಟರಲ್ಲೆ ಅನೇಕ ವರ್ಷಗಳಿಂದ ಮರೆಯಾದವರ ಮುಖದರ್ಶನವಾಗಿ ,ಒಂದು ಆತ್ಮಿಯ ನಗುವಿನಿಂದ ,ಆರಾಮ ,ಆರಾಮ ,ಎಂಬ ಕುಶಲೋಪರಿಯಿಂದ ಮರೆಯಾದ ಎಷ್ಟೊ ಸಂಬಂಧಗಳು ಗೆಳೆತನಗಳು ಮತ್ತೆ ಚಿಗುರಿದವು.ಕೆಲವು ನಿಮಿಷದ ಮಾತಿನಿಂದ ಮರೆಯಾದ ಬಾಂಧವ್ಯ ಮತ್ತೆ ಬೆಸೆಯಿತು.ಮನದಿಂದ ಮರೆಯಾದವರು ಮತ್ತೆ ಮನದಲ್ಲಿ ನಿಂದರು. ನನ್ನೂರಿನ ಜಾತ್ರೆ ನನ್ನೂರಿನ ಜನರೊಡನೆ ಬಾಂಧವ್ಯ ಬೆಸೆದಿಡುವ ಹಂದರವಾಯಿತು. ******

ಲಲಿತ ಪ್ರಬಂಧ Read Post »

ಇತರೆ

ಪ್ರಸ್ತುತ

ಕೇಜ್ರಿವಾಲಾರವರ ಕ್ರೇಝಿವಾಲಾಗಳಿಗಾಗಿ………. ಗಣೇಶಭಟ್,ಶಿರಸಿ ಕೇಜ್ರಿವಾಲಾರವರ ಕ್ರೇಝಿವಾಲಾಗಳಿಗಾಗಿ………. ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಪಡೆದ ದೊಡ್ಡ ಗೆಲುವು, ಆ ಪಕ್ಷದ ನೇತಾರ ಅರವಿಂದ ಕೇಜ್ರಿವಾಲಾರ ಅಭಿಮಾನಿಗಳ, ಅವರ ಕ್ರೇಝಿಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಕೇಜ್ರಿವಾಲಾರವರೇ ದೇಶದ ಸಮಸ್ಯೆಗಳನ್ನು ಪರಿಹರಿಸುವ ಸಾಮಥ್ರ್ಯ ಹೊಂದಿದ್ದಾರೆ ಎಂಬ ಭಾವನೆ ಇಂಥವರಲ್ಲಿ ಬಲಿಯುತ್ತಿದೆ. ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲೂ ಗೆದ್ದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಸೋಲಿಸಿದ್ದು ದೊಡ್ಡ ಸಾಧನೆ ಎಂದೇ ಕೊಂಡಾಡಲಾಗುತ್ತಿದೆ. ಆಮ್ ಆದ್ಮಿ ಪಕ್ಷದ ಗೆಲುವಿಗೆ ಹಲವು ಕಾರಣಗಳನ್ನು ಮಾಧ್ಯಮ ತಜ್ಞರು ನೀಡಿದ್ದಾರೆ. ಈ ಸುದ್ದಿಯನ್ನು ಬಿತ್ತರಿಸುವಾಗ, ಸೋತ ಪಕ್ಷದ ವಿರುದ್ಧ ಮಾಧ್ಯಮದವರು ಬಳಸಿದ ಭಾಷೆಯಲ್ಲಿ ಆದ ಮಹತ್ತರ ಬದಲಾವಣೆಯನ್ನು ಎಷ್ಟು ಜನ ಗಮನಿಸಿದ್ದಾರೋ ಗೊತ್ತಿಲ್ಲ. ಅಧಿಕಾರ ಹೊಂದಿರುವ ಪಕ್ಷ ಸೋತಾಗ ಮಖಾಡೆಯಾಗಿ ಮಲಗಿತು , ನೆಲಕಚ್ಚಿತು , ಹೀನಾಯ ಸೋಲು ಮುಂತಾಗಿ ಬಳಕೆಯಾಗುತ್ತಿದ್ದ ಮಾಮೂಲಿ ಶಬ್ದಗಳು ಬಿಜೆಪಿಯ ಕುರಿತು ಬಳಕೆಯಾಗಲಿಲ್ಲ. ಕಾಂಗ್ರೆಸ್ ಕುರಿತು ಕೆಲವರು ಈ ಶಬ್ದಗಳನ್ನು ಬಳಸಿದರಾದರೂ ಚುನಾವಣಾ ಪರಿಣಾಮದ ವಿಶ್ಲೇಷಣೆಯಲ್ಲಿ ಗೆಲುವಿನ ಕಾರಣಗಳ ಕುರಿತೇ ಹೆಚ್ಚಿನ ಒತ್ತು ನೀಡಲಾಗಿತ್ತು. ಇಂತಹ ಸಂದರ್ಭಗಳಲ್ಲಿ ಬಳಕೆಯಾಗುವ ಇನ್ನೊಂದು ನುಡಿಗಟ್ಟೆಂದರೆ ಮತದಾರ ಬುದ್ದಿವಂತನಾಗಿದ್ದಾನೆÀ ಎಂಬುದು. ಇದು ಕೂಡಾ ಅಷ್ಟಾಗಿ ಬಳಕೆಯಾಗಲಿಲ್ಲ. ಮಾಧ್ಯಮದವರ ಈ ಬದಲಾವಣೆಯನ್ನು ಧನಾತ್ಮಕ ಪರಿವರ್ತನೆ ಎಂದು ಭಾವಿಸುವುದು ತಪ್ಪಾಗುತ್ತದೆ. ನಮ್ಮ ದೇಶದ ಸಮೂಹ ಮಾಧ್ಯಮಗಳು ಬಂಡವಾಳಶಾಹಿಗಳ ನಿಯಂತ್ರಣದಲ್ಲಿರುವುದು ವಾಸ್ತವ. ಬಂಡವಾಳವಾದಿಗಳಿಗೆ ಬಿಜೆಪಿ ಅತ್ಯಂತ ಅಪ್ಯಾಯಮಾನ ಪಕ್ಷ. ಆದ್ದರಿಂದಲೇ ಆ ಪಕ್ಷದ ಸೋಲಿನ ಕುರಿತು ಹೆಚ್ಚಿನ ಟೀಕೆ ಮಾಡಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಮಾಧ್ಯಮ ದೊರೆಗಳು ಇಷ್ಟ ಪಡುವುದಿಲ್ಲ. ಕಾಂಗ್ರೆಸ್ ಕೂಡಾ ಬಂಡವಾಳಶಾಹಿಗಳ ಪರವಾಗಿಯೇ ಇರುವ ಪಕ್ಷ. ಕಾಂಗ್ರೆಸ್ ಮತ್ತು ಬಿಜೆಪಿಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಖಾಸಗೀಕರಣವನ್ನು ನಡೆಸುತ್ತಿರುವ ವೇಗ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪ್ರಾರಂಭವಾದ ಖಾಸಗೀಕರಣದ ವೇಗ ನಿಧಾನ ( ಗಂಟೆಗೆ 10 ಕಿ.ಮೀ ವೇಗ ಎನ್ನೋಣ) ಆದರೆ ಬಿಜೆಪಿ ಖಾಸಗೀಕರಣದ್ದು ಅತಿ ವೇಗ ( ಗಂಟೆಗೆ 110 ಕಿ.ಮೀ). ಈ ಪಕ್ಷಗಳ ನಡುವೆ ಅರವಿಂದ ಕೇಜ್ರಿವಾಲಾರವರ ಆಮ್ ಆದ್ಮಿ ಪಕ್ಷದ ವೇಗ ಇನ್ನೂ ಸ್ಪಷ್ಟವಾಗಬೇಕಿದೆಯಾದರೂ ಅದು ಕೂಡ ಖಾಸಗೀಕರಣದ ಪರವಾಗಿಯೇ ಇರುವ ಪಕ್ಷ ಎಂಬುದು ಸ್ಪಷ್ಟ. ದೆಹಲಿಯ ಚುನಾವಣೆಯಲ್ಲಿ ಆಮ್‍ಆದ್ಮಿ ಪಕ್ಷದ ಗೆಲುವಿಗೆ ಸೂಚಿತವಾಗಿರುವ ಕಾರಣಗಳಲ್ಲಿ ದೆಹಲಿಯ ಸರ್ಕಾರಿ ಶಾಲೆಗಳ ಸುಧಾರಣೆ ಪ್ರಮುಖವಾದದ್ದು. ಸರ್ಕಾರಿ ಶಾಲೆಗಳ ಮಟ್ಟವನ್ನು ಏರಿಸಲು ಸಾಧ್ಯ. ಖಾಸಗಿ ಕ್ಷೇತ್ರದ ಶಾಲೆಗಳ ಸಮಾನಕ್ಕೇರಿಸಲೂ ಬಹುದೆಂಬುದನ್ನು ಸಾಧಿಸಿರುವುದನ್ನು ಗಮನಿಸದಿರಲು ಸಾಧ್ಯವೇ ಇಲ್ಲ. ಅಮೇರಿಕಾದ ಅಧ್ಯಕ್ಷರ ಶ್ರೀಮತಿಯವರು ಸರ್ಕಾರಿ ಶಾಲೆಗೆ ಭೇಟಿ ನೀಡಿರುವುದು ಗಣನೀಯವೇ ಸರಿ. ಆದರೂ, ಈ ವಿಷಯದಲ್ಲಿ ಎರಡು ಸಂಗತಿಗಳು ಎದ್ದು ಕಾಡುತ್ತವೆ. ಮೊದಲನೆಯದಾಗಿ ಖಾಸಗಿ ಶಾಲೆಗಳು ನಡೆಸುತ್ತಿರುವ ಶೋಷಣೆಗಳ ವಿರುದ್ಧ ಕ್ರಮ ಕೈಗೊಳ್ಳದಿರುವುದು. ಅತಿ ಎನ್ನುವಷ್ಟು ಶುಲ್ಕ ಆಕರಣೆ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ಸಂಸ್ಥೆಗಳು ದೆಹಲಿ ಸರ್ಕಾರ ಲೀಸ್ ಮೇಲೆ ನೀಡಿರುವ ಭೂಮಿಯನ್ನೇ ಬಳಕೆ ಮಾಡಿಕೊಳ್ಳುತ್ತಿವೆ. ಈ ಅಂಶವನ್ನೂ ಗಮನದಲ್ಲಿರಿಸಿಕೊಂಡು ಶೋಷಕ ಶಿಕ್ಷಣ ಸಂಸ್ಥೆಗಳ ಮೇಲೆ ನಿಯಂತ್ರಣ ಕ್ರಮ ಕೈಗೊಳ್ಳಲು ಸಾಧ್ಯವೆಂದು ದೆಹಲಿಯ ಹಲವು ನಾಗರಿಕರು ಅಭಿಪ್ರಾಯ ಪಡುತ್ತಾರೆ. ಎರಡನೇಯದೆಂದರೆ ಶಿಕ್ಷಣದ ಗುಣಮಟ್ಟದಲ್ಲಿ ಆಗಬೇಕಾದ ಮೂಲಭೂತ ಬದಲಾವಣೆ. ಖಾಸಗಿ ಶಿಕ್ಷಣ ಸಂಸ್ಥೆಗಳು, ಕಾರ್ಪೋರೇಟ್ ವಲಯಕ್ಕೆ ಬೇಕಾಗುವ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸುವ ಕಾರ್ಖಾನೆಗಳಾಗಿವೆ. ಈ ಪ್ರಕ್ರಿಯೆಯಲ್ಲಿ ತಾವೂ ಕೂಡ ಹಣ ಗಳಿಸುತ್ತವೆ. ಅಂತಹ ಶಾಲಾ, ಕಾಲೇಜುಗಳಲ್ಲಿ ಕೂಡಾ ಯೋಗ, ಧ್ಯಾನ ಮುಂತಾದವುಗಳನ್ನು ಕಲಿಸಲಾಗುತ್ತದೆ. ಆದರೆ, ಅವುಗಳ ಉದ್ದೇಶ ವಿದ್ಯಾರ್ಥಿಗಳ ಮನಸ್ಸನ್ನು ಶಾಂತಗೊಳಿಸಿ, ಅವರಲ್ಲಿ ಗುಲಾಮಗಿರಿ ಭಾವವನ್ನು ತುಂಬುವುದೇ ಆಗಿದೆ. ತಾನು ಶಿಕ್ಷಣ ಪಡೆದು, ಯಾವುದೋ ಕಂಪನಿಯಲ್ಲಿ ಕೆಲಸ ಪಡೆದು, ಹೆಚ್ಚೆಚ್ಚು ಸಂಬಳ ಪಡೆಯುತ್ತ ಕಂಪನಿಯನ್ನು (ಅಂದರೆ ಖಾಸಗೀಕರಣವನ್ನು) ಗಟ್ಟಿಗೊಳಿಸಬೇಕೆಂಬ ಭಾವವನ್ನು ಪರೋಕ್ಷವಾಗಿ ಬೆಳೆಸಲಾಗುತ್ತಿದೆ. ಇದರ ಪರಿಣಾಮವೆಂದರೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ, ಸಮಾಜದ ಇತರರೊಂದಿಗೆ ಸಹಜವಾಗಿ ಬೆರೆಯಲಾರದ ಮೇಲರಿಮೆ, ಅನಗತ್ಯವಾದ ಸ್ಪರ್ಧಾತ್ಮಕ ಮನೋಭಾವದ ಬೆಳವಣಿಗೆಯಿಂದಾಗಿ ಇತರರನ್ನು ಪ್ರೀತಿಸಲಾರದ, ಸಹಿಸಲಾರದ , ವೈರಿಗಳೋಪಾದಿಯಲ್ಲಿ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಬ್ರಿಟಿಷರ ಬಳುವಳಿಯ ಶಿಕ್ಷಣ ಪದ್ಧತಿಯ ಮುಂದುವರಿಕೆಯಾದ ಇಂದಿನ ಶಿಕ್ಷಣ ಪದ್ಧತಿಯನ್ನು ಖಾಸಗಿ ಕ್ಷೇತ್ರದವರು ಒಂದು ಉದ್ಯಮವನ್ನಾಗಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕೂಡಾ ಇದೇ ವಿಧದ ಶಿಕ್ಷಣ ನೀಡುವ ಬದಲಿಗೆ ಭಾರತೀಯ ಶಿಕ್ಷಣ ಪದ್ಧತಿಯನ್ನು ಅನುಷ್ಠಾನಗೊಳಿಸಲು ಕೇಜ್ರಿವಾಲರವರು ಪ್ರಯತ್ನಿಸಲಿಲ್ಲವೆಂಬ ಆಕ್ಷೇಪ ಹಲವರದು. ಆತ್ಮವಿಶ್ವಾಸದಿಂದ ಬದುಕನ್ನು ರೂಢಿಸಿಕೊಳ್ಳುವ ಶಿಕ್ಷಣ ಪದ್ಧತಿಯನ್ನು ದೆಹಲಿಯ ಮುಖ್ಯಮಂತ್ರಿಯವರು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತರುತ್ತಾರೆಂದು ನಿರೀಕ್ಷಿಸುವ ಯಾವ ಸೂಚನೆಯೂ ಅವರ ಕಾರ್ಯಸೂಚಿಯಲ್ಲಿ ಕಂಡು ಬರುತ್ತಿಲ್ಲ. ಯಾಕೆಂದರೆ, ಕೇಜ್ರಿವಾಲಾರವರ ಆಮ್ ಆದ್ಮಿ ಪಕ್ಷವು ಬಂಡವಾಳವಾದಿ ಚೌಕಟ್ಟಿನಾಚೆಗೆ ಚಿಂತಿಸುತ್ತಿಲ್ಲ. ಅಪರಾಧ ಹಿನ್ನೆಲೆಯ ಎಮ್ಮೆಲ್ಲೆಗಳು, ಪಕ್ಷಾಂತರಿಗಳಿಗೆ ಟಿಕೆಟ್ ನೀಡಿಕೆ ಮುಂತಾದ ವಿಷಯಗಳಲ್ಲಿ ಇತರ ರಾಜಕೀಯ ಪಕ್ಷಗಳ ರೀತಿಯಲ್ಲೇ ಆಪ್‍ನ ವರ್ತನೆಯಿದೆ. ಚುನಾವಣೆಯಲ್ಲಿ ಹರಿದ ಹಣದ ಮೂಲ ಕೂಡಾ ಅವೇ ಆಗಿವೆ. ನಗರವಾಸಿಗಳ ನಿರೀಕ್ಷೆಗಳನ್ನು ಗುರ್ತಿಸುವಲ್ಲಿ ಕೇಜ್ರಿವಾಲಾರವರು ಯಶಸ್ವಿಯಾಗಿರುವುದು ಚುನಾವಣೆಯಲ್ಲಿ ಅವರ ಸಫಲತೆಗೆ ಕಾರಣ. ಒಂದು ಹಂತದವರೆಗೆ ಉಚಿತ ವಿದ್ಯುತ್, ಉಚಿತ ನೀರು ಮುಂತಾದ ಜನಪ್ರಿಯ ಕಾರ್ಯಕ್ರಮಗಳ ಅನುಷ್ಠಾನದಿಂದ ಮತದಾರರ ಮನ ಗೆಲ್ಲಲು ಆಪ್ ಯಶಸ್ವಿಯಾಗಿದೆಯೆಂಬುದು ನಿಚ್ಚಳ. ಆದರೆ ಇಂತಹ ಕಾರ್ಯಕ್ರಮಗಳು ದೀರ್ಘಾವಧಿಯಲ್ಲಿ ಸಮಾಜಕ್ಕೆ ಹಿತಕಾರಿಯೇ ಎಂಬ ಕುರಿತು ಯೋಚಿಸಲೇಬೇಕಾಗಿದೆ. ಸಮ ಮತ್ತು ಬೆಸ ಸಂಖ್ಯೆಯ ನೋಂದಾಯಿತ ವಾಹನಗಳ ಬಳಕೆಯನ್ನು ವಾರದ ನಿರ್ದಿಷ್ಟ ದಿನಗಳಿಗೆ ಮಿತಗೊಳಿಸಿ ದೆಹಲಿಯ ವಾಯುಮಾಲಿನ್ಯವನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದೇವೆಂಬ ಕೇಜ್ರಿವಾಲಾರವರ ಹೇಳಿಕೆಯನ್ನು ಬಡಾಯಿ ಎನ್ನುವುದೇ ಸೂಕ್ತವೆಂಬುದು, ದೆಹಲಿಯ ವಾಯುಮಾಲಿನ್ಯವನ್ನು ಗಮನಿಸುವವರಿಗೆ ಅರ್ಥವಾಗುತ್ತದೆ. ಮುಖ್ಯ ರಸ್ತೆಗಳು ಚೆನ್ನಾಗಿದ್ದರೂ ನಗರದ ಒಳ ರಸ್ತೆಗಳ ಪರಿಸ್ಥಿತಿ, ಬಿದ್ದಿರುವ ಕಸದ ರಾಶಿಗಳನ್ನು ನೋಡಿದವರಿಗೆ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು ಬಹಳಷ್ಟಿದೆಯೆಂಬುದರ ಅರಿವಾಗುತ್ತದೆ. ದೆಹಲಿ ಬೆಳೆಯುತ್ತಿದೆ, ಪಕ್ಕದ ರಾಜ್ಯಗಳ ಗಡಿರೇಖೆಗಳನ್ನು ದಾಟಿಯೂ ದೆಹಲಿ ಬೆಳೆಯುತ್ತಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಸ್ವತಂತ್ರವಾಗಿ ಹೊಂದಿರದ ರಾಜ್ಯವಾದ ದೆಹಲಿಗೆ ಕೃಷಿಯ ಚಿಂತೆಯಿಲ್ಲ. ಗ್ರಾಮೀಣ ಅಭಿವೃದ್ಧಿಯ ಹೊಣೆಗಾರಿಕೆಯಿಲ್ಲ, ಆದರೂ ಉದ್ಯೋಗ ಸೃಷ್ಟಿಯ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ. ಒಂದರ್ಥದಲ್ಲಿ ದೆಹಲಿ ರಾಜ್ಯವೆಂದರೆ ಮಹಾನಗರ ಪಾಲಿಕೆಯ ಮುಂದಿನ ಹಂತವೇ ಆಗಿದೆ. ಕೆಲವು ರಾಜ್ಯಗಳಲ್ಲಿ ಆಪ್‍ನ ಅಸ್ತಿತ್ವವಿದೆ. ಸರ್ಕಾರದ ಉನ್ನತ ಹುದ್ದೆಗೆ ರಾಜೀನಾಮೆ ನೀಡಿ, ಭ್ರಷ್ಟಾಚಾರ ವಿರೋಧಿ ಅಲೆಯಲ್ಲಿ ಅಧಿಕಾರಕ್ಕೇರಿದ ಅರವಿಂದ ಕೇಜ್ರೀವಾಲರ ಆಪ್ ಏಕವ್ಯಕ್ತಿ ಪಕ್ಷವಾಗುತ್ತಿದೆ. ಕೇಜ್ರಿವಾಲಾರವರ ವರ್ಚಸ್ಸೊಂದನ್ನೇ ಅವಲಂಬಿಸಿ, ರಾಜ್ಯದ, ದೇಶದ ಅಭಿವೃದ್ಧಿ ಸಾಧಿಸುತ್ತೇವೆಂದು ನಂಬುವುದು ವ್ಯಾವಹಾರಿಕವಾಗಲಾರದು. ದುಡಿಯುವ ಸಾಮಥ್ರ್ಯ ಇರುವ ಪ್ರತಿಯೋರ್ವ ವ್ಯಕ್ತಿಗೂ ದುಡಿಮೆಯ ಅವಕಾಶ ಸೃಷ್ಟಿಸುವ , ದುಡಿಮೆಯ ಪ್ರತಿಫಲದಿಂದ ದುಡಿಮೆಗಾರ ಮತ್ತು ಅವರ ಅವಲಂಬಿತರ ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ , ಔಷಧೋಪಚಾರಗಳನ್ನು ಪಡೆಯುವ ಅವಕಾಶ ನಿರ್ಮಿಸಬೇಕಾದುದು ಸರ್ಕಾರದ ಕರ್ತವ್ಯ. ಈ ಸೌಲಭ್ಯವನ್ನು ಪಡೆಯುವುದು ಪ್ರತಿಯೋರ್ವ ನಾಗರಿಕನ ನೈಸರ್ಗಿಕ ಹಕ್ಕು. ಆದರೆ, ತಮ್ಮ ಈ ಹಕ್ಕಿನ ಅರಿವು ಹೆಚ್ಚಿನವರಿಗೆ ಇಲ್ಲದಿರುವ ಕಾರಣದಿಂದ ಸರ್ಕಾರ ನೀಡುವ ದಯಾಭಿಕ್ಷೆಯಿಂದಲೇ ಅವರು ತೃಪ್ತರು. ಈ ಕುರಿತಾಗಿ ಆಪ್ ಪಕ್ಷಕ್ಕೆ ಸ್ಪಷ್ಟ ವಿಚಾರ ಅಥವಾ ಕಾರ್ಯಕ್ರಮವಿಲ್ಲ. ಕೃಷಿರಂಗದ ಸಮಸ್ಯೆಗಳು, ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಲು ಬೇಕಾದ ಕಾರ್ಯಸಾಧ್ಯ ಯೋಜನೆಗಳು ಆಪ್ ಬಳಿ ಇಲ್ಲ. ಕೃಷಿ ರಂಗದ ಮೇಲಿನ ಅತಿಯಾದ ಅವಲಂಬನೆಯನ್ನು ತಗ್ಗಿಸಿ, ಪರ್ಯಾಯ ಉದ್ಯೋಗ ಕಲ್ಪಿಸುವ ಯೋಜನೆಗಳು ಆಪ್‍ನಲ್ಲಿ ಇಲ್ಲ. ಮೊಹಲ್ಲಾ ಕ್ಲಿನಿಕ್‍ಗಳು ಉಪಯುಕ್ತವೆಂಬುದು ನಿಜ. ಆದರೆ ಔಷಧ ತಯಾರಿಕರ ಪ್ರಬಲ ಲಾಭಿಯನ್ನು ಹಿಮ್ಮೆಟ್ಟಿಸುವ ಸಾಮಥ್ರ್ಯ ಅವಕ್ಕಿಲ್ಲ. ಜನರನ್ನು ಶೋಷಿಸುತ್ತಿರುವ ಔಷದೋಪಚಾರ ಕ್ಷೇತ್ರದ ಹೈಟೆಕ್ ಲಾಬಿಗಳನ್ನು ಮಣಿಸಿ ಜನಪರವಾಗಿಸುವ ಚಿಂತನೆಯನ್ನು ಆಪ್ ಹೊಂದಿಲ್ಲ. ಸ್ಥಳೀಯರಿಗೇ ಉದ್ಯೋಗಾವಕಾಶಗಳ ಮೀಸಲಾತಿಯೆಂಬ ವಿಚಾರ ಇಂದು ಜನಪ್ರಿಯವಾಗುತ್ತಿದೆ; ಪ್ರಾದೇಶಿಕವಾದ ಬೆಳೆಯುತ್ತಿದೆ. ಈ ಜನಾಂದೋಲನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅರ್ಥವ್ಯವಸ್ಥೆಯನ್ನು ಬಲಪಡಿಸುವ , ಈ ಭಾವನೆಗಳು ಸಂಕುಚಿತವಾಗದೇ ವಿಶಾಲ ಮನೋಭಾವ ತಳೆಯುವಂತೆ ಪರಿವರ್ತಿಸುವ ಕುರಿತು ಆಪ್ ಬಳಿ ವಿಚಾರಧಾರೆಯಿಲ್ಲ. ಭ್ರಷ್ಟಾಚಾರದ ವಿರೋಧಿ ಅಲೆಯನ್ನೇರಿ ಅಧಿಕಾರಕ್ಕೆ ಬಂದಿರುವ ಆಪ್ ಭ್ರಷ್ಟಾಚಾರವನ್ನು ತಡೆಗಟ್ಟುವ , ನಿಯಂತ್ರಿಸುವ ದೀರ್ಘಕಾಲೀನ ಕಾರ್ಯಕ್ರಮಗಳನ್ನು ಪ್ರಾರಂಭಿಸಿಲ್ಲ. ಆ ಕುರಿತು ಅವರ ಬಳಿ ಸಿದ್ಧಾಂತವೂ ಇಲ್ಲ. ಬಿಜೆಪಿಯ ಹುಸಿ ರಾಷ್ಟ್ರೀಯವಾದ, ಮತೀಯ ದ್ವೇಷಗಳನ್ನು ಎದುರಿಸುವ ಧನಾತ್ಮಕ ಚಿಂತನೆ, ಕಾರ್ಯಯೋಜನೆಗಳು ಅರವಿಂದರ ಬಳಿ ಇಲ್ಲದಿರುವುದರಿಂದಲೇ ಈ ಕುರಿತು ಅವರು ಮೌನವಹಿಸಿದ್ದಾರೆ. ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಅಥವಾ ಅವಕ್ಕೆ ಪ್ರತಿಕ್ರಿಯಿಸದಿರುವುದೇ ಪರಿಹಾರವಲ್ಲ. ನಗರವಾಸಿಗಳ ನಾಡಿ ಮಿಡಿತವನ್ನು ಸರಿಯಾಗಿ ಗ್ರಹಿಸಿ, ಚುನಾವಣೆಯಲ್ಲಿ ಗೆದ್ದು ದೆಹಲಿ ಗದ್ದುಗೆಯನ್ನು ಮೂರನೇ ಬಾರಿ ಏರಿರುವ ಅರವಿಂದ ಕೇಜ್ರಿವಾಲಾರವರ ಕುರಿತು ಕ್ರೇಝಿಗಳಾಗಿರುವವರು ಪ್ರತಿಪಾದಿಸುತ್ತಿರುವಂತೆ , ಭಾರತದ ಸಮಸ್ಯೆಗಳನ್ನು ಪರಿಹರಿಸುವ ಸಾಮಥ್ರ್ಯ ಆಪ್‍ಗೆ ಇದೆಯೇ ಎಂಬುದನ್ನು ವಸ್ತುನಿಷ್ಟವಾಗಿ ವಿಶ್ಲೇಷಿಸುವುದು ಇಂದಿನ ಅವಶ್ಯಕತೆ. *******************************

