ಕಥೆ
ನಂದಿನಿ ವಿಶ್ವನಾಥ ಹೆದ್ದುರ್ಗ.
“ನಾಡಿದ್ದು ಒಂದು ಇಂಟರವ್ಯೂ ಮಾಡೋಕಿದೆ.ಅವರ ಫೋನ್ ನಂಬರ್ ಜೊತೆಗೆ ಉಳಿದ ಡೀಟೈಲ್ಸ್ ಕಳಿಸ್ತಿನಿ.ಪ್ಲಾಂಟೇಷನ್ ನಲ್ಲಿ ಅವರು ಮಾಡಿರೋ ಸಾಧನೆಯ ಸಣ್ಣ ವಿವರವನ್ನೂ ಕಳಿಸ್ತೀನಿ.ಡೇಟ್ ನೆನಪಿರ್ಲಿ”
ಅಂತ ಒಂದೇ ಉಸುರಿಗೆ ಹೇಳಬೇಕಾದ್ದನ್ನೆಲ್ಲಾ ಹೇಳಿ ಮುಗಿಸಿದ.
ಅವನ ಸಮಯ ಅವನಿಗೆ ಬಹಳ ಮಹತ್ವದಂತೆ.ಹಾಗಂತ ಪದೇಪದೇ ಹೇಳ್ತಾನೆ ಇರ್ತಾನೆ.
ಅದೂ ಇತ್ತೀಚಿಗೆ.
ಅವನ ಜೊತೆಗೆ ಮಾತಾಡುವಾಗ ಸ್ವರ ಆದಷ್ಟೂ ಸಹಜವಾಗಿರೋದಿಕ್ಕೆ ಪ್ರಯತ್ನಿಸ್ತೀನಿ.
ಅವನಿಗೆ ಕಾಲ್ ಮಾಡಿ ಆ ಕಡೆಯಿಂದ ಬರುವ ಮೊದಲ ಹಲೋಗೆ ಎದೆ ಮೂರು ಪಟ್ಟು ಮಿಡಿತ ಏರಿಸಿಕೊಂಡು ಕುಡಿದ ಕುದುರೆ ಥರ ಆಡೋದನ್ನ ಮುಚ್ಚಿಡ್ಲಿಕ್ಕೆ ಮಾಡೋ ಹರಸಾಹಸಕ್ಕೆ ಒಂದೊಂದು ಸರಿ ಬೇಸತ್ತು ಹೋಗಿ ಬಿಡುತ್ತೆ .
‘Okay.ಯೂ ಕ್ಯಾರಿ ಆನ್.ಇಫ್ ಯು ವಾಂಟ್ ವೆಹಿಕಲ್ ,ಐ ವಿಲ್ ಅರೆಂಜ್ ಫಾ ಇಟ್”ಅಂದ ತೀರ ಗಂಭೀರವಾಗಿ.
ಅವನ ಪತ್ರಿಕೆಗಾಗಿ ಕೆಲಸ ಮಾಡೋ ಯಾರೋ ಹತ್ತರಲ್ಲೊಬ್ಬ ವರದಿಗಾರ್ತಿಯ ಜೊತೆ ಮಾತಾಡುವಂತೆ.
ಎದುರಿಗಿದ್ದಿದ್ದರೆ ನನ್ನ ಉಗುರು ಅವನ ಕುತ್ತಿಗೆಯ ಮೇಲೆ ಮೂಡಿರ್ತಿದ್ವು.ಫೋನ್ ತೆಗೆದು ಬಿಸಾಡುವಷ್ಟು ಅಸಹನೆ ಅನಿಸ್ತು.
ನನ್ನ ಹುಡುಗ…!
ನನಗಾಗಿಯೇ ಇದ್ದವನು.
