ಕವಿತೆ
ರೇಖಾ ಭಟ್
ಹೋದವಾರ
ಮೂಲೆ ಮೂಲೆ ಹುಡುಕಿ
ಹೊಸಕಿ ಹೊರಹಾಕಿದ ಮುನಿಸು
ಅದಾವ ಕಿಂಡಿಯಲ್ಲಿ
ಒಳಸೇರಿತೋ
ಕಾಣೆ
ಈಗ ಮತ್ತೆ ಬಲೆ ಹಬ್ಬುತಿದೆ
ಒಬ್ಬರಿಗೊಬ್ಬರು ಕಾಣದಷ್ಟು
ದಟ್ಟವಾಗಿ
ಎಲ್ಲೆಲ್ಲೂ
ಬೆಳಕಿನ ಹೂಗಳೇ ಅರಳಿದ
ಕನಸು ಕಾಣುತ್ತ
ಕತ್ತಲೆ ಬೇರಿಗೆ
ನೀರೆರೆಯಲು ಮರೆತಾಗಲೇ
ನಗು ಮಾಯ
ಮನದ ಅರಸನಂತಿದ್ದ
ಸರಸ ಸರಿದು ಹೋಗಿ:
ಕಿರೀಟವ ಮುನಿಸು ಧರಿಸಿ ನಿಂತಿದ್ದು
ನಾವು ಅಡಿಯಾಳಾಗಿ
ನಮ್ಮೊಳಗೆ ಅಡಗಿಕೊಂಡಿದ್ದು
ಅವನೇ ಮಾತಾಡಲಿ ಎನ್ನುವ ನಾನು
ನಾನೇ ಏಕೆ ಮೊದಲು ಎಂಬುವ ಆತ
ಇನ್ನೆಷ್ಟು ಹೊತ್ತು
ಅಹಮ್ಮುಗಳನ್ನೇ ಹೊದ್ದು ಮಲಗುವುದು!?
ಆಗಲೇ
ಒಳಸೆಲೆಯ ಒಲುಮೆಯಿಂದ
ಹೊಸ ಸೂತ್ರವೊಂದು ಸಿದ್ಧವಾಗಿ
ಪರದೆ ಸರಿಯುತ್ತದೆ
ಓಡಿಹೋದ ಅರಸ ಮತ್ತೆ
ಸಿಂಹಾಸನ ಏರುತ್ತಾನೆ
ನಾವು ಕಣ್ಣಲ್ಲೇ ನಗುತ್ತೇವೆ
*************
ನೈಸ್..
Chuper dear.. ಜೀವನವು ಸೊಗಸಾದ ಮುನಿಸುಗಳಿಂದ ರಂಗೇರಲಿ…
Very Nice
ಮುನಿಸು ಪ್ರೀತಿಯ ಸಂಕೇತ….ನೈಸ್ ಕಣೇ..
ಚನ್ನಾಗಿದೆ