ಪ್ರಸ್ತುತ Read Post »

ಇತರೆ

ಶಿಕ್ಷಣ

ಮೌಲ್ಯಯುತ ಜೀವನಕ್ಕೆ ಶಿಸ್ತು ರಮೇಶ ಇಟಗೋಣಿ ಮೌಲ್ಯಯುತ ಜೀವನಕ್ಕೆ ಶಿಸ್ತು : ಪಾಲಕರು, ಶಿಕ್ಷಕರು, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಮುಂದೆ ಗುರಿ ಹಿಂದೆ ಗುರು ಇರಬೇಕು. ವಿದ್ಯೆಯನ್ನು ಅರ್ಥೈಸಿಕೊಂಡು ಕಲಿಯುವ, ಗ್ರಹಿಸುವ ಸಾಮರ್ಥ್ಯ ಸಂಪಾದಿಸುವವನೇ ವಿದ್ಯಾರ್ಥಿ. ಕಲಿಕಾರ್ಥಿಗೆ ಏಕಲವ್ಯನಂತಹ ಉತ್ಕಟವಾದ ಕಲಿಕೆಯ ಹಸಿವು ಇದ್ದಲ್ಲಿ ವಿದ್ಯೆಯನ್ನು ಒಲಿಸಿಕೊಳ್ಳುವುದು ಕಷ್ಟ ಆಗಲಾರದು. ಮಕ್ಕಳಾಗಿ ಕಲಿಯುವುದು ಎಷ್ಟು ಚಂದವೋ ಅಷ್ಟೇ ಗುರುವಾಗಿ ಕಲಿಸೋದು ಅಷ್ಟೇ ಅಂದವಾಗಿದೆ. ಸಾವಿರಾರೂ ಕಲ್ಲುಗಳನ್ನು ಸುಂದರವಾದ ಮೂರ್ತಿ ಮಾಡುವ ಬ್ರಹ್ಮ ಶಿಕ್ಷಕ. ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಆದರೆ ಟೀಚರ್ ಲೈಫ್ ಇಸ್ ಡೈಮಂಡ್ ಲೈಫ್. ಮಕ್ಕಳಲ್ಲಿ ಶಿಸ್ತನ್ನು ರೂಢಿಸುವ ಕಾರ್ಯ ಮನೆಯಿಂದಲೇ ಆರಂಭವಾಗಬೇಕು “ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು” ಎಂಬಂತೆ ಶಿಸ್ತಿನ ಪಾಲನೆ ಕೆವಲ ವಿದ್ಯಾರ್ಥಿ ಜೀವನದ ಭಾಗವಲ್ಲ ಈಡೀ ಜೀವನದುದ್ದಕ್ಕೂ ಶಿಸ್ತು ಒಂದು ಅವಿಭಾಜ್ಯ ಅಂಗ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಮಕ್ಕಳಿಗೆ ಶಿಸ್ತನ್ನು ಕಾದುಕೊಳ್ಳಲು ತಿಳಿ ಹೇಳುವುದು ಪಾಲಕರ ಕರ್ತವ್ಯವಾಗಿದೆ. ಶಿಕ್ಷಣದಿಂದ ಒಳ್ಳೆಯ ನಡತೆಯನ್ನು ಅಳವಡಿಸಿಕೊಳ್ಳುವುದೇ ಶಿಸ್ತು, ಶಿಕ್ಷೆಯೇ ಶಿಸ್ತಲ್ಲ ಶಿಕ್ಷೆಯಿಂದ ಮಾತ್ರ ಶಿಸ್ತು ರೂಢಿಸಿಕೊಳ್ಳಲು ಸಾಧ್ಯವಿಲ್ಲ. ಜೀವನದಲ್ಲಿ ಯಾವ ವಿದ್ಯಾರ್ಥಿ ಶಿಸ್ತು ಅಳವಡಿಸಿಕೊಳ್ಳುತ್ತಾನೆಯೋ, ಯಾರು ಶಿಸ್ತಿನ ಶಿಪಾಯಿಗಳಾಗಿ ಓದುತ್ತಾರೆಯೋ ಅಂತಹ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚುತ್ತದೆ ಅಂತವರು ಮಾತ್ರ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ. ಶಿಕ್ಷಣ ಎಂದರೆ ಓದಿ ಉದ್ಯೋಗ ಗಿಟ್ಟಿಸಿಕೊಳ್ಳುವುದಲ್ಲ ನಿಮ್ಮಲ್ಲಿ ವ್ಯಕ್ತಿತ್ವವನ್ನು, ಮನುಷ್ಯತ್ವವನ್ನು, ಸಂಸ್ಕಾರವನ್ನು, ಉತ್ತಮ ಗುಣಗಳನ್ನು ಪಡೆಯುವುದೇ ಶಿಕ್ಷಣವಾಗಿದೆ. ವಿದ್ಯಾರ್ಥಿ ತನ್ನ ಜೀವನದಲ್ಲಿ ಗುರಿ ಸಾಧಿಸಬೇಕಾದರೆ ಕೆಲವೊಂದು ನಿಯಮ ಪಾಲಿಸಬೇಕಾಗುತ್ತದೆ. ಅದರಲ್ಲೂ ಶಿಸ್ತು ಮತ್ತು ಸಮಯಪ್ರಜ್ಞೆ, ಹಿರಿಯರನ್ನು ಗೌರವಿಸುವ ಗುಣ, ಸಂಯಮದ ನಡವಳಿಕೆಗಳು ಹೆಚ್ಚಾಗಬೇಕು ಇವುಗಳನ್ನು ಯಾರು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾರೋ ಅಂತವರು ಜೀವನದಲ್ಲಿ ಏನಾದರೂ ಸಾಧನೆ ಮಾಡುತ್ತಾರೆ ಇಲ್ಲವಾದರೆ “ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ” ಎಂಬಂತೆ ಜೀವನದುದ್ದಕ್ಕೂ ಗೊಂದಲದಲ್ಲಿ ಉಳಿಯುತ್ತಾರೆ. “ಒಡೆದ ಮುತ್ತು ಕಳೆದ ಹೊತ್ತು” ಯಾವತ್ತೂ ತಿರುಗಿ ಬಾರದು ಎಂಬ ಮಾತಿನಂತೆ ಸಿಕ್ಕಂತ ಸಮಯವನ್ನು ಬಳಸಿಕೊಂಡು ಅವಕಾಶಗಳನ್ನು ಸೃಷ್ಟಿಸುತ್ತಾ ಹೋಗಬೇಕು. ಸಮಯ ಎಲ್ಲರಿಗೂ ಒಂದೇ ಅದನ್ನು ಅರಿತು ಹೆಜ್ಜೆ ಇಡುವುದು ಸಮಂಜಸ. ವಿದ್ಯಾರ್ಥಿಗಳಿಗೆ ಒಂದು ವರ್ಷದ ಮಹತ್ವ ತಿಳಿಯುವುದು ಪರೀಕ್ಷೆಯಲ್ಲಿ ಉತ್ತಿರ್ಣರಾದಾಗ ಮಾತ್ರ, ಸಿಕ್ಕ ಅವಕಾಶವನ್ನು ಆಯಾ ಸಮಯದಲ್ಲಿ ಸರಿಯಾಗಿ ಬೆಳೆಸಿಕೊಳ್ಳುತ್ತಾ ಶಿಸ್ತಿನ ಜೊತೆಗೆ ಸಾಧನೆಯು ನಿಮ್ಮನ್ನು ಬೆನ್ನಟ್ಟಿ ಬರುತ್ತದೆ. ಶಿಸ್ತು ಎಂದರೆ ಕೆಲವರ ಮನಸ್ಸಿಗೆ ನಿಯಂತ್ರಣ ಹಾಕಿಕೊಳ್ಳುತ್ತಾರೆ ಬದುಕಿನ ಇತಿಮಿತಿಗಳನ್ನು, ಎಲ್ಲೆಯನ್ನು ಹಾಕಿಕೊಳ್ಳುತ್ತಾರೆ ಸಂತೋಷದ ಎಲ್ಲ ವಿಚಾರಗಳಿಂದ ದೂರ ಇರುತ್ತಾರೆ ಇದು ಶಿಸ್ತು ಅಲ್ಲ. ಬದುಕಿನೊಂದಿಗೆ ಶಿಸ್ತು ರೂಢಿಸಿಕೊಳ್ಳುವುದೆಂದರೆ ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಏಕಾಗ್ರತೆಯಿಂದ ತಮ್ಮೊಳಗಿನ ಶಕ್ತಿಯನ್ನು ಹರಿಬಿಡುವುದರ ಜೊತೆಗೆ ಇತರರ ಮಾತುಗಳಿಗೆ ಒಳಗಾಗದೇ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗದೆ ಸರಿಯಾದ ಮನಸ್ಥಿತಿಯನ್ನು ಬೆಳೆಸಿಕೊಳ್ಳುವುದೇ ಶಿಸ್ತು. ಎಲ್ಲ ವಿದ್ಯಾರ್ಥಿಗಳ ಜೀವನದಲ್ಲಿ ಗುರುವಿನ ಪಾತ್ರ ಅಮೂಲ್ಯವಾದದ್ದು ಶಿಕ್ಷಕರು ಕೂಡಾ ಒಬ್ಬ ನಿರಂತರ ವಿದ್ಯಾರ್ಥಿಯಾಗಿ ಬಹಳ ವಿಚಾರಗಳನ್ನು ವಿದ್ಯಾರ್ಥಿಗಳಿಂದ ಕಲಿತುಕೊಳ್ಳುತ್ತಾರೆ. ತಮ್ಮಲ್ಲಿರುವ ಎಲ್ಲ ಒಳ್ಳೆಯ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಬಿತ್ತರಿಸಿ ಮೌಲ್ಯಯುತ ಮೂರ್ತಿಯನ್ನಾಗಿ ರೂಪಿಸುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಪ್ರೀತಿಸಿ, ಬೋಧಿಸಿ ಒಳ್ಳೆಯ ಮೌಲ್ಯ ತುಂಬಿ ನಿಸ್ವಾರ್ಥ ಸೇವೆ ಸಲ್ಲಿಸುವಲ್ಲಿ ಶಿಕ್ಷಕರದು ಒಂದು ಕೈ ಮೇಲೆ ಇರುತ್ತದೆ. “ಹರ ಮುನಿದರೂ ಗುರು ಮುನಿಯಲಾರ” ಎಂಬ ಮಾತಿನಂತೆ ಅಂತಹ ಪ್ರತಿಯೊಬ್ಬ ಗುರುವಿಗೂ ನನ್ನ ಅನಂತಕೋಟಿ ನಮನಗಳು. *****************************

ಶಿಕ್ಷಣ Read Post »