ಆ ದಿನಗಳಲ್ಲಿ ನನ್ನ ಜೊತೆಗೆ ಕಳೆಯೋ ಹತ್ತೇ ಹತ್ತು ನಿಮಿಷಕ್ಕಾಗಿ ಅವನ ಆ ಹಾತೊರೆಯುವಿಕೆ,
ನನ್ನ ಕಂಡೊಡನೆ ಬೆಳಕು ಚೆಲ್ಲುತ್ತಿದ ಅವನ ನೋಟದ ಪರಿ,ಅವನ ಇಡೀ ದೇಹ ನನ್ನ ಭೇಟಿಯನ್ನು ಸಂಭ್ರಮಿಸುತ್ತಿದ್ದದ್ದನ್ನ ನೋಡಿದಾಗೆಲ್ಲಾ ನನಗೆ ನನ್ನ ಬಗ್ಗೆ ಹೆಮ್ಮೆ ಅನಿಸ್ತಿತ್ತು.
ಅವನ ಆ ಒಲವು,ಕಾವು ,ನನಗಾಗಿ ಮೀಸಲಿಡುತ್ತಿದ್ದ ಸಮಯ ಎಲ್ಲವೂ ನನ್ನೊಳಗೆ ಉದ್ದೀಪಿಸುತ್ತಿದ್ದ ಆತ್ಮವಿಶ್ವಾಸವನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವೇ.?
ಅಂತಹ ಅವನು..??
ಹೀಗೆ…ಹೇಗೆ ಸಾಧ್ಯ.?
ಇದೇನಾಯಿತು ನಮ್ಮಿಬ್ಬರ ನಡುವೆ.?
ಎಷ್ಟು ಯೋಚಿಸಿದರೂ ಒಂದೇ ಒಂದು ಬಿರುಕು ಮೂಡುವಂತ ಘಟನೆ ನೆನಪಿಗೆ ಬರತಿಲ್ಲ.
ಅಥವಾ ನಡೆಯಲೂ ಇಲ್ಲ. ಎರಡು ವರ್ಷಗಳ ಕಾಲ ನಿತ್ಯದ ಸಂಜೆಗಳನ್ನ ನನಗಾಗಿಯೇ ಮೀಸಲಿಡುತ್ತಿದ್ದ ಅವ ನಿಧಾನವಾಗಿ ಕಾಲದ ಮಹತ್ವದ ಕುರಿತು ಭಾಷಣ ಶುರುಮಾಡಿದ.
ಮೊದಮೊದಲು ನನಗಿದಾವುದೂ ತಿಳಿಯಲೇ ಇಲ್ಲ.
ಬರುಬರುತ್ತಾ ನಿತ್ಯದ ಫೋನುಗಳು ಮೂರುದಿನಕ್ಕೋ,ವಾರಕ್ಕೋ ಬದಲಾಯಿಸಿಕೊಂಡಾಗ ನನ್ನ ದಿನಚರಿಯ ಭಾಗವೇ ಆಗಿಹೋಗಿದ್ದ ಸಂಭ್ರಮದ ಸಂಜೆಗಳಿಲ್ಲದೆ ದಿಗಿಲೆದ್ದು ಹೀಗೇಕೆ ಎಂದು ಗಾಬರಿ ಬಿದ್ದದ್ದು,ಮನೆಯಲ್ಲೇನಾದರೂ ಸಮಸ್ಯೆಯಾ ಅಂತ ದೇವರಿಗೆ ಮುಡುಪಿಟ್ಟದ್ದೆಲ್ಲ ಮುಗಿದು ನಾನೇ ಮಾತಾನಾಡಿಸುವ ಎಂದರೆ ಅವನ ಫೋನ್ ಲಾಂಗ್ ಟೈಮ್ ಎಂಗೇಜು.
