ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಬ್ಬಿಗರ ಅಬ್ಬಿ, ಕಾವ್ಯಯಾನ

ಒಬ್ಬಂಟಿ…!

ಕವಿತೆ ಒಬ್ಬಂಟಿ…! ಡಾ. ಅರಕಲಗೂಡು ನೀಲಕಂಠ ಮೂರ್ತಿ. ಅನಾಥಎಲ್ಲ ಒಬ್ಬೊಬ್ಬರೂ ಅಪ್ರತಿಮಅನಾಥತೆಯ ಒಬ್ಬಂಟಿ! ಇರುವವರೆಲ್ಲ ಒಂದಿನಿತು ಇದ್ದುಎದ್ದು ಎತ್ತೆತ್ತಲೋ ಸಾಗುವವರುಬರುವವರೆಲ್ಲ ಸಹ ಕ್ಷಣಕಾಲಬಂದು ಹಾಗೇ ಹೋಗುವವರು ಕೊನೆಗೆಮತ್ತೆ ಒಬ್ಬಂಟಿಮತ್ತೆ ಮತ್ತೆ ಅಂಥದೇ ಒಬ್ಬಂಟಿತನಆಜೀವಪರ್ಯಂತ…ಇದು ಬದುಕುಯಾರಿದ್ದರೇನುಎಲ್ಲರೂ ಕೂಡಿದಂತೆ ಇದ್ದರೇನುಎಲ್ಲರ ನಡುವೆಯೇತಾನಿದ್ದೂ ಇಲ್ಲದಂಥತುಂಬು ಒಬ್ಬಂಟಿತನಬಾಧಿಸುವ ಒಬ್ಬಂಟಿಯಾಗಿ…!ಅತೀ ದೊಡ್ಡ ಮನೆಯಕಂಬಗಳ ಸುತ್ತ ಬಳಸಿಬದುಕಿದ ಹಾಗೆ… ಬದುಕು ಕ್ರೂರ ಹಲವರಿಗೆಧನ್ಯವಾದ ಓ ಬದುಕೆಮತ್ತೆ ಮತ್ತೆ ನಿನಗೆನಿನ್ನ ಥಳಕು ನಾಟಕಕೆಧನ್ಯವಾದ ಓ ಬದುಕೇ…! ಎಲೆ ಯಾತನಾಮಯ ಬದುಕೆಇಷ್ಟೊಂದು ಯಾತನೆ ಏತಕೆಯಾತನೆ ಇಲ್ಲದ ಬದುಕಬದುಕಲೊಲ್ಲೆಯಾ ನೀ ಓ ಬದಕೆಅಥವ ಅಂಥ ಬೆಳಕಿನ ಬದುಕನೀಡಲೊಲ್ಲೆಯಾ ಒಮ್ಮೆ ನಮಗೆ…? ಹೌದುಇಷ್ಟೊಂದು ಯಾತನಾಸಮೂಹಗಳ ನಡುವೆಅಲ್ಲೊಂದು ಇಲ್ಲೊಂದುಸಂತಸದ ಬೆರಗು ಕ್ಷಣಗಳೂ ಇವೆಬೆರಳ ಸಂದುಗಳ ಮಧ್ಯೆಬ್ಯಾಟರಿ ಬೆಳಕು ಬಿಟ್ಟ ಹಾಗೆ…!ಆ ಬೆಳಕ ಕಸುವು ತಾನೆ ಎಷ್ಟುಮತ್ತದು ನಿಲುವ ಸಮಯವೆಷ್ಟುಎಲ್ಲದರ ಮೊತ್ತ ಕೂಡಿದರುಇಡೀ ಬದುಕೊಂದರ ದಾರಿಉದ್ದಗಲಕು ತೋರಬಲ್ಲುದೆ ಬೆಳಕುಆ ಬೆಳಕು ಹೊನಲಾಗುವಷ್ಟು…?ಕನಸಲಿ ಕಂಡಂಥ ಮಹಾಮಹಲು! ಬಂದಂತೆಮತ್ತೆ ಅದೇ ದಾರಿ ಹಿಡಿದುಹೋಗೇ ಹೋಗುವಂತೆಒಬ್ಬೊಬ್ಬರೂ ಒಬ್ಬಂಟಿಬದುಕುವುದೂ ಹಾಗೆ ಖಾತರಿಗೋರಿಯೊಳಗೆ ಮಲಗಿದಂತೆ…ಒಬ್ಬಂಟಿಎಲ್ಲರೂ ಎಲ್ಲ ಕಡೆಮತ್ತೆ ಮತ್ತೆ ಒಬ್ಬಂಟಿನಿಶ್ಚಿತವಾಗಿ…! ********

ಒಬ್ಬಂಟಿ…! Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ ಮೌ..ನದ ನಡುವಿನ ಮೌನ ಸುಮಾರು ಮೂವತ್ತು ವರ್ಷಗಳ ಹಿಂದೆ ಕಾಡಿನ ನಟ್ಟ ನಡುವೆ, ಟೆಂಟ್ ನೊಳಗೆ ಮಲಗಿದ್ದೆ. ಚಿಕ್ಕಮಗಳೂರಿನ ಭದ್ರಾ ರಕ್ಷಿತಾರಣ್ಯದಲ್ಲಿ ಸ್ಕೌಟ್ ಕ್ಯಾಂಪ್ ಅದು. ವಿದ್ಯುತ್ ದೀಪಗಳು ಇರಲಿಲ್ಲ, ಕತ್ತಲು ಸುತ್ತಲೂ.  ವರ್ಷಗಳ ಹಿಂದೆ ದೂರ ನಕ್ಷತ್ರ ಗಳಿಂದ ಯಾತ್ರೆ ಹೊರಟು ಯಾತ್ರೆಯ ದಣಿವಿನಿಂದ ಮಂದವಾದ ಕಿರಣಗಳು, ತಂಗದಿರನ ಸೌಮ್ಯ ಬೆಳಕು ಮಾತ್ರ ಆ ಕಾಡನ್ನು ತಬ್ಬಿದ್ದವು. ಟೆಂಟು ಸುತ್ತಲೂ ಗಗನಕ್ಕೆ ಗೆಲ್ಲು ಚಾಚಿದ ಬೃಹತ್ ವೃಕ್ಷಗಳು. ಅವುಗಳಿಂದಾಚೆಗೆ ಕತ್ತಲೆ ಅಂದರೆ ಕತ್ತಲೆಯೇ. ಟೆಂಟ್ ನೊಳಗೆ ಕಣ್ಣೆಷ್ಟು ಅರಳಿಸಿದರೂ ಅರಿವಿಗೇ ಎಟುಕದಟಷ್ಟು ಕತ್ತಲೆ. ಅದಕ್ಕಿಂತ ಗಾಢ ಅನುಭೂತಿ ಮೌನದ್ದು. ಎಲ್ಲೋ ದೂರದ ಪ್ರಾಣಿಗಳ ಕೂಗನ್ನು ಬಿಟ್ಟರೆ ಅಲ್ಲಿ ಶಬ್ಧಶೂನ್ಯತ್ವ. ಆ ಮೌನದ ತಂಪಿನಲ್ಲಿ ಮನಸ್ಸು ತಣಿದು ಸೂಕ್ಷ್ಮ ಸಂವೇದನೆಗಳು ಜಾಗೃತವಾಗುತ್ತೆ. ನಮ್ಮ ಎದೆಬಡಿತ ನಮಗೇ ಕೇಳ ತೊಡಗುತ್ತೆ. ಸಾಗರದ ಅಲೆಗಳು ಶಾಂತವಾದಾಗ ಆಳದಲ್ಲಿ ಸದ್ದಿಲ್ಲದೆ ನಡೆಯುವ ಹರಿವಿನ ಅನುಭೂತಿ ಆಗುತ್ತೆ. ಆಳದಲ್ಲಿ ಈಜಾಡುವ ಮೀನುಗಳು, ಬೃಹತ್ ತಿಮಿಂಗಿಲಗಳು, ರಕ್ತಕ್ಕಾಗಿ ಹಸಿದು ಅಸಹನೆಯಿಂದ ಸರಸರನೆ ಈಜುವ ಶಾರ್ಕ್ ಗಳು ಮತ್ತು ಇನ್ನಿತರ ಜಲಚರಗಳು ತಮ್ಮ ಚಲನೆಯಿಂದ ನಡೆಯುವ ತಲ್ಲಣಗಳು ಅರಿವಿಗೂ ಬರುತ್ತವೆ. ಹೃಷೀಕೇಶದ ತಪ್ಪಲಿನಿಂದ, ಹಿಮಾಲಯದ ಏರು ಆರಂಭ. ಹತ್ತಾರು ಕಿಲೋಮೀಟರ್ ಹತ್ತಿದರೆ ವಸಿಷ್ಠ ಗುಹೆ. ಅದರೊಳಗೆ ಕುಳಿತರೂ ಅಷ್ಟೇ, ರಾತ್ರೆಯ ಕತ್ತಲು, ಹಿಮಾಲಯದ ತಂಪಿಗೆ, ಮನಸ್ಸು ಸ್ಪಟಿಕೀಕರಿಸಿ ಮೌನ ಸಂಭವಿಸುತ್ತೆ. ಒಂದು ವಿಷಯ ಗಮನಿಸಿ. ಮೌನ ಎಂದರೆ ನಾಲಿಗೆಯನ್ನು ಸುಮ್ಮನಿರಿಸುವುದಲ್ಲ, ಕಿವಿ ಮುಚ್ಚುವುದೂ ಅಲ್ಲ. ನಮ್ಮ ಇಂದ್ರಿಯಗಳು ಹೊರಗಿನ  ಅಲೆಗಳಿಗೆ ಸ್ಪಂದಿಸುತ್ತಲೇ ಇರುತ್ತವೆ. ದೃಶ್ಯ, ಶಬ್ದ, ಸ್ಪರ್ಶ, ರಸಸ್ವಾದ, ವಾಸನೆ ಇವುಗಳನ್ನು ಗ್ರಹಿಸಿ ಪ್ರತಿಕ್ರಿಯೆ ಕೊಡುತ್ತವೆ. ಇವು ದೇಹದ ಚಟುವಟಿಕೆಗಳಿಗೆ ಅಗತ್ಯವೂ ಹೌದು. ಮೌನದ ಮೊದಲನೆಯ ಹಂತದಲ್ಲಿ, ಈ ಇಂದ್ರಿಯಗಳನ್ನು ಸಂಪೂರ್ಣ ಶಾಂತವಾಗಿಸಬೇಕು. ಅದು ಮೌನದ ಮೊದಲ ಹಂತ. ಮೌನದ ಎರಡನೆಯ ಹಂತದಲ್ಲಿ, ಭಾವ ಮತ್ತು ಕಲ್ಪನೆಗಳನ್ನು ಮೌನಕ್ಕೆ ಶರಣಾಗಿಸುವ ಕ್ರಿಯೆ. ಕಣ್ಣು ಮುಚ್ಚಿದರೆ, ಹೊರಗಿನ ದೃಶ್ಯ ಕಾಣದಿರಬಹುದು. ಆದರೆ ಮನಸ್ಸು, ಇಷ್ಟವಾದ, ಹಲವು ದೃಶ್ಯಗಳನ್ನು ಮನ:ಪಟಲದ ಮುಂದೆ ತಂದು ಆನಂದಿಸುತ್ತದೆ. ಹಾಗೆಯೇ ಶಬ್ಧವೂ. ಕಿವಿ ಮುಚ್ಚಿದರೂ, ಮನಸ್ಸಿನೊಳಗೆ ಇಷ್ಟವಾದ ಯಾವುದೋ ಹಾಡು, ಇನಿಯೆಯ ಪ್ರೀತಿಯ ಮಾತುಗಳು, ಮೇಷ್ಟ್ರು ಬೈದ ಮಾತುಗಳು, ಹೀಗೆ ಹತ್ತು ಹಲವು ಶಬ್ಧಗಳು ನಿಃಶಬ್ಧದ ಬಾಗಿಲು ಮುರಿದು ಒಳ ನುಗ್ಗುತ್ತವೆ. ಈ ಕಾನ್ಶಿಯಸ್ ಮೈಂಡ್ ಅನ್ನು ಮೌನವಾಗಿಸುವುದು ಎರಡನೆಯ ಹಂತ. ಮೂರನೆಯ ಹಂತದಲ್ಲಿ, ಧ್ಯಾನಕ್ಕೆ ಮನಸ್ಸನ್ನು ಸಮರ್ಪಿಸಿದರೆ, ಮೌನದ ತುರೀಯಕ್ಕೆ ಪ್ರಜ್ಞೆ ತಲಪುತ್ತೆ. ಇದರ ಬಗ್ಗೆ ಬೇಂದ್ರೆಯವರು ಹೀಗೆ ಹೇಳುತ್ತಾರೆ.  “ಮೌನವು ಮಾತಿನ ತಪಸ್ಸು- ಮೊದಲ ಮೆಟ್ಟಿಲು. ಎರಡನೆಯ ಮೆಟ್ಟಿಲಲ್ಲಿ ಅದು ಮೌನದ ಅವಸ್ಥಾ ಶಿಖರ! ನಿಜವಾದ ಉತ್ತಮ ಮೌನವು ಮನದ ಗೌರೀಶಂಕರ, ಧವಲಗಿರಿ” ಅರಬಿಂದೋ ಅವರ ಧ್ಯಾನ ಯೋಗದಿಂದ ಪ್ರೇರಣೆ ಪಡೆದು ೧೯೪೮ರಲ್ಲಿ, ಬೇಂದ್ರೆ ಮತ್ತು ವಿ.ಕೃ. ಗೋಕಾಕ್ ಅವರು, ಇತರ ಸಮಾನ ಮನಸ್ಕ ಗೆಳೆಯರ ಜತೆಗೆ ಮೌನ ಸಪ್ತಾಹ ಆಚರಿಸುತ್ತಾರೆ. ಆ ಮೌನ ಸಪ್ತಾಹದಲ್ಲಿ, ಮೌನಾಚರಣೆಯ ಗರ್ಭದ ಆಳಚಿಂತನೆಯಿಂದ ಅವರು ಬರೆದ ಕವನ ” ಅಸ್ಮಿತಾ” ಅದರ ಕೊನೆಯ ಸಾಲುಗಳು ಹೀಗಿವೆ. “ತಾಯಿ ಕೂಸಿನ ಮುದ್ದು ಮೌನದಲಿ ಮಿಡಿದಾಗ ಶ್ರುತಿಯನ್ನು ಹಿಡಿದಿರುವೆಯಾ ? ಧ್ಯಾನ ಪಕ್ವತೆ ಪಡೆದು ಮೌನ ಬೀಜವು ಸಿಡಿದು ಓಂವೇದ ಪಡೆದಿರುವೆಯಾ ? ಸ್ಮಿತವೆ ವಿಸ್ಮಿತವಾಯ್ತು ಅಸ್ಪರ್ಶ ಸ್ಪರ್ಶದಲಿ ಅಸ್ಮಿತೆಯು ಸ್ಫೂರ್ತಿಸಿತ್ತು ವಿಸ್ಮಿತದ ಸ್ತಿಮಿತದಲಿ ಮೌನವೇ ಧ್ವನಿಸುತಿರೆ ಸ್ಮಿತವಾಗಿ ಮೂರ್ತಿಸಿತ್ತು.” ಮೌನದಾಚೆಗಿನ ಧ್ಯಾನಸ್ಥ ಸ್ಥಿತಿಯಿಂದ, ” ಸ್ಮಿತವೆ ವಿಸ್ಮಿತವಾಯ್ತು, ಅಸ್ಪರ್ಶ ಸ್ಪರ್ಶದಲಿ ಅಸ್ಮಿತೆಯು ಸ್ಪೂರ್ತಿಸಿತ್ತು, ” ಶಬ್ದಗಳ ಶಬ್ಧಕ್ಕೆ ಮೀರಿದ ಸಾಲುಗಳಿವು. ಕಳಿಂಗ ಯುದ್ಧದ ನಂತರದ ರಾತ್ರೆ, ಚಕ್ರವರ್ತಿ ಅಶೋಕ ತಾನೇ ಹರಿಸಿದ ರಕ್ತದ ಕೋಡಿಯನ್ನು ನೋಡಿ ಹಲವು ಚಿಂತನೆಗಳಿಗೊಳಗಾಗುತ್ತಾನೆ. ರಾತ್ರೆಯಿಡೀ ಆತನ ಮೌನ, ಮಾರನೆಯ ದಿನ ತನ್ನ ಬದುಕನ್ನೇ ಅಹಿಂಸೆಗೆ ಸಮರ್ಪಣೆ ಮಾಡುವ ನಿರ್ಧಾರದ ಹಿಂದೆ ಯುದ್ಧಾನಂತರದ ಮೌನವಿದೆ. ಧಾರಾಕಾರವಾಗಿ ಸುರಿದ ಮಳೆ, ಸಿಡಿಲು, ಕೋಲ್ಮಿಂಚು, ನಂತರ ಎಲ್ಲವೂ ಮೌನವಾಗುತ್ತೆ. ತಡೆಯಲಾದ ದುಃಖದಿಂದ ಬಿಕ್ಕಿ ಬಿಕ್ಕಿ ಅತ್ತ ನಂತರವೂ ಒಂದು ಸುದೀರ್ಘ ಮೌನವಿರುತ್ತದೆ. ಗಂಡ ಹೆಂಡತಿಯರ ಜಗಳದ ನಂತರದ ಮೌನಕ್ಕೆ ಔಷಧೀಯ ಗುಣವಿದೆ. ಮೌನ ಖಾಲಿ ಹಾಳೆಯಂತೆ. ಅದರಲ್ಲಿ ನೀವೇನು ಕಾಣ ಬಯಸುತ್ತೀರೋ,ಅದನ್ನು ಬರೆಯಬಹುದು. ಅದಕ್ಕೇ ಮೌನವನ್ನು ಕವಿಗಳು ಕಾಡಿ ಕಂಡು ಹಾಡಿ, ಬಳಸಿದ್ದಾರೆ. ಬೇಂದ್ರೆಯವರ “ಏಲಾಗೀತ” ದಲ್ಲಿ ಮೌನದ ಅಪೂರ್ವ ಸಾಲು ಹೀಗಿದೆ. “ಸ್ವಾದದ ನಾದದ ಮೋದದ ಒಳಬಸಿರನೆ ಬಗೆದು ಹುಂಕಾರದ ಒಳನೂಲನು ಮೆಲ್ಲನೆ ಹೊರದೆಗೆದು  ಶಬ್ದಕೆ ಹಾಸಿಗೆಯಾಗಿಹ ತನಿಮೌನದಿ ಮುಗಿದು. “ ಮೌನ, ಶಬ್ಧಕ್ಕೆ ಹಾಸಿಗೆ ಅನ್ನುತ್ತಾರೆ,ಬೇಂದ್ರೆಯವರು ಗೋಪಾಲಕೃಷ್ಣ ಅಡಿಗರ ಈ ಕೆಳಗಿನ ಕವನ ಆರಂಭವಾಗುವುದೇ ಮೌನದಿಂದ. “ಮೌನ ತಬ್ಬಿತು ನೆಲವ; ಜುಮ್ಮೆನೆ ಪುಳಕಗೊಂಡಿತು ಧಾರಿಣಿ ನೋಡಿ ನಾಚಿತು ಬಾನು; ಸೇರಿತು ಕೆಂಪು ಸಂಜೆಯ ಕದಪಲಿ ಹಕ್ಕಿಗೊರಲಿನ ಸುರತಗಾನಕೆ ಬಿಗಿಯು ನಸುವೆ ಸಡಿಲಿತು ಬೆಚ್ಚಬೆಚ್ಚನೆಯುಸಿರಿನಂದದಿ ಗಾಳಿ ಮೆಲ್ಲನೆ ತೆವಳಿತು ಇರುಳ ಸೆರಗಿನ ನೆಳಲು ಚಾಚಿತು, ಬಾನು ತೆರೆಯಿತು ಕಣ್ಣನು; ನೆಲವು ತಣಿಯಿತು, ಬೆವರು ಹನಿಯಿತು; ಭಾಷ್ಪ ನೆನೆಸಿತು ಹುಲ್ಲನು ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು, ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು” ಭೂಮಿಯೇ ಮೌನವನ್ನು ಬೆಚ್ಚಗೆ ಅಪ್ಪಿಕೊಂಡು ಪುಳಕಗೊಳ್ಳುವಾಗ, ಆಕೆ ಧಾರಿಣಿಯಾಗುತ್ತಾಳೆ. ಹಿಂದುಸ್ತಾನಿ ಸಂಗೀತದಲ್ಲಿ, ಒಂದು ಸ್ವರವನ್ನ ಬಿಗಿ ಹಿಡಿದು ಕಡಿಯದ ಧಾರೆಯಂತೆ ಮಾಡುವ ಸುದೀರ್ಘ ಆಲಾಪಕ್ಕೆ, ಧಾರಣೆ ಅನ್ನುವುದಿದೆ. ಧಾರಣೆಯಲ್ಲಿ ಸ್ವರಸಮರ್ಪಣೆಯ ಧ್ಯಾನಸ್ಥ ಮನಸ್ಸಿದೆ. “ಮೌನ ಉರುಳಿತು, ಹೊರಳಿತೆದ್ದಿತು; ಗಾಳಿ ಭೋರನೆ ಬೀಸಿತು, ತೆಂಗುಗರಿಗಳ ಚಾಮರಕೆ ಹಾಯೆಂದು ಮೌನವು ಮಲಗಿತು” ಪ್ರಕೃತಿಯ ಕ್ರಿಯೆಗಳು ಮೌನವನ್ನು ಜತೆ ಜತೆಗೇ ಹೊತ್ತು ತರುತ್ತವೆ. ನಾವು ನಡೆಯುವಾಗ, ಎರಡು ಹೆಜ್ಜೆಗಳ ನಡುವೆ ಮೌನವಿದೆ. ನಾವು ಬರೆಯುವ ವಾಕ್ಯಗಳಲ್ಲಿ ಪದಗಳ ನಡುವೆ ಮೌನವಿದೆ. ಸ್ಫುರಿಸುವ ಭಾವ ವೈವಿಧ್ಯಗಳ ನಡುವೆ ಮೌನವಿದೆ. ನಿತ್ಯಕವಿ ನಿಸಾರ್ ಅಹಮದ್ ಅವರ ಬೇಸರಾಗಿದೆ ಮಾತು ಕವನದ ಕೆಲವು ಸಾಲುಗಳು ಹೀಗಿದೆ ನೋಡಿ. ” ಬೇಸರಾಗಿದೆ ಮಾತು, ಭಾರವಾಗಿದೆ ಮೌನ ನೋವು ಕರಗಿದೆ ಕಣ್ಣಲ್ಲಿ ಅಡಿಗೆ ಚುಚ್ಚಿದ ಮುಳ್ಳು ಒಳಗಡೆಯೆ ಮುರಿಯದಂತೆ ಭಾವ ಕುಟುಕಿದೆ ಮನದಲಿ ಸಿಪ್ಪೆ ತಿರುಳನು ಉಳಿದು ಮಣ್ಣಿಗುರುಳಿದ ಬೀಜ ಕನಸುವಂತೆಯೆ ಮೊಳಕೆಗೆ ಎಲ್ಲ ನಂಟನು ತೊರೆದು ನಗ್ನವಾಗಿದೆ ಜೀವ ಹೊಸತು ಬದುಕಿನ ಬಯಕೆಗೆ” ಅಡಿಗೆ ಚುಚ್ಚಿದ ಮುಳ್ಳು, ಒಳಗಡೆಯೆ ಮುರಿದು, ನೋವೇ ಕಣ್ಣೀರಲ್ಲಿ ಕರಗಿದ ದುಃಖದಿಂದ, ಮೌನ ಸಹಜವೂ ಹೌದು, ಆ ಮೌನ ಭಾರವೂ ಹೌದು. ಆದರೆ ಅಂತಹ ಮೌನ ನೋವಿನ ಹಿಂದಿನ ಬಂಧನದ ಅರಿವನ್ನು ತಿಳಿಯಾಗಿಸಲು ದಾರಿಯಾಗುತ್ತೆ. ಎಲ್ಲ ನಂಟನು ತೊರೆದು ನಗ್ನವಾದ ಜೀವ, ಹೊಸ ಬದುಕಿನತ್ತ ಕದ ತೆರೆಯುತ್ತೆ. ಈ ಎಲ್ಲ ನಂಟನು ತೊರೆದು ನಗ್ನವಾಗುವ ಕ್ರಿಯೆಯ ಮೂಲದಲ್ಲಿ ಮೌನ ಸೃಜಿಸಿದ ಮಂಥನವಿದೆ. ಹುಟ್ಟಿದ ನೆಲದಿಂದ ಗಿಡವನ್ನು ಕಿತ್ತು ತೆಗೆದರೆ ಗಿಡಕ್ಕೆಷ್ಟು ನೋವಾಗಬಹುದು. ಹಾಗೆ ಬೇರು ಸಹಿತ ಕಿತ್ತ ಗಿಡವನ್ನು ದೂರದ ಅರಿಯದ ಹೊಲದಲ್ಲಿ ನೆಟ್ಟರೆ?. ಮದುವೆಯಾಗಿ ಪ್ರೀತಿಯ ತನ್ನ ಮನೆ  ತವರುಮನೆಯಾಗುವ ಮಾರ್ಪಾಡಿನಲ್ಲಿ, ತಿಳಿಯದ ಇನ್ನೊಂದು ಮನೆ ಸ್ವಂತದ್ದಾಗಿಸಲೇ ಬೇಕಾದ ಟ್ರಾನ್ಸಿಷನ್ ಹೂಮನಸ್ಸಿನ ಹುಡುಗಿಗೆ ಹೇಗನಿಸಬಹುದು?. ಗಂಡನ ಮನೆಯ ಆ ಮೊದಲ ದಿನದ ಮೌನದ ಬಗ್ಗೆ ಬಹುಷಃ ಕೆ ಎಸ್ ನ ಅವರಿಗಿಂತ ಚಂದ ಯಾರೂ ಬರೆಯಲಾರರು. “ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ ಚಿಂತೆ ಬಿಡಿ ಹೂವ ಮುಡಿದಂತೆ ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ ಜೀವದಲಿ ಜಾತ್ರೆ ಮುಗಿದಂತೆ” ಅಂತಹ ತಳಮಳ, ತನ್ನವರ ಅಗಲಿಕೆಯ ದುಃಖ,  ಭಾವೋದ್ವೇಗ, ಭಯ, ಎಲ್ಲವನ್ನೂ ಈ ಮೊದಲ ದಿನ ಮೌನ, ಮೌನವಾಗಿಯೇ ಹೇಳಿಬಿಡುತ್ತೆ. ಪು ತಿ ನ ಅವರ “ಯದುಗಿರಿಯ ಮೌನ ವಿಕಾಸ” ಎಂಬ ಕವನವೂ ಮೌನ ಪ್ರತಿಮೆಯ ಸುತ್ತ ಹಲವು ರೂಪಗಳ ಕೆತ್ತಿದೆ.. ಈ ಕವಿತೆಯ ಬಗ್ಗೆ ಬರೆಯಲು ಒಂದು ಪೂರ್ತಿ ಲೇಖನವೂ ಸಣ್ಣದಾದೀತು, ಮುಂದೊಂದು ದಿನ ಬರೆಯುವೆ. “ಅಲೆಯೊಳಗಿನ ಮೌನ”  ಎಂಬ ಗಜಲ್ ಸಂಕಲನದಲ್ಲಿ ಶ್ರೀದೇವಿ ಕೆರೆಮನೆ ಅವರ ಕವಿತೆಯೂ ಪ್ರೀತಿ ಸಂವಾದದ ಸಾಲುಗಳಲ್ಲಿ ಮೌನಕ್ಕೆ ಹಲವು ಅರ್ಥಪ್ರಯೋಗ ಮಾಡಿದೆ. “ಯುಗಾಂತರದಿಂದಲೂ ಮೌನಕ್ಕೆ ಜಾರಿದಂತೆ ಮನಸ್ಸು ಹೆಪ್ಪುಗಟ್ಟುತ್ತಿದೆ ನಿನ್ನ ಒಂದು ಮಾತು ನನ್ನ ಬದುಕಿಗೆ ಮರಳುವಂತೆ ಮಾಡುತ್ತಿದೆ ಮೌನದಿಂದ ನನ್ನನ್ನು ಕೊಲ್ಲುವ ಇರಾದೆ ಏಕೆ ನಿನಗೆ ನಿನ್ನ ಮೌನ ನನ್ನನ್ನು ಇರಿದಿರಿದು ಸಾಯಿಸುತ್ತಿದೆ. ಮುಗಿದ ಮಾತುಗಳ ಮೌನದರಮನೆಗೆ ರಾಣಿಯಾಗಲಾರೆ ಅರಮನೆಯ ಸಂಕಲೆ ನನ್ನನ್ನು ದಿಕ್ಬಂಧನಕ್ಕೆ ಒಳಪಡಿಸುತ್ತಿದೆ ಮಾತಿಗೂ ಬರಗಾಲ ತಂದಿಡುವ ಆಶಯವಾದರೂ ನಿನಗೇಕೆ? ಮಾತು ಈಗ ದೂರದಲ್ಲಿ ಸೆಳೆಯುವ ಮೃಗಜಲದಂತೆ ಗೋಚರಿಸುತ್ತಿದೆ. ಸಾಕುಬಿಡು ನಿನ್ನ ಗಾದೆ ಮಾತಿನ ಥಳುಕಿಗಷ್ಟು ಬೆಂಕಿಯಿಡು ಬದುಕಿಸುವ ಮಾತಿನ ಬೆಳ್ಳಿಗಿಂತ ಮೌನದ ಬಂಗಾರ ಕೊಲ್ಲುತ್ತಿದೆ. ಎಂದಾದರೂ ಬದುಕು ಮೌನದ ಕಣಿವೆಯೊಳಗೆ ಜಾರಲೇ ಬೇಕು ‘ಸಿರಿ’ ಒಂದಾಗಿಸುವ ಮೃದು ಮಾತನ್ನಷ್ಟೇ ಬೇಡುತಿದೆ.” ಮೌನ ವಿರಹಸೂಚಕವಾಗಿ, ಮೌನವೇ ಎದೆಗಿರಿಯುವ ಆಯುಧವಾಗಿ, ಮೌನ ಅರಮನೆಯಾಗಿ, ಸಂಕಲೆಗಳಾಗಿ,  ಮಾತಿನ ಬರಗಾಲವಾಗಿ,  ಮೌನ,ಬದುಕಿನ ಅನಿವಾರ್ಯ ಕಣಿವೆಯಾಗಿ ಚಿತ್ರಿಸಲ್ಪಟ್ಟದ್ದು ಕವಯಿತ್ರಿಯ ಸೃಜನಶೀಲತೆಗೆ ಸಾಕ್ಷಿ. ಅಲೆಯೊಳಗಿನ ಮೌನ ಎಂಬ ಸಂಕಲನದ ಶೀರ್ಷಿಕೆಗೂ ವಿಶೇಷ ಅರ್ಥವಿದೆ. ನಾದ ಎಂಬುದು ಒಂದಕ್ಕೊಂದು ಜೋಡಣೆಯಾಗಿ ಕಾಲಗತಿಯಲ್ಲಿ ಸಂಚರಿಸುವ ಅಲೆಯ ಪ್ರವಾಹ. ಆ ನಾದದೊಳಗೆ, ತರಂಗಾವರ್ತನಗಳೊಳಗೆ ಮೌನ ಕಾಣುವ ಅನನ್ಯ ನೋಟ ಕವಯಿತ್ರಿ ಅವರದ್ದು. ಜನವರಿ ಇಪ್ಪತ್ತಾರು, ಕೆ ಎಸ್ ನ ಅವರ ಮತ್ತು ಮೂವತ್ತೊಂದು ಬೇಂದ್ರೆಯವರ ಜನ್ಮ ದಿನ. ಅವರಿಬ್ಬರ ದಿವ್ಯ ಭವ್ಯ ಚೇತನಗಳಿಗೆ ಶಿರಬಾಗಿ ನಮಿಪೆ. ********************************************************** ಮಹಾದೇವ ಕಾನತ್ತಿಲ ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ ಕಾವ್ಯೋದ್ಭವ “ಗುರುಗಳೇ, ನನಗೆ ಸಂಗೀತ ಕಲಿಯಬೇಕು! ಕಲಿಸುವಿರಾ..” ಅಲ್ಲಲ್ಲಿ ಹರಿದರೂ ತಕ್ಕಮಟ್ಟಿಗೆ ಒಪ್ಪವಾಗಿದ್ದ ಅಂಗಿ, ಖಾಕಿ ಚಡ್ಡಿ ಧರಿಸಿದ ಹುಡುಗ, ‘ಧ್ರುಪದ್ ಗಂಧರ್ವ’ ಮನೆ ತಲಪಿದ್ದ. ಮನೆಯ ಬಂಧನ ಬಿಟ್ಟು, ಎರಡು ದಿನ, ಮೂರು ರಾತ್ರೆ ರೈಲು ಯಾತ್ರೆ ಮಾಡಿದಾಗ, ಹೊತ್ತು ತಂದದ್ದು ಕಪ್ಪು ಕಣ್ಣುಗಳ ತುಂಬಿದ ಕನಸು ಮಾತ್ರ. ಕಣ್ಣಲ್ಲಿ ಕಣ್ಣಿಟ್ಟು ಒಳಗಿನ ಭಾಷೆಯನ್ನು ಅರ್ಥ ಮಾಡಿಕೊಂಡವರಂತೆ ಗುರುಗಳು ಒಪ್ಪಿಕೊಂಡರು. ಗುರುಗಳ ಮನೆಯಲ್ಲಿಯೇ ವಾಸ. ಬೆಳಗ್ಗೆ ಗಡಿಯಾರದ ಲೋಲಕ ಢಣ್ ಢಣ್ ಎಂದು ನಾಲ್ಕು ಬಾರಿ ಆಂದೋಳಿಸಿದಾಗ ಎದ್ದು ಮನೆ,ಅಂಗಳ ಗುಡಿಸಬೇಕು. ಆ ಮೇಲೆ ಬಾವಿಯೊಳಗೆ ಬಿಂದಿಗೆಯಿಳಿಸಿ ಒಂದೊಂದೇ ಬಿಂದಿಗೆ ನೀರನ್ನು ತಂದು ಮನೆಯ, ಬಚ್ಚಲು ಮನೆಯ,ಅಡುಗೆ ಮನೆಯ ಹಂಡೆ ತುಂಬುವ ಕೆಲಸ. ಗುರುಗಳ ಅಂಗಳದಲ್ಲಿ ತಂಬೂರಿ ಕೂಡಾ ೫ ಗಂಟೆಗೇ ಎದ್ದು ಸ್ವರ ಹಚ್ಚಲು ತಂತಿ ಬಿಗಿ ಮಾಡುತ್ತಿತ್ತು. ತಂಬೂರಿಯ ಮಂದ್ರ ಶಡ್ಜಕ್ಕೆ  ಗುರುಗಳು ಸ್ವರ ಹಚ್ಚುವಾಗ, ಉಳಿದ ಶಿಷ್ಯರು ತಮ್ ತಮ್ಮ ಕೊರಳನ್ನೂ ಸೇರಿಸಿದಾಗ ಅನುರಣನೆಗೆ, ಬೆಳಗಿನ ಮಂಜು ಕರಗುತ್ತಿತ್ತು. ಪೂರ್ವದಿಗಂತ ವರ್ಣಮಯವಾಗುತ್ತಿತ್ತು. ಗುರುಗಳ ಮನೆಗೆ ತಲಪಿದ್ದು ಅಮವಾಸ್ಯೆಯ ದಿನ. ಇಂದು ಆಗಲೇ ಹುಣ್ಣಿಮೆ. ರಾತ್ರೆ ಗುರುಗಳ ಪಾದ ಒತ್ತುತ್ತಾ ಹುಡುಗ ಅನ್ನುತ್ತಾನೆ. ” ಗುರುಗಳೇ, ನನಗೆ ಸಂಗೀತ ಪಾಠ ದಯವಿಟ್ಟು ಶುರುಮಾಡಿ” ” ಬೇಟೇ! ನಿನ್ನ ಸಂಗೀತ ಪಾಠ ಆಗಲೇ ಆರಂಭವಾಗಿದೆ. ರಾತ್ರೆಯ ಮೌನದಲ್ಲಿಯೂ ಪ್ರಕೃತಿಯ ಸಂಗೀತ ಆಲಿಸು. ಗಡಿಯಾರದ ಲೋಲಕದ ಆಂದೋಲನದಲ್ಲಿ ಇಂಪಿನಲೆ ಇಲ್ಲವೇ?. ಬಾವಿಯೊಳಗೆ ಬಿಂದಿಗೆ ನೀರನ್ನು ಸ್ಪರ್ಶಿಸಿದಾಗ ಆದ ಕಂಪನ ಬಾವಿಯೊಳಗಿಂದ ಮೊಳಗುವಾಗ ಅದರಲ್ಲಿ ಸಂಗೀತ ಆಲಿಸಿರುವೆಯಾ?. ಇಬ್ಬನಿಯ ಒಂದೊಂದೇ ಬಿಂದುಗಳು ತೊಟ್ಟಿಕ್ಕುವಾಗ ಅದರೊಳಗಿಂದ ಸ್ಪಂದಿಸುವ ಸ್ವರ ಸಾಮರಸ್ಯ ನೋಡಿರುವೆಯಾ?. ಇಂದು ಹುಣ್ಣಿಮೆಯ ರಾತ್ರಿ. ಕಿಟಿಕಿಯ ಹೊರಗೆ ನೋಡು. ಚಂದ್ರನ ಬೆಳಕಿನ ಉತ್ಕರ್ಷದಲ್ಲಿ ಪ್ರಕೃತಿಯ ಜೀವತಂತುಗಳು ಮಿಡಿಯುವ ಸಂಗೀತ ಕೇಳಿಸುತ್ತಿದೆಯಾ?. ಮಗೂ, ನಿನಗದು ಕೇಳಿಸಲು ನಿನ್ನ ಮನಸ್ಸೊಳಗೆ ಮೌನವನ್ನು ತುಂಬಿಸಬೇಕು. ಅಲೆಗಳು ಮೌನದ ನೆಲೆಯಲ್ಲಿ ಯೋಗ ಸಮಾಧಿ ಹೊಂದಬೇಕು.ಬೇಟಾ, ಅಂತಹ ಒಂದು ಶಾಂತಿಯ ಪ್ರಜ್ಞೆಯನ್ನು ಕ್ಷಣ ಕ್ಷಣವೂ ಅನುಭವಿಸುತ್ತಾ ಪ್ರಕೃತಿಯನ್ನು ಗಮನಿಸು. ಆಗ ಜೀವಕ್ರಿಯೆಯ ಪ್ರತೀ ಕ್ಷಣಗಳಲ್ಲಿ ಜೀವಲಯ, ಜೀವಸ್ವರ, ಭಾವತರಂಗ ನಿನಗೆ ಕೇಳಿಸುತ್ತೆ. ಆ ಸ್ವರ ಲಯ,ಭಾವದಲ್ಲಿ ಒಂದಾಗುವ, ತಾದಾತ್ಮ್ಯ ಅನುಭವಿಸುವ ಮನಸ್ಸು ನಿನಗೆ ಸಂಭವಿಸಲಿ. ಸಂಗೀತದ ಜೀವಾತ್ಮ ನಿನ್ನೊಳಗೆಯೇ ಸಾಕ್ಷಾತ್ಕಾರ ಆಗಲು ಇದೊಂದೇ ಮಾರ್ಗ. ಪ್ರಕೃತಿಯೇ ನಿನ್ನ ಸಂಗೀತದ ಮೊದಲ ಗುರು, ಮಗೂ.” ಕ್ಷಮಿಸಿ! ಮೇಲಿನ ಕಥೆಯಂತಹಾ ಕಥೆ ಕಳೆದ ಶತಮಾನದಲ್ಲಿ ಸಂಗೀತ ಕಲಿತ ಹಲವು ಮಹಾನ್ ಸಂಗೀತ ಕಲಾಕಾರರ ಬಾಲ್ಯದ ಕಲಿಕೆಯ, ಕಷ್ಟದ, ಸಮರ್ಪಣೆಯ ಕಥೆಯೇ. ಪ್ರಪಂಚದ ಪ್ರತಿಯೊಂದು ಸ್ಥಿತಿಯಲ್ಲೂ ಸಿಮ್ಮಟ್ರಿ, ಸೌಂದರ್ಯ ಇರುವ ಹಾಗೆಯೇ, ಪ್ರತೀ ಕ್ರಿಯೆಯಲ್ಲಿ, ಲಯವಿದೆ, ತರಂಗವಿದೆ, ಆವರ್ತನವಿದೆ ಮತ್ತು ಸಂಗೀತವೂ ಇದೆ. ಕಾವ್ಯದ ಉಗಮದಲ್ಲಿಯೂ,ಈ ಭಾವಲಯ, ಭಾವತರಂಗ, ಮತ್ತು ತುರೀಯಾವಸ್ತೆ ಅಂತರ್ಗತವಾಗಿದೆ. ಸಂಗೀತವಿರಲಿ ಕಾವ್ಯವಿರಲಿ, ಮೂಡುವ ಕ್ಯಾನುವಾಸು ಮನಸ್ಸೇ ತಾನೇ. ಹೆಣ್ಣುಗಂಡಿನ ಮಿಲನದಿಂದ ಎರಡು ಜೀವಕೋಶಗಳು ಒಂದಾಗಿ, ಆ ಕೋಶ, ಸ್ವವಿಭಜನೆಯಿಂದ, ಎರಡಾಗಿ, ಮತ್ತೆ ನಾಲ್ಕಾಗಿ, ಹಲವು ಲಕ್ಷ ಪುನರಾವರ್ತನೆಗಳ ನಂತರ 27 ಟ್ರಿಲಿಯನ್ ( 27 ಲಕ್ಷ ಕೋಟಿ ) ಜೀವಕೋಶಗಳ ದೇಹರೂಪೀ ಮಗುವಾಗುವುದು ಸೃಷ್ಟಿಯ ವಿಸ್ಮಯ. ಅದಕ್ಕಿಂತ ದೊಡ್ಡ ವಿಸ್ಮಯ,  ಮನುಷ್ಯ ದೇಹದ, ಹೃದಯ, ಶ್ವಾಸಕೋಶ,, ಉದರ, ಕೈಕಾಲುಗಳು, ಮಿದುಳು, ಅಸಂಖ್ಯ ರಕ್ತನಾಳಗಳು ಹೇಗಿರಬೇಕು, ಎಲ್ಲಿರಬೇಕು, ಹೇಗೆ ಕೆಲಸ ಮಾಡಬೇಕು, ಇಷ್ಟೊಂದು ಎಂಜಿನಿಯರಿಂಗ್ ವ್ಯವಸ್ಥೆಗಳು ಹೇಗೆ ಟೀಮ್ ವರ್ಕ್ ಮಾಡ ಬೇಕು ಎಂಬ ಎಲ್ಲಾ ಜ್ಞಾನವೂ ಆ ಒಂದು ಕೋಶದೊಳಗಿಂದಲೇ ವಿಕಸಿತವಾಯಿತು ಎಂಬುದು. ಮಿದುಳಿನೊಳಗಿನ ಸಾಫ್ಟ್‌ವೇರ್ ಕೂಡಾ ಆ ಒಂದು ಕೋಶದೊಳಗಿಂದಲೇ ಇವಾಲ್ವ್ ಆಗಿ ಮಿದುಳಿನೊಳಗೆ ಇನ್‌ಸ್ಟಾಲ್ ಆಗಿದೆ. ಹುಟ್ಟಿದ ಮಗುವಿನ ಹಲವು ಪ್ರತಿಭೆಗಳೂ, ಆ ಕೋಶದಲ್ಲಿ ಬೀಜವಾಕ್ಯವಾಗಿದ್ದವು. ಹೀಗೆ ಎಲ್ಲವನ್ನೂ ತನ್ನ ಕೇಂದ್ರದಿಂದ ಸೃಜಿಸಿ, ಸೃಷ್ಟಿಯಾಗುವ ಕ್ರಿಯೆ, ಅಂತರಂಗದಿಂದ ಚಿಲುಮಿಸಿ ಹೊರಬರುವ ಕ್ರಿಯೆ, ಕಾವ್ಯೋದ್ಭವದ ಹಲವು ಸಾಧ್ಯತೆಗಳಲ್ಲಿ ಮೊದಲನೆಯದೂ ಹೌದು, ಮತ್ತು ಅತ್ಯಂತ ಸಂಕೀರ್ಣವೂ ಹೌದು. ಆದರೆ ಇಂತಹ ಪ್ರಯತ್ನದಿಂದ ಮೊಳೆತ ಕವಿತೆ, ಅನನ್ಯವೂ ಆತ್ಮಾರ್ಥಪೂರ್ಣವೂ ಆಗಿರುತ್ತೆ. ಇಂತಹ ಕವಿತೆಗಳನ್ನು ಸೃಜಿಸುವ ಕವಿ ರಸ ಋಷಿಗಳೇ ಆಗಿರುತ್ತಾರೆ. ಕುವೆಂಪು ಅವರ “ಓ ನನ್ನ ಚೇತನ, ಆಗು ನೀ ಅನಿಕೇತನ” ಇಂತಹ ಒಂದು ಸೃಷ್ಟಿ. ದ.ರಾ. ಬೇಂದ್ರೆಯವರ ‘ ನಾಕುತಂತಿ’ ,  ‘ಚೈತನ್ಯದ ಪೂಜೆ’ ಕವಿತೆಗಳೂ ಅಷ್ಟೇ. ” ಚೈತನ್ಯದ ಪೂಜೆ ನಡೆದSದ ನೋಡS ತಂಗಿ।। ಅಭಂಗದ ಭಂಗೀS ಸತ್ಯ ಎಂಬುವ ನಿತ್ಯದ ದೀಪ ಸುತ್ತೆಲ್ಲಾ ಅವನದೇ ರೂಪ ಪ್ರೀತಿ ಎಂಬುವ ನೈವೇದ್ಯ ಇದು ಎಲ್ಲರ ಹೃದಯದ ಸಂವೇದ್ಯ. ಸೌಂದರ್ಯ ಧ್ಯಾನಾ ಎದೆಯಲ್ಲಿ ಅಸ್ಪರ್ಶಾ ಚಿನ್ಮಯದಲ್ಲಿ ಆನಂದಗೀತ ಸಾಮSವೇದಾ ಸರಿಗಮ ನಾದಾ” ಇಂತಹ ಕವಿತೆಯನ್ನು ಬರೆಯಲು ಧ್ಯಾನಸ್ಥ ಸ್ಥಿತಿಯಲ್ಲಿ ಕವಿ ಹಗಲಿರುಳು ಸಾಧನೆ ಮಾಡಬೇಕು. ಕವಿತೆಯೇ , ತಪಸ್ಸಾಗಿ ಬದುಕಬೇಕು. ಒಳಗೊಳಗಿಂದಲೇ ಅರಳಬೇಕು. ಒಳಲೋಕದಿಂದ ಕವಿತೆ ಹುಟ್ಟುವ ಇನ್ನೊಂದು ವಿಧಾನ, ಕವಿಯ ತೀವ್ರ ಭಾವೋತ್ಕರ್ಷದ ಹರಿವು. ಬೇಂದ್ರೆಯವರ ಮಗನ ಸಾವಿನ ಸಂದರ್ಭದಲ್ಲಿ ತಮ್ಮ ಪತ್ನಿಯ ಕಣ್ಣೊಳಗೆ ಕಣ್ಣಿಟ್ಟು ನೋಡುವ ಕವಿ, ನೋವಿನ, ಹತಾಶೆಯ, ಅಸಹಾಯಕತೆಯ ಭಾವದ ತುರೀಯಕ್ಕೆ ತಲಪಿದಾಗ” ನೀ ಹೀಂಗ ನೋಡ ಬ್ಯಾಡ ನನ್ನ” ದಂತಹಾ ಕವಿತೆ ಜನ್ಮಿಸುತ್ತೆ. ಹೀಗೆ ಅಂತರಾಳದಿಂದ ರೂಪ ಪಡೆದು ಹೊರಬರುವ ಕವಿತೆಯ ಸ್ವರೂಪದಲ್ಲಿ ಯಾವುದೇ ಪೂರ್ವಯೋಜನೆ ಇರುವುದಿಲ್ಲ. ಈ ಕವಿತೆಯ,ಚಂದ, ಛಂದ, ಅರ್ಥ ಎಲ್ಲವೂ ಆ ಕ್ಷಣದ ಆ ಸ್ಥಿತಿಯ ಕ್ರೋಮೋಸೋಮ್ ಗಳ ಅಭಿವ್ಯಕ್ತಿ. ಕಾವ್ಯ ಹುಟ್ಟುವ ಇನ್ನೊಂದು ಬಗೆ, ಕಥಾ ಪಾತ್ರದೊಳಗೆ ಕವಿ ಮಾಡುವ ಪರಕಾಯ ಪ್ರವೇಶ. ಹಾಗೆ ಪ್ರವೇಶಿಸಿದ ಕವಿ, ಆ ಪಾತ್ರದ ಅಷ್ಟೂ ಅನುಭವಗಳನ್ನು, ಸ್ವಂತವಾಗಿಸಿ, ಹನಿಯಾಗಿ ಜಿನುಗುತ್ತಾನೆ. ಹೆಚ್.ಎಸ್.ವಿ. ಅವರು ಅಭಿನಯ ಮತ್ತು ಕಾವ್ಯ ಸೃಷ್ಟಿಯ ಬಗ್ಗೆ ಹೀಗೆ ಹೇಳುತ್ತಾರೆ. ” ಬರವಣಿಗೆಯಲ್ಲಿ ಅಭಿನಯವೇ ಇದೆಯಲ್ಲವೇ? ಕಾವ್ಯ, ಕಥೆ ಬರೆಯುವಾಗ ಅನೇಕ ಪಾತ್ರಗಳು ಬರುತ್ತವೆ. ಆ ಪಾತ್ರ ನಾನಾಗದೇ ಬರಹದಲ್ಲಿ ಸಹಜತೆ ಬರುವುದಿಲ್ಲ. ಬುದ್ಧಚರಿತವನ್ನೇ ನೋಡು, ರಾಹುಲನ ಮಾತುಗಳನ್ನು ನಾನು ಬರೆಯಬೇಕಾದರೆ ರಾಹುಲನನ್ನು ನಾನು ಆವಾಹಿಸಿಕೊಳ್ಳಬೇಕು. ಸೀತೆಯಾಗಬೇಕಾದರೆ ಸೀತೆಯ ಹೆಣ್ತನವನ್ನು ನಾನು ಪಡೆಯದಿದ್ದರೆ ಸಹಜತೆ ಬರುವುದಿಲ್ಲ. ಕವಿಯ ಮನಸ್ಸು ಅನೇಕ ಸ್ಥರಗಳಲ್ಲಿ ಸಂಚಾರ ಮಾಡುತ್ತಿರುತ್ತದೆ. ವಿಫುಲ ರೂಪ ಧಾರಿಣಿ ಕವಿಯ ಮನಸ್ಸು ಎಂದು ಕುವೆಂಪು ಹೇಳಿಲ್ಲವೇ. ಹಾಗೆ ಬರವಣಿಗೆ ಎಂಬುದು ಅಂತರಂಗದಲ್ಲಿ ಅಭಿನಯ.  ಸಿನಿಮಾ, ನಾಟಕ ಎಂಬುದು ಬಹಿರಂಗದಲ್ಲಿ ತೋರಿಸಬೇಕಾದ್ದು.ಕವಿತೆ ಕಷ್ಟ ಏಕೆಂದರೆ ಅದರಲ್ಲಿ ಬರುವ ಎಲ್ಲಾ ಪಾತ್ರಗಳನ್ನೂ ಕವಿ ಅಭಿನಯಿಸಬೇಕು” ಹರಿಶ್ಚಂದ್ರ ಕಾವ್ಯದಲ್ಲಿ, ಚಂದ್ರಮತಿ, ತನ್ನ ಮಗ ಹಾವು ಕಚ್ಚಿ ಸತ್ತಾಗ, ವಿಲಪಿಸುವ ಸಾಲುಗಳು ಹೀಗಿವೆ. “ಬಂದರಂ ಲೋಹಿತಾಶ್ವಾ ಎಂದು ಬಟ್ಟೆಯೊಳು ನಿಂದರಂ ಲೋಹಿತಾಶ್ವಾ ಎಂದು ಗಾಳಿ ಗಿಱಿಕೆಂದಡಂ ಲೋಹಿತಾಶ್ವಾ ಎಂದು ಕರೆಕರೆದು ಬಿಡೆ ಬೀದಿಗಱುವಿನಂತೆ ಮಂದಮತಿಯಾಗಿರ್ದ ಚಂದ್ರಮತಿಗೊಬ್ಬನೈ ತಂದಿಂದು ಕೂಡೆ ಹೋಗಿರ್ದು ಕಂಡೆಂ ನಿನ್ನ ಕಂದನೊಂದುಗ್ರಫಣಿ ತಿಂದು ಜೀವಂಗಳೆದನೆಂದು ಹೇಳಿದನಾಗಳು” ಚಂದ್ರಮತಿಯ ಪ್ರಲಾಪ,  ಕನ್ನಡ ಕಾವ್ಯಜಗತ್ತಿನ ಇತಿಹಾಸದಲ್ಲಿ ದುಃಖ ರಸದ ಮನಮುಟ್ಟುವ ಅಭಿವ್ಯಕ್ತಿಯಾಗಿ ಪರಿಗಣಿಸಲ್ಪಡುವುದರ ಹಿಂದೆ, ರಾಘವಾಂಕ ಕವಿ, ಚಂದ್ರಮತಿಯ ಪಾತ್ರದೊಳಗೆ ಹೊಕ್ಕು, ಮಗನ ಸಾವಿನ ತೀವ್ರ ಶೋಕದ ಅನುಭೂತಿಯನ್ನು ಅನುಭವಿಸಿ ಪಾತ್ರವೇ ತಾನಾಗಿ,ಬರೆದದ್ದು ಕಾರಣವಲ್ಲವೇ. ಕವಿತೆ ಹುಟ್ಟಲೇಬೇಕೇ?. ಕವಿತೆಯನ್ನು ಕಟ್ಟಲೂ ಬಹುದು. ಪ್ರಕೃತಿಯಿಂದ ಪ್ರೇರಣೆ ಪಡೆದು, ಬದುಕು ಕಟ್ಟಿಕೊಡುವ ಅನುಭವದ ಕಡುಬನ್ನು ಮೆದ್ದು ಅದರ ಆಧಾರದಲ್ಲಿ, ನವರಸಗಳ ಪಾಕ ಬಡಿಸಬಹುದು. ದೇಶ, ಸಮಾಜ, ಗಗನ, ಸೂರ್ಯ,ನದಿ, ಪ್ರೀತಿ, ಹೀಗೆ ಹತ್ತು ಹಲವು ನೂಲೆಳೆಗಳನ್ನು ನೇಯ್ದು ಪದ್ಯಮಾಡಬಹುದು.  ಕವಿಗೆ ನಿಜ ಜೀವನದ ವಸ್ತುವೇ ಕಾವ್ಯ ವಾಸ್ತುವಾಗಿ ಕೆಲವೊಮ್ಮೆ ಹೊಲದ ನಡುವಿನ ಗುಡಿಸಲು, ಮತ್ತೊಮ್ಮೆ ಗಗನ ಚುಂಬಿ ಕಟ್ಟಡಗಳು, ಬಗೆ ಬಗೆಯ ಕಟ್ಟಡಗಳಂತಹ ಕವಿತೆಗಳು ನೆಲದ ಅಡಿಪಾಯದ ಮೇಲೆ ಎದ್ದು ನಿಲ್ಲುತ್ತವೆ. ಗುಂಪು ಗುಂಪಾಗಿ ಓಡುವ ಕುರಿಮಂದೆಯನ್ನು ಕಂಡಾಗ, ಕವಿ ನಿಸಾರ್ ಅಹಮದ್ ಅವರು ಹೀಗೊಂದು ಅಪೂರ್ವ ಕವಿತೆ ಬರೆಯುತ್ತಾರೆ. ” ಕುರಿಗಳು ಸಾರ್ ಕುರಿಗಳು ಸಾಗಿದ್ದೇ ಗುರಿಗಳು ಮಂದೆಯಲ್ಲಿ ಒಂದಾಗಿ ಸ್ವಂತತೆಯೇ ಬಂದಾಗಿ ಅದರ ಬಾಲ ಇದು ಮತ್ತೆ ಇದರ ಬಾಲ ಅದು ಮೂಸಿ ದನಿ ಕುಗ್ಗಿಸಿ ತಲೆ ತಗ್ಗಿಸಿ ಅಂಡಲೆಯುವ ನಾವು ನೀವು ಎಡ ದಿಕ್ಕಿಗೆ ಬಲ ದಿಕ್ಕಿಗೆ, ಒಮ್ಮೆ ದಿಕ್ಕುಪಾಲಾಗಿ ಹೇಗೆ ಹೇಗೋ ಏಗುತಿರುವ ಬರೀ ಕಿರುಚಿ ರೇಗುತಿರುವ ನೊಣ ಕೂತರೆ ಬಾಗುತಿರುವ ತಿನ್ನದಿದ್ದರು ತೇಗುತಿರುವ ಹಿಂದೆ ಬಂದರೊದೆಯದ ಮುಂದೆ ಬರಲು ಹಾಯದ ನಾವು ನೀವು ಅವರು ಇವರು ನಮ್ಮ ಕಾಯ್ವ ಕುರುಬರು” ಕಾಣುವ ವಸ್ತು, ಕ್ರಿಯೆ ಮತ್ತು ಡೈನಾಮಿಕ್ಸ್, ಕವಿಯ ಮನಸ್ಸೊಳಗೆ ಹಲವು ಕಲ್ಪನೆಗಳಿಗೆ, ಚಿಂತನೆಗಳಿಗೆ ಪ್ರೇರಣೆಯಾಗುತ್ತೆ. ಏನೋ ಹೇಳಬೇಕಾದ ತುಡಿತ, ಸಂದೇಶದ ಸಮೀಕರಣವಾಗಿ, ಹಲವು ಪ್ರತಿಮೆಗಳ ಮೂಲಕ ಕಾವ್ಯಕಟ್ಟಡವನ್ನು ಕವಿ ಕಟ್ಟುತ್ತಾರೆ. ಬೇಲೂರಿನ ಚನ್ನಕೇಶವ ದೇವಾಲಯದ ಶಿಲಾ ಪ್ರತಿಮೆಗಳು  ಗೋಡೆಗಳಲ್ಲಿ ಸಾಲುಗಟ್ಟಿ  ಒಂದು ಕತೆಯನ್ನು ಹೇಳುವ ಹಾಗೆಯೇ ಇದೂ. ಮೇಲಿನ ಕವಿತೆಯಲ್ಲಿ, ಕುರಿಗಳು ಅಂದರೆ ಬಹುಮುಖೀ ಪ್ರತಿಮೆ ಎಂದು ಬೇರೆ ಹೇಳಬೇಕಾಗಿಲ್ಲ ತಾನೇ. ನವ್ಯ ಮತ್ತು ನಂತರದ ಇಂತಹಾ ಕವಿತೆಗಳು ಅಬ್ಸ್ಟ್ರಾಕ್ಟ್ ಆಗಿರುವುದರಿಂದ, ಇವುಗಳ ಅರ್ಥ ಓದುಗನ ಗ್ರಹಿಕೆಗೆ, ಹ್ರಹಿಸುವ ಮನಸ್ಸಿನ ಪರದೆಯ ವಿನ್ಯಾಸಕ್ಕೆ ಸಾಪೇಕ್ಷವಾಗಿರುತ್ತೆ. ಕವಿತೆ ಕಟ್ಟುವ ಕ್ರಿಯೆಯಲ್ಲಿ, ಕವಿ ಮೊದಲೇ ಒಂದು ಪದಹಂದರದೊಳಗೆ ತನಗೆ ಹೇಳಬೇಕಾದ ಅರ್ಥ ತುಂಬಿ, ವ್ಯವಸ್ಥೆ ಯೊಳಗೆ ಹರಿಯಬಿಟ್ಟು, ಸಂಚಲನವೆಬ್ಬಿಸುವುದೂ ಒಂದು ಬಗೆ. ಸಮಾಜವಾದ, ಮಾರ್ಕ್ಸ್ ವಾದ, ಮಾನವತಾವಾದ, ಪರಿಸರವಾದ, ಹೀಗೆ ಹತ್ತು ಹಲವು ‘ಇಸಂ’ ಗಳನ್ನು ತನ್ನ ವಾಸ್ತುವಿನೊಳಗೆ ತುಂಬಿಸಿಕೊಂಡ ಕವಿತೆಗಳು ಕಳೆದ ಹಲವು ದಶಕಗಳಲ್ಲಿ ಮೂರ್ತರೂಪ ಪಡೆದಿವೆ. ಸಮಾಜದ ಬದಲಾವಣೆಗಾಗಿ, ಸಾಮಾಜಿಕ ಪ್ರಜ್ಞೆಯನ್ನು ಬಡಿದೆಬ್ಬಿಸಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದುವತ್ತ ಕವಿತೆಯನ್ನು ದುಡಿಸಿಕೊಳ್ಳುವ ಪ್ರಯತ್ನ ಇದು. ಕವಿತೆ ಬರೆಯಲು ಏಕಾಂತ ಬೇಕು. ಏಕಾಂತದೊಳಗೆ ಮನಸ್ಸು ಮೌನವಾಗ ಬೇಕು. ಇದೊಂದು ಥರಾ ಧ್ಯಾನದ ಹಾಗೆ. ನಿಧಾನವಾಗಿ ಮನಸ್ಸು ಅದರೊಳಗೆ ಇಳಿಯುತ್ತಾ, ಇಳಿದಂತೆ ಮನಸ್ಸು, ಕಾವ್ಯವಸ್ತುವಿನಲ್ಲಿ ಕೇಂದ್ರೀಕರಿಸಿ ಯಾವುದೋ ಒಂದು ಹಂತದಲ್ಲಿ ಕವಿತೆ ಅವತರಿಸಿ ಸಾಲುಗಳು ಹರಿಯುತ್ತವೆ. ಯಶವಂತ ಚಿತ್ತಾಲರು ಬೆಳಗ್ಗೆ ಮೂರು ಗಂಟೆಗೆ ಎದ್ದು, ದೀಪದ ಬೆಳಕಿನಲ್ಲಿ ಕತೆ ಬರೆಯುತ್ತಿದ್ದರಂತೆ. ಸುತ್ತಲೂ ಕತ್ತಲು, ದೀಪವೊಂದೇ ಜ್ಯೋತಿ. ಆ ಏಕಾಂತದಲ್ಲಿ ಜ್ಯೋತಿಗೆ ನೋಟ ಸಂಧಿಸಿದಾಗ ಕತೆಯ ಪಾತ್ರಗಳು ನಿಧಾನವಾಗಿ ನಿಚ್ಚಳವಾಗಿ ಕಣ್ಣಲ್ಲಿ ರೂಪುಗೊಂಡು ಕತೆಯಾಗುತ್ತಿದ್ದವಂತೆ. ಬೆಳಗಾದಂತೆ, ದೀಪದ ಜ್ಯೋತಿ ಮಂಜಾಗಿ ಕತೆಯ ಪಾತ್ರಗಳೂ ಮಾಯವಾದಾಗ ಕತೆ ಬರೆಯುವುದು ನಿಲ್ಲಿಸುತ್ತಿದ್ದರು,ಎಂದು ಹಿಂದೆಂದೋ ಓದಿದ ನೆನಪು. ಇಂತಹಾ ಅನುಸಂಧಾನದ ಜತೆಗೆ ಕವಿತೆ ಬರೆಯಲು ಅಗತ್ಯವಾದ ಸಾಹಿತ್ಯದ ಪರಿಣತಿ, ಪರಿಸರದತ್ತ, ಜೀವಪ್ರಪಂಚದ ಕಷ್ಟ ಸುಖಗಳತ್ತ  ಸೂಕ್ಷ್ಮ ಸ್ಪಂದನೆ, ಕಲ್ಪನಾ ಸಾಮರ್ಥ್ಯ ಕೂಡಾ ಅಗತ್ಯ.  