ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವೃತ್ತಿ ವೃತ್ತಾಂತ
ವೃತ್ತಿ ಬದುಕಿನ ಹಿನ್ನೋಟ
ನೋಟ ~ ೧೯

ಮತ್ತಷ್ಟು ಸ್ವಾರಸ್ಯಕರ ಘಟನೆಗಳು

ಬೆಳಿಗ್ಗೆ ರೈಲ್ವೆ ನಿಲ್ದಾಣಕ್ಕೆ ಬಂದ ಕೂಡಲೇ ನಾವು ಗೆಳತಿಯರು ಒಟ್ಟಿಗೆ ನಿಲ್ಲುತ್ತಿದ್ದೆವು. ಸರಸ್ವತಿ ಆಗ  ಟೈಪಿಸ್ಟ್. ಮೊದಲ ಅಪಾಯಿಂಟ್ಮೆಂಟ್ ಅಲ್ಲಿ ಅವಳದು. ಮುಖ್ಯ ನಿಲ್ದಾಣದಲ್ಲಿ ಹತ್ತಿರುತ್ತಿದ್ದಳು. ಚಾಮರಾಜಪುರಂ ನಿಲ್ದಾಣ ಬಂದಾಗ ಇಲ್ಲಿದ್ದೇನೆ ಎಂದು ಬಾಗಿಲ ಬಳಿ ಬಂದು ಸೂಚನೆ ಕೊಡುತ್ತಿದ್ದಳು .ಆ ಕಂಪಾರ್ಟ್ಮೆಂಟ್ ಗೆ ಅಲ್ಲಿದ್ದವರೆಲ್ಲ ಹತ್ತಿ ಕೊಳ್ಳುತ್ತಿದ್ದರು. ನಂತರ ಅಶೋಕಪುರ ಸ್ಟೇಷನ್ ಗೆ ಬಂದಾಗ ಯಾರಾದರೂ ಒಬ್ಬರು ಸೂಚನೆ ಕೊಡುತ್ತಿದ್ದವು .ಅಂತೂ ಎಲ್ಲ ಒಂದೇ ಕಡೆ ಕುಳಿತು ಮಾತನಾಡಿಕೊಂಡು ಹೋಗುತ್ತಿದ್ದೆವು. ಚಾಮರಾಜಪುರಂ ನಿಲ್ದಾಣದಲ್ಲಿ ನಾನು, ಕೃಪಾ, ಪ್ರಕಾಶ್ ಪ್ರಸಾದ್ ಹತ್ತುತ್ತಿದ್ದೆವು.  ಕೃಪಾ ನನ್ನ ತಂಗಿ ಛಾಯ ಅವರ ಬ್ಯಾಚ್ ನವಳು.  ಪ್ರಕಾಶ್ ಮತ್ತು ಪ್ರಸಾದ್ ನನ್ನದೇ ಜೊತೆ ಬೆಂಗಳೂರು ವಿಭಾಗದಲ್ಲಿ ನಿಯುಕ್ತಿಯಾದವರು .ಎಲ್ಲರೂ ಹೆಚ್ಚು ಕಡಿಮೆ ಬಂದೇ ಓರಿಗೆ. ತುಂಬಾ ಒಳ್ಳೆಯ ಹೊಂದಾಣಿಕೆ ಸ್ನೇಹ ಅಂದಿಗೂ ಇಂದಿಗೂ ಸಹ . ಪ್ರಕಾಶ್ ಸ್ವಯಂ ನಿವೃತ್ತಿ ತೆಹೆದುಕೊಂಡಿದ್ದಾರೆ. ಇಲ್ಲದಿದ್ದರೆ ನಾವಿಬ್ಬರೂ ಒಂದೇ ದಿನ ನಿವೃತ್ತಿಯಾಗಬೇಕಿತ್ತು.‌ ಪ್ರಸಾದ್ ಪದೋನ್ನತಿ ತೆಗೆದುಕೊಂಡು ಅಧಿಕಾರಿ ಆಗಿ ಹೋದರು ಮುಂದೆ. ಅಶೋಕಪುರಂ ನಿಲ್ದಾಣದಲ್ಲಿ ಉಮಾಶಂಕರ ನಾರಾಯಣ ಭಟ್ ಹಾಗೂ ಅಧಿಕಾರಿಗಳಾದ ರಾಜೇಗೌಡ ಹಾಗೂ ಟಿ ಎನ್ ಪರಶಿವಮೂರ್ತಿ ಇವರು ಹತ್ತುತ್ತಿದ್ದರು. ಇಳಿದ ನಂತರ ಬೇರೆ ಬೇರೆ.
 ನಾವು ಗೆಳತಿಯರು ಒಟ್ಟಾಗಿ ನಡೆದು ಹೋಗುತ್ತಿದ್ದೆವು. ಬಜಾರ್ ರಸ್ತೆಗೆ ತಿರುಗುವ ಎಡ ಮೂಲೆಯಲ್ಲಿ ಒಬ್ಬ ಹೂವಿನವಳು ಕುಳಿತುಕೊಳ್ಳುತ್ತಿದ್ದಳು. ದಿನ ಅವಳ ಬಳಿ ಹೂ ಕೊಂಡು ಕೊಂಡು  ಎಲ್ಲರೂ ಮುಡಿದು ಮುಂದೆ ಹೋಗುತ್ತಿದ್ದ ವಾಡಿಕೆ.. ಬರುವಾಗಲೂ ಅಷ್ಟೇ ಅವಳ ಬಳಿಯೇ ಹೂ ತೆಗೆದುಕೊಂಡು ಬರುತ್ತಿದ್ದು ಮಾರನೆಯ ದಿನದ ಪೂಜೆಗಾಗಿ. ದಾರಿಯುದ್ದಕ್ಕೂ ಎರಡು ಕಡೆ ತರಕಾರಿ ಸೊಪ್ಪು ಎಲ್ಲವನ್ನು ಇಟ್ಟುಕೊಳ್ಳುತ್ತಿದ್ದರು . ಬರುವಾಗ ಅವುಗಳನ್ನು ಕೊಂಡು ಬರುತ್ತಿದ್ದೆವು.  ಹಾಗೆ ಸೀಬೆಕಾಯಿ ಹೆಚ್ಚಿಸಿ ಉಪ್ಪುಕಾರ ಹಾಕಿಸಿಕೊಳ್ಳುವುದು, ಗಿಣಿಮೂತಿ ಮಾವಿನ ಕಾಯಿ ಕಾಲದಲ್ಲಿ ಅದನ್ನು ತೆಗೆದುಕೊಳ್ಳುವುದು.  ನಾನು ಹೋದ ಸ್ವಲ್ಪ ದಿನದಲ್ಲೇ ಅವರೆಕಾಯಿ ಕಾಲ ಆರಂಭವಾದ್ದರಿಂದ ದೊಡ್ಡ ಚೀಲ ಇಟ್ಟುಕೊಂಡು ದಿನವೂ ಅವರೇ ಕಾಯಿ ತೆಗೆದುಕೊಂಡು ಬರುತ್ತಿದ್ದೆವು.