ಇತರೆ

ಹಾಸ್ಯಲೇಖನ

ನಾ ಮಾಡಿದ ಉಪ್ಪಿಟ್ಟು  ಗೋಪಿನಾಥ್ ನಾ ಮಾಡಿದ ಉಪ್ಪಿಟ್ಟು  ರೀ ಒಂದ್ ಸಲ ಸೌಟು ಹಿಡಿದು ನೋಡಿ ಗೊತ್ತಾಗುತ್ತೆ ಅಡಿಗೆ ಮಾಡುವುದು ಏನು ಮಹಾ ಅಂತಿರಲ್ಲಾ, ಮೂವತ್ತು ಅಂಕ ಗಳಿಸಿ ಸಾಕೆಂದಳು ! ನಾ ಅವಳ ಚಾಲೆಂಜ್ ಒಪ್ಪಿಕೊಂಡೆ..ಆದರೆ ಒಂದ್ ಕಂಡಿಷನ್. ನೀನು ಯಾವುದೇ ಕಾರಣಕ್ಕೂಅಡಿಗೆಮನೆಯೊಳಗೆ ‌ಬರಬಾರದು ! ಅವಳು ಖುಷಿಯಿಂದ ನಿಮ್ಮಗ್ರಹಚಾರಕ್ಕೆ ನಾನೇನು ಮಾಡಲಾದೀತೆಂದು ರೂಮು ಸೇರಿದಳು. ನಾನು ಬಹಳ ಹುಮ್ಮಸ್ಸಿನಲ್ಲಿದ್ದೆ, ಅಡಿಗೆ ಮನೆಗೆ ಹೋಗಿ ಸೌಟು ಕೈಲಿ ಹಿಡಿದು ಕೈ ಚೌಕವನ್ನು ಹೆಗಲಿಗೇರಿಸಿ ನಳಮಹರಾಜನ ಹಾಗೆ ಪೋಸ್ ಕೊಟ್ಟು ಸೆಲ್ಫೀ ತೆಗೆದುಕೊಂಡೆ..ನಾಳೆ‌ ಇವಳು ಅಲ್ಲಗೆಳದರೆ ?! ಏನು ಮಾಡುವುದು ಒಪ್ಪಿಕೊಂಡಾಗಿದೆ  T.V. ತಿರುಗಿಸಿದೆ, ಮೊದಲಿಗೆ ಕಂಡಿದ್ದು ಪಾಕಶಾಲೆಯ ಕಾರ್ಯಕ್ರಮ ಖುಷಿ ಇಂಗಿಹೋಯಿತು ಅಂದು ಭಾನುವಾರ ಬಾಡೂಟ ನಮಗೆ ಲಾಯ್ಕಲ್ಲಂತ.. ಹಾಗೆ ಎಲ್ಲ ಚಾನಲ್ಗಳ ಪಾಕ ನಿಪುಣೆಯರನ್ನು ನೆನಸಿಕೊಂಡು ಧೈರ್ಯವಾಗಿ ಮುಂದಡಿಯಿಟ್ಟೆ. ತಲೆಯಲ್ಲಿ ಅವರುಗಳು ಹೇಳಿದ್ದು ಮೆಲಕು ಹಾಕುತ್ತಾ… ‘ಮೊದಲಿಗೆ ಅಡಿಗೆ ಮನೆಗೆ ಹೋಗಬೇಕು, ಸರಿ ಅಡಿಯಿಟ್ಟೆ..ಮುಂದೆ ? ಒಲೆಗೆ ಬೆಂಕಿ ಹಚ್ಚಬೇಕು ! ಛೇ ಅಲ್ಲ, ಒಲೆಹಚ್ಚಬೇಕೂ..ಬಾಣಲೆ ಒಲೆ ಮೇಲೆ ಇಡಬೇಕು, ಆಮೇಲೆ ಮುಂದೆ ? ಅವಳು‌ರೂಮಿನಿಂದ ಬೊಬ್ಬೆ ಹೊಡೆದಳು ‘ಏನದು ಸೀದ ವಾಸನೆ ? ಬಾಣಲೆ ಸೀದಿತ್ತು ಕೈಕಾಲಾಡದೆ ಸ್ಟವ್ ಆಫ್ ಮಾಡಿದೆ, ಆ..ಈಗ ಜ್ಞಾಪಕ ಬಂತು ಎಣ್ಣೆ ಹಾಕಬೇಕು. ಹೌದು ಏನೆಣ್ಣೆ ಹಾಕುತ್ತಾರೆ ? ಸಂದೇಹ ನಿವಾರಿಸಿಕೊಳ್ಳುವ ಸಲುವಾಗಿ ‘ಲೇ.. ಎಣ್ಣೆ ಕಾಣುತ್ತಿಲ್ಲಾಂದೆ, ಸುಮ್ಮನೆ ಹೇಳಬೇಕಲ್ಲವಾ ?‌ ‘ನೀವು ಎಣ್ಣೆ ಹಾಕುವ ಸಮವಿನ್ನೂ ಇದೆ ರಾತ್ರಿಯಾಗಿಲ್ಲ ! ಆ…ಮತ್ತೆ ಕಡಲೆಕಾಯಿ ಎಣ್ಣೆ ಎರಡನೇ ಅಟ್ಟದಲ್ಲಿದೆ. ಸರಿ ಎಣ್ಣೆ ಹಾಕಿದೆ ಬಾಣಲೆಗೆ ಧಗ ಧಗ ಬೆಂಕಿ..ಬಾಣಲೆ ಅಷ್ಟು ಕಾದಿತ್ತು..’ರೀ ಮನೆಗೇ ಬೆಂಕಿ ಹಚ್ಚಿದರೇನು ? ‘ಇಲ್ಲ ಮಹರಾಯಿತಿ ಗಾಬರಿಯಾಗ ಬೇಡ ಎಂದು ಅವಳಿಗೆ ಹೇಳಿ ಹಣೆ ಮೇಲಿನ ಬೆವರನ್ನು ಒರಸಿಕೊಂಡೆ, ಹೆಚ್ಚಿಕೊಂಡ  ಈರುಳ್ಳಿ, ಹಸಿ ಮೆಣಸಿಕಾಯಿ, ಕೊತ್ತಂಬರಿ,  ಕರಿಬೇವು ಮೂರು ನಾಲ್ಕು ಬೇಳೆಗಳು ಎಲ್ಲವನ್ನು ಒಟ್ಟಿಗೆ ಹಾಕಿದೆ‌ ಚಿನಕುರಳಿ ಪಟಾಕಿ ಸದ್ದು..ಮತ್ತೆ ಏನೋ ಬಿಟ್ಟೆ ಎಂದು ನೆನಪಾಗಿ ಒಂದಿಷ್ಟು ಉಪ್ಪು ಸುರಿದೆ..ಈಗ ನೀರು ಹಾಕ ಬೇಕು ಎನಿಸಿ ನೀರು ಹಾಕಿದೆ, ಕೊತ ಕೊತ ಕುದಿಯುವಾಗ ರವೆ ಹಾಗೆನೆ..ಸ್ವಲ್ಪ ಹೊತ್ತು ತಟ್ಟೆಯನ್ನು ಮುಚ್ಚಿಡಬೇಕು. ಅಬ್ಬಾ ಎಲ್ಲಾ ಸರಿಯಾಗಿ ಮಾಡಿದೀನಿ ಎನಿಸಿ ಪರೀಕ್ಷೆ ಮುಗಿಸಿ‌ ವಿಜಯ ಧ್ವಜವನ್ನು ಹಾರಿಸಿದಷ್ಟು ಖುಷಿಯಾಗಿತ್ತು. ‘ಲೇ ಆಯಿತು ಬಂದು ನೋಡು ಎಂದು ದರ್ಪವಾಗಿ ಹೇಳಿದೆ..ಆದರೆ ನನ್ನ ಮೂಗನ್ನೇ ನಂಬದಾದೆ ಸೀದ ಬಗ್ಗಡದ ವಾಸನೆ..ಸ್ಟವ್ ಆರಿಸುವುದನ್ನೇ ಮರೆತಿದ್ದೆ, ರವೆ ಹುರಿದಿರಲಿಲ್ಲ‌.  ಇವಳು ಒಳಗೆ ಬರದೆಯೇ ಅಲ್ಲಿಂದಲೇ ಹೇಳಿದಳು ‘ಹಿತ್ತಲ ನಲ್ಲಿ ಕೆಳಗೆ‌ ಬಾಣಲೆಯಿಟ್ಟು ಜೋರಾಗಿ ನೀರು ಬಿಟ್ಟು ಬನ್ನಿ. ‘ಏನಾಯಿತೆಂದು‌ ನಾ ಕೇಳಲೇ ಇಲ್ಲ, ನಾನು ಫಸ್ಟ್‌ ಕ್ಲಾಸಲ್ಲಿ ಫೇಲಾಗಿದ್ದೆ. ಬಾಗಿಲ ಬೆಲ್ ಆಯಿತು..ಹೊರಗೆ ಹೋಟೆಲ್ ಹುಡುಗ ಪಾರಸಲ್ ಹಿಡಿದು ನಿಂತಿದ್ದ. **************************************

ಹಾಸ್ಯಲೇಖನ Read Post »

