ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸಂಪ್ರೋಕ್ಷಣ

ಅಶ್ವತ್ಥಮರದ ಮೇಲೊಂದು ಗುಬ್ಬಿಗೂಡು ಈ ಮರ-ಗಿಡಗಳದ್ದು ಒಂದು ವಿಸ್ಮಯದ ಲೋಕ. ಒಂದಿಂಚು ಕತ್ತರಿಸಿದರೆ ನಾಲ್ಕಾರು ಟಿಸಿಲೊಡೆದು ಚಿಗುರಿಕೊಳ್ಳುವ ಗಿಡ ಕಣ್ಣೆದುರೇ ಮರವಾಗಿ ಬೆಳೆದುಬಿಡುವ ಪ್ರಕ್ರಿಯೆಯೊಂದು ಅಚ್ಚರಿ ಮೂಡಿಸುತ್ತದೆ. ಆ ಬೆಳವಣಿಗೆಯ ಬೆರಗಿನ ಲೋಕದಲ್ಲಿ ದಿನಕ್ಕೊಂದು ಹೊಸ ನೋಟ, ನೋಟದಲೊಂದಿಷ್ಟು ಹೊಸ ಅನುಭವಗಳು ಅವಿತು ಕುಳಿತಿರುತ್ತವೆ. ಹಾಗೆ ಅಡಗಿ ಕುಳಿತ ಅನುಭವಗಳೆಲ್ಲ ಸಮಯ ಸಿಕ್ಕಾಗ ಗಾಳಿ-ಬೆಳಕು-ನೆರಳುಗಳೊಂದಿಗೆ ಮಾತುಕತೆ ನಡೆಸುತ್ತ, ಮಳೆಗೊಂದು ಕೊಡೆ ಹಿಡಿದು ಚಲಿಸುತ್ತ ತಮ್ಮ ಇರುವಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತವೆ. ಗಾಳಿಯೊಂದಿಗೆ ಹಾರಿಬಂದ ಧೂಳಿನ ಕಣವೊಂದು ಎಲೆಯನ್ನಾಶ್ರಯಿಸಿದರೆ, ಬೆಳಕಿನೊಂದಿಗೆ ಬಿಚ್ಚಿಕೊಳ್ಳುವ ಹೂವಿನ ಎಸಳುಗಳು ದುಂಬಿಯನ್ನು ಸೆಳೆಯುತ್ತವೆ; ನೆರಳ ಹುಡುಕಿ ಬಂದ ನಾಯಿಮರಿಯೊಂದು ಮರದ ಬುಡದಲ್ಲಿ ಕನಸ ಕಾಣುತ್ತ ನಿದ್ರಿಸಿದರೆ, ಎಲೆಗಳನ್ನು ತೋಯಿಸಿದ ಮಳೆ ಹನಿಗಳೆಲ್ಲ ಬೇರಿಗಿಳಿದು ನೆಮ್ಮದಿ ಕಾಣುತ್ತವೆ. ಎಲ್ಲ ಕ್ರಿಯೆಗಳನ್ನೂ ತನ್ನದಾಗಿಸಿಕೊಳ್ಳುವ ಮರದ ಆತ್ಮ ನೆಲದೊಂದಿಗೆ ನಂಟು ಬೆಳಸಿಕೊಂಡು ನಿರಾಳವಾಗಿ ಉಸಿರಾಡುತ್ತದೆ.           ಮರವೊಂದು ಬೆಳೆದುನಿಲ್ಲುವ ರೀತಿಯೇ ಹಾಗೆ! ಪ್ರಪಂಚವೇ ತನ್ನದೆನ್ನುವ ಗತ್ತಿನಲ್ಲಿ, ತುಂಡಾಗಿ ಕತ್ತರಿಸಿದರೂ ಮತ್ತೆ ಚಿಗುರುವ ಆತ್ಮವಿಶ್ವಾಸದಲ್ಲಿ, ನೀರೆರೆಯದಿದ್ದರೂ ಮಳೆಯೊಂದು ಬೀಳುವುದೆನ್ನುವ ಭರವಸೆಯಲ್ಲಿ ಬದುಕು ಕಟ್ಟಿಕೊಳ್ಳುವ ಮರ ಕಲಿಸಿಕೊಡುವ ಪಾಠಗಳು ಹಲವಾರು. ಸುತ್ತ ಬದುಕುವವರ ಉಸಿರಾಟಕ್ಕೆ ನೆರವಾಗುತ್ತ, ಕಾಲಕಾಲಕ್ಕೆ ಚಿಗುರಿ ಹೂವು-ಹಣ್ಣುಗಳಿಂದ ನಳನಳಿಸುತ್ತ, ಆಗಾಗ ಭೇಟಿ ನೀಡುವ ಪ್ರಾಣಿ-ಪಕ್ಷಿಗಳನ್ನು ಪ್ರೀತಿಸುತ್ತ, ಮೊಟ್ಟೆಯೊಂದು ಕಣ್ಣುತೆರೆವ ಕ್ಷಣಕ್ಕೆ ಸಾಕ್ಷಿಯಾಗುತ್ತ ತನ್ನದೇ ಜಗತ್ತನ್ನು ಸೃಷ್ಟಿಸಿಕೊಂಡು ಬಾಳಿಬದುಕುವ ಮರ ನಿಸ್ವಾರ್ಥ ಪ್ರಜ್ಞೆಯ ದೃಷ್ಟಾಂತವಾಗಿ ನಿಲ್ಲುತ್ತದೆ. ಮರದ ಸಂವೇದನೆಗೆ ಜಾಗ ನೀಡುವ ನೆಲ ತಾಯಿ ಬೇರಿನೊಂದಿಗೆ ಮಗುವಾಗಿ, ಮಕ್ಕಳನ್ನು ಸಲಹುವ ತಾಯಿಯೂ ಆಗಿ ತನ್ನ ಕರ್ತವ್ಯವನ್ನು ಪೂರೈಸುತ್ತದೆ. ಬೇರು ತನ್ನನ್ನು ಆಶ್ರಯಿಸಿದ ಅಹಂಭಾವದ ಮದ ನೆಲದ ತಲೆಗೇರುವುದಿಲ್ಲ; ಹೂವಾಗಿ ಅರಳುವ ಮೊಗ್ಗಿನ ಕನಸನ್ನು ಬೆಳಕು ತುಂಡರಿಸುವುದಿಲ್ಲ; ಉದುರಿಬಿದ್ದ ಎಸಳುಗಳು ಗಾಳಿಯನ್ನು ಶಪಿಸುವುದಿಲ್ಲ; ಸುರಿವ ಮಳೆ ಚಿಗುರಿಸಿದ ಎಲೆಗಳ ಲೆಕ್ಕವಿಡುವುದಿಲ್ಲ. ಹೀಗೆ ಎಲ್ಲ ಭೌತಿಕ ಲೆಕ್ಕಾಚಾರ, ವ್ಯವಹಾರಗಳಾಚೆ ನಿಲ್ಲುವ ಮರ-ಗಿಡಗಳ ಅನನ್ಯ ಲೋಕ ತರ್ಕಗಳನ್ನೆಲ್ಲ ತಲೆಕೆಳಗಾಗಿಸುತ್ತ ಅನಾವರಣಗೊಳ್ಳುತ್ತದೆ.           ನಮ್ಮ ಸುತ್ತಲಿನ ಪ್ರಪಂಚ ಅನನ್ಯವೆನ್ನುವ ಭಾವನೆ ಮೂಡುವುದು ಅಲ್ಲಿನ ಚಟುವಟಿಕೆಗಳ ನಿರಂತರ ಜೀವಂತಿಕೆಯಿಂದ. ಬರಿಯ ಮಾತಿಗೆ ನಿಲುಕದ, ಒಮ್ಮೊಮ್ಮೆ ವಿವೇಚನೆಗೂ ಎಟುಕದ ಅದೆಷ್ಟೋ ಸಂಗತಿಗಳು ಆವರಣಕ್ಕೊಂದು ವಿಶಿಷ್ಟವಾದ ಸೌಂದರ್ಯವನ್ನು ಒದಗಿಸುತ್ತವೆ. ಆ ಆವರಣದೊಳಗಿನ ಮಾಧುರ್ಯ ಬದುಕಿನ ಒಂದು ಭಾಗವಾಗಿ ನಮ್ಮೊಳಗೆ ಬೇರುಬಿಟ್ಟು, ಹೊಸಹೊಸ ರಾಗಗಳಾಗಿ ಚಿಗುರೊಡೆಯುತ್ತಿರುತ್ತದೆ. ಹಾಗೆ ಗುನುಗುನಿಸುವ ಅಮೂರ್ತ ಸ್ವರಗಳಲ್ಲಿ ಅಶ್ವತ್ಥಕಟ್ಟೆಯೂ ಒಂದು. ಅಜಾನುಬಾಹು ಶರೀರದ, ದೊಡ್ಡ ಕಿರೀಟ ತೊಟ್ಟ ಮಹಾರಾಜನಂತೆ ವಿರಾಜಿಸುವ ಅಶ್ವತ್ಥಮರದ ಕಟ್ಟೆಯೆಂದರೆ ಅದೊಂದು ಸುಭಿಕ್ಷತೆ-ಸಮೃದ್ಧಿಗಳ ಅರಮನೆಯಿದ್ದಂತೆ. ಅಲ್ಲೊಂದು ಮಣ್ಣಿನ ಹಣತೆ ಲಯಬದ್ಧವಾಗಿ ಉರಿಯುತ್ತ ಕತ್ತಲೆಯ ದುಗುಡವನ್ನು ಕಡಿಮೆ ಮಾಡುತ್ತಿರುತ್ತದೆ; ಕಟ್ಟೆಯನ್ನೇರುವ ಮೆಟ್ಟಿಲುಗಳ ಆಚೀಚೆ ಬಿಡಿಸಿದ ಪುಟ್ಟ ಹೂಗಳ ರಂಗೋಲಿಯ ಮೇಲಿನ ಅರಿಸಿನ-ಕುಂಕುಮಗಳು ಬೆಳಗಿನ ಸೂರ್ಯನ ಕಿರಣಗಳಿಗೆ ಹೊಳೆದು ಬಣ್ಣದ ಲೋಕವನ್ನು ತೆರೆದಿಡುತ್ತವೆ; ಸೆರಗನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಭಕ್ತಿಯಿಂದ ಮರವನ್ನು ಸುತ್ತುವ ತಾಯಿಯ ಹಿಂದೊಂದು ಪುಟ್ಟ ಮಗು ಕಾಲ್ಗೆಜ್ಜೆಯ ಸದ್ದು ಮಾಡುತ್ತ ನೆರಳಿನೊಂದಿಗೆ ಆಟವಾಡುತ್ತದೆ; ಮಾಗಿ ಉದುರಿದ ಹಣ್ಣುಗಳೆಲ್ಲ ಆಕಾಶದಿಂದ ಬಿದ್ದ ನಕ್ಷತ್ರಗಳಂತೆ ಭಾಸವಾಗಿ ಅಶ್ವತ್ಥಕಟ್ಟೆಗೊಂದು ದಿವ್ಯವಾದ ಸೌಂದರ್ಯ ಪ್ರಾಪ್ತಿಯಾಗುತ್ತದೆ.           ಹೀಗೆ ಸೌಂದರ್ಯವೆನ್ನುವುದು ಒಮ್ಮೆ ಮರದಡಿಯ ನೆರಳಾಗಿ, ಮತ್ತೊಮ್ಮೆ ಮರದ ಮೇಲಿನ ಹಣ್ಣಾಗಿ, ಸುಶ್ರಾವ್ಯ ಸ್ವರದಂತೆ ನೆಲಕ್ಕಿಳಿವ ಎಲೆಯಾಗಿ ಬಸ್ ಸ್ಟಾಪಿನಲ್ಲಿ ಬಸ್ಸಿಗಾಗಿ ಕಾಯುತ್ತಿರುವವರ ಬೆಳಗಿನೊಂದಿಗೆ ಬೆರೆತು ನೆನಪಿನಲ್ಲಿ ನೆಲೆಗೊಳ್ಳುತ್ತದೆ. ಹಾಗೆ ಕಾಯುತ್ತಿರುವವರ ಪರ್ಸಿನಲ್ಲೊಂದು ಮರದ ತೊಟ್ಟಿಲಿನಲ್ಲಿ ಮಲಗಿ ಹಾಯಾಗಿ ನಿದ್ರಿಸುತ್ತಿರುವ ಪುಟ್ಟ ಮಗುವಿನ ಕಪ್ಪು-ಬಿಳುಪು ಭಾವಚಿತ್ರ ಬಣ್ಣದ ಕನಸುಗಳನ್ನು ಚಿತ್ರಿಸುತ್ತಿರಬಹುದು; ವೀಳ್ಯದೆಲೆ ಮಾರುವವನ ಗೋಣಿಚೀಲದೊಳಗೆ ಶಿಸ್ತಿನಿಂದ ಕುಳಿತ ಎಲೆಗಳು ಬಾಡಿಹೋಗುವ ಭಯವಿಲ್ಲದೇ ಒಂದಕ್ಕೊಂದು ಅಂಟಿಕೊಂಡಿರಬಹುದು; ಕಾಲೇಜು ಹುಡುಗಿಯ ಪುಸ್ತಕದೊಳಗಿನ ಒಣಗಿದ ಗುಲಾಬಿ ಎಲೆಗಳ ನೆನಪು ಸದಾ ಹಸಿರಾಗಿ ಚಿಗುರುತ್ತಿರಬಹುದು; ಹೈಸ್ಕೂಲು ಹುಡುಗನ ಡ್ರಾಯಿಂಗ್ ಹಾಳೆಯ ಮೇಲಿನ ಅಶ್ವತ್ಥಎಲೆಯೊಂದು ಬಣ್ಣ ತುಂಬುವ ಪೀರಿಯಡ್ಡಿಗಾಗಿ ಕಾಯುತ್ತಿರಬಹುದು; ಅಮ್ಮನಮನೆಯ ದೇವರಕಾರ್ಯಕ್ಕೆಂದು ಬಸ್ಸನ್ನೇರುತ್ತಿರುವ ಪ್ಲಾಸ್ಟಿಕ್ ಕವರಿನ ಮುಷ್ಟಿಮಣ್ಣಿನಲ್ಲಿ ನಾಗದಾಳಿಯ ಚಿಗುರೊಂದು ಬೇರುಬಿಡುತ್ತಿರಬಹುದು. ಹಾಗೆ ಪ್ರತಿದಿನವೂ ಚಲಿಸುವ ಬೆಳಗುಗಳಿಗೆ ಸಾಕ್ಷಿಯಾಗುವ ಬಸ್ ಸ್ಟಾಪಿನೆದುರಿಗಿನ ಮರ ಮಾತ್ರ ನಿಂತಲ್ಲಿಯೇ ಬೆಳೆಯುತ್ತ, ಹೊಸ ಗೂಡುಗಳಿಗೆ ಆಶ್ರಯ ನೀಡುತ್ತ ನೆನಪುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ.           ಈ ನೆನಪುಗಳು ಬೇರುಬಿಡುವ ವಿಧಾನವೂ ವಿಶಿಷ್ಟವಾದದ್ದು. ಮನದಾಳಕ್ಕೆ ಬೇರನ್ನಿಳಿಸದ ನೆನಪುಗಳು ಮುಗುಳ್ನಗೆಯ ಖಾಸಗಿ ಕ್ಷಣಗಳನ್ನು ತಮ್ಮದಾಗಿಸಿಕೊಳ್ಳಲಾರವು. ನಗಣ್ಯವೆನ್ನಿಸುವ ಎಷ್ಟೋ ಸಂಗತಿಗಳು ಕಾಲಕಳೆದಂತೆ ಅತ್ಯಮೂಲ್ಯವೆನ್ನುವಂತಹ ನೆನಪುಗಳಾಗಿ ಬದಲಾಗುವುದುಂಟು; ಅಪರೂಪದ್ದೆನ್ನುವಂತಹ ಘಟನೆಗಳೂ ಕೆಲವೊಮ್ಮೆ ಕೇವಲ ಫೋಟೋ ಆಲ್ಬಮ್ಮುಗಳಲ್ಲೋ, ಮೊಬೈಲ್ ಗ್ಯಾಲರಿಯ ಯಾವುದೋ ಮೂಲೆಯಲ್ಲೋ ಉಳಿದುಹೋಗುವುದುಂಟು. ತೋಟದಂಚಿನ ಹೊಳೆಯಲ್ಲಿ ಸ್ನಾನದ ಟವೆಲ್ಲಿನಿಂದ ಹಿಡಿದ ಮೀನಿನ ಮರಿಗಳನ್ನು ಮನೆಯ ಪಕ್ಕದ ಕೆರೆಗೆ ತಂದು ಬಿಡುತ್ತಿದ್ದ ಕಾಲಹರಣದ ಕೆಲಸವೊಂದು ಎಂದೆಂದಿಗೂ ಮರೆಯಲಾಗದ ನೆನಪುಗಳ ಸಾಲಿನಲ್ಲಿ ಸೇರಿಕೊಳ್ಳಬಹುದೆಂಬ ಯೋಚನೆ ಕೂಡಾ ಬಾಲ್ಯಕ್ಕೆ ಇರಲಿಕ್ಕಿಲ್ಲ. ಸೂರ್ಯೋದಯದ ಫೋಟೋದ ಹಿಂದೆ ಮನೆ ಮಾಡಿಕೊಂಡಿದ್ದ ಗುಬ್ಬಚ್ಚಿಯ ಸಂಸಾರವೊಂದು ದಿನ ಬೆಳಗಾಗುವಷ್ಟರಲ್ಲಿ ಜಗುಲಿಯನ್ನು ತೊರೆದು ಹಾರಿಹೋಗುವುದಕ್ಕಿಂತ ಮುಂಚೆ, ಬದುಕಿನ ಅತಿ ಸುಂದರ-ರೋಮಾಂಚಕ ದೃಶ್ಯಗಳೆಲ್ಲ ಕ್ಷಣಾರ್ಧದಲ್ಲಿ ನೆನಪುಗಳಾಗಿ ರೂಪ ಬದಲಾಯಿಸಿಬಿಡಬಹುದೆನ್ನುವ ಕಲ್ಪನೆ ಯಾರ ಕಣ್ಣಳತೆಗೂ ದಕ್ಕಿರಲಿಕ್ಕಿಲ್ಲ. ಗೇರುಮರಕ್ಕೆ ಆತುಕೂತು ಇಂಗ್ಲಿಷ್ ಪದ್ಯವನ್ನು ಬಾಯಿಪಾಠ ಮಾಡಿದ್ದು, ಅತ್ತಿಮರದ ಬೇರಿನ ಮೇಲೆ ಕುಳಿತು ಹೊಳೆಯ ನೀರಿನಲ್ಲಿ ಕಾಲುಗಳನ್ನು ಇಳಿಬಿಟ್ಟು ಡೆಬಿಟ್ಟು-ಕ್ರೆಡಿಟ್ಟುಗಳನ್ನು ಬ್ಯಾಲೆನ್ಸ್ ಮಾಡಿದ್ದು ಹೀಗೆ ಎಲ್ಲ ನೆನಪುಗಳೂ ನೆಲದಾಳಕ್ಕೆ ಬೇರುಬಿಟ್ಟು ನೆಮ್ಮದಿಯ ಬದುಕು ಕಾಣುತ್ತವೆ.           ಹಾಗೆ ಬೇರುಬಿಟ್ಟ ಬದುಕು ನೆಲದುದ್ದಕ್ಕೂ ಹರಡಿಕೊಂಡು ಗಿಡವಾಗಿ ಚಿಗುರಿ, ಮರವಾಗಿ ಬೆಳೆದು ನಿಲ್ಲುತ್ತದೆ. ಹಾಗೆ ಬೆಳೆದು ನಿಂತ ಮರದ ರೆಂಬೆಯಲ್ಲೊಂದು ಕನಸುಗಳ ಜೋಕಾಲಿ ಕುಳಿತವರನ್ನೆಲ್ಲ ಜೀಕುತ್ತಿರುತ್ತದೆ; ಪೊಟರೆಯಲ್ಲೊಂದು ಪುಟ್ಟ ಹೃದಯ ಬಚ್ಚಿಟ್ಟ ಭಾವನೆಗಳೊಂದಿಗೆ ಬೆಚ್ಚಗೆ ಕುಳಿತಿರುತ್ತದೆ; ಜಗದ ಸದ್ದಿಗೆ ತಲ್ಲಣಗೊಳ್ಳದ ಎಲೆ ಆಗಸದೆಡೆಗೆ ಮುಖ ಮಾಡಿ ಭರವಸೆಯನ್ನು ಚಿಗುರಿಸುತ್ತದೆ; ಜೀವಶಕ್ತಿಯ ಮೋಹಕ ಕುಂಚ ಒಡಮೂಡಿದ ಮೊಗ್ಗಿನ ಮೇಲೆ ಬಣ್ಣದ ಎಳೆಗಳನ್ನೆಳೆಯುತ್ತದೆ; ಅರಳಿದ ಹೂವಿನ ಗಂಧ ಗಾಳಿಯೊಂದಿಗೆ ಬೆರೆತು ಹಗುರಾಗಿ ತೇಲುತ್ತ ಮೈಮರೆಯುತ್ತದೆ; ಬಲಿತ ಬೀಜ ಬಯಲ ಸೇರುವ ಹೊತ್ತು ಜಗುಲಿಯಿಂದ ಹಾರಿಬಂದ ಗುಬ್ಬಿಯ ಗೂಡು ಮರದ ಮಡಿಲು ಸೇರುತ್ತದೆ. ******************************** ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಸೆರೆಹಕ್ಕಿ ಹಾಡುವುದು ಏಕೆಂದು ಬಲ್ಲೆ ಇಂಗ್ಲಿಷ್ ಮೂಲ : ಮಾಯಾ ಏಂಜೆಲೋ ಕನ್ನಡಕ್ಕೆ : ಎಂ.ಆರ್.ಕಮಲ‘ಐ ನೋ ವೈ ದ ಕೇಜ್ಡ್ ಬರ್ಡ್ ಸಿಂಗ್ಸ್’ ಎಂಬ ಮೂಲ ಶೀರ್ಷಿಕೆಯನ್ನು ‘ಸೆರೆಹಕ್ಕಿ ಹಾಡುವುದು ಏಕೆಂದು ಬಲ್ಲೆ’ ಎಂಬ ಸುಂದರ ಶೀರ್ಷಿಕೆಯೊಂದಿಗೆ ಅನುವಾದಿಸಿದ್ದಾರೆ.ಇದು ಜಗತ್ಪ್ರಸಿದ್ಧ ಕಪ್ಪು ಲೇಖಕಿ ಮಾಯಾ ಎಂಜೆಲೋ ಅವರ ಆರು ಆತ್ಮಕತೆಗಳಲ್ಲಿ ಮೊದಲನೆಯದು. ಆಕೆ ತನ್ನ ಮೂರನೆಯ ವಯಸ್ಸಿನಿಂದ ಹದಿನೇಳು ವರ್ಷ ವಯಸ್ಸಿನ ವಳಾಗುವ ತನಕ ತನ್ನ ಅಣ್ಣ ಮತ್ತು ತಂದೆಯ ತಾಯಿ ಅಜ್ಜಿಯ ಜತೆಗೆ ವಾಸಿಸಿದಳು.ತಾನು ಅನುಭವಿಸಿದ್ದ ಕಷ್ಟ- ನಿಷ್ಠುರಗಳನ್ನೂ ನೋವು-ಸಂಕಟಗಳನ್ನೂ ಆಕೆ ಇಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. ಕಪ್ಪು ಜನಾಂಗಕ್ಕೆ ಸೇರಿದ ಮಾಯಾ ಎಂಜೆಲೋ ದಕ್ಷಿಣ ಮತ್ತು ಉತ್ತರ ಅಮೆರಿಕಾಗಳಲ್ಲಿ ಬಿಳಿಯರ ವರ್ಣದ್ವೇಷ ಮತ್ತು ಅಮಾನುಷ ವರ್ತನೆಗಳನ್ನು ಮತ್ತು ಅವರಿಂದ ಶೋಷನೆಗೊಳಗಾದ ಕರಿಯರು ತಮ್ಮ ಸ್ವಾಭಿಮಾನ ಹಾಗೂ ಸ್ವಪ್ರಯತ್ನಗಳಿಂದ ಮೇಲೆ ಬರಲು ಪ್ರಯತ್ನಿಸಿದ್ದ ರ ಬಗ್ಗೆ ಬರೆಯುತ್ತಾರೆ.ಮೂರು ವರ್ಷದ ಹುಡುಗಿಯಾಗಿ ದ್ದಾಗಲೇ ತನ್ನ ನಾಲ್ಕು ವರ್ಷ ವಯಸ್ಸಿನ ಅಣ್ಣ ಬೈಲಿಯ ಜತೆಗೆ ತಾಯಿ-ತಂದೆಯರಿಂದ ಬೇರ್ಪಟ್ಟು ಆಕೆ ಅಜ್ಜಿಯ ಮನೆಯಲ್ಲಿಯೇ ಬೆಳೆಯುತ್ತಾರೆ.ಅಜ್ಜಿಯ ಧೈರ್ಯ- ಸ್ಥೈ ರ್ಯ, ಶಿಸ್ತು-ಸ್ವಾಭಿಮಾನಗಳನ್ನು ತಾನೂ ರೂಢಿಸಿಕೊಳ್ಳು ತ್ತಾಳೆ.ಇಡೀ ಹಳ್ಳಿಯಲ್ಲಿ ತನ್ನ ಸ್ವತಂತ್ರ ಮನೋಭಾವಕ್ಕೆ ಹೆಸರಾದ ಅಜ್ಜಿಯ ಬಗ್ಗೆ ಅವಳಿಗೆ ಅಪಾರ ಮೆಚ್ಚುಗೆಯಿ ದೆ.ಆದರೆ ಆಕೆಯ ಎಂಟನೇ ವಯಸ್ಸಿನಲ್ಲಿ ಒಮ್ಮೆ ಆಕೆಯ ಅಮ್ಮ ಆಕೆಯನ್ನು ತಾನು ವಾಸವಾಗಿರುವವ ಸಾನ್ ಫ್ರಾನ್ಸಿಸ್ಕೋ ನಗರಕ್ಕೆ ಕರೆತಂದು ಇಟ್ಟುಕೊಳ್ಳುತ್ತಾಳೆ. ಆದರೆ ಅಮ್ಮನ ಗೆಳೆಯನೊಬ್ಬ ಆಕೆಯ ಮೇಲೆ ಲೈಂಗಿಕ ಅತ್ಯಾಚಾರ ಮಾಡಿದಾಗ ಅವಳ ಮಾವಂದಿರು ಅವನನ್ನು ಕೊಲೆ ಮಾಡುತ್ತಾರೆ. ಈ ಎಲ್ಲ ದುರ್ಘಟನೆಗಳಿಂದ ಆಕೆ ಯ ಮನಸ್ಸಿಗೆ ಆದ ಘೋರ ಆಘಾತವು ಆಕೆಯನ್ನು ಅಕ್ಷ ರಶಃ ಮೂಕಿಯನ್ನಾಗಿಸುತ್ತದೆ. ಮುಂದಿನ ಐದು ವರ್ಷಗಳ ತನಕ ಮೂಕಿಯಾಗಿಯೇ ಇದ್ದ ಆಕೆಗೆ ಮಿಸೆಸ್. ಫ್ಲವರ್ ಎಂಬ ಸ್ನೇಹಮಯಿ ಮಹಿಳೆ ಯ ಪ್ರೋತ್ಸಾಹದಿಂದ ಮಾತು ಬರುತ್ತದೆ. ಆ ಮಹಿಳೆಯ ಮೂಲಕವೇ ಮಾಯಾ ನೃತ್ಯ-ನಾಟಕ, ಶಿಕ್ಷಣ ಮೊದಲಾದ ವಿಷಯಗಳನ್ನು ಕಲಿತು ಬದುಕಿನಲ್ಲಿ ಯಶಸ್ಸು ಸಾಧಿಸು ತ್ತಾಳೆ. ಮಾತ್ರವಲ್ಲದೆ ಕಾವ್ಯಪ್ರಿಯತೆಯನ್ನೂ ರೂಢಿಸಿಕೊಂ ಡು ಕಾವ್ಯರಚನೆ ಮಾಡುತ್ತಾಳೆ.ಮಾಯಾ ಜನಾಂಗ ದ್ವೇಷ ವನ್ನು ವಿರೋಧಿಸಿ ಅನೇಕ ಕವನಗಳನ್ನು ಬರೆಯುತ್ತಾಳೆ. ತಾನು ತೀವ್ರವಾದ ಹಲ್ಲು ನೋವಿನಿಂದ ಬಳಲುತ್ತಿರುವಾ ಗಲೂ ಚಿಕಿತ್ಸೆ ಮಾಡಲೊಪ್ಪದ ಒಬ್ಬ ಬಿಳಿಯ ದಂತವೈದ್ಯ ನ ಕ್ರೌರ್ಯ ಮತ್ತು ಕೃತಘ್ನತೆಯನ್ನು ಆಕೆ ತನ್ನ ಆತ್ಮಕಥೆ ಯಲ್ಲಿ ದಾಖಲಿಸುತ್ತಾಳೆ. ಈ ಕೃತಿಯಲ್ಲಿ ಇದೇ ಧ್ವನಿಯನ್ನು ಹೊಂದಿದ ಅನೇಕ ಕವನಗಳೂ ಇವೆ. ಅಲ್ಲದೆ ಮಾಯಾ ಅವರ ವೈಯಕ್ತಿಕ ನಿಲುವುಗಳನ್ನು ಬಿಂಬಿಸುವ ನಾಲ್ಕು ಅರ್ಥಪೂರ್ಣ ಸಂದರ್ಶನಗಳೂ ಇವೆ. ಸಂದರ್ಶನಗಳಲ್ಲಿ ಜನಾಂಗದ್ವೇಷ ರಹಿತವಾದ ಒಂದು ಹೊಸ ಸಮಾಜದ ನಿರ್ಮಾಣಕ್ಕಾಗಿ ಕರೆಯಿದೆ. ಮೂಲತಃ ಕವಿಯಾದ ಎಂ.ಆರ್.