ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಕಣ ಸಂಗಾತಿ

ವಿಭಾಗೀಯ ಕಚೇರಿಯಲ್ಲಿ ಒಟ್ಟು ನಾನು ಕಳೆದದ್ದು 7 ವರ್ಷ ನಿಜಕ್ಕೂ ತುಂಬಾ ಒಳ್ಳೆಯ ಅನುಭವ ಕೊಟ್ಟ ಅವಧಿ ಅದು.
ಕಾರ್ಮಿಕ ಸಂಘದಲ್ಲಿ ಇದುವರೆಗೂ ನನಗೆ ಪರಿಚಯ ಇದ್ದದ್ದು ನಾಗರಾಜ ಗುಪ್ತ ಕುಮಾರಸ್ವಾಮಿ ಮತ್ತು ಪುರುಷೋತ್ತಮ ಅವರು ನಾಗರಾಜ ಗುಪ್ತ ಅವರಿಗೆ ನಂತರ ಪಾರ್ಶ್ವವಾಯು ಆಗಿ ಅಸ್ವಸ್ಥರಾಗಿದ್ದರು. ಲೆಕ್ಕಪತ್ರ ವಿಭಾಗದಲ್ಲಿ ಅವರು ಇದ್ದುದು. ಮಾತು ಅಸ್ವಷ್ಟ ಆಗಿದ್ದರು ಸಹ ಅವರು ಕಾರ್ಮಿಕ ಸಂಘದಲ್ಲಿ ತುಂಬಾ ಪ್ರಮುಖ ಸ್ಥಾನ ಹೊಂದಿದ್ದರು. ಪುರುಷೋತ್ತಮ ಅವರು ಈಗ ಶಾಖೆ ಎರಡರಲ್ಲಿ ಇದ್ದಿದ್ದು ಕುಮಾರಸ್ವಾಮಿ ಅವರು ಪದೋನ್ನತಿ ಹೊಂದಿ ಬೇರೆ ಕಡೆ ಇದ್ದರು .ಈಗ ಮೈಸೂರಿನ ಕಾರ್ಮಿಕ ಸಂಘದಲ್ಲಿ ಮುಖ್ಯವಾಗಿ ಕಾರ್ಯನಿರ್ವಹಿಸುತ್ತಿದ್ದು ಬಾಲಾಜಿ, ಲಕ್ಷ್ಮಿನರಸಿಂಹ, ಆರ್ ಎಸ್ ಚಂದ್ರಶೇಖರ್ ಇವರೇ ಮೊದಲಾದವರು. ಲಕ್ಷ್ಮೀನರಸಿಂಹ ಮತ್ತು ಆರ್ ಎಸ್ ಚಂದ್ರಶೇಖರ್ ಅವರು ಬನುಮಯ್ಯ ಕಾಲೇಜಿನಲ್ಲಿ ನನಗೆ ಸೀನಿಯರ್ ಆಗಿದ್ದವರು. ಪಾಪ ಲಕ್ಷ್ಮಿನರಸಿಂಹ ತುಂಬಾ ಬೇಗ ದೇವರಿಗೆ ಪ್ರಿಯವಾಗಿ ಹೋಗಿಬಿಟ್ಟ. ಅವನ ಸಾವೂ ಸಹ ತುಂಬಾ ಸಹಿಸಲಾಗದ ಹೊಡೆತ . ಅವನ ಪತ್ನಿ ಜಯಶ್ರೀ ಅವರಿಗೆ ನಿಗಮದಲ್ಲಿ ಕೆಲಸ ದೊರೆತಿದ್ದು ಆಕೆ ಸಹ ನನಗೆ ಉತ್ತಮ ಗೆಳತಿಯಾಗಿದ್ದಾರೆ .ಈಗ ಕಾರ್ಮಿಕ ಸಂಘದ ಕೆಲಸಗಳನ್ನು ಹತ್ತಿರದಿಂದ ನೋಡುವ ಅವಕಾಶ ದೊರೆತಿತ್ತು. ನವೆಂಬರ್ 14 ನಮ್ಮ ಕಾರ್ಮಿಕ ಸಂಘದ ಸಂಸ್ಥಾಪನ ದಿವಸ ಅಂದು ಎಲ್ಲರಿಗೂ ಸಿಹಿ ಹಂಚುವುದಲ್ಲದೆ ಮಧ್ಯಾಹ್ನ ಭೋಜನ ವೇಳೆಯಲ್ಲಿ ಒಂದು ಗೇಟ್ ಮೀಟಿಂಗ್ ಆಯೋಜಿಸಲ್ಪಡುತ್ತಿತ್ತು .ಹೀಗೆ ಒಂದು ಬಾರಿ ಅಂದು ಶನಿವಾರ ಬಂದಿದ್ದರಿಂದ ರಕ್ತದಾನ ಶಿಬಿರ ಸಹ ಆಯೋಜಿಸಲ್ಪಟ್ಟಿತ್ತು. ಮೊಟ್ಟಮೊದಲ ಬಾರಿಗೆ ಅಂದು ನಾನು ರಕ್ತದಾನ ಮಾಡಿದ್ದೆ. ನಂತರದಲ್ಲಿ ತಲೆ ಸುತ್ತು ಬಂದಿತ್ತು.

ಇದೇ ಅವಧಿಯಲ್ಲಿ ಒಮ್ಮೆ ರಾಷ್ಟ್ರಮಟ್ಟದ ಒಂದು ಸಮಾವೇಶವನ್ನು ಮೈಸೂರಿನಲ್ಲಿಯೇ ಹಮ್ಮಿಕೊಳ್ಳಲಾಗಿತ್ತು. ಸಂಸ್ಕೃತ ಪಾಠ ಶಾಲೆ ಬಳಿಯ ಸಹಕಾರ ಭವನದಲ್ಲಿ ಇದನ್ನು ಆಯೋಜಿಸಲಾಗಿದ್ದು ಪ್ರತಿ ದಿನ ಮೂರು ದಿನಗಳ ಕಾಲ ಕಾರ್ಯಕ್ರಮಗಳು ಇದ್ದವು .ನಾವು ರಜೆ ಇಲ್ಲದಿದ್ದರಿಂದ ಸಂಜೆಯ ವೇಳೆ ಹೋಗಿ ಅದನ್ನು ಅಟೆಂಡ್ ಮಾಡುತ್ತಿದ್ದೆವು.

ಈ ಹಿಂದೆಯೇ ಮಿನಿ ಬ್ಯಾಂಕ್ ಅಂತ ಒಂದು ಆಯೋಜನೆಯ ಬಗ್ಗೆ ಹೇಳಿದ್ದೆ. ಇಲ್ಲಿ ನಮ್ಮ ಯೂನಿಯನ್ ಮುಖಾಂತರವೂ ಈ ರೀತಿಯ ಒಂದು ಮನೀ ಬ್ಯಾಂಕ್ ಇದ್ದಿದ್ದು ನಾನು ಹೋದ ತಕ್ಷಣ ಅದಕ್ಕೆ ಸದಸ್ಯಳಾಗಿ ಸೇರಿಕೊಂಡೆ ಅಷ್ಟೇ ಅಲ್ಲದೆ ಒಂದು ಸಾಮೂಹಿಕ ಶೇರ್ ಇನ್ವೆಸ್ಟ್ಮೆಂಟ್ ಸಹ ಇದ್ದದ್ದು ಒಂದೊಂದು ಬಾರಿ ಹಣ ಹಾಕಿ ಸಾಂಘಿಕವಾಗಿ ಶೇರ್ ಗಳಿಗೆ ಹೂಡುತ್ತಿದ್ದರು. ಅದನ್ನು ಲಕ್ಷ್ಮಿ ನರಸಿಂಹ ನಿರ್ವಹಿಸುತ್ತಿದ್ದು ಅಂದಿನ ಮಟ್ಟದಲ್ಲಿ ತುಂಬಾ ಚೆನ್ನಾಗಿಯೇ ಲಾಭ ತಂದು ಕೊಡುತ್ತಿತ್ತು.

