ಬೊಗಸೆಯೊಡ್ಡುವ

ಕವಿತೆ

ಗೋಪಾಲ ತ್ರಾಸಿ

ಅಹೋರಾತ್ರಿ
ಬಾನು ಭುವಿಯ ನಡುವೆ ಚಲನಶೀಲ ಶಿಖರ
ದಂದದಿ ಉದ್ದಾನುದ್ದಕೆ
ರಾಶಿರಾಶಿ ಮೋಡಗಳ ಜಂಬೂಸವಾರಿ,
ಕಾರಿರುಳ ದಿಬ್ಬಣಕೆ,ಅಲ್ಲೊಂದು ಇಲ್ಲೊಂದು
ಅಂಜುತ್ತಂಜುತ್ತ ಇಣುಕುವ
ಮಿಣುಕು ನಕ್ಷತ್ರಗಳು, ಸಾಕ್ಷಿ.

ಮೈಭಾರವಿಳಿಸಿಕೊಳ್ಳಲೇನೊ, ತಾನೇ
ತಾನು ಮೈತುಂಬ ಕನ್ನಕೊರೆದು
ನಸುಕಿನಿಂದಲೆ, ಧಸಧಸ ಸುರಿದುಕೊಂಡ
ಮೋಡ;
ರ್ರೊಯ್ಯನೆ ಹೊಯಿಲೆಬ್ಬಿಸುವ ಗಾಳಿಗೌಜು,
ಧಡಾಂಧುಡೂಂ, ಛಟ್ ಛಟ್ ಛಟೀಲ್
ಗುಡುಗು ಮಿಂಚಿನ ಜುಗಲ್ಬಂಧಿ
ಏರುಮಧ್ಯಾಹ್ನವೇ ಸಂಜೆಗತ್ತಲ ಭ್ರಾಂತಿ;
ಹೊರಗೆ.

ಆಯಾಸದಿಂದ ಕಿಟಕಿಬಾಗಿಲು ಸಂದಿತೂರಿ
ಸುಯ್ಯನೆ ಒಳಸುಳಿದು
ಅಪ್ಯಾಯಮಾನವಾಗಿ ಕಚಗುಳಿಯಿಡುವ
ಒದ್ದೆಗಾಳಿ
ಗರಿಗರಿಯಾಗಿ ಮೈಮನಸ್ಸು ಬೆಚ್ಚಗೆ
ಗರಿಗೆದರಬೇಕಿತ್ತು ; ಒಳಗೆ.

      ***

ಮಾಗಿಯ ಚುಮುಚುಮು ಚಳಿ
ಯ ಜೊತೆ ಅನಾಯಾಸ ಬೆವರಿಳಿಸುವ
ನಿರ್ಜೀವ ಜಡ ಜಂತು
ಭೂಮ್ಯಾಕಾಶ ಬಾಹು ಚಾಚಿ
ಕೊಳ್ಳುತ್ತಲೆ, ಎಲ್ಲೋ ಕ್ಷಿತಿಜದಂಚಿಂದ
ದಿಢೀರನೆ, ಹೊಸ್ತಿಲಲಿ ಹೊಂಚು !

ಹೊರಟೇ ಹೋಯಿತೆನ್ನಿ
ಬಂದಂತೆ ವೈಶಾಖ, ಪೆಚ್ಚುಮೋರೆ ಹಾಕಿ
ಅಟ್ಟಕ್ಕೇರಿದ ಹರ್ಷೋಲ್ಲಾಸ
ವರ್ಷಾಕಾಲಿಟ್ಟರೂ ಮಿಸುಕಾಡಲಿಲ್ಲ
ರಾಹು ಬಡಿದಂತೆ ಮಂಕು ಸಮಯ !

