ಅನುಭವ ಸಂಪಾದನೆ
ಅಂಕಣ ಸಂಗಾತಿ ತೊರೆಯ ಹರಿವು ‘ಸಾವಿಗೊಂದು ಘನತೆ ಕೊಡುವ…’ ಅಪ್ಪು ಎಂಬ ಮನದ ಮಗನ ಸಾವಿಗೆ ಕರ್ನಾಟಕ ಇನ್ನಿಲ್ಲದಂತೆ ಕೊರಗುತ್ತಿದೆ. ‘ಈ ಸಾವು ನ್ಯಾಯವೇ ?’ ಎಂದು ಪ್ರಶ್ನಿಸುತ್ತಿದೆ. ‘ಸಾಯೋ ವಯಸ್ಸಾ ಇದು? ವಿಧಿಗೆ ಕುರುಡೇ? ಯಮನ ಕಿಂಕರರಿಗೆ ಕರುಣೆ ಇಲ್ಲವೇ?’ ಎಂದೆಲ್ಲಾ ನೂರಾರು ಪ್ರಶ್ನೆಗಳನ್ನು ಎಲ್ಲರ ಮನಸ್ಸು ಜಗ್ಗಿ ಕೇಳುತ್ತಿದೆ. ಇದಂತೂ ಈ ಕಾಲಮಾನದಲ್ಲಿನ ಎಲ್ಲಾ ವಯೋಮಾನದವರ ಮನದಲ್ಲಿ ಉಳಿದು ಹೋದ ಅಹಿತಕರ ಘಟನೆ. ಯಾರೂ ಊಹಿಸದಿದ್ದ ಆಘಾತ! ‘ಹುಟ್ಟಿದ ಮೇಲೆ ಸಾವು ಸಹಜ’ ಎಂದರೂ ಬಾಳಿ ಬದುಕಬೇಕಾದ ಒಂದು ಒಳಿತಿನ ಜೀವಕ್ಕೆ ಇಂಥದ್ದೊಂದು ಸಾವು ಬಂದುದನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೊಂದು ಎಂದಿಗೂ ಮಾಯದ ಗಾಯ. ಪುನೀತ್ ಕೇವಲ ನಟನಾಗಿದ್ದರೆ ಸಿನಿಪ್ರಿಯರಿಗೆ, ಅಭಿಮಾನಿಗಳಿಗೆ ಹೆಚ್ಚು ದುಃಖವಾಗುತ್ತಿದ್ದಿರಬಹುದು. ಆದರೆ ಜನಾನುರಾಗಿಯೂ ಹೃದಯವಂತನೂ ಆದ ಚೆಂದದ ವ್ಯಕ್ತಿಯೊಬ್ಬರ ಈ ಸಾವು ಎಲ್ಲಾ ವಯೋಮಾನದವರನ್ನೂ ಕಾಡಿದೆ. ಇಂಥಾ ದಿಢೀರ್ ಸಾವಿಗೆ ಕಾರಣವನ್ನು ಹುಡುಕುತ್ತಿದೆ. ಸಾವು ಸಹಜ ಎಂದ ಮೇಲೆ ಅದು ಬಂದಂತೆ ಸಹಜವಾಗಿ ಸ್ವೀಕರಿಸಬೇಕು ಎಂದು ಹೇಳುವುದು ಸುಲಭ. ಆದರೆ ಅಕಾಲದ ಸಾವನ್ನು ಸ್ವೀಕರಿಸುವುದು ಹೇಗೆ? ಅಕಾಲದ ಸಾವೆಂದರೆ ಏನು? ಸಾವಿಗೆ ಕಾಲ ಎನ್ನುವುದಿದೆಯೇ? ಎಂಬೆಲ್ಲಾ ಜಿಜ್ಞಾಸೆಗೆ ಮನ ತುಡಿಸುತ್ತದೆ. ನಮ್ಮ ಹಿರಿಯರು ಹೇಳುವಂತೆ ಅಥವಾ ನಾವು ಬೆಳೆದು ಬಂದ ರೂಢಿಯಲ್ಲಿ ತುಂಬು ಬಾಳನ್ನು ಅಪೇಕ್ಷಣೀಯ ಎನ್ನಲಾಗುತ್ತದೆ. ಇಲ್ಲಿ ‘ತುಂಬು ಬಾಳು ತುಂಬಿರುವ ತನಕ ತುಂಬಿ ತುಂಬಿ ಕುಡಿಯಬೇಕು’ ಎನ್ನುವ ಹಿರಿಮನಸ್ಸಿನ ಹಾರೈಕೆಯಿರುತ್ತದೆ. ‘ ಶತಮಾನಂ ಭವತಿ ಶತಾಯುಹ್ ಪುರುಷಃ ಶತೇಂದ್ರಿಯಃ ಆಯುಶ್ಯೇವೇಂದ್ರಿಯೇ ಪ್ರತಿತಿಷ್ಠತಿ’ ಎಂಬುದು ದೀರ್ಘಾಯುಶ್ಯ ಹಾಗೂ ಉತ್ತಮ ಆರೋಗ್ಯ ಹೊಂದಿರಿ ಎಂಬ ಸದಾಶಯ ಹೊಂದಿರುವ ಆಶೀರ್ವಾದ ಸ್ವರೂಪದ ಮಂತ್ರವನ್ನು ಆಗಾಗ್ಗೆ ಕೇಳುವ ಆಚರಣೆಗಳ ಜೊತೆ ಜೊತೆಗೆ ಬೆಳೆದು ಬಂದಿರುತ್ತೇವೆ. ಕೊನೆಗೆ ‘ನೂರು ವರ್ಷ ಸುಖವಾಗಿ ಬಾಳಿದರು’ ಎಂಬ ಸುಖಾಂತ್ಯವೇ ಆಗಿರಬೇಕೆನ್ನುವ ಅಪೇಕ್ಷೆಯಲ್ಲೇ ಎಲ್ಲಾ ಕತೆಗಳನ್ನು ಹೆಣೆಯುತ್ತೇವೆ. ಪುರಾಣಗಳಲ್ಲಿ ‘ಚಿರಂಜೀವಿ’ಗಳನ್ನು ಹುಟ್ಟಿಸಿ ವಿಚಿತ್ರ ಸಮಾಧಾನಪಡುವವರು ನಾವು. ‘ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ | ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ‘ ಎಂದು ಅವರನ್ನು ಹೆಸರಿಸುವ ಸಂಸ್ಕೃತ ಶ್ಲೋಕವಿದೆ. ಚಿರಂಜೀವಿಗಳಾಗಿರಿ, ಆಯುಶ್ಮಾನ್ಭವ ಎಂದು ಆಶೀರ್ವದಿಸುವ ರೂಢಿ ನಮ್ಮಲ್ಲಿದೆ. ಹೀಗಿರುವಾಗ, ಅಪಘಾತದ ಸಾವುಗಳು, ಅನಾರೋಗ್ಯದ ಕಾರಣಕ್ಕೆ ಬರುವ ಸಾವುಗಳನ್ನು ಸ್ವೀಕರಿಸುವ ಬಗೆ ಹೇಗೆ? ಮನಸ್ಸು ಯಾವಾಗಲೂ ದೀರ್ಘಾಯುಷ್ಯಕ್ಕೆ ಸಿದ್ಧವಾಗಿರುವಾಗ ಅಪಘಾತ, ಅನಾರೋಗ್ಯದ ಕಾರಣ ಅಕಾಲಿಕ ಸಾವು ಬಂದರೆ?! ಅಂಥ ಸಂದರ್ಭಗಳಲ್ಲಿ ನಮ್ಮ ಕೈ ಮೀರಿದ ವಿಷಯಕ್ಕೆ ಅತೀವ ದುಃಖವಾಗುವುದು ಸುಳ್ಳಲ್ಲ. ದೇಶಗಳ ಆಂತರಿಕ ರಾಜಕೀಯ ಕಲಹಕ್ಕೆ ಬಲಿಯಾಗಿ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ ಸತ್ತ ಪುಟ್ಟ ಸಿರಿಯನ್ ಬಾಲಕ ‘ಅಲಾನ್ ಕುರ್ದಿ’ ಆಗಲಿ, ಭಾರತ ಯುದ್ಧದಲ್ಲಿ ವೀರ ಮರಣಕ್ಕೆ ಒಳಗಾದ ಪದೇ ಪದೇ ನೆನಪಿಗೆ ಬರುವ ‘ವೀರ ಅಭಿಮನ್ಯು’ವಾಗಲೀ, ಕೆವಿನ್ ಕಾರ್ಟರನ ಪುಲಿಟ್ಚರ್ ಪ್ರಶಸ್ತಿಯ ಚಿತ್ರದೊಳಗಿನ ಅಪೌಷ್ಠಿಕಾಂಶದ ‘ಆಫ್ರಿಕಾದ ಮಗು’ ವಾಗಲಿ, ಮಹಾಯುದ್ಧದ ಕ್ರೂರ ನೆನಪಾಗಿ ಕಾಡುವ ಅಣುಬಾಂಬಿನ ದಾಳಿಗೆ ಸಿಲುಕಿದ ಆ ಎರಡು ನಗರಗಳ ಕಂದಮ್ಮಗಳಾಗಲಿ.. ಅಕಾಲದ ಸಾವಿಗೆ ವಿನಾಕಾರಣ ಬಲಿಯಾದವರು. ಇಂಖಾ ಸಾವುಗಳು ಇಡೀ ಮನುಕುಲವನ್ನು ಕಾಡುತ್ತವೆ. ಹಾಗೆ ಕಾಡುವ ದೂರ ದೇಶಗಳ, ಇತಿಹಾಸ ಪುರಾಣಗಳ ಸಾವುಗಳ ನಡುನಡುವೆ ನಮ್ಮ ಸುತ್ತಳತೆಯಲ್ಲಿ ಘಟಿಸಿಬಿಡುವ ಪುನೀತರಂತಹ ಅದಮ್ಯ ಚೇತನಗಳ ಸಾವು ಕಂಗೆಡಿಸಿ ತಲ್ಲಣಗೊಳಿಸುತ್ತವೆ. ಹುಟ್ಟಿದ ಜೀವಿಗಳಿಗೆ ಸಾವು ಅನಿವಾರ್ಯವೇ. ಆದರೆ ಅದನ್ನು ನಿರೀಕ್ಷಿಸುತ್ತಾ ಯಾರೂ ಕುಳಿತಿರಲಾರರು. ಸಾವಿನಂತಹ ಅಂತಿಮ ಸತ್ಯವನ್ನು ಅರಿತಿದ್ದರೂ ಅದರ ರೀತಿ ರಿವಾಜುಗಳನ್ನು ನಮ್ಮ ಬಾಲಿಶ ಮನಸ್ಸು ಸ್ವೀಕರಿಸಲು ತಯಾರಿರುವುದಿಲ್ಲ. ವಾರ ಕಳೆದರೂ ಗರ ಬಡಿದಂತಿರುವ ಮನಸ್ಸಿಗೆ ದಿಕ್ಕು ತೋಚದಂತಾಗಿ ಬಿಡುವುದು ಸತ್ಯವೇ. ಆದರೂ ಈ ಅನಿರೀಕ್ಷಿತ ಆಘಾತದ ಸಂದರ್ಭದಲ್ಲಿ ದುಡುಕಿನ ಕೈಗೆ ಮತಿಕೊಟ್ಟು ಮಂಕಾದ ಮನಸ್ಥಿತಿಯಲ್ಲಿ ನಮ್ಮ ಸಾವಿಗೆ ನಾವೇ ಆಹ್ವಾನ ಕೊಡುವುದಿದೆಯಲ್ಲ ಅದೊಂದು ಪರಮ ಮೂರ್ಖತನದ ಕೆಲಸ. ಈಗಾಗಲೇ ಹಲವಾರು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇದು ನಿಜಕ್ಕೂ ಬೇಸರದ ವಿಚಾರ. ಯಾವ ನೋವುಗಳೂ ಶಾಶ್ವತವಾಗಿರುವುದಿಲ್ಲ. ಸುಖ ದುಃಖಗಳು ಬಾಳಿನೆರಡು ಮುಖಗಳು. ಇದೊಂದು ಗಳಿಗೆ ಇದ್ದರೆ ಅದೊಂದು ಗಳಿಗೆ ಇರುತ್ತದೆ. ಇಂಗ್ಞೀಶಿನಲ್ಲಿ ಒಂದು ಪದವಿದೆ passing clouds ಎಂದು. ಇದನ್ನು ಯಾವುದಕ್ಕೂ ಹೋಲಿಸಬಹುದು. ಸುಖವಾಗಲಿ ದುಃಖವಾಗಲಿ ಸ್ಥಿರವಲ್ಲ. ಬೇಸರ ಭಾವ ಯಾವತ್ತಿಗೂ ಸ್ಥಿರವಲ್ಲ. ಹಾಗೆಯೇ ಸುಖವೂ ಶಾಶ್ವತವಲ್ಲ. ಇದನ್ನು ತಿಳಿದ ನಮ್ಮ ಹಿರಿಯರು ಬದುಕನ್ನು ಚಕ್ರಕ್ಕೆ ಹೋಲಿಸಿದ್ದರು. ಗಾಲಿ ಸುತ್ತುತ್ತಿರುವಾಗ ಬಂಡಿಯು ಚಲಿಸುವಂತೆ, ಜೀವನ ಚಕ್ರವು ಚಲಿಸಲು ಸುಖವೊಮ್ಮೆ ದುಃಖವೊಮ್ಮೆ ಮೇಲಾಟವಾಡಬಹುದು. ನಿರಂತರವಾಗಿ ಯಾವ ಅಡೆತಡೆಯೂ ಇಲ್ಲದೆ ಗುರಿಯನ್ನು ಮುಟ್ಟುವಂತೆ ಬದುಕಿನ ಬಂಡಿ ಚಲಿಸುವುದು ಅಸಾಧ್ಯ. ಸರ್ವ ಜೀವಿಗಳಿಗೂ ಅದರದ್ದೇ ಆದ ಕಷ್ಟಸುಖಗಳಿರುತ್ತವೆ. ಯಾವಾಗಲೂ ಒಂದೇ ರೀತಿಯ ಜಡಭಾವದಲ್ಲಿ ಬದುಕಲಾಗದು. ಚಲಿಸುವ ಗಾಲಿಯಂತೆ ನಮ್ಮ ಜೀವನ ಚಕ್ರವೂ ಚಲಿಸುತ್ತಿರಬೇಕು. ಬೆಳಕಿನಂಥ ಬುದ್ಧಿಯನ್ನಾವರಿಸುವ ಕತ್ತಲೆಯಂತಹ ಕ್ರೋಧ, ಮಂಕುತನವನ್ನು ನಿವಾರಿಸಿಕೊಳ್ಳಬೇಕು. ಮಬ್ಬು ಹಿಡಿಸುವ ಆಲೋಚನೆಗಳಿಂದ ಕಷ್ಟಪಟ್ಟಾದರೂ ಹೊರಬರಬೇಕು. ವಿಚಾರದ ಯೋಗ್ಯ ನಿರ್ಣಯಕ್ಕೆ ಮನಸ್ಸನ್ನು ತಾಲೀಮುಗೊಳಿಸಬೇಕು. ಈಗೀಗಂತೂ ಆತ್ಮಹತ್ಯೆಗಳು, ಕೊಲೆಗಳು ತೀರಾ ಸಾಮಾನ್ಯ ಎನ್ನುವಂತಾಗಿಬಿಟ್ಟಿವೆ. ‘ಕೊಂದರೆ ತೀರಿತೆ ಮಂದಿಯ ದುಃಖ!’ ‘ಆತ್ಮಹತ್ಯೆಯಿಂದ ಸಿಗುವುದೇ ನೋವಿಗೆ ಅಂತ್ಯ!’ ಎಂದು ಯಾರು ಯಾರನ್ನೋ ಕೇಳಬೇಕಾಗಿಲ್ಲ. ನಮ್ಮ ಮನಗಳನ್ನು ಸಂತೈಸಿಕೊಳ್ಳಬೇಕಾದ ಕಾಲವಿದು. ನಮ್ಮೊಡನೆ ಇರುವ ಕುಟುಂಬಕ್ಕೆ, ನಾವು ಬದುಕುತ್ತಿರುವ ಸಮಾಜಕ್ಕೆ ಜವಾಬ್ದಾರರಾಗಿರುವ ಬದ್ಧತೆ ನಮಗಿರಬೇಕು. ಕಳೆದುಕೊಂಡವರ ನೋವನ್ನು ಇತರರು ಹಂಚಿಕೊಳ್ಳಲಾಗದು. ‘ದುಃಖ ಭರಿಸುವ ಶಕ್ತಿ ಸಿಗಲಿ’ ಎಂಬ ನಾಲ್ಕು ಸಮಾಧಾನದ ಮಾತನಾಡುವ ಸಂದರ್ಭದಲ್ಲಿ ನಮ್ಮ ದುಡುಕಿನ ನಿರ್ಧಾರಗಳು ನೊಂದವರ ಹೃದಯವನ್ನು ಮತ್ತಷ್ಟು ಭಾರಗೊಳಿಸಬಾರದು. ಸಾವು ಬಂದಾಗ ಬರಲಿ. ಬಂದೇ ತೀರುವ ಅತಿಥಿಯನ್ನು ಇಂದೇ ಕರೆಯುವ ಹಠ ಯಾರಿಗೂ ಬೇಡ. ತಾನಾಗಿ ಬರಲಿರುನ ಸಾವಿಗೊಂದು ಘನತೆಯ ಬದುಕನ್ನು ಕಟ್ಟಿ ಕೊಡುವ… – ವಸುಂಧರಾ ಕದಲೂರು . ೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ
ಅಂಕಣ ಸಂಗಾತಿ ತೊರೆಯ ಹರಿವು ಭಾವಶುದ್ಧ ಇರದವರಲ್ಲಿ…. ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು. ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು. ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು. ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು. ಭಾವ ಶುದ್ಭವಿಲ್ಲದವರಲ್ಲಿ ಧೂಪನೊಲ್ಲೆಯಯ್ಯಾ ನೀನು. ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು. ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾನೀನು. ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು. ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ – ಅಕ್ಕ ಮಹಾದೇವಿ. ತನು ಮನ ಕರಗದವರು, ಹದುಳಿಗರಲ್ಲದವರು, ಅರಿವು ಕಣ್ತೆರೆಯದವರು, ಭಾವಶುದ್ಧ ಇಲ್ಲದವರು, ಪರಿಣಾಮಿಗಳಲ್ಲದವರು, ತ್ರಿಕರಣ ಶುದ್ಧವಿಲ್ಲದವರು, ಹೃದಯ ಕಮಲ ಅರಳದವರು ಇಂಥವರಿಂದ ಯಾವುದನ್ನೆಲ್ಲಾ ‘ಒಲ್ಲೆ’ ಎನ್ನುವುದು ಕೇವಲ ದೇವರಿಗೆ ಇರಬೇಕಾದ ಭಾವವೇ? ಮಾನವರೂ ಈ ಕುರಿತು ಗಟ್ಟಿ ನಿಲುವನ್ನು ತೆಗೆದುಕೊಳ್ಳಬೇಕೆ, ಬೇಡವೆ? ಎಂದು ಚಿಂತಿಸುವಂತೆ ಈ ವಚನ ಮಾಡುತ್ತದೆ. ೧೨ನೆಯ ಶತಮಾನದ ವಚನಕಾರರು, ಸಮಾಜೋ-ಧಾರ್ಮಿಕ ಸುಧಾರಣೆಯ ಹರಿಕಾರರು. ಡಾಂಭಿಕತೆಯ ಕಟು ವಿರೋಧಿಗಳು ಹಾಗೂ ಗೊಡ್ಡು ಆಚರಣೆಯ ತೀವ್ರ ವಿಮರ್ಶಕರು. ವಚನಕಾರರಲ್ಲಿದ್ದ ಈ ಬಗೆಯ ಚಿಕಿತ್ಸಕ ಗುಣವು ಅವರಿಂದ ಅದೆಷ್ಟು ಚೆನ್ನಾದ ವಚನಗಳನ್ನು ರಚಿಸುವಂತೆ ಮಾಡಿದೆ ಎಂದರೆ, ವಚನಕಾರರ ರಚನೆಗಳ ಆಶಯವನ್ನು ೨೧ ನೆಯ ಶತಮಾನದ ನಮ್ಮ ಜೀವನಕ್ರಮಕ್ಕೆ ಹೊಂದಿಸಿಕೊಳ್ಳಬೇಕಾಗಿ ಬಂದಿರುವುದು ಆಶ್ಚರ್ಯವಾದರೂ ತೀವ್ರ ವಿಷಾದ ಎನಿಸುತ್ತದೆ. ಏಕೆಂದರೆ, ಹೆಚ್ಚು ಕಡಿಮೆ ಒಂದು ಸಹಸ್ರಮಾನದ ಅಂತರವಿದ್ದರೂ ಮಾನವರ ವ್ಯಕ್ತಿತ್ವಗಳಲ್ಲಿ ಬದಲಾವಣೆ ಆಗದೆ, ಆಗಿನ ರಚನೆಗಳೇ ನಮಗೆ ಇಂದಿಗೂ ಪಾಠಗಳಾಗುತ್ತಿವೆಯಲ್ಲಾ, ಎಂದು. ಒಂದು ಪುಟ್ಟ ಮಗು ಕೂಡ ನಿಸ್ಪೃಹ ಮನಸ್ಸಿಲ್ಲದವರಿಂದ ಮುದ್ದು ಮಾಡಿಸಿಕೊಳ್ಳಲು ನಿರಾಕರಿಸುವುದನ್ನು ನಾವು ಕಾಣಬಹುದು. ಬಸವಣ್ಣ, ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ….’ ಬೇಡ ಎನ್ನುವ ನಿಷೇಧಾರ್ಥಕ ಪದವನ್ನು ಬಳಸಿ ಹೇಳಿದ ಎಲ್ಲಾ ಬೇಡಗಳೂ ಯಾವ ಕಾಲಕ್ಕೂ ವರ್ಜ್ಯಗಳೇ.. ಬದುಕಿನಲ್ಲಿ ಮೌಲ್ಯಗಳನ್ನು ಸ್ವೀಕರಿಸಬೇಕು. ಮೌಲ್ಯಗಳ ಅಪಮೌಲೀಕರಣ ಮಾಡಬಾರದು. ಆದರೆ ಆಗುತ್ತಿರುವುದೇನು? ಗಾಂಧೀ ಕ್ಲಾಸು, ಸತ್ಯ ಹರಿಶ್ಚಂದ್ರ, ಮಹಾ ಶರಣ.. ಮೊದಲಾದ ಪದಗಳನ್ನು ಮೂದಲಿಕೆಗೆ ಸಂವಾದಿಯಾಗಿ ಬಳಸುತ್ತಿರುವುದು ಮನೋವ್ಯಾಧಿ ಅಲ್ಲದೆ ಮತ್ತೇನು? ನಮ್ಮ ಹಿರಿಯರು, “ಒಳ್ಳೆಯವರು ಇರೋ ಹೊತ್ತಿಗೆ ಕಾಲಕಾಲಕ್ಕೆ ಮಳೆ ಬೆಳೆ ಆಗ್ತಿರೋದು” ಎಂಬ ಮಾತನ್ನು ಪದೇ ಪದೇ ಹೇಳುತ್ತಿರುತ್ತಾರೆ. ಎಂದರೆ, ಒಳ್ಳೆಯವರಾಗಿ ಇರುವುದು ಅತ್ಯಂತ ಉದಾತ್ತ ಮೌಲ್ಯ. ಹಾಗಾದರೆ, ಒಳ್ಳೆಯತನದ ವ್ಯಾಖ್ಯಾನ ಏನು ಎಂದರೆ ಹೇಗೆ ವಿವರಿಸುವುದು? ‘ಸರ್ವರೊಳಗೆ ಒಂದಾಗಿ ಬದುಕುವ ಗುಣ’, ‘ಅಂತರಂಗ ಬಹಿರಂಗ ಶುದ್ಧಿ’ ಹೊಂದಿರುವ ಭಾವ, ‘ನಡೆನುಡಿಗಳು ಒಂದಾಗಿಹ ರೀತಿ’… ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ‘ಒಳಿತು ಮಾಡು ಮನುಶಾ.. ನೀ ಇರೋದು ನಾಕು ದಿವಸಾ…’ ಎಂಬ ತತ್ವಪದದ ರೀತಿ ಇರುವ ಗೀತೆಯೊಂದು ನಾಕು ದಿನ ಇದ್ದು ಆಮೇಲೆ ಬಿದ್ದು ಹೋಗುವ ಮನುಷ್ಯರು ತಮ್ಮ ಅಶಾಶ್ವತ ಬದುಕಿನಲ್ಲಿ ಒಳಿತು ಮಾಡಬೇಕಾದ ಮಹತ್ವವನ್ನು ಹೃದಯ ತುಂಬಿ ಬರುವಂತೆ ಅಭಿವ್ಯಕ್ತಿಸುತ್ತದೆ. ‘ಮಾನವ ಜನ್ಮ ದೊಡ್ಡದೂ ಇದ ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ…’ ಎನ್ನುವ ದಾಸವಾಣಿಯೂ ಸಹ ಸಕಲ ಜೀವರಿಗೆ ಲೇಸು ಬಯಸುವಂತೆ ಬದುಕಬೇಕಾದ ಲೋಕ ಧರ್ಮವನ್ನು ಸಾರುತ್ತದೆ. ಲೋಕಧರ್ಮವೆಂದು ಯಾವುದನ್ನು ಕರೆಯುತ್ತೇವೆಯೋ ಅವೆಲ್ಲವೂ ಸಕಲ ಜೀವಾತ್ಮರ ಲೇಸನ್ನು ಬಯಸುವಂತಹವೇ ಆಗಿವೆ. ಸ್ವಾರ್ಥ ಕಳೆದ ಜೀವ ನಿಸ್ವಾರ್ಥದಿಂದ ಹಲವು ಲೋಕೋಪಯೋಗಿ ಕೆಲಸಗಳನ್ನು ಮಾಡುವುದು. ಬಾಗದ ಹೊರತು ಬೀಗಬಾರದು ಎಂಬ ಮಾತೊಂದಿದೆ. ಆದರೆ ಬೀಗುವವರ ಜಾತ್ರೆಯಲ್ಲಿ ಬಾಗುವವರನ್ನು ಯಾರೂ ಕಾಣಲಾರದ ಸ್ಥಿತಿ ಈಗ ನಿರ್ಮಾಣಲಾಗುತ್ತಿದೆ. ಅದೃಷ್ಟವಶಾತ್, ಕೆಲವು ಇ-ಮಾಧ್ಯಮಗಳು ಅವರವರಿಗೆ ವೈಯಕ್ತಿಕ ವೇದಿಕೆಯನ್ನು ಕಲ್ಪಿಸಿಕೊಟ್ಟು ಸಮಾಧಾನ ಹೇಳುತ್ತಿವೆ. ಇದು ವಿರೋಧವಾದದ್ದೂ ಉಂಟು. ಇಂಥಾ ಮಾಧ್ಯಮಗಳೂ ಅನಿಯಂತ್ರಿತ ಮನಸ್ಸನ್ನು ಒತ್ತಕ್ಕೆ ದೂಡಿರುವುದುಂಟು. ವೈಯಕ್ತಿಕ ನೆಲೆಯ ಉದ್ಧಾರಕ್ಕಿಂತ ಸಮಷ್ಟಿಯ ಲೇಸನ್ನು ಬಯಸಿ ಬದುಕುವವರು ಇಂದು ಬೇಕಾಗಿದ್ದಾರೆ. ನರಮನುಷ್ಯರ ಆಯಸ್ಸು ಅಲ್ಪಕಾಲದ್ದಾದರೂ, ಅವರ ಕೊಡುಗೆ ಸುದೀರ್ಘ ಪರಿಣಾಮಗಳನ್ನು ಬೀರುತ್ತವೆ. ಶುದ್ಧತೆ ಎನ್ನುವುದು ಮೇಲ್ನೋಟದ ಸ್ವಚ್ಛತೆ ಆಗಬಾರದು. ಅಂತರಂಗ ಬಹಿರಂಗ ಶುದ್ಧಿ ಹೊಂದದವರನ್ನು ಮೆಚ್ಚಲಾರನು ಪರಮಾತ್ಮ ಎಂದ ಬಸವಣ್ಣನವರ ವಚನದ ತಿರುಳನ್ನು ಗ್ರಹಿಸಿ, ಗುಣಗ್ರಾಹಿಗಳಾದರೆ ಬದುಕು ನಮ್ಮದೂ ಸಹ್ಯವಾಗುವುದು ಜೊತೆಗೆ ನಮ್ಮೊಡನೆ ಬಾಳುತ್ತಿರುವ ಸಮಾಜ ಜೀವಿಗಳದ್ದೂ ಸುಂದರವಾಗುವುದು. ನಿರ್ಮಾಪಕರು ನಾವೇ ಆಗಿರುವುದರಿಂದ ನಾವು ನಿರ್ಮಿಸುವ ಕೃತಿ ಕಲಾಕೃತಿ ಎನಿಸಿಕೊಳ್ಳುವಂತೆ ಮಾಡುವುದೂ ಸಹ ನಮ್ಮ ಕೈಯಲ್ಲೇ ಇರುತ್ತದೆ. ಒಳಗೊಂದು ಹೊರಗೊಂದು ಮಾಡುವವರೇ ಚೆನ್ನಾಗಿ ಬದುಕುತ್ತಾರೆ ಎಂಬ ಅಪಾಯಕಾರಿ ನಿಲುವಿಗೆ ಕೆಲವೊಮ್ಮೆ ಬಂದು ನಿಲ್ಲುತ್ತೇವೆ. ಇದು ಹತಾಶ ಮನಸ್ಸಿನ ನಿರ್ಧಾರ. ಸುತ್ತಲಿನ ಕ್ರಿಯೆಯು ವ್ಯತಿರಿಕ್ತವಾಗಿದ್ದರೆ ಪ್ರತಿಕ್ರಿಯೆಯೂ ಹಾಗೆಯೇ ಋಣಾತ್ಮಕವಾಗಿರುತ್ತದೆ. ಆದರೆ, ತೆಗೆದುಕೊಂಡ ಗಟ್ಟಿ ನಿರ್ಧಾರಗಳು ಬಹಳ ನಿರೀಕ್ಷಿತ ಶುಭ ಫಲವನ್ನು ನೀಡುವಲ್ಲಿ ಸಮಯ ಬೇಡುತ್ತವೆ. ನೆಟ್ಟ ಬೀಜಗಳು ಮೊಳೆತು ಚಿಗುರಿ ಹೂ-ಹಣ್ಣಿನ ಫಲ ನೀಡಲು ಸಮಯಾವಕಾಶ ಕೋರುವುದನ್ನು ನೆನೆದು ಸಮಾಧಾನಿಗಳಾಗಿರಬೇಕು. ಅಲ್ಲಿಯವರೆಗೂ ತನು ಮನ ಭಾವ ಶುಧ್ಧತೆಯನ್ನು ಪರಿಣಾಮಕಾರಿಯಾಗಿ ಹೊಂದಬೇಕು. ತೀವ್ರತೆ ಇರದ ಯಾವುದೂ ಪರಿಣಾಮಕಾರಿಯಲ್ಲ ಎನ್ನುವುದನ್ನು ಮರೆಯಬಾರದು. ಹಾಗೆಂದು ತೀವ್ರತೆ ತರಲೋಸುಗವೇ ಅನಗತ್ಯ ಒತ್ತಡ ನಿರ್ಮಿಸಿಕೊಂಡು ತೊಳಲಾಡಬಾರದು. – ವಸುಂಧರಾ ಕದಲೂರು. ೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ
ಅಂಕಣ ಬರಹ ತೊರೆಯ ಹರಿವು ಅಮ್ಮನಾಗಿ ಬರೆಯುವಾಗ ನಾನೊಬ್ಬ ಹೊರಗೆ ದುಡಿಯಲು ಹೋಗುವ ಆಧುನಿಕ ಕಾಲದ ಅಮ್ಮ. ವೃತ್ತಿಯ ಜೊತೆಗೆ ಕೆಲವು ಪ್ರವೃತ್ತಿಗಳಿವೆ. ಅದರಲ್ಲೂ ಓದು – ಬರವಣಿಗೆ ಎಂಬುದು ನನ್ನ ಪ್ರೀತಿಯ ಹವ್ಯಾಸ. ಆದರೆ, ಈ ಹವ್ಯಾಸಿ ಬರವಣಿಗೆ ಅನ್ನುವುದು ಯಾವ ಸಮೀಕ್ಷೆ ಅಥವಾ ಅಧ್ಯಯನಗಳಿಗೆ ಒಳಗಾಗದ ಅನೂಹ್ಯ ಘಟನೆ ಎನ್ನುವುದು ನನ್ನ ಅಭಿಮತ. ಏಕೆಂದರೆ, ಬರವಣಿಗೆಗೆ ಒಂದು ಭಾವ ಅಗತ್ಯ. ಆದರೆ, ಭಾವ ಸ್ಫುರಿಸಿದಾಗ ಬರೆದು ಬಿಡಬಹುದಾದ ಯಾವ ಅನುಕೂಲಗಳೂ ವೃತ್ತಿಪರ ಬರಹಗಾರರಲ್ಲದ ನನ್ನಂಥವರಿಗೆ ಇರುವುದಿಲ್ಲ. ಸೃಜನಶೀಲ ಬರವಣಿಗೆಗೆ ಹೊತ್ತುಗೊತ್ತಿನ ಕಟ್ಟುಪಾಡು ಇರುವುದಿಲ್ಲ. ಯಾವುದೇ ನಿರ್ದಿಷ್ಟವಾದ ನಿರ್ಧರಣೆಯಿಲ್ಲದೇ ಬರುವ ಹಲವು ಭಾವಗಳನ್ನು ಆಗಲೇ ಬರಹಕ್ಕೆ ಇಳಿಸಬೇಕಾದುದು ಬರಹಗಾರರಿಗೆ ಇರಬೇಕಾದ ಅನಿವಾರ್ಯದ ಸ್ಥಿತಿ. ಆದರೆ, ದೈನಂದಿನ ಕೆಲಸ ಕಾರ್ಯಗಳನ್ನು ಒತ್ತಟ್ಟಿಗಿಟ್ಟು ನನ್ನಂಥವರಿಗೆ ದಿಢೀರನೆ ಬರೆಯಲಾಗುವುದಿಲ್ಲ. ಹಾಗೆಂದು, ಮೂಡಿ ಬಂದ ಭಾವನೆಗಳನ್ನು, ಕ್ಷಣದಲ್ಲಿ ಮಿಂಚುವ ವಿಚಾರಗಳನ್ನು ಎಷ್ಟು ಹೊತ್ತು ನೆನಪಿನಲ್ಲಿಟ್ಟುಕೊಂಡು ಬಿಡುವು ಸಿಕ್ಕ ಅನಂತರ ಬರೆಯಲು ಸಾಧ್ಯ? ಸೃಜನಶೀಲ ಬರವಣಿಗೆಗೆ ಅದರದ್ದೇ ಆದ ವೈಶಿಷ್ಟ್ಯವಿದೆ. ತಿಣುಕಾಡಿ ಬರೆದರೆ ಅದರಷ್ಟು ಪೇಲವವಾದ ವಿಚಾರ ಮತ್ತೊಂದಿರುವುದಿಲ್ಲ. ಹಾಗೆಂದು ಹಠ ಹಿಡಿದೇ ಬರೆದೆವೆಂದರೆ, ಮತ್ತೊಮ್ಮೆ ನಮಗೇ ಓದಲಾಗುವುದಿಲ್ಲ. ಸಹಜವಾಗಿ ಮೋಡಗಟ್ಟಿ ಮಳೆಗರೆಯುವಂತೆ ಭಾವನೆ- ವಿಚಾರಗಳು ಹರಳುಗಟ್ಟಿ ಬರಹವಾಗಬೇಕು. ಮೋಡ ಬಿತ್ತನೆಯಿಂದ ಕೃತಕ ಮಳೆ ಎಷ್ಟು ತರಿಸಲಾದೀತು? ಹಾಗೆಯೇ ಸೃಜನಾತ್ಮಕ ಬರಹವಣಿಗೆಯನ್ನು ಕೃತಕವಾಗಿ ಮಾಡಲಾಗದು. ಹೇಗೋ ತಿಣುಕಾಡಿ ಬರೆದರೂ, ಅದು ಭ್ರಮನಿರಸನ ಉಂಟು ಮಾಡುವಷ್ಟು ಭಾವತೀವ್ರತೆಯ ಕೊರತೆಯಿಂದ ತುಂಬಿಕೊಂಡಿರಬಹುದು. ವೈಯಕ್ತಿಕವಾಗಿ ಹೇಳಬೇಕೆಂದರೆ, ಬರವಣಿಗೆಗೆ ತೊಡಗುವಾಗ ಕಚೇರಿ ಕೆಲಸ, ಮನೆವಾರ್ತೆಯ ಬಹುಮುಖ್ಯ ಅಗತ್ಯಗಳನ್ನು ಮೊದಲಿಗೆ ಪೂರೈಸಿಬಿಡುತ್ತೇನೆ. ಏಕೆಂದರೆ, ಬರೆಯುವಾಗ ಒತ್ತಡ ರಹಿತ ಪರಿಸ್ಥಿತಿ ಬಹಳ ಅಗತ್ಯ. ಸಾಮಾಜಿಕ ಜವಾಬ್ದಾರಿಯ ನಿರ್ವಹಣೆ ಮಾಡುವುದು ಯಾರಿಗಾದರೂ ಮೊದಲ ಆದ್ಯತೆ ಆಗಿರಲೇಬೇಕು. ಹಲವಾರು ಜನ ಕೇಳುತ್ತಾರೆ, ಕಚೇರಿ, ಮನೆ, ಪುಟ್ಟಮಕ್ಕಳು ಇವನ್ನೆಲ್ಲಾ ನಿಭಾಯಿಸಿಕೊಂಡು ಹೇಗೆ ಇತರೆ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯ?! ಎಂದು. ಅದಕ್ಕೆ ನನ್ನ ಒಂದೇ ಉತ್ತರ, ‘ಮನಸ್ಸಿದ್ದರೆ ಮಾರ್ಗ ‘ ಹಾಗೂ ನಮ್ಮ ಇತರೆ ಅನಗತ್ಯದ ಒತ್ತಡಗಳನ್ನು, ಅಮುಖ್ಯ ವಿಚಾರಗಳನ್ನು, ಇತರೆ ಏನೆಲ್ಲಾ ಅವಸರಗಳನ್ನು ಅನಾಮತ್ತಾಗಿ ಪಕ್ಕಕ್ಕೆ ಸರಿಸಿ ಬಿಡಬೇಕೆಂದು. ಒಂದು ವೈಯಕ್ತಿಕ ಶಿಸ್ತನ್ನು ರೂಢಿಸಿಕೊಂಡರೆ ಹಾಗೂ ಮನೆಮಂದಿಯ ಸಹಕಾರ ದೊರಕಿಸಿಕೊಂಡರೆ ಅಸಾಧ್ಯವಾದುದು ಯಾವುದೂ ಇಲ್ಲ. ಆದರೂ, ಏನೆಲ್ಲವನ್ನೂ ಅನಾಮತ್ತಾಗಿ ಪಕ್ಕಕ್ಕೆ ಸರಿಸಬಲ್ಲೆನಾದರೂ, ಮಕ್ಕಳ ಸಣ್ಣ ಬೇಡಿಕೆಗಳನ್ನು, ಅವರೊಡನೆ ಕಳೆಯಬಹುದಾದ ದಿವ್ಯ ಗಳಿಗೆಗಳನ್ನು ನಿರಾಕರಿಸುವ ಧೈರ್ಯವನ್ನು ನಾನು ಮಾಡುವುದು