ಕವಿತೆ
ಸುಜಾತ ಲಕ್ಷ್ಮೀಪುರ.
ಒಂದೇ ಸಮನೆ ಎಡಬಿಡದೆ
ಝಣಗುಟ್ಟುವ ಪೋನು
ಕೋಪ ನೆತ್ತಿಗೇರಿಸಿ ಸಿಟ್ಟು ಮತ್ತು ಅಳು
ಒತ್ತರಿಸಿಕೊಂಡು ಬಂದು
ಕಣ್ಣೀರಾಗಿ ಹರಿದರೂ
ಬಿಕ್ಕಳಿಕೆ ಹಾಗೇ ಉಳಿದಿದೆ.
ದಯವಿಟ್ಟು ಕರೆ ಮಾಡಬೇಡಿ
ನಾನು ಎಷ್ಟು ಬಾರಿ ಹೇಳಲಿ
ಹೌದು ನಾನು ಕರೋನಾ ಸೋಂಕಿತಳು.ಸೋಂಕಿತಳೆ.
ಮತ್ತೆ ಮತ್ತೆ ವಿಳಾಸ ಖಾತರಿ
ಆಗಬೇಕೇಕೆ!??
ಹೊರಟಿಲ್ಲಾ ಇನ್ನೂ ವಿಳಾಸವಿಲ್ಲದ ಊರಿಗೆ.
ದೇಹದ ನೋವಿಗೇನೋ
ಗುಳಿಗೆಗಳಿವೆ…
ಯಾರಾದರೂ ಕಳಿಸಿಕೊಡಿ
ವಿಳಾಸ ತಿಳಿಸುವೆ
ಸೋಂಕಿತಳೆಂಬ ಹೆಸರು ಕಿತ್ತಾಕುವ ಗುಳಿಗೆ.
ಹಾಲು,ತರಕಾರಿ,ದಿನಸಿ
ತಂದು ಕೊಡುವವರಿಲ್ಲದೆ
ಕಿಟಕಿ ಸರಳುಗಳ ಆಚೆ ಸತ್ತ ಮನಸ್ಸಿನ ಮಂದಿ ನೋಡುತ್ತಾ ಕಾಲದೂಡುತ್ತಿದ್ದೇನೆ.
ನಾನೀಗ ವೈರಾಣುವಿನ ವಿರುದ್ದ
ಗಟ್ಟಿಯಾಗಿ ನಿಂತಿದ್ದೇನೆ.
ಪದೇ ಪದೇ ಕರೆಮಾಡಿ
ಪ್ರಶ್ನಿಸಬೇಡಿ ನಿರುಮ್ಮಳವಾಗಿರಲು ಬಿಟ್ಟುಬಿಡಿ.
ಸದ್ಯಕ್ಕೆ ಇದೇ ವಿಳಾಸ..
ಸದ್ಯಕ್ಕೆ ನಾನು ಸೋಂಕಿತಳೆ
ಸದ್ಯಕ್ಕೆ ಪೋನಿಡಿ
ಕರೋನಾ ಬಂದವರೆಲ್ಲಾ ಸಾಯುವುದಿಲ್ಲಾ.
ಕೊಂಚ ಮಾನವೀಯತೆ ತೋರಬೇಡವೇ!?
ಪ್ರಶ್ನಿಸಿಕೊಳ್ಳಿ ನಿಮ್ಮನ್ನೆ.
************************************
ಸಕಾಲಿಕ- ಇಂದಿನ ದುರಂತಮಯ ಸನ್ನಿವೇಶಕ್ಕೆ ಹಿಡಿದ ಕನ್ನಡಿ
ಧನ್ಯವಾದಗಳು ಮೇಡಮ್
ವಿಭಿನ್ನ ವಿಷಯ