ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸಂಪ್ರೋಕ್ಷಣ

ಬೆಳಗಾಗ ನಾನೆದ್ದು ಯಾರ್‍ಯಾರ ನೆನೆಯಲಿ ಅಂಕಣ ಬರಹ ಬೆಳಗು ಎನ್ನುವುದೊಂದು ಸುಂದರ ಅನುಭೂತಿ. ಮನೆಯ ಮಾಳಿಗೆಯ ಗಾಜಿನ ಹಂಚಿನಿಂದಲೋ, ಅಪಾರ್ಟ್ಮೆಂಟಿನ ಬಾಲ್ಕನಿಯ ಬಾಗಿಲಿನಿಂದಲೋ, ರಾತ್ರಿಪಾಳಿ ಮುಗಿಸಿ ಮರಳುತ್ತಿರುವ ಕ್ಯಾಬ್ ನ ಕಿಟಕಿಯಿಂದಲೋ ಸಿಕ್ಕಿದ ಅವಕಾಶಗಳನ್ನೆಲ್ಲ ಬಳಸಿಕೊಂಡು ಹುಟ್ಟುವ ಬೆಳಗು ಹೊಸದಿನವೆನ್ನುವ ಹೊಸ ಚೈತನ್ಯವನ್ನು ದೊರಕಿಸಿಕೊಡುತ್ತದೆ. ತುಳಸಿಕಟ್ಟೆಯ ಹೊಸಮಣ್ಣಿನಲ್ಲಿ ಉರಿಯುತ್ತಿರುವ ಅಗರಬತ್ತಿಯ ಪರಿಮಳ ರಸ್ತೆ ದಾಟಿದರೆ, ರಸ್ತೆಯ ತುದಿಯಲ್ಲಿರುವ ಟೀ ಅಂಗಡಿಯ ಘಮ ಮೇನ್ ರೋಡನ್ನು ತಲುಪುತ್ತದೆ; ಬಸ್ ಸ್ಟ್ಯಾಂಡ್ ನಿಂದ ಹೊರಡಲು ರೆಡಿಯಾದ ಬಸ್ಸಿನೊಳಗೆ ಮಲ್ಲಿಗೆಮಾಲೆ ಬಳುಕುವಾಗ, ತಳ್ಳುಗಾಡಿಯ ಮೇಲೆ ಕೆಂಪು-ಹಳದಿ ಸೇವಂತಿಗೆಗಳು ತೂಕಕ್ಕೆ ದೊರಕುತ್ತವೆ; ಪುಟ್ಟ ಮಗುವೊಂದು ಶೂಲೇಸ್ ಕಟ್ಟಿಕೊಳ್ಳಲು ಕಲಿಯುವ ಹೊತ್ತು, ಜಿಮ್ ನಲ್ಲೊಬ್ಬ ಹುಡುಗ ಮ್ಯೂಸಿಕ್ ಗೆ ತಕ್ಕಂತೆ ಹೆಜ್ಜೆ ಹಾಕುತ್ತಾನೆ; ರಾತ್ರಿ ಟ್ರೇನ್ ನಲ್ಲಿ ಅರೆಬರೆ ನಿದ್ರೆಯಲ್ಲಿಯೇ ಊರು ತಲುಪಿದ ಜೀನ್ಸ್ ತೊಟ್ಟ ಹುಡುಗಿ ತಾಮ್ರದ ಹಂಡೆಯ ಹದವಾದ ಬಿಸಿನೀರಿನಲ್ಲಿ ಫೇಷಿಯಲ್ ಮಾಡಿದ ಮುಖವನ್ನು ತೊಳೆದು, ಅಮ್ಮ ಹೊಲಿದ ಕೌದಿಯ ಮೇಲೆ ಮಲಗಿ ಸುಖವಾಗಿ ನಿದ್ರಿಸುತ್ತಾಳೆ; ಅಂಗಳದಲ್ಲೊಂದು ದಾಸವಾಳ ಸದ್ದಿಲ್ಲದೆ ಅರಳಿ, ಹುಟ್ಟಿದ ಪ್ರತಿ ಬೆಳಗಿಗೂ ಇನ್ನಷ್ಟು ಸೌಂದರ್ಯವನ್ನು ಒದಗಿಸುತ್ತದೆ.           ಈ ಸೌಂದರ್ಯದ ಪರಿಕಲ್ಪನೆಯೇ ವಿಶಿಷ್ಟವಾದದ್ದು. ಕಥೆ-ಕಾದಂಬರಿಗಳ ನಾಯಕಿಯ ಹೆರಳು, ಕವಿಯ ಕಲ್ಪನೆಯಲ್ಲಿ ತೂಗುವ ಮರ-ಗಿಡಗಳು, ಸಿನೆಮಾವೊಂದರ ಸುಖಾಂತ್ಯವಾಗುವ ಪ್ರೇಮ, ಪಾತ್ರೆ ತೊಳೆಯುತ್ತ ಅಮ್ಮ ಹಾಡುವ ಮಂಗಳಗೌರಿ ವ್ರತದ ಹಾಡು, ತೋಟದ ಅಂಚಿನಲ್ಲಿ ಹೂವರಳಿಸಿ ನಿಲ್ಲುವ ಸಂಪಿಗೆಮರ, ಶಾಪಿಂಗ್ ಮಾಲ್ ನ ಮೂಲೆಯ ಪುಟ್ಟ ಅಂಗಡಿಯ ಬಣ್ಣಬಣ್ಣದ ಐಸ್ ಕ್ರೀಮು ಎಲ್ಲವೂ ಸೇರಿ ಸೃಷ್ಟಿಯಾಗುವ ಸೌಂದರ್ಯದ ಪರಿಕಲ್ಪನೆ ಕಾಲಕ್ಕೆ ತಕ್ಕಂತೆ ಪೋಷಾಕು ಧರಿಸುತ್ತದೆ. ಕಪ್ಪು-ಬಿಳುಪು ಭಾವಚಿತ್ರದ ಉದ್ದ ಜಡೆಯೊಂದು ಸೆಲ್ಫಿಯ ಫ್ರೆಂಚ್ ಪ್ಲೇಟ್ ಆಗಿ ಬದಲಾದರೆ, ಹೆರಳಿನ ಸೌಂದರ್ಯವನ್ನು ಪರಿಪೂರ್ಣಗೊಳಿಸುತ್ತಿದ್ದ ಕೆಂಪುಗುಲಾಬಿಯ ಜಾಗವನ್ನು ರೆಡ್ ಸ್ಟ್ರೀಕ್ಸ್ ತನ್ನದಾಗಿಸಿಕೊಳ್ಳುತ್ತದೆ; ಜೋಕಾಲಿಯಾಗಿ ತೂಗುತ್ತಿದ್ದ ಮರ-ಗಿಡಗಳನ್ನು ಅಮ್ಯೂಸ್ಮೆಂಟ್ ಪಾರ್ಕಿನ ರೋಲರ್ ಕೋಸ್ಟರ್ ಗಳು ರಿಪ್ಲೇಸ್ ಮಾಡುತ್ತವೆ; ಪ್ರೇಮಕ್ಕೊಂದು ಹೊಸ ವ್ಯಾಖ್ಯಾನ ಬರೆಯುವಂತೆ ಲಿವಿನ್ ಸಂಬಂಧಗಳು ಹುಟ್ಟಿಕೊಳ್ಳುತ್ತವೆ. ಆದರೂ ಪಾತ್ರೆಯೊಂದಿಗೆ ಸದ್ದುಮಾಡುವ ಹಸಿರು ಚಿಕ್ಕಿಬಳೆಯ ಅಂದವಾಗಲೀ, ಗಾಳಿಯೊಂದಿಗೆ ಮನೆಯಂಗಳವನ್ನು ತಲುಪುವ ಸಂಪಿಗೆಯ ಪರಿಮಳವಾಗಲೀ, ಎರಡೂ ಕೈಗಳಿಂದ ಕೋನ್ ಐಸ್ ಕ್ರೀಮ್ ಹಿಡಿದು ಪುಟ್ಟ ಅಂಗಡಿಯಿಂದ ಹೊರಬರುವ ಪುಟ್ಟ ಮಗುವಿನ ಮುಗ್ಧತೆಯಾಗಲೀ ಎಂದಿಗೂ ಮಾಸುವುದಿಲ್ಲ.           ಹೀಗೆ ಸೌಂದರ್ಯ ಎನ್ನುವುದು ಮುಗ್ಧತೆಯಾಗಿ, ಹೆಣ್ಣಾಗಿ, ಪ್ರೇಮವಾಗಿ, ಭಕ್ತಿಯಾಗಿ, ಪ್ರಕೃತಿಯಾಗಿ ಬೆಳಗು ಎನ್ನುವ ಬೆರಗಿನೊಂದಿಗೆ ನಮ್ಮೆದುರು ತೆರೆದುಕೊಳ್ಳುತ್ತದೆ. ಸಾಮಾನ್ಯವಾಗಿ ಮುಂಜಾವಿನ ಕ್ರಿಯೆ-ಪ್ರಕ್ರಿಯೆಗಳೆಲ್ಲ ಒಂದು ಅವಸರದ ದಿನಚರಿಯೊಂದಿಗೆ ಹಾಜರಾಗುತ್ತವೆ. ಶಾಲೆಗೆ ಹೋಗುವ ದಿನಗಳಲ್ಲಿ ತಿಂಡಿ ಮಾಡುವ ತರಾತುರಿಯಲ್ಲಿರುತ್ತಿದ್ದ ಅಮ್ಮ ಅಡುಗೆಮನೆಯಿಂದಲೇ ಶಾಲೆಯನ್ನು ನೆನಪಿಸಿದರೆ, ಬೆಚ್ಚಗೆ ಕಂಬಳಿ ಹೊದ್ದು ಮಲಗಿರುತ್ತಿದ್ದ ನಾನು ಶಾಲೆಯನ್ನೂ ಬೆಳಗನ್ನೂ ಬೈದುಕೊಳ್ಳುತ್ತಲೇ ಎದ್ದೇಳುತ್ತಿದ್ದೆ. ವರ್ಷದ ಏಳೆಂಟು ತಿಂಗಳುಗಳು ಚಳಿಯ ವಾತಾವರಣವಿರುತ್ತಿದ್ದ ಮಲೆನಾಡಿನ ಮುಂಜಾವಿಗೆ ಬಚ್ಚಲೊಲೆಯ ಬೆಂಕಿ ಒಂದು ಸಂಭ್ರಮದ ಸಂಗತಿಯಾಗಿತ್ತು. ಒಣಗಿದ ಅಡಕೆಯ ಹಾಳೆ, ತೆಂಗಿನಕಾಯಿಯ ಸಿಪ್ಪೆ, ಕರಟಗಳೆಲ್ಲ ಬೇಸರವಿಲ್ಲದೆ ಉರಿಯುತ್ತ ಬೆಳಗುಗಳನ್ನು ಬೆಚ್ಚಗಿಡುತ್ತಿದ್ದವು. ಜಗಲಿಯ ಮಂಚ, ಕಪಾಟು, ಆರಾಮಕುರ್ಚಿಗಳ ನಡುವೆ ಅಡಗಿರುತ್ತಿದ್ದ ಧೂಳನ್ನು ಗುಡಿಸಿ ತೆಗೆದು, ಬಕೆಟಿನ ಬಿಸಿನೀರಿನಲ್ಲಿ ಅದ್ದಿತೆಗೆದ ಬಟ್ಟೆಯಿಂದ ಅಳಿದುಳಿದ ಧೂಳನ್ನೂ ಒರೆಸಿದ ಮೇಲೆ ಬೆಳಗನ್ನು ಸ್ವಾಗತಿಸಲಿಕ್ಕೆ ಜಗಲಿ ರೆಡಿಯಾಗುತ್ತಿತ್ತು. ಸುಂದರವಾದ ಕೆತ್ತನೆಯ ಮರದ ಬಾಗಿಲು-ಕಂಬಗಳ ಸುತ್ತ ಪುಟ್ಟಪುಟ್ಟ ಹೂಗಳ ರಂಗೋಲಿಯನ್ನು ಬಿಡಿಸಿ, ಅದಕ್ಕೊಪ್ಪುವ ಕೆಂಪು ಹಳದಿ ಗುಲಾಬಿ ಬಣ್ಣಗಳನ್ನು ತುಂಬಿ, ನಡುನಡುವೆ ಆಗತಾನೇ ಅರಳಿದ ಮೋತಿಮಲ್ಲಿಗೆ ಶಂಖಪುಷ್ಪ ದಾಸವಾಳಗಳನ್ನಿಟ್ಟರೆ ಜಗಲಿಗೊಂದು ತನ್ನದೇ ಆದ ಸೌಂದರ್ಯ ಪ್ರಾಪ್ತಿಯಾಗುತ್ತಿತ್ತು. ಪಕ್ಕದಮನೆಯ ಮಗುವೊಂದು ಅಂಬೆಗಾಲಿಡುತ್ತ ಬಂದು ಹೂವಿನ ಎಸಳುಗಳನ್ನೆಲ್ಲ ಕೀಳುತ್ತ, ತನ್ನ ಪುಟ್ಟಪುಟ್ಟ ಬೆರಳುಗಳಿಂದ ರಂಗೋಲಿಯ ಹೂವುಗಳ ಆಕಾರಗಳನ್ನು ಬದಲಾಯಿಸುವ ಸುಂದರ ನೋಟಕ್ಕೆ ಬೆಳಗು ಸಾಕ್ಷಿಯಾಗುತ್ತಿತ್ತು.           ಹೀಗೆ ಬಚ್ಚಲೊಲೆಯ ಹದವಾದ ಬಿಸಿಯಂತೆ ಹರಡಿಕೊಳ್ಳುವ ಬೆಳಗು ಬಾಳೆಎಲೆಯ ಹಸಿರಾಗಿ, ತುಪ್ಪದ ತಿಳಿಹಳದಿಯಾಗಿ, ಜೋನಿಬೆಲ್ಲ-ಮಿಡಿಉಪ್ಪಿನಕಾಯಿಗಳ ಕೆಂಪು ಬಣ್ಣವಾಗಿ ಮುದ ನೀಡುತ್ತ ಯುನಿಫಾರ್ಮಿನ ನೀಲಿಯಾಗಿ ಶಾಲೆಯನ್ನು ತಲುಪುತ್ತಿತ್ತು. ಕಾಲ್ನಡಿಗೆಯ ಕಷ್ಟವನ್ನು ದೂರಗೊಳಿಸಲೆಂದೇ ಹುಟ್ಟಿದಂತೆ ಗೋಚರಿಸುತ್ತಿದ್ದ ಮಾವಿನಮರಗಳು ದಾರಿಯುದ್ದಕ್ಕೂ ಹಣ್ಣುಗಳನ್ನು ಉದುರಿಸುತ್ತಿದ್ದವು; ಬೆಟ್ಟದ ಮೇಲೊಂದಿಷ್ಟು ನೆಲ್ಲಿಕಾಯಿಗಳು ನಮಗಾಗಿಯೇ ಕಾದಿರುತ್ತಿದ್ದವು; ಕಾಸು ಕೊಟ್ಟು ಕೊಂಡುಕೊಳ್ಳಲಾಗದ ಅದೆಷ್ಟೋ ಬಗೆಯ ಹಣ್ಣು-ಕಾಯಿಗಳೆಲ್ಲ ವರ್ಷದುದ್ದಕ್ಕೂ ಪಾಟಿಚೀಲ ಸೇರುತ್ತಿದ್ದವು; ಮಳೆಗಾಲದಲ್ಲಿ ಹುಟ್ಟಿದ ಒರತೆಯೊಂದು ಮಳೆ ನಿಂತಮೇಲೂ ಚಿಮ್ಮುತ್ತ ಬೆಳಗಿನ ಪಯಣವನ್ನು ಸುಂದರವಾಗಿಸುತ್ತಿತ್ತು. ಈ ಎಲ್ಲ ದಿವ್ಯತೆಯ ಅನುಭೂತಿಗಳಿಗೆ ಎದುರಾಗುತ್ತಿದ್ದ ದಿನಗಳಲ್ಲಿ ಮಳೆಯ ನೀರು ಸ್ಕರ್ಟನ್ನು ಒದ್ದೆಯಾಗಿಸುವ ಕಷ್ಟವಾಗಲೀ, ಚಳಿಗಾಲದಲ್ಲಿ ಕೈ-ಕಾಲುಗಳು ಬಿರುಕುಬಿಡುವ ನೋವಾಗಲೀ, ಬಿಸಿಲುಗಾಲದ ಬಾಯಾರಿಕೆ ಸನ್ ಬರ್ನ್ ಗಳಾಗಲೀ, ಪಾಟಿಚೀಲದ ಭಾರವಾಗಲೀ ಯಾವುದೂ ಬಾಧಿಸಲೇ ಇಲ್ಲ. ಸೂರ್ಯ ಹುಟ್ಟುತ್ತಿದ್ದಂತೆಯೇ ತನ್ನ ಬಳಗವನ್ನೆಲ್ಲ ಕರೆದು ಪಾತ್ರೆ ತೊಳೆಯುವ ಜಾಗದಲ್ಲಿ ಅನ್ನದ ಕಾಳನ್ನು ಹೆಕ್ಕುತ್ತಿದ್ದ ಕಾಗೆ ಸಹಬಾಳ್ವೆಯ ಸೊಗಸನ್ನು ತೋರಿಸಿಕೊಟ್ಟರೆ, ಪಾತ್ರೆ ತುಂಬುವಷ್ಟು ಹಾಲು ಕೊಡುತ್ತಿದ್ದ ಹಸು ಪರೋಪಕಾರದ ಪಾಠವನ್ನು ಕಲಿಸಿತು; ದಿನ ಬೆಳಗಾದರೆ ಒಲೆಯಲ್ಲಿ ಉರಿಯುತ್ತಿದ್ದ ಕರಟದಲ್ಲಿ ತ್ಯಾಗದ ಭಾವನೆ ಕಾಣಿಸಿದರೆ, ಅಂಗಳದ ಕಂಬಕ್ಕೆ ಹಬ್ಬಿ ಹೂವರಳಿಸುತ್ತಿದ್ದ ಶಂಖಪುಷ್ಪದ ಬಳ್ಳಿ ಎಲ್ಲ ತೊಡಕುಗಳನ್ನು ಮೀರಿ ಬೆಳಕಿನೆಡೆಗೆ ಸಾಗುವ ದಾರಿಯನ್ನು ತೋರಿಸಿತು.           ಹೀಗೆ ಬದುಕಿನ ತೊಡಕುಗಳೆಲ್ಲವನ್ನೂ ಎದುರಿಸುವ ಶಕ್ತಿಯೊಂದನ್ನು ಬೆಳಗು ತನ್ನೆಲ್ಲ ಚಟುವಟಿಕೆಗಳಿಂದಲೇ ಕಲಿಸಿಕೊಟ್ಟಿತು. ಅಮ್ಮ ಅಡುಗೆಮನೆಯಿಂದಲೇ ವಿಶಿಷ್ಟವಾಗಿ ಗುಡ್ ಮಾರ್ನಿಂಗ್ ಹೇಳುತ್ತಿದ್ದ ರೀತಿ ಮೊಬೈಲ್ ನಲ್ಲಿರುವ ಅಲಾರ್ಮ್ ಗೆ ಶಿಫ್ಟ್ ಆಯಿತು; ಹದವಾದ ಬಿಸಿನೀರಿನೊಂದಿಗೆ ಬೆಳಗನ್ನು ಸ್ವಾಗತಿಸುತ್ತಿದ್ದ ತಾಮ್ರದ ಹಂಡೆಯನ್ನು ಗೀಸರ್ ರಿಪ್ಲೇಸ್ ಮಾಡಿತು; ಕಂಬವನ್ನು ತಬ್ಬಿ ಬೆಳೆಯುತ್ತಿದ್ದ ಶಂಖಪುಷ್ಪದ ಬಳ್ಳಿ ಬಾಲ್ಕನಿಯ ಸರಳುಗಳನ್ನು ಆಶ್ರಯಿಸಿತು. ಬೆಳಗಾದರೆ ತುಂಬುತ್ತಿದ್ದ ಹಾಲಿನ ಚೊಂಬಿನ ಜಾಗವನ್ನು ವಿವಿಧ ಬಣ್ಣ-ಸೈಜುಗಳ ಪ್ಯಾಕೆಟ್ಟುಗಳು ಆಕ್ರಮಿಸಿಕೊಂಡವು. ದಾರಿಯಂಚಿನ ಒರತೆ, ಬಚ್ಚಲೊಲೆಯ ಬೆಂಕಿ, ಪಾಟಿಚೀಲದ ಸಾಂಗತ್ಯ ಎಲ್ಲವೂ ಸಲೀಸಾಗಿ ರೂಪಾಂತರಗೊಂಡು ನೆನಪಿನ ಅಂಗಳಕ್ಕೂ ಬೆಳಗಿನ ಸೌಂದರ್ಯವನ್ನು ಒದಗಿಸಿಕೊಟ್ಟವು. ಕಾಲಕಾಲಕ್ಕೆ ಅಗತ್ಯಕ್ಕೆ ಅನುಗುಣವಾಗಿ ಸ್ವರೂಪ ಬದಲಾಯಿಸಿಕೊಂಡ ಬೆಳಗು ನೆನಪಾಗಿ, ಜೀವನಪಾಠವಾಗಿ, ಜೀವಂತಿಕೆಯ ಚಲನೆಯಾಗಿ, ಸುಂದರ ಅನುಭೂತಿಯಾಗಿ ಬದುಕುಗಳನ್ನು ಸಲಹುತ್ತಲೇ ಇರುತ್ತದೆ. ಬೆಟ್ಟದಲ್ಲಿ ಹುಟ್ಟಿದ ಒರತೆಯೊಂದು ಬಾಲ್ಕನಿಯ ಶಂಖಪುಷ್ಪದ ಬಳ್ಳಿಯೆಡೆಗೆ ಹರಿದು ಸುಂದರವಾದ ಹೂವುಗಳನ್ನು ಅರಳಿಸುತ್ತದೆ. **************************** ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕ(ಣ)ದ ಪರದೆ ಸರಿಯುವ ಮುನ್ನ.

ಸಂಗಾತಿ ಸಾಹಿತ್ಯ ಪತ್ರಿಕೆಯನ್ನು ಅದರ ನಿಲುವನ್ನೂ ಹಲವು ಗೆಳೆಯರು ಗಮನಿಸಿರಬಹುದು. ಸದಾ ಹೊಸ ಆಲೋಚನೆಗಳಿಗೆ ಮತ್ತು ಆಧುನಿಕ ಕಾಲದ ಸಂವೇದನೆಗೆ ವೇದಿಕೆಯಾಗಿರ ಬಯಸುವ ಸಂಗಾತಿ ಸ್ಥಾಪಿತ ಹಿತಾಸಕ್ತಿಗಳನ್ನು ಮತ್ತು ಬರಿಯ ತೋರಿಕೆಯನ್ನು  ಎಂದಿಗೂ ಎತ್ತಿಹಿಡಿದಿಲ್ಲ. ಅವರು ಇವರು ಎಂದಲ್ಲ. ಫೇಸ್ಬುಕ್ ಈ ನಡುವೆ ಬಹುತೇಕರ ನಿರಂತರ ನಿಲುದಾಣ, ತಂಗುದಾಣ, ಹಾಗೂ ಅಭ್ಯಾಸದ ಮೈದಾನವೂ ಆಗಿದೆ. ಹಲವರನ್ನು  ಫಾಲೋ ಮಾಡುತ್ತ ಅವರ ರಚನೆಗಳನ್ನು ಗಮನಿಸಿದರೆ ದಿನದಿಂದ ದಿನಕ್ಕೆ ಪ್ರಭೃದ್ಧರಾಗುತ್ತಿರುವ ಹಲವರಿದ್ದಾರೆ. ಇನ್ನು ಒಂದೋ ಎರಡೋ ಸಂಕಲನ ತಂದೂ ಫೇಸ್ಬುಕ್ಕಲ್ಲಿ ಕ್ರಿಯಾಶೀಲರಾಗಿ ಇರುವ ಹಲವರಿದ್ದಾರೆ. ಇಂಥ ಎಲೆ ಮರೆಯ ಪ್ರತಿಭೆಗಳನ್ನು ಅವರು ಪ್ರಕಟಿಸಿರುವ ಕವಿತೆಗಳ ಅವಲೋಕನದ ಜೊತೆಗೆ ಪರಿಚಯಿಸುವ ಇರಾದೆಯಿಂದ ಹುಟ್ಟಿದ್ದು ಈ ಅಂಕಣ “ಹೊಸ ದನಿ – ಹೊಸ ಬನಿ”. ಈ ಶೀರ್ಷಿಕೆ ಹೊಳೆದದ್ದು ಕೂಡ ಆಕಸ್ಮಿಕವೇನಲ್ಲ. ಖ್ಯಾತ ಕವಿ ಶ್ರೀ ಜಿ ಕೆ ರವೀಂದ್ರ ಕುಮಾರ್ ಬೆಂಗಳೂರು ಆಕಾಶವಾಣಿ ನಿರ್ದೇಶಕರಾಗಿ ನಿಯುಕ್ತರಾದಾಗ ಅವರ ಜೊತೆಯಾದವರು ಮತ್ತೊಬ್ಬ ಪ್ರತಿಭೆ ಡಾ.ಎನ್.ರಘು. ಅದ್ಭುತ ಸಂಗೀತ ಪ್ರತಿಭೆಯ ರಘು ಮತ್ತು ಜಿ ಕೆ ಆರ್ ಜೋಡಿ ನಾಡಿನಾದ್ಯಂತ ಇರುವ ಕವಿಗಳಿಂದ ತಿಂಗಳಿಗೊಂದು ಹೊಸ ಕವಿತೆ ಬರೆಸಿ ಅದಕ್ಕೆ ಅದ್ಭುತ ಸಂಗೀತ ಹೊಂದಿಸಿ ಭಾವಗೀತೆ ಆಗಿಸಿ ಜನಪ್ರಿಯ ಕಾರ್ಯಕ್ರಮ ಮಾಡತೊಡಗಿದರು. ಈ ಹಿಂದೆಯೂ ಆಕಾಶವಾಣಿ “ನವಸುಮ” “ತಿಂಗಳ ಹೊಸಹಾಡು” ಎಂದು ಖ್ಯಾತ ಕವಿಗಳ ರಚನೆಗಳಿಗೆ ಸಂಗೀತ ಜೋಡಿಸಿ ಹಾಡಾಗಿ ಪ್ರಸಾರ ಮಾಡುತ್ತಿತ್ತು. ಎರಡು ಬಾರಿ ನನ್ನ ಕವಿತೆಗಳಿಗೆ ಈ ಅವಕಾಶ ಸಿಕ್ಕು ನನ್ನ ಕವಿತೆಗಳೂ ಹಾಡಾಗಿ ಬಿತ್ತರವಾದುವು. ಆ ಕಾರ್ಯಕ್ರಮದ ಶೀರ್ಷಿಕೆ “ಹೊಸ ದನಿ – ಹೊಸಬನಿ” ಎಂದೇ ಆಗಿತ್ತು. ಹೆಸರೇ ತಿಳಿಸುವಂತೆ ಸುಗಮ ಸಂಗೀತ ಕ್ಷೇತ್ರಕ್ಕೆ ಹೊಸ ದನಿಯನ್ನು ಸೇರಿಸಿ ಆ ಕವಿಯ ಕವಿತೆಗೆ ರಾಗ ಸಂಯೋಜಿಸಿ ತಿಂಗಳ ಹಾಡಾಗಿ ಪ್ರಸಾರ ಮಾಡುತ್ತಿದ್ದ ಆ ಕಾರ್ಯಕ್ರಮ ತುಂಬ ಜನಪ್ರಿಯವೂ ಆಯಿತು. ಅದೇ ಶೀರ್ಷಿಕೆಯಲ್ಲೇ ಇವತ್ತು ಫೇಸ್ಬುಕ್ಜಿನಲ್ಲಿ ಬರೆಯುತ್ತಿರುವ ಕವಿತೆಗಳನ್ನು ಗುರ್ತಿಸಿ ತನ್ಮೂಲಕ ಕವಿಯ ಸಾಹಿತ್ಯಕ ಸಾಧನೆಯನ್ನು ಓದುಗರಿಗೆ ತಿಳಿಸುವುದು ಈ ಅಂಕಣದ ಉದ್ದೇಶ. ಕಳೆದ ಮೂವತ್ತೈದು ವರ್ಷಗಳಿಂದಲೂ ಕವಿತೆಯ ಸಾಗಂತ್ಯದಲ್ಲಿ ಬದುಕು ಕಂಡುಕೊಂಡ ನನಗೆ ಹೊಸಕಾಲದ ಅದರಲ್ಲೂ ಹೊಸ ಮಾಧ್ಯಮಗಳಾದ ಫೇಸ್ಬುಕ್ ಮತ್ತು ವಾಟ್ಸ್ ಅಪ್ ಗುಂಪುಗಳಲ್ಲಿ ಹಾಗೇ ವೈಯುಕ್ತಿಕ ಪೇಜಲ್ಲಿ ಬರೆಯುತ್ತಿರುವ ಹಲವರ ಬಗ್ಗೆ ಖುಷಿ ಮತ್ತು ಕೆಲವರ ಬಗ್ಗೆ ಸಂತಾಪಗಳೂ ಇವೆ. ಹೊಗಳಿಕೆಗೋ ಲೈಕಿಗೋ ಅಥವ ತುಂಬ ಈಸಿಯಾದ ಇಮೋಜಿಗಳಿಗೋ ಇರುವ ಪ್ರಾಧಾನ್ಯತೆ ವಿಮರ್ಶೆಯ ನಿಜದ ಮಾತುಗಳಿಗೆ ಪ್ರೋತ್ಸಾಹಕ್ಕೆ ಹೇಳಿದ ತಿದ್ದುಪಡಿಗಳಿಗೆ ಇಲ್ಲದುದನ್ನು ಕಂಡಾಗ ಬೇಸರವೂ ಆಗಿದೆ. ಕಾವ್ಯಕೇಳಿ, ಕಾಜಾಣ, ಪದ್ಯ, ಮೊದಲಾದ ತಾಣಗಳು, ಹಾಗೇ ಅವಧಿ, ಕೆಂಡಸಂಪಿಗೆ, ಸಂಗಾತಿ, ಸಂಪದ ಮೊದಲಾದ ವೆಬ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಕವಿತೆಗಳೂ ಇದುವರೆಗೂ ನಂಬಿದ್ದ ಸಾಹಿತ್ಯ ಚರಿತ್ರೆ ಕಟ್ಟಿಕೊಟ್ಟಿದ್ದ ಮಿತಿ ಮತ್ತು ಪಾತಳಿಯನ್ನು ವಿಸ್ತರಿಸಿ ಹಾಗೇ ಕೆಡವಿ ಹೊಸದನ್ನು ಕಟ್ಟುತ್ತಿರುವ ಈ ಕಾಲದ ಎಲ್ಲ ನಿಜ ಕವಿಗಳನ್ನೂ ಅಭಿನಂದಿಸುತ್ತೇನೆ. ಈ ಕುರಿತು ಸದ್ಯ ಅನಿಸಿದ್ದನ್ನು ವಿಸ್ತರಿಸಿ ಈ ಲೇಖನ. ನಮ್ಮಲ್ಲಿ ಬಹಳ ಜನ ಕವಿತೆಯೆಂದರೆ ಕವಿಗೋಷ್ಠಿಯೆಂದರೆ ಮೂಗು ಮುರಿಯುತ್ತೇವೆ. ಕವಿತೆಯನ್ನು ಓದುವುದು ಅಥವ ಬರೆಯುವುದೆಂದರೆ ಮಾಡಲು ಬೇರೇನೂ ಕೆಲಸವಿಲ್ಲದವರು ಹೊಂಚಿಕೊಂಡ ಕೆಲಸವೆಂದು ಅನ್ನುವವರೂ ಇದ್ದಾರೆ. ಆದರೂ ಸಾಹಿತ್ಯ ಸಮ್ಮೇಳನಗಳ ಮುಖ್ಯ ಆಕರ್ಷಣೆಯೇ ಕವಿಗೋಷ್ಠಿಗಳಾಗಿರುವುದೂ ವಿಶೇಷವೇ. ಪಂಡಿತರಿಗಷ್ಟೇ ಕವಿತೆ ಪಾಮರರಿಗೆ ಏಕದರ ಗೊಡವೆ ಅನ್ನುವವರೂ ಇದ್ದಾರೆ. ಇನ್ನು ಕವಿಯಲ್ಲದವರು ಅಥವ ಕವಿತೆಯ ಗೊಡವೆ ಬೇಡದೆಯೂ ಕವಿತೆಯ ಜೊತೆಗೆ ಅನಿವಾರ್ಯವಾಗಿ ಬೆರೆಯುವವರೆಂದರೆ ಅದನ್ನು ಪಠ್ಯವಾಗಿ ಓದಲೇಬೇಕಿರುವ ವಿದ್ಯಾರ್ಥಿಗಳು ಮತ್ತು ಅದನ್ನವರಿಗೆ ಪಾಠ ಹೇಳಬೇಕಾದ ಗುರುತರ ಜಾವಾಬ್ದಾರಿ ಹೊಂದಿರುವ ಅಧ್ಯಾಪಕರು. ಕವಿತೆಯನ್ನು ಪಾಠ ಮಾಡುವುದು ಎಂದರೆ ಅಧ್ಯಾಪಕರಿಗೆ ಹಿಂಜರಿಕೆ.ವರ್ಷಾವಧಿ  ಪರೀಕ್ಷೆಯಲ್ಲಿ ಕವಿತೆಗಳ ಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವುದೆಂದರೆ ವಿದ್ಯಾರ್ಥಿಗಳಿಗೆ ಅಂಜಿಕೆ. ಅರ್ಥವಾಗದು ಎಂಬ ಅಂಜಿಕೆ ಹುಡುಗರಿಗೆ. ಅರ್ಥವಾಗದಿದ್ದರೆ ಎಂಬ ಅಂಜಿಕೆ ಅಧ್ಯಾಪಕರಿಗೆ. ಓದಿದ ಕವಿತೆ ಅರ್ಥವಾಗದಿದ್ದರೆ ನಮ್ಮ ಅಹಂಕಾರಕ್ಕೆ ಪೆಟ್ಟು. ಅದಕ್ಕೇ ನಮಗೆ ಕವಿತೆಯ ಉಸಾಬರಿಯೇ ಬೇಡ ಎಂದು ಮುಖ ತಿರುಗಿಸುವ ಮಂದಿ ಬಹಳ. ಕವಿತೆಯೊಂದನ್ನು ಓದಿದೊಡನೆಯೇ ಅದು ಅರ್ಥವಾಗಲೇ ಬೇಕು ಎಂದು ದಯವಿಟ್ಟು ಹಠಮಾಡಬೇಡಿ. ಕವಿತೆಯನ್ನು ಅರ್ಥದ ಗೂಟಕ್ಕೆ ಕಟ್ಟಬೇಡಿ. ಅದನ್ನು ಸುಮ್ಮನೆ ವಿಹಾರಕ್ಕೆ ಬಿಡಿ. ಅಂಗಳದಲ್ಲಿ ಆಡಬಯಸುವ ಪುಟ್ಟ ಮಗುವಿನಂತೆ ಕವಿತೆ ಆರಾಮಾಗಿ ನಿಮ್ಮ ಮನದ ಅಂಗಳದಲ್ಲಿ ಆಡಿಕೊಳ್ಳಲಿ. ಕವಿತೆಯ ಭಯವನ್ನು ಗೆಲ್ಲಲು ನಾವು ಆರಂಭದಲ್ಲಿ ಕೈಗೊಳ್ಳಬೇಕಾದ ಸುಲಭ ಉಪಾಯವಿದು. ಸುಮ್ಮನೆ ಓದುತ್ತಾ ಹೋದರೆ, ಓದುತ್ತಲೇ ಹೋದರೆ ಹೇಗೆ ಈಗ ತಾನೇ ಓಡಾಡಲು ಪ್ರಾರಂಭಿಸಿರುವ ಮಗು ತನ್ನ ಆಟದಲ್ಲಿ ಒಂದು ಲಯ ಕಂಡೀತೋ ಹಾಗೆಯೇ ನೀವೂ ಕವಿತೆಯನ್ನು ಕಾಣಬೇಕು. ಕವಿತೆ ಹೇಗೆ ನಡೆಯುವುದು, ಹೇಗೆ ನಗುವುದು, ಹೇಗೆ ಅತಾರ್ಕಿಕವನ್ನು ಪಲುಕುವುದು ಗಮನಿಸಿ. ಕವಿತೆ ಎಂದರೆ ಮೊದಲು ಗಮನಿಸ ಬೇಕಾದದ್ದು ಅದನ್ನು ಕವಿಯು ಹೇಗೆ ಗುನುಗುನಿಸುವ ಮಾತುಗಳನ್ನು ಹಿಡಿದು ನೇಯ್ದು ಮಾಲೆ ಮಾಡಿದ್ದಾನೆ ಎಂಬುದನ್ನು ಓದಿನ ಮೂಲಕವೇ ದಕ್ಕಿಸಿಕೊಳ್ಳಬೇಕು. ಕವಿತೆಯ ಗ್ರಹಿಕೆ ಎಂಬುದು ಕವಿತೆಯ ಶಬ್ದ ಸಾಮಗ್ರಿಯಿಂದ ನೀವೇ ಸ್ವಂತ ಕಟ್ಟಿಕೊಂಡ ಗ್ರಹಿಕೆ ಎಂಬುದನ್ನು ಮರೆಯದಿರಿ. ಈ ಪದ್ಯದ ಇನ್ನೊಬ್ಬ ಓದುಗ ಭಿನ್ನವಾದ ಬೇರೆ ಒಂದು ಗ್ರಹಿಕೆಯನ್ನೇ ತನ್ನ ಓದಿನಿಂದ ಕಟ್ಟಿಕೊಂಡರೆ ನೀವು ಆತಂಕಗೊಳ್ಳಬೇಕಿಲ್ಲ. ಸದ್ಯಕ್ಕೆ ಇದು ನಿಮ್ಮ ಕಾವ್ಯ ಗ್ರಹಿಕೆ. ಮುಂದೆ ನಿಮ್ಮ ಓದು ಪರಿಷ್ಕಾರಗೊಂಡಂತೆ ಕವಿತೆ ಬೇರೊಂದು ವಿಭಿನ್ನವಾದ ಗ್ರಹಿಕೆಯನ್ನೇ ಕಟ್ಟಿಕೊಳ್ಳಬಲ್ಲುದು. ಕವಿತೆ ಒಂದೇ; ಆದರೆ ಅದರ ಗ್ರಹಿಕೆಗಳು ಅನಂತ. ಈ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಹೊಸ ಕಾವ್ಯಾರ್ಥಿಗಳು ತಮ್ಮ ಕಾವ್ಯ ಶೋಧವನ್ನು ಮುಂದುವರೆಸಲಿ. ಕವಿತೆಯೆಂಬುದು ನಿರಂತರ ವಿಕಸನಶೀಲವಾದ ಒಂದು ಜೈವಿಕ ಭಾಷಾನುಸಂಧಾನ ಎಂಬ ಅರಿವು ನಿಮಗಿರಲಿ. ಅದಕ್ಕಿಂತ ಮುಖ್ಯ ನಮ್ಮ ಪೂರ್ವಸೂರಿಗಳನ್ನೂ ಹಾಗೇ ಸಮಕಾಲೀನರನ್ನೂ ಎಷ್ಟು ಓದಿಕೊಂಡಿದ್ದೀರಿ ಎನ್ನುವುದು ಮುಖ್ಯ. ಸಾಹಿತ್ಯ ಚರಿತ್ರೆಯ ಅದು ನಡೆದ ಬಂದ ದಾರಿಯ ಬಗ್ಗೆ ಕೊಂಚವಾದರೂ ತಿಳುವಳಿಕೆ ನಾವು ನಡೆಯುತ್ತಿರುವ ದಾರಿಗೆ ತೋರುಬೆರಳು ಅನ್ನುವುದನ್ನು ಮರೆಯದಿರೋಣ.  ಹಲವು ಯುವ ಬರಹಗಾರರು ಪರಂಪರೆಯನ್ನು ಧ್ಯಾನಿಸದೇ ಸುಮ್ಮನೇ ಮುಂದುವರಯುತ್ತಿರುವುದನ್ನೂ ಓದಿನಿಂದ ಬಲ್ಲೆ. ನಿಜಕ್ಕೂ ಭಾಷೆಯ ಸೊಗಸು, ಅದರ ನಿರ್ಮಿತಿಯ ವಿನ್ಯಾಸ ಹಾಗೂ ಮಿತಿ ಅರ್ಥವಾಗುವುದೇ ನಿರಂತರದ ಓದಿನಿಂದ. ಅನ್ಯರನ್ನು ಓದದೇ ನಾವು ನಮ್ಮ ಕಾವ್ಯ ಬೆಳೆಯಲಾರದು. ಸದ್ಯದ ಕಾವ್ಯ ಇನ್ನೂ ತನ್ನ ದಾರಿಯನ್ನು ಸ್ಪಷ್ಟಗೊಳಿಸಿಕೊಳ್ಳಬೇಕಿದೆ. ನವೋದಯದ ರಮ್ಯತೆ ಕಳೆದು ನವ್ಯದ ಪ್ರತಿಮೆ ರೂಪಕಗಳೂ ಸವೆದು ಬಂಡಾಯದ ದನಿ ಉಡುಗಿಹೋಗಿರುವ ಸಂದರ್ಭದಲ್ಲಿ ಕಾವ್ಯವೆಂದರೆ ಆ ಕ್ಷಣ ಅನ್ನಿಸಿದ್ದನ್ನು ತತ್ ಕ್ಷಣವೇ ಬರೆದು ಪ್ರಕಟಿಸುವ ಸಾಮಾಜಿಕ ಜಾಲತಾಣಗಳ ಪುಟಗಳಾಗಿ ಬದಲಾಗುತ್ತಿದೆ. ಇದು ಗಮನಿಸಬೇಕಾದ ಮುಖ್ಯ ಸಂಗತಿ. ಕವಿತೆ ಬರೆಯುವವರೆಂದರೆ ಅದ್ಯಾಪಕರೇ ಎಂಬ ಹುಸಿಯನ್ನು ವರ್ತಮಾನದ ಕವಿಗಳು ಅಳಿಸಿಹಾಕಿದ್ದಾರೆ. ಬದುಕಿನ ಹಲವು ಸ್ತರಗಳಿಂದ ಅನುಭವಗಳಿಂದ ಹುರಿಗೊಂಡ ಅನೇಕ ಮನಸ್ಸುಗಳು ಆಧುನಿಕ ಕಾವ್ಯ ಪ್ರಕಾರವನ್ನು ಕಟ್ಟುತ್ತಿವೆ. ತಮಗನ್ನಿಸಿದ್ದನ್ನು ನಿರ್ಭಿಡೆಯಿಂದ ಸ್ಪಷ್ಟವಾಗಿ ಹೇಳುವ ಸಿದ್ಧ ಸಾಮಗ್ರಿ ಈಕಾಲದ ಕವಿಗಳಿಗಿರುವುದು ವಿಶೇಷ. ಹೊಸ ದನಿ- ಹೊಸ ಬನಿಯ ಮೂಲಕ ಎಲ್ಲರನ್ನೂ ಗುರುತಿಸುತ್ತೇವೆ, ಬೆನ್ನು ತಟ್ಟುತ್ತೇವೆ ಎನ್ನುವುದಷ್ಟೇ ಈ ಅಂಕಣದ ಉದ್ದೇಶವಲ್ಲ. ಆದರೆ ನಿಜಕ್ಕೂ ಚೆನ್ನಾದ ಕವಿತೆಗಳನ್ನು ಬರೆಯುತ್ತಿದ್ದರೂ ಬೇರೆ ಬೇರೆ ಕಾರಣಗಳಿಂದಾಗಿ ಪತ್ರಿಕೆಗಳಲ್ಲಿ ಅಷ್ಟಾಗಿ ಕಾಣಿಸಿ ಕೊಳ್ಳದ ಕವಿಗಳನ್ನು ಪರಿಚಯಿಸುವುದು ಮುಖ್ಯ ಉದ್ದೇಶ. ಇದರ ಜೊತೆಗೆ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಣೆಗಾಗಿ ಕಾದು ಕಾದು ಕಡೆಗೆ ಫೇಸ್ಬುಕ್ಕಲ್ಲಿ ಪ್ರಕಟಿಸಿ ಭೇಶ್ ಅನ್ನಿಸಿಕೊಂಡ ಹಲವರನ್ನು ನಾವು ಬಲ್ಲೆವು. ಫೇಸ್ಬುಕ್ ಗೆಳೆಯಲ್ಲಿ ವಿನಂತಿ. ಸ್ಟೇಟಸ್ಸಿನಲ್ಲಿ ಎರಡು ಸಾಲು ಬರೆದೋ, ಅವರಿವರ ಸಾಲು ಎಗರಿಸಿ ತಮ್ಮದೆಂದೇ ಹೇಳುವವರು ಬೇಕಿಲ್ಲ ಉಳಿದಂತೆ ಚೆಂದಾಗಿ ಬರೆಯುತ್ತಿದ್ದೇನೆ ಅಂತ ಅನ್ನಿಸಿದವರು ಸಂಗಾತಿಗೆ ತಮ್ಮ ಹತ್ತು ಹನ್ನೆರಡು ಕವಿತೆಗಳ ಗುಚ್ಛದೊಂದಿಗೆ ನಿಮ್ಮ ಭಾವಚಿತ್ರ ಮತ್ತು ಸ್ವಪರಿಚಯದೊಂದಿಗೆ ಕಳಿಸಿ. ನಿಮ್ಮ ಕವನ ಗುಚ್ಛದಲ್ಲಿ ಫೇಸ್ಬುಕ್ಕಲ್ಲಿ ಪ್ರಕಟಿಸಿದ ದಿನಾಂಕಗಳನ್ನು ನಮೂದಿಸಿ ಅಥವ ಆ ಪದ್ಯಗಳ ಲಿಂಕ್ ಲಗತ್ತಿಸಿ. ಕವಿತೆಗಳು ಕನಿಷ್ಠ ಹದಿನೈದು- ಇಪ್ಪತ್ತು ಸಾಲಾದರೂ ಇರಲಿ. ಪ್ರತಿ ಗುರುವಾರ ಉದ್ದೇಶಿತ ಅಂಕಣ ಪ್ರಕಟವಾಗಲು ಓದುಗರ, ಕವಿಗಳ ಸಹಕಾರವೂ ಮುಖ್ಯ. *********************************** ಲೇಖಕರ ಬಗ್ಗೆ: ತರೀಕೆರೆ ಮೂಲದವರಾದ ಡಿ.ಎಸ್.ರಾಮಸ್ವಾಮಿಯವರು ಜೀವವಿಮಾ ನಿಗಮದ ಅಧಿಕಾರಿಯಾಗಿ ಅರಸೀಕೆರೆಯಲ್ಲಿ ನೆಲೆಸಿದ್ದಾರೆ.ಇವರ ‘ಉಳಿದ ಪ್ರತಿಮೆಗಳು’ ಕವನಸಂಕಲನಕ್ಕೆಮುದ್ದಣ ಕಾವ್ಯ ಪ್ರಶಸ್ತಿದೊರೆತಿದೆ.

ಅಂಕ(ಣ)ದ ಪರದೆ ಸರಿಯುವ ಮುನ್ನ. Read Post »

ಅಂಕಣ ಸಂಗಾತಿ, ದಿಕ್ಸೂಚಿ

ಬಿಟ್ಟು ಬಿಡಿ ಹೋಲಿಕೆ ಬೆಳೆಸಿಕೊಳ್ಳಿ ಸ್ವಂತಿಕೆ

ಅಂಕಣ ‘ಪಕ್ಕದ ಮನೆ ಪದ್ಮ ಕೋಗಿಲೆ ತರ ಹಾಡುತ್ತಾಳೆ. ನೀನೂ ಇದ್ದಿಯಾ. ನಿನ್ನ ಗೆಳೆಯ ರವಿ ನೋಡು ಭಾಷಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದವರೆಗೂ ಬಹುಮಾನ ಪಡೆದಿದ್ದಾನೆ. ಹಾಡು ಭಾಷಣ ಇರದಿದ್ದರೆ ಅಷ್ಟೇ ಹೋಯ್ತು ರಜನಿ ತರಹ ಕ್ಲಾಸಿಗೆ ರ‍್ಯಾಂಕ್ ಬರೋಕೆ ಆಗಲ್ಲ ಯಾವಾಗ ನೋಡಿದರೂ ಮನೆ ಮುಂದೆ, ಮೈದಾನದಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಆಡ್ತಿಯಾ ನಾಯಿ ಬಾಲ ಯಾವಾಗಲೂ ಡೊಂಕು ಅದನ್ನು ನೇರ ಮಾಡಲು ಸಾಧ್ಯವಿಲ್ಲ. ನಾ ಹೇಳಿದಾಗ ಮಾತ್ರ ಅಭ್ಯಾಸ ಮಾಡುತ್ತಿಯಾ.’ ಇದು ರಾಜುವಿನ ಅಪ್ಪ ಅವ್ವನ ಮಾತುಗಳು. ರಾಜುನಿಗೂ ಹೆತ್ತವರ ಮಾತುಗಳನ್ನು ಕೇಳಿ ಕೇಳಿ ರೋಸಿ ಹೋಗುತ್ತದೆ. ನಾನು ಆಟದಲ್ಲಿ ಮುಂದಿರೋದು ಇವರಿಗೆ ಕಾಣುವುದೇ ಇಲ್ಲ ಎಂದು ಗೊಣಗಿಕೊಳ್ಳುತ್ತಾನೆ. ಮನಃಸ್ಥಿತಿ ಸರಿ ಇರದಿದ್ದಾಗ ಹೌದಲ್ಲ ನನಗೆ ಚೆನ್ನಾಗಿ ಹಾಡೋಕೆ ಬರಲ್ಲ. ಭಾಷಣ ಮಾಡೋಕೆ ಬರಲ್ಲ. ಅಂಕ ಜಾಸ್ತಿ ಗಳಿಸಲು ಆಗಿಲ್ಲ. ನಾನು ಕೆಲಸಕ್ಕೆ ಬಾರದವನು ಎಂದೆನಿಸುತ್ತದೆ. ಇದು ಕೇವಲ ರಾಜುವಿನ ಆತಂಕದ ಸ್ಥಿತಿಯಲ್ಲ. ನಮ್ಮಲ್ಲಿ ಬಹುತೇಕ ಜನ ಪಾಲಕರ ಮತ್ತು ಮಕ್ಕಳ ಸಮಸ್ಯೆ. ಇತರರೊಂದಿಗಿನ ಹೋಲಿಕೆ ಬಹುತೇಕ ಸಲ ನೋವನ್ನೇ ತರುವುದು. ಹೋಲಿಕೆಯಿಂದ ಹೊರ ಬರುವುದು ಹೇಗೆ ಎಂಬುದು ಹಲವಾರು ಯುವಕ/ತಿಯರ ಸಮಸ್ಯೆ. ಹೋಲಿಕೆಯ ಕುಣಿಕೆಯಿಂದ ಬಚಾವಾಗಲು ಕೆಲವು ಸುಳಿವುಗಳು ಒಬ್ಬರಂತೆ ಒಬ್ಬರಿಲ್ಲ ನಮಗೆಲ್ಲ ಗೊತ್ತಿರುವ ಹಾಗೆ ಶಕ್ತಿಯಲ್ಲಿ ಅಶ್ವ ಶಕ್ತಿ ಪ್ರಸಿದ್ಧವಾದುದು.ಅದಕ್ಕೆ ಮರ ಹತ್ತುವ ಸ್ಪರ್ಧೆಯಲ್ಲಿ ಅದು ನಪಾಸಾಗುತ್ತದೆ. ಮೀನು  ಸಲೀಸಾಗಿ ಈಜುವುದು ಅದಕ್ಕೆ ಭೂಮಿಯ ಮೇಲೆ ಓಡುವ ಸ್ಪರ್ಧೆ  ಇಟ್ಟರೆ ಸತ್ತೇ ಹೋಗುತ್ತದೆ. ಪಶು ಪ್ರಾಣಿಗಳ ಹಾಗೆಯೇ ನಮ್ಮಲ್ಲಿಯೂ ಪ್ರತಿಯೊಬ್ಬರೂ ಒಂದೊಂದರಲ್ಲಿ ವಿಶೇಷ ಪ್ರತಿಭೆಯನ್ನು ಹೊಂದಿರುತ್ತೇವೆ. ಈಗಾಗಲೇ ಗೆಲುವು ಸಾಧಿಸಿದವರನ್ನು ಕಂಡು ಅವರಂತಾಗಲು ಹೋದರೆ ಅವರಿಗೆ ಹೋಲಿಸಿಕೊಂಡು ಕೀಳರಿಮೆಯಿಂದ ಬಳಲುತ್ತೇವೆ. ನಿಮ್ಮಲ್ಲಿರುವ ಶಕ್ತಿಯನ್ನು ಕಡೆಗಣಿಸುವುದು ದೊಡ್ಡ ತಪ್ಪು.ಜೀವನದ ಕೊನೆಯಲ್ಲಿ ಶಕ್ತಿಯ ಅರಿವಾದರೆ ನಿಷ್ಪ್ರಯೋಜಕ. ಹಾಗೇ ಯಾರನ್ನೂ ಕಡೆಗಣಿಸಬೇಡ.  ಕಬೀರರು ಹೇಳಿದಂತೆ,’ ಕಾಲ ಕೆಳಗಿರುವ ಕಡ್ಡಿಯನ್ನು ಕಡೆಗಣಿಸಬೇಡ. ಅದೇ ಹಾರಿ ಬಂದು ನಿನ್ನ ಕಣ್ಣಲ್ಲಿ ನೆಟ್ಟು ನೋವನ್ನುಂಟು ಮಾಡಬಹದು.’ ಮತ್ತೊಬ್ಬರ ನಕಲು ಮಾಡುವುದು ತರವಲ್ಲ. ಪ್ರತಿಯೊಬ್ಬರಿಗೂ ಪಂಚೇಂದ್ರಿಯಗಳಿವೆ. ಆದರೆ ಅವು ನೋಡಲು ಬೇರೆ ಬೇರೆಯೇ ಆಗಿವೆ. ಅಂದರೆ ಒಬ್ಬರಂತೆ ಒಬ್ಬರಿಲ್ಲ. ಹೀಗಾಗಿ ಪ್ರತಿಯೊಬ್ಬರಲ್ಲಿ ಹುದುಗಿರುವ ಪ್ರತಿಭೆಗಳು ಭಿನ್ನ ಭಿನ್ನ. ಎಂಬ ವಿಷಯವನ್ನು ಮನದಟ್ಟು ಮಾಡಿಕೊಂಡರೆ ಹೋಲಿಕೆಯಾಚೆ ಬರುವುದು ಸುಲಭ ಕೊರತೆಯ ಭಯ ಬೇಡ ಬೇರೆಯವರಲ್ಲಿರುವ ಪ್ರತಿಭೆ ನನ್ನಲ್ಲಿಲ್ಲ. ನನ್ನಲ್ಲಿ ಕೊರತೆಗಳ ಆಗರವೇ ಇದೆ. ಈ ಕೊರತೆಗಳ ಕಾರಣದಿಂದ ನನಗೇನೂ ಸಾಧಿಸಲಾಗುವುದಿಲ್ಲ ಎನ್ನುವ ಭ್ರಮೆಯಿಂದ ಹೊರ ಬನ್ನಿ. ಇತರರ ಜಾಣ್ಮೆ, ಸೌಂದರ್ಯ, ಸಿರಿವಂತಿಕೆಗೆ ಹೋಲಿಸಿಕೊಂಡು ಕೊರಗುವುದನ್ನು ನಿಲ್ಲಿಸಿ. ಇತರರಲ್ಲಿರುವುದು ಶ್ರೇಷ್ಟ. ನನ್ನಲ್ಲಿರುವುದು ಕನಿಷ್ಟ. ಎಂಬ ನಿರ‍್ಧಾರಕ್ಕೆ ಬರಬೇಡಿ. ನಮ್ಮ ನಮ್ಮ ಮನೋವೃತ್ತಿಯಂತೆ ನಮ್ಮ ಇಚ್ಛೆಗಳಿರುತ್ತವೆ.ಎನ್ನುತ್ತಾರೆ ಬಲ್ಲವರು.ಸುತ್ತ ಮುತ್ತ ಇರುವವರ ಅಭಿಪ್ರಾಯವನ್ನು ಮನ್ನಿಸಿ ಅದರಂತೆ ನಡೆಯದೇ ಹೋದರೆ ನನ್ನಲ್ಲಿರುವ ಕೊರತೆಯ ಕಂದಕ ಮುಚ್ಚಲಾಗುವುದಿಲ್ಲ. ಬೇರೆಯವರ ಮಾತಿನಂತೆ ನಡೆದುಕೊಂಡರೆ ಅದು ನಿಸ್ವಾರ‍್ಥ.ಕೊರತೆಯ ನೀಗಿಸಿಕೊಳ್ಳುವುದರಲ್ಲಿ ತೊಡಗಿಕೊಂಡರೆ ಅದು ಸ್ವಾರ್ಥ ಎಂಬ ತಪ್ಪು ಕಲ್ಪನೆಯಲ್ಲಿ ಕಾಲ ಕಳೆಯಬೇಡಿ. ‘ತನ್ನ ಹಿತವನ್ನು ನೋಡಿಕೊಳ್ಳುವುದು ಸ್ವಾರ‍್ಥವಲ್ಲ. ಇತರರ ಹಿತಕ್ಕೆ ದಕ್ಕೆ ತರುವುದೇ ಸ್ರ‍ಾರ್ಥ.’ ಎಂಬುದನ್ನು ಅರಿತು ಮುನ್ನಡೆಯಿರಿ. ಆಸಕ್ತಿ ಗುರುತಿಸಿಕೊಳ್ಳಿ ವಾತ್ಸಾಯನ ಮುನಿಯ ನುಡಿಯಂತೆ ‘ಒಂದೇ ಒಂದು ದೋಷವು ಎಲ್ಲ ಗುಣಗಳನ್ನು ಕೆಡಿಸಿಬಿಡುತ್ತದೆ.’ ಹೋಲಿಕೆಯಲ್ಲಿ ಬಿದ್ದು ಬಿಟ್ಟರೆ ನಮ್ಮೆಲ್ಲ ಸಾರ್ಥಕ್ಯ ಶಕ್ತಿ ವಿನಾಶವಾದಂತೆಯೇ ಸರಿ. ನಿಮಗೆ ಯಾವ ರಂಗದಲ್ಲಿ ಆಸಕ್ತಿ  ಇದೆ ಎಂಬುದನ್ನು ಗುರುತಿಸಿ. ಬಡತನದ ಕಾರಣದಿಂದ ಶಾಲಾ ಶಿಕ್ಷಣ ಪಡೆಯದ ಬಾಲಕನೊಬ್ಬ ಹೊಟ್ಟೆ ಪಾಡಿಗಾಗಿ ಬುಕ್ ಬೈಂಡಿಂಗ್ ಕೆಲಸ ಮಾಡುತ್ತಿದ್ದ. ಬೈಂಡಿಂಗಿಗೆ ಬಂದ ಪುಸ್ತಕಗಳನ್ನು ಓದುವ ಗೀಳು ಬೆಳೆಸಿಕೊಂಡ. ಬರ ಬರುತ್ತ ವಿಜ್ಞಾನದಲ್ಲಿ ತನಗಿರುವ ಆಸಕ್ತಿಯನ್ನು ಗುರುತಿಸಿಕೊಂಡು ಸರ್ ಹಂಪ್ರೆ ಡೇವಿಯ ಸಹಾಯಕನಾಗಿ ಕಾರ‍್ಯ ನಿರ‍್ವಹಿಸಿ ಕೊನೆಗೆ  ಜಗತ್ತಿನ  ಸುಪ್ರಸಿದ್ಧ ವಿಜ್ಞಾನಿಯಾದ ಆತನೇ ಮೈಕೆಲ್ ಫ್ಯಾರಡೆ. ಆಸಕ್ತಿಯನ್ನು ಗುರುತಿಸಿಕೊಳ್ಳಬೇಕೆಂದರೆ ನಿಮ್ಮನ್ನು ನೀವು ಅರ್ಥೈಸಿಕೊಳ್ಳಿ. ಅಂದರೆ  ನಿಮ್ಮಲ್ಲಿರುವ ಬಲ ಮತ್ತು ಬಲಹೀನತೆಗಳನ್ನು ತಿಳಿದುಕೊಳ್ಳಿ. ಈ ಕೆಲಸ ನನಗೆ ತುಂಬಾ ಖುಷಿ ನೀಡುತ್ತದೆ. ಇದನ್ನು ನಾನು ಇತರರಿಗಿಂತ ಬಹಳಷ್ಟು ಚೆನ್ನಾಗಿ ಮಾಡಬಲ್ಲೆ. ವಿವಿಧ ವಿಷಯಗಳಲ್ಲಿ ಆಸಕ್ತಿ ಇದೆ ಎಂದೆನಿಸಿದಾಗ ಇದನ್ನು ಮಾಡದಿದ್ದರೆ ಏನೋ ಕಳೆದುಕೊಂಡಂತೆ ಅನಿಸುತ್ತದೆ. ಈ ಕೆಲಸ ನನಗೆ ಪಂಚ ಪ್ರಾಣ. ಇದನ್ನು ಮಾಡದೇ ನಾನಿರಲಾರೆ.ಅಂತ ಹೇಳುತ್ತಿರೋ ಅದೇ ನಿಜವಾಗಲೂ ನಿಮ್ಮ ಆಸಕ್ತಿ ಎಂದು ಪರಿಗಣಿಸಿ ನಿಮ್ಮ ಗುರಿಯನ್ನು ನಿರ‍್ಣಯಿಸಿ. ನೀವು ನೀವಾಗಿರಿ ಬೇರೆಯವರು ನಿಮ್ಮನ್ನು ಇಷ್ಟಪಡಬೇಕೆಂದು ನಿಮಗೆ ಇಷ್ಟವಿಲ್ಲದ, ನಿಮ್ಮ ವ್ಯಕ್ತಿತ್ವಕ್ಕೆ ಹೊಂದದ ಬದಲಾವಣೆಗಳಿಗೆ ಮುಂದಾಗವೇಡಿ. ಭೌತಿಕವಾಗಿ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಲು ಪ್ರಯತ್ನಿಸಬೇಡಿ. ನಿಮ್ಮ ಕುಟುಂಬದ ಆಚರಣೆಗಳು, ಪದ್ದತಿಗಳು, ಸತ್ಸಂಪ್ರದಾಯಗಳು, ಹಬ್ಬ ಹರಿದಿನಗಳು, ವ್ರತಾಚರಣೆಗಳು ಮೌಢ್ಯತೆಯಿಂದ ಮುಕ್ತವಾಗಿರುವಾಗ ಅವುಗಳನ್ನು ಬದಲಾಯಿಸುವುದರಿಂದ ಅರ‍್ಥವಿಲ್ಲ. ಸಣಕಲು ದೇಹದವನು ದಪ್ಪದಾಗಿ ಕಾಣಲು ಸ್ವೆಟರ್ ಧರಿಸಿದರೆ ನೀವು ಅದನ್ನು ಫ್ಯಾಷನ್ ಎಂದು ತಿಳಿದು ತಡೆದುಕೊಳ್ಳಲಾರದ ಬೇಸಿಗೆಯ ಧಗೆಯಲ್ಲಿ ಒದ್ದಾಡಬೇಕಾಗುತ್ತದೆ.  ಅಂಧರಾಗಿ ಅನುಕರಿಸಲು ಹೋದರೆ ನಗೆಪಾಟಲಿಗೆ ಈಡಾಗುತ್ತೀರಿ. ನಿಮ್ಮ ದೇಹಕ್ಕೆ ಕಾಲಮಾನಕ್ಕೆ ಏನು ಸೂಕ್ತವೋ ಅದನ್ನೇ ಧರಿಸಿ. ನಟ ಪುನೀತ್ ರಾಜ್ ಕುಮಾರ ಎಂದರೆ ಅಚ್ಚು ಮೆಚ್ಚು ಆತನ ಬಿಗ್ ಫ್ಯಾನ್ ನಾನು ಎನ್ನುತ್ತ ಆತನ ನಡೆ ನುಡಿಯನ್ನು ಅನುಸರಿಸಿದರೆ ನಿಮ್ಮನ್ನು ಜ್ಯೂನಿಯರ್ ಪುನಿತ್ ಎಂದು ಕರೆಯುತ್ತಾರೆ ಹೊರತು ನಿಮ್ಮನ್ನು ನಿಮ್ಮ ಹೆಸರಿನಲ್ಲಿ ಗುರುತಿಸುವುದಿಲ್ಲ. ಹೀಗಾಗಿ ಎಲ್ಲೆಲ್ಲಿ ಯಾವುದು ಒಳ್ಳೆಯದಿದೆಯೋ ಅದನ್ನು ನಿಮ್ಮದಾಗಿಸಿಕೊಳ್ಳಿ ಆದರೆ ಸಂಪೂರ‍್ಣವಾಗಿ ನಿಮ್ಮತನವನ್ನು ಬಿಟ್ಟುಕೊಡಬೇಡಿ. ಹಾಗೆ ಮಾಡಲು ಹೋದರೆ ನವಿಲು ಕುಣಿಯುತ್ತೆ ಅಂತ ಕೆಂಬೂತ ಕುಣಿಯಲು ಹೋದಂತೆ ಆಗುತ್ತದೆ. ‘ನಮಗೆ ಜೀವನವನ್ನು ಕೊಟ್ಟ ದೇವರು ಅದರ ಜೊತೆಯಲ್ಲಿಯೇ ಸ್ವಾತಂತ್ರ್ಯವನ್ನೂ ದಯಪಾಲಿಸಿದ್ದಾನೆ.’ ಎಂಬುದು ಜೆರ‍್ಸನ್ ಮಾತು. ಸ್ವತಂತ್ರವಾಗಿ ನೆಮ್ಮದಿಯಿಂದಿರಿ. ಸ್ವಸ್ವಾರ್ಥದಿಂದ ಪಡೆಯುವ ಗೌರವವೇ ನಿಜವಾದ ಗೌರವ. ಅವಮಾನಗಳಿಗೆ ಹೆದರದಿರಿ ಬಹು ಅಂಗವೈಕಲ್ಯವನ್ನು ಹೊರೆ ಎಂದುಕೊಳ್ಳದೇ ಸಾಧನೆಯ ಪರ‍್ವತವನ್ನೇರಿದ ಹೆಲೆನ್ ಕೆಲ್ಲರ್, ಕುರುಡನಾದರೂ ಡಾಕ್ಟರ್ ಆದ ಡೇವಿಡ್ ಹರ‍್ಟ್ಮನ್,ಬಡತನವನ್ನು ಬೆನ್ನಿಗಂಟಿಸಿಕೊಂಡು ಹುಟ್ಟಿದ ಅಬ್ರಹಾಂ ಲಿಂಕನ್ ಅಧ್ಯಕ್ಷನಾಗಲು ಪಟ್ಟ ಅವಮಾನಗಳು ಅಷ್ಟಿಷ್ಟಲ್ಲ. ಹೆಜ್ಜೆ ಹೆಜ್ಜೆಗೂ ಅವಮಾನದ ರುಚಿಯನ್ನು ಕಂಡವರೆ ಅವರೆಲ್ಲ. ಆದರೂ ತನ್ನಂತೆ ಇರುವವರ ಜೊತೆ ತಮ್ಮನ್ನು ಹೋಲಿಸಿಕೊಂಡು ಅಮೂಲ್ಯ ಜೀವನ ವ್ಯರ್ಥವಾಗಿಸಿಕೊಳ್ಳಲಿಲ್ಲ. ಬದಲಾಗಿ ಅವಮಾನಗಳಿಗೆ ಕೆಚ್ಚೆದೆಯಿಂದ ಸೆಡ್ಡು ಹೊಡೆದು ಗೆದ್ದರು. ಖ್ಯಾತ ಫೋರ‍್ಢ್   ಮೋಟಾರು ಕಂಪನಿಯ ಮುಖ್ಯಸ್ಥ ಹೆನ್ರಿ ಫೋರ‍್ಢ್ ಕಾರು ಕಂಡು ಹಿಡಿಯುವ ಕಠಿಣ ಪರಿಶ್ರಮದಲ್ಲಿದ್ದ ಕಾಲದಲ್ಲಿ ಒಬ್ಬ ಹಳ್ಳಿಗ ಆತನನ್ನು ಉದ್ದೇಶಿಸಿ,’ಕುದುರೆಗಳೇ ಇಲ್ಲದ ಚಕ್ರದ ರಥವನ್ನು ಎಳೆಯಬೇಕು ಅಂದುಕೊಂಡಿದ್ದಿಯಾ? ಶ್ರೀಮಂತ ಆಗೋ ಹುಚ್ಚು ಕನಸು ಕಾಣ್ತಿದಿಯಾ?’ ಎಂದು ವ್ಯಂಗ್ಯವಾಗಿ ಕೇಳಿದನಂತೆ. ಅದಕ್ಕೆ ಫೋರ‍್ಡ್ ‘ನಾನಷ್ಟೇ ಅಲ್ಲ ಸಾವಿರಾರು ಜನರನ್ನು ಶ್ರೀಮಂತರನ್ನಾಗಿ ಮಾಡಬೇಕು ಅಂತ ಕನಸು ಕಾಣ್ತಿದಿನಿ.’ ಅಂತ ಗಟ್ಟಿಯಾದ ಧ್ವನಿಯಲ್ಲಿ ಉತ್ತರಿಸಿದನಲ್ಲದೇ ತಾನು ಅಂದಂತೆ ಸಾಧಿಸಿದ. ಹೋಲಿಕೆಯ ಗೋರಿಯಲ್ಲಿ ಹೂತುಕೊಳ್ಳದೇ ನೈಜತೆಯನ್ನು ಅರ‍್ಥೈಸಿಕೊಂಡು ನಡೆದರೆ  ಚೆಂದದ ಜೀವನವೊಂದು ನಾವು ನಡೆಯುವ ದಾರಿಯಲ್ಲಿ ಮುಗಳ್ನಗುತ್ತದೆ. ************* ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