ಇಂಪಾರ್ಟೆಂಟ್ ಕೆಲಸ ಇತ್ತು,ಡೆಲಿಗೇಟ್ಸ್ ಇದ್ರು,ಕಾನ್ ಕಾಲ್ ಇತ್ತು ಅಂತ ಅವ ಹೇಳುವಾಗ
‘ಛೆ.ಇದೇನು ಸಂಪಾದಕನ ಕೆಲಸ ಬಿಟ್ಟು ಯಾವುದಾದರೂ ಬಿಸಿನೆಸ್ ಶುರು ಮಾಡಿದ್ನಾ ಅಂತ ಅನುಮಾನವಾಗಿ ಕೇಳಿದ್ರೆ ”ಹಾ ಒಂದು ಪೆಯಿಂಟ್ ಏಜೆನ್ಸಿ ತಗೊಂಡಿದೀನಿ..ಶಾಪ್ ಮೊನ್ನೆ ಓಪನ್ ಆಯ್ತು..ಇಲ್ಲೇ ಥಿಯೆಟರ್ ಪ್ರಿಮಿಸಿಸ್ ನಲ್ಲೆ”
ಅಂದ..ಶಾಕ್ ಆಯ್ತು…ಫೋಟೊ ಕಳಿಸಲಿಲ್ಲ,ಕರೀಲಿಲ್ಲ ಎಂದೆ.
ತಕ್ಷಣ ಹತ್ತಿಪ್ಪತ್ತು ಫೋಟೋ ಬಂದ್ವು.
ಕಳಿಸಿದ ಫೋಟೊದಲ್ಲಿ ದೂರದವರು ಅಂದುಕೊಂಡವರೆಲ್ಲ ಇದಾರೆ.
ನಾನಿಲ್ಲ.
ಹಾಗೆ ನೋಡಿದ್ರೆ ಅವರ ತಂದೆಗೆ ನನ್ನ ಕಂಡರೆ ಅಚ್ಚುಮೆಚ್ಚು. ನನ್ನ ಸೊಸೆ ಅಂತ ರೇಗಿಸ್ತಾನೆ ಇರ್ತಾರೆ.
ಹಾಗಾದ್ರೆ ಇಲ್ಲೇನೋ ನಡೀತಿದೆ.
ಪರಿಹರಿಸಿಕೊಳ್ಳಣಾಂದ್ರೆ ಅವ ಮಾತಿಗೆ ಸಿಗೋದೇ ಇಲ್ಲ..
ಸಿಕ್ಕರೂ ಫಾರ್ಮಾಲಿಟೀಸ್ ಮಾತಿನಿಂದ ಮುಂದಕ್ಕೆ ಸಂಭಾಷಣೆ ಮುಂದುವರಿಯಲೇ ಇಲ್ಲ.
“ರವೀಂದ್ರ,ದಯವಿಟ್ಟು ಕಟ್ ಮಾಡಬೇಡ ಕಾಲ್ .ಸರಿಯಾಗಿ ಕೇಳಿಸ್ಕೊ.ನಾನು ಈ ಇಂಟರ್ ವ್ಯೂ ಮಣ್ಣು ,ಮಸಿ ಅಂತ ಎಲ್ಲ ಮಾಡ್ತಿರೋದು ಹಣಕ್ಕಾಗಿ ಹೆಸರಿಗಾಗಿ ಅಲ್ಲ .ನಿನ್ನ ಜೊತೆ ಒಂದಷ್ಟು ಸಮಯ ಕಳೆಯಬಹುದಲ್ಲಾ ಅಂತ.as usual ಒಂದಷ್ಟು ರಫ್ ಪ್ತಶ್ನೆಗಳನ್ನ ತಯಾರಿ ಮಾಡಿದ್ದೀನಿ.ಅದನ್ನ ಫೈನ್ ಮಾಡಿಕೊಂಡು ನಾಡಿದ್ದು ನನ್ನನ್ನ ಮನೆಯಿಂದ ಪಿಕ್ ಮಾಡು.ನಿನ್ನ ವೃತ ಭಂಗ ಮಾಡೋದಿಲ್ಲೋ ಮಾರಾಯಾ ಜೊತೆಗಿರಬೇಕು ಅನ್ನೋದಷ್ಟೆ ನನ್ನಾಸೆ..ಏನು.?”
