ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಪ್ರವಾಸ ಕಥನ

ಪ್ರವಾಸ ಕಥನ

ಜಾರಕಬಂಡೆಕಾವಲ್ ವೃಕ್ಷ ಉದ್ಯಾನ ಚಂದ್ರಮತಿ ಪುರುಷೋತ್ತಮ್ ಭಟ್ ಮಲೆನಾಡಲ್ಲಿ ಬೆಳೆದವರಿಗೆ ಮರಗಳೇ ಸ್ನೇಹಿತರು . ಹಾಗೂ ತಮ್ಮ ಊರಿನ ಕಂಪು, ಸಂಸ್ಕೃತಿ ರೀತಿ ರಿವಾಜು ಮರೆತು ಬಾಳುವವರು ಇಲ್ಲವೇ ಇಲ್ಲ ಎಂದರೂ ತಪ್ಪಾಗಲಾರದು. ಎಲ್ಲಾ ಕಾಲದಲ್ಲೂ ಮರಗಿಡಗಳು ಹಸಿರಾಗಿ ಪರೋಪಕಾರಿಯಾಗಿಯೇ ಮೌನವಾಗಿ ತನ್ನತನವನ್ನು ಎತ್ತಿ ತೋರಿಸುವಂತಹ ಪ್ರಕೃತಿಯನ್ನು ಮೈದುಂಬಿಸಿಕೊಂಡಿರುತ್ತದೆ. ಬೆಟ್ಟಗುಡ್ಡಗಳು ನಿತ್ಯ ಜನರನ್ನು ಕೈಬೀಸಿ ಕರೆಯುತ್ತಿರುತ್ತದೆ.ಆಗಲೂ ಈಗಲೂ ಅರಣ್ಯಗಳಲ್ಲಿ ಸಿಗುವಂತಹ ಹಣ್ಣುಹಂಪಲುಗಳೇ ಅಲ್ಲಿಯ ಎಷ್ಟೋ ಜನರ ಆಹಾರವಾಗಿರುತ್ತದೆ. ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದ ನಮ್ಮಂತಹ ಎಷ್ಟೋ  ನಿಸರ್ಗಾರಾಧಕರಿಗೆ ಆಗಾಗ ತವರೂರು ನೆನಪಾಗುವುದು ಸರ್ವೇಸಾಮಾನ್ಯ. ಕೆಲವೊಮ್ಮೆ ನಗರ ನರಕ ಸಮಾನವೆಂದೆನಿಸಿ ಬಿಡುತ್ತದೆ.  ಉಸಿರು ಕಟ್ಟುವ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ವಾರಕ್ಕೊಮ್ಮೆಯಾದರೂ ಎಲ್ಲಾದರೂ ನಿರ್ಜನ ಹಾಗೂ ಪ್ರಕೃತಿಯಿರುವಲ್ಲಿ ಕಾಲಕಳೆಯ ಬೇಕೆನಿಸುವುದರಲ್ಲಿ ತಪ್ಪೇನಿದೆ.ನಗರಗಳು ಕದಂಬ ಬಾಹುವಿನಂತೆ ಹಳ್ಳಿ ಹಳ್ಳಿಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು  ಬೆಳೆಯುತ್ತಿರುವಾಗ ಪಶ್ಚಿಮಘಟ್ಟಗಳಿಂದ ಬಂದ ನಮಗೆ ಮರಗಿಡಗಳ ಹಾಗೂ ಹಕ್ಕಿಗಳ ಕಲರವ ನೀರಿನ ಜುಳುಜುಳು ನಾದ ನೆನಪಾಗದೇ ಉಳಿಯಲು ಸಾಧ್ಯವೇ ? ಅಕ್ಟೋಬರ್ ಇಪ್ಪತ್ತಾರನೇ ದಿನದಂದು ನಮ್ಮ ಮನೆಯಿಂದ ಸುಮಾರು ಇಪ್ಪತ್ತು ಮೈಲು ದೂರದಲ್ಲಿರುವ  ವೃಕ್ಷ ಉದ್ಯಾನಕ್ಕೆ ಹೊರಟೆವು.  