ಕಮಲ ಅವರ ಅನುವಾದದ ಭಾಷೆ ಕಾವ್ಯಾತ್ಮಕವಾಗಿದ್ದು ಬಹಳ ಪರಿಣಾಮಕಾರಿಯಾಗಿದೆ. ******************************************* ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಡಿ ವಿ ಪ್ರಹ್ಲಾದರ ಆರ್ತ ಯಾಪನೆ “ದಯಾ ನೀ, ಭವಾ ನೀ” ಡಿ ವಿ ಪ್ರಹ್ಲಾದ ತಮ್ಮ ಹೊಸ ಸಂಕಲನ “ದಯಾ ನೀ, ಭವಾ ನೀ”  ಸಂಕಲನಕ್ಕೆ ನನ್ನನ್ನೆರಡು ಮಾತು ಬರೆಯಲು ಕೇಳಿದಾಗ ನನಗೆ ಆಶ್ಚರ್ಯ. ಏಕೆಂದರೆ ನಮ್ಮಲ್ಲಿ ಬಹುತೇಕರು  ಸ್ವ ಪ್ರತಿಷ್ಠೆ ಮತ್ತು ಒಣ ಸಿದ್ಧಾಂತಗಳನ್ನು ಮೆರೆಸಲು ಈ ನಡುವೆ ಕವಿತೆಯನ್ನೂ ಗುರಾಣಿಯಂತೆ ಬಳಸುತ್ತಿರುವ ಸಂಧಿಗ್ದ ಕಾಲವಿದು. ಈ ಇಂಥ ಕಾಲದಲ್ಲಿ ನಮ್ಮ ಸಂಕಲನಗಳಿಗೆ ಮುನ್ನುಡಿ ಹಿನ್ನುಡಿ ಬೆನ್ನುಡಿಗಳಿಗೆ ನಾವಾಶ್ರಯಿಸುವುದು ಪೀಠಾಧಿಪತಿಗಳ ಬೆನ್ನು ಕೆರೆಯುವ ಸನ್ನಿಧಾನಕ್ಕೆ ಮತ್ತು ಆ ಅಂಥ ಗುರು ಪೀಠ ನಮ್ಮನ್ನು ನಮ್ಮ ಸಂಕಲನವನ್ನು ಎಲ್ಲೆಲ್ಲಿ ಎಷ್ಟೆಷ್ಟು ಸಾಧ್ಯವೋ ಅಲ್ಲಲ್ಲೆಲ್ಲ ತೂರಿಸುವ ಹಿತಾಸಕ್ತಿ ಮತ್ತು ಶಕ್ತಿ ಹೊಂದಿದೆಯೇ ಅಂತ ಪ್ರಕಾಶನದ ಕರಾರಿಗೆ ಸಹಿ ಹಾಕುವ ಮೊದಲು ಖಾತರಿ ಮಾಡಿಕೊಳ್ಳುತ್ತೇವೆ. ಈ ಇಂಥ ಸಂಧಿ (ವಾತದ) ಕಾಲದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಏನೇನೂ ಅಲ್ಲದ ಆದರೆ ಬದುಕಿನ ಬಂಡಿಗೆ ಕವಿತೆಯೊಂದೇ ಮೆಟ್ಟಿಲು ಅಂತ ನಂಬಿ ಅದನ್ನೇ ಆಶ್ರಯವಾಗಿಟ್ಟುಕೊಂಡಿರುವ ನನ್ನಿಂದ ಅವರು ಮುನ್ನುಡಿ ಬರೆಸಿದ್ದು ಏಕೋ ಕಾಣೆ. ಇನ್ನು ಅವರ ಈ ಹೊಸ ಸಂಕಲನದ ಪದ್ಯಗಳನ್ನು ಕುರಿತು ಹೇಳುವ ಮೊದಲು ಅವರೇ ಕಟ್ಟಿ ಬೆಳೆಸಿದ ಸಂಚಯದ ಮೂಲಕ ಅದೆಷ್ಟು ಹೊಸ ಪ್ರತಿಭೆಗಳಿಗೆ ಅವರು ಹಾರುಮಣೆಯಾದರು ಮತ್ತು ಪ್ರಕಾಶನದ ಗಂಧ ಗಾಳಿಯ ಅರಿವೇ ಇಲ್ಲದ ನನ್ನಂಥ ಎಷ್ಟೊಂದು ಅನಾಮಿಕ ಮಿಂಚುಹುಳುಗಳನ್ನು ಮಿನುಗುವ ನಕ್ಷತ್ರಗಳನ್ನಾಗಿಸಿದರು.  ಹಾಗೆ ಮೆರೆಯ ಹೊರಟ ಅದೆಷ್ಟೋ ಮಿಣುಕುಗಳು ಉಲ್ಕೆಗಳಂತೆ ಉರಿದು ಹೋದದ್ದೂ ಈಗ ಇತಿಹಾಸ. ಇರಲಿ, ಗಾಯದ ಕಲೆ ಕಂಡ ಕೂಡಲೇ ಅನುಭವಿಸಿದ ನೋವಿನ ಯಾತನೆ ನೆನಪಾಗುವುದು ಸಹಜ. ಶ್ರೀನಿವಾಸ ರಾಜು ಮೇಶ್ಟ್ರು ಮತ್ತು ಪ್ರಹ್ಲಾದ್ ಪ್ರತಿ ವರ್ಷ ಕಾವ್ಯ ಸ್ಪರ್ಧೆ ನಡೆಸಿ ಕೈ ತುಂಬ ಪುಸ್ತಕಗಳನ್ನು ಕೊಡುತ್ತಿದ್ದರು. ಯಾವ ಪ್ರವೇಶ ಶುಲ್ಕವೂ ಇಲ್ಲದ ಆ ಸ್ಪರ್ಧೆಗೆ ನಾಮುಂದು ತಾಮುಂದೆಂದು ಬರುತ್ತಿದ್ದ ಅದೆಷ್ಟು ಕವಿತೆಗಳಿಗೆ ಸಂಚಯ ಆಶ್ರಯ ಕೊಟ್ಟು ಸಲಹಿತು. ನೆನೆದಾಗಲೆಲ್ಲ ಅವರ ನಿಸ್ಪೃಹ ಸಾಹಿತ್ಯ ಸೇವೆ ಕಣ್ಣ ಮುಂದೆ ಕಟ್ಟುತ್ತದೆ. ಇನ್ನು ಸಾಹಿತ್ಯ ಪತ್ರಿಕೆಗಳ ನಿಯತ ಪ್ರಸಾರವೇ ಇಲ್ಲದ ಕಾಲದಲ್ಲಿ ಸಂಚಯ ನಡೆದಷ್ಟೂ ಕಾಲವೂ ನಿಯಮಿತವಾಗಿ ನಿಯತ ಕಾಲಿಕವಾಗಿ ಬಂದಿತು. ಸಂಯುಕ್ತ ಸಂಚಿಕೆ ಎಂದು ಅಚ್ಚು ಹಾಕಿ ನಾಮ ಹಾಕುವವರ ನಡುವೆ ಅವರದು ಏಕಾಂಗಿ ಹೋರಾಟವಾಗಿತ್ತು. ವಿಶೇಷ ಸಂಚಿಕೆಗಳ ಮೂಲಕ ಸಂಚಯ ಸಾಹಿತ್ಯ ಚರಿತ್ರೆಯಲ್ಲಿ  ಇತಿಹಾಸದ ಪುಟಗಳನ್ನೇ ಬರೆಯಿತು. ಲಂಕೇಶ್, ತೇಜಸ್ವಿ, ಡಾ. ರಾಜ್, ಹಿಂದ್ ಸ್ವರಾಜ್ ಒಂದೇ ಎರಡೇ? ಈಗಲೂ ನನ್ನ ಪುಸ್ತಕದ ಕಪಾಟಲ್ಲಿ ಸಂಚಯದ ಸಂಚಿಕೆಗಳು ಸುಭದ್ರವಾಗಿ ಕೂತಿವೆ, ರೆಫರೆನ್ಸಿಗೆಂದು ತೆಗೆದಾಗಲೆಲ್ಲ ಮತ್ತೇನೋ ಹೊಸ ದಾರಿ ಕಾಣಿಸುವುದೂ ಉಂಟು. “ಡ್ರೀಮರ್” (1995) ಡಿ ವಿ ಪ್ರಹ್ಲಾದ್ ಅವರ ಮೊದಲ ಸಂಕಲನ. ಆಮೇಲೆ ನನ್ನಂಥವರ ಒತ್ತಾಯಕ್ಕೆ ತಂದದ್ದು “ನಾಳೆಯಿಂದ”.(2005) ೯೦ರ ದಶಕದ ಮೊದಲ ಸಂಕಲನದ ೧೧ ವರ್ಷಗಳ ತರುವಾಯ ಬಂದ ‘ನಾಳೆಯಿಂದ’ ಸಂಕಲನ ‘ಡ್ರೀಮರಿನ ಕನಸುಗಳು ಕರಗಿ ಹೋದ ಕುರುಹುಗಳಾಗದೇ ನಾಳೆಯಿಂದಲಾದರೂ ಮತ್ತೆ ಯತ್ನಿಸಿ ಸಫಲನಾಗುವ ಕನಸಿನ ವಿಸ್ತರಣೆಯೇ ಆಗಿತ್ತು. ನವ್ಯದ ಪ್ರಭಾವಳಿಯಲ್ಲೇ ಅರಳಿದ್ದ “ಡ್ರೀಮರ್” ‘ನಾಳೆಯಿಂದ’ ತರುವಾಗಲೇ ಸಾಕಷ್ಟು ಮಾಗಿದ್ದ. ನವ್ಯದ ಸಹಜ ಪ್ರತಿಮೆಗಳಾದ “ಸ್ವ” ಮತ್ತು ಎಲ್ಲವನ್ನೂ ಕಟೆದು ಕಟ್ಟುವ ಕನಸುಗಳಿದ್ದ ಡ್ರೀಮರ್ ನಾಳೆಯಿಂದ ತರುವಾಗ ವಯಸ್ಸಿನಲ್ಲಿ ನಿರ್ಧಾರದಲ್ಲಿ ಮತ್ತು ಅನುಭವ ಜನ್ಯ ಬದುಕ ಶ್ರೀಮಂತಿಕೆಯಿಂದ ಮಾಗಿದ್ದ. ಹಾಗಾಗಿ ಯಾವತ್ತಿಗೂ ಪೋಸ್ಟ್ ಪೋನ್ ಮಾಡುತ್ತಲೇ ಇರುವ ನಮ್ಮ ಕೆಲಸ ಕಾರ್ಯಗಳ ವೈಖರಿಗೆ ಕವಿ ಕೊಟ್ಟ ದಿಟ್ಟ ಉತ್ತರ ಅದಾಗಿತ್ತು. ಸ್ವತಃ ಸಾಹಿತ್ಯ ಪತ್ರಿಕೆಯೊಂದರ ಸಂಪಾದಕನಾಗಿ, ಸಂಕಿರಣ ಶೀರ್ಷಿಕೆಯ ಮೂಲಕ ಅದೆಷ್ಟು ಹೊಸ ಪ್ರತಿಭೆಗಳ ಪುಸ್ತಕಗಳಿಗೆ ಅವರಿವರಿಗೆ ಹೇಳಿ, ಬೇಡಿ ವಿಮರ್ಶೆ ಬರೆಸಿದರು. ದುರಂತ ಅಂದರೆ ಅವರ ಪುಸ್ತಕಗಳ ಬಗ್ಗೆ ಈ ಯಾವ ಮಹನೀಯರೂ ಸೊಲ್ಲೇ ಎತ್ತಲಿಲ್ಲ. ಸದ್ಯ ಇದೀಗ ಸಂಚಯದ ಪ್ರಕಟಣೆ ನಿಂತ ಮೇಲೆ ಪುನಃ ಪದ್ಯದ ಸಂಗಕ್ಕೆ ಪ್ರಹ್ಲಾದ್ ಹೊರಳಿದ್ದಾರೆ. ಯಾವತ್ತೂ ಬರಹಗಾರನಿಗೆ ಕವಿತೆಯೇ ತಂಗುದಾಣ, ನಿಲುದಾಣ ಮತ್ತು ಹಲವೊಮ್ಮೆ ಅಡಗು ತಾಣ. ಯಾಕೆಂದರೆ ನಮ್ಮೊಳಗಿನ ಕನಸು, ಊಹೆ, ಅನಿಸಿಕೆ, ಸಮಾಜದ ಮೇಲಣ ಟಿಪ್ಪಣಿಗಳಿಗೆ ಕವಿತೆಯ ಪೋಷಾಕು ತೊಡಿಸಿ ನಮ್ಮ ಒಳ ಮನಸ್ಸಿನ ಮಾತನ್ನು ಹೇಳುತ್ತೇವೆ. ಅದು ಮುಟ್ಟ ಬೇಕಾದವರಿಗೆ ಮುಟ್ಟಿತೋ ಇಲ್ಲವೋ ನಮ್ಮ ಶಂಖ ನಾವು ಊದುತ್ತಲೇ ಇರುತ್ತೇವೆ. ಎಲ್ಲೋ ಅಪರೂಪಕ್ಕೆ ಕೆಲವರು ಕ್ಲಿಕ್ಕಾಗಿ ಬಹುಮಾನ, ಪ್ರಶಸ್ತಿ, ಪಾರಿತೋಷಕಗಳ ಪಡೆದು ಇದ್ದಲ್ಲೇ ಸುತ್ತ ತೊಡಗುತ್ತಾರೆ. ಆದರೆ ಸಾಂಸ್ಕೃತಿಕ ಲೋಕದ ಸಕಲೆಂಟು ದೇವರ ಸಂಪರ್ಕವಿದ್ದೂ ಪ್ರಹ್ಲಾದ್ ಸಂಕೋಚದಲ್ಲೇ ಉಳಿದು ಬಿಟ್ಟರು. ಆ ಅವರ ಸಂಕೋಚವೇ ಅವರೆಲ್ಲ ಪದ್ಯಗಳ ಆತ್ಮವಾಗಿ ಮತ್ತು ಅವರು ನಡೆಯುತ್ತಿರುವ ಅವರದೇ ದಾರಿಯ ಪ್ರತಿಫಲನವಾಗಿಯೂ ನನಗೆ ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು ಈ “ದಯಾ..ನೀ  ಭವಾ..ನೀ” ಸಂಕಲನದ ಪದ್ಯಗಳನ್ನು ಓದುತ್ತ ಓದುತ್ತ ಟಿಪ್ಪಣಿಸುತ್ತ ಹೋದ ಹಾಗೆ ಇಲ್ಲಿನ ಎಲ್ಲ ಪದ್ಯಗಳೂ ಅವರ  ಮೊದಲೆರಡು ಸಂಕಲನಗಳ ಮುಂದುವರೆದ ತಂತುವಾಗಿಯೇ ನನಗೆ ಕಂಡಿದೆ. ಹಾಗೆ ನೋಡಿದರೆ ಎಲ್ಲ ಕವಿಗಳ ಹಣೆಬರಹವೂ ಇಷ್ಟೇ ಆಗಿದೆ. ಆಗಿರಬೇಕು ಕೂಡ. ತಾನು ಬಯಸಿದ ತಾನು ನಂಬಿದ ಸಿದ್ಧಾಂತದ ಪರ ವಕಾಲತ್ತು ಹಾಕುವ ಕವಿಯೊಬ್ಬ  ಎಷ್ಟೆಲ್ಲ ಸಂಕಲನ ತಂದರೂ ತಾನು ನಂಬಿದ ಸಿದ್ಧಾಂತಕ್ಕೆ ನಿಷ್ಠೆ ಇಟ್ಟುಕೊಂಡಿದ್ದು  ಸಂಕಲನದಿಂದ ಸಂಕಲನಕ್ಕೆ ಮತ್ತಷ್ಟು ವ್ಯಾಪಿಸುತ್ತ ಹೋಗುತ್ತಾನೆ. ಎಲ್ಲೊ ಕೆಲವರು ಶೋಕಿಗೆ ಅಥವ ಲೋಕಪ್ರಿಯತೆಯ ಹಂಬಲಕ್ಕೆ ಬಿದ್ದು ತಮ್ಮ ಸೊಂಟ ತಾವೇ ಮುರಿದುಕೊಂಡು ಅಲ್ಲಿಂದಿಲ್ಲಿಗೆ ಕುಪ್ಪಳಿಸುತ್ತ ಎಲ್ಲಿಯೂ ಸಲ್ಲದವರಾಗುತ್ತಾರೆ ಮತ್ತು ಒಟ್ಟೂ ಕಾಣ್ಕೆಯ ಕಾರಣದಿಂದ ಹೊರಗೇ ಉಳಿಯುತ್ತಾರೆ. “ಡ್ರೀಮರ್” ಪುಸ್ತಕದ ಮುನ್ನುಡಿಯಲ್ಲಿ ಎಕ್ಕುಂಡಿ ಅದೆಷ್ಟು ಚೆನ್ನಾಗಿ ಪ್ರಹ್ಲಾದರ  ಪದ್ಯಗಳನ್ನು ಬಗೆಯುತ್ತಲೇ ಅವನ್ನು ಧ್ಯಾನಿಸುವ ಆಪ್ತ ಶೈಲಿಯನ್ನು ಹೇಳಿಕೊಟ್ಟಿದ್ದಾರೆಂದರೆ ಅವರ ಮಾತಿನ ಮುಂದೆ ನಾನೇನು ಹೇಳಿದರೂ ಅದು ಪೇಲವವೇ ಆಗುತ್ತದೆ. ಇರುವ ಕೇವಲ ೧೮ ಕವಿತೆಗಳಲ್ಲೂ ಅದೇನು ನವ್ಯದ ಪ್ರತಿಮೆಗಳನ್ನು ಇಡಿಕರಿಸಿಟ್ಟಿದ್ದರು ಎಂದರೆ ಈ ಕಾಲದ ಹುಡುಗರು ತಮ್ಮ ನೂರು ಪದ್ಯಗಳಲ್ಲೂ ಅಲ್ಲಿನ ರೂಪಕ ಮತ್ತು ಪ್ರತಿಮೆಗಳನ್ನು ಮತ್ತೆ ಸೃಷ್ಟಿಸಲಾರರು. ರಸ್ತೆ ಬದಿಯಂಗಡಿಯಲ್ಲಿ ಬಿಡಿಸಿಟ್ಟ ಹಣ್ಣು ಮುತ್ತಿರುವ ನೊಣದ ಹಿಂಡಲ್ಲೂ ಅಲ್ಲೊಂದು ಜೇನು    (ಪ್ರತೀಕ್ಷೆ) ಅಂತ ಧೇನಿಸಿದ ಕವಿ ಗಂಡು ಬಿಕ್ಕುವ ಹಾಗಿಲ್ಲ ಹೆಣ್ಣು ನಕ್ಕ ನೆನಪಿಲ್ಲ ಬೆಳುಕು ಬೀರಿದ್ದ ಪ್ರಖರ ಬಲ್ಬುಗಳು ಬರ್ನಾಗಿ ಬಿತ್ತು ಕನಸು, ನೇಯುವ ಗಿರಣಿ ಬೆಂಕಿ ನುಂಗಿತ್ತು(ಬೃಹನ್ನಳೆಯ ಸ್ವಗತ) ಅಂತ ಹೇಳುವಾಗ ಬದುಕಿನ ಎರಡೂ ತುದಿಗಳನ್ನು ಅದೆಷ್ಟು ಸಲೀಸಾಗಿ ದಾಟಿಬಿಡುತ್ತಾರಲ್ಲ ಅದೇ ನನ್ನ ಪಾಲಿನ ಸೋಜಿಗ. ಡ್ರೀಮರಿನ ಎಲ್ಲ ಪದ್ಯಗಳೂ ಗೊತ್ತಿದ್ದೋ ಗೊತ್ತಿಲ್ಲದೆಯೋ ನವ್ಯದ ಭರ್ಜರಿ ಪೋಷಾಕು ತೊಟ್ಟಿವೆ. ಆ ಪೋಷಾಕಿಗೆ ಮುಖ್ಯವಾಗಿ ಅಡಿಗ ಕ್ವಚಿತ್ತಾಗಿ ರಾಮಾನುಜನ್ ಮತ್ತು ಅಪರೂಪಕ್ಕೆ ಎಕ್ಕುಂಡಿ ಬಟ್ಟೆ ಕೊಟ್ಟಿದ್ದಾರೆ. ಗೋತಾ ಹೊಡೆದ ಗಾಳಿಪಟ ಕರೆಂಟು ಕಂಬಿಯ ಮೇಲೆ ತಲೆ ಕೆಳಗು ಮಲಗಿತ್ತು    (ಗಾಳಿಪಟ) ಅನ್ನುವಾಗ ಯಾವ ಯಾವುವೋ ಕಾರಣಕ್ಕೆ ಉತ್ಸಾಹ ಕಳಕೊಂಡ ನಮ್ಮೆಲ್ಲರ ಬದುಕಾಗಿ ಆ ಗಾಳಿಪಟ ಕಾಡುತ್ತದೆ. ಇನ್ನು ಸಂಕಲನದ ಶೀರ್ಷಿಕೆಯೂ ಆಗಿರುವ “ಡ್ರೀಮರ್” ಓದಿದ ಮೇಲೆ ಅಂತರ್ಜಾಲದಲ್ಲಿ ಅದಕ್ಕೆ ಪ್ರೇರಣೆಯಾದ ಜಪಾನೀ ಕತೆಯನ್ನು ಹುಡುಕಿ ಓದಿದೆ. ತಲ್ಲಣಿಸಿದೆ. ಏಕೆಂದರೆ ಎಲ್ಲವನ್ನೂ ಮರೆತು ಭ್ರಮೆಯಲ್ಲಿ ಕೊಂಚಕಾಲ ಮಾತ್ರವೇ ಇರಬಲ್ಲೆವು. ಆಮೇಲೆ ಕಾಡುವುದು ಮತ್ತದೇ ನಮ್ಮ ಸುತ್ತಣದ ನಮ್ಮ ಜೊತೆಗಾರರ ಬದುಕೇ! ವಾಸ್ತವದ ಗಹಗಹಿಕೆಯ ಮುಂದೆ ಕ್ಷಣ ಸುಖದ್ದು ಬರಿಯ ಅಮಲು. ಕಡೆಗೂ ನಾವು ಬಯಸುವುದೇನು?, “ಸಾಬರ ಹುಡುಗ ಮತ್ತು ಹಳೇ ಮರ” ಕವಿತೆಯ ಸಾಲು; ಕೊಡು ಕೊಡು ನನಗೊಂದೇ ಒಂದು ಹೂ ಕೊಡು! ಅಂಗಿಗಿಟ್ಟು ಗುನುಗುವೆ ನನ್ನ ಹಾಡು! ಆದರೆ ಸದ್ಯದ ವರ್ತಮಾನ ಹೂವನ್ನಿರಲಿ ಒಣ ಎಲೆಯನ್ನೂ ಕೊಡದಷ್ಟು ಕಠಿಣವಾಗಿದೆ, ಕ್ರೂರವೂ ಆಗಿದೆ. ಇನ್ನು ಪ್ರಹ್ಲಾದರ ಎರಡನೆಯ ಸಂಕಲನ “ನಾಳೆಯಿಂದ” ದ ಕೆಲವು ಪದ್ಯಗಳ ಸಾಲು ಸ್ಮರಿಸಿ ಮುಂದಕ್ಕೆ ತೆರಳುತ್ತೇನೆ. ಈ ಸಂಕಲನದಲ್ಲಿ ಒಟ್ಟಾಗಿ ಇರುವುದು ಕೇವಲ ೨೫ ಕವಿತೆಗಳು. ತಾನು ಹೇಳ ಹೊರಟದ್ದನ್ನು ಎಲ್ಲಿ ಓದುಗ ದೊರೆ ಗಮನಿಸುವುದಿಲ್ಲವೋ ಎನ್ನುವ ಕಾರಣ ಕೊಟ್ಟು ನೂರು ಪದ್ಯಗಳನ್ನು ಅಡಿಕಿರಿಸಿ ಯಾವುದನ್ನೂ ಓದದಂತೆ ಮಾಡಿಕೊಂಡ ಹಲವು ಕವಿಗಳು ನಮಗೆ ಗೊತ್ತಿದ್ದಾರೆ. ನಾನೀಗಾಗಲೇ ಹೇಳಿದಂತೆ ಸಂಕಲನದಿಂದ ಸಂಕಲನಕ್ಕೆ ಕವಿಯ ಪಯಣದ ಹಾದಿ ಮುಂದುವರೆಯುವುದೇ ವಿನಾ ಅವನು ನಂಬಿದ ದಾರಿಯಲ್ಲ. ಹಾಗಾಗಿ ಕವಿ ಸೃಷ್ಟಿಸಿಕೊಂಡ ದಾರಿ ಇದುವರೆಗೂ ಯಾರೂ ಸವೆಸದ ಮತ್ತು ಆ ಕವಿಯೇ ಕಂಡು-ಕೊಂಡ ಕಚ್ಚಾ ರಸ್ತೆ ಆಗಿರಬೇಕು ಎನ್ನುವುದು ಲಾಕ್ಷಣಿಕರ ಅಭಿಮತ. ಇಲ್ಲಿರುವ ೨೫ ಕವಿತೆಗಳೂ ಡ್ರೀಮರಿನ ಮುಂದುವರೆದ ಕನಸುಗಳೇ. ಎಲ್ಲೋ ನವ್ಯದ ಬಿಸುಪು ಕಡಿಮೆಯಾದಂತೆ ಕಂಡು ಆಡುನುಡಿ ಕಂಡಿದೆ ಅಂದ ಮಾತ್ರಕ್ಕೇ ಇವು ಯಾವುವೂ ನವ್ಯದ ಮೂಸೆಯಲ್ಲಲ್ಲದೆ ಬೇರೆಲ್ಲಿಂದಲೂ ಉದಯಿಸಿಲ್ಲ. ಎಚೆಸ್ವಿ ಮುನ್ನುಡಿ ಇರುವ ಈ ಸಂಕಲನದ ಶೀರ್ಷಿಕೆಯೇ ಬಹುಮುಖ್ಯ ಪದ್ಯ “ನಾಳೆಯಿಂದ”. ನಮ್ಮ ಸೋಲನ್ನು ಒಪ್ಪಿಕೊಳ್ಳದ ಮತ್ತು ಅನಿಸಿದ್ದನ್ನು ಮಾಡಲಾಗದ ನಾವು ಸುಳ್ಳು ಸುಳ್ಳೇ ಮತ್ತೆ ಮತ್ತೆ ಹೇಳಿಕೊಳ್ಳುವ ಮಾತೆಂದರೆ ” ನಾಳೆಯಿಂದ”, ಇಂಗ್ಲಿಶಿನಲ್ಲಿ procrastination ಎಂಬ ಪದಕ್ಕೆ ತೀರ ಸಮೀಪದ್ದು. ಒಂದಲ್ಲ ಒಂದು ಕಾರಣ ಕೊಟ್ಟು ಮಾಡಬೇಕಾದ ಕೆಲಸವನ್ನು ( ಕಳ್ಳಂಗೊಂದು ಪಿಳ್ಳೆ ನೆವ) ಮುಂದಕ್ಕೆ ಹಾಕುವುದಕ್ಕೆ ನಾಳೆಯಿಂದ ಅಂತ ಜಾರಿಕೊಳ್ಳುತ್ತೇವಲ್ಲ ಅದೇ ಆಗಿದೆ. ಪ್ರಾಯಶಃ ಮತ್ತೆ ಪದ್ಯ ಬರೆಯಲು ತೊಡಗುತ್ತೇನೆಂದು ಪ್ರಹ್ಲಾದ್ ಅವತ್ತೇ ನಿರ್ಧರಿಸಿದ್ದಿರೋ ಹೇಗೆ?? ಜಗದ ಮೋಡದ ಮಾಡಿಗೆ ಯಾರು ಹೆಸರಿಟ್ಟವರು ಏರಿದಷ್ಟೂ ಎವರೆಷ್ಟು ಉಳಿಯುತ್ತದೆ ರವಷ್ಟು ( ಮೆಟ್ಟಲಾರದ ಮುಗಿಲು) ಅಂತ ಆರಂಭವಾಗುವ ಪದ್ಯ ಆ ಹಿಮದ ಆಲಯದ ಏರುವೆತ್ತರ ಬಿಟ್ಟು ಮುದುರಿ ನಿಂತ ಕುದುರೆಗೆ ಕೆನೆತವಿಲ್ಲ ಆವತ್ತಿನ ಮೊರೆತವಿಲ್ಲ ಅಂತ ಮುಂದುವರೆದು ಕಡೆಗೆ ನಿಲ್ಲುವುದು ಹೀಗೆ; ಮೆಟ್ಟಿ ಬಾವುಟ ನೆಟ್ಟ ಪ್ರತಿ ಎತ್ತರದ ತುದಿಗೂ ಒಂದೊಂದು ಬಟಾಬಯಲು ಮೆಟ್ಟಲಾರದ ಮುಗಿಲು. ನಮ್ಮೆಲ್ಲರೊಳಗಿನ ದೌರ್ಬಲ್ಯವನ್ನು ಹೀಗೆ ಅನಾಮತ್ತು ಎತ್ತಿ ಆಡುವ ಕವಿ ಹಾಗೇ ತಲೆಗೆ ಮೊಟಕುತ್ತಾನಲ್ಲ,  ಈ ಇಂಥ ಕವಿಯನ್ನು ನವ್ಯದ ಶಾಲೆಯ ತಂಟೆಕೋರ ವಿದ್ಯಾರ್ಥಿ ಅನ್ನದೇ ವಿಧಿಯಿಲ್ಲವಲ್ಲ! ಹತ್ತಿ ಹತ್ತಿ ಎತ್ತರಕ್ಕೆ ಇನ್ನೂ ಎತ್ತರಕ್ಕೆ ಕಾಣಲಾರದು ಯಾವ ಜಗದ ನೋವು ( ಭೀಮಣ್ಣನ ರಾಮಕಲಿ) ಭೀಮಸೇನ ಜೋಷಿಯವರ ‘ರಾಮ್ ಕಲಿ’ ರಾಗ ಕೇಳಿ ಅಂತ ಪದ್ಯದ ತಳದಲ್ಲಿ ಟಿಪ್ಪಣಿ ಇದೆ. ನಿಜವಾದ ರಾಮನನ್ನು (ರಾಮ ಅಂದರೆ ಆನಂದ) ಅನುಸರಿಸಿದರೆ ಹತ್ತಿಯಂತೆ ಹಗುರಾಗಿ ಎಂಥ ಎತ್ತರಕ್ಕೂ ಹತ್ತಿ ನಿಂತು ಜಗದೆಲ್ಲ ನೋವ ಪರಿಹಾರ ಅಂತ ಅರ್ಥೈಸಿಕೊಂಡರೆ ಜೀವ ನಿರುಮ್ಮಳವಾಗುತ್ತದೆ. ಇನ್ನು ‘ಒಂದು ವಿರಳ ಭೇಟಿ’ ಅನ್ನುವ ಸರಳ ಪದ್ಯ ಓದುವಾಗ ಯಾಕೋ ಪ್ರತಿಭಾ ನಂದಕುಮಾರರ “ನಾವು ಹುಡುಗಿಯರೇ ಹೀಗೆ” ನೆನಪಾಯಿತು. ಆ ಪದ್ಯದಲ್ಲಿ ಕವಿ ಗೆಳತಿಯ ಜೊತೆ ಏನೇನನ್ನೋ ಮಾತಾಡುತ್ತ ಮತ್ತೆ ಹಳೆಯ ಸ್ನೇಹವ ನೆನೆದು ಕಡೆಗೆ ಅವನ ಅವಳಲ್ಲೂ ತನ್ನ ಬಿಂಬವನ್ನೇ ಕಾಣುತ್ತಾಳೆ. ಆದರೆ ಈ ಪದ್ಯದ ಸರಾಗ ಓಟ ಆ ಪದ್ಯದ ಹಾಗೇ ಲಯವರಿತ ಹದದಲ್ಲಿ ಓಡುತ್ತೋಡುತ್ತಲೇ ಆಪತ್ತಿಗೆ ಆಗದ ಗೆಳೆಯನನ್ನು ಸ್ಮರಿಸುತ್ತದೆ. ಗೇಲಿ