ಹಾಗೆ ಪಕ್ವವಾದ ಕವಿಗೆ ಕವಿತೆ ಬರೆಯುವ ಚಾಲೆಂಜ್ ನೀವು ಕೊಡಬಹುದು. ಸಿನೆಮಾ, ನಾಟಕ, ಸೀರಿಯಲ್, ಗಳ ದೃಶ್ಯಕ್ಕೆ ಪೂರಕವಾದ ಕವಿತೆಗಳು ಒಂದು ರೀತಿಯಲ್ಲಿ ಹೊಸತನದ ತೆನೆಯೇ. ಉದಾಹರಣೆಗೆ, ಮುಕ್ತ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ ಮಗುವಿನ ಪರಿಮಳ ಆ ಮಗು ಹುಟ್ಟಿ ಆಗಷ್ಟೇ ಮೂರು ತಿಂಗಳು ದಾಟಿರಬೇಕು. ಬೆಳಕಿನತ್ತ ಮುಖ ಮಾಡುತ್ತೆ. ಹೊಸ ಮುಖಗಳನ್ನು ನಿರ್ಮಲ ಕಣ್ಣುಗಳೊಳಗೆ ತುಂಬಿ ಏನೋ ನೆನಪಿಸಿಕೊಂಡಂತೆ ತನ್ನಷ್ಟಕ್ಕೇ ಮುಗುಳು ನಕ್ಕು ದೃಷ್ಟಿ ಬದಲಿಸುತ್ತೆ.  ಮಾಮನಿಗೆ ಆ ಮಗುವಿನೊಂದಿಗೆ ಆಡುವುದೆಂದರೆ ಇಷ್ಟ!. ಆತ, ಮಗುವಿನ ನುಣುಪು ಹೊಟ್ಟೆಗೆ, ಹೊಕ್ಕುಳ ಸುತ್ತ ತನ್ನ ಮೂಗು ಸವರಿ ” ಪಂಬಳ ಪಂಬಳ ಬತ್ತನ್ನೇ!” ( ಪರಿಮಳ ಪರಿಮಳ ಬರ್ತಿದೇ!) ಅಂತ ಆಘ್ರಾಣಿಸುತ್ತಾನೆ. ಮಗು ತನ್ನ ಬೊಚ್ಚುಬಾಯಿ ಅಗಲಿಸಿ ಗಟ ಗಟ ನಗುತ್ತೆ. ಪುಟ್ಟ ಕೈಗಳನ್ನು ಚಪ್ಪಾಳೆ ಹೊಡೆಯುವಂತೆ ಅಲುಗಾಡಿಸುತ್ತೆ!. ಹೌದು!! ಮಗುವಿಗೆ ಅನೂಹ್ಯ ಪರಿಮಳವಿದೆ.‌ ಆ ಪರಿಮಳ ಮುಗ್ಧ ಪರಿಮಳ. ಕಲಬೆರಕೆಯಾಗದ ಪರಿಮಳ. ಈ ಲೋಕದ್ದೇ ಅಲ್ಲವೋ ಎನ್ನುವ ಪ್ರೀತಿಯ ಪರಿಮಳ. ಮಗು ಬೆಳೆಯುತ್ತಾ ಹೋದಂತೆ, ಆ ಪರಿಮಳ ಮರೆಯಾಗಿ, ಕಲೆಯುತ್ತಾ, ಕಲಿಯುತ್ತಾ ಹೋದಂತೆ,  ಸಮಾಜದ ‘ವಾಸನೆ’ ದೇಹಕ್ಕಂಟುತ್ತೆ.  ಮಗುವಿನ ಪರಿಮಳವನ್ನು ಉಳಿಸಿಕೊಳ್ಳಲು ಸಾಧ್ಯವಿದೆಯೇ?. ಆರು ದಶಕಗಳ ಬದುಕಿನ ದಾರಿಯಲ್ಲಿ ಇಷ್ಟೊಂದು ಗಂಧಗಳು ಮೈ ಮನಸ್ಸಿಗೆ ಅಂಟಿಕೊಳ್ಳುವಾಗ ಮಗುವಾಗಿದ್ದಾಗಿನ ಪರಿಮಳ ಉಳಿಸಿಕೊಂಡು ಹಿಂತಿರುಗಿ ನೋಡಿದರೆ ಹೇಗಿರಬಹುದು!? ಬೆಂಗಳೂರಿನ –  ” ಇಷ್ಟು ಕಾರು, ಬಸ್ಸು,  ಮೆಟ್ರೋ ರೈಲುಗಳು ಓಡಾಡುವ ಜಾಗದಲ್ಲಿ, ಉಸಿರಿದ್ದರಷ್ಟೇ ಸಾಕು ಎಂದು ಜನರು ನಿಟ್ಟುಸಿರಿಡುವಲ್ಲಿ ದೊಡ್ಡದೊಂದು ತೆಂಗು ಗರಿ ತೇಲುತ್ತಾ ಮನೆಯೊಳಕ್ಕೆ ಬಂದು ಬಿದ್ದಿದ್ದನ್ನು ನಂಬುವುದು ಹೇಗೆ?!. ಮನುಷ್ಯರಿಗೆ ಮನುಷ್ಯನ ದನಿಯೇ ಕೇಳದ ಜಾಗದಲ್ಲಿ ಈ ವಲಸೆ ಗರಿಯ ಸದ್ದು ಅವಳಿಗೆ ಕೇಳಿದ್ದಾದರೂ ಹೇಗೆ?!” ಹೀಗೆ ಪೇಟೆಯಲ್ಲಿ ಮನೆಕಟ್ಟಿದ ವಯಸ್ಕ ಮನಸ್ಸೊಳಗೆ ಬಾಲ್ಯದ ನೆನಪಿನ ತೆಂಗಿನ ಮಡಲು ಹಾರಿ ಬರುತ್ತೆ.  ಆಕೆ, ಆ ಮಡಲಿನ ಒಂದೊಂದೇ ಪುಟ್ಟ ಗರಿಗಳನ್ನು ಕೀಳುತ್ತಾಳೆ. ಮೊದಲು ಹೆಣೆಯುವುದೇ ಚಾಪೆ!. ಅದರಲ್ಲಿ ಕುಳಿತು ಗರಿಯ ವಾಚು, ಊದಲು ಪೀಪೀ ಗೆಳೆಯರನ್ನು ಕರೆದು ಅವರಿಗೆಲ್ಲ ‘ಕನ್ನಡಕ’. ” ಕಣ್ಣ ಕನಸುಗಳು ಗರಿಯ ತೋರಣ ಕಟ್ಟಿದವು. ಎಲ್ಲರೂ ಗಿರಗಿಟ್ಟಲೆಯಾಗಿ ಗರಗರ ತಿರುಗಿದರು. ಒಂದೊಂದೇ ಗರಿಗಕ್ಕಿಗಳ ಮಾಡಿ ಹಾರಲು ಬಿಟ್ಟರು.” ಆ ಹಕ್ಕಿಗಳು, ನೆರೆಮನೆಗಳ ಜಜ್ಜಕ್ಕೆ ಬಡಿದು, ಚರಂಡಿಯಲ್ಲಿ ಸಿಕ್ಕಿ ಉಸಿರುಗಟ್ಟಿ, ಗಾಳಿಯ ಚಕ್ರಕ್ಕೆ ಸಿಕ್ಕಿ, ಸಾಯುತ್ತವೆ. ಚೆಲ್ಲಾಪಿಲ್ಲಿಯಾದ ಹಕ್ಕಿಗಳ ಬದುಕನ್ನು ಕಂಡ ಗೆಳೆಯರು ಜಾಗ ಖಾಲಿ ಮಾಡುತ್ತಾರೆ.  ಆದರೆ, ಆಕೆ ಉಳಿದ ಗರಿಗಳನ್ನು ಕಟ್ಟಿ ಪೊರಕೆ ಮಾಡಿ, ಕನಸಿನ ಹಿಡಿಕೆಯನ್ನು ಗರಿಯಲ್ಲೇ ಕಟ್ಟುತ್ತಾಳೆ!. ಅದಕ್ಕೇ ಆಕೆ ಮಗುವಾಗಿದ್ದಾಗಿನ ಪರಿಮಳ ಇನ್ನೂ ಇದೆ!. ಎಂ. ಆರ್. ಕಮಲಾ ಅವರ ಗದ್ಯಗಂಧೀ ಕವಿತೆಗಳು ಪುಸ್ತಕದ ಸಾಲುಗಳವು. ಇದೊಂದು ಆತ್ಮಕವಿತೆ! ಬಾಲ್ಯದ ನಿರ್ಮಲಾನಂದೋಬ್ರಹ್ಮನ ಅನುಭೂತಿಯನ್ನು ಹೊತ್ತು, ಜೀವಕೋಶಗಳು ಬಲಿತಂತೆ, ಸುತ್ತಲಿನ ಒಂದೊಂದೇ ವಾಸನೆಗಳನ್ನು ತುಂಬಿ ಲಯಿಸಿಕೊಂಡು, ಒಂದೊಂದೇ ಬಣ್ಣವನ್ನು ಕಲೆಸಿ ಲೇಪಿಸಿಕೊಂಡು, ತನ್ನ ಸುತ್ತಲೂ ಸ್ವರ ಮಂಡಲದ ಹಲವು ತರಂಗಗಳ ಸಂಕೀರ್ಣ ಪ್ರಸ್ತಾರವನ್ನು ಸಂಗೀತವಾಗಿಸಿಕೊಂಡು, ರುಚಿಗೆ ರುಚಿಯಾಗಿ ರುಚಿಕಟ್ಟಿ ಅಭಿರುಚಿ ಸೃಷ್ಟಿಸಿಕೊಂಡು ನಡೆದ ದಾರಿಯ ಇನ್ನೊಂದು ತುದಿಯಲ್ಲಿ ಕವಯಿತ್ರಿ ನಿಂತು, ಪ್ರತಿಫಲಿಸುತ್ತಾರೆ. ‘ಗದ್ಯಗಂಧೀ ಕವಿತೆಗಳು’, ಪುಸ್ತಕದಲ್ಲಿ, ಹಾಗೆ ನೋಡಿದರೆ ಒಂದೇ ಕವಿತೆಯಿದೆ, ಅಂತ ನನ್ನ ಅನಿಸಿಕೆ. ಒಂದೊಂದೇ ಪುಟವೂ ಒಂದು ಭಾವಕ್ಕೆ, ಇಂದ್ರಿಯಗ್ರಾಹ್ಯ ಅನುಭವಕ್ಕೆ, ನಗೆಯ ಚಿಗುರು ತುಟಿಗೆ, ನೋವಿನ ಕಣ್ಣೀರ ಬಿಂದುಗಳಿಗೆ ‘ಗಂಧ’ವಾಗುತ್ತೆ. ಮಹಾಭಾರತ ಆರಂಭವಾದದ್ದೇ ರಾಜ ಆಕರ್ಷಿತನಾದ ಆ ಗಂಧದಿಂದ. ಶಂತನು ಮಹಾರಾಜ ‘ಯೋಜನಗಂಧಿ’ ಯ ಪರಿಮಳಕ್ಕೆ ಸೋತ ಕ್ಷಣವದು. ‘ಗಂಧ’ ಕ್ಕೆ ಅಂತಹ ಅಪರಿಮಿತ ಶಕ್ತಿಯೂ ಇದೆ, ವ್ಯಾಪ್ತಿಯೂ ಇದೆ. ಗದ್ಯಗಂಧೀ ಕವಿತೆಗಳು, ಇದರ ಎಲ್ಲಾ ಪುಟಗಳ ತುಂಬಾ ಮನಸ್ಸಿನೊಳಗಿನ ಪದರಗಳಲ್ಲಿ ಮೂಡಿದ ಪ್ರತಿಮೆಗಳು ನಿತ್ಯನೋಟದ ವಸ್ತುಗಳ ರೂಪದಲ್ಲಿ ಪ್ರಕಟವಾಗುತ್ತದೆ. ಪ್ರತೀ ಪುಟದಲ್ಲೂ ಮಗು ಮನಸ್ಸು ಮತ್ತು ಸಮಾಜದ ಕಲೆಕ್ಟಿವ್ ಮನಸ್ಸುಗಳ ತುಯ್ದಾಟ ಹಲವು ರೂಪ ಪಡೆದು ಚಿಂತನೆಗೆ ಹಚ್ಚುತ್ತವೆ. ಗದ್ಯದಂತಹ ಸಾಲುಗಳಲ್ಲಿ, ಪದ್ಯಾತ್ಮ ಪ್ರತಿಷ್ಠೆ ಮಾಡುವ ಪ್ರಯತ್ನ ಎನಬಹುದೇ?. ಸಾಧಾರಣವಾಗಿ ಹಿಂದಿ/ ಉರ್ದು ಶಾಯರಿಗಳಲ್ಲಿ ಕಂಡು ಬರುವ ಪಂಚ್ ಲೈನ್ ನ ಹಾಗೆ ಪುಟದ ಕೊನೆಗೆ ಕವಯಿತ್ರಿ, ತನ್ನ ಥಾಟ್ ಲೈನ್ ಅನ್ನು ಪ್ರಕಟಿಸುತ್ತಾರೆ. ಆ ಸಾಲು, ಬಾಲ್ಯದ  ಗಂಧಕ್ಕೇ ವಾಲಿರುವುದೂ ಅಥವಾ ಅದನ್ನು ರಿ-ಇನ್ವೆಂಟ್ ಮಾಡುವ ಪ್ರಯತ್ನ ನಡೆಯುವುದೂ ಸ್ಪಷ್ಟ. ಇದಕ್ಕೆ ಸಾಮ್ಯವಿರುವ ಪ್ರಯತ್ನವೇ ಎಂದು ಹೇಳುವ ಭಾಷಾ ಪಾಂಡಿತ್ಯ ಇಲ್ಲದಿದ್ದರೂ, ವಿದ್ಯಾರ್ಥಿಯ ಕನವರಿಕೆಯ ಹಾಗೆ, ಇದನ್ನು ಉಲ್ಲೇಖಿಸ ಬಯಸುತ್ತೇನೆ. ಕೆ.ವಿ.ತಿರುಮಲೇಶ್ ಅವರ ಈ ಮಹತ್ತರವಾದ ಅಕ್ಷಯ ಕಾವ್ಯ ಪುಸ್ತಕದಲ್ಲಿ ಸುಮಾರು ೪೭೮ ಪುಟಗಳು. ಬಿಡಿ ಬಿಡಿಯಾದ,ಆದರೂ ಇಡಿಯಾದ ಕವಿತೆಗಳು. ತಮ್ಮ ಅಕ್ಷಯ ಕಾವ್ಯ ಪುಸ್ತಕದ ಮುನ್ನುಡಿಯಲ್ಲಿ, ಅವರು ಹೀಗೆ ಬರೆಯುತ್ತಾರೆ. ” ಸೂತ್ರಬದ್ಧತೆ, ಸುಸಂಬದ್ಧತೆ, ಕ್ರಮಬದ್ಧತೆ ಮುಂತಾದ ಯಾವುದೇ ಬದ್ಧತೆಗಳನ್ನು ಈ ಕಾವ್ಯ ಪರಿಪಾಲಿಸಿದ್ದಕ್ಕಿಂತ ಉಲ್ಲಂಘಿಸಿದ್ದೇ ಹೆಚ್ಚು. ಆದ್ದರಿಂದ ಸಾಲು ಸಾಲುಗಳ ನಡುವೆ ಕಂದಕಗಳು ನಿಜವಾದ ಕಂದಕಗಳು ಆದರೂ ಇಲ್ಲೆಲ್ಲೂ ಅಮಾನುಷ ಪ್ರಪಂಚವಿಲ್ಲ…ಕಾವ್ಯಕ್ರಿಯೆಯ ಒಳಹೊರಗಣ ಸೀಮೆಗಳ ಮಿತಿಗಳ ಸ್ಪರ್ಶಿಸುತ್ತಲು ಹಿಂದೆಗೆಯುತ್ತಲು ಮುಗಿಯದ ಕ್ರಿಯೆ ಸದ್ಯ ಇದೊಂದೇ ಸಾಧ್ಯ.” ಈಗ ಗದ್ಯಗಂಧೀ ಕವಿತೆಗಳಿಗೆ ಪುನಃ ಬರೋಣ. ಈ ಒಟ್ಟೂ ಪುಸ್ತಕದ  ಕವಿತೆಯ ಅಷ್ಟೂ ‘ಗಂಧ’ ಗಳನ್ನೂ ಬರೆಯಲು ಅಸಾಧ್ಯವಾದರೂ ಎರಡು  ಪರಿಮಳ ದ್ರವ್ಯಗಳನ್ನಾದರೂ ಗ್ರಹಿಸುವ ಪ್ರಯತ್ನ ನನ್ನದು. ” ಅವಳ ಮನೆಯಲ್ಲಿ ಮೂರು ಕನ್ನಡಿಗಳಿದ್ದವು.” ಎಂದು ಆರಂಭವಾಗುವ ಕವಿತಾದಳದಲ್ಲಿ, ನೆರೆಮನೆಯ ಹುಡುಗಿ ಮತ್ತು ಈಕೆ ಎರಡು ಕನ್ನಡಿಗಳನ್ನು ಎದುರು ಬದುರು ಇಡುತ್ತಾರೆ. ” ಆಹಾ! ಒಂದರೊಳಗೊಂದು ಒಂದರೊಳಗೊಂದು ಕನ್ನಡಿಗಳು! ಕೊಂಚ ಮುಖ ತೂರಿಸಿ ಲೆಕ್ಕವಿರದಷ್ಟು ಬಿಂಬಗಳನ್ನು ಎದೆಯಲ್ಲಿ ಸೆರೆಹಿಡಿದು ಕನ್ನಡಿಗಳ ಸ್ವ ಸ್ಥಾನಕ್ಕೆ ಸೇರಿಸಿದರು.” ಎರಡು ಪುಟ್ಟ ಮಕ್ಕಳ ಆಟದಂತೆ ಕಾಣುವ ಈ ಚಿತ್ರ, ಚಿತ್ತಗನ್ನಡಿಗಳ ನಡುವಿನ ಅಸಂಖ್ಯ ಪ್ರತಿಫಲನಗಳಲ್ಲವೇ? ಆ ಹುಡುಗಿಯ ಯೌವನದಲ್ಲಿ ದಿವಾನಖಾನೆಯ ಕನ್ನಡಿಯೊಳಗಿಂದ ಹುಡುಗ ಹಾಡತೊಡಗಿ, ಅವಳು “ಮಾಯಾಬಜಾರಿ”ನ ಶಶಿರೇಖೆಯಾದಳು. ಹೀಗೆ ಒಂದು ಕನ್ನಡಿಯ ಸುತ್ತ ಪ್ರತಿಫಲಿಸುತ್ತವೆ ಹಲವು ಪ್ರತಿಮೆಗಳು. ಈ ಪುಟದ ಕೊನೆಯ ಸಾಲು ಹೀಗಿದೆ. ” ಈಗಂತೂ ಕನ್ನಡಿಯನ್ನು ಬೀದಿಯ ಕಡೆಗೆ ಮುಖಮಾಡಿ ಇರಿಸಿಬಿಟ್ಟಿದ್ದಾಳೆ. ಹಾದು ಹೋಗುವ ಪ್ರತೀ ಜೀವಿಯ ನೋವು,ನಲಿವು ಅವಳ ಎದೆಯಲ್ಲಿ ಪ್ರತಿಫಲಿಸುತ್ತದೆ.” ಕನ್ನಡಿಯೇ ಕವಯಿತ್ರಿಯ ಹೃದಯವೂ ಆಯಿತು. ಅದು ಸದಾ ಸಮಾಜದ ಚಲನೆಯ, ಬೀದಿಯ ಅಷ್ಟೂ ಡೈನಾಮಿಕ್ಸ್ ಗೆ, ಭಾವ ವೈವಿಧ್ಯಕ್ಕೆ ಕನ್ನಡಿ ಆಗುತ್ತೆ, ಹೃದಯ ಬರೇ ಕನ್ನಡಿಯೇ?. ಇದೊಂದು ಸ್ಪಂದನೆಯ ಕನ್ನಡಿ. ಈ ಎಸಳಿನ ನಂತರ ಒಂದು ವೈಶಿಷ್ಟ್ಯವನ್ನು ಹೇಳುವೆ. ಬೆಲ್ಲ ತಯಾರಿಸುವ ಕಾರ್ಖಾನೆಯಲ್ಲಿ ಕಬ್ಬಿನ ರಸ ಕುದಿಸುವಾಗ ಅದರ ಪರಿಮಳ ಊರೆಲ್ಲಾ ಹರಡುತ್ರೆ. ಕುದಿಸುತ್ತಾ ಅ ರಸ, ಪಾಕವಾಗಿ ಜೇನಿನಂತೆ ಮಂದ, ಸ್ನಿಗ್ಧ ದ್ರವವಾಗುತ್ತೆ. ಈ ಹಂತದಲ್ಲಿ ಅದಕ್ಕೆ ಕಬ್ಬಿನ ರಸದ ಎಲ್ಲಾ ಗುಣಗಳೂ ಇರುತ್ತವೆ,ಆದರೆ ಸಾಂದ್ರವಾಗಿರುತ್ತದೆ. ಹರಿಯುವ ಗುಣವೂ,ಪರಿಮಳವೂ,ಸಿಹಿಯೂ. ಈ ಹಂತದಲ್ಲಿ ಅದನ್ನು ಸಂಗ್ರಹಿಸಲು ಬಾಟಲಿ ಬೇಕು. ಇದರ ಮುಂದಿನ ಹಂತದಲ್ಲಿ ಅದನ್ನು ಗಟ್ಟಿಯಾಗಿಸಿ, ಅಚ್ಚಾಗಿಸಿ, ಆಕರ್ಷಕ ಪ್ಲಾಸ್ಟಿಕ್ ಕವರಿನೊಳಗೆ ಪ್ಯಾಕ್ ಮಾಡಿ ಮಾರುಕಟ್ಟೆಯಲ್ಲಿ, ಕಂಪೆನಿಯ ಬೆಲ್ಲದಚ್ಚಾಗಿ ಗ್ರಾಹಕರ ವಿಕ್ರಯದ ವಸ್ತುವಾಗಿ ಪ್ರಕಟವಾಗುತ್ತೆ.  ಕಮಲಾ ಅವರ ಗದ್ಯಗಂಧೀ ಕವಿತೆ ಬೆಲ್ಲದ ಅಚ್ಚು ಅಲ್ಲ. ಇದು ಸಾಂದ್ರವಾದ ಬೆಲ್ಲದ ಪಾಕ. ಇದಕ್ಕೆ ಹರಿವು,ಪರಿಮಳ, ರುಚಿ ಎಲ್ಲವೂ  ಇದೆ. ರೂಪ ಮಾತ್ರ ಪಾಕವನ್ನು ತುಂಬಿಸಿಕೊಂಡ  ಪಾತ್ರೆಯದ್ದೇ. ಗದ್ಯ ಗಂಧಿಯ ಇನ್ನೊಂದು ಎಸಳು ಹೀಗೆ ಆರಂಭವಾಗುತ್ತೆ. “ಅವಳು ಪುಟ್ಟವಳಿದ್ದಾಗ ಅಣ್ಣ ಕೊಟ್ಟ ನಾಲ್ಕಾಣೆ,ಎಂಟಾಣೆ ನಾಣ್ಯವನ್ನು ನೆಲದಲ್ಲಿ ಉರುಳಿ ಬಿಟ್ಟು ಎಷ್ಟು ದೂರ ಹೋಗುತ್ತದೆ ಎಂದು ನೋಡುತ್ತಿದ್ದಳು” ಈ ನಾಣ್ಯ, ಈ ನೆಲ, ಈ  ನಾಣ್ಯದ ಉರುಳು ಚಲನೆ,ಚಲಾವಣೆ ಏನನ್ನು ಧ್ವನಿಸುತ್ತೆ?. ಆಕೆಯ ಅಪ್ಪ , ಪ್ರೀತಿಯಿಂದ ನಾಣ್ಯವನ್ನು ಉರುಳಿಸಿ  ” ಅಂತಃಕರಣದ ನುಡಿಯನ್ನು ಹೀಗೇ ಉರುಳಿಸು. ಆ ಭಾಷೆ ಎಷ್ಟೋ ಜನಕ್ಕೆ ತಿಳಿದೇ ಇರುವುದಿಲ್ಲ. ಅದು ಅವರಿಗೆ ಅರ್ಥವಾಗದಿದ್ದರೂ ಸರಿ, ಉರುಳಿಸುತ್ತಾ ಹೋಗಬೇಕು, ಎಷ್ಟು ದೂರ ಸಾಧ್ಯವಾದರೆ ಅಷ್ಟು ದೂರ” ಉರುಳುವ ನಾಣ್ಯಕ್ಕೆ ಅಂತಃಕರಣದ ನುಡಿಯ ಸ್ವರೂಪ. ಕೊಡು ಕೊಳ್ಳುವಿಕೆಯ ಕ್ರಿಯೆಯಿಂದ, ಪ್ರೀತಿಯಲ್ಲಿ ಕರಗುವ, ಕರಗಿಸುವ, ದ್ರಾವಣದೊಳಗೆ ಒಂದೇ ಆಗುವ ಕ್ರಿಯೆ. ನೀರಲ್ಲಿ ಕರಗಿಸಿದ ಸಕ್ಕರೆಯ ಹಾಗೆ. ನೀರೂ,ಸಕ್ಕರೆಯೂ ಒಂದಕ್ಕೊಂದು ಅಂತಃಕರಣಿಸಿ ಸ್ವಂತ ರೂಪ ಕಳೆದು ಏಕಸ್ವರೂಪ ಹೊಂದಿದ ಹಾಗೆ. ಕೊನೆಯ ಸಾಲುಗಳಲ್ಲಿ ಮನಸ್ಸಿನ ಟ್ರಾನ್ಸ್ಫಾರ್ಮೇಟಿವ್ ಚೈತನ್ಯ ಪರಿಮಳಿಸುತ್ತೆ.  ” ಈಗ ನೀವು ನಿಮ್ಮೊಳಗಿನ ಯಾವ ನಾಣ್ಯವನ್ನಾದರೂ ಅವಳೆದುರಿಗೆ ಉರುಳಿಸಿ. ಎತ್ತಿಕೊಂಡು ಅಂತಃಕರಣದ ನುಡಿಯಾಗಿಸಿ ಉರುಳಿಬಿಡುತ್ತಾಳೆ” ಎಚ್ ನರಸಿಂಹಯ್ಯ ಅವರ ” ಹೋರಾಟದ ಹಾದಿ” ಪುಸ್ತಕದಲ್ಲಿ ಒಂದು ಘಟನೆಯಿದೆ. ಎಚ್. ಎನ್. ಅವರ ಗೆಳೆಯ ಮತ್ತು ಆತನ ಪುಟ್ಟ ಮಗು ಶಟಲ್ ಬ್ಯಾಡ್ಮಿಂಟನ್ ಆಡುತ್ತಿರುತ್ತಾರೆ. ಆ ಮಗು ಕೋರ್ಟ್ ನ ಎಡಭಾಗದಲ್ಲಿ ಇರುವಾಗ,ಎದುರಾಳಿ ಶಟಲ್ ಕಾಕ್ ಅನ್ನು ಕೋರ್ಟಿನ ಬಲಗಡೆಗೆ ಪ್ಲೇಸ್ ಮಾಡುತ್ತಾನೆ. ಮಗು ಕೋರ್ಟ್ನ ಬಲ ಭಾಗದಲ್ಲಿದ್ದರೆ ಎದುರಾಳಿ, ಶಟಲ್ ನನ್ನು ಕೋರ್ಟ್ ನ ಎಡ ಭಾಗಕ್ಕೆ ಹೊಡೆಯುತ್ತಾನೆ. ಮಗು ಬಹಳ ನೊಂದುಕೊಂಡು ಎಚ್. ಎನ್. ಹತ್ರ ಹೇಳುತ್ತೆ, “ಅಂಕಲ್! ಇದು ಚೀಟಿಂಗ್” ಅಂತ. ಇದು ಕೂಡಾ ಮಗುವಿನ ಪರಿಮಳ. ಅಂತಹಾ ಪರಿಮಳವನ್ನು ಮೇಟಿಕುರ್ಕೆ ಯ ಬಾಲ್ಯದ ದಿನದಿಂದ ನಾಗರಿಕ ಜಗತ್ತಿನ ಗಂಧಗಳ ನಡುವೆಯೂ ಉಳಿಸಿಕೊಂಡು, ಇಲ್ಲಿಯೂ ಅಲ್ಲಿಯೂ ಸಲ್ಲುವ ಮತ್ತು ಯಾವುದೇ ನಾಣ್ಯವನ್ನು ಅಂತಃಕರಣದ ನುಡಿಯಾಗಿ ಪರಿವರ್ತಿಸುವ ಕವಿತೆಗಳಿವು. ಕವಿತೆಯುದ್ದಕ್ಕೂ ಸ್ತ್ರೀ ಸಹಜ ಮಮತೆ, ಸಹನೆ, ಮಡಿಲಲ್ಲಿ ತುಂಬಿಕೊಳ್ಳುವ ಕ್ಷಮತೆ, ಹರಿಯುತ್ತಲೇ ಇರುವ ನಿರಂತರತೆ, ತನ್ನ ಗಾಯವಲ್ಲದೇ,ಇತರರ ಗಾಯಗಳನ್ನೂ ಸ್ಪರ್ಶಿಸಿ ಗುಣವಾಗಿಸುವ ಔಷಧೀಯ ಹಸ್ತದ ಮೃದುಲತೆ, ಇವೆಲ್ಲವನ್ನೂ ಚಿತ್ತಾರವಾಗಿಸಿದ್ದನ್ನು ಕಾಣಬಹುದು.  ಈ ಒಂದು ಚಿತ್ರವನ್ನು ಮನದಲ್ಲಿ ರೂಪಿಸಿಕೊಳ್ಳಿ. ಎರಡು ಗುಡ್ಡಗಳಿವೆ. ನಡುವೆ ಬಯಲು. ಒಂದು ಗುಡ್ಡದಲ್ಲಿ ಬಾಲ್ಯದ ಹಳ್ಳಿ, ಅಣ್ಣ ( ಅಪ್ಪ), ಅಮ್ಮ, ಮನೆ, ಕನ್ನಡಿ, ಕಲ್ಲುಗಳು, ತೆಂಗಿನ ಮರಗಳು, ಗಾಜಿನ ಬಳೆಗಳು, ಓಡಿದ ಓಣಿಗಳು, ಹೊಲಗಳು. ಸದಾ ಬೀಸುವ ಗಾಳಿ, ಪೋಸ್ಟ್ ಆಫೀಸ್, ನಕ್ಷತ್ರ, ಇವುಗಳೆಲ್ಲವೂ ಮಗುವಿನ ಪರಿಮಳದಂತೆ. ಮುಗ್ಧ, ನಿರ್ಮಲ, ನೇರ ನಿರಂತರ. ಭಾವ, ಮಮತೆ, ಜೀವಸಂಕುಲದ ಜತೆಗಿನ ತಾದಾತ್ಮ್ಯ ಸ್ಥಿತಿಗಳು ಈ ಗುಡ್ಡದ ತುಂಬಾ. ಎರಡನೆಯ ಗುಡ್ಡದಲ್ಲಿ, ಕಾರು, ಮೆಟ್ರೋ ರೈಲು, ಮುಖವಾಡಗಳು, ಕಲ್ಲು ಮನೆಗಳು, ಬೀಗ ಹಾಕಿದ ಬಾಗಿಲುಗಳು, ಸಿಮೆಂಟ್ ರಸ್ತೆಗಳು,  ತಾಜ್ ಮಹಲ್ ಗಳು ಮತ್ತು ಗಾಳಿಯೂ ಸ್ಥಿರವಾಗಿವೆ.  