ಸ್ವಲ್ಪ ನಗರದ ವಾಹನ ದಟ್ಟಣೆ ಕಳೆದ ತಕ್ಷಣ ಮರಗಳ ಸಾಲುಗಳು ನಮ್ಮನ್ನು ಕೈಬೀಸಿ ಕರೆದವು. ನಗರದಿಂದ ಅನತಿ ದೂರದಲ್ಲಿ ಇದ್ದ ಈ ವೃಕ್ಷಗಳು ಸ್ವೇಚ್ಛೆಯಾಗಿ ನೀಳವಾಗಿ ಎತ್ತರವಾಗಿ ವಿಸ್ತಾರವಾದ ಈ ಪ್ರದೇಶದಲ್ಲಿ ಕಂಗೊಳಿಸುತ್ತಿದ್ದವು. ವಾವ್ ಎನ್ನುವ ವಾತಾವರಣ ಹಾಯ್ ಎನ್ನಿಸಿದ್ದುಇದೇ ರಾಮಗೊಂಡನ ಹಳ್ಳಿಯಲ್ಲಿರುವಂತಹ  ‘ ಜಾರಕಬಂಡೆ ಕಾವಲ್ ವೃಕ್ಷ ಉದ್ಯಾನ ವನ ‘. ಇದು ನಿಸರ್ಗ ಪ್ರಿಯರಿಗೆ ಹೇಳಿಸಿದ ತಾಣ. ಸುಮಾರು ಸಾವಿರ ಹೆಕ್ಟೇರ್ ಜಾಗವನ್ನು ಒಳಗೊಂಡ ಈ ಉದ್ಯಾನವನದಲ್ಲಿ ಸುಮಾರು 5000 ಸಸ್ಯ ಪ್ರಬೇಧ‌ಗಳಿವೆ.ಇಕ್ಕೆಡೆಗಳಲ್ಲಿ ಮರ ಹಾಗೂ ಅಲ್ಲಲ್ಲಿ ದಣಿವು ತಣಿಸಿಕೊಳ್ಳಲು ಕಲ್ಲು ಆಸನಗಳೂ ಇವೆ. ಈ ಉದ್ಯಾನವನವನ್ನು ತುಂಬಾ ಸ್ವತಂತ್ರವಾಗಿ ಬೆಳೆಯಲು ಬಿಟ್ಟಿದ್ದಾರೆ. ಇದರ ಒಳಗಡೆ ಹಳ್ಳಿಯಲ್ಲಿ ಇರುವಂತಹ ಮಣ್ಣಿನ ರಸ್ತೆ , ಕಾಲುದಾರಿ ,ವಿವಿಧ ರೀತಿಯ ಗಿಡಗಳು ಪೊದೆಗಳು ಹೀಗೆ ನಡೆದಾಡುವ ಅಭ್ಯಾಸ ಇರುವವರಿಗೆ ಮನೋಲ್ಲಾಸವನ್ನು ನೀಡುತ್ತದೆ. ಅಲ್ಲಲ್ಲಿ ಕಣ್ತಣಿಸುವ ಮಲೆನಾಡಿನ ಸಸ್ಯಗಳನ್ನು ನಾವು ಕಾಣಬಹುದು. ನಾವು ಬಾಲ್ಯದಲ್ಲಿ ತಿನ್ನುತ್ತಿದ್ದ ಕೆಲವೊಂದು ಗಿಡಗಳೂ ಅಲ್ಲಿ ಫಲಭರಿತವಾಗಿ ಕಂಡು ಬಂದವು. ಪಕ್ಷಿ ಪ್ರಿಯರಿಗೂ ಅದ್ಭುತ ಸ್ಥಳ. ಅಲ್ಲಿಗೆ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಹೋದರೆ ಅಲ್ಲಿ ಚಿಟ್ಟೆಗಳ ಪ್ರಪಂಚ ಇರುವುದರಿಂದ  ವರ್ಣರಂಜಿತ ವಿವಿಧ ರೀತಿಯ ಚಿಟ್ಟೆಗಳನ್ನೂ ಕಾಣಬಹುದು.ಬೈಸಿಕಲ್ ಸವಾರರಿಗೆ ಮತ್ತು ಕಾಲುನಡಿಗೆ ಮಾಡುವವರಿಗೆ ಮಾತ್ರ ಅಲ್ಲಿ ಪ್ರವೇಶವಿರುತ್ತದೆ. ಸುಮಾರು ಏಳೂವರೆ ಮೈಲಿಯಷ್ಟು ನಡಿಗೆ.  