ಇತರೆ

ಪ್ರಸ್ತುತ

ಶಿವ ಒಂದುವಿಶ್ಲೇಷಣೆ ಗಣೇಶ ಭಟ್ ಶಿರಸಿ ಪ್ರತಿವರ್ಷ ಶಿವರಾತ್ರಿ ಬಂದೊಡನೆ ಶಿವನ ಆರಾಧನೆ ಜೋರಾಗುತ್ತದೆ; ಶಿವನ ಕುರಿತಾಗಿ ಲೇಖನಗಳು, ಪುಸ್ತಕಗಳು ಬರುತ್ತವೆ. ಎಲ್ಲವೂ ಹೆಚ್ಚು ಕಡಿಮೆ ಒಂದೇ ಅಚ್ಚಿನಲ್ಲಿ ಎರಕಹೊಯ್ದಂತಿರುತ್ತವೆ. ನಾನಿಲ್ಲಿ ಹೇಳಹೊರಟಿರುವದು ಶಿವನ ಕುರಿತಾದ ಒಂದು ವಿಶಿಷ್ಟ ಪುಸ್ತಕದ ಕುರಿತು. ಅದರ ಹೆಸರೇ ನಮಃ ಶಿವಾಯ ಶಾಂತಾಯ. ಶ್ರೀ ಶ್ರೀ ಆನಂದಮೂರ್ತಿ ಎಂದು ಅನುಯಾಯಿಗಳಿಂದ ಕರೆಯಲ್ಪಡುವ ಶ್ರೀ ಪ್ರಭಾತ ರಂಜನ್ ಸರ್ಕಾರರು 1982 ರ ಎಪ್ರಿಲ್ 11 ರಿಂದ ಪ್ರಾರಂಭಿಸಿ 13 ಅಗಸ್ಟ್ 1982 ರವರೆಗೆ ಸುಮಾರಾಗಿ ವಾರದಲ್ಲಿ ಒಂದರಂತೆ ನೀಡಿದ 20 ಪ್ರವಚನ ಸಂಗ್ರಹವೇ ಈ ಪುಸ್ತಕ. ಶ್ರೀ ಶ್ರೀ ಆನಂದ ಮೂರ್ತಿಯವರ ಅಭಿಪ್ರಾಯದಂತೆ ಶಿವ ಒಬ್ಬ ಐತಿಹಾಸಿಕ ಮಹಾಪುರುಷ. ಜಡ್ಡುಗಟ್ಟಿದ್ದ ಮಾನವ ಸಮೂಹದ ಪ್ರಗತಿಗೆ ಚಾಲನೆ ನೀಡಲು ಸುಮಾರು ಏಳು ಸಾವಿರ ವರ್ಷಗಳ ಹಿಂದೆ ಆವಿರ್ಭವಿಸಿದ ತಾರಕ ಬ್ರಹ್ಮ. ಮಾನವ ನಾಗರಿಕತೆ ಮತ್ತು ಸಂಸ್ಕøತಿಗಳ ನಿರ್ಮಾಣದಲ್ಲಿ ಶಿವನದು ವಿರಾಟ ಭೂಮಿಕೆ. ಅವನ ಕೊಡುಗೆ ಅಪಾರ. ಶಿವನನ್ನು ಹೊರತುಪಡಿಸಿ ಮಾನವ ಸಮಾಜದ ನಾಗರಿಕತೆ, ಸಂಸ್ಕøತಿಗಳು ನಿಲ್ಲಲಾರವು. ಒಂದು ವೇಳೆ ಪ್ರಥ್ವಿಯ ಇಂದಿನ ಮತ್ತು ಭವಿಷ್ಯದ ಮಾನವ ಸಮಾಜದ ಕುರಿತು ಯಥಾರ್ಥವಾಗಿ ವಿಚಾರಿಸುವುದಾದರೆ ಅಥವಾ ಇತಿಹಾಸವನ್ನು ಬರೆಯುವುದಾದರೆ , ಶಿವನನ್ನು ಬಿಟ್ಟು ಸಾಗಲಾರೆವೆಂದು ಅವರು ಹೇಳುತ್ತಾರೆ. ಮಾನವ ಸಮಾಜಕ್ಕೆ ಶಿವನ ಕೊಡುಗೆ ಅಪಾರ. ಸಂಗೀತ ಕ್ಷೇತ್ರವನ್ನೇ ತೆಗೆದುಕೊಂಡರೆ, ಇಂದಿನ ಸಂಗೀತವು ಸುರ- ಸಪ್ತಕವನ್ನು ಆಧರಿಸಿದೆ. ಅಂದಿನ ಸಮಯದ ಋಗ್ವೇದ ಯುಗದಲ್ಲಿ ಛಂದವಿತ್ತು. ಆದರೆ ರಾಗ- ರಾಗಿಣಿಗಳ ಉದ್ಭವವಾಗಿರಲಿಲ್ಲ. ಸುರ- ಸಪ್ತಕದ ಪರಿಚಯವಿರಲಿಲ್ಲ. ವಿವಿಧ ಪ್ರಾಣಿ, ಪಕ್ಷಿಗಳ ಧ್ವನಿ ತರಂಗಗಳು ವಿಶ್ವದ ಧ್ವನಿ ತರಂಗದೊಂದಿಗೆ, ಆರೋಹ- ಅವರೋಹಗಳೊಂದಿಗೆ ಸಾಮರಸ್ಯ ಹೊಂದಿರುವುದನ್ನು ಶಿವನು ಗುರ್ತಿಸಿದನು. ಇದರ ಪರಿಣಾಮವಾಗಿ ಏಳು ಪ್ರಾಣಿಗಳ ಧ್ವನಿಯನ್ನು ಕೇಂದ್ರವಾಗಿಸಿಕೊಂಡು ಸುರ ಸಪ್ತಕವನ್ನು ರಚಿಸಿದನು. ಧ್ವನಿ ವಿಜ್ಞಾನವು ಸ್ವರ ವಿಜ್ಞಾನವನ್ನು ಅವಲಂಬಿಸಿದೆ. ಇದು ಮಾನವನ ಶ್ವಾಸ, ನಿಃಶ್ವಾಸಗಳನ್ನು ಆಧರಿಸಿದೆ. ಇದನ್ನು ಆಧರಿಸಿಯೇ ಛಂದದ ಜೊತೆಗೆ ನೃತ್ಯ ಮತ್ತು ಮುದ್ರೆಯನ್ನು ಸಹ ಶಿವನು ಜೋಡಿಸಿದನು. ಆದ್ದರಿಂದಲೇ ಅವನು ನಟರಾಜ. ಈ ಜ್ಞಾನವನ್ನು ಭರತ ಮಹರ್ಷಿಯ ಮೂಲಕ ಜನರಿಗೆ ತಲುಪಸಿದನು. ಶಿವನು ಕೇವಲ ಸಂಗೀತ ಮತ್ತು ನೃತ್ಯಕ್ಕೆ ಮಾತ್ರ ವಿಧಿಬದ್ಧ, ಛಂದೋಬದ್ಧ ರೂಪವನ್ನು ನೀಡಲಿಲ್ಲ; ಜೀವನದ ಪ್ರತಿಯೊಂದು ಅಭಿವ್ಯಕ್ತಿಯನ್ನೂ ಶಿಸ್ತುಬದ್ಧಗೊಳಿಸಿದನು. ಶಿವನು ಸಮಯಕ್ಕಿಂತ ಮೊದಲು ವಿವಾಹ ಪದ್ಧತಿ ಇರಲಿಲ್ಲ. ವ್ಯಕ್ತ್ತಿಯ ಪರಿಚಯವನ್ನು ತಾಯಿಯ ಹೆಸರಿನಿಂದ ಗುರ್ತಿಸಲಾಗುತ್ತಿತ್ತು. ತಂದೆಯಾದವನಿಗೆ ಕುಟುಂಬ ನಿರ್ವಹಣೆಯಲ್ಲಿ ನಿರ್ದಿಷ್ಟ ಪಾತ್ರವಿರಲಿಲ್ಲ. ವಿವಾಹ ( ಅಂದರೆ ಒಂದು ವಿಶೇಷ ನಿಯಮಾನುಸಾರ ನಡೆಯುವುದು) ಪದ್ಧತಿಯನ್ನು ಅರ್ಥಾತ್ ಕೌಟುಂಬಿಕ ವ್ಯವಸ್ಥೆಗೆ ಭದ್ರ ಅಡಿಪಾಯ ಹಾಕಿದವನು ಸದಾಶಿವ. ಶಿವ- ಪಾರ್ವತಿಯರ ವಿವಾಹವನ್ನು ಪ್ರಥಮ ವಿವಾಹವೆಂದೂ ಹೇಳುತ್ತಾರೆ. ನವ ವಿವಾಹಿತರಿಗೆ ಆಶೀರ್ವಾದ ಮಾಡುವಾಗ ಶಿವ- ಪಾರ್ವತಿಯರಂತೆ ಆದರ್ಶ ದಾಂಪತ್ಯ ನಿಮ್ಮದಾಗಲಿ ಎಂದು ಹೇಳುವ ಸಂಪ್ರದಾಯ ಇಂದಿಗೂ ಕೂಡಾ ಇದೆ. ಶ್ವಾಸ-ನಿಶ್ವಾಸಗಳು ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತದೆ. ವಿವಿಧ ನಾಡಿಗಳು ( ಇಡಾ, ಪಿಂಗಳಾ, ಸುಷುಮ್ನಾ) ಕಾರ್ಯ ನಿರ್ವಹಿಸುವ ವಿಧಾನ, ಮಾನವನ ಉಸಿರಾಟದೊಂದಿಗೆ ಅವುಗಳ ಸಂಬಂಧದ ಕುರಿತು ತಿಳಿ ಹೇಳಿದವನು ಶಿವ. ಶ್ವಾಸ- ಪ್ರಶ್ವಾಸಗಳು ಕೆಲವೊಮ್ಮೆ ಬಲನಾಸಿಕ ಅಥವಾ ಎಡನಾಸಿಕ ಹಾಗೂ ಕೆಲವೊಮ್ಮೆ ಎರಡೂ ನಾಸಿಕಗಳ ಮೂಲಕ ನಡೆಯುವುದನ್ನು ಗಮನಿಸಿರುತ್ತೇವೆ. ಉಸಿರಾಟದ ವಿಶೇಷತೆಗೂ, ಮಾನವನ ದಿನಚರ್ಯೆಗೂ ನೇರ ಸಂಬಂಧ ಇರುವುದನ್ನು ತೋರಿಸಿಕೊಳ್ಳುವುದು ಶಿವ. ಬಲನಾಸಿಕದಲ್ಲಿ ಶ್ವಾಸೊಚ್ವಾಸ ನಡೆದಿರುವಾಗ ಯಾವ ಕಾರ್ಯಗಳನ್ನು ಮಾಡಬೇಕು, ದೈಹಿಕ ಶ್ರಮಕ್ಕೆ ಪೂರಕವಾದ ಉಸಿರಾಟ ಎಂತಿರಬೇಕು. ಯೋಗಾಸನಕ್ಕೆ, ಧ್ಯಾನಕ್ಕೆ ಪೂರಕವಾದ ಉಸಿರಾಟದ ವಿಧಾನ ಹೇಗಿರಬೇಕು ಮುಂತಾಗಿ ತಿಳಿಸಿದವನು ಶಿವ. ಈ ವಿಜ್ಞಾನವನ್ನು ಸ್ವರಶಾಸ್ತ್ರ ಅಥವಾ ಸ್ವರೋದಯ ಅಥವಾ ಸ್ವರ ವಿಜ್ಞಾನ ಎಂದು ಕರೆಯಲಾಯಿತು. ಮಾನವನ ದೇಹದಲ್ಲಿ ಹಲವು ಗ್ರಂಥಿಗಳಿವೆ. ಅವು ಸ್ರವಿಸುವ ಗ್ರಂಥಿರಸದ ಪ್ರಮಾಣ ದೈಹಿಕ ಆರೋಗ್ಯವನ್ನು, ಮಾನಸಿಕ ಸ್ಥಿರತೆಯನ್ನು ನಿಯಂತ್ರಿಸುತ್ತದೆ. ಗ್ರಂಥಿಗಳ ನಿಯಂತ್ರಣಕ್ಕಾಗಿ ವ್ಯವಸ್ಥಿತ ರೀತಿಯಲ್ಲಿ ದೇಹ ಚಲನೆ ಅಗತ್ಯ. ಅಂತಹ ದೈಹಿಕ ಚಲನೆಯನ್ನು ಮುದ್ರೆ, ಛಂದಗಳನ್ನು ಸೇರಿಸಿದ ನೃತ್ಯ ರೂಪದಲ್ಲಿ ಶಿವನು ನೀಡಿದನು. ಪುರುಷರಲ್ಲಿ ಆತ್ಮವಿಶ್ವಾಸ ಬೆಳೆಸುವ, ಧೈರ್ಯ ಹೆಚ್ಚಿಸುವ, ಛಲ ಬೆಳೆಸುವುದಕ್ಕಾಗಿ ತಾಂಡವ ನೃತ್ಯವನ್ನು ಶಿವನು ಪರಿಚಯಿಸಿದನು. ಕಳೆದ ಏಳುಸಾವಿರ ವರ್ಷಗಳ ಹಿಂದೆ ಜನಪ್ರಿಯಗೊಂಡಿದ್ದ ತಾಂಡವ ಕ್ರಮೇಣ ಜನಮಾನಸದಿಂದ ಮರೆಯಾಗಿ ಬಿಟ್ಟಿದೆ. ಇದೇ ತಾಂಡವವನ್ನು ಸಕಾರಣವಾಗಿ ಪುನಃ ಜನಪ್ರಿಯಗೊಳಿಸುವ ಕಾರ್ಯವನ್ನು ಶ್ರೀ ಪ್ರಭಾತ ರಂಜನ್ ಸರ್ಕಾರರು ಮಾಡಿದ್ದಾರೆ. ಜಗತ್ತಿನಾದ್ಯಂತ ಇರುವ ಆನಂದ ಮಾರ್ಗದ ಪುರುಷ ಅನುಯಾಯಿಗಳು ತಾಂಡವ ನೃತ್ಯವನ್ನು ಕಲಿತು, ಯೋಗಾಸನದಂತೆ ಪ್ರತಿದಿನ ಎರಡು ವೇಳೆ ಅಭ್ಯಾಸ ಮಾಡಲು ಅವರು ಸೂಚಿಸಿದ್ದಾರೆ. ಇತರರಿಗೂ ತಾಂಡವ ನೃತ್ಯವನ್ನು ಉಚಿತವಾಗಿ ಬೋಧಿಸುವ ವ್ಯವಸ್ಥೆ ಮಾಡಿದ್ದಾರೆ.. ವೈದ್ಯಕಶಾಸ್ತ್ರಕ್ಕೆ ಶಿವನ ಕೊಡುಗೆ ಅಪಾರ. ಶಲ್ಯಕರಣ, ವಿಶಲ್ಯಕರಣ, ಶವಚ್ಛೇದಗಳೆಲ್ಲವನ್ನೂ ಶಿವನು ಆಯುರ್ವೇದ ಶಾಸ್ತ್ರದೊಂದಿಗೇ ಸಮ್ಮಿಲಿತಗೊಳಿಸಿದ್ದರು. ಆರ್ಯರು ಭಾರತಕ್ಕೆ ಹೊರಗಿನಿಂದ ಬಂದವರು. ಯಜ್ಞ- ಯಾಗಗಳೂ ಅವರೊಂದಿಗೇ ಬಂದವು. ಭಾರತದ ಮೂಲನಿವಾಸಿಗಳಿಗೆ ಅಮೂಲ್ಯವಾದ ಆಹಾರ ವಸ್ತುಗಳನ್ನು ಯಜ್ಞ ಕುಂಡದಲ್ಲಿ ಸುರಿಯುವುದು, ಪ್ರಾಣಿಗಳ ಬಲಿ ನೀಡುವುದು ಒಪ್ಪಿತವಾಗಿರಲಿಲ್ಲ. ಇದು ಧರ್ಮವೇ ಅಲ್ಲವೆಂದು ಶಿವನು ಸಾರಿದನು. ಧರ್ಮವೆಂದರೆ ಪರಮ ಸಂಪ್ರಾಪ್ತಿಯ ಮಾರ್ಗ; ಪಾಶವೀ ಸುಖದ ಮಾರ್ಗವಲ್ಲ ಎಂದು ಶಿವನು ಘೋಷಿಸಿದ್ದನು. ಸಮಸ್ತ ಕರ್ಮಗಳ ಏಷಣವನ್ನು ಈಶ್ವರನತ್ತ ತಿರುಗಿಸಿ ಸಾಗುವುದೇ ಧರ್ಮದ ಪೂರ್ಣತೆಯೆಂಬುದು ಶಿವನ ಅಭಿಪ್ರಾಯವಾಗಿತ್ತು. ಶಿವನ ಕಾಲದಲ್ಲಿ ಭಾರತದ ಮೂಲ ನಿವಾಸಿಗಳು ( ಆಸ್ಟ್ರೀಕೋ- ಮಂಗೋಲ- ನಿಗ್ರೋಯೆಡ್ ಜನಾಂಗದವರು) ಮತ್ತು ಹೊರಗಿನಿಂದ ಬಂದ ಆರ್ಯರ ಸಂಬಂಧ ಒಳ್ಳೆಯದಾಗಿರಲಿಲ್ಲ. ಇಲ್ಲ್ಲಿನವರನ್ನು ಅಸುರರು, ದಾನವರು, ದಾಸರು, ಶೂದ್ರ ಮುಂತಾಗಿ ಆರ್ಯರು ಸಂಬೋಧಿಸುತ್ತಿದ್ದರು. ಗೌರಿ ಅಥವಾ ಪಾರ್ವತಿ ಆರ್ಯಕನ್ಯೆ. ಶಿವನನ್ನೇ ಧ್ಯಾನಿಸಿ, ಅವನನ್ನೇ ವಿವಾಹವಾಗ ಬಯಸಿದವಳು. ಶಿವ ಮತ್ತು ಗೌರಿಯ ವಿವಾಹದ ನಂತರ ಆರ್ಯ ಮತ್ತು ಆರ್ಯೇತರರ ಸಂಬಂಧ ಸುಧಾರಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಇನ್ನಷ್ಟು ಕೆಡತೊಡಗಿತು. ಗೌರಿಯ ತಂದೆಯಾದ ಆರ್ಯಕುಲದ ದಕ್ಷನು ಶಿವನನ್ನು ನಿಂದಿಸಲೆಂದೇ, ಶಿವನನ್ನು ಬಿಟ್ಟು ಒಂದು ಯಜ್ಞವನ್ನು ನಡೆಸಿದನು. ಶಿವನಿಗೆ ಆಮಂತ್ರಣ ನೀಡದೇ ಇದ್ದುದÀಲ್ಲದೇ ಯಜ್ಞ ಸ್ಥಳದಲ್ಲಿ ನಡೆದ ಶಿವ ನಿಂದನೆಯನ್ನು ಸಹಿಸಲಾರದ ಗೌರಿಯು ಆತ್ಮತ್ಯಾಗ ಮಾಡಿದಳು. ಹಲವರ ಅಭಿಪ್ರಾಯದಲ್ಲಿ ದಕ್ಷಯಜ್ಞರ ಘಟನೆ ಪೌರಾಣಿಕ ಕಲ್ಪನೆ. ಆದರೆ ಶ್ರೀ ಶ್ರೀ ಆನಂದ ಮೂರ್ತಿಯವರು ಹೇಳುವಂತೆ ಗೌರಿಯ ಆತ್ಮತ್ಯಾಗದ ನಂತರ ಆರ್ಯ ಮತ್ತು ಅನಾರ್ಯರ ಸಂಬಂಧ ಸುಧಾರಿಸತೊಡಗಿತು. ಐತಿಹಾಸಿಕ ಶಿವನಿಗೆ ಮೂವರು ಪತ್ನಿಯರು. ಆರ್ಯಕುಲದ ಗೌರಿ, ಅನಾರ್ಯಕನ್ಯೆಯಾದ ಕಾಳಿ, ಮಂಗೋಲಿಯನ್ ಕನ್ಯೆಯಾದ ಗಂಗೆ. ಭೈರವ ಪಾರ್ವತಿಯ ಮಗ. ಭೈರವಿ ಕಾಳಿಯ ಮಗಳು. ಕಾರ್ತಿಕೇಯ ಗಂಗೆಯ ಮಗ. ಶಿವನ ಕುರಿತಾಗಿ ಹಲವು ನಂಬಿಕೆಗಳು, ಊಹಾಪೋಹಗಳು, ಕಲ್ಪನೆಗಳು ಜನರ ಮನಸ್ಸಿನಲ್ಲಿ ತುಂಬಿಕೊಂಡಿವೆ. ಶಿವನ ಜಟೆಯಿಂದ ನೀರು ಹರಿದು ಬರುವುದನ್ನು ತೋರಿಸಿ ಅದನ್ನು ಗಂಗೆ ಎಂದು ನಂಬುತ್ತಾರೆ. ಇದಕ್ಕೆ ಶ್ರೀ ಶ್ರೀ ಆನಂದ ಮೂರ್ತಿಯವರ ವಿವರಣೆ ತುಂಬಾ ಮಾರ್ಮಿಕವಾಗಿದೆ. ಪಾರ್ವತಿಯ ಮಗನಾದ ಭೈರವ ಹಾಗೂ ಕಾಳಿಯ ಮಗಳು ಭೈರವಿ ಇಬ್ಬರೂ ಧರ್ಮನಿಷ್ಠರೂ, ತಂತ್ರಸಾಧಕರೂ ಆಗಿದ್ದರು. ಆದರೆ, ಗಂಗೆಯ ಪುತ್ರ ಕಾರ್ತಿಕೇಯನು ಹಾಗಿರಲಿಲ್ಲ. ಇದು ಅವಳ ದುಃಖಕ್ಕೆ ಕಾರಣವಾಗಿತ್ತು. ಅವಳ ದುಃಖವನ್ನು ಮರೆಸುವ ಸಲುವಾಗಿ ಶಿವನು ಅವಳಿಗೆ ಹೆಚ್ಚಿನ ಸಮಾಧಾನ ಮಾಡುತ್ತಿದ್ದನು. ಮತ್ತು ಸಮಯ ನೀಡುತ್ತಿದ್ದನು. ಇದನ್ನೇ ಶಿವನು ಗಂಗೆಯನ್ನು ತಲೆಯ ಮೇಲೆ ಹೊತ್ತುಕೊಂಡಿದ್ದಾನೆಂದು ಆಡಿಕೊಳ್ಳುತ್ತಿದ್ದರು. ಸಾವಿರಾರು ವರ್ಷಗಳ ನಂತರ ಇದೇ ವಿಷಯ ಬದಲಾಗಿ ಶಿವನ ಜಟೆಯಿಂದ ಗಂಗೆ( ನೀರು) ಯ ಉದ್ಭವವಾಗುವ ಕಥೆ ಹುಟ್ಟಿಕೊಂಡಿತು. ಅಸುರರೆಂದರೆ ಕ್ರೂರಿಗಳೆಂದೂ, ಬೃಹತ್ ದೇಹ ಹೊಂದಿದ ಅನಾಗರಿಕ ಜನರೆಂದು ನಮ್ಮ ಪುರಾಣ ಕಥೆಗಳಲ್ಲಿ ಓದುತ್ತೇವೆ. ಆದರೆ ಶ್ರೀ ಶ್ರೀ ಆನಂದ ಮೂರ್ತಿಯವರ ಪ್ರಕಾರ ಮಧ್ಯ ಏಷಿಯಾದ ಅಸ್ಸೀರಿಯಾ ಪ್ರಾಂತ್ಯದ ನಿವಾಸಿಗಳೇ ಅಸುರರು. ಇವರು ಆರ್ಯರ ಬದ್ಧ ದ್ವೇಷಿಗಳಾಗಿದ್ದರು. ಆರ್ಯರ ನಡೆ, ನುಡಿ, ಆಚರಣೆಗಳನ್ನು ಅಸುರರು ಒಪ್ಪುತ್ತಿರಲಿಲ್ಲ. ತಮ್ಮ ಶ್ರೇಷ್ಠತೆಯನ್ನು ಒಪ್ಪದ ಅಸುರರನ್ನು ಕೊಲ್ಲುವದು ತಮ್ಮ ಹಕ್ಕು ಎಂಬಂತೆ ಆರ್ಯರು ವರ್ತಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಅಸುರರು ರಕ್ಷಣೆ ಕೋರಿ ಶಿವನಲ್ಲಿಗೆ ಬರುತ್ತಾರೆ. ಅಂದು ನಡೆಯುತ್ತಿದ್ದ ಜನಾಂಗೀಯ ದ್ವೇಷವನ್ನು ತಣಿಸಲು ಶಿವನು ಸಾಕಷ್ಟು ಶ್ರಮಿಸಿದನು ಮತ್ತು ಅಸುರರಿಗೆ ರಕ್ಷಣೆ ನೀಡಿದನು, ಸಮಾಜದಲ್ಲಿ ಗೌರವ ಪಡೆಯಲು ಅನರ್ಹರೆಂದು ಆರ್ಯರಿಂದ ತೀರ್ಮಾನಿಸಲ್ಪಟ್ಟ ಜನಸಾಮನ್ಯರು ಶಿವನ ಅನುಯಾಯಿಗಳಾಗಿದ್ದರು. ಇಂತಹ ಹಲವು ಘಟನೆಗಳು ಮುಂದಿನ ದಿನಗಳಲ್ಲಿ ಆರ್ಯರ ಪ್ರಭಾವಕಕ್ಕೊಳಗಾಗಿ ರಚಿತವಾದ ಕಥೆ, ಪುರಾಣಗಳಲ್ಲಿ ವಿಕೃತವಾಗಿ ಪ್ರಸ್ತುತಪಡಿಸಲ್ಪಟ್ಟವು. ಅದರಿಂದಾಗಿಯೇ ಅಸುರರು ಶಿವ ಭಕ್ತರಾಗಿ ಶಿವನಿಂದ ವರ ಪಡೆದವರಾಗಿ ಯಜ್ಞ- ಯಾಗಾದಿಗಳನ್ನು ಕೆಡಿಸುವವರಾಗಿ ತೋರಿಸಲ್ಪಟ್ಟಿದ್ದಾರೆ. ಜನಸಾಮಾನ್ಯರನ್ನು ಶಿವಗಣಗಳೆಂದೂ, ಸ್ಮಶಾನವಾಸಿಗಳೆಂದೂ ವಿವರಿಸುವುದನ್ನು ಕಾಣುತ್ತೇವೆ. ಪುರಾಣಗಳ ಮೂಲಕ, ಜಾನಪದ ಕಥೆ, ದಂತಕಥೆಗಳ ಮೂಲಕ ಶಿವನಿಗೂ ಹಾಗೂ ಇತರ ದೇವಿ, ದೇವತಾ ಪುರುಷರಿಗೂ ಒಂದೊಲ್ಲೊಂದು ರೀತಿಯ ಸಂಬಂಧ ಕಲ್ಪಿಸಿರುವುದನ್ನು ಕಾಣುತ್ತೇವೆ. ವಾಸ್ತವದಲ್ಲಿ ಐತಿಹಾಸಿಕ ಶಿವನಿಗೂ, ಅವರೆಲ್ಲರಿಗೂ ಯಾವ ಸಂಬಂಧವೂ ಇರಲಿಲ್ಲ. ಆದರೂ ಇಂತಹ ಸಂಬಂಧ ಸೃಷ್ಟಿಗೆ ಮೂಲಕಾರಣ ಶಿವನ ಉನ್ನತ ವ್ಯಕ್ತಿತ್ವ. ಮಾನವ ಸಮಾಜ ಅದರಲ್ಲೂ ವಿಶೇಷವಾಗಿ ಭಾರತೀಯ ಸಮಾಜದ ಮೇಲೆ ಉಂಟಾಗಿರುವ ಶಿವನ ಗಾಢ ಪ್ರಭಾವವೇ ಇಂತಹ ಕಥೆಗಳಿಗೆ ಕಾರಣ. ಶಿವನ ಪತ್ನಿಯೆಂದು ನಂಬಲಾಗಿರುವ ದುರ್ಗೆ, ಪಾರ್ವತಿಯೂ ಅಲ್ಲ; ಕಾಳಿಯೂ ಅಲ್ಲ, ದುರ್ಗೆಯ ಕಲ್ಪನೆ ಮಾಡಿರುವುದೇ ಶಿವನ ಸಮಯದ ಐದು ಸಾವಿರ ವರ್ಷಗಳ ನಂತರ. ಕೆಲವು ಪುರಾಣ ಕಥೆಗಳಲ್ಲಿರುವಂತೆ ಲಕ್ಷ್ಮೀ ಮತ್ತು ಸರಸ್ವತಿಯರು ಶಿವನ ಪುತ್ರಿಯರೇ ಅಲ್ಲ. ಶಿವನ ಮಗನೆಂದು ಹೇಳಲಾಗುವ ಗಣೇಶನು ಶಿವನಿಗಿಂತ ಬಹು ಪುರಾತನನು. ಗಣದ ಮುಖ್ಯಸ್ಥನಾಗಿ ಕಲ್ಪನೆಯಲ್ಲಿದ್ದ ಗಣೇಶನನ್ನು ಶಿವನೊಂದಿಗೆ ಜೋಡಿಸಿರುವುದು, ಲಿಂಗಪೂಜೆಯೊಂದಿಗೆ ಶಿವನ ಸಂಬಂಧ ಕಲ್ಪಿಸಲು ಕಾರಣವೆಂದರೆ ಶಿವನ ಅಸಮಾನ್ಯ, ಅಲೌಕಿಕ ಪ್ರಭಾವವು ಜನಸಮೂಹದ ಮೇಲೆ ಇರುವುದೇ ಕಾರಣ. ಶಿವನೊಂದಿಗೆ ಸಂಬಂಧ ಕಲ್ಪಿಸಿ ಅವರ ಗೌರವ ಹೆಚ್ಚಿಸಿಕೊಳ್ಳುವ ಪ್ರಯತ್ನವಿದು. ಆದ್ದರಿಂದಲೇ ಶಿವನ ಸಮ್ಮಾನದಲ್ಲಿಯೇ ಸರ್ವರ ಸಮ್ಮಾನವಿದೆಯೆಂದು ಹೇಳುತ್ತಾರೆ. ನಮಃ ಶಿವಾಯ ಶಾಂತಾಯ ಪುಸ್ತಕದಲ್ಲಿ ಇಂತಹ ಹಲವು ಅಪರೂಪದ ಮಾಹಿತಿಗಳು ಸಿಗುತ್ತವೆ. ಶ್ರೀ ಶ್ರೀ ಆನಂದ ಮೂರ್ತಿಯವರು ಹೇಳಿದ್ದಾರೆಂಬ ಕಾರಣಕ್ಕಾಗಿಯೇ ಶಿವನನ್ನು ಐತಿಹಾಸಿಕ ಮಹಾಮೇರು ವ್ಯಕ್ತಿಯೆಂದು ನಂಬಬೇಕೇ ಎಂಬ ಪ್ರಶ್ನೆ ಸಹಜ. ಶಿವನ ಅಸ್ತಿತ್ವಕ್ಕೆ ಆಧಾರವಾಗಿ ಯಾವ ಶಿಲಾ ಲೇಖವೂ ಇಲ್ಲ. ಯಾಕೆಂದರೆ ಅಂದು ಲಿಪಿಯ ಆವಿಷ್ಕಾರ ಆಗಿರಲೇ ಇಲ್ಲ. ಆದರೂ ಶಿವನ ಐತಿಹಾಸಿಕ ಸತ್ಯವನ್ನು, ತಾರ್ಕಿಕವಾಗಿ ಲೇಖಕರು ಸಿದ್ಧಪಡಿಸುತ್ತಾರೆ. ಇದೇ ಅವರ ಪ್ರವಚನಗಳ ವಿಶೇಷತೆ. ನಮಃ ಶಿವಾಯ ಶಾಂತಾಯ ಬರೀ ಶಿವನ ಕಥೆಯಲ್ಲ. ಕಳೆದ ಏಳು ಸಾವಿರ ವರ್ಷಗಳ ಭಾರತದ ಇತಿಹಾಸವಿದು. ಶಿವನ ನಂತರ ಭಾರತದಲ್ಲಿ ಉಂಟಾದ ಬದಲಾವಣೆಗಳು ಹುಟ್ಟಿಕೊಂಡ ಹೊಸ ಹೊಸ ಪಂಥಗಳು, ಮತಗಳು ಮತ್ತು ಅವು ಯಾವ ರೀತಿಯಲ್ಲಿ ಶಿವನಿಂದ, ಶಿವತತ್ವದಿಂದ ಪ್ರೇರಿತವಾದವೆನ್ನುವುದನ್ನು ವಿವರಿಸಲಾಗಿದೆ, ಬೌದ್ಧ, ಜೈನ ಮತಗಳು ಕೂಡಾ ಹೇಗೆ ಶಿವನ ಪ್ರಭಾವಕ್ಕೊಳಗಾಗಿ ತಮ್ಮ ನಂಬಿಕೆಯ ದೇವ- ದೇವತೆಗಳನ್ನು ಶಿವನೊಂದಿಗೆ ಜೋಡಿಸಿದರೆಂಬ ಮಾಹಿತಿಯನ್ನು ನೀಡಲಾಗಿದೆ. ಬೌದ್ಧರ ತಾರಾನಾಥ, ಜೈನರ ಮಂಜುನಾಥ ಮುಂತಾದ ಹಲವು ಉದಾಹರಣೆಗಳೂ ಲಭ್ಯ. ದೇಶದ ವಿವಿಧ ಪ್ರದೇಶಗಳಲ್ಲಿ ಆಚರಣೆಯಲ್ಲಿರುವ ಸಂಪ್ರದಾಯಗಳು ಶಿವನೊಂದಿಗೆ ಹೊಂದಿರುವ ಸಂಬಂಧಗಳ ವಿಶ್ಲೇಷಣೆಯನ್ನು ನೀಡಲಾಗಿದೆ. ಶಿವೋಕ್ತಿ

ಪ್ರಸ್ತುತ Read Post »