ಅಲ್ಲಿ ನನ್ನ ಆಪ್ತ ಗೆಳತಿಯರೆಂದರೆ ಟ್ರೈನಿಂಗ್ ನಿಂದ ನನ್ನ ಜೊತೆ ಇದ್ದ ನಂದಶ್ರೀ ಕುಲಕರ್ಣಿ ಹಾಗೆಯೇ ಕಚೇರಿ ಸೇವಾ ವಿಭಾಗದಲ್ಲಿಯೇ ಇದ್ದ ಬಿಕೆ ಸುಮಾ ಶಶಿ ಮತ್ತು ನಮ್ಮ ಜೊತೆಯಲ್ಲಿಯೇ ಎನ್ ಟಿ ಬಿ ಅಭ್ಯರ್ಥಿಯಾಗಿ ಬೆಂಗಳೂರಿನಲ್ಲಿ ನಿಯುಕ್ತಿಯಾಗಿ ನಂತರ ಮೈಸೂರಿಗೆ ವರ್ಗಾವಣೆ ಹೊಂದಿದ್ದ ಕಮಲ ಇಷ್ಟು ಜನ. ಕಮಲ ಅವರ ಪತಿ ಲೆಕ್ಚರರ್ ಆಗಿದ್ದು ಈಗಾಗಲೇ ಆರು ವರ್ಷದ ಮಗಳು ಇದ್ದಳು. ನಮಗಿಂತ ಎಂಟು ಒಂಬತ್ತು ವರ್ಷ ಹಿರಿಯರಾಗಿದ್ದ ಅವರು ಒಂದು ರೀತಿ ಹಿರಿಯ ಸೋದರಿಯಂತೆ ನಮಗೆ ಮಾರ್ಗದರ್ಶನ ಮಾಡುತ್ತಿದ್ದರು ಈಗಾಗಲೇ ಸ್ವಂತ ಮನೆ ಎಲ್ಲ ಮಾಡಿಕೊಂಡು ಸೆಟಲ್ ಆಗಿದ್ದ ಅವರು ಸಾಕಷ್ಟು ಉತ್ತಮ ಸ್ಥಿತಿಯಲ್ಲಿ ಇದ್ದರು. ನಂದಶ್ರೀ ತಂಗಿಗೂ ಸಹ ಈಗಾಗಲೇ ಭಾರತೀಯ ಜೀವವಿಮಾ ನಿಗಮದಲ್ಲಿ ಹೊಳೆನರಸೀಪುರದಲ್ಲಿ ನಿಯುಕ್ತಿ ಆಗಿತ್ತು. ಶಶಿ ಇಂಜಿನಿಯರಿಂಗ್ ಪದವೀಧರೆ ಆದರೂ ಎಲ್ಐಸಿ ವೃತ್ತಿಯಲ್ಲಿ ಮುಂದುವರೆಯಲು ಇಚ್ಚಿಸಿದಳು. ತುಂಬಾ ಮೆದುಸ್ವಭಾವದ ಕಡಿಮೆ ಮಾತಿನ ಹುಡುಗಿ. ನಂತರದಲ್ಲಿ ಮದುವೆಯಾಗಿ ಬೆಂಗಳೂರಿಗೆ ಹೋದಳು. ಅವಳ ತಂಗಿಯು ಸಹ ನಿಗಮದ ಉದ್ಯೋಗಿಯೇ. ಸುಮ ಸಹ ನಮಗಿಂತ ಸೀನಿಯರ್. ಈಗಾಗಲೇ ಪೋಸ್ಟ್ ಅಂಡ್ ಟೆಲಿಗ್ರಾಫ್ ನಲ್ಲಿ ಕೆಲಸ ಮಾಡುತ್ತಿದ್ದು ನಂತರ ನಿಗಮಕ್ಕೆ ಬಂದದ್ದು ನಮ್ಮದೇ ಬ್ಯಾಚ್ನ ಮುಂದಿನ ಲಿಸ್ಟ್ ಅವಳದು ಅವಳಿಗೂ ಮದುವೆಯಾಗಿ ಈಗಾಗಲೇ ಒಂದು ಮಗು ಸಹ ಇತ್ತು. ನಂತರದಲ್ಲಿ ನಂದಶ್ರೀ  ತಂಗಿ ಉಷ ಮದುವೆಯಾಗಿ ಬೆಳಗಾವಿಗೆ ವರ್ಗಾವಣೆಯಾಗಿ ಹೋದಳು. ಅವಳದೇ ಬ್ಯಾಚ್ನ ಮೀನ ವಿಭಾಗೀಯ ಕಚೇರಿಗೆ ಬಂದು ನಮ್ಮ ಗ್ರೂಪ್ ಸೇರಿದಳು. ನಂತರದಲ್ಲಿ ಅವಳು ಶಾಖೆ 5 ಕ್ಕೆ ವರ್ಗವಾಗಿ ಹೋದಳು. ಈಗ ನಾನು ಶಾಖೆ ಐದಕ್ಕೆ ಬಂದ ಮೇಲೆ ಪ್ರಸ್ತುತ ಒಟ್ಟಿಗೆ ಒಂದೇ ವಿಭಾಗದಲ್ಲಿ ಕೆಲಸ ಮಾಡುತಿದ್ದೇವೆ.