ಅಂದೆ.
ಮೊದಲಾದರೆ’ಆಹಾ ನಿನ್ನ ಸ್ವರವೇ!’ ಅಂತ ಮುದ್ದುಗರೆಯುತ್ತಿದ್ದವ ‘ಸರಿ’ ಎಂದಷ್ಟೇ ಹೇಳಿದಾಗ ಪಿಚ್ಚೆನಿಸಿತು.
ಎಷ್ಟೋ ದಿನಗಳ ನಂತರ ಅವನ ಬೇಟಿ. ಸಂದರ್ಶನದ ದಿನ ಸಮಯಕ್ಕೂ ಮೊದಲೇ ತಯಾರಾಗಿ ಅವನಿಗಿಷ್ಟದ ನೀಲಿ ಬಿಂದಿಯಿಟ್ಟು
ಕಾಯುತ್ತಿದ್ದವಳ ಕಣ್ಣಿಗೆ ಬಿದ್ದದ್ದು ಆಫೀಸಿನ ಕಾರು.
ತಲೆಸುತ್ತಿ ಬಂದ ಹಾಗಾಯ್ತು.
ಹಾಗೆಲ್ಲ ನಾನು ಯೋಚಿಸಿದ ಹಾಗೆ ಇರಲಾರದು.
ಅದು ಅವನೇ ಇರಬೇಕು.
ಆಫೀಸ್ ಕಾರು ಅವನು ಬಳಸಬಾರದು ಅಂತೇನೂ ಇಲ್ಲವಲ್ಲ ಅಂತ ಮನಸಿಗೆ ಸಮಜಾಯಿಷಿ ಹೇಳಿಕ್ಕೊಳ್ಳುವಾಗಲೇ ಡ್ರೈವರ್ ಬಂದು’ಸರ್ ಹೇಳಿದ್ರು..ಅವರಿಗೆ ಬರೋದಿಕ್ಕೆ ಆಗಲ್ವಂತೆ.ನಿಮ್ ಫೋನು ಕನೆಕ್ಟ್ ಆಗ್ತಿಲ್ವಂತೆ..ತೋಟದ ಮಾಲೀಕರಿಗೆ ಫೋನ್ ಮಾಡಿದಾರೆ.ಬನ್ನಿಮೇಡಮ್ ‘ಅಂದ.
ಇದೇನಾಗ್ತಿದೆ ನನ್ನ ಜೀವನದಲ್ಲಿ.!
ನನ್ನ ಹುಚ್ಚು ಹತ್ತಿಸಿಕೊಂಡು ಕಾದುಕಾದು ಕರಗಿ ಹೋಗ್ತಿದ್ದವ ನನ್ನನ್ನುಅವಾಯ್ಡ್ ಮಾಡ್ತಿದ್ದಾನೆ.!
ಕಾರಣ..??
ಇವತ್ತೇ.ಇದೇ ಕೊನೆ.ಮತ್ತೆಂದೂ ಫೋನ್ ಅಥವಾ ಮೆಸೇಜ್ ಮಾಡಲಾರೆ ಅವನಿಗೆ.
ಆದರೆ.?
ಹೀಗಂತ ಎಷ್ಟು ದಿವಸ ಅಂದುಕೊಂಡಿಲ್ಲ ನಾನು.?
ಬೆಳಗಾಗುವಷ್ಟರಲ್ಲಿ ನಿರ್ಧಾರ ಬದಲಾಗಿ ಇನ್ನೊಮ್ಮೆ.. ಒಮ್ಮೆ.. ಪ್ರಯತ್ನಿಸಬಹುದಲ್ಲಾ ಅನಿಸಿ ಮರಳಿ ಯತ್ನವ ಮಾಡಿದಾಗೆಲ್ಲಾ
ಮತ್ತದೆ ಉಡಾಫೆ ಉತ್ತರ.
ಅದೂ ಗಂಟೆ ಕಳೆದ ಮೇಲೆ.
” ಹಿ ಈಸ್ ಆನ್ಲೈನ್.ಬಟ್ ನಾಟ್ ಫಾರ್ ಯೂ”
ಅಂತ ಬೇರೆ ಸ್ಟೇಟಸ್ ಹಾಕಿದಾನೆ..
ನಾ ಈ ಮಟ್ಟಿಗೆ ಹಚ್ಚಿಕೊಳ್ಳೊ ಮುನ್ನ ಯೋಚಿಸಬೇಕಿತ್ತಾ..?
ಆದರೆ ಅಳೆದು ಸುರಿದು ಮುಂದುವರೆಯಲು ಇದು ಭಾವಕೋಶದ ಮಾತು .
ಯಾಕೆ ಅವನಿಗಾಗಿ ಅಳ್ತಿದ್ದೀನಿ ನಾನು.?
ಅದೂ ಈ ಮಟ್ಟಿಗೆ.?
ಒಲಿಯುವವರೆಗೆ ನಡುರಾತ್ರಿ ತನಕ ನೋವು ಪ್ರಲಾಪಗಳ ಕವಿತೆ ಹಾಡಿದ್ದೇ ಹಾಡಿದ್ದು.
ಛೀ ಅನಿಸುತ್ತೆ ಈಗ ಯೋಚಿಸಿದ್ರೆ.
ಅತ್ತುಮುಗಿದ ಮೇಲೆ ಯೋಚಿಸುತ್ತೇನೆ.?
ಯೋಗ್ಯತೆ ಇಲ್ಲದವನಿಗಾಗಿ ನನ್ನ ಕಣ್ಣೀರೇ.?
ಈಗಿಂದೀಗಲೇ ಅವನನ್ನು ನನ್ನ ಮನಸಿಂದ ತೆಗೆದು ಹಾಕ್ತೀನಿ.
ಹೀಗಂತ
ಪದೇಪದೇ ಹೇಳಿಕೊಂಡಿದ್ದೂ ಆಯ್ತು.
ಚಕ್ಕಳಮಕ್ಕಳ ಹಾಕಿ ಕೂತುಬಿಟ್ಟಿದ್ದಾನೆ.
ಇಲ್ಲಿ..
ಈ ಎದೆಯೊಳಗೆ.
ಹೊರಗೆ ಕಳಿಸೋದು ಅಷ್ಟು ಸುಲಭವಲ್ಲ.
‘ರವೀ…ನಿನ್ನ ಹೆಸರಿಗೆ ಅಂಟಿರುವ ಇಂದ್ರನ ಕುರಿತು ನಂಗೆ ಮೊದಲಿಂದಲೂ ಅನುಮಾನ ಇದೆ’.
ಅಂತಿದ್ದೆ ನಾನು ಆಗಾಗ.
ಹಾಗಂದಾಗೆಲ್ಲಾ ‘ ನನ್ನ ಪ್ರೇಮಕ್ಕೆ ,ಪಟ್ಟಕ್ಕೆ ಚಾರುದೇವಿಯೊಬ್ಬರೆ ರಾಣಿ ‘
ಅಂದಮಾತಿಗೆ ಆಕಾಶಕ್ಕೆ ತಲೆ ಹೊಡಿಸಿಕೊಂಡು ಪೆಟ್ಟಾದ ಹಾಗೆ.
ಮತ್ತೆ ಹಳೆ ನೆನಪುಗಳೆ.
ಇವತ್ತು..ಇವತ್ತೇ ಕೊನೆ ಬಾರಿ.
ಇನ್ನೆಂದೂ ನಿನಗೆ ಫೋನ್ ಮಾಡಲಿಕ್ಕೆ ಮೆಸೇಜಿಗೆ ಪ್ರಯತ್ನಿಸೊಲ್ಲ.ಇದೊಂದು ಪರೀಕ್ಷೆ ನಡೆದೇ ಹೋಗಲಿ.
