ನೆನಪಿನ ಸಂಗಾತಿ
ಜಯಲಕ್ಷ್ಮಿ ಕೆ.
“ನೆನಪಿನೊಂದಿಗೆ ನೆನಪಾಗುವ ನೆನಪುಗಳು….”

ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮುಗಿಸಿ ಮಕ್ಕಳಿಗೆ ಉತ್ತರ ಪತ್ರಿಕೆಗಳನ್ನು ನೀಡುತ್ತಾ, ಅಸಂಬದ್ಧ ಉತ್ತರ ಬರೆದ ‘ ಕಡು ಜಾಣ’ನೊಬ್ಬನಿಗೆ ‘ ಮರ್ಯಾದೆ ‘ ಮಾಡುತ್ತಿರಬೇಕಾದರೆ ತರ್ಲೆ ವಿದ್ಯಾರ್ಥಿಯೊಬ್ಬ ಕಿಸಕ್ಕನೆ ನಕ್ಕ. ಆತನಿಗೆ ಉತ್ತರ ಪತ್ರಿಕೆ ಇನ್ನೂ ತಲುಪಿರಲಿಲ್ಲ. ” ನಗು ನಿಲ್ಲಿಸು, ನಿನ್ನ ಸರದಿಯೂ ಬರುತ್ತದೆ, ಆಗ ಗಹಗಹಿಸಿ ನಗುವಿಯಂತೆ ” ಎಂದು ಸಿಟ್ಟಿನಿಂದ ಹೇಳಿದೆ. ಆಗಲೂ ಆತನ ನಗು ನಿಲ್ಲಲಿಲ್ಲ. ಆತನನ್ನು ನಿಲ್ಲಿಸಿ ನಗುವಿನ ಕಾರಣ ಕೇಳಿದೆ. ಅದಕ್ಕೆ ಆತ ತಾನು ಪ್ರೌಢಶಾಲೆಯಲ್ಲಿದ್ದಾಗ ಹಿಂದಿ ಉತ್ತರ ಪತ್ರಿಕೆಯಲ್ಲಿ ‘ ಪದ್ಯ ಪೂರ್ಣಗೊಳಿಸಿ ‘ ಎನ್ನುವ ನಾಲ್ಕು ಅಂಕದ ಪ್ರಶ್ನೆಗೆ ‘ ದುನಿಯಾ ಹಸಿನೋ ಕ ಮೇಲಾ ‘ ಎನ್ನುವ ಹಿಂದಿ ಚಲನಚಿತ್ರ ಗೀತೆ ಬರೆದು ನಾಲ್ಕೂ ಅಂಕಗಳನ್ನು ಗಳಿಸುತ್ತಿದ್ದ ಆ ದಿನಗಳು ನೆನಪಾಗಿ ನಗು ಬಂತು” ಎಂದ. ಹೀಗೆ ಕೆಲವೊಂದು ಸಂದರ್ಭಗಳಲ್ಲಿ ಅದಕ್ಕೆ ಪೂರಕವಾದ ಹಳೆ ನೆನಪುಗಳು ನೆನಪಾಗಿಬಿಡುತ್ತವೆ. ನೆಲ್ಲಿಕಾಯಿಗಳನ್ನು ಯಾರು ಎಲ್ಲಿಯೇ ಮಾರುತ್ತಿರಲಿ, ಬಾಲ್ಯದ ದಿನಗಳಲ್ಲಿ ನೆಲ್ಲಿಕಾಯಿ ಮರಗಳನ್ನು ಜಾಲಾಡಿದ ನನ್ನ ಬಾಲ್ಯದ ದಿನಗಳು ನನಗೆ ಹಾಗೇ ನೆನಪಾಗುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯ ತೀರಾ ಹಳ್ಳಿಯೊಂದರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ದಿನಗಳವು. ಮನೆಯಿಂದ ಶಾಲೆ ಎಷ್ಟೇ ದೂರದಲ್ಲಿದ್ದರೂ ಅಕ್ಕ ಪಕ್ಕದ ಮಕ್ಕಳೆಲ್ಲ ಗುಂಪು ಸೇರಿಕೊಂಡು ಅಜ್ಜ ಅಜ್ಜಿ ಹೇಳುತ್ತಿದ್ದ ಕಥೆಗಳನ್ನು ಪರಸ್ಪರರು ಸ್ವಾರಸ್ಯಕರವಾಗಿ ಬಣ್ಣಿಸುತ್ತಾ, ಕಾಡು ಹಣ್ಣುಗಳನ್ನು ಕಿತ್ತು ಹಂಚಿಕೊಂಡು ತಿನ್ನುತ್ತಾ ಕಾಲ್ನಡಿಗೆಯಲ್ಲೇ ಶಾಲೆಗೆ ಸಾಗುತ್ತಿದ್ದ ದಿನಗಳವು. ಒಂದು ದಿನ ‘ ಕುಳ್ಳ ಸೀನ’ ಎಂದೇ ಪ್ರಸಿದ್ಧನಾದ ಮತ್ತು ಮರ ಏರುವುದರಲ್ಲಿ ನಿಸ್ಸೀಮನಾದ ಸೀನಪ್ಪನನ್ನು ನೆಲ್ಲಿ ಮರದ ಮೇಲೆ ಹತ್ತಿಸಿ ಆತ ಕಿತ್ತೆಸೆದ ನೆಲ್ಲಿಕಾಯಿಗಳನ್ನೆಲ್ಲ ಎತ್ತಿಕೊಂಡ ನಾವು ಆ ದಾರಿಯಲ್ಲಿ ಅಂದು ಅನಿರೀಕ್ಷಿತವಾಗಿ ಬಂದ ನಮ್ಮ ಹೆಡ್ ಮಾಸ್ಟರ್ ರನ್ನು ನೋಡಿ ಅವನನ್ನು ಮರದಲ್ಲೇ ಬಿಟ್ಟು ಓಡಿದ್ದು, ಆ ಸಿಟ್ಟಿನಿಂದ ಆತ ಕೆಲ ದಿನಗಳ ಕಾಲ ನಮ್ಮ ಗುಂಪಿಗೆ ಬಹಿಷ್ಕಾರ ಹಾಕಿ ದೂರ ಉಳಿದದ್ದು.. ಎಲ್ಲವೂ ನೆನಪಾಗುತ್ತದೆ. ಗುಲಾಬಿಯವರ ಗದ್ದೆಯಿಂದ ಹಸಿ ಮರಗೆಣಸು, ಉಪ್ಪಿನಂಗಡಿ ಜಾತ್ರೆಯಿಂದ ಇಡೀ ಬಚ್ಚಂಗಾಯಿ ಇವನ್ನೆಲ್ಲ ಎಗರಿಸಿ ನಮಗೆಲ್ಲ ಹಂಚುವ ನಿಪುಣತೆ ಇರುವ ಆತನನ್ನು ಗುಂಪಿನಿಂದ ಹೊರಗೆ ಉಳಿಯಲು ಬಿಡದ ನಾವು ಆತನಿಗೆ ದುಂಬಾಲು ಬಿದ್ದು ಮತ್ತೆ ನಮ್ಮ ಗುಂಪಿಗೆ ಸೇರಿಸಿಕೊಂಡದ್ದು,.. ಹೀಗೆ ಒಂದು ನೆನಪಿನೊಂದಿಗೆ ಅದೆಷ್ಟೋ ನೆನಪುಗಳು ಮನದಾಳದಿಂದ ಈಚೆಗೆ ಬಂದು ಕಣ್ಣೆದುರು ಕುಣಿಯಲಾರಂಭಿಸುತ್ತವೆ.
