ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ಕಳೆದ ಹಲವಾರು ದಶಕಗಳಿಂದ ಭಾರತ ದೇಶದಲ್ಲಿ ದಯಾಮರಣ ಎಂಬ ಕಾನೂನನ್ನು ಜಾರಿಗೆ ತರಲು ಒತ್ತಾಯಿಸಲಾಗುತ್ತಿತ್ತು. ಇದೀಗ ಆ ಕಾನೂನನ್ನು ಕೆಲ ನಿರ್ದಿಷ್ಟ ನಿರ್ದೇಶನಗಳೊಂದಿಗೆ ಆದೇಶ ಮಾಡಲಾಗಿದೆ.

ಏನಿದು ದಯಾ ಮರಣ? ವ್ಯಕ್ತಿಯು ಬದುಕಿದ್ದಾಗಲೇ ಆತನ ದೇಹದ ಎಲ್ಲಾ ಅಂಗಗಳು ನಿಷ್ಕ್ರಿಯಗೊಂಡು ಮುಂದೆ ಆತ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಆತನನ್ನು ಜೋಪಾನ ಮಾಡುವವರು ಅಸಹಾಯಕತೆಯಿಂದ ಕೈ ಚೆಲ್ಲಿದಾಗ, ಇನ್ನೆಂದೂ ಆತ ವಾಸಿ ಹೊಂದುವುದಿಲ್ಲ ಎಂಬ ಪರಿಸ್ಥಿತಿಯಲ್ಲಿ ಔಷಧಿ ಇಲ್ಲವೇ ಇಂಜೆಕ್ಷನ್ ನೀಡುವ ಮೂಲಕ ಆತನಿಗೆ ಮರಣವನ್ನು ದಯಪಾಲಿಸುವ ಕಾನೂನಾತ್ಮಕ ಒಪ್ಪಿಗೆಯನ್ನು ದಯಾ ಮರಣ ಎಂದು ಹೇಳಬಹುದು.