ಬೆಳಿಗ್ಗೆ 12 ಗಂಟೆಗೆ ಹಾಗೂ ಅಪರಾಹ್ನ  ನಾಲ್ಕು ಗಂಟೆಗೆ ಪಕ್ಕದಲ್ಲಿ ಇದ್ದ  ಹೋಟೆಲಿಗೆ ಹೋಗಿ ಕಾಫಿ ಕುಡಿಯುವುದು ಸಾಮಾನ್ಯ. ಬೆಳಗಿನ ಹೊತ್ತು ಬೇಗ ತಿಂಡಿ ತಿಂದಿದ್ದರಿಂದ ಆ ವೇಳೆಗೆ ಹಸಿವೆಯಾಗಿರುತ್ತಿತ್ತು ಒಂದು ಪ್ಲೇಟ್ ಬಜ್ಜಿ ಅಥವಾ ಅರ್ಧರ್ಧ ಮಸಾಲೆ ದೋಸೆ ತೆಗೆದು ಕೊಂಡು ತಿಂದು ಬರುತ್ತಿದ್ದೆವು. ಪೂರ್ತಿ ತಿನ್ನಬಹುದಿತ್ತೇನೋ ಆ ವಯಸ್ಸಿನಲ್ಲಿ .ಆದರೆ ಮಧ್ಯಾಹ್ನ ಹಸಿವೆಯಾಗದಿದ್ದರೆ ಊಟ ಚೆಲ್ಲಬೇಕು ಎನ್ನುವುದು ಒಂದು ಮತ್ತು ಅಷ್ಟು ಸಲೀಸಾಗಿ ಹಣ ಖರ್ಚು ಮಾಡಲು ಹಿಂದೇಟು ಹೊಡೆಯುವ ಪರಿಸ್ಥಿತಿ. ಆದರೆ ಆ ಹೋಟೆಲಿನಲ್ಲಿ ಅರ್ಧ ಮಸಾಲೆ ದೋಸೆ ಕಟ್ ಮಾಡಿ ಕೊಡುತ್ತಿದ್ದು ಈಗಲೂ ಒಂದು ರೀತಿ ಖುಷಿ ನೀಡುತ್ತದೆ.

ರೈಲ್ವೆ ಸ್ಟೇಷನ್  ಎದುರಿಗೆ ಒಂದು ಚಿಕ್ಕ ಹೋಟೆಲ್ ಇತ್ತು .ಸಾಮಾನ್ಯ ಹುಡುಗರು ಯಾರಾದರೂ ಬೇಗ ಬಂದು ಅಲ್ಲಿ ಪಕೋಡ ಅಥವಾ ಬಜ್ಜಿ ಕಟ್ಟಿಸಿಕೊಳ್ಳುತ್ತಿದ್ದರು. ಇಲ್ಲದಿದ್ದರೆ ಚುರುಮುರಿ. ರೈಲು ಬಂದ ನಂತರ ಹತ್ತಿ ಒಟ್ಟಿಗೆ ನಿಂತಿರುತ್ತಿದ್ದೆವು. ಸಾಮಾನ್ಯ ಸಂಜೆ ಸೀಟ್  ಸಿಗುತ್ತಿರಲಿಲ್ಲ. ಆಗ ನಮ್ಮ ಈ ಸಂಜೆಯ ತಿನಿಸುಗಳ ತಿನ್ನಾಟ. ನೀನು ರೈಲಿನಲ್ಲೇ ಹುರಿದ ಕಡಲೆಕಾಯಿ ಮಾರಿಕೊಂಡು ಬರುತ್ತಿದ್ದರು. ಒಂದು ರೂ  ಕೊಟ್ಟರೆ ಬೆಲ್ಲವನ್ನೂ ಸಹ ಕೊಡುತ್ತಿದ್ದರು. ದಿನನಿತ್ಯ ಕಡಲೆಕಾಯಿ ತಿನ್ನುವ ಕಾರ್ಯಕ್ರಮ ನಡೆದೇ ಇರುತ್ತಿತ್ತು.

ಶನಿವಾರದ ದಿನ ನಾಲ್ಕು ಗಂಟೆಗೆ ರೈಲು ಇದ್ದದ್ದು ಅಂದು ಬಸ್ಸಿನಲ್ಲಿ ವಾಪಸ್ ಕೆಲವರು ಹೋಗುತ್ತಿದ್ದರು. ನಾವೆಲ್ಲ ಅಂದು ಡಬ್ಬಿ ತೆಗೆದುಕೊಂಡು ಹೋಗಿ ಎರಡು ಗಂಟೆಗೆ ಕಚೇರಿ ಮುಗಿದ ನಂತರ ಊಟ ಮಾಡಿ ಹೆಚ್ಚಿನ ಕೆಲಸ ಇದ್ದರೆ ಮಾಡುತ್ತಿದ್ದೆವು ಇಲ್ಲದಿದ್ದರೆ ಕೇರಂ ಆಡುತ್ತಾ 3:30ಗೆ ಹೊರಟು ಬಂದು ಟ್ರೈನಲ್ಲಿ ವಾಪಸ್.

ದಿನವೂ ಓಡಾಡುತ್ತಾ ಬ್ಯಾಂಕಿನ ಉದ್ಯೋಗಿಗಳು ಹಾಗೂ ಕೆಲವು ರಾಜ್ಯ ಸರ್ಕಾರಿ ಉದ್ಯೋಗಿಗಳ ಪರಿಚಯವು ಆಗಿತ್ತು. ಆಶ್ಚರ್ಯವೆಂದರೆ ಆಗ ಪರಿಚಯವಾದ ಕೆಲವು ಉದ್ಯೋಗಿಗಳು ಈಗಲೂ ನಮ್ಮ ಕಚೇರಿಗೆ ಬಂದಾಗ ಗುರುತು ಹಿಡಿದು ಮಾತನಾಡಿಸುವುದು.