“ರವಿ.ಮುಂದಿನ ಭಾನುವಾರ ಮಂಡ್ಯಕ್ಕೆ ಹೋಗ್ತಿದ್ದೀನಿ.
ಮೈಸೂರಿನಿಂದ ಗೆಳತಿ ಪಿಕ್ ಮಾಡ್ತಾಳೆ.
ಲಗೇಜಿದೆ.ಬಸ್ಸು ಪ್ರಯಾಣ “
ಅಂತ ಟೈಪಿಸಿ ಸೆಂಡ್ಒತ್ತಿದೆ.
ಬಿದ್ದೇ ಹೋಗುವ ಎದೆಯ ಹಿಡಿದು ಅರ್ದ ಗಂಟೆ ಕಾಯ್ದ ಮೇಲೆ ಓಕೆ ಅಂತ ಮೆಸೇಜು ಬಂತು.
ಇಷ್ಟೇನಾ..?
ದೂರ ಹೋಗುವಾಗ ಹೇಳು. ಒಟ್ಟಿಗೆ ಪ್ರಯಾಣ ಮಾಡೋಣ.
ನಿನ್ನ ಪ್ರಭಾವಳಿಯೊಳಗೆ ಸ್ವಲ್ಪ ಹೊತ್ತು ಇದ್ದ ಖುಷಿ ನನದಾಗುವ ಸಂಭ್ರಮವನ್ನು ಕೊಡೆ ಅಂತ ಗೋಗರೆಯುತ್ತಿದ್ದವ ಇವನೇನಾ.?
ಇಲ್ಲ..
ಏನೋ ವ್ಯತ್ಯಾಸ ಆಗ್ತಿದೆ.ಅವನು ಮಾಡಿರಲಾರ ಮೆಸೇಜು..
ಒಪ್ಪಲಿಲ್ಲ ವಾಸ್ತವವನ್ನು ಮನಸ್ಸು.
ಅನುಮಾನ,
ಬೇರೆಯವರ ಬಳಿಯಲ್ಲಿ ಫೋನಿದ್ದರೆ..?
ಕಾಲ್ ಒತ್ತಿದೆ..ಅವನದ್ದೇ ಧ್ವನಿ.ಕೇಳಿದೊಡನೆ ಕುಣಿಯೋ ನವಿಲಾಗೋ ಈ ಹಾಳು ಜನ್ಮ ಸಾಕು ಇನ್ನು.
ಘನ ಗಂಭೀರವಾಗಿ ‘ಬಿಡುವಿದೆಯಾ’.ಎಂದೆ.
‘ಹಾ ಹೇಳು.’
‘ಮಂಡ್ಯಕ್ಕೆ ಹೊರಟಿದ್ದೀನಿ’
ಮುಗಿದೇ ಇಲ್ಲ ಮಾತು.
‘ಸರಿಯಾಗಿ ಒಂಬತ್ತೂ ಕಾಲಿಗೆ ಮಾಡ್ತೀನಿ.
ಪ್ಲೀಸ್ ಬಿಟ್ ಬ್ಯುಸಿ’
ಕರೆ ಕತ್ತರಿಸಿದ ಫೋನು ಹಿಡಿದವಳ ಮನಸಿಗೆ ಅವನ ಧ್ವನಿಯಲ್ಲಿ ಪ್ರಾಮಾಣಿಕತೆ ಇದೆ ಅನಿಸಿತೊ ಅಥವಾ ಈ ಸಂದರ್ಭಕ್ಕೆ ನಂಗೆ ಹಾಗೆ ಅನಿಸ್ತಿದೆಯಾ ತಿಳಿಲಿಲ್ಲ.
ಒಂಬತ್ತು ಮುಗಿದ ಮೇಲಿನ ಒಂದೊಂದು ನಿಮಿಷವೂ ಆ ಮಟ್ಟಿಗೆ ದೀರ್ಘ ಎನಿಸಿದ್ದು ಅದೇ ಮೊದಲು..
ಗಡಿಯಾರದ ಶೆಲ್ ಸರಿಗಿದೆಯಾ…ಚೆಕ್ ಮಾಡಬೇಕಿತ್ತು..
ಛೆ..ಫೋನ್ ನೆಟ್ವರ್ಕ್ ಲಿ ಇದೆಯಾ ಇಲ್ಲವೇ ಅಂತ ಚೆಕ್ ಮಾಡಿ…
9.15ಆಯ್ತು.ಓ ಮೈ ಗಾಡ್.
ಇವನು…!!
ಇವನು ಅವಾಯ್ಡ್ ಮಾಡ್ತಿದ್ದಾನೆ ನನ್ನ.!
ಆನ್ ಲೈನ್ ಚೆಕ್ ಮಾಡಿದ್ರೆ ಮುಕ್ಕಾಲು ಗಂಟೆ ಹಿಂದೆ ಲಾಸ್ಟ್ ಸೀನ್ ಇದೆ.
‘ಹೈ ‘ಕಳಿಸಿದೆ.
ಸಿಂಗಲ್ ರೈಟುಮಾರ್ಕು.
ಅಂದರೆ.
ಅಂದರೆ ಬೇರೆಯವರ ಜೊತೆಗೆ ಸಂಭಾಷಣೆ ನಡೀತಿದೆ.ಮಾತಾಡುವಾಗ ಅವ ನೆಟ್ ಆಫ್ ಇಡೋದು ಗೊತ್ತಿರೊ ವಿಚಾರವೇ.
ಹೀಗೇಕಾಯ್ತು.
ಸಂಬಂಧದಲ್ಲಿ ಏನೊಂದು ಇಲ್ಲದೆ ಹೀಗೆ ದೂರಾಗಲು
ಸಾಧ್ಯವೇ?
ನನ್ನ ಪ್ರೀತಿಯಲ್ಲಿ ಇದ್ದ ಕೊರತೆಯಾದರೂ ಏನು?
ಛೆ.ಅಲ್ಲದ್ದನ್ನೇ ಯೋಚಿಸ್ತೀನಿ.
ಅಂತವನಲ್ಲ ಅವ.
ಕ್ಷಣ ನಿರಾಳವಾದರೂ ಮತ್ತೆ ಎದೆಯೊಳಗೆ ಅನಂತವಾಗುತ್ತಿದ್ದ ನೋವು.
ರಾತ್ರಿ ಹನ್ನೊಂದು ಕಾಲಿಗೆ ಸರಿಯಾಗಿ
ಅವನಿಂದ ಮೆಸೇಜು ಬಂತು.
ಜೊತೆಗೆ ಅನ್ಲೈನಿಗೂ ಬಂದ
‘ಸಾರಿ..ಆಗಲಿಲ್ಲ.ಕಾಲ್ ಮಾಡೋದಿಕ್ಕೆ.
ಫಾರ್ ಮಂಡ್ಯ,
ಯೂ ಪ್ಲೀಸ್ ಕ್ಯಾರಿ ಆನ್.
ಹ್ಯಾವ್ ಎ ನೈಸ್ ಟೈಮ್.ಬೈ.’
ಗಳಗಳನೆ ಅಳಬಹುದಾದ ಮಾತುಗಳು.
ಆದರೆ…ಹೇಗೋ ಈ ಎದೆ ಗಟ್ಟಿಯಾಗಿದೆ.!
ಒಂದೇ ಒಂದು ತೊಟ್ಟು ಕಣ್ಣೀರು ಬರಲಿಲ್ಲ .