ಬಯಲಿನಲ್ಲಿ ಒಂದು ಸ್ಥಂಭದಲ್ಲಿ ಪೆಂಡುಲಮ್,ಈ ಎರಡು ಗುಡ್ಡಗಳ ನಡುವೆ ಓಲಾಡುತ್ತೆ. ಆ ಪೆಂಡುಲಮ್ನಲ್ಲಿ ಕವಯಿತ್ರಿ ಕುಳಿತಿದ್ದಾರೆ. ಪ್ರತೀ ಆಸ್ಸಿಲೇಷನ್, ಒಮ್ಮೆ ಮೊದಲ ಗುಡ್ಡದ ಹತ್ತಿರ, ಮತ್ತೆ ಎರಡನೇ ಗುಡ್ಡದ ಸಮೀಪ ಆಂದೋಳಿಸಿ  ತರುವ ಅನುಭೂತಿಯ ಸಂಕಲನವೇ ‘ಗದ್ಯಗಂಧೀ ಕವಿತೆಗಳು’. ********************************************** ಮಹಾದೇವಕಾನತ್ತಿಲ ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ ಸೌಂದರ್ಯ ಲಹರಿ ಆ ಅಜ್ಜ ತನ್ನ ಮನೆಯ ಅಂಗಳದಲ್ಲಿ ಕುಳಿತು ನೋಡುತ್ತಲೇ ಇದ್ದರು. ದಿನಾಲೂ ನೋಡುತ್ತಿದ್ದರು. ಚಿಟ್ಟೆಯನ್ನು! ಬಣ್ಣದ ಚಿಟ್ಟೆಯನ್ನು.  ಅದರ ಎಡ ಬಲದ ರೆಕ್ಕೆಗಳು ಒಂದಕ್ಕೊಂದು ಕನ್ನಡಿ ಹಿಡಿದ ಬಿಂಬಗಳ ಹಾಗೆ. ಆಗಷ್ಟೇ ರವಿ ವರ್ಮ, ತನ್ನ ಕುಂಚದಿಂದ ಬಳಿದು ಬಿಡಿಸಿದ ತೈಲವರ್ಣಚಿತ್ರದ ರೇಖೆಗಳ ಹಾಗೆ ನಾಜೂಕು ವರ್ಣ ರೇಖೆಗಳು ಆ ರೆಕ್ಕೆಗಳಲ್ಲಿ!. ಅದು ಹಾರೋದಂದರೆ! ಲಪ್..ಟಪ್.. ಎಂದು ರೆಕ್ಕೆಯನ್ನು ನಯ ನಾಜೂಕಿನಿಂದ ತೆರೆದು ಮಡಿಸಿ ವಿಶ್ವಾಮಿತ್ರನ ತಪಸ್ಸು ಭಂಗಕ್ಕೆ ಬಂದ ಅಪ್ಸರೆಯ ಮೋಹಕ ಹೆಜ್ಜೆಗಳ ಲಯ ಅದಕ್ಕೆ!. ಬರೆದೇ ಬಿಟ್ಟರು! ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ. ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಸಿಣ ಹಚ್ಚಿ; ಹೊನ್ನ ಚಿಕ್ಕಿ ಚಿಕ್ಕಿ; ಇಟ್ಟು ಬೆಳ್ಳಿ ಅಕ್ಕಿ. ಈ ಕವನದತ್ತ ಚಿತ್ತ ಹರಿಸುವ ಮುನ್ನ, ಸೃಷ್ಟಿಯಲ್ಲಿ ಕಾಣ ಸಿಗುವ  ಪ್ರತಿಯೊಂದು ರೂಪದ ಹಿಂದಿನ ಸ್ವರೂಪದತ್ತ ದೃಷ್ಟಿ ಹರಿಸಿದರೆ ನಮಗೆ ಒಂದು ಅನೂಹ್ಯ ಸಾಮ್ಯತೆ ಕಾಣ ಸಿಗುತ್ತೆ. ಅದೇ ಸಿಮ್ಮೆಟ್ರಿ ( Symmetry). ನಿಮಗಿಷ್ಟವಾದ ಸಿನೆಮಾ ನಟಿ ಅಥವಾ ನಟನ ಮುಖ ಯಾಕೆ ಚಂದ. ಮುಖದ ಎಡ ಭಾಗ ಮತ್ತು ಬಲ ಭಾಗ ಒಂದಕ್ಕೊಂದು ಮಿರರ್ ಇಮೇಜ್ ಅಲ್ವಾ. ಎಡ ಬಲದಲ್ಲಿ ಕಣ್ಣುಗಳು, ಹುಬ್ಬುಗಳು  ಕಪೋಲಗಳು, ಕಿವಿಗಳು ಮೂಗಿನಲ್ಲೂ ಎರಡು ಹೊಳ್ಳೆಗಳು! ಹೀಗೆ ಸೃಷ್ಟಿಯ ಅದ್ಭುತ ಅಡಗಿದೆ ಮುಖಾರವಿಂದದ ಸಿಮ್ಮೆಟ್ರಿಯಲ್ಲಿ. ಈ ಸುಂದರ ಸಮರೂಪೀ ಚಿತ್ರಗಳು ಪರಸ್ಪರ ಕಣ್ಣು ಮಿಟುಕಿಸಿ “ಲವ್ ಅಟ್ ಫಸ್ಟ್ ಸೈಟ್” ಎಂಬ ಪ್ರೇಮ ಕಥೆ ಆರಂಭ. ಜಗದ ಸೌಂದರ್ಯದ ಹಿಂದೆ ಈ ಸಮರೂಪತ್ವ ಅಥವಾ ಸಿಮ್ಮೆಟ್ರೀ ಇದೆ. ಇದೊಂದು ಪ್ರಕೃತಿ ತತ್ವ. ನಾವು ನೀವು ಬಯಸಿ ರೂಪಿಸಿದ್ದಲ್ಲ. ದಾಸವಾಳ ಹೂವನ್ನು ಗಮನಿಸಿ. ಅದರ ದಳಗಳು ಒಂದರಂತೆ ಇನ್ನೊಂದು, ಒಂದು ಶಂಕುವಿಗೆ ಅಂಟಿಕೊಂಡಂತೆ ಹೊರಗಿಣುಕುತ್ತವೆ. ಅದರ ತೊಟ್ಟನ್ನು ಹಿಡಿದು ಸ್ವಲ್ಪ ಸ್ವಲ್ಪವೇ ದಳದಿಂದ ದಳಕ್ಕೆ ತಿರುಗಿಸಿದರೆ,  ಹೂವು ಒಂದೇ ಥರ ಕಾಣಿಸುತ್ತೆ.  ಇದೂ ಒಂದು ಸಿಮ್ಮಟ್ರೀ. ಅದೂ ಬೇಡ ಅಂದರೆ ಯಾವುದೇ ಗಿಡ ಬಳ್ಳಿಯ ಎಲೆಯನ್ನು ಗಮನಿಸಿ. ಎಲೆ ಮಧ್ಯದಲ್ಲಿ ಒಂದು ನಾರು ಅದು ಜೋಡಿಸಿ ಹಿಡಿದು ಇಕ್ಕೆಲಗಳಲ್ಲಿ ಎಡ ಬಲದ ಎಲೆ!. ಅದೂ ಸಿಮ್ಮೆಟ್ರೀ!. ದೇವದಾರು ಮರದ ಗೆಲ್ಲುಗಳು, ತೆಂಗಿನ ಮರದ ಮಡಲುಗಳು, ಎಷ್ಟೊಂದು ಸಿಮ್ಮೆಟ್ರಿಯಿಂದ ಸ್ವಾಲಂಕಾರ ಭೂಷಣೆಯರು ಅಲ್ಲವೇ. ನಾವು ನಿಂತ ಭೂಮಿ, ಆಕಾಶಕಾಯಗಳು ಸಾಧಾರಣವಾಗಿ ಗೋಲಾಕಾರ. ಅದು ಅತ್ಯಂತ ಹೆಚ್ಚು ಸಿಮ್ಮೆಟ್ರಿಕ್ ಅವಸ್ಥೆ. ಚಂದಮಾಮ ಹುಣ್ಣಿಮೆಯ ದಿನ ಎಷ್ಟು ಚಂದ ಕಾಣಿಸುತ್ತಾನೆ, ವೃತ್ತಾಕಾರದ ಬೆಳ್ಳಿ ತಟ್ಟೆಯ ಹಾಗೆ! ನೀವು ಸಸ್ಯದ ತುಣುಕನ್ನು ಮೈಕ್ರೋಸ್ಕೋಪ್ ನಲ್ಲಿ ಇಟ್ಟು ನೋಡಿದರೆ ಷಟ್ಕೋನಾಕೃತಿಯ  ಜೀವಕೋಶಗಳು ಸಿಮ್ಮೆಟ್ರಿಕ್ ಆಗಿ ಒಂದಕ್ಕೊಂದು ಹೆಗಲು ಜೋಡಿಸಿ ಸಾಲುಗಟ್ಟಿ ನಿಂತ ದೃಶ್ಯ ಕಾಣಿಸುತ್ತೆ. ಸಸ್ಯ ಮತ್ತು ಪ್ರಾಣಿಲೋಕದಿಂದ ಹೊರಬಂದರೆ, ಅದೋ, ಆ ಕಪ್ಪು ಕಲ್ಲು ಇದೆಯಲ್ಲ, ಅದನ್ನು ಒಡೆದೊಡೆದು ಅತ್ಯಂತ ಸಣ್ಣ, ಮೂಲ ಕಣವಾಗಿಸಿದರೆ ಅದು ಸ್ಪಟಿಕ ರೂಪಿಯಾಗಿರುತ್ತೆ. ಆ ಸ್ಫಟಿಕದ ಏಕಕಣ ಕೋಶ ಚಚ್ಚೌಕವೋ ಆಯತ ಘನವೋ, ಇತ್ಯಾದಿ ಹಲವು ರೀತಿಯ ಸಿಮ್ಮೆಟ್ರಿಕ್ ಆಕಾರ ಪಡೆದಿರುತ್ತವೆ. ಅದರ ಮೂಲೆಗಳಲ್ಲಿ ಮತ್ತು ಒಳಗೆ ನಾವು ಗೋಲಾಕಾರ ಎಂದು ನಂಬಿದ ಪರಮಾಣುಗಳು ಕುಳಿತಿರುತ್ತವೆ. ಪರಮಾಣುಗಳೂ ಸಮರೂಪೀ ಗೋಲಕಗಳೇ!. ನಾವು ಉಸಿರಾಡುವ ಆಕ್ಸೀಜನ್, ಕುಡಿಯುವ H2O ನೀರು, ಈ ಎಲ್ಲಾ ಮಾಲೆಕ್ಯೂಲ್ ಗಳೂ ತಮ್ಮದೇ ಆದ ಸಿಮ್ಮೆಟ್ರಿಯಿಂದಾಗಿ, ಸ್ವಭಾವವನ್ನೂ ಪಡೆದ ಅಂದಗಾತಿಯರು. ನಮ್ಮ ಮಿಲ್ಕೀ ವೇ ನಕ್ಷತ್ರ ಮಂಡಲದ ಚಿತ್ರ ನೋಡಿದರೆ ಅದರಲ್ಲೂ ಒಂದು ಸಿಮ್ಮೆಟ್ರಿ. ನಮ್ಮನ್ನು ಬಹಳಷ್ಟು ಕಾಡಿದ ಕರೋನಾ ವೈರಸ್ ನ ಚಿತ್ರವನ್ನು ಗಮನಿಸಿ, ಅದೂ ಸಿಮ್ಮೆಟ್ರಿಕ್ ಆದ ಗೋಲಕದ ಮೇಲ್ಮೈಯಲ್ಲಿ ವ್ಯವಸ್ತಿತ ದೂರದಲ್ಲಿ ಹತ್ತು ಹಲವು ಕಡ್ಡಿಗಳನ್ನು ಚುಚ್ಚಿದಂತೆ ಕಾಣಿಸುತ್ತೆ. ಈ ಸಿಮ್ಮೆಟ್ರಿಯಿಂದಾಗಿ ಆಕಾರಕ್ಕೆ ಸೌಂದರ್ಯವಲ್ಲದೇ ಅದರದ್ದೇ ಆದ ಸ್ಥಿರತೆ ಸಿಗುತ್ತೆ. ಚಿಟ್ಟೆಯ,ಹಕ್ಕಿಗಳ ದೇಹದ ಇಕ್ಕೆಲಗಳ ರೆಕ್ಕೆಗಳು ಅವುಗಳಿಗೆ ಹಾರಾಡುವಾಗ ಏರೋಡೈನಮಿಕ್ ಸ್ಥಿರತೆ ಕೊಡುತ್ತವೆ. ವಿಮಾನದ ಒಂದು ರೆಕ್ಕೆ ಮುರಿದರೆ ವಿಮಾನ ಕೆಳಗೆ ಬಿತ್ತು ಎಂದೇ ಲೆಕ್ಕ. ಕಟ್ಟಡಗಳು ಚಚ್ಚೌಕವೋ ಪಿರಮಿಡ್ ಥರವೋ, ಗುಂಬಜ್ ಆಗಿಯೋ ನಿರ್ಮಿಸಲು ಕಾರಣವೇ  ಸಿಮ್ಮಟ್ರಿಯ ಚಂದದ ಜತೆ ಜತೆಗೇ ಸಿಗುವ ದೃಡತೆ, ಸ್ಥಿರತೆ. ಮನುಷ್ಯ, ಪ್ರಾಣಿಗಳ ದೇಹದ ಸಂರಚನೆಯಲ್ಲಿ ಕಾಣುವ ಸಿಮ್ಮೆಟ್ರಿ, ಆಯಾ ಪ್ರಾಣಿಯ ಜೀವನ ಶೈಲಿಗೆ ಅನುಗುಣವಾದ ಚಲನೆಗೆ ಮತ್ತು ಅಸ್ತಿತ್ವಕ್ಕೆ ಸ್ಥಿರತೆ ದೊರಕಲೆಂದೇ. ಈ ಎಲ್ಲಾ ಪ್ರಕೃತಿ ಸಿದ್ಧ ಪ್ರಕಾರಗಳ ಸ್ವರೂಪವನ್ನು ನಿರ್ಧರಿಸುವ ಸೂತ್ರ ಆ ವ್ಯವಸ್ಥೆಯ ಒಳಗಿನಿಂದಲೇ ಅದಕ್ಕೆ ಆ ರೂಪ ಕೊಡುತ್ತದೆ!. ದಾಸವಾಳ ಹೂವಿನ ಮೊಗ್ಗು ಅರಳಿ ಹೂವಾಗುತ್ತೆ ತಾನೇ!. ಯಾರೋ ತಮ್ಮ ಇಚ್ಛೆಗನುಸಾರ ದಾಸವಾಳದ ದಳಗಳನ್ನು ಒಂದಕ್ಕೊಂದು ಅಂಟಿಸಿದ್ದರಿಂದಾಗಿ,ಆ ಹೂ ಅರಳಿಲ್ಲ ಎಂಬುದು ಮುಖ್ಯ. ಅಂತಃಸತ್ವದ ಬಲದಿಂದ, ಅಂತಃಸೂತ್ರದ ಮಾರ್ಗದರ್ಶನದಿಂದ ಈ ರೂಪದ ಸಿಮ್ಮೆಟ್ರಿ, ಜತೆಜತೆಗೇ ಅದರ  ಸೌಂದರ್ಯ ಪ್ರಕಟವಾಗಿದೆ. ಒಂದು ಶಾಂತವಾದ ಕೊಳದ ಮಧ್ಯಕ್ಕೆ ಒಂದು ಕಲ್ಲೆಸೆದರೆ, ವೃತ್ತಾಕಾರದ ಅಲೆಗಳು ಬಿದ್ದ ಕಲ್ಲಿನ ಬಿಂದುವನ್ನು ಕೇಂದ್ರವಾಗಿಸಿ ಒಂದರ ಹಿಂದೆ ಒಂದರಂತೆ ಕೊಳದ ದಡದತ್ತ ಸರಿಯುತ್ತವೆ. ಈ ಅಲೆಗಳಲ್ಲಿಯೂ ಸಿಮ್ಮೆಟ್ರಿ ಇದೆ. ಅಲೆಗಳ ನಡೆಯಲ್ಲಿ ಲಯವೂ ಇದೆ. ಹಾಗಾಗಿ, ಯಾವುದೇ ಸಿಮ್ಮೆಟ್ರಿಯ ಜತೆಗೆ, ಲಹರಿಯಿದೆ, ಲಯವೂ ಇದೆ. ಈಗ ಕವಿತೆಗೆ ಬರೋಣ! ಕವಿತೆಯ ಸಾಲುಗಳ ರೂಪ  ಮತ್ತು ಅರ್ಥ ಕಟ್ಟುವ ಸ್ವರೂಪವೇ ಛಂದಸ್ಸು!. ಅದಕ್ಕೂ ಹತ್ತು ಹಲವು ಸಿಮ್ಮೆಟ್ರಿಗಳಿವೆ. ಪ್ರಕೃತಿಯ ಚಿತ್ತಾರಗಳ ಸಿಮ್ಮಟ್ರಿ ಹೇಗೆ  ಒಳಗಿನಿಂದಲೇ ಪ್ರಕಟವಾಗುತ್ತದೆಯೋ ಹಾಗೆಯೇ ಕವಿತೆಯ ಛಂದವನ್ನು, ಚಂದವನ್ನು ಮತ್ತು ಅರ್ಥ ವಾಸ್ತುವನ್ನು ಕವಿತೆಯ ಅಂತರಂಗದ ಬೀಜವೇ ನಿರ್ಧರಿಸುತ್ತದೆ. ಅದಕ್ಕೇ ಇರಬೇಕು, ಕವಿಯನ್ನೂ ಬ್ರಹ್ಮನಿಗೆ ಹೋಲಿಸಿದ್ದು. ಕವಿತೆಯ ಛಂದದ ಜತೆಗೂ ಲಹರಿಯಿದೆ. ಲಯವಿದೆ. ಆ ಲಯಕ್ಕೆ ಓದುಗನ ತನ್ಮಯ ಮನಸ್ಸನ್ನು ವಿಲಯನ ಮಾಡುವ ಕಸುವಿದೆ. ಬೇಂದ್ರೆ ಅವರ “ಪಾತರಗಿತ್ತಿ ಪಕ್ಕ” ಕವನದಲ್ಲಿ ಈ ಅಂತರಂಗಜನ್ಯ ಸಿಮ್ಮೆಟ್ರಿ ಮತ್ತು ಸೌಂದರ್ಯ ಲಹರಿ ಎರಡೂ ಎಷ್ಟು ಚೆಂದ!. ಹಾಗಿದ್ದರೆ ಈ ಛಂದದ ಗರ್ಭಕೋಶ ಯಾವುದು. ಅದರ ನೈಸರ್ಗಿಕ ಮತ್ತು ವ್ಯಾಕರಣಾತ್ಮಕ ವ್ಯಾಪ್ತಿ ಏನು?. ಮನುಷ್ಯ ಹೊರಗಿನಿಂದ ಲೇಪಿಸುವ ಛಂದ ಮುಖ್ಯವೇ ಅಥವಾ ಪ್ರಕೃತಿ,ಜನಪದ ಜನ್ಯ ಛಂದವಿಲ್ಲದ ಚಂದ ಮುಖ್ಯವೇ? ಈ ಪ್ರಶ್ನೆ ಹಾಕುವ ಕವಿತೆ, ಪೂರ್ಣಿಮಾ ಸುರೇಶ್ ಬರೆದ “ಛಂದವಿಲ್ಲದ ಚೆಂದ” ಕವಿತೆ. ಅಕ್ಷರರೂಪಿಯಾಗಿ ಹೀಗಿದೆ ನೋಡಿ. ಛಂದವಿಲ್ಲದ ಚೆಂದ *        *         * ನಾವು ಪ್ರಶ್ನೆಗಳ ಪ್ರಕಾರ ಗಣಿತ ಗುಣಿತ ಕಲಿತವರು ಸಮಸ್ಯೆಯ ಲೆಕ್ಕ ಬಿಡಿಸಿ ಅಂಕಗಳ ಕಂಡವರು ಅಡುಗೆ‌ ಮನೆಯ ಕುಕ್ಕರ್ ಕೂಗಿದ ಸದ್ದಿಗೇ ಗಲಿಬಿಲಿ; ಅಂತರಂಗದಲ್ಲಿ ಒಳದನಿಗೆ ಗೀಚಿಟ್ಟ ಸರಳರೇಖೆಗಳೂ ಗೋಜಲು ಅಲ್ಲೇ ಮೂಲೆಯಲ್ಲಿ! ಅಂಗಳದ ರಂಗೋಲಿಗೂ ಜ್ಯಾಮಿತಿಯ ಚುಕ್ಕಿ- ಗೆರೆಗಳು; ಚಿತ್ತಾರದ ಹುಮ್ಮಸ್ಸಿಗೆ ಕಂಠಪಾಠ ಆಗಲೇಬೇಕು ಸೂತ್ರ- ಪ್ರಮೇಯಗಳು ಸಂಭ್ರಮಗಳನ್ನ ಸಿದ್ಧಸೂತ್ರ, ಪ್ರಮೇಯಗಳಲ್ಲಿ ಕಟ್ಟಿಹಾಕಿದ ಸೂತ್ರ ಕಗ್ಗಂಟುಗಳು ಆಗ ಗೆರೆಗಳು  ಬೆರಳ ತುದಿಯಿಂದ ಇಳಿದು.. ಆದರೂ ಆಗೊಮ್ಮೆ ಈಗೊಮ್ಮೆ ನುರಿತ ಬೆರಳುಗಳ ಸಂದಿನಲ್ಲಿಳಿವ ವಕ್ರರೇಖೆಗಳು ಬಣ್ಣಗೆಡಿಸಿಕೊಂಡಾಗ “ಸುಮ್ಮನಿರಿ ಅಕ್ಕ, ಇದೇನುಮಹಾ.. ಇಲ್ಲಿ ಕೊಡಿ” ಹುಡಿಯನ್ನ ಬೆರಳುಗಳ ಕುಡಿಗಳು ಸೆಳೆದು ಸರಸರ ಎಳೆಯುತ್ತಾಳೆ… ಬರೆಯೋ – ಗೆರೆಯೋ, ತಪ್ಪು- ಸರಿ, ಗಣಿತ – ಕಾಗುಣಿತದ ಚಿಹ್ನೆಗಳೋ .. ಸಲೀಸಾಗಿ ಬರೆದು  ರಂಗೋಲಿಯಂತೆಯೇ ಅವಳೂ ನಿರಾಳ ನಗುವಾಗ.. ಇವಳ ಆಯಾಮಗಳ ತೆರೆಯದ ಆಯಾಮಗಳಲ್ಲಿ ಅರಳುವ ಛಂದವಿಲ್ಲದ ಚೆಂದ *        *        * ಛಂದವಿಲ್ಲದ ಚೆಂದ ಅನ್ನುವಲ್ಲಿ ಛಂದ ಎಂದರೇನು?. ಅದು ಕಾವ್ಯದ ಅಂತರಾಳದಿಂದ ಸ್ವಯಂಭೂ ಆಗಿ ಸಂಭವಿಸಿದ, ಸಂಭವಿಸುತ್ತಲೇ ಇರುವ ನೈಸರ್ಗಿಕ ಕ್ರಿಯೆಯೇ? ಅಥವಾ ಬಾಹ್ಯಸ್ತರದಿಂದ ಅಂಕಣದ ಅಂಚುಗಳಿಗೆ ರೂಪ ಕಟ್ಟುವ ಛಂದವೇ?. “ನಾವು ಪ್ರಶ್ನೆಗಳ ಪ್ರಕಾರ ಗಣಿತ ಗುಣಿತ ಕಲಿತವರು ಸಮಸ್ಯೆಯ ಲೆಕ್ಕ ಬಿಡಿಸಿ ಅಂಕಗಳ ಕಂಡವರು” ‘ಗಣಿತ ಗುಣಿತ ಕಲಿತವರು’ ಎಂಬುದನ್ನು ಗಮನಿಸಬೇಕು. ಇದು ಕಲಿತ ಛಂದ. ಸ್ವಯಂ ಭೂ ಛಂದವಲ್ಲ.  ಹೀಗೆ ಕಲಿಸುವ ಕಲೆಸುವ, ಪಾಕ ಬರಿಸುವ, ತರ್ಕ ಶಾಸ್ತ್ರೀಯ, ಬಾಹ್ಯಜಗತ್ತಿನ ಕಾರ್ಯ ಕಾರಣ ಸಂಬಂಧಗಳ ಪದಬಂಧಕ್ಕೆ ಸಿಲುಕಿದ ಅಂತರ್ಮನ, ಮನೆಯ ಕುಕ್ಕರ್ ಕೂಗಿದ ಸದ್ದಿಗೇ ಗಲಿಬಿಲಿಯಾಗುತ್ತೆ. “ಅಂತರಂಗದಲ್ಲಿ ಒಳದನಿಗೆ ಗೀಚಿಟ್ಟ ಸರಳರೇಖೆಗಳೂ ಗೋಜಲು ಅಲ್ಲೇ ಮೂಲೆಯಲ್ಲಿ!” ಈ ಸಾಲುಗಳಲ್ಲಿ ‘ಅಂತರಂಗದ ಒಳದನಿ’ ಅಂತ ಬಳಸಿರುವುದು ಗಮನಾರ್ಹ. ಅದು ಅಂತರಾಳದ ನ್ಯಾಚುರಲ್ ಛಂದ. ಕವಿತೆಯುದ್ದಕ್ಕೂ ನಡೆಯುವ ತುಲನೆ, ಬಾಹ್ಯಜನ್ಯ ಛಂದದ ಲಿಪ್ ಸ್ಟಿಕ್ ಮತ್ತು ಎದೆಯೊಳಗಿನ ಪ್ರೀತಿಯ ಛಂದದ ಚೆಂದ ಗಳ ನಡುವೆ. “ನುರಿತ ಬೆರಳುಗಳ ಸಂದಿನಲ್ಲಿಳಿವ ವಕ್ರರೇಖೆಗಳು ಬಣ್ಣಗೆಡಿಸಿಕೊಂಡಾಗ “ಸುಮ್ಮನಿರಿ ಅಕ್ಕ, ಇದೇನುಮಹಾ.. ಇಲ್ಲಿ ಕೊಡಿ” ಹುಡಿಯನ್ನ ಬೆರಳುಗಳ ಕುಡಿಗಳು ಸೆಳೆದು ಸರಸರ ಎಳೆಯುತ್ತಾಳೆ.”  ಗೆರೆಗಳ  ಮೂಲಕ, ಸಂಭ್ರಮಗಳನ್ನ ಸಿದ್ಧಸೂತ್ರ, ಪ್ರಮೇಯಗಳಲ್ಲಿ ಕಟ್ಟಿಹಾಕಿದ ಸೂತ್ರ ಕಗ್ಗಂಟುಗಳು, ಶಿಷ್ಟ ಪದ್ಧತಿಯ ಕಂಠಪಾಠ ಮಾಡಿದ ‘ನುರಿತ’ ಬೆರಳುಗಳು ರಂಗವಲ್ಲಿ ಬರೆಯುವಾಗ ರೇಖೆಗಳಿಗೆ ಭಾವ ಬರದೇ ಇದ್ದಾಗ ಆ ಜನಪದೀಯ ಹುಡುಗಿ ಸರಸರನೆ ರಂಗೋಲಿ ಬರೆಯುತ್ತಾಳೆ. ಆಕೆಗೆ,  ಬರೆಯೋ – ಗೆರೆಯೋ, ತಪ್ಪು- ಸರಿ, ಗಣಿತ – ಕಾಗುಣಿತದ ಚಿಹ್ನೆಗಳೋ  ಯಾವುದರ ಕಂಠಪಾಠವೂ ಇಲ್ಲ. ( ಕಂಠಪಾಠ ಎಂಬ ಪದ ಎಷ್ಟು ಮೆಕ್ಯಾನಿಕಲ್ ಎಂಬ ಭಾವ ಅಲ್ಲವೇ). ಹಾಗೆ ಆ ಕಾಡು ಹುಡುಗಿ ಸಲೀಸಾಗಿ ಬರೆದು,   “ರಂಗೋಲಿಯಂತೆಯೇ ಅವಳೂ ನಿರಾಳ ನಗುವಾಗ.. ಇವಳ ಆಯಾಮಗಳ ತೆರೆಯದ ಆಯಾಮಗಳಲ್ಲಿ ಅರಳುವ ಛಂದವಿಲ್ಲದ ಚೆಂದ” ರಂಗವಲ್ಲಿಯ ಪೂರ್ವನಿರ್ಧಾರಿತ ಶಿಷ್ಟ ಜ್ಞಾನದ ಗೆರೆಗಳು, ಮತ್ತು ಅಂತರಂಗದಿಂದ ಮೂಡಿ ಆವಿರ್ಭವಿಸಿ ತನ್ನಿಂದ ತಾನೇ ಬರೆಯಲ್ಪಟ್ಟ ರಂಗೋಲಿಯ ನಡುವೆ ಇದು ಸ್ಪರ್ಧೆಯಲ್ಲ. ಮೊದಲನೆಯದ್ದು  ಸೂತ್ರ ಕಗ್ಗಂಟುಗಳಲ್ಲಿ ಬಂದಿಯಾದರೆ, ಎರಡನೆಯದ್ದು ಛಂದವಿಲ್ಲದ ಚಂದವಾಗಿ, ಬಂಧನವಿಲ್ಲದ ಬಾಂಧವ್ಯವಾಗಿ, ಸರಸರನೆ ಬೆರಳುಗಳು ಸರಿದು ಮೂಡುವ ಸಿಮ್ಮೆಟ್ರಿಯಾಗಿ ಮೂಡಿ “ರಂಗೋಲಿಯಂತೆ ಅವಳೂ ನಿರಾಳವಾಗಿ ನಗುತ್ತಾಳೆ! “ ನಾನು ಈ ಮೊದಲು ಉದಾಹರಣೆಯಾಗಿ ಹೇಳಿದ ಪ್ರಕೃತಿಯ ಒಳಕೇಂದ್ರದಿಂದ ಹೊರಮುಖಿಯಾಗಿ ಆಯಾಮದ ಪರಿಧಿಯ ಹಂಗಿಲ್ಲದೆ ಹರಿದು ಮೂಡುವ ಸಿಮ್ಮೆಟ್ರಿಗೆ ಛಂದವಿಲ್ಲದ ಚೆಂದವಿದೆ. ಅದಕ್ಕೆ ಮನುಷ್ಯನಿರ್ಮಿತ ಛಂದಸ್ಸಿನ ಅಗತ್ಯವಿಲ್ಲ. ಅಲ್ಲವೇ ************************************************************ ಮಹಾದೇವಕಾನತ್ತಿಲ ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಇಂತಹ ಅಗಾಧತೆಯಲ್ಲಿ ಸೂಜಿ ಮೊನೆಯ ಮಿದುಳಿನ ಮನುಷ್ಯ ಮತ್ತು ಆತನ ಮನಸ್ಸು, ತಾನು ಮಾತ್ರ ಜೀವಿ, ಇನ್ನುಳಿದ ಕಲ್ಲು, ಭೂಮಿ, ನಕ್ಷತ್ರ, ಆಕಾಶಗಳು ನಿರ್ಜೀವಿ ಎಂದು ನಿರ್ಧರಿಸುವಾಗ, ಆ ಪ್ರಜ್ಞೆ ಎಷ್ಟು ಸ್ವಕೇಂದ್ರಿತವಲ್ಲವೇ?.