Read Post »

ಅಂಕಣ ಸಂಗಾತಿ, ದಿಕ್ಸೂಚಿ

ಗೆಲುವಿಗೆ ಶತ್ರುಗಳಿವೆ. . . . ಎಚ್ಚರಿಕೆ‼

ಗೆಲುವಿಗೆ ಶತ್ರುಗಳಿವೆ. . . . ಎಚ್ಚರಿಕೆ‼     ನನ್ನಲ್ಲಿರುವ ಚೂರು ಪಾರು ಆತ್ಮವಿಶ್ವಾಸವನ್ನು ಒಗ್ಗೂಡಿಸಿ ಏನನ್ನೇ ಮಾಡಲು ಹೊರಟರೂ ಉತ್ಸಾಹಕ್ಕೆ ತಣ್ಣೀರೆರುಚುವವರು ಸುತ್ತಲೂ ಸುತ್ತುವರೆದಂತೆ ಇರುತ್ತಾರೆ. ಅಷ್ಟೇ ಅಲ್ಲ ಮನದಲ್ಲಿ ಉಕ್ಕುತ್ತಿರುವ ಹಂಬಲವನ್ನು ಚಿವುಟಿ ಚಿಂದಿ ಮಾಡುತ್ತಾರೆ. ಎಷ್ಟೋ ಸಲ ನನ್ನಿಂದ ಏನೂ ಆಗುವುದಿಲ್ಲ ಅನ್ನುವ ಭಾವವನ್ನು ಮೂಡಿಸುವವರೂ ಇದ್ದಾರೆ. ಅವರಿವರ ಇಂಥ ಗಿರಕಿಯೊಳಗೆ ಸಿಕ್ಕಿ ಬಿದ್ದರೆ ನನ್ನ ಕಥೆ ಮುಗಿದೇ ಹೋಗುತ್ತದೆ ಅಂತ ಅನ್ನಿಸಿದರೂ ಅದರಿಂದಾಚೆ ಬರಲು ಆಗುತ್ತಿಲ್ಲ. ‘ಏನಾದರೂ ಆಗಲಿ ಮುನ್ನುಗ್ಗು ಎಂಥ ಸೋಲೇ ಎದುರಾದರೂ ಎದೆಗುಂದಬೇಡ ಧೈರ್ಯದಿಂದ ಹೆಜ್ಜೆ ಹಾಕು. ‘ಛಲವೇ ಗೆಲುವಿನ ಬಲ.’ ಎಂದು ಗುರುಗಳು ಹೇಳಿದ ಮಾತುಗಳನ್ನು ನೆನೆದಾಗಲೊಮ್ಮೆ “ಗೆಲ್ಲುವುದು ಕಷ್ಟವಲ್ಲ ಗೆಲ್ಲಲೇಬೇಕೆಂದು ಮನಸ್ಸು ಮಾಡುವುದು ಕಷ್ಟ. ದೃಢ ಸಂಕಲ್ಪ ತೊಡುವುದು ಇನ್ನೂ ಕಷ್ಟ..”ಎಂದೆನಿಸುತ್ತದೆ. ಇದು ಬಹುತೇಕ ಯುವ ಸ್ಪರ್ಧಾರ್ಥಿಗಳ ಮತ್ತು ವಿದ್ಯಾರ್ಥಿಗಳ ಸ್ವಗತವಾಗಿದೆ. ಗೆಲುವು. . . .        ಗೆಲುವು ಯಾರಿಗೆ ಬೇಡ ಹೇಳಿ? ಪ್ರತಿಯೊಬ್ಬರೂ ಗೆಲ್ಲಲು ಬಯಸುತ್ತಾರೆ.ಕನಸುಗಳು ಬೇರೆ ಬೇರೆ ಬಣ್ಣ ಸುರಿದು ಕೈ ಬೀಸಿ ಕರೆಯುತ್ತವೆ. ಇನ್ನೇನು ಗೆಲುವು ಕೈಯಲ್ಲಿ ಸಿಕ್ಕಿತು ಎನ್ನುವಷ್ಟರಲ್ಲಿ ಕೈ ಜಾರಿದ ಕಹಿ ಅನುಭವವನ್ನು ಮರೆಯುವದಾದರೂ ಹೇಗೆ? ಗೆಲುವಿನ ವಿಷಯವಾಗಿ ಅನೇಕ ಸಲ ಮನಸ್ಸಿಗೆ ಮತ್ತು ಬುದ್ಧಿಗೆ ಚಕಮಕಿ ನಡೆದಿರುತ್ತದೆ. ಕೆಲವೊಮ್ಮೆ ಗುರಿಯ ಕುರಿತು ಬಲು ಶಿಸ್ತಿನ ವ್ಯಕ್ತಿಯಾದರೂ ಗೆಲುವು ಮರೀಚಿಕೆ ಆಗುವುದುಂಟು. ಯಶಸ್ಸಿನ ವಿಷಯದಲ್ಲಿ ಅಸಮಾಧಾನದಲ್ಲಿ ಇರುವುದನ್ನು ಕಾಣುತ್ತೇವೆ.ನನ್ನ ಜೀವನ ಈಗ ಯಾವ ಘಟ್ಟದಲ್ಲಿದೆ ಅದನ್ನು ಎಲ್ಲಿಗೆ ಕೊಂಡೊಯ್ಯಬೇಕು? ಗೆಲುವಿನತ್ತ ಹೆಜ್ಜೆ ಹಾಕುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೊರಟಾಗ ಜೀವನ ಧ್ಯೇಯವನ್ನು ಕಂಡುಕೊಂಡು ಆ ಗುರಿಯತ್ತ ದಿಟ್ಟ ಹೆಜ್ಜೆ ಹಾಕುವಾಗ ಏಕಾಂಗಿಯಾಗಿ ಉಳಿಯುವ ಮಾತಿಲ್ಲ. ‘ ರೈತ ಬಿತ್ತಿದ ತಕ್ಷಣ ಫಲ ಬರುವುದಿಲ್ಲ. ನೀರು ಗೊಬ್ಬರ ಸಕಾಲಕ್ಕೆ ಹಾಕಿದ ಮೇಲೆ ಅಲ್ಲವೇ ಬೆಳೆ ಬರುವುದು.’ ಹಾಗೆಯೇ ಗೆಲುವೂ ಸಹ. ಮನಸ್ಸಿನಲ್ಲಿ ಗೆಲ್ಲಬೇಕೆನ್ನುವ ಬಯಕೆ ಮೂಡಿದರೆ ಸಾಲದು ಅದಕ್ಕೆ ಪೂರಕ ಅಂಶಗಳನ್ನು ಪೂರೈಸಿದಾಗ ಮಾತ್ರ ಫಲಿಸುವುದು. ಸ್ವಯಂ ಪ್ರೀತಿ ಇಲ್ಲದಿರುವುದು ಗೆಲುವಿನ ಗಿಡಕ್ಕೆ ಕಾಡುವ ಕ್ರಿಮಿ ಇದ್ದಂತೆ. ರೋಲೋ ಮೇ ಹೇಳುವಂತೆ ‘ಸ್ವಯಂ-ಪ್ರೀತಿ ಅವಶ್ಯಕ ಮತ್ತು ಒಳ್ಳೆಯದು ಮಾತ್ರವಲ್ಲ ಅದು ಇತರರನ್ನು ಪ್ರೀತಿಸಲು ಸಹ ಒಂದು ಪೂರ್ವಭಾವಿ ಅಗತ್ಯವಾಗಿರುತ್ತದೆ.’  ಬೆಳೆಯನ್ನು ಕಾಡುವ ಕ್ರಿಮಿಗಳಿಗೆ ಕೀಟನಾಶಕ ಸಿಂಪಡಿಸಿ ನಿಯಂತ್ರಿಸಿದAತೆ ಗೆಲುವಿನ ಶತ್ರುಗಳಾವವು? ಅವುಗಳನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ತಿಳಿಯಬೇಕೇ? ಹಾಗಾದರೆ ಮುಂದಕ್ಕೆ ಓದಿ.. . . ಸ್ಪಷ್ಟ ಗುರಿ    ಬಹುತೇಕರು ಎಡುವುದೇ ಇಲ್ಲಿ. ಗುರಿಯ ನಿರ್ಧಾರವಿಲ್ಲದಿದ್ದರೆ ಹೋಗುವುದಾದರೂ ಎಲ್ಲಿಗೆ? ಗಾಳಿಯಲ್ಲಿ     ಹೊರಟ ಕರುವಿನಂತೆ ಆಗುತ್ತದೆ ಬದುಕು. ಕಡಲಯಾನಿಗಳಿಗೆ ಬೇಕಾದ ಪ್ರಮುಖ ವಸ್ತು ಎಂದರೆ ದಿಕ್ಸೂಚಿ. ಹೋಗುವ ದಿಕ್ಕು ಗೊತ್ತಿಲ್ಲದೇ ಮುನ್ನಡೆದರೆ ಆಪತ್ತು ಕಟ್ಟಿಟ್ಟ ಬುತ್ತಿ. ಎಲ್ಲವೂ ಇದ್ದು ಏನೂ ಇಲ್ಲದವರ ತರಹ ಹಲುಬುವುದು ಗೋಳಾಡುವುದೇ ಜೀವನವಾಗಬಾರದು. ಸ್ಪಷ್ಟ ಗುರಿ ಇಲ್ಲದಿರುವುದು ಗೆಲುವಿಗೆ ದೊಡ್ಡ ಶತ್ರು.  ಗುರಿಯನ್ನೇ ಗುರುತಿಸದಿರುವುದು.  ಗುರಿ ನಿರ್ಧಾರವು ಒಂದು ಸಾಹಸ ಸಂಕೇತ. ಗುರಿ ನಿರ್ಧರಿಸುವುದು ಮತ್ತು ಅದನ್ನು ಎಡೆಬಿಡದೇ ಅನುಸರಿಸುವುದು ಅನಿವಾರ್ಯ. ಯೋಜನೆಗಳನ್ನು ಹಾಕದಿರುವುದು. ಯೋಜನೆಗಳು ನಕ್ಷತ್ರಗಳಂತೆ ಗುರಿಯತ್ತ ಚಲಿಸುವಾಗ ಅವುಗಳನ್ನು ಮಾರ್ಗ ಸೂಚಿಗಳಂತೆ ಆಯ್ಕೆ ಮಾಡಿಕೊಳ್ಳಬೇಕು.ಆ ದಾರಿಗುಂಟ ಗಮ್ಯ ಸ್ಥಾನವನ್ನು ತಲುಪಬಲ್ಲೆವು. ಬದ್ಧತೆಗಳು ನಂಬಿಕೆಗಳು ಸಮಾನವಾಗಿರದಿದ್ದರೆ ಜೀವನದಲ್ಲಿ ಸುಖದಿಂದ ಇರಲು ಸಾಧ್ಯವಿಲ್ಲ ಅಂತೆಯೇ ಗುರಿ ಇಲ್ಲದ ಜೀವನ ಗೆಲುವಿನ ದಡ ಸೇರಲು ಸಾಧವಿಲ್ಲ.. ಗುರಿ ನಮ್ಮ ಮನಸ್ಸಿಗೆ ಸ್ಪೂರ್ತಿ ನೀಡುತ್ತದೆ. ಬರೆದಿಟ್ಟ ಗುರಿಯತ್ತ ದಿಟ್ಟ ಹೆಜ್ಜೆ ಇಡುವಂತೆ ಮಾಡುತ್ತದೆ.’ಸ್ಪಷ್ಟ ಗುರಿ ಎಂದರೆ ಸಾಮಾನ್ಯನಾಗಿಯೇ ಇರಲು ನಿರಾಕರಿಸುವುದು.. ಅಸಾಮಾನ್ಯನಾಗುವ ನಿರ್ಧಾರ ಕೈಗೊಂಡಂತೆ.’ ಮುಂದಿನ ಜೀವನದ ದಿಟ್ಟ ಪ್ರಯತ್ನ. ಏಕೆಂದರೆ ಅದು ನಿಮ್ಮಲ್ಲಿ ಅಡಗಿರುವ ಸುಪ್ತ ಶಕ್ತಿಗಳನ್ನು ಸಾಧ್ಯತೆಗಳನ್ನು ಹೊರಗೆಳೆಯುವ ಚೈತ್ರ ಕಾಲ.  ಆಲಸ್ಯತನ    ಆಲಸ್ಯ ನಮ್ಮ ಶರೀರದೊಳಗೇ ಇರುವ ದೊಡ್ಡ ಶತ್ರು. ಇದನ್ನು ಹೊರ ಓಡಿಸಲು ಮನಸ್ಸು ಮಾಡದಿದ್ದರೆ ಜೀವನವನ್ನು ನುಂಗಿ ಹಾಕಿ ಬಿಡುತ್ತದೆ. ಬಣ್ಣದ ಮಾತುಗಳನ್ನು ಹೇಳುತ್ತ ಕುಳಿತರೆ ಬದುಕು ಉದ್ದಾರವಾಗುವುದಿಲ್ಲ ಎಂಬುದು ಕಟು ಸತ್ಯ. ‘ನಾವು ಪಡೆದುಕೊಳ್ಳುವ ವಸ್ತುಗಳಲ್ಲೆಲ್ಲಾ ಬಹು ಬೇಸರದಿಂದ ಪಡೆದುಕೊಳ್ಳುವುದು ಬುದ್ಧಿವಾದ.’ ಎನ್ನುವ ಸಂಗತಿ ಎಲ್ಲರಿಗೂ ಗೊತ್ತಿರುವುದೇ. ಗುರು ಹಿರಿಯರು ಹೇಳುವ ಬುದ್ಧಿವಾದವನ್ನು ಕಿವಿಗೆ ಹಾಕಿಕೊಳ್ಳದೇ ಆಲಸ್ಯತನವನ್ನೇ ಸಮರ್ಥಿಸಿಕೊಳ್ಳುವುದನ್ನು ರೂಢಿಸಿಕೊಂಡಿರುವುದು ಶೋಚನೀಯ ವಿಚಾರ. ‘ಸಮರ್ಥತೆ ಇರಲಾರದೇ ಆರ್ಥಿಕತೆ ಇರಲಾರದು.’ಎಂಬುದು ಬಲ್ಲವರ ಮಾತು. ಅಂತೆಯೇ ‘ಶ್ರಮವಿರಲಾರದೇ ಗೆಲುವು ಇರಲಾರದು.’ ಎಂಬ ನುಡಿಯನ್ನು ಅದಕ್ಕೆ ಜೋಡಿಸಬಹುದು. ಇದು ಸಾರ್ವಕಾಲಿಕ ಸತ್ಯ ಕೂಡ. ಕಷ್ಟ ನಷ್ಟಗಳ ನಡುವೆ ಫೀನಿಕ್ಸ್ ಪಕ್ಷಿಯಂತೆ ಮೈ ಕೊಡವಿ ಎದ್ದು ನಿಂತು ಬದುಕಿ ಬಾಳುವವರ ಚಿತ್ರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡುತ್ತಿರುತ್ತವೆ. ಅಂಥವುಗಳನ್ನೆಲ್ಲ ನೋಡಿದಾಗೊಮ್ಮೆ ನಾನೂ ಹಾಗೆ ಆಗಬೇಕೆಂದುಕೊಂಡರೂ ಮನಸ್ಸು ಮಾತ್ರ ಚೇತನ ಆವಸ್ಥೆಗೆ ಬರುವುದೇ ಇಲ್ಲ. ಅದಕ್ಕೆ ಎಲ್ಲ ಕಾರಣ ದೃಢ ಸಂಕಲ್ಪದ ಅಭಾವ. ‘ಅಚಲ ಸಂಕಲ್ಪವೇ ಆಲಸ್ಯತನಕ್ಕೆ ಮದ್ದು.’ ಶ್ರದ್ಧೆಯ ದುಡಿಮೆಗೆ ಮೋಸವಿಲ್ಲವೆಂದು ಗುರಿಯ ದಾರಿಯಲ್ಲಿ ಹೆಜ್ಜೆ ಹಾಕಬೇಕು.ಸೋಮಾರಿತನದ ಗೂಡಾದ ಮೆದುಳು ತಾರ್ಕಿಕವಾಗಿ ಏನನ್ನೂ ಯೋಚಿಸದು. ಆದ್ದರಿಂದ ಸೋಮಾರಿತನದ ಬೇರನ್ನು ಕಿತ್ತೊಗೆಯುವುದೊಂದೇ ದಾರಿ. ಸಮಯ ನಿರ್ವಹಣೆ ಬಹುತೇಕ ಪ್ರಾಜ್ಞರ ಪ್ರಕಾರ ‘ಜೀವನವೆಂದರೆ ಸಮಯ.’ ಸಮಯ ನಿರ್ವಹಣೆಯಲ್ಲಿಯೇ ಜೀವನದ ನೋವು ನಲಿವು ಸೋಲು ಗೆಲುವು ಎಲ್ಲವೂ ಅಡಗಿವೆ. ಮಾಡುವ ಕೆಲಸಗಳ ಬಗೆಗೆ ಸರಿಯಾದ ಚಿತ್ರಣ ಇರದಿದ್ದರೆ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿ ಸಮಯ ಪೋಲು ಮಾಡಿ ಬಿಡುತ್ತೇವೆ. ಅಷ್ಟೇ ಅಲ್ಲ ಮಾಡಬೇಕಾದ ಸಮಯದೊಳಗೆ ಕೆಲಸವನ್ನು ಮುಗಿಸಲು ಆಗುವುದಿಲ್ಲ ಮುಖ್ಯವಾದ ಕೆಲಸಗಳಿಗೆ ಸಮಯವೇ ಇಲ್ಲದಂತಾಗುತ್ತದೆ.ಕೆಲಸಗಳ ಪ್ರಾಮುಖ್ಯತೆಯ ಅರಿವಿಲ್ಲದೇ ಕಷ್ಟ ಪಟ್ಟು ಕೆಲಸ ಮಾಡಿದರೂ ಸರಿಯಾದ ಫಲಿತಾಂಶ ದೊರೆಯುವುದಿಲ್ಲ.ಆದ್ದರಿಂದ ಪ್ರತಿನಿತ್ಯ  ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಹಿಂದಿನ ದಿನ ರಾತ್ರಿ ಇಲ್ಲವೇ ಬೆಳಿಗ್ಗೆ ತಯಾರಿಸಿಕೊಳ್ಳುವುದು ಸೂಕ್ತ. ಮುಖ್ಯವಾದ ಕೆಲಸಗಳಲ್ಲಿ ತೊಡಗಿರುವಾಗ ಇತರರಿಗೆ ‘ಇಲ್ಲ ಆಗುವುದಿಲ್ಲ ಎಂದು ಹೇಳುವುದನ್ನು ಕಲಿಯಲೇಬೇಕು. ಇಲ್ಲದಿದ್ದರೆ ಮನಸ್ಸಿನ ಮೇಲೆ ಹಲವಾರು ಕೆಲಸಗಳನ್ನು ಹೇರಿದಂತಾಗಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗುವುದು.’ಯಾವ ವ್ಯಕ್ತಿಗೆ ಸಮಯ ನಿರ್ವಹಣೆ ಗೊತ್ತಿದೆಯೋ ಅವನು ಯಶಸ್ವಿ ವ್ಯಕ್ತಿಯಾಗುವನು.’ ನಿರ್ವಹಣೆ ಗೊತ್ತಿಲ್ಲದವನು ಸಮಯದ ಅಭಾವದ ಕುರಿತು ದೂರುವನು. ಉತ್ಸಾಹ     ಹೊಸ ಹುರುಪು ಸ್ಪಷ್ಟ ಚಿಂತನೆಗಳು ಇರದಿದ್ದರೆ ಯಾವುದರಲ್ಲಿಯೂ ಮುನ್ನಡೆಯುವುದು ಕಷ್ಟ. ಉತ್ಸಾಹದಿಂದ ವಿಶ್ವಾಸ ವೃದ್ಧಿಯಾಗುವುದು.ನೀವು ಏನನ್ನೇ ಮಾಡಲು ಮುಂದಾದರೂ ನಿಮ್ಮ ಉತ್ಸಾಹಕ್ಕೆ ತಣ್ಣೀರೆರಚುವವರು ಮತ್ತು ವಿಪತ್ತುಗಳು ಸಂಕಷ್ಟಗಳು ಇದ್ದೇ ಇರುತ್ತವೆ.ನೀವು ಈಗ ನದಿ ಹರಿಯುವ ದಿಕ್ಕಿನಲ್ಲಿ ದೋಣಿಯನ್ನು ನಡೆಸುತ್ತಿರುವವರು ನಿಮಗೀಗ ಮುಂದೆ ಹೋಗುವುದನ್ನು ಬಿಟ್ಟು ಬೇರೆ ದಾರಿ ಇಲ್ಲ.ಅಥವಾ ಹಿಂದೆ ಹೋಗಬೇಕು.ಖ್ಯಾತ ಸಾಹಿತಿ ಮಾಕ್ ð ಟ್ವೇನ್ ಹೇಳುವಂತೆ “ಪ್ರತಿಯೊಬ್ಬರೂ ತಾನಿರುವ ಸ್ಥಿತಿಯಲ್ಲಿ ಉಳಿದರೆ ಪ್ರಪಂಚದಲ್ಲಿ ಹೀರೋಗಳೇ ಇರುವುದಿಲ್ಲ.”ದುರ್ಬಲ ಹೃದಯದವರಾಗಿ ನಿನ್ನೆ ಅನ್ನುವ ಕಳೆದು ಹೋಗಿರುವ ಇತಿಹಾಸದಲ್ಲಿ ಉಳಿದು ಬಿಟ್ಟರೆ ತೊಂದರೆ ಖಚಿತ.“ಉತ್ಸಾಹ ಎನ್ನುವುದು ಕಲ್ಲಿದ್ದಲಿನೊಳಗಿನ ಕಾವು ಆಗಬೇಕೇ ಹೊರತು ಹುಲ್ಲು ಮೆತ್ತೆಗೆ ಹತ್ತಿದ ಬೆಂಕಿ ಆಗಬಾರದು.”ಎಷ್ಟೋ ಸಲ ಗೆಲುವಿನ ಹತ್ತಿರವೇ ಇದ್ದರೂ ಗಡಿಬಿಡಿಯಲ್ಲಿ ಸೋಲಿನತ್ತ ಹೊರಳುತ್ತೇವೆ. ಕೊನೆ ಹನಿ  ಗೆಲುವನ್ನು ನಮ್ಮದಾಗಿಸಿಕೊಳ್ಳಲು ಅಲ್ಪಾಸೆಗೆ ಒಳಗಾಗುತ್ತೇವೆ. ಶ್ರಮದ ಬದಲು ಅಡ್ಡ ದಾರಿ ಹಿಡಿಯುತ್ತೇವೆ. ‘ಗೆಲುವು ಎಂದರೆ ಭೂಮಿಯನ್ನು ಅಗೆದು, ಮರಳನ್ನು ಜಾಲಾಡಿಸಿ ಚಿನ್ನವನ್ನು ತೆಗೆಯುವ ಪ್ರಯತ್ನದಂತೆ.ಕಷ್ಟಪಟ್ಟು ಜಾಲಾಡಿದರೆ ಕೊನೆಗೊಂದು ದಿನ ಸಿಗುವುದು.. ಪ್ರಯತ್ನದಿಂದ ಗೆಲುವಿನ ಸಾಗರವೇ ನಮ್ಮದಾಗುವುದು. ತಾಳ್ಮೆ ಬೇಕಷ್ಟೇ.ಕ್ಷಣಿಕ ಕ್ಷುಲ್ಲಕ ಆಸೆಗಳನ್ನು ಬಿಟ್ಟು ಅಮೃತದಂಥ ಪ್ರಯತ್ನದ ಬೆನ್ನು ಹತ್ತಬೇಕು. ಹತ್ತು ಹಲವು ಕಡೆ ಹಾರುವ ಚಂಚಲ ಮನವನ್ನು ಗುರಿಯತ್ತ ನೆಲೆಯಾಗಿಸುವುದರಲ್ಲೇ ಗೆಲುವಿದೆ. ನಿರಂತರ ಪ್ರಯತ್ನಿಸುವವನಿಗೆ ಗೆಲುವು ತಾನಾಗಿಯೇ ಕೈ ಚಾಚಿ ಅಪ್ಪಿಕೊಳ್ಳುತ್ತದೆ. ಬದುಕಿನ ಹಸಿ ಗೋಡೆಯ ಮೇಲೆ ಗೆಲುವಿನ ಹೊಸ ಚಿತ್ತಾರ ಬರೆಯುತ್ತದೆ.                     ************************************ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

ಗೆಲುವಿಗೆ ಶತ್ರುಗಳಿವೆ. . . . ಎಚ್ಚರಿಕೆ‼ Read Post »

