ಅನುವಾದ ಸಂಗಾತಿ
ದೇಹದ ಬೀಜ
ತೆಲುಗು ಮೂಲ : ಕೆ.ಎ. ಮುನಿಸುರೇಶ್ ಪಿಳ್ಳೆ
ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು



ಬೀಜವು ಮಹಿಮೆ ತಿಳಿದಿರುವ ಮನೆಯಲ್ಲಿಯೇ ಅಲ್ಲವೇ?
ಅವಳು ಮೊಳಕೆಯೊಡೆದಿದ್ದು!
ಬೀಜದಲ್ಲಿ..
ಬಿತ್ತವಿಕೆಯಲ್ಲಿ..
ಬದುಕು ಇರುವುದೆಂಬ ಪಾಠವನ್ನು ತಿಳಿದ ಅಮ್ಮ!
ಅಮ್ಮ ಬಿತ್ತಿದ ಪ್ರತಿಯೊಂದು ಬೀಜವೂ..
ಮೊಳಕೆಯೊಡೆದ ಪ್ರತಿಯೊಂದು ಮೊಳಕೆಯೂ ..
ದೃಷ್ಟಿಗೆ ಬರುತ್ತವೆ ನನಗೆ!
ನನ್ನ ಬಾಲ್ಯದಿಂದಲೂ,
ನನ್ನನ್ನು ಅನಾಥನನ್ನಾಗಿ ಮಾಡುವವರೆಗೂ..
ಬಿತ್ತಿದ ಪ್ರತಿ ಬೀಜವೂ!
ಅಮ್ಮ ಬಿತ್ತಿದ ಅಕ್ಷರಗಳು
ನನ್ನಅಧ್ಯಯನಗಳಾಗಿ ಮೊಳಕೆಯೊಡೆದವು!
ಅಮ್ಮ ಬಿತ್ತಿದ ಆಲೋಚನೆಗಳು
ನನ್ನ ಬುದ್ಧಿಯಲ್ಲಿ ಪರಿಣತಿಯಾಗಿ ಮೊಗ್ಗು ಬಿಟ್ಟಿವೆ!
ನನ್ನ ಮೇಲೆ ಬಿತ್ತಿದ ಆಶೆಗಳು
ಮೊಳಕೆಯೊಡೆದು ನನ್ನ ಜೀವನವಾಗಿ ಅರಳಿದವು!
ನನ್ನ ಬೆನ್ನಿನ ಮೇಲೆ ಬೆತ್ತದಿಂದ ಬಿತ್ತಿದ ಬೀಜಗಳು
ನನಗೆ ಒದಿಗಿದ ಶಿಸ್ತಾಗಿ ಫಲಿಸಿದವು!
ಅಮ್ಮ ಒಳ್ಳೆಯ ಬೇಸಾಯಗಾರ್ತಿ
ಬಿತ್ತುವುದು ಅಮ್ಮನ ಲಕ್ಷಣ!
ಭೂಮಿತಾಯಿ ಯಿಂದ ಚೊಚ್ಚಿ ಬಂದ ಮೊಳಕೆ
ಎರಡು ಎಲೆ ತೊಟ್ಟಂದಿನಿಂದಲೂ …
ಆ ಮೊಳಕೆಗೆ ರಕ್ಷಣೆಯ ತೊಡಿಗೆಯೂ ಅಮ್ಮನೇ!
ಸಸ್ಯಕ್ಕೆ ದಾಹವನ್ನು ತೀರಿಸುವ ಬೊಗಸೆಯ –ನೀರೂ ಅಮ್ಮನೇ!
ಬೆಳಕಿನಿಂದ ಜೀವನೀಡುವ ಏಳು ಕುದುರೆಗಳ ರಾಜನೂ ಅಮ್ಮನೇ !
ಆಕಾಶವನ್ನು ಲಕ್ಷ್ಯವನ್ನಾಗಿಸಿಕೊಂಡು …
ನೇರವಾಗಿ ಬೆಳೆಯುವುದನ್ನು ಕಲಿಸಿರುವುದು ಅಮ್ಮನೇ !
ತಲೆಯನ್ನು ಕೊರೆಯುವ ಹುಳುಗಳು ಸೇರಿದಾಗಲೆಲ್ಲಾ…
ಔಷಧದ ಪಿಚಕಾರಿಯಿಂದ ಕಾಪಾಡಿದ್ದು ಅಮ್ಮನೇ !
ವ್ಯರ್ಥವಾದ ಟೊಂಗೆಗಳನ್ನು ಪ್ರೂನಿಂಗ್ ಮಾಡುತ್ತಾ
ದೃಢವಾಗಿ ಬೆಳೆಯುವಂತೆ ನೋಡಿದವಳು ಅಮ್ಮನೇ!
ಕಸಿಕಟ್ಟಿ, ಸಸಿ ಬೆಳುಯುವ ವರೆಗೂ
ಕಾಯ್ದು , ಆ ಬೇಸಾಯದ ಕನ್ನಡಿಯಲ್ಲಿ
ತನ್ನನ್ನೂ, ತನ್ನ ಕಷ್ಟವನ್ನೂ ತೃಪ್ತಿಯಾಗಿ ನೋಡಿಕೊಂಡವಳು ಅಮ್ಮನೇ!
ಆ ಗಿಡ ಮರವಾದಾಗ…
ಆ ಫಲಗಳನ್ನು ಸಂಪೂರ್ಣವಾಗಿ ಆಸ್ವಾದಿಸದೆಯೇ
ಆ ನೆರಳಿನಲ್ಲಿ ತುಂಬಾ ದಣಿವು ತೀರಿಸಿಕೊಳ್ಳದೆಯೇ ಜಾರಿಹೋದವಲೇ ಅಮ್ಮ!
ಆ ನೆರಳು ತನಗೆ ಸಾಕೆಂದುಕೊಂಡಳೇ?
ತನ್ನ ಜಾಡ ಆ ಮರಕ್ಕೆ ಸಾಕೆಂದುಕೊಂಡಳೇ?
ಆ ನೆರಳಲ್ಲಿ ತನ್ನ ಪಾದದ ತಡನೆಯ ಸದ್ದುಗಳೆ
ಆ ಮರದ ಬೇರುಗಳ ಎದೆ ಬಡಿತೆಗಳೆಂದು ಅಮ್ಮಗೆ ತಿಳಿಯದೆ?
ನೆರಳನ್ನು ಏಮಾರಿಸಿ ತನು ಸರಿದುಹೋದರೆ
ಆ ಎದೆ ನಿಶ್ಶಬ್ದ ವಾಗುವುದೆಂದೂ …
ಆ ಮರ ನಿಶ್ಶಕ್ತ ವಾಗುವುದೆಂದೂ
ಅಮ್ಮನಿಗೆ ತಿಳಿವು ಇಲ್ಲವೇ?
—-
ಅಮ್ಮ ತನ್ನನ್ನು ತಾನೇ ಬಿತ್ತಿಕೊಂಡಳು
ತನ್ನ ದೇಹವನ್ನು ಬಿತ್ತಿಕೊಂಡಳು!
ಅನಾಟಮಿ ಲ್ಯಾಬ್ ನಲ್ಲಿ ಮೊಳಕೆಯೊಡುತ್ತಾಳೆ!
ನಾಳೆಯ ವೈದ್ಯರ ಜ್ಞಾನದಲ್ಲಿ ಪುಷ್ಪಿಸಿ, ಫಲಿಸಿ ವೃದ್ಧಿಹೊಂದುತ್ತಳೆ!
ಮರದ ನೆರಳಿನಲ್ಲಿ ದಣಿವಾರಿಸಿ ಕೊಳ್ಳುವವಳಲ್ಲ ಅಮ್ಮ
ತಾನೇ ಶಾಖೋಪಶಾಖಗಳಾಗಿ ಮಹಾವೃಕ್ಷವಾಗಿ ವಿಸ್ತರಿಸುವವಳು !
(ನನ್ನ ತಾಯಿಯ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡಿದನಂತರ.. ಅಮ್ಮ ನೆನೆಪಿನಲ್ಲಿ -: ಕೆ.ಎ. ಮುನಿಸುರೇಶ್ ಪಿಳ್ಳೆ, 99594 8808
ತೆಲುಗು ಮೂಲ : ಕೆ.ಎ. ಮುನಿಸುರೇಶ್ ಪಿಳ್ಳೆ
ಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು



