ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕನಸಿನೂರಿಂದ….

-ಕನಸಿನೂರಿನವ

ಮತ್ತದೆ ದ್ವಂದ್ವ!

ಚಿತ್ತಭಿತ್ತಿಯಲಿ
ಸ್ಥಿರವಾಗಿ ಉಳಿದ ಅ ಮೊಗವನೆಲ್ಲಿ ಕಂಡೆ,
ಪಡೆಯದೆಲೆ ಕಳೆದುಕೊಂಡೆ?
ನೆನಪಿಸಿಕೊ ಹೃದಯ ಕವಾಟವೆ
ಕಣ್ಣೊಳಗೆ ಬಿಂಬವಾಗಿ

ಎದೆಯೊಳಗೆ ಕಂಬವಾಗಿ
ನರನಾಡಿಗಳಲಿ ಜೀವ ಮಿಡಿತವಾಗಿ
ನಿಂತಾ ಮೊಗವ ಎಲ್ಲಿ ಕಂಡೆ

ಹೇಗೆ ಕಳೆದುಕೊಂಡೆ.
ಮೊದಲ ನೋಟದಲೇನು ತುಂಬಿಕೊಂಡೆ
ಆ ಮುದ್ದು ಮೊಗದ ನಕ್ಷತ್ರಗಳ ಕಣ್ಣುಗಳನೊ 

ಅದರೊಳಗಿನ ಬೆಳಕನ್ನೊ?

ಆ ಬಿರಿಯದೆ ಬಿಗಿದ ತುಟಿಗಳ
ಹಿಂದಿನ ಮೌನವನೊ?

ಬಹಳ ವರುಷಗಳ ಹಿಂದೆ ಆ ಮುಖವನ್ನು ಮೊದಲ
ಬಾರಿಗೆ ನೋಡಿದೆ. ಅದೇಕೊ ಆ  ಮುಖ ನನ್ನ ಸೆಳೆದುಬಿಟ್ಟಿತ್ತು.ಎಷ್ಟರ ಮಟ್ಟಿಗೆ ಹೃದಯದಲ್ಲಿ ಅಚ್ಚಳಿಯದೆ ನಿಂತು ಬಿಟ್ಟಿತೆಂದರೆ ಇವತ್ತಿನವರೆಗು ಬೇರ್ಯಾವ ಮುಖವು ಅದರ ಸ್ಥಳ  ಆಕ್ರಮಿಸಲಾಗಲಿಲ್ಲ.ಬಹುಶ:ಅದರ ನೆನಪುಗಳಲ್ಲೆ ನೂರಾರು ಪುಟಗಳ ಬರೆಯುತ್ತ ಹೋದೆ. ತೀರಾ ಮೊನ್ನೆ ಮೊನ್ನೆಯವರೆಗು  ಮತ್ತೆಂದಾದರು ಆ ಮುಖ ನೋಡುತ್ತೇನೆಂಬ ಕಲ್ಪನೆಯೂ ನನಗಿರಲಿಲ್ಲ…..