ಅಂಕಣ ಸಂಗಾತಿ, ಮುಖಾಮುಖಿ

ಏನೂ ಸಾಧ್ಯವಿಲ್ಲವೆಂಬ ಕಾಲಘಟ್ಟದಲ್ಲಿ ಪ್ರತಿರೋಧಗಳು ಬಂದಿವೆ ಬಿ.ಶ್ರೀನಿವಾಸ ಬಂಡ್ರಿ ಗೆಳೆಯ ಬಿ.ಶ್ರೀನಿವಾಸ ಕಡುಬಡತನದ, ಅನಕ್ಷರಸ್ಥ ಕುಟುಂಬದಲ್ಲಿ ಜನಿಸಿದರು. ೦೧-೦೬-೧೯೭೦ ಅವರ ಜನ್ಮದಿನ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ತಂದೆ ಬಂಡ್ರಿ ನರಸಪ್ಪ, ತಾಯಿ ಓಬವ್ವರಿಗೆ ಹನ್ನೊಂದು ಮಕ್ಕಳ ಪೈಕಿ, ಬದುಕುಳಿದ ಏಳು ಮಕ್ಕಳಲ್ಲಿ ಶ್ರೀನಿವಾಸ ಸಹ ಒಬ್ಬರು.ಸಂಡೂರು ತಾಲೂಕಿನ ಬಂಡ್ರಿ ಗ್ರಾಮದ ಜೋಗಿಕಲ್ಲು ಗುಡ್ಡದಿಂದ ಬದುಕನ್ನರಸಿ ಕೂಡ್ಲಿಗಿಯಲ್ಲಿ ನೆಲೆನಿಂತರು. ಪ್ರಾಥಮಿಕ,ಪ್ರೌಢಶಾಲಾ ವಿದ್ಯಾಭ್ಯಾಸವನ್ನೆಲ್ಲ ಕೂಡ್ಲಿಗಿಯಲ್ಲಿ ಪೂರೈಸಿದ ನಂತರ,ಕೊಟ್ಟೂರು,ಹೂವಿನಹಡಗಲಿ,ಹೊಸಪೇಟೆಯಲ್ಲಿ ಬಿ.ಎಸ್.ಸಿ ಪದವಿ ನಂತರ ಕಲಬುರಗಿಯಲ್ಲಿ ನ್ಯೂಕ್ಲಿಯರ್ ಭೌತಶಾಸ್ತ್ರದಲ್ಲಿ ಎಮ್.ಎಸ್.ಸಿ.ಸ್ನಾತಕೋತ್ತರ ಪದವಿ ಪಡೆದರು.ಪ್ರಜಾವಾಣಿ ದೀಪಾವಳಿ ಕಥಾ ಪುರಸ್ಕಾರ,ಕಥೆಗಾರ ಸದಾಶಿವ ದತ್ತಿನಿಧಿ ಪುರಸ್ಕಾರ,ಸಿಂಚನ ಕಾವ್ಯಪುರಸ್ಕಾರಕ್ಕೆ ಅವರು ಪಾತ್ರರಾಗಿದ್ದಾರೆ.ಪ್ರಕಟಿತ ಕೃತಿಗಳು : ಕಾಣದಾಯಿತೋ ಊರುಕೇರಿ (ಕಥಾ ಸಂಕಲನ), ಉರಿವ ಒಲೆಯ ಮುಂದೆ (ಕವನ ಸಂಕಲನ),ಪುರೋಹಿತಶಾಹಿ ಮತ್ತು ಗುಲಾಮಗಿರಿ (ಅನುವಾದಿತ ಕೃತಿ), ಹಾವೇರಿ ನ್ಯಾಯ (ಸಂಪಾದಿತ ಕೃತಿ) ಅವರ ಬರೆದ ಪುಸ್ತಕಗಳು.…………………………………. ಕತೆ,ಕವಿತೆ ಹುಟ್ಟುವ ಕ್ಷಣ ಯಾವುದು ? ಇವುಗಳು ಹುಟ್ಟುವ ಕ್ಷಣಗಳು ನಿರ್ದಿಷ್ಟವಾಗಿ ಬರವಣಿಗೆಯ ಮಾತ್ರದಿಂದಲೇ ಹುಟ್ಟಿಬರುತ್ತವೆ ಎಂಬುದು ತಪ್ಪು. ಸವಣೂರಿನ ಭಂಗಿಗಳು ಮೈ ಮೇಲೆ ಮಲ ಸುರುವಿಕೊಂಡು ಪ್ರತಿಭಟಿಸಿದ ಸುದ್ದಿಯಾಯ್ತಲ್ಲ..ಅವರ ಪೈಕಿ ಮಂಜುನಾಥ ಭಂಗಿ ಎಂಬ ಹುಡುಗ ಹೇಳ್ತಾನೆ….”ನಾವು…ಅಂದರೆ ನಾನು,ನನ್ ಚಿಗವ್ವ,ಚಿಗಪ್ಪ,ತಂಗಿ,ತಮ್ಮಂದಿರೆಲ್ಲರೂ ಹುಟ್ಟಿ ಈಗ್ಗೆ ಮೂರುದಿನಗಳಾದ್ವು”ಎಂದ!. ಅವರು ತಮ್ಮ ಬೇಡಿಕೆ ಈಡೇರಿಕೆಗಾಗಿ ಮಲ ಸರುವಿಕೊಂಡು ಅಂದಿಗೆ ಮೂರುದಿನವಾಗಿತ್ತು.ಟೀವಿ,ಪೇಪರ್ನಾಗೆಲ್ಲ ಸುದ್ದಿ ಬಂದಿತ್ತು. ಅಲ್ಲೀವರೆಗೂ ನಮ್ಮ ವ್ಯವಸ್ಥೆಗೆ ಅವರ ಸಂಕಟಗಳು ಹೋಗಲಿ ಮನುಷ್ಯರು ಇದ್ದಾರೆನ್ನುವುದೇ ಇರಲಿಲ್ಲ. ಇಪ್ಪತೈದರ ಹರೆಯದ ಯುವಕ “ನಾನು ಈಗ್ಗೆ ಮೂರು ದಿನದ ಹಿಂದೆ ಹುಟ್ಟಿದೆ” ಎನ್ನುವುದನ್ನು ಹೇಗೆ ತೆಗೆದುಕೊಳ್ತೀರಿ..?ಅವನೇನು ದಾರ್ಶನಿಕನಾ..? ಕವಿಯೋ…ಕಥೆಗಾರನೋ..ಏನಂತಾ ಕರೀತೀರಿ? ಅದಕ್ಕೆ ಅಕ್ಷರಗಳ ಸಾಲಿಯಲಿ ಕಲಿತವರಿಗಿಂತಲೂ ಲೋಕದ ಸಾಲಿಯಲಿ ಕಲಿತವರ ಬಹುದೊಡ್ಡ ಪರಂಪರೆಯೇ ನಮ್ಮ ಮುಂದಿದೆ.ಹೀಗಾಗಿ ನಾವು ಒಂದೆರೆಡು ಪುಸ್ತಕಗಳಲ್ಲಿ ಕೆಲವನ್ನು ಹಿಡಿದಿಟ್ಟರೆ ಅದು ಕಡಲಲಿ ನಿಂತು ಹಿಡಿದ ಬೊಗಸೆ ನೀರು ಮಾತ್ರ . ನಾನು..ನನ್ನ ಮೊದಲ ಪದ್ಯ ಬರೆದದ್ದು ಕೂಡ ಹೀಗೆಯೇ. ಅದೊಂದು ದಿನ,ಶಾಲೆಗೆ ರಜೆಯಿತ್ತು.ಬಳ್ಳಾರಿ ಜಿಲ್ಲೆಯ ಬಿಸಿಲು ನಿಮಗೆ ಗೊತ್ತೇ ಇದೆ.ಅಂಥಾ ಬಿಸಿಲಿನಲ್ಲೂ ಅಪ್ಪ,ನನ್ನನ್ನು ಬತ್ತಿಮರದ ನೆರಳಲ್ಲಿ ಕುಳ್ಳಿರಿಸಿ ರಂಟೆ ಹೊಡೆಯುತ್ತಿದ್ದ.ಆತನ ಕಪ್ಪು ಎದೆಯಲ್ಲಿ ಮೂಳೆಗಳು ಎದ್ದು ಕಾಣುತ್ತಿದ್ದವು. ಈ ಚಿತ್ರ ಬಹುಶಃ ನಾನು ಮೂರೋ ನಾಕನೇ ಕ್ಲಾಸಿದ್ದಾಗೋ ಆಗಿರಬಹುದು.ಆದರೆ ಇಂದಿಗೂ ಕಾಡುತ್ತಿದೆ.`ನಾನು ಸಾಲಿ ಕಲಿತಿಲ್ಲ/ ಆದರೂ ಎಣಿಸಬಲ್ಲೆ/ ಅಪ್ಪನ ಎದೆಯ ಮೂಳೆಗಳನ್ನು/ ಎನ್ನುವ ಸಾಲುಗಳನ್ನು ಬರೆಯಲಿಕ್ಕೆ ಸಾಧ್ಯವಾಯಿತು. ಅಂದರೆ ಅಕ್ಷರ ಕಲಿತರೆ ಮಾತ್ರವೇ ಸಂವೇದನೆ ಗಳಿರುತ್ತವೆ ಎಂಬ ಮಾತನ್ನು ಹೊಡೆದು ಹಾಕಿದೆ. ಹೌದು,ನಿವೇಕೆ ಬರೆಯುತ್ತೀರಿ? ಸೃಜನಶೀಲ ಬರಹಗಾರನೊಬ್ಬ ‘ಡಿಸ್ಟರ್ಬ್’ ಆದಾಗ,ಲೇಖನಿ ಖಡ್ಗವಾಗುವುದುಂಟು.ಕೆಲವೊಮ್ಮೆ ಅವ್ವನ ಬತ್ತಿದೆದೆಯಲಿ ಹಾಲು ಬರುವುದಿಲ್ಲವೆಂದು ಗೊತ್ತಿದ್ದೂ ಚೀಪುವ ಬಡಪಾಯಿ ಮಗುವಿನ ಹಾಗೆ.ಬರಹಗಾರ ಬರೀತಾ ಹೋಗ್ತಾನೆ.ನಿರಾಳತೆಯ ಅನಂತ ಗುಹೆ ಹೊಕ್ಕು ಸಾಗುತ್ತಲೇ ಇರುತ್ತಾನೆ.ಈ ಪಯಣ ಕವಿಗೆ,ಕಥೆಗಾರನಿಗೆ,ಕಾದಂಬರಿಕಾರನಿಗೆ,ಹೆಚ್ಚು ಭಾವುಕವಾಗಿಬಿಡುತ್ತದೆ. ಅಕ್ಷರಗಳಿಂದ ಏನೂ ಮಾಡಲು ಸಾಧ್ಯವಿಲ್ಲವೆಂದು ಗೊತ್ತಿರುವ ಕಾಲಘಟ್ಟಗಳಲ್ಲಿ ಪ್ರಪಂಚದ ಅತ್ಯುತ್ತಮ ಕೃತಿಗಳು,ಪ್ರತಿರೋಧಗಳು ಮೂಡಿಬಂದಿರುವುದನ್ನು ಗಮನಿಸಬಹುದು. ಲಿಯೋ ಟಾಲ್ಸ್ಟಾಯ್,ಪಾಬ್ಲೋನೆರೂಡ, ಸಿದ್ಧಲಿಂಗಯ್ಯ, ದೇವನೂರು, ಅನಂತಮೂರ್ತಿ, ಲಂಕೇಶ, ತೇಜಸ್ವಿಯವರ ಸಾಹಿತ್ಯ ಉದಾಹರಿಸಬಹುದು. ಕತೆ-ಕವಿತೆಗಳಲ್ಲಿ ಬಾಲ್ಯ,ಹರೆಯ ಇಣುಕಿದೆಯೆ? ಓ…ಖಂಡಿತ.ಇಣುಕುವುದಿರಲಿ ಪರಿಪೂರ್ಣ ಹಾಜರಿಯೇ ಇದೆ.ನನ್ನ ಕಥೆ,ಕವಿತೆ….ಬರೆಯುತ್ತಿರುವ ಸಂಡೂರಿನ ಚಿತ್ರಗಳಾಗಲೀ,ಕಾದಂಬರಿಯೇ ಆಗಿರಲಿ ಎಲ್ಲದರ ಮೂಲಧಾತು ನನ್ನ ಊರಿನ ಬಾಲ್ಯ,ಮತ್ತು ಹರೆಯದ ಮೌನ. ಅಪ್ಪ ಚೌರ ಮಾಡಿಸಿಕೊಂಡಿದ್ದ ಕಿಟ್ಟಪ್ಪನ ಅಂಗಡಿಯಿಂದ ಹಿಡಿದು ಹರಿದ ಬನಿಯನ್ನಿನ ನನ್ನ ಮೇಷ್ಟ್ರವರೆಗೆ…ನನ್ನ ಬರವಣಿಗೆಯಲ್ಲಿ ಬಂದಿದ್ದಾರೆ. ಈ ಮನೆಯ ಮುದ್ದೆಗೆ/ ಆ ಮನೆಯ ಸಾರು/ ಉಂಡ ರುಚಿ ಮೂಲೆ ಸೇರಿದೆ ಅಜ್ಜನ ಹಾಗೆ/ ಹೀಗೆ ಬರೆಯಲಿಕ್ಕೆ ನನಗೆ ಸಾಧ್ಯ ಮಾಡಿದ್ದೇ ನನ್ನ ಕಳೆದುಹೋದ ಬದುಕು. ಪ್ರತಿಯೊಬ್ಬ ಲೇಖಕನಿಗೂ ಅವನ ಬಾಲ್ಯ,ಹರೆಯ, ಬರವಣಿಗೆಯೊಳು ಹಾಸುಹೊಕ್ಕಾಗಿರುತ್ತವೆ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನ್ನಿಸುತಿದೆ? ಇತ್ತೀಚೆಗೆ ಎಲ್ಲ ಸಮುದಾಯಗಳೂ ತಮ್ಮ ತಮ್ಮ ಸಾಂಸ್ಕೃತಿಕ ಐಕಾನ್ ಗಳನ್ನು ಹೊಂದಿದ್ದಾರೆ.ಬಸವಣ್ಣನನ್ನು,ಕನಕನನ್ನು,ವಾಲ್ಮೀಕಿಯನ್ನು….ಹೀಗೆ ಆಯಾ ಬಹುಸಂಖ್ಯಾತ ಸಮುದಾಯಗಳು ತಮ್ಮ ತಮ್ಮ ಸಾಂಸ್ಕೃತಿಕ ನಾಯಕನನ್ನಾಗಿ ಘೋಷಿಸಿಕೊಂಡಿವೆ.ಆದರೆ ವಿಪರ್ಯಾಸ ನೋಡಿ,ಅಂಚಿನ ಸಮುದಾಯಗಳಾದ ಕೊರಚ,ಕೊರಮ,ಕೊರವರ,,ಕಮ್ಮಾರ,ಕುಂಬಾರ…ತಮ್ಮ ಅಸ್ತಿತ್ವಕ್ಕಾಗಿ ಇನ್ನೂ ಹೋರಾಡುತ್ತಿದ್ದಾರೆ.ಯಾವ ನಾಯಕರು ಇಡೀ ಮಾನವ ಕುಲವೊಂದೇ ಎಂದು ಹೋರಾಡಿದರೋ ,ಅವರನೆಲ್ಲ ಆಯಾ ನಿರ್ದಿಷ್ಟ ಸಮುದಾಯಗಳು ಮಾತ್ರವೇ ಗುತ್ತಿಗೆ ಪಡೆದ ರೀತಿಯಲ್ಲಿ ವರ್ತಿಸುತ್ತಿವೆ.ಸಾಹಿತ್ಯಿಕ ಲೋಕದ ದಿಗ್ಗಜರಿಗೂ ಈ ಸತ್ಯ ಅರಿವಾಗಿದ್ದರೂ ಮೌನವಾಗಿರುವುದು ಸಾಂಸ್ಕೃತಿಕ ಅಪರಾಧ. ಇನ್ನು ಇತರೆ ಧರ್ಮೀಯರದಂತೂ ಹೇಳುವ ಹಾಗೆಯೇ ಇಲ್ಲ.ಶರೀಫರಿಗೂ ಮಠ ಕಟ್ಟಿ ಬಂಧಿಸಿಡಲಾಗಿದೆ.ಮಠಾಧೀಶರಂತೂ ಧಾರ್ಮಿಕ ಮತ್ತು ರಾಜಕಾರಣದ ಗೆರೆ ಅಳಿಸಿರುವವರಂತೆ ತೋರುತ್ತಿದ್ದಾರೆ.ಸಂಪುಟದ ತೀರ್ಮಾನಗಳು ಇವರ “ಅಪ್ಪಣೆ”ಮೇರೆಗೂ ನಡೆದ ವಿದ್ಯಮಾನಗಳು ನಮ್ಮ ಕಣ್ಣೆದುರಿಗಿವೆ. ಸಾಂಸ್ಕೃತಿಕ ರಾಜಕಾರಣ ಎಲ್ಲದಕ್ಕಿಂತಲೂ ಅಪಾಯಕಾರಿಯಾದುದು.ಇದನ್ನು ಗ್ರಹಿಸುತ್ತಿದ್ದ ಲೋಹಿಯಾ,ಜೆ.ಪಿ.,ನಮ್ಮ ಪಟೇಲರಂತಹ ರಾಜಕಾರಣಿಗಳೂ ಈಗ ಇಲ್ಲ.ಒಂದು ರೀತಿ ಕಲ್ಚರಲ್ ವ್ಯಾಕ್ಯೂಮ್ ಸೃಷ್ಟಿಯಾಗಿಹೋಗಿದೆ. ಈ ಮಾತನ್ನು ಯಾಕೆ ಪ್ರಸ್ತಾಪಿಸುತ್ತಿದ್ದೇನೆಂದರೆ,ರಾಜಕಾರಣಿಯೂ ಎಲ್ಲ ಮನುಷ್ಯರ ಹಾಗೆ ನಗಬೇಕು,ಅಳಬೇಕು,ಸಂಕಟಗಳ ಅರಿವೂ ಇರಬೇಕು.ಈ ಹಿಂದಿನ ರಾಜಕಾರಣಿಗಳಿಗೆ ಕನಿಷ್ಟ ಮಟ್ಟದಲ್ಲಾದರೂ ಇವುಗಳ ಅರಿವಿತ್ತು. ನಗು ಮರೆತು,ಅಳು ಮರೆತು ರಾಜಕಾರಣ ಮಾಡಿದರೆ ಅದು ಮನುಷ್ಯ ರಾಜಕಾರಣವಾಗುವುದಿಲ್ಲ.ಸಂವೇದನಾರಹಿತನೊಬ್ಬ ರಾಜಕಾರಣಿಯಾಗುವುದೂ..ಬಾಂಬುಗಳೇ ನಮ್ಮನ್ನಾಳುವುದಕ್ಕೂ ವ್ಯತ್ಯಾಸವಿಲ್ಲ. ಇಂದು ನಮ್ಮನ್ನಾಳುವ ಪ್ರಭುಗಳ ಪರಿಸ್ಥಿತಿ ನೋಡಿ,ಎಲೆಕ್ಷನ್ ಹತ್ತಿರ ಬಂದಾಗಲೆಲ್ಲ ಮಿಲಿಟರಿ ಡ್ರೆಸ್ ಹಾಕ್ಕೊಂಡು ನಿಲ್ತಾರೆ.ಜನರನ್ನು ಭಾವನಾತ್ಮಕವಾಗಿ,ಧಾರ್ಮಿಕವಾಗಿ,ಸಾಂಸ್ಕೃತಿಕವಾಗಿಯೂ ವ್ಯವಸ್ಥಿತವಾಗಿ ಒಡೆಯಲಾಗುತ್ತಿದೆ. ಈಗೀಗ ಗಡಿರೇಖೆಯ ನ್ಯೂಸ್ ಗಳನ್ನೇ ಹೆಚ್ಚಾಗಿ ಕೇಳುತ್ತೇವೆ. ನಾವು ನೀವೆಲ್ಲ ಚಿಕ್ಕ ವಯಸ್ಸಿನಲ್ಲಿ ಯುದ್ಧ ಎಂದರೆ ಬಬ್ರುವಾಹನ ಚಿತ್ರದ ದೃಶ್ಯ ಕಣ್ಮುಂದೆ ಬರುತಿತ್ತು,ಬಿಟ್ಟರೆ ಇಸ್ರೇಲೋ..ಇರಾನ್ ನಲ್ಲೋ..ಅಲ್ಲೊಂದು ಇಲ್ಲೊಂದು ಸುದ್ದಿಯಿರುತ್ತಿತ್ತು.ಆದರೀಗ ಸುದ್ದಿಗಳೇ ಯುದ್ಧ ಸೃಷ್ಟಿಸುವಂತಹ ಸಂದರ್ಭಕ್ಕೆ ಬಂದು ನಿಂತಿದ್ದೇವೆ.ಇದು ನಾವು ತಲುಪಿರುವ ದುರಂತ. ನಿಮ್ಮ ಕತೆಗಳ ವಸ್ತು,ವ್ಯಕ್ತಿ ಹೆಚ್ಚಾಗಿ ಯಾವುದು?ಪದೇ ಪದೇ ಕಾಡುವ ವಿಷಯ ಯಾವುದು? ನನ್ನ ಬರವಣಿಗೆಯು ವರ್ತಮಾನದ ಕನ್ನಡಿ.ಸಾಮಾಜಿಕ ಅಸಮಾನತೆಯಲಿ ಬೆಂದವರು,ಬಂಡವಾಳಶಾಹಿಯ ಹಿಡಿತಕ್ಕೆ ಸಿಕ್ಕು ನಲುಗಿದವರು ನನ್ನ ಕಥೆಯ ಪಾತ್ರಧಾರಿಗಳು.ಬರಹಗಾರನಿಗೆ ವೈಯಕ್ತಿಕವು ಸಾಮಾಜಿಕವೂ ಆಗಿರಬೇಕು.ಆಗ ಮಾತ್ರ ವರ್ತಮಾನದ ಒತ್ತಡ ಅವನನ್ನು ಲೇಖಕನನ್ನಾಗಿ ಮಾಡುತ್ತೆ. ನನ್ನ ಕಥೆ,ಕವಿತೆಗಳೆಲ್ಲವೂ ಒಂದು ರೀತಿಯಲ್ಲಿ ರಿಯಾಕ್ಷನರಿ ಪ್ರೋಜ್, ಪೊಯೆಮ್ಸ್ …ಪ್ರತಿಕ್ರಿಯಾತ್ಮಕ ಗದ್ಯ,ಪದ್ಯಗಳೆ ಆಗಿವೆ. ಧರ್ಮ,ದೇವರು ವಿಷಯದಲ್ಲಿ ನಿಮ್ಮ ನಿಲುವೇನು? ಪ್ರತಿಯೊಬ್ಬ ಭಾರತೀಯನಲ್ಲೂ ರಾಮ,ರಹೀಮ,ಏಸು,ನಾನಕ….ಮುಂತಾದ ಧರ್ಮಗಳ ನಾಯಕರಿದ್ದಾರೆ.ವಿವೇಕಾನಂದರೂ ಹೇಳಿದ್ದನ್ನೆ ನಾನು ಅನುಮೋದಿಸುತ್ತಿರುವೆನಷ್ಟೆ.ಆದರೆ ಆ ದೇವರುಗಳ ಹೆಸರಿನಲ್ಲಿನ ಮೌಢ್ಯತೆಗಳನ್ನು ಸಹಿಸಲಾರೆ. ಧರ್ಮಗಳ ನಡುವಿನ ಅಂತರ ಹೆಚ್ಚಾಗ್ತಿರುವುದೂ ದೇಶದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ.ನೇರವಾಗಿ ಹೇಳಿಬಿಡ್ತೇನೆ…ಒಂದು ನಿರ್ದಿಷ್ಟ ಧರ್ಮೀಯರನ್ನು ಹೊರಗಿಟ್ಟು ಸಿಎಎ ಕಾಯಿದೆ ಜಾರಿ ಮಾಡುವುದು ,ಅನುಮಾನದಿಂದ ನೋಡುವುದು ಆ ಧರ್ಮೀಯರಲ್ಲಿ ಅಭದ್ರತೆ,ಪರಕೀಯ ಭಾವನೆಯನ್ನು ಮೂಡಿಸುವುದಲ್ಲದೆ ಮತ್ತೇನು?ಈ ಹಿಂದೆ ಕಾರ್ಗಿಲ್ ವಿಜಯೋತ್ಸಾಹದ ಸಂದರ್ಭದಲ್ಲಿ ಹಿಂದೂ ಸೈನಿಕರಿಗೆ ರಕ್ಷಾಬಂಧನ ಕಟ್ಟಿದರೆ..ಜೊತೆಯಲಿದ್ದ ,ದೇಶಕ್ಕಾಗಿ ದುಡಿದ ಮುಸ್ಲಿಮ್ ಸೈನಿಕರುಗಳ ಭಾವನೆ ಹೇಗಾಗಿದ್ದೀತು? ಕಳೆದ ವರುಷ ಪುಲ್ವಾಮ ದಾಳಿಯಲ್ಲಿ ಹತರಾದವರು ನಲವತ್ತು ಜನ ಯೋಧರಿದ್ದರು.ನಮ್ಮೂರುಗಳಲ್ಲಿ ರಾತ್ರಿ ಸರ್ಕಲ್ಲುಗಳಲಿ ಮೊಂಬತ್ತಿ ಹಿಡಿದು ಭಾವನಮನ ಸಲ್ಲಿಸುವಾಗ, ಹಾಕಿದ್ದ ಕಾರ್ಯಕ್ರಮದ ಪ್ಲೆಕ್ಸನಲ್ಲಿ ಒಬ್ಬ ನತದೃಷ್ಟನ ಪಟ ಇರಲಿಲ್ಲ.ಕಾರಣವೇನೆಂದರೆಅವನು ಅನ್ಯಧರ್ಮೀಯನಾಗಿದ್ದುದು! ಇದು ನನ್ನ ಭಾರತ ಸಾಗುತ್ತಿರುವ ದುರಂತ ಪಥ. ವೈಯಕ್ತಿಕವಾಗಿ ಧರ್ಮ,ದೇವರುಗಳ ವಿಷಯದಲ್ಲಿ ಲೋಹಿಯಾ ನನಗೆ ಮಾದರಿ. ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ….ನೋಡಿ,ನಮ್ಮೂರಿನಲ್ಲಿ ಹಿಂದೆ ಕೂಡ ಗಣಿಗಾರಿಕೆಯಿತ್ತು.ಈಗಲೂ ಇದೆ.ಈಗ ಇರುವಷ್ಟು ಅಕ್ರಮ ಇರಲಿಲ್ಲ. ಊರ ಜನರಿಂದ ಆಯ್ಕೆಯಾಗಿ ಹೋದ ಎಮ್ಮೆಲ್ಲೆ ಹತ್ರ ಹೋಗಿ,ಊರಿಗೆ ಶಾಲೆ,ರಸ್ತೆ ರಿಪೇರಿಗೋ,ಕುಡಿಯುವ ನೀರಿಗೋ ಬೇಡಿಕೆಯಿಟ್ಟರೆ “ಮೀಕೇಮಿ ಕೆಲ್ಸಮಲೇದ..?ಮೀದೊಕ್ಕಟೆ ಊರೇಮಿ ನಾಕಿ..? ಪೋ ಪೋ..ಪೋರ್ರಾ”(ನಿಮಿಗೆ ಕೆಲ್ಸವಿಲ್ಲವೇನು ? ನಿಮ್ಮದೊಂದೆ ಊರಂದ್ಕಡಿದಿರೇನು ನನಗೆ…ಹೋಗ್ ಹೋಗ್ರಪಾ..)ಎಂದು ಅರ್ಧ ಕನ್ನಡ ಇನ್ನರ್ಧ ತೆಲುಗು ಮಿಶ್ರಿತ ಭಾಷೆಯಲ್ಲಿ ಗದರಿಸಿ ಕಳುಹಿಸುತ್ತಿದ್ದ.ಆತ ಒಂದು ಕಪ್ಪು ಟೀ ಕೂಡ ಕೊಡುತ್ತಿರಲಿಲ್ಲ.ಜನರೂ ಸುಮ್ಮನೆ ಬರೋರು. ಆದರೆ ಅದೇ ನಮ್ಮೂರಿಗೆ ಕಳೆದ ಹದಿನೈದು ವರುಷಗಳಿಂದ ಗಣಿಧಣಿಗಳೇ ಶಾಸಕರಾಗುತ್ತಿದ್ದಾರೆ.ಅವರನ್ನು ಎಲೆಕ್ಷನ್ ಟೈಮಲ್ಲಿ ನೋಡಿದ್ದು ಬಿಟ್ಟರೆ ಮತ್ತೆ ನೋಡಾದು ಮತ್ತೊಂದು ಎಲೆಕ್ಷನ್ನು ಬಂದಾಗಲೆ.ಎಲೆಕ್ಷನ್ನಲ್ಲಿ ಹಬ್ಬವೋ ಹಬ್ಬ.ಅದುವರೆಗೂ ಅಂತಹ ಸ್ಟೀಲ್ ಸಾಮಾನುಗಳನ್ನು ನೋಡಿರದ ಜನರಿಗೆ ತರಹೇವಾರಿ ಟಿಪನ್ನು ಕ್ಯಾರಿಯರ್ ಮನೆಮನೆಗೆ ತಲುಪಿಸಲಾಯಿತು.ಓಟಿಗೆ ಸಾವ್ರ,ಎರಡ್ಸಾವ್ರ ರೂಪಾಯಿಗಳಂತೆ ಹಂಚಲಾಯಿತು.ಹೀಗೆ ಗೆದ್ದು ಬಂದ ಎಮ್ಮೆಲ್ಲೆ ಹತ್ರನೂ ಅದೇ ಸಮಸ್ಯೆಗಳನ್ನು ಹೊತ್ತು ಬೆಂಗಳೂರಿಗೂ ಹೋಕ್ತಾರೆ. ಅಲ್ಲಿ ಬೆಳಗಾ ಮುಂಜಾನಿಗೆ ಬೆಂಗಳೂರಿಗೆ ಹೋದವರ ದೃಶ್ಯ ವಿವರಿಸುವೆ ಕೇಳಿ. ಭವ್ಯ ಬಂಗಲೆ!ಹೋದ ತಕ್ಷಣ,ಇವರ ವೋಟಿನ ಕಾರ್ಡು,ಆಧಾರಕಾರ್ಡು ಚೆಕ್ ಮಾಡಲಾಗುತ್ತದೆ.ಕ್ಷೇತ್ರದ ಮತದಾರರೆಂದು ಕನ್ಫರ್ಮ್ ಆದ ಮೇಲೇಯೇ ಇವರಿಗೆಲ್ಲ ಸ್ನಾನ,ನಿತ್ಯಕರ್ಮಾದಿಗಳಿಗೆ ರೂಮು ತೋರಿಸ್ತಾರೆ. ಭರ್ಜರಿ ತಿಂಡಿ,ತಿಂದ ನಂತರ ನಿಂತಿದ್ದ ವೋಲ್ವೋ ಬಸ್ ಹತ್ತಬೇಕು.ಯಂತ್ರಮಾನವರಂತೆ ಜನರು ಹತ್ತಿ ಕುಳಿತು ಬೆಂಗಳೂರೆಂಬ ಮಾಯಾನಗರಿಯನ್ನು ಬೆರಗಿನಿಂದ ನೋಡ್ತಾರೆ.ಇಂಥದೊಂದು ಲೋಕವ ನಾವೂ ನೋಡದೆ ಇರುತ್ತಿದ್ವಲ್ಲ ಎಂದು ಬಂದ ಭಾಗ್ಯಕೆ ಖುಷಿಪಡುತ್ತಾರೆ. ಮತ್ತೆ ರಾತ್ರಿ ಭೂರಿ ಭೋಜನದ ವ್ಯವಸ್ಥೆ.ಪ್ರತಿಯೊಬ್ಬರ ಕೈಗೂ ಐನೂರರ ಗಾಂಧಿ ನೋಟು! ಬಸ್ಸೇರಿ ಊರಿಗೆ ಮರಳುತ್ತಾರೆ. ತಾವು ಕೇಳಲೆಂದು ಹೋದ ಅದೇ ಮುರಿದು ಬೀಳುವ ಹಂತದ ಶಾಲೆ ,ತಗ್ಗುದಿಣ್ಣಿಯ ರಸ್ತೆ,ತುಂಬು ಗರ್ಭಿಣಿಯರು ಕೊಡ ನೀರಿಗಾಗಿ ಮೈಲುಗಟ್ಟಲೆ ದೂರ ನಡೆವ ಚಿತ್ರಗಳು ಕಾಣಸಿಗುತ್ತವೆ. ನಾನು ಹೇಳ್ತಿರುವುದು ಕಥೆಯಲ್ಲ.ವಾಸ್ತವ.ಇದು ಭಾರತದ ರಾಜಕಾರಣ ತಲುಪಿರುವ ದುರಂತ . ಮಾತನಾಡದಂತೆ ತಡೆಯುವುದು,ಪ್ರಭುತ್ವದ ವಿರುದ್ಧ ಮೌನವಾಗಿರುವಂತೆ ಬೆದರಿಸುವುದು ಫ್ಯಾಸಿಸಂನ ಲಕ್ಷಣಗಳನ್ನೂ ದಾಟಿ,ಇದೀಗ ಪ್ರತಿಯೊಬ್ಬರ ಮನೆಯಂಗಳಕೂ ಕಣ್ಗಾವಲಿಟ್ಟ ಬಿಗ್ ಬಾಸ್ ರೀತಿಯಲ್ಲಿ ನಮ್ಮ ಬದುಕು ನಡೆಯುತ್ತಿದೆ.ಈ ಹೊತ್ತು ಇಡೀ ಭಾರತವೇ ಡಿಟೆನ್ಷನ್ ಕ್ಯಾಂಪಿನಲ್ಲಿರುವ ಹಾಗೆ ತೋರುತ್ತಿದೆ. ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ನಾನು,ಮೂಲತಃ ನ್ಯೂಕ್ಲಿಯರ್ ಫಿಜಿಕ್ಸ್ನ ವಿದ್ಯಾರ್ಥಿ. ಆದರೆ ಭೌತಶಾಸ್ತ್ರಕ್ಕಿಂತಲೂ ಹೆಚ್ಚು ಓದಿದ್ದು ಕನ್ನಡ ಸಾಹಿತ್ಯ. ನಾನೇಕೆ ಇಷ್ಟೊಂದು ಸೆಳೆತಕ್ಕೆ ಒಳಗಾದೆ? ಎಂಬ ಪ್ರಶ್ನೆ ನನಗೆ ನಾನೇ ಹಾಕಿಕೊಂಡಿದ್ದುಂಟು. ನನ್ನೂರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ.ಬಿಸಿಲು,ಬಡತನ ಮತ್ತು ದೇವದಾಸಿಯೆಂಬ ನತದೃಷ್ಟರೇ ಹೆಚ್ಚಾಗಿರುವ ಊರು.ಕೊಟ್ರೇಶ್ ಎಂಬ ಬಾಲ್ಯದ ಗೆಳೆಯನಿದ್ದ.ಅವನಿಗೋ ವಿಪರೀತ ಓದುವ ಹುಚ್ಚು.ನನಗೂ ಹಿಡಿಸಿದ.ಸರ್ಕಾರಿ ಲೈಬ್ರರಿಯ ಹೆಚ್ಚು ಕಮ್ಮಿ ಎಲ್ಲಾ ಪುಸ್ತಕಗಳನ್ನೂ ಓದಿಬಿಟ್ಟಿದ್ದೆವು.ಸಾಲದಕ್ಕೆ ಏಪ್ರಿಲ್ ಮೇ ತಿಂಗಳ ರಜೆಯಲ್ಲಿ ಗಂಟೆಗಟ್ಟಲೆ ಚರ್ಚಿಸುತ್ತಿದ್ದೆವು.ನನಗೆ ಬಹುವಾಗಿ ಕಾಡಿದ ಕಥೆ ನಿರಂಜನರ ಕೊನೆಯ ಗಿರಾಕಿ.ಕಣ್ಣೆದುರೇ ನಮ್ಮೂರಿನಲ್ಲಿ ಅಂತಹ ಎಷ್ಟೋ ನತದೃಷ್ಟರನ್ನು ನೋಡ್ತಾ ಬೆಳೆದ್ವಿ.ಆಗ ನಮಗೆ ಈ ಸಾಹಿತ್ಯ ಬೇರೆಯಲ್ಲ, ಬದುಕೂ ಬೇರೆಯಲ್ಲ ಎಂಬುದು ಅರಿವಾಗತೊಡಗಿತ್ತು.ಆಗಲೇ ನಾವು ಕುವೆಂಪು, ಕಾರಂತರ ಜಗತ್ತನ್ನು, ಮಾಸ್ತಿಯವರನ್ನು,ಅನಂತಮೂರ್ತಿ,ದೇವನೂರು,ಕುಂವೀ,ಸಿದ್ಧಲಿಂಗಯ್ಯ ನವರನ್ನು ಓದಿಕೊಂಡಿದ್ದು.ಬಹುಶಃ ಈ ಸೆಳೆತದಿಂದಾಗಿಯೇ ನಾನು ಮನುಷ್ಯನಾಗಿ ಉಳಿದುಕೊಳ್ಳುವುದಕ್ಕೆ ಸಾಧ್ಯವಾಯಿತು. ಲಂಕೇಶ್-ತೇಜಸ್ವಿಯವರ ಓದು,ನಮ್ಮ ದಾರಿಗಳನ್ನು ಮತ್ತಷ್ಟು ಕ್ಲಿಯರ್ ಮಾಡ್ತಾ ಹೋಯಿತು.ನಿರಂಜನರ ಕೊನೆಯ ಗಿರಾಕಿಗಳೂ,ದೇವನೂರರ ಅಮಾಸ,ಕುಂವೀಯವರ ಡೋಮ,ಮೊಗಳ್ಳಿಯವರ ಬುಗುರಿ,ಎಲ್ಲವೂ ನಮ್ಮೂರಲ್ಲಿದ್ವಲ್ಲ!ಅದಕ್ಕೆ…ಬರಹ ನನಗೆ ಆಪ್ತತೆಯನ್ನು ನೀಡ್ತಾ ಬಂತು. ನಂಜುಂಡ ಸ್ವಾಮಿಯವರ ರೈತ ಹೋರಾಟ,ಕೃಷ್ಣಪ್ಪನವರ ದ.ಸಂ.ಸ.,ಗೋಪಾಲಗೌಡರ ಸಮಾಜವಾದ ಕುರಿತಂತೆ ,,ಜೊತೆಗೆ ನಾನು ಈಗ ಕಳೆದ ಇಪ್ಪತ್ತು ವರುಷಗಳಿಂದ ಕೆಲಸ ಮಾಡುತ್ತಿರುವ ಹಾವೇರಿ ಸುತ್ತಮುತ್ತಲಿನ ಪ್ರದೇಶದಲ್ಲಿದ್ದ ಸ್ವಾತಂತ್ರ‍್ಯ ಹೋರಾಟಗಾರರ ಕುರಿತು ಚರಿತ್ರಾರ್ಹ ಬರವಣಿಗೆ ದಾಖಲಿಸಬೇಕಿದೆ.ಆ ಹೊತ್ತಿನ ಸಾಹಿತ್ಯದ ತೇವ ಆರಿ ಹೋಗದ ಹಾಗೆ ಮರು ರೂಪಿಸುವ ಬಹುದೊಡ್ಡ ಕನಸೊಂದಿದೆ.ಜೊತೆಗೆ ಗಣಿಗಾರಿಕೆಯೆಂಬ ಅತ್ಯಾಚಾರಕ್ಕೆ ಒಳಗಾದ ಸಂಡೂರೆಂಬ ಊರಿನ ಸಾಂಸ್ಕೃತಿಕ ದಾಳಿಯ ಕುರಿತೂ ಬರವಣಿಗೆ ಮಾಡಬೇಕಿದೆ. ಕನ್ನಡ ಹಾಗೂ ಆಂಗ್ಲ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ,ಸಾಹಿತಿ ಯಾರು..? ಲಂಕೇಶ್…ತೇಜಸ್ವಿ,ಕುವೆಂಪು, ಇಂಗ್ಲೀಷಿನಲ್ಲಿ ಶಿವ ವಿಶ್ವನಾಥನ್ ಬರಹಗಳಿಷ್ಟ.ಮಾರ್ಕ್ವೈಜ್ನ ಒನ್ ಹಂಡ್ರೆಡ್ ಡೇಸ್ ಆಫ್ ಸಾಲಿಟ್ಯೂಡ್….ತುಂಬ ಡಿಸ್ಟರ್ಬ್ ಮಾಡಿದ ಕೃತಿ.ಇತ್ತೀಚೆಗೆ ಶಿವಸುಂದರ್,ಬರಗೂರರ ,ಹರ್ಷಮಂದರ್,ಮುಜಾಫರ್ ಅಸಾದಿಯವರ ಮಾತುಗಳನ್ನು

Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಅಂಕಣ ಬರಹ ಸರಳತೆಯ ಘನತೆ ನಾನು ಭೇಟಿಮಾಡಿದ ಅಪರೂಪದ ವ್ಯಕ್ತಿಗಳಲ್ಲಿ ಬನ್ನೂರು ನಿವಾಸಿ ಅದೀಬ್ ಅಖ್ತರ್ ಅವರೂ ಒಬ್ಬರು. ಅದೀಬರ ಲಘು ಬರೆಹಗಳನ್ನು ಪತ್ರಿಕೆಗಳಲ್ಲಿ ಓದಿದ್ದೆ. ಒಂದು ಲೇಖನದಲ್ಲಿ ಅವರು ತಾನೊಬ್ಬ ಉರ್ದು ಮಾಧ್ಯಮದ ವಿದ್ಯಾರ್ಥಿಯೆಂದೂ, ನಡುಪ್ರಾಯದಲ್ಲಿ ಕನ್ನಡ ಕಲಿತು ಬರೆಯಲು ಆರಂಭಿಸಿದವನೆಂದೂ ಹೇಳಿಕೊಂಡಿದ್ದರು. ಇದು ಕುತೂಹಲ ಹುಟ್ಟಿಸಿತು. ಅವರೂ ನನ್ನನ್ನು ನೋಡಬಯಸಿ ಪತ್ರ ಬರೆದರು. ಅಂಗಡಿ ಬಿಟ್ಟು ಹೋಗಲು ಸಾಧ್ಯವಾಗದೆ ಇರುವುದರಿಂದ ನಾನೇ ಬರಬೇಕೆಂದು ತಿಳಿಸಿದ್ದರು. ಬನ್ನೂರಿಗೆ ಹೋದೆ. ಅದೀಬರ ವಿಳಾಸ ಬಹಳ ಸುಲಭ- ಬಸ್ಸುನಿಲ್ದಾಣ ಎದುರಿನ ಚಪ್ಪಲಿ ಅಂಗಡಿ. ಕುಟುಂಬಕ್ಕೆ ಇದುವೇ ಆಧಾರ. ನಾನು ಅಂಗಡಿಯಲ್ಲಿದ್ದಷ್ಟು ಹೊತ್ತು ಅಲ್ಲಿಗೆ ಯಾವ ಗಿರಾಕಿಗಳು ಬರಲಿಲ್ಲ. ಹೆಚ್ಚಿನ ಜನ ಮೈಸೂರಿಗೆ ಹೋದಾಗ ಚಪ್ಪಲಿ ಕೊಂಡುಕೊಳ್ಳುತ್ತಾರೆ. ನಿಮ್ಮ ಗಿರಾಕಿಗಳು ಯಾರೆಂದು ಕೇಳಿದೆ. ಶಾಲಾ ಮಕ್ಕಳು ಯೂನಿಫಾರಂ ಜತೆಗೆ ಹಾಕಿಕೊಳ್ಳುವ ಬೂಟುಗಳಿಂದ ಕೊಂಚ ವ್ಯಾಪಾರವಾಗುತ್ತೆ ಎಂದರು. ನನಗೆ ಎದ್ದು ಕಂಡಿದ್ದು ಅವರ ಜತೆ ನಾವು ಮಾತಾಡುವಾಗ ಕರುಬುತ್ತ ತಕರಾರು ಮಾಡುತಿದ್ದ ಬೆಕ್ಕು. ಅದೀಬ್ ಅಂಗಡಿಯಲ್ಲಿ ಮಗನನ್ನು ಕೂರಿಸಿ ನನ್ನನ್ನು ಮನೆಗೆ ಕರೆದುಕೊಂಡು ಬಂದರು. ಅದೊಂದು ತೀರ ಚಿಕ್ಕಮನೆ. ಕುರ್ಚಿಯಿಲ್ಲದ ಚಿಕ್ಕ ಹಾಲು. ಅಗತ್ಯಕ್ಕಿಂತ ಹೆಚ್ಚಿನ ಪಾತ್ರೆಯಿರದ ಅಡುಗೆಮನೆ. ಮಂಚವಿಲ್ಲದ ಒಂದು ಮಲಗುಕೋಣೆ. ಕಳ್ಳಹೊಕ್ಕ ಮನೆಯಂತಿದ್ದ ಅಲ್ಲಿ ಬೆಲೆಬಾಳುವ ವಸ್ತುಗಳೇ ಇರಲಿಲ್ಲ. ಅದೀಬ್ ಭಾಷಣಕ್ಕೆ ಹೋದಾಗ ಸಭೆಗಳಲ್ಲಿ ಕೊಡುವ ಕಾಣಿಕೆಗಳನ್ನು ದಾರಿಯಲ್ಲಿ ಸಿಗುವ ಯಾರಿಗಾದರೂ ಕೊಟ್ಟುಬರುತ್ತಾರಂತೆ. ಅವರಿಗೊಮ್ಮೆ ಶಾಲೆಯವರು `ಇದನ್ನು ಯಾರಿಗೂ ದಾನ ಕೊಡಬಾರದು; ಸಂಸ್ಥೆಯ ನೆನಪಿಗೆ ಇಟ್ಟುಕೊಳ್ಳಬೇಕು’ ಎಂದು ಕರಾರು ಮಾಡಿ ಶಾಲು ಹೊದೆಸಿದರಂತೆ. ಅದೀಬ್ ಪ್ರಾರ್ಥನೆಯಲ್ಲಿ ಚೆನ್ನಾಗಿ ಭಾವಗೀತೆ ಹಾಡಿದ ಒಬ್ಬ ಹುಡುಗಿಗೆ ಗುಟ್ಟಾಗಿ ಅದನ್ನು ಕೊಟ್ಟರಂತೆ. ಅವರ ಮಡದಿಯ ಮುಖದಲ್ಲಿ ಪ್ರಸನ್ನತೆಯು ಕಾವೇರಿ ತೀರದ ಮಾಗಿದ ಬತ್ತದ ತೆನೆಯ ಗದ್ದೆಗಳಂತೆ ತೊನೆದಾಡುತ್ತಿತ್ತು. ಇದಕ್ಕೆ ಅವರ ಅಸಂಗ್ರಹ ತತ್ವವೂ ಕಾರಣವಿರಬಹುದು ಎನಿಸಿತು. ಕೂಡಲೇ ನನಗೆ ನಮ್ಮ ಮಧ್ಯಮವವರ್ಗದ ಮನೆಗಳು ನೆನಪಾದವು. ಶಾಪಿಂಗ್ ಮಾಡಲು ತ್ರಾಣವಿಲ್ಲದಿದ್ದರೂ ಕೊಳ್ಳುಬಾಕತನದ ಕೆಟ್ಟಹುಚ್ಚು ಈ ವರ್ಗಕ್ಕೆ. ಓಡಾಡಲು ಜಾಗವಿಲ್ಲದಂತೆ ಹಾಲಿನಲ್ಲಿ ಫರ್ನಿಚರು; ಗೊಂಬೆಗಳೂ ಫಲಕಗಳೂ ತುಂಬಿದ ಶೋಕೇಸು, ಟಿವಿ; ಸೀರೆಭರಿತ ವಾರ್ಡ್‍ರೋಬು; ಎರಡು ತಿಂಗಳು ಪುನರಾವರ್ತನೆ ಮಾಡದೆ ಉಡಬಹುದಾದಷ್ಟು ಪ್ಯಾಂಟು-ಶರ್ಟು ಮೆರೆಯುತ್ತಿರುತ್ತವೆ. ಇಷ್ಟಾದರೂ ಪೇಟೆಗೆ ಪ್ರವಾಸ ಹೋದರೆ, ಶಾಪಿಂಗ್ ಚಟ ಜಾಗೃತವಾಗುತ್ತದೆ. ನಾನು ಮದುವೆಯಾದ ಹೊಸತರಲ್ಲಿ ಬಂಧುಗಳ ಮನೆಯಲ್ಲೊಮ್ಮೆ ಊಟಕ್ಕೆ ಕರೆದಾಗ ವಸತಿ ಮಾಡಿದ್ದು ನೆನಪಾಗುತ್ತಿದೆ. ನಮಗೆ ಬಿಟ್ಟುಕೊಟ್ಟಿದ್ದ ಬೆಡ್‍ರೂಮಿನ ಮೂಲೆಯಲ್ಲಿ ಕುರ್ಚಿ ಟೀಪಾಯಿ ಒಟ್ಟಲಾಗಿತ್ತು. ಅವುಗಳ ಮೇಲೆ ಉಡುಗೊರೆ ಪ್ಯಾಕು, ಟೇಬಲ್‍ಫ್ಯಾನು ಹೇರಲಾಗಿತ್ತು. ಅವು ಯಾವುದೇ ಗಳಿಗೆಯಲ್ಲಿ ಕವುಚಿ ಮೈಮೇಲೆ ಬೀಳುವಂತೆ ಕಂಡು ನನಗೆ ನಿದ್ದೆಯೆ ಹತ್ತಲಿಲ್ಲ. ಹೊಸಸೊಸೆಯ ಜತೆ ಬಂದಿದ್ದ ಹೊಸ ಫರ್ನಿಚರುಗಳು ಹಳತನ್ನು ಮೂಲೆಗುಂಪು ಮಾಡಿದ್ದವು. ಹಪಾಪಿತನ, ವರದಕ್ಷಿಣೆಗಳಿಂದ ಬಹುತೇಕರ ಮನೆಗಳು ಗೋಡೌನಾಗಿರುತ್ತವೆ. ಅಗತ್ಯವಿರದಾಗ ಬೇಡ ಎನ್ನುವ ಸಂಯಮ, ಹೆಚ್ಚಿದ್ದಾಗ ಹಂಚಿಕೊಂಡು ಬದುಕುವ ಖುಶಿಯನ್ನೇ ಮಧ್ಯಮವರ್ಗದ ನಾವು ಕಳೆದುಕೊಂಡಿದ್ದೇವೆ. ಮಾರುಕಟ್ಟೆ ನಮ್ಮನ್ನು ಹುಳಗಳನ್ನಾಗಿ ಮಾಡಿಬಿಟ್ಟಿದೆ. ಮಧ್ಯಮವರ್ಗದ ಈ ಕೊಳ್ಳುಬಾಕುತನವು ಮೇಲ್‍ಮಧ್ಯಮ ವರ್ಗದ ವಿಲಾಸಿ ಬದುಕಿನ ಕರುಣಾಜನಕ ಅನುಕರಣೆಯ ಪರಿಣಾಮ. ಮಾರುಕಟ್ಟೆ ಸಂಸ್ಕøತಿಯ ಉಬ್ಬರದ ಈ ದಿನಮಾನದಲ್ಲಿ, ಶಾಪಿಂಗ್ ಸೋಂಕುರೋಗದಂತೆ ಹರಡುತ್ತಿದೆ. ಪರಿಚಿತರೊಬ್ಬರು `ಕೋನ್ ಬನೇಗಾ ಕಡೋಡ್ ಪತಿ’ ಕಾರ್ಯಕ್ರಮಕ್ಕೆ ಬಚನ್ ಹೊಸಹೊಸ ಕೋಟು ಹಾಕಿಕೊಂಡು ಬರುತ್ತಾನಲ್ಲ, ಅವನಲ್ಲಿ ಎಷ್ಟು ಕೋಟುಗಳಿರಬಹುದು ಎಂದು ವಿಸ್ಮಯಪಡುತ್ತಿದ್ದರು. ಆ ನಟನ ದಿರಿಸು ಸ್ಟುಡಿಯೋದ್ದೂ ಇದ್ದೀತು. ಆತ ತನ್ನ ಕೋಟುಗಳನ್ನು ಇಂಗ್ಲೆಂಡಿನಲ್ಲಿ ಹೊಲಿಸುತ್ತಾನೆಂಬ ದಂತಕತೆಯಿದೆ. ಸಿರಿಯಗುಡ್ಡೆಯ ಮೇಲೆ ಕುಳಿತವರಿಗೆ ಇದು ದೊಡ್ಡ ವಿಚಾರವಲ್ಲ. ವ್ಯಂಗ್ಯವೆಂದರೆ, `ಅಮಿತಾಭ’ ಎನ್ನುವುದು ಅಸಂಗ್ರಹತತ್ವ ಪ್ರತಿಪಾದಿಸಿದ ಬುದ್ಧನ ಹೆಸರುಗಳಲ್ಲಿ ಒಂದು. ನಾನಿದ್ದಷ್ಟೂ ಹೊತ್ತು ಅದೀಬ್ ಬುದ್ಧನ ಬಗ್ಗೆಯೇ ಮಾತಾಡಿದರು. ನಾನು ಹೊರಡುವಾಗ ಭಿಕ್ಷುವೊಬ್ಬರು ಬರೆದ ಚಿಕ್ಕ ಪುಸ್ತಕವನ್ನು ಕಾಣಿಕೆಯಾಗಿ ಕೊಟ್ಟರು. `ಮನುಷ್ಯನ ವೇದನೆಗೆ ಕಾರಣ ಎಲ್ಲಿದೆ?’ ಎಂಬುದನ್ನು ವಿಶ್ಲೇಷಿಸುವ ಬೌದ್ಧ ಚಿಂತನೆಯ ಪುಸ್ತಿಕೆಯದು. ಹತ್ತಿಪ್ಪತ್ತು ಪುಸ್ತಕಗಳಿದ್ದ ಅವರ ಕಪಾಟನ್ನು ಕುತೂಹಲದಿಂದ ನೋಡುತ್ತ ಒಂದು ಪುಸ್ತಕ ತೆರೆದು ಓದಲಾರಂಭಿಸಿದೆ. ಅದನ್ನು ಕಂಡ ಅದೀಬ್ `ನೀವು ಓದಿಲ್ಲವಾದರೆ ತೆಗೆದುಕೊಂಡು ಹೋಗಿ. ನಾನು ಮುಗಿಸಿದ್ದೇನೆ. ನಿಮ್ಮದು ಮುಗಿದ ಮೇಲೆ ಅಗತ್ಯವುಳ್ಳ ಬೇರೆಯವರಿಗೆ ದಾಟಿಸಿ’ ಎಂದು ನನಗೆ ದಾನಮಾಡಿದರು. ಅವರು ಓದಿದ ಮೇಲೆ ಯಾವ ಪುಸ್ತಕವನ್ನೂ ತಮಗಾಗಿ ಇಟ್ಟುಕೊಂಡಂತೆ ಕಾಣಲಿಲ್ಲ. ಕೆಲವು ವರ್ಷಗಳ ಹಿಂದೆ , ನಾವು ಕೆಲವು ಗೆಳೆಯರು ಸೇರಿ ಬೌದ್ಧಚಿಂತಕರನ್ನು ಭೇಟಿಮಾಡುತ್ತ ಕರ್ನಾಟಕ ತಿರುಗಾಡಿದ್ದುಂಟು. ಆಗ ಅದೀಬ್ ಬೌದ್ಧದರ್ಶನದ ಶ್ರೇಷ್ಠ ಮೌಲ್ಯಗಳನ್ನು ಬದುಕುತ್ತಿರುವ ಸಾಧಕರೆಂದು ಗೊತ್ತಿರಲಿಲ್ಲ. ಗೊತ್ತಿದ್ದರೆ ಖಂಡಿತ ಅವರ ಜತೆ ಅರ್ಧದಿನ ಕಳೆಯುತ್ತಿದ್ದೆವು. ಅದೀಬ್ `ಉಂಡು ಉಪವಾಸಿ ಬಳಸಿ ಬ್ರಹ್ಮಚಾರಿ’ತನದಿಂದ ಮನಸ್ಸನ್ನು ಎಷ್ಟು ನಿರಾಳ ಇಟ್ಟುಕೊಂಡಿದ್ದಾರೆ! ಸಂತೃಪ್ತವಾಗಿರುವ ಅವರ ಮುಖ ನೋಡುವಾಗ, ಅದನ್ನು ಅವರು ತಮ್ಮ ಮಡದಿಯಿಂದಲೂ ಪಡೆದಿರಬಹುದು ಅನಿಸಿತು. ಗಾಂಧಿಯ ಬದುಕೂ ಸರಳವಿತ್ತು. ಅವರ ಟೀಕಾಕಾರರು `ಬಾಪು, ನಿಮ್ಮ ಸರಳತೆಗಾಗಿ ಎಷ್ಟೊಂದು ಖರ್ಚು ಮಾಡಲಾಗುತ್ತಿದೆ ಗೊತ್ತೇ?’ ಎಂದು ಕೆಣಕುತ್ತಿದ್ದರು. ಉದ್ಯಮಿಗಳ ಅತಿಥಿ ಗೃಹದಲ್ಲಿ ಉಳಿದುಕೊಳ್ಳುತ್ತಿದ್ದ ಅವರನ್ನು ಛೇಡಿಸುತ್ತಿದ್ದರು. ಭಾಷಣ ಮಾಡುವುದು ಬರೆಯುವುದು ಸುಲಭ. ಸವಾಲಿರುವುದು ಬದುಕುವುದರಲ್ಲಿ. ಬಸವಣ್ಣ ನುಡಿಯ ಚಹರೆಗಳನ್ನು ಮುತ್ತಿನ ಹಾರದಂತೆ ಮಾಣಿಕ್ಯದ ದೀಪ್ತಿಯಂತೆ ಸ್ಫಟಿಕದ ಶಲಾಕೆಯಂತೆ ಇರಬೇಕು ಎಂದೆಲ್ಲ ಪಟ್ಟಿ ಮಾಡುತ್ತಾನೆ. ಕೊನೆಯಲ್ಲಿ ಮಾತಿಗೊಂದು ಶರತ್ತು ವಿಧಿಸುತ್ತಾನೆ- ನುಡಿದಂತೆ ನಡೆಯಲಾಗದಿದ್ದರೆ ವ್ಯರ್ಥ ಎಂದು. ನಾವಾಡಿದ ಮಾತು ನಮಗೇ ಹಗೆಯಾಗದಂತೆ ಬದುಕುವುದು ಬಹಳ ಕಷ್ಟ. ಬದುಕಿದ್ದನ್ನು ಮಾತಿಗೆ ತಾರದೆ ಬದುಕುವುದು ಇನ್ನೂ ದೊಡ್ಡದು. ಅದೀಬರನ್ನು ಭೇಟಿಮಾಡಿ ಬಂದ ಬಳಿಕ ನನ್ನಲ್ಲಿ ಲಜ್ಜೆ ಹುಟ್ಟಿತು. ಅವರ ಬಾಳಿನಲ್ಲಿ ತೋರಿಕೆಯಿರಲಿಲ್ಲ. ಸ್ವಯಂತೃಪ್ತ ಘನತೆಯಿತ್ತು. ಅದನ್ನು ಸರಳತೆಯಲ್ಲಿ ಹುಟ್ಟುವ ಘನತೆ ಎನ್ನಬಹುದು.ಈ ತೃಪ್ತಸ್ಥಿತಿಯಲ್ಲಿ ಲೋಕದ ಆಗುಹೋಗುಗಳಿಗೆ ತಲೆಕೆಡಿಸಿಕೊಳ್ಳದ ನಿರುಮ್ಮಳತೆ ಇರಬಹುದೇ? ತಾನು ಬದುಕದೆ ಊರಿಗೆಲ್ಲ ತತ್ವಸಾರುವುದು ಒಂದು ಮಿತಿ; ಸರಳತೆ ಘನತೆ ಸ್ವಯಂತೃಪ್ತಿಗಳು ಸ್ವಕೇಂದ್ರಿತ ಮನೋಭಾವಕ್ಕೆ ಕಾರಣವಾದರೆ ಇನ್ನೊಂದು ಮಿತಿ. ದೊಡ್ಡಬಾಳು ಮತ್ತೊಂದು ಬಾಳನ್ನು ಸೋಂಕುವ ಅಗತ್ಯವಿದೆ. ಬುದ್ಧನ ಬಾಳು ಕೇವಲ ವಜ್ರಪ್ರಭೆಯಾಗಿರಲಿಲ್ಲ. ಸಂಪರ್ಕಕ್ಕೆ ಬಂದ ದೀಪಗಳನ್ನೂ ಬೆಳಗಿಸಬಲ್ಲ ದೀಪವಾಗಿತ್ತು. ಕರಕುಗಟ್ಟಿದ್ದ ಬತ್ತಿಕುಡಿಯನ್ನು ಸ್ವಚ್ಛಗೊಳಿಸಿಕೊಂಡು ನಾನೂ ದೀಪ ಹತ್ತಿಸಿಕೊಳ್ಳಲು ಯತ್ನಿಸಿದೆ. ಅದು ಉಜ್ವಲಿಸಲಿಲ್ಲ. ಆದರೆ ಮಿಣಿಮಿಣಿಗುಟ್ಟಿತು ****************************

