ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಕೊನೆಯ ಕಂತು ಸಮಸ್ಯೆ ಉಳಿದಿದೆ ಬಾಗಿಲು ತೆರೆದಿದೆ… ಕೊರೊನಾ ಆತಂಕವನ್ನು ಕಟ್ಟಿಟ್ಟು ಅದೆಷ್ಟೋ ಮನೆಗಳ, ಅಂಗಡಿಗಳ ಬಾಗಿಲು ಮತ್ತೆ ಮೊದಲಿನಂತೆಯೇ ತೆರೆದಿವೆ! ಒಂದೆಡೆ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದಾಯರಹಿತ ಜೀವನ ನಡೆಸಲಾಗುವುದಿಲ್ಲ, ಹಸಿವಿನಿಂದಲೇ ಹಲವರು ಸಾಯಬಹುದು ಎನ್ನುವ, ಎಲ್ಲವೂ ಪುನರಾರಂಭಗೊಳ್ಳಬೇಕು ಎನ್ನುವ ಒತ್ತಡ, ಒತ್ತಾಯದಿಂದ ತೆರೆದಿರುವ ಬಾಗಿಲುಗಳು ಬದುಕಿನ ಆತಂಕಗಳನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುತ್ತಿದೆ. ಮತ್ತದೇ ಭೋಗ ಜೀವನವನ್ನು ಬಾಚಿ ತಬ್ಬಿಕೊಳ್ಳುವ ಹಲವರ ನಡೆ ‘ನಾಯಿಯ ಬಾಲ ನಳಿಗೆಯಲ್ಲಿ ಹಾಕಿದರೂ ಡೊಂಕು’ ಎನ್ನುವ ಮಾತನ್ನು ನೆನಪಿಸುತ್ತಿದೆ. ‘ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹರಿಸಿ’ ಎಂದು ಎಚ್ಚರಿಸುವ ಮಾಧ್ಯಮಗಳ ಮಾತು ಬರಹ ಗಮನಿಸುವ ವ್ಯವಧಾನ ಕೆಲವರಲ್ಲಷ್ಟೇ ಉಳಿದಿದೆ. ಇಷ್ಟು ದಿನವೂ ತಮ್ಮ ಬದುಕನ್ನು ಪಣವಾಗಿಟ್ಟು ದುಡಿದ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ನರ್ಸ ಗಳು ಎಲ್ಲಕ್ಕಿಂತ ಮುಖ್ಯವಾಗಿ ಡಾಕ್ಟರುಗಳ ತ್ಯಾಗ, ಸಂಯಮ, ಸೇವೆಯ ಫಲವಾಗಿ ಅನೇಕರು ಕೊರೋನಾದಿಂದ ಗುಣಮುಖರಾಗಿದ್ದಾರೆ. ಆದರೆ ಜನರ ವಿವೇಚನಾರಹಿತ ವ್ಯವಹಾರದಿಂದ ರೋಗಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುವ ಡಾಕ್ಟರುಗಳ ತಾಳ್ಮೆಯನ್ನು ನಿಕಷಕ್ಕೊಡ್ಡುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ. ಹೆಣ ಸುಡುವ ಬೆಂಕಿಯಲ್ಲಿ ಅಡುಗೆ ಬೇಯಿಸಲೆತ್ನಿಸುವ ರಾಜಕೀಯದವರ ನಡೆ ವಾಕರಿಕೆ ಹುಟ್ಟಿಸುತ್ತಿದೆ. ಸತ್ತವರು ಒಂದು ಸಮುದಾಯದವರಾದರೆ ಎಡಗಣ್ಣಿನಲ್ಲಿ ನೀರು, ಸತ್ತವರು ಇನ್ನೊಂದು ಸಮುದಾಯದವರಾದರೆ ಬಲಗಣ್ಣಿನಲ್ಲಿ ನೀರು..ತಥ್.. ಸಿದ್ಧಾಂತದಲ್ಲಿ ಸಿಲುಕಿದವರಿಗೆ ಅರ್ಥವಾಗುವುದು ಅರೆಬರೆ ಬೆಂದ, ಅರ್ಧಸತ್ಯಗಳು ಮಾತ್ರ. . ನಿಜವಾಗಿಯೂ ಮಾನವೀಯತೆ ಇದ್ದರೆ ಎಡ ಬಲಗಳ ಹಂಗು ಹರಿದು ಎಲ್ಲ ಅನ್ಯಾಯವನ್ನು ಪ್ರಶ್ನಿಸಿ, ಎಲ್ಲರ ಕಷ್ಟಕ್ಕೂ ಸ್ಪಂದಿಸುವಂತಾಗಲಿ. ತೆರೆದ ಬಾಗಿಲಿನಾಚೆ ವೈರಾಣುವಿನ ರೂಪದಲ್ಲಿ ಸಾವು ಹೊಂಚು ಹಾಕುತ್ತಲೇ ಇದೆ.. ಜಾತಿ ಮತ ಬೇಧಭಾವ ಮಾಡದೇ ಯಾರನ್ನು ಆವರಿಸಲಿ ಎಂದು ಕಾಯುತ್ತಿದೆ. ಸಾಮರಸ್ಯವೆನ್ನುವುದು ಕಟ್ಟಲಾರದ ಕವಿತೆಯಾಗದಿರಲಿ. ನಮ್ಮನ್ನು ನಾವು ಕಾಪಾಡಿಕೊಳ್ಳುವ, ದೇಶ ಉಳಿಸುವ ಸಂಯಮ ಬದುಕಿನ ಗೀತವಾಗಲಿ. ****** ಮುಗಿಯಿತು ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-13 ಅವರ ಒಡಲು ತಣ್ಣಗಾಗಲಿ.. ಭೂಮಿಯನ್ನು ತಾಯಿ ಎನ್ನುತ್ತೇವೆ. ನಮ್ಮೊಡಲನ್ನು ಅನುದಿನವೂ ತುಂಬಿಸಿಕೊಳ್ಳುವುದು ಭೂಮಿಯಲ್ಲಿ ಬೆಳೆದ ಬೆಳೆಯಿಂದಲೇ.. ವಿವೇಚನಾರಹಿತವಾಗಿ ನಾವು ಸುರಿಯುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದ, ರಾಸಾಯನಿಕಗಳಿಂದ , ಕಟ್ಟಡಗಳ ತ್ಯಾಜ್ಯದಿಂದ ನಾನಿನ್ನು ಬೆಳೆಯನ್ನು ಬೆಳೆಸುವ ಸಾಮರ್ಥ್ಯ ಕಳೆದುಕೊಂಡಿದ್ದೇನೆ ಎಂದು ಭೂಮಿ ಘೋಷಿಸಿದರೆ ನಾವುಳಿಯಲಾದೀತೆ? ಪ್ರಕೃತಿ ಮನುಜರ ಆಸೆ ಪೂರೈಸುತ್ತದೆ ದಿಟ. ದುರಾಸೆ ಮಾಡುತ್ತಿರುವ ಕಾರಣದಿಂದಲ್ಲವೇ ಇಂತಹ ಲಾಕ್ಡೌನ್ ಎದುರಿಸಬೇಕಾಗಿ ಬಂದಿದ್ದು. ಇದು ಪ್ರಕೃತಿ ನೀಡುತ್ತಿರುವ ಬಲವಾದ ಎಚ್ಚರಿಕೆ. ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಜೀವನ ಶೈಲಿ ಬದಲಿಸಿಕೊಳ್ಳದಿದ್ದರೆ ಇನ್ನೂ ಕಠಿಣ ದಿನಗಳನ್ನು ಎದುರಿಸಬೇಕಾಗಿ ಬರಬಹುದು… ಬದುಕು ಬದಲಾಗಬೇಕು ಎಂದು ವಿಚಾರ ಮಾಡುತ್ತಲೇ ಹುಡುಕಲಾರಂಭಿಸಿದೆ.. ಎಲ್ಲವೂ ಖಾಲಿಯಾದ ಬಿಂದಿ ಪ್ಯಾಕೆಟ್ಟುಗಳೇ..ಹಳೆಯ ಪರ್ಸು, ಬ್ಯಾಗು.. ಎಲ್ಲವನ್ನೂ ತಡಕಾಡಿದರೂ ಬಿಂದಿ( ಟಿಕಲಿ) ಪ್ಯಾಕೆಟ್ಟು ಸಿಗಲಿಲ್ಲ.. ನಾನು ಬಳಸುವ ಏಕೈಕ ಅಲಂಕಾರಿಕ ವಸ್ತು.. ಅದೂ ಖಾಲಿಯಾಯ್ತೇ ಅಕಟಕಟಾ. .. ಚಿಕ್ಕಂದಿನಲ್ಲಿ ಹಚ್ಚಿಕೊಳ್ಳುತ್ತಿದ್ದಂತೆ ಬಾಟ್ಲಿ ಕುಂಕುಮದ ಬಾಟ್ಲಿಯೂ ಇಲ್ಲ. ನಮ್ಮ ಅತ್ತೆಯಂತೆ ತೆಳ್ಳಗೆ ಗುಂಡಗೆ ಬೆಣ್ಣೆ ಸವರಿಕೊಂಡು ಪುಡಿ ಕುಂಕುಮವನ್ನೇ ಇಟ್ಟುಕೊಳ್ಳುವ ಕಲೆಯೂ ನನಗೆ ಸಿದ್ಧಿಸಿಲ್ಲ..ಅಯ್ಯೋ ನಾನು ಈಗ ಟಿಕಲಿ ಬಡವಂತೆ. ನಿಮ್ಮದೇ ಅದೃಷ್ಟ ಇಂತಹ ತಲೆಬಿಸಿ ಇಲ್ಲ ಎಂದು ಗಂಡ, ಮಕ್ಕಳಿಬ್ಬರ ಹಣೆ ದಿಟ್ಟಿಸುತ್ತಾ ಹಲುಬುತ್ತ ಕರುಬಿದೆ. .ಹಳೆ ಟಿಕಲಿಗಳನ್ನೆಲ್ಲ ಬಚ್ಚಲು ಮನೆಯ ಗೋಡೆಯ ಮೇಲೆ ಚಿತ್ತಾರದಂತೆ ಅಂಟಿಸುವ ಅಮ್ಮನ ನೆನಪಾಯಿತು. ಅವಳ ಬಳಿ ಟಿಕಲಿ ಖಾಲಿ ಆದರೆ ಅದನ್ನೇ ಕಿತ್ತು ಮತ್ತೆ ಹಣೆಗಿಟ್ಟುಕೊಳ್ಳಬಹುದಾ? ನಗು ಬಂತು.. ಅಷ್ಟರಲ್ಲಿ ಮಡಚಿಟ್ಟ ಸೀರೆ ಮಡಿಕೆಯೊಳಗಿಂದ ಎಂದೋ ಇಟ್ಟ ಟಿಕಲಿ ಪ್ಯಾಕೆಟ್ಟೊಂದು ಪಟ್ಟನೆ ಉದುರಿ ಸಿಕ್ಕಿಯೇ ಬಿಟ್ಟಿತು.. ಅಬ್ಬಾ ಬೋಳು ಹಣೆಯಲ್ಲಿ ಇರುವುದು ತಪ್ಪಿತಲ್ಲ ಇದು ಖರ್ಚಾಗುವಷ್ಟರಲ್ಲಿ ಧಡೂತಿ ದೇಹದ, ನಗುಮೊಗದ ಬೀದಿ ತುದಿಯ ಹೆಂಗಸು ಅಂಗಡಿ ಬಾಗಿಲು ತೆರೆಯಬಹುದು..ಎಂದು ಸಮಾಧಾನಪಟ್ಟುಕೊಂಡೆ.. ಬಿಂದಿಯಿಂದ ಬಾಣಲೆಯವರೆಗೆ ಚಪ್ಪಲಿಯಿಂದ ಮೊಬೈಲಿನವರೆಗೆ ಪ್ರತಿ ವಸ್ತುವಿಗೂ ನಾವು ಬಲವಾಗಿಯೇ ಅಂಟಿಕೊಂಡಿದ್ದೇವೆ. ದಿನವೂ ಅಂಗಡಿ ಬಾಗಿಲು ತೆರೆದು ‘ಬನ್ನಿ ಬನ್ನಿ ಏನು ಬೇಕು’ ಎಂದು ಕೇಳಿ ಮಾರಾಟ ಮಾಡುತ್ತಿದ್ದವರ ಚಹರೆಗಳು, ಆ ಅಂಗಡಿಗಳು ಇರುವ ಸ್ಥಳ ಎಲ್ಲವೂ ಮೆರವಣಿಗೆ ಹೊರಟಂತೆ ನೆನಪಾಗತೊಡಗಿದವು. ಬೀದಿ ಬದಿಯಲ್ಲಿ ತರಕಾರಿ ಮಾರುವ ಅಜ್ಜಿಯರು, ಪಾನಿಪುರಿ, ಬೆಲ್ ಪುರಿ ಮಾರುವ ಅಂಗಡಿಯವರು.. ಈಗ ಆದಾಯವೇ ಇಲ್ಲದ ಅವರ ಮನೆಯಲ್ಲಿ ಒಲೆ ಉರಿಯುತ್ತಿರಬಹುದೇ. ಅಥವಾ ಜಠರಾಗ್ನಿಯೇ ಕಿಚ್ಚಾಗಿ ಸುಡುತ್ತಿರಬಹುದೇ? ‘ಕಾಡಿನಿಂದ ನಾಡಿಗೆ ಮನ ಒಲಿಸಿ ಕರೆ ತಂದ ಆದಿವಾಸಿಗಳನೇಕರು ಆಹಾರ ಅರಸುತ್ತ ಮತ್ತೆ ಕಾಡಿನೆಡೆಗೆ ನಡೆದಿದ್ದಾರೆ’ ಎಂಬ ಸುದ್ದಿ ಓದುವಾಗ ಒಂದಿಷ್ಟು ಜನರು ಮತ್ತೆ ಗ್ರಾಮವಾಸಕ್ಕೆ ಮನಸ್ಸು ಮಾಡಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಬರಬಹುದು ಎನ್ನಿಸುತ್ತದೆ. ಮನೆಯ ಮುಂದೆ ತರಕಾರಿ ಹಣ್ಣು ಮಾರುವವರು ಮೊದಲಿಗಿಂತ ಹೆಚ್ಚಾಗಿದ್ದಾರೆ. ಕಾರಣ ಅರಸುತ್ತ ಹೋದಾಗ ತಿಳಿದು ಬಂದ ವಿಷಯವೂ ಸ್ವಾರಸ್ಯಕರವಾಗಿದೆ. ಒಬ್ಬರು ಹೇಳುತ್ತಾರೆ.. ‘ನಾನು ಒಬ್ಬ ಟೈಲರ್.. ಪ್ರತಿವರ್ಷ ಈ ಸಮಯದಲ್ಲಿ ಮಕ್ಕಳಿಗೆ ಸಮವಸ್ತ್ರ ಹೊಲಿಯುತ್ತಿದ್ದೆ.. ಕೈತುಂಬಾ ಕೆಲಸ, ಸಂಪಾದನೆ ಇತ್ತು. ಈಗ ಹೊಲಿಯಲು ಬಟ್ಟೆಕೊಡುವವರಿಲ್ಲ. ಹಾಗೆಂದು ಮನೆಯಲ್ಲಿ ಖರ್ಚು ನಿಲ್ಲುವುದಿಲ್ಲ.. ಹಣ್ಣು ಮಾರುತ್ತಿದ್ದೇನೆ. ಇನ್ನೊಬ್ಬರು ಬಡಗಿ ಕೆಲಸ ಸಿಗುತ್ತಿಲ್ಲ ಎಂದು ಬೈಕ್ ಮೇಲೆ ಬುಟ್ಟಿ ಕಟ್ಟಿಕೊಂಡು ತರಕಾರಿ ಮಾರುತ್ತಿದ್ದಾರೆ. ಕೆಲಸ ಇಲ್ಲ ಎಂದು ಕಂಗೆಡುವ ಜನರಿಗಿಂತ ದುಡಿಮೆಗೆ ಹೊಸ ದಾರಿ ಹುಡುಕಿಕೊಳ್ಳುವ ಇಂತವರೇ ಶ್ರೇಷ್ಠರು ಎನಿಸುತ್ತದೆ.. ಲಾಕ್ ಡೌನ್ ಆರಂಭದಲ್ಲಿ ಕಡಿಮೆ ತರಕಾರಿ, ಹಣ್ಣು ಬಳಸುತ್ತಿದ್ದೆ‌. ಈಗ ಧಾರಾಳವಾಗಿ ಮಾರುವವರು ಹೇಳಿದಷ್ಟು ಬೆಲೆಗೆ ಖರೀದಿಸಿ ಉಪಯೋಗಿಸುತ್ತಿದ್ದೇನೆ. ನೀವೂ ಹಾಗೇ ಮಾಡುತ್ತಿದ್ದೀರಾ? ಮಾರುವವರ ಮನೆಯ ಒಲೆಯೂ ಉರಿದು ಅವರ ಒಡಲೂ ತಣ್ಣಗಾಗಲಿ.. ******* ಮುಂದುವರಿಯುವುದು… ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಅಂಕಣ ಸಂಗಾತಿ

ಸ್ವಾತ್ಮಗತ

ಅಭಿವೃದ್ಧಿಯಾಗಬೇಕಾದ ‘ಹೆಳವರು’..! ಅಭಿವೃದ್ಧಿಯಾಗಬೇಕಾದ ‘ಹೆಳವರು’..! ಇವರ ಒಟ್ಟು ಸಂಖ್ಯೆ ಸುಮಾರು 80 ಸಾವಿರಬಹುದು. ಇದಿಷ್ಟೇ ಈ ಜಾನಂಗದ ಜನರಿಗೆ 180 ಕ್ಕೂ ಹೆಚ್ಚು ಬೆಡಗುಗಳು ಅಥವಾ ಕುಲಗಳು ಇರಬಹುದು. ಅಂದರೆ, ಪ್ರತಿ 444 ಜನರಿಗೆ ಒಂದು ‘ಕುಲ’ವಾಯಿತು..! ಅಲ್ಪಸ್ವಲ್ಪ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೂ ಇವರ ಮೂಲ ವೃತ್ತಿ ಭಿಕ್ಷಾಟನೆಯಾಗಿದೆ. ಈ ಜನಾಂಗ ಇವರ ಮೂಲ ಕಸುಬಾದ ಭಿಕ್ಷಾಟನೆ ಬಿಟ್ಟಿಲ್ಲ.ಅದೂ ಈ ಜನರು ಎಲ್ಲರ ಮನೆಗೆ ಅಂದರೆ ಕಂಡ, ಕಂಡವರ ಮನೆಗೆ ಭಿಕ್ಷಾಟನೆಗೆ ಹೋಗುವುದಿಲ್ಲ. ತಮ್ಮ ಒಕ್ಕಲು ಮನೆಯವರ ಮನೆಗೆ ಮಾತ್ರ ಭಿಕ್ಷಾಟನೆಗೆ ಹೋಗುತ್ತಾರೆ ಅಷ್ಟೇ… ಇವರು ಅಂಗವಿಕಲರಲ್ಲ. ಆದರೂ ಅಂಗವೈಕಲ್ಯತೆಗೆ ಸಮಾನವಾದ ಪದದಿಂದ ಇವರನ್ನು ಸಂಬೋಧಿಸಲಾಗುತ್ತದೆ… ಅವರೇ ಈ ಹೆಳವರು…– ಗ್ರಾಮೀಣ ಪ್ರದೇಶದಲ್ಲಿ ಹೆಳವ ಎಂದರೆ ಸ್ವಾಧೀನ ಕಳೆದುಕೊಂಡ ಕಾಲನ್ನು ಹೊಂದಿರುವವನೆಂದರ್ಥ. ಹೆಳವ ಎಂಬುದು ಒಂದು ‘ಬುಡಕಟ್ಟು ಸಮುದಾಯದ’ ಹೆಸರು ಮಾತ್ರ. ಈ ಸಮುದಾಯಕ್ಕೆ ಹೆಳವ ಎಂಬ ಹೆಸರು ಬಂದಿದ್ದಕ್ಕೆ ಹಲವಾರು ಐತಿಹ್ಯಗಳಿವೆ. ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ವ್ಯವಸಾಯ ಮಾಡುವ ಒಂದು ಕುಟುಂಬದಲ್ಲಿ 6 ಮಂದಿ ಗಂಡು ಮಕ್ಕಳಿರುತ್ತಾರೆ. ಅದರಲ್ಲಿ ಒಬ್ಬನಿಗೆ ಕಾಲು ಊನವಾಗಿರುತ್ತದೆ. ಆದರೆ, ಉಳಿದ ಐವರಿಗೆ ಈತನನ್ನು ಕಂಡರೆ ಆಗಿಬರುತ್ತಿರಲಿಲ್ಲ. ಏಕೆಂದರೆ ನಾವೆಲ್ಲಾ ದುಡಿದು ತಂದಿದ್ದನ್ನು ಈತ ತಿನ್ನುತ್ತಾನೆ ಎಂಬ ಅಲಕ್ಷ್ಯ ಅವರಿಗಿತ್ತು. ಆದರೆ, ತಾಯಿಗೆ ಮಾತ್ರ ಈ ಊನ ಮಗನನ್ನು ಕಂಡರೆ ಎಲ್ಲಿಲ್ಲದ ಅಕ್ಕರೆ. ಇದರಿಂದ ಆಕ್ರೋಶಗೊಂಡ ಐವರು ಅಣ್ಣತಮ್ಮಂದಿರು ಕುಂಟ ಸೋದರನನ್ನು ಹತ್ಯೆ ಮಾಡಲೂ ಮುಂದಾಗುತ್ತಾರೆ. ಆದರೆ, ಮನೆಯಲ್ಲಿ ಸಾಕಿದ್ದ ಬಸವ(ಎತ್ತು) ಪ್ರತಿ ಸಂದರ್ಭದಲ್ಲೂ ಕುಂಟನ ನೆರವಿಗೆ ಬರುತ್ತದೆ. ಕಡೆಗೊಂದು ದಿನ ಆಸ್ತಿ ಪಾಲು ಮಾಡುವ ಸಂದರ್ಭದಲ್ಲಿ ಮನೆಯ ಹಿರಿಯರೆಲ್ಲಾ ಮಕ್ಕಳನ್ನು ಕೂರಿಸಿ ಐವರು ಮಕ್ಕಳಿಗೆ ಆಸ್ತಿ ಪಾಲು ಮಾಡುತ್ತಾರೆ. ಕುಂಟನಿಗೆ ಸ್ವಂತಕ್ಕೆ ದುಡಿದು ತಿನ್ನುವ ಶಕ್ತಿ ಇಲ್ಲ ಎಂಬ ಕಾರಣಕ್ಕೆ ಆತನ ಮುದ್ದಿನ ಎತ್ತು ಮತ್ತು ಗಂಟೆಯನ್ನು ನೀಡುತ್ತಾರೆ. ಈತ ಪ್ರತಿ ವರ್ಷ ಸುಗ್ಗಿ ಕಾಲದಲ್ಲಿ ಎತ್ತಿನ ಮೇಲೆ ಸವಾರಿ ಮಾಡಿ ಗಂಟೆಯನ್ನು ಬಾರಿಸುತ್ತಾ ಐವರು ಸೋದರರ ಮನೆಗೆ ಹೋಗಿ ತನ್ನ ಪಾಲಿನ ಕಾಳು ಕಡ್ಡಿಯನ್ನು ಭಿಕ್ಷಾ ರೂಪದಲ್ಲಿ ತಂದು ತಿನ್ನಬೇಕೆಂಬ ಷರತ್ತು ವಿಧಿಸುತ್ತಾರೆ. ಕಾಲಕ್ರಮೇಣ ಈ ಕುಂಟನ ವಂಶವೃಕ್ಷ ಬೆಳೆಯಿತಾದರೂ ಕುಟುಂಬದಲ್ಲಿ ಯಾರೂ ಊನಗೊಂಡವರಿರಲಿಲ್ಲ. ಆದರೆ, ಅಪ್ಪ ಮಾಡಿದ ಭಿಕ್ಷಾಟನೆಯನ್ನು ಮಕ್ಕಳು, ಅವರ ಮಕ್ಕಳು ಮುಂದುವರೆಸುತ್ತಾ ಬಂದರು. ಇದು ಮುಂದೊಂದು ದಿನ ದೊಡ್ಡ ಸಂಸಾರವಾಗಿ ರೂಪುಗೊಂಡಿದೆ. ಇದೇ ಕಾರಣಕ್ಕಾಗಿ ಈ ಕುಟುಂಬ ಅಥವಾ ವಂಶವನ್ನು ‘ಹೆಳವ’ ಎಂದು ಕರೆಯಲಾಯಿತು ಎಂಬ ಪ್ರತೀತಿ ಪುರಾಣಗಳಲ್ಲಿ ದಾಖಲಾಗಿದೆ..! ಭಿಕ್ಷಾಟನೆ ಒಕ್ಕಲಿಗರ ಅಥವಾ ಕೃಷಿಕರ ಮನೆಯಲ್ಲಿ ಭಿಕ್ಷೆ ಎತ್ತುವ ಈ ಕಾಯಕ ಇಂದಿಗೂ ಮುಂದುವರೆದಿದೆ… ಎತ್ತಿನ ಮೇಲೆ ಸವಾರಿ ಮಾಡುತ್ತಾ ಇಡೀ ಕುಟುಂಬದೊಂದಿಗೆ ಊರಿಂದ ಊರಿಗೆ ಅಲೆಯುತ್ತಾ ಬಂದಿದ್ದ ಈ ಸಮುದಾಯವನ್ನು ಅಲೆಮಾರಿಗಳೆಂದು ಪರಿಗಣಿಸಲಾಗಿದೆ. ಇವರನ್ನು ಬುಡಕಟ್ಟು ವರ್ಗದವರೆಂದು ಹೇಳಲಾಗುತ್ತಿದ್ದರೂ ಕಾಡು ಮೇಡುಗಳಲ್ಲಿ ಜೀವಿಸುವುದಿಲ್ಲ. ಜನವಸತಿ ಪ್ರದೇಶಗಳಲ್ಲಿ ಜನರೊಂದಿಗೆ ಬೆರೆತು ಜೀವನ ಸಾಗಿಸುತ್ತಿದ್ದಾರೆ. ಅಲೆಮಾರಿಗಳು ಎಂದು ಕರೆಯಿಸಿಕೊಂಡಿದ್ದರೂ ಇತ್ತೀಚಿನ ದಿನಮಾನದಲ್ಲಿ ಹೆಳವರು ಒಂದು ಊರಿನಲ್ಲಿ ನೆಲೆ ನಿಂತಿದ್ದಾರೆ. ಆ ಊರಿನಿಂದಲೇ ತಮ್ಮ ಭಿಕ್ಷಾಟನೆ ಕಾಯಕವನ್ನು ನಡೆಸುತ್ತಿದ್ದಾರೆ… ಈ ಸಮುದಾಯದ ಹೆಚ್ಚು ಜನ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲೇ ವಾಸವಾಗಿದ್ದರೆ. ಅಂದರೆ, ಈ ಜಿಲ್ಲೆಯಲ್ಲಿ ಸುಮಾರು 14 ಸಾವಿರದಷ್ಟು ಜನ ಇದ್ದಾರೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಸುಮಾರು 12 ಸಾವಿರದಷ್ಟಿದ್ದಾರೆ… ಉಳಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಹರಿದು ಹಂಚಿ ಹೋಗಿರುವ ಸಮುದಾಯದ ಒಟ್ಟು ಕುಟುಂಬಗಳ ಸಂಖ್ಯೆ ಸುಮಾರು 14 ಸಾವಿರ ಇದ್ದರೆ, ಜನಸಂಖ್ಯೆ ಸುಮಾರು 80 ಸಾವಿರ… ಈ ಸಮುದಾಯದಲ್ಲಿ ಪ್ರಮುಖವಾಗಿ ಎತ್ತಿನ ಹೆಳವರು, ಗಂಟೆ ಹೆಳವರು ಮತ್ತು ಚಾಪೆ ಹೆಳವರು ಎಂದು ಗುರುತಿಸಲಾಗಿದೆ… ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಎತ್ತಿನ ಹೆಳವರು ಕಂಡುಬಂದರೆ, ದಕ್ಷಿಣ ಕರ್ನಾಟಕದಲ್ಲಿ ಗಂಟೆ ಹೆಳವರಿದ್ದಾರೆ. ಅದೇ ರೀತಿ ಬೀದರ್, ಗುಲ್ಬರ್ಗಾ, ಬಳ್ಳಾರಿ ಮತ್ತು ಶಿವಮೊಗ್ಗ, ಗದಗ ಸುತ್ತಮುತ್ತಲಿನ ಪ್ರದೇಶಗಳ ಜಿಲ್ಲೆಗಳಲ್ಲಿ ಚಾಪೆ ಹೆಳವರು ಜೀವಿಸುತ್ತಿದ್ದಾರೆ… ಎತ್ತಿನ ಹೆಳವರು ಮತ್ತು ಗಂಟೆ ಹೆಳವರು ಚಾಪೆ ಹೆಳವರಿಗಿಂತ ಮೇಲ್ದರ್ಜೆಯವರೆಂದು ಹೇಳಲಾಗುತ್ತದೆ. ಏಕೆಂದರೆ, ಎತ್ತಿನವರು ಮತ್ತು ಗಂಟೆ ಹೆಳವರ ಸಂಪ್ರದಾಯಗಳಲ್ಲಿ ಬಹುತೇಕ ಸಾಮ್ಯತೆ ಕಂಡುಬರುತ್ತದೆ. ಗಂಟೆ ಹೆಳವರು ತಮ್ಮ ಬಗಲಲ್ಲಿ ದೊಡ್ಡ ಜೋಳಿಗೆ ಹಿಡಿದು ಗಂಟೆ ಬಾರಿಸುತ್ತಾ ನಿಗದಿತ ಒಕ್ಕಲುಗಳಿಗೆ ಅಂದರೆ ಕೃಷಿ ಮಾಡುವ ಒಂದು ಸಮುದಾಯದ ಮನೆಗಳಿಗೆ ಹೋಗಿ ಭಿಕ್ಷೆ ಎತ್ತುತ್ತಾರೆ. ಅವರು ಬಾರಿಸುವ ಗಂಟೆಯನ್ನು ಅವರ ಒಕ್ಕಲುಗಳೇ ಕೊಡಿಸಿರುತ್ತಾರೆ. ಅವರು ಕೊಡಿಸಿದ ಗಂಟೆಯನ್ನು ಅದೇ ಒಕ್ಕಲುಗಳಲ್ಲಿ ಬಾರಿಸಬೇಕು. ಒಂದು ಒಕ್ಕಲಿನ ಗಂಟೆಯನ್ನು ಮತ್ತೊಂದು ಒಕ್ಕಲಲ್ಲಿ ಬಾರಿಸಿದರೆ ಅದು ಅಪರಾಧವಾದಂತೆ… ಆದರೆ, ಎತ್ತಿನ ಹೆಳವರು ಎತ್ತಿನ ಮೇಲೆ ಸವಾರಿ ಮಾಡಿಕೊಂಡು ಭಿಕ್ಷಾಟನೆ ಮಾಡುತ್ತಾರೆ. ಇದೊಂದು ವೈರುಧ್ಯ ಬಿಟ್ಟರೆ ಎರಡೂ ಪಂಗಡಗಳಲ್ಲಿ ಒಂದೇ ರೀತಿಯ ಸಂಪ್ರದಾಯವಿದೆ… ಆದರೆ, ಭಿಕ್ಷಾಟನೆಯಲ್ಲಿ ತೊಡಗಿದರೂ ಚಾಪೆ ಹೆಳವರು ಹಂದಿಯನ್ನು ಸಾಕುತ್ತಾರೆ. ಇವರಿಗೆ ಇಂತಹದ್ದೇ ಒಕ್ಕಲಲ್ಲಿ ಭಿಕ್ಷೆ ಬೇಡಬೇಕೆಂಬ ನಿಬಂಧನೆಯೂ ಇಲ್ಲ. ಹೀಗಾಗಿ ಈ ಸಮುದಾಯ ಕೀಳು ಎಂಬ ಸಂಪ್ರದಾಯ ಕೆಲವರಲ್ಲಿ ಇದೆ… ಎತ್ತಿನ ಮತ್ತು ಗಂಟೆ ಹೆಳವರ ಮಧ್ಯೆ ವೈವಾಹಿಕ ಸಂಬಂಧಗಳು ಇವೆಯಾದರೂ ಈ ಪಂಗಡಗಳು ಚಾಪೆ ಹೆಳವರ ಜತೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ… ಕೆಲವೇ ಕೆಲವು ಸಾವಿರದಷ್ಟು ಜನಸಂಖ್ಯೆ ಇರುವ ಈ ಮೂರು ಪಂಗಡಗಳಲ್ಲಿ ಅರಳಿ ಕುಲ, ಬಳಗಾರ ಕುಲ, ಬೆಳಗೂಗಿನವರು, ಬೇವಿನವರು, ಬೊಮ್ಮ, ಮಂಗಲವರು, ಮುತ್ತಿನ ಸತ್ತರಗಿಲವರು, ಮನೆಗಲವರು, ವಜಮೂನಿಯವರು, ಸಂಕಲವರು, ಸದರಿನವರು, ಹಾವುಲವರು, ಬಂಡಿಕುಲ, ಬಂಗಾರ ಕುಲ, ಗಂಟ ಕುಲ, ಜ್ಯೋತಿಕುಲ ಹೀಗೆ ಬರೋಬ್ಬರಿ 180 ಕ್ಕೂ ಅಧಿಕ ಬೆಡಗುಗಳಿವೆ… ಇವರನ್ನು ‘ಕುಲ ಕೊಂಡಾಡುವರು’ ಎಂತಲೂ ಕರೆಯಲಾಗುತ್ತದೆ. ಏಕೆಂದರೆ, ಕೈಲೊಂದು ದಪ್ಪನೆಯ ಪುಸ್ತಕ. ಆ ಪುಸ್ತಕದಲ್ಲಿ ಭಿಕ್ಷಾಟನೆಗೆ ಹೋಗುವ ಒಕ್ಕಲುಗಳ ವಂಶವಾಳಿಯನ್ನು ನಮೂದಿಸಿರುತ್ತಾರೆ. ಇದನ್ನೇ ಭಿಕ್ಷಾಟನೆ ಸಂದರ್ಭದಲ್ಲಿ ಹೇಳಿ ಭಿಕ್ಷೆ ನೀಡುವಂತೆ ಮನವೊಲಿಸುತ್ತಾರೆ. ಇಂತಹ ಬೃಹತ್ ಪುಸ್ತಕಕ್ಕೆ ‘ಚಿಪ್ಪೋಡು’ ಎನ್ನಲಾಗುತ್ತದೆ… ಅನಾದಿ ಕಾಲದಿಂದಲೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿಯುತ್ತಾ ಬಂದಿರುವ ಹೆಳವರ ಪರಿಸ್ಥಿತಿಯಲ್ಲಿ ಪ್ರಸ್ತುತ ಯಾವುದೇ ಬದಲಾವಣೆ ಕಾಣಲು ಸಾಧ್ಯವಾಗಿಲ್ಲ. ಕೃಷಿಯನ್ನು ಅವಲಂಬಿಸಿದ್ದ ಒಕ್ಕಲುಗಳಲ್ಲಿ ಬಹುತೇಕ ಮಂದಿ ವೃತ್ತಿಯನ್ನು ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಇಲ್ಲವೇ ಪರ್ಯಾಯ ಉದ್ಯೋಗ ಮಾಡುತ್ತಿದ್ದಾರೆ. ಹೀಗಾಗಿ ಈ ಒಕ್ಕಲುಗಳನ್ನೇ ನಂಬಿದ್ದ ಹೆಳವರಿಗೆ ಭಿಕ್ಷೆ ಇಲ್ಲವಂತಲ್ಲ, ಈ ಜನರು ಈಗ ಕಡಿಮೆಯಾಗಿದೆ ಅಷ್ಟೇ… ಹೀಗಾಗಿ ಭಿಕ್ಷಾಟನೆಯೂ ಕಡಿಮೆಯಾಗುತ್ತದೆ. ಬಹುತೇಕ ಕುಟುಂಬಗಳು ಕೂಲಿ ನಾಲಿ ಬದುಕು ಸವೆಸುವಂತಹ ದುಸ್ಥಿತಿ ಬಂದೊದಗಿದೆ. ಆದರೆ, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಬೆರಳೆಣಿಕೆಯಷ್ಟು ಕುಟುಂಬಗಳು ಮೂಲ ವೃತ್ತಿಯನ್ನು ಬಿಡದೇ ಮುಂದುವರೆಸಿಕೊಂಡು ಬಂದಿವೆ. ಇನ್ನೂ ಕೆಲವರು ಅಲ್ಪಸ್ವಲ್ಪ ಕೃಷಿ ಭೂಮಿ ಹೊಂದಿ ಕೃಷಿಯತ್ತ ವಾಲಿದ್ದಾರೆ… ಇನ್ನು ಶೈಕ್ಷಣಿಕವಾಗಿ ಒಂದೊಂದೇ ಹೆಜ್ಜೆ ಮುಂದೆ ಬರುತ್ತಿರುವ ಸಮುದಾಯದ ಕೆಲವರು ನ್ಯಾಯಾಧೀಶರು, ವಕೀಲರು, ವೈದ್ಯ ವೃತ್ತಿ ಸೇರಿದಂತೆ ಮತ್ತಿತರೆ ಉನ್ನತ ಹುದ್ದೆಗೇರಿದ್ದಾರೆ. ಆದರೆ, ಇಂತಹವರ ಸಂಖ್ಯೆ ಗೌಣವಾಗಿದೆ. ಆದರೆ, ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಎಂಬುದು ಮರೀಚಿಕೆಯೇ ಎನ್ನಬಹುದು… ತೀರಾ ಕೆಳಸ್ತರದ ಜೀವನ ಸಾಗಿಸುತ್ತಿರುವ ಸಮುದಾಯವನ್ನು ಸರ್ಕಾರಗಳು ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿವೆ. ಆದರೆ, ಇದರಿಂದಾಗಿ ಇತರೆ ಸಮುದಾಯಗಳ ಜತೆ ಮೀಸಲಾತಿ ವಿಚಾರದಲ್ಲಿ ಸ್ಪರ್ಧಿಸಲಾಗದೇ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ… ಸಮಾಜದಲ್ಲಿ ತೀರಾ ಹಿಂದುಳಿದಿರುವ ಹೆಳವರು ಬುಡಕಟ್ಟು ವರ್ಗಕ್ಕೆ ಸೇರಿದವರಾಗಿದ್ದಾರೆ. ಆದರೆ, ಇವರನ್ನು ಇತರೆ ಹಿಂದುಳಿದ ವರ್ಗಕ್ಕೆ ಸೇರಿಸಿರುವುದರಿಂದ ಸೂಕ್ತ ರೀತಿಯಲ್ಲಿ ಸರ್ಕಾರದ ಯಾವುದೇ ಮೀಸಲಾತಿ ಸೌಲಭ್ಯಗಳು ಸಿಗಂತಾಗಿವೆ. ಈ ಹಿನ್ನೆಲೆಯಲ್ಲಿ ಹೆಳವರು ಸೇರಿದಂತೆ ಎಲ್ಲಾ ಬುಡಕಟ್ಟು ಸಮುದಾಯಗಳಿಗೆ ಎಸ್ಸಿ, ಎಸ್ಟಿ ಮಾದರಿಯಲ್ಲಿ ಪ್ರತ್ಯೇಕ ವರ್ಗವನ್ನು ರೂಪಿಸಿ ಪ್ರತ್ಯೇಕ ಮೀಸಲಾತಿ ನೀಡಬೇಕು. ಈ ಮೂಲಕ ಇವರಿಗೆ ಸಂವಿಧಾನಬದ್ಧವಾದ ಸೌಲಭ್ಯಗಳನ್ನು ಕಲ್ಪಿಸಿ ಅವರ ಶ್ರೇಯೋಭಿವೃದ್ಧಿಗೆ ನಾಂದಿ ಹಾಡಬೇಕಿದೆ… (ಡಾ.ಎ.ಎಸ್. ಪ್ರಭಾಕರ. ಬುಡಕಟ್ಟು ಅಧ್ಯಯನ ವಿಭಾಗದ ಮಾಹಿತಿ ಹೆಕ್ಕಿ ತೆಗೆಯಲಾಗಿದೆ, ಕನ್ನಡ ವಿಶ್ವವಿದ್ಯಾಲಯ) ****** ಕೆ.ಶಿವು ಲಕ್ಕಣ್ಣವರ

