ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಗಜಲ್


ಒಲವ ಪದಗಳ ಸಾಲಿನಲಿ ಇಳಿಸಿ
ಕವಿತೆ ಆಗಿಸು ಗೆಳೆಯಾ
ಚೆಲುವ ಕವನದ ಭಾವಗಳ ಒಳಗೆ
ಮನವ ಬಾಗಿಸು ಗೆಳೆಯಾ
ಬಾಳೆಂಬ ಪುಸ್ತಕದ ಪುಟದಲಿ ಬರೆದು
ಗೀಚಿದ ಹಾಳೆಗಳು ಅದೆಷ್ಟೋ
ಹೇಳಲು ಮುಜುಗರ ಪಡದಂತೆ ಆತ್ಮ
ವಿಶ್ವಾಸ ತೂಗಿಸು ಗೆಳೆಯಾ
ಕಾಲದ ಮಿತಿಯಲಿ ಎಲ್ಲವೂ ಚೆಂದವೇ
ತಿಳಿದಂತೆ ನಡೆಯಬೇಕು ಎಚ್ಚರ
ಬೇಲಿಯ ದಾಟದಂತೆ ವರ್ತುಲವ ಕಟ್ಟಲು
ಭಯವ ನೀಗಿಸು ಗೆಳೆಯಾ
ಹಲವು ವಿಷಯವು ಚರ್ಚೆಗೆ ಗ್ರಾಸವಾಗಿ
ಪರಿಹಾರ ಸಿಗುವುದು ಕಷ್ಟ
ಛಲವು ತುಂಬಿರಲು ಎದೆಯಲಿ ದೃಢ
ನಿರ್ಧಾರ ಸಾಗಿಸು ಗೆಳೆಯಾ
ನಿಲುವು ಸ್ಪಷ್ಟವಾಗಿ ಇರಲು ಬದುಕ
ಅಲ್ಲಾಡಿಸಿ ಕಾಡಲು ಅಸಾಧ್ಯ
ಗೆಲುವು ಸಿಗಲು ಮಾಲೆಯ ಹಾಕುತ
ರಾಧೆಯ ಬೀಗಿಸು ಗೆಳೆಯಾ
ಅನುರಾಧಾ ರಾಜೀವ್ ಸುರತ್ಕಲ್