ಇದಿಷ್ಟು ನಮ್ಮೊಂದಿಗೆ ಮೈಸೂರಿನಿಂದ ಓಡಾಡುವ ಸಹೋದ್ಯೋಗಿಗಳ ಪರಿಚಯವಾದರೆ ನಂಜನಗೂಡಿನ ಲೋಕಲ್ ನಲ್ಲಿ ಇದ್ದ ಗೆಳತಿಯರು ಹಲವರು ಅದರಲ್ಲಿ ಮೊದಲಿಗರು ಸುಲೋಚನ ಆಫೀಸಿನ ಪಕ್ಕದ ಬೀದಿಯಲ್ಲಿ ಅವರ ಮನೆ ಯಾರೊಬ್ಬರು ಊಟ ತಾರದಿದ್ದರೂ ಅಥವಾ ಹುಷಾರಿಲ್ಲದೆ ಬಿಸಿನೀರು ಬೇಕಿದ್ದರೂ ಅವರ ಮನೆಗೆ ಹೋಗುತ್ತಿದ್ದುದು. ತುಂಬಾ ಒಳ್ಳೆಯ ಕೆಲಸ ಗಾರ್ತಿ ಅಲ್ಲದೆ ಅವರ ಸಮಯ ಪರಿಪಾಲನೆ ಅಂತೂ ಅಷ್ಟು ನಿಖರ. ಆಗ ಸ್ನೇಹಿತೆ ಯಾಗಿದ್ದು ಮುಂದು ಬಹುವಚನದಲ್ಲೇ ಮಾತನಾಡುತ್ತಿದ್ದರು ನಮ್ಮ ಆತ್ಮೀಯತೆಗೆ ಮಾತ್ರ ಸ್ವಲ್ಪವೂ ಕುಂದು ಇರಲಿಲ್ಲ. ಮುಂದೆ ಪದೋನ್ನತಿ ಹೊಂದಿ ಸಕಲೇಶಪುರಕ್ಕೆ ಹೋದಾಗ ನಾವಿಬ್ಬರೇ ಒಟ್ಟಿಗೆ ಮನೆ ಮಾಡಿಕೊಂಡು ಇದ್ದಾಗ ಅವರ ಸ್ವಭಾವದ ಮತ್ತಷ್ಟು ಆಳವಾದ ಪರಿಚಯವಾಯಿತು. ಈ ನನ್ನ ಆತ್ಮೀಯ ಗೆಳತಿ ಬಹಳ ಬೇಗವೇ ಕಾಲನ್ನು ಕರೆಗೆ ಓ ಗೊಟ್ಟಿದ್ದು ಮಾತ್ರ ತುಂಬಾ ದುಃಖದ ಸಂಗತಿ. ಇದೇ ಮೊದಲ ಬಾರಿಗೆ ನಾನು ಅವರ ಬಗ್ಗೆ ಬರೆಯುತ್ತಿರುವುದು.‌ ಇಷ್ಟು ದಿನ ಏನೂ ಬರೆಯಲು ಸಾಧ್ಯವಾಗಿರಲಿಲ್ಲ. ಮತ್ತೊಬ್ಬಳು ವಸುಧಾ. ಸ್ವಭಾವತಃ ತುಂಬಾ ಅಂಜು ಬುರುಕಿ. ಮುಂದೆ ಅವಳು ಬೆಂಗಳೂರಿಗೆ ವರ್ಗಾವಣೆ ತೆಗೆದುಕೊಂಡು ಹೋಗಿ ಇತ್ತೀಚೆಗೆ ನನ್ನ ತಂಗಿಯೊಂದಿಗೆ ಸಹೋದ್ಯೋಗಿಯಾಗಿದ್ದಳು. ನಂಜನಗೂಡಿನ ದೇವಾಲಯದ ಪ್ರಧಾನ ಅರ್ಚಕರಾದ ಸದಾಶಿವ ಅವರ ಮಗಳು ಭಾರತಿ ಸಹ ನಮ್ಮ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದು ಅವಳಿಗೆ ವಿವಾಹವಾಗಿ ಬೆಂಗಳೂರಿಗೆ ವರ್ಗಾವಣೆ ಕೋರಿದ್ದಳು.  ಇನ್ನೊಬ್ಬ ಗೆಳತಿ ನಿವೇದಿತಾ ಎನ್ನುವವಳು ಆ ಕಾಲದಲ್ಲಿ ಮ್ಯಾಟ್ರಿಮೋನಿಎಲ್ ಮೂಲಕ ಹೈದರಾಬಾದಿನ ಐಎಎಸ್ ಅಧಿಕಾರಿ ಒಬ್ಬರೊಂದಿಗೆ ಅವಳ ಮದುವೆಯಾಗಿತ್ತು. ಬಹಳ ಬೇಗ ರಾಜೀನಾಮೆ ಕೊಟ್ಟು ಹೊರಟು ಹೋದಳು ಆದರೂ ನನ್ನ ನೆನಪಿನಲ್ಲಿ ಇನ್ನೂ ಉಳಿದಿದ್ದಾಳೆ.

ರೈಲು ಪ್ರಯಾಣದ ಮರೆಯಲಾಗದ ಅನುಭವಗಳೆಂದರೆ ಹುಣ್ಣಿಮೆ ಅಮಾವಾಸ್ಯೆ ಕಾರ್ತಿಕ ಸೋಮವಾರ ಹಾಗೂ ಜಾತ್ರೆಯ ಸಮಯದಲ್ಲಿ ರೈಲು ಸಿಕ್ಕಾಪಟ್ಟೆ ರಷ್ ಆಗುತ್ತಿದ್ದು ಕೆಲವೊಮ್ಮೆ ನಿಲ್ಲಲು ಸಹ ಕಷ್ಟಪಡುವಷ್ಟು ಜನಸಂದಣಿ.  ಹಾಗೆಯೇ ಮತ್ತೊಮ್ಮೆ ಯಾವಾಗಲೋ  ಬಂದ್ ಆಗಿ ಅಶೋಕ ಪುರಂನಲ್ಲಿ ರೈಲನ್ನು ತಡೆ ಹಿಡಿದು ಬಿಟ್ಟರು. ಅಲ್ಲಿಂದ ಬೇರೆ ವಾಹನ ಹಿಡಿದು ಬಸ್ಸಿಗೆ ಬರಬೇಕಿತ್ತು .ಅವೆಲ್ಲ ರಗಳೆ ಏಕೆ ಎಂದು ಎಲ್ಲರೂ ಮನೆಗಳಿಗೆ ವಾಪಸ್ ಆಗಿಬಿಟ್ಟಿದ್ದೆವು. ಎಲ್ಲರೂ ರಜೆ ಆದ್ದರಿಂದ ಆಫೀಸು ಬಿಕೋ ಅನ್ನುತ್ತಿತ್ತು ಎಂದು ಮಾರನೆಯ ದಿನ ಹೋದಾಗ ಹೇಳುತ್ತಿದ್ದರು. ಇನ್ನೊಮ್ಮೆ ರೈಲನ್ನು ಕಡಕೋಳ ರೈಲು ನಿಲ್ದಾಣದಲ್ಲಿ ನಿಲ್ಲಿಸಿ ಬಿಟ್ಟಿದ್ದರು ಒಂದು ತರಹ ಎಡಬಿಡಂಗಿ ಪರಿಸ್ಥಿತಿ. ವಾಪಸ್ ಹೋಗುವ ಬದಲು ನಂಜನಗೂಡಿಗೇ ಹೋಗೋಣ ಎಂದುಕೊಂಡೆವು. ನಮ್ಮ ಹುಡುಗರು ಹೋಗಿ ಒಂದು ಮಿನಿ ಲಾರಿಯನ್ನು ಮಾತನಾಡಿದರು. ನಿಂತುಕೊಂಡೇ ಹೋಗಬೇಕಿತ್ತು ಆದರೆ ನಮಗೆಲ್ಲ ಮಹಿಳೆಯರಿಗೆ ಹತ್ತಲು ಕಷ್ಟ. ಪಕ್ಕದ ಅಂಗಡಿ ಒಂದರಿಂದ ಸ್ಟೂಲ್ ತೆಗೆದುಕೊಂಡು ಬಂದು ಎಲ್ಲರೂ ಹತ್ತಿದ್ದಾಯಿತು. ಆಫೀಸ್ಗೆ ಬರುವ ವೇಳೆಗೆ 11 ಗಂಟೆ.  ಕೆಲವೊಮ್ಮೆ ನಂಜನಗೂಡು ಟೌನಿನಲ್ಲಿ ಮಾತ್ರ ಕೆಲವೊಂದು ಬಂದ್ ಅಥವಾ ಸ್ಟ್ರೈಕ್ ಗಳು ನಡೆದು ಆ ಜನರು ಬಂದು ಕಚೇರಿಯನ್ನು ಮುಚ್ಚಿಸುತ್ತಿದ್ದರು. ಆಗ ಮುಂದಿನ ರೈಲು ಅಥವಾ ಬಸ್ ಹಿಡಿದು ಮೈಸೂರಿಗೆ ವಾಪಸ್ ಆಗುತ್ತಿದ್ದೆವು. ಒಂದೆರಡು ಅಲ್ಲಿಯೇ ಇದ್ದ ಗೆಳತಿಯರ ಮನೆಗೆ ಹೋಗಿ ಮಾಮೂಲಿನಂತೆ ಸಂಜೆಯ ರೈಲಿಗೆ ವಾಪಸ್ ಆಗುತ್ತಿತ್ತು ಅದು ಬಸ್ಸುಗಳ ಅಭಾವ ಇದ್ದ ಸಮಯಗಳಲ್ಲಿ.

ಇನ್ನೊಂದು ಬಾರಿ ಸಂಜೆ ರೈಲಿನಲ್ಲಿ ವಾಪಸ್ ಆಗುತ್ತಿದ್ದಾಗ ಕಡಕೊಳದ ನಂತರ ಧಡಕ್ಕನೆ ಬ್ರೇಕ್ ಹಾಕ ರೈಲು ನಿಂತುಬಿಟ್ಟಿತು.  ಏನಪ್ಪಾ ಎಂದು ನೋಡಿದರೆ ಯಾರೋ ಒಬ್ಬ  ಯುವತಿ ರೈಲಿಗೆ ಅಡ್ಡ ಸಿಕ್ಕಿ ಆತ್ಮಹತ್ಯೆಗೆ ಪ್ರಯತ್ನಿಸಿದಳು ಎಂದು ರೈಲಿನಲ್ಲೇ ಇರುತ್ತಿದ್ದ ರೈಲ್ವೆ ಪೊಲೀಸರು ಅವಳನ್ನು ಕರೆದುಕೊಂಡು ಬಂದು ಸ್ವಲ್ಪ ಕಾಲಿ ಇದ್ದ ನಮ್ಮ ಬೋಗಿಗೆ ಹತ್ತಿಸಿದರು. ನಮ್ಮದೇ ವಯಸಿನ ಯುವತಿ ಬರಿಯ ಕತ್ತು ಉದ್ದ ಜಡೆ . ಮಾಸಿದ ಸೀರೆ ಹೊಂದಿಕೆಯಾಗದ ಕುಪ್ಪಸ. ಕಿವಿಯಲ್ಲಿ ಕೃತಕ ಓಲೆಗಳು. ರೈಲು ಹತ್ತಿದಾಗ  ತಗ್ಗಿಸಿದ ತಲೆಯನ್ನು ನಾವು ಇಳಿಯುವವರೆಗೂ ಎತ್ತಲಿಲ್ಲ. ಏನು ಕಷ್ಟ ಇತ್ತೋ ಪಾಪ ಸಾವಿಗೆ ಮನಸ್ಸು ಮಾಡುವಷ್ಟು. ವಿಫಲವಾದ ಆತ್ಮಹತ್ಯೆಯ ಪ್ರಯತ್ನ ಮತ್ತೆ ಪ್ರಪಂಚವನ್ನು ಎದುರಿಸಬೇಕಾದ ಭಯ ಅವಳ ಸ್ಥಿತಿ ನೋಡಿ ನಮಗೆ ಅಳು ಬರುವಂತದಾತ್ತು.  ಆ ವಾರವೆಲ್ಲಾ ಆ ಯುವತಿಯ ಬಗ್ಗೆಯೇ ಚರ್ಚೆ. ಹೆಚ್ಚಿನ ಕಷ್ಟಗಳ ಅರಿವಿಲ್ಲದ ನಮಗೆಲ್ಲ ಪ್ರಪಂಚದ ಮತ್ತೊಂದು ಮುಖವನ್ನು ಪರಿಚಯಿಸಿದ್ದು ಆ ಘಟನೆ.

ಜಾತ್ರೆ ಅಥವಾ ವಿಶೇಷ ಪೂಜೆಗಳು ಇದ್ದ ದಿನದಲ್ಲಿ ದೇವಸ್ಥಾನದ ಪ್ರಸಾದಗಳು ಆಫೀಸನ್ನು ತಲುಪುತ್ತಿದ್ದವು. ಎಲ್ಲರಿಗೂ ಹಂಚಲಾಗುತ್ತಿತ್ತು. ಶಾಲ್ಯಾನ್ನ, ರಸಾಯನ ಹಾಗೂ ಖಾರ ಪೊಂಗಲ್ ಗಳು ಸಾಮಾನ್ಯವಾಗಿ ಪ್ರಸಾದ ರೂಪದಲ್ಲಿ ಬರುತ್ತಿದ್ದವು. ಅಂದು ಯಾರಾದರೂ ಊಟ ತಂದಿಲ್ಲದಿದ್ದರೆ ಅದೇ ಪೂರ್ತಿ ಊಟ. ಹೊರಗಿನ ತಿಂಡಿ ತೆಗೆದುಕೊಳ್ಳುವಂತೆಯೇ ಇರಲಿಲ್ಲ. ಕಾಫಿ ಸಮಯದಲ್ಲಿ ಅದನ್ನೇ ತಿಂದು ನಂತರ ಕಾಫಿ ಕುಡಿಯಲು ಹೋಗುತ್ತಿದ್ದೆವು. ಚಿಕ್ಕ ಜಾತ್ರೆ ,ದೊಡ್ಡ ಜಾತ್ರೆ ರಥೋತ್ಸವ ಈ ಸಮಯಗಳಲ್ಲಿ ನಮ್ಮ ಆಫೀಸಿನ ಮುಂದೆಯೇ ಮಜ್ಜಿಗೆ ಪಾನಕ ಕೋಸಂಬರಿ ಇತ್ಯಾದಿಗಳ ಹಂಚುವಿಕೆ ನಡೆದಿರುತ್ತಿತ್ತು. ಒಳಗೂ ತಂದು ಕೊಡುತ್ತಿದ್ದರು.