ಇತರೆ

ಶ್ರದ್ದಾಂಜಲಿ

‘ವಿಡಂಬಾರಿ’ ಕಣ್ಮರೆ..! ಕೆ.ಶಿವು ಲಕ್ಕಣ್ಣವರ ಖ್ಯಾತ ಚುಟುಕು ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ವಿಡಂಬಾರಿ’ ಕಣ್ಮರೆ..! ಖ್ಯಾತ ಚುಟುಕು ಕವಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಡಂಬಾರಿ ಅವರು ಕಡತೋಕೆಯಲ್ಲಿ ತಮ್ಮ ಮಗಳ ಮನೆಯಲ್ಲಿ ನಿನ್ನೆ ನಿಧನರಾಗಿದ್ದಾರೆ… ‘ವಿಡಂಬಾರಿ’ ಕಾವ್ಯನಾಮದಿಂದ ಬರೆಯುತ್ತಿದ್ದ ವಿಷ್ಣುಗ. ಭಂಡಾರಿ ಜನಿಸಿದ್ದು 1935 ಫೆಬ್ರುವರಿ 29 ರಂದು. ‘ವಿಶಾಲ ಕರ್ನಾಟಕ’ದಲ್ಲಿ ಮೊದಲ ಚುಟುಕು ಪ್ರಕಟವಾಯಿತು. ವಿ.ಗ.ಭಂಡಾರಿ ಬದಲು ಸಂಪಾದಕರು ‘ವಿಡಂಬಾರಿ’ ಎಂದು ಬದಲಿಸಿ ಪ್ರಕಟಿಸಿದರು (ಅಂಚೆ ನೌಕರರಾಗಿದ್ದ ವಿಷ್ಣು ಅವರ ಹೆಸರಿನಲ್ಲಿಯೇ ಪ್ರಕಟವಾದರೆ ಅನವಶ್ಯಕ ತೊಂದರೆ ಎಂಬ ಕಾರಣದಿಂದ ಸಂಪಾದಕರೇ ನಾಮಧೇಯ ಬದಲಿಸಿದ್ದರು). ಮುಂದೆ ಅದುವೆ ಕಾವ್ಯನಾಮ ಆಯಿತು. ‘ವಿಡಂಬಾರಿ’ ಅವರ ಬದುಕಿಗೆ ಪಕ್ವತೆ ಬಂದದ್ದು ಭಟ್ಕಳದ ಶಿರಾಲಿಯಲ್ಲಿ. ನಿವೃತ್ತಿ ಆಗುವವರೆಗೂ ಶಿರಾಲಿಯಲ್ಲಿಯೇ ಇದ್ದರು. ಅವರ ಬದುಕಿಗೆ ಹೊಸ ಚಾಲನೆ ನೀಡಿದ್ದು ಶಿರಸಿಯ ‘ಚಿಂತನ’ ಕನ್ನಡ ಪುಸ್ತಕ ಮಳಿಗೆ… ನಿವೃತ್ತಿಯ ನಂತರ ಜಲ್ಲಿ ಕ್ರಶ್ಶರಿನಲ್ಲಿ ಜೀವ ತೇಯುತ್ತಿದ್ದ ‘ವಿಡಂಬಾರಿ’ ಅವರು ಪುಸ್ತಕದಂಗಡಿಯ ಮ್ಯಾನೇಜರ ಆಗಿ ನೇಮಕಗೊಂಡರು. ಸ್ವಂತ ಮನೆ ಇಲ್ಲದ ಅವರು ಶಿರಸಿಗೆ ಸ್ಥಳಾಂತರವಾದರು. ಅಂದಿನಿಂದ ಪುಸ್ತಕಗಳೇ ಅವರ ದಿನಚರಿ. ವಿಡಂಬಾರಿ ಅವರು ಈವರೆಗೆ 4 ಕವನ ಸಂಕಲನ ಪ್ರಕಟಿಸಿದ್ದಾರೆ… ‘ಒಗ್ಗರಣೆ’ (1981), ‘ಕವಳ’ (1986) ‘ಕುದಿ ಬಿಂದು’ (2004) ‘ವಿಡಂಬಾರಿ ಕಂಡಿದ್ದು’ (2010) ಚುಟುಕು ಸಂಕಲನ. ‘ಅಂಚೆ ಪೇದೆಯ ಆತ್ಮ ಕಥನ’ ಅವರ ಆತ್ಮಕಥನ… ಹೀಗೆ 7 ಪುಸ್ತಕ ಪ್ರಕಟವಾಗಿವೆ. ಇತ್ತೀಚೆಗೆ ಆನಾರೋಗ್ಯದಿಂದ ಬಳಲುತ್ತಿದ್ದ ಅವರು ಮಗಳ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ಮರಣಾನಂತರ ಅವರ ಕುಟುಂಬದವರು ಕಾರವಾರ ಮೆಡಿಕಲ್ ಕಾಲೇಜಿಗೆ ‘ವಿಡಂಬಾರಿ’ ಅವರ ದೇಹದಾನ ಮಾಡಿದ್ದಾರೆ. ಬದುಕಿನ ಕೊನೆಯಲ್ಲೂ ದೇಹದಾನ ಮಾಡುವ ಮೂಲಕ ‘ವಿಡಂಬಾರಿ’ ಮಾದರಿಯಾಗಿದ್ದಾರೆ ಅವರಿಗೆ ಚಿರಶಾಂತಿ ದೊರೆಯಲೆಂದು ಹಾರೈಸೋಣ..! *************

ಶ್ರದ್ದಾಂಜಲಿ Read Post »

ಇತರೆ

ಪ್ರಸ್ತುತ

ಡಾ. ಸರೋಜಿನಿ ಮಹಿಷಿ ವರದಿಯಾಚೆಗೆ .. ಗಣೇಶ್ ಭಟ್ ಶಿರಸಿ ಡಾ. ಸರೋಜಿನಿ ಮಹಿಷಿ ವರದಿಯಾಚೆಗೆ .. ಕನ್ನಡ ನಾಡಿನಲ್ಲಿ ಕನ್ನಡಿಗರೇ ಸಾರ್ವಭೌಮ, ಕನ್ನಡಕ್ಕೇ ಮೊದಲ ಸ್ಥಾನ ಎನ್ನುವುದನ್ನು ಜನರು ಒಪ್ಪಿದರೂ, ಸರ್ಕಾರಗಳು ಅನುಷ್ಠಾನಕ್ಕೆ ತರಲು ಹಿಂದೇಟು ಹಾಕುತ್ತಿವೆ. ವೋಟಿಗಾಗಿ ನಾಟಕ ಮಾಡುವ ರಾಜಕೀಯ ಪಕ್ಷಗಳೆಲ್ಲವೂ ಕುಂಟು ನೆಪ ಮುಂದೆ ಮಾಡಿ ಡಾ. ಸರೋಜಿನಿ ಮಹಿಷಿ ವರದಿಯ ಜಾರಿಯನ್ನು ಮುಂದೂಡುತ್ತಲೇ ಇವೆ. ಕಳೆದ 35 ವರ್ಷಗಳಿಂದ ಅಧಿಕಾರದಲ್ಲಿದ್ದ ವಿವಿಧ ಪಕ್ಷಗಳು ( ಜನತಾ, ಕಾಂಗ್ರೆಸ್, ಬಿಜೆಪಿ) ಕನ್ನಡ ನಾಡಿನ ಉದ್ಯೋಗವನ್ನು ಕನ್ನಡಿಗರಿಗೇ ಮೀಸಲಾಗಿಡುವ ಧೈರ್ಯ ತೋರಿಸಿಲ್ಲ. ಈ ವರದಿಯ ಜಾರಿಗಾಗಿ ಆಗ್ರಹಿಸಿ ಕನ್ನಡಪರ ಸಂಘಟನೆಗಳು ನಿರಂತರ ಹೋರಾಟ ನಡೆಸುತ್ತಾ ಬಂದಿವೆ. ಅದರ ಮುಂದುವರಿಕೆಯಾಗಿ ಫೆಬ್ರುವರಿ 13 ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಿವೆ. ರಸ್ತೆ ತಡೆ, ಬಂದ್ ಮುಂತಾದ ಹೋರಾಟದ ವಿಧಾನಗಳು ಇಂದು ಅಪ್ರಸ್ತುತವಾಗಿದ್ದರೂ, ನೇತಾರರು ಅದರಾಚೆಗೆ ಚಿಂತಿಸುತ್ತಿಲ್ಲ. ಬಂದ್ ಆಚರಣೆಯಿಂದ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆಂದು ಭಾವಿಸುವುದು ಮುಗ್ಧತೆ ಅಥವಾ ದಡ್ಡತನ ಅಥವಾ ಧೂರ್ತತೆ. ಬಂದ್‍ನಿಂದ ತೊಂದರೆಗೊಳಗಾಗುವವರು ಜನ ಸಾಮಾನ್ಯರು. ದಿನದ ದುಡಿಮೆಯನ್ನೇ ಅವಲಂಬಿಸಿರುವ ಕಾರ್ಮಿಕರು, ಬೀದಿಬದಿ ವರ್ತಕರು, ತಳ್ಳುಗಾಡಿ ವ್ಯಾಪಾರಿಗಳು, ಹಣ್ಣು, ತರಕಾರಿ ಬೆಳೆಗಾರರು, ವಿದ್ಯಾರ್ಥಿಗಳು ಇತ್ಯಾದಿ ಇತ್ಯಾದಿ. ಯಾರಿಗೆ ಬಂದ್‍ನ ಬಿಸಿ ತಗುಲಬೇಕೆಂದು ಅಪೇಕ್ಷಿಸುತ್ತೇವೋ ಅಂಥಹ ರಾಜಕಾರಣಿಗಳು, ಉನ್ನತ ಅಧಿಕಾರಿಗಳು, ಆಡಳಿತ ನಡೆಸುವವರು ಮುಂತಾದವರು ಪೋಲೀಸ್ ರಕ್ಷಣೆಯಲ್ಲಿ ತಮ್ಮ ದೈನಂದಿನ ಕಾರ್ಯ ಚಟುವಟಿಕೆಯಲ್ಲಿ ತೊಡಗಿರುತ್ತಾರೆ. ಅವರಿಗೆ ಯಾವ ತೊಂದರೆಯೂ ಇಲ್ಲ. ಮಹಿಷಿ ವರದಿ ಜಾರಿಗಾಗಿ ಆಗ್ರಹಿಸುವುದನ್ನು ಬೆಂಬಲಿಸಲೇಬೇಕು. ಆದರೆ ಅದಕ್ಕಾಗಿ ಕರ್ನಾಟಕ ಬಂದ್‍ಗೆ ಕರೆ ನೀಡುವುದು ಸಮರ್ಥನೀಯವಲ್ಲ. ಬಡ, ಅಸಹಾಯಕ ಕನ್ನಡಿಗರನ್ನು ತೊಂದರೆಗೊಳಪಡಿಸುವುದು ಸಮಂಜಸವಲ್ಲ. 1983ರಲ್ಲಿ ಡಾ.ಸರೋಜಿನಿ ಮಹಿಷಿಯವರ ನೇತೃತ್ವದಲ್ಲಿ ರಚಿತವಾದ ಸಮಿತಿ, ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡುವ ಹಲವಾರು ಶಿಫಾರಸ್ಸುಗಳನ್ನೊಳಗೊಂಡ ಮಧ್ಯಂತರ ವರದಿಯನ್ನು 1984 ರಲ್ಲಿಯೂ , ಅಂತಿಮ ವರದಿಯನ್ನು 30-12-1986 ರಂದು ಸರ್ಕಾರಕ್ಕೆ ಸಲ್ಲಿಸಿತು. ಅಲ್ಲಿಂದ ಮುಂದೆ ಪ್ರಾರಂಭವಾದದ್ದು ರಾಜಕೀಯ ನಾಟಕ. ಮಹಿಷಿ ಸಮಿತಿಯ 58 ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸುವಾಗ ಆದ್ಯತೆಯನ್ನು ನಿರ್ಧರಿಸುವುದಕ್ಕಾಗಿ 1988 ರಲ್ಲಿ ಡಾ. ವಿ. ವೆಂಕಟೇಶ ನೇತೃತ್ವ ಸಮಿತಿಯನ್ನು ರಚಿಸಲಾಯಿತು. ಮಹಿಷಿ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ್ದ ಇಬ್ಬರನ್ನು ಈ ಸಮಿತಿಯಲ್ಲೂ ಸೇರಿಸಲಾಯಿತು. ಈ ಸಮಿತಿಯ ವರದಿಯನ್ನಾಧರಿಸಿ 1990 ರಲ್ಲಿ ಕರ್ನಾಟಕ ಸರ್ಕಾರದ ಸಂಪುಟ ಉಪ ಸಮಿತಿಯು 45 ಶಿಫಾರಸ್ಸುಗಳನ್ನು ಅನುಮೋದಿಸಿತ್ತು. ಅಂತೂ 1993 ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಲಾಯಿತು. ಮಹಿಷಿ ವರದಿಯಿಂದ ಪ್ರೇರೇಪಿತರಾಗಿ ಗುಜರಾತ, ರಾಜಸ್ಥಾನ ಮುಂತಾದ ರಾಜ್ಯಗಳು ಈ ಶಿಫಾರಸ್ಸುಗಳನ್ನು ಬಳಸಿ ತಮ್ಮದೇ ಆದ ರೀತಿಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಗಟ್ಟಿಗೊಳಿಸಿಕೊಂಡರು. ಆದರೆ, ಕರ್ನಾಟಕದಲ್ಲಿ ಕನ್ನಡಿಗರೇ ಪರಕೀಯರಾಗುವುದನ್ನು ತಡೆಯಲು ನೀಡಿದ ಶಿಫಾರಸ್ಸುಗಳು ಕಡತದಲ್ಲೇ ಬಂಧಿಯಾಗಿ ಕುಳಿತಿವೆ. ಉದ್ಯೋಗಾವಕಾಶಗಳನ್ನು ಸ್ಥಳೀಯರಿಗೆ ಮೀಸಲಿಡುವ/ ಪ್ರಾಶಸ್ತ್ಯ ನೀಡುವ ಕುರಿತು ತಯಾರಾದ ವರದಿ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ತಮ್ಮ ತಮ್ಮ ಪ್ರದೇಶಗಳಲ್ಲಿ ಸೂಕ್ತವಾದ ಉದ್ಯೋಗಾವಕಾಶ ಸಿಗದ ಕಾರಣ, ಇತರ ರಾಜ್ಯಗಳಿಗೆ ವಲಸೆ ಹೋಗುವವರಿಂದಾಗಿ ಸ್ಥಳೀಯರು ಉದ್ಯೋಗ ವಂಚಿತರಾಗುವುದನ್ನು 60ರ ದಶಕದಲ್ಲಿಯೇ ಗಮನಿಸಲಾಗಿತ್ತು. ಆ ಕಾರಣಕ್ಕಾಗಿಯೇ 1968 ರಲ್ಲಿ ರಾಷ್ಟ್ರೀಯ ಸಮನ್ವಯ ಪರಿಷತ್ತು (ಓಚಿಣioಟಿಚಿಟ Iಟಿಣegಡಿಚಿಣioಟಿ ಅouಟಿಛಿiಟ) ವಲಸಿಗರಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಸ್ಥಳೀಯರಿಗೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುವದು ಸೂಕ್ತವೆಂದು ಅಭಿಪ್ರಾಯ ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮಹಿಷಿ ಆಯೋಗ ರಚಿತವಾಗಿತ್ತು; ಅದೂ ಹದಿನೈದು ವರ್ಷಗಳ ನಂತರ. ರಾಜ್ಯಸರ್ಕಾರದ ಹಾಗೂ ಸಾರ್ವಜನಿಕ ಕ್ಷೇತ್ರದ ಉದ್ಯಮಗಳಲ್ಲಿ ಶೇಕಡಾ 100 ರಷ್ಟು ಹುದ್ದೆಗಳನ್ನು ಕನ್ನಡಿಗರಿಗೇ ಮೀಸಲಾಗಿಡುವಂತೆ, ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಉದ್ಯಮಗಳ ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ( ಗುಮಾಸ್ತ, ಸಿಪಾಯಿ ಇತ್ಯಾದಿ) ಕನ್ನಡಿಗರಿಗೇ ಮೀಸಲಾಗಿಡಬೇಕೆಂದು ಮಹಿಷಿ ವರದಿಯ ಶಿಫಾರಸ್ಸಿನಲ್ಲಿ ಹೇಳಲಾಗಿತ್ತು. ಉನ್ನತ ಹುದ್ದೆಗಳಾದ ಬಿ. ದರ್ಜೆಯಲ್ಲಿ ಶೇಕಡಾ 80 ರಷ್ಟು, ಏ ದರ್ಜೆಯಲ್ಲಿ 65% ಹುದ್ದೆಗಳನ್ನು ಕನ್ನಡಿಗರಿಗೇ ನೀಡಬೇಕೆಂದು ಸೂಚಿಸಲಾಗಿತ್ತು. ಈ ಹುದ್ದೆಗಳಿಗೆ ಅರ್ಹ ಕನ್ನಡಿಗರು ಲಭ್ಯವಿಲ್ಲದಿದ್ದಾಗ ಮಾತ್ರ ಹೊರಗಿನವರನ್ನು ನೇಮಿಸಬಹುದೆಂದು ಹೇಳಲಾಗಿತ್ತು. ಕೇಂದ್ರ ಸರ್ಕಾರದ ಅನುಮತಿಯ ಅಗತ್ಯವಿದ್ದ ವಿಷಯಗಳಿಗೆ, ಅದರ ಒಪ್ಪಿಗೆ ಪಡೆಯುವ ಅವಶ್ಯಕತೆಯನ್ನು ವರದಿಯಲ್ಲಿ ಒತ್ತಿ ಹೇಳಲಾಗಿದ್ದರೂ, ರಾಜ್ಯ ಮತ್ತು ಕೇಂದ್ರದಲ್ಲಿ ಈ ದಿಸೆಯಲ್ಲಿ ಯಾವ ಪ್ರಗತಿಯೂ ಆಗಿಲ್ಲ. ಇಂದಿನ ಬಿಜೆಪಿ ಸರ್ಕಾರಕ್ಕೆ ಪ್ರಾದೇಶಿಕ ವೈಶಿಷ್ಟ್ಯತೆಯನ್ನು , ಪ್ರಾದೇಶಿಕ ಬೆಳವಣಿಗೆ, ಭಾಷೆ, ಸಾಂಸ್ಕøತಿಕ ವೈವಿದ್ಯತೆಗಳನ್ನು ಗುರ್ತಿಸುವ , ಗೌರವಿಸುವ , ರಕ್ಷಿಸುವ ಕುರಿತು ಆಸಕ್ತಿಯೇ ಇಲ್ಲ. ರಾಷ್ಟ್ರವಾದದ ಸೋಗಿನಲ್ಲಿ ಪ್ರಾದೇಶಿಕತೆಯನ್ನು ಹೊಸಕಿ ಹಾಕಲಾಗುತ್ತಿದೆ. ಖಾಸಗಿ ಉದ್ಯಮಗಳಿಗೆ ಅನುಮತಿ ನೀಡುವಾಗ ನಿರ್ದಿಷ್ಟ ಪ್ರಮಾಣದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಶರತ್ತುಗಳನ್ನು ವಿಧಿಸಬೇಕೆಂದು ಮಹಿಷಿ ವರದಿ ಸೂಚಿಸಿದೆ. 100 ಕ್ಕಿಂತ ಹೆಚ್ಚಿನ ಉದ್ಯೋಗಿಗಳಿರುವ ಉದ್ಯಮಗಳ ನೇಮಕಾತಿ ಸಮಿತಿಯಲ್ಲಿ ರಾಜ್ಯಸರ್ಕಾರದ ಒಬ್ಬ ಪ್ರತಿನಿಧಿ ಇರುವದನ್ನೂ ಕಡ್ಡಾಯಗೊಳಿಸಬೇಕೆಂದೂ ಹೇಳಲಾಗಿದೆ. ಖಾಸಗಿ ರಂಗದ ನೇಮಕಾತಿಗಾಗಿ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿತ ಕನ್ನಡಿಗರನ್ನೇ ಪರಿಗಣಿಸಬೇಕೆಂದೂ ಹೇಳಲಾಗಿದೆ. ಕನ್ನಡಿಗ ಯಾರೆಂಬ ಕುರಿತು ಮಹಿಷಿ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕನಿಷ್ಠ 15 ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವ, ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ಬಲ್ಲ ವ್ಯಕ್ತಿ ಕನ್ನಡಿಗ ಎಂದು ವ್ಯಾಖ್ಯಾನಿಸಲಾಗಿದೆ. ಹತ್ತನೇ ತರಗತಿಯವರೆಗೆ ಕನ್ನಡವನ್ನು ಒಂದು ಭಾಷೆಯನ್ನಾಗಿ ಅಧ್ಯಯನ ಮಾಡಿದವರನ್ನು ಕನ್ನಡಿಗ ಎಂದು ಪರಿಗಣಿಸಲು ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರದ ಉದ್ಯಮಗಳಲ್ಲಿ ಅವಕಾಶಗಿಟ್ಟಿಸುವ ಹೊರ ರಾಜ್ಯದವರಿಗೆ ಕನ್ನಡದ ಪ್ರಾಥಮಿಕ ಜ್ಞಾನದ ಪರೀಕ್ಷೆಯನ್ನು ಕಡ್ಡಾಯಗೊಳಿಸಿ, ಅದರಲ್ಲಿ ಉತ್ತೀರ್ಣರಾದವರನ್ನು ಮಾತ್ರ ನೇಮಕಾತಿಗೆ ಪರಿಗಣಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಡಾ. ಸರೋಜಿನಿ ಮಹಿಷಿ ವರದಿಯ ಅನುಷ್ಠಾನಕ್ಕೆ ರಾಜ್ಯಸರ್ಕಾರವೇ ನಿರಾಸಕ್ತಿ ತೋರುತ್ತಿರುವಾಗ ಕೇಂದ್ರ ಸರ್ಕಾರದಿಂದ ಬೆಂಬಲ ನಿರೀಕ್ಷಿಸುವುದು ವ್ಯರ್ಥ. ಇದರ ಪರಿಣಾಮದಿಂದಾಗಿ ಇಂದು ಕೇಂದ್ರ ಸರ್ಕಾರದ ಉದ್ಯಮಗಳಾದ ಬ್ಯಾಂಕ್, ರೇಲ್ವೆ ಮುಂತಾದವುಗಳಲ್ಲಿ ಕನ್ನಡಿಗೇತರರೇ ಪ್ರಾಬಲ್ಯ ಹೊಂದಿರುವುದನ್ನು ಕಾಣುತ್ತೇವೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಉದ್ಯಮಗಳ ನೇಮಕಾತಿಗಾಗಿ ನಡೆಯುವ ಪ್ರವೇಶ ಪರೀಕ್ಷೆಗಳಲ್ಲಿ ಕನ್ನಡ( ಹಾಗೂ ಇತರ ಪ್ರಾದೇಶಿಕ ಭಾಷೆಗಳೂ ಸಹ) ದಲ್ಲಿ ಬರೆಯುವ ಅವಕಾಶವನ್ನು ಕಿತ್ತುಕೊಳ್ಳಲಾಗಿದೆ. ಒಂದು ದೇಶ, ಒಂದೇ ಭಾಷೆ, ಏಕರೂಪದ ಅಭಿವೃದ್ಧಿ ಯೋಜನೆ ಮುಂತಾದ ಮೂರ್ಖ ಚಿಂತನೆಗಳಿಗೆ ಜೋತು ಬಿದ್ದಿರುವ ಕೇಂದ್ರ ಸರ್ಕಾರದ ನಡೆಯಿಂದಾಗಿ ಭಾರತದ ವೈವಿದ್ಯತೆ ಅಪಾಯಕ್ಕೆ ಸಿಲುಕಿದೆ. ಭಾರತವೆಂದರೆ ಹಲವು ರಾಷ್ಟ್ರೀಯ ಭಾವಧಾರೆಗಳ ಒಂದು ಒಕ್ಕೂಟ. ವೈವಿದ್ಯತೆಯಲ್ಲೂ ಏಕತೆ ಸಾಧಿಸುವ ಸೂತ್ರ ಹೊಂದಿರುವ ವಿಶಿಷ್ಟ ದೇಶ ಎಂಬುದನ್ನು ಮುಖಂಡರು ಗಮನಿಸದಿರುವುದು ಅಪಾಯಕಾರಿ ಪ್ರವೃತ್ತಿ. ಕನ್ನಡ ಭಾಷೆ ಹಾಗೂ ಕನ್ನಡಿಗರ ರಕ್ಷಣೆಯ ಕುರಿತು ಪ್ರಾಮಾಣಿಕ ಕಳಕಳಿ ಹೊಂದಿರುವ ಮಹಿಷಿ ವರದಿಯ ಅನುಷ್ಠಾನಕ್ಕೆ ರಾಜಕಾರಣಿಗಳು ಹಿಂದೇಟು ಹಾಕಲು ಮೂಲ ಕಾರಣ ಅವರ ಧಣಿಗಳು ಅಂದರೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಉದ್ಯಮಿಗಳು ಅರ್ಥಾತ್ ಬಂಡವಾಳಶಾಹಿಗಳು. ಸ್ಥಳೀಯರಿಗೇ ಉದ್ಯೋಗ ನೀಡುವದರಿಂದ, ಸ್ಥಳೀಯ ಸಂಪನ್ಮೂಲಗಳ ಹತೋಟಿಯನ್ನು ಸ್ಥಳೀಯರಿಗೇ ನೀಡುವುದರಿಂದ ಲಾಭ ಬಡುಕ ಬಂಡವಾಳಶಾಹಿಗಳ ಗುರಿ ಈಡೇರುವುದಿಲ್ಲ. ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ಕಚ್ಚಾ ವಸ್ತುಗಳನ್ನು ಪಡೆದು, ಕಿರಿಕಿರಿ ಮಾಡದ, ಸ್ಥಳೀಯರಲ್ಲದ ಅತಂತ್ರ ವಲಸೆಗಾರ ಉದ್ಯೋಗಿಗಳನ್ನು ನೇಮಿಸಿಕೊಂಡು ಲಾಭ ಹೆಚ್ಚಳವನ್ನೇ ಗುರಿಯಾಗಿಸಿಕೊಂಡಿರುವ ಬಂಡವಾಳಶಾಹಿಗಳನ್ನು ಎದುರು ಹಾಕಿಕೊಂಡರೆ ಪಕ್ಷ ಮತ್ತು ಸ್ವಂತಕ್ಕೆ ಸಿಗುವ ದೇಣಿಗೆ ತಪ್ಪಿ ಹೋಗುವದೆಂಬ ಆತಂಕ ರಾಜಕಾರಣಿಗಳನ್ನು ಕಾಡಿಸುತ್ತದೆ. ಹೂಡಿಕೆದಾರರಿಂದಲೇ ದೇಶೋದ್ಧಾರ, ಸೀಮಿತ ಸಂಖ್ಯೆಯ ಶ್ರೀಮಂತರ ಸಂಪತ್ತು ಹೆಚ್ಚಾಗುವುದೇ ದೇಶದ ಅಭಿವೃದ್ಧಿ ಮುಂತಾಗಿ ನಂಬಿರುವ, ನಂಬಿಸುತ್ತಿರುವ ಸ್ವಾರ್ಥಿ ರಾಜಕಾರಣಿಗಳು ಸ್ಥಳೀಯರಿಗೆ ಉದ್ಯೋಗಾವಕಾಶ ಕಡ್ಡಾಯಗೊಳಿಸುತ್ತಾರೆಂದು ನಿರೀಕ್ಷಿಸಲಾಗದು. ಭಾಷಾ ಪ್ರಜ್ಞೆ ಮತ್ತು ಬಾಂಧವ್ಯ ಗಟ್ಟಿಯಾಗಿದ್ದ ಕಾರಣದಿಂದ ಕನ್ನಡ ಭಾಷೆಯ ಬಳಕೆಗೆ ಕೆಲವು ತೋರಿಕೆಯ ಪ್ರೋತ್ಸಾಹವನ್ನು ರಾಜ್ಯ ಸರ್ಕಾರ ನೀಡಿದ್ದರೂ, ಕನ್ನಡದ ಬಳಕೆಯನ್ನು ಕಡ್ಡಾಯಗೊಳಿಸಲು ಕೂಡಾ ಹಿಂದೇಟು ಹಾಕುತ್ತಿದೆ. ಕನ್ನಡಕ್ಕೆ ಪ್ರಾಶಸ್ತ್ಯ ನೀಡುವ ಸೋಗಿನಲ್ಲಿ , ಉದ್ಯೋಗಾವಕಾಶ ಮತ್ತು ಇತರ ಆರ್ಥಿಕ ವಿಚಾರವನ್ನು ಹಿಂದಕ್ಕೆ ಸರಿಸಲಾಗಿದೆ. ಮಹಿಷಿ ವರದಿಯನ್ನು ಜಾರಿಗೊಳಿಸುವುದನ್ನು ಮುಂದೂಡಲು ಹೊಸ ಹೊಸ ಕ್ಯಾತೆಗಳನ್ನು ತೆಗೆಯಲಾಗುತ್ತಿದೆ. ಉದಾಹರಣೆಗಾಗಿ ಈ ವರದಿ ಸಿದ್ಧಪಡಿಸುವಾಗ ಐಟಿ, ಬಿಟಿ ಉದ್ಯಮ ಬೆಳೆದಿರಲಿಲ್ಲ; ಈಗ ವರದಿಯನ್ನು ಪರಿಷ್ಕರಿಸಬೇಕಾಗಿದೆ ಮುಂತಾದವು. ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೊಳಿಸಿದಾಕ್ಷಣ ಕನ್ನಡಿಗರ ಸಾಮಾಜಿಕ- ಆರ್ಥಿಕ ಸಮಸ್ಯೆಗಳೆಲ್ಲವೂ ಪರಿಹಾರವಾಗಿ ಬಿಡುತ್ತವೆಂದು ನಂಬುವುದು ಬಾಲಿಶತನ. ಉದ್ಯೋಗಾವಕಾಶವೆಂದರೆ ಸರ್ಕಾರಿ ಮತ್ತು ಖಾಸಗಿ ರಂಗದ ನೌಕರಿಗಳು ಮಾತ್ರವೆಂದು ಭಾವಿಸಬೇಕಿಲ್ಲ. ದುಡಿಮೆಯ ಅವಕಾಶಗಳೆಂದರೆ ಕೃಷಿ, ವ್ಯಾಪಾರ-ವಹಿವಾಟು, ಉದ್ದಿಮೆ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ಇರುವ ಉದ್ಯೋಗಾವಕಾಶಗಳು. ಉದ್ದಿಮೆ, ವ್ಯಾಪಾರ-ವಹಿವಾಟು ಕ್ಷೇತ್ರಗಳು ಕನ್ನಡಿಗರ ನಿಯಂತ್ರಣದಲ್ಲಿ ಇಲ್ಲದೆಯೇ ದಶಕಗಳೇ ಸಂದಿದೆ. ಬೆಂಗಳೂರು ಮಹಾನಗರ ಸೇರಿದಂತೆ ಹುಬ್ಬಳ್ಳಿ, ವಿಜಯಪುರ, ಕಲ್ಬುರ್ಗಿ ಮುಂತಾದೆಡೆಗಳಲ್ಲಿ ದಿನಬಳಕೆ ವಸ್ತುಗಳ ಸಗಟು ಮತ್ತು ಚಿಲ್ಲರೆ ವ್ಯವಹಾರಗಳು ಹೊರ ರಾಜ್ಯದವರ ಕೈಯಲ್ಲಿಯೇ ಇವೆ. ಕನ್ನಡ ನಾಡಿನ ಸಂಪನ್ಮೂಲಗಳ (ಉದಾ: ಅದಿರು, ಅರಣ್ಯಸಂಪತ್ತು, ಕೃಷಿಭೂಮಿ) ಹತೋಟಿಯು ಪರ ರಾಜ್ಯದವರ ಕೈ ಸೇರುತ್ತಿದೆ. ನಿರುದ್ಯೋಗ ಕನ್ನಡಿಗರ ಪಾಲಾಗುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರವೆಂದರೆ ವಿಕೇಂದ್ರೀಕೃತ ಅರ್ಥವ್ಯವಸ್ಥೆಯ ಅನುಷ್ಠಾನ. ಇದರ ಮೊದಲ ಹಂತವೆಂದರೆ ಆರ್ಥಿಕವಾಗಿ ಸ್ವಯಂ ಸ್ವಾವಲಂಬಿಯಾಗಬಲ್ಲ ಭೌಗೋಳಿಕ ಕ್ಷೇತ್ರಗಳನ್ನು ಗುರ್ತಿಸುವುದು. ಇಂದು ಅಸ್ತಿತ್ವದಲ್ಲಿರುವ ರಾಜ್ಯಗಳು ಈ ವ್ಯಾಖ್ಯೆಗೆ ಒಳಪಡುವುದಿಲ್ಲ. ಕೆಲವು ರಾಜ್ಯಗಳಲ್ಲಿ ( ಉದಾ: ಬಿಹಾರ, ಆಂದ್ರಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ) ಒಂದಕ್ಕಿಂತ ಹೆಚ್ಚು ಸ್ವಯಂ ಸ್ವಾವಲಂಬಿ ಸಾಮಾಜಿಕ- ಆರ್ಥಿಕ ಘಟಕಗಳನ್ನು ರೂಪಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕನ್ನಡ ನಾಡನ್ನು ಒಂದೇ ಸ್ವಯಂ ಸ್ವಾವಲಂಬಿ ಆರ್ಥಿಕ ವಲಯವಾಗಿಸುವ ಅವಕಾಶವಿದೆ. ಮುಂದಿನ ಹಂತವೆಂದರೆ ಸ್ಥಳೀಯ ಸಂಪನ್ಮೂಲಗಳ ಹತೋಟಿಯನ್ನು ಸಹಕಾರಿ ವ್ಯವಸ್ಥೆಯ ಮೂಲಕ ಸ್ಥಳೀಯರಿಗೇ ನೀಡುವುದು. ನಂತರ ಸ್ಥಳೀಯರೆಲ್ಲರಿಗೂ ಉದ್ಯೋಗಾವಕಾಶ ಸೃಷ್ಟಿಸುವ ರೀತಿಯಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸುವ ಅಭಿವೃದ್ಧಿ ಯೋಜನೆಗಳ ನಿರೂಪಣೆ. ತಳಮಟ್ಟದಿಂದ ಅಂದರೆ ಬ್ಲಾಕ್ ಮಟ್ಟದಿಂದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಕ್ರೋಢೀಕರಿಸುವುದು. ದೇಶ ಅಭಿವೃದ್ಧಿ ಹೊಂದಬೇಕೆಂದರೆ ದೇಶದ ಮೂಲೆ ಮೂಲೆಯಲ್ಲೂ ಅಭಿವೃದ್ಧಿಯಾಗಬೇಕು. ಇದಕ್ಕಿರುವ ಏಕೈಕ ದಾರಿಯೆಂದರೆ ವಿಕೇಂದ್ರೀಕೃತ ಅರ್ಥವ್ಯವಸ್ಥೆಯ ಮೂಲಕ ಪ್ರಾದೇಶಿಕ ಅಭಿವೃದ್ಧಿ. ಪ್ರಾದೇಶಿಕ ಭಾಷೆ, ನಂಬಿಕೆ, ಸಂಸ್ಕøತಿ, ಜೀವನ ವಿಧಾನಗಳನ್ನು ಬಳಸಿ ಜನರನ್ನು ಒಗ್ಗೂಡಿಸಲು ಸಾಧ್ಯ. ಜಾತಿ, ಮತ, ಪಂಥಗಳ ಬಿರುಕಿನಲ್ಲಿ ಸೇರಿ ಹೋಗಿರುವ ಜನರನ್ನು ನಾವು ಕನ್ನಡಿಗರು ಎಂಬ ಭಾವದಿಂದ ಒಂದುಗೂಡಿಸಿ ಆರ್ಥಿಕ ಅಭಿವೃದ್ಧಿ ಸಾಧಿಸಲು ಸಾಧ್ಯ, ಕರ್ನಾಟಕದ ದುಡಿಮೆಯ ಅವಕಾಶಗಳು ಕನ್ನಡಿಗರ ಹಕ್ಕು. ದುಡಿಯಬಲ್ಲ ಕನ್ನಡಿಗರೆಲ್ಲರಿಗೂ ದುಡಿಮೆಯ ಅವಕಾಶ ಅರ್ಥಾತ್ 100% ಉದ್ಯೋಗಾವಕಾಶ ಎಂಬುದು ನಮ್ಮ ಘೋಷಣೆಯಾಗಬೇಕು, ನಡೆಯುವ ದಾರಿಯಾಗಬೇಕು. ( ಇದೇ ಸಿದ್ಧಾಂತದನ್ವಯ ಇತರ ಪ್ರದೇಶಗಳೂ– ಕೇರಳ, ತಮಿಳುನಾಡು, ಓಡಿಶಾ ಇತ್ಯಾದಿ ಕಾರ್ಯನಿರ್ವಹಿಸುವಂತಾಗಬೇಕು) ಕನ್ನಡಿಗರ ಸಾಮಾಜಿಕ- ಆರ್ಥಿಕ ಭವಿಷ್ಯದಲ್ಲಿ ತನ್ನ ಸಾಮಾಜಿಕ- ಆರ್ಥಿಕ ಭವಿಷ್ಯವನ್ನು ವಿಲೀನಗೊಳಿಸಿಕೊಳ್ಳುವ ವ್ಯಕ್ತಿಯೇ ಕನ್ನಡಿಗ ಎಂಬ ವ್ಯಾಖ್ಯೆ – ಪ್ರಸ್ತುತ ಕನ್ನಡಿಗ ವ್ಯಾಖ್ಯೆಗಿಂತ ಸ್ಪಷ್ಟತೆ ನೀಡುತ್ತದೆ. ಬಂಡವಾಳವಾದಿ ವ್ಯವಸ್ಥೆಯ ಚೌಕಟ್ಟಿಗೇ ಸೀಮಿತವಾಗಿರುವ ಮಹಿಷಿ ವರದಿಯ ಆಚೆಗೂ ಯೋಚಿಸಿ ಕಾರ್ಯಯೋಜನೆ ರೂಪಿಸಿದಾಗ ಮಾತ್ರ ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರಾಗುತ್ತಾರೆ. ಇದನ್ನು ಜಾರಿಗೊಳಿಸಲು ಜನಾಧಿಕಾರ ವ್ಯವಸ್ಥೆಯ ಮೂಲಕ ಜನಸಾಮಾನ್ಯರೇ ಮುಂದಾಗಬೇಕು. ******************************

ಪ್ರಸ್ತುತ Read Post »

ಇತರೆ

ವ್ಯಾಲಂಟೈನ್ಸ್ ಡೇ ಸ್ಪೆಶಲ್

ಒಲವು-ಗೆಲುವು ದೀಪಾಜಿ ಒಂದು ಕಾಲು ಕೆಜಿಯಷ್ಟು ತೂಗುವ ಗ್ರೀಟಂಗೂ ಕವರಿನಿಂದಾಚೆ ತೆಗೆದೊಡನೆ ಎರಡು ಪುಟದ ಮೇಲೊಂದಂದು ಬಿಳಿ ಪಾರಿವಾಳಗಳು ಪುಟಿದು ಕುಳತದ್ದು ನೋಡುತ್ತಿದ್ದಂತೆ ಮದ್ಯದಲ್ಲಿನ ಅಂಗೈ ಅಗಲದ ಕಡುಗೆಂಪು ಹೃದಯ ಅದರಾಳದೊಳಗಿಂತ ವಾದ್ಯಸಂಗೀತ ಕಿವಿ ದಾಟಿ ಎದೆ ತಾಕುತ್ತದೆ. ಪುಟ ತಿರುಗಿಸಿದರೆ ಜೋಡಿ ಗುಲಾಬಿ ಹೂ ಗಳು ಅದರ ಕೆಳಗೆ ಮೂರು ಸಾಲಿನ ಹನಿಗವನ.    ಮೂರು ಬಾರಿ ಉಸಿರೆ…. ಉಸಿರೆ.. ಉಸಿರೆ… ಉಸಿರಾಗಿ ಬಾ ಹೆಸರಾಗಿ ಬಾ ಈ ಬರಡು ಬದುಕಿಗೆ ಹಸಿರಾಗಿ ಬಾ..   ಅಬ್ಬಾ..!!   ಗ್ರೀಟಿಂಗ್ ಕಾರ್ಡಿನ ಎನ್ವಲಪ್ ಕವರಿನೊಳಗಡೆ ಇನ್ನೂ ಭಾರ ಉಳಿದಿದೆ ಕೈ ಹಾಕಿದರೆ ಒಂದು ಡಾರ್ಕ್ ಚಾಕಲೇಟ್ ಮತ್ತೊಂದು ಒರಟು ಒರಟಾದ ನಾಲ್ಕು ಮಡಿಕೆಯ ಹಾಳೆ.     ಎರಡನ್ನು ಹೊರ ತೆಗೆದು ಹಾಳೆಯ ಮಡಿಕೆಗೆಳನ್ನ ಬಿಚ್ಚಿದರೆ ಬಿಳಿ ಹಾಳೆಯ ತುಂಬ ರಕ್ತದೋಕುಳಿ ..!   “I LOVE YOU MY LOVE ❤“ ಎಂಬ ಪದಗಳು ಒಂದು ಹೃದಯದ ಚಿತ್ರ, ರಕ್ತ ಮರಗಟ್ಟಿದ ಹಾಳೆ ಮುಖಕ್ಹಿಡಿದು ಓದುತ್ತಿದ್ದಂತೆ ಅರೆಕ್ಷಣ ತಲೆ ಗಿರ್ರನೆ ತಿರುಗಿ ನಿಂತಂತಾಯಿತು, ಭಯ ಉದ್ವೇಗ ಒಂದಾಗಿ ಎದುರಿಗಿದ್ದ ಪ್ರೇಮ ನಿವೇದಕನ ಕೈ ಗಮನಿಸಿದರೆ ಬಲಗೈ ಮದ್ಯದ ಮೂರು ಬೆರಳುಗಳು ಶ್ವೇತ ವರ್ಣದ ಬ್ಯಾಂಡೇಜಿನೊಳಗಡೆ ಮುಲುಗಿ ಮಲಗಿದ್ದವು. ಪ್ರೀಯತಮನ ಈ ವಿಕಾರವನ್ನ ಕಂಡ  ಹೂವಿನಂತ ಹುಡುಗಿ ಕೈಲಿದ್ದ ಗ್ರೀಟಿಂಗು ಚಾಕಲೆಟ್ ಅವನ ರಕ್ತ ಸಿಕ್ತ ಪತ್ರ ಎಲ್ಲ ಅಲ್ಲೆ ಕೈ ಬಿಟ್ಟುಬಿಟ್ಟಳು..     ಮತ್ತೆಂದೂ ಅವನ ದೃಷ್ಟಿ ಎದುರಿಸಲೇ ಇಲ್ಲ.                           *      ರಕ್ತದಲ್ಲದ್ದಿ ಬರೆದ ಪ್ರೇಮ ಪತ್ರಗಳು, ದುಬಾರಿ ಉಡುಗೊರೆಗಳು, ಪ್ರೀತಿಯ ಮಾನದಂಡಗಳಾ? ಪ್ರೀತಿಯ ತೂಕವನ್ನು ಹೆಚ್ಚಿಸಿ ಬಿಡಬಲ್ಲವಾ? ಪ್ರೀತಿಗೆ ಅಳತೆಗೋಲು ಯಾವುದು? ಪ್ರೇಮ ನಿವೇದನೆಯ ಪ್ರಕ್ರಿಯೆ ಹೇಗಿರಬೇಕು? ಪ್ರೀತಿಗಿಂತಲೂ ಹೆಚ್ಚು ಇಂತ ವಿಷಯಗಳೆ ಯುವ ಪ್ರೇಮಿಗಳನ್ನು ಹಾಳುಗೆಡುವುತ್ತಿವೆ.    ಈ ಮೇಲಿನ ಯಾವ ಪ್ರಶ್ನೆಗೂ ನನ್ನ ಬಳಿಯು ಉತ್ತರವಿಲ್ಲ. ನನ್ನ ಬಳಿ ಅಷ್ಟೆ ಅಲ್ಲ ಬೇರಾರ ಬಳಿಯು ಈ ಪ್ರಶ್ನೊತ್ತರ ಮಾಲಿಕೆಗೆ ಸಿದ್ಧ ಉತ್ತರಪಟ್ಟಿಯೊಂದು ಸಿಗಲಾರದು. ಕಾರಣ ಇದು ಪ್ರೀತಿಯ ವಿಷಯ.     ಪ್ರೀತಿ ಮನುಷ್ಯ ಪ್ರಾಣಿಯಲ್ಲಡಗಿರುವ ಅಷ್ಟು ಭಾವನೆಗಳಲ್ಲೆ ಅತ್ಯಂತ ಶ್ರೀಮಂತ ಭಾವನೆ,  ಅದಕ್ಕೆ ಆಕರ್ಷಣೆ,ಕಾಮ,‌ಮೋಹ, ಉನ್ಮಾದ, ಅತಿರೇಖಗಳನ್ನ ಲೇಪಿಸಿ ದಿನೆ ದಿನೆ ಪ್ರೀತಿಯ ವ್ಯಾಖ್ಯಾನವನ್ನು ಸಂಕುಚಿತಗೊಳಿಸುವ ಪ್ರಯತ್ನ ಎಗ್ಗಿಲ್ಲದೆ ನಡೆದಿದೆ.    ಈ ಪ್ರೀತಿ, ಒಲವು, ಮಮಕಾರ, ಅಂತಃಕರಣ, ಬಾಂಧವ್ಯ ಇಂತವಕ್ಕೆಲ್ಲ ಯಾವ ಚೌಕಟ್ಟುಗಳು ಇಲ್ಲ ಪದಪುಂಜಗಳ ಬಂಧನದೊಳಗೆ ಇವು ನಿಲ್ಲಲಾರವು, ಅಸಲು ಪ್ರೀತಿಗೆ ಇಂತದ್ದೆ ಎಂಬ ಬಂಧನ ನಿರ್ಬಂಧಗಳಿಲ್ಲವಾದ್ದರಿಂದ ಪ್ರೀತಿಯನ್ನ ಒಂದು ಪದದಲ್ಲಿ ಹೇಳಿದರೂ ಮುಗಿದೀತು ಇಲ್ಲವೆ ನಾಲ್ಕಾರು ಪುಟ ಪ್ರಬಂಧ ಬರೆದರೂ ಹೇಳುವುದಿನ್ನೂ ಉಳಿದೀತು.       ಅದು ಹೂವಿನಂತೆ, ನಾವೇ ಬೆಳೆಸಿದ ಕುಂಡಲದಲ್ಲು ಅರಳಿಬಿಡಬಹುದು ಇಲ್ಲವೇ ಸ್ಮಶಾನದ ಬೇಲಿಯಲ್ಲು ಅರಳಿ ನಿಂತುಬಿಡಬಹುದು.ಪ್ರೀತಿಸ ಹೊರಟವರು ಮಾತ್ರ ಅಂತದೆ ಹೂ-ಮನಸ್ಸೊಂದನ್ನು ಕಾಯ್ದುಕೊಳ್ಳುವುದು ಮಾತ್ರ ಬಹುಮುಖ್ಯ. ನಾನವರನ್ನು ಪ್ರೀತಿಸುತ್ತೇನೆ ಅದಕ್ಕಾಗೆ ಎದುರಿನ ಆಕೆ/ಅವನು ನನ್ನನ್ನು ಪ್ರೀತಿಸಬೇಕೆಂಬುದು ಮಹಾ ದಡ್ಡ ಪ್ರೇಮಿಯ ನಿರೀಕ್ಷೆ. ಪ್ರೀತಿ ಕೊಡುವ ಸರಕೆ ಹೊರತು, ಇಸಿದುಕೊಳ್ಳುವ, ಪಡೆಯುವ, ನಿರೀಕ್ಷಿಸಿ ನಿಂತು ಹೊತ್ತು ತರುವ ಮಾಲಲ್ಲ.  ಪ್ರೀತಿ, ಅಕ್ಕ- ಚೆನ್ನಮಲ್ಲಿಕಾರ್ಜುನನ ಪ್ರೇಮಿಸಿದ ಪರಿಯಂತದ್ದು, ಪ್ರೀತಿ ಮೀರೆಯು ಕೃಷ್ಣನಿಗೆ ನುಡಿಸಿದ ತಂಬುರಿ ನಾದದಂತದ್ದು, ಅದಕ್ಕೆ ಆಕಾರವಿಲ್ಲ ಅನುಭವ-ಅನುಭಾವವಿದೆ ಅಷ್ಟೆ.     ಅಂಚೆ,ತಂತಿ,ಮೊಬೈಲ್, ವಾಟ್ಸಾಪ್, ಇದ್ಯಾವುದು ಇಲ್ಲದ ಕಾಲದಲ್ಲೂ ಭುಮಿಯ ಮೇಲೆ ಅತ್ಯಂತ ಶ್ರೇಷ್ಠ ಪ್ರೇಮಿಗಳು ಬದುಕಿ ಹೋಗಿದ್ದಾರೆ. ಸಂವಹನ ಸಂಪರ್ಕದ ಗಾಳಿಗೆ ಸಿಕ್ಕು ಮಧುರ ಪ್ರೇಮ ಒಂದು ಸೋಂಕು ತಗಲಿ ಗಾಸಿಯಾಗದಿರಲಿ, ಸಣ್ಣ ಪುಟ್ಟ ಅಹಂಕಾರ ಜಂಭಗಳಿಗೆ ಜೋತು ಬಿದ್ದು ಪವಿತ್ರ ಪ್ರೇಮಿಗಳು ಬೆನ್ನು ಮಾಡಿ ಹೊರಟು ನಿಲ್ಲದಿರಲಿ.     ನಿವೇದಿಸಿದ ಪ್ರೀತಿ ದಕ್ಕಲಿಲ್ಲವೇ..? ಅದು ಸಿದ್ಧಿಸದಷ್ಟು ಕಾಲ ನೀವು ಉತ್ಖಟ ಪ್ರೇಮದ ತುತ್ತತುದಿಯ ತಂಗಾಳಿಗೆ ಎದೆಒಡ್ಡಿ ನಿಂತು ಆಸ್ವಾದಿಸಬಲ್ಲಿರಿ. ನಿಮ್ಮ ಮನದ ಕಣ್ಣಿಗೆ ಬಣ್ಣಬಣ್ಣದ ಕನಸುಗಳ ಹಾರ ತೊಡಿಸಬಲ್ಲಿರಿ.    ದೈಹಿಕ ವಾಂಛೆಗಳಿಗೂ ನಿರ್ಮಲ ಪ್ರೀತಿಗೂ ಅಜಗಜಾಂತರ ಅಂತರವಿದೆ. ವಯೋ ಸಹಜ ದೈಹಿಕ ವಾಂಛೆಗೆ ಪ್ರೀತಿ ಎಂಬ ಹೆಸರಿಟ್ಟು ನಿಮ್ಮ‌ pure infatuation ನ್ನ ಹರಿಬಿಡದಿರಿ..   ‌   ಪ್ರೀತಿ ಪಾತ್ರರೂ ಎಲ್ಲೆ ಇರಲಿ ಅವರ    ನೆಮ್ಮದಿಗಾಗಿ ನಿಮ್ಮದೊಂದು ಶುದ್ಧ ಪ್ರಾರ್ಥನೆ, ಮತ್ತೆನನ್ನೋ ಮಾಡುತ್ತೇನೆಂದು ಹೊರಟಾಗ ಒಂದೊಳ್ಳೆ ಶುಭ್ರ ಅಭಿನಂದನೆ, ಸಂಕಷ್ಟ ಎಂದು ಬಳಿಸುಳಿದಾಗ ಅಪ್ಪಿ ಬೆನ್ನು ಸವರಿ ನಾನಿದ್ದೇನೆ ಎಂಬ  ಸಣ್ಣ  ಭರವಸೆಯ ಬಿಗಿತ, ದುಃಖ ಎಂದು ಕಣ್ಣಪಸೆ ತೋರಿದಾಗ ಹಣೆಗೊಂದು ಮೃದು ಮುತ್ತಿನ ನವಿರು ಸ್ಪರ್ಶ‌ ಇಷ್ಟೇ ಶ್ರೀಮಂತ ಪ್ರೀತಿಯ ಪ್ರತೀಕಗಳು ಇದ್ಯಾವುದು ಸಾಧ್ಯವಿಲ್ಲದ ಸ್ಥಿತಿ  ನಿಮ್ಮದಾಗಿದ್ದರೆ ಒಂದು ಹಾರೈಕೆಯು ಸಾಕು ನಿಮ್ಮ ಪ್ರೇಮಿ ಗೆದ್ದು ಬರಲು.     ಎಲ್ಲಾ ಪ್ರೇಮಗಳು ಮಧುವೆಯಲ್ಲೆ ಅಂತ್ಯವಾಗಬೇಕೆಂಬ ಹಂಬಲ ಬೇಡ ಪರಸ್ಪರರೆಡಿನ ಗೌರವದ ನೋಟವು ಜೀವನದುದ್ದಕ್ಕೂ ಆ ಪ್ರೀತಿಯನ್ನ ಜೀವಂತ ಉಳಿಸಿ ಗೆಲ್ಲಿಸಿ ಬಿಡುತ್ತದೆ..  ‌‌   ಒಲವೆ ನಮ್ಮ ಬದುಕು  ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು..    ಬೇಂದ್ರೆ ಅಜ್ಜ ಹೇಳುವಂತೆ, ಈ ಒಲವೆ ಬದುಕಲು ಸಾಕಷ್ಟಾಯಿತು. ************************

ವ್ಯಾಲಂಟೈನ್ಸ್ ಡೇ ಸ್ಪೆಶಲ್ Read Post »

ಇತರೆ

ಲಹರಿ

ಪ್ರೀತಿಯ ಆಸುಪಾಸು… ಚಂದ್ರಪ್ರಭ ಪ್ರೀತಿಯ ಆಸುಪಾಸು… ಒಮ್ಮೊಮ್ಮೆ ಹೇಳುತ್ತೇವೆ, ” ನಿನ್ನ ನಾ ಪ್ರೀತಿಸುತ್ತೇನೆ, ಆದರೆ..” ಈ ‘ಆದರೆ’ ಪ್ರೀತಿಸುತ್ತೇನೆ ಎನ್ನುವ ಸತ್ಯವನ್ನೇ ಹೊಡೆದುರುಳಿಸುತ್ತದೆ. ಪ್ರೀತಿಯಲ್ಲಿ ಹಾಗಿದ್ದಲ್ಲಿ, ಹೀಗಿದ್ದಲ್ಲಿ,ಆದರೆ ಗಳಿಗೆ ಜಾಗವಿಲ್ಲ. ಅಲ್ಲಿ ಆರಂಭ ಅಂತ್ಯವೂ ಇಲ್ಲ. ಅಲ್ಲಿ ಪ್ರೀತಿ ಇದೆ ಅಷ್ಟೇ.. ಎಂದೆಂದಿಗೂ. ಭಾವನೆಗಳ ಕಲಸುಮೇಲೋಗರದಲ್ಲಿ ಹೀಗೆ ಬಂದು ಹಾಗೆ ಹೋಗುವ ಕ್ಷಣದ ಚಂಚಲತೆ, ಉತ್ಕಟತೆ ಅದಲ್ಲ. ಆರಂಭ ಅಂತ್ಯಗಳಿಲ್ಲದ ಷರತ್ತುಗಳಿಲ್ಲದ ಎದೆಯ ತುಡಿತ ಪ್ರೀತಿ. ಎದೆಯೆ ಅದರ ಮನೆ.. ದೇವರ ಗುಡಿ ಅದಕ್ಕೆ. ಎದೆಯ ಒಂದು ಭಾಗವೇ ಅದು. ಕಾಲ ಕಾಲಕ್ಕೆ ತನ್ನಷ್ಟಕ್ಕೆ ತಾನೇ ಜೀವಕೋಶಗಳಿಗೆ ರೂಪು ಕೊಡುತ್ತ.. ಅವಯವಗಳನ್ನು ಕಸಿ ಮಾಡುತ್ತ ಅದು ಚಿಗುರುತ್ತಲೇ ಇರುತ್ತದೆ ಅನುಗಾಲ. ನಮ್ಮ ಬುದ್ಧಿಯನ್ನು, ಭಾವವನ್ನು ಪರಿವರ್ತಿಸುವ, ನಾವು ಸಾಗಬೇಕಾದ ದಾರಿಯನ್ನು ನಿರ್ದೇಶಿಸುವ ತಾಕತ್ತು ಪ್ರೀತಿಗಿದೆ. ನಮ್ಮ ಆತ್ಮ ಚೈತನ್ಯದಲ್ಲಿ ನೆಲೆ ನಿಂತು ಬದುಕಿನುದ್ದಕ್ಕೂ ಅನುಕ್ಷಣವೂ ನಮ್ಮನ್ನು ಮುನ್ನಡೆಸುವ ದೀಪ್ತಿ ಪ್ರೀತಿ. “ನಾ ನಿನ್ನ ಪ್ರೀತಿಸುವೆ, ಆದರೆ…” ಎಂದರೆ ‘ಪ್ರೀತಿಸುವುದೇ ಇಲ್ಲ’ ಎಂತಲೇ ಅರ್ಥ. ಆದ್ದರಿಂದ ನಾ ನಿನಗೆ ಹೇಳುವುದಿಷ್ಟೇ : ನಾ ನಿನ್ನ ಪ್ರೀತಿಸುತ್ತೇನೆ ಕೊನೆ ಮೊದಲುಗಳೇ ಇಲ್ಲದೆ. ನಿನ್ನ ಪ್ರೀತಿಸ ತೊಡಗಿದ ಕ್ಷಣದಿಂದ ನೀ ನನ್ನ ದೇಹದ ಬೇರ್ಪಡಿಸಲಾಗದ ಅಂಗವಾಗಿರುವೆ. ಹುಡುಗಿಯೊಬ್ಬಳು ಓರ್ವ ಹುಡುಗನನ್ನು ಹೇಗೆ ಪ್ರೀತಿಸಬಹುದೊ ಹಾಗೇ ನಾ ನಿನ್ನ ಪ್ರೀತಿಸುವೆ..ನಿರ್ಭಯವಾಗಿ.. ಯಾವ ನಿರೀಕ್ಷೆಗಳೂ ಇಲ್ಲದೆ. ಪ್ರತಿಯಾಗಿ ಏನನ್ನೂ ಬಯಸೆನು.. ಅನಂತ ಕಾಲವೂ ನೀ ನನ್ನೆದೆಯಲ್ಲಿಯೇ ನೆಲೆಯಾಗಿರಬೇಕು ಎಂಬುದರ ಹೊರತು. ನಿನ್ನ ಬಲ, ನಿನ್ನ ಆತ್ಮ ಪ್ರತ್ಯಯ, ನಿನ್ನ ಕಣ್ಣಬೆಳಕು ನನಗೆ ನೀಡುವ ಸ್ವಾತಂತ್ರ್ಯವೊಂದೇ ಸಾಕು.. ನಾನು ಮೇಲೆ ಮೇಲಕ್ಕೆ ಹಾರುವೆ. ಇಂಗ್ಲಿಷ್ ಮೂಲ : ಕೊಕೊ ಜೆ ಜಿಂಜರ್ Sometimes you want to say, “I love you, but…” Yet the “but” takes away the ‘I love you’. In love their are no ‘buts’ or ‘if’s’ or ‘when’. It’s just there, and always. No beginning, no end. It’s the condition-less state of the heart. Not a feeling that comes and goes at the whim of the emotions. It is there in our heart, a part of our heart…eventually grafting itself into each limb and cell of our bodies. Love changes our brain, the way we move and talk. Love lives in our spirit and graces us with its presence each day, until death. To say “I love you, but….” is to say, “I did not love you at all”. I say this to you now: I love you, with no beginning, no end. I love you as you have become an extra necessary organ in my body. I love you as only a girl could love a boy. Without fear. Without expectations. Wanting nothing in return, except that you allow me to keep you here in my heart, that I may always know your strength, your eyes, and your spirit that gave me freedom and let me fly.” ― Coco J. Ginger ************

ಲಹರಿ Read Post »