ತುಂಬಾ ವಿಸ್ತಾರವಾದ ಜಾಗವಾಗಿರೋದ್ದರಿಂದ ಒಬ್ಬರೇ ಹೋಗುವುದಕ್ಕಿಂತ  ಜೊತೆಯಲ್ಲಿ ಹೋಗುವುದು ಸುರಕ್ಷಿತ .ಮುಖ್ಯದಾರಿಯ ನಂತರ ಕಾಲು ದಾರಿಗಳಲ್ಲಿ ನಡೆಯುತ್ತಾ ನಡೆಯುತ್ತಾ ಮೈಮರೆತರೆ ಪುನ: ಹೊರಗಡೆ ಬರುವುದು ಕಷ್ಟವಾಗ ಬಹುದು. ಮಖ್ಯದ್ವಾರದಲ್ಲಿ ಇರುವ ಸಿಬ್ಬಂಧಿಗಳಲ್ಲಿ ವಿಚಾರಿಸಿಕೊಂಡು ನಿಮ್ಮ ಪ್ರಯಾಣವನ್ನು ಶುರು ಮಾಡುವುದು ಒಳ್ಳೆಯದು. ಬೆಳಿಗ್ಗೆ ಆರು ಗಂಟೆಯಿಂದ ಹತ್ತರವರೆಗೆ ಹಾಗೂ ಸಂಜೆ ಮೂರು ಗಂಟೆಯಿಂದ ಆರರವರೆಗೆ ತೆರೆದಿರುವುದರಿಂದ  ಸೂರ್ಯೋದಯ  ಮತ್ತು ಸಂಜೆಯ ಸೂರ್ಯಾಸ್ತದ ಸಮಯವನ್ನು ಆನಂದಿಸ ಬಹುದು. ನಾವು ಮುಸ್ಸಂಜೆಯಲ್ಲಿ ಹಕ್ಕಿಗಳ ಕಲರವದ ಜೊತೆಜೊತೆಗೆ ಸೂರ್ಯಾಸ್ತದ ಸಮಯವನ್ನು ಆನಂದಿಸಿದೆವು.  ಮೂರು ಘಂಟೆಗಳ ಕಾಲ ಕಾಲ್ನಡಿಗೆಯಲ್ಲಿ ಮುಖ ಕವಚವಿಲ್ಲದೆ ಶುದ್ಧ ಪ್ರಾಣವಾಯುವನ್ನು ಸೇವಿಸುತ್ತಾ ನಡೆಯುತ್ತಾ ಮಲೆನಾಡು ಸೊಬಗನ್ನು ಸವಿದೆವು. ಸೂರ್ಯಾಸ್ತದ ರಮಣೀಯ ದೃಶ್ಯವನ್ನು ಕಣ್ತುಂಬಿಕೊಂಡು ಮನೆಯತ್ತ ಸಾಗಿದೆವು. ಆಗಸ್ಟ್ ತಿಂಗಳಿನಿಂದ ಜನವರಿ ತಿಂಗಳವರೆಗೆ ಹಸಿರು ಸೊಬಗನ್ನು ಬಹುಶಃ: ಅಲ್ಲಿ ಕಾಣಬಹುದು.ದಯವಿಟ್ಟು ಅಲ್ಲಿಗೆ ನಿಸರ್ಗ ಪ್ರೇಮಿಗಳು ಮಾತ್ರ ಹೋಗಬೇಕು ಏಕೆಂದರೆ ಈ ಮಹಾನಗರ ವ್ಯಾಪ್ತಿಯಲ್ಲಿ ಇದು ಅಳಿದುಳಿದು ಕೊಂಡಂತಹ ಏಕೈಕ ತಾಣ ಹಾಗೂ ನೈಸರ್ಗಿಕವಾಗಿ ಕಲ್ಮಷರಹಿತವಾಗಿಟ್ಟಂತಹ ನೆಮ್ಮದಿಯ ತಾಣ ಎಂದರೂ ಅತಿಶಯೋಕ್ತಿಯಾಗಲಾರದು. ಅಂತಹ ಅಮೂಲ್ಯವಾದ ಜಾಗಗಳನ್ನು ಹಾಗೇ ಉಳಿಸಿಕೊಳ್ಳೋಣ. ಗೌರವಿಸೋಣ.*******************************************

ಪ್ರವಾಸ ಕಥನ Read Post »