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಕಬ್ಬಿಗರ ಅಬ್ಬಿ -9

ಕಬ್ಬಿಗರ ಅಬ್ಬಿ -8 ಬಂಧ ಮತ್ತು ಸ್ವಾತಂತ್ರ್ಯದ ನಡುವೆ ಹದ ಹುಡುಕುತ್ತಾ. ಶ್ರೀ ಹರಿ ಕೋಟಾದ ರಾಕೆಟ್ ಉಡ್ಡಯನ ಕೇಂದ್ರವದು. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಗಣಕಯಂತ್ರದ ಪರದೆಯೇ ಕಣ್ಣಾಗಿ ಕುಳಿತಿದ್ದಾರೆ. ಮಹಿಳಾ ವಿಜ್ಞಾನಿಯ ಇಂಪಾದ ಮತ್ತು ಅಷ್ಟೇ ಸಾಂದ್ರವಾದ ದನಿಯಿಂದ ನಿಧಾನವಾಗಿ ಮತ್ತು ಖಚಿತವಾಗಿ…ಹತ್ತು..ಒಂಭತ್ತು…ಎಂಟು.. ಹೌದು. ಅದು ಕೌಂಟ್ ಡೌನ್! ಉಪಗ್ರಹದ ಭಾರ ಹೊತ್ತ ರಾಕೆಟ್ ಸಾಕಮ್ಮನ ಮಡಿಲಿಂದ ಎದೆಯುಬ್ಬಿಸಿ ಹಾರಬೇಕು.ಒಂದು….ಸೊನ್ನೆ!!.ಅದೋ ಅದೋ..ಅಧೋಮುಖದಿಂದ ಬೆಂಕಿ ಹೊಗೆ ಚಿಮ್ಮಿತು, ರಾಕೆಟ್ಟು ಜಿಗಿಯಿತು ಅನಂತಕ್ಕೆ. ವ್ಯೋಮಗಮನಕ್ಕೆ ಮೊದಲ ಜಿಗಿತ.ಸಾಕೇ?. ಸಾಲದು!. ಭೂಮಿತಾಯಿಯ ಪ್ರೇಮ ಬಂಧನದಿಂದ ದಾಟಿಹೋಗಲು ಸುಲಭವೇ. ತಾಯಿ ಅವಳು. ಮಗು ಮಡಿಲು ಬಿಟ್ಟು ಹೋಗಲು ಮನಸ್ಸು ಒಪ್ಪಲ್ಲ. ವೇಗ..ಹೆಚ್ಚಿಸಬೇಕು.. ನೇರವಾಗಿ ಹಾರಿದರೆ ವೇಗ ವೃದ್ಧಿಸಲು ಮಾತೆಯ ಕೊಂಡಿ ಕಳಚಲು ಕಷ್ಟ. ಹಾಗೇ ಪ್ರೀತಿಯಿಂದ ಓಡಿ ಒಂದರ್ಧ ಪ್ರದಕ್ಷಿಣೆ ಹಾಕಿ ಭೂಮಿತಾಯಿಯ ಒಲವಿನ ವೃತ್ತಕ್ಕೆ ಹೊರಮುಖಿಯಾಗಿ ಹಾರುತ್ತಾ, ವಿಮೋಚನಾ ವೇಗ( escape velocity) ಪಡೆದು ಹಾರಿದಾಗ..ಅದು ಕೊನೆಯ ಲಂಘನ. ಭೂತಾಯಿಯ ಆಕರ್ಷಣೆಯಿಂದ ಬಿಡುಗಡೆ!ವ್ಯೋಮದಲ್ಲಿ, ನಿರ್ವಾತ! ಹಾರಲು ತಡೆಯೇ ಇಲ್ಲ! ಅಂತಹ ಬಿಡುಗಡೆ ಅದು! ಇನ್ನೊಂದು ಉದಾಹರಣೆ ಕೊಡುವೆ!. ಆಕೆ ಗರ್ಭಿಣಿ. ಅಮ್ಮನಾಗುವ ತವಕ. ದಿನಗಳು ಕಳೆದು ಮಗು ಬೆಳೆದು..ಹೆರಿಗೆ ಆಗದಿದ್ದರೆ?. ಆಗಲೇ ಬೇಕು. ಮಗು ಗರ್ಭದ ಕೋಶದೊಳಗಿಂದ ತಾಯಿ ದೇಹದ ಬಂಧ ಬಿಡಿಸಿ, ಜನ್ಮಿಸಿದಾಗ ಮೊದಲ ಕೆಲಸ, ಹೊಕ್ಕುಳ ಬಳ್ಳಿ ತುಂಡರಿಸುವುದು. ಅದು ಮಗುವಿನ ದೇಹಕ್ಕೆ ಸ್ವತಂತ್ರವಾಗಿ ಎದೆ ಬಡಿಯಲು, ಉಸಿರಾಡಲು ಸಿಗುವ ಸ್ವಾತಂತ್ರ್ಯ. ಸಹಜ ಕ್ರಿಯೆಯಾದರೂ ಸಣ್ಣ ವಿಷಯ ಅಲ್ಲ,ಅದು. ಪಲ್ಲಣ್ಣ ಗಾಳಿಪಟ ಹಾರಿಸ್ತಿದ್ದಾರೆ. ಅದರ ದಾರ ಒಲವು. ಆದರೆ ದಾರವನ್ನು ಗಟ್ಟಿಯಾಗಿ ಹಿಡಿದರೆ ಗಾಳಿಪಟ ಹಾರಲ್ಲ! ದಾರವನ್ನು ಬಿಡಬೇಕು! ಮತ್ತೆ ಹಿಡಿಯಬೇಕು. ಗಾಳಿಪಟ ಒಂದಷ್ಟು ಹಾರಿದಾಗ ಪುನಃ ದಾರವನ್ನು ತನ್ನತ್ತ ಸೆಳೆಯಬೇಕು, ಮತ್ತೆ ಬಿಡಬೇಕು. ಹೀಗೆ ನಿರಂತರವಾಗಿ ಎಳೆದೂ ಬಿಟ್ಟೂ, ಎಳೆದೂ ಬಿಟ್ಟೂ ನೂರಾರು ಬಾರಿ ಮಾಡಿದಾಗ ಗಾಳಿಪಟ ಆಗಸದ ಎತ್ತರದಲ್ಲಿ ಪಟಪಟಿಸಿ ಏರೋಡೈನಮಿಕ್ಸ್ ನ ಪಾಠ ಮಾಡುತ್ತೆ. ಹಕ್ಕಿ ಗೂಡಲ್ಲಿ ಮರಿಗಳಿಗೆ ರೆಕ್ಕೆ ಪುಕ್ಕ ಬಲಿತು ಹಾರುವ ವರೆಗೆ ಅಮ್ಮ ಹಕ್ಕಿ , ಮರಿಕೊಕ್ಕಿನೊಳಗೆ ಕಾಳಿಕ್ಕುತ್ತೆ. ಒಂದು ದಿನ ಅಚಾನಕ್ಕಾಗಿ ಹಕ್ಕಿ ಮರಿ ರೆಕ್ಕೆ ಬೀಸುತ್ತೆ, ಆಗಸಕ್ಕೆ ಹಾರುತ್ತೆ.ಬಂಧ, ಬಂಧನ ಮತ್ತು ಸ್ವಾತಂತ್ರ್ಯ ಇವುಗಳು ಜೀವ ನಿರ್ಜೀವ ಜಗತ್ತಿನ ಚಲನತತ್ವದ ಸಮೀಕರಣಗಳ ಚರಸಂಖ್ಯೆಗಳು. ಹಾಗಿದ್ದರೆ ಪ್ರೀತಿ ಬಂಧನವೇ. ಅಗತ್ಯವೇ ಅನಗತ್ಯವೇ?. ಮೀರಾ ಜೋಶಿಯವರ ಕವನ “ಮರಳು ಗೂಡಿಗೆ” ಇಂತಹ ಒಂದು ಹದ ಹುಡುಕುವ ಪ್ರಯತ್ನ. ಕವಿತೆ ಓದಿದಂತೆ ಅದಕ್ಕೆ ಅಧ್ಯಾತ್ಮಿಕ ದೃಷ್ಟಿಕೋನ ಪ್ರಾಪ್ತವಾಗುವುದು ಕವಿತೆಯ ಇನ್ನೊಂದು ಮುಖ. ಮೊದಲು ಕವಿತೆ ನೋಡೋಣ. ** *** *** ಮರಳು ಗೂಡಿನತ್ತ ಎನ್ನಂಗಳದಲಿ ಮೊಟ್ಟೆಯೊಡೆದುಮರಿಯೊಂದು ಹೊರ ಬಂದಿತ್ತುಕೋಮಲ ನಿಸ್ಸಹಾಯಕಬಯಸಿದರೂ ಹಾರಲಾರದು ಹಾಲುಣಿಸಿ ನೀರುಣಿಸಿಕಾಳುಗಳಕ್ಕರದಿ ತಿನಿಸಿಬೆಳೆಯುವದ ನೋಡುತಲಿದ್ದೆನೋಡಿ ನಲಿಯುತಲಿದ್ದೆ ಪಿಳಿ ಪಿಳಿ ಬಿಡುವ ಕಣ್ಣಿನಲಿಇಣುಕಿದಾ ಮುಗ್ಧತೆಕಂಡಾಗ ಹೃದಯದಲಿಸೂಸಿತು ಮಮತೆ ಬೆಳೆ ಬೆಳೆದಂತೆ ಗರಿಗೆದರಿನನಗೇನೋ ಭಯಹಾರಿಹೋಗುವದೇನೋ ಎಂಬಕಳವಳ ವ್ಯಾಕುಲ ಅಂತೆಯೇ ಪಂಜರದಲಿಟ್ಚೆಎಲ್ಲ ಸುಖವ ಕೊಟ್ಟೆಸದಾ ಕಣ್ಣಿನ ಕಾವಲಿಟ್ಟೆಹಾರದೆಂದು ಸಂಭ್ರಮ ಪಟ್ಚೆಒಂದು ದಿನ ಪ್ರೀತಿಯುಕ್ಕಿ ಅಂಜಲಿಯಲ್ಹಿಡಿದುಮುದ್ದು ಮಾಡುತಲಿದ್ದೆಹೃದಯ ಸಮೀಪದಲ್ಲಿಟ್ಟು ಸುಖಿಸುತಿದ್ದೆಭಾವಾವೇಶದಲಿ ಎಲ್ಲಿಯೋ ನೋಡುತಿದ್ದೆ ಹಕ್ಕಿಯನಿಡಲು ಪಂಜರದಲಿಪ್ರೇಮ ಸೂಸುತ ನೋಡಿದೆ ಕೈಗಳಲಿಅಂಜಲಿ ಯಾವಾಗಲೋ ಸಡಿಲಿಸಿತ್ತುಹಕ್ಕಿ ಗರಿಗೆದರಿ ಹಾರಿ ಹೋಗಿತ್ತು ಅತ್ತಿತ್ತ ಅರಸಿದೆವ್ಯರ್ಥ ನೋಟ ಹರಿಸಿದೆಪಂಜರ ಚಿತೆಯೇರಿತುಇನ್ನೂ ನಿಂತೇ ಇದ್ದೇನೆ ನಿರೀಕ್ಷೆಯಲಿಎಂದಾದರೂ ಮರಳಿ ಬರಬಹುದೇನೋಹೊಸದೊಂದು ಗೂಡಿಗೆ ** *** *** ಈ ಕವಿತೆಯಲ್ಲಿ ಕವಿಯ ಅಂಗಳದಲ್ಲಿ ಅನಾಥ ಮೊಟ್ಟೆ, ಅದು ಮರಿಯಾಗುತ್ತೆ. ಹಕ್ಕಿ ಮರಿ.ಕವಿ ಆ ಮರಿಯನ್ನು ಸಾಕಿ ಸಲಹುತ್ತಾಳೆ.ಕವಿಗೆ ಹಕ್ಕಿಯತ್ತ ಎಷ್ಟು ಪ್ರೇಮ!. ಹಾರಿ ಹೋದರೆ! “ಬೆಳೆ ಬೆಳೆದಂತೆ ಗರಿಗೆದರಿನನಗೇನೋ ಭಯಹಾರಿಹೋಗುವದೇನೋ ಎಂಬಕಳವಳ ವ್ಯಾಕುಲ” ಈ ಕವಿತೆಯಲ್ಲಿ ಕವಿ ಪ್ರಶ್ನಿಸದಿದ್ದರೂ ಮನಕ್ಕೆ ಬರುವ ಪ್ರಶ್ನೆ ..ಹಾರಲು ಬಿಡಬೇಕೇ ಬೇಡವೇ?ಅಂತೂ ಕವಿ ಒಂದು ಪಂಜರ ತಂದು….. “ಅಂತೆಯೇ ಪಂಜರದಲಿಟ್ಚೆಎಲ್ಲ ಸುಖವ ಕೊಟ್ಟೆಸದಾ ಕಣ್ಣಿನ ಕಾವಲಿಟ್ಟೆಹಾರದೆಂದು ಸಂಭ್ರಮ ಪಟ್ಚೆ” ಇಲ್ಲಿರುವ ವಿಪರ್ಯಾಸ ಗಮನಿಸಿ. ಕವಿಗೆ, ಹಕ್ಕಿಯ ಮೇಲೆ ಪ್ರೇಮ. ಹಕ್ಕಿ ಹಾರಿ ಹೋಗುವ,ತನ್ನ ಆಧೀನದಿಂದ ದಾಟಿಹೋಗುವುದನ್ನು ಸುತರಾಂ ಒಪ್ಪಲಾರ. ಆದರೆ ಹಕ್ಕಿ!. ಹಾರಲೇ ಹುಟ್ಟಿದ ಜೀವವದು. ಪಂಜರ ಅದಕ್ಕೆ ಬಂಧನ. ಹಾಗೊಂದು ದಿನ ಬೊಗಸೆಯಲ್ಲಿ ಹಕ್ಕಿ ಹಿಡಿದು ಪ್ರೇಮದಲ್ಲಿ ಮೈಮರೆತಾಗ ಹಕ್ಕಿ ಹಾರಿ ಹೋಗುತ್ತೆ.ಕವಿ ಪಂಜರವನ್ನು ಕಳೆದು ಮುಂದೊಂದು ದಿನ ಹಕ್ಕಿ ಬರಬಹುದೇನೋ ಎಂದು ಕಾಯತ್ತಾನೆ.ಇದಿಷ್ಟು ನೇರವಾದ ಅರ್ಥ. ಇದರೊಳಗೆ ಅಡಕವಾಗಿರುವ ಧರ್ಮ ಸೂಕ್ಷ್ಮವನ್ನು ಗಮನಿಸಿ. ಕವಿಯ ಪಂಜರದೊಳಗೆ ಹಕ್ಕಿ, ಅದು ಕವಿಯ ಪ್ರೇಮ. ಹಕ್ಕಿಗೆ ಅದು ಬಂಧನ. ಹಾಗಿದ್ದರೆ,ಪ್ರೇಮ ಬಂಧನವೇ, ಪ್ರೇಮವಿರಬಾರದೇ?ಸಮಾಜದಲ್ಲಿ ಹಲವಾರು ಅಮ್ಮಂದಿರು, ಮಕ್ಕಳನ್ನು ಅತಿಯಾಗಿ ಪ್ರೀತಿಸಿ ( pampered child), ಮಕ್ಕಳ ಬೆಳವಣಿಗೆ ಆಗದಿರುವ ಸಾಮಾಜಿಕ ಸಮಸ್ಯೆಯನ್ನು ಕವಿ ಎಷ್ಟು ಚಂದ ಕಟ್ಟಿ ಕೊಟ್ಟಿದ್ದಾನೆ. ಹಾಗಿದ್ದರೆ ಪ್ರೇಮ ಎಂದರೆ ಪೂರ್ಣ ಸ್ವಾತಂತ್ರ್ಯವೇ?. ಪೂರ್ಣ ಸ್ವಾತಂತ್ರ್ಯ ಅನುಭವಿಸಿದ ಮಕ್ಕಳು ದಾರಿ ತಪ್ಪಿ ವ್ಯಸನಗಳಿಗೆ ದಾಸರಾದದ್ದೂ ಕಾಣಿಸುತ್ತೆ. ನಾನು ಮೊದಲೇ ಹೇಳಿದ ಗಾಳಿಪಟದ ಉದಾಹರಣೆಯಲ್ಲಿ ಹೇಳಿದ ಹಾಗೆ,ಹಿಡಿದೂ ಬಿಟ್ಟೂ ಪುನಃ ಪುನಃ ಮಾಡಿದಾಗಲೇ ಗಾಳಿಪಟ ಹಾರುತ್ತೆ ಎತ್ತರದಲ್ಲಿ.ಭೂಮಿಯ ಗುರುತ್ವಾಕರ್ಷಣ ಶಕ್ತಿ ಇಲ್ಲದಿದ್ದರೆ ನಮಗೆ ನೆಲದಲ್ಲಿ ನೇರವಾಗಿ ಧೃಡವಾಗಿ ನಿಲ್ಲಲು, ನಿಯಂತ್ರಣದಲ್ಲಿ ಚಲಿಸಲು ಆಗಲ್ಲ. ಗುರುತ್ವಾಕರ್ಷಣ ಶಕ್ತಿ ಅಧಿಕವಾದರೆ ಮಲಗಿದಲ್ಲೇ ಬಂದಿಯಾಗುತ್ತೇವೆ. ಹಾಗೆಯೇ ಪ್ರೇಮದ ಕಾಂತೀಯ ಶಕ್ತಿಯನ್ನು ಅತ್ಯಂತ ವಿವೇಚನೆಯಿಂದ ಪ್ರಯೋಗಿಸುವುದು, ಮಗುವಿನ ಬೆಳವಣಿಗೆಗೆ ಅಗತ್ಯ. ಮಗು ಬೆಳೆದ ಮೇಲೆ ಅದರ ಕಾಲಲ್ಲಿ ನಿಲ್ಲುವ, ರೆಕ್ಕೆ ಬೀಸಿ ಹಾರುವುದರಲ್ಲಿ, ಹಾರಲು ಬಿಡುವುದರಲ್ಲಿ ನಾವೆಲ್ಲರೂ ಸಂಭ್ರಮ ಪಡಬೇಕು ತಾನೇ. ಈಗ ಕವಿತೆಯ ಎರಡನೆಯ ಅರ್ಥಸಾಧ್ಯತೆಗೆ ಬರೋಣ. ” ಎನ್ನಂಗಳದಿ ಮೊಟ್ಟೆಯೊಡೆದು ಮರಿಯೊಂದು ಹೊರ ಬಂದಿತ್ತು” ಅಂಗಳ ಎಂಬ ಪದದ ವ್ಯಾಪ್ತಿ ದೊಡ್ಡದು. ಅದು ಚಿಂತಕನ ಮನದಂಗಳ ಆಗಬಹುದು. ಮನದಂಗಳದಲ್ಲಿ ಮೊಟ್ಟೆಯೊಡೆದುಮರಿ ಹೊರಬರುವುದು ಒಂದು ಹೊಸ ಚಿಂತನೆ, ಐಡಿಯಾ, ಭಾವನೆ, ಕವಿತೆ,ಕನಸು ಆಗಬಹುದು.ಇವಿಷ್ಟನ್ನೂ ಮನಸ್ಸಿನೊಳಗೆ ಬೆಳೆಸುತ್ತೇವೆ. ನಮ್ಮ ಯೋಚನೆಯನ್ನು, ಅತ್ಯಂತ ಪ್ರೀತಿಸುತ್ತೇವೆ. ಅವುಗಳನ್ನು ಸಿದ್ಧಾಂತ ಎಂಬ ಪಂಜರದೊಳಗೆ ಬಂದಿಯಾಗಿಸಿ ಖುಷಿ ಪಡುತ್ತೇವೆ. ಒಂದು ದಿನ ನಂಬಿದ ಸಿದ್ಧಾಂತ ಮುರಿದಾಗ ಚಿಂತನೆಗೆ ಸ್ವಾತಂತ್ರ್ಯ ಸಿಕ್ಕಿ ಅದು ನಾಲ್ಕೂ ದಿಕ್ಕುಗಳಿಗೆ ಹರಿಯುತ್ತೆ. ಇಂತಹ ಸ್ವಸಿದ್ಧಾಂತದೊಳಗೆ ಬಂದಿಯಾದ ಹೊರಬರಲಾರದ ಅದೆಷ್ಟು ಚಿಂತಕರು ನಮ್ಮ ಸುತ್ತುಮುತ್ತಲೂ.ಹಾಗೆ ಬಂದಿಯಾದವರು, ಬೆಳವಣಿಗೆ ಸ್ಶಗಿತವಾಗಿ ಕಾಲಗರ್ಭದೊಳಗೆ ಕಾಣೆಯಾಗುವುದನ್ನೂ ಕಾಣುತ್ತೇವೆ. ಒಮ್ಮೆ ಚಿಂತನೆ ಕವಿತೆಯಾಗಿಯೋ, ಕಲೆಯಾಗಿಯೋ,ಚಿತ್ರವಾಗಿಯೋ ಹೊರಬಂದರೆ ಹಳೆಯ ಪಂಜರದ ಪಳೆಯುಳಿಕೆಗಳನ್ನು ದಹಿಸಿ ಮನಸ್ಸನ್ನು ಹಸಿಯಾಗಿಸಿ, ಇನ್ನೊಂದು ಚಿಂತನೆಯ ಹಕ್ಕಿ ಗೂಡುಕಟ್ಟಲು ಅನುವು ಮಾಡಿಕೊಡಬೇಕು. ಇನ್ನು ಮೂರನೆಯ ಅರ್ಥಕ್ಕೆ ಬರೋಣ. ಕವಿತೆಯ ಶೀರ್ಷಿಕೆ ” ಮರಳು ಗೂಡಿಗೆ”ಮರಳು ಎಂಬುದು ವಾಪಸ್ ಬರುವುದು ಎಂಬ ಸಾಧಾರಣ ಅರ್ಥ, ಮೇಲೆ ಹೇಳಿದ ಎರಡೂ ಇಂಟರ್ಪ್ರಿಟೇಷನ್ ಗಳಿಗೆ ಹೊಂದುತ್ತದೆ.ಆದರೆ ಮರಳು ಗೂಡಿಗೆ ಎಂಬುದು ಮರಳಿನಿಂದ ಮಾಡಿದ ಗೂಡಿಗೆ ಎಂಬ ಅರ್ಥವೂ ಇದೆ ತಾನೇ.‌ಮರಳು ಒದ್ದೆಯಾದಾಗ ಗೂಡು ಮಾಡಿದರೆ ನಿಲ್ಲುತ್ತೆ. ಮರಳಿಂದ ನೀರಿನ ಅಂಶ ಒಣಗಿದಾಗ ಅದು ಕುಸಿಯುತ್ತೆ. ಅಷ್ಟೂ ತಾತ್ಕಾಲಿಕ ಅದು. ನಶ್ವರ ಅದು. ಪುರಂದರ ದಾಸರ ಗಿಳಿಯು ಪಂಜರದೊಳಗಿಲ್ಲ ಎಂಬ ಪದ್ಯದಲ್ಲಿ, ಒಂಭತ್ತು ಬಾಗಿಲ ಮನೆ ಅಂತ ಈ ಪಂಜರವನ್ನು ವರ್ಣಿಸುತ್ತಾರೆ. ಈ ಮರಳು ಮನೆ ಅದೇ ಪಂಜರವೇ?ಪದ್ಯದ ಅಷ್ಟೂ ಸಾಲುಗಳೂ ದೇಹ,ಆತ್ಮವನ್ನು ಸಲಹುವಂತೆಯೇ ಇದೆ. ಕೊನೆಯ ಪ್ಯಾರಾದಲ್ಲಿ, ಗಮನಿಸಿ. “ಪಂಜರ ಚಿತೆಯೇರಿತುಇನ್ನೂ ನಿಂತೇ ಇದ್ದೇನೆ ನಿರೀಕ್ಷೆಯಲಿಎಂದಾದರೂ ಮರಳಿ ಬರಬಹುದೇನೋಹೊಸದೊಂದು ಗೂಡಿಗೆ” ಅಸ್ತಿಪಂಜರ, ಆತ್ಮದ ಹಕ್ಕಿ ಬಿಟ್ಟು ಹೋದಾಗ ಚಿತೆಯೇರುತ್ತೆ. ಆತ್ಮ ಪುನಃ ಹೊಸ ಗೂಡು ಹುಡುಕಿ ಮರಳಿ ಬರುವುದೇ. “ಪುನರಪಿ ಜನನಂ ಪುನರಪಿ ಮರಣಂಪುನರಪಿ ಜನನೇ ಜಠರೇ ಶಯನಂ” ಎಂಬ ಶಂಕರಾಚಾರ್ಯರ ಗೀತೆಯ ಸಾಲುಗಳ ಹಾಗೆ ಆತ್ಮ ಗೂಡಲ್ಲಿ ವಾಸ ಹೂಡುತ್ತೆ. ಗೂಡು ಬಿಟ್ಟು ಹೊಸ ಗೂಡಿಗೆ ವಾಪಸ್ಸಾಗುತ್ತೆ.ಇಲ್ಲಿನ ಗೂಡು,ಮರಳು ಗೂಡು.ನಶ್ವರವೂ ಹೌದು. ಪುನಃ ಪುನಃ ಮರಳಬೇಕಾದ ಗೂಡೂ ಹೌದು. *********************************************** ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