ಕಡಿಮೆಯೇ.. ಏಕೆಂದರೆ, ಮಕ್ಕಳೆಂದರೆ ನನನಗಷ್ಟೇ ಅಲ್ಲ ಸಮಾಜಕ್ಕೆ ಸೇರಿದ ಪ್ರಜೆಗಳು. ಹಾಗಾಗಿ ಅವರನ್ನು ಜವಾಬ್ದಾರಿಯುತರನ್ನಾಗಿ ಬೆಳೆಸಬೇಕಾದ ಪ್ರಜ್ಞೆಯೂ ಆಂತರ್ಯದಲ್ಲಿ ಕೆಲಸ ಮಾಡುತ್ತಿರುತ್ತದೆ. ಹೀಗೆ, ಭವದ ಮಕ್ಕಳತ್ತ ಚಿತ್ತ ನೆಟ್ಚಾಗ ಮನದಲ್ಲಿ ಮೂಡಿದ್ದ ‘ಭಾವ’ವೆಂಬ ಹೊಸದಾಗಿ ಜನ್ಮ ತಳೆಯುವ ಆಸೆಯಲ್ಲಿದ್ದ ‘ಬರಹದ ಕೂಸು’ ನನ್ನ ಮೇಲೆ ಮುನಿದುಕೊಂಡದ್ದು ಬೆರಳೆಣಿಕೆಯ ಬಾರಿಯಲ್ಲ. ಚೆಂದದ ಅನುಭೂತಿ ಮೂಡಿಯೂ ಬರೆಯಲಾಗದೇ ಮರೆಯಾದ ಅನನ್ಯ ಭಾವಗಳು, ಕಲ್ಪನೆಗಳು ಅವೆಷ್ಟೋ..!!! ಯಾವಾಗಲೋ ಹೊಳೆದ ನನ್ನಷ್ಟಕ್ಕೆ ಅತ್ಯುತ್ತಮ ಎನಿಸುವ ಸಾಲುಗಳನ್ನು, ಮೋಹ ಉಕ್ಕಿಸುವ ಬರಹ ರೂಪಗಳನ್ನು ಮಕ್ಕಳ ಸಲುವಾಗಿ ನಾನು ಮರೆತು ಬಿಡಬೇಕಾಗುತ್ತದೆ. ಹಲವು ಬಾರಿ ಒಂದು ಸಣ್ಣ ಟಿಪ್ಪಣಿಯನ್ನೂ ಮಾಡಿಕೊಳ್ಳಲೂ ಆಗಿರುವುದಿಲ್ಲ. ಆಗೆಲ್ಲಾ ಬರವಣಿಗಾಗಿಯೇ ಬದುಕು ಮುಡಿಪಿಟ್ಟವರನ್ನು ನೆನೆದುಕೊಂಡಿದ್ದೇನೆ. ಬರವಣಿಗೆಯವ್ಲಿರುವ ಲೇಖಕರ ಮಕ್ಕಳನ್ನು ನಿಭಾಯಿಸುವ ಪತಿ/ಮಡದಿ, ಮೂಡು ಬರಿಸಿಕೊಳ್ಳಲು ಅವರು ಮೊರೆ ಹೋಗುವ ತಿರುಗಾಟಗಳು, ಮೋಜು-ಮಸ್ತಿಗಳು, ಅನಾಯಾಸವಾಗಿ ಸಿಕ್ಕಿಬಿಡುವ ಸಮಯಾನುಕೂಲಗಳು (ಇವೆಲ್ಲಾ ವಿಶೇಷವಾಗಿ ಪುರುಷ ಲೇಖಕರಿಗೆ) ಹೀಗೆ… ಇಂಥವೆಲ್ಲಾ ನೆನೆದಾಗ ನನ್ನಂತಹ ಹವ್ಯಾಸಿ ಮಹಿಳಾ ಬರಹಗಾರರಿಗೆ ಆಪ್ತ ಸಮಯ ಎನ್ನುವುದು ಗಗನ ಕುಸುಮವಲ್ಲದೇ ಮತ್ತೇನು..? ಎನಿಸುತ್ತದೆ. ವೃತ್ತಿ ಪ್ರವೃತ್ತಿಗಳ ನಡುವೆ ಮನೆ-ಮಕ್ಕಳ ಜವಾಬ್ದಾರಿಗಳನ್ನು ಮರೆಯುವಂತೆಯೇ ಇಲ್ಲವಲ್ಲ. ಹಾಗೇನಾದರು ಆದರೆ ಅದೆಲ್ಲಿಯೋ ಮರೆಯಾಗಿರುವ ‘ನಾನು ಒಳ್ಳೆ ಅಮ್ಮ ಅಲ್ಲ’, ‘ಮಕ್ಕಳಿಗೆ ಕ್ವಾಲಿಟಿ ಟೈಂ ಕೊಡುತ್ತಿಲ್ಲ’ ಎಂಬ ಛದ್ಮವೇಷದಲ್ಲಿರುವ ‘ಅಪರಾಧಿ’ ಪ್ರಜ್ಞೆಯೊಂದು ಬಂದು ತಲೆಯೊಳಗೆ ಕುಳಿತು ಕೆಲವೊಮ್ಮೆ ಇನ್ನಿಲ್ಲದಂತೆ ಕಾಡುತ್ತಾ ಹಿಂಸಿಸುತ್ತದೆ. ಅಲ್ಲದೇ ಹಲವು ಬಾರಿ, ಓದಲು ಬರೆಯಲು ಕುಳಿತಾಗ ಮಕ್ಕಳೇ ಹತ್ತಿರ ಬಂದು ಆಟಕ್ಕೋ ಮತ್ತೊಂದಕ್ಕೋ ಕರೆಯುತ್ತಾರೆ. ಬೆಳಗ್ಗಿಂದಲೂ ಮನೆಯ ಹೊರಗೇ ಇರುವ ನಾನು, ಮನೆಗೆ ಬಂದ ಮೇಲೂ ಅವರಿಂದ ದೂರ ಇರುವುದನ್ನು ಒಪ್ಪಲು ಅವರು ಸಿದ್ಧರಿರುವುದಿಲ್ಲ. ನಾನು ಅವರ ಅಮ್ಮ. ಅವರಿಗೆ ಬೇಕಾದಾಗ ಈ ಅಮ್ಮ ಸಿಗಬೇಕು. ಅವರ ಅಮ್ಮ ಅವರಿಗೆ ಬೇಕು ಅಷ್ಟೇ… ಇದೇ ಅವರ ಅಂತಿಮ ಡಿಮ್ಯಾಂಡ್. ಹೀಗಾಗಿ ಮನೆಗೆ ಬಂದ ಮೇಲೆಯೂ ನಾನು ನನಗಾಗಿ ಸ್ಪೇಸ್ ಅಪೇಕ್ಷಿಸಲು ಸಾಧ್ಯವಾಗದು. ಹಾಗೇನಾದರು ಮಾಡಿದರೆ ಮಕ್ಕಳೇ ನನ್ನ ಮೇಲೆ ಕೋಪಿಸಿಕೊಂಡು ದೂಷಿಸದೇ ಇರಲಾರು. ಆ ಅನುಭವಗಳೂ ಸಾಕಷ್ಟು ಆಗಿವೆ.. ಹೀಗೆ ಬರೆಯಬೇಕೆಂದು ಕುಳಿತಾಗ ಹಲವಾರು ಬಾರಿ ಅನಾನುಕೂಲಗಳು ಆಗುವುದು ಹೌದು. ತಕ್ಷಣಕ್ಕೆ ಹೊಳೆಯು ಆ ಪದ, ಆ ಸಾಲು ಮನದಿಂದ ಮರೆಯಾಗಬಹುದು. ಜೊತೆಗೆ ಆ ಭಾವತೀವ್ರತೆಯೂ ಕೊನೆಯಾಗಬಹುದು. ಹಾಗೆಂದು ಮಕ್ಕಳನ್ನು ಅಪರಾಧಿ ಸ್ಥಾನದಲ್ಲಿಟ್ಟು ನೋಡಲಾರೆ. ಎಷ್ಟಾದರು ನಾನು ಅಮ್ಮನಲ್ಲವೇ.. ಬರೆಯಲಾಗದ ಬಹಳಷ್ಟು ಸಮಯದಲ್ಲಿ ನನ್ನ ಇಬ್ಬರು ಮಕ್ಕಳೂ ನನ್ನ ಮತ್ತೊಂದು ಬಗೆಯ ಬರಹದ ಪ್ರಸ್ತುತಿಗಳೇ ಎಂದು ಸಮಾಧಾನ ಮಾಡಿಕೊಳ್ಳುತ್ತೇನೆ. ಏಕೆಂದರೆ ನಾನು ಹೆಣ್ಣು, ಮಿಗಿಲಾಗಿ ಅಮ್ಮ…. ವಸುಂಧರಾ ಕದಲೂರು. ೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ
ಒಂದು ಸವಿ ಮುಂಜಾವಿನ ತಳ್ಳುಗಾಡಿಯ ಮಾರಾಟಗಾರರ ಕೂಗಿನ ಬನಿಯೊಡನೆ ಮೂಡಿನಿಂತ ಈ ಲೇಖನ, ‘ಹೊಸಗನ್ನಡದ ಮುಂಗೋಳಿ’ ಎಂದು ಕವಿ ಮುದ್ದಣನನ್ನು ಕರೆದು ಗೌರವಿಸಲಾಗಿರುವಂತೆ, ‘ಹೊಸದಿನದ ಜಾಗೃತ ಮುಂಗೋಳಿ’ಗಳೆಂದು ನಾವು ಮುಂಜಾವಿನ ಈ ಮಾರಾಟಗಾರರನ್ನು ಕರೆದು ಗೌರವಿಸಬಹುದು ಅಲ್ಲವೇ ಎಂಬ ಸದಾಶಯವನ್ನು ಹಾಗೇ ಮನದ ಬಾನಿನಲಿ ತೇಲಿಸಿತು…
‘ಆಡದೇ ಮಾಡುವವ ರೂಢಿಯೊಳಗುತ್ತಮ’ ಎಂದು ಹೇಳುವುದಕ್ಕೂ ಸೀಮಿತಾರ್ಥಗಳೇ ಇರುತ್ತವೆ. ಕರ್ತವ್ಯ, ಜವಾಬ್ದಾರಿ ನಿರ್ವಹಣೆಯ ವಿಚಾರದಲ್ಲಿ; ಮಾನವೀಯತೆ, ಅನುಕಂಪೆ ತೋರುವ ಸಂಗತಿಗಳಲ್ಲಿ; ಸಹಾಯ ಹಸ್ತ ಚಾಚುವ ಸಂದರ್ಭಗಳಲ್ಲಿ ಇದು ಅನ್ವಯಿಸಬಹುದೇ ಹೊರತು ಆಡು, ಮಾತನಾಡು, ಮಾತನಾಡಿದ್ದನ್ನು ಮಾಡು ಎಂಬುದನ್ನು ಎಲ್ಲ ವಿಚಾರಕ್ಕೂ ಪರಿಭಾವಿಸಿ ನಡೆದುಕೊಳ್ಳುವುದು ಅಗತ್ಯವಿಲ್ಲ.
ಅಂಕಣ ಬರಹ ತೊರೆಯ ಹರಿವು ಆಟಕ್ಕುಂಟು ಲೆಕ್ಕಕ್ಕಿಲ್ಲ ಬಾಲ್ಯದಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಮಾತನ್ನು ಸಾಕಷ್ಟು ಬಾರಿ ಕೇಳಿಸಿಕೊಂಡಿರ್ತೀವಿ ಅಥವಾ ಹೇಳಿರ್ತೀವಿ. ಅದರಲ್ಲೂ, ಸಮಾನ ವಯಸ್ಕ ಗೆಳೆಯರೊಡನೆ ಆಡುವಾಗ, ಚಿಕ್ಕವಯಸ್ಸಿನ ಮಕ್ಕಳು ತಮ್ಮನ್ನೂ ಆಟಕ್ಕೆ ಸೇರಿಸಿಕೊಳ್ಳಿರೆಂದು ಹಠ ಹಿಡಿದಾಗಲೋ ಅಥವಾ ಹಿರಿಯರು ಗದರಿಸಿ ಸಣ್ಣಮಕ್ಕಳನ್ನು ಆಟಕ್ಕೆ ಸೇರಿಸಿ ಹೋದಾಗಲೋ ಈ ಮಾತು ಬಳಕೆಯಾಗಿರುತ್ತೆ. ಎಂದರೆ, ಆಟದ ನಿಯಮಗಳು ಅರ್ಥವಾಗದ, ಅನುಸರಿಸಲಾಗದ ವಯಸ್ಸು ಹಾಗೂ ಮನಃಸ್ಥಿತಿ ಇರುವವರೊಡನೆ ಗುದ್ದಾಡಿಕೊಂಡು ಆಟದ ಮಜಾ ಹಾಳು ಮಾಡಿಕೊಳ್ಳಲಾರದೆ ,ಅವರೂ ಇದ್ದರೆ ಇರಲಿ ಅವರ ಪಾಡಿಗೆ; ನಾವೂ ಆಡಿಕೊಳ್ಳೋಣ ನಮ್ಮ ಪಾಡಿಗೆ ಎಂಬರ್ಥದಲ್ಲಿ ಈ ಮಾತು ಬಳಕೆ ಆಗಿರುತ್ತದೆ. ಇಲ್ಲಿ ಸಣ್ಣಮಕ್ಕಳಿಗೆ ದೊಡ್ಡವರ ಗುಂಪಿನಲ್ಲಿ ತಾವೂ ಆಡಿದೆವೆಂಬ ಖುಷಿ ಸಿಕ್ಕರೆ, ದೊಡ್ಡವರಿಗೆ ತಮ್ಮ ಆಟದ ನಿಯಮಗಳಿಗೆ ಮಕ್ಕಳಿಂದ ತೊಂದರೆ ಆಗಲಿಲ್ಲ ಎಂಬ ಸಮಾಧಾನ! ಈ ಖುಷಿ – ಸಮಾಧಾನ ಸ್ಥಾಯಿಯಲ್ಲ. ಯಾರನ್ನು ಆಟಕ್ಕುಂಟು ಲೆಕ್ಕಕ್ಕಿಲ್ ಲವೆಂದು ಪರಿಗಣಿಸಿ ಹಾಗೆ ನಡೆಸಿಕೊಳ್ಳಲಾಗಿರುತ್ತದೆಯೋ ಅವರಿಗೆ ಸ್ವಲ್ಪ ತಿಳುವಳಿಕೆ ಮೂಡುತ್ತಿದ್ದಂತೆಯೇ, ತನ್ನನ್ನು ಗುಂಪಿನಿಂದ ಪ್ರತ್ಯೇಕಿಸಲಾಗಿದೆ ಎನ್ನುವುದು ಅರ್ಥ ಆಗುತ್ತದೆ. ಆಗ ಮೊದಲಿಗೆ ಅವರ ಮನಸ್ಸಿಗೆ ಘಾಸಿಯಾಗುತ್ತದೆ! ಅನಂತರ ದುಃಖ ಮೂಡಿ; ಕೊನೆಗೆ ಅದು ಸಿಟ್ಟು, ಕೋಪಕ್ಕೆ ಮೂಲವಾಗಿ ದ್ವೇಷ-ರೋಷದ ಕಿಡಿ ಹೊತ್ತಿಸಿ ಇತರರೊಡನೆ ಜಗಳವಾಡಿಕೊಂಡು, ದೂರು ಹೇಳಿ, ಗಲಾಟೆ ಎಬ್ಬಿಸಿ ಆಟದ ಆನಂದವನ್ನೇ ಕೆಡಿಸಬಹುದು ಅಥವಾ ಆಟವನ್ನೇ ಮುಕ್ತಾಯಗೊಳಿಸುವ ಕೊನೆಯ ಹಂತಕ್ಕೆ ಮುಟ್ಟಬಹುದು. ಇಂಗ್ಲೀಷಿನಲ್ಲಿ ಒಂದು ಮಾತಿದೆ. ‘ಗುಡ್ ಫಾರ್ ನಥಿಂಗ್’ ಎಂದು. ಇದನ್ನೂ ಸಹ ನಮ್ಮ ‘ಆಟಕ್ಕುಂಟು …’ ಎನ್ನುವ ನುಡಿಗಟ್ಟಿನಂತೆಯೇ ಬಳಸುವುದುಂಟು. ಅಪ್ರಯೋಜಕರಿಗೆ, ನಿಷ್ಪ್ರಯೋಜಕರಿಗೆ ಬೆಟ್ಟು ಮಾಡಿ ತೋರಿಸುವಾಗ ಈ ಮಾತು ಹೇಳಲಾಗುತ್ತದೆ. ಎಂದರೆ ಮನುಷ್ಯ ಒಳ್ಳೆಯವರೇ, ಆದರೆ ಏನೂ ಉಪಯೋಗವಿಲ್ಲ! ಉಪಯೋಗಕ್ಕೆ ಬಾರದ ಒಳ್ಳೆಯತನ ಕಟ್ಟಿಕೊಂಡು ಪ್ರಯೋಜನವೇನು? ಎಂದು ಕೇಳಬಹುದಾದ ಪ್ರಶ್ನೆಗೆ, ಒಳ್ಳೆಯದ್ದೇ ಅಪರೂಪ ಆಗುತ್ತಿರುವ ಈ ಸಂದರ್ಭದಲ್ಲಿ ಕಡೇಪಕ್ಷ ಅಂತಹ ಗುಣವನ್ನು ತೋರುವವರಾದರೂ ಇದ್ದಾರಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕೆನ್ನುವ ಉತ್ತರ ನೀಡಬಹುದೇ? ಆಟ ಎಂದರೆ ಎಷ್ಟೊಂದು ಬಗೆ ನೆನಪಾದರೂ ‘ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆಯೋಕೆ..’ ಸಾಧ್ಯವೇ ಇರೋಲ್ಲ. ನಮ್ಮ ಬಾಲ್ಯ ಕಾಲದ ಆಟಗಳ ಮುಂದೆ ಈಗಿನ ಮಕ್ಕಳ ಇಂಟರ್ನೆಟ್ಟಿನೊಳಗಿನ ವೀಡಿಯೋ ಗೇಮಾಟಗಳನ್ನು ಹೋಲಿಸಲು ಸಾಧ್ಯವೇ ಇಲ್ಲ. ಮಣ್ಣಿನೊಡನೆ ಆಡಿರೆಂದರೆ ಮೂಗು ಮುರಿದುಕೊಳ್ಳುವ ಈ ಮಕ್ಕಳಿಗೆ ಇಂಡೋರ್ ಗೇಮ್ ಎಂದರೆ ಕೇರಂ, ಚೆಸ್, ಪಗಡೆ, ಅಳಿಗುಣಿ ಮನೆ, ಚೌಕಾಬಾರ, ಹಾವು ಏಣಿ ಮೊದಲಾದವು ನೆನಪಾಗುವುವೇ? ಧರ್ಮರಾಯನೂ ಸಹ ಇಂಡೋರ್ ಗೇಮೆಂಬ ದ್ಯೂತದಲ್ಲಿ ಸೋತವನೇ.. ಸೋತವನು ಅನಂತರ ಗೆದ್ದವನಾದುದೇ ಒಂದು ದೊಡ್ಡ ರಾಮಾಯಣ..! ಅಲ್ಲಲ್ಲ ಮಹಾಭಾರತ. ‘ದೇವರ ಆಟಾ ಬಲ್ಲವರಾರು…?’ ಎನ್ನುತ್ತಾ ‘ಎಲ್ಲಾ ವಿಧಿಯ ಲೀಲೆ ನರಮಾನವನ ಕೈಯಲ್ಲಿ ಏನಿದೆ?’ ಎಂದು ಯಾವ ಜವಾಬ್ದಾರಿಯನ್ನೂ ಹೊರಲಾರದವರು ಹೇಳಿ ಕೈ ತೊಳೆದುಕೊಂಡು ಬಿಡುವುದುಂಟು. ಇದು ಯುದ್ಧಕ್ಕೆ ಮೊದಲೇ ಶಸ್ತ್ರತ್ಯಾಗ ಮಾಡಿದಂತೆ. ಯುದ್ಧ ಎಂದಾಗ ನೆನಪಾಗುವುದು ನೋಡಿ, ಹೊಡಿಬಡಿಕಡಿ,ಹುಡುಕಿ ಕೊಚ್ಚು, ಅಟ್ಟಾಡಿಸಿ ಕೊಲ್ಲು, ಬಾಂಬ್ ಹಾಕು, ಬಂದೂಕಿನಿಂದ ಗುರಿಹಿಡಿ, ಎದೆ ಸೀಳು, ರಕ್ತ ಬಸಿ ಎನ್ನುವಂತಹ ವೀಡಿಯೋ ಗೇಮ್ ಗಳನ್ನು ಈಗತಾನೇ, ತಾಯ ಮೊಲೆಹಾಲು ಕುಡಿದು ಬಿಟ್ಟ ತುಟಿಗಳಲ್ಲಿ ಹಸಿಹಾಲಿನ ವಾಸನೆ ಆರಿರದ ಕಂದಮ್ಮಗಳು ಆಡುತ್ತಿರುವುದು ಭೀಭತ್ಸಕ್ಕೆ ನೈಜ ಉದಾಹರಣೆ. ಹೀಗೆ ಆಡುವುದೇ ಮಜಾ ಎಂಬಂತೆ, ಬ್ರೈನ್ ವಾಷ್ಗೆ ಒಳಗಾಗುವ ಮಕ್ಕಳ ಕೈಯಲ್ಲಿ ಎಕೆ-೪೭ ರಂತಹ ರಣಮಾರಿಯ ಕೈಯ ಆಯುಧ ಸಿಕ್ಕರೆ ತಮ್ಮ ಖುಷಿಗಾಗಿ ಅನ್ಯ ಸಹಜೀವಿಯನ್ನು ಕೊಂದು ತೀರದಿರರೇ? ‘…ಆಟ ಊಟ ಓಟ ಕನ್ನಡ ಮೊದಲನೆ ಪಾಠ..’ ಎಂದು ಚಿಕ್ಕಂದಿನಲ್ಲೇ ಕಲಿಯುತ್ತಾ ಬೆಳೆದ ನಾವು ದೊಡ್ಡವರಾದ ಮೇಲೆ ಹೇಳ್ತೀವಿ, ‘ನಿನ್ನಾಟ ನನ್ಹತ್ರ ನಡೀಯಲ್ಲಮ್ಮಾ..’ ಎಂದು. ಆದ್ರೆ ಕೃಷ್ಣನಾಟಕ್ಕೆ ಮಾತ್ರ ಸುಮ್ಮನೆ ಮಾತಿಗೆಂಬಂತೆ, ‘ಬೇಡ ಕೃಷ್ಣಾ ರಂಗಿನಾಟ..’ ಎಂದು ಹುಸಿ ಮುನಿಸು ತೋರಿದರೂ ಒಳಗೊಳಗೆ ಪುಳಕಗೊಂಡು ಸಂಭ್ರಮಿಸ್ತೀವಿ! ಕೃಷ್ಣ ಬರಿಯ ರಂಗಿನಾಟಗಳನ್ನು ಮಾತ್ರ ಆಡಿದವನಲ್ಲ, ರಾಜತಾಂತ್ರಿಕ ನೈಪುಣ್ಯ ಸಾಧಿಸಿದವನು ಎಂದೆಲ್ಲಾ ಕೊಂಡಾಟ ಮಾಡಿದರೂ ನಮಗೆ ಇಷ್ಟವಾಗಿ ಮನಸ್ಸಿಗೆ ಹತ್ತಿರವಾಗೋದು ಗೋಪಬಾಲನ ಬಾಲ್ಯದ ಆಟಗಳ ಸೊಗಸುಗಾರಿಕೆಗಳೇ.. ಒಂದೊಂದು ಪ್ರದೇಶಕ್ಕೂ ವಿಶಿಷ್ಟವಾದ ಸ್ಥಳೀಯ ಆಟಗಳಿರುತ್ತವೆ. ಭಾರತ-ಹಾಕಿ, ಅಮೇರಿಕ- ರಗ್ಬಿ, ಸ್ಪೇನ್- ಗೂಳಿ ಕಾಳಗ, ಆಸ್ಟ್ರೇಲಿಯಾ- ಕ್ರಿಕೆಟ್, ಬಾಂಗ್ಲಾದೇಶ- ಕಬಡ್ಡಿ, ಚೀನಾ – ಪಿಂಗ್ ಪಾಂಗ್, ಜಪಾನ್- ಸುಮೋ, ಭೂತಾನ್-ಆರ್ಚರಿ…. ಹೀಗೆ ಹಲವು ರಾಷ್ಟ್ರಗಳು ತಮ್ಮ ರಾಷ್ರೀಯ ಕ್ರೀಡೆಗಳನ್ನು ಇವೇ ಎಂದು ಘೋಷಿಸಿಕೊಂಡಿವೆ. ಇದರ ಜೊತೆಗೇ, ಭಾರತದಂತಹ ಸಂಯುಕ್ತ ಒಕ್ಕೂಟ ರಾಷ್ಟ್ರದಲ್ಲಿ ಕಬಡ್ಡಿ, ಕಂಬಳ, ಜಲ್ಲಿಕಟ್ಟು, ಎತ್ತಿನಗಾಡಿ ಸ್ಪರ್ಧೆ, ದೋಣಿ ಸ್ಪರ್ಧೆ, ಮರ ಏರುವುದು, ಬುಗುರಿ, ಚಿನ್ನಿದಾಂಡು, ಅಪ್ಪಾಳೆ ತಿಪ್ಪಾಳೆ, ಮುದ್ದೆ ನುಂಗುವುದು, ಗದ್ದೆ ನಾಟಿ ಮಾಡುವುದು…, ಹೀಗೆ ಹಲವು ಪ್ರಾದೇಶಿಕ ಆಟಗಳನ್ನು ಹಾಗೂ ಕೆಲವು ಸೀಸನಲ್ ಆಟಗಳನ್ನೂ ಆಡುವುದುಂಟು. ಆಟವನ್ನು ಆಟ ಎಂದರೆ, ಏನೋ ಲಘುತ್ವ ಭಾವ. ಹಾಗಾಗಿ, ಕ್ರೀಡೆ ಎಂದು ಕರೆದು ಅದಕ್ಕೆ ಗಾಂಭೀರ್ಯವನ್ನು ಆರೋಪಿಸಲಾಗುತ್ತದೆ. ಹೌದಲ್ಲವೇ? ಆಡುವಾಗ ಗಂಭೀರವಾಗಿಲ್ಲದಿದ್ದರೆ, ಏಕಾಗ್ರತೆ ಕಳೆದುಕೊಂಡು ಬಹುಮಾನ ವಂಚಿತರಾಗಬಹುದು. ಸ್ಥಳೀಯ ಕ್ರೀಡೆಗಳು ಮನೆಯ ಒಳಾಂಗಣದಿಂದ ಪ್ರಾರಂಭವಾಗಿ, ಅಂಗಳ ಮುಟ್ಟಿ, ಬಯಲಿಗೆ ಸಾರಿರುವುದು ಮಾನವನ ನಾಗರಿಕತೆಯ ವಿಕಾಸವಾದದಷ್ಟೇ ಇತಿಹಾಸ ಉಳ್ಳದ್ದು. ಶಾಲೆ- ಕಾಲೇಜು ಹಂತಗಳಲ್ಲಿ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿದವರಿಗೆ ಉನ್ನತ ವ್ಯಾಸಂಗಕ್ಕೆ ವಿಫುಲ ಮೀಸಲಾತಿಯ ಅವಕಾಶಗಳನ್ನು ಸರ್ಕಾರ ಮಾಡಿಕೊಡುತ್ತದೆ. ಕೇವಲ ವಿದ್ಯಾಭ್ಯಾಸವಷ್ಟೇ ಅಲ್ಲ, ಸರ್ಕಾರಿ ಉದ್ಯೋಗದಲ್ಲೂ ಗೌರವ ಸ್ಥಾನಮಾನಗಳನ್ನು ಕಲ್ಪಿಸಲಾಗುತ್ತದೆ. ಕ್ರೀಡಾ ಸಾಧಕರದ್ದು ವೈಯಕ್ತಿಕ ಸಾಧನೆ, ಅವರಿಗೇಕೆ ಈ ಬಗೆಯ ವಿಶೇಷ ಗೌರವ ಎನ್ನುವವರಿಗೆ, ತಿಳಿ ಹೇಳಬೇಕಾದುದು ಜವಾಬ್ದಾರಿ ಹೊಂದಿರುವ ನಾಗರಿಕರ ಕರ್ತವ್ಯ. ಕೆಲವೊಮ್ಮೆ ಆಟಗಳನ್ನು ಸಾಂಪ್ರದಾಯಿಕ ಎಂದೋ ಹ್ಂದಿನಿಂದ ನಡೆದು ಬಂದ ರೂಢಿ- ಪರಂಪರೆ ಎಂದೋ ಆಡುವುದು ಕಡ್ಡಾಯ. ಕೃಷ್ಣ ಜನ್ಮಾಷ್ಠಮಿಗೆ ಮೊಸರಿನ ಗಡಿಗೆ ಒಡೆಯುವುದು, ಗಾಳಿಪಟ ಬಿಡುವುದು, ಎತ್ತಿನ ಬಂಡಿ ಓಡಿಸುವುದು, ಭಾರದ ಗುಂಡು ಎತ್ತುವುದು, ದಸರಾ ಹಬ್ಬದಲ್ಲಿ ಪೈಲ್ವಾನ್ಗಳಿಂದ ಕುಸ್ತಿ ಕಾಳಗ, ಹುಂಜದ ಅಂಕಣ, ಕೋಳಿ ಜಗಳ, ಹೋರಿ- ಟಗರು ಕಾಳಗ, ಯುಗಾದಿ ಹಬ್ಬದ ಮಾರನೆ ದಿನ ಇಸ್ಪೀಟಾಟ…. ಇವೆಲ್ಲಾ ಒಂದು ಪುರಾಣದ್ದೋ ಇತಿಹಾಸದ್ದೋ ಎಳೆಯನ್ನು ಇಟ್ಟುಕೊಂಡು ನಾಮಕಾವಾಸ್ತೆಗೆ ಇರಲಿ ಎಂದಾದರೂ ಆಡುವಂತಿರುತ್ತವೆ!! ಕ್ರೀಡೆ ಎಂದರೆ ಕೇವಲ ದೈಹಿಕ ಆಟವಲ್ಲ. ಅದು ಮಾನಸ್ಥಿಕ ಸ್ಥಿತಿಯೂ ಕೂಡ. ‘ಕ್ರೀಡಾ ಮನೋಭಾವ’ ಹೊಂದಿರಬೇಕೆಂದರೆ, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವುದು ಎಂದರ್ಥ. ಸೋತ ಕಾರಣಕ್ಕೆ ಹತಾಶರಾಗಿ ಕೈ ಚೆಲ್ಲದೇ, ಮರಳಿ ಯತ್ನವ ಮಾಡುತ್ತಿರಬೇಕೆನ್ನುವ ಸಂಕಲ್ಪ ಶಕ್ತಿಯನ್ನು ಸದಾಕಾಲ ಜಾಗೃತವಾಗಿ ಇಟ್ಟುಕೊಳ್ಳುವುದೇ ಕ್ರೀಡಾ ಮನೋಭಾವ. ಇದು ವೈಯಕ್ತಿಕ ಸ್ವಾಸ್ಥ್ಯದೊಡನೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೂ ಸಹಕಾರಿಯಾಗುತ್ತದೆ. ಒಲಂಪಿಕ್ಸ್, ಕಾಮನ್ವೆಲ್ತ್, ಫಿಫಾ, ಟೆನ್ನಿಸ್ ನ ವಿವಿಧ ಗ್ಯ್ರಾಂಡ್ ಸ್ಲ್ಯಾಮ್ ಗಳು, ಚೆಸ್, ಕ್ರಿಕೆಟ್, ರಗ್ಬಿ, ಕುದುರೆ ಸವಾರಿ, ಅಥ್ಲೆಟಿಕ್ಸ್ ನ ರಾಷ್ಟ್ರೀಯ- ಅಂತಾರಾಷ್ಟ್ರೀಯ ಕ್ರೀಡೆಗಳು ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುತ್ತವೆ. ಯಾವುದೋ ದೇಶದ ಕ್ರೀಡಾ ತಾರೆ, ಮತ್ಯಾವುದೋ ದೇಶದ ಗಾಡ್ ಆಫ್ ಅರ್ಥ್ ಆಗುವುದೇ ಒಂದು ಸೋಜಿಗ. ಇದು ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಹುಚ್ಚುತನ ಎನಿಸುತ್ತದೆ. ಕೆಲವೊಂದು ಕ್ರೀಡೆಗಳು ಸಮುದಾಯವನ್ನೇ ಸಮೂಹ ಸನ್ನಿಗೆ ಒಳಪಡಿಸುತ್ತವೆ. ಕ್ರೀಡೆಗಳನ್ನು ಅನುಸರಿಸಿ ಬರುವ ಪ್ರಾಯೋಜಕರು, ಜಾಹೀರಾತುಗಳು ಕೋಟ್ಯಾಂತರ ರೂಪಾಯಿಯ ವ್ಯವಹಾರ ನಡೆಸುತ್ತವೆ. ವೇಶ್ಯಾವಾಟಿಕೆಗೆ, ಡ್ರಗ್ಸ್ ದಂಧೆಗೆ, ಮಾನವ ಸಾಗಾಣಿಕೆ, ರಾಜಕೀಯ ಸ್ಥಿತ್ಯಂತರಕ್ಕೆ, ಆಟಗಳೂ ಪ್ರಮುಖ ಕಾರಣ ಎನ್ನುವುದನ್ನು