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ  ಸಾಲುಗಟ್ಟಿದ  ಮನಸ್ಸುಗಳು ಮನೆ ಕಟ್ಟುವಾಗ ಮೊದಲು  ಕಲ್ಲಿನಿಂದ ಗಟ್ಟಿಯಾದ ಅಡಿಪಾಯ, ಆಮೇಲೆ ಕಟ್ಟುವುದೇ ಗೋಡೆ!. ತಳಪಾಯದ ನಾಲ್ಕೂ ಅಂಚುಗಳುದ್ದಕ್ಕೂ ನಾಲ್ಕು ಗೋಡೆಗಳು ಮಧ್ಯದಲ್ಲಿ ಸ್ಪೇಸ್ ಮತ್ತು ಗಾಳಿ ಬಂಧಿಸಲ್ಪಡುತ್ತದೆ. ಒಳಗೆ ಮತ್ತೊಂದಷ್ಟು ಗೋಡೆಗಳು. ಡ್ರಾಯಿಂಗ್ ರೂಂ ಮತ್ತು ಮಲಗುವ ಕೋಣೆ ನಡುವೆ ಗೋಡೆ, ಮನೆಗೆ ಬರುವ ಆಗಂತುಕರಿಂದ ಪ್ರೈವೆಸಿ ಅತ್ಯಗತ್ಯ.  ಆಮೇಲೆ ಅಡುಗೆ ಕೋಣೆ ಮತ್ತು ಡೈನಿಂಗ್ ರೂಂ ನಡುವೆ ಗೋಡೆಗಳು. ಮತ್ತೆ, ದೇವರ ಕೋಣೆ ಎನ್ನಲ್ಪಡುವ ಗೂಡಿನಂತಹ ಚಿಕ್ಕ ಕೋಣೆಗೂ ಗೋಡೆಗಳು, ಒಳಗೆ ದೇವರನ್ನು ಕೂರಿಸಲು. ಸಮಾಜವಾದಕ್ಕೇ ಸವಾಲು, ಈ ಪ್ರೈವೇಟ್ ಎನ್ನುವ ಮನೆ!. ಮನೆಯ ಹೊರಗೆ, ಮನೆಯೂ ಸುರಕ್ಷಿತವಾಗಲಿ ಎಂದು ಕಾಂಪೌಂಡ್ ಗೋಡೆ. ಅದಕ್ಕೆ ಒಂದು ಗೇಟು. ಗೇಟಲ್ಲಿ ಬೋರ್ಡು, ‘ನಾಯಿಗಳಿವೆ ಎಚ್ಚರಿಕೆ’ !.  ಮನೆಯೊಳಗೆ ಸ್ವಂತ ಹಣ, ಚಿನ್ನ ಇತ್ಯಾದಿಗಳನ್ನು ನಗರದ ಕಳ್ಳರಿಂದ, ಢಕಾಯಿತರಿಂದ ಸುರಕ್ಷಿತವಾಗಿ ಬಚ್ಚಿಡಲು ಉಕ್ಕಿನ ಕಪಾಟುಗಳು, ಅದಕ್ಕೆ ದೊಡ್ಡ ಬೀಗ. ಕಳ್ಳರು ಮನೆಯೊಳಗೆ ನುಗ್ಗದಂತೆ ಬಾಗಿಲು. ಅದನ್ನು ಒಳಗಿಂದ ಲಾಕ್ ಮಾಡಲು ಕದ, ಉಕ್ಕಿನ ಚಿಲಕ ಇತ್ಯಾದಿ. ಮನೆ ಮನೆಗಳ ಸಾಲುಗಳು, ಅವುಗಳ ನಡುವೆ ಬೀದಿಗಳು. ಬೀದಿಗಳಿಗೆ ಸಂಖ್ಯೆಗಳು, ಹೆಸರುಗಳೂ ಬೇಕು,ವಿಳಾಸಕ್ಕಾಗಿ. ಮನೆಗಳ ತ್ಯಾಜ್ಯಗಳನ್ನು ನಗರದ ಹೊರಗೆ ಹರಿಯುವ ನದಿಗೆ ಸಾಗಿಸಲು ಕೊಳಚೆ ಚರಂಡಿಗಳು ನೆಲದಡಿಯಲ್ಲಿ. ಆ ಚರಂಡಿಗಳನ್ನು ಮುಚ್ಚಿ ಸುಂದರವಾಗಿ ಕಲ್ಲು ಚಪ್ಪಡಿಗಳನ್ನು ಹಾಸಲಾಗಿದೆ!. ನಗರ ನಿರ್ಮಲವಾಗಿರಬೇಕಲ್ಲ!!. ನಾಗರೀಕತೆ ಅಥವಾ ಸಿವಿಲೈಸೇಷನ್ ಎಂಬ ಪದದ ಜತೆಗೆ ಒಂದು ವ್ಯವಸ್ಥೆ ಇದೆ. ಒಂದರ ಬಗುಲಲ್ಲಿ ಒಂದು ಹೀಗೆ ಅನುಶಾಸಿಸಿ, ಕಟ್ಟಿದ ಸಾಲುಗಳು, ಸಾಲು ಸಾಲುಗಳು , ಒಂದು ಸಾಲಿನ ಮೇಲೆ ಇನ್ನೊಂದಷ್ಟು ಸಾಲುಗಳಾಗಿ ಇಟ್ಟಿಗೆಗಳನ್ನು ಪೇರಿಸಿ ಸಿಮೆಂಟ್ ನಿಂದ ಚೆನ್ನಾಗಿ ಒಂದಕ್ಕೊಂದು ಅಂಟಿಸಿ ಗೋಡೆ ಕಟ್ಟಿ, ಬಾಗಿಲು  ಕೂಡಿಸಿ, ಅಂತಃಕರಣವನ್ನೂ ಒಳಗೆ ಬಂಧಿಸಿದರೆ ಅದು ನಗರದ ಮನೆಯಾಗುತ್ತೆ. ನಗರದ ವ್ಯವಸ್ಥೆಯೊಳಗೆ ನಾಗರಿಕ ಸಮಾಜ ಸಂವಹಿಸಿ ಬದುಕುವಾಗ, ವ್ಯಾಪಾರಿಗಳು, ಕವಿಗಳು, ಕಾರ್ಮಿಕರು, ಆಫೀಸರುಗಳು, ಆಳುವವರು, ಆಳಿಸಿಕೊಳ್ಳುವವರು, ಕಳ್ಳರು, ಹೀಗೆ ಎಲ್ಲರೂ ಉಸಿರಾಡುವ ಪಟ್ಟಣದ ಗಾಳಿ ಒಂದೇ. ನಗರದ ನಿಯಮಗಳು,  ಒಂದು ರೀತಿ ಕವಿತೆಯ ವ್ಯಾಕರಣದ ಹಾಗೆ!. ಬಂಧ, ಛಂದದ ಕೋಶದೊಳಗೆ ಟ್ರಾಫಿಕ್ ನಿಯಮಗಳನ್ನು ಪಾಲಿಸಲೇ ಬೇಕು. ನಮ್ಮ ದೇಹದ ಕೋಟ್ಯಂತರ ಜೀವಕೋಶಗಳೂ ಒಂದು ಕ್ರಮಬದ್ಧತೆಗೇ ಒಳಪಟ್ಟು, ಜೀವಕೋಶಗಳ ನಗರವನ್ನೇ ಕಟ್ಟಿಕೊಂಡಿವೆ. ಅಂತಹಾ ದೇಹದ ಸುವ್ಯವಸ್ಥಿತ ಪಟ್ಟಣದೊಳಗೆ ಅಂತರ್ಗತವಾಗಿ ಮನುಷ್ಯ ಚೇತನ ಸದಾ ಕ್ರಿಯಾಶೀಲವಾಗಿದೆ. ಬಸವಣ್ಣ ಹೇಳಿದ ಸ್ಥಾವರದೊಳಗಿನ ಜಂಗಮವದು. ಹಾಗಿದ್ದರೆ, ಹೊಸ ಹೊಸ ಯೋಚನೆಗಳು, ಸೃಜನಶೀಲ ತತ್ವಗಳು ರೂಪ ತಳೆಯುವುದು ಹೇಗೆ!. ಮನುಷ್ಯ ಪ್ರಜ್ಞೆಯ ಚೇತನ ಸ್ವರೂಪಕ್ಕೆ ಮನೆಯ ವ್ಯಾಖ್ಯೆ ಏನು?. ವ್ಯವಸ್ಥೆಯ ಮಿತಿ, ನಿಯಮಗಳನ್ನು ಮೀರಿದ ಚೇತನ ಸ್ವರೂಪವನ್ನು ಕುವೆಂಪು ನೋಡುವ ಬಗೆ ಹೀಗಿದೆ ಅಲ್ಲವೇ. ” ಓ! ನನ್ನ ಚೇತನ ಆಗು ನೀ ಅನಿಕೇತನ || ರೂಪ ರೂಪಗಳನು ದಾಟಿ ನಾಮ ಕೋಟಿಗಳನು ಮೀಟಿ ಎದೆಯ ಬಿರಿಯ ಭಾವದೀಟಿ ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ ಎಲ್ಲಿಯೂ ನಿಲ್ಲದಿರು ಮನೆಯನೆಂದು ಕಟ್ಟದಿರು ಕೊನೆಯನೆಂದು ಮುಟ್ಟದಿರು ಓ! ಅನಂತವಾಗಿರು “ ದೇಹ, ಮನಸ್ಸು ಮತ್ತು ಚೇತನ ಇವುಗಳು ಒಂದಾಗಿ ಪ್ರಕಟವಾಗುವುದೇ ಮನುಷ್ಯನ ರೂಪದಲ್ಲಿ. ದೇಹ ಮತ್ತು ಮನಸ್ಸಿಗೆ ಮನೆ ಬೇಕು, ವ್ಯವಸ್ಥೆ ಬೇಕು, ಸಮಾಜ ಬೇಕು. ನಾಗರಿಗತೆಯ ಎಲುಬು ಗೂಡೊಳಗೆ ಸಿದ್ಧಾಂತಗಳೂ ಮನೆಮಾಡುತ್ತವೆ. ಇವುಗಳೆಲ್ಲವೂ ನಮ್ಮ ಬದುಕನ್ನು, ಬದುಕುವ ಬಗೆಯನ್ನು, ಚಿಂತನೆಯನ್ನು ಒಂದು ಚೌಕಟ್ಟಿನೊಳಗೆ ಕೂಡಿಸುವಾಗ, ಅದಕ್ಕೊಂದು ಸ್ಥಿರತೆ, ಸಮತೋಲನ ಪ್ರಾಪ್ತವಾಗುತ್ತೆ. ಆದರೆ, ವಿಕಸನಕ್ಕೆ ತಹತಹಿಸುವ ಸೃಜನಶೀಲತೆಗೆ, ಚೇತನಕ್ಕೆ ಈ ಎಲ್ಲವೂ ಬಂಧನಗಳೇ.  ರೂಪ ಮತ್ತು ಸ್ವರೂಪ ಎಂಬ ಡೆಫೆನಿಷನ್ ನನ್ನು ದಾಟಲು, ಹೆಸರಿನ ಅಚ್ಚೊತ್ತು ಎಂಬ ಸ್ವಚಿತ್ರ ರೇಖೆಗಳನ್ನು ಮೀರಿ, ಎಲ್ಲ ತತ್ವದ ಎಲ್ಲೆ ಮೀರಿ ಅನಂತವೇ ಗುರಿಯಾಗಿ ವಿಸ್ತರಿಸುವುದು ಚೇತನ.  ಮನೆ ಕಟ್ಟುವುದು ಎಂದರೆ, ಈ ಚೈತನ್ಯದ ವಿಕಸನಕ್ಕೆ ಪೂರ್ಣವಿರಾಮ ಹಾಕಿದಂತೆ. ಸದಾ ಚಲನಶೀಲವೇ ಚೇತನ. ಹಾಗಿದ್ದರೆ ಮನುಷ್ಯನಿಗೆ ಮನೆಯೇ ಬೇಡವೇ?.ಹಾಗೆಂದು ಕವಿಯ ಭಾವವಲ್ಲ.  ಸ್ಥಿರ ಮತ್ತು ಚಲನಶೀಲ ಶಕ್ತಿಗಳು ನಮ್ಮೊಳಗೆ ಒಂದಕ್ಕೊಂದು ತಳಕು ಹಾಕಿಕೊಂಡು ಸದಾ ಟಗ್ ಆಫ್ ವಾರ್ ನಡೆಸುತ್ತಲೇ ಇರುತ್ತವೆ.  ಸೃಜನಶೀಲ ಪ್ರಜ್ಞೆ, ಕವಿಯಾಗುತ್ತದೆ, ಕಲಾವಿದನಾಗುತ್ತದೆ. ಸದಾ ವಿಕಸನದತ್ತ ತುಡಿಯುವ ಮನಸ್ಸು ರಾತ್ರೆ ಮನೆಯೊಳಗೆ ಬೆಚ್ಚಗೆ ನಿದ್ರಿಸುತ್ತೆ. ನೇಸರನ ಮೊದಲ ಕದಿರು ಕನಸುಗಾರನ ಕನಸಿಗೆ, ಕಲ್ಪನೆಗೆ,  ಸ್ಪೂರ್ತಿಯಾಗುತ್ತೆ. ಮನೆ ಹಳೆಯದಾದಾಗ ಹೊಸ ಮನೆ ಕಟ್ಟ ಬೇಕಾದರೆ, ಮೊದಲು ಹಳೆಯ ಅಡಿಪಾಯ, ಗೋಡೆಗಳನ್ನು ಮುರಿದು ತೆಗೆದು, ಹೊಸ ಮನಸ್ಥಿತಿಗನುಗುಣವಾಗಿ, ಕನಸು,ಕಲ್ಪನೆಗಳಿಗನುಗುಣವಾಗಿ ಪುನಃ ಇಟ್ಟಿಗೆಗಳನ್ನು ಒಂದೊಂದೇ ಜೋಡಿಸಿ- “ಕಟ್ಟುವೆವು ನಾವು ಹೊಸ ಮನೆಯೊಂದನು!” ನಗರವನ್ನು ಕಟ್ಟುವ ಪ್ರಕ್ರಿಯೆ, ನಗರದ ವ್ಯವಸ್ಥೆ ಇವುಗಳೆಲ್ಲಾ, ಮನಸ್ಸಿನ, ನಾಗರಿಕ ಸಮಾಜಪ್ರಜ್ಞೆಗೆ ಹಿಡಿಯುವ ಕನ್ನಡಿ ತಾನೇ. ಕಂಬಾರರ ಇಟ್ಟಿಗೆಯ ಪಟ್ಟಣದ ಎದೆಬಡಿತ ಹೀಗಿದೆ.  ಇಟ್ಟಿಗೆಯ ಪಟ್ಟಣ ಹಸಿರನಲ್ಲ, ಈ ನಗರದಲ್ಲಿ ಬಿತ್ತಿ ಬೆಳೆಯುತ್ತಾರೆ ಮಣ್ಣಿನಿಟ್ಟಿಗೆಯನ್ನ. ಇಟ್ಟಿಗೆ ಬೆಳೆಯುತ್ತದೆ, ಕಟ್ಟಡವಾಗುತ್ತದೆ. ಕಟ್ಟಡ ಆಕಾಶದವಕಾಶವನ್ನ ಚುಚ್ಚಿ ಬಿಸಿ ಮಾಡುತ್ತದೆ. ಸೂರ್ಯನ ಬಿಸಿಲಿಗೆ ದೀಪದ ಬೆಳಕಿಗೆ ಕಿಸಕ್ಕಂತ ಹಲ್ಲು ಕಿರಿದು ಹಳದಿಯ ನಗು ನಗುತ್ತದೆ. ಕಟ್ಟಡದ ಇಕ್ಕಟ್ಟು ಸಡಿಲಿ, ಬಿರುಕಿನಲ್ಲಿ ಹಸಿರು ಇಣುಕಿದರೆ, ಇಟ್ಟಿಗೆ ಅದರ ಕತ್ತು ಹಿಸುಕಿ ಕೊಲ್ಲುತ್ತದೆ. ಪಾಪಾತ್ಮ ಹಸಿರು ಹುತಾತ್ಮನಾಗದೆ ಸಾಯುತ್ತದೆ. ಗೊತ್ತಾ ನಿಮಗೆ- ಈ ಸಿಟಿಯೊಳಗೆ ಆತ್ಮದ ಮಾರ್ಕೆಟ್ಟಿದೆ. ತಲೆಯ ಕೊಯ್ದು, ತೊಗಲ ಸುಲಿದು ತಿಪ್ಪರಲಾಗ ತೂಗು ಹಾಕಿದರೆ ತಗೊ, ಹಲೊ ಕಾಸಿಗೊಂದು ಕಿಲೊ ಕೊಸರಿಗೊಂದು ಕಿಲೊ. ತಲೆ ತಿಂಬವರಿಗೆ ಸೂಚನೆ: ಅದು ಹಲ್ಕಿರಿದು ಅಣಕಿಸಿದರೆ ಹೆದರಬೇಡಿರಿ. ***  ***  *** ಮಣ್ಣು, ಹಸಿರು ಮತ್ತು ಜನಪದ, ಇವಗಳ ನಡುವೆ ಆತ್ಮಸಂಬಂಧ. ಯಾವ ಶಾಸ್ತ್ರದ, ತಂತ್ರಜ್ಞಾನದ, ಲಿಪಿಯ ಸಹಾಯ ಇಲ್ಲದೇ  ಪೀಳಿಗೆಯಿಂದ ಪೀಳಿಗೆಗೆ ಬಾಯಿಮಾತುಗಳಿಂದ ದಾಟುತ್ತಾ, ಜನಜೀವನದ ಅನುಭವದ ಸತ್ವವನ್ನೂ ಹೀರಿ ಬೆಳೆಯುವ ಜ್ಞಾನ ಪ್ರಕಾರ, ಜಾನಪದ. ಜಾನಪದದ ಒಂದೊಂದು ಹೆಜ್ಜೆಗಳೂ ಒಂದೊಂದು ಪೀಳಿಗೆ. ಇದೆಲ್ಲಾ ಯಾಕೆ ಹೇಳಿದೆ ಎಂದರೆ, ಚಂದ್ರಶೇಖರ ಕಂಬಾರ ಅವರು ಜನಪದದಲ್ಲೇ ಬೇರು ಕಂಡ ಬರಹಗಾರರು. ಅವರ ಕವಿತೆಗಳಲ್ಲಿ, ಅಂತರ್ಗತ ಜನಪದ ಧ್ವನಿಯಿದೆ. ಈ ಕವಿತೆಗಾಗಿ, ಜಾನಪದದ ಇನ್ನೊಂದು ಮುಖವನ್ನೂ ಹೇಳಬೇಕು. ಸಾಮಾನ್ಯವಾಗಿ ಹಳ್ಳಿಯ ಜನ ಮುಗ್ಧರು, ಮನುಷ್ಯ ಮನುಷ್ಯನ ನಡುವೆ ಇರುವ ಸಂಬಂಧ, ಪ್ರೀತಿ ಗೌರವಗಳನ್ನು ಅತ್ಯಂತ ಶುಧ್ಧ ಅಂತಃಕರಣದಿಂದ ಅನುಭವಿಸುವ ಮಂದಿ ಇವರು. ಇಟ್ಟಿಗೆಯ ಪಟ್ಟಣ ಈ ಕವಿತೆಯಲ್ಲಿ, ಇಟ್ಟಿಗೆ ಮೇಲೆ ಇಟ್ಟಿಗೆ ಬೆಳೆದು ಪಟ್ಟಣವಾಗಿ, ಆಕಾಶದವಕಾಶ ನುಂಗುವುದು ಮೊದಲ ಚರಣ. ಬೆಳೆವ ಹಸಿರಿನ ಅವಕಾಶವನ್ನೂ ಆಕಾಶದ ಮೂರೂ ಸ್ವತಂತ್ರ ಆಯಾಮಗಳನ್ನು ಪಟ್ಟಣ ನುಂಗಿದೆ. ಒಂದುಕಡೆ ಜಗತ್ತಿಗೇ ಉಸಿರು ಕೊಡುವ ಹಸಿರು ಕಳೆಯಿತು ಎಂದಾದರೆ, ಅದರ ಜತೆಗೆ ನ್ಯಾಚುರಲ್ ಆದ ಮನುಷ್ಯ ಪ್ರಜ್ಞೆಯೂ, ಮತ್ತು ಜೀವಜಾಲದ ನೈಸರ್ಗಿಕ ವಿಕಾಸಕ್ಕೆ ಅಗತ್ಯವಾದ ಫ್ರೀ ಸ್ಪೇಸ್ ( ಆಕಾಶದವಕಾಶ) ಕೂಡಾ ಸಂಕುಚಿತವಾಗಿದೆ.   ಅಷ್ಟು ಮಾತ್ರವಲ್ಲದೆ, ಕಿಸಕ್ಕನೆ ಹಲ್ಕಿರಿದು ಹಳದಿ ನಗು ನಗುತ್ತದೆ! ಕಾಮಾಲೆ ರೋಗ ಬಂದವರಿಗೆ, ಎಲ್ಲವೂ ಹಳದಿಯಾಗಿ ಕಂಡು, ಹಳದಿಯೇ ಜಗತ್ತು,ಹಳದಿಯೇ ಸತ್ಯ. ಇಟ್ಟಿಗೆ,ಪಟ್ಟಣವಾದಾಗ, ಅದಕ್ಕೆ ಅದರ ಮಾರ್ಗವೇ ಸರಿ ಎನ್ನುವ ಕಾಮಾಲೆ ದೃಷ್ಟಿಯೇ, ಅದಕ್ಕೇ ಹಳದಿ ನಗುವೇ !! ಸಾಧಾರಣವಾಗಿ ಅಶುಭ್ರ ಹಲ್ಲುಗಳು ಹಳದಿಯಾಗಿರುತ್ತವೆ. ಹಾಗೆ ನಕ್ಕಾಗ, ನಗುವಿನಲ್ಲಿ,ಹಳದಿ ಹಲ್ಲು ಇಣುಕುತ್ತವೆ. ಇದು ಹಳದಿ ನಗುವೇ?. ಇಟ್ಟಿಗೆಯ ಪಟ್ಟಣ ಮತ್ತು ಹಾಗೆ ಮೋನೋಕ್ರೊಮ್ಯಾಟಿಕ್, ಬೆಳವಣಿಗೆ, ಅಶುಬ್ರ ಅನ್ನುವ ಧ್ವನಿಯೇ? ಇನ್ನೊಂದು ವಿಷಯ, ಇಟ್ಟಿಗೆಗೆ ನಿರ್ದಿಷ್ಟ ಆಕಾರ, ಇದೆ. ಇಟ್ಟಿಗೆ, ವೆಲ್ ಡಿಫೈನ್ಡ್. ಹಸಿರಿಗೆ ಯಾವಾಗಲೂ ಫ್ರೀ ಡೆಫಿನಿಷನ್.  ಇದೇ ಎಂಬ ಆಕಾರ, ಚಚ್ಚೌಕಾರದ ಆಕೃತಿಗಳಿಂದ ಚೂಪು ಮೂಲೆಗಳಿಂದ ಮೀರಿದ್ದು ಹಸಿರು. ಅದಕ್ಕೇ ಹಸಿರು,ಸ್ವಾತಂತ್ರ್ಯದ ಪ್ರತೀಕ. ಇಟ್ಟಿಗೆ,ಮನುಷ್ಯ ನಿರ್ಮಿತ. fixed ಆಕಾರ, fixed ಚಿಂತನಾವಕಾಶ. ಕಟ್ಟಡದ ಬಿರುಕಿನಲ್ಲಿ, ಹಸಿರು ಚಿಗುರಿದರೆ ಅದನ್ನೂ ಈ ಇಟ್ಟಿಗೆ ನುಂಗಿ ಹಾಕುತ್ತದೆ!. ಕೋಡಗಾನ ಕೋಳಿ ನುಂಗಿತ್ತಾ ಅಂತ ಸಿಕ್ಕಿದ್ದೆಲ್ಲಾ ನುಂಗುತ್ತಾ ಸಾಗುವ ಇಟ್ಟಿಗೆ, ತನ್ನ, ಮತ್ತು ಇನ್ನಿತರ ಇಟ್ಟಿಗೆಗಳ ಅಮಾನುಷ ಬಂಧದಲ್ಲಿ ನೈಸರ್ಗಿಕ ತತ್ವಕ್ಕೆ, ಪ್ರೀತಿ,ಸ್ವಾತಂತ್ರ್ಯಕ್ಕೆ ಜಾಗವನ್ನು ಕೊಡುವುದಿಲ್ಲ, ಮಾತ್ರವಲ್ಲ, ಅದನ್ನು ಕತ್ತು ಹಿಸುಕಿ ಕೊಲ್ಲುತ್ತದೆ. ಪಟ್ಟಣದಲ್ಲಿ ಮನುಷ್ಯಮುಖೀ,ಜೀವನ್ಮುಖೀ ಸತ್ವಕ್ಕೆ ಜಾಗವಿಲ್ಲ, ಮನುಷ್ಯಸಹಜ ಬೆಳವಣಿಗೆಗೆ ಸ್ವಾತಂತ್ರ್ಯವೂ ಇಲ್ಲ. ಹುತಾತ್ಮನಾಗದೆ ಸಾಯುತ್ತದೆ, ಪಾಪಾತ್ಮ ಹಸಿರು!. ಹಸಿರು ಪಾಪಾತ್ಮವಾಗಿ ಕಾಣುವುದು, ಮೇಲಿನ ಚರಣದ ಕಾಮಾಲೆ ದೃಷ್ಟಿಗೆ.  ಯಾವುದೇ ಉದ್ದೇಶ ಸಾಧಿಸದೇ ಕೊಲ್ಲಲ್ಪಟ್ಟಾಗ, ಅ ಸಾವಿಗೆ ಹುತಾತ್ಮ ಪಟ್ಟವೂ ಸಿಗಲ್ಲ. ಈ ಪಟ್ಟಣದಲ್ಲಿ ಆತ್ಮದ ಮಾರ್ಕೆಟ್ ಇದೆ! ಪಟ್ಟಣದ ವ್ಯಾಪಾರೀ ಮನೋಭಾವ, ಆತ್ಮವನ್ನೂ ಮಾಡಿಕೊಳ್ಳಲು ಸಿಧ್ಧ. ವ್ಯಾಪಾರ ಕೇಂದ್ರಿತ, ಬಂಡವಾಳಶಾಹಿ ವ್ಯವಸ್ಥೆ, ಹಣಕ್ಕಾಗಿ, ಆತ್ಮವನ್ನೂ ಮಾರಬಲ್ಲದು. ಆತ್ಮ ಎಂದರೆ ಇಲ್ಲಿ, ಅಧ್ಯಾತ್ಮಿಕ ಅರ್ಥವೇ ಆಗಬೇಕೆಂದಿಲ್ಲ, ಆತ್ಮ ಎಂದರೆ, ಮನುಷ್ಯನೊಳಗಿನ ಜೀವಪ್ರಜ್ಞೆ, ಸ್ವಂತಿಕೆ  ಅಂತಲೂ ಅಂದುಕೊಳ್ಳಬಹುದು. ಅಂತಹ ವ್ಯವಸ್ಥೆಯಲ್ಲಿ, ತಲೆ ಕಡಿದು, ಸಿಪ್ಪೆ ಸುಲಿದು, ಉಲ್ಟಾ ನೇತು ಹಾಕಿದರೂ ಯಾರಿಗೂ ಏನೂ ವೇದನೆಯಿಲ್ಲ, ಸಂವೇದನೆಯೂ ಸತ್ತಿದೆ. ತಲೆ ಕಡಿದದ್ದರಿಂದ, ಯೋಚನಾಶಕ್ತಿಯೂ ವಿವೇಚನಾಶೀಲತೆಯೂ ಗತವಾಗಿದೆ. ‘ಇಟ್ಟಿಗೆಯ ಪಟ್ಟಣ’ ಇಲ್ಲಿ ನಿರ್ದಯೀ, ಅಮಾನುಷ ವ್ಯಾಪಾರೀ ಜಗತ್ತನ್ನು ಪ್ರತಿಧ್ವನಿಸುತ್ತದೆ. ‘ತಲೆ ತಿಂಬವಗೆ’ ಎಂಬ ಪದ, ಅನೇಕ ಯೋಚನೆಗಳಿಗೆ ಮನದ ಕದ ತೆರೆಯುತ್ತದೆ. ಜಾನಪದಕ್ಕೆ ಮನೆ ಕಟ್ಟುವ, ಮನೆಯೊಳಗಿನ ಕಟ್ಟುಪಾಡುಗಳ ಜರೂರತ್ತಿಲ್ಲ. ಅದು ಕುವೆಂಪು ಅವರ ಕವಿತೆಯ, ಚೇತನ ಸ್ವರೂಪಿ. ಹಾಗೆಯೇ ಪ್ರೇಮಸ್ವರೂಪಿ,ಸಂವೇದನಾ ಸ್ವರೂಪಿ ಕೂಡಾ. ಕಂಬಾರರ ಕವಿತೆಯ ಇಟ್ಟಿಗೆಯ ಪಟ್ಟಣ, ಶಿಷ್ಟ ಮನಸ್ಸಿನ ಹಿಡಿತದ  ಮತ್ತು ಜಾನಪದದ ಚೋಮನ ದುಡಿಯ ಬಡಿತದ ನಡುವಿನ ಸಂಘರ್ಷ. ನಗರ ಕಟ್ಟುತ್ತಾ ತನ್ನದೇ ವರ್ತುಲ ಬೆಳೆಸುವ ಮಹತ್ವಾಕಾಂಕ್ಷೆಯ ದಾರಿಯಲ್ಲಿ ಪ್ರಕೃತಿಯ ಇತರ ಎಲ್ಲಾ ಜೀವ ವೇತನಗಳನ್ನು ಶೋಷಿಸುವ, ಕೊಲ್ಲುವ ನಾಗರಿಕ ಸಮಾಜದ ವಿಕೃತ ಮನಸ್ಸನ್ನು ಕವಿತೆ ಚಿತ್ರಿಸುತ್ತದೆ. ಕೊನೆಗೆ “ನಾಗರಿಕತೆ” ಎಂದರೇನು ಎಂಬ ಮೂಲಭೂತ ಪ್ರಶ್ನೆ ನಮ್ಮನ್ನು ತೀವ್ರವಾಗಿ ಕಾಡುತ್ತೆ. ************************************************** ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ  ಕ್ಯಾನುವಾಸು ಮತ್ತು ಕಾವ್ಯ ರಾತ್ರೆ ಆಗಷ್ಟೇ ಲಂಗದಾವಣಿ ತೊಟ್ಟು ಕುಳಿತಿತ್ತು. ಆ ಹೊತ್ತಿಗೆ ಆ ಪುಟ್ಟ ಮನೆಯೊಳಗೆ ಬಡಕಲು ಕ್ಯಾಂಡಲ್ ಮಾತ್ರ ಉರಿಯುತ್ತಿದೆ. ನಸುಗೆನ್ನೆಯ ಹೊಳೆವ ಕಣ್ಣುಗಳ ಬಾಲಕ ಮತ್ತು ಆತನ ಉಬ್ಬುಗೆನ್ನೆಯ ಕನಸುನೇತ್ರದ ತಂಗಿಗೆ ತಿನ್ನಲು ಬರೇ ಎರಡು ಸ್ಲೈಸ್ ಬ್ರೆಡ್ ಮಾತ್ರ ಉಳಿದಿದೆ. ಆ ಮಕ್ಕಳ ಅಮ್ಮ ಬ್ರೆಡ್ ಬಿಸಿ ಮಾಡಿಕೊಡಲು ವಿದ್ಯುತ್ ಪೂರೈಕೆ ಇಲ್ಲದೇ, ಆ ಛಳಿಯಲ್ಲೂ ತಣ್ಣಗಿನ ಬ್ರೆಡ್ ಮಕ್ಕಳಿಗೆ ತಿನ್ನಲು ಕೊಡುತ್ತಾಳೆ. ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯ ಆಗಸದಲ್ಲಿ ರಾತ್ರೆ ಬ್ರಿಟನ್,ಅಮೆರಿಕಾ ಇತ್ಯಾದಿ ರಾಷ್ಟ್ರ ಗಳ  ಯುದ್ಧವಿಮಾನಗಳು ಬಾಂಬು ಸುರಿಯುತ್ತಿದ್ದವು. ಸಾಧಾರಣವಾಗಿ ಯುದ್ಧಕಾಲದಲ್ಲಿ ರಾತ್ರಿಯಿಡೀ ಪೇಟೆ ಪಟ್ಟಣಗಳನ್ನು ಬ್ಲಾಕ್ ಔಟ್ ಮಾಡುತ್ತಾರೆ. ಜರ್ಮನಿಯ ವೈರಿಪಡೆಗಳೂ ಅಮವಾಸ್ಯೆಯಂತಹ ಕಗ್ಗತ್ತಲ ರಾತ್ರೆಯನ್ನೇ ವೈಮಾನಿಕ ದಾಳಿಗೆ ಉಪಯೋಗಿಸುತ್ತಾರೆ. ಹಾರಿ ಬರುವ ಯುದ್ಧವಿಮಾನಗಳನ್ನು ಹೊಡೆದುರುಳಿಸಲು ನೆಲಸೇನೆಯ ಗನ್ ಗಳು ಆಗಸಕ್ಕೆ ಮುಖಮಾಡಿ ಬೆಂಕಿಯುಗುಳಲು ಕಾಯುತ್ತವೆ. ಅದೋ ಸ್ಪೋಟದ ಸದ್ದುಗಳು ಕೇಳುತ್ತಿದೆ. ಮಕ್ಕಳು ಹೆದರಿ ಅಮ್ಮನ ಕೋಟಿನ ಬೆಚ್ಚಗಿನ ಅಪ್ಪುಗೆಯಲ್ಲಿ ಥರಗುಟ್ಟುತ್ತಿವೆ. ಜಗ್ಗನೆ ಬೆಳಕು, ಅಮೇಲೆ ಬಾಂಬಿನ ಸ್ಪೋಟದ ಸದ್ದು. ಅವರ ಮನೆಯಿಂದ ತುಸು ದೂರದಲ್ಲಿ ಇರುವ ಮನೆಗಳ ಸಮುಚ್ಛಯದ ಮೇಲೆ ಬಾಂಬು ಬಿದ್ದು ಉರಿಯುವುದು ಕಿಟಿಕಿಯ ಮೂಲಕ ಕಾಣಿಸುತ್ತಿದೆ. ಆ ಸಮುಚ್ಛಯದಲ್ಲಿಯೇ, ಈ ಮಕ್ಕಳ ಗೆಳೆಯ ಗೆಳತಿಯರ ವಾಸ. ಮರಣಾಕ್ರಂದನ ಒಡೆದ ಗಾಜುಗಳ ಕಿಟಿಕಿಯನ್ನ ದಾಟಿ ಈ ಮಕ್ಕಳಿಗೂ ಕೇಳಿಸುತ್ತೆ. ಅವರು ಅಮ್ಮನನ್ನು ಬಿಗಿ ಹಿಡಿದು ಸಣ್ಣಗೆ ಅಳುತ್ತವೆ. ಇಂತಹ ನಾಲ್ಕಾರು ವರ್ಷ, ಜರ್ಮನಿ,ಬ್ರಿಟನ್, ಫ್ರಾನ್ಸ್, ಇಟಲಿ ಇತ್ಯಾದಿ ದೇಶಗಳಲ್ಲಿ ಪರಸ್ಪರ ದಾಳಿ ನಡೆದು, ಅಲ್ಲಿ ಬದುಕುಳಿದ ಮಕ್ಕಳ ಮನೋ ಸ್ಥಿತಿ ಹೇಗಿದ್ದಿರಬಹುದು?. ಎರಡನೇ ಮಹಾಯುದ್ಧದ ನಂತರ ಸುಮಾರು ಮೂರು ದಶಕಗಳಷ್ಟು ಕಾಲ, ಈ ದೇಶಗಳಲ್ಲಿ ರಚಿತವಾದ ಕವಿತೆ, ಕತೆ ಕಾದಂಬರಿಗಳಲ್ಲಿ, ಈ ನೋವು, ಅನೂಹ್ಯ ಭಯ, ಅಸ್ಥಿರತೆ, ಬಡತನ ಎಲ್ಲದರ ಚಿತ್ರಣ ಒಂದಲ್ಲ ಒಂದು ರೀತಿಯಲ್ಲಿ ಧ್ವನಿಯಾಗಿ ಹರಿದಿತ್ತು. ಹಾಗಿದ್ದರೆ ಕಾವ್ಯದ ಮೂಲ ಸೆಲೆ ಸೃಜಿಸುವುದು ಎಲ್ಲಿಂದ?. ಕಾವ್ಯಬ್ರಹ್ಮ ಕುಳಿತ ತಾವರೆಯ ದಂಟಿನ ಬುಡ ಯಾವ ಕೆರೆಯ ಕೆಸರಲ್ಲಿ ಹುದುಗಿದೆ?. ಒಂದು ಬಿಳಿ ಬಣ್ಣದ ಬಟ್ಟೆಯ ಕ್ಯಾನುವಾಸು ಮೇಲೆ ಬಣ್ಣದ ದ್ರಾವಣ ಎರೆಯೋಣ. ಬಟ್ಟೆಯ ಮಧ್ಯದಲ್ಲಿ ಬಿದ್ದ ಬಣ್ಣದ ಬಿಂದು ನಿಧಾನವಾಗಿ ನೂಲೆಳೆಯ ಎಳೆಹಿಡಿದು ವರ್ತುಲ ವರ್ತುಲವಾಗಿ ಹರಡುತ್ತೆ. ಹಾಗೆ ಹರಡಿದ ಬಣ್ಣಹೀರಿದ ಬಟ್ಟೆಯ ಮೇಲೆ ಮತ್ತೊಂದು ಬಣ್ಣದ ನೀರನ್ನು ಎರೆಯೋಣ. ಈಗ ಮೊದಲು ಹರಡಿದ ಬಣ್ಣ ಮತ್ತು ಈ ಬಣ್ಣ ಒಂದಕ್ಕೊಂದು ಕಲೆತು ಹರಡಿ ಚಿತ್ತಾರವಾಗುತ್ತವೆ. ಮತ್ತೆ ಇವುಗಳ ಮೇಲೆ ಇನ್ನೊಂದು ಬಣ್ಣ,  ಅದು ಹರಡಿ ಮಿಳಿತವಾದಂತೆ ಮಗುದೊಂದು ಬಣ್ಣದ ದ್ರಾವಣಗಳನ್ನು ಎರೆಯುತ್ತಾ ಹೋದರೆ, ಕ್ಯಾನುವಾಸು ಮೇಲೆ ಸುಂದರವಾದ ವರ್ಣ ಚಿತ್ತಾರ ಮೂಡುತ್ತೆ. ಆ ಬಣ್ಣಗಳು ಒಂದರೊಡನೊಂದು ಕಲೆಯುವ ರೀತಿ, ಕಲೆಯುವ ಅನುಪಾತ, ಇವುಗಳು ಚಿತ್ರಕ್ಕೆ ಹಲವು ಶೇಡ್ ಗಳನ್ನು ಕೊಡುತ್ತವೆ. ಆ ಚಿತ್ರದ ಅಂಚುಗಳು ಬಣ್ಣಗಳೇ ಸ್ವತಂತ್ರವಾಗಿ ವಿಕಸನಕೊಂಡ ವಿಸ್ತಾರದ ಕೊನೆ ಗೆರೆಗಳು. ಈ ವರ್ಣ ವಿಕಸನಕ್ಕೆ ಒಂದು ಕೇಂದ್ರಬಿಂದು ಇರುತ್ತೆ. ಆ ಕೇಂದ್ರದ ಸುತ್ತ ನಿರ್ದಿಷ್ಟ ರೀತಿಯ ಸಿಮ್ಮೆಟ್ರಿ,  ಆ ಪ್ಯಾಟರ್ನ್ ಗೆ ಇರುತ್ತೆ.  ಬಣ್ಣಗಳ ಕಾಂಟ್ರಾಸ್ಟ್ಗಳನ್ನು, ಮಬ್ಬು ಛಾಯೆಗಳನ್ನು ಚಿತ್ರದ ಪೂರ್ಣತ್ವದಿಂದ ಭಿನ್ನವಾಗಿಸಿ ತುಂಡಾಗಿಸಿ ನೋಡಲಾಗದು. ಒಮ್ಮೆ ಹರಡಿ, ಬೆರೆತ ಬಣ್ಣಗಳನ್ನು ಮೊದಲಿನಂತೆಯೇ ಪುನಃ ಬಿಡಿಸಿ ಹಿಂಪಡೆಯಲೂ ಆಗಲ್ಲ. ಕಲೆಸಿದ ಬಣ್ಣ ಕಲೆತೇ ಇರುತ್ತೆ. ಬಾಲ್ಯದಿಂದಲೂ ಕಾಣುವ ದೃಶ್ಯಗಳು ನಮ್ಮ ಮನಸ್ಸಿನ ಹಾಳೆಯ ಮೇಲೆ ಹೀಗೆಯೇ ಬಣ್ಣದ ದ್ರಾವಣವಾಗಿ ಎರೆಯಲ್ಪಡುತ್ತವೆ. ದಿನ ದಿನವೂ ಹೊಸ ದೃಶ್ಯ, ಹೊಸ ಬಣ್ಣ. ಮನಸ್ಸಿನಲ್ಲಿ ಅದು ಹರಡುತ್ತದೆ, ಪದರ ಪದರವಾಗಿ ಒಂದು ಕೇಂದ್ರದ ಸುತ್ತ. ನಾವು ಕರೆದುಕೊಳ್ಳುವ, ಅನುಭವ, ನೆನಪು ಇವುಗಳೆಲ್ಲ ನಮ್ಮ ಮನಸ್ಸಿನ ಕ್ಯಾನುವಾಸಿನ ಮೇಲೆ ಮೂಡಿದ ವರ್ಣಚಿತ್ರಗಳು. ಪ್ರತೀ ಮನಸ್ಸನ್ನೂ ನೋವು, ಆಘಾತಗಳು, ಕಾಡಿದಷ್ಟು ಬೇರೆ ಭಾವಗಳು ಕಾಡಲ್ಲ. ಮನಸ್ಸಿನ ಚಿತ್ರಪಟಲದಲ್ಲಿ ಅಂತಹ ಘಟನೆಗಳು ತುಂಬಾ ಆಳವಾದ ಅಚ್ಚೊತ್ತು ಆಗುತ್ತೆ.‌ ಅಮೂರ್ತ ವರ್ಣಚಿತ್ರಕಾರ ಹೆಚ್ಚೆಂದರೆ ಒಂದು ವರ್ಣ ಚಿತ್ರ ಬರೆಯಲು ಕೆಲವು ತಿಂಗಳ ಸಮಯ ತಗೋಬಹುದು. ಹಾಗೆ ಆತ, ತನ್ನ ಜೀವನದಲ್ಲಿ ಹತ್ತಾರು ವರ್ಣಚಿತ್ರಗಳನ್ನು ಬರೆಯುತ್ತಾನೆ. ಆದರೆ ಈ ಮನಸ್ಸಿನಲ್ಲಿ ಮೂಡುವ ವರ್ಣ ಚಿತ್ರ ಒಂದೇ. ಅದು ಶುರುವಾಗುವುದು, ಹೆರಿಗೆ ಕೋಣೆಯಲ್ಲಿ, ಅದರ ಚಿತ್ರಣ ಮುಗಿಯುವುದು ಸ್ಮಶಾನದಲ್ಲಿ. ಚೆಲ್ಲಿದ ಬಣ್ಣ ಅಳಿಸಲಾಗದೇ ಚಿತ್ರದ ಹಂದರವೇ ಆಗುತ್ತಾ ಚಿತ್ರ ವಿಕಸಿತವಾಗುತ್ತೆ. ದಿನ ದಿನವೂ  ವಿಕಸಿತವಾಗುವ ಈ ಚಿತ್ರದಲ್ಲಿ ಎಷ್ಟೊಂದು ಪದರಗಳು, ಗೆರೆಗಳು,ಅಂಚುಗಳು, ಮೂಲೆಗಳು,ಛಾಯೆಗಳು ವರ್ತುಲಗಳು, ಶೃಂಗಗಳು, ಶೃಂಗಾರಗಳು. ಒಂದು ವಿಸ್ತಾರವಾದ ಖಾಲಿ ಗುಡ್ಡವಿದೆ, ಅಂದುಕೊಳ್ಳೋಣ. ತುಂಬಾ ಮಳೆಸುರಿದು ಗಿಡಗಳು ಮೊಳಕೆಯೊಡೆಯುತ್ತವೆ. ಕೆಲವು ವರ್ಷಗಳ ನಂತರ ಗಿಡಗಳು ಮರಗಳಾಗುತ್ತವೆ. ಮರಗಳ ಸುತ್ತ ಬಳ್ಳಿಗಳು, ಕೆಲವು ಮುಳ್ಳಿನ ಗಿಡ ಪೊದೆಗಳು, ಒಂದಕ್ಕೊಂದು ಅವಲಂಬಿತವಾಗಿ ಒಟ್ಟಾಗಿ, ಅದನ್ನು ನಾವು ಕಾಡು ಎಂದು ಕರೆಯ ತೊಡಗುತ್ತೇವೆ. ಕಾಡೊಳಗೆ ಕ್ರಿಮಿ ಕೀಟಗಳು, ಪ್ರಾಣಿ ಪಕ್ಷಿಗಳು ರಂಗೋಲಿಯ ಚುಕ್ಕಿಗಳಾಗುತ್ತವೆ. ಜೇಡ ಬಲೆ ಹೆಣೆಯುತ್ತೆ. ಹಲವು ವರ್ಷಗಳ ನಂತರ, ಹಳೆಯ ಮರಗಳು ಬೀಳುತ್ತವೆ,ಹೊಸ ಮರ ಬೆಳೆಯುತ್ತದೆ. ಭೂಕಂಪವಾದಾಗ, ಗುಡ್ಡದ ಅಂಚಿನಲ್ಲಿ ಮಣ್ಣು ಜರಿದು ಇಳಿಜಾರಿನ ಹೊಸ ಚಿತ್ರ ಬರೆಯುತ್ತೆ. ಮನಸ್ಸಿನೊಳಗೂ ಹಾಗೆ!. ಚಿತ್ರ ನಿಧಾನವಾಗಿ ವಿಕಸಿತವಾಗುತ್ತೆ. ಅದಕ್ಕೊಂದು ಮೂರು ಆಯಾಮ ಕೊಡುತ್ತೆ. ನಾವು ಯಾವುದೇ ವಸ್ತುವಿನ ಸ್ವರೂಪವನ್ನು ನೋಡುವಾಗ, ಆ ವಸ್ತುವಿನ ಹಿಂದೆ ಯಾವ ಹಿನ್ನೆಲೆಯಿದೆಯೋ ಅದಕ್ಕೆ ಸಾಪೇಕ್ಷವಾಗಿ ಆ ಸ್ವರೂಪ ಕಾಣುತ್ತೆ.  ಮನಶ್ಶಾಸ್ತ್ರದಲ್ಲಿ, ಇದಕ್ಕೆ ಫಿಗರ್- ಗ್ರೌಂಡ್ ರಿಲೇಶನ್ ಶಿಪ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಒಂದು ಕೆಂಪು ಬಣ್ಣದ ಚೆಂಡನ್ನು, ಕೆಂಪು ಬಣ್ಣದ ಪರದೆಯ ಮುಂದಿಟ್ಟರೆ ಗುರುತಿಸಲು ಕಷ್ಟ. ಅದೇ ಚೆಂಡನ್ನು, ಕಪ್ಪು ಬಣ್ಣದ ಅಥವಾ ಬಿಳಿ ಇನ್ನಿತರ ಬಣ್ಣದ ಪರದೆಯ ಮುಂದೆ ಇಟ್ಟರೆ ಸುಲಭವಾಗಿ ಕಾಣಿಸುತ್ತದೆ. ನಿಜ ಜೀವನದಲ್ಲಿ ನಾವು ಯಾವುದೇ ಘಟನೆಯನ್ನು ನೋಡುವಾಗ, ನಮ್ಮ ಅದುವರೆಗಿನ ಬದುಕಿನ ಅನುಭವದ ವರ್ಣ ಚಿತ್ರದ ಹಿನ್ನೆಲೆಯಲ್ಲಿ ಆ ಘಟನೆ ಬಿಂಬ ಪಡೆದು, ಹಿನ್ನೆಲೆಗೆ ಸಾಪೇಕ್ಷವಾಗಿ ನಮಗೆ ಕಾಣಿಸುತ್ತೆ. ಈ ಹೊಸ ಅನುಭೂತಿಯೂ ನಮ್ಮ ಮನಸ್ಸಿನ ಕ್ಯಾನುವಾಸಿನ ಚಿತ್ರದಲ್ಲಿ ಹೊಸ ಚುಕ್ಕಿಯಾಗಿ ಛಾಪೊತ್ತುತ್ತೆ. ಹೀಗೆ ನಮ್ಮ ವರ್ತಮಾನದ ಘಟನೆಗಳ ಗ್ರಹಿಕೆ ನಮ್ಮ ಭೂತಕಾಲದ ಅಷ್ಟೂ ಅನುಭವದ ಮನಃಚಿತ್ರದ ಮೇಲೆ ಅವಲಂಬಿಸಿರುತ್ತದೆ. ಇದರ ಜತೆಗೆ, ನಾವು ನೋಡುವ ಚಿತ್ರದ ಅನುಭೂತಿ, ನೋಟದ ಕೋನದ  ಮೇಲೂ ಅವಲಂಬಿತ ತಾನೇ. ಅದನ್ನೇ ನಾವು ದೃಷ್ಟಿಕೋನ ಎನ್ನುತ್ತೇವೆ. ವಿಮಾನದಿಂದ ಕೆಳಗೆ ನೋಡುವಾಗ ನಿಮಗೆ ಕಾಣುವ ಪಟ್ಟಣದ ಚಿತ್ರ, ನೆಲದಲ್ಲಿ ಚಲಿಸುತ್ತಾ ನೋಡುವಾಗಿನ ಚಿತ್ರದಿಂದ ಎಷ್ಟೊಂದು ಭಿನ್ನ ಅಲ್ಲವೇ. ಇಂತಹಾ ಜಿಗಿಹಲಗೆಯ ಮೇಲೆ ನಿಂತು ಮೇಲಕ್ಕೆ ಜಿಗಿದರೆ!. ಹೌದು, ಅದೇ ಕಲ್ಪನೆ, ಕನಸು, ಭಾವೋತ್ಕರ್ಷ,ಚಿಂತನೆ ಮಂಥನೆಗಳು. ಕವಿ ತಾನು ನೋಡಿದ್ದನ್ನು, ಅನುಭವಿಸಿದ್ದನ್ನು ಬಣ್ಣದ ಕಾಗದದಲ್ಲಿ ಚಿತ್ರಿಸಿ, ಗಾಳಿ ಪಟ ಮಾಡಿ ಹಾರಿ ಬಿಡುತ್ತಾನಲ್ಲ!.  ಕಾಫಿ ಕಾಯಿಯನ್ನು ಹಾಗೆಯೇ ತಿಂದರೆ ರುಚಿ ಸಿಗುತ್ತದೆಯೇ?. ಅದನ್ನು ಒಣಗಿಸಿ, ಹದವಾಗಿ ಹುರಿದು ಸರಿಮಾತ್ರೆಯಲ್ಲಿ ಚಿಕೋರಿ ಸೇರಿಸಿ, ಸರಿಗಾತ್ರದ ಹುಡಿ ಮಾಡಿ, ಡಿಕಾಕ್ಷನ್ ಪಾತ್ರೆಯ ಉಗಿಯಲ್ಲಿ ಬೇಯಿಸಿ, ತಯಾರಾದ ಸಾಂದ್ರದ್ರವವನ್ನು ಬಿಂದು ಬಿಂದಾಗಿ ತೊಟ್ಟಿಕ್ಕಿಸಿ, ರಾತ್ರಿಯಿಡೀ ಸಂಗ್ರಹಿಸಿ, ಮೊದಲ ಸೂರ್ಯನ ಕಿರಣದ ಬೆಚ್ಚಗಿನ ಸಾನ್ನಿಧ್ಯದಲ್ಲಿ ಕುದಿಸಿದ ಹಾಲು ಸಕ್ಕರೆಗೆ ಬೆರೆಸಿ ಹಬೆಯಾಡುತ್ತಾ ಇರುವ ಕಾಫಿಯನ್ನು ಹೀರಿದರೆ ರುಚಿ!. ಸೃಜನಶೀಲತೆ ತಂದು ಕೊಡುವ ಅನನ್ಯ ಅವಕಾಶವೇ ಹಾಗೆ!. ಹೀಗೆ ಕವಿಕಂಡ ವಸ್ತು, ಕವಿತೆಯಾಗಿ ಬಿಂದುವಿನಿಂದ ಮೂರು ಆಯಾಮದ ಸುಂದರ ಬಿಂಬವಾಗಿ ಹೊರ ಬರಲು, ಕವಿಯ ಅನುಭವ ಮತ್ತು ಸೃಜನಶೀಲತೆ ಎರಡೂ ಶಿಲ್ಪಿಯ ಉಳಿಯಂತೆ ಕೆಲಸ ಮಾಡುತ್ತೆ. ಗೋಪಾಲಕೃಷ್ಣ ಅಡಿಗರ ಈ ಸಾಲುಗಳನ್ನು ನೋಡಿ. ” ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ  ಹರೆಯದೀ ಮಾಂತ್ರಿಕನ ಮಾಟ ಮುಸುಳುವ ಮುನ್ನ  ಉತ್ಸಾಹಸಾಹಸದ ಉತ್ತುಂಗ ವೀಚಿಗಳ  ಈ ಕ್ಷುಬ್ಧ ಸಾಗರವು ಬತ್ತಿ ಹೋಗುವ ಮುನ್ನ  ಕಟ್ಟುವೆವು ನಾವು ಹೊಸ ನಾಡೊಂದನು” ಮಾಂತ್ರಿಕನ ಮಾಟದ ಚಿತ್ರಣ, ಉಕ್ಕುವ ಕಡಲಿನ ಚಿತ್ರಣ ಬಾಲ್ಯದ ಮನಸ್ಸಲ್ಲಿ ವರ್ಣ ಚಿತ್ರವಾಗಿ, ಈ ಕವಿತೆಯಲ್ಲಿ ಪ್ರತಿಮೆಗಳಾಗಿ ಹೊರಬಂದಿವೆ. ಕಡಲನ್ನು  ನೋಡದೇ ಬೆಳೆದ ಮನಸ್ಸಿಗೆ, ಈ ಕ್ಷುಬ್ಧ ಸಾಗರ ಅಂತ ಬರೆಯಲು ಬರಬಹುದೇ?. ” ಇರುಳಿರಳಳಿದು ದಿನದಿನ ಬೆಳಗೆ ಸುತ್ತಮುತ್ತಲೂ ಮೇಲಕೆ ಕೆಳಗೆ ಗಾವುದ ಗಾವುದ ಗಾವುದ ಮುಂದಕೆ ಎವೆ ತೆರೆದಿಕ್ಕುವ ಹೊತ್ತಿನ ಒಳಗೆ ಹಕ್ಕಿ ಹಾರುತಿದೆ ನೋಡಿದಿರಾ? ಕರಿನೆರೆ ಬಣ್ಣದ ಪುಚ್ಚಗಳುಂಟು ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು ಕೆನ್ನನ ಹೊನ್ನನ ಬಣ್ಣಬಣ್ಣಗಳ ರೆಕ್ಕೆಗಳೆರಡೂ ಪಕ್ಕದಲುಂಟು ಹಕ್ಕಿ ಹಾರುತಿದೆ ನೋಡಿದಿರಾ? ನೀಲಮೇಘಮಂಡಲ-ಸಮ ಬಣ್ಣ ! ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ ! ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ ಹಕ್ಕಿ ಹಾರುತಿದೆ ನೋಡಿದಿರಾ? “ ಹಾರುವ ಹಕ್ಕಿಯನ್ನು ತನ್ಮಯತೆಯಿಂದ ನೋಡುತ್ತಾ, ದಿನಗಳು,ರಾತ್ರಿಗಳು, ಕಳೆದಾಗ ಬೇಂದ್ರೆ ಅಜ್ಜನ‌ ಕಲ್ಪನಾ ವಿಲಾಸ ಹಕ್ಕಿ ಹಾರುತಿದೆ ನೋಡಿದಿರಾ ಕವನವಾಗುತ್ತೆ. ಹಕ್ಕಿ ಅಮೂರ್ತ ವರ್ಣಚಿತ್ರ ಬರೆಯುವ ಕುಂಚವಾಗುತ್ತೆ. ಹಕ್ಕಿಗಳನ್ನು ಕಾಣಸಿಗದ ಮರುಭೂಮಿ ಪ್ರದೇಶದಲ್ಲಿ ಬೇಂದ್ರೆ ಜೀವಿಸಿದ್ದರೆ,ಈ ಕವಿತೆ ಬರಲು ಅಸಾಧ್ಯ. ಆ ಸನ್ನಿವೇಶದಲ್ಲಿ ಅವರ ಸೃಜನಶೀಲ ಮನಸ್ಸು, ಮರುಭೂಮಿಯ ಬೇರೇನೋ ಅನುಭವದ ಕವಿತೆ ಚಿಲುಮಿಸುತ್ತಿತ್ತು. ” ನನ್ನವ್ವ ಫಲವತ್ತಾದ ಕಪ್ಪು ನೆಲ ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ; ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ; ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ” ಬಾಲ್ಯದಲ್ಲಿ ಅಮ್ಮನನ್ನು ಅತ್ಯಂತ ಸಮೀಪದಿಂದ ಕಂಡು ಪ್ರೀತಿಸಿದ ಬಾಲಕನಿಗೆ, ಸೃಷ್ಟಿಯ ಅಷ್ಟಲ್ಲೂ ಅಮ್ಮನನ್ನೇ ಕಾಣುವ ದೃಷ್ಟಿ ಪ್ರಾಪ್ತವಾಗುವ ವರ್ಣ ಚಿತ್ರದ ಮನಸ್ಸು ಲಂಕೇಶ್ ಅವರದ್ದು. ಅಲ್ಲವಾದರೆ ಇಂತಹ ಕವನ ಸಾಧ್ಯವೇ?. ********************************************* ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಕಬ್ಬಿಗರ ಅಬ್ಬಿ ಮನಸ್ಸು ಕಟ್ಟಿದ ಕೇರಿ ಮತ್ತು ಸಾಕ್ಷೀಪ್ರಜ್ಞೆ ಆ ಸಾಯಂಕಾಲ ಪಶ್ಚಿಮ ಘಟ್ಟದ ಮೇಲ್ ಮೆಟ್ಟಿಲು ಗಳಲ್ಲಿ ಒಂದಾದ, ‘ಕೊಟ್ಟಿಗೆಹಾರ’ ದಿಂದ ಸೈಕಲ್ ತುಳಿಯುತ್ತಾ ಇಳಿದರೆ ಘಟ್ಟದ ಬುಡದಲ್ಲಿ ಧರ್ಮಸ್ಥಳ. ಪಶ್ಚಿಮದ ಅರಬ್ಬೀ ಸಮುದ್ರ ಅಲೆಯೆಬ್ಬಿಸಿ ಸೂರ್ಯಾಲಿಂಗನಕ್ಕೆ ತೋಳು ಚಾಚಿ ಕಾಯುತ್ತಿತ್ತು. ಅದು ಚಾರ್ಮಾಡಿ ಘಟ್ಟ. ಯಾವಾಗಲೂ ಹತ್ತುವ ರಸ್ತೆ ಎಂದೂ ಮುಗಿಯದ ಪಯಣದಂತಿದ್ದರೆ, ಇಳಿಯುವ ರಸ್ತೆ ಹಾಗಲ್ಲ. ಮೈಭಾರ ಹೆಚ್ಚಿದ್ದಷ್ಟು ಬೇಗ ಭಾರ ಇಳಿಸುವ ತವಕ ಅದಕ್ಕೆ. ಅದೆಷ್ಟು ತಿರುವುಗಳೋ!. ಸೈಕಲ್ ಚಕ್ರಗಳು ಅಲೆಕ್ಸಾಂಡರ್ ನ ಕುದುರೆಯ ಹಾಗೆ ನಾಗಾಲೋಟ ಓಡಲು ಕಾರಣ, ಚಕ್ರವೂ ಅಲ್ಲ, ನನ್ನ ತುಳಿಸಾಮರ್ಥ್ಯವೂ ಅಲ್ಲ!. ಅದು ಭೂಮಿತಾಯಿಯ ಗುರುತ್ವಾಕರ್ಷಣ ಶಕ್ತಿ. ರಸ್ತೆಯಲ್ಲಿ ಇರುವ ತಿರುವುಗಳು ಹೆಂಗಳೆಯರು ಮುಂಗುರುಳಿಗೆ ಹಾಕುವ ಪಿನ್ ನಂತಹ (ಹೆಯರ್ ಪಿನ್ ) ತಿರುವುಗಳು. ಹೋಗುವ ದಿಶೆಯನ್ನು  ರಸ್ತೆ, ಒಮ್ಮಿಂದೊಮ್ಮೆಯೇ  ವಿರುದ್ಧ ದಿಕ್ಕಿಗೆ ತಿರುಗಿಸುತ್ತೆ. ‘ನನ್ನ ದಿಕ್ಕನ್ನು ನಾನೇ ನಿರ್ಧರಿಸುವೆ ‘ ಎಂಬ ಜಂಭವಿದ್ದರೆ, ಇಳಿಜಾರಿನ ಯಮಪ್ರಪಾತ ಬಾಯ್ತೆರೆದು ಕಾಯುತ್ತೆ. ಸಾಯಂಕಾಲದ ಬಣ್ಣ ಬಣ್ಣದ ಮದಿರೆ ಹೀರಿದ ಗಗನದಲ್ಲಿ ಗಾಳಿ ತೂರಾಡುತ್ತೆ. ವಾತಾವರಣದ ನೋಹಕ ನಶೆಯಲ್ಲಿ ರಸ್ತೆ, ಪಸ್ಚಿಮಘಟ್ಟಗಳ ದಟ್ಟ ಕಾಡುಗಳನ್ನು ಬಳಸಿ, ಕೆಳನೆಗೆಯುವ ತೊರೆಗಳಲ್ಲಿ ನೆನೆದು ಇಳಿದಂತೆ,ಅದಕ್ಕಂಟಿದ ಸೈಕಲ್ ಚಕ್ರಗಳು ತಿರು ತಿರುಗಿ ಓಡುತ್ತವೆ. ಆಗಸದಲ್ಲಿ ಹಕ್ಕಿಗಳು ತಮಗೆ ಬೇಕಾದಂತೆ ರೆಕ್ಕೆ ತೇಲಿಸಿ ಇಳಿಯುತ್ತವೆ,ಅದು ಚಂದ. ಅವುಗಳಿಗೆ ರಸ್ತೆಯ ಅಗತ್ಯವೂ ಇಲ್ಲ, ಬಂಧನವೂ ಇಲ್ಲ. ಹಾಗಂತ ಅವು ದಿಶಾಹೀನ ಅಲ್ಲ. ರಾತ್ರೆಯಾದಂತೆ, ರೊಮ್ಯಾಂಟಿಕ್ ಆಗಿದ್ದ ಬಣ್ಣಗಳೂ, ಕತ್ತಲೆಯ ಕಪ್ಪಿಗೆ ಸಮರ್ಪಣೆ ಮಾಡಿಕೊಂಡು, ನಮ್ಮ ಪರ್ಸೆಪ್ಷನ್ ನಲ್ಲಿ ಪರಿಸರದ ಗಾಢಕತ್ತಲೆಯಲ್ಲಿ ಕಳೆದುಹೋಗುತ್ತವೆ. ಘಟ್ಟಗಳ ಬುಡಕ್ಕಿಳಿದಾಗ ದಟ್ಟ ಕತ್ತಲು. ತಲೆಯೆತ್ತಿ ನೋಡಿದರೆ ಬೆಟ್ಟಗಳ ಸಾಲುಗಳ ಚಿತ್ರ ಅಕ್ಷಿಪಟಲದಲ್ಲಿ ಮೂಡವು. ಅನುಭವಕ್ಕೂ ಬಾರವು. ಸೈಕಲ್ ಒಂದು ಮ್ಯಾಜಿಕ್!.  