ಸ್ವಾತ್ಮಗತ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-1 ಆಯ್ಕೆ ಬೆಳೆಗಾರರ ಕೈಯಲ್ಲಿಯೇ ಇದೆ ಮೈಸೂರಿನ ನೈಸರ್ಗಿಕ ಕೃಷಿಕ ಕೈಲಾಸಮೂರ್ತಿಯವರು ನಿಸರ್ಗದೊಂದಿಗೆ ಒಡನಾಡುತ್ತ ತಮ್ಮ ಬಾಳ ಇಳಿಸಂಜೆಯನ್ನು ಅರ್ಥಪೂರ್ಣವಾಗಿ ಕಳೆಯುತ್ತಿರುವವರು. ಮನಸೊಬಾ ಪುಕುವೋಕಾ ಅವರ ಪ್ರಭಾವಕ್ಕೊಳಗಾದವರು.. ಬೆಳೆಗಿಂತ ಹೆಚ್ಚು ಕಳೆ ಬಗ್ಗೆ ನಾನು ತಲೆಕೆಡಿಸಿಕೊಳ್ಳುತ್ತೇನೆ ಎಂದು ತಮ್ಮ ಬಗ್ಗೆ ತಾವೇ ತಮಾಷೆ‌ ಮಾಡಿಕೊಳ್ಳುವ ಕೈಲಾಸಮೂರ್ತಿಯವರ ಬಿತ್ತನೆಯಿಂದ ಬೆಳೆದ ಭತ್ತದ ಕೃಷಿ ನೋಡಲು ಕೆಲ ಕಾಲದ ಹಿಂದೆ ಅವರ ಗದ್ದೆಗೆ ಹೋಗಿದ್ದೆ. ‘ಮುಂಗಾರಿನಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ಉಳಿದ ಹುಲ್ಲನ್ನು ಮಣ್ಣಿಗೇ ಬೆರೆಸಿದ್ದೇವೆ. ಹಿಂಗಾರಿಯಲ್ಲಿ ಅದೇ ಗದ್ದೆಯಲ್ಲಿ ಉದ್ದು ಸಾಸಿವೆ ಬೆಳೆದು ಕಾಲು ಕೊಯ್ದು ಅದನ್ನೂ ಮಣ್ಣಿಗೇ ಸೇರಿಸಿ ಉತ್ತಿ ಭತ್ತ ಬಿತ್ತನೆ ಮಾಡುತ್ತೇವೆ. ನಾವು ಭೂಮಿಗೆ ಗೊಬ್ಬರ ಹಾಕೋದಿಲ್ಲ. ಕಳೆ ತೆಗೆಯೋದಿಲ್ಲ, ಕೀಟನಾಶಕ ಹೊಡೆಯೋದಿಲ್ಲ. ಹೇಗಿದೆ ನೋಡಿ ನಮ್ಮ ಗದ್ದೆಯಲ್ಲಿ ಫಸಲು’..ಎಂದು ಹೆಮ್ಮೆಯಿಂದ ಹೇಳುವ ಕೈಲಾಸಮೂರ್ತಿ ಯವರ ಹೊಲ ಹಸಿರಿನಿಂದ ಕಂಗೊಳಿಸುತ್ತಿತ್ತು! ಇವರ ತೋಟದಲ್ಲಿ ಬೆಳೆದಿರುವ ಮಾವು, ಹಲಸು, ಪರಂಗಿ, ಬಾಳೆ, ಪಪ್ಪಾಯ.. ಸೇರಿದಂತೆ ಎಲ್ಲ ಬೆಳೆ ಬೆಳೆಯುವುದಕ್ಕೂ ಇದೇ ಶಿಸ್ತು. ಕಳೆ ತೀರಾ ಹೆಚ್ಚಾಗದಂತೆ ಕೊಯ್ದು ಅವುಗಳನ್ನೇ ಬೆಳೆಗೆ ಮುಚ್ಚಿಗೆ ಮಾಡುತ್ತಾರೆ. ಅಲ್ಪ ಪ್ರಮಾಣದ ನೀರು ಕೊಡುತ್ತಾರೆ. ಅದ್ಬುತ ಬೆಳೆ ತೆಗೆಯುತ್ತಾರೆ. ಕಳೆಗಿಡಗಳು ಮಣ್ಣಿನ ಜೀವಂತಿಕೆಯನ್ನು ಹೆಚ್ಚಿಸುತ್ತವೆ ಅವುಗಳ ಬುಡದಲ್ಲಿರುವ ಸೂಕ್ಷ್ಮಾಣು ಜೀವಿಗಳು ಮಣ್ಣನ್ನು ಫಲವತ್ತಾಗಿಸುತ್ತವೆ. ಬೆಳೆದ ಬೆಳೆದ ಬೆಳೆ ಸುರಕ್ಷಿತವಾದ ವಿಷಮುಕ್ತ ಆಹಾರ. ‘ಯಾರಿಗೇ ಧಾನ್ಯ, ಹಣ್ಣು, ತರಕಾರಿ ಮಾರುವಾಗ ನನಗೆ ಅಳುಕಿರುವುದಿಲ್ಲ. ಮುಂದಿನ ತಲೆಮಾರಿಗೆ ಸುಸ್ಥಿತಿಯಲ್ಲಿ ಭೂಮಿಯನ್ನು ಕೊಡುತ್ತೇನೆ.ಎಂಬ ಸಮಾಧಾನವೂ ಇದೆ ಎನ್ನುತ್ತಾರೆ’ ಕೈಲಾಸಮೂರ್ತಿ ಯವರು. ಮನೆ ಪಕ್ಕದಲ್ಲಿ ಸೋಲಾರ ಶಕ್ತಿಯಿಂದ ನಡೆಸಬಹುದಾದ ಮಿಲ್ಲ ಹಾಕಿಸಿಕೊಂಡಿದ್ದಾರೆ. ಈ ರೈತರು ತಾವು ಬೆಳೆಸಿದ ಪತ್ರವನ್ನು ಅಕ್ಕಿ ಮಾಡಿ ಗ್ರಾಹಕರಿಗೆ ತಲುಪಿಸುವ ಕೆಲಸವನ್ನೂ ಕೂಡಾ ಮಾಡುತ್ತಿದ್ದಾರೆ. ಇವರ ಕೃಷಿ ಸಾಧನೆಗೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಇವರ ತೋಟಕ್ಕೆ ದೇಶ ವಿದೇಶದಿಂದ ನೈಸರ್ಗಿಕ ಕೃಷಿ ಅಧ್ಯಯನಕ್ಕೆಂದೇ ಜನರು ಬರುತ್ತಾರೆ. ಲಾಕ್ ಡೌನ್ ಅವಧಿಯಲ್ಲಿ ಮತ್ತೊಮ್ಮೆ ಅವರನ್ನು ಮಾತನಾಡಿಸಿದೆ. ಹೇಗಿದ್ದೀರಿ ಸರ್?… ಚೆನ್ನಾಗಿದ್ದೇವೆ ಮೇಡಂ.ನಮ್ಮ ಬದುಕಿಗೆ ಅಗತ್ಯವಾದ ಬಹುತೇಕ ಬೆಳೆಗಳನ್ನೆಲ್ಲ ನಾವೇ ಬೆಳೆದುಕೊಳ್ಳುವುದರಿಂದ ಮಾರುಕಟ್ಟೆಯ ಅವಲಂಬನೆ ನಮಗಿಲ್ಲ. ಯಾವುದೇ ಬೆಳೆ ಬೆಳೆಯಲು ನಾನು ಮಾಡುವ ಖರ್ಚು ಅತ್ಯಂತ ಕಡಿಮೆಯಾಗಿರುವುದರಿಂದ ಬೆಳೆ ಬಂದಿದ್ದಷ್ಟೂ ಲಾಭವೇ!, ತೋಟದಲ್ಲಿ ಬೆಳೆದ ಹಣ್ಣು ತರಕಾರಿಯನ್ನು ಕೊಯ್ದು ತರುವಾಗ ನಮಗೆ ಬೇಕಾದುದಷ್ಟನ್ನು ಇಟ್ಟುಕೊಂಡು ಉಳಿದದ್ದನ್ನು ಪರಿಚಿತರಿಗೆ ಸ್ನೇಹಿತರಿಗೆ ಹಂಚಿಬಿಡುತ್ತೇನೆ. ಕೊಯಿಲು ಮಾಡದೇ ಬಿಟ್ಟಿದ್ದನ್ನು ಪ್ರಾಣಿ ಪಕ್ಷಿಗಳು ತಿನ್ನುತ್ತವೆ. ಬೇಸಿಗೆಯಲ್ಲಿ ಅವುಗಳಿಗೂ ಅಹಾರದ ಕೊರತೆ ಇರುತ್ತದೆ. ಅದು ಕೂಡಾ ಧನ್ಯತೆ ಮೂಡಿಸುವ ಕೆಲಸವೇ… ಎಂದರು. ಇಂತಹ ನೈಸರ್ಗಿಕ ಕೃಷಿ ಪ್ರಯೋಗವನ್ನು ಎಲ್ಲ ಕೃಷಿಕರೂ ಕೈಗೊಳ್ಳಬಹುದು. ಆರಂಭದಲ್ಲಿ ಅಷ್ಟು ಲಾಭದಾಯವವೆನಿಸದಿದ್ದರೂ ಕಡಿಮೆ ವೆಚ್ಚದಿಂದಾಗಿ ಕೃಷಿಕಾರ್ಯ ಹೊರೆ ಆಗುವುದಿಲ್ಲ ಎನ್ನುವುದನ್ನು ಖಾತ್ರಿಯಾಗಿ ಹೇಳಬಹುದು. ಆದರೆ ಕ್ರಮೇಣ ಇಡೀ ತೋಟ, ಗದ್ದೆಯ ಚಿತ್ರಣವನ್ನೇ ಬದಲಿಸಬಹುದಾದ ಸಾಧ್ಯತೆಯನ್ನು ಕೈಲಾಸಮೂರ್ತಿಯವರು ತಮ್ಮ ತೋಟ ಗದ್ದೆಯನ್ನು ಆಧಾರಸಮೇತವಾಗಿ ತೋರಿಸಿ ಹೇಳುತ್ತಾರೆ.. ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕಗಳ ಬಲದಲ್ಲಿ ಬೆಳೆ ಬೆಳೆಯುವ ಪಂಜಾಬ್ ಹಸಿರುಕ್ರಾಂತಿಯ ಮುಂಚೂಣಿಯಲ್ಲಿ ನಿಂತಿದೆ. ತತ್ಪರಿಣಾಮವಾಗಿ ಅಲ್ಲಿ ಸರಿಸುಮಾರಾಗಿ ಪ್ರತಿ ಮನೆಯಲ್ಲೂ ಕ್ಯಾನ್ಸರ್ ರೋಗಿಗಳಿದ್ದಾರೆ. ಕೃಷಿಕರೇ ಆಯ್ಕೆ ಇನ್ನೂ ನಿಮ್ಮ ಕೈಯಲ್ಲೇ ಇದೆ. ವಿಷಕೃಷಿ, ಬರಡಾಗುತ್ತಿರುವ ಭೂಮಿ, ಬತ್ತುತ್ತಿರುವ ಜಲಮೂಲ, ಹದಗೆಡುವ ಆರೋಗ್ಯವೇ? ಅಥವಾ ನಿರ್ವಿಷ ಅನ್ನ ,ಫಲವತ್ತಾದ ಭೂಮಿ,ಶುದ್ಧ ಗಾಳಿ, ನೀರು, ಸುಸ್ಥಿರ ಕೃಷಿಯೇ? ಕೊರೋನಾ ವಿಷಕೃಷಿಯ ಬಾಗಿಲು ಮುಚ್ಚುವಂತಾಗಲಿ. ಮುಂದುವರಿಯುವುದು… **********