 ಈ ಹಿಂದೆ ಸಾಕಷ್ಟು ಬಾರಿ ಬಹಳಷ್ಟು ಜನ ತಮ್ಮ ಆರೋಗ್ಯ ಸಮಸ್ಯೆಗಳಿಂದ ಬೇಸತ್ತು ಇನ್ನೆಂದೂ ವಾಸಿಯಾಗದ ಕಾಯಿಲೆಗಳಿಂದ ನೊಂದು ದಯಾ ಮರಣಕ್ಕೆ ಅರ್ಜಿ ಹಾಕಿ ರಾಷ್ಟ್ರಪತಿಗಳವರೆಗೆ ಪತ್ರಗಳು ಹೋಗಿದ್ದ ಪ್ರಕರಣಗಳು ಉಂಟು… ಆದರೆ ಭಾರತದ ಜೀವಪರ ಸಂಘಟನೆಗಳು ಈ ದಯಾಮರಣ ಪ್ರಕ್ರಿಯೆಯ ವಿರುದ್ಧ ಹೋರಾಟವನ್ನು ಆರಂಭಿಸಿತ್ತು. ಗೊತ್ತಿದ್ದು ಕೂಡ ಯಾವುದೇ ಒಂದು ಜೀವಿಯ ಬದುಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ ಎಂಬುದು ಅವರ ವಾದವಾಗಿತ್ತು…. ಇದು ನಿಜ ಕೂಡ.
ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಕನಸುಗಳನ್ನು ಹೊತ್ತು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅರುಣ ಶಾಮ್ ಭಾಗ್ ಎಂಬ  ಯುವತಿ ಮುಂಬೈಯ ಕೆ ಎಂ ಆಸ್ಪತ್ರೆಗೆ ನರ್ಸ್ ಆಗಿ ಕೆಲಸಕ್ಕೆ ಸೇರಿದಳು.1973ರ ನವಂಬರ್ 27 ರಂದು ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರುಣಾಳನ್ನು ವಾರ್ಡ್ ಬಾಯ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೋಹನ್ ಲಾಲ್ ಭಾರ್ತಾ ಎಂಬ ಯುವಕ ಅತ್ಯಾಚಾರ ಮಾಡಲು ಪ್ರಯತ್ನಿಸಿ ಪ್ರತಿರೋಧಿಸಿದ ಆಕೆಯ ಕೊರಳಿಗೆ ಕಬ್ಬಿಣದ ಸರಪಳಿಯಿಂದ ಬಿಗಿದ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ. ಕುತ್ತಿಗೆಗೆ ಬಿಗಿದ ಸರಳಿನಿಂದಾಗಿ ಆಕೆಯ ಮೆದುಳಿಗೆ ಸಂಪರ್ಕ ತಪ್ಪಿ ಆಕೆ ಕೋಮಾಕ್ಕೆ ಜಾರಿದಳು. ಆಸ್ಪತ್ರೆಯ ವೈದ್ಯರ ಸಿಬ್ಬಂದಿಗಳ ಅವಿರತ ಪ್ರಯತ್ನದ ಹೊರತಾಗಿಯೂ ಕೂಡ ಆಕೆ ಚೇತರಿಸಿಕೊಳ್ಳಲಿಲ್ಲ. ಕುಟುಂಬದವರು ಕೂಡ ಹಿಂದೆ ಸರಿದರು.1980 ರಲ್ಲಿ ಆಕೆಯನ್ನು ಆಸ್ಪತ್ರೆಯಿಂದ ಹೊರ ಹಾಕುವ ಪ್ರಯತ್ನವನ್ನು ಮುಂಬೈ ಮಹಾನಗರ ಪಾಲಿಕೆ ಮಾಡಿದರೂ ಅದರ ವಿರುದ್ಧ ಉಗ್ರವಾಗಿ ಧ್ವನಿಯೆತ್ತಿದ ಆಸ್ಪತ್ರೆಯ ನರ್ಸ್ ಗಳ ದೆಸೆಯಿಂದಾಗಿ ಆ ಕಾರ್ಯ ಸ್ಥಗಿತವಾಯಿತು. ಆಸ್ಪತ್ರೆಯ ಒಂದು ಕೋಣೆಯಲ್ಲಿ ಸರಿ ಸುಮಾರು 42 ವರ್ಷಗಳ ಕಾಲ ಆಕೆಯನ್ನು ಮಗುವಿನಂತೆ ಅಲ್ಲಿಯ ನರ್ಸ್ ಗಳು ಜೋಪಾನ ಮಾಡಿದರು.

 ಆಕೆಯ ಪರಿಸ್ಥಿತಿಯನ್ನು ಕಂಡು ಕೇಳಿ ನೊಂದ ಪಿಂಕಿ ವಿರಾನಿ ಎಂಬ ವಕೀಲರು ಆಕೆಗೆ ದಯಾಮರಣವನ್ನು ನೀಡಬೇಕಾಗಿ ನ್ಯಾಯಾಲಯದ ಮೊರೆ ಹೋದರು. ಆದರೆ ಹಲವಾರು ಪರ ವಿರೋಧಗಳ ಕಾರಣಕ್ಕೆ ದಯಾಮರಣದ ವಿಷಯ ಜನರ ಗಮನವನ್ನು ಸೆಳೆದಿತ್ತು. ಸುಮಾರು 42 ವರ್ಷಗಳ ಕಾಲ ಕೋಮಾದಲ್ಲಿಯೇ ಇದ್ದ ಅರುಣ 2015ರಲ್ಲಿ ನ್ಯೂಮೋನಿಯಾಗೆ ತುತ್ತಾಗಿ ಸಹಜ ಸಾವನ್ನು ಅಪ್ಪಿದರು