ಬಿಟ್ಟು ಬಿಡಿ ಹೋಲಿಕೆ ಬೆಳೆಸಿಕೊಳ್ಳಿ ಸ್ವಂತಿಕೆ Read Post »

ಅಂಕಣ ಸಂಗಾತಿ, ಮುಖಾಮುಖಿ

ಮನದೊಳಗಣ ತಾಕಲಾಟವೇ ಅಭಿವ್ಯಕ್ತಿ

ಅಂಕಣ ಬರಹ ಕವಿಯಿತ್ರಿ ನೂತನ ಎಂ.ದೋಶೆಟ್ಟಿ ಉತ್ತರ ಕನ್ನಡದ ಸಿದ್ದಾಪುರದವರು. ಮೃತ್ಯುಂಜಯ ದೋಶೆಟ್ಟಿ , ಪ್ರೇಮಾ ದೋಶೆಟ್ಟಿ ಅವರ ಮಗಳು.‌ಅವರ ಪತಿ ಶಾಮ ಸುಂದರ ಕದಂ ಕಾರವಾರ ಬಳಿಯ ಸದಾಶಿವಗಡದವರು. ಆಕಾಶವಾಣಿಯಲ್ಲಿ ಎಂಜಿನಿಯರ್. ಕವಯಿತ್ರಿ ಕತೆಗಾರ್ತಿ ನೂತನ ದೋಶೆಟ್ಟಿ ಸಮೂಹ ಸಂವಹನ , ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕ ಹುದ್ದೆ ನಿಭಾಯಿಸುತ್ತಿದ್ದಾರೆ. ಕಾರವಾರ ಆಕಾಶವಾಣಿ, ಬೆಂಗಳೂರು ಆಕಾಶವಾಣಿಯಲ್ಲಿ ಸೇವೆ ಮಾಡಿ, ಇದೀಗ ಹಾಸನ ಜಿಲ್ಲಾ ಆಕಾಶವಾಣಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ೨೦೦೯ರಲ್ಲಿ ಕಾಲವೆಂಬ ಮಹಾಮನೆ ಕಾವ್ಯ ಸಂಕಲನ ಪ್ರಕಟಿಸಿದರು. ಭಾಗೀರತಿ ಉಳಿಸಿದ ಪ್ರಶ್ನೆಗಳು ,ಮಾನವೀಯತೆ ಬಿಕ್ಕಳಿಸಿದೆ(೨೦೧೬) ಅವರ ಕವಿತಾ ಸಂಕಲನಗಳು. ಯಾವ “ವೆಬ್ ಸೈಟ್ ನಲ್ಲೂ ಉತ್ತರವಿಲ್ಲ ” ಕಥಾ ಸಂಕಲನ. ಅಂತಃಸ್ಪುರಣ, ಮರೆಯಾಯಿತೆ ಪ್ರಜಾಸತ್ತೆ ಅವರ ಲೇಖನಗಳ ಸಂಗ್ರಹ. ಆಕಾಶವಾಣಿ ಅಂತರಾಳ‌ ಅವರು ಆಕಾಶವಾಣಿ ಕುರಿತು ಬರೆದ ಪುಸ್ತಕ. ‌ಬಾ ಬಾಪು , ಆನ್ ಗಾಂಧಿಯನ್ ಪಾಥ್ ಆಕಾಶವಾಣಿಗಾಗಿ ರೂಪಿಸಿದ ರೂಪಕಗಳು. ವಚನಸಾಹಿತ್ಯ, ಬಸವಣ್ಣ, ಗಾಂಧಿಜೀ ವಿಚಾರಧಾರೆಯಿಂದ ಪ್ರಭಾವಿತರಾದ ಲೇಖಕಿ. ಜೀವಪರ ಕಾಳಜಿಯ ಕವಯಿತ್ರಿ. ‌ ಈ ಸಲ  ಸಾಹಿತ್ಯ ಸಂಗಾತಿ ಕನ್ನಡ  ವೆಬ್ ಜೊತೆ ಮಾತಿನಲ್ಲಿ ಮುಖಾಮುಖಿಯಾಗಿದ್ದಾರೆ… ……. ಲೇಖಕಿ ನೂತನ ದೋಶೆಟ್ಟಿ ಅವರೊಡನೆ ಮುಖಾಮುಖಿಯಾಗಿದ್ದಾರೆ ಕವಿ ನಾಗರಾಜ ಹರಪನಹಳ್ಳಿ  ಪ್ರಶ್ನೆ : ಕತೆ, ಕವಿತೆ ಗಳನ್ನು ಬರೆಯುವುದರ ಕುರಿತು ಹೇಳಿ, ಇದೆಲ್ಲಾ ಹೇಗೆ ಆರಂಭವಾಯಿತು? ಉತ್ತರ : ನಾನು ಮೊದಲು ಬರವಣಿಗೆ ಶುರು ಮಾಡಿದ್ದು ನಾನು ಓದಿದ ಪುಸ್ತಕದ ಕುರಿತು ನನಗೆ ಅನ್ನಿಸಿದ ನಾಲ್ಕು ಸಾಲುಗಳನ್ನು ನೋಟ್ ಪುಸ್ತಕದಲ್ಲಿ ಬರೆಯುವುದರ ಮೂಲಕ. ಅದೊಂಥರ ವಿಮರ್ಶೆ ಅಂತ ಆಗ ಅಂದ್ಕೊಂಡಿದ್ದೆ. ಕಾಲೇಜಿನ ಆರಂಭದ ದಿನಗಳಲ್ಲಿ. ಆ ಪುಸ್ತಕ ಈಗಲೂ ನನ್ನ ಹತ್ತಿರ ಇದೆ. ಆನಂತರ ಸಣ್ಣ ಕವಿತೆ ಬರೀತಿದ್ದೆ.  ಅದೇ ಪುಸ್ತಕದಲ್ಲಿ. ನಾನು ಬಹುತೇಕ ಮೌನಿ. ಬಹಳ ಕಡಿಮೆ ಮಾತು. ಹಾಗಂತ ಮನದೊಳಗಿನ ದೊಂಬರಾಟ ಇರ್ತಿತ್ತಲ್ಲ. ಅದಕ್ಕೆ ಒಂದು ಅಭಿವ್ಯಕ್ತಿ ಬೇಕಾಗುತ್ತಿತ್ತು. ಅದು ಕವಿತೆಯ ಸಾಲುಗಳಲ್ಲಿ ಹೊರಬರಲು ಹವಣಿಸಿತ್ತು. ಕತೆಯೂ ಹಾಗೇ. ಸುತ್ತಲಿನ ಪರಿಸರದಲ್ಲಿ ಗಮನಿಸಿದ, ತಟ್ಟಿದ ವಿಷಯದ ಎಳೆ ಮನಸ್ಸಿನಲ್ಲಿ ಕೊರೆಯಲು ಶುರುವಾಗುತ್ತಿತ್ತು. ಕತೆಯಾಗಲಿ,  ಕವಿತೆಯಾಗಲಿ ಅದು ಒಂದು ರೂಪಕ್ಕೆ ಬರುವ ತನಕದ ತಹತಹವನ್ನ ಅನುಭವಿಸಿಯೇ ತೀರಬೇಕು. ಅದು ಅಕ್ಷರದ ರೂಪದಲ್ಲಿ ಇಳಿದಾದ ಮೇಲಿನ ನಿರುಮ್ಮಳತೆ ಕೂಡ ಅತ್ಯಂತ ಸುಖದ ಅನುಭವಗಳಲ್ಲಿ ಒಂದು. ಬರವಣಿಗೆ ನನ್ನ ನಿಲುವು, ಸಮಾಜದ ಆಶಯ, ನನ್ನ ಆಶಯದ ಕಾಣ್ಕೆ. ಇದರ ಹೊರತಾಗಿಯೂ ಇದಕ್ಕೇ ಬರೀತೇನೆ ಅಂತ ಹೇಳೋದಕ್ಕೆ ಆಗೋದಿಲ್ಲ. ನನಗೆ ಬರವಣಿಗೆ ತೀರಾ ಖಾಸಗಿ, ತೀರ ಸ್ವಂತದ್ದು.. ಹೀಗಂದಾಗ ಕೆಲವರು ಕೇಳ್ತಾರೆ. ಅದು ಬೇರೆಯವರು ಓದೋದಕ್ಕೆ ಅಂತ. ಅದಕ್ಕೆ ಆ ಶಕ್ತಿ ಇದ್ದರೆ ತುಂಬ ಸಂತೋಷ. ತಾನಾಗೇ ಅದನ್ನು ಆದರೆ ಕತೆ, ಕವಿತೆ ಗಳಿಸಿಕೊಳ್ಳಬೇಕು. ಕವಿತೆ ಹುಟ್ಟುವ ಕ್ಷಣ… ತಡೆಹಿಡಿದ ದುಃಖ ತಮ್ಮವರು ಕಂಡಾಗ ಕಟ್ಟೆಯೊಡೆದು ಹೊರ ಬರುತ್ತದಲ್ಲಾ ಅಂಥ ಒತ್ತಡ ಒಳಗೆ ಇರುತ್ತದೆ ಅಂತ ಕಾಣುತ್ತೆ. ಅದಕ್ಕೆ ಚುರುಕು ಮುಟ್ಟಿಸಿದ ತಕ್ಷಣ ತಾನಾಗಿ ಬರುತ್ತದೆ. ದುಃಖ, ನೋವು,ಸಂಕಟ, ವಿಷಾದ, ಕಳೆದುಕೊಳ್ಳುವುದು, ಒಂಟಿತನ , ಸಂಬಂಧ ಮೊದಲಾದವು ತೀವೃವಾಗಿ ಬರೆಸುವಂತೆ ಸಂತೋಷ , ಸುಖ ಬರೆಸಲಾರದು. ಬರೆದಾದ ಮೇಲೆ ಅದೊಂದು ಬಂಧಮುಕ್ತತೆ… ಕತೆ ಹಾಗಲ್ಲ. ಕೆಲವು ಕತೆಗಳು ಒಂದೇ ಓಟದಲ್ಲಿ ಸಾಗಿಬಿಡುತ್ತವೆ. ಕೆಲವಕ್ಕೆ ಹೈರಾಣಾಗಿ ಹೋಗಿಬಿಡುತ್ತೇವೆ. ಬಂದಿರುವುದು ನನ್ನ ಒಂದು ಕಥಾ ಸಂಕಲನ. ಯಾವ ವೆಬ್ ಸೈಟಿನಲ್ಲೂ ಉತ್ತರವಿಲ್ಲ ಅಂತ. ಅದೇ ಶೀರ್ಷಿಕೆಯ ಕತೆ ನನ್ನ ಮನಸ್ಸಿನಲ್ಲಿ ಮೂಡಿದ್ದು ಬಸ್ಸಿನಲ್ಲಿ ಹೋಗುತ್ತಿರುವಾಗ. ಅಲ್ಲೇ ಗುರುತು ಹಾಕ್ಕೊಂಡಿದ್ದೆ. ಇನ್ನು ಕಾರವಾರದಲ್ಲಿ ಇದ್ದಾಗ ಕಡಲು ಬಹಳ ಕಾಡಿಸಿತ್ತು. ಬೀಚಿನಲ್ಲಿ ಶೇಂಗಾ ಮಾರಲು ಬರುವ ಹುಡುಗನನ್ನು ಕಂಡಾಗ ಮನೆಗೆ ಬಂದು ಬರೆದಿದ್ದಿದೆ. ಒಂದೊಂದು ಕತೆಗೂ ಅದರದ್ದೇ ಆದ ಇತಿಹಾಸ ಇರುತ್ತೆ. ಕಾವ್ಯ,ಕತೆಯ ವಸ್ತು, ವಿಷಯ…. ಮನುಷ್ಯ ಸಂಬಂಧಗಳು ಬಹುತೇಕ ವಸ್ತು ಕತೆಗಳಲ್ಲಿ. ಸಾಮಾಜಿಕ ಚಿತ್ರಣ, ಶೋಷಣೆಗಳೂ ಇವೆ. ಪ್ರಸ್ತುತ ರಾಜಕೀಯ…. ನಾನು ರಾಜಕೀಯವನ್ನು ಹತ್ತಿರದಿಂದ ಗಮನಿಸುತ್ತೇನೆ. ಅದರ ನಡೆಗಳು ನಮ್ಮ ಸಾಮಾಜಿಕ ಹಾಗೂ ವೈಯುಕ್ತಿಕ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತವೆ. ಆದರೆ ಬಹುತೇಕರು ತಮಗೆ ಸಂಬಂಧವಿಲ್ಲ ಎಂಬಂತೆ ಇರುತ್ತಾರೆ. ಹಾಗಾಗಬಾರದು. ನಮ್ಮಲ್ಲಿ ರಾಜಕೀಯ ಪ್ರಜ್ಞೆ ಬಹಳ ಕಡಿಮೆ ಅನ್ನಿಸುತ್ತದೆ. ಬಾಲ್ಯ, ಹರೆಯ….ಕುರಿತು ಒಂದಿಷ್ಟು ಬಾಲ್ಯ  ಧಾರಾಳವಾಗಿ ಇಣುಕಿದೆ ಕವಿತೆಗಳಲ್ಲಿ . ಏಕೆಂದರೆ ನಮ್ಮದು ಸಮೃದ್ಧ ಬಾಲ್ಯ. ಮಲೆನಾಡಿನ ಬೆಚ್ಚನೆಯ,  ನಚ್ಚಗಿನ ಬಾಲ್ಯ. ನನ್ನ  ಊರು ಸಿದ್ದಾಪುರ. ಊರಿಗೆ ಊರೇ ನಮ್ಮ ಆಟದ ಅಂಗಳವಾಗಿತ್ತು. ಎದುರು-ಬದುರು, ಅಕ್ಕ-ಪಕ್ಕ ಎಲ್ಲರೂ ನಮ್ಮವರೇ ಎಂದು ಬೆಳೆದವರು. ಈಗಲೂ ಅದನ್ನು ಎಲ್ಲರಲ್ಲೂ ಕಾಣಲು ಹೋಗಿ   ಮೋಸ ಹೋಗುತ್ತೇನೆ. ಸಾಂಸ್ಕೃತಿಕ  ವಾತಾವರಣ ಏನನಿಸುತ್ತದೆ? ಬಸವ ತತ್ತಗಳಲ್ಲಿ ಬೆಳೆದ ನಮಗೆ   ಯಾವುದೇ ಜಾತಿ- ಮತಗಳ ಬೇಧ ಕಾಣಿಸದೇ ನಮ್ಮ ಹಿರಿಯರು ಬೆಳೆಸಿದ್ದು ನಮ್ಮ ಭಾಗ್ಯ. ಆದರೆ ಇವುಗಳು ಇಂದು  ಮುನ್ನೆಲೆಗೆ ಬಂದು ನಿಂತಿವೆ. ಇವುಗಳ ಮಾಯೆಯ ಮುಸುಕಿಂದ ಒಂದು ಅಂತರ ಕಾಪಾಡಿಕೊಳ್ಳುವುದು ಕಷ್ಟವೇನಲ್ಲ. ಧರ್ಮ, ದೇವರ ಕುರಿತು ಹೇಳಿ… ನಾವು ಚಿಕ್ಕಂದಿನಿಂದ ನಮ್ಮ ಮನೆಯಲ್ಲಿ ಮಕ್ಕಳೆಲ್ಲ ಎರಡು ಹೊತ್ತು … ದೇವರೆದುರು ನಿಂತು ಬಸವಣ್ಣನವರ    ಕಳಬೇಡ, ಕೊಲಬೇಡ …ವಚನ  ಹೇಳಿಕೊಳ್ಳುತ್ತಿದ್ದೆವು. ಉಳಿದ ಇನ್ನೂ ಏನೇನೋ ಹೇಳಿಕೊಳ್ಳುತ್ತಿದ್ದೆವು. ಆದರೆ ಆ ವಚನ ನನ್ನ ಮನದಲ್ಲಿ ಮಾಡಿರುವ ಪ್ರಭಾವ ಅಪಾರ. ನಾನು ಇಂದಿಗೂ ಅದನ್ನು ಅಕ್ಷರ ಷಹ ಪಾಲಿಸುತ್ತೇನೆ. ಇದರಿಂದ ಎಷ್ಟು ಸಂಕಟಗಳನ್ನು ಅನುಭವಿಸಬೇಕಾಗುತ್ತದೆ. ಆದರೂ ಅದೇ ನನ್ನ ಧರ್ಮ. ಆಗೆಲ್ಲ ನಾನು ಸಮಾಧಾನ ಮಾಡಿಕೊಳ್ಳುವುದು ಬಸವಣ್ಣನನ್ನೇ ಬಿಡದವರು ನಮ್ಮನ್ನು ಬಿಟ್ಟಾರೇ ? ಅಂತ. ಅವರೆಂದಂತೆ ಕಾಯಕವೇ ನನ್ನ ಧರ್ಮ. ಈ ಧರ್ಮದಲ್ಲಿ ಎಷ್ಟು ಕಷ್ಟವಿದೆಯೇ ಅಷ್ಟೇ ಸುಖವಿದೆ. ನನಗೆ ಆಗ ಕಷ್ಟದಿಂದ ಸಿಗುವ ಸುಖವೇ ಇಷ್ಟ. ಅದು ಬಹಳ ಚೇತೋಹಾರಿ. ಇನ್ನು ದೇವರು …ನನಗೆ ಒಬ್ಬ ಮಿತ್ರನಂತೆ. ಯಾರ ಬಳಿಯೂ ಹೇಳಲಾಗದ ವಿಷಯ, ಚರ್ಚೆಗೆ ಆ ನಿರಾಕಾರ ಬೇಕು. ದೇವರು ಎಂಬುದು ಒಂದು ಅನುಭೂತಿ. ನಿಮ್ಮನ್ನೆ ನೀವು ಆಂತರ್ಯದಲ್ಲಿ ಕಾಣುವ ಬಗೆ. ಸಾಹಿತ್ಯ ವಲಯದ ರಾಜಕೀಯದ ಬಗ್ಗೆ ನಾನು  ಸಿದ್ದಾಪುರದವಳು. ಅಲ್ಲಿಂದ ದೂರ ಇದ್ದೇನೆ. ಉತ್ತರ ಕನ್ನಡ ಜಿಲ್ಲೆಯಲ್ಲೇ ನಾನು ಅಪರಿಚಿತಳು. ನನ್ನ ಮೂರು ಕವನ ಸಂಕಲನಗಳಿವೆ. ಒಂದು ಕವಿತೆ ಬೆಂಗಳೂರು ವಿಶ್ವವಿದ್ಯಾಲಯದ  ಪದವಿಗೆ ಪಠ್ಯವಾಗಿ ತುತ್ತು 2013ರಲ್ಲಿ. ಸುಧಾದಲ್ಲಿ ಬಂದಿದ್ದ ಕತೆಯನ್ನು ಕುವೆಂಪು ವಿಶ್ವವಿದ್ಯಾಲಯದ  ಪದವಿಗೆ ಪಠ್ಯ ಮಾಡಿದ್ದರು 2010ರಲ್ಲಿ. ನಾನು ಅವುಗಳನ್ನು ನೋಡಲೂ ಇಲ್ಲ. ಯಾರೋ ಹೇಳಿದರು ಇದೆ ಎಂದು. ಸಂತೋಷವಾಯಿತು. ಸಾವಿರಾರು, ಮಕ್ಕಳು ಓದಿದರಲ್ಲ ಎಂದು.  ನನ್ನಷ್ಟಕ್ಕೆ ನಾನು ಬರೆದುಕೊಂಡು ಇರುತ್ತೇನೆ. ಯಾವ ಹಪಹಪಿಯೂ ಇಲ್ಲ. ಇದು ನನ್ನ  ನಿಲುವು.ಉಳಿದವರ ನಿಲುವಿನಲ್ಲಿ ನನಗೆ ಆಸ್ಥೆ ಇಲ್ಲ. ದೇಶದ ಚಲನೆ ಬಗ್ಗೆ ಏನನಿಸುತ್ತದೆ? ಅಂದರೆ ರಾಜಕೀಯವಾಗಿ ಮಾತ್ರ ಅಲ್ಲ. ಸಾಮಾಜಿಕ, ಆರ್ಥಿಕ,  ಶೈಕ್ಷಣಿಕ ..ಹೀಗೆ. ಸಾಕಷ್ಟು ಅಭಿವೃದ್ಧಿ ಆಗಿದೆ. ರಾಜಕೀಯ ಹಿನ್ನೆಲೆಯಲ್ಲಿ ಸ್ಥಿತ್ಯಂತರಗಳು ಸಹಜ. ಆದರೆ ನಮ್ಮಲ್ಲಿ ಅದಕ್ಕೆ ಹಾಹಾಕಾರ ಎಬ್ಬಿಸುವ ಚಾಳಿ ಇದೆ. ಬದಲಾಗಿ ಅದನ್ನು ಕೌಂಟರ್ ಮಾಡುವ ಜಾಣ್ಮೆ ಬೇಕು. ಈಗ ನೀವು ಗಮನಿಸಿದರೆ ಯಾವುದೇ ಮುಖ್ಯ ಚಳುವಳಿಗಳಿಲ್ಲ. ಇದೂ ಒಂದು ಫೇಸ್. ತನಗೆ ಬೇಕಾದ್ದನ್ನು ಪಡೆಯುವುದು ಸಮಾಜಕ್ಕೆ ಗೊತ್ತಿದೆ. ಆ ಮಟ್ಟಿಗೆ ನನ್ನದು ಆಶಾವಾದ.ಆದರೆ ಸಾಹಿತ್ಯ ಕ್ಷೇತ್ರ ಒಡೆಯದೇ ಒಂದಾಗಿ, ಗುಂಪುಗಾರಿಕೆ ಇರದೇ ಮಾದರಿಯಾಗಿರಬೇಕು ಎಂಬ ಆಸೆಯಿದೆ. ಸಾಹಿತ್ಯವನ್ನು ಅದರ ಮೌಲಿಕತೆಯೊಂದಿಗೆ ಮಾತ್ರ ನೋಡುವ ವಾತಾವರಣ  ಒಡಮೂಡಲಿ. ನಿಮ್ಮ  ಕನಸು… ಓದಬೇಕಾದ್ದು ಬಹಳ ಇದೆ. ನನಗೆ ಮಿತಿಗಳಿವೆ. ಹಾಗಾಗಿ ನನ್ನ ಕನಸುಗಳು ಬಹಳ ಎತ್ತರ ಹಾರಲಾರವು. ಇಷ್ಟದ ಲೇಖಕರು ಕನ್ನಡದಲ್ಲಿ ತೇಜಸ್ವಿ, ಬೇಂದ್ರೆ ಇಂಗ್ಲೀಷ್ ಹೆಚ್ಚು ಓದಿಲ್ಲ. ವರ್ಡ್ಸ್ವರ್ತ್ ನೆಚ್ಚಿನ ಕವಿ. ಈಚೆಗೆ ಓದಿದ ಕೃತಿ… ಲಕ್ಷ್ಮೀ ಪತಿ ಕೋಲಾರ ಅವರ ಹರಪ್ಪ ಡಿಎನ್ ಎ ನುಡಿದ ಸತ್ಯ, ರವಿ ಹಂಜ್ ಅವರು  ಹ್ಯೂಎನ್ ತ್ಸಾಂಗನ ಮಹಾಪಯಣ, ನೇಮಿಚಂದ್ರರ ಯಾದ್ ವಶೀಮ್.  ಇಷ್ಟದ ಕೆಲಸ:  ಗಾರ್ಡನಿಂಗ್ ಇಷ್ಟದ ಸ್ಥಳ:  ಕೈಲಾಸ ಮಾನಸ ಸರೋವರ  ಮರೆಯಲಾರದ ಘಟನೆ :  ಬಹಳಷ್ಟಿವೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ …ಊಟಿಗೆ ಹೋಗಿದ್ದಾಗ ಬೆಟ್ಟದ ಮೇಲೆ ಜಿ ಎಸ್ ಶಿವರುದ್ರಪ್ಪ ನವರು ಸಿಕ್ಕಿದ್ದು. ನನ್ನ ಅತೀವ ಸಂಕೋಚ,   ಮುಜುಗರದಿಂದ ನಾನು ಬರೆದದ್ದನ್ನು ಯಾರಿಗು ಹೇಳುತ್ತಿರಲಿಲ್ಲ. ತೋರಿಸುತ್ತಲೂ ಇರಲಿಲ್ಲ. ಈಗಲೂ ಅದೇನು ಹೆಚ್ಚು ಬದಲಾಗಿಲ್ಲ. ************************************** ಲೇಖಕರ ಬಗ್ಗೆ: ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

ಮನದೊಳಗಣ ತಾಕಲಾಟವೇ ಅಭಿವ್ಯಕ್ತಿ Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಹಾವು ತುಳಿದೇನೇ?

ರಾಜ್ಯಮಟ್ಟದ ಪತ್ರಿಕೆಗಳ ಜಿಲ್ಲಾ ಆವೃತ್ತಿಯ ತುದಿಮೂಲೆಯಲ್ಲಿ ಮುದ್ರಿತವಾಗುವ ಒಂದು ಕಾಲಂ ನನ್ನನ್ನು ಸದಾ ಕಾಡುತ್ತದೆ. ಅದೆಂದರೆ `ಅಪರಾಧ ಸುದ್ದಿ’. ಕೆಲವು ಪತ್ರಿಕೆಗಳು ಈ ಶೀರ್ಷಿಕೆಯನ್ನು ಕೆಂಪಕ್ಷರಗಳಲ್ಲಿಟ್ಟು ಅದರ ಕೆಳಗೆ ವರದಿ ಪ್ರಕಟಿಸುತ್ತವೆ. ಈ ರಕ್ತವರ್ಣವು ಅಪಾಯ ಮತ್ತು ಸಾವನ್ನು ಸಂಕೇತಿಸಲಿ ಎಂಬುದು ಅವುಗಳ ಇರಾದೆಯಿರಬೇಕು. ಅಲ್ಲಿ ಎರಡು ಮಾದರಿಯ ಸುದ್ದಿಗಳಿರುತ್ತವೆ. ಮೊದಲನೆಯವು-ಬೈಕುಗಳ್ಳರ ಬಂಧನ, ಸರಗಳ್ಳತನ, ಮನೆಯ ದರೋಡೆ, ಭೀಕರಕೊಲೆ, ಪ್ರಿಯಕರನೊಂದಿಗೆ ವಿವಾಹಿತ ಸ್ತ್ರೀ ಪರಾರಿ, ಮಣ್ಣುಕುಸಿದು ಕೂಲಿಗಾರನ ಜೀವಂತ ಸಮಾಧಿ, ಜಾತ್ರೆಯಲ್ಲಿ ಗುಂಪು ಘರ್ಷಣೆ, ಬಣವೆ ದಹನ, ಟ್ರಿಪ್ಪರ್ ಡಿಕ್ಕಿಹೊಡೆದು ಕಾರು ನುಜ್ಜುಗುಜ್ಜು, ಎಮ್ಮೆ ಅಡ್ಡಬಂದು ಬೈಕ್ ಸವಾರನಿಗೆ ಪೆಟ್ಟು ಇತ್ಯಾದಿ. ಎರಡನೆಯವು-ಕುರಿಗಳಿಗೆ ಸಿಡಿಲು ಬಡಿದಿದ್ದು, ಹಾವು ಕಚ್ಚಿ ಸತ್ತಿದ್ದು, ರೈತನಿಗೆ ಕಾಡುಹಂದಿ ತಿವಿದಿದ್ದು, ದನಗಾಹಿಗಳ ಮೇಲೆ ಕರಡಿ ಹಲ್ಲೆ, ಭಕ್ತರ ಮೇಲೆ ಜೇನುದಾಳಿ, ನಾಯಿಯನ್ನು ಚಿರತೆ ತಿಂದಿದ್ದು ಮುಂತಾದವು.ಮೊದಲನೆಯವು ಮಾನನಿರ್ಮಿತ ಅಪರಾಧಗಳಾದರೆ, ಎರಡನೆಯವು ನಿಸರ್ಗವೂ ಪಾಲುಗೊಂಡಿರುವ ದುರಂತಗಳು. ಪ್ರಶ್ನೆಯೆಂದರೆ ಎರಡನೆಯವು ನಿಜಕ್ಕೂ `ಅಪರಾಧ’ಗಳೇ? ಸಾವು ನೋವಿನ ಅಂಶವಿರುವುದರಿಂದಲೂ, ಪೋಲಿಸರು ಮಹಜರು ನಡೆಸುವುದರಿಂದಲೂ ಇವು `ಅಪರಾಧ’ದ ಸುದ್ದಿಗಳು ನಿಜ. ವಾಸ್ತವದಲ್ಲಿ ಇವು ಮನುಷ್ಯರು ಆಹ್ವಾನಿಸಿಕೊಂಡು ಅಥವಾ ಅವರ ಕೈಮೀರಿ ನಡೆದ ದುರಂತಗಳು ಕೂಡ. ಆದರಲ್ಲೂ ಹಾವುಕಚ್ಚುವುದು ಅಪರಾಧ ಎನ್ನುವವರಿಗೆ, ತನ್ನ ಪಾಡಿಗೆ ಹೋಗುತ್ತಿದ್ದ ಹಾವನ್ನು ಜನ ಚಚ್ಚುವುದು ಅಪರಾಧ ಎನಿಸುವುದಿಲ್ಲವೇಕೆ? ರಾಜ್ಯ ಮಟ್ಟಕ್ಕೇರದೆ ಎರಡನೇ ಪುಟದ ಸ್ಥಳಿಯ ಸುದ್ದಿಗಳಾಗಿ ಪ್ರಕಟವಾಗುವ ಈ `ಸಣ್ಣ’ ವರದಿಗಳನ್ನು ಮುಂಜಾನೆಯ ಗಡಿಬಿಡಿಯಲ್ಲಿರುವ ವಾಚಕರು ನಿರ್ಲಕ್ಷಿಸಿ, ರಾಜ್ಯ-ರಾಷ್ಟ್ರದ ದೊಡ್ಡ ಸುದ್ದಿಗಳಿಗೆ ಹೋಗಲು ತವಕಿಸುತ್ತಾರೆ. ಹೀಗಾಗಿ ಇವು ನಿರ್ಲಕ್ಷಿತವಾಗಿಯೇ ಉಳಿದುಬಿಡುತ್ತವೆ. ಎಷ್ಟೊ ಸಲ ಇವು ಸ್ಥಳೀಯ ಸ್ಟಿಂಜರನ ಅಸ್ತಿತ್ವದ ಭಾಗವಾಗಿ ಪುಟತುಂಬುವ ಫಿಲ್ಲರುಗಳಾಗಿರುತ್ತವೆ. ಆದರಿವು ನಿರ್ಲಕ್ಷಿಸುವ ಸುದ್ದಿಗಳೇ? ಬಳ್ಳಾರಿ ಜಿಲ್ಲೆಯಲ್ಲೇ ನೂರಾರು ಜನ ಹಾವು ಕಡಿದು ಸಾಯುತ್ತಾರೆಂದ ಮೇಲೆ, ಕರ್ನಾಟಕದ ಲೆಕ್ಕ ಎಷ್ಟಿರಬಹುದು? ವರ್ಷಕ್ಕೆ ಭಾರತದಲ್ಲಿ ಹಾವುಕಚ್ಚಿ ಸಾಯುವವರ ಸಂಖ್ಯೆ 50 ಸಾವಿರವಂತೆ. `ಅಪರಾಧ’ ಸುದ್ದಿಯ ನಮೂನೆಯೊಂದನ್ನು ಇಲ್ಲಿ ಉಲ್ಲೇಖಿಸಬಹುದು: “ಹಾವುಕಚ್ಚಿ ಇಬ್ಬರ ಸಾವು: ಬುಧವಾರ ರಾತ್ರಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಯುವಕರು ಹಾವಿನ ಕಡಿತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಹೊಸಪೇಟೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ನಾಗೇನಹಳ್ಳಿಯಲ್ಲಿ ಮಲಗಿದ್ದ ಮಿನಗಿನಾಗ (15) ಮತ್ತು ಶಿವಪ್ಪ (19) ಎಂಬುವರು ಸಾವನ್ನಪ್ಪಿದರು. ಮಿನಗಿನಾಗನಿಗೆ ಗುಡಿಸಲಿನಲ್ಲಿ ಇದ್ದಾಗ ಹಾವು ಕಚ್ಚಿದರೆ, ಶಿವಣ್ಣನಿಗೆ ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚ್ಚಿತ್ತು. ಮಿನಗಿನಾಗ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದರೆ, ಶಿವಣ್ಣ ಸ್ಥಳದಲ್ಲಿಯೇ ಸಾವನಪ್ಪಿದ ಎಂದು ಪೋಲಿಸ್ ಮೂಲಗಳು ತಿಳಿಸಿವೆ.’’ಗಾಬರಿ ಹುಟ್ಟಿಸುವುದು ಹಾವು ಕಚ್ಚಿದ್ದಲ್ಲ; ಇದು ಮಾಮೂಲಿ ಎಂಬಂತಿರುವ ಬರೆಹದ ನಿರ್ಲಿಪ್ತತೆ. ದಿನಾ ಕೊಲ್ಲುವ ಮತ್ತು ಸಾಯುವ ಈ ಸುದ್ದಿಯನ್ನು ಬರೆಬರೆದು ಬಹುಶಃ ಸ್ಥಳೀಯ ಪತ್ರಕರ್ತರೂ ದಣಿದಿರಬೇಕು. ಯಾಕೆಂದರೆ, ಈ ಹಾವುಗಳು ಸ್ಕೂಲಿಗೆ ಹೋಗಿದ್ದ ಮಗುವಿಗೆ, ಮನೆಯಲ್ಲಿ ಮಲಗಿದ್ದವರಿಗೆ, ಕೆಲವೊಮ್ಮೆ ಒಂದೇ ಮನೆಯಲ್ಲಿದ್ದ ಐದಾರು ಜನರಿಗೆ, ಕೋಳಿ ಇಟ್ಟಿರುವ ಮೊಟ್ಟೆಯನ್ನು ತೆಗೆಯಲು ಬುಟ್ಟಿಯೊಳಗೆ ಕೈಹಾಕಿದ ಮುದುಕಿಗೆ, ಹುಲ್ಲುಕೊಯ್ಯಲು ಹೋದ ತರುಣನಿಗೆ, ರಾತ್ರಿ ಗದ್ದೆಗೆ ನೀರು ಹಾಯಿಸಲು ಹೋದವರಿಗೆ, ಬೆಳೆ ಕೊಯ್ಯುವವರಿಗೆ, ಕೊಯ್ದು ಹಾಕಿದ ಬೆಳೆಯನ್ನು ಸಿವುಡುಗಟ್ಟಲೆಂದು ಬಾಚಿಕೊಂಡವರಿಗೆ ಕಚ್ಚುತ್ತವೆ. ಕಬ್ಬಿನಗದ್ದೆಯನ್ನು ಸರಸಕ್ಕೆ ಆರಿಸಿಕೊಂಡ ಪ್ರೇಮಿಗಳನ್ನೂ ಬಿಟ್ಟಿಲ್ಲ. ಒಮ್ಮೆ ತಮ್ಮ ಮಗಳನ್ನು ವಿಶ್ವವಿದ್ಯಾಲಯಕ್ಕೆ ಸೇರಿಸಲು ಬಂದ ಒಬ್ಬರು ಬಗಲುಕೋಲು ಮೆಟ್ಟಿಕೊಂಡು ಕಷ್ಟಪಟ್ಟು ಕ್ಯಾಂಪಸ್ಸಿನಲ್ಲಿ ಓಡಾಡುತ್ತಿದ್ದರು. ಅವರ ಕಾಲನ್ನು ಕಂಡು ಏನಾಯಿತು ಎಂದು ಕೇಳಿದೆ. ಅವರು ಲೈನ್‍ಮನ್. ಕಂಬಹತ್ತುವಾಗ ಬುಡದಲ್ಲಿದ್ದ ಹಾವು ಕಚ್ಚಿ ಮೊಣಕಾಲತನಕ ಕಾಲನ್ನೇ ಕತ್ತರಿಸಲಾಗಿದೆ. ಹಾವು ಕಚ್ಚಲು ಹೊಲವೇ ಬೇಕಾಗಿಲ್ಲ.ಮನುಷ್ಯರನ್ನು ಸಾಯುವಂತೆ ಕಚ್ಚುವುದು ಒಂದೊ ನಾಗರ ಇಲ್ಲವೇ ಕನ್ನಡಿ(ವೈಪರ್) ಹಾವು. ಬಳ್ಳಾರಿ ಜಿಲ್ಲೆಯ ಸ್ಥಳೀಯ ಸುದ್ದಿಗಳ ಪ್ರಕಾರ, ಹೆಚ್ಚು ಜನರು ಹಾವಿನಿಂದ ಸತ್ತಿರುವುದು ಹೊಲಗೆಲಸದಲ್ಲಿ. ಅದೂ ಅಪರಾತ್ರಿಯಲ್ಲಿ. ಮೇಲ್ಕಾಣಿಸಿದ ಸುದ್ದಿಯಲ್ಲಿರುವವರ ಹೆಸರಲ್ಲೇ ಸರ್ಪದ ಹೆಸರೂ, ಸರ್ಪವನ್ನು ಒಡವೆಯಂತೆ ಧರಿಸುವ ಶಿವನ ಹೆಸರೂ ಇರುವುದು ಒಂದು ವ್ಯಂಗ್ಯ.ಈ ಸರ್ಪಸಾವುಗಳಿಗೆ ನಿಜವಾದ ಕಾರಣವೇನು? ಹಾವುಗಳ ಜಾಗದಲ್ಲಿ ಜನ ವಾಸವಾಗಿದ್ದಾರೆಯೊ ಅಥವಾ ಹಾವೇ ಜನರ ಜಾಗಕ್ಕೆ ಹರಿದು ಬರುತ್ತಿವೆಯೊ? ಹಾವಿನಿಂದ ಕಚ್ಚಿಸಿಕೊಳ್ಳದಂತೆ ಎಚ್ಚರಿಕೆಯಿಂದ ಕೆಲಸ ಮಾಡಲು ಸಾಧ್ಯವಿಲ್ಲವೆ? ಕಚ್ಚಿದರೆ ಕೂಡಲೇ ಅವರನ್ನು ಬದುಕಿ ಉಳಿಸುವ ಆರೋಗ್ಯದ ಸೌಲಭ್ಯ ಎಷ್ಟರಮಟ್ಟಿಗಿದೆ? ಮೊದಲರಡು ಪ್ರಶ್ನೆಗಳು ಪರಿಸರಕ್ಕೆ ಸಂಬಂಧಪಟ್ಟವು. ಮೂರನೆಯದು ಕೆಲಸಗಾರರ ಎಚ್ಚರಗೇಡಿತನದ್ದು; ಕೊನೆಯದು ವ್ಯವಸ್ಥೆಗೆ ಸಂಬಂಧಿಸಿದ್ದು ಮತ್ತು ಗಂಭೀರವಾದದ್ದು. ಯಾಕೆಂದರೆ, ಹೆಚ್ಚಿನ ಪ್ರಸಂಗಗಳಲ್ಲಿ ಹಾವು ಕಡಿತಕ್ಕೆ ಒಳಗಾದವರು ಆಸ್ಪತ್ರೆ ತಲುಪುವ ಮುನ್ನ ದಾರಿಯಲ್ಲೇ ಕೊನೆಯುಸಿರು ಎಳೆಯುತ್ತಾರೆ; ಇಲ್ಲವೇ ಆಸ್ಪತ್ರೆಗೆ ಹೋದಾಗ ತುರ್ತುಚಿಕಿತ್ಸೆ ಸಿಗದೆ ಸಾಯುತ್ತಾರೆ. ಇಲ್ಲಿ ಅಪರಾಧ ಕೇವಲ ಹಾವಿನದಲ್ಲ; ಕಚ್ಚಿಸಿಕೊಂಡ ಕೆಲಸಗಾರರದ್ದಲ್ಲ; ಅವರನ್ನು ಉಳಿಸಿಕೊಳ್ಳಲಾಗದ ವ್ಯವಸ್ಥೆಯದು ಸಹ. ಸಾವು ವಯೋ ಸಹಜವಾಗಿ ಬಂದರೆ ದೋಷ ಕೊಡಬೇಕಿಲ್ಲ. ಅಸಹಜವಾಗಿ ಅಕಸ್ಮಾತ್ ಬಂದರೆ, ಅದನ್ನು ತಡೆಯುವ ಸಿದ್ಧತೆ ನಾಗರಿಕ ಸಮಾಜದಲ್ಲಿ ಇರಬೇಕು. ಹಾಗಿಲ್ಲದೆ ಇರುವುದೇ ಸಾಮಾಜಿಕ ಅಪರಾಧ.ಪಶ್ಚಿಮದ ದೇಶಗಳಲ್ಲೂ ಹಾವು ಕಚ್ಚುತ್ತವೆ. ಆದರೆ ಅಲ್ಲಿ ಸಾಯುವವರ ಸಂಖ್ಯೆ ಕಡಿಮೆ. ಕಚ್ಚಿದರೂ ಉಳಿಸಿಕೊಳ್ಳುವ ವ್ಯವಸ್ಥೆ ಅಲ್ಲಿ ಚೆನ್ನಾಗಿದ್ದಂತಿದೆ. ಭೂಕಂಪ, ನೆರೆ, ಸುನಾಮಿ, ಚಂಡಮಾರುತ ಬಂದಾಗ ಅಲ್ಲೂ ಸಂಭವಿಸುವ ಸಾವುನೋವುಗಳ ಪ್ರಮಾಣ ಕಡಿಮೆ. 90ರ ದಶಕದಲ್ಲಿ ಲಾತೂರಿನ ಭೂಕಂಪವಾದಾಗ ಹೆಚ್ಚು ಜನ ಸತ್ತಿದ್ದು ಮನೆಗಳ ಕಚ್ಚಾ ರಚನೆಯಿಂದ. ಬಂಗಾಳ ಕೊಲ್ಲಿಯಲ್ಲಿ ಏಳುವ ಚಂಡಮಾರುತಗಳು ಪೂರ್ವ ಕರಾವಳಿಯಲ್ಲಿ ತಾಂಡವನೃತ್ಯ ಮಾಡಿದಾಗಲೂ ಇದೇ ಕತೆ. ನಾಗರಿಕ ಸಮಾಜವಾಗಿ ನಾವು ಕಟ್ಟಿಕೊಂಡಿರುವ ವ್ಯವಸ್ಥಿತವಲ್ಲದ ವ್ಯವಸ್ಥೆಯಿಂದ ಸಕಾಲಿಕ ನೆರವಿಲ್ಲದೆ ಹೆಚ್ಚು ಜನ ಮರಣಿಸುತ್ತಾರೆ. ಕಣಿವೆಗೆ ಬಿದ್ದ ಹಸುವಿರಲಿ, ನೆರೆಯಲ್ಲಿ ಕೊಚ್ಚಿಹೋಗುವ ವ್ಯಕ್ತಿಯಿರಲಿ, ಮನೆಗೆ ಬೆಂಕಿಬಿದ್ದಾಗ ಸಿಕ್ಕಿಕೊಂಡ ಮಗುವಿರಲಿ, ಯೂರೋಪು ಜಪಾನು ಅಮೆರಿಕಗಳ ವ್ಯವಸ್ಥೆ ಪ್ರಾಣವುಳಿಸಲು ಎಷ್ಟು ಮುತುವರ್ಜಿ ವಹಿಸುತ್ತದೆ ಎಂಬುದನ್ನು ಟಿವಿ ನೋಡುವವರೆಲ್ಲ ಬಲ್ಲರು. ಇದು ಅಲ್ಲಿನ ನಾಗರಿಕ ವ್ಯವಸ್ಥೆ ತನ್ನ ಜನರಿಗೆ ಬದ್ಧವಾಗಿರುವುದರ ಸಂಕೇತ ಮಾತ್ರವಲ್ಲ, ಎಚ್ಚೆತ್ತ ನಾಗರಿಕ ಪ್ರಜ್ಞೆಯುಳ್ಳ ಸಮಾಜ ಆಳುವ ವ್ಯವಸ್ಥೆಗಳನ್ನು ದಕ್ಷವಾಗಿ ಇಟ್ಟುಕೊಂಡಿರುವುದರ ಸಂಕೇತ ಕೂಡ.ನಾವೊಂದಿಷ್ಟು ಗೆಳೆಯರು, ಉತ್ತರ ಕರ್ನಾಟಕದ ಪ್ರವಾಹದಿಂದ ಶೆಡ್ಡುಗಳಲ್ಲಿ ಬದುಕುತ್ತಿದ್ದವರ ಜತೆ ವಾರಕಾಲ ಇದ್ದೆವು. ಹೆಂಚಿನಂತೆ ಕಾದ ಶೆಡ್ಡುಗಳು. ಜತೆಗೆ ಹಾವು ಹುಪ್ಪಡಿ ಕಾಟ. ವ್ಯವಸ್ಥೆಯ ಬೇಹೊಣೆಯಿಂದ ಕಷ್ಟಪಡುವ ಜನರ ಲೆಕ್ಕ ಬರೆಯಲು ತಕ್ಕ ಕಿರ್ದಿ ಪುಸ್ತಕವೇ ಇಲ್ಲವೆನಿಸಿತು. ಇದೆಲ್ಲ `ಅಪರಾಧ’ದ ವರ್ತುಲದಲ್ಲಿ ಬರುವುದೇ ಇಲ್ಲ. ಕೊಲೆಯೆಂದೂ ಅನಿಸುವುದಿಲ್ಲ. ಭೂಪಾಲದಲ್ಲಿ ಜನರನ್ನು ಕೊಂದಿದ್ದು ವಿಷಾನಿಲವೊ ಜನರನ್ನು ವಿಪತ್ತುಗಳಿಂದ ರಕ್ಷಿಸುವ ಹೊಣೆಹೊರದ ವ್ಯವಸ್ಥೆಯೊ? ನಾಲ್ಕು ದಶಕಗಳಾಗುತ್ತಿದ್ದರೂ ಅಲ್ಲಿನ ಜನಕ್ಕೆ ತಕ್ಕ ಪರಿಹಾರ ಸಿಕ್ಕಿಲ್ಲ. ಎಂಡೋಸಲ್ಫಾನ್ ಪೀಡಿತರು ತಮ್ಮದಲ್ಲದ ತಪ್ಪಿಗೆ ನರಳುತ್ತಲಿದ್ದಾರೆ. ಇವರಿಗೂ ಬೆಂಕಿಬೀಳುವ ನೊರೆಕಾರುವ ಬೆಂಗಳೂರಿನಂಚಿನ ಕೆರೆಗಳಿಗೂ ವ್ಯತ್ಯಾಸವಿಲ್ಲ. ಡ್ಯಾಮಿನ ಕೆಳಗಣ `ಭತ್ತದ ಕಣಜ’ ಎನ್ನಲಾಗುವ ಊರುಗಳಲ್ಲಿ ಸುರಿಯಲಾಗುತ್ತಿರುವ ಕ್ರಿಮಿನಾಶಕಗಳು ಎಷ್ಟು ಜೀವಿಗಳ ಆರೋಗ್ಯವನ್ನು ಹೇಗೆ ಕೆಡಿಸಿವೆಯೊ ಯಾರು ಬಲ್ಲರು? ನಂಜನ್ನು ಎಗ್ಗಿಲ್ಲದೆ ಚೆಲ್ಲಾಡಿ ಸಮೂಹಗಳ ಪ್ರಾಣಕ್ಕೆ ಕುತ್ತಿಡುವ ಕೆಲಸಗಳಿಗಿಂತ ಕಚ್ಚುವ ಹಾವುಗಳು ಕಡಿಮೆ ಅಪಾಯಕಾರಿ. ಶಿಶುನಾಳರ `ಹಾವು ತುಳಿದೇನೇ ಮಾನಿನಿ’ ತತ್ವಪದದಲ್ಲಿ ಹಾವು ಆನುಭಾವಿಕ ಅರ್ಥದಲ್ಲಿರುವ ರೂಪಕ. ಸಿದ್ಧಲಿಂಗಯ್ಯನವರ `ಹಾವುಗಳೇ ಕಚ್ಚಿ’ ಕವನದಲ್ಲಿ ಜನರ ಎಚ್ಚೆತ್ತಪ್ರಜ್ಞೆಯ ಸಂಕೇತ. ಹಾವನ್ನು ದಾಸಿಮಯ್ಯ ಹಸಿವಿಗೆ ಹೋಲಿಸಿದರೆ ಅಕ್ಕ ಕಾಮಕ್ಕೆ ಪ್ರತಿಮಿಸುವಳು. ಹಾವನ್ನು ಪ್ರತಿಮೆ ರೂಪಕವಾಗಿಸಿರುವ ಈ ಯಾರೂ ಅದನ್ನು ಕೇವಲ ಹಗೆಯನ್ನಾಗಿ ಪರಿಭಾವಿಸಿಲ್ಲ. ಹಾವನ್ನು ಆರಾಧಿಸುವ ಮತ್ತು ಚಚ್ಚಿಹಾಕುವ ಮನೋಭಾವಕ್ಕಿಂತ ಭಿನ್ನವಾದ ದೃಷ್ಟಿಕೋನವಿದು. ಕಚ್ಚಿಸಿಕೊಳ್ಳದಂತೆ ಒಡನಾಡುವುದು ಸಾಧ್ಯವಾಗುವುದಾದರೆ, ಹಾವಿನ ಸಂಗ ಲೇಸು ಕಾಣಯ್ಯ ಎಂದು ಹೇಳುವಲ್ಲಿ, ದಿಟ್ಟತನ ಮಾತ್ರವಲ್ಲ ವೈರುಧ್ಯಗಳನ್ನು ಸಂಭಾಳಿಸುವ ವಿವೇಕವೂ ಇದೆ.ಕೊಂದಹರು ಎಂಬುದನರಿಯದ ಹಾವು ತುಳಿದವರನ್ನಷ್ಟೆ ಕಚ್ಚುತ್ತದೆ. ಅದರ ನೆಲೆಯನ್ನು ಆಕ್ರಮಿಸಿಕೊಂಡು, ಉಣಿಸಿನ ಸರಪಣಿಯನ್ನು ಭಗ್ನಪಡಿಸಿರುವ ನಾವು, ದಿಟದ ನಾಗರ ಕಂಡೊಡನೆ ಕೊಲ್ಲುತ್ತಿದ್ದೇವೆ. ಅಧಿಕಾರಸ್ಥರು ರೈತರ ಹೊಲಗದ್ದೆಯನ್ನು ನೀರು ಬೆಟ್ಟವನ್ನು ಕಿತ್ತು ಉದ್ಯಮಿಗಳಿಗೆ ಮಾರುವುದು `ಅಪರಾಧ ಸುದ್ದಿ’ ಆಗುವುದೇ ಇಲ್ಲ. ಈಗ ಜನರನ್ನು ಕೊಲ್ಲಲು ಹಾವುಗಳೇ ಬೇಕಿಲ್ಲ. ಡೆಂಗಿ ಸೊಳ್ಳೆಗಳೇ ಸಾಕು. ಬಳ್ಳಾರಿ ಜಿಲ್ಲೆಯಲ್ಲಿ ಡೆಂಗಿಜ್ವರದಿಂದ ಬಹಳ ಜನ ಜೀವ ಕಳೆದುಕೊಂಡಿದ್ದಾರೆ. ನಾಡಿನಲ್ಲಿ ಜನರ ಜೀವದಷ್ಟು ಅಗ್ಗವಾದ ವಸ್ತು ಬೇರೆಯಿಲ್ಲ. ಇಂತಹ ವ್ಯವಸ್ಥೆಯಲ್ಲಿ, ಆತ್ಮರಕ್ಷಣೆಗಾಗಿ ಕಚ್ಚುವ ಹಾವುಗಳು ಅಪರಾಧಿಗಳಾಗಿ ಬಿಂಬಿತವಾಗುವುದು ಸಹಜವೇ ಆಗಿದೆ. ****************************************************** ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

ಹಾವು ತುಳಿದೇನೇ? Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಹರಿಯುವ ಕವಿತೆಗೆ ಒಡ್ಡು ಕಟ್ಟದಿರಿ!

