ನಮಗೊಂದು ಪ್ರಕೃತಿಯು..!

ಕವಿತೆ

ರಮಣ ಶೆಟ್ಟಿ ರೆಂಜಾಳ.

ನಮಗೊಂದು ದೇಹವ
ಕೊಟ್ಟನು ಆ ದೇವ,
ಕೊಟ್ಟದರಲ್ಲಿಟ್ಟನು ಪರಿ ಪರಿಯ ನೋವ !
ನಮಗೊಂದು ಮನವ
ಕೊಟ್ಟನು ಆ ದೇವ,
ಕೊಟ್ಟದರಲ್ಲಿಟ್ಟನು ನಾನಾ ಪರಿ ಚಿಂತೆಯ !
ನಮಗೊಂದು ಜಿಹ್ವೆಯ
ಕೊಟ್ಟನು ಆ ದೇವ,
ಕೊಟ್ಟದರಲ್ಲಿಟ್ಟನು ವಿಧ ವಿಧ ರುಚಿಯ !
ನಮಗೊಂದು ನಾಸಿಕವ
ಕೊಟ್ಟನು ಆ ದೇವ,
ಆಘ್ರಾಣಿಸಬಿಟ್ಟನು ಇಹಪರದ ವಾಸನೆಯ !
ನಮಗೆರಡು ಕಂಗಳ
ಕೊಟ್ಟನು ಆ ದೇವ,
ಕೊಟ್ಟದರಲ್ಲಿಟ್ಟನು ಚಂಚಲ ನೋಟವ !
ನಮಗೆರಡು ಕಿವಿಗಳ
ಕೊಟ್ಟನು ಆ ದೇವ,
ಕೇಳಲೆಂದನವ ತರಹಾವರಿ ಶಬ್ಧವ !
ನಮಗೆರಡು ಕೈ ಕಾಲುಗಳ
ಕೊಟ್ಟನು ಆ ದೇವ,
ಗಂಟುಗಳಲಿಟ್ಟು ವೃದ್ಧಾಪ್ಯಕೆ
ನೋವ ನಿರಖು ಠೇವಣಿಯ !
ನಮಗೊಂದು ಜೀವನವ
ಕೊಟ್ಟನು ಆ ದೇವ,
ಅನುಭವಿಸಲೆಂದು ಈ ಪರಿಯೊಳು
ಸಕಲ ಸುಖದುಃಖವ !
ಆದರೇನು?
ನಮಗೊಂದು ಪ್ರಕೃತಿಯ
ಕೊಟ್ಟನು ಆ ದೇವ ,
ಹಾಳುಗೈಯದೆ ಅದನು
ಹಾಳಾಗಗೊಡದಿರಿಯೆಂದ ನಿಮ್ಮ ತನುಮನವ!


Leave a Reply

Back To Top