ನಮ್ಮ ಮೆದುಳು ಅಸಂಖ್ಯಾತ ನೆನಪುಗಳ ಸಂಗ್ರಹ ಕೋಶ. ನಮ್ಮ ನಿತ್ಯ ಜೀವನದಲ್ಲಿ ಒಂದು ಘಟನೆ ನಡೆದಾಗ ಅದಕ್ಕೆ ಸಂಬಂಧಿಸಿದ ಹಲವಾರು ನೆನಪುಗಳು ಸ್ಮೃತಿ ಪಟಲದಲ್ಲಿ ಹಾಗೆ ತೇಲಿ ಬರುತ್ತವೆ. ಹೀಗೆ ನೆನಪಿನೊಂದಿಗೆ ನೆನಪಾಗುವ ನೆನಪುಗಳು ಒಂದಕ್ಕೊಂದು ಬೆಸೆದುಕೊಳ್ಳುತ್ತಾ ಹೋಗುತ್ತವೆ. ಇಂತಹ ನೆನಪುಗಳಲ್ಲಿ ಕೆಲವು ನೋವನ್ನು ಕೊಡಬಹುದು ಕೆಲವು ಸಂತಸದಾಯಕವಾಗಿರಬಹುದು. ನನಗೆ ಯಾರಾದರೂ ಬೃಹದಾಕಾರದ ಮಗ್ಗಿನಲ್ಲಿ ಗುಟುಕು ಕಾಫಿಯನ್ನಷ್ಟೇ ತಂದಿತ್ತಾಗ ಮುಂಬೈನ ಥಾನೆಯ ಹಡಗಿನ ಹೋಟೆಲ್ ನಲ್ಲಿ ರುಚಿ ಚಪ್ಪರಿಸುವ ಮುನ್ನವೇ ಖಾಲಿಯಾದ ದೊಡ್ಡ ಮಗ್ಗಿನ ಗುಟುಕು ಕಾಪಿ ನೆನಪಾಗುತ್ತದೆ. ಹಾಗೆ ಅದರೊಂದಿಗೆ ಅಲ್ಲಿಗೆ ಹೋಗಲು ಅವಕಾಶ ನೀಡಿದ ಸಾಹಿತ್ಯ ಕ್ಷೇತ್ರ, ಅಲ್ಲಿಗೆ ನನ್ನೊಡನೆ ಬಂದಿದ್ದ ಊರಿನ ಗೆಳತಿಯರು, ಕಿವಿ ತುಂಬುತ್ತಿದ್ದ ವಡಾ ಪಾವ್.. ವಡಾ ಪಾವ್… ಅಲ್ಲಿ ತಂಗಿದ್ದ ಒಂದು ವಾರದ ಅವಧಿಯಲ್ಲಿ ರೈಲು ಹತ್ತಿ ಇಳಿದ ಹರ ಸಾಹಸ, ಹೀಗೆ ಒಂದರ ಹಿಂದೆ ಇನ್ನೊಂದು ನೆನಪು ತೇಲಿ ಬರುತ್ತದೆ. ಇಂದಿನ ಒಂದು ಭಾವನಾತ್ಮಕ ಅಂಶ ಹಿಂದಿನ ಅದೆಷ್ಟೋ ಭಾವನಾತ್ಮಕ ಅಂಶಗಳನ್ನು ನೆನಪಿಗೆ ತರಬಲ್ಲದು. ಮಂಗಳೂರು ಮಲ್ಲಿಗೆಯೇ ದೊರೆಯದ ಕೊಡಗಿನ ಹಿರಿಯರೊಬ್ಬರು ಕಲ್ಯಾಣ ಮಂಟಪವೊಂದರ ಮದುವೆ ಸಮಾರಂಭದಲ್ಲಿ ಯಾರೋ ಮಂಗಳೂರು ಮಲ್ಲಿಗೆ ಮುಡಿದು ಓಡಾಡುವುದನ್ನು ನೋಡುತ್ತಾ, ” ನನಗೆ ಆ ಮಲ್ಲಿಗೆ ನೋಡಿದ ತಕ್ಷಣ ಉಡುಪಿಯಲ್ಲಿ ನಡೆದ ನನ್ನ ಮದುವೆಯ ದಿನದ ನೆನಪಾಗುತ್ತದೆ. ಆ ದಿನದ ಮಲ್ಲಿಗೆಯ ಹೂವಿನ ಸುವಾಸನೆಯನ್ನು ಆಘ್ರಾಣಿಸಿದ ಅನುಭವವಾಗುತ್ತದೆ ” ಎನ್ನುತ್ತಾ ತಮ್ಮ ಮದುವೆಯ ದಿನವನ್ನು ನೆನಪಿಸಿಕೊಂಡರು. ಮಲ್ಲಿಗೆಯ ಸುವಾಸನೆ ತಂದ ಮಧುರ ನೆನಪದು!!