ಇದರಲ್ಲಿ ಕುಳಿತು ಎಡಕ್ಕೆ ವಾಲಿದರೂ,ಬಲಕ್ಕೆ ವಾಲಿದರೂ ಬೀಳುತ್ತೀರಿ!. ಸೈಕಲ್ ಎಡಕ್ಕೋ ಬಲಕ್ಕೋ ವಾಲಿದರೆ,ಕೂಡಲೇ ದೇಹಭಾರವನ್ನು ವಿರುದ್ಧ ದಿಕ್ಕಿಗೆ ವಾಲಿಸಿ ಸಮತೋಲಿಸಬೇಕು.  ದೇಹ, ಸೈಕಲ್ ನ ಜತೆಗೂಡಿ, ಗುರುತ್ವ ಕೇಂದ್ರವನ್ನು, ಸೈಕಲ್‌ ನ ಒಟ್ಟೂ ಘನತ್ವದ ಮಧ್ಯಬಿಂದುವಿನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಹಾಗೆ ಸಂಪಾದಿಸಿದ  ಸಮದೃಷ್ಟಿಯೇ ಸೈಕಲ್ ಗೂ, ಚಲನೆಗೂ ಸಮತೋಲನ ತಂದುಕೊಟ್ಟು ಗುರಿಯತ್ತ ಮುಖಮಾಡುತ್ತೆ. ಮನಸ್ಸು ಕೂಡಾ ಅಷ್ಟೇ, ಎಡಕ್ಕೋ,ಬಲಕ್ಕೋ, ಯಾವುದೇ ಸಿದ್ಧಾಂತದತ್ತ ವಾಲಿದರೆ, ಚಲನಶೀಲತೆಗೆ ಅಗತ್ಯವಾದ ಬ್ಯಾಲೆನ್ಸ್ ಅನ್ನು ಕಳೆದುಕೊಳ್ಳುತ್ತದೆ,  ಅಯಸ್ಕಾಂತಕ್ಕೆ ಅಂಟಿ ನಿಂತ ಕಬ್ಬಿಣದ ತುಂಡಿನ ಹಾಗೆ. ಸೈಕಲ್ ನನ್ನು ನಿಂತಲ್ಲೇ ಬ್ಯಾಲೆನ್ಸ್ ಮಾಡಲು ಅತ್ಯಂತ ಕಷ್ಟ.  ಸೈಕಲ್ ನಲ್ಲಿ ಕುಳಿತು ಅದು ಚಲನಶೀಲವಾದಾಗ ಬ್ಯಾಲನ್ಸ್ ಸುಲಭ. ಪ್ರಕೃತಿಯ ಸಹಜತತ್ವ ಚಲನಶೀಲತೆಯಲ್ಲಿಯೇ ಸಮತೋಲನ ಕಾಣುವಂತೆಯೇ ಸೈಕಲ್ ಸವಾರಿಯೂ ಕಾಣುತ್ತೆ. ಯಾವುದೇ ಸವಾರಿಯಲ್ಲಿ, ಅದು, ಸೈಕಲ್, ಬಸ್ಸು,ರೈಲು, ವಿಮಾನ ಎಲ್ಲದರಲ್ಲೂ, ಪ್ರಯಾಣಿಕನ ಪ್ರಜ್ಞೆ ಮತ್ತು ಪರಿಸರದ ಅವಸ್ಥೆಗಳಲ್ಲಿ ಸಾಪೇಕ್ಷತೆ ಕೆಲಸ ಮಾಡುತ್ತೆ. ವೇಗವಾಗಿ ಚಲಿಸುವ ರೈಲಿನಲ್ಲಿ ಕುಳಿತಾಗ, ಹೊರಗೆ ಕಾಣುವ ಮರಗಳು, ಕಟ್ಟಡಗಳು ಎಲ್ಲವೂ ವೇಗವಾಗಿ ಹಿಮ್ಮುಖವಾಗಿ ಚಲಿಸುವ ಅನುಭವ ಆಗುತ್ತಲ್ಲ. ಅದೇ ಸಾಪೇಕ್ಷ ಅನುಭವ. ಅಂದರೆ, ಡೈನಮಿಕ್ ವ್ಯವಸ್ಥೆಯಲ್ಲಿ ಅನುಭವ, ಚಲಿಸುವ ದೇಹ ಮತ್ತು ಮನಸ್ಸಿನ ಮೇಲೆ ( ಫ್ರೇಮ್ ಆಫ್ ರೆಫರೆನ್ಸ್), ಚಲಿಸುವ ದಿಕ್ಕಿನ ಮೇಲೆ ಮತ್ತು ಪರಿಸರದ ಅವಸ್ಥೆಯ ಮೇಲೆ ಅವಲಂಬಿತವಾಗಿರುವಾಗ, ಕಾವ್ಯಪ್ರಜ್ಞೆಯೂ, ಸಿದ್ಧಾಂತಗಳನ್ನು ರೂಪಿಸುವ ತಾರ್ಕಿಕ ಮನಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಆದ್ದರಿಂದ ಯಾತ್ರೆಯುದ್ದಕ್ಕೂ,  ನಮ್ಮ ಅಬ್ಸರ್ವೇಷನ್ ನ ಮೇಲೆ ಇತ್ಯಾತ್ಮಕ ಅಭಿಪ್ರಾಯಗಳನ್ನು ಸ್ಥಿರೀಕರಿಸುವುದು ಮತ್ತು ಪ್ರತಿಪಾದಿಸುವುದು, ನಿತ್ಯಚಲನಶೀಲವಾದ ಪ್ರಕೃತಿ ತತ್ವಕ್ಕೆ ಪೂರಕವಾಗದು. ಸೈಕಲ್ ಸವಾರ ಚಲಿಸುತ್ತಾ ಹೋಗುತ್ತಿದ್ದಂತೆ, ಕಾಲ ಹಿಂದಕ್ಕೆ ಓಡುತ್ತೆ. ವಿಪರ್ಯಾಸವೆಂದರೆ ಸೈಕಲ್ ಸವಾರ ಯಾತ್ರೆ ಮುಗಿಸಿ ಹಿಂತಿರುಗಬಲ್ಲ. ಆದರೆ, ಕಾಲ ಹಿಂತಿರುಗಲ್ಲ. ಅದು ಏಕಮುಖೀ. ಒಮ್ಮೆ ಭೂತಕಾಲವಾದ ವರ್ತಮಾನ, ಪುನಃ ವರ್ತಮಾನಕ್ಕೆ ಹಿಂತಿರುಗಲ್ಲ!. ಇವಿಷ್ಟು ತಯಾರಿಯೊಂದಿಗೆ ವಿಜಯ್ ದಾರಿಹೋಕ ಅವರ ಕವಿತೆ ” ಸೈಕಲ್,ರಸ್ತೆ, ತುಡಿತ ಇತ್ಯಾದಿ” ಎಂಬ ಕವಿತೆಯನ್ನು ನೋಡೋಣ. **    **     **    ***  ಸೈಕಲ್,ರಸ್ತೆ, ತುಡಿತ ಇತ್ಯಾದಿ ಎಲ್ಲ ಮರೆತ ಒಂದು ಹಳೆಯ ಊರಕೇರಿಯ ದಾರಿಗುಂಟ ಸತತ …ಸೈಕಲ್ ತುಳಿವ ತುಡಿತ….! ಇನ್ನೇನು …ದಿನ ಕಳೆದು, ಹುಟ್ಟಿಗೆ ಸಿದ್ದವಾದ ರಾತ್ರಿಗೆ, ಸಂಜೆಯ ಹುಂಜದ ಹಂಗಿಲ್ಲ..! ಅಪರಿಚಿತ ಊರಕೇರಿಯ ದಿಕ್ಕು.. ಹಣ್ಣು ಹಣ್ಣಾದ ರಸ್ತೆಗೂ ಎಂತಹ ಸೊಕ್ಕು…! ತುಸುವೇ ಹೊತ್ತಿನ ಬಳಿಕ.. ನಾನು ತಲುಪುವ ಕೇರಿಯಾದರೂ ಎಂಥದು..?? ಮುದಿ ಲಾಟೀನಿನ ಮಂದ ಬೆಳಕಲ್ಲಿ  ಮಿಂದ ಮುಖಗಳೊ,ಮಿಣುಕುವ ಕಣ್ಣುಗಳೋ ಆ ಊರಿನಲ್ಲಿ.. ? ನೀರವತೆಯ ಬೆನ್ನಟ್ಟಿ ಗಾಳಿಯನ್ನು ಗೋಳಿಕ್ಕುವ ತೆಳು ಹಾಡಿನಂಥ ಸದ್ದುಗಳೋ ಆ ಊರಿನಲ್ಲಿ..!? ಒಣ ಗಂಡಸರು,ಇಲಿಗಳಂತ ಮಕ್ಕಳು,ಬಳೆಯ ಹೆಂಗಸರೋ ಆ ಊರಿನಲ್ಲಿ..?  ನನ್ನನು ಅಲ್ಲಿ ಊಹಿಸುವ ಉಮೇದಿಗೆ  ದುಗುಡ ಕೂಡ ಬೆರೆತಿದೆ..! ಒಂದೋ, ಅಪರಿಚಿತ  ಗುಡಿಸಲೊಂದರಲ್ಲಿ ಮಂಕು ದೀಪದ ಸುತ್ತ ಕೆಲವರ ಮುಂದೆ ಪ್ರಕಟಗೊಳ್ಳುವೆ, ಹೇಳುವೆ, ಕೇಳುವೆ ಹುಬ್ಬು ಗಂಟಿಕ್ಕಿ… ಗಹ ಗಹಿಸಿ ನಗುವೆ, ಪವಡಿಸುವೆ… ಇಲ್ಲವೋ.. ಮೇಲೆ ಚುಕ್ಕಿಗಳ ಅಣಕಿಗೆ ಅಳುಕುತ್ತಾ ಎಲ್ಲಿ ತಂಗಲಿ ಎಂದು ಅತ್ತಿಂದಿತ್ತ  ಅಲೆವೆ,ಸವೆವೆ ಒಂದೇ ಸಮನೆ , ಮಟ ಮಟ ರಾತ್ರಿಯು ನೆತ್ತಿಗೇರುವ ತನಕ  …? ಹಳತು ಮರೆತ ಕೇರಿಯ ದಾರಿಗುಂಟ  ಸತತ ಸೈಕಲ್ ತುಳಿವ ತುಡಿತ..? ಎದುರು  ಸಪೂರ ಕಾಲುಗಳ ಮೇಲೆ ಬಂದ ಎಷ್ಟೊಂದು ಗಂಟುಗಳೂ, ಮೂಟೆಗಳು, ಎವೆಯೆಕ್ಕದೆಯೆ ನನ್ನ ನೋಡುತ ಸಾಗುವ  ಪರಿಗೆ ಕಂಗಾಲಾಗಿ  ಕಿವಿಗೆ ಗಾಳಿ  ಹೊಕ್ಕಂತೆ  ಸೈಕಲ್ ಓಡಿತು..! ಈ ನಡುವೆ ರಸ್ತೆ ತುಸುವೇ ಮಿಸುಕಾಡಿ ಹೇಳಿದ್ದು ಹೀಗೆ.. ನನ್ನ ಬಾಲದ ಮೇಲೆ ಸವಾರಿ ಮಾಡುತ್ತೀಯಾ..? ನನ್ನ ಹೆಡೆಯ ಭಾಗಕೆ ಬಂದು ತಲುಪು ನೋಡುವಾ..! ……. ಹಳತು, ಮರೆತ ಕೇರಿಯ ದಾರಿಗುಂಟ  ಸತತ ಸೈಕಲ್ ತುಳಿವ ತುಡಿತ..! **   **      **  ** ಎಲ್ಲ ಮರೆತ ಒಂದು ಹಳೆಯ ಊರಕೇರಿಯ ದಾರಿಗುಂಟ,  ಸತತ …ಸೈಕಲ್ ತುಳಿವ ತುಡಿತ….! ಹಳೆಯ ಊರಕೇರಿ, ಮರೆತು ಹೋಗಿದ್ದರೂ, ಎಲ್ಲೋ ಮನಸ್ಸಿನ ಮೂಲೆ ಕೋಣೆಯಲ್ಲಿ ಅಚ್ಚಾಗಿದೆ!.  ಬಾಲ್ಯದ್ದು ಇರಬಹುದು, ಊರಕೇರಿ ಎನ್ನುವುದು, ಒಂದು ಸಾಮಾಜಿಕ ವ್ಯವಸ್ಥೆ,ತಾನೇ.  ಆ ವ್ಯವಸ್ಥೆ, ಊರಿಗೇ ಸೀಮಿತವೂ ಹೌದು, ಕೇರಿಯ ಕಟ್ಟು ಕಟ್ಟಳೆಯಿಂದ ಬಂಧಿತವೂ ಹೌದು. ಕವಿತೆಯುದ್ದಕ್ಕೂ ಕವಿಗೆ ಆ ಕೇರಿಯ ಬಗ್ಗೆ ಬಣ್ಣ ಬಣ್ಣದ ಕನಸಿಲ್ಲ.  ಆದರೆ ಅದರ ಸುತ್ತ ಸೈಕಲ್ ತುಳಿಯುವ ತುಡಿತ. ಅಂದರೆ ಆತ ಬರೇ ವೀಕ್ಷಕ ( ಅಬ್ಸರ್ವರ್) ಆಗುತ್ತಾನೆ. ಸೈಕಲ್ ತುಳಿಯುತ್ತಾ, ನೋಡುವಾಗ, ಊರಕೇರಿಯ ಸ್ಥಾವರ ಚಿತ್ರ, ಜಂಗಮ ಫ್ರೇಮ್ ನ ಮೂಲಕ ಕಾಣುವ ತುಡಿತವೇ?. ‘ದಿನ ಕಳೆದು ಹುಟ್ಟಿಗೆ ಸಿದ್ಧವಾದ ರಾತ್ರಿ’ ಅನ್ನುವ ಕವಿ ಕಲ್ಪನೆಗೆ ಅನನ್ಯತೆಯಿದೆ. ನಮ್ಮ ಮನಸ್ಸು ಹಗಲಿನ, ಬೆಳಕಿನ ಪಕ್ಷಪಾತಿ. ಆದರೆ ಹಗಲಿನದ್ದು ಮತ್ತು ರಾತ್ರಿಯದ್ದು ಪರಸ್ಪರ ಪೂರಕ ಮತ್ತು ಸಾಪೇಕ್ಷ( ರಿಲೇಟಿವ್) ಅಸ್ತಿತ್ವ. ಅದಕ್ಕೇ ರಾತ್ರೆಯ ಹುಟ್ಟು ತುಂಬಾ ತಾತ್ವಿಕ ಕಲ್ಪನೆ. ಹಾಗೆಯೇ ಇನ್ನೊಂದು ಅಪೂರ್ವ ಸಾಲು, ಹಣ್ಣು ಹಣ್ಣಾದ ರಸ್ತೆ!. ರಸ್ತೆ ಹಣ್ಣಾಗುವುದು ಎಂದರೆ, ದಿನವಿಡೀ ಚಲಿಸುವ ವಾಹನಗಳ ತುಳಿತದಿಂದ ಬಳಲಿ ಹಣ್ಣಾದದ್ದೇ?. ಅಥವಾ ಚಲಿಸುವ ವಾಹನಗಳಿಗೆ ದಾರಿತೋರಿ, ದಾರಿಯೇ ಆಗಿ, ಪಕ್ವವಾದ ಅನುಭವವೇ?. ದಾರಿ ಸಿಗದ ಯಾತ್ರಿಕರಿಗೆ ದಾರಿಯಾಗಿ ಅತೀವ ಹೆಮ್ಮೆಯ ಸೊಕ್ಕು, ರಸ್ತೆಗೆ!. ಆ ಕೇರಿಯ ಲಾಟೀನು ಮುದಿಯಾಗಿದೆ. ನೀರವತೆಯ ಬೆನ್ನಟ್ಟಿ ಗಾಳಿಯನ್ನು ಗೋಳಿಕ್ಕುವ ತೆಳುಹಾಡುಗಳಂತಹಾ ಸದ್ದುಗಳು, ಒಣ ಗಂಡಸರು, ಹೀಗೆ ಕವಿ ಕೇರಿಯ ವಿವರಣೆ ಕೊಡುವಾಗ, ಒಂದು ರಸಹೀನ,ಜೀವಭಾವ ರಹಿತ ವ್ಯವಸ್ಥೆಯ ಚಿತ್ರ ಮೂಡುತ್ತೆ.  ಬದಲಾವಣೆಗೆ ಒಗ್ಗದೆ ಕಾಲದಲ್ಲಿ ಕಾಲವಾದ ವ್ಯವಸ್ಥೆಯನ್ನು, ಚಲನಶೀಲ ಮನಸ್ಸು ಸೈಕಲ್ ತುಳಿಯುತ್ತಾ ಕಾಣುತ್ತೆ. ಗಮನಿಸಿ!, ನೋಟಕನ ಸೈಕಲ್ ನಿಲ್ಲಿಸಿ ನೋಡುವುದಿಲ್ಲ, ಚಲಿಸುತ್ತಲೇ ಇರುತ್ತೆ. ” ಅಪರಿಚಿತ  ಗುಡಿಸಲೊಂದರಲ್ಲಿ ಮಂಕು ದೀಪದ ಸುತ್ತ ಕೆಲವರ ಮುಂದೆ ಪ್ರಕಟಗೊಳ್ಳುವೆ, ಹೇಳುವೆ, ಕೇಳುವೆ ಹುಬ್ಬು ಗಂಟಿಕ್ಕಿ… ಗಹ ಗಹಿಸಿ ನಗುವೆ, ಪವಡಿಸುವೆ… ಇಲ್ಲವೋ.. ಮೇಲೆ ಚುಕ್ಕಿಗಳ ಅಣಕಿಗೆ ಅಳುಕುತ್ತಾ ಎಲ್ಲಿ ತಂಗಲಿ ಎಂದು ಅತ್ತಿಂದಿತ್ತ  ಅಲೆವೆ,ಸವೆವೆ ಒಂದೇ ಸಮನೆ , ಮಟ ಮಟ ರಾತ್ರಿಯು ನೆತ್ತಿಗೇರುವ ತನಕ  …” ಈ ಸಾಲುಗಳನ್ನು ಓದುವಾಗ, ಕವಿ, ಈ ವ್ಯವಸ್ಥೆಯನ್ನು ದಿಕ್ಕರಿಸಿ ಬಂದಂತಿದೆ.  ವ್ಯವಸ್ಥೆಯನ್ನು ನಿಂತ ನೀರಾಗಿಸಿದ, ರಸಹೀನವಾಗಿಸಿದ ಕೆಲವು ಮಂದಿಯ ಬಗ್ಗೆ ಆಕ್ರೋಶ ಇದೆ. ಅದನ್ನು ಪ್ರಶ್ನಿಸುವ ಆಸೆಯಿದೆ. ಆದರೆ ಆ ವ್ಯವಸ್ಥೆ, ತನ್ನ ಪ್ರಶ್ನೆಗಳಿಂದ ಬದಲಾಗಲ್ಲ ಎಂಬ ಆಸಮಧಾನವೂ ಇದೆ. ‘ಮಟ ಮಟ ರಾತ್ರಿಯು ನೆತ್ತಿಗೇರುವ ತನಕ’ ಎಂಬ ಈ ಸಾಲುಗಳು ಸೂರ್ಯ ನೆತ್ತಿಗೇರುವ ಹಾಗೆಯೇ ರಾತ್ರಿಯೂ, ಎಂಬ ಹೊಸ ಕಲ್ಪನೆಯನ್ನು ಬಿಂಬಿಸುವ ಜತೆಗೇ, ನಿರಾಶಾದಾಯಕ ಮನಸ್ಥಿತಿಯ ಕ್ಶಿತಿಜವನ್ನೂ ಪರಿಚಯಿಸುತ್ತೆ. ಹಳತನ್ನು ಮರೆತು ಹೊಸತಿಗೆ ತೆರೆಯುವ ಕೇರಿಯ ಗುಂಟ ಸೈಕಲ್ ತುಳಿಯಬೇಕೆಂಬ ಹಂಬಲ ಕವಿ ಮನಸ್ಸಲ್ಲಿ ಇದ್ದಂತಿದೆ. “ಸಪೂರ ಕಾಲುಗಳ ಮೇಲೆ ಬಂದ ಎಷ್ಟೊಂದು ಗಂಟುಗಳು, ಮೂಟೆಗಳು” ಕಾಲುಗಳು, ದೇಹಕ್ಕೂ, ದೇಹ ಹೊರುವ ಹೊರೆಗೂ ಆಧಾರ. ಆದರೆ ಆಧಾರ, ಅಡಿಪಾಯ, ಗಟ್ಟಿಯಾಗಿಲ್ಲ. ಪೋಷಕಾಂಶಗಳ ಕೊರತೆಯಿಂದ ಕಾಲುಗಳು ಸಪೂರವಾಗಿವೆ. ವ್ಯವಸ್ತೆಯ ಜೀವಪೋಶಕ ಅಂಶ ವಿರಳವಾದಾಗ, ಆಧಾರ ಸ್ಥಂಭಗಳು ದುರ್ಬಲವಾಗುತ್ತವೆ. ಆ ದುರ್ಬಲ ವ್ಯವಸ್ಥೆ ಹೊತ್ತಿರುವ ಮೂಟೆಗಳು ಮಣ ಭಾರ. ಗಂಟುಗಳು ಎಂದರೆ, ಕ್ಲಿಷ್ಟವಾದ, ಬಿಡಿಸಲಾಗದ ಅಥವಾ ಬಿಡಿಸಲು ಪ್ರಯತ್ನವೇ ಮಾಡದೆ ಕ್ಲಿಷ್ಟವಾದ ಸಮಸ್ಯೆಗಳನ್ನು, ಪ್ರತಿನಿಧಿಸುವಂತಿದೆ. ಸೈಕಲ್ ನಲ್ಲಿ ಸವಾರನಾದ ಕವಿಗಯನ್ನು ಈ ಪ್ರಶ್ನೆಗಳು ಅಧೀರನನ್ನಾಗಿಸುತ್ತವೆ. ” ಈ ನಡುವೆ ರಸ್ತೆ ತುಸುವೇ ಮಿಸುಕಾಡಿ ಹೇಳಿದ್ದು ಹೀಗೆ.. ನನ್ನ ಬಾಲದ ಮೇಲೆ ಸವಾರಿ ಮಾಡುತ್ತೀಯಾ..? ನನ್ನ ಹೆಡೆಯ ಭಾಗಕೆ ಬಂದು ತಲುಪು ನೋಡುವಾ..!” ಕೇರಿಯ ಸುತ್ತಲಿನ ರಸ್ತೆಯೇ ಈಗ ಮಾತಾಡುತ್ತೆ. ಸಮಸ್ಯೆಯ ಅಗಾಧತೆಯ ಪರಿಚಯ ಮಾಡಿಕೊಡುತ್ತೆ. ಈ ಕವಿತೆಯಲ್ಲಿ ಸೈಕಲ್ ಸವಾರ, ವ್ಯಕ್ತಿಯೇ ಆಗಬೇಕಿಲ್ಲ. ನಮ್ಮ ಮನಸ್ಸಿನೊಳಗಿನ ಸಾಕ್ಷೀ ಪ್ರಜ್ಞೆಯೂ ಆಗಬಹುದು. ನಾವು ಅನುಭವ ರೂಪದಲ್ಲಿ ಸಂಗ್ರಹಿಸಿದ ವಿಷಯಗಳ ಆಧಾರದಲ್ಲಿ ಮನಸ್ಸೊಳಗೇ ಕೇರಿ ನಿರ್ಮಾಣ ( ಪೂರ್ವಾಗ್ರಹ) ಮಾಡುತ್ತೇವೆ. ನಮ್ಮ ಸಾಕ್ಷಿ ಪ್ರಜ್ಞೆ ನಿರಂತರವಾಗಿ ಅದರ ಸುತ್ತ ಸುತ್ತುತ್ತದೆ, ಪ್ರಶ್ನಿಸುವ ಪ್ರಯತ್ನ ಮಾಡುತ್ತೆ.  ಆದರೆ, ಮನಸ್ಸಿನಲ್ಲಿ ರೂಪುಗೊಂಡ, ಮೂರ್ತವಾದ ಅಭಿಪ್ರಾಯ, ಸಿದ್ಧಾಂತಗಳು, ಬದಲಾವಣೆಯನ್ನು, ಪ್ರತಿರೋಧಿಸುತ್ತವೆ. ಅದರೂ ಸಾಕ್ಷಿಪ್ರಜ್ಞೆ ಸೈಕಲ್ ತುಳಿಯುತ್ತಲೇ ಇರುತ್ತೆ. ಅದೊಂದು ನೆವರ್ ಎಂಡಿಂಗ್ ಸ್ಪಿರಿಟ್ .  ಈ ಸೈಕಲ್ ಯಾತ್ರೆ ಒಂದು ಪೂರ್ತಿ ಬದುಕಿನ ಪಯಣವೂ ಆಗಬಹುದು. ಮನೋಲೋಕದೊಳಗೆ ದಿನ ನಿತ್ಯ  ಹಳತು ಹೊಸತರ ನಡುವೆ, ಸಿದ್ಧಾಂತಗಳ ವೈರುಧ್ಯಗಳ ನಡುವೆ, ಭಾವ  ಬುದ್ಧಿ ಗಳ ನಡುವೆ ನಡೆಯುವ ಸಂಘರ್ಷಗಳು, ಸೈಕಲ್ ಸವಾರನ ವೀಕ್ಷಕ ವಿವರಣೆಯಲ್ಲಿ ದಾಖಲಾದಂತೆಯೂ ಅನ್ವಯಿಸಬಹುದು. ವ್ಯಕ್ತಿ  ಮತ್ತು ವ್ಯವಸ್ಥೆ ಗಳ ನಡುವಿನ ತಾಕಲಾಟವಾಗಿಯೂ ನೋಡಬಹುದು ಈ ಕವಿತೆಯಲ್ಲಿ ‘ಕೇರಿ’ಯ ಪ್ರತಿಮೆಯನ್ನು ಕವಿ ಬಹಳ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಇದೇ ರೀತಿ ದ.