ಕಬ್ಬಿಗರ ಅಬ್ಬಿ -9 Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ಕಾಡು ಸುತ್ತಿಸಿ ನಿಸರ್ಗದ ಪಾಠ ಹೇಳುವ ಕಾನ್ಮನೆಯ ಕಥೆಗಳು                        ನಾನು ಎರಡನೇ ತರಗತಿ ಇದ್ದಿರಬಹುದು. ಅಜ್ಜಿ ಮನೆಯ ಊರಲ್ಲಿ ಬಂಡಿ ಹಬ್ಬ. ಅಂಕೋಲಾ ಹಾಗೂ ಕುಮಟಾದವರು ಏನನ್ನಾದರೂ ಬಿಟ್ಟಾರು. ಆದರೆ ಬಂಡಿ ಹಬ್ಬ ಬಿಡುವುದುಂಟೆ? ಆದರೆ ಬಂಡಿ ಹಬ್ಬದಲ್ಲಿ ದೇವರು ಒಮ್ಮೆ ಕಳಸದ ಮನೆಯಲ್ಲಿ ಕುಳಿತ ನಂತರ ಮತ್ತೆ ಎದ್ದು ಬರೋದು ರಾತ್ರಿಯೇ. ಅದರಲ್ಲೂ ಬಂಡಿ ಆಟ ಮುಗಿಸಿ ತಡವಾಗಿದ್ದ ರಾತ್ರಿಯದು. ನಾವೆಲ್ಲ ನಿಂತ ಅನತಿ ದೂರದಲ್ಲಿ ಒಂದೆಡೆ ಜಾತ್ರೆಯ ತೇರಿನಂತೆ ಮರಕ್ಕೆ ಬಣ್ಣಬಣ್ಣದ ದೀಪ ವಿದ್ಯತ್ ಅಲಂಕಾರ ಮಾಡಿದಂತೆ ಕಾಣಿಸುತ್ತಿತ್ತು. ನನಗೋ ಅದು ಎಂದೂ ನೋಡಿರದ ದೃಶ್ಯ. ಮಾವನ ಮಗಳು ಮಾಲಕ್ಕನ ಬಳಿ ಅಕ್ಕಾ ಏನದು? ಎಂದೆ. ಮಾತನಾಡಿದರೆ ಈ ಧರೆಗಿಳಿದ ಸೌಂದರ್‍ಯ ಕರಗಿ ಹೋಗಬಹುದು ಎನ್ನುವ ಭಯ. ಆದರೆ ಆಕೆಗೆ ಅದು ಮಾಮೂಲು. ‘ಅದಾ ಮಿಂಚು ಹುಳ. ಮಳೆಗಾಲ ಹತ್ತಿರ ಬಂತಲ್ಲ? ಅದಕ್ಕೆ ಮಿಂಚು ಹುಳಗಳು ಮಳೆಗೆ ದಾರಿ ತೋರಸ್ತಾವೆ. ಎಂದಳು. ನನಗೆ ಅಷ್ಟು ದೂರದಿಂದ ಸೂಡಿಯ ಬೆಳಕಲ್ಲಿ ಮೈ ಮೇಲೆ ಬಂದ ದೇವರ ಆರ್ಭಟ ನೋಡುವ ಕುತೂಹಲ ಮುಗಿದು ಹೋಯ್ತು. ಕಣ್ಣೆದುರಿಗೇ ಧರೆಗಿಳಿದ ಅಮರಾವತಿಯನ್ನಿಟ್ಟುಕೊಂಡು, ಮಾತನಾಡಿದರೇ ಥಕಧಿಮಿಗುಡುವ ದೇವರನ್ನೇಕೆ ನೋಡಲು ಹೋಗಲಿ? ಅಂತೂ ದೇವರ ಕಳಸ ನಮ್ಮ ಮುಂದಿನಿಂದ ಧಪಧಪ ಹೆಜ್ಜೆ ಇಡುತ್ತ ಹೋಗುವಾಗ ಕೈ ಹಿಡಿದುಕೊಂಡಿದ್ದ ಮಾಲಕ್ಕ ನನ್ನನ್ನು ಎಳೆದುಕೊಂಡೇ ಹೊರಟಳು ಆದರೆ ನನಗೋ ಆ ಚಿತ್ತಾರ ಬಿಟ್ಟು ಬರುವ ಮನಸ್ಸಿರಲಿಲ್ಲ. ಇಂದಿನಂತೆ ಆಗೇನಾದರೂ ಕೈಯ್ಯಲ್ಲೊಂದು ಮೊಬೈಲ್ ಇದ್ದಿದ್ದರೆ ಅದೆಷ್ಟು ಫೋಟೊ ಹೊಡೆದು ಫೇಸ್‌ಬುಕ್‌ಗೆ ಹಾಕಿ ಏನೇನು ತಲೆಬರೆಹ ಕೊಡುತ್ತ ಎಷ್ಟೊಂದು ಲೈಕ್ ಗಿಟ್ಟಿಸಬಹುದಿತ್ತು ಎಂದು ಈಗಲೂ ಆ ದೃಶ್ಯವನ್ನು ನೆನಪಿಸಿಕೊಳ್ಳುವಾಗಲೆಲ್ಲ   ಅಂದುಕೊಳ್ಳುತ್ತೇನೆ. ಮತ್ತೆ ಆ ದೃಶ್ಯ ಈಗ ಶಿವಾನಂದ ಕಳವೆಯವರ ಕಾನ್ಮನೆಯ ಕಥೆಗಳು ಪುಸ್ತಕ ಓದುವಾಗ ನೆನಪಿಗೆ ಬಂತು.         ಶಿವಾನಂದ ಕಳವೆಯವರ ಕಾನ್ಮನೆಯ ಕಥೆಗಳು ನಮಗೆ ಹಲವಾರು ವಿಷಯಗಳನ್ನು ವಿವರಿಸುತ್ತ ಹೋಗುತ್ತವೆ. ಕಾಡು ಮತ್ತು ಮಾನವನ ಸಂಬಂಧದ ಕುರಿತಾದ ಅದ್ಭುತ ನುಡಿಚಿತ್ರವನ್ನು ನಾವು ಈ ಪುಸ್ತಕದಲ್ಲಿ ಕಾಣಬಹುದು. ‘ಅರೆ ಹೌದಲ್ಲ? ಇದನ್ನು ನೋಡಿದ್ದರೂ ನಾವಿದನ್ನು ಗಮನಿಸಿಯೇ ಇರಲಿಲ್ಲವಲ್ಲ’ ಎಂಬ ಅದೆಷ್ಟೋ ಘಟನೆಗಳು ನಮ್ಮನ್ನು ಅಚ್ಚರಿಯ ಸುಳಿಗಾಳಿಗೆ ಸಿಲುಕಿಸುತ್ತವೆ. ಕಾಗೆಯ ಗೂಡಿಗೆ ಕಲ್ಲು ಹೊಡೆದು ತಿಂಗಳುಗಳಿಂದ ಮನೆಯಿಂದ ಹೊರಗೇ ಬರಲಾರದಂತೆ ಮಾಡಿಕೊಂಡ ಎಡವಷ್ಟು ನಮ್ಮ ಬಾಲ್ಯದಲ್ಲಿ ಅದೆಷ್ಟಿಲ್ಲ?  ಅದೆಷ್ಟೋ ಬೀಜಗಳ ಪೋಷನೆಯನ್ನು ಹೀಗೆ ಮಾಡಿದರೆ ಮಾತ್ರ ಮೊಳಕೆಯೊಡೆಯುತ್ತದೆ ಎನ್ನುವುದನ್ನು ನಮ್ಮ ಹಿರಿಯರು ಹೇಳಿಕೊಟ್ಟಿಲ್ಲ ಹೇಳಿ. ಆದರೂ ನಾವು ಪರಿಸರವನ್ನು ಕೇವಲ ಸಸ್ಯಶಾಸ್ತ್ರೀಯ ಅಧ್ಯಯನಗಳಿಂದಲೇ ತಿಳಿದುಕೊಳ್ಳುವುದಕ್ಕೆ ಹೊರಡುತ್ತೇವೆಯೇ ಹೊರತೂ  ನಮ್ಮ ಜನಪದ ಜ್ಞಾನವನ್ನು ಇದಕ್ಕೆ ಬಳಸಿಕೊಳ್ಳುವುದಿಲ್ಲ ಎಂಬುದಕ್ಕೆ ಅದೆಷ್ಟು ಉದಾಹರಣೆಗಳು ಈ ಪುಸ್ತಕದಲ್ಲಿ ದೊರಕುತ್ತವೆಯೆಂದರೆ ಓದುತ್ತಿದ್ದರೆ ಒಮ್ಮೆ ನಗು, ಇನ್ನೊಮ್ಮೆ ವಿಷಾz, ಮತ್ತೊಮ್ಮೆ ಕೋಪ ಕೆಲವೊಮ್ಮೆ ಎಲ್ಲವೂ ಒತ್ತಟ್ಟಿಗೇ ಒಕ್ಕರಿಸಿಕೊಂಡು ಬರುತ್ತದೆ.                   ನಾವೆಲ್ಲ ಕಹಿ ಎಂದುಕೊಳ್ಳುವ, ವಿಷಕಾರಿ ಎಂದು ದೂರ ಇಡುವ ಕಾಸ್ನ (ಕಾಸರಕ) ಮರದ ವಿಶೇಷಣಗಳ ಬಗ್ಗೆ ಶಿವಾನಂದ ಕಳವೆಯವರು ಹೇಳುವಾಗ ಈ ಮರಕ್ಕೆ ಇಷ್ಟೆಲ್ಲ ಗುಣಗಳಿವೆಯೇ ಎಂದು ಅಚ್ಚರಿಯಾಗದೇ ಇರಲು ಸಾಧ್ಯವೇ ಇಲ್ಲ. ಹೆಂಡ ಇಳಿಸಲು ಬಳಸುವ ಬಗಿನೆ ಮರದ ಬೇರನ್ನು ಅಡಿಕೆಯ ಬದಲಾಗಿ ತಾಂಬೂಲ ಹಾಕಲು ಬಳಸಬಹುದಂತೆ ಎಂಬ ಮಾತಂತೂ ನನಗೆ ಹೊಸದು. ಆಗಾಗ ಹಬ್ಬ ಹಾಗೂ ಮನೆಯ ವಿಶೇಷ ಕಾರ್‍ಯಕ್ರಮಗಳಲ್ಲಿ ಮನೆಯ ಅಡಿಕೆ ಹಾಗೂ ಅದೇ ಮರಕ್ಕೆ ಹಬ್ಬಿದ್ದ ವೀಳ್ಯದೆಲೆಗೆ ಸುಣ್ಣ ಹಚ್ಚಿ ಬಾಯಿ ಕೆಂಪು ಮಾಡಿಕೊಳ್ಳುವ ನೀವು ದುರಾಭ್ಯಾಸವೆಂದರೆ ದುರಭ್ಯಾಸ, ಆರೋಗ್ಯಕರ ಎಂದರೆ ಆರೋಗ್ಯಕರವಾದ ನನ್ನ ಕವಳ ಹಾಕುವ ಚಟ ನೆನಪಿಗೆ ಬಂದು, ಈ ಬಾಡಿಗೆ ಮನೆಯಲ್ಲಿ ಹೊತ್ತಲ್ಲದ ಹೊತ್ತಲ್ಲಿ ಕವಳ ಹಾಕಲಾಗದು ಎಂದು ಪರಿತಪಿಸುವಂತಾಗಿದ್ದು ಸುಳ್ಳಲ್ಲ.    ಅಂದಹಾಗೆ ಕಾಳಿನದಿ ಕಣಿವೆಯ ಶಿವಪುರ ಎಂಬ ಹಳ್ಳಿಯ ಬಾಗಿನಗದ್ದೆಯ ಅಡಕೆ ತೋಟದ ಪಕ್ಕದಲ್ಲಿರುವ ಹಾಲೆ ಮರದಡಿಯಲ್ಲಿ ಇಟ್ಟ ವೀಳ್ಯದ ಎಲೆ ವರ್ಷವಾದರೂ ಬಾಡುವುದಿಲ್ಲವಂತೆ. ಈ ಹಾಲೆ ಮರವನ್ನು ದೇವರ ಮರ ಎಂದು ಪೂಜಿಸುತ್ತಾರೆ ಆ ಭಾಗದವರು. ಆ ಮರದ ಬುಡದಲ್ಲಿ ಎಡೆಯಿಟ್ಟ ವೀಳ್ಯದ ಎಲೆಗಳು ಬೇರು ಬಿಟ್ಟು ಬಳ್ಳಿಗಳಾಗಿ ಆ ಮರಕ್ಕೇ ಹಬ್ಬಿಕೊಂಡಿದೆಯಂತೆ. ದೇವ-ದಾನವರು ಸಮುದ್ರ ಕಡೆದು ಸಿಕ್ಕ ಅಮೃತ ಕುಡಿದ ನಂತರ ಹೆಚ್ಚಾದ ಅಮೃತವನ್ನು ಗಜರಾಜನ ಕಂಬದ ಕೆಳಗಿಟ್ಟಿದ್ದರಂತೆ. ಆದರೆ ಗಜರಾಜ ಮದವೇರಿ ಆ ಅಮೃತದ ಕಲಶವನ್ನು ಒಡೆದನಂತೆ. ಹೀಗಾಗಿ ಆ ಒಡೆದ ಕಲಶ ಒಡೆದಲ್ಲಿ ಅಮೃತ ಚೆಲ್ಲಿ ಬೆಳೆದ ಬಳ್ಳಿಯೇ ನಾಗವಲ್ಲಿ ಅಂದರೆ ವೀಳ್ಯದ ಎಲೆ ಬಳ್ಳಿಗಳಂತೆ. ಅಂತೂ ಕವಳ ತಿನ್ನುವ ನನ್ನ ರೂಢಿ ಕೆಟ್ಟದ್ದಲ್ಲ ಎಂದು ಸಿಕ್ಕಾಗಲೆಲ್ಲ ಕವಳ ಹಾಕಿಯೇ ಮಾತಿಗೆ ತೊಡಗುವ ಶಿವಾನಂದ ಹೆಗಡೆಯವರು ಹೇಳಿ ನನ್ನ ದುಗುಡ ಕಡಿಮೆ ಮಾಡಿದ್ದಾರಾದರೂ ಹಾಲೆಮರ ಎಂದು ಕರೆಯಿಸಿಕೊಳ್ಳುವ ಸಪ್ತಪರ್ಣಿಯನ್ನು ಕಡಿದು ಆ ಮನೆತನವೇ ಊರು ಬಿಟ್ಟಿದ್ದು, ಅಲ್ಲಿನ ವೀಳ್ಯದ ಬಳ್ಳಿಗಳೂ ಒಣಗಿ ಹೋಗಿದ್ದನ್ನು ಹೇಳಿ ಒಂದಿಷ್ಟು ಚಿಂತೆಯನ್ನೂ ಜೊತೆಗೆ ಅದ್ಯಾವ ಕಾರಣಕ್ಕೆ ಹಾಗೆ ಆಗಿರಬಹುದು ಎನ್ನುವ ಕುತೂಹಲ ಮೂಡಿಸಿದ್ದಾರೆ. ನನ್ನ ಮುಂದಿನ ಕಾಡಿನ ವಾಸ ಕಂಡಿತಾ ಶಿಪುರದ ಸಮೀಪಕ್ಕೆ ನನ್ನನ್ನು ಕೊಂಡೊಯ್ಯಬಹುದು. ಯಾಕೆಂದರೆ ಈ ಹಾಲೆ ಮರದ ತೊಗಟೆಯನ್ನು ತಂದು ಕುದಿಸಿ ದೀಪಾವಳಿಯ ದಿನ ಬೆಳ್ಳಂಬೆಳಿಗ್ಗೆ ಮೈ ತುಂಬ ಅರಶಿಣ ಎಣ್ಣೆ ಲೇಪಿಸಿಕೊಂಡು ಹಾಲೆ ಕಷಾಯ ಕುಡಿಯುವ ಸಂಪ್ರದಾಯ ನಮ್ಮ ಜನಾಂಗದಲ್ಲಿದೆ. ಹೀಗಾಗಿ ಹಾಲೆ ಮರದ ತೊಗಟೆ ತೆಗೆಯುವ ಈ ಶತಮಾನಗಳ ಆಚರಣೆಯ ಬಗ್ಗೆ ಒಂದಿಷ್ಟು ಭಯವೂ ಹುಟ್ಟಿಕೊಂಡಿದೆ.    ನಾನು ಹಿಂದೆ ಬಾಡಿಗೆಗೆ ಇದ್ದ ಮನೆಯ ಎರಡು ಮನೆಗಳ ಆಚೆ ಒಂದು ವೃದ್ಧ ಜೋಡಿಯಿತ್ತು. ಆತ ಸೈನ್ಯದಲ್ಲಿದ್ದು ನಿವೃತ್ತಿ ಹೊಂದಿದವರು. ಹೀಗಾಗಿ ತೀರಾ ಕಟ್ಟುನಿಟ್ಟು. ಯಾರೊಡನೆಯೂ ಹೆಚ್ಚಿನ ಮಾತಿಲ್ಲ. ಅಷ್ಟು ದೊಡ್ಡ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇರುತ್ತಿದ್ದುದು. ಬೆಳಿಗ್ಗೆ ನಾನು ಶಾಲೆಗೆ ಹೋಗುವಾಗ ಇಬ್ಬರೂ ಮನೆಯ ಅಂಗಳದಲ್ಲಿ ಖುರ್ಚಿ ಹಾಕಿಕೊಂಡು ಎದುರಿಗೆ ಬಿದ್ದ ದೊಡ್ಡ ಬಯಲನ್ನು ನೋಡುತ್ತ ಕುಳಿತಿರುತ್ತಿದ್ದರು. ಸಂಜೆ ಬಂದಾಗಲೂ ಬಹುತೇಕ ಅಲ್ಲಿಯೇ ಇರುತ್ತಿದ್ದರು. ಅಥವಾ ಆತ ಅಲ್ಲೇ ಅಂಗಳದಲ್ಲಿ ವಾಕ್ ಮಾಡುತ್ತಿದ್ದರೆ ಹೆಂಡತಿ ಅದೇ ಭಂಗಿಯಲ್ಲಿ ಕುಳಿತಿರುತ್ತಿದ್ದರು. ಕೆಲವೊಮ್ಮೆ ಮಧ್ಯಾಹ್ನ ಊಟಕ್ಕೆಂದು ನಾನು ಮನೆಗೆ ಬಂದಾಗಲೂ ಅವರು ಅಲ್ಲಿಯೇ. ಇವರಿಬ್ಬರು ಅಡುಗೆ, ಊಟ ಏನಾದರೂ ಮಾಡ್ತಾರೋ ಇಲ್ಲವೋ ಎಂಬ ಅನುಮಾನ ಆಗುತ್ತಿತ್ತು ಆಗಾಗ. ಆದರೆ ಅಕ್ಟೋಬರ್ ರಜೆ ಮುಗಿಸಿ ನಾನು ಶಾಲೆಗೆ ಹೋಗುವ ಹೊತ್ತಿನಲ್ಲಿ ಅವರಿಬ್ಬರಲ್ಲೂ ಅದೆಂಥಹ ಬದಲಾವಣೆಯಾಗುತ್ತಿತ್ತು ಎಂದರೆ ಅವರ ಮನೆಯ ಮುಂದಿನ ಜಾಗ ರಸ್ತೆಯೋ ಪಕ್ಷಿ ಸಾಕಾಣಿಕಾ ಕೇಂದ್ರವೋ ಎನ್ನುವ ಅನುಮಾನ ಹುಟ್ಟಿಸಿಬಿಡುತ್ತಿತ್ತು. ಮನೆಯ ಮುಂದೆ ದೊಡ್ಡ, ಅಗಲವಾದ ನೀರಿನ ಮಡಕೆಯೊಂದನ್ನು ಇಡುತ್ತಿದ್ದರು. ನೀರು ಕುಡಿಯಲು ಹಕ್ಕಿಗಳ ದಂಡೇ ಆಗಮಿಸುತ್ತಿತ್ತು. ನವೆಂಬರ ತಿಂಗಳ ಮುಸುಗುಡುವ ಚಳಿಯಲ್ಲಿ ನಾನು ಏಳಲಾಗದೇ ಎದ್ದು ವಾಕಿಂಗ್ ಹೋಗುವಾಗ ಆ ನೀರಿನ ಮಡಿಕೆಯ ಎದುರು ನಾಲ್ಕಾರು ನವಿಲುಗಳೂ ಇರುತ್ತಿದ್ದವು. ಶಿವಾನಂದ ಕಳೆಯವರ ಪುಸ್ತಕದಲ್ಲಿ ಹೀಗೆ ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗಾಗಿ ನೀರನ್ನಿಡುವ ಪ್ರಸ್ತಾಪ ಹಲವಾರು ಸಾರಿ ಓದಿದಾಗ ನನಗೆ ನೆನಪಾಗಿದ್ದು ಅದೇ ವೃದ್ಧ ದಂಪತಿಗಳು.ಆ ಹಕ್ಕಿಗಳನ್ನು ನೋಡುತ್ತ ಅವರು ಪರವಶರಾಗುತ್ತಿದ್ದುದು ನನಗೀಗಲೂ ನೆನಪಿದೆ. ಕಾಲು ನೋವಿನಿಂದ ಒದ್ದಾಡುತ್ತ ಕುಳಿತಲ್ಲಿಂದ ಎದ್ದು ಓಡಾಡಲು ಹರಸಾಹಸ ಪಡುತ್ತಿದ್ದ ಆಕೆಯಂತೂ ಮಡಿಕೆಯಲ್ಲಿ ನೀರು ಒಂದಿಷ್ಟು ಖಾಲಿಯಾದರೂ ಸಾಕು ಬೇಗ ಬೇಗ ನೀರು ತಂದು ಹಾಕುತ್ತಿದ್ದರು. ಮೊಮ್ಮಕ್ಕಳು ಬಂದಾಗಲೂ ಆಕೆ ಹೀಗೆ ಓಡಾಡಿದ್ದನ್ನು ನಾನು ನೋಡಿರಲಿಲ್ಲ.  ಬಾವಿಗೆ ಬಿದ್ದ ಚಿರತೆಯನ್ನು ಎತ್ತಿದ ಪ್ರಸಂಗ, ಹಾಗೂ ಅದೇ ಸಮಯದಲ್ಲಿ ಮೂರನೇ ತರಗತಿಯನ್ನೂ ಕಲಿಯದ ಹಿರಿಯೊಬ್ಬರು ಹೇಳಿದ ಪರಿಸರ ಪಾಠವನ್ನು ನಿಜಕ್ಕೂ ಎಲ್ಲರೂ ಅರ್ಥ ಮಾಡಿಕೊಳ್ಳುವಂತಿದ್ದರೆ ಬಹುಶಃ ನಾವಿಂದು ಪ್ರಾಣಿಗಳನ್ನು ರಕ್ಷಿಸಿ ಎಂಬ ಸ್ಲೋಗನ್‌ಗಳನ್ನು ಹಿಡಿದು ನಮ್ಮ ಶಾಲಾ ಮಕ್ಕಳನ್ನು ಮೆರವಣಿಗೆ ಹೊರಡಿಸುವ ಅಗತ್ಯವಿರಲಿಲ್ಲ.    ನನ್ನ ಆತ್ಮೀಯ ಗೆಳೆಯನೊಬ್ಬನಿಗೆ ಬದನೆ ಕಾಯಿ, ಬಟಾಟೆ ಬೆಂಡೆಕಾಯಿಗಳನ್ನು ತಿಂದರೆ ಮೈಯ್ಯೆಲ್ಲ ಚಿಕ್ಕ ಚಿಕ್ಕ ಗುಳ್ಳೆ ಎದ್ದು ತುರಿಕೆ ಪ್ರಾರಂಭವಾಗುತ್ತದೆ. ನಾವು ಬೆಂಡೆಗೆ, ಬದನೆಗೆ ಹಾಗೂ ಅತೀವ ತುರಿಕೆ ಹುಟ್ಟಿಸುವ ಕೆಸುವಿನ ಎಲೆ, ಗಡ್ಡೆಯ ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷ್ಯಗಳಿಗೆ, ಸುವರ್ಣ ಗಡ್ಡೆ ಎನ್ನುವ ಅತ್ಯಪೂರ್ವ ಗಡ್ಡೆಗೆ ನಮ್ಮದೇ ಆದ ವಾಟೆಹುಳಿ ಬೆರೆಸುತ್ತೇವೆ, ಮೊನ್ನೆ ‘ಬೆಂಡೆಗೆ ಮುರುಗಲು ಹುಳಿಯನ್ನೇ ಹಾಕು ಅದರ ಲೋಳೆ ಕಡಿಮೆಯಾಗಿ ತುರಿಕೆ ಇರುವುದಿಲ್ಲ’ ಎಂದು ಅಮ್ಮ ಹೇಳುತ್ತಿದ್ದರು. ಇದನ್ನೇ ನಾನು ನನ್ನ ಸ್ನೇಹಿತನಿಗೂ ಹೇಳುತ್ತಿದ್ದೆ. ಕೋಕಂ ಸಿಪ್ಪೆ ಇಟ್ಕೋಬೇಕು. ತುರಿಕೆ ಆದಾಗಲೆಲ್ಲ ನೀರಲ್ಲಿ ಹಿಚುಕಿ ಆ ನೀರು ಕುಡಿದು ಅದರ ಸಿಪ್ಪೆಯನ್ನು ತುರಿಕೆ ಎದ್ದ ಚರ್ಮಕ್ಕೆ ತಿಕ್ಕಿದರೆ ನಾವು ಪೈಥಿ ಎನ್ನುವ ಗುಳ್ಳೆ ಏಳುವ ಈ ತರಹದ ಅಲರ್ಜಿ ಕಡಿಮೆಯಾಗುತ್ತದೆಯೆಂದು. ಬಯಲು ಸೀಮೆಯ ಆತನಿಗೆ ನಾವು ಮುರುಗಲು ಅಥವಾ ಪುನಿರ್‌ಪುಳಿ ಎಂದು ಕರೆಯುವ ಕೋಕಂನ ಪರಿಚಯವಿಲ್ಲ. ಹೀಗಾಗಿ ಅದರ ಬಳಕೆಗೂ ಹಿಂದೇಟು ಹಾಕುವುದು ಸಹಜವೇ.  ಕಾಡು ಕಲಿಕೆಗೆ ನೂರಾರು ದಾರಿಗಳು ಲೇಖನ ನನ್ನ ಈ ಔಷಧಿಯ ಹುಳಿಯ ನಿಜಾಯತಿಯನ್ನು ಸಿದ್ಧಪಡಿಸಿದ್ದಕ್ಕಾಗಿ ಖುಷಿಯಾಯಿತು. ಕೆಸುವಿನ ಎಲೆ ತಿಂದು ತುರಿಕೆಯ  ಕಾರಣದಿಂದಾಗಿ ಅರ್ಧ ನಾಲಿಗೆ ಹೊರಚಾಚಿ ಉಸಿರಾಟಕ್ಕೆ ಸಂಕಷ್ಟ ಪಡುತ್ತಿದ್ದ ಆಕಳ ಕರುವಿಗೂ ಹೂಳಿ ತಿನ್ನಿಸಿ ಬದುಕಿಸಿದ ಕಥೆಯಿದೆ. ಸನೈಡ್‌ನಷ್ಟು ತೀಕ್ಷ್ಣವಾದ ವಿಷದ ನೀರು ಬಿಡುವ ಕಳಲೆಯನ್ನೂ ಆಹಾರ ಯೋಗ್ಯವನ್ನಾಗಿ ಮಾಡಿಕೊಂಡಿರುವ ಹಳ್ಳಿಗರ ವೈಶಿಷ್ಟ್ಯತೆಯನ್ನು ಕಳವೆಯವರು ವಿವರಿಸುತ್ತ ಯಾವ ಪಾಕತಜ್ಞರಾಗಲಿ, ವಿಜ್ಞಾನಿಗಳಾಗಲಿ ವಿವರಿಸಿದ ಪಾಠ ಇದಲ್ಲ ಎನ್ನುತ್ತಾರೆ. ಇಂತಹುದ್ದೇ ಉಪ್ಪಾಗೆ ಹುಳಿಗೆ ಒಂದು ಕಾಲದಲ್ಲಿ ಕೆಜಿಗೆ ಐನೂರು, ಆರು ನೂರು ರೂಪಾಯಿಗಳಾಗಿ, ಒಂದು ಹಂತದಲ್ಲಿ ಸಾವಿರ ರೂಪಾಯಿಯವರೆಗೂ ಹೋಗಿದ್ದನ್ನು ಚಿಕ್ಕಂದಿನಲ್ಲಿ ಗಮನಿಸಿದ್ದೇನೆ. ಉಪ್ಪಾಗೆ ಕಾಯನ್ನಷ್ಟೇ ಕೊಯ್ಯುವ ಬದಲು, ರೆಂಬೆಕೊಂಬೆಗಳನ್ನೆಲ್ಲ ಕಡಿದು, ಉಪ್ಪಾಗೆ ಸಸ್ಯದ ಅವನತಿಗೆ ಕಾರಣವಾಗಿದ್ದೂ ಗೊತ್ತಿದೆ. ಇಂದಿಗೂ ದೇಹದ ಉಷ್ಣತೆಗೆ, ಕೈಕಾಲು ಬಿರುಕಿಗೆ ಬಳಸುವ ಮುರುಗಲು ತುಪ್ಪ ಹಾಗೂ ದೇಹದ ತೂಕ ಇಳಿಸುತ್ತದೆಯೆಂದು ನಾನು ಹುಡುಕುತ್ತಿರುವ ಉಪ್ಪಾಗೆ ತುಪ್ಪ ಈಗ ಅಪರೂಪದ ವಸ್ತುವಾಗಿದೆ ನಮ್ಮ ಆಧುನಿಕತೆಯಿಂದಾಗಿ.         ಶಿವಾನಂದ ಕಳವೆಯವರ ಜಲಜಾಗ್ರತಿ ನಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಕೆರೆಗಳ ಸಂರಕ್ಷಣೆಗಾಗಿ ಇಡೀ ಕರ್ನಾಟಕದಾದ್ಯಂತ ಓಡಾಡಿ ಅನೇಕ ಕೆರೆಗಳ ಪುನರುತ್ಥಾನ ಮಾಡಿದ್ದು ಗೊತ್ತಿದೆ. ಇಲ್ಲಿ ಜಲಜಾಗ್ರತಿಯ ಬಗ್ಗೆ ಹೇಳಿದ್ದಾರೆ, ಪರಿಸರದ ಕುರಿತಾಗಿ ಭಾಷಣ ಮಾಡಿ, ಕ್ವಿಜ್ ಏರ್ಪಡಿಸಿ, ಸೆಮಿನಾರ್‌ಗಳನ್ನು ಮಾಡುವ ಬದಲು ಒಂದಿಷ್ಟು ಗಿಡನೆಟ್ಟು ಬೆಳೆಸಬೇಕಾದ ಅನಿವಾರ್‍ಯತೆಯನ್ನು ಒತ್ತಿ ಹೇಳಿದ್ದಾರೆ. ಓಡುವ ಮಳೆ ನೀರನ್ನು ನಿಲ್ಲಿಸಿದರೆ ಅದು ಕಾಡಿನ ಬಣ್ಣವನ್ನು ಹಚ್ಚಹಸಿರಾಗಿಸುವ, ಬಣ್ಣ ಬಣ್ಣದ ಹೂಗಳಿಂದ ಶೃಂಗರಿಸುವ ಪರಿಯನ್ನು ವಿವರಿಸಿದ್ದಾರೆ. ಮುಂಡುಗೋಡದ ಪಾಳಾ ಎಂಬ ಬಯಲಿನಲ್ಲಿ ಮಾವಿನ ತೋಟ ಮಾಡಿಸಿದ ಅಪ್ಪಾರಾಯರ ಬಗ್ಗೆ ಹೇಳಿ ಗಿಡ ಬೆಳೆಸುವುದು ನಮ್ಮೆಲ್ಲರ ಕಾಯಕವಾಗಬೇಕು