ಬಣ್ಣ ಬಣ್ಣದ ಮಿಠಾಯಿ ತುಂಬಿದ ಜೇಮ್ಸ್ ಪ್ಯಾಕೆಟ್ ನೋಡಿದೊಡನೆ ಖಿನ್ನ ಮನಸ್ಕಳಾಗಿ ಬಿಡುವ ನನ್ನ ಗೆಳತಿಗೆ ಅದೇ ತಿಂಡಿಗಾಗಿ ಓಡಿ ದುರಂತ ಕಂಡ ತನ್ನ ತಮ್ಮನ ನೆನಪಾಗಿ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ. ತನ್ನ ಅಪ್ಪನಿಗೆ ಬಲು ಇಷ್ಟವಾಗಿದ್ದ ಬೆಲ್ಲದ ಕಾಫಿಯನ್ನು ಕಾಯಿಸಿ ಕುರ್ಚಿಯಲ್ಲಿ ಕುಳಿತಿದ್ದ ಅವರಿಗೆ ಕೊಡಲೆಂದು ಬಂದ ಆ ಗಳಿಗೆಯಲ್ಲಿಯೇ ಹೃದಯಾ ಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ ಅಪ್ಪನ ಚಿತ್ರಣ ‘ ಬೆಲ್ಲದ ಕಾಫಿ ‘ ಎನ್ನುವ ಪದ ಹೇಳಿದೊಡನೆ ನೆನಪಾಗಿ ಕಾಡುವುದರಿಂದ ನನ್ನ ಸಹೋದ್ಯೋಗಿ ಒಬ್ಬಳು ಕಾಫಿ ಕುಡಿಯುವುದನ್ನೇ ಬಿಟ್ಟುಬಿಟ್ಟಿದ್ದಾಳೆ. ಅಲಾರಾಂ ಸದ್ದಿ ನಿಂದಲೇ ಬೆಳಗ್ಗೆ ಬೇಗ ಹೇಳುವ ಅಭ್ಯಾಸ ರೂಡಿಸಿಕೊಂಡಿದ್ದ ನನ್ನ ಸ್ನೇಹಿತೆಯೊಬ್ಬಳು ಒಂದು ದಿನ ಬೆಳ್ಳಂಬೆಳಗ್ಗೆ ಅಲಾರಾಂ ಸದ್ದಿಗೆ ಬದಲಾಗಿ ತನ್ನ ತಮ್ಮನ ಕರೆ ಬಂದಾಗ, ಆ ಕರೆಯಲ್ಲಿ’ ಅಮ್ಮ ತೀರಿಕೊಂಡರು ‘ ಎನ್ನುವ ವಿಚಾರ ತಿಳಿದು ಬಂದಲ್ಲಿಂದ ಅಲಾರಾಂ ಇಟ್ಟುಕೊಳ್ಳುವ ಅಭ್ಯಾಸವನ್ನೇ ತೊರೆದುಬಿಟ್ಟಿದ್ದಾಳೆ.