ಕಬ್ಬಿಗರ ಅಬ್ಬಿ – ಸಂಚಿಕೆ ೫ ನನ್ನ ಗೆಳೆಯನ ಪುಟ್ಟ ಮಗು ನನ್ ಹತ್ರ ಕೇಳಿದ,  ” ಮಾಮಾ, ಈ ಚಂದಾಮಾಮ ಎಷ್ಟೆತ್ತರ? “. ನಾನಂದೆ! ” ತುಂಬಾ ಎತ್ತರದಲ್ಲಿ ಇದ್ದಾನೆ ಪುಟ್ಟಾ”. “ಹೇಗೆ ತಲಪೋದು! ” ಪುಟ್ಟನ ಪ್ರಶ್ನೆ! ರಾಕೆಟ್ಟು..ಜೆಟ್ ಪ್ರಿನ್ಸಿಪಲ್ ಅಂತ ಒಂದಷ್ಟು ಕೊರೆದೆ!. ಪುಟ್ಟನ ಕಣ್ಣೊಳಗೆ ಏನೋ ಮಿಂಚು! ಆತ ಅಂದ, ” ಮಾಮಾ, ಅಷ್ಟೆಲ್ಲ ಕಷ್ಟ ಯಾಕೆ! ನಮ್ಮ ತಾರಸಿಯ ಮೇಲೆ ಒಂದು ಮೆಟ್ಟಿಲು ಕಟ್ಟೋಣ!, ಆ ಮೆಟ್ಟಿಲು ಹತ್ತಿ ನಿಂತು ಇನ್ನೊಂದು ಕಟ್ಟುವಾ! ಮತ್ತೆ ಅದರ ಮೇಲೆ ಹತ್ತಿ ನಿಂತು ಇನ್ನೊಂದು ಮೆಟ್ಟಿಲು! ಹೀಗೇ ಹತ್ತಿದರೆ ಚಂದಾಮಾಮ ಸಿಗಲ್ವಾ! ಹೀಗೆ, ಮುಗ್ಧ ಪುಟಾಣಿಗಳಿಗೂ ಕವಿಗಳಿಗೂ ಕಲ್ಪನೆ ಎನ್ನುವುದಕ್ಕೆ ಭೌತಿಕದ ಭೂತ ಕಾಡಲ್ಲ! ಎತ್ತರ, ಇನ್ನೂ ಎತ್ತರ, ನೆಲಕ್ಕೆ ನೆಲವೇ ಮೆಟ್ಟಿಲಾಗಿ ನಿಂತ ಮೆಟ್ಟಿಲುಗಳ ಸಾಲುಗಳೇ ಹಿಮಾಲಯ ಪರ್ವತಶ್ರೇಣಿ. ‌ ತುಂಬಿದ ಕೋಶಕೋಟಿಯಿಂದ ನಿರ್ವಾತದತ್ತ ನಡಿಗೆಯದು! ಆಕಾಶವನ್ನೇ ಘನೀಕರಿಸುವ ಥಂಡಿ. ವರುಣನೂ ಅಲ್ಲಿ ಸೋತು ಗಡ್ಡೆ ಕಟ್ಟಿದ ನೀರ್ಗಲ್ಲ ಪದರದೊಳಗೆ ಬಂದಿ. ಕರೆದೇ ಬಿಟ್ಟರು! ಇಳಿದು ಬಾ ತಾಯೇ ಇಳಿದು ಬಾ! ಸಾಮಾನ್ಯರೇ ಅವರು! ಅಂಬಿಕಾತನಯದತ್ತರು! ಇಳಿದು ಬಾ ತಾಯಿ ಇಳಿದು ಬಾ ಹರನ ಜಡೆಯಿಂದ ಹರಿಯ ಅಡಿಯಿಂದ ಋಷಿಯ ತೊಡೆಯಿಂದ ನುಸುಳಿ ಬಾ ದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹಣಿಸಿ ಬಾ ಚರಾಚರಗಳಿಗೆ ಉಣಿಸಿ ಬಾ ಇಳಿದು ಬಾ ತಾಯಿ ಇಳಿದು ಬಾ. ಗಂಗಾ ನದಿ ಗೋಮುಖದ ಎತ್ತರದಿಂದ ಭಾಗೀರಥಿ ಯಾಗಿ ಇಳಿದು, ಬಂಗಾಳಕೊಲ್ಲಿಯಲ್ಲಿ ಸಾಗರವಾಗುವ ನಡುವಿನ ಯಾತ್ರೆ, ಅದು ದರ್ಶನ. ನದಿ ಎಂದರೆ ಹರಿವು, ನಿರಂತರ ಹರಿವು. ಚಲನಶೀಲತೆಗೆ ಪ್ರತಿಮೆ, ನದಿ.  ಉಕ್ಕಿ ಹರಿಯುವ ನದಿ, ಮನುಷ್ಯನ ಭಾವೋತ್ಕರ್ಷದಂತೆ. ತಿರುವುಗಳು, ಪರಿವರ್ತನೆಯ ಸಂಧಿಯಂತೆ. ಎತ್ತರದಿಂದ ಜಲಪಾತವಾಗಿ ಬೀಳುವ ಧಾರೆ, ಪತನದ ಪ್ರತಿಮೆಯಂತೆ. ಕೆಳಬಿದ್ದ ಧಾರೆ ಸುಳಿ ಸುಳಿಯಾಗಿ ಎದ್ದು ಕೊಚ್ಚಿಕೊಂಡು, ಕೊಚ್ಚಿಸಿಕೊಂಡು ಬಿಂದು ಬಿಂದು ಸೇರಿ ಪುನಃ ಪ್ರವಹಿಸುವುದು, ಜೀವನದ ಅನಿವಾರ್ಯ ಸಂಘರ್ಷದಂತೆ, ಮರುಹುಟ್ಟಿನಂತೆ, ಪತನದ ನಂತರವೂ ಹರಿವಿನ ಸಾಧ್ಯತೆಯ ಧನಾತ್ಮಕ ಚಿಂತನೆಯಂತೆ. ಪರ್ವತದ ಕೊರಕಲಿನಲ್ಲಿ ಆಕೆಯ ರಭಸ, ಕೋಪವೋ, ಅಸಹನೆಯೋ, ಯೌವನದ ಶಕ್ತಿಪ್ರದರ್ಶನವೋ, ಯದ್ಧೋನ್ಮಾದವೋ ಗೊತ್ತಿಲ್ಲ. ಬಯಲಿನ ಸಮತಲದಲ್ಲಿ  ಆಕೆಗೆ ಮಧ್ಯವಯಸ್ಸು, ಶಾಂತಚಿತ್ತೆ, ಗಂಭೀರೆ. ಹರಡಿಕೊಳ್ಳುವಳು,  ವಿಸ್ತಾರವಾಗುವಳು,  ವಿಶಾಲ ಹೃದಯದ ಅಮ್ಮನಂತೆ. ನಿಧಾನವಾಗಿ, ಗಮ್ಯದತ್ತ ಸಾಗುವಳು,ಯೋಗಸಮಾಧಿಯ ಅಭ್ಯಾಸದಂತೆ. ಈ ಚಲನಶೀಲ ತತ್ವ ಹರಿಯುವ ನದಿಯ ನೀರಿನದ್ದು ಮಾತ್ರವಲ್ಲ!. ಅಸಂಖ್ಯ ಜೀವಜಾಲವನ್ನು ಗರ್ಭದಲ್ಲಿ ಹೊತ್ತು, ಅವಕ್ಕೆ ಉಸಿರೂಡಿ ಹರಿಯುವ ಹರಿವದು. ನದಿಯ ಇಕ್ಕೆಲಗಳಲ್ಲಿ, ನಾಗರಿಕತೆಯನ್ನು ಕಟ್ಟಿ, ಬೆಳೆಸುವ ಕಾಲನದಿಯೂ ಅದೇ. ನದಿಯ ಬಗ್ಗೆ ಒಂದು ಅಪೂರ್ವ ಕಲ್ಪನೆಯನ್ನು ತಡವಿ ಮುಂದುವರಿಯೋಣ!  ಕೆಳಗಿನ ಸಾಲುಗಳು, ಸಿದ್ದಲಿಂಗಯ್ಯನವರ, “ಸಾವಿರಾರು ನದಿಗಳು” ಕವಿತೆಯಿಂದ ” ನೆನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು ಬೀದಿಯಲ್ಲಿ ಗಲ್ಲಿಯಲ್ಲಿ ಬೇಲಿಮೆಳೆಯ ಮರೆಗಳಲ್ಲಿ ಯಜಮಾನರ ಹಟ್ಟಿಯಲ್ಲಿ ಧಣಿಕೂರುವ ಪಟ್ಟದಲ್ಲಿ ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು” ಪರಿವರ್ತನೆಯ, ಹೊಸ ಬದುಕಿನ ಕನಸು ಹೊತ್ತ ಜನರ ಹೋರಾಟದ ದನಿಗಳಿವು. ಅವರು ಮುಂದುವರೆದು, “ಪೋಲೀಸರ ದೊಣ್ಣೆಗಳು ಏಜೆಂಟರ ಕತ್ತಿಗಳು ವೇದಶಾಸ್ತ್ರಪುರಾಣ ಬಂದೂಕದ ಗುಡಾಣ ತರೆಗೆಲೆ ಕಸಕಡ್ಡಿಯಾಗಿ ತೇಲಿತೇಲಿ ಹರಿದವು ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು” ಹೀಗೆ, ಸಿದ್ದಲಿಂಗಯ್ಯ ನವರ ಕಲ್ಪನೆಯಲ್ಲಿ, ಪರಿವರ್ತನೆಗಾಗಿ ಹೋರಾಡುವ ಪ್ರತಿಯೊಬ್ಬನೂ, ಅಂತಹ ಸಾವಿರಾರು ಜನಮಾನಸ, ಹೋರಾಟದ ಸಾಗರದತ್ತ ಧುಮುಕಿದ ಸಾವಿರಾರು ನದಿಗಳು ಅಂತ, ನದಿಗೆ ಒಂದು ಹೊಸ ಪ್ರತಿಮೆ ಕೊಟ್ಟಿದ್ದಾರೆ. ಗಂಗಾನದಿಯನ್ನು, ಗಂಗೆಯ ತಟದ ಸಾಮಾನ್ಯ ಜನರು “ಗಂಗಾ ಮಾತಾ” ಅಂತ ಕರೆಯುತ್ತಾರೆ. ಎಷ್ಟೆಂದರೆ, ಅದು ಭೌತಿಕ ನದಿಯೆಂದು ಅವರು ಒಪ್ಪಲಾರರು. ಅದು ಅಮ್ಮ! ಈ ಭಾವನೆ, ಒಂದೆರಡು ದಿನಗಳ ಭಾವಬೆಳೆ ಅಲ್ಲ. ಇದು ಕುಡಿಯಲು ನೀರುಕೊಟ್ಟ, ಕೃಷಿಯ ಮೂಲಕ ಅನ್ನ ಕೊಟ್ಟ, ಅಮ್ಮನತ್ತ ಪ್ರೀತಿ,ಕೃತಜ್ಞ ಭಾವ. ತನ್ನನ್ನು ಸಾಕಿದ ಪ್ರಕೃತಿಯ ಶಕ್ತಿಯಾಗಿ ಅದಕ್ಕೆ ಸೂರ್ಯ, ಅಗ್ನಿ,ಇತ್ಯಾದಿ ಶಕ್ತಿಗಳ ಹಾಗೆಯೇ ದೈವೀಸ್ವರೂಪವೂ. ಗಂಗೆ ಅಂತಲ್ಲ, ಕಾವೇರಿ, ತುಂಗಭದ್ರೆ,  ಗೋದಾವರಿ ಇತ್ಯಾದಿ ನದಿಗಳ ಮಡಿಲಲ್ಲಿ ನಾಗರೀಕತೆ ಹುಟ್ಟಿ ಹುಲುಸಾಗಿ ಬೆಳೆಯಿತಷ್ಟೇ ಅಲ್ಲ, ಆ ನದಿಗಳೂ ನಮ್ಮ ಮನೆ, ಮನಸ್ಸು,ಭಾಷೆ, ಕಲೆಯ ಭಾಗವೇ ಆದವು. ಕೆಲವು ವರ್ಷಗಳ ಹಿಂದೆ, ಉತ್ತರಾಖಂಡದಲ್ಲಿ ಭೀಕರ ಮಳೆ ಸುರಿದು, ಗಂಗೆಯ ಪ್ರವಾಹ, ತನ್ನ ತಟದಲ್ಲಿ ಕಟ್ಟಿದ ಆಧುನಿಕತೆಯ ರೂಪಕಗಳಾದ ಹೋಟೆಲ್ ಕಟ್ಟಡಗಳನ್ನು ನೋಡು ನೋಡುತ್ತಲೇ ಕೊಚ್ಚಿ ತನ್ನ ಪ್ರವಾಹಕ್ಕೆ ಎಳೆದು ನುಂಗಿ ಹರಿದ ರೌದ್ರ ರೂಪವನ್ನು ,ನಾನು ಋಷೀಕೇಶದಲ್ಲಿ ಕಣ್ಣಾರೆ ನೋಡಿರುವೆ. ಆಗ ಅಲ್ಲಿನ ಜನರ ಬಾಯಲ್ಲಿ ಒಂದೇ ಮಾತು,  “ಗಂಗಾ ಮಾ, ಗುಸ್ಸೇ ಮೈ ಹೈ” ನೀರಿನಲ್ಲಿ ತರಗೆಲೆಯಂತೆ ತೇಲಿ ಹೋಗುವ ಕಾರು, ಗ್ಯಾಸ್ ಸಿಲಿಂಡರ್, ಮರದ ದಿಮ್ಮಿಗಳನ್ನು ನೋಡಿದರೆ ನಿಜವಾಗಿಯೂ, ನಾಗರಿಕತೆಯ ದೌರ್ಜನ್ಯದತ್ತ ಅಮ್ಮ ಅತೀವ ಕೋಪದಲ್ಲಿ ಹರಿಯುವಂತೆಯೇ ನನಗೂ ಅನಿಸಿತ್ತು. ” ನಿನಗೆ ಪೊಡಮಡುವೆ ನಿನ್ನನುಡುತೊಡುವೆ ಏಕೆ ಎಡೆತಡೆವೆ ಸುರಿದು ಬಾ ಸ್ವರ್ಗ ತೊರೆದು ಬಾ ಬಯಲ ಜರೆದು ಬಾ ನೆಲದಿ ಹರಿದು ಬಾ ಬಾರೆ ಬಾ ತಾಯಿ ಇಳಿದು ಬಾ” ಸ್ವರ್ಗವನ್ನು ತೊರೆದು ಬಂದ ತಾಯೀ, ನಿನಗೆ ಪೊಡಮಡುವೆ,  ಎನ್ನುವ ಬೇಂದ್ರೆ ಅವರಿಗೆ ಈ ತಾಯಿಯತ್ತ ಎಷ್ಟು ಪ್ರೀತಿ. ನದಿ,ತಾಯಿಯೇ ಎಂಬ ಸ್ಥಾಯೀ ಭಾವ. “ಬಯಲ ಜರೆದು ಬಾ, ನೆಲದಿ ಹರಿದು ಬಾ,”  ಎನ್ನುವಾಗ ಅಮ್ಮನ ಶಕ್ತಿಚಲನಕ್ರಿಯೆಯತ್ತ ಬಾಲಕ ಬೇಂದ್ರೆಯ ಬೆರಗಿನ,ಒಲವಿನ ಕರೆ ಕೇಳಿಸುತ್ತೆ ಅಲ್ಲವೇ!. ಹೀಗೆ ಚಲನಶೀಲ, ಚಣಚಣದ ಪರಿವರ್ತನೆಯೇ ಅಂತರಂಗದ ಸೂತ್ರವಾಗಿ ಹರಿಯುವ ನದಿಯನ್ನು ಒಡ್ಡು ಕಟ್ಟಿ ಬಂಧಿಸಿ ಒಂದು ಕೆರೆಯಾಗಿಸಿದರೆ, ಅದು ಕಂಬಾರರ ಗಂಗಾಮಾಯಿ ಕವಿತೆಯಾಗುತ್ತೆ.  ” ಕೆಂಪಾನ ಕೆಂಪುಗುಡ್ಡ ಬೆಳ್ಳಾನ ಬಿಳಿ ಗುಡ್ಡ ಒಡಮುರಿದು ಕೂಡಿದ ಒಡ್ಡಿನಲ್ಲೆ,ನಮ್ಮೂರ ಕೆರೆ ಹೆಸರು ಗಂಗಾಮಾಯಿ.” ಗುಡ್ಡಗಳು ಸೇರುವಲ್ಲಿ, ಅಣೆಕಟ್ಟು ಕಟ್ಟಿ, ಹರಿಯುವ ನೀರನ್ನು ಮನುಷ್ಯ ನಿಲ್ಲಿಸಿದ್ದಾನೆ. ಹಾಗೆ ಮೂಡಿದ, ಕೆರೆಯೇ ಗಂಗಾಮಾಯಿ ಕೆರೆ . ಮಾಯಿ ಅಂದರೆ ಮಾತೆಯೇ. ಗಂಗೆಯ ಎಲ್ಲಾ ಗುಣಗಳನ್ನು ಈ ಕೆರೆ ಹೊಂದಿದೆ, ಆದರೆ ಚಲನಶೀಲತೆ ಇಲ್ಲ. ಈ ಕವಿತೆಯಲ್ಲಿ ಹಲವಾರು ಪ್ರತಿಮೆಗಳು. ಈ ಕೆರೆಯ ಸುತ್ತ ಮೂರು ಥರದ ಜೀವ ವೈವಿಧ್ಯತೆ. ೧. ” ಮರಗಿಡ ಕಂಟಿ,ಸಸ್ಯ ಕೋಟಿ ೨. ” ನಾಯಿ ನರಿ ಹಂದಿ,ಶುಕಪಿಕಾದಿಯ, ಚೌರ್ಯಾಂಸಿ ಲಕ್ಷ ಕೀಚು ಕೀಚು. ( ಹಲವು ಪ್ರಾಣಿಗಳಲ್ಲದೇ, 84 ಲಕ್ಷ, ಕ್ರಿಮಿ ಕೀಟಗಳ ಪ್ರಾಣಿಜಗತ್ತು. , ಕೀಚು ಕೀಚು ಪ್ರಯೋಗ, ಒಂದು ಧ್ವನಿ ಪ್ರಬೇಧ) ೩. ದಡದ ಗಿಡಗಳ ನೆತ್ತಿ ಜೋತ ಬಾವಲಿ ಹಿಂಡು, ನೀರಿನೆದೆಯಲ್ಲದರ ವಕ್ರ ನೆರಳು. ( ಇದನ್ನು ಸ್ವಾರ್ಥ ಮನುಷ್ಯ ಪ್ರಜ್ಞೆಯ ಪ್ರತಿಮೆ, ಅಂತ ವಿಮರ್ಶಕರು ವಿವರಿಸಿದ್ದಾರೆ. ಈ ಬಾವಲಿಗಳು, ತಲೆಕೆಳಗಾಗಿ, ದಡದ ಮರಕ್ಕೆ ಜೋತು ಬಿದ್ದಿವೆ, ಅವುಗಳ ವಕ್ರ ನೆರಳು ಕೆರೆಯ ಎದೆಮೇಲೆ.) ಕವಿತೆಯುದ್ದಕ್ಕೂ ಹರಿವ ನೀರು,ನಿಂತ ನೀರಾಗಿ, ಅದನ್ನು ಮನುಷ್ಯ, ತನ್ನ ಸ್ವಾರ್ಥಕ್ಕಾಗಿ ಕೊಳೆ ಕೊಳೆಯಿಸುವ ಭಾವ. ಕವಿತೆಯಲ್ಲಿ ಕವಿ ಉಪಯೋಗಿಸಿದ ಒಂದು ಯೋಚನೆಗೂ ನಿಲುಕದ, ಪ್ರತಿಮೆಯಿದೆ. ಸಾಧಾರಣವಾಗಿ, ಬೆಳಗು, ಶುಭ ಸೂಚಕವೂ,ಆನಂದದಾಯಕವೂ. ನಿರಾಶೆಯ ಪರಮಾವಧಿಯಲ್ಲಿ ಕವಿಗೆ ಸೂರ್ಯೋದಯ ಹೇಗೆ ಕಾಣಿಸುತ್ತೆ?  ” ಮೂಡಣದ ಮುದಿಕುರುವೊಡೆದು ನೆತ್ತರು ಕೀವು ಸೋರಿತೋ, ಸುರುವಾಯ್ತಿಲ್ಲಿ ಚಲನೆ” ಜೀವಿಸುವ ದೇಹದ ನೂರಾರು ಅಂಗಾಂಗಗಳಿಗೆ ರಕ್ತಸಂಚಾರ ನಿರಂತರವಾಗಿ ಆಗುತ್ತಲೇ ಇರಬೇಕು. ಹಾಗೆ ಹರಿಯುತ್ತಾ, ರಕ್ತ, ದೇಹದ ಮುಕ್ಕೋಟಿ ಜೀವಕೋಶಗಳಿಗೆ ಶಕ್ತಿ ಹಂಚುತ್ತೆ. ಜೀವಕೋಶಗಳ  ಕಲ್ಮಶಗಳನ್ನು ತನ್ನೊಳಗೆ ಸೇರಿಸಿ, ಕಿಡ್ಣಿಯ ಮೂಲಕ ಹಾದು, ಕಲ್ಮಶ ಕಳೆದು, ಶ್ವಾಸಕೋಶಗಳನ್ನು ಹಾದು, ಕಾರ್ಬನ್ ಡೈ ಆಕ್ಸೈಡ್ ಕೊಟ್ಟು,ಆಕ್ಸೀಜನ್, ತುಂಬಿ ಹೃದಯದ ಮುಖಾಂತರ ಪುನಃ ದೇಹದ ಸುತ್ತ ಸುತ್ತುತ್ತೆ. ಇದೊಂದು ಚಲನಶೀಲ ಕ್ರಿಯೆ!. ದೇಹದಲ್ಲಿ ಕುರುವಾದಾಗ, ರಕ್ತಕಣಗಳು ಸತ್ತು, ಕೀವಾಗಿ, ಕುರು ಒಡೆದಾಗ ಸೋರುತ್ತದೆ. ಆ ಸೋರಿಕೆಯಲ್ಲಿ, ಕೆಟ್ಟುಹೋದ ರಕ್ತವೂ ಸೋರುತ್ತೆ. ಬಿಳಿ,ಕೆಂಪು ಬಣ್ಣಗಳ ಮಿಶ್ರಣವದು. ಚಲನಶೀಲ ತತ್ವಕ್ಕೆ ತಡೆಯುಂಟಾದಾಗ, ಕುರುವಾಗಿ ಒಡೆದು,ಸೋರುವುದು, ದೇಹದ ಪ್ರಕೃತಿ. ಬೆಳಗನ್ನು,ಇಷ್ಟು ಪ್ರತಿಮಾತ್ಮಕವಾಗಿ ಋಣಾತ್ಮಕ, ವಿದ್ಯಮಾನಕ್ಕೆ ಬಳಸಿದ ಇನ್ನೊಂದು ಕಾವ್ಯ ಇದಯೇ?.  ಪ್ರಕೃತಿ ಚಲನಶೀಲ ತತ್ವದ ಮೇಲೆಯೇ ನಿಂತರುವ, ಸದಾ ಬದಲಾಗುವ, ಅನಂತ ವ್ಯವಸ್ಥೆ. ಅದಕ್ಕೆ ತಡೆಯಾದಾಗ, ಭೂಕಂಪ,ನೆರೆ, ಚಂಡಮಾರುತ ಇತ್ಯಾದಿಗಳು, ನಿಸರ್ಗ,ತನ್ನ ಡಾಕ್ಟರ್,ತಾನೇ ಆಗುವ ಪ್ರಕ್ರಿಯೆಯಷ್ಟೇ?. ಹಾಗೆ ಮೂಡಣದ ಮುದಿಕುರುವೊಡೆದು,ಸೋರಿದಾಗ, ಸುರುವಾಯ್ತಿಲ್ಲಿ,ಚಲನೆ! ಎನ್ನುವಾಗ ಕವಿ,ಕುರುವಿಗೆ ಕನ್ನಡಿ ಹಿಡಿದು ಗಂಗಾಮಾಯಿ ಕೆರೆಯ ಸುತ್ತ ನಡೆಯುವ ಮಾನವ ನಿರ್ಮಿತ ಕೊಳೆತ, ಕೊಳೆಯುತ್ತಲೇ ಇರುವ ವ್ಯವಸ್ಥೆಯ ಪ್ರತಿಬಿಂಬ ತೋರಿಸುತ್ತಾನೆ. ” ಕೊಡುಕೊಲ್ಲು ವ್ಯವಹಾರ,ದರ ನಿರಾತಂಕ ತಂಗಾಳಿ ಸುಳಿಯದ,ದೊಡ್ಡ ತೆರೆ ಮೂಡಿ ಮುಳುಗದ ಹರಿಯುವುದಕ್ಕೆ ದಿಕ್ಕಿಲ್ಲದ ನೀರು” ಹರಿಯುವ ತೊರೆಗೆ, ಮನುಷ್ಯ,ಒಡ್ಡು ಕಟ್ಟಿ, ಕೊಡು ಕೊಲ್ಲು ವ್ಯವಹಾರದ ವ್ಯವಸ್ಥೆ, ವ್ಯಾಪಾರ ದರದಿಂದ ಅರ್ಥದಲ್ಲಿಯೇ ಅರ್ಥ ಅನ್ನುವ, ತಂಗಾಳಿಯೂ ಸುಳಿಯದ ವ್ಯವಸ್ಥೆ. ಹೊಸ ಯೋಚನೆ, ಹಳೆಯದು ತೊಳೆದು ಹೊಸ ಚಿಂತನೆ,ಇಲ್ಲದ, ಸ್ತಬ್ಧ ಚಿತ್ರದಂತೆ ನಾವೇ ಹೇರಿಕೊಂಡು, ಪ್ರಕೃತಿಯನ್ನು ಕಟ್ಟಿ ಹಾಕಿ ನಿಲ್ಲಿಸಿದ ವ್ಯವಸ್ಥೆ. ಪ್ರಕೃತಿ ಹರಿಯಲು ಬಯಸುತ್ತಿದೆ,ಆದರೆ ಮನುಷ್ಯ ಕಟ್ಟಿದ ಒಡ್ಡು,ಆ ಹರಿವಿಗೆ ಅಡ್ಡವಾಗಿದೆ!. 1969ರಲ್ಲಿ, ಕಂಬಾರರು ಬರೆದ ಕವಿತೆ, ಇಂದು  ಹೆಚ್ಚು, ಮನಮುಟ್ಟಲು ಕಾರಣ, ನಾವಿನ್ನೂ ಕಟ್ಟುತ್ತಿರುವ ಒಡ್ಡುಗಳೇ?. ಕೊರೊನಾ ವೈರಸ್ ಕೂಡಾ, ಮಾನವ, ನಿರ್ಮಿಸಿ ಕೊಳೆಯಿಸಿದ ಕೆರೆಯೊಳಗೆ ಹುಟ್ಟಿದ್ದೇ?. ******************************************************* ಲೇಖಕರ ಬಗ್ಗೆ: ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ.

ಹರಿಯುವ ಕವಿತೆಗೆ ಒಡ್ಡು ಕಟ್ಟದಿರಿ! Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಎಂದೂ ಸಾಕೆನಿಸದ ನೆಲದ ನಂಟು, ಸಮುದ್ರದ ಪ್ರೀತಿ