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಗೂಡಂಗಡಿಯ ತಿರುವು ಬದುಕು ಎನ್ನುವುದು ಕುದಿಯುತ್ತಿರುವ ಹಾಲಿನಂತೆ. ಚೆಲ್ಲಿಹೋಗದಂತೆ ಕಾಪಾಡುವುದು ಬೆಂಕಿಯ ಕರ್ತವ್ಯವೋ, ಪಾತ್ರೆಯ ಜವಾಬ್ದಾರಿಯೋ ಅಥವಾ ಮನೆಯೊಡತಿಯ ಉಸ್ತುವಾರಿಯೋ ಎಂದು ಯೋಚಿಸುವುದು ನಿರರ್ಥಕವಾದೀತು! ಕುದಿಯುವುದು ಹಾಲಿನ ಕರ್ತವ್ಯವಾದರೆ, ಆ ಕ್ರಿಯೆ ಅಪೂರ್ಣವಾಗದಂತೆ ಮುತುವರ್ಜಿ ವಹಿಸುವುದು ಮಹತ್ತರವೆನ್ನಬಹುದಾದಂತಹ ಕೆಲಸ. ಬದುಕು ಎನ್ನುವ ಕಾಯಕ ಪರಿಪೂರ್ಣವಾಗುವುದೇ ಅದಕ್ಕೆ ಸಂಬಂಧಪಟ್ಟ ಕ್ರಿಯೆ-ಪ್ರಕ್ರಿಯೆಗಳ ನಿರಂತರತೆಯಲ್ಲಿ. ಮಣ್ಣಿನ ಒಡಲಿನಲ್ಲಿ ಬೇರು ಬಿಡುವ ಬೀಜ ಬೆಳಕಿನಾಶ್ರಯದಲ್ಲಿ ಕುಡಿಯೊಡೆವ ಕ್ಷಣದಲ್ಲಿ ಸದ್ದಿಲ್ಲದೆ ಬಿದ್ದ ಮಳೆಹನಿಯೊಂದು ಜೀವಜಲವಾಗಿ ಹರಿದು ಚಂದದ ಹೂವನ್ನರಳಿಸುತ್ತದೆ; ಎಲ್ಲಿಂದಲೋ ಹಾರಿಬಂದ ಬಣ್ಣದ ರೆಕ್ಕೆಗಳ ಪಾತರಗಿತ್ತಿಯೊಂದು ಅರಳಿದ ಹೂವಿನ ಮೇಲೆ ಕುಳಿತು ಬಿಸಿಲುಕಾಯಿಸುತ್ತದೆ. ಹೀಗೆ ಬದುಕು ಎನ್ನುವುದು ಒಮ್ಮೆ ಕುದಿಯುತ್ತ, ಮರುಕ್ಷಣ ಚಿಗುರುತ್ತ, ಮತ್ತೊಮ್ಮೆ ಮುಕ್ತ ಛಂದಸ್ಸಿನ ಕವಿತೆಯಾಗಿ ನಮ್ಮೆದುರು ತೆರೆದುಕೊಳ್ಳುತ್ತದೆ.           ಬದುಕು ಚಿಗುರೊಡೆಯುವುದೇ ಅದು ಕಟ್ಟಿಕೊಡುತ್ತ ಹೋಗುವ ಚಿಕ್ಕಪುಟ್ಟ ಖುಷಿ-ನೆಮ್ಮದಿಗಳ ಕಾಂಪೌಂಡಿನ ಸಹಯೋಗದಲ್ಲಿ. ಬೆಳಗ್ಗೆ ಕಣ್ಣುಬಿಟ್ಟಾಗ ಅಡುಗೆಮನೆಯ ಪುಟ್ಟ ಡಬ್ಬದಲ್ಲಿ ಬೆಚ್ಚಗೆ ಕುಳಿತಿರುವ ಕಾಫಿಪುಡಿ-ಸಕ್ಕರೆಗಳೇ ಇಡೀದಿನದ ಸಂತೋಷವನ್ನು ಸಲಹಲು ಸಾಕಾಗಬಹುದು; ಮಧ್ಯಾಹ್ನದ ಬಿಸಿಲಿಗೊಂದು ತಣ್ಣನೆಯ ತಿಳಿಮಜ್ಜಿಗೆಯ ಗ್ಲಾಸು ದೊರಕಿ ನೆಮ್ಮದಿಯ ನಗುವನ್ನು ಅರಳಿಸಬಹುದು; ರಸ್ತೆಯಂಚಿನ ಹೊಂಗೆಮರದಲ್ಲೊಂದು ಹಕ್ಕಿ ಅದ್ಯಾವುದೋ ಅಪರಿಚಿತ ರಾಗದಲ್ಲಿ ಹಾಡುತ್ತ ಹೃದಯದಲ್ಲೊಂದು ಪ್ರೇಮರಾಗವನ್ನು ಹುಟ್ಟಿಸಿ ಮುದ ನೀಡಬಹುದು; ಪಕ್ಕದ ಮನೆಯ ಟೆರೇಸಿನಲ್ಲೊಬ್ಬಳು ಪುಟ್ಟ ಪೋರಿ ಕಷ್ಟಪಟ್ಟು ಗಾಳಿಪಟವನ್ನು ಹಾರಿಸುತ್ತ ಬಾಲ್ಯದ ನೆನಪುಗಳಿಗೊಂದು ರೆಕ್ಕೆ ಕಟ್ಟಿಕೊಡಬಹುದು; ಶಾಲೆ ಮುಗಿಯುತ್ತಿದ್ದಂತೆಯೇ  ತಳ್ಳುಗಾಡಿಯಲ್ಲಿ ನಗುನಗುತ್ತ ಕೊತ್ತಂಬರಿಸೊಪ್ಪು ಮಾರುವ ಪುಟ್ಟ ಹುಡುಗ ಸುಖ-ನೆಮ್ಮದಿಗಳ ಪರಿಕಲ್ಪನೆಯನ್ನೇ ಬದಲಾಯಿಸಬಹುದು. ಹೀಗೆ ನೋಟಕ್ಕೆ ದಕ್ಕುವ, ದಕ್ಕದೆಯೂ ತಾಕುವ ಸರಳವೆನ್ನಿಸುವ ಸಂಗತಿಗಳೇ ಒಟ್ಟಾಗಿ ಬದುಕು ಎನ್ನುವ ಬಹುದೊಡ್ಡ ಭಾರವನ್ನು ಹಗುರಗೊಳಿಸುತ್ತ, ಸಹ್ಯವಾಗಿಸುತ್ತ ಸಾಗುತ್ತವೆ.           ಬದುಕಿನ ಭಾರವನ್ನು ಇಳಿಸುತ್ತ ಹೋಗುವ ಕ್ರಿಯೆಯಲ್ಲಿ ಹುಟ್ಟಿಕೊಳ್ಳುವ ಅನುಭವಗಳೆಲ್ಲವೂ ಸುಂದರವೆನ್ನಿಸುವುದು ಅವು ನಮ್ಮದಾಗುತ್ತ ಹೋಗುವ ಗಳಿಗೆಗಳಲ್ಲಿ. ಚಳಿಗಾಲದ ಮುಂಜಾವಿನಲ್ಲಿ ರಸ್ತೆಬದಿಯ ಚಹದಂಗಡಿಯ ಎದುರು ನಿಂತು ಅಂಗೈಗಳನ್ನು ಉಜ್ಜಿಕೊಳ್ಳುತ್ತ, ಉಸಿರು ಬಿಗಿಹಿಡಿದು ಚಹಕ್ಕಾಗಿ ಕಾದು ನಿಂತವರನ್ನು ನೋಡುವುದೇ ಒಂದು ಸುಂದರವಾದ ಅನುಭವ. ಆ ಕ್ಷಣದ ಅವರೆಲ್ಲರ ಬದುಕು ಒಲೆಯ ಮೇಲಿನ ನೀರಿನ ಪಾತ್ರೆಯಲ್ಲಿ ಕುದಿಯುತ್ತಿರುವ ಟೀ ಪೌಡರಿನಂತೆ ಚಡಪಡಿಸುತ್ತದೆ. ರಾತ್ರಿ ಬಿದ್ದ ಕೆಟ್ಟ ಕನಸಾಗಲೀ, ಕ್ಲೈಂಟ್ ಮೀಟಿಂಗ್ ಶುರುವಾಗುವುದರೊಳಗೆ ಆಫೀಸು ಸೇರಬೇಕಾದ ಗಡಿಬಿಡಿಯಾಗಲೀ, ತಪ್ಪದೇ ತಪಾಸಣೆ ಬಯಸುವ ಸಕ್ಕರೆ ಕಾಯಿಲೆಯಾಗಲೀ, ಮಗನನ್ನು ಟ್ಯೂಷನ್ ಕ್ಲಾಸಿಗೆ ಮುಟ್ಟಿಸುವ ಧಾವಂತವಾಗಲೀ ಯಾವುದೂ ಅವರ ಆ ಕ್ಷಣದ ಬದುಕನ್ನು ಬಾಧಿಸುವುದಿಲ್ಲ. ಕದ್ದು ಸಿಗರೇಟು ಸೇದಲು ಕಲಿತ ಕಾಲೇಜು ಓದುತ್ತಿರುವ ಹುಡುಗನಿಂದ ಹಿಡಿದು ರಿಟೈರಮೆಂಟಿನ ಸುಖವನ್ನು ಅನುಭವಿಸುತ್ತಿರುವ ಗೆಳೆಯರ ಗುಂಪಿನವರೆಗೆ ಎಲ್ಲರ ದೃಷ್ಟಿಯೂ ಒಲೆಯ ಮೇಲಿನ ಪಾತ್ರೆಯ ಮೇಲೆ ಕೇಂದ್ರೀಕೃತವಾಗಿ, ಅವರೆಲ್ಲರ ಬದುಕು ಒಂದೇ ಆಗಿಬಿಡುವ ಅನುಭವವನ್ನು ಚಹಾದ ಪಾತ್ರೆ ಒದಗಿಸುತ್ತದೆ. ಆ ಗೂಡಂಗಡಿಯ ಬದುಕಿನ ವ್ಯಾಪಾರದಲ್ಲಿ ಅಪ್ಪ ಕೊಟ್ಟ ಪಾಕೆಟ್ ಮನಿಗೂ, ದಿನಗೂಲಿಯ ಮುದ್ದೆಯಾದ ನೋಟಿಗೂ, ನಾಲ್ಕಂತಸ್ತಿನ ಮನೆಯ ನೆಮ್ಮದಿಯ ಹಣಕಾಸಿನ ವ್ಯವಹಾರಕ್ಕೂ ಯಾವ ವ್ಯತ್ಯಾಸವೂ ಇರುವುದಿಲ್ಲ; ಕಾದು ನಿಂತವರೆಲ್ಲರಿಗೂ ಒಂದೇ ಬಣ್ಣ-ರುಚಿಗಳ ಚಹಾದ ಪೂರೈಕೆಯಾಗುತ್ತದೆ.           ಬದುಕಿನ ವ್ಯಾಪಾರಗಳೆಲ್ಲವೂ ಹಾಗೆಯೇ! ಬೆಳಗಾಗುತ್ತಿದ್ದಂತೆಯೇ ಬಾಗಿಲು ತೆರೆವ ಹೂವಿನಂಗಡಿಯ ಮಲ್ಲಿಗೆ ಮಾಲೆಯೊಂದು ಪಕ್ಕದಲ್ಲಿಯೇ ಇರುವ ದೇವರ ಮೂರ್ತಿಯ ಮುಡಿಗೇರಬಹುದು; ದೊಡ್ಡದೊಂದು ಪ್ಲಾಸ್ಟಿಕ್ ಕವರಿನಲ್ಲಿ ರಾಶಿಬಿದ್ದ ಸಂಪಿಗೆಹೂಗಳು ಮುಷ್ಟಿ ತುಂಬಿ ಕಾಗದದ ಪೊಟ್ಟಣದಲ್ಲಿ ಸ್ಕೂಟರನ್ನೇರಬಹುದು; ಕೆಂಪು ಗುಲಾಬಿಗಳ ಗುಚ್ಛವೊಂದು ಐಟಿ ಪಾರ್ಕಿನ ಹೂದಾನಿಯಲ್ಲಿ ಕುಳಿತು ಒಳಗೆ ಬಂದವರನ್ನು ಸ್ವಾಗತಿಸಬಹುದು; ರಾತ್ರಿಯಾಗುತ್ತಿದ್ದಂತೆ ಅಂಗಡಿಯಲ್ಲೇ ಉಳಿದುಹೋದ ಹೂಗಳೆಲ್ಲ ಮುಚ್ಚಿದ ಬಾಗಿಲುಗಳ ಹಿಂದೆ ಬಾಡಿಹೋಗುವ ಭಯದಲ್ಲಿ ಬದುಕಬಹುದು. ಒಮ್ಮೊಮ್ಮೆ ಎಲ್ಲವೂ ಪೂರ್ವನಿಶ್ಚಯವಾದಂತೆ ಭಾಸವಾಗಿ, ಮರುಕ್ಷಣವೇ ಎಲ್ಲ ಅನಿಶ್ಚಿತತೆಗಳ ಅಸ್ಪಷ್ಟ ನೆರಳುಗಳಂತೆ ಜಾಗ ಬದಲಾಯಿಸುವ ಬದುಕು ತನ್ನದೇ ಮಾರ್ಗ ಹಿಡಿದು ಮನಬಂದಂತೆ ಚಲಿಸುತ್ತದೆ. ಆ ಚಲನೆಯಲ್ಲೊಂದು ಹವಾಯಿ ಚಪ್ಪಲಿ ಸೂರ್ಯಾಸ್ತ ನೋಡಲೆಂದು ಬೆಟ್ಟದ ತುದಿಯನ್ನೇರಿ ಕುಳಿತಿರಬಹುದು; ಒಣಗಿದ ಎಲೆಯೊಂದು ಹೊಳೆಯ ಹರಿವಿನಲ್ಲಿ ಒಂದಾಗಿ ಇಳಿಜಾರಿನೆಡೆಗೆ ಚಲಿಸುತ್ತಿರಬಹುದು; ಸೈಕಲ್ಲಿನಲ್ಲೊಬ್ಬ ಐಸ್ ಕ್ರೀಮು ಮಾರುವವ ಬಾಲ್ಯದ ನೆನಪುಗಳಿಗೆ ತಣ್ಣನೆಯ ಸ್ಪರ್ಶ ನೀಡಬಹುದು; ಮುಗಿದುಹೋದ ಪ್ರೇಮದ ಹಾದಿಯ ಕವಲುದಾರಿಗಳುದ್ದಕ್ಕೂ ಗುಲ್ ಮೊಹರ್ ಗಿಡಗಳು ಮೈತುಂಬ ಹೂವರಳಿಸಿ ನಿಂತಿರಬಹುದು. ಹೀಗೆ ಎಲ್ಲ ಚಲನೆಗಳಿಗೂ ಹೊಸದೊಂದು ನೋಟವನ್ನು, ತಿರುವುಗಳನ್ನು ಒದಗಿಸುತ್ತ ಮುಂದೋಡುವ ಬದುಕು ನಿಂತಿದ್ದನ್ನು ಕಂಡವರಿಲ್ಲ.           ನೋಡುವ ಕಣ್ಣುಗಳಲ್ಲಿ ಹೊಸತನ-ಭರವಸೆಗಳನ್ನು ತುಂಬಿಕೊಳ್ಳಲು ಸಾಧ್ಯವಾದಾಗಲೆಲ್ಲ ಬದುಕು ಹೊಸಹೊಸ ನೋಟಗಳನ್ನು ಒದಗಿಸುತ್ತಲೇ ಇರುತ್ತದೆ. ಸಗಣಿ, ಒಣಹುಲ್ಲು, ತ್ಯಾಜ್ಯಗಳೇ ತುಂಬಿರುವ ಗೊಬ್ಬರಗುಂಡಿಯ ಅಂಚಿನಲ್ಲೊಂದು ಸೀತಾಫಲದ ಗಿಡ ಚಿಗುರುತ್ತಿರಬಹುದು; ಕಸದ ಗಾಡಿಯ ಹಸಿತ್ಯಾಜ್ಯಗಳ ರಾಶಿಯ ಮೇಲೊಂದು ಕಾಗೆ ಅನ್ನದ ಅಗುಳನ್ನು ಹೆಕ್ಕುತ್ತಿರಬಹುದು; ಪಾತ್ರೆಯ ತಳದಲ್ಲುಳಿದ ಚಹಾದ ಪುಡಿ ಗುಲಾಬಿ ಗಿಡದ ಬುಡವನ್ನು ಸೇರಿ ಹೊಸ ಹೂಗಳನ್ನರಳಿಸಬಹುದು; ಆಕ್ಸಿಡೆಂಟಿನಲ್ಲಿ ಮಗನನ್ನು ಕಳೆದುಕೊಂಡ ತಾಯಿಯೊಬ್ಬಳು ಸಾವಿನ ನೋವನ್ನು ಸಹಿಸಿಕೊಂಡು ನೈವೇದ್ಯಕ್ಕೆಂದು ಚಕ್ಕುಲಿ ಸುತ್ತುತ್ತಿರಬಹುದು. ಹೀಗೆ ಕುದಿವ ನೋವುಗಳು, ಒಣಗಿಹೋದ ಇರವುಗಳಿಗೆಲ್ಲ ಹೊಸ ಹೊಳಹುಗಳನ್ನು ಕರುಣಿಸುತ್ತ ಸಾಗುವ ಬದುಕಿನ ಪೆಟ್ಟಿಗೆಯಲ್ಲಿ ನೆನಪಿನ ಸುರುಳಿಯ ಕ್ಯಾಸೆಟ್ಟುಗಳು, ಸಂಬಂಧಗಳನ್ನು ಹಿಡಿದಿಟ್ಟ ಆಲ್ಬಮ್ಮುಗಳು, ಇತಿಹಾಸವನ್ನೇ ಕಟ್ಟಿಹಾಕುವಂತೆ ಕುಳಿತ ನಾಣ್ಯಗಳು ಎಲ್ಲವೂ ಸದ್ದುಮಾಡದೇ ಸ್ನೇಹ ಬೆಳಸಿಕೊಳ್ಳುತ್ತವೆ; ಗೋಡೆಯ ಮೇಲೊಂದು ಹಳೆಯ ಗಡಿಯಾರ ಸದ್ದುಮಾಡುತ್ತ ಚಲಿಸುತ್ತಿರುತ್ತದೆ.           ಹೀಗೆ ಬದುಕಿನ ಚಲನೆಗಳೆಲ್ಲವೂ ಒಮ್ಮೆ ಶಬ್ದ ಮಾಡುತ್ತ, ಮನಬಂದಾಗ ಮೌನವಾಗುತ್ತ, ನಗುನಗುತ್ತ ಹೆಜ್ಜೆಯಿಟ್ಟು ದಾರಿ ಸವೆಸುತ್ತವೆ. ಆ ದಾರಿಯ ಶುರುವಿನಲ್ಲೊಂದು ಬಾಣದ ಗುರುತಿನ ಬೋರ್ಡು ಎತ್ತಿಡುವ ಪ್ರತಿ ಹೆಜ್ಜೆಯನ್ನೂ ನಿರ್ಧರಿಸಬಹುದು; ದಾರಿಯ ಮಧ್ಯದಲ್ಲೊಂದು ತಿರುವು ಕಾಣಿಸಿಕೊಂಡು ಪೂರ್ವನಿಶ್ಚಿತ ಪಯಣವನ್ನೇ ಪ್ರಶ್ನಿಸಿಬಿಡಬಹುದು; ಇದ್ದಕ್ಕಿದ್ದಂತೆ ಎದುರಾದ ದಾರಿಹೋಕನೊಬ್ಬ ಆ ಕ್ಷಣದ ಎಲ್ಲ ಪ್ರಶ್ನೆಗಳ ಉತ್ತರವಾಗಿಬಿಡಬಹುದು; ಜೊತೆಗೆ ನಡೆದವರಲ್ಲೊಬ್ಬಿಬ್ಬರು ಮನಸಾರೆ ನಕ್ಕು ಕೈಹಿಡಿಯಬಹುದು; ಹಿಂತಿರುಗಿ ನೋಡಿದರೆ ಹಾದುಬಂದ ತಿರುವು ದೂರದಿಂದ ಕೈಬೀಸಿ ಬೀಳ್ಕೊಡಬಹುದು; ದಣಿವಾರಿಸಿಕೊಳ್ಳಲು ಕೊಂಚಹೊತ್ತು ಕಾಲುಚಾಚಿ ವಿರಮಿಸುವ ಹೊತ್ತು ಹಾದಿಬದಿಯ ಮರದ ಮೇಲೊಂದು ಮರಿಹಕ್ಕಿ ರೆಕ್ಕೆ ಬಲಿವ ಗಳಿಗೆಗಾಗಿ ಕಾಯುತ್ತಿರಬಹುದು; ಮುಂದಿನ ತಿರುವಿನಲ್ಲೊಂದು ಗೂಡಂಗಡಿಯ ಒಲೆಯ ಮೇಲೆ ಹಾಲು ಕುದಿಯುತ್ತಿರಬಹುದು! **************************** ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ ಚಿತ್ರಕೃಪೆ: ಶ್ರೀನಿಧಿ ಡಿ.ಎಸ್.

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಅರ್ಧನಾರೀಶ್ವರ ( ಕಾದಂಬರಿ) ತಮಿಳು ಮೂಲ : ಪೆರುಮಾಳ್ ಮುರುಗನ್  ಕನ್ನಡಕ್ಕೆ : ನಲ್ಲತಂಬಿ ಬದುಕಿನ ಆದಿಮ ಸತ್ಯಗಳಾದ ಕಾಮ, ಹುಟ್ಟು, ತಾಯ್ತನ, ವಂಶಾಭಿವೃದ್ಧಿಯ ಬಯಕೆಗಳು ಮತ್ತು ಸಾಮಾಜಿಕ ವ್ಯವಸ್ಥೆ ಬೆಳೆದು ಬಂದ ಬಗೆಗಳ  ನಡುವಣ ಸಂಘರ್ಷವೇ ಈ ಕಾದಂಬರಿಯ ಕಥಾವಸ್ತು.  ಕಾಮ ಮತ್ತು ತಾಯ್ತನದ ಬಯಕೆಗಳು ನೈಸರ್ಗಿಕವಾಗಿ ಇರುವಂಥವು.  ಆದರೆ ಗಂಡು-ಹೆಣ್ಣುಗಳ ನಡುವಣ ಕಾಮದಾಸೆಯ ಪೂರೈಕೆಗಾಗಿ  ಸಮಾಜವು ರೂಪಿಸಿಕೊಂಡ ವಿವಾಹವೆಂಬ ವ್ಯವಸ್ಥೆಯು ಕೆಲವೊಮ್ಮೆ ವಿಫಲವಾದಾಗ  ವ್ಯವಸ್ಥೆಯನ್ನು ಒಡೆದು  ಬೇರೆ ದಾರಿ ಹಿಡಿಯುವುದು ಹೇಗೆ  ಮತ್ತು ಅದರ ಪರಿಣಾಮಗಳೇನಾಗಬಹುದು ಎಂಬುದರ ಕುರಿತಾದ ಸಂವಾದವನ್ನು  ಈ ಕಾದಂಬರಿ ಅತ್ಯಂತ ಮಾರ್ಮಿಕವಾಗಿ ನಿರೂಪಿಸುತ್ತದೆ.  ಅದರ ಜತೆಗೆ ಜನಪದ ಬದುಕು  ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ವ್ಯವಸ್ಥೆಯೊಳಗೇನೇ ಕಂಡುಕೊಂಡ ಪರಿಹಾರವೂ ಇಲ್ಲಿದೆ. ಗ್ರಾಮೀಣ ಬದುಕಿನ ಚಿತ್ರಣ, ಗಂಡ-ಹೆಂಡಿರ ನಡುವಣ ಆತ್ಮೀಯ ಸಂಬಂಧದ ಅರ್ಧನಾರೀಶ್ವರ ಪರಿಕಲ್ಪನೆಯನ್ನು ಹೋಲುವ ಸುಂದರ ಚಿತ್ರಣವು ಕೃತಿಯ ಸೌಂದರ್ಯಕ್ಕೆ ಮೆರುಗನ್ನಿತ್ತಿದೆ.  ಕಾಳಿ ಮತ್ತು ಪೊನ್ನಿಯರ ದಾಂಪತ್ಯ ಜೀವನವು ‘ಸ್ವರ್ಗಕ್ಕೆ ಕಿಚ್ಚು ಹಚ್ಚುವಷ್ಟು’ ಆನಂದಮಯವಾಗಿತ್ತು. ಗಂಡ-ಹೆಂಡಿರು ಒಬ್ಬರನ್ನೊಬ್ಬರು ಎಂದೂ ಬಿಟ್ಟಿರಲಾರದವರೂ ಬಿಟ್ಟು ಕೊಡಲಾರದವರೂ ಆಗಿದ್ದರು.  ಅವರಿಬ್ಬರ ನಡುವಣ ಲೈಂಗಿಕ ಸಂಬಂಧದ ಬಿಸುಪು ಹತ್ತು ವರ್ಷ ಕಳೆದರೂ  ಒಂದಿಷ್ಟೂ ಕಡಿಮೆಯಾಗಿರಲಿಲ್ಲ. ಆದರೆ ಒಂದೇ ಒಂದು ಕೊರತೆಯೆಂದರೆ ಅವರಿಗೆ ಮಕ್ಕಳಾಗಿರಲಿಲ್ಲ. ಹೆಣ್ಣು ತನ್ನ ವ್ಯಕ್ತಿತ್ವದ ಮೂಲಕ ಎಷ್ಟೇ ಯಶಸ್ವಿಯಾದರೂ  ಆಕೆ ತಾಯಿಯಾಗದಿದ್ದರೆ ಸಮಾಜವು ಆಕೆಯನ್ನು ಸದಾ ಚುಚ್ಚಿ ನೋಯಿಸುತ್ತಿರುತ್ತದೆ.  ಕಾಳಿ-ಪೊನ್ನಿಯರಿಬ್ಬರೂ ಈ ದುಃಖವನ್ನು ಎದುರಿಸುತ್ತಾರೆ.  ಕೊನೆಗೆ ಕಾಳಿಯ ಅಮ್ಮ ಮತ್ತು ಪೊನ್ನಿಯ ಅಮ್ಮ ಇಬ್ಬರೂ ಅವಳನ್ನು ತಿರುಚೆಂಗೋಡು ಜಾತ್ರೆಯ  ಹದಿನಾಲ್ಕನೇ ದಿವಸದಂದು ಊರಿನ ಪದ್ಧತಿಯಂತೆ  ಮದುವೆಯಾದ ಹೆಣ್ಣು ಮಕ್ಕಳನ್ನು ಅವರು ಇಷ್ಟಪಟ್ಟವರ ಜತೆ ಕೂಡಲು ಕಳುಹಿಸುವ ಯೋಜನೆ ಹಾಕುತ್ತಾರೆ.  ತನ್ನ ಪೊನ್ನಿ ತನ್ನ ಕೈಜಾರಿ ಹೋಗುತ್ತಾಳೆಂಬ ಭಯದಿಂದ ಕಾಳಿ ಇದಕ್ಕೆ ಸಮ್ಮತಿಸುವುದಿಲ್ಲ. ಆದರೆ ತಾಯ್ತನದ ಸಹಜ ಬಯಕೆ ಪೊನ್ನಿಯಲಿ ಎಷ್ಟು ಬಲವಾಗುತ್ತದೆ ಅಂದರೆ  ತಾನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಕಾಳಿಯ ವಿರೋಧವನ್ನು ಲೆಕ್ಕಿಸದೆ ಬೇರೊಬ್ಬ ಯುವಕನನ್ನು ಆರಿಸಿಕೊಂಡು ಪೊನ್ನಿ ಹೋಗುತ್ತಾಳೆ. ಕೊನೆಯಲಿ ಕಾಳಿ ಅವಳ ಮೇಲೆ ಸಿಟ್ಟಾಗುವುದರೊಂದಿಗೆ ಕಾದಂಬರಿ ಮುಗಿಯುತ್ತದೆ. ಪುರುಷ ಕೇಂದ್ರಿತ ವ್ಯವಸ್ಥೆಯಲ್ಲಿ ಒಬ್ಬ ಹೆಣ್ಣು ಹೇಗೆ ಸ್ವಾರ್ಥಿ ಪುರುಷನ ಸ್ವಂತ ಸೊತ್ತಾಗಿ ಶೋಷಣೆಗೊಳಗಾಗುತ್ತಾಳೆ ಎಂಬುದನ್ನು ಕಾದಂಬರಿ ನಿರೂಪಿಸುತ್ತದೆ.ಅನುವಾದದ ಭಾಷೆ ಚೆನ್ನಾಗಿದೆ. ಮೂಲದಲ್ಲಿರುವ ಆಡುಭಾಷೆಗೆ ಪರ್ಯಾಯವನ್ನು ಕೊಡಲು ಅನುವಾದಕರು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ ಮತ್ತು ಯಶಶ್ವಿಯಾಗಿದ್ದಾರೆ ************************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

You cannot copy content of this page

Scroll to Top