ರಾ. ಬೇಂದ್ರೆಯವರೂ ಕೇರಿಯ ರೂಪಕವನ್ನು ತಮ್ಮ ಕವನ ” ಬಾರೋ ಸಾಧನ ಕೇರಿಗೆ” ತುಂಬಾ ಧನಾತ್ಮಕವಾಗಿ ಬಳಸಿದ್ದಾರೆ. “ಬಾ ಬಾರೋ, ಬಾರೋ ಬಾರೋ ಬಾರೊ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಅಂಕಣ ಬರಹ ಕಬ್ಬಿಗರ ಅಬ್ಬಿ ನೆಲದವ್ವನ ಒಡಲ ಜೀವಜಲ ಆ ಬಾವಿ ನೀರಿಗೆ ಅಷ್ಟೊಂದು ರುಚಿ. ಆಸರಾದ ಗಂಟಲಿಗರ ಆಸರೆಯೇ ಆ ಬಾವಿ. ನಮ್ಮ ಮನೆಯಿಂದ ಶಾಲೆ ತಲಪಲು ನಾಲ್ಕುಮೈಲಿಯ ಹೆಜ್ಜೆ. ನಡುದಾರಿಯಲ್ಲಿ ದೇವಸ್ಥಾನ. ಅದರ ಪಕ್ಕದಲ್ಲಿ ಈ ಬಾವಿ. ನಾನು ತುಂಬಾ ಚಿಕ್ಕವನಿದ್ದಾಗ, ನನ್ನ ಅಕ್ಕನ ಜತೆಗೆ ಶಾಲೆಗೆ ನಡೆದು ಬಾಯಾರಿದರೆ ಈ ಬಾವಿಯಿಂದ ಅಕ್ಕ ನೀರು ಸೇದುತ್ತಿದ್ದಳು. ಬಾವಿಯಾಳಕ್ಕೆ ಹಳೆಯ ಅಲ್ಯುಮಿನಿಯಮ್ ಬಿಂದಿಗೆ ಇಳಿಸಿ ನೀರು ನಿಧಾನವಾಗಿ ತುಂಬುವಾಗ ಗುಳು ಗುಳು ಶಬ್ಧ ಬಾವಿಯ ಪಾತ್ರದೊಳಗಿಂದ ಅನುರಣಿಸುವ ಶಬ್ಧ, ಬಾವಿಯ ಜತೆಗೆ ಬಿಂದಿಗೆ ಪಿಸುಮಾತಲ್ಲಿ ಸಲ್ಲಪಿಸುವಂತೆ ಆಪ್ತವೂ ನೈಜವೂ ಆಗಿತ್ತು. ತೆಂಗಿನ ಹುರಿಹಗ್ಗ ಹಿಡಿದು ಒಂದೊಂದೇ ಉಸಿರಿನ ಜತೆಗೆ ಒಂದೊಂದೇ ಕೈಯಳತೆಯಷ್ಟು ಎಳೆಯುತ್ತಾ ಬಾವಿಯ ಆಕರ್ಷಣೆಗೆ ವಿರುದ್ಧವಾಗಿ ಕೊರಳಿಗೆ ಉರುಳು ಸಿಕ್ಕಿಸಿದ ಬಿಂದಿಗೆ ಮೇಲೇರುತ್ತಿತ್ತು. ಅಕ್ಕ ಕೊಡ ಬಗ್ಗಿಸಿ ನನ್ನ ಪುಟ್ಟ ಬೊಗಸೆ ತುಂಬಾ ನೀರು ಸುರಿದಾಗ ಅವಳ ಸ್ತ್ರೀ ಸಹಜ ಪ್ರೀತಿಯೇ ಬೊಗಸೆ ತುಂಬಾ. ನೀರೂ ಅಷ್ಟೇ, ನೆಲದವ್ವನ ಒಡಲ ಜೀವ ಜಲವದು. ವೃತ್ತಾಕಾರದ ಕಟ್ಟೆ, ಬಾವಿಯ ಮುಖಪರಿಚಯ. ಬಾವಿಯೊಳಗೆ ಇಣುಕಿದರೆ, ನಿಶ್ಚಲವಾಗಿ ಶಾಂತವಾಗಿ ನೀರು, ಆಗಸಕ್ಕೂ, ಬಾವಿಯ ಒಳ ಅಂಚಿಗೂ ಕನ್ನಡಿಯಾಗುತ್ತೆ.  ಬಾವಿಯೊಳಗೆ ಇಣುಕಿದರೆ ಅದು ನಿಮಗೆ ನಿಮ್ಮದೇ ಮುಖವನ್ನು ತೋರಿಸುತ್ತದೆ, ಗಗನದ ಬಿಂಬದ ಹಿನ್ನೆಲೆಯಲ್ಲಿ. ತಿಳಿನೀರಿಗೆ ಕಡಲೇ ಗಾತ್ರದ ಕಲ್ಲೆಸೆದರೆ, ಅಷ್ಟೂ ಬಿಂಬಗಳು ವಕ್ರ ವಕ್ರವಾಗಿ, ಅಲೆಗಳ ಹಿಂದೆ ಅಲೆಯತ್ತವೆ. ಬಾವಿಯ ಇನ್ನೊಂದು ವಿಶೇಷತೆ, ಶಬ್ಧದ ಪುನರಾವರ್ತನೆ( ಇಖೋ) ಮತ್ತು ತತ್ಪರಿಣಾಮವಾಗಿ ಸ್ವರವರ್ಧನೆ. ಮಕ್ಕಳು ಬಾವಿಯ ಮುಖಕ್ಕೆ ಮುಖ ಹಚ್ಚಿ, ಹೂಂ.. ಅಂದರೆ, ಬಾವಿಯೊಳಗಿಂದ ಯಾರೋ ಹೂಂ…ಹೂಂ.. ಅಂತ ಸ್ವರಾನುಕರಣೆ ಮಾಡಿದಂತೆ, ಮಕ್ಕಳಿಗೆ ಬಾವಿಯೊಳಗೆ ರಾಕ್ಷಸ ಇದ್ದಾನೋ ಎಂಬ ಕಲ್ಪನೆ ಮೂಡಿ, ಬಾವಿಯೊಳಗಿಂದ ಕಥೆಯ ಕವಲುಗಳು ಚಿಗುರುತ್ತವೆ. ಬಾವಿಯೊಳಗೆ ನೀವು ಇಳಿದು ಮೇಲೆ ನೋಡಿದರೆ, ನಿಮಗೆ ಕಾಣಿಸುವುದು ಆಗಸದ ಒಂದು ಚಿಕ್ಕ ತುಂಡು ಮಾತ್ರ.  ಬಾವಿ ಆಳವಾಗಿದ್ದರೆ, ಬಾವಿಯೊಳಗಿಂದ ಹೊರಜಗತ್ತಿನತ್ತ ನೋಟದ ವ್ಯಾಪ್ತಿ, ನಿಮ್ಮ ಕಣ್ಣಿನ ಕ್ಷಮತೆಗಿಂತ ಹೆಚ್ಚು, ಬಾವಿಯ ಹೊರಬಾಯಿಯ ಅಳತೆಯ ಮೇಲೆಯೇ ಅವಲಂಬಿಸಿರುತ್ತೆ. ಬಾವಿಯ ಅಂಚಿನಲ್ಲಿಯೂ  ಜರಿಗಿಡಗಳಂಥಹಾ ಹತ್ತು ಹಲವು ಸಸ್ಯ ಪ್ರಬೇಧಗಳು ಬೇರಿಳಿಸಿ ಜೀವನೋತ್ಸಾಹದ ದ್ಯೋತಕವಾಗಿ ತೊನೆಯುತ್ತವೆ.  ನೀರ ಸೆಲೆಯೇ ಜೀವಸಂಕುಲದ ನೆಲೆ ಎನ್ನುವ ಪ್ರಪಂಚವದು. ಬಾವಿಯೊಳಗೆ ಅಂಚುಗಳಲ್ಲಿ ಪಾಚಿಯೂ ಬೆಳೆಯುತ್ತೆ.  ಬಾವಿಯೊಳಗೆ ಕಪ್ಪೆ, ಅದರ ಮಕ್ಕಳು ಮರಿಗಳು ಎಲ್ಲಾ ಸೇರಿ ಸುಖೀ ಸಂಸಾರ ಕಟ್ಟುತ್ತವೆ. ಬಾವಿಯಲ್ಲಿ ಜೀವಜಲದ ಒರತೆಯಿದೆಯಷ್ಟೇ. ಅದರ ಜತೆಗೇ ಬಾವಿಯಿಂದ ನೀರು ಯಾವುದೋ ಸೆರೆಯಲ್ಲಿ ಹೊರ ಹರಿಯುವ ದಾರಿಯೂ ಇದೆ. ಈ ಒಳಹರಿವು ಮತ್ತು ಹೊರ ಹರಿವಿನ ಚಲನಶೀಲತೆಯಿಂದಾಗಿ ಬಾವಿಯ ಜಲಜ್ಞಾನಸಂಗ್ರಹ ಒಂದು ಮಟ್ಟದಲ್ಲಿರುತ್ತೆ ಮತ್ತು, ನೀರು ಸದಾ ಸ್ವಚ್ಛ ನೂತನವಾಗಿರುತ್ತೆ. ಬಾವಿ ನೀರು ನೆಲದಮ್ಮನ ಮೊಲೆಹಾಲಿನಂತೆ. ಮಣ್ಣಿನ ಖನಿಜ ಸಾರಗಳು, ಅದರ ವಿಶಿಷ್ಠವಾದ ಪರಿಮಳ ನೀರಿಗೆ ರುಚಿ ಆರೋಪಿಸುತ್ತೆ. ಬಾವಿನೀರು ನಮ್ಮ ನೋಟಕ್ಕೆ ಸಿಗದ ಲಕ್ಷಾಂತರ ಜೀವಾಣುಗಳ  ಸಾಮ್ರಾಜ್ಯವೂ ಹೌದು. ಲಂಗದಾವಣಿ ತೊಟ್ಟ  ಹುಡುಗಿಯರು ಬಿಂದಿಗೆ ಹಿಡಿದು ಬಾವಿಯ ನೀರು ಕೊಂಡೊಯ್ಯಲು ಬಂದರೆ ಅದನ್ನು ನೋಡಿ ಹಳ್ಳಿಗೆ ಹಳ್ಳಿಯೇ ಗಜಲ್ ಬರೆಯುತ್ತೆ. ಬಾವಿ ಕಟ್ಟೆಯ ಸುತ್ತಮುತ್ತ, ಪ್ರಣಯಗೀತೆಗಳ ಗುಂಜಾರವ ಗುನುಗುನಿಸುತ್ತೆ. ಜತೆ ಜತೆಗೆ ಬಾವಿಯ ನೀರು ಕೊಂಡೊಯ್ಯಲು ಬಂದ ಗೃಹಿಣಿಯರು ಬಾವಿಯೊಳಗಿನ ದರ್ಪಣದಲ್ಲಿ, ಪರಸ್ಪರ ತಮ್ಮ ಭಾವವನ್ನೂ ಬಿಂಬಿಸಿ ಹಂಚಿಕೊಳ್ಳುವಾಗ ಕೆಲವೊಮ್ಮೆ ಕಣ್ಣೀರ ಬಿಂದುಗಳು, ಆನಂದ ಭಾಷ್ಪಗಳು ಬಾವಿ ನೀರಿನಲ್ಲಿ ತಂಪು ಕಾಣುತ್ತವೆ. ಬೇಂದ್ರೆಯವರ ಪುಟ್ಟ ಮಗಳು ಒಂದು ಸಂಜೆ ಬಿಂದಿಗೆ ಹಿಡಿದು, ಬಾವಿಯತ್ತ ಹೆಜ್ಜೆ ಹಾಕುವ ದೃಶ್ಯ ನೋಡಿದ ನಡಿಗೆಯ ಹೆಜ್ಜೆಯ ಗೆಜದಜೆಯ ಲಯದಂತಹಾ ” ಸಂಜೆಯ ಜಾವಿಗೆ ಹೊರಟಾಳ ಬಾವಿಗೆ” ಅಂತ ಬರೆಯುತ್ತಾರೆ!. “ಸಂಜೆಯ ಜಾವಿಗೆ | ಹೊರಟೀದಿ ಬಾವಿಗೆ || ಕಿರಗೀಯ ನೀರಿಗೆ | ಒದೆಯೂತ ದಾರಿಗೆ || ಗೆಜ್ಜೀಯು ಗೆಜ್ಜಿಗೆ | ತಾಕ್ಯಾವ ಹೆಜ್ಜಿಗೆ || ಏನಾರ ನಡಿಗೆ | ಯಾವೂರ ಹುಡಿಗೆ || ಸಂಜೆಯ ಜಾವಿಗೆ | ಹೊರಟಾಳ ಬಾವಿಗೆ ||” ಬೇಂದ್ರೆಯವರ ಪದಗಳು ನಾಟ್ಯಾಂಗನೆಯ ಪದಗಳು. ಹುಡುಗಿ, ಪುಟ್ಟ ಸೀರೆಯುಟ್ಟು, ನಡೆಯೋದಲ್ಲ, ಹಾದಿಗೆ ಪುಟ್ಟ ಪಾದಗಳಿಂದ ಹಾದಿಯನ್ನು ಒದಿಯೂತ ನಡೆಯುವಾಗ, ಆಕೆಯ ಗೆಜ್ಜೆ, ಹೆಜ್ಜೆ ಮತ್ತು ನಡಿಗೆಯಲ್ಲಿ ಸಂಭ್ರಮ ಪದ್ಯವಾಗಿದೆ.  ಆಕೆ ಬಿಂದಿಗೆಯಲ್ಲಿ ಜಲತುಂಬಿ ಹಿಂತಿರುಗಿ ನಡೆಯುವ ಭಂಗಿ ಈ ಕೆಳಗಿನ ಸಾಲುಗಳು.  “ಮೂಗಿನ ನೇರಿಗೆ | ಹೊರಳೀದೆ ಊರಿಗೆ || ತಲಿಮ್ಯಾಲ ಬಿಂದಿಗೆ | ಕಾಲಾಗ ಅಂದಿಗೆ || ತುಂ ತುಮುಕು ತುಂಬಿದೆ | ಬಿಂದೀಗೆ ಅಂತಿದೆ || ಝಣ್‍ಝಣ ಅಂದಿಗೆ | ಅಂದಾವ ಹೊಂದಿಗೆ || ಸಂಜೀಯ ಜಾವಿಗೆ | ಹೋಗಿದ್ದೆ ಬಾವಿಗೆ || ” ಪು.ತಿ.ನರಸಿಂಹಾಚಾರ್ ಅವರು ಬಾವಿಯ ಮೂಲಕ ತತ್ವದರ್ಶನ ಮಾಡುತ್ತಾರೆ. ” ಬಾಯಾರಿಕೆಯೊಳು ಬೇಯುತ ಬಂದಿತು ಬುದ್ಧಿ ಎದೆಯ ಬಾವಿಯ ಬಳಿಗೆ ಹೇರಾಳದ ಕಗ್ಗತ್ತಲ ತಳದೊಳು ಅಮೃತ ರುಚಿಯ ತಿಳಿನೀರೆಡೆಗೆ “ ತರ್ಕಿಸುವ ಮನಸ್ಸು ಚಿಂತನೆಯ ಬೆಂಕಿಯಲ್ಲಿ ಕಾದು, ಬಾಯಾರಿ ಬರುವುದು ಎದೆಯ ಬಾವಿಯ ಬಳಿಗೆ. ಕಾವ್ಯದ ಭಾಷೆಯಲ್ಲಿ, ಎದೆ ಎಂದರೆ ಭಾವ, ಕಲ್ಪನ , ಪ್ರೀತಿ. ಆ ಬಾವಿಯ ತಳದಲ್ಲಿದೆ ತಿಳಿಯಾದ ನೀರು, ತಿಳಿವಿನ ನೀರು. ಆ ಅರಿವಿಗೆ ಅಮೃತದ ರುಚಿಯಿದೆ, ಬುದ್ಧಿ ಕೆತ್ತುವ ಲಾಜಿಕ್ ನ ವಾಸ್ತುಶಿಲ್ಪಕ್ಕೆ ಆ ರುಚಿಯಿಲ್ಲ. ಗೋಪಾಲಕೃಷ್ಣ ಅಡಿಗರ ಕವನ, ‘ ಭೂತ’ ಎಂಬ ಕವನದಲ್ಲೂ ಬಾವಿ ಪ್ರತಿಮೆಯ ಅಪೂರ್ವ ಪ್ರಯೋಗವಿದೆ. “ಬಾವಿಯೊಳಗಡೆ ಕೊಳವೆ ನೀರು ; ಮೇಲಕ್ಕಾವಿ ; ಆಕಾಶದುದ್ದವೂ ಅದರ ಕಾರಣ ಬೀದಿ ; ಕಾರ್ಮುಗಿಲ ಖಾಲಿಕೋಣೆಯ ಅಗೋಚರ ಬಿಂದು ನವಮಾಸವೂ ಕಾವ ಭ್ರೂಣರೂಪಿ— ಅಂತರಪಿಶಾಚಿ ಗುಡುಗಾಟ, ಸಿಡಿಲಿನ ಕಾಟ— ಭೂತರೂಪಕ್ಕೆ ಮಳೆ ವರ್ತಮಾನ ; ಅಗೆದುತ್ತ ಗದ್ದೆಗಳ ಕರ್ಮಭೂಮಿಯ ವರಣ ; ಭತ್ತಗೋಧುವೆ ಹಣ್ಣುಬಿಟ್ಟ ವೃಂದಾವನ, ಗುಡಿಗೋಪುರಗಳ ಬಂಗಾರ ಶಿಖರ.” ಬಾವಿಯೊಳಗೆ ಭೂತಕಾಲದ ನೀರೊರತೆ, ವರ್ತಮಾನದಲ್ಲಿ ಆವಿ, ಮೋಡವಾಗಿ ಮಳೆ ಸುರಿಯುತ್ತೆ. ಕಾಲಾಂತರ ಮತ್ತು ರೂಪಾಂತರಗಳು ಸಮಾನಾಂತರವಾಗಿ ಸಂಭವಿಸುವ ಪ್ರಕ್ರಿಯೆ ಶುರುವಾಗುವುದು ಬಾವಿಯಿಂದ. ಬಾವಿಯ ಬಗ್ಗ  ಲಂಕೇಶ್ ಅವರು ಬರೆಯುವ ಈ ಸಾಲನ್ನು ಗಮನಿಸಿ! ” ಕವಿಯ ಊರಿಗೆ ಹೋದಾಗ ಅಲ್ಲಿಯ ಬಾವಿಯಲ್ಲಿ ಪಾಚಿಗಟ್ಟಿತ್ತು” ಶಿವರುದ್ರಪ್ಪನವರು ಬಾವಿಯನ್ನು ಭಾವದ ಬಾವಿಯಾಗಿ ಕಾಣುತ್ತಾರೆ. ” ಅದೂ ಬೇಕು ಇದೂ ಬೇಕು ಎಲ್ಲವೂ ಬೇಕು ನನಗೆ. ದಾರಿ ನೂರಾರಿವೆ ಬೆಳಕಿನರಮನೆಗೆ! ಬೇಡ ನನಗೆ ಸಿದ್ಧಾಂತಗಳ ರಾದ್ಧಾಂತ; ನನಗಿಲ್ಲ, ಇದೇ ಸರಿ ಇಷ್ಟೇ ಸರಿ ಎನುವ ಪಂತ. ನಾ ಬಲ್ಲೆ, ಇವು ಎಲ್ಲ ಏರುವೆಯ ಒಂದೊಂದು ಹಂತ. ನೂರಾರು ಭಾವದ ಬಾವಿ; ಎತ್ತಿಕೋ ನಿನಗೆ ಬೇಕಾದಷ್ಟು ಸಿಹಿನೀರ. ಪಾತ್ರೆಯಾಕಾರಗಳ ಕುರಿತು ಏತಕೆ ಜಗಳ? ನಮಗೆ ಬೇಕಾದದ್ದು ದಾಹ ಪರಿಹಾರ.” ನೂರಾರು ಭಾವದ ಬಾವಿಯಿಂದ ಬೇಕಾದಷ್ಟು ಸಿಹಿನೇರನ್ನು ಎತ್ತಿಕೋ. ಯಾವ ಪಾತ್ರೆಯಲ್ಲಿ ನೀರು ತುಂಬುತ್ತೇವೋ ಆ ಪಾತ್ರೆಯ ಆಕಾರ ನೀರಿನದ್ದು!. ಸಿದ್ಧಾಂತದ ಬಂಧ ಮತ್ತು ಪೂರ್ವನಿರ್ಧಾರಿತ ಆಕಾರ, ಅಂಚುಗಳು, ಚೂಪುಗಳು ಅಗತ್ಯವೇ?. ಬಾವಿಯ ನೂರು ಭಾವಗಳ ಸಿಗಿನೀರಿನ ಮೂಲ ಉದ್ದೇಶ ಆಕಾರ ಪಡೆಯುವುದೇ? ಅಥವಾ ದಾಹ ತಣಿಸುವುದೇ?. ಹೀಗೆ ಹಲವು ಪ್ರತಿಮೆಗಳಿಗೆ ಆಕಾರ ಕೊಡುವ ಬಾವಿಯನ್ನು ವರ್ತಮಾನದ ಕವಯಿತ್ರಿ ಸ್ಮಿತಾ ಅಮೃತರಾಜ್ ಸಂಪಾಜೆ ಅವರು ತುಂಬಾ ವಿಭಿನ್ನವಾಗಿ ಕವಿತೆಗಿಳಿಸಿದ್ದಾರೆ. **   **    **   **  ಬಾವಿ ಕಟ್ಟೆ “ಗುದ್ದಿ ಗುದ್ದಿ ಆಳಕ್ಕೆ ಅಗೆದು ಸಿಕ್ಕ ಜೀವ ಜಲಕ್ಕೆ ಅತ್ತ ಇತ್ತ ಮಿಸುಕಾಡದಂತೆ ಕಟ್ಟಿದ್ದು ಕಟ್ಟೆ. ನೆಟ್ಟ ದಿಟ್ಟಿಗೆ ಒಂದು ಹಿಡಿ ಆಗಸ ಬಿಟ್ಟರೆ ಆಕೆ ತರುವ ಕೊಡದೊಂದಿಗಷ್ಟೇ ಹೇಗೋ ಬೆಳೆದದ್ದು ನಂಟು. ಅದೆಂತಹ ಆತುರ ಬಿಂದಿಗೆಗೆ ಕಂಠಕ್ಕೆ ಹಗ್ಗ ಬಿಗಿಸಿಕೊಳ್ಳುತ್ತಾ ಹಾಗೇ ಇಳಿಬಿಡುವ ಹೊತ್ತಿಗೆ ಕೈಯ ಹಿಡಿತವನ್ನೇ ಸಡಿಲಿಸಿ ರೊಯ್ಯನೆ ಡುಬುಕಿ ಹೊಡೆದಾಗ ಕೊಡ ಸೇರಿ ಜಗತ್ತು ನೋಡುವ ಕಾತರಕ್ಕೆ ಬಾವಿಯ ಮೈ ತುಂಬಾ ಅಲೆ. ಅನ್ನಕ್ಕೆ ಸಾಂಬಾರಿಗೆ ಕಾಫಿಗೆ ಚಹಕ್ಕೆ ನೀರು ಸದ್ದಿಲ್ಲದೇ ಕಲಬೆರಕೆಯಾಗುವ ಸಂಕಟಕ್ಕೆ ಕುದಿ ಮತ್ತಷ್ಟು ಹೆಚ್ಚುತ್ತಿದೆ. ಖಾಲಿಯಾಗುವ ಖುಷಿಗೆ ಕೊಡ ಇಂಚಿಂಚೇ ಮೈ ಅಲಗಿಸಿ ಕೊಳ್ಳುತ್ತಿದೆ ಇತ್ತ ಬಾವಿ ಹೆಜ್ಜೆ ಸಪ್ಪಳಕ್ಕೆ ಕಿವಿ ತಾಗಿಸಿ ಕುಳಿತಿದೆ. ಈ ಕೊಡದ ನೀರು ಗಿಡದ ಬುಡಕ್ಕೋ ಅಡುಗೆ ಮನೆಯ ವ್ಯಂಜನಕ್ಕೋ? ಕುತೂಹಲ ತಣಿದ ದಿನ ಕಣ್ಣು ಹೊಳಪು ಕಳೆದುಕೊಂಡು ಬಿಡುತ್ತದೆ. ಮತ್ತೆ ಕೊಡ ತುಂಬಿಕೊಳ್ಳುತ್ತಿದೆ ಡುಬು ಡುಬು ಎದೆಬಡಿಯುವ ಒಡಲಾಳದ ಸದ್ದು ಎಲ್ಲಿಯದ್ದು .? ಬಿಂದಿಗೆಯದ್ದಾ..? ಬಾವಿಯದ್ದಾ..? ಅರೆ! ನನ್ನೆದೆಯೇಕೆ ಹೀಗೆ ಬಡಿದುಕೊಳ್ಳುತ್ತಿದೆ ಈ ಹೊತ್ತು .” **  **     **  ** ಬಾವಿ ತೋಡುವ ಕಠಿಣ ಕೆಲಸ ಮಾಡಿ,ಸಿಕ್ಕಿದ ನೀರು ಹೊರಗೆ ಹರಿಯಬಾರದಲ್ಲಾ. ಅದನ್ನು ಹರಿಯದಂತೆ ಬಂಧಿಸಲು ಬಾವಿಗೆ ಕಟ್ಟೆ ಕಟ್ಟಬೇಕು. ಬಾವಿ, ನೀರು, ಕಟ್ಟೆ ಇವುಗಳು ಏನನ್ನು ಪ್ರತಿನಿಧಿಸುತ್ತವೆ? ಓದುಗರಿಗೆ ಬಿಡುವೆ. ಈ ಕವಿತೆಯಲ್ಲಿ, ಬಾವಿ ಮತ್ತು ಬಿಂದಿಗೆ ಎರಡು ಪ್ರಮುಖ ಪಾತ್ರಗಳು. ಅವುಗಳು ಪರಸ್ಪರ ಸಂವಾದಿಸುತ್ತಾ ಕವಿತೆ ಸಾಗುತ್ತೆ. ಬಾವಿ ಆಗಸದತ್ತ ಕಣ್ಣು ನೆಟ್ಟರೆ ಅದಕ್ಕೆ ಕಾಣಸಿಗುವುದು ತುಂಡು ಆಗಸ ಮಾತ್ರ. ಬಾಹ್ಯಪ್ರಪಂಚಕ್ಕೆ ಅದರ ಸಂಬಂಧ ಹೊಂದಿಸುವುದು ಬಿಂದಿಗೆಯೇ. ಅಷ್ಟೇ ಪ್ರೀತಿ, ಆತುರ ಬಿಂದಿಗೆಗೆ. ಬಾವಿಯನ್ನು ಹೇಗೆ ಕಟ್ಟೆ ಬಂದಿಯಾಗಿಸಿದೆಯೋ, ಹಾಗೆಯೇ ಬಿಂದಿಗೆಯ ಕೊರಳಿಗೆ ಹಗ್ಗ ಬಿಗಿದಿದೆ. ಬಾವಿಯ ನೀರಿನ ಜತೆಗೆ ಬಿಂದಿಗೆಯ ಸಮಾಗಮ, ಪ್ರೇಮಜಲ ಸಿಂಚನ, ಸ್ಪರ್ಶದ ಪುಳಕ, ಅಲೆ ಎಲ್ಲವೂ ಇದೆ.  ಹಾಗೆ ತುಂಬಿದ ಕೊಡ, ಬಾವಿಯಿಂದ ಹೊರಬಂದ ನಂತರವೂ ಸ್ವತಂತ್ರವಲ್ಲ, ಅದರೊಳಗಿನ ನೀರು, ಅನ್ನಕ್ಕೆ, ಸಾಂಬಾರಿಗೆ ಉಪಯೋಗವಾಗುತ್ತೆ. ಇಲ್ಲಿ ಕವಯಿತ್ರಿ ‘ಕಲಬೆರಕೆ’ ಪದ ಪ್ರಯೋಗ ಮಾಡಿದ್ದಾರೆ. ನೀರಿನ ಇಚ್ಛೆ ಸಾಂಬಾರು ಆಗುವುದು ಅಂತಿಲ್ಲ. ತಿಳಿಯಾದ ನೀರು ಸಾಂಬಾರ್ ಆದಾಗ ಅದೂ ಕಲಬೆರಕೆಯೇ. ರುಚಿಹಿಡಿದ ಆಸ್ವಾದಕನಿಗೆ ಸಾಂಬಾರ್ ರುಚಿ, ತಿಳಿಯಾಗಿದ್ದ ನೀರಿನ, ಬಾವಿಯ ಫ್ರೇಮ್ ಆಫ್ ರೆಫರೆನ್ಸ್ ನಲ್ಲಿ ಅದು ಕಲಬೆರಕೆ. ಬಿಂದಿಗೆ ತುಂಬಿದ್ದ ನೀರನ್ನು ಹೊಯ್ದಂತೆ, ಖಾಲಿಯಾಗುವ ಅನುಭವ ಕೂಡಾ ಒಂದು ಅನೂಹ್ಯ  ಪ್ರಕ್ರಿಯೆಯ ಪ್ರತಿಮೆಯೇ. ಕವಿತೆಯ ಕೆಳಗಿನ ಸಾಲುಗಳು ಖಂಡಿತಾ ಹಿಂದಿ ಶಾಯರಿಗಳಲ್ಲಿ ಕಾಣಸಿಗುವ ಪಂಚ್ ಲೈನ್ ಗಳು. ” ಮತ್ತೆ ಕೊಡ ತುಂಬಿಕೊಳ್ಳುತ್ತಿದೆ ಡುಬು ಡುಬು ಎದೆಬಡಿಯುವ ಒಡಲಾಳದ ಸದ್ದು ಎಲ್ಲಿಯದ್ದು .? ಬಿಂದಿಗೆಯದ್ದಾ..? ಬಾವಿಯದ್ದಾ..? ಅರೆ! ನನ್ನೆದೆಯೇಕೆ ಹೀಗೆ ಬಡಿದುಕೊಳ್ಳುತ್ತಿದೆ ಈ ಹೊತ್ತು .” ಅಂದರೆ ಬಾವಿ, ಕೊಡ, ಬಾವಿಯೊಳಗಿನ ನೀರು, ಸಮಾನಾಂತರವಾಗಿ ನಡೆಯುವ  ಒಡಲಾಳದ ಸದ್ದು ಮತ್ತು ಎದೆ ಬಡಿತ, ಕವಿತೆಯ ಮೇಲಿನ ಅಷ್ಟೂ ಸಾಲುಗಳಿಗೆ ಒಂದು ಇತ್ಯಾತ್ಮಕ ಅರ್ಥದತ್ತ ಮಾರ್ಗ ಸೂಚಿಯಾಗುತ್ತವೆ. ಸದಾ ಹೊರಜಗತ್ತಿನತ್ತ ಸಂಬಂಧ ಬೆಳೆಸುವ ಹಂಬಲ, ಕಾತರ,ಹಸಿವು ಬಾವಿಗಿದೆ. ತಿಳಿಯಾದ ಸ್ವಂತಿಕೆ ಸಮಾಜದ ಅಳವಡಿಕೆಯಲ್ಲಿ ಕಲಬೆರಕೆಯಾಗುವ ನೋವಿದೆ. ಅದು ತನ್ನ ಇಚ್ಛೆಗೆ ವಿರುದ್ಧವಾಗಿ ನಡೆಯುವ ಅಸಹನೆಯೂ ಇದೆ. ಒಡಲಾಳದ ಪ್ರೀತಿಯನ್ನು ಬಿಂದಿಗೆಯಲ್ಲಿ ಮೊಗೆ ಮೊಗೆದು ಕೊಡುವಾಗ ತುಂಬುವ ಖುಷಿಯೂ, ಹಂಚುವಾಗಿನ ಖಾಲಿಯಾಗುವ ಸಂತೃಪ್ತಿಯೂ ಕವಿತೆಯಲ್ಲಿ ಕಾಣಿಸುತ್ತೆ.

Read Post »

You cannot copy content of this page

Scroll to Top