ನಿಗಮದಲ್ಲಿ ಕಂಪ್ಯೂಟರ್ಗಳ ಬಳಕೆ ಹೆಚ್ಚು ಆಗಲು ತೊಡಗಿತ್ತು. ಹಾಗಾಗಿ ಆಗ ಮೈಕ್ರೋ ಪ್ರೋಸೆಸ್ ಆಪರೇಟರ್ ಹುದ್ದೆಗಳ ನೇಮಕಾತಿ ಆರಂಭವಾಯಿತು.  ಅಂದರೆ ಟೈಪಿಸ್ಟ್ ಅಥವಾ ಅಸಿಸ್ಟೆಂಟ್ ಗಳನ್ನೇ ಒಂದು ಪರೀಕ್ಷೆ ಮಾಡಿ ಉತ್ತೀರ್ಣರಾದವರನ್ನು ಸಂದರ್ಶನ ಮಾಡಿ ಈ ಹುದ್ದೆಗೆ ತೆಗೆದುಕೊಳ್ಳಲಾಗುತ್ತಿತ್ತು. ಆಬ್ಜೆಕ್ಟಿವ್ ಕೊಶ್ಚನ್ ಪೇಪರ್ ಇದ್ದು ನೆಗೆಟಿವ್ ವ್ಯಾಲ್ಯೂಯೇಷನ್ ಇರುತ್ತಿತ್ತು ಅಲ್ಲಿನ ಪ್ರವೇಶಿಕ ಪರೀಕ್ಷೆಗೆ. ಆ ಹುದ್ದೆಗೆ ಆಯ್ಕೆಯಾದರೆ, ಮೈಸೂರಿಗೆ ಬೇಗ ವರ್ಗಾವಣೆ ಸಿಗಬಹುದು ಎಂಬ ಆಸೆಯಿಂದ ನಾನೂ ಅರ್ಜಿ ಹಾಕಿದೆ.  ಒಂದು ಶನಿವಾರ ಮಧ್ಯಾಹ್ನ ಪ್ರವೇಶ ಪರೀಕ್ಷೆಯು ಸಹ ನಡೆಯಿತು. ಪ್ರವೇಶ ಪರೀಕ್ಷೆಯಲ್ಲಿ ಪಾಸಾದ ಸುದ್ದಿ ಸಹ ಬಂದಿತ್ತು.  ಆಗ ನಂಜನಗೂಡಿನಿಂದ ಪರೀಕ್ಷೆಗಾಗಿ ಮೈಸೂರಿಗೆ ಹೋಗುವುದರಿಂದ ಪ್ರವಾಸಭತ್ಯೆ ಸಹ ಸಿಗುತ್ತಿತ್ತು. ಅದೂ ಪರೀಕ್ಷೆ ತೆಗೆದುಕೊಳ್ಳಲು ಒಂದು ನೆಪ.  ಆ ಸಂದರ್ಶನದಲ್ಲಿ ನಂಜನಗೂಡಿನಲ್ಲಿ ಆ ಹುದ್ದೆ ಕೊಟ್ಟರೆ ಹೋಗುತ್ತೀರಾ ಎಂದು ಕೇಳಿದರು ನಾನು ಸತ್ಯ ಹರಿಶ್ಚಂದ್ರನ ಮೊಮ್ಮಗಳಂತೆ “ಇಲ್ಲ ಮೈಸೂರಿಗೆ ವರ್ಗ ಸಿಗಲಿ ಎಂದು ಈ ಹುದ್ದೆಗೆ ಹಾಕಿರುವುದು ಅಲ್ಲಿಯೇ ಆದರೆ ಸಹಾಯಕಳಾಗಿಯೇ ಮುಂದುವರೆಯುವೆ” ಎಂದು ಹೇಳಿದೆ. ಆ  ಹುದ್ದೆ ನನಗೆ ಸಿಗಲಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ . ಆದರೆ ಕೆ ಆರ್ ನಗರದಲ್ಲಿ ಟೈಪಿಸ್ಟ್ ಆಗಿದ್ದ ನನ್ನ ಕಾಲೇಜಿನ ಜೂನಿಯರ್ ಶೈಲಾ  ನಂಜನಗೂಡು ಹತ್ತಿರವಾಗಬಹುದು ಎಂದು ಇಲ್ಲಿಗೆ ಎಂ ಪಿ ಓ ಆಗಿ ಬಂದಳು. ನಮ್ಮೊಂದಿಗೆ ಓಡಾಡಲು ಮತ್ತೊಬ್ಬಳು ಸಿಕ್ಕಿದಂತಾಯಿತು. ಅದೇ ಸಮಯದಲ್ಲಿ ಮಂಡ್ಯದಲ್ಲಿ ನನ್ನ ಸಹೋದ್ಯೋಗಿಗಳಾಗಿದ್ದ ಗಾಯತ್ರಿ ದೇವಿ ಹಾಗೂ ಮಂಜುಳಾ ಅವರೂ ಸಹ ನಂಜನಗೂಡಿಗೆ ವರ್ಗವಾಗಿ ಬಂದರು. ಮೈಸೂರಿನಿಂದ ಓಡಾಡುವವರ ಸಂಖ್ಯೆ ಗಣನೀಯವಾಗಿಯೇ ಹೆಚ್ಚಿತು. ಕುವೆಂಪು ನಗರದಲ್ಲಿದ್ದ ಮಂಜುಳಾ ಹಾಗೂ ಜೆಪಿ ನಗರದಲ್ಲಿದ್ದ ಗಾಯತ್ರಿ ಇವರು ಸಹ ಅಶೋಕಪುರ ರೈಲ್ವೆ ನಿಲ್ದಾಣದಲ್ಲಿಯೇ ಹತ್ತಿ ಕೊಳ್ಳುತ್ತಿದ್ದರು .‌ಹೆಚ್ಚು ಕಡಿಮೆ ನಾನು ಸಹಿತ ಅಲ್ಲಿಗೆ ಹೋಗಲು ಆರಂಭಿಸಿದೆ. ಬರುವಾಗ ಮಾತ್ರ ಚಾಮರಾಜಪುರಂ ರೈಲು ನಿಲ್ದಾಣ.

ಬೇರೆ ಎಲ್ಲಾ ಶಾಖೆಗಳಂತೆ ಇಲ್ಲಿಯೂ ಸಹ ಮನರಂಜನ ಕೂಟ ಇದ್ದು ಎಲ್ಲಾ ನಿಯತಕಾಲಿಕೆಗಳನ್ನು ತರಿಸುತ್ತಿದ್ದರು. ನಾನು ತೆಗೆದುಕೊಂಡ ನಿಯತಕಾಲಿಕೆ ರೈಲಿನಲ್ಲೇ ಓದಿ ಮುಗಿಸಿ ಬಿಡುತ್ತಿದೆ. ನನ್ನ ಗೆಳತಿಯರು ತೆಗೆದುಕೊಂಡಿದ್ದು ಸಹ ಹೋಗುವಾಗಲೂ ಬರುವಾಗಲ ಓದಿ ಮುಗಿಸಿಯಾಗಿ ಬಿಡುತ್ತಿತ್ತು. ಸುಲೋಚನಾ ಅವರು ಸಹ ತುಂಬಾ ಓದುತ್ತಿದ್ದರು ಹಾಗಾಗಿಯೇ ಅವರು ಲೈಬ್ರರಿ ಇಂದ ತಂದ ಪುಸ್ತಕಗಳು ಕೆಲವೊಮ್ಮೆ ಕೊಡುತ್ತಿದ್ದರು ಹೀಗಾಗಿ ನನ್ನ ಓದಿನ ಹಸಿವಿಗೆ ಸಾಕಷ್ಟು ಮೇವು ಸಿಗುತ್ತಿತ್ತು.