ಕಳೆದುಕೊಂಡಿದ್ದ ಆತ್ಮವಿಶ್ವಾಸವನ್ನೆಲ್ಲಾ ತುಸು ಹೊತ್ತು ಧ್ಯಾನಿಸಿ ಆವಾಹಿಸಿಕೊಂಡೆ.
ಮತ್ತೆಂದೂ.
ಎಂದೆಂದೂ ಅವನಿಗಾಗಿ ಕಾಯಲಾರೆ.
ತಿರುಗಿ ಬಂದರೆ ಸ್ವೀಕರಿಸಲಾರೆ.
ಮುಂದೆ ಯಾರಿಗಾಗಿಯೂ ಕಾಯಲಾರೆ.!
ಕನ್ನಡಿ ನೋಡಿಕೊಂಡೆ.
ಹಣೆಯ ನೆರಿಗೆಗಳೆಲ್ಲ ಸಡಿಲಾಗಿ ಮುಖ ಪ್ರಸನ್ನವಾಗಿತ್ತು.
ನೆಮ್ಮದಿಯ ಒಂದು ಕಿರುನಗು ತುಟಿಯ ಮೇಲೆ.
ಎಂದೂ ನಿದ್ರಿಸದ ರೀತಿಯಲ್ಲಿ ಆ ರಾತ್ರಿ ಮಲಗಿ ನಿದ್ರಿಸಿದೆ.
—–
ಸುದೀರ್ಘವಾದ ನಿಟ್ಟುಸಿರಿನೊಂದಿಗೆ ಮಾತು ಮುಗಿಸಿ ಅವಳು ನನ್ನ ಮುಖ ನೋಡಿದಳು.
ಯಾಕೋ ಅಪ್ಪಿಕೊಳ್ಳಬೇಕು ಅನಿಸಿತು.
ಸಮಾನ ದುಃಖಿಗಳು.
ಇದೇ ಕಥೆ ನನ್ನ ಜೀವನದಲ್ಲಿ.
ಎರಡು ವರ್ಷ ಮೊದಲು.
ಆಗ ನನ್ನ ತಪ್ಪಿಸಿ ಮಾತಿಗೆ ತೊಡಗಿದ್ದು ಅವ ಇವಳ ಜೊತೆ..
ಈಗ …!!!
ಹೆಸರು ಗೊತ್ತಿಲ್ಲ..
ಯಾವುದೋ ಹೆಣ್ಣು ಎದೆ…
ಮೊಹರೊತ್ತಿಕೊಂಡಿದೆ ಇವನ ಹೆಸರನ್ನ.!
ಮತ್ತದೇ ನೋವಿನ ಪ್ರಲಾಪಗಳ ಹಾಡು ಹೇಳ್ತಿರಬಹುದು.
ನಡುರಾತ್ರಿವರೆಗೆ..!!
ಹೆಣ್ಣು ಜನ್ಮ..’ಅಯ್ಯೋ’ ಅನ್ನೋದು ಜನ್ಮ ಸಿದ್ಧ.!
ಎಲ್ಲ ಹೇಳಿ ಹಗುರಾಗಿ
ಹೊಸದಾಗಿ ಹೊಳೆಯುತ್ತಿದ್ದ ಅವಳ ಅಕ್ಕರೆಯಲಿ
ಕರೆದು ಒಂದು ಸಣ್ಣ ವಾಕಿಂಗ್ ಹೋಗಲಿಕ್ಕೆ ಹೊರಟೆ.
ಅವಳೂ ಅಡ್ಡಿಯಿಲ್ಲದೆ ಎದ್ದಳು.
**********************
ಕವಿತೆಯಂತ ಕತೆ, chendide ನಂದಿನಿ
ಈ ತಳಮಳದ ಕಥೆ ಇಷ್ಟವಾಯಿತು
ಹೊಟ್ಟೆ ಕಿಚ್ಛಾಗುವಷ್ಟು ಚೆನ್ನಾಗಿ ಬರಿತೀರಿ