” ನೆನಪಿನ ಶಕ್ತಿ” ಎನ್ನುವಂತದ್ದು ಮನುಷ್ಯನಿಗೆ ದೇವರು ಕೊಟ್ಟ ವರವೋ… ಶಾಪವೋ.. ಹೇಳಲಾಗದು. ಮನಸ್ಸಿಗೆ ಆನಂದ ನೀಡತಕ್ಕಂತಹ ಅನುಭವಗಳು ಸನ್ನಿವೇಶಗಳು ಎದ್ದು ಬರುತ್ತಿದ್ದರೆ ” ನೆನಪು.. ಎಷ್ಟು ಸುಂದರ!!” ಎಂದೆನಿಸಬಹುದು. ಯಾವ ಘಟನೆಯನ್ನು ಯಾವ ನೋವನ್ನು ನಾವು ಮರೆಯಬೇಕು ಎಂದು ಭಾವಿಸುತ್ತಿರುತ್ತೇವೆಯೋ ಅಂತಹ ನೆನಪು ಮತ್ತೆ ಮತ್ತೆ ಕಾಡುವಂತೆ ನೆನಪಾದಾಗ ” ನೆನಪೇ ನೀನೇಷ್ಟು ಕ್ರೂರಿ!! ಎಂದೆನಿಸಿ ” ದೇವರು ಮರೆವಿನ ಕಾಯಿಲೆಯನ್ನಾದರೂ ಕೊಡಬಾರದಿತ್ತೇ..? ” ಎಂದು ಚೀರಿ ಹೇಳಬೇಕೆನಿಸಬಹುದು. ಮನದಲ್ಲಿ ಅಚ್ಚೊತ್ತಿ ನಿಂತ ನೆನಪುಗಳು ಮಧುರವಾಗಿದ್ದರೆ, ನೆನಪಿನ ಶಕ್ತಿ ವರದಾನ. ನೆನಪು ನೋವು ಅವಮಾನಗಳ ಮುಳ್ಳಾದಾಗ ನೆನಪಿನ ಶಕ್ತಿಗೆ ಒಂದು ಶಾಪ.
ಸಂತೋಷದ ಕ್ಷಣಗಳೋ…ದುಃಖದ ಸನ್ನಿವೇಶಗಳೋ.. ಗೆಳೆಯ ಗೆಳತಿಯರು, ಕುಟುಂಬದ ಸದಸ್ಯರು, ಹೀಗೆ ಬಳಗದಲ್ಲಿ ಒಟ್ಟಾಗಿ ಕುಳಿತು ಮಾತನಾಡುವ ಸಂದರ್ಭಗಳಲ್ಲಿ ಇಂತಹ ನೆನಪುಗಳನ್ನು ನಾವು ಹಂಚಿಕೊಳ್ಳುತ್ತೇವೆ. ಇದರಿಂದ ಕೆಲವೊಮ್ಮೆ ಮನ ಗೆಲುವಾಗಬಹುದು.. ಹಗುರಾಗಬಹುದು.. ಒಮ್ಮೊಮ್ಮೆ ಮನಸ್ಸು ಭಾರವಾಗಲೂಬಹುದು. ಕಷ್ಟ ಸುಖ ಎರಡೂ ಬದುಕಿನಲ್ಲಿ ಇರ ತಕ್ಕವೇ. ಏನಿಲ್ಲವೆಂದರೂ ಗತಕಾಲದ ನೆನಪನ್ನು ಮೆಲುಕು ಹಾಕಿದಾಗ ಆ ಸ್ನೇಹಿತರು, ಆ ವಾತಾವರಣ, ಆ ದಿನಗಳು ಎಲ್ಲವೂ ಕಣ್ಣೆದುರು ತೇಲಿ ಬಂದು ಸಂತೃಪ್ತ ಭಾವವಂತೂ ಖಂಡಿತ ಮೂಡಬಹುದು. ಒಟ್ಟಿನಲ್ಲಿ ನಮ್ಮ ಚಿತ್ತ ಭಿತ್ತಿಯಲ್ಲಿ ಉಳಿದ ನೆನಪುಗಳನ್ನು ಪರಸ್ಪರರು ಹಂಚಿಕೊಂಡಾಗ ನೋವಿನ ನಿಟ್ಟುಸಿರು ಹೊರಮ್ಮದೇ ನಗುವಿನ ಅಲೆಗಳು ತೇಲಿ ಬರಲಿ .. ಭಗವಂತ ನಮ್ಮೆಲ್ಲರ ಮನಗಳಲ್ಲಿ ಸಿಹಿ ನೆನಪುಗಳನ್ನೇ ತುಂಬಲಿ ಎಂದು ಆಶಿಸೋಣ….
——————————————————————–
ಜಯಲಕ್ಷ್ಮಿ ಕೆ