ಇತರೆ

ಪ್ರಸ್ತುತ

ಕೇಂದ್ರದ ಬಜೆಟ್ ಗಣೇಶ್ ಭಟ್ ಶಿರಸಿ ಕೇಂದ್ರ ಬಜೆಟ್ 2020 ಬಜೆಟ್ ಒಂದರಿಂದಲೇ ಇಡೀ ಅರ್ಥವ್ಯವಸ್ಥೆ ಬದಲಾಗಿ ಬಿಡುತ್ತದೆ ಎಂದು ಭಾವಿಸುವದು ಮೂರ್ಖತನ. ಆದರೆ, ಬಜೆಟ್‍ನಲ್ಲಿ ಮಂಡಿಸುವ ವಿಚಾರಗಳು, ಆದಾಯದ ಮೂಲಗಳು ಮತ್ತು ಖರ್ಚುವೆಚ್ಚಗಳನ್ನು ನಿಭಾಯಿಸುವ ವಿವರಗಳಿಂದ ಅರ್ಥವ್ಯವಸ್ಥೆ ಸಾಗುತ್ತಿರುವ ದಿಸೆಯನ್ನು ಸುಲಭದಲ್ಲಿ ಗುರ್ತಿಸಲು ಸಾಧ್ಯ. ಹಲವು ಕ್ಷೇತ್ರಗಳಿಗೆ ಬಜೆಟ್‍ನಲ್ಲಿ ಮೀಸಲಾಗಿಟ್ಟಿರುವ ಮೊತ್ತವನ್ನು ಗಮನಿಸಿದಾಗ ಸರ್ಕಾರದ ನಿಲುವುಗಳನ್ನು ಗ್ರಹಿಸುವುದು ಸುಲಭ ಸಾಧ್ಯ. ವರ್ಷ ವರ್ಷವೂ ಹಿಗ್ಗುತ್ತಿರುವ ಬಜೆಟ್ ಗಾತ್ರದ ಜೊತೆಗೆ ಏರುತ್ತಿರುವ ಬೆಲೆಗಳು, ಹೆಚ್ಚುತ್ತಿರುವ ಖರ್ಚುಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿದಾಗ ಮಾತ್ರ ದೇಶದ ಆರ್ಥಿಕತೆಯ ಆರೋಗ್ಯದ ಕಲ್ಪನೆ ಬರುತ್ತದೆ. ಉದಾಹರಣೆಗಾಗಿ ಈ ಬಾರಿಯ ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮೊತ್ತ ಮೀಸಲಾಗಿಡಲಾಗಿದೆಯೆಂದು ಹೊಗಳುವವರಿದ್ದಾರೆ. ಆದರೆ ಈ ಮೊತ್ತದಲ್ಲಿ ಶಿಕ್ಷಕರು, ಉಪನ್ಯಾಸಕರುಗಳಿಗೆ ನೀಡುವ ಸಂಬಳ ಪಿಂಚಣಿ, ಸವಲತ್ತುಗಳೇ ಹೆಚ್ಚಿನ ಭಾಗವನ್ನು ನುಂಗುತ್ತವೆಂಬುದು ವಿಷಾದನೀಯ ಅಂಶ. ಯು.ಜಿ.ಸಿ ಯೋಜನೆಯಡಿ ಸಂಬಳ ಪಡೆಯುವವರು ಮಾಸಿಕ ಒಂದುವರೆ ಲಕ್ಷಕ್ಕೂ ಹೆಚ್ಚಿಗೆ ವೇತನ ಪಡೆಯುತ್ತಾರೆ. ಅಂಥವರ ಪಿಂಚಣಿ ಐವತ್ತರಿಂದ ಅರವತ್ತು ಸಾವಿರ ರೂಪಾಯಿಗಳಿಗೂ ಮಿಕ್ಕಿರುತ್ತದೆ. ಸರ್ಕಾರದ ಖರ್ಚಿನ ದೊಡ್ಡ ಪಾಲನ್ನು ಪಡೆಯುವ ನೌಕರರ ಸಂಬಳ , ಸವಲತ್ತುಗಳು ಹಾಗೂ ಪಡೆದ ಸಾಲದ ಮೇಲೆ ನೀಡಬೇಕಾದ ಬಡ್ಡಿ. ಯಾವುದೋ ಸಮಯ, ಸಂದರ್ಭದಲ್ಲಿ ನಿಗದಿಯಾದ ನೌಕರರ ಸಂಬಳ ಸದಾ ಏರುತ್ತಲೇ ಇರಬೇಕೆಂದು ಬಯಸುತ್ತಾರೆ. ಸರ್ಕಾರವೂ ಇದನ್ನು ಅನುಮೋದಿಸುತ್ತದೆ. ಶೇಕಡಾ 4 ಕ್ಕಿಂತ ಕಡಿಮೆ ಇರುವ ಈ ವರ್ಗಕ್ಕೆ ನೀಡುವ ವೇತನ, ಸವಲತ್ತುಗಳು ಏರುತ್ತಿರುವಾಗ ಬಹುಸಂಖ್ಯಾತರಾದ, ಕೃಷಿಕರು, ಕಾರ್ಮಿಕರ ಆದಾಯವೂ ಹೆಚ್ಚುತ್ತಲೇ ಇರಬೇಕೆಂಬ ಕುರಿತು ಪ್ರಾಮಾಣಿಕ ಚಿಂತನೆ , ಪ್ರಯತ್ನಗಳು ನಡೆಯುತ್ತಿಲ್ಲ. ಬಜೆಟ್‍ನಲ್ಲಿ ಘೋಷಣೆಯಾಗುವ ರಿಯಾಯಿತಿ, ಅನುದಾನಗಳ ಪ್ರಮಾಣವನ್ನು ಗಮನಿಸಿ, ಆ ಕ್ಷೇತ್ರ ಉದ್ಧಾರವಾಯಿತೆಂದು ಚಪ್ಪಾಳೆ ಬಾರಿಸುವವರು ಇಡೀ ಅರ್ಥವ್ಯವಸ್ಥೆಯ ಸಮಗ್ರತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಉದಾಹರಣೆಗಾಗಿ ಕೃಷಿ ಕ್ಷೇತ್ರಕ್ಕೆ ನೀಡಬೇಕಾದ ಸಾಲ, ಸಬ್ಸಿಡಿಗಳ ಮೊತ್ತವನ್ನು ಹೆಚ್ಚಿಸಿದಾಕ್ಷಣ, ಕೃಷಿಗೆ ಭಾರೀ ಬೆಂಬಲ ಎನ್ನುವ ಮಾತು ಕೇಳಿ ಬರುತ್ತದೆ. ಕೃಷಿ ರಗದ ಸಮಸ್ಯೆಗಳ ಉಳಿದ ಆಯಾಮಗಳನ್ನು , ಮೂಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಏನಾದರೂ ಕಾರ್ಯಕ್ರಮಗಳಿವೆಯೇ ಎಂದು ಗಮನಿಸುವುದೇ ಇಲ್ಲ. ಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡುವುದು ಬರೀ ಘೋಷಣೆಗಳಿಂದ ಸಾಧ್ಯವಿಲ್ಲ. ಸಮಗ್ರ ಭೂ ಬಳಕೆ ನೀತಿ, ಅದಕ್ಕೆ ಪೂರಕವಾಗಿ ಬೇಡಿಕೆ ಆಧಾರಿತ ಬೆಳೆ ಸಂಯೋಜನೆ ಮಾರುಕಟ್ಟೆ ವ್ಯವಸ್ಥೆ ಮುಂತಾದ ಹಲವು ಸಂಗತಿಗಳನ್ನು ಒಳಗೊಂಡಾಗ ಮಾತ್ರ ಕೃಷಿ ಕ್ಷೇತ್ರ ಲಾಭದಾಯಕವಾಗಬಲ್ಲದು. ಪ್ರಸ್ತುತ ಬಜೆಟ್ ಈ ದಿಸೆಯಲ್ಲಿ ಆಶಾದಾಯಕ ಹೆಜ್ಜೆಯನ್ನೇ ಹಾಕಿಲ್ಲ. ಒಂದು ಜಿಲ್ಲೆ- ಒಂದು ಬೆಳೆ ಮುಂತಾದ ಅತಾರ್ಕಿಕ, ಅವೈಜ್ಞಾನಿಕ ಘೋಷಣೆಗಳು ಅಂಧಾಭಿಮಾನಿಗಳ ಕರತಾಡನ ಗಿಟ್ಟಿಸಲಷ್ಟೇ ಯೋಗ್ಯ. ಪ್ರಸಕ್ತ ಬಜೆಟ್ ಬಿಜೆಪಿ ಸರ್ಕಾರದ ಚಿಂತನೆಗಳ ಮುಂದುವರಿಕೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ತೊಂಬತ್ತರ ದಶಕದ ಪ್ರಾರಂಭದಲ್ಲಿ ಕಾಂಗ್ರೆಸ್ ಪ್ರಾರಂಭಿಸಿದ ಖಾಸಗೀಕರಣ, ಉದಾರೀಕರಣ, ಜಾಗತೀಕರಣ ನೀತಿಯನ್ನು ಆ ಪಕ್ಷವು ಸಣ್ಣ ಸಣ್ಣ ದೋಸ್‍ಗಳ ಮೂಲಕ ಅನುಷ್ಠಾನಗೊಳಿಸಲು ಪ್ರಯತ್ನಿಸಿತ್ತು. ಆದರೆ ಬಿಜೆಪಿ, ಕಳೆದ ಆರು ವರ್ಷಗಳಿಂದಲೂ ಇವೇ ನೀತಿಗಳನ್ನು ರಾಜಾರೋಷಾಗಿ ವೈಭವೋಪೇತವಾಗಿ ಕಾಂಗ್ರೆಸ್ ನಾಚಿಕೊಳ್ಳುವ ರೀತಿಯಲ್ಲಿ ಅನುಷ್ಟಾನಗೊಳಿಸುತ್ತಿದೆ. ಆರ್ಥಿಕವಾಗಿ ಲಾಭದಾಯಕವಾಗಿದ್ದ ಜೀವ ವಿಮಾ ನಿಗಮದ ಶೇರುಗಳ ಮಾರಾಟ ಮಾಡಲು ಮುಂದಾಗಿರುವುದು, ಬಿಜೆಪಿಯ ಖಾಸಗೀಕರಣದ ಪ್ರೇಮಕ್ಕೆ ಉದಾಹರಣೆ. ದೇಶದ ಜನರಿಗಾಗಿ ಜೀವವಿಮಾ ನಿಗಮದ ಶೇರುಗಳನ್ನು ಬಿಡುಗಡೆ ಮಾಡಲಾಗುತ್ತದೆಯೆಂಬುದು ಘೋಷಣೆ. ಆದರೆ ಈ ಶೇರುಗಳು ಸೇರುವುದು ಬೆರಳೆಣಿಕೆಯ ಶ್ರೀಮಂತರ ಕೈಗೆ. ಐವತ್ತು ಸಾವಿರ ಕೋಟಿಗೂ ಹೆಚ್ಚು ಆದಾಯ ಸಂಗ್ರಹಿಸುವ ಉದ್ದೇಶ ಹೊಂದಿರುವ ಈ ಪ್ರಸ್ತಾಪ, ಸಾಲ ತೀರುವಳಿಗಾಗಿ ತನ್ನ ಉತ್ಪನ್ನ ಬರುತ್ತಿರುವ ತೋಟದ ಒಂದೊಂದೇ ಭಾಗವನ್ನು ಮಾರಾಟ ಮಾಡುವ ರೀತಿಯಂತಿದೆ. ಎಲ್‍ಐಸಿಯ ನೌಕರರು, ಏಜೆಂಟರು ನೀಡುತ್ತಿರುವ ಸೇವೆಯಲ್ಲಿ ಸಾಕಷ್ಟು ಕುಂದುಗಳಿವೆ. ಆದರೂ ಎಲ್‍ಐಸಿಯೆಂಬ ಸಾರ್ವಜನಿಕ ವಲಯದ ಸಂಸ್ಥೆಯಿಂದಾಗಿಯೇ ಖಾಸಗಿ ವಿಮಾ ಸಂಸ್ಥೆಗಳು ಬಾಲ ಮುದುರಿಕೊಂಡು ವ್ಯವಹರಿಸುತ್ತಿವೆ. ಎಲ್‍ಐಸಿ ದುರ್ಬಲಗೊಳ್ಳತೊಡಗಿದಂತೆ ಖಾಸಗಿ ರಂಗದ ವಿಮಾ ಸಂಸ್ಥೆಗಳ ಶೋಷಣೆಯೂ ಹೆಚ್ಚಲಿದೆ. ಕಳೆದೆರಡು ವರ್ಷಗಳಿಂದಲೂ ಎಲ್‍ಐಸಿಯನ್ನು ದುರ್ಬಲಗೊಳಿಸುವ ಪ್ರಕ್ರಿಯೆ ನಡೆಯುತ್ತಲೇ ಇದೆ. ನಷ್ಟದಲ್ಲಿರುವ ಬ್ಯಾಂಕ್‍ಗಳ ಶರನ್ನು ಎಲ್‍ಐಸಿ ಖರೀದಿಸುವಂತೆ ಮಾಡಿರುವುದು ಒಂದು ಉದಾಹರಣೆ ಮಾತ್ರ. ಖಾಸಗಿ ರಂಗದ ಕೃಷಿ ವಿಮಾ ಸಂಸ್ಥೆಗಳು ರೈತರಿಗೆ ಮಾಡುತ್ತಿರುವ ವಂಚನೆಗಳನ್ನು ಗಮನಿಸಿದಾಗ ವಿಮಾ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀರಂಗಕ್ಕೆ ನೀಡಿದರೆ ಆಗುವ ಅಪಾಯಗಳನ್ನು ಊಹಿಸುವುದು ಸುಲಭ. ವಿದೇಶೀ ಬಂಡವಾಳದ ನೇರ ಹೂಡಿಕೆಗೆ ಅವಕಾಶಗಳನ್ನು ಹೆಚ್ಚಿಸಿರುವುದು ಕೂಡಾ ಅಪಾಯಕಾರಿ ಕ್ರಮ. ಭಾರತದ ಅರ್ಥವ್ಯವಸ್ಥೆ ಬಂಡವಾಳದ ಕೊರತೆಯಿಂದ ಬಳಲುತ್ತಿಲ್ಲ ಎಂಬುದು ಜನಸಾಮಾನ್ಯರಿಗೂ ಅರ್ಥವಾಗುವ ಸಂಗತಿ. ದೇಶದ ಆರ್ಥಿಕ ಸ್ವಾಯತ್ತತೆಗೆ ಅಪಾಯವೊಡ್ಡುವ ಕ್ರಮಗಳ ಕುರಿತು ಕುರುಡು ನಂಬಿಕೆ ಹೊಂದಿರುವ ಬಂಡವಾಳವಾದಿ ಆರ್ಥಿಕ ತಜ್ಞರ ಸಲಹೆಗಳನ್ನು ಮಾನ್ಯ ಮಾಡುವ ಆಡಳಿತ ನಡೆಸುವವರು. ಜಾಗತಿಕ ಆರ್ಥಿಕ ವಿದ್ಯಮಾನಗಳನ್ನು ಸ್ವಾರ್ಥಕ್ಕಾಗಿ, ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆನ್ನುವುದು ಸ್ಪಷ್ಟ. ತನ್ನ ಆರ್ಥಿಕ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಯುರೋಪಿಯನ್ ಆರ್ಥಿಕ ಒಕ್ಕೂಟದಿಂದ ಬ್ರಿಟನ್ ಹೊರ ಬಂದಿರುವುದು ನಮಗೆ ಪಾಠವಾಗಬೇಕಿತ್ತು. ಹೂಡಿಕೆದಾರರು ದೇಶೋದ್ಧಾರಕರು ಎಂದು ನಂಬುವವರು, ನಂಬಿಸುವವರನ್ನು ಸ್ವಾರ್ಥಿಗಳು ಮತ್ತು ಕಪಟಿಗಳು ಎನ್ನಲೇಬೇಕಾಗುತ್ತದೆ. ಯಾಕೆಂದರೆ ಹೂಡಿಕೆದಾರರಿಗೆ ತಮ್ಮ ಲಾಭ ಗಳಿಕೆಯೇ ಪ್ರಮುಖ ಗುರಿಯಾಗುತ್ತದೆಯೇ ಹೊರತು ಸಮುದಾಯದ ಉದ್ಧಾರವಲ್ಲ. ಶಿಕ್ಷಣ ಕ್ಷೇತ್ರದಲ್ಲಿಯೂ ವಿದೇಶಿ ನೇರ ಹೂಡಿಕೆಗೆ ಅವಕಾಶ ಕಲ್ಪಿಸುವ ಪ್ರಸ್ತಾಪ ಅತ್ಯಂತ ಅಪಾಯಕಾರಿ. ಭಾರತೀಯ ಚಿಂತನೆ ಆಧಾರಿತ ವ್ಯಕ್ತಿತ್ವ ನಿರ್ಮಾಣದ ಶಿಕ್ಷಣ ನೀತಿಗೆ ತಿಲಾಂಜಲಿ ನೀಡಿ ಶತಮಾನಗಳೇ ಕಳೆದವು. ಬಂಡವಾಳಶಾಹಿಗಳ ಅಗತ್ಯಕ್ಕನುಗುಣವಾಗಿ ಗುಲಾಮರನ್ನು ಸೃಷ್ಟಿಸುವ ಶಿಕ್ಷಣ ನೀತಿಯನ್ನು ಹಲವು ದಶಕಗಳಿಂದ ಅನುಷ್ಟಾನಗೊಳಿಸುತ್ತಾ, ಯಾವ ಜನತೆಯಲ್ಲಿ ಆತ್ಮವಿಶ್ವಾಸ ಬೆಳೆಯದಂತೆ ಮಾಡಿರುವ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಹಣವಂತರ ಕೈಗೆ ನೀಡುವುದರಿಂದ ಆಗುವ ಸಾಂಸ್ಕøತಿಕ ಆಘಾತಗಳು, ಕುಂಠಿತಗೊಳ್ಳುವ ವ್ಯಕ್ತಿತ್ವ ನಿರ್ಮಾಣದ ಕುರಿತು ಸರ್ಕಾರ ಅಸಡ್ಡೆ ತೋರಿರುವುದು ಸ್ಪಷ್ಟ. ದೇಶಾಭಿಮಾನ, ಭಾರತೀಯತೆ ರಾಷ್ಟ್ರೀಯತೆ ಮುಂತಾದ ಇವರ ಘೋಷಣೆಗಳ ಟೊಳ್ಳುತನ ಇದರಿಂದಲೇ ಸ್ಪಷ್ಟವಾಗುತ್ತದೆ. ಸಂಪತ್ತು ಸೃಷ್ಟಿಸುವವರನ್ನು ಗೌರವಿಸುವದಾಗಿ ಹೇಳಲಾಗಿದೆ. ಸಂಪತ್ತು ಸೃಷ್ಟಿಸುವವರು ಯಾರಿಗಾಗಿ ಆ ಕಾರ್ಯ ಮಾಡುತ್ತಾರೆಂಬುದನ್ನೂ ಸರ್ಕಾರದ ಅಂಕಿಅಂಶಗಳಿಂದಲೂ ಕಾಣಬಹುದು. ಬೆರಳೆಣಿಕೆಯ ಶ್ರೀಮಂತರ ಹಾಗೂ ಅವರ ಕಂಪನಿಗಳ ವಹಿವಾಟು ದೇಶದ ಬಜೆಟ್‍ನ್ನೂ ಮೀರಿದೆ ಎಂಬ ವಿಷಯವೇ, ದೇಶದ ಆಡಳಿತವನ್ನು ನಿಯಂತ್ರಿಸುತ್ತಿರುವವರು ಶ್ರೀಮಂತರೇ ಹೊರತು ರಾಜಕೀಯ ನೇತಾರರಲ್ಲ ಎಂಬುದನ್ನು ಎತ್ತಿ ಹೇಳುತ್ತದೆ. ಭಾರತದ 63 ಅತಿ ಶ್ರೀಮಂತರ ಸಂಪತ್ತು, ದೇಶದ ಮುಕ್ಕಾಲು ಪಾಲು ಜನರ ಸಂಪತ್ತಿಗೂ ಹೆಚ್ಚು ಎನ್ನುವ ವಿಷಯ ಅಧಿಕಾರಸ್ಥರ ಗಮನ ಸೆಳೆದಿಲ್ಲವೆಂಬುದು ಆಶ್ಚರ್ಯದ ಸಂಗತಿ. ಭಾರತದ ಜನಸಂಖ್ಯೆಯ ಶೇಕಡಾ ಒಂದರಷ್ಟಿರುವ ಅತಿ ಶ್ರೀಮಂತರ ಸಂಪತ್ತು ಪ್ರತಿವರ್ಷವೂ ಹೆಚ್ಚುತ್ತಲೇ ಇದ್ದು, ದೇಶದ ಸಂಪತ್ತಿನ 58% ನಷ್ಟು ಇವರ ಹತೋಟಿಯಲ್ಲೇ ಇದೆ. ಈ ಅಪಾಯಕಾರಿ ಪ್ರವೃತ್ತಿಯನ್ನು ತಡೆಗಟ್ಟುವ ಅಥವಾ ನಿಯಂತ್ರಿಸುವ ಯಾವ ಪ್ರಸ್ತಾಪವೂ ಬಜೆಟ್‍ನಲ್ಲಿ ಇಲ್ಲ. ಬದಲಿಗೆ ಸಂಪತ್ತಿನ ಕೇಂದ್ರೀಕರಣಕ್ಕೆ ಇನ್ನಷ್ಟು ಒಲವು ತೋರಿಸುವ ಬಜೆಟ್ ಮಂಡಿಸಿರುವ ಸರ್ಕಾರ , ಸಾಮಾಜಿಕ ನ್ಯಾಯದ ಕುರಿತು ಮಾತನಾಡುವ ನೈತಿಕ ಹಕ್ಕನ್ನೇ ಕಳೆದುಕೊಂಡಿದೆ. ನಗರಗಳ ಅಭಿವೃದ್ಧಿ, ವಿಮಾನ ನಿಲ್ದಾಣಗಳ ಹೆಚ್ಚಳ, ಹೈಸ್ಪೀಡ್ ರೈಲುಗಳನ್ನು ಹೆಚ್ಚಿಸಿ ಉದ್ಯೋಗ ಸೃಷ್ಟಿಸುತ್ತೇವೆಂಬ ಭ್ರಮೆಯನ್ನು ಸೃಷ್ಟಿಸಲಾಗುತ್ತಿದೆ. ರಾಜ್ಯದ ಯಾವುದೋ ಒಂದು ನಗರದಲ್ಲಿ ಫುಡ್‍ಪಾರ್ಕ್ ಅಥವಾ ಇನ್ಯಾವುದೋ ಉದ್ಯಮ ಪ್ರಾರಂಭಿಸುವ ಬದಲಿಗೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಆಧಾರಿತ ಮತ್ತು ಕೃಷಿ ಪೂರಕ ಉದ್ಯಮಗಳ ಸ್ಥಾಪನೆಗೆ ಒತ್ತು ನೀಡುವ ಕ್ರಮಗಳಿಂದ ಉದ್ಯೋಗ ಸೃಷ್ಟಿ, ನಗರಾಭಿಮುಖ ವಲಸೆಯನ್ನು ತಡೆಗಟ್ಟಲು ಸಾಧ್ಯವಿದೆ. ಹಳ್ಳಿಗಳನ್ನು ಉದ್ಯೋಗ ಸೃಷ್ಟಿಯ ಕೇಂದ್ರಗಳನ್ನಾಗಿಸುವುದರಿಂದ ಕ್ಷಿಪ್ರ ಆರ್ಥಿಕ ಪ್ರಗತಿ ಸಾಧ್ಯ. ಜನರ ಕೈಗೆ ಖರೀದಿ ಶಕ್ತಿ ನೀಡುವ ಕುರಿತು ಘೋಷಣೆ ಮಾತ್ರ ಇದೆಯೇ ಹೊರತು, ಅನುಷ್ಠಾನ ಯೋಗ್ಯ ಕ್ರಮಗಳ ಪ್ರಸ್ತಾಪವೇ ಇಲ್ಲ. ಆರ್ಥಿಕ ಪುನಶ್ಚೇತನಕ್ಕೆ ಬೇಕಾದ ಸೂಕ್ತ ಪ್ರಸ್ತಾಪಗಳಲ್ಲದೇ ಬಳಲಿರುವ ಈ ವರ್ಷದ ಬಜೆಟ್‍ನಿಂದ ಧನಾತ್ಮಕ ಬದಲಾವಣೆಯ ನಿರೀಕ್ಷೆ ಮಾಡಲಾಗದು. ದೇಶದ ಆರ್ಥಿಕ ಸ್ವಾಯತ್ತತೆಯನ್ನು ಹಾಳುಗೆಡವಿ, ಜನಸಾಮಾನ್ಯರಿಂದ ಆರ್ಥಿಕ ಸ್ವಾವಲಂಬನೆಯನ್ನು ಕಸಿಯುವ ನಿಟ್ಟಿನಲ್ಲಿ ಕೇಂದ್ರ ಬಜೆಟ್ ಯಶಸ್ವಿಯಾಗುವುದು ನಿಶ್ಚಿತ. ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸುವ ಪ್ರಕ್ರಿಯೆಯ ಮುಂದುವರಿಕೆಯ ಪರಿಣಾಮ ಬಹುಬೇಗ ಪ್ರಕಟಗೊಳ್ಳಲಿದೆ. ಅರ್ಥವ್ಯವಸ್ಥೆಯ ಪುನಶ್ಚೇತನವಾಗಬೇಕೆಂದರೆ ಜನಸಾಮಾನ್ಯರಿಗೆ ಸರ್ಕಾರದ ರೀತಿ- ನೀತಿಗಳಲ್ಲಿ ನಂಬಿಕೆ, ವಿಶ್ವಾಸ ಮೂಡಬೇಕು. ಈ ದಿಸೆಯಲ್ಲಿ ಭರವಸೆ ಮೂಡಿಸಲು ಪ್ರಸ್ತುತ ಬಜೆಟ್ ವಿಫಲವಾಗಿದೆ.

ಪ್ರಸ್ತುತ Read Post »

You cannot copy content of this page

Scroll to Top