ಮರಳಿಗೂಡಿಗೆ

ಲಹರಿ

ಅನುಪಮಾ ರಾಘವೇಂದ್ರ

                            

“ಎಲ್ಲಿ ಹೋದರೂ ಹಿಂತಿರುಗಿ ಮನೆಗೆ ತಲುಪುವವರೆಗೆ ಮನಸ್ಸಿಗೆ ಸಮಾಧಾನವೇ ಇಲ್ಲ”  ಎಂಬ  ಭಾವ ಮೂಡಿದಾಗಲೇ  ‘ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಮಾತು ಎಷ್ಟು ಅರ್ಥಪೂರ್ಣ ಅನಿಸಿದ್ದು.

      ತಿಂಗಳ ಹಿಂದೆ ಹಕ್ಕಿಯೊಂದು ನಮ್ಮ aಮೊಟ್ಟೆಗಳನ್ನಿಟ್ಟು,ಕಾವು ನೀಡಿ , ಮರಿ ಮಾಡಿತ್ತು. ಅಷ್ಟು ದಿನಗಳಲ್ಲಿಯೇ ಆ ಹಕ್ಕಿ ಸಂಸಾರ ಹಾಗೂ ನನ್ನ ಮಧ್ಯೆ ಅನಿರ್ವಚನೀಯ ಬಂಧವೊಂದು ಬೆಳೆದುಬಿಟ್ಟಿತ್ತು. ಆ ಮರಿಗಳ ರೆಕ್ಕೆ ಬಲಿಯುವವರೆಗೂ ತಾಯಿ ತಂದೆ ತಾವೇ ಆಹಾರ ತಂದು ಬಾಯಿಗೆ ಕೊಟ್ಟು ಸಾಕುತ್ತಿದ್ದವು. ಆ ಮರಿಗಳ ರೆಕ್ಕೆ ಬಲಿತಾಗ ಎಲ್ಲ ಹಕ್ಕಿಗಳೂ ಗೂಡು ಬಿಟ್ಟು ಹೋಗಿದ್ದವು. ನನಗೊಂದು ಸಂಶಯ……. ‘ಹಾರಿ ಹೋದ ಮೇಲೆ ಮರಿಗಳಿಗೂ ,ಅದರ ಹೆತ್ತವರಿಗೂ ಯಾವ ರೀತಿಯ ಸಂಬಂಧವಿರಬಹುದು…?’ ಆ ಮರಿಗಳು ತಮ್ಮ ಹೆತ್ತವರ ಬಗ್ಗೆ ಚಿಂತೆ ಮಾಡುತ್ತವೆಯೋ………ಇಲ್ಲವೋ…….. ಆ ದೇವರೇ ಬಲ್ಲ. ಈಗಿನ ಕಾಲದಲ್ಲಿ ತಿಳುವಳಿಕೆಯುಳ್ಳ ಮನುಷ್ಯರೇ ತಮ್ಮ ಹೆತ್ತವರ ಜವಾಬ್ದಾರಿ ವಹಿಸದೆ ನುಣುಚಿಕೊಳ್ಳುವುದು ಸರ್ವೇ ಸಾಮಾನ್ಯ. ಹೀಗಿರುವಾಗ ಪ್ರಾಣಿ ಪಕ್ಷಿಗಳಲ್ಲಿ ಯಾವ ಬಂಧ….? ಆ ಹಕ್ಕಿಗಳು ಹಾರಿ ಹೋದ ಮೇಲೆ ಏನೋ ಕಳಕೊಂಡ ಅನುಭವ ನನಗೆ. ಹೆರಿಗೆಗೆ ತವರಿಗೆ ಬಂದ ಮಗಳನ್ನು ಬಾಣಂತನ ಮಾಡಿ ಕಳುಹಿಸಿ ಕೊಟ್ಟ ಭಾವ….. ಮಗಳ ಹೆಜ್ಜೆಯ ಸಪ್ಪಳದ ತಾಳವಿಲ್ಲ…. ಮಗುವಿನ ಅಳುವಿನ ಇಂಪಾದ ರಾಗವಿಲ್ಲ. ಈಗ ಎಲ್ಲೆಲ್ಲೂ ಕರ್ಣ ಕಠೋರ ಮೌನರಾಗ ಮಾತ್ರ !

      ಹಾಗೂ ಹೀಗೂ ಒಂದು ತಿಂಗಳು ಕಳೆದಿತ್ತು. ಅದೊಂದು ದಿನ ಹಟ್ಟಿಯ ಬಳಿ ಏನೋ ಕೆಲಸದಲ್ಲಿದ್ದೆ. ಹಕ್ಕಿಯೊಂದು ಏನನ್ನೋ ಕಚ್ಚಿಕೊಂಡು ಹಾರಿ ಹಟ್ಟಿಯೊಳಗೆ ಬರುವುದು ಕಂಡಿತು. ಹತ್ತಿರ ಹೋದರೆ ಅದು ಓಡಿ ಹೋಗಬಹುದೆಂದು ಅಂಜಿ ದೂರದಿಂದಲೇ ಗಮನಿಸಿದೆ. ಹೋ….. ಅದೇ ಹಕ್ಕಿ….. ಅಂದು ಇಲ್ಲೇ ವಾಸವಾಗಿತ್ತಲ್ಲಾ….. ನನ್ನ ಮನಸ್ಸೂ ರೆಕ್ಕೆ ಬಿಚ್ಚಿ ಹಾರತೊಡಗಿತು. ಗೂಡಿನ ಕಡೆಗೆ ಹೋದ ಹಕ್ಕಿ ಒಂದೆರಡು ಕ್ಷಣದಲ್ಲೇ ವಾಪಾಸು ಬಂದು ಕಿಚ ಪಿಚ ಹಾಡುತ್ತಾ ನನ್ನ ಸುತ್ತ ಮುತ್ತ ತಿರುಗಿ ಹೊರಗೆ ಹಾರಿತು. ಮರಳಿ ಗೂಡಿಗೆ ಬಂದೆ ಎಂಬ ಸೂಚನೆ ನೀಡಿತ್ತೋ…… ಅದರ ಗೂಡನ್ನು ಹಾಳುಗೆಡಹದೆ ಹಾಗೇ ಇಟ್ಟದ್ದಕ್ಕೆ ಧನ್ಯವಾದ ಹೇಳಿತ್ತೋ ……… ಹಕ್ಕಿಗಳ ಭಾಷೆಯನ್ನು ಅರ್ಥ ಮಾಡಿಕೊಳ್ಳುವಂತಿದ್ದರೆ ಎಷ್ಟು ಚೆನ್ನ ಅನಿಸಿತ್ತು.

   ನಮ್ಮ ಮನೆಯ ಸುತ್ತ ಮುತ್ತ ಗಿಡ ಮರಗಳಲ್ಲಿ ಹತ್ತು ಹಲವು ಹಕ್ಕಿಗಳು ಬಂದು ಗೂಡು ಕಟ್ಟಿ, ಮೊಟ್ಟೆ ಇಟ್ಟು , ಮರಿ ಮಾಡಿ ಹಾರಿ ಹೋಗಿವೆ. ಯಾವ ಹಕ್ಕಿಗಳನ್ನೂ ನಾನು ಇಷ್ಟೊಂದು ಹಚ್ಚಿಕೊಂಡಿಲ್ಲ. ಆ ಹಕ್ಕಿಗಳು ಹಾರಿ ಹೋದ ಮೇಲೆ ಆ ಗೂಡು ಅಲ್ಲೇ ಅನಾಥವಾಗಿ ಬಿದ್ದಿರುವುದು ಸಾಮಾನ್ಯ. ಕೆಲವು ದಿನಗಳು  ಕಳೆದ ಮೇಲೆ ಆಕರ್ಷಕವಾಗಿರುವ ಆ ಗೂಡುಗಳನ್ನು  ನನ್ನ ಸಂಗ್ರಹಾಲಯದೊಳಗೆ ಸೇರಿಸಿಕೊಳ್ಳುವುದು ನನ್ನ ಅಭ್ಯಾಸ. ಆದರೆ ಯಾಕೋ ಏನೋ… ಹಟ್ಟಿಯಲ್ಲಿದ್ದ ಗೂಡು ಒಂದು ತಿಂಗಳಿನಿಂದ ಅನಾಥವಾಗಿದ್ದರೂ ನನ್ನ ಸಂಗ್ರಹಾಲಯಕ್ಕೆ ಸೇರಿಸಿಕೊಳ್ಳುವ ಯೋಚನೆ ಬರಲೇ ಇಲ್ಲ. ಹಟ್ಟಿಯ ಬಳಿಗೆ ಹೋದಾಗಲೆಲ್ಲ  ನನ್ನ ಕಣ್ಣು ಓಡುತ್ತಿದ್ದದ್ದು ಆ ಗೂಡಿನ ಕಡೆಗೆ.

         ಮರುದಿನ ಮಾಮೂಲಿನಂತೆ ಹಟ್ಟಿಯ ಬಳಿಗೆ ಹೋದಾಗ ಹಕ್ಕಿ ಪುರ್ರನೆ ಹಾರಿ ಹೋಯಿತು. ಮೆಲ್ಲನೆ ಇಣುಕಿ ನೋಡಿದೆ. ಮೂರು ಮೊಟ್ಟೆ. ಹೋ…… ಇನ್ನೊಂದು ಬಾಣಂತನದ ತಯಾರಿ…… ಹಕ್ಕಿಗೆ ತಿನ್ನಲು ಕಾಳು ಹಾಕಬೇಕು, ನಾಯಿ , ಬೆಕ್ಕುಗಳ ಕಣ್ಣು ಬೀಳದಂತೆ ಜಾಗ್ರತೆ ವಹಿಸಬೇಕು, ಮೊಟ್ಟೆಯೊಡೆದು ಮರಿ ಹೊರ ಬರಲು  ಕಾಯಬೇಕು , ಅದು ಹಾರಲು ಕಲಿಯುವುದನ್ನು ಕದ್ದು ನೋಡಬೇಕು , ನನ್ನ ಮೊಬೈಲಲ್ಲಿ ಸೆರೆ ಹಿಡಿಯಬೇಕು. ಅಬ್ಬಾ…..ಎಷ್ಟೆಲ್ಲಾ ಕೆಲಸ . ಸಂಭ್ರಮವೋ ಸಂಭ್ರಮ.

************

Leave a Reply

Back To Top