ನಂಜನಗೂಡು ಶಾಖೆಯಿಂದ ತಲಕಾಡು ಶಿವನಸಮುದ್ರ ಈ ಕಡೆಗೆ ಒಂದು ಬಾರಿ ಟೂರ್ ಹಾಕಿದ್ದರು. ನನ್ನ ಕಡೆಯ ತಂಗಿ ವೈಶಾಲಿಯನ್ನು ಕರೆದುಕೊಂಡು ಹೋಗಿದ್ದೆ. ತುಂಬಾ ಚಂದದ ನೆನಪುಗಳು ಆದರೆ ಆ ಸಮಯದಲ್ಲಿ ಎಲ್ಲರ ಬಳಿ ಕ್ಯಾಮೆರಾ ಇರಲಿಲ್ಲ ಹಾಗಾಗಿ ಫೋಟೋ ರೂಪದಲ್ಲಿ ಅವು ಉಳಿದಿಲ್ಲ.
(ಮುಂದಿನವಾರಕ್ಕೆಮುಂದುವರೆಯುವುದು)


About The Author

7 thoughts on “”

  1. ಅಚ್ಚುಕಟ್ಟಾಗಿ ಪ್ರಕಟಿಸಿದ ಸಂಪಾದಕರಾದ ಮಧುಸೂದನ‌ಅವರಿಗೆ ಹೃತ್ಪೂರ್ವಕ ಧನ್ಯವಾದಗಳು.

    ಸುಜಾತಾ ರವೀಶ್

  2. ಒಂದೊಂದು ಘಟನೆಗಳನ್ನೂ ಎಳೆ ಎಳೆಯಾಗಿ ಬರೆದಿರುವ ನಿನ್ನೀ ಶೈಲಿಗೆ ಫಿದಾ.. ಸೊಗಸಾಗಿ ಮೂಡಿ ಹರುತ್ತಾ ಇದೆ.

  3. ಪಯಣ ಕೇವಲ ಗಾಡಿ, ವಾಹನಗಳ ಮುಖೇನ ಅಲ್ಲ. ಪಯಣ ಮೌನವಾಹಕ. ಆತ್ಮಹತ್ಯೆಗೆ ಮುಂದಾದ ಯುವತಿಯ ಸಂಕಟದ ಕ್ಷಣಕ್ಕಿಂತ ಅದರಿಂದ ಹೊರಬಂದು
    ಪಯಣಿಗರನ್ನು ಎದುರಿಸುವ ತೀಕ್ಷ್ಣ ವಿಷಾದದ ಸಂಕೀರ್ಣ ಪ್ರಕ್ಷುಬ್ದತೆ ಇದೆಯಲ್ಲ ,ಅದೊಂದು ಬಗೆಯ ಸ್ಮಶಾನಮೌನಭಾವ.
    ವೃತ್ತ ನಿವೃತ್ತ ಪ್ರವೃತ್ತಗಳ ಆವರಣಗಳಲ್ಲಿ ಈ ರೀತಿಯ ಗಾಢ ಪ್ರಗಾಢ ಅನುಭವಗಳನ್ನು ಕಾದಿರಿಸಿಕೊಳ್ಳುವುದೂ ಸಹ ವಿಶಿಷ್ಟ.
    ಸಾಗುವ ಹಾದಿಯ ಮಾಗುವ ಯಾನ ಸಾತತ್ಯದ ಸತ್ತ್ವ, ಸ್ಪರ್ಶಗಳನ್ನು ಪಡೆಯಲು ಹೀಗಾದಾಗಲೇ ಸಾಧ್ಯ, ಶುಭಂಬ್ರೂಯಾತ್.

    1. ನಿಜ ನಿಮ್ಮ ಸೂಕ್ಷ್ಮ ಗ್ರಹಿಕೆಗೆ ನಮೋ ನಮೋ. ಆ ಯುವತಿಯ ಮುಖದ ಭಾವ ೩೫ ವರ್ಷಗಳಾದರೂ ಮನದಿಂದ ಮರೆಯಾಗಿಲ್ಲ. ನಿಮ್ಮ ಈ ಪ್ರೋತ್ಸಾಹದ ನುಡಿಗಳು, ಭಾವಗಳ ಗ್ರಹಿಕೆ ಬರೆಯಲು ಬಹಳಷ್ಡು ಪ್ರೇರಣೆ ಮತ್ತು ಉತ್ತೇಜನ ನೀಡುತ್ತದೆ. ಹೃತ್ಪೂರ್ವಕ ಧನ್ಯವಾದಗಳು

Leave a Reply

You cannot copy content of this page

Scroll to Top