ಅರಗಿಸಿಕೊಳ್ಳುವುದು ಕಷ್ಟವೇ… ಸರಿಯಾದ ತರಬೇತಿ, ಅನುಕೂಲಕರ ವ್ಯವಸ್ಥೆ ಒದಗಿಸಿದರೆ ಗ್ರಾಮೀಣ ಪ್ರತಿಭೆಗಳು ಸಾಧನೆ ಯಾವ ಎತ್ತರದಲ್ಲಿರುತ್ತದೆ ಎಂಬುದಕ್ಕೆ ನಮ್ಮ ಮುಂದೆ ಉದಾಹರಣೆಯ ಸಾಲು ಸಾಲು ಮಾದರಿಗಳೇ ಇವೆ. ಆದರೆ, ಲಿಂಗ-ಜಾತಿ- ವರ್ಗ- ವರ್ಣ ತಾರತಮ್ಯಗಳು ಅಂಥ ಸಾವಿರಾರು ಪ್ರತಿಭೆಗಳನ್ನು ಅವಕಾಶವಂಚಿತರನ್ನು ಸೃಷ್ಟಿಸಿರುವುದು ಉಂಟು. ವಶೀಲಿಭಾಜಿ ನಡೆಸಿ, ಕ್ರಿಕೆಟ್, ಅದರಲ್ಲೂ ಪುರುಷರ ಕ್ರಿಕೆಟ್ ಒಂದೇ ನಿಜವಾದ ಆಟವೆಂದು ಪರಿಗಣಿಸುವ ಭಾರತದಂಥ ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಎರಡಂಕಿ ಮೇಲೆ ಪದಕ ನಿರೀಕ್ಷಿಸುವುದು ಮೂರ್ಖತನ. ನಾವು ಎಂಜಿನಿಯರ್, ವೈದ್ಯಕೀಯ ಬಿಟ್ಟ ಓದು ಓದಲ್ಲ ಎಂದೂ, ಕ್ರಿಕೆಟ್ ಬಿಟ್ಟ ಇತರೆ ಆಟ ಆಟವಲ್ಲ ಎಂದೂ ಎಂದೋ ಪರಮ ದಡ್ಡತನದ ನಿರ್ಧಾರ ಮಾಡಿಬಿಟ್ಟಿರುವಂತಿದೆ. ಶಾಲಾ ಹಂತದಲ್ಲಿ ದೈಹಿಕ ಚಟುವಟಿಕೆಗಳಿಗೂ ಮಹತ್ವ ನೀಡುತ್ತಿದ್ದ ಶಿಕ್ಷಣ ವ್ಯವಸ್ಥೆ ಬರಬರುತ್ತಾ, ಓದಿನ ಕಾರ್ಖಾನಗಳಂತೆ ಆಗುತಿರುವುದು ದೈಹಿಕ – ಮಾನಸಿಕ ಹಾಗೂ ಆ ಮೂಲಕ ಸಾಮಾಜಿಕ ಸ್ವಾಸ್ಥ್ಯದ ಹದವನ್ನು ಹಾಳುಗೆಡವುತ್ತಿದೆ. ಬೆಕ್ಕಿನ ಕೈಗೆ ಸಿಕ್ಕಿ ಬೀಳುವ ಇಲಿಯನ್ನು ಅದು ಒಂದೇ ಏಟಿಗೆ ಕೊಂದು-ತಿಂದು ಮುಗಿಸುವುದಿಲ್ಲ. ಬಿಟ್ಟ ಹಾಗೆ ಮಾಡಿ, ಮತ್ತೆ ಮೇಲೆ ಹಾರಿ ಅದನ್ನು ಸತಾಯಿಸಿ ಸುಸ್ತು ಮಾಡಿಸಿ ಅದು ಗಾಬರಿ ಬಿದ್ದು ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ಮುಟ್ಟಿರುತ್ತದೆ. ಹೀಗೆ, ಒಬ್ಬರ ಆಟ ಮತ್ತೊಬ್ಬರಿಗೆ ಪ್ರಾಣ ಕಂಟಕ ಆಗಬಾರದು ಎಂದೇ ‘ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ’ ಎಂಬ ಗಾದೆ ಟಂಕಿಸಲಾಗಿದೆ. ‘ಆಟ ಆಡಿದ್ರೆ ಅರಗಿಣಿ; ಕಾಟ ಕೊಟ್ರೆ ನಾಗಪ್ಪ’ ಅಂತಾನೂ ಮನೋಆಟದ ಕುರಿತ ಗಾದೆ ಇದೆ. ಇದು ಮಾನವರ ನಡವಳಿಕೆಯು ಹೇಗೆ ಪ್ರಾಣಿಗಳ ನಡವಳಿಕೆಗೆ ಹೋಲಿಕೆಯಾಗುವುದು ಎಂಬ ಬಗ್ಗೆ ಇರುವಂತಹದ್ದು. ಹಿಂದಿನ ರಾಜಮಹಾರಾಜರು, ಹಣವಂತರು ಶಿಕಾರಿಯನ್ನೂ ಆಟವೆಂದೇ ಭಾವಿಸಿದ್ದರೆನ್ನುವುದು ಓದಿನಿಂದ ತಿಳಿಯಬಹುದು. ಈಗ ಕಾನೂನು ಶಿಕಾರಿಯನ್ನು ಅಮಾನ್ಯ ಮಾಡಿದೆ. ಸರ್ಕಸ್ ನಲ್ಲಿ ಹಿಡಿದು ಪಳಗಿಸಿದ ಕಾಡುಪ್ರಾಣಿಗಳಿಂದ ಕೆಲವಾರು ಆಟ ಆಡಿಸಿ ಕಾಸು ಮಾಡುವುದು ಈ ಮನುಷ್ಯ ಜಾತಿಯವರ ಆಸೆಬುರಕತನವೋ ಅಥವಾ ಚಾಣಾಕ್ಷತನವೋ ನಿರ್ಧರಿಸುವುದು ಹೇಗೆ? ‘ಪರಮಾತ್ಮ ಆಡಿಸಿದಂತೆ ಆಡುವೆ ನಾನು’ ಎನ್ನುವ ಆಸ್ತಿಕವಾದಿಗಳು, ತಮ್ಮ ನಿರ್ಧಾರಗಳಿಗೂ ಬೇರೆಯ ಧಾತುವನ್ನು ಹೊಣೆಗಾರಿಕೆ ಮಾಡುವುದು ಬೇಜವಾಬ್ದಾರಿತನ ಅವಲ್ಲದೆ ಮತ್ತೇನಲ್ಲ ಎಂದು ಖಂಡಿತವಾಗಿ ಹೇಳಬಹುದು. ಒಟ್ನಲ್ಲಿ ‘ಆಟ ಕೆಟ್ಟರೆ ದೀವಟಿಗೆಯವನ ಸುತ್ತ’ ಎಂದಂತೆ, ಜೀವನದ ಆಟದಲ್ಲಿ ಭಾಗವಹಿಸಿರುವ ಎಲ್ಲರೂ ಒಂದಲ್ಲಾ ಒಂದು ಪಾತ್ರ ನಿರ್ವಹಿಸವೇ ಬೇಕು. ಹಾಗೂ ‘…. ನಿಂತಾಗ ಬುಗುರಿಯ ಆಟ ಎಲ್ಲಾರೂ ಒಂದೇ ಓಟ…’ ಎಂದು ಆಟ ಮುಗಿಸಿ ‘ಸಾಯೋ ಆಟ’ ಆಡಲು ಗಂಟುಮೂಟೆ ಕಟ್ಟಲೇಬೇಕು… ******************** – ವಸುಂಧರಾ ಕದಲೂರು. ೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ
ರಾಕ್ಷಸ ಸಂಹಾರಕ್ಕೆ ವೀರರಾದ ಬಾಲಕರನ್ನು ಕಳಿಸಿಕೊಡೆಂದು ಕೇಳಿದಾಗ ದಶರಥ ಮಹಾರಾಜ ಹೌಹಾರಿದ್ದನೆಂದೇ ರಾಮಾಯಣ ಹೇಳುತ್ತದೆ. ‘ಮಕ್ಕಳಿನ್ನೂ ಹಾಲುಗಲ್ಲದ ಹಸುಗೂಸುಗಳು, ನಾನೇ ಬರುವೆ, ಸೈನ್ಯ ತರುವೆ..‘ ಎಂದು ಚಡಪಡಿಸಿ ಬಡಬಡಾಯಿಸಿದ್ದ ಎಂದು ತಿಳಿದಾಗ, ಎಂಥಾ ರಾಜಾಧಿರಾಜ ಆದರೂ ಅಪ್ಪನೆಂಬ ಅಂತಃಕರಣ ಮೀರಲಾದೀತೇ ಎನಿಸುತ್ತದೆ.
ಕೆಲವೊಮ್ಮೆ ವೈಯಕ್ತಿಕ ದ್ವೇಷಕ್ಕೂ ಸಾಕು ಪ್ರಾಣಿಗಳು ಬಲಿಯಾಗುತ್ತವೆ. ವಿಷ ಉಣಿಸಿಯೋ, ಅಪಘಾತ ಮಾಡಿಸಿಯೋ ಕೊಲ್ಲುವುದು ಮನುಷ್ಯರಾದವರು ಮಾತ್ರ ಮಾಡಬಹುದಾದ ನೀಚ ಕ್ರಿಯೆ. ಮತ್ತೆ ಕೆಲವು ಕಡೆ ತಮಗೆ ಆಗದವರ ಮೇಲೆ ನಾಯಿಗಳನ್ನು ‘ಚೂ..’ ಬಿಟ್ಟು ಕಚ್ಚಿಸುವುದೂ ಉಂಟೆಂಬ ವಿಷಯ ಗೊತ್ತಾದಾಗ ಭಯವಾಗುತ್ತದೆ.
ಹೆಸರಿನಲ್ಲಿ ‘ಸಮಾಜಶಾಸ್ತ್ರಜ್ಞೆ’ ಎಂದು ಇರುವುದರಿಂದ ಆಕೆ ಯಾರು? ಎಂಬ ಕುತೂಹಲದೊಡನೆ ಕತೆಗೆ ಪ್ರವೇಶ ಪಡೆದರೆ, ‘ನನ್ನ ಕಾಲದಲ್ಲಿ ಹೀಗಿತ್ತೆ? ನಾಲ್ಕು ದಿನದ ಮದುವೆ. ಈಗಿನದೆಲ್ಲಾ ಎಂತದು, ಬರೀ ನಾಟಕದ ಹಾಗೆ’ ಎಂದು ಗೊಣಗುತ್ತಾ ಸಮಾಜದ ಬದಲಾವಣೆಯ ಬಗ್ಗೆ ತಮ್ಮ ಟೀಕೆ-ಟಿಪ್ಪಣಿಗೆ ತೊಡಗುವುದರಿಂದ ಎದುರಾಗುವ ವಾಗತ್ತೆಯೇ ಸಮಾಜಶಾಸ್ತ್ರಜ್ಞೆ ಇರಬಹುದೇ ಎಂದು ಸಂಶಯಪಡಬೇಕಾಗುತ್ತದೆ. ಆದರೆ ವಾಗತ್ತೆ ಹಾಗೆ ಸಂಶಯಪಡಲು ಒಂದು ನಿಮಿತ್ತ ಜೀವ.