ಇತರೆ, ಪ್ರವಾಸ ಕಥನ

ಸಿದ್ಧಿಸಿತೆನಗೆ ” ಸಿದ್ಧರ ಬೆಟ್ಟ “ಯಾನ

ಪ್ರವಾಸ ಕಥನ ಸಿದ್ಧಿಸಿತೆನಗೆ  -ಸಿದ್ಧರ ಬೆಟ್ಟ ಯಾನ ಚಂದ್ರಮತಿ ಪುರುಷೋತ್ತಮ್ ಭಟ್     ಬಹುದಿನದ ಬಯಕೆ, ನೋಡಲೇ ಬೇಕೆಂಬ ತುಡಿತದ ಜೊತೆಗೆ ನಲವತ್ತರ ಹರೆಯ ದಾಟಾಯ್ತು ಈಗಲೂ ನೋಡದಿದ್ದರೆ ಇನ್ನು ಯಾವಾಗ ನೋಡೋದು ಅನ್ನೋ ಅನಿಸಿಕೆ. ನನ್ನ ಮಗಳು ಹಾಗೂ ಅವಳ ಗೆಳೆಯರು ಬರ್ತೀರ ಆಂಟಿ ಸಿದ್ಧರ ಬೆಟ್ಟಕ್ಕೆ ಅಂದಾಕ್ಷಣ ವೈ ನಾಟ್ ! ಎಂದು ‘ ರೋಗಿ ಬಯಸಿದ್ದು ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ‘ ಅಂತ ಹುಂ ಎಂದು ಹೊರಟೇ ಬಿಟ್ಟೆ. ತುಂಬಾ ದಿನದಿಂದ ಅಂದು ಕೊಂಡ ಈ ಬೆಟ್ಟ ನೋಡುವ ಭಾಗ್ಯಬಂದೊದಗಿಯೇ ಬಿಟ್ಟಿತು. ಸೂರ್ಯೋದಯಕ್ಕೂ ಮುಂಚೆ ಸುಮಾರು 4.45 ರ ಸಮಯಕ್ಕೆ ಶುರುವಾಯ್ತು ನಮ್ಮ ಪಯಣ. ಜನಸಂದಣಿ ಇರದ ಈ ಸಮಯದಲ್ಲಿ ನಮ್ಮ ಬೆಂದಕಾಳೂ ಕೂಡ ಸುಂದರ ಹಾಗೂ ಸುಖಕರವೆನಿಸುವುದು. ಬೆಂಗಳೂರಿನಿಂದ 100 ಕಿ.ಮೀ ದೂರದಲ್ಲಿರುವ ಸಿದ್ದರ ಬೆಟ್ಟಕ್ಕೆ ಐದು ಮಂದಿಯನ್ನು ಹೊತ್ತು ಡಸ್ಟರ್ ಶರವೇಗದಲ್ಲಿ ನಗರವನ್ನು ದಾಟಿ ಇನ್ನೇನು ಸಿದ್ಧರ ಬೆಟ್ಟದ ದಾರಿ ತಲುಪಿದ್ದಂತೆಯೆ ನಮ್ಮನ್ನು ಸೆಳೆದದ್ದು ಆ ಊರಿನ ರುಚಿಕರವಾದ ತಟ್ಟೆ ಇಡ್ಲಿ .  ಅಲ್ಲಿಂದ 8 ರಿಂದ 10 ಕಿ.ಮೀ ದೂರದಲ್ಲಿ ಈ ಬೆಟ್ಟ . ತಲುಪಿದಾಗ ಸುಮಾರು ಮುಂಜಾನೆ 6.30 ಸಮಯ. ಸದ್ದು ಗದ್ದಲ ಇಲ್ಲದ ನಿರ್ಜನ ಪ್ರಶಾಂತ ತಾಣ. ಸಿಲಿಕಾನ್ ಸಿಟಿಯಿಂದ ಬರುವ ಯಾತ್ರಿಕರಿಗೆ ಒಮ್ಮೆ ಯಾದರೂ ಹಾಯ್ ಎನಿಸದೇ ಇರದು.ಈ ಬೆಟ್ಟವು ಸುಮಾರು 6 ಕಿಲೋಮೀಟರ್ ಚಾರಣ. 1700ಅಡಿ ಎತ್ತರದಲ್ಲಿರುವ ಈ ಬೆಟ್ಟವು ಔಷಧೀಯ ಸಸ್ಯಗಳ ಬೀಡು. ೨೦೦೦ ಕ್ಕೂ ಹೆಚ್ಚು ಸಸ್ಯಗಳಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಕೆ.ಫ್.ಡಿ ಗೆ ಧನ್ಯವಾದ ಹೇಳಲೇ ಬೇಕು   ಶುರುವಾಯ್ತು ಸೆಲ್ಫಿಯಿಂದಲೇ ನಮ್ಮ ಉತ್ಸಾಹದ ಆರೋಹಣ ಚಾರಣ. ಹಸಿರಿನ ಔಷಧೀಯ ಮರಗಿಡಗಳ ನಡುವೆ ಹಕ್ಕಿಗಳ ಕಲರವ ಹಾಗೂ ತುಂತುರು ಮಳೆಯಲ್ಲಿ ಹತ್ತಿದ ಕ್ಷಣ ಅದ್ಬುತ ! ನೂರಾರು ಮೆಟ್ಟಿಲುಗಳ ನಂತರ ಕಡಿದಾದ ಬೆಟ್ಟದಲ್ಲಿ ಮುಂದಕ್ಕೆ ಹತ್ತಲು ಗಟ್ಟಿ ಕಲ್ಲುಗಳೇ ನಮಗೆ ಆಸರೆಯಾದವು. ಅಂತು ಇಂತೂ ಅಸಾಧ್ಯ ಎನಿಸಿದರೂ ಅಲ್ಲಲ್ಲಿ ತಂಗುದಾಣ ನಮ್ಮನ್ನು ಪ್ರೋತ್ಸಾಹಿಸಿತು. ಕ್ಷಣಕಾಲ ನಿಬ್ಬೆರಗಾದೆವು ! ನೋಡಿದರೆ ದೊಡ್ಡ ಕಲ್ಲು ಬಂಡೆಯನ್ನೇ ಕೊರೆದು ಮಾಡಿದ ಕಿರಿದಾದ ಮೆಟ್ಟಿಲುಗಳು. ಜಿನುಜಿನುಗುವ ಮಳೆಯಲ್ಲಿ ಹತ್ತುತ್ತಾ ಕಾಲು ಜಾರಿದರೆ ಎನ್ನುವ ಆತಂಕದಲ್ಲಿ ಮುಂದೆ ಮುಂದೆ ಹೆಜ್ಜೆ ಇಟ್ಟೆವು. ಹತ್ತಿದಾಕ್ಷಣ ಜಯಶಾಲಿಯದೆವಾ ? ಅನ್ನೋ ಅನಿಸಿಕೆಯ ಜೊತೆ ಜೊತೆಗೆಮಂಜು ಮುಸುಕಿದ ತುದಿಬೆಟ್ಟವು ‘  ಮಾನವ ನೀನೆಷ್ಟು ಅಲ್ಪ ! ಎಂದು ನಗುವುದೇನೋ ಎನ್ನಿಸಿತು.  ಸೌಂದರ್ಯ , ಪ್ರಶಾಂತತೆ  ನಮ್ಮನ್ನು ಮೂಖವಿಸ್ಮಿತಗೊಳಿಸಿತು. ಅಚ್ಚರಿ ! ಆ ತುತ್ತತುದಿಯಲ್ಲಿ ಕಲ್ಲು ಬಂಡೆಯಲ್ಲೂ ಸದಾಕಾಲ ಎಳಿನೀರಿನಂತಹ ತಣ್ಣೀರು ಕಾಣಸಿಗುವುದು.  ಸಿದ್ಧರು ಸಿದ್ಧಿ ಫಡೆದಂತಹ ಸ್ಥಳ ಆಗಿರೋದರಿಂದ ಆಸ್ತಿಕರಿಗೆ ಹೇಳಿಸಿದ ಸ್ಥಳ ಕೂಡ . ಅಲ್ಲಿ ಈಗಲೂ ಬಂದವರೆಲ್ಲರಿಗೂ ಆಶೀರ್ವದಿಸಲು ಒಬ್ಬರು ಸಿದ್ಧರು ದೊಡ್ಡ ಕಲ್ಲು ಬಂಡೆಯ ಒಳಗಡೆ ತಪಸ್ಸು ಮಾಡುತ್ತಾ ಕುಳಿತಿರುತ್ತಾರೆ. ಆಶೀರ್ವಾದ ಪಡೆದ ನಾವು ಕೊಂಚ ಹೊತ್ತು ಅಲ್ಲೇ ಧ್ಯಾನ ಮಗ್ನರಾದೆವು. ಇನ್ನೂ ಬೆಟ್ಟದ ತುದಿ ನೋಡುವ ಬಯಕೆ ಹೊತ್ತು ಬಂದ ನಾವು ತುಸು ವಿಶ್ರಮಿಸಿ ಮುಂದಿನ ಹೆಜ್ಜೆ ಬೆಳೆಸಿದೆವು. ಅಲ್ಲಿಂದ ಮುಂದೆ ದೊಡ್ಡ ಬಂಡೆಯೊಳಗಿಂದ ಹತ್ತುತ್ತಾ ಹತ್ತುತ್ತಾ ಹೊರಬಂದು ನೋಡಿದರೆ ಅಲ್ಲಿರುವ  ಮನಮೋಹಕ ಪ್ರಕೃತಿಯ ವೈಚಿತ್ರ್ಯ ! ಮಂಜಿನ ಸಹಿತ ಬೀಸುತ್ತಿರುವ ಶೀತಗಾಳಿಯು ಹಾಗೂ ಮುಂಜಾನೆಯ ಹೊಂಗಿರಣದಿಂದ ಫಳ ಫಳಿಸುತ್ತಿರುವ  ಆ ಬೆಟ್ಟವು ನಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ದು ಬಿಟ್ಟಿತು. ಹನ್ನೆರೆಡು ಗಂಟೆಯವರೆಗೂ ಹಿಮಾವೃತ ಬೆಟ್ಟವನ್ನು ನೋಡಿದನುಭವ ಅವರ್ಣನೀಯ ! ನಮ್ಮ ಕರ್ನಾಟಕ ಆಹಾ ಎಷ್ಟು ಅದ್ಭುತ ! ಎಂದೆನಿಸಿತು. ವಾರೆ ವಾವ್ ! ಈ ಸಿದ್ಧರ ಬೆಟ್ಟ ನೋಡುವಾವಕಾಶ ಎಲ್ಲರಿಗೂ ಸಿದ್ಧಿಸಲಿ ಸಿದ್ಧರ ಆಶೀರ್ವಾದ ಪಡೆಯಲಿ . ಎನ್ನುತ್ತಾಮತ್ತೊಂದಿಷ್ಟು ಸೆಲ್ಫಿ ಒಂದಿಷ್ಟು ಮಸ್ತಿ ಮಾಡುತ್ತಾ ಬೆಟ್ಟದಿಂದ ನಿಧಾನವಾಗಿ ಅವರೋಹಣ ಮಾಡಿದೆವು. ಏರಿಳಿತಗಳ ರೋಚಕ ಅನುಭವವನ್ನು ಮೆಲುಕು ಹಾಕುತ್ತಾ ನಗರಿಗೆ  ಹಿಂತಿರುಗಿ ಪ್ರಯಾಣ ಬೆಳೆಸಿದೆವು. ——— ಮಾರ್ಗ :ಬೆಂಗಳೂರು – ತುಮಕೂರು -ತೋವಿನಕೆರೆ – ತುಂಬಾಡಿ – ಸಿದ್ಧರಬೆಟ್ಟಸರಿಯಾದ ಸಮಯ : ಜೂನ್-ಜುಲೈ-ಆಗಸ್ಟ್ಚಾರಣದ ಸಮಯ : ಒಂದು ಗಂಟೆಸಾಧ್ಯ : ಚಾರಣಾಸಕ್ತರು ಹಾಗೂ ಪ್ರಕೃತಿ ಪ್ರಿಯರಿಗೆ ಮಾತ್ರ ನಿಷೇಧ : ಪ್ಲಾಸ್ಟಿಕ್ಸಲಹೆ : ಒಂಟಿ  ಪಯಣ ಬೇಡ. ಗುಂಪಿನ ಜೊತೆ ಯೋಗ್ಯ          “ಪ್ರಕೃತಿಯನ್ನು ಉಳಿಸಿ ಪ್ರೀತಿಸಿ ಆದರಿಸಿ ಆನಂದಿಸಿ “ *********************************

ಸಿದ್ಧಿಸಿತೆನಗೆ ” ಸಿದ್ಧರ ಬೆಟ್ಟ “ಯಾನ Read Post »

You cannot copy content of this page

Scroll to Top