ರೆಕ್ಕೆ ಪುಕ್ಕ ತೊಯ್ದು
ಹಿಂಜಿ ಹಿಂಡಿ ಇನ್ನಿಲ್ಲವೆಂಬಂತೆ
ಮುದುಡಿ ಹಿಡಿಯಾದ ತೈನಾತಿ ದಿನಚರಿ
ಪಿಳಿಪಿಳಿಗಣ್ಣು ನಿಸ್ತೇಜ ಪಾಪೆ
ತೆರೆಗಣ್ಣಲಿ ಮೂರ್ಛೆ ಹೋದ
ಮಾನವನಹಮಿಕೆ
ಅಳಿದುಳಿದ ಅಂತ:ಸ್ಥೈರ್ಯ
ಮಂಡಿಯೂರಲೂ ಘನಕಾರಣವಿರಬೇಕು;
ಇರಲಂತೆ, ಇರುವಂತೆ.

ತೊಯ್ಯಲಾಗದ ಮೃದುಲ ಮನಸ್ಸಿನ
ವಿಭ್ರಾಂತಿ
ನಿಮ್ನೋನ್ನತ ಹಾದಿಗುಂಟ ತಲ್ಲಣ
ಗಳ ಸಂತೈಸುತ್ತಲೇ ಪಾರಾಗಬೇಕಿನ್ನು
ಸಕಲ ಪೀಡಾವಿನಾಶಕ ವಿಪ್ಲವಕ್ಕೆ
ಗದ್ಗದಿತ ಮೋಡ ತೊಟ್ಟಿಕ್ಕುವ ಆ ಕೊನೇಯ
ಸಂಜೀವಿನಿ ಹನಿಗೆ
ಭೊಗಸೆಯೊಡ್ಡುವ ಆವೊಂದು
ತಂಪು ಬೆಳಕಿನ ಬೆಳಗಿಗೆ…

14 thoughts on “ಬೊಗಸೆಯೊಡ್ಡುವ

  1. ಕೊನೆಯ ಸಂಜೀವಿನಿ ಹನಿ….! ಕವಿತೆಯ ಆಶಯ ಬಹಳ ಚೆನ್ನಾಗಿದೆ…

  2. ಸಾಂದರ್ಭಿಕ ಸನ್ನಿವೇಷವನ್ನು
    ನಿಸರ್ಗ ಮತ್ತು ಬದುಕು ಮೂಲಕ ವಿವೇಚಿಸಿದೆ.

  3. ಕಾವ್ಯಪ್ರಿಯರು, ಕವಿ, ಕವಿಮನದವರ ಪ್ರತಿಕ್ರಿಯೆಗೆ ಧನ್ಯವಾದಗಳು …. Tonns of thanks…

  4. ಬ್ಯೂಟಿಫುಲ್ ಶ್ರೀಮಾನ್ಜಿ ಗೋಪಾಲ್. God bless you sir.

  5. ತುಂಬಾ ಚೆಲುವಾಗಿ ರೆ; ಹೃದಯದಲ್ಲುಳಿದಿದೆ, ತ್ರಾಸೀ!

  6. ತ್ರಾಸಿಯವರೇ… ಸುಂದರ ರಚನೆ…. ಸಂಜೀವಿನಿ ಹನಿಗೆ ಬೊಗಸೆಯೊಡ್ಡುವ…. ಚಿತ್ರಣ… ಬಹುಶ : ಇಂದಿನ ಸ್ಥಿತಿಗೆ ಪೂಬಹು ಅಗತ್ಯ ಎನಿಸುತ್ತದೆ.

  7. ತ್ರಾಸಿಯವರೇ… ಸುಂದರ ರಚನೆ…. ಸಂಜೀವಿನಿ ಹನಿಗೆ ಬೊಗಸೆಯೊಡ್ಡುವ…. ಚಿತ್ರಣ… ಬಹುಶ : ಇಂದಿನ ಸ್ಥಿತಿಗೆ ಬಹು ಅಗತ್ಯ ಎನಿಸುತ್ತದೆ.

Leave a Reply

Back To Top