ಕವಿತೆ
ಪ್ಯಾರಿಸುತ
ಅದು ಒಂದು ದಾರಿ
ಬುದ್ಧ ಹೋಗುತ್ತಿದ್ದ ದಾರಿಯದು
ಅವನು ಎದ್ದು ಹೋದ ಸಮಯಕ್ಕೆ
ನಾನೂ ಎದ್ದು ಯಾರಿಗೂ ಹೇಳದೆ
ಹೋಗಿಬಿಟ್ಟೆ;
ಅವನಿಗೆ ಕಂಡಂತೆ ನನಗೆ ಯಾವ
ಹೆಣವಾಗಲಿ,ಮುದಿಯನಾಗಲಿ
ಯಾರೂ ಒಬ್ಬರೂ ಸಿಗಲೇ ಇಲ್ಲ
ಅಥವಾ
ನನ್ನ ಕಣ್ಣೇ ಕಾಣಲಿಲ್ಲವೋ ಗೊತ್ತಿಲ್ಲ
ನಾನು ಮಾತ್ರ ಅವನು ಸಿಗುವ
ಭರವಸೆಯ ಭರದಲ್ಲಿ ಹೆಜ್ಜೆಗಳನ್ನು
ಹಾಕುತ್ತಲೇ ಹೋಗುತ್ತಿದ್ದೆ
ನನ್ನ ಚಪ್ಪಲಿಗಳೂ ಅದೇ ಭರವಸೆಯನ್ನು
ಹುಟ್ಟು ಹಾಕಿದ್ದವು
ಒಳಗೊಳಗೆ ಬುದ್ಧನಾಗುವ ಜಂಬ
ಕಾರಂಜಿಯಂತೆ ರಂಜಿಸುತ್ತಿತ್ತು
ನಾನು ರಾಜನ ಮಗನಲ್ಲದಕ್ಕೋ,
ಗುಡಿಸಲು ಹೊರತು ಬೇರೇನೂ
ಇಲ್ಲದಕ್ಕೋ
ತಿಳಿಯಲಿಲ್ಲ ಮತ್ತೆ ಮುಂದೆ ಹೆಜ್ಜೆ ಹಾಕಿದೆ
ಕಾಡೆಲ್ಲ ಅಲೆದರೂ ಯಾವ ಪಾಪಪ್ರಜ್ಞೆಯು
ಕಾಡದಿರುವದು
ನನ್ನಲ್ಲೂ ಆಶ್ಚರ್ಯ ಉಂಟು ಮಾಡಿತ್ತು
ಅಲ್ಲಿಂದ ನೇರವಾಗಿ ಪಟ್ಟಣದ ಎದೆಯ ಮೇಲೆ
ನಡೆಯುತ್ತಿದ್ದೆ
ಗುಡಿಯ ಪಕ್ಕ ಹಸಿವಿಗಾಗಿ ಹಂಬಲಿಸುವ
ಮಾಸ್ಕು ಧರಿಸಿದ,ಕೊಳಕು ಬಟ್ಟೆಯುಟ್ಟ
ಬಲಗೈಯನ್ನು ಮುಂದೆ ಚಾಚಿರುವ
ಒಬ್ಬ ಸುಂದರ ಯುವತಿ ಕಂಡಳು
ಅವಳಲ್ಲಿ ಸೌಂದರ್ಯವಿತ್ತು,ಸಾಕ್ಷಾತ್ ಭಗವಂತನಿದ್ದ ಆದರೆ ಅದಕ್ಕಿಂತ
ಅವಳ ಹಸಿವು ಕಾಣುತ್ತಿತ್ತು
ಹಸಿವನ್ನು ನಿಗಿಸಿದ್ದರೆ ಭಗವಂತ ಹೊರಬರುತ್ತಿದ್ದನೇನೋ
ಈ ದಾರಿಯಲ್ಲಿ ನಾ ಬರುವ ಬದಲು ಬುದ್ಧನೇ
ಬರಬೇಕಿತ್ತು
ಕಾಡನ್ನು ಬಿಟ್ಟು ಪಟ್ಟಣವನ್ನೆಲ್ಲ ಸುತ್ತಬೇಕಿತ್ತು
ಅಲ್ಲಿ ಕಾಣುತ್ತಿದ್ದ ಹೆಣ,ಒಂಟಿ ಮುದಿ ಜೀವ
ಇಲ್ಲಿ ಎಲ್ಲವೂ ಬಹುವಾಗಿ ಕಾಣುತ್ತಿದ್ದವು
************************************
ತುಂಬಾ ಮಾರ್ಮಿಕವಾಗಿದೆ ಕವಿತೆ ಜಗದ ಹಸಿವಿನ ಸಂಕಟ ನೀಗಿಸುವವನೇ ಭುದ್ದ