ಅಂಕಣಬರಹ ಪುಸ್ತಕ- ಬಾನಸಮುದ್ರಕೆ ಗಾಳನೋಟ ಲೇಖಕರು- ಪ್ರವೀಣ ಬೆಲೆ ೮೦/- ಪ್ರಕಾಶನ-ಸಲೀಲ ಪುಸ್ತಕ ಚಿಕ್ಕವನಿರುವಾಗ ಬಟ್ಟೆಯ ಸ್ಟ್ಯಾಂಡ್‌ನಲ್ಲಿರುವ ಬಟ್ಟೆಗಳನ್ನೆಲ್ಲ ಒಂದೆಡೆ ಗುಡ್ಡೆಹಾಕಿಕೊಂಡು ಬೆಚ್ಚಗೆ ಮಲಗುತ್ತಿದ್ದ ಮಗನಿಗೆ ಈಗ ಆತ ಹಾಗೆ ಮಾಡುತ್ತಿದ್ದ ಎಂದರೆ ನಂಬುವುದಿಲ್ಲ. ಮಲಗುವಾಗ ನಾನು ಬೆಳ್ಳಿಗ್ಗೆ ಬೇಗ ಏಳಬೇಕಾದಾಗಲೆಲ್ಲ ಅವನ ಪಕ್ಕ ನನ್ನ ಉಪಯೋಗಿಸಿದ ಉಡುಪುಗಳನ್ನು ಇಡುತ್ತಿದ್ದೆ. ಅದನ್ನೇ ತಬ್ಬಿಕೊಂಡು ಆತ ಹಾಯಾಗಿ ಮಲಗಿಬಿಡುತ್ತಿದ್ದ. ಕೆಲವೊಮ್ಮೆ ಬಟ್ಟೆ ಇಡದಿದ್ದಾಗ ಎದ್ದು ಅಳಲು ಪ್ರಾರಂಭಿಸುತ್ತಿದ್ದ. ಪ್ರವೀಣ ಅವರ ಬಾನಸಮುದ್ರಕೆ ಗಾಳನೋಟ ಎನ್ನುವ ಸಂಕಲನದ ಮೊದಲ ಕವನವನ್ನು ಓದಿದಾಗ ನನಗೆ ಈ ಘಟನೆ ನೆನಪಾಗಿ ಮತ್ತೊಮ್ಮೆ ಕಣ್ಣಲ್ಲಿ ನೀರೂರಿತು. ತಾಯಂದಿರ ಸೀರೆಯ ಬಗ್ಗೆ ಎಲ್ಲ ಮಕ್ಕಳಿಗೂ ಒಂದು ರೀತಿಯಾದ ಭಾವನಾತ್ಮಕವಾದ ಅನುಬಂಧವಿರುತ್ತದೆ. ಊಟವಾದ ನಂತರ ತಾಯಿಯ ಸೆರಗಿಗೆ ಕೈ ಒರೆಸದ ನನ್ನ ತಲೆಮಾರಿನವರು ಸಿಗಲು ಸಾಧ್ಯವೇ ಇಲ್ಲ. ಕೊನೆಯಪಕ್ಷ ಹಳ್ಳಿಯಲ್ಲಿ ಬೆಳೆದವರಾದರೂ ಅಮ್ಮನ ಸೆರಗಿಗೆ ಕೈ ಒರೆಸಿಯೇ ಒಳೆದವರು ಎಂದು ಖಡಾಖಂಡಿತವಾಗಿ ಹೇಳಬಲ್ಲೆ. ನನ್ನ ನಂತರದ ತಲೆಮಾರಿಗೆ ಸೆರಗು ಸಿಕ್ಕಿರಲಿಕ್ಕಿಲ್ಲ. ಆದರೆ ಅಮ್ಮ ಬೆನ್ನು ತಬ್ಬಿ ಅಮ್ಮನ ಚೂಡಿದಾರಕ್ಕೆ ಮುಖ, ಕೈ ಒರೆಸಿಯೇ ಒರೆಸುತ್ತಾರೆ. ಆ ಸುಖವೇ ಬೇರೆ. ಇನ್ನು ನನ್ನ ಅಮ್ಮನ ತಲೆಮಾರಿನವರಿಗೆ ಹಾಗೂ ಅದಕ್ಕಿಂತ ಹಿಂದಿನವರಿಗೆ ಸೆರಗು ಬಹು ಉಪಯೋಗಿ ಸಾಧನವಾಗಿತ್ತು. ಕೆಂಡದ ಒಲೆಯಿಂದ ಬಿಸಿ ಪಾತ್ರೆಗಳನ್ನಿಳಿಸಲು, ಕೆಲವೊಮ್ಮೆ ಮಸಿ ಅರಿವೆಯಾಗಿ, ಮತ್ತೂ ಕೆಲವೊಮ್ಮೆ ತಕ್ಷಣದ ಸ್ವಚ್ಛಗೊಳಿಸುವ ಸಾಧನವಾಗಿಯೂ ಬಳಸಲ್ಪಡುತ್ತಿತ್ತು. ಸೆರಗಿನ ಬಳಕೆಯ ಮಹತ್ವ ಕಡಿಮೆಯದ್ದೇನಲ್ಲ. ಶ್ರೀಕೃಷ್ಣನ ಕೈಗೆ ಗಾಯವಾಗಿ ರಕ್ತ ಸೋರುತ್ತಿರುವಾಗ ದ್ರೌಪದಿ ತನ್ನ ಸೆರಗಿನ ಅಂಚನ್ನೇ ಹರಿದು ಗಾಯಕ್ಕೆ ಪಟ್ಟಿ ಕಟ್ಟಿದ್ದಳಂತೆ. ಆ ಸೆರಗಿನ ಅಂಚು ನಂತರ ದ್ರೌಪದಿಯ ವಸ್ತ್ರಾಪಹರಣದ ಸಮಯದಲ್ಲಿ ಅಕ್ಷಯ ಸೆರಗಾಗಿ ಅವಳನ್ನು ಆವರಿಸಿಕೊಂಡಿದ್ದು ಎನ್ನುವ ನಂಬಿಕೆಯಿದೆ. ಹೀಗಿರುವಾಗ ಅಮ್ಮನ ಸೆರಗನ್ನು ಚಾಣಿಗಿಯಾಗಿ ಬಳಸುವ ರೂಪಕವನ್ನು ತನ್ನ ಮೊದಲ ಕವಿತೆಯಲ್ಲಿ ತಂದು ಇಡೀ ಸಂಕಲನದ ಘನತೆಯನ್ನು ಹೆಚ್ಚಿಸಿ, ಸಂಕಲನದ ಉಳಿದ ಕವಿತೆಯ ಕಡೆಗೊಂದು ಕುತೂಹಲವನ್ನು ಹುಟ್ಟಿಸಿದ್ದಾರೆ ಪ್ರವೀಣ.    ಇಂದಿಗೂ ಪ್ರವೀಣ ಎಂದಾಗಲೆಲ್ಲ ಹತ್ತಾರು ಪ್ರವೀಣರನ್ನು ನೆನಪಿಸಿಕೊಳ್ಳುವ ನಾನು ೨೦೧೯ರಪ್ರಜಾವಾಣಿ ಕಾವ್ಯದ ವಿಜೇತರು ಎಂದಾಗ ಮಾತ್ರ ಅರ್ಥಮಾಡಿಕೊಳ್ಳುತ್ತೇನೆ. ಹೀಗಿರುವಾಗಲೇ ಈ ಸಂಕಲನ ನನ್ನ ಕೈ ಸೇರಿದ್ದು. ಅದ್ಭುತ ರೂಪಕಗಳ ಸುರಿಮಳೆಯನ್ನು ಓದಿ ದಿಗ್ಭ್ರಮೆಗೊಳಗಾಗಿದ್ದು. ಅಮ್ಮನ ಮೊದಲ ಸೀರೆಗೆಕನಸು ಬರೆದ ಚಿತ್ತಾರದ ಅಂಚಿತ್ತುವಸಂತ ಋತುವಿನ ಚಿಗುರಿನ ಉತ್ಸಾಹಗಳ ಚಿನ್ನದ ಸೆರಗಿತ್ತುನನ್ನ ಹುಟ್ಟಿದ ದಿನ ಬಂಗಾರದಸೆರಗು ಕುಂಚಿಗೆಯಾಗಿ ಅಂಚುಕಟ್ಟುವ ಕಸಿಯಾಗಿ ಚೂಪಾದತುತ್ತತುದಿಗೆ ಸಾಗರದಾಳದಹೊಚ್ಚಹೊಸ ಮುತ್ತು ಮೆರೆದುನನ್ನ ತಲೆಗೆ ಕಿರೀಟವಾಯಿತು.  ಎಂದು ಹೇಳುತ್ತಾರೆ. ಇಲ್ಲಿ ಬರುವ ಸಾಲುಗಳನ್ನು ಗಮನಿಸಿ. ಮಗುವಿನ ತಲೆಗೆ ಕಟ್ಟಲು ಅಮ್ಮ ಹೊಲಿಯುವ ಕುಂಚಿಗೆಗೆ ತನ್ನ ಮೆತ್ತನೆಯ ಸೀರೆಯನ್ನು ಬಳಸಿ ಹೊಲೆಯುವ ಸಹಜ ಪ್ರಕ್ರಿಯೆ ಇಲ್ಲಿ ಕವಿತೆಯಾಗಿ ಮನಮುಟ್ಟುವ ಪರಿಯೇ ವಿಶಿಷ್ಟವಾದದ್ದು. ಈ ಕವನದಲ್ಲಿ ಬರುವ ಸಾಲುಗಳನ್ನು ಓದುತ್ತ ಹೋದಂತೆ ಹೊಸತೇ ಆದ ಒಂದು ಕಾವ್ಯಲೋಕ ಕಣ್ಣೆದುರು ಬಿಚ್ಚಿಕೊಳ್ಳುತ್ತದೆ.   ಜಗತ್ತಿನ ಮೊತ್ತಮೊದಲ ಮುತ್ತಿನಸಂಭ್ರಮದಲ್ಲಿ ನನ್ನ ರಾಜ್ಯಾಭಿಷೇಕವಾಯಿತು.ಈ ಸಾಲುಗಳಲ್ಲಿ ಮೂಡಿರುವ ಆಪ್ತತೆಯನ್ನು ಗಮನಿಸಿ. ಈ ಎರಡು ಸಾಲುಗಳು ಓದುಗನಲ್ಲಿ ಸಾವಿರ ಭಾವವನ್ನು ತುಂಬುತ್ತವೆ.      ಹತ್ತನೇ ತರಗತಿಯ ಹಿಂದಿನ ಸಿಲೆಬಸ್‌ನಲ್ಲಿ ಎ. ಕೆ. ರಾಮಾನುಜನ್‌ರವರು ಇಂಗ್ಲೀಷ್‌ಗೆ ಅನುವಾದಿಸಿದ್ದ ಲಂಕೇಶರ ಅವ್ವ ಕವನವಿತ್ತು. ಅವ್ವನನ್ನು ಹೊಗಳುತ್ತಲೇ ಬನದ ಕರಡಿಯಂತೆ ಪರಚುವ ಅವ್ವ, ಕಾಸು ಕೂಡಿಡುವ ಅವ್ವ, ಸರಿಕರೆದುರು ತಲೆ ತಗ್ಗಿಸಬಾರದೆಂದು ಛಲದಿಂದ ದುಡಿವ ಅವ್ವನನ್ನು ಹೇಳುವಾಗಲೆಲ್ಲ ನನ್ನ ಮಾತು ಆರ್ದೃವಾಗುತ್ತಿತ್ತು. ಅವ್ವನನ್ನು ಕುರಿತ ಕನ್ನಡದ ಅಥವಾ ನಿಮ್ಮ ಮಾತೃಭಾಷೆಯಲ್ಲಿರುವ ಕವನಗಳನ್ನು ಇಂಗ್ಲೀಷ್‌ಗೆ ಅನುವಾದಿಸಿ ಎಂದು ನಾನು ಮಕ್ಕಳಿಗೆ ಹೇಳುತ್ತಿದ್ದೆ.  ಈಗ ಈ ಕವನವನ್ನು ಓದಿದ ನಂತರ ತಕ್ಷಣಕ್ಕೆ ಅನ್ನಿಸಿದ್ದು, ಆಗ ಹಿಂದಿನ ಸಿಲೆಬಸ್ ಇರುವಾಗಲೇ ಪ್ರವೀಣ ಈ ಕವನ ಬರೆದಿದ್ದರೆ ನನ್ನ ಮಕ್ಕಳಿಗೆ ಇನ್ನೊಂದಿಷ್ಟು ಚಂದವಾಗಿ ಅಮ್ಮನನ್ನು ಕಟ್ಟಿಕೊಡಬಹುದಿತ್ತು, ಆಸಕ್ತ ವಿದ್ಯಾರ್ಥಿಗಳಿಗೆ ನಾಲ್ಕಾರು ಸಾಲುಗಳನ್ನು ನೀಡಿ ಇಂಗ್ಲೀಷ್ ಅನುವಾದ ಮಾಡಿ ಎನ್ನಬಹುದಿತ್ತು ಎಂದೇ. ಅಮ್ಮನನ್ನು ಇಷ್ಟೊಂದು ಆಪ್ತವಾಗಿ ಕಟ್ಟಿಕೊಡುವ ಇನ್ನೊಂದು ಕವನವನ್ನು ಸಧ್ಯದಲ್ಲಿ ನಾನು ಓದಿರಲಿಲ್ಲ. ಬರೆದಷ್ಟೂ ಬರೆಯಿಸಿಕೊಳ್ಳುವ ಕವನವಿದು. ಇದೊಂದೇ ಕವನದ ಕುರಿತುಪುಟಗಟ್ಟಲೆ ಬರೆಯಬಹುದೇನೋ. ಭಗಭಗನೆ ಉರಿವ ಹಾಸಿಗೆಯ ಮೇಲೆಸೀರೆ ಹಾಸಿ ನಿದ್ದೆ ಮಾಡುತ್ತಾಳೆ ಎವೆಮುಚ್ಚದೆಸೀರೆಯ ಗಂಟಿನಲ್ಲಿ ಮಡಚಿಟ್ಟುಕೊಂಡಬೈಗುಳ ಅವಮಾನದಣಿವು ಸುಸ್ತುಗಳ ಒದರಿನಡಕ್ಕೆ ಸೆರಗು ಕಟ್ಟಿಕೊಂಡು ಹೊಟ್ಟೆಗೆಹತ್ತಿದ ಬೆಂಕಿ ಆರಿಸಲುಸ್ಟೋವು ಹೊತ್ತಿಸುತ್ತಾಳೆ. ಹೌದು, ಹೆಣ್ಣಿನ ಸೀರೆಯ ಸೆರಗಿನಂಚಿನಲ್ಲಿ ಎಂತೆಂಥವು ಗಂಟುಹಾಕಿಕೊಂಡಿರುತ್ತವೋ ಬಲ್ಲವರಾರು? ಯಾರೋ ಕೊಟ್ಟ ಹಣ, ಇನ್ನಾರೋ ಮಾಡಿದ ಅವಮಾನ, ನಡೆವ ಬೀದಿಯೇ ಮೈಮೇಲೆ ಬಿದ್ದು ಎಸುಗಲೆತ್ನಿಸಿದ ಬಲಾತ್ಕಾರ, ಸ್ವಂತ ಗಂಡನೇ ತಿರಸ್ಕರಿಸಿ ಬೇರೆಯವಳೊಟ್ಟಿಗೆ ನಡೆದ ನೋವು, ಹಡೆದ ಮಗನೇ ದೂರೀಕರಿಸಿದ ಅಸಹಾಯಕತೆ ಎಲ್ಲವೂ ಆ ಸೆರಗಿನ ಮೂಲೆಯಲ್ಲಿರುತ್ತದೆ. ಸೆರಗು ಕೊಡವಿ ಎದ್ದು ನಿಂತರೆ ಬಾಳು, ಇಲ್ಲವೆಂದಾದಲ್ಲಿ ಅದೇ ಸೆರಗನ್ನು ಮನೆಯ ಜಂತಿಗೆ ಕಟ್ಟಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಬದುಕುವ ಛಲವಿರುವ ಯಾವ ಅಮ್ಮನೂ ಹಾಗೆ ಮಾಡಿಕೊಳ್ಳುವುದಿಲ್ಲ, ಬದಲಾಗಿ ತನ್ನ ಮಕ್ಕಳಲ್ಲಿಯೂ ಬದುಕುವ ಹುಮ್ಮಸ್ಸನ್ನೇ ತುಂಬುತ್ತಾಳೆ.ಜೀವನ ಕಟ್ಟುವ ಎಳೆದಾಟದಲ್ಲಿಪಿಸುಕಿದ ಅಮ್ಮನ ಸೀರೆಗಳನ್ನು ಒಟ್ಟಿಗೆ ಹೊಲಿದರೆ ನೆಪ್ಪದಿ ನೀಡುವ ದುಪಟಿಹರಿದರೆ ಕಲ್ಮಶ ತೊಳೆಯುವ ಅರಿವೆಇನ್ನಷ್ಟು ಹರಿದರೆ ಕಣ್ಣೀರು ಒರೆಸುವ ಕೈವಸ್ತ್ರಹರಿದು ಚಿಂದಿ ಚಿಂದಿ ಮಾಡಿದರೂಲಕ್ಷಾಂತರ ದೀಪಗಳಿಗೆಬತ್ತಿ ನಿಜ, ಇಂತಹ ಸಶಕ್ತ ಸಾಲುಗಳಿಗಲ್ಲದೇ ಬೇರಾವುದಕ್ಕೆ ಪ್ರಜಾವಾಣಿಯ ದೀಪಾವಳಿ ಕವನ ಸ್ಪರ್ಧೆಯಲ್ಲಿ ಬಹುಮಾನ ನೀಡಲು ಸಾಧ್ಯ? ಹಾಗೆ ನೋಡಿದರೆ ಈ ಕವಿತೆಗೆ ಪ್ರಥಮ ಬಹುಮಾನ ನೀಡಿ ಪ್ರಜಾವಾಣಿಯ ಬಹುಮಾನಿತ ಕವನಗಳು ಯಾವತ್ತೂ ಅತ್ಯುತ್ತಮವಾಗಿರುತ್ತವೆ ಎಂಬ ಮಾತಿಗೆ ಗಟ್ಟಿ ಸಾಕ್ಷ್ಯ ದೊರೆತಂತಾಗಿದೆ. ಹುಡುಕುತಿವೆ ಕಾಳುಗಳು ಕೋಳಿಗಳನ್ನುಗೋರಿಗಳು ಸತ್ತ ದೇಹಗಳನ್ನುನಿದ್ರೆಗಳು ಮುಚ್ಚುವ ಕಣ್ಣೆವೆಗಳನ್ನುಬಟ್ಟೆಗಳು ಮುಚ್ಚಬಹುದಾದ ಮಾನಗಳನ್ನು   ಈ ಸಾಲುಗಳಲ್ಲಿರುವ ವ್ಯಂಗ್ಯವನ್ನು ಗುರುತಿಸಿ. ಲೋಕದ ನಿಯಮಗಳನ್ನೆಲ್ಲ ಬದಲಾಯಿಸಿದ ವಿಷಾದವನ್ನು ನೋಡಿ. ಹೇಳಬೇಕಾದುದನ್ನೂ ಮೀರಿ ಈ ಸಾಲುಗಳು ಮಾತನಾಡುತ್ತಿವೆ. ಹಾಗೆ ನೋಡಿದರೆ ಒಮ್ಮೆಲೆ ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳೇ ನಮ್ಮಯ ದೇವರು….’ ಎನ್ನುವ ಸಾಲು ನೆನಪಿಗೆ ಬಂದೇ ಬರುತ್ತದೆ. ಇಡೀ ಕವನವನ್ನು ಓದಿದಮೇಲೆ ಅರಿವಾಗದ ವಿಶಣ್ಣಭಾವವೊಮದು ಎದೆಯೊಳಗೆ ಹಾಗೇ ಉಳಿಯದಿದ್ದರೆ ಹೇಳಿ. ಖಂಡಿತವಾಗಿ ಈ ಕವನವನ್ನು ಓದಿ ಮುಗಿಸಿದ ನಂತರ ಮಾಮೂಲಿಯಾಗಿ ಮುಂದಿನ ಕವನವನ್ನು ಓದಲಾಗುವುದೇ ಇಲ್ಲ. ಮತ್ತೊಮ್ಮೆ, ಮಗದೊಮ್ಮೆ ಈ ಕವನದ ಸಾಲುಗಳನ್ನು ತಿರುವುತ್ತೀರಿ. ಪ್ರಜಾಪ್ರಭುತ್ವದ ಮೇಲೆ ಒಂದಿಷ್ಟಾದರೂ ನಂಬಿಕೆಯಿದ್ದವರಾದರೆ ನಿಮಗೆ ಈ ಸಾಲುಗಳು ಚಿಂತನೆಗೆ ಹಚ್ಚುತ್ತವೆ. ಜೀವಪರ ನಿಲುವುಗಳು ನಿಮ್ಮಲ್ಲಿದ್ದರೆ ಖಂಡಿತಾ ಈ ಸಾಲುಗಳು ನಿಮ್ಮನ್ನು ಅಲುಗಾಡಿಸದೇ ಬಿಡುವುದಿಲ್ಲ. ಚೂರಿ ದೈವವೇ ಬಹುಪರಾಕಗಡಿಯ ನಶೆಯೇ ಬಹುಪರಾಕತಲೆಯ ಚಪ್ಪಲಿಯೇ ಬಹುಪರಾಕಬಣ್ಣದ ಪೊರಕೆಯೇ ಬಹುಪರಾಕನಿಜ, ಈ ಪರಾಕುಗಳೇ ನಾವು ಸಾಗುತ್ತಿರುವ ದಾರಿಯನ್ನು ತೋರಿಸುತ್ತಿದೆ. ಬಗಲಲ್ಲಿ ಚಾಕು ಸಿಕ್ಕಿಸಿಕೊಂಡೇ ನಾವೀಗ ಬೆಣ್ಣೆ ಸವರಿದ ಮಾತನಾಡುತ್ತೇವೆ. ದೇಶಪ್ರೇಮದ ಹೆಸರಿನಲ್ಲಿ ಸೈನಿಕರ ಕುರಿತಾದ ಭಾವನಾತ್ಮಕ ಕಥೆಗಳನ್ನು ಹರಿಯಬಿಟ್ಟು ಎಂದೂ ಇಳಿಯದ ನಶೆಯನ್ನು ಸಾಮಾನ್ಯ ಜನರಲ್ಲಿ ತುಂಬಿ ಅಧಿಕಾರದ ಗದ್ದುಗೆಯನ್ನು ಭದ್ರಪಡಿಸಿಕೊಳ್ಳುತ್ತೇವೆ, ಇದೇ ನಶೆಯಲ್ಲಿ ಮಾಡಿದ ತಪ್ಪುಗಳನ್ನೆಲ್ಲ ಮರೆಮಾಚಿಕೊಂಡು ತಲೆಯ ಮೇಲೆ ಪಾದುಕೆಗಳನ್ನಿಟ್ಟುಕೊಂಡು ಪೂಜಿಸುತ್ತಿದ್ದೇವೆ,‘ಇಕೋ ತಕೋ ಸಂಭ್ರಮಿಸು’ ಕವಿತೆಯಂತೂ ಇಡೀ ಸಂಕಲನದ ಕಿರೀಟವೆಂಬಂತೆ ಭಾಸವಾಗುತ್ತದೆ. ರಾವಣ ತನ್ನ ದೈವ ಶಂಕರನನ್ನು ಪ್ರಶ್ನಿಸುತ್ತಲೇ ದೇವಾನುದೇವತೆಗಳನ್ನು ಬೆತ್ತಲು ಮಾಡಿ ನಿಲ್ಲಿಸುತ್ತಾನೆ. ‘ಲಂಕೆಯ ಶರಧಿಯಲಿ ಬೀಳುವ ನನ್ನ ನಾಡ ಪ್ರತಿಬಿಂಬದಷ್ಟೂ ಚೆಂದವಿರದ ಸ್ವರ್ಗವನ್ನು ಬಿಟ್ಟು ಬಾ’ ಎಂದು ಶಿವನನ್ನೇ ಆಹ್ವಾನಿಸುವ ಪರಿ ಕುತೂಹಲ ಮೂಡಿಸುತ್ತದೆ. ಲಕ್ಷ್ಮಣನ್ನು , ಜರೆಯುತ್ತ, ಶಿವಧನಸ್ಸನ್ನು ಮುರಿದವನ ಮೇಲೆ ಸೇಡು ತೀರಿಸಿಕೊಳ್ಳುವ ತನ್ನ ಹಠವನ್ನು ತಪ್ಪೆಂದು ಒಪ್ಪಿಕೊಳ್ಳುತ್ತ ಇಕೊ ತಕೊ ನನ್ನ ಪ್ರಾಣ ಎನ್ನುವ ರಾವಣ ಇಲ್ಲಿ ಪ್ರತಿನಾಯಕನ ವಿಜೃಂಭಣೆಯಿಂದ ಮೆರೆಯುವುದಿಲ್ಲ. ಬದಲಿಗೆ ಒಬ್ಬ ಸಾಮಾನ್ಯ ಮನುಷ್ಯನಾಗಿಯೇ ಹೆಗ್ಗಳಿಕೆ ಗಳಿಸಿಕೊಳ್ಳುತ್ತಾನೆ.‘ತನ್ನ ಡಬ್ಬಿಯ ಅನ್ನ’ ಕವಿತೆ ಹಸಿವಿನ ಕುರಿತಾಗಿ ಮಾತನಾಡುತ್ತದೆ. ಹಸಿವೆಯೆಂದು ತಿಂದು ಬಿಡುವಂತಿಲ್ಲ, ಹೊಟ್ಟೆ ತುಂಬಿಸಿಕೊಳ್ಳುವಂತಿಲ್ಲ. ಅದಕ್ಕೂ ರೀತಿ ನೀತಿ ನಿಯಮಗಳಿವೆ. ಆದರೆ ಇಲ್ಲಿ ಮಗು ತನ್ನೆದುರು ಕುಳಿತ ಬಡ, ಬತ್ತಲ ಮಗುವಿಗೆ ಆಹಾರ ನೀಡಿ ಸಂತೃತ ಕಣ್ಣುಗಳಿಂದ ನೋಡುವ ಬಗೆಯಿದೆಯಲ್ಲ, ಅದು ಯಾವ ಸ್ಥಿರ ಚಿತ್ರಕ್ಕಿಂತಲೂ ಹೆಚ್ಚಿನ ಅರ್ಥವನ್ನು ಹೊಮ್ಮಿಸುತ್ತದೆ. ಇದೇ ಚಮದದ ಮನಸೆಳೆಯುವ ಚಿತ್ರಣ ‘ವಿಶ್ವವೇ ಆಟಿಗೆಯ ಬುಟ್ಟಿ’ಯಲ್ಲಿದೆ. ಕೊಚ್ಚೆಯಲೂ ನೆಗೆದು ಹಕ್ಕಿಗೂಡ ಮಾತಾಡಿನದಿಯೊಡನೆ ಓಟ ರವಿಯೊಡನೆ ಆಟಚಂದಾಮಾಮನ ಜೊತೆಯೂಟವಿಶ್ವವೇ ಅವಗೆ ಆಟಿಗೆಯ ಬುಟ್ಟಿ ಎನ್ನುವಲ್ಲಿ ಮಕ್ಕಳ ಮನಸ್ಸಿನ ನಿರ್ಮಲತೆಯನ್ನು ಬಣ್ಣಿಸಲಾಗಿದೆ. ಎರಡೂ ಕವನಗಳಲ್ಲಿ ಇದ್ದಷ್ಟು ಮುಗ್ಧವಾದ ಮಕ್ಕಳ ಪ್ರಪಂಚ ಈ ಜಗತ್ತಿನಲ್ಲಿದ್ದರೆ ಈ ಜಗತ್ತು ಅಳುವಾಗ ಅತ್ತು ಉಳಿದದ್ದಕ್ಕೆಲ್ಲ ನಗುವ ಸುಂದರ ಸ್ವರ್ಗವಾಗುತ್ತಿತ್ತು. ಆದರೆ ನಾವೆಲ್ಲ ಹಾಗೆ ಸ್ವರ್ಗದಲ್ಲಿ ಬದುಕುವ ಮನಸ್ಸು ಮಾಡುತ್ತಿಲ್ಲ. ಸದ್ದಿಲ್ಲದೇ ನರಕವನ್ನು ಕೈಹಿಡಿದು ಕರೆತಂದು ಎದುರಿಗೆ ಕುಳ್ಳಿರಿಸಿಕೊಳ್ಳುತ್ತೇವೆ. ನಾಜೂಕಾಗಿ ಒಂದೊಂದೇ ಹೆಜ್ಜೆಯನ್ನು ನರಕದೊಳಗೆ ಇಡುತ್ತ, ಅದರ ನೋವುಗಳನ್ನೇ ಸುಖ ಎಂದು ಭ್ರಮಿಸುತ್ತಿದ್ದೇವೆ. ನಾನು ಕತ್ತಲೆಯೊಡನೆ ರಾಜಿ ಮಾಡಿಕೊಂಡಿದ್ದೇನೆಮಿಂಚುಹುಳುಗಳ ಬೆಳಕಲ್ಲಿ ನಕ್ಷತ್ರಗಳ ಬಿಡಿಸುತ್ತಿದ್ದೇನೆಹೃದಯಕ್ಕೆ ಬೆಂಕಿ ಹಚ್ಚಿ ಬೆಚ್ಚಗಾಗುತ್ತಿದ್ದೇನೆ ಎಂಬುದು ನಮ್ಮೆಲ್ಲರ ಸಾಲುಗಳೂ ಹೌದು. ಬಯಸಿ ಬಯಸಿ ಎದೆಯಗೂಡಿನಲ್ಲಿರುವ ನಂದಾದೀಪವನ್ನು ತೆಗೆದು ಪೆಟ್ರೋಮ್ಯಾಕ್ಸ್ ಉರಿಸಿ ಸ್ಪೋಟಿಸುತ್ತೇವೆ. ‘ಇನ್ನು ಪ್ರೀತಿ ಹುಟ್ಟುವುದಿಲ್ಲ’ ಕವನದ ಬೆಂಕಿಕಡ್ಡಿ, ‘ಸುಡುತ್ತಿದ್ದುದು’ ಕವನದಲ್ಲಿ ಬರುವ ‘ಬರಿ ಚಡ್ಡಿಯಲ್ಲಿರುವವರು ಎಲ್ಲವನೂ ಸಹಿಸಿಕೊಳ್ಳಬೇಕಾಗುತ್ತೆ,’ ಎನ್ನುವ ಮಾತು, ‘ಹೂವು ಅರಳಿಲ್ಲ’ ಕವಿತೆಯಲ್ಲಿ ಹೇಳುವ ಪಾಚಿಗಟ್ಟಿದ ಗವಿಯ ಹೊರಗಿರುವ ಕಲ್ಲನ್ನು ತಿಕ್ಕಿ ತಿಕ್ಕಿ ಫಳಫಳನೆ ಹೊಳೆಯುವಂತೆ ಮಾಡುವ ಗವಿಯಾಚೆಗಿನ ಬೆಳಕು, ‘ಮುಗಿದು ಹೋದ ಕಥೆ’ಯಲ್ಲಿ ಬರುವ ಕಥೆಯಲ್ಲದ ಕಥೆಯ ವರ್ಣನೆ, ‘ಬದಲಿಸಲಾಗದ ಮೊದಲು’ ಕವಿತೆಯ ಹುಳು, ಎಲ್ಲವೂ ನಮ್ಮನ್ನು ಹೊಸತೇ ಆದ ಲೋಕವೊಂದನ್ನು ಪರಿಚಯಿಸಿಕೊಳ್ಳಲು ಒತ್ತಾಯಿಸುತ್ತಿರುವಂತೆ ಭಾಸವಾಗುತ್ತದೆ. ಇನ್ನೇನು ಮುಗಿದೇ ಹೋಯಿತೆನ್ನುವಾಗ ಧಿಗ್ಗನೆ ಹೊತ್ತಿ ಉರಿಯುವ ಪ್ರೇಮದಂತೆ ಇಲ್ಲಿನ ಕವಿತೆಗಳು ಏನು ಹೇಳಲಿಲ್ಲ ಎನ್ನುವಾಗಲೇ ಎರಡೇ ನಲ್ಲಿ ಎಲ್ಲವನ್ನೂ ಹೇಳಿ ದಿಗ್ಭ್ರಮೆಗೊಳ್ಳುವಂತೆ ಮಾಡಿಬಿಡುತ್ತವೆ. ನನ್ನಲ್ಲೂ ಮಳೆ ಬಂದುನಿನ್ನಲ್ಲೂ ಮಳೆ ಬಂದದ್ದೂತಿಳಿಯುವುದು ಮಳೆ ನಿಂತ ಮೇಲೆ ಇದು ಕೇವಲ ಪ್ರವೀಣರವರ ಸಾಲುಗಳಲ್ಲ. ಅವರ ಸಾಲುಗಳನ್ನು ಓದಿದ ನಂತರ ನಮ್ಮಲ್ಲೂ ಹೀಗೊಂದು ಭಾವ ಹೊಮ್ಮುತ್ತದೆ. ಏನೂ ಆಗಿಲ್ಲವಲ್ಲ ಎನ್ನುವಾಗಲೇ ಕವಿತೆ ನಮ್ಮನ್ನು ನಿಬ್ಬೆರಗಾಗುವ ಒಂದು ತಿರುವಿನಲ್ಲಿ ಕಣ್ಣುಕಟ್ಟಿ ನಿಲ್ಲಿಸಿ ನಾಜೂಕಾಗಿ ತಾನು ಜಾರಿಕೊಳ್ಳುತ್ತದೆ. ಮುಂದಿನ ದಾರಿ ತಿಳಿಯದೇ ಮತ್ತದೇ ಕವನದೊಳಗೆ ಹುದುಗಲೇಬೇಕಾದ ಅನಿವಾರ್‍ಯತೆ ಸೃಷ್ಟಿಯಾಗುವ ವೈಚಿತ್ರ್ಯವನ್ನು ನಾನು ಇಡೀ ಪುಸ್ತಕದ ತುಂಬ ಹಲವಾರು ಸಲ ಎದುರುಗೊಂಡಿದ್ದೇನೆ. ನೆಲದ ನಂಟು ಸಾಕೆಂದು ಸಮುದ್ರಕ್ಕೆ ಧುಮುಕಿದರೆನೀರೆಲ್ಲ ಜೀವಗಾಳಿಯಾಗಿ ಮುಟ್ಟಿದ್ದು ಮತ್ತೊಂದು ನೆಲ ಒಂದು ಕವಿತೆಯ ರೂಪಕಗಳು ಸಾಕೆಂದು ಮತ್ತೊಮದು ಕವಿತೆಗೆ ನಡೆದರೆ ಅಲ್ಲೂ ಎದುರಾಗುವುದು ಒಳಸುಳಿಗೆ ಸಿಕ್ಕಿಸುವ ನುಡಿಚಿತ್ರಗಳೇ ಹೊರತೂ ಮತ್ತೇನೂ ಅಲ್ಲ. ಬದುಕು ಇಷ್ಟೇ. ನಿಜ, ಆಜೆಗೇನೂ ಇಲ್ಲ ಎಂಬ ಸುಂದರ ಕಲ್ಪನೆಯಲ್ಲಿಯೇ ನಾವು ಈಚೆಗಿನ ಸೌದರ್‍ಯವನ್ನು ಕಣ್ತುಂಬಿಕೊಂಡು, ವಾಸ್ತವದ ನಿಜಾಯಿತಿಯಲ್ಲಿ ಬದುಕಬೇಕಿದೆ.                                  ***************************** ಲೇಖಕರ ಬಗ್ಗೆ ಎರಡು ಮಾತು:ಕವಯತ್ರಿ ಶ್ರೀದೇವಿ ಕೆರೆಮನೆ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಹದಿಮೂರು

ಎಂದೂ ಸಾಕೆನಿಸದ ನೆಲದ ನಂಟು, ಸಮುದ್ರದ ಪ್ರೀತಿ Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಕರ್ಟನ್ನಿನ ಮೇಲೊಂದು ಕೇತಕಿ ಹೂವು

ಬದುಕಿನ ಬಗ್ಗೆ ಮಾತನಾಡುವಾಗಲೆಲ್ಲ ನನಗೆ ಕರ್ಟನ್ನುಗಳು ನೆನಪಾಗುತ್ತವೆ; ಬದುಕಿನ ಪ್ರತಿಯೊಂದು ಅಧ್ಯಾಯವೂ ಬೇರೆಬೇರೆ ಬಣ್ಣ-ವಿನ್ಯಾಸಗಳನ್ನು ಹೊತ್ತ ಸುಂದರವಾದ ಕರ್ಟನ್ನಿನಂತೆ ಭಾಸವಾಗುತ್ತದೆ. ಕಿಟಕಿಗಳೇ ಇಲ್ಲದ ಮನೆಯಲ್ಲಿ ಬೆಳಕಿಗೊಂದು ಅವಕಾಶವನ್ನು ಒದಗಿಸುವುದಾದರೂ ಹೇಗೆ; ಹಾಗೆ ಕಿಟಕಿಯೊಂದು ಒದಗಿಸಿದ ಅವಕಾಶವನ್ನು ಸ್ವಂತದ್ದಾಗಿಸಿಕೊಳ್ಳಲಿಕ್ಕೆ ಕರ್ಟನ್ನುಗಳ ಸೃಷ್ಟಿಯೂ ಆಗಿರಬೇಕು! ಬೆಳಕಿನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕಿಟಕಿ, ಕಿಟಕಿಯೊಂದಿಗೆ ಸಾಮರಸ್ಯವನ್ನು ಬೆಳೆಸಿಕೊಳ್ಳುವ ಕರ್ಟನ್ನು ಎಲ್ಲವೂ ಸೇರಿ ಬದುಕಿಗೊಂದು ಸ್ವಂತಿಕೆ, ಜೊತೆಗಿಷ್ಟು ಬಣ್ಣಗಳು ಲಭ್ಯವಾಗಿದ್ದಿರಬೇಕು. ದುಃಸ್ವಪ್ನಗಳನ್ನೆಲ್ಲ ದೂರವಾಗಿಸುವ ಬೆಳಕು ಕಿಟಕಿಯನ್ನು ಸ್ಪರ್ಶಿಸುವ ಸಮಯಕ್ಕೆ ಸರಿಯಾಗಿ ಕಣ್ತೆರೆವ ಕರ್ಟನ್ನಿನ ಎಲೆ, ಹೂವು, ಹಣ್ಣು, ಹಕ್ಕಿಗಳೆಲ್ಲವೂ ಮುಂಜಾವಿಗೊಂದು ಹೊಸ ಬಗೆಯ ಸೊಬಗನ್ನು ಒದಗಿಸುತ್ತವೆ. ಎಳೆಬಿಸಿಲಿಗೆ ತಿಳಿಹಸಿರು ಬಣ್ಣವನ್ನು ಮೈಗೆ ಮೆತ್ತಿಕೊಳ್ಳುವ ಎಲೆಯೊಂದು ಮುಸ್ಸಂಜೆಗೆ ಅಚ್ಚಹಸಿರಾಗಿ, ಬೀದಿದೀಪದ ಬೆಳಕಿಗೆ ಹಳದಿಯೂ ಆಗಿ ಬಣ್ಣಗಳ ಹೊಸ ಜಗತ್ತನ್ನೇ ನಮ್ಮೆದುರು ತೆರೆದಿಡುತ್ತದೆ; ಎಲೆಗಳ ಸಂದಿಯಲ್ಲಡಗಿರುವ ಪುಟ್ಟ ಹಕ್ಕಿಯೊಂದು ಬಣ್ಣದ ರೆಕ್ಕೆಗಳನ್ನು ತೊಟ್ಟು ಸದ್ದಿಲ್ಲದೇ ಮನೆತುಂಬ ಹಾರಾಡುವ ಸಂಭ್ರಮವನ್ನು ಕಟ್ಟಿಕೊಡುವ ಕರ್ಟನ್ನು ಪ್ರತಿದಿನದ ಬೆಳಗಿಗೊಂದು ಹೊಸತನದ ಅನುಭವವನ್ನು ಒದಗಿಸುತ್ತದೆ.  ಬದುಕು ತನ್ನದಾಗಿಸಿಕೊಳ್ಳುವ ಅನುಭವಗಳ ಪಟ್ಟಿಯಲ್ಲಿ ಬಾಲ್ಯವೆನ್ನುವುದೊಂದು ಸುಂದರ ಅನುಭವ. ಹೋದಲ್ಲೆಲ್ಲ ಹಿಂಬಾಲಿಸುತ್ತಿದ್ದ ಪಾಟಿಚೀಲದಿಂದ ಹಿಡಿದು ದೊಡ್ಡಪ್ಪ ಅಂಗಳದಲ್ಲಿ ಬಿಡಿಸುತ್ತಿದ್ದ ರಂಗೋಲಿಯವರೆಗೆ ಘಟಿಸಿದ ಎಲ್ಲ ಚಿಕ್ಕಪುಟ್ಟ ಸಂಗತಿಗಳೂ ಅದ್ಯಾವುದೋ ಕ್ಷಣದಲ್ಲಿ ಅಚ್ಚರಿಗಳಾಗಿ ರೂಪಾಂತರಗೊಂಡು ಬದುಕಿಗೊಂದು ಹೊಸತನವನ್ನು ದೊರಕಿಸಿಕೊಡುತ್ತವೆ. ಪಾಟಿಚೀಲದ ಜಿಪ್ ನೊಂದಿಗೆ ನೇತಾಡುತ್ತಿದ್ದ ಕೀಚೈನ್ ಮೇಲಿದ್ದ ಪುಟ್ಟ ನಾಯಿಮರಿಯೊಂದಿಗಿನ ಗೆಳೆತನ ಪ್ರೈಮರಿ, ಹೈಸ್ಕೂಲು ಎಲ್ಲ ಮುಗಿದಮೇಲೂ ಬಾಲ್ಯದ ನೆನಪುಗಳೊಂದಿಗೆ ನಂಟು ಬೆಳೆಸಿಕೊಳ್ಳುತ್ತದೆ. ಒಮ್ಮೆಯೂ ಸ್ನಾನಮಾಡಿಸಿ ಕೋಲ್ಡ್ ಕ್ರೀಮ್ ಹಚ್ಚದಿದ್ದರೂ ಚಳಿಗಾಲದಲ್ಲಿಯೂ ತನ್ನ ಸೌಂದರ್ಯವನ್ನು ಕಳೆದುಕೊಳ್ಳದ ನಾಯಿಮರಿ, ಸನ್ ಸ್ಕ್ರೀನ್ ಲೋಷನ್ ಇಲ್ಲದೇ ಬಣ್ಣವನ್ನೂ ಕಾಪಾಡಿಕೊಂಡು, ಮಳೆಗಾಲದಲ್ಲಿ ಪಾಟಿಚೀಲದೊಂದಿಗೆ ತಾನೂ ಮಳೆಯಲ್ಲಿ ನೆನೆಯುತ್ತ ಕೊಳೆಯನ್ನೆಲ್ಲ ತೊಳೆದುಕೊಳ್ಳುತ್ತಿತ್ತು. ಪಾರ್ಲರ್ ಶಾಂಪೂವಿನಿಂದ ತಲೆಗೂದಲನ್ನು ತೊಳೆದುಕೊಳ್ಳುವಾಗಲೆಲ್ಲ, ಅರ್ಥವಾಗದ ಗಣಿತದ ಲೆಕ್ಕಾಚಾರವನ್ನು ಸಹನೆಯಿಂದ ಸಹಿಸಿಕೊಂಡು ಪರೀಕ್ಷೆಯ ಭಯವನ್ನು ಕಡಿಮೆ ಮಾಡಿದ ನಾಯಿಮರಿಯ ಪ್ರೇಮವನ್ನು ನೆನೆದು ಅಚ್ಚರಿಗೊಳ್ಳುತ್ತಲೇ ಇರುತ್ತೇನೆ.  ಅಂತಹ ಸೋಜಿಗಗಳಲ್ಲಿ ದೊಡ್ಡಪ್ಪ ಅಂಗಳದಲ್ಲಿ ಬಿಡಿಸುತ್ತಿದ್ದ ರಂಗೋಲಿಯೂ ಸೇರಿಕೊಂಡಿದೆ. ಹಬ್ಬಗಳಲ್ಲೋ, ದೇವರಕಾರ್ಯಗಳಲ್ಲೋ ದೊಡ್ಡಪ್ಪ ತನ್ನ ರಂಗೋಲಿ ತಟ್ಟೆಯೊಂದಿಗೆ ಅಂಗಳಕ್ಕೆ ಹಾಜರಾದರೆ ಕೇರಿಯ ಮಕ್ಕಳೆಲ್ಲ ಅವನ ಸುತ್ತ ನೆರೆಯುತ್ತಿದ್ದೆವು. ಯಾವ ಪೂರ್ವತಯಾರಿ-ಯೋಜನೆಗಳೂ ಇಲ್ಲದೇ ಮನಸ್ಸಿಗೆ ತೋಚಿದ ರಂಗೋಲಿಯನ್ನು ಬಿಡಿಸುತ್ತಿದ್ದ ದೊಡ್ಡಪ್ಪ ಅಂಗಳದಲ್ಲೊಂದು ಹೊಸ ಲೋಕವನ್ನೇ ಸೃಷ್ಟಿ ಮಾಡುತ್ತಿದ್ದ. ಬೆಟ್ಟದ ತುದಿಯಲ್ಲಿ ತನ್ನಪಾಡಿಗೆ ತಾನು ಗರಿಬಿಚ್ಚಿ ನಿಂತಿರುತ್ತಿದ್ದ ನವಿಲು, ಅದರ ಪಕ್ಕದಲ್ಲೇ ಹುಲ್ಲು ತಿನ್ನುತ್ತಾ ಆಚೀಚೆ ಓಡುತ್ತಿದ್ದ ಮೊಲ, ಕೊಟ್ಟಿಗೆಯಿಂದ ತಪ್ಪಿಸಿಕೊಂಡು ಬಂದು ಅಂಗಳದ ತುಂಬಾ ಹೆಜ್ಜೆಗುರುತು ಮೂಡಿಸುತ್ತಿದ್ದ ಆಕಳಕರು, ಆಗಷ್ಟೇ ಅರಳಿದ ಕೆಂಪು ದಾಸವಾಳ, ಹೂವಿನ ಮೊಗದ ಮುದ್ದು ಬಾಲಕೃಷ್ಣ ಹೀಗೆ ಪ್ರಕೃತಿಯೇ ರಂಗೋಲಿಯಾಗಿ ಹೊಸಹೊಸ ರೂಪ-ಬಣ್ಣಗಳನ್ನು ಧರಿಸುತ್ತಿತ್ತು. ರಂಗೋಲಿಯ ಒಂದೊಂದು ಎಳೆಯೂ ಎಲ್ಲೋ ಆರಂಭವಾಗಿ ಇನ್ನೆಲ್ಲೋ ಮುಗಿಯುತ್ತ ನವಿಲುಗರಿಯಾಗಿ, ಮೊಲದ ಕಿವಿಯಾಗಿ, ಕರುವಿನ ಕುತ್ತಿಗೆಯ ಗಂಟೆಯಾಗಿ, ಕೊಳಲಾಗಿ ಅಂಗಳಕ್ಕಿಳಿಯುವುದೊಂದು ಸೋಜಿಗದ ಸಂಗತಿಯಾಗಿತ್ತು. ದೊಡ್ಡಪ್ಪನಿಗೆ ರಂಗೋಲಿ ಬಿಡಿಸುವುದನ್ನು ಕಲಿಸಿಕೊಟ್ಟವರಿರಲಿಲ್ಲ; ಇಷ್ಟೇ ಜಾಗವನ್ನು ರಂಗೋಲಿಗೆ ಮೀಸಲಾಗಿಡಬೇಕು ಎನ್ನುವ ಯಾವ ಇತಿಮಿತಿಗಳೂ ಅವನ ತಲೆಯಲ್ಲಿ ಇರುತ್ತಿರಲಿಲ್ಲ. ಸಿಕ್ಕಿದ ಅವಕಾಶವನ್ನೆಲ್ಲ ಮುಕ್ತ ಮನಸ್ಸಿನಿಂದ ಬಳಸಿಕೊಳ್ಳುತ್ತ, ಪ್ರಕೃತಿಯಿಂದಲೇ ಪಾಠ ಕಲಿತು ಜೀವನಪ್ರೀತಿಯನ್ನು ಚಿತ್ರಿಸುತ್ತ ಮಕ್ಕಳ ಬದುಕಿಗೊಂದಿಷ್ಟು ಬೆರಗು ಬೆರೆಸಿದ ದೊಡ್ಡಪ್ಪ ಪ್ರಕೃತಿ ಕರುಣಿಸಿದ ಅಚ್ಚರಿಗಳಲ್ಲಿ ಒಂದಾಗಿ ಉಳಿದುಕೊಂಡಿದ್ದಾನೆ.  ಪ್ರಕೃತಿ ತನ್ನ ಮಡಿಲಿನಲ್ಲಿ ಸಲಹುವ ವಿಸ್ಮಯಗಳನ್ನು, ಕ್ಲಾಸ್ ರೂಮು-ಫೀಸುಗಳಿಲ್ಲದೇ ಕಲಿಸಿಕೊಡುವ ಪಾಠಗಳನ್ನು ಥಿಯರಿಗಳನ್ನಾಗಿಸಿ ಪುಸ್ತಕಗಳಲ್ಲಿ ಹಿಡಿದಿಡಲಾಗದು. ಬೇಸಿಗೆಯ ದಿನಗಳಲ್ಲಿ ಎಲ್ಲೋ ನೆಲಕ್ಕೆ ಬಿದ್ದ ಬೀಜವೊಂದು ಗಾಳಿಯೊಂದಿಗೆ ಹಾರುತ್ತಾ ಇನ್ನೆಲ್ಲೋ ತಲುಪಿ, ಮೊದಲಮಳೆಗೆ ಮೊಳಕೆಯೊಡೆಯುವ ಸೃಷ್ಟಿಯ ವಿಸ್ಮಯ ಅನುಭವಕ್ಕೆ ಮಾತ್ರವೇ ದಕ್ಕುವಂಥದ್ದು. ಇಂತಹ ಅನನ್ಯ ಅನುಭವಗಳ ಸಾಲಿನಲ್ಲಿ ಕೇಸರಿಬಣ್ಣದ ಕೇತಕಿಯ ಕಣವೂ ಸೇರಿಕೊಂಡಿದೆ. ಚಳಿಗಾಲದ ಹೂವಿನ ಸೀಸನ್ ಮುಗಿದು ಬೀಜಗಳೆಲ್ಲ ನೆಲಕ್ಕೆ ಉದುರಿ ಗಿಡವೂ ಒಣಗಿಹೋದಮೇಲೆ ಮಲ್ಲಿಗೆಯನ್ನೋ, ಜಾಜಿಯನ್ನೋ ಅರಸುತ್ತ ಪ್ರಕೃತಿಸಹಜವೆಂಬ ಮನಸ್ಥಿತಿಯಲ್ಲಿ ನಾವೆಲ್ಲ ಕೇತಕಿಯನ್ನು  ಮರೆತುಹೋಗುತ್ತಿದ್ದೆವು. ಅಂಗಳದಲ್ಲೋ, ಭತ್ತದ ಕಣಗಳಲ್ಲೋ ಬಿದ್ದಿರುತ್ತಿದ್ದ ಬೀಜಗಳೂ ಬಿಸಿಲಿಗೆ ಒಣಗುತ್ತ, ಗಾಳಿಯಲ್ಲಿ ಹಾರುತ್ತಾ ಮಾಯವಾಗಿಬಿಡುತ್ತಿದ್ದವು. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಅಷ್ಟೂ ದಿನ ಮಾಯವಾಗಿದ್ದ ಬೀಜಗಳೆಲ್ಲ ಮೊಳಕೆಯೊಡೆದು, ಹತ್ತಿಪ್ಪತ್ತು ದಿನಗಳಲ್ಲಿ ಮೈತುಂಬ ಎಲೆಗಳನ್ನು ಹೊತ್ತು ಚಿಗುರಿಬಿಡುತ್ತಿದ್ದವು. ಜಾಸ್ತಿ ಮಳೆಯಾದ ವರ್ಷಗಳಲ್ಲಿ ಕೊಳೆತುಹೋಗದೇ, ಕಡಿಮೆ ಮಳೆಗೆ ಬಾಡಿಹೋಗದೇ ಜೀವ ಕಾಪಾಡಿಕೊಳ್ಳುತ್ತಿದ್ದ ಕೇತಕಿಯ ಗಿಡಗಳು ಜೀವನಪ್ರೀತಿಯನ್ನು ಉಳಿಸಿ ಬೆಳಸಿಕೊಂಡು ಹೋಗುವ ಕ್ರಿಯೆಯೊಂದರ ಕಣ್ಣೆದುರಿಗಿನ ಉದಾಹರಣೆಗಳಂತಿದ್ದವು. ಗುಂಪುಗುಂಪಾಗಿ ಹುಟ್ಟಿ, ಜೊತೆಯಾಗಿ ಬೆಳೆದು, ಕಿತ್ತೆಸೆದರೂ ಬೇಸರಿಸದೇ ಬೇರುಬಿಟ್ಟು, ಮೈತುಂಬ ಹೂವರಳಿಸಿ ಕೇಸರಿ-ಹಳದಿ ಬಣ್ಣಗಳ ಕಣವೊಂದನ್ನು ಸೃಷ್ಟಿಮಾಡಿಬಿಡುತ್ತಿದ್ದವು. ನಾಜೂಕು ಎಸಳುಗಳ ಕೇತಕಿ ಹೂವನ್ನು ಸ್ಪರ್ಶಿಸಿದಾಗಲೆಲ್ಲ, ಪ್ರಕೃತಿ ತನ್ನೊಳಗೆ ಬಚ್ಚಿಟ್ಟುಕೊಂಡ ವಿಸ್ಮಯವೊಂದು ಅಂಗೈಯೊಳಗೆ ದೊರಕಿದ ರೋಮಾಂಚನ ನನ್ನದಾಗುತ್ತಿತ್ತು. ವರ್ಷದಲ್ಲಿ ಒಂದೇ ತಿಂಗಳು ಕೈಗೆ ಸಿಗುತ್ತಿದ್ದ ಕೇತಕಿಯ ಹೂಗಳು ಕರ್ಟನ್ನಿನ ಮೇಲೂ ಇರಬಾರದಿತ್ತೇ ಎಂದುಕೊಳ್ಳುತ್ತಿದ್ದೆ.  ಆಗೆಲ್ಲ ಕರ್ಟನ್ನುಗಳೆಂದರೆ ಅಮ್ಮನ ಹಳೆಯ ಸೀರೆಗಳು. ಹಳತಾದ ಸೀರೆಗಳಲ್ಲಿ ಇರುವುದರಲ್ಲೇ ಒಳ್ಳೆಯ ಸೀರೆಯೊಂದು ಕರ್ಟನ್ನಿನ ಅವತಾರ ತೊಟ್ಟು ಬಾಗಿಲುಗಳನ್ನೂ, ಕಿಟಕಿಗಳನ್ನೂ ಆವರಿಸಿಕೊಳ್ಳುತ್ತಿತ್ತು. ಬಾಳೆಹಣ್ಣನ್ನೋ, ಬಿಸ್ಕಿಟನ್ನೋ ತಿಂದಾದ ಮೇಲೆ ಅರ್ಜಂಟಿಗೆ ಕೈ ಒರೆಸಿಕೊಳ್ಳುವ ಟವೆಲ್ ಆಗಿಯೂ ಆಗಾಗ ಕರ್ಟನ್ನು ಬಳಕೆಯಾಗುತ್ತಿತ್ತು. ಸೀರೆಯೊಂದು ಕರ್ಟನ್ನಾಗಿ ರೂಪಾಂತರ ಹೊಂದಿದ ಸ್ವಲ್ಪ ದಿನಗಳಲ್ಲಿಯೇ ಅದರ ಮೇಲಿದ್ದ ಹೂವು, ಮಾವಿನಕಾಯಿ, ವೀಣೆ, ನವಿಲಿನ ಚಿತ್ರಗಳೆಲ್ಲ ಮಾಸಿಹೋಗುತ್ತಿದ್ದವು. ಆದರೂ ಈ ಸೀರೆಯ ಇದೇ ಜಾಗದಲ್ಲಿ ಇಂಥದ್ದೇ ಚಿತ್ರವಿತ್ತು ಎನ್ನುವ ವಿವರ ಮಾತ್ರ ಕರಾರುವಕ್ಕಾಗಿ ಎಲ್ಲರ ಜ್ಞಾಪಕದಲ್ಲೂ ಇರುತ್ತಿತ್ತು. ಹೀಗೆ ಬದುಕಿನ ಒಂದು ಬಹುಮುಖ್ಯ ಭಾಗವೇ ಆಗಿಹೋಗುತ್ತಿದ್ದ ಕರ್ಟನ್ನಿನ ಮೇಲಿನ ಮೋಹ ಎಷ್ಟಿತ್ತೆಂದರೆ, ಅಮ್ಮ ಹೊಸ ಸೀರೆ ಖರೀದಿಸಿದಾಗಲೆಲ್ಲ ಇದು ಕರ್ಟನ್ನಾಗಿ ಬದಲಾಗಲು ಸೂಕ್ತವೋ ಅಲ್ಲವೋ ಎನ್ನುವ ಚರ್ಚೆಗಳೂ ನಡೆಯುತ್ತಿದ್ದವು. ಸೀರೆಯ ಜಾಗವನ್ನು ಬ್ರ್ಯಾಂಡೆಡ್ ಕರ್ಟನ್ನುಗಳು ತಮ್ಮದಾಗಿಸಿಕೊಂಡಮೇಲೂ, ಅವುಗಳೆಡೆಗಿನ ಸೆಳೆತ ಮಾತ್ರ ಹಾಗೆಯೇ ಉಳಿದುಕೊಂಡಿದೆ. ದಿನ ಬೆಳಗಾದರೆ ಕರ್ಟನ್ನಿನ ಮೇಲೆ ಅರಳುವ ಬಣ್ಣಬಣ್ಣದ ಹೂಗಳ ನಡುವೆ ಕೇತಕಿಯ ಬೀಜವೂ ಮೊಳಕೆಯೊಡೆಯುತ್ತಿರಬಹುದೆನ್ನುವ ನಿರೀಕ್ಷೆಯೊಂದು ಪ್ರತೀ ಬೆಳಗನ್ನೂ ಸುಂದರವಾಗಿಸುತ್ತದೆ. *************************** ಲೇಖಕರ ಬಗ್ಗೆ ಎರಡು ಮಾತು: ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

ಕರ್ಟನ್ನಿನ ಮೇಲೊಂದು ಕೇತಕಿ ಹೂವು Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಉಗಾದಿ ಚಿತ್ರಗಳು ಕೆರೆಕೋಡಿ ಪಕ್ಕದಲ್ಲಿದ್ದ ಬೀದಿಯೊಂದರಲ್ಲಿ ನನ್ನ ತಾರುಣ್ಯ ಕಳೆಯಿತು. ಅಲ್ಲಿ ಬೆಸ್ತರು, ಈಡಿಗರು, ಬಡಗಿಗೆಲಸದ ಆಚಾರಿಗಳು, ಕಮ್ಮಾರರು, ಮಂಡಕ್ಕಿಭಟ್ಟಿಯವರು, ಮೇದಾರರು ಇದ್ದರು. ಎಲ್ಲರೂ ಬಸವಣ್ಣನವರ ವಚನದಲ್ಲಿ ಬರುವಂತೆ `ಅಂದಂದೆ ಹುಟ್ಟಿತ್ತು ಅಂದಂದೆ ಹೊಂದಿತ್ತು’ ಎಂಬಂತೆ ಹಗಲ ದುಡಿಮೆ- ರಾತ್ರಿಯ ಊಟದ ಅವಸ್ಥೆಯವರು. ಒಬ್ಬರ ಮನೆಯ ಹಬ್ಬ ಇಡೀ ಬೀದಿಯ ಹಬ್ಬವಾಗುತ್ತಿತ್ತು. ರಂಜಾನ್ ದಿನ ಶೀರ್‍ಕುರುಮಾ ಬಟ್ಟಲನ್ನು ಬೀದಿಯ ಎಲ್ಲರ ಮನೆಗೆ ತಲುಪಿಸುವುದು ನಮಗೆ ಲೋಕಮಹತ್ವದ ಕಾಯಕವಾಗಿತ್ತು. ಉಗಾದಿಯ ದಿನ ಬೇರೆಯವರ ಮನೆಗಳಿಂದ ಬರುತ್ತಿದ್ದ ಹೋಳಿಗೆ, ಕೋಸಂಬರಿ, ಹೋಳಿಗೆ ಸಾರು, ಚಿತ್ರಾನ್ನ, ಮಜ್ಜಿಗೆ ಮೆಣಸಿನಕಾಯಿ, ಸಂಡಿಗೆಗಳಿಂದ ಅಲಂಕೃತವಾದ ದೊಡ್ಡ ತಾಟನ್ನು ಬಾಗಿಲಲ್ಲಿ ಖುದ್ದು ನಿಂತು ಸ್ವಾಗತಿಸುವ ಕೆಲಸವನ್ನು ಮುತುವರ್ಜಿಯಿಂದ ನಾವು ಮಾಡುತ್ತಿದ್ದೆವು. ಮಕ್ಕಳು ಅವರಿವರ ಮನೆಯ ಅಡಿಗೆಗೆ ಕಾಯಬಾರದೆಂದು ಅಮ್ಮ ಹೋಳಿಗೆ ಮಾಡುತ್ತಿದ್ದಳು. ಆದರೆ ನೆರೆಮನೆಯ ಹೋಳಿಗೆಯ ಸ್ವಾದವೇ ಬೇರೆ. ಬೀದಿಯ ಜನ, ಉಗಾದಿಯಂದು ಹೊತ್ತು ಕಂತುವ ಸಮಯಕ್ಕೆ ಪುರಿಭಟ್ಟಿಯ ಅಕ್ಕಿ ಒಣಗಲು ಮಾಡಿದ್ದ ಕಣದಲ್ಲಿ ಜಮಾಯಿಸುತ್ತಿತ್ತು. ಕೆರೆ ಕೆಳಗಿನ ಅಡಿಕೆ ತೋಟಗಳ ತಲೆಯ ಮೇಲೆ, ಬಣ್ಣಬಣ್ಣದ ಮೋಡಗಳು ವಿವಿಧ ಆಕೃತಿಗಳಲ್ಲಿ ಲಾಸ್ಯವಾಡುವ ಪಡುವಣದಾಗಸದಲ್ಲಿ, ಬೆಳ್ಳಿ ಕುಡುಗೋಲಿನಂತಹ ಉಗಾದಿ ಚಂದ್ರನನ್ನು ಹುಡುಕುವ ಕಾರ್ಯ ನಡೆಸುತ್ತಿತ್ತು. ನಾವು ವಯಸ್ಸಾಗಿ ಕಣ್ಣು ಮಂಜಾದವರಿಗೆ ಚಂದ್ರನನ್ನು ತೋರಿಸುವ ಕೆಲಸ ಮಾಡುತ್ತಿದ್ದೆವು. ಅವರ ಬೆನ್ನಹಿಂದೆ ನಿಂತು, ಅವರ ಎಡಹೆಗಲ ಮೇಲೆ ಕೈಯಿಟ್ಟು, ಅವರ ಕಿವಿಯ ಪಕ್ಕ ನಮ್ಮ ಕೆನ್ನೆ ತಂದು, ತೋರುಬೆರಳನ್ನು ನಿಮಿರಿಸಿ ಚಂದ್ರನಿಗೆ ಅವರ ದಿಟ್ಟಿಯನೊಯ್ದು ಮುಟ್ಟಿಸಲು ಯತ್ನಿಸುತ್ತಿದ್ದೆವು. “ಅಗೋ ಆ ಕರೇ ಮಾಡ ಐತಲ್ಲಜ್ಜಿ, ಅದರ ಪಕ್ಕ ಮೊಸಳೆ ತರಹ ಒಂದು ಮಾಡ ಎದ್ದೀತಲ್ಲ, ಅದರ ಬಲಗಡೀಕ್ ನೋಡು, ಸಣ್ಣಗೆ ಬೆಳ್ಳಗೆ ಗೆರೆ ಥರ” ಎಂದು ವೀಕ್ಷಕ ವಿವರಣೆ ಕೊಡುತ್ತಿದ್ದೆವು. ರಂಜಾನ್ ತಿಂಗಳಲ್ಲೂ ಚಂದ್ರನನ್ನು ಹೀಗೇ ಹುಡುಕುತ್ತಿದ್ದವು. ಅವನು ಕಂಡನೆಂದರೆ ನಾಳೆ ನಮಾಜು ಗ್ಯಾರಂಟಿ. ಉಗಾದಿ ಚಂದ್ರನನ್ನು ತೋರಿಸುವಾಗ ಈಡಿಗರ ಅಜ್ಜಿಗೆ ಕಾಣದಿದ್ದರೂ ಚದುರಿದ ಮೋಡದ ಚೂರನ್ನು ಕಂಡು `ಹ್ಞೂಕಣಪ್ಪಾ, ಕಾಣ್ತುಕಾಣ್ತು. ಸ್ವಾಮೀ ನಮಪ್ಪಾ. ಈಸಲ ಒಳ್ಳೆ ಮಳೆಬೆಳೆ ಕೊಡಪ್ಪಾ” ಎಂದು ಮುಗಿಲಿಗೆ ಕೈಮುಗಿಯುತ್ತಿತ್ತು. ಅದೇ ಹೊತ್ತಲ್ಲಿ ಅಪ್ಪ, ಬೀದಿಯಲ್ಲಿ ಹಿರೀಕನಾಗಿ ಅಂಗಳದಲ್ಲಿ ಕುರ್ಚಿ ಹಾಕಿಕೊಂಡು ಜಗದ್ಗುರುವಿನಂತೆ ಪಾದಗಳನ್ನು ನೀಟಾಗಿ ಜೋಡಿಸಿಕೊಂಡು ಕೂರುತ್ತಿದ್ದ. ಚಿಕ್ಕವರೆಲ್ಲರೂ ಅಪ್ಪನಿಗೆ `ಸಾಬರೇ ಚಂದ್ರ ಕಾಣ್ತು, ಆಶೀರ್ವಾದ ಮಾಡ್ರಿ’ ಎಂದು ಕಾಲುಮುಟ್ಟಿ ಹಾರೈಕೆ ಪಡೆಯುತ್ತಿದ್ದರು. ಯುಗಾದಿ ಹಬ್ಬದ ದಿನ ಭದ್ರಾವತಿ ಆಕಾಶವಾಣಿಯವರು ಬೆಳಗಿನ ವಾರ್ತೆಗಳ ಬಳಿಕ 7.45ಕ್ಕೆ `ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಹಾಡನ್ನು ಕಡ್ಡಾಯವೆಂಬಂತೆ ಹಾಕುತ್ತಿದ್ದರು. ಜಾನಕಿಯವರ ದನಿಯಲ್ಲಿ ಮೂಡಿಬಂದಿರುವ ಬೇಂದ್ರೆ ವಿರಚಿತ ಈ ಹಾಡು, ನನ್ನ ಸ್ಮತಿಯಲ್ಲಿ ಭದ್ರವಾಗಿ ಕೂತಿದೆ. ಕೋಡಿಹಳ್ಳದ ದಂಡೆಗೆ ಹೊಂಗೆಗಿಡಗಳಿದ್ದ ಕಾರಣ “ಹೊಂಗೆಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಬರುತಿದೆ” ಎಂಬ ಸಾಲು ನಮಗೆ ಅನುಭವವೇದ್ಯವಾಗಿತ್ತು. ಈ ಸಾಲನ್ನು ಮೈಸೂರಿನಲ್ಲಿ ಕುಕ್ಕರಹಳ್ಳಿ ಪಕ್ಕದ ಹಾಸ್ಟೆಲಿನಲ್ಲಿರುವಾಗ, ಕೆರೆದಂಡೆಯ ಮೇಲೆ ಅಡ್ಡಾಡುತ್ತ ಮತ್ತೂ ದಿವಿನಾಗಿ ಅನುಭವಿಸಿದೆ. ಸಾಹಿತ್ಯದ ವಿದ್ಯಾರ್ಥಿಯಾಗಿ `ಯುಗಾದಿ’ ಕವನ ಓದುವಾಗ ಗೊತ್ತಾಯಿತು- ಇದು ನಿಸರ್ಗದ ಸಂಭ್ರಮಾಚರಣೆಯ ಹಾಡು ಮಾತ್ರವಲ್ಲ, ವಿಷಾದಗೀತೆ ಕೂಡ ಎಂದು. “ವರುಷಕೊಂದು ಹೊಸ ಜನುಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವ ಜಾತಕೆ; ಒಂದೇ ಜನ್ಮದಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೇ ಏತಕೆ?”ಎಂಬ ಪ್ರಶ್ನೆ ನನ್ನೊಳಗೆ ಕಂಪನದಾಯಕ ಅಸಹಾಯಕತೆ ಹುಟ್ಟಿಸಿತು. ಯಾಕೀ ಅನ್ಯಾಯ ಎಂದು ಆಕ್ರೋಶ ಬರಿಸಿತು. ಯುಗದ ಆದಿಯನ್ನು ಸೂಚಿಸುವ ಈ ಹಬ್ಬ, ಕಾಲನ ಕಠೋರತೆಯನ್ನೂ ಸೂಚಿಸುತ್ತ ತಲ್ಲಣವನ್ನು ನನ್ನೊಳಗೆ ಖಾಯಂ ಸ್ಥಾಪಿಸಿಬಿಟ್ಟಿತು. ಇದನ್ನೆಲ್ಲ ಧೇನಿಸುತ್ತ್ತ ಮನೆಯ ಮುಂದೆ ನಾವೇ ಬೆಳೆಸಿರುವ ಹೊಂಗೆಗಿಡಗಳನ್ನು ನೋಡುತ್ತೇನೆ. ನಮ್ಮ ತಾಪತ್ರಯಗಳಲ್ಲಿ ಅವಕ್ಕೆ ವಾರದಿಂದ ನೀರುಣಿಸುವುದಕ್ಕೂ ಆಗಿರಲಿಲ್ಲ. ಎಮ್ಮೆಗಳು ಕೋಡಿನ ತುರಿಕೆ ಕಳೆಯಲು ತಿಕ್ಕಾಡಿದ್ದರಿಂದ ಲಾಠಿಜಾರ್ಜಿಗೆ ಒಳಗಾದ ಭಿಕ್ಷರಂತಾಗಿದ್ದವು ಅವು. ಆದರೀಗ ಗಾಯಗೊಂಡ ಅವುಗಳ ಕೊಂಬೆಗಳಿಂದ ಜೀವರಸ ಹೊಮ್ಮಿದಂತೆ ತೆಳುಕೆಂಬಣ್ಣದ ತಳಿರು ಮೂಡಿವೆ-ಯಾರ ಹಂಗೂ ಇಲ್ಲದೆ ದೇಹದೊಳಗಿನ ಜವ್ವನವು ಉಕ್ಕಿ ಮುಖದಲ್ಲಿ ಕಾಂತಿ ಹೊಮ್ಮಿಸುವಂತೆ.ಕಳೆದೆರಡು ವಾರಗಳಿಂದ ನಮ್ಮ ಹಿತ್ತಲ ಮರಗಿಡಗಳು ಎಲೆಯುದುರಿಸುತ್ತಿವೆ. ನನ್ನ ಹೆಂಡತಿ ಗೊಣಗಿಕೊಂಡು ಅವನ್ನು ಗುಡಿಸುತ್ತ ಮರದ ಬುಡಕ್ಕೇ ಸುರಿಯುತ್ತಿದ್ದಾಳೆ. ಎಲೆಯುದುರುವ ಸದ್ದು ಸಾಮಾನ್ಯವಾಗಿ ಕೇಳುವುದಿಲ್ಲ. ಆದರೆ ದಿವಿಹಲಸಿನ ಗಿಡದ ದಪ್ಪನೆಯ ಎಲೆ ಕಳಚಿ ಬೀಳುವ ಖಟ್ ಸದ್ದು ಮಾತ್ರ ಶ್ರವಣೀಯ. ತನ್ನ ಮೈಯ ತೊಗಲೊಡೆದು ಹುಟ್ಟಿದ ಎಲೆಯನ್ನು ವರ್ಷವಿಡೀ ಇರಿಸಿಕೊಂಡಿದ್ದ ಮರ, ಹಣ್ಣಾದ ಬಳಿಕ ಎಷ್ಟು ನಿರಾಳವಾಗಿ ಕೈಬಿಡುತ್ತಿದೆ! ಚಿಕ್ಕಂದಿನಲ್ಲಿ ಅಮ್ಮ ಹೇಳುತ್ತಿದ್ದಳು. ಸ್ವರ್ಗದಲ್ಲಿ ಒಂದು ಮರವಿದೆಯಂತೆ. ಅದರಲ್ಲಿ ನಮ್ಮ ಹೆಸರಿನ ಎಲೆಗಳಿವೆಯಂತೆ. ಅದು ಉದುರಿದ ದಿನ ಇಲ್ಲಿ ನಮ್ಮ ಪ್ರಾಣ ಹೋಗುತ್ತದಂತೆ. ಉದುರಿದ ಎಲೆಯ ಜಾಗದಲ್ಲಿ ಹೊಸ ಚಿಗುರು ಬರಬಹುದು. ಆದರೂ ಉದುರಿದ ಎಲೆಯ ತಬ್ಬಲಿತನ ಇನ್ನಿಲ್ಲದಂತೆ ಕಾಡುತ್ತದೆ. ಎಲೆಯುದುರಿಸಿದ ಮರಗಳೀಗ ಮುಂದಿನ ಉಗಾದಿ ತನಕ ಅಭಯಕೊಡುವಂತೆ ಚಿಗುರುತ್ತಿವೆ. ಮನೆಯೆದುರಿನ ಬೇವು ಮುತ್ತಿನ ಮೂಗುಬೊಟ್ಟಿನಂತಹ ಹೂಗಳನ್ನು ಗೊಂಚಲಾಗಿ ಬಿಟ್ಟಿದೆ. ಇಂತಹ ಋತುಚಕ್ರದ ಯಾವ ಕರಾರಿಗೂ ಸಹಿಹಾಕದ ಬಾಳೆಗೆ ಎಲೆಬದಲಿಸುವ ಗರಜಿಲ್ಲ. ಕೆಂಡಸಂಪಿಗೆ ಗಿಡದಲ್ಲಿ ಉಳಿದಿರುವ ಕೊನೆಯ ಮೊಗ್ಗುಗಳು, ಮನೆಗೆಲಸಕ್ಕೆ ಹೋಗಿಬರುವ ಬಡ ಹುಡುಗಿಯರಂತೆ ಸೊರಗಿ ಸಣ್ಣಗೆ ಅರಳುತ್ತಿವೆ. `ಇದು ಗೊಡ್ಡು ಬಿದ್ದಿದೆ ಕಂಡ್ರಿ, ಕಡಿದು ಎಸೀರಿ ಅತ್ಲಾಗೆ’ ಎಂದು ಸಾರ್ವಜನಿಕ ಒತ್ತಾಯವಿದ್ದರೂ, ನನ್ನ ವೀಟೊ ಕಾರಣದಿಂದ ನಿಂತಿರುವ ಕಾಡುನೆಲ್ಲಿ, ರೆಂಬೆಗಳಲ್ಲಿ ಗಿಣಿಹಸುರಿನ ಸಣ್ಣಚಿಗುರು ತಳೆದು ಇನ್ನೊಂದು ಅವಕಾಶ ಕೊಡಿ ಎಂದು ಅರ್ಜಿ ಹಾಕುತ್ತಿದೆ. ನುಗ್ಗೆ, ಜೋಗಮ್ಮನ ಜಡೆಗಳಂತೆ ಕಾಯಿಗಳನ್ನು ಇಳಿಬಿಟ್ಟು ತೃಪ್ತಿಯಿಂದ ನಿಂತಿದೆ. ಅಂಜೂರ ಮಾತ್ರ ಎಮ್ಮೆಕಿವಿಯಂತಹ ಎಲೆಗಳ ಮೇಲೆ ಧೂಳನ್ನು ಹೊತ್ತು ತಾಪ ಕೆರಳಿಸುತ್ತಿದೆ. ಜಂಬುನಾಥನ ಬೆಟ್ಟದಲ್ಲಿ ನಿಶ್ಯಬ್ದವಾಗಿ ಮಲಗಿದ್ದ ಅದಿರನ್ನು ಬಲಾತ್ಕಾರವಾಗಿ ಮೇಲೆಬ್ಬಿಸಿ, ವಿದೇಶಗಳಿಗೆ ಕಳಿಸಿ ರೊಕ್ಕ ಬಾಚುತ್ತಿರುವ ಧಣಿಗಳು ಎಲ್ಲಿದ್ದಾರೊ ಏನೊ, ಅವರು ಹಬ್ಬಿಸಿದ ಧೂಳು ನಮ್ಮ ಮರದೆಲೆಗಳ ಮೇಲೆ ತಬ್ಬಲಿಯಂತೆ ಪವಡಿಸಿದೆ. ಗಣಿಯೂರಲ್ಲಿ ನೆಲೆಸಿರ್ದ ಬಳಿಕ ಕೆಂಧೂಳಿಗೆ ಅಂಜಿದೊಡೆ ಹೇಗೆ ಎಂದುಕೊಂಡು, ವಾಸ್ತವವಾದಿ ಅಂಜೂರ ಗಿಡ ನೀಳತೊಟ್ಟಿನ ಚಪ್ಪಟೆಮುಖದ ಹಸಿರುಕಾಯನ್ನು ಮೈತುಂಬ ಕಚ್ಚಿಕೊಂಡಿದೆ. ಆದರೆ ಇಷ್ಟಪಟ್ಟು ನೆಟ್ಟ ಬದಾಮಿ ಮಾವು ಮಾತ್ರ ಚಿಗುರಿ ನಿರಾಶೆ ತಂದಿದೆ. ಅದರ ಕೆಂದಳಿರು ಮೋಹಕವಾಗಿದೆ. ಅದು ಈ ಸಲ ಫಲವಿಲ್ಲ ಎಂದು ಕೊಟ್ಟಿರುವ ನೋಟಿಸಾಗಿದ್ದು ಅದರ ಸೌಂದರ್ಯ ಅಹಿತವಾಗಿ ಕಾಣುತ್ತಿದೆ. ವಸಂತಮಾಸದಲ್ಲಿ ಮಾವಿನ ಚಿಗುರು ತಿನ್ನಲು ಕೋಗಿಲೆಗಳು ಬಂದು ಕೂಗುತ್ತವೆ ಎಂಬುದು ಕವಿಸಮಯ. ನಮ್ಮ ಮಾವಿನ ಮರ ಕಂಡಂತೆ ಸದಾ ಮೆರೂನ್ ಬಣ್ಣದ ಕೆಂಬೂತಗಳು ಬಂದು ಕುಳಿತು, ಗಂಟಲನ್ನು ಕ್ಯಾಕರಿಸಿ ಸರಿಪಡಿಸಿಕೊಳ್ಳುವವರಂತೆ ಖ್‍ಖ್‍ಖ್ ನಾದ ಹೊರಡಿಸುತ್ತ ಸುರತಕೇಳಿ ಮಾಡುತ್ತವೆ. ಇಷ್ಟಾಗಿಯೂ ಮೂರು ಕೊಂಬೆಗಳು ಚಿಗರದೆ ಕಪ್ಪುಹಸಿರಿನ ಹಳೇಎಲೆಗಳನ್ನು ಇಟ್ಟುಕೊಂಡು, ಹೂತು ಮಾವು ಬಿಡುವ ಭರವಸೆ ನೀಡುತ್ತಿವೆ. ಒಂದಷ್ಟು ಬಲಿತ ಕಾಯಿ, ಒಂದಷ್ಟು ಮಿಡಿ, ಒಂದಷ್ಟು ಹೂವು ಎಲ್ಲವೂ ಒಟ್ಟೊಟ್ಟಿಗೆ ಇವೆ. ಅರೆಹುಚ್ಚನಂತಿರುವ ಮಾವಿನ ಮರವನ್ನೂ, ಬೀದಿ ಮಣ್ಣಲ್ಲಿ ಆಡಿಬಂದ ಮಗುವಿನಂತಹ ಅಂಜೂರ ಗಿಡವನ್ನೂ ನೋಡುತ್ತಿರುವಂತೆ, ಉಗಾದಿ ವಿಚಿತ್ರ ಭಾವವನ್ನು ಸ್ಫುರಿಸುತ್ತಿದೆ. ಬಾಲ್ಯದ ಮಧುರ ನೆನಪುಗಳೂ, ಬೇಂದ್ರೆ ಕವನ ಹುಟ್ಟಿಸಿದ ಕಂಪನಗಳೂ ಕೆಂಧೂಳಿನ ವಾಸ್ತವತೆಗಳೂ ಮಿಶ್ರಗೊಂಡು ನುಗ್ಗುತ್ತಿವೆ. ತಮ್ಮೆಲ್ಲ ದುಗುಡಗಳೊಳಗೆ ಬದುಕುವ ಯಾವುದೊ ತ್ರಾಣ ಜನರಲ್ಲಿದೆ. ಹಬ್ಬ ಬರುವುದೇ ದಣಿದ ಜೀವಗಳಿಗೆ ಚೈತನ್ಯ ತುಂಬಲು. ಬೀದಿಯಲ್ಲಿ ಕಟ್ಟುತ್ತಿರುವ ಕಟ್ಟಡಗಳನ್ನು ಕಾಯಲೆಂದು ಊರುಬಿಟ್ಟು ಬಂದಿರುವ ವಾಚ್‍ಮನ್ ಶೆಡ್ಡುಗಳತ್ತ ನೋಡಿದೆ. ಕವನದ ಮೊದಲ ಭಾಗದಲ್ಲಿರುವ `ಭೃಂಗದ ಕೇಳಿ’ ಮಕ್ಕಳಿಂದ ಹೊಮ್ಮಿ ಬರುತ್ತಿದೆ. ಕವನದ ಕೊನೆಯ ಭಾಗವನ್ನೇ ಧೇನಿಸುತ್ತ ವಿಷಾದಮುಖಿಯಾಗಿರುವ ನನ್ನನ್ನು ಅಣಕಿಸುತ್ತಿದೆ. ಯುಗಕ್ಕೆ ಆದಿ ಯಾವುದೊ ಏನೊ? ಅದರ ಅಂತ್ಯವನ್ನೇ ಕುರಿತು ಯಾಕೆ ಚಿಂತಿಸಬೇಕು. ಮನುಷ್ಯರಿಗೆ ಅಂತ್ಯವಿರುವುದು ನಿಜ. ಆದರೆ ಪಯಣದ ಹಾದಿಯಲ್ಲಿ ದೊರಕುವ ನೋಟಗಳು ಅನಂತವಾಗಿವೆ. ಇದು ಬೇಂದ್ರೆಯವರಿಗೂ ಅರಿವಿತ್ತು. ಎಂತಲೇ ತಾವೇ ಬರೆದ `ಯುಗಾದಿ’ ಕವನಕ್ಕೆ ಡಿಕ್ಕಿಹೊಡೆಯುವಂತೆ `ಈ ತುಂಬಿಬಾಳು ತುಂಬಿರುವ ತನಕ ತುಂತುಂಬಿ ಕುಡಿಬೇಕು’ ಎಂಬ ಸಾಲನ್ನೂ ಬರೆದರು. ಉಮರ್ ಖಯಾಮನನ್ನು ಕನ್ನಡಿಸುತ್ತ ಹುಟ್ಟಿದ ಸಾಲುಗಳಿವು. ಸಾವು ಹತಾಶೆಯನ್ನು ಮಾತ್ರವಲ್ಲ, ತೀವ್ರವಾಗಿ ಬದುಕುವ ಉತ್ಕಟತೆಯನ್ನೂ ಹುಟ್ಟಿಸಬಲ್ಲದು. (ಪಂಡಿತ್ ಬಿಜಾಪುರೆ ಲೇಖನಕ್ಕೆ ಸಿಕ್ಕ ಮೆಚ್ಚುಗೆ ಕಂಡಬಳಿಕ, ಈ ಹಿಂದೆ ಬರೆದ ಆದರೆ ಪುಸ್ತಕರೂಪದಲ್ಲಿನ್ನೂ ಬಂದಿರದ ಕೆಲವು ಟಿಪ್ಪಣಿಗಳನ್ನು ಹಂಚಿಕೊಳ್ಳಬಹುದು ಅನಿಸಿ ಈ ಈ ಬರಹ.) *********************** ಲೇಖಕರ ಬಗ್ಗೆ: ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ದಿಕ್ಸೂಚಿ