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-10 ಆತ್ಮಾವಲೋಕನಕ್ಕಿದು ಸಕಾಲ.. ಉಳಿದೆಲ್ಲ ಕ್ಷೇತ್ರಗಳಲ್ಲಿಯೂ ದುಡಿಮೆ ನಿಂತರೂ ಕೃಷಿಕ್ಷೇತ್ರದಲ್ಲಿ ದುಡಿಮೆ ನಿಂತಿಲ್ಲ. ಅದನ್ನು ನಿಲ್ಲಿಸುವಂತಿರುವುದೂ ಇಲ್ಲ.ದಾಸ್ತಾನು ಮಾಡಬಹುದಾದ ಬೆಳೆ ಬೆಳೆಯುವ ರೈತರು ಈಗ ಅಷ್ಟಾಗಿ ಚಿಂತೆ ಮಾಡುತ್ತಿಲ್ಲ. ಈ ಬಿಡುವನ್ನು ಸ್ವಲ್ಪ ರಜೆಮೂಡಿನಲ್ಲಿ ಅನುಭವಿಸುತ್ತಿದ್ದಾರೆ. ತೋಟದ ಕೆಲಸವನ್ನು ನಿರ್ವ ಹಿಸುತ್ತಿದ್ದಾರೆ. ಆದರೆ ತರಕಾರಿ ಹೂವು, ಹಣ್ಣು ಬೆಳೆದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅಲ್ಪಾವಧಿಯಲ್ಲಿ ಬರುವ ಬೆಳೆಗೆ ಬೇಸಿಗೆಯಲ್ಲಿ ಉತ್ತಮ ಧಾರಣೆ ದೊರೆಯುತ್ತಿತ್ತು ( ಜಾತ್ರೆ ,ತೇರು ಸಮಾರಂಭಗಳು ಈ ಸಮಯದಲ್ಲಿ ನಡೆಯುತ್ತಿದ್ದವು) ಲಾಕ್ ಡೌನ್ ಅವರ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. ಬಳಕೆದಾರ ರಿಗೆ ಕೊರತೆಯಾಗದಷ್ಟು ಹಣ್ಣು ತರಕಾರಿಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ ಅಗ್ಗದ ಬೆಲೆಯಲ್ಲಿಯೇ ದೊರಕುತ್ತಿರುವ ತರಕಾರಿ ಹಣ್ಣುಗಳನ್ನು ಕೊಳ್ಳುವಾಗ ಬೆಳೆದವರಿಗೆ ಸಿಕ್ಕುವುದೆಷ್ಟು ಎಂಬ ಪ್ರಶ್ನೆ ಪ್ರಜ್ಞಾವಂತರ ಮನದಲ್ಲಿ ಏಳುತ್ತಿದೆ. ಕೆಲವು ಧೈರ್ಯಸ್ಥ ರೈತರು ತಾವು ಬೆಳೆದ ಹಣ್ಣು ತರಕಾರಿಗಳನ್ನು ವಿಡಿಯೋ ಮಾಡಿ ಆನ್ಲೈನ್ ಮೂಲಕವೇ ಮಾರಿ ಲಾಭಗಳಿಸಿಕೊಂಡರೆ ಕೆಲವು ರೈತರು ವಾಹನಗಳಲ್ಲಿ ಹಣ್ಣು ತರಕಾರಿ ತುಂಬಿಕೊಂಡು ಮಾರುತ್ತಿದ್ದಾರೆ. ಕೆಲವರು ಬೆಳೆ ವಿನಿಮಯದ ಮೂಲಕ ಸಮಸ್ಯೆ ಗೆ ಪರಿಹಾರ ಹುಡುಕಲೆತ್ನಿಸುತ್ತಿದ್ದಾರೆ. ಹಲವರು ಹತಾಶೆಯಿಂದ ಬೆಳೆದ ಬೆಳೆಯನ್ನು ಬುಲ್ಡೊಜರ್ ಹಚ್ಚಿ ನೆಲಸಮ ಮಾಡುತ್ತಿದ್ದಾರೆ. ಈಗ ಕೃಷಿಕರು ಆತ್ಮ ವಿಮರ್ಶೆ ಮಾಡಿಕೊಳ್ಳಲು ಸಕಾಲ. ಈಗ ಬೆಳೆದ ಒಂದು ಬೆಳೆಗೆ ಸೂಕ್ತ ಬೆಲೆ ದೊರೆಯದಿದ್ದರೂ ಮತ್ತೆ ಬೆಳೆಯಲು ಬೇಕಾದ ಭೂಮಿ ನಿಮ್ಮ ಬಳಿ ಇದ್ದೇ ಇದೆ.( ನಿರುದ್ಯೋಗದ ಭೀತಿ ಇಲ್ಲ) ನಿಮ್ಮ ಊರಿನ ಹವಾಮಾನಕ್ಕೆ ಸೂಕ್ತವಾದ, ಲಭ್ಯವಿದ್ದ ನೀರು ಗೊಬ್ಬರದಲ್ಲಿ ಬೆಳೆಯಬಹುದಾದ ಬೆಳೆಯನ್ನು ಬೆಳೆಯಲು ವಿಚಾರ ಮಾಡಿ.ಅದಕ್ಕೆ ಸ್ಥಳೀಯವಾದ ಮಾರುಕಟ್ಟೆಯೂ ಇದ್ದರೆ ಅನುಕೂಲ. ಇರುವ ಜಮೀನಿನಲ್ಲಿ ಆಹಾರ ಧಾನ್ಯ ತೋಟಗಾರಿಕೆ ಬೆಳೆ, ವಾಣಿಜ್ಯ ಬೆಳೆ… ಹೀಗೆ ಎಲ್ಲವುಗಳನ್ನೂ ಬೆಳೆಯಲೆತ್ನಿಸಿ. ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಬೆಳೆ ಕೈಹಿಡಿಯಬಹುದು. ಪ್ರತಿ ಊರಿನಲ್ಲಿರುವ ರೈತರು ಬಗ್ಗಟ್ಟಾಗಿ ಯಾರ ಹೊಲದಲ್ಲಿ ಏನೇನು ಬೆಳೆದರೆ ಒಟ್ಟಾಗಿ ಮಾರುಕಟ್ಟೆ ಹುಡುಕಬಹುದು ಎನ್ನುವುದನ್ನು ವಿಚಾರ ಮಾಡಿ. ಪ್ರತಿ ಬೆಳೆಯನ್ನು ಉತ್ತಮ ಬೆಳೆ ಬರುವವರೆಗೆ ಸಂಸ್ಕರಿಸಿ ದಾಸ್ತಾನು ಇಡುವುದು ಹೇಗೆ, ಮೌಲ್ಯವರ್ಧನೆ ಮಾಡುವುದು ಹೇಗೆ? ಮಧ್ಯವರ್ತಿಗಳ ಕಾಟವಿಲ್ಲದೇ ಬೆಳೆದ ಬೆಳೆಯನ್ನು ಗ್ರಾಹಕರಿಗೆ ತಲುಪಿಸುವುದು ಹೇಗೆ? ಎಂಬುದನ್ನು ಊರ ಜನರು ಒಟ್ಟಾಗಿ ವಿಚಾರ ಮಾಡಿ ಉತ್ತರ ಕಂಡುಕೊಳ್ಳಬೇಕಿದೆ.. ಬೆಳೆ ಬೆಳೆಯಲು ಖರ್ಚು ಕಡಿಮೆ ಮಾಡಿಕೊಂಡರೆ ಬಂದಿದ್ದೆಲ್ಲವೂ ಲಾಭವೇ ಎನ್ನುವ ರೈತರನ್ನು ನಾಳೆ ಪರಿಚಯಿಸುತ್ತೇನೆ… ಮುಂದುವರಿಯುವುದು. ******** ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಅಂಕಣ ಸಂಗಾತಿ

ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ ಗಝಲ್ ಲೋಕ ಐದನೇ ಅದ್ಯಾಯ ಮನಸೂರೆಗೊಳ್ಳುವ ಗಜಲ್ ಗಜಲ್ ಗದ್ಯ ಮಿಶ್ರಿತ ಪದ್ಯವೇ ಗಜಲ್ ಗದ್ಯವೇ, ಪದ್ಯವೇ ಅಥವಾ ಗದ್ಯ ಮಿಶ್ರಿತ ಪದ್ಯವೇ ಎಂಬುದು ಇತ್ತೀಚಿನ ಕನ್ನಡ ಗಜಲಗಳನ್ನು ನೋಡಿದಾಗ ಸಾಕಷ್ಟು ಗೊಂದಲವಾಗುತ್ತದೆ. ಯಾಕೆಂದರೆ ಹೆಚ್ಚಿನ ಗಜಲಗಳು ಗದ್ಯ ಮಿಶ್ರಿತ ಪದ್ಯಗಳಾಗಿ ಕಂಡು ಬರುತ್ತವೆ. ಆದರೆ ಮೂಲತಃ ಗಜಲ್ ಎನ್ನುವುದು ಲಯಬದ್ಧವಾಗಿದ್ದೂ ಗೇಯತೆಯನ್ನು ಹೊಂದಿರಬೇಕು… ಪ್ರತಿಮೆ, ರೂಪಕ, ಉಪಮಾನ, ಉಪಮೇಯ, ಅಲಂಕಾರ ಮೊದಲಾದ ಕಾವ್ಯಾತ್ಮಕ ಅಂಶಗಳನ್ನು ಅತ್ಯಂತ ಕಲಾತ್ಮಕವಾಗಿ ದುಡಿಸಿಕೊಂಡು ಸುಮಧುರ ಪದಗಳೊಂದಿಗೆ ಛಂದೋಬದ್ದವಾಗಿ ಕಟ್ಟಿ ಕೊಟ್ಟು ಸುಲಭವಾಗಿ ಹಾಡಲು ಬರುವಂತಿರಬೇಕು. ಆದರೆ ಮುಖ್ಯವಾದ ಗಜಲನ ಈ ಲಕ್ಷಣವನ್ನೇ ಮರೆತಿರುವ ಕನ್ನಡದ ಖ್ಯಾತ ಗಜಲಕಾರರು ಹೆಸರು ಬಂದಂತೆ ತಾವು ರಚಿಸಿದ್ದೆಲ್ಲಾ ಗಜಲ್ ಎನ್ನತೊಡಗುತ್ತಾರೆ. ಅವರನ್ನು ಅನುಸರಿಸುವ ಉದಯೋನ್ಮುಖ ಗಜಲಕಾರರು ಇನ್ನೂ ಕೆಳ ಹಂತಕ್ಕೆ ಹೋಗಿ ಅತ್ಯಂತ ಕಳಾಹೀನ ಬರಹಗಳನ್ನು ಕೊಟ್ಟು ಬಿಡುತ್ತಾರೆ.. ಅದರಲ್ಲಿ ಸಾರವೂ ಇರುವುದಿಲ್ಲ ಮತ್ತು ಸತ್ವವೂ ಇರುವುದಿಲ್ಲ. ಇದರಿಂದ ಕಳೆಗುಂದುವ ಗಜಲ್ ಹಂತಹಂತವಾಗಿ ಸೊರಗಿ ಮೂಲ ಲಕ್ಷಣಗಳನ್ನು ಮತ್ತು ತನ್ನ ಮೌಲ್ಯವನ್ನು ಕಳೆದುಕೊಳ್ಳುವ ಅಪಾಯವಿದೆ. ಗಜಲ್ ಗಾಯನ ಹಾಗಿದ್ದರೆ ಗಜಲ್ ಹಾಡಲು ಮಾತ್ರವೇ ಎಂದೆನಿಸಿದರೆ ಖಂಡಿತ ಸರಿ ಹೋಗುವಂತಿಲ್ಲ. ಬರೆದಿದ್ದೂ ಎಲ್ಲಾ ಗಜಲ್ ಆಗಲ್ಲ, ಅಂತೆಯೇ ಗಜಲ್ ಆದವು ಎಲ್ಲಾ ಹಾಡುವಂತೆ ಇರುವುದಿಲ್ಲ. ನಾವು ಹಾಡುವಂತೆ ಬರೆದರೆ ಅದನ್ನು ಆಗ ಕನಿಷ್ಠ ಪಕ್ಷ ಮನಸೂರೆಗೊಳ್ಳುವಂತೆ ವಾಚಿಸುವ ಮೂಲಕ ವಿಶಾಲ ಅವಕಾಶಗಳನ್ನು ತೆರೆದಿಡಬಹುದಾಗಿದೆ. ರಾಗ ತಾಳ ಭಾವಗಳನ್ನು ಹೊಂದುವುದು ಆ ಗಜಲನ ನಿಜವಾದ ಸಾಮರ್ಥ್ಯವಾಗಿರುತ್ತದೆ. ಅದರಿಂದಲೇ ಉರ್ದು ಮತ್ತು ಹಿಂದಿ ಗಜಲಗಳು ಯಶಸ್ಸು ಕಂಡಿದವು. ಗಜಲ್ ಹಾಡಿನ ರೂಪ ಪಡೆಯದಿದ್ದರೆ ಇಂದು ಗಜಲ್ ಕಂಡ ಗೆಲುವು, ಜನಪ್ರಿಯತೆ ಅದಕ್ಕೆ ನಿಜವಾಗಿಯೂ ದಕ್ಕುತ್ತಿರಲಿಲ್ಲ. ಗೀತೆಯ ಮಹೋನ್ನತ ಧಾಟಿಯನ್ನು ಹೊಂದಿದ್ದರಿಂದಲೇ ಬಹುತೇಕ ಹಿಂದಿ ಮತ್ತು ಉರ್ದು ಗಜಲಗಳು ಗೀತೆಗಳಾಗಿ ಜನಮಾನಸದಲ್ಲಿ ಅಚ್ಚಳಿಯದಂತೆ ನೆಲೆ ನಿಂತವು. ಅದು ಎಂತಹ ಮೋಡಿ ಆಹಾ!! ಎಂತಹ ಅದ್ಬುತ ಗೀತೆ ಎಂದು ಮೈ ದಡವಿ ಮೆಲ್ಲಗೆ ಮನ ಸ್ಪರ್ಶಿಸುವ ಹಳೆಯ ಹೆಚ್ಚಿನ ಹಿಂದಿ ಗೀತೆಗಳು ಗಜಲಗಳೇ ಎಂದರೆ ಗಜಲನ ರಸಸ್ವಾದ ಸರಳವಾಗಿ ಅರ್ಥವಾದೀತು. ಆ ಭಾಷೆ ಬಲ್ಲದವನು ಸಹ ತಲೆ ತೂಗಿ ಆಸ್ವಾದಿಸುವಂತೆ ಮಾಡುವ ತಾಕತ್ತು ಗಜಲನ ಗೇಯತೆಗೆ ಇರಬೇಕು. ಭಾವಗೀತೆಯ ಗುಣಗಳನ್ನು ಹೊಂದಿರುವ ಗಜಲಗಳು ಅದಕ್ಕಿಂತ ಗಾಢವಾದ ಭಾವ ತೀವ್ರತೆ ಮತ್ತು ಅಗಾಧವಾದ ಗಾಂಭೀರ್ಯದ ಮೂಲಕ ಹಿಡಿದಿಡುವ ಕೌಶಲ್ಯವೇ ಗಜಲಗಳ ಮೆರುಗಾಗಿ ಬೆರಗು ಹುಟ್ಟಿಸುತ್ತದೆ. ಸನಿಹ ವಿರಹಗಳ ವಿಕಾಸ ಮತ್ತು ತಲ್ಲಣಗಳು ಹೀಗೆ ಇನ್ನೂ ಯಾವುದೇ ವಿಷಯ ವಸ್ತುವಾದರೂ ಸಹ ಜೀವ ಪಡೆದಂತೆ ಭಾಸವಾಗಿ ನಮ್ಮನ್ನೇ ಆವರಿಸಿಕೊಳ್ಳುವ ಗಜಲ್ ಎಂಬ ಪ್ರೇಮ ಕಾವ್ಯ ಆ ಮೂಲಕ ಮತ್ತೆ ಮತ್ತೆ ತನ್ನ ಲಕ್ಷಣಗಳನ್ನು ಪ್ರಖರವಾಗಿ ಸಾಬೀತು ಮಾಡುತ್ತಲೇ ಬಂದಿದೆ. ಗಜಲ್ ಮಾಂತ್ರಿಕರು ಈ ಸಮಯದಲ್ಲಿ ಗಜಲ್ ಗಾಯನದ ಮೂಲಕ ಎಲ್ಲರ ಮನ ತಟ್ಟಿ ಗಜಲ್ ಮಾಂತ್ರಿಕರೆಂದೆ ಇತಿಹಾಸದಲ್ಲಿ ಉಲ್ಲೇಖಿಸಲ್ಪಡುವ ಕೆಲವು ಮಹಾನ್ ವ್ಯಕ್ತಿಗಳ ಕುರಿತು ಹೇಳಲೇಬೇಕಾಗುತ್ತದೆ. ಅಂತಹವರಲ್ಲಿ ಮೊದಲಿಗರೆಂದರೆ ಅದು ವಿಶ್ವವಿಖ್ಯಾತ ಗಜಲ್ ಚಕ್ರವರ್ತಿ ಎಂದೇ ಹೆಸರಾದ ಜಗಜೀತ್ ಸಿಂಗ್. ಅವರದೇ ಆದ ಶೈಲಿಯಲ್ಲಿ ಗಜಲ್ ಗೀತೆಗಳನ್ನು ಪ್ರಸ್ತುತಪಡಿಸಿ ದೇಶ ವಿದೇಶಗಳ ಕೋಟಿ ಕೋಟಿ ಜನರ ಹೃದಯ ತಟ್ಟಿ ಒಂದು ತಲೆಮಾರಿನ ಅಭಿಮಾನವನ್ನೇ ಪಡೆದ ಜಗಜೀತ್ ಸಿಂಗ್ ಅವರು ಗಜಲ್ ಗಾಯನಕ್ಕೆ ಕೀರ್ತಿ ಶಿಖರವಾಗಿದ್ದಾರೆ. ಪದೇ ಪದೇ ಮೆಲುಕು ಹಾಕುವಂತೆ ಹಾಡಿ ವಿಭಿನ್ನ ವಿನೂತನವಾಗಿ ಗಜಲ್ ಸವಿ ಸ್ವಾದ ಉಣಬಡಿಸಿ ಒಂದು ಅತ್ಯುತ್ತಮ ಸಂಗೀತ ಪರಂಪರೆಯನ್ನೇ ಪ್ರತಿಪಾದಿಸಿದ ಇವರ ಗಜಲ್ ಗಾಯನಕ್ಕೆ ಮರುಳು ಆಗದವರೇ ಇಲ್ಲ ಎಂದರೆ ಅದು ಅತಿಶಯೋಕ್ತಿಯಲ್ಲ. “ದಿ ಅನ್ಪರ್ಗೆಟಬಲ್ಸ”, “ಸಮ್ ವನ್ ಸಮ್ ವೇರ್” “ವಕ್ರತುಂಡ ಮಹಾಕಾಯ” ಮೊದಲಾದ ಗಜಲ್ ಆಲ್ಬಮಗಳ ಮೂಲಕ ಜಗದ ಮನ್ನಣೆ ಗಳಿಸಿದ ಅವರು ಹಿಂದಿ ಚಿತ್ರರಂಗದ ಬಹು ಮುಖ್ಯ ಗಾಯಕರಾಗಿದ್ದರು. ಮೋಹಕ ರೂಪದ ಸುಂದರಿ ಸುರಯ್ಯಾ ನಟಿಯಾಗಿ ಮಾತ್ರವಲ್ಲದೆ ಗಜಲ್ ಗಾಯನಗಳ ಮೂಲಕ ಮಾಧುರ್ಯದ ರಾಣಿ ಎಂದೇ ಖ್ಯಾತರಾದರು. ಎಲ್ಲ ತರಹದ ಗೀತೆಗಳನ್ನು ಹಾಡಿದ ಮಹಮ್ಮದ್ ರಫೀ ಅವರು ಗಜಲಗಳಿಗೆ ಮತ್ತು ಖವ್ವಾಲಿಗಳಿಗೂ ಹೊಸ ರೂಪ ನೀಡಿದರು. ಭಾರತೀಯ ಗಜಲ್ ಪರಂಪರೆಯ ಮತ್ತೋರ್ವ ಬಹು ದೊಡ್ಡ ಗಾಯಕಿಯಾದ ಬೇಗಂ ಅಕ್ತರ್ ತಮ್ಮ ಸುಮಧುರ ಕಂಠದಿಂದ ಅಕ್ಷರಶಃ ರಾಣಿಯ ಹಾಗೆ ಮೆರೆದರು. ಈ ಯಾದಿಯಲ್ಲಿ ಇನ್ನೂ ಹೇಳಲೇಬೇಕಾದ ಗಜಲ್ ಮಾಂತ್ರಿಕ ಗಾಯಕರೆಂದರೆ ಅದು ಗಜಲ್ ಕಿಂಗ್ ಮೆಹದಿ ಹಸನ್, ಗಜಲ್ ಉಸ್ತಾದ ಗುಲಾಂ ಅಲಿ, ಆಶಾ ಭೋಸ್ಲೆ, ಹರಿಹರನ್ ಇತರರು.. ಇಂದಿಗೂ ಸಹ ಗಜಲ್ ಗೀತೆಗಳು ಹಿಂದಿ ಚಿತ್ರರಂಗವನ್ನು ಆಳುತ್ತಲ್ಲಿವೆ ಕನ್ನಡದಲ್ಲಿ ಗಜಲ್ ಗೀತೆಗಳು ಕನ್ನಡದಲ್ಲಿ ಗಜಲ್ ಗೀತೆಗಳನ್ನು ಸಂಗೀತಕ್ಕೆ ಅಳವಡಿಸಿದ ಮೊದಲಿಗರೆಂದರೆ ಅದು ಗವಾಯಿಗಳು. ಅವರ ನಂತರ ರವಿ ಹಂದಿಗನೂರ ಅವರು ಗಜಲ್ ಗಾಯನದ ಕಾರ್ಯಕ್ರಮಗಳನ್ನು ನೀಡುವ ಮೂಲಕ ಗಜಲ್ ಗಾಯನದ ಛಾಪನ್ನು ಕನ್ನಡದಲ್ಲಿ ಮೂಡಿಸಿದರು. ಆದರೂ ಸಹ ಕನ್ನಡದಲ್ಲಿ ಗಜಲ್ ಗಾಯನ ಪ್ರಭಾವಿಸುವಷ್ಟು ಮಟ್ಟಿಗೆ ಇದುವರೆಗೂ ಬೆಳೆದೇ ಇಲ್ಲ. ಇನ್ನೂ ಕನ್ನಡ ಚಿತ್ರರಂಗವಂತೂ ಇದನ್ನು ಇನ್ನೂ ಸಮರ್ಥವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಸಹ ಮಾಡಿಲ್ಲ. ಅಪರೂಪಕ್ಕೆ ಎಂಬಂತೆ ಉದಾಹರಣೆಗೆ ಒಂದೋ ಎರಡೋ ಅಷ್ಟೇ ಗಜಲಗಳು ಕನ್ನಡ ಚಿತ್ರರಂಗದಲ್ಲಿ ಗೀತೆಗಳಾಗಿ ಮೂಡಿ ಬಂದಿವೆ. ಅಂತಹ ಒಂದು ಅತ್ಯಂತ ಜನಪ್ರಿಯ ಗೀತೆ ಎಂದರೆ ವಿ. ಲಕ್ಷ್ಮಣರಾವ್ ರಚಿತ ರಮೇಶ ಅರವಿಂದ ಅವರ ಆಕ್ಸಿಡೆಂಟ್ ಚಿತ್ರದ ಗೀತೆ “ಬಾ ಮಳೆಯೇ ಬಾ”. ಇನ್ನೂ ಮೇಲಾದರೂ ಹೆಚ್ಚಿನ ಗಜಲಗಳು ಗೀತೆಗಳಾಗಿ ಚಾಲ್ತಿಗೆ ಬಂದು ಆ ಮೂಲಕ ಕಮರ್ಷಿಯಲ್ ಯಶಸ್ಸನ್ನು ಸಹ ಸಾಧಿಸಬೇಕಿದೆ, ಅಂತೆಯೇ ಗಜಲಕಾರರು ತಮ್ಮ ಗಜಲಗಳಿಗೆ ಗುಣಮಟ್ಟದ ಲಯ ಗೇಯತೆಗಳನ್ನು ಒದಗಿಸಬೇಕಿದೆ ****** ಬಸವರಾಜ ಕಾಸೆ

ಗಝಲ್ ಲೋಕ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-9 ಸೇವಾನಿರತರ ಕೈ ಬಲಪಡಿಸಿ ‘ಧಿಡೀರ್ ಲಾಕ್ ಡೌನ್ ಕಾರ್ಮಿಕರ ಬದುಕನ್ನು ಮೂರಾಬಟ್ಟೆ ಮಾಡಿಬಿಟ್ಟಿತು’ ಎಂದು ಕೆಲವರು ಹಳಿಯುತ್ತಾ, ಮರುಗುತ್ತಾ ಕುಳಿತಿದ್ದಾರೆ. ಸರಕಾರ ಅವರಿಗೆ ಇದ್ದಲ್ಲಿಯೇ ಅನ್ನಾಹಾರ ನೀಡಲು ಹಲವು ಕ್ರಮ ಕೈಗೊಂಡಿದೆ. ಇಸ್ಕಾನ್, ಅದಮ್ಯಚೇತನ, ಇಂಪೋಸಿಸ್, ರಾಷ್ಟ್ರೀಯ ಸ್ವಯಂಸೇವಕ ಸಂಘ( ನನ್ನ ಅರಿವಿಗೆ ಬಂದಷ್ಟನ್ನೇ ಉಲ್ಲೇಖಿಸಿದ್ದೇನೆ)… ಅನೇಕ ಸಹೃದಯಿಗಳು ಸರಕಾರದ ಕೆಲಸಕ್ಕೆ ಪೂರಕವಾಗಿ ಕಾರ್ಮಿಕರ, ನಿರ್ಗತಿಕರ ನೆರವಿಗೆ ಶ್ರಮಿಸುತ್ತಿವೆ. ಇಂತಹ ಸೇವಾಕಾರ್ಯದಲ್ಲಿ ತೊಡಗಿರುವ ಮೈಸೂರಿನ ಯೋಗ ಶಿಕ್ಷಕರಾದ ಶ್ರೀಹರಿಯವರನ್ನು ಮಾತನಾಡಿಸಿದೆ..ಲಾಕ್ ಡೌನ್ ಶುರುವಾದಾಗ ಮನೆ ಇದ್ದವರು ಮನೆಯಲ್ಲಿ ಸುರಕ್ಷಿತವಾಗಿ ಕುಳಿತುಕೊಳ್ಳಬಹದು. ಮನೆ ಇಲ್ಲದವರು ಏನು ಮಾಡಬೇಕು ಎಂದು ನಾನು ನನ್ನಂತಹ ಎರಡು ಸಾವಿರ ಸಮಾನ ಮನಸ್ಕರು ಚಿಂತಿಸಿದೆವು. ಸರಕಾರದಿಂದ ಪರ್ಮಿಶನ್ ತೆಗೆದುಕೊಂಡು, ಮಾಸ್ಕ ಧರಿಸಿ ಇಡೀ ಮೈಸೂರು ನಗರ ಸರ್ವೆ ಮಾಡಿದೆವು. ಎಲ್ಲೆಲ್ಲಿ ಕಟ್ಟಡ ಕಾರ್ಮಿಕರು, ನಿರ್ಗ ತಿಕರು, ವೃದ್ಧರು ಇದ್ದಾರೆಯೋ,ಅಂಥವರನ್ನು ಹುಡುಕಿದೆವು. ನಮ್ಮ ತಂಡದಲ್ಲಿ ಎಲ್ಲ ವೃತ್ತಿಯವರಿದ್ದಾರೆ. ಕೇಟರರ್ಸ ಅಡುಗೆ ಮಾಡುತ್ತಾರೆ. ಅವುಗಳನ್ನು ದಿನದಲ್ಲಿ ಮೂರು ಸಲ ಅಗತ್ಯವಿದ್ದವರಿಗೆ ಉಳಿದವರು ವಿತರಿಸುತ್ತಿದ್ದೇವೆ. ನಮ್ಮ ತಂಡದಲ್ಲಿರುವ ಹದಿನೈದು ಆಯುರ್ವೇದ ವೈದ್ಯರು ಪೋನ್ ಮೂಲಕ ಕೌನ್ಸಲಿಂಗ್ ಮಾಡುತ್ತಿದ್ದಾರೆ. ಆರೋಗ್ಯ ಸಲಹೆ ನೀಡುತ್ತಿದ್ದಾರೆ. ಹದಿನೈದು ಯುವ ಜನರು ಸರಕಾರದಿಂದ ಬರುವ ನಿಖರವಾದ ಮಾಹಿತಿಗಳನ್ನು ಫೇಸ್ ಬುಕ್ ಮೂಲಕ ಜನರಿಗೆ ತಿಳಿಸುತ್ತಿದ್ದಾರೆ…ಎಲ್ಲ ಚಟುವಟಿಕೆಗಳು ದಾನಿಗಳ ನೆರವಿನಿಂದ ನಡೆಯುತ್ತವೆ. ಇಡೀ ದೇಶ ನಮ್ಮ ಮನೆಯಿದ್ದಂತೆ. ಎಲ್ಲರನ್ನೂ ಜೋಡಿಸಿಕೊಂಡು ಮಾನವೀಯ ನೆಲೆಯಲ್ಲಿ ಸ್ಪಂದಿಸುತ್ತಾ ಕೊರೋನಾ ಬಿಕ್ಕಟ್ಟನ್ನು ಗೆಲ್ಲಲೆತ್ನಿಸುತ್ತಿದ್ದೇವೆ. ಸರಕಾರವೇ ಎಲ್ಲವನ್ನೂ ಮಾಡಬೇಕು ಎನ್ನುವ ಮನೋಭಾವ ಬೇಡ. ಸಾರ್ವಜನಿಕರ ಸಹಕಾರವೂ ಇರಲಿ… ಎನ್ನುವ ಇಂತಹ ಸದ್ದಿಲ್ಲದೇ ಸೇವಾಕಾರ್ಯ ಮಾಡುತ್ತಿರುವ ಎಲ್ಲರೂ ಸ್ಯುತ್ಯಾರ್ಹರು. ಕೊರೋನಾ ಸೋಂಕು ತಗಲುವ ಭೀತಿ ನಿಮಗಿಲ್ಲವೇ? ಎಂದು ಶ್ರೀಹರಿಯವರನ್ನು ಕೇಳಿದ್ದೆ. . ‘ಸೋಂಕಿತರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಸೇವೆ ಸಲ್ಲಿಸುತ್ತಿರುವ ವೈದ್ಯರೇ ನಮಗೆ ಮಾದರಿ. ಅವರು ಈಗ ತೆಗೆದುಕೊಳ್ಳುತ್ತಿರುವ ರಿಸ್ಕಿನ ಪ್ರಮಾಣಕ್ಕೆ ಹೋಲಿಸಿದರೆ ನಾವು ತೆಗೆದುಕೊಳ್ಳುವ ರಿಸ್ಕ ತುಂಬಾ ಕಡಿಮೆ ಪ್ರಮಾಣದ್ದು. ಮಾಸ್ಕ, ಗ್ಲೌಸ್ ಹಾಕಿಕೊಂಡು ಶುಚಿತ್ವ ಕಾಪಾಡಿಕೊಂಡು ಕೆಲಸ ಮಾಡುತ್ತಿದ್ದೇವೆ.. ಇಂತಹ ಸೇವಾಕಾರ್ಯದಲ್ಲಿ ದೊರಕುವ ಆತ್ಮತೃಪ್ತಿಗೆ ಬೆಲೆಕಟ್ಟಲಾಗದು’. ಎಂದರು ಶ್ರೀಹರಿಯವರು. ಮಾನವೀಯತೆಯ ಹೆಬ್ಬಾಗಿಲು ತೆರೆಯುವುದು ಇಂತಹ ಕಷ್ಟಕಾಲದಲ್ಲಿಯೇ … ತೆರೆದಿದೆ ಮನೆ ಓ ಬಾ ಅತಿಥಿ ಎಂದು ಯಾರೂ ಈಗ ಹಾಡುವಂತಿಲ್ಲ .ಕೊರೊನಾ ಎಂಬ ಬೇಡದ ಅತಿಥಿ ಬಂದರೇನು ಮಾಡುವುದು ಎಂಬ ಭಯ ಎಲ್ಲರ ಮನದೊಳಗೆ. ಈ ಬೇಸಿಗೆಯಲ್ಲಿ ಯಾರ ಮನೆಗೂ ಯಾವ ಅತಿಥಿಗಳು ಬರಲಾರರು. ಆದ್ದರಿಂದ ಅತಿಥ್ಯಕ್ಕೆ ಮೀಸಲಿಟ್ಟ ಒಂದಿಷ್ಟು ಹಣ ದವಸ ಧಾನ್ಯಗಳನ್ನು ಅನುಕೂಲ ಇದ್ದವರು ಪ್ರತಿ ಊರು, ನಗರಗಳಲ್ಲಿ ನಡೆಯುವ ಇಂತಹ ಸೇವಾಕಾರ್ಯಗಳಿಗೆ ನೀಡಿದರೆ ಕಷ್ಟದಲ್ಲಿರುವವರು ನೆಮ್ಮದಿಯ ನಿಟ್ಟುಸಿರಿಟ್ಟಾರು ಅಲ್ವೇ? ********* ಮುಂದುವರಿಯುವುದು… ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-8 ತೆಗೆದೀತೆ ದುಡಿಮೆಯ ಬಾಗಿಲು? ನಾಲ್ಕು ವರ್ಷಗಳ ಕೃಷಿ ಲೇಖನಗಳ ಸರಣಿ ಬರಹಕ್ಕಾಗಿ ಹಲವು ಹಳ್ಳಿಗಳ ರೈತರನ್ನು ಸಂದರ್ಶಕ ಮಾಡಿದ್ದೆ. ಎಲ್ಲ ರೈತರೂ ಕಾರ್ಮಿಕರ ಕೊರತೆಯನ್ನೆದುರಿಸುತ್ತಿರುವ ವಿಷಯ ಹೇಳುತ್ತಿದ್ದರು. ಯಾಕೆ ಎಲ್ಲ ಹಳ್ಳಿಗಳಲ್ಲಿಯೂ ಹೀಗೆ? ಎಂದು ಕಾರ್ಮಿಕರನ್ನು ವಿಚಾರಿಸಲಾರಂಭಿಸಿದೆ. ನಗರದ ಅಂಚಿನ ಹಳ್ಳಿಯಲ್ಲಿ ವಾಸಿಸುವ ಕಾರ್ಮಿಕರು ಕೃಷಿ ಭೂಮಿಯಲ್ಲಿ ದುಡಿಯುವುದಕ್ಕಿಂತ ನಗರಗಳಲ್ಲಿ ಕೆಲಸಕ್ಕೆ ಹೋದರೆ ಕೂಲಿ ಹೆಚ್ಚು ಸಿಗುತ್ತದೆ ಎಂದು ಲೆಕ್ಕ ಹಾಕಿ ದಿನವೂ ನಗರಕ್ಕೆ ಹೋಗುತ್ತಿದ್ದರು. ಅವರಲ್ಲಿ ನಗರದ ಸಿನಿಮಾ, ತಿಂಡಿ ತಿನಿಸು, ವೇಷಭೂಷಣ, ವ್ಯಸನ .. ಹೀಗೆ ಹಲವು ಆಮಿಷಕ್ಕೆ ಮರುಳಾದ ಮನಸ್ಥಿತಿಯೂ ಇತ್ತು. ಇನ್ನೂ ಕೆಲವು ಹಳ್ಳಿಗಳು ವಲಸೆ ಮನಸ್ಥಿತಿಯವು. ಮಳೆಗಾಲದಲ್ಲಿ ಊರಿನಲ್ಲಿ ಇದ್ದರೆ ನಂತರ ಇಡೀ ಹಳ್ಳಿಯಲ್ಲಿ ದುಡಿಯುವಷ್ಟು ಗಟ್ಟಿ ಇದ್ದವರೆಲ್ಲ ಮಹಾನಗರಕ್ಕೆ ಗುಳೆ ಹೋಗುತ್ತಿದ್ದರು. ಒಮ್ಮೆ ಕಾರ್ಮಿಕ ಮಹಿಳೆಯೊಬ್ಬಳು ಅವರ ಜೀವನವನ್ನು ಹೀಗೆವಿವರಿಸಿದಳು..ದೀಪಾವಳಿ ಮುಗಿತಂದ್ರೆ ಗೋವಾ, ಮುಂಬೈ, ಬೆಂಗಳೂರಿಗೆಲ್ಲ ಕೆಲಸಾ ಹುಡುಕಿ ಹೊಂಟಬಿಡ್ತೇವ್ರಿ. ಗಂಡನನ್ನು ಮಾತ್ರ ಕಳಿಸಿದ್ರೆ ಚಟಕ್ಕ ಬಿದ್ದು, ಬ್ಯಾರೆ ಹೆಣ್ಣಿನ ಕೂಡ ಜೀವ್ನಾ ಮಾಡಿದ್ರೇನು ಗತಿ. ನಮ್ಮನ್ನ ಮಕ್ಕಳನ್ನ ನೋಡುವವರಾರು? ಅಂದ್ಕೊಂಡು ವಯಸ್ಸಾದ ಅತ್ತಿ ಮಾವ ಇಲ್ಲ ಅಪ್ಪಾ ಅವ್ವಾನಗೂಡ ಮಕ್ಕಳನ್ನು ಊರಿನಲ್ಲಿಯೇ ಬಿಟ್ಟು ಹೊರಟುಬಿಡ್ತೇವ್ರೀ. ಬ್ಯಾಸಿಗಿ ಮುಗಿಯೂ ಟೇಮ್ಗ ಕೈಯಾಗ ಒಂದಿಷ್ಟು ಕಾಸು ಕೂಡಿಸಿಕೊಂಡು ಹೊಳ್ಳಿ ಬರ್ತೇವ್ರೀ. ಯಾವ ನಗರಕ್ಕೆ ಹೋದರೂ ಒಂದು ಬಾಡಗಿ ಮನಿ ಹಿಡಿಯುವಷ್ಟು ರೊಕ್ಕ ನಮ್ಮ ಕಡಿಗ ಆಗಂಗಿಲ್ಲ.ಅರ್ಧ ಕಟ್ಟಿದ ಕಟ್ಟಡ, ರೇಲ್ವೆ ಸ್ಟೇಷನ್ನು, ಸೇತುವೆಯ ಕೆಳಭಾಗ, ಕೊಳಗೇರಿಗಳಲ್ಲೆಲ್ಲೋ ಇರಬೇಕಾಗ್ತದೆ. ಇದ್ದೂರಾಗ ಗಳಿಸಾಕ ಅವಕಾಶ ಇದ್ರೆ ನಾವ್ಯಾಕ ಹಿಂಗ ತಿರುಬೋಕಿಗಳಾಗುತ್ತಿದ್ದೆವು…. ಲಾಕ್ ಡೌನ್ ಮಾಡಿದಾಗ ಇದ್ದ ನಗರದಲ್ಲೇ ಇರಲಾಗದೇ ಸ್ವಂತ ಊರಿಗೆ ಬರಲೂ ಆಗದೇ ಪರದಾಡಿದವರ ಸ್ಥಿತಿ ಕರುಣಾಜನಕವಾದದ್ದು. ಅನೇಕ ಸಂಘ ಸಂಸ್ಥೆಗಳು, ಸರಕಾರ ಇವರಿಗೆ ಹಲವು ಬಗೆಯಲ್ಲಿ ನೆರವಾದರೂ ಅನೇಕರಿಗೆ ಕಷ್ಟವಾಯಿತು. ಕೆಲವರು ನೂರಾರು ಮೈಲಿ ನಡೆದಾದರೂ ಊರು ತಲುಪಿಬಿಡಬೇಕೆಂದು ಪ್ರಯತ್ನ ಮಾಡಿ ಜೀವ ತೆತ್ತರು. ಈಗಲೂ ಹೇರಳವಾದ ಅವಕಾಶಗಳಿರುವ ಕೃಷಿಕ್ಷೇತ್ರದಲ್ಲಿ ದುಡಿಯಲು ಕಾರ್ಮಿಕರು ಮನಸ್ಸು ಮಾಡಿದರೆ ಇದ್ದ ಊರಿನಲ್ಲಿ, ಸುತ್ತ ಮುತ್ತಲ ಊರಿನಲ್ಲಿ ಅನೇಕ ಕಾರ್ಮಿಕರಿಗೆ ಕೆಲಸ ದೊರೆಯುತ್ತದೆ. ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತ ಇವರೆಲ್ಲ ನಗರಕ್ಕೆ ದೌಡಾಯಿಸುವುದಕ್ಕೆ ಪರ್ಯಾಯವಾಗಿ ವಲಸೆ ಕಾರ್ಮಿಕರು ಇರುವ ಸ್ಥಳಗಳನ್ನು ಗುರುತಿಸಿ ಸರಕಾರ ಅಥವಾ ಉದ್ಯಮಿಗಳು ಉದ್ಯಮ ಸ್ಥಾಪಿಸಿ ಉದ್ಯೋಗ ಸೃಷಿ ಆದರೆ ಅನೇಕ ಕಾರ್ಮಿ ಕರು ನೆಮ್ಮದಿಯಿಂದ ಬದುಕುವಂತಾಗಬಹುದು. ಚಿಂದಿಯಾಗಿರುವ ಅವರ ಸಂಸಾರಗಳು ಸುಖ ಕಾಣಬಹುದು.. ********* ಮುಂದುವರಿಯುತ್ತದೆ… ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-7 ಸಮಾನತೆಯೋ ಸಹಬಾಳ್ವೆಯೋ? ಲಾಕ್ ಡೌನ್ ಶುರುವಾದಾಗಿನಿಂದ ಕಿಟಕಿ ಬಾಗಿಲುಗಳು ಸದಾ ಮುಚ್ಚಿಯೇ ಇದ್ದರೂ ಅದೆಲ್ಲಿಂದ ಬರುತ್ತದೆಯೋ ಇಷ್ಟೊಂದು ಧೂಳು ಎನ್ನುತ್ತಾ ಗೊಣಗಾಡಿಕೊಂಡು ಸ್ವಚ್ಛತಾ ಕಾರ್ಯ ಶುರು ಮಾಡಿದೆ.  ಅಷ್ಟರಲ್ಲಿ ಒಬ್ಬ ಗೆಳತಿ ಪೋನ್ ಮಾಡಿದಳು. ಬೆಳಿಗ್ಗೆ ಹತ್ತು ಗಂಟೆಯ ಒಳಗೆ ಮನೆಯ ಎಲ್ಲಾ ಕೆಲಸ ಮುಗಿದು ಹೋಗುತ್ತದೆಯೆ ಈಗ. ನನ್ನ ಗಂಡನೂ ಮನೆಯಲ್ಲಿಯೇ ಇರುವುದರಿಂದ  ಅರ್ಧ ಮನೆಕೆಲಸ ಅವನಿಗೆ ತಗುಲಿ ಹಾಕ್ತೇನೆ… ನೀನೂ ಹಾಗೇ ಮಾಡು… ಎಂದಳು!. ‘ಮಹರಾಯ್ತಿ ನಮ್ಮ ಮನೆಯವರು ಆಫೀಸಿಗೆ ಹೋಗುತ್ತಾ ಇದ್ದಾರೆ’ ಎಂದೆ. ಮುಂದೆ  ವಿಷಯ ಬದಲಾಯಿತು. ಇಂದು ಸಮಾನತೆ ಸಾಧಿಸುವುದೆಂದರೆ ಅನೇಕರು  ಪತಿ ಪತ್ನಿ ಮನೆಗೆಲಸವನ್ನು ಅರ್ಧರ್ಧ ಮಾಡುವುದು ಎಂಬಂತೆ ನಡೆದುಕೊಳ್ಳುವುದನ್ನು ನೋಡಿ ನನಗೆ ನಗುವೂ, ವಿಷಾಧವೂ ಒಟ್ಟಿಗೇ ಆಗುತ್ತದೆ. ( ಕೆಲವು ಯುವ ದಂಪತಿಗಳು ಇದೇ ವಿಷಯದಲ್ಲಿ ಕಾದಾಡಿ ವಿವಾಹ ವಿಚ್ಛೇದನಕ್ಕೂ ಮುಂದಾಗಿದ್ದಾರೆ) ಇಬ್ಬರೂ ತಿಳುವಳಿಕೆಯಿಂದ ಹಾಗೆ ಕೆಲಸ ಮಾಡಿದರೆ ಸಂತೋಷ, ಒಳ್ಳೆಯದು. ಹಾಗಲ್ಲದಿದ್ದರೆ ದೈಹಿಕ ಮಾನಸಿಕ, ಬೌದ್ದಿಕ ಆಧಾರದ ಮೇಲೆ ಮನೆಕೆಲಸದ ಹಂಚಿಕೆ ಮಾಡಿಕೊಂಡರಾಯ್ತು ಅಷ್ಟೇ. ಸುಖವಾಗಿ, ಸಂತೋಷವಾಗಿ ಬದುಕುವುದು ಮುಖ್ಯ. ಈ ಸಮಯದಲ್ಲಿ ಗಂಡಸರನೇಕರು ಮನೆಗೆಲಸ ಕಲಿಯುತ್ತಿದ್ದೇವೆ.. ಪತ್ನಿಯರ ಕಷ್ಟವನ್ನು ಅರಿಯುತ್ತಿದ್ದೇವೆ ಎಂದು ಪತ್ರಿಕೆಗಳಲ್ಲಿ ಫೇಸ್ ಬುಕ್ಕಿನಲ್ಲಿ ಕೆಲವು ಗಂಡಸರು ಬರೆದುಕೊಳ್ಳುತ್ತಿದ್ದಾರೆ.  ಇನ್ನೂ ಕೆಲವರು ಟೈಂಪಾಸಿಗಾಗಿ ಹೆಂಡತಿಗೆ ಬೈಯುವುದು, ಹೊಡೆಯುವುದು, ಚಿತ್ರಹಿಂಸೆ ಕೊಡುವುದು… ಮಾಡುತ್ತಿದ್ದಾರೆ. .. ಸಾವು ನಮ್ಮ ಸುತ್ತಲೂ ಗಿರಕಿ ಹೊಡೆಯುತ್ತಿದೆಯೇನೋ ಎಂದು ಭ್ರಮಿಸುವ ಈ ಹೊತ್ತಿನಲ್ಲಿಯೂ ಜಗಳಗಳು ಬೇಕಾ?  ಒಂದೈದು ನಿಮಿಷ ಕಣ್ಮುಚ್ಚಿ ಕುಳಿತುಕೊಳ್ಳಿ. ನಿಮಗೆ ಯಾರ ನೆನಪು ಬಂದು ಮನಸ್ಸು ಕೃತಜ್ಞತೆಯಿಂದ ನಮಿಸುತ್ತದೆ ಎಂಬುದನ್ನು ಗಮನಿಸಿ. ಆಗ ನಿಮ್ಮ ಕಷ್ಟ ಕಾಲದಲ್ಲಿ ನಿಮ್ಮ ಜೊತೆಗಿದ್ದ, ನಿಮ್ಮನ್ನು ಸಂಕಷ್ಟದಿಂದ ಪಾರು ಮಾಡಿದವರ ನೆನಪು ಬರುತ್ತದೆ.. ಈ ಕಷ್ಟ ಕಾಲದಲ್ಲಿ  ಹೆಂಡತಿ ಗಂಡನಿಗೆ ಅಥವಾ  ಗಂಡ ಹೆಂಡತಿಗೆ ಸಹಾಯ ಸಹಕಾರ ನೀಡಿ ಬದುಕಬೇಕು. ಆಗ  ಕಷ್ಟ ಕಳೆದರೂ ಜೀವನಪರ್ಯಂತ ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಪ್ರೀತ್ಯಾದರಗಳು ಇಮ್ಮಡಿಯಾಗುತ್ತವೆ. ಒಂದೆರಡು ತಲೆಮಾರಿನ ಹಿಂದಿನವರ ಬದುಕನ್ನು ಗಮನಿಸಿದರೆ ಮುಂಬಾಗಿಲಿಗೆ ಗಂಡಸರು ಯಜಮಾನರಾದರೆ ಹಿಂಬಾಗಿಲಿಗೆ ಮಹಿಳೆಯರು ಯಜಮಾನ್ತಿಯರಾಗಿದ್ದರು. ಗಂಡಸರ ಕಾರಬಾರು ಗಂಡಸರಿಗೆ. ಹೆಂಗಸರ ಪಾರುಪತ್ಯ ಹೆಂಗಸರಿಗೆ. ಅದೂ ಬಂದು ಬಗೆಯ ಹೊಂದಾಣಿಕೆಯೇ ಆಗಿತ್ತಲ್ಲವೇ? ಅದಕ್ಕೆ ಸಹಬಾಳ್ವೆ ಎನ್ನಬಹುದು… ******** ಮುಂದುವರಿಯುವುದು… ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-6 ಭವಿಷ್ಯವೇನೋ ಭಗವಂತ ಬಲ್ಲ… ಇನ್ನೊಂದೇ ಪರೀಕ್ಷೆ ಮುಗಿದರೆ ನನ್ನ ಪಿಯುಸಿ ಶಿಕ್ಷಣ ಮುಗಿಯುತ್ತದೆ ಅಮ್ಮಾ ಎಂದೊಬ್ಬ ಮಗ ಹೇಳಿದರೆ, ಇನ್ನೊಬ್ಬ ಅಮ್ಮನ ಮಗ ಹತ್ತನೆಯ ತರಗತಿಯ ಪರೀಕ್ಷೆಗೆ ಓದುತ್ತಿದ್ದ. ಒಬ್ಬಳ ಮಗಳು ಎಂಟನೆಯ ಪರೀಕ್ಷೆಗೆ ಓದುತ್ತಿದ್ದರೆ ಮತ್ತೊಬ್ಬಳ ಮಗಳು ಡಿಗ್ರಿ ಪರೀಕ್ಷೆಗೆ ಓದುತ್ತಿದ್ದಳು. ಎಲ್ಲ ಶಾಲಾ ಕಾಲೇಜು ಬಾಗಿಲುಗಳು ಮುಚ್ಚಿ ‘ಕೊರೊನಾ ದೆಸೆಯಿಂದ ನಿಮಗೆ ಅನಿರ್ದಿಷ್ಟ ಅವಧಿಯವರೆಗೆ ರಜಾ’ ಎಂದವು. ಅನೇಕರು ಪರೀಕ್ಷೆ ಬರೆಯದೇ ಪಾಸಾದರು. ಅರ್ಧಮರ್ಧ ಪರೀಕ್ಷೆ ಬರೆದವರು ಮುಂದಿನ ಪರೀಕ್ಷೆಗಳಿವೆಯೇ ಇಲ್ಲವೇ ತಿಳಿಯದೇ ಪರದಾಡುತ್ತಿದ್ದಾರೆ. ನ್ಯೂಸ್ ನಲ್ಲಿ ಏನಾದರೂ ಪರೀಕ್ಷಾ ವಿವರ ಹೇಳಬಹುದೆಂದು ಟಿವಿಯ ಮುಂದೆ ಕುಳಿತ ವಿದ್ಯಾರ್ಥಿಗಳು ಕೊರೊನಾ, ರೋಗಿಗಳು, ಶಂಕಿತರು, ಕ್ವಾರಂಟೈನಿನಲ್ಲಿರುವವರು, ಕಾನೂನು ಮುರಿದವರ ಲೆಕ್ಕಾಚಾರಗಳನ್ನೆ ಮತ್ತೆ ಮತ್ತೆ ಪ್ರಸಾರ ಮಾಡುವುದನ್ನು ನೋಡಿ ನೋಡಿ ಬೇಸತ್ತು ಕಡು ಬಿಸಿಲು ಬರುವವರೆಗೂ ಮುಸುಕೆಳೆದು ಮಲಗಲು ಶುರು ಮಾಡಿದ್ದಾರೆ. ಮಗನೇ ಏಳೊ, ಮಗಳೇ ಏಳು… ಹಿಂದೆ ಲಾಲಿ ಹಾಡಿ ಮಲಗಿಸುತ್ತಿದ್ದ ಅಮ್ಮಂದಿರು ಈಗ ಎಂಟು ಗಂಟೆಗೆ ಉದಯ ರಾಗ ಹಾಡುತ್ತಿದ್ದಾರೆ. ‘ನಾವು ಯಂಗ್ ಜನರೇಶನ್ ಯೋಚಿಸುವುದು ನಿಮಗರ್ಥ ಅಗುವುದಿಲ್ಲ. ನಮ್ಮ ಫ್ರೆಂಡ್ಸ ನಮಗೆ ಸಿಗುತ್ತಿಲ್ಲ’ ಎನ್ನುವ ಮಕ್ಕಳನ್ನು ನೋಡುತ್ತಾ ಬಾರದ ಮುಗುಳುನಗುವನ್ನು ಮುಖದ ಮೇಲೆ ತರುವ ಪಾಡು ಎಲ್ಲ ಹೆತ್ತವರದ್ದು. ಮಕ್ಕಳಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಸಾಲಸೊಲ ಮಾಡಿ ಇದ್ದ ಬಿದ್ದ ಹಣ ಒಂದುಗೂಡಿಸಿ ವಿದೇಶಕ್ಕೆ ಮಕ್ಕಳನ್ನು ಕಳಿಸಿದ ಅಮ್ಮಂದಿರಂತೂ ಅಂಗೈಲಿ ಜೀವ ಹಿಡಿದಿದ್ದಾರೆ. ಇಪ್ಪತ್ತೈದರಿಂದ ಎಪ್ಪತ್ತೈದು ಲಕ್ಷದವರೆಗೆ ಸಾಲ ತೆಗೆದುಕೊಂಡು ವಿದೇಶಕ್ಕೆ ಹೋದವರು ಅಕ್ಷರಶಃ ಪರದೇಶಿಯಾಗಿದ್ದರೂ ದಿನವೂ ಪೋನ್ ಮಾಡಿ ‘ನಾನಿಲ್ಲಿ ಸುರಕ್ಷಿತವಾಗಿದ್ದೇನೆ. ಚಿಂತೆ ಮಾಡಬೇಡಿ’ ಎಂದು ಹೆತ್ತವರಿಗೆ ಸಾಂತ್ವನ ಹೇಳುತ್ತಾರೆ. ಎದೆಯಲ್ಲಿ ಭಯದ ಭತ್ತ ಕುಟ್ಟಿ ಅಕ್ಕಿ ಮಾಡುತ್ತಿದ್ದೇವೆನಿಸುತ್ತದೆ.. ಎಂದೆಲ್ಲ ಅಳಲು ತೋಡಿಕೊಳ್ಳುವ ಗೆಳತಿಯರು ಕೆಲವರು. ಇನ್ನೂ ಕೆಲವರು ಎಷ್ಟ ನಮನಿ ಅಡುಗೆ ಮಾಡಿದ್ರೂ ಕಡಿಮೆ.. ಇಡೀ ದಿನಾ ಅಡುಗೆ ಮಾಡು.. ಪಾತ್ರೆ ತೊಳೆ ಎನ್ನುವುದೇ ಆಗಿದೆ. ವಿವಿಧ ಬಗೆಯ ಅಡುಗೆ ಮಾಡು ಎಂದು ಜೀವ ತಿನ್ನುತ್ತವೆ ಈ ಮಕ್ಕಳು.. ಒಂದೇ ಒಂದು ಕೆಲಸಾ ಮಾಡೋದಿಲ್ಲ ಮಕ್ಕಳು ಎಂದು ಗೋಳಾಡುತ್ತಾರೆ. ಮಕ್ಕಳು ಮುಂದೇನು ಅರಿಯದೇ ಆತಂಕಕ್ಕೊಳಗಾಗಿದ್ದಾರೆ. ಅನೇಕ ಶಾಲಾ ಕಾಲೇಜುಗಳು ಆನ್ಲೈನ್ ಕ್ಲಾಸು ಆರಂಭಿಸಿದರೂ ಅದೆಷ್ಟು ಉಪಯುಕ್ತವೋ ತಿಳಿಯದಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳೊಂದಿಗೆ ಪಾಲಕರ ಸ್ನೇಹಪೂರ್ವಕ ನಡೆ ಅತ್ಯಂತ ಮಹತ್ವದ್ದು. ಚಿಕ್ಕ ಪುಟ್ಟ ಮನೆಕೆಲಸದಲ್ಲಿ ಮಕ್ಕಳನ್ನು ತೊಡಗಿಸಿ. ಕೆಲಸ ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಬರದಿದ್ದರೆ ಕಟುವಾಗಿ ಟೀಕಿಸಬೇಡಿ. ಅನವಶ್ಯಕವಾಗಿ ಉಪದೇಶ ಮಾಡಬೇಡಿ. ಶಾಲಾ ಕಾಲೇಜುಗಳ ಬಾಗಿಲು ತೆರೆದು ಮಕ್ಕಳ ಭವಿಷ್ಯ ಉಜ್ವಲವಾಗುವ ದಿನಗಳು ಬರಲಿ.. (ಮುಂದುವರಿಯುವುದು….) ****** ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

You cannot copy content of this page

Scroll to Top