ಇದೀಗ ಮತ್ತೆ ದಯಾಮರಣದ ಕುರಿತ ವಿಷಯ ಮುನ್ನೆಲೆಗೆ ಬರಲು ಕಾರಣವಾಗಿದ್ದು ಹಾಗೂ ದಯಾಮರಣವನ್ನು ಕಾನೂನು ಬದ್ಧವಾಗಿ ನೀಡಲು ಮುಂದಾಗಿದ್ದು ಕಳೆದ 13 ವರ್ಷಗಳಿಂದ ಕೋಮದಲ್ಲಿದ್ದು ಮುಂದಿನ ದಿನಮಾನಗಳಲ್ಲಿಯೂ ಕೂಡ ಆರೋಗ್ಯದಲ್ಲಿ ಚೇತರಿಕೆ ಕಾಣುವ ಯಾವುದೇ ಲಕ್ಷಣಗಳು ಇಲ್ಲದ ಕಾರಣ ದೆಹಲಿಯ ಸುಪ್ರೀಂ ಕೋರ್ಟ್ ಅವರಿಗೆ ದಯಾಮರಣವನ್ನು ನೀಡಲು ಒಪ್ಪಿಕೊಂಡಿದ್ದು ಈಗಾಗಲೇ ಎಲ್ಲಾ ಪ್ರಕ್ರಿಯೆಗಳು ಆರಂಭವಾಗಿವೆ.

.ಮೂಲತಃ ದೆಹಲಿಯವರಾದ ಹರೀಶ್ ರಾಣಾ ಅವರು ಚಂಡಿಗಡದ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಓದುತ್ತಿದ್ದರು. 2013 ಆಗಸ್ಟ್ 20ರಂದು ರಕ್ಷಾಬಂಧನದ ದಿನ ಆಕಸ್ಮಿಕವಾಗಿ ತಾವು ಉಳಿದುಕೊಂಡಿದ್ದ ಹಾಸ್ಟೆಲ್ನ ವಸತಿಗೃಹದ ನಾಲ್ಕನೇ ಮಹಡಿಯಿಂದ ನೆಲಕ್ಕೆ ಬಿದ್ದ ಅವರ ದೇಹದ ಎಲ್ಲ ಭಾಗಗಳು ನಿಷ್ಕ್ರಿಯಗೊಂಡಿದ್ದು ಕಳೆದ 13 ವರ್ಷಗಳಿಂದ ಅವರು ಹಾಸಿಗೆಯಲ್ಲಿಯೇ ಇದ್ದಾರೆ. ಮುಂದೆ ಯಾವುದೇ ಚೇತರಿಕೆಯನ್ನು ಕಾಣುವ ಅವಕಾಶವೇ ಇಲ್ಲದ ಅವರ ಪರಿಸ್ಥಿತಿಯನ್ನು ಕಂಡ ಅವರ ಪಾಲಕರು ಹಲವಾರು ವೈದ್ಯಕೀಯ ಮಂಡಳಿಗಳ ದಾಖಲೆಗಳನ್ನು ಹೊತ್ತು ತಮ್ಮ ಮಗನಿಗೆ ದಯಾಮರಣವನ್ನು ದಯಪಾಲಿಸುವ ಅನುಮತಿ ನೀಡಿ ಎಂದು ಸುಪ್ರೀಂಕೋರ್ಟ್ನ ಮೊರೆ ಹೋಗಿದ್ದರು.

 ಹಲವಾರು ಪರಿಶೀಲನೆಗಳ ನಂತರ ಅಂತಿಮವಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಜೆಪಿ ಪರ್ದಿ ವಾಲಾ ಮತ್ತು ಕೆ ವಿ ವಿಶ್ವನಾಥನ್ ಅವರು ಕುಟುಂಬದ ಒಪ್ಪಿಗೆ ಹಾಗೂ ವೈದ್ಯಕೀಯ ಮಂಡಳಿಗಳ ವರದಿಯನ್ನು ಆಧರಿಸಿ ಮೊನ್ನೆ ಮಾರ್ಚ್ 11, 2026 ರಂದು ಸಂಪೂರ್ಣ ಜೀವಚ್ಚವವಾಗಿರುವ ಹರೀಶ್ ರಾಣಾ ಅವರಿಗೆ ನಿಷ್ಕ್ರಿಯ ದಯಾ ಮರಣ ನೀಡಲು ರಾಷ್ಟ್ರ ರಾಜಧಾನಿ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರಿಗೆ ಆದೇಶ ನೀಡಿದ್ದಾರೆ.