ಆದರೆ ನಾವು ನಂಬಲಿ ಬಿಡಲಿ ಕಾಲ ನಮ್ಮ ಜೊತೆ  ವಿಧಿಯ ಹೆಸರಿನಲ್ಲಿ ಆಟ ಆಡುತ್ತದೆ. ಅಂತಹದೊಂದು ಆಟದ ಭಾಗವಾಗಿ ಮತ್ತೆ ನಾನಾ ಮುಖವನ್ನು ನೋಡಿದೆ. ಮತ್ತೆ ಮತ್ತೆ ಆ ಮುಖ ನೋಡುವಾಗ ಮನಸು ಮಿತಿಗಳನ್ನು ಮೀರುವ ವ್ಯರ್ಥ ಪ್ರಯತ್ನ ಮಾಡುತ್ತಿದೆ.. ಆ ಮುಖವನ್ನು ಬೊಗಸೆಯೊಳಗೆ ಹಿಡಿದುಕೊಂಡು ನುಡಿಯಬೇಕು-ಎಲ್ಲಿದ್ದೆಇಲ್ಲಿಯವರೆಗು?ಮತ್ತೆಕೆ ಬಂದೆ ನನ್ನೆದುರಿಗೆ ಅಂತ ಕೇಳಬೇಕೆನಿಸುತ್ತೆ.ಆ ದೈರ್ಯ ಸಾಲುತ್ತಿಲ್ಲ…ಸಾದ್ಯವಾದಷ್ಟು ಆ ಮೊಗದಿಂದ ದೂರ ಸರಿದು ಹೋಗಬೇಕೆನಿಸಿದಾಗೆಲ್ಲ  ಸಾವು ನೆನಪಾಗುತ್ತದೆ.ಅದಿಲ್ಲದೆಯೂ ಇಷ್ಟು ವರ್ಷಗಳಕಾಲ ಬದುಕಿದ್ದು ವ್ಯರ್ಥವೆನಿಸಿ ಆ ಮುಖವ ಮರೆಯಬೇಕೆಂದು ಶಪಥಗೈದು  ಹಗಲು ಮುಗಿಸುತ್ತೇನೆ. ಮತ್ತೆ ಬಂದ ಇರುಳಿನ ಸ್ವಪ್ನದೊಳಗಾ  ಮುಖ ಬಂದು ಕೇಳುತ್ತದೆ….ಇಷ್ಟು ವರ್ಷ ನನಗಾಗಿ ಕನಸಿದ್ದು ಸುಳ್ಳೇ? ಹೇಳು ಮತ್ತೇಕೆ ಮರೆಯಲೆತ್ನಿಸುವ ನಾಟಕ?

ಉತ್ತರಿಸಲಾಗದೆ ತಡವರಿಸುತ್ತೇನೆ…..

ಕರಗಿದ ಕತ್ತಲಿಗೆ
ಕುಡಿಯೊಡೆದು ಬಂದ ಬೆಳಗು ಮತ್ತದೆ ಮುಖವನ್ನು ಎದುರು ನಿಲ್ಲಿಸುತ್ತದೆ. ಇದನ್ನು ಬದುಕಿನಕಡೆಯ
ದಿನವೆಂದೊ-ಕಡೆಯ ಕ್ಷಣವೆಂದೊ ಅಂದುಕೊಂಡು ಹೇಳಿ ಬಿಡು ಮುಖಕ್ಕೆ ಮುಖ ಕೊಟ್ಟು ಅದರ ಕಣ್ಣುಗಳಲ್ಲಿ
ನಿನ್ನಕಣ್ಣ ನೆಟ್ಟುಪ್ರೀತಿಸುತ್ತೇನೆಂದು!

ಮತ್ತದೆ ದ್ವಂದ್ವ!

===============================

About The Author

6 thoughts on “ನನ್ನೊಳಗೆ!”

  1. ಆರಂಬದಲ್ಲಿನ ಓದುಗನ ಉತ್ಸಾಹವನ್ನು ಕೊನೆಯವರೆಗೂ ಹಾಗೇ ಕಾಪಿಟ್ಟುಕೊಂಡು ಹೋಗುವ ಶಕ್ತಿ ಕೆಲವು ಬರಹಗಳಿಗೆ ಮಾತ್ರ..ಆ ರೀತಿಯ ಬರಹವನ್ನ ಓದಿದ ತೃಪ್ತಿ ನನಗೆ…ಬರೆದ ಕನಸಿನೂರಿನ ಕನಸುಗಾರನಿಗೂ…ಪ್ರಕಟಿಸಿದ ಸಂಗಾತಿಗೂ ಹೃದಯಪೂರ್ವಕ ಧನ್ಯವಾದಗಳು☺

Leave a Reply

You cannot copy content of this page

Scroll to Top