ಪರಿಶ್ರಮದಿಂದ ಗೆಲುವನ್ನು ಕೊಳ್ಳಬಹುದು ಇಂದಿನ ದಾವಂತದ ಬದುಕಿನಲ್ಲಿ ಎಲ್ಲ ಸುಖಗಳೂ ನಮ್ಮೆಡೆ ತಾವೇ ಬರಲಿ ಎಂದು ಆಶಿಸುತ್ತೇವೆ. ಬೆರಳ ತುದಿಯಲ್ಲಿ ಬೇಕಾದ್ದೆಲ್ಲವೂ ದೊರೆಯುತ್ತಿರುವಾಗ ಗೆಲುವಿಗೆ ಮಾತ್ರ ಇನ್ನಿಲ್ಲದ ಪರಿಶ್ರಮ ಏಕೆ ಪಡಬೇಕು ಎಂದು ಪ್ರಶ್ನಿಸುತ್ತೇವೆ. ‘ಕೆಲಸಕ್ಕೆ ಕರೆಯಬೇಡ್ರಿ ಊಟಕ್ಕೆ ಮರೆಯಬೇಡ್ರಿ.’ ಅನ್ನೋ ಜಾಯಮಾನದವರನ್ನು ಕಂಡರೆ ಯಶಸ್ಸು ಹತ್ತಿರವೂ ಸುಳಿಯುವುದಿಲ್ಲ. ಶ್ರಮವಿಲ್ಲದೇ ಏನೆಲ್ಲವೂ ತಮ್ಮ ಪಾದದ ಕೆಳಗೆ ಬಿದ್ದಿರಬೇಕೆಂಬುದು ನಮ್ಮಲ್ಲಿ ಬಹುತೇಕ ಜನರ ಅಭಿಪ್ರಾಯ. ವ್ಯಕ್ತಿತ್ವ ವಿಕಾಸದಲ್ಲಂತೂ ಪರಿಶ್ರಮ ಮೂಲ ವಸ್ತುವಿನಂತೆ ಕಾರ‍್ಯ ನಿರ‍್ವಹಿಸುತ್ತದೆ. ಶ್ರಮದ ಬೀಜಕ್ಕೆ ಅಗಾಧ ಶಕ್ತಿ ಇದೆ ಎನ್ನುವುದು ಈಗಾಗಲೇ ಮಹಾನ್ ಸಾಧಕರು ತೋರಿಸಿಕೊಟ್ಟಿದ್ದಾರೆ.  ಎಷ್ಟು ಶ್ರಮವಹಿಸಿದರೂ ಅಷ್ಟೇ ಬದುಕು ಅದೃಷ್ಟದಾಟ. ಅದೃಷ್ಟದ ಮುಂದೆ ಪರಿಶ್ರಮವೂ ಒಂದು ಆಟಿಗೆಯಂತೆ.ಎಂದು ನಂಬಿ ಜೀವನವನ್ನು ಅದೃಷ್ಟದ ಕೈಗೆ ಕೊಟ್ಟು ಹಗಲು ರಾತ್ರಿ ಹಲಬುವವರ ಸಂಖ್ಯೆಯೇನೂ ಕಮ್ಮಿಯಿಲ್ಲ. ‘ಪರಿಸ್ಥಿತಿಗೆ ಅಂಜಲಾರೆ. ನಾನೇ ಆ ಪರಿಸ್ಥಿತಿಯ ನಿರ‍್ಮಾತೃ.’ ಎಂಬ ನೆಪೋಲಿಯನ್ ಬೊನಾಪರ‍್ಟೆ ಮಾತಿಗೆ ಅಮೂಲ್ಯವಾದ ಬೆಲೆ ನೀಡಿದ ಮಹಾ ಪುರುಷರು ಇತರರಿಗೆ ಆದರ್ಶ ಪ್ರಾಯರಾಗಿದ್ದಾರೆ ಯಾವ ಆಸೆ ಆಮಿಷಗಳಿಗೆ ಬಲಿಯಾಗದ,ಎಂಥ ಸಿರಿವಂತಿಕೆಗೂ ದಕ್ಕದ ಗೆಲುವನ್ನು ಪರಿಶ್ರಮದ ಬೆವರಿನಿಂದ ಗಿಟ್ಟಿಸಿಕೊಳ್ಳಬಹುದು. ಅದು ಹೇಗೆ ಎಂಬುದಕ್ಕೆ ಮುಂದಕ್ಕೆ ಓದಿ. ಪರಿಶ್ರಮ ಎಂದರೆ . . . . ? ಗೆಲುವಿಗೆ ಬೇಕಾದ ಮೂಲ ಪರಿಕರ. ಮೂಲ ಬೀಜ. ಮೂಲತಃ ಗೆಲುವಿಗೆ ತಿಳಿಯುವ ಚೆಂದದ ಮೂಲ ಭಾಷೆ. ಪರಿಶ್ರಮ ಹೇಳಿದ ಮಾತನ್ನು ಗೆಲುವು ಶಿರಸಾವಹಿಸಿ ಪಾಲಿಸುತ್ತದೆ. ಸ್ವಲ್ಪ ತಡವಾಗಬಹುದು ಅಷ್ಟೆ. ಮನುಷ್ಯನ ಮನಸ್ಸೊಂದು ವಿಚಿತ್ರ. ಅದು ಯಾವ ಯಾವುದೋ ರೂಪದಲ್ಲಿ ರಂಜನೆಯನ್ನು ಪಡೆಯಲು ಸದಾ ಕಾಲ ತುಡಿಯುತ್ತದೆ. ಇನ್ನೂ ವಿಚಿತ್ರವೆಂದರೆ ಪರಿಶ್ರಮವೊಂದನ್ನು ಬಿಟ್ಟು. ಜೇನು ತುಪ್ಪ ಬೇಕಾದವನು ಜೇನುನೊಣಗಳಿಗೆ ಹೆದರಬಾರದು ಎಂಬುದು ದಕ್ಷಿಣ ಆಫ್ರಿಕನ್ ಗಾದೆ. ಗೆಲುವಿನ ಫಲ ಬೇಕೆನ್ನುವವರು ಪರಿಶ್ರಮದ ಬೀಜ ಬಿತ್ತಿ ಸತತ ನೀರೆರೆಯುವುದನು ಮರೆಯಬಾರದು. ನಡೆಯದು ಅದೃಷ್ಟದಾಟ  ಅದೃಷ್ಟ ಗಾಜಿನಂತೆ: ಹೊಳಪು ಹೆಚ್ಚಿದಂತೆಲ್ಲ ಬೇಗ ಒಡೆಯಬಲ್ಲದು. ಹಗಲಿರುಳೆನ್ನದೇ ಶ್ರಮ ಪಡುತ್ತಿದ್ದರೂ, ಹಣೆಯ ಮೇಲೆ ಬೆವರಿನ ಸಾಲು ಸಾಲುಗಟ್ಟಿದರೂ ಫಲಿತಾಂಶ ಮಾತ್ರ ನನ್ನ ನಿರೀಕ್ಷೆಯನ್ನು ತಲುಪುತ್ತಿಲ್ಲ. ಎಂಬುದು ಕೆಲವರ ಗೊಣಗಾಟ. ವಿಷ್ಣು ಶರ‍್ಮ ಹೇಳಿದಂತೆ,’ಆಪತ್ತು ಬಂದಾಗ ಬುದ್ಧಿಗೆಡಬಾರದು.’ಶೇ ೯೯ ರಷ್ಟು ಪ್ರಯತ್ನಕ್ಕೆ ಶೇ ೧ ರಷ್ಟು ಅದೃಷ್ಟ ಸೇರಿದಾಗ ಗೆಲುವು. ಶ್ರಮ ಎಂಬುದೊಂದು ದೊಡ್ಡ ಭಾರ ಎಂದು ಹೆಸರಿಟ್ಟು ದೂರ ಸರಿಯುವವರೂ ಇಲ್ಲದಿಲ್ಲ.ಇದನ್ನು ಕಂಡು ರವೀಂದ್ರನಾಥ ಟ್ಯಾಗೋರ್ ಹೀಗೆ ಹೇಳಿದ್ದಾರೆ; ಹೊರೆಯೇ ಮುಖ್ಯವಾಗಿರುವಾಗ ಯಾವ ಭಾರವಾದರೇನು? ಇಟ್ಟಿಗೆಯಾದರೇನು? ಕಲ್ಲಾದರೇನು? ಪ್ರತಿ ಯಶಸ್ವಿ ವ್ಯಕ್ತಿಯ ಹಿಂದೆ ಅಪಾರ ಪರಿಶ್ರಮವಿರುತ್ತದೆ. ಪರಿಶ್ರಮದ ನೋವಿನಲ್ಲೂ ನಲಿವಿದೆ ಗೆಲುವಿದೆ ಹಾಗಾದರೆ ಪರಿಶ್ರಮದ ಬೀಜ ಬಿತ್ತಿ ಗೆಲುವಿನ ಫಲ ಪಡೆಯಬಹುದು. ಭಾಗ್ಯದ ಬೆನ್ನು ಹತ್ತಿ ನಾವು ಓಡುವಂತೆ ಪರಿಶ್ರಮಿಗಳ ಬೆನ್ನು ಹತ್ತಿ ಗೆಲುವು ಓಡುತ್ತದೆ. ಬೇಡ ಕಣ್ಣೀರಿನ ಉತ್ತರ ಷೇಕ್ಸಪಿಯರ್ ತನ್ನ ಸಾನೆಟ್ ಒಂದರಲ್ಲಿ ‘ಕಾಲದ ಆಘಾತಕ್ಕೆ ಶಿಲಾ ಪ್ರತಿಮೆಗಳು ಒಡೆಯಬಹುದು. ಹೊನ್ನಲೇಪದ ಸ್ಮಾರಕಗಳು ಉರಳಬಹುದು. ಆದರೆ ಕಾವ್ಯ ಮಾತ್ರ ಮೃತ್ಯು ಹಾಗೂ ವಿಸ್ಮೃತಿಗೆ ಅತೀತವಾದುದು.’ ಎಂದು ಕಾವ್ಯದ ಅಮರತೆಯ ಕುರಿತು ಹೇಳಿದ ಅದೇ ಮಾತನ್ನು ಪರಿಶ್ರಮಕ್ಕೂ ಅನ್ವಯಿಸಬಹುದು. ಹೆಜ್ಜೆ ಹೆಜ್ಜೆಗೂ ಎದುರಾಗುವ ಸೋಲಿಗೆ ಹೆದರಿ ಹತಾಶೆಯಿಂದ ಕಣ್ಣೀರು ಸುರಿಸುತ್ತೇವೆ. ಸೋಲಿಗೆ ಕಣ್ಣೀರಿನ ಉತ್ತರ ನೀಡುತ್ತೇವೆ. ಸೋಲನ್ನು ಕಣ್ಣೀರಿನ ಕೈಯಲ್ಲಿ ಕೊಟ್ಟು ಕೈ ತೊಳೆದುಕೊಂಡು ಬಿಡುತ್ತೇವೆ. ಕತ್ತಲು ಕೋಣೆಯಲ್ಲಿ ಕಣ್ಣೀರು ಕೆಡವಿ ಮತ್ತೆ ಆಲಸ್ಯತನದ ಮರೆಯಲ್ಲಿ ಮಲಗುವ ಅಭ್ಯಾಸ ಮಾಡಿಕೊಂಡಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಶ್ರಮವೆಂಬುದು ನಮಗೆ ಕಬ್ಬಿಣದ ಕಡಲೆಯಂತೆ ಕಾಣುತ್ತಿದೆ. ಆಲಸ್ಯವೆಂಬ ಮಾಯೆ ಶ್ರಮವೆಂಬ ಸತ್ಪಥವನ್ನು ನುಂಗಿ ಹಾಕಿ ಬಿಡುತ್ತದೆ. ಶ್ರಮವೆಂಬ ಜಂಜಾಟದಲ್ಲಿ ಬೀಳುವುದಕ್ಕಿಂತ ಕಣ್ಣೀರಿನಲ್ಲಿ ಕೈ ತೊಳೆಯುವುದು ಒಳ್ಳೆಯದು ಎಂದು ಕೊಂಡಿದ್ದೇವೆ. ಮಣ್ಣಿನ ಗಡಿಗೆಯಲಿ ಅಡುಗೆ ಮಾಡಿ ಉಣ್ಣುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಅದನ್ನೆಲ್ಲ ಪಾಲಿಸೋಕೆ ಸಮಯವೆಲ್ಲಿದೆ? ಶ್ರಮದ ಯೋಚನೆಗಳಿಲ್ಲದೇ ಯೋಜನೆಗಳಿಲ್ಲದೇ ಸ್ಪರ್ಧಾತ್ಮಕ ಯುಗದಲ್ಲಿ ಸುಂದರ ಬದುಕು ಪಡೆಯುವುದು ಕಷ್ಟ. ಇರಲಿ ಗಟ್ಟಿ ನಿರ್ದಾರ ಪರಿಶ್ರಮವೆಂಬುದು ಕಿರಿದಾದ ದಾರಿಯಲ್ಲಿ ಅದೂ ಪಾಚಿಗಟ್ಟಿದ ದಾರಿಯಲ್ಲಿ ನಡೆದಂತೆ. ಆದ್ದರಿಂದ ಅದರ ಸಹವಾಸವೇ ಬೇಡ. ಗೆಲುವನ್ನು ಬಾಚಿ ತಬ್ಬಿಕೊಳ್ಳಲು ಸಾಕಷ್ಟು ಅಡ್ಡ ಮಾರ‍್ಗಗಳಿವೆ. ಅವುಗಳನ್ನು ಅನುಸರಿಸುವುದೇ ಸೂಕ್ತ ಎಂದು ಅವುಗಳತ್ತ ಹೆಜ್ಜೆ ಹಾಕಿ ಕೈ ಸುಟ್ಟುಕೊಳ್ಳುತ್ತೇವೆ. ಶಾಶ್ವತ ಗೆಲುವಿನ ನಿಜವಾದ ಕೀಲಿ ಕೈ ಶ್ರಮವೆಂದು ಅರಿಯುವುದರಲ್ಲಿ ಸಾಕಷ್ಟು ಸಮಯ ಸರಿದಿರುತ್ತದೆ. ನೊಂದ ಮನಸ್ಸು ವಿಶ್ರಾಂತಿ ಬೇಕೆಂದು ಅಂಗಲಾಚುತ್ತದೆ. ಆದರೆ ಅದು ವಿಶ್ರಾಂತಿಗೆ ಸಕಾಲವಲ್ಲ. ಪ್ರಖರವಾದ ಪರಿಶ್ರಮಕ್ಕೆ ಒಡ್ಡಿಕೊಳ್ಳಬೇಕಾದ ಕಾಲ.ಮಾಡಿದ ತಪ್ಪಿಗೆ ಬೇರೆ ದಾರಿ ಇಲ್ಲ. ಶ್ರಮದೆಡೆ ಮುಖ ಮಾಡುವುದೊಂದೇ ದಾರಿ. ಪರಿಶ್ರಮವೆಂಬುದು ನಿರಂತರ ಪ್ರಕ್ರಿಯೆ. ಶ್ರಮ ಪಟ್ಟದ್ದು ಸಾಕೆಂದುಕೊಂಡರೆ ಗೆಲುವು ನಿಂತ ನೀರಿನಂತೆ ನಿಲ್ಲುತ್ತದೆ. ಜಗತ್ತಿನ ಸುಪ್ರಸಿದ್ಧ ವಿಜ್ಞಾನಿ ಥಾಮಸ್ ಅಲ್ವಾ ಎಡಿಸನ್, ೬೭ ನೇ ವಯಸ್ಸಿನಲ್ಲಿ ತಾನು ಕಟ್ಟಿ ಬೆಳೆಸಿದ ಫ್ಯಾಕ್ಟರಿ ಹೊತ್ತಿ ಉರಿಯುವುದನ್ನು ಕಂಡು.’ ನಿನ್ನ ತಾಯಿ ಮತ್ತು ಆಕೆಯ ಗೆಳತಿಯರನ್ನು ಕರೆ. ಅವರೆಂದೂ ಇಂಥ ದೊಡ್ಡ ಫ್ಯಾಕ್ಟರಿ ಉರಿಯುವ ದೃಶ್ಯವನ್ನು ಕಂಡಿರಲಾರರು.’ ಎಂದು ತನ್ನ ೨೪ ವರ‍್ಷದ ಮಗ ಚಾರ್ಲ್ಸ್ ಹೇಳುತ್ತಾನೆ. ತಂದೆಯ ಮಾತು ಕೇಳಿದ ಮಗ ಗಾಬರಿಯಾಗಿ ಇದೇನು ಹೇಳುತ್ತಿರುವಿರಿ ನೀವು? ಇಷ್ಟು ದಿನ ಶ್ರಮವಹಿಸಿ ಬೆಳೆಸಿದ ನಿಮ್ಮ ಕನಸು ಹೊತ್ತಿ ಉರಿಯುತ್ತಿದೆ ಎಂದ ಸಖೇದ ಆಶ್ಚರ್ಯದಿಂದ. ಅದಕ್ಕೆ ಥಾಮಸ್ ಕೊಟ್ಟ ಉತ್ತರ ಮಾರ‍್ಮಿಕವಾದುದು. ಪರಿಶ್ರಮ ಪಡುವ ಗಟ್ಟಿ ನಿರ‍್ಧಾರವಿದ್ದರೆ ಇಂಥ ಎಷ್ಟು ಫ್ಯಾಕ್ಟರಿಗಳನ್ನು ಕಟ್ಟ ಬಹುದೆಂದ. ಮರು ದಿನದಿಂದಲೇ ಶ್ರಮದ ಬೆವರು ಸುರಿಸಿದ. ಪರಿಶ್ರಮವೇ ಕೀಲಿಕೈ ಭವಿಷ್ಯವನ್ನು ವರ‍್ತಮಾನದಿಂದ ಕೊಳ್ಳಬಹುದು ಎಂದಿದ್ದಾರೆ ಡಾ: ಜಾನ್ಸನ್. ಹಾಗೆಯೇ ಗೆಲುವನ್ನು ಪರಿಶ್ರಮದಿಂದ ಕೊಳ್ಳಬಹುದು. ವರ‍್ತಮಾನದಲ್ಲಿ ನಾವು ತೊಡಗಿಸಬೇಕಾದ ಬಂಡವಾಳವೆಂದರೆ ಪರಿಶ್ರಮ. ಎಲ್ಲರ ಮನ ಸೆಳೆಯುವ ಬಣ್ಣ ಬಣ್ಣದ ಚಿಟ್ಟೆ ಆಗಬೇಕಾದರೆ ಕಂಬಳಿಹುಳ ಪಡುವ ನೋವು ಅಷ್ಟಿಷ್ಟಲ್ಲ. ಸಾಧಕರ ಯಶೋಗಾಥೆಯನ್ನು ಓದುವಾಗ ಅಥವಾ ಕೇಳುವಾಗ ಸ್ಪಷ್ಟವಾಗುವ ಅಂಶವೆಂದರೆ,’ಕೆತ್ತಿಸಿಕೊಳ್ಳುವ ತಾಳ್ಮೆ ಇಲ್ಲದವರು ವಿಗ್ರಹವಾಗಲು ಹಂಬಲಿಸಬಾರದು. ಕಲ್ಲಾಗಿಯೇ ಇದ್ದು ಬಿಡಬೇಕು.’ ರಭಸವಾದ ಅಲೆಗಳಂತೆ ಬಂದ ಸಮಸ್ಯೆಗಳಿಗೆ ತಮ್ಮ ಛಲ ಬಿಡದ ಪರಿಶ್ರಮದಿಂದಲೇ ಎದೆಯನ್ನೊಡ್ಡಿ ದಿಟ್ಟ ಉತ್ತರ ನೀಡಬೇಕು.. ಆಂಡ್ರೂ ಕರ‍್ನೇಗಿ, ಅಮೇರಿಕದ ಸ್ಟೀಲ್ ರಂಗದಲ್ಲಿ ಬಹು ದೊಡ್ಡ ಹೆಸರು. ಆತ ಹನ್ನೊಂದುವರ‍್ಷದ ಪುಟ್ಟ ಪೋರನಾಗಿದ್ದಾಗ ಕಾರ‍್ಮಿಕನಾಗಿದ್ದ. ಛಲ ಬಿಡದ ತ್ರಿವಿಕ್ರಮನಂತೆ ಶ್ರಮವಹಿಸಿ ತಾನು ಶ್ರೀಮಂತನಾಗುವುದಲ್ಲದೇ ನೂರಾರು ಜನ ಬಿಲಿಯನರ್‌ಗಳನ್ನು ಸೃಷ್ಟಿಸಿದ.ಇದನ್ನು ಅವಲೋಕಿಸಿದಾಗ ಗೆಲುವನ್ನು ಪರಿಶ್ರಮದಿಂದ ಕೊಳ್ಳಬಹುದು ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ ಬನ್ನಿ ಸೋಲೆಂಬ ಅವಮಾನಕ್ಕೆ ಉತ್ತರವನ್ನು ಪರಿಶ್ರಮದಿಂದ ಕೊಡೋಣ. ಗೆಲುವಿನ ದಾರಿಯಲ್ಲಿ ನಗು ನಗುತ ಹೆಜ್ಜೆ ಹಾಕೋಣ. ************************ ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

You cannot copy content of this page

Scroll to Top