 ಈಗಾಗಲೇ ಕೋರ್ಟ್ ಆದೇಶದಂತೆ ಮೊದಲ ಪ್ರಕ್ರಿಯೆ ಆರಂಭವಾಗಿದ್ದು ಅವರಿಗೆ ಬಾಹ್ಯವಾಗಿ ಆಹಾರವನ್ನು ಸೇವಿಸಲು ಬಾಯಿಗೆ ಹಾಕಿರುವ ನಳಿಕೆಗಳನ್ನು ತೆಗೆದು ಹಾಕಿದ್ದು ಹಾಗೂ ದೇಹಕ್ಕೆ ಅಳವಡಿಸಲ್ಪಟ್ಟ ವಿಸರ್ಜನಾ ವ್ಯವಸ್ಥೆಗಳನ್ನು  ತೆಗೆದುಹಾಕಲಾಗಿದೆ.
ಆತನಿಗೆ ಪಾಲಕರು ಹಾಗೂ ಕುಟುಂಬದವರು ಅಂತಿಮ ವಿದಾಯ ಹೇಳಿದ್ದಾರೆ. ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಹೋದರಿಯರು ಅವರನ್ನು ಕುರಿತು ಎಲ್ಲರನ್ನೂ ಕ್ಷಮಿಸು, ಎಲ್ಲರಿಗೂ ಕ್ಷಮೆ ಕೇಳು ಹಾಗೂ ಶಾಂತಿಯಿಂದ ಹೊರಟುಬಿಡು ಎಂಬ ಅಂತಿಮ ವಾಕ್ಯಗಳನ್ನು ಹೇಳಿ ಅತ್ಯಂತ ಕರುಣಾಪೂರ್ವಕ ಪ್ರೀತಿಯಿಂದ ಬೀಳ್ಕೊಟ್ಟಿದ್ದಾರೆ.

ಹತ್ತು ಹಲವಾರು ಕಾಯಿಲೆಗಳಿಂದ ಸಂಪೂರ್ಣ ದೇಹಗಳು ನಿಷ್ಕ್ರಿಯಗೊಂಡು ಮನೋ ದೈಹಿಕ ಯಾತನೆಯನ್ನು ಅನುಭವಿಸುತ್ತಿರುವ, ಬದುಕಿರುವಾಗಲೇ ಸತ್ತಂತೆ ಇರುವ ಹಲವಾರು ಜನರು ಆಸ್ಪತ್ರೆಯ ಮೂಲೆಯ ಬೆಡ್ಗಳಲ್ಲಿ, ಮನೆಗಳಲ್ಲಿ ಇದ್ದು ಅವರಿಗೆ ಮತ್ತು ಅವರ ಯಾತನೆಯನ್ನು ಕಂಡು ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿಯನ್ನು ಅನುಭವಿಸುತ್ತಿರುವ ಅವರ ಕುಟುಂಬದವರಿಗೆ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ನೆಮ್ಮದಿಯ ನಿಟ್ಟುಸಿರನ್ನು ತಂದಿದೆ.
 ಯಾವುದೇ ಕಾನೂನುಗಳು ದುರ್ಬಳಕೆಯಾಗಬಾರದು ಎಂಬುದಷ್ಟೇ ಸಮಾಜದ ಕಳಕಳಿ. ಹರೀಶ್ ರಾಣಾಗೆ ಭಾವಪೂರಿತ ವಿದಾಯವನ್ನು ಕೋರುತ್ತಾ


About The Author

Leave a Reply

You cannot copy content of this page

Scroll to Top