ನಮ್ಮ ಕಚೇರಿಯ ಕೆಳಭಾಗದಲ್ಲಿ ಒಂದು ಪುಟ್ಟ ಹೋಟೆಲ್ ಇದ್ದು ಕಾಫಿ ಟೀ ಹಾಗೂ ಇತರ ಇಡ್ಲಿ-ದೋಸೆ ತರಹದ ತಿಂಡಿಗಳು ಸಿಗುತ್ತಿದ್ದವು. ಮಧ್ಯಾಹ್ನ ಹಾಗೂ ಸಂಜೆ ವಡೆ ಬಜ್ಜಿ ದೋಸೆ ಈ ರೀತಿಯ ಸ್ನಾಕ್ಸ್ ಗಳನ್ನು ಮಾಡುತ್ತಿದ್ದರು. ಊಟ ತೆಗೆದುಕೊಂಡು ಹೋಗದಿದ್ದಾಗಲೆಲ್ಲ ಮಧ್ಯಾಹ್ನ ಅಲ್ಲಿಂದ ಪ್ಯಾಕ್ ಮಾಡಿಸಿಕೊಂಡು ಬರಬಹುದಿತ್ತು ಅಥವಾ ಅಲ್ಲಿಯೇ ಹೋಗಿ ತಿನ್ನುವ ವ್ಯವಸ್ಥೆಯು ಇತ್ತು ಮಧ್ಯಾಹ್ನ 12 ಗಂಟೆ ಹಾಗೂ ಸಂಜೆ 4:00ಗೆ ಕೆಳಗಡೆ ಹೋಗಿ ಕಾಫಿ ಕುಡಿದು ಬರುತ್ತಿದ್ದೆವು. ಎರಡನೇ ಫ್ಲೋರ್ ನಲ್ಲಿದ್ದ ನಾನು ಕಮಲ ಒಟ್ಟಿಗೆ ಕೆಳಗೆ ಹೋಗುತ್ತಿದ್ದೆವು. ನಂತರ ಅಲ್ಲಿಗೆ ಮೂರನೇ ಫ್ಲೋರ್ ನಿಂದ ನಂದಶ್ರೀ ಹಾಗೂ ಸುಮಾ ಬರುತ್ತಿದ್ದರು. ಇಲ್ಲಿಯೂ ಕಾಫಿ ಜೊತೆ ಏನಾದರೂ ತೆಗೆದುಕೊಂಡು ತಿನ್ನುವ ಅಭ್ಯಾಸ ಮುಂದುವರೆದಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ? ಮಧ್ಯಾಹ್ನ 3ನೇ ಫ್ಲೋರ್ ನ ಕಚೇರಿ ವಿಭಾಗಕ್ಕೆ ಹೋಗಿ ಎಲ್ಲರೂ ಸೇರಿ ಒಟ್ಟಿಗೆ ಊಟ ಮಾಡುತ್ತಿದ್ದು ಒಟ್ಟು ಆರು ಜನ ಹಂಚುವ ವೇಳೆಗೆ ಮುಚ್ಚಳಗಳು ತುಂಬಿ ಹೋಗಿರುತ್ತಿದ್ದವು. ಆದರೂ ಎಷ್ಟು ಖುಷಿ ಹಂಚಿ ತಿನ್ನುವುದರಲ್ಲಿ ಬರಿ ನಮ್ಮ ಮುಚ್ಚಳಗಳಲ್ಲಿ ಇದ್ದದ್ದನ್ನು ತಿನ್ನುವ ವೇಳೆಗೆ ಹೊಟ್ಟೆ ತುಂಬಿ ಹೋಗುತ್ತಿತ್ತು ನಾವು ತೆಗೆದುಕೊಂಡು ಹೋಗಿದ್ದು ಎಕ್ಸ್ಟ್ರಾ ಎನ್ನುವ ಹಾಗೆ.
ಅಲ್ಲಿದ್ದಾಗಿನ ಮತ್ತೊಂದು ನೆನಪು ಎಂದರೆ ಗಾರ್ಡನ್ ಸೀರೆ ಸೇಲ್ ಗೆ ಹೋಗುವುದು ಪ್ರತಿ ವರ್ಷ ಎರಡು ಬಾರಿ ಆ ಸೇಲ್ ಹಾಕುತ್ತಿದ್ದರು. ಸಾಮಾನ್ಯವಾಗಿ ಆನಂದ ವಿಹಾರ್ ಛತ್ರದಲ್ಲಿ ಕೆಲವೊಮ್ಮೆ ಜೆ ಎಲ್ ಬಿ ರಸ್ತೆಯ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಹಾಲ್ನಲ್ಲಿ. ಹಾಗೆ ಸೇಲ್ ಇರುವಾಗ ಒಂದು ಶನಿವಾರ ಮಧ್ಯಾಹ್ನ ಸಿದ್ದಾರ್ಥ ಹೋಟೆಲಿನಲ್ಲಿ ಊಟ ಮುಗಿಸಿ ಆನಂದ ವಿಹಾರ್ ಛತ್ರದಲ್ಲಿ ಗಾರ್ಡನ್ ಸೇಲ್ ವ್ಯಾಪಾರ ಮುಗಿಸಿ ನಂತರ ಮನೆಗೆ ಹೋಗುತ್ತಿದ್ದೆವು. ನನ್ನ ತಂಗಿ ಛಾಯಾಸಹ ಇದಕ್ಕೆ ಜೊತೆಗೂಡುತ್ತಿದ್ದಳು. ಹೀಗೆ ಹೋಗುವಾಗಲೇ ನಾನು ಮೊಟ್ಟಮೊದಲ ಬಾರಿಗೆ ನಾರ್ತ್ ಇಂಡಿಯನ್ ಊಟದ ರುಚಿ ನೋಡಿದ್ದು ಅಲ್ಲಿಂದ ನಂತರ ಯಾವಾಗ ಹೋಟೆಲಿಗೆ ಹೋದರು ನಾರ್ತ್ ಇಂಡಿಯನ್ ತೆಗೆದುಕೊಳ್ಳುತ್ತಿದ್ದೆ. ತೀರ ಇತ್ತೀಚೆಗೆ ಅದರ ಬಗ್ಗೆ ಅಷ್ಟು ಒಲವಿಲ್ಲ.

ಗಾರ್ಡನ್ ಸೀರೆಗಳು ಅಂದರೆ ಒಂದು ರೀತಿಯ ಕ್ರೇಜ್ ಎಷ್ಟು ಬಾರಿ ಒಗೆದರು ಸುಕ್ಕಾಗದ ಉಡಲು ಆರಾಮವಾಗಿರುವ ಸೀರೆಗಳು ರೂ 300 400 ಬೆಲೆಗಳಲ್ಲಿ ಸಿಕ್ಕುತ್ತಿತ್ತು. ವರ್ಷದಲ್ಲಿ ಒಂದೆರಡು ಬಾರಿ ಅಲ್ಲಿ ಸೀರೆಕೊ ಳ್ಳುತ್ತಿದ್ದು ದಂತು ಖಾಯಂ. ಅದರಲ್ಲೂ ಏನು ಪ್ರಿಂಟ್ ಇಲ್ಲದ ಪ್ಲೈನ್ ಸೀರೆಗಳು ತುಂಬಾ ಚೆನ್ನಾಗಿರುತ್ತಿದ್ದವು ಅದಕ್ಕೆ ಅಲ್ಲೇ ಇದ್ದ ಶೈನಿಂಗ್ ಮೆಟೀರಿಯಲ್ ಗಳ ಪ್ರಿಂಟ್ ಬ್ಲೌಸ್ ಗಳಂತೂ ಹೋಲಿಸಿಕೊಂಡರೆ ಸೂಪರ್ ಆಗಿರುತ್ತಿತ್ತು .ಅಲ್ಲದೆ ಗಾರ್ಡನ್ ಮೆಟೀರಿಯಲ್ ಸಹ ತುಂಬಾ ಚೆನ್ನಾಗಿರುತ್ತಿತ್ತು. ಚೂಡಿದಾರ್ ಗಳಿಗೆ ಅಲ್ಲೇ ಬಟ್ಟೆ ತೆಗೆದುಕೊಳ್ಳುತ್ತಿದ್ದೆವು. ನಾನೇ ಹೊಲೆಯುತ್ತಿದ್ದರಿಂದ ತುಂಬಾ ಕಡಿಮೆ ವೆಚ್ಚದಲ್ಲಿ ಆಗುತ್ತಿದ್ದವು, ಇಬ್ಬರೂ ಸಹೋದರಿಯರಿಗೂ ವರ್ಷಕ್ಕೆ ಒಂದು ಬಾರಿಯಾದರೂ ಗಾರ್ಡನ್ ಮೆಟೀರಿಯಲ್ನ ಡ್ರೆಸ್ ಬಟ್ಟೆ ತೆಗೆದುಕೊಳ್ಳುತ್ತಿದ್ದೆವು. ನಾನು ಆಗ ಬರೀ ಸೀರೆ ಮಾತ್ರ ಧರಿಸುತ್ತಿದ್ದುದರಿಂದ ಸೀರೆಗಳನ್ನು ಕೊಳ್ಳುತ್ತಿದ್ದೆ. ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ನಲ್ಲಿ ಸೇಲ್ ಇದ್ದಾಗ ರಮ್ಯಾ ಹೋಟೆಲ್ ನಲ್ಲಿ ಹೋಗಿ ತಿಂಡಿ ತಿಂದು ನಂತರ ಅಟೆಂಡ್ ಮಾಡುತ್ತಿದ್ದು ರಮ್ಯಾ ಹೋಟೆಲ್ ಮಧ್ಯಾಹ್ನ ಇರುತ್ತಿರಲ್ಲವಾದ್ದರಿಂದ ಅಲ್ಲಿದ್ದಾಗ ಸಂಜೆ ಆಫೀಸ್ ಮುಗಿದ ನಂತರ ಹೋಗುತ್ತಿದ್ದುದು.

ಒಂದು ರೀತಿಯ ಅಲಿಖಿತ ಒಪ್ಪಂದದಂತೆ ಪ್ರತಿಯೊಬ್ಬರ ಹುಟ್ಟು ಹಬ್ಬದ ಸಮಯದಲ್ಲಿ ನಮ್ಮ ಗುಂಪಿನ ಎಲ್ಲರೂ ಒಟ್ಟಿಗೆ ಹೋಟೆಲ್ ಗೆ ಹೋಗುವುದು ಅಭ್ಯಾಸವಾಗಿತ್ತು .ಅಂತಹ ಸಂದರ್ಭದಲ್ಲಿ ನನ್ನ ತಂಗಿ ಸಹ ಜೊತೆಗೂಡುತ್ತಿದ್ದಳು. ಸಿದ್ದಾರ್ಥ ಹೋಟೆಲಿನಲ್ಲಿ ನಾರ್ತ್ ಇಂಡಿಯನ್ ಗೋವರ್ಧನ್ ಹೋಟೆಲ್ನಲ್ಲಿ ಸೌತ್ ಇಂಡಿಯನ್ ಡಿಷ್ಗಳು ಮತ್ತು ಮಸಾಲೆ ದೋಸೆ ತುಂಬಾ ಚೆನ್ನಾಗಿ ಇರುತ್ತಿತ್ತು. ಕೆಲವಿಮ್ಮೆ ಧನ್ವಂತರಿ  ರಸ್ತೆಯ ಪಾರಸ್ ಹೋಟೆಲಿಗೂ ಹೋಗುತ್ತಿದ್ದೆವು.ಬರ್ತಡೇ ಇರುವವರು ಪಾರ್ಟಿ ಕೊಡುತ್ತಿದ್ದರು. ಮಿಕ್ಕವರು ಸೇರಿ ಎಲ್ಲಾ ಹಣ ಹಾಕಿ ಏನಾದರೂ ಒಂದು ಗಿಫ್ಟ್ ಕೊಡುತ್ತಿದ್ದೆವು.

ನಮ್ಮ ಹೊಸ ವ್ಯವಹಾರಗಳ ವಿಭಾಗ ಎರಡನೆಯ ಮಹಡಿಗೆ ಸ್ಥಳಾಂತರ ಅಲ್ಲಿ ನಮ್ಮ ಪಕ್ಕದಲ್ಲಿ ಪ್ಲಾನಿಂಗ್ ವಿಭಾಗ ಇತ್ತು ಅಲ್ಲಿ ನನ್ನದೇ ಹೆಸರಿನ ಸುಜಾತ ಎಂಬ ಸಹಾಯಕಿ ಇದ್ದರು. ನಂತರ ಸಹ ಅವರೊಂದಿಗೆ ಕೆಲಸ ಮಾಡಿದ್ದೆ. ನಿವೃತ್ತಿಯಾದ ಕೆಲವೇ ತಿಂಗಳುಗಳಲ್ಲಿ ಪಾಪ ಅವರು ಕಾಲವಾದರು. ತುಂಬಾ ಒಳ್ಳೆಯ ಕೆಲಸಗಾರ್ತಿ ಜೋರು ಮಾತಿನವರಾದರು ಮನಸ್ಸು ತುಂಬಾ ಮೃದು ಒಳ್ಳೆಯ ಗೆಳತಿ. ಹಾಗೆ ಸೂರ್ಯ ಎಂಬ ಸೇನೆಯಿಂದ ನಿವೃತ್ತರಾಗಿ ನಿಗಮ ಸೇರಿದ ಮತ್ತೊಬ್ಬರು. ಸೌಹಾರ್ದಯುತವಾಗಿ ಎಲ್ಲರೂ ಕೆಲಸ ಮಾಡುತ್ತಿದ್ದೆವು. ಅದೇ ವಿಂಗ್ ನಲ್ಲಿ ವಿಭಾಗ ವ್ಯವಸ್ಥಾಪಕರ ಕಚೇರಿ ಹಾಗೂ ಅವರ ಕಾರ್ಯದರ್ಶಿಗಳು ಇದ್ದರು. ದೊರೆ ಎಂಬ ಆಡಳಿತ ಅಧಿಕಾರಿ ಆಗ ವಿಭಾಗ ವ್ಯವಸ್ಥಾಪಕರ ಕಾರ್ಯದರ್ಶಿಗಳಾಗಿದ್ದರು ತುಂಬಾ ದಕ್ಷ ವ್ಯಕ್ತಿ.  ಟೆಲಿಫೋನ್ ಆಪರೇಟರ್ ಎಂಬ ಹೊಸ ಹುದ್ದೆ ಆಗ
ನಿಯೋಜಿಸಲಾಗಿದ್ದು ಹಿರಿಯ ಅಧಿಕಾರಿಗಳೊಬ್ಬರ ಮಗಳು ಅದಕ್ಕೆ ನಿಯುಕ್ತಿಯಾಗಿದ್ದಳು.  ನಂತರದಲ್ಲಿ ಅವಳು ಮದುವೆಯಾಗಿ ಬೆಂಗಳೂರಿಗೆ ಹೋದಳು. ನಾನು ಕೆಲಸಕ್ಕೆ ಸೇರಿದಾಗ ಮೈಸೂರಿನ ವಿಭಾಗ ವ್ಯವಸ್ಥಾಪಕರಾಗಿದ್ದ ವೇಣುಗೋಪಾಲ್ ಅವರು ಬೆಂಗಳೂರಿಗೆ ವರ್ಗಾವಣೆ ಹೊಂದಿದ್ದು ಅವರ ಜಾಗದಲ್ಲಿ ಈಗ ಅಲೆಕ್ಸಾಂಡರ್ ಎಂಬ ವಿಭಾಗ ವ್ಯವಸ್ಥಾಪಕರು ಬಂದಿದ್ದರು ತುಂಬಾ ಶಿಸ್ತಿನ ವ್ಯಕ್ತಿ. ಪ್ರತಿ ವರ್ಷ ಹೊಸ ವರ್ಷದ ದಿನ ಜನವರಿ ಒಂದರಂದು ಎಲ್ಲರಿಗೂ ಕೇಕ್ ಮತ್ತು ಚಿಪ್ಸ್ ಅನ್ನು ತಮ್ಮ ವೈಯಕ್ತಿಕವಾಗಿ ಕೊಡಿಸುತ್ತಿದ್ದು ನೆನಪಿನಲ್ಲಿ ಇದೆ.

ವಾರದಲ್ಲಿ ಒಂದು ದಿನ ನಾನು ಮತ್ತು ಛಾಯ ಆಫೀಸಿನಿಂದ ನೇರವಾಗಿ ದೇವರಾಜ ಮಾರುಕಟ್ಟೆಗೆ ಹೋಗುತ್ತಿದ್ದೆವು ಅಲ್ಲಿ ವಿವಿಧ ತರಕಾರಿಗಳು ಕೆಲವು ಹಣ್ಣುಗಳು ಇವೆಲ್ಲವನ್ನು ತೆಗೆದುಕೊಂಡು ನಂತರ ಬಸ್ ಸ್ಟ್ಯಾಂಡಿಗೆ ನಡೆದೆ ಹೋಗುತ್ತಿದ್ದವು. ಅಷ್ಟು ಬಾರ ಹೊತ್ತು ನಡೆದರೂ ಆಗ ಅದು ತುಂಬಾ ಸಾಮಾನ್ಯ ಎನಿಸಿತು ದೇವರಾಜ ಮಾರುಕಟ್ಟೆಗೆ ಹೋಗುವುದು ಆಗಲು ಈಗಲೂ ನನಗೆ ತುಂಬಾ ಖುಷಿಯ ವಿಷಯ ಆದರೆ ಮಳೆ ಬಂದ ನಂತರದ ಕೊಚ್ಚೆ ಮಾತ್ರ ಸಹಿಸಲು ಅಸಾಧ್ಯ ಹಾಗೆಯೇ ಹಬ್ಬದ ಹಿಂದೆ ತುಂಬಾ ಜನಸಂದಣಿ ಇರುತ್ತದೆ ನಡೆದು ಹೋಗಲು ಕಷ್ಟ ಇಲ್ಲದಿದ್ದಾಗ ಸಾಮಾನ್ಯವಾಗಿ ಹೋಗಲು ತುಂಬಾ ಚೆಂದ ಅಲ್ಲಿ ಜೋಡಿಸಿ ಇಟ್ಟಿರುವ ಹೂವು ಹಾಗೂ ತರಕಾರಿಗಳು ಕಣ್ಮನ ತುಂಬುತ್ತವೆ. ನಂತರ ಬಸ್ ಬಿಟ್ಟು ಗಾಡಿ ತೆಗೆದುಕೊಂಡು ಹೋಗಲು ಆರಂಭಿಸಿದಾಗಲೂ ಇದೇ ವ್ಯವಸ್ಥೆ ಮುಂದುವರೆದಿತ್ತು ನನ್ನ ತಂಗಿ ಗೆ ಹೋಗುವವರೆಗೂ ಇದೇ ಅಭ್ಯಾಸ. ಈಗ ಹೆಚ್ಚುಗಟ್ಟಲೆ ತರಕಾರಿ ತರಬೇಕೆಂದರೆ ಮೈಸೂರಿನ ಎಂ ಜಿ ರೋಡ್ ನಲ್ಲಿರುವ ತರಕಾರಿ ಸಂತೆಗೆ ಹೋಗಿ ತಂದು ಬಿಡುತ್ತೇವೆ. ದೇವರಾಜ ಮಾರ್ಕೆಟ್ ಸಂದರ್ಶನ ತುಂಬಾ ವಿರಳ ಆಗಿಬಿಟ್ಟಿದೆ.  ವಿವಿಧ ತರಕಾರಿಗಳು ತಂದು ಚೀಲದಿಂದ ಸುರಿದು ಅವುಗಳನ್ನು ವಿಂಗಡಿಸಿ ಬೇರೆ ಬೇರೆ ಕವರ್ ಗಳಿಗೆ ಹಾಕಿ ಫ್ರಿಡ್ಜ್ ನಲ್ಲಿ ಸೇರಿಸಿ ಇಡುತ್ತಿದ್ದೆವು . ಕನಕಾಂಬರ ಮಲ್ಲಿಗೆ ಸಣ್ಣಮರ್ಲೆ ಮೊದಲಾದ ಹೂವುಗಳನ್ನು ಕಟ್ಟಿ ಇಡುತ್ತಿತ್ತು. ಮನೆಯಲ್ಲಿ ಮುಡಿಯಲು ಹೂ ಇದ್ದರೆ ಒಂದು ರೀತಿ ಸಡಗರ. ಮನೆ ಮುಂದೆ ಹೂ ಬರುತ್ತಿದ್ದರೂ ನಾವೇ ತಂದು ದಿಂಡಾಗಿ ಕಟ್ಟಿದ ಹೂವುಗಳನ್ನು ಮುಡಿಯುವುದು ಒಂದು ರೀತಿಯ ಖುಷಿ. ಈಗಂತೂ ಮನೆಯಲ್ಲಿಯೇ ಜಾಜಿ ಹೂ ದಂಡಿಯಾಗಿ ಬಿಡುತ್ತದೆ . ಕೀಳುವುದು ನನ್ನವರ ಕೆಲಸ. ಕಟ್ಟುವುದು ನಾನೇ. ಹೂವು ಕಟ್ಟುವುದು ನನಗೊಂದು ತರಹ ಸ್ಟ್ರೆಸ್ ಬಸ್ಟರ್ ಇದ್ದ ಹಾಗೆ.

ಹೀಗೆ ಒಂದು ರೀತಿ ಜೀವನ ಆರಾಮವಾಗಿ ಉರುಳುತ್ತಿದ್ದರೂ ಮಕ್ಕಳಾಗದ ಚಿಂತೆ ಮಾತ್ರ ಕಾಡುತ್ತಿತ್ತು. ಅದಕ್ಕಾಗಿ ಇಲ್ಲಿ ಬೇರೊಬ್ಬ ವೈದ್ಯರನ್ನು ಹಿಡಿದು ಮತ್ತೆ ಆಸ್ಪತ್ರೆ ಅಲೆದಾಟ ಶುರುವಾಗಿತ್ತು. ಸ್ಕ್ಯಾನಿಂಗ್ ಮಾತ್ರೆ ಇಂಜಕ್ಷನ್ ಇವೆಲ್ಲವುಗಳ ಮುಗಿಯದ ವರ್ತುಲ ಆದರೂ ಸಹನೀಯ ಅನಿಸಿದ್ದು ಆತ್ಮೀಯ ಗೆಳತಿಯರು ಹಾಗೂ ಖುಷಿ ಕೊಡುವ ಆಫೀಸಿನ ಕೆಲಸ. ಚಿಂತೆಗೆ ಎಡೆಗೊಡದ ಹಾಗೆ ಇದ್ದ ಬಿಡುವಿಲ್ಲದ ದಿನಚರಿ


About The Author

Leave a Reply